Tuesday, February 17, 2015

ಮುದುಕಿ, ನಿನ್ನಾಟ ಮುಂದ ಅದ!



ಅರವಿಂದ ಕೇಜರಿವಾಲಾರು ಮೊದಲ ಸಲ ದಿಲ್ಲಿಯ ಮುಖ್ಯ ಮಂತ್ರಿಯಾಗುವ ಸಮಯದಲ್ಲಿ ನನಗೆ ಅವರ ಬಗೆಗೆ ತುಂಬ ಗೌರವವಿತ್ತು. ಇವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರು ಹಾಗು ರಾಜಕೀಯದ ಶುದ್ಧೀಕರಣಕ್ಕಾಗಿ ತಮ್ಮದೇ ಆದ ‘ಆಮ ಆದ್ಮಿ ಪಕ್ಷ’ವನ್ನು ಕಟ್ಟಿ ಪರ್ಯಾಯ ರಾಜಕಾರಣವನ್ನು ಪ್ರಾರಂಭಿಸಿದವರು ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಕಳೆದ ವರ್ಷದಲ್ಲಿ ನಡೆದ ಚುನಾವಣೆಗೂ ಮೊದಲು ಅವರು ಉತ್ತರ ಪ್ರದೇಶದ ಮುಸ್ಲಿಮ ಧರ್ಮಗುರು ಒಬ್ಬರನ್ನು ಭೆಟ್ಟಿಯಾಗಿ ಮುಸ್ಲಿಮರ ಮತಗಳನ್ನು ಸೆಳೆಯಲು ಪ್ರಯತ್ನಿಸಿದಾಗ, ‘ಓಹ್! ಇವರೂ ಒಬ್ಬ ಪಕ್ಕಾ ರಾಜಕಾರಣಿಯೇ!’ ಎಂದು ಬೇಸರವಾಯಿತು.

ಈ ಸಲ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಂತೂ ಕೇಜರಿವಾಲಾ ತಮ್ಮ ಬಣ್ಣವನ್ನು ಸರಿಯಾಗಿ ತೋರಿಸಿದರು. ತಮ್ಮ ಎದುರಾಳಿ ಕಿರಣ ಬೇಡಿಯವರನ್ನು ‘ಮೋದಿಯ ಸೂತ್ರದ ಗೊಂಬೆ’ ಎಂದು ಹೀಯಾಳಿಸಿದ ಇವರು, ‘ಕೇಜರಿವಾಲಾ ಕಳ್ಳ’ ಎಂದು ನಿರ್ಮಲಾ ಸೀತಾರಾಮನ್ ಆಪಾದಿಸಿದಾಗ, ಇದು ‘ಅಸಭ್ಯ ಪ್ರಚಾರ’ ಎಂದು ಪ್ರತಿಭಟಿಸಿದರು.

ಕೇಜರಿವಾಲಾ ಮತದಾರರಿಗೆ ಒಡ್ಡಿದ ಆಮಿಶಗಳಿಗೆ ಹಾಗು ತೋರಿಸಿದ ಕಾಮನಬಿಲ್ಲಿಗೆ ನನ್ನ ಆಕ್ಷೇಪಣೆ ಇಲ್ಲ. ಎಲ್ಲ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ಆದರೆ ಕೇಜರಿವಾಲಾರು ತಮ್ಮನ್ನು ವೈಭವೀಕರಿಸುವ ಉದ್ದೇಶದಿಂದ, ಇತರರನ್ನು ಮುಖ್ಯವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಯನ್ನು ವಿನಾಕಾರಣ ಕೀಳು ಮಾಡುವುದು ಸರಿಯಲ್ಲ. ವಿದೇಶಿ ಬ್ಯಾಂಕುಗಳಲ್ಲಿ ಇರುವ ಭಾರತೀಯರ ಕಪ್ಪು ಹಣವನ್ನು ಬಯಲಿಗೆಳೆಯುತ್ತೇನೆ ಎನ್ನುವ ವಿದೇಶೀ ವ್ಯಕ್ತಿಯನ್ನು ಭಾರತ ಸರಕಾರವು ತನ್ನ ‘ಕಪ್ಪು ಹಣ ನಿರ್ವಹಣಾ ಮಂಡಲಿ’ಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಸಲಹೆಯನ್ನು ಪತ್ರಮುಖೇನ ಇವರು ಭಾರತ ಸರಕಾರಕ್ಕೆ ನೀಡುತ್ತಿದ್ದಾರೆ ಹಾಗು ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶವು ಯಾರಿಗಾದರೂ ಅರ್ಥವಾಗುವಂತಹದೇ. ಇಂತಹ ಕ್ರಿಯೆಯು ಅಸಾಧುವಾಗಿದ್ದರಿಂದ ಭಾರತ ಸರಕಾರವು ಹಾಗೆ ಮಾಡಲು ಸಾಧ್ಯವಿಲ್ಲ. ಆಗ ಕೇಜರಿವಾಲಾ ಅಮಾಯಕ ಜನರೆದುರಿಗೆ ಬೊಬ್ಬೆ ಹಾಕಬಹುದು: ‘ನೋಡಿ, ನಾನೊಬ್ಬನೇ ಸತ್ಯ ಹರಿಶ್ಚಂದ್ರ; ಉಳಿದವರು ಭ್ರಷ್ಟರು!’ ಭಾರತ ಸರಕಾರವು  ಕೆಲಸದಿಂದ ತೆಗೆದು ಹಾಕಿದ ಸಂಜೀವ ಚತುರ್ವೇದಿಯವರನ್ನು ಪುನಃ ನೇಮಿಸಿಕೊಳ್ಳುವ ಮೂಲಕ ಕೇಜರಿವಾಲಾ ಕೇಂದ್ರ ಸರಕಾರದ ವಿರುದ್ಧ ಸೆಡ್ಡು ಹೊಡೆಯುತ್ತಿದ್ದಾರೆ. ಇವೆಲ್ಲುವುಗಳ ಹಿಂದಿನ ಉದ್ದೇಶ ಇಷ್ಟೇ. ಕೇಂದ್ರ ಸರಕಾರದ ಮುಖಕ್ಕೆ ಕಪ್ಪು ಬಳಿದು, ಜನತೆಯನ್ನು ಅದರ ವಿರುದ್ಧ ತಿರುಗಿಸುವುದು. ಅಮಾಯಕ ಜನತೆಯನ್ನು ಮರಳು ಮಾಡುವ ಇಂತಹ ತಂತ್ರಗಳನ್ನು ತಥಾಕಥಿತ ಕ್ರಾಂತಿಕಾರಿಗಳು ಯಾವತ್ತಿನಿಂದಲೂ ಅನುಸರಿಸುತ್ತಲೇ ಬಂದಿದ್ದಾರೆ! ಫ್ರಾನ್ಸ ಹಾಗು ರಶಿಯಾದಲ್ಲಿ ನಡೆದ ಕ್ರಾಂತಿಗಳು ಎಂತಹ ನರಮೇಧಗಳಲ್ಲಿ ಕೊನೆಗೊಂಡವು ಹಾಗು ಕೊನೆಗೂ ಏನನ್ನೂ ಸಾಧಿಸದೇ ಹೋದವು ಎನ್ನುವುದು ಇತಿಹಾಸದ ಅಭ್ಯಾಸಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ.

ದಿಲ್ಲಿಗೇ ಆಗಲಿ, ಭಾರತಕ್ಕೇ ಆಗಲಿ, ಈಗ ಬೇಕಾಗಿರುವುದು ಸಂಪತ್ತನ್ನು ವೃದ್ಧಿಸುವ ಯೋಜನೆಗಳು. ಇಂತಹ ಯೋಜನೆಗಳಿಗಾಗಿ ಮೋದಿ ಎಲ್ಲೆಲ್ಲೂ ಅಲೆದು, ನಿಧಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೇಜರಿವಾಲಾ ಅವರು ಈ ನಿಧಿಯನ್ನು ಅಸಮರ್ಪಕ ಸಬ್ಸಿಡಿಗಳ ಮೂಲಕ ಹಾಳು ಮಾಡುತ್ತ, ತಮ್ಮ ಮುಂದಿನ ಚುನಾವಣೆಗಳ ಉದ್ದೇಶದಿಂದ ಅಪವ್ಯಯಗೊಳಿಸುತ್ತಿದ್ದಾರೆ. ವಾಹವ್ವಾ, ದೂರದೃಷ್ಟಿಯೇ!

ಅಣ್ಣಾ ಹಜಾರೆಯವರು ‘ರಾಜಕಾರಣವನ್ನು ಪ್ರವೇಶಿಸಬೇಡಿ’ ಎಂದು ತಮ್ಮ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದು ಏಕೆ ಎನ್ನುವುದು ಈಗ ಅರ್ಥವಾಗುತ್ತದೆ. ಎಂತಹ ನಿಸ್ವಾರ್ಥಿ ಕೇಜರಿವಾಲಾ ಎಷ್ಟು ಸರಳವಾಗಿ ತಮ್ಮ ಬಣ್ಣವನ್ನು ಬದಲಾಯಿಸಿದರಲ್ಲ ಎಂದು ವ್ಯಥೆಯೂ ಆಗುತ್ತದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ವೈಯಕ್ತಿಕ ಸ್ವಾರ್ಥವಿಲ್ಲದ ವ್ಯಕ್ತಿಯಲ್ಲಿ ರಾಜಕೀಯ ಸ್ವಾರ್ಥವು ಹುಟ್ಟಬಹುದಲ್ಲವೆ?  ಆದರೂ ಆ ಮಹಾಶಯನಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳಲೇ ಬೇಕು. ಲಕ್ಷ್ಮಣರೇಖೆಯನ್ನು ದಾಟಿದ ರಾವಣನು ಸೀತೆಯನ್ನು ಅಪಹರಿಸಲು ಸಾಧ್ಯವಾಯಿತು. ಆದರೆ ಆ ಮೂಲಕ ಇಡೀ ಲಂಕೆಯೇ ಸುಟ್ಟು ಹೋಯಿತು. ಕೇಜರಿವಾಲಾರೆ, ಇಡೀ ದಿಲ್ಲಿ ತನ್ನನ್ನು ಪ್ರೀತಿಸುತ್ತಿದೆ ಎಂದು ಬೊಬ್ಬೆ ಹೊಡೆಯಬೇಡಿ. ನಿಮಗೆ ಸಿಕ್ಕಿದ್ದು ಶೇಕಡಾ ೫೩ರಷ್ಟು ಮತಗಳು. ಇದರರ್ಥ ಶೇಕಡಾ ೪೭ರಷ್ಟು ಮತದಾರರು ನಿಮ್ಮನ್ನು ಪ್ರೀತಿಸುವದಿಲ್ಲ. ಈಗೇನೋ ನೀವು ದೊಂಬರಾಟವನ್ನು ಮಾಡುತ್ತಿದ್ದೀರಿ. ಆದರೆ ನಿಮಗೊಂದು ಮಾತನ್ನು ಗಟ್ಟಿಯಾಗಿ ಹೇಳಲೇ ಬೇಕು: ‘ಮುದುಕಿ, ನಿನ್ನಾಟ ಮುಂದ ಅದ!’

6 comments:

Subrahmanya said...

ಕಾಕಾ ,
ನಮ್ಕಡೆ "ಮುಂದೈತೆ ಮಾರಿ ಹಬ್ಬ " ಅಂತೀವಿ. ಹ್ಯಾಂಗದ್ರೇನು ? !. ಬಣ್ಣ ಬಯಲಾಗೂದೊಂದ ಬಾಕಿ .

Badarinath Palavalli said...

ಎರಡನೇ ಬಾರಿಯೂ ದೆಹಲಿ ಮತದಾರನು ಅಪಾತ್ರ ದಾನ ಮಾಡಿದ್ದಾನೇನೋ ಎಂಬ ಅನುಮಾನ ಕಾಡಿದೆ.
ಸಂಪನ್ಮೂಲ ಶೇಖರಣೆಯಲ್ಲಿ ತಕ್ಕ ಮೂಲ ವಸ್ತುಗಳನ್ನು ಕ್ರೋಡಿಕರಿಸಲಾಗದಷ್ಟು ಪುಟ್ಟ ರಾಜ್ಯಕ್ಕೆ ಅವಾಸ್ತವಿಕ ಭರವಸೆಗಳ ಪೊಳ್ಳು ಪ್ರಭಾವಳಿಯ ಮಾಯೆಯನ್ನು ಹಚ್ಚಿಕೊಟ್ಟ ಅಪ್ರಭುದ್ಧನೀತ!

ಅಣ್ಣಾ ಹಜಾರೆಯವರಿಗೂ ಈಗ ಮನ ನೊಂದಿರಬಹುದು!

sunaath said...

ಸುಬ್ರಹ್ಮಣ್ಯರೆ,
ಕಾಯ್ದು ನೋಡೋಣ!

sunaath said...

ಬದರಿನಾಥರೆ,
ಮತದಾರರಿಗೆ ಟೋಪಿ ಹಾಕುವದರಲ್ಲಿ ಈತ ಪ್ರಬುದ್ಧತೆಯನ್ನು ತೋರಿಸಿದ್ದಾನೆ!

Swarna said...

ಕಾಕಾ ,
ನಮ್ಮ ಈಚಿನ ರಾಜಕಾರಣಿಗಳು ಉತ್ತಮ ವಾಗ್ಮಿಗಳು , ಜನರನ್ನು ಭಾವನಾತ್ಮಕವಾಗಿ ವಂಚಿಸುವುದರಲ್ಲಿ ನಿಸ್ಸೀಮರು
ನೀವು ಹೇಳಿದಂತೆ ಮುದುಕಿಯ ಆಟ ಮುಂದೆ ನೋಡೋಣ . ಕೊಟ್ಟ ಆಶ್ವಾಸನೆಗಳನ್ನು ಎಷ್ಟರಮಟ್ಟಿಗೆ ಈಡೇರಿಸುತ್ತಾರೋ ನೋಡೋಣ
ಇಂಗ್ಲೀಷಿನಲ್ಲಿ ಹೇಳುವಂತೆ You can not fool all the people all the time

ವಂದನೆಗಳೊಂದಿಗೆ
ಸ್ವರ್ಣಾ

sunaath said...

ಸ್ವರ್ಣಾ,
ಈ ರಾಜಕಾರಣಿಗಳು ದೂರದೃಷ್ಟಿ ಇಲ್ಲದವರು. ಇಂತಹ ರಾಜಕಾರಣಿಗಳಿಂದ ಅನೇಕ ದೇಶಗಳು, ಅನೇಕ ಜನತೆ ಸಂಕಟಕ್ಕೆ ಒಳಗಾಗಿವೆ!