Monday, October 10, 2016

ಸೀಮೋಲ್ಲಂಘನ............................ಬೇಂದ್ರೆ


ಹೋಗೋಣ ಬಾ ! ಇನ್ನು ಸೀಮೆಯನು ದಾಟಿ !!

ಪಂಗಡವ ಪಂಗಡವ ವಿಂಗಡಿಸಿ ಕೆಟ್ಟು
ಸಂಗಡಿಸಿ ಕೂಡಿರುವ ಬಾಳುವೆಯ ಗುಟ್ಟು
ಕಂಗೊಳಿಸೆ ಹಾಗಿರುವ ಬಿರುದನ್ನು ತೊಟ್ಟು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಇಲ್ಲಸಲ್ಲದ ಕಾಲತೊಡರುಗಳ ಕಡಿದು
ಬಲ್ಲವರು ತೋರಿರುವ ಹಾದಿಯನು ಹಿಡಿದು
ಎಲ್ಲರೂ ಒಂದಾಗಿ ಒಂದಾಗಿ ನಡೆದು
ಹೋಗೋಣ ನಾವೆಲ್ಲ ಸೀಮೆಯನು ದಾಟಿ.

ಅಕ್ಕತಂಗೆಂದರಿಗೆಲ್ಲ ವಿದ್ಯೆಯನು ಕಲಿಸಿ
ಚಿಕ್ಕಮಕ್ಕಳ ಬುದ್ಧಿ ಮುದ್ದಾಡಿ ಬಲಿಸಿ
ನಕ್ಕು ನಲಿದಾಡಿ ಹಿರಿಕಿರಿಯರನು ಒಲಿಸಿ
ಅಡಿಗಡಿಗೆ ಹೋಗೋಣ ಸೀಮೆಯನು ದಾಟಿ.

ಮಾಡಿದರೆ ನನ್ನಿ ತಾ ಮಾಡುವರು ನನ್ನಿ
ನೋಡಿ ನೋಡಿದವರ್ಗೆ ಬನ್ನಿ ಬನ್ನೆನ್ನಿ
ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

ಹಿಂದಿರುವ ಹಗೆಯೀಗ ಅಂಗಾರವಾಯ್ತು
ಮುಂದಿರುವ ಗೆಳೆತನವೆ ಸಿಂಗಾರವಾಯ್ತು
ಇಂದು ಮುಟ್ಟಿದ ಪತ್ರಿ ಬಂಗಾರವಾಯ್ತು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಒಂದೆ ತಾಯಿಯ ಮಕ್ಕಳಂತೆ ಒಂದಾಗಿ
ಅಂದಗೇಡನು ಕೆಡಿಸಿ ಚೆಲುವು ಚೆಂದಾಗಿ
ಮುಂದಿರುವ ಜನರ ಸರಿಮೇಲು ಮುಂದಾಗಿ
ಸಾಗೋಣ ಹೋಗೋಣ ಸೀಮೆಯನು ದಾಟಿ.

ಹೋಗಲಾಡಿಸಿಕೊಂಡು ತಿರುಕತನವನ್ನು
ನೀಗಲಾಡಿಸುತ ಮನೆಮುರುಕತನವನ್ನು
ಬೇಗದಿಂ ಕರುನಾಡ ಹರುಕತನವನ್ನು
ಕಳೆದು ಹಿರಿದಾಗೋಣ ಸೀಮೆಯನು ದಾಟಿ.

ಪಡುವಣದ ಶಕ್ತಿಯಲಿ ಮೂಡಣದ ಭಕ್ತಿ
ಬಡಗಣದ ಭುಕ್ತಿಯಲಿ ತೆಂಕಣದ ಮುಕ್ತಿ
ಒಡನೊಡನೆ ನೆರೆಬೆರೆತು ಹೊಸತಾಯ್ತು ಯುಕ್ತಿ
ಹೀಗೆ ಇಡಿಯಾಗೋಣ ಸೀಮೆಯನು ದಾಟಿ.

ದೇವಿಯರ ನಾಡೆಂತು ಹಿಂದುಳಿಯಬಹುದು?
ಭಾವಭಕ್ತಿಯವೆಂತು ಹಗೆಯಾಗಲಹುದು?
ಹೇವದಿಂ ಗುರಿಯಿಟ್ಟು ಮೇಳ ಹೊರಟಿಹುದು
ಏರಿಕೆಯ ಕರಿನಾಡ ಸೀಮೆಯನು ದಾಟಿ.
********************************************

ವಿಜಯದಶಮಿಯಂದು ಬೇಂದ್ರೆಯವರು ‘ಸೀಮೋಲ್ಲಂಘನ’ದ ಕರೆ ನೀಡಿದ್ದಾರೆ. ಅವರ ಸೀಮೋಲ್ಲಂಘನವು ನಮ್ಮನ್ನೇ ನಾವು ಗೆಲ್ಲಿಕೊಳ್ಳುವ ಪರಾಕ್ರಮದಲ್ಲಿದೆಯೇ ಹೊರತು, ಪರರ ಆಕ್ರಮಣದಲ್ಲಿಲ್ಲ. ಈ ಕವನ ‘ಗರಿ’ ಸಂಕಲನದಲ್ಲಿದೆ. ಗರಿ ಮೊದಲು ಪ್ರಕಟವಾಗಿದ್ದು ೧೯೩೨ರಲ್ಲಿ. ಆಗಿನ್ನೂ ಕರ್ನಾಟಕದ ಏಕೀಕರಣ ಕನಸಿನ ಮಾತಾಗಿತ್ತು. ಆ ಕನಸು ಈ ಕವನದಲ್ಲೂ ಬಿಂಬಿಸಿದೆ. ಕರುನಾಡ ಏಳ್ಗೆಯನ್ನು ಈ ಕವನ ಕಾಣುತ್ತಿದೆ. 

ಬೇಂದ್ರೆಯವರ ಅಪಾರ ಕಲ್ಪನಾಪ್ರತಿಭೆಯು, ಪದಸಾಮರ್ಥ್ಯವು ಎಲ್ಲ ಸೀಮೆಗಳನ್ನು ದಾಟಿರುವುದನ್ನು ನಾವು ಈ ದೀರ್ಘ ಕವನದಲ್ಲಿ ನೋಡಬಹುದು.

ವಿಜಯದಶಮಿಯ ದಿನ ಬೇಂದ್ರೆಯವರ ಜೊತೆಜೊತೆಗೇ ನಾವೂ ಸಹ ಉಗ್ಗಡಿಸೋಣ, ಬನ್ನಿ : 

ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

4 comments:

Badarinath Palavalli said...

ಮೊದಲು ನಿಮಗೂ ಮತ್ತು ತಮ್ಮ ಕುಟುಂಬದವರಿಗೆಲ್ಲರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಶುಭಾಶಯಗಳು.

ಸಕಾಲಿಕವಾಗಿ ಬೇಂದ್ರೆಯವರ 'ಸೀಮೋಲ್ಲಂಘನ' ಓದಿಸಿದ ತಮಗೆ ಅನಂತ ಧನ್ಯವಾದಗಳು.

'ಹೋಗಲಾಡಿಸಿಕೊಂಡು' ಚರಣದ ಕಿವಿಹಿಂಡುವಿಕೆ ನಮಗೆ ದಾರಿದೀಪ.

ಕೊನೆಯ ಮಾತು, ವಾಮನ ಬೇಂದ್ರೆಯವರ ನಿಧನ ತುಂಬಾ ನೋವು ಕೊಟ್ಟಿತು ಸಾರ್. ತಂದೆಯನ್ನು ಆ ಪರಿ ಪ್ರೀತಿಸಿವ ಮಕ್ಕಳು ಎಲ್ಲರಿಗೂ ದೊರೆಯಲಿ.

sunaath said...

ಬದರಿನಾಥರೆ,
ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ದಸರೆಯ ಶುಭಾಶಯಗಳು. ಭುವನೇಶ್ವರಿಯು ನಿಮ್ಮನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.

Srikanth Manjunath said...

"ಇಲ್ಲಸಲ್ಲದ ಕಾಲತೊಡರುಗಳ ಕಡಿದು
ಬಲ್ಲವರು ತೋರಿರುವ ಹಾದಿಯನು ಹಿಡಿದು
ಎಲ್ಲರೂ ಒಂದಾಗಿ ಒಂದಾಗಿ ನಡೆದು
ಹೋಗೋಣ ನಾವೆಲ್ಲ ಸೀಮೆಯನು ದಾಟಿ."

ತಾನುಂಟೋ ಮೂರು ಲೋಕವುಂಟೋ ಎನ್ನುವ ಸ್ವಾರ್ಥದ ಪಥವನ್ನು ತಿರುಚಿ.. ಜೀವನ ಎಂದರೆ ಹೀಗೆ ಇರಬೇಕು ಎನ್ನುವ ಸಂದೇಶ ಕೊಡುವ ಮೇಲಿನ ಸಾಲು ಬಲು ಇಷ್ಟವಾಯಿತು.

ಪ್ರತಿಯೊಂದು ಕಾರ್ಯಕ್ಕೂ ಅಡತಡೆಗಳು ಇದ್ದದ್ದೇ, ಅದನ್ನು ಬದಿಗೆ ಸರಿಸಿ ಮುನ್ನೆಡೆಯಲು, ಹಿರಿಯರ, ಬಲ್ಲವರ ಮಾರ್ಗದರ್ಶನ ಎಷ್ಟು ಅವಶ್ಯಕ ಎನ್ನುವ ಮಾತು ಗೋಚರಿಸುತ್ತದೆ.

ನಾವೇ ಹಾಕಿಕೊಂಡಿರುವ ಸೀಮಾ ಕಟ್ಟನ್ನು ದಾಟಿ ಹೋಗಬೇಕು ಎನ್ನುವ ಅಜ್ಜನ ಮಾತು ಇಂದಿಗೂ ಪ್ರಸ್ತುತ

ನವರಾತ್ರಿ ಕೂಡ ಮನಸ್ಸಿನ ಕಲ್ಮಶಗಳನ್ನು ನವದುರ್ಗಿಯರು ಸಂಹಾರ ಮಾಡುವ ಸುಂದರ ಹಬ್ಬ..

ಸಮಯೋಚಿತವಾಗಿದೆ ಬೇಂದ್ರೆ ಅಜ್ಜನ ಕಾವ್ಯ ಮತ್ತು ನೀವು ಅದನ್ನು ಹಂಚಿಕೊಂಡ ಸಮಯ..

ದಸರಾ ಹಬ್ಬದ ಹಬ್ಬಕ್ಕೆ ಶುಭಾಶಯಗಳು ಸರ್

sunaath said...

ಧನ್ಯವಾದಗಳು, ಶ್ರೀಕಾಂತರೆ. ಬೇಂದ್ರೆಯವರು ಕನ್ನಡಿಗರಿಗೆ ಸೀಮೋಲ್ಲಂಘನದ ಪಥವನ್ನು ತೋರಿಸಿದ್ದಾರೆ. ಕನ್ನಡನಾಡು ಬೆಳೆದೀತು, ಬೆಳಗೀತು ಎಂದು ವಿಜಯದಶಮಿಯಂದು ಹಾರೈಸೋಣ. ನಿಮಗೂ ಸಹ ದಸರೆಯ ಹಾರ್ದಿಕ ಶುಭಾಶಯಗಳು.