Monday, May 9, 2016

ಮೃಚ್ಛಕಟಿಕಮ್-೮



ಅಂಕ ೬:
ಉತ್ತರಾರ್ಧ:
ಇಂಗ್ಲಿಶ್ ನಾಟಕಕಾರ ಶೇಕ್ಸಪಿಯರನ ‘Comedy of errors’ ಸಾಕಷ್ಟು ಪ್ರಸಿದ್ಧವಿದೆ. ಅದನ್ನು ಆಧರಿಸಿ, ಶ್ರೀ ಶಂಕರ ಮೊಕಾಶಿ-ಪುಣೇಕರರು ‘ವಿಪರ್ಯಾಸ ವಿನೋದ’ ಎನ್ನುವ ಪುಟ್ಟ ನಾಟಕವನ್ನು ಬರೆದಿದ್ದರು. ಒಂದು ಚಲನಚಿತ್ರವೂ ಸಹ ಇದೇ ಧಾಟಿಯಲ್ಲಿ ಕನ್ನಡದಲ್ಲಿ ನಿರ್ಮಿತವಾಗಿದೆ. ಮೃಚ್ಛಕಟಿಕಮ್ ನಾಟಕದಲ್ಲಿ ಈಗ ನಡೆಯಲಿರುವುದು ‘tragedy of errors’ ಅಥವಾ ದೈವೀದುರ್ವಿಪಾಕ.

ಆರನೆಯ ಅಂಕದ ಉತ್ತರಾರ್ಧವು ಚಾರುದತ್ತನ ಬಂಡಿಯ ಚಾಲಕನಾದ ವರ್ಧಮಾನಕನ ಪ್ರವೇಶದೊಂದಿಗೆ ಆಗುತ್ತದೆ. ‘ವಸಂತಸೇನೆಯನ್ನು ಬೇಗನೇ ಕರೆತರಲು ಚಾರುದತ್ತನು ತಿಳಿಸಿದ್ದಾನೆ’ ಎಂದು ವರ್ಧಮಾನಕನು ರದನಿಕೆಗೆ ಹೇಳುತ್ತಾನೆ. ವಸಂತಸೇನೆಯು ಸಿಂಗರಿಸಿಕೊಂಡು ಬರಲು ಒಳಗೆ ಹೋಗುತ್ತಾಳೆ. ಗಾಡಿಯಲ್ಲಿ ಹಾಸಬೇಕಾಗಿದ್ದ ಕಂಬಳಿಯನ್ನು ಮರೆತಿದ್ದ ವರ್ಧಮಾನಕನು ಕಂಬಳಿಯನ್ನು ತರಲು ಮನೆಯ ಒಳಗೆ ಹೋಗುತ್ತಾನೆ.

ಇದೇ ಸಮಯದಲ್ಲಿ ಶಕಾರನ ಬಂಡಿಯ ಚಾಲಕನಾದ ಸ್ಥಾವರಕನು ಬಂಡಿಯೊಂದಿಗೆ ಅಲ್ಲಿಗೆ ಬರುತ್ತಾನೆ. ವಾಹನಗಳ ದಟ್ಟಣೆಯು ಅತಿಯಾದದ್ದರಿಂದ, ಆತನು ತನ್ನ ಬಂಡಿಯನ್ನು ಅಲ್ಲಿಯೇ ಅಂದರೆ ಚಾರುದತ್ತನ ಮನೆಯ ಎದುರಿಗೆ ನಿಲ್ಲಿಸಬೇಕಾಗುತ್ತದೆ. ಶಕಾರನು ಸಹ ಪುಷ್ಪಕರಂಡಕ ಉದ್ಯಾನದಲ್ಲಿಯೇ ಇದ್ದಾನೆ. ಬಂಡಿಯ ಸಪ್ಪಳವನ್ನು ಕೇಳಿದ ವಸಂತಸೇನೆಯ ಚೇಟಿಯು ‘ಬಂಡಿಯು ಬಂದಿದೆ’ ಎಂದು ವಸಂತಸೇನೆಗೆ ತಿಳಿಸುತ್ತಾಳೆ. ವಸಂತಸೇನೆಯು ಶಕಾರನ ಬಂಡಿಯನ್ನೇ ಚಾರುದತ್ತನ ಬಂಡಿ ಎಂದು ತಪ್ಪಾಗಿ ಭಾವಿಸಿ, ಶಕಾರನ ಬಂಡಿಯನ್ನು ಏರುತ್ತಾಳೆ.

ವಿಧಿವೈಪರೀತ್ಯವನ್ನು ನೋಡಿದಿರಾ? ಹುಲಿಯ ಗವಿಯ ಬಾಗಿಲಿಗೆ ಜಿಂಕೆ ತಾನಾಗಿ ಹೋದಂತಾಯಿತಲ್ಲವೆ? ಪ್ರೇಕ್ಷಕನಿಗೆ ಇಲ್ಲಿ ಒಂದು ಪುಟ್ಟ ಸಂದೇಹ ಬರುವುದು ಸ್ವಾಭಾವಿಕ. ವಸಂತಸೇನೆ ಕುಳಿತಿದ್ದು ಬಂಡಿಯ ಚಾಲಕನಾದ ಸ್ಥಾವರಕನಿಗೆ ತಿಳಿಯಲಿಲ್ಲವೆ? ಈ ಅನುಮಾನ ಸರಿಯಾಗಿಯೇ ಇದೆ. ಇದನ್ನು ಸರಿಪಡಿಸಲು ನಮ್ಮ ನಾಟಕಕಾರನಾದ ಶೂದ್ರಕನು ಒಂದು ಉಪಾಯವನ್ನು ಹುಡುಕಿದ್ದಾನೆ. ಬಂಡಿಯು ನಿಂತಾಗ, ಚಾಲಕನು ಅದರ ಚಕ್ರವನ್ನು ಎಳೆದು ಮುನ್ನೂಕಿದ್ದಾನೆ. ಆ ಶ್ರಮದಿಂದಾಗಿ ತನಗೆ ಬಂಡಿಯು ಭಾರವಾಗಿ ಭಾಸವಾಗಿರಬಹುದು ಎಂದು ಸ್ಥಾವರಕನು ಭಾವಿಸಿ, ಬಂಡಿಯನ್ನು ಹೊಡೆದುಕೊಂಡು ಹೋಗುತ್ತಾನೆ. ಬಂಡಿಗಳನ್ನು ಬದಲಾಯಿಸಿದ ವಿಧಿಯು ವಸಂತಸೇನೆಯನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎನ್ನುವುದನ್ನು ಮುಂದೆ ನೋಡೋಣ.

ಇತ್ತ ರಾಜಭಟರು ಡಂಗುರವನ್ನು ಸಾರುತ್ತ ಬರುತ್ತಿದ್ದಾರೆ. ಸೆರೆಯಲ್ಲಿ ಇಡಲ್ಪಟ್ಟ ಆರ್ಯಕ ಎನ್ನುವ ಸೆರೆಯಾಳು ಕಾರಾಗೃಹದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಸೈನಿಕರು ಎಲ್ಲೆಡೆಗೂ ಅವನನ್ನು ಶೋಧಿಸುತ್ತಿದ್ದಾರೆ. ಜನಗಳೆಲ್ಲ ಎಚ್ಚರದಿಂದ ಇರಬೇಕು ಎನ್ನುವುದು ಅವರ ಡಂಗುರದ ಸಾರವಾಗಿದೆ.

ಇದೀಗ ತಪ್ಪಿಸಿಕೊಂಡು ಓಡಿ ಹೋದ ಆರ್ಯಕನ ಪ್ರವೇಶವು ರಂಗದಲ್ಲಿ ಆಗುತ್ತದೆ. ಆತನು ಕೈಬೇಡಿಗಳನ್ನು ತುಂಡರಿಸಿಕೊಂಡಿದ್ದಾನೆ. ಆದರೆ ಕಾಲುಬೇಡಿಗಳು ಹಾಗೆಯೇ ಇವೆ. (ಕಾಲುಬೇಡಿಗಳು ಹಾಗೆಯೇ ಇರುವದರ ಮಹತ್ವವನ್ನು ಸ್ವಲ್ಪದರಲ್ಲಿ ನಾವು ತಿಳಿಯುತ್ತೇವೆ.) ಶರ್ವಿಲಕನ ಸಹಾಯದಿಂದ ಆತನು ಹೇಗೆ ಪಾರಾದನು ಎನ್ನುವುದು ಆರ್ಯಕನ ಸ್ವಗತದಿಂದ ಪ್ರೇಕ್ಷಕರಿಗೆ ತಿಳಿಯುತ್ತದೆ. (ಶರ್ವಿಲಕನು ವಸಂತಸೇನೆಯ ದಾಸಿಯಾಗಿದ್ದ ಮದನಿಕೆಯ ಪ್ರಿಯಕರ ಎನ್ನುವುದನ್ನು ನೆನಪಿಸಿಕೊಳ್ಳಿರಿ. ನಾಲ್ಕನೆಯ ಅಂಕದಲ್ಲಿ ಈತನು ಮದನಿಕೆಯನ್ನು ಬಿಡಿಸಿಕೊಳ್ಳಲು, ವಸಂತಸೇನೆಯ ಬಳಿಗೆ ಹೋಗಿದ್ದನು.)

ರಾಜಭಟರಿಂದ ತಪ್ಪಿಸಿಕೊಳ್ಳಲು ಆರ್ಯಕನು ಅಲ್ಲಿಯೇ ನಿಂತಿದ್ದ ಚಾರುದತ್ತನ ಬಂಡಿಯೊಳಗೆ ಥಟ್ಟನೇ ನುಸಳಿಕೊಳ್ಳುತ್ತಾನೆ. ಕಾಲುಕೋಳಗಳ ಕಿಳಿಕಿಳಿಯನ್ನು ಗೆಜ್ಜೆಗಳ ನಾದ ಎಂದು ಭ್ರಮಿಸಿದ ಚಾರುದತ್ತನ ಚಾಲಕನು ವಸಂತಸೇನೆಯೇ ಕುಳಿತುಕೊಂಡಳು ಎಂದು ಭಾವಿಸಿ, ‘ಆರ್ಯೇ, ಸಾವಕಾಶವಾಗಿ ಹಿಂಬದಿಯಿಂದಲೇ ಹತ್ತವ್ವ’ ಎಂದು ಹೇಳುತ್ತ ಬಂಡಿಯನ್ನು ಹೊಡೆದುಕೊಂಡು ಹೋಗುತ್ತಾನೆ.

ಇಂತಹ ಅದಲು ಬದಲಾಟಗಳನ್ನು ನಾವು ಅನೇಕ ನಾಟಕಗಳಲ್ಲಿ ಹಾಗು ಚಲನಚಿತ್ರಗಳಲ್ಲಿ ನೋಡಿದ್ದೇವೆ. ಶ್ರೀ ರಬೀಂದ್ರನಾಥ ಠಾಕೂರರು ಬರೆದ ‘ನೌಕಾಡುಬಿ’ ಎನ್ನುವ ಕಾದಂಬರಿಯಲ್ಲೂ ಸಹ (೧೯೦೬) ಈರ್ವರು ವರಕನ್ಯೆಗಳ  ಅದಲುಬದಲಾಟ ನಡೆದಿದೆ. ಇವೆಲ್ಲವುಗಳ ಮೂಲರೂಪವು ಮೃಚ್ಛಕಟಿಕಮ್ ನಾಟಕ ಎನ್ನಬಹುದು.

ಆರ್ಯಕನನ್ನು ಹುಡುಕಲು ರಾಜಭಟರು ಎಲ್ಲೆಲ್ಲೂ ಶೋಧನಾಕಾರ್ಯವನ್ನು ಮಾಡುತ್ತಿದ್ದಾರೆ. ವೀರಕ ಎನ್ನುವ ಸೈನ್ಯಾಧಿಕಾರಿಯು ತನ್ನ ಸೈನಿಕರಿಗೆ ಶೋಧನೆಯ ಸೂಚನೆಗಳನ್ನು ನೀಡುತ್ತಾನೆ  ಹಾಗು ಚಂದನಕ ಎನ್ನುವ ಸೈನಿಕನೊಡನೆ ಪ್ರಾಗಾರದ ಮೇಲೆ ನಿಂತುಕೊಂಡು ವೀಕ್ಷಿಸುತ್ತಿದ್ದಾನೆ. ಆ ಸಮಯದಲ್ಲಿ ತೆರೆಯಿಂದ ಮುಚ್ಚಲ್ಪಟ್ಟ ಬಂಡಿಯೊಂದು ಅಲ್ಲಿ ಬರುತ್ತಿರುವುದನ್ನು ಅವರೀರ್ವರೂ ನೋಡುತ್ತಾರೆ. ಬಂಡಿಯ ಚಾಲಕನು ‘ಇದು ಚಾರುದತ್ತನ ಬಂಡಿ; ತಾನು ವಸಂತಸೇನೆಯನ್ನು ಪುಷ್ಪಕರಂಡಕ ಉದ್ಯಾನಕ್ಕೆ ಕರೆದೊಯ್ಯುತ್ತಿರುವದಾಗಿ ಹೇಳುತ್ತಾನೆ.’ ಚಂದನಕನು ಆ ಗಾಡಿಯನ್ನು ಬಿಡಲು ಸಮ್ಮತಿಸಿದನು, ಆದರೆ ವೀರಕನು ಒಪ್ಪಲಿಲ್ಲ. ಚಂದನಕನು ಗಾಡಿಯನ್ನು ಪರೀಕ್ಷಿಸುತ್ತಾನೆ. ಒಳಗೆ ಆರ್ಯಕನಿರುವುದನ್ನು ನೋಡುತ್ತಾನೆ. ಅವನ ಪ್ರಾರ್ಥನೆಯಂತೆ ಅವನನ್ನು ಪಾರು ಮಾಡುವ ಉದ್ದೇಶದಿಂದ, ‘ಒಳಗಿರುವವಳು ವಸಂತಸೇನೆಯೇ’ ಎಂದು ವೀರಕನಿಗೆ ಹೇಳುತ್ತಾನೆ.  

ಚಂದನಕನ ಮಾತಿನಲ್ಲಿ ವೀರಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ತಾನೇ ಪರೀಕ್ಷಿಸಲು ಹೊರಡುತ್ತಾನೆ. ಆರ್ಯಕನನ್ನು ರಕ್ಷಿಸುವ ಉದ್ದೇಶದಿಂದ ಚಂದನಕನು ಅವನೊಡನೆ ಜಗಳ ಪ್ರಾರಂಭಿಸುತ್ತಾನೆ. ವೀರಕನನ್ನು ಕೆಳಗೆ ಬೀಳಿಸಿ, ಕಾಲಿನಿಂದ ಒದೆಯುತ್ತಾನೆ. ಆಬಳಿಕ ಬಂಡಿಯಲ್ಲಿ ಇದ್ದ ವ್ಯಕ್ತಿ ವಸಂತಸೇನೆಯೇ ಎನ್ನುವಂತೆ, ‘ವಸಂತಸೇನೆಯೆ, ಯಾರಾದರೂ ಕೇಳಿದರೆ, ಚಂದನಕ ಹಾಗು ವೀರಕರು ಈ ಗಾಡಿಯನ್ನು ಪರೀಕ್ಷಿಸಿದ್ದಾರೆ ಎಂದು ತಿಳಿಸು. ನನ್ನ ಗುರುತಿಗಾಗಿ ಇದೊಂದು ನಿನ್ನ ಬಳಿ ಇರಲಿ’ ಎಂದು ಹೇಳುತ್ತ ತನ್ನ ಖಡ್ಗವನ್ನು ಕೊಡುತ್ತಾನೆ. ‘ಆರ್ಯೇ, ಈ ವಿಶ್ವಾಸಕ್ಕೆ ಪ್ರತಿಯಾಗಿ ನನ್ನ ನೆನಪು ನಿನ್ನಲ್ಲಿ ಇರಲಿ’ ಎಂದು ಗುಪ್ತ ಸೂಚನೆ ಕೊಡುತ್ತಾನೆ.

ರಾಜನ ಸೈನ್ಯಾಧಿಕಾರಿಯಾದ ವೀರಕನೊಡನೆ ಜಗಳವಾಡಿ, ಆರ್ಯಕನನ್ನು ಈ ರೀತಿಯಾಗಿ ಬೀಳ್ಕೊಟ್ಟ ಚಂದನಕನು ಇನ್ನು ಇಲ್ಲಿ ಇರುವುದು ಸರಿಯಲ್ಲ ಎಂದು ಭಾವಿಸಿ, ತನ್ನ ಬಂಧು, ಮಕ್ಕಳೊಡನೆ ಆರ್ಯಕನ ಗುಂಪಿಗೆ ಸೇರಲು ಹೊರಟು ಹೋಗುತ್ತಾನೆ. ( ರಾಜನ ವಿರೋಧಿಯಾದ ಆರ್ಯಕನ ತಂಡವು ಸಾಮಾನ್ಯ ಜನರಿಂದ ಬೆಳೆಯುತ್ತಿರುವ ಪರಿಯನ್ನು ಗಮನಿಸಿರಿ.)

ಆರನೆಯ ಅಂಕದ ಪುರ್ವಾರ್ಧದಲ್ಲಿ ವಿನೋದ,ಕರುಣೆ ಹಾಗು ಶೃಂಗಾರಗಳಿಂದ ತುಂಬಿದ ಈ ನಾಟಕವು, ಆರನೆಯ ಅಂಕದ ಉತ್ತರಾರ್ಧದಲ್ಲಿ ರಂಗಸ್ಥಳದ ಮೇಲೆ ಕೋಲಾಹಲವನ್ನು ತೋರಿಸುತ್ತದೆ, ಪ್ರೇಕ್ಷಕನನ್ನು ಬೆಚ್ಚಿ ಬೀಳಿಸುತ್ತದೆ. ಮುಂದೆನಾದೀತು ಎನ್ನುವ ಕುತೂಹಲವನ್ನು ಪ್ರೇಕ್ಷಕನಲ್ಲಿ ಹುಟ್ಟಿಸುತ್ತದೆ.

ಏಳನೆಯ ಅಂಕ:
ಚಾರುದತ್ತ ಹಾಗು ಮೈತ್ರೇಯರು ಪುಷ್ಪಕರಂಡಕ ಉದ್ಯಾನದಲ್ಲಿ ವಸಂತಸೇನೆಯನ್ನು ನಿರೀಕ್ಷಿಸುತ್ತಿರುವ ದೃಶ್ಯದಿಂದ ಏಳನೆಯ ಅಂಕವು ಪ್ರಾರಂಭವಾಗುತ್ತದೆ. ವರ್ಧಮಾನಕನು ಎಷ್ಟು ತಡಮಾಡಿದನಲ್ಲ, ಏನು ಕಾರಣವಿರಬಹುದು ಎಂದು ಇವರೀರ್ವರು ಆಲೋಚಿಸುತ್ತಿರುವಾಗಲೇ, ವರ್ಧಮಾನಕನು ಬಂದು, ತಡವಾದದ್ದಕ್ಕೆ ಕ್ಷಮೆ ಕೇಳುತ್ತಾನೆ. ಚಾರುದತ್ತನ ಸೂಚನೆಯಂತೆ ಮೈತ್ರೇಯನು ವಸಂತಸೇನೆಗೆ ಇಳಿಯಲು ಸಹಾಯ ಮಾಡಲೆಂದು ಹೋದವನು, ಅಲ್ಲಿ ಪುರುಷನೊಬ್ಬನನ್ನು ಕಂಡು ಬೆಚ್ಚಿ ಬೀಳುತ್ತಾನೆ.

ಚಾರುದತ್ತನು ತಾನೇ ಅಲ್ಲಿ ಹೋಗಿ ನೋಡಿದಾಗ, ಅಲ್ಲಿದ್ದ ಆರ್ಯಕನು ಚಾರುದತ್ತನಿಂದ ರಕ್ಷಣೆಯನ್ನು ಕೋರುತ್ತಾನೆ. ಚಾರುದತ್ತನು ಆರ್ಯಕನಿಗೆ ರಕ್ಷಣೆಯ ಭರವಸೆಯನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ ವಸಂತಸೇನೆ ಏನಾದಳು ಎನ್ನುವ ಚಿಂತೆ ಇದ್ದರೂ ಸಹ, ಚಾರುದತ್ತನು ಧೈರ್ಯ ಹಾಗು ಗಾಂಭೀರ್ಯದಿಂದ ನಡೆದುಕೊಳ್ಳುವ ರೀತಿಯು ಆತನ ಸಂಭಾಷಣೆಯಲ್ಲಿ ವ್ಯಕ್ತವಾಗುತ್ತದೆ.

ಚಾರುದತ್ತನು ಆರ್ಯಕನಿಗೆ ಹೇಳುವ ಮಾತು: ‘ದೈವವೇ ನಿನ್ನನ್ನು ಈ ಕಡೆಗೆ ಕರೆ ತಂದಿತು. ನಿನ್ನನ್ನು ಕಂಡದ್ದು ತುಂಬ ಸಂತೋಷ. ಶರಣಾದ ನಿನ್ನನ್ನು ಕೈ ಬಿಡುವುದರ ಬದಲು ನನ್ನ ಪ್ರಾಣವನ್ನೇ ಕೊಡುವೆನು. ವರ್ಧಮಾನಕ, ಆತನ ಕಾಲಿನ ಸಂಕೋಲೆಯನ್ನು ಬಿಡಿಸಿ ತೆಗೆ’. (ಆರ್ಯಕನ ಕಾಲುಕೋಳಗಳನ್ನು ಬಿಡಿಸಿ, ಆತನು ಸ್ವಾತಂತ್ರ್ಯವನ್ನು ಪಡೆಯಲು ಚಾರುದತ್ತನು ಈ ರೀತಿಯಲ್ಲಿ ಕಾರಣೀಭೂತನಾದನು.)

ಇಷ್ಟೇ ಅಲ್ಲದೆ, ‘ಈ ಪ್ರದೇಶದಲ್ಲಿ ಸಾಕಷ್ಟು ಜನ ಓಡಾಡುತ್ತಿರುವರು. ಗಾಡಿಯಲ್ಲಿ ಹೋದರೆ ನಿನ್ನನ್ನು ಯಾರೂ ನೋಡಲಾರರು. ಆದುದರಿಂದ ಗಾಡಿಯಲ್ಲಿಯೇ ಹೋಗು’ ಎಂದು ತನ್ನ ಗಾಡಿಯನ್ನೂ ಸಹ ಚಾರುದತ್ತನು ಆರ್ಯಕನಿಗೆ ಕೊಡುತ್ತಾನೆ. ಆರ್ಯಕನ ಸಂಕೋಲೆಗಳನ್ನು ಹಾಳು ಬಾವಿಯಲ್ಲಿ ಬಿಸಾಡಲು ಮೈತ್ರೆಯನಿಗೆ ಹೇಳುವುದು ಚಾರುದತ್ತನ ಎಚ್ಚರಿಕೆಯ ಸ್ವಭಾವವನ್ನೂ ತೋರಿಸುತ್ತದೆ.

‘ದೈವವೇ ನಿನ್ನನ್ನು ಈ ಕಡೆಗೆ ಕರೆ ತಂದಿತು.’ ಎಂದು ಚಾರುದತ್ತನು ಆರ್ಯಕನಿಗೆ ಹೇಳುವ ಮಾತಿನಲ್ಲಿ ಅಡಗಿರುವ ವ್ಯಂಗ್ಯವನ್ನು ಗಮನಿಸಿರಿ. ಈ ವ್ಯಂಗ್ಯವು ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿದೆ, ಅದರೆ ಸ್ವತಃ ಚಾರುದತ್ತನಿಗೆ ಅದು ಕಂಡಿಲ್ಲ! ಯಾವ ದೈವವು ಆರ್ಯಕನ ಬೆಂಬಲಕ್ಕೆ ನಿಂತಿತೊ, ಅದೇ ದೈವವು ವಸಂತಸೇನೆಗೆ ಅವಳ ಜೀವನದ ದೊಡ್ಡ ಆಘಾತವನ್ನು ನೀಡಲು ಸಿದ್ಧವಾಗುತ್ತಿದೆ. ಇದಕ್ಕೇ ‘ಅದೃಷ್ಟ’ (=ಕಾಣದೇ ಇರುವದು) ಎನ್ನುತ್ತಾರಲ್ಲವೆ?


ಆರ್ಯಕನ ಕಾಲುಕೋಳಗಳು ವಹಿಸಿದ ಪಾತ್ರವನ್ನು ಇಲ್ಲಿ ಗಮನಿಸಬೇಕು. ಈ ಕೋಳಗಳ ನಾದವನ್ನು, ಬಂಡಿಯ ಚಾಲಕನಾದ ವರ್ಧಮಾನಕನು ಗೆಜ್ಜೆಯ ಧ್ವನಿ ಎಂದು ಭ್ರಮಿಸಿ, ಆರ್ಯಕನನ್ನೇ ವಸಂತಸೇನೆ ಎಂದು ಕಲ್ಪಿಸಿಕೊಂಡನು. ಇದೀಗ ಆರ್ಯಕನ ಕೋಳಗಳನ್ನು ತೆಗೆಯಿಸುವ ಮೂಲಕ, ಆತನನ್ನು ಸ್ವತಂತ್ರನನ್ನಾಗಿ ಮಾಡಲು ಚಾರುದತ್ತನು ಕಾರಣೀಭೂತನಾದನು. ಚಾರುದತ್ತನ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಲು ಆರ್ಯಕನಿಗೆ ಸಾಧ್ಯವಾಗುವುದೋ ಹೇಗೆ ಎನ್ನುವುದನ್ನು ಕೊನೆಯ ಅಂಕದಲ್ಲಿ ನೋಡೋಣ.

ಆರ್ಯಕನು ಗಾಡಿಯಲ್ಲಿ ಹೋದ ಬಳಿಕ, ಚಾರುದತ್ತ ಹಾಗು ಮೈತ್ರೇಯರು ತಾವೂ ತೆರಳುತ್ತಾರೆ.  ಅಷ್ಟರಲ್ಲಿ ಓರ್ವ ಬೌದ್ಧ ಭಿಕ್ಷು ಅಲ್ಲಿಗೆ ಬರುವುದನ್ನು ನೋಡಿದ ಅವರು, ‘ಇದು ಅಪಶಕುನ’ ಎಂದು ಭಾವಿಸಿ, ಬೇರೊಂದು ದಿಕ್ಕನ್ನು ಹಿಡಿಯುತ್ತಾರೆ. ನಮ್ಮ ನಾಟಕಕಾರನು ಮತ್ತೊಮ್ಮೆ ಬೌದ್ಧ ಭಿಕ್ಷುಗಳ ಲೇವಡಿ ಮಾಡುವುದನ್ನು ಇಲ್ಲಿ ಕಾಣಬಹುದು.

ಚಾರುದತ್ತನು ಅಪಶಕುನ ಎಂದು ಭಾವಿಸಿದ ಭಿಕ್ಷುವೇ, ಈ ನಾಟಕದಲ್ಲಿ ಮತ್ತೊಂದು ಮಹತ್ವದ ಪಾತ್ರವನ್ನಾಡುತ್ತಾನೆ.  ಮೊದಲೊಮ್ಮೆ ಚಾರುದತ್ತನಲ್ಲಿ ಸೇವಕನಾಗಿದ್ದ ಸಂವಾಹಕ ಎನ್ನುವವನನ್ನು ವಸಂತಸೇನೆಯು ಜೂಜುಖೋರರಿಂದ ರಕ್ಷಿಸಿದ್ದಳು, (ಎರಡನೆಯ ಅಂಕದಲ್ಲಿ). ಆತ ತನ್ನಂತರ ಬೌದ್ಧ ಭಿಕ್ಷುವಾಗಿದ್ದ. ಈ ಭಿಕ್ಷುವಿನ ಪಾತ್ರವನ್ನು ಮುಂದಿನ ಅಂಕದಲ್ಲಿ ನೋಡೋಣ.

No comments: