Monday, April 11, 2016

ಮೃಚ್ಛಕಟಿಕಮ್-೪


ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ಎನ್ನುವ ಒಂದು ಸುಭಾಷಿತವಿದೆ. ನಮ್ಮ ನಾಟಕದ ಧೀಮಂತ ನಾಯಕನಾದ ಚಾರುದತ್ತನಿಗೆ ಕಾವ್ಯ-ಶಾಸ್ತ್ರ-ಸಂಗೀತಗಳಲ್ಲಿ ಇರುವ ಆಸಕ್ತಿ ಹಾಗು ಜ್ಞಾನವನ್ನು ತೋರಿಸಬೇಕಷ್ಟೆ? ಕೇವಲ ಆತನ ಅಪರಿಮಿತ ಔದಾರ್ಯವೊಂದೇ ಆತನನ್ನು ಧೀಮಂತ ನಾಯಕನನ್ನಾಗಿ ಮಾಡಲಾರದು.  ಆದುದರಿಂದ  .           ಚಾರುದತ್ತನ ಸಂಗೀತಪ್ರೇಮವನ್ನು ತೋರಿಸುವ ಒಂದು ಸನ್ನಿವೇಶವನ್ನು ನಾಟಕಕಾರನು  ಸೃಷ್ಟಿಸಿದ್ದಾನೆ.    
       
ಚಾರುದತ್ತ ಹಾಗು ಆತನ ಗೆಳೆಯ ಮೈತ್ರೇಯರು ಒಂದು ಸಂಗೀತಸಭೆಗೆ ತೆರಳಿ, ಸಂಗೀತದ ಬಗೆಗೆ ಚರ್ಚಿಸುತ್ತ, ಇದೀಗ ರಾತ್ರಿಯ ಸಮಯದಲ್ಲಿ ಮರಳಿ ಬರುತ್ತಿದ್ದಾರೆ. ಈ ಸನ್ನಿವೇಶವನ್ನು ಸೃಷ್ಟಿಸುವಲ್ಲಿ ನಾಟಕಕಾರನಿಗೆ ಮತ್ತೂ ಒಂದು ಉದ್ದೇಶವಿದೆ. ವಸಂತಸೇನೆಯು ನೀಡಿದ ಒಡವೆಗಳನ್ನು ಮೈತ್ರೇಯನು ತನ್ನ ಶಾಲಿನಲ್ಲಿ ಗಂಟು ಕಟ್ಟಿಕೊಂಡು ಇಟ್ಟುಕೊಂಡಿದ್ದಾನೆ; ಇದೀಗ ಚಾರುದತ್ತನ ಮನೆಯ ಒಂದು ಭಾಗದಲ್ಲಿಯೇ ಆತನು ಮಲಗಿಕೊಳ್ಳುತ್ತಿದ್ದಾನೆ ಎನ್ನುವುದನ್ನು ನಾಟಕಕಾರನಿಗೆ ತೋರಿಸಬೇಕಾಗಿದೆ. ಆದುದರಿಂದ ಅದಕ್ಕೆ ಪೂರ್ವಭಾವಿಯಾಗಿ, ಸಂಗೀತಸಭೆಯಿಂದ ಚಾರುದತ್ತ ಹಾಗು ಮೈತ್ರೇಯರು ಮನೆಗೆ ಮರಳುತ್ತಿರುವ ದೃಶ್ಯವನ್ನು ನಾಟಕದಲ್ಲಿ ತೋರಿಸಲಾಗುತ್ತಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಜಾಣತನ ನಮ್ಮ ನಾಟಕಕಾರನದು

ಮುಂದಿನ ದೃಶ್ಯ ಹೀಗಿದೆ:
ಚಾರುದತ್ತ ಹಾಗು ಮೈತ್ರೇಯರು ನಿದ್ರೆಗೆ ಜಾರಿದ ಬಳಿಕ, ಮನೆಯ ಹೊರಭಾಗದಲ್ಲಿ ಒಬ್ಬ ಕಳ್ಳನು ಪ್ರತ್ಯಕ್ಷನಾಗುತ್ತಾನೆ. ಕಳ್ಳತನವೆನ್ನುವ ವಿಜ್ಞಾನದಲ್ಲಿ ಈತನು ಕುಶಲನು. ಮನೆಯ ಗೋಡೆಗೆ ಕನ್ನವನ್ನು ಕೊರೆದು ಒಳಗೆ ನುಸುಳುವುದು ಈತನ ವಿಶೇಷತೆ.ಆದುದರಿಂದ, ಮನೆಯ ಗೋಡೆಯು ಮಣ್ಣಿನದಾಗಿದ್ದರೆ ಕನ್ನವನ್ನು ಹೇಗೆ ಕೊರೆಯಬೇಕು, ಇಟ್ಟಿಗೆಯ ಗೋಡೆಯಾಗಿದ್ದರೆ ಏನು ಮಾಡಬೇಕು, ಹಸಿಯಾದ ಗೋಡೆಯನ್ನು ಕೊರೆಯುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಕನ್ನವು ಚೌಕಾಗಿ ಇರಬೇಕೊ, ವೃತ್ತವಾಗಿರಬೇಕೊ ಅಥವಾ ವಜ್ರಾಕಾರವಾಗಿ ಇರಬೇಕೊ ಇವನ್ನೆಲ್ಲ ಈ ಕಳ್ಳನ ರಂಜನೀಯ ಸ್ವಗತದಲ್ಲಿ ಕೇಳಿಸಿಕೊಂಡ ಪ್ರೇಕ್ಷಕರು ಇವನ ಚೌರ್ಯಪಾಂಡಿತ್ಯವನ್ನು ಮೆಚ್ಚಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಕೆಲವು ಪ್ರೇಕ್ಷಕರಿಗೆ ಈ ಮಾತುಗಳು ಕೈಪಿಡಿಯಾದರೂ ಅಚ್ಚರಿಯಿಲ್ಲ!                      

ಅನಿವಾರ್ಯವಾಗಿ ಚೋರವೃತ್ತಿಯನ್ನು ಕೈಕೊಂಡ ಈ ಕಳ್ಳನು ವಾಸ್ತವದಲ್ಲಿ ಓರ್ವ ಚತುರ್ವೇದೀ ಬ್ರಾಹ್ಮಣನು. ಕನ್ನವನ್ನು ಕೊರೆಯಬೇಕಾದ ಜಾಗದ ಅಳತೆಯನ್ನು ಮಾಡಲು ತನ್ನ ಜನಿವಾರವನ್ನೇ ಬಳಸುತ್ತಾನೆ. ಕಳ್ಳರ ದೇವರಾದ ಸ್ಕಂದನನ್ನು ಪ್ರಾರ್ಥಿಸಿ, ಮೊದಲಿಗೆ ಒಂದು ಮಾನವಾಕಾರದ ಗೊಂಬೆಯನ್ನು ಕನ್ನದ ಮೂಲಕ ಒಳಗೆ ನೂಕುತ್ತಾನೆ. ಈ ಪರೀಕ್ಷೆಯ ನಂತರ ಎಲ್ಲವೂ ಸ್ತಬ್ಧವಾಗಿಯೇ ಇರುವುದರಿಂದ, ತಾನೂ ಒಳಗೆ ನುಸುಳುತ್ತಾನೆ.

ಆದರೆ ಕಳ್ಳನ ದುರ್ವಿಧಿಯನ್ನಬೇಕು. ಬಡ ಚಾರುದತ್ತನ ಮನೆಯಲ್ಲಿ ಈತನಿಗೆ ಏನು ಸಿಕ್ಕೀತು? ತನ್ನ ಹಣೆಬರಹವನ್ನು ಶಪಿಸುತ್ತ ಈತನು ಮರಳುತ್ತಿರುವಾಗ, ಅಲ್ಲಿಯೇ ಮಲಗಿಕೊಂಡ ಮೈತ್ರೇಯನು ಕನಸಿನಲ್ಲಿ ಬಡಬಡಿಸುವ ಮಾತುಗಳು ಕೇಳಿ ಬರುತ್ತವೆ. ಈ ಮೈತ್ರೇಯನು ಚಾರುದತ್ತನ ಪ್ರಾಣಸ್ನೇಹಿತನಾಗಿದ್ದರೂ ಸಹ, ಚಾರುದತ್ತನ ಮಹಾಸಂಕಟಗಳಿಗೆ ಈತನು ಕಾರಣೀಭೂತನಾಗಿದ್ದಾನೆ;  ಒಮ್ಮೆಯಲ್ಲ, ಎರಡು ಸಲ!

ವಸಂತಸೇನೆಯ ಒಡವೆಗಳನ್ನು ತನ್ನ ಬಳಿಯಲ್ಲಿ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದ ಮೈತ್ರೇಯನು, ‘ಗೆಳೆಯಾ, ಈ ಚಿನ್ನದ ಗಂಟನ್ನು ನೀನೇ ಇಟ್ಟುಕೊಎಂದು ಕನಸಿನಲ್ಲಿ ಕೈ ಮುಂದು ಮಾಡುತ್ತಾನೆ.   ನಮ್ಮ ಕಳ್ಳನಿಗೆ ಅದೃಷ್ಟವು ತಾನಾಗಿಯೇ ಒಲಿದಂತಾಯಿತು. ಆದರೂ ಸಹ ಈ ಗಂಟನ್ನು ಹೊಡೆಯಲು  ಅವನಿಗೆ ಸಂಕೋಚವಾಗುತ್ತದೆ. ಆದರೇನು ಮಾಡುವುದು? ತನ್ನ ಒಂದು ವೈಯಕ್ತಿಕ ಸಮಸ್ಯೆಯಿಂದಾಗಿ ಈತನು, ಕಳ್ಳತನಕ್ಕೆ ಕೈಹಾಕುವುದು ಅನಿವಾರ್ಯವಾಗಿದೆ.       
               
ಈ ನಮ್ಮ ಕಳ್ಳನ ಹೆಸರು ಶರ್ವಿಲಕ. ಈತನು ಚತುರ್ವೇದಿ ಬ್ರಾಹ್ಮಣರ ವಂಶಜನು. ಇಂತಹ ಸತ್ಕುಲಪ್ರಸೂತನು (!) ವಸಂತಸೇನೆಯ ದಾಸಿಯಾದ ಮದನಿಕೆ ಎನ್ನುವವಳನ್ನು ಪ್ರೀತಿಸುತ್ತಿದ್ದಾನೆ. ಮದನಿಕೆಯನ್ನು ವೇಶ್ಯೆಯ  ದಾಸ್ಯದಿಂದ ಬಿಡಿಸಿ, ಮದುವೆಯಾಗಬೇಕೆನ್ನುವುದು ಇವನ ಹಂಬಲ. ಆದರೆ ಬಿಡಿಸಲು ಬೇಕಾದ ದುಡ್ಡು ಇವನಲ್ಲಿಲ್ಲ. ಹಾಗಾಗಿ ಕಳ್ಳತನಕ್ಕೆ ಈತ ಕೈಹಾಕಬೇಕಾಯಿತು. ತನ್ನ ಅಕಾರ್ಯಕ್ಕಾಗಿ ತಾನೇ ಬೇಸರಪಡುತ್ತ, ಈತ ಚಿನ್ನದ ಗಂಟಿನೊಡನೆ  ಪಲಾಯನ ಮಾಡುತ್ತಾನೆ.                          

 ಓದುಗರು ಒಂದು ಮಾತನ್ನು ಇಲ್ಲಿ ಗಮನಿಸಬೇಕು. ಬ್ರಾಹ್ಮಣನಾದ ಚಾರುದತ್ತನು ತಲೆತಲಾಂತರದಿಂದ ವ್ಯಾಪಾರಿಯಾದರೆ, ಶರ್ವಿಲಕನು ಪೌರೋಹಿತ್ಯವನ್ನು ಕಡೆಗಣಿಸಿ ಕಳ್ಳತನಕ್ಕೆ ಶರಣಾಗಿದ್ದಾನೆ. ಇದು ಆ ಕಾಲದ  ಬ್ರಾಹ್ಮಣರ ನೈತಿಕ, ಸಾಮಾಜಿಕ ಅಧಃಪತನವನ್ನು ಸೂಚಿಸುತ್ತದೆ. ಇದರಂತೆಯೇ ಸಮಾಜದಲ್ಲಿ ಗಣ್ಯರಾದ ಮಹಾರಾಜರು, ನ್ಯಾಯಾಧೀಶರು ಇವರೆಲ್ಲರ  ಅವನತಿಯನ್ನೂ ಈ ನಾಟಕದಲ್ಲಿ ಸೂಚಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ಸಮಾಜದ ನಗಣ್ಯ ವರ್ಗಗಳು ಹೇಗೆ ನ್ಯಾಯಪರವಾಗಿದ್ದವು ಎನ್ನುವುದನ್ನು ಈ ನಾಟಕದಲ್ಲಿ ಅಪರೋಕ್ಷವಾಗಿ ಸೂಚಿಸಲಾಗಿದೆ.
                                   
ಮುಂದಿನ ದೃಶ್ಯ:
ಮುಂಜಾವಿನ ಸಮಯ. ಎಲ್ಲರಿಗಿಂತಲೂ ಮೊದಲು ಏಳುವವರು ಸೇವಕರೇ ತಾನೆ? ಅದರಂತೆ ಚಾರುದತ್ತನ ಸೇವಿಕೆಯಾದ ರದನಿಕೆಯು ಎದ್ದು ಬಂದು, ಗೋಡೆಯಲ್ಲಿ ಕೊರೆದ ಕನ್ನವನ್ನು ನೋಡುತ್ತಾಳೆ. ದಿಗ್ಭ್ರಾಂತಳಾಗಿ, ಹೊರಭಾಗದಲ್ಲಿ ಮಲಗಿದ್ದ ಮೈತ್ರೇಯನನ್ನು ಎಬ್ಬಿಸಿ, ವಿಷಯ ತಿಳಿಸುತ್ತಾಳೆ. ಆತನು ಚಾರುದತ್ತನನ್ನು ಎಬ್ಬಿಸುತ್ತಾನೆ. ನಮ್ಮ ಮನೆಯಲ್ಲಿ ಏನಿದೆಯಯ್ಯಾ ಕಳವು ಮಾಡಲಿಕ್ಕೆಎಂದು ಚಾರುದತ್ತನು ಮೊದಲು ಉಪಹಾಸ ಮಾಡಿದರೂ ಸಹ, ‘ನಿನಗೆ ಕೊಟ್ಟ ಒಡವೆಗಳ ಗಂಟು ಸುರಕ್ಷಿತವಾಗಿದೆಯಲ್ಲವೆ’, ಎಂದು ಮೈತ್ರೇಯನನ್ನು ಕೇಳುತ್ತಾನೆ.  ಅದು ಕಳೆದು ಹೋಗಿರುವ ವಿಷಯ ತಿಳಿದು ಚಾರುದತ್ತನು ಮೂರ್ಛೆ ಹೋಗುತ್ತಾನೆ. ನ್ಯಾಸವಾಗಿಟ್ಟ ಒಡವೆಗಳು ಹೋದುವಲ್ಲ ಎನ್ನುವುದು ಒಂದು ದುಃಖವಾದರೆ, ಜನರು ತನ್ನನ್ನು ನಂಬುವುದಿಲ್ಲವಲ್ಲ ಎನ್ನುವುದು ಅವನ ಮತ್ತೊಂದು ದುಃಖದ ವಿಷಯವಾಗಿದೆ.
ನನ್ನ ದುಡ್ಡಿನ ಮೇಲೆ ವಿಧಿಯು ಕಣ್ಣಿಟ್ಟಿತು
ನಾನು ಕಂಗೆಡಲಿಲ್ಲ
ಈಗಲೋ ಅದು ನನ್ನ ವ್ಯಕ್ತಿತ್ವವನ್ನೇ
ಕೊಲೆಮಾಡಹೊರಟಿದೆ.                                        
( ಬನ್ನಂಜೆಯವರ ಅನುವಾದ)
                                   
ಇದೆಲ್ಲವನ್ನು ನೋಡುತ್ತಿರುವ ರದನಿಕೆಯು, ಒಳಮನೆಗೆ ಹೋಗಿ, ಚಾರುದತ್ತನ ಹೆಂಡತಿಯಾದ ಧೂತಾದೇವಿಗೆ ವಿಷಯವನ್ನು ತಿಳಿಸುತ್ತಾಳೆ.  ಇಂತಹ ಸಮಯದಲ್ಲಿ ಒಬ್ಬ ಹೆಂಡತಿಯ ಮೊದಲ ಪ್ರತಿಕ್ರಿಯೆ ಏನಿರುತ್ತದೆ?.......ಗಂಡನ ಸುರಕ್ಷೆಯೆ ಅವಳಿಗಿರುವ ಮೊದಲ ಕಾಳಜಿ ತಾನೆ?                    

 ನನ್ನ ಗಂಡನಿಗೆ ಏನೂ ಅಪಾಯವಾಗಿಲ್ಲವಷ್ಟೇ, ಆತನ ಗೆಳೆಯನಿಗೂ ಏನೂ ಅಪಾಯವಾಗಿಲ್ಲವಷ್ಟೆ?’ ಎನ್ನುವುದು ಧೂತಾದೇವಿಯು ರದನಿಕೆಗೆ ಕೇಳುವ ಮೊದಲ ಪ್ರಶ್ನೆಯಾಗಿದೆ. ಗಂಡನೇನೊ ಸುರಕ್ಷಿತವಾಗಿದ್ದಾನೆ. ಆದರೆ ನಿಷ್ಠಾವಂತ ಹೆಂಡತಿಗೆ ಅದಷ್ಟೇ ಸಾಲದು. ವಸಂತಸೇನೆಯ ಒಡವೆಗಳು ಕಳೆದು ಹೋಗಿದ್ದನ್ನು ಯಾರೂ ನಂಬಲಿಕ್ಕಿಲ್ಲ ; ತನ್ನ ಪತಿಯ ಮಾನವು ಅವನ ಜೀವದಷ್ಟೇ ಮುಖ್ಯ ಎನ್ನುವದನ್ನು ತಿಳಿದಂತಹ ಸಾಧ್ವಿ ಈಕೆ. ಧೂತಾದೇವಿಎನ್ನುವ ಇವಳ ಹೆಸರೇ ಅದನ್ನು ಸೂಚಿಸುತ್ತದೆ. (ಧೂತ=ತೊಳೆದಂತಹ).
                                   
ಈ ಸಮಸ್ಯೆಯನ್ನು ಪರಿಹರಿಸಲು ಅವಳು ಕ್ಷಣಮಾತ್ರದಲ್ಲಿಯೇ ಒಂದು ನಿರ್ಣಯವನ್ನು ಮಾಡುತ್ತಾಳೆ. ರದನಿಕೆಯ ಮೂಲಕ ಮೈತ್ರೇಯನನ್ನು ಕರೆಸಿ,  ಮಹಾಬ್ರಾಹ್ಮಣನೆ, ನಾನು ಒಂದು ವ್ರತವನ್ನು ಮಾಡುತ್ತಿದ್ದೇನೆ. ಅದರ ಅಂಗವಾಗಿ ನಿನಗೆ ಈ ಮುತ್ತಿನ ಹಾರವನ್ನು ಕೊಡುತ್ತಿದ್ದೇನೆಎಂದು ಹೇಳುತ್ತಾಳೆ. ಈ ಮುತ್ತಿನ ಹಾರವನ್ನು ಧೂತಾದೇವಿಯ ತವರು ಮನೆಯವರು ಅವಳಿಗೆ ವಿವಾಹದ ಸಮಯದಲ್ಲಿ ಉಡುಗೊರೆಯಾಗಿ ನೀಡಿದ್ದರು. ಇದು ವಸಂತಸೇನೆಯ ಒಡವೆಗಳಿಗಿಂತ ಎಷ್ಟೋ ಪಾಲು ಮೌಲ್ಯಯುತವಾಗಿತ್ತು. 

ಮೈತ್ರೇಯನಿಗೆ ಧೂತಾದೇವಿಯು ಬಿಡಿಸಿ ಹೇಳದಿದ್ದರೂ ಸಹ ಅವನಿಗೆ ಎಲ್ಲವೂ ಅರ್ಥವಾಗುತ್ತದೆ. ಆ ಹಾರವನ್ನು ಆತನು ಚಾರುದತ್ತನಿಗೆ ನೀಡುತ್ತಾನೆ. ತನ್ನ ಹೆಂಡತಿಯು ತನಗೆ ಇದನ್ನು ಕೊಟ್ಟು ಕಳುಹಿಸಿದ್ದಾಳೆ ಎಂದು ಗ್ರಹಿಸಿದ ಚಾರುದತ್ತನು, ‘ಹೆಂಡತಿಗೆ ಕೈಚಾಚಬೇಕಾಯಿತೆಎಂದು ದುಖಿಸಿದರೂ ಸಹ, ಇಂತಹ ಹೆಂಡತಿ ಹಾಗು ಗೆಳೆಯನನ್ನು ಪಡೆದ ತಾನು ಸತ್ಯದ ದೀಕ್ಷೆಯನ್ನು ಬಿಟ್ಟುಕೊಡಲಿಲ್ಲ , ಬಡವನ ಬಾಳಿನಲ್ಲಿ ಇದು ಸುಲಭವೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ.                                                            
ಧೂತಾದೇವಿಯು ತಾನೇ ನೇರವಾಗಿ ತನ್ನ ಪತಿಯ ಬಳಿಗೆ ತೆರಳಿ, ತನ್ನ ಮುತ್ತಿನ ಹಾರವನ್ನು ಕೊಡಬಹುದಾಗಿತ್ತಲ್ಲ? ಅವಳು ಅದನ್ನು ಮೈತ್ರೇಯನ ಕೈಯಲ್ಲಿ ಏಕೆ ಕೊಟ್ಟಳು, ಅದೂ ದಾನವೆಂದು ಹೇಳುತ್ತ ಎನ್ನುವ ಪ್ರಶ್ನೆ ಇಲ್ಲಿ ಏಳುತ್ತದೆ. ವಸಂತಸೇನೆಯು ತನ್ನ ಗಂಡ ಚಾರುದತ್ತನಲ್ಲಿ ಆಕರ್ಷಿತಳಾಗಿರುವ ವಿಷಯವು ಧೂತಾದೇವಿಗೆ ಸಹಜವಾಗಿಯೆ ತಿಳಿದಿತ್ತು. ವಸಂತಸೇನೆಯ ಒಡವೆಗಳನ್ನು ಅವಳಿಗೆ ಮರಳಿಸಲಾಗದಿದ್ದರೆ, ತನ್ನ ಪತಿಯು ಸಮಾಜದಲ್ಲಿ ಅಪಕೀರ್ತಿಗೆ ಒಳಗಾಗಬೇಕಾದೀತು ಎನ್ನುವುದೂ ಅವಳಿಗೆ ತಿಳಿದಿತ್ತು. ಅದೂ ಅಲ್ಲದೆ ತನ್ನ ಋಣದಲ್ಲಿ ಬಿದ್ದ ಚಾರುದತ್ತನಿಂದ ವಸಂತಸೇನೆಯು ಏನನ್ನು ಬಯಸಿಯಾಳು ಎನ್ನುವ ಹೆದರಿಕೆಯೂ ಅವಳಿಗಿರಬೇಕು. ಇಷ್ಟೆಲ್ಲ ಇದ್ದರೂ ಸಹ ಈ ಪತಿವ್ರತೆಯು ತಾನು ನೇರವಾಗಿ ಚಾರುದತ್ತನ ಎದುರಿಗೆ ಹೋಗಿ ತನ್ನ ಹಾರವನ್ನು ಕೊಡುವುದಿಲ್ಲ. ತನ್ನ ಪತಿಯನ್ನು ಸಂಕೋಚದಲ್ಲಿ, ಮುಜುಗರದಲ್ಲಿ ಮುಳುಗಿಸಲು ಧೂತಾದೇವಿಯು ಬಯಸುವದಿಲ್ಲ. ಇಷ್ಟೇ ಅಲ್ಲ, ಮೈತ್ರೇಯನಿಗೂ ಸಹ ನೇರವಾಗಿ ಹೇಳುವುದಿಲ್ಲ. ಇದು ಧೂತಾದೇವಿಯ ಸಂವೇದನಾಶೀಲ ಸ್ವಭಾವನ್ನು ತೋರಿಸುತ್ತದೆ.

ಚಾರುದತ್ತನನ್ನು ವಧಾಸ್ಥಾನಕ್ಕೆ ಎಳೆದೊಯ್ಯುವ ದೃಶ್ಯವು ಕೊನೆಯ ಅಂಕದಲ್ಲಿ ಬರುತ್ತದೆ. ಆ ಸಂದರ್ಭದಲ್ಲಿ ಇವಳು ಅಗ್ನಿಪ್ರವೇಶ ಮಾಡಲು ಹೊರಡುತ್ತಾಳೆ. ಇದು ಚಾರುದತ್ತನ ಬಗೆಗೆ ಅವಳಿಗಿರುವ ಪ್ರೀತಿಯ ದ್ಯೋತಕವಾಗಿದೆ. ಚಾರುದತ್ತನಿಗೆ ಒಲಿದ ವಸಂತಸೇನೆಯನ್ನು ಧೂತಾದೇವಿಯು ಸವತಿಯಂತೆ ನೋಡುವುದಿಲ್ಲ, ಬದಲಾಗಿ ತನ್ನ ತಂಗಿಯಂತೆ ಭಾವಿಸುತ್ತಾಳೆ. ಕೊನೆಯ ಅಂಕದಲ್ಲಿ ವಸಂತಸೇನೆ ಬದುಕಿರುವುದನ್ನು ತಿಳಿದ ಧೂತಾದೇವಿಯು, ‘ನನ್ನ ತಂಗಿಯೂ ಸಹ ಕ್ಷೇಮವಾಗಿರುವಳಲ್ಲಎಂದು ಸಂತೋಷಿಸುತ್ತಾಳೆ. ವಸಂತಸೇನೆಯೂ ಸಹ ಧೂತಾದೇವಿಯೊಡನೆ ಮುಖಾಮುಖಿಯಾಗುವ ಮುಂದಿನ ಒಂದು ಸನ್ನಿವೇಶದಲ್ಲಿ, ‘ನಾನು ಶ್ರೀ ಚಾರುದತ್ತರ ಗುಣಗಳಿಗೆ ಮನಸೋತ ದಾಸಿಯಾಗಿದ್ದೇನೆ; ಆದುದರಿಂದ ನಾನು ನಿಮ್ಮ ದಾಸಿಯೂ ಅಹುದುಎಂದು ಹೇಳುವ ಮೂಲಕ, ಚಾರುದತ್ತನ ಬದುಕಿನಲ್ಲಿ ಧೂತಾದೇವಿಯ ಸ್ಥಾನವು ತನ್ನ ಸ್ಥಾನಕ್ಕಿಂತ ಹೆಚ್ಚಿನದು ಎಂದು ಸ್ಪಷ್ಟ ಪಡಿಸುತ್ತಾಳೆ.                   

ಇಲ್ಲಿಯವರೆಗೆ  ವಸಂತಸೇನೆಯ ಪ್ರೇಮಾರ್ದ್ರ ಮನಸ್ಸನ್ನು ನೋಡಿದ ಪ್ರೇಕ್ಷಕನು ಈ ಅಂಕದಲ್ಲಿ ಚಾರುದತ್ತನ ಪತ್ನಿ ಧೂತಾದೇವಿಯ ಪತಿಪ್ರೇಮ ಹಾಗು ಸುಶೀಲತೆಯನ್ನೂ ನೋಡುತ್ತಾನೆ. ಕೊನೆಯ ಅಂಕದಲ್ಲಿ ಅಗ್ನಿಪ್ರವೇಶವನ್ನು ಮಾಡಲೆಳಸುವ ಅವಳ ಕ್ರಿಯೆಗೆ ಒಂದು ತಾರ್ಕಿಕ ಹಿನ್ನೆಲೆಯು ಅವಳ ಪತಿಪ್ರೇಮದ ಸನ್ನಿವೇಶದ ಮೂಲಕ ಇಲ್ಲಿ ಮೊದಲೇ ಅಭಿವ್ಯಕ್ತವಾಗಿದೆ.                               

ಆ ಕಾಲದ ಭಾರತೀಯ ಸಮಾಜದಲ್ಲಿ ದಾಸ, ದಾಸಿಯರ ವ್ಯಾಪಾರ ನಡೆಯುತ್ತಿತ್ತು ಎನ್ನುವುದು ಈ ಅಂಕದಲ್ಲಿ ಸೂಚಿತವಾಗಿದೆ. ಮೊದಲ ಎರಡು ಅಂಕಗಳು ಒಂದು ರೀತಿಯಲ್ಲಿ ಪರಿಚಯಾತ್ಮಕ ಅಂಕಗಳಾಗಿವೆ. ಕಥೆಯನ್ನು ನಾಟಕವನ್ನಾಗಿ ಪರಿವರ್ತಿಸುವ ಪ್ರಸಂಗಗಳು ಈ ಅಂಕದಿಂದ ಪ್ರಾರಂಭವಾಗುತ್ತವೆ!

2 comments:

Badarinath Palavalli said...

ಹೊಸ ಧಾರವಾಹಿಗೆ ಮೊದಲ ಧನ್ಯವಾದಗಳು.

ಮೊದಲ ಮೂರು ಮತ್ತು ಇದೀಗ ನಾಲ್ಕನೇ ಕಂತನ್ನು ಒಟ್ಟಿಗೇ ಓದಿ ಇದೀಗ ಪ್ರತಿಕ್ರಿಯಿಸುತ್ತಿದ್ದೇನೆ.

ಶರ್ವಿಲಕನ ಪ್ರವರ ಓದುತ್ತಿದ್ದಂತೆ, ತಮ್ಮ ಉದ್ಘಾರ 'ಸತ್ಕುಲಪ್ರಸೂತ' ಎನ್ಬುವುದು ಸರ್ವಕಾಲಿಕವೂ ಮತ್ತು ದುರಂತವೂ ಆಗಿದೆಯಲ್ಲವೇ!

ಅರ್ಥವಾಗದ ಆಂತರ್ಯಗಳನ್ನೆಷ್ಟೋ ತೆರೆದಿಟ್ಟ ತಮಗೆ ನಾವು ಋಣಗ್ರಸ್ತರು.

sunaath said...

ಬದರಿನಾಥರೆ,
ಮೃಚ್ಛಕಟಿಕಮ್ ನಾಟಕದ ಬಗೆಗೆ ಬರೆಯುವದೆಂದರೆ, ಜಿಲೇಬಿಯ ರುಚಿಯನ್ನು ಚಿತ್ರ ಬರೆದು ತೋರಿಸಿದಂತೆ. ಆ ನಾಟಕವನ್ನು ಓದಿಯೇ ಆನಂದಿಸಬೇಕು.