Saturday, August 29, 2015

Tanmayi's thoughts

ತನ್ಮಯಿ ಇವಳು ಒಂಬತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಕೆಲದಿನಗಳ ಹಿಂದೆ, ತನ್ನ ಮನದಲ್ಲಿ ಹೊಳೆದ ಭಾವನೆಗಳನ್ನು ಇವಳು ಕಾಗದದ ಮೇಲೆ ಗೀಚಿ ಇಟ್ಟಿದ್ದಳು. ಅಕಸ್ಮಾತ್, ಅದು ನನಗೆ ದೊರೆಯಿತು. ಆ ಬರಹವನ್ನು ನೋಡಿ ಸಂತಸ ಹಾಗು ಅಚ್ಚರಿಗೊಂಡ ನಾನು ಅದನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ. ಈ ಬಾಲಕಿಗೆ ನಿಮ್ಮ ಪ್ರೋತ್ಸಾಹ ಇರಲಿ.

 

Saturday, August 15, 2015

ಶ್ರಾವಣಾ..........ಬೇಂದ್ರೆ


ಇಂದು ಶ್ರಾವಣಮಾಸ ಶುಕ್ಲಪಕ್ಷ ಪ್ರತಿಪದೆ. ಶ್ರಾವಣಮಾಸವು ಬೇಂದ್ರೆಯವರಿಗೆ  ಹಿಗ್ಗು ಕೊಡುವ ಮಾಸ. ಈ ಮಾಸದಲ್ಲಿ ಪ್ರಕೃತಿಯು ಹಸಿರನ್ನು ಉಟ್ಟುಕೊಂಡು ಮೈದುಂಬಿ ಮೆರೆಯುವದನ್ನು ಅವರು ಬಣ್ಣಿಸುವುದು ಹೀಗೆ:
ಹೂವ ಹಡಲಿಗೆಯನ್ನು ಹೊತ್ತ
ಭೂಮಿತಾಯಿ ಜೋಗಿತಿ
ಮೈsತುಂಬಿ ಕುಣಿಯುತಿಹಳ—
ನಂತ ಕಾಲವೀ ಗತಿ.
(-ಶ್ರಾವಣದ ವೈಭವ, ಸಖೀಗೀತ)

ಜಗದ್ಗುರು ಶ್ರೀಕೃಷ್ಣ ಹಾಗು ಬೇಂದ್ರೆಯವರ ಆಧ್ಯಾತ್ಮಿಕ ಗುರು ಶ್ರೀ ಅರವಿಂದರು ಹುಟ್ಟಿದ್ದೂ ಸಹ ಶ್ರಾವಣ ಮಾಸದಲ್ಲಿಯೇ. ಹೀಗಾಗಿ ಇದು ಅವರಿಗೆ ದೈವಿಕ ಮಾಸವೂ ಹೌದು. ಆದುದರಿಂದಲೇ ಅವರು ತಮ್ಮ‘ಬಂದಿಕಾರಾ ಶ್ರಾವಣಾ’ ಕವನದಲ್ಲಿ, ‘ದುಂದು-ಕಂಸನ ಕೊಂದು, ತಂದೆ-ತಾಯ್ ಹೊರತಂದ / ಕಂದನ್ನ ಕರೆ ಶ್ರಾವಣಾ’ ಎಂದು ಪ್ರಾರ್ಥಿಸುತ್ತಾರೆ.  ನನಗೆ ತಿಳಿದ ಮೇರೆಗೆ ಬೇಂದ್ರೆಯವರು ಹನ್ನೊಂದು ಶ್ರಾವಣ-ಕವನಗಳನ್ನು ರಚಿಸಿದ್ದಾರೆ. ಅವು ಹೀಗಿವೆ:

(೧) ಚಿತ್ತಿ ಮಳೆಯ ಸಂಜೆ (ಸಖೀಗೀತ….೧೯೩೨)
(೨) ಶ್ರಾವಣದ ವೈಭವ (ಸಖೀಗೀತ….೧೯೩೭)
(೩) ಅಗೋ ಅಲ್ಲಿ ದೂರದಲ್ಲಿ (ನಾದಲೀಲೆ…೧೯೩೮)
(೪) ಶ್ರಾವಣದ ಹಗಲು (ಉಯ್ಯಾಲೆ…೧೯೩೮)
(೫) ಬಂದಿಕಾರಾ ಶ್ರಾವಣಾ (ಗಂಗಾವತರಣ..೧೯೪೪)
(೬) ಶ್ರಾವಣಾ (ಕಾಮಕಸ್ತೂರಿ…೧೯೪೬)
(೭) ಪ್ರತಿ ವರ್ಷದಂತೆ ಬಂತು ಶ್ರಾವಣಾ (ಸೂರ್ಯಪಾನ…೧೯೫೭)
(೮) ಹುಬ್ಬಿ ಮಳೆ (ಸಂಚಯ…೧೯೫೯)
(೯) ಮತ್ತೆ ಶ್ರಾವಣಾ (ನಾಕು ತಂತಿ… ೧೯೬೪)
(೧೦) ಮತ್ತೆ ಶ್ರಾವಣಾ ಬಂದಾ (ನಾಕು ತಂತಿ…೧೯೬೪)
(೧೧) ನಮ್ಮ ಚಿತ್ತಾ (ಶತಮಾನ…ಅಪ್ರಕಟಿತ)

‘ಶ್ರಾವಣಾ’ ಕವನವು ಕೇವಲ ಓದುವ ಕವನವಲ್ಲ. ಶ್ರವಣ ಅಂದರೆ ಕೇಳುವುದು. ‘ಶ್ರಾವಣಾ’ ಕವನದಲ್ಲಿ ಬೇಂದ್ರೆಯವರು ಮಳೆಯ ಭೋರ್ಗರೆತವನ್ನು ನಮಗೆ ಕೇಳಿಸುತ್ತಾರೆ. ಕವನವನ್ನು ಓದುತ್ತಿರುವಂತೆಯೇ  ಓದುಗನು ಈ ಮೊರೆತವನ್ನು ಸ್ವತಃ ಅನುಭವಿಸುತ್ತಾನೆ. ಕವನದ ಪೂರ್ತಿಪಾಠ ಹೀಗಿದೆ:

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||

                          
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
                   ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
                   ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ

                  
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
          ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ  ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
          ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
                             ಶ್ರಾವಣಾ ಬಂತು.

                  
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು

                  
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |

                 
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
                   ಶ್ರಾವಣಾ ಬಂತು
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.       

ಈ ಕವನವನ್ನು ಬರೆದವನು ಒಬ್ಬನೇ ಕವಿ. ಆದರೆ ಕವನದಲ್ಲಿ ಹಾಸುಹೊಕ್ಕಾದ ಭಾವನೆಗಳು ಆ ಒಬ್ಬನೇ ಕವಿಯ ವಿವಿಧ ವಯೋಘಟ್ಟಗಳನ್ನು ಹಾಗು ವಿವಿಧ ಪ್ರಜ್ಞೆಗಳನ್ನು ಸೂಚಿಸುವುದು, ಈ ಕವನದ ಅಚ್ಚರಿಗಳಲ್ಲೊಂದು!
ಕವನದ ಮೊದಲಲ್ಲಿ ಇರುವ ಪಲ್ಲ ಹಾಗು ಅನುಪಲ್ಲಗಳು ಭಿರ್ರನೆ ಬೀಸುವ ಮಳೆಗಾಳಿಗೆ ವಿಸ್ಮಯಗೊಳ್ಳುವ, ಭೀತನಾಗುವ ಬಾಲಮನೋಭಾವವನ್ನು ಪ್ರದರ್ಶಿಸುತ್ತವೆ.
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||ಪಲ್ಲ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||ಅನುಪಲ್ಲ||

ಶ್ರಾವಣದ ಈ ಮಳೆಗಾಳಿಯು ರಾವಣನೇ ಕುಣಿಯುತ್ತಿರುವನೇನೊ ಎನ್ನುವಷ್ಟು ಭೀಕರವಾಗಿವೆ. (ರಾವಣನಿದ್ದದ್ದು ಭಾರತದ ದಕ್ಷಿಣದಲ್ಲಿದ್ದ ಲಂಕೆಯಲ್ಲಿ; ಭಾರತಕ್ಕೆ ಮುಂಗಾರು ಮಳೆ ಬರುವುದೂ ಸಹ ದಕ್ಷಿಣ-ಪಶ್ಚಿಮದಿಂದಲೇ!) ಕಡಲಿನ ತೆರೆಗಳನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿಶಾಲಿ ಗಾಳಿಯ ರೂಪವನ್ನು ‘ಕುಣಿದಾವ ಗಾಳಿ’ ಎನ್ನುವ ಎರಡೇ ಪದಗಳಲ್ಲಿ ಬೇಂದ್ರೆ ಬಿಚ್ಚಿಟ್ಟಿದ್ದಾರೆ. ಆದರೆ ರಾವಣನಂತೆ ಈ ಮಳೆಗಾಳಿ ವಿನಾಶಕಾರಿಯಲ್ಲ. ರಾವಣನು ಪೂಜಿಸುತ್ತಿದ್ದ ದೇವತೆಯಾದ ಶಿವನೇ ಅಂದರೆ ಭೈರವನೇ ಮಳೆಗಾಳಿಯ ರೂಪ ತಾಳಿ ಕಡಲಿನ ಮೇಲೆ ಕುಣಿಯುತ್ತಿರುವನೇನೊ  ಎನ್ನುವ ವಿರಾಟ್ ದರ್ಶನವನ್ನು ಇಲ್ಲಿ ಬೇಂದ್ರೆ ತೋರಿಸುತ್ತಿದ್ದಾರೆ. ಭೈರವನೂ ಸಹ ಭಯಂಕರನೇ. ಆದರೆ ರಾವಣನಂತೆ ವಿನಾಶಕನಲ್ಲ. ಮುಂಗಾರು ಮಳೆಗಾಳಿಯ ಎರಡೂ ರೂಪಗಳನ್ನು ಬೇಂದ್ರೆಯವರು ಈ ಎರಡು ಪ್ರತಿಮೆಗಳ ಮೂಲಕ ತೋರಿಸುತ್ತಿದ್ದಾರೆ.
(‘ರುದ್ರವಿಲಾಸದ ಪರಿಯೇ ಬೇರೆ / ಶಿವಕರುಣೆಯೆ ಹಿರಿದು’ ಎನ್ನುವ ಮತ್ತೊಂದು ಬೇಂದ್ರೆ-ಕವನದ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

ಎಂತಹ ಕಲ್ಪನಾವಿಲಾಸದಲ್ಲಿಯೂ ಸಹ ಬೇಂದ್ರೆಯವರ ಕವನಗಳು ಕ್ರಮಬದ್ಧತೆಯನ್ನು ಕಾಯ್ದುಕೊಳ್ಳುತ್ತವೆ ಎನ್ನುವದಕ್ಕೆ ನಿದರ್ಶನವಾಗಿ, ಈ ಸಾಲುಗಳನ್ನು ನೋಡಬಹುದು:
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು
ಮಳೆಗಾಳಿಯು ಕಡಲನ್ನು ದಾಟಿದ ಬಳಿಕ ಮೊದಲು ಪ್ರವೇಶಿಸುವುದು ಪಶ್ಚಿಮ ಘಟ್ಟದ ಕಾಡನ್ನೇ ತಾನೆ? ಅನಂತರ ಅದು ವಿಶಾಲವಾದ ಜನಬಳಕೆಯ ನಾಡನ್ನು ಹಾಗು ಜನರು ವಾಸಿಸುವ ಬೀಡನ್ನು ತಲಪುತ್ತದೆ!

ಮುಂದಿನ ನುಡಿಯಲ್ಲಿ ಅಂದರೆ ಒಂದನೆಯ ನುಡಿಯಲ್ಲಿ ಬೇಂದ್ರೆಯವರ ಬಾಲಮನೋಭಾವ ಕಡಿಮೆಯಾಗಿದೆ. ಆ ಸ್ಥಾನದಲ್ಲಿ ಪ್ರಬುದ್ಧ ಕವಿ ಮನೋಭಾವ ಕಾಣುತ್ತಿದೆ:
ಶ್ರಾವಣಾ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ
                   ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆ ಹಗಲು |
ಶ್ರಾವಣಾ ಬಂತು ಹೊಳಿಗಳಿಗೆ | ಅದೇ ಶುಭಗಳಿಗೆ
                   ಹೊಳಿಗೆ ಮತ್ತೆ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
ಘಟ್ಟಕ್ಕೆ ಢಿಕ್ಕಿ ಹೊಡೆಯುತ್ತಿದ್ದ ಶ್ರಾವಣದ ಮೋಡಗಳು ಈಗ ಇನ್ನಿಷ್ಟು ಅಂದರೆ ಆಕಾಶದೆತ್ತರಕ್ಕೆ ಏರಿವೆ. ( ಈ ವರ್ಣನೆ ಕಾಳಿದಾಸನ ‘ಮೇಘದೂತ’ವನ್ನು ನೆನಪಿಗೆ ತರುವದಲ್ಲವೆ?)  ಆಕಾಶದೆತ್ತರಕ್ಕೆ ಏರಿದ ಈ ಮೋಡಗಳು ತಮ್ಮ ಕೆಳಗಿನ ಭೂಮಿಯೆನ್ನೆಲ್ಲ ಕವಿದಿವೆ. ಇದನ್ನು ಕಂಡ ಸೂರ್ಯನು ಹಾಡುಹಗಲೆ ಕಾಣದಾಗಿದ್ದಾನೆ!
ಭೂಮಿಯ ಮೇಲೆ ಹರಡಿದ ಈ ಮೋಡಗಳು ಅಲ್ಲಿ ಹರಿಯುತ್ತಿರುವ ಪ್ರವಾಹಗಳಿಗೆ ಮಳೆಯನ್ನು ಸುರಿಯುತ್ತಿವೆ. ಮೋಡ ಹಾಗು ಹೊಳೆ ಒಂದಾಗುತ್ತಿರುವ ಈ ದೃಶ್ಯವು ಅವುಗಳ ಮಿಲನದಂತೆ ಕಾಣುತ್ತಿದೆ. (ಕನ್ನಡದಲ್ಲಿ ಲಗ್ನ ಎಂದರೆ ಮದುವೆ ಎನ್ನುವ ಅರ್ಥವೇನೋ ಇದೆ. ಆದರೆ ಲಗ್ನದ ನಿಜವಾದ ಅರ್ಥವು ‘ಹತ್ತಿಕೊಂಡಿರು’ (ಹಿಂದೀ लगना) ಎಂದಾಗುತ್ತದೆ. ಈ ಒಂದು ಶುಭಮುಹೂರ್ತದಲ್ಲಿ ಭೂಮಿ ಸಂತೋಷಭರಿತವಾಗಿದೆ.

ಹೊಳೆ, ಹಳ್ಳ, ಬಯಲು ಪ್ರದೇಶ ಇವೆಲ್ಲವನ್ನು ದಾಟಿದ ಮಳೆಗಾಳಿ ಈಗ ಜನವಸತಿಗಳಿಗೆ ಬರಬೇಕಲ್ಲವೆ?  ಇಲ್ಲಿ ಕವಿ ಕಾಣುವದೇನು?
ಶ್ರಾವಣಾ ಬಂತು ಊರಿಗೆ | ಕೇರಿ ಕೇರಿಗೆ
          ಹೊಡೆದ ಝೂರಿಗೆ
ಜೋಕಾಲಿ ಏರಿ | ಆಡರ್ಯಾವ ಮರಕ  ಹಾರಿ |
ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
          ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ||
                             ಶ್ರಾವಣಾ ಬಂತು.
ಶ್ರಾವಣಮಾಸವು ಹಬ್ಬಗಳ ಮಾಸವೂ ಹೌದು. ಹಳ್ಳಿಗಳಲ್ಲಿ ಹುಡುಗ, ಹುಡುಗಿಯರು ಮರಕ್ಕೆ ಜೋಕಾಲಿ ಕಟ್ಟಿ ಜೋರುಜೋರಾಗಿ ‘ಝುರಿಕಿ’ (= taking swing) ಹಾಕುತ್ತ ಜೀಕುತ್ತಾರೆ. ಅದೇ ರೀತಿಯಲ್ಲಿ, ಈ ಮಳೆಗಾಳಿಯೂ ಸಹ ಜೋರಾಗಿ ಜೀಕುತ್ತ ಮರಗಳಿಗೆ ಅಡರುತ್ತದೆ ಅಂದರೆ ತೆಕ್ಕೆ ಹಾಯುತ್ತದೆ. ಹುಡುಗರು ಮಳೆಗಾಳಿ ಎನ್ನದೆ ಹೊರಗೆ ಆಡುತ್ತಿದ್ದರೆ, ಮನೆಯೊಳಗಿನ ಹಿರಿಯರು ಸಹ ಉತ್ಸಾಹದಲ್ಲಿ ಇರುತ್ತಾರೆ. ತಮ್ಮ ಊರಿಗೆ, ಹೊಲಗಳಿಗೆ ಮಳೆ ಬಂದ ಹುರುಪಿನಲ್ಲಿ ಅವರು ದನಿಗೆ ದನಿ ಕೂಡಿಸಿ ಉಲಿಯುತ್ತಿದ್ದಾರೆ. ಅವರ ಪ್ರಸನ್ನಗೊಂಡ ಮನಸ್ಸೆಂಬ ರೆಂಬೆಯ ಚೆಲುವಾದ ಕೊನೆಯಲ್ಲಿ (ಹೂವು ಅರಳುವಂತೆ) ಹಾಡು ಒಡೆದಿವೆ! ‘ಒಡೆದಿವೆ’ ಎನ್ನುವ ಕ್ರಿಯಾಪದವನ್ನು ಎಷ್ಟೆಲ್ಲ ಅರ್ಥಪೂರ್ಣವಾಗಿ ಬೇಂದ್ರೆ ಬಳಸುತ್ತಿದ್ದಾರೆ, ನೋಡಿ! ‘ರಸ ಉಕ್ಕತಾವ’ ಅಂದರೆ ಸಂತೋಷರಸ ಉಕ್ಕುತ್ತಿದೆ ಎಂದರ್ಥ. ರಸ ಅಂದರೆ ನೀರು, ದ್ರವ. ಮಳೆಯ ನೀರು ಈ ಹಳ್ಳಿಗರ ಹಾಡುಗಳಲ್ಲಿ ‘ಆನಂದದ್ರವ’ವನ್ನು ಉಕ್ಕಿಸುತ್ತದೆ. ಈ ಸಂತೋಷವು ಅಭಿವ್ಯಕ್ತವಾಗುವುದು ‘ಶ್ರಾವಣಾ ಬಂತು’ ಎಂದು ಕೊನೆಯಲ್ಲಿ ಬರುವ ಉದ್ಗಾರದಲ್ಲಿ!
( ‘ಮನದ ನನಿಕೊನಿಗೆ’ ಎನ್ನುವಾಗ ಬೇಂದ್ರೆಯವರು ‘ಮನದ ಮಾಮರದ ಕೊನಿಗೆ’ ಎನ್ನುವ ತಮ್ಮದೇ ಸಾಲನ್ನು ಹಾಗು ‘ಕೋಗಿಲೆ, ಚೆಲ್ವ ಕೋಗಿಲೆ’ ಎನ್ನುವ ನಿಜಗುಣಿ ಶಿವಯೋಗಿಗಳ ಕವನವನ್ನು ನೆನಪಿಸುತ್ತಾರೆ.) 

ಈ ಶ್ರಾವಣವು ನಿಸರ್ಗದಲ್ಲಿ ಮೂಡಿಸಿದ ಪರಿಣಾಮವೇನು? ಅದು ಮುಂದಿನ ನುಡಿಯಲ್ಲಿ  ವ್ಯಕ್ತವಾಗುತ್ತಿದೆ:
ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡು | ನಿಂತಾವ ಹರ್ಷಗೊಂಡು

ಕವಿಯ ನೋಟ ಇದೀಗ ಸುತ್ತಲಿನ ಪರಿಸರದ ಮೇಲೆ ವಿಶಾಲವಾಗಿ ಹರಿಯುತ್ತದೆ. ಅಲ್ಲಿ ಕಾಣುವುದೇನು? ಮಳೆಗಾಲದ ಮೊದಲಲ್ಲಿ ಸ್ವೇಚ್ಛೆಯಾಗಿ ಬೆಳೆದು, ಬೆಟ್ಟಗಳ ಮೇಲೆಲ್ಲ ವ್ಯಾಪಿಸಿದ ಹಸಿರು ಕಿರಿಹುಲ್ಲು. ಇದು ದೂರದಿಂದ ಕವಿಯ ಕಣ್ಣಿಗೆ ಕುತನಿಯ (=velvet) ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳ ಹಾಗೆ ಕಾಣುತ್ತದೆ. ಈ ಪುಟ್ಟ ಮಕ್ಕಳು ಕುತನಿಯ ಅಂಗಿಯನ್ನು ತೊಡುವುದು ಅಪರೂಪದ ಸಂದರ್ಭಗಳಲ್ಲಿ, ಅಂದರೆ ಹಬ್ಬಗಳಲ್ಲಿ ಜಾತ್ರೆಗೆ ಹೊರಡುವಾಗ. ಅವು ಹೊರಡುವುದು ತುಂಬ ಉತ್ಸಾಹದಿಂದ (ಜಂಗಿ ಎನ್ನುವುದು ಜಂಗ್ ಎನ್ನುವ ಹಿಂದೀ ಪದದಿಂದ ಬಂದಿದೆ. ಇದರ ಅರ್ಥ ಕಾಳಗ.) ಆ ಎಲ್ಲ ಬೆಟ್ಟಗಳು ನೆರೆದದ್ದು ಇಲ್ಲಿಯೇ: ಕವಿಯ ಸುತ್ತಲೂ! ಶ್ರಾವಣಮಾಸದ ಮೊದಲ ಹಬ್ಬ ನಾಗರಪಂಚಮಿ ತಾನೆ? ಈ ಹಬ್ಬವು ಹೆಣ್ಣುಮಕ್ಕಳ ಹಬ್ಬ. ಅಣ್ಣ-ತಂಗಿಯರು ಕೂಡಿ ನಲಿಯುವ ಹಬ್ಬ. ಆದುದರಿಂದಲೇ. ಕವಿಯು ‘ನೋಡ ತಂಗಿ’ ಎಂದು ತನ್ನ ಮುದ್ದು ತಂಗಿಗೆ ಹೇಳುತ್ತಿದ್ದಾನೆ.

ದೂರದ ಬೆಟ್ಟಗಳು ಪುಟ್ಟ ಮಕ್ಕಳಂತೆ ಕಂಡರೆ, ಹತ್ತಿರದ ಬನಗಳು ಕಾಣುವುದು ಹರೆಯದ ಮದುಮಕ್ಕಳ ಹಾಗೆ. ಬನದಲ್ಲಿರುವ ಮರಗಳ ಶಿರೋಭಾಗವು ಹೊಸ ತಳಿರುಗಳಿಂದ ಚಿಗುರಿ, ಕವಿಯ ಕಣ್ಣಿಗೆ ಮದುಮಗನು ಧರಿಸಿದ ಬಾಸಿಂಗದ ಹಾಗೆ ಕಾಣುತ್ತದೆ. ಮದುಮಕ್ಕಳಲ್ಲಿ ಉಕ್ಕುವ ಹರ್ಷವನ್ನು ಈ ಬನಗಳಲ್ಲಿಯೂ ಕಾಣಬಹುದು. ಈ ಹರ್ಷಕ್ಕೆ ಕಾರಣವೆಂದರೆ ಮತ್ತೆ ಮತ್ತೆ ಸೃಷ್ಟಿಸುವ ಅವಕಾಶ!

ಪುಟ್ಟ ಮಕ್ಕಳನ್ನು ಹಾಗು ಮದುಮಗನನ್ನು ಕಂಡ ಕವಿಯ ಕಣ್ಣು ಈಗ ಪ್ರಕೃತಿದೇವಿಯನ್ನು ನೋಡುತ್ತದೆ:
ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಷಿಣ ಒಡೆಧ್ಹಾಂಗ
ಹೊಮ್ಮುತಾವ | ಬಂಗಾರ ಚಿಮ್ಮತಾವ |
ಪ್ರಕೃತಿಯು ಹಸಿರಿನಿಂದ ತುಂಬಿದೆ.  ಹಸಿರು ಎಲ್ಲೆಡೆಗೂ ಬೆಳೆದು ನಿಂತಿದೆ. ಭೂತಾಯಿ ಈಗ ಬಸಿರಾಗಿದ್ದಾಳೆ. ಬಸಿರು ಹೆಣ್ಣುಮಗಳು ಗಲ್ಲಗಳಿಗೆ ಅರಿಷಿಣ ಹಚ್ಚಿಕೊಳ್ಳುವಂತೆ, ನೆಲದ ಮೇಲೆ ಹರಡಿದ ಹಳದಿ ಕಿರುಸಸ್ಯಗಳು ಭೂತಾಯಿಯ ಚೆಲುವನ್ನು ಹೆಚ್ಚಿಸಿವೆ. ಬಂಗಾರ ಬಣ್ಣದ ಸಸ್ಯಗಳು ಭೂತಾಯಿಯ ಒಡವೆಗಳಂತೆ ಕಾಣುತ್ತವೆ ಎನ್ನುವುದು ಒಂದು ಅರ್ಥವಾದರೆ,  ಸೃಷ್ಟಿಯ ಬಸಿರಿನಿಂದ ಬಂಗಾರದಂತಹ ಫಲ ದೊರೆಯಲಿದೆ ಎನ್ನುವುದು ಮತ್ತೊಂದು ಅರ್ಥವಾಗುತ್ತದೆ.

ಮಳೆಯ ಅರ್ಭಟಕ್ಕೆ ಪುಟ್ಟ ಬಾಲಕನಂತೆ ಬೆರಗಾಗಿ ನಿಂತ ಕವಿ, ಪ್ರಬುದ್ಧ ಕವಿಯಾಗಿ ತನ್ನ ಸುತ್ತಲಿನ ಪ್ರಕೃತಿಯ ಚೆಲುವನ್ನು ಕಂಡು ಆನಂದಿಸಿದನು. ಇದೀಗ ಅವನು ಪ್ರಕೃತಿಯ ದೈವಿಕತೆಯನ್ನು ಅನುಭವಿಸುತ್ತಲಿದ್ದಾನೆ:
ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |
ಕುತನಿಯ ಅಂಗಿಯನ್ನು ತೊಟ್ಟ ಪುಟ್ಟ ಮಕ್ಕಳಂತೆ ಕಾಣುತ್ತಿದ್ದ ಬೆಟ್ಟಗಳು ಈಗ ಅವನಿಗೆ ಸ್ಥಾವರಲಿಂಗದಂತೆ ಕಾಣುತ್ತಿವೆ. ದೇವಾಲಯಗಳಲ್ಲಿ ಇರುವ ಲಿಂಗಕ್ಕೆ ಅಭಿಷೇಕವಾಗುವುದು ಪೂಜಾರಿಯು ಬಿಂದಿಗೆಯಲ್ಲಿ ತುಂಬಿ ತಂದ ಹೊಳೆಯ ಅಥವಾ ಬಾವಿಯ ನೀರಿನಿಂದ.  ಬಯಲಲ್ಲಿ ಸ್ಥಾವರಲಿಂಗಗಳಂತೆ ತಲೆ ಎತ್ತಿ ನಿಂತಿರುವ ಈ ಬೆಟ್ಟಗಳಿಗೆ ಅಭಿಷೇಕವಾಗುತ್ತಿರುವುದು ಮಳೆಯ ಸಹಜ ನೀರಿನಿಂದ. ಅಭಿಷೇಕಿಸುತ್ತಿರುವ ಭಕ್ತರು ಅಥವಾ ಪೂಜಾರಿಗಳೆಂದರೆ ಮೋಡಗಳು.  ಇದೊಂದು ಅದ್ಭುತ ಕಲ್ಪನೆ. ಈ ಕಲ್ಪನೆ ಲೌಕಿಕ ಕವಿಗೆ ಸಾಧ್ಯವಾಗದು. ಇದು ಹೊಳೆಯುವುದು ಧ್ಯಾನಸ್ಥನಾದ ಅವಧೂತನಿಗೆ ಮಾತ್ರ. ಈ ಸಾಲುಗಳು ಬೇಂದ್ರೆಯವರ ಮಾನಸದಲ್ಲಿ ಹೊಳೆದಾಗ ಅವರು ಅವಧೂತಪ್ರಜ್ಞೆಯಲ್ಲಿ ಇರಬೇಕು.
( ಅಭ್ಯಂಗಸ್ನಾನ ಮಾಡುವುದು ಯಜ್ಞಪೂರ್ವದಲ್ಲಿ. ಶ್ರಾವಣದ ಮಳೆ ದೈವಯಜ್ಞದಂತಿದೆ. ಈ ಹಿನ್ನೆಲೆಯಲ್ಲಿ ‘ಸಾಕ್ಷಿ’ (=ಆರ್.ಜಿ.ಕುಲಕರ್ಣಿ)ಯವರು ಹೇಳುವುದು ಹೀಗೆ: ‘ಪರ್ಜನ್ಯ ಒಂದು ಯಜ್ಞಕ್ರಮ.....ಅದು ಪುರುಷಾರ್ಥಪ್ರದಾಯಕವಾದದ್ದು...ಅದು ಕೇವಲ ಪ್ರಕೃತಿವಿಲಾಸವಲ್ಲ ಎನ್ನುವುದನ್ನು ಬೇಂದ್ರೆಯವರ ಕಾವ್ಯೋದ್ಯೋಗ ಕಂಡಿರಬೇಕು.)

(ಟಿಪ್ಪಣಿ : ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ’ ಎಂದು ಬಸವಣ್ಣನವರು ಸಾರಿದರು. ಬೇಂದ್ರೆ ಇಲ್ಲಿ ನಿಸರ್ಗವನ್ನೇ ದೇವಾಲಯವನ್ನಾಗಿ ಮಾಡಿ, ಬೆಟ್ಟಗಳನ್ನೇ ಲಿಂಗಗಳನ್ನಾಗಿ ಮಾಡಿ ಸ್ಥಾವರದ ವಿಭೂತಿಯನ್ನು ತೋರಿಸಿದ್ದಾರೆ.)

ಈ ಅವಧೂತಕವಿಗೆ ಮತ್ತೇನು ಕಾಣಿಸುತ್ತದೆ?
ನಾಡೆಲ್ಲ ಏರಿಯ ವಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ ||
                   ಶ್ರಾವಣಾ ಬಂತು

ಈ ಪರ್ಜನ್ಯಯಜ್ಞದ ಫಲಶ್ರುತಿಯೇನು?
ಶ್ರಾವಣ ಮಾಸ ಬರುವುದು ಸೃಷ್ಟಿಗೆ ಪೋಷಣೆ ಕೊಡುವುದಕ್ಕಾಗಿ. ನಾಡಿನ ಏರಿಗಳು ಹಾಗು ಓರೆಗಳು (ವಾರಿಗೆ ಓರೆ ಎನ್ನುವ ಅರ್ಥವಿರುವಂತೆಯೇ ನೀರು ಎನ್ನುವ ಅರ್ಥವೂ ಇದೆ.) ನೀರಿನ ಝರಿಗಳಿಂದ ತುಂಬಿ ಹರಿಯುತ್ತವೆ. ಇದು ಬರಿ ನೀರಲ್ಲ, ಇದು ಹಾಲಿನ ತೊರಿ. ಈ ಹಾಲನ್ನು ಶ್ರಾವಣವು ನೆಲಕ್ಕೆ ಕುಡಿಸುತ್ತದೆ. ಭೂತಾಯಿಗೇ ಶ್ರಾವಣವು ತಾಯಿಯಾಗಿದೆ!

ಶ್ರಾವಣದ ಈ ಆಟ, ಸೃಷ್ಟಿಯ ಈ ಆಟ ನಮ್ಮ ಅವಧೂತ ಕವಿಗೆ ಕೊಡುವ ದರ್ಶನ ಏನಿರಬಹುದು?
ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟ ಸಂತೋಷ
ಕುಣಿತದ | ತಾನsನ ದಣಿತದ |
ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು.       

ಶ್ರೀಕೃಷ್ಣ ಹಾಗು ಅರವಿಂದರು ಹುಟ್ಟಿದ್ದು ಶ್ರಾವಣ ಮಾಸದಲ್ಲಿ. ಇವರಿಬ್ಬರೂ ಜಗದ್ಗುರುಗಳು. ಇವರು ತಮ್ಮ ಲೀಲೆಗಾಗಿ ನೂರು ವೇಷ ಕಟ್ಟುತ್ತಾರೆ, ಕುಣಿಯುತ್ತಾರೆ, ಕುಣಿಕುಣಿದು ದಣಿಯುತ್ತಾರೆ. ಈ ಆಟವು ಅವರಿಗೂ ಸಂತೋಷವನ್ನು ಕೊಡುತ್ತದೆ, ನಮಗೂ ಸಂತೋಷವನ್ನು ಕೊಡುತ್ತದೆ. (ಪುರಂದರ ದಾಸರ ‘ಆಡ ಪೋಗೋಣು ಬಾರೊ ರಂಗಾ, ಕೂಡಿ ಯಮುನೆ ತೀರದಲ್ಲಿ’ ಎನ್ನುವ ಗೀತೆಯನ್ನು ನೆನಪಿಸಿಕೊಳ್ಳಿರಿ.) ಈ ಸೃಷ್ಟಿಯ ಚರಾಚರ ವಸ್ತುಗಳು, ಋತುಮಾನಗಳು ಎಲ್ಲವೂ ಆತನ ಆಟಿಕೆಗಳೇ!  ಎಲ್ಲವೂ ಆತನ  ಆನಂದಕ್ಕಾಗಿ! ಇದೇ ನಮ್ಮ ಅವಧೂತ ಕವಿ ಕಂಡ ಕಾಣ್ಕೆ.
(ಬೇಂದ್ರೆಯವರ ‘ಕುಣಿಯೋಣ ಬಾರಾ’ ಕವನದ ಕೊನೆಯ ಸಾಲುಗಳನ್ನು ನೆನಪಿಸಿಕೊಳ್ಳಿರಿ:
ಆ ಕ್ಷೀರಸಾಗರ / ದಾನಂದದಾಗರ / ತೆರಿ ತೆರಿ ತೆರದರ / ಕುಣಿಯೋಣ ಬಾ
ಹದಿನಾಲ್ಕು ಲೋಕಕ್ಕ / ಚಿಮ್ಮಲಿ ಈ ಸುಖ / ಹಿಗ್ಗಲಿ ಸಿರಿಮುಖ / ಕುಣಿಯೋಣ ಬಾ’)

ಬೇಂದ್ರೆಯವರು ಕವನದ ಮೊದಲಿನಿಂದ ಕೊನೆಯವರೆಗೆ ಮೂರು ಬಗೆಯ ಪ್ರಜ್ಞೆಗಳಲ್ಲಿ ಈ ಕವನವನ್ನು ರಚಿಸಿದ್ದಾರೆ:
(೧) ಬೆರಗಿನ ಬಾಲಭಾವ (೨) ಪ್ರಬುದ್ಧ ಕವಿಭಾವ (೩) ಅವಧೂತಭಾವ
ಕವನದ ನುಡಿಗಳೂ ಸಹ ಇದೇ ಕ್ರಮವನ್ನು ಅನುಸರಿಸಿವೆ.
ಈ ಮೂರು ಭಾವಗಳಲ್ಲಿಯ ಕಾಣ್ಕೆಗಳನ್ನು ಹೆಣೆದು ಬೇಂದ್ರೆಯವರು ರಸಸೃಷ್ಟಿಯನ್ನು ಮಾಡಿದ್ದಾರೆ. ಸಂಗೀತದ ನಾದವನ್ನು ಕವನದಲ್ಲಿ ಹೊಮ್ಮಿಸಿದ್ದಾರೆ. ಪ್ರಕೃತಿಯ ಹಿಗ್ಗನ್ನು ತಾವು ಅನುಭವಿಸುತ್ತ, ನಮಗೂ ಉದಾರವಾಗಿ ಹಂಚಿದ್ದಾರೆ.

(ಟಿಪ್ಪಣಿ: ಸುಮಾರು ನೂರು ವರ್ಷಗಳ ಹಿಂದೆ ಧಾರವಾಡದಲ್ಲಿ ನೂರು ಸೆಂಟಿಮೀಟರ ವಾರ್ಷಿಕ ಮಳೆಯಾದ ದಾಖಲೆ ಇದೆ. ಇದೀಗ ೫೦-೬೦ ಸೆಂಟಿಮೀಟರ ಮಳೆಯಾದರೆ, ಅದನ್ನೇ ಅತಿವೃಷ್ಟಿ ಎನ್ನುವ ಕಾಲ ಬಂದಿದೆ. ಆ ಕಾಲದ ಮಳೆಯನ್ನು ಅನುಭವಿಸಿದ, ಧಾರವಾಡದ ಜಾನಪದ ಕವಿಯೊಬ್ಬ ಹಾಡಿದ್ದು ಹೀಗೆ:
ಧಾರವಾಡದ ಮ್ಯಾಗ
ಏರಿ ಬಂದಾವ ಮೋಡ
ದೊರಿಯ ನೋಡಪ್ಪ, ಕಮಕಾಳ ಕಟ್ಟೀ ಮ್ಯಾಲ
ಭೋರ್ಯಾಡತಾನ ಮಳಿರಾಯ !)
(‘ಶ್ರಾವಣಾ’ ಕವನವು ‘ಕಾಮಕಸ್ತೂರಿ’ ಕವನಸಂಕಲನದಲ್ಲಿದೆ.)

Monday, August 3, 2015

`ಬೇಂದ್ರೆ ನನ್ನ ಓದು’...ಮಾಲಿನಿ ಗುರು ಪ್ರಸನ್ನರ ಲೇಖನ



ಅಂಬಿಕಾತನಯದತ್ತರ ಕಾವ್ಯದಲ್ಲಿ ಹೆಣ್ಣು ಅಂದರೆ ತಾಯಿ. ಅವರ ಅನೇಕ ಕವನಗಳು ಹೆಣ್ಣನ್ನು ಗೌರವಿಸುವ ಪೂಜ್ಯ ಭಾವನೆಯ ಕವನಗಳೇ ಆಗಿವೆ. ಆದರೆ ಬೇಂದ್ರೆಯವರ ಬದುಕಿನಲ್ಲಿ, ಬದುಕಿನ ಹೋರಾಟದಲ್ಲಿ, ದಾಂಪತ್ಯದ ಸರಸ-ವಿರಸಗಳಲ್ಲಿ ಹೆಣ್ಣಿನ ಪಾತ್ರವೇನು? ಹೆಂಡತಿಯನ್ನು ಬೇಂದ್ರೆಯವರು ಯಾವ ದೃಷ್ಟಿಯಿಂದ ಕಂಡಿದ್ದಾರೆ? ಓರ್ವ ಸಂಪ್ರದಾಯಸ್ಥ ಗೃಹಸ್ಥನ ಹಾಗೆ ಅಥವಾ ಒಲವಿನ ಜೊತೆಗಾತಿಯ ಹಾಗೆ? ಮಾಲಿನಿ ಗುರುಪ್ರಸನ್ನರು ತಮ್ಮ ಲೇಖನದಲ್ಲಿ ಈ ಒಗಟನ್ನು ವಿಶ್ಲೇಷಿಸಿದ್ದಾರೆ, ಒಂದು ಸಂತುಲಿತ ವ್ಯಾಖ್ಯಾನವನ್ನು ನಮಗೆ ನೀಡಿದ್ದಾರೆ.
(ಈ ಲೇಖನವು ಮೊದಲು ‘ಚುಕುಬುಕು’ವಿನಲ್ಲಿ ಪ್ರಕಟವಾಗಿತ್ತು. ‘ಸಲ್ಲಾಪ’ದಲ್ಲಿ ಮರುಪ್ರಕಟಣೆ ಮಾಡಲು ಮಾಲಿನಿಯವರು ಸಮ್ಮತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.)
............................................................................................................................................

ಪ್ರತೀ ಸಲವೂ ಗಮನವಿಟ್ಟು ನೋಡುತ್ತಿರುತ್ತೇನೆ...ಬಹುತೇಕ ತೊಂಬತ್ತೊಂಬತ್ತರಷ್ಟು ಪ್ರತಿಶತ ಹೀಗೇ ನಡೆಯುತ್ತಿರುತ್ತದೆ. ಬೆಳಗಿನಿಂದ ಸಂಭ್ರಮದಲ್ಲಿ ಮಿಂದೆದ್ದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಸೂತಕದ ಛಾಯೆ ಆವರಿಸಿರುತ್ತದೆ. ತುಸು ಬಾಡಿದ ನಾಚಿದ ತಲೆತಗ್ಗಿಸಿದ ಎಳೆ ಮೊಗ, ದುಗುಡವನ್ನೆಲ್ಲ ಎದೆಯಲ್ಲಿಟ್ಟುಕೊಂಡೂ ಮೊಗದಲ್ಲಿ ಬಾರದ ನಗೆ ತುಳುಕಿಸುತ್ತಾ ಹೊರಡುತ್ತಿರುವ ನೆಂಟರಿಗೆ ವಿದಾಯ ಹೇಳುತ್ತಾ ಓಡಾಡುತ್ತಿರುವ ಹಿರಿಯ ತಾಯಿ ಜೀವ. ಅವಳ ಕಣ್ಣಲ್ಲಿ ಇನ್ನೇನು ಹೊರಬಂದುಬಿಡುತ್ತೇನೆ ಎಂದು ಹಟ ಹಿಡಿದು ನಿಂತ ಕಣ್ಣೀರು.....ಶುರುವಾಗುತ್ತದೆ ನೋಡಿ ಆ ಸಂದರ್ಭದಲ್ಲಿ ನಾನೆಂದೂ ಕೇಳಬಯಸದ ಆ ಹಾಡು.....ಆ ಹಾಡಿಗೆ ಬಹುತೇಕ ಕಡೆ ರಾಗ, ತಾಳ, ಮಾಧುರ್ಯ ಯಾವುದೂ ಇರುವುದಿಲ್ಲ .....ಅದಕ್ಕಿರುವುದು ಆ ಸಂದರ್ಭದಲ್ಲಿ ಅಳಿಸುವ, ನೋಯಿಸುವ ಶಕ್ತಿಯೊಂದೇ. ತಮ್ಮ ಹಾಡು ಸುತ್ತಲಿನವರನ್ನು ಎಷ್ಟು ಅಳಿಸುತ್ತಿದೆ ಎಂದು ಅತ್ತಿತ್ತ ಕಣ್ಣು ಹಾಯಿಸುತ್ತಾ ಖಾತ್ರಿ ಪಡಿಸಿಕೊಳ್ಳುತ್ತಲೆ ಹಾಡುವ ಕೊರಳುಗಳು ನಂತರ ತಾವೂ ಕಣ್ಣೊರೆಸಿಕೊಳ್ಳುತ್ತವೆ. ಆ ಕ್ಷಣಗಳು ನನಗೆಂದಿಗೂ ತವರಿನ ಪಾಲಿಗೆ ಆ ಹುಡುಗಿಯ ಅರ್ಧ ಸಾವು ಎನ್ನಿಸಿಬಿಡುತ್ತದೆ.
" ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ,
ಈ ಮನೆಯೇ ಈ ಇವರೇ ನಿನ್ನವರು ಮುಂದೆ,
ಇವರೇ ತಾಯ್ಗಳು ಸಖರು ಭಾಗ್ಯವನು ಬೆಳೆಸುವರು,
ಇವರ ದೇವರುಗಳೇ ನಿನ್ನ ದೇವರುಗಳು".
ಹುಟ್ಟಿಬೆಳೆದ ಪರಿಸರ, ಒಡನಾಟ, ಸುತ್ತಲಿನ ವಾತಾವರಣ, ತಂದೆ ತಾಯಿ , ಅಭಿರುಚಿ ಇವೆಲ್ಲವೂ ಸೇರಿ ಒಬ್ಬ ವ್ಯಕ್ತಿ ಬೆಳೆಯುತ್ತಾನೆ. ಪರಿಸ್ಥಿತಿ ಈಗ ಎಷ್ಟೋ ಸುಧಾರಿಸಿದೆ ಎಂಬ ನೆಮ್ಮದಿಯಿದ್ದರೂ ಬಹತೇಕ ಮದುವೆಗಳಲ್ಲಿ ಒಂದು ಮನೆಯ ಹೆಣ್ಣುಮಗಳ ಅರ್ಧ ಸಾವು, ಮತ್ತೊಂದು ಮನೆಯ ಪುಟ್ಟ ಗೃಹಿಣಿಯ ಜನನ ಸಂಭವಿಸುತ್ತಲೇ ಇರುತ್ತದೆ. ಗಮನವಿಟ್ಟು ನೋಡಿ ಮೇಲಿನ ಸಾಲುಗಳನ್ನು. ಆ ಹೆಣ್ಣು ಮಗುವನ್ನು ಧಾರೆ ಎರೆದು ಕೊಟ್ಟ ಮರುಕ್ಷಣದಿಂದಲೇ ಅವಳು ಹೆತ್ತವರ ಮನೆಗೆ ಹೊರಗಾಗಿಬಿಡುತ್ತಾಳೆ. ಮುಂದವಳ ತಾಯಿ, ತಂದೆ, ಸಖ,ಸಖಿ ಎಲ್ಲ ಎಲ್ಲವೂ ಗಂಡನ ಮನೆಯವರೇ." ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ !."
ಇದೆಷ್ಟರ ಮಟ್ಟಿಗೆಂದರೆ ಹುಟ್ಟಿನಿಂದ ಅವಳು ಪ್ರಾರ್ಥಿಸುತ್ತಿದ್ದ, ಪೂಜಿಸುತ್ತಿದ್ದ ದೇವರೂ ಅವಳ ದೇವರಲ್ಲ. ಗೋತ್ರ, ಸೂತ್ರ ಎಲ್ಲವೂ ಸತ್ತು ಮರುಹುಟ್ಟು ಪಡೆಯುವವಳಿಗೆ ಹೊಸ ಗೋತ್ರ, ಹೊಸ ಹುಟ್ಟು, ಹೊಸ ಸೂತ್ರ!!!!! ಹೀಗೆ ಹುಟ್ಟುವ ಪುಟ್ಟ ಗೃಹಿಣಿಯೆಂಬ ಕೂಸಿಗೆ ಬೇಕಾಗುವುದು ತಂದೆ ತಾಯಿಯಂತೆ ಲಾಲಿಸಬೇಕಾದ ಅತ್ತೆ-ಮಾವ, ಕೈ ಹಿಡಿದು ಜೊತೆ ನಡೆಯುವ ಅಕ್ಷರಶ ಸಖನಾಗಬೇಕಾದ ಪತಿ, ಅವಳ ಆಸೆ ಆಕಾಂಕ್ಷೆ ಅಭಿರುಚಿ ಹವ್ಯಾಸಗಳನ್ನು ಅರ್ಥೈಸಿಕೊಳ್ಳಬೇಕಾದ ಹೊಸ ಪರಿವಾರ. ದುರಂತವೆಂದರೆ ಹೆಚ್ಚಿನ ಕಡೆ ಇದಾವುದೂ ಸಂಭವಿಸುವುದಿಲ್ಲ... ಹೆಂಡತಿಯನ್ನು ಗೆಳತಿಯನ್ನಾಗಿ ನೋಡುವ ಭಾವದ ಬಗ್ಗೆಯೇ ದ್ವಂದ್ವ, ಹೆಂಡತಿಯನ್ನು ಸರಿಸಮಾನ ಪರಿಗಣಿಸಲಾಗದ ಪರಂಪರಾನುಗತ ಪುರುಷ ಪ್ರಜ್ಞೆ...ಇಂದಿನ ಎಷ್ಟೋ ಮುಂದುವರಿದ ಶಿಷ್ಟ ಪರಿವಾರಗಳಲ್ಲೂ ತನ್ನ ಹಾಜರಿ ಹಾಕುತ್ತಲೇ ಇದೆ. ಆಗೆಲ್ಲಾ ನನಗೆ ಸಖೀಗೀತ ನೆನಪಾಗುತ್ತದೆ.... ನನ್ನೊಳಗೆ ಬೇಂದ್ರೆ ಕಾಡತೊಡಗುತ್ತಾರೆ....ಹಾಡತೊಡಗುತ್ತಾರೆ.
ಮಹಾನುಭಾವ, ಕವಿ, ಸಂತ, ಅನುಭಾವಿ ಏನೆಲ್ಲ ಹೆಸರುಗಳಿಂದ ಕರೆಯಬಹುದಾದ ಈ ರಸಋಷಿಯ
"ಕವಿ ಜೀವದ ಬ್ಯಾಸರ ಹರಿಸಾ
ಹಾಡ ನುಡಿಸಾಕ
ಹೆಚ್ಚಿಗೇನು ಬೇಕ?
ಒಂದು ಹೂತ ಹುಣಸಿಮರ ಸಾಕ"

ಆಡು ನುಡಿಗಳೇ ಲಯಬದ್ಧವಾಗಿ ನಾದಲೀಲೆಯಾಗಿ ಪದ್ಯವಾಗಿ ಹೊರಹೊಮ್ಮುವ ಚಮತ್ಕಾರ ನನ್ನನ್ನು ಯಾವತ್ತೂ ಬೆರಗುಗೊಳಿಸುತ್ತದೆ. ವೈದಿಕದಲ್ಲಿ ಜಾನಪದವನ್ನು ಹೇಳುವ, ಜಾನಪದದ ಮೂಲಕ ವೈದಿಕಕ್ಕೆ ಲಗ್ಗೆ ಹಾಕುವ ಬಗೆ ಅಂಬಿಕಾತನಯರಿಗಷ್ಟೆ ಗೊತ್ತೇನೋ. 'ಗೋವತ್ಸ ಲೀಲೆಯಷ್ಟೇ ಸುಲಲಿತವಾಗಿ 'ಕುರುಡು ಕಾಂಚಾಣವನ್ನು' ಬರೆಯಬಲ್ಲವರು ಮುಟ್ಟಬಲ್ಲವರು ಅವರು. ಅರವಿಂದರಿಂದ, ಜ್ಞಾನದೇವರಿಂದ ಗಾಢವಾಗಿ ಪ್ರಭಾವಿತರಾಗಿದ್ದ ಬೇಂದ್ರೆಯವರು ಸಂಸಾರದಲ್ಲಿದ್ದೂ ವಿರಕ್ತ, ವಿರಕ್ತನಾಗಿದ್ದೂ ಅನುರಕ್ತ.
ಇಷ್ಟು ವರ್ಷಗಳಿಂದ ಬೇಂದ್ರೆಯವರ ಕಾವ್ಯವನ್ನು ಅಭ್ಯಸಿಸುತ್ತಾ ಬಂದ ನನಗೆ ಅವರ ಕಾವ್ಯ ಮಾರ್ಗವನ್ನು, ಕಾವ್ಯದ ಕೇಂದ್ರ ಪ್ರಜ್ಞೆಯನ್ನು ಇಂದಿಗೂ ಗುರುತಿಸಲಾಗುತ್ತಿಲ್ಲ. ಹುಡುಕ ಹೊರಡುವ ನನ್ನನ್ನು ಪ್ರತಿಬಾರಿಯೂ ದಿಕ್ಕಾಪಾಲಾಗಿ ಎಳೆದೊಯ್ಯುತ್ತಾರೆ. ಒಮ್ಮೆ ಮುಗಿಲಿಗೆ ಮತ್ತೊಮ್ಮೆ ನೆಲಕ್ಕೆ, ಒಮ್ಮೆ ಭಾವಕ್ಕೆ ಮತ್ತೊಮ್ಮೆ ಅನುಭಾವಕ್ಕೆ, ಒಮ್ಮೆ ವಿರಕ್ತಿಗೆ ಮತ್ತೊಮ್ಮೆ ಅನುರಕ್ತಿಗೆ, ಒಮ್ಮೆ ಶೃಂಗಾರಕ್ಕೆ ಮತ್ತೊಮ್ಮೆ ಸಂಸಾರದ ದಾರಿದ್ರ್ಯಕ್ಕೆ ಹೀಗೆ ನಿಷ್ಕರುಣೆಯಿಂದ ಕಟ್ಟಕಡೆಯದಾಗಿ ನನ್ನನ್ನು ಬಟ್ಟ ಬಯಲಿನಲ್ಲಿ, ಬಹು ದೊಡ್ಡ ಮೈದಾನದಲ್ಲಿ ನಿಲ್ಲಿಸಿಬಿಡುತ್ತಾರೆ. ಎತ್ತ ತಿರುಗಿದರೂ ಮಾರ್ಗಗಳಿಲ್ಲ, ಅಥವಾ ಎತ್ತ ನೋಡಿದರೂ ಮಾರ್ಗಗಳೇ.!!!!
ಗಂಡು ಹೆಣ್ಣನ್ನು ಸೊತ್ತು ಎಂದು ಭಾವಿಸಿದ್ದ ಕಾಲದಲ್ಲಿ, ಹೆಣ್ಣು ಗಂಡಿನ ತೊತ್ತಾಗಿದ್ದ ಕಾಲದಲ್ಲಿ, ಗಂಡ ಹೆಂಡಿರ ನಡುವೆ ಮಾತೆ ನಿಷಿದ್ದವೆನಿಸಿದ್ದ ಕಾಲದಲ್ಲಿ ಹೆಂಡತಿಯನ್ನು ಸಖಿ ಎಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಬೇಂದ್ರೆ. ( ಮುದ್ದಣ ಮನೋರಮೆ ಹೊರತು ಪಡಿಸಿ). ಬೇಂದ್ರೆಯವರ ಜೀವನದ ಮೂಲ ಧ್ಯೇಯವೇ ಗೆಳತನದ ತತ್ವ. ಮಧುರ ಚೆನ್ನರ ಜೊತೆಗೂಡಿ ಅವರು ಕಟ್ಟಿದ್ದು ಗೆಳೆಯರ ಗುಂಪು. ಎಲ್ಲವನ್ನೂ ಗೆಳೆತನದ ನೆರಳಲ್ಲೇ ನೋಡುತ್ತಿದ್ದ ಬೇಂದ್ರೆಯವರಿಗೆ ಹೆಂಡತಿಯೂ ಗೆಳತಿಯಾಗಿ ಕಂಡಳೆ? ಹಾಗೆ ಕರೆದ ನಂತರವೂ ಅವರಲ್ಲಿ ದ್ವಂದ್ವ ಭಾವವಿತ್ತೇ?

ಅವರ ಮನದನ್ನೆ ಪದ್ಯವನ್ನು ನೋಡಿ.... ಮೊದಲಿಗೇ ಹೇಳಿಬಿಡುತ್ತಾರೆ..." ಆಡದಿರು ಮನದನ್ನೆ ಎನಗೆ ಇದಿರಾಡದಿರು" . ನನಗೆ ಇದಿರಾಡ ಬೇಡ ಎನ್ನುತ್ತಾ ಮುಂದುವರೆಯುವ ಕವಿ " ಹೇಳುತಿರೆ ಹೂಂ ಅನ್ನು", "ನಿನ್ನ ತಿಳಿವನು ಹಣಿಸು" ಎನ್ನುತ್ತಾರೆ. ಅವಳ ಅರಿವನ್ನು ಬದಿಗಿಟ್ಟು ಹೂಂ ಎನ್ನು ಎನ್ನುವ ಭಾವ ಅಲ್ಲಿ ಕಾಣುತ್ತದೆ.
" ಗಂಡು ದರ್ಪವ ಹರಿದು
ಬಿರುಸು ಬಿಂಕವ ತೊರೆದು
ತೋಳ ತೊಟ್ಟಿಲ ಮಗುವು ಆಗಿ ಬಂದೆ.
ಗೊಂಬೆಯಾಡಿಸಿದಂತೆ ಆಡಿಸೆಂದೆ.
ನಿನ್ನ ತಾಯ್ತನದ ಸೈರಣೆಯ ವಿತರಣೆ ಬೇಕು
ನಿನ್ನ ತಾಳ್ಮೆಯ ಸೈಪಿನೊಂದು ಕರುಣೆಯು ಸಾಕು"
ಓದುತ್ತಿದ್ದಂತೆಯೇ ಮನ ಆರ್ದ್ರವಾಗುತ್ತದೆ...ತನ್ನ ಬಿರುಸು ಬಿಂಕ , ದರ್ಪ ತೊರೆದು ಮಗುವಾಗಿ ಬರುವವನ ಮಾತಿಗೆಲ್ಲಾ 'ಹೂಂ' ಎಂದು ಸೋತು ಬಿಡುವ ಉತ್ಕಟ ಭಾವ ಆವರಿಸಿಬಿಡುತ್ತದೆ. ಗೊಂಬೆಯನ್ನು ನಾವು ಹೇಗೆ ಬೇಕಾದರೂ ಆಡಿಸಬಹುದು....ಆಡಿಸುವಾಗ ಅದಕ್ಕೆ ಹಾನಿಯಾದರೂ ಅದು ಉಸಿರೆತ್ತುವುದಿಲ್ಲವೆಂಬ ಧೈರ್ಯ ಆಡಿಸುವಾಕೆಯದು. ಮುಂದೆ ಓದಿ
" ಮಲಗಿರುವ ಹಾವನ್ನು ಕೆಣಕಬೇಡ
ಕಚ್ಚಿ ವಿಷ ಕಾರಿದರೆ ತಿಣುಕಬೇಡ"

ಮೊದಲು ಮೂಡಿದ ಉತ್ಕಟತೆ ಹಾಗೇ ಜರ್ರೆಂದು ಇಳಿದು ಹೋಗುತ್ತದೆ. ಒಂದೊಮ್ಮೆ ನಿನ್ನ ತಾಯ್ತನದ ಸೈರಣೆಯ ವಿತರಣೆ ನನಗೆ ದೊರೆಯದಿದ್ದರೆ, ನೀನು ನಾನು ಹೇಳಿದ್ದಕ್ಕೆ ಹೂಂ ಗುಡದಿದ್ದರೆ, ನಿನ್ನ ತಾಳ್ಮೆ ಇರದಿದ್ದರೆ ನಾನು ಮಲಗಿರುವ ಹಾವು ನೆನಪಿರಲಿ , ಕಚ್ಚದಿರಲಾರೆ ಎಂದು ಎಚ್ಚರಿಸುತ್ತಾರೆ. ' ಬಾಳನ್ನು ಮಾಡದಿರು ಬೇಳೆಯಂತೆ ಎನ್ನುವ ಕವಿ ನಾವಿಬ್ಬರೂ ಸೇರಿ ಮಾಡದಿರೋಣ ಬಾಳನ್ನು ಬೇಳೆಯಂತೆ ಎನ್ನುವುದಿಲ್ಲ... ಇಡಿಗಾಳು ಕೂಡಿರಲು ಇಬ್ಬರೂ ಬೇಕು ಎನ್ನುವುದಿಲ್ಲ. ಬಾಳನ್ನು ಹಸನು ಮಾಡುವುದು ಅವಳ ಕೈಯಲ್ಲಿದೆ, ಅವಳು ಎದಿರಡಾದೇ ಇರುವಲ್ಲಿದೆ, ಸುಮ್ಮನೆ ಹೂಂ ಗುಟ್ಟುವುದರಲ್ಲಿದೆ. ಇದು ಬೇಂದ್ರೆಯವರ ಸಖೀ ಭಾವದ ದ್ವಂದ್ವಕ್ಕೆ ಹಿಡಿದ ಸ್ಪಷ್ಟ ಕನ್ನಡಿಯಾಗಿದೆ. ಅವರ ಮೊದುಲ ದೀನತೆಯೂ ಸತ್ಯ, ನಂತರದ ದರ್ಪವೂ ಸತ್ಯ...ಅಲ್ಲಿರುವುದು ದ್ವಂದ್ವ..
ಬರುವುದೇನೆ ನೆಪ್ಪಿಗೆಯಲ್ಲಿ ಕೂಡ ಮೊದಲು ಎದೆಗೆ ಎದೆಯ ಅಪ್ಪಿಗೆ ಎನ್ನುವ ಕವಿ ನಂತರ ಕೂಡಿದೊಂದು ತಪ್ಪಿಗೆ ಎನ್ನುತ್ತಾರೆ, ಆಹಾ ಚೆಲುವ ಎಂದು ಕುಣಿದೆ ಮಿಕ್ಕ ಸಂಜೆ ಮಬ್ಬಿಗೆ ಎನ್ನುತ್ತಾರೆ. ಮಿಕ್ಕ ಸಂಜೆಯ ಮಬ್ಬೆಂದರೆ ಕತ್ತಲಲ್ಲವೇ? ಕತ್ತಲಲ್ಲಿ ಮಾತ್ರ ಚೆಲುವೆಯಾಗಿ ಕಂಡಳೆ ಮನದನ್ನೆ? ಮುಂದೆ ಬರುವ ಸಖೀಗೀತ ಅವರ ದ್ವಂದ್ವ ಭಾವವನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಹಾಗೆಂದರೆ ಅವರಲ್ಲಿ ಒಲವಿನ ಕೊರತೆ ಇದೆ ಎಂದಲ್ಲ, ಸಖೀ ಭಾವದ ಅನುಷ್ಟಾನದ ಬಗ್ಗೆಯಷ್ಟೇ ಈಗಿರುವ ಪ್ರಶ್ನೆ.. ಅವರ ಒಲವಿನ ಗೆಳೆತನದ ಸಾಲುಗಳು ಹೀಗಿವೆ.
" ನೀನು ದೊಡ್ದವಳಾದೆ ಮೈಸಲಿಗೆ ಬೆಳೆಸಿದೆ ಏಕಾಂತಕೆಳೆಸಿದೆ ಎಲೆ-ಕೆಳದಿಯೇ
ಏನು ಸಂಭ್ರಮವದು! ಹರೆಯದ ಹಬ್ಬವು ಕನಸು ಮನಸೂ ಹೆಣೆದು ಬೆಳೆಬೆಳೆದೆವೇ.
ಹೆರಳಿನ ಮಾಲೆಯು ಕಣ್ಣಿನ ಕಾಡಿಗೆ ತುಟಿಯ ತಂಬುಲ ಉಗುರ ಮದರಂಗಿಯೇ
ಕೊಳಲ ನುಡಿಸುತಿತ್ತು ರಾಗ ಮಿಗುತಲಿತ್ತು ನಿಂತ ನಿಲುವೆಲ್ಲವೂ ತ್ರಿಭಂಗಿಯೇ.
ಕಿವಿಮಾತ ಸೊಗಸೇನು ಆಡಿದ್ದಾಡುವುದೇನು ಹಳೆಸದ ಮುದ್ದಾಟ ಒಸಗುತಿರೆ
ಸವಿ ಬಂತು ಮುನಿಸಿಗೂ, ಕಳೆ ಬಂತು ಕನಸಿಗೂ ಮೋಹದ ಮಾಟವನೆಸಗುತಿರೆ"
ಈ ಒಲವಿನ ಶೃಂಗಾರದ ಆಟದಲ್ಲಿ, ಬೇಟದಲ್ಲಿ ಸಖೀ ಭಾವ ಬಹಳ ಸುಲಭ. ಒಬ್ಬರನ್ನೊಬ್ಬರು ಮೀರುವುದಿಲ್ಲ, ಮತ್ತೊಬ್ಬರನ್ನೊಬ್ಬರು ಧಿಕ್ಕರಿಸುವುದಿಲ್ಲ. ಸಖ್ಯ ಭಾವ ತಂತಾನೇ ಪೊರೆದುಕೊಳ್ಳುತ್ತದೆ. ಇದರ ಸತ್ವ ಪರೀಕ್ಷೆಯಾಗುವುದು ದುರ್ದಿನಗಳಲ್ಲೇ. ಮೋಹನದಾಸನ ಬಿರುಗಾಳಿ ದೇಶದಲ್ಲಷ್ಟೇ ಅಲ್ಲ ಇವರ ಮನೆಯಲ್ಲೂ ಬೀಸಿಬಿಡುತ್ತದೆ. ಇವರು ಬರೆದ ನರಬಲಿ ಪದ್ಯ ಉದ್ಯೋಗವನ್ನೇ ಬಲಿ ಪಡೆಯುತ್ತದೆ. ತಮ್ಮ ಸಂಸಾರ ಪರಾಶ್ರಯದಲ್ಲಿ ಬದುಕಬೇಕಾದ ಸ್ಥಿತಿ. ಸ್ವಾಭಿಮಾನಿ ಬೇಂದ್ರೆಯ ಜೀವನ ರೀತಿಯನ್ನೇ ಬದಲಿಸಿ ಬಿಡುತ್ತದೆ. ಸಂಸಾರವನ್ನು ಪೊರೆಯಲಶಕ್ತರಾದ ಬೇಂದ್ರೆ ಪತ್ನಿಯ ಕಣ್ಣು ತಪ್ಪಿಸಲಾರಂಭಿಸಿದರೇ?
ಪತಿಯ ರೀತಿಯಿಂದ ಕಂಗೆಟ್ಟ ಪತ್ನಿ ಪ್ರಶ್ನಿಸುವ ಪರಿ ನೋಡಿ.
" ನಿಮ್ಮ ಜೀವನ ಧ್ಯೇಯ ಗೌರೀಶಂಕರದಂತೆ ಶಿಖರವನೆತ್ತಿದೆ ಮುಗಿಲಿನೆಡೆ
ನನ್ನೆದೆ ತಿರುಗಿದೆ ಗಂಗೆಯು ಹರಿದಂತೆ ಜನರೀತಿಯಂತೆಯೇ ನೆಲದ ಕಡೆ.
ನಿಮ್ಮೆದೆ ಕರಗಿದರೆ ನನಗೆ ನೀರೆರೆವುದು ಚಳಿಗಾಳಿ ಬಂದಂತೆ ಕಲ್ಲಾಗಲು
ನಾ ತಣ್ಣಗಾಗುತ ನಡುಗುತ ಅಡಗಲು ಓದುವೆ ದಿಗ್ಡೇಶಕೆಲ್ಲಾದರೂ
ನಿಮ್ಮೆದೆ ಎತ್ತರಕೆ ನಾವೇನು ಬಂದೇವು ಕಲಿತವರ ಬೆಡಗಿಲ್ಲ ನಮ್ಮ ಕಡೆ
ನಿಮ್ಮ ಕಣ್ಮುಂದೆಯೇ ಕಣ್ಮುಚ್ಚಿದರೆ ಸಾಕು ಗೆದ್ದೆವು' ಎಂದೆ ನೀ ಕಣ್ಮುಚ್ಚಿಯೇ"
ಇಲ್ಲಿ ಸಖಿಯಾದವಳಿಗೆ ತಾನು ಸಖಿಯೆಂಬ ಭಾವವಿದ್ದಿದ್ದರೆ ಕಣ್ಮುಚ್ಚಿ ಒಂದೇ ಉಸುರಿಗೆ ಹೇಳಬೇಕಾದ ಅವಶ್ಯಕತೆಯೇ ಬರುತ್ತಿರಲಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕೇಳಬಹುದಿತ್ತು. ಮುಂದೆ ನೋಡಿ
"ಗೆಳೆಯರ ಕೂಡಾಡಿ ಬಂದಾಗ, ನಾ ನಿಮ್ಮ ಮುಖದಲುಕ್ಕುವ ಗೆಲುವ ಕಂಡಿಲ್ಲವೇ !
ಮನೆ ಬೆಳಕು ಮುಂದಿರೆ ಆ ಕಣ್ಣು ಕುಂದಿರೆ ನಾನೊಳಗೆ ನೊಂದಿರೇ ನೀವರಿಯರೇ.
ಏಕೆಂದು ಸಾಕೆಂದು ಬೇಕೆಂದು ನೂಕೆಂದು ರಮಿಸಾಡಿದಿರಲ್ಲ ನೀವು ನಿಮ್ಮಷ್ಟಕ್ಕೆ
ಗಂಗೆಯ ಕಷ್ಟವು ಗೌರಿಗೆ ತಿಳಿಯದು ಹೆಂಗಸಿನ ಕಷ್ಟವು ಗಂಡಸಿಗೆ.
ಎಂದಿಗೂ ತಿಳಿಯದು ಏತಕೆ ತಿಳಿಯೋದು ದು:ಖವು ನಮ್ಮದು ನಮಗೆ ಇದೆ"
ಇದು ಪತ್ನಿ ಶೋಕಿಸುವ ಪರಿ. ಇಲ್ಲೊಂದು ಅಂಶ ನೆನಪಿಡಲೇ ಬೇಕು, ಸಖೀ ಗೀತವನ್ನು ಬರೆದದ್ದು ಅವರ ಪತ್ನಿಯಲ್ಲ, ಸಾಕ್ಷಾತ್ ಬೇಂದ್ರೆಯೇ. ಅಂದರೆ ಆ ತೊಳಲಾಟಗಳು .... ಸಖಿಯೆಂಬ ಭಾವದ ನಿರ್ವಚನ ಅವರನ್ನೂ ಕಾಡಿತ್ತೆ? ಸಖಿಯೆಂಬ ಭಾವ ಕರೆಯುವವನಿಗಷ್ಟೆ ಇದ್ದರೆ ಸಾಲದು, ಆ ಸಖಿಯ ಮನದಲ್ಲೂ ತಾನು ಸಖಿಯೆಂಬ ಭಾವದ ಅನಾವರಣವಾಗಬೇಕು . ಅದಾಗದ ತೀವ್ರತೆ ಬೇಂದ್ರೆಯವರನ್ನೂ ತಟ್ಟಿರಬಹುದೇ? ಪರಂಪರಾನುಗತ ಪುರುಷಾಹಾಂಕಾರದ ಶೃಂಖಲೆ ಬೇಂದ್ರೆಯವರಿಂದಲೂ ಬಿಡಿಸಿಕೊಳ್ಳಲಾಗಲಿಲ್ಲವೇ? ಅಥವಾ ಹೆಂಡತಿಯನ್ನು ಸಖಿ ಎಂದು ಕರೆದದ್ದೇ ಆತ್ಮವಂಚನೆಯೇ, ಎಲ್ಲೂ ಹಾಗೆನ್ನಿಸುವುದಿಲ್ಲ, ಒಂದು ವೇಳೆ ಹೆಂಡತಿಯನ್ನು ದಾಸಿ ಎಂದು ಕರೆಯ ಬೇಕೆನಿಸಿದ್ದರೂ ಹಾಗೆ ಕರೆಯಬಹುದಾಗಿದ್ದ ನಿರ್ಭೀತ ವ್ಯಕ್ತಿತ್ವ , ಮನಸ್ಥಿತಿ ಬೇಂದ್ರೆಗಿತ್ತು. ಇಲ್ಲಿ ಪ್ರಾಮಾಣಿಕತೆಯ ಕೊರತೆಯೋ, ಒಲವಿನ ಅಭಾವವೋ ಎಂದೂ ನನಗೆ ಕಂಡಿಲ್ಲ. ಪರಂಪರಾನುಗತ ಗಂಡಿನ ಮನೋಭಾವವನ್ನು ಒಂದು ಮಟ್ಟಿಗಷ್ಟೇ ಮೀರಲು ಬೇಂದ್ರೆ ಶಕ್ತರಾದರಾ? ಇಲ್ಲಿ ನನಗೆ ಕಾಣಿಸುತ್ತಿರುವುದು ಅಪ್ಪಟ ದ್ವಂದ್ವ ಮನಸ್ಥಿತಿ.

ಹೆಣ್ಣಿಗೇನು ಬೇಕೆಂದು ಬೇಂದ್ರೆಯವರಿಗೆ ಚೆನ್ನಾಗಿಯೇ ಗೊತ್ತಿತ್ತು, ಹೆಣ್ಣಾಗಿ ಬರೆದ " ನಾನು ಬಡವಿ" ಅದಕ್ಕೊಂದು ಸುಂದರ ಉದಾಹರಣೆ.
" ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು,
ತೋಳುಗಳಿಗೆ ತೋಳ ಬಂಧಿ ಕೆನ್ನೆ ತುಂಬ ಮುತ್ತು.
ಕುಂದುಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗಿತ್ತ ಜೀವ ಫಲವ ತುಟಿಗೆ ಹಾಲುಜೇನು"

ಕಡೆಯ ಸಾಲಿನಲ್ಲಿ ಸಾಕ್ಷಾತ್ ರಸಋಷಿಯೆ ಆಗಿ ವಿಜೃಂಭಿಸಿ ಬಿಡುವ, ಈ ಭಾವಗಳನ್ನು ಇಷ್ಟು ತೀವ್ರವಾಗಿ ಹೇಳಿದ ಕವಿಯನ್ನೂ ಕಾಡುತ್ತಿದ್ದ ಈ ದ್ವಂದ್ವ ಆ ಕಾಲದ ಜನರ ನಡಾವಳಿಗಳಿಂದ ಹುಟ್ಟಿದ್ದಾ? ಹೆಂಡತಿಯನ್ನು ಸಖಿಯೆಂದು ಕರೆಯಬೇಕೆಂಬ , ಸಖಿಯನ್ನಾಗಿಸಿ ಬಾಳ ಸಾಗಿಸುವ ಹಂಬಲ... ಹೆಣ್ಣನ್ನು ಆಳದಿದ್ದರೆ ತಮ್ಮ ಗಂಡುತನದ ಬಗ್ಗೆ ಅಂದಿನ ಸಂಪ್ರದಾಯಸ್ಥ ಸಮಾಜ ತೋರಿಸಬಹುದಿದ್ದ ತಿರಸ್ಕಾರ ಬೇಂದ್ರೆಯವರನ್ನು ಈ ದ್ವಂದ್ವಕ್ಕೆ ದೂಡಿತ್ತಾ? ಅದೇನೇ ಇದ್ದರೂ ಪತ್ನಿಯನ್ನು ಸಖಿಯೆಂದು ಕರೆಯುವ ಸಂಪ್ರದಾಯಕ್ಕೆ ನಾಂದಿ ಹಾಡಿದವರು ಕನ್ನಡದ ಕಾವ್ಯ ಪರಂಪರೆಯಲ್ಲಿ ಬೇಂದ್ರೆ ಎಂಬುದನ್ನು ಮರೆಯಲಾಗದು.

ಸಂಪ್ರದಾಯ ಬಿಡದ, ಎಲ್ಲೆಯನ್ನು ಮೀರದ, ಹಾಗೆಂದು ಶೃಂಗಾರವನ್ನು ಕಡೆಗಣಿಸಿ ಬರಡು ಬದುಕು ಸಾಗಿಸದ, ಆತ್ಮ ವಂಚನೆ ಮಾಡಿಕೊಳ್ಳದ, ಹಾಗೆಂದು ಯಾರೂ ಕೇಳುವವರಿಲ್ಲವೆಂದು ಸ್ವೈರವೂ ಇಲ್ಲದ ಅಪ್ಪಟ ನಾದಮೂಲದ ಬೇಂದ್ರೆಯವರ ಕಾವ್ಯ ಈ ಎಲ್ಲ ದ್ವಂದ್ವಗಳನ್ನೂ ಮೀರಿ ನನ್ನೆದೆಯಲ್ಲಿ ಭದ್ರವಾಗಿ ಬೇರು ಬಿಟ್ಟಿದೆ....ಯಾವಾಗಲೋ ಒಮ್ಮೊಮ್ಮೆ ಬೇಸತ್ತು ಕುಳಿತಾಗ ಅಲ್ಲೆಲ್ಲೋ ದೂರದಲ್ಲಿ ಬೇಂದ್ರೆ ಹಾಡುತ್ತಿರುತ್ತಾರೆ.
"ಹುಸಿನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ
ಬಡನೂರು ವರುಷಾನ ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ"
ನನ್ನ ತುಟಿಯಂಚಿನಲ್ಲಾಗ ನಸುನಗೆ..............
  --ಮಾಲಿನಿ ಗುರುಪ್ರಸನ್ನ