Tuesday, May 20, 2008

ಮಲ್ಲರು ಹಾಗು ಕಂದರು

ಕರ್ನಾಟಕದಲ್ಲಿ ಮಲ್ಲ ಹೆಸರನ್ನು ಸೂಚಿಸುವ ೩೮೦ ಗ್ರಾಮಗಳಿವೆ.
ಕೆಲವು ಉದಾಹರಣೆಗಳು:
ಮಲಂದೂರು, ಮಲಂಬಾ, ಮಲಗಾಳಿ, ಮಲಗೆರೆ, ಮಲಗೋಣ, ಮಲಘಾಣ, ಮಲ್ಲಸಂದ್ರ, ಮಲ್ಲೇಶ್ವರಮ್, ಮಲ್ಲಹಳ್ಳಿ, ಮಲ್ಲಾಪುರ, ಮಲ್ಲೂರು ಇತ್ಯಾದಿ. ‘ಮಲಪ್ರಭಾ’ ಎಂದು ಕರೆಯಲಾಗುವ ನದಿಯು ವಾಸ್ತವಿಕವಾಗಿ ‘ಮಲ್ಲಪ್ರಭಾ’ ನದಿಯೇ ಸೈ. ಮಲ್ಲ ಜನಾಂಗವು ಈ ನದಿಯ ಆಸುಪಾಸಿನಲ್ಲಿ ನೆಲೆಸಿದ್ದರಿಂದಲೇ ಈ ನದಿಗೆ ಮಲ್ಲಪ್ರಭಾ ಎನ್ನುವ ಹೆಸರು ಬಂದಿರಬೇಕು.

ಕರ್ನಾಟಕದಲ್ಲಿ ಮಲ್ಲ ಈ ಪದದ ಅರ್ಥ ಶೂರ, ಜಟ್ಟಿ ಎಂದಾಗುತ್ತದೆ. ಮಲ್ಲಪ್ಪ, ಮಲ್ಲವ್ವ ಇವು ಕರ್ನಾಟಕದಲ್ಲಿ ಜನಪ್ರಿಯ ಹೆಸರುಗಳು. ಮಲ್ಲಯ್ಯನೆನ್ನುವದು ಶಿವನ ಹೆಸರೂ ಹೌದು. ಅಡಗೂಲಜ್ಜಿಯ ಕತೆಗಳಲ್ಲಿ ‘ಮಲಪೂರಿ’ ಎನ್ನುವ ಯಕ್ಷಿಣಿ ಬರುತ್ತಾಳೆ. ಸ್ಕಂದಪುರಾಣದಲ್ಲಿ, ಮಾರ್ಕಂಡೇಯ ಮುನಿಯು ಮಾರ್ತಾಂಡಭೈರವನಿಗೆ, “ಸ್ವಾಮಿನ್, ಮಲ್ಲನಿಷೂದನ!” ಎಂದೇ ಸಂಬೋಧಿಸುತ್ತಾನೆ. ಈ ಮಾರ್ತಾಂಡಭೈರವ ಪದವಿಯನ್ನು ಮಲ್ಲರ ವೈರಿಯಾದ ‘ಖಂಡೋಬಾ’ನಿಗೆ ಕೊಡಲಾಗಿದೆ. ಈತನೇ ‘ಮಲ್ಲಾರಿ ಮಾರ್ತಾಂಡ’. ಈ ಖಂಡೋಬಾ ಅಥವಾ ಖಂಡೇರಾಯನ ಭಕ್ತರು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ವ್ಯಾಪಿಸಿದ್ದಾರೆ.

ಮಲ್ಲ ಪದವು ಸಮುದಾಯಸೂಚಕವಾಗಿದ್ದಂತೆಯೆ, ‘ಖಂಡ’ ಪದವೂ ಸಹ ಸಮುದಾಯಸೂಚಕವಾಗಿದೆ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನ ಸಹಾಯದಿಂದ ‘ಖಾಂಡವ ವನ’ದಲ್ಲಿ ಸರ್ಪದಹನ ಮಾಡಿದ್ದನ್ನು ಗಮನಿಸಿರಿ. ‘ಖಾಂಡವ’ ಪದವು ‘ಖಂಡು ’ ಪದದಿಂದ ಉತ್ಪತ್ತಿಯಾಗಿದೆ. (ಉದಾ: ಪಾಂಡುವಿನಿಂದ ಪಾಂಡವರು ಬಂದಂತೆ). ಕ್ಷತ್ರಿಯರನ್ನೆಲ್ಲ ನಿರ್ನಾಮ ಮಾಡಲು ಹೊರಟ ಪರಶುರಾಮನು ಹಿಡಿದ ಆಯುಧವು ‘ಖಂಡ ಪರಶು’. ಇಲ್ಲಿ ಖಂಡ ಇದಕ್ಕೆ ತುಂಡು ಎನ್ನುವ ಅರ್ಥ ಮಾಡಬಹುದಾದರೂ, ಖಂಡ ಸಮುದಾಯದ specific weapon ಎಂದೂ ಅರ್ಥೈಸಬಹುದು. ಪರಶುರಾಮನ ಜನ್ಮಸ್ಥಳವೂ ಈಗಿನ ಕರ್ನಾಟಕವೇ. ಈತನ ತಾಯಿ ರೇಣುಕೆಯ ದೇವಸ್ಥಾನವಿರುವದು ಮಲಪ್ರಭಾ (=ಮಲ್ಲಪ್ರಭಾ) ನದಿಯ ಬದಿಯಲ್ಲಿರುವ ಸವದತ್ತಿಯಲ್ಲಿ. ಈ ರೀತಿಯಾಗಿ ಈ ಎರಡು ಸಮುದಾಯಗಳು, (ಮಲ್ಲರು ಹಾಗು ಖಂಡರು) ‘ಬೃಹತ್ ಕಂನಾಡಿನ’ ನಿವಾಸಿಗಳು, ಹೋರಾಡುತ್ತಲೇ ಬದುಕಿದ ದಾಯಾದಿಗಳಾಗಿರಬಹುದು.

ಮಹಾಭಾರತದಲ್ಲಿ ಅಂಗ, ವಂಗ ಹಾಗು ಕಳಿಂಗರ ಜೊತೆಗೆ ಮಲ್ಲರ ಬಗೆಗೂ ಸಹ ದಾಖಲಿಸಲಾಗಿದೆ.. ಭೀಮಸೇನ ಹಾಗು ಅರ್ಜುನರು ಉತ್ತರಮಲ್ಲರನ್ನು ಹಾಗು ದಕ್ಷಿಣಮಲ್ಲರನ್ನು ಯುದ್ಧದಲ್ಲಿ ಸೋಲಿಸಿದ ವರ್ಣನೆಯಿದೆ. ಮನುಸ್ಮೃತಿಯಲ್ಲಿ ಮಲ್ಲರನ್ನು ವ್ರಾತ್ಯ (heterodox) ಕ್ಷತ್ರಿಯರೆಂದು ಕರೆಯಲಾಗಿದೆ.

ಕ್ರಿ.ಪೂ. ೬ನೆಯ ಶತಮಾನದಿಂದ ಕ್ರಿ.ಪೂ. ೪ನೆಯ ಶತಮಾನದವರೆಗೆ, ‘ಪಾವಾ’ ಮತ್ತು ‘ಕುಶೀನಗರ’ಗಳಲ್ಲಿ ಮಲ್ಲರ ಗಣರಾಜ್ಯಗಳು ಇದ್ದ ಬಗೆಗೆ ಉಲ್ಲೇಖಗಳಿವೆ. ೧೨ನೆಯ ಶತಮಾನದಲ್ಲಿ ಖಾಸಮಲ್ಲರು ನೇಪಾಳದಲ್ಲಿ ರಾಜರಾಗಿದ್ದರು. ಈ ಖಾಸ ಎನ್ನುವವರು ಕೃಷ್ಣನ ಅನುಯಾಯಿಗಳಾಗಿದ್ದರೆಂದು ಭಾಗವತದಲ್ಲಿ ಹೇಳಲಾಗಿದೆ. (ಕೃಷ್ಣನು ‘ಕನ್ಹೈಯಾ’ ಅಂದರೆ ‘ಕನ್ನಯ್ಯ’ (=ಕನ್ನ ಜನಾಂಗದವ) ಹಾಗು ಗೋಕುಲದಲ್ಲಿದ್ದ ‘ಹಟ್ಟಿಕಾರ’ ಸಮುದಾಯದಲ್ಲಿ ಬೆಳೆದವ ಎನ್ನುದನ್ನು ಗಮನಿಸಬೇಕು). ಮನುಸ್ಮೃತಿಯಲ್ಲಿ ಖಾಸರ ಉಲ್ಲೇಖವಿದೆ. ಇವರು ವ್ರಾತ್ಯ ಕ್ಷತ್ರಿಯರೆಂದು ಅಲ್ಲಿ ಹೇಳಲಾಗಿದೆ.

೧೭ನೆಯ ಹಾಗು ೧೮ನೆಯ ಶತಮಾನದಲ್ಲಿ ಬಂಗಾಲದ ಭಾಗವನ್ನು ಆಳಿದ ಮಲ್ಲರಾಜರ ರಾಜಧಾನಿಯಾದ ವಿಷ್ಣುಪುರವು ಬಂಕೂರು ಎನ್ನುವ ಜಿಲ್ಲೆಯಲ್ಲಿದೆ. (ಕೋಲಕತ್ತಾದಿಂದ ೧೩೨ ಕಿ.ಮಿ. ದೂರದಲ್ಲಿದೆ). ಅಲ್ಲಿ ಮಲ್ಲೇಶ್ವರವೆನ್ನುವ ಗುಡಿ ಸಹ ಇದೆ. (ಬಂಕೂರು ಇದು ಕನ್ನಡ ಪದ).

ಉತ್ತರ ಪ್ರದೇಶದಲ್ಲಿ ಇರುವ ಮಲ್ಲರು ಶೂದ್ರರ ಗುಂಪಿಗೆ ಸೇರಿದವರು. ಇವರನ್ನು ಅಲ್ಲಿ ಜಲಗಾರರು (=ಮೀನುಗಾರರು, ಅಂಬಿಗರು) ಎಂದೂ ಕರೆಯುತ್ತಾರೆ. ಡಕಾಯತರ ರಾಣಿ ಫೂಲನ್ ದೇವಿ ಮಲ್ಲ ಸಮುದಾಯಕ್ಕೆ ಸೇರಿದವಳು. ದಾರ್ಜೀಲಿಂಗದ ಹತ್ತಿರವಿರುವ ಗುಡ್ಡಗಾಡಿನಲ್ಲಿ ಖಾಸೀ ಜನಾಂಗವಿದೆ.

ಇವೆಲ್ಲ ದಾಖಲೆಗಳು ಮಲ್ಲ ಜನಾಂಗದ ಪ್ರಾಚೀನತೆಯನ್ನು ತೋರಿಸುತ್ತವೆ. ರಾಜಕೀಯ ಪ್ರಾಬಲ್ಯವಿದ್ದಾಗ ಕ್ಷತ್ರಿಯರಾಗುತ್ತಿದ್ದ ಈ ಸಮುದಾಯವು, ರಾಜಕೀಯವಾಗಿ ನಿರ್ಬಲರಾದಾಗ ಶೂದ್ರರ ಗುಂಪಿಗೆ ಜಮೆಯಾಗುತ್ತಿತ್ತು.
ಹಿಮಾಲಯದ ಅಡಿಭಾಗದಲ್ಲಿ ಹಾಗು ಬಂಗಾಲದಲ್ಲಿ ರಾಜ್ಯವಾಳಿದ ಈ ಸಮುದಾಯವು , ಅಲ್ಲಿ ರಾಜಕೀಯ ವೈರವನ್ನೆದುರಿಸಲಾಗದೆ, ದಕ್ಷಿಣಕ್ಕೆ ಬಂದಿತೆ? ಹಾಗು ಕರ್ನಾಟಕದಲ್ಲಿ ನೆಲೆ ನಿಂದಿತೆ?

ಉತ್ತರ ಭಾರತದಲ್ಲಿಯೇ ಉಳಿದುಕೊಂಡ ಕನ್ನಡ ಜನಾಂಗಗಳು ಕಾಲಕ್ರಮೇಣ ಕನ್ನಡವನ್ನು ಬಿಟ್ಟುಬಿಟ್ಟು , ಆರ್ಯಭಾಷೆಯನ್ನು ಅಂಗೀಕರಿಸಿದಂತೆಯೆ, ಅಲ್ಲಿಯ ಮಲ್ಲರೂ ಸಹ ಕನ್ನಡವನ್ನು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ನೆಲೆಸಿದ ಮಲ್ಲರು ಮಾತ್ರ ಕನ್ನಡವನ್ನು ಇಟ್ಟುಕೊಂಡಿರಬೇಕು.

‘ಖಂಡ’ ಅಥವಾ ಕಂದ ಪದವನ್ನು ಸೂಚಿಸುವ ೫೪ ಗ್ರಾಮಗಳು ಕರ್ನಾಟಕದಲ್ಲಿವೆ.
ಕೆಲವು ಉದಾಹರಣೆಗಳು:
ಕಂದಕೂರು, ಕಂದಗಲ್, ಕಂದಗೋಳ, ಕಂದಾವರ, ಕಂದೂರು, ಕಂದ್ರಾಜಿ, ಖಂಡಾಲಾ, ಖಂದೋಡಿ, ಖಂಡೇರಾಯನಪಳ್ಳಿ ಇತ್ಯಾದಿ. ಇದಕ್ಕಿಂತ ಮುಖ್ಯವಾಗಿ, ಕರ್ನಾಟಕದ ಹೊರಗೂ ಇಂತಹ ಅನೇಕ ಸ್ಥಳಗಳಿವೆ. ಅಫಘಾನಿಸ್ತಾನದಲ್ಲಿರುವ ‘ಕಂದಹಾರ’ವಂತೂ ಜಗತ್ಪ್ರಸಿದ್ಧವಿದೆ. ಈ ಪದವು ಕಂದ ಹಾಗು ಹಾರ ಎನ್ನುವ ಎರಡು ಪದಗಳಿಂದ ಕೂಡಿದ ಸಂಯುಕ್ತ ಪದವಾಗಿದ್ದು, ಹಾರ (=ಹಳ್ಳಿ) ಇದು ಕನ್ನಡ ಪದ ಎನ್ನುವದನ್ನು ಲಕ್ಷಿಸಬೇಕು. ಕಂದಹಾರವೆನ್ನುವ ಒಂದು ಪಟ್ಟಣವೂ ಸಹ ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿದೆ. ಮುಂಬಯಿ ನಗರದ ಭಾಗವಾದ ‘ಕಾಂದೀವ್ಲಿ’ ಇದು ‘ಕಂದವಳ್ಳಿ’ಯ ಹಾಗು ‘ಖಂಡಾಲಾ’ ಇದು ‘ಖಂಡಹಾಳ’ದ ಮರಾಠೀಕರಣವೆನ್ನುವದು ಸ್ಪಷ್ಟವಿದೆ. ಈ ರೀತಿಯಾಗಿ ಅಫಘಾನಿಸ್ತಾನ ಹಾಗು ಮಧ್ಯಭಾರತದಲ್ಲಿ ನೆಲೆಸಿದ್ದ ಈ ಸಮುದಾಯವು , ಆರ್ಯರ ಆಕ್ರಮಣದಿಂದಾಗಿ, ಗುಳೆ ಹೊರಟು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ನೆಲೆಸಿದರು. ಅಲ್ಲಿಯೂ ಸಹ ಕಂದರಿಗೆ ಹಾಗು ಮಲ್ಲರಿಗೆ ಪರಸ್ಪರ ಹೊಡೆದಾಟಗಳು ನಡದೇ ಇದ್ದವು.

ಈ ಕಂದರ ದೇವತೆಯು ‘ಕಂದಸ್ವಾಮಿ’. ಈತನು ಕಾಲಾಂತರದಲ್ಲಿ ಸಂಸ್ಕೃತೀಕರಣದಿಂದ ‘ಸ್ಕಂದ’ನಾಗಿರಬಹುದು. ಈತನ ವಾಹನ ನವಿಲು, ಅಂದರೆ ಹಾವಿನ ವೈರಿ. ಖಾಂಡವ ವನವನ್ನು ಅರ್ಜುನನು ಸುಟ್ಟಾಗ ಸತ್ತವರೆಲ್ಲರೂ ನಾಗರು. (=ಸರ್ಪಗಳು). ಅಂದರೆ, ಕಂದರ ನೆಲೆಯಾದ ಖಾಂಡವವನವನ್ನು ಅತಿಕ್ರಮಿಸಿದ ನಾಗರನ್ನು ಹೊರದೂಡಲಿಕ್ಕಾಗಿ, ಖಂಡರು ಅರ್ಜುನನ ಸಹಾಯವನ್ನು ಕೋರಿರಬಹುದು.

ಕಂದ ಎನ್ನುವ ಹೆಸರನ್ನು ಹೊಂದಿದ ಆದಿವಾಸಿ ಸಮುದಾಯವು ಈಗ ಕೇವಲ ಆಂಧ್ರಪ್ರದೇಶ ಹಾಗು ಓಡಿಸಾ ರಾಜ್ಯಗಳಲ್ಲಿ ಮಾತ್ರ ಸಿಗುತ್ತದೆ. ಈ ಕಂದರ ಭಾಷೆ ತೆಲಗು ಹಾಗು ಗೊಂಡಿ ಭಾಷೆಯನ್ನು ಹೋಲುತ್ತದೆ.

ಇದಿಷ್ಟು ಮಲ್ಲ ಹಾಗು ಕಂದ ಸಮುದಾಯಗಳ ಕತೆ. ಪೂರ್ವ-ದ್ರವಿಡ ಭಾಷೆಯನ್ನಾಡುತ್ತಿದ್ದ ಈ ಸಮುದಾಯಗಳು, ಕಾಲಕ್ರಮದಲ್ಲಿ ಹಿಮಾಲಯದ ಅಡಿಭಾಗದಿಂದ ದಕ್ಷಿಣಕ್ಕೆ ಸರಿಯುತ್ತ, ಕರ್ನಾಟಕದಲ್ಲಿ ಅಂತಿಮವಾಗಿ ತಳವೂರಿದ ಕತೆ. ಭಾರತೀಯ ಪುರಾಣಗಳು ವಾಸ್ತವದಲ್ಲಿ ಇಲ್ಲಿಯ ಮೂಲ ಜನಾಂಗಗಳ ಇತಿಹಾಸವೇ ಆಗಿವೆ. ಪುರಾಣ ಈ ಪದದ ಅರ್ಥವೇ ಹಳೆಯ ಎಂದಾಗುತ್ತದೆ. ಈ ಪುರಾಣಗಳನ್ನು ಸೋಸಿದಾಗ ಐತಿಹಾಸಿಕ ಸತ್ಯದ ಹೊಳಹು ಗೋಚರಿಸುತ್ತದೆ.

10 comments:

Anonymous said...

ನಾನು ಮಲಪ್ರಭಾ ಅಂದರ ’ಮಲೆಯ ಪ್ರಭೆ’ ಅಂದುಕೊಂಡಿದ್ದೆ. ನಾನು ಅಂದುಕೊಂಡಿದ್ದು: ಘಟಪ್ರಭಾ ಅಂದರ ’ಘಟ್ಟದ ಪ್ರಭೆ’, so, ಇವೆರಡೂ ಗುಡ್ಡದ ಪರ್ಯಾಯ ಶಬ್ದಗಳಿಂದ ಬಂದಾವ ಅಂದುಕೊಂಡಿದ್ದೆ. ಇನ್ನುಳಿದಂತೆ, ನೀವು ಹೇಳಿದ ’ಕಂದ’, ’ಮಲ್ಲ’ ಮುಂತಾದ ಶಬ್ದಗಳಿಂದ ಶುರುವಾಗುವ ಊರುಗಳು, ಆಯಾಯಾ ಸಮುದಾಯಗಳನ್ನು ಸೂಚಿಸುತ್ತವೆ ಅನ್ನೋದು ಒಂದು ಸ್ಪೆಕ್ಯುಲೇಶನ್ನೋ ಅಥವಾ ಇದಕ್ಕ ಆಧಾರ ಅದನೋ?

ಅಂಧಂಗ, heterodox ಅನ್ನಲಿಕ್ಕೆ ವ್ರ್ಯಾತ್ಯ ಅನ್ನುವ ಶಬ್ದ ಉಪಯೋಗಿಸಬಹುದು ಅಂತಲೂ ಕಲಿಸಿದಿರಿ. ಈ ಶಬ್ದದ ಬೇರೆ ಬೇರೆ ಪ್ರಯೋಗಗಳನ್ನ ಹೇಳಿದರ ಅನುಕೂಲ ಆಗತದ. ಉದಾಹರಣೆಗೆ, heterodoxyಗೆ ಏನನ್ನಬೇಕು?

ಅಮರ said...

ನಮಸ್ಕಾರ ಸುನಾಥರೇ, ನಿಮ್ಮ "ಮಲ್ಲರು ಮತ್ತು ಕಂದರು" ಬಗೆಗಿನ ವಿಶ್ಲೇಷಣೆ ಅದ್ಭುತ. ನನ್ನ ತಿಳಿದ ವೆಬ್ ಸೈಟ್ ನಲ್ಲಿ ಹಲವಾರು ಐತಿಹಾಸಿಕ ಮಹತ್ವದ ಸಂಗತಿಗಳಿ ಒಮ್ಮೆ ನೋಡಿ
http://www.gosai.com/

sunaath said...

ಸಂಕೇತರೆ,
‘ವ್ರಾತ್ಯ’ ಪದವು ‘ವ್ರಾತ’ ಪದದಿಂದ ಸಾಧಿತವಾಗಿದೆ. ವ್ರಾತ ಎಂದರೆ ಸಮುದಾಯ. ಉದಾಹರಣೆಗೆ, ಗಣಪತಿ ಅಥರ್ವಶೀರ್ಷದಲ್ಲಿ, ಗಣಪತಿಯನ್ನು “ ನಮೋ ವ್ರಾತಪತಯೇ ” ಎಂದು ಸ್ತುತಿಸಲಾಗಿದೆ. ವ್ರಾತದ (ಅಂದರೆ ಒಂದು ಸಮುದಾಯದ) ಸಂಪ್ರದಾಯಗಳಿಗೆ ಕಟ್ಟುಬದ್ಧನಾದವನು orthodox. ವ್ರಾತದಿಂದ ಚ್ಯುತನಾದವನು ವ್ರಾತ್ಯ, ಅಂದರೆ renegade, apostate, heterodox. ಕನ್ನಡದಲ್ಲಿ orthodoxರಿಗೆ ಸಂಪ್ರದಾಯನಿಷ್ಠರು ಹಾಗು heterodoxರಿಗೆ ಅಸಂಪ್ರದಾಯಿಕರು, ಪಥಭ್ರಷ್ಟರು, ಅಪಮಾರ್ಗಿಗಳು ಎನ್ನಬಹುದೇನೊ? ವ್ರಾತ್ಯ ಪದದಿಂದಲೆ heterodoxyಗೆ ಸಮನಾದ ಪದವನ್ನು ಸಾಧಿಸಬೇಕಾದರೆ ವ್ರಾತ್ಯತ್ವವೆನ್ನಬಹುದೆ?

ಶಂ.ಬಾ. ಜೋಶಿಯವರು ಕನ್ನ ಎನ್ನುವ ಸಮುದಾಯಸೂಚಕ ಪದದಿಂದ ಕಂನಾಡು(=ಕರ್ನಾಟಕ) ಹಾಗು ಕಂನುಡಿ (=ಕನ್ನಡ) ಪದಗಳು ಬಂದಿವೆ ಎನ್ನುವದನ್ನು ಹಾಗು ಈ ಕನ್ನಾಡು ಒಂದು ಕಾಲದಲ್ಲಿ ವಿಸ್ತಾರವಾಗಿ ಹಬ್ಬಿದ್ದನ್ನು ಅನೇಕ ಆಧಾರಗಳ ಮೂಲಕ ಸಾಧಿಸಿದ್ದಾರೆ. ಅವರ ಸಂಶೋಧನೆಯಿಂದ ಪ್ರೇರಿತನಾದ ನಾನು ಕನ್ನ ಜನಾಂಗದಂತೆ ಇತರ ಜನಾಂಗಗಳೂ ಇರುಬಹುದು ಎನ್ನುವ premises ಮೇಲೆ, ಕರ್ನಾಟಕದ ಗ್ರಾಮಗಳ ಹೆಸರುಗಳನ್ನು ಸಂಗ್ರಹಿಸಿದಾಗ ಸುಮಾರು ೨೮ಕ್ಕೂ ಹೆಚ್ಚು ಸಮುದಾಯಗಳು ಇರುವ ಸಾಧ್ಯತೆ ಕಂಡು ಬಂದಿತು. ಇವುಗಳಲ್ಲಿ ಕೆಲವು ಸಮುದಾಯಗಳು ಸದ್ಯಕ್ಕೆ ಇರುವಂತಹ tribal ಸಮುದಾಯಗಳೇ ಆಗಿವೆ. ಉದಾಹರಣೆಗೆ ಕೋಲರು, ಮುಂಡರು, ಹಣಬರು, ಗೊಂಡರು ಇತ್ಯಾದಿ. ಇನ್ನುಳಿದ ಸಮುದಾಯಗಳು ನಮ್ಮ ಪುರಾಣಗಳಲ್ಲಿ ರಾಕ್ಷಸರು, ಕಿನ್ನರರು (=ಕಿಮ್?+ನರ), ವಾನರರು (=ವಾ!+ನರರು) ಎಂದು ವರ್ಣಿತರಾದವರು. ಕೆಲವು ಸಮುದಾಯಗಳು ಪ್ರಾಣಿ-ಸಂಕೇತಗಳಿಂದ (=totems) ಗುರುತಿಸಲ್ಪಟ್ಟಂತಹವು. ಉದಾಹರಣೆಗೆ ನಾಗರು, ಜಾಂಬವಂತರು ಇತ್ಯಾದಿ. ಇವೆಲ್ಲ ಸಮುದಾಯಗಳ ಬಗೆಗೆ ಮಾನವಶಾಸ್ತ್ರಜ್ಞರು ಅಧ್ಯಯನ ಮಾಡಿದ್ದಾರೆ. ಅಷ್ಟೆ ಏಕೆ, ನಮ್ಮವರೇ ಆದ, ಡಾ| ಅಂಬೇಡಕರರೂ ಸಹ ಈ ಬಗೆಗೆ ಬರೆದಿದ್ದಾರೆ ಎಂದು ಕೇಳಿದ್ದೇನೆ. ಇವೆಲ್ಲ ನನ್ನ ಲೇಖನಗಳಿಗೆ ಅಪ್ರತ್ಯಕ್ಷ ಆಧಾರಗಳು. ಆದರೆ ಇಲ್ಲಿ ಮಾತ್ರ ನನ್ನ ಲೇಖನಗಳಿಗೆ ಕೇವಲ statistical ಆಧಾರ ಮಾತ್ರ ಕೊಡಬಲ್ಲೆನೆ ಹೊರತು, ಬೇರೆ ಆಧಾರಗಳಿಲ್ಲ. ಆದುದರಿಂದ ಇದು, ನೀವು ಹೇಳಿದಂತೆ speculation ಮಾತ್ರ!

sunaath said...

ಅಮರರೆ,
ಧನ್ಯವಾದಗಳು. ನೀವು ಸೂಚಿಸಿದ ತಾಣಕ್ಕೆ ಹೋಗಿ ನೋಡಿದೆ. ಅನೇಕ ಮಹತ್ವದ ವಿಷಯಗಳು ಅಲ್ಲಿ ಲಭ್ಯವಿರುವದನ್ನು ನೋಡಿ ಖುಶಿಯಾಯಿತು. ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಸುನಾಥರೆ,

ತುಂಬಾ ಮಾಹಿತಿಗಳು ಲಭ್ಯವಾದವು ನಿಮ್ಮ ಲೇಖನ ಹಾಗೂ ಅಮರ್ ಅವರು ಕೊಟ್ಟ ಲಿಂಕ್ ನಿಂದ. ಧನ್ಯವಾದಗಳು ಇಬ್ಬರಿಗೂ. ಸುನಾಥರೆ ಶಾಸನಗಳ ಕುರಿತು ನಿಮ್ಮಲ್ಲಿ ಹೆಚ್ಚಿನ ಮಾಹಿತಿಗಳಿವೆಯೇ?

sunaath said...

ತೇಜಸ್ವಿನಿ,
I am sorry; ನನ್ನಲ್ಲಿ ಶಾಸನಗಳ ಬಗೆಗೆ ಮಾಹಿತಿ ಇಲ್ಲ.

Unknown said...

ನಿಮ್ಮ ಮಾಹಿತಿಗೆ ಧನ್ಯವಾದಗಳು.ಶಂ.ಬಾ. ಜೋಶಿಯವರಿಂದ ಪ್ರಾರಂಭವಾದ ನನ್ನ ಅನ್ವೇಷಣೆಯು ನಿಮ್ಮ ಲೇಖನದವರೆಗೂ ಬಂದಿದೆ. ಇವನ್ನೆಲ್ಲಾ ಕ್ರೋಡೀಕರಿಸಿ ಪ್ರಕಟಿಸಬೇಕಾದ ಅಗತ್ಯವಿದೆ. ಸಾಮಾನ್ಯ ಕನ್ನಡಿಗರೂ ಹೆಮ್ಮೆಯಿಂದ ಬೀಗಬೇಕಾದ ವಿಷಯಗಳಿವು. ಕ್ರಿಸ್ತಪೂರ್ವದಲ್ಲಿಯೇ ಗ್ರೀಕರೊಂದಿಗೆ ಕನ್ನಡದ ಸಂಪರ್ಕವಿತ್ತೆಂದು ಸಂದೇಹವಿದೆ. ಕಕ್ಕ ಮುಂತಾದ ಪದಗಳು ಗ್ರೀಕರ ನಾಟಕದಲ್ಲಿ ಕಾಣ ಸಿಗುತ್ತವೆ.ಹರಪ್ಪದ ಭಾಷೆಯನ್ನು ಬಿಡಿಸಿದಾಗ ಕನ್ನಡದ ಇತಿಹಾಸವೇ ಮತ್ತೂ ಹಿಂದಕ್ಕೆ ಹೋಗುತ್ತದೆ. ಬಿಹಾರ, ಬಂಗಾಳದಲ್ಲಿಯೂ ಹೆಚ್ಚು ಸಂಖ್ಯೆಯ ಶಾಸನಗಳು ಸಿಕ್ಕಿವೆ.

sunaath said...

ಧನ್ಯವಾದಗಳು, ಗೋಪಾಲರೆ. ನಾನೂ ಸಹ ಶಂ.ಬಾ. ಜೋಶಿಯವರಿಂದಲೇ ನನ್ನ ಅನ್ವೇಷಣೆಯನ್ನು ಪ್ರಾರಂಬಿಸಿದೆ. ಸ್ಥಳನಾಮಗಳು ಎನ್ನುವ ಲೇಬಲ್ಲಿನ ಅಡಿಯಲ್ಲಿ ದಯವಿಟ್ಟು ನೋಡಿರಿ. ಇನ್ನೂ ಕೆಲವು ಸ್ಥಳನಾಮಗಳ ಬಗೆಗೆ ನಾನು ಉಲ್ಲೇಖಿಸಿರುವೆ. ನಿಮ್ಮ ಅನಿಸಿಕೆಯನ್ನು ದಯವಿಟ್ಟು ತಿಳಿಸಿರಿ.

Unknown said...

I am proud of malla samudaya

sunaath said...

ನಾವೆಲ್ಲರೂ ಮಲ್ಲ ಸಮುದಾಯದ ಅಭಿಮಾನಿಗಳೇ ಆಗಿದ್ದೇವೆ, ಶ್ರೀ Unknown!