Saturday, May 28, 2011

ರಾಗರತಿ.............................ದ.ರಾ.ಬೇಂದ್ರೆ

ಬೇಂದ್ರೆಯವರನ್ನು ಪ್ರಕೃತಿಕವಿ ಎಂದು ಕರೆಯಬಹುದೆ?
ಪ್ರಕೃತಿವೈಭವದ ಬಗೆಗೆ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ.  ನಿಸರ್ಗದ ವಿವಿಧ ಮುಖಗಳನ್ನು ಅವರಷ್ಟು ವಿಸ್ತಾರವಾಗಿ ಹಾಗು ಆಳವಾಗಿ ಸೆರೆ ಹಿಡಿದವರು ಮತ್ತೊಬ್ಬರಿಲ್ಲ.  ಬೆಳಗು ಹಾಗು ಶ್ರಾವಣ ಇವು ಅವರ ಕಾವ್ಯದ ಪ್ರೀತಿಯ ವಿಷಯಗಳು.

 ಬೆಳಗು ಅವರ ತುಂಬ ಪ್ರಸಿದ್ಧಿ ಪಡೆದ ಕವನ. ಈ ಕವನದಲ್ಲಿ ಅವರು ಉದಯಕಾಲದಲ್ಲಿ ಮೈಮರೆತ ಕವಿಯ ಭಾವಸಮಾಧಿಯನ್ನು ಚಿತ್ರಿಸಿದ್ದಾರೆ:
 (ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ,ಇದು ಬರಿ ಬೆಳಗಲ್ಲೊ ಅಣ್ಣಾ).

`ಬೆಳಗು’ ಕವನದಲ್ಲಿ ಏಕಾಂತ ಭಾವನೆ ಇದ್ದರೆ, ಅವರ ‘ಸೂರ್ಯನ ಹೊಳಿ’ ಎನ್ನುವ ಕವನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಒಡನಾಟದ, ಉಲ್ಲಾಸದ ಕರೆ ಇದೆ:
(ಬಂದsದ ಸೂರ್ಯನs ಹೊಳೀ
ನಡೀ ಮೈತೊಳಿ, ನೀರಿನ್ಯಾಗಿಳಿ
ಬಾ ಗೆಣೆಯಾ, ಯಾಕ ಮೈಛಳೀ)

ಅವರ ‘ಉಷಾಸೂಕ್ತ’ವು ಸೂರ್ಯೋದಯದ ಮೊದಲಲ್ಲಿ ಆಗಮಿಸುವ ಉಷೆಯನ್ನು ಸ್ತುತಿಸುತ್ತದೆ:
(ಅಂದೆ ಕಂಡು ನಿನ್ನ ಛವಿ
ಹಾಡಿ ಕರೆದ ವೇದದ ಕವಿ
ಎಂದು ಬರುವನವ್ವ ರವಿ?
ಛಂದ ಕುಣಿದು ಬಾರೆ
ಮುಂದೆ ರವಿಯ ತಾರೆ.)

ಉದಯಕಾಲದ ಅವರ ಮತ್ತೊಂದು ಕವನವು ಬೆಳಕನ್ನು ಬಲೆಯಂತೆ ಚಿತ್ರಿಸುವ ಅಪೂರ್ವ ಉಪಮೆಯನ್ನು ಹೊಂದಿದೆ.
(ಏಳು ಚಿಣ್ಣ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್ ಎಂದು ಬಿಟ್ಟ ಮಾರ
ಗುಡಿಗೋಪುರಕ್ಕು ಬಲೆ ಬೀಸಿ ಬಂದ,ಅಗೊ ಬೆಳಕು ಬೇಟೆಗಾರ.)

‘ನಸುಕು ಬಂತು ನಸುಕು’ ಎನ್ನುವ ಕವನದಲ್ಲಿ ಬೇಂದ್ರೆಯವರು ರಾತ್ರಿ ಹಾಗು ಬೆಳಗಿನ ನಡುವೆ ಇರುವ ಸಂಬಂಧದ ಅಪೂರ್ವ ಕಲ್ಪನೆಯನ್ನು ತೋರಿಸಿದ್ದಾರೆ:
(ಬೆಳಗು ಗಾಳಿ ತಾಕಿ ಚಳಿತು
ಇರುಳ ಮರವು ಒಡೆದು ತಳಿತು
ಅರುಣ ಗಂಧ ಹರುಹಿ ಒಳಿತು
                  ನಸುಕು ಬಂತು.)

ಬೇಂದ್ರೆಯವರ ‘ವಸಂತಮುಖ  ಕವನವಂತೂ ಸೂರ್ಯೋದಯದ ಮೂಲಕ ಪ್ರಕೃತಿಯ ಚೈತನ್ಯವನ್ನೇ ತೆರೆದು ತೋರಿಸುವ ದರ್ಶನವನ್ನು ಹೊಂದಿದೆ:
(ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ.)

ಇವೆಲ್ಲ ನಿಸರ್ಗವರ್ಣನೆಗಳಾದವು. ಆದರೆ ಪ್ರಕೃತಿ ಹಾಗು ಬೇಂದ್ರೆಯವರ ನಡುವೆ, ವರ್ಣನೆಗಳಿಗೆ ಮೀರಿದ ಸಂಬಂಧವೊಂದು ಜೀವಂತವಿದೆ. ಪ್ರಕೃತಿಯ ಭಾವಸಂಚಾರಕ್ಕೂ ಮಾನವ ಭಾವಸಂಚಾರಕ್ಕೂ ಅವರು ಮಾಡುವ ಸಮೀಕರಣವು ಅವರನ್ನು ನಿಜವಾದ ಅರ್ಥದಲ್ಲಿ ಪ್ರಕೃತಿಕವಿಯನ್ನಾಗಿ ಮಾಡಿದೆ. ಅವರ ಅನೇಕ ಕವನಗಳಲ್ಲಿ ಪ್ರಕೃತಿಯ ಮಾನುಷೀಕರಣವಿದೆ, ಹಲವೆಡೆಗಳಲ್ಲಿ ಪ್ರಕೃತಿಯ ದೈವೀಕರಣವೂ ಇದೆ. ಉದಾಹರಣೆಗೆ, ಅವರ ‘ಶ್ರಾವಣಾ’ ಎನ್ನುವ ಕವನದ ಈ ನುಡಿಯನ್ನು ನೋಡಿರಿ:
(ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ)

ಬೇಂದ್ರೆಯವರ ‘ನನ್ನವಳು ಕವನವು ದಾಂಪತ್ಯಪ್ರೇಮದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಈ ಕವನದಲ್ಲಿ ಪ್ರಕೃತಿಯ ಮೂರು ಮುಖಗಳನ್ನು (ಸಂಜೆ, ಇರುಳು ಹಾಗು ನಸುಕು) ಕವಿಯು ತನ್ನ ಕೆಳದಿಯೊಡನೆ ಸಮೀಕರಿಸಿ, ತನ್ನವಳು ತನಗೆ ಹೇಗೆ ಸದಾಕಾಲವೂ ಅನ್ಯೋನ್ಯಳಾಗಿದ್ದಾಳೆ ಎಂದು ಚಿತ್ರಿಸಿದ್ದಾನೆ.

ಈ ರೀತಿಯಾಗಿ ಬೇಂದ್ರೆಯವರು ಪ್ರಕೃತಿಯೊಡನೆ ಸಾಮರಸ್ಯ ಸಾಧಿಸಿದ್ದರಿಂದ, ಅವರನ್ನು ಪ್ರಕೃತಿಕವಿ ಎಂದು ಕರೆಯುವದು ಸಮುಚಿತವಾಗಿದೆ.
.............................................................................................

ಬೇಂದ್ರೆಯವರ ಜನಪ್ರಿಯ ಕವನವಾದ ‘ರಾಗರತಿ’ಯಲ್ಲಿ, ಸಂಧ್ಯಾಕಾಲದ ಪ್ರಕೃತಿಶೃಂಗಾರವನ್ನು ಹೆಣ್ಣೊಬ್ಬಳ ಭಾವವಿಕಾರದೊಡನೆ ಸಮೀಕರಿಸಲಾಗಿದೆ. ಹೆಣ್ಣೊಬ್ಬಳ ಮನದಲ್ಲಿ ಮಲಗಿರುವ ಬಯಕೆಯು ಎಚ್ಚೆತ್ತು, ಹೆಡೆಯಾಡಿಸುತ್ತಿರುವ ವರ್ಣನೆಯು ‘ರಾಗರತಿ’ ಕವನದ ತಿರುಳಾಗಿದೆ. ಕವನದ ಮೊದಲ ಎರಡು ನುಡಿಗಳಲ್ಲಿ ಸಂಧ್ಯಾಕಾಲದ ಪ್ರಕೃತಿವರ್ಣನೆ ಇದ್ದರೆ, ಕೊನೆಯ ಎರಡು ನುಡಿಗಳಲ್ಲಿ ಹೆಣ್ಣೊಬ್ಬಳ ಅಂತರಂಗದ ಚಿತ್ರಣವಿದೆ.
ಕವನ ಹೀಗಿದೆ:

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
——ಆಗಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಗಾಳಿಗೆ ಮೇಲಕ್ಕೆದ್ದಿತ್ತs.

ಬಿದಿಗಿ ಚಂದ್ರನಾ ಚೊಗಚೀನಗಿಹೂ ಮೆಲ್ಲಗ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳಗಾಳಿಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರೆತಿತ್ತ.
…………………………………………………………………..



ಕವನದ ಮೊದಲ ನುಡಿ ಹೀಗಿದೆ:
ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
 ——ಆಗಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
         ಗಾಳಿಗೆ ಮೇಲಕ್ಕೆದ್ದಿತ್ತs.

ಮುಳುಗುತ್ತಿರುವ ಸೂರ್ಯನ ಕಿರಣಗಳಿಂದಾಗಿ ಮುಗಿಲೆಲ್ಲ ಗಾಢವಾದ ಕೆಂಪುವರ್ಣವನ್ನು ತಳೆದಿದೆ. ಇದನ್ನು ಬೇಂದ್ರೆಯವರು ‘ರಾಗರತಿ’ ಎಂದು ಬಣ್ಣಿಸುತ್ತಾರೆ. ರಾಗರತಿ ಎಂದರೆ ತೀವ್ರವಾದ ಕಾಮನೆಯೂ ಹೌದು.
‘ಮುಗಿಲ ಮಾರಿಗೆ’ ಎಂದು ಹೇಳುವ ಮೂಲಕ ಈ ಕೆಂಪು ವರ್ಣವು ಬಾನಲ್ಲಿ ಹರಡಿದ ಭೌತಿಕ ವರ್ಣವಷ್ಟೇ ಅಲ್ಲ, ಪ್ರಕೃತಿ ಎನ್ನುವ ಹೆಣ್ಣಿನ ಮನದ ಬಯಕೆಯ ಬಣ್ಣವೆನ್ನುವದನ್ನು ಬೇಂದ್ರೆಯವರು ಸೂಚ್ಯವಾಗಿ ಹೇಳುತ್ತಾರೆ. ಈ ರೀತಿಯಾಗಿ ಪ್ರಕೃತಿಯ ಮಾನುಷೀಕರಣವು ಇಲ್ಲಿದೆ.

ಬೇಂದ್ರೆಯವರು ‘ರಾಗರತಿಯ ನಂಜ ಏರಿತ್ತ’ ಎಂದು ಏಕೆ ಹೇಳುತ್ತಿದ್ದಾರೆ? ನಂಜು ಎಂದರೆ ವಿಷ ಅಲ್ಲವೆ? ಬಹುಶಃ ಅದರ ಕಾರಣ ಹೀಗಿರಬಹುದು:
ಪ್ರಕೃತಿಯ ಸಂಧ್ಯಾಕಾಲದ ಕಾಮನೆಯನ್ನು ಬೇಂದ್ರೆಯವರು ಉದಾರವಾಗಿ ಅಥವಾ ತಟಸ್ಥವಾಗಿ ನೋಡುವದಿಲ್ಲ. ಈ ಪ್ರಕೃತಿಸ್ತ್ರೀಯ ಮುಖಕ್ಕೆ ಹರಡಿದ ರತಿರಾಗವನ್ನು ‘ನಂಜು’ ಎಂದು ಕರೆಯುವ ಮೂಲಕ, ಅವರು ತಮ್ಮ ಆಕ್ಷೇಪಣೆಯನ್ನು ಸ್ಪಷ್ಟಪಡಿಸುತ್ತಾರೆ. ಕಾಮನೆಯು ಪ್ರಕೃತಿಧರ್ಮವೇನೋ ಹೌದು, ಆದರೆ ಅದು ಸಕಾಲಿಕವಿರಬೇಕು ಹಾಗು ಸಪಾತ್ರವಾಗಿರಬೇಕು. ಅಕಾಲಿಕವಾದಾಗ ಅಥವಾ ಅಪಾತ್ರವಾದಾಗ ಅದು ನಂಜು ಅಂದರೆ ವಿಷದಂತೆ ಏರುತ್ತದೆ. ಅದರ ಪರಿಣಾಮವೂ ವಿಷದಂತೆಯೇ ಆಗಬಹುದು!

ಇಂತಹ ಅಕಾಲಿಕ ಅಥವಾ ಅಪಾತ್ರ ಕಾಮನೆಗೆ ಕಾರಣವೇನಿರಬಹುದು? ಮುಂದಿನ ಸಾಲುಗಳಲ್ಲಿ ಅದು ಸ್ಪಷ್ಟವಾಗುತ್ತದೆ: 
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
         ಗಾಳಿಗೆ ಮೇಲಕ್ಕೆದ್ದಿತ್ತs.
ಮಂಜಿನ ಮುಸುಕು ಎಂದರೆ ತಿಳಿವನ್ನು ಹದಗೆಡಿಸುವಂತಹ ಭಾವವಿಕಾರ. ಈ ವಿಕಾರವು ನೆಲದ ಅಂಚಿನಲ್ಲಿ ಅಂದರೆ ಮನಸ್ಸಿನ ತಳಭಾಗದಲ್ಲಿ ಮುದುಡಿಕೊಂಡು ಮಲಗಿತ್ತು. ಆದರೆ ಇದನ್ನು ಅಲುಗಾಡಿಸುವಂತಹ ‘ಗಾಳಿ’ ಬೀಸಿದ್ದರಿಂದ, ಮಂಜಿನ ಮುಸುಕು, ಮನಸ್ಸಿನ ಮುಂಭಾಗಕ್ಕೂ ಸಹ ಸರಿದು ಬಂದಿತು. ಪ್ರಕೃತಿಯಲ್ಲಿ ಹೇಗೋ, ನಾಯಕಿಯ ಅಂತರಂಗದಲ್ಲಿಯೂ ಸಹ ಈ ಗಾಳಿಯು ಭಾವವಿಕಾರವನ್ನು ನಂಜಿನಂತೆ ಹಬ್ಬಿಸಿದೆ.

ಗಾಳಿ ಎನ್ನುವದಕ್ಕೆ ವಿವಿಧ ಅರ್ಥಗಳನ್ನು ಹೇಳಬಹುದು.
ಈ ವರೆಗೆ ತಿಳಿದಿರದ ಹೊಸ ವಿಚಾರವೂ ಗಾಳಿಯೇ, ಅರಿವಿಗೆ ಬಾರದ ಭಾವವೂ ಗಾಳಿಯೇ. ದೆವ್ವಕ್ಕೂ ಸಹ ಗಾಳಿ ಎನ್ನುತ್ತಾರೆ. ಒಟ್ಟಿನಲ್ಲಿ, ಇಲ್ಲಿಯವರೆಗೆ, ನಿರಾಳವಾಗಿದ್ದ ಮನಸ್ಸು ಈಗ ಕಂಪಿಸಿದೆ. (ಈ ಕವನದ ಕೊನೆಯ ನುಡಿಯಲ್ಲಿ ಈ ಗಾಳಿಯ ಕುರುಹನ್ನು ನೀಡಲಾಗಿದೆ!)

ಮೊದಲನೆಯ ಸಾಲಿನಲ್ಲಿ ಮುಗಿಲು ಕೆಂಬಣ್ಣ ತಾಳಿರುವದನ್ನು ಹೇಳುವಾಗ,  ಬೇಂದ್ರೆಯವರು ಕಾಲವನ್ನು ಸೂಚಿಸಿಲ್ಲ. ಇದು ಮುಂಜಾವಿನ ಸಮಯವಾದರೆ, ಮನದಲ್ಲಿ ಭಾವವಿಕಾರವಾಗುವದು ಅಸಂಭವ. ಈ ಸಂದಿಗ್ಧತೆಯನ್ನು ತಪ್ಪಿಸಲೆಂದೇ, ಬೇಂದ್ರೆಯವರು ಎರಡನೆಯ ಸಾಲಿನಲ್ಲಿ, ‘ಆಗ ಸಂಜೆಯಾಗಿತ್ತs’ ಎಂದು explicit ಆಗಿ ಹೇಳಿಬಿಡುತ್ತಾರೆ.

ರತಿರಾಗಕ್ಕೆ ನಂಜು ಎನ್ನುವ ವಿಶೇಷಣವನ್ನು ಬಳಸಲು ಬೇಂದ್ರೆಯವರಿಗೆ ಮತ್ತೊಂದು ಕಾರಣವೂ ಇದೆ.
ನಂಜಿನ ಬಣ್ಣವು ಕಡುಕಪ್ಪಾಗಿದ್ದು, ಮಂಜಿನೊಡನೆ ಬೆರೆತಾಗ, ಅದು ಬೂದಿ ಬಣ್ಣದವರೆಗಿನ ವರ್ಣಶ್ರೇಣಿಯನ್ನು ನಿರ್ಮಿಸುತ್ತದೆ. ಅದೇ ರೀತಿಯಲ್ಲಿ ಬೇಂದ್ರೆಯವರು, ‘ರಾಗರತಿ’ ಕವನದಲ್ಲಿಯೂ ಸಹ ನಂಜಿನಂತಹ  ಕಡುಗೆಂಪುಬಣ್ಣವು, ಮಂಜಿನಿಂದಾಗಿ ಬೂದುಗೆಂಪಾಗಿ ಮಾರ್ಪಟ್ಟಿದೆ ಎಂದು ಹೇಳುತ್ತಿರಬಹುದು.

ದೈಹಿಕ ಆಕರ್ಷಣೆ ಹಾಗು ಕಾಮನೆ ಇವು ಗಂಡು,ಹೆಣ್ಣಿನ ನಡುವಿನ ಸಂಬಂಧದ ಮೊದಲ ಮೆಟ್ಟಿಲಾದರೂ ಸಹ, ರತಿರಾಗವನ್ನು ಮೀರಿದ ಪ್ರೇಮ ಮುಂದಿನ ಮೆಟ್ಟಲಾಗಿದೆ. ಅದು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ನಿರ್ಮಲವಾಗಿ ವರ್ಧಿಸುತ್ತಿದೆ. ಈ ಭಾವವು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಬಿದಿಗಿ ಚಂದ್ರನಾ ಚೊಗಚೀನಗಿಹೂ ಮೆಲ್ಲಗ ಮೂಡಿತ್ತs
         ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
         ಸೂಸ್ಯಾವ ಚಿಕ್ಕಿ ಅತ್ತಿತ್ತ.

ಸೂರ್ಯಾಸ್ತದ ನಂತರ ಈಗ ಚಂದ್ರೋದಯವಾಗುತ್ತಿದೆ. ಬಿದಿಗೆಯ ಚಂದ್ರ ಮೂಡುತ್ತಿದ್ದಾನೆ. ಸೂರ್ಯನ ಜೊತೆಜೊತೆಗೇ ಚಲಿಸುವ ಬೆಳ್ಳಿಚಿಕ್ಕಿಯನ್ನು(=ಶುಕ್ರ ಗ್ರಹವನ್ನು) ಚಂದ್ರ ಕೂಡುತ್ತಿದ್ದಾನೆ ಎಂದರೆ ಸೂರ್ಯ, ಚಂದ್ರರಿಬ್ಬರೂ ಪಶ್ಚಿಮ ದಿಕ್ಕಿನಲ್ಲಿಯೇ ಇದ್ದಾರೆ. ಆದುದರಿಂದ ಇದು ಅಮವಾಸ್ಯೆಯ ನಂತರದ ಶುಕ್ಲಪಕ್ಷದ ಬಿದಿಗೆ.
ಈ ಅವಧಿಯಲ್ಲಿ ಚಂದ್ರ ಇನ್ನೂ ಕ್ಷೀಣವಾಗಿಯೇ ಇರುತ್ತಾನೆ. ಆತನ ಬೆಳದಿಂಗಳು ಮಂದವಾಗಿರುತ್ತದೆ. ಹಾಗಾಗಿ ಆಗಸದಲ್ಲಿ ಅಲ್ಲಲ್ಲಿ ಚಿಕ್ಕೆಗಳು ಸೂಸಿವೆ. ಬೇಂದ್ರೆಯವರ ಕಣ್ಣಿಗೆ ಈ ಚಿಕ್ಕೆಗಳು ಇರುಳೆಂಬ ನಾರಿ ತನ್ನ ಹೆರಳಿನಲ್ಲಿ ಧರಿಸಿದ ಅರಳು ಮಲ್ಲಿಗೆ ಹೂವುಗಳ ಜಾಳಿಗೆಯಂತೆ ಕಾಣುತ್ತವೆ. ಅತ್ಯಂತ ಸುಂದರವಾದ ಪ್ರಕೃತಿಚಿತ್ರಣವಿದು. ಪ್ರಕೃತಿಶೃಂಗಾರದ ಈ ಚಿತ್ರಣವು  ಕವನದಲ್ಲಿಯ ಅಭಿಸಾರ ಭಾವನೆಗೆ ಬಲ ನೀಡುತ್ತದೆ.
[ ಟಿಪ್ಪಣಿ: ಚೊಗಚಿ ಹೂವು=Cassia occidentalis ]

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಪ್ರಕೃತಿಯಲ್ಲಿ ಮೂಡಿದ ಭಾವವಿಕಾರವನ್ನು ವರ್ಣಿಸಿದರೆ, ಎರಡನೆಯ ನುಡಿಯಲ್ಲಿ ಅಭಿಸಾರ-ಆಸಕ್ತ ನಿಸರ್ಗದ ಶೃಂಗಾರಭರಿತ ಚಿತ್ರವನ್ನು ಹಾಗು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ವರ್ಧಿಸುತ್ತಿರುವ ನಿರ್ಮಲಪ್ರೇಮವನ್ನು ವರ್ಣಿಸಿದ್ದಾರೆ.
ಇದು ಪ್ರಕೃತಿವರ್ಣನೆಯಾಯಿತು. ಈ ಸನ್ನಿವೇಶದಲ್ಲಿ, ನಾಯಕಿಯ ಮನಃಸ್ಥಿತಿಯು ಹೇಗಿದೆ ಎನ್ನುವದರ ಚಿತ್ರಣವು ಮುಂದಿನ ಎರಡು ನುಡಿಗಳಲ್ಲಿದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
        ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs
        ಎರಗಿ ಹಿಂದಕ್ಕುಳಿತಿತ್ತ.

ಬೇಂದ್ರೆಯವರು ಈ ಕವನವನ್ನು ಬರೆದ ಕಾಲದಲ್ಲಿ, ನೀರಿಗಾಗಿ ಕೆರೆ ಅಥವಾ ಬಾವಿಗಳನ್ನೇ ಆಶ್ರಯಿಸಬೇಕಾಗಿತ್ತು. ಹೆಣ್ಣುಮಕ್ಕಳು ಮುಂಜಾನೆ ಹಾಗು ಸಂಜೆಗೆ ನೀರು ತರಲು ಹೋಗುತ್ತಿದ್ದರು. ಅಂತಹ ಹೆಣ್ಣುಮಗಳೊಬ್ಬಳು ಸಂಜೆಯ ಸಮಯದಲ್ಲಿ ಬಾವಿಯಿಂದ ನೀರು ಸೇದಿಕೊಂಡು ತನ್ನ ಮನೆಗೆ ಹಿಂತಿರುಗುತ್ತಿದ್ದಾಳೆ.
ಈ ಹೆಣ್ಣು ಮಗಳು ಎಂಥವಳು?

‘ಬಟ್ಟಲುಗಣ್ಣು’ ಎನ್ನುವದು ಚೆಲುವಿನ ಲಕ್ಷಣವಾಗಿದೆ. ಇವಳು ಕೇವಲ ಬಟ್ಟಲುಗಣ್ಣುಗಳ ಹೆಣ್ಣಲ್ಲ, ‘ಬೊಗಸೆಗಣ್ಣವಳು’! ಕಣ್ಣುಗಳೇ ಬೊಗಸೆಯಾದವಳು! ಬೊಗಸೆಯು ‘ಕೊಡು-ಕೊಳ್ಳು’ವಿಕೆಯನ್ನು ಸೂಚಿಸುತ್ತದೆ. ಮನದ ಬಯಕೆಯ ಈ ಕೊಡು-ಕೊಳ್ಳುವಿಕೆಯು ಇಲ್ಲಿ ಕಣ್ಣುಗಳ ಮೂಲಕವೇ ಆಗುತ್ತಿದೆ. ಆದರೆ ಕೇವಲ ನೇತ್ರವ್ಯವಹಾರವು ಬಯಕೆಯನ್ನು ಹಿಂಗಿಸಬಲ್ಲದೆ? ಆದುದರಿಂದ ನೀರು ತುಂಬಿಕೊಂಡ ಬಳಿಕ ಅವಳು ತನ್ನ ಮನೆಗೆ ಮರಳುತ್ತಿದ್ದರೂ ಸಹ, ಅವಳ ಮನಸ್ಸು ಹಿಂದೆ ಬಿಟ್ಟ ಬಾವಿಯ ಕಡೆಯಲ್ಲಿಯೇ ಇದೆ. ಬಾವಿಯ ಹಾದಿ ಅವಳನ್ನು ಮತ್ತೆ ಕರೆಯುತ್ತಿದೆ. ‘ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs’ ಎನ್ನುವ ಮೂಲಕ ಬೇಂದ್ರೆ ಇದನ್ನು ಸ್ಪಷ್ಟಗೊಳಿಸುತ್ತಾರೆ. ಸಾಕಿದ ಬೆಕ್ಕು ನಿಮ್ಮ ಜೊತೆಗೇ ಸಾಗುತ್ತದೆ, ನಿಮ್ಮ ಕಾಲಿಗೆ ತೊಡರುತ್ತದೆ. ಇವಳು ಮರಳುತ್ತಿರುವ ಹಾದಿಯು, ಇವಳನ್ನು ಮರಳಿ ಕರೆಯುತ್ತಿದೆ. (ಅಂಥಾದ್ದು ಅಲ್ಲೇನಿದೆ?) ಮನೆಗೆ ಮರಳುವಾಗ, ನಾಯಕಿಯು ತನ್ನೆಲ್ಲ ಬಯಕೆಗಳನ್ನು ಬಾವಿಯ ಬಳಿಯಲ್ಲಿಯೇ ಬಿಟ್ಟು ಬರಬೇಕಲ್ಲವೆ? ಆದುದರಿಂದಲೇ ಆ ಹಾದಿಯು ಅವಳನ್ನು ಬಿಡುತ್ತಿಲ್ಲ. ಅರ್ಥಾತ್ ಅವಳೇ ಆ ಹಾದಿಯನ್ನು ಬಿಡಲು ಒಲ್ಲಳು!

ಒಂದು ಕಾಲದಲ್ಲಿ ‘ಕಾಮಿ’ ಎನ್ನುವದು ಸಾಕು ಬೆಕ್ಕುಗಳ ಪ್ರೀತಿಯ ಹೆಸರಾಗಿತ್ತು. ಈ ಕಾಮಿನಿಯು ತನ್ನ ಮನದಲ್ಲಿಯೆ ಸಾಕಿ, ಪೋಷಿಸುತ್ತಿರುವ ಕಾಮಭಾವನೆಯೂ ಸಹ, ಕಾಮಿ ಬೆಕ್ಕಿನಂತೆ ಅವಳನ್ನು ಕಾಡುತ್ತ, ಅವಳ ಜೊತೆಗೇ ಬರುತ್ತ, ಮತ್ತೆ ಮತ್ತೆ ಹಿನ್ನೋಟ ಬೀರುತ್ತ ಸಾಗಿದೆ. ಬೆಕ್ಕು ಮೈಯನ್ನು ಅಡರಿದರೆ ಕಾಮಭಾವನೆಯು ಮನಸ್ಸನ್ನು ಆಡರುತ್ತದೆ. ಆದುದರಿಂದ ಕಾಮಭಾವನೆಗೆ ಬೆಕ್ಕಿನ ಪ್ರತೀಕವನ್ನು ಬಳಸಿದ್ದು ಇಲ್ಲಿ ಅತ್ಯಂತ ಸಮರ್ಪಕವಾಗಿದೆ.

ಕೊನೆಯ ನುಡಿಯಲ್ಲಿ ಈ ನಾಯಕಿಯ ಮನೋವಿಕಾರದ ಭ್ರಮಾಲೋಕದ ವರ್ಣನೆ ಇದೆ:
ಮಳ್ಳಗಾಳಿಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
              ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
         ತನ್ನ ಮೈಮರ ಮರೆತಿತ್ತ.

ಈ ಕಾಮಿನಿಯ ಮನಸ್ಸಿನಲ್ಲಿ ಅವಳ ಗೆಣೆಕಾರನ ಆಕರ್ಷಣೆ ತುಂಬಿಕೊಂಡಿದೆ. ಅವಳ ಸೆರಗು ಗಾಳಿಗೆ ಸೆಳೆದಂತಾದಾಗ, ಅವಳಿಗೆ ಅದು ತನ್ನ ಗೆಣೆಯನ ಚೇಷ್ಟೆ ಎನ್ನುವ ಭ್ರಮೆ ಥಟ್ಟನೆ ಹುಟ್ಟುತ್ತದೆ. ಅದು ಅವಳ ಒಳಬಯಕೆಯೂ ಆಗಿದೆ. ಆದರೆ ಮತ್ತೆ ಅವಳಿಗೆ ಭ್ರಮನಿರಸನವಾಗುತ್ತೆದೆ. ಇದೆಕ್ಕೆಲ್ಲ ಕಾರಣವಾದ ಈ ಅಮಾಯಕ ಗಾಳಿಗೆ ನಾಯಕಿಯ ಬಗೆಗೆ ಪ್ರಣಯಭಾವನೆಯೇನೂ ಇಲ್ಲವಲ್ಲ! ಆದುದರಿಂದ ಅದು ಕೇವಲ ‘ಮಳ್ಳಗಾಳಿ’. ಆದರೆ ನಾಯಕಿಯು ತನ್ನ ಗೆಣೆಯನೇ ಸುಳಿವು ಕೊಡದೇ ‘ಕಳ್ಳಾಟ’ ಆಡುತ್ತಿದ್ದಾನೆ  ಎಂದು ಭಾವಿಸುತ್ತಿದ್ದಾಳೆ. ಅವಳ ಈ ಹುಚ್ಚು ಅವಸ್ಥೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಗಾಳಿಯೂ ಸಹ ಬೆರಗುಗೊಳ್ಳುತ್ತದೆ. (ಬೇಂದ್ರೆಯವರು ಗಾಳಿಯನ್ನು ಮಾನುಷೀಕರಣಗೊಳಿಸುವ ಪರಿಯನ್ನು ಗಮನಿಸಬೇಕು.) ಇನ್ನು ಅವಳ ಗೆಣೆಕಾರ ಅಲ್ಲಿ ಇಲ್ಲದಿದ್ದರೂ ಸಹ ಅವನ ಮನಸ್ಸು ಅಲ್ಲಿಯೇ ಸುತ್ತುತ್ತಿದೆ, ಅವಳ ಬೆನ್ನ ಹಿಂದೆಯೇ ಗಿಳಿಯಂತೆ ಹಾರಾಡುತ್ತ ಬರುತ್ತಿದೆ. (ಮೊದಲನೆಯ ನುಡಿಯಲ್ಲಿ ಬರುವ ‘ಗಾಳಿ’ ಯಾವುದು ಎನ್ನುವದು ಇಲ್ಲಿ ಬಯಲಾಗುತ್ತದೆ!)

ಕೊನೆಯ ನುಡಿಗೆ ಮತ್ತೊಂದು ಸಂಭಾವ್ಯತೆಯೂ ಇದೆ.
ನೀರು ತುಂಬಿಕೊಂಡ ಹೆಣ್ಣು ಮುಂದೆ ಮುಂದೆ ಸಾಗಿದ್ದರೆ, ಸರಸ ವರ್ತನೆಯ ಈ ರಸಿಕ ಗೆಣೆಕಾರ ಅವಳ ಬೆನ್ನ ಹಿಂದೆ, ಅವಳ ನೆರಳಿನಂತೆ ಒಂದೇ ಮನಸ್ಸಿನಿಂದ ಅವಳನ್ನು ಹಿಂಬಾಲಿಸಿದ್ದಾನೆ, ತನ್ನನ್ನೇ ಮರೆತಿದ್ದಾನೆ. ಸಾಕುಗಿಳಿಯು ಸಾಕಿದವರ ಸುತ್ತಲೂ ಹಾರುವಂತೆ, ಇವನ ಮನವು ಅವಳ ಸುತ್ತಲೂ ಸುತ್ತುತ್ತಿದೆ ಹಾಗು ಅವಳ ಧ್ಯಾನದಲ್ಲಿ ತನ್ನನ್ನೇ ಮರೆತಿದೆ!

ಬೇಂದ್ರೆಯವರು ತಮ್ಮ ಕವನದ ನಾಯಕಿಯ ಭಾವವಿಕಾರವನ್ನು ಬಣ್ಣಿಸುವದರಲ್ಲಿ ಹಾಗು ಈ ಭಾವವಿಕಾರವನ್ನು ಪ್ರಕೃತಿಯ ರಂಗಿನೊಡನೆ ಸಮೀಕರಿಸುವದರಲ್ಲಿ ಆಸ್ಥೆ ಹೊಂದಿರುವರೇ ಹೊರತು, ವಾಸ್ತವದ ಅಭಿಸಾರದಲ್ಲಿ ಅಲ್ಲ. ಆದುದರಿಂದ ಎರಡನೆಯ ಸಂಭಾವ್ಯತೆ ಸಾಧುವಾಗಿರಲಾರದು. ಏನೇ ಇರಲಿ, ಕಣ್ಣುಮುಚ್ಚಾಲೆಯಾಟದಂತಿರುವ ಈ ಅಭಿಸಾರವು ಅಕಾಲಿಕ ಪ್ರೀತಿಯಂತೂ ಹೌದು, ಜೊತೆಗೇ ಅಪಾತ್ರ ಪ್ರೀತಿಯೂ ಆಗಿರಬಹುದು; ನೀತಿಬಾಹ್ಯ ಪ್ರೀತಿಯೂ ಆಗಿರಬಹುದು. ಮುಖ್ಯವಾಗಿ ಇವರ ಪ್ರೀತಿಯಲ್ಲಿ ಕಾಮಭಾವ ತುಂಬಿದೆ. ಆದುದರಿಂದ ಬೇಂದ್ರೆಯವರು ‘ರಾಗರತಿಯಲ್ಲಿ ನಂಜು ಏರಿತ್ತು’ ಎಂದು ಹೇಳುತ್ತಾರೆ. ಪ್ರೇಮಭಾವನೆಯ ಬೆಳದಿಂಗಳು ಇವರಲ್ಲಿ ಇನ್ನೂ ಮೂಡಿಲ್ಲ.

‘ರಾಗರತಿ’ ಕವನವು ‘ಗರಿ’ ಸಂಕಲನದಲ್ಲಿ ಅಡಕವಾಗಿದೆ.

Wednesday, May 11, 2011

ನನ್ನ ಹಾಡು……………….ದ.ರಾ.ಬೇಂದ್ರೆ


ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
..............................................................................................................
ಬೇಂದ್ರೆಯವರ ‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾನೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ ಲಕ್ಷಣವನ್ನು ವರ್ಣಿಸುತ್ತಾನೆ ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ ಲಕ್ಷಣವನ್ನು ಸೂಚಿಸುತ್ತಾನೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು ವಿವರಿಸುತ್ತಾನೆ.

ನುಡಿ ೧:
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಬಾಳಿನಲ್ಲಿ ಬೆಂದ ವ್ಯಕ್ತಿಯು ಭಗವಂತನೆಂಬ ದಿವ್ಯ ಚೈತನ್ಯಕ್ಕೆ ಶರಣು ಹೋಗುವದು ಒಂದು ಸಹಜ ಕ್ರಿಯೆ. ‘ವಿಶ್ವದ ಎಲ್ಲ ಘಟನೆಗಳಿಗೂ ಭಗವಂತನೇ ಕಾರಣಪುರುಷ ; ಲೋಕಮುಖಿಯಾದ ತನ್ನನ್ನು ಭಗವನ್ಮುಖಿಯಾಗಿ ಮಾಡುವ ಉದ್ದೇಶದಿಂದಲೇ ಭಗವಂತನು ತನ್ನನ್ನು ಇಷ್ಟೆಲ್ಲ ಸಂಕಷ್ಟಗಳಿಗೆ ಒಡ್ಡುತ್ತಿದ್ದಾನೆ’ ಎನ್ನುವ ತಿಳಿವಳಿಕೆ ಭಕ್ತನಿಗೆ ಬರಬೇಕು. ಆವಾಗ ಆತನು  ‘ನನ್ನ ಹರಣ, ನಿನಗೆ ಶರಣ’ ಎನ್ನುವ ಮೂಲಕ ತನ್ನ ಪ್ರಾಣವನ್ನು ಅಂದರೆ ಜೀವಚೈತನ್ಯವನ್ನು  ಭಗವಂತನಿಗೆ ಅಂದರೆ ವಿಶ್ವಚೈತನ್ಯನಿಗೆ  ಒಪ್ಪಿಸಿಕೊಳ್ಳುತ್ತಾನೆ. ಈ ಭಾವನೆಯನ್ನು ಬೇಂದ್ರೆಯವರು ‘ಸಕಲ ಕಾರ್ಯ ಕಾರಣಾ’ ಎನ್ನುವ ಸಂಬೋಧನೆಯ ಮೂಲಕ ಸ್ಪಷ್ಟ ಪಡಿಸುತ್ತಿದ್ದಾರೆ.

ವ್ಯಕ್ತಿಯ ಜೀವಾತ್ಮವು ಪರಿಮಿತ ಚೈತನ್ಯ ; ಪರಮಾತ್ಮನು ಅಪರಿಮಿತ ಚೈತನ್ಯ. ಈ ತಿಳಿವು ಭಕ್ತನ ಮನಸ್ಸಿನಲ್ಲಿ ಹುಟ್ಟಿ, ಅವನು ಆ ತಿಳಿವನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದಂತೆಯೆ, ಆತನ ಮನಸ್ಸು ಪುಳಕಗೊಳ್ಳುತ್ತದೆ ಹಾಗೂ ನಿರ್ಮಲವಾಗುತ್ತದೆ. ಮನಸ್ಸಿನ ನಿರ್ಮಲತೆಯು, ಮನದ ಆವರಣವಾದ ಶರೀರಕ್ಕೂ ಸಹ ಹಬ್ಬಲೇಬೇಕಲ್ಲವೆ? ಹೀಗಾಗಿ ಆತನ ತನುವೂ ಸಹ ಪವಿತ್ರವಾಗುತ್ತದೆ. ‘ತನುವು ಪವಿತ್ರಗೊಳ್ಳುವದು’ ಅಂದರೇನು? ಪವಿತ್ರ ದೇಹದ ಮೂಲಕ ನಡೆಯಿಸುವ ಕಾರ್ಯಗಳು ನೀಚ ಕಾರ್ಯಗಳಾಗದೆ, ಒಳ್ಳೆಯ ಕಾರ್ಯಗಳಾಗುವವು ಎನ್ನುವದು ‘ತನು ಪಾವನಾ’ ಎನ್ನುವದರ ಅರ್ಥ. ಇಂತಹ ಮನಸ್ಸು ಹಾಗು ಇಂತಹ ದೇಹವು ಭಗವಚ್ಚಿಂತನೆಯಲ್ಲಿ ಮುಳುಗಿರುವದರಿಂದ ಸದಾಕಾಲವೂ ಉಲ್ಲಸಿತ ಭಾವದಲ್ಲಿ ಇರುತ್ತದೆ.

ನುಡಿ ೨:
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ಭಗವಂತನ ಅರಿವನ್ನು ಪಡೆದ ಭಕ್ತನು ಲೌಕಿಕವನ್ನು ಹೇಗೆ ನೋಡುತ್ತಾನೆ?
ಆತನ ಈವರೆಗಿನ ಜೀವನದಲ್ಲಿ ಲೌಕಿಕ ಸುಖದ ಮಿಷವು ಅಂದರೆ ಬಯಕೆಯು ಪ್ರಬಲವಾಗಿತ್ತು. ಈ ಬಯಕೆಯೇ ದುಃಖವೆಂಬ ವಿಷದ ಮೂಲವೂ ಹೌದು. ಇದು ಅವನಿಗೆ ಅರಿವಾದಾಗ, ಆತನು ಈ ಲೌಕಿಕ ಬಯಕೆಯನ್ನು ತ್ಯಜಿಸುತ್ತಾನೆ. ಭಗವಂತನ ಸಂಗದಿಂದ ಆತನ ಪರಿಮಿತ ವ್ಯಾಪ್ತಿಯ ಚೈತನ್ಯವು ಅಪರಿಮಿತವಾಗಿ, ಅನಂತವಾಗಿ ಹಿಗ್ಗುತ್ತದೆ. ಇದು ಒಂದು ಅರ್ಥ.
ಹಿಗ್ಗು ಅಂದರೆ ತೃಪ್ತನಾಗು ಎನ್ನುವ ಅರ್ಥವೂ ಇದೆ. ಭಗವಂತನ ಸಂಗವನ್ನು ಪಡೆದ ಜೀವವು ಸದಾಕಾಲವೂ ಸಂತೃಪ್ತವಾಗಿರುತ್ತದೆ ಎನ್ನುವದು ಎರಡನೆಯ ಅರ್ಥ.

ಈ ರೀತಿಯಾಗಿ ಹಿಗ್ಗಿದ ಹಾಗು ಹಿಗ್ಗುಗೊಂಡ ಭಕ್ತನ ಪ್ರಜ್ಞೆಯಲ್ಲಿ ಭಕ್ತ ಹಾಗು ಭಗವಂತ ಲಯವಾಗುತ್ತಾರೆ. ಇದು ಸತ್-ಚಿತ್-ಆನಂದದ ಸ್ಥಿತಿ. ಇಂತಹ ಮನಸ್ಸು ದೇವಾಲಯವಿದ್ದಂತೆ. ಈ ಮನಸ್ಸಿನ ಸಾಧನಗಳಾದ ಪಂಚಕರಣಗಳ ಸಮೂಹವು ( ಐದು ಜ್ಞಾನೇಂದ್ರಿಯಗಳು ಹಾಗು ಐದು ಕರ್ಮೇಂದ್ರಿಯಗಳು) ಈ ದೇವಾಲಯಕ್ಕೆ ಕಟ್ಟಿದ ಬಾವುಟ ಹಾಗು ತೋರಣಗಳಾಗುತ್ತವೆ. ಈ ಸ್ಥಿತಿಯಲ್ಲಿ ಆತನ ಕ್ರಿಯೆಗಳೆಲ್ಲ ಭಗವಂತನಿಗಾಗಿ ಇರುತ್ತವೆ.

[ ಇಂತಹ ಸ್ಥಿತಿಯನ್ನು ಶ್ರೀ ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ಹೀಗೆ ವರ್ಣಿಸಿದ್ದಾರೆ:
ಜಪೋ ಜಲ್ಪ: ಶಿಲ್ಪಂ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಮಶನಾದ್ಯಾಹುತಿ ವಿಧಿ:
ಪ್ರಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣ ದೃಶಾ
ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್|
ಭಾವಾನುವಾದ:
ನುಡಿದದ್ದು ಎಲ್ಲ ಜಪವು, ಕೈಯಾಟವೆಲ್ಲ ಮುದ್ರೆ,
ನಡೆದದ್ದೇ ಪ್ರದಕ್ಷಿಣೆ, ನನ್ನೂಟ ನಿನಗೆ ಬಲಿಯು,
ಒರಗಿರಲು ಅದುವೆ ನಮನ, ಆತ್ಮಾರ್ಪಣೆಯೆ ಸುಖವು
ಈ ರೀತಿ ಬೆಳೆಯಲಮ್ಮ ನನ್ನ ಪೂಜೆಯಾ ವಿಧಿಯು!]


ನುಡಿ ೩:
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಭಕ್ತನ ಮನಸ್ಸು ಎನ್ನುವ ದೇವಾಲಯದಲ್ಲಿ ಸ್ಥಿತನಾಗಿರುವ ಈ ಭಗವಂತನ ಲಕ್ಷಣವೇನು? ಶರಣಾಗತಿಯು ಭಕ್ತನ ಲಕ್ಷಣವಾದರೆ, ಅನುಗ್ರಹವು ಭಗವಂತನ ಲಕ್ಷಣವಾಗಿದೆ. ತನ್ನ ಭಕ್ತನನ್ನು ಸಂಸಾರಸಾಗರದ ತೆರೆನೊರೆಗಳಿಂದ ರಕ್ಷಿಸುತ್ತ, ಪಾರು ಮಾಡುವದೇ, ‘ಶರಣಾಗತವತ್ಸಲ’ ಎನ್ನುವ ಬಿರುದುಳ್ಳ ಭಗವಂತನ ಪ್ರಮುಖ ಲಕ್ಷಣವಾಗಿದೆ. ಇದನ್ನು ಕವಿಯು ‘ನಿನ್ನ ಚರಣ, ಸುಸಂತರಣ’ ಎನ್ನುವ ಪದಪುಂಜದಿಂದ ಸೂಚಿಸುತ್ತಾನೆ. ಸುಸಂತರಣ ಎಂದರೆ ಸುಲಭವಾಗಿ ದಾಟಿಸಬಲ್ಲಂತಹದು ಎನ್ನುವ ಅರ್ಥ. ಭಗವಂತನ ಈ ಶಕ್ತಿಯು ವಿಶ್ವವ್ಯಾಪಿಯಾಗಿದೆ ಹಾಗು ಆತನ ಭಕ್ತವತ್ಸಲತೆಯೂ ಸಹ ಸರ್ವವ್ಯಾಪಿಯಾಗಿದೆ ಹಾಗು ಇದನ್ನು ಆತನ ಭಕ್ತರೆಲ್ಲರೂ ಪೂರ್ಣವಾಗಿ ಅರಿತಿದ್ದಾರೆ ಎನ್ನುವ ಅರ್ಥದಲ್ಲಿ ಬೇಂದ್ರೆಯವರು ‘ಜಗದ್ಭರಿತ ಭಾವನಾ’ ಎಂದು ಹೇಳುತ್ತಾರೆ.

 ‘ಹಾಸ್ಯಕಿರಣ’ವು ಭಗವಂತನ ಅನುಗ್ರಹದ ಪ್ರತೀಕವಾಗಿದೆ. ಭಗವಂತನದು ಯಾವಾಗಲೂ ಮಂದಹಾಸ. ಆ ಮಂದಹಾಸವು ರವಿಕಿರಣದಂತೆ ಮನಸ್ಸಿಗೆ ಬೆಳಕನ್ನು ನೀಡಿದರೆ, ಚಂದ್ರಕಿರಣದಂತೆ ಮನಸ್ಸನ್ನು ತಂಪುಗೊಳಿಸುತ್ತದೆ. ಭಕ್ತನ ಮನಸ್ಸು ಇಂತಹ ಭಗವಂತನ ಸ್ಮರಣೆಯಲ್ಲಿಯೇ ಸದಾ ನಿರತವಾಗಿರುತ್ತದೆ. ಲೌಕಿಕವನ್ನು ದಾಟುವ ಇತರ ಮಾರ್ಗಗಳು ಇಲ್ಲ. ಇದ್ದರೂ ಸಹ ಅವು ಅವನ ಮನಸ್ಸನ್ನು ಸೆಳೆಯಲಾರವು.

ನುಡಿ ೪:
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.

ಭಗವಂತನಲ್ಲಿ ಈ ರೀತಿಯಾಗಿ ಶರಣಾಗತನಾಗಿ, ಭಗವಂತ ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಭಕ್ತನಿಗೆ ಕಂಡ ಕಾಣ್ಕೆ ಯಾವುದು? ಸೃಷ್ಟಿ ಇಲ್ಲದೆ ಭಗವಂತ ಇರಲಾರ. ಸೃಷ್ಟಿಯ ಸಕಲ ಜೀವಿಗಳಿಗೆ ಭಗವಂತನ ಕರುಣೆ ಇದೆ. ಆ ಅನುಗ್ರಹದಲ್ಲಿ ಎಲ್ಲ ಜೀವಿಗಳು ಹರುಷದಿಂದ ಬಾಳುತ್ತವೆ ಎನ್ನುವದೇ ಈ ಅರಿವು. ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಹಾಗು ಅನುಗ್ರಹ ಇವು ಭಗವಂತನ ಐದು ನಿರಂತರ ಕ್ರಿಯೆಗಳು. ಇದು ಅವನ ಧರ್ಮವೂ ಹೌದು. ಬಸವಣ್ಣನವರು ಇದನ್ನೇ ‘ಸಕಲ ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲ ಸಂಗಮ ದೇವ’ ಎಂದಿದ್ದಾರೆ. ಈ ದರ್ಶನಕ್ಕೆ ಬೇಂದ್ರೆಯವರು ‘ಜೀವಧರ್ಮಧಾರಣಾ’ ಎನ್ನುತ್ತಾರೆ.

ಭಗವಂತನ ಹರುಷರಸವೇ ಅವನ ಸೃಷ್ಟಿಗೆ ಕಾರಣ, ಇದುವೇ ಜೀವನ. ಈ ಹರುಷರಸ ಇಲ್ಲದಲ್ಲಿ ಅದು ‘ವಿ-ರಸ’ ಆಗುತ್ತದೆ. ಅದುವೇ ಮರಣ. ಈ ರಸ ಹಾಗೂ ವಿರಸಗಳ ನಡುವೆ ಇರುವದೇ ಜೀವನ. ಆದುದರಿಂದಲೇ ಈ ಜೀವನವು ಸುಖ ಹಾಗು ದುಃಖಗಳ ಸಮರಸವಾಗಿದೆ. ಇದು ಬೇಂದ್ರೆಯವರು ಕಂಡ ಕಾಣ್ಕೆ!

‘ನನ್ನ ಹಾಡು’ ಮೇಲ್ ನೋಟದಲ್ಲಿ ಅತಿ ಸರಳವಾದ ಕವನ. ಕವನದಲ್ಲಿ ಬಳಸಲಾದ ಪದಗಳು ಸರಳವಾಗಿವೆ ಹಾಗು ಮೃದುವಾಗಿವೆ. ಕವನದ ಛಂದಸ್ಸು ಸರಳವಾಗಿದೆ. (ಇದು ಕನ್ನಡದಲ್ಲಿ ಇರುವ ಆರು ಬಗೆಯ ಷಟ್ಪದಿಗಳಿಗಿಂತ ಭಿನ್ನವಾದ ಷಟ್ಪದಿಯಾಗಿದೆ.) ಕವನದ ಭಾವವೂ ಸಹ ಸರಳವಾಗಿಯೇ ಇದೆ. ಆದರೆ ಕವನದ ಪ್ರತಿ ಪದವೂ ಸಂಕೀರ್ಣ ಅರ್ಥವನ್ನು ಹೊಂದಿದೆ. ಹೀಗಾಗಿ ಬೇಂದ್ರೆಯವರ ಅನೇಕ ಸರಳ ಕವನಗಳಂತೆ, ‘ನನ್ನ ಹಾಡು’ ಸಹ ಸಂಕೀರ್ಣ-ಅರ್ಥ-ಗರ್ಭಿತ ಕವನವಾಗಿದೆ.

ಪ್ರತಿಯೋರ್ವ ವ್ಯಕ್ತಿಗೂ ಹುಟ್ಟಿದ ಕ್ಷಣದಿಂದಲೇ ಒಂದು identity ಪ್ರಾರಂಭವಾಗುತ್ತದೆ. ದೈಹಿಕ identity, ಕೌಟಂಬಿಕ identity,ಸಾಮಾಜಿಕ identity ಹೀಗೆಲ್ಲ ಇವು ಸಂಗ್ರಹಗೊಳ್ಳುತ್ತಲೇ ಹೋಗುತ್ತವೆ. ಸಂಕಷ್ಟಗಳ ಹೊಡೆತಕ್ಕೆ ಸಿಲುಕಿ, ಹಣ್ಣಾದ ಭಕ್ತನು ಈ ಎಲ್ಲ identityಗಳನ್ನು ಕಳೆದುಕೊಳ್ಳುತ್ತಾನೆ. ಅವನ ಲೌಕಿಕ identityಗಳೆಲ್ಲ ನಾಶವಾಗಿ ಹೋಗುತ್ತವೆ. ಆತನು ಭಕ್ತ ಎನ್ನುವ identity ಒಂದೇ ಉಳಿದುಕೊಳ್ಳುತ್ತದೆ. ಅದೇ ಅವನ ಕೊನೆಯ ಭಾವ. ಆದುದರಿಂದಲೇ ಬೇಂದ್ರೆಯವರು ಈ ಕೊನೆಯ ಭಾವದ ಸೂಚನೆಯಾಗಿ ಈ ಕವನವನ್ನು ‘ನನ್ನ ಹಾಡು’ ಎಂದು ಕರೆದಿದ್ದಾರೆ.

[ಟಿಪ್ಪಣಿ:
ವಿನಾಯಕ ಕೃಷ್ಣ ಗೋಕಾಕರು ತಮ್ಮ ಬೃಹತ್ ಕಾದಂಬರಿಯ ಶೀರ್ಷಿಕೆಯನ್ನು ( ‘ಸಮರಸವೇ ಜೀವನ’ ) ಈ ಕವನದಿಂದಲೇ ಎತ್ತಿಕೊಂಡಿದ್ದಾರೆ.]