Wednesday, August 5, 2020

ಅಸ್ಪಷ್ಟ ತಲ್ಲಣಗಳು.......ಟಿ.ಎಸ್.ಶ್ರವಣಕುಮಾರಿ

‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಕಥೆಗಳಾಗಿವೆ. ಶ್ರವಣಕುಮಾರಿಯವರ ಈ ಕಥಾಸಂಕಲನವನ್ನು ಪ್ರಕಟಿಸುವ ಮೂಲಕ ‘ಮೈತ್ರಿ ಪ್ರಕಾಶನ’ವು ಕನ್ನಡ ಓದುಗರಿಗೆ ಒಂದು ಉಪಕಾರವನ್ನು ಮಾಡಿದೆ. ಆದುದರಿಂದ ಈ ಕಥಾಸಂಕಲನದ ಪ್ರಕಾಶಕರಾದ ‘ಮೈತ್ರಿ ಪ್ರಕಾಶನ’ದ ಒಡತಿ ಶ್ರೀಮತಿ ಅಂಜಲಿ ದೇಸಾಯಿಯವರಿಗೆ ನನ್ನ ಧನ್ಯವಾದಗಳು. ಶ್ರವಣಕುಮಾರಿಯವರ ಕಥೆಗಳನ್ನು ಬಿಡಿಬಿಡಿಯಾಗಿ ಓದಿದಾಗ ಈ ಕಥೆಗಳನ್ನು ಪೋಣಿಸುವ ಸೂತ್ರ ಒಂದಿದೆ ಎಂದು ಹೊಳೆಯಲಿಕ್ಕಿಲ್ಲ. ಇಲ್ಲಿಯ ಕಥಾಶೈಲಿಯ ಅನನ್ಯತೆ, ಕಥಾರಚನೆಯ ಹೊಸತನ ಹಾಗು ಕಥಾನಕಗಳ motif ಇವು, ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಮಾತ್ರ ವೇದ್ಯವಾಗುತ್ತವೆ. ಶ್ರವಣಕುಮಾರಿಯವರ ಹನ್ನೆರಡು ಕಥೆಗಳಲ್ಲಿ ಹತ್ತು ಕಥೆಗಳು ಹೆಂಗೂಸುಗಳ ಕಥೆಗಳು. ಈ ಹತ್ತು ಕಥೆಗಳಲ್ಲಿ ಎರಡು ಕಥೆಗಳು ಕೆಳಸ್ತರದ ಹೆಂಗಸರ ಕಥೆಗಳಾಗಿವೆ. ಉಳಿದ ಎಂಟು ಕಥೆಗಳಲ್ಲಿ ಬರುವ ಮಹಿಳೆಯರು ಆಧುನಿಕರು, ದೊಡ್ಡ ನಗರಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ವಿಚಾರಗಳುಳ್ಳವರು, ಆಧುನಿಕ ಜೀವನಶೈಲಿಯನ್ನು ರೂಢಿಸಿಕೊಂಡವರು ; ಕೆಲವರು ಗಂಡುದರ್ಪವನ್ನು ಎದುರಿಸಿ ವಿಚ್ಛೇದಿತರಾಗಿ ಬಾಳುತ್ತಿರುವವರು;ಇನ್ನು ಕೆಲವರು ಗಂಡನ ಮರ್ಜಿಯನ್ನು ಅನುಸರಿಸಿ ಬದುಕು ಸಾಗಿಸುತ್ತಿರುವವರು. ಮೊದಲನೆಯ ಪ್ರಕಾರದಲ್ಲಿ ಬರುವವರು ಸ್ವತಂತ್ರ ಜೀವನವನ್ನು ನಡೆಸುತ್ತಿರುವ ಕಾರಣದಿಂದಾಗಿಯೇ ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಇವರ ಕೌಟಂಬಿಕ ಬದುಕಿನಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿ ಆಪ್ತತೆಯ ಬೆಸುಗೆ ಇಲ್ಲಿ ಕಳಚಿ ಹೋಗಿದೆ. ಇವಳು ಒಂಟಿ ಹೆಣ್ಣು, ಅಸಹಾಯಕಳು. ಎರಡನೆಯ ಪ್ರಕಾರದಲ್ಲಿರುವವರು ಆರ್ಥಿಕ ವಿಷಯದಲ್ಲಿ ಗಂಡನ ಅನುಮತಿಗಾಗಿ ಕಾಯಬೇಕಾಗಿರುವ ಕಾರಣದಿಂದಾಗಿ ಮಾನಸಿಕ ದುಗುಡದಲ್ಲಿದ್ದಾರೆ. ಇದೂ ಸಹ ಆಪ್ತತೆಯ ಅಭಾವಕ್ಕೆ ಹಾಗು ಅದೃಶ್ಯ ಒಳಬಿರುಕಿಗೆ ಕಾರಣವಾಗಿದೆ! ಈ ಅಂಶಗಳನ್ನು ಜಾಣತನದಿಂದ ಹೆಣೆದಿರುವ ಈ ಕಥೆಗಳ ಒಂದು ಪಕ್ಷಿನೋಟವನ್ನು ನೋಡೋಣ: ಮೊದಲನೆಯ ಕಥೆಯ (‘ಅವಳ ಮಗಳು’) ಮೊದಲಲ್ಲಿಯೇ ಗಂಡ ಹಾಗು ಹೆಂಡತಿ ಬೇರೆಯಾಗಿ ಬದಕುತ್ತಿರುವ ಪ್ರಸಂಗವಿದೆ. ಪುಟ್ಟ ಮಗಳು ತಾಯಿಯ ಜೊತೆ ಬೆಳೆಯುತ್ತಾಳೆ. ಮಗಳು ಬೆಳೆಯುತ್ತ ಬಿನ್ ದಾಸ್ ಆದಾಗ, ಮಗಳನ್ನು ಸಂಭಾಳಿಸಲಾಗದ ಸಂಕಟವನ್ನೂ ಇವಳು ಅನುಭವಿಸಬೇಕು. ಗಂಡ ಇವಳನ್ನು ಭೌತಿಕವಾಗಿ ಹಾಗು ಮಾನಸಿಕವಾಗಿ ದೂರೀಕರಿಸಿದ್ದಾನೆ ; ಮಗಳು ತಾಯಿಯನ್ನು ಮಾನಸಿಕವಾಗಿ ದೂರ ಮಾಡಿ, ತನ್ನ ಲೋಕದಲ್ಲೇ ತಾನಿದ್ದಾಳೆ. ಅಲ್ಲಿ ತಾಯಿಗೆ ಪ್ರವೇಶವಿಲ್ಲ. ಗಂಡ ಹಾಗು ಮಗಳು ಇಬ್ಬರಿಗೂ ಅನಾಪ್ತಳಾದ ಒಂಟಿ ಹೆಣ್ಣುಮಗಳು ಎಂತಹ ಮಾನಸಿಕ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರಬೇಕು! ಇಷ್ಟಲ್ಲದೆ, ಯಾರ ನೆರವಿಲ್ಲದೆ ದಿನ ನೂಕುತ್ತಿರುವ ಒಂಟಿ ಹೆಣ್ಣಿನ ದೈನಂದಿನ ಸಮಸ್ಯೆಗಳು ಬೇರೆ. ಇವೆಲ್ಲ ಸಾಮಾನ್ಯ ಲೇಖಕನ ಕೈಯಲ್ಲಿ ಸಿಕ್ಕರೆ, ಅದೊಂದು ರಾಮಾಯಣವಾಗುತ್ತದೆ. ಆದರೆ ಶ್ರವಣಕುಮಾರಿಯವರ ಪ್ರತಿಭೆಯನ್ನು ನಾವು ಮೆಚ್ಚಬೇಕು! ಕಥೆಯನ್ನು ರೂಟಿನ್ ಎಂಬಂತೆ ಸಹಜವಾಗಿ ಪ್ರಾರಂಭಿಸುವ ಅವರ ಚತುರತೆ, ಕಥೆಯನ್ನು ಬೆಳೆಯಿಸುವ ಅವರ ವಿಧಾನ, ಕಥಾವಿಸ್ತಾರದ ಭಯವಿಲ್ಲದೆ ಅವಶ್ಯವಿರುವ ಎಲ್ಲವನ್ನು ಬರೆಯುವ ಹಾಗು ಅನವಶ್ಯವಾದ ಏನನ್ನೂ ಬರೆಯದಿರುವ ಅವರ ಕಥನಕುಶಲತೆ ಇವು ಓದುಗನನ್ನು ಸೆರೆ ಹಿಡಿಯುತ್ತವೆ. ಇದಲ್ಲದೆ ಶ್ರವಣಕುಮಾರಿಯವರ ಕಥೆಗಳಲ್ಲಿ ಮನೋವಿಜ್ಞಾನವು ಹಾಸುಹೊಕ್ಕಾಗಿದೆ. ಒಂದೋ ಅವರು ಮನೋವಿಜ್ಞಾನದ ಅಧ್ಯಯನವನ್ನು ಮಾಡಿರಬೇಕು, ಇಲ್ಲಾ ಮನೋವಿಜ್ಞಾನದಲ್ಲಿ ಇವರಿಗೆ ಒಳನೋಟವಿದೆ. ಹೀಗಾಗಿ ಇಲ್ಲಿಯ ಕಥೆಗಳ ಪಾತ್ರಗಳ ನಡೆಯನ್ನು, ಒಳತೋಟಿಯನ್ನು ಅವರು ಬರೆಯುವಾಗ, ಓರ್ವ ಮನೋವಿಜ್ಞಾನಿ ಇದನ್ನೆಲ್ಲ ಬರೆಯುತ್ತಿದ್ದಾನೆ ಎನ್ನುವ ಅನುಭವ ಓದುಗನಿಗೆ ಆಗುತ್ತದೆ! ಎರಡನೆಯ ಕಥೆಯಾದ ‘ಅಸ್ಪಷ್ಟ ತಲ್ಲಣಗಳು’ ಸಹ ಇಂತಹದೇ ಕಥೆ. ಗಂಡನಿಲ್ಲದೆ, ಮಗಳನ್ನು ಬೆಳೆಯಿಸಿದ ಮಹಿಳೆಯ ಕಥೆ ಇದು. ಮಗಳು ಮನೆ ಬಿಟ್ಟು ತನ್ನ ಪ್ರಿಯಕರನ ಜೊತೆಗೆ ಹೋದಾಗ, ತಾಯಿಯ ಒಡಲಬೇಗುದಿಯೇ ಈ ಕಥೆಯ ವಸ್ತು. ಈ ಅನಾಪ್ತತೆ ಅನ್ನುವುದು ಕೇವಲ ದಂಪತಿಗಳ ನಡುವೆ ಅಥವಾ ತಂದೆತಾಯಿ ಹಾಗು ಮಕ್ಕಳ ನಡುವೆ ನಡೆಯುವ ಸಂಗತಿಯಲ್ಲ. ಬಾಲ್ಯದಲ್ಲಿ ಕೂಡಿ ಬೆಳೆದವರು, ದೊಡ್ಡವರಾಗಿ, ತಮ್ಮ ತಮ್ಮ ಸಂಸಾರದಲ್ಲಿ ಮಗ್ನರಾದಾಗ ಅವರಲ್ಲಿ ಕುಟುಂಬಸ್ವಾರ್ಥ ಬೆಳೆಯುವುದು ಸಹಜಸಾಧ್ಯ. ಅಂತಹ ಪ್ರಸಂಗವೊಂದು ‘ಪಾಲು’ ಎನ್ನುವ ಕಥೆಯಲ್ಲಿದೆ. ಇಲ್ಲಿಯೂ ಸಹ ಎಲ್ಲ ಸೋದರರು ಒಂದು ಕಡೆ ನಿಂತು ಹುಟ್ಟಿದ ಮನೆಯನ್ನು ಮಾರಾಟ ಮಾಡಲು ನಿಂತಾಗ, ಅವರ ಸೋದರಿ ತಲ್ಲಣಗೊಳ್ಳುತ್ತಾಳೆ, ಅಸಹಾಯಕತೆಯನ್ನು ಅನುಭವಿಸುತ್ತಾಳೆ. ಈ ಕಥೆಯ ಸೋದರರಲ್ಲಿ ಒಬ್ಬಾತನು ಒಳ್ಳೆಯ ನೌಕರಿಯನ್ನು ಮಾಡುತ್ತ ದೂರದೂರಿನಲ್ಲಿದ್ದಾನೆ. ಇನ್ನೊಬ್ಬನಿಗೆ ಸಂಪಾದನೆ ಸಾಲದು. ಆದರೆ ಇವರಿಬ್ಬರಿಗೂ ಮನೆ ಮಾರಾಟ ಹಾಗು ಪಾಲು ಬೇಕೇ ಬೇಕು. ಇವರ್ಯಾರಿಗೂ ಇಲ್ಲದ ತವರುಮನೆಯ ಪ್ರೇಮ,ಆ ಅಸಹಾಯಕ ಸೋದರಿಗೆ ಮಾತ್ರ ಇದೆ. ಇನ್ನೊಬ್ಬ ಸೋದರಿಯ ಕಥೆ ಸ್ವಲ್ಪ ಭಿನ್ನವಾಗಿದೆ. ಇವಳ ಪ್ರೀತಿಯ ಸೋದರ, ಮೊದಲೆಲ್ಲ ಒಳ್ಳೆಯ ರೀತಿಯಲ್ಲಿದ್ದವನು ಇದೀಗ ಭಿಕಾರಿಯಾಗಿದ್ದಾನೆ. ಅವನಿಗೆ ಈಕೆ ಆಗಾಗ ಸಹಾಯ ಮಾಡುತ್ತಿರುತ್ತಾಳೆ. ಆದರೆ ಕೊನೆಕೊನೆಗೆ ಈಕೆಯ ಗಂಡನಿಗೆ ಇದರಿಂದ ಅಸಮಾಧಾನವಾಗುತ್ತಿದೆ. ಹೆಂಡತಿಯು ಗಂಡನ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿದ್ದರೆ, ಸಮಸ್ಥಾನದಲ್ಲಿ ನಿಲ್ಲದಾದಾಗ ಅವಳೂ ಸಹ ಒಂದು ರೀತಿಯಲ್ಲಿ ಒಂಟಿಯೇ! ‘ಕಟ್ಟೆಯ ಮೇಲೆ ಕೂತವನು’ ಎನ್ನುವ ಈ ಕಥೆಯಲ್ಲಿ ಗಂಡ ತನಗೆ ಏನೆನ್ನುತ್ತಾನೊ ಎನ್ನುವದೊಂದೇ ಈ ಹೆಣ್ಣುಮಗಳ ಒಳಕುದಿಯಲ್ಲ, ತನ್ನ ಸೋದರ ತನ್ನ ಮನೆಗೆ ಬಂದು ಬಿಟ್ಟರೆ, ತಾನು ಹೇಗೆ ಆತನನ್ನು ಎದುರಿಸಬೇಕು ಎನ್ನುವುದೂ ಸಹ ಇವಳ ಸಂಕಟವಾಗಿದೆ. ಗಂಡನ ಅಕಾಲ ನಿಧನದ ಬಳಿಕ, ಎರಡು ವರ್ಷದ ಮಗನನ್ನು ಒಂಟಿಯಾಗಿ ಬೆಳೆಯಿಸಿದ ಮಹಿಳೆಯ ಕಥೆ ‘ಕಿತ್ತ ಕೊಂಡಿ’ಯಲ್ಲಿದೆ. ಇವಳ ಮಗ ಅಮೆರಿಕಾದಲ್ಲಿದ್ದಾನೆ. ಅಲ್ಲಿಯ ಹುಡುಗಿಯೊಬ್ಬಳನ್ನು ಮದುವೆಯಾಗುವ ತರದೂದಿನಲ್ಲಿ ಅವನಿದ್ದಾನೆ. ಇವಳಿಗೆ ಮಗ ಎಲ್ಲಿ ತನ್ನನ್ನು ಬಿಟ್ಟು ಅಲ್ಲಿಯೇ ನೆಲೆಸಿಬಿಡುತ್ತಾನೊ ಎನ್ನುವ ಹೆದರಿಕೆಯಾದರೆ, ಇವಳ ಜೊತೆಗೆ ಇರುವ ಇವಳ ಮುದುಕಿ ಅವ್ವನಿಗೆ ತನ್ನ ಮಗಳು ತನ್ನನ್ನು ಬಿಟ್ಟು ಎಲ್ಲಿ ಅಮೆರಿಕಾಕ್ಕೆ ಹೋಗಿ ಬಿಡುವಳೊ ಎನ್ನುವ ಹೆದರಿಕೆ. ಇಂತಹ ಹೆದರಿಕೆಯಲ್ಲಿ ಜೀವಿಸುವ ಎರಡು ಹೆಣ್ಣುಗಳ ಕಥೆ ಇಲ್ಲಿದೆ. ಆದರೆ ಇದಷ್ಟೇ ಅಲ್ಲ ; ಒಂಟಿ ಹೆಣ್ಣಿಗೆ ದೈನಂದಿನ ಸಣ್ಣಪುಟ್ಟ ಸಮಸ್ಯೆಗಳೂ ಸಹ ದೊಡ್ಡ ಸಂಕಟಗಳೇ ಆಗಿರುತ್ತವೆ. ತನ್ನ ಕಚೇರಿಯಲ್ಲಿಯ ಗಂಡುಗಳ ಕಣ್ಣುಗಳನ್ನು ಎದುರಿಸಬೇಕು, ಅವರ ಕೊಂಕು ಮಾತುಗಳನ್ನು ನಿಭಾಯಿಸಬೇಕು, ತನ್ನ ಹಳೆಯ ಕುಪ್ಪುಸದ ಹುಕ್ಕು ಎಲ್ಲಿ ಕಳಚೀತೊ ಎನ್ನುವ ಹೆದರಿಕೆಯಿಂದ ಅಲ್ಲಿ ಯಾವಾಗಲೂ ಒಂದು ನಿಗಾ ಇಟ್ಟಿರಬೇಕು, ಇವೆಲ್ಲ ಈ ಹೆಣ್ಣುಜೀವವನ್ನು ಸತತವಾಗಿ ಚುಚ್ಚುತ್ತಲೇ ಇರುತ್ತವೆ. ಅನಾಪ್ತತೆ, ಒಂಟಿತನ ಹಾಗು ಅದರಿಂದ ಹುಟ್ಟುವ ಅಸಹಾಯಕತೆ ಮತ್ತು ಖಿನ್ನತೆ ಇವನ್ನಷ್ಟೇ ಲೇಖಕಿ ಈ ಕಥೆಗಳ ಮೂಲಕ ಚಿತ್ರಿಸುತ್ತಿದ್ದಾಳೆ ಎನ್ನುವುದು ಸರಿಯಲ್ಲ. ಇವುಗಳನ್ನು ಉಪಶಮನಗೊಳಿಸುವ ಮದ್ದೂ ಸಹ ಲೇಖಕಿಗೆ ಗೊತ್ತು. ಅದು ಎರಡು ಜೀವಿಗಳ ನಡುವೆ ನಡೆಯಬೇಕಾದ ಆಪ್ತಸಂವಹನ. ಈ ಮದ್ದನ್ನು ಪ್ರತಿ ವ್ಯಕ್ತಿ ತಾನೇ ಕಂಡುಕೊಳ್ಳಬೇಕಾಗುತ್ತದೆ. ‘ಜೀವನ್ಮುಖಿ’ ಎನ್ನುವ ಕಥೆ ಈ ಅಂಶವನ್ನು ಸಮರ್ಥವಾಗಿ ಹೇಳುತ್ತದೆ. ಗಂಡನಿಗೆ ವರ್ಗಾವಣೆಯಾದಲ್ಲೆಲ್ಲ ಹೋಗಬೇಕಾದ ನೌಕರಿ. ಹೆಂಡತಿ ಒಬ್ಬಳೇ ಮಗಳನ್ನು ಬೆಳೆಯಿಸುವ ಭಾರವನ್ನು ಹೊತ್ತುಕೊಂಡು ತಮ್ಮ ನಗರದಲ್ಲಿ ಉಳಿಯುತ್ತಾಳೆ. ಗಂಡ ಯಾವಾಗಲೋ ಒಮ್ಮೆ ಬಂದು ಇವರನ್ನು ಭೆಟ್ಟಿಯಾಗುವನು. ಹೀಗಾಗಿ ಪುಟ್ಟ ಮಗಳ ಜೊತೆಗಂತೂ ಇವನ ಸಂವಹನ ಶೂನ್ಯ ಪ್ರಮಾಣದಲ್ಲಿದೆ. ಹಗಲಿನಲ್ಲಿ ಈತನಿಗೆ ಹೆಂಡತಿಯ ಜೊತೆಗೆ ಮಾತನಾಡಲು ಸಮಯವಿಲ್ಲ; ರಾತ್ರಿಯಲ್ಲಿ ಗಳಿಗೆಯ ಕಾರ್ಯಕ್ರಮಕ್ಕೆ ಮಾತೇಕೆ ಬೇಕು?! ಬೇಸತ್ತ ಹೆಂಡತಿಯು ನಿರ್ಭಿಡೆಯಿಂದ ಗಂಡನನ್ನು ದೂರಿ, ಆಶ್ರಮವನ್ನು ಸೇರುವ ತನ್ನ ನಿರ್ಧಾರವನ್ನು ಇವನಿಗೆ ಹೇಳುತ್ತಾಳೆ. ಪುಟ್ಟ ಮಗಳನ್ನು ಬೋರ್ಡಿಂಗ ಸ್ಕೂಲಿನಲ್ಲಿ ಇಡುವ ಅನಿವಾರ್ಯತೆ ಬರುತ್ತದೆ. ಇವನ ಮನೆಗೆ ಅಕಸ್ಮಾತ್ತಾಗಿ ಬರುವ ಅತಿಥಿಯೊಬ್ಬ ತನ್ನ ಹಾಗು ತನ್ನ ಪುಟ್ಟ ಮಗಳೊಡನೆ ಸಾಧಿಸಿದ ಸಲುಗೆಯನ್ನು ನೋಡಿ, ಜೀವನವನ್ನು ಹೊಸದಾಗಿ ಅರ್ಥ ಮಾಡಿಕೊಂಡ ಈತ ‘ಜೀವನ್ಮುಖಿ’ಯಾಗಿ ಪರಿವರ್ತನೆಯಾಗುತ್ತಾನೆ. ತನ್ನ ಮಗಳಿಗೆ ವಾತ್ಸಲ್ಯವನ್ನು ಕೊಟ್ಟು, ಅವಳ ಪ್ರೀತಿಯನ್ನು ಪಡೆಯಲು ಸಮರ್ಥನಾಗುತ್ತಾನೆ. ಈ ಎಲ್ಲ ಕಥೆಗಳಿಗಿಂತ ಭಿನ್ನವಾದದ್ದು ‘ಕಾಮಿನಿಯೂ ಚಿಕನ್ ಬಿರ್ಯಾನಿಯೂ’ ಎನ್ನುವ ಕಥೆ. ಹಸಿದ ಹೊಟ್ಟೆಗೆ ತುಸು ಕೂಳು ಹಾಕಲು ಸೂಳೆಯೊಬ್ಬಳು, ಬೀದಿ ಬದಿಯಲ್ಲಿ ಗಿರಾಕಿಗಳನ್ನು ಹುಡುಕುತ್ತ ನಿಂತಿದ್ದಾಳೆ. ಮೋಟರ ಸಾಯಕಲ್ ಮೇಲೆ ಬಂದ ಹುಡುಗನೊಬ್ಬ ಇವಳಿಗೆ ಚಿಕನ್ ಬಿರಿಯಾನಿಯ ಆಸೆ ಹಚ್ಚುತ್ತಾನೆ. ಅವನ ಮೋಟರ ಸೈಕಲ್ ಮೇಲೆ ಕುಳಿತಾಗ ಈ ಹುಚ್ಚು ಹೆಣ್ಣು ರಂಗೀನ ಕನಸುಗಳನ್ನು ಕಾಣುತ್ತಾಳೆ. ಇವಳನ್ನು ಭೋಗಿಸಿದ ಬಳಿಕ ಆತ ಮೋಸದಿಂದ ಓಡಿ ಹೋಗುತ್ತಾನೆ. ಇತ್ತ ದುಡ್ಡೂ ಇಲ್ಲದೆ, ಅತ್ತ ಹೊಟ್ಟೆಗೂ ಇಲ್ಲದೆ ನಿತ್ರಾಣವಾಗಿ ರೋದಿಸುತ್ತ, ಶಪಿಸುತ್ತ ಕುಳಿತಿರುವ ಇವಳನ್ನು ಕಂಡು ಮರುಗಿದ ತಲೆಹಿಡುಕನೊಬ್ಬ ತನ್ನ ಊಟವನ್ನು ಇವಳಿಗೆ ಕೊಡುತ್ತಾನೆ. ಅಸಹಾಯಕ ಹೆಣ್ಣುಮಕ್ಕಳ ಶೋಷಣೆಯ ಮತ್ತೊಂದು ಮುಖವಿದು. ಈ ಕಥೆಯ ವೈಶಿಷ್ಟ್ಯವೆಂದರೆ ಇಲ್ಲಿ ಬಳಸಲಾದ ಕೆಳವರ್ಗದ ಭಾಷೆ. ಇಂತಹದೇ ಭಾಷೆಯನ್ನು ಬಳಸಿದ ಮತ್ತೊಂದು ಕಥೆ ಎಂದರೆ ‘ಜೇಡನ ಬಲೆ’. ಕಷ್ಟಪಟ್ಟು ಕಾ˘ಲೇಜಿಗೆ ಸೇರಿದ ಕೆಳತರಗತಿಯ ಹುಡುಗಿಯೊಬ್ಬಳು ತನಗೆ ತಿಳಿಯದೆಯೇ ಶೋಷಕನ ಬಲೆಗೆ ಸಿಕ್ಕು, ಹಣವನ್ನು ಕಕ್ಕುತ್ತ ನರಳುತ್ತಾಳೆ. ಕೊನೆಗೊಮ್ಮೆ ಆತ ತನ್ನ ಕಾಮದಾಟಕ್ಕೆ ಇವಳನ್ನು ಕರೆದಾಗ, ಇವಳು ರೋಷದಿಂದ ಅವನನ್ನು ಎದುರಿಸಿ, ಅವನ ಬಲೆಯಿಂದ ಮುಕ್ತಳಾಗುತ್ತಾಳೆ. ಇಲ್ಲಿಯೂ ಸಹ ಗ್ರಾಮ್ಯ ಭಾಷೆಯನ್ನು ಸಹಜವಾಗಿ ಬಳಸಲಾಗಿದೆ. ‘ಮುಖಾಮುಖಿ’ಯು ಈ ಸಂಕಲನದ ಮನ ಕರಗಿಸುವ ಕಥೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮುದುಕನೊಬ್ಬನನ್ನು ಮದುವೆಯಾಗಿ, ಬಳಿಕ ವಿಧವೆಯಾಗಿ, ಪುರುಷಸುಖವಿಲ್ಲದೆ ಬಾಳಿದ ಹೆಣ್ಣುಮಗಳೊಬ್ಬಳು, ಸಮಾಜದ ಅಪಹಾಸ್ಯಕ್ಕೆ ಪಕ್ಕಾಗುತ್ತ ಕೊನೆಯವರೆಗೂ ತುತ್ತು ಅನ್ನಕ್ಕಾಗಿ ಏನೆಲ್ಲ ಪಾಡು ಪಡಬೇಕಾಯಿತು ಎನ್ನುವುದು ಈ ಕಥೆಯ ವಸ್ತು. ಕಥೆಯ ಕೊನೆಯಲ್ಲಿ ಬರುವ ದಾರುಣ ಅನಿರೀಕ್ಷಿತತೆ ಓದುಗನನ್ನು ಕಂಗೆಡಿಸುತ್ತದೆ. ಸಂಕಲನದ ಕೊನೆಯ ಕಥೆ ‘ರಾಧಾರಮಣ’ ಇದು ಈ ಎಲ್ಲ ಕಥೆಗಳಿಗಿಂತ ವಿಭಿನ್ನವಾದ ಕಥೆ. ಇದು ಹೆಣ್ಣಿನ ಶೋಷಣೆಯ ಕಥೆಯಲ್ಲ. ಇದು ಪೌರುಷವಿಲ್ಲದ ಗಂಡಸಿನ ಕಥೆ. ಈ ಕಥೆಯನ್ನು ಸಾಕ್ಷಿಯಾಗಿ ನೋಡುತ್ತಿರುವವಳು ಒಬ್ಬ ಕೆಳಸ್ತರದ ಹೆಣ್ಣು ಮಗಳು. ಅವಳಿಗೆ ಜೊತೆಯಾಗಿ ಇರುವುದು ಅವಳ ನಾಯಿ. ಓದುಗನಿಗೆ ಈ ನಾಯಿಯೂ ಸಹ ಆಪ್ತವಾಗುವುದು ಕಥೆಯಲ್ಲಿಯ ಸ್ವಾರಸ್ಯಕರ ಅಂಶವಾಗಿದೆ. ನಾಯಕಿಯ ಸುತ್ತ ಹೆಣೆಯುತ್ತ ಹೋದ ಇಲ್ಲಿಯ ಕಥೆಗಳು ಕೆಲವೊಮ್ಮೆ flash backನ ನೆರವನ್ನು ಪಡೆಯುತ್ತವೆ. ಹೀಗಾಗಿ ಕಥೆಗಳನ್ನು ಬಿಗಿಯಾಗಿ ಹೆಣೆಯಲು ಲೇಖಕಿಗೆ ಸಾಧ್ಯವಾಗಿದೆ. ಕಥೆಗಳ ಪಾತ್ರಗಳ ಮನೋವಿಶ್ಲೇಷಣೆಯನ್ನು ಸರಳವಾಗಿ ಬಿಡಿಸುತ್ತ ಹೋಗುವುದರಿಂದ ಕಥೆಗಳಲ್ಲಿ ಸಹಜತೆ ಹಾಗು ಜೀವಂತಿಕೆ ಸಾಧ್ಯವಾಗಿದೆ. ಅನೇಕ ಸಲ ಲೇಖಕನು ಕಥೆಗೆ ಬೇಕಾದಂತಹ ಪಾತ್ರಗಳನ್ನು, ಕಥಾನಕವನ್ನು ಸೃಷ್ಟಿಸಿಕೊಳ್ಳುತ್ತಾನೆ. ಇದು ಅವನ ಅಧಿಕಾರ. ಶ್ರವಣಕುಮಾರಿಯವರು ಒಂದು ಮಿತಿಯಲ್ಲಿಯೇ ಈ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸಿದ್ದಾರೆ. ಕೆಲವೊಮ್ಮೆ ಈ ಮಿತಿಯನ್ನು ಸ್ವಲ್ಪವೇ ಮೀರಿದ ಒಂದೆರಡು ಕಥೆಗಳು ಇಲ್ಲಿವೆ. ಉದಾಹರಣೆಗಾಗಿ ‘ಮುಖಾಮುಖಿ’ ಕಥೆಯನ್ನೇ ನೋಡೋಣ. ತಂದೆಯ ವಯಸ್ಸಿನವನೊಬ್ಬನು ತನಗೆ ಮನಸ್ಸಿರದೇ ಹೋದರೂ ಬಾಲಕಿಯೊಬ್ಬಳನ್ನು ಮದುವೆಯಾಗುವ ಅನಿವಾರ್ಯತೆಯೆ ಇಲ್ಲಿಯ ಕಥೆ. ಈ ‘ಅನಿವಾರ್ಯತೆ’ಯನ್ನು ಲೇಖಕಿ ಸೃಷ್ಟಿಸಿರುವ ರೀತಿ ಕೃತಕವೆನಿಸುತ್ತದೆ. ಈ ಕೃತಕತೆಯನ್ನು ಮರೆಯಾಗಿಸುವ ಉದ್ದೇಶದಿಂದ ಲೇಖಕಿ ಮತ್ತೊಂದು ಪಾತ್ರವನ್ನು ಸೃಷ್ಟಿಸಿ, ಅವಳೆದುರಿಗೆ ಕಥೆಯನ್ನು ಬಿಚ್ಚಿಸಿದ್ದಾರೆ. ಪರಿಣಾಮತಃ ಓದುಗನು ಇಂತಹ ಅಸಂಭಾವ್ಯತೆಯನ್ನು ಒಪ್ಪಿಕೊಳ್ಳುತ್ತಾನೆ. ಇದೇ ರೀತಿಯಲ್ಲಿ ‘ಜೀವನ್ಮುಖಿ’ ಕಥೆಯಲ್ಲಿಯ ಹೆಂಡತಿಯ ನಿರ್ಧಾರ. ಇದೂ ಸಹ ಕಥೆಗೆ ಅವಶ್ಯಕವಾಗಿರುವದರಿಂದ ಒಪ್ಪಿಕೊಳ್ಳಲೇ ಬೇಕು. ಈ ಎಲ್ಲ ಅಸಂಭಾವ್ಯತೆಗಳನ್ನು ಓದುಗನು ಪಿಟಕ್ಕೆನ್ನದೆ ಒಪ್ಪಿಕೊಳ್ಳುವುದೇ ಲೇಖಕಿಯ ಕಥನಪ್ರತಿಭೆಗೆ ಸಾಕ್ಷಿಯಾಗಿದೆ. ‘ಜೇಡನ ಬಲೆ’ಯಲ್ಲಿ ಗ್ರಾಮ್ಯ ಭಾಷೆಯಲ್ಲಿ ಕಥೆ ಸಾಗಿದೆ. ಶೋಷಿತ ಹುಡುಗಿ ಹಾಗು ಶೋಷಕ ವ್ಯಕ್ತಿಯೊಬ್ಬನ ನಡುವೆ ನಡೆಯುವ ಮಾತುಗಳೂ ಸಹ ಗ್ರಾಮ್ಯಭಾಷೆಯಲ್ಲಿಯೇ ಇವೆ. ಹಿಗಿದ್ದರೂ ಸಹ ಆತನು ಒಮ್ಮೆ ಈ ಹುಡುಗಿಗೆ, “ನಿನ್ ಫೋಟೋ ನನಗೆ ಬಂಗಾರದ ಮೊಟ್ಟೆ ಇಡುವ ಕೋಳಿ” ಎನ್ನುವುದು ಹಾಗು “ಇದು ಜಾಣ ಕೋಳಿ ಥರಾ” ಎನ್ನುವುವು ಕನ್ನಡದ ಮಾತುಗಳು ಎನಿಸುವುದಿಲ್ಲ. ಇಂಗ್ಲೀಶಿನ ‘Hen laying the golden eggs’ ಹಾಗು `That’s like a wise girl’ ಎನ್ನುವುದರ ಭಾಷಾಂತರಗಳು ಎಂದೆನಿಸಿ ಬಿಡುತ್ತದೆ. ನನ್ನ ತಿಳಿವಳಿಕೆ ಸರಿ ಇರಲಿ, ಬಿಡಲಿ, ನನ್ನ ಮಟ್ಟಿಗೆ ಇವು ಕಥೆಯ ಓದಿನ ಓಘದಲ್ಲಿ ಸ್ವಲ್ಪ ಅಡಚಣೆಯನ್ನಂತೂ ಮಾಡಿದವು. ಆದರೆ ಒಳ್ಳೆಯ ಅಭಿರುಚಿಯ, ಇಷ್ಟು ಸೊಗಸಾದ ಕಥೆಗಳನ್ನು ಬರೆದ ಲೇಖಕಿಗೆ ಇಷ್ಟೂ ‘ಕವಿಸ್ವಾತಂತ್ರ್ಯ’ವನ್ನು ಕೊಡದಿರಲು ಹೇಗೆ ಸಾಧ್ಯ? ಕಥೆಗಳನ್ನು ಎಳೆದಾಡಿ, ಮೇಲೆ-ಕೆಳಗೆ ಮಾಡಿ ನಾನು ಬರೆಯುತ್ತಿರುವಾಗ, ಇವುಗಳ ಸ್ವಾರಸ್ಯವನ್ನು ನಾನು ಮಸಕುಗೊಳಿಸುತ್ತಿದ್ದೇನೆ ಎನ್ನುವ ಭಯ ನನಗಿದೆ. ವಾಸ್ತವದಲ್ಲಿ ಕಥೆಗಳು ತುಂಬ ಚೆನ್ನಾಗಿವೆ. ಓದುಗನು ಕಥೆಯ ಪಾತ್ರಗಳೊಡನೆ ಲೀನನಾಗಿ ಹೋಗುತ್ತಾನೆ. ಶ್ರವಣಕುಮಾರಿಯವರು ಕನ್ನಡಕ್ಕೆ ಆಸಕ್ತಿಕರವಾದ ಹೊಸ ಮಾದರಿಯ ಕಥೆಗಳನ್ನು ಕೊಟ್ಟಿದ್ದಾರೆ. ಇನ್ನಷ್ಟು ಕಥೆಗಳು ಇವರಿಂದ ಬರಲಿ ಎಂದು ಹಾರೈಸುತ್ತೇನೆ.

5 comments:

Subrahmanya said...

ಈ ಪುಸ್ತಕದ ಪರಿಚಯವನ್ನು ಫೇಸ್ಬುಕ್ ನಲ್ಲಿ ಯಾರೋ ಹಾಕಿದ್ದರು. ಈಗಾಗಲೆ ಬಂದಿರುವ ಕತೆಗಳಂತೆ ಕಂಡರೂ ನಿರೂಪಣೆ ವಿಭಿನ್ನವಾಗಿದೆ ಎಂದು ನಿಮ್ಮ ಬರಹದಿಂದಲೇ ಗೊತ್ತಾಗುತ್ತಿದೆ. ಓದಬೇಕು.

sunaath said...

ಧನ್ಯವಾದಗಳು, ಸುಬ್ರಹ್ಮಣ್ಯರೆ!Face Book-Messengerನಲ್ಲಿ ನೀವು Umesh Desaiಯವರನ್ನು ಸಂಪರ್ಕಿಸಿದರೆ, ಅವರು ನಿಮಗೆ ಪುಸ್ತಕವನ್ನು ಕಳುಹಿಸಬಹುದು.

Arathi said...

ಬಹಳ ಚಂದದ ವಿಮರ್ಶೆ ಸರ್.ಮಹಿಳಾ ಸಂಘರ್ಶಗಳ ನಾನಾ ಮುಖಗಳು ನಾವಿಲ್ಲಿ ಕಾಣಬಹುದು.
ಮನೋವೈಜ್ಞಾನಿಯ ಹಾಗೆ ಕಥೆಗಳನ್ನು ಹೆಣೆಯುವ ಕಲೆ ಎಂದು ನೀವು ಬಣ್ಣಸಿರುವ ರೀತಿಯೂ ಸ್ವಾರಸ್ಯಕರವೆನಿಸಿತು.
ಶ್ರವಣ ಕುಮಾರಿಯವರ ಕಥಾ ಕೌಶಲಕ್ಕೆ ಅಭಿನಂದನೆಗಳು.

sunaath said...

ಧನ್ಯವಾದಗಳು, ಆರತಿ ಮೇಡಮ್!

Anonymous said...

The Emperor Casino Review
The Emperor Casino Review. This 제왕 카지노 website offers a review of The Emperor 카지노 casino. This website offers a septcasino number of online casino games including, roulette, and more. Rating: 4 · ‎Review by ShootingCasino