Tuesday, April 30, 2013

`ಬದುಕು ಮಾಯೆಯ ಮಾಟ'.................ಬೇಂದ್ರೆ



ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವಮಾನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು.

ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ಬೇಂದ್ರೆಯವರ ಕಾಲವು ಆದರ್ಶದ ಕಾಲ. ಆ ಕಾಲದ ತರುಣರಿಗೆ ತಿಲಕ, ಗಾಂಧೀಜಿ, ಸುಭಾಸಚಂದ್ರ ಬೋಸ ಮೊದಲಾದವರಿಂದ ರಾಜಕೀಯ ಹೋರಾಟದ ಕೆಚ್ಚು ಬಂದರೆ, ರವೀಂದ್ರನಾಥ ಠಾಕೂರ ಮೊದಲಾದವರಿಂದ ಭಾರತೀಯ ಸಾಹಿತ್ಯ ಹಾಗು ಕಲೆಗಳ ಬಗೆಗೆ ಆದರಾಭಿಮಾನಗಳು ಮೂಡಿದ್ದವು. ವಿವೇಕಾನಂದ, ಅರವಿಂದ ಹಾಗು ಅನೇಕ ಸಾಧು-ಸಂತರಿಂದ ಈ ಯುವಕರಿಗೆ ಆಧ್ಯಾತ್ಮದತ್ತ ಒಲವು ಮೂಡಿತ್ತು. ಇವೆಲ್ಲ ಪ್ರೇರಣೆಗಳು ಆ ಕಾಲದ ಅನೇಕ ಯುವಕರ ಮನೋಧರ್ಮವನ್ನು ರೂಪಿಸಿದ್ದವು. ಬೇಂದ್ರೆಯವರಂತೂ ಬಹುಶ್ರುತರು. ಅವರ ಆದರ್ಶವು ಸಾಂಸ್ಕೃತಿಕ ಹಿರಿಮೆಯಾಗಿತ್ತು ಹಾಗು ದೈವಶ್ರದ್ಧೆಯು ಅವರ ಆದರ್ಶದ ತಳಹದಿಯಾಗಿತ್ತು. ಬೇಂದ್ರೆಯವರ ‘ಗೆಳೆಯರ ಗುಂಪು’ ಈ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಕೂಟವಾಗಿತ್ತು. ಈ ವೈಶಿಷ್ಟ್ಯಗಳನ್ನು ‘ಬದುಕು ಮಾಯೆಯ ಮಾಟ’ ಎನ್ನುವ ಅವರ ಕವನದಲ್ಲಿ ನೋಡಬಹುದು.

ಬೇಂದ್ರೆಯವರು ಸ್ನೇಹಜೀವಿಗಳು. ಅದರಲ್ಲೂ ‘ಮಧುರಚೆನ್ನ’ (ಹಲಸಂಗಿ ಚೆನ್ನಮಲ್ಲಪ್ಪ)ರಂತಹ ಆಧ್ಯಾತ್ಮಸಾಧಕ, ಸಾಹಿತಿ ಗೆಳೆಯರಂತೂ ಅವರಿಗೆ ಪ್ರಾಣಪ್ರಿಯರು. ಈ ಕವನವನ್ನು ಓದಿದಾಗ, ಬೇಂದ್ರೆಯವರು ಮಧುರಚೆನ್ನರೊಡನೆ ಸಂಭಾಷಿಸುತ್ತಿದ್ದಾರೇನೊ ಎನ್ನುವ ಭಾಸವು ಆಗುವುದು.

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಈ ಪ್ರಪಂಚವು ದೇವರ ಲೀಲೆ ಹಾಗು ನಮ್ಮ ಬದುಕು ದೇವಸೃಷ್ಟಿ ಎಂದು ಹೇಳುತ್ತಾರೆ. ಎರಡನೆಯ ನುಡಿಯಲ್ಲಿ ಬದುಕಿಗಿರಬೇಕಾದ ಧ್ಯೇಯಾದರ್ಶಗಳನ್ನು ಗುರುತಿಸುತ್ತಾರೆ. ಮೂರನೆಯ ನುಡಿಯಲ್ಲಿ ಸಾರ್ಥಕ ಬದುಕಿಗೆ ಬೇಕಾದ ದೈವೀಕೃಪೆಯನ್ನು ಆಶಿಸುತ್ತಾರೆ.

ಕವನದ ಮೊದಲ ಸಾಲು ಬದುಕನ್ನು ಮಾಯೆಯ ಮಾಟಕ್ಕೆ ಹೋಲಿಸುತ್ತದೆ. ‘ಮಾಯೆ’ ಎನ್ನುವುದು ಅನೇಕ ಅರ್ಥಗಳನ್ನು ಹೊಂದಿದ್ದು, ಬೇಂದ್ರೆಯವರು ಯಾವ ಅರ್ಥದಲ್ಲಿ ಈ ಪದವನ್ನು ಬಳಸಿದ್ದಾರೆ ಎನ್ನುವುದನ್ನು ಪರಿಶೀಲಿಸೋಣ.

ಆದಿ ಶಂಕರಾಚಾರ್ಯರು ಈ ಪ್ರಪಂಚವನ್ನು ‘ಮಾಯಾಕಲ್ಪಿತ ದೇಶಕಾಲಕಲನಾ’ ಎಂದು ಕರೆದಿದ್ದಾರೆ. ದೇಶ ಹಾಗು ಕಾಲ ಇವು ಸತ್ಯವಲ್ಲ; ಇದು ಮಿಥ್ಯಾಪ್ರಪಂಚ ಎಂದು ಶಂಕರಾಚಾರ್ಯರು ಹೇಳುತ್ತಾರೆ. (ಖ್ಯಾತ ವಿಜ್ಞಾನಿ ಅಲ್ಬರ್ಟ ಐನಸ್ಟೈನ್ ಸಹ space ಅರ್ಥಾತ್ ದೇಶ ಹಾಗು time ಅರ್ಥಾತ್ ಕಾಲ ಇವು ಸಾಪೇಕ್ಷ ಎಂದೇ ಹೇಳುತ್ತಾನೆ.  ಆದರೆ ಶಂಕರಾಚಾರ್ಯರದು ತಾತ್ವಿಕ ಸಿದ್ಧಾಂತ; ಐನಸ್ಟೈನನದು ಭೌತಿಕ ಸಿದ್ಧಾಂತ!)

‘ಮಾಟ’ ಪದವು ‘ಮಾಡು’ ಪದದಿಂದ ಬಂದಿದೆ. (ಉದಾಹರಣೆಗೆ ‘ಆಡು’....‘ಆಟ’; ‘ಕೂಡು’...‘ಕೂಟ’ ಇತ್ಯಾದಿ). ಈ ಸಮಸ್ತ ಪ್ರಪಂಚವನ್ನು ‘ಮಾಡಿ’ದವಳು ಮಾಯೆ. ಈ ಮಿಥ್ಯಾಪ್ರಪಂಚವನ್ನು ಸೃಷ್ಟಿಸುವ ‘ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ’ ಇರುವುದು ಈ ಮಾಟಗಾತಿಯಲ್ಲಿ ಮಾತ್ರ!  ಆದುದರಿಂದ ಬದುಕು ಎನ್ನುವುದು ‘ಮಾಯೆಯ ಮಾಟ’ವಾಗಿದೆ.

ಮಾಟ ಎನ್ನುವ ಪದಕ್ಕೆ witchcraft ಎನ್ನುವ ಅರ್ಥವೂ ಇದೆ. ‘ಮಾಟಗಾತಿ’ ಎಂದರೆ  witch ಎನ್ನುವ ಅರ್ಥವೇ ಇದೆ. ಆದುದರಿಂದ ಮಾಟಗಾತಿಯು ತನ್ನ ಮನಸೋಇಚ್ಛೆ ಈ ಪ್ರಪಂಚವನ್ನು ಸೃಷ್ಟಿಸಬಲ್ಲಳು ಹಾಗು ವಿನಾಶ ಮಾಡಬಲ್ಲಳು. ಆದುದರಿಂದಲೂ ಈ ಬದುಕು ಆ ಮಾಯೆಯ ‘ಮಾಟ’ವಾಗಿದೆ. ಆಡುಮಾತಿನಲ್ಲಿ ಮಾಯೆ ಎಂದರೆ ಜಾದೂ ಎನ್ನುವ ಅರ್ಥವಿದೆ ಹಾಗು ಅದೃಶ್ಯವಾಗುವುದು ಎನ್ನುವ ಅರ್ಥವೂ ಇದೆ. ಇವೆಲ್ಲದರ ಒಟ್ಟರ್ಥವೆಂದರೆ ಮಾಯೆ ಎಂದರೆ magic.

‘ಮಾಟ’ ಎನ್ನುವ ಪದಕ್ಕೆ ಸುಂದರವಾದದ್ದು ಎನ್ನುವ ಅರ್ಥವೂ ಇದೆ. (ಉದಾಹರಣೆಗೆ: ‘ಮಾಟವಾದ ಗೊಂಬೆ’.) ಬೇಂದ್ರೆಯವರ ಈ ಕವನದಲ್ಲಿ ಬದುಕಿನ ಆದರ್ಶ ಹಾಗು ಉತ್ಸಾಹಗಳು ತುಂಬಿರುವುದರಿಂದ, ಮಾಟ ಎಂದರೆ ಸುಂದರ ಎನ್ನುವ ಅರ್ಥವೂ ಅನ್ವಯವಾಗುತ್ತದೆ.

ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ‘ಈ ಸೃಷ್ಟಿಯೆಲ್ಲ ದೇವಿಯ ಅಭಿವ್ಯಕ್ತಿಯಾಗಿದೆ (ತ್ವಯಿ ಪರಿಣತಾಯಾಂ ನ ಹಿ ಪರಮ್)’ ಎನ್ನುತ್ತಾರೆ. ಅರವಿಂದರು ‘To be or to become something is the whole endeavor of the Nature' ಎಂದಿದ್ದಾರೆ. Nature ಎಂದರೆ ಪ್ರಕೃತಿಯೂ ಹೌದು, ಸ್ವಭಾವವೂ ಹೌದು. ಆದರೆ ಭಾರತೀಯ ದರ್ಶನಗಳು ದೇವರಿಗೆ ‘ಸ್ವಭಾವ’ ಇದೆ ಎಂದು ಗ್ರಹಿಸುವದಿಲ್ಲ. ದೇವರು ನಿರ್ವಿಕಲ್ಪನು; ಆತನನ್ನು ವಿಕಲ್ಪಕ್ಕೆ ಒಳಪಡಿಸುವುದೇ ಮಾಯೆ!

ಬಸವಣ್ಣನವರು ‘ಅಯ್ಯಾ,ನೀನು ನಿರಾಕಾರನಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ; ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ....’ ಎನ್ನುತ್ತಾರೆ. ಬಸವಣ್ಣನವರು ಹೇಳುವ ‘ವಾಹನ’ವು ದೇವನ ‘ಮಹಿಮೆ’ಯಾಗಿದ್ದು ಪ್ರಾಚೀನರು ಹೇಳುವ ಮಾಯೆಯೇ ಆಗಿದೆ.

ಸ್ವತಃ ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ ‘ಓ ತಾಯಿ, ಮಾಯಿ, ಶಿವಜಾಯಿ ಕಾಯಿ’ ಎನ್ನುವಾಗ ‘ಮಾಯಿ’ ಎನ್ನುವದನ್ನು ಅಂತಃಕರಣಪೂರಿತ ತಾಯಿ ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ‘ಬದುಕು ಮಾಯೆಯ ಮಾಟ’ ಎನ್ನುವಾಗ ಬೇಂದ್ರೆಯವರ ‘ಮಾಯೆ’ ಈ ಎಲ್ಲ ಅರ್ಥಗಳನ್ನು ಒಳಗೊಂಡಿದೆ.

ಬದುಕು ಮಾಯೆಯ ಸೃಷ್ಟಿ ಎಂದು ಹೇಳಿದ ನಂತರ, ಬೇಂದ್ರೆಯವರು ಈ ಸೃಷ್ಟಿಯ ಲಕ್ಷಣಗಳನ್ನು ಪರೀಕ್ಷಿಸುತ್ತಿದ್ದಾರೆ.   ಬದುಕು static ಅಲ್ಲ. ಇದಕ್ಕೆ ಅಂತರ್ಗತವಾದ ಚಲನೆ ಇದೆ, ವಿವಿಧರೂಪ ತಾಳಿದ ಜೀವಿಗಳಲ್ಲಿ ಅಬಾಧಿತ ಸಂಪರ್ಕವಿದೆ. ಅದನ್ನೇ ಬೇಂದ್ರೆಯವರು ‘ಮಾತು ನೆರೆ-ತೊರೆಯಾಟ’ ಎನ್ನುತ್ತಾರೆ. ಈ ಅಂತರ್-ಸಂಪರ್ಕ ಹಾಗು ಚಲನೆ ಇವೆಲ್ಲ ಸಮುದ್ರದ ನೊರೆ ಹಾಗು ತೆರೆ ಇದ್ದಂತೆ. ಸಮುದ್ರವು ಸಮುದ್ರವೆನಿಸುವುದೇ ತನ್ನ ತೆರೆಗಳಿಂದಾಗಿ. ಆದರೆ ಓರ್ವ ಜೀವಿಯ ಅಂತರಂಗದ ಬದುಕು ಈ ಮೇಲ್‍ಮೇಲಿನ ತೆರೆಗಳಿಗಿಂತ ತುಂಬ ಗಾಢವಾಗಿ, ಗಂಭೀರವಾಗಿ ಇರುತ್ತದೆ. ಮುನ್ನೀರು ಎಂದರೆ ಸಮುದ್ರ; ಗುಂಭ ಎಂದರೆ ಗಾಢವಾದದ್ದು. ಬದುಕು ಸಮುದ್ರದಂತೆ ಆಳವಾಗಿ ಇರುವದಾದರೂ, ಸಮುದ್ರದ ಮೇಲ್ಮೈಯಲ್ಲಿರುವ ತೆರೆಗಳಂತೆ, ಬದುಕಿನ ಮೇಲ್ಮೈಯಲ್ಲಿ ಸೃಷ್ಟಿಯ ಘಟನೆಗಳು ಜರಗುತ್ತಿರುತ್ತವೆ.

ಬೇಂದ್ರೆಯವರು ಸಮುದ್ರಕ್ಕೆ ‘ಮುನ್ನೀರು’ ಎನ್ನುವ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಮಳೆನೀರು, ಒರತೆಯ ನೀರು ಹಾಗು ಹೊಳೆನೀರು ಸಂಗಮಿಸಿ ಸಮುದ್ರವಾಗಿರುತ್ತದೆ. ಆದುದರಿಂದ ಇದು ‘ಮೂರ್+ನೀರು’ = ಮುನ್ನೀರು. ಪ್ರತಿ ಜೀವಿಯ ವೈಯಕ್ತಿಕ ಬದುಕೂ ಸಹ ದೈವಕೃಪೆ, ಕರ್ಮಬಂಧನ ಹಾಗು ಸ್ವಪ್ರಯತ್ನಗಳಿಂದ ರೂಪಗೊಳ್ಳುತ್ತದೆ.

ಬದುಕು ಸಾರ್ಥಕವಾಗಲು ಎರಡು ಸಂಗತಿಗಳ ಅವಶ್ಯಕತೆ ಇದೆ. ಒಂದು ಕರುಣೋದಯ; ಎರಡನೆಯದು ಅರುಣೋದಯ. ಸಮಸ್ತ ಜೀವಿಗಳಲ್ಲಿ ಸ್ನೇಹಭಾವ ಬೆಳೆಯುವುದೇ ಕರುಣೋದಯ. ತನ್ನ ಬದುಕಿನಲ್ಲಿ ಭಗವಂತನ ಬೆಳಕು ಕಾಣುವುದೇ ಅರುಣೋದಯ! ಈ ಎರಡು ಸಾಧನೆಗಳಾದಾಗ ಮಾತ್ರ ‘ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು’. ಓರ್ವ ಜೀವಿಯು ಮೇಲಿನ ಸಾಧನೆಗಳಿಂದ ಪಕ್ವವಾದಾಗ ಮಾತ್ರ, ಆ ಜೀವಿಯ ಹಳೆಯ ಕೊಳೆಯಲ್ಲ ತೊಳೆದು ಹೋಗಿ, ಅವನ ಎದೆಯು ಅಂದರೆ ಅಂತರಂಗವು ಹೊಚ್ಚ ಹೊಸದಾದಂತಹ, ಆದುದರಿಂದ ಸ್ಫೂರ್ತಿದಾಯಕವಾದ ಹೊನ್ನೀರಿನಿಂದ ತುಂಬುವುದು. ಈ ಹೊಸ ಹೊನ್ನೀರು ಆ ಜೀವಿಗೆ ಹೊಸ ಬೆಳಕನ್ನು ತೋರುವುದರ ಮೂಲಕ ಸತ್‍ಪಥದಲ್ಲಿ ನಡೆಯಿಸುವುದು. (‘ಕರುಣಾಳು ಬಾ ಬೆಳಕೆ....ನೆನಪಾಗುವದಲ್ಲವೆ?)

ಆದಿ ಶಂಕರಾಚಾರ್ಯರ ‘ಸೌಂದರ್ಯಲಹರಿ’ಯಲ್ಲಿಯ ಸಾಲೊಂದನ್ನು ನೋಡಿರಿ:
‘ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ’
ಶಂಕರಾಚಾರ್ಯರು ದೇವಿಯನ್ನು ‘ಶಿವನ ಕರುಣೆ’ಗೆ ಹೋಲಿಸುತ್ತಾರೆ. ಈ ಕರುಣೆಯು ಅವ್ಯಾಜವಾಗಿರುವದರಿಂದ ಶ್ವೇತವರ್ಣದ್ದಾಗಿದೆ. ಶ್ವೇತವರ್ಣವು ನಿರ್ವಿಕಲ್ಪ ಸ್ಥಿತಿಯನ್ನೂ ಸೂಚಿಸುತ್ತದೆ. ಆದರೆ ಪ್ರಪಂಚವನ್ನು ಸೃಷ್ಟಿಸಲು ‘ರಾಗ’ಗಳ ಅವಶ್ಯಕತೆ ಇದೆ. ಆದುದರಿಂದ ದೇವಿಯು ಈ ಕರುಣಭಾವದಲ್ಲಿ ಕಿಂಚಿತ್ ಕೆಂಪು ಕೂಡಿದ ಅರುಣವರ್ಣದವಳಾಗಿದ್ದಾಳೆ! ಇದನ್ನೇ ಬೇಂದ್ರೆಯವರು ‘ಕರುಣೋದಯದ ಕೂಡ, ಅರುಣೋದಯವು ಇರಲು’ ಎಂದು ವರ್ಣಿಸುತ್ತಾರೆ. ಬೇಂದ್ರೆಯವರು ಓದಿದ್ದು, ಕೇಳಿದ್ದು ಎಲ್ಲವೂ, ಅವರ ಕಾವ್ಯಮೂಸೆಯಲ್ಲಿ ಮಾರ್ಪಾಡಾಗಿ ಒಂದಿಲ್ಲೊಂದು ರೂಪದಲ್ಲಿ ಕಾಣಿಸಿಕೊಳ್ಳುವದರ ಉದಾಹರಣೆ ಇದು.

ಬೇಂದ್ರೆಯವರ ಕವನಗಳಲ್ಲಿ ಕೆಲವೊಂದು ಪದಗಳು ಬೇರೆ ಬೇರೆ ರೂಪಗಳಲ್ಲಿ ಪುನರಾವರ್ತಿಸುತ್ತಿರುತ್ತವೆ. ಇಲ್ಲಿಯ ‘ಹೊನ್ನೀರು’ ಅವರ ‘ಹೃದಯ ಸಮುದ್ರ’ ಕವನದಲ್ಲಿ ‘ಬಂಗಾರ ನೀರ ಕಡಲಾಚೆಗೀಚೆಗಿದೆ’ ಆಗಿದೆ.

ಇಷ್ಟೆಲ್ಲದರ ಜೊತೆಗೆ, ಮತ್ತೂ ಒಂದು ಅರ್ಥವು ‘ಬದುಕು ಮಾಯೆಯ ಮಾಟ’ ಎನ್ನುವ ಹೇಳಿಕೆಯಲ್ಲಿ ಇದೆ.
ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ ಜಾಗೃತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ’ ಎಂದು ಹೇಳುತ್ತಾರೆ, ಅಂದರೆ ನಮ್ಮ ಬದುಕು ಮಾಯೆ ಸೃಷ್ಟಿಸಿದ ಭ್ರಮೆ ಮಾತ್ರ!

ಮೊದಲ ನುಡಿಯಲ್ಲಿ ಬೇಂದ್ರೆಯವರು ಸೃಷ್ಟಿರಹಸ್ಯವನ್ನು ಹೇಳಿದರು. ಈ ದೈವೀಶಕ್ತಿಯ ಸಂತಾನವಾದ ನಾವು ಎಂತಹ ಬದುಕನ್ನು ಬದುಕಬೇಕು ಎನ್ನುವುದನ್ನು ಎರಡನೆಯ ನುಡಿಯಲ್ಲಿ ಹೇಳುತ್ತಿದ್ದಾರೆ:
ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ

ಬದುಕಿನಲ್ಲಿ ವಂಚನೆ ಇರಬಾರದು. ನಮ್ಮದು ಸತ್ಯವಂತ ಜೀವನವಾಗಿರಬೇಕು. ಜೊತೆ ಜೊತೆಗೇ (ಎಲ್ಲರಲ್ಲೂ) ಪ್ರೀತಿ ಇರಬೇಕು. ನಾವು ಬದುಕುವ ರೀತಿಯಿಂದ ಬದುಕಿಗೆ ಒಂದು ಚೆಲುವು ಹಾಗು ಸಂತಸ ಬರಬೇಕು. ನಮ್ಮ ಒಳಿತು ದುರ್ಬಲರ ಒಳ್ಳೆಯತನ ಆಗಬಾರದು. (ಈ ಮಾತುಗಳು ಮಹಾತ್ಮಾ ಗಾಂಧೀಜಿಯವರ ಮಾತುಗಳೇ ಆಗಿವೆ.)

ನಿಜತೆ, ಒಲವು ಹಾಗು ಚೆಲುವು ಇವು ‘ಸತ್ಯಂ ಶಿವಂ ಸುಂದರಂ’ ಎನ್ನುವ ಆದರ್ಶವನ್ನೇ ಹೇಳುತ್ತವೆ. ಇದೇ ಅರ್ಥದ ಮತ್ತೊಂದು ಬೇಂದ್ರೆ-ಕವನ ಹೀಗಿದೆ:
‘ಸಿಂಹಮುಖಕ್ಕಿದೆ ನವಿಲಿನ ಸೋಗೆ
ಶಕ್ತಿ, ಶಾರದೆಯ ಮೇಳದ ಹಾಗೆ.’
ಬದುಕಿಗೆ ಶಾರದೆಯ ಸಂಸ್ಕೃತಿಯೂ ಬೇಕು; ಜೊತೆಗೇ ಕಾಳಿಯ ಶಕ್ತಿಯೂ ಬೇಕು!

ಬೇಂದ್ರೆಯವರು ಈ ಮಾತನ್ನೆಲ್ಲ ‘ಜೀವಕೆಳೆಯಾ’ ಅಂದರೆ ಪ್ರಾಣಸ್ನೇಹಿತನಿಗೆ ಸಂಬೋಧಿಸಿ ಹೇಳುತ್ತಿರುವುದನ್ನು ಗಮನಿಸಬೇಕು. ನಾವು ನಮ್ಮ ಆದರ್ಶಗಳನ್ನು, ನಮ್ಮ ಕನಸುಗಳನ್ನು ಹಂಚಿಕೊಳ್ಳುವುದು ಪ್ರಾಣಸ್ನೇಹಿತರ ಜೊತೆಗೇ ತಾನೆ? ಆದುದರಿಂದ ಇಲ್ಲಿ ಆ ತರಹದ ಸಂಬೋಧನೆ ಇದೆ. ಅಷ್ಟೇ ಅಲ್ಲ, ಬೇಂದ್ರೆಯವರ ಆದರ್ಶವು ಇಡೀ ಪ್ರಪಂಚವನ್ನೇ ಒಳಗೊಳ್ಳುವುದರಿಂದ (-‘ವಸುಧೈವ ಕುಟುಂಬಕಮ್’-) ಈ ಪ್ರಪಂಚದ ಸಮಸ್ತ ಜೀವಿಗಳು ಅವರಿಗೆ ‘ಜೀವಕೆಳೆಯರೇ’ ಆಗಿದ್ದಾರೆ!

‘ಸತ್ಯಂ ಶಿವಂ ಸುಂದರಮ್’ ಎನ್ನುವುದು ಬದುಕು ಹೇಗಿರಬೇಕು ಎನ್ನುವ ಸಾಂಸ್ಕೃತಿಕ ಆದರ್ಶವಾಯಿತು. ಆದರೆ ಇದಷ್ಟೇ ಬದುಕಿನ ಅಂತಿಮ ಗುರಿಯಾಗಲಾರದು. ಸಾಂಸ್ಕೃತಿಕ ಆದರ್ಶವು ಆಧ್ಯಾತ್ಮದತ್ತ ಕೈದೋರಬೇಕು. ಇದು ಬೇಂದ್ರೆಯವರ ಮುಂದಿನ ಕಾಣ್ಕೆಯಾಗಿದೆ:
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ನಮ್ಮ ಬದುಕು ಲೌಕಿಕ-ಕೇಂದ್ರಿತವಾಗಬಾರದು; ಆ ದೇವನೇ ಈ ಬದುಕಿನ ಕೇಂದ್ರ. ಪ್ರತಿ ಜೀವಿಯೂ ತನ್ನ ಬದುಕನ್ನು ತಾನೇ ಆಧ್ಯಾತ್ಮಿಕವಾಗಿ ರೂಪಿಸಿಕೊಳ್ಳುವ masterಆಗಬೇಕು; ಹಾಗು ಸಾಧನೆಯ ಉಚ್ಚ ಮಟ್ಟವನ್ನು ತಲುಪಿದರೂ ಸಹ ತನ್ನ ‘ಎಲ್ಲೆ’ಯನ್ನು ಅಂದರೆ ಸೀಮೆಯನ್ನು ತಿಳಿದುಕೊಳ್ಳಬೇಕು. ವಿಧಿವಿಲಾಸದ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ನಾವು ಅರಿಯಬೇಕು. ಈ ಸಂದರ್ಭದಲ್ಲಿ ಡಿ.ವಿ.ಜಿ.ಯವರ ‘ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ...’ ಎನ್ನುವ ಸಾಲು ನೆನಪಾಗದೇ ಇರದು. ಒಬ್ಬೊಬ್ಬನೂ ಇಂದ್ರ ಎಂದಾಗ, ಪ್ರತಿ ಜೀವಿಯೂ ಇಂದ್ರಿಯ ಸುಖಗಳನ್ನು ಬಯಸುವವನೇ ಆಗಿರುತ್ತಾನೆ; ಆದರೆ ದೇವನೇ ಈ ಜೀವನದ ಕೇಂದ್ರವನ್ನಾಗಿ ಆತನು ಮಾಡಿಕೊಳ್ಳಬೇಕು ಎನ್ನುವ ಅರ್ಥವೂ ಇಲ್ಲಿದೆ.

ಮೊದಲ ನುಡಿಯಲ್ಲಿ ಬೇಂದ್ರೆಯವರು ‘ಮಾಯೆ ನಮಗೆ ಬದುಕನ್ನು ಕೊಟ್ಟವಳು’ ಎಂದು ಹೇಳಿದರು. ಎರಡನೆಯ ನುಡಿಯಲ್ಲಿ, ಬದುಕಿನಲ್ಲಿ ಪ್ರತಿ ಜೀವಿಯು ಸಾಧಿಸಬೇಕಾದ ಆದರ್ಶಗಳನ್ನು ಉಸುರಿದರು. ಕೊನೆಯ ನುಡಿಯಲ್ಲಿ ಈ ಸಾಧನೆಗೆ ಬೇಕಾದ ನೋಟ ಹಾಗು ಭಗವತ್‍ಕೃಪೆಯ ಅವಶ್ಯಕತೆಯ ಬಗೆಗೆ ಹೇಳುತ್ತಿದ್ದಾರೆ.
ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ

ಈ ಸೃಷ್ಟಿ ಸಾಧ್ಯವಾಗಬೇಕಾದರೆ ‘ಶಿವ’ ಹಾಗು ‘ಶಕ್ತಿ’ ಈರ್ವರೂ ಬೇಕು. ಈ ಮಾತನ್ನು emphasize ಮಾಡಲೆಂದೇ, ಬೇಂದ್ರೆಯವರು ‘ಆತನಾಕೆ’ ಎನ್ನುತ್ತಾರೆ. ಆತನ (ಶಿವನ) ಆಕೆಯು (ಶಕ್ತಿಯು) ನಮ್ಮ ಜೀವನನೌಕೆಯನ್ನು ನಡೆಯಿಸಲಿ ಎನ್ನುವುದು ಕವಿಯ ಅಪೇಕ್ಷೆ. ಹಳೆಯ ಕಾಲದ ನಾವಿಕರು ನೌಕಾಯಾನದಲ್ಲಿ ಗುರಿ ತಪ್ಪದಿರಲು, ಧ್ರುವ ನಕ್ಷತ್ರವನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಿದ್ದರು. ಧ್ರುವನಕ್ಷತ್ರವು ಶಾಶ್ವತವಾದದ್ದು. ಅದರಂತ ತಮ್ಮ ಜೀವನನೌಕೆಯು ಅಂದರೆ ಪ್ರತಿಯೊಬ್ಬರ ಜೀವನನೌಕೆಯು ಶಾಶ್ವತವಾದದ್ದರ ಕಡೆಗೆ ಸಾಗಲಿ; ಆ ಗುರಿಯು ತಪ್ಪದಂತೆ ದೇವಿಯು ನಮ್ಮ ನೌಕೆಯನ್ನು ನಡೆಯಿಸಲಿ ಎಂದು ಕವಿಯು ಪ್ರಾರ್ಥಿಸುತ್ತಾರೆ. ‘ಶಿವ’ ಎಂದರೆ ಒಳಿತಾದದ್ದು. ಶಿವನೊಡನೆ ಶಕ್ತಿ ಕೂಡಿದಾಗ ಮಾತ್ರ ಬದುಕನ್ನು ಸರಿಯಾದ ಧ್ಯೇಯದೆಡೆಗೆ ಕೊಂಡೊಯ್ಯಬಹುದು.

ಬೇಂದ್ರೆಯವರ ನೌಕೆಯು ವಿಶ್ವನೌಕೆ. ಈ ನೌಕೆಯಲ್ಲಿ ಸಮಸ್ತ ಜೀವಿಗಳು ಪಯಣಿಸುತ್ತಿವೆ. ಆದುದರಿಂದ ಬೇಂದ್ರೆ ತಮ್ಮ ಸಹಪ್ರಯಾಣಿಕರಿಗೆ ಹೇಳುವುದು ಹೀಗೆ:
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ನೌಕೆಯ ಸಹಪ್ರಯಾಣಿಕರಲ್ಲಿ ಅಂದರೆ ಬದುಕಿನಲ್ಲಿ ನಮ್ಮ ಜೊತೆಯಲ್ಲಿದ್ದವರಲ್ಲಿ ಸಾಮರಸ್ಯ ಇರಬೇಕು. ಹಾಗಾದಾಗ, ‘ನಾನು’, ‘ನೀನು’ ಅಳಿಸಿ ಹೋಗಿ ನಾವು ‘ತಾನು’ ಆಗುತ್ತೇವೆ. ಭಗವಂತನ ತಾನಿನ (=ಸಂಗೀತದ) ತಾನು (=ಸಂಗೀತ) ಆಗುತ್ತೇವೆ. ಮತ್ತೊಂದು ಅರ್ಥವೆಂದರೆ ತಾನು ಎಂದರೆ self ಅರ್ಥಾತ್ ಭಗವಂತನೇ ಆಗುತ್ತೇವೆ. ಹಿತಮಯವಾದ ಬದುಕಿಗೆ ಬೇಕಾದ ತಾಳ, ಲಯ ಹಾಗು ರಾಗಗಳು ‘ಸಹಜ’ವಾಗಿ ಬರಲಿ ಎಂದರೆ ಅವುಗಳಲ್ಲಿ ಸೃಷ್ಟಿಗೆ ಅಸಹಜವಾದದ್ದು (unnatural ಆದದ್ದು), ಆ ಕಾರಣದಿಂದ ವಿಕಾರವಾದದ್ದು ಬರದಿರಲಿರಲಿ ಎಂದು ಕವಿ ಆಶಿಸುತ್ತಾರೆ.

‘ಬದುಕು ಮಾಯೆಯ ಮಾಟ’ ಕವನವು ಕವಿಯ ತಾತ್ವಿಕ ತಿಳಿವು ಹಾಗು ಅವನ ಕನಸುಗಳ ಅಭಿವ್ಯಕ್ತಿಯಾಗಿ ಒಡಮೂಡಿದೆ. ಕೇವಲ ಮೂರು ನುಡಿಗಳ ಸರಳ ಕವನದಲ್ಲಿ ಬೇಂದ್ರೆಯವರು ವಿಶ್ವವ್ಯಾಪಿಯಾದ ಜೀವನದರ್ಶನವನ್ನು ಕಾಣಿಸಿದ್ದಾರೆ.
ಬೇಂದ್ರೆಯವರು ಈ ಕವನದಲ್ಲಿ ಬಳಸಿದ ‘ನಾನು’, ‘ನೀನು’ ಹಾಗು ‘ತಾನು’ ಇವು ಅವರ ‘ನಾಕು ತಂತಿ’ ಕವನದಲ್ಲಿ ಪುನರಾವರ್ತಿಸಿವೆ. ಇದು ಅವರ ಜೀವನದೃಷ್ಟಿಯೇ ಆಗಿದೆ.

‘ಬದುಕು ಮಾಯೆಯ ಮಾಟ’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

24 comments:

  1. ಕವನದ ಶೀರ್ಷಿಕೆಯಲ್ಲಿ ಬೇಂದ್ರೆಯವರು ಬದುಕಿನ ಸಾರ ತುಂಬಿಟ್ಟಿದ್ದಾರೆ.

    ಬೇಂದ್ರೆಯವರ ಕಾಲವನ್ನು ಹೋಲಿಸಿದರೆ, ನಮ್ಮ ತಲೆಮಾರು ಮತ್ತು ಇತ್ತೀಚಿನ ಪೀಳಿಗೆಯ ಆದರ್ಶಗಳೇ ಭೀತಿಯನ್ನು ಹುಟ್ಟಿಸುತ್ತವೆ.

    ಮುನ್ನೀರಿನ ಪದ ಜನ್ಯತೆ ನನಗೆ ಇಲ್ಲಿ ಸಿಕ್ಕಿತು.

    ನನ್ನ ಮಟ್ಟಿಗೆ ಇದು ಪದೇ ಪದೇ ಓದಿ ಅರ್ಥೈಸಿಕೊಳ್ಳಲೇ ಬೇಕಾದ ಕವನ. ಕವನದ ಎಳೆ ಎಳೆಯನ್ನು ಬಿಚ್ಚಿಟ್ಟ ನಿಮಗೆ ಅನಂತ ಧನ್ಯವಾದಗಳು.

    ReplyDelete

  2. ಸಾವಿರ ವಂದನೆಗಳು ಸರ್.
    nothing else . . .

    ReplyDelete
  3. ಕವನದ ಒಳ ಅರ್ಥವನ್ನು ಸವಿಸ್ತಾರವಾಗಿ ತೆರೆದಿಟ್ಟಿದ್ದೀರಿ ಸಾರ್.
    ಮುನ್ನೀರು, ಹೊನ್ನೀರು, ಕರುಣೋದಯ, ಅರುಣೋದಯ ಮುಂತಾದ ಪದಗಳಿಗಿರುವ ಅರ್ಥವನ್ನು ಬಹಳ ಚೆನ್ನಾಗಿ ವಿವರಿಸಿರುವಿರಿ.
    ಧನ್ಯವಾದಗಳು .

    ReplyDelete
  4. "ಬದುಕಿಗೆ ಶಾರದೆಯ ಸಂಸ್ಕೃತಿಯೂ ಬೇಕು; ಜೊತೆಗೇ ಕಾಳಿಯ ಶಕ್ತಿಯೂ ಬೇಕು"!
    - ಬೇಂದ್ರೆಯವರ ಎಲ್ಲಾ ಕವನಗಳಲ್ಲೂ ಇಂತಹದ್ದೊಂದು ಪ್ರೋತ್ಸಾಹ-ಉತ್ಸಾಹ ಇದ್ದೇ ಇರುತ್ತದೆ.

    ಧನ್ಯನಾದೆ.

    ReplyDelete
  5. ನಾಗರಾಜರೆ,
    ಧನ್ಯವಾದಗಳು.

    ReplyDelete
  6. ಸುಬ್ರಹ್ಮಣ್ಯರೆ,
    ಧನ್ಯವಾದಗಳು.

    ReplyDelete
  7. ಕಾಕಾ ,
    ಬದುಕು ಮಾಯೆಯ ಮಾಟ ಅಂದ ಶಂಕರ ವಾಣಿಯ ಅಂಬಿಕಾತನಯರ ಪದ್ಯವನ್ನು ವಿವರವಾಗಿ ಸೊಗಸಾಗಿ ತಿಳಿಸಿದ್ದೀರಿ . ನಮ್ಮ ಜೀವ ನೌಕೆಗಳು ಧ್ರುವಮರೆಯದಂತೆ ರಕ್ಷಿಸಲು ಇಂತಹ ವಿವರಣೆಗಳು ಬೇಕು .
    ವಂದನೆಗಳು

    ReplyDelete
  8. ಸ್ವರ್ಣಾ,
    ಧನ್ಯವಾದಗಳು.

    ReplyDelete
  9. ನಾನು ಹೇಳಬಯಸಿದ್ದು, "ಜೀವ ಮೌನದ ತುಂಬ ಗುಂಭ ಮುನ್ನೀರು" ಆಗಬೇಕಿತ್ತಲ್ಲವೇ?

    ReplyDelete
  10. ಕೃಷ್ಣಪ್ರಕಾಶರೆ,
    ಬೇಂದ್ರೆಯವರ ಹಳೆಯ ಪ್ರಕಟಿತ ಪುಸ್ತಕವನ್ನು ಪರಿಶೀಲಿಸಿದೆ.
    ‘ಜೀವಮಾನ’ದ ಎಂದೇ ಅಚ್ಚಾಗಿದೆ! Of course, ನಿಮ್ಮ ತಿದ್ದುಪಡಿಯೂ ಸಹ ವಿಶೇಷ ಅರ್ಥವನ್ನು ಕೊಡುತ್ತದೆ.

    ReplyDelete
  11. ನಮೋ ನಮಃ
    ಅದ್ಭುತ ವಿವರಣೆ .. ಸೂಪರ್ !

    ಜೀವನೌಕೆಯ ತಮ್ಮ ---- ಈ ತಮ್ಮ ಎನ್ನುವುದು ನಮ್ಮನ್ನು ಉದ್ದೇಶಿಸಿ ಹೇಳಿದ್ದೇ ? ( ಕೇಳೋ ತಮ್ಮ ಅನ್ನುವ ರೀತಿಯಲ್ಲಿ ?)

    ReplyDelete
  12. ಪ್ರವೀಣರೆ,
    ಬೇಂದ್ರೆಯವರು ವಿವಿಧಾರ್ಥ ಕುಶಲಿಗಳು. ಅವರು ಬಳಸುವ ಪದಗಳಲ್ಲಿ ಅನೇಕ ಅರ್ಥಗಳಿರುವುದು ಸಹಜವಾಗಿದೆ!

    ReplyDelete
  13. ನಮಸ್ಕಾರ ಸರ್,

    ನನ್ನದೊಂದು ಪ್ರಷ್ನೆ. ಇತ್ತೀಚಿಗೆ ಬಿಡುಗಡೆ ಆದ ಕಡ್ಡಿಪುಡಿ ಕನ್ನಡ ಸಿನಿಮಾದಲ್ಲಿ ಒಂದು ಜನಪದ ಗೀತೆ ಇದೆ. ಅದರಲ್ಲಿ ಒಂದು ಪದ "ಹಗಣಗಾರತಿ" ಅಂತ ಇದೆ. ಇದರ ಅರ್ಥ ತಿಳಿಸಲು ಸಾಧ್ಯವೇ...
    ಕೆಳಗಿನ ಕೊಂಡಿಯಲ್ಲಿ ನೀವು ಹಾಡನ್ನು ನೋಡಬಹುದು.

    http://www.youtube.com/watch?v=c-gFNsaZLAQ
    ಧನ್ಯವಾದಗಳು.

    ReplyDelete
  14. ಹರಟೆಮಲ್ಲರೆ,
    ಎಲ್ಲಾ ಶಬ್ದಕೋಶಗಳಲ್ಲೂ ಹುಡುಕಿ ನೋಡಿದೆ.‘ಹಗಣಗಾರತಿ’ ಪದವು ಎಲ್ಲಿಯೂ ಸಿಕ್ಕದು. ಬಹುಶಃ ಹಗರಣಾರತಿ ಎಂದು ಹಾಡಬೇಕಾದದ್ದನ್ನು ತಪ್ಪಿ ಹಗಣಗಾರತಿ ಎಂದು ಹಾಡಿದ್ದಾರೆಯೆ? ಯಾಕೆಂದರೆ ಹಗರಣ ಎಂದರೆ ತಪ್ಪು ಕಾರ್ಯ ಎನ್ನುವ ಅರ್ಥವಾದರೂ ಆದೀತು!

    ReplyDelete
  15. ಸುನಾಥರೇ, ಅದು ಹಗರಣಾರತಿ ಅಲ್ಲ.

    "ಹೆದರಬ್ಯಾಡ್ರಿ ಅಂತ ಗಂಡಗ ಧೈರ್ಯ ಕೊಟ್ಟಾಳ್ರಿ
    ಹಗಣಗಾರತಿ ಮಾ ಚತುರ ಬೀಗುತಿ"

    ಹಗಣಗಾರತಿ ಎಂದು ಆಕೆಯನ್ನು ಕರೆಯಲಾಗಿದೆ. 'ದಿಟ್ಟೆ' ಎಂಬ ಅರ್ಥದಲ್ಲಿ ಹೇಳಿರಬಹುದು.

    ReplyDelete
  16. ಹೌದು ಕೃಷ್ಣಪ್ರಕಾಶರೆ, ನಿಮ್ಮ ಅರ್ಥ ಸರಿ ಎನ್ನಿಸುತ್ತದೆ. ಹಗಣಗಾರತಿ ಎಂದರೆ ಹಗಣಗಾತಿ ಅರ್ಥಾತ್ ಕ್ಯಾತೆ ತೆಗೆಯಲು ಹಿಂಜರಿಯದೆ ಇರುವವಳು ಎಂದುಕೊಳ್ಳಬಹುದಲ್ಲವೆ?

    ReplyDelete
  17. ಪದದ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  18. ಬೇಂದ್ರೆ ರವರಿಗೆ ಬದುಕು ಮೊಗದಷ್ಟು ಹೊಸಹೊಸ ವ್ಯಾಖ್ಯಾನ ನೀಡೀದೆ...ಬದುಕಿನಲಿ ಅನುಬವಿಸಿದ ನೋವುಗಳು ಅವರನ್ನ ಬದುಕಿಗೆ ವಿಮುಕರನ್ನಾಗಿಸಿಲ್ಲ... ವಿವರಣೆ ಚೆನ್ನಾಗಿದೆ....

    ReplyDelete
  19. ಧನ್ಯವಾದಗಳು, ಭಾನು!

    ReplyDelete
  20. ದನ್ಯವಾದಗಳು ಸರ್ ,ತುಂಬಾ ಸರಳ ರೀತಿಯಲ್ಲಿ ಮನ ಮಿಟ್ಟುವಂತೆ ಹೇಳಿದ್ದೀರಿ

    ReplyDelete
  21. ಧನ್ಯವಾದಗಳು, Unknownರವರೆ!

    ReplyDelete