Sunday, September 21, 2008

ಶಿಶುನಾಳ ಶರೀಫರು

ಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತರಾಗಿದ್ದಾರೆ. ಇವರ ಜೀವನದ ವಿವರಗಳು ಇಂತಿವೆ:

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು.

ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. ೧೮೧೯ನೆಯ ಇಸವಿಯ ಮಾರ್ಚ ತಿಂಗಳಿನ ೭ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು.

ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.

ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು.
ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.
ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||

ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||

ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||

ಕೆಲಕಾಲದ ನಂತರ ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.
ಶರೀಫರಿಗೆ ತಮ್ಮ ಹೆಂಡತಿಯ ಬಗೆಗಿರುವ ಮರ್ಯಾದೆಯ ಭಾವವು ಅವರು ರಚಿಸಿದ ಈ ಹಾಡಿನಲ್ಲಿ ಕಂಡುಬರುತ್ತದೆ:

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||

ಶರೀಫರ ಸಂಸಾರದಲ್ಲಿ ಇಷ್ಟು ಚೆನ್ನಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ಅವರ ಹೆಂಡತಿ ಅವರ ಆಧ್ಯಾತ್ಮ ಸಾಧನೆಯಲ್ಲಿಯೂ ಅವರಿಗೆ ಜೊತೆಗಾತಿಯಾಗಿರಬಹುದು.

“ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ” ಎನ್ನುವ ಸಾಲುಗಳು ಸ್ಥೂಲದೇಹಕ್ಕಷ್ಟೇ ಅಲ್ಲ, ಸೂಕ್ಷ್ಮದೇಹ ಹಾಗೂ ಕಾರಣದೇಹಗಳಲ್ಲೂ ತಾವು ಜೊತೆಯಾಗಿರೋಣ ಎಂದು ಶರೀಫರು ತಮ್ಮ ಹೆಂಡತಿಗೆ ಕರೆ ಕೊಡುವದನ್ನು ತೋರಿಸುತ್ತವೆ.

ಕೆಲಕಾಲದ ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿ, ಬೇಗನೇ ಮರಣವನ್ನಪ್ಪುತ್ತದೆ. ಅವರ ಹೆಂಡತಿ ಫಾತಿಮಾ ಸಹ ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತಾಳೆ. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ಮಾವ ಅವರಿಗೆ ಹೇಳಿ ಕಳಿಸುತ್ತಾರೆ. ಆದರೆ, ಶರೀಫರು ಈಗ ಎಲ್ಲಾ ಮಾಯಾಬಂಧಗಳಿಂದ ಮುಕ್ತರಾಗಿದ್ದರು. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಲಿಲ್ಲ. ಅವರ ಮನೋಭಾವನೆ ಈ ಹಾಡಿನಲ್ಲಿ ವ್ಯಕ್ತವಾಗಿದೆ:

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

ಇನ್ನು ಮುಂದೆ ಶರೀಫರ ಜೀವನವು ಪೂರ್ಣವಾಗಿ ಪಾರಮಾರ್ಥಿಕ ಸಾಧನೆಗೆ ಮೀಸಲಾಯಿತು. ಮಗಳು, ಮಡದಿ, ತಂದೆ,ತಾಯಿ ಹಾಗು ಕೊನೆಗೆ ಗುರು ಗೋವಿಂದ ಭಟ್ಟರ ನಿಧನದ ನಂತರ, ಶರೀಫರು ಪುಣ್ಯಕ್ಷೇತ್ರಗಳ ಯಾತ್ರೆ ಹಾಗು ಪುಣ್ಯಜೀವಿಗಳ ಭೆಟ್ಟಿಯಲ್ಲಿ ಕಾಲ ಕಳೆದರು. ನವಲಗುಂದದ ನಾಗಲಿಂಗಪ್ಪನವರು ಹಾಗೂ ಗರಗದ ಮಡಿವಾಳಪ್ಪನವರು ಶರೀಫರಿಗೆ ಅತ್ಯಂತ ಆಪ್ತರಾಗಿದ್ದರು.
ಆ ಅವಧಿಯಲ್ಲಿ ಇಳಿವಯಸ್ಸಿನಲ್ಲಿದ್ದ ಶ್ರೀ ಚಿದಂಬರ ಸ್ವಾಮಿಗಳ ಹಾಗು ಬಾಲಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪಡೆದರು.
ಅಲ್ಲದೆ ಸಮಕಾಲೀನರಾದ ಅಗಡಿಯ ಶೇಷಾಚಲ ಸ್ವಾಮಿಗಳು, ಅವರಾದಿ ಫಲಾಹಾರ ಸ್ವಾಮಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು ಹಾಗು ವಿಶ್ವಕರ್ಮದ ಪ್ರಭುಸ್ವಾಮಿಗಳು ಇವರೆಲ್ಲರ ಸತ್ಸಂಗವನ್ನು ಪಡೆದರು.
ತಮ್ಮ ಕೊನೆಯ ದಿನಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳನ್ನು ಸಂದರ್ಶಿಸಿದಾಗ ಸ್ವಾಮಿಗಳಿನ್ನೂ ಚಿಕ್ಕವರಿದ್ದರು.

ಶರೀಫರು ಯಾವುದೇ ಕೆಲಸ ಮಾಡದೆ, ಆತ್ಮಚಿಂತನೆಯಲ್ಲಿ ಮಗ್ನರಾಗಿ ಇರುತ್ತಿದ್ದರಿಂದ ಸಾಕಷ್ಟು ನಿಂದನೆಯನ್ನು ಎದುರಿಸಬೇಕಾಯಿತು. ಸಾಲಗಾರರ ಕಾಟದಿಂದ ಮುಕ್ತರಾಗಲು, ಶಿಶುನಾಳದಲ್ಲಿದ್ದ ತಮ್ಮ ಹೊಲವನ್ನು ಮಾರಬೇಕಾಯಿತು. ಇದೆಲ್ಲವನ್ನೂ ಶರೀಫರು ದೇವರ ದಯವೆಂದೇ ಭಾವಿಸಿದರು:

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||೧||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||೫||

ತಮ್ಮ ಕೊನೆಗಾಲವನ್ನು ಅರಿತ ಶರೀಫರು, ಶರಣರ ಪದ್ಧತಿಯಂತೆ “ವಿಭೂತಿ ವೀಳ್ಯೆ” ಮಾಡಿಸಿಕೊಂಡು ದೇಹತ್ಯಾಗ ಮಾಡಲು ಬಯಸಿದರು. ಈ ವಿಧಾನದ ಪ್ರಕಾರ ಜಂಗಮ ಪಾದಪೂಜೆ ಹಾಗು ಶರೀಫರ ಮಸ್ತಕದ ಮೇಲೆ ಜಂಗಮನ ಪಾದವಿಟ್ಟು ಶಿವಸಾಯುಜ್ಯ ಮಂತ್ರಪಠಣ ಮಾಡುವ ಅವಶ್ಯಕತೆ ಇತ್ತು. ಶರೀಫರ ಹಣೆಯ ಮೇಲೆ ಪಾದವಿಡಲು ಯಾವ ಜಂಗಮ ಒಪ್ಪಿಯಾರು? ಕೊನೆಗೆ ಹಿರೇಮಠದ ಕರಿಬಸವಯ್ಯನವರು ಶರೀಫರ ಇಚ್ಛೆಯನ್ನು ಪೂರ್ಣಗೊಳಿಸಿದರು. ಆ ಕ್ಷಣವೇ ಶರೀಫರು ಓಂಕಾರದಲ್ಲಿ ಲೀನವಾದರು:(ಕ್ರಿ.ಶ.೧೮೮೯ನೆಯ ಮಾರ್ಚ ೭ನೆಯ ದಿನಾಂಕ.)

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||

ಶರೀಫರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ,ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಅದಕ್ಕೆ ನೆರಳು ನೀಡುವ ಮರ ಇವೇ ಅವರ ಗದ್ದುಗೆ.
ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಹಾಗು ಬಲಭಾಗದಲ್ಲಿ ಹಿಂದೂಗಳು ತಮ್ಮ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||
……………………………………………………..

36 comments:

  1. ಧನ್ಯವಾದಗಳು, ಕುಮಾರಸ್ವಾಮಿಯವರೆ.

    ReplyDelete
  2. ಇದೆಂತಾ ಕಾಕತಾಳೀಯ ಮಾರಾಯ್ರೆ!!! ನಿಜವಾಗ್ಲೂ ಯಾಕೆ ಗೊತ್ತಾ ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ. ನಿಮ್ಮೊಂದಿಗೆ ಶರೀಫರ ಬಗ್ಗೆ ಮಾತಾಡ ಬೇಕೆಂದು ಅಂದು ಕೊಂಡಿದ್ದೆ. ನಿಮ್ಮ ಬ್ಲಾಗ್ ತೆರೆದು ನೋಡಿದರೆ ಅದೇ ಇರ್ಬೇಕಾ ತುಂಬಾ ಖುಶಿಯಾಯ್ತು. ನನಗೆ ಇಷ್ಟವಾದ ಹಾಡುಗಳು ಹೀಗಿವೆ;

    ಸೋರುತಿಹುದು ಮನೆಯ ಮಾಳಿಗೆ,
    ಅಙ್ಞಾನದಿಂದ ಸೋರುತಿಹುದು ಮನೆಯ ಮಾಳಿಗೆ,


    ತರವಲ್ಲ ತಗಿ ನಿನ್ನ ತಂಬೂರಿ.....


    ಎಂತಹ ಹಾಡುಗಳು ಸುನಾಥರೇ ಈ ಹಾಡುಗಳು!!
    ಎಷ್ಟು ಖುಷಿಯಾಗುತ್ತೆ ಕೇಳ್ತಾ ಇದ್ರೆ.

    ಅದಕ್ಕೆ ಇಂಬು ಕೊಟ್ಟಂತೆ ಸಿ. ಅಶ್ವಥ್ಥರ ಕಂಚಿನ ಕಂಠ! ಷರೀಫರ ಹಾಡುಗಳನ್ನು ಜನರಿಗೆ ತಲುಪಿಸುವಲ್ಲಿ ಅಶ್ವಥ್ ರ ಕೊಡುಗೆಯನ್ನ ಮರೆಯುವಂತಿಲ್ಲ. ಧನ್ಯವಾದಗಳು ನಿಮಗೆ.

    ReplyDelete
  3. ಸಿಮ್ಮಾ ಅವರೆ,
    ಈ ಕಾಕತಾಳೀಯಗಳ ಹಿಂದೆ ದೈವೀ ಪ್ರೇರಣೆ ಇರುತ್ತದೆಯೊ ಏನೊ?

    ReplyDelete
  4. ಸುನಾಥ ಕಾಕ,
    ಲೇಖನ ಸೊಗಸಾಗಿದೆ. ಕೆಲವು ಕಡೆ ಶರೀಫಾ ಅರ್ಥವಾಗುವುದಿಲ್ಲ.
    "ಮೂರು ಮೂಲೆಯ ಕಲ್ಲು ಅದರೊಳು
    ಜಾರುತಿರುವ ಕಲ್ಲು"
    ಇಲ್ಲಿ ಶರೀಫಾ ಏನು ಹೇಳುತಿದ್ದಾರೆ ಎಂಬುದು ಗೊತ್ತಾಗಲಿಲ್ಲ.

    ಸ್ನೇಹದಿಂದ
    ಬಾಲ.

    ReplyDelete
  5. ಬಾಲವನ-ವಿಹಾರಿಯವರೆ,
    ಶರೀಫರ ಈ ಹಾಡಿನಲ್ಲಿ ತಂತ್ರ-concept ಇದೆ. ತಂತ್ರದ ಪ್ರಕಾರ ದೈವಿ ಚೈತನ್ಯವು ಇಬ್ಭಾಗವಾಗಿ ಶಿವ ಹಾಗೂ ಶಕ್ತಿರೂಪವನ್ನು ಪಡೆಯಿತು. ಮೂರು ಮೂಲೆಗಳ ಕಲ್ಲು ಅಂದರೆ ಶ್ರೀಚಕ್ರದ ತ್ರಿಕೋಣ.ಅದರಲಿ ಜಾರುತಿರುವ ಕಲ್ಲು ಅಂದರೆ "ಬಿಂದು". ಬಿಂದು ಇದು ಶಿವ-ಶಕ್ತಿಯರ ಸಾಮರಸ್ಯ ಸ್ವರೂಪ.
    ಯೋಗಸಾಧಕನು ಈ ಮಟ್ಟವನ್ನು ತಲುಪಿದಾಗ, ಅವನಿಗೆ "ನಾದ" ಕೇಳಿಸುವದು. ಅಂತಲೇ, ಶರೀಫರು "ಶಂಖ, ಭೇರಿ, ಸುನಾದ" ಎಂದು ವರ್ಣಿಸಿದ್ದಾರೆ.

    ಇನ್ನು ಶಕ್ತಿಯನ್ನು ತಾಯಿಗೆ ಹಾಗು ಶಿವನನ್ನು ತಂದೆಗೆ ಹೋಲಿಸುವದರಿಂದ, ಮೂರು ಮೂಲೆಗಳ ಕಲ್ಲು ಅಂದರೆ ಸೃಷ್ಟಿಯ ಮೂಲವಾದ ಯೋನಿ ಎಂದೂ ಹಾಗು ಅದರಲಿ ಜಾರುತಿರುವ ಕಲ್ಲು ಅಂದರೆ ಸೃಷ್ಟಿಕಾರಕವಾದ ಲಿಂಗ ಎಂದೂ ಅರ್ಥವಾಗುತ್ತದೆ.

    ಈ ಶ್ರೀಚಕ್ರವು ಮನುಷ್ಯದೇಹದಲ್ಲಿಯೇ ಇದೆ.(ಸ್ಥೂಲ, ಸೂಕ್ಷ್ಮ ಹಾಗು ಕಾರಣದೇಹಗಳು). ಶ್ರೀಚಕ್ರದಲ್ಲಿ ಸಾಧಕನು ಕೊನೆಯ ಸ್ಥಿತಿಯನ್ನು ತಲುಪಬೇಕಾದರೆ ಅವನು "ಆರು ಮೂರನು ಕಟ್ಟ"ಬೇಕಾಗುತ್ತದೆ. ಆರು ಎಂದರೆ ಆರು ಚಕ್ರಗಳು, ಮೂರು ಎಂದರೆ ಮೂರು ಗ್ರಂಥಿಗಳು.
    ಮತ್ತೂ ಒಂದು ಅರ್ಥ ಇಲ್ಲಿದೆ. ಆರು ಎಂದರೆ ಸಾಧಕನ ಆರು ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ. ಮೂರು ಎಂದರೆ ಸತ್ವ, ರಜಸ್ ಹಾಗೂ ತಮೋಗುಣಗಳು.

    ReplyDelete
  6. ಸುನಾಥ ಕಾಕ,
    ನಿಮ್ಮ ನಿಖರವಾದ ವಿವರಣೆಗೆ ವಂದನೆಗಳು, ನಿಮಗೆ ಇನ್ನೆರೆಡು ಪ್ರಶ್ನೆಗಳು
    ೧. ಕೆಳಗಿನ ಭಾಗ ಕೂಡ ಅರ್ಥವಾಗಿಲ್ಲ
    ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
    ಬಂಡೆದ್ದು ಹೋಗುವದು ಭಯವ್ಯಾಕೋ
    ಮಂಡಲನಾಡಿಗೆ ಪಿಂಡದ ಗೂಡಿಗೆ
    ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

    ೨. ಷರೀಫರು ಅದ್ವೈತವಾದಿಗಳೇ ಎಂಬ ಸಂದೇಹ ದಯವಿಟ್ಟು ಪರಿಹರಿಸಿ.

    ಧನ್ಯವಾದಗಳೊಂದಿಗೆ,
    ಬಾಲ.
    (www.chandana.wordpress.com)

    ReplyDelete
  7. ಬಾಲವನ-ವಿಹಾರಿಗಳೆ,
    ಖಂಡವನ ಈ ಪದವನ್ನು ಎರಡು ರೀತಿಯಾಗಿ ಗ್ರಹಿಸಬಹುದು.
    ಖಂಡದಿಂದ ತುಂಬಿದ ವನ ಮನಸ್ಸು. ಎರಡನೆಯ ಗ್ರಹಿಕೆ ಅಂದರೆ ಖಂಡವನ=ಖಾಂಡವವನ. ಖಾಂಡವವನವನ್ನು ದಹಿಸಿದ್ದು ಅಗ್ನಿ.
    ಯಾವುದೇ ಅಥವಾ ಎರಡೂ ಅರ್ಥಗಳನ್ನು ಹೊಂದಿಸಿಕೊಂಡು ನೋಡಿದಾಗ, ಅಗ್ನಿಯು ತನ್ನ ಮನಸ್ಸಿನಲ್ಲಿ ಹುಟ್ಟಿ, ತನ್ನ ಮೈಯನ್ನು ಸೋಕುತ್ತದೆ ಎಂದು ಶರೀಫರು ಹೇಳುತ್ತಾರೆ. ಈ ಅಗ್ನಿಯು ಕಾಮಾಗ್ನಿ. ಈ ಕಾಮಾಗ್ನಿ ಹತ್ತಿಕೊಂಡಾಗ, ಪುರುಷನ ಮನಸ್ಸು
    ಮಂಡಲನಾಡಿಗೆ ಮತ್ತು ಪಿಂಡದ ಗೂಡಿಗೆ ಅಂದರೆ ಹೆಣ್ಣಿನ ದೇಹಕ್ಕೆ ಚಂಡಿಹಿಡಿದು ಹಂಬಲಿಸುವದು, ಹರಿದಾಡುವದು.

    ಈಗಲಾದರೊ, ಶರೀಫರ ಮೋಹದ ಮಡದಿಯೆ ಇಲ್ಲ. ಶರೀಫರಿಗೆ ಇದು ಶಿಶುನಾಳಧೀಶನ ದಯೆಯಂತೆ ತೋರುತ್ತದೆ!

    ಶರೀಫರು ದ್ವತವಾದಿಗಳೊ ಅಥವಾ ಅದ್ವೈತವಾದಿಗಳೊ ಎಂದು ಹೇಳುವಂತಿಲ್ಲ. ಏಕೆಂದರೆ ಈ ಸೃಷ್ಟಿಯನ್ನು ಮಾಡಿದವಳು ಆ ತಾಯಿ ಎಂದು ಅವರು ಹೇಳುತ್ತಾರೆ.
    ("ಕುಂಬಾರಕಿ ಈಕಿ ಕುಂಬಾರಕಿ ಈ
    ಬ್ರಹ್ಮಾಂಡವೆಲ್ಲವ ತುಂಬಿಕೊಂಡಿರುವ")
    ಅದರಂತೆ, ಮತ್ತೊಂದು ಪದದಲ್ಲಿ, ಈ ಸೃಷ್ಟಿಯೆಲ್ಲ ಬ್ರಹ್ಮಾನಂದದಲ್ಲಿ ಮುಳುಗಿದೆ ಎಂದು ಹೇಳುತ್ತಾರೆ.
    ("ಅದು ನೋಡು ಅದು ನೋಡು
    ಬ್ರಹ್ಮಾನಂದದಿ ಮುಣಿ ಮುಣಿಗ್ಯಾಡ್ವುದು ನೋಡು".)

    ReplyDelete
    Replies
    1. ಕೋಡಗನ ಕೋಳಿ ನುಂಗಿತ್ತಾ ಹಾಡಿನ ಮರ್ಮ -ಸಾಗರದಲ್ಲಿ ಹನಿಯೊಂದು ಲೀನವಾದ ಮೇಲೆ ಅದನ್ನು ಬೇರ್ಪಡಿಸುವುದು ಹೇಗೆ ಅಸಾಧ್ಯವೋ ಹಾಗೆ ಪರಮಾತ್ಮನಲ್ಲಿ ಆತ್ಮ ಒಂದಾದ ನಂತರ ಬೇರ್ಪಡಿಸಲು ಆಗದು ಎಂಬ ಅದ್ವೈತ ಸಿದ್ಧಾಂತವನ್ನೇ ಸಂತ ಶರೀಫಸಾಹೇಬರ ತತ್ವಪದಗಳು ಪ್ರತಿಪಾದಿಸುತ್ತವೆ.

      Delete
  8. ಶರೀಫರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  9. Nice asusual..
    ಆದರೆ ಯಾಕೋ ಸ್ವಲ್ಪ ಅವಸರದಲ್ಲಿ ಬರೆದಂತೆ ಭಾಸವಾಯಿತು..
    -rj

    ReplyDelete
  10. ಒಪ್ಪಿಕೊಂಡೆ, rj!

    ReplyDelete
  11. ಸುನಾಥರೆ,

    ಶಿಶುನಾಳ ಶರೀಫರ ಹಾಡುಗಳ ಮಹಾ ಅಭಿಮಾನಿ ನಾನು. ಈ ಲೇಖನ ಬಹಳ ಮೆಚ್ಚಿಕೊಂಡೆ. ಅವರ ಸಮಾಧಿ ಶಿಶುನಾಳದಲ್ಲಿ ಇದೆಯೇ ಅಥವಾ ಕಾಗಿನೆಲೆಯಲ್ಲಿದೆಯೇ? ತಮಗೆ ಗೊತ್ತಿದ್ದರೆ ತಿಳಿಸುವರೆ? ಭೇಟಿ ನೀಡಬೇಕು.

    ReplyDelete
  12. ಜಾತಿ ಮತಗಳ ಬಗ್ಗೆ ಎನ್ನ ಮನದಲಿ ಕವುಚಿದ ಬೂದಿಯನ್ನು ಸರಿಸಿದ ಗುರು ಶರೀಫರಿಗೆ ನೂರೆಂಟು ವಂದನೆಗಳು

    ಲೋಕದ ಕಣ್ಣಿಗೆ ಕಾಣದ ಹಾಗಿದ್ದರೂ ಮನಗಳಿಗೆ ಕಾಣುವ, ಅರಿತಿದ್ದರೂ ಮರೆಯುತಿಹ ಜೀವನದ ಪರಿಯನ್ನು ಆಡು ಭಾಷೆಯಲ್ಲಿ ಮನ ಮುಟ್ಟುವಂತೆ ಸಾರಿದ
    ಗುರುವರೇಣ್ಯ ಶರೀಫ ಸಾಹೇಬರ ಕೆಲವು ಪದಗಳನ್ನು ಅಷ್ಟೇ ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಹಿಂದೊಮ್ಮೆ ಲಕ್ಷ್ಮೀನಾರಾಯಣ ಭಟ್ಟರು ಕ್ಯಾಸೆಟ್ ಮೂಲಕ
    ಜನಮನಗಳನ್ನು ತಲುಪಿದಂತೆಯೇ ನೀವೂ ತಲುಪುತಿಹಿರಿ.

    ಅಗ್ಗದ ಅರಿವೀ ತಂದು
    ಹಿಗ್ಗೀ ಹೊಲಿಸಿದೆ ಅಂಗಿ
    ಹೆಗ್ಗಣ ಅಯ್ತವ್ವ ತಂಗಿ
    ಅಂಗಿ ಹೆಗ್ಗಣ ಅಯ್ತವ್ವ ತಂಗಿ

    ಅಗಣಿತ ವಿಷಯದ
    ಆರೋಗ್ಯ ನಿನ್ನ ಕವಚ
    ತೊಗಲಿನ ಬೆವರನು ಕುಡಿದು
    ಸಿಗದೇ ಹೋಯಿತವ್ವ ಈ ನಿನ್ನ ಅಂಗಿ ...

    ಸತ್ಕಾರ್ಯ ಅನವರತ ಸಾಗಲಿ ಸಾರ್

    ಗುರುದೇವ ದಯಾ ಕರೊ ದೀನ ಜನೆ

    ReplyDelete
  13. ರಾಜೇಶ,
    ಶರೀಫರ ಸಮಾಧಿ ಶಿಶುನಾಳದಲ್ಲಿದೆ. ಹುಬ್ಬಳ್ಳಿಗೆ ಬಂದು, ಅಲ್ಲಿಯ Rural Bus standನಲ್ಲಿ ಬಸ್ ಹಿಡಿಯಬಹುದು.
    ಕಡೆಯ ಶ್ರಾವಣ ಸೋಮವಾರದಮ್ದು ಹಾಗೂ ಫಾಲ್ಗುಣ ಶುದ್ಧ ದಶಮಿಯಂದು ಅಲ್ಲಿ ಜಾತ್ರೆಗಳಾಗುತ್ತವೆ.

    ReplyDelete
  14. ಶ್ರೀನಿವಾಸರೆ,
    ಅನೇಕ ವಂದನೆಗಳು.
    ಕನ್ನಡದ ಶರೀಫರು ಕನ್ನಡಿಗರ ಮನ ತಟ್ಟಲಿ.
    ಸಬಕೊ ಸನ್ಮತಿ ದೇ ಭಗವಾನ್ ಅಂತ ಹಾರೈಸೋಣ

    ReplyDelete
  15. ಸುನಾಥ ಕಾಕಾ,

    ಶರೀಫರ ಕುರಿತು ಬಹಳಷ್ಟು ಮಾಹಿತಿಗಳು ತಿಳಿದವು. ವಂದನೆಗಳು. ಇನ್ನಷ್ಟು ಮಾಹಿತಿಗಳಿದ್ದರೆ ತಿಳಿಸಬೇಕಾಗಿ ವಿನಂತಿ. ಹಾಗೆಯೇ ಅವರ "ಅಳಬೇಡ ತಂಗಿ ಅಳಬೇಡ.." ಹಾಡನ್ನು ಸಲ್ಲಾಪದಲ್ಲಿ ನೋಡುವ ಆಶಯವಾಗಿದೆ :)

    ReplyDelete
  16. ತೇಜಸ್ವಿನಿ,
    ಶರೀಫರ ಬಗೆಗೆ ಇನ್ನೊಂದಿಷ್ಟು ಮಾಹಿತಿಯನ್ನು ಹಾಗು "ಅಳಬೇಡ ತಂಗಿ..."ಯನ್ನು ಶೀಘ್ರದಲ್ಲಿಯೇ ಬರೆಯುವೆ.
    ಈ ಹಾಡು ನಿನ್ನ ಮೆಚ್ಚಿನದೆ?
    -ಸುನಾಥ ಕಾಕಾ

    ReplyDelete
  17. ಹೌದು ಕಾಕಾ, ಇದು ನನ್ನ ಮೆಚಿನ ಹಾಡು.. ತುಂಬಾ ಆಳ ಹಾಗೂ ಮಾರ್ಮಿಕ ಅರ್ಥವನ್ನೊಳಗೊಂಡಿದೆ ಅಲ್ಲವೇ?

    ReplyDelete
  18. ಸುನಾಥ ಸಾರ್,

    ತರವಲ್ಲ ತೆಗಿ ನಿನ್ನ ತಂಬೂರಿ! ನನ್ನ ಪ್ರೀತಿಯ ಶಿಶುನಾಳ ಶರೀಫರ ಹಾಡು. ಒಳ್ಳೇ ಲೇಖನ Thanks.

    ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

    ನನ್ನ ಬ್ಲಾಗ್ ವಿಳಾಸ:
    http://chaayakannadi.blogspot.com/
    ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
    http://camerahindhe.blogspot.com/

    ReplyDelete
  19. sunaath sir,
    ನೀವು ನನ್ನ ಬ್ಲಾಗಿಗೆ ಬಂದು ಚಿತ್ರ-ಲೇಖನಗಳನ್ನು ನೋಡಿ ನಿಮ್ಮ ಪ್ರತಿಕ್ರಿಯೆ ನೀಡಿದ್ದಕ್ಕೆ Thanks. ನನ್ನ ಉಳಿದ ಲೇಖನಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ

    ನನ್ನ ಮತ್ತೊಂದು ಬ್ಲಾಗಿಗೆ ಬೇಟಿ ಕೊಟ್ಟರೆ ನಿಮಗೆ ಮತ್ತಷ್ಟು ವಿಭಿನ್ನವೆನಿಸುವ ನನ್ನ ನಿಜ ವೃತ್ತಿಯ ಬಗೆಗಿನ ಲೇಖನಗಳು ನಿಮಗೆ ಇಷ್ಟವಾಗಬಹುದು;

    http://camerahindhe.blogspot.com/

    ReplyDelete
  20. shishunal sharif avar mrutyu dinank sari aytenu nange shanka ide idna conferm madike happasaheb@gmail.com mele tilisari

    ReplyDelete
  21. ಶರೀಫರ ಜನನ ಹಾಗು ಮರಣ ಮಾರ್ಚ ೭ರಂದು ಆದವು ಎಂದು ನಾನು ಓದಿದ್ದೇನೆ. ಇದರ ಬಗೆಗೆ ಹೆಚ್ಚಿನ ಮಾಹಿತಿ ನನಗೆ ತಿಳಿಯದು.

    ReplyDelete
  22. ಚೆನ್ನಾಗಿದೆ ಸರ್

    ReplyDelete
  23. ಧನ್ಯವಾದಗಳು, ಭಜಂತ್ರಿಯವರೆ.

    ReplyDelete
  24. ಶ್ರೀ ರಾಮಕೃಷ್ಣ ಪರಮಹಂಸರೂ ಕಾಳಿಕಾ ದೇವಿಯ ಆರಾಧಕರು ಹಾಗೂ ಅದ್ವೈತ ಸಿದ್ಧಾಂತದ ಪ್ರತಿಪಾದಕರು ಆಗಿದ್ದರು.

    ReplyDelete
  25. ಪ್ರಿಯ ಸುಬ್ಬಾರಾವ ದೇಸಾಯರೆ (Unknown?),
    ಪರಮಹಂಸರಾಗಲಿ,ಶರೀಫರಾಗಲಿ ಅದ್ವೈತ ಸಿದ್ಧಾಂತದವರೇ ಆಗಿರಬಹುದು. ಆದರೆ, ಅವರು ದೇವಿಯನ್ನು ಸಾಕ್ಷಾತ್ ತಾಯಿಯಂದು ತಿಳಿದು ಆರಾಧಿಸುವ ಬಗೆಯು, ಈ ಒಂದು ವಿಷಯದಲ್ಲಿ ಅಂದರೆ, ಮೋಕ್ಷ ಸಿಗುವವರೆಗೆ ಅವರನ್ನು ದ್ವೈತ-ರೂಪಿಗಳನ್ನಾಗಿ ಮಾಡುತ್ತದೆಯಲ್ಲವೆ?

    ReplyDelete
  26. ಮೋಕ್ಷ ಸಿಗುವವರೆಗೆ ದ್ವೈತರೂಪಿ ಸಿಕ್ಕಮೇಲೆ ಅದ್ವೈತರೂಪಿ.ಏನೇ ಆಗಲಿ.ಸಂತ ಶರೀಫಸಾಹೇಬರ ತತ್ವಪದಗಳ ಗೂಢಅರ್ಥವನ್ನು ಎಳೆಎಳೆಯಾಗಿ ಜನಸಾಮಾನ್ಯರ ಮುಂದೆ ಬಿಡಿಸಿಟ್ಟ ತಮಗೆ ತುಂಬುಹೃದಯದ ಧನ್ಯವಾದಗಳು.

    ReplyDelete
  27. ಸಂತ ಶಿಶುನಾಳ ಶರೀಫರ
    ನುಡಿಗಳು ನಮ್ಮ ಜೀವನಕ್ಕೆ ನಾಂದಿಯಗಲಿ

    ReplyDelete
  28. ಪ್ರಿಯ Unknown,
    ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು. ಮಹಾಪುರುಷರ ವಚನಗಳು ನಮಗೆ ದಾರಿದೀಪಗಳಾಗಿವೆ.

    ReplyDelete
  29. ಸಂತ ಶಿಶುನಾಳ ಶರೀಫರ ನುಡಿಗಳು
    ನಮ್ಮ ಬದುಕಿಗೆ ನಾಂದಿಯಾಗಲಿ.

    ReplyDelete
  30. ಧನ್ಯವಾದಗಳು, Unknownರವರೆ.

    ReplyDelete
  31. ಧನ್ಯವಾದಗಳು. ಸರಳ ಸುಲಲಿತವಾಗಿ ರಚಿಸಿದ್ದಕ್ಕಾಗಿ. ಶರೀಫರ ಇತರ ಪದಗಳ ಬಗ್ಗೆಯೂ ದಯವಿಟ್ಟು ತಿಳಿಸಿ.

    ReplyDelete
  32. Unknownರೆ, ಈಗಾಗಲೇ ಇಲ್ಲಿ ಬಂದಂತಹ ಕೆಲವು ಪದಗಳನ್ನು ನೀವು ಓದಿರಬಹುದು. ಇನ್ನಷ್ಟನ್ನು ಕಾಲಾನುಕ್ರಮದಲ್ಲಿ ಬರೆಯುವೆ.

    ReplyDelete