Saturday, July 18, 2015

ಪುಣ್ಯಕೋಟಿ ಎನ್ನುವ ಗೋವಿನ ಕತೆ.



‘ಗೋವಿನ ಹಾಡು’ ಕವನದ ಪಠ್ಯ ಈ ರೀತಿಯಾಗಿದೆ:

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು ||೧||

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ ||೨||

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದಿಹ ತುರುಗಳನ್ನು
ಬಳಿಗೆ ಕರೆದನು ಹರುಷದಿ ||೩||

ಗಂಗೆ ಬಾರೆ, ಗೌರಿ ಬಾರಿ,
ತುಂಗಭದ್ರೆ ತಾಯಿ ಬಾರೆ
ಕಾಮಧೇನು ಬಾ ಎನುತ್ತ
ಚೆನ್ನ ಗೊಲ್ಲನು ಕರೆವನು ||೪||

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ ||೫||

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತನು ಎಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿರ್ದನು ||೬||

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುದುಕಲೆರಗಿದ ರಭಸಕಂಜಿ
ಚದುರಿ ಹೋದವು ಹಸುಗಳು ||೭||

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆನ್ನಾಗಿ ತಾ ಬರುತಿರೆ ||೮||

ಇಂದೆನೆಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು ||೯||

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನಿತು ಕೋಪದಿ
ಖೂಳ ವ್ಯಾಘ್ರನು ಕೂಗಲು ||೧೦||

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದೆ ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ ||೧೧||

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು, ನೀನು
ನುಸುಳಿ ಹೋಗುವೆ, ಮತ್ತೆ ಬರುವೆಯಾ
ಹುಸಿಯನಾಡುವೆ ಎಂದಿತು ||೧೨||

ಸತ್ಯವೇ ನಮ್ಮ ತಾಯಿ, ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು ||೧೩||

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದಲಿ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ ||೧೪||

ಅಮ್ಮ ನೀನು ಸಾಯಲೇಕೌ
ನನ್ನ ತಬ್ಬಲಿ ಮಾಡಲೇಕೌ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಿತು ||೧೫||

ಕೊಟ್ಟ ಭಾಷೆಗೆ ತಪ್ಪಲಾರೆ
ಕೆಟ್ಟ ಯೋಚನೆ ಮಾಡಲಾರೆ
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ ||೧೬||

ಆರ ಮೊಲೆಯನು ಕುಡಿಯಲಮ್ಮ,
ಆರ ಸೇರಿ ಬದುಕಲಮ್ಮ,
ಆರ ಬಳಿಯಲಿ ಮಲಗಲಮ್ಮ,
ಆರು ನನಗೆ ಹಿತವರು? ||೧೭||

ಅಮ್ಮಗಳಿರಾ, ಅಕ್ಕಗಳಿರಾ,
ನನ್ನ ತಾಯೊಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು ||೧೮||

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು  ||೧೯||

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ ||೨೦||

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ ||೨೧||

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು ||೨೨||

ಖಂಡವಿದಕೋ ಮಾಂಸವಿದಕೋ
ಗುಂಡಿಗೆಯ ಬಿಸಿ ರಕ್ತವಿದಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು ||೨೩||

ಪುಣ್ಯಕೋಟಿಯ ಮಾತು ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು ||೨೪||

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನು ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು ||೨೫||

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು ||೨೬||

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ ||೨೭||

ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು ||೨೮||

ಪುಣ್ಯಕೋಟಿಯ ಕತೆಯು ಕನ್ನಡ ನಾಡಿನ ಜನಪ್ರಿಯ ಕಥನಕವನ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಈ ಕವನದ ಭಾಗಗಳನ್ನು ನಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿದ್ದರು. ಕವನದ ಕೊನೆಗೆ ಒಂದು ಪ್ರಶ್ನೆ ಇರುತ್ತಿತ್ತು: ಯಾರ ತ್ಯಾಗ ಹೆಚ್ಚಿನದು, ಪುಣ್ಯಕೋಟಿಯದೊ ಅಥವಾ ಹುಲಿಯದೊ?

ನಾವು ವಿದ್ಯಾರ್ಥಿಗಳೆಲ್ಲ ಪುಣ್ಯಕೋಟಿಯ ಪರವಾಗಿ ಇದ್ದರೆ, ನಮ್ಮ ಗುರುಗಳು ಹುಲಿಯ ತ್ಯಾಗ ಹೇಗೆ ಹೆಚ್ಚಿನದು ಎಂದು ವಿವರಿಸುತ್ತಿದ್ದರು. ಗೋವು ಹೇಳೀಕೇಳೀ ಸಾಧು ಪ್ರಾಣಿ. ಸತ್ಯದ ಮಾರ್ಗದಲ್ಲಿ ನಡೆಯುವುದು ಅದಕ್ಕೆ ತಲೆತಲಾಂತರದ ಅಭ್ಯಾಸ. ಹುಲಿಯಾದರೊ ಕ್ರೂರ ಪ್ರಾಣಿ. ತನಗೆ ಹಸಿವಾದಾಗಲೂ ಸಹ ಪುಣ್ಯಕೋಟಿಯನ್ನು ಅದರ ದೊಡ್ಡಿಗೆ ಹೋಗಲು ಬಿಟ್ಟಿದ್ದು ಹುಲಿಯ ಹೆಚ್ಚುಗಾರಿಕೆ. ಪುಣ್ಯಕೋಟಿ ಮರಳಿ ಬಂದು ಹುಲಿಯ ಮನಃಪರಿವರ್ತನೆಯಾದ ಬಳಿಕ, ಅದು ತನ್ನ ಪ್ರಾಣತ್ಯಾಗವನ್ನು ಮಾಡಿದ್ದು ಹುಲಿಯ ತ್ಯಾಗವೇ ಹೆಚ್ಚಿನದು ಎನ್ನುವುದನ್ನು ತೋರಿಸುತ್ತದೆ ಇತ್ಯಾದಿ.

ಇತ್ತೀಚೆಗೆ ಪ್ರಸಿದ್ಧ ನಾಟಕಕಾರ ಹಾಗು ಹಿರಿಯ ಚಿಂತಕರಾದ ವ್ಯಾಸ ದೇಶಪಾಂಡೆಯವರು ಈ ಕವನದ ಮೇಲೆ ಹೆಚ್ಚಿನ ಬೆಳಕನ್ನು ಬೀರಿದರು. ಅವರ ಮುಖ್ಯ ಪ್ರಶ್ನೆ ಎಂದರೆ ಹುಲಿ ತನ್ನನ್ನು ತಾನೆ ಕೊಂದುಕೊಳ್ಳುವ ಕಾರಣವೇನು, ಎನ್ನುವುದು. ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ಹುಲಿಯ ಮನಃಪರಿವರ್ತನೆ ಆಗಿದೆ. ಇದರರ್ಥವೆಂದರೆ, ಇನ್ನು ಮೇಲೆ ಈ ಕೊಂದು ತಿನ್ನುವ ಕಾಯಕವನ್ನು ಅದು ಬಿಟ್ಟು ಬಿಡುತ್ತದೆ. ಆದರೆ ಅದು ಶಾಕಾಹಾರಿಯಾಗಿ ಬದುಕಲು ಸಾಧ್ಯವಿಲ್ಲವಲ್ಲ! ಈ ವಿಪರ್ಯಾಸವು ಆ ಹುಲಿಗೆ ಥಟ್ಟನೆ ಹೊಳೆದು, ಅದು ಆತ್ಮಹತ್ಯೆಯೆ ಉತ್ತಮ ಪರ್ಯಾಯವೆಂದು ಭಾವಿಸಿರಬಹುದು!

ವ್ಯಾಸ ದೇಶಪಾಂಡೆ ಹೇಳಿದರು: “ಹುಲಿಯು ಆ ಕ್ಷಣದಲ್ಲಿಯೇ ಪ್ರಾಣತ್ಯಾಗ ಮಾಡುವ ಕಾರಣವೆಂದರೆ, ಆ ಕ್ಷಣದಲ್ಲಿ ಅದಕ್ಕೆ ಸತ್ಯದ ದರ್ಶನವಾಗಿದೆ!

ಪುಣ್ಯಕೋಟಿಯು ಮರಳಿ ಬರಬಹುದೆಂದು ಹುಲಿಯು ಭಾವಿಸಿರಲಿಲ್ಲ. ಹಾಗಿದ್ದರೂ ಅದು ಪುಣ್ಯಕೋಟಿಯನ್ನು ಬಿಡಲು ಕಾರಣವೇನು? ಈ ಜಗತ್ತಿನಲ್ಲಿ ಸತ್ಯ, ಅಹಿಂಸೆಗಳು ಸುಳ್ಳು ಆದರ್ಶಗಳು. ತನ್ನ ಜೀವದ ಸುತ್ತು ಬಂದಾಗ, ಎಲ್ಲ ಆದರ್ಶಗಳೂ ಓಡಿ ಹೋಗುತ್ತವೆ. ಬದುಕಬೇಕಾದರೆ ಕ್ರೂರವಾಗಿ ಬದುಕಬೇಕು ಇದು ಆ ಹುಲಿಯ ನಂಬುಗೆಯಾಗಿತ್ತು. ತನ್ನ ನಂಬಿಕೆಯೇ ಸರಿ, ಪುಣ್ಯಕೋಟಿಯು ಮೋಸಗಾರ್ತಿ ಎನ್ನುವುದನ್ನು ಆ ಹುಲಿಗೆ ತೋರಿಸಬೇಕಾಗಿತ್ತು. ಆದರೆ ಪುಣ್ಯಕೋಟಿ ಮರಳಿ ಬಂದಾಗ, ಹುಲಿಯ ನಂಬಿಕೆಗಳು ಅಲುಗಾಡಿದವು. ತಾನೇ ಸೋತೆ ಎನ್ನುವುದು ಅದಕ್ಕೆಅರಿವಾಯಿತು. ತನ್ನ ಹಳೆಯ ನಂಬಿಕೆಗಳನ್ನು ಹೊತ್ತುಕೊಂಡು, ಹಳೆಯ ರೀತಿಯಲ್ಲಿಯೇ ಇನ್ನು ಬದುಕುವುದು ಸಾಧ್ಯವಿಲ್ಲ ಎಂದು ಆ ಹುಲಿಗೆ ಅನಿಸಿರಬಹುದು. ಆ ಕಾರಣದಿಂದಲೇ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.

ವಿಶ್ವಾಮಿತ್ರನು ಸತ್ಯ ಹರಿಶ್ಚಂದ್ರನನ್ನು ಸುಳ್ಳುಗಾರ ಎಂದು ತೋರಿಸುವ ಪ್ರಯತ್ನಕ್ಕೆ ಇದನ್ನು ಹೋಲಿಸಬಹುದು. ಭಾರತೀಯ ಶಾಸ್ತ್ರಗಳು, ಪುರಾಣಗಳು ಈ ಮಾತನ್ನೇ ಯಾವಾಗಲೂ ಘೋಷಿಸುತ್ತ ಬಂದಿವೆ: ‘ಸತ್ಯಂ ಶಿವಂ ಸುಂದರಮ್’, ಅಂದರೆ ಸತ್ಯಮಾರ್ಗವೇ ಬಾಳಿಗೆ ಕಲ್ಯಾಣಕರವಾದದ್ದು. ಸುಂದರಂ ಎಂದರೆ ದೈಹಿಕ ಚೆಲುವು ಅಂತಲ್ಲ, ಯಾವುದು ಬಾಳಿಗೆ ಬೆಳಕು ಕೊಡುವುದೊ ಅದೇ ಸುಂದರವಾದದ್ದು.

ಇಲ್ಲಿ ಕವಿಯು ಪುಣ್ಯಕೋಟಿಯನ್ನು ಸಾತ್ವಿಕತೆಯ ಪ್ರತೀಕವಾಗಿ ಹಾಗು ಹುಲಿಯನ್ನು ತಾಮಸ ಶಕ್ತಿಯ ಪ್ರತೀಕವಾಗಿ ತೋರಿಸಬಯಸುತ್ತಿದ್ದಾನೆ. ತಾಮಸ ಶಕ್ತಿಗೆ ತಾತ್ಪೂರ್ತಿಕವಾಗಿ ಮೇಲುಗೈಯಾಗಬಹುದು. ಆದರೆ ಸಾತ್ವಿಕತೆಯು ತನ್ನ ತ್ಯಾಗ, ಬಲಿದಾನಗಳ ಮೂಲಕವೇ ತಾಮಸ ಶಕ್ತಿಯ ಕಣ್ಣು ತೆರೆಯಿಸುತ್ತದೆ. ತಾಮಸ ಶಕ್ತಿಯನ್ನು ಸಾತ್ವಿಕತೆಗೆ ಬದಲಾಯಿಸುತ್ತದೆ.”

ಈ ಸಂದರ್ಭದಲ್ಲಿ ವ್ಯಾಸ ದೇಶಪಾಂಡೆಯವರು ಗಾಂಧೀಜಿಯನ್ನು ನೆನಪಿಸಿದರು. ಗಾಂಧೀಜಿ ಈ ಯುಗದ ಸಾತ್ವಿಕ ಶಕ್ತಿಯ ಪ್ರತೀಕರಾಗಿದ್ದಾರೆ. ದೇಶವಿಭಜನೆಯ ಸಮಯದಲ್ಲಿ ನಡೆದ ಹಿಂಸಾಚಾರವನ್ನು ಹಾಗು ಪ್ರತಿಹಿಂಸಾಚಾರವನ್ನು ನಿಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಅವರ ಕೊಲೆಯಾದ ತಕ್ಷಣವೇ ಹಿಂಸಾಚಾರವು ಸ್ತಬ್ಧವಾಯಿತು. ಅವರ ಸಾವು ತಾಮಸ ಶಕ್ತಿಗಳ ಮೇಲೆ ವಿಜಯ ಸಾಧಿಸಿತು! ಈ ಮಾತನ್ನೇ ಬೇಂದ್ರೆಯವರು ತಮ್ಮ ಕವನದಲ್ಲಿ ಹೀಗೆ ಹೇಳಿದ್ದಾರೆ:

ಹಿಂಸೆ ಕೊನೆಗು ಅಹಿಂಸೆಯನ್ನು
ಗುಂಡು ಹಾಕಿ ಕೊಂದಿತೊ,
ತನ್ನ ಕೊಲೆಯ ಕೊನೆಗಾಣಿಸೆ
ಅವಗೆ ಶರಣು ಬಂದಿತೊ,
ಅಯ್ಯೊ ಇವನೆ ಅಮರ
ನಾನೆ ಸತ್ತೆ ಎಂದಿತೊ?”

ಆ ಬಳಿಕ, ಈ ಕವನದ ಇತರ ಅಂಶಗಳ ಬಗೆಗೆ ನಮ್ಮ ನಡುವೆ ಚರ್ಚೆ ನಡೆಯಿತು. ಈ ಕವನದ ಕವಿಯು, ಕವನದ ಮೊದಲಲ್ಲಿ ‘ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟ ದೇಶದಿ’ ಎಂದು ಹಾಡಿದ್ದಾನೆ.  ನಮ್ಮ ಕನ್ನಡ ನಾಡೇ ಈ ಭೂಮಂಡಲದ ಮಧ್ಯದಲ್ಲಿದೆ ಹಾಗು ಮೆರೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ಕವಿಗಿದೆ. ಯಾವ ಕಾರಣಗಳಿಗಾಗಿ ಕರ್ನಾಟದೇಶವು ಮೆರೆಯುತ್ತಿರಬಹುದು ಎಂದು ಕೇಳಿದರೆ, ಅದರ ಉತ್ತರ ಈ ಕವನದ ಕಥೆಯಲ್ಲಿದೆ: ತನ್ನ ಸದ್ಗುಣಗಳಿಗಾಗಿ ಕರ್ನಾಟದೇಶವು ಭೂಮಂಡಲದಲ್ಲಿ ಮೆರೆಯುತ್ತಿದೆ. ಇದು ಕರ್ನಾಟಕದ ಪರಂಪರೆ! ಇದು ನಮ್ಮ ಸಂಸ್ಕೃತಿ. ಗೋವಿನ ಹಾಡಿನ ಮೂಲಕ, ಕವಿಯು ಕರ್ನಾಟದೇಶದ ಸಂಸ್ಕೃತಿಯನ್ನು ಹಾಡುತ್ತಿದ್ದಾನೆ. ‘ನಮ್ಮದು ಈ ಕನ್ನಡ ನಾಡು, ಸತ್ಯ ಅಹಿಂಸೆಯ ಬೀಡು!’ ತನ್ನನ್ನು ತಬ್ಬಲಿಯನ್ನಾಗಿ ಮಾಡಬೇಡ ಎಂದು ಬೇಡಿಕೊಳ್ಳುವ ಕರುವಿಗೆ, ಪುಣ್ಯಕೋಟಿ ಹೇಳುವ ಮಾತನ್ನು ನೋಡಿರಿ:

ಕೊಟ್ಟ ಭಾಷೆಗೆ ತಪ್ಪಲಾರೆ
ಕೆಟ್ಟ ಯೋಚನೆ ಮಾಡಲಾರೆ
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಕೃಷಿಸಂಸ್ಕೃತಿ ಇದ್ದಾಗ, ಗೋವಳರಿಗೆ ಹಾಗು ಅವರ ಗೋವುಗಳಿಗೆ ಇರುವ ಸಾಮರಸ್ಯವನ್ನು ಈ ಮುಂದಿನ ನುಡಿಯು ಸೂಚಿಸುತ್ತದೆ:

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ.

ಈ ಸಂಸ್ಕೃತಿಯು ಈಗ ಉಳಿದಿಲ್ಲ; ಕಾಲಾಯ ತಸ್ಮೈ ನಮಃ!

[ ಎಸ್.ಎಲ್. ಭೈರಪ್ಪನವರು ಬರೆದ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಈ ಸಾಮರಸ್ಯವು ಹದಗೆಟ್ಟು ಹೋಗಿರುವದನ್ನು ಚೆನ್ನಾಗಿ ಚಿತ್ರಿಸಿದ್ದಾರೆ. (ಇದು ಇದೇ ಶೀರ್ಷಿಕೆಯ ಚಲನಚಿತ್ರದಲ್ಲಿಯೂ ಸಹ ಬಂದಿದೆ.) ನಾಯಕನು ತನ್ನ ಗೋವುಗಳನ್ನು ಕಟುಕರ ಕೈಯಿಂದ ಪಾರು ಮಾಡಲು ಧಾವಿಸುತ್ತಾನೆ. ಕಟುಕನಿಗೆ ಬೆಲೆ ಕೊಟ್ಟು, ಆ ಗೋವುಗಳನ್ನು ಪುನಃ ಕೊಳ್ಳಲು ಬಯಸುತ್ತಾನೆ. ಅವನಿಗೆ ತನ್ನ ಗೋವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ‘ಅವುಗಳನ್ನು ಹೆಸರು ಹಿಡಿದು ಕರೆಯಿರಿ. ಅವು ನಿಮ್ಮಧ್ವನಿಯ ಮೂಲಕ ನಿಮ್ಮನ್ನು ಗುರುತಿಸುತ್ತವೆ’ ಎಂದು ಕಟುಕನು ಹೇಳುತ್ತಾನೆ. ನಾಯಕನು ಕರೆದರೂ ಸಹ ಗೋವುಗಳು ನಾಯಕನನ್ನು ಗುರುತಿಸುವದಿಲ್ಲ. Neither he recognises his cattle, nor his cattle recognise him!]

ಈ ಕವನದಲ್ಲಿ ಕೆಲವು ವ್ಯಂಗ್ಯ ಅಂಶಗಳೂ ಬಂದಿವೆ:
ಪುಣ್ಯಕೋಟಿಯು ತನ್ನ ಸೋದರಿಯರಿಗೆ ಬೇಡಿಕೊಳ್ಳುವ ಮಾತುಗಳನ್ನು ನೋಡಿರಿ:

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು. 

ತನ್ನ ತಾಯಿಯು ಹುಲಿಗೆ ಆಹಾರವಾದ ಬಳಿಕ ಅದರ ಕರು ಮಮತೆಯನ್ನು ಪಡೆಯಲು ಇತರ ಗೋವುಗಳ ಮುಂದೆ ಹೋಗುತ್ತದೆ. ಇತರ ಗೋವುಗಳು ಈ ಕರುವನ್ನು ತಿರಸ್ಕರಿಸಿ ಅದಕ್ಕೆ ಇರಿದರೆ? ಆಗ ಆ ಕರುವು ಇತರ ಗೋವುಗಳ ಹಿಂಭಾಗದಲ್ಲಿ ಹೋಗಿ ನಿಲ್ಲುತ್ತದೆ,ಅಲ್ಲಿಯಾದರೂ ತನಗೆ ಆಶ್ರಯ ಸಿಕ್ಕೀತೆಂದು. ಆದರೆ ಇತರ ಗೋವುಗಳು ಅಲ್ಲಿಂದಲೂ ಈ ಕರುವನ್ನು ಒದೆದು ಕಳುಹಿಸಬಹುದಲ್ಲವೆ? ಈ ಸಾಲುಗಳು ತಾಯಿಯ ತಳಮಳವನ್ನು ಹಾಗು ಸಾಮಾನ್ಯವಾಗಿ ಬಳಗದವರು ಅನಾಥ ಶಿಶುವನ್ನು ನಡೆಯಿಸಿಕೊಳ್ಳುವ ರೀತಿಯನ್ನು ತೋರಿಸುತ್ತವೆ.

ತನ್ನ ಕರುವನ್ನು ಅಗಲುವ ಗಳಿಗೆಯಲ್ಲಿ, ಪುಣ್ಯಕೋಟಿಯ ಮನದಲ್ಲಿ ಏಳುತ್ತಿರುವ ಭಾವನೆ ಏನು? ‘ತಾನಂತೂ ಸಾಯುತ್ತಿದ್ದೇನೆ. ತನ್ನ ಕರುವಾದರೂ ಸುರಕ್ಷಿತವಾಗಿರಲಿ.’  
ಆ ಉದ್ದೇಶದಿಂದ ಅದು ಕರುವಿಗೆ  ಈ ರೀತಿಯಾಗಿ ಸೂಚನೆಯನ್ನು ಕೊಡುತ್ತದೆ:

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ.

ಪುಣ್ಯಕೋಟಿಯ ಕಥೆಯು ಕೇವಲ ಒಂದು ಏಕಾಕಿ ಕಥೆಯಲ್ಲ, ಅದು ಒಂದು ಸಾಂಸ್ಕೃತಿಕ ಪರಂಪರೆ ಎಂದು ಹೇಳುವ ಉದ್ದೇಶದಿಂದಲೆ, ಕೊನೆಯ ಎರಡು ನುಡಿಗಳಲ್ಲಿ, ಕಾಳಿಂಗ ಗೊಲ್ಲನ ಹಾಗು ಪುಣ್ಯಕೋಟಿಯ ವಂಶದ ಬಗೆಗೆ ಪ್ರಸ್ತಾಪವಿದೆ.

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.


ಭಾರತೀಯ ಸಾಹಿತ್ಯಪರಂಪರೆಗೆ ಅನುಗುಣವಾಗಿ, ಕವನದ ಅಂತಿಮ ಸಾಲುಗಳು ದೇವರ ಕೃಪೆಯು ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತವೆ:
ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು.

ವ್ಯಾಸ ದೇಶಪಾಂಡೆಯವರದು ಅದ್ಭುತ ಸ್ಮರಣಶಕ್ತಿ. ತಾವು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ಒಂದು ಘಟನೆಯನ್ನು ಅವರು ಹೇಳಿದರು. ಶ್ರೀ ಎನ್.ಪಿ.ಕುಲಕರ್ಣಿ ಎನ್ನುವ ಅವರ ಗುರುಗಳು, ಕನ್ನಡ ಪಠ್ಯದಲ್ಲಿದ್ದ, ಗಂಗಾಧರ ಚಿತ್ತಾಳರ ಒಂದು ಕವನವನ್ನು ಇವರಿಗೆ ವಿವರಿಸುತ್ತಿದ್ದರಂತೆ. ಆ ಕವನವೂ ಸಹ ಗಾಂಧೀಜಿಯ ಕೊಲೆಯ ಬಗೆಗೆ ಇದೆ; ಸಾತ್ವಿಕ ಶಕ್ತಿಯು ತನ್ನ ಬಲಿದಾನದ ಮೂಲಕವೇ ತಾಮಸ ಶಕ್ತಿಯನ್ನು ಗೆಲ್ಲುತ್ತದೆ ಎನ್ನುವುದನ್ನು ಈ ಕವನವು ಹೇಳುತ್ತದೆ. ಆ ಕವನವನ್ನು ವ್ಯಾಸ ದೇಶಪಾಂಡೆಯವರು ತಮಗೆ ನೆನಪಿದ್ದಷ್ಟು ವಾಚಿಸಿದರು:

ನಿನ್ನ ನೆತ್ತರು ನೆಲಕೆ ಚೆಲ್ಲಿದಂದಂದು
ಮಣ್ಣು ನಡುಗಿತು, ಹಗಲು ಹೂಬಾಡಿತು
ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ
ಉತ್ತಮರ ಬಲಿ ಇಲ್ಲಿ ಎಂದು ಬಾನಾಡಿತು

ಬತ್ತಿದೆದೆಗಳಲಿ ಒಲವ ತೇವು ಮೂಡಿತ್ತು
ಶಾಂತಿಸಮರಕೆ ಇದುವೆ ಮೊದಲೆನಿಸಿತು
ಕಲ್ಲೆದೆಯ ಸೀಮೆಯಲಿ ಹೂಕುಸುರು ಅಹ ಇದುವೆ
ಬರುವ ಭಾಗ್ಯದ ಯುಗದ ತೊದಲೆನಿಸಿತು

ಖ್ಯಾತ ಸಾಹಿತಿ ಯಶವಂತ ಚಿತ್ತಾಳರ ಅಣ್ಣಂದಿರಾದ ಗಂಗಾಧರ ಚಿತ್ತಾಳರು ಕರ್ನಾಟಕ ಹಾಯ್‍ಸ್ಕೂಲಿನ ವಿದ್ಯಾರ್ಥಿ.  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾಗಿದ್ದರು. (ಆಗಿನ ಮುಂಬಯಿ ಪ್ರಾಂತದಲ್ಲಿ ಗುಜರಾತ, ಮಹಾರಾಷ್ಟ್ರ ಹಾಗು ಈಗಿನ ಕರ್ನಾಟಕದ ನಾಲ್ಕು ಉತ್ತರದ ಜಿಲ್ಲೆಗಳು ಕೂಡಿಕೊಂಡಿದ್ದವು.) ಅವರು ಕಾ^ಲೇಜಿನಲ್ಲಿ ಕಲಿಯುವಾಗ, ಗಾಂಧೀಜಿಯವರ ಕರೆಯ ಮೇರೆಗೆ, ವಿದ್ಯಾಭ್ಯಾಸವನ್ನು ತ್ಯಜಿಸಿ, ‘ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿದರು. ಪರಿಣಾಮವಾಗಿ ತಮ್ಮ ಒಂದು ವರ್ಷವನ್ನು ಕಳೆದುಕೊಂಡರು. ಶ್ರೀ ಎನ್.ಪಿ.ಕುಲಕರ್ಣಿಯವರು ಈ ಕವನವನ್ನು ವಿದ್ಯಾರ್ಥಿಗಳ ಎದುರಿಗೆ ವಾಚಿಸಿ ಹೇಳಿದರಂತೆ: ‘ಗಂಗಾಧರ ಚಿತ್ತಾಳ ನನ್ನ ಶಿಷ್ಯನಾಗಿದ್ದ. ನೀವು ಕೂತಿರುವಲ್ಲಿಯೇ ಅತನೂ ಕೂತಿರುತ್ತಿದ್ದ. ಆತನ ಕವನವನ್ನೇ ನಾನು ಇದೀಗ ನಿಮಗೆ ಕಲಿಸುತ್ತಿರುವುದು ನನಗೆ ಹೆಮ್ಮೆಯ ಮಾತಾಗಿದೆ.’
ಧನ್ಯ ಗುರು, ಧನ್ಯ ಶಿಷ್ಯ!

‘ಗೋವಿನ ಹಾಡು’ ಜಾನಪದ ಹಾಡಲ್ಲ. ಇದನ್ನು ಬರೆದವನು ಮದ್ದೂರಿನವನು ಅಥವಾ ಮದ್ದೂರು ನರಸಿಂಹದೇವರ ಒಕ್ಕಲು ಎಂದು ಕೆಲವರು ಅನುಮಾನಿಸುತ್ತಾರೆ. ಏನೇ ಇರಲಿ, ಕನ್ನಡದ ಜನಮಾನಸದಲ್ಲಿ ಅಚ್ಚೊತ್ತಿ ನಿಂತಿರುವ ಈ ಗೀತೆಯು ಕನ್ನಡಿಗರ ಸಂಸ್ಕೃತಿಯನ್ನು ತೋರಿಸುತ್ತದೆ. ಆ ಕಾರಣದಿಂದಾಗಿಯೇ, ನಮ್ಮ ಸಾಂಸ್ಕೃತಿಕ ಪ್ರತಿನಿಧಿಗಳಾದ ಲೇಖಕರು ಈ ಗೀತೆಯ ಸಾಲುಗಳನ್ನು ತಮ್ಮ ಕೃತಿಗಳ ಶಿರ್ಷಿಕೆಯಾಗಿ ಬಳಸಿಕೊಂಡಿದ್ದಾರೆ.  ಎಸ್.ಎಲ್.ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ಹಾಗು ಪಿ.ಲಂಕೇಶರ ‘ಖಂಡವಿದೆ ಕೋ, ಮಾಂಸವಿದೆ ಕೋ’ ಚಲನಚಿತ್ರವು ಈ ಮಾತಿಗೆ ನಿದರ್ಶನಗಳಾಗಿವೆ.

19 comments:

ಚಿನ್ಮಯ ಭಟ್ said...

ಪುಣ್ಯಕೋಟಿಯ ಕಥೆಯನ್ನು ಕನ್ನಡಶಾಲೆಯಲ್ಲಿ ರಾಗವಾಗಿ ಹೇಳುತ್ತಿದ್ದ ನೆನಪು ಅಷ್ಟೇ...
ಧನ್ಯವಾದಗಳು ಅದರ ಎಡ-ಬಲಗಳನ್ನು ತಿಳಿಸಿದ್ದಕ್ಕೆ :)

sunaath said...

ಧನ್ಯವಾದಗಳು ಚಿನ್ಮಯ, ನಿಮ್ಮ ಶೀಘ್ರಾತಿಶೀಘ್ರ ಸ್ಪಂದನೆಗಾಗಿ.

ತೇಜಸ್ವಿನಿ ಹೆಗಡೆ said...

ಪ್ರಿಯ ಕಾಕಾ,

ಮೊತ್ತ ಮೊದಲಿಗೆ ಕ್ಷಮೆ ಕೋರುತ್ತಿರುವೆ.. ಈ ಸುಂದರ ಸಲ್ಲಾಪ ತಾಣಕ್ಕೆ ಭೇಟಿ ಕೊಡುವುದು ಕಡಿಮೆ ಆಗಿದ್ದಕ್ಕೆ (ಇನ್ನು ಮುಂದೆ ತಪ್ಪದೇ ಬರುವೆ :) )

ಆಹಾ ಅದೆಷ್ಟು ಚೆನ್ನಾಗಿ ವಿವರಿಸಿದ್ದೀರಿ! ಓದಲು, ಕೇಳಲು ಸರಳ, ಸುಲಭ ಎಂದೆನಿಸುವ ಗೋವಿನ ಹಾಡಿನೊಳಗಿನ ಆತ್ಮವನ್ನು ಬಿಚ್ಚಿಟ್ಟಿದ್ದೀರಿ. ತುಂಬಾ ಧನ್ಯವಾದಗಳು.

~ತೇಜಸ್ವಿನಿ.

ಮನಸು said...

ಕಾಕಾ,
ಎಂತಹ ಸೊಗಸಾಗಿ ವಿವರಣೆ ಕೊಟ್ಟಿದ್ದೀರಿ, ಪ್ರಭಾತ್ ಕಲಾವಿದರು ಕುವೈತಿಗೆ ಬಂದಾಗ ಧರಣಿ ಮಂಡಲ ಹಾಡಿಗೆ ನಾಟಕವನ್ನು ಪ್ರಸ್ತುತ ಪಡಿಸಿದ್ದರು, ನಾಟಕ ನೋಡುತ್ತ ನೋಡುತ್ತ ಕಣ್ಣಲ್ಲಿ ನೀರು ತಾನೇತಾನಾಗಿ ಸುರಿಯುತ್ತಿತ್ತು. ನನ್ನ ಮಗ ನನ್ನ ಗೇಲಿ ಮಾಡುತ್ತಿದ್ದ ಆ ನಾಟಕ ನೋಡಿ ಅಳುತ್ತೀಯಲ್ಲಮ್ಮಾ ನೀನು ಎಷ್ಟು ಸೆಂಟಿಮೆಂಟ್ ಅಂತ್ತಿದ್ದ. ಆದರೆ ಈ ಹಾಡಿನ ಭಾವ ನಮ್ಮಲ್ಲಿ ದುಃಖ ತರುವುದಂತೂ ಖಂಡಿತ. ಧನ್ಯವಾದಗಳು ನಿಮ್ಮ ಈ ವಿವರ ನೋಡಿ ಎಲ್ಲ ನೆನಪಾಯಿತು.

sunaath said...

ತೇಜಸ್ವಿನಿ,
ಕುವೆಂಪು ಹಾಡಿದ್ದಾರೆ:‘ಬಾರಿಸು ಕನ್ನಡ ದಿಂಡಿಮವ, ಓ ಕರ್ನಾಟಕ ಹೃದಯ ಶಿವ!’
ಗೋವಿನ ಹಾಡು ಕರ್ನಾಟಕದ ಹೃದಯಶಿವವೇ ಆಗಿದೆ!

sunaath said...

ಮನಸು,
ನಿಮ್ಮ ಕಣ್ಣೀರು ಆ ಹಾಡಿನ ಕವಿಗೆ ನೀವು ಸಲ್ಲಿಸಿದ ಪ್ರಶಂಸೆಯೇ ಆಗಿದೆಯಲ್ಲವೆ?

Swarna said...

ಕಾಕಾ , ಇತ್ತೀಚಿಗೆ ಇನ್ನೂ ಕೆಲವು ಕಡೆ ಹುಲಿಯ ತ್ಯಾಗವೂ ದೊಡ್ಡದಲ್ಲವೇ ? ಎಂಬ ಮಾತು ಕೇಳಿ ಯಾವುದೂ ಸ್ಪಷ್ಟವಾಗಿರಲಿಲ್ಲ. ಹಲವು ತುಮುಲಗಳಿಗೆ ನಿಮ್ಮ ಹಾಗೂ ದೇಶಪಾಂಡೆಯವರ ಚರ್ಚೆಯಲ್ಲಿ ಉತ್ತರ ದೊರೆಯಿತು . ದೊಡ್ಡವರು ಹೇಳಿದಂತೆ ಸಜ್ಜನರ ಸಂಗ ಹೆಜ್ಜೇನು ಸವಿದಂತೆಯೇ ಸರಿ.
ಧನ್ಯವಾದಗಳು ಮತ್ತು ವಂದನೆಗಳೊಂದಿಗೆ
ಸ್ವರ್ಣಾ

sunaath said...

ಸ್ವರ್ಣಾ,
ವ್ಯಾಸ ದೇಶಪಾಂಡೆಯವರು ನನಗೆ ಹೆಚ್ಚಿನ ತಿಳಿವಳಿಕೆ ಕೊಟ್ಟಿದ್ದಕ್ಕಾಗಿ, ನಾನು ಅವರಿಗೆ ಋಣಿಯಾಗಿದ್ದೇನೆ!

ಸೀತಾರಾಮ. ಕೆ. / SITARAM.K said...

govina haadina hattu halavu ayaamagalannu vivarisi adara garime mereyisiddiri. dhanyavaadagalu

sunaath said...

ಧನ್ಯವಾದಗಳು, ಸೀತಾರಾಮರೆ!

Unknown said...

ಕಾಕ ಇದನ್ನ ಯಾರ್ ಬರದಿದ್ದು

sunaath said...

ಗೋವಿನ ಹಾಡು ಕವನವನ್ನು ಬರೆದವರು ಯಾರು ಎನ್ನುವುದು ತಿಳಿದಿಲ್ಲ. ಈ ಜನಪ್ರಿಯವಾದ ಹಾಡು ಜನರ ಬಾಯಿಯಿಂದ ಬಾಯಿಗೆ ಸಾಗುತ್ತ ಬಂದಿದ್ರೆ.ವಾಸ್ತವದಲ್ಲಿ ಅನೇಕ ಜನಪದ ಹಾಡುಗಳನ್ನು ಯಾರೋ ಒಬ್ಬರು ರಚಿಸಿರಬೇಕಲ್ಲವೆ? ಉದಾಹರಣೆಗೆ : ಹೆಣ್ಣು ಮಕ್ಕಳು ಹಾಡುವ ಕುಟ್ಟುವ, ಬೀಸುವ ಹಾಡುಗಳು. ಅದೇ ರೀತಿಯಲ್ಲಿ ಗೋವಿನ ಹಾಡಿಗೆ ನಾವು ಜನಪದ ಹಾಡು ಎಂದು ಹೇಳಬಹುದು. ಇದನ್ನು ಮದ್ದೂರಿನ ನರಸಿಂಹ ದೇವರ ಒಕ್ಕಲಿನವರೊಬ್ಬರು ರಚಿಸಿರಬಹುದೆಂದು ಹೇಳಲಾಗುತ್ತಿದೆ.

Trilok Trivikrama said...

ಜನಪದ ರೂಪದಲ್ಲಿದ್ದ ಗೋವಿನ ಹಾಡನ್ನು ಅಕ್ಷರ ರೂಪಕ್ಕೆ ತಂದವರು ಚನ್ನಪಟ್ಟಣ ವಾಸುದೇವಯ್ಯನವರು. ಕಣ್ಣಾಮುಚ್ಚೆ ಕಾಡೆಗೂಡೆಯಂತಹ ಹಲವು ಗೀತೆಗಳನ್ನು ಒಳಗೊಂಡ ಕನ್ನಡ ಬಾಲಬೋಧೆಯನ್ನು ರಚಿಸಿದ್ದು ಇವರೇ.

sunaath said...

ಧನ್ಯವಾದಗಳು, ತ್ರಿಲೋಕ ತ್ರಿವಿಕ್ರಮರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಅಥವಾ ಆಕರ ಸಿಗಬಹುದೆ?

VEERESH maski said...

ನಿಜವಾಗಿಯೂ ಮನಮುಟ್ಟವಂತೆ ವಿವರಿಸಲಗಿದೆ

sunaath said...

ʻಗೋವಿನ ಕಥೆʼ ನಮ್ಮ ಪುಣ್ಯದಿಂದ ಹುಟ್ಟಿದೆ!

Trilok Trivikrama said...

https://youtu.be/zkIZKRIhd1A

ಈ ವಿಡಿಯೋದಲ್ಲಿ ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಅವರು ಅದರ ಬಗ್ಗೆ ಮಾತನಾಡಿದ್ದಾರೆ. ಇದರ ಮೂಲ ವಿಡಿಯೋ ಅವರ ಅಕೌಂಟ್ನಲ್ಲಿದೆ. ಹುಡುಕಿದೆ ಸಿಗಲಿಲ್ಲ.

Ravi Maruti Bhovi said...

😍😍😍😍😍😍

sunaath said...

ರವಿ ಅವರೆ,
ನಿಮ್ಮ ಪ್ರತಿಕ್ರಿಯೆಯ ಲಿಪಿ intelligible ಇಲ್ಲ!