Friday, September 7, 2012

ಬೇಂದ್ರೆ-ಕುವೆಂಪು....ದೃಷ್ಟಿ-ಸೃಷ್ಟಿ


ಬೇಂದ್ರೆ ಹಾಗು ಕುವೆಂಪು ಇವರೀರ್ವರು ನವೋದಯ ಕಾಲದ ಹೆಸರಾಂತ ಕನ್ನಡ ಕವಿಗಳು. ಇವರೀರ್ವರ ಕಾವ್ಯಗಳಲ್ಲಿ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಿಗಿರುವ ಭಿನ್ನತೆಯನ್ನು ಕಾಣಬಹುದು. ಈ ಭಿನ್ನತೆಗಳ ಸ್ವರೂಪ ಎಂತಹದು, ಇದರ ಹಿಂದಿರುವ ಮನೋವೈಜ್ಞಾನಿಕ ಕಾರಣಗಳೇನು ಎನ್ನುವುದನ್ನು ಅರಿತುಕೊಳ್ಳುವ ಒಂದು ಪ್ರಯತ್ನವು ಇಲ್ಲಿದೆ. ಆ ಪ್ರಯತ್ನದ ಮೊದಲ ಹೆಜ್ಜೆಯಾಗಿ, ಈ ಕವಿಗಳ ಕೆಲವು ಕವನಗಳ ಅಧ್ಯಯನವನ್ನು ಮಾಡೋಣ.

ನವೋದಯದ ಎಲ್ಲ ಕವಿಗಳಂತೆ ಬೇಂದ್ರೆ ಹಾಗು ಕುವೆಂಪು ಸಹ ಕನ್ನಡ ನಾಡು ಹಾಗು ನುಡಿಗಳ ಮೇಲೆ ಅನೇಕ ಕವನಗಳನ್ನು ರಚಿಸಿದ್ದಾರೆ. ಇವರ ಎರಡು ಕವನಗಳ ಒಂದೊಂದು ನುಡಿಗಳು ಹೀಗಿವೆ :

(೧) ಕುವೆಂಪು ಅವರ ಕವನ:
ನೀ ಮೆಟ್ಟುವ ನೆಲ ಅದೆ ಕರ್ನಾಟಕ,
ನೀನೇರುವ ಮಲೆ ಸಹ್ಯಾದ್ರಿ;
ನೀ ಮುಟ್ಟುವ ಮರ ಶ್ರೀಗಂಧದ ಮರ,
ನೀ ಕುಡಿಯುವ ನೀರ್ ಕಾವೇರಿ!

(೨) ಬೇಂದ್ರೆಯವರ ಕವನ:
ಕನ್ನಡ ನುಡಿದಿತು ಕನ್ನಡ ಹಕ್ಕಿ,
ಕನ್ನಡವೆಂದಿತು ಆ ಗೋದೆ.
ಕಾವೇರಿಯು ತಂಪಾಯಿತು,
ಕನ್ನಡ ಗಾಳಿಯು ಉಸಿರಿತು ಈ ಬೋಧೆ.

ಈ ಎರಡೂ ನುಡಿಗಳ ಆಂತರ್ಯ ಒಂದೇ. ಎರಡೂ ಕವನಗಳು ಕನ್ನಡ ನಾಡು ಹಾಗು ನುಡಿಯ ಪ್ರೇಮದಿಂದ ತುಂಬಿವೆ. ಆದರೆ ಎರಡೂ ಕವನಗಳು ಕೊಡುವ ಸಂದೇಶ ಮಾತ್ರ ಬೇರೆ. ಕುವೆಂಪುರವರ ಕವನದಲ್ಲಿ ರಣೋತ್ಸಾಹವಿದೆ. ಆವೇಶ ಹಾಗು ಆದೇಶ ಈ ಗುಣಗಳು ಅವರ (ಅನೇಕ) ಕವನಗಳ ಲಕ್ಷಣಗಳು. ಓರ್ವ ದಂಡನಾಯಕನಂತೆ ಕುವೆಂಪು ಕನ್ನಡಿಗರಿಗೆ ಆದೇಶ ನೀಡುತ್ತಾರೆ. ಈ ಆದೇಶವನ್ನು ಕೇಳುತ್ತಿದ್ದಂತೆ, ಕನ್ನಡಿಗರಲ್ಲಿ ಹುರುಪು ತುಂಬುವುದು.

ಬೇಂದ್ರೆಯವರ ಕವನವು ಅನೇಕ ಶ್ಲೇಷಾರ್ಥಗಳನ್ನು ಒಳಗೊಂಡಿದೆ. ಐತಿಹಾಸಿಕವಾಗಿ ಕನ್ನಡ ನಾಡು ಗೋದಾವರಿಯಿಂದ ಕಾವೇರಿಯವರೆಗೆ ವ್ಯಾಪಿಸಿತ್ತು. (ಗೋದಾವರಿಯ ದಂಡೆಯ ಮೇಲೆ, ಈಗಿನ ಮಹಾರಾಷ್ಟ್ರದಲ್ಲಿ ‘ಕನ್ನಡ’ ಎನ್ನುವ ಹಳ್ಳಿಯೊಂದಿದೆ. ಆ ಹಳ್ಳಿಯ ಜನರೆಲ್ಲ ಕನ್ನಡ ಭಾಷೆಯನ್ನೇ ಮಾತನಾಡುತ್ತಾರೆ. ಅದರಂತೆ ಮಧ್ಯಪ್ರದೇಶದಲ್ಲಿಯೂ ಸಹ ಕನ್ನಡ ಎನ್ನುವ ಕೆಲವು ಹಳ್ಳಿಗಳಿವೆ.) ಐತಿಹಾಸಿಕ ಕಾಲದಲ್ಲಿ ಈ ಎಲ್ಲ ಪ್ರದೇಶದಲ್ಲಿ ಕನ್ನಡ ಸಂಸ್ಕೃತಿಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈಗ ಭೌಗೋಲಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕನ್ನಡ ನಾಡು ಕುಗ್ಗಿ ಹೋಗಿದೆ. ಈಗಲೂ ಸಹ ನೆರೆಯ ಭಾಷಿಕರಿಂದ ಕರ್ನಾಟಕದ ಮೇಲೆ ಆಕ್ರಮಣ ನಡದೇ ಇದೆ. (‘ಮರಾಠಿಗರ ಘೋಷಣೆಯಾದ ‘ಬೆಳಗಾಂವ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಹಿಜೆ’ ಎನ್ನುವ ವಾಕ್ಯದಲ್ಲಿಯ ‘ಝಾಲಾಚ ಪಾಹಿಜೆ’ಯನ್ನು ಬೇಂದ್ರೆಯವರು ‘ಆಗೋದೆ’ ಎನ್ನುವ ಶ್ಲೇಷೆಯ ಮೂಲಕ ವ್ಯತಿರಿಕ್ತ ಅರ್ಥದಲ್ಲಿ ಬಳಸಿದ್ದಾರೆ.)

ಇಂತಹ ಸಂದರ್ಭದಲ್ಲಿ ಕನ್ನಡಿಗರ ಕರ್ತವ್ಯವೇನು?
ಕುವೆಂಪು ಹೋರಾಟದ ಸಂದೇಶವನ್ನು ನೀಡಿದರೆ, ಬೇಂದ್ರೆಯವರು ತಾಳ್ಮೆಯ ಉಪದೇಶವನ್ನು ನೀಡುತ್ತಾರೆ. ‘ಕಾವೇರಿಯು ತಂಪಾಯಿತು’ ಎಂದರೆ ಕನ್ನಡಿಗರಲ್ಲಿ ‘ಕಾವು+ಏರಿಯೂ’ ಸಹ, ತಂಪಾಯಿತು ಎನ್ನುವ ಶ್ಲೇಷೆ ಇಲ್ಲಿದೆ.
ಈ ಸ್ವಭಾವಭಿನ್ನತೆ ಬೇಂದ್ರೆ ಹಾಗು ಕುವೆಂಪು ಇವರ  ಕವನಗಳ ಭಿನ್ನತೆಗೆ ಕಾರಣವಾಗಿದೆ.

ನಾಡಪ್ರೇಮವಲ್ಲದೆ,ಸಾಮಾಜಿಕ ಅಸಮತೆ ಹಾಗು ಬಡ ನಾಡಿಗರ ಕಷ್ಟಕಾರ್ಪಣ್ಯದ ಬಗೆಗೆಯೂ  ಕುವೆಂಪು ಹಾಗು ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ಅವರ ಎರಡು ಕವನಗಳ ಕೆಲವು ಸಾಲುಗಳನ್ನು ಪರಿಶೀಲಿಸೋಣ:

ಕುವೆಂಪು:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಿಲುಗಳಿಗೆ ಬೆಂಕಿಯು ಬಿದ್ದು
ಧಗಧಗಧಗಧಗ ಹೊತ್ತಿದುದು
ಭುಗಿಭುಗಿಲೆನ್ನುತ ಮುತ್ತಿದುದು!

ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕುದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯ ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!

ಬೇಂದ್ರೆ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ
ಕಕ್ಕಸಬಡುತಿದೆ ಬೊಕ್ಕಸದೊಡಲು
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ!

ಕುವೆಂಪು ಅವರ ಕವನದಲ್ಲಿ ಆವೇಶವಿದೆ,ಆಕ್ರೋಶವಿದೆ. ಬಡವರ ಒಡಲ ಬೇಗೆಯು ಸಿರಿವಂತರನ್ನು ಸುಟ್ಟು ಹಾಕುವುದು ಎನ್ನುವ ಎಚ್ಚರಿಕೆಯ ಘೋಷಣೆ ಇದೆ. ಬೇಂದ್ರೆಯವರ ಕವನದಲ್ಲಿ ವಾಸ್ತವತೆಯ ಭೀಕರ ಚಿತ್ರಣವಿದೆ.
ಬೇಂದ್ರೆಯವರು ಈ ಕವನವನ್ನು (ತುತ್ತಿನ ಚೀಲ’) ಬರೆದ ಕಾಲದಲ್ಲಿ ಎರಡನೆಯ ಜಾಗತಿಕ ಮಹಾಯುದ್ಧ ನಡೆದಿತ್ತು. ಬ್ರಿಟಿಶ್ ಸರಕಾರವು ಭಾರತದಲ್ಲಿ ಬೆಳೆದ ಆಹಾರಧಾನ್ಯವನ್ನು ತನ್ನ ಸೈನಿಕರಿಗಾಗಿ ಹಾಗು ಬ್ರಿಟಿಶರಿಗಾಗಿ ಇಲ್ಲಿಂದ ನಿರ್ಯಾತ ಮಾಡುತ್ತಿತ್ತು. ಬಂಗಾಲದಲ್ಲಿಯ ರೈತರು ತಾವು ಬೆಳೆದ ಅಕ್ಕಿಯನ್ನು ತಾವೇ ಕೊಳ್ಳಲಾರದಂತಹ ಕೃತಕ ಬರ ನಿರ್ಮಾಣವಾಗಿತ್ತು. ಬಂಗಾಲದಲ್ಲಿ ಎಲ್ಲೆಂದರಲ್ಲಿ ಹಸಿವಿನಿಂದ ಸತ್ತವರ ಶವಗಳು ಬಿದ್ದಿದ್ದು, ಆ ಕಳೇವರಗಳನ್ನು ಪರದೇಶದ ವೈದ್ಯಕೀಯ ವಿದ್ಯಾಲಯಗಳಿಗಳಿಗೆ ಕಳ್ಳತನದಿಂದ ಕಳುಹಿಸುವ ಜಾಲವೇ ಹುಟ್ಟಿಕೊಂಡಿತ್ತು. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ವಿರೋಧ ಪಕ್ಷಗಳು, ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ರಿಟಿಶ್ ಸರಕಾರವನ್ನು ಕಟುವಾಗಿ ಟೀಕಿಸಿದ್ದಕ್ಕೆ ದಾಖಲೆಗಳಿವೆ.

ಬೇಂದ್ರೆಯವರ ಕವನದ ಈ ನುಡಿಯ ಪ್ರತಿ ಸಾಲನ್ನು ವಿಶ್ಲೇಷಿಸಿರಿ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ’ ಇದು ಮೊದಲನೆಯ ಸಾಲು. ಭೂಮಿಯ ಮೇಲೆ ಆಹಾರಧಾನ್ಯದ ಕೊರತೆ ವಾಸ್ತವದಲ್ಲಿ ಇಲ್ಲವೇ ಇಲ್ಲ. ಒಂದು ವೇಳೆ ಭಾರತದ ಯಾವುದೇ ಭಾಗದಲ್ಲಿ ಆಹಾರದ ಕೊರತೆಯಾದರೂ ಸಹ, ಬೇರೆಡೆಯಿಂದ ಧಾನ್ಯವನ್ನು ಕೊಂಡು ತಂದು ಬಡವರಿಗೆ ಹಂಚಲು ಸರಕಾರಕ್ಕೆ ಅಸಾಧ್ಯವಲ್ಲ; ಏಕೆಂದರೆ ಭಾರತದಲ್ಲಿಯ ಬ್ರಿಟಿಶ್ ಸರಕಾರದ ಬೊಕ್ಕಸವು ವಾಂತಿಯಾಗುವಷ್ಟು ತುಂಬಿ ತುಳುಕುತ್ತಿದೆ: ‘ಕಕ್ಕಸಬಡುತಿದೆ ಬೊಕ್ಕಸದೊಡಲು’! ಮೂರನೆಯ ಸಾಲಿನಲ್ಲಿ (‘ಬಾಳಿಗಿಂತಲೂ ಕೂಳೇ ಮೇಲೊ?’) ಹಸಿವನ್ನು ಪರಿಹರಿಸಿಕೊಳ್ಳಲು ಬಂಗಾಲದ ಬಡ ಜನ ಕಳ್ಳತನ, ಮೋಸಗಾರಿಕೆಯಂತಹ ಹೀನಕೃತ್ಯಗಳಿಗೆ ಹಾಗು ಒಂದು ತುಂಡು ರೊಟ್ಟಿಗಾಗಿ, ಹೆಂಗಸರು ಮೈಯನ್ನು ಮಾರಿಕೊಳ್ಳುವಂತಹ ಅನಿವಾರ್ಯತೆಗೆ ಮೊರೆ ಹೊಕ್ಕಿರುವದರ ಸೂಚನೆ ಇದೆ.
ಇಷ್ಟಾದರೂ ಸಹ ಆ ನರಕಜೀವಿಗಳ ಹೊಟ್ಟೆ ತುಂಬಿತೆ? ...ಇಲ್ಲ!
ಬರಿದೋ ಬರಿದು, ತೆರವೋ ತೆರವು
ಬಡವರ ಬಗ್ಗರ ತುತ್ತಿನ ಚೀಲ.

ಬೇಂದ್ರೆಯವರ ‘ಕರಡಿ ಕುಣಿತ’ ಎನ್ನುವ ಕವನದಲ್ಲಿ ಸಾವಿರಾರು ವರ್ಷಗಳಿಂದ ಪಟ್ಟಭದ್ರರು ಅಮಾಯಕ-ಅಸಹಾಯಕರ ಮೇಲೆ ನಡೆಯಿಸುತ್ತಿರುವ ದೌರ್ಜನ್ಯದ ಚಿತ್ರವಿದೆ. (ಆ ಕವನದ ವಿಶ್ಲೇಷಣೆಯನ್ನು ಇಲ್ಲಿ ನೋಡಿರಿ.) ಆದರೆ ಆ ಕವನದ ಅತ್ಯಂತ ಸರಳ ಭಾಷೆಯಿಂದಾಗಿ, ಆ ಕವನವನ್ನು ‘ಬಾಲಗೀತೆ’ಗಳಲ್ಲಿ ಸೇರಿಸಲಾಗಿದೆ! ಸರಳ ಕನ್ನಡವೇ ಬೇಂದ್ರೆಯವರ ಕಾವ್ಯದ ಒಂದು ದೋಷವೇನೊ ಎನ್ನುವಂತಾಗಿದೆ.

ಬೇಂದ್ರೆ ಹಾಗು ಕುವೆಂಪು ಭಾರತದ ಸ್ವಾತಂತ್ರ್ಯಹೋರಾಟದ ಬಗೆಗೂ ಕವನಗಳನ್ನು ರಚಿಸಿದ್ದಾರೆ. ಈ ಹೋರಾಟಕ್ಕೆಂದು ಕುವೆಂಪು ನೇರವಾದ, ಉತ್ಸಾಹಪೂರ್ಣ ಕರೆಯನ್ನೇ  ನೀಡಿದ್ದಾರೆ:
ನಾನಳಿವೆ, ನೀನಳಿವೆ
ನಮ್ಮೆಲುವುಗಳ ಮೇಲೆ
ಮೂಡುವುದು, ಮೂಡುವುದು
ಭಾರತದ ಲೀಲೆ, ನವಭಾರತದ ಲೀಲೆ.

ಈ ನುಡಿಗಳಲ್ಲಿ marching songವೀರಾವೇಶವಿದೆ, ಬಲಿದಾನ ಮಾಡಲು ಆಹ್ವಾನವಿದೆ.
ಬೇಂದ್ರೆಯವರಿಗೆ ಇಂತಹ ಕವನವನ್ನು ರಚಿಸಲು ಸಾಧ್ಯವೇ ಇಲ್ಲ! ಭಾರತಮಾತೆಯು ಕಣ್ಣೀರು ಸುರಿಸುವ ಕಲ್ಪನೆಯ ಕವನವನ್ನು ಮಾತ್ರ ಅವರು  ಸೃಷ್ಟಿಸಬಲ್ಲರು :
ಮಕ್ಕಳಿವರೇನಮ್ಮ? ಮಕ್ಕಳಿವರೇನಮ್ಮ?
       ಮೂವತ್ತುಮೂರು ಕೋಟಿ!
            ನಾ ಹಡೆದ
ಮೂವತ್ತುಮೂರು ಕೋಟಿ.

ಬೇಂದ್ರೆ ಹಾಗು ಕುವೆಂಪು ಅವರ ಸ್ವಭಾವಭಿನ್ನತೆಯ ಒಂದು ಮಗ್ಗಲನ್ನು ನೋಡಿದೆವು. ಇದು ಅವರ ಪ್ರಕೃತಿಗೀತೆಗಳಲ್ಲೂ ಸಹ ಬಿಂಬಿತವಾಗಿದೆ.
ಉದಾಹರಣೆಗೆಂದು ಈ ಕವನಗಳನ್ನು ನೋಡಿರಿ:
ಕುವೆಂಪು:
ಓಡು ಹೊರಗೆ, ಓಡು ನೋಡು:
ಮೂಡುತಿಹನು ದಿನಮಣಿ!
ಹಚ್ಚನೆ ಹಸರು ಬಯಲ ಮೇಲೆ
ಮಿರುಗುತಿಹವು ದಿನಮಣಿ!

ಅದರಂತೆ,
ನೋಡಲ್ಲಿ ಮೂಡಿಹುದು ಮುಗಿಲಿನಲಿ ಮಳೆಬಿಲ್ಲು
ಬಾನ್ದೇವಿಯಾಂತ ಮಣಿಹಾರದಂತೆ
ಮೂಕವಿಸ್ಮಿತನಾಗಿ ನಿಲ್ಲು, ಗೆಳೆಯನೆ ನಿಲ್ಲು
ಗುಡಿಯೆದುರು ಕೈಮುಗಿವ ಭಕ್ತನಂತೆ!-

ಅಥವಾ,
ವಾವೇಶದಿ ನೋಡುತ ನಿಂತೆ,
ಹೃದಯದೊಳುರಿಯಿತು ರಸಮಯ ಚಿಂತೆ,
‘ಉರಿ-ಕಿಡಿ’ದೆನು ಹಿಮಮಣಿಯಂತೆ!
(-ಶರತ್ಕಾಲದ ಸೂರ್ಯೋದಯದಲಿ)

ಕುವೆಂಪು ಅವರ ಮೂರು ವಿಭಿನ್ನ ಕವನಗಳ ಮೂರು ನುಡಿಗಳಿವು. ಮೊದಲೆರಡು ಕವನಗಳಲ್ಲಿ ಜ್ಞಾನಿಯಾದ ಕವಿಯು high pedestal ಮೇಲೆ ನಿಂತುಕೊಂಡು ಅಜ್ಞಾನಿಗಳಿಗೆ ತಿಳಿವಳಿಕೆಯನ್ನು ಹಾಗು ಆದೇಶವನ್ನು ನೀಡುತ್ತಿದ್ದಾನೆ. ಮೂರನೆಯ ಕವನದಲ್ಲಿ ಕವಿಯ ಸ್ವಕೇಂದ್ರಿತ, ಸ್ವಕಲ್ಪಿತ ದೊಡ್ಡಸ್ತನದ ಭ್ರಮೆಯಿದೆ.

ಬೇಂದ್ರೆಯವರ ಪ್ರಕೃತಿಕವನಗಳಲ್ಲಿ ಬೆರಗನ್ನು ಇತರರೊಡನೆ ಹಂಚಿಕೊಳ್ಳುವ ಸಾಲುಗಳು ಬರಬಹುದೇ ಹೊರತು, ಆದೇಶ-ಸಂದೇಶಗಳಲ್ಲ. ಅವರ ಪ್ರಸಿದ್ಧ ಕವನದಲ್ಲಿ (‘ಬೆಳಗು’) ಬರುವ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎನ್ನುವ ಸಾಲನ್ನು ಇದಕ್ಕೆ ಉದಾಹರಣೆಯನ್ನಾಗಿ ನೋಡಬಹುದು. ಇನ್ನು ಕೆಲವು ಕವನಗಳಲ್ಲಂತೂ ನಿಸರ್ಗವಷ್ಟೇ ಇರುತ್ತದೆಯೇ ಹೊರತು, ಕವಿಯೂ ಸಹ ಅಲ್ಲಿರುವದಿಲ್ಲ. ಉದಾಹರಣೆಗಾಗಿ ‘ವಸಂತಮುಖ’ ಈ ಕವನವನ್ನು ನೋಡಿರಿ:
ಉದಿತ ದಿನ, ಮುದಿತ ವನ
ಸಾವಿರ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ!

ಬೆಳಗಿನ ಸಮಯದಲ್ಲಿ ಬೇಂದ್ರೆಯವರ ಕಣ್ಣಿಗೆ ಕಾಣುವುದು ಉಲ್ಲಾಸದಲ್ಲಿರುವ ನಿಸರ್ಗ ಹಾಗು ಅಲ್ಲಿಯ ಅನೇಕ ಜೀವಿಗಳ ಕಲರವ. ಅವರ ಹೃದಯದಲ್ಲಿ ಯಾವ ‘ರಸಮಯ ಚಿಂತೆ(!?)’ಯೂ ಉರಿಯುವದಿಲ್ಲ! ‘ವಸಂತಮುಖ’ ಕವನವು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಆ ಕವನದ ವ್ಯಾಖ್ಯಾನವನ್ನು ಇಲ್ಲಿ ನೋಡಿರಿ.

ಇನ್ನು ಸಾಮಾನ್ಯ ಓದುಗನಿಗೆ ವೀರಾವೇಶದ ಘೋಷಣೆಯೇ ಹೆಚ್ಚು ಹಿಡಿಸುತ್ತದೆ. Authority figure ನೀಡುವ ಆದೇಶವು ಅವನ ಮನವನ್ನುಆವರಿಸಿ ಬಿಡುತ್ತದೆ. ಕುವೆಂಪುರವರ ಕಾವ್ಯದಲ್ಲಿ ಇರುವ ಇಂತಹ ಗುಣಗಳು ಬೇಂದ್ರೆಯವರ ಕಾವ್ಯದಲ್ಲಿ ಇಲ್ಲ. ಅಲ್ಲದೆ, ಕುವೆಂಪು ಸೃಷ್ಟಿಸುವ ಕೆಲವು ಪದಪುಂಜಗಳು ಸಹ ಓದುಗನನ್ನು ವಿಭ್ರಾಂತಗೊಳಿಸುವ ಶಕ್ತಿಯನ್ನು ಪಡೆದಿವೆ.
ಉದಾಹರಣೆಗೆ:
(೧) ಮೂಕವಿಸ್ಮಿತನಾಗಿ ನಿಲ್ಲು
(೨) ಓ ಕರ್ನಾಟಕ ಹೃದಯ ಶಿವ
(೩) ಇದು ಪಕ್ಷಿಕಾಶಿ
(೪) ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಇಂತಹ ಸಂಭ್ರಾಮಕ ಪದಸೃಷ್ಟಿ ಬೇಂದ್ರೆಯವರ ಪದಗಳಲ್ಲಿ ಕಂಡುಬರುವದಿಲ್ಲ..
ಇದು ಅವರ ಸ್ವಭಾವಭಿನ್ನತೆಯ ಪರಿಣಾಮದ ಮತ್ತೊಂದು ಉದಾಹರಣೆಯಾಗಿದೆ.

ಕುವೆಂಪು ಹಾಗು ಬೇಂದ್ರೆ ಈರ್ವರೂ ನಿಸರ್ಗದ ಚೆಲುವನ್ನು ಅನುಭವಿಸಿ, ಆನಂದಿಸಿದ ಕವನಗಳನ್ನು ನೋಡಿದೆವು. ಇಷ್ಟೇ ಅಲ್ಲ, ಈ ಇಬ್ಬರೂ ಕವಿಗಳು ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡವರು. ಇದರ ಉದಾಹರಣೆಯಾಗಿ, ಮೊದಲಿಗೆ ಕುವೆಂಪು ಅವರ ಕವನವೊಂದರ ಒಂದು ನುಡಿಯನ್ನು ಗಮನಿಸೋಣ:
ಬಿಸಿಲಿದು ಬರಿ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ
ಆ ಭ್ರಾಂತಿಯ ಮಾಣೊ.

ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣುವ ಕವನವಿದು.
ಆದರೆ ಈ ಸಾಲುಗಳಲ್ಲೂ ಸಹ ನಾವು ಆದೇಶದ ಧೋರಣೆಯನ್ನೇ ಕಾಣುತ್ತೇವೆ. (ಅಲ್ಲದೆ ‘ಸೂರ್ಯನು ಬರಿ ರವಿಯಲ್ಲವೊ’ ಎನ್ನುವ ಸಾಲಿನ ಅರ್ಥವೂ ಆಗುವುದಿಲ್ಲ!)
ಅಥವಾ ಈ ನುಡಿಯನ್ನು ನೋಡಿರಿ:
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು!

ಈ ನುಡಿಯ ಮೊದಲಲ್ಲಿ ಬರುವ ಕಲ್ಪನೆಯು ಅದ್ಭುತವಾಗಿದ್ದರೂ, ಕೊನೆಯಲ್ಲಿ ಬರುವ ಹೆಗ್ಗಳಿಕೆಯು ‘ಕವಿಯಾಗಿ ತಾನು ಎಷ್ಟು ಹೆಚ್ಚಿನವನು!’ ಎನ್ನುವ ಅಹಂಭಾವವನ್ನು ತೋರುತ್ತದೆ. ಇದು ಸರಿಯಲ್ಲ. ಏಕೆಂದರೆ ಕವಿಯಷ್ಟೇ ಅಲ್ಲ, ಸಾಮಾನ್ಯ ವ್ಯಕ್ತಿಯೂ ಸಹ ಇಂತಹ ದೃಶ್ಯವನ್ನು ರಸವಶನಾಗುತ್ತ ನೋಡುತ್ತಾನೆ. ಕವಿಯ ಹೆಚ್ಚುಗಾರಿಕೆ ಇರುವುದು ಅವನ ಕಲಾಪೂರ್ಣ ಅಭಿವ್ಯಕ್ತಿಸಾಮರ್ಥ್ಯದಲ್ಲಿ!

ಮತ್ತೊಬ್ಬರಿಗೆ ಆದೇಶ ನೀಡುವುದು ಬೇಂದ್ರೆಯವರಿಗೆ ಸಾಧ್ಯವಿಲ್ಲ. ಸ್ವಂತದ ಹೆಗ್ಗಳಿಕೆಯೂ ಅವರಿಗೆ ಸಾಧ್ಯವಿಲ್ಲ.
ರಸಿಕ ಓದುಗನಲ್ಲಿಯೂ ಸಹ ಅವರು ಪ್ರಾರ್ಥಿಸುವುದು ಇಷ್ಟೇ:
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.

ಕುವೆಂಪುರವರಂತೆ ಬೇಂದ್ರೆಯವರೂ ಸಹ ನಿಸರ್ಗದ ಜಡವಸ್ತುಗಳಲ್ಲಿ ಭಗವತ್‍ಚೈತನ್ಯವನ್ನು ಕಾಣುತ್ತಾರೆ. ಆದರೆ ಕುವೆಂಪುವಿನಂತೆ ವಸ್ತುವಿನ ಹೊರಗೆ ನಿಂತು ನೋಡದೆ, ಬೇಂದ್ರೆ ಆ ಪರಾವಸ್ತುವಿನಲ್ಲಿಯೇ ಪರವಶರಾಗುತ್ತಾರೆ. ಅಂತಹ ಒಂದು ಕವನದ (‘ಶ್ರಾವಣ’) ನುಡಿಯೊಂದು ಹೀಗಿದೆ:

ಗುಡ್ಡ ಗುಡ್ಡ ಸ್ಥಾವರಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |

ಅಥವಾ ಈ ಕವನದ (‘ದವನದ ಹುಣ್ಣಿವೆಯ ಜಾತ್ರಿಯ ರಾತ್ರಿ’) ನುಡಿಯೊಂದನ್ನು ನೋಡಬಹುದು:
ಆಕಾಶ ಅನಸತದ ಗುಡಿಯ ಹಾಂಗ
ಪ್ರಕಾಶ ಮಹಾಲಿಂಗ, ನೆಲ ಅಗಲ ಪೀಠಧ್ಹಾಂಗ.

ಕುವೆಂಪು ಅವರ ಕವನಗಳಲ್ಲಿ ಭಾವಸ್ಫೋಟವಿದ್ದರೆ, ಬೇಂದ್ರೆಯವರ ಕವನಗಳಲ್ಲಿ ಅರ್ಥಸ್ಫೋಟವಿದೆ.
ಸ್ವಭಾವದ ಭಿನ್ನತೆಯೇ ಕಾವ್ಯದ ಭಿನ್ನತೆಗೆ ಕಾರಣ ಎನ್ನುವುದನ್ನು ಹೇಳಬೇಕಾಗಿಲ್ಲ. ಬೇಂದ್ರೆ ಹಾಗು ಕುವೆಂಪು ಬೆಳೆದ ಪರಿಸರವನ್ನು ಗಮನಿಸಿದಾಗ ಇವರ ಸ್ವಭಾವದ ಭಿನ್ನತೆಯ ಕಾರಣವೂ ಅರ್ಥವಾಗುವುದು.

ಕುವೆಂಪು ತಮ್ಮ ಬಾಲ್ಯದಲ್ಲಿ ಹಳ್ಳಿಯಲ್ಲಿ ಬೆಳೆದವರು. ಅವರ ಮನೆತನಕ್ಕೆ ಜಮೀನು, ದರ್ಪ ಹಾಗು ಹಣವಂತಿಕೆ ಎಲ್ಲವೂ ಇದ್ದವು. ಹಳ್ಳಿಗಳಲ್ಲಿ ಸಾಮಾನ್ಯವಾದ ಮೌಢ್ಯವನ್ನು ಹಾಗು ಮೂಢನಂಬಿಕೆಗಳ ಮೇಲೆ ಆಧಾರಿತವಾದ ಬದುಕನ್ನು ಕಂಡ  ಕುವೆಂಪು, ಹೆಚ್ಚಿನ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ತೆರಳಿದ ಬಳಿಕ ಅಲ್ಲಿಯ ಸುಧಾರಿತ ಜೀವನಮಟ್ಟವನ್ನು ಹಾಗು ನಯ ನಾಗರಿಕತೆಯನ್ನು ನೋಡಿದರು. ಹಳ್ಳಿಗರ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಸುಧಾರಿಸಬೇಕಾದರೆ, ಅವರಲ್ಲಿಯ ಮೌಢ್ಯ ತೊಲಗಬೇಕು, ಅವರಲ್ಲಿ ವೈಚಾರಿಕ ಕ್ರಾಂತಿ ಆಗಬೇಕು ಎನ್ನುವುದನ್ನು ಕುವೆಂಪು ಅನುಭವಿಸಿದರು. ಹೀಗಾಗಿ ಅವರ ಕವನಗಳಲ್ಲಿ ಕ್ರಾಂತಿಗೆ ಕರೆ ಇದೆ, ಆಹ್ವಾನವಿದೆ, ಆದೇಶವಿದೆ. ಸಮಾಜವನ್ನು ಅಜ್ಞಾನದಿಂದ ಮುಕ್ತಗೊಳಿಸಬೇಕೆನ್ನುವ ಹಂಬಲ ಹಾಗು ಕಳಕಳಿ ಅವರಲ್ಲಿದೆ. ಅಲ್ಲದೆ ನಗರವಾಸಿಗಳಿಗಿಂತ ತಾನೇನು ಕಡಿಮೆಯಲ್ಲ ಎನ್ನುವದನ್ನು ತೋರಿಸಬೇಕಾದರೆ ಅಹಂಭಾವದ ವರ್ತನೆ ಅನಿವಾರ್ಯವಾದ ಪ್ರತಿಕ್ರಿಯೆ ಆಗುತ್ತದೆ. ಇದು mega maniaಕ್ಕೆ ಹತ್ತಿರವಾದ ಭಾವ. ಹೀಗಾಗಿ ಅವರ ಕವನಗಳಲ್ಲಿ ಸ್ವಕೇಂದ್ರಿತ ನಾಯಕನ ಮನೋಭಾವವನ್ನು ಕಾಣುತ್ತೇವೆ.

ಸಂಸ್ಕೃತಭೂಯಿಷ್ಠ ಕನ್ನಡವು ನಾಗರಿಕ ಭಾಷೆಯಾಗಿದ್ದನ್ನು ಕಂಡ ಕುವೆಂಪು, ತಮ್ಮ ಕವನಗಳಲ್ಲಿ ಅತ್ಯಧಿಕ ಸಂಸ್ಕೃತವನ್ನು ಬಳಸಿದ್ದಾರೆ. ಗಾವಿಲ ಜನತೆ ನಾಗರಿಕ ಸಂಸ್ಕೃತಿಯ ಮಟ್ಟವನ್ನು ತಲುಪಲಿ ಎನ್ನುವ ಅವರ ಹಂಬಲದ ಪ್ರತೀಕವೆಂದು ಇದನ್ನು ಭಾವಿಸಬಹುದು. ಅಲ್ಲದೆ, ಒಂದು ಸಂಸ್ಕೃತಿ ಅಥವಾ ನಾಗರಿಕತೆಯನ್ನು ತಿರಸ್ಕರಿಸುವವರು, ಆ ಸಂಸ್ಕೃತಿಯ ಮಾದರಿಯನ್ನು ಅಥವಾ ಅದರ ಬಾಹ್ಯಲಕ್ಷಣಗಳನ್ನು ನಕಲು ಮಾಡುವುದನ್ನು ನಾವು ನೋಡುತ್ತಲೇ ಇದ್ದೇವೆ. (ಇದು Stockholm syndromeಗೆ ಹತ್ತಿರವಾದ ಲಕ್ಷಣಸಮುಚ್ಚಯವಾಗಿದೆ!) ಆದುದರಿಂದ ವೈದಿಕ ಸಂಸ್ಕೃತಿಯನ್ನು ತಿರಸ್ಕರಿಸಿದ ಕುವೆಂಪು, ಅದರ ಹೊರಲಕ್ಷಣವಾದ ಸಂಸ್ಕೃತಭೂಯಿಷ್ಠ ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಅಳವಡಿಸಿಕೊಂಡರು ಎನ್ನಬಹುದು. ಇನ್ನು ಅವರ ಸ್ವಕೇಂದ್ರಿತ ದೊಡ್ಡಸ್ತನದ ಭ್ರಮೆಗೆ ಕಾರಣವೇನು? ಇದಕ್ಕೆ ಸರಳವಾದ ಉತ್ತರವಿಲ್ಲ. ಆದರೆ ನಾಯಕನಾಗ ಬಯಸುವವನಿಗೆ ತಾನು ತನ್ನ ಸುತ್ತಲಿನವರಿಗಿಂತ ಹೆಚ್ಚಿನವನು ಎನ್ನುವ ( --ಕೆಲವೊಮ್ಮೆ ಭ್ರಮಾತ್ಮಕವಾದ--) self image ಇರುತ್ತದೆ. ಒಂದು ಸಂದರ್ಭದಲ್ಲಿ ಕುವೆಂಪು ‘ತಾನು ವಿವೇಕಾನಂದ’ ಎನ್ನುವ ಭ್ರಮೆಗೆ ಒಳಗಾಗಿದ್ದರು ಎನ್ನುವುದನ್ನು ಇಲ್ಲಿ ನೆನೆಯಬಹುದು.   

ಬಡತನವು ಬೇಂದ್ರೆಯವರ ಆಜನ್ಮ ಸಂಗಾತಿಯಾಗಿತ್ತು. ನರಗುಂದದ ಬಂಡಾಯದ ಕಾಲಕ್ಕೆ, ಇವರ ಅಜ್ಜಿ ಧಾರವಾಡಕ್ಕೆ ಓಡಿ ಬರಬೇಕಾಯಿತು. ಅವರ ೧೭ ಮಕ್ಕಳಲ್ಲಿ ಉಳಿದ ಒಂದೇ ಒಂದು ಸಂತಾನವೆಂದರೆ ಬೇಂದ್ರೆಯವರ ತಾಯಿ ಮಾತ್ರ. ಬೇಂದ್ರೆಯವರ ತಂದೆ ಶಾಲಾಶಿಕ್ಷಕರಾಗಿದ್ದವರು ಬೇಗನೇ ತೀರಿಕೊಂಡರು. ಆಗ ಇವರ ಅಜ್ಜಿಯೇ ಖಾನಾವಳಿಯೊಂದನ್ನು ನಡೆಸುತ್ತ ಇವರನ್ನು ಸಾಕಿದರು. ಆ ಅಜ್ಜಿಯನ್ನು ಬೇಂದ್ರೆ ನೆನೆಸುವುದು ಹೀಗೆ:
ಹದಿನೇಳು ಹಡೆದರು ಹೆಣ್ಣೊಂದೆ ಉಳಿದರು
ಜಗ್ಗದ ಕುಗ್ಗದ ಎದೆಯವಳು
ಹುಲಿ ಹಾಲ ಕುಡಿಸಿದಳು ತಂತಿಯಲಿ ನಡೆಸಿದಳು
ಸೂಜಿಯ ಮೊನೆಯಲ್ಲಿ ನಿಲಿಸಿದಳು.

ತಮ್ಮ ಅಜ್ಜಿಯಿಂದ ಬೇಂದ್ರೆ ಪೌರುಷವನ್ನು ಕಲಿತರೇ ಹೊರತು ದರ್ಪವನ್ನಲ್ಲ. ಧಾರವಾಡದಲ್ಲಿ ಹಾಗು ಪುಣೆಯಲ್ಲಿ ಆ ಸಮಯದಲ್ಲಿ ರಾಷ್ಟ್ರೀಯ ಚಳುವಳಿಯ ಗಾಳಿ ಬೀಸುತ್ತಿತ್ತು. ಸಾಮುದಾಯಕ ಚಟುವಟಿಕೆಗಳಲ್ಲಿ ಸದಾ ಭಾಗಿಯಾಗುತ್ತಿದ್ದ ಬೇಂದ್ರೆಯವರಿಗೆ ಮಾತುಗಾರಿಕೆ ಅನಿವಾರ್ಯವಾಗಿತ್ತು.ಈ ಕಾರಣಕ್ಕಾಗಿ ಬೇಂದ್ರೆಯವರು ವಾಚಾಳಿಯಾಗಿರಬಹುದು. ಇದು ಅವರ ಕವನಗಳಲ್ಲಿ ಕಾಣುವ ಅಪರಿಮಿತ ಕಲ್ಪನೆ ಹಾಗು ವಾಗ್ಜಾಲಕ್ಕೆ ಮೂಲವಾಗಿರಬಹುದು. ಈ ಗುಣಗಳು ಅವರ ಕವನಗಳಲ್ಲಿ ಸುವ್ಯಕ್ತವಾಗಿವೆ. ಆದರೆ ಈ ಗುಣಗಳಿಂದಾಗಿಯೇ ಬೇಂದ್ರೆಯವರ ಅನೇಕ ಕವನಗಳಲ್ಲಿ focus ತಪ್ಪಿಹೋಗಿರುತ್ತದೆ. ಇದು ಅವರ ದೌರ್ಬಲ್ಯ ಎನ್ನಬಹುದು.

ಬೇಂದ್ರೆ ಹಾಗು ಕುವೆಂಪು ಅವರು ಬೆಳೆದ ಪರಿಸರವು ಅವರ ಸ್ವಭಾವಭಿನ್ನತೆಗೆ ಹಾಗು ಕಾವ್ಯಭಿನ್ನತೆಗೆ ಈ ರೀತಿಯಾಗಿ ಕಾರಣವಾಗಿದೆ. ಇನ್ನು ಇವರು ಹೆಣ್ಣನ್ನು ನೋಡುತ್ತಿದ್ದ ದೃಷ್ಟಿಗೂ ಸಹ ಅವರ ಬಾಲ್ಯದ ಹಾಗು ತಾರುಣ್ಯದ ವಾತಾವರಣವೇ ಕಾರಣವಾಗಿವೆ. ಬೇಂದ್ರೆಯವರ ಪೋಷಣೆಯಲ್ಲಿ ಅವರ ಅಜ್ಜಿ ಹಾಗು ತಾಯಿ ಮಹತ್ವದ ಪಾತ್ರ ವಹಿಸಿದರು. ಇದರಿಂದಾಗಿ ಬೇಂದ್ರೆಯವರು ‘ಹೆಣ್ಣು’ ಅಂದರೆ ತಾಯಿ ಎನ್ನುವ ದೃಷ್ಟಿಯಿಂದ ನೋಡುತ್ತಾರೆ.
ನಾನು’ ಎನ್ನುವ ಅವರ ಕವನವನ್ನು ಇಲ್ಲಿ ನೋಡಬಹುದು:

ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು
ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು
ಕನ್ನಡದ ತಾಯಿ-ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತನರನು
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು.

ಕುವೆಂಪು ಅವರು ರಾಮಕೃಷ್ಣ ಆಶ್ರಮದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಆಶ್ರಮದ ಆದರ್ಶಗಳನ್ನು ಅಳವಡಿಸಿಕೊಂಡರು. ನಡುವಯಸ್ಸು ಸಮೀಪಿಸುವವರೆಗೆ ಬ್ರಹ್ಮಚಾರಿಯಾಗಿ ಉಳಿದ ಕುವೆಂಪು ಅವರಿಗೆ ಸಂಗಾತಿಯೊಬ್ಬಳ ಅವಶ್ಯಕತೆ ಭಾಸವಾಗತೊಡಗಿತು. ಆಗ ಅವರು ಮಂಜಪ್ಪಗೌಡರಿಗೆ ಬರೆದ ಪತ್ರದಲ್ಲಿ ಹೀಗೆ ಬರದಿದ್ದಾರೆ :
......Now comes the strange news- I have a mind to choose a bride and live a married life!......

ಮತಾಂತರ ಹೊಂದುವ ವ್ಯಕ್ತಿ ತನ್ನ ಹಳೆಯ ಮತಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ವರ್ತಿಸುವುದು ಒಂದು ಮನೋವೈಜ್ಞಾನಿಕ ತಥ್ಯವಾಗಿದೆ. ಕುವೆಂಪು ಬ್ರಹ್ಮಚರ್ಯದ ಆದರ್ಶವನ್ನು ತ್ಯಜಿಸಿ, ಗೃಹಸ್ಥಾಶ್ರಮಕ್ಕೆ ಮತಾಂತರಗೊಂಡರು. ಈ ಮತಾಂತರದ ಲಕ್ಷಣಗಳು ಅವರ ಕವನಗಳಲ್ಲಿ ಪ್ರತಿಫಲಿತವಾಗಿವೆ. ಹೀಗಾಗಿ ಅವರ ಅನೇಕ ಕವನಗಳಲ್ಲಿ ದೇಹಸೌಂದರ್ಯ ಹಾಗು ದೇಹಸುಖವೇ ಪ್ರಮುಖವಾಗಿವೆ. ಬ್ರಹ್ಮಚರ್ಯದ ತಿರಸ್ಕಾರವು, ಮೈಯ ಚೆಲುವನ್ನು ಬಣ್ಣಿಸುವುದರಲ್ಲಿ ಹಾಗು ದೇಹಸುಖವನ್ನು ವೈಭವೀಕರಿಸುವದರಲ್ಲಿ ಉಕ್ಕುಕ್ಕಿ ಬರುವುದು ಕುವೆಂಪು ಅವರ ಅನೇಕ ಕವನಗಳ ಲಕ್ಷಣವಾಗಿದೆ. ಅವರ ಅತ್ಯಂತ ಜನಪ್ರಿಯ ಗೀತೆಯೊಂದರ ಸಾಲುಗಳು ಹೀಗಿವೆ:
ನೋಡು ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.
‘ಮೂಡುವೆಣ್ಣಿನ ಮೈಸಿರಿ’ ಎನ್ನುವುದು sensuous beautyಯ ಉದಾಹರಣೆಯಾಗುತ್ತದೆ. ಉಷಾದೇವಿಯ ದೈವಿಕ ಚೆಲುವನ್ನು ‘ಮೂಡುವೆಣ್ಣಿನ ಮೈಸಿರಿ’ ಎಂದು ಕರೆಯುವುದು ಸಭ್ಯವೆನಿಸುವುದಿಲ್ಲ..
ಅವರ ಇತರ ಪ್ರೇಮಕವನಗಳಲ್ಲಿಯೂ ಕಾಮವೇ ಮುಖ್ಯವಾಗಿದೆ ಎಂದು ಭಾಸವಾಗುತ್ತದೆ.
ಉದಾಹರಣೆಗಳು:
(೧) ನನ್ನ ಕೈಯೊಳಿರಲು ನಿನ್ನ
ಪ್ರೇಮ ಶಿಖರ ಪದುಮ ಸದೃಶ
ಹೇಮವಕ್ಷದಮೃತ ಕಲಶ,
ನಾನು ಅಜರ! ನಾನು ಅಮರ!
ನಾನು ದಿವ್ಯ ! ನಾನು ಧನ್ಯ !

(೨) ಯೋಗವೇದಿಕೆ ಮಂಚ;
ಭೋಗಾಸನವೆ ಯೋಗಾಸನ;
ಚೆಂದುಟಿಯ ಚುಂಬನವೆ ಧ್ಯಾನಮುದ್ರೆ;
ಹೊಂಗಳಸದಾಲಿಂಗನವೆ ಯೋಗ ನಿದ್ರೆ.

ಈ ಕೆಳಗಿನ ಕವನವಂತೂ ಸ್ವಂತದ ಸಂಭೋಗಶಕ್ತಿಯ ಪರಾಕಾಷ್ಠ ವರ್ಣನೆಯಾಗಿದೆ:
ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
ಮುತ್ತೊಂದರೊಳೆ ಮೊಗೆದು ಮನದಣಿಯೆ ಸೊದೆಯೀಂಟಿ
ಆನಂದದಮರತೆಯ ಹೊಂದಬಲ್ಲೆ!
...................
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ!
ಮಲಗಿರುವ ಬಡಬಾಗ್ನಿ ನಾನೆನ್ನ ಕೆಣಕದಿರು
ಗುಟುಕೊಂದರಲಿ ಕಡೆಯ ಕುಡಿಯಬಲ್ಲೆ!

ಮಹಾದೇವನ ಲಿಂಗಶಕ್ತಿಯನ್ನು ಕುವೆಂಪು ಬಣ್ಣಿಸುವುದು ಹೀಗೆ:
ಕ್ಷೀರವಾರ್ಧಿ ಕುಗ್ಗಿತೊ ಎನೆ
ಹಿಗ್ಗಿತಾ ಸರೋವರ,
ಸ್ಪರ್ಧಿಸಿತೆನೆ ಗಿರಿಮಂದರ
ವರ್ಧಿಸಿತ್ತು ಕುಂಜರ!

ಕನ್ನಡದಲ್ಲಿ ಅಸಭ್ಯವಾಗುವ ಈ ಸಾಲುಗಳು ಸಂಸ್ಕೃತದಲ್ಲಿ ಬರೆದದ್ದರಿಂದ  ಸಭ್ಯವಾಗಿವೆಯೆ ಎನ್ನುವ ವಿಮರ್ಶೆಯನ್ನು ನಾನು ಮಾಡುತ್ತಿಲ್ಲ. ಕುವೆಂಪು ಅವರು ಹೀಗೆ ಬರೆಯಲು ಅವರ ‘ಮತಾಂತರ ಮನೋಸ್ಥಿತಿ’ ಕಾರಣವಾಗಿರಬಹುದು ಎನ್ನುವದಷ್ಟೆ ನಾನು ಹೇಳುತ್ತಿರುವ ವಿಷಯವಾಗಿದೆ.

ಅಧ್ಯಾತ್ಮಕವನಗಳಲ್ಲಿಯೂ ಸಹ ಕುವೆಂಪು ಅವರು ದೈಹಿಕ ಚೆಲುವಿಗೇ ಮನ್ನಣೆ ನೀಡುತ್ತಾರೆ. ಇಲ್ಲಿಯೂ ಸಹ ಅವರದು ಆದೇಶದ ಧೋರಣೆಯೇ ಆಗಿದೆ. ಅವರ ಕವನವೊಂದರ ಕೆಲವು ಸಾಲುಗಳನ್ನು ಗಮನಿಸಿರಿ:
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ
..........................................
ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ.
ಈ ಕೊನೆಯ ಎರಡು ಸಾಲುಗಳು ಕುವೆಂಪು ಅವರ ಆದೇಶ ಮನೋಭಾವಕ್ಕೆ ಹಾಗು ದೈಹಿಕ ಚೆಲುವಿಗೆ ಅವರು ಕೊಡುವ ಮನ್ನಣೆಗೆ ಸಾಕ್ಷಿಯಾಗಿವೆ.

ರಾಧೆಯ ಪಾಡು’ ಎನ್ನುವ ಬೇಂದ್ರೆಯವರ ಕವನವು ಇದಕ್ಕೆ ತೀರ ವಿರುದ್ಧವಾದ ಮನೋಭಾವವನ್ನು ಹೊಂದಿದೆ. ಅಲ್ಲಿ ರಾಧೆ ತನ್ನ ಅಲಂಕಾರಗಳನ್ನೆಲ್ಲ ಬಿಸುಟಿ ಒಗೆಯುತ್ತಾಳೆ. ಯಮುನಾನದಿಯಲ್ಲಿ ಜೀವಿತವನ್ನು ಕೊನೆಗೊಳಿಸಿದರಾದರೂ ಕೃಷ್ಣ ದೊರೆತಾನೆಯೆ ಎಂದು ಹಂಬಲಿಸುತ್ತಾಳೆ.

ಕುವೆಂಪು ಹಾಗು ಬೇಂದ್ರೆ ಇವರು ಬೆಳೆದ ಪರಿಸರಗಳು ಹೇಗೆ ಅವರ ಕಾವ್ಯದ ಮೇಲೆ ಪ್ರಭಾವ ಬೀರಿವೆ ಎನ್ನುವುದನ್ನು ನೋಡಿದೆವು. ಇದು ಅವರ ಕಾವ್ಯದ ವಿಮರ್ಶೆ ಅಥವಾ ಮೌಲ್ಯಮಾಪನವಲ್ಲ ಎನ್ನುವುದನ್ನು ಸ್ಪಷ್ಟಪಡಿಸಬಯಸುತ್ತೇನೆ. ಕನ್ನಡಾಂಬೆಯ ಈ ಇಬ್ಬರು ಸುಪುತ್ರರ ಸಾಹಿತ್ಯಕ್ಕೆ ಅವರು ಬೆಳೆದ ಪರಿಸರವು ಹೇಗೆ ಕಾರಣವಾಗಿದೆ ಎನ್ನುವುದನ್ನು ಅರಿಯುವ ಒಂದು ಪ್ರಯತ್ನ ಮಾತ್ರ ಇದಾಗಿದೆ. ಇಂತಹ ಭಿನ್ನ ಸ್ವಭಾವಗಳ ಮೂಲಕ ಕುವೆಂಪು ಅವರು ಕರ್ನಾಟಕದ ಒಂದು ಸಾಂಸ್ಕೃತಿಕ icon ಆದರೆ, ಬೇಂದ್ರೆ ವರಕವಿಗಳಾದರು. ಇವರೀರ್ವರಿಗೂ ನನ್ನ ಸಹಸ್ರ ನಮನಗಳು.