Friday, February 12, 2010

ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ

‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಜನೆವರಿ ೨೧ರ ಸಂಚಿಕೆಯಲ್ಲಿ, ‘ನೂರೊಂದು ಮಾತು’ ಎನ್ನುವ ತಮ್ಮ ಅಂಕಣಬರಹದಲ್ಲಿ ಒಂದು ಲೇಖನ ಬರೆದಿದ್ದಾರೆ. ‘ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ’ ಎನ್ನುವ ಈ ಲೇಖನವನ್ನು ಇಲ್ಲಿ ಪ್ರಸ್ತಾಪಿಸಲಿಕ್ಕೆ ನನಗೆ ಎರಡು ಕಾರಣಗಳಿವೆ:

(೧) ಶ್ರೀ ಭಟ್ಟರಂತಹ ಮೇಧಾವಿ, ತರ್ಕಚತುರ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿಯೊಬ್ಬರು ‘ಪ್ರಭಾವಿ’ ವ್ಯಕ್ತಿಗಳ ಸಮ್ಮುಖದಲ್ಲಿರುವಾಗ ಎಷ್ಟು ವೇಗವಾಗಿ ತಮ್ಮ ಮೇಧಾವಿತನ, ತರ್ಕಚತುರತೆ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿತ್ವವನ್ನು ಕಳೆದುಕೊಂಡು ಬಿಡುತ್ತಾರಲ್ಲ! Glamour ಎದುರಿಗೆ, ಸಮ್ಮೋಹಿನಿಗೆ ಒಳಗಾದವರಂತೆ ಮರುಳಾಗಿ ಬಿಡುತ್ತಾರಲ್ಲ! ಇದು ವಿಸ್ಮಯದ ಮಾತು.

(೨) ಶ್ರೀ ಭಟ್ಟರು ಆ ‘ಪ್ರಭಾವಿ’ ವ್ಯಕ್ತಿಯ ತರ್ಕದಲ್ಲಿದ್ದ ಮಿಥ್ಯೆ(fallacy)ಯನ್ನು ಗುರುತಿಸದೆ ಹೋದರಲ್ಲ ಎನ್ನುವ ವ್ಯಥೆ. ಈ ಮಿಥ್ಯಾತರ್ಕವನ್ನು ತಮ್ಮ ಪತ್ರಿಕೆಯ ಮೂಲಕ ಇನ್ನಷ್ಟು ಪ್ರಚುರಪಡಿಸುತಿದ್ದಾರಲ್ಲ ಎನ್ನುವ ದುಃಖ.

ಎಲ್ಲಕ್ಕೂ ಮೊದಲಿಗೆ ಅವರ ಲೇಖನದಲ್ಲಿ ನಮಗೆ ಸಂಬಂಧಪಡುವಂತಹ ಭಾಗವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ದಯವಿಟ್ಟು ಗಮನಿಸಿ:

ಈ ಲೇಖನಾಂಶವನ್ನು ಓದಿದ ಬಳಿಕ ನಮಗೆ ಅನಿಸುವದೇನು?
ವಿಶ್ವೇಶ್ವರ ಭಟ್ಟರು ಒಬ್ಬ ಅತಿ ಗಣ್ಯ ವ್ಯಕ್ತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಭಟ್ಟರು ವರ್ಣಿಸುವ ಮೇರೆಗೆ ಆ ವ್ಯಕ್ತಿ ಕೋಟ್ಯಾಧಿಪತಿಗಳಿಗೆ ಪಾಠ ಹೇಳುವ ಅಧ್ಯಾಪಕ. ಅಂತಹ ವ್ಯಕ್ತಿ ಇನ್ನೋರ್ವ ಗಣ್ಯ ವ್ಯಕ್ತಿಯೊಡನೆ ಅಂದರೆ ಆ^ಸ್ಟ್ರೇಲಿಯನ್ ಹಡಗಿನ ದಳಪತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆ ದಳಪತಿಯ ಅಭಿಪ್ರಾಯದ ಪ್ರಕಾರ ಒಂದು ದೇಶದ ಸಂಪತ್ತೆಂದರೆ ಅಲ್ಲಿಯ ಜನಸಂಖ್ಯೆಯೇ ಹೊರತು ಅಲ್ಲಿಯ ಧನಸಂಪತ್ತಲ್ಲ. ಜನಸಂಖ್ಯೆಯು ನಮ್ಮ ದೇಶದ ಜಟಿಲ ಸಮಸ್ಯೆಯೆಂದು ಭಾವಿಸಿದ ಆ ಅಧ್ಯಾಪಕರು ಹಡಗಿನ ದಳಪತಿಯ ಲೋಕಾಭಿರಾಮ ಹರಟೆಯಿಂದ ಪ್ರಭಾವಿತರಾದರು. ‘ಹೌದಲ್ಲ! ನಾವು ಜನಸಂಖ್ಯಾಸ್ಫೋಟವನ್ನು ಸಮಸ್ಯೆಯೆಂದು ಏಕೆ ಭಾವಿಸಬೇಕು? ಇದೇ ನಮ್ಮ ಬಲವೂ ಆಗಬಹುದು’ ಎಂದು ಈ ಅಧ್ಯಾಪಕರಿಗೆ ಅನಿಸಿತು. ತಮಗೆ ಅನಿಸಿದ್ದನ್ನು ಈ ದೊಡ್ಡ ಅಧ್ಯಾಪಕರು ಭಟ್ಟರಿಗೆ ಹೇಳಿದರು. ಸರಿ, ಭಟ್ಟರಿಗೂ ಹಾಗೆಯೇ ಅನ್ನಿಸತೊಡಗಿತು.

ಭಟ್ಟರೆ, ನಿಮ್ಮ ಮೇಧಾವಿತನ, ತೀಕ್ಷ್ಣ ತರ್ಕಚಾತುರ್ಯ ಹಾಗು ವಿಸ್ತಾರ ಅಧ್ಯಯನದ ಫಲವಾದ ಪಾಂಡಿತ್ಯ ಇವೆಲ್ಲ ಎಲ್ಲಿ ಮಾಯವಾದವು? ನಿಮ್ಮೆದುರಿಗಿನ ವ್ಯಕ್ತಿ ಎಷ್ಟೇ ‘ಪ್ರಭಾವಶಾಲಿ’ಯಾಗಿರಲಿ, ನೀವು ಇಷ್ಟು ವೇಗವಾಗಿ ಅವರ ಸಮ್ಮೋಹಿನಿಗೆ ಒಳಗಾಗಬಹುದೆ? ಅವರ ಮಾತಿಗೆ ಮರುಳಾಗಬಹುದೆ?

Of course, ಒಪ್ಪಿಕೊಳ್ಳುತ್ತೇನೆ—Consistancy is the virtue of an ass.
ಒಬ್ಬ ವ್ಯಕ್ತಿಯ ಅಭಿಪ್ರಾಯವು ಯಾವಾಗಲೂ ಏಕಪ್ರಕಾರವಾಗಿರಬೇಕಿಲ್ಲ. ಆದರೆ, ಅಭಿಪ್ರಾಯದ ಬದಲಾವಣೆಯು ತರ್ಕಬದ್ಧವಾಗಿರಬೇಕಲ್ಲವೆ? ಆ ಪ್ರಭಾವಿ ಅಧ್ಯಾಪಕರು ‘ಜನಸಂಖ್ಯೆಯೇ ಒಂದು ದೇಶದ ಸಂಪತ್ತು’ ಎಂದು ಹೇಳಿದಾಗ, ಅವರ ಕಣ್ಣಿಗೆ ಬಿದ್ದಿರಲಾರದ ಒಂದು ಸತ್ಯ ನಿಮ್ಮ ಕಣ್ಣಿಗೂ ಬೀಳಲಿಲ್ಲವೆ? ಅದೇನೆಂದರೆ, ನಮ್ಮ ದೇಶದ ಜನಸಂಖ್ಯೆಯ ಬಹುಭಾಗ ಎಂತಹುದು? ಅರ್ಧಕ್ಕೂ ಹೆಚ್ಚು ಭಾರತೀಯರು ನಿರಕ್ಷರಿಗಳು. ಸಾಕ್ಷರ ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚಿನವರ ಶಿಕ್ಷಣ ನಿರುಪಯುಕ್ತ ಶಿಕ್ಷಣ. ಮುಕ್ಕಾಲು ಭಾಗ ಭಾರತೀಯರು ಅರೆಕಾಲೀನ ಉದ್ಯೋಗಿಗಳು. ಇಲ್ಲಿ ಉದ್ಯೋಗ ಸಿಗಲಾರದ ಕಾರಣಕ್ಕಾಗಿ, ಕೆಳದರ್ಜೆಯ ಉದ್ಯೋಗ ಮಾಡುವ ಭಾರತೀಯರೂ ಸಹ ದುಬಾಯಿ ಮೊದಲಾದ ಅರಬ ರಾಷ್ಟ್ರಗಳಿಗೆ ಉದ್ಯೋಗವನ್ನರಸಿ ಹೋಗುತ್ತಿದ್ದಾರೆ. ಭಾರತೀಯ ಹೆಂಗಸರೂ ಸಹ ಆ ದೇಶಗಳಲ್ಲಿ ಮನೆಗೆಲಸಕ್ಕೆ ಹೋಗಿ, ಅಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಮೂರು ವರ್ಷದ ಹೆಣ್ಣು ಶಿಶುಗಳೂ ಸಹ ಭಾರತದಲ್ಲಿ ವೇಶ್ಯಾವಾಟಿಕೆಗೆ ಬಿಕರಿಯಾಗುತ್ತಿವೆ. ಶಿಕ್ಷಣ ಪಡೆಯಲು ಇಲ್ಲಿಂದ ಹೊರದೇಶಗಳಿಗೆ ತೆರಳಿದ ನಮ್ಮ ವಿದ್ಯಾರ್ಥಿಗಳು, ಅಲ್ಲಿ ಏಟು ತಿನ್ನುತ್ತಿದ್ದಾರೆ.

ಭಟ್ಟರೆ, ಇದು ನಮ್ಮ ದೇಶದ ಜನಸಂಪತ್ತು ; ಬೇಕಾದರೆ ಇದನ್ನು ದನಸಂಪತ್ತು ಎಂದು ಕರೆಯಿರಿ. ಅದೂ ತಪ್ಪೇ!
ಭಟ್ಟರೆ, ನಮ್ಮವರಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ ಹಾಗು ಒಳ್ಳೆಯ ಬದುಕನ್ನು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಜನಸಂಖ್ಯೆಯು ಈ ಮಿತಿಯನ್ನು ಮೀರಿ ಬೆಳೆದಿದೆ.

ದೊಡ್ಡ ಹಡಗವೊಂದು ಸಮುದ್ರ ಮಧ್ಯದಲ್ಲಿ ತೇಲುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಒಂದು ಸಾವಿರ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವಿರುವ ಹಡಗು ಇದು ಎಂದು ಇಟ್ಟುಕೊಳ್ಳಿ. ಈ ಹಡಗಿನಲ್ಲಿ ಎರಡು ಸಾವಿರ ಪ್ರಯಾಣಿಕರನ್ನು ತುಂಬಿದರೆ ಏನಾಗುತ್ತದೆ? ಹಡಗು ಮುಳುಗಿ ಹೋಗುತ್ತದೆ. ಇದು ಸಾಮಾನ್ಯ ಜ್ಞಾನದ ಮಾತು.

ಎರಡನೆಯದಾಗಿ, ಭಟ್ಟರು ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಅದು ಸಮಸ್ಯೆಯೇ ಅಲ್ಲ ಎನ್ನುವ ಮಿಥ್ಯಾತರ್ಕಕ್ಕೆ ಬಲಿಯಾಗಿದ್ದಾರೆ. ಇಂತಹ ಮಿಥ್ಯಾತರ್ಕದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.

(೧) ಪೋಲೀಸ ಸ್ಟೇಶನ್ನಿಗೆ ಹೋದ ಓರ್ವ ವ್ಯಕ್ತಿ, ಪೋಲೀಸ ಅಧಿಕಾರಿಗೆ: “ಸಾಹೇಬರ, ನನ್ನ ಹೇಣತಿ ಮನಿ ಬಿಟ್ಟು ಓಡಿ ಹೋಗ್ಯಾಳರೀ!”
ಪೋಲೀಸ ಅಧಿಕಾರಿ: “ಛಲೋ ಆತಲ್ಲಪಾ! ಆಕೀ ಹೊಟ್ಟಿಗೆ ಹಾಕೋ ತ್ರಾಸು ತಪ್ಪಿತು ನಿನಗ.
ಅರಾಮ ಇರು, ಹೋಗು!”

(೨) ಅಪ್ಪ ಮಗನಿಗೆ: “ಮಗನs, ಈ ಸಲಾನೂ SSLC ಒಳಗ ಢುಮ್ಕಿ ಹೊಡದೇನು?”
ಮಗ: “ ಅಪ್ಪಾ, ನಿಮಗ ಈ ಸಲಾ tution fees ಉಳಿತಾಯ ಮಾಡೇನಿ ಅಂತ ಯಾಕ ತಿಳ್ಕೋಬಾರ್ದು ನೀವು?”

ಇಂತಹ ಮಿಥ್ಯಾತರ್ಕದಲ್ಲಿ ನಮ್ಮ ರಾಜಕಾರಣಿಗಳು ಬಹು ಚತುರರು. ತಮ್ಮ ತಂದೆ ಇನ್ನೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ, ಶ್ರೀಮತಿ ಇಂದಿರಾ ಗಾಂಧಿಯವರು ಒಮ್ಮೆ ಓಡಿಸಾ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರು. ಓಡಿಸಾದಲ್ಲಿ ಆಗ ಭೀಕರ ಬರಗಾಲವಿತ್ತು. ಅಕ್ಕಿಯಂತೂ ಕಾಳಸಂತೆಯಲ್ಲಿ ಮಾತ್ರ ಲಭ್ಯವಿತ್ತು. ಆಗ ಶ್ರೀಮತಿ ಇಂದಿರಾ ಗಾಂಧಿಯವರು ಜನತೆಗೆ ಕೊಟ್ಟ ಸಲಹೆ: “ ಅಕ್ಕಿ ಸಿಗದೇ ಹೋದರೆ, ಬಟಾಟೆ ತಿನ್ನಿರಿ!”
ಇತ್ತೀಚೆಗೆ, ಕೇಂದ್ರಸಚಿವರಾದ ನಮ್ಮ ಕನ್ನಡಿಗರೊಬ್ಬರು , ‘ವಾರದಲ್ಲಿ ಒಂದು ದಿನ ಉಪವಾಸ ಮಾಡಿರಿ’ ಎಂದು ಹೇಳಲಿಲ್ಲವೆ? ವಾಸ್ತವ ಸ್ಥಿತಿ ಏನಿದೆಯೆಂದರೆ, ಕರ್ನಾಟಕದಲ್ಲಿ ಅನೇಕ ನೆರೆ ಸಂತ್ರಸ್ತರು ವಾರದಲ್ಲಿ ಒಂದೇ ದಿನ ಊಟ ಮಾಡುತ್ತಿದ್ದಾರೆ!

ಇದು ನಮ್ಮ ದೇಶದ ಜನಸಂಪತ್ತು. ಇದು ಇಮ್ಮಡಿ, ಮುಮ್ಮಡಿಯಾಗಲಿ ಎಂದು ವಿಶ್ವೇಶ್ವರ ಭಟ್ಟರು ಬಯಸುತ್ತಿದ್ದಾರೆಯೆ? ಭಟ್ಟರೆ, ಹಾಗಿದ್ದರೆ ಒಂದು ಕಿವಿಮಾತನ್ನು ನಿಮಗೆ ಹೇಳಬಯಸುತ್ತೇನೆ:
‘ದೇಶದ ಪ್ರಗತಿಯನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕು!

55 comments:

ಸಾಗರದಾಚೆಯ ಇಂಚರ said...

ಜನಸಂಖ್ಯೆ ದೇಶದ ಬಹುದೊಡ್ಡ ಸಮಸ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ
ನಮ್ಮೆಲ್ಲ ಸುಧಾರಣೆಗಳೂ ಜನಸಂಖ್ಯೆ ಯಿಂದಲೇ ಕುಂಟಿತ ಗೊಳ್ಳುತ್ತಿದೆ
ಆದರೆ ಭೀಕರ ಅರ್ಥಿಕ ಮುಗ್ಗಟ್ಟಿನಲ್ಲಿ ಜನಸಂಖ್ಯೆಯೇ ಒಂದು ಲಾಭ
ನಮ್ಮವರೇ ನಮ್ಮ ಸರಕುಗಳನ್ನು ಖೆರೀದಿಸಿದರೆ ಅರ್ಥಿಕ ಸಮಸ್ಯೆಯೇ ಇಲ್ಲ ಅಲ್ಲವೇ?
ಆದರೆ ಜನಸಂಕ್ಯೆ ಹಿಡಿತದಲ್ಲಿದ್ದರೆ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
ಎಲ್ಲರಿಗೂ ಎಲ್ಲದೂ ಸಿಗುತ್ತದೆ

ಶಾಂತಲಾ ಭಂಡಿ (ಸನ್ನಿಧಿ) said...

ಸುನಾಥ್ ಅಂಕಲ್...
ನಿಜ, ಮನೆಯಲ್ಲಿ ರಾಶಿ ಭತ್ತವಿದೆ ಅಂದಮಾತ್ರಕ್ಕೆ ಎಲ್ಲ ಭತ್ತದಕಾಳುಗಳಲ್ಲೂ ಅಕ್ಕಿಯಿದೆಯೆಂದು ಸಾರಿಬಿಡುವ ಮೊದಲು ಯೋಚಿಸಬೇಕಾದ್ದೇ.
ಇಷ್ಟವಾಯ್ತು ನಿಮ್ಮ ಮಾತು.

ಚುಕ್ಕಿಚಿತ್ತಾರ said...

ಕಾಕ..
”ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿಯೇ ಇದೆ ಪರಿಹಾರ”
ಅ೦ತ ಭಟ್ಟರಿಗೆ ಯಾಕೆ ಅನ್ನಿಸಲಿಲ್ಲವೋ...
ಸಮ್ಮೋಹಿನಿಗೆ ಒಳಗಾಗಿದ್ದು ಹೌದಿರಬೇಕು...

Subrahmanya said...

ಕಾಕಾಶ್ರೀ...

ಅತ್ಯಂತ ಸೂಕ್ತ ಸಲಹೆ ನಿಡಿದ್ದೀರಿ...ನಿಮ್ಮ ವಿಚಾರವನ್ನು ವಿಶ್ವೇಶ್ವರ ಭಟ್ಟರು ಓದಿ ಪ್ರತಿಕ್ರಿಯೆ ನೀಡಲಿ ಎಂದು ಕಾಯುತ್ತೇನೆ...ಉತ್ತಮ ವಿಚಾರ ವಿಮರ್ಶೆ ಮಾಡಿದ್ದೀರಿ ಕಾಕಾ..

Narayan Bhat said...

ಸೂಕ್ತವಾದ ಸಾಂಧರ್ಭಿಕ ಲೇಖನ. ನಮ್ಮ ದೇಶದ ಜನಸಂಖ್ಯಾ ಸ್ಪೋಟದ ಸಮಸ್ಯೆ, ಜೊತೆಗೆ ಇನ್ನಿತರ ಸಂಬಂಧೀ ಸಮಸ್ಯೆಗಳನ್ನೂ ಸೃಷ್ಟಿಸಿದೆ ಎನ್ನುವುದು ನಿಜ.ಆದರೆ ಅದೇ ಕಾಲಕ್ಕೆ ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಮಾನವ ಸಂಪನ್ಮೂಲದ ಬೆಳವಣಿಗೆ ಅಮೆರಿಕಾ ದೇಶಕ್ಕೆ (ಇಲ್ಲಿನ ಅಧ್ಯಕ್ಷರೇ ಒಪ್ಪಿಕೊಂಡಂತೆ)ಸವಾಲು ಒಡ್ಡುತ್ತಿರುವುದೂ ಅಷ್ಟೇ ಸತ್ಯ. ಈ ತಂತ್ರ ಜ್ಞಾನದ ಮಾನವ ಸಂಪನ್ಮೂಲ ಬೆಳವಣಿಗೆಗೆ ಸಂಬಂಧಿಸಿದ ಬಹುತೇಕ ವ್ಯಕ್ತಿಗಳು ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದಿಂದಲೇ ಬಂದವರಾಗಿದ್ದಾರೆ ಎಂದು ನನ್ನ ಅನಿಸಿಕೆ. ಈ ಒಂದು ಕಾರಣಕ್ಕಾಗಿಯಾದರೂ ನಾವು ಹೆಮ್ಮೆ ಪಡುತ್ತಾ, ಉಳಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

ತೇಜಸ್ವಿನಿ ಹೆಗಡೆ said...

ಉತ್ತಮ ಶೀರ್ಷಿಕೆಯಡಿ ಅಸಮಂಜಸ ಲೇಖನ!

ಆ ಆಸ್ಟ್ರೇಲಿಯನ್ ಕಮಾಂಡರ್ ಹೇಳಿದ ಮತೊಳಗಿನ ವ್ಯಂಗ್ಯವೇಕೆ ಇಬ್ಬರಿಗೂ ಅರ್ಥವಾಗಲಿಲ್ಲವೇಕೋ!? ಸಂಪತ್ತು ಎಂದರೆ ಸಂತೋಷ ನೆಮ್ಮದಿ ಕೊಡುವಂಥದ್ದು. ಅದು ಯಾವ ರೂಪದಲ್ಲೇ ಇದ್ದಿರಲಿ. ಆದರೆ ಇಲ್ಲಿಯೋ ಜನಸಂಖ್ಯಾಸ್ಫೋಟದಿಂದ ಜನರ ನೆಮ್ಮದಿ, ಶಾಂತಿ ಎಲ್ಲವೂ ಮಾಯವಾಗಿ, ಎಲ್ಲೆಲ್ಲೂ ಅರಾಜಕತೆ, ಬಡತನ ಮೆರೆಯುತ್ತಿದೆ. ಕಣ್ಮುಂದೆ ಸಮಸ್ಯೆಯಿದ್ದಾಗ ಅದನ್ನು ಅರ್ಥಮಾಡಿಕೊಂಡು ಪರಿಹಾರ ಮಾರ್ಗ ಹುಡುಕಬೇಕೇ ವಿನಃ, ಈ ಸಮಸ್ಯೆಯೇ ಚೆನ್ನ, ಪರಿಹಾರಕ್ಕಾಗಿ ಶ್ರಮಿಸುವ ಯತ್ನ ಬೇಕಾಗಿಲ್ಲವೆಂಬ ಆಲೋಚನೆಯೇ ಆಲಸ್ಯತನ ಹಾಗೂ ಬೇಜವಾಬ್ದಾರಿತನದಿಂದ ಕೂಡಿದ್ದು.

ಮನಮುಕ್ತಾ said...

ಸುನಾಥ ಕಾಕಾ,
ನಿಮ್ಮ ವೈಚಾರಿಕ ವಿಮರ್ಶೆ ಇಷ್ಟವಾಯ್ತು..
ದೄಷ್ಟಿಕೋನ ಬದಲಾವಣೆಯಿ೦ದ ಸಮಸ್ಯೆ ಹೋಗಿ ಸ೦ಪತ್ತಾಗುವುದಿಲ್ಲ.ನಿಜ.
ಉತ್ತಮ ವಿಮರ್ಶೆ ..
ಧನ್ಯವಾದಗಳು.

ಸುಮ said...

ಕಾಕ , ಒಳ್ಳೆಯ ಲೇಖನ. ಈ ಮೇನೇಜ್ ಮೆಂಟ ಗುರುಗಳ ಮಾತುಗಳೇ ಹಾಗೆ ಉತ್ಸಾಹ ತುಂಬುವ ಭರದಲ್ಲಿ ಸತ್ಯವನ್ನು ಮರೆಮಾಚುವುದು. ಕೇಳುವವರು ಯೋಚಿಸಬೇಕಷ್ಟೆ.

VENU VINOD said...

ಸಮಸ್ಯೆಗಳನ್ನು ಸಿಂಪಲ್ ಆಗಿ ನೋಡಿದಾಕ್ಷಣ ಸಮಸ್ಯೆಯೇನೂ ಪರಿಹಾರ ಕಂಡುಕೊಳ್ಳದು...ಜನಸಂಖ್ಯೆ ಎಂಬುದನ್ನು ನಮ್ಮ ಶಕ್ತಿ ಎಂದು ಹೇಳಿಕೊಂಡರೂ ಅದನ್ನು ಶಕ್ತಿಯಾಗಿ ಪರಿವರ್ತಿಸುವುದು ಅಸಾಧ್ಯ..ನಿಮ್ಮ ವಿಶ್ಲೇಷಣೆ ಒಳ್ಳೆಯ ಒಳನೋಟ ಒದಗಿಸಿದೆ ಸುನಾಥರೆ...

sunaath said...

ಗುರುಮೂರ್ತಿಯವರೆ,
ನಿಮ್ಮ ಮಾತು ನಿಜ. ನಮ್ಮವರೇ ನಮ್ಮ ಸರಕುಗಳನ್ನು ಖರೀದಿಸಿದರೆ, ಆರ್ಥಿಕ ಸಮಸ್ಯೆಯ ನಿವಾರಣೆ ಸಾಧ್ಯವಾದೀತು.

sunaath said...

ಶಾಂತಲಾ,
ನೀವು ನೀಡಿದ ಉಪಮೆ--- ರಾಶಿ ಭತ್ತ ಹಾಗು ಜೊಳ್ಳು ಕಾಳುಗಳು-- ತುಂಬ ಔಚಿತ್ಯಪೂರ್ಣವಾಗಿದೆ. ನಮ್ಮ ಜನಸಂಖ್ಯೆಯಲ್ಲಿ ಇತ್ತೀಚೆಗೆ ಜೊಳ್ಳೇ ಜಾಸ್ತಿಯಾಗುತ್ತಿದೆಯೇನೊ!

sunaath said...

ವಿಜಯಶ್ರೀ,
Social and financial status ಇವು ಭಟ್ಟರನ್ನು ಸಮ್ಮೋಹಿನಿಗೆ ಒಳಪಡಿಸಿರಬಹುದೇನೊ!

sunaath said...

ಪುತ್ತರ್ ಸುಬ್ಬು,
ಆಯುಷ್ಮಾನ್ ಭವ!
ವಿಶ್ವೇಶ್ವರನು ಕಣ್ಣು ತೆರೆದರೆ ನಾನು ಕೃತಾರ್ಥ!
-ಕಾಕಾಶ್ರೀ

sunaath said...

ನಾರಾಯಣರೆ,
ಕೆಸರಿನಲ್ಲಿ ಕಮಲ ಹುಟ್ಟುವಂತೆ, ನಮ್ಮ ನಡುವೆ ಹೆಮ್ಮೆ ಪಡುವಂತಹ ಮಾನವರು ಹುಟ್ಟುತ್ತಲೇ ಇದ್ದಾರೆ. ಆದರೆ, ಕೆಸರೇ ಇತ್ತೀಚೆಗೆ ಜಾಸ್ತಿಯಾಗುತ್ತಲಿದೆ!

sunaath said...

ತೇಜಸ್ವಿನಿ,
ವ್ಯಂಗ್ಯ ತಿಳಿಯಲಾರದ ದಡ್ಡತನ ನಮ್ಮಲ್ಲಿ ಸೇರಿಕೊಂಡು ಬಿಟ್ಟಿದೆ.
ಅದಕ್ಕಾಗಿಯೇ ನಾವು ‘ಮೇರಾ ಭಾರತ ಮಹಾನ್’ ಎಂದುಕೊಳ್ಳುತ್ತಿರುವದು!

sunaath said...

ಮನಮುಕ್ತಾ,
ವಿಭಿನ್ನ ದೃಷ್ಟಿಕೋನದಿಂದ ವಿಚಾರ ಮಾಡಬೇಕು ಎನ್ನುವದನ್ನು ಒಪ್ಪಿಕೊಳ್ಳಬೇಕು. ಆದರೆ, ಇಲ್ಲಿ ಈ ಮಹಾಶಯರು ದೃಷ್ಟಿಯನ್ನು
ಮುಚ್ಚಿಕೊಂಡು ಸಮಸ್ಯೆಯನ್ನು ಪರೀಕ್ಷಿಸಿರಿ ಎನ್ನುತ್ತಿದ್ದಾರೆ!

sunaath said...

ಸುಮಾ,
ಸರಿಯಾಗಿ ಹೇಳಿದಿರಿ. ಇದು management ಗುರುಗಳ ಧಂಧೆ!

sunaath said...

ವೇಣು,
You put it exactly.

V.R.BHAT said...

ಸುನಾಥರೇ, ತಮಗೊಂದು ಮಾತು- ನಮ್ಮ ದೇಶದ ಯುವ ಪೀಳಿಗೆ ಕೆಲಸವನ್ನು ಮಾಡುವುದಕ್ಕಿಂತ ಹೆಚ್ಚಿನ ಪ್ರತಿಫಲವನ್ನು ನಿರೀಕ್ಷಿಸುತ್ತಿದ್ದಾರೆ, ಇದು ನನ್ನ ವೃತ್ತಿಯ ಅನುಭವಜನ್ಯ ಮಾತು. ಬರೇ ನಾವು ತಯಾರಿಸಿದ್ದನ್ನ/ಬೆಳೆಸಿದ್ದನ್ನ ನಾವೇ ಪರಸ್ಪರ ಖರೀದಿಸಿದರೆ ಸಾಲದು, ಯುವಕರಿಗೆ ಆಲಸ್ಯ ತೊರೆದು, ಅನವಶ್ಯಕ ಕಾಲಹರಣದ ಚಟಬಿಟ್ಟು ಕೆಲಸದಲ್ಲೇ ದೇವರನ್ನು ಕಾಣುವ ಮನೋಭಾವನೆ ಬೆಳೆಸಿಕೊಂಡರೆ ಅದು ಉತ್ತಮ ಬೆಳವಣಿಗೆ, ಇದನ್ನು ನಾವು ಹೇಳಿದರೆ-ನೀವು ಬರೆದರೆ ಇಬ್ಬರೂ ಹಾಳು ಎನಿಸಿಕೊಳ್ಳುತ್ತೇವೆ. ಚಿಂತೆಯಿಲ್ಲ, ಇದ್ದುದನ್ನ ಹೇಳಿಬಿಟ್ಟಿದ್ದೇನೆ! ಉಳಿದಂತೆ ನಿಮ್ಮ ಲೇಖನ ಮೌಲ್ಯಯುತ,ಧನ್ಯವಾದಗಳು

Guruprasad said...

ಸುನಾಥ ಸರ್,,
ತುಂಬಾ ಒಳ್ಳೆಯ ವಿಮರ್ಶೆ,, ಎಲ್ಲ ದೇಶದಲ್ಲೂ ಜನಸಂಖ್ಯೆ ಒಂದು ದೊಡ್ಡ ಸಮಸ್ಯೆ,,, ಆದರೆ ಅವರು ಹೇಳಿರುವ ಪ್ರಕಾರ ನಮ್ಮ ಜನಸಂಖ್ಯೆ ಯನ್ನೇ ಉಪಯೋಗಿಸಿ ಮುಂದೆ ಬನ್ನಿ, ಮಾನವ ಸಂಪನ್ಮೂಲವೇ ದೊಡ್ಡ ಸಂಪತ್ತು ಅಂತ ಹೇಳಿದ್ದಾರೆ.. ನೀವು ಒಂದು ದೃಷ್ಟಿ ಇಂದ ಸರಿಯಾಗಿಯೇ ವಿಮರ್ಶೆ ಮಾಡಿದ್ದೀರಾ...
ಒಳ್ಳೆಯ ಚರ್ಚಾತ್ಮಕ ಲೇಖನ.... ಇನ್ನೊಮೆ ವಿಚಾರ ಮಾಡಬೇಕು....?
ಗುರು

Ittigecement said...

ಸುನಾಥ ಸರ್...

ಜಗತ್ತಿನ ಹಲವು ದೇಶಗಳಲ್ಲಿ ಜನಸಂಖ್ಯೆ ಇಲ್ಲದಿರುವದು ದೊಡ್ಡ ಸಮಸ್ಯೆಯಾಗಿದೆ..

ಕೆಲವು ದೇಶಗಳಲ್ಲಿ "ಜನ ಸಂಖ್ಯೆ ಜಾಸ್ತಿ " ಮಾಡಲು ಪ್ರೋತ್ಸಾಹ ಕೊಡುತ್ತಿವೆ..
ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ..

ಜನಸಂಖ್ಯೆ ಕಡಿಮೆ ಇರುವ ದೇಶಗಳ ಸಮಸ್ಯೆ ಹಲವಾರು..
ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಇರುವದಿಲ್ಲ...

ನಮ್ಮಲ್ಲಿ ಹಾಗಿಲ್ಲ..
ನಮ್ಮ ಉತ್ಪನ್ನಗಳಿಗೆ ನಮ್ಮದೇ.. ಮರುಕಟ್ಟೆಯಿದೆ..

ಜನಸಂಖ್ಯೆ ಸಂಗಡ ಅವರಿಗಿರುವ ಎರಡು ಕೈಗಳ ಬಗೆಗೆ ಮರೆಯ ಬಾರದು..

ನಮ್ಮ ಮಾರುಕಟ್ಟೆಯ ಬಗೆಗೆ ವಿಶ್ವದ ಹಲವು ರಾಷ್ಟ್ರಗಳ ಹೊಟ್ಟೆಕಿಚ್ಚಿದೆ...

ನಮ್ಮ ಜನ ಸಂಖ್ಯೆ ನಮ್ಮಗೊಂದು ವರ...

ನಮಗೊಂದು ಒಳ್ಳೆಯ ಸರಕಾರ...
ಅಧಿಕಾರಿವರ್ಗದ ಜನವಿದ್ದಿದ್ದರೆ... ಅಲ್ಲವೆ..??

ಈ ರೀತಿಯಿಂದ ವಿಚಾರ ಮಾಡಿದರೆ... ಭಟ್ಟರು ಸರಿಯೆಂದು ನನ್ನ ಭಾವನೆ...

( ಒಂದು ಚರ್ಚೆಯಗಲಿ ಎಂಬ ಸದುದ್ದೇಶದ ಹೊರತು ಮತ್ತೇನಿಲ್ಲ...
ಅವಿದ್ಯಾವಂತ..
ಬಡತನದ ಜನಸಂಖ್ಯೆ ದೊಡ್ಡ ಶಾಪ.. ಇದು ನಿಜ)

ಜಲನಯನ said...

ಸುನಾಥ್ ಸರ್, ಮಿಥ್ಯ ತರ್ಕ-ತಿಳಿದುಕೊಂಡದ್ದು ತಪ್ಪಿದ್ದು ಸತ್ಯವೆಂದು ವಾದಿಸುವುದು, ದಾರಿತಪ್ಪಿಸುವ ತರ್ಕ- ಸರಿಯೇನೆಂದು ಗೊತ್ತು ಆದರೂ ಎದುರಿಗಿರುವನದು ಸರಿಯಿದ್ದರೂ ತಪ್ಪು ಎಂದು ತರ್ಕಿಸುವುದು, ಇದನ್ನು ಇಲ್ಲಿ ಹೇಳಲು ಕಾರಣ...ನಮ್ಮ ದೇಶವನ್ನುಶಕ್ತಿಯೆಂದು ಗೊತ್ತಿರುವ ಮತ್ತು ನಂಬಿರುವ ದೊಡ್ಡ ದೇಶಗಳು ನಿಮ್ಮಲ್ಲಿ ಬಡತನ ಇದೆ, ಸೌಲತ್ತುಗಳಿಲ್ಲ, ನೀವು ಹಿಂದುಳಿದಿದ್ದೀರಿ ಎನ್ನುವುದು..ಕೇವಲ ದಾರಿತಪ್ಪಿಸುವ ತರ್ಕ . ಆಸ್ಟ್ರೇಲಿಯಾದಲ್ಲಿನ ಭಾರತೀಯರ ಮೇಲಿನ ದಾಳಿಯನ್ನೇ ತೆಗೆದುಕೊಳ್ಲಿ...ಇದು ಜಗಾಂಗೀಯ ಎಂದು ಅವರಿಗೆ ಗೊತ್ತು, ಇದು ಅವರ ಹತಾಶಭಾವ...ಎಲ್ಲೆಡೆ ಭಾರತೀಯರ ಮಿದುಳು ಕೆಲ್ಸಮಾಡ್ತಿದೆಯಲ್ಲಾ..??!! ಎನ್ನೋ ಪರಚಿಕೊಳ್ಳುವ ಸ್ಥಿತಿ.. ಅದಕ್ಕೇ ಅವರು ಕೈಗೆ ಕೆಲ್ಸ....
ಬಹಳ ಚನ್ನಾಗಿ ವಿವವರಣೆ ನೀಡಿದ್ದೀರಿ..,,ಎಂದಿನಂತೆ...ವಿಚಾರಾಧೀನ ಮಾಡುವ ಕೆಲಸ ನಿಮ್ಮದು.

Unknown said...

ಮಾನ್ಯ ಸುನಾತರೆ,

ನೀವು ಕೂಡ ಬಾರತವನ್ನ ಒಟ್ಟಿಗೆ ತೆಗೆದುಕೊಂಡು ಮಂದಿಯೆಣಿಕೆಯ ಬಗ್ಗೆ ತುಂಬ ಲೋಕಾಬಿರಾಮವಾಗಿ ಮಾತಾಡಿದ್ದೀರಿ. ಇದರಲ್ಲಿ ನೀವು ಯಾವ ಡೇಟ ಕೊಟ್ ಮಾತಾಡಿಲ್ಲ. ಮಂದಿಯೆಣಿಕೆಯ ತೊಡರು ಬಾರತದಲ್ಲಿ ಎಲ್ಲೆಲ್ಲಿರುವುದು.ನಿಜವಾಗಲು ಇದಕ್ಕೆ ಕಾರಣವಾದ ಪ್ರದೇಶಗಳಾವುವು ಅಂತ ತಾವು ಉಂಕಿಸಲು ಮನಸ್ಸು ಮಾಡಿಲ್ಲ.

ಈಗ್ಗೆ ಕೆಲವು ದಿನಗಳ ಹಿಂದೆ ’ಪ್ರಜಾವಾಣಿ’ಗೆ ನಾನು ಬರೆದ ಓಲೆಯ(http://www.prajavani.net/Content/Sep232009/netmail20090922147870.asp)
ತಿರುಳನ್ನು ಇಲ್ಲಿ ಹಾಕುತ್ತಿದ್ದೇನೆ.

"ಮಾನ್ಯರೆ,
ಈಚೆಗೆ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಚೀನಾ ಮಾದರಿಯಲ್ಲಿ ಮಂದಿಯೆಣಿಕೆಯ ಹೆಚ್ಚಳಕ್ಕೆ ತಡೆಯೊಡ್ದುವ ಕ್ರಮ ಕೈಗೊಳ್ಳುವುದರ ಬಗ್ಗೆ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿಗಳು ಕರ್ನಾಟಕದ ಜನಯೆಣಿಕೆಯ ಅಂಕಿ-ಅಂಶಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಂತೆ ಕಾಣುತ್ತಿಲ್ಲ. ಭಾರತ ದೇಶದ ಸೆನ್ಸಸ್-2001 ತಾಣದ (http://www.censusindia.gov.in/Census_Data_2001/Census_data_finder/Census_Data_Finder.aspx) ಪ್ರಕಾರ ಕರ್ನಾಟಕದ ಜನಸಾಂದ್ರತೆ(population density)
ಇರುವುದು ಪ್ರತಿ ಚದರ ಕಿಲೋಮೀಟರಿಗೆ ಬರೀ 275. ಇದು ಭಾರತ ದೇಶದ ಒಟ್ಟಾರೆ ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿ.ಮಿ,ಗೆ 312 ಕ್ಕಿಂತ ಕಡಿಮೆಯಿದೆ. ಇದೇ ಅಂಕಿ-ಅಂಶ ನಮ್ಮ ದೇಶದ ದೊಡ್ಡ ರಾಜ್ಯಗಳಾದ ಪಶ್ಚಿಮ ಬಂಗಾಳ-903, ಬಿಹಾರ-881, ಕೇರಳ- 819, ಉತ್ತರ ಪ್ರದೇಶ-689, ಪಂಜಾಬ್-483 ಇರುತ್ತವೆ, ಅಂದರೆ ನಮ್ಮ ದೇಶದ ಜನಸಂಖ್ಯೆ ಸಮಸ್ಯೆಯಿದ್ದರೆ ಅವು ಈ ರಾಜ್ಯಗಳಲ್ಲಿ ಮಾತ್ರ ಹೊರತು ಕರ್ನಾಟಕದಲ್ಲಿ ಖಂಡಿತ ಈ ಸಮಸ್ಯೆಯಿಲ್ಲ. ಆದಾಗಿಯೂ ಸರಕಾರವೂ ಈ ಜನಸಂಖ್ಯೆ ತಡೆಗಟ್ಟುವ ಕ್ರಮ ಕೈಗೊಂಡರೆ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಇನ್ನು
ಕಡಿಮೆಯಾಗಿ ವಲಸೆಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ. ಇದರಿಂದ ನಮ್ಮ ನೆಲದಲ್ಲೇ ಕನ್ನಡೇತರರು ಹೆಚ್ಚಾಗಿ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗಬೇಕಾಗಬಹುದು. ಆದ್ದರಿಂದ
ಸರ್ಕಾರವು ಜನಸಂಖ್ಯೆಯನ್ನು ತಡೆಗಟ್ಟುವ ಯಾವ ಯೋಜನೆ ಅಥವಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಕಂಡು ಬರುವುದಿಲ್ಲ"

ಹದುಳವಿರಲಿ,
ಬರತ್

shivu.k said...

ಸುನಾಥ್ ಅರ್,

ಭಟ್ಟರ ಲೇಖನವನ್ನು ನಾನು ಓದಿದ್ದೆ. ನೀವು ಇಷ್ಟು ಚೆನ್ನಾಗಿ ಅದನ್ನು ವಿಮರ್ಶಿಸಿದ ಮೇಲೆ ನಿಮ್ಮ ಮಾತು ಖಂಡಿತ ಸರಿಯೆನಿಸುತ್ತದೆ. ಕೆಲವು ದೊಡ್ಡ ವ್ಯಕ್ತಿಗಳು ಹೇಗೆ ಬೇರೆಯವರ ಪ್ರಭಾವಕ್ಕೊಳಗಾಗಿ ತಮ್ಮ ತರ್ಕವನ್ನು ಕಳೆದುಕೊಳ್ಳುತ್ತಾರೆ ಅನ್ನುವುದಕ್ಕೆ ಉದಾಹರಣೆ ಸಹಿತ ವಿವರಿಸಿದ್ದೀರಿ...

ಧನ್ಯವಾದಗಳು.

umesh desai said...

ಕಾಕಾ ಭಟ್ಟರು ಹೊಸಾ ಹೊಸಾ ಆವಿಷ್ಕಾರ ನಡಿಸ್ಯಾರ ಅದಕ್ಕ ಅವ್ರ ತಲಿಯೊಳಗ ಇಂಥಾ ವಿಚಾರ ಬರತಾವ. ನಿಮ್ಮ ವಿಮರ್ಷಾ
ಲೇಖನ ಮಜಬೂತ ಅದ .

sunaath said...

ವ್ಹಿ.ಆರ್.ಭಟ್ಟರೆ,
ತಮ್ಮ ಸ್ಪಂದನೆಗೆ ಧನ್ಯವಾದಗಳು. ನಮ್ಮ ದೇಶದ ಸಮಸ್ಯೆಗೆ ಹಲವು ಮುಖಗಳಿವೆ. ನಮಗೆ ಕಂಡದ್ದನ್ನು ನಾವು ಹೇಳುತ್ತ ಹೋಗಲೇ ಬೇಕಲ್ಲವೆ? ಉಳಿದದ್ದು ದೇವರ ಚಿತ್ತ!

sunaath said...

ಗುರು,
ಪುರಂದರದಾಸರು ಹೇಳಿಲ್ಲವೆ:
"ಮಕ್ಕಳಿದ್ದರು ಚಿಂತೆ
ಇಲ್ಲದಿದ್ದರು ಚಿಂತೆ!"
ನಮ್ಮ ದೇಶದಲ್ಲಿ ಮಕ್ಕಳ ಅತಿವೃಷ್ಟಿಯ ಚಿಂತೆಯಾದರೆ, ಕೆಲವೆಡೆ
ಅನಾವೃಷ್ಟಿಯ ಚಿಂತೆ!

sunaath said...

ಪ್ರಕಾಶ,
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ನೀವಂದಂತೆ ಈ ವಿಷಯಕ್ಕೆ ಒಂದು ವಿಸ್ತಾರವಾದ ಚರ್ಚೆಯ ಅಗತ್ಯ ಇದೆ.

sunaath said...

ಜಲನಯನ,
Global politics ತುಂಬ ಜಟಿಲವಾಗಿದೆ. ಪ್ರತಿ ದೇಶವೂ ತನ್ನ ಸ್ವಾರ್ಥಕ್ಕೆ ಅನುಸಾರವಾಗಿ ತನ್ನ ಚಿಂತನೆಯನ್ನು ಭಾರತದ ಮೇಲೆ ಹೇರುತ್ತಿದೆ.

sunaath said...

ಭರತ,
ತಾವು ಮತ್ತೆ ಅದೇ trapನಲ್ಲಿ ಬೀಳುತ್ತಿದ್ದೀರಿ. ಭಾರತೀಯ ಜನಸಂಖ್ಯಾಸ್ಫೋಟವನ್ನು ನಾವು ರಾಷ್ಟ್ರೀಯ ಸಮಸ್ಯೆ ಎಂದೇ ನೋಡಬೇಕಾಗುವದೇ ಹೊರತು ಪ್ರಾಂತೀಯವಾಗಿ ಅಲ್ಲ.

sunaath said...

ಶಿವು,
ತುಂಬಾ ಧನ್ಯವಾದಗಳು. ಭಟ್ಟರ ವಿಚಾರಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ "ಪ್ರಭಾವಿ" ವ್ಯಕ್ತಿಗಳ ಸಮ್ಮುಖದಲ್ಲಿ ಎಷ್ಟು ಥಟ್ಟನೆ ಅವರು ಬದಲಾದರಲ್ಲ ಎನ್ನುವದೇ ಬೇಸರದ ಸಂಗತಿ.

sunaath said...

ಉಮೇಶ,
ಹೊಸ ವಿಚಾರಗಳ ನಿರಂತರ ಆವಿಷ್ಕಾರವು ಬಹುಶಃ ಪತ್ರಿಕಾಕರ್ತರಿಗೊಂದು ಶಾಪ ಅಂತ ಅನಸ್ತದ. ಹಿಂಗಾಗಿ ಗಣಪ್ಪನ್ನ
ಮಾಡೋ ಬದಲಿ ಹಣಮಪ್ಪನ್ನ ಮಾಡತಾರ.

Unknown said...

ಸುನಾತರೆ,
ತಾವು ದಿಟಕ್ಕೆ(ವಾಸ್ತವಕ್ಕೆ) ಬೆನ್ನು ಮಾಡುತ್ತಿದ್ದೀರಿ.
ಎಲ್ಲದಕ್ಕೂ ತರ್ಕವನ್ನು ಮುಂದಿಡುವ ತಾವು "caause & effect relation"(
ಇದರ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಚಿಟುಕಿಸಿ-- http://en.wikipedia.org/wiki/Ishikawa_diagram)ಎಂಬ ತರ್ಕವನ್ನ ಒಪ್ಪುತ್ತೀರಿ ಎಂದು ನಂಬುತ್ತೇನೆ. ಇಲ್ಲಿ ಪ್ರಾಂತೀಯ, ದೇಶದ ಎಂಬ ಬೇರೆತನವಿಲ್ಲ. ಸುಮ್ಮನೆ ದೇಶದಲ್ಲೆಲ್ಲ ಮಂದಿಯೆಣಿಕೆ ಸಮಸ್ಯೆಯಿದೆ ಎಂದು ಹುಯಿಲೆಬ್ಬುಸುವುದನ್ನು ಬಿಡಿ.

ಬಂಗಾಳ, ಬಿಹಾರದಲ್ಲಿ ಮಂದಿಯೆಣಿಕೆ ಸಮಸ್ಯೆಯಿದೆ, ಕರ್ನಾಟಕದಲ್ಲಿ ಕಂಡಿತ ಇಲ್ಲ.(ಒಸಿ ಸೆನ್ಸಸ್ ತಾಣ ನೋಡಿ ಸ್ವಾಮಿ). ಅದು ಬರೀ ದೇಶದ ಸಮಸ್ಯೆಯಾಗಿದ್ದರೆ ಆ ಸೆನ್ಸಸ್ ತಾಣದವರು(ಸರ್ಕಾರದವರು), ರಾಜ್ಯ ಮಟ್ಟದ ಅಂಕಿ-ಅಂಶ ಏಕೆ ಪ್ರಕಟಿಸಿದರು?

ನಾನು ಯಾವ ಕೆಡ್ಡಕ್ಕೂ ಬಿದ್ದಿಲ್ಲ(ಯಾಕಂದರೆ ವಿಶ್ವೇಶ್ವರ ಬಟ್ಟರು ನಾನು ಇಶ್ಟಪಡದ ಬರಹಗಾರರಲ್ಲಿ ಒಬ್ಬರು:) ).

ನಾನು ಪ್ರಾಕ್ಟಿಕಲ್ ಆಗಿ ಡೇಟ ಕೊಟ್ ಮಾತಾಡುತ್ತಿದ್ದೇನೆ. ನೀವು ಆ ಡೇಟ ನೋಡಿ ಮಾರುಲಿಯಬೇಕಾಗಿ ವಿನಂತಿ. ಇಲ್ಲವಾದರೆ ನೀವು ತುಂಬ ಅತಾರ್ಕಿಕ,impractical ಮತ್ತು ಅಸಂಬದ್ದವಾಗಿ (ಡೇಟ ನೋಡದೆ)ತಾವು ಮಾತಾಡುತ್ತಿದ್ದೀರೆಂದು ನಾನು ತಿಳಿಯಬೇಕಾಗುತ್ತದೆ.

ಗೌತಮ್ ಹೆಗಡೆ said...

mutti nodkolo haage hodediddeeri barahadale:) baala khushyat e lekhana oadi:)

sunaath said...

ಭರತ,
ನಮ್ಮ ರಾಜ್ಯಕ್ಕೆ ನಮ್ಮ ದೇಶದ ಸಂಬಂಧವಿಲ್ಲ ಎಂದು ನೀವು ಹೇಳುವದು ಅವಿವೇಕದ ಮಾತಾಗುತ್ತದೆ. ಜನಸಂಖ್ಯಾಸ್ಫೋಟ ಕೇವಲ
ಪಂಜಾಬ ಅಥವಾ ಬಿಹಾರಕ್ಕೆ ಸಂಬಂಧಿಸಿದ್ದು ಎನ್ನುವದಾದರೆ, ಭಾರತೀಯ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬಿಗಳು
ಕೇವಲ ಪಂಜಾಬದ ರಕ್ಷಣೆ ಮಾಡುತ್ತಿದ್ದಾರೆಯೆ? ನಮ್ಮ ನೋಬೆಲ್
ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಕೂರರನ್ನು ಬಂಗಾಲಿ ಕವಿ ಎಂದು ನೀವು ತಿರಸ್ಕರಿಸುತ್ತೀರಾ, ಅಥವಾ ಕನ್ನಡದ ಅನೇಕ ಸಾಹಿತಿಗಳ ಮಾತೃಭಾಷೆ ಕನ್ನಡವಲ್ಲ ಎಂದು ಅವರನ್ನು ಹೊರಗಿಡುತ್ತೀರಾ? ಭರತ, ಕರ್ನಾಟಕವು ಭಾರತದ ಒಂದು ಭಾಗವೆಂದು ಅರಿಯಿರಿ.
ಕುವೆಂಪು ಅವರ ನಾಡಗೀತೆಯನ್ನು ನೆನಪಿಸಿಕೊಳ್ಳಿ:
"ಜಯ ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ!"

sunaath said...

ಗೌತಮ,
ಧನ್ಯವಾದಗಳು. ಭಟ್ಟರ ಅಭಿಪ್ರಾಯಸ್ವಾತಂತ್ರ್ಯಕ್ಕೆ ನನ್ನ ವಿರೋಧವಿಲ್ಲ. ಆದರೆ ಅವರು ಪ್ರಭಾವಾಧೀನರು ಎನ್ನುವ ಅಂಶ
ನನ್ನನ್ನು ದಿಗಿಲಿಗೆ ಬೀಳಿಸುತ್ತಿದೆ.

Unknown said...

"...ನಮ್ಮ ರಾಜ್ಯಕ್ಕೆ ನಮ್ಮ ದೇಶದ ಸಂಬಂಧವಿಲ್ಲ ಎಂದು ನೀವು ಹೇಳುವದು ಅವಿವೇಕದ ಮಾತಾಗುತ್ತದೆ. "

ನಾನು ಹೀಗೆ ಹೇಳಿಲ್ಲ.(ಹೇಳಿದ್ದರೆ ಕೋಟ್ ಮಾಡಿ),
ನಿಮ್ಮ conclusions ಗೆ ನಾನು ಹೊಣೆಯಾಗಲ್ಲ.

ಈಗ ನಿಮ್ಮ ಬೀದಿಯಲ್ಲಿ ಯಾವುದೊ ಮನೆಗೆ ಬೆಂಕಿ ಬಿದ್ದಿದೆ ಅಂದುಕೊಳ್ಳಿ...ಆಗ ನೀವು ನಿಮ್ಮ ಮನಗೆ ಬೆಂಕಿ ಬಿದ್ದಿದೆ ಅಂದುಕೊಳ್ಳುತ್ತೀರ?. ಮೊದಲು ಯಾವ ಮನೆಗೆ ಬೆಂಕಿ ಬಿದ್ದಿದೆ
ಆ ಮನೆಯನ್ನು ಕಾಪಾಡಲು (ನೀರೆರಚಿಯೊ, fire extinugisher ಬಳಸಿಯೊ) ಮುಂದಾಗುತ್ತೇವೆ.

ಇದು ಅದೇ ತರ.

ನಾನು ಹೇಳುತ್ತಿರುವುದು ಇಶ್ಟು

ಯಾವುದೇ ತೊಡರು/ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಾಗ ಸಮಸ್ಯೆಯನ್ನು ಅರಿಯುವುದು ಮುಕ್ಯವಾಗುತ್ತದೆ. ಅಮೇಲೆಯೆ ಅದಕ್ಕೆ ಪರಿಹಾರ ಕಂಡುಹಿಡಿಯಬೇಕು.

ನನ್ನ ಪ್ರಕಾರ ನಿಮಗೆ ಮಂದಿಯೆಣಿಕೆಯ ತೊಡರಿನ ಸಮಸ್ಯೆಯ ಬಗ್ಗೆ ಸರಿಯಾದ ಅರಿವಿಲ್ಲ. ಯಾಕಂದ್ರೆ ನಿಮಗೆ ಸರಿಯಾದ ಡೇಟ ಗೊತ್ತಿಲ್ಲ. ಡೇಟ ಕೊಟ್ಟರು ನೀವು ನೋಡುತ್ತಿಲ್ಲ ಮೇಣ್ ಅದರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬರೀ ಲೋಕಾಬಿರಾಮದ ಮಾತುಗಳನ್ನೇ ಆಡುತ್ತಿದ್ದೀರಿ.

ಶೆಟ್ಟರು (Shettaru) said...

ಕಾಕಾ,

ಉತ್ತಮ ವಿಮರ್ಶೆ.

-ಶೆಟ್ಟರು

sunaath said...

ಪ್ರಿಯ ಸ್ನೇಹಿತ ಭರತ,
ನಾನು ಶ್ರೀ ವಿಶ್ವೇಶ್ವರ ಭಟ್ಟರ ಅಭಿಪ್ರಾಯಾಂತರದ ಬಗೆಗೆ ನನ್ನ
ವಿಚಾರವನ್ನು ಪ್ರಸ್ತಾವಿಸುತ್ತಿದ್ದೇನೆಯೇ ವಿನಃ, ಜನಸಂಖ್ಯಾ ಸ್ಫೋಟದ ಸಂಖ್ಯಾಜ್ಞಾನದ ಬಗೆಗೆ ಅಲ್ಲ ಎನ್ನುವ ಅಂಶ ನಿಮ್ಮ
ಗ್ರಹಿಕೆಯ ಹೊರಗೆ ನಿಂತಿರುವಂತೆ ತೋರುತ್ತದೆ. ದಯವಿಟ್ಟು ವಿಷಯಕ್ಕೆ ಸಬಂಧಿಸಿದಂತೆ ಮಾತ್ರ ಚರ್ಚಿಸಿರಿ. ವಿಷಯಾಂತರ ಬೇಡ.

sunaath said...

ಶೆಟ್ಟರ,
ಧನ್ಯವಾದಗಳು.
-ಕಾಕಾ

ಸೀತಾರಾಮ. ಕೆ. / SITARAM.K said...

ಜನಸ೦ಖ್ಯೆಯೂ ಸಮಸ್ಯೆಯೆ? ಅಲ್ಲವೇ?
ಜನಸ೦ಖ್ಯೆಯನ್ನು ಬೇರೆ ರೀತಿಯಿ೦ದ ನೋಡದಾಗದೇ-ಸಮಸ್ಯೆ ಎ೦ಬುದನ್ನು ಬಿಟ್ಟು?
ಭಾಶಾವಾರು ಸಮಸ್ಯಾ ತಳುಕು ಭರತರ ಇನ್ನೊ೦ದು ಗೋಜಲು.

ನಮ್ಮ ಜನಸ೦ಖ್ಯಾಸ್ಫ಼ೋಟ ಸಮಸ್ಯೆಯೆ. ಅದನ್ನು ಯಾರೂ ಅಲ್ಲಗಳೆಯರು. ಹಾಗೆ೦ತಾ ಅದರಲ್ಲಿ ಒಳ್ಳೇ ಅ೦ಶಗಳಿಲ್ಲವೆ೦ದಲ್ಲಾ. ನಮಗೆ ಸಧ್ಯ ಬೇಕಾದದ್ದು ಜನಸ೦ಖ್ಯಾನಿಯ೦ತ್ರಣ ಹಾಗೂ ಹೊ೦ದಿರುವ ಜನಸ೦ಖ್ಯೆಯ ಸದುಪಯೋಗ.

ಸರ್ವರಿಗೂ ಶಿಕ್ಷಣ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳು ಸಿಕ್ಕಿ ಬಡತನ ಮಾಯವಾದರೇ ಜನಸ೦ಖ್ಯೆ ಸಮಸ್ಯೆಯೆ ಅಲ್ಲ. ಆ ಸ೦ಕಲ್ಪ ನಮ್ಮಲ್ಲಿದೆಯೆ? ಯಾರೂ ಏನೇ ಹೇಳಿದರೂ ಎರಡು ಗು೦ಪಿನಲ್ಲಿ ಪರ ವಿರೋಧಿ ಚರ್ಚೆಗೆ ನಮ್ಮ ಭುದ್ಧಿ ಸೀಮಿತವಾಗುವ ನಮ್ಮ ಪರಿಗೆ ನನಗೂ ಆಶ್ಚರ್ಯವೆನಿಸುತ್ತದೆ.
ಭಟ್ಟರೂ ಪ್ರಭಾವಿ ವ್ಯಕ್ತಿಯ ಸಮ್ಮೋಹನಕ್ಕೆ ಸಿಲುಕಿದರೊ? ಪ್ರಭಾವಿ ವ್ಯಕ್ತಿಗಳು ಕಮಾ೦ಡರನ ಸಮ್ಮೋಹನಕ್ಕೊಳಗಾದರೋ? ನಾವು ಸುನಾಥರ ಲೇಖನದ ಸಮ್ಮೋಹನೆಗೊಳಗಾದೇವೊ? ಭರತರು ತಮ್ಮ ಪ್ರಾ೦ತೀಯ ಜನಸ೦ಖ್ಯಾ ಅ೦ಕಿ ಅ೦ಶಗಳಿ೦ದ ವ್ಯವಸ್ತಿತವಾಗಿ ಸಮ್ಮೋಹಿನಿಗೊಳಪದಿಸುತ್ತಿರುವರೋ? ತಮ್ಮ ಅಧ್ಯಯನದ ಬಗ್ಗೆ ತಿಳಿಸುವ ಧಾವ೦ತವೋ ಅವರಿಗೆ?.
ಪ್ರತಿಯೊ೦ದರಲ್ಲೂ ಪರ-ವಿರ್‍ಓಧ ಚರ್ಚೆಯ ಅ೦ಶಗಳಿರುತ್ತವೆ. ಚರ್ಚೆಯೂ ಅವರವರ ನ೦ಬಿಗೆ ಮೇಲೆ ಸಾಗುತ್ತದೆ. ಸಾರ್ವತ್ರಿಕವಾಗಿ ಸ್ವೀಕರಿಸಬೇಕಾದ ಸತ್ಯಗಳು ಜಗತ್ತಲ್ಲಿ ಇಲ್ಲ. ಕಾಲ, ಸನ್ನಿವೇಶ ಮತ್ತು ನಮ್ಮ ನಮ್ಮ ನ೦ಬಿಕೆಗಳಿಗೆ ಅನುಗುಣವಾಗಿ ನಮ್ಮ ಸತ್ಯ-ಮಿಥ್ಯೆ ಗಳು ಜನ್ಮ ತಾಳುತ್ತವೆ. ನಮ್ಮ ಇ೦ದಿನ ಸತ್ಯ ಇ೦ದು ಬೇರೆಯವರಿಗೆ ಮಿಥ್ಯವಾಗಬಹುದು ಅಥವಾ ನಾಳೇ ನಮಗೆ ಮಿಥ್ಯವಾಗಬಹುದು. ಸ೦ಕೀರ್ಣ ವಿಭಿನ್ನ ಯೋಚನೆಯ ಪರಸ್ಪರರಲ್ಲಿ ಕಾಲುನಕಾಲಕ್ಕೆ ಸತ್ಯೆ-ಮಿಥ್ಯೆ ಗಳು ರೂಪಾ೦ತರಗೊಳುತ್ತವೆ. ಭಟ್ಟರೂ ಸರಿ, ಪ್ರಭಾವಿ ವ್ಯಕ್ತಿಗಳೂ ಸರಿ, ಕಮಾ೦ಡರರೂ ಸರಿ ಸುನಾಥರೂ ಸರಿ, ಭರತರೂ ಸರಿ- ಅವರವರ ಸ್ಥಳದಲ್ಲಿ.
ನಮಗೆ ಬೇಕಾದದ್ದು ನಾವು ತೆಗೆದುಕೊಳ್ಳುವಾ... ಅಪಥ್ಯೆಯನ್ನು ಕಡೆಗಣಿಸುವಾ...ಆದರೆ ಪ್ರತಿಯೊಬ್ಬರ ಬರಹದಲ್ಲಿ ಒ೦ದು ಹ೦ಚುವಿಕೆಯ ತುಡಿತವಿದೆ... ಅವರ ಅನುಭವವಿದೆ... ಅವರ ನ೦ಬಿಕೆಗಳಿವೆ.... ಬನ್ನಿ ಅವುಗಳನ್ನೂ ಸಮಾನವಾಗಿ ಗೌರವಿಸೋಣ.
ತೇಜಸ್ವಿನಿಯವರು ಹೇಳುವ೦ತೆ ವಿಭಿನ್ನತೆಯಲ್ಲಿ ಏಕತೆ ಹೊ೦ದಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ಸುನಾಥರವರಿಗೆ ಒಳ್ಳೇ ಚಿ೦ತನೆಗೆ ಒಳಪಡಿಸಿದ ಲೇಖನವನ್ನು ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದಗಳು. ಪ್ರತಿಕ್ರಿಯಿಸಿ ಚರ್ಚೆ ಒದಗಿಸಿದವರಿಗೂ ವ೦ದನೆಗಳು. ಒಟ್ಟಿನಲ್ಲಿ ಭಟ್ಟರ ಲೇಖನ, ಸುನಾಥರ ಅ೦ಕಣ ಮತ್ತು ಒದುಗರ ಪ್ರತಿಕ್ರಿಯೆಗಳು ಎಲ್ಲರ ಜ್ಞಾನವಿಸ್ತಾರ ಹಾಗೂ ಚಿ೦ತನೆ ಹೆಚ್ಚಿಸಿದ್ದರಲ್ಲಿ ಸ೦ಶಯವಿಲ್ಲ.

Unknown said...

ನಲ್ಮೆಯ ಸುನಾತರೆ,

ಇಲ್ಲಿ ವಿಶಯಾಂತರ ಎಲ್ಲಿಂದ ಬಂತು? ನನಗೆ ತಿಳಿಯಲಿಲ್ಲ

ಬಟ್ಟರು ದೇಶಕ್ಕೆ ಮಂದಿಯೆಣಿಕೆಯ ತೊಡರಲ್ಲ ಅದು ಒಂದು +ವ್ ಅಂಶ ಅಂತ ಹೇಳುವುದಕ್ಕೆ ಮೊಗಸಿದ್ದಾರೆ.

ನೀವು ಅದನ್ನ ಅಲ್ಲಗಳೆದು, ಅಲ್ಲ ಅದು ನಮ್ಮ ದೇಶದ ತೊಡರು ಅಂತ ಹೇಳ್ತಾ ಇದ್ದೀರಿ.

ನಾನು ಹೇಳುತ್ತಿರುವುದು ನಮ್ಮ ದೇಶದಲ್ಲೆಲ್ಲಾ ಈ ಮಂದಿಯೆಣಿಕೆಯ ತೊಡರಿಲ್ಲ ಕೆಲವು ರಾಜ್ಯಗಳಲ್ಲಿ(ಬಂಗಾಳ,ಬಿಹಾರ) ಇವೆ, ಇನ್ನು ಕೆಲವು ರಾಜ್ಯಗಳಲ್ಲಿ (ಕರ್ನಾಟಕ, ಆಂದ್ರ)ಇಲ್ಲ ಅಂತ ಹೇಳುತ್ತಿದ್ದೇನೆ. ಇದರ ಬಗ್ಗೆ ಚರ್ಚೆಯಾದರೆ ನನಗೆ ನಲಿವಾಗುತ್ತಿತ್ತು.

ಸೀತಾರಾಮರವರೆ,

ನಾನು ಹೇಳಿರುವುದರಲ್ಲಿ ಯಾವ ಪ್ರಾಂತೀಯ ಬಾವನೆ ಇದೆ? ನಾನು ಹೇಳುತ್ತಿರುವುದು data based obvious conclusions. ನಾನು ಹೇಳುವುದಕ್ಕೆ ಪುರಾವೆಯಾಗಿ ಈಗಾಗಲೆ ಸೆನ್ಸಸ್ ತಾಣ ಮತ್ತು ಅಲ್ಲಿರುವ ತಲೆಮೆಯ ಅಂಕಿ-ಅಂಶಗಳನ್ನು ಈಗಾಗಲೆ ಕೊಟ್ಟಿದ್ದೇನೆ.

ಕೊನೆಯದಾಗಿ, ಸೆನ್ಸಸ್ ತಾಣದಲ್ಲಿರುವ ಅಂಕಿ-ಅಂಶಗಳ ಬಗ್ಗೆ ಚರ್ಚೆಯಾದರೆ ಒಳ್ಳೆಯದು.

ಕೊಸರು: Attack the issue not the person.

ಸೀತಾರಾಮ. ಕೆ. / SITARAM.K said...

ಶ್ರಿಯುತ ಭರತರೇ,
ನನ್ನ ಅಭಿಪ್ರಾಯದ ಸಾರ ತಾವು ಹೇಗೆ ಸ್ವೀಕರಿಸಿರುವಿರೋ ತಿಳಿಯದು. ಅದರೆ ತಮ್ಮ ಮರು ಪ್ರತಿಕ್ರಿಯೆಯಿ೦ದ ತಾವು ಅದನ್ನು ಬೇರೆ ರೀತಿ ಅರ್ಥೈಸಿರೆನ್ನುವದು ಮಾತ್ರ ನನಗೆ ವಿದಿತವಾಯಿತು. ಮೊದಲನೆಯದಾಗಿ ನಾನು ಪ್ರತಿಯೊ೦ದು ವ್ಯಕ್ತಿಯನ್ನು ಗೌರವಿಸಿ ಅವರಿ೦ದ ಪಡೆಯುವ ಅ೦ಶಗಳನ್ನು ಹೆಕ್ಕಿ ಅವರೊ೦ದಿಗಿನ ಭಿನ್ನಭಿಪ್ರಾಯದ ವಿಷಯಗಳನ್ನು ಕಡೆಗಾಣಿಸಿ ಚರ್ಚಿಸದೇ ಬಿಡುವ ವ್ಯಕ್ತಿ. ನಾನು ಹೇಳಿದ್ದೆನೆ೦ದರೇ,
೧. ಪ್ರತಿಯೊಬ್ಬ ವ್ಯಕ್ತಿಯು- ಭಿನ್ನ- ವಿಭಿನ್ನ ಅವರವರ ಪರಿಸರ, ಕಾಲ ಮತ್ತು ನ೦ಬಿಕೆಗಳಿ೦ದ ಜೊತೆಗೆ ಹೊ೦ದುವ ಪರಿಸರ ಹಾಗೂ ವ್ಯಕ್ತಿಗಳ ಪ್ರಭಾವದಿ೦ದ.
೨. ಸಾರ್ವತ್ರಿಕ ಸತ್ಯ ಅಥವಾ ಮಿಥ್ಯಗಳಿಲ್ಲ ಏಕೆ೦ದರೇ ದೃಷ್ಟಿಕೋನಗಳು ವ್ಯಕ್ತಿ-ವ್ಯಕ್ತಿಗಳಿ೦ದ ಭಿನ್ನ-ವಿಭಿನ್ನ.
೩. ಬರವಣಿಗೆಯ ಉದ್ದೇಶ ತಮ್ಮ ನ೦ಬಿಕೆಗಳನ್ನು ಇನ್ನೊಬ್ಬರಿಗೆ ವಿಶದಪಡಿಸುವದು-ಅದರ ಉದ್ದೇಶ ಸಮ್ಮೋಹನವೇ! ಅದರೆ ಅದು ಕೆಲವರನ್ನು ಸಮ್ಮೋಹಿಸಬಹುದು ಮತ್ತು ಕೆಲವರನ್ನು ಪ್ರಚೋದಿಸಬಹುದು -ಇದಕ್ಕೂ ಅವರವರ ನ೦ಬಿಕೆಗಳೇ ಕಾರಣ.
೪. ನ೦ಬಿಕೆಗಳು ಕಾಲಕಾಲಕ್ಕೆ, ಪರಿಸರ-ಪರಿಸರದಿ೦ದ, ಪ್ರಭಾವ-ಪ್ರಚೋದನೆಗಳಿ೦ದ ಸದಾ ಮಾರ್ಪಾಡಿನಲ್ಲಿರುತ್ತೆ.
೫. ಇಷ್ಟವಾದುದನ್ನು ಸ್ವೀಕರಿಸಿ- ಅಪಥ್ಯವನ್ನು ವರ್ಜಿಸಿ ( ಚರ್ಚಿಸುವ ಅಗತ್ಯ ಇಲ್ಲ)
೬. ನ೦ಬಿಕೆಗಳ ಭಿನ್ನಭಿಪ್ರಾಯದ ಚರ್ಚೆಗಳು ವೈಯುಕ್ತಿಕ ವಿರೋಧಕ್ಕೆ ತಿರುಗುವದರಿ೦ದ ವ್ಯಕ್ತಿ-ವ್ಯಕ್ತಿಗಳ ನಡುವಣ ಕ೦ದಕಕ್ಕೆ ಕಾರಣವಾಗುವವು.
ಭಟ್ಟರು ತಮಗೆ ತಿಳಿದದ್ದು ಹೇಳಿದ್ದಾರೆ, ಸುನಾಥರು ತಮಗೆ ತಿಳಿಸಿದ್ದು ಹೇಳಿದ್ದಾರೆ , ನೀವು ನಿಮಗೆ ತಿಳಿದಾಉ ಮತ್ತು ನಾನು ನನಗೆ ತಿಳಿದದ್ದು. ಬೇಕಾದರೆ ಸ್ವೀಕರಿಸಿ ಬೇಡಾದದ್ದು ವರ್ಜಿಸಿ. ನಿಮ್ಮ ಅಭಿಪ್ರಾಯ ಒತ್ತಾಯವಾಗಿ ಹೇರುವ ಪ್ರಯತ್ನ ಬೇಡ ಅಥವಾ ಇನ್ನೊಬ್ಬರ ವಿಚಾರ ಒತ್ತಾಯವಾಗಿ ಸಾರ್ವತ್ರಿಕ ಸತ್ಯ ಅಥವಾ ಮಿಥ್ಯ ಎ೦ಬ ಘೋಷಣೆ ಮಾಡುವ ಪ್ರಯತ್ನ ಬೇಡ.
ಹಾ ಅ೦ದ ಹಾಗೆ ನನ್ನ ಅಭಿಪ್ರಾಯದಲ್ಲಿ ತಮ್ಮಲ್ಲಿ ಪ್ರಾ೦ತಿಯ ಭಾವನೆ ಇದೆ ಎ೦ಬ ಅರ್ಥದಲ್ಲಿ ಎಲ್ಲೂ ಹೇಳಿಲ್ಲ. ತಮ್ಮ ಪ್ರಾ೦ತವಾರು ಜನಸ೦ಖ್ಯಾ ಅ೦ಕಿ ಅ೦ಶ ಗಳಿ೦ದ ಸುನಾಥರ ಲೇಖನಕ್ಕೆ ಇನ್ನೊ೦ದು ಆಯಾಮ ತೆರೆದು ಮತ್ತಷ್ಟು ಸಮ್ಮೋಹಿನಿಗೊಳಪಡಿಸಿದ್ದಿರೆ೦ದು ಹಾಗೂ ತಮ್ಮ ಅಧ್ಯಯನ ವನ್ನು ಹ೦ಚಿಕೊಳ್ಳುವ ಧಾವ೦ತ ತಮ್ಮಲ್ಲಿದೆಯೆ೦ದು ಹೇಳಿದ್ದೆನೆ. ಬರವಣಿಗೆಯ ಮೂಲ ಆಶಯ ಸಮ್ಮೋಹಿನಿಯೆ೦ದು ಮೊದಲೇ ಹೇಳಿರುವದರಿ೦ದ ಹಾಗೂ ನಾನು ಒಪ್ಪಿರುವದರಿ೦ದ ಮತ್ತೆ ಆ ಚರ್ಚೆ ಬೇಡ. ನಮಗೆ ಗೊತ್ತಿರುವ ವಿಷಯ ಇನ್ನೊಬ್ಬರಿಗೆ ಹ೦ಚುವ ಧಾವ೦ತ ಅದು ಮಾನವ ಸಹಜ ಗುಣ ಅದಕ್ಕೆ ಯಾರೂ ಹೊರತಿಲ್ಲ-ನನ್ನನ್ನು ಹಿಡಿದು ಸಹಾ.
ಜನಸ೦ಖ್ಯೇ ಸಮಸ್ಯೆ ಎ೦ದರೇ ಸಮಸ್ಯೆ ಇಲ್ಲಾ ಎ೦ದರೇ ಇಲ್ಲ.
ನನ್ನ ಅಭಿಪ್ರಾಯ ತಮಗೆ ವೈಯುಕ್ತಿಕ ನಿ೦ದನೆ ಅನ್ನಿಸಿದರೇ ನಾನು ತಮ್ಮಲ್ಲಿ ಕ್ಷಮೆ ಕೋರುವೆ.
ನನ್ನ ಅಭಿಪ್ರಾಯದಲ್ಲಿ ಎಲ್ಲ ಓದುಗರೂ ಹೊಸ ಆಯಾಮ ತೆರೆದಿದ್ದಾರೇ ಎ೦ದು ಹೇಳಿ ಅವರಿಗೆ ವ೦ದನೆ ಸಲ್ಲಿಸುವಲ್ಲಿ ತಾವೂ ಮುಖ್ಯವಾಗಿದ್ದಿರಿ ಎ೦ದು.
ಅ೦ದ ಹಾಗೇ ಪ್ರಾ೦ತೀಯ ಜನಸ೦ಖ್ಯಾ ವಿವರಗಳನ್ನು ನಾನು ಒಪ್ಪುತ್ತೆನೆ ಹಾಗೂ ಅದರಿ೦ದ ಕರ್ನಾಟಕಕ್ಕೆ ಸಮಸ್ಯೆ ಏನಿಲ್ಲ ಎ೦ಬುದನ್ನು ನಾನು ಅಲ್ಲಗಳೆಯುತ್ತೇನೆ. ಏಕೆ೦ದರೇ ಇರುವ ಕರ್ನಾಟಕದ ಜನಸ೦ಖ್ಯೇಗೆ (ಕಡಿಮೆ ತಮ್ಮ ಪ್ರಕಾರ ಬಿಹಾರಗಳಿಗೆ ಹೋಲಿಸಿ -ನನ್ನ ಪ್ರಕಾರ ಹೆಚ್ಚು ಬೇರೆ ಹೆಚ್ಚಿನ ದೇಶಗಳಿಗೆ ಹೋಲಿಸಿದಾಗ -ಚೀನಾದ೦ತಾ ಕೆಲವು ದೇಶಗಳನ್ನು ಬಿಟ್ಟು) ನಾವೂ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವ ಮಟ್ಟಿನಲ್ಲಿದ್ದೆವೇಯೇ? ನಮ್ಮಲ್ಲಿ ಎಕೆ ಅಕ್ಷರತೆ ೬೦% ಮೇಲೆರುತ್ತಿಲ್ಲ. ಆರೋಗ್ಯ ಸೌಲಭ್ಯವಿದೆಯೆ? ಉನ್ನತ ವ್ಯಾಸ೦ಗ ಸಾಮಾನ್ಯರಿಗೆ ಸಾಧ್ಯವೇ? ಬಸ್ಸು-ರೈಲು-ವಿಮಾನಗಳೇಕೆ ಯಾವಾಗಳು ಕಿಕ್ಕಿರಿದು ಹೋಗುತ್ತವೇ? ನೀರು-ಬೆಳಕು ಎಲ್ಲರಿಗೂ ದೊರೆಯುತ್ತಿದೆಯೆ? ವಿಧ್ಯುತ-ಇ೦ಧನ ಕೊರತೆಗಳೇಕೆ? ಇನ್ನು ಇತ್ಯಾದಿ ಪ್ರಶ್ನೇಗಳು ನಮ್ಮ ಮು೦ದಿವೆ. ಸಮಸ್ಯೆಗೆ ಜನಸ೦ಖ್ಯೇಯೊ೦ದೇ ಕಾರಣವಿಲ್ಲದಿರಬಹುದು-ವ್ಯವಸ್ಥೇಯು ಇದೆ. ಹಾಗ೦ತ ಜನಸ೦ಖ್ಯೇ ಸಮಸ್ಯೆ ಅಲ್ಲ ಎ೦ದು ನಾನು ಹೇಳುವದಿಲ್ಲ. ಹಾಗೆ೦ದು ಜನಸ೦ಖ್ಯೆಯಿ೦ದ ಬರೀ ಸಮಸ್ಯೆ ಎ೦ಬ ತರ್ಕವನ್ನೂ ನಾನು ಒಪ್ಪುವದಿಲ್ಲ. ಸಮುದ್ರಮಥನದಲ್ಲಿ ಅಮೃತವೂ ಇದೆ ಹಾಲಾಹಲವೂ ಇದೆ-ಎರಡನ್ನೂ ಸ್ವೀಕರಿಸುವ ಇಚ್ಚಾಶಕ್ತಿ ಮಥಿಕರಿಗೆ ಇರಬೇಕು.

Unknown said...

ಸೀತರಾಮರೆ,
"ನಿಮ್ಮ ಅಭಿಪ್ರಾಯ ಒತ್ತಾಯವಾಗಿ ಹೇರುವ ಪ್ರಯತ್ನ ಬೇಡ "

ನಾನು ನನ್ನ ನಿಲುವು/ಅಬಿಪ್ರಾಯವನ್ನೆ ಇನ್ನು ತಿಳಿಸಿಲ್ಲ. ಇನ್ನು ಹೇರುವುದು ಎಲ್ಲಿಂದ ಬಂತು?

ನಾನು ಸೆನ್ಸಸ್ ತಾಣದಲ್ಲಿ ಕೊಟ್ಟಿರುವ ಅರಿಮೆ/ಮಾಹಿತಿಯನ್ನ ಮಾತ್ರ ಇಲ್ಲಿ ಹಂಚಿಕೊಂಡಿದ್ದೇನೆ ಅಶ್ಟೆ, ಯಾಕಂದ್ರೆ ಸುನಾತರು ಎತ್ತಿರುವ ಮಂದಿಯೆಣಿಕೆಯ ತೊಡರು ಇದಕ್ಕೆ ನಂಟಿರುವುದು.

-ಹದುಳವಿರಲಿ
ಬರತ್

Subrahmanya said...

ಪ್ರಿಯ ಭರತರೆ,
ನಿಮ್ಮ ವಿಚಾರಗಳನ್ನು ಓದಿದೆ. ನನ್ನ ಅನುಭವಕ್ಕೆ ಬಂದಿರುವ ಮತ್ತು ಕಂಡಿರುವ , ಒಂದಷ್ಟು ವಿಷಯಗಳನ್ನು ನಿಮ್ಮುಂದೆ ಹೇಳಬಯಸುತ್ತೇನೆ...

೧) ಮೊದಲಿಗೆ , ಕಾಕಾಶ್ರೀ ಯವರು ’ಮಂದಿಯೆಣಿಕೆಯ’ ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದಂತೆ ನನಗೆ ಕಂಡುಬಂದಿಲ್ಲ. ವಿಶ್ವೇಶ್ವರಭಟ್ಟರಂತಹ ಬುದ್ಧಿಶಾಲಿಗಳು ಜನಸಂಖ್ಯೆ, ನಮ್ಮ ದೇಶದ ಸಮಸ್ಯೆಯೇ ಅಲ್ಲ ಎನ್ನುವಂತೆ ಮಾತನಾಡಿದರಲ್ಲ ...ಎನ್ನುವುದನ್ನಷ್ಟೇ ಹೇಳಿದ್ದಾರೆ ಎನ್ನುವುದು ನನಗೆ ಕಂಡುಬಂದದ್ದು. ನಮ್ಮಲ್ಲಿ ಗಣತಿ ಸರಿಯಾಗಿಯೇ ನೆಡೆದಿರಬಹುದು..ತಾವು ಕೋಟ್ ಮಾಡಿರುವ ಡೇಟಾಗಳು ಸರಿಯಾಗಿರಬಹುದು...ಈ ಅಂಕಿ-ಅಂಶಗಳಾವುವೂ ನಮ್ಮ ದೇಶದ ಸಮಸ್ಯೆಯನ್ನು ಬಗೆಹರಿಸಲಾರವು ....statistics ಗಳು ನಮ್ಮ ದೇಶದ ವ್ಯವಸ್ಥೆಯಲ್ಲಿ ಕಡತಗಳಲ್ಲಿರಲಷ್ಟೇ ಲಾಯಕ್ಕು.

೨) ನಮ್ಮ ದೇಶದ ಜನಸಂಖ್ಯಾ ಬೆಳವಣಿಗೆಯನ್ನು ಯಾವ ರೀತಿಯಲ್ಲಿ +ve ಆಗಿ ತೆಗೆದುಕೊಳ್ಳಬೇಕು ಹೇಳಿ. ನಮ್ಮ ದೇಶದ ಕೃಷ್ಯುತ್ಪನ್ನಕ್ಕೆ ಸರಿಯಾಗಿ ನಾವು ತಿನ್ನುವ ಆಹಾರವನ್ನು match ಮಾಡುಲಾಗುತ್ತಿಲ್ಲ. ಸಣ್ಣ ಉದಾಹರಣೆಯಂತೆ ...ಖಾದ್ಯತೈಲಗಳನ್ನು ಹೀರಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತಕ್ಕೆ ಪ್ರಪಂಚದಲ್ಲೇ ೩ ನೇ ಸ್ಥಾನವಿದೆ. ಶೇಕಡಾ ೭೦ ಆಮದಾದರೆ ಶೇಕಡಾ ಮೂವತ್ತು ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಕುಂಠಿತವೆಲ್ಲಾಗಿದೆ ಹೇಳಿ ? ಭೂಮಿಗಳು ಕೈಗಾರಿಕೆಗಳಿಗೆ -Industry ಗಳ ಪಾಲಾಗಿವೆ (ಆಗುತ್ತಿವೆ ).ಇತ್ತ ಬೆಳೆಯುತ್ತಿರುವ ಜನಸಂಖ್ಯೆ..ಅತ್ತ ಕುಸಿಯುತ್ತಿರುವ ಉತ್ಪಾದನೆ. ಒಂದು ಸರ್ವೇ ಪ್ರಕಾರ ನಮ್ಮ ದೇಶದಲ್ಲಿ ಇಂದಿಗೂ ೪ ದಿನಕ್ಕೊಮ್ಮೆ ಉಣ್ಣುವವರೂ ಇದ್ದಾರೆ. ಈ availablity ಕೊರತೆ ಉಂಟಾಗಿರುವುದು ಅವೈಜ್ಞಾನಿಕ ಜನಸಂಖ್ಯಾ ಬೆಳವಣಿಗೆಯಿಂದಲೇ ವಿನಃ ಮಂದಿಯೆಣಿಕೆಯ ತೊಡರಿನಿಂದಲ್ಲ.

೩) ನಮ್ಮ ದೇಶದ ಜನಸಂಖ್ಯೆಯನ್ನು +ve ಆಗಿ ತೆಗೆದುಕೊಂಡು ಶಕ್ತಿಯನ್ನಾಗಿ ಪರಿವರ್ತಿಸುವುದು ಲೋಕಾಭಿರಾಮವಾಗಿ ಮಾತನಾಡಿದಷ್ಟು ಸುಲಭವಲ್ಲ ( ಇದನ್ನೇ ಕಾಕಾಶ್ರೀಯವರು ಹೇಳಿರುವುದು). ಇದಕ್ಕೆ ನಮ್ಮ ವ್ಯವಸ್ಥೆಯಲ್ಲಿನ ಲೋಪದೋಷಗಳೂ ಕಾರಣವಾಗಿವೆ. ಜನಸಂಖ್ಯೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇಚ್ಚಾಶಕ್ತಿ ಸೆನ್ಸಸ್ನ statistics ನಿಂದ ಬರಲು ಸಾಧ್ಯವಿಲ್ಲ. ಸಾಮಾಜಿಕ ಜಾಗೃತಿಯಿಂದಷ್ಟೇ ಸಾಧ್ಯ. DBMS (Database management system) ಗಳು ಮ್ಯಾನೇಜ್ಮೆಂಟ್ ಗಷ್ಟೇ ಸುಲಭವಾಗುತ್ತವೆ ವಿನಃ, ಸಮಸ್ಯೆಗೆ ಪರಿಹಾರ ಸೂಚಿಸುವುದಿಲ್ಲ. ಇಚ್ಚಾಶಕ್ತಿಯ ಕೊರತೆಯೇ ನಮ್ಮ ದೇಶದ ನಿಜವಾದ ಸಮಸ್ಯೆ. ಯೋಚಿಸುವುದಕ್ಕೂ ಪುರುಸೊತ್ತಿಲ್ಲದಂತೆ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಬಲ್ಲಿದರು ಪ್ರಬಲರಾಗುತ್ತಿರುವುದು, ಬಡವರು ಪಾತಾಳಕ್ಕಿಳಿಯುತ್ತಿರುವುದು ಮಂದಿಯನ್ನು ಶಕ್ತಿಯಾಗಿ ಪರಿವರ್ತಿಸಲು ತೊಡರಾಗಿದೆ. ಜನಸಂಖ್ಯೆ ಬೆಳವಣಿಗೆಯನ್ನು +ve ಆಗಿ ತೆಗೆದುಕೊಳ್ಳಲು ವಿಶಾಲ ಭೌಗೋಳಿಕ ವಿಸ್ತಾರವಿರುವ ಯುರೋಪಿನಂತಹ ರಾಷ್ಟ್ರಗಳಿಗಷ್ಟೇ ಸದ್ಯಕ್ಕೆ ಸಾಧ್ಯ. ನಮ್ಮ ಸಮಸ್ಯೆಗಳಿನ್ನೂ ಪರಿಹಾರ ಕಾಣಬೇಕಿವೆ

೪) ಶ್ರೀ ಭಟ್ಟರು VIP ಗಳ ಮಾತಿನ ವ್ಯಂಗ್ಯವನ್ನು ಯೋಚಿಸದೇ , ಅವರ ವಿಚಾರಕ್ಕೆ ಹೂಂಗುಟ್ಟಿ ಶರಣಾದರಲ್ಲ , ಎನ್ನುವುದಷ್ಟೇ ಇಲ್ಲಿನ ವಿಚಾರದ ಸರಕು. 5000 ತಿಂಗಳ ಸಂಬಳ ಪಡೆಯುವವನು 10 ಮಕ್ಕಳು ಮಾಡಿಕೊಂಡು ಜೀವನ ನೆಡೆಸುವುದು ಕಷ್ಟವಲ್ಲವೇ..ಅಥವಾ ೧೦ ರಿಂದಲೂ ಕೆಲಸ ತೆಗೆಯುತ್ತೇನೆಂದು +ve ಆಗಿ ಹೊರಟರೆ , ಕೆಲಸ ಇರಬೇಕಲ್ಲವೇ ? ಅಥವಾ ಕೆಲಸ ಸೃಷ್ಟಿಸುವ ಇಚ್ಚಾಶಕ್ತಿ ತೋರಬೇಕು. ಈ ಸೃಷ್ಟಿಯ ಕೆಲಸಕ್ಕೆ ತೊಡರಾಗುತ್ತಿರುವುದೇ ಮಿತಿಮೀರುತ್ತಿರುವ ದೇಶದ ಜನಸಂಖ್ಯೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಮಕ್ಕಳು ಮಾಡಿಕೊಳ್ಳಿ...ದೇಶದ ಶಕ್ತಿ ಬೆಳೆಯುತ್ತದೆ ಎಂದರೆ ಅರ್ಥವುಂಟೇ..? ಮಂದಿಯೆಣಿಕೆಯ ಅಂಕಿಗಳು ಅನ್ನ-ನೀರಾಗಿ ಪರಿವರ್ತನೆಯಾಗಬಲ್ಲವೇ ? ಕಾಕಾಶ್ರೀಯವರು ಹೇಳಿರುವ ವಿಷಯ ಸರಳವಾದದ್ದೇ...ನಾನೇ ಅದನ್ನು ಸಾಂಧರ್ಭಿಕವಾಗಿ ಬೆಳೆಸಿದ್ದೇನಷ್ಟೆ. ಇಲ್ಲಿ ಯಾವ ತೊಡರುಗಳೂ ಇಲ್ಲ.
ಮಂದಿಯೆಣಿಕೆಯ statistics ಬಗ್ಗೆ ನಿಮ್ಮ ತಾಣದಲ್ಲಿ ನೀವೂ ಬರೆಯಿರಿ, ಅದನ್ನೂ ಓದುವ, ಇನ್ನಷ್ಟು ತಿಳಿದುಕೊಳ್ಳುವ. ಇದು ಇಲ್ಲಿಗೆ ಮುಗಿಯಲೆಂದು ಆಶಿಸುತ್ತೇನೆ.

ನಿಮ್ಮ ಕೊಸರಿಗೊಂದು ನನ್ನ ಉಸುರು : adidas shoe ಗಳಿಗೆ ನಮ್ಮ bata shoe ಗಳು ಸಮಾನವಾಗಿವೆ (Quality ಕೂಡ) . ಆದರೆ adidas 4500 ನಮ್ಮ Bata 1000 ರೂ.
ಆದರೆ ಹೆಚ್ಚು sale ಆಗುವುದು adidasಸೇ. ನಾವೇಕೆ ಪರದೇಶಿಯರನ್ನು ಉದ್ದರಿಸಬೇಕು ? ಇದು ನನ್ನ ವಿಚಾರ. ಆದರೆ
ನಾನು ಹಾಕುವುದು adidas ಬೂಟನ್ನೇ...ಆಗ ಜನ ಹೇಳುವುದು ನೀನು ಸರಿಯಾಗು ನಂತರ ನಿನ್ನ ವಿಚಾರ ಸರಿಪಡಿಸಿಕೋ ಎಂದು.
ಇಲ್ಲಿ issue ಮೇಲೆ ಮಾತನಾಡುವುದಕ್ಕಿಂತಲೂ person ಬಗ್ಗೆ ಮಾತನಾಡುತ್ತಾರೆ. ಏಕೆಂದರೆ ಬೂಟು ಹಾಕಿರುವವನು ನಾನೇ ತಾನೆ !.
ಸರ್ವೇ ಜನಾಃ ಸುಖಿನೋ ಭವಂತು. ಇಲ್ಲಿಗೆ ಈ ಚರ್ಚೆ ಸಮಾಪ್ತಿಯಾಗಲಿ ಎಂದು ಆಶಿಸುತ್ತೇನೆ....ವಂದನೆಗಳು

Subrahmanya said...
This comment has been removed by the author.
ಮನಸಿನಮನೆಯವನು said...

'sunaath' ಅವ್ರೆ..,

ನಿಮ್ಮ ವಿಮರ್ಶೆ ಚೆನ್ನಾಗಿದೆ..
ನನಗೆ ವಿಮರ್ಶಕರಲ್ಲಿ ಆಸಕ್ತಿ..
ಹೀಗೆ ವಿಮರ್ಶಿಸುತ್ತಿರಿ..

Blog is Updated: http//manasinamane.blogspot.com

sunaath said...

ಗುರು,
ನಿಮ್ಮ ಸ್ಪಂದನಕ್ಕೆ ತುಂಬಾ ಧನ್ಯವಾದಗಳು.

Anonymous said...

ನಿಮಗೆ ಬೇರೆ ವಿಷಯಗಳು ಹೊಳೆಯುವುದಿಲ್ವೇ ಸುನಾಥ ಮಹಾಶಯರೇ. ಎಲ್ಲರ ಬರಹಗಳಿಗೆ ಕಾಮೆಂಟ್‌ ಹಾಕುವುದು, ಅವರಿಂದ ಕಾಮೆಂಟ್‌ಗಳನ್ನು ಪಡೆಯುವುದು, ನಿಮಗಿಂತ ಬುದ್ಧಿಸ್ಥರದಲ್ಲಿ ಮೇಲಿರುವವರ ಬರಹಗಳನ್ನು ಓದುವುದರಿಂದ ದೂರವಿರುವುದಷ್ಟೆ ನಿಮ್ಮ ಲೋಕವಾದಂತಿದೆ. ಛೇ. ನಿಮ್ಮ ಬಾವಿಯ ಪರಿಧಿಯಿಂದ ಒಂಚೂರು ಹೊರಗೆ ಬಂದು ನೋಡಿ. ಬದುಕು ನೀವಂದುಕೊಂಡದ್ದಕ್ಕಿಂತ ವಿಶಾಲವಾಗಿದೆ.

Anonymous said...

ಸರ್,
ನಾನೂ ಸುಮಾರು ವರ್ಷಗಳಿಂದ ಈ ವ್ಯಕ್ತಿತ್ವ ವಿಕಸನ, ಪರ್ಸನಲ್ ಮ್ಯಾನೇಜ್ಮೆಂಟ್ ಇತ್ಯಾದಿ ವಿಷಯಗಳ ಕುರಿತು ಓದುತ್ತ ಬಂದಿದ್ದೇನೆ. ಅವರದೆಲ್ಲ ಒಂದು ದಿಕ್ಕಿನ ನೋಟ, ಒಂದು ದಿಕ್ಕಿನ ದಾಟಿ. I think, therefore I am ಅಥವಾ I feel therefore I am ಎಂಬಂತಹ ಒಂದೊಂದು ಹೊಸ ವಿಷಯ ದೊರೆತೊಡನೆ ಅದನ್ನೇ ಸಮಷ್ಟಿ ದೃಷ್ಟಿ ಎಂಬಂತೆ ಪ್ರತಿಬಿಂಬಿಸುತ್ತ, ಹೊಸ ಸಿದ್ಧಾಂತವನ್ನು ಪ್ರಾರಂಭಿಸಿಬಿಡುತ್ತಾರೆ. ಪಾಶ್ಚಾತ್ಯ ಚಿಂತನೆಯ ಆಳದಲ್ಲಿಯೇ ಹೀಗೆ ಒಡೆದು ನೋಡುವ ದೃಷ್ಟಿಕೋನವಿದೆ, ಮತ್ತು ನಾವು ಅದನ್ನು ಪ್ರಸಾದವೆಂಬಂತೆ ಸ್ವೀಕರಿಸಿ ಅನುಸರಿಸುತ್ತಿದ್ದೇವೆ.

ನಿಮ್ಮ ದೇಶದ ಜನಸಂಖ್ಯೆ ನಿಮಗೆ ಆಸ್ತಿ ಎಂಬ ಆ ದಳಪತಿಯ ಮಾತು (ಅದರಲ್ಲಿ ಅಪಹಾಸ್ಯದ ಒಂದು ಎಳೆಯಾದರೂ ಇದ್ದೀತು ಅನ್ನಿಸುತ್ತದೆ ನನಗೆ) ಆ ಕ್ಷಣದ ಒಂದು ಆಲೋಚನೆ ಅಷ್ಟೇ. ಅದಕ್ಕೆ ಮೊದಲ ಪ್ರತಿಕ್ರಿಯೆಯಾಗಿ ನಾವು, "ಹೌದಲ್ಲವೇ?" ಅನ್ನಬಹುದು. ನಂತರ ಜನಸಂಖ್ಯೆ ಹೇಗೆ ಆಸ್ತಿಯಾಗಬಹುದು ಎಂಬುದರ ಕುರಿತು ಚಿಂತನೆ ನಡೆಸಿ ಕಾರ್ಯೋನ್ಮುಖರಾಗಬಹುದು.

ಆದರೆ ಒಂದು ಕ್ಷಣಕ್ಕೆ ಬಂದ ಒಂದು ಆಲೋಚನೆಯೇ ಒಂದು ತತ್ವ ಹೇಗೆ ಆದೀತು!

sunaath said...

ರಾಘವೇಂದ್ರ,
ನೀವು ವ್ಯಕ್ತಿತ್ವ ವಿಕಸನದ ಗ್ರಂಥಗಳನ್ನು ಓದಿರುವದರಿಂದ, Suggestibilityಯ ಬಗೆಗೆ ತಿಳಿದುಕೊಂಡೇ ಇರುವಿರಿ.
ಪ್ರಭಾವಿ ವ್ಯಕ್ತಿಗಳ suggestionsಗಳಿಗೆ ನಾವು ಸ್ವಲ್ಪ ಜಾಸ್ತಿಯೇ receptive ಇರುತ್ತೇವೆ ಎನಿಸುತ್ತದೆ. ಪಾಪ, ಭಟ್ಟರು ಅಲ್ಲಿಯೇ hypnotised ಆಗಿರಬಹುದು! ಅದರ ಬದಲಾಗಿ ಅವರು ಜನಸಂಖ್ಯಾ ಸ್ಫೋಟದ ಪರವಾದ ಹಾಗು ವಿರುದ್ಧವಾದ ವಾದಗಳನ್ನು ನೀಡಿದ್ದರೆ, ಅದು ಸರಿಯಾದ ರೀತಿಯಾಗಿರುತ್ತಿತ್ತು.

RJ said...

ಸುನಾಥ್ ಸಾರ್,
ಒಂದು ಸಾಮಾನ್ಯ ಸಮಸ್ಯೆಗೆ ಎಷ್ಟೆಲ್ಲಾ ಮಗ್ಗುಲಗಳಿವೆ
ಎಂದು ನಿಮ್ಮ ವಿಮರ್ಶೆ ಮತ್ತು ಇಲ್ಲಿರುವ ಕಾಮೆಂಟುಗಳಲ್ಲಿ ಕಾಣಬಹುದು..
ಏನೇ ಆದರೂ ಎಷ್ಟೇ ಬಡಕೊಂಡರೂ ನಮಗಿರುವದು ಜನಸಂಖ್ಯಾ ಶಾಪ!
ಇದನ್ನು ಯಾವುದೇ ದೃಷ್ಟಿಯಲ್ಲಿ +ve ಆಗಿ ನೋಡಲಿಕ್ಕಾಗದು.
ಹಾಗೇನಾದರೂ ಜನಸಂಖ್ಯೆ ಎಂಬುದು ತನ್ನ ದೇಶವನ್ನು ಮುನ್ನಡೆಸುವ 'ವರ' (ಕನ್ಯಾ-ವರ ಅಲ್ಲ! :-))
ಎಂದೇನಾದರೂ ಗೊತ್ತಾಗಿದ್ದರೆ,ಜನಸಂಖ್ಯೆ ಹೆಚ್ಚಿಸಲೇಬೇಕೆಂದು ಬರ್ರಾಕ್ ಒಬಾಮಾ
ಯಾವತ್ತೋ ಠರಾವು ಪಾಸು ಮಾಡಿರುತ್ತಿದ್ದ...!!
ಇಷ್ಟಕ್ಕೂ ನಮ್ಮ ಸರ್ಕಾರವೇಕೆ "ಆರತಿ-ಕೀರುತಿ.." ಅಂತ ಕಿರುಚಿಕೊಳ್ಳಬೇಕಿತ್ತು?
ಜನಸಂಖ್ಯೆ ಕಡಿಮೆ ಮಾಡಲು ಅಂತ ತಾನೇ?
-RJ

sunaath said...

RJ,
ಎರಡೇ ಮಕ್ಕಳು ಸಾಕು ಎಂದು ಮೊದಲು ಹೇಳುತ್ತಿದ್ದ ಸರಕಾರವು ಈಗ ಬಾಯಿ ಮುಚ್ಚಿಕೊಂಡು ಕೂತು ಬಿಟ್ಟಿದೆ. ಸಂತಾನ ನಿಯಂತ್ರಣದ ಬಗೆಗೆ ಮಾತನಾಡಿದರೆ ಸಾಕು, ಎಲ್ಲಿ ಮತಗಳನ್ನು ಕಳೆದುಕೊಳ್ಳ್ರುತ್ತೇವೆಯೋ ಎನ್ನುವ ಹೆದರಿಕೆ ಅವರಿಗೆ!

Me, Myself & I said...

<>
?????

Me, Myself & I said...

ನಮ್ಮ ದೇಶದಲ್ಲಿ ಅಗ್ಗಕ್ಕೆ ಜನ ಸಿಗುತ್ತಾರೆ. ಇದೇ ಮಾನವ ಸಂಪನ್ಮೂಲವನ್ನು ಸರಿಯಾಗಿ ದುಡಿಸಿಕೊಂಡರೆ ಅದ್ಬುತ ಕ್ರಾಂತಿ ಸಾಧ್ಯ
?????