Tuesday, April 1, 2008

ನಾಕು ತಂತಿ


‘ಬೆಂದರೇ ಅದು ಬೇಂದ್ರೆ’ ಎನ್ನುವ ಮಾತೊಂದಿದೆ. ಇಲ್ಲಿ ‘ಬೇಯು’ವದಕ್ಕೂ ಎರಡು ಅರ್ಥಗಳಿವೆ. ಬೆಂಕಿಯಲ್ಲಿ ತಪಿಸುವದು ಎನ್ನುವುದು ಒಂದು ಅರ್ಥವಾದರೆ, ಪಕ್ವವಾಗುವುದು ಎನ್ನುವುದು ಎರಡನೆಯ ಅರ್ಥ. ಬೇಂದ್ರೆಯವರು ಬದುಕಿನ ಕಾವಲಿಯಲ್ಲಿ ಬೆಂದಿದ್ದಂತೂ ಸರಿಯೇ. ಜೊತೆಗೇ ಅವರ ಅಂತರಂಗವೂ ಸಹ ಪಕ್ವವಾಗುತ್ತಿತ್ತು. ಇದು ಅವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿದೆ. ತರುಣ ಬೇಂದ್ರೆ ಬರೆದ ಕಾವ್ಯಕ್ಕೂ ಪಕ್ವಬೇಂದ್ರೆ ಬರೆದ ಕಾವ್ಯಕ್ಕೂ ಇರುವ ವ್ಯತ್ಯಾಸವು ಈ ತಾಪ ಹಾಗು ತಪಸ್ಸಿನ ಫಲವಾಗಿದೆ.

ಅರಳು ಮರಳುಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ ೬೦ ವರ್ಷ ವಯಸ್ಸು. ಅದಕ್ಕೂ ಮೊದಲಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲ್ಯವನ್ನು ಹಾಗು ಕುಸುರಿ ಕೆಲಸವನ್ನು ಕಾಣಬಹುದು. ‘ಅರಳು ಮರಳು’ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ಬಯಲ ಭವ್ಯತೆಆಕ್ರಮಿಸಿಕೊಂಡಿದೆ. ಬೇಲೂರು ಶಿಲಾಬಾಲಿಕೆಯ ಮೋಹಕ ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ. ‘ಅರಳು ಮರಳು’ ನಂತರ ರಚಿಸಿದ ಕಾವ್ಯವಂತೂ ಪೂರ್ಣವಾಗಿ ಬೇರೊಂದು ರೂಪವನ್ನೇ ಪಡೆದಿದೆ. ಲೌಕಿಕ ಮಾರ್ಗಕ್ಕೆ ವಿಮುಖನಾಗಿ, ಅಲೌಕಿಕ ಮಾರ್ಗದಲ್ಲಿ ಕ್ರಮಿಸುತ್ತಿರುವ ಸಂತಕವಿಯ ಕಾವ್ಯವನ್ನು ಇಲ್ಲಿ ಕಾಣಬಹುದು. ಹೀಗಾಗಿ ಈ ಕಾವ್ಯವು ‘ನಿಗೂಢ ಕಾವ್ಯ’ವಾಗಿದೆ. ಮೈಯಲ್ಲಿ ದೇವರು ಬಂದ ಪೂಜಾರಿಗಳು ಒಡನುಡಿಯುವ ಕಾರ್ಣೀಕವನ್ನು ಈ ನಿಗೂಢ ಕಾವ್ಯಕ್ಕೆ ಹೋಲಿಸಬಹುದು.

ಬೇಂದ್ರೆಯವರ ನಾಕು ತಂತಿಕವನವು ಇಂತಹ ಒಡಪಿನ ರೂಪದ ‘ಕಾರ್ಣಿಕ’ದಲ್ಲಿದೆ. ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ಅಂಬಿಕಾತನದತ್ತನ ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು. ಬೇಂದ್ರೆಯವರೇ ಹೇಳಿದಂತೆ, ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’!

ನಾಕು ತಂತಿಕವನದಲ್ಲಿ ನಾಲ್ಕು ಭಾಗಗಳಿವೆ. ಇವು ಒಂದೇ ಭಾಗದ ನಾಲ್ಕು ಮಗ್ಗಲುಗಳು. ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ. ಮೂರನೆಯ ಭಾಗದಲ್ಲಿ ಒಂದು ಸವಾಲ್-ಜವಾಬ್ಇದೆ. ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ಒಡದೇ ಹೇಳುತ್ತದೆ.

(ಭಾಗ-೧)

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

(ಭಾಗ-೨)

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

(ಭಾಗ-೩)

ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ

ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.

(ಭಾಗ-೪)

ನಾನು’ ’ನೀನು
ಆನು’ ’ತಾನು
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ:

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ಆವು ಅಂದರೆ ಗೋವು(=ಕಾಮಧೇನು). (ಆವಿನ ಬಹುವಚನವೆ ಆವುಗಳು=ಆಕಳು). ಆವು ಈಯುತ್ತಿದೆ, ಅಂದರೆ ಏನನ್ನು ಈಯುತ್ತಿದೆ (ಪ್ರಸವಿಸುತ್ತಿದೆ)?

ಆವು ಈಯುತ್ತಿರುವದು:-ನಾನು ಹಾಗು ನೀನು ಜೊತೆಯಾಗಿ ಸೃಷ್ಟಿಸಿದ ಆನುವನ್ನು.
ಆನು’(= ಈ ಸೃಷ್ಟಿ) ಇದು ತಾನುವಿನ(=ದೇವರ) ತನನನಾ(=ಸಂತೋಷ).

ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು. ನಾನು ಎಂದರೆ ಆತ್ಮಾ(=ಪುರುಷ) . ನೀನು ಎಂದರೆ ಪ್ರಕೃತಿ. ಇವರ ಕೂಸೇ ಈ ಸೃಷ್ಟಿ. ತಾನು ಎಂದರೆ ಇದನ್ನೆಲ್ಲ ಒಳಗೊಂಡ ದೈವಿ ಚೈತನ್ಯ. ಇನ್ನೂ ಒಂದು ಅರ್ಥ ಇಲ್ಲಿ ಹೊಮ್ಮುತ್ತದೆ. ನಾನು ಎಂದರೆ ಕವಿ; ನೀನು ಎಂದರೆ ಕಾವ್ಯಪ್ರಜ್ಞೆ. ಕವನ ಇವರೀರ್ವರಆನು=ಸೃಷ್ಟಿ’. ಆನು ಎನ್ನುವ ಕಾವ್ಯಸೃಷ್ಟಿಯ ತಾನಅಂದರೆ ಸಂಗೀತದ, ತನನನಾs ಎಂದರೆ ಆನಂದಲಹರಿ.

ಎರಡನೆಯ ನುಡಿ ಈ ರೀತಿಯಾಗಿದೆ:

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಈ ಸಾಲುಗಳನ್ನು ಈ ರೀತಿಯಾಗಿ ಅರ್ಥೈಸಬಹುದು. ನಾನು ಹಾಗು ನೀನು ಇವುಗಳಿಂದ ಸೃಷ್ಟಿಯಾದ ಈ ನೀ+ನಾ+ಆನಿಗೆ, ಯಾವ ಬೇನೆ (=ಪ್ರಸವವೇದನೆ) ಬೇಕು ಎನ್ನುವದನ್ನು ನಾನು (ಜಾಣಿ=ಜ್ಞಾನಿ) ತಿಳಿದಿದ್ದೇನೆ. ಅಂದರೆ ಕವಿ ಹಾಗು ಕಾವ್ಯಪ್ರಜ್ಞೆ ಸೃಷ್ಟಿಸುತ್ತಿರುವ ಈ ಕಾವ್ಯಕ್ಕೆ ಬೇಕಾಗುವಂತಹ ಹೆರಿಗೆಯ ಬೇನೆಯನ್ನು ನಾನು ತಿಳಿದಿದ್ದೇನೆ. ಈನ್ ಎನ್ನುವದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಆದುದರಿಂದ ಈ ಸೃಷ್ಟಿ ಅರ್ಥಾತ್ ಕಾವ್ಯವು  ತೇಜಸ್ವಿಯಾಗಿದೆ ಎನ್ನುವುದು ಇಲ್ಲಿಯ ಅರ್ಥ.

ಈ ಕಾವ್ಯಸೃಷ್ಟಿಯ ಲಕ್ಷಣಗಳನ್ನು ಬೇಂದ್ರೆ ಮೂರನೆಯ ನುಡಿಯಲ್ಲಿ ನೀಡಿದ್ದಾರೆ:

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
ರಸ್ವನಾ

ಚಾರು ಅಂದರೆ ನಾಲ್ಕು ಎನ್ನುವ ಅರ್ಥವೂ ಆಗುತ್ತದೆ; ಸುಂದರವಾದ ಎನ್ನುವ ಅರ್ಥವೂ ಆಗುತ್ತದೆ. ಸುಂದರವಾದ, ನಾಲ್ಕು ತಂತ್ರಗಳನ್ನು ಹೊಂದಿದ ಈ ಕಾವ್ಯಸೃಷ್ಟಿಯ ಪ್ರತಿ ಚರಣದಲ್ಲೂ ಹೊಮ್ಮುವ ನಾದ ಯಾವ ರೀತಿಯದಾಗಿದೆ? ಅದು ಮೋಡಗಳು (=ಘನ) ಡಿಕ್ಕಿ ಹೊಡೆಯುವ ಗರ್ಜನೆಯಂತಿದೆ.
(ಶ್ರಾವಣ ಮಾಸದ ಮೋಡಗಳು ಡಿಕ್ಕಿ ಹೊಡೆಯುವಾಗ ಬೇಂದ್ರೆಯವರಿಗೆ ಕೇಳಿಸುವದು ಓಂಕಾರ’. ಅವರ ಮತ್ತೊಂದು ಕವನದಲ್ಲಿ ಈ ತರಹದ ಸಾಲೊಂದಿದೆ:
ಗುಡುಗುಡು ಗುಡುಗುಡು ಗುಡುಗಾಡುತ್ತಿದೆ
ಪ್ರಣವಪ್ರವೀಣನ ನಾದಸ್ಥಂಬ.”).

ಚತುರಸ್ವನಾ ಎನ್ನುವಲ್ಲಿಯೂ ಸಹ ನಾಲ್ಕು ಧ್ವನಿಗಳು ಎನ್ನುವ ಅರ್ಥ ಹಾಗು ಚತುರವಾದ ಎನ್ನುವ ಅರ್ಥ ಕೂಡಿವೆ. ಈ ಚತುರಸ್ವನಗಳು ಯಾವವು? ಅವು ನಾನು, ನೀನು, ಆನು, ತಾನು ಎನ್ನುವ ಶಬ್ದಗಳೇ ಆಗಿವೆ. ಈ ಶಬ್ದಗಳಿಗೆ  ಪರಾ, ಪ್ರತ್ಯಕ್, ಪಶ್ಯಂತೀ ಹಾಗು ವೈಖರೀ ಎನ್ನುವ ನಾಲ್ಕು ಹಂತಗಳೂ ಇವೆ. ಅವುಗಳ ಸ್ವರೂಪ ಈ ರೀತಿಯಾಗಿದೆ:

ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದಬ್ರಹ್ಮಕ್ಕೆ ಪರಾವಾಕ್ಎಂದು ಹೇಳಲಾಗುತ್ತದೆ. ಅದು ವಾಯುವಿನ ಜೊತೆಗೂಡಿ, ನಾಭಿಯವರೆಗೆ ಹೋಗಿ (ಸ್ವಾಧಿಷ್ಠಾನ ಚಕ್ರದಲ್ಲಿ), ವಿಮರ್ಶರೂಪದಲ್ಲಿರುವ ಮನಸ್ಸಿನ ಜೊತೆಗೂಡಿ, ’ಪಶ್ಯಂತೀ ವಾಕ್ಎನಿಸುತ್ತದೆ. ಆ ಶಬ್ದಬ್ರಹ್ಮವು ಹೃದಯದವರೆಗೆ ಹೋಗಿ (ಅನಾಹತ ಚಕ್ರದಲ್ಲಿ) ನಾದಮಯವಾಗಿ ಮಧ್ಯಮಾ ವಾಕ್ಎಂದಾಗುತ್ತದೆ. ಕಂಠಪ್ರದೇಶದಲ್ಲಿ (ವಿಶುದ್ಧಿ ಚಕ್ರದಲ್ಲಿ) ಅದು ಕೇಳಲು ಯೋಗ್ಯವಾದ ವೈಖರೀ ವಾಕ್ಆಗುತ್ತದೆ.)

ಇನ್ನು ನಾಲ್ಕು ತಂತ್ರಗಳು ಯಾವವು? ಇವು ನಾನು, ನೀನು, ಆನು, ತಾನು ಎನ್ನುವ ಭಾವನೆಗಳನ್ನು ಹೊರಡಿಸುವ ನಾಲ್ಕು ತಂತಿಗಳಾಗಿವೆ. ಅಲ್ಲದೇ ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳೂ ಆಗಿವೆ. ಐಂದ್ರಿಕ ಸೌಂದರ್ಯ, ಬೌದ್ಧಿಕ ಸೌಂದರ್ಯ, ಭಾವನಾತ್ಮಕ ಸೌಂದರ್ಯ ಹಾಗು ಆಧ್ಯಾತ್ಮಿಕ ಸೌಂದರ್ಯ ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.

ನಾಲ್ಕನೆಯ ನುಡಿ ಈ ರೀತಿಯಾಗಿದೆ:

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಕಾವ್ಯವು ನಾದರೂಪದಲ್ಲಿ ಹೊಮ್ಮಿದಾಗ ಅದರ ಪಥವೇನೆಂದು ಮೆಲೆ ಚರ್ಚಿಸಲಾಗಿದೆ. (ಬೇಂದ್ರೆ ಕಾವ್ಯವು ನಾದಲೀಲೆಎನ್ನುವದನ್ನು ನೆನಪಿಸಿಕೊಳ್ಳಿ.) ಅನಾಹತಚಕ್ರದಲ್ಲಿ ಹೊಮ್ಮುವ ನಾದಕ್ಕೆ ಯಾವುದೇ ಆಹತ(=ತಾಡನ)ಬೇಕಾಗಿಲ್ಲ. ಆ ಕಾರಣದಿಂದಲೇ ಇದಕ್ಕೆ ಅನಾಹತ ಚಕ್ರವೆನ್ನುವ ಹೆಸರಿದೆ.

ಅನಾಹತ ಚಕ್ರದಿಂದ ಅಂದರೆ ಹೃದಯಭಾಗದಿಂದ ಹೊಮ್ಮುವ, ನಾದಶರೀರಿಯಾದ ಈ ಕಾವ್ಯವು ಹತವೊ, ಹಿತವೊ ಅರ್ಥಾತ್ ಒಳ್ಳೆಯದೊ, ಕೆಟ್ಟದ್ದೊ ಅನ್ನುವುದನ್ನು ಬಲ್ಲವರಾರು? ಏನೇ ಆದರೂ ತನ್ನ ಪ್ರತಿ ಮಿತಿಯಲ್ಲಿಯೂ ಅದು ಸ್ವಾತ್ಮಸಂತೋಷವನ್ನು (=ನನನನಾ) ಹೊಮ್ಮಿಸುತ್ತಿದೆ.

ಐದನೆಯ ನುಡಿ ಈ ರೀತಿಯಾಗಿದೆ:

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

ಜನನದ ಧ್ಯಾನವೇ(=ಜಾನಿಕೆ) ಬೆನ್ನಿಗೆ ಆನಿಕೆ(=ಆಧಾರ)ಯಾಗಿದೆ. ಕಾವ್ಯದ ಮನನವೇ ಸ-ಹಿತ-ಸ್ತನಾ ಆಗಿದೆ. ಕಾವ್ಯಶಿಶುವಿಗೆ ಹಿತವಾದ ಸ್ತನ್ಯಪಾನ ಮಾಡಿಸಲು, ಅದರ ಮನನವೇ ಸಾಧನವಾಗಿದೆ.

ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿಯಾಗುವ ಹಾಗು ಅದು ಹೊರಬರಲು ತವಕಿಸುವ ವರ್ಣನೆ ಮೊದಲ ಭಾಗದಲ್ಲಿ ಈ ರೀತಿಯಾಗಿ ಬಂದಿದೆ.
ಇನ್ನೂ ಅನೇಕ ಅರ್ಥಗಳು ಈ ಭಾಗಕ್ಕೆ ಇರಬಹುದು. ಇಲ್ಲಿ ಹೊಳೆದದ್ದು ಒಂದು ಅರ್ಥ ಮಾತ್ರ.

ನಾಕು ತಂತಿಯ ಎರಡನೆಯ ಭಾಗದಲ್ಲಿ ೬ ನುಡಿಗಳಿವೆ:
ಈ ಭಾಗದಲ್ಲಿ ಅಮೂರ್ತ ಕಾವ್ಯದ ಮೂರ್ತೀಕರಣವಿದೆ.

ಮೊದಲನೆಯ ಭಾಗದಲ್ಲಿ ಆವು (ಅಂದರೆ ಕಾಮಧೇನು=ದೈವೀ ಅನುಗ್ರಹ) ಈಯುತ್ತಿದ್ದ ಅಮೂರ್ತ ಕಾವ್ಯದ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಕಾವ್ಯಕನ್ನೆ ಕವಿಯ ಮನಸ್ಸಿನಲ್ಲಿ ಮೂಡಿದ್ದಾಳೆ. ಅವಳ ವ್ಯಕ್ತರೂಪದ ವರ್ಣನೆ ಇಲ್ಲಿದೆ.
ಮೊದಲನೆಯ ನುಡಿ ಹೀಗಿದೆ:

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ಆವಿನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ.  ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ? ಕಾತರದಿಂದಾಗಿ ನಡುಗುತ್ತಿದ್ದಾಳೆ ಎಂದು ಭಾವಿಸಬೇಕೆ? ಅಥವಾ ನಡು ಅಂದರೆ ಟೊಂಕವು ನಡುಗಿ ಎಂದರೆ ನರ್ತಿಸುತ್ತ ಎಂದು ಭಾವಿಸಬೇಕೆ? ಎರಡೂ ರೀತಿಯಲ್ಲಿ ಅರ್ಥೈಸಬಹುದು.

ಎರಡನೆಯ ನುಡಿ ಹೀಗಿದೆ:

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ಇದೊಂದು ಅತ್ಯಂತ ಸುಂದರವಾದ ನುಡಿ. ಕವಿಗೆ ಹಾಗು ಕಾವ್ಯಕನ್ಯೆಗೆ ಇರುವ ಸಂಬಂಧವನ್ನು ಕವಿಸಲಿಗೆಯ ಸುಲಿಗೆಎಂದು ಬಣ್ಣಿಸುತ್ತಾನೆ. ಅವಳ ಉಡುಪಾದರೊ ಬಯಲಿನ ನೆಯ್ಗೆಯ ಸಿರಿಯುಳ್ಳದ್ದು. ಬಯಲಿನ ನೆಯ್ಗೆ ಎಂದರೆ ದಿಕ್ಕುಗಳೇ ಅಂಬರವಾದ ದಿಗಂಬರ ಉಡುಗೆ! ಇದು ‘ಬೃಹತ್ ಭಾವ’ ವನ್ನು ಸೂಚಿಸುವದಲ್ಲದೆ, ಕವಿ ಹಾಗು ಕಾವ್ಯಕನ್ನೆಯ ನಡುವೆ ಯಾವುದೇ ಮುಚ್ಚುಮರೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ. ಇಂತಹ ಕಾವ್ಯಕನ್ಯೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ.

ಮೂರನೆಯ ನುಡಿ ಹೀಗಿದೆ:

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಕಾವ್ಯಕನ್ಯೆಯ ನಡಿಗೆ ಕವಿಯ ನಾಡಿಸ್ಪಂದನಕ್ಕೆ ಅನುಸ್ಪಂದಿಯಾಗಿದೆ. ಈ ನಾಡಿಗಳು ಯಾವವು? ಕಾವ್ಯ ಸೃಷ್ಟಿಯು ಲೌಕಿಕ ಕವಿಯ ಮನಸ್ಸಿನಲ್ಲಿ ನಡೆದರೆ, ಅಲೌಕಿಕ ಕವಿಗೆ ಇದು ಪರಾಮನಸ್ಸಿನಲ್ಲಿ ನಡೆಯುವ ವ್ಯಾಪಾರ. ಇಲ್ಲಿರುವ ನಾಡಿಗಳು ಯೋಗಶರೀರದ ನಾಡಿಗಳು. ಈ ನಾಡಿಗಳಲ್ಲಿ ಕ್ರಮಿಸುವ ಅವಳ ವಾಕ್ಅನ್ನು ಕವಿ ನಲುವಿನ ನಾಲಿಗೆ ಅಂದರೆ ಆಹ್ಲಾದಕರವಾಗಿದೆ ಹಾಗೂ ಅದು ಸೋಲುವ(=ಮರಳಾಗುವ) ಸೊಲ್ಲಿನಲಿನೆನೆದಿದೆ ಎಂದು ಹೇಳುತ್ತಾನೆ.

ನಾಲ್ಕನೆಯ ನುಡಿ ಹಿಗಿದೆ:

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಇದುವರೆಗೂ ಯಾರೂ ಮುಟ್ಟದಂತಹ, (ಈವರೆಗೂ ಹುಟ್ಟಿರದಂತಹ) ಜೇನುಹುಟ್ಟಿನ (-ಜೇನು ಹುಟ್ಟು ಹುಟ್ಟಿರುವದಿಲ್ಲ; ಅದನ್ನು ಜೇನುಹುಳುಗಳು ಕಟ್ಟಿರುತ್ತವೆ-) ಜೇನನ್ನು , ಕಾವ್ಯಕನ್ಯೆ ಕವಿಯ ಸನಿಹದಲ್ಲಿ ಹನಿಸುತ್ತಾಳೆ. ಈ ಹನಿಯುವಿಕೆಯು ಜೇನಿನ ಮಳೆಯನ್ನೆ ಥಳಿ ಹೊಡೆದ ಹಾಗೆ ಸುಖಕರವಾಗಿದೆ. ( ’ಹನಿಎನ್ನುವಲ್ಲಿ drop ಹಾಗು ’honey’ ಎರಡೂ ಇರುವದು ಸ್ವಯಂವೇದ್ಯ).

ಐದನೆಯ ನುಡಿ ಹೀಗಿದೆ:

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಈ ಎಲ್ಲ ಕ್ರಿಯೆಯಲ್ಲಿ ವೆಚ್ಚವಾದದ್ದೇನು? ಕವಿಯ ಉದ್ವೇಗಸ್ಥಿತಿಯ ಬಿಡುಗಡೆಯೆ? ಈ ಭಾವನೆ ಕವಿಯನ್ನು ಬೆಚ್ಚಿಸುತ್ತದೆ. (ವಾಲ್ಮೀಕಿಯ ಉದ್ವೇಗ ಕೊನೆಗೊಮ್ಮೆ ರಾಮಾಯಣದ ರಚನೆಯಲ್ಲಿ ಮುಕ್ತಿ ಪಡೆದದ್ದನ್ನು, ಗೋಪಾಲಕೃಷ್ಣ ಅಡಿಗರು ಬಣ್ಣಿಸುವದು ಹೀಗೆ:
ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ, ರಾಮಾಯಣಶ್ಲೋಕ ರೇಶ್ಮೆದೊಗಲು”.)
ಕವಿಯ ಬಸರಿನಲ್ಲಿ ಕಾವ್ಯವಂತೂ ಮೊಳೆದಿದೆ. ಆದರೆ ಇಲ್ಲಿ ಇನ್ನೂ ಏನು ಬಚ್ಚಿಟ್ಟುಕೊಂಡಿದೆ ಎನ್ನುವದು ಕವಿಗೆ ಗೂಢವಾಗಿದೆ.

ಆರನೆಯ ನುಡಿ ಹಿಗಿದೆ:

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಕವಿಯನ್ನು ಪ್ರೇರೇಪಿಸಿದ ಭಾವ ಈಗ ಹಳೆಯದಾಯಿತು. ಕವಿತೆ ಹುಟ್ಟಿದ್ದರಿಂದ ಹೊಸ ಬೆಳಗು (=ಜಾವ=ಯಾಮ) ಉದ್ಭವವಾಯಿತು. ಈ ನವಶಿಶುವಿಗೆ ಮೊಲೆ ಊಡಿಸುವಳು ಕವಿಯ ಪ್ರತಿಭೆ. ಅವಳು ಹೊಸ ಹೊಸ ಸ್ಫುರಣಗಳನ್ನು ಮಾಡುವ ಸಾಮರ್ಥ್ಯವುಳ್ಳವಳು(=ಪ್ರತಿಭಾ ನವನವೋನ್ಮೇಶಶಾಲಿನೀ).

ಮೂರನೆಯ ಭಾಗದಲ್ಲಿ ಎರಡೇ ನುಡಿಗಳಿವೆ:

ಮೂರನೆಯ ಭಾಗವು ಸವಾಲು-ಜವಾಬಿನ ರೂಪದಲ್ಲಿದೆ ಎಂದು ಬೇಂದ್ರೆ ಮಾಸ್ತರರ ಅಡಿಟಿಪ್ಪಣಿ ಹೇಳುತ್ತದೆ.
ಸವಾಲು ಮಾಡುವವರು ಇಬ್ಬರು. ಒಬ್ಬಳು ಸಾವೀ ಮಗಳು, ಮತ್ತೊಬ್ಬಳು ಭಾವೀ ಮಗಳು.

ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ

ಚಿತ್ರಾ ನಕ್ಷತ್ರಲ್ಲಿ ಬೀಳುವ ಈ ಚಿತ್ತೀ ಮಳೆಯು ಎಲ್ಲಿ ಸುರಿಯುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಸುರಿದಲ್ಲಿ ಬೆಳೆಗೆ ವರವಾಗುತ್ತದೆ. ಕವಿಯ ಅಂತರಂಗದಲ್ಲಿ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ. ಚಿತ್ತಿಯ ನಂತರದ ಸ್ವಾತಿ ಮಳೆ, ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತು ಹುಟ್ಟುತ್ತದೆ. ಅದಕ್ಕಾಗಿಯೇ ಸತ್ತಿsಯೊ ಮಗನs’ ಎಂದು ಸಾವೀ ಮಗಳು ಹಾಗು ಭಾವೀ ಮಗಳು ಕವಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಾವೀ ಮಗಳು ಹಾಗು ಭಾವೀ ಮಗಳು ಯಾರು? ಸಾವೀ ಎಂದರೆ ಭೂತಕಾಲದ ಹಾಗು ಭಾವೀ ಎಂದರೆ ಭವಿಷ್ಯಕಾಲದ ಪ್ರತಿನಿಧಿಗಳು ಎಂದು ಭಾವಿಸಬಹುದು.

ಮತ್ತೂ ಒಂದು ಅರ್ಥವು ಇಲ್ಲಿ ಹೊರಡುತ್ತದೆ:
ಚಿತ್ತಿ ಅಂದರೆ ಚಿತ್’. ಅದು ಸ್ವಾತಿಮುತ್ತಾಗಬೇಕಾದರೆ, ಅದು ಸತ್ದೊಡನೆ ಸೇರಬೇಕು. ಈ ಎಚ್ಚರಿಕೆಯನ್ನು
ಸಾವೀ ಮಗಳು ಹಾಗು ಭಾವೀ ಮಗಳು ನೀಡುತ್ತಿದ್ದಾರೆಯೆ? ಬೇಂದ್ರೆಯವರ ಕವನದಲ್ಲಿ ಯಾವಾಗಲೂ ಅನೇಕ ಧ್ವನಿಗಳು ಹೊರಡುತ್ತವೆ.

ಈ ಸವಾಲಿಗೆ ಅಂಬಿಕಾತನಯದತ್ತರ ಜವಾಬು ಈ ರೀತಿಯಾಗಿದೆ:

ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.

ಪ್ರಕೃತಿ ಹಾಗು ಪುರುಷ (ಅರ್ಥಾತ್ ಆತ್ಮಾ) ಇವರ ಮಿಲನದಿಂದ ಸೃಷ್ಟಿಯಾಗಿದೆ. ಅಪ್ಪ ಎಂದರೆ ಆತ್ಮ ಹಾಗು ಅಮ್ಮ ಎಂದರೆ ಪ್ರಕೃತಿ. ಈ ಜಗತ್ತೇ ಇವರ ಮಗು. ಆದುದರಿಂದ ಅಮ್ಮನಲ್ಲಿ ಕಾಣುವುದು ಅಪ್ಪನ ಮುಖವೇ.

ಈ ತಾಯಿಯ ಭಾರ ಹೊತ್ತವನು ತಂದೆ. ಅದಕ್ಕಾಗಿಯೇ ಅವಳು ಭಾರ್ಯಾ’, ಅವನು ಭರ್ತಾ’. ಈ ಜಗತ್ತು ಈ ದೈವೀ ತಂದೆ-ತಾಯಿಗಳ ಕೂಸು(ಜಗತ: ಪಿತರೌ). ಈ ನುಡಿಯ ಮೊದಲಿನ ಮೂರು ಸಾಲುಗಳಲ್ಲಿ ಬೇಂದ್ರೆಯವರು, ಕಾಳಿದಾಸನು ತನ್ನ ರಘುವಂಶಕಾವ್ಯಕ್ಕೆ ಬರೆದ ನಾಂದೀಪದ್ಯವನ್ನು ನೆನಪಿಸುತ್ತಾರೆ:
(ಟಿಪ್ಪಣಿ: ರಘುವಂಶ ಎಂದು ಬರೆಯುವ ಬದಲಾಗಿ ನಾನು ‘ಕುಮಾರಸಂಭವ’ ಎಂದು ತಪ್ಪಾಗಿ ಬರೆದಿದ್ದು, ಶ್ರೀ ವಿಜಯಶಂಕರ ಮೆಟಿಕುರ್ಕೆಯವರು ಈ ದೋಷವನ್ನು ನನ್ನ ನಜರಿಗೆ ತಂದದ್ದು, ನಾನೀಗ ಇದನ್ನು ಸರಿಪಡಿಸಿದ್ದೇನೆ.)
ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ
ವಾಕ್ನಲ್ಲಿ ಪ್ರತಿಫಲನವಾಗುವದು ಅರ್ಥ’. (’ವಾಗರ್ಥಾವಿವ ಸಂಪೃಕ್ತೌ’). ಅಂದರೆ ಅಮ್ಮನ ಮುಖದಲ್ಲಿ ಕಾಣುವದು ಅಪ್ಪನ ಮುಖವೇ ಆಗಿದೆ.

ಅಂಬಿಕಾತನಯದತ್ತನು ತಾನು ಈ ದೈವೀ ಮಿಥುನದ ಕಂದನೆಂದು ಹೇಳಿಕೊಳ್ಳುತ್ತಾನೆ. ದೈವಿ ಚೈತನ್ಯವನ್ನು ಅನುಭವಿಸುವವರಿಗಲ್ಲದೆ ಬೇರೆಯವರಿಗೆ ಈ ಘೋಷಣೆ ಅಸಾಧ್ಯ. ಶ್ರೀ ಗುರುದತ್ತ ಅಂದಅಂದರೆ ಶ್ರೀ ಗುರುದತ್ತನು ಈ ರೀತಿಯಾಗಿ ಹೇಳಿದನು ಎನ್ನುವ ಅರ್ಥದೊಡನೆಯೇ, ಗುರುದತ್ತನು ಅಂದವಾಗಿದ್ದಾನೆ ಎನ್ನುವ ಅರ್ಥವೂ ಸಹ ಸೇರಿಕೊಂಡಿದೆ.

ಕೊನೆಯದಾದ ನಾಲ್ಕನೆಯ ಭಾಗದಲ್ಲಿ ಎರಡು ನುಡಿಗಳಿವೆ:

ನಾನು’ ’ನೀನು
ಆನು’ ’ತಾನು
ನಾಕೆ ನಾಕು ತಂತಿ,

ಕವಿಯು ಸಂಸಾರದ ಅರ್ಥವಿರುವದು ಈ ನಾಲ್ಕೇ ತಂತಿಗಳಲ್ಲಿ (ನಾನು, ನೀನು, ಆನು, ತಾನು)ಎಂದು ಪುನರುಚ್ಚರಿಸುತ್ತಾನೆ. ನಾನು ಹಾಗು ನೀನು ಇವು ಆತ್ಮ ಮತ್ತು ಪ್ರಕೃತಿಗೆ ಅಥವಾ ತಂದೆ ಹಾಗು ತಾಯಿಗೆ ಸಂಕೇತವಾದರೆ, ಆನು ಇದು ಅವರ ಸೃಷ್ಟಿಗೆ ಸಂಕೇತವಾಗುತ್ತದೆ. ತಾನು ಎನ್ನುವುದು ಇವೆಲ್ಲವನ್ನೂ ಒಳಗೊಂಡ ಚೈತನ್ಯರೂಪವಾಗಿದೆ. ಈ ಚೌದಂಡಿಗೆಯ ಶ್ರಾವ್ಯ ಮತ್ತು ಶ್ರವಣಾತೀತ ಸ್ವರ ಉಸಿರುವದು ಒಂದೇ ರಾಗ: ಓಂ ದಂತಿಎಂದು.

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಇಲ್ಲಿಯವರೆಗೆ ನಾನು, ನೀನು, ಆನು ತಾನು ಮಾತ್ರ ಇದ್ದುದು ಈಗ ದಂತಿಯ ಪ್ರವೇಶವಾಗುತ್ತದೆ. ದಂತಿ ಎಂದರೆ ಗಣಪತಿ. ಆ ಗಣನಾಯಕನೇ ಈ ಮೈ ಮಾಯಕವನ್ನು ,ಕಾವ್ಯವನ್ನು (-ಯಾಕೆಂದರೆ ಕಾವ್ಯವೆಂದರೆ ಕವಿಯ ಮಾಯಾಶರೀರ -) ಸೈ ಸಾಯಕ ಮಾಡಿ (-ಸೈ=ಸರಿಯಾದ, ಸಾಯಕ=ಬಾಣ-) ಪ್ರಯೋಗಿಸಬೇಕು. ಈ ಪ್ರಯೋಗ ಹೇಗಿರಬೇಕೆಂದರೆ, ಅದು ಗುರಿಯ ತುಂಬಿ(=ಗುರಿಯ ಕಡೆಗೆ ಲಕ್ಷ್ಯ ತೊಟ್ಟು), ಕುರಿಯ ಕಣ್ಣು(ಕುರಿತು=ನಿರ್ದಿಷ್ಟವಾಗಿ ದೃಷ್ಟಿಸುತ್ತ) ಅಥವಾ bull’s eyeದಂತೆ ಇರಬೇಕು. ಇದರ ಫಲವೆಂದರೆ ಧಾತು (ಅರ್ಥ) ಮತ್ತು ಮಾತು( ವಾಕ್) ಕೂಡಿರಬೇಕು.

ಬೇಂದ್ರೆಯವರು ತಾವು ಬಳಸುವ ಪದಗಳಿಗೆ ಇತರ ಭಾಷೆಯಲ್ಲಿರುವ ಅರ್ಥಗಳನ್ನೂ ಜೋಡಿಸಿರುತ್ತಾರೆ. ಉದಾಹರಣೆಗೆ ಮೈ ಮಾಯಕದಲ್ಲಿ ಮೈ ಪದವನ್ನು ಮೂರು ಅರ್ಥಗಳಲ್ಲಿ ಬೇಂದ್ರೆ ಬಳಸಿದ್ದಾರೆ.
(೧) ಮೈ= ಶರೀರ
(೨) ಮೈ= ಮಹಿಮೆ
(೩) ಮೈ= my
ಇದರಂತೆ ಸಾಯಕಕ್ಕೆ ಬಾಣ ಹಾಗು ಸಹಾಯಕ ಎನ್ನುವ ಎರಡೂ ಅರ್ಥಗಳನ್ನು ಉಪಯೋಗಿಸಬಹುದು.
ಕುರಿಎನ್ನುವ ಪದ ಕುರಿತು ಎಂದರೆ ನಿರ್ದಿಷ್ಟ ಎನ್ನುವ ಅರ್ಥ ಕೊಡುವಂತೆಯೇ ಗುರಿಎನ್ನುವ ಪದಕ್ಕೆ ಧ್ವನಿಸಂವಾದಿ ಪದವೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಅವರ ಬೇರೊಂದು ಕವನದ ಎರಡು ಸಾಲುಗಳನ್ನು ಇಲ್ಲಿ ಕೊಡುತ್ತೇನೆ:

ಘುರ್ರೆ ಘುರ್ರೆ ಘೋಟಕಾ
ನಡೆ ಅಂತಃಸ್ಫೋಟಕಾ”.

ಘುರ್ರೆ ಅನ್ನುವದು ತೆಲುಗಿನ ಕುರ್ರಂ(=ಕುದುರೆ) ಅನ್ನುವ ಪದಕ್ಕೆ ಹಾಗು ಘೋಟಕಾ ಎನ್ನುವದು ಹಿಂದಿ ಭಾಷೆಯ ಘೋಡಾ(=ಕುದುರೆ) ಪದಕ್ಕೆ ಧ್ವನಿಸಂವಾದಿ ಪದಗಳಾಗಿರುವದನ್ನು ಗಮನಿಸಬೇಕು. ಇಂತಹ ಬಳಕೆ ಬೇಂದ್ರೆಯವರ ಕಾವ್ಯದಲ್ಲಿ ಸಾಮಾನ್ಯ.

ನಾಕು ತಂತಿಅತ್ಯಂತ ಸರಳ ಕನ್ನಡದಲ್ಲಿ ರಚಿಸಲಾದ ಕವನ. ಆದರೆ ಅಷ್ಟೇ ನಿಗೂಢವಾದ ಕವನ. ಈ ಕವನದಲ್ಲಿ ಪದಗಳಿಗೆ ಅನೇಕ ಅರ್ಥಗಳು ಇರುವಂತೆಯೇ, ಪದಗಳ ನಾದಕ್ಕೂ ಸಹ ಅರ್ಥವಿದೆ. ಲೌಕಿಕ ಹಾಗು ಅಲೌಕಿಕ ಆಯಾಮಗಳಲ್ಲಿ ಈ ಕವನದ ಅರ್ಥವನ್ನು ಅನುಭವಿಸಬೇಕಾಗುತ್ತದೆ.

42 comments:

  1. ನಾಕುತಂತಿಯ ಬಗ್ಗೆ ಒಂದೆರಡು ವಿವರಣೆಗಳನ್ನು ಓದಿದ್ದೆ. ಇದರಷ್ಟು ವಿಸ್ತೃತ, ವಿಶಾಲ (ಬೇಂದ್ರೆಯ ಕವನವಾದ್ದರಿಂದ ಪರಿಪೂರ್ಣ ಅನ್ನಲಾರೆ, ಕ್ಷಮಿಸಿ) ಅರ್ಥವಿವರಣೆ ಓದಿಲ್ಲ, ಕೇಳಿಲ್ಲ. ಔತಣ ಬಡಿಸಿದ್ದೀರಿ. ಇನ್ನೊಮ್ಮೆ, ಮತ್ತೊಮ್ಮೆ ಸವಿಯುತ್ತೇನೆ. ಧನ್ಯವಾದಗಳು, ಕಾಕಾ.

    ReplyDelete
  2. `ನಾಕು ತಂತಿ' ಪುಸ್ತಕ ನೋಡಿದ್ದೇನೆ. ಓದಿಲ್ಲ. ಬಹಳ ಹಿಂದೆ ಒಂದು ಸಲ ಓದಲು ಪ್ರಯತ್ನಿಸಿ ಅರ್ಥವಾಗದೆ ಬಿಟ್ಟುಬಿಟ್ಟೆ.
    ನಿಮ್ಮ `ನಾಕು ತಂತಿಯ ನೆರಳಲ್ಲಿ ಓದಿದರೆ ತಿಳಿಯಬಹುದೇನೋ ? ಇಂದೇ ತಂದು ಓದಲು ಪ್ರಯತ್ನಿಸುವೆ. ಬೆಳಗಾವಿಯಲ್ಲಿ `ನಾಕು ತಂತಿ ಸಿಗುವದೋ ಇಲ್ಲವೋ ? ಅತ್ಯಂತ ಶ್ಲಾಘ್ಯ ಕೆಲಸ ಮಾಡಿರುವಿರಿ. ಧನ್ಯವಾದಗಳು.

    ಶ್ರೀನಿವಾಸ ಕಟ್ಟಿ

    ReplyDelete
  3. ‘ನಾಕುತಂತಿ’ಯ ಅರ್ಥ ತಿಳಿಯಲು ತುಂಬ ಬಯಸಿದ್ದೆ. ನೀವು ಅದ್ಭುತ ವಿವರಣೆ ನೀಡಿದ್ದೀರಿ. ತುಂಬ ಧನ್ಯವಾದಗಳು ಸರ್

    ReplyDelete
  4. ಜ್ಯೋತಿ,
    ನಾನು ಬರೆದದ್ದು ನನಗೇ ಸಮಾಧಾನ ತಂದಿಲ್ಲ.ಕೊನೆಯ ಭಾಗದಲ್ಲಿ ದಂತಿಯ ಪ್ರವೇಶದ ವಿವರಣೆಯನ್ನು ಅಪೂರ್ಣ ಮಾಡಿರುವೆ.ದೈವೀ ’ನಾನು,ನೀನು’ಗಳ ’ಆನು’ ಅವನು.
    ಹತ್ತು ಜನ ಕೂಡಿ ತಿಳಿದುಕೊಳ್ಳಬೇಕಾದ ಕವನವಿದು.ನಿನಗೆ ಕಂಡ ಹೆಚ್ಚಿನ ಅರ್ಥವನ್ನು ದಯವಿಟ್ಟು ತಿಳಿಸು.
    -ಸುನಾಥ ಕಾಕಾ

    ReplyDelete
    Replies
    1. ಯಾಕೋ ಬೇಜಾರಿನಲ್ಲಿದ್ದೆ.ಈ ಓದು ಸ್ವಲ್ಪ ಸಮಾಧಾನ ತಂದಿತು.ನಿಮ್ಮಂತವರಿಂದ ಕನ್ನಡ ಕಾವ್ಯ ಇನ್ನೂ ಸಾವಿರ ವರ್ಷ ಉಳಿಯುತ್ತದೆ.

      Delete
  5. ಕಟ್ಟಿಯವರೆ,
    ’ನಾಕು ತಂತಿ’ ಬೆಳಗಾವಿಯಲ್ಲಿ ದೊರೆಯದಿದ್ದರೆ ತಿಳಿಸಿ; ಧಾರವಾಡದಿಂದ ಕಳಿಸುವೆ.

    ReplyDelete
  6. ಶುಭದಾ,
    ಸsರ್ ಯಾಕಮ್ಮ? ಕಾಕಾ ಎಂದು ಕರೆದರೆ ಸಾಕು.
    -ಸುನಾಥ ಕಾಕಾ

    ReplyDelete
  7. ’ನಾಕು ತಂತಿ’ ಅತ್ಯಂತ ಸರಳ ಕನ್ನಡದಲ್ಲಿ ರಚಿಸಲಾದ ಕವನ. ಆದರೆ ಅಷ್ಟೇ ನಿಗೂಢವಾದ ಕವನ!

    ಸುನಾಥರೇ, ಎಳೆ ಎಳೆಯಾಗಿ ಬಿಡಿಸಿ ಬರೆದಿದ್ದೀರಿ. ಆದರೂ ನನಗೆ ಅರ್ಥವಾಗಿದೆಯೇ ಎನ್ನುವ ಸಂದೇಹ! "ಬೇಂದ್ರೆಯವರ ಕವನ ಅರ್ಥ ಮಾಡಿಕೊಳ್ಳುವುದಕ್ಕಿಂತ ಹಾಡಿಕೊಂಡು ಸಂತೋಷಪಡುವುದೇ ಸುಲಭ" ಎಂದು ನಾನೊಮ್ಮೆ ಬರೆದಿದ್ದೆ. ಅರ್ಥ ತಿಳಿದು ಹಾಡಿದರೆ - ಹಾಡು ಕೇಳಿದರೆ - ಇನ್ನೂ ಸುಖ ಅನ್ನಿಸುತ್ತಿದೆ - ನಿಮ್ಮ ವಿವರಣೆ ನೋಡಿದ ಮೇಲೆ.

    ಸಾರ್ಥಕ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  8. ನಿಜ, ತ್ರಿವೇಣಿಯವರೆ,
    ಬೇಂದ್ರೆಯವರ ಕವನಗಳನ್ನು ಹಾಡಿಕೊಳ್ಳುವದರಲ್ಲಿ ಸುಖವಿದೆ.
    ಅವರ ಕವನಗಳ ಅರ್ಥಗಳು ಹೊಳೆಯುತ್ತ ಹೋದರೆ ಇನ್ನೂ ಸುಖವಿದೆ.

    ReplyDelete
  9. ಕಾಕಾ,
    ನಾಕುತಂತಿಯ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿದ್ದೆ ನಾನು. ಏನೂ ಅರ್ಥವಾಗಿರಲಿಲ್ಲ. ಇಷ್ಟು ಒಳ್ಳೆಯ ವಿವರಣೆಗೆ ತುಂಬಾ ಧನ್ಯವಾದಗಳು. ಎಲ್ಲ ಅರ್ಥವಾಯಿತು ಅಂತೇನಿಲ್ಲ. ಮತ್ತೆ ಮತ್ತೆ ಓದುತ್ತೇನೆ.
    ಬೇಂದ್ರೆ ಅಜ್ಜನ ಕವಿತೆಯ ಬಗ್ಗೆ ತಿಳಿಯಬೇಕೆಂದಾಗೆಲ್ಲ ನೀವಿದ್ದೀರಲ್ಲ. ಅದೇ ಖುಶಿ ನಂಗೆ.

    ಮತ್ತೊಮ್ಮೆ ಧನ್ಯವಾದಗಳು.

    ReplyDelete
  10. ಮನಸ್ವಿನಿ,
    ಸ್ವಾಗತ, ಸುಸ್ವಾಗತ!
    -ಕಾಕಾ

    ReplyDelete
  11. ನಮಸ್ಕಾರ
    ಸ್ನೇಹಿತರೊಬ್ಬರಿಂದ ಸಿಕ್ತು ಲಿಂಕ್. ಕವನ ಇನ್ನೂ ಅರ್ಥಾ ಅಗಿಲ್ಲ್ಲ . ಆದ್ರೆ ಅರ್ಥ ಮಾಡಿಸುವ ನಿಮ್ಮ ಪ್ರಯತ್ನದ ಬಗ್ಗೆ ಖುಶಿಯಾಗಿದೆ. ಮತ್ತೆ ಮತ್ತೆ ಓದುವ ಪ್ರಯತ್ನ ಮಾಡ್ತೀನಿ :).

    ರಾಧಿಕಾ

    ReplyDelete
  12. ರಾಧಿಕಾ,
    ಸುಸ್ವಾಗತ. ’ನಾಕು ತಂತಿ’ ನಿಗೂಢವಾದ ಕವಿತೆ; ಆದರೆ ಕ್ಲಿಷ್ಟವೇನಲ್ಲ.

    ReplyDelete
  13. `ನಾಕು ತಂತಿ' ಬೆಳಗಾವಿಯಲ್ಲಿ ಸಿಗಲಿಲ್ಲ. ಧಾರವಾಡದಲ್ಲಿ ಬೇಂದ್ರೆಯವರ ಕೃತಿಗಳ ಸಂಪೂರ್ಣ ಸಂಪುಟ ದೊರೆಯುವದೆ ?ದೊರೆತರೆ, ಕಳಿಸಲು ಸಾಧ್ಯವೆ ?

    ಶ್ರೀನಿವಾಸ ಕಟ್ಟಿ.

    ReplyDelete
  14. ದೊರೆಯುವವು. ಕಳಿಸುವೆ.

    ReplyDelete
  15. ಸುನಾಥರೇ ... ಕೆಲಸದ ಒತ್ತಡದಿಂದ ಈ ಎರಡು ಬರಹಗಳನ್ನು ಓದಲಾಗಿಲ್ಲ, ಮತ್ತೆ ಅನಿಸಿಕೆ ಬರೆಯುವೆ ... ಯುಗಾದಿಯ ಶುಭಾಷಯಗಳು.
    -ಅಮರ.

    ReplyDelete
  16. ಅಮರ,
    You are always welcome!

    ReplyDelete
  17. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನೆಲ್ಲ ಸಂಗ್ರಹಿಸುವ ಹುಮ್ಮಸ್ಸಿನಲ್ಲಿ ಕಳೆದ ವರ್ಷ ಕೊಂಡುತಂದಿದ್ದೆ 'ನಾಕುತಂತಿ' ಸಂಕಲನವನ್ನ. ಮನೆಗೆ ಬಂದು ಓದಲು ಪ್ರಯತ್ನಿಸಿದರೆ ಅದರಲ್ಲಿನ ಎರಡ್ಮೂರು ಕವಿತೆಗಳನ್ನ ಬಿಟ್ರೆ ಇನ್ನುಳಿದದ್ದು ಒಂದೂ ಅರ್ಥ ಆಗಿರಲಿಲ್ಲ. ಆಮೇಲೂ ಸುಮಾರು ಸಲ ಪ್ರಯತ್ನಿಸಿದ್ದೇನೆ; ಈ ಹಾಡನ್ನಂತೂ ಪ್ಲೇಯರ್ರಿನಲ್ಲಿ ರಿಪೀಟ್' ಮೋಡಲ್ಲಿಟ್ಟು ನೂರಾರು ಬಾರಿ ಕೇಳಿ ನೋಡಿದ್ದೇನೆ; ಊಹೂಂ, ಏನೇನೋ ಅರ್ಥವಾದಂತಾಗುತ್ತದಾದರೂ 'ಪೂರ್ತಿ ಸರಿಯಾದ ಅರ್ಥ ಏನು' ಅಂತ ಇವತ್ತಿಗೂ ಗೊತ್ತಾಗಿರ್ಲಿಲ್ಲ..

    ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗೊಲ್ಲ. ಬಿಡಿಸಿ ವಿವರಿಸಿ ಹೇಳಿ ಇಷ್ಟೊಳ್ಳೆ ಕೆಲಸ ಮಾಡಿದೀರ..

    ಈಗ್ಲೂ ಪೂರ್ತಿ ಅರ್ಥ ಆಗಿಲ್ಲ; ಪ್ರಿಂಟೌಟ್ ತಗೊಂಡು ಹೋಗಿ ಮನೇಲಿ ಪ್ರಯತ್ನಿಸ್ತೀನಿ.. ;)

    ReplyDelete
  18. ನನಗೆ ನಾಕು ತಂತಿಯ ಹುಚ್ಚು ಹಿಡಿದಿದ್ದು ನಾನು ಮೊದಲನೆಯ ವರ್ಷ (1999) ಇಂಜಿನೇರಿಂಗ ಸೇರಿದಾಗಿನಿಂದ. ಅವತ್ತಿನಿಂದ ಇವತ್ತಿನವರೆಗೆ ನಾನು ದಿನಕ್ಕೊಮ್ಮೆ ಕೇಳುತ್ತಲೇ ಇರುತ್ತೇನೆ, ಹಾಡುತ್ತಲೇ ಇರುತ್ತೇನೆ. ಹಾಡಲಿಕ್ಕೆ ಸೊಗಸಾದ ಜಾಗ ಬಚ್ಚಲಮನೆ. ಪುಣೆಯಲ್ಲಿ ನಾವಿರುವ ಮನೆಯ ಯಜಮಾನರು ಕನ್ನಡದವರು. ಮನೆಯ ಯಜಮಾನಿ ನನ್ನ ಹಾಡು ಕೇಳಿ ಚನ್ನಾಗಿ ಹೇಳುತ್ತಿಯ ಅಂತ ಯಾವಾಗಲು ಹೇಳುತ್ತಲೇ ಇರುತ್ತಾರೆ.ನಾಕು ತಂತಿಯ ಜೊತೆ ನಾನಾಡುವ ಬೇರೆ ಹಾಡುಗಳು, ಚಕೋರಂಗೆ ಚಮದ್ರಮನ, ಗುಡಿಯನೋಡಿರಣ್ಣ ದೇಹದ ಗುಡಿಯ.., ಕೆಲವು ಮಂಕುತಿಮ್ಮನ ಹಾಡುಗಳು...ತನುವು ನಿನ್ನದು, ಎದೆತುಂಬಿ ಹಾಡಿದೆನು ನನ್ನದೇ ಆದ ಅರಳಿ ಬಿಡು ಮಲ್ಲೆ ಹುವೆ...ಇತ್ಯಾದಿ. ನನಗೆ ನಾಕುತಂತಿಯ ಅರ್ಥ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ನಿಮ್ಮ ಈ ವಿವರಣೆ ನೋಡಿದಮೇಲೆ ಆಳವಾಗಿ ಅರ್ಥವಾಯಿತು.

    ಕಾಕಾ ನಿಮಗೆ ಅನಂತ ಧನ್ಯವಾದಗಳು.
    ಸ್ವಾಮಿ
    ಕಡಾಕೊಳ್ಳ.
    10/05/08

    ReplyDelete
  19. ನಾನು ಚಿಕ್ಕವನಿದ್ದಾಗಿನಿ೦ದ ಈ ಹಾಡನ್ನು ಕೇಳುತ್ಟಾ ಇದ್ದೆನೆ, ಅರ್ಥ ಆಗಿರಲಿಲ್ಲ. ಆದರೂ ಬಹು:ಶ ಅದರ ರಾಗ ತು೦ಬಾ ಸೆಳೆದಿತ್ತು. ಗೆಳೆಯ ಇವತ್ತು ಇ ವೆಬ್ ಸ್ಯಟ್ ಬಗ್ಗೆ ತಿಳಿಸಿದ. ತು೦ಬಾ ವಿಸ್ತೃತ ಹಾಗು ವದ್ವ್ತತ್ತ್ತ್ ಪೂರ್ಣ ಅರ್ಥವನ್ನು ವಿಸ್ತಾರವಾಗಿ ತಿಳಿಸಿದ್ದಿರಿ. ಧನ್ಯವಾದಗಳು.

    ReplyDelete
  20. ITS A VERY FANTASTIC SONG WITH A FABULOUS MEANING...............
    THE CONCEPT OF COMPARING THE OEM AND THE POET TO COW AND ITS BABY IS HEART TOUCHING!!!!!!!!!!!

    ReplyDelete
  21. The metaphysical concepts (or realities)are perceptible to only the
    naturally enabled mind.I wonder how many can understand your elucidation of DRB's 'Naakutanti'.It is a particular dimension of understanding that is needed.It is beyond a brain trained merely in material sciences.
    Chitguppi

    ReplyDelete
  22. ee kavanakke artha bahala dinagaLinda huDukuttaa idde. neevu vistRutavaagi bareda artha bahaLa sahayavaayitu. nimage tuMbu hRudayada vaMdanegaLu.
    neevu heLida haage bEMdre avarannu artha maaDikoLLalu namma samarthyavannu meeri dRuShTi haayisabEku. nivu idara haageye, dayaviTTu "om sachchidaanaMda.... iLidu baa" ee kavanakke kooda artha bareyuttira?

    idallade nimma blog oTTare bahaLa sogasagi mooDi barutte ide. AbhinaMdanegaLu.

    ReplyDelete
  23. Nimagae nanna preethiya namaskara..nimma kelsa shlaghaneeya.

    ReplyDelete
  24. ಧನ್ಯವಾದಗಳು, ಅರುಣ!

    ReplyDelete
  25. atyadbhuta ! kaviteyoo, nimma vivaraNeyoo... E ondu padyakke artha idakkinta channagi/sariyagi heLbeku andre Bendreyavare barabekeno !

    ReplyDelete
  26. ಸಂದೀಪ, ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು!

    ReplyDelete
  27. ಧನ್ಯವಾದಗಳು, ಗಂಗಾಧರರೆ! ಬೇಂದ್ರೆಯವರ ‘ನಾಕು ತಂತಿ’ ನಿಮ್ಮೆದೆಯ ತಂತಿಯನ್ನು ಮಿಡಿದು, ನಿಮ್ಮನ್ನು ಸಂತೈಸಿದ್ದದ್ದು ಖುಶಿಯ ಸಂಗತಿ. ಬೇಂದ್ರೆಯವರು ವರಕವಿಗಳು. ಅವರ ಪಾಕವನ್ನು ನಾನು ನನಗೆ ತಿಳಿದಂತೆ ನಿಮಗೆ ಬಡಿಸಿದವನಷ್ಟೆ. ಪಾಕವನ್ನು ತಯಾರಿಸಿದ ಬೇಂದ್ರೆಯವರು ಅನುಪಮರು.

    ReplyDelete
  28. ಕಾಕಾ.. ಅದ್ಭುತ ವಿವರಣಿ. ಕೀರ್ತಿನಾಥರಿಂದ ನಾಕುತಂತಿ ಸ್ವಲ್ಪ ತಲೆಗೆ ಹೋಗಿತ್ತು, ಇಗ ಮತ್ತೊಂದಿಷ್ಟು.. ಇನ್ನೂ ಇರಬಹುದು.. ಬೇಂದ್ರೆಯವರ ಕವನ ಬೊಗೆದಷ್ಟು ಒರತೆ ಹೆಚ್ಚುವ ಸಲಿ...ಕುಡಿದಂತೆ ದಾಹ ಹೆಚ್ಚೇರುವ ಕಾವ್ಯ ಪಾನಕ

    ReplyDelete
  29. ಅಧ್ಭುತ ವಿವರಣೆ. ಒಂದು ಸಣ್ಣ ತಪ್ಪು ನುಸುಳಿದೆ. ವಾಗರ್ಥಾವಿವ.... ರಘುವಂಶದ ಮೊದಲ ಪದ್ಯ. ಕುಮಾರಸಂಭವದ್ದಲ್ಲ.

    ReplyDelete
  30. ಧನ್ಯವಾದಗಳು, ಸೀತಾರಾಮರೆ. ಬೇಂದ್ರೆ ಕವನಗಳು ರಸಿಕರಿಗೆ ಅಕ್ಷಯಪಾತ್ರ್ ಇದ್ದಂತೆ.

    ReplyDelete
  31. ವಿಜಯಶಂಕರರೆ, ನೀವು ತಪ್ಪನ್ನು ಎತ್ತಿ ತೋರಿಸದಿದ್ದರೆ, ಆ ದೋಷವು ಹಾಗೆಯೆ ಉಳಿದುಬಿಟ್ಟು, ಅರಿಯದವರು ಅದೇ ಸರಿ ಎಂದು ತಿಳಿಯಬಹುದಿತ್ತು. ಆದುದರಿಂದ ನಿಮಗೆ ನಾನು ಉಪಕೃತನಾಗಿದ್ದೇನೆ ಹಾಗು ಇದೀಗ ತಪ್ಪನ್ನು ಸರಿಪಡಿಸಿದ್ದೇನೆ. ಧನ್ಯವಾದಗಳು

    ReplyDelete
  32. ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು. ಬಹುಶಃ ಇದಕಿಂತ ಮಿಗಿಲಾದ ವಿವರಣೆ ಲಭ್ಯವಿಲ್ಲ ಎಂದೆನಿಸುತ್ತದೆ. ಮತ್ತೊಮ್ಮೆ ಧನ್ಯವಾದಗಳು

    ReplyDelete
  33. ಶ್ರೀಧರರೆ,ನಿಮಗೂ ಧನ್ಯವಾದಗಳು.

    ReplyDelete
  34. ಸರ್ ಅದ್ಭುತವಾದ ವಿವರಣೆ ಧನ್ಯವಾದಗಳು.

    ReplyDelete
  35. Unknownರೆ, ಅನೇಕ ಧನ್ಯವಾದಗಳು.

    ReplyDelete
  36. ಅನಂತ ಅನಂತ ಧನ್ಯವಾದಗಳು ಸರ್


    ReplyDelete
  37. ಧನ್ಯವಾದಗಳು, Unknownರೆ.

    ReplyDelete
  38. ಸರ್ ನಾಕುತಂತಿಯನ್ನಾ ಅವರೇ ಬರೆದ original copy ಎನಾದ್ರು ಸಿಗುತ್ತಾ without editing.

    ReplyDelete
  39. Unknownರೆ, ಬೇಂದ್ರೆಯವರ ಎಲ್ಲ ದಾಖಲೆಗಳು ಶರ್ಮಾ ಅವರ trustಗೆ ಹೋಗಿವೆ. ಅವ್ಯಾವವೂ ನಮಗೆ ಲಭ್ಯವಿಲ್ಲ.

    ReplyDelete