Thursday, June 12, 2008

ಭಾಷಾದೋಷ: ‘ಆ’ಕಾರಾಂತ ಪದಗಳು

ಭಾಷಾದೋಷವು ವ್ಯಾಕರಣದೋಷಕ್ಕಿಂತ ಘೋರವಾದಂತಹ ಸ್ಥಿತಿ. ವ್ಯಾಕರಣದೋಷವು ಓರ್ವ ವ್ಯಕ್ತಿಯ ಅಜ್ಞಾನದಿಂದಾಗಿ ಘಟಿಸಬಹುದು. ಆದರೆ, ಭಾಷಾದೋಷವು ಒಂದು ಪ್ರದೇಶದಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಗಳಿಂದಾಗಿ ಉದ್ಭವಿಸುತ್ತದೆ. ಈ ಉದಾಹರಣೆಯನ್ನು ನೋಡಿರಿ:

ಇತ್ತೀಚೆಗೆ ಟೀವಿಯಲ್ಲಿ ಪ್ರಸಾರವಾದ ಕನ್ನಡದ ಒಂದು ಪ್ರಸಿದ್ಧ ಧಾರಾವಾಹಿ: “ ಮುಕ್ತ”. ಇದು “ ಮುಕ್ತಾ” ಎಂದಿರಬೇಕು. ಯಾಕೆಂದರೆ “ ಮುಕ್ತ” ಎನ್ನುವದು ಪುಲ್ಲಿಂಗವಾಚಕ ವಿಶೇಷಣ. ಉದಾಹರಣೆಗೆ ಜೀವನ್-ಮುಕ್ತ ಪುರುಷ ಇತ್ಯಾದಿ. ಹೃಸ್ವಾಂತವಾಗಿ ಕೊನೆಗೊಳ್ಳುವ ಪದವನ್ನು ದೀರ್ಘಾಂತವಾಗಿ ಉಚ್ಚರಿಸುವದು ಸರಿಯಲ್ಲ. ಒಂದು ವೇಳೆ ಮುಕ್ತ ಎಂದು ಹೃಸ್ವಾಂತವಾಗಿ ಬರೆದು ಮುಕ್ತಾ ಎಂದು ದೀರ್ಘಾಂತವಾಗಿಯೇ ಉಚ್ಚರಿಸುವದಾದರೆ, ಹೃಸ್ವಾಂತವಾಗಿ ಉಚ್ಚರಿಸಲು, ಯಾವ ರೀತಿಯಿಂದ ಬರೆಯಬೇಕು?.... ‘ ಮುಕ್ತ್ ’ ಎಂದೆ?
ದೀರ್ಘಾಂತ, ಹೃಸ್ವಾಂತ ಹಾಗು ವ್ಯಂಜನಾಂತ ಪದಗಳನ್ನು ಬರೆಯುವಾಗ, ಈ ರೂಢಿಯು ಸೃಷ್ಟಿಸುವ ಗೋಜಲನ್ನು ಪರಿಶೀಲಿಸಲು ಕೆಳಗಿನ ಉದಾಹರಣೆಯನ್ನು ಗಮನಿಸಿರಿ:
ರಮಾ’ ಎನ್ನುವ ದೀರ್ಘಾಂತ ಪದವನ್ನು ‘ರಮ’ ಎಂದು ಬರೆದರೆ, ‘ರಮ’ ಎನ್ನುವ ಹೃಸ್ವಾಂತ ಪದವನ್ನು ಹೇಗೆ ಬರೆಯಬೇಕು?....’ರಮ್’ ಎಂದೆ? ಹಾಗಾದಾಗ, ರಮ್ (Rum)ಅನ್ನು ಹೇಗೆ ಬರೆಯಬೇಕು?

ಕನ್ನಡ ವಿಕಿಪೀಡಿಯಾದಲ್ಲಿಯ ಒಂದು ಲೇಖನದಲ್ಲಿ Madam Cama ಇವರ ಹೆಸರನ್ನು ಮೇಡಂ ಕಾಮ ಎಂದು ಬರೆಯಲಾಗಿದೆ. ಅಯ್ಯೋ ರಾಮ! ಕಾಮದೇವನ ಪಟ್ಟವನ್ನು ಕಾಮಾಳಿಗೆ ಕೊಟ್ಟರೆ, ‘ಕಾಮ’ನನ್ನು ‘ಕಾಮ್’ ಎಂದು ಬರೆಯಬಹುದೆ? ಆದರೆ ಕಾಮನು ಕಾಮ್ (calm) ಆಗಿರಲು ಒಪ್ಪುವನೆ?

ಇದೇ ರೀತಿಯಾಗಿ ‘ಗಂಗಾ’ ನದಿಯನ್ನು ‘ಗಂಗ’ ಎಂದು ಬರೆದರೆ, ತಲಕಾಡು ರಾಜ್ಯವನ್ನಾಳಿದ ‘ಗಂಗ’ ರಾಜಕುಲವನ್ನು ಹೇಗೆ ಬರೆಯಬೇಕು?—‘ಗಂಗ್’ ರಾಜಕುಲವೆಂದೆ?

ಕನ್ನಡ ವಿಕಿಪೀಡಿಯಾದಲ್ಲಿ ನಾನು ಹಳಗನ್ನಡದ ಪ್ರಸಿದ್ಧ ಲೇಖಕ ‘ನೇಮಿಚಂದ್ರ’ನ ಬಗೆಗೆ ಒಂದು ಲೇಖನ post ಮಾಡಿದ್ದೆ. ಆಬಳಿಕ ಹೊಸ ಪೀಳಿಗೆಯ ಲೇಖಕಿಯಾದ ‘ನೇಮಿಚಂದ್ರ’ಳ ಬಗೆಗೆ ಲೇಖನ post ಮಾಡಲು ಹೊರಟಾಗ ಗಣಕ ಯಂತ್ರವು ಈ ಹೊಸ ಲೇಖನವನ್ನು ಅದೇ ಹೆಸರಿನಲ್ಲಿ ಒಪ್ಪಿಕೊಳ್ಳಲಿಲ್ಲ. ಆ ಬಳಿಕ ನಾನು ‘ನೇಮಿಚಂದ್ರ (ಲೇಖಕಿ)’ ಎಂದು ತಿದ್ದುಪಡಿ ಮಾಡಬೇಕಾಯಿತು. ‘ನೇಮಿಚಂದ್ರಾ’ ಇವರು ತಮ್ಮ ಹೆಸರಿನ ಕೊನೆಯನ್ನು ದೀರ್ಘೀಕರಿಸದೇ, ಹೃಸ್ವೀಕರಿಸಿದ್ದರಿಂದ, ಅವರು ಪುಲ್ಲಿಂಗವಾದರು!

ಸಂತೋಷಕುಮಾರ ಗುಲವಾಡಿಯವರು ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ಈ ವಿಷಯದ ಬಗೆಗೇ ಒಂದು ಸಂಪಾದಕೀಯ ಬರೆದಿದ್ದರು. ಆ ಸಂದರ್ಭದಲ್ಲಿ ಅವರು ನೀಡಿದ ಉದಾಹರಣೆ: ‘ದುರ್ಗಾ’ ಪದವನ್ನು ‘ದುರ್ಗ’ ಎಂದು ಬರೆದರೆ, ಆ ಪದವು ಹುಡುಗಿಯ ಹೆಸರಾಗುವ ಬದಲು ‘ಕೋಟೆ’ ಎನ್ನುವ ಅರ್ಥವನ್ನು ಕೊಡುತ್ತದೆ.

ಇದರಂತೆ, ಅನೇಕ ಪದಗಳ ಉದಾಹರಣೆಗಳನ್ನು ಕೊಡಬಹುದು: ಬಾಲವಿಹಾರದಲ್ಲಿ ಕಲಿಸಲಾಗುವ ಹಾಡನ್ನು ಮುದ್ರಿಸಿದ ಈ ಅವತರಣಿಕೆಯನ್ನು ನೋಡಿರಿ:
“ ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವದು,
ಎತ್ತಿಕೊಳ್ಳದಿರಲು ಅದಕೆ ಕೋಪ ಬರುವದು”.

‘ಪಾಪ’ ಪದದ ಅರ್ಥವೇನು? –SIN ಎಂದಲ್ಲವೇ?
ಕೂಸು ಎಂದು ಹೇಳಲು ‘ಪಾಪಾ’ ಎಂದು ಬರೆಯಬೇಕಲ್ಲವೆ?
ಕೂಸು ಪದಕ್ಕೆ ‘ಪಾಪ’ ಎಂದೇ ಬರೆಯುವದು ಸರಿ ಎಂದು ನೀವು ಹೇಳುವದಾದರೆ, SIN ಅರ್ಥದ ‘ಪಾಪ’ ಪದಕ್ಕೆ ‘ಪಾಪ್’ ಎಂದು ಬರೆಯಬೇಕೆ? ಹಾಗಾದಾಗ POP ಅರ್ಥದ ಪಾಪ್ ಪದವನ್ನು ಬರೆಯುವದು ಹೇಗೆ?

ಕೇವಲ ‘ಆ’ ಸ್ವರಾಂತ ನಾಮಸೂಚಕ ಪದಗಳಿಗಷ್ಟೇ ಈ ತಪ್ಪು ಪ್ರಯೋಗ ಸೀಮಿತವಾಗಿಲ್ಲ. ಸರಕಾರಿ ಕಚೇರಿಯೊಂದರ ಮೇಲೆ ಹಾಕಿದ ಈ ಫಲಕವನ್ನು ನೋಡಿರಿ:
ಶಿಶುಪಾಲನ ಕೇಂದ್ರ”
ಈ ಫಲಕವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವೇ ಆಗಲಿಲ್ಲ. ಕೃಷ್ಣನ ವಿರೋಧಿಯಾದ ‘ಶಿಶುಪಾಲ’ ಎನ್ನುವ ದೈತ್ಯನ ಸಲುವಾಗಿ ಯಾರು ಯಾಕೆ ಕೇಂದ್ರ ಸ್ಥಾಪಿಸುತ್ತಾರೆ ಎಂದೇ ಗೊತ್ತಾಗಲಿಲ್ಲ. ಕಚೇರಿಯ ಒಳಹೊಕ್ಕು ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ತಿಳಿದದ್ದು: ಇದು ‘ಶಿಶುಪಾಲನಾ ಕೇಂದ್ರ’ವೆಂದು!

ಈ ತಪ್ಪು ಪ್ರಯೋಗವು ಸಂಯುಕ್ತ ಪದಗಳ ಮಧ್ಯಭಾಗವನ್ನೂ ಸಹ ಆಕ್ರಮಿಸಿರುವದು ಹೆಚ್ಚಿನ ದುರ್ದೈವ. ಉದಾಹರಣೆಗೆ, “ಶುಭಾಕಾಂಕ್ಷೆ” ಎನ್ನುವ ಪದವನ್ನು “ಶುಭಕಾಂಕ್ಷೆ” ಎಂದು ವಿಕಿಪೀಡಿಯಾದ ಓದುಗರೊಬ್ಬರು ಬರೆದಿದ್ದರು.

ಅಷ್ಟೇ ಏಕೆ, ನಮ್ಮ ಕರ್ನಾಟಕ ಸರಕಾರದ ಸಂಪುಟ ದರ್ಜೆ ಸಚಿವರಾದ ಶ್ರೀ ಮುಮತಾಜ ಅಲಿಯವರು ಪತ್ರಿಕೆಗೆ ಬರೆದ ಪತ್ರ ಒಂದರಲ್ಲಿ, “ಶಿಲಾನ್ಯಾಸ” ಪದದ ಬದಲಾಗಿ “ಶಿಲನ್ಯಾಸ” ಎಂದು ಬರೆದಿದ್ದರು. ಈ ಅಪಪ್ರಯೋಗದ ತಪ್ಪು ಅವರದಲ್ಲ. “ಶಿಲಾ” ಪದ ಬರೆಯುವದನ್ನು “ಶಿಲ” ಎಂದೇ ಬರೆಯಲು ಅವರು ರೂಢಿಸಿಕೊಂಡಿದ್ದರಿಂದ ಇಂತಹ ಅಪಪ್ರಯೋಗವಾಗಿದೆ.

ಇದರಂತೆಯೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಸಿನಿಮಾ ವಿಭಾಗದಲ್ಲಿ ಬರೆಯುವ ಎಚ್. ಕೆ. ಸಾವಿತ್ರಿಯವರು ನಟಿಯೊಬ್ಬಳನ್ನು ವರ್ಣಿಸುತ್ತ, ‘ಬೆಳಗಾವಿಯ ಕುಂದದಂತಹ’ ಎಂದು ಬರೆದಿದ್ದಾರೆ. ‘ಕುಂದ’ ಎಂದರೆ ಒಂದು ಜಾತಿಯ ಹೂವು. ಬೆಳಗಾವಿ ಕುಂದಪುಷ್ಪಕ್ಕಂತೂ ಹೆಸರು ಪಡೆದಿಲ್ಲ. ‘ಹೀಗೇಕೆ?’ ಎಂದು ನಾನು ವಿಸ್ಮಯಪಡುತ್ತಿದ್ದಾಗ ಹೊಳೆದದ್ದು: ಓಹೋ ಇವರು ಹೇಳುತ್ತಿರುವದು ಬೆಳಗಾವಿಯ ‘ಕುಂದಾ’, ಒಂದು ಬಗೆಯ sweet, ‘ಕುಂದ’ಪುಷ್ಪವಲ್ಲ ಎನ್ನುವದು.

ಈ ತರಹದ ಬರೆವಣಿಗೆಯನ್ನು ಕೆಲವರು ಸಮರ್ಥಿಸಿಕೊಳ್ಳಬಹುದು. ಅವರ ಸಮರ್ಥನೆ ಈ ರೀತಿಯಾಗಿದೆ:
ಇ, ಈ ಎನ್ನುವ ಸ್ವರಜೋಡಿ ಇದ್ದಂತೆಯೆ, ಅ, ಆ ಎನ್ನುವ ಸ್ವರಜೋಡಿ ಇದೆ. ಅಂದರೆ, ಅ ಸ್ವರವನ್ನು ಹೃಸ್ವ ಆ ಎಂದು ಉಚ್ಚರಿಸಬೇಕು. ಇವರ ಪ್ರಕಾರ, ‘ರಮ’ ಎಂದು ಬರೆದು ‘ರಮಾ’ ಎಂದು ಉಚ್ಚರಿಸಬೇಕು. ‘ದಸರ’ ಎಂದು ಬರೆದು ‘ದಸರಾ’ ಎಂದು ಉಚ್ಚರಿಸಬೇಕು. ಇವರಿಗೆ ನನ್ನ ಪ್ರಶ್ನೆ : ಮ ಅನ್ನು ಮಾ ಅನ್ನುವದಾದರೆ, ರ ಅನ್ನು ರಾ ಎಂದೇಕೆ ಅನ್ನಬಾರದು? ಅರ್ಥಾತ್ ‘ರಮ’ ಪದವನ್ನು ‘ರಾಮಾ’ ಎಂದು ಏಕೆ ಉಚ್ಚರಿಸಬಾರದು? ‘ದಸರ’ ಪದವನ್ನು ‘ದಾಸಾರಾ’ ಎಂದೇಕೆ ಉಚ್ಚರಿಸಬಾರದು?
ಇದಕ್ಕೆ ಅವರು ಕೊಡುವ ಸಮಾಧಾನ ಈ ರೀತಿಯಾಗಿದೆ. ಪದಾಂತದಲ್ಲಿ ಬರುವ ಹೃಸ್ವ ‘ಅ’ ಕಾರವನ್ನು ಮಾತ್ರ ದೀರ್ಘವಾಗಿ ಉಚ್ಚರಿಸಬೇಕು.
ಹಾಗೆ ಮಾಡಿದರೆ, ಕನ್ನಡ ಬರಹವು purely phonetic script ಆಗುವದಿಲ್ಲ ; selectively phonetic script ಆಗುತ್ತದೆ. ಇದು ಸರಿಯಲ್ಲ.

‘ಅ’ಕಾರವನ್ನು ‘ಆ’ಕಾರ ಮಾಡುವ ಅಪಪ್ರಯೋಗದಂತೆಯೇ, ವ್ಯಂಜನೀಕರಣದ ಮತ್ತೊಂದು ಅಪಪ್ರಯೋಗವೂ ಚಾಲ್ತಿಗೆ ಬಂದಿದೆ.
ಸಂಯುಕ್ತ ಕರ್ನಾಟಕದ suplimentನಲ್ಲಿ ಒಮ್ಮೆ ಎಚ್ಚೆಸ್ಕೆಯವರ ಲೇಖನ ಬಂದಿತ್ತು. ಆ ಲೇಖನದಲ್ಲಿ ಅವರು, ‘ರಾಯಚೂರಕರ’ ಎನ್ನುವ ವ್ಯಕ್ತಿಯನ್ನು ‘ರಾಯ್‌ಚೂರ್‌ಕರ್’ ಎಂದು ನಿರ್ದಯೆಯಿಂದ ಚೂರು ಚೂರು ಮಾಡಿ ಒಗೆದಿದ್ದರು. ಈ ವ್ಯಂಜನಾಘಾತವನ್ನು ‘ಭೀಮಸೇನ ಜೋಶಿ’ಯವರೂ ಅನುಭವಿಸಿದ್ದಾರೆ. ಅವರು ‘ಭೀಮಸೇನ್ ಜೋಷಿ’ ಅಗಿದ್ದಾರೆ.(ಕನ್ನಡ ವಿಕಿಪೀಡಿಯಾ ನೋಡಿರಿ). ಅವರ ಪುಣ್ಯಬಲವು ದೊಡ್ಡದು. ‘ಭೀಮ್‌ಸೇನ್ ಜೋಷಿ’ ಆಗಿಲ್ಲ! ಇದರಂತೆ, ಕನ್ನಡ ವಿಕಿಪೀಡಿಯಾದಲ್ಲಿ ‘ಗಿರೀಶ ಕಾರ್ನಾಡ’ರು ‘ಗಿರೀಶ್ ಕಾರ್ನಾಡ್’ ಆಗಿದ್ದಾರೆ. 'ಜ್ಯೋತ್ಸ್ನಾ ಕಾಮತ'ರು 'ಜ್ಯೋತ್ಸ್ನ ಕಾಮತ'ರಾಗಿದ್ದರು. ಕೆಲವು ಓದುಗರು ಈ ತಪ್ಪನ್ನು ಎತ್ತಿ ತೋರಿಸಿದರು. ಜ್ಯೋತ್ಸ್ನಾ ತಮ್ಮ ಹೆಸರನ್ನು ಜ್ಯೋತ್ಸ್ನ ಎಂದು ಬರೆದುಕೊಳ್ಳುವದಿಲ್ಲ, ಜ್ಯೋತ್ಸ್ನಾ ಎಂದು ಬರೆದುಕೊಳ್ಳುತ್ತಾರೆ ಎಂದು ನಾನೂ ಸಹ ಆಧಾರಸಹಿತ ತೋರಿಸಿದ ನಂತರವೇ, ಅವರು ಮರಳಿ ಜ್ಯೋತ್ಸ್ನಾ ಆದರು. ಇದೇ ಸಂದರ್ಭದಲ್ಲಿ ಮತ್ತೂ ಒಂದು ಅಪಪ್ರಯೋಗವನ್ನು ಹೇಳಿಬಿಡಬಹುದು: ‘ಜೋಶಿ’ ಎನ್ನುವ ಹೆಸರನ್ನು ಎಲ್ಲಾ ಸಂಸ್ಕೃತಜನ್ಯ ಭಾಷೆಯ ಲಿಪಿಗಳಲ್ಲಿ ‘ಜೋಶಿ’ ಎಂದೇ ಬರೆಯಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಸಹ ಅದೇ ಪ್ರಯೋಗವಿದೆ. ಹೀಗಿರುವಾಗ, ದಕ್ಷಿಣ ಕರ್ನಾಟಕದಲ್ಲಿ ‘ಜೋಷಿ’ ಎಂದು ಬರೆಯುವದು ಸರಿಯಲ್ಲ. ವಿಕಿಪೀಡಿಯಾದಲ್ಲಿ ನಾನು ಶಂ.ಬಾ. ಜೋಶಿಯವರ ಬಗೆಗೆ ಒಂದು ಲೇಖನ post ಮಾಡಿದ್ದೆ. ಅದನ್ನು ಆಗಲೇ ಇರುವ ‘ಶಂ.ಬಾ. ಜೋಷಿ’ ಲೇಖನದಲ್ಲಿ merge ಮಾಡಲಾಯಿತು. ಶಂ.ಬಾ. ಜೋಶಿಯವರು ತಮ್ಮ ಹೆಸರನ್ನು ‘ಜೋಶಿ’ ಎಂದು ಸರಿಯಾಗಿ ಬರೆದುಕೊಳ್ಳುವಾಗ, ಅದನ್ನು ತಪ್ಪಾಗಿ ‘ಜೋಷಿ’ಗೆ ಬದಲಾಯಿಸುವದರ ಔಚಿತ್ಯವೇನು?

ಇರಲಿ, ಈಗ ವ್ಯಂಜನೀಕರಣಕ್ಕೆ ಮತ್ತೆ ಮರಳೋಣ. ‘ಗದುಗು’ ಅಥವಾ ‘ಗದಗ’ ಎನ್ನುವ ಊರಿನ ಹೆಸರನ್ನು ಬೆಂಗಳೂರಿನ ಕಾರಕೂನರು ‘ಗದಗ್’ ಮಾಡಿಟ್ಟಿದ್ದಾರೆ. ಬಹುಶಃ, ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಇವರ ಪೆನ್ನಿನಲ್ಲಿ ‘ ಕುಮಾರ್‌ವ್ಯಾಸ್ ಬರೆದ ಗದಗ್‌ನ ಭಾರತ್’ ಆಗಬಹುದು. ಅಷ್ಟೇಕೆ, ‘ಬಸವೇಶ್ವರ’ರು ‘ಬಸ್‌ವೇಶ್ವರ್’ ಆಗಬಹುದಲ್ಲವೆ?

ಆದುದರಿಂದ, ಕನ್ನಡವನ್ನು ಪ್ರೀತಿಸುವ ಗೆಳೆಯರೆ,
ಯಾವುದೇ regional sentimentsಗಳಿಗೆ ಒಳಗಾಗದೆ, ಈ ವಿಷಯವನ್ನು ಪರಾಮರ್ಶಿಸಿ, ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. ಎಲ್ಲಿ ತಪ್ಪಿದೆಯೊ, ಅಲ್ಲಿ ತಿದ್ದಿಕೊಳ್ಳೋಣ.
ಮುಂದಿನ ಸಂಚಿಕೆಯಲ್ಲಿ ಅಲ್ಪಪ್ರಾಣ/ಮಹಾಪ್ರಾಣಗಳ ಬಗೆಗೆ ಪರಿಶೀಲಿಸೋಣ.

ಸರಿಗನ್ನಡಮ್ ಗೆಲ್ಗೆ!

25 comments:

  1. ಈ ನಿಮ್ಮ "ಭಾಷಾ ದೋಷ" ನಮ್ಮ ಕನ್ನಡದ ಸಣ್ಣಪರದೆಯ ಎಲ್ಲ ವಾಹಿನಿಗಳ ಕಣ್ಣು ತೆರೆಸಬೇಕು. ಈಟಿವಿ, ಉದಯ, ಸುವರ್ಣ ಮುಂ. ಎಲ್ಲ ಕನ್ನಡದ ವಾಹಿನಿಗಳಲ್ಲಿ ಕನ್ನಡ ಭಾಷೆಯ ನಿತ್ಯ ಕೊಲೆಯಾಗುತ್ತದೆ. ಎಷ್ಟೊಂದು ಸಹಿಸುವದು. ಈ ವಾಹಿನಿಗಳಲ್ಲಿ ಸುದ್ದಿ ಓದುವವರಿಗೆ, ಧಾರಾವಾಹಿಯ ಸಂಭಾಷಣೆ ಬರೆಯುವವರಿಗೆ ಮತ್ತು ನಟ-ನಟಿಯರಿಗ ಹೃಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣಗಳ ಪರಿಚಯವೇ ಇಲ್ಲವೆಂದು ತೋರುತ್ತದೆ. ಕನ್ನಡವನ್ನು ದೇವರೇ ಕಾಪಾಡಬೇಕು.

    ReplyDelete
  2. ಕಟ್ಟಿಯವರೆ,
    ಸಿರಿಗನ್ನಡವನ್ನು ಸರಿಗನ್ನಡವನ್ನಾಗಿ ಮಾಡಲು, unprejudiced, organised ಪ್ರಯತ್ನ ಬೇಕಾಗಿದೆ.

    ReplyDelete
  3. [quote] ಇ, ಈ ಎನ್ನುವ ಸ್ವರಜೋಡಿ ಇದ್ದಂತೆಯೆ, ಅ, ಆ ಎನ್ನುವ ಸ್ವರಜೋಡಿ ಇದೆ. ಅಂದರೆ, ಅ ಸ್ವರವನ್ನು ಹೃಸ್ವ ಆ ಎಂದು ಉಚ್ಚರಿಸಬೇಕು. ಇವರ ಪ್ರಕಾರ, ‘ರಮ’ ಎಂದು ಬರೆದು ‘ರಮಾ’ ಎಂದು ಉಚ್ಚರಿಸಬೇಕು. ‘ದಸರ’ ಎಂದು ಬರೆದು ‘ದಸರಾ’ ಎಂದು ಉಚ್ಚರಿಸಬೇಕು [/quote]

    ನಾನು ತಿಳಿದಿರುವಂತೆ ಕೆಲವು ವಿಷಯಗಳನ್ನು ಹೇಳಬಯಸುವೆ.

    ರಮ ಎಂದು ಬರೆದು ರಮ ಎಂದು ಓದಿದರೆ ಅದು ಹೃಸ್ವಾಂತವೇ. ರಮ ಅನ್ನುವ ಪದ ವ್ಯಾಕರಣ ರೀತ್ಯಾ ತಪ್ಪು ಅನ್ನುವುದು ನಿಜವಾಗಿದ್ದರೂ.

    ಮತ್ತೆ ’ಅ’ ಕಾರಕ್ಕೆ ಎರಡು ಉಚ್ಚಾರಗಳು ನಮ್ಮ ಮಾತಿನಲ್ಲಿ ಕಂಡುಬರುತ್ತವೆ. ಒಂದು ಆ ಕಾರವನ್ನು ಕಿರಿದು ಮಾಡುವಂತಹ ಉಚ್ಚಾರ.

    ಉದಾ: ಅರ್ದ, ಅನ್ನ, ಅಷ್ಟು, ಅಲ್ಲಿ , ಅಕ್ಷರ, ಅಗಣಿತ, ಅಪ್ರಯೋಜಕ , ಹರಡು (ಹ್ ಜೊತೆಗೆ ಸೇರಿದೆ), ಕನ್ನಡಿ, ತಂದೆ (ಅಪ್ಪ)

    ಇನ್ನೊಂದು ಇಂಗ್ಲಿಷ್ ನ up, under, ಮೊದಲಾದ ಪದಗಳಲ್ಲಿ u ಗೆ ಇರುವಂತಹ ಉಚ್ಚಾರ. ಹತ್ತು, ಕತ್ತು , ಕಚ್ಚು, ತಂದೆ (bring) ಮೊದಲಾದ ಪದಗಳಲ್ಲಿ ಇದನ್ನು ನೋಡಬಹುದು

    (ಇವೆರಡಕ್ಕೂ technical terminology ಇದೆ - roundedness ಅಂತೇನೋ ಇದೆ. ನನಗೆ ಸರಿಯಾದ ವಿವರ ಮರೆತಿದೆ).

    ಮುಕ್ತ ಅನ್ನುವುದನ್ನು ಮುಕ್ತಾ ಎಂದು ಏಕೆ ಬರೆಯಬೇಕೆನ್ನುತ್ತಿದ್ದೀರಿ ನನಗೆ ತಿಳಿಯಲಿಲ್ಲ (ನಾನು ಈ ಧಾರಾವಾಹಿ ನೋಡಿಲ್ಲ). ಈ ತಲೆ ಬರಹ ಒಂದು ಹೆಣ್ಣು ಪಾತ್ರಕ್ಕೆ ಇತ್ತೇ? ಅಂತಹ ಸಂದರ್ಭದಲ್ಲೂ, ಕನ್ನಡಕ್ಕೆ ಮುಕ್ತೆ ಎನ್ನುವ ಪದ ಇನ್ನೂ ಸರಿಹೋಗುವುದಲ್ಲವೇ?

    ReplyDelete
  4. ಅಕಾರ - ಆಕಾರಾಂತಗಳ(?) ಬಗ್ಗೆ ನನಗೂ ಗೊಂದಲಗಳು ಇವೆ. ನನ್ನ ಹೆಸ್ರನ್ನ ಯಾರಾದ್ರೂ ಶ್ರೀಮಾತ ಅಂತ ಮೊಟಕುಗೊಳಿಸಿದಾಗ ಮೈಪರಚಿಕೊಳ್ಳೋ ಾಗಾಗುತ್ತೆ. ಅದು ಶ್ರೀಮಾತಾ ಅಂತಲೇ ಇರಬೇಕು ಅಂತ ವಾದಕ್ಕಿಳೀತೀನಿ. ಆದ್ರೆ ಈ ಆಕಾರಾಂತ ಸ್ತ್ರೀಲಿಂಗ ಸಂಸ್ಕತದ ಎರವಲಷ್ಟೇ(ಎರವಲು ಪದಗಳ ದ್ವೇಷಿಯೇನಲ್ಲ) ಹೊರತು ಕನ್ನಡಕ್ಕೆ must n should ಅಲ್ಲ ಅನ್ನೋ ವಾದವನ್ನೂ ಕೇಳಿದೀನಿ. ಅದು ಹೌದಾ? ’ಕುಸುಮ’ ’ಸುಮನ’ - ಈ ಥರದ ಹೆಸರುಗಳನ್ನ ನೋಡಿದಾಗ ದೀರ್ಘಾಂತ್ಯವೇ ಆಗಿರಬೇಕು ಅಂತೇನೂ ಅನ್ನಿಸೋಲ್ಲ ಅಲ್ವಾ?

    ’ಪಾಪಾ’ ಬಗ್ಗೆನೂ ನಂಗೆ ಸಂದೇಹ. ನಮ್ಮಲ್ಲಿ ಒಂದೇ ಪದಕ್ಕೆ ಸಂದರ್ಭಾನುಸಾರ ಬೇರೆ ಬೇರೆ ಅರ್ಥ ಬರೋದು ಇದೆಯಲ್ವಾ...ಅದನ್ನ ಸಂದರ್ಭಾನುಸಾರವೇ ಅರಥೈಸಿಕೊಳ್ತೀವಲ್ವಾ? ಹೀಗಿರೋವಾಗ ದೀರ್ಘಾಂತ್ಯದಿಂದ ಗೊಂದಲ ನಿವಾರಿಸುವ ಅಗತ್ಯ ಇದೆಯಾ? ಮಾತಿನಲ್ಿ ಪುಟ್ಟ ಮಗುವಿನ ಬಗ್ಗೆ ಹೇಳೋವಾಗ ’ಪುಟ್ಟ ಪಾಪ’ ಅಂತೀವೇ ಹೊರತು ’ಪುಟ್ಟ ಪಾಪಾ’ ಅನ್ನೋದಿಲ್ಲವಲ್ಲ?

    ಮತ್ತೆ ’ಮುಕ್ತ’ದ ಬಗ್ಗೆ ಹಂಸಾನಂದಿಯವರು ಕೇಳಿರೋ ಡೌಟು ನನಗೂ ಇದೆ...

    ಹೀಗೇಸುಮ್ನೆ ಇನ್ನೊಂದು ಡೌಟು - ನೇಮಿಚಂದ್ರ ಪುರುಷರಾಗಿದ್ರೂ ವಿಕಿಪೀಡಿಯಾ ಅವರನ್ನ ಹಳಗನ್ನಡದ ಲೇಖಕನ ಜೊತೆ confuse ಮಾಡಿಕೊಳ್ತಿತ್ತೇನೋ?:p

    ReplyDelete
  5. ಹಂಸಾನಂದಿಯವರೆ,
    ಮೌಲಿಕವಾದ ತಾಂತ್ರಿಕ ಅಂಶಗಳನ್ನು ಹೇಳಿದ್ದೀರಿ. ಮತ್ತೆ ಯಾರು ಏನು ಹೇಳುತ್ತಾರೊ ಗಮನಿಸೋಣ.
    ಮುಕ್ತಾ (written as ಮುಕ್ತ in the Serial Title) ಧಾರಾವಾಹಿಯ ಕಥಾನಾಯಕಿಯ ಹೆಸರು ಬಹುಶ: ಮುಕ್ತಾ ಎಂದಿರಬಹುದು. ಈ ಧಾರಾವಾಹಿಯ ಬಗೆಗೆ ಕೇಳಿರುವೆ; ಆದರೆ ನಾನೂ ನೋಡಿಲ್ಲ.

    ReplyDelete
  6. ಶ್ರೀಮಾತಾ,
    ಎಲ್ಲ ಭಾರತೀಯ ಲಿಪಿಗಳಿಗೂ 'ಬ್ರಾಹ್ಮಿ'ಲಿಪಿಯೇ ಮೂಲ ಎಂದು ಹೇಳುತ್ತಾರೆ.ಆದರೆ ಈ ಎಲ್ಲ ಲಿಪಿಗಳೂ ಒಂದೇ ಪ್ರಮಾಣದಲ್ಲಿ evolve ಆಗಲಿಲ್ಲ. ನಾಗರೀ ಲಿಪಿಯಲ್ಲಿಯೇ ನೋಡಿರಿ. ಎ ಮತ್ತು ಏ ಸ್ವರಗಳಿಗೆ,ಒ ಮತ್ತು ಓ ಸ್ವರಗಳಿಗೆ ಒಂದೊಂದೇ ಅಕ್ಷರಗಳಿವೆ. ಅವರು Red ಮತ್ತು Raid ಪದಗಳನ್ನು रेड ಎಂದೇ ಬರೆಯುತ್ತಾರೆ.ಕೊಡು ಮತ್ತು ಕೋಡುಗಳಿಗೆ ಅಲ್ಲಿ ವ್ಯತ್ಯಾಸವೇ ಇಲ್ಲ.(कॊडु).
    ತಮಿಳು ಲಿಪಿಯಂತೂ ಇನ್ನೂ ಅಧ್ವಾನ.ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರ ಸಂಕೇತ. ಉದಾಹರಣೆಗೆ ಕ, ಖ, ಗ, ಘ ಈ ಧ್ವನಿಗಳಿಗೆ ಇರುವ ಅಕ್ಷರಸಂಕೇತ ಒಂದೇ.

    ಅತ್ಯಂತ ಕರೆಕ್ಟ್ ಆಗಿ ಬರೆಯುವ ಅವಕಾಶ (scope)ಕನ್ನಡ ಲಿಪಿಯಲ್ಲಿ ಇದೆ. ಭಾರತೀಯ ಭಾಷೆಗಳ ಧ್ವನಿರೂಪಗಳಿಗೆ ಕನ್ನಡದಷ್ಟು perfect ಆಗಿರುವಂತಹ ಲಿಪಿ ಬೇರೊಂದು ಇದೆಯೋ, ಇಲ್ಲವೋ?
    ಹೀಗಿರುವಾಗ,ಹೇಗೋ ಬರೆದು ಸಂದರ್ಭಕ್ಕೆ ತಕ್ಕಂತೆ ಅರ್ಥೈಸುವ
    ಒದ್ದಾಟ ಕನ್ನಡಿಗರಿಗೆ ಯಾಕೆ ಬೇಕು?
    ಸಂಸ್ಕೃತದಿಂದ ಅನೇಕ ಪದಗಳು ಕನ್ನಡಕ್ಕೆ ಬಂದಿವೆ;ಕನ್ನಡದಿಂದ ಅನೇಕ ಪದಗಳು ಸಂಸ್ಕೃತಕ್ಕೂ ಹೋಗಿವೆ.ಈ ಎರವಲು ಪದಗಳು
    ಕನ್ನಡದ ಪದಗಳೇ ಆಗಿಬಿಟ್ಟಿವೆ.ಕನ್ನಡದ ಜಾಯಮಾನಕ್ಕೆ ತಕ್ಕಂತೆ ಅವನ್ನು ಉಚ್ಚರಿಸುವದರಲ್ಲಿ ಏನೂ ತಪ್ಪಿಲ್ಲ. ಉದಾಹರಣೆಗೆ ಸಂಸ್ಕೃತದ 'ಶಾಖ'ಎನ್ನುವದು ಕನ್ನಡದಲ್ಲಿ 'ಸೆಕೆ'ಆಯಿತು;'ವೇಗ'ಎನ್ನುವದು 'ಬೇಗ'
    ಆಯಿತು. OK, ಕನ್ನಡ ಉಚ್ಚಾರವನ್ನೇ ಮಾಡೋಣ. ಆದರೆ
    'ಹಸ್ತಾ'ನಕ್ಷತ್ರಕ್ಕೆ ನಾವು 'ಹಸ್ತ'ಎಂದು ಬರೆಯುವದು ಸರಿಯೆ? ಆಗ ಅದರ ಅರ್ಥ ಏನಾಗುತ್ತದೆ?
    ನಮ್ಮಲ್ಲಿ ಧಾರಾಳವಾದ ಲಿಪಿಸೌಲಭ್ಯವಿರುವಾಗ ತಪ್ಪು ಮಾಡುವ ಹಟವೇಕೆ?

    ಇನ್ನು ನೇಮಿಚಂದ್ರದ ಬಗೆಗೆ ಗಣಕಯಂತ್ರ ಮಾಡಿಕೊಳ್ಳುವ confusion ಬಗೆಗೆ ನೀವು ಹೇಳುವದು ಸರಿ.
    ಒಪ್ಪಿಕೊಳ್ಳುತ್ತೇನೆ.

    ReplyDelete
  7. ಸುನಾಥರೆ,

    ನನ್ನೊಳಗಿರುವ ಎಷ್ಟೋ ಸಂಶಯಗಳಿಗೆ ನಿಮ್ಮೀ ಲೇಖನದಿಂದ ಹಾಗೂ ಪ್ರತಿಕ್ರಿಯೆಗಳ ಮೂಲಕ ದೊರೆಯಿತು. ತುಂಬಾ ಧನ್ಯವಾದಗಳು. ಇನ್ನು ’ಮುಕ್ತ’ ಧಾರಾವಹಿಯಲ್ಲಿ ಯಾವ ಕಥಾನಾಯಕಿಯ ಹೆಸರೂ ಮುಕ್ತಾ ಎಂದಿರಲಿಲ್ಲ.. ಬದಲು ನಾಯಕಿಯರ ಗೊಂದಲ, ತೊಳಲಾಟಗಳಿಗೆ ಮುಕ್ತಿ ನೀಡುವ ಕೆಲಸ ನಿರ್ದೇಶಕರು ಮಾಡುತ್ತಿದ್ದರು.

    ಇದೇ ಧಾರಾವಾಹಿಯ ಮುಂದುವರಿದ ಭಾಗ ಮುಂದಿನ ಸೋಮವಾರದಿಂದ ಗಂಟೆ ೯.೩೦ ಗೆ ಪ್ರಾರಂಭವಾಗಲಿದೆ. ನೋಡಬಹುದು(ಆಸಕ್ತಿ ಇದ್ದವರು). ಇಲ್ಲಿಯೂ ಕೂಡ ಮತ್ತೆ ನಿರ್ದೇಶಕರು "ಮುಕ್ತ..ಮುಕ್ತ.." ಎಂದೇ ಕರೆದಿದ್ದಾರೆ!

    ReplyDelete
  8. ಸುನಾಥರೆ ,
    ನಿಮ್ಮ ಭಾಷಾದೋಷವನ್ನು ಓದಿದ.ಕನ್ನಡ ಬರವಣಿಗೆಯಲ್ಲಿಯ ತಪ್ಪುಗಳನ್ನು ಓದಿ ನನಗೂ ಬಹಳ ಬೇಸರವಾಗುತ್ತಿದೆ. ಆದರೆ ಸರಿಪಡಿಸುವದು ಕಠಿಣ ಅಲ್ಲವೆ?

    ReplyDelete
  9. ತೇಜಸ್ವಿನಿ,
    ಓಹೋ, ಹೀಗಿದೆಯೊ ಮುಕ್ತ ಕತೆ? ನಾಯಕಿಯ ಹೆಸರೇ 'ಮುಕ್ತಾ' ಇರಬಹುದು ಎಂದುಕೊಂಡಿದ್ದೆ ನಾನು.
    Well, ನಾಯಕಿಯ ತೊಳಲಾಟಗಳಿಗೆ ಮುಕ್ತಿ ಸಿಕ್ಕ ಮೇಲಾದರೂ, ಅವಳು ಮುಕ್ತಾ ಆಗುವಳೆ
    ಹೊರತು ಮುಕ್ತ ಆಗಲಾರಳಲ್ಲವೆ?

    ReplyDelete
  10. ವನಮಾಲಾ,
    ರಾಜಕುಮಾರರವರ ಚಿತ್ರದ ಗೀತೆಯನ್ನು ಕೇಳಿರುವಿರಲ್ಲವೆ?
    'ಆಗದು ಎಂದು,ಕೈಲಾಗದು ಎಂದು
    ಕೈಕಟ್ಟಿ ಕೂತರೆ....!'

    ReplyDelete
  11. ಸುನಾಥ್,
    ಎಲ್ಲರ ಕಣ್ಣು ತೆರೆಸುವ ಲೇಖನವಿದು.

    (ನಿಮ್ಮ email id ಹೇಗಾದರು ನನಗೆ ತಲುಪಿಸಿ..)

    ReplyDelete
  12. ಬಾಯಿಯ ಉಚ್ಚಾರಗಳನ್ನು ನಿಖರವಾಗಿ ಬರೆಯಲು ಕನ್ನಡ ಮತ್ತು ತೆಲುಗುಗಳಲ್ಲಿ ಮಾತ್ರ ಸಾಧ್ಯವೆಂದು ತೋರುತ್ತದೆ. ಉಳಿದ ಲಿಪಿಗಳಲ್ಲಿ ಬರೆದದ್ದನ್ನು ಎಷ್ಟೋ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಓದಲು ಸಾಧ್ಯ. ಅಲ್ಲವೇ ?

    ReplyDelete
  13. ಅಂತರ್ವಾಣಿಯವರೆ,
    ಇಗೊ ನನ್ನ email:
    sunaath@gmail.com
    ನನ್ನನ್ನು ಸಖತ್ತಾಗಿ ಬೈಯುವ ಉದ್ದೇಶವಿಲ್ಲವಷ್ಟೆ?

    ReplyDelete
  14. ಕಟ್ಟಿಯವರೆ,
    ನೀವು ಹೇಳುವದು ಸರಿ. ಇಂಗ್ಲಿಶ್‌ನಲ್ಲಂತೂ ಅತಿವಿಚಿತ್ರ. ಲಾಂಗೂಲಾಚಾರ್ಯರು ಬರೆದ ಹರಟೆ ಒಂದರಲ್ಲಿ ಈ ವಿಚಿತ್ರವನ್ನು ತೋರಿಸಿದ್ದು, ನಿಮಗೂ ನೆನಪಿರಬಹುದು:
    Hough Gough ಎನ್ನುವ ಹೆಸರನ್ನು ಹೇಗೆ ಉಚ್ಚರಿಸುವದು
    ಹೇಳಿ?
    ಹ್ಯೂ ಗಫ್!

    ReplyDelete
  15. ಕಾಕಾ,

    ಸಮಯೋಚಿತ ಮತ್ತು ಚಿಂತನಾತ್ಮಕ ಲೇಖನ, (ಇಲ್ಲಿನ ಎಷ್ಟೋ ತಪ್ಪುಗಳನ್ನು ನಾನೇ ಮಾಡಿದ್ದಿದೆ)

    ನಾನು ೨ ವರ್ಷ ಧಾರವಾಡದಲ್ಲಿದ್ದಾಗ ಮನಸ್ಸಿಗೆ ಬೇಜಾರಾದಾಗ ಪಾವಟೆನಗರದಿಂದ ಸಾಧನಕೇರಿಗೆ ಹೋಗಿ ಅಡ್ಡಾಡಿ ಬರುತ್ತಿದ್ದೆ (ಬೇಂದ್ರೆ, ಜೋಶಿ ಅವರಿದ್ದ ಜಾಗವಲ್ಲವೆ, ಪುಣ್ಯಕ್ಷೇತ್ರ). ಮುಂಬಯಿಗೆ ಬಂದ ಮೇಲೆ ಆ ಅವಕಾಶವನ್ನು ಕಳೆದುಕೊಂಡಿದ್ದೆ, ನೀವು ಬ್ಲಾಗನ್ನು ಶುರು ಮಾಡಿದ ಮೇಲೆ ನಿಮ್ಮ ಬ್ಲಾಗ ನನ್ನ ಸಾಧನಕೇರಿಯಾಗಿದೆ. ನನ್ನ ಬ್ಲಾಗರೊಲಿನಲ್ಲಿ ನಿಮ್ಮ ಬ್ಲಾಗನ್ನು "ಬಾರೊ ಸಾಧನಕೇರಿಗೆ" ಎಂದು ಹೇಸರಿಸಿದ್ದೆನೆ.

    ನೀವು ನನ್ನ ಬ್ಲಾಗನ್ನು ಕಣ್ಣಾಡಿಸಿದ್ದು ಮತ್ತು ಕಮೇಂಟಿಸಿದ್ದು ನಿಜಕ್ಕೂ ನನ್ನ ಸೌಭಾಗ್ಯ.

    ನಮ್ಮ ಆಫಿಸಿನಲ್ಲಿ "ಬ್ಲಾಗಸ್ಪಾಟ"ನ್ನು ಬ್ಲಾಕ ಮಾಡಿದ್ದಾರೆ, ಆದರೆ ಪ್ರತಿ ಶನಿವಾರ ನಿಮ್ಮ ಬ್ಲಾಗನ್ನು ಭೇಟಿಯಾಗುವುದನ್ನು ತಪ್ಪಿಸುವುದಿಲ್ಲ. ನಿಮ್ಮ ಲೇಖನಗಳು ನಮ್ಮಂತ ಹುಡುಗರನ್ನು ಒಳ್ಳೆಯ ಚಿಂತನೆ ನೀಡುತ್ತಿವೆ.

    ಪ್ರೀತಿಯಿರಲಿ

    ಶೆಟ್ಟರು

    ReplyDelete
  16. ಶೆಟ್ಟರೆ,
    ಕನ್ನಡದ ಸವಿಯನ್ನು ಕೂಡಿ ಸವಿಯೋಣ.
    -ಕಾಕಾ

    ReplyDelete
  17. ಸುನಾಥರೆ,

    ಕನ್ನಡ ಸಾಮಾನ್ಯ ಭಾಷೆಗೇ ಉಳಿವಿದೆಯೋ ಇಲ್ಲವೋ ಅನ್ನುವ ಪುಕಾರಿರುವ ದಿನಗಳಲ್ಲಿ ನೀವು ಕನ್ನಡದ ವ್ಯಾಕರಣದ ಬಗ್ಗೆ ವಿಷ್ಲೇಶಣೆ ಚರ್ಚೆ ಆರಂಭಿಸಿದ್ದು ಅಭಿನಂದನೀಯ. ಹೌದು ಪ್ರದೇಶಾಧಾರಿತವಾಗಿ ಉಚ್ಛಾರಣೆ ಹಾಗೂ ಬರವಣಿಗೆಗೆಗಳಲ್ಲಿ ವ್ಯತ್ಯಾಸಗಳನ್ನು ನಾನೂ ಗುರುತಿಸಿದ್ದೇನೆ.
    ನನಗೆ ನನ್ನದೇ ಸರಿ ಅವರಿಗೆ ಅವರದ್ದೆ. ನೀವು ಹೇಳಿದ ಹಾಗೆ ಆ ರೀಜನಲ್ ವ್ಯತ್ಯಾಸ ಮರೆತು ಚರ್ಚಿಸೋಣ. ಆದರೆ ಉದಾಹರಿಸುವಾಗ ಆ ರೀಜನಲ್ ಡಿಫರೆನ್ಸ್ ಹೇಳಲೇಬೇಕಾಗುತ್ತೆ.

    ಈ 'ಅ' ಮತ್ತು 'ಆ' ಕಾರದ ಗೊಂದಲದ ಬಳಕೆ ನಾನು ಈ ಬೆಂಗಳೂರು ಭಾಗದಲ್ಲಿ ನೋಡಿದಾಗ ಸಾಕಷ್ಟು ನಗೆಯಾಡಿದ್ದೆ.
    'ಲತ,ಸೀತ,ಗೀತ' ಇವರೆಲ್ಲ ಗಿಡ್ಡಕಾಗ್ಯಾರ ಇವ್ರನ್ನ ಯಾರಾದ್ರೂ ಎಳ್ದು ಉದ್ದಾ ಮಾಡ್ರಪಾ ಅಂತ ಕೇಳಿಕೊಳ್ಳುತ್ತಿದ್ದೆ.

    ನನ್ನ ತಿಳುವಳಿಕೆಯಲ್ಲಿ 'ಅ' ಕಾರ ಪುಲ್ಲಿಂಗ, 'ಆ' ಕಾರ ಸ್ತ್ರಿಲಿಂಗ
    'ಕೃಷ್ಣ' ಎಂಬುದು ಹೆಣ್ಣಿಗೂ ಹೆಸರಿದೆ ಗಂಡಿಗೂ ಇದೆ. ಹೀಗಿದ್ದಾಗ ಹುಡುಗನಿಗೆ 'ಕೃಷ್ಣ' ಎಂದೂ ಹುಡುಗಿಗೆ 'ಕೃಷ್ಣಾ' ಎಂದು ಬರೆದರೆ ಸರಿ ಎನಿಸುವುದಿಲ್ಲವೇ?

    ಇಲ್ಲಿನ ನಾಮಫಲಕಗಳಲ್ಲಿ ನಾನು ಕಂಡ ಇನ್ನೊಂದು ಗೊಂದಲ 'ಮಾಡರ್ನ್' ಎಂಬ ಶಬ್ದದ ಬಗೆಗಾಗಿದೆ.
    modern ಎಂಬ ಪದಕ್ಕೆ ಇಡೀ ಬೆಂಗಳೂರಿನೆಲ್ಲೂ ಸರಿಯಾದ ಶಬ್ದ ಬರೆದಿರುವುದನ್ನು ಕಾಣೆ.
    ಅದು ಯಾವಾಗಲೂ ಮಾರ್ಡನ್, ಮಾಡ್ರನ್, ಮಾಡನ್ರ್ ಇನ್ಯಾವುದೋ ತಪ್ಪುಅಕ್ಷರಗಲ್ಲಿರುತ್ತೆ.
    ನನ್ನ ಗೆಳೆಯರೊಂದಿಗೆ ನನ್ನದೊಂದು ಅಕಾಲಿತ ಬೆಟ್ ಇದೆ. ಯಾರಾದರೂ ನನಗೆ ಸರಿಯಾದ modern ಗೆ ಕನ್ನಡ ಫಲಕ ತೋರಿಸಿದರೆ ಅವರಿಗೊಂದು ಕಿಟೆಲ್ ಶಬ್ದಕೋಶ ಉಚಿತ.

    ReplyDelete
  18. md,
    ನೋಡ್ತಾ ಇರ್ರಿ;ಕಿಟೆಲ್ ಶಬ್ದಕೋಶ ನಿಮ್ಮಲ್ಲಿಯೇ ಉಳಿದುಕೊಳ್ಳುತ್ತದೆ.
    I bet!

    ReplyDelete
  19. ಕಾಕಾ, ನಿಮ್ಮ ಈ ಲೇಖನ ಮಾಲೆ ನಮ್ಮೆಲ್ಲರ ಕಣ್ಣಿನ ಪಿಸುರು ಕಳೆಯುತ್ತಿದೆ. ಧನ್ಯವಾದಗಳು.

    ಎಮ್.ಡಿ.ಯವರೇ, ನಿಮ್ಮ ಅಕಾಲಿತ ಬೆಟ್ ಬೆಂಗಳೂರಿಗೆ ಮಾತ್ರ ಸೀಮಿತವೋ, ಕರ್ನಾಟಕದ ಯಾವ ಭಾಗಕ್ಕೂ ಲಭ್ಯವೋ?

    ಜಸ್ಟ್ ಕಿಡ್ಡಿಂಗ್...

    ReplyDelete
  20. ಈಗ ಇದನ್ನೆಲ್ಲಾ ನೋಡ್ತಿದ್ರೆ "ಸಿರಿಗನ್ನಡಮ್ಮ ಗಲ್ಗೆ" ಅನ್ಸುತ್ತೆ!!!!

    ReplyDelete
  21. ನಿಜಕ್ಕೂ ಸಮಯೋಚಿತ ಬರಹ. ನಿಮ್ಮ ಈ ಬರಹವನ್ನು ಕನ್ನಡದ ಎಲ್ಲ ಪತ್ರಿಕೆಗಳ ಸಂಪಾದಕರಿಗೆ, ಎಲ್ಲ ಟಿವಿ ಯವರಿಗೆ ಕೊಡಬೇಕು.

    ನಿಮ್ಮ ಲೇಖನಕ್ಕೆ ನನ್ನದೊಂದು ಚಿಕ್ಕ ಅಡಿಬರಹ:

    ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ "ಅ" ಅನ್ನು ನಾವು ಉಚ್ಚಾರ ಮಾಡಲು ಹೇಳಿಕೊಟ್ಟಿದ್ದು "ಅ" ಎಂದು (ಉದಾ: ರಮಣ ಶಬ್ದ ಉಚ್ಚರಿಸುವಾಗ ರ-ದಿಂದ ಹೊರಡುವ ಧ್ವನಿ. "ಆ" ಅನ್ನು ಉಚ್ಚಾರ ಮಾಡಲು ಹೇಳಿಕೊಟ್ಟಿದ್ದು "ಆ" ಎಂದು (ಉದಾ: ರಾವಣ ಶಬ್ದ ಉಚ್ಚರಿಸುವಾಗ ರಾ-ದಿಂದ ಧ್ವನಿ). ಆದರೆ ಶಿವಮೊಗ್ಗದಿಂದ ಕೆಳಗೆ ಹೋದಂತೆಲ್ಲ ಮಕ್ಕಳು "ಅ ಆ" ಕಲಿಯುವ ಪರಿಯೇ ಬೇರೆ. "ಅ" ಅನ್ನು "ಆ" ಸ್ವರವನ್ನು ಅರ್ಧ ತಿಂದಂತೆ ಉಚ್ಚಾರ ಮಾಡುತ್ತಾರೆ. ಈ ಗೊಂದಲದಲ್ಲಿ "ಸೀತಾ"ಗಿಂತ "ಸೀತ" ಅವರಿಗೆ ಸರಿ ಅನಿಸುತ್ತದೆ; "ರಾಮ"ಗಿಂತ "ರಾಮ್" ಸರಿಯೆನಿಸುತ್ತದೆ. ಅದಕ್ಕೇ ಇಷ್ಟೆಲ್ಲ ಗೊಂದಲ ಪತ್ರಿಕೆಗಳಲ್ಲಿ, ಟಿವಿಯಲ್ಲಿ ಶುರುವಾಗಿರುವುದು.

    ನನ್ನ ಮಿತ್ರನೊಬ್ಬನಿದ್ದ, ಮೈಸೂರು ಕಡೆಯವ. ಅವನ ಹೆಸರು ಸಂದೀಪಕುಮಾರ ಎಂದಿಟ್ಟುಕೊಳ್ಳಿ. ಆತ ಅವನ ಹೆಸರನ್ನು ಬರೆಯುತ್ತಿದುದು ಸಂದೀಪ್ ಕುಮಾರ್ ಎಂದು. ಇದು ತಪ್ಪಲ್ಲವಾ ಎಂದರೆ ಆತ ಎರಡು ಕಾರಣ ಕೊಡುತ್ತಿದ್ದ.
    ೧. ಸಂದೀಪಕುಮಾರ ತಪ್ಪಂತೆ, ಹಾಗೆ ಬರೆದರೆ ಅವನ ಹೆಸರು ಉಚ್ಚರಿಸುವಾಗ "ಸಂದೀಪಾ ಕುಮಾರಾ" ಆಗುತ್ತದಂತೆ!
    ೨. ಇಂಗ್ಲೀಷಿನಲ್ಲಿ ಅವನ ಹೆಸರು Sandeepkumar. ಆದ್ದರಿಂದ ಸಂದೀಪ್ ಕುಮಾರ್ ಸರಿ!!


    ನನಗೆ ತಿಳಿದಿರುವಂತೆ ಸ್ವರಗಳ ಮೂಲ ಗುಣವೆಂದರೆ ಅವನ್ನು ಎಷ್ಟು ಮಾತ್ರೆ ಹೇಳಿದರೂ ಅವು ಬದಲಾಗವು. ಉದಾ: ಇ ಅನ್ನು ಒಂದು ನಿಮಿಷ ಹೇಳಿದರೂ ಇ ಆಗಿಯೇ ಇರುತ್ತದೆ. ವ್ಯಂಜನಗಳು ಹಾಗಲ್ಲ, ಸ್ವರಗಳ ಸಹಾಯವಿಲ್ಲದೇ ಅವುಗಳನ್ನು ಉಚ್ಚರಿಸಲೂ ಬರುವುದಿಲ್ಲ. ಉದಾ: ಕ್ - ಸ್ವರಗಳ ಸಹಾಯವಿಲ್ಲದೇ ಅದನ್ನು ಮಾತಾಡಲು ಸಾಧ್ಯವಿಲ್ಲ, ಊಹಿಸಬಹುದಷ್ಟೇ. "ಸಂದೀಪ್" ಶಬ್ದದಲ್ಲಿ "ಪ್" ಉಚ್ಚಾರ ಸಾಧ್ಯ್ವಾಯಿತಲ್ಲ್ಲಾ ಎಂದು ವಾದ ಮಾಡಬೇಡಿ, ಅಲ್ಲಿ ನಿಜವಾಗಿ ಪ್ ಆನ್ನು ಉಚ್ಚಾರ ಮಾಡಲು ಸಾಧ್ಯವಾದದ್ದು ಅದರ ಹಿಂದೆ ಇರುವ ಸ್ವರದ ದೆಸೆಯಿಂದ.

    ಈ ದೃಷ್ಟಿಯಿಂದ ನೋಡಿದಾಗ ಉತ್ತರ ಕರ್ನಾಟಕದ ಕಡೆ ಹೇಳಿಕೊಡುವ "ಅ" ದ ಉಚ್ಚಾರ ಸರಿ ಎನಿಸುತ್ತದೆ, ದಕ್ಷಿಣ ಕರ್ನಾಟಕದ ಕಡೆ ಹೇಳಿಕೊಡುವ "ಅ" ದ ಉಚ್ಚಾರ ತಪ್ಪು ಎನಿಸುತ್ತದೆ.

    - ಕೇಶವ (www.kannada-nudi.blogspot.com)

    ReplyDelete
  22. ಕೇಶವ ಕುಲಕರ್ಣಿಯವರೆ

    ನೀವು ಹೀಗಂದಿರಿ:

    "ಈ ದೃಷ್ಟಿಯಿಂದ ನೋಡಿದಾಗ ಉತ್ತರ ಕರ್ನಾಟಕದ ಕಡೆ ಹೇಳಿಕೊಡುವ "ಅ" ದ ಉಚ್ಚಾರ ಸರಿ ಎನಿಸುತ್ತದೆ, ದಕ್ಷಿಣ ಕರ್ನಾಟಕದ ಕಡೆ ಹೇಳಿಕೊಡುವ "ಅ" ದ ಉಚ್ಚಾರ ತಪ್ಪು ಎನಿಸುತ್ತದೆ."

    ನಿಮ್ಮ ಹೇಳಿಕೆ ತಪ್ಪು ಎನ್ನದೇ ಬೇರೆ ದಾರಿಯಿಲ್ಲ. ’ಅ’ ಎಂದು ಬರೆಯಲಾಗುವ ಅಕ್ಷರಕ್ಕೆ ಎರಡು ಬಗೆಯ ಉಚ್ಹಾರವಿರುವುದರ ಉದಾರಣೆಗಳನ್ನು ಮೇಲೊಂದು ಟಿಪ್ಪಣಿಯಲ್ಲಿ ನಾನು ಹಾಕಿದ್ದನ್ನು ನೋಡಿ. ಅದರಲ್ಲೊಂದು ವಿಧವನ್ನು ಉತ್ತರಕರ್ನಾಟಕದಲ್ಲಿ ಹೆಚ್ಚಾಗಿ ಹೇಳುತ್ತಾರೆ, ಇನ್ನೊಂದು ವಿಧವನ್ನು ದಕ್ಷಿಣದಲ್ಲಿ ಹೇಳುತ್ತಾರೆ. ಅಂತಹದರಲ್ಲಿ ಯಾರು ಸರಿ ಯಾರು ತಪ್ಪು? ಇಬ್ಬರೂ ಸರಿಯೇ ಎಂದರೆ ಮಾತ್ರ ಸರಿ ಹೋಗಬಹುದಷ್ಟೇ!

    ತಪ್ಪು ತಿಳಿಯಬೇಡಿ - ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಭಾವ ಎಂದು (ದಕ್ಷಿಣದವರು) ತಪ್ಪು ತಿಳಿದಿರುವಂತೆ, ಉತ್ತರದವರು ದಕ್ಷಿಣದಲ್ಲಿ ತಮಿಳು ಪ್ರಭಾವ ಎಂಬ ತಪ್ಪು ಗ್ರಹಿಕೆಯಲ್ಲಿದ್ದಾರೆ.

    ನಾನು ದಕ್ಷಿಣದವನಾದ್ದರಿಂದ ಇಷ್ಟೆಲ್ಲಾ ಹೇಳಬೇಕಾಯಿತು :)

    ReplyDelete
  23. ಹಂಸಾನಂದಿಯವರೇ,

    ತಪ್ಪು ತಿಳಿಯಬೇಡಿ. ನಾನೇನೂ ಭಾಷಾ ಪಂಡಿತನಲ್ಲ.

    ನನಗೆ ತಿಳಿದಿರುವಂತೆ ಹೃಸ್ವಸ್ವರಗಳನ್ನು ಹೇಳಲು ಒಂದು ಮಾತ್ರೆ ಕಾಲಾವಕಾಶ ಬೇಕು, ದೀರ್ಘಸ್ವರಗಳನ್ನು ಹೇಳಲು ಎರಡು ಮಾತ್ರೆ ಕಾಲಾವಕಾಶ ಬೇಕು. "ಅ" ಸ್ವರವನ್ನು "ಆ" ಸ್ವರದಂತೆ ಒಂದೇ ಮಾತ್ರೆಯಲ್ಲಿ ಹೇಳಲು ಸಾಧ್ಯ ಎಂದು ಒಪ್ಪುತ್ತೇನೆ. ಆದರೆ ಛಂದಸ್ಸಿನಲ್ಲಿ ಕಾವ್ಯ ಬರೆಯುವ ಯಾರೂ ಇದುವರೆಗೂ "ಆ" ಅನ್ನು ಒಂದೇ ಮಾತ್ರೆಯಲ್ಲಿ ಓದಿದ್ದು ನನಗೆ ನೆನಪಿಲ್ಲ. "ಯಜಮಾನ" ಎನ್ನುವಾಗ "ಯ, ಜ" ವನ್ನು ಉತ್ತರ ಕರ್ನಾಟಕದ ಜನದ ತರಹ "ಅ" ತರಹ ಹೇಳುತ್ತೇವೆಯೇ ಹೊರತು, ದಕ್ಷಿಣದ ತರಹ "ಆ" ಅನ್ನು ಒಂದೇ ಮಾತ್ರೆಯಲ್ಲಿ ಹೇಳುವಂತೆ ದಕ್ಷಿಣದವರೂ ಹೇಳುವುದಿಲ್ಲ. ಆದರೆ ಶಬ್ದದ ಕೊನೆಯಲ್ಲಿ "ಅ"ಕಾರಾಂತವಾಗದ್ದರೆ, ದಕ್ಷಿಣದವರು ಅದನ್ನು "ಆ" (ಒಂದು ಮಾತ್ರೆ)ಕಾರವಾಗಿ ಹೇಳುತ್ತಾರೆ. "ಯಜಮಾನ" ಅವರ ಹೇಳಿಕೆಯಲ್ಲಿ "ಯಜಮಾನಾ" (ಇಲ್ಲಿ ಆ ಒಂದು ಮಾತ್ರೆ ಮಾತ್ರ ಹೇಳುತ್ತಾರೆ) ಆಗುತ್ತದೆ. ಯಾಕೆ ಹೀಗೆ? ನನಗೆ ಉಳಿದ ದ್ರವಿಡ ಭಾಷೆಗಳಲ್ಲೂ ಇದೇ ಪರಿಪಾಠವಿದೆಯೇ ಗೊತ್ತಿಲ್ಲ. ಗೊತ್ತಿದ್ದರೆ ತಿಳಿಸಿ. ಆದರೆ ಸಂಸ್ಕೃತದಲ್ಲಿ ಮಾತ್ರ "ಅ" ಅನ್ನು ಉತ್ತರ ಕರ್ನಾಟಕದ ತರಹ "ಅ" ಎನ್ನುತ್ತಾರೆ (ಅದು ಶಬ್ದದ ಮಧ್ಯದಲ್ಲಿರಲಿ, ಅಥವಾ ಕೊನೆಯಲ್ಲಿರಲಿ.

    ನನಗಿರುವ ಗೊಂದಲ ಇದೇ. ಅದೇ ಗೊಂದಲದಲ್ಲಿ ನಾನು ಉತ್ತರ ಕರ್ನಾಟಕದ "ಅ" ಸರಿಯೆಂದು ಹೇಳಿದ್ದು.

    --------------------------

    ನನ್ನ ಪ್ರತಿಕ್ರಿಯೆಯನ್ನು ಇನ್ನೂ ಮುಂದುವರೆಸುತ್ತೇನೆ:

    ಸಿ.ಅಶ್ವಥ್ ಬೇಂದ್ರೆಯವರ ಹಾಡನ್ನು ಹಾಡುವಾಗ ಇದೇ ತಪ್ಪನ್ನು ಮಾಡುತ್ತಾರೆ. ಉದಾ: "ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದದೋ ಅಂದದ" ಎನ್ನುವ ಸಾಲನ್ನು "ಹೊಸ ದ್ವೀಪಗಳಿಗೆ ಹೊರಟಾನಾ (ನಾ - ಎರಡು ಮಾತ್ರೆ) ಬನ್ನಿ ಅಂದದೋ ಅಂದದಾ (ದಾ - ಎಅರಡು ಮಾತ್ರೆ)" ಎನ್ನುತ್ತಾರೆ. ಹಾಗೆ ಹೇಳಿ ಕವನವನ್ನು ನುಚ್ಚುನೂರು ಮಾಡುತ್ತಾರೆ. ಅದನ್ನು ನಿಜವಾಗಿ ಹೇಳಬೇಕಾಗಿರುವುದು, "ಹೊಸ ದ್ವೀಪಗಳಿಗೆ ಹೊರಟಾನs ಬನ್ನಿ ಅಂದದೋ ಅಂದದs" ಎಂದು.

    ಕೇಶವ

    ReplyDelete
  24. ಜ್ಯೋತಿ, foryou, ಕೇಶವ, ಹಂಸಾನಂದಿ,
    ಸ್ಪಂದನೆಗೆ ಧನ್ಯವಾದಗಳು.
    ತಿಕ್ಕಾಟದಿಂದಲ್ಲಿಯೇ ಬೆಳಕು ಹುಟ್ಟುವದು.
    ಬೆಳಕಿನ ಬೆನ್ನು ಹತ್ತಿ ಹೊರಟಿದ್ದೇವೆ.
    'ಕರುಣಾಳು ಬಾ ಬೆಳಕೆ......' ಎಂದು ಪ್ರಾರ್ಥಿಸೋಣವೆ?

    ReplyDelete
  25. ಸುನಾಥರೆ, ನೀವು ಭೀಮ್‌ಸೇನ್ ಎಂದು ಹೇಗೆ ಬರೆದಿರಿ? ನಾನು ಬರೆಯಲು ಹೋದರೆ ಭೀಮ್ಸೇನ್ ಎಂದಾಗುತ್ತಿದೆ.

    Zero width non joiner ಉಪಯೋಗಿಸಿ ಬರೆಯಬೇಕು ಎಂದು ಗೊತ್ತು. ಆದರೆ ಸುಲಭವಾಗಿ ಅದನ್ನು ಬ್ಲಾಗಿನಲ್ಲಿ ಹೇಗೆ ಬರೆಯುವುದೆಂದು ತಿಳಿಯುತ್ತಿಲ್ಲ.

    ಇದೇ ರೀತಿಯ ಇನ್ನೊಂದು ಬರಹ: "ಸರ್ವಶಿಕ್ಷ ಅಭಿಯಾನ" ಎನ್ನುವುದು. "ಸರ್ವಶಿಕ್ಷಾ" ಎಂದಾಗಬೇಕಲ್ಲವೇ?

    ReplyDelete