Wednesday, May 11, 2011

ನನ್ನ ಹಾಡು……………….ದ.ರಾ.ಬೇಂದ್ರೆ


ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
..............................................................................................................
ಬೇಂದ್ರೆಯವರ ‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾನೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ ಲಕ್ಷಣವನ್ನು ವರ್ಣಿಸುತ್ತಾನೆ ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ ಲಕ್ಷಣವನ್ನು ಸೂಚಿಸುತ್ತಾನೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು ವಿವರಿಸುತ್ತಾನೆ.

ನುಡಿ ೧:
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಬಾಳಿನಲ್ಲಿ ಬೆಂದ ವ್ಯಕ್ತಿಯು ಭಗವಂತನೆಂಬ ದಿವ್ಯ ಚೈತನ್ಯಕ್ಕೆ ಶರಣು ಹೋಗುವದು ಒಂದು ಸಹಜ ಕ್ರಿಯೆ. ‘ವಿಶ್ವದ ಎಲ್ಲ ಘಟನೆಗಳಿಗೂ ಭಗವಂತನೇ ಕಾರಣಪುರುಷ ; ಲೋಕಮುಖಿಯಾದ ತನ್ನನ್ನು ಭಗವನ್ಮುಖಿಯಾಗಿ ಮಾಡುವ ಉದ್ದೇಶದಿಂದಲೇ ಭಗವಂತನು ತನ್ನನ್ನು ಇಷ್ಟೆಲ್ಲ ಸಂಕಷ್ಟಗಳಿಗೆ ಒಡ್ಡುತ್ತಿದ್ದಾನೆ’ ಎನ್ನುವ ತಿಳಿವಳಿಕೆ ಭಕ್ತನಿಗೆ ಬರಬೇಕು. ಆವಾಗ ಆತನು  ‘ನನ್ನ ಹರಣ, ನಿನಗೆ ಶರಣ’ ಎನ್ನುವ ಮೂಲಕ ತನ್ನ ಪ್ರಾಣವನ್ನು ಅಂದರೆ ಜೀವಚೈತನ್ಯವನ್ನು  ಭಗವಂತನಿಗೆ ಅಂದರೆ ವಿಶ್ವಚೈತನ್ಯನಿಗೆ  ಒಪ್ಪಿಸಿಕೊಳ್ಳುತ್ತಾನೆ. ಈ ಭಾವನೆಯನ್ನು ಬೇಂದ್ರೆಯವರು ‘ಸಕಲ ಕಾರ್ಯ ಕಾರಣಾ’ ಎನ್ನುವ ಸಂಬೋಧನೆಯ ಮೂಲಕ ಸ್ಪಷ್ಟ ಪಡಿಸುತ್ತಿದ್ದಾರೆ.

ವ್ಯಕ್ತಿಯ ಜೀವಾತ್ಮವು ಪರಿಮಿತ ಚೈತನ್ಯ ; ಪರಮಾತ್ಮನು ಅಪರಿಮಿತ ಚೈತನ್ಯ. ಈ ತಿಳಿವು ಭಕ್ತನ ಮನಸ್ಸಿನಲ್ಲಿ ಹುಟ್ಟಿ, ಅವನು ಆ ತಿಳಿವನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದಂತೆಯೆ, ಆತನ ಮನಸ್ಸು ಪುಳಕಗೊಳ್ಳುತ್ತದೆ ಹಾಗೂ ನಿರ್ಮಲವಾಗುತ್ತದೆ. ಮನಸ್ಸಿನ ನಿರ್ಮಲತೆಯು, ಮನದ ಆವರಣವಾದ ಶರೀರಕ್ಕೂ ಸಹ ಹಬ್ಬಲೇಬೇಕಲ್ಲವೆ? ಹೀಗಾಗಿ ಆತನ ತನುವೂ ಸಹ ಪವಿತ್ರವಾಗುತ್ತದೆ. ‘ತನುವು ಪವಿತ್ರಗೊಳ್ಳುವದು’ ಅಂದರೇನು? ಪವಿತ್ರ ದೇಹದ ಮೂಲಕ ನಡೆಯಿಸುವ ಕಾರ್ಯಗಳು ನೀಚ ಕಾರ್ಯಗಳಾಗದೆ, ಒಳ್ಳೆಯ ಕಾರ್ಯಗಳಾಗುವವು ಎನ್ನುವದು ‘ತನು ಪಾವನಾ’ ಎನ್ನುವದರ ಅರ್ಥ. ಇಂತಹ ಮನಸ್ಸು ಹಾಗು ಇಂತಹ ದೇಹವು ಭಗವಚ್ಚಿಂತನೆಯಲ್ಲಿ ಮುಳುಗಿರುವದರಿಂದ ಸದಾಕಾಲವೂ ಉಲ್ಲಸಿತ ಭಾವದಲ್ಲಿ ಇರುತ್ತದೆ.

ನುಡಿ ೨:
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ಭಗವಂತನ ಅರಿವನ್ನು ಪಡೆದ ಭಕ್ತನು ಲೌಕಿಕವನ್ನು ಹೇಗೆ ನೋಡುತ್ತಾನೆ?
ಆತನ ಈವರೆಗಿನ ಜೀವನದಲ್ಲಿ ಲೌಕಿಕ ಸುಖದ ಮಿಷವು ಅಂದರೆ ಬಯಕೆಯು ಪ್ರಬಲವಾಗಿತ್ತು. ಈ ಬಯಕೆಯೇ ದುಃಖವೆಂಬ ವಿಷದ ಮೂಲವೂ ಹೌದು. ಇದು ಅವನಿಗೆ ಅರಿವಾದಾಗ, ಆತನು ಈ ಲೌಕಿಕ ಬಯಕೆಯನ್ನು ತ್ಯಜಿಸುತ್ತಾನೆ. ಭಗವಂತನ ಸಂಗದಿಂದ ಆತನ ಪರಿಮಿತ ವ್ಯಾಪ್ತಿಯ ಚೈತನ್ಯವು ಅಪರಿಮಿತವಾಗಿ, ಅನಂತವಾಗಿ ಹಿಗ್ಗುತ್ತದೆ. ಇದು ಒಂದು ಅರ್ಥ.
ಹಿಗ್ಗು ಅಂದರೆ ತೃಪ್ತನಾಗು ಎನ್ನುವ ಅರ್ಥವೂ ಇದೆ. ಭಗವಂತನ ಸಂಗವನ್ನು ಪಡೆದ ಜೀವವು ಸದಾಕಾಲವೂ ಸಂತೃಪ್ತವಾಗಿರುತ್ತದೆ ಎನ್ನುವದು ಎರಡನೆಯ ಅರ್ಥ.

ಈ ರೀತಿಯಾಗಿ ಹಿಗ್ಗಿದ ಹಾಗು ಹಿಗ್ಗುಗೊಂಡ ಭಕ್ತನ ಪ್ರಜ್ಞೆಯಲ್ಲಿ ಭಕ್ತ ಹಾಗು ಭಗವಂತ ಲಯವಾಗುತ್ತಾರೆ. ಇದು ಸತ್-ಚಿತ್-ಆನಂದದ ಸ್ಥಿತಿ. ಇಂತಹ ಮನಸ್ಸು ದೇವಾಲಯವಿದ್ದಂತೆ. ಈ ಮನಸ್ಸಿನ ಸಾಧನಗಳಾದ ಪಂಚಕರಣಗಳ ಸಮೂಹವು ( ಐದು ಜ್ಞಾನೇಂದ್ರಿಯಗಳು ಹಾಗು ಐದು ಕರ್ಮೇಂದ್ರಿಯಗಳು) ಈ ದೇವಾಲಯಕ್ಕೆ ಕಟ್ಟಿದ ಬಾವುಟ ಹಾಗು ತೋರಣಗಳಾಗುತ್ತವೆ. ಈ ಸ್ಥಿತಿಯಲ್ಲಿ ಆತನ ಕ್ರಿಯೆಗಳೆಲ್ಲ ಭಗವಂತನಿಗಾಗಿ ಇರುತ್ತವೆ.

[ ಇಂತಹ ಸ್ಥಿತಿಯನ್ನು ಶ್ರೀ ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ಹೀಗೆ ವರ್ಣಿಸಿದ್ದಾರೆ:
ಜಪೋ ಜಲ್ಪ: ಶಿಲ್ಪಂ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಮಶನಾದ್ಯಾಹುತಿ ವಿಧಿ:
ಪ್ರಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣ ದೃಶಾ
ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್|
ಭಾವಾನುವಾದ:
ನುಡಿದದ್ದು ಎಲ್ಲ ಜಪವು, ಕೈಯಾಟವೆಲ್ಲ ಮುದ್ರೆ,
ನಡೆದದ್ದೇ ಪ್ರದಕ್ಷಿಣೆ, ನನ್ನೂಟ ನಿನಗೆ ಬಲಿಯು,
ಒರಗಿರಲು ಅದುವೆ ನಮನ, ಆತ್ಮಾರ್ಪಣೆಯೆ ಸುಖವು
ಈ ರೀತಿ ಬೆಳೆಯಲಮ್ಮ ನನ್ನ ಪೂಜೆಯಾ ವಿಧಿಯು!]


ನುಡಿ ೩:
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಭಕ್ತನ ಮನಸ್ಸು ಎನ್ನುವ ದೇವಾಲಯದಲ್ಲಿ ಸ್ಥಿತನಾಗಿರುವ ಈ ಭಗವಂತನ ಲಕ್ಷಣವೇನು? ಶರಣಾಗತಿಯು ಭಕ್ತನ ಲಕ್ಷಣವಾದರೆ, ಅನುಗ್ರಹವು ಭಗವಂತನ ಲಕ್ಷಣವಾಗಿದೆ. ತನ್ನ ಭಕ್ತನನ್ನು ಸಂಸಾರಸಾಗರದ ತೆರೆನೊರೆಗಳಿಂದ ರಕ್ಷಿಸುತ್ತ, ಪಾರು ಮಾಡುವದೇ, ‘ಶರಣಾಗತವತ್ಸಲ’ ಎನ್ನುವ ಬಿರುದುಳ್ಳ ಭಗವಂತನ ಪ್ರಮುಖ ಲಕ್ಷಣವಾಗಿದೆ. ಇದನ್ನು ಕವಿಯು ‘ನಿನ್ನ ಚರಣ, ಸುಸಂತರಣ’ ಎನ್ನುವ ಪದಪುಂಜದಿಂದ ಸೂಚಿಸುತ್ತಾನೆ. ಸುಸಂತರಣ ಎಂದರೆ ಸುಲಭವಾಗಿ ದಾಟಿಸಬಲ್ಲಂತಹದು ಎನ್ನುವ ಅರ್ಥ. ಭಗವಂತನ ಈ ಶಕ್ತಿಯು ವಿಶ್ವವ್ಯಾಪಿಯಾಗಿದೆ ಹಾಗು ಆತನ ಭಕ್ತವತ್ಸಲತೆಯೂ ಸಹ ಸರ್ವವ್ಯಾಪಿಯಾಗಿದೆ ಹಾಗು ಇದನ್ನು ಆತನ ಭಕ್ತರೆಲ್ಲರೂ ಪೂರ್ಣವಾಗಿ ಅರಿತಿದ್ದಾರೆ ಎನ್ನುವ ಅರ್ಥದಲ್ಲಿ ಬೇಂದ್ರೆಯವರು ‘ಜಗದ್ಭರಿತ ಭಾವನಾ’ ಎಂದು ಹೇಳುತ್ತಾರೆ.

 ‘ಹಾಸ್ಯಕಿರಣ’ವು ಭಗವಂತನ ಅನುಗ್ರಹದ ಪ್ರತೀಕವಾಗಿದೆ. ಭಗವಂತನದು ಯಾವಾಗಲೂ ಮಂದಹಾಸ. ಆ ಮಂದಹಾಸವು ರವಿಕಿರಣದಂತೆ ಮನಸ್ಸಿಗೆ ಬೆಳಕನ್ನು ನೀಡಿದರೆ, ಚಂದ್ರಕಿರಣದಂತೆ ಮನಸ್ಸನ್ನು ತಂಪುಗೊಳಿಸುತ್ತದೆ. ಭಕ್ತನ ಮನಸ್ಸು ಇಂತಹ ಭಗವಂತನ ಸ್ಮರಣೆಯಲ್ಲಿಯೇ ಸದಾ ನಿರತವಾಗಿರುತ್ತದೆ. ಲೌಕಿಕವನ್ನು ದಾಟುವ ಇತರ ಮಾರ್ಗಗಳು ಇಲ್ಲ. ಇದ್ದರೂ ಸಹ ಅವು ಅವನ ಮನಸ್ಸನ್ನು ಸೆಳೆಯಲಾರವು.

ನುಡಿ ೪:
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.

ಭಗವಂತನಲ್ಲಿ ಈ ರೀತಿಯಾಗಿ ಶರಣಾಗತನಾಗಿ, ಭಗವಂತ ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಭಕ್ತನಿಗೆ ಕಂಡ ಕಾಣ್ಕೆ ಯಾವುದು? ಸೃಷ್ಟಿ ಇಲ್ಲದೆ ಭಗವಂತ ಇರಲಾರ. ಸೃಷ್ಟಿಯ ಸಕಲ ಜೀವಿಗಳಿಗೆ ಭಗವಂತನ ಕರುಣೆ ಇದೆ. ಆ ಅನುಗ್ರಹದಲ್ಲಿ ಎಲ್ಲ ಜೀವಿಗಳು ಹರುಷದಿಂದ ಬಾಳುತ್ತವೆ ಎನ್ನುವದೇ ಈ ಅರಿವು. ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಹಾಗು ಅನುಗ್ರಹ ಇವು ಭಗವಂತನ ಐದು ನಿರಂತರ ಕ್ರಿಯೆಗಳು. ಇದು ಅವನ ಧರ್ಮವೂ ಹೌದು. ಬಸವಣ್ಣನವರು ಇದನ್ನೇ ‘ಸಕಲ ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲ ಸಂಗಮ ದೇವ’ ಎಂದಿದ್ದಾರೆ. ಈ ದರ್ಶನಕ್ಕೆ ಬೇಂದ್ರೆಯವರು ‘ಜೀವಧರ್ಮಧಾರಣಾ’ ಎನ್ನುತ್ತಾರೆ.

ಭಗವಂತನ ಹರುಷರಸವೇ ಅವನ ಸೃಷ್ಟಿಗೆ ಕಾರಣ, ಇದುವೇ ಜೀವನ. ಈ ಹರುಷರಸ ಇಲ್ಲದಲ್ಲಿ ಅದು ‘ವಿ-ರಸ’ ಆಗುತ್ತದೆ. ಅದುವೇ ಮರಣ. ಈ ರಸ ಹಾಗೂ ವಿರಸಗಳ ನಡುವೆ ಇರುವದೇ ಜೀವನ. ಆದುದರಿಂದಲೇ ಈ ಜೀವನವು ಸುಖ ಹಾಗು ದುಃಖಗಳ ಸಮರಸವಾಗಿದೆ. ಇದು ಬೇಂದ್ರೆಯವರು ಕಂಡ ಕಾಣ್ಕೆ!

‘ನನ್ನ ಹಾಡು’ ಮೇಲ್ ನೋಟದಲ್ಲಿ ಅತಿ ಸರಳವಾದ ಕವನ. ಕವನದಲ್ಲಿ ಬಳಸಲಾದ ಪದಗಳು ಸರಳವಾಗಿವೆ ಹಾಗು ಮೃದುವಾಗಿವೆ. ಕವನದ ಛಂದಸ್ಸು ಸರಳವಾಗಿದೆ. (ಇದು ಕನ್ನಡದಲ್ಲಿ ಇರುವ ಆರು ಬಗೆಯ ಷಟ್ಪದಿಗಳಿಗಿಂತ ಭಿನ್ನವಾದ ಷಟ್ಪದಿಯಾಗಿದೆ.) ಕವನದ ಭಾವವೂ ಸಹ ಸರಳವಾಗಿಯೇ ಇದೆ. ಆದರೆ ಕವನದ ಪ್ರತಿ ಪದವೂ ಸಂಕೀರ್ಣ ಅರ್ಥವನ್ನು ಹೊಂದಿದೆ. ಹೀಗಾಗಿ ಬೇಂದ್ರೆಯವರ ಅನೇಕ ಸರಳ ಕವನಗಳಂತೆ, ‘ನನ್ನ ಹಾಡು’ ಸಹ ಸಂಕೀರ್ಣ-ಅರ್ಥ-ಗರ್ಭಿತ ಕವನವಾಗಿದೆ.

ಪ್ರತಿಯೋರ್ವ ವ್ಯಕ್ತಿಗೂ ಹುಟ್ಟಿದ ಕ್ಷಣದಿಂದಲೇ ಒಂದು identity ಪ್ರಾರಂಭವಾಗುತ್ತದೆ. ದೈಹಿಕ identity, ಕೌಟಂಬಿಕ identity,ಸಾಮಾಜಿಕ identity ಹೀಗೆಲ್ಲ ಇವು ಸಂಗ್ರಹಗೊಳ್ಳುತ್ತಲೇ ಹೋಗುತ್ತವೆ. ಸಂಕಷ್ಟಗಳ ಹೊಡೆತಕ್ಕೆ ಸಿಲುಕಿ, ಹಣ್ಣಾದ ಭಕ್ತನು ಈ ಎಲ್ಲ identityಗಳನ್ನು ಕಳೆದುಕೊಳ್ಳುತ್ತಾನೆ. ಅವನ ಲೌಕಿಕ identityಗಳೆಲ್ಲ ನಾಶವಾಗಿ ಹೋಗುತ್ತವೆ. ಆತನು ಭಕ್ತ ಎನ್ನುವ identity ಒಂದೇ ಉಳಿದುಕೊಳ್ಳುತ್ತದೆ. ಅದೇ ಅವನ ಕೊನೆಯ ಭಾವ. ಆದುದರಿಂದಲೇ ಬೇಂದ್ರೆಯವರು ಈ ಕೊನೆಯ ಭಾವದ ಸೂಚನೆಯಾಗಿ ಈ ಕವನವನ್ನು ‘ನನ್ನ ಹಾಡು’ ಎಂದು ಕರೆದಿದ್ದಾರೆ.

[ಟಿಪ್ಪಣಿ:
ವಿನಾಯಕ ಕೃಷ್ಣ ಗೋಕಾಕರು ತಮ್ಮ ಬೃಹತ್ ಕಾದಂಬರಿಯ ಶೀರ್ಷಿಕೆಯನ್ನು ( ‘ಸಮರಸವೇ ಜೀವನ’ ) ಈ ಕವನದಿಂದಲೇ ಎತ್ತಿಕೊಂಡಿದ್ದಾರೆ.]

52 comments:

ಅನಂತ್ ರಾಜ್ said...

"ರಸವೆ ಜನನ ವಿರಸ ಮರಣ ಸಮರಸವೆ ಜೀವನ" -ವೇದೋಕ್ತಕ್ಕೆ ಸಮಾನವಾದ ಉಕ್ತವಾಗಿದೆ. ದರಾಬೇ ಅವರ ಅದ್ಭುತ ರಸ ಕಾವ್ಯಗಳ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ ಸುನಾತ್ ಸರ್. "ಭಗವಂತನ ಹರುಷರಸವೇ "ಅವನ" ಸೃಷ್ಟಿಗೆ ಕಾರಣ.." ಎ೦ದಿದ್ದೀರಿ. ಇಲ್ಲಿ "ಅವನ" ಎ೦ದರೆ ಭಗವ೦ತನ ಎ೦ದು ಅರ್ಥ ಆಗುತ್ತದಲ್ಲವೆ? ಸೃಷ್ಟಿಕರ್ತ ಮತ್ತು ಸೃಷ್ಟಿಯಾದವ ಎರಡೂ ಒ೦ದೇ ಆದ೦ತೆ ಅರ್ಥ ಬರುವುದಲ್ಲವೆ?
ಇದರ ಭಾವಾರ್ಥ ಹೀಗೆಯೇ ಆಗುತ್ತದೆಯೇ? ನನ್ನಲ್ಲಿ ಬ೦ದ ಸ೦ಶಯ ಅಷ್ಟೆ. ಅನ್ಯಥಾ ಭಾವಿಸಿಬೇಡಿ.

ಶುಭಾಶಯಗಳು
ಅನ೦ತ್

Harisha - ಹರೀಶ said...

"ರಸವೆ ಜನನ, ವಿರಸ ಮರಣ, ಸಮರಸವೆ ಜೀವನ" ಈ ಸಾಲನ್ನು ಕೇಳಿದ್ದೆ.. ಆದರೆ ಈ‌ ಕವನದ್ದು ಎಂದು ಗೊತ್ತಿರಲಿಲ್ಲ. ಬಹಳ ಚೆನ್ನಾಗಿ ವಿವರಿಸಿದ್ದೀರಿ.

umesh desai said...

ಕಾಕಾ, ಮೇಲ್ನೋಟಕ್ಕೆ ಕವಿತಾ ಸರಳಅದ ಅಂತ ಅನಸತದ. ಎಷ್ಟೆಲ್ಲ ಅರ್ಥಅವ ಅಂತ ಆಶ್ಚರ್ಯ ಆತು.
ವಿಶ್ಲೇಷಿಸಿದ ನಿಮಗೆ ಶರಣು

sunaath said...

ಅನಂತರಾಜರೆ,
ಭಗವಂತನಿಗೆ ಸೃಷ್ಟಿಕ್ರಿಯೆ ಹರ್ಷ ನೀಡುತ್ತದೆ. ಅದೇ ರೀತಿಯಲ್ಲಿ ಸೃಷ್ಟಿಕ್ರಿಯೆಯು ನಮಗೂ ಸಹ ಸಂತೋಷದಾಯಕವೇ!
‘ಅವನ’ಎಂದರೆ ‘ಸೃಷ್ಟಿಕರ್ತನ’ಎನ್ನುವದೇ ಸರಿಯಾದ ಅರ್ಥ. ಜಿಜ್ಞಾಸೆಗೆ ಧನ್ಯವಾದಗಳು.

sunaath said...

ಹರೀಶ,
ಒಂದು ಕಾಲದಲ್ಲಿ, ‘ನನ್ನ ಹಾಡು’ ತಾತ್ವಿಕ ಹಾಡು ಎಂದು ಪ್ರಸಿದ್ಧವಾಗಿತ್ತು. ಕಾಲಾಂತರದಲ್ಲಿ ಈ ಕವನದ ಸಂದೇಶವಾದ ‘ಸಮರಸವೇ ಜೀವನ’ ಎನ್ನುವದು ಜನಮಾನಸದಲ್ಲಿ ಉಳಿದು, ಕವನ ಮರೆಯಾಗಿ ಹೋಯಿತು!

sunaath said...

ದೇಸಾಯರ,
ಬೇಂದ್ರೆಯವರ ಕವನಗಳ ವೈಶಿಷ್ಟ್ಯನs ಇದು. ಸರಳವಾಗಿ ಕಾಣೋ ಕವನಗಳು ಎಷ್ಟೆಷ್ಟೂ ಸರಳ ಇರೋದಿಲ್ಲ!

ಸೀತಾರಾಮ. ಕೆ. / SITARAM.K said...

tumbaa chennaagi artha vivarisiddiraa bendre ajjana sumadhura kavanavanna.

ಮನಮುಕ್ತಾ said...

ಈ ಕವಿತೆಯನ್ನು ಚಿಕ್ಕ೦ದಿನಲ್ಲಿ ಓದಿದ್ದೆ ಅಷ್ಟೆ..ಇಷ್ಟೊ೦ದು ಅರ್ಥಪೂರ್ಣವಾಗಿದೆ ಎ೦ಬುದು ಅರಿವಿಗೆ ಬ೦ದಿರಲೇ ಇಲ್ಲ.ಉತ್ತಮವಾದ ಕವನವನ್ನು ಸು೦ದರವಾಗಿ, ಸರಳವಾದ ರೀತಿಯಲ್ಲಿ ಅರ್ಥೈಸಿ ತಿಳಿಸಿದ್ದೀರಿ.ತು೦ಬಾ ಧನ್ಯವಾದಗಳು ಕಾಕಾ.

ರಾಘವೇಂದ್ರ ಜೋಶಿ said...

ರಸವೆ ಜನನ
ವಿರಸ ಮರಣ
ಸಮರಸವೆ ಜೀವನ-
ಎಂಬ ಸಾಲುಗಳನ್ನು ಮಾತ್ರ ಕೇಳಿ ಬಲ್ಲೆ.
ನೀವು ಹೇಳಿದಂತೆ ಇದೊಂದು ಸರಳ ಜೊತೆಗೇ ಆಂತರಿಕವಾಗಿ ಅತ್ಯಂತ ಕಠಿಣ ಪದ್ಯ. ಕಠಿಣ ಸಾಲುಗಳನ್ನು
ಹೂವಿನ ಪಕಳೆಗಳಂತೆ
ಬಿಡಿಸಿ ಇಟ್ಟಿರುವಿರಿ.
ಖುಷಿ ಕೊಡುತ್ತೆ ಸರ್ ನಿಮ್ಮ ವಿವರಣೆ..

sunaath said...

ಸೀತಾರಾಮರೆ,
ಬೇಂದ್ರೆ ಕಾವ್ಯ ಅನೇಕ ಅರ್ಥಗಳನ್ನು ಒಳಗೊಂಡ ಕಾವ್ಯ. ಅರ್ಥ ಹೊಳೆಯುತ್ತ ಹೋದಂತೆ, ರುಚಿ ಹತ್ತುತ್ತ ಹೋಗುತ್ತದೆ!

sunaath said...

ಮನಮುಕ್ತಾ,
ಬೇಂದ್ರೆಯವರ ಕಾವ್ಯವು ಓದುಗನನ್ನು, ವಿಮರ್ಶಕನನ್ನು ಬೆಳೆಯಿಸುವ ಕಾವ್ಯ ಎಂದು ಹೇಳುತ್ತಾರೆ. ನಾವು ಬೆಳೆಯುತ್ತ ಹೋದಂತೆ, ಅವರ ಕಾವ್ಯದ ಅರ್ಥವೂ ವಿಸ್ತಾರವಾಗುತ್ತ ಹೋಗುತ್ತದೆ.

sunaath said...

ರಾಘವೇಂದ್ರ ಜೋಶಿಯವರೆ,
ಹೂವಿನ ಪಕಳೆಗಳ ಸುವಾಸನೆಯನ್ನು ಸವಿದಿರಲ್ಲ! ನನಗೆ ಅದೇ ಖುಶಿ.

Sushrutha Dodderi said...

ಕಾಕಾ, ನಂಗೆ ನೀವು ವಿಡಂಬನೆಗಳಿಗಿಂತ ಇಂತ ಪೋಸ್ಟುಗಳನ್ನ ಬರೆದಾಗ ಹೆಚ್ಚು ಇಷ್ಟ ಆಗ್ತೀರ..

ಮನಸು said...

ಧನ್ಯವಾದಗಳು ಕಾಕ.... ಎಷ್ಟು ಅರ್ಥ ಒಳಗೊಂಡಿದೆ ನಿಜಕ್ಕೂ ಓದಲು ಖುಷಿಯಾಗುತ್ತೆ....

Subrahmanya said...

ಸೌಂದರ್ಯ ಲಹರಿಯ ಕನ್ನಡ ಭಾವಾನುವಾದಕ್ಕೆ ಬೆರಗಾದೆ. ಇನ್ನಷ್ಟು ಅನುವಾದ ಮಾಡಬಹುದೇ ? ( ನಿಮ್ಮಿಂದಾಗಲಿ ಎಂದು ಆಶಿಸುತ್ತೇನೆ).

ಬೇಂದ್ರೆಯವರ ಹಾಡಿನ ವಿವರಣೆ ಚೆನ್ನಾಗಿತ್ತು.

(ಹಳೆಯ ಪ್ರತಿಕ್ರಿಯೆಗಳನ್ನೆಲ್ಲಾ ಯಾವುದೋ ಬ್ಲಾಗ್‍ದೆವ್ವ ತಿಂದು ಹಾಕಿದೆ ಅನಿಸುತ್ತಿದೆ !)

sunaath said...

ಮನಸು,
ಧನ್ಯವಾದಗಳು.

sunaath said...

ಸುಬ್ರಹ್ಮಣ್ಯರೆ,
‘ಬಿಟ್ಟೆ ಬಿಟ್ಟೆ ಬೆಳಗಾಯ್ತು, ತಟ್ಟೀಮನೆ ಹಾಳಾಯ್ತು;
ಹಾಳುಗೋಡೆಯ ದೆವ್ವ ಬಂದು ಬಡೀತು!’
ಬ್ಲಾಗರದ ಯಾವುದೋ ತಾಂತ್ರಿಕ ದೆವ್ವ ಹಳೆಯ ೬ ಪ್ರತಿಕ್ರಿಯೆಗಳನ್ನು ನುಂಗಿ ಬಿಟ್ಟಿದೆ! ಆ ನನ್ನ ಬ್ಲಾಗ್ ಬಂಧುಗಳಿಗೆ ನನ್ನ apologies!

umesh desai said...

ಕಾಕಾ ಈ ಹಿಂದೆ ಹಾಕಿದ ಕಾಮೆಂಟು ಇಲ್ಲ ಇರಲಿ ನಿಮ್ಮ ವಿಶ್ಲೇಷಣೆ ಸೊಗಸಾಗಿದೆ ಕವಿತಾ ಮೇಲ್ನೋಟಕ್ಕೆಸರಳ ಅನಿಸಿದರೂ
ಭಾಳ ಗೂಡಾರ್ಥ ಒಳಗೊಂಡಿದೆ

ಮನಮುಕ್ತಾ said...

ಕಾಕಾ,
ಒಳ್ಳೆಯ ಕವಿತೆಗೆ ಉತ್ತಮ ವಿವರಣೆ..ಧನ್ಯವಾದಗಳು.

ಬಹುಷಃ ತಾ೦ತ್ರಿಕ ದೋಷದಿ೦ದ ನಾನು ಮೊದಲು ಬರೆದ ಪ್ರತಿಕ್ರಿಯೆ ಕಾಣೆಯಾಗಿದೆ.ಇರಲಿ.. ಕೆಲವೊಮ್ಮೆ ಹೀಗಾಗುತ್ತದೆ.

Ambika said...

Arthapurnavagide..

ಸಿಂಧು sindhu said...

Ultimate.
innondsala odi, vivaravaagi pratikriyisuttene sir. tumba chenaagide.
-sindhu

Ittigecement said...

ಸುನಾಥ ಸರ್...

ಬೇಂದ್ರೆಯವರ ಈ ಹಾಡಿನಲ್ಲಿ ಇಷ್ಟೊಂದು ಅರ್ಥಗಳಿವೆಯೆಂದು ನಮಗೆ ನೀವು ತಿಳಿಸಿಕೊಟ್ಟಿದ್ದೀರಿ..
ಬೇಂದ್ರೆಯವರಿಗೆ "ಆಧ್ಯಾತ್ಮ" ಜ್ಞಾನ ಎಷ್ಟಿರಬಹುದು...
ಅಬ್ಭಾ...
ಆ ಹಿರಿಯ ಚೇತನಕ್ಕೆ ನಮನಗಳು..

ಅರ್ಥ ತಿಳಿಸಿದ ನಿಮಗೂ ವಂದನೆಗಳು...
ಇನ್ನಷ್ಟು ಕವಿತೆಗಳ ಅರ್ಥ ವಿವರಣೆ ಮಾಡಿಸಿಕೊಡಿ...

sunaath said...

ದೇಸಾಯರ,
ಬೇಂದ್ರೆಯವರ ಕವನವೊಂದರ ಕೆಲವು ಸಾಲುಗಳು ಹೀಗಿವೆ:
"ಅಂಬಿಕಾತನಯ ಕಟ್ಟಿದ ಕಗ್ಗಾ
ಜಗ್ಯಾಡಬ್ಯಾಡಾ ನೀ ಹಿಗ್ಗಾಮುಗ್ಗಾ
ಹುರಿ ಐತ್ಯೊ ಒಳಗ,
ಸುಮ್ಮನೆ ಹೊಸದಿಲ್ಲಾ ಹಗ್ಗಾ!"

sunaath said...

ಮನಮುಕ್ತಾ,
ನಿಮ್ಮ ಮೊದಲಿನ ಪ್ರತಿಕ್ರಿಯೆ ಮಾಯವಾಗಿದೆ! ಬೇಸರಿಸದೆ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು.

sunaath said...

ಕವಿತಾ,
ಬೇಂದ್ರೆಯವರ ಕಾವ್ಯ ಅರ್ಥಗರ್ಭಿತವಾಗಿರಲೇಬೇಕಲ್ಲವೆ? ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

sunaath said...

ಸಿಂಧು,
I await your further comments.

sunaath said...

ಪ್ರಕಾಶ,
ಬೇಂದ್ರೆಯವರು ಕವಿಯೂ ಹೌದು,ಸಾಧಕರೂ ಹೌದು. ಹೀಗಾಗಿ ಆಧ್ಯಾತ್ಮವು ಅವರ ಅನೇಕ ಕವನಗಳ ಭಾಗವೇ ಆಗಿದೆ.

Ittigecement said...

ಸುನಾಥ ಸರ್...

ಇದು ಮುಖಸ್ತುತಿ ಅಂದುಕೊಳ್ಳಬೇಡಿ...
ನಾನೂ ಒಬ್ಬ ಸಿವಿಲ್ ಇಂಜನೀಯರ್...

ನೀವು ಇಷ್ಟೆಲ್ಲ ಸಾಹಿತ್ಯ, ಜ್ಞಾನ ಹೇಗೆ ಸಂಪಾದಿಸಿದಿರಿ...?
ಯಾಕೆಂದರೆ ಸಾಹಿತ್ಯಕ್ಕೂ ನಮ್ಮ ವಿಭಾಗಕ್ಕೂ ಬಹಳ ದೊಡ್ಡ ಕಂದಕವೇ ಇದೆ...

ನಾನು ಇದೇ ಸಿವಿಲ್ ರಂಗದಲ್ಲಿರುವದರಿಂದ ನನಗೆ ಗೊತ್ತು...

ಸಾಹಿತ್ಯ ನಿಮ್ಮ ಆಸಕ್ತಿಯಾಗಿ ಓದಿದ್ದೀರಾ?
ಅಥವಾ ವಿಷಯವಾಗಿ ಓದಿದ್ದೀರಾ?

ನೀವು ಶಿಶುನಾಳ ಷರೀಫರ, ಮತ್ತು ಬೇಂದ್ರೆ ಕಾವ್ಯಗಳನ್ನು ವಿವರಿಸುವಾಗ..
ನನ್ನ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ನೆನಪಾಗುತ್ತಾರೆ..

ಆಳವಾದ ಸಾಹಿತ್ಯ ಮತ್ತು ಸಿವಿಲ್ ಇಂಜನೀಯರಿಂಗ್ ಜೊತೆಯಾಗಿದ್ದು ಹೇಗೆ?
ಮತ್ತು ಹೇಗೆ ಸಾಧ್ಯವಾದದ್ದು?

ನನಗಂತೂ ನೀವೊಂದು " ಆಶ್ಚರ್ಯ.." !! ಅದ್ಭುತ !!

ನನ್ನ ಅನುಮಾನವನ್ನು ನನ್ನ ಬಗೆಗೆ ತಿರುಗಿಸದೆ ದಯವಿಟ್ಟು ಹೇಳಿ..

ಪ್ರೀತಿಯಿಂದ...

sunaath said...

ಪ್ರಕಾಶ,
ನಿಮ್ಮ ಹಾಗು ನನ್ನ ವೃತ್ತಿಯೂ ಒಂದೇ, ಆಸಕ್ತಿಯೂ ಒಂದೇ,
ಆಸಕ್ತಿ ಇದ್ದಲ್ಲಿ ತಿಳಿವು ಬೆಳೆಯಲೇಬೇಕು!

Narayan Bhat said...

ಅಂಬಿಕಾತನಯ ಕಟ್ಟಿದ ಕಗ್ಗದ ದರುಶನವನ್ನ ಸರಳವಾಗಿ ಮತ್ತೊಮ್ಮೆ ಮಾಡಿಸಿದ್ದೀರಿ...ಕೃತಜ್ಞತೆಗಳು ನಿಮಗೆ.

ಪ್ರವೀಣ್ ಭಟ್ said...

Wov estu chandada kavana... estu chandada vivarane... bendreyara ella kavanagaligu munde nimminda vivarane tiliyalu bayasuttene

pravi

sunaath said...

ನಾರಾಯಣ ಭಟ್ಟರೆ,
ಅಂಬಿಕಾತನಯರ ಕಗ್ಗದ ಬಗೆಗೆ ಏನು ಹೇಳಲಾದೀತು?
ಅವರೇ ಹೇಳಿದ್ದಾರೆ:
"ಕಟ್ಟೋರೆಲ್ಲ ಕವಿಗಳಲ್ಲ,
ಹುಟ್ಟೋರೆಲ್ಲ ಭವಿಗಳಲ್ಲ!
ಕರು ಕೂಡ ಕಟ್ಟಿದ್ದುಂಟು,
ಬಸವಣ್ಣನೂ ಹುಟ್ಟಿದ್ದುಂಟು!"

sunaath said...

ಪ್ರವೀಣ,
ಬೇಂದ್ರೆಯವರ ಕಾವ್ಯದ ಬಗೆಗೆ ಬರೆಯುವದು ನನಗೆ ಸಂತೋಷದ ವಿಷಯವೇ. ಇನ್ನೂ ಕೆಲವು ಕವನಗಳ ವಿವರಣೆಗೆ ಪ್ರಯತ್ನಿಸುತ್ತೇನೆ.

ಸಿದ್ಧಾರ್ಥ said...

ನಿಜಕ್ಕೂ ನಿಮ್ಮ ಬ್ಲಾಗ್ ಓದುವುದೊಂದು ಹಬ್ಬ. ಬೇಂದ್ರೆ ಮಾಸ್ತರ ಬಹುತೇಕ ಕವನಗಳು ನನ್ನಂಥವರಿಗೆ ಬರೀ ಬೌನ್ಸರ್‌ಗಳೇ... ನಿಮ್ಮ ವಿಶ್ಲೇಷಣೆ ಓದಿ ಸ್ವಲ್ಪ ಅರ್ಥಮಾಡಿಕೊಂಡಂತಿದೆ.
ತುಂಬಾ ಧನ್ಯವಾದಗಳು.

ಜಲನಯನ said...

ಸುನಾಥಣ್ಣ..ನಿಮ್ಮ ವಿವರಣೆ ಇಲ್ಲದೇ ಇದ್ದಿದ್ದರೆ ಎಂಥ ಸರಳ ನೇರ ಕವನ ಬೇಂದ್ರೆಯವರದು ಎನ್ನುತ್ತಿದ್ದೆ...ಆದ್ರೆ ನಿಮ್ಮ ವಿವರಣೆ ನೋಡಿ..ನಿಜಕ್ಕೂ ಮಹಾನ್ ಕವಿಗಳ ಸರಳ ಪದ ಬಳಕೆಯ ಸರಳುಗಳು ಕಬ್ಬಿಣದಷ್ಟೇ ಅತಿ ಕ್ಲಿಷ್ಟಗಳಒಗ್ಗೂಡಿಕೆಯ ಸರಳತೆ ಎನಿಸುತ್ತೆ...ಅದೂ ಛಂದಸ್ಸಿನಲ್ಲಿದೆಯೆಂದರೆ..??!! ನಿಮ್ಮ ಪೋಸ್ಟ್ ನ ವೈಶಿಷ್ಠ್ಯತೆ ಇದೇ ಅಲ್ಲವೇ ಎಲ್ಲ ನಮಗೆ ಗೋಜಲೆನಿಸುವ ವಿಷಯ ಹಲಸಿನ ತೊಳೆ ಬಿಡಿಸಿಟ್ಟಂತೆ ಆಸ್ವಾದನೆ ಸುಲಭಗೊಳಿಸುತ್ತಿರಿ,,,,ಧನ್ಯವಾದ

sunaath said...

ಸಿದ್ಧಾರ್ಥ,
ಬೇಂದ್ರೆಯವರ ಕವನಗಳು ಸರಳವಾಗಿಯೇ ಇರುತ್ತವೆ. ಸರಳಾರ್ಥದ ಸುಖವನ್ನು ಕೊಟ್ಟೇ ಕೊಡುತ್ತವೆ. ಒಳಗಿನ ಚೆಲುವು ಹೊಳೆದಾಗ, ಇನ್ನಷ್ಟು ಖುಶಿ ಸಿಗುತ್ತದೆ!

sunaath said...

ಜಲನಯನ,
ಬೇಂದ್ರೆಯವರ ಪ್ರತಿಭೆ ಅಗಾಧವಾದದ್ದು, ಪಾಂಡಿತ್ಯ ಅಪಾರವಾದದ್ದು. ಅಂದ ಮೇಲೆ ಅವರ ಕಾವ್ಯದ ಚೆಲುವು ಹೇಗಿರಬೇಡ!

sunaath said...

ಸುಶ್ರುತ,
ನಿಮ್ಮ ಪ್ರತಿಕ್ರಿಯೆಯು ತಾಂತ್ರಿಕ ಭೂತದಲ್ಲಿ ಅದೃಶ್ಯವಾಗಿದ್ದು, ಇಂದು ಫೀನಿಕ್ಸ ಹಕ್ಕಿಯಂತೆ ಮತ್ತೇ ಮರಳಿದೆ. ನಿಮ್ಮ ಆಪ್ತಸಲಹೆಗೆ ಧನ್ಯವಾದಗಳು. ಸಿಹಿಯೂಟದ ನಡುವೆ ಉಪ್ಪಿನಕಾಯಿಯ ಹಾಗೆ ಯಾವಾಗಲಾದರೊಮ್ಮೆ...ವಿಡಂಬನೆ!
ಸರಿಯೆ?

V.R.BHAT said...

ಸಾಹೇಬರೇ, ಸಾಕ್ಷಾತ್ ಬೇಂದ್ರೆ ಎದ್ದು ಕುಣಿದ ಹಾಗಿದೆ, ಇದನ್ನು ನಾವೆಲ್ಲಾ ನಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ಹಾಡುತಿದ್ದೆವು, ಇದು ತರಗತಿಯ ಪುಸ್ತಕದಲ್ಲಿರಲಿಲ್ಲ, ಆದರೆ ಆಸಕ್ತಿಯಿಂದ, ಪ್ರೀತಿಯಿಂದ ಹಾಡುವ ಹಾಡುಗಳಲ್ಲಿ ಒಂದಾಗಿತ್ತು. ಈ ಹಾಡು ನೇರ ಬಾಲ್ಯಕ್ಕೆ ಎಳೆದೊಯ್ದಿತು. ಜೇನಿನ ಸವಿಯನ್ನು ಉಣಬಡಿಸಿದ ನಿಮಗೆ ಧನ್ಯವಾದಗಳು

sunaath said...

ಭಟ್ಟರೆ,
ಈ ಕವನ ತನ್ನ ಸರಾಗತೆಯಿಂದ ಹಾಗು ಸರಳತೆಯಿಂದ ಜನಪ್ರಿಯತೆಯನ್ನು ಪಡೆದ ಹಾಡಾಗಿದೆ. ನಾನೂ ಸಹ ಬಾಲ್ಯದಲ್ಲಿಯೇ ಈ ಹಾಡನ್ನು ಕೇಳಿದ್ದು.

Badarinath Palavalli said...

sir,
you have explained the diffenent angles of amika tanaya datta.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
looks simple, but speaks 1000 words. great sir.

sunaath said...

ಬದರಿನಾಥರೆ,
ಕಿರಿದರೊಳ್ ಪಿರಿದರ್ಥವನ್ನು ಪೇಳುವದೇ ವರಕವಿಗಳ ಹೆಗ್ಗಳಿಕೆಯಲ್ಲವೆ?

ಶ್ರೀನಿವಾಸ ಮ. ಕಟ್ಟಿ said...

ಜೀವನದ ಸಮರಸತೆಯನ್ನು, ಜೀವನ ಧರ್ಮವನ್ನಾಗಿಸಿ, ಜೀವನದಲ್ಲಿಯೇ ಮುಕ್ತಿ ಕಂಡುಕೊಳ್ಳುವ ಮಹಾನ್ ಕವಿಯ ಮಹಾಕಾವ್ಯವಿದು. ಅದರ ಅರ್ಥವನ್ನು ಪದರು ಪದರಾಗಿ ಬಿಡಿಸಿ ಬಹಳ ಚೆನ್ನಾಗಿ ಬರೆದಿರಿವಿರಿ.

sunaath said...

ಕಟ್ಟಿಯವರೆ,
ಬೇಂದ್ರೆಯವರ ಜೀವನದರ್ಶನವನ್ನು ಸಾರುವ ಈ ಕವನವನ್ನು ಕನ್ನಡಿಗರು ತಮ್ಮ ‘ತತ್ವಪದ’ಗಳಲ್ಲಿ ಸೇರಿಸಿಕೊಂಡುಬಿಟ್ಟಿದ್ದಾರೆ.
ನವಲಗುಂದದ ಗವಿಮಠದ ಹಿರಿಯ ಅಜ್ಜನವರ ಜೀವಿತದ ಕಾಲದಲ್ಲಿ ಅಲ್ಲಿ ಜರುಗಿದ ಸರ್ವಧರ್ಮ ಸಮ್ಮೇಲನದಲ್ಲಿ, ಗಾಯಕಿಯೊಬ್ಬಳು ಈ ಹಾಡನ್ನು ಹಾಡಿದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.

Manjunatha Kollegala said...
This comment has been removed by the author.
Manjunatha Kollegala said...

ಸೊಗಸಾದ ನಿರೂಪಣೆ, ಎಂದಿನಂತೆ. ನಿಮ್ಮ ಬೇಂದ್ರೆ ನಿರೂಪಣೆಯನ್ನು ಓದುವುದು ಬೇಂದ್ರೆಯವರ ಕಾವ್ಯವನ್ನು ಓದುವಷ್ಟೇ ಸೊಗಸು. ಸಿಮೆಂಟು ಮರಳಿನವರ ಪ್ರಶ್ನೆಯೇ ನನ್ನದೂ ಕೂಡ. ವೃತ್ತಿಯೆಲ್ಲಿ ಪ್ರವೃತ್ತಿಯೆಲ್ಲಿ! ನಿಮ್ಮ poetic insight ಅದ್ಭುತ. ನನಗನ್ನಿಸುತ್ತದೆ, ನೀವು ಕನ್ನಡ ಮಾಸ್ತರಾಗಿರಬೇಕಿತ್ತು, ನಮಗೆ ಅಂತ. ಲಭ್ಯವಿಲ್ಲ ಅಷ್ಟೇ.

ಅಂದಹಾಗೆ ಇದು ಶರಷಟ್ಪದಿಯಲ್ಲ. ನಡೆ ಭೋಗಷಟ್ಪದಿಯನ್ನು ಹೋಲುತ್ತದೆಯಾದರೂ ಅದರ ಹರಹು ಇದರ ಎರಡರಷ್ಟು. ಅಂದರೆ ಈ ಕವನದಲ್ಲಿ ಸಾಲೊಂದಕ್ಕೆ ಮೂರು ಮಾತ್ರೆಯ ಎರಡು ಗುಂಪುಗಳು ಬಂದರೆ, ಭೋಗಷಟ್ಪದಿಯಲ್ಲಿ ಮೂರರ ನಾಲ್ಕು ಗುಂಪುಗಳು ಬರುತ್ತವೆ. ಹಾಗೆಯೇ ಕವನದ ಮೂರು ಮತ್ತು ನಾಲ್ಕನೆಯ ಸಾಲಿನಲ್ಲಿ ಮೂರರ ಮೂರು ಗುಂಪುಗಳು ಬಂದರೆ, ಭೋಗಷಟ್ಪದಿಯಲ್ಲಿ ಮೂರರ ಆರು ಗುಂಪುಗಳು ಬರುತ್ತವೆ. ಜೊತೆಗೆ ಷಟ್ಪದಿಗಳಲ್ಲೆಲ್ಲಾ ಕಟ್ಟುನಿಟ್ಟಾಗಿ ಪಾಲಿಸುವ ಆದಿಪ್ರಾಸ ಈ ಕವನದಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಸಾಲಿನ ಲೆಕ್ಕದಲ್ಲಿ ಇದು ಷಟ್ಪದಿಯೇ ಆದರೂ ನಮ್ಮ ಸಾಂಪ್ರದಾಯಿಕ ಷಟ್ಪದಿಗಳಾರರಲ್ಲಿ ಇದು ಒಂದಲ್ಲ. ನಾವು ಬೇಕಾದರೆ ಇದನ್ನು ಏಳನೆಯ ಷಟ್ಪದಿಯಾಗಿ ಪರಿಗಣಿಸಿ "ಭೋಗಾರ್ಧ ಷಟ್ಪದಿ" ಎಂದು ಕರೆಯಬಹುದು :)

ಸಿಂಧು sindhu said...

ಪ್ರಿಯ ಸುನಾಥ,

ನನ್ನ ಬಾಲ್ಯದ ಬೇಸಿಗೆ ರಜೆಯ ಓದನ್ನು ನೆನಪಿಸುತ್ತವೆ ನಿಮ್ಮ ಬರಹಗಳು. ವಿರಾಮದ ದಿನಗಳಲ್ಲಿ ಮೊಗೆದಷ್ಟೂ ಸಿಹಿಯಾಗಿ ಸವಿಯಾಗಿ ಬಗೆಯನ್ನು ಹೊಗುವ ವಿಷಯ ವೈವಿಧ್ಯಗಳು ಕಾವ್ಯಮಯವಾಗಿ ಪುಟಪುಟಗಳಲ್ಲೂ ಹೊಮ್ಮುತ್ತಿದ್ದರೆ.. ಆಹಾ ಅದರ ಸೊಗಸೇ ಬೇರೆ. ಅದನ್ನು ಮುಂದಿನ ಯೋಚನೆಯಿಲ್ಲದೆ ಹಿಂದಿನ ಜಗ್ಗುವಿಕೆ ಇಲ್ಲದೆ ಆ ಕ್ಷಣದಲ್ಲೆ ಮುಳುಗಿ ತೀರುವಂತೆ ಓದಿದ ದಿನಗಳು ನನ್ನ ನೆನಪಿನ ಚೀಲದಲ್ಲಿ ಸುರುಳಿ ಸುತ್ತಿ ಕೂತಿರುತ್ತವೆ. ನಿಮ್ಮ ಬರಹದಲ್ಲಿ ಅದೇ ಆಹ್ಲಾದ.
ಏನಿರಬಹುದು ಮ್ಯಾಜಿಕ್ಕು ಅಂತ ಯೋಚಿಸುತ್ತಿದ್ದೆ. ನೀವು ಆರಿಸಿಕೊಳ್ಳುವ ಬಳ್ಳಿಗಳೇ ಅತಿ ಅಪೂರ್ವದವು. ಅವುಗಳಲ್ಲಿ ನೀವು ಇಗೋ ಇಲ್ಲಿ ಏ ಎಲೆಯ ಮಾಟ ನೋಡಿ,ಇಲ್ಲಿ ಹಬ್ಬಿದ ಈ ದಂಟು ನೋಡಿ, ಈ ಎಲೆ ಮರೆಯ ಮೊಗ್ಗು ಇನ್ನೂ ಬಿರಿಯದೆ ಸ್ಫುರಿಸುವ ಸೊಬಗು ನೋಡಿ, ಇಲ್ಲಿ ಬಿರಿಯುವ ಮೊಗ್ಗಿನ ಸದ್ದು ಕೇಳಿ, ಅದೋ ಅಲ್ಲಿ ಅರಳಿದ ಹೂವಿನ ಬಿಂಕ ನೋಡಿ, ಈ ಎಲ್ಲ ಬೆಡಗಲ್ಲಿ ಅರಗಿರುವ ಬೆರಗಿನ ಅರ್ಥ ನೋಡಿ ಅಂತ ಬೇಂದ್ರೆಯವರ ಕವಿತೆಗಳನ್ನ ನಾವು ರಸಮೋಹಿಗಳ ಓದಿಗೆ ಒಗ್ಗಿಸಿ ಪ್ರಸ್ತುತ ಪಡಿಸುವ ನಿಮ್ಮ ಕಸಬುದಾರಿಕೆ ಬಹುಶಃ ಕಲಿತದ್ದಲ್ಲ. ಅದು ಒಳಗೇ ಇದ್ದು,ಅತ್ತಿತ್ತಲ ರಸಬಾವಿಗಳಿಂದ ಸದಾ ಪೂರಣಗೊಂಡು, ಹೆಮ್ಮರಗಳ ನೆಳಲು ಉಂಡು, ಬಯಲುಸದೃಶ ವಿಸ್ತಾರಗಳಲ್ಲಿ ಅಲೆದು, ವರ್ಷಗಳ ನೌಕರಿ ಮುಗಿಸಿ ಮಾಗಿ ಕುಳಿತ ಸಂಜೆಯಲ್ಲಿ ಹಲವೈದು ಪುಟ್ಟ ಗಿಡಗಳ ಬಿಂಕ ನೋಡಿ ಸುಖಿಸಿ, ಮರವೊಂದು ತನ್ನ ರೆಂಬೆಗಳನ್ನ ಅಲ್ಲಾಡಿಸಿ ಒಂದಿಷ್ಟು ಕಳಿತ ಹಣ್ಣುಗಳನ್ನ ಹಂಚುವ ಸಂಭ್ರಮ ಕಾಣಿಸುತ್ತದೆ ನನಗೆ ಇಲ್ಲಿ.
ಎಂತಹ ಆಹ್ಲಾದಕರ ಓದು ಎನ್ನುವುದನ್ನು ಹೇಳಲು ನನಗೆ ಮಾತು ಬಾರದು. ನೀವು ನಮಗೆಲ್ಲ ತುಂಬ ಉಪಕಾರ ಮಾಡುತ್ತಿದ್ದೀರಿ ಎಂದರೆ ಸಣ್ಣ ಮಾತು. ಆದರೆ ಆಳದ ನಿಜ.

ನನ್ನ ಹಾಡು -
ನನ್ನ, ನಿಮ್ಮ, ಅವರ ಇವರ, ಎಲ್ಲರ ಬದುಕುನಿರಾಶೆಭರವಸೆಗಳಿಗೆ ಬೇಂದ್ರೆಯವರು ಎಷ್ಟು ಚೊಲೋ ವ್ಯಾಕರಣ ಜೋಡಿಸಿ ಹಾಡು ಮಾಡ್ಯಾರೆ ಅಂತ ಇವತ್ತು ಕಂಡೆ. ಎಂದೋ ಚಿಕ್ಕಂದಿನಲ್ಲಿ ಗಮಕ ಕೇಳುತ್ತ ಕೇಳೆದ ಹಾಡು ಇದು. ಎಂಥ ವಿಶಾಲ ಹರವು!!

ಬಯಲ ಬಾಗಿಲ ತೆರೆದು ಬಿಡ್ತೀರಿ ನೀವು. ಕಾಲು ಸೋಲುವವರೆಗೆ ನಡೆಯಬಹುದು ನಾವು.

ನೀವೆಂದರೆ ಬಲು ಮೆಚ್ಚು ನನಗೆ. ನೀವು ನನ್ನ ಅಜ್ಜನ ಇನ್ನೊಂದು ರೂಪವೇ ಅನ್ನಿಸಿಬಿಡ್ತದೆ ಕೆಲವೊಮ್ಮೆ.
ನನ್ನ ಕಲ್ಪನೆಯ ಕುದುರೆಗೆ ಕೀಲು ಜೋಡಿಸಿಕೊಟ್ಟವರೇ ನನ್ನಜ್ಜ.

ಪ್ರೀತಿಯಿಂದ,
ಸಿಂಧು

Unknown said...

ಇಷ್ಟೊಂದು ಅರ್ಥವಿದೆ ಎಂದು ಅರಿವಿಗೆ ಬಂದಿರಲಿಲ್ಲ, ಬಂದಿರುವುದೇನು ನನ್ನ ಅರಿವಿಗೆ ನಿಲುಕೇ ಇರಲಿಲ್ಲ. ನಿಮ್ಮಿಂದ ತಿಳಿದ ಹಾಗಾಯ್ತು.
ತುಂಬಾ ಚೆನ್ನಾಗಿದೆ, ಹೀಗೆ ಮುಂದುವರಿಸಿ.

Vinuvps said...

ಅತ್ಯುತ್ತಮ ವಿಮರ್ಶೆ ಸರ್....

sunaath said...

ಧನ್ಯವಾದಗಳು, Our Tech KANNADA!

Kotresh T A M said...

ನಿಮ್ಮ ವಿಶ್ಲೇಷಣೆ ಸೊಗಸಾಗಿದೆ

sunaath said...

ಧನ್ಯವಾದಗಳು, ಕೊಟ್ರೇಶರೆ.