Friday, January 30, 2009

Slumdog millionaire

Slumdog millionaire ಚಲನಚಿತ್ರವು ಕೊಳಚೆ ಪ್ರದೇಶದ ಹುಡುಗನೊಬ್ಬನು ಕೋಟ್ಯಾಧಿಪತಿಯಾಗುವ ಕತೆಯನ್ನು ಹೊಂದಿದೆ.
ಚಲನಚಿತ್ರಗಳಲ್ಲಿ ಕೊಳಚೆನಿವಾಸಿಯು ಕೋಟ್ಯಾಧಿಪತಿಯಾಗಬೇಕಾದರೆ ಅದಕ್ಕೆ ಎರಡು ಮಾರ್ಗಗಳಿವೆ.
ಒಂದು ಮಾರ್ಗವೆಂದರೆ, the hard criminal way.
ಈ ತರಹದ ಅನೇಕ crime movieಗಳು Hollywoodನಲ್ಲಿ ಹಾಗೂ Bollywoodನಲ್ಲಿ ನಿರ್ಮಾಣಗೊಂಡಿವೆ ; ಜನಪ್ರಿಯತೆಯನ್ನೂ ಪಡೆದಿವೆ.
ಉದಾಹರಣೆಗೆ ಹಿಂದೀ ಚಲನಚಿತ್ರ: ‘ದೀವಾರ’.
ಅಮಿತಾಭ ಬಚ್ಚನ್ ಈ ಚಿತ್ರದಲ್ಲಿ ಮಾಫಿಯಾ ಹೀರೊ.
ಈ ಚಲನಚಿತ್ರವು ಬಚ್ಚನ್ನನಿಗೆ ತುಂಬಾ ಜನಪ್ರಿಯತೆಯನ್ನು ತಂದು ಕೊಟ್ಟಿತು.

ಕೋಟ್ಯಾಧಿಪತಿಯಾಗಲು ಎರಡನೆಯ ಮಾರ್ಗವೆಂದರೆ, ಅದೃಷ್ಟದ ನೆರವು.
ಮೊದಲನೆಯ ವರ್ಗದ ಚಿತ್ರಗಳಲ್ಲಿ ಅಪರಾಧಿ ಜಗತ್ತಿನ ಕಟು ವಾಸ್ತವತೆಯನ್ನು ತೋರಿಸಬೇಕಾಗುತ್ತದೆ. ಕ್ರೌರ್ಯವನ್ನು ತೋರಿಸಬೇಕಾಗುತ್ತದೆ.
ಅನೇಕ ನಿರ್ದೇಶಕರು ತುಂಬಾ ಖುಶಿಯಿಂದ ಇಂತಹ ನಿರ್ದೇಶನ ಮಾಡಿದ್ದಾರೆ.
ಆದರೆ ಎರಡನೆಯ ವರ್ಗದ ಚಲನಚಿತ್ರಗಳ ನಿರ್ದೇಶನ ತುಂಬಾ ಕಷ್ಟದ್ದು.
ಇಂತಹ ಚಲನಚಿತ್ರಗಳಲ್ಲಿ ಹಗಲುಗನಸಿನ, ತೇಲುಗಣ್ಣಿನ ನಿರ್ದೇಶನ ಬೇಕು. ದೃಶ್ಯಗಳು soft ಆಗಿರಬೇಕು.
ಇಂತಹ ಚಲನಚಿತ್ರಗಳೂ ಸಹ ನಿರ್ಮಾಣವಾಗಿವೆ.
ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಕನ್ನಡದ್ದೇ ಆದ ಚಲನಚಿತ್ರ : ‘ಮೇಯರ ಮುತ್ತಣ್ಣ’.
ಸಾಮಾನ್ಯ ರೈತನೊಬ್ಬ ಹಳ್ಳಿಯಿಂದ ಪಟ್ಟಣಕ್ಕೆ ಬಂದು, ಪ್ರಾಮಾಣಿಕ ಪರಿಶ್ರಮದಿಂದ ಮೇಲೆರುತ್ತ ಕೊನೆಗೆ ಮೇಯರ ಆದ ಕತೆ ಇಲ್ಲಿದೆ.

Slumdog millionaire ಎರಡನೆಯ ವರ್ಗಕ್ಕೆ ಸೇರಬೇಕಾದ ಚಲನಚಿತ್ರ.
ಕೊಳಚೆಪ್ರದೇಶದ ಹುಡುಗನೊಬ್ಬ, ಅಪರಾಧಿ ಜಗತ್ತಿನಿಂದ ತಪ್ಪಿಸಿಕೊಂಡು, ಚಾಯವಾಲಾ ಕೆಲಸ ಮಾಡುತ್ತಲೇ “ ಕೌನ ಬನೇಗಾ ಕರೋಡಪತಿ ” ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ.
ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ, ಕರೋಡಪತಿ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ.
ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಸಂದರ್ಭದಲ್ಲಿ ಈತನ ಹಳೆಯ ಇತಿಹಾಸದ ಯಾತನಾಮಯ ಘಟನೆಗಳು ಈತನಿಗೆ ಉತ್ತರವನ್ನು ಹೇಳಲು ಸಹಾಯಕವಾಗುತ್ತವೆ.
ಇಂತಹ ಘಟನೆಗಳನ್ನು ಚಿತ್ರಿಸುವಾಗ, ಈ ಚಿತ್ರದ ನಿರ್ದೇಶಕರು ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸುವ ಬದಲು, ವಾಸ್ತವವಾದಿ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ.
ಆದರೆ criminal ಆಗಬೇಕಾದ ಹುಡುಗನು ಪ್ರಾಮಾಣಿಕನಾಗಿದ್ದಕ್ಕೆ ಇಲ್ಲಿ ಯಾವುದೇ ಸಮರ್ಥನೆ ಸಿಗುವದಿಲ್ಲ.
ಇಲ್ಲಿ ಕತೆಯೇ ಅವಾಸ್ತವವಾಗಿರುವದರಿಂದ ವಾಸ್ತವಾದಿ ನಿರ್ದೇಶನವು ನಿರರ್ಥಕವಾಗಿದೆ.
ಇದೇ ಕತೆಯನ್ನೇ ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

ಚಿತ್ರಜಗತ್ತಿನಲ್ಲಿ ಇಲ್ಲಿಯವರೆಗೆ ಅನೇಕ crime movies ಬಂದಿವೆ.
Alfred Hitchcock ನಿರ್ದೇಶಿಸಿದ ‘psycho’ ಒಂದು ಅತ್ಯುತ್ತಮ crime film. ಈ ಚಿತ್ರದಲ್ಲಿ ಅಪರಾಧಕ್ಕಿಂತ ಹೆಚ್ಚಾಗಿ ಆಪರಾಧಿಯ ಮನೋವಿಶ್ಲೇಷಣೆ ಮಹತ್ವದ್ದಾಗಿದೆ.
ನಿಜ ಹೇಳಬೇಕೆಂದರೆ, ಕುರೊಸಾವೊ ನಿರ್ದೇಶಿಸಿದ ‘ರಾಶೊಮನ್’ ಕೂಡ ಒಂದು ರೀತಿಯಲ್ಲಿ crime film ಎಂದೇ ಹೇಳಬೇಕು.
ಏಕೆಂದರೆ ಇಲ್ಲಿಯೂ ಸಹ ಒಂದು ಅಪರಾಧದ ಸುತ್ತಲೂ ಕತೆ ಹೆಣೆಯಲಾಗಿದೆ.
ಆದರೆ ಈ ಚಿತ್ರದಲ್ಲಿ ಮಹತ್ವವಿರುವದು ಸತ್ಯದರ್ಶನಕ್ಕೆ ಹಾಗೂ ಮಾನವೀಯ ಅನುಕಂಪಕ್ಕೆ.
ಹೀಗಾಗಿ ಈ ಚಿತ್ರವು ಚಿತ್ರಜಗತ್ತಿನ ಶ್ರೇಷ್ಠ ಚಿತ್ರಗಳಲ್ಲಿಯೇ ಅಗ್ರಗಣ್ಯವಾಗಿದೆ.

Slumdog millionaire ಚಿತ್ರದಲ್ಲಿ ಯಾವುದೇ ಸಮಸ್ಯೆಯ ಅಧ್ಯಯನವಿಲ್ಲ,
ಯಾವುದೇ ಮಾನವೀಯ ಅನುಕಂಪವಿಲ್ಲ ಹಾಗೂ ಭಾರತವನ್ನೇ ಪ್ರತಿನಿಧಿಸುವ ಯಥಾರ್ಥತೆ (documentary character) ಇಲ್ಲ.

ಮುಂಬಯಿಯಲ್ಲಿ ಜರುಗಿದಂತೆ ಈ ಚಿತ್ರದ ಕತೆಯನ್ನು ತೋರಿಸಲಾಗಿದೆ.
ಆದರೆ ಇದು ಯಾವ ದೇಶದಲ್ಲಾದರೂ ನಡೆಯಬಹುದಾದಂತಹ ಘಟನಾವಳಿ.
(ಮುಂಬಯಿ ನಗರಕ್ಕೆ ವಿಶಿಷ್ಟವಾದ crime racket ನೋಡಬೇಕೆಂದರೆ, ಭಂಡಾರಕರರು ನಿರ್ದೇಶಿಸಿದ Traffic Signal ಚಲನಚಿತ್ರವನ್ನು ನೋಡಬೇಕು.)
ಈ ಚಿತ್ರದ ಕತೆಯ ದೇಹ ಮಾತ್ರ ಭಾರತೀಯ , ಪ್ರಾಣ ಭಾರತೀಯವಲ್ಲ , ಬಹುಶ: ಯಾವ ದೇಶದ್ದೂ ಅಲ್ಲ.
ಹೀಗಾಗಿ ಈ ಚಿತ್ರವು ಒಂದು stuffed toy ತರಹ ಕಾಣುತ್ತದೆ, ನಿರ್ಜೀವ ಬೊಂಬೆಯಂತೆ ಕಾಣುತ್ತದೆ.

Slumdog millionaire ಚಿತ್ರವು ಭಾರತದಲ್ಲಿಯ ದಾರಿದ್ರ್ಯ ಹಾಗು ಅಪರಾಧವನ್ನಷ್ಟೇ ತೋರಿಸುತ್ತದೆ. ಆದುದರಿಂದ ಇದು ಒಳ್ಳೆಯ ಚಿತ್ರವಲ್ಲ ಎಂದು ಕೆಲವರು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ದಾರಿದ್ರ್ಯ ಹಾಗೂ ಅಪರಾಧವನ್ನು ತೋರಿಸುವ ಒಂದೇ ಕಾರಣದಿಂದಲೇ ಯಾವ ಚಿತ್ರವೂ ಕೆಟ್ಟ ಚಿತ್ರವಾಗುವದಿಲ್ಲ.
ಸತ್ಯಜಿತ ರಾಯರ ಮೊದಲ ಚಿತ್ರ ‘ಪಥೇರ ಪಾಂಚಾಲಿ’ಗೆ Cannes Film Festivalದಲ್ಲಿ ಅತ್ಯುತ್ತಮ ಮಾನವೀಯ ದಾಖಲೆ ಪ್ರಶಸ್ತಿ ಲಭಿಸಿತು.
ಈ ಚಿತ್ರದಲ್ಲಿ ಬಂಗಾಲದ ಹಳ್ಳಿ ಹಾಗು ಪಟ್ಟಣಗಳಲ್ಲಿಯ ಬಡತನದ ಚಿತ್ರಣವಿದೆ.
ಆದರೆ, ಈ ಚಿತ್ರದ ಉದ್ದೇಶವು ಭಾರತದ ಬದುಕನ್ನು ಹಾಗು ಸಂಸ್ಕೃತಿಯನ್ನು ಚಿತ್ರಿಸುವದಾಗಿದೆಯೇ ಹೊರತು ಬಡತನವನ್ನು ಚಿತ್ರಿಸುವದಲ್ಲ.
ಭಾರತದಲ್ಲಿ ಆರ್ಥಿಕ ಬಡತನವು ಮೊದಲೂ ಇತ್ತು, ಈಗಲೂ ಇದೆ.
ಆದರೆ ಭಾರತವು ಸಂಸ್ಕೃತಿಯಲ್ಲಿ ಎಂದೂ ಬಡವಾಗಿಲ್ಲ.
ಕಾಡುಮೇಡುಗಳಿಂದ ತುಂಬಿದ ಬಡ ಹಳ್ಳಿಯೊಂದರಲ್ಲಿ ಪರಿಸರದೊಡನೆ ಒಂದಾದ ಬಂಗಾಲಿ ಕುಟುಂಬವು ಹೇಗೆ ಜೀವಿಸುತ್ತದೆ ಎನ್ನುವದನ್ನು ಸತ್ಯಜಿತ ರಾಯ ತುಂಬ ತಾಳ್ಮೆಯಿಂದ ಚಿತ್ರಿಸಿದ್ದಾರೆ.

ಕ್ರೌರ್ಯ ಹಾಗು ಅಪರಾಧವನ್ನು ತೋರಿಸುವ ಉತ್ತಮ ಹಿಂದೀ ಚಿತ್ರವೆಂದರೆ ‘ಸಲಾಮ್ ಬಾಂಬೇ’.
ಈ ಚಿತ್ರಕ್ಕೂ ಸಹ Cannes film festivalನಲ್ಲಿ Golden Camera ಪ್ರಶಸ್ತಿ ದೊರಕಿದೆ.
ಮುಂಬಯಿ ನಗರದಲ್ಲಿಯ crime racketಅನ್ನು ಈ ಚಿತ್ರದಲ್ಲಿ ವಿಸ್ತಾರವಾಗಿ ತೋರಿಸಲಾಗಿದೆ.
ಈ ಚಿತ್ರದಲ್ಲಿ ನಾನಾ ಪಾಟೇಕರನ ಮೂಲಕ ಬಿಂಬಿಸಲಾದ ಕ್ರೂರ ಮನೋಸ್ಥಿತಿಯು ಭಯಾನಕವಾಗಿದೆ.
ಬಡತನವನ್ನು ಚಿತ್ರಿಸುವ ‘ಪಥೇರ ಪಾಂಚಾಲಿ’ ಹಾಗೂ ಅಪರಾಧವನ್ನು ಚಿತ್ರಿಸುವ ‘ಸಲಾಮ್ ಬಾಂಬೇ’ ಚಿತ್ರಗಳಲ್ಲಿ ಜೀವನದ ವಾಸ್ತವತೆಯ ಚಿತ್ರಣವಿದೆ.
ಆದರೆ Slumdog millionaire ಚಿತ್ರದಲ್ಲಿ ವಾಸ್ತವತೆಯ ಬದಲು Sensationalism ಬಂದಿದೆ.
ಅಂತಹ ಘಟನೆಗಳಲ್ಲಿಯೆ ಅತ್ಯಂತ ಕೊಳಕು ಘಟನೆ ಎಂದರೆ ಸಾರ್ವಜನಿಕ ಸಂಡಾಸಕ್ಕೆ ಹೋದ ಹುಡುಗನು, ಅಮಿತಾಭ ಬಚ್ಚನ್ನನನ್ನು ನೋಡಲು ಹೊಲಸಿನಲ್ಲಿ ಜಿಗಿಯುವ ಘಟನೆ.
ಪ್ರೇಕ್ಷಕರನ್ನು ವಿನೋದಿಸಲೆಂದು ನಿರ್ದೇಶಕರು ಇಂತಹ ದೃಶ್ಯವನ್ನು ಸೃಷ್ಟಿಸಿದರಲ್ಲ ಎಂದು ದುಃಖವಾಗುತ್ತದೆ.

Slumdog millionaire ಚಿತ್ರದ ಒಂದೇ ಒಳ್ಳೆಯ ಗುಣವೆಂದರೆ ಅಚ್ಚುಕಟ್ಟಾದ ನಿರೂಪಣೆ.
ಅಚ್ಚುಕಟ್ಟಾದ ನಿರೂಪಣೆ,Sensationalism ಹಾಗೂ ವಿದೇಶಿ ನಿರ್ದೇಶಕ ಎನ್ನುವ ಮೂರು ಕಾರಣಗಳಿಂದ ಈ ordinary ಚಲನಚಿತ್ರವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುತ್ತ ನಡೆದಿದೆ.

40 comments:

ಸುಪ್ತದೀಪ್ತಿ suptadeepti said...

ಕಾಕಾ, ಈ ಚಿತ್ರ ನನಗಂತೂ ಇಷ್ಟ ಆಗಿದೆ.
ನಿಜ, ಪುಟ್ಟ ಜಮಾಲ್ ಹೊಲಸಲ್ಲಿ ಬಿದ್ದು, ಎದ್ದು ಓಡಿಬರುವ ಸನ್ನಿವೇಶ ಅಗತ್ಯವಿರಲಿಲ್ಲ. ಅದರಲ್ಲಿ ವಿನೋದವಿಲ್ಲ, ಅಸಹ್ಯವಿದೆ. ಆದರೆ, ಒಬ್ಬ ಪುಟ್ಟ ರಿವ್ಯೂವರ್ ಪ್ರಕಾರ, ಅದೇ ಜಮಾಲ್ ಪಾತ್ರದ ಗಟ್ಟಿತನದ ಅಡಿಗಲ್ಲು. ಆ ಸನ್ನಿವೇಶ ಇಲ್ಲದಿದ್ದಲ್ಲಿ ಆ ಪಾತ್ರ ಅಷ್ಟು ಅಂತಃಸತ್ವದ ಪಾತ್ರವಾಗಿ ಮೂಡುತ್ತಲೇ ಇರಲಿಲ್ಲ ಅಂದಿದೆ ಆ ಹದಿಹೃದಯ. ಕೇಳಿದ ಮೇಲೆ ಹೌದೆನ್ನಿಸಿದೆ ನನಗೂ. ಆದರೂ ಅಸಹ್ಯ ಬೇಡವಾಗಿತ್ತು ಅನ್ನುವ ನನ್ನ ಅನಿಸಿಕೆ ಸಡಿಲಾಗಿಲ್ಲ, ಬಿಡಿ.

ಕೆ.ಎನ್. ಪರಾಂಜಪೆ said...

ಸರ್,
ಈ ಚಲನಚಿತ್ರ ಈಗ Talk of the Town ಆಗಿದೆ. ಆಸ್ಕರ್ ಪ್ರಶಸ್ತಿಯ ಹೊಸ್ತಿಲಲ್ಲಿರುವುದರಿ೦ದ
ಬಹುಚರ್ಚಿತ ಚಿತ್ರವು ಹೌದು. ನಿಮ್ಮ ವಿಮರ್ಶೆ ಚೆನ್ನಾಗಿದೆ.

sunaath said...

ಜ್ಯೋತಿ,
ವಿಭಿನ್ನ ದೃಷ್ಟಿಕೋನಗಳಿಗೆ ಸ್ವಾಗತ.
ಜಮಾಲನ ಪಾತ್ರದ ಬೆಳವಣಿಗೆಯ ದೃಷ್ಟಿಯಿಂದ ಆ ದೃಶ್ಯವು ಸರಿಯಾಗಿರಬಹುದು. ಅದರೆ, ಆ ಪುಟ್ಟ ಪಾತ್ರಧಾರಿಯು ಅನುಭವಿಸಿರಬಹುದಾದ ಸಂಕಟವು ನನಗೆ ಸಹ್ಯವಾಗಲಿಲ್ಲ.

sunaath said...

ಪರಾಂಜಪೆಯವರೆ,
ಚಿತ್ರದ ಬಗೆಗೆ ನಿಮ್ಮ ಅಭಿಪ್ರಾಯವೇನು?

ಕೆ.ಎನ್. ಪರಾಂಜಪೆ said...

ಸರ್,
ನಿಜ ಹೇಳಬೇಕೆ೦ದರೆ ನಾನಿನ್ನೂ ಅ ಚಿತ್ರವನ್ನು ನೋಡಿಲ್ಲ.
ವಿಮರ್ಶೆಗಳನ್ನು ಓದಿ ನೋಡಲೇಬೇಕೆ೦ಬ ಉತ್ಸುಕತೆ
ಯಲ್ಲಿದ್ದೇನೆ.

shivu.k said...

ಸುನಾಥ್ ಸಾರ್,

ಈ ಚಿತ್ರದ ಬಗ್ಗೆ ಎಲ್ಲರೂ ಬರೆದಿದ್ದನ್ನು ಓದಿ ಓದಿ ನನಗಿನ್ನೂ ಸಿನಿಮಾ ನೋಡುವ ಆಸೆಯೇ ಇಲ್ಲವಾಗಿದೆ.....

ಮುಂದೆ ನೋಡಬೇಕೋ ಬೇಡವೋ ತಿಳಿಯದು.....ನನಗನ್ನಿಸುತ್ತೆ....ನೀವು ಸೇರಿದಂತೆ ನೂರಾರು ಜನರು ಬರೆದಿರುವ ಪ್ರಕಾರ ಎಲ್ಲಾ ವಿಮರ್ಶೆಗಳು ಒಂದೋ ಹೊಗಳಿಕೆ ಅಥವ ತೆಗಳಿಕೆ..ಇದ್ದೇ ಇರುತ್ತವೆ....ಸಿನಿಮಾವನ್ನು ಎಲ್ಲಾ ದೃಷ್ಟಿಯಿಂದಲೂ ಈ ರೀತಿ ತಪ್ಪು ಒಪ್ಪುಗಳನ್ನು ವಿಮರ್ಶಿಸುತ್ತಾ ಬಂದರೆ ಸಿನಿಮಾ ಅನ್ನುವ ಮನರಂಜನ ಮಾದ್ಯಮವನ್ನು ನಾವೆಲ್ಲಾ ಬುದ್ದಿವಂತರಂತೆ ನೋಡುತ್ತಾ....ನಿಜವಾದ ಮನರಂಜನಾ ಅರ್ಥವನ್ನು ಮನಃಪೂರ್ವಕವಾಗಿ ಅನುಭವಿಸದೇ ಕಳೆದುಹೋಗುತ್ತಿದ್ದೇವೇನೋ ಅನಿಸುತ್ತಿದೆ.....

ಪೂರ್ವಗ್ರಹ ಪೀಡಿತನಾಗದೆ....ಯಾವುದೇ ಮಾದ್ಯಮವನ್ನು ನೋಡಬೇಕೆನ್ನುವುದು...ನನ್ನ ಭಾವನೆ.

ಇತ್ತೀಚೆಗೆ ನಮ್ಮೆಲ್ಲರ ಬುದ್ದಿಮಟ್ಟವೂ ಹೆಚ್ಚಾಯಿತೇನೋ.....ಅದಕ್ಕೆ ನಮ್ಮ ನೋಡುಗಾರಿಕೆಯೆಲ್ಲಾ ವಿಮರ್ಶಾತ್ಮಕ ದೃಷಿಗೆ ತಿರುಗಿಬಿಟ್ಟಿದೆ....ನಮ್ಮ ನೋಡುವ ದೃಷ್ಟಿಯಲ್ಲಿ ಮಗುವಿನಲ್ಲಿನ ಕುತೂಹಲ....ಕಾತುರ ಮಾಯಾವಾಗಿ...ನಿಜವಾದ ಅಚ್ಚರಿ ನಮಗಿಲ್ಲವಾಗಿದೆ....ಏಕೆ ಹೀಗೆ ಆಗಿದೆಯೋ ನಾ ಕಾಣೆ... ಇದು ಎಲ್ಲಿಯವರೆಗೆ ಹೋಗುತ್ತೋ ನೋಡೋಣ....ಇದೆಲ್ಲಾ ವಿಮರ್ಶೆಗಳು ಮುಗಿದ ಮೇಲೆ ಸಿನಿಮಾ ನೋಡುತ್ತೇನೆ......ಆಗ ಮತ್ತೆ ಬರುತ್ತೇನೆ....ಥ್ಯಾಂಕ್ಸ್....

shivu.k said...

ಸುನಾಥ್ ಸಾರ್,

ತುಂಬಾ ನೇರವಾಗಿ ಬರೆದಿದ್ದೇನೆ ಅಂಥ ಬೇಸರಿಸಬೇಡಿ....ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ...

ಅಂತರ್ವಾಣಿ said...

ಸುನಾಥಂಕಲ್,
review ನೇರವಾಗಿ ಇರೋ ಹಾಗೆ ಬರೆದಂತೆ ತೋರುತ್ತದೆ.

ಇದು ಪ್ರಶಸ್ತಿ ಸಿಗುವ ಕಾರಣ ನಿಜ ಅನಿಸುತ್ತೆ.

sunaath said...

ಶಿವು,
ನೀವು ನೇರವಾಗಿ ಬರೆದಿದ್ದಕ್ಕಾಗಿ ನನಗೆ ಖುಶಿಯೇ ಆಗುತ್ತಿದೆ.
ಈ ಚಿತ್ರವನ್ನು ನೋಡಿದಾಗ ನಿಮಗೆ ಖಂಡಿತವಾಗಿಯೂ ಮನರಂಜನೆ ದೊರೆಯುತ್ತದೆ. ಯಾಕೆಂದರೆ ಇದೊಂದು well-produced movie.
ಹಾಗೆ, ನೋಡಿದ ಬಳಿಕ ನಿಮ್ಮ ಪ್ರತಿಕ್ರಿಯೆ ಹೇಳಿ.

sunaath said...

ಜಯಶಂಕರ,
ಧನ್ಯವಾದಗಳು.

ಚಂದ್ರಕಾಂತ ಎಸ್ said...

ಸುನಾಥ್ ಸರ್

ಹೇಮಾಶ್ರೀಯವರು ಬರೆದ ಈ ಚಿತ್ರದ ವಿಮರ್ಶೆಯನ್ನು ನಾನು ಮೊಟ್ಟಮೊದಲು ನೋಡಿದ ಕೂಡಲೇ ಚಿತ್ರವನ್ನು download ಮಾಡಿಕೊಂಡು ನೋಡಿದೆ. ನನ್ನ ಮನದಲ್ಲಿ ರೂಪುಗೊಂಡ ಅಭಿಪ್ರಾಯಗಳನ್ನು ಬರಹದಲ್ಲಿ ಇಳಿಸಬೇಕೆನ್ನುವಷ್ಟರಲ್ಲಿ ಅದಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಬಂದು ವಿಮರ್ಶೆಗಳ ಬಿರುಮಳೆಯೂ ಆಯಿತು. ಮೊದಮೊದಲಿಗೆ ಪತ್ರಿಕೆಗಳ ಅಭಿಪ್ರಾಯ ಒಮ್ಮುಖವಾದದ್ದು ಅನಿಸಿ ಸಿಟ್ಟೂ ಬಂದಿತು.ಇಂತಹ ಸಂದರ್ಭದಲ್ಲಿ ಸುದರ್ಶನ್ ಬೇಳುರರ ವಿಶ್ಲೇಷಣೆ ( ಕನ್ನಡಪ್ರಭದಲ್ಲಿ) ಸ್ವಲ್ಪಮಟ್ಟಿಗೆ ನನ್ನ ಅನಿಸಿಕೆಗೆ ಹೊಂದುವ ಬರಹ ಅನ್ನಿಸಿತು

ಅಷ್ಟರಲ್ಲಿ ನಿಮ್ಮ ಬರಹ ಓದಿ ನನಗೆಷ್ಟು ಸಂತಸವಾಗಿದೆಯೆಂದರೆ - ನೀವು ಪಥೇರ್ ಪಾಂಚಾಲಿಯ ಬಗ್ಗೆ ಹೇಳಿದ ಮಾತುಗಳು, ರಾಷೊಮನ್ ನ ಚಿತ್ರದ ವಿಮರ್ಶೆ- ಹೇಳಲಸಾಧ್ಯ. ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳ್ಳು ನೂರಕ್ಕೆ ನೂರು ನನ್ನ ಅಭಿಪ್ರಾಯಗಳೇ ಆಗಿವೆ. ಬಹಳ ಚೆನ್ನಾಗಿ ವಿಮರ್ಶಿಸಿರುವಿರಿ. ಸಾಧ್ಯವಾದರೆ http://saangatya.wordpress.blogspot.comಗೆ ಕಳುಹಿಸಿ.

ಜಮಾಲನು ಹೊಲಸಲ್ಲಿ ಬಿದ್ದ ದೃಶ್ಯ ಚಿತ್ರಕ್ಕೆ ಖಂಡಿತ ಅನವಶ್ಯಕ.

sunaath said...

ಚಂದ್ರಕಾಂತಾ,
"ಈ ಚಲನಚಿತ್ರವು ರೋಚಕ ಚಲನಚಿತ್ರವಾಗಬಹುದೇ ಹೊರತು, ಉತ್ತಮ ಚಿತ್ರವಾಗಲಾರದು."----ಇದು ನಮ್ಮಿಬ್ಬರ ಅಭಿಪ್ರಾಯ ಅನ್ನಿಸುತ್ತದೆ.
ಉತ್ತಮ ಚಿತ್ರಗಳಲ್ಲಿಯ human element ಇಲ್ಲಿ ಇಲ್ಲವಾಗಿದೆ.

Keshav.Kulkarni said...

ಸುನಾಥ,
"ಸ್ಲಂ"ಬಗ್ಗೆ ನಾನು ಇದುವರೆಗೂ ಓದಿರುವ ನೂರಾರು ಬರಹಗಳಿಗಿಂತ ನಿಮ್ಮ ದೃಷ್ಟಿಕೋನ ಇನ್ನೊಂದು ಮಗ್ಗುಲಿನದು! "ರೋಶೋಮಾನ್" ನೆನಪಿಸಿದ್ದಕ್ಕೆ ಧನ್ಯವಾದಗಳು!
-ಕೇಶವ (www.kannada-nudi.blogspot.com)

sunaath said...

ಕೇಶವ,
ಧನ್ಯವಾದಗಳು.
'ರೋಶೋಮನ್', 'ಸೆವೆನ್ ಸಮುರಾಯಿ',
'Children of Heaven', 'Colours of Paradise' ಮೊದಲಾದ ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸಲು ನನಗೆ ಸಾಧ್ಯವಾದದ್ದು 'ಅಮರ'ರ ಕೃಪೆಯಿಂದ.
ಆದುದರಿಂದ ಈ creditಅನ್ನು ನಾನು ಅವರಿಗೇ ಸಲ್ಲಿಸುತ್ತಿದ್ದೇನೆ.

ತೇಜಸ್ವಿನಿ ಹೆಗಡೆ said...

ಕಾಕಾ,

ನಾನಿನ್ನೂ ಈ ಚಿತ್ರವನ್ನು ನೋಡಿಲ್ಲ. ಒಮ್ಮೆ ನೋಡಿಯೇ ಇಲ್ಲಿ ಸರಿಯಾಗಿ ಪ್ರತಿಕ್ರಿಯಿಸುವೆ. ಆಗದೇ? ನೋಡುವ ಕುತೂಹಲವಂತೂ ಇದೆ.

sunaath said...

ತೇಜಸ್ವಿನಿ,
ಈ ಚಿತ್ರವನ್ನು ನೋಡುವದರಿಂದ ವಿದೇಶಿ ನಿರ್ದೇಶಕನೊಬ್ಬನು
ಭಾರತೀಯ ಬದುಕನ್ನು ತಿಳಿದುಕೊಳ್ಳುವ ಹಾಗೂ ನಿರ್ದೇಶಿಸುವ ರೀತಿ ಅರ್ಥವಾಗುತ್ತದೆ. ಆದುದರಿಂದ ಜೊತೆಜೊತೆಗೇ ಭಂಡಾರಕರ
ನಿರ್ದೇಶನದ Traffic signal ಸಹ ನೋಡಬೇಕು.
ಈ ಎರಡೂ ಚಲನಚಿತ್ರಗಳನ್ನು ತುಲನಾತ್ಮವಾಗಿ ವೀಕ್ಷಿಸುವದರಿಂದ
ಲಾಭವಿದೆ.

Ittigecement said...

ಸುನಾಥ ಸರ್...

ನಾನು ಸಿನೇಮ ನೋಡಿಯೇ ಪ್ರತಿಕ್ರಿಯೆ ಬರೆಯೋಣ ಅನಿಸಿತ್ತು..

ನೋಡಿದೆ...

ತುಂಬಾ.. ಚೆನ್ನಾಗಿದೆ..

ಇದಕ್ಕೆ ಬರುವ "ವಿದೇಶಿ" ಪ್ರಶಸ್ತಿ ಬಗೆಗೆ ನನ್ನ ಆಕ್ಷೇಪಣೆಯಿದೆ...

ಇದಕ್ಕಿಂತ ಒಳ್ಳೆಯ ಹಲವಾರು ಸಿನೇಮ ನಮ್ಮಲ್ಲಿದೆ...

ನಮ್ಮಲ್ಲಿಯ ಬಡತನ ಬಗೆಗೆ..

ಬಡತನ ನಮ್ಮಲ್ಲಿದೆ .. ತೋರಿಸಿದ್ದಾನೆ...

ಅದರಿಂದ ನಮ್ಮ ಗೌರವಕ್ಕೇನು ನಷ್ಟ..?

ನಿಮ್ಮ ವಿಮರ್ಶೆ ಬಹಳ ಚೆನ್ನಾಗಿತ್ತು..

ನನಗೆ ಸಿನೇಮಾ ನೋಡುವಂತೆ ಮಾಡಿತು...

ಧನ್ಯವಾದಗಳು..

sunaath said...

ಪ್ರಕಾಶ,
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಚಲನಚಿತ್ರದಲ್ಲಿ ಬಡತನವನ್ನು, ಅಪರಾಧವನ್ನು ತೋರಿಸುವದರಲ್ಲಿ ತಪ್ಪಿಲ್ಲ.
ಮಜೀದ ಮಜೀದಿಯವರು ತಮ್ಮ ಚಲನಚಿತ್ರಗಳಾದ 'ಬಚೇಹಾ ಯೇ ಆಸೆಮಾನ್(Children of Heaven)'ಮತ್ತು
'ರಂಗ ಕೆ ಖೋದಾ(The colour of Paradise)'ಗಳಲ್ಲಿ ಇರಾಣದಲ್ಲಿಯ ಬಡತನವನ್ನು ತೋರಿಸಿದ್ದಾರೆ. ಆದರೆ, ಅದರಿಂದ ಪ್ರೇಕ್ಷಕರಲ್ಲಿ ಇರಾಣದ ಬಗೆಗೆ ಯಾವುದೇ ತಿರಸ್ಕಾರದ ಭಾವನೆ ಹುಟ್ಟುವದಿಲ್ಲ. ಬದಲಾಗಿ ಇರಾಣದ ಸಾಮಾನ್ಯ ಜನತೆಯ ಬಗೆಗೆ ಗೌರವ ಮೂಡುತ್ತದೆ. ಇದೇ ಮಾತನ್ನು ಸಸ್ತ್ಯಜಿತ ರಾಯರ ಚಿತ್ರಗಳ ಬಗೆಗೂ ಹೇಳಬಹುದು.
ಸಲಾಮ್ ಬಾಂಬೆ ಹಾಗೂ Traffic Signal ಚಿತ್ರಗಳಲ್ಲಿಯೂ ಸಹ 'ಭಯಂಕರ crime' ತೋರಿಸಲಾಗಿದೆ.
ಆದರೆ ಈ ಯಾವ ಚಿತ್ರಗಳಲ್ಲಿಯೂ ಪ್ರೇಕ್ಷಕರ ರಂಜನೆಗಾಗಿ
sensationalism ಮಾಡಿಲ್ಲ. ಇವುಗಳಲ್ಲಿ human
element ಇದೆ, ಅದು missing in Slumdog millionaire.

ಚಂದ್ರಕಾಂತ ಎಸ್ said...

ಸುನಾಥ್ ಸರ್

ನಿಮ್ಮ ಬರಹ ಓದಿ ಎರಡು ದಿನದ ನಂತರ ಪ್ರತಿಕ್ರಿಯೆ ಬರೆದಿದ್ದೆ. ಅದು ಅಷ್ಟು ಸಮರ್ಪಕ ಅನಿಸಲಿಲ್ಲವಾದ್ದರಿಂದ ಮತ್ತೊಮ್ಮೆ ನಿಮ್ಮ ವಿಮರ್ಶೆ ಓದಿ ಪ್ರತಿಕ್ರಿಯಿಸುತ್ತಿದ್ದೇನೆ.ನೀವು ‘ ಮೇಯರ್ ಮುತ್ತಣ್ಣ ’ ಚಿತ್ರ ಗುರುತಿಸಿದಂತೆ ಬೇರೆ ಯಾರೂ ಆ ಚಿತ್ರವನ್ನು ಗುರುತಿಸಿಲ್ಲ. ಮಾನವೀಯತೆಯ ಸ್ಪರ್ಷವಿಲ್ಲದ ಯಾವ ಕಲಾಕೃತಿಯೂ ವ್ಯರ್ಥವೇ. ಈ ದೃಷ್ಟಿಯಲ್ಲಿ ರಾಷೊಮನ್ ನಂತಹ ಅಪೂರ್ವ ಚಿತ್ರ ಬಂದೇ ಇಲ್ಲವೆಂದು ನನ್ನ ಅನಿಸಿಕೆ. ಸತ್ಯಜಿತ್ ರೇಯವರ ಪಥೇರ್ ಪಾಂಚಾಲಿಯ ಜೊತೆಯಲ್ಲಿ ಅಪರಾಜಿತಾ ಮತ್ತು ಅಪೂರ್ ಸಂಸಾರ್ ಹಾಗೂ ಬಂಗಾಳದ ಬರಗಾಲವನ್ನು ವಸ್ತುವನ್ನಾಗುಳ್ಳ ‘ಆಶಾನಿ ಸಂಕೇತ್ ’ ಇವುಗಳಲೆಲ್ಲಾ ಮಾನವೀಯ ಸ್ಪರ್ಶ ತಂದಿರುವ ರೀತಿ ನೋಡಿದರೆ ರೇ ಏಕೆ ಅತಿ ಶ್ರೇಷ್ಟ ನಿರ್ದೇಶಕರಾಗಿ ನಿಲ್ಲುತ್ತಾರೆ ಎಂಬುದು ಅರ್ಥವಾಗುತ್ತದೆ.ನೀವು ಪ್ರಸ್ತಾಪಿಸಿರುವ The Colour of Paradise , Traffic Signal ಮತ್ತು Salaam Bombayಗಳನ್ನು ನಾನಿನ್ನೂ ನೋಡಿಲ್ಲ.ನೋಡಿದ ಮೇಲೆ ಮತ್ತೊಮ್ಮೆ ಇದೇ ಲೇಖನದಡಿಯಲ್ಲಿ ಬರೆಯುತ್ತೇನೆ.ಮತ್ತೊಮ್ಮೆ ನಿಮ್ಮ ಉತ್ತಮ ಬರಹಕ್ಕಾಗಿ ಧನ್ಯವಾದಗಳು.

sunaath said...

ಚಂದ್ರಕಾಂತಾ,
ಮಜೀದ ಮಜೀದಿಯವರ 'Children of Heaven'
ಹಾಗೂ 'Colour of Paradise' ಇವು ಅತ್ಯುತ್ತಮ ಚಿತ್ರಗಳಾಗಿವೆ.
'ಸಲಾಮ್ ಬಾಂಬೇ' ಹಾಗೂ 'Traffic Signal' ಇವು ಮುಂಬಯಿ ಪಟ್ಟಣದಲ್ಲಿಯ crime racketನ
ಒಳಹೊರಗನ್ನು ತೋರಿಸುತ್ತವೆ.
ಈ ನಾಲ್ಕೂ ಚಿತ್ರಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರಿ.

PARAANJAPE K.N. said...

Sir,

ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

Anonymous said...

The idea of the script is wonderful! I saw the film and liked it except 3 scenes. But, I did not find it worth Oscar. In fact, Aami Khan's TARE ZMEEN PAR is really worth OSCAR !!!

Anonymous said...

ಸಿನೆಮಾ ನೋಡಿದ ಮೇಲೆ ಕಾಮೆಂಟ್ ಮಾಡುತ್ತಿದ್ದೇನೆ.
ಒಂದು ಉತ್ತಮ ಚಿತ್ರ.
ಮುಂಬೈ ನಗರದ ನಗ್ನಸತ್ಯಗಳನ್ನು ಎತ್ತಿತೋರಿಸಿದ್ದಾರೆ.
ಆದರೆ ಆಸ್ಕರ್ ಪಡೆಯುವಷ್ಟು ತಾಕತ್ತು ಈ ಚಿತ್ರಕ್ಕಿದೆಯಾ?
I don't think so..
-rj

PARAANJAPE K.N. said...

Sir
ದಯವಿಟ್ಟು ನನ್ನ ಬ್ಲಾಗಿನ ಕಡೆ ಒಮ್ಮೆ ಕಣ್ಣು
ಹಾಯಿಸುವಿರಾ ??

sunaath said...

ಪರಾಂಜಪೆಯವರೆ,
ಉತ್ತಮ ಲೇಖನಗಳ blog ಆರಂಭಿಸಿದ್ದಕ್ಕಾಗಿ ಅಭಿನಂದನೆಗಳು.
ನಿಮ್ಮಿಂದ ದಿನವೂ ಒಂದು ಉತ್ತಮ ಲೇಖನವನ್ನು ಬಯಸುತ್ತೇನೆ.

sunaath said...

ಕಟ್ಟಿಯವರೆ, rj,
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಈ ಚಿತ್ರ ಕೇವಲ ಮನೋರಂಜಕ ಚಿತ್ರ;not worth Oscar.to

Prabhuraj Moogi said...

ಚಿತ್ರ ಚೆನ್ನಾಗಿದೆ.. ಆದ್ರೆ ಚಿತ್ರ ವಿಚಿತ್ರವಾಗಿದೆ, ವಿಮರ್ಶೆ ಓದಿ ಹೇಳಬೇಕೆಸಿದ್ದೆಂದರೆ, ಬರೀ ಭಾರತವನ್ನು ತೆಗಳುವ ಚಿತ್ರಗಳು, ಅಂಥ ಬುಕ್ಕುಗಳು ಅವುಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ದೊರೆಯುವುದು ನೊಡಿ ಮನಸಿಗೆ ರೇಜಿಗೆಯಾಗುತ್ತದೆ... ಇದೆಲ್ಲ ವ್ಯವಸ್ಥಿತ ಹುನ್ನಾರವೆನ್ನುವ ಸಂಶಯವೂ ಬರುತ್ತದೆ....

sunaath said...

ಪ್ರಭುರಾಜ,
ಪಾಶ್ಯಾತ್ಯ ಕಣ್ಣುಗಳಿಗೆ ಭಾರತವೆಂದರೆ ಹಾವಾಡಿಗರ ದೇಶ. ಹೀಗಾಗಿ ಇಂತಹ ಅಭಿಪ್ರಾಯ ತೋರಿಸುವ ಕೃತಿಗಳಿಗೇ ಮಾನ್ಯತೆ ಸಿಗುವದು ಸಹಜ.
ಆದರೆ, Oscar ಹಾಗು Bookerಕ್ಕೆ ಮಹತ್ವ ಕೊಡುವ ನಾವೂ ದಡ್ಡರೇ ಅಲ್ಲವೆ?

ಚಂದ್ರಕಾಂತ ಎಸ್ said...

ಸುನಾಥ್ ಅವರೆ ಒಳ್ಳೆ ಮಾತು ಹೇಳಿರುವಿರಿ. ನಾವೇಕೆ ಪಾಶ್ಚಿಮಾತ್ಯ ಪ್ರಶಸ್ತಿಗಳಿಗೆ ಅಷ್ಟು ಮಹತ್ವ ಕೊಡುತ್ತೇವೆ. ಹಾಗೆಯೇ ನಾವೇಕೆ ಇತರ ದೇಶದವರು ನಮ್ಮ ದೇಶವನ್ನು ಹೊಗಳಲಿ ಎಂದು ಬಯಸುತ್ತೇವೆ? ಒಂದು ಚಲನಚಿತ್ರ ಅಥವಾ ಒಂದು ಕಾದಂಬರಿಯಿಂದ ನಮ್ಮ ದೇಶದ ಪರಿಚಯ ( ಬಡತನ ಇತ್ಯಾದಿ...) ಗೊತ್ತಾಗುತ್ತದೆ ಎಂದುಕೊಳ್ಳಲು ನಾವು ಯಾವ ಕಾಲದಲ್ಲಿದ್ದೇವೆ. ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತುಕೊಂಡು ಮತ್ತೊಂದು ದೇಶವನ್ನು ಅರಿಒಯಬಹುದು. ಚಿತ್ರದಲ್ಲಿ ತೋರಿಸಿದ ಬಡತನಕ್ಕಿಂತ ನಮ್ಮ ದೇಶದವರು ಎಬ್ಬಿಸುತ್ತಿರುವ ಗದ್ದಲದಿಂದ ಇತರರನ್ನು ನಮ್ಮ ದೇಶದ ಬಡತನದ ಕಡೆ ಸೆಳೆಯುತ್ತಿದ್ದೇವೆ ಅನಿಸುತ್ತದೆ.

ಕಡೆಯದಾಗಿ ಒಂದು ಮಾತು. ನಮ್ಮ ದೇಶದ ಬಡತನ ತೋರಿಸಿರುವುದರಿಂದ ದೇಶದ ಮಾನ ಮರ್ಯಾದೆ ಹರಾಜಾಗಿದೆ ಎನ್ನುವವರಾರೂ ಸ್ಲಮ್ ಗಳನ್ನು ಇನ್ನು ಮುಂದಾದರೂ ಚೆನ್ನಾದ ಸ್ಥಿತಿಯಲ್ಲಿಡೋಣ ಅನ್ನುವುದಿಲ್ಲ ಏಕೆ ?ದೇಶದ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ಒಬ್ಬರೂ ಏಕೆ ಚಕಾರವೆತ್ತುವುದಿಲ್ಲ?

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಫಿಲಂ ನೋಡಿದೆ. ನನಗಂತೂ ಇಷ್ಟವಾಯ್ತು. ಅದ್ರಲ್ಲೂ ಫೋಟೋಗ್ರಫಿ ತುಂಬಾ ಚೆನ್ನಾಗಿದೆ.

Anonymous said...

Please read and participate

http://thepinkchaddicampaign.blogspot.com/

Santhosh Rao said...

ಸರ್ ,
ತುಂಬ ಸರಳವಾಗಿ ವಿಮರ್ಶೆ ಮಾಡಿದ್ದಿರ. ಚಿತ್ರದಂತೆ ನಿಮ್ಮ ವಿಮರ್ಶೆ ಕೂಡ ಚೆನ್ನಾಗಿದೆ

sunaath said...

ಚಂದ್ರಕಾಂತಾ,
ನಿಮ್ಮ ಮಾತು ನಿಜ. ಚೀನಾ, ಕೋರಿಯಾ ಇವು ವಿದೇಶೀಯರ ಕಣ್ಣಿಗೆ ಶಿಸ್ತಿನ ದೇಶಗಳಾಗಿ ಕಾಣಲಿಕ್ಕೆ ಕಾರಣವೆಂದರೆ, ಆ ದೇಶಗಳು ಅಷ್ಟು ಪರಿಶ್ರಮಪಟ್ಟಿವೆ.
ಭಾರತದಲ್ಲಿರುವ ಹೊಲಸು ಹಾಗು ಅಶಿಸ್ತನ್ನು ನಾವು ಒಪ್ಪಲೇಬೇಕು. ಅದನ್ನು ಚಿತ್ರೀಕರಿಸಬೇಡಿ ಎಂದು ಹೇಳುವದೂ ತಪ್ಪೇ. ಆದರೆ, slumdog millionaire ಚಿತ್ರವು ಕೇವಲ ರೋಚಕ ಚಿತ್ರವೇ ಹೊರತು ಶ್ರೇಷ್ಠ ಚಿತ್ರವಲ್ಲ ಎನ್ನುವದೂ ಸಹ ಅಷ್ಟೇ ಸತ್ಯ.

sunaath said...

ಮಲ್ಲಿಕಾರ್ಜುನರೆ,
ಚಿತ್ರದ production ಉತ್ತಮವಾಗಿದೆ.ಅದನ್ನು ಒಪ್ಪಲೇಬೇಕು.

sunaath said...

ಸಂತೋಷ,
ಧನ್ಯವಾದಗಳು.

shivu.k said...

ಇಂದು ಬೆಳಿಗ್ಗೆ ಸ್ಲಮ್ ಡಾಗ್ ಮಿಲಿಯನೇರ್" ಚಿತ್ರವನ್ನು ನೋಡಿದಾಗ ನನಗನ್ನಿಸಿದ್ದು ಇಷ್ಟು..


ಮೊದಲಿಗೆ ಚಿತ್ರವನ್ನು ಬುದ್ಧಿವಂತನಾಗಿ ನೋಡಿದ ಅನುಭವಗಳು....


ಚಿತ್ರದಲ್ಲಿ ಯಾವುದೇ ಮಾನವೀಯ ಮೌಲ್ಯಗಳಿಲ್ಲ....

ಕೆಲವು ದೃಶ್ಯಗಳನ್ನು ಈ ಮಟ್ಟದಲ್ಲಿ ಹಸಿ ಹಸಿಯಾಗಿ ತೋರಿಸುವ ಅವಶ್ಯಕತೆಯಿಲ್ಲ....


ಚಿತ್ರ ಮುಗಿದ ನಂತರ ನೆನಪಿನಲ್ಲುಳಿಯುವುದು.....ಮೊದಲಿಗೆ ಪುಟ್ಟ ಮಕ್ಕಳ ಸಹಜ ಅಭಿನಯ...ಇದು ಬಿಟ್ಟರೆ ಚಿತ್ರ ಯಾವ ರೀತಿಯೂ ಯಾವ ಮಟ್ಟದಲ್ಲೂ ನಮ್ಮನ್ನು ಕಾಡುವುದಿಲ್ಲ......


ನಮ್ಮವ ರೆಹಮಾನ್‌ಗೆ ಆಸ್ಕರ್ ಬಂದಿದೆಯೆಂದು ಖುಷಿಯಾಗಿದೆ....

ಅದಕ್ಕಿಂತ ಅತ್ಯುತ್ತಮ ಸಂಗೀತ ನೀಡಿರುವ ನಮ್ಮವೇ ಸಿನಿಮಾಗಳಷ್ಟು ಇದು ಚೆನ್ನಾಗಿಲ್ಲ.....ಅಥವ ಪಾಶ್ಚಿಮಾತ್ಯರಿಗೆ ಇದೇ ಅದ್ಭುತವೆನಿಸಿದರೆ ಅವರ ಈ ಜ್ಞಾನದ ಮಟ್ಟದ ಎಷ್ಟು ಎಂದು ತಿಳಿಯುತ್ತದೆ......

ಮತ್ತು ಈ ಚಿತ್ರ ಯಾವುದೇ ಕಾರಣಕ್ಕೂ ಆಸ್ಕರ್ ಪಡೆಯುವ ಮಟ್ಟಕ್ಕೆ ಇಲ್ಲ......ನಮ್ಮ ಯಾವುದೇ ಭಾಷೆಯ ಒಂದು ಅತ್ಯುತ್ತಮ ಕಮರ್ಷಿಯಲ್ ಚಿತ್ರಕ್ಕಿಂತ ವ್ಯತ್ಯಾಸವೇನಿಲ್ಲ.....


ಸಿನಿಮಾವನ್ನು ಮುಗ್ಧತೆಯಿಂದ, ಮಾಸ್, ಕ್ಲಾಸ್ ಅನ್ನುವುದನ್ನೆಲ್ಲಾ ಬಿಟ್ಟು, ತಾಂತ್ರಿಕವಾಗಿಯೂ ಜ್ಞಾನವನ್ನು ಗಮನಿಸುತ್ತಾ ನೋಡಿದಾಗ:


ಒಂದು ಕತೆಯನ್ನು ಇಷ್ಟು ಚೆಂದದ ಬಿಗಿಯಾದ ಚಿತ್ರಕತೆಯನ್ನು ಮಾಡಬಹುದಾ ಅನ್ನಿಸುತ್ತದೆ......ಅದಕ್ಕೆ ಸೈಮನ್ ಬಾಯ್ಲ್‌ಗೆ ಅಭಿನಂದನೆಗಳು..... ಅದನ್ನು ಅಷ್ಟೇ ಚೆನ್ನಾಗಿ ಪ್ರತಿಯೊಂದು ಪ್ರೇಮು ವೇಸ್ಟು ಅನ್ನಿಸಿದಂತೆ, ಪ್ರಾರಂಭದಿಂದ ಅಂತ್ಯದವರೆಗೂ ಒಂದು ಸಹಜ ಕುತೂಹಲ ನಮ್ಮೊಳಗೆ ಅವರಿಸಿಕೊಳ್ಳುವಂತೆ ಮಾಡಿರುವ ನಿರ್ದೇಶನ......ಅದಕ್ಕಾಗಿ ಆರಿಸಿಕೊಂಡ ಹೊಸಶೈಲಿ.....[ಮೂರು ರೀತಿಯ ಟೇಕಿಂಗ್ಸ್...ಅವುಗಳಲ್ಲಿ ಎರಡು ವಾಸ್ತವ ಮತ್ತು ಮೂರನೆಯದು ಮತ್ತು ಮುಖ್ಯವಾದದ್ದು ಪ್ಲಾಶ್ ಬ್ಯಾಕ್ ಚಿತ್ರಣಗಳು....ಅದೇ ಚಿತ್ರದ ಜೀವಾಳ ಇದು ಒಂದು ರೀತಿ ಚಿತ್ರದುದ್ದಕ್ಕೂ ಸಮನಾಂತರವಾಗಿ ಹರಿಯುತ್ತದೆ.]

ಇನ್ನೂ ಕ್ಯಾಮೆರಾ ಮೆನ್ ಮತ್ತು ಸಂಕಲನಕಾರನ ಬಗ್ಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲೇಬೇಕು....

ಇವರಿಬ್ಬರು ಕಟ್ಟಿಕೊಟ್ಟಿರುವ ದೃಶ್ಯಕಾವ್ಯಗಳು ಅನನ್ಯ....ಅದ್ಭುತ...[ಜಮಾಲ್ ಮಲದಿಂದೆದ್ದು ಬರುವ ದೃಶ್ಯ ಹೊರತುಪಡಿಸಿ...ಅದು ನಿರ್ದೇಶಕನ ಹೊಣೆಗಾರಿಕೆ]

ಚಿತ್ರಕ್ಕೆ ಬೇಕಾದಂತ ಸಹಜ ಮತ್ತು ಎಲ್ಲೂ ಕೂಡ [ಪ್ರಶ್ನೆ ಉತ್ತರ ದೃಶ್ಯಗಳನ್ನು ಹೊರತುಪಡಿಸಿ] ಕಣ್ಣಿಗೆ ರಾಚದಂತೆ, ನೋಡುಗನಿಗೆ ಚಿತ್ರದ ಫೀಲ್ ಬರುವಂತೆ ನೆರಳು ಬೆಳಕಿನ ಸಂಯೋಜನೆ ಚಿತ್ರ ಗುಣಾತ್ಮಕ ಅಂಶಗಳಲ್ಲಿ ಒಂದು....

ಸ್ಲಮ್ಮಿನ ನೀರಿನ ದೊಡ್ಡ ತೊಟ್ಟಿಯಲ್ಲಿ ಜಮಾಲ್, ಸಲೀಮ್ ಆಟವಾಡುತ್ತಿರುವಾಗ ಮತ್ತೊಂದು ಕೋಮಿನವರು ಇವರ ಮೇಲೆ ದಾಳಿನಡೆಸುವ ದೃಶ್ಯ ಅದೆಷ್ಟು ಹಸಿಯಾಗಿ ನೈಜವಾಗಿದೆಯೆಂದರೆ ಯಾರಿಗೆ ಆಗಲಿ ಒಂದು ಕ್ಷಣ ನೋಡಲಾಗದೆ ಕಣ್ಣು ಮುಚ್ಚಿಕೊಳ್ಳುತ್ತೇವೆ...ಇದು ನಿಜವಾಗಿ ನಮ್ಮೆದುರು ನಡೆಯುತ್ತಿದೆಯೇನೋ ಅನ್ನುವಂತೆ....ಇದು ಛಾಯಾಗ್ರಾಹಕನ ಪ್ರತಿಭೆ ಮತ್ತು ನಿರ್ದೇಶಕನ ಮೇಲೆ ನಮಗೆ ಬರುವ ನಮ್ಮ ಸಿಟ್ಟು...

ಮತ್ತೊಮ್ಮೆ ಎಲ್ಲಾ ಮಕ್ಕಳ ಪಾತ್ರದಾರಿಗಳು ಹಿರಿಯ ಪಾತ್ರದಾರಿಗಳು.....ಚಿತ್ರದಲ್ಲಿ ಸಹಜವಾಗಿ ಅಬಿನಯಿಸಿ....ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ.....


ಪೋಲಿಸ್ ಮಕ್ಕಳನ್ನು ಓಡಿಸಿಕೊಂಡು ಬರುವಾಗ ಒಂದು ನಾಯಿ ಕ್ಯಾಮೆರಾ ಮುಂದೆ ಇದ್ದು.....ಅದು ಅಲ್ಲೇನು ನಡೆಯುತ್ತಿದೆಯೆಂಬುದು ಅದಕ್ಕೆ ತಿಳಿಯದೆ ಒಮ್ಮೆ ಆಕಳಿಸಿ ನೋಡುವಾಗ ಅದರ ಹಿನ್ನೆಲೆಯಲ್ಲಿ ಪೋಲಿಸ್ ಮಕ್ಕಳನ್ನು ಓಡಿಸಿಕೊಂಡು ಬರುವ ದೃಶ್ಯ ಚಿತ್ರದ ಅತ್ಯುತ್ತಮ ದೃಶ್ಯಗಳಲ್ಲಿ ಒಂದು...ಇಂಥ ಅನೇಕ ದೃಶ್ಯಗಳು ಇವೆ......ಇದಕ್ಕೆ ನಾವು ಖಂಡಿತ ಛಾಯಾಗ್ರಾಹಕ ಮತ್ತು ಸಂಕಲನಕಾರ್‍ಅನಿಗೆ ನಮ್ಮ ಅಬಿನಂದನೆ ತಿಳಿಸಬೇಕು...
ಇಂಥ ದೃಶ್ಯಗಳನ್ನು ನೋಡಲು ನಾನು ಕೊಟ್ಟ ೮೦ ರೂಪಾಯಿ ಸಿನಿಮಾ ಟಿಕೆಟ್ ಏನೇನು ಅಲ್ಲ.....


ಕೊನೆಯಲ್ಲಿ ಈ ಸಿನಿಮಾ ಆಸ್ಕರ್ ಗಾಗಿ ಅಲ್ಲ....ಇದಕ್ಕೆ ಆಸ್ಕರಿ ಸಿಕ್ಕಿದೆಯೆಂದರೆ ಆಸ್ಕರ್ ಮಾನದಂಡ....ಅಥವ ಅದನ್ನು ಕೊಡುವ ಅಲ್ಲಿನ[ಪಾಶ್ಚಿಮಾತ್ಯ]ಅಭಿರುಚಿಯ ಮಟ್ಟ ತಿಳಿಯುತ್ತದೆ.....


ನಾನು ಸಿನಿಮಾ ನೋಡಿದ್ದು ಹೀಗೆ ಅದಕ್ಕಾಗೆ ಕಾದು ಟಾಕೀಸಿನಲ್ಲೇ ನೋಡಿದ್ದು......ಇಂಥ ಸಿನಿಮಾಗಳನ್ನು ಡಿವಿಡಿಗಳಲ್ಲಿ ಟಿ.ವಿ.ಗಳಲ್ಲಿ ನೋಡಿದಾಗ ಆಗುವ ಅನುಭವದಿಂದ ಅಭಿಪ್ರಾಯಗಳು ಬದಲಾಗಬಹುದು......ಮತ್ತು ಸಿನಿಮಾವನ್ನು ಸಿನಿಮಾ ಆಗಿ ನೋಡಬೇಕೆನ್ನುವುದು.....ಅದನ್ನು ಮೊದಲು ಸಂಪೂರ್ಣವಾಗಿ ಎಂಜಾಯ್ ಮಾಡಬೇಕೆನ್ನುವುದು...ಒಟ್ಟಾರೆ ನನ್ನ ವೈಯಕ್ತಿಕ ಅಭಿಪ್ರಾಯ.....

sunaath said...

ಶಿವು,
ನೀವು ನೀಡಿದ ಉತ್ತಮ ವಿಮರ್ಶೆಗಾಗಿ ಧನ್ಯವಾದಗಳು.
Slumdog millionaireದ ತಾಂತ್ರಿಕ ಮೌಲ್ಯಗಳ ಬಗೆಗೆ
ಚೆನ್ನಾಗಿ ಬರೆದಿರುವಿರಿ.
ರೆಹಮಾನರ ಸಂಗೀತ ಅವರ ಇತರ ಚಿತ್ರಗಳ ಸಂಗೀತಕ್ಕಿಂತ ಹೆಚ್ಚಿನದೇನಲ್ಲ ಹಾಗೂ ನಮ್ಮಲ್ಲಿ ಇದಕ್ಕೂ ಚೆನ್ನಾಗಿ ಸಂಗೀತ ನೀಡಿದವರು ಇದ್ದಾರೆ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.
ಚಿತ್ರವನ್ನು ನೋಡಿ ಗುಣಮಟ್ಟದ ವಿಮರ್ಶೆ ನೀಡಿದ್ದಕ್ಕಾಗಿ ಧನ್ಯವಾದಗಳು.

suragange said...

Dear sir,
I completly agree with you
Most of sensible indians feels the slumdog millionair is very ordinary film.Now days all awards are loosing value.Unfortunatly all recent oscar are just not worth of it.

Dayananda said...

Dear sir,
Now a day lot of people criticizing Girish kasaravalli.People are unnecessarily questioning his commitment to cinema in kannadaprbha new paper. Sir why don't you write an article to support of Girish kasaravalli.? Please write a article on it.

sunaath said...

Dear Dayanand,
It is beyond my capacity to write an article for a Paper! Thanx for the appreciation.