Friday, March 14, 2008

ಬೇಂದ್ರೆ ಮತ್ತು ಕುವೆಂಪು:

ಬೇಂದ್ರೆ ಮತ್ತು ಕುವೆಂಪು ಇವರಿಬ್ಬರೂ ಕನ್ನಡದ ನವೋದಯ ಕಾಲದ ಶ್ರೇಷ್ಠ ಕವಿಗಳು. ಇಬ್ಬರೂ ಜ್ಞಾನಪೀಠ ಪ್ರಶಸ್ತಿ ವಿಜೇತರು. ಆದರೆ ಇವರೀರ್ವರ ಕಾವ್ಯದೃಷ್ಟಿ ಹಾಗು ಕಾವ್ಯಸೃಷ್ಟಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಬೇಂದ್ರೆ ಹಾಗು ಕುವೆಂಪು ಸಹ ತಮ್ಮ ತಮ್ಮ ಪರಿಸರಗಳ ನಿರ್ಮಿತಿಗಳೇ. ಅವರ ಕಾವ್ಯದ ಅಧ್ಯಯನವು ಈ ಕಾವ್ಯದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.

ಬೇಂದ್ರೆ ಮತ್ತು ಕುವೆಂಪು ಯಾವ ರೀತಿಯಲ್ಲಿ ಭಿನ್ನರಾಗಿದ್ದಾರೆ?...... ಒಂದು ಪರಿಮಿತ ಹೋಲಿಕೆಯ ಮೂಲಕ ಈ ಭಿನ್ನತೆಯನ್ನು ಸ್ವಲ್ಪ ಮಟ್ಟಿಗೆ ವಿವರಿಸಬಹುದು. ಕಾವ್ಯಶೈಲಿಯ ಮಟ್ಟಿಗೆ ಬೇಂದ್ರೆ ಪುರಂದರದಾಸರಾದರೆ, ಕುವೆಂಪು ಕನಕದಾಸರು.

ಬೇಂದ್ರೆಯವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬೇಂದ್ರೆಯವರಲ್ಲಿ ದೇಸಿ ಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗು ಹಳಗನ್ನಡ ಪದಗಳೇ ಹೆಚ್ಚು. ಬೇಂದ್ರೆಯವರ ಉಪಮೆಗಳು ನೆಲದ ಮೆಲೆ ನಿಂತಿವೆ. ಕುವೆಂಪುರವರ ಪ್ರತಿಮೆಗಳು ಆಕಾಶದಲ್ಲಿ ಮೋಹಕವಾಗಿ ಹಾರಾಡುತ್ತಿರುತ್ತವೆ. ಬೇಂದ್ರೆ ತಮ್ಮ ಕವನಗಳಲ್ಲಿ ತತ್ವಜ್ಞಾನವನ್ನು ಸಾರುವದಿಲ್ಲ. ಕುವೆಂಪುರವರ ಕವನಗಳಲ್ಲಿ ತತ್ವಜ್ಞಾನ ಹಾಗು ಆದೇಶವಾಕ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ.
ಇವರೀರ್ವರ ಶೈಲಿಯ ವಿಭಿನ್ನತೆಯನ್ನು ತೋರುವ ಕೆಲವು ಉದಾಹರಣೆಗಳು ಇಂತಿವೆ:

೧) ಮೊದಲನೆಯ ಉದಾಹರಣೆ:
ಬೇಂದ್ರೆ ಬರೆದ “ಪಾತರಗಿತ್ತಿ ಪಕ್ಕ” ಹಾಗು ಕುವೆಂಪು ಬರೆದ “ಬಣ್ಣದ ಚಿಟ್ಟೆ” ಈ ಕವನಗಳನ್ನು ಹೋಲಿಸಿರಿ. ’ಪಾತರಗಿತ್ತಿ ಪಕ್ಕ’ ಕವನವನ್ನು ಇದೇ blogದಲ್ಲಿ ಬೇರೆಡೆ ಕೊಡಲಾಗಿದೆ. ಆದುದರಿಂದ ಕುವೆಂಪುರವರ ಕವನ “ಬಣ್ಣದ ಚಿಟ್ಟೆ”ಯಿಂದ ಮಾತ್ರ ಇಲ್ಲಿ ಉದ್ಧರಿಸಲಾಗಿದೆ:

"ಪೂವಿಂ ಪೂವಿಗೆ ಚಿಮ್ಮುತ ಹಾರಿ,
ಸುಮಹೃದಯದ ನವಮಧುವನು ಹೀರಿ,
ಬನಗಳ ಬಣ್ಣದ ಕವಿತೆಯದೊಂದು
ಮುದ್ದನು ಸೂಸಿತು ನನ್ನೆಡೆ ಬಂದು!
ಸುಗ್ಗಿಯ ತಿಂಗಳ ಹೂವುಗಳೆಲ್ಲ,
ಇಂದಿರವಿಲ್ಲಿನ ರಾಗಗಳೆಲ್ಲ
ಬಣ್ಣದ ಚಿಟ್ಟೆಯ ರೆಕ್ಕೆಯ ಮೇಲೆ
ಕುಣಿದವು, ಕಬ್ಬಿಗ ಮುದದಲಿ ತೇಲೆ!
ನೇಸರು ಮೆರೆದನು ಬಾಂದಳದಲ್ಲಿ;
ಹಕ್ಕಿಗಳುಲಿದವು ಬನ ಬನದಲ್ಲಿ!
ಸಾವಿರ ಸುಮಗಳು ತರುಲತೆಗಳಲಿ
ತಲೆದೂಗಿದ್ದವು ತಂಗಾಳಿಯಲಿ!
ಬಾನೂ, ಬನವೂ, ತಿರೆಯೂ, ಗಿರಿಯೂ,
ಎಲ್ಲವು ಚಿಟ್ಟೆಯ ಸಲುವಾಗಿ,
ಯಾರೊ ರಚಿಸಿದ ರಂಗದ ತೆರದಲಿ
ಮೆರೆದವು ಕಣ್ಣಿಗೆ ಚೆಲುವಾಗಿ!"

ಕುವೆಂಪು ಬರೆದ ಈ ಕವಿತೆ ಹಳಗನ್ನಡ ಕವನವೇನೊ ಎಂದು ಭಾಸವಾಗುವದು!

೨) ಎರಡನೆಯ ಉದಾಹರಣೆ:
ಬೇಂದ್ರೆ ’ಮಲೆನಾಡ ಸೆರಗು’ ಎಂದು ಕರೆಯಿಸಿಕೊಳ್ಳುವ ಧಾರವಾಡದ ಪರಿಸರದ ಬಗೆಗೆ ಹೀಗೆ ಹಾಡಿದ್ದಾರೆ:

ಏನು ಅಂದವೋ! ಅಹಹ! ಎನಿತು ಚೆಂದವೋ!!
ಬಟ್ಟ ಬಯಲು ಅತ್ತ ಇತ್ತ
ಹಸಿರು ಹುಲ್ಲು ಮೊತ್ತ ಮೊತ್ತ
ಪಚ್ಚೆಪಯಿರು ಸುತ್ತಮುತ್ತ
ಏನು ಅಂದವೋ! ಅಹಹ! ಎನಿತು ಚೆಂದವೋ!!

ಈಗ ಕುವೆಂಪುರವರ ಕವನ ಮಲೆನಾಡಿನ ಬಗೆಗೆ:

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವದೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ
ಗಂತಿ ಗಂತಿ!

ಕುವೆಂಪುರವರ ಕವನಗಳಲ್ಲಿಯ ಸಂಸ್ಕೃತಬಾಹುಳ್ಯ ರಚನೆ ಹಾಗು ಹಳಗನ್ನಡದ ಬಳಕೆಯನ್ನು ಬೇಂದ್ರೆಯವರ ’ದೇಸಿ ಕವನ’ದ ತಿಳಿಗನ್ನಡಕ್ಕೆ ಹೋಲಿಸಬಹುದು.

ಇದಿಷ್ಟು ಒಟ್ಟಾರೆ ಅಧ್ಯಯನದ ಒಂದು ಭಾಗ.

ಕವಿಯ ಅಭಿವ್ಯಕ್ತಿಯನ್ನು ಆಧರಿಸಿ, ಅವನ ಮನೋವೈಜ್ಞಾನಿಕ ಪರಾಮರ್ಶೆ ಮಾಡಲು ಸಾಧ್ಯವಿದೆ. ಆದರೆ ಆ ತರಹ ಮಾಡುವದು ಸುರುಚಿಯಲ್ಲ, ಸುನೀತಿಯೂ ಅಲ್ಲ. ಬೇಂದ್ರೆ ಯಾಕೆ ’ದೇಸಿ’ ಅಭಿವ್ಯಕ್ತಿಗೆ ವಾಲಿದರು ಹಾಗು ಕುವೆಂಪು ’ಅತಿಶಿಷ್ಟ ಶೈಲಿಯ’ ಅಭಿವ್ಯಕ್ತಿಗೆ ಯಾಕೆ ವಾಲಿದರು ಎನ್ನುವದನ್ನು ನಾವೇ ಊಹಿಸಬೇಕಷ್ಟೆ!

17 comments:

  1. There is a basic difference between Kuvempu and Bendre. Bendre is a born poet whereas Kuvempu attained it like Vishvamitra attained Brahmarshi Pada by great efforts. I do not mean to say that Kuvempy is imferior in any way. He is great in his own way. As u said it not right to compare them. But, as I feel, Bendre's poetry has "flown from his heart as his heart melted.Bendre did not go in search of words to express his heart. But, Kuvempu had to depend on his vast study of Sanskrit, English and Kannada to pick and use the words that would suit the situation. Bendre lokks to be like Kumaravyasa i.e. "padavittalukadomdaggilake"
    May be I am wrong....but this is what I feel.

    SM Katti

    ReplyDelete
  2. ನಾನಿದರ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಳ ಹಿಂದೆ ಇಲ್ಲಿ ಬರೆದಿದ್ದೆ.

    I still stick with it :)

    ReplyDelete
  3. ಆದರೂ ಅವರಿಬ್ಬರು ಸಮಕಾಲೀನ ಕವಿಗಳು ಎನ್ನುವುದಂತೂ ಸತ್ಯ.


    ತಮ್ಮ ಲೇಖನದಲ್ಲಿ ಏನೋ ಒಂದು ಶಕ್ತಿಯಿದೆ. ಬರೆಯಿರಿ; ಬರೆಯುತ್ತಾ ಇರಿ.



    ಪ್ರೀತಿಯಿರಲಿ
    ........

    ReplyDelete
  4. ಸುನಾಥರೇ,

    ನಿಮ್ಮ ಲೇಖನಗಳ ಮೂಲಕ ಬೇಂದ್ರೆ ಅಜ್ಜ ಮತ್ತೆ ಹುಟ್ಟಿ ಬಂದಾರ! :)

    ನಿಮ್ಮ ಪರಿಚಯವಾದ ಮೊದಲಿಗೇ, ನಿಮ್ಮನ್ನು ಬರೆಯಲು ಹಚ್ಚದ ನಾವೆಂಥಹ ಪೆದ್ದರು!

    ReplyDelete
  5. ಸುನಾಥ,

    ಬೇಂದ್ರೆ ಅವರು ಧಾರವಾಡದ ಪೇಟೆ (ಶುಕ್ರವಾರ ಪೇಟೆ, ಶನಿವಾರ ಪೇಟೆ ಇತ್ಯಾದಿ) ಗಳನ್ನು ಸುತ್ತಿ ಜನರ ಮಾತುಗಳನ್ನು, ಜನಪದ ಹಾಡುಗಳನ್ನು ಕೇಳಿಸಿಕೊಂಡು ಬರುತ್ತಿದ್ದರು ಎಂದು ಎಲ್ಲೋ ಓದಿದ ನೆನಪು. ಅವರು ಪದ್ಯ ಬರೆಯುವಾಗ ಮೂಡುವ ಶಬ್ದಗಳೆಲ್ಲ ಜನರ ಆಡುಮಾತುಗಳು (ಅವರ ನಂತರದ ಪದ್ಯಗಳ ಬಗ್ಗೆ ಇದೇ ಮಾತು ಹೇಳಲಾಗುವುದಿಲ್ಲ ಎನ್ನುವುದು ಬೇರೆ ಮಾತು).

    ಕುವೆಂಪು ಅವರದು ಪುಸ್ತಕಗಳಿಂದ ಆಧ್ಯಾತ್ಮದಿಂದ ತಂದ ವಿಚಾರಗಳು. ಅವರು ತಮ್ಮ ಕಾದಂಬರಿಗಳಲ್ಲಿ ತಮ್ಮ ದೇಸೀತನವನ್ನೆಲ್ಲ ಬರೆದುಬಿಟ್ಟಿದ್ದಾರೆ. ಅವರಿಗೆ ಕಾವ್ಯವೇನಿದ್ದರೂ ಕಷ್ಟಶಬ್ದಗಳ, ಸಂಸ್ಕೃತಪದಗಳ ಸರಸಸಲ್ಲಾಪ. ಅವರ ಮಗನ ಹೆಸರನ್ನು ನೋಡಿ, ವೈ.ಎನ್.ಕೆ ಹೇಳುತ್ತಿದ್ದರಂತೆ, "he has sentenced his son" ಎಂದು!

    ಕೇಶವ

    ReplyDelete
  6. ಪ್ರಿಯ ಕಟ್ಟಿಯವರೆ,
    ಒಂದು ವಿಷಯವನ್ನು ಅರಿತುಕೊಳ್ಳಲು, ಅನೇಕ ಪರಿಮಿತ ಹೋಲಿಕೆಗಳನ್ನು ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಬೇಂದ್ರೆ ಹಾಗು ಕುವೆಂಪು ಈ ಇಬ್ಬರು ಕಾವ್ಯದಿಗ್ಗಜಗಳನ್ನು ಬ್ರಹ್ಮರ್ಷಿ ಹಾಗು ರಾಜರ್ಷಿ ಇವರಿಗೆ ಹೋಲಿಸಿದ್ದು ಒಂದು ಪರಿಮಿತಿಯಲ್ಲಿ ತುಂಬ ಅರ್ಥಪೂರ್ಣ.
    ಇನ್ನು ಕುಮಾರವ್ಯಾಸನಿಗೆ ಹೇಗೆ "ಪದವಿಟ್ಟಳುಕದೊಂದಗ್ಗಳಿಕೆ..." ಎನ್ನುವ ಸಾಮರ್ಥ್ಯವಿತ್ತೊ, ಅದೇ ತರಹ ಬೇಂದ್ರೆಯವರಿಗೂ ಸಹ ಪದಗಳ ಹಾಗು ಪ್ರಾಸಗಳ ಅಪರಿಮಿತ ಸಾಮರ್ಥ್ಯವಿತ್ತು ಎನ್ನುವದನ್ನು ಒಪ್ಪಿಕೊಳ್ಳಲೇಬೇಕು. ವಿಚಾರಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಹೇ ಸ್ಟಡ್,
    ಸುಮಾರು ಒಂದು ವರ್ಷದ ಹಿಂದೆಯೇ ನೀವು ಬರೆದದ್ದನ್ನು ಈಗ ನಿಮ್ಮ blogನಲ್ಲಿ ನೋಡಿದೆ. ನನ್ನ ಲೇಖನಕ್ಕಿಂತ ನಿಮ್ಮ ಲೇಖನದಲ್ಲಿಯೇ ಹೆಚ್ಚಿಗೆ ಮಾಹಿತಿ ಇದೆ. ಏನೇ ಇರಲಿ, "ಸಮಾನಶೀಲೇಷು ವ್ಯಸನೇಷು ಸಖ್ಯಮ್" ಎನ್ನುವಂತೆ, ನಮಗಿಬ್ಬರಿಗೂ ಒಳ್ಳೇ ಜಮಾಯಿಸುತ್ತದೆ, ಅಲ್ಲವೆ?

    ReplyDelete
  8. ಪ್ರಿಯ ಪೂರ್ಣ ವಿ-ರಾಮ,
    ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಇಲ್ಲಿಗೆ ಬರಲು ಪೂರ್ಣವಿರಾಮ ಹಾಕದಿರಿ,ಅಲ್ಪವಿರಾಮಿಗಳಾಗಿರಿ ಎಂದು ವಿನಂತಿಸುತ್ತೇನೆ.

    ReplyDelete
  9. ತ್ರಿವೇಣಿ,
    ತುಳಸಿವನದಲ್ಲಿಯೇ ನಿಮ್ಮೆಲ್ಲರನ್ನು ಸಾಕಷ್ಟು ಕೊರೆದಿದ್ದೇನಲ್ಲ!
    -ಕಾಕಾ

    ReplyDelete
  10. ಕೇಶವ,
    ನಿಮ್ಮ ವಿಶ್ಲೇಷಣೆ ೧೦೦% ಸರಿಯಾಗಿದೆ. ಬೇಂದ್ರೆ ಹಾಗು ಕುವೆಂಪು ಇವರ ಪದ್ಯ, ಗದ್ಯ ಹಾಗು later ಸಾಹಿತ್ಯದ ಬಗೆಗೆ ತುಂಬ ಅರ್ಥವತ್ತಾದ ಮಾತು.

    ReplyDelete
  11. ನೀವು ಕುವೆಂಪುರವರ "ಕುರುಕ್ಷೇತ್ರ " ಓದಿರುವಿರಾ ? ಏನು ಅಧ್ಬುತ ಕಲ್ಪನೆ !

    ಶ್ರೀನಿವಾಸ ಕಟ್ಟಿ

    ReplyDelete
  12. ಸುನಾಥರೇ,

    ಬೇಂದ್ರೆ ಅಜ್ಜನ ಕುರಿತು ಏನು ಬರೆದರೂ ನನಗೆ ಚಂದವೆ.

    ಕುವೆಂಪು, ಬೇಂದ್ರೆ ಇಬ್ಬರೂ ಶ್ರೇಷ್ಠ ಕವಿಗಳೆ. ಸಮಕಾಲೀನರು. ಇಬ್ಬರದೂ ವಿಭಿನ್ನ ಶೈಲಿ. ಹೋಲಿಸಬಾರದು ಕೂಡ. ಆದರೂ ನನಗೆ ಬೇಂದ್ರೆ ಪ್ರೀತಿಯ ಕವಿ :)

    ಒಳ್ಳೆಯ ಲೇಖನಕ್ಕೆ ತುಂಬು ಹೃದಯದ ಧನ್ಯವಾದಗಳು.

    ReplyDelete
  13. ಕಟ್ಟಿಯವರೆ,
    ಕುವೆಂಪುರವರ ಕಲ್ಪನೆಗಳು ಅದ್ಭುತ ಎನ್ನುವದರಲ್ಲಿ ಎರಡು ಮಾತಿಲ್ಲ.

    ReplyDelete
  14. ಮನಸ್ವಿನಿ,
    ಬೇಂದ್ರೆ ಹಾಗು ಕುವೆಂಪು ನವೋದಯದ ಎರಡು ದಿಗ್ಗಜಗಳು.
    ಇವರೀರ್ವರನ್ನು ಹೋಲಿಸಿ ನೋಡಿದಾಗ, ಹೆಚ್ಚಿನ ರಸಾಸ್ವಾದ ಸಾಧ್ಯ. ನನಗೂ ಸಹ ಬೇಂದ್ರೆ ಮೆಚ್ಚಿನ ಕವಿ. ಆ ಕಾರಣಕ್ಕಾಗಿ ನಾನು ಪಕ್ಷಪಾತದ ಬರಹ ಬರೆಯುತ್ತಿದ್ದೇನೆಂದು ಯಾರೂ ತಿಳಿಯದಿರಲಿ ಎನ್ನುವದು ನನ್ನ ಕೋರಿಕೆ.

    ReplyDelete
  15. ಈ ವಿಷಯದಲ್ಲಿ ಆಸಕ್ತಿ ಇರುವವರಿಗೆ ಎಚ್. ಎಸ್. ರಾಘವೇಂದ್ರರಾವ್ ಅವರ "ಹಾಡೆ ಹಾದಿಯ ತೋರಿತು" ಉಪಯೋಗವಾಗಬಹುದು. ಅವರ ಡಾಕ್ಟೊರೇಟ್ ಪ್ರಬಂಧವಾದ ಇದರಲ್ಲಿ ಅವರು ಕುವೆಂಪು, ಬೇಂದ್ರೆ ಮತ್ತು ಪುತಿನ ಅವರ ಅನನ್ಯ ಗುಣಗಳನ್ನು ಅಧ್ಯಯನ ಮಾಡಿದ್ದಾರೆ.

    ReplyDelete
  16. ನಮ್ಮ ಬೇಂದ್ರೆ ಮತ್ತು ಕುವೆಂಪು ರವರು ಮಹಾನ್ ಕವಿಗಳೇ...ಸಮಕಾಲಿನ ಕವಿಗಳು ಇವರೀರ್ವರು...ಆದರೂ ನನಗೆ ಬೇಂದ್ರೆ ಮಾಸ್ತರ್ ಅಂದ್ರೆ ತುಂಬಾನೇ ಇಷ್ಟ.. ಅದೆಷ್ಟೋ ಯುವ ಕವಿಗಳಿಗೆ, ಬರಹಗಾರರಿಗೆ ಸ್ಪೂರ್ತಿ ಯಾಗಿದ್ದಾರೆ ನಮ್ಮ ಧಾರವಾಡದ ಮಾಸ್ತರ್... ವರಕವಿ... ಕನ್ನಡದಲ್ಲಿ ಎಷ್ಟೊಂದು ಸರಳತೆ ಇದೆ ಎಂದು ತೋರಿಕೊಟ್ಟವರು ನಮ್ಮ ಅಜ್ಜ ಬೇಂದ್ರೆಯವರು... ನಿಮಗಿದೋ ನನ್ನ ಸಲಾಂ...

    ReplyDelete
  17. Unknownರೆ,
    ಬೇಂದ್ರೆಯವರ ಕವನಗಳ ಸರಳತೆ "ಸಹಜ"ವಾದದ್ದು. ಆದುದರಿಂದಲೇ ಅವರ ಕವನಗಳು ಆತ್ಮೀಯವಾಗುತ್ತವೆ.

    ReplyDelete