Friday, July 1, 2016

ಉಡತಾ ಜ್ಯುಡಿಶಿಯರಿ



ಇದೆಲ್ಲಾ ಆಗಿದ್ದು ನನ್ನ ಅಜ್ಜಿಯಿಂದ.
ಸಾಯುವ ಮೊದಲು ‘ಸತ್ಯ ಹರಿಶ್ಚಂದ್ರ’ಸಿನೆಮಾವನ್ನು ನೋಡಿಯೇ ಸಾಯುವೆ ಎಂದು ನನ್ನ ಅಜ್ಜಿ ಹಟ ಹಿಡಿದಿದ್ದಳು. ‘ಅಣ್ಣಾವರ’ ಮೇಲೆ ಅಷ್ಟು ಪ್ರೀತಿ ಅವಳಿಗೆ. ಹಾಗೂ ಹೀಗೂ ‘ಸತ್ಯ ಹರಿಶ್ಚಂದ್ರ’ ಸಿನೆಮಾದ ರೀಲು ದೊರಕಿಸಿಕೊಂಡೆ. ಆಮೇಲೆ ತಿಳಿಯಿತು. ನಮ್ಮ ಸರ್ವೋಚ್ಚ ನ್ಯಾಯಾಲಯದವರು ನೀಡಿದ ಆದೇಶದ ಮೇರೆಗೆ ಇನ್ನು ಮೇಲೆ ಎಲ್ಲಾ ಸಿನೆಮಾಗಳನ್ನೂ ಸರ್ವೋಚ್ಚ ನ್ಯಾಯಾಲಯದ ಏಕಸದಸ್ಯಪೀಠದೆದುರಿಗೆ ಮೊದಲು ಪ್ರದರ್ಶನ ಮಾಡಬೇಕು ಎಂದು. ಇದನ್ನು ಚಿತ್ರೋದ್ಯಮದ ನಮ್ಮ ಗೆಳೆಯರೊಬ್ಬರು ತಿಳಿಸಿದರು.

‘ಎಂಥಾ ವಿಚಿತ್ರ ನಿಯಮ! ಸೆನ್ಸಾರ್ ಬೋರ್ಡಿನವರು ಈಗಾಗಲೇ ಈ ಸಿನೆಮಾಕ್ಕೆ U ಪ್ರಮಾಣಪತ್ರವನ್ನು ಕೊಟ್ಟಿದ್ದಾರಲ್ಲ’ ಎಂದು ನನ್ನ ಗೆಳೆಯನನ್ನು ಕೇಳಿದೆ.
‘ಅದೆಲ್ಲಾ ಹಳೆಯ ಕಥೆ. ‘ಉಡತಾ ಪಂಜಾಬ’ದ ಬಗ್ಗೆ ಕೇಳಿಲ್ಲವೇನು ನೀನು? ಸೆನ್ಸಾರ್ ಬೋರ್ಡಿನ ಮೇಲೆ ಸುಪ್ರೀಮ್ ಕೋರ್ಟಿನವರು ಕೆಂಡಾಮಂಡಲವಾಗಿದ್ದಾರೆ. ಹಳೆಯ ಸಿನೆಮಾ ಇರಲಿ, ಹೊಸ ಸಿನೆಮಾ ಇರಲಿ, ಎಲ್ಲಾ ಸಿನೆಮಾಗಳನ್ನೂ ಸುಪ್ರೀಮ್ ಕೋರ್ಟಿನವರು ಮೊದಲು ನೋಡುತ್ತಾರೆ. ತಮ್ಮ ಸಲಹೆಗಳನ್ನು ನೀಡುತ್ತಾರೆ.  ಸೆನ್ಸಾರ್ ಬೋರ್ಡಿನದು ಏನಿದ್ದರೂ ಪ್ರಮಾಣಪತ್ರ ಕೊಡುವ ಕೆಲಸ ಅಷ್ಟೇ!’

 ‘ಸತ್ಯ ಹರಿಶ್ಚಂದ್ರ’ ಸಿನೆಮಾದ ಡಬ್ಬಾ ಹಿಡಿದುಕೊಂಡು ದಿಲ್ಲಿಗೆ ಹೋದೆ. ದಿಲ್ಲಿಯಲ್ಲಿ ನನ್ನ ಹಳೆಯ ಗೆಳೆಯನೊಬ್ಬ ಇದ್ದಾನೆ. ಅವನ ಮನೆಯಲ್ಲಿಯೇ ಠಿಕಾಣಿ ಹೂಡಿದೆ. ನನ್ನ ಗೆಳೆಯನ ಮಗನು ಸಕಲಕಲಾವಲ್ಲಭ. ಅವನಿಂದಾಗಿ ಕೆಲಸ ಸುಲಭವಾಯಿತು. ಏಕಸದಸ್ಯಪೀಠದೆದುರಿಗೆ ಅವನೇ ನನ್ನನ್ನು ಕರೆದುಕೊಂಡು ಹೋದ.

ನನ್ನ ಸರದಿ ಬಂದೊಡನೆ ಡಬ್ಬಾ ಹಿಡಿದುಕೊಂಡು ಒಳಗೆ ಕಾಲಿಟ್ಟೆ. ಪೀಠದ ಮೇಲೆ ತಲೆಯನ್ನು ಬೋಳಿಸಿಕೊಂಡು, ತಲೆಯ ಎರಡೂ ಬದಿಗಳಲ್ಲಿ ಹಾಗು ನಡುಭಾಗದಲ್ಲಿ ಜುಟ್ಟನ್ನು ಬಿಟ್ಟುಕೊಂಡು, ಕೋತಿಯಂತೆ ಕಾಣುತ್ತಿದ್ದ ಜೀನ್ಸಧಾರಿ ತರುಣನೊಬ್ಬ ಕುಳಿತುಕೊಂಡಿದ್ದ. ಗದ್ದದ ಮೇಲೆ ಅರ್ಧ ಕತ್ತರಿಸಿದ ಗಡ್ಡ ಬೇರೆ. ಈತ ನ್ಯಾಯಾಧೀಶನೆ ಎಂದು ನನಗೆ ಆಶ್ಚರ್ಯವಾಯಿತು. ಆದರೆ ನನ್ನ ಗೆಳೆಯನ ಮಗನ ಸನ್ನೆಯನ್ನೆ ಅರಿತು, ನಾನು ಈ ಕೋತಿಗೇ ಒಂದು ನಮಸ್ಕಾರ ಮಾಡಿದೆ.

‘ಏನ್ರೀ, ನಿಮ್ಮ ಚಿತ್ರದ ಹೆಸರೇನು?’ ನ್ಯಾಯಾಧೀಶರು ಕೇಳಿದರು.
‘ಸತ್ಯ ಹರಿಶ್ಚಂದ್ರ, ಸsರ’, ನಾನು ಉತ್ತರಿಸಿದೆ.
ನ್ಯಾಯಾಧೀಶರು ಪಕಪಕನೆ ನಕ್ಕರು.
‘ನಿಮ್ಮ ಚಿತ್ರಕ್ಕೆ ಪ್ರಮಾಣಪತ್ರ ಕೊಡಲು ಸಾಧ್ಯವಿಲ್ಲ, ನಿಮ್ಮ ಡಬ್ಬಾ ಹೊತ್ತುಕೊಂಡು ಅಬೌಟ್-ಟರ್ನ ಮಾಡಿರಿ’, ಎಂದ ಆ ಪಡ್ಡೆ ಹುಡುಗ.
`ಸsರ್, ದಯವಿಟ್ಟು ನನಗೊಂದು ಅವಕಾಶ ಕೊಡರಿ. ಈ ಚಿತ್ರವನ್ನು ನೋಡಿಯೇ ಸಾಯುತ್ತೇನೆ ಎಂದು ನನ್ನ ಅಜ್ಜಿ ಹಟ ಮಾಡುತ್ತಿದ್ದಾಳೆ. ಅವಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಅವಳು ಹರಿಶ್ಚಂದ್ರನನ್ನು ನೋಡಿಯೇ ಸಾಯಬೇಕು’ ಎಂದು ನಾನು ಗೋಗರೆದು ಹೇಳಿದೆ.
ನ್ಯಾಯಾಧೀಶರ ಕಣ್ಣಲ್ಲಿ ಕರುಣೆ ಮಿಂಚಿತು.
‘ಅಲ್ಲಪ್ಪ, ನಾವು ಕಲಿಯುಗದಲ್ಲಿ ಇದ್ದೇವೆ ಎನ್ನುವುದು ನಿಮಗೆ ಗೊತ್ತಿಲ್ಲವೆ? ಇಂತಹ ಸತ್ಯಯುಗದ ಚಿತ್ರವನ್ನು ಏಕೆ ತೋರಿಸುತ್ತೀರಿ?’ ನ್ಯಾಯಾಧೀಶರು ಕೇಳಿದರು.
‘ಸsರ್, ಸತ್ಯ ಹರಿಶ್ಚಂದ್ರ ಭಾರತೀಯರಿಗೆ ಒಬ್ಬ role model. ಇಂತಹ ಚಿತ್ರಗಳನ್ನು ನೋಡುವದರಿಂದ ನಮ್ಮ ಯುವಪೀಳಿಗೆಯ ನೈತಿಕ ಮಟ್ಟ ಸುಧಾರಿಸಲಿ ಎನ್ನುವುದು ನಮ್ಮ ಉದ್ದೇಶ’ ಎಂದು ಬೊಗಳೆ ಬಿಟ್ಟೆ.

ನ್ಯಾಯಾಧೀಶರು ಕಣ್ಣುಗಳು ಕೋಪದಿಂದ ಕೆಂಪಾದವು. ‘ರೀ ಮಿಸ್ಟರ್, ವಾಸ್ತವತೆ ಏನು ಎನ್ನುವುದು ನಿಮಗೆ ಗೊತ್ತೇನ್ರಿ? ಈ ಕಾಲದಲ್ಲಿ ಯಾರಾದರೂ ಸತ್ಯವನ್ನು ಹೇಳುತ್ತಾರೆಯೆ? ಇಂತಹ ಅವಾಸ್ತವ ಚಿತ್ರವನ್ನು ತೋರಿಸುವದರಿಂದ, ಹದಿವಯಸ್ಸಿನ ಹುಡುಗರು ಮನೋರೋಗಿಗಳಾಗಲಿಕ್ಕಿಲ್ಲವೆ? ಸತ್ಯ ಹರಿಶ್ಚಂದ್ರ, ಮಹಾತ್ಮಾ ಗಾಂಧಿ ಇಂಥವರೆಲ್ಲ role model ಆದರೆ,ಭಾರತದ ಗತಿ ಏನು? ಆಧುನಿಕ ಕಾಲಕ್ಕೆ ಆಧುನಿಕ role model ಬೇಕಪ್ಪಾ. ಒಂದು ಸಲ ‘ಉಡತಾ ಪಂಜಾಬ’ ಚಿತ್ರವನ್ನು ನೋಡಿಕೊಂಡು ಬನ್ನಿರಿ. ನಿಮಗೇ ಅರ್ಥವಾಗುತ್ತದೆ. ಈಗಂತೂ  ಎತ್ತಿಕೊಂಡು ಹೋಗಿರಿ ಈ ಡಬ್ಬಾನ್ನ’, ನ್ಯಾಯಾಧೀಶರು ಗುಡುಗಿದರು.
ಥಟ್ಟನೆ ನ್ಯಾಯಾಧೀಶರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿದೆ. ‘ಸsರ್, ನೀವು ಬೇಕಾದಷ್ಟು ಕಟ್ಸ್‍ಗಳನ್ನು ಮಾಡಿರಿ. ಆದರೆ ಚಿತ್ರಕ್ಕೆ ಪ್ರಮಾಣಪತ್ರವನ್ನು ದಯವಿಟ್ಟು ಕೊಡಿಸಿರಿ’ ಎಂದು ವಿನಂತಿಸಿದೆ.

ಸರಿ, ನ್ಯಾಯಾಧೀಶರು ಚಿತ್ರವನ್ನು ವೀಕ್ಷಿಸಿದರು, ನಡುನಡುವೆ ಮುಖವನ್ನು ಸಿಂಡರಿಸುತ್ತಿದ್ದರು.
‘ಈ ಚಿತ್ರಕ್ಕೆ ಈಗಾಗಲೇ ಹಳೆಯ ಸೆನ್ಸಾರ್ ಬೋರ್ಡಿನವರು U ಪ್ರಮಾಣಪತ್ರ ಕೊಟ್ಟಿದ್ದಾರೆ. ನಿಮಗೆ ಎಲ್ಲರೂ ನೋಡಬಹುದಾದ ಪ್ರಮಾಣಪತ್ರ ಬೇಕಾದರೆ, ಈ ಚಿತ್ರಕ್ಕೆ ಕೆಲವೊಂದು addsಗಳನ್ನು ಹಾಗು replacementsಗಳನ್ನು ಮಾಡಬೇಕಾಗುತ್ತದೆ, ತಿಳಿಯಿತೊ?’
‘ಆಗಲಿ, ಸsರ್’, ಎಂದೆ.
‘ಮೊದಲನೆಯದಾಗಿ ಚಿತ್ರದ ಹೆಸರನ್ನು ‘ಉಡತಾ ಹರಿಶ್ಚಂದ್ರ’ ಎಂದು ಬದಲಾಯಿಸಬೇಕು. ದರಬಾರ್ ದೃಶ್ಯದೊಂದಿಗೆ ಚಿತ್ರವನ್ನು ಪ್ರಾರಂಭಿಸಿ, ಹರಿಶ್ಚಂದ್ರನು ಭಾಂಗ್ ಸೇವಿಸುತ್ತ ಕೂತಿರುವದನ್ನು ತೋರಿಸಬೇಕು. ಆತನ ಎದುರಿಗೆ ಆಸ್ಥಾನ ನರ್ತಕಿಯರು ಕ್ಯಾಬರೆ ಡಾನ್ಸ್ ಮಾಡುತ್ತಿರಲಿ. ಅವರ ಕುಣಿತ ಮುಗಿಯುತ್ತಿದ್ದಂತೆ, ಹರಿಶ್ಚಂದ್ರನೂ ಸಹ ಅವರ ಜೊತೆಗೆ ಕುಣಿಯುವದನ್ನು ತೋರಿಸಿರಿ.

‘ಆದರೆ ಸsರ್,…..ರಾಜಾ ಹರಿಶ್ಚಂದ್ರ ಹೀಗಿರಲಿಲ್ಲ..’ ಎಂದು ನಾನು ರಾಗವೆಳೆದೆ.
‘ವಾಸ್ತವತೆಯನ್ನು ತೋರಿಸಿರಿ, ಮಿಸ್ಟರ್! ಆತ ರಾಜಾ ಇದ್ದನಲ್ಲವೆ? ಹಾಗಿದ್ದಾಗ, ಆತ ಇಂತಹ ಎಲ್ಲವನ್ನೂ ಮಾಡುತ್ತಿರಲೇ ಬೇಕು.’
‘ಸsರ್, ಆತನ ಎದುರಿಗೆ ವಿಶ್ವಾಮಿತ್ರನು ಸೃಷ್ಟಿಸಿದ ಹುಡುಗಿಯರು ನಾಚು ಮಾಡುವ ದೃಶ್ಯವೊಂದು ಬರುತ್ತದೆ. ಆವಾಗಲೂ ಇಂತಹದೆ ಒಂದು ನಂಗಾ ನಾಚ್ ತೋರಿಸೋಣವೆ?’. ನಾನು ಕೇಳಿದೆ.
‘ಬೇಡ,ಅಲ್ಲಿ ಹುಡುಗಿಯರ ಕುಣಿತದ ಬದಲು ಬೆತ್ತಲೆ ಹುಡುಗರು ಕುಣಿಯುವ ಒಂದು ಸೀನ್ ಹಾಕಿರಿ’, ನ್ಯಾಯಾಧೀಶರು ಹೇಳಿದರು.
‘ಸsರ್, ಆದರೆ ಆ ಹುಡುಗಿಯರು ಹರಿಶ್ಚಂದ್ರನನ್ನು ಮದುವೆಯಾಗಲು ಬಂದಿದ್ದರು’, ನಾನು ಹೇಳಿದೆ.
‘ಅದಕ್ಕೇನೀಗ? ಈ ಹುಡುಗರೂ ಸಹ ಅದೇ ಡಿಮಾಂಡ್ ಮಾಡಲಿ, ತಪ್ಪೇನಿದೆ? LGBTಯನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ. ಹರಿಶ್ಚಂದ್ರನು ಮಂಗಳಮುಖಿಯರನ್ನು ಮದುವೆಯಾದನು ಎಂದು ತೋರಿಸುವದರಿಂದ ನಿಮ್ಮ ಚಿತ್ರಕ್ಕೆ ಇನ್ನಷ್ಟು ವಾಸ್ತವತೆ ಬರುತ್ತದೆ.’

ಈ ಸಿನೆಮಾದಲ್ಲಿ ನಮ್ಮ ನ್ಯಾಯಾಧೀಶರು ಮೆಚ್ಚಿಕೊಂಡು ಖುಶಿಪಟ್ಟ ದೃಶ್ಯವೂ ಇತ್ತು ಎಂದರೆ ಯಾರಿಗಾದರೂ ಆಶ್ಚರ್ಯವಾದೀತು. ಸ್ಮಶಾನದಲ್ಲಿ ಕಳ್ಳು ಕುಡಿಯುತ್ತ ಕುಳಿತ ಎಂ. ಪಿ. ಶಂಕರರ ಎದುರಿಗೆ ಇಬ್ಬರು ಹುಡುಗಿಯರು ಕುಣಿಯುವ ದೃಶ್ಯವದು.
‘ನಿನ್ನ ನಾನು, ನನ್ನ ನೀನು,
ಕಾದುಕೊಂಡು ಕೂತುಕೊಂಡ್ರೆ
ಈ ಆಸೇವು ತೀರೊದೆಂಗೆ ಚಂದಮಾಮಾ,
ಬೇಕಾದ್ದು ಕೊಡುತೀಯಾ ಚಂದಮಾಮಾ’
ಎನ್ನುವ ಹಾಡಿನ ದೃಶ್ಯವಿದು.
ಸಿನೆಮಾದಲ್ಲಿಯ ಎಮ್.ಪಿ.ಶಂಕರನಿಗಿಂತ ಮೊದಲು ನಮ್ಮ ನ್ಯಾಯಾಧೀಶರೇ ವ್ಯಾಸ ಮಹರ್ಷಿಯಂತೆ ಕೈಎತ್ತಿ ಕೂಗಿದರು: ‘ಕೊಡ್ತೀವಿ, ಕೊಡ್ತೀವಿ!’ (‘ಕೈ ಎತ್ತಿ ಕೂಗುತಿಹೆ ಕೇಳುವರೆ ಇಲ್ಲ’—ವ್ಯಾಸ ಮಹರ್ಷಿ)
‘ಅಹಾ! ಈ ದೃಶ್ಯವಾದರೆ ಪರವಾಗಿಲ್ಲ. ವಾಸ್ತವತೆಗೆ ಹತ್ತಿರವಾಗಿದೆ’ ಎಂದು ನ್ಯಾಯಾಧೀಶರು ಶಭಾಶಗಿರಿ ಕೊಟ್ಟರು.

‘ಸsರ್, ಚಿತ್ರದ ಕೊನೆಯಲ್ಲಿ ಸತ್ಯಕ್ಕೆ ಜಯವಾಗುತ್ತದೆ ಎಂದು ಹೇಗೆ ತೋರಿಸುವುದು?’, ನನ್ನ ಮತ್ತೊಂದು ಪ್ರಶ್ನೆ.
‘ಎಂಥಾ ಮೂರ್ಖರಪ್ಪಾ ನೀವು? ವಾಸ್ತವತೆಗೆ ಜಯವಾಗುತ್ತದೆ ಎನ್ನುವುದನ್ನು ತೋರಿಸಬೇಕೆ ಹೊರತು, ಸತ್ಯಕ್ಕೆ ಜಯವಾಗುತ್ತದೆ ಎಂದಲ್ಲ. ಹರಿಶ್ಚಂದ್ರನಿಂದ ಹೊಡೆದುಕೊಂಡ ದುಡ್ಡನ್ನೆಲ್ಲ ವಿಶ್ವಾಮಿತ್ರನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದ ಎಂದು ತೋರಿಸಿರಿ. ರಿಯೋ ಕಾರ್ನಿವಾಲ್‍ದಲ್ಲಿ ಮಜಾ ಮಾಡುತ್ತಿದ್ದ ಎನ್ನುವುದನ್ನು ತೋರಿಸಿರಿ’, ನ್ಯಾಯಾಧೀಶರು ಹೇಳಿದರು.
‘ಸsರ್, ವಿಶ್ವಾಮಿತ್ರನ ಜೊತೆಗೆ, ನಮ್ಮ ರಾಜ್ಯದ ಶಾಸಕರನ್ನೂ ತೋರಿಸಲೆ?’, ನಾನು ಕೇಳಿದೆ.
‘ಭಪ್ಪರೆ! ನೀವು ವಾಸ್ತವತೆಯ ಪಾಠವನ್ನು ಎಷ್ಟು ಬೇಗನೇ ಕಲಿತು ಬಿಟ್ಟಿರಲ್ಲ!’, ನ್ಯಾಯಾಧೀಶರು ಮುಗುಳಗುತ್ತ ಹೇಳಿದರು, ‘ನಾನು ಸೂಚಿಸಿದ addsಗಳನ್ನು ಮಾಡಿಕೊಂಡು, ಮತ್ತೆ ಬನ್ನಿ, ಒಂದು ತಿಂಗಳಿನ ನಂತರ’.

ನ್ಯಾಯಾಧೀಶರು ಸೂಚಿಸಿದ ಬದಲಾವಣೆಗಳನ್ನು ಮಾಡಿಕೊಂಡು, ಒಂದು ತಿಂಗಳಿನ ನಂತರ, ಮತ್ತೊಮ್ಮೆ ‘ಉಡತಾ ಜ್ಯುಡಿಶಿಯರಿ’ ನ್ಯಾಯಾಲಯಕ್ಕೆ ಹೋದೆ. ಬದಲಾವಣೆಗಳನ್ನು ನೋಡಿದ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದರು. ಮೂಲೆಯಲ್ಲಿ ಕುಳಿತುಕೊಂಡ, ಜೋಲು ಮೋರೆಯ ಒಬ್ಬ ಸಹಾಯಕನನ್ನು ಕರೆದು ಹೇಳಿದರು:
‘ಏ ನಿಹಲಾನಿ, ಈ ಚಿತ್ರಕ್ಕೆ S ಪ್ರಮಾಣಪತ್ರವನ್ನು ಕೊಡು’
‘S ಅಂದರೆ ಏನು, ಸsರ್?’ ಎಂದು ಕೇಳಿದೆ.
‘S ಅಂದರೆ sexy ಎಂದು ಅರ್ಥ. ಎಲ್ಲರೂ ನೋಡಬಹುದಾದ ಚಿತ್ರಗಳಿಗೆ S ಪ್ರಮಾಣಪತ್ರವನ್ನು ಕೊಡುತ್ತೇವೆ.
ಆದರ್ಶವಾದಿ ಚಿತ್ರಗಳಿಗೆ H ಪ್ರಮಾಣಪತ್ರ ಕೊಡುತ್ತೇವೆ. H ಅಂದರೆ horrible ಎಂದರ್ಥ. H ಚಿತ್ರಗಳನ್ನು ಹದಿನೆಂಟು ವರ್ಷದ ಒಳಗಿನ ಹುಡುಗರು ನೋಡಕೂಡದು. ಪಾಪ, impressionable ವಯಸ್ಸಿನ ಹುಡುಗರಲ್ಲವೇ ಅವರು. ಅವರ ಮೇಲೆ ಕೆಟ್ಟ ಪರಿಣಾಮ ಆಗಬಾರದು ನೋಡಿ.’
`‘ಸsರ್, U ಪ್ರಮಾಣಪತ್ರವನ್ನು ಈಗ ಕೊಡುತ್ತಿಲ್ಲವೆ?’ ಎಂದು ಧೈರ್ಯ ಮಾಡಿ ಕೇಳಿದೆ.
‘ಯಾಕಿಲ್ಲ? ಒಂದು ಉದಾಹರಣೆ ಕೊಡುತ್ತೇನೆ. ನಿಮಗಿಂತಲೂ ಮೊದಲು ಒಬ್ಬರು ‘ಸತ್ಯವಾನ್-ಸಾವಿತ್ರಿ’ ಚಿತ್ರವನ್ನು ತೆಗೆದುಕೊಂಡು ಬಂದಿದ್ದರು. ಅವರಿಗೆ U ಕ್ಕಿಂತ ಹೆಚ್ಚಿನ ಪ್ರಮಾಣಪತ್ರವನ್ನು ಕೊಟ್ಟಿದ್ದೇವೆ.’

ನನ್ನ ಮುಖದ ಮೇಲಿನ ದಿಗ್ಭ್ರಮೆಯನ್ನು ಕಂಡ ನ್ಯಾಯಾಧೀಶರು ವಿವರಿಸಿದರು. ‘ಸತ್ಯವಾನ್-ಸಾವಿತ್ರಿ’ ಚಿತ್ರದಲ್ಲಿ ಸತ್ಯವಾನನ ಸಾವಿನ ಮೊದಲು, ಅವರೀರ್ವರ ಬೆಡ್ ರೂಮ್ ದೃಶ್ಯಗಳನ್ನು ತೋರಿಸಬೇಕು, ವಾತ್ಸ್ಯಾಯನನ ಕಾಮಸೂತ್ರದ ವಿವಿಧ ಭಂಗಿಗಳನ್ನು ತೋರಿಸಬೇಕು ಎನ್ನುವ ಕಂಡಿಶನ್ ಹಾಕಿದ್ದೆವು. ಆದರೆ ನಮ್ಮ ನಿರ್ಮಾಪಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಸತ್ಯವಾನನಿಗೆ ಕೈಕೊಟ್ಟ ಸಾವಿತ್ರಿಯು ಯಮನ ಜೊತೆಗೆ ಕೋಣನ ಮೇಲೆ ಫರಾರಿಯಾದ ದೃಶ್ಯವನ್ನು  ತೋರಿಸಿದರು. ಆದುದರಿಂದ ಅವರಿಗೆ U ಸರ್ಟಿಫಿಕೇಟಿಗಿಂಗ ಹೆಚ್ಚಿನ ಪ್ರಮಾಣಪತ್ರ ಕೊಟ್ಟೆವು.’
‘ಯಾವುದು ಸsರ್, ಅದು’ ಎಂದು ಕುತೂಹಲದಿಂದ ಕೇಳಿದೆ.
‘ಅದಕ್ಕೆ FS ಪ್ರಮಾಣಪತ್ರ ಎನ್ನುತ್ತಾರೆ. FS ಅಂದರೆ F**k Shit’ ಎನ್ನುವದರ ಸಂಕ್ಷಿಪ್ತ ರೂಪ. ಈ ಚಿತ್ರವನ್ನು ಶಾಲಾಮಕ್ಕಳಿಗೆ ಪುಕ್ಕಟೆಯಾಗಿ ತೋರಿಸಬೇಕು ಎನ್ನುವ ಕಂಡಿಶನ್ ಇದೆ. ಇದರಿಂದ ಅವರಿಗೆ sex education ಕೊಟ್ಟಂತಾಗುವುದು,ಅಲ್ಲವೆ?

ನ್ಯಾಯಾಧೀಶರಿಗೆ ಧನ್ಯವಾದ ಹೇಳಿ, ಮೂಲೆಯಲ್ಲಿ ನೊಣ ಹೊಡೆಯುತ್ತ ಕುಳಿತ ನಿಹಲಾನಿಯ ಹತ್ತಿರ ಹೋದೆ.
ನಿಹಲಾನಿ ನಮ್ಮ ಚಿತ್ರದ ಮೇಲೆ S ಎಂದು ಬರೆದು, ಸೆನ್ಸಾರ್ ಬೋರ್ಡ ಎಂದು ಬರೆದ ಸಿಕ್ಕಾ ಒತ್ತಿ ಕೊಟ್ಟ.

ನ್ಯಾಯಾಧೀಶರು ತಮ್ಮ ವಿಶ್ರಾಂತಿ ಕೋಣೆಗೆ ಹೋದರು. ಅವರಿಗೆ ಧನ್ಯವಾದ ಹೇಳಲು ನಾನೂ ಅಲ್ಲಿಯೇ ಹೋದೆ. ‘ಕೂತುಕೊಳ್ಳಿ’ ಎಂದು ಹೇಳುತ್ತ, ನ್ಯಾಯಾಧೀಶರು ಸಾವಕಾಶವಾಗಿ ತಾವು ಹಾಕಿಕೊಂಡ ವಿಗ್ ತೆಗೆದರು. ತಲೆತುಂಬ ಬಿಳಿ ಕೂದಲುಗಳಿರುವ ಅವರನ್ನು ಕಂಡು ಆಶ್ಚರ್ಯಚಕಿತನಾದೆ. ಬಳಿಕ ತಮ್ಮ ಜೀನ್ಸ್ ತೆಗೆದು ಹಾಕಿ, ಒಂದು ದೊಗಳೆ ಪ್ಯಾಂಟ್ ಹಾಕಿಕೊಂಡರು. ನಾನು ಅಲ್ಲಿ ನೋಡಿದ ಆಧುನಿಕ ತರುಣನೆಲ್ಲಿ, ಈಗ ನೋಡುತ್ತಿರುವ ವಯೋವೃದ್ಧನೆಲ್ಲಿ?’

‘ಇದೇನು, ಸsರ್? ತಾವು ಪಡ್ಡೆ ಹುಡುಗ ಎಂದು ಮಾಡಿದ್ದೆ. ಈಗ ನೋಡಿದರೆ…..!’
ನ್ಯಾಯಾಧೀಶರು ಮುಗಳ್ನಕ್ಕರು.
‘ನೋಡಿ ಸ್ವಾಮಿ, ‘ಉಡತಾ ಪಂಜಾಬ’ ಚಿತ್ರವು ಸರ್ವೋಚ್ಚ ನ್ಯಾಯಾಲಯದ ಮೇಲೆ ಭಯಂಕರ ಪರಿಣಾಮವನ್ನು ಮಾಡಿತು. ನಲುವತ್ತು ವರ್ಷಗಳ ಕೆಳಗೆ ನ್ಯಾಯಾಂಗಕ್ಕೆ ‘ಸೋತಾ ಜ್ಯುಡಿಶಿಯರಿ’ ಎಂದು ಕರೆಯುತ್ತಿದ್ದರು. ಇಪ್ಪತ್ತು ವರ್ಷಗಳಿಂದೀಚೆಗೆ, ನ್ಯಾಯಾಂಗವು proactive ಆಯಿತು. ಅದನ್ನು ‘ಜಾಗತಾ ಜ್ಯುಡಿಶಿಯರಿ’ ಎಂದು ಕರೆದರು. ಇದೀಗ ಇಪ್ಪತ್ತೊಂದನೆಯ ಶತಮಾನ, ‘ಉಡತಾ ಪಂಜಾಬ’ದ ಕಾಲ. ನ್ಯಾಯಾಂಗವೂ ಸಹ ಕಾಲಕ್ಕೆ ತಕ್ಕಂತ ತಾಳ ಹಾಕಲು ನಿರ್ಣಯಿಸಿದೆ. ಅದರ ಫಲವಾಗಿ  ಅತ್ಯಾಧುನಿಕವಾಗಿದೆ. ಹಳೆಯ ಕಾಲದಲ್ಲಿ ನ್ಯಾಯಾಧೀಶರು ಬಿಳಿಯ ವಿಗ್ ಹಾಕಿಕೊಂಡು, ಕರಿಯ ಕೋಟಿನಲ್ಲಿ ನ್ಯಾಯಾಲಯಕ್ಕೆ ಬರುತ್ತಿದ್ದರಲ್ಲವೆ?  ಇದೀಗ ನಾವು ‘ಪಂಕ್ ವಿಗ್’ ಧರಿಸಿ, ಜೀನ್ಸ್ ಹಾಕಿಕೊಂಡು ನ್ಯಾಯಾಲಯಕ್ಕೆ ಬರುತ್ತೇವೆ. ಅರ್ಥವಾಯಿತೆ?
‘ಅರ್ಥವಾಯಿತು ಸsರ್, ‘ಉಡತಾ ಭಾರತ ಜೈ ಹೋ’ ಎಂದು ಅವರಿಗೆ ಸಲಾಮು ಹೊಡೆದು’ ಹೊರಬಂದೆ.

‘ಉಡತಾ ಹರಿಶ್ಚಂದ್ರ’ ಸಿನೆಮಾವನ್ನು ನಮ್ಮ ಅಜ್ಜಿಗೆ ತೋರಿಸಿದೆ.
ಅಜ್ಜಿ ಗೊಟಕ್ ಎಂದಳು.