Wednesday, September 10, 2008

ಚಿಗರಿಗಂಗಳ ಚೆಲುವಿ.........ದ.ರಾ.ಬೇಂದ್ರೆ

ವಸುಂಧರಾ ಎನ್ನುವದು ನಮ್ಮ ಪುರಾತನ ಕವಿಗಳು ಭೂಮಿತಾಯಿಗೆ ಕೊಟ್ಟ ಹೆಸರು. ವಸು ಎಂದರೆ ಜೀವಿ. ಭೂಮಿತಾಯಿಯು ಜೀವಿಗಳನ್ನು ಹೊತ್ತವಳು, ಆದುದರಿಂದ ಇವಳು ವಸುಂಧರಾ. ಇವಳಲ್ಲಿ ಅಡಗಿರುವ ಅನೇಕ ಹಾಗೂ ಅಮೂಲ್ಯ ಸಂಪತ್ತಿನಿಂದಾಗಿ ಇವಳನ್ನು ಬಹುರತ್ನಾ ವಸುಂಧರಾಎಂದು ಬಣ್ಣಿಸಲಾಗಿದೆ.

ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ಚಿಗರಿಗಂಗಳ ಚೆಲುವಿಎಂದು ಕರೆದಿದ್ದಾರೆ. ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ಮೃಗನಯನಿಎಂದು ಕರೆಯಲಾಗಿದೆ. ಆದರೆ ಈ ಕವನದಲ್ಲಿ ಭೂಮಿತಾಯಿ ಸುಂದರ ಕಣ್ಣುಗಳಿಗಾಗಿ ಚಿಗರಿಗಂಗಳ ಚೆಲುವಿಯಾಗಿಲ್ಲ ; ಅವಳು ಇಲ್ಲಿ ಹೆದರಿದ ಹರಿಣಿ. ಹೆದರಿದ ಹರಿಣಿಯನ್ನು ನೋಡುವವರಿಗೆ ಎದ್ದು ಕಾಣುವ ಸಂಗತಿ ಎಂದರೆ, ಹರಿಣಿಯ ಕಣ್ಣುಗಳು ; ಅತ್ತಿತ್ತ ಚಂಚಲವಾಗಿ ಚಲಿಸುವ ಬೆದರಿದ ಕಣ್ಣುಗಳು.

ಚಿಗರಿಗಂಗಳ ಚೆಲುವಿಈ ಕವನವು ಬೇಂದ್ರೆಯವರ ಸಖೀಗೀತಕವನಸಂಕಲನದಲ್ಲಿ ಸೇರಿದೆ.
ಸಖೀಗೀತವು ೧೯೩೭ರಲ್ಲಿ ಪ್ರಕಟವಾಯಿತು.
………………………………………………………………..
ಚಿಗರಿಗಂಗಳ ಚೆಲುವಿಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನ.
ಮಾನವನ ನಾಗರಿಕತೆ ಪ್ರಾರಂಭವಾಗುವ ಮೊದಲು ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ಸಾಮರಸ್ಯದಲ್ಲಿ ಜೀವಿಸುತ್ತಿದ್ದವು.
ನಾಗರಿಕತೆ ಪ್ರಾರಂಭವಾದಾಗಿನಿಂದ, ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು.
ಮಾನವನ ಸ್ವಾರ್ಥ ಹಾಗೂ ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗೂ ಇತರ ಪ್ರಾಣಿಗಳಿಗೆ. ಬಳಿಕ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಕಲಹಗಳಿಂದಾಗಿ, ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇದನ್ನು ಈ ಕವನದಲ್ಲಿ ಹಂತ ಹಂತವಾಗಿ ವರ್ಣಿಸಲಾಗಿದೆ.

ಬೇಂದ್ರೆಯವರ ಕವನಗಳೆಂದರೆ, ಕವಿಯು ತನ್ನ ಭಾವನೆಗಳನ್ನು, ತನ್ನ ಸುಖ, ದುಃಖಗಳನ್ನು, ತನ್ನ ಅನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಕವನಗಳು. ಚಿಗರಿಗಂಗಳ ಚೆಲುವಿಕವನದಲ್ಲಿಯೂ ಸಹ ಕವಿಯು ತನ್ನ ದುಃಖವನ್ನು, ತನ್ನ ಆಕ್ರೋಶವನ್ನು ತನ್ನ ಗೆಳೆಯನೆದುರಿಗೆ ಹೇಳಿಕೊಳ್ಳುತ್ತಿದ್ದಾನೆ.

ಕವನದ ಪೂರ್ತಿಪಾಠ ಹೀಗಿದೆ:
………………………………………………………………

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ ||ಪಲ್ಲವಿ||


ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . .


ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .


ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .


ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . .
…………………………………………………………….
ಕವನದ ಮೊದಲ ನುಡಿ ಹೀಗಿದೆ:

ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . .

ಈ ನುಡಿ ಪ್ರಾರಂಭವಾಗುವದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ :
ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ

ನಿಸರ್ಗದ ಸಂಪನ್ಮೂಲಗಳಾದ ಹಾಗೂ ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆಹಳ್ಳಗಳು ತೊರೆಯುತ್ತಿವೆ ಅಂದರೆ ತುಂಬಿಕೊಂಡು ಸಮೃದ್ಧವಾಗಿ ಹರಿಯುತ್ತಿವೆ. ಈ ಸಂಪನ್ಮೂಲಗಳನ್ನು ಭೋಗಿಸುವ ಜೀವರಾಶಿಯಾದ ಹಕ್ಕಿಗಳು ಬೆರೆದಿವೆ ಅಂದರೆ ಹೊಸ ಸೃಷ್ಟಿಯ ಕ್ರಿಯೆಯಲ್ಲಿ ತೊಡಗಿಕೊಂಡಿವೆ. ಇದೆಲ್ಲ ಮನಸ್ಸನ್ನು ಮುದಗೊಳಿಸುವ ನೋಟ.

ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ.
ಯಾಕೆಂದರೆ:

ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ

ನಿಸರ್ಗದ ಈ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ, ಮಾನವ ಎನ್ನುವ ಈ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ ಈ ಜೀವಿಗೆ. ಈ ಜೀವಿಗೆ ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗುವದಿಲ್ಲ. ಇವನಿಗೆ ಉಳಿದ ಜೀವಿಗಳ ಮೇಲೆ ಹೊಟ್ಟೆಕಿಚ್ಚು. ಅದಕ್ಕೆ ಬೇಂದ್ರೆ ಹೇಳುತ್ತಾರೆ:
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs”

ಇಷ್ಟೇ ಅಲ್ಲ, ಇಂಥವರ ಕೆಟ್ಟ ದೃಷ್ಟಿಯಿಂದಾಗಿ (evil eye) ‘ಮನಿ ಮುರದಾವ’. ಇಲ್ಲಿಯವರೆಗೆ, ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ , ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ (=ಮನಿ) ಈಗ ಭಗ್ನವಾಗುತ್ತಿದೆ.

ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ,ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದುರಾಸೆಯಿಂದ ದೋಚುತ್ತಿರುವವರನ್ನು ಅವಳು ತಡೆಯುವದೆಂತು?
ಹೀಗಾಗಿ, ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ),
ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ),
ಹಾಗೂ ಈ ಶೋಷಣೆಯಿಂದಾಗಿ ಸೊರಗುತ್ತಿದ್ದಾಳೆ (ಸ್ವತಃ).

ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾs|| ಚಿಗರಿಗಂಗಳ. . . . .

ಈ ದುರಾಕ್ರಮಣಕ್ಕೆ ಹೆದರಿದ ಅವಳು ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ, ಚಂಚಲವಾಗಿ ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ, ಅಂದರೆ ಆವರ್ತಿಸುವ ವಿಷಯ.

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ .
………………………………………………………………
ಮೊದಲನೆಯ ನುಡಿಯಲ್ಲಿ ಒಂದು ಸ್ತಬ್ದ ಚಿತ್ರವಿದೆ. ತಾನು ಸಮೃದ್ಧವಾದ ಬನದಲ್ಲಿದ್ದೂ, ಮನೆಮುರುಕರ ದುರಾಸೆಯ ಕೆಟ್ಟ ಕಣ್ಣಿನಿಂದ ಹೆದರಿದ, ಎಲ್ಲಿ ಓಡಬೇಕೊ ತಿಳಿಯದ ಅಸಹಾಯಕ ಹರಿಣಿಯ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಆಕ್ರಮಣದ ಚಿತ್ರವಿದೆ.

ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ಬೇಂದ್ರೆ ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಜರುಗಿದ ಮೊದಲ ಹಂತದ, ಅಂದರೆ ಬೇಟೆಯಾಡುವ ಹಂತದ ಚಿತ್ರವಿದು. ಬೇಟೆಯಾಡುವ ಪ್ರಾಣಿಗಳನ್ನು ಈಲು ಮಾಡಿ, ಅವುಗಳಿಂದ ಬೇಟೆಯಾಡಿಸುವ ಮಾನವ ಬುದ್ಧಿಯ ಚಿತ್ರವಿಲ್ಲಿದೆ. ಈ ಬೇಟೆಗೆ ಹಸುಜೀವಬೆದರ್ಯಾವೊ. ಹಸು ಇದು ಪಶು ಪದದ ತದ್ಭವವಾಗಿದ್ದರೂ ಸಹ, ರೂಢಿಯಲ್ಲಿ ಹಸು ಅಂದರೆ ಆಕಳು ; ಆದುದರಿಂದ ಹಸುಜೀವ ಅಂದರೆ ಸಾಧು ಪ್ರಾಣಿಗಳು.

ಅಪ್ರತ್ಯಕ್ಷವಾಗಿ ಇದು ಆಕ್ರಮಣಕಾರರ ಹಾಗು ಪರಾಜಿತ ಜನಾಂಗದವರನ್ನೂ ಸಹ ಸೂಚಿಸುತ್ತಿದೆ.
ಭಾರತ ದೇಶವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ಪ್ರಾಚೀನ ಕಾಲದಿಂದಲೂ ಈ ದೇಶದ ಮೇಲೆ ಆಕ್ರಮಣಗಳು ನಡೆಯುತ್ತಲೆ ಇವೆ. ಸುಸಂಸ್ಕೃತರಾದ ಹಾಗು ಆ ಕಾರಣದಿಂದಲೇ ದುರ್ಬಲರಾದ ಇಲ್ಲಿಯ ಜನತೆ, ಅನಾಗರಿಕ ಆಕ್ರಮಣಕಾರರಿಂದ ಅತ್ಯಾಚಾರಕ್ಕೊಳಗಾಗುತ್ತಲೆ ಬಂದಿದ್ದಾರೆ.
ಈ ಅತ್ಯಾಚಾರದಿಂದ ಪ್ರಕೃತಿಯೂ ಸಹ ಕಂಪಿಸಿದೆ ; ಗಿಡದ ಎಲೆಗಳು ಗಳಗಳನೆ ಉದರಿವೆ. ಅಷ್ಟೇ ಏಕೆ, ನಿರ್ಜೀವ ವಸ್ತುವಾದ ದಿನ್ನಿ, ಮಡ್ಡಿ, ಗುಡ್ಡ ಸಹ ನಡುಗಿವೆ.

ಬೇಂದ್ರೆಯವರು ಈ ವರ್ಣನೆಗಳಲ್ಲಿ ಶ್ರೇಣೀಕರಣದ ಬಳಕೆಯಾಗಿರುವದನ್ನು ಗಮನಿಸಬೇಕು.
ಮೊದಲು ಸಾಧುಪ್ರಾಣಿಗಳಿಗಾದ ಆಘಾತ ವರ್ಣಿಸಿ, ಆ ಬಳಿಕ ಸಸ್ಯಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಆ ಬಳಿಕ ನಿರ್ಜೀವ ವಸ್ತುಗಳಿಗಾದ ಆಘಾತ ಬಣ್ಣಿಸಲಾಗಿದೆ. ಅಲ್ಲೂ ಸಹ, ಮೊದಲುದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ಮಡ್ಡಿ’, ಬಳಿಕ ಅದಕ್ಕೂ ದೊಡ್ಡ ವಸ್ತುವಾದಗುಡ್ಡವನ್ನು ಬಣ್ಣಿಸಲಾಗಿದೆ.
ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಅನುಸರಿಸುವದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.

ಮೊದಲನೆಯ ನುಡಿಯ ಎರಡನೆಯ ಭಾಗದಲ್ಲಿ ಭೂಮಿತಾಯಿ ಮರುಗಿದಂತೆ, ಇಲ್ಲೂ ಸಹ ಅವಳು ಸಂಕಟಪಡುವ ಚಿತ್ರವಿದೆ:

ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ. . .

ವಸುಂಧರೆಗೆ ಪ್ರತಿ ಜೀವಿಯೂ (-- ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ--) ತನ್ನ ಮಗುವೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ಜೀವದ ಬೇಟೆಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ.

ಮೂರನೆಯ ನುಡಿಯಲ್ಲಿ, ಮಾನವನ `ನಾಗರಿಕತೆ’ಯ ಬೆಳವಣಿಗೆ ಇನ್ನೂ ಮೇಲಕ್ಕೇರಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ, ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ.

ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ || ಚಿಗರಿಗಂಗಳ. . .

ಹೋರಾಟವೆನ್ನುವದು, ರಾಜ್ಯವಿಸ್ತಾರ ಎನ್ನುವದು ಇವೆಲ್ಲ ಆಳುವವರಿಗೆ ಒಂದು ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗೂ ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಯುದ್ಧವೇ ಆಗಲಿ, ಸಾಮಾನ್ಯ ಜನತೆಗೆ ಅದು ಬೇಕಾಗಿಲ್ಲದ ಯುದ್ಧ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸುತ್ತಾರೆ. ಎಷ್ಟೇ ಕಣ್ಣೀರು ಹಾಕಿದರೇನು, ಗಾಳವು ಮೀನಿಗೆ ದಯೆ ತೋರುವದೆ?

ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕಿದ್ದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತವರು. ಅವರ ಬದುಕು ಕೊಳೆತು ಹೋಗುತ್ತದೆ, ಹುಳತು ಹೋಗುತ್ತದೆ, ಅಳುವುದೊಂದೇ ಅವರಿಗೆ ಉಳಿದ ಬದುಕು.

ಇದನ್ನು ಕಂಡ ಭೂಮಿತಾಯಿಗೆ ಹೇಗೆ ಅನಿಸುತ್ತದೆ?
ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ, ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ?
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ.
Her womb is a burial ground for her babies.

ಬೇಂದ್ರೆಯವರ ಉಪಮೆಗಳಲ್ಲಿ ಅತಿ ಕಠೋರವಾದ ಉಪಮೆ ಇದು ಎಂದು ಹೇಳಬಹುದು. ಅವರ ಮತ್ತೊಂದು ರಚನೆನೀ ಹೀಂಗ ನೋಡಬ್ಯಾಡ ನನ್ನಕವನದಲ್ಲಿ ಸಹ ಶೋಕರಸದ ಉನ್ನತ ಉಪಮೆಯೊಂದಿದೆ:
ಹುಣ್ಣವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲs”.
ಆದರೆ ಈ ಉಪಮೆಯಲ್ಲಿ ಶೋಕವಷ್ಟೇ ಅಲ್ಲದೆ, ಕ್ರೌರ್ಯವಿದೆ.

ಕೊನೆಯ ನುಡಿಯಲ್ಲಿ, ಭೂಮಿತಾಯಿಯ ಈ ಬವಣೆ, ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾರೆ:

ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ. . . .

ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆ ಇಲ್ಲಿ ಮತ್ತೊಮ್ಮೆ ಕಾಣುತ್ತದೆ.
ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ಹೊತ್ತಿನ ಬೆನ್ಹತ್ತ್ಯಾಳೊಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಕಾಲವನ್ನು ಕಾಯುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (=ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನೂ ಸಹ ಸೂಚಿಸುತ್ತದೆ. ತಿಂಗಳನ ಬಗಲಾಗೆತ್ತ್ಯಾಳೊಎನ್ನುವ ಸಾಲು ಹಸುಗೂಸನ್ನು ಎತ್ತಿಕೊಂಡ ಹೆಂಗಸಿನ ಚಿತ್ರವನ್ನು ಕೊಡುತ್ತದೆ; ಅದರಂತೆಯೇ ಚಂದ್ರನು (=ತಿಂಗಳನು) ಭೂಮಿಯ ಸುತ್ತಲೂ ತಿರುಗುತ್ತಿರುವ ವಾಸ್ತವವನ್ನೂ ಒಳಗೊಂಡಿದೆ.

ಇಂತಹ ಭೂಮಿತಾಯಿ ತನ್ನ ದುಃಖವನ್ನು ತನ್ನೊಳಗೇ ಒತ್ತಿ ಹಿಡಿದುಕೊಂಡು, ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ:

ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ.

ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ಘನತೆಯನ್ನು ಸಾರುವ ಆಭರಣಗಳು ;
ದೊಡ್ಡಸ್ತಿಕೆ ತೋರುವ ಸಂಕೇತಗಳು.
ನವಾಬನ ಜನಾನಾ ದೊಡ್ಡದಿದ್ದಷ್ಟೂ ಆತ ದೊಡ್ಡ ನವಾಬ.
ಆದರೆ, ಆತನ ದೊಡ್ಡಸ್ತಿಕೆಗಾಗಿ ಬಲಿಯಾಗುವ ಜನರ ಕಣ್ಣೀರನ್ನು ಆತ ಗಮನಿಸುವದಿಲ್ಲ.
ಇದನ್ನೇ ಭೂತಾಯಿ ಹೀಗೆ ಹೇಳುತ್ತಾಳೆ:

ನನ್ನನ್ನು ನಿರ್ಜೀವ ನೆಲವೆಂದು ತಿಳಿದು ಕಡಿಯಬೇಡ; ನಾನು ಕೇವಲ ಒಡವೆ ಅಲ್ಲ, ನಾನು ಉಸಿರಿರುವ ಒಡಲು; ಯಾಕೆಂದರೆ ನನ್ನ ಉಸಿರಿನಿಂದಲೆ ಬದಕುತ್ತಿವೆ ನನ್ನಲ್ಲಿಯ ಕೋಟಿ ಕೋಟಿ ಜೀವಿಗಳು.
ಒಡವ್ಯಲ್ಲೊ ಮಗನೆ ಉಸಿರಿದ್ದೊಡಲೊ’!

ಬೇಂದ್ರೆಯವರ ಕಾಲದಲ್ಲಿಯೇ, ಎಲ್ಲಾ ಯುರೋಪಿಯನ್ ದೇಶಗಳು ಏಶಿಯಾ ಹಾಗೂ ಆಫ್ರಿಕಾ ಖಂಡದ ದೇಶಗಳಲ್ಲಿ ಕ್ರೌರ್ಯದಿಂದ ಅಧಿಕಾರ ಸ್ಥಾಪಿಸಿ, ಆ ದೇಶಗಳನ್ನು ಶೋಷಿಸುತ್ತಿದ್ದವು. ಭಾರತವಂತೂ ಪುರಾತನ ಕಾಲದಿಂದಲೇ ಆಕ್ರಮಣಗಳನ್ನು ಎದುರಿಸುತ್ತ ಬಂದ ನಾಡು.

ಈ ಎಲ್ಲ ಸಂಗತಿಗಳು ಬೇಂದ್ರೆಯವರಿಗೆ ಈ ಕವನವನ್ನು ಬರೆಯಲು ಪ್ರೇರಣೆ ಕೊಟ್ಟಿರಬೇಕು. ಇಂತಹದೇ ಇನ್ನೊಂದು ಕವನವನ್ನು ಅವರು ರಚಿಸಿದ್ದಾರೆ : ಮೊದಲಗಿತ್ತಿ
(ಮೊದಲಗಿತ್ತಿಯಂತೆ ಮೆರೆಯುವಿಯೇ ತಾಯಿ|
ಮೊದಲಗಿತ್ತಿಯಂತೆ ಮೆರೆಯುತಿಹೆ.)

ಮಾನವನ ನಾಗರಿಕತೆ ಬೆಳೆದಂತೆಲ್ಲ ಶೋಷಣೆಯೂ ಹೆಚ್ಚುತ್ತ ಹೋದದ್ದನ್ನು ಅವರು ತಮ್ಮ ಕರಡಿ ಕುಣಿತಕವನದಲ್ಲಿ ಬಣ್ಣಿಸಿದ್ದಾರೆ:

ಯಾವ ಕಾಡಡವಿಯಲ್ಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ
ಧಣಿ ದಾನ ಕೊಡುವನು ಎಂದಾನೊ.

ಜಾಂಬುವಂತ ಅಂದರೆ ಮೂಲಜನಾಂಗದ ಪ್ರತಿನಿಧಿ. ಧಣಿ ಅಂದರೆ ಯಜಮಾನ ನಾಗರಿಕತೆಯ ಪ್ರತಿನಿಧಿ.
ಅಡವಿಯಲ್ಲಿ ಸ್ವತಂತ್ರನಾಗಿ, ಜೇನುಂಡು ಬದುಕುತ್ತಿದ್ದ ಕರಡಿಯನ್ನು, ನಾಗರಿಕ ಮಾನವನು ಹಿಡಿದು ತಂದು, ಧಣಿ ಕೊಡುವ ದಾನಕ್ಕಾಗಿ (!) ಸಲಾಮು ಹೊಡಿಸುತ್ತಾನೆ!

ಬೇಂದ್ರೆಯವರದು ಭಾರತೀಯ ಆದರ್ಶ. ಈಶಾವಾಸ್ಯ ಉಪನಿಷತ್ತಿನಲ್ಲಿ ಹೇಳುವಂತೆ :
ಈಶಾವಾಸ್ಯಮಿದಮ್ ಸರ್ವಮ್,ಯತ್ಕಿಂಚ ಜಗತ್ಯಾಂ ಜಗತ್;
ತೇನ ತ್ಯಕ್ತೇನ ಭುಂಜೀಥಾ:, ಮಾ ಗೃಧ: ಕಸ್ಯಸ್ವಿದ್ಧನಮ್.

ಈ ಆದರ್ಶವನ್ನು ಬಿಂಬಿಸುವ ಕವನಗಳೂ ಸಹ ಅವರಿಂದ ಹೊಮ್ಮಿವೆ. ಉದಾಹರಣೆಗೆ, ಅವರ ಬೈರಾಗಿಯ ಹಾಡುಎನ್ನುವ ಅತಿ ಚಿಕ್ಕ ಕವನವೊಂದನ್ನು ನೋಡಬಹುದು:

ಬೈರಾಗಿಯ ಹಾಡು
ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..
……………………………………………….......
ಟಿಪ್ಪಣಿ:

ಇಂಗ್ಲೀಶಿನ enjambment ಅನ್ನುವ ಅಲಂಕಾರದಲ್ಲಿ ಕವನದ ಗತಿಯನ್ನು ನಡುವಿನ ಒಂದು ಸಾಲಿನ ಮೂಲಕ ಮುರಿಯಲಾಗುತ್ತದೆ. ಬೇಂದ್ರೆ ತಮ್ಮ ಈ ಕವನದಲ್ಲಿ ಆ ಅಲಂಕಾರವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಮೊದಲನೆಯ ನುಡಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ:

ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ;
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾsಳೊ
ಸೊರಗ್ಯಾsಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ .

ಈ ನುಡಿಯ ಮೊದಲ ನಾಲ್ಕು ಸಾಲುಗಳಲ್ಲಿ ಒಂದು ಚಿತ್ರವಿದೆ ; ಕೊನೆಯ ನಾಲ್ಕು ಸಾಲುಗಳಲ್ಲಿ ಭೂಮಿತಾಯಿಯ ಸಂಕಟವಿದೆ. ಇವುಗಳ ಪ್ರವಾಹವನ್ನು ನಡುವಿನ ಸಾಲು ಅಂದರೆ ಐದನೆಯ ಸಾಲು ಮುರಿಯುತ್ತದೆ.
ಇದೇ ರೀತಿಯಾಗಿ ಇತರ ನುಡಿಗಳಲ್ಲೂ ಸಹ, ಮೊದಲ ನಾಲ್ಕು ಸಾಲುಗಳನ್ನು ಹಾಗು ಕೊನೆಯ ನಾಲ್ಕು ಸಾಲುಗಳನ್ನು ,ನಡುವಿನ ಅಂದರೆ ಐದನೆಯ ಸಾಲು ಪ್ರತ್ಯೇಕಿಸುತ್ತದೆ.

ಈ ಕವನದ ಇನ್ನೊಂದು ರಚನಾವೈಶಿಷ್ಟ್ಯವನ್ನು ಗಮನಿಸಬಹುದು :
ಪ್ರತಿಯೊಂದು ನುಡಿಯಲ್ಲಿ ಮೊದಲ ನಾಲ್ಕು ಸಾಲುಗಳು ಭೂಮಿತಾಯಿಯ ಒಂದು ಸ್ಥಿತಿಯನ್ನು ಬಣ್ಣಿಸುತ್ತವೆ. ಕೊನೆಯ ನಾಲ್ಕು ಸಾಲುಗಳು ಅವಳು ದುಃಖಿಸುವದನ್ನು ಬಣ್ಣಿಸುತ್ತವೆ.
ಮೊದಲನೆಯ ನುಡಿಯಿಂದ ಕೊನೆಯ ನುಡಿಯವರೆಗೆ, ವಸುಂಧರೆಯ ದುರಂತ ಗಂಭೀರವಾಗುತ್ತ ಹೋಗುವದನ್ನು ವರ್ಣಿಸಲಾಗಿದೆ.
ಸರ್ವಮಂಗಲೆಯಾದ ನಿಸರ್ಗದಲ್ಲಿಯ ಹಿಂಸೆ ಭಾರತೀಯ ಕವಿಗಳನ್ನು ಯಾವಾಗಲೂ ವಿಷಾದಕ್ಕೆ ಈಡು ಮಾಡಿದೆ. ಆದಿಕವಿ ವಾಲ್ಮೀಕಿ ಸಹ ‘ಮಾ ನಿಷಾದ ತ್ವಮಗಮಃ ಶಾಶ್ವತೀ  ಸಮಾ: ಯತ್ ಕ್ರೌಂಚಮವಧೀ: ಶಾಶ್ವತೀ ಸಮಾ:’ ಎಂದು ದುಃಖಿಸಿದ್ದು, ಭಾರತದ ಆದಿಕಾವ್ಯವಾದ ‘ರಾಮಾಯಣ’ಕ್ಕೆ ಪ್ರೇರಣೆಯಾಯಿತು. ವಾಲ್ಮೀಕಿಯ ಈ ವಿಷಾದವನ್ನು ಕನ್ನಡದ ಮತ್ತೊಬ್ಬ ಶ್ರೇಷ್ಠ ಕವಿಯಾದ ಅಡಿಗರು ‘ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಶ್ಮೆದೊಗಲು’ ಎಂದು ಬಣ್ಣಿಸಿದ್ದಾರೆ.

ಚಿಗರಿಗಂಗಳ ಚೆಲುವಿಸ್ವತಃ ಬೇಂದ್ರೆಯವರಿಗೇ ಪ್ರಿಯವಾದ ಕವನವಾಗಿತ್ತು.

19 comments:

ಶಾಂತಲಾ ಭಂಡಿ (ಸನ್ನಿಧಿ) said...

ಸುನಾಥಕಾಕಾ...
‘ಚಿಗರಿಗಂಗಳ ಚೆಲುವೆ’ಯ ಚೆಲುವನ್ನ, ಅದರೊಳಗನ್ನ ತುಂಬ ಸುಂದರವಾಗಿ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು.
‘ವಸುಂಧರೆ’ ಎನ್ನುವುದು ಭೂಮಿತಾಯಿಯ ಇನ್ನೊಂದು ಹೆಸರು ಎಂಬುದನ್ನರಿತೂ ನಾವು ಆ ಪದವನ್ನು ಬಳಸುವಾಗ ನಮ್ಮ ನೆಲ(ಭಾರತ)ಕ್ಕಷ್ಟೇ ಸೀಮಿತವಾಗಿಟ್ಟುಕೊಂಡು ನಮಗರಿವಿಲ್ಲದೆಯೇ ಬಳಸುತ್ತೇವೆ. ನಾನು, ನಾವು, ನನ್ನದು, ನನ್ನವರೆಂಬ ಅಂತಃಸ್ಥ ಪದಪದಗಳಲ್ಲಿಯೂ ನಮಗರಿವಿಲ್ಲದೆಯೇ ನಮ್ಮನ್ನು ಹೇಗೆ ಆವರಿಸಿಕೊಂಡಿರುತ್ತದೆಯಲ್ಲವೇ! ಇಂತಹ ಭಾವಗಳೇ ನಮ್ಮನ್ನೆಲ್ಲ ಕೆಲಕ್ಷಣಗಳಿಗಾದರೂ ಒಟ್ಟಿಗೆ ಕಟ್ಟಿಹಾಕಬಲ್ಲವು. ಒಗ್ಗಟ್ಟನ್ನ ಕಟ್ಟಿಕೊಡಬಲ್ಲವು.

ನಾಗರೀಕತೆ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆಯೆಂಬುದನ್ನು ವಿವರಿಸುತ್ತ ಬೇಂದ್ರೆಯವರ ‘ಚಿಗರಿಗಂಗಳ ಚೆಲುವೆಯ’ ಒಳಗನ್ನು ನಮ್ಮೊಳಗೆ ನೀವು ಬಿತ್ತಿದ ಪರಿಗೆ ವಂದನೆಗಳು.

sunaath said...

ಶಾಂತಲಾ,
ಬೈಬಲ್‌ನಲ್ಲಿ ಸಹ , Adamನು ನಿಷೇಧಿತ (ಜ್ಞಾನದ) ಹಣ್ಣನ್ನು ತಿಂದ ಬಳಿಕ, Garden of Eden ಹಾಳಾದದ್ದನ್ನು ಬಣ್ಣಿಸಿದ್ದಾರಲ್ಲವೆ?
ಕಾಳಿದಾಸನು ಬರೆದ 'ಅಭಿಜ್ಞಾನ ಶಾಕುಂತಲಮ್'ನಾಟಕವನ್ನು ಸಹ ನಾವು ಈ ದೃಷ್ಟಿಯಿಂದ ಪರಿಶೀಲಿಸಬಹುದು.
ಅರಣ್ಯದಲ್ಲಿ, ನಿಸರ್ಗದೊಡನೆ ಒಂದಾಗಿ ಬಾಳುತ್ತಿದ್ದ ಆಶ್ರಮವಾಸಿ ಶಕುಂತಲೆಯನ್ನು ನಗರದಲ್ಲಿ ಕೃತಕ ಜೀವನ ನಡೆಯಿಸುತ್ತಿದ್ದ, ನಾಗರಿಕ ಸಂಸ್ಥೆಯ ಪರಮ ಸಂಕೇತವಾದ ರಾಜಾ ದುಷ್ಯಂತನು ಮೋಸಗೊಳಿಸಿದ್ದರ ಕತೆಯೇ ಶಾಕುಂತಲಮ್.
ಕಾಳಿದಾಸನು ಈ ಮೋಸವನ್ನು ತೋರಗಡದೆ, ಅರಣ್ಯವಾಸಿಗಳ ಸಹಜ ಜೀವನವನ್ನು ಸರಳವಾಗಿ ವರ್ಣಿಸಿದ್ದಾನೆ. ಈ ನಿಸರ್ಗ ಸಾಮರಸ್ಯಕ್ಕೆ ಮಾರುಹೋದದ್ದರಿಂದಲೇ ಯುರೋಪಿಯನ್ ಸಾಹಿತಿಗಳು ಈ ನಾಟಕವನ್ನು ತಲೆಯ ಮೇಲೆ ಹೊತ್ತು ಕುಣಿದದ್ದಲ್ಲವೆ?
ಮಾಸ್ತಿಯವರೂ ಸಹ ತಮ್ಮ 'ಕಾಕನ ಕೋಟೆ'ನಾಟಕದಲ್ಲಿ ಅರಣ್ಯವಾಸಿಗಳ ಸಹಜ ಜೀವನ vs ನಗರಜೀವಿಗಳ ನಾಗರಿಕತೆಯನ್ನು ಸೂಕ್ಷ್ಮವಾಗಿ ಸೂಚಿಸಿದ್ದಾರೆ.
-ಸುನಾಥ ಕಾಕಾ

ಹರೀಶ್ ಕೇರ said...

ಸುನಾಥಜೀ, ಎಷ್ಟೊಂದು ಅಧ್ಯಯನಪೂರ್ವಕವಾದ ಲೇಖನ !
ಇಷ್ಟು ವಿಸ್ತೃತವಾಗಿ, ತಾಳ್ಮೆಯಿಂದ, ಬೇಂದ್ರೆಯವರ ಪದ್ಯಗಳನ್ನು ಆವಾಹಿಸಿಕೊಂಡು ಬರೆಯಲಿಕ್ಕೆ ನಾವೆಷ್ಟು ತಪಸ್ಸು ಮಾಡಬೇಕೋ ಏನೋ. ಇವನ್ನೆಲ್ಲ ಒಂದು ಸಂಕಲನವಾಗಿ ತಂದರೆ ತುಂಬ ಚೆನ್ನಾಗಿರುತ್ತದೆ.
- ಹರೀಶ್ ಕೇರ

sunaath said...

ಹರೀಶ,
ಧನ್ಯವಾದಗಳು. 'ಸಲ್ಲಾಪ'ವೇ ಒಂದು ಸಂಕಲನ!

Anonymous said...

ಪ್ರಿಯರೇ,
ಎಂದಿನಂತೆ ಬೇಂದ್ರೆಯವರ ಪದ್ಯ ಹಾಗೂ ನಿಮ್ಮ ವಿವರಣೆ ಎರಡೂ ಸಾದ್ಯಂತವಾಗಿವೆ.
ಆದರೆ ನನಗನಿಸಿದಂತೆ,ಈ ಕವಿತೆ ತನ್ನಷ್ಟಕ್ಕೆ ತಾನೇ ಬಿಚ್ಚಿಕೊಳ್ಳುತ್ತ ಹೋಗಬಲ್ಲದು.
ಅಷ್ಟೊಂದು ಸುಲಲಿತವಾಗಿದೆ.
ಚಿಕ್ಕದೊಂದು ಬಿನ್ನಹವಿದೆ:
ಏಕತಾನತೆಯಿಂದ ಹೊರಬರುವದಕ್ಕಾಗಿ ಕೊಂಚ ಕಾಲ ಶರೀಫ಼್ ರ ಹಾಡುಗಳ ಬಗ್ಗೆಯೂ
ನೋಡುವಿರಾ?
ಬಿದ್ದೀಯಬೆ ಮುದುಕಿ ಬಿದ್ದೀಯಬೇ...ಯಂತಹ ನಿಚ್ಚಳ ಹಾಡುಗಳಲ್ಲಿ ಇದುವರೆಗೂ
ನಮಗೆ ಗೊತ್ತಿಲ್ಲದಂತಹ ಹೊಳಹುಗಳು,ಗೂಢಗಳು ನಿಮಗೆ ಗೊತ್ತಿರಬಹುದು..
ಏನಂತೀರಿ?
-ರಾಘವೇಂದ್ರ ಜೋಶಿ.

sunaath said...

rj,
ನನಗೆ ಹೆಚ್ಚಿಗೆ ಗೊತ್ತಿದೆ ಎನ್ನುವದು ಸರಿಯಲ್ಲ. ಆದರೆ, ಇನ್ನು ಶರೀಫರ ಪದಗಳನ್ನೂ ಸಹ ಗಮನಿಸೋಣ.

Anonymous said...

ಸರ್,
ofcourse,ನನಗೆ ಹೆಚ್ಚಿಗೆ ಗೊತ್ತಿದೆ ಅಂತ ನಮ್ಮಷ್ಟಕ್ಕೆ ನಾವೇ ಅಂದುಕೊಳ್ಳುವದು ತಪ್ಪು.
ಆದರೆ,ಹಾಗೆಯೇ ’ಸಲ್ಲಾಪ’ವನ್ನ ಓದುವ ನನ್ನ ತಲೆಮಾರಿನ ಓದುಗರೆಲ್ಲರೂ
’ನಿಮಗೆ ಜಾಸ್ತಿ ಗೊತ್ತಿದೆ’ ಎನ್ನುವದನ್ನು ಬಹುಶಃ ತಿರಸ್ಕರಿಸಲಾರರು..
ನಿಮ್ಮ ಅನುಭವ,ಅನುಭೂತಿ ಮತ್ತು ಅಭ್ಯಾಸಗಳು ನಮಗೆ ದಾರಿದೀಪವಾದರೆ
ಒಳ್ಳೇಯದೇ ಅಲ್ಲವೇ?
ಗೊತ್ತಿಲ್ಲ ಅನ್ನುವದು ನಿಮ್ಮ ವಿನಯ ಅಷ್ಟೇ!
-ರಾಘವೇಂದ್ರ ಜೋಶಿ.

kanasu said...

kaakaa..
as always, beautiful explanation :) thank u soo much..

Anonymous said...

ಕವನದ ಸೊಬಗನ್ನು ಅಷ್ಟೇ ಅಧ್ಬುತ ವಿಶ್ಲೇಷಣೆಯೊ೦ದಿಗೆ ತೆರೆದಿಟ್ಟಿದ್ದೀರಿ.. ಧನ್ಯವಾದಗಳು.
~ಸುಷ್ಮ ಸಿ೦ಧು

Unknown said...

ಸುನಾಥರೆ,ನೀವು ಬೇಂದ್ರೆಯವರ ಕವನಗಳ ಬಗ್ಗೆ ಬರೆಯುವ ಬದಲು ಬೇರೆಯವರ ಬಗ್ಗ ಬರದರೆ ನಮಗ ಒದಲು ಇನ್ನೂ ಖುಶಿಯಾಗುತ್ತದ.

sunaath said...

ಸುಷ್ಮಾಸಿಂಧು,
ಸುಸ್ವಾಗತ ಹಾಗು ಧನ್ಯವಾದಗಳು.

sunaath said...

ವನಮಾಲಾ,
ತಥಾಸ್ತು.

ತೇಜಸ್ವಿನಿ ಹೆಗಡೆ said...

ಸುನಾಥ ಕಾಕಾ,

ತುಂಬಾ ಚೆನ್ನಾದ ವಿಷ್ಲೇಶಣೆ. ಅದು ಹೇಗೆ ನೀವು ಇಷ್ಟು ನಿರಾಳವಾಗಿ, ಸರಾಗವಾಗಿ ಅರ್ಥೈಸಿಕೊಂಡು ಬರೆಯುವಿರೆಂದು ತುಂಬಾ ಆಶ್ಚರ್ಯವಾಗುತ್ತಿದೆ.

ನೀವು ಶಾಂತಲಾ ಅವರಿಗೆ ಉತ್ತರಿಸುತ್ತಾ ದುಷ್ಯಂತ ಶಕುಂತಲೆಗೆ ಮೋಸಮಾಡಿದ ಎಂದಿರುವಿರಿ. ಆದರೆ ಅಲ್ಲಿ ನಡೆದದ್ದು ಮೋಸವಲ್ಲ. ಶಾಪ. ವಿಶ್ವಾಮಿತ್ರರ ಕೋಪಕ್ಕೆ ತುತ್ತಾದ ಶಾಕುಂತಲೆ ತನ್ನ ಗುರುತಿನುಂಗುರವನ್ನು ಕಳೆದುಕೊಂಡಿದ್ದರಿಂದ ತಾನೆ ಆತ ಆಕೆಯನ್ನು ಗುರುತಿಸದೇ ಹೋದದ್ದು. ಇತ್ತ ಗುರುತಿನುಂಗುರ ಕಳೆದಂತೆ ಅತ್ತ ಅವನ ಸ್ಮರಣಾ ಶಕ್ತಿಯೂ ಕಳೆಯುವುದೆಂದೂ ಶಾಪ ಹೇಳುತ್ತದೆ. ಹಾಗೆ ದುಷ್ಯಂತನಿಗೆ ಮೋಸ ಮಾಡಲೇ ಬೇಕೆಂಬ ಉದ್ದೇಶವಿದ್ದಿದ್ದರೆ ಉಂಗರವನ್ನೇ ಕೊಡುತ್ತಿರಲಿಲ್ಲ ಅಲ್ಲವೇ? ನಿಮ್ಮ ಅಭಿಪ್ರಾಯವೇನೆಂದು ತಿಳಿದುಕೊಳ್ಳಲು ಉತ್ಸುಕಳಾಗಿರುವೆ.

ಕಾಕಾ ನಾನೂ ಕಾತುರಳಾಗಿರುವೆ ನೀವು ಬೇರೆ ಕವಿಗಳ ಕವಿತೆಯ ಬಗ್ಗೆ ಬರೆಯುವದನ್ನು ಓದಲು... ಆದಷ್ಟು ಬೇಗ ಬರೆಯಬೇಕಾಗಿ ಕೋರಿಕೆ.

sunaath said...
This comment has been removed by the author.
sunaath said...

ತೇಜಸ್ವಿನಿ,
ಆಶ್ರಮವಾಸಿಗಳ ಅಕೃತ್ರಿಮ ಜೀವನ ಹಾಗು ನಿಸರ್ಗದೊಡನೆ ಅವರಿಗಿರುವ ಸಾಮರಸ್ಯದ ವರ್ಣನೆ, ಇವು ಕಾಳಿದಾಸನ ಮೂಲ ಉದ್ದೇಶಗಳು. ರಾಜಾ ದುಷ್ಯಂತನನ್ನು ಮೋಸಗಾರನೆಂದು ಚಿತ್ರಿಸುವದು ನಾಟಕದ ಕಥಾನಕಕ್ಕೆ ಹೊಂದುತ್ತಿರಲಿಲ್ಲ. ಅಲ್ಲದೆ, ರಾಜಾಶ್ರಯದಲ್ಲಿ ಬಾಳುವ ಕವಿಗೆ ಅದು ಸಾಧುವೂ ಅಲ್ಲ. ಈ ಕಾರಣಗಳಿಂದಾಗಿ ನಾಟಕದಲ್ಲಿ ಋಷಿ-ಶಾಪದ ಕತೆಯನ್ನು ಕಟ್ಟಲಾಗಿದೆ.
ಈ ಕತೆಯು ಮಹಾಭಾರತದಲ್ಲೋ ಅಥವಾ ಬೇರಾವದೋ ಪುರಾಣದಲ್ಲೋ ಬರುತ್ತಿದ್ದು ಅಲ್ಲಿ ಋಷಿ-ಶಾಪದ ಉಲ್ಲೇಖವಿಲ್ಲವೆಂದು ಕೇಳಿದ್ದೇನೆ.
-ಕಾಕಾ

ಚಿತ್ರಾ said...

ಸುನಾಥ ಕಾಕಾ,
( ಕಾಕಾ ಎನ್ನುವ ಸಲಿಗೆ ತೆಗೆದುಕೊಳ್ಳಬಹುದೆ? )

ಬೇಂದ್ರೆಯವರ ಕವನಗಳನ್ನು ನೀವು ಬಿಡಿಸಿಡುವ ಪರಿಗೆ ಪ್ರತಿಸಲವೂ ಬೆರಗಾಗುತ್ತೇನೆ.
" ಸಲ್ಲಾಪ" ವನ್ನು ತೆರೆದಾಗ ಕನ್ನಡ ಸಾಹಿತ್ಯದ ಕ್ಲಾಸಿನಲ್ಲಿ ಕುಳಿತು ಒಬ್ಬ ಅತ್ತ್ಯುತ್ತಮ ಅಧ್ಯಾಪಕರಿಂದ ಪಾಠ ಕೇಳಿದಂತಾಗುತ್ತದೆ.
ತುಂಬಾ ತುಂಬಾ ಧನ್ಯವಾದಗಳು.
(ನನ್ನ ಬ್ಲಾಗಿಗೂ ಆಗೀಗ ಬರುತ್ತಿರಿ.)

sunaath said...

ಚಿತ್ರಾ,
ನಾನು ನಿಮ್ಮೆಲ್ಲರ ಕಾಕಾ ಹೌದು.
ಕಾಕಾ ಎನ್ನಲು ಯಾವುದೇ hesitation ಬೇಡ.
-ಸುನಾಥ ಕಾಕಾ

Siddaramu KS said...

ತುಂಬ ಸೊಗಸಾಗಿ ವಿಶ್ಲೇಸಿದ್ದೀರಾ. ಮತ್ತಷ್ಟು ಅಧ್ಯಯನಕ್ಕೆ ಪ್ರೇರಣೆಯಾಯಿತು. ಧನ್ಯವಾದಗಳು.
- Siddaramu KS

sunaath said...

ಸಿದ್ದರಾಮುರವರೆ, ಸ್ಪಂದನೆಗಾಗಿ ಅನೇಕ ಧನ್ಯವಾದಗಳು.