Saturday, June 28, 2008

ಹೆಸರಿನ ಕುಸುರು ಪಸರಿಸಿದಾಗ

ಹಿನ್ನೆಲೆಯ ಟಿಪ್ಪಣಿ:
ಶ್ರೀ ಅನಂತ ಕಲ್ಲೋಳರು ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕರು. ೧೯೯೫ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿತವಾದ ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ಸ್ಥಾಪಕ ಸದಸ್ಯರು. ಕನ್ನಡದ ಅಭಿಮಾನದಿಂದಾಗಿ, ತಮ್ಮ ನೌಕರಿಯಲ್ಲಿ ಹಿಂದೇಟು ಅನುಭವಿಸಿದವರು.
ಕನ್ನಡದ ಕಟ್ಟಾಳುಗಳಾದ ಶ್ರೀ ಅನಂತ ಕಲ್ಲೋಳರು ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ದಶಮಾನೋತ್ಸವದ ಸ್ಮರಣ ಸಂಚಿಕೆ (೨೦೦೮)ಯಲ್ಲಿ ಬರೆದ ಲೇಖನವನ್ನು ಇಲ್ಲಿ ಉದ್ಧರಿಸಲಾಗಿದೆ.
ಶ್ರೀ ಅನಂತ ಕಲ್ಲೋಳರಿಗೆ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ.
-ಸುನಾಥ


”ಹೆಸರಿನ ಕುಸುರು ಪಸರಿಸಿದಾಗ”
------ಅನಂತ ಕಲ್ಲೋಳ

ನನ್ನ ಹಿರಿಯ ಸಾಹಿತಿ ಮಿತ್ರರಾದ ‘ರಂ.ಶಾ’ರವರು ‘ಗಾಂಧಿ ಆಣಿ ಆಂಬೇಡಕರ’ ಎಂಬ ಶೀರ್ಷಿಕೆಯ ತರವಲ್ಲ ಎಂದೆನಿಸಿದರೂ ಹೆಸರಿನ ಬಗ್ಗೆ ಕೊಸರಾಡುವದನ್ನು ತಪ್ಪಿಸಲಾಗಲಿಲ್ಲ. ನಾವು ಕನ್ನಡದಲ್ಲಿ ಬಾಬಾಸಾಹೇಬರ ಅಡ್ಡಹೆಸರನ್ನು ‘ಅಂಬೇಡ್ಕರ್’ ಎಂದೇ ರೂಢಿಸಿದ್ದೇವೆ. ಆದರೆ ಮರಾಠಿಯಲ್ಲಿ ಅದು ‘ಆಂಬೇಡಕರ’ ಎಂದು ಝಳಕಾಯಿಸುತ್ತದೆ. ‘ವ್ಯಕ್ತಿಯು ತನ್ನ ಹೆಸರನ್ನು ಹೇಗೆ ಬರೆಯುತ್ತಾನೋ ಹಾಗೆಯೇ ಉಳಿದರೂ ಬರೆಯುವದು, ಉಚ್ಚರಿಸುವದು ಶಿಷ್ಟಾಚಾರವೆನಿಸುತ್ತದೆ. ಆದ್ದರಿಂದ ನೀವು ಆಂಬೇಡಕರ ಎಂದೇ ಕನ್ನಡದಲ್ಲಿ ಬರೆಯಿರಿ’ ಎಂದು ರಂ.ಶಾ. ಬಜಾಯಿಸಿದ್ದರು.

‘ಹೌದ್ರೀ ಖರೆ; ಅವರು ನಮ್ಮ ‘ಕಾರಂತ’ರನ್ನು ‘ಕಾರಂಥ’ ಎಂದು ಗಿರೀಶ ‘ಕಾರ್ನಾಡ’ರನ್ನು ಗಿರೀಷ ಕರ್ನಾಡರೆಂದು, ‘ಮೈಸೂರ’ನ್ನು ‘ಮ್ಹೈಸೂರೆಂದು, ಅಷ್ಟೇ ಏಕೆ ‘ಕನ್ನಡ’ವನ್ನು ‘ಕಾನ್ಹಡೀ’ ಎಂದು ರೂಢಿಸಿಕೊಂಡು ದೃಢಪಡಿಸಿಬಿಟ್ಟಿದ್ದಾರಲ್ಲ ಮರಾಠಿಯಲ್ಲಿ. ಕನ್ನಡದಲ್ಲಿ ರಾಹುಲ್ ‘ದ್ರಾವಿಡ’ ಅದರೆ ಮರಾಠೀ ಬಂಧುಗಳು ಆತನನ್ನು ‘ದ್ರವಿಡ’ ಎಂದೆನ್ನುತ್ತಾರೆ, ಹಾಗೇ ಬರೆಯುತ್ತಾರೆ. ಸದ್ಯ ಭಾರತದ ಪುಣ್ಯಕ್ಕ ರಾಷ್ಟ್ರಗೀತೆಯಲ್ಲಿಯ ‘ದ್ರಾವಿಡ’ವನ್ನು ಅವರು ದ್ರವಿಡಗೊಳಿಸಿಲ್ಲ! ಶಾಸ್ತ್ರಾತ್ ರೂಢಿರ್ಬಲೀಯಸೀ……..’ ಅಂತ ನಾನು ಕೊಸರಾಟದ ಸುರು ತೆಗೆದಾಗ, ರಂ.ಶಾ.ಮೊಳಕೆಯಲ್ಲಿಯೇ ಚಿವುಟಿ ಹಾಕಿದರು. ‘ಅವರು ತಮ್ಮ ಮಾತೃಭಾಷೆಯಲ್ಲಿ ಹೇಗೆ ತಮ್ಮ ಹೆಸರು ಬರೆಯುತ್ತಿದ್ದರೋ ಹಾಗೇ ಕನ್ನಡದಲ್ಲಿ ಇರಲಿ’ ಎಂದು ಅವರು ಅಪ್ಪಣೆ ಕೊಡಿಸಿದ್ದು ಒಪ್ಪುವಂತೆಯೇ ಇತ್ತು. ನಾನು ಹಾಗೇ ಅದನ್ನು ಅನುಷ್ಠಾನಗೊಳಿಸಿದೆ; ಆದರೆ ಹೆಸರಿನ ಕುರಿತು ಒಡಮೂಡಿದ ಕುಸುರು ಮನಸ್ಸಿನಲ್ಲಿ ಪಸರಿಸುತ್ತಲೇ ಇದೆ.

ಕನ್ನಡ ಭಾಷಾ ಅಕ್ಷರಸಂಪತ್ತು, ಕನ್ನಡ ಭಾಷಾ ಬಳ್ಳಿ ಪುಷ್ಕಳವಾಗಿದೆ. ಕನ್ನಡದವರು ಯಾವುದೇ ಭಾಷೆಯವರ ಹೆಸರುಗಳನ್ನು , ಪದಗಳನ್ನು ಅವರವರ ಉಚ್ಚಾರಣೆಗೆ ತದ್ರೂಪವಾಗಿ ಬರೆಯಬಲ್ಲರು. ಆ ದೃಷ್ಟಿಯಿಂದ ದೇವನಾಗರಿ ಲಿಪಿ ಸಹ ಕನ್ನಡದ ಲಿಪಿಯಷ್ಟು ಸಮೃದ್ಧವಾಗುವದಿಲ್ಲ. ಉದಾಹರಣೆಗೆ ಏಕನಾಥನನ್ನು ಕನ್ನಡದಲ್ಲಿ ಬರೆಯುತ್ತೇವೆ; ಅಂತೆಯೇ ಎಡೆಯೂರೇಶ್ವರನನ್ನು ಉಚ್ಚಾರಾನುಗುಣವಾಗಿ ಬರೆಯುವಾಗ ಹೃಸ್ವ ‘ಎ’ಕಾರದೊಂದಿಗೆ ಆರಂಭಿಸುತ್ತೇವೆ. ಇಂಥ ನಿಷ್ಕೃಷ್ಟತೆ ದೇವನಾಗರಿಗೂ ಸಾಧ್ಯವಿಲ್ಲವಲ್ಲ. ನಮ್ಮಲ್ಲಿ ಎ,ಏ; ಒ, ಓ ಎಂಬ ಭೇದನಿರೂಪಣೆಯ ಉಚ್ಚಾರ ಸಂಕೇತಗಳು ದೇವರ ಭಾಷೆಯಲ್ಲಿಯೂ ಇಲ್ಲ ನೋಡ್ರಿ. ನಮ್ಮ ಬೆಳಗಾವಿಯನ್ನು ಮರಾಠಿಯಲ್ಲಿ ಬರೆದಾಗ ಬೇಳಗಾಂವ ಎಂದು ದೀರ್ಘ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಬಹುಶಃ ಇಷ್ಟೊಂದು ದೀರ್ಘಕಾಲದ ಹೋರಾಟ ನಡೆಯಿಸಿದರೂ ಅವರಿಗೆ ಕನ್ನಡದ ಬೆಳಗಾವಿ ಕನ್ನಡಿಯ ಗಂಟಾಗಿಯೇ ಉಳಿದಿದೆ. ‘ಬೆಳಗಾವಿ’ಯ ನಿಖರ ಉಚ್ಚಾರ ಮರಾಠಿಯಲ್ಲಿ ಬರೆಯಲಾಗುವದಿಲ್ಲವಲ್ಲ! TASTEನ್ನು ಮತ್ತು TESTನ್ನು ಅವರು ಒಂದೇ ರೀತಿಯಲ್ಲಿ ತಮ್ಮ ಲಿಪಿಯಲ್ಲಿ ಬರೆಯಬೇಕಾಗುತ್ತದೆ. ಅವರಿಗೆ ದೀರ್ಘದ ದಂಡ ನಾಸ್ತಿ. ಬಹುಶಃ ಅದರಿಂದಾಗಿ ಅವರು ಉಳಿದ ಭಾಷೆಗಳಿಗೆ ದೂರದಿಂದಲೇ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ನುಡಿಯ ಬಗ್ಗೆ ವಿಶೇಷ ಪುರಸ್ಕಾರ ನೀಡುತ್ತಾರೇನೋ?

ದೇವನಾಗರಿ ಲಿಪಿಯನ್ನು ಬದಿಗಿಟ್ಟು ತಮಿಳು ಭಾಷೆಯ ಕಡೆಗೆ ಹೊರಳೋಣ. ನಮಗಿಂತ ಮೊದಲೇ ತಮಿಳು ಭಾಷೆ ಶಾಸ್ತ್ರೀಯ ಭಾಷೆಯಾಗಿ ಅಧಿಕೃತ ಪಟ್ಟಗೊಡಿಸಿದೆಯಷ್ಟೇ. ‘ಗಾಂಧಿ’ ಎಂಬ ಸುಲಭದ ಹೆಸರನ್ನು ತಮಿಳು ಭಾಷೆಯಲ್ಲಿ ಬರೆದಾಗ ಅದನ್ನು ಕಾಂತಿ ಎಂದೋ, ಖಾಂತಿ ಎಂದೋ, ಕಾಂಥಿ ಎಂದೋ, ಗಾಂತಿ ಎಂದೋ, ಗಾಂಧಿ ಎಂದೋ, ಖಾಂದಿ ಎಂದೋ, ಘಾಂತಿ ಎಂದೋ, ಖಾಂಧಿ ಎಂದೋ ಹಲವು ಹನ್ನೊಂದು ಬಗೆಯಾಗಿ ಉಚ್ಚರಿಸಬಹುದಾಗಿದೆ. ‘ಪ್ರಭಾಕರ’ನನ್ನು ‘ಪಿರ್ಪಾಗರ್’ ಎಂದು, ಪ್ರತಿಭಾ ಪಾಟೀಲ ಎಂಬ ಹೆಸರನ್ನು ಪಿರಿತಿಪಾ ಬಾಡಿಲ ಎಂದೂ ಓದುವಂತಹ ಅಧ್ವಾನ ಉಂಟಾಗುತ್ತದೆ. ಅವರಲ್ಲಿ ಕ ಆದ ಕೂಡಲೆ ಙ, ಖ ಆದ ಕೂಡಲೇ ಞ್ ಹೀಗೆ ಮಿತಸಂಖ್ಯೆಯಲ್ಲಿ ಲಿಪಿಸಂಕೇತಗಳಿವೆ. ಬರವಣಿಗೆಯಲ್ಲಿ ಮಿತಾಕ್ಷರಿಗಳಿದ್ದರು ಬಾಯಬಡಕತನದಲ್ಲಿ ಅವರ ಬಢಾಯಿ, ಲಢಾಯಿ ಬಲು ಜೋರು. ಒಂದೊಂದೇ ಅಕ್ಷರವು ಹಲವು ಹನ್ನೊಂದು ಉಚ್ಚಾರಣೆಗಳಿಗೆ ಆಸ್ಪದವೀಯುತ್ತದೆ. ಕನ್ನಡದಲ್ಲಿ ಅಕ್ಷರಗಳ ಸಿರಿವಂತಿಕೆ ಇದ್ದರೂ, ನಾವು ದೈವವಿದ್ದೂ ದತ್ತಗೇಡಿಯಂತೆ ಹೆರವರ ಅನುವರ್ತನೆ ಮಾಡುತ್ತೇವೆ. ವಿಶೇಷತಃ ಕರ್ನಾಟಕದ ದಕ್ಷಿಣ ಭಾಗದಲ್ಲಿ ‘P.T.ಉಷಾ’, ‘K.D.ಸತೀಶ್’ ಎಂಬಂಥ ಹಂಡಬಂಡ ಬರವಣಿಗೆ ಕಂಡುಬರುತ್ತದಲ್ಲವೆ! ಅದು ತಮಿಳರಿಂದ ನಾವು ಪಡೆದ ಬಳುವಳಿ. ಪಾಪ; ತಮಿಳಿನಲ್ಲಿ ಈ ಆದ್ಯಾಕ್ಷರಗಳನ್ನು (initials) ಬರೆದಲ್ಲಿ
P.T.ಉಷಾ, B.D. ಉಷಾ, B.T. ಉಷಾ, P.D.ಉಷಾ ಹೀಗೆ ನಾನಾ ತರಹದವಳಾಗಬೇಕಾಗುತ್ತದೆ. ಕನ್ನಡದಲ್ಲಿ ಅಂಥ ಗೊಂದಲವಿಲ್ಲ; ನಮ್ಮ ಅಕ್ಷರಸಂಪತ್ತು ಎಂಥ ಹೆಸರನ್ನೂ, ಇನಿಷಿಯಲ್ಸನ್ನೂ ಅಪ್ಪಟವಾಗಿ ಬರೆಯುವಷ್ಟು ಶ್ರೀಮಂತವಾಗಿದೆ. ಆದರೆ ಹಿರಿಯಣ್ಣ ತಮಿಳು ತನ್ನ ಅಕ್ಷರದಾರಿದ್ರ್ಯದಿಂದ ಅವಲಂಬಿಸಿರುವ ಈ ಹಂಡಬಂಡತನವನ್ನು ಕನ್ನಡದವರು ಕುರುಡರಾಗಿ ಅನುಸರಿಸುತ್ತಾರೆ. ತಲೆ ಬೋಳಾದವನು ಪಾಪ; ವಿಗ್ ಹಾಕಿಕೊಳ್ಳುತ್ತಾನೆಂದು ನೋಡಿದ ಎಬಡ (ಕನ್ನಡಿಗ) ತನ್ನಕೇಶಸಂಪತ್ತನ್ನು ಬೋಳಿಸಿಕೊಂಡು ಟೋಪಣ ಹಾಕಿಕೊಂಡಂತೆ! ಮೈಸೂರು ಕಡೆಗೆ ಕನ್ನಡ ಅಂಕಿಗಳ ಬಳಕೆ ಕಡಿಮೆ. ಇದಕ್ಕೂ ಅದೇ ಕಾರಣ. ತಮಿಳು ಅಂಕೆಗಳು ಅಕ್ಷರ ರೂಪದಲ್ಲಿ ಇವೆ. (ಅ,ಗ……) ಅದರಿಂದ ಬರವಣಿಗೆಯಲ್ಲಿ ಅಧ್ವಾನವಾಗುತ್ತದೆ ಎಂದು ಅವರು ಅರೆಬಿಕ್ ಅಂಕೆ (1,2,3,…) ಅವಲಂಬಿಸಿದರು. ಕನ್ನಡದ ಅಂಕೆಗಳಿಂದ ಅಂಥ ಫಜೀತಿ ಇಲ್ಲ. ಆದರೂ ತ್ಮಿಳರು ಅರೆಬಿಕ್ ಅಂಕೆಗಳಿಗೆ ಆತುಕೊಂಡರು ಎಂದು ಕನ್ನಡಿಗರು ಕನ್ನಡ ಅಂಕೆಗಳನ್ನು ಕೈಬಿಟ್ಟರು. ತಮಿಳರ ಕುರುಡು ಅನುಕರಣ ಮಾಡಿದರು.

ಈಗ ನೋಡ್ರಿ. ನಮ್ಮ ಕನ್ನಡದಲ್ಲಿ ‘ಸಾರಿಗೆ’ ಎಂದು ಸೂಕ್ತವಾದ ಪದವಿದೆ, Transport ಎಂಬುದಕ್ಕೆ. ನಾವು ಅದನ್ನು ಬಳಸುವದಿಲ್ಲ. ತಮಿಳು ಭಾಷಿಕರು ‘Transport’ ಎಂಬುದಕ್ಕೆ ತಮ್ಮಲ್ಲಿ ಸೂಕ್ತವಾದ ಪದವಿಲ್ಲ ಎಂಬುದನ್ನು ಕಂಡುಕೊಂಡಾಗ ‘ಪೋಕ್ಕುವರುವದು’ ಎಂಬ ಕೃತ್ರಿಮ ಪದವನ್ನು ಸೃಷ್ಟಿಸಿದರು. ಅದರರ್ಥ ‘ಹೋಗಿಬರುವದು’ ಎಂದು. ಈಗ ತಮಿಳಿನಲ್ಲಿ ಅದೇ ಪದ ಪ್ರಚಲಿತಗೊಂಡು ಪ್ರತಿಷ್ಠಾಪಿತವಾಗಿದೆ. ತಮಿಳು ಸರ್ಕಾರ, ತಮಿಳು ಅರಸಾಂಗ ಎನಿಸುತ್ತದೆ. ಗವರ್ನರು ರಾಜ್ಯಪಾಲರಲ್ಲ ತಮಿಳಿನಲ್ಲಿ; ಆಳುವವರ್! ನಾವು ಕನ್ನಡ ಪದಗಳು ಇದ್ದಾಗಲೂ ಬಳಸದೇ ಹೆರವರ ನುಡಿಗಳಲ್ಲಿ ಪದಗಳಿಗೆ ಜೋತು ಬೀಳ್ತೀವಿ. ಎಂಥ ನ್ಯೂನಗಂಡತೆ ಇದು!!

ಮರಾಠಿಗರು ಸಹ ಹೆಚ್ಚೂ ಕಡಿಮೆ ತಮಿಳರಂತೇ ಸ್ವತ್ವದ ಸತ್ವ ಕಾಯ್ದುಕೊಂಡವರು. Airhostessಗೆ ಹವಾಯಿ ಸುಂದರಿ ಎಂಬಂಥ ಅನರ್ಥಕಾರಿ ಪದವನ್ನು ಸೃಷ್ಟಿಸಿ ಬಳಸುತ್ತಾರೆ ಅವರು. ಅವರದೇ ‘ಅಮೃತ’ ಎಂಬ ಡೈಜೆಸ್ಟ್ ದಲ್ಲಿ ಕೆಲವರ್ಷಗಳ ಹಿಂದೆ ಈ ಬಗ್ಗೆ ಒಂದು ಲೇಖನ ಬಂದಿತ್ತು. ‘ಕನ್ನಡಿಗರು ಗಗನಸಖಿ ಎಂಬಂಥ ಅರ್ಥಪೂರ್ಣ ಪದ ಟಂಕಿಸಿದ್ದಾರೆ. ನಮ್ಮ ‘ಹವಾಯೀ ಸೌಂದರಿ’ಯಲ್ಲಿ ಮರಾಠಿತನವೂ ಇಲ್ಲ, ಸೂಕ್ತತೆಯೂ ಇಲ್ಲ’ ಎಂದು ಹಳಹಳಿಕೆ ಇತ್ತು. ಜೀವಾವಧಿ ಶಿಕ್ಷೆ ಕನ್ನಡದಲ್ಲಿದೆ, Life termಗೆ ಸುಸಂವಾದಿಯಾದ ಪದ. ಮೊನ್ನೆ ನಮ್ಮ ಇಲ್ಲಿಯ ಕನ್ನಡದ ಸಾಹಿತಿಗಳೊಬ್ಬರು, ‘ಪ್ರವೀಣ ಮಹಾಜನ್ನಿಗೆ ಜನ್ಮಠೇಪ ಆತಲ್ರಿ’ ಅಂತ ಒರಲಿದ್ರು. ಜೀವಾವಧಿ ಶಿಕ್ಷೆ ಕನ್ನಡದ ನಾಲಗೆಗೆ ಬರದೆ ‘ಜನ್ಮಠೇಪ ಯಾಕೆ ಲೇಪಗೊಳ್ಳಬೇಕು?’ ಭಾಷೆಗೆ ತಪ್ಪುವ ರಾಯರ ಗಂಡ ಹುಟ್ಟಬೇಕಾಗಿದೆ.

ಕನ್ನಡಿಗರ ಲಿಪಿಯಲ್ಲಿ, ಶಬ್ದಕೋಶದಲ್ಲಿ ಎಂಥ ಭಾವನೆಗಳನ್ನೂ ವಿಚಾರಗಳನ್ನೂ ಸಂವಹಿಸುವ ಕ್ಷಮತೆ ಇದೆ. ಸಂಸ್ಕೃತದ ಜೀವಧಾರೆಯು ಪುಷ್ಟಿದಾಯಕವಾಗಿ ಹೊಂದಿಕೊಳ್ಳುವಂತಿದೆ. ಆದರೆ ಕನ್ನಡಿಗರಿಗೆ ಅದನ್ನು ಬಳಸುವಂಥ ಮನಸ್ಸು ಯಾಕೆ ಬಾರದು? ಹೆರವರನ್ನು ಅನುಕರಿಸುವ ರಣಹೇಡಿತನ, ಗತಿಗೇಡಿತನ ಇನ್ನೂ ಎಷ್ಟೊಂದು ಕಾಲ ಇರೋದು?

‘ಕಂಠೀ ಝಳಕೆ ಮಾಳ ಮುಕ್ತಾಫಳಾಚಿ’ ಎಂದರೆ ಏನು? ‘ನುರುವಿ ಪುರುವಿ’ ಎಂದರೇನು? ಮುತ್ತಿನ ಸರ ಇರುತ್ತವೆ ಸರಿ; ಮುಕ್ತಾಫಳ ಎಂಬುದಕ್ಕೆ ಇರುವ ಅರ್ಥ ಏನು? ‘ಮುಕ್ತಾಫಳ’ಕ್ಕೆ ಮರಾಠಿಯಲ್ಲಿಯೇ ವ್ಯಂಗ್ಯಾರ್ಥ ಒಂದಿದೆ. ಅದೇನೆ ಇರಲಿ. ಆರತಿ/ಮಂತ್ರ ಮುಂತಾದವುಗಳು ಭಕ್ತಿ ಭಾವನೆಯಿಂದ ಹಾಡುವದು/ಅನ್ನುವದು ನಮ್ಮ ರೀತಿಯಾಗಿದೆ. ಅದರಲ್ಲೇನೂ ದೋಷವಿಲ್ಲ. ಪ್ರಾರ್ಥನೆಯ, ಸ್ತೋತ್ರದ ರೂಪದಲ್ಲಿಯ ಆರತಿಯು ನಮ್ಮದೇ ಭಾಷೆಯಲ್ಲಿದ್ದರೆ ಅರ್ಥದ ಅರಿವಿನಂದಾಗ ಅದಕ್ಕೆ ಹೆಚ್ಚಿನ ಸಾರ್ಥಕತೆ ಬರುವದಲ್ಲವೇ? ಹಾಗೆ ಮಾಡಿ ನಂತರ ಬೇಕಾದರೆ ಬೇರೆ ಭಾಷೆಯ ಜನಪ್ರಿಯ ಆರತಿ ಅಂದಲ್ಲಿ ಸರಿಯಾದೀತಲ್ಲವೇ? ‘ನುರುವಿ’ಯನ್ನು ಎಲ್ಲಿ ನುರಿಸೋದು ಎಂಬುದನ್ನು ಕೂಡ ಯೋಚಿಸದೇ ಚಪ್ಪಾಳೆ ತಟ್ಟುತ್ತೇವೆ. ಅರ್ಥಪೂರ್ಣವಾದ ಕನ್ನಡದ ಆರತಿಗಳನ್ನು ಅನ್ನಲಿಕ್ಕೆ, ನಮ್ಮ ಬಾಯಿ ಸೆಟಗೊಳ್ಳುತ್ತದೆ. ದ.ರಾ.ಬೇಂದ್ರೆಯವರು ೧೯೩೧ರಷ್ಟು ಹಿಂದೆಯೇ ಬೇರೆ ಭಾಷೆಯ ಗಣಪತಿ ಆರತಿಯನ್ನು ಹಾಡುವ ಕಾಲಕ್ಕೆ ಕನ್ನಡಿಗರನ್ನು ತರಾಟೆಗೆ ತಗೊಂಡಿದ್ದರಲ್ಲದೇ ತಾವೇ ಅನೇಕ ಆರತಿ ಪದಗಳನ್ನು ಬರೆದುಕೊಟ್ಟಿದ್ದರು. (ಅವರ ಮಾತೃಭಾಷೆ ಮರಾಠಿ ಎಂದು ಕನ್ನಡಿಗರು ಮತ್ತೆ ಮತ್ತೆ ಹೇಳುತ್ತಾರೆ.) ಅವರು ನಮ್ಮವರ ಈ ಆರೆತನದ ಮೋಹದ ವಿರುದ್ಧ ಸಿಡಿದು ಹಾಡಿದ್ದು ಏನೆಂದರೆ “ಕನ್ನಡ ದೀಕ್ಷೆಯು ಹೊಂದಿದ ಪ್ರತಿಯೊಬ್ಬನು ಆರ್ಯ, ಕನ್ನಡ ತೇಜವು ಸಾರಲಿ, ಕನ್ನಡಿಗರ ಕಾರ್ಯ,
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ.”

ಮತ್ತೊಬ್ಬ ಆರ್ಯ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ.ಗೋಕಾಕರು ತಮ್ಮ ಮರಾಠಿ ಮಡದಿಯ ಮೋಹವನ್ನು ನಿಷ್ಪ್ರಭಗೊಳಿಸಲು ಹಾಕಿದ್ದ ಒಗಟ ಹೀಗಿತ್ತು.

“ಕ್ವಾಟ್ಯಾಗ ಕ್ವಾಟಿ ಕರ್ನಾಟಕದ ಬಾಗಿಲುಕ್ವಾಟಿ
ಮರಾಠಿ ಒಗಟ ಹಾಕಿದ್ರ ತಿವಿತೇನು ಶಾರದಾನ ಸ್ವಾಟಿ.” (ಶಾರದಾಬಾಯಿ ಅವರ ಮಡದಿ). ಹೆಸರುವಾಸಿ ಪಂಡಿತ, ವಿದ್ವಾಂಸರು, ಎಷ್ಟೊಂದು ಕಳಕಳಿಯಿಂದ ಕನ್ನಡದ ಉಸಿರು ಜ್ವಾಪಾಸನೆ ಮಾಡ್ಯಾರ. ಪಾಪ, ಅವರಂಥ ಸಭ್ಯಸ್ತರು, ಶಿಷ್ಟಾಚಾರ ಸಂಪನ್ನರು ಸಹ ಹೊಟ್ಟಿ ಉರಿಸ್ಕೊಂಡು ಹೀಂಗ ಉದ್ಗರಿಸುವಂಥ ಪಾಳಿಯನ್ನು ಮುಖೇಡಿ ಕನ್ನಡಿಗರು ತಂದಾರ. ಹೌದ್ರೀ; ತಮ್ಮತನವನ್ನು ತಾನs ಕಡೆಗಣಿಸಿದರ ಮೂಲೋಕದಲ್ಲಿ ಎಲ್ಲಿಯೂ ತಮಗ ಠಾವು ಉಳ್ಯಾಣಿಲ್ಲ; ಅಂತರ್ ಪಿಶಾಚಿಯಾಗಿ ಉಳಿಯೋದs ಗತಿ ಆದೀತು. ಚೊಕ್ಕ ಮತವನ್ನು ಸಾರಿದ ನಾಡಿನಲ್ಲಿ ಚೊಕ್ಕ ಕನ್ನಡ ಉಳಿಸಿಕೊಳ್ಳೋದು ಹ್ಯಾಂಗ ಅಂಬೋದನ್ನು ಚಿಂತಿಸಬೇಕಾಗೇದ. ಅರುವತ್ತು ವರ್ಷ ಆದ್ವು ನಮ್ಮ ರಾಜ್ಯ ಆಗಿ; ಆದ್ರೂ ಅರಿವು ಬರಲಿಲ್ಲವೋ ಅಥವಾ ಅಳವು ಉಳಿದೇ ಇಲ್ಲವೋ?

ಕನ್ನಡದಲ್ಲಿ ಮಾತನಾಡುವದಕ್ಕೆ, ಕನ್ನಡದಲ್ಲಿ ಕರೆಯೋಲೆ ಮುದ್ರಿಸಲಿಕ್ಕೆ, ಕನ್ನಡದಲ್ಲಿ ರುಜು ಹಾಕುವದಕ್ಕೆ, ಪತ್ರವ್ಯವಹಾರ ಮಾಡುವದಕ್ಕೆ, ಕನ್ನಡದ ಹಾಡು ಹಾಡುವದಕ್ಕೆ ಕನ್ನಡಿಗರೇ ಹಿಂಜರಿದರೆ, ಹಿಂದೇಟು ಹಾಕಿದರೆ ಕನ್ನಡವನ್ನು ಅರಬರೋ, ಆಂಗ್ಲರೋ, ಅಮೆರಿಕನ್ನರೋ ಬಳಸಿ ಉಳಿಸುವರೇ! ಕನ್ನಡ ತಾಯಿಯ ಮೊಲೆ ಉಂಡ ಮಕ್ಕಳೇ ತಾಯ್ನುಡಿಯನ್ನು ಹೀನಾಯವಾಗಿ ಕಂಡು ಪರಭಾಷೆಗೆ ಪರವಶರಾಗಿ ಹರಕಾಮುರಕಾ ಆದ್ರೂ ಸೈ ‘ನಾವು ಆರೇ ಮಾತಾಡಾವ್ರು, ನಾವು ಇಂಗ್ಲೀಷಿನ್ಯಾಗ ವ್ಯವಹರಿಸಾವ್ರು; ಅರ್ಥ ಆಗಲಿ ಬಿಡಲಿ ಪರಭಾಷೆಯ ಆರತೀ ಪದ ಗಿಳಿಪಾಠ ಮಾಡಿ ದೇವರ ಮೂರ್ತಿಯ ಮುಂದೆ ಧನಿ ತೆಗೆದು ಒದರಾವ್ರು’ ಎಂಬಂಥ ಪರಪ್ರತ್ಯನೇಯ ಬುದ್ಧಿ ಮತ್ತು ತನ್ನತನಕ್ಕೆ ತಿಲಾಂಜಲಿ ತರ್ಪಣಗೈಯುವ ಮನೆಮುರುಕತನ ಮತ್ತು ಕಾರ್ಪಣ್ಯ ಇನ್ನೂ ಎಷ್ಟು ಕಾಲ ಮುಂದುವರಿಸಾವ್ರು? ತಮಿಳು ಮಾತೃಭಾಷಿಕರಾದ ರಾಜರತ್ನಂ, ಮಾಸ್ತಿ; ತೆಲುಗು ತಾಯ್ನುಡಿಯಾಗಿದ್ದ ಡಿ.ಇ.ಜಿ., ಮರಾಠಿ ಮೂಲದವರಾದ ಬೇಂದ್ರೆ, ಶಂ.ಬಾ., ಮಲಯಾಳ ಮಾತೃಭಾಷಿಕರಾದ ಕಸ್ತೂರಿ, ಕೊಂಕಣಿ ಭಾಷಿಕರಾದ ಗೋವಿಂದ ಪೈ ಮುಂತಾದವರು ಕನ್ನಡತನವನ್ನು ದೇವತ್ವವನ್ನು ಆರಾಧಿಸುವಂತೆ ಆರಾಧಿಸಿದ್ದರು. ಕಾನಡಾ ಹೋ ವಿಟ್ಠಲು, ಕರ್ನಾಟಕು ಎಮ್ದು ಜ್ಞಾನೇಶ್ವರರು ಪಾಡಿದ್ದರು. ನಮೋ ಕಾನಡೀ ಭಾಷಾ ಎಂದು ಏಕನಾಥ್ರು ಮಣಿದು ವಂದಿಸಿದ್ದರು; ಪುಲ, ಖಾಂಡೇಕರ್, ಶಿರವಾಡ್ಕರಾದಿಗಳು ಗೌರವದಿಂದ ಕನ್ನಡವನ್ನು ಮನ್ನಿಸಿದವರು. ಅಂಥವರ ಅರಿವಿಗೆ ಬಂದದ್ದು ಸ್ವಂತ ಕನ್ನಡ ಕುವರರ (ಕುವರಿಯರೂ ಸೇರಿದ್ದಾರೆ ಇದರಲ್ಲಿ) ತಲೆಗೆ ಹೊಳೆಯುವದಿಲ್ಲವೇಕೆ? ಕನ್ನಡದ ಕಡೆಗೆ ಬೆನ್ನು ತಿರುಗಿಸಿ ತಮಗರಿವಿಲ್ಲದ ಹೆರವರ ನುಡಿಗಳಲ್ಲಿ ಬಡಬಡಿಸುವ ದರಿದ್ರತನ ಯಾಕೆ?

ಕವಿಗೋಷ್ಠಿ ಅಂತ ಇಟ್ಟುಕೊಂಡರೆ, ನೂರಾರು ‘ಕವಿ’ಗಳು ತಮ್ಮ ತಥಾಕಥಿತ ಕಾವ್ಯ ವಾಚಿಸಿ ಕೊರೆಯಲು ಸಜ್ಜಾಗುತ್ತಾರೆ. ಆದರೆ ಕನ್ನಡದಲ್ಲಿ ನವನವೀನ ರೀತಿಯಲ್ಲಿ ಆರತಿ ಪದಗಳನ್ನು ಬರೆಯುವವರು, ಹಬ್ಬ ಹರಿದಿನಗಳಲ್ಲಿ ಸೂಕ್ತ ಶುಭಾಶಯಗಳನ್ನು ಕನ್ನಡದಲ್ಲಿ ಹೊಸೆದು ಶುಭಾಶಯ ಪತ್ರಗಳನ್ನು ಹೊರತರುವವರು, ಮದುವೆ ಮುಂಜಿವೆಗಳಲ್ಲಿ ಹೊಸ ಬಗೆಯ ಕನ್ನಡ ಒಗಟ ಸಾದರಪಡಿಸುವವರು ಎಷ್ಟು ಜನರಿದ್ದಾರೆ? ಕಲ್ಪನಾಶಕ್ತಿಯ ಕೊರತೆಯೇ, ಅಂಜುಬುರುಕತನದ ಪರಮಾವಧಿಯೋ ಹೆರವರ ಚಾಲ್ತಿಯಲ್ಲಿದ್ದ ಪದಗಳನ್ನು ಪುಟಪುಟಿಸುವ , ಅರ್ಥ ತಿಳಿಯದೇ ಇದ್ದರೂ ಸೈ, ಅಂದು ತೋರಿಸಿ ಬಿಡುಗಡೆಯ ನಿಟ್ಟುಸಿರು ಬಿಡುವ ಗತಿಗೇಡಿತನ, ಮತಿಗೇಡಿತನ ಇನ್ನೂ ಎಷ್ಟು ಕಾಲ ಮುಂದುವರಿಯುವದು?

ದ.ರಾ. ಬೇಂದ್ರೆಯವರು ಅಳ್ನಾವರದ ಕರ್ನಾಟಕ ಸಂಘದಲ್ಲಿ ಗಣೇಶೋತ್ಸವದಲ್ಲಿ (೧೯೩೧)ರಲ್ಲಿ ‘ಸುಖಕರ್ತಾ ದುಃಖಕರ್ತಾ’ ಹಾಡಿದ್ದು ಕೇಳಿ ಕನಲಿ ಕೆಂಡವಾಗಿ ಕನ್ನಡದಲ್ಲಿ ಗಣಪನ ಆರತಿಗಳನ್ನು ಬರೆದರು. ಕವಿಗಳೆಂದು ಹೇಳಿಕೊಳ್ಳುವವರು, ಸಾಹಿತಿಗಳೆಂದು ಮೆರೆಯುವವರು ಈ ಮಾದರಿಯನ್ನ ಮುಂದುವರಿಸಬೇಡವೇ? ಗಣಪತಿಯ ಮುಂದೆ ‘ಗಣಪತಿ ಬಪ್ಪಾ ಮೋರಯಾ ಪುಢಚ್ಯಾ ವರ್ಷೀ ಲೌಕರ್ ಯಾ’ ಅಂತ ಮರಾಠಿ ತಿಳಿಯದ ಕನ್ನಡ ಹುಡುಗರೂ ಕೂಗ್ತಾವೆ. ಈ ಘೋಷಣೆಗೆ ಏನರ್ಥ? ಭಾದ್ರಪದ ಶುದ್ಧ ಚತುರ್ಥಿಯಂದೇ ಮತ್ತೆ ಗಣಪತಿ ಪ್ರತಿಷ್ಠಾಪನೆ ಆಗಬೇಕೆಂದು ನಿಗದಿಯಾಗಿರುವಾಗ ಬೇಗನೇ ಹೇಗೆ ಬರಬಹುದು? ನಡುವೆ ಅಧಿಕಮಾಸ ಬಂದರಂತೂ ಆತ ಬರುವದಕ್ಕೆ ತಡವೇ ಆದೀತು. ಕೇವಲ ಪ್ರಾಸಕ್ಕಾಗಿ ಇಂಥ ಘೋಷಣೆಗಳನ್ನು ಅವರು ಹೊಸೆಯುತ್ತಾರೆ. ‘ಮಾಡಿವರಚೀ ಅಕ್ಕಾ ಮಾರಾ ಪುಲೀಚಾ ಶಿಕ್ಕಾ’, ‘ಚಾಂದೀಚ್ಯಾ ತಾಟಾತ್ ರೂಪಯೆ ಠೇವಿಲೆ ಸತ್ತರ್, ಸಖಾರಾಮರಾವಾನಾ ಲಾವತೇ ಅತ್ತರ್’ ಎಂಬಂಥ ಅರ್ಥವಿರಹಿತ ಘೋಷಣೆ, ಒಗಟ ಅವರಲ್ಲಿ ನಡೆಯಬಹುದು. ಅಂಥವನ್ನು ಆಲಿಂಗಿಸಿ ಅನುಸರಿಸಬೇಕೆ? ಹಾಗೆ ಮಾಡುವದು ‘ಸುಧಾರಕತನವೇ?’

ನಾನಂತೂ ಕಳೆದ ಮೂರು ದಶಕಗಳಿಂದ ಈ ಕೆಳಗಿನ ಆರತಿ ಪದವನ್ನು ನಮ್ಮ ಗಣಪತಿಯ ಮುಂದೆ ಹಾಡುತ್ತೇನೆ.


ಗಜಾನನ ನಿಜ ಆರತಿ
ಸಿದ್ಧಿ ವಿನಾಯಕ ಬುದ್ಧಿ ಪ್ರದಾಯಕ
ಜಯ ಜಯ ಮಂಗಳ ಮೂರುತಿ
ಸಂಕಟಹಾರಕ ಪಾಪವಿನಾಶಕ
ಬೆಳಗುವೆ ನಿನಗೆ ಆರತಿ ನಾ ಬೆಳಗುವೆ ನಿನಗೆ ಆರತಿ ||ಪ||
ಆನೆಯ ಮೊಗದ ಮೊರಗಳ ಕಿವಿಯ
ಒಂದೇ ದಾಢೆಯ ಠೀವಿಯು, ಒಂದೇ ದಾಢೆಯ ಠೀವಿಯು!
ಸಾನುರಾಗದಿ ಭಕ್ತರ ಸಲಹುವ ನಿತ್ಯ ನಿರಂತರ ನೀವಿಯು
ಶಿಷ್ಟರಕ್ಷಕ ಕಷ್ಟನಿವಾರಕ
ಜಯ ಜಯ ಮಂಗಳ ಮೂರುತಿ ಬೆಳಗುವೆ……..||೧||
ಲಂಬೋದರನೆ ಹೇರಂಬದೇವನೆ
ನೀಡೆಮಗೆ ಅವಲಂಬನ, ನೀಡೆಮಗೆ ಅವಲಂಬನ
ಅಂಬೆಯ ತನುಜನೆ ಇಂಬಾಗು ಎನೆ
ತುಡಿಯುತ್ತಿದೆ ಈ ಹೃನ್ಮನ||
ಅನಾಯಕರಿಗೆ ನೀನೇ ನಾಯಕ ಜಯ ಜಯ ಮಂಗಳ ಮೂರುತಿ ಬೆಳಗುವೆ ನಿನಗೆ……..||೨||

ಆರತಿಯ ನಂತರ ಭಜನೆ
ಮಂಗಳ ಮೂರುತಿ ಮೋರಯ್ಯಾ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ | ಹರುಷವ ನಮಗೆ ತಾರಯ್ಯ||
ಕಂಗಳು ಕಾಣಲಿ ನಿನ್ನಯ ಮೂರುತಿ | ಕಿವಿಗಳು ಕೇಳಲಿ ನಿನ್ನಯ ಕೀರುತಿ ||
ಭಕ್ತರ ಮನದಲಿ ನಿನ್ನಾವಾಸ | ನಿತ್ಯ ನಿರಂತರ ನಿನ್ನದೇ ಧ್ಯಾಸ ||
ನಿತ್ಯವು ಪೂಜನೆ ನಿತ್ಯವು ಭಜನೆ | ತನುಮನ ಅರ್ಪಿತ ನಿತ್ಯಾರಾಧನೆ ||
ಇದುವೇ ನಮ್ಮಯ ನಿತ್ಯ ಕಾಯಕ | ಶರಣು ಸಿದ್ಧಿ ಶ್ರೀ ವಿನಾಯಕ ||
ಮಂಗಳ ಮೂರುತಿ ಮೋರಯ್ಯ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ || ಹರುಷವ ನಮಗೆ ತಾರಯ್ಯ||
*********************************************************
ಇದೇ ತೆರನಾಗಿ ನವರಾತ್ರಿಯಲ್ಲಿ ಶ್ರೀ ವೆಂಕಟೇಶನಿಗೆ, ಶನಿವಾರದಂದು ಮಾರುತಿಯ ಭಜನೆಯ ಕಾಲಕ್ಕೆ ಹಣಮಪ್ಪನಿಗ್ ಕನ್ನಡದಲ್ಲಿಯೇ ಆರತಿ ರಚಿಸಿ ಹಾಡುತ್ತೇನೆ. ಈ ಯಾವ ದೇವರೂ ತಕ್ರಾರು ಮಾಡಿಲ್ಲರಿ ; ಭಾಳ ಖುಷಿಯಿಂದ ಕೇಳಿ ಪ್ರಸನ್ನರಾಗಿ ನನ್ನನ್ನು ಕಾಪಾಡುತ್ತ ಬಂದಿದ್ದಾರೆ. ನಾನು ಹಾಡುವ ಈ ಆರತಿ ಪದಗಳನ್ನು ಕೇಳಿದ ನನ್ನ ಇಷ್ಟಮಿತ್ರರು, ನಂಟರು ಕೂಡ ಕನ್ನಡದ ಆರತಿಗಳನ್ನು ಅನ್ನುವಷ್ಟು ಧೈರ್ಯವನ್ನು , ಪ್ರೇರಣೆಯನ್ನು ಆಯಾ ದೇವರ ದಯದಿಂದ ಹೊಂದಿದ್ದಾರೆ ಎಂದು ಹೇಳಲು ನನಗೆ ಸಂತಸವೆನಿಸುತ್ತದೆ. ಯಾವ ದೇವರ ಬಗ್ಗೆಯೂ ನಾನು ಕನ್ನಡದಲ್ಲಿ ಆರತಿ ಬರೆದು ಕೊಡಬಲ್ಲೆ. ಹಾಡುವ ಧೈರ್ಯವನ್ನು ಮಾಡುವ ಕನ್ನಡ ಭಕ್ತರು ಬೇಕು.

ನೋಡಿ, ಕರ್ನಾಟಕ ರಾಜ್ಯ ನಿರ್ಮಿತಿಯ ಚಿನ್ನದ ಹಬ್ಬದ ಸಂದರ್ಭದಲ್ಲಿಯೂ ‘ಕ್ನ್ನಡಿಗರಲ್ಲಿ ಸ್ವಭಾಷಾ ಅಭಿಮಾನ ತೀರ ಕಡಿಮೆ’ ಎಂಬ ಅದೇ ಹಳೆಯ ಅವಹೇಳನಕಾರಿ ಪದ ಕೇಳುವ ದೌರ್ಭಾಗ್ಯ ಉಳಿದುಕೊಂಡು ಬಂದಿದೆ. ವೈಯ್ಯಕ್ತಿಕ ಮಟ್ಟದಲ್ಲಿಯಾದರೂ ತಿಳಿದವರು, ಸೂಜ್ಞರು, ಸುಶಿಕ್ಷಿತರು ವಿಧಾಯಕ ರೀತಿಯಿಂದ ತಾಯ್ನಾಡಿನ ಹೆಮ್ಮೆಯನ್ನು ದರ್ಶಿಸುವ, ಪ್ರದರ್ಶಿಸುವ ಎಚ್ಚರ ಹೊಂದಿರಬೇಕಲ್ಲವೇ? ‘ದೈವವಿದ್ದೂ ದತ್ತಗೇಡಿ’ ಎನ್ನುವ ನುಡಿಗೆ ಪಕ್ಕಾಗದಿರೋಣ; ಸ್ವಾಭಿಮಾನಿ ಹೆರವರ ಪಕ್ಕದಲ್ಲಿದ್ದೂ ಅವರಿಂದ ಪಕ್ಕಾತನ ಕಲಿಯದಿದ್ದರೂ ಹೇಗೆ? ಕನ್ನಡಿಗರಿಗೆ ಅಭಿಮಾನಿಗಳಾಗಿ ಎಂದು ಹೇಳುವದೇ ಒಂದೇ ಗೊಮ್ಮಟನಿಗೆ ಚಡ್ಡಿ ಏರಿಸೋದು ಒಂದೇ ಎಂದು ಲೇವಡಿ ಮಾತು ಇದೆ. ಅದಕ್ಕೆ ಎಡೆ ನೀಡದಂತೆ ಎದೆಗಾರಿಕೆ ತೋರಿಸಬೇಕಿದೆ. ಪುನಶ್ಚ ‘ಹರಿ ಓಂ’ ಎಂದು ಸಜ್ಜಾಗಬೇಕಿದೆ ಸರೀನಾ?
---ಅನಂತ ಕಲ್ಲೋಳ

Wednesday, June 25, 2008

ಶಂಕರ ಭಟ್ಟರ ಪದಕ್ರಾಂತಿ

ಶಂಕರ ಭಟ್ಟರು ಕನ್ನಡ ನುಡಿಯಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳೇ ಬಳಕೆಯಲ್ಲಿ ಬರಬೇಕೆಂದು ಹೇಳುತ್ತಾರೆ. ಈ ಹೇಳಿಕೆಗೆ ಸ್ವಾಗತವಿದೆ. ಕನ್ನಡದಲ್ಲಿ ಇಲ್ಲದ ಹೊಸ ಪದಗಳನ್ನು ರೂಪಿಸುವಾಗ ಕ್ಲಿಷ್ಟ ಸಂಸ್ಕೃತ ಪದಗಳಿಗೆ ಜೋತು ಬೀಳದೆ, ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಲು ಸೂಚಿಸುತ್ತಾರೆ:
ಉದಾಹರಣೆ:
ಪೋಲೀಸ.……ಆರಕ್ಷಕ
ಇಂಜನಿಯರ…..ಅಭಿಯಂತ

ಇದರಂತೆ, ವೈಜ್ಞಾನಿಕ ಬರಹಗಳಲ್ಲಿ ಸಹ ಹೆಚ್ಚೆಚ್ಚು ಕನ್ನಡ ಪದಗಳನ್ನು ಬಳಸಲು ಅವರು ಕರೆ ಕೊಡುತ್ತಿದ್ದಾರೆ. ಇವೆಲ್ಲ ಸ್ವಾಗತಾರ್ಹ ಸಲಹೆಗಳು. ಈಗಾಗಲೇ ನಮ್ಮ ಅನೇಕ ಸತ್ವಶಾಲಿ ವಿಜ್ಞಾನ-ಬರಹಗಾರರು ಇಂತಹ ಪದಗಳನ್ನು ಬಳಕೆಯಲ್ಲಿ ತಂದಿದ್ದಾರೆ. ಉದಾ: ಅರಿವಳಿಕೆ, ಕೀಳರಿಮೆ, ಕುಲಾಂತರಿ ಇತ್ಯಾದಿ.

ಶಂಕರ ಭಟ್ಟರು ದಿನಪತ್ರಿಕೆಗಳಲ್ಲಿ ಅನೇಕ ಸಂಸ್ಕೃತ ಪದಗಳನ್ನು ಕೇವಲ ಘನತೆಗಾಗಿ ಉಪಯೋಗಿಸುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಸಂಸ್ಕೃತ ಪದಗಳನ್ನು ಘನತೆಗಾಗಿ ಉಪಯೋಗಿಸುವದು ನಿಜವೇ ಆದರೂ, ಇದು ಅನಿವಾರ್ಯವಾಗಿದೆ.
ಉದಾಹರಣೆಗೆ: ‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?

ಭಾರತೀಯ ಭಾಷೆಗಳಿಗೆ ಒಂದು advantage ಇದೆ. ‘ಘನತೆ’ ಬೇಕಾದಾಗ ಅಥವಾ ಮುಜುಗರ ತಪ್ಪಿಸುವಂತಹ ಪದಗಳನ್ನು ಬಳಸಬೇಕಾದಾಗ ಸಂಸ್ಕೃತ ಭಾಷೆಯನ್ನು ನಾವು ಅವಲಂಬಿಸಬಹುದು. ಈ advantage ಇಂಗ್ಲಿಶ ಭಾಷೆಗಿಲ್ಲ. ವೈಜ್ಞಾನಿಕ ಪುಸ್ತಕಗಳಲ್ಲಿ ಲೈಂಗಿಕ ಪದಗಳನ್ನು ಬಳಸುವಾಗ, ನಾವು ಸರಳವಾಗಿ ಸಂಸ್ಕೃತ ಪದಗಳನ್ನು ಬಳಸಬಹುದು. ಇಂಗ್ಲಿಶ್ ಭಾಷೆಯಲ್ಲಿ ಇದು ಸಾಧ್ಯವಿಲ್ಲ. ಅಷ್ಟೇ ಏಕೆ, ಹೊಲಸು ಬೈಗಳನ್ನು ಹೇಳಬೇಕಾದಾಗ ಸಹ, ನಾವು ಇಂಗ್ಲಿಶ್ ಭಾಷೆಯ ಪದವನ್ನೇ ಬಳಸಿ ಮುಜುಗರ ತಪ್ಪಿಸಿಕೊಳ್ಳುತ್ತೇವೆ. ಉದಾಹರಣೆ: shit. ಈ ಸೌಲಭ್ಯ ಇಂಗ್ಲಿಶ್ ಅಥವಾ ಅಮೆರಿಕನ್ನರಿಗೆ ಇಲ್ಲವಲ್ಲ!

ವೀರಶೈವ ಚಳುವಳಿಯು ಕರ್ನಾಟಕದಲ್ಲಿ ಕೇವಲ ಸಾಮಾಜಿಕ ಕ್ರಾಂತಿಯನ್ನಷ್ಟೇ ಮಾಡಲಿಲ್ಲ. ವಚನಸಾಹಿತ್ಯವೆನ್ನುವ ಸೊಬಗಿನ ಸೃಷ್ಟಿಯನ್ನೇ ಮಾಡಿತು. ಈ ವಚನ ಸಾಹಿತ್ಯವನ್ನು ರಚಿಸಿದವರಲ್ಲಿ ಹೆಚ್ಚಿನವರು the so called ‘ಕೆಳವರ್ಗದವರು’. ಆದರೆ ಇವರ ವಚನಗಳಲ್ಲಿ ಸಂಸ್ಕೃತ ಪದಗಳಿಲ್ಲವೆ?

ಸಂಸ್ಕೃತ ಪದಗಳ ಅವಶ್ಯಕತೆಯನ್ನು ಅರಿತುಕೊಳ್ಳಲು ಬಸವಣ್ಣನವರ ಈ ವಚನವನ್ನು ನೋಡಿರಿ:

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಶಂಕರ ಭಟ್ಟರು ಈ ವಚನವನ್ನು ಹೀಗೆ ಬರೆಯುತ್ತಿದ್ದರೇನೊ?

‘ಆನೆ ದೊಡ್ಡದು, ಆದರೆ ಚುಚ್ಚುಗ ಸಣ್ಣದೆ?
ಕತ್ತಲೆ ದಟ್ಟವಾಗಿದೆ, ಆದರೆ ಸೊಡರು ಸಣ್ಣದೆ?’

ಆದುದರಿಂದ ಸಂಸ್ಕೃತ ಹಾಗೂ ಇಂಗ್ಲಿಶ್ ಅಥವಾ ಮತ್ತಾವದೇ ಭಾಷೆಯ ಪದಗಳನ್ನು ಕನ್ನಡದಲ್ಲಿ ಸಂಕೋಚವಿಲ್ಲದೇ ಬಳಸೋಣ.ಬಳಸಲು ನಮ್ಮ ಸಂಕೋಚವನ್ನು ತೊರೆಯೋಣ.

ಇಷ್ಟು ದಿನ ಶಂಕರ ಭಟ್ಟರ ಜೊತೆಗೆ ಮಲ್ಲಯುದ್ಧಕ್ಕಿಳಿದು ಸಾಕಾಗಿದೆ. ಇದೀಗ ಸಾಕು ಮಾಡುತ್ತಿದ್ದೇನೆ.
ಕನ್ನಡದ ಖ್ಯಾತ ಹಾಸ್ಯ ಲೇಖಕ ಶ್ರೀ ಅನಂತ ಕಲ್ಲೋಳ ಅವರು ಕನ್ನಡ ಬರಹದ ಬಗೆಗೆ ಬರೆದ ಲೇಖನವೊಂದನ್ನು ಮಂಗಳಶ್ಲೋಕದ ರೂಪದಲ್ಲಿ ಮುಂದಿನ postನಲ್ಲಿ ಕೊಟ್ಟು ಮಂಗಳ ಹಾಡುತ್ತೇನೆ. ತಾಳ್ಮೆಯಿಂದ ಸಹಭಾಗಿಗಳಾದ ತಮಗೆಲ್ಲರಿಗೂ ನನ್ನ ವಂದನೆಗಳು.

Monday, June 23, 2008

ಶಂಕರ ಭಟ್ಟರ ವಾದದಲ್ಲಿಯ ದೋಷಗಳು

ಶಂಕರ ಭಟ್ಟರ ಪ್ರತಿಪಾದನೆಯಲ್ಲಿ ಕೆಳಗಿನ ಲೋಪದೋಷಗಳಿವೆ:

‘ಮೇಲ್ವರ್ಗ’ದವರು ‘ಕೆಳವರ್ಗ’ದವರನ್ನು ಶೋಷಿಸುವ ಉದ್ದೇಶದಿಂದಲೇ ಕನ್ನಡ ಲಿಪಿಯಲ್ಲಿ ೫೦ ಅಕ್ಷರಗಳನ್ನು ಇಟ್ಟುಕೊಂಡಿದ್ದಾರೆ ಎಂದು ಭಟ್ಟರು ಪ್ರತಿಪಾದಿಸುತ್ತಾರೆ.(ಪುಟ ೧: ಸಾಲು ೨, ಸಾಲು ೧೭; ಪುಟ ೨೬: ಸಾಲು ೮; ಪುಟ:೫೯,ಸಾಲು ೨; ಪುಟ ೯೩: ಸಾಲು ೨,ಸಾಲು ೨೫ ಇತ್ಯಾದಿ).

ಹೀಗೆ ಹೇಳುವದು absolutely presumptive statement ಹಾಗು ಲಿಪಿ ಕಡಿತಕ್ಕೆ ತಾಂತ್ರಿಕ ಕಾರಣವಾಗುವದಿಲ್ಲ. ಕನ್ನಡದಲ್ಲಿ ಇತರ ಭಾರತೀಯ ಭಾಷೆಗಳ ಹಾಗೂ ಅನೇಕ ಅಭಾರತೀಯ ಭಾಷೆಗಳ ಪದಗಳು ಸಮ್ಮಿಳಿತವಾಗಿವೆ. ಇವುಗಳ ಸರಿಯಾದ ಉಚ್ಚಾರ ಮಾಡಲು ಈಗ ಕನ್ನಡದಲ್ಲಿರುವ ಧ್ವನಿಸಂಕೇತಗಳನ್ನು ನಾವು ಉಳಿಸಿಕೊಂಡರೆ ಸಾಕು. (ಉದಾ:ಖುದಾ, ಖಾನದಾನೀ, ಖೋಮೆನಿ, ಘೋಟಾಳೆ ಇ.)

ಎರಡನೆಯದಾಗಿ ಅವಶ್ಯವಾದರೆ, ಇನ್ನೂ ಹೆಚ್ಚಿನ ಧ್ವನಿಸಂಕೇತಗಳನ್ನೂ ನಾವು ರೂಢಿಸಿಕೊಳ್ಳಬೇಕು. ಉದಾಹರಣೆಗಾಗಿ, ಇಂಗ್ಲೀಶಿನಲ್ಲಿರುವ doctor, profit ಮೊದಲಾದ ಪದಗಳನ್ನು ಬರೆಯುವಾಗ ನಾಗರಿ ಲಿಪಿಯಲ್ಲಿ ‘ಡಾ’ ಅಥವಾ ‘ಪ್ರಾ’ ಅಕ್ಷರಗಳ ಮೇಲ್ಗಡೆಯಲ್ಲಿ ಅರ್ಧಚಂದ್ರದ ಸಂಕೇತವನ್ನು ಬಳಸುತ್ತಾರೆ. ಕನ್ನಡದಲ್ಲೂ ಸಹ ಇದನ್ನು ಬಳಸಲಾಗುತ್ತಿತ್ತು. ಇದೀಗ ಅರ್ಧಚಂದ್ರ ಸಂಕೇತಕ್ಕೆ ಕನ್ನಡದಲ್ಲಿ ಅರ್ಧಚಂದ್ರಪ್ರಯೋಗವಾಗಿದ್ದರಿಂದ, ಈ ಧ್ವನಿಯನ್ನು ಸಮರ್ಥವಾಗಿ ಬರೆಯಲು ಆಗುತ್ತಿಲ್ಲ.
ಒಂದು ಉದಾಹರಣೆ: ಕನ್ನಡಿಗರಲ್ಲಿ John ಹೆಸರಿನ ವ್ಯಕ್ತಿಗಳು ಇದ್ದಾರಷ್ಟೆ. ಇವರು ತಮ್ಮ ಹೆಸರನ್ನು ಜಾನ್ ಎಂದು ಬರೆದುಕೊಂಡರೆ ಅದನ್ನು ಅನೇಕರು ಇಂಗ್ಲೀಶಿನ ‘ಒ’ಕಾರವಿಲ್ಲದೇ ಉಚ್ಚರಿಸುತ್ತಾರೆ. ಇದನ್ನು ತಪ್ಪಿಸಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ John ಪದವನ್ನು ‘ಜೋನ್’ ಎಂದು ಬರೆಯುತ್ತಾರೆ. ಆದರೆ Joan ಎನ್ನುವ ಹೆಸರೂ ಇದೆ ಎನ್ನುವದನ್ನು ಗಮನಿಸಿ. ಇಂತಹ ಆಭಾಸವನ್ನು ತಪ್ಪಿಸಲು ‘ಜಾ’ ಅಕ್ಷರದ ಮೇಲೆ ಅರ್ಧಚಂದ್ರ ಕೊಡುವದೇ ಸರಿಯಾದ ಉಪಾಯ.
ಮತ್ತೊಂದು ಉದಾಹರಣೆ: ಕನ್ನಡಿಗರು Collage ಹಾಗು College ಅನ್ನುವ ಎರಡು ವಿಭಿನ್ನ ಪದಗಳನ್ನು ಮಾತಿನಲ್ಲಿ ಬಳಸುತ್ತಾರೆ ಹಾಗು ಬರಹದಲ್ಲೂ ಉಪಯೋಗಿಸುತ್ತಾರೆ. ಒಂದಕ್ಕೆ ಕೊಲೇಜ ಎಂದು ಬರೆಯುವದು ಸರಿ. ಮತ್ತೊಂದಕ್ಕೂ ಹಾಗೆ ಬರೆಯುವದು ತಪ್ಪಲ್ಲವೆ? ಅದಕ್ಕೆ ಬೇಕು ಮೇಲೊಂದು ಅರ್ಧಚಂದ್ರವುಳ್ಳ ‘ಕಾ’. ಅರ್ಥಾತ್, ನಮಗೆ ಹೆಚ್ಚೆಚ್ಚು ಧ್ವನಿಸಂಕೇತಗಳು ಬೇಕಾದಂತೆ, ಅವುಗಳನ್ನು ಸೃಷ್ಟಿಸಿಕೊಂಡರೆ ತಪ್ಪೇನು? ಲಿಪಿ ಹೆಚ್ಚೆಚ್ಚು ವಿಕಾಸವಾದರೆ ಅದರಲ್ಲಿ ತಪ್ಪೇನಿದೆ?

ಶಂಕರ ಭಟ್ಟರು ತಮಿಳು ಲಿಪಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. (ಮೊದಲ ಮುದ್ರಣ, ಪುಟ ೬೮ರಿಂದ ಪುಟ ೭೩ರವರೆಗೆ).
ಮೂಲ ಬ್ರಾಹ್ಮಿ ಲಿಪಿಯಿಂದ ಭಾರತೀಯ ಲಿಪಿಗಳು ವಿಕಾಸಗೊಳ್ಳುವ ಸಂದರ್ಭದಲ್ಲಿ, ಒಂದು ಕಾಲದಲ್ಲಿ ತಮಿಳು ಹಾಗು ಕನ್ನಡದಲ್ಲಿ ಕೆಲವೇ ಅಕ್ಷರಗಳು ಇದ್ದಿರಬಹುದು. ಆದರೆ ಕನ್ನಡ ಲಿಪಿಯು ವಿಕಾಸಗೊಂಡಿತು. ತಮಿಳು ಲಿಪಿ ಹಳೆಯ ಸ್ಥಿತಿಯಲ್ಲಿಯೇ ಉಳಿದುಕೊಂಡಿತು. ಇದನ್ನು ಮಂಗನಿಂದ ಮಾನವನಾದ(=ಕನ್ನಡ) ಹಾಗು ಮಂಗನಾಗಿಯೇ ಉಳಿದ (=ತಮಿಳು) ಡಾರ್ವಿನ್ ವಿಕಾಸವಾದಕ್ಕೆ ಹೋಲಿಸಬಹುದು. ನನ್ನ ಈ ಲೇವಡಿ ಮಾತಿಗೆ ಚಕೋರರಂತಹ sensitive persons ವಿರೋಧ ವ್ಯಕ್ತಪಡಿಸಬಹುದು. ಆದರೆ ನನ್ನ ಮಾತನ್ನು ಸ್ಪಷ್ಟ ಪಡಿಸಲು ನನಗೆ ಬೇರೊಂದು ಹೋಲಿಕೆ ಹೊಳೆಯುತ್ತಿಲ್ಲ. I apologise.

ಹೀಗಾಗಿ ಕನ್ನಡದಲ್ಲಿ ಕೆಳೆಯ/ಗೆಳೆಯ, ತಬ್ಬು/ದಬ್ಬು ಮೊದಲಾದ ಭಿನ್ನ ಅರ್ಥವುಳ್ಳ ಪದಗಳು ಸಾಧ್ಯವಾದರೆ ಇದು ತಮಿಳಿನಲ್ಲಿ ಸಾಧ್ಯವಿಲ್ಲ. ( ‘ಕೆಳೆಯನು ಕೆಳದಿಯನ್ನು ತಬ್ಬಿದನು’ ಎನ್ನುವ ವಾಕ್ಯವನ್ನು ‘ಗೆಳೆಯನು ಗೆಳತಿಯನ್ನು ದಬ್ಬಿದನು’ ಎಂದೂ ಸಹ ತಮಿಳಿನಲ್ಲಿ ಓದಬಹುದು ಅಂತ ಕಾಣುತ್ತೆ).

ಶಂಕರ ಭಟ್ಟರೆ ಸ್ವತಃ ತಮ್ಮ ವಾದವನ್ನು ಮಂಡಿಸುತ್ತ, ತಮಿಳಿನಲ್ಲಿ ಯಾವ ರೀತಿಯಿಂದ ಸಂಸ್ಕೃತ ಪದಗಳನ್ನು ತಮಿಳಿನಲ್ಲಿ ಬರೆಯುತ್ತಾರೆ ಹಾಗೂ ಓದುತ್ತಾರೆ ಎನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ.
ಭಟ್ಟರು ಕೊಟ್ಟ ಉದಾಹರಣೆಗಳು:

ಪುಟ ೭೧:
ಸಂಸ್ಕೃತ ಪದ--- ತಮಿಳು ಪದ
ಬುದ್ಧಿ------ ಪುತ್ತಿ
ಭಕ್ತಿ------ ಪಕ್ತಿ
ಧಾನ್ಯ----- ತಾನಿಯ
ಅಧಿಕ----- ಅತಿಕ
ಶೀಘ್ರ------ ಚೀಕ್ಕಿರ
ಗೋಷ್ಠಿ----- ಕೋಷ್ಟಿ
ಮುಖ್ಯ----- ಮುಕ್ಕಿಯ
ಮಾಂಗಲ್ಯ----------- ಮಾಙ್ಕಲ್ಯ
ಸಂದೇಹ----- ಚನ್ತೇಕ
ಪೂಜಾರಿ----- ಪೂಚಾರಿ
ತಾಂಬೂಲ----------- ತಾಮ್ಪೂಲ
ತಾಂಡವ------ ತಾಣ್ಟವ
ಋಷಿ------- ರಿಷಿ
ಕೃಷ್ಣ------ ಕಿರುಷ್ಣ
ತೃಪ್ತಿ------ ತಿರುಪ್ತಿ
ದುರದೃಷ್ಟ---------- ತುರತಿರುಷ್ಟ
ಪ್ರಯಾಣ------------ ಪಿರಯಾಣ
ಪ್ರಯೋಗ------------ ಪಿರಯೋಕ
ದ್ವಾಪರ----- ತುವಾಪರ
ಗ್ರಾಮ------- ಕಿರಾಮ
ಧ್ಯಾನ------ ತಿಯಾನ
ಬ್ರಹ್ಮ------ ಪಿರಮ್ಮ
ಉಪದೇಶ------------ ಉಪತೇಚ
ದರ್ಶನ------ ತರಿಚನ
ಅತಿಶಯ------ ಅತಿಚಯ
ದಿಶಾ------- ತಿಚೈ
ಗೌರವ------ ಕೌರವ
ಗುಣ------- ಕುಣ
ದುಃಖ------ ತುಕ್ಕ
ದೀಪ------- ತೀಪ

ಭಟ್ಟರ ಪ್ರಕಾರ, ಕನ್ನಡಿಗರಿಗೂ ಸಹ ಇದೇ ಸರಿಯಾದ ಮಾರ್ಗ. (ತಮಿಳು ಜನಾಃ ಯೇನ ಗತಾ: ಸಃ ಪಂಥಾಃ?)
ಭಟ್ಟರೆ,ನೀವು ಪ್ರಗತಿಚಕ್ರವನ್ನು reverse ಮಾಡುತ್ತೇನೆಂದರೆ, ಅದು ತಪ್ಪು ಕಣ್ರೀ.
ಜಗತ್ತು ಎಷ್ಟು fast ಆಗಿ ಓಡ್ತಾ ಇದೆ ಅನ್ನುವದು ನಿಮಗೆ ಕಾಣೋದಿಲ್ವೆ? ಕನ್ನಡಿಗರು ಈಗ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಕನ್ನಡಕ್ಕೆ ಬೇರೆ ಬೇರೆ ಭಾಷೆಗಳ ಪದಗಳನ್ನು ತರಬೇಕಾಗಿದೆ. ಆ ಸಂದರ್ಭದಲ್ಲಿ ಬೇರೆ ಭಾಷೆಯ ಪದಗಳ ಮೂಲಧ್ವನಿಗೆ ನಾವು ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು.

ಒಂದು ಉದಾಹರಣೆ: ‘ಯೇಶು’ ಇದು ಪ್ರೀತಿ ಹಾಗು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಪುಣ್ಯಾತ್ಮನ ಸರಿಯಾದ ಹೆಸರು. ಇದನ್ನು ಫ್ರೆಂಚ್ ಭಾಷೆಯಲ್ಲಿ ಬಹುಶ: JESUS ಎಂದು ಬರೆದು ‘ಯೇಶು’ ಎಂದು ಉಚ್ಚಾರ ಮಾಡುತ್ತಾರೆ. ಇಂಗ್ಲೀಶರು ಫ್ರೆಂಚ್ spelling ತೆಗೆದುಕೊಂಡರು; ಇಂಗ್ಲಿಶ್ ಉಚ್ಚಾರ ಮಾಡಿದರು.
ಹೀಗಾಗಿ ಇಂದು ಇಂಗ್ಲಿಶ್ ಅನ್ನು ಒಂದು ಮುಖ್ಯ ಭಾಷೆಯಾಗಿ ಕಲಿತವರು, ಯೇಶುವನ್ನು ಜೀಸಸ್ ಎಂದು ವಿರೂಪಗೊಳಿಸಿದ್ದಾರೆ. (ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು ಎಂದು ಬರದದ್ದೇಕೆನ್ನುವದಕ್ಕೆ ಇಲ್ಲೊಂದು ಉದಾಹರಣೆ: ಫ್ರೆಂಚ್ ಭಾಷೆಯಲ್ಲಿ ‘ಪ್ರೋಗ್ರಾಮ್’ ಪದದಲ್ಲಿಯ ‘ಪ್ರೊ’ ಅನ್ನು ಅವರು ಪ್ರೋ ಹಾಗು ಬ್ರೋ ಧ್ವನಿಗಳ ಮಿಶ್ರಣದಂತೆ ಉಚ್ಚರಿಸುತ್ತಾರೆ. ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ.)

ಬೆಂಗಳೂರಿಗೆ ಬ್ಯಾಂಗ್ಲೋರ್ ಎಂದು ಕರೆಯುವದನ್ನು ನಾವು ವಿರೋಧಿಸಲಿಲ್ಲವೆ? ಅಂದ ಮೇಲೆ ಯೇಶುವನ್ನು ಜೀಸಸ್ ಎಂದು ಕರೆಯುವದು ತಪ್ಪಲ್ಲವೆ?
ಈಗ ನೋಡಿ: ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಬರೆದ ಶ್ರೀ ರಂ. ಶ್ರೀ. ಮುಗಳಿ ತಮಿಳಿನಲ್ಲಿ ಏನಾಗುತ್ತಾರೆ ಎಂದು ವಿಚಾರ ಮಾಡಿದರೆ ಮೈ ಉರಿದು ಹೋಗುತ್ತದೆ. ಆದರೆ ಇದು ‘ತಿರು ಸಂಕರ ಪತ್ತ’ರಿಗೆ ಅತ್ಯಂತ ಯೋಗ್ಯವಾದ ಮಾರ್ಗವಾಗಿ ಕಾಣುತ್ತದೆ.

ಮತ್ತೆ ಅವರ ಸಮರ್ಥನೆ ಏನು? ‘ಕೆಳವರ್ಗ’ದವರ ಉದ್ಧಾರ.
‘ಕೆಳವರ್ಗ’ ಎಂದು ಯಾರಿಗೆ ಭಟ್ಟರು ಕರೆಯುತ್ತಾರೊ ಅವರಲ್ಲಿಯ ಅನೇಕರು, ತಮ್ಮ ಪ್ರತಿಭೆಯ ಮೂಲಕ ಇಂದು ಉಚ್ಚ ಸ್ಥಾನಗಳನ್ನು ಪಡೆದಿಲ್ಲವೆ? ಕನ್ನಡದ ಅನೇಕ ಶ್ರೇಷ್ಠ ಸಾಹಿತಿಗಳು the so called ಕೆಳವರ್ಗದವರಲ್ಲವೆ? ಅನೇಕರು high postsಗಳಿಲ್ಲವೆ? ಇವರಿಗೆ ಕನ್ನಡ ಲಿಪಿ ಅಡ್ಡ ಬಂದಿತೆ? ಅನೇಕ ‘ಮುಂದುವರಿದ’ ವರ್ಗದವರು ಕೆಳಸ್ತರಗಳಲ್ಲಿ ಇಲ್ಲವೆ? ಇವರಿಗೆ ಕನ್ನಡ ಲಿಪಿ ಸಹಾಯ ಮಾಡಿತೆ?

ಆದುದರಿಂದ ಭಟ್ಟರ (೧) ಉದ್ದೇಶದಲ್ಲಿ ಅರ್ಥವಿಲ್ಲ ಹಾಗು (೨) ಲಿಪಿಕ್ರಾಂತಿಯಲ್ಲಿ ಅನರ್ಥವಿದೆ. ಆದರೆ ಅವರ ಪದಕ್ರಾಂತಿಯ ಮೇಲೆ ಈ ಆರೋಪಗಳನ್ನು ಹೊರಿಸಲಾಗುವದಿಲ್ಲ. ಅವುಗಳನ್ನು ಮುಂದಿನ postನಲ್ಲಿ ನೋಡೋಣ.

ಹೊಸ ಟಿಪ್ಪಣಿ: ಶ್ರೀ ಹಂಸಾನಂದಿಯವರು ಈ ರೀತಿ commentiಸಿದ್ದಾರೆ:
" ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ"

ಈ ಅಕ್ಷರಕ್ಕೆ ಇಂಗ್ಲಿಷ್ ನಲ್ಲಿ ಸೂಚಿಸುವಾಗ ’zh' ಎಂದು ಬರೆಯುವುದು ರೂಢಿಯಾದರೂ, ಅದು ಳ ಮತ್ತು ಝ ಧ್ವನಿಗಳ ಮಿಳಿತವೇನೂ ಅಲ್ಲ.ೞ ಎಂಬ ಹಳೆಗನ್ನಡದ ಅಕ್ಷರವೇ ಅದು. ಹೆಚ್ಚಿನಂಶ ಳ ವನ್ನು ಹೋತರೂ, retroflextion ಇನ್ನೂ ಹೆಚ್ಚಿರುವ ಉಚ್ಚಾರ ಅದರದ್ದು

Friday, June 20, 2008

I accuse

ಕನ್ನಡ ಬರಹದಲ್ಲಿ ನುಸುಳಿರುವ ಭಾಷಾದೋಷಗಳನ್ನು ಪರಿಶೀಲಿಸುತ್ತಿರುವಾಗಲೆ, ಶ್ರೀ ಶಂಕರ ಭಟ್ಟರ “ಕನ್ನಡ ಬರಹವನ್ನು ಸರಿಪಡಿಸೋಣ” ಕೃತಿಯ ಪ್ರಸ್ತಾವನೆ ಬಂದುದರಿಂದ, ನಮ್ಮೆಲ್ಲರ ಚರ್ಚೆ ಆ ದಿಕ್ಕಿಗೆ ಹೊರಳಿದೆ.

ಈ ಕೃತಿಯಲ್ಲಿ ಶ್ರೀ ಶಂಕರ ಭಟ್ಟರು ಎರಡು ಕ್ರಾಂತಿಗಳ ಬಗೆಗೆ ಪ್ರಸ್ತಾಪಿಸಿದ್ದಾರೆ:
೧) ಅಕ್ಷರಕ್ರಾಂತಿ
೨) ಪದಕ್ರಾಂತಿ

ಶ್ರೀ ಶಂಕರ ಭಟ್ಟರ ಕ್ರಾಂತಿಗೆ ಪ್ರೇರಣೆ, ಅವರೇ ಹೇಳುವ ಪ್ರಕಾರ: “ಕೆಳವರ್ಗದ ಮೇಲಿನ ಕಳಕಳಿ”. ಈ ಘೋಷಣೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವದು ಇದೀಗ ನಮ್ಮ ಮುಂದಿರುವ ಕಾರ್ಯ.

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನು ಕನ್ನಡಿಗರ ಬಗೆಗೆ ಒಕ್ಕಣಿಸಿದ ಮೆಚ್ಚುಗೆಯ ಮಾತುಗಳು ಮಾಧ್ಯಮಿಕ ಶಿಕ್ಷಣ ಪಡೆದ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುವವೇ:
ಕನ್ನಡಿಗರು “ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಈ “ಕುರಿತೋದುದೆಯಮ್” ಪದದ ಅರ್ಥವೇನು?
ನೃಪತುಂಗ ಚಕ್ರವರ್ತಿಯ ಕಾಲದಲ್ಲಿ ‘universal formal education’ ಎನ್ನುವದು ಇರಲಿಲ್ಲವಷ್ಟೆ?
ಕುಲವೃತ್ತಿಯ ಮೇರೆಗೆ, ಹುಡುಗರು ತಮ್ಮ ಅಜ್ಜ, ಅಪ್ಪಂದಿರ ಕೈಯಲ್ಲೆ apprentices ಆಗಿ, heredity knowledgeಅನ್ನು ಪಡೆಯುತ್ತಿದ್ದರಷ್ಟೆ? ಹೆಣ್ಣು ಮಕ್ಕಳಿಗಂತೂ ಶಿಕ್ಷಣವೆಂದರೆ ಮನೆಗೆಲಸದ ಶಿಕ್ಷಣವಷ್ಟೆ ಆಗಿತ್ತು.

ಇಷ್ಟಾದರೂ ಸಹ ಜಾನಪದ ಸಾಹಿತ್ಯ ಎಂತಹ ಉಚ್ಚಮಟ್ಟದಲ್ಲಿ ಇತ್ತು ಎನ್ನುವದು ನಮಗೆಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿದೆ. ಹೆಣ್ಣುಮಕ್ಕಳ ಕುಟ್ಟುವ ಹಾಡುಗಳು, ಬೀಸುವ ಹಾಡುಗಳು ಇವುಗಳ ಬಗೆಗಂತೂ ಹೇಳುವದೇ ಬೇಡ. ಇಂತಹ ಒಂದು ತ್ರಿಪದಿಯ ಒಂದು ಸಾಲನ್ನು ಇಲ್ಲಿ ಉದ್ಧರಿಸುತ್ತೇನೆ:
“…ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ…”.

ಹೆಣ್ಣು ಮಗಳು ತನ್ನ ಕೂಸನ್ನು ಹೆರುವ ಸಮಯದಲ್ಲಿ ಅವಳು ಅನುಭವಿಸುವ ನೋವು ಹಾಗು ಕೂಸು ಹುಟ್ಟಿದ ತಕ್ಷಣ ಅವಳಿಗಾಗುವ ಆನಂದ –the Agony and Ecstacy—ಈ ಎರಡೂ ಭಾವಗಳು “ಮುಗಿಲಿಗೇರ್ಯಾವ ಜೀವ” ಎನ್ನುವ ಒಂದೇ ಸಾಲಿನಲ್ಲಿ ಅಡಕವಾಗಿವೆ.
ಇಂತಹ ಸಾಲು ಯಾವ classical literatureನಲ್ಲಿ ಸಿಕ್ಕೀತು?
ಇಂತಹ ಸಾಮಾನ್ಯ ಕನ್ನಡಿಗರನ್ನು ಕುರಿತೇ ಚಕ್ರವರ್ತಿ-ಕವಿ ಹೇಳಿದ ಮಾತುಗಳಿವು:
ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಸರ್ವಜ್ಞ ಕವಿ ತನ್ನನ್ನೇ ಕುರಿತು ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾನೆ:
“ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೆ ಆದ ಸರ್ವಜ್ಞ”.

ಸರ್ವಜ್ಞನಿಗೂ formal schooling ಇರಲಿಲ್ಲ. ಆದರೆ ಅವನು ವಿದ್ಯೆಯ ಪರ್ವತವೆ ಆಗಿದ್ದ.

ಇಂಥವರ ಬಗೆಗೆ ನಮ್ಮ ಶಂಕರ ಭಟ್ಟರ ಅಭಿಪ್ರಾಯವೇನು? ಅವರ ಪುಸ್ತಕದ ‘ಮುನ್ನೋಟ’ದ ಸಾರಾಂಶ ಹೀಗಿದೆ:-

“ಜನಸಾಮಾನ್ಯರು ಕೆಳವರ್ಗದವರು.
ಮೇಲ್ವರ್ಗದವರು ಇವರನ್ನು ಶೋಷಿಸುತ್ತಿದ್ದಾರೆ. ಯಾಕೆಂದರೆ, ಮೇಲ್ವರ್ಗದವರು ಕನ್ನಡದಲ್ಲಿರುವ ೫೦ ಅಕ್ಷರಗಳನ್ನು ಸುಲಭವಾಗಿ ಕಲಿಯಬಲ್ಲರು; ಆದರೆ ಕೆಳವರ್ಗದವರಿಗೆ ೫೦ ಅಕ್ಷರಗಳನ್ನು mastery ಮಾಡುವದು ಕಠಿಣವಾಗುವದರಿಂದ, ಅದರಲ್ಲಿಯ ೧೭ ಅಕ್ಷರಗಳಿಗೆ ಕತ್ತರಿ ಹಾಕೋಣ. ಕನ್ನಡ ಸುಲಭವಾಗುತ್ತದೆ. ಕೆಳವರ್ಗದವರ ಶೋಷಣೆ ತಪ್ಪುತ್ತದೆ!”

ವಾಹ್, ಭಟ್ಟರೆ! ಕನ್ನಡದ ಲಿಪಿಯನ್ನು ಕತ್ತರಿಸಲಿಕ್ಕೆ ನೀವು ಬೇರಾವದೊ ತಾಂತ್ರಿಕ ಕಾರಣಗಳನ್ನು ತೋರಿಸಿದ್ದರೆ,ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ನೀವು ಬ್ರಿಟಿಶರ ಹಳೆಯ ‘Devide and Rule policy’ಯನ್ನು ಉಪಯೋಗಿಸಲು ಪ್ರಯತ್ನಿಸುತ್ತಿದ್ದೀರಿ, ಅಲ್ಲವೆ? ಕೆಳವರ್ಗ, ಮೇಲ್ವರ್ಗ ಹಾಗು ಶೋಷಣೆ ಎನ್ನುವ ಪದಗಳನ್ನು ಉಪಯೋಗಿಸಿ blackmailಗೆ ಪ್ರಯತ್ನಿಸುತ್ತಿದ್ದೀರಾ?
ಈ ಕತ್ತರಿಪ್ರಯೋಗಕ್ಕೆ ನಿಮಗಿರುವ role-model ಯಾವುದು?
ತಮಿಳು, of course!

ಶ್ರೀ ಶಂಕರ ಭಟ್ಟರು ಕೊಡುವ ಈ ಕಾರಣವು ಸರಿ ಎನ್ನಿಸುವದೆ? ನನಗಂತೂ ಇದು ಹಸಿ ಮೋಸ ಎನಿಸುತ್ತಿದೆ.
Shankar Bhat, I accuse you of hypocrisy!

ಇದಷ್ಟೇ ಅಲ್ಲ, ಇದರಲ್ಲಿ ದುರುದ್ದೇಶವೇನಾದರೂ ಅಡಗಿರಬಹುದೆ?
ಈಗ ನೋಡಿ, ಕನ್ನಡದ ಪದಗಳಿಂದ ಮಹಾಪ್ರಾಣವನ್ನು ತೆಗೆದುಹಾಕಬೇಕೆನ್ನುವ ಭಟ್ಟರ policyಯನ್ನು ಕರ್ನಾಟಕ ಸರಕಾರದವರು ಪಾಲಿಸಿದರು ಅಂತ ಇಟ್ಟುಕೊಳ್ಳಿ.
ಆಗ ಏನಾಗುತ್ತೆ?

ಕನ್ನಡಿಗರ ಉಚ್ಚಾರದಲ್ಲಿ ಮಹಾಪ್ರಾಣ ಮರೆಯಾಗಿ ಬಿಡುತ್ತದೆ. ಅಲ್ಪಪ್ರಾಣ ಇವರಿಗೆ ಸ್ವಾಭಾವಿಕವಾಗಿ ಬಿಡುತ್ತದೆ. ಈ tendencyಯು ಕನ್ನಡಿಗರ ಇಂಗ್ಲಿಶ್ ಉಚ್ಚಾರದಲ್ಲೂ ಸೇರಿಕೊಳ್ಳುತ್ತದೆ. (ಈಗ ತಮಿಳರು, ಮರಾಠಿಗರು etc. ತಮ್ಮದೇ strange English pronunciation ಮಾಡುವದಿಲ್ಲವೇ?—ಹಾಗೆ).

ಕರ್ನಾಟಕದಿಂದ ಪರದೇಶಗಳಿಗೆ ಹೋದ ಅನೇಕ ಕನ್ನಡಿಗರಿದ್ದಾರೆ. Call centreಗಳಲ್ಲಿ ಕೆಲಸ ಮಾಡುವ ಅನೇಕ ಕನ್ನಡಿಗರಿದ್ದಾರೆ. ಇವರ ಇಂಗ್ಲಿಶ್ ಉಚ್ಚಾರದಿಂದ ಮಹಾಪ್ರಾಣ ಮರೆಯಾಯಿತೆನ್ನಿ.
ಆಗ ಕನ್ನಡಿಗರಾದ ಒಬ್ಬ ಕ್ರಿಕೆಟ್ ಅಂಪೈರ್ ಇಂಗ್ಲಿಶ್‌ನಲ್ಲಿ ಹೇಗೆ ಕಮೆಂಟರಿ ಹೇಳಬಹುದು?

“ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
(==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).

ಶಂಕರ ಭಟ್ಟರೆ, ನಿಮಗೆ ಇದು ಸರಿ ಕಾಣಿಸುವದೆ?
‘ಸರಿ ಕಾಣುತ್ತಿದೆ’ ಎಂದು ನೀವು ಹೇಳಿದರೆ, ನಿಮ್ಮ ಅಜ್ಞಾನವನ್ನು ಕ್ಷಮಿಸಿ ಬಿಡಬಹುದು. ತಿಳಿದೂ ತಿಳಿದೂ ನೀವು ಈ ಪ್ರಸ್ತಾವನೆಯನ್ನು ಮಾಡುತ್ತಿದ್ದರೆ, ಇದು ನೀವು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವೆಂದಾಗುತ್ತದೆ.

Shankar Bhat, I accuse you of hypocrisy!
(ಭಟ್ಟರ ಅಕ್ಷರಕ್ರಾಂತಿ ಹಾಗು ಪದಕ್ರಾಂತಿಗಳ ಬಗೆಗೆ ಮುಂದಿನ ಲೇಖನದಲ್ಲಿ ಗಮನಿಸೋಣ.)

Tuesday, June 17, 2008

ಕನ್ನಡಕ್ಕೆ ಬಂದ ಕುತ್ತು

ಈ ಲೇಖನದ ಹಿಂದಿನ ಲೇಖನದ ಬಗೆಗೆ ಶ್ರೀ ಹರೀಶರು ತಮ್ಮ commentನಲ್ಲಿ ನೀಡಿದ ಅಭಿಪ್ರಾಯದ ಜೊತೆಗೆ ಒಂದು ಕೊಂಡಿಯನ್ನು ಕೊಟ್ಟಿದ್ದಾರೆ. ಈ ಕೊಂಡಿಗೆ ಹೋದಾಗ, ಶ್ರೀ ಕಿ.ರಂ.ನಾಗರಾಜರು ಕನ್ನಡವನ್ನು ಮಾರ್ಪಡಿಸಲು ನೀಡಿದ ಅಮೂಲ್ಯ ಸಲಹೆಗಳನ್ನು ಓದಿ ನನ್ನ ಕಣ್ಣಾಲಿಗಳು ತುಂಬಿ ಬಂದವು. ಆ ಲೇಖನದಲ್ಲಿ ದೊರೆತ ಕೊಂಡಿಯ ಮೂಲಕ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ ಶ್ರೀ ಡಿ.ಎನ್.ಶಂಕರ ಭಟ್ಟರ ಪುಸ್ತಕದ ಭಾಗವನ್ನು ಓದಿದೆ. ಈ ಪುಸ್ತಕವನ್ನು ಈಗಾಗಲೇ ನಾನು ಓದಿದ್ದೆ. ಓದಿ ಹೈರಾಣಾಗಿದ್ದೆ. ಶ್ರೀ ಡಿ.ಎನ್. ಶಂಕರಭಟ್ಟರು ಬಯಸಿದಂತೆ ನಡೆದರೆ, ಕನ್ನಡ ನುಡಿಯು ಕುಲಗೆಟ್ಟು ಹೋಗುವದರಲ್ಲಿ ಸಂಶಯವಿಲ್ಲ.

ಭಾಷೆ ನಿಂತ ನೀರಲ್ಲ; ಬದಲಾಗುತ್ತಲೇ ಇರಬೇಕು. ಬದಲಾವಣೆ ಎಂದರೆ ವಿಕಾಸಗೊಳ್ಳಬೇಕೆ ಹೊರತು, ಕುಂಠಿತವಾಗುತ್ತ ಹೋಗುವದಲ್ಲ. ಯಾವ ಭಾಷೆಯೂ ತನ್ನಷ್ಟಕ್ಕೇ ವಿಕಾಸಗೊಳ್ಳುವದಿಲ್ಲ. ಪರಭಾಷೆ ಹಾಗು ಪರಕೀಯ ಸಂಸ್ಕೃತಿಗಳ ಸಂಪರ್ಕದಿಂದಲೇ ಭಾಷೆಯ ವಿಕಾಸ ಸಾಧ್ಯವಾಗುವದು.

ಸಂಸ್ಕೃತ ಭಾಷೆಯ ಸಂಪರ್ಕದಿಂದ ಕನ್ನಡಕ್ಕೆ ಲಾಭವಾದಂತೆ, ಸಂಸ್ಕೃತಕ್ಕೂ ಆಗಿದೆ. ಭಾರತೀಯ ಭಾಷೆಗಳ ಸಂಪರ್ಕದಿಂದ, ಹಾಗೂ ತನ್ನ ಕೊಲೊನಿಯ ಭಾಷೆಗಳ ಸಂಪರ್ಕದಿಂದ ಇಂಗ್ಲೀಶಿಗೂ ಲಾಭವಾಗಿದೆ. ಆದುದರಿಂದ ಸಂಕುಚಿತ ಮನಸ್ಸನ್ನು, ಸಂಕುಚಿತ ಬುದ್ಧಿಯನ್ನು ತೊರೆದು, ಸಂಸ್ಕೃತ, ಇಂಗ್ಲಿಶ್ ಹಾಗು ಇತರ ಭಾಷೆಗಳ ಸಂಪರ್ಕದಿಂದ ಕನ್ನಡ ವಿಶಾಲವಾಗುವಂತೆ, ಕನ್ನಡಕ್ಕೆ ಲಾಭವಾಗುವಂತೆ ಪ್ರಯತ್ನಿಸುವದರಲ್ಲಿಯೇ ಜಾಣತನವಿದೆ.

ಕನ್ನಡದಲ್ಲಿ ಶಂಕರಭಟ್ಟರು ತರಬಯಸುವ ಕ್ರಾಂತಿಯಲ್ಲಿ ಎರಡು ಹೆಜ್ಜೆಗಳಿವೆ:
೧) ಲಿಪಿಕ್ರಾಂತಿ
೨) ಪದಕ್ರಾಂತಿ

ಶಂಕರಭಟ್ಟರು ವಿವರಿಸುವ ಪ್ರಕಾರ ಕನ್ನಡದಲ್ಲಿ ೫೨ ಅಕ್ಷರಗಳು ಇದ್ದದ್ದು ಹೆಚ್ಚಾಯಿತು; ೩೨ ಅಕ್ಷರಗಳೇ ಸಾಕು; ಬಾಕಿ ೨೦ ಅಕ್ಷರಗಳು ಅನವಶ್ಯಕ ಎಂದು ಅವರ ಅಭಿಪ್ರಾಯ. ಈ ವಿಷಯದಲ್ಲಿ ಅವರಿಗೆ role model ಅಂತ ಇರುವದು ತಮಿಳು ಲಿಪಿ. ತಮಿಳು ಲಿಪಿಯು inadequate ಇದ್ದದ್ದು ಅವರಿಗೆ ಶ್ರೇಷ್ಠತೆಯಾಗಿ ಕಾಣುತ್ತಿರುವದು, ಕನ್ನಡದ ದುರ್ದೈವ. ಕಡಿಮೆ ಧ್ವನಿಸಂಕೇತಗಳು ಇರುವದರಿಂದ ತಮಿಳು ಭಾಷೆಗೆ ಆದ ಹಾನಿಯ ಬಗೆಗೆ ಅವರ ಗಮನವಿಲ್ಲ.

ಈಗ ನೋಡಿ, ಕನ್ನಡದಲ್ಲಿ ಗೆಳತಿ ಹಾಗು ಕೆಳದಿ ಎನ್ನುವ ಎರಡು ಪದಗಳಿವೆ. ಗೆಳತಿ ಎಂದರೆ friend, ಕೆಳದಿ ಎಂದರೆ ಮಡದಿ. ತಮಿಳಿನಲ್ಲಿ ಗೆಳತಿ ಹಾಗು ಕೆಳದಿ ಪದಗಳನ್ನು ಒಂದೇ ರೀತಿಯಾಗಿ ಬರೆಯುತ್ತಾರೆ. (---I believe). ಶಂಕರಭಟ್ಟರ ಸಮರ್ಥನೆ ಏನೆಂದರೆ, ಸಂದರ್ಭದ ಪ್ರಕಾರ ಅರ್ಥ ಮಾಡಿಕೊಳ್ಳಲು ತಮಿಳು ಬುದ್ಧಿಗೆ ಸಾಧ್ಯವಿದೆ ಎನ್ನುವದು. OK,ಕೆಳಗಿನ ಪ್ಯಾರಾ ಓದಿರಿ:

“ರಮಾ ರಾಜನ ಕೆ(ಗೆ)ಳದಿ(ತಿ). ಇಬ್ಬರೂ ಜೊತೆಯಾಗಿ ಹೊಟೆಲ್ಲಿನಲ್ಲಿ ಮಸಾಲೆ ದೋಸೆ ತಿಂದು, ಪಾರ್ಕಿನಲ್ಲಿ ಸರಸವಾಡಿದರು…….”.
ಇದೇ ರೀತಿಯಾಗಿ ಒಂದು ಇಡೀ ಅಧ್ಯಾಯವನ್ನೇ ಬರೆಯಬಹುದು. ಓದುಗರಿಗೆ ರಮಾ ಹಾಗು ರಾಜನ ಸಂಬಂಧ ಏನೆಂಬುದು ಗೊತ್ತಾಗುವದೇ ಇಲ್ಲ,….ಸಂದರ್ಭ ಬರುವವರೆಗೂ. ಆದುದರಿಂದ ತಮಿಳು ಭಾಷೆ suspense novels ಬರೆಯಲು ಯೋಗ್ಯವಾದೀತೆ ಹೊರತು, ಸರಾಗ ಓದಿಗಲ್ಲ.

ಆದರೆ ನನ್ನ point ಇದಲ್ಲ. ಧ್ವನಿಸಂಕೇತಗಳು ಕಡಿಮೆಯಾಗಿದ್ದರಿಂದ ಪದಗಳ ಸಂಖ್ಯೆ ಕಡಿಮೆಯಾಗುವದು ಎನ್ನುವದು ಗಣಿತದಲ್ಲಿಯ permutations and combinations ಬಲ್ಲ ಯಾರಿಗಾದರೂ ಗೊತ್ತಾಗುವದು.
ಇಂಗ್ಲಿಶ್ ಲಿಪಿ non-phonetic ಇರುವದರಿಂದ ಅದೇ ಆ ಭಾಷೆಗೆ ಒಂದು advantage ಆಗಿಬಿಟ್ಟಿದೆ. ಬೇಕಾಬಿಟ್ಟಿಯಾಗಿ ಅಕ್ಷರ ಜೋಡಣೆ ಮಾಡುವದರಿಂದ ಅವರು ಯಾವ ಧ್ವನಿಯನ್ನಾದರೂ ಪದವನ್ನಾಗಿ ಬರೆಯಬಲ್ಲರು. ಆದರೆ phonetic script ಹೊಂದಿರುವ ತಮಿಳಿನಲ್ಲಿ, ಕಡಿಮೆ ಅಕ್ಷರಗಳಿರುವದರಿಂದ ಅದರ ಪದಸಂಪತ್ತೂ ಸಹ ಕಡಿಮೆಯಾಗುತ್ತದೆ ಎನ್ನುವದು just a mathematical understanding.

ಇಂತಹ ಅನಾಗರಿಕ ಲಿಪಿಯನ್ನು ಅನುಸರಿಸಲು, ಶಂಕರಭಟ್ಟರು ಕನ್ನಡಿಗರಿಗೆ ಯಾಕೆ ಸಲಹೆ ನೀಡುತ್ತಿದ್ದಾರೆ? ಕನ್ನಡದ ಮೇಲಿನ ದ್ವೇಷದಿಂದಲೆ? ಸಂಸ್ಕೃತದ ಮೇಲಿನ ದ್ವೇಷದಿಂದಲೆ? ಅಥವಾ ಲಿಪಿ ಅನಾಗರಿಕವಾದಾಗ, ಆ ಭಾಷೆಗೆ Classical Status ಸಿಗುವದು ಎನ್ನುವ ಕಲ್ಪನೆಯಿಂದಲೆ?

ಊಂ.. ಹೂಂ…. ಅಲ್ಲ. ತಮಗೆ ‘ಕೆಳವರ್ಗ’ದ ಬಗೆಗೆ ಇರುವ ಕಳಕಳಿಯಿಂದ ಎಂದು ಶಂಕರ ಭಟ್ಟರು ತಮ್ಮ ಪುಸ್ತಕದಲ್ಲಿ ಘೋಷಿಸಿದ್ದಾರೆ. ಅದರ ಸತ್ಯಾಸತ್ಯತೆಯನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.

Sunday, June 15, 2008

ಅಲ್ಪಪ್ರಾಣ--ಮಹಾಪ್ರಾಣ

ಬಂಗಾಲಿಗಳು ‘ಪಂಚವಟಿ’ ಎನ್ನುವ ಪದವನ್ನು ‘ಪೊಂಚೊಬೊಟಿ’ ಎಂದು ಉಚ್ಚರಿಸುತ್ತಾರೆ. ‘ಕಂಕಣಾ’ ಪದವನ್ನು
‘ಕೊಂಕಣಾ’ ಎಂದು ಉಚ್ಚರಿಸುತ್ತಾರೆ. ಅವರ ಉಚ್ಚಾರಣಾ ಶೈಲಿಯೇ ಹಾಗಿದೆ. ಇಂಗ್ಲಿಶ್ ಜನಗಳಿಗೆ ‘ಬೆಂಗಳೂರು’ ಎನ್ನಲು ಬಾರದೆ, ‘ಬ್ಯಾಂಗ್ಲೋರ್’ ಎಂದೂ ‘ಶಿಂಧೆ’ ಎನ್ನಲು ಬಾರದೇ, ‘ಸಿಂದ್ಯಾ’ ಎಂದೂ ಅಂದಿರಬಹುದು.

ಕನ್ನಡಿಗರಿಗೆ ಉಚ್ಚಾರಣಾ ಸಮಸ್ಯೆ ಇಲ್ಲವೇ ಇಲ್ಲ. ಕನ್ನಡಿಗರು ಸಂಸ್ಕೃತ ಪದಗಳನ್ನು ಶುದ್ಧವಾಗಿ ಉಚ್ಚರಿಸಬಲ್ಲರು, ಅಮೇರಿಕನ್ನರು ನಾಚುವಂತೆ ಅಮೇರಿಕನ್-ಇಂಗ್ಲಿಶ್ ಮಾತನಾಡಬಲ್ಲರು. ಇದೆಲ್ಲ ಸರಿಯೇ. ಆದರೆ, ಕನ್ನಡದಲ್ಲಿಯೇ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಅದಲು ಬದಲು ಮಾಡುವದರಲ್ಲಿ ಕನ್ನಡಿಗರು ವಿಶೇಷ ಆಸಕ್ತಿಯನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಸಿನೆಮಾದ ‘ಮಧ್ಯಾಂತರವು’ ಕೆಲವು ಕನ್ನಡಿಗರಿಗೆ ‘ಮದ್ಯಾಂತರ’ವಾಗಿ ಬಿಡುವದು. ಉಚ್ಚಾರಣೆ ಹೋಗಲಿ ಬಿಡಿ, ಬರೆಯುವದೂ ಹೀಗೆ ಆದರೆ ತಪ್ಪಲ್ಲವೆ?

ಮಹಾತ್ಮಾ ಗಾಂಧಿಯವರು ಖಾನ ಸಹೋದರರ ಜೊತೆಗೆ ‘ ಖುದಾಯೀ ಖಿದ್ಮತ್‌ಗಾರ ’ ಚಳುವಳಿಯಲ್ಲಿ ಭಾಗವಹಿಸಿದ್ದರು. ಚಳುವಳಿಯ ಪ್ರವರ್ತಕರು ಯಾವ ರೀತಿಯಲ್ಲಿ ಈ ಪದಪುಂಜವನ್ನು ಬರೆಯುತ್ತಾರೊ ಹಾಗು ಉಚ್ಚರಿಸುತ್ತಾರೊ, ಅದೇ ರೀತಿಯಲ್ಲಿ ತನ್ನ ಭಾಷೆಯಲ್ಲಿ ಬರೆಯುವದು ಹಾಗು ಉಚ್ಚರಿಸುವದು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯ ಹೊಣೆಗಾರಿಕೆ.
ಆದರೆ, ಕನ್ನಡ ವಿಕಿಪೀಡಿಯಾದಲ್ಲಿ ‘ಖುದಾಯೀ ಖಿದ್ಮತ್‌ಗಾರ’ ಪದವು ‘ಕುದಾಯಿ ಕಿದ್ಮತ್ಗಾರ್’ ಆಗಿದೆ. ಅದರಂತೆ ‘ಝಾರಖಂಡ’ ಪದವು ‘ಜಾರ್ಕಂಡ್’ ಅಗಿತ್ತು. ಇದರ ಬರಹಗಾರರು, “ಮಹಾಪ್ರಾಣ ಉಚ್ಚಾರವು ಕನ್ನಡಕ್ಕೆ ಸಹಜವಲ್ಲವೆಂದು”, justify ಮಾಡುವರೇನೊ?

ಯಾರು ನಿಮಗೆ ಈ ತಪ್ಪು ಗ್ರಹಿಕೆಯನ್ನು ಕೊಟ್ಟವರು ಎಂದು ಕೇಳುತ್ತೇನೆ. ಇದು ನಿಜವಲ್ಲ. ಒಂದು ವೇಳೆ, ಮಹಾಪ್ರಾಣ ಪದಗಳು ಸಂಸ್ಕೃತ ಭಾಷೆಯಿಂದಲೇ ಕನ್ನಡಕ್ಕೆ ಬಂದಿದ್ದರೂ ಸಹ, ಈಗ ಅವು ಕನ್ನಡದಲ್ಲಿ ಒಂದಾಗಿ ಬೆರೆತುಕೊಂಡಿವೆ. ದೈನಂದಿನ ವ್ಯಾಪಾರದಲ್ಲಿ ಅವುಗಳನ್ನು ಬಿಡುವದು ಸಾಧ್ಯವೇ ಆಗದು. ಈ ಲೇಖನದಲ್ಲಿ ಇಲ್ಲಿಯವರೆಗೆ ೧೫೦ ಪದಗಳು ಬಂದಿವೆ. ಅವುಗಳಲ್ಲಿ ೧೨ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳಿವೆ. ಅಂದರೆ ಶೇಕಡಾ ೮ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳು ಬಂದಿವೆ.

ಈಗ ಒಂದು ಉದಾಹರಣೆ ಗಮನಿಸಿರಿ:
‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಘೋರ್ಪಡೆಯವರು ಶ್ರೀ ಭೀಮಣ್ಣ ಖಂಡ್ರೆಯವರ ಜೊತೆಗೆ, ಮಧ್ಯದಲ್ಲಿ ಆಸೀನರಾಗಿದ್ದಾರೆ.’
ಈ ವಾಕ್ಯವನ್ನು ‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಜೊತೆಗೆ, ಮದ್ಯದಲ್ಲಿ ಆಸೀನರಾಗಿದ್ದಾರೆ. ’ ಎಂದು ಬರೆದರೆ ಹಾಗೂ ಉಚ್ಚರಿಸಿದರೆ ಸರಿಯಾಗಿರುತ್ತದೆಯೆ?

ಕನ್ನಡದಲ್ಲಿ ಮಹಾಪ್ರಾಣ ಪದಗಳೇ ಇಲ್ಲವೆಂದು ಹೇಳುವ ಕೆಲವು ಅಲ್ಪಪ್ರಾಣಿಗಳಿಗೆ ನಾವು “ ಛೀ, ಥೂ!” ಎನ್ನದೆ ಗತ್ಯಂತರವಿಲ್ಲ. ಇವೆಲ್ಲ ಸಂಸ್ಕೃತ ಪದಗಳು ಎನ್ನುವ ಇವರಿಗೆ ಸಂಸ್ಕೃತ ಹಾಗು ಕನ್ನಡ ಭಾಷೆಗಳ ಅನ್ಯೋನ್ಯ ಸಂಬಂಧವೇ ಗೊತ್ತಿಲ್ಲ. ಖಂಡಿತವಾಗಿಯೂ ಸಂಸ್ಕೃತವು ಕನ್ನಡದ ತಾಯಿಯಲ್ಲ. ಅದರೆ, ಅವುಗಳ ಸಂಬಂಧ ಸಾವಿರಾರು ವರ್ಷಗಳ ಪ್ರೇಮಿಗಳ ಸಂಬಂಧ.

ಮಹಾಪ್ರಾಣಗಳ ವಿರುದ್ಧ ಕತ್ತಿ ಮಸೆಯುತ್ತಿರುವವರಲ್ಲಿ, ಶ್ರೀ ಶಂಕರ ಭಟ್ಟರು ಮುಖ್ಯರು. “ಕನ್ನಡ ಬರಹವನ್ನು ಸರಿಪಡಿಸೋಣ” ಎನ್ನುವ ಅವರ ಪುಸ್ತಕದಲ್ಲಿ ಕನ್ನಡಿಗರು ಮಹಾಪ್ರಾಣವನ್ನು ನಿಜವಾಗಿಯೂ ಉಚ್ಚರಿಸುವದೇ ಇಲ್ಲ; ಆದರೆ ಹಾಗೆ ತಿಳಿದುಕೊಂಡಿರುತ್ತಾರೆ ಎಂದು ಬರೆದಿದ್ದಾರೆ. (ಪುಟ ೬೦ ) “ಮುಖ್ಯ ಮಂತ್ರಿ” ಎಂದು ಉಚ್ಚರಿಸುತ್ತಿದ್ದೇವೆಂದು ನಾವು ಅಂದುಕೊಂಡರೂ ಸಹ, ನಿಜವಾಗಲೂ ನಾವು ಉಚ್ಚರಿಸುತ್ತಿರುವದು “ಮುಕ್ಯ ಮಂತ್ರಿ” ಎಂದು ಇವರು ತಿಳುವಳಿಕೆ ಕೊಟ್ಟಿದ್ದಾರೆ. (ಪುಟ ೬೦ ).
ಈ ಮಾತು ಕನ್ನಡಿಗರಿಗೆ ಅವಮಾನವಲ್ಲವೆ? ಕನ್ನಡಿಗರು ಅಷ್ಟು ದಡ್ಡರೆ?

ಇದು ಒಂದು Theoryಯಾದರೆ, ಉತ್ತರ ಕರ್ನಾಟಕದ ಜನರು ಮರಾಠಿ ಭಾಷೆಯ ಪ್ರಭಾವದಿಂದಾಗಿ, ಅಲ್ಪಪ್ರಾಣಗಳನ್ನು ಮಹಾಪ್ರಾಣವಾಗಿ ಬದಲಾಯಿಸುತ್ತಾರೆ ಎನ್ನುವದು ಮತ್ತೊಂದು theory.
ಧಾರವಾಡ ಜಿಲ್ಲೆಯ ಕುಂದಗೋಳ ಊರಿನಲ್ಲಿಯೇ ಬೆಳೆದು ಈಗ ಮೈಸೂರು ಸೇರಿದ ಶ್ರೀ ರಾಜಪುರೋಹಿತ ಎನ್ನುವ ಭಾಷಾಶಾಸ್ತ್ರಜ್ಞರ ಘೋಷಣೆಯನ್ನಷ್ಟು ಗಮನಿಸಿರಿ. ಇವರ ಲೇಖನ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಘೋಷಣೆಯ implication ಹೀಗಿದೆ:
ಗಡಿಯಾರ’ ಅನ್ನುವ ಪದವನ್ನು ಉತ್ತರ ಕರ್ನಾಟಕದವರು ತಪ್ಪಾಗಿ ‘ಘಡಿಯಾರ’ ಎಂದು ಗರ್ಜಿಸಿ ಉಚ್ಚರಿಸುತ್ತಾರೆ!
ವಾಹ್ ವಾ!! ರಾಜಪುರೋಹಿತರೆ, ನಿಮ್ಮ ಭಾಷಾಪಾಂಡಿತ್ಯಕ್ಕೆ ನನ್ನ ದೀಡ ನಮಸ್ಕಾರ!
ಸಂಸ್ಕೃತದಲ್ಲಿ ‘ಘಟೀ’ ಎಂದರೆ ಸಮಯದ ಒಂದು unit. ಈ ಪದದಿಂದ ಹಿಂದಿಯಲ್ಲಿ ‘ಘಡೀ’ ಎನ್ನುವ ಪದವು ಬಂದಿದೆ. ಹಿಂದಿಯಲ್ಲಿ ‘ಯಾರ’ ಅಂದರೆ ‘ಮಿತ್ರ’ ಅನ್ನುವ ಅರ್ಥವಿದೆ. ಆದುದರಿಂದ ‘ಘಡೀಯಾರ’ ಅಂದರೆ ‘ಸಮಯ ಮಿತ್ರ’; ನಿಮಗೆ ವೇಳೆಯನ್ನು ತಿಳಿಸುವವನು. ‘ಘಡಿಯಾರ’ ಎಂದು ಸರಿಯಾಗಿ ಉಚ್ಚರಿಸುವ ಉತ್ತರ ಕರ್ನಾಟಕದವರಿಗೇ ನೀವು ತಪ್ಪಿತಸ್ಥರ ಪಟ್ಟ ಕಟ್ಟಿದಿರಲ್ಲ , ಸ್ವತಃ ಉತ್ತರ ಕರ್ನಾಟಕದ ಕುಂದಗೋಳದಲ್ಲಿ ಶಾಲೆಯನ್ನು ಕಲಿತವರಾಗಿ! ಇದಕ್ಕೆ ಅಜ್ಞಾನವೆನ್ನೋಣವೆ ಅಥವಾ ಭಾಷಾದ್ರೋಹವೆನ್ನೋಣವೆ?

ನಿಜ ಹೇಳಬೇಕೆಂದರೆ, ಮೈಸೂರು ಸಂಸ್ಥಾನವು ಅನೇಕ ವರ್ಷಗಳವರೆಗೆ ತಮಿಳು ದಿವಾನರ ಆಳಿಕೆಯಲ್ಲಿ ಇದ್ದುದರಿಂದ ಹಾಗೂ ತಮಿಳು ನಾಡಿಗೆ ಹತ್ತಿರವಾಗಿ ಇದ್ದುದರಿಂದ, ಆ ಪ್ರದೇಶದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವದು ರೂಢಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನು? Very simple. ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರಸಂಕೇತ ಇರುವದರಿಂದ, ತಮಿಳಿನಲ್ಲಿ ಮಹಾಪ್ರಾಣವೇ ಇಲ್ಲ. (ಜಗಳಕ್ಕೆ ಬಂದರೆ ಮಾತ್ರ ತಮಿಳರಂತಹ ಮಹಾಪ್ರಾಣಿಗಳೇ ಇಲ್ಲವೆನ್ನಿ).

ತಮಿಳಿನಲ್ಲಿ ಕ, ಖ, ಗ, ಘ ಈ ಧ್ವನಿಗಳಿಗೆ ಒಂದೇ ಸಂಕೇತಾಕ್ಷರ. ಅದರಂತೆ ಟ, ಠ ಇತ್ಯಾದಿಗಳಿಗೆ. ಹೀಗಾಗಿ ತಮಿಳಿನಲ್ಲಿ ‘ಘೋರ್ಪಡೆ’ ‘ಕೋರ್ಪತೆ’ ಅಥವಾ ‘ಖೋರ್ಫಠೆ’ ಆಗಬಹುದು. ‘ಭಟ್ಟ’ರು ‘ಬಟ್ಟ’ರಾಗುತ್ತಾರೆ , ‘ಬತ್ತ’ರೂ ಆಗಬಹುದು. ಈ ಪ್ರಭಾವದಲ್ಲಿ ಬೆಳೆದ ಹಳೆ ಮೈಸೂರಿನಲ್ಲಿ ಸಹ ಅಲ್ಪಪ್ರಾಣದ ರೂಢಿ ಬಲವತ್ತರವಾಯಿತು. ಹಳೆ ಮೈಸೂರಿಗರು ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೂ ಹೀಗಳೆಯುವದು ಈ ಲೇಖನದ ಉದ್ದೇಶವಲ್ಲ. ಕನ್ನಡವನ್ನು ಸರಿಯಾಗಿ ಬರಿಯುವ ಹಾಗು ಉಚ್ಚರಿಸುವ ಉದ್ದೇಶದಿಂದ ಇದನ್ನೆಲ್ಲ ಬರೆಯುತ್ತಿದ್ದು, ಯಾರಿಗಾದರೂ ನೋವೆನಿಸುತ್ತಿದ್ದರೆ, ಈ ದಡ್ಡನನ್ನು ದಯವಿಟ್ಟು ಕ್ಷಮಿಸಿರಿ.

ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ತಪ್ಪುಗಳನ್ನು ನೋಡೋಣ, ತಿದ್ದಿಕೊಳ್ಳಲು ಮನಸ್ಸು ಮಾಡೋಣ.

ಸರಿಗನ್ನಡಮ್ ಗೆಲ್ಗೆ!

Thursday, June 12, 2008

ಭಾಷಾದೋಷ: ‘ಆ’ಕಾರಾಂತ ಪದಗಳು

ಭಾಷಾದೋಷವು ವ್ಯಾಕರಣದೋಷಕ್ಕಿಂತ ಘೋರವಾದಂತಹ ಸ್ಥಿತಿ. ವ್ಯಾಕರಣದೋಷವು ಓರ್ವ ವ್ಯಕ್ತಿಯ ಅಜ್ಞಾನದಿಂದಾಗಿ ಘಟಿಸಬಹುದು. ಆದರೆ, ಭಾಷಾದೋಷವು ಒಂದು ಪ್ರದೇಶದಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಗಳಿಂದಾಗಿ ಉದ್ಭವಿಸುತ್ತದೆ. ಈ ಉದಾಹರಣೆಯನ್ನು ನೋಡಿರಿ:

ಇತ್ತೀಚೆಗೆ ಟೀವಿಯಲ್ಲಿ ಪ್ರಸಾರವಾದ ಕನ್ನಡದ ಒಂದು ಪ್ರಸಿದ್ಧ ಧಾರಾವಾಹಿ: “ ಮುಕ್ತ”. ಇದು “ ಮುಕ್ತಾ” ಎಂದಿರಬೇಕು. ಯಾಕೆಂದರೆ “ ಮುಕ್ತ” ಎನ್ನುವದು ಪುಲ್ಲಿಂಗವಾಚಕ ವಿಶೇಷಣ. ಉದಾಹರಣೆಗೆ ಜೀವನ್-ಮುಕ್ತ ಪುರುಷ ಇತ್ಯಾದಿ. ಹೃಸ್ವಾಂತವಾಗಿ ಕೊನೆಗೊಳ್ಳುವ ಪದವನ್ನು ದೀರ್ಘಾಂತವಾಗಿ ಉಚ್ಚರಿಸುವದು ಸರಿಯಲ್ಲ. ಒಂದು ವೇಳೆ ಮುಕ್ತ ಎಂದು ಹೃಸ್ವಾಂತವಾಗಿ ಬರೆದು ಮುಕ್ತಾ ಎಂದು ದೀರ್ಘಾಂತವಾಗಿಯೇ ಉಚ್ಚರಿಸುವದಾದರೆ, ಹೃಸ್ವಾಂತವಾಗಿ ಉಚ್ಚರಿಸಲು, ಯಾವ ರೀತಿಯಿಂದ ಬರೆಯಬೇಕು?.... ‘ ಮುಕ್ತ್ ’ ಎಂದೆ?
ದೀರ್ಘಾಂತ, ಹೃಸ್ವಾಂತ ಹಾಗು ವ್ಯಂಜನಾಂತ ಪದಗಳನ್ನು ಬರೆಯುವಾಗ, ಈ ರೂಢಿಯು ಸೃಷ್ಟಿಸುವ ಗೋಜಲನ್ನು ಪರಿಶೀಲಿಸಲು ಕೆಳಗಿನ ಉದಾಹರಣೆಯನ್ನು ಗಮನಿಸಿರಿ:
ರಮಾ’ ಎನ್ನುವ ದೀರ್ಘಾಂತ ಪದವನ್ನು ‘ರಮ’ ಎಂದು ಬರೆದರೆ, ‘ರಮ’ ಎನ್ನುವ ಹೃಸ್ವಾಂತ ಪದವನ್ನು ಹೇಗೆ ಬರೆಯಬೇಕು?....’ರಮ್’ ಎಂದೆ? ಹಾಗಾದಾಗ, ರಮ್ (Rum)ಅನ್ನು ಹೇಗೆ ಬರೆಯಬೇಕು?

ಕನ್ನಡ ವಿಕಿಪೀಡಿಯಾದಲ್ಲಿಯ ಒಂದು ಲೇಖನದಲ್ಲಿ Madam Cama ಇವರ ಹೆಸರನ್ನು ಮೇಡಂ ಕಾಮ ಎಂದು ಬರೆಯಲಾಗಿದೆ. ಅಯ್ಯೋ ರಾಮ! ಕಾಮದೇವನ ಪಟ್ಟವನ್ನು ಕಾಮಾಳಿಗೆ ಕೊಟ್ಟರೆ, ‘ಕಾಮ’ನನ್ನು ‘ಕಾಮ್’ ಎಂದು ಬರೆಯಬಹುದೆ? ಆದರೆ ಕಾಮನು ಕಾಮ್ (calm) ಆಗಿರಲು ಒಪ್ಪುವನೆ?

ಇದೇ ರೀತಿಯಾಗಿ ‘ಗಂಗಾ’ ನದಿಯನ್ನು ‘ಗಂಗ’ ಎಂದು ಬರೆದರೆ, ತಲಕಾಡು ರಾಜ್ಯವನ್ನಾಳಿದ ‘ಗಂಗ’ ರಾಜಕುಲವನ್ನು ಹೇಗೆ ಬರೆಯಬೇಕು?—‘ಗಂಗ್’ ರಾಜಕುಲವೆಂದೆ?

ಕನ್ನಡ ವಿಕಿಪೀಡಿಯಾದಲ್ಲಿ ನಾನು ಹಳಗನ್ನಡದ ಪ್ರಸಿದ್ಧ ಲೇಖಕ ‘ನೇಮಿಚಂದ್ರ’ನ ಬಗೆಗೆ ಒಂದು ಲೇಖನ post ಮಾಡಿದ್ದೆ. ಆಬಳಿಕ ಹೊಸ ಪೀಳಿಗೆಯ ಲೇಖಕಿಯಾದ ‘ನೇಮಿಚಂದ್ರ’ಳ ಬಗೆಗೆ ಲೇಖನ post ಮಾಡಲು ಹೊರಟಾಗ ಗಣಕ ಯಂತ್ರವು ಈ ಹೊಸ ಲೇಖನವನ್ನು ಅದೇ ಹೆಸರಿನಲ್ಲಿ ಒಪ್ಪಿಕೊಳ್ಳಲಿಲ್ಲ. ಆ ಬಳಿಕ ನಾನು ‘ನೇಮಿಚಂದ್ರ (ಲೇಖಕಿ)’ ಎಂದು ತಿದ್ದುಪಡಿ ಮಾಡಬೇಕಾಯಿತು. ‘ನೇಮಿಚಂದ್ರಾ’ ಇವರು ತಮ್ಮ ಹೆಸರಿನ ಕೊನೆಯನ್ನು ದೀರ್ಘೀಕರಿಸದೇ, ಹೃಸ್ವೀಕರಿಸಿದ್ದರಿಂದ, ಅವರು ಪುಲ್ಲಿಂಗವಾದರು!

ಸಂತೋಷಕುಮಾರ ಗುಲವಾಡಿಯವರು ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ಈ ವಿಷಯದ ಬಗೆಗೇ ಒಂದು ಸಂಪಾದಕೀಯ ಬರೆದಿದ್ದರು. ಆ ಸಂದರ್ಭದಲ್ಲಿ ಅವರು ನೀಡಿದ ಉದಾಹರಣೆ: ‘ದುರ್ಗಾ’ ಪದವನ್ನು ‘ದುರ್ಗ’ ಎಂದು ಬರೆದರೆ, ಆ ಪದವು ಹುಡುಗಿಯ ಹೆಸರಾಗುವ ಬದಲು ‘ಕೋಟೆ’ ಎನ್ನುವ ಅರ್ಥವನ್ನು ಕೊಡುತ್ತದೆ.

ಇದರಂತೆ, ಅನೇಕ ಪದಗಳ ಉದಾಹರಣೆಗಳನ್ನು ಕೊಡಬಹುದು: ಬಾಲವಿಹಾರದಲ್ಲಿ ಕಲಿಸಲಾಗುವ ಹಾಡನ್ನು ಮುದ್ರಿಸಿದ ಈ ಅವತರಣಿಕೆಯನ್ನು ನೋಡಿರಿ:
“ ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವದು,
ಎತ್ತಿಕೊಳ್ಳದಿರಲು ಅದಕೆ ಕೋಪ ಬರುವದು”.

‘ಪಾಪ’ ಪದದ ಅರ್ಥವೇನು? –SIN ಎಂದಲ್ಲವೇ?
ಕೂಸು ಎಂದು ಹೇಳಲು ‘ಪಾಪಾ’ ಎಂದು ಬರೆಯಬೇಕಲ್ಲವೆ?
ಕೂಸು ಪದಕ್ಕೆ ‘ಪಾಪ’ ಎಂದೇ ಬರೆಯುವದು ಸರಿ ಎಂದು ನೀವು ಹೇಳುವದಾದರೆ, SIN ಅರ್ಥದ ‘ಪಾಪ’ ಪದಕ್ಕೆ ‘ಪಾಪ್’ ಎಂದು ಬರೆಯಬೇಕೆ? ಹಾಗಾದಾಗ POP ಅರ್ಥದ ಪಾಪ್ ಪದವನ್ನು ಬರೆಯುವದು ಹೇಗೆ?

ಕೇವಲ ‘ಆ’ ಸ್ವರಾಂತ ನಾಮಸೂಚಕ ಪದಗಳಿಗಷ್ಟೇ ಈ ತಪ್ಪು ಪ್ರಯೋಗ ಸೀಮಿತವಾಗಿಲ್ಲ. ಸರಕಾರಿ ಕಚೇರಿಯೊಂದರ ಮೇಲೆ ಹಾಕಿದ ಈ ಫಲಕವನ್ನು ನೋಡಿರಿ:
ಶಿಶುಪಾಲನ ಕೇಂದ್ರ”
ಈ ಫಲಕವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವೇ ಆಗಲಿಲ್ಲ. ಕೃಷ್ಣನ ವಿರೋಧಿಯಾದ ‘ಶಿಶುಪಾಲ’ ಎನ್ನುವ ದೈತ್ಯನ ಸಲುವಾಗಿ ಯಾರು ಯಾಕೆ ಕೇಂದ್ರ ಸ್ಥಾಪಿಸುತ್ತಾರೆ ಎಂದೇ ಗೊತ್ತಾಗಲಿಲ್ಲ. ಕಚೇರಿಯ ಒಳಹೊಕ್ಕು ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ತಿಳಿದದ್ದು: ಇದು ‘ಶಿಶುಪಾಲನಾ ಕೇಂದ್ರ’ವೆಂದು!

ಈ ತಪ್ಪು ಪ್ರಯೋಗವು ಸಂಯುಕ್ತ ಪದಗಳ ಮಧ್ಯಭಾಗವನ್ನೂ ಸಹ ಆಕ್ರಮಿಸಿರುವದು ಹೆಚ್ಚಿನ ದುರ್ದೈವ. ಉದಾಹರಣೆಗೆ, “ಶುಭಾಕಾಂಕ್ಷೆ” ಎನ್ನುವ ಪದವನ್ನು “ಶುಭಕಾಂಕ್ಷೆ” ಎಂದು ವಿಕಿಪೀಡಿಯಾದ ಓದುಗರೊಬ್ಬರು ಬರೆದಿದ್ದರು.

ಅಷ್ಟೇ ಏಕೆ, ನಮ್ಮ ಕರ್ನಾಟಕ ಸರಕಾರದ ಸಂಪುಟ ದರ್ಜೆ ಸಚಿವರಾದ ಶ್ರೀ ಮುಮತಾಜ ಅಲಿಯವರು ಪತ್ರಿಕೆಗೆ ಬರೆದ ಪತ್ರ ಒಂದರಲ್ಲಿ, “ಶಿಲಾನ್ಯಾಸ” ಪದದ ಬದಲಾಗಿ “ಶಿಲನ್ಯಾಸ” ಎಂದು ಬರೆದಿದ್ದರು. ಈ ಅಪಪ್ರಯೋಗದ ತಪ್ಪು ಅವರದಲ್ಲ. “ಶಿಲಾ” ಪದ ಬರೆಯುವದನ್ನು “ಶಿಲ” ಎಂದೇ ಬರೆಯಲು ಅವರು ರೂಢಿಸಿಕೊಂಡಿದ್ದರಿಂದ ಇಂತಹ ಅಪಪ್ರಯೋಗವಾಗಿದೆ.

ಇದರಂತೆಯೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಸಿನಿಮಾ ವಿಭಾಗದಲ್ಲಿ ಬರೆಯುವ ಎಚ್. ಕೆ. ಸಾವಿತ್ರಿಯವರು ನಟಿಯೊಬ್ಬಳನ್ನು ವರ್ಣಿಸುತ್ತ, ‘ಬೆಳಗಾವಿಯ ಕುಂದದಂತಹ’ ಎಂದು ಬರೆದಿದ್ದಾರೆ. ‘ಕುಂದ’ ಎಂದರೆ ಒಂದು ಜಾತಿಯ ಹೂವು. ಬೆಳಗಾವಿ ಕುಂದಪುಷ್ಪಕ್ಕಂತೂ ಹೆಸರು ಪಡೆದಿಲ್ಲ. ‘ಹೀಗೇಕೆ?’ ಎಂದು ನಾನು ವಿಸ್ಮಯಪಡುತ್ತಿದ್ದಾಗ ಹೊಳೆದದ್ದು: ಓಹೋ ಇವರು ಹೇಳುತ್ತಿರುವದು ಬೆಳಗಾವಿಯ ‘ಕುಂದಾ’, ಒಂದು ಬಗೆಯ sweet, ‘ಕುಂದ’ಪುಷ್ಪವಲ್ಲ ಎನ್ನುವದು.

ಈ ತರಹದ ಬರೆವಣಿಗೆಯನ್ನು ಕೆಲವರು ಸಮರ್ಥಿಸಿಕೊಳ್ಳಬಹುದು. ಅವರ ಸಮರ್ಥನೆ ಈ ರೀತಿಯಾಗಿದೆ:
ಇ, ಈ ಎನ್ನುವ ಸ್ವರಜೋಡಿ ಇದ್ದಂತೆಯೆ, ಅ, ಆ ಎನ್ನುವ ಸ್ವರಜೋಡಿ ಇದೆ. ಅಂದರೆ, ಅ ಸ್ವರವನ್ನು ಹೃಸ್ವ ಆ ಎಂದು ಉಚ್ಚರಿಸಬೇಕು. ಇವರ ಪ್ರಕಾರ, ‘ರಮ’ ಎಂದು ಬರೆದು ‘ರಮಾ’ ಎಂದು ಉಚ್ಚರಿಸಬೇಕು. ‘ದಸರ’ ಎಂದು ಬರೆದು ‘ದಸರಾ’ ಎಂದು ಉಚ್ಚರಿಸಬೇಕು. ಇವರಿಗೆ ನನ್ನ ಪ್ರಶ್ನೆ : ಮ ಅನ್ನು ಮಾ ಅನ್ನುವದಾದರೆ, ರ ಅನ್ನು ರಾ ಎಂದೇಕೆ ಅನ್ನಬಾರದು? ಅರ್ಥಾತ್ ‘ರಮ’ ಪದವನ್ನು ‘ರಾಮಾ’ ಎಂದು ಏಕೆ ಉಚ್ಚರಿಸಬಾರದು? ‘ದಸರ’ ಪದವನ್ನು ‘ದಾಸಾರಾ’ ಎಂದೇಕೆ ಉಚ್ಚರಿಸಬಾರದು?
ಇದಕ್ಕೆ ಅವರು ಕೊಡುವ ಸಮಾಧಾನ ಈ ರೀತಿಯಾಗಿದೆ. ಪದಾಂತದಲ್ಲಿ ಬರುವ ಹೃಸ್ವ ‘ಅ’ ಕಾರವನ್ನು ಮಾತ್ರ ದೀರ್ಘವಾಗಿ ಉಚ್ಚರಿಸಬೇಕು.
ಹಾಗೆ ಮಾಡಿದರೆ, ಕನ್ನಡ ಬರಹವು purely phonetic script ಆಗುವದಿಲ್ಲ ; selectively phonetic script ಆಗುತ್ತದೆ. ಇದು ಸರಿಯಲ್ಲ.

‘ಅ’ಕಾರವನ್ನು ‘ಆ’ಕಾರ ಮಾಡುವ ಅಪಪ್ರಯೋಗದಂತೆಯೇ, ವ್ಯಂಜನೀಕರಣದ ಮತ್ತೊಂದು ಅಪಪ್ರಯೋಗವೂ ಚಾಲ್ತಿಗೆ ಬಂದಿದೆ.
ಸಂಯುಕ್ತ ಕರ್ನಾಟಕದ suplimentನಲ್ಲಿ ಒಮ್ಮೆ ಎಚ್ಚೆಸ್ಕೆಯವರ ಲೇಖನ ಬಂದಿತ್ತು. ಆ ಲೇಖನದಲ್ಲಿ ಅವರು, ‘ರಾಯಚೂರಕರ’ ಎನ್ನುವ ವ್ಯಕ್ತಿಯನ್ನು ‘ರಾಯ್‌ಚೂರ್‌ಕರ್’ ಎಂದು ನಿರ್ದಯೆಯಿಂದ ಚೂರು ಚೂರು ಮಾಡಿ ಒಗೆದಿದ್ದರು. ಈ ವ್ಯಂಜನಾಘಾತವನ್ನು ‘ಭೀಮಸೇನ ಜೋಶಿ’ಯವರೂ ಅನುಭವಿಸಿದ್ದಾರೆ. ಅವರು ‘ಭೀಮಸೇನ್ ಜೋಷಿ’ ಅಗಿದ್ದಾರೆ.(ಕನ್ನಡ ವಿಕಿಪೀಡಿಯಾ ನೋಡಿರಿ). ಅವರ ಪುಣ್ಯಬಲವು ದೊಡ್ಡದು. ‘ಭೀಮ್‌ಸೇನ್ ಜೋಷಿ’ ಆಗಿಲ್ಲ! ಇದರಂತೆ, ಕನ್ನಡ ವಿಕಿಪೀಡಿಯಾದಲ್ಲಿ ‘ಗಿರೀಶ ಕಾರ್ನಾಡ’ರು ‘ಗಿರೀಶ್ ಕಾರ್ನಾಡ್’ ಆಗಿದ್ದಾರೆ. 'ಜ್ಯೋತ್ಸ್ನಾ ಕಾಮತ'ರು 'ಜ್ಯೋತ್ಸ್ನ ಕಾಮತ'ರಾಗಿದ್ದರು. ಕೆಲವು ಓದುಗರು ಈ ತಪ್ಪನ್ನು ಎತ್ತಿ ತೋರಿಸಿದರು. ಜ್ಯೋತ್ಸ್ನಾ ತಮ್ಮ ಹೆಸರನ್ನು ಜ್ಯೋತ್ಸ್ನ ಎಂದು ಬರೆದುಕೊಳ್ಳುವದಿಲ್ಲ, ಜ್ಯೋತ್ಸ್ನಾ ಎಂದು ಬರೆದುಕೊಳ್ಳುತ್ತಾರೆ ಎಂದು ನಾನೂ ಸಹ ಆಧಾರಸಹಿತ ತೋರಿಸಿದ ನಂತರವೇ, ಅವರು ಮರಳಿ ಜ್ಯೋತ್ಸ್ನಾ ಆದರು. ಇದೇ ಸಂದರ್ಭದಲ್ಲಿ ಮತ್ತೂ ಒಂದು ಅಪಪ್ರಯೋಗವನ್ನು ಹೇಳಿಬಿಡಬಹುದು: ‘ಜೋಶಿ’ ಎನ್ನುವ ಹೆಸರನ್ನು ಎಲ್ಲಾ ಸಂಸ್ಕೃತಜನ್ಯ ಭಾಷೆಯ ಲಿಪಿಗಳಲ್ಲಿ ‘ಜೋಶಿ’ ಎಂದೇ ಬರೆಯಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಸಹ ಅದೇ ಪ್ರಯೋಗವಿದೆ. ಹೀಗಿರುವಾಗ, ದಕ್ಷಿಣ ಕರ್ನಾಟಕದಲ್ಲಿ ‘ಜೋಷಿ’ ಎಂದು ಬರೆಯುವದು ಸರಿಯಲ್ಲ. ವಿಕಿಪೀಡಿಯಾದಲ್ಲಿ ನಾನು ಶಂ.ಬಾ. ಜೋಶಿಯವರ ಬಗೆಗೆ ಒಂದು ಲೇಖನ post ಮಾಡಿದ್ದೆ. ಅದನ್ನು ಆಗಲೇ ಇರುವ ‘ಶಂ.ಬಾ. ಜೋಷಿ’ ಲೇಖನದಲ್ಲಿ merge ಮಾಡಲಾಯಿತು. ಶಂ.ಬಾ. ಜೋಶಿಯವರು ತಮ್ಮ ಹೆಸರನ್ನು ‘ಜೋಶಿ’ ಎಂದು ಸರಿಯಾಗಿ ಬರೆದುಕೊಳ್ಳುವಾಗ, ಅದನ್ನು ತಪ್ಪಾಗಿ ‘ಜೋಷಿ’ಗೆ ಬದಲಾಯಿಸುವದರ ಔಚಿತ್ಯವೇನು?

ಇರಲಿ, ಈಗ ವ್ಯಂಜನೀಕರಣಕ್ಕೆ ಮತ್ತೆ ಮರಳೋಣ. ‘ಗದುಗು’ ಅಥವಾ ‘ಗದಗ’ ಎನ್ನುವ ಊರಿನ ಹೆಸರನ್ನು ಬೆಂಗಳೂರಿನ ಕಾರಕೂನರು ‘ಗದಗ್’ ಮಾಡಿಟ್ಟಿದ್ದಾರೆ. ಬಹುಶಃ, ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಇವರ ಪೆನ್ನಿನಲ್ಲಿ ‘ ಕುಮಾರ್‌ವ್ಯಾಸ್ ಬರೆದ ಗದಗ್‌ನ ಭಾರತ್’ ಆಗಬಹುದು. ಅಷ್ಟೇಕೆ, ‘ಬಸವೇಶ್ವರ’ರು ‘ಬಸ್‌ವೇಶ್ವರ್’ ಆಗಬಹುದಲ್ಲವೆ?

ಆದುದರಿಂದ, ಕನ್ನಡವನ್ನು ಪ್ರೀತಿಸುವ ಗೆಳೆಯರೆ,
ಯಾವುದೇ regional sentimentsಗಳಿಗೆ ಒಳಗಾಗದೆ, ಈ ವಿಷಯವನ್ನು ಪರಾಮರ್ಶಿಸಿ, ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. ಎಲ್ಲಿ ತಪ್ಪಿದೆಯೊ, ಅಲ್ಲಿ ತಿದ್ದಿಕೊಳ್ಳೋಣ.
ಮುಂದಿನ ಸಂಚಿಕೆಯಲ್ಲಿ ಅಲ್ಪಪ್ರಾಣ/ಮಹಾಪ್ರಾಣಗಳ ಬಗೆಗೆ ಪರಿಶೀಲಿಸೋಣ.

ಸರಿಗನ್ನಡಮ್ ಗೆಲ್ಗೆ!

Monday, June 9, 2008

ವ್ಯಾಕರಣದೋಷ--ಭಾಷಾದೋಷ

ವ್ಯಾಕರಣದೋಷಗಳು ಬರವಣಿಗೆಯಲ್ಲಿ ಘಟಿಸುವದು ಸರ್ವೆಸಾಮಾನ್ಯ. ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳಲ್ಲಿ ಕಲಿಯುತ್ತಿರುವಾಗ, ನಮ್ಮ ಮನದಲ್ಲಿ ಮೂಡಿದ ತಪ್ಪು ತಿಳುವಳಿಕೆಯಿಂದಾಗಿ ಇಂತಹ ವ್ಯಾಕರಣದೋಷಗಳು ಸಂಭವಿಸುತ್ತವೆ. ಇಂತಹ ದೋಷಗಳು ಅನೇಕ ಸಲ ಅಲ್ಪಪ್ರಾಣ ಹಾಗು ಮಹಾಪ್ರಾಣ ಉಚ್ಚಾರಗಳನ್ನು ಅದಲು ಬದಲಾಗಿ ಭಾವಿಸುವದರಿಂದ ಉಂಟಾಗಿರುತ್ತವೆ.

ಉದಾಹರಣೆಗೆ ‘ಶಾಕಾಹಾರ’ವೆಂದು ಬರೆಯುವ ಬದಲಾಗಿ ‘ಶಾಖಾಹಾರ’ವೆಂದು ಬರೆಯುವದು; ‘ಕಾಷ್ಠ’ ಎಂದು ಬರೆಯುವ ಬದಲಾಗಿ ‘ಕಾಷ್ಟ’ ಎಂದು ಬರೆಯುವದು ಇತ್ಯಾದಿ. ಇವು ಕ್ಷಮ್ಯ ದೋಷಗಳು. ಶಬ್ದಕೋಶವನ್ನು ಪರಿಶೀಲಿಸಿ ನಮ್ಮ ಸಂಶಯನಿವಾರಣೆ ಮಾಡಿಕೊಳ್ಳಬಹುದು.

ಇಂತಹ ದೋಷಗಳು ಸಾರ್ವಜನೀಕರಣಗೊಂಡಾಗ, ಅಪರಾಧಿಗಳನ್ನು ಕ್ಷಮಿಸುವದು ಕಷ್ಟವಾಗುತ್ತದೆ. ಆದರೂ ಸಹ, ಅಪರಾಧಿಯ ವ್ಯಾಕರಣಜ್ಞಾನವನ್ನು ಲೆಕ್ಕಿಸಿ, ಕ್ಷಮಾದಾನ ಮಾಡಬಹುದು. ಉದಾಹರಣೆಗೆ ‘ಗಿರಿಜಾ’ ಎನ್ನುವ ಯುವತಿಗೆ ದ್ವಾರಕೀಶರು ‘ಶೃತಿ’ ಎಂದು ನಾಮಕರಣ ಮಾಡಿ, ಚಿತ್ರರಂಗಕ್ಕೆ ಪ್ರವೇಶ ನೀಡಿದಾಗ, ಆದಂತಹ ವ್ಯಾಕರಣ ದೋಷಕ್ಕಾಗಿ, ದ್ವಾರಕೀಶರನ್ನು ಕ್ಷಮಿಸಬಹುದು. ‘ಶ್ರುತಿ’ ಎನ್ನುವದು ಸರಿಯಾದ ಪದವೆನ್ನುವದು ದ್ವಾರಕೀಶರಿಗೆ ಗೊತ್ತಿಲ್ಲ. ಬಹುಶಃ ಆ ಪದದ ಅರ್ಥವೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಸಂಸ್ಕೃತ ಪದವೆಂದ ಮೇಲೆ ‘ರು’ಕಾರ ತಪ್ಪು, ‘ಋ’ಕಾರವೇ ಸರಿ ಎಂದು ಅವರು ಭಾವಿಸಿರಬಹುದು. ಇದೀಗ ಈ ವ್ಯಾಕರಣದೋಷವು ಸಾರ್ವಜನೀಕರಣಗೊಂಡು ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಸಹ ‘ಶೃತಿ’ ಎನ್ನುವ ಬರವಣಿಗೆ ಅಂಗೀಕೃತವಾಗಿಬಿಟ್ಟಿದೆ. [ಕೆಲವೊಂದು ವರ್ಷಗಳ ಹಿಂದೆ ರಾಯಚೂರಿನಲ್ಲಿ (ಅಥವಾ ಕಲಬುರ್ಗಿಯಲ್ಲಿ?) ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ ಸಮಾರಂಭವೊಂದರಲ್ಲಿ, ನೇಪಥ್ಯದಲ್ಲಿ ತೂಗಾಡುತ್ತಿದ್ದ ತೆರೆಯ ಮೇಲೆ ‘ಶೃತಿ’ ಎನ್ನುವ ಪದವಿದ್ದಿತು.] ಬನ್ನಂಜೆ ಗೋವಿಂದಾಚಾರ್ಯರು ಆ ವ್ಯಾಕರಣದೋಷವನ್ನು ಗಮನಿಸಿ ಸಂಘಟಕರ ಗಮನಕ್ಕೆ ತಂದರೋ, ಇಲ್ಲವೋ ಎನ್ನುವದು ತಿಳಿಯದು.
ಜೈ ದ್ವಾರಕೀಶ!

ಆದರೆ, ಹುಬ್ಬಳ್ಳಿಯ ಪ್ರಮುಖ ವಾರ್ತಾಪತ್ರಿಕೆಯಾದ ‘ಸಂಯುಕ್ತ ಕರ್ನಾಟಕ’ವು ಎಸಗುತ್ತಿರುವ ವ್ಯಾಕರಣ ದೋಷಗಳನ್ನು ಕ್ಷಮಿಸುವದು ಅಸಾಧ್ಯ. ‘ಉಚ್ಚ’ ನ್ಯಾಯಾಲಯ ಅಥವಾ ‘ಸರ್ವೋಚ್ಚ’ ನ್ಯಾಯಾಲಯ ಎಂದು ಬರೆಯಬೇಕಾದ ಸಂದರ್ಭಗಳಲ್ಲಿ, ಈ ಪತ್ರಿಕೆಯು (ಇತ್ತೀಚಿನ ವರ್ಷಗಳಲ್ಲಿ) ‘ಉಚ್ಛ’ ಮತ್ತು ‘ಸರ್ವೋಚ್ಛ’ ಎಂದೇ ಬರೆಯುತ್ತ ಬಂದಿದೆ. ಪತ್ರಿಕೆಯ ಈ ವ್ಯಾಕರಣದೋಷವು ಅಕ್ಷಮ್ಯ. ಶಾಲಾಹಂತದ ಬಾಲಕರು ಇವೇ ಸರಿಯಾದ ಪದಗಳು ಎಂದು ತಿಳಿದು ಇವನ್ನೇ ನಕಲು ಮಾಡಿದರೆ ಆಶ್ಚರ್ಯವಿಲ್ಲ. ಸಾರ್ವಜನಿಕರಿಂದ ಪ್ರಮಾಣ ಎಂದು ಭಾವಿಸಲ್ಪಟ್ಟಿರುವ ಸಂಸ್ಥೆಗಳು, ಪತ್ರಿಕೆಗಳು ಹಾಗು ವ್ಯಕ್ತಿಗಳು ವ್ಯಾಕರಣದೋಷಗಳ ಬಗೆಗೆ ಬಲು ಎಚ್ಚರವಹಿಸಬೇಕು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಓದಲಾದ ಇಂತಹ ಕೆಲವು ಅಲ್ಪ/ಮಹಾ ಪ್ರಾಣಘಾತಕ ಪದಗಳನ್ನು ಇಲ್ಲಿ ಕೊಟ್ಟಿದೆ:

ತಪ್ಪು ………..ಒಪ್ಪು
ನಿಚ್ಛಳ ……ನಿಚ್ಚಳ
ಸಮುಚ್ಛಯ ….ಸಮುಚ್ಚಯ
ಅಲ್ ಖೈದಾ…….ಅಲ್ ಕೈದಾ
ಧೃವ……………ಧ್ರುವ
ಧೃವೀಕರಣ……..ಧ್ರುವೀಕರಣ
ಅನುಗೃಹ………ಅನುಗ್ರಹ
ಶಿಲನ್ಯಾಸ……...ಶಿಲಾನ್ಯಾಸ
ಕಳ್ಳಬಟ್ಟಿ……...ಕಳ್ಳಭಟ್ಟಿ
ಭೋಗಸ್………ಬೋಗಸ್
ಖೂಟ………….ಕೂಟ
ಥಳಕು ಹಾಕಿದ……ತಳಕು ಹಾಕಿದ
ಸೌಹಾರ್ದೃ………ಸೌಹಾರ್ದ
ಪ್ರಾಂಥ……… .ಪ್ರಾಂತ
ಛಾಳಿ…………. ಚಾಳಿ
ಉಮ್ಮಸ್ಸು…… ಹುಮ್ಮಸ್ಸು
ಸೋಲ್ಲು……… ಸೊಲ್ಲು
ನೈರುತ್ಯ....ನೈಋತ್ಯ

ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಶ್ ಪದಗಳ ಬರವಣಿಗೆಯಲ್ಲಿಯೂ ಸಹ ಈ ಪತ್ರಿಕೆಯು ಘೋರ ಅಪರಾಧವನ್ನು ಮಾಡಿದೆ. ಕಳೆದ ವರ್ಷದಲ್ಲಿ(೨೦೦೭ರಲ್ಲಿ), CET ‘ಕೌನ್ಸೆಲಿಂಗ್ ’ ಅನ್ನುವ ಪದವನ್ನು ಈ ಪತ್ರಿಕೆ ‘ಕೌನ್ಸಿಲಿಂಗ್’ ಎಂದು ಸತತವಾಗಿ ಬರೆಯುತ್ತ ನಡೆದಿದೆ. COUNSEL ಹಾಗು COUNCIL ಎನ್ನುವ ಪದಗಳ ನಡುವಿನ ಅಂತರ ತಿಳಿಯದ ಪತ್ರಿಕೆ, ಅದೆಂತಹ ಪತ್ರಿಕೆ?

ನನ್ನ ತಾಯಿ ನನಗೆ ಚಿಕ್ಕಂದಿನಲ್ಲಿ ಅಕ್ಷರ ಕಲಿಸುವಾಗ, ‘ಸಂಯುಕ್ತ ಕರ್ನಾಟಕ’ ದಲ್ಲಿಯ ಪದಗಳನ್ನು ತೋರಿಸಿ ಅಕ್ಷರ ಕಲಿಸಿದಳು. Thank God, ಆ ಸಮಯದಲ್ಲಿ ವ್ಯಾಕರಣ ಬಲ್ಲ ಸಂಪಾದಕರು ಅಲ್ಲಿದ್ದರು. ಹೀಗಾಗಿ ‘ಸಂಯುಕ್ತ ಕರ್ನಾಟಕ’ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ನಾನು ನನ್ನ ಮಕ್ಕಳಿಂದ ಈ ಪತ್ರಿಕೆಯನ್ನು ಅಡಗಿಸಿ ಇಡುವ ಪ್ರಸಂಗ ಬಂದಿದೆ (ತಪ್ಪು ಪದಪ್ರಯೋಗಗಳಿಂದ ಅವರನ್ನು ರಕ್ಷಿಸಲು).

ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ವ್ಯಾಕರಣ ದೋಷಗಳನ್ನು ಏಕೆ ಮಾಡುತ್ತಿದೆ? ಇದಕ್ಕೆ ಮೂರು ಕಾರಣಗಳಿರಬಹುದು:
೧) ಸಂಪಾದಕ ಮಂಡಲಿಯಲ್ಲಿ ಕನ್ನಡ ಬಾರದ ಪಂಡಿತರಿದ್ದಾರೆ.
೨) ಅಖಿಲ ಕರ್ನಾಟಕ ಪತ್ರಿಕೆಯಾಗುವ ಹುಮ್ಮಸ್ಸಿನಲ್ಲಿ, ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಳನ್ನು ಈ ಪತ್ರಿಕೆ ರೂಢಿಸಿಕೊಳ್ಳುತ್ತಿದೆ.
೩) ತನ್ನ ಪ್ರತಿದ್ವಂದ್ವಿ ಪತ್ರಿಕೆಯ specailityಗಳನ್ನು (ತಪ್ಪಾಗಿ) ನಕಲು ಮಾಡಲು ಪ್ರಯತ್ನಿಸುತ್ತಿದೆ.

ಸ್ವಾತಂತ್ರ್ಯಪೂರ್ವದಿಂದಲೇ, ಉಚ್ಚ ಧ್ಯೇಯಗಳನ್ನಿಟ್ಟುಕೊಂಡು ಈ ಪತ್ರಿಕೆಯು ಹೋರಾಡಿದೆ. ‘ಪ್ರಮಾಣ ಕನ್ನಡ’ದ ನಿರ್ಮಾಣಕ್ಕಾಗಿ ಈ ಪತ್ರಿಕೆಯು ಪರಿಶ್ರಮಪಟ್ಟಿದೆ. ಇಂತಹ ಉಜ್ವಲ ಇತಿಹಾಸವುಳ್ಳ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಪದಪ್ರಯೋಗದಲ್ಲಿ ಸುಧಾರಿಸುವದೆಂದು ಹಾರೈಸೋಣ.

ಇದಿಷ್ಟು ವ್ಯಾಕರಣದೋಷದ ಬಗೆಗೆ. ಆದರೆ, ಭಾಷಾದೋಷದ ಬಗೆಗೆ ಬರೆಯುವದು ಕತ್ತಿಯ ಮೇಲೆ ನಡೆದಂತೆ. Regional sentimentsಗಳಿಂದಾಗಿ ನಮ್ಮ ಮನಸ್ಸು ಪ್ರಭಾವಿತವಾಗಬಹುದು.
ಈ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

Friday, June 6, 2008

ಸ್ಥಳನಾಮ ಮಾರ್ಪಾಟುಗಳು

ಭಾರತ ದೇಶದಲ್ಲಿ ಆರ್ಯರು ಪ್ರವೇಶಿಸಿದ ಸಂದರ್ಭದಲ್ಲಿ ಅವರು ನುಡಿಯುತ್ತಿದ್ದ ಭಾಷೆಗೆ ಆರ್ಯಭಾಷೆ ಎಂದು ಕರೆಯೋಣ. ವ್ಯಾಕರಣದ ಕಟ್ಟುಪಾಡು ಇಲ್ಲದಿರುವ ಕಾಲದ ಈ ಭಾಷೆ ಪ್ರಾಕೃತ ಭಾಷೆ (=ಪ್ರಕೃತಿಸಹಜವಾದದ್ದು=natural). ಈ ಭಾಷೆಯನ್ನು ವ್ಯಾಕರಣದ ಶಿಸ್ತಿಗೆ ಒಳಪಡಿಸಿ, ಸಂಸ್ಕರಿಸಿದಾಗ ಇದು ಸಂಸ್ಕರಣಗೊಂಡ ಭಾಷೆ ಆಯಿತು (=ಸಂಸ್ಕರಿತ, ಸಂಸ್ಕೃತ, processed, refined). ‘ಸಂಸ್ಕೃತ’ವೆನ್ನುವದು ಭಾಷೆಯ ಹೆಸರಲ್ಲ, ಭಾಷೆಯ ಸ್ಥಿತಿ. ಪ್ರಾಕೃತ ಅಂದರೆ natural tongue; ಸಂಸ್ಕೃತ ಅಂದರೆ grammered tongue.

ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.

ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.

ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)

ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ

ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.

ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!

Wednesday, June 4, 2008

ಬೆಂಗಳೂರು ಹಾಗು ವೆಂಗಿಮಂಡಲ

ಬೆಂಗಳೂರು ಈ ಪದದ ಮೂಲ ‘ಬೆಂದಕಾಳೂರು’ ಎಂದು ಹೇಳಲಾಗುತ್ತಿದೆ. ಈ ನಿರುಕ್ತಿಗಾಗಿ ಒಂದು ಕತೆಯನ್ನೇ ಕಟ್ಟಲಾಗಿದೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:

ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)

ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!

ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.

ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.

ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.

ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:

ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.

ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.

ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.

‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.

ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.

Sunday, June 1, 2008

ಮೂಗ, ಪಣಬ, ಮನ್ನ, ಕಿನ್ನ, ಹಂಗ, ನಲ್ಲ, ಗಂಗ, ಮುಂಬ, ಸಿಂಗ, ಕಂಬ, ಲಾಟ, ಮುರ

ಮೂಗರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೆಲೆಸಿದ್ದ ದೊಡ್ಡ ಮೂಲನಿವಾಸಿ ಸಮುದಾಯ. ಆಂಧ್ರಪ್ರದೇಶದಲ್ಲಿ ಇರುವ ಮುಖ ಹೆಸರಿನ ಆದಿವಾಸಿಗಳು ಇವರೇ ಆಗಿರಬಹುದು. ಮೂಗ ಅಥವಾ ಮೂಕ ಎನ್ನುವ ಪದದಿಂದ ಪ್ರಾರಂಭವಾಗುವ ೩೫ ಹಳ್ಳಿಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಮುಖೇರ ಎನ್ನುವ ಊರಿದೆ. ಈ ಹೆಸರು ‘ಮುಖ+ಹಾರ’ ಎನ್ನುವ ದ್ರಾವಿಡ ಪದದ ಮಹಾರಾಷ್ಟ್ರೀಕರಣವಿರಬಹುದು. ಕರ್ನಾಟಕದ ಕೊಲ್ಲೂರಿನಲ್ಲಿರುವ ಮೂಕಾಂಬಿಕೆ ಸುಪ್ರಸಿದ್ಧ ದೇವಿಯಾಗಿದ್ದಾಳೆ. ಇವಳು ಮೂಕಾಸುರನನ್ನು ಸಂಹರಿಸಿದಳು ಎಂದು ಸ್ಥಳಪುರಾಣಗಳು ಹೇಳುತ್ತವೆ. ಕೋಲ, ಮುಂಡ, ಮಹಿಷ ಮೊದಲಾದ ಮೂಲನಿವಾಸಿ ಸಮುದಾಯಗಳನ್ನು ಸೋಲಿಸಿದ ಮಾತೃಪ್ರಧಾನ ಸೈನ್ಯವೇ, ಈ ಮೂಕಸಮುದಾಯವನ್ನೂ ಸಹ ಸೋಲಿಸಿರಬಹುದು. ಕರ್ನಾಟಕದಲ್ಲಿ ಮೂಕ ಅಥವಾ ಮೂಗ ಹೆಸರಿನಿಂದ ಪ್ರಾರಂಭವಾಗುವ ಕೆಲವು ಸ್ಥಳನಾಮಗಳು ಈ ರೀತಿಯಾಗಿವೆ:
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.

ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.

ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.

ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.

‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.

ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.

ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.

ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.

ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.

ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.

ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.

ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?

ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.

ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.

ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.

ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).