Wednesday, July 30, 2008

ಹೃದಯಸಮುದ್ರ....ದ.ರಾ.ಬೇಂದ್ರೆ

ಬೇಂದ್ರೆಯವರಿಗೆ ಅರವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಐದು ಕವನಸಂಕಲನಗಳನ್ನು ಕೂಡಿಸಿ ಅರಳು-ಮರಳುಎನ್ನುವ  ಬೃಹತ್-ಕವನಸಂಕಲನವನ್ನು ಪ್ರಕಟಿಸಲಾಯಿತು. ಆ ಐದು ಸಂಕಲನಗಳು ಇಂತಿವೆ:

(೧) ಸೂರ್ಯಪಾನ
(೨) ಹೃದಯಸಮುದ್ರ
(೩) ಮುಕ್ತಕಂಠ
(೪) ಚೈತ್ಯಾಲಯ
(೫) ಜೀವಲಹರಿ

ಹೃದಯಸಮುದ್ರ ಕವನಸಂಕಲನದ ಮೊದಲ ಕವನವೂ ಹೃದಯಸಮುದ್ರವೇ. ಈ ಕವನದ ಬಗೆಗೆ ಬೇಂದ್ರೆಯವರು ಈ ರೀತಿ ಟಿಪ್ಪಣಿ ನೀಡಿದ್ದಾರೆ:ಶ್ರೀ ಅರವಿಂದರ ಅತಿಮಾನಸ ಸಾಕ್ಷಾತ್ಕಾರದಿಂದ ಬಂದ ಸಂಸಾರೋತ್ತಾರಕ ಕರೆಯನ್ನೇ ನೆನಿಸಿ ಈ ಭಾವಲಹರಿ ಉತ್ಕಟತೆಯನ್ನು ತಾಳಿದೆ.

ಮನುಷ್ಯನು ಉತ್ಕ್ರಾಂತಿ ಪಥದಲ್ಲಿ ಮುಂದುವರೆಯುತ್ತಿದ್ದಾಗ ಕೊನೆಯ ಘಟ್ಟದಲ್ಲಿ ಅವನ ಪ್ರಜ್ಞೆಯುಸುಪ್ರಮಾನಸಅವಸ್ಥೆಯನ್ನು ತಲುಪುವದಾಗಿ ಶ್ರೀ ಅರವಿಂದರು ಹೇಳುತ್ತಿದ್ದರು. (ಸ್ವತಃ ಅವರು ಈ ಅವಸ್ಥೆಯನ್ನು ತಲುಪಿದ್ದರು).

ಲೌಕಿಕ ಪ್ರಜ್ಞೆಯಿಂದ ಅಲೌಕಿಕ ಪ್ರಜ್ಞೆಗೆ ಸಾಗಲು ಅವರು ನೀಡಿದ ಕರೆಯನ್ನು ಕವಿಸಂಸಾರೋತ್ತಾರಕ ಕರೆಎಂದು ಕರೆದಿದ್ದಾರೆ. ಗುರುವಿನ ಕರೆಯ ಪ್ರಭಾವದಿಂದ ಕವಿಯಲ್ಲಿ ಭಾವವು ಉಮ್ಮಳಿಸಿದಾಗ, ಈ ಕವನ ಹೊರಹೊಮ್ಮಿದೆ.

 ಹೃದಯಸಮುದ್ರಕವನದ ಪೂರ್ತಿಪಾಠ ಇಂತಿದೆ:

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದs,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.
…………………………………………..

ಕವಿಯು ಆಧ್ಯಾತ್ಮ ಸಾಧಕನ ಹೃದಯವನ್ನೇ ಒಂದು ಸಮುದ್ರಕ್ಕೆ ಹೋಲಿಸಿ ಕವನವನ್ನು ಪ್ರಾರಂಭಿಸಿದ್ದಾರೆ.
ಆದರೆ ಈ ಸಮುದ್ರವು ಸದ್-ಭಾವನೆಗಳಿಂದ ತುಂಬಿದ ಹೃದಯಸಮುದ್ರ. ಅಂತೆಯೇ ಇದು ಬಂಗಾರ ನೀರಿನ ಸಮುದ್ರ.

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಅನಂತ ದೂರದಲ್ಲಿರುವ ಆಕಾಶದ ಬಣ್ಣ ನೀಲಿ. ಈ ಸಮುದ್ರದ ತೀರಗಳ ಬಣ್ಣವೂ ನೀಲಿಯೇ. ಯಾಕೆಂದರೆ ದೈವಿಭಾವದ ಈ ಸಮುದ್ರವೂ ಸಹ ಅನಂತವಾಗಿದೆ. ಇದರ ತೀರವು ತೀರದಂತಹದು, ಇದಕ್ಕೆ ಅಂತವಿಲ್ಲ.
ಈ ಸಮುದ್ರದಲ್ಲಿ ಏಳುವ ಸತ್-ಭಾವನೆಯ ತೆರೆಗಳು ಎಂತಹವು? ಅವು ಮಿಂಚಿನ ಬಳಗ!
ಮಿಂಚು ಪ್ರಕಾಶಮಾನವಾಗಿರುತ್ತದೆ. ಅದರ ಕಣ್ಣು ಕೋರೈಸುವ ಬೆಳಕು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಆದರೆ ಕೊನೆಯಿಲ್ಲದ ಮಿಂಚಿನ ಬಳಗ? ಅದು ಅಪೂರ್ವ ಸಿದ್ಧಿಯ ಮಾನಸಿಕ ಸ್ಥಿತಿಯಾಗಿದೆ.

[ಶಂಕರಾಚಾರ್ಯರು ತಮ್ಮ ಸೌಂದರ್ಯಲಹರಿಯಲ್ಲಿ ತಪಸ್ವಿಗಳು ದೇವಿಯು ಕಾಣುವ ಬಗೆಯನ್ನೂ ಇದೇ ರೀತಿಯಾಗಿ ಬಣ್ಣಿಸಿದ್ದಾರೆ.

ತಟಿಲ್ಲೇಖಾ ತನ್ವೀಂ, ತಪನಶಶಿವೈಶ್ವಾನರಮಯೀಮ್
ನಿಷಣ್ಣಾಂ ಷಣ್ಣಾಂ ಅಪ್ಯುಪರಿ ಕಮಲಾನಾಂ ತವ ಕಲಾಮ್
ಮಹಾಪದ್ಮಾಟವ್ಯಾಂ ಮೃದಿತಮಲಮಾಯೇನ ಮನಸಾ
ಮಹಾಂತಃ ಪಶ್ಯಂತಃ ದಧತಿ ಪರಮಾಹ್ಲಾದ ಲಹರೀಮ್ .

(ಹೇ ದೇವಿ, ಷಟ್ಚಕ್ರಗಳ ಮೇಲಿರುವ ಸಹಸ್ರದಳಕಮಲದಲ್ಲಿರುವ , ಮಿಂಚಿನ ಬಳ್ಳಿಯಂತಹ ರೂಪವುಳ್ಳ, ಸೂರ್ಯ, ಚಂದ್ರ ಹಾಗು ಅಗ್ನಿ ಸ್ವರೂಪಳಾದ ನಿನ್ನನ್ನು ವಿಮಲ ಮನಸ್ಸಿನ ತಪಸ್ವಿಗಳು ನೋಡುತ್ತಾರೆ.)]

ಅನೇಕ ಸಾಧಕರ ಅನುಭಾವ ಕವನಗಳು ವೈಯಕ್ತಿಕವಾಗಿರುವದನ್ನು ನೋಡುತ್ತೇವೆ. ಆದರೆ ಬೇಂದ್ರೆಯವರ ಈ ‘ಹೃದಯಸಮುದ್ರ’ವು  ವೈಯುಕ್ತಿಕ ಸ್ವರೂಪದ್ದಾಗಿರದೆ ಸಾಮುದಾಯಕ ರೂಪವನ್ನು ಪಡೆದಿದೆ. ಅಂತೆಯೇ ಈ ತಮ್ಮ ಮಾನಸಸಮುದ್ರದಲ್ಲಿ ಅವರು ಎಲ್ಲ ಸಹಯಾತ್ರಿಕರ ನೆಲೆಗಳನ್ನು ಕಾಣುತ್ತಾರೆ.
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ.
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಊರಿದರೆ ಮಾತ್ರ ಊರು ಸಿಗುವದು. ಊರುವದು ಧೀರನಿಗೇ ಸಾಧ್ಯ. ಧೀರನೆಂದರೆ ಸಾಧಕನೇ ಸೈ. ಎಲ್ಲಾ ಸಾಧಕರ ಮಾನಸಸಮುದ್ರ ಒಂದೇ. ಅದು ಭಗವಂತನು ವಾಸಿಸುವ ಹಾಲ್ಗಡಲು.
ಈ ಹಾಲ್ಗಡಲ ವಾಸವನ್ನು ನೆನಸಿಕೊಂಡೇ ಪುರಂದರದಾಸರು ಹಾಡಿದರಲ್ಲವೆ?
ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ!

ಅಂತಹ ಹೃದಯಸಮುದ್ರದಲ್ಲಿ ನಾವುಅಂದರೆ ಸಾಧಕರು ಇದ್ದೇವೆ ; ನಮ್ಮೊಳಗೆ ತಾವುಅಂದರೆ ಭಗವಂತ ಇದ್ದಾನೆ. ಬೇಂದ್ರೆಯವರ ಅನೇಕಾರ್ಥ ಪದ ಬಳಕೆ ಇಲ್ಲಿಯೂ ಕಾಣುತ್ತದೆ. ನಾವುಪದದ ಮತ್ತೊಂದು ಅರ್ಥ
ದೋಣಿ ; ‘ತಾವುಅಂದರೆ ಠಾವು, ಅಂದರೆ.ಬಂದರು;ಅದು ಇಲ್ಲವಣ್ಣ ದೂರಾ.ಯಾಕೆಂದರೆ ಸಮುದ್ರ, ದೋಣಿ ಹಾಗು ಬಂದರು ಎಲ್ಲವೂ ಸಾಧಕನ ಹೃದಯದಲ್ಲಿಯೇ ಇವೆ. ಆದುದರಿಂದ ನೀಲ ಕ್ಷಿತಿಜದಷ್ಟು ದೂರವಾಗಿ ಕಾಣುವ ಈ ತೀರ ಸಾಧಕನಿಗೆ ದೂರವಲ್ಲ ಎಂದು ಬೇಂದ್ರೆ ಹೇಳುತ್ತಾರೆ. ಇದೇ ಅರ್ಥವನ್ನು ಪುರಂದರದಾಸರೂ ಸಹ ತಮ್ಮ ಹಾಡಿನಲ್ಲಿ ಹೇಳಿದ್ದಾರೆ: ಒಂದೇ ಕೂಗಳತೆ ಕಾಣೊ ವೈಕುಂಠಕೆ”.

ಇಂತಹ ಮಾನಸಸಮುದ್ರದಲ್ಲಿರುವ ಸಾಧಕನ ಮುಂದಿನ ಘಟ್ಟವೇನು ಎನ್ನುವದನ್ನು ಕವನದ ಎರಡನೆಯ ನುಡಿಯಲ್ಲಿ ಬೇಂದ್ರೆ ಈ ರೀತಿಯಾಗಿ ವರ್ಣಿಸಿದ್ದಾರೆ:

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ದಿವ್ಯಗಳಿಗೆ ಅಂದರೆ ದೇವರು ಕರೆ ನೀಡುತ್ತಿರುವ ಗಳಿಗೆ. ಈ ಕರೆ ಎಷ್ಟು ಉತ್ಕಟವಾದದ್ದೆಂದರೆ ಇದು ಸಮುದ್ರದ ತೆರೆಗಳಂತೆ ಬಂದು ನಮ್ಮನ್ನು ತನ್ನಲ್ಲಿ ಮುಳುಗಿಸುತ್ತದೆ. ಇದು ನೆರೆ ಅಂದರೆ ಮಹಾಪೂರದಂತೆ ಬಂದು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತದೆ. ಈ ಕರೆಯ ತೆರೆಯತ್ತ ನಮ್ಮ ಭಾವ ಹರಿಯುತ್ತದೆ.

ಬೇಂದ್ರೆಯವರ ಕ್ರಮಬದ್ಧತೆಯನ್ನು ಇಲ್ಲಿ ಗಮನಿಸಬೇಕು. ಮೊದಲು ಬರುವುದು ಸಣ್ಣ ಪ್ರಮಾಣದ ತೆರೆ. ಸಾಧಕನ ಸಾಧನೆ ಹೆಚ್ಚಿದಂತೆ ಇದು ನೆರೆಯಾಗುತ್ತದೆ. ನೆರೆ’ ಎನ್ನುವ ಪದಕ್ಕೆ mature ಎನ್ನುವ ಅರ್ಥವೂ ಇದೆ.

ಹರಿತsದ ಭಾವ’; ನಮ್ಮ ಜೀವಭಾವವು ಈ ಕರೆಯತ್ತ, ಕರೆ ಕೊಡುವವನತ್ತ ಹರಿಯುತ್ತದೆ; ‘ಹರಿತsಅಂದರೆ ಹರಿತವಾಗುತ್ತದೆ, sharp ಆಗುತ್ತದೆ ಎಂದೂ ಬೇಂದ್ರೆ ಹೇಳುತ್ತಾರೆ. ಭಗವಂತನ ಈ ಕರೆಯೊಳಗೆ ನಮ್ಮ ಜೀವ ಬೆರತು ಹೋಗುತ್ತದೆ. ನಮಗೆ ಸ್ವತಂತ್ರ ಆತ್ಮಭಾವ ಉಳಿಯುವದೇ ಇಲ್ಲ. ನಮ್ಮ ಆತ್ಮಗಳಿಗೆಲ್ಲ ಇದೇ ಸಮಯ, ದೇವಚೈತನ್ಯದಲ್ಲಿ ಬೆರೆತುಹೋಗಬೇಕಾದ ಸಮಯ.ಆತ್ಮಗಳಿಗೆಎಂದರೆ ಆತ್ಮದ ಗಳಿಗೆ’ ( Devine Moment) ಎಂದೂ ಅರ್ಥೈಸಬಹುದು. ಇನ್ನು ನಾವು ಈ ಪ್ರಕ್ರಿಯೆಯಲ್ಲಿ ಸಂಶಯ ಪಡುವ ಕಾರಣವೇ ಇಲ್ಲ. ಯಾಕೆಂದರೆ ಈ ಪ್ರಕ್ರಿಯೆಯ ಕಾರಣಪುರುಷನು ನಮ್ಮನ್ನು ಸಾಗರ ದಾಟಿಸುವ ಅಂಬಿಗನಾಗಿದ್ದಾನೆ. ಅವನು ನಾವು ನಂಬಬಹುದಾದ, ನಂಬಲೇಬೇಕಾದ ನಂಬಿಗ.
ದಾಸರು ಹೇಳುವಂತೆ: ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ.

ಮೂರನೆಯ ನುಡಿಯಲ್ಲಿ ಬೇಂದ್ರೆ ಈ ಸಮುದ್ರವು ಲೌಕಿಕ ಸಾಗರವಲ್ಲ, ಅಲೌಕಿಕ ಸಾಗರ ; ಅರ್ಥಾತ್ ಕ್ಷುದ್ರ ಭಾವನೆಗಳ ಸಾಗರವಲ್ಲ , ದೈವೀ ಭಾವನೆಗಳ ಸಾಗರ ಎನ್ನುವದನ್ನು ಸ್ಪಷ್ಟಪಡಿಸುತ್ತಾರೆ.

ಇದು ಉಪ್ಪು ನೀರ ಕಡಲಲ್ಲೊ ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಉಪ್ಪನೀರ ಕಡಲು ಅಂದರೆ ಪ್ರಾಪಂಚಿಕ ಕಡಲು. ಈ ಕಡಲು ಪ್ರಾಪಂಚಿಕವಲ್ಲ, ನಮ್ಮ ಒಡಲು ಅಂದರೆ ನಮ್ಮ ಅಂತಃಕರಣದಲ್ಲಿಯೇ ಈ ಕಡಲಿನ ನೆಲೆ ಇದೆ. ಈ ನೆಲೆಯೇ ಈ ಕಡಲಿನ ಸೆಲೆಯು. ಕಂಡಕಂಡವರಿಗೆ ಇದರ ಬೆಲೆ ಗೊತ್ತಾಗದು. ಒಳಗಣ್ಣಿನಿಂದ ಕಂಡವರಿಗಷ್ಟೇ ಇದರ ಮೌಲ್ಯದ ಅರಿವಾಗುವದು. ಸಿಕ್ಕಸಿಕ್ಕಲ್ಲಿ ಈ ಸೆಲೆ ಒಡೆಯಲಾರದು. ಸಾಧನೆಯಿಂದ ಪವಿತ್ರಗೊಂಡ ತಾಣದಲ್ಲಿ ಮಾತ್ರ ಈ ಸೆಲೆ ಚಿಮ್ಮುವದು. ಯಾಕೆಂದರೆ ಇದು ತೀರ್ಥಕ್ಷೇತ್ರವಿದ್ದಂತೆ. ಇದರ ಕಾಂತಿ ನಮಗೆ ಹೊಳೆಯಬೇಕಾದರೆ ನಮ್ಮ ಕಣ್ಣು ಅರಳಿರಬೇಕು. ಈ ಅರಳಿದ ಕಣ್ಣು ಈ ದಿವ್ಯತೀರ್ಥದ ಕಡೆಗೆ ಹೊರಳಬೇಕು. ಆಗ ಮಾತ್ರ ದಿವ್ಯಪ್ರಭೆಯ ಈ ಕಾರಂಜಿ ನಮ್ಮ ಕಣ್ಣಿಗೆ ಹೊಳೆಯುವದು.

ಈ ಸಾಕ್ಷಾತ್ಕಾರವು ಕವಿಯನ್ನು ಆನಂದದಿಂದ ತುಂಬಿದೆ. ಅಂತೆಲೇ ಆತ ಉದ್ಘೋಷಿಸುತ್ತಿದ್ದಾನೆ:

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದs,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

ಯಾರು ಬಂದಿದ್ದಾರೆಯೋ, ಅಂದರೆ ದಿವ್ಯಕರೆಯನ್ನು ಕೇಳಿ ಬಂದಿದ್ದಾರೆಯೊಅವರ ಬಳಿಗೆ ಈ ಮಹಾಪ್ರವಾಹ ಬಂದಿದೆ. ಯಾರು ಇಲ್ಲಿ ಬಂದು ನಿಂತಿದ್ದಾರೊ ಅವರ ಪಕ್ಕದಲ್ಲಿಯೆ(=ನೆರೆಗು) ಬಂದಿದೆ. ಅವರ ನೆರೆಗೆ (ಅಂದರೆ ಅವರನ್ನು ಪಕ್ವಗೊಳಿಸುವ ಸಲುವಾಗಿ) ನಿಂತುಕೊಂಡಿದೆ. ನಿಂದವರ ನೆರೆಗೆ ಅನ್ನುವದಕ್ಕೆ ಮತ್ತೊಂದು ಅರ್ಥವನ್ನು ಹೇಳಬಹುದು. ಯಾರು ಬಾರದೆ ಅಲ್ಲಿಯೇ ನಿಂತಿದ್ದಾರೆಯೋ ಅವರ ಪಕ್ಕಕ್ಕೂ ಸಹ ಈ ನೆರೆ ಬಂದು ನಿಂತಿದೆ.

ಕರೆಸಾಧಕನಿಗೆ ಏನು ಹೇಳುತ್ತಿದೆ?
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.

‘ನವಮನುವು ಬಂದಿರುವನು’ ಎನ್ನುವ ಈ ಘೋಷಣೆ ಶ್ರೀ ಅರವಿಂದರ ಕಾಣ್ಕೆಯ ವಿವರಣೆ.
ಅರವಿಂದರು ಮಾನವನ ಉತ್ಕ್ರಾಂತಿಯಲ್ಲಿ ನಂಬಿಗೆ ಇಟ್ಟವರು. ಮನುಷ್ಯನು ತನ್ನ ಕೆಳಮಟ್ಟದ ಮಾನಸಿಕ ಸ್ಥಿತಿಯಿಂದ ಮೇಲೆದ್ದು ಸುಪ್ರಮಾನಸ (supra mental, super mind) ಸ್ಥಿತಿಯನ್ನು ತಲುಪಬೇಕು, ತಲುಪಿಯೇ ತೀರುತ್ತಾನೆ ಎನ್ನುವದು ಅವರ ಕಾಣ್ಕೆ. ಬೇಂದ್ರೆಯವರು ಅದನ್ನೇ ನವಮನುವಿನ ರೂಪಕದ ಮೂಲಕ ಹೇಳುತ್ತಿದ್ದಾರೆ.

ಶ್ರೀ ಅರವಿಂದರನ್ನು ಮಾನಸಿಕವಾಗಿ ತಮ್ಮ ಗುರುವಾಗಿ ಸ್ವೀಕರಿಸಿದ ಬೇಂದ್ರೆಯವರು, ಶಿಷ್ಯರ ಸಾಧನೆ ಹಾಗು ಗುರುವಿನ ಅನುಗ್ರಹವನ್ನು ಹೃದಯಸಮುದ್ರಕವನದ ಮೂಲಕ ಚಿತ್ರಿಸಿದ್ದಾರೆ.

ಹೃದಯಸಮುದ್ರಕವನದಲ್ಲಿ ಬೇಂದ್ರೆಯವರ ವೈಶಿಷ್ಟ್ಯವಾದ ಅನೇಕಾರ್ಥ ಪದಗಳಿವೆ. ಅವರ ಎಲ್ಲ ಕವನಗಳಲ್ಲಿರುವ ಕ್ರಮಬದ್ಧತೆ, ವಾಸ್ತವಿಕ ನಿರೂಪಣೆ ಇಲ್ಲಿಯೂ ಇದೆ. ಆದರೂ ಸಹ ಓದುಗನ ಹೃದಯಕ್ಕೆ ತಟ್ಟುವಂತೆ ಸಾಧಕನ ಮನಃಸ್ಥಿತಿಯನ್ನು ಬಿಂಬಿಸುವದರಲ್ಲಿ ಕವನ ಸೋತಿದೆ ಎನ್ನಬಹುದು.
ಕನ್ನಡದ ಬೇರೆ ಕೆಲವು ಅನುಭಾವ ಗೀತೆಗಳು ಎಷ್ಟು ಸಮರ್ಥವಾಗಿ ಈ ಕಾರ್ಯವನ್ನು ಮಾಡಿವೆ ಎನ್ನುವದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು:

(೧) ಮಧುರಚೆನ್ನರು ಸಾಧಕನ ಹಂಬಲವನ್ನು ಹೀಗೆ ವರ್ಣಿಸುತ್ತಾರೆ:
ನಿಲ್ಲು ನಿಲ್ಲೆಲೆ ನವಿಲೆ, ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ!
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ,
ತಾಳಲಾರದು ಜೀವ, ಹೇಳಬಾರೆ!

(೨) ಅಕ್ಕ ಮಹಾದೇವಿಯ ವಚನವಂತೂ ಪ್ರಸಿದ್ಧವಿದೆ.
ಈ ವಚನದಲ್ಲಿ ಸಾಕ್ಷಾತ್ಕಾರ ಪಡೆದ ಸಾಧಕನ ಚಿತ್ರವಿದೆ:
ಅಕ್ಕ ಕೇಳವ್ವ, ನಾನೊಂದ ಕನಸ ಕಂಡೆ
ಅಕ್ಕ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು……”

ಇದರ ಕಾರಣ ಸ್ಪಷ್ಟ. ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು. ಬೇಂದ್ರೆಯವರ ಮಾತಿನಲ್ಲಿಯೇ ಹೇಳುವದಾದರೆ:
ಕಟ್ಟೋರೆಲ್ಲ ಕವಿಗಳಲ್ಲಾ, ಹುಟ್ಟೋರೆಲ್ಲಾ ಭವಿಗಳಲ್ಲಾ,
ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.

13 comments:

ತೇಜಸ್ವಿನಿ ಹೆಗಡೆ said...

ಸುನಾಥರೆ,

"ಬಂಗಾರ ತೀರ.." ಕವನ ಅವರ ಮೊದಲ ಕವನ ಸಂಕಲನವಾದ "ಕೃಷ್ಣಕುಮಾರಿ" ಕವನಸಂಕಲನದ್ದು ಎಂದು ಓದಿದ ನೆನಪು. ಹೃದಯಸಮುದ್ರ ಕವನ ಸಂಕಲನದಲ್ಲಿದೆಯೆಂದು ನೀವು ಹೇಳುತಿದ್ದೀರಿ!! ನನ್ನ ಸಂಶಯವನ್ನು ನಿವಾರಿಸಬೇಕಾಗಿ ವಿನಂತಿ.

ನೀವು ಹೇಳಿದ್ದು ನಿಜ....ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು.
ಆದರೆ ಅಕ್ಕ ಮಹಾದೇವಿಯ ವಚನಕ್ಕೆ ಬೇಂದ್ರೆಯವರ ಈ ಕವನವನ್ನು ಹೋಲಿಸಲಾಗದೆಂದು ನನ್ನ ಅಭಿಮತ. ಅಕ್ಕನ ಈ ವಚನಕ್ಕಿಂತಲೂ ನೇರವಾಗಿ ಹೃದ್ಯವಾಗಿ ಬೇಂದ್ರೆಯವರ ಬಂಗಾರ ತೀರ ಕವನ ಮನಗೆಲ್ಲುತ್ತದೆ.

ಈ ಕವನದೊಳಡಗಿರುವ ದಾರ್ಶನಿಕತ್ವಕ್ಕೆ ಮಾರುಹೋಗಿರುವೆ. ಈ ಕವನದಷ್ಟೇ ಸುಂದರ, ಸರಳ, ಇದೇ ಭಾವವನ್ನು ಸ್ಫುರಿಸುವ ಅಡಿಗರ ಕವನ "ಯಾವಮೋಹನ ಮುರಳಿ ಕರೆಯಿತೋ.."

ಸುಂದರ, ಸರಳ ಹಾಗೂ ಅರ್ಥವತ್ತಾದ ಲೇಖನಕ್ಕಾಗಿ ತುಂಬಾ ಧನ್ಯವಾದಗಳು.

ಅಂದ ಹಾಗೆ

“ ಕಟ್ಟೋರೆಲ್ಲ ಕವಿಗಳಲ್ಲಾ, ಹುಟ್ಟೋರೆಲ್ಲಾ ಭವಿಗಳಲ್ಲಾ,
ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.”

ಇದನ್ನು ನಾವು ಹೇಗೆ ವಿಷ್ಲೇಶಿಸಬಹುದು?

Bala said...

ಸುನಾಧರೆ,
"ಬಂಗಾರ ತೀರ" ಕವನದ ಬಗ್ಗೆ ವಿಮರ್ಶಾತ್ಮಕವಾದ ಲೇಖನಕ್ಕೆ ಧನ್ಯವಾದಗಳು."ಬಂಗಾರ ತೀರ" ಮತ್ತು "ಬದುಕು ಮಾಯೆಯ ಮಾಟ" ಕವನಗಳು ನನ್ನ ಮೆಚ್ಚಿನ ಕವನಗಳು. ಈ ಎರಡು ಕವನಗಳಲ್ಲಿನ ದಾರ್ಶನಿಕತ್ವ ಅಗಾಧವಾದುದು."ಬದುಕು ಮಾಯೆಯ ಮಾಟ" ವಂತೂ ಇಡೀ ವೇದಾಂತವನ್ನು ಈ ಕಾವ್ಯ ಸುಂದರವಾಗಿ ಹಿಡಿದಿಟ್ಟಿದೆ.

ಬೇಂದ್ರೆಯವರ ಬಗ್ಗೆ ನೀವು ಹೇಳಿರುವ "ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು" ಎಂಬ ಮಾತನ್ನು ಒಪ್ಪುವುದು ಸ್ವಲ್ಪ ಕಷ್ಟ. ನೀವು ಹೇಳುವಂತೆ ಶಿಲಾಬಾಲಿಕೆಯರಲ್ಲಿನ ಕುಸುರೀ ಕೆಲಸವಿಲ್ಲದಿದ್ದರೂ, ಅವರಲ್ಲಿ ಅನುಭಾವದ ಸಾಕ್ಷತ್ ಅನುಭವವಿರಲೇ ಇಲ್ಲ ಎನ್ನುವುದಕ್ಕಾಗುವುದಿಲ್ಲ. ಯಾವುದೋ ಒಂದು ಸ್ತರದಲ್ಲಿ ಅನುಭಾವದ ಅರಿವಿಲ್ಲದೆ ಯಾವುದೇ ಮಹತ್ವದ ಸಾಧನೆಯಾಗುವುದಿಲ್ಲ ಎಂಬುದು ನನ್ನ ನಂಬಿಕೆ.

-ಬಾಲ

sunaath said...

ತೇಜಸ್ವಿನಿ,
"ಕೃಷ್ಣಾಕುಮಾರಿ" ಕವನವು ೧೯೨೨ರಲ್ಲಿ ಪ್ರಕಟವಾಯಿತು.
ಆ ಸಂಕಲನದಲ್ಲಿ "ಬಂಗಾರ ನೀರ..." ಕವನವು ಕೂಡಿಲ್ಲ.
ಆದರೆ, ಬೇಂದ್ರೆಯವರ ಕೆಲಕೆಲವು ಕವನಗಳು ಬೇರೆ ಬೇರೆ ಸಂಕಲನಗಳಲ್ಲಿ repeat ಆಗಿವೆ. ಆದುದರಿಂದ ಹೀಗೇ ಎಂದು ಹೇಳುವ ಧೈರ್ಯವು ನನಗೂ ಇಲ್ಲ. ನಾನು ಈ ಕವನವನ್ನು ಓದಿದ್ದು "ಹೃದಯ ಸಮುದ್ರ" ಸಂಕಲನದಲ್ಲಿ.

ಅಕ್ಕನ ವಚನವನ್ನು ಬೇಂದ್ರೆಯವರ ವಚನಕ್ಕೆ ಹೋಲಿಸಬಾರದು ಎನ್ನುವ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪಿಕೊಳ್ಳುತ್ತೇನೆ.
ಕವಿಗಳ ಕಾಲ ಹಾಗು ಮನೋಧರ್ಮ ಬೇರೆಯೇ ಆಗಿರುವಾಗ ರಚನೆಯಲ್ಲಿ ಭಿನ್ನತೆ ಸಹಜ. ಅಲ್ಲದೆ ಒಬ್ಬನೆ ಕವಿಯ ಕವನಗಳಲ್ಲಿ ಸಹ ಕಾವ್ಯಸತ್ವದ ವ್ಯತ್ಯಾಸ ಆಗುತ್ತಿರುತ್ತದೆ.

"ಕಗ್ಗ" ಅನ್ನುವ ಕವನ "ಅರಳು ಮರಳು" ಸಂಕಲನದಲ್ಲಿದೆ.

"ಕಟ್ಟೋರೆಲ್ಲಾ ಕವಿಗಳಲ್ಲ
ಹುಟ್ಟುವರೆಲ್ಲಾ ಭವಿಗಳಲ್ಲ
ಮುಟ್ಟಿದ್ದೆಲ್ಲಾ ಚಿನ್ನ ಅಂತ ತಿಳಕೋಬ್ಯಾಡೋss
ಭಾವಾ ಅರ್ಥಾ ಹುಡುಗಾ ನೀನು ತಿಳದಾ ನೋಡೋss

ಹಸು ಕೂಡS ಕಟ್ಟಿದ್ದುಂಟು
ಬಸವಣ್ಣsನು ಹುಟ್ಟಿದ್ದುಂಟು
ಮುಟ್ಟಿದ್ದೆಲ್ಲಾ 'ಬೂದಿ'ಮಾಡಿದಾ ಭಸ್ಮಾಸೂರಾss
ಅವನ ನೀಗಿಸಿಬಿಟ್ಟಿತ್ತಣ್ಣಾ ಮೋಹಿನಿ ಅವತಾರಾ"

ಯಾರ್ಯ್ಯಾರೋ ಏನೇನೋ ಕಟ್ಟಿದರೆ ಅದು ಕಾವ್ಯವಾಗಲಾರದು, 'ಕಗ್ಗ'ವಾಗುತ್ತದೆ ಎನ್ನುವ ಅರ್ಥದಲ್ಲಿ
ಬೇಂದ್ರೆಯವರು ಹಾಗೆ ಬರೆದಿದ್ದಾರೆ.ಮುಂದುವರೆದು,
'ಹಸು ಕೂಡS ಕಟ್ಟಿದ್ದುಂಟು' ಎಂದರೆ ಆಕಳು ಸಹ ಗರ್ಭ ಧರಿಸುತ್ತದೆ, ಅದರಿಂದ ಬಸವಣ್ಣ ಎಂದರೆ ಹೋರಿ ಕರು ಜನಿಸುತ್ತದೆ ಎನ್ನುವ ಚಮತ್ಕಾರೋಕ್ತಿಯನ್ನು ಹೇಳುತ್ತಾರೆ. ಈ ಚಮತ್ಕಾರೋಕ್ತಿಯ ಅರ್ಥವೆಂದರೆ ಕಾವ್ಯರಚನೆ ಸುಲಭಸಾಧಾರಣ ಕ್ರಿಯೆಯಲ್ಲ ಎಂದು ಹೇಳುವದು.

ಈ 'ಕಗ್ಗ' ಕವನವು ದೀರ್ಘಕವನವಾಗಿದ್ದು, ಕೊನೆಕೊನೆಯಲ್ಲಿ
ಒಂದು ನೂಡಿ ಹೀಗಿದೆ:
"ಅಂಬಿಕಾತನಯ ಕಟ್ಟಿದ ಕಗ್ಗಾ
ಜಗ್ಗಬ್ಯಾಡ ನೀ ಹಿಗ್ಗಾ ಮುಗ್ಗಾ
ಹುರಿ ಐತಿ ಒಳಗS ಬರಿದಲ್ಲಾ ಹಗ್ಗಾ"

ಹೀಗೆ ಹೇಳುವ ಮೂಲಕ ತಮ್ಮ ಕವನಗಳು ಅರ್ಥಗರ್ಭಿತ ಕವನಗಳಾಗಿದ್ದು ಅವನ್ನು ರಸಗ್ರಹಣ ಮಾಡಿಕೊಳ್ಳಬೇಕೆಂದು ಸೂಚಿಸುತ್ತಾರೆ.

ತೇಜಸ್ವಿನಿಯವರೆ,
ಅರ್ಥಪೂರ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು

sunaath said...

ಬಾಲರೆ,
"ಬದುಕು ಮಾಯೆಯ ಮಾಟ" ಒಂದು ಮನಮೋಹಕ ದಾರ್ಶನಿಕ ಕವನ.
ಬೇಂದ್ರೆಯವರು ಆಧ್ಯಾತ್ಮಸಾಧನೆಯ ಉನ್ನತ ಸ್ತರವನ್ನು ತಲುಪಿದ್ದು ಸರಿಯೆ.ಆದರೆ ಅವರ ಅನುಭಾವ ಕಾವ್ಯದಲ್ಲಿ ಅವರ ಸ್ವಂತ ಅನುಭಾವವು ಪ್ರತಿಬಿಂಬಿತವಾಗದೆ,ಅಧ್ಯಯನದ ದಾರ್ಶನಿಕತೆ ಮೂಡಿದೆ ಎಂದು ನನಗೆ ಭಾಸವಾಗುತ್ತದೆ.

ಸಿಮ್ಮಾ said...

ಸುನಾಥರೇ,
"ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,"
ಈ ಹಾಡನ್ನ ನಾನು ಮೊದಲು ಕೇಳಿದ್ದು 1999ರಲ್ಲಿ.
ನಾನಾಗ ಬಿ ಎಡ್ ನಲ್ಲಿದ್ದೆ, ನಮ್ಮೋರ್ವ ಗೆಳತಿಯೊಬ್ಬರು ತುಂಬಾ ಚೆನ್ನಾಗಿ ಹಾಡಿದ್ದರು.

ಸುನಾಥರೇ,
ಬೇಂದ್ರೆಯವರ ಕವನಗಳು ಅಷ್ಟೊಂದು ಇಷ್ಟ ಾಗ್ಲಿಕ್ಕೆ ಕಾರಣ, ಅವರ ಅಪಾರ ಅನುಭವ, ಅರಿವು ಮತ್ತು ಅದೆಲ್ಲವನ್ನು ಅರ್ಥವತ್ತಾಗಿ ಹೇಳುವ ಪದ ಕೌಶಲ್ಯದಿಂದಾಗಿಯೆಂದು ನನ್ನ ಅನಿಸಿಕೆ. ಅವರನ್ನ ಶಬ್ಧ ಗಾರುಡಿಗ ೆಂದು ಕರೆದಿರುವುದು ಅತ್ಯಂತ ಸಮಂಜಸವಾಗಿದೆ. ಅದೂ ಅಲ್ದೆ ಅವರಿಗಿದ್ದ ಸಂಗೀತದ knoledge ಅವರ ಕವನಗಳಲ್ಲಿ ಬಳಕೆಯಾಗಿರುವುದನ್ನ ನಾವು ಗಮನಿಸ ಬಹುದು.

ನಿಮ್ಮ ಅಧ್ಯಯನಪೂರ್ಣ ವಿಮರ್ಶೆಗಾಗಿ ಧನ್ಯವಾದಗಳು.

sunaath said...

ಸಿಮ್ಮಾ,
ಬೇಂದ್ರೆಯವರು ಅನೇಕ ಮೂಲಗಳಿಂದ ಹಾಗು ತಮ್ಮ ಸುತ್ತಲಿನ ಜಾನಪದದಿಂದ ಪಡೆದದ್ದನ್ನೆಲ್ಲ, ಸರಳವಾದ ದೇಸಿಯಲ್ಲಿ ಕರಗಿಸಿ ನಮಗೆ ಕೊಟ್ಟಿದ್ದಾರೆ.

"ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ."

ಪಾಡಾದ ಅವರ ಪಾಡು ನಮಗೆಲ್ಲ ಸವಿಯನ್ನೇ ಹಣಿಸಿದೆ.

Shriniwas M Katti said...

ಜುಲಾಯಿ 23 ರಂದು ಅಮೆರಿಕೆಗೆ ಬಂದೆ. ಇಲ್ಲಿಯವರೆಗೆ, ಸಲ್ಲಾಪ ಸಿಗಲೇ ಇಲ್ಲ. ಇಂದು, ಗೂಗಲ್ಲಿನಲ್ಲಿ, ಸಲ್ಲಾಪ ಎಂದು ಕನ್ನಡದಲ್ಲಿ ಬರೆದು ಹುಡುಕಿದಾಗ, ತಟ್ಟನೇ ದೊರೆಯಿತು. ಮನಸ್ಸು ಆನಂದ ತುಂದಿಲವಾಯಿತು. ಹೃದಯಸಮುದ್ರವನ್ನು ಓದಿದೆ. ಬಹಳ ಉತ್ತಮವಾಗಿದೆ. ಬೇಂದ್ರೆ ಋಷಿ. ಇಲ್ಲದಿದ್ದರೆ, ಇಂಥ ಕಾವ್ಯ ಅವರಿಂದ ರಚನೆ ಆಗುತ್ತಲೇ ಇರಲಿಲ್ಲ. " ನಾ ಋಷಿಃ ಕುರುತೆ ಕಾವ್ಯಮ್ " ಎಂದು ದೃಷ್ಟಾರರು ಅದಕ್ಕೇ ಹೇಳಿದ್ದು ! ಉಳಿದ ಲೇಖನಗಳನ್ನು ನಾಳೆ ಓದುವೆ. ಈಗ ಇಲ್ಲಿ ರಾತ್ರಿ. ಎಲ್ಲರೂ ಮಲಗಿಯಾಯಿತು. ಬೇಂಧ್ರೆ-ಅರವಿಂದ ಸಮಾಗಮ ಸಂದರ್ಭದ ಕವಿತಾ ಪಾಠವನ್ನು ನಮ್ಮ ಕನ್ನಡ ಗುರುಗಳಾದ ಶ್ರೀ ಅನಂತಾಚಾರ್ಯ ಬಿಡಕರ ರಿಂದ ಕೇಳಿದ ನೆನಪು. ಅವುಗಳ ಕುರಿತು ಬರೆಯುವಿರಾ ?

sunaath said...

ಕಟ್ಟಿಯವರೆ,
ನಿಮ್ಮ ಅಮೆರಿಕೆಯ ಇರುವು ಸುಖಕರವಾಗಲಿ. ಎಲ್ಲೆ ಹೋದರೂ ಕನ್ನಡ, ಬೇಂದ್ರೆ ನಮ್ಮನ್ನು ಬಿಡದ ಸಂಗತಿಗಳು. ರಾಜರತ್ನಮ್
ಹೇಳಿದ ಹಾಗೆ, "ಮೂಗ್ನಲ್ಲಿ ಕನ್ನಡ್ ಪದವಾಡ್ತೀನಿ, ನನ್ ಮನಸನ್ ನೀ ಕಾಣೆ"!
ಬೇಂದ್ರೆ-ಅರವಿಂದ ಸಮಾಗಮ ಸಮಯದ ಕವನ ಯಾವುದೆಂದು ನನಗೆ ತಿಳಿಯದು. ನೀವು ತಿಳಿಸಿದರೆ, ಓದಿ ಖುಶಿ ಪಡುವೆ.
ವಂದನೆಗಳು,
-ಸುನಾಥ

Shriniwas M Katti said...

ನನಗೂ ನೆನಪಿಲ್ಲ. ಇಲ್ಲಿ ನೆನಪಿನ ಮೇಲೆಯೇ ಅವಲಂಬನೆ. ಯಾವ ಪುಸ್ತಕವೂ ದೆರೆಯುವದಿಲ್ಲವಲ್ಲ. ಬರುವಾಗ ಕುಮಾರವ್ಯಾಸ ಭಾರತ ಮಾತ್ರ ತಂದಿರುವೆ. ಆ ಪದ್ಯ ಕಮಲದ ಹೂವಿನ ವರ್ಣನೆಯಿಂದ ಆರಂಭವಾಗಿ, ವೇದಾಂತಕ್ಕೆ ಸುಳಿದು, ಮೂಲಾಧಾರಕ್ಕೆ ಹೋಗಿ, ಅಲ್ಲಿಂದ ಸಹಸ್ರಾರದ ವರೆಗೆ ಪಯಣಿಸಿ, ಕುಂಡಲಿನಿ ಜಾಗೃತಗೊಳಿಸಿ,ಅರವಿಂದರನ್ನು ಮಹಾಮಾನವರನ್ನಾಗಿಸಿದ ವರ್ಣನೆ ಇದೆ. ಕವಿತೆಯ ಸಾಲುಗಳು ನೆನಪಿಲ್ಲ.


ಡಬ್ಲಿನ್, ಓಹೈಒ, ಅಮೆರಿಕಾ.

Shiv said...

ಸುನಾಥರೇ,

ಹೃದಯಸಮುದ್ರದ ಆಳವನ್ನು ತೋರಿಸಿದ್ದಕ್ಕೆ ವಂದನೆಗಳು..
ಆಡಿಗರ ಬಗ್ಗೆ ಬರೆಯುತ್ತಾ ಎಲ್ಲ ಘಟ್ಟದಲ್ಲಿ ಸಫಲರಾದರೆಂದು ಬರೆದಿದ್ದೀರಿ. ಯಾವಾಗಲಾದರೂ ಇದರ ಬಗ್ಗೆ ಸವಿಸ್ತಾರವಾಗಿ ಬರೆಯಿರೆಂದು ಕೋರಿಕೆ

sunaath said...

ಶಿವ,
ಅಡಿಗರು ನನ್ನ ನೆಚ್ಚಿನ ಕವಿ. ಅವರ ಕವನಗಳ ಬಗೆಗೆ ಖಂಡಿತವಾಗಿಯೂ ಬರೆಯುವೆ.

Madhu said...

ನಮಸ್ಕಾರ ಸುನಾಥರೇ,
ಬೆಂದ್ರೆಯವರ ಕವನ ತುಂಬಾ ಚೆನ್ನಾಗಿದೆ. ಧನ್ಯವಾದಗಳು. ಆಧ್ಯಾತ್ಮದ ಅಭಿರುಚಿ ಇರುವವರಿಗೆ ಈ ತರಹದ ಕವನಗಳು ಅಂದರೆ ಹಬ್ಬವೇ ಸರಿ. ಬೆಂದ್ರೆಯವರನ್ನು ಕೇವಲ ಸಾಧಾರಣ ಕವಿಯ ರೂಪದಲ್ಲಿ ನೋಡಲಾಗುವದಿಲ್ಲ. ಅವರೊಬ್ಬ ಋಷಿ. ಅವರ ಕವನಗಳಲ್ಲಿ ನ್ಯೂನತೆ ಕಂಡು ಹಿಡಿಯಲು ನಾವು ಅವರಿಗಿಂತಲೂ ಹೆಚ್ಚಿನ ಸಾಧನೆ ಮಾಡಬೇಕಾಗುತ್ತದೆ. ಹಾಗಾಗಿ ನೀವು ತಪ್ಪು ತಿಳಿಯುವುದಿಲ್ಲವಾದರೆ ನನ್ನದು ಒಂದು ಸಲಹೆ. ನೀವು ಆ ಸಾಧನೆ ಮಾಡಿದ್ದೀರಾ ಎಂದು ಒಮ್ಮೆ ಸ್ವವಿಮರ್ಷೆ ಮಾಡಿಕೊಳ್ಳುವದು ಒಳ್ಳೆಯದು. ನೀವು ಹೇಳಿದಂತೆ ಶ್ರವಣಬೆಳಗೊಳದ ಗೊಮ್ಮಟನ ಭವ್ಯತೆ ಇಲ್ಲದಿದ್ದರೂ, ವೇಣೂರಿನ ಹಾಗೂ ಧರ್ಮಸ್ಥಳಗಳ ಗೊಮ್ಮಟನಿಗೂ ವಿಶೆಷತೆ ಇದೆ, ಆದರೆ ಅದನ್ನು ಅರ್ಥೈಸಿಕೊಳ್ಳುವ ದೃಷ್ಟಿ ನಮಗೆ ಇರಬೇಕು. ಹಾಗೆಯೇ ಬೇಂದ್ರೆಯವರ ಕವನಗಳು. ಅವುಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅವುಗಳನ್ನು ಬೇರೆಯವರ ಕವನಗಳೊಂದಿಗೆ ಹೋಲಿಸುವುದು ಸರಿ ಅಲ್ಲ ಅಂತ ನನ್ನ ಭಾವನೆ.

ನಮಸ್ಕಾರ
ಮಧುಸೂದನ. ಸು. ಪರಾಂಜಪೆ.

bhadra said...

bEMdre yavarige yaaru saaTi! :o

super sir

nanage idara bagge arthaisiddakke bahaLa dhanyavaadagaLu :)