Friday, August 29, 2008

ಗಂಗಾವತರಣ..........ದ.ರಾ.ಬೇಂದ್ರೆ

ಭಗೀರಥನ ಕಠಿಣ ಪ್ರಯತ್ನದಿಂದ ಸ್ವರ್ಗದಲ್ಲಿರುವ ಗಂಗಾನದಿ ಧರೆಗಿಳಿದಳು. ಹಿಮಾಲಯದಲ್ಲಿ ಧುಮ್ಮಿಕ್ಕಿ, ಬಯಲಲ್ಲಿ ಭೋರ್ಗರೆದು, ಭಗೀರಥನ ಪೂರ್ವಜರಿಗೆ ಪ್ರೇತಲೋಕದಿಂದ ಮುಕ್ತಿ ನೀಡಿದಳು.
ಗಂಗಾನದಿಯ ದರ್ಶನವು ಬೇಂದ್ರೆಯವರಿಗೆ ಕಾಶಿಯಲ್ಲಿ ಆಯಿತು.
ಅಂಬಿಕಾತನಯದತ್ತರು ಪ್ರಕೃತಿಯ ಆ ಮಹಾಚೈತನ್ಯದೆದುರಿಗೆ ಮೂಕವಿಸ್ಮಿತರಾದರು. ಬೇಂದ್ರೆಯವರ ಮನೋಲೋಕದಲ್ಲಿ ಧುಮ್ಮಿಕ್ಕಿದ ಈ ಗಂಗೆಯನ್ನು , ಸ್ವರ್ಗದಿಂದ ಧರೆಗಿಳಿಯಲು ಅವರು ಮತ್ತೊಮ್ಮೆ ಆಹ್ವಾನಿಸುತ್ತಾರೆ.

ಗಂಗಾದೇವಿಯನ್ನು ಆಹ್ವಾನಿಸುವ ಈ ಪ್ರಾರ್ಥನೆಯು ಸಂಕೀರ್ಣವಾದ ಕವಿತೆಯಾಗಿದೆ.
ಮೊದಲನೆಯದಾಗಿ, ೧೯೪೩ರಲ್ಲಿ ಬಿದ್ದ ಬರಗಾಲದಿಂದ ಭಾರತ ದೇಶವು ವಿಶೇಷತಃ ಬಂಗಾಲವು ಕಂಗೆಟ್ಟಿತ್ತು. ೧೯೪೪ರಲ್ಲಿ ಬೇಂದ್ರೆ ಈ ಕವನವನ್ನು ರಚಿಸಿದರು.
ಗಂಗೆ ಭಾರತದ ಎಲ್ಲ ನದಿಗಳ ಪ್ರಾತಿನಿಧಿಕ ನದಿ. ಭಾರತದಲ್ಲಿ ಕಾಲಕಾಲಕ್ಕೆ ಮಳೆಯಾಗಿ, ಎಲ್ಲ ನದಿಗಳು ತುಂಬಿ ಹರಿಯಲಿ, ಭಾರತ ಸಸ್ಯಶ್ಯಾಮಲೆಯಾಗಲಿ ಎನ್ನುವದು ಈ ಪ್ರಾರ್ಥನೆಯ ಒಂದು ಉದ್ದೇಶ.

ಎರಡನೆಯದಾಗಿ, ಗಂಗೆ ಕೇವಲ ಭೌತಿಕ ಪ್ರವಾಹವಲ್ಲ. ಅವಳು ಪುಣ್ಯವಾಹಿನಿ, ಜ್ಞಾನದಾಯಿನಿ. ಅವಳು ತನಗೆ ಹಾಗು ತನ್ನ ನಾಡಿಗರಿಗೆ ಜ್ಞಾನವನ್ನು , ಸುಜ್ಞಾನವನ್ನು ಪ್ರಸಾದಿಸಲಿ ಎನ್ನುವದು ಈ ಪ್ರಾರ್ಥನೆಯ ಎರಡನೆಯ ಉದ್ದೇಶ.

ಕವನದ ಪೂರ್ತಿಪಾಠ ಹೀಗಿದೆ :
……………………………………………………….
ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ
ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ
ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
……………………………………………………………………

ಗಂಗಾನದಿ ಹುಟ್ಟಿದ್ದು ಹರಿಯ ಪಾದಗಳಲ್ಲಿ. ಆದರೆ ಗಂಗಾಎಂದೊಡನೆ ನಮಗೆಲ್ಲರಿಗೂ ನೆನಪಾಗುವದು
`ಶಿವ-ಜಟಾ-ಬಂಧನ. ಇದೊಂದು ರೋಮಾಂಚಕ ಪ್ರಸಂಗ. ಪ್ರಳಯದೇವಿಯಂತೆ ಧುಮ್ಮಿಕ್ಕುತ್ತಿರುವ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಬಂಧಿಸಿ ಇಟ್ಟ ಬಳಿಕ, ಭಗೀರಥ ಶಿವನನ್ನು ಮತ್ತೆ ಪ್ರಾರ್ಥಿಸಿ ಅವಳನ್ನು ಬಿಡುಗಡೆಗೊಳಿಸುತ್ತಾನೆ.
ಅವಳು ಆರು ಚಿಕ್ಕ ಧಾರೆಗಳಲ್ಲಿ ಹರಿಯುತ್ತ ಮುಂದುವರೆಯುತ್ತಾಳೆ. ತನ್ನ ಕುಟೀರದತ್ತ ಧಾವಿಸುತ್ತಿರುವ ಈ ಗಂಗೆಯನ್ನು ಜಹ್ನು ಋಷಿ ಆಪೋಶನ ತೆಗೆದುಕೊಳ್ಳುತ್ತಾನೆ. ಭಗೀರಥ ಮತ್ತೆ ಪ್ರಾರ್ಥಿಸಿದ ಬಳಿಕ, ಆತ ಗಂಗಾನದಿಯನ್ನು ತನ್ನ ತೊಡೆಯ ಮೂಲಕ ಹೊರಬಿಡುತ್ತಾನೆ. ಹೀಗಾಗಿ ಗಂಗಾನದಿ ಜಹ್ನು ಋಷಿಯ ಮಗಳಾದಳು ; ‘ಜಾಹ್ನವಿಎನ್ನುವ ಹೆಸರು ಪಡೆದಳು.
ಸಕಲ ಜೀವಿಗಳಿಗೆ ಪೋಷಣೆ ಕೊಡುವ ಇವಳು ನಮ್ಮೆಲ್ಲರ ತಾಯಿ.
ಅಂತೆಯೇ ಬೇಂದ್ರೆಯವರು ಈ ಮಾತೃರೂಪಿಣಿಯನ್ನು ಧರೆಗಿಳಿಯಲು ಭಕ್ತಿಯಿಂದ ಪ್ರಾರ್ಥಿಸುತ್ತಾರೆ :

ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
………………………………………….
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಸುರನದಿಯಾದ ನೀನು ದೇವತೆಗಳ ಬಾಯಾರಿಕೆಯನ್ನೂ ತಣಿಸಿ ಬಾ’. ಎಂದು ಬೇಂದ್ರೆ ಗಂಗೆಯನ್ನು ಕೇಳಿಕೊಳ್ಳುತ್ತಾರೆ. ದೇವತೆಗಳಿಗೆಂತಹ ಬಾಯಾರಿಕೆ ಎನ್ನುವ ಸಂದೇಹ ನಮ್ಮಲ್ಲಿ ಮೂಡಬಹುದು. ಭಗವಚ್ಚಿಂತನೆಯೊಂದೇ ದೇವತೆಗಳಿಗಿರುವ ಬಾಯಾರಿಕೆ. ಹರಿಯ ಅಡಿಯಲ್ಲಿ ಜನಿಸಿದ ಗಂಗೆಯ ತೀರ್ಥವನ್ನು ಬಾಯಲ್ಲಿ ಹಾಕಿಕೊಂಡಾಗ, ದೇವತೆಗಳಲ್ಲಿರುವ ಭಗವಚ್ಚಿಂತನೆಯ ಬಾಯಾರಿಕೆಯು ತಣಿಯುವದು ಸಹಜವೇ. (ಮರಣಸಮಯದಲ್ಲಿ,ಗಂಗೋದಕವನ್ನು ಬಾಯಲ್ಲಿ ಹಾಕುವದು ಇದೇ ಕಾರಣಕ್ಕಾಗಿ ; ಮರಣಾಸನ್ನನಿಗೆ ಭಗವಂತನ ಸನ್ನಿಧಿಯು ದೊರೆಯಲು.)

ಸ್ವರ್ಗದಿಂದ ಕೆಳಗಿಳಿಯುತ್ತಿರುವಾಗ, ಈ ವ್ಯೋಮವ್ಯಾಪಿ ಗಂಗಾ ಅಷ್ಟದಿಕ್ಕುಗಳಿಗೆ ನೀರಿನ ಸೇಚನೆ ಮಾಡದಿರುವಳೆ? ಅದು ಮಳೆಯ ರೂಪದಲ್ಲೂ ಇರಬಹುದು. ಈ ಸೇಚನೆಯಿಂದಾಗಿ ಸಕಲ ಪ್ರಕೃತಿಯು ನೀರುಣ್ಣುವದು. ಬೇಂದ್ರೆಯವರು ಹೇಳುತ್ತಿರುವದು ಸಲಹೆ-ಸೂಚನೆ ಅಲ್ಲ. ಅದು ಗಂಗೆಯ ಕಾರ್ಯ, ಅವಳ ಪರಮೋದ್ದೇಶ.. ಅದನ್ನೆ ಅವರು ಚರಾಚರಗಳಿಗೆ ಉಣಿಸಿ ಬಾಎಂದು ಬಣ್ಣಿಸುತ್ತಿದ್ದಾರೆ.
ಮೊದಲು ದೇವಲೋಕ, ಬಳಿಕ ದಿಗಂತ ಅಂದರೆ ದೇವಲೋಕ ಹಾಗು ಭೂಲೋಕಗಳ ನಡುವಿನ ಕ್ಷಿತಿಜ, ಬಳಿಕ ಚರಾಚರಗಳು ಇರುವ ಭೂಲೋಕಗಳನ್ನು ಕವಿಯು ಕ್ರಮಬದ್ಧವಾಗಿ ಬಣ್ಣಿಸಿದ್ದಾನೆ.
ಸಕಲ ಚರಾಚರಗಳಲ್ಲಿ ಈ ಕವಿಯೂ ಇದ್ದಾರೆ. ಗಂಗೆಯ ದೈವಿಕತೆ ಇವರಿಗೆ ಗೊತ್ತು. ಅದಕ್ಕೇ ಇವರು ಧರೆಗಿಳಿಯುತ್ತಿರುವ ಈ ಗಂಗೆಯನ್ನು ಪೊಡಮಟ್ಟು ಅಂದರೆ ಸಾಷ್ಟಾಂಗ ನಮಸ್ಕಾರದೊಂದಿಗೆ ಬರಮಾಡಿಕೊಳ್ಳುತ್ತಾರೆ.

ಈ ಗಂಗೆಯನ್ನೇ ತಮ್ಮ ಉಡುಗೆಯನ್ನಾಗಿ ಮಾಡಿಕೊಳ್ಳಲು ಅವರು ಬಯಸುತ್ತಾರೆ. ಏನು ಹಾಗೆಂದರೆ?
ಓರ್ವ ಮನುಷ್ಯನ ಬೆಲೆಯನ್ನು ಕಟ್ಟುವದು ಅವನ ಉಡುಗೆಯಿಂದ. ಆದರೆ ಕವಿಗೆ ಇಂತಹ ಮೋಸದುಡುಗೆ ಬೇಕಾಗಿಲ್ಲ. ಲೌಕಿಕದ ಈ ವಸ್ತ್ರವಿಲಾಸವನ್ನು ಬಿಸಾಕಿ, ಅವರು ಗಂಗೆಯಲ್ಲಿ ಮೀಯಬಯಸುತ್ತಾರೆ. ಪವಿತ್ರ ಗಂಗೆಯನ್ನೇ ತನ್ನ ಉಡುಗೆಯನ್ನಾಗಿ ಮಾಡಬಯಸುತ್ತಾರೆ.

ತನ್ನ ವ್ಯಕ್ತಿತ್ವವನ್ನು ಆವರಿಸುವ ಉಡುಗೆ ಶುದ್ಧವಾಗಿರಲಿ, ನಿಷ್ಕಲ್ಮಶವಾಗಿರಲಿ, ಪುಣ್ಯಕರವಾಗಿರಲಿ ಎನ್ನುವದು ಅವರ ಬಯಕೆ. ಯಾಕೆಂದರೆ ಇಂತಹ ನಿರ್ಮಲ ವ್ಯಕ್ತಿಯೇ ತಾನಾಗಲು ಅವರು ಬಯಸುತ್ತಾರೆ.
ಇದು ಗಂಗಾಂಬರವೆನ್ನುವ ಪುಣ್ಯಾಂಬರವನ್ನು ಉಟ್ಟುಕೊಳ್ಳಲು ಬಯಸುವ ಬೇಂದ್ರೆಯವರ ಒಳಮನದ ಹಾರೈಕೆ.
ಅದಕ್ಕೇ ಬೇಂದ್ರೆ ಹೇಳುತ್ತಾರೆ :

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ

ಅವಳು ಉದಾರಳಾಗಿ ತನ್ನ ಮೇಲೆ ಸುರಿಯಲಿ, ಈ ಚರಾಚರ ಪ್ರಕೃತಿಯ ಯಾವುದೇ ಕಣವೂ ಅವಳ  ಸ್ಪರ್ಶವಂಚಿತವಾಗದಿರಲಿ ಎನ್ನುವ ಉದ್ದೇಶದಿಂದ ಕವಿ ಹೇಳುತ್ತಾರೆ :

ಏಕೆ ಎಡೆತಡೆವೆ   
ಸುರಿದು ಬಾ

ಕವಿ ಇರುವದು ಭೂಮಿಯ ಮೇಲೆ. ಆ ಸುರನದಿ ಗಂಗಾದೇವಿ ಭೂಮಿಗೆ ಬಂದಾಳೆ? ಕವಿಯ ಮೊರೆಯನ್ನು ಪುರಸ್ಕರಿಸುವಳೆ? ಹೀಗೆಂದು ಅವನೇನೂ ಸಂಶಯ ಪಡುತ್ತಿಲ್ಲ. ಆದರೂ ಸಹ ಮೇಲ್ಮಟ್ಟದಲ್ಲಿರುವ ಪುಣ್ಯಗಂಗೆಯನ್ನು ಕೆಳಮಟ್ಟದಲ್ಲಿರುವ ನಮ್ಮ ಉದ್ಧಾರಕ್ಕೆ ಇಳಿ ಎಂದು ಹೇಳಬೇಕಾದರೆ, ಪ್ರಾರ್ಥಿಸುವ ಅವಶ್ಯಕತೆ ಇದೆ, ಅಲ್ಲವೆ? ಅದಕ್ಕೆ ಕವಿ ಹೇಳುತ್ತಾರೆ :

ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಸ್ವರ್ಗಲೋಕವನ್ನು ತೊರೆದ ಮೇಲೆ ಅವಳು ಬಯಲಲ್ಲಿ ಅಂದರೆ ಅವಕಾಶದಲ್ಲಿ ಜರೆಯಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಅವಳ ಅವತರಣಕ್ಕೆ ಯಾವುದೇ ಘರ್ಷಣೆ ಇರುವದಿಲ್ಲ. ನೆಲವನ್ನು ತಲುಪಿದ ಬಳಿಕ ಅವಳು ಹರಿಯಬೇಕಾಗುತ್ತದೆ.
ಜರೆ ಎನ್ನುವ ಪದಕ್ಕೆ ನಿಂದಿಸು ಎನ್ನುವ ಅರ್ಥವೂ ಇದೆ. ಸ್ವರ್ಗವನ್ನೇ ತೊರೆದ ಗಂಗೆ, ಆಕಾಶದಲ್ಲಿ ನಿಂತಾಳೆಯೆ? ಧರೆಯೇ ಅವಳ ಗಮ್ಯ. ಆದುದರಿಂದ ಆಕಾಶವನ್ನು ಜರೆದು ಅಂದರೆ ತಿರಸ್ಕರಿಸಿ ಅವಳು ಭೂಮಿಗಿಳಿಯುವಳು ಎನ್ನುವ ಶ್ಲೇಷೆ ಇಲ್ಲಿದೆ.)

ಇಲ್ಲಿಯವರೆಗೆ ಗಂಗಾದೇವಿಯನ್ನು ಭೌತಿಕರೂಪದಲ್ಲಿ, ಪ್ರವಾಹರೂಪದಲ್ಲಿ ಆಹ್ವಾನಿಸಿದ ಕವಿ, ಈಗ ಅವಳ ಅಂತರ್-ರೂಪವನ್ನು ನೋಡುತ್ತಿದ್ದಾನೆ. ಅವಳು ಜ್ಞಾನಗಂಗೆಯೂ ಹೌದು, ಆಧ್ಯಾತ್ಮಗಂಗೆಯೂ ಹೌದು. ಅವಳಿಂದಲೇ ತನ್ನ ಉದ್ಧಾರ ಆಗಬೇಕು. ಬ್ರಹ್ಮಾಂಡದಲ್ಲಿ ಇಳಿದ ಅವಳು ಈಗ ಈ ಪಿಂಡಾಂಡದಲ್ಲಿ ಇಳಿಯಬೇಕು:

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ

ತಾಯೆ, ಗಂಗಾದೇವಿ, ನಿನ್ನ ಎದುರಿಗೆ ನಾನು ತಲೆಬಾಗಿ ನಿಂತಿದ್ದೇನೆ. ನನ್ನ ತಲೆಯೊಳಗೆ ಅಂದರೆ ನನ್ನ ಚಿತ್ತದೊಳಗೆ, ನನ್ನ ಬುದ್ಧಿಯೊಳಗೆ ಇಳಿದು ಶುದ್ಧಗೊಳಿಸು. ಮಸ್ತಕದಿಂದ ಕೆಳಗಿಳಿದು, ನನ್ನ ಬೆನ್ನಹುರಿಯಲ್ಲಿ ಹರಿದು, ನನ್ನ ಒಳ್ಳೆಯ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲು. ನನ್ನ ಒಳಗೆ, ನನ್ನ ಕೆಳಗೆ ಇಳಿ. ಅಂದರೆ ನನ್ನ ಭೌತಿಕ ಬಯಕೆಗಳನ್ನು, ನನ್ನ ಆದಿಮ ಅಪೇಕ್ಷೆಗಳನ್ನು ತೊಳೆದು ಹಾಕು. ನನ್ನಲ್ಲಿ ಆಧ್ಯಾತ್ಮಿಕ ಹಂಬಲವೇ ಉದ್ದೀಪನವಾಗಲಿ. ನನ್ನ ಕಣ್ಣ ಕಣವನ್ನು ತೊಳೆ ಅಂದರೆ ನನ್ನ ನೋಟವನ್ನು ಸ್ವಚ್ಛಗೊಳಿಸು, ನನ್ನ ಒಳ ಉಸಿರನ್ನು ಎಳೆದು ಪ್ರಾಣಾಯಾಮದಲ್ಲಿ ವಿಲೀನಗೊಳಿಸು. ನನ್ನಲ್ಲಿ ನುಡಿಯ ಅಂದರೆ ಓಂಕಾರದ ಸಸಿಯನ್ನು ನೀರುಣ್ಣಿಸಿ ಮೊಳೆಯಿಸು.
(ನುಡಿಯ ಸಸಿ ಅಂದರೆ ಕಾವ್ಯಸಸಿ ಎನ್ನುವ ಅರ್ಥವೂ ಬರುತ್ತದೆ.)

ಬೇಂದ್ರೆ ಇಲ್ಲಿ ಯೋಗದ ಪರಿಭಾಷೆಯನ್ನು ಉಪಯೋಗಿಸಿಕೊಂಡಿದ್ದಾರೆ.
ನನ್ನ ತಲೆಯೊಳಗೆ ಅಂದರೆ ಸಹಸ್ರಾರ ಚಕ್ರದೊಳಗೆ ;
ನನ್ನ ಬೆಂಬಳಿಗೆ ಅಂದರೆ ಸಹಸ್ರಾರ ಹಾಗು ಇತರ ಆರು ಚಕ್ರಗಳಲ್ಲಿ ಹಾಯ್ದು ಹೋಗುವ ಸುಷುಮ್ನಾ ನಾಡಿಯೊಳಗೆ ;
ನನ್ನ ಒಳಕೆಳಗೆ ಅಂದರೆ ಮೂಲಾಧಾರ ಚಕ್ರದೊಳಗೆ ;
ದೇವಗಂಗೆಯೆ ಅಂದರೆ ಕುಂಡಲಿನಿ ಶಕ್ತಿಯೆ ನುಗ್ಗಿ ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.
(ಬ್ರಹ್ಮಾಂಡದಲ್ಲಿರುವ ಚೈತನ್ಯ ಹಾಗೂ ಪಿಂಡಾಂಡದಲ್ಲಿರುವ ಚೈತನ್ಯ ಎರಡೂ ಒಂದೇ. ಆದುದರಿಂದ ಸುರಗಂಗೆ ಹಾಗು ಕುಂಡಲಿನಿ ಬೇರೆ ಬೇರೆ ಅಲ್ಲ.)
ಹಿಗ್ಗಿ ಬಾಅಂದರೆ ದೈವೀ ಆನಂದವನ್ನು ನೀಡುತ್ತ ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.


ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಯೋಗದ ಭಾಷೆಯಲ್ಲಿ ಎದೆಯ ನೆಲೆ ಅಂದರೆ ಅನಾಹತ ಚಕ್ರ,
ಜೀವಜಲ ಅಂದರೆ ಮಣಿಪೂರ ಚಕ್ರ ಹಾಗೂ
ಮೂಲಹೊಲ ಅಂದರೆ ಮೂಲಾಧಾರ ಚಕ್ರ ಎನ್ನುವ ಅರ್ಥವಾಗುತ್ತದೆ.
ಹೃದಯದಲ್ಲಿ ರವಿ ಇರುತ್ತಾನೆ. ಆದುದರಿಂದ ಎದೆ ಅಂದರೆ ತೇಜ, ಜೀವಜಲ ಅಂದರೆ ಅಪ್, ಮೂಲಹೊಲ ಅಂದರೆ ಪೃಥ್ವಿ ;
ಆದುದರಿಂದ ಪಂಚಮಹಾಭೂತಗಳಲ್ಲಿಯ ಮೂರು ಮಹಾಭೂತಗಳಾದ ಪೃಥ್ವಿ, ಅಪ್ ಹಾಗೂ ತೇಜಗಳನ್ನು ಇಲ್ಲಿ ನಿರ್ದೇಶಿಸಿ, ಪಿಂಡಾಂಡದಲ್ಲಿರುವ ಈ ಮೂರು ಮಹಾಭೂತಗಳನ್ನು (ಹಾಗು ಅರ್ಥವ್ಯಾಪ್ತಿಯ ಮೂಲಕ ಎಲ್ಲ ಪಂಚಮಹಾಭೂತಗಳನ್ನು) ಶುದ್ಧೀಕರಿಸು ಎಂದು ಕವಿ ಬಿನ್ನವಿಸುತ್ತಾನೆ.
ಅಲ್ಲದೆ, ಎದೆಯ ನೆಲೆ ಎನ್ನುವದು ಕವಿಯ ವೈಯಕ್ತಿಕ ಆಕಾಂಕ್ಷೆಗಳನ್ನು, ಜೀವ ಜಲ ಎನ್ನುವದು ಕವಿಯ ಶಾರೀರಕ ಆಕಾಂಕ್ಷೆಗಳನ್ನು ಹಾಗೂ ಮೂಲ ಹೊಲ ಎನ್ನುವದು ಕವಿಯ ಆದಿಮ ಆಕಾಂಕ್ಷೆಗಳನ್ನು ಸೂಚಿಸುತ್ತವೆ.

ಒಮ್ಮೆ ಧರೆಗಿಳಿದ ಗಂಗೆ ನಿರಂತರವಾಗಿ ಪ್ರವಹಿಸುತ್ತಿರಲು ಏನು ಮಾಡಬೇಕು? ಅವಳೇ ಮೋಡವಾಗಿ, ಆಕಾಶಕ್ಕೇರಿ, ಮತ್ತೆ ಮಳೆಯ ರೂಪದಲ್ಲಿ ಧರೆಗಿಳಿಯಬೇಕಲ್ಲವೆ?
ಕವಿ ಅದನ್ನು ಹೀಗೆ ಬಣ್ಣಿಸುತ್ತಾರೆ :

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ

ಕಂಚುಮಿಂಚಾಗಿ ಕಾಣುವದು ಅಂದರೆ to appear suddenly in a flash. ಗಂಗಾದೇವಿ ಮತ್ತೆ ಮತ್ತೆ ಈ ಜಲಚಕ್ರದ ಮೂಲಕ ಧರೆಯ ಮೇಲಿರುವ ಚರಾಚರಗಳನ್ನು ತಣಿಸುತ್ತಿರಬೇಕು. ಅವಳ ಕರುಣೆಯಿಲ್ಲದೇ ಹೋದರೆ, ಈ ಭೂಜೀವಿಗಳು ದಯೆಯನ್ನು ಕಾಣದ ದೀನರಾಗುವರು, ಪ್ರಾಯದ ಚೈತನ್ಯವಿಲ್ಲದಂತಹ ಹೀನರಾಗುವರು, ನೀರಿಲ್ಲದ ಮೀನಿನಂತಾಗುವರು.

ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

(ಈ ಕವನರಚನೆಯನ್ನು ಮಾಡುವ ಸಮಯದಲ್ಲಿ ಬೇಂದ್ರೆಯವರು ಮಧ್ಯವಯಸ್ಕರಾಗಿದ್ದರು. ಆ ಕಾರಣಕ್ಕಾಗಿಯೇ ಅವರು ಹರೆಯಳಿದ ಹೀನ ಎಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ. ಅಲ್ಲದೆ, ಆ ಕಾಲಾವಧಿಯಲ್ಲಿ ಭಾರತೀಯರೂ ಸಹ, ಶಕ್ತಿಹೀನರಾಗಿ, ದಯೆಯನ್ನು ಅಪೇಕ್ಷಿಸುವ ದೀನರಾಗಿ ತೋರುತ್ತಿದ್ದರು. )

ತಮ್ಮ ಮರುಕದ ಸ್ಥಿತಿಯನ್ನು ಬಣ್ಣಿಸಿದ ಕವಿ, ಗಂಗಾದೇವಿಯ ಮಮತೆಯ ಘನತೆಯನ್ನು ಬಣ್ಣಿಸುತ್ತಾರೆ.
ತಾಯಿಗೆ ತನ್ನ ಮಕ್ಕಳ ಬಗೆಗಿನ ಮಾತೃವಾತ್ಸಲ್ಯದ ಬಗೆಗೆ ಸಂದೇಹವೇ ಬೇಡ :

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ

ತಾನು ಸಲಹುವ ಜೀವಿಗಳ ಪೋಷಣೆ ಮಾಡುವಲ್ಲಿ, ಗಂಗಾದೇವಿಯು ವಹಿಸುವ ಮೂರು ಹಂತಗಳನ್ನು ಬೇಂದ್ರೆ ಸೂಚಿಸಿದ್ದಾರೆ. ಮೊದಲನೆಯ ಹಂತದಲ್ಲಿ ಅವಳು ತನ್ನ ಕರುವನ್ನು ಕಂಡ ಗೋವಿನಂತೆ ವಾತ್ಸಲ್ಯಭರಿತಳಾಗುವಳು.
ಎರಡನೆಯ ಹಂತದಲ್ಲಿ ಮಗುವಿನ ಮನಸ್ಸನ್ನು ತಿಳಿದು ಮಗುವಿಗೆ ಮುದ್ದು ಮಾಡುವ ಮರುಳ ತಾಯಿ ಅವಳು. ಮೂರನೆಯ ಹಂತದಲ್ಲಿ ಅವಳು ಉದ್ದಂಡ ಅರುಳೆ ; ಅಂದರೆ ಸ್ವತಃ ಪೂರ್ಣ ಜ್ಞಾನವನ್ನು ಹೊಂದಿದ, ಮಗುವಿಗೆ ಶಿಕ್ಷೆ ಕೊಡುತ್ತಲೇ ಶಿಕ್ಷಣ ನೀಡಬಲ್ಲ ಶಿಕ್ಷಕಿ. ಈ ದೇವಿಯನ್ನು ಬೇಂದ್ರೆ ಸುಳಿ ಸುಳಿದು ಬಾ’, ಅಂದರೆ ದೂರ ಹೋಗದಿರು, ಸುತ್ತಲೇ ಸುತ್ತುತ್ತ ಇರು ಎಂದು ಬೇಡಿಕೊಳ್ಳುತ್ತಾರೆ.

ಈ ರೀತಿಯಾಗಿ ಜೀವಿಗಳ ಉದ್ಧಾರ ಮಾಡುವ ಕೃಪಾಭಾವ ಗಂಗಾದೇವಿಗೆ ಇರುವ ಕಾರಣವೇನು? ಇಲ್ಲಿ ಗಂಗಾದೇವಿಯ ಪಾರಮಾರ್ಥಿಕ ಸ್ವರೂಪವನ್ನು ಬೇಂದ್ರೆ ಬಣ್ಣಿಸುತ್ತಾರೆ. ಅವಳು ಸಾಕ್ಷಾತ್ ಶಿವನ ಶುಭ್ರ ಕರುಣಾಭಾವ.
ಈ ಏಕೈಕ ಕರುಣಾಭಾವದಲ್ಲಿ ಬೇರೆ ಭಾವಗಳು ಎಳ್ಳಷ್ಟೂ ಮಿಳಿತವಾಗಿಲ್ಲ. ಅವಳು ವಾತ್ಸಲ್ಯಭಾವದಿಂದ ಮಾತ್ರ ಆವರಿಸಲ್ಪಟ್ಟವಳು.(ವಾತ್ಸಲ್ಯವರಣೆ). ಆದುದರಿಂದಲೇ ಅವಳು ಜೀವಿಗಳ ಉದ್ಧಾರದಲ್ಲಿ ತಾರತಮ್ಯವಿಲ್ಲದೇ ಸದಾ ಮಗ್ನಳಾಗಿರುವವಳು.

ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

[ಹಾಗಿದ್ದರೆ ಈ ಶುಭ್ರಕರುಣೆಯು ಕಿಂಚಿತ್ ಅರುಣೆಯಾಗಿ ಕಾಣುವದೇಕೆ? ಈ ಅತಿ ಸ್ವಲ್ಪ ಕೆಂಪು ವರ್ಣಾಂಶವು ಎಲ್ಲಿಂದ ಬಂದಿತು? ಅದಕ್ಕೆ ಉತ್ತರವು ಶ್ರೀ ಶಂಕರಾಚಾರ್ಯರ ಸೌಂದರ್ಯಲಹರಿಯಲ್ಲಿದೆ.

ಶಿವನು ಕೇವಲ ಆತ್ಮಸ್ವರೂಪನು ; ಅವನಲ್ಲಿ ಯಾವುದೇ ಗುಣಗಳಿಲ್ಲ. ಆದರೆ ಅವನ ಶಕ್ತಿಯು ಸಕಲಗುಣಗಳನ್ನು ಒಳಗೊಂಡ ಅರುಣರೂಪದವಳು. ಅವನ ಕರುಣಾಭಾವವೂ ಅವಳೇ. ಆದುದರಿಂದ ಅವನ ಕರುಣಾಭಾವವೂ ಸಹ ಕೆಂಪು ವರ್ಣಾಂಶವನ್ನು ಹೊಂದಿರುವಂತೆ ಭಾಸವಾಗುತ್ತದೆ.
ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ”]

ಇಂತಹ ಗಂಗಾದೇವಿಯನ್ನು ಬಿಟ್ಟರೆ ತಮ್ಮ ಉದ್ಧಾರಕರು ಬೇರೆ ಯಾರೂ ಇಲ್ಲ ಎಂದು ಬೇಂದ್ರೆ ಆಕೆಗೆ ಹೇಳುತ್ತಾರೆ :

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ

ತನ್ನಲ್ಲಿಯೇ ಆಗಲಿ, ತನ್ನ ನಾಡಿನಲ್ಲಿಯೇ ಆಗಲಿ, ಕೊಳೆಯನ್ನು ತೊಳೆಯುವವರು ಯಾರೂ ಇಲ್ಲ. ಭೌತಿಕ ಕೊಳೆಯೇ ಆಗಲಿ, ಅಜ್ಞಾನದ ಕೊಳೆಯೇ ಆಗಲಿ ಅಥವಾ ನೈತಿಕ ಕೊಳೆಯೇ ಆಗಲಿ, ಇವೆಲ್ಲವನ್ನು ತೊಳೆಯಲು ಗಂಗಾದೇವಿಗೆ ಮಾತ್ರ ಸಾಧ್ಯ. ಬೇರೆ ಶಕ್ತಿಗಳಿಂದ ಅದು ಸಾಧ್ಯವಿಲ್ಲ. ಏಕೆಂದರೆ, ಇತರ ಶಕ್ತಿಗಳೆಂದರೆ ಮಾನವ ಶಕ್ತಿಗಳು, ಉದಾಹರಣೆಗೆ ಧನಶಕ್ತಿ. ಈ ಇತರ ಶಕ್ತಿಗಳು ಹೊಲ್ಲಅಂದರೆ ಮಲಿನಗೊಂಡ ಶಕ್ತಿಗಳು. ಆದುದರಿಂದ ಈ ನಿನ್ನ ಕರ್ತವ್ಯವನ್ನು ಮಾಡದಿರುವದು ನಿನಗೆ ತಕ್ಕದ್ದಲ್ಲ.

ಇಲ್ಲಿಯವರೆಗೆ ಮಾನವನ ವೈಯಕ್ತಿಕ ಉದ್ಧಾರವನ್ನು ಕೋರಿದ ಕವಿ ಈಗ ನಾಡಿನ ಉದ್ಧಾರಕ್ಕಾಗಿ ಪ್ರಾರ್ಥಿಸುತ್ತಾರೆ.

ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ನಮ್ಮ ನಾಡಿನಾಡಿಯಲ್ಲಿ ನಿನ್ನ ತುತ್ತನ್ನು ನೀಡು, ನಮ್ಮ ನಾಡನ್ನೆಲ್ಲ ಸುತ್ತಿ ನೀರುಣ್ಣಿಸು ಹಾಗು ಸತ್ತ ಜನರನ್ನು ಮೇಲೆತ್ತು. ನಿನ್ನ ಕರುಣೆಯಿಂದ ಈ ನಾಡು ಮತ್ತೆ ಹಸಿರು ಹಸಿರಾಗಲಿ, ಜನರಲ್ಲಿ ಮತ್ತೆ ಜೀವ ತುಂಬಲಿ ಎಂದು ಬೇಂದ್ರೆಯವರು ಗಂಗಾದೇವಿಯನ್ನು ಪ್ರಾರ್ಥಿಸುತ್ತಾರೆ. ಆದುದರಿಂದ ಗಂಗಾದೇವಿ ಕೇವಲ ಹಿಮಾಲಯದಿಂದ ಹರಿದು ಬಂಗಾಲ ಉಪಸಾಗರವನ್ನು ಸೇರುತ್ತಿರುವ ನದಿಯಾಗಿ ಉಳಿಯದೆ, ಭಾರತದಲ್ಲೆಲ್ಲ ಹರಿಯುವ ಪ್ರವಾಹಗಳ ಪ್ರತಿನಿಧಿಯಾಗುತ್ತಾಳೆ.

(ಭಾರತದಲ್ಲಿ ಹರಿಯುವ ನದಿಗಳೆಲ್ಲ ಭಾರತೀಯರ ಪಾಲಿಗೆ ಪುಣ್ಯನದಿಗಳೇ. ಗುರುಗ್ರಹವು ಪ್ರತಿ ಹದಿಮೂರು ತಿಂಗಳಿಗೊಮ್ಮೆ ರಾಶ್ಯಂತರ ಮಾಡುವಾಗ, ಗಂಗೆಯೂ ಸಹ ಒಂದೊಂದು ನದಿಯಲ್ಲಿ ಸಮಾವೇಶಗೊಳ್ಳುತ್ತಾಳೆ ಎನ್ನುವದು ಭಾರತೀಯರ ನಂಬಿಕೆ. ಉದಾಹರಣೆಗೆ, ಗುರು ಕನ್ಯಾ ರಾಶಿಯಲ್ಲಿ ಪ್ರವೇಶಿಸಿದಾಗ, ಗಂಗಾದೇವಿಯು ಕೃಷ್ಣಾ ನದಿಯಲ್ಲಿ ಸಮಾವಿಷ್ಟಳಾಗಿರುತ್ತಾಳೆ. ಆದುದರಿಂದ, ಕಾಲದಲ್ಲಿ ಪಿತೃಗಳಿಗೆ ಪಿಂಡಪ್ರದಾನವನ್ನು
ಕೃಷ್ಣಾನದಿಯಲ್ಲಿ ಮಾಡುವದು, ಗಂಗಾನದಿಯಲ್ಲಿ ಮಾಡುವಷ್ಟೇ ಫಲದಾಯಕವಾದದ್ದು.)

ಇಂತಹ ಪುಣ್ಯನದಿಯಾದ ಗಂಗಾದೇವಿಯ ಮನಸ್ಸಿನ ರೂಪವೆಂತಹದು? ದೇವತೆಗಳ ಕನಸುಗಳ ಪ್ರತಿಬಿಂಬವು ಈ ಸುರನದಿಯಲ್ಲಿ ಬಿದ್ದಿತಂತೆ. ಆ ದಿವ್ಯಸ್ವಪ್ನದಿಂದ ಶುದ್ಧಜ್ಞಾನ ಪಡೆದ ನೀರೆ ಈ ಗಂಗಾದೇವಿ. ಅವಳೀಗ ಆಕಾಶದುದ್ದವನ್ನು ತುಂಬಿಕೊಂಡು ಧರೆಗಿಳಿಯಲಿದ್ದಾಳೆ.

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ಸಿರಿವಾರಿ ಅಂದರೆ ಗಂಗಾದೇವಿ; ಅವಳ ನೀರುಂಡು ಬೆಳೆದದ್ದು ಪಾರಿಜಾತ ವೃಕ್ಷ. ಪಾರಿಜಾತದಲ್ಲಿ ಹುಟ್ಟಿದ ಹೂವುಗಳೇ ಆಕಾಶವನ್ನು ತುಂಬಿಕೊಂಡ ತಾರೆಗಳು. ಈ ತಾರೆಗಳ ಮಧ್ಯದಿಂದ ಕೆಳಗಿಳಿದು ಬರುತ್ತಿದ್ದಾಳೆ ಗಂಗಾದೇವಿ.
ಈ ರೀತಿಯಾಗಿ ಆಕಾಶದಿಂದ ಇಳಿಯುತ್ತಿರುವ ಗಂಗಾದೇವಿಯನ್ನು ಕವಿ ಭಕ್ತಿಯಿಂದ ವಂದಿಸುತ್ತಾರೆ:

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ.

ವೃಂದಾರವೆಂದರೆ ವೃಂದಾಹಾರ (=ತುಳಸಿಮಾಲೆ). ತುಳಸಿ ಭೂಮಿಯ ಮೇಲೆ ಬೆಳೆಯುವ ಪವಿತ್ರ ಸಸ್ಯ. ಮಂದಾರವೆಂದರೆ ಸ್ವರ್ಗದಲ್ಲಿ ಬೆಳೆಯುವ ವೃಕ್ಷ. ಗಂಗಾದೇವಿಯು ಭೂಮಿಯಲ್ಲಿ ಪವಿತ್ರಸಸ್ಯ ತುಳಸಿಯಿಂದ ಪೂಜಿಸಲ್ಪಡಬೇಕಾದವಳು. ಸ್ವರ್ಗದಲ್ಲಿ ಮಂದಾರಪುಷ್ಪಗಳಿಂದ ಪೂಜಿತಳಾಗಿ, ಆ ಸುವಾಸನೆಯನ್ನು ಹೊಂದಿದವಳು. ಈ ರೀತಿಯಾಗಿ ಭೂಮಿ ಹಾಗು ಸ್ವರ್ಗದಲ್ಲಿ ನೀನು ಪೂಜಿತಳಾಗಿದ್ದೀಯೆ. ಈ ಮಕ್ಕಳನ್ನು ವಾತ್ಸಲ್ಯದಿಂದ ಪೋಷಿಸಬೇಕಾದ ತಾಯಿ ಹಾಗು ತಂದೆ ನೀನೇ ಎಂದು ಕವಿ ಹೇಳುತ್ತಾನೆ.

ಇಂತಹ ಗಂಗಾದೇವಿಯನ್ನು ಕವಿ ಭಕ್ತಿಯಿಂದಲೇ ಆಹ್ವಾನಿಸುತ್ತಿದ್ದಾನೆ.
ನೀನು ಭಗವಂತಹ ಆನಂದರಸದಲ್ಲಿ ಜನಿಸಿದವಳು; ಆದುದರಿಂದ ನೀನು ಸತ್-ಚಿತ್-ಆನಂದ ಬ್ರಹ್ಮನ ಕನ್ಯೆ. ನಾವೂ ಸಹ ಆ ಸಚ್ಚಿದಾನಂದ ಬ್ರಹ್ಮನ ಸೃಷ್ಟಿಯೇ. ಆದುದರಿಂದ ನೀನು ನನಗೆ ಬೇರೆಯವಳಾಗಲು ಹೇಗೆ ಸಾಧ್ಯ?’
ಒಂದೇ ಒಂದು ಸಲ ನೀನು ಕೆಳಗಿಳಿದು ಬಾ. ನಿನ್ನನ್ನು ಕಾಣುತ್ತಿರುವ ನನ್ನ ಆನಂದದ ಅಶ್ರುಧಾರೆಯನ್ನು ತಡೆಯಬೇಡಎಂದು ಅವಳಿಗೆ ಬಿನ್ನಹ ಮಾಡುತ್ತಾನೆ.

ನೀನು ಕೆಳಗಿಳಿದು ಬಾ ತಾಯಿ, ಇದು ಅಧ:ಪತನವಲ್ಲ, ಇದು ಅಧ:ಪಾತ, ಇದು ಅವತರಣಎಂದು ಬೇಂದ್ರೆ ಹೇಳುತ್ತಾರೆ. ಪತನವೆಂದರೆ ಅಧೋಗತಿಗೆ ಇಳಿಯುವದು. ಆದುದರಿಂದ ಧಬಧಬೆಗೆ ಜಲಪತನವೆನ್ನುವದಿಲ್ಲ, ಜಲಪಾತವೆನ್ನುತ್ತಾರೆ.
ಅದೇ ರೀತಿಯಾಗಿ ಗಂಗೆ ಧರೆಗಿಳಿಯುವದು ಗಂಗಾಪತನವಲ್ಲ ; ಇದು ಗಂಗಾಪಾತ, ಇದು ಗಂಗಾವತರಣ !

ಇಲ್ಲಿ ಮತ್ತೊಂದು ಹೆಚ್ಚುಗಾರಿಕೆ ಇದೆ.
ಭಗವಂತನು ಭಕ್ತರ ಉದ್ಧಾರಕ್ಕಾಗಿ ಒಂಬತ್ತು ಅವತಾರಗಳನ್ನು ಎತ್ತಿದ್ದಾನೆ ಎಂದು ಹೇಳುತ್ತಾರೆ.
ಈ ಯಾವ ಅವತಾರಗಳಲ್ಲಿಯೂ ಆತ ತನ್ನ ಸ್ವಸ್ವರೂಪವನ್ನು ತೋರಿಸಿಲ್ಲ. ಮತ್ಸ್ಯ, ಕೂರ್ಮ, ವರಾಹ….ರಾಮ, ಕೃಷ್ಣ ಮೊದಲಾದ ರೂಪಗಳನ್ನು ಧರಿಸಿದ್ದಾನೆ.
ಆದರೆ ಗಂಗಾದೇವಿ ತನ್ನ ಸ್ವಸ್ವರೂಪದಲ್ಲಿಯೇ ಧರೆಗಿಳಿದಿದ್ದಾಳೆ. ಆದುದರಿಂದ ಇದು ಬರಿಯ ಅವತಾರವಲ್ಲ ; ಇದು ಸ್ವಸ್ವರೂಪದ ಅವತರಣ ! ಇದು ಗಂಗಾವತರಣ !

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಬೇಂದ್ರೆಯವರದು ಏನಾದರೂ ವೈಯಕ್ತಿಕ ಹರಕೆ ಇತ್ತೊ ಗೊತ್ತಿಲ್ಲ. ಆದರೆ ಭಗೀರಥನಿಗೆ ತನ್ನ ಪೂರ್ವಜರನ್ನು ಪ್ರೇತಲೋಕದಿಂದ ಬಿಡಿಸಬೇಕಾಗಿತ್ತು. ಗಂಗಾವತರಣದಿಂದ ಆ ಹರಕೆ ಪೂರ್ಣವಾಯಿತು. ಮತ್ತೊಮ್ಮೆ ಇದೀಗ ಗಂಗಾದೇವಿ ಮಮತಾಪೂರದಲ್ಲಿ ಮಿಂದವಳಂತೆ, ಮಹಾಪೂರದಲ್ಲಿ ಮೈ ತುಂಬಿಕೊಂಡು , ತಡ ಮಾಡದಂತೆ, ಎಗ್ಗಿಲ್ಲದೆ ದುಡುಕುತ್ತಮುನ್ನುಗ್ಗಬೇಕು. ತನ್ನ ಕಂದನ್ನ ಹುಡುಕಿಕೊಂಡು ಹೋಗಬೇಕು. ಇದು ಅವಳ ವಾತ್ಸಲ್ಯದ ಕರ್ತವ್ಯ!

ಅವಳು ಹರಿದಲ್ಲೆಲ್ಲ ಚರಾಚರಗಳು ಹೊಸವಾಗುತ್ತವೆ, ಹಸಿರಾಗುತ್ತವೆ. ಜೀವಕ್ಕಂಟಿಕೊಂಡ ಕಲ್ಮಶಗಳೆಲ್ಲ ತೊಳೆದು ಹೋಗಿ, ಬಾಳಿನಲ್ಲಿ ಹೊಸ ಬೆಳಕು ಮೂಡುತ್ತದೆ. ಆದುದರಿಂದ ತಾಯಿ, ಮೈ ತುಂಬಿಕೊಂಡು ಬಾಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ:

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಶಿವನು ಕೇವಲ ಸತ್-ರೂಪನು ; ಶಕ್ತಿ ಅವನ ಚಿತ್-ರೂಪಳು. (ಬೇಂದ್ರೆಯವರು ಗಂಗಾದೇವಿಯನ್ನೆ ಶಕ್ತಿರೂಪೆಯಾಗಿ ಗ್ರಹಿಸಿ ಬರೆದಿದ್ದಾರೆ). ಆದುದರಿಂದ ಗಂಗೆಗೆ ಅವರು ಶಿವನ ಚಿತ್ತೆ ಎಂದು ಕರೆಯುತ್ತಾರೆ.
ಗಂಗಾದೇವಿಯು ದತ್ತ ನರಹರಿಗೆ ಮುತ್ತಜ್ಜಿಯಾಗಬೇಕು.
ಇಂತಹ ಗಂಗಾದೇವಿಯು ಅಂಬಿಕಾತನಯದತ್ತನತ್ತ ಬರಲಿ ಎಂದು ಕವಿ ಪ್ರಾರ್ಥಿಸುತ್ತಾರೆ.

ಬೇಂದ್ರೆಯವರು ಗಂಗಾದೇವಿಯನ್ನು ತಾವೊಬ್ಬರೇ ಪ್ರಾರ್ಥಿಸುತ್ತಿರುವಂತೆ ಕವನವನ್ನು ರಚಿಸಿದ್ದರೂ ಸಹ ಇದು ನಮ್ಮ ನಾಡಿನ ಕರೆ. ನಮ್ಮ ನಾಡು ಸಮೃದ್ಧವಾಗಬೇಕು, ಈ ನಾಡವರೆಲ್ಲರೂ ಜ್ಞಾನಸಂಪನ್ನರಾಗಬೇಕು, ಪವಿತ್ರರಾಗಬೇಕು ಎನ್ನುವದು ಈ ಕವನದ ಭಾವನೆ.

ಕವನವು ಬೆಳೆದ ಬಗೆಯನ್ನು ಓದುಗರು ಗಮನಿಸಬೇಕು:
ಕವನದ ಮೊದಲ ನಾಲ್ಕು ನುಡಿಗಳಲ್ಲಿ ಗಂಗಾನದಿಗೆ ಪ್ರಾರ್ಥನೆ ಇದೆ. ನಂತರದ ಎರಡು ನುಡಿಗಳಲ್ಲಿ ಗಂಗೆಯ ಮಮತೆಯ ವರ್ಣನೆ, ಅವಳ ಶಕ್ತಿವರ್ಣನೆ ಇವೆ. ಮೂರನೆಯ ನುಡಿಯಲ್ಲಿ ಅವಳ ದೈವತ್ವದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಗಂಗಾವತರಣದಿಂದ ಈ ಪ್ರಕೃತಿ ಹೊಸ ಜೀವದಿಂದ ತುಂಬಿಕೊಳ್ಳುವದೆನ್ನುವ ಭರವಸೆ ಇದೆ.

54 comments:

ಆಲಾಪಿನಿ said...

ಸುನಾಥ್ ಅಂಕಲ್‌. . .
ಹೂಂ..ಸುಸ್ತಾಯ್ತು.ಅಷ್ಟೇ ಹೊಟ್ಟೆಕಿಚ್ಚೂ. ಅದ್ ಹೇಗ್ ಬರಿತೀರಿ ಇಷ್ಟೊಂದು ಆಳವಾಗಿ, ಸವಿಸ್ತಾರವಾಗಿ. ನಿಮ್ಮ ತಾಳ್ಮೆಗೆ ಹ್ಯಾಟ್ಸ್ ಅಪ್.
ಯಾರೋ ಹೇಳಿದ್ದನ್ನ ನಾನ್ ಹೇಳಿದ್ದೆಯಷ್ಟೇ. ಅದನ್ನ ಟಿಪ್ಪಣಿ ಅಂತ ಹಾಕಿಬಿಟ್ಟಿದ್ದೀರಿ...
ಅಲ್ಲಾ ನನಗ್ ಈಗ ಅನ್ನಿಸಿದ್ದು ಏನ್ ಅಂದ್ರ. ಲಹರಿ ಅಲ್ಲಿಂದ ತಗೊಂಡಿದ್ರೂ ತಗೊಂಡಿರಬಹುದು. ಅದಕ್ಕ ಪ್ರಸ್ತುತವಾಗೇ ಬರಗಾಲದ ಘಟನಾ ಎಲ್ಲಾ ನಡೆದಿದ್ರೂ ನಡೆದಿರಬಹುದು. ಏನೋ ಗೊತ್ತಿಲ್ಲ. ಇದು ನನ್ನ ಊಹೆ ಅಷ್ಟ. ಹಂಗ ಸುಮ್ನ ಹೇಳಿದೆ :)

ಆಲಾಪಿನಿ said...

ಆದ್ರ ಆ ಜೋಕ್ ಮಾತ್ರ ಯಾರ್‍ ಹೇಳಿದ್ರೋ ನೆನಪಾಗ್ತಿಲ್ಲ. ಧಾರವಾಡದಾವ್ರ ಅಂತ ಮಾತ್ರ ಗೊತ್ತು. ಎನಿ ವೇ ತುಂಬಾ ಇಷ್ಟಾ ಆಯ್ತು. ನಾನು ನನ್ನ ತಮ್ಮ ಸೇರಿ ಇದನ್ನ ಸಣ್ಣವರಿದ್ದಾಗ ಹಾಡ್ತಿದ್ವಿ. ಕಾರ್ಯಕ್ರಮದಾಗು ಭಾಳ ಸಲಾ ಹಾಡೇನಿ. ಆಗೆಲ್ಲ ಈ ಹಾಡು ಭಾಳ ಖುಷಿ ಕೊಟ್ಟದ. ಈಗ್ಲೂ ಅದು ನೆನಪಿಗ್ ಬರ್‍ತಿರ್‍ತದ.

sunaath said...

ಶ್ರೀದೇವಿ,
ನೀವು ಚೆನ್ನಾಗಿ ಬರೀತೀರಿ ಮತ್ತು ಚೆನ್ನಾಗಿ ಹಾಡ್ತೀರಿ. ನಿಮ್ಮ ಬಗ್ಗೆ ನನಗೆ ತುಂಬಾ ಅಭಿಮಾನ ಆಗ್ತದ.

ಇನ್ನು ಆ ಜೋಕ್‌ಅನ್ನು ಯಾರೇ ಹೇಳಿರಲಿ, ಛಲೋ ನಗಸ್ತದ.
ಅದನ್ನು ಎಲ್ಲರ ಜೊತೆಗೆ share ಮಾಡ್ಕೊಂಡದ್ದಕ್ಕ ಥ್ಯಾಂಕ್ಸ್.
-ಸುನಾಥ ಕಾಕಾ

Anonymous said...

ಅದ್ಭುತವಾದ ತಾಳ್ಮೆಯ ಒಳನೋಟ ನಿಮ್ಮದು.
ಇಲ್ಲಿ ಬೇಂದ್ರೆಯವರು ಬರೀ ಕವಿಯಷ್ಟೇ ಆಗಿಲ್ಲ.
ಅವರೊಬ್ಬ ಯೋಗಿ,ಮಾನವತಾವಾದಿ ಮತ್ತು ಅಂತಃಕರಣದ
ಜೀವಿಯಾಗಿ ಕಂಗೊಳಿಸಿದ್ದಾರೆ.mostly,ಭೌತವಿಜ್ಞ್ನಾನಿಯೂ ಕೂಡ!
ವೃಂದಾರವಂದ್ಯೆ,ಮಂದಾರಗಂಧೆ-ಎಂಥ ಸುಕೋಮಲ ಪದಗಳು..
-ರಾಘವೇಂದ್ರ ಜೋಶಿ.

ಆಲಾಪಿನಿ said...

ನಿಮ್ಮ ಅಭಿಮಾನಕ್ಕ ಥ್ಯಾಂಕ್ಸ್. ಆದ್ರ ನೀವ್ ಯವಾಗ್ ಕೇಳೀರಿ ನಾ ಹಾಡೂದು?

sunaath said...

ಜೋಶಿಯವರೆ,
ನೀವು ಹೇಳಿದಂತೆ, ಬೇಂದ್ರೆ ಒಬ್ಬ ಅತ್ಯಂತ ಸಂಕೀರ್ಣ ವ್ಯಕ್ತಿಯಾಗಿದ್ದರು. ಅವರ ಕವನಗಳಲ್ಲಿ ಅದು ವ್ಯಕ್ತವಾಗಿದೆ.

sunaath said...

ಶ್ರೀದೇವಿ,
ನೀವು ಹಾಡಲೆಂದುಕೊಲ್ಕತ್ತಾಕ್ಕೆ ಹೋಗಿದ್ದಾಗಿ ಬರೆದಿದ್ದೀರಲ್ಲ.
ನೀವು ಚೆನ್ನಾಗಿ ಹಾಡುತ್ತಿರಲೇ ಬೇಕು.
-ಕಾಕಾ

Parisarapremi said...

ನನಗೆ ಬೇಂದ್ರೆ ಕವನಗಳು ಅರ್ಥವಾಗುವುದು ಬಹಳ ಕಷ್ಟ ಎನ್ನಿಸಿ ಕೆಲವು ದಿನಗಳಾಗಿವೆ.. ನನಗೆ ಸರಿಯಾಗಿ ಅರ್ಥವಾಗಿರದ ಕವನಗಳಲ್ಲಿ ಇದೂ ಒಂದಾಗಿತ್ತು. ಈಗ ಖುಷಿ ನನಗೆ. ಹೀಗೆ ಇನ್ನಷ್ಟು ಮತ್ತಷ್ಟು ಕವನಗಳನ್ನು ನಮ್ಮಂಥವರಿಗೆ ಹೇಳಿಕೊಡಿಪ್ಪಾ.. ತುಂಬಾ ಥ್ಯಾಂಕ್ಸ್.

sunaath said...

ಪರಿಸರಪ್ರೇಮಿಯವರೆ,
At your service, Sir.

ತೇಜಸ್ವಿನಿ ಹೆಗಡೆ said...

ಸುನಾಥ ಕಾಕಾ,

ಏನು ಹೇಳಬೇಕೆಂದೇ ತೋಚುತ್ತಿಲ್ಲ.. ಅಷ್ಟೊಂದು ಅರ್ಥವತ್ತಾಗಿ ವಿವರಿಸಿದ್ದೀರಿ. ತುಂಬಾ ಸರಳ ವರ್ಣನೆ. ಧನ್ಯವಾದಗಳು.

ಕಾಕಾ "ಶಿವಶುಭ್ರ ಕರುಣೆ " ಇಲ್ಲಿ ಶಿವ ಅಂದರೆ ‘ಮಂಗಳ" ಎಂದರ್ಥವನ್ನೂ ಗ್ರಹಿಸಬಹುದಲ್ಲವೇ? ಶಿವ ಶಬ್ದದ ಮೂಲಾರ್ಥ ಮಂಗಳಕರ ಎಂದು ಓದಿರುವೆ. ಗಂಗೆಯನ್ನು ಮಂಗಳೆ, ಶುಭ್ರ ಎಂದು ಹೇಳಿರಬಹುದಲ್ಲವೇ?

sunaath said...

Exactly, ತೇಜಸ್ವಿನಿ!
ಶಿವ ಅಂದರೆ ಮಂಗಲಕರ ಅನ್ನುವ ಅರ್ಥವಿರುವದರಿಂದ, ಮಂಗಲೆ, ಪಾವನಳು ಹಾಗು ಕರುಣಾಮಯಿ ಎನ್ನುವ ಅರ್ಥವನ್ನು ಹೇಳುವದು ಸರಿಯಾಗಿಯೇ ಇದೆ.
ಧನ್ಯವಾದಗಳು.
-ಸುನಾಥ ಕಾಕಾ

Jagali bhaagavata said...

ಈ ಹಾಡನ್ನ ಪಿ. ಕಾಳಿಂಗ ರಾವ್ ಕಂಠದಲ್ಲಿ ಕೇಳ್ಬೇಕು. ನನ್ನ ಅತಿ ಮೆಚ್ಚಿನ ಹಾಡಿದು.

Jagali bhaagavata said...

ಮತ್ತೆ ಕಾಕಾ, ಗಂಗೆ ಜುಹ್ನು ಮುನಿಯ ಕಿವಿಯಿಂದ ಹೊರಬಂದಳು ಅಂತ ನಾನು ಕೇಳಿದ, ಓದಿದ ಕಥೆಗಳಲ್ಲಿದ್ದ ನೆನಪು. ತೊಡೆಯಿಂದ ಹೊರಗೆ ಬಂದ್ಲು ಅಂತ ಇದೇ ಮೊದ್ಲು ಕೇಳ್ತಾ ಇರೋದು ನಾನು.

ಸಿಪಿಕೆಯವರ ಒಂದು ವಿಮರ್ಶಾ ಲೇಖನದಲ್ಲಿ ಈ ’ಋಷಿಯ ತೊಡೆಯಿಂದ’ ಅನ್ನೋದು ಕೇವಲ ಕವನ ಓಘಕ್ಕಾಗಿ ಇರುವ ಸಾಲು ಓದಿದ್ದ ನೆನಪು. ಈ ಕೊಂಡಿಯನ್ನ ನೋಡಿ - http://members.tripod.com/~pnsrao/bendre/ilidu.html ಇದ್ರಲ್ಲೂ ಅದೇ ರೀತಿ ಅಭಿಪ್ರಾಯ ಇದೆ. ವಿಮರ್ಶೆಗೆ ಹೊಸ ದೃಷ್ಟಿಕೋನ ಇದೆ.

Jagali bhaagavata said...

ಮುಂದಿನ ಕವನ - "ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ..." ಬಹುಜನರ ಅಪೇಕ್ಷೆಯ ಮೇರೆಗೆ.

Jagali bhaagavata said...

"...ನಾಡಿಗರಿಗೆ ಜ್ಞಾನವನ್ನು , ಸುಜ್ಞಾನವನ್ನು ಪ್ರಸಾದಿಸಲಿ"

ಯಾವ ನಾಡಿಗರಿಗೆ? ಸುಮತೀಂದ್ರ ನಾಡಿಗರಿಗಾ? :-)) http://members.tripod.com/~pnsrao/bendre/ilidu.html ನೋಡಿ ಇನ್ನೊಂದ್ ಸರ್ತಿ :-)

Jagali bhaagavata said...

ಅಂಬಿಕಾತನಯದತ್ತ"ನತ್ತೆ" ಬಾ

ಕಾಕಾ, ಈ ಬೇಂದ್ರೆಯಜ್ಜ ಯಾಕೆ ಅಂಬಿಕಾತನಯದತ್ತನ ಅತ್ತೆಯನ್ನ ಬಾ ಅಂತ ಕರೀತಾ ಇದ್ದಾರೆ? :-)

Jagali bhaagavata said...

ಮತ್ತೆ ಕಾಕಾ, ನನ್ನ ಬ್ಲಾಗೋದ್ಬಿಟ್ಟು ಅದ್ಯಾರೋ ’ಗುಲಾಬಿ’ಯ ನೆನಪಾಯ್ತು ಅಂತ ಬರ್ದಿದ್ರಲ್ಲ, ಯಾರದು? ಎನ್ ಕಥೆ? ನಮಗೂ ಕಥೆ ಹೇಳಿ. ಚೆನ್ನಗಿರತ್ತೆ, ಕೇಳ್ತೀವಿ :-)

ಅಂತೂ ಇಂತೂ ಇವತ್ತು ನಿಮ್ ಬ್ಲಾಗ್ spam ಮಾಡ್ಲಿಕ್ಕೆ ಒಳ್ಳೆ ಅವಕಾಶ ಸಿಕ್ತು :-)

sunaath said...

ಭಾಗವತರೆ,
“ಇಳಿದು ಬಾ ತಾಯಿ” ಗೀತೆಯನ್ನು ಪಿ.ಕಾಳಿಂಗರಾವ ಅದ್ಭುತವಾಗಿ ಹಾಡಿದ್ದಾರೆ. ಗಂಗೆ ಧುಮ್ಮಿಕ್ಕಿ ಬರುವಂತೆ ಭಾಸವಾಗುತ್ತದೆ.
ಗಂಗಾದೇವಿ ಜಹ್ನು ಋಷಿಯ ಕಿವಿಯಿಂದ ಹೊರಬಂದಳು ಎಂದೇ ನಾನೂ ಓದಿದ್ದೇನೆ. ಇನ್ನು ಬೇಂದ್ರೆಯವರ ಹೇಳಿಕೆಯನ್ನು ಹೀಗೆ ಅರ್ಥೈಸಬಹುದು:
ತಲೆಯ ಮೇಲೆ ಕೂಡುವವಳು ಹೆಂಡತಿ ; ತೊಡೆಯ ಮೇಲೆ ಕೂಡುವವಳು ಮಗಳು. ಗಂಗಾದೇವಿ ಹರನ ಹೆಂಡತಿಯಾದದ್ದರಿಂದ ಅವನ ತಲೆಯ ಮೇಲೆ ವಾಸವಾದಳು. ಋಷಿಯ ಮಗಳಾದದ್ದರಿಂದ ಅವನ ತೊಡೆಯ ಮೇಲೆ ನುಸುಳುತ್ತಿದ್ದಳು!
‘ಸುಮತೀಂದ್ರ ನಾಡಿಗರಿಗೆ ಬುದ್ಧಿಯನ್ನು ಕರುಣಿಸು’ ಎನ್ನುವದು ಎಲ್ಲಾ ಕನ್ನಡಿಗರ ಒಕ್ಕೊರಲಿನ ಪ್ರಾರ್ಥನೆ, ದೇವರಲ್ಲಿ! ಇದನ್ನು ನೀವು ಅತ್ಯಂತ ಸರಿಯಾಗಿ ಊಹಿಸಿದ್ದೀರಿ !!
ಬೇಂದ್ರೆಯವರು ತಮ್ಮ ಅತ್ತೆಯನ್ನು ಯಾಕೆ ಕರೆದರು ಎನ್ನುವದು ಗೂಢವಾಗಿದೆ. ಶ್ರೀದೇವಿ ಕಳಸದ ಅವರು ತಿಳಿಸಿದಂತೆ, ನಲ್ಲಿಯಲ್ಲಿ ನೀರು ಬರದೆ ಇದ್ದಾಗ, ಬೇಂದ್ರೆಯವರು “ಇಳಿದು ಬಾ” ಎಂದು ಹಾಡಿದ್ದಾರೆ. ಆಗಲೂ ಸಹ ನೀರು ಬರದೆ ಇದ್ದಾಗ, ಅವರು ತಮ್ಮ ಅತ್ತೆಯನ್ನು ಕರೆದರೆ? (ಅವರ ಅತ್ತೆಯ ಹೆಸರಂತೂ ಗಂಗಾ ಎಂದಿಲ್ಲ.) ಹೆಂಡತಿಯನ್ನೇಕೆ ಕರೆಯಲಿಲ್ಲ? ಹೆಂಡತಿ ಮುನಿಸಿಕೊಂಡಿದ್ದಳೆ?
ಇದೆಲ್ಲ ಗೋಜಲಿನಿಂದ ಪಾರಾಗಲು, ಅಂಬಿಕಾನಯನತ್ತೆ=ಅಂಬಿಕಾತನಯನತ್ತ=towards Ambikaatanaya ಎಂದು ಊಹಿಸುವದು ಯೋಗ್ಯ ಎನಿಸುತ್ತದೆ !

sunaath said...

ಭೋಜನಪಕ್ಷದ ಭಾಗವತರೆ,
"ಬಂಗಾರ ನೀರ ಕಡಲಾಚೆಗೀಚಿಗೆ.."ಕವನದ ಟಿಪ್ಪಣಿಯನ್ನು ನೀವು ಹೃದಯ ಸಮುದ್ರದಲ್ಲಿ ಓದಬಹುದು.

sunaath said...

ಮಾಣಿ,
ಎಂತಾ ಕತೆ? ನಿನ್ನ ಗುಲಾಬಿ ಕತೆ ನಂಗೇನು ಗೊತ್ತಪ್ಪ?
'ತೇರೇ ಆಂಗನೇ ಮೆ ಮೇರಾ ಕ್ಯಾ ಕಾಮ ಹೈ'?
-ಖಾಖಾ

ಆಲಾಪಿನಿ said...

ನೋಡಿ ಸುನಾಥ್ ಅಂಕಲ್,
ಯಾಕೆ ಪದೇ ಪದೇ ನನ್ನನ್ನ ಜ್ಞಾಪಿಸಿಕೊಳ್ತಿದ್ದೀರಾ? ಹೀಗೆ ಮಾಡ್ತಿದ್ರೆ ಜಗಳ ಆಡ್ಬೇಕಾಗತ್ತೆ ನೋಡಿ ಮತ್ತೆ.

sunaath said...

ಶ್ರೀದೇವಿ,
ನೀವು ಜಗಳಾಡೋಕೆ ಬಂದ್ರ, ನಾ ಅರವಿಂದರ ಹಿಂದ ನಿಲ್ತೇನಿ!

Anonymous said...

ತುಂಬಾ ತುಂಬಾ ಚೆನ್ನಾದ ಬರಹ...
ಇನ್ನೇನೂ ಹೇಳಲು ತೋಚುತ್ತಿಲ್ಲ.....

sunaath said...

ಮಾಲಾ,
ಧನ್ಯವಾದಗಳು.

VENU VINOD said...

ಉಫ್!
ಈ ಹಾಡು ಗೊತ್ತಿತ್ತೇ ವಿನಾಃ ಅದರ ಅರ್ಥದ ಹರವು ಇಷ್ಟಿರಬಹುದೆಂದು ಊಹಿಸಿರಲಿಲ್ಲ. ಹಿಂದೆ ಹೈಸ್ಕೂಲಿನಲ್ಲೂ ಮೇಷ್ಟರು ಇಷ್ಟು ಸುಂದರವಾಗಿ ಬಿಡಿಸಿ ಹೇಳಿಯೂ ಇರಲಿಲ್ಲ....ಮಹಾನುಭಾವ ಬೇಂದ್ರೆಗೆ, ಸಾಲು ಸಾಲು ಬಿಡಿಸಿ ಹೇಳಿದ ನಿಮಗೆ ವಂದನೆ

kanasu said...

ಸುನಾಥರೆ...
ನಾನು ನಿಮ್ಮನ್ನ ಕಾಕಾ ಅಂತ ಕರಿಲಾ? :)
ತುಂಬ.. ತುಂಬ ಚೆನ್ನಾಗಿದೆ ಪದ್ಯದ ವಿವರಣೆ..
ಧನ್ಯವಾದಗಳು..

ಮುಂದಿನ ಪದ್ಯ ಯಾವುದು?

sunaath said...

ವೇಣುವಿನೋದ,
ಕೆಲವು ಶಿಕ್ಷಕರು ಹೈಸ್ಕೂಲಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಜಾಸ್ತಿ ಹೇಳಲು ಹೋಗುವದಿಲ್ಲ. ಆದರೆ ಈ ವಿಷಯದಲ್ಲಿ ನಾನು ಅದೃಷ್ಟವಂತ. ಒಂದು ಉದಾಹರಣೆ ಕೊಡುತ್ತೇನೆ. ಚಾಮರಸ ಕವಿ ಬರೆದ "ಪ್ರಭುಲಿಂಗ ಲೀಲೆ"ಯ ಒಂದು ಭಾಗವನ್ನು "ಮಾಯಾದೇವಿಯ ಬಾಲ್ಯ" ಮಾಧ್ಯಮಿಕ ಶಾಲೆಯ ಕೊನೆಯ ವರ್ಷದಲ್ಲಿ ನಮಗೆ ಪಠ್ಯವಾಗಿತ್ತು. ಅದರಲ್ಲಿಯ ಒಂದು ನುಡಿ ಹೀಗಿದೆ:
"ಹಿಡಿ ಹಿಡಿದುಕೊಂಡರ್ತಿಯಲಿ
ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ ಮುದ್ದುತನ ಮಿಗೆ ಮಾಯೆ ತನ್ನಂತೆ
ನಡೆಯ ಕಲಿಸಿದಳಂಚೆವಿಂಡಿಗೆ
ನುಡಿಯ ಕಲಿಸಿದಳರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ."

ಈ ನುಡಿಯ ಸರಳಾರ್ಥವನ್ನು ತಿಳಿಸಿದ ಬಳಿಕ ನಮ್ಮ ಶಿಕ್ಷಕರು ಒಂದು ಮಾತು ಹೇಳಿದರು:
"ಈ ನುಡಿಯಲ್ಲಿ ಕವಿ ಮಾಯಾದೇವಿಯ onset of teenage ಅನ್ನು ಸೂಚಿಸುತ್ತಿದ್ದಾನೆ."

ಈ ರೀತಿಯಾಗಿ Reading between the lines ಅನ್ನು ಹೇಳಿಕೊಟ್ಟ ಮಹಾನುಭಾವರವರು.

sunaath said...

ಕನಸುಗಾತಿ,
ನಾನು ನಿಮ್ಮ ಕಾಕಾನೇ ಇದ್ದೀನಲ್ಲ.
ಕರೆಯಲಿಕ್ಕೆ hesitation ಯಾತಕ್ಕೆ?
-ಸುನಾಥ ಕಾಕಾ

Sushrutha Dodderi said...

ಲವ್ಯೂ ಕಾಕಾ! ನಂಗೇನಾದ್ರೂ ಅಥಾರಿಟಿ ಇದ್ದಿದ್ರೆ ನಿಮ್ಗೆ ನೀವು ಮಾಡಿರೋ ಬೇಂದ್ರೆ ಸಾಹಿತ್ಯದ ಬಗೆಗಿನ ಅಧ್ಯಯನಕ್ಕೆ ಪಿಎಚ್‍ಡಿ ಕೊಡ್ತಿದ್ದೆ! ಅದ್ ಹೇಗ್ ಕಾಕಾ ಇಷ್ಟೆಲ್ಲಾ ಆಳವಾಗಿ ಒಂದು ಕವಿತೇನಾ ಅರ್ಥ ಮಾಡ್ಕೊಳ್ಳೋದು?

ನೀವು ಇವನ್ನೆಲ್ಲಾ ಸೇರಿಸಿ ’ಬೇಂದ್ರೆ ಸಾಹಿತ್ಯ ಅಕಾಡೆಮಿ’ಗೆ ಕೊಟ್ರೆ ಅವ್ರು ಪುಸ್ತಕ ಮಾಡ್ಬಹುದು ಅನ್ನೋದು ನಂದೊಂದು ಸಲಹೆ.. ಬ್ಲಾಗ್ ಮಂದಿ ಅಲ್ದೇ ಉಳಿದ ಬೇಂದ್ರೆ ಕಾವ್ಯಾಸಕ್ತರಿಗೂ ಅನುಕೂಲ ಆಗತ್ತೆ..

sunaath said...

ಮಗೂ,
ನಂದೇನು ಅಂಥಾ ದೊಡ್ಡ ಅಧ್ಯಯನವಲ್ಲ. ಕೀರ್ತಿನಾಥ ಕುರ್ತಕೋಟಿ ಇದ್ದರು. ಅವರನ್ನು ನಿಜವಾಗಿಯೂ 'ಬೇಂದ್ರೆ ಡಿಕ್ಷನರಿ' ಅಂತಾ ಕರೀಬಹುದು. ಜಿ.ಎಸ್.ಆಮೂರ, ವಾಮನ ಬೇಂದ್ರೆ ಇವರೆಲ್ಲ ಬೇಂದ್ರೆ ಸಾಹಿತ್ಯದ ಆಳವಾದ ಅಭ್ಯಾಸಿಗಳು.
-ಕಾಕಾ

Anonymous said...

ಶ್ರೀ ಕೃಷ್ಣ ಕಟ್ಟಿಯವರು ಬೇಂದ್ರೆ ಸಾಹಿತ್ಯದಲ್ಲಿಯೇ ಪಿ.ಎಚ್ ಡಿ., ಮಾಡಿರುವರು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆವರಿಗೆ ಲಸ ಮಾಡುತ್ತಿರುವರು. ಅವರಿಗೆ ಕುರ್ತಕೋಟಿಯವರು 'ಗೈಡ' ಆಗಿದ್ದರು. 'ಸಲ್ಲಾಪ'ದ ಕುರಿತು ಅವರಿಗೆ ಹೇಳಿದ್ದೆ.

NilGiri said...

" ಇಳಿದು ಬಾ ತಾಯಿ...." ನನಗೆ ತುಂಬಾ ಇಷ್ಟವಾದ ಹಾಡು. ಪೂರ್ಣ ಅರ್ಥ ತಿಳಿಸಿ, ಬಿಡಿಸಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು.

ಆಂದ ಹಾಗೆ ನಾನೂ ನಿಮ್ಮನ್ನು " ಕಾಕಾ" ಎಂದೇ ಕರೆಯಲೇ? ;)


ನಿಮ್ಮ ಪುಣ್ಯ ಒಳ್ಳೆಯ ಕನ್ನಡ ಮೇಷ್ಟ್ರು ಸಿಕ್ಕಿದ್ರು. ನಮಗೆ ಸಿಕ್ಕ ಕನ್ನಡ ಲೆಕ್ಚರರ್ ಬಗ್ಗೆ ಏನು ಹೇಳುವುದು? :( " ನಾಗರ ಹಾವೇ.." ಅಂದ್ರೆ ಏನಪ್ಪಾ ಅಂದ್ರೇ ....ನಾಗರ ಹಾವೇ...." ಹಾವೊಳು ಹೂವೇ.." ಅಂದ್ರೆ ಏನಪ್ಪಾ ಅಂದ್ರೇ... ಹಾವೊಳು ಹೂವೇ.." ಎಂದು ಹೇಳಿಕೊಟ್ಟ ಜಾತಿಯವರು.

ವಿನಾಯಕ ಕೆ.ಎಸ್ said...

ನಮಸ್ತೆ,
ಸುನಾಥರೇ ನಿಮ್ಮ ಬ್ಲಾಗು ಇವತ್ತು ಕಣ್ಣಿಗೆ ಬಿತ್ತು. ತುಂಬಾ ಚೆನ್ನಾಗಿದೆ. ಬೇಂದ್ರೆ ನಿಜಕ್ಕೂ ಎಲ್ಲಾ ತಲೆಮಾರಿನವರು ನೆನಪಿಸಿಕೊಳ್ಳಬೇಕಾದ ಕವಿ. ಆದರೆ ದುರಂತವೆಂಬಂತೆ ಈ ತಲೆಮಾರಿಗೆ ಅವರ ನೆನಪು ಮಾಸಿಹೋಗುತ್ತಿದೆ. ಬೇಂದ್ರೆ ಒಡನಾಡಿಗಳಾದ ಸುರೇಶ್ ಕುಲಕರ್ಣಿ ಸಿಕ್ಕಾಗಲೆಲ್ಲಾ ಬೇಂದ್ರೆ ವ್ಯಕ್ತಿತ್ವದ ಕುರಿತು ವಿವರಿಸುತ್ತಿರುತ್ತಾರೆ. ಅವರ ಕವಿತೆಗಿಂತ ವ್ಯಕ್ತಿತ್ವ ಇನ್ನೂ ದೊಡ್ಡದು ಅಂತಾ ನನ್ನ ಭಾವನೆ. ಆ ಕುರಿತು ನಿಮಗೆ ತಿಳಿದಿದ್ದರೆ ಒಂಚೂರು ಬರೆಯಿರಿ. (ನಮಗಾಗಿ!)
ವಿನಾಯಕ ಕೋಡ್ಸರ

sunaath said...

ಕಟ್ಟಿಯವರೆ,
ಕೃಷ್ಣ ಕಟ್ಟಿಯವರು ಧಾರವಾಡಕ್ಕೆ ಬಂದಾಗ ಸಂಪರ್ಕಿಸುವೆ.
ನಿಮಗೆ ಧನ್ಯವಾದಗಳು.

sunaath said...

nilಗಿರಿಜಾ,
ನಾನು ನಿಮಗೆಲ್ಲರಿಗೂ ಕಾಕಾ.
ನೀವು ಕಾಕಾ ಅಂದರೆ ನನಗೆ ಖುಶಿ.
-ಕಾಕಾ

sunaath said...

ವಿನಾಯಕರೆ,
ಬೇಂದ್ರೆಯವರನ್ನು ನಾನು ಕೆಲವೊಮ್ಮೆ ನೋಡಿದ್ದೇನೆ. ಆದರೆ ಆ ಮಹಾಕವಿಯ ಹತ್ತಿರ ಹೋಗುವ ಧೈರ್ಯ ಮಾಡಿಲ್ಲ.
ಅವರ ವ್ಯಕ್ತಿತ್ವ ಸಂಕೀರ್ಣವಾದದ್ದು.
"ಪಲವುಂ ನಾಲಗೆಯುಳ್ಳವಂ ಬಣ್ಣಿಸಲ್ಕಾರನಾ ಕವಿಯಮ್,
ಮತ್ತಿನ ಮಾನಸರೇನ್ ಬಣ್ಣಿಪರು?" ಎಂದು ಆಂಡಯ್ಯನ ಸಾಲುಗಳನ್ನು ತಿರುಚಿ ಹೇಳಬಹುದು, ಬೇಂದ್ರೆಯವರ ಬಗೆಗೆ.

Anonymous said...

ಶ್ರೀ ಕೃಷ್ಣ ಕಟ್ಟಿ ನನ್ನ ಸೋದರ ಸಂಬಂಧಿ. ಅವರಿರುವದು ಹೊಸಪೇಟೆಯಲ್ಲಿ. ಅವರ ಜಂಗಮ ದೂರವಾಣಿ ಸಂಖ್ಯೆ 9448580056. ಕನ್ನಡ ಸಾಹಿತ್ಯದ, ಅದರಲ್ಲಿಯೂ ಅಂಬಿಕಾತನಯದತ್ತರ ಪರಮ ಭಕ್ತರು.ಶ್ರೀ ಕುರ್ತಕೋಟಿಯವರ ಶಿಷ್ಯರು. ಅವರಿಂದ ನಮ್ಮ ಬ್ಲಾಗಿಗೆ ಒಳ್ಳೆ ಲೇಖನಗಳು ಬರಬಹುದೆಂಬ ಆಸೆ.

Archu said...

ಸುನಾಥ ಕಾಕಾ,
ನೀವು ಇಷ್ಟು ಚಂದ ವಿವರಣೆ ನೀಡಿದ್ದೀರಲ್ಲಾ..ನನಗೆ ಓದಲು ಬಹಳ ಖುಷಿ.
ಪ್ರೀತಿಯಿಂದ,
ಅರ್ಚನಾ

sunaath said...

ಅರ್ಚನಾ,
ನಿನಗೆ ಧನ್ಯವಾದಗಳು.
-ಕಾಕಾ

ಅವೀನ್ said...

ಸುನಾಥ್ ಸರ್,

ನಿಜಕ್ಕೋ ನಿಮ್ಮ ಬರವಣಿಗೆ ಅಪೂರ್ವವಾದದ್ದು. ಅರ್ಥ ಗರ್ಭಿತ, ಸಾಮಾನ್ಯ ಮನುಷ್ಯನಿಗೂ ನಿಲುಕುವಂಥದ್ದು. ನಿಮ್ಮ ಬರಹಗಳನ್ನು ಓದುವಾಗ ನಿಜಕ್ಕೋ ವರ್ಣನಾತೀತ ಆನಂದವಾಗುತ್ತದೆ. ಹೀಗೆ ನಿಮ್ಮ ಬರವಣಿಗೆ ನಿರಂತರವಾಗಿರಲಿ

Mamta Rivonkar said...

ನಮಸ್ಕಾರ ಸುನಾಥರೇ!

ಬೇಂದ್ರೆಯವರ "ನಾಕು ತಂತಿ" ಭಾವಾರ್ಥ ಹುಡುಕುತಿದ್ದಾಗ ನನ್ನ ಪುನ್ಯವೇನೋ ಎಂಬಂತೆ ನಿಮ್ಮ ಬರವಣಿಗೆ ಸಿಕ್ಕಿದೆ ! "ನಾಕು ತಂತಿ" ಸಿಗಲಿಲ್ಲ ಆದರೆ ಅತ್ಯದ್ಭುತ ಸಂಕಲನ ಸಿಕ್ಕಿತು.
ನಿಮ್ಮ ಬರವಣಿಗೆ ನೋಡಿದರೆ ತಾವು ಅಸಮಾನ್ಯರು ಎಂದೆನಿಸುತ್ತದೆ. ಕೋಟಿ ಪ್ರಣಾಮಗಳು ನಿಮಗೆ.

ಗಂಗಾವತರಣ ತಾತ್ಪರ್ಯ ಓದಿ ಖುಷಿಯಾಯಿತು.

ಶ್ರೇಷ್ಟರು ನೀವು..

ನಮಸ್ಕಾರ
ಮಮತಾ

sunaath said...

ಮಮತಾ ಮೇಡಮ್,
ಬೇಂದ್ರೆ ಅಸಾಮಾನ್ಯರು, ನಾನಲ್ಲ!! ನಿಮ್ಮ ಪ್ರೀತಿಗೆ ಧನ್ಯವಾದಗಳು.

Mamta Rivonkar said...

ಧನ್ಯವಾದಗಳು ... "ನಾಕು ತಂತಿ"ಯ ತಾತ್ಪರ್ಯ ಹುಡುಕುತ್ತಿದ್ದೆ ... ಸಾಧ್ಯವಾದರೆ ಪೋಸ್ಟ್ ಮಾಡುವಿರಾ ?

sunaath said...

ಮಮತಾ ಮೇಡಮ್,
‘ನಾಕು ತಂತಿ’ ಕವನದ ಬಗೆಗೆ ಒಂದು ಲೇಖನವನ್ನು ಇದೇ ಬ್ಲಾ^ಗಿನಲ್ಲಿ ಬರೆದಿದ್ದೇನೆ. ಅದರ ಕೊಂಡಿ ಹೀಗಿದೆ: http://sallaap.blogspot.in/2008/04/blog-post.html

ಬ್ಲಾ^ಗ್ ಪೋಸ್ಟಿನ ಬಲಬದಿಯಲ್ಲಿ ನಿಮಗೆ Search this blog ಎನ್ನುವ ಒಂದು box ಸಿಗುತ್ತದೆ. ಅಲ್ಲಿ ನೀವು ಟೈಪ್ ಮಾಡಿದರೆ, ನೀವು ಹುಡುಕುತ್ತಿರುವ ವಿಷಯ ಸಿಗಬಹುದು.

Mamta Rivonkar said...

ಅದ್ಭುತ ! ಧನ್ಯವಾದಗಳು

sunaath said...

ಧನ್ಯವಾದಗಳು, ಮೇಡಮ್!

Punith said...

ಸುನಾಥ್ ಸರ್,

ಈ ಮಳೆಗಾಲದಲ್ಲಿ ಮಳೆನಾಡಲ್ಲಿ ಈ ಹಾಡು ಗುನುಗುತ್ತಾ ನೋಡಿದ ಜಲಪಾತಗಳ ದೃಶ್ಯಗಳ್ನ ಜೋಡಿಸಿ ಮಾಡಿದ ಹಾಡು .

https://www.youtube.com/watch?v=qxbm2oLn_Dw

sunaath said...

ಪುನೀತರೆ,
ನಿಮಗೆ ಪ್ರತಿಕ್ರಿಯಿಸಲು ನನ್ನಿಂದ ದೀರ್ಘ ವಿಲಂಬವಾಯಿತು. ಕ್ಷಮಿಸಿರಿ. ನಿಮ್ಮ ದೃಶ್ಯಜೋಡಣೆ ಅತ್ಯುತ್ತಮವಾಗಿದೆ. ಈ ದೃಶ್ಯಾವಳಿಯನ್ನು ನನಗೆ ತೋರಿಸಿದ ಹಾಗು ಉತ್ಕೃಷ್ಟವಾದ ಹಾಡು ಕೇಳಿಸಿದ ನಿಮಗೆ ಧನ್ಯವಾದಗಳು.

Pradeep M B said...

ಕವಿತೆಯ ಒಳಹೊರಗನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವರಣೆ ನೀಡಿರುವಿರಿ, ಬೇಂದ್ರೆಯವರ ಮನೋಭೂಮಿಕೆಯ ಪ್ರತಿಬಿಂಬದಂತಿದೆ ನಿಮ್ಮ ವಿಶ್ಲೇಷಣೆ.

sunaath said...

ಧನ್ಯವಾದಗಳು, ಪ್ರದೀಪರೆ.

Anonymous said...

ನಮಸ್ಕಾರ ಸುನಾಥರಿಗೆ...
ನಾವು ʻದೃಶ್ಯಕಾವ್ಯ ಕನ್ನಡʼ ಅಂತ ಯುಟ್ಯೂಬ್‌ ವಾಹಿನಿ ಶುರು ಮಾಡಿದ್ದೇವೆ. ಕನ್ನಡದ ಹಳೆ-ಹೊಸ ಗದ್ಯ,ಪದ್ಯ,ತಾಳೆಗರಿ,ಶಾಸನ ಇತ್ಯಾದಿಗಳಲ್ಲಿರುವ ವಿಷಯಗಳನ್ನು ಹೊಸ ಡಿಜಿಟಲ್‌ ತಲೆಮಾರಿಗೆ ತಲುಪಿಸುವ ಸಲುವಾಗಿ ಈ ವಾಹಿನಿ. ಇದರಲ್ಲಿ ತಾವು ʻಗಂಗಾವತರಣʼ ಕಾವ್ಯದ ಜೊತೆಗೆ ತಾವು ಬರೆದ ವಿವರ ವಾಚನ ಮಾಡಲು ಉತ್ಸುಕನಾಗಿದ್ದೇನೆ. ಇದಕ್ಕೆ ಹಾಗೂ ತಮ್ಮ ಹೆಸರು ನಮೂದಿಸಲು ಸಹ ಅನುಮತಿ ನೀಡಬೇಕಾಗಿ ವಿನಂತಿ.ಕಾಶಿಗೆ ಹೋಗಿ ಗಂಗೆಯ ಚಿತ್ರೀಕರಣ ಮಾಡಿಕೊಂಡು ಬಂದಿದ್ದೇವೆ. ಆ ದೃಶ್ಯಾವಳಿ ಜೋಡಿಸುತ್ತೇವೆ.

ನಮ್ಮ ಯುಟ್ಯೂಬ್‌ ವಾಹಿನಿ : drishyakavyakannada
contact: 8310125604 (Jayakumar Vinayak)

sunaath said...

ಪ್ರಿಯ ಜಯಕುಮಾರರೆ, ನನ್ನ ಯಾವುದೇ ಲೇಖನದ ಯಾವುದೇ ಭಾಗವನ್ನು ಬಳಸಿಕೊಳ್ಳಲು ನೀವು ಮುಕ್ತರಿದ್ದೀರಿ. ನನ್ನ ಅನುಮತಿ ನಿಮಗೆ ಬೇಕಾಗಿಲ್ಲ. ಆದುದರಿಂದ ನೀವು ಯಾವುದೇ ಸಂಕೋಚ ಹಾಗು ಸಂದೇಹವಿಲ್ಲದೆ ಮುಂದುವರಿಯಬಹುದು.

Anonymous said...

ಧನ್ಯವಾದಗಳು. ಲೇಖನದಲ್ಲಿರುವ ಗುರುಗ್ರಹದ ರಾಶಿಚಲನೆ ಹಾಗೂ ಗಂಗೆಯ ಚಲನೆ ವಿವರ ಪೂರ್ತಿ ಎಲ್ಲಿ ಸಿಗಬಹುದು?

sunaath said...

Anonumusರೆ, ನೀವು ಯಾವುದೇ ಪಂಚಾಂಗ ಅಥವಾ ephemeris ದಲ್ಲಿ ಹುಡುಕಿದರೆ ನಿಮಗೆ ಎಲ್ಲ ಗ್ರಹಗಳ ಚಲನೆಗಳ ವಿವರಗಳು ಲಭ್ಯವಾಗುವವು. ಆದರೆ, ಬಹುತೇಕ ಪಂಚಾಂಗಗಳಲ್ಲಿ ನಿರಯನ ಚಲನೆಯನ್ನು ಕೊಟ್ಟಿರುತ್ತಾರೆ. ephemerisಗಳಲ್ಲಿ ಸಾಯನ ಚಲನೆಯನ್ನು ಕೊಟ್ಟಿರುತ್ತಾರೆ. ನೀವು ಸಾಯನ ಚಲನೆಯಲ್ಲಿ ಅಜಮಾಸು ೨೩.೫ ಕೂಡಿಸಿದರೆ, ನಿಮಗೆ ನಿರಯನ ಚಲನೆ ದೊರೆಯುವುದು. ಉದಾಹರಣೆಗೆ, ephemeris ಪ್ರಕಾರ, ಸೂರ್ಯನು ಡಿಶಂಬರ ೨೧/೨೨ರಂದು ಮಕರವೃತ್ತದ ಮೇಲೆ ಇರುತ್ತಾನೆ. ಇದರಲ್ಲಿ ೨೩.೫ ದಿನಗಳನ್ನು ಕೂಡಿಸಿದರೆ, ಸೂರ್ಯನು ಜನೇವರಿ ೧೪ರಂದು ಮಕರವೃತ್ತದಲ್ಲಿ ಇರುತ್ತಾನೆ. ಸಾಯನವು ನಮಗೆ ಗೋಚರವಾಗುವ ವಾಸ್ತವ ಸ್ಥಿತಿ. ನಿರಯನವು ಲೆಕ್ಕದಿಂದ ದೊರೆಯುವ ಸ್ಥಿತಿ. ಗುರುವು ಕನ್ಯಾಗತ ಎಂದು ಹೇಳುವಾಗ, ನಿರಯನವನ್ನು ಅವಲಂಬಿಸಿಯೇ ಹೇಳಿರುತ್ತಾರೆ. ನೀವು ಪಂಚಾಂಗದಲ್ಲಿ ಗುರುವು ಕನ್ಯಾರಾಶಿಗೆ ಯಾವಾಗ ಬಂದಿರುತ್ತಾನೆ ಎನ್ನುವುದನ್ನು ನೋಡಿದರೆ, ಆ ಸಮಯದಲ್ಲಿ, ಕೃಷ್ಣಾನದಿಯಲ್ಲಿ ಕನ್ಯಾಗತ ಇರುತ್ತದೆ. ( ಏಕೆಂದರೆ, ನನಗೆ ತಿಳಿದ ಮಟ್ಟಿಗೆ, ಕೃಷ್ಣಾ ನದಿಯು ಭೂಮಿಯ ಮೇಲೆ, ಕನ್ಯಾ ರಾಶಿಯ ಕೆಳಗೆ ಇದ್ದಿರಬಹುದು.) ಈ ವರ್ಷಪೂರ್ತಿ ಗುರುವು ಬಹುಶಃ ಮಕರ ರಾಶಿಯಲ್ಲಿ ಇದ್ದಂತೆ ತೋರುತ್ತದೆ. In that case, ಇನ್ನು ೬-೭ ವರ್ಷಗಳವರೆಗೆ ಕನ್ಯಾಗತ (ಅಂದರೆ ಗುರುವು ಕನ್ಯಾರಾಶಿಗೆ) ಬರುವುದಿಲ್ಲ. ಇದೆಲ್ಲವೂ ನನ್ನ ಅರೆಬರೆ ತಿಳಿವಳಿಕೆಯ ವಿವರಗಳು. ಇದರಲ್ಲಿ ಸಾಕಷ್ಟು ತಪ್ಪುಗಳು ಇರಬಹುದು.