Friday, October 3, 2008

ಅಳಬೇಡ ತಂಗಿ ಅಳಬೇಡ

ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.

ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.

ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: ಅಳಬೇಡ ತಂಗಿ ಅಳಬೇಡ.
ಆ ಹಾಡು ಹೀಗಿದೆ:

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||
..................................

ಹಾಡು ಪ್ರಾರಂಭವಾಗುವದು ಸಮಾಧಾನಪಡಿಸುವ ಮಾತುಗಳಿಂದ:
“ತಂಗೆವ್ವಾ, ನೀ ಎಷ್ಟs ಅತ್ತರೂ, ಅದರಿಂದ ಏನೂ ಪ್ರಯೋಜನ ಇಲ್ಲ.
ಇಲ್ಲಿ ಕೂಡಿದವರು ನಿನ್ನನ್ನು ಕಳಸುವವರೇ ಹೊರತು, ಉಳಿಸಿಕೊಳ್ಳೋರಲ್ಲಾ”.
ಈ ಮಾತುಗಳಲ್ಲಿಯ ವ್ಯಂಗ್ಯವನ್ನು ಗಮನಿಸಬೇಕು. ತೊಂದರೆ ಕೊಟ್ಟವನನ್ನು ಅಥವಾ ಅಪಕಾರ ಮಾಡಿದವನನ್ನು ಬೈಯಲು ಉಪಯೋಗಿಸುವ ಪದಪುಂಜವಿದು : “ ಏನಪಾ, ನಮ್ಮನ್ನೇನ ಕಳಸಬೇಕಂತ ಮಾಡಿಯೇನ?”

ಆದರೆ, ಇಲ್ಲಿ ಕಳಿಸುತ್ತಿರುವದು ಗಂಡನ ಮನೆಗೆ, ಅಂದರೆ ಸಂಸಾರವೆಂಬ ಮಾಯಾಲೋಕಕ್ಕೆ. ಇಂತಹ ಮಾಯಾಪ್ರಪಂಚಕ್ಕೆ ಈ ಹುಡುಗಿಯನ್ನು ನೂಕುತ್ತಿರುವವರ ಸಡಗರ ನೋಡಿರಿ:
“ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ”.

ಗಂಡನ ಮನೆಗೆ ಕಳಿಸುವಾಗ ಮಗಳ ಉಡಿಯಲ್ಲಿ ಅಕ್ಕಿ ತುಂಬಿ ಕಳಿಸುವ ಸಂಪ್ರದಾಯವಿದೆಯಲ್ಲವೆ?
ಹಾಗಾಗಿ, ಈ ಹುಡುಗಿಯ ಉಡಿಯಲ್ಲಿ ಖಡಕ್ಕಾಗಿ (=full) ಅಕ್ಕಿ ತುಂಬಿ, ಬಳಿಕ ದುಡುಕುತ್ತ(=ಜೋರಿನಿಂದ) ಅವಳನ್ನು ಮುಂದೆ ನೂಕಿದರಂತೆ!
ಇದೆಲ್ಲ ಹುಡುಗಿಗೂ ಬೇಕಾದದ್ದೆ! ಅವಳು ಮಿಡುಕಿ, ಮಿಡುಕಿ ಅಂದರೆ ಹಂಬಲಿಸಿ ಮದುವೆಯಾದವಳು.
ಈ ಮಾಯೆಯ ಸಂಸಾರವನ್ನು ತಾನೇ ಹುಡುಕಿ ಹೊಕ್ಕವಳು.
ಒಮ್ಮೆ ಹೊಕ್ಕ ಮೇಲೆ ಮುಗಿಯಿತು.
ಇನ್ನು ಅವಳಿಗೆ ಮರಳುವ ಮಾರ್ಗವಿಲ್ಲ. This is path of no return.
ಈಗಾಗಲೇ ಅವಳಿಗೆ ಮಿಂಡರು ಗಂಟು ಬಿದ್ದಿದ್ದಾರೆ.
ಮಿಂಡರು ಅಂದರೆ ಮನಸ್ಸನ್ನು ಹಾದಿಗೆಡಿಸುವ ಪ್ರಲೋಭನೆಗಳು.

ತನ್ನಲ್ಲಿ ಸಂಪತ್ತು ಕೂಡಬೇಕು, ತನ್ನ ಅಂತಸ್ತು ಇತರರಿಗಿಂತ ಹೆಚ್ಚಾಗಬೇಕು, ತಾನು ಸರೀಕರೆದುರಿಗೆ ಮೆರೆಯಬೇಕು, ಇಂತಹ ಸಾಮಾನ್ಯ ಅಪೇಕ್ಷೆಗಳು ಮನಸ್ಸನ್ನು ಸನ್ಮಾರ್ಗದಿಂದ ದೂರ ಸರಿಸುವದರಿಂದ ಇವೆಲ್ಲ ಮಿಂಡರಿದ್ದ ಹಾಗೆ.
ದೇವರ ಆಲೋಚನೆ ಅಂದರೆ ಪಾತಿವ್ರತ್ಯ ; ಇತರ ಆಲೋಚನೆಗಳು ಹಾದರ.
ಇಷ್ಟೇ ಅಲ್ಲದೆ, ಇವಕ್ಕೆಲ್ಲ ಪ್ರೋತ್ಸಾಹ ಕೊಡುವ ‘ಐವರು ರಂಡೆಯರು’ ಅಂದರೆ ನಮ್ಮ ಪಂಚ ಇಂದ್ರಿಯಗಳು : ಕಣ್ಣು, ಕಿವಿ, ಮೂಗು,ನಾಲಗೆ ಹಾಗು ಚರ್ಮ.
ಈ ಐದು ಇಂದ್ರಿಯಗಳೂ ಸಹ ಸುಖಾಪೇಕ್ಷೆ ಮಾಡುತ್ತವೆ, ಅಲ್ಲವೆ?

“ಇಷ್ಟೆಲ್ಲ ಬಂಧನಗಳು ಇದ್ದಾಗ, ಇಲ್ಲಿ ಬಂದಿರುವ ಬಂಧುಗಳ ಕಾಲಿಗೆ ಬಿದ್ದರೆ, ನಿನಗೆ ಸದ್ಗತಿ ಹೇಗೆ ಸಿಕ್ಕೀತು, ತಂಗೆವ್ವಾ? ಇನ್ನು ನಿನಗೆ ಮಾಯಾಸಂಸಾರ ತಪ್ಪದು. ಮೋಜು ಬಯಸಿ ಮದಿವ್ಯಾದಿ, ಈಗ ಮೋಜನ್ನು ಅನುಭವಿಸು”, ಎಂದು ಶರೀಫರು ಹೇಳುತ್ತಾರೆ.

ಶರೀಫರು ಆ ಹುಡುಗಿಗೆ ಈ ಮಾಯಾಸಂಸಾರದಲ್ಲಿದ್ದ ಉತ್ಸಾಹವನ್ನು , ಆಸಕ್ತಿಯನ್ನು ಗಮನಿಸಿ ಈ ರೀತಿ ಹೇಳುತ್ತಾರೆ:
“ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ”
ದಡಿ ಅಂದರೆ ಅಂಚು. ರಂಗೀಲಿ(=ರಂಗಿನಲ್ಲಿ) ಅಂದರೆ ಉತ್ಸಾಹದಿಂದ ರೇಶಿಮೆ ಸೀರೆ ಉಟ್ಟಿದ್ದಾಳೆ.
ಆದರೆ, ಈ ಹುಡುಗಿ ಹಂಗನೂಲಿನ ಪರವಿಯನ್ನು ಮರೆತು ಬಿಟ್ಟಿದ್ದಾಳೆ.
ಹಂಗನೂಲು ಅಂದರೆ, ಕೈಯಿಂದ ತಯಾರಿಸಿದ ಹತ್ತಿಯ ನೂಲು. ಅದರ ಪರವಿಯನ್ನು ಈ ಹುಡುಗಿ ಮರೆತಿದ್ದಾಳೆ. ಪರವಿ ಅಂದರೆ ಪರವಾಹ್ ಅನ್ನುವ ಉರ್ದು ಪದ ಅಂದರೆ ಕಾಳಜಿ, ಚಿಂತೆ, care, bother.
ಹೇಗೆ ಕೈಮಗ್ಗದ ಹತ್ತಿಯ ಬಟ್ಟೆ ನಿಸರ್ಗಸಹಜವಾಗಿದೆಯೊ ಹಾಗೆಯೇ ದೇವರ ನೆನಪು ನಮ್ಮ ಮನಸ್ಸಿಗೆ ಹತ್ತಿರವಾದದ್ದು. ಕೃತಕ ಹಾಗು ಆಡಂಬರದ ರೇಶಿಮೆ ಸೀರೆ ಎಂದರೆ ಸಂಸಾರದ ವೈಭವ. ಈ ವೈಭವಕ್ಕೆ ನೀನು ಮನಸೋತರೆ, ನೀನು ಮಂಗಳಮೂರುತಿ ದೇವರ ಸಾನ್ನಿಧ್ಯಕ್ಕೆ ಹೊರತಾಗುತ್ತೀ ಎಂದು ಶರೀಫರು ಎಚ್ಚರಿಸುತ್ತಾರೆ.
ಶರೀಫರು ‘ಮಂಗಳಮೂರುತಿ’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಏಕೆಂದರೆ, ultimately ನಮಗೆ ಮಂಗಳವಾಗುವದು ಪಾರಮಾರ್ಥಿಕ ಚಿಂತನೆಯಿಂದಲೇ ಹೊರತು, ಸಾಂಸಾರಿಕ ಆಡಂಬರದಿಂದಲ್ಲ.

ಲೌಕಿಕ ಪ್ರತಿಮೆಗಳಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವದು ಶರೀಫರ ವೈಶಿಷ್ಟ್ಯವಾಗಿದೆ. ಮಿಂಡೇರ ಬಳಗ, ರೇಶಿಮೆ ಸೀರಿ ಮೊದಲಾದ ಪ್ರತಿಮೆಗಳು ಅಚ್ಚ ದೇಸಿ ಪ್ರತಿಮೆಗಳು. ಇದರ ಜೊತೆಗೇ ಮಾಯದ ಮರದಂತಹ ಅಚ್ಚರಿಯ ಪ್ರತಿಮೆಗಳನ್ನೂ ಅವರು ಸಂಯೋಜಿಸುತ್ತಾರೆ. ಈ ರೀತಿಯಲ್ಲಿ ಶರೀಫರು ಲೌಕಿಕವಾಗಿ ಪ್ರಾರಂಭಿಸಿದ ಹಾಡನ್ನು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಸಹಜವಾಗಿ ತಿರುಗಿಸುತ್ತಾರೆ.

22 comments:

  1. ಸುನಾಥ ಕಾಕ,
    ಈ ಬಾರಿ ಪ್ರಶ್ನೆಗೆ ಅವಕಾಶವಿಲ್ಲದಂತೆ "ಅಳಬೇಡ ತಂಗಿ" ಪರಿಚಯಿಸಿದಕ್ಕೆ ಧನ್ಯವಾದಗಳು.
    -ಬಾಲ.

    ReplyDelete
  2. ಬಾಲಕೃಷ್ಣರೆ,
    'ಪರವಿ' ಪದದ ಅರ್ಥ ಹೊಳೆಯದೆ ಒಂದು ತಪ್ಪು ಮಾಡಿದ್ದೆ. ಅದೀಗ ಥಟ್ಟನೆ ಹೊಳೆದಾಗ, ಸರಿಪಡಿಸಿದ್ದೇನೆ. ದಯವಿಟ್ಟು ಮತ್ತೆ ಓದಲು ನಿಮ್ಮನ್ನು ಪೀಡಿಸುತ್ತಿದ್ದೇನೆ.
    -ಕಾಕಾ

    ReplyDelete
  3. ಕಾಕ,
    ಮತ್ತೊಮ್ಮೆ ಓದಿದೆ, ಅರ್ಥಪೂರ್ಣವಾಗಿದೆ. ಮತ್ತೊಮ್ಮೆ ಧನ್ಯವಾದಗಳು.
    -ಬಾಲಕೃಷ್ಣ

    ReplyDelete
  4. ಸುನಾಥವರೆ,
    ಶರೀಫರ ಈ ಕವನ ತುಂಬಾ ಅರ್ಥವತ್ತಾಗಿದೆ. ಅದನ್ನು ಅರ್ಥ ಮಾಡಿಸಿದ್ದಕ್ಕೆ ಧನ್ಯವಾದಗಳು

    ReplyDelete
  5. ಎಷ್ಟು ಛಂದ ಅರ್ಥ ಮಾಡ್ಕೊಂಡು ಪ್ರೆಸೆಂಟ್ ಮಾಡ್ತೀರಿ ನೀವು....?

    ReplyDelete
  6. ಜಯಶಂಕರ, ಶ್ರೀದೇವಿ,
    ಶರಿಫರು ರಸವತ್ತಾಗಿ ಅಡುಗೆ ಮಾಡಿಟ್ಟಿದ್ದಾರೆ. ಚಪ್ಪರಿಸುತ್ತ ಉಣ್ಣುವದಷ್ಟೆ ನಮಗಿರುವ ಕೆಲಸ.

    ReplyDelete
  7. ಅಂಕಲ್
    ಅದೂ ಸರೀನೇ. ಆದ್ರೆ ಅದನ್ನ ಬಡಿಸೂದ್ರಾಗೂ ಒಂದ್ ಕಲೆಗಾರಿಕಿ ಇರತ್ ತಾನೆ? ಹೊಗಳಿಕೆ ಅಂತಲ್ಲ. ವಾಸ್ತವ. ಛುಲೋ ಇದ್ದದ್ದನ್ನ ಛುಲೋ ಅಂತ ಹೇಳೂದ್ರಾಗ ಏನ್ ಅದ ಹೇಳ್ರಿ?

    ReplyDelete
  8. ಸುನಾಥ ಕಾಕಾ,

    ನಿಜವಾಗಿಯೂ ತುಂಬಾ ಸರಳವಾಗಿ, ಸ್ಫುಟವಾಗಿ ಹಾಗೂ ಮನಮುಟ್ಟುವಂತೆ ಅರ್ಥೈಸಿದ್ದೀರಿ ಈ ಹಾಡನ್ನು. ಈವರೆಗೆ ನಾನು ಈ ಹಾಡನ್ನು ಅರ್ಥೈಸಿಕೊಂಡದ್ದು ಅದರ ಮೂಲಾರ್ಥಕ್ಕೆ ಎಷ್ಟು ಭಿನ್ನವಾಗಿತ್ತೆಂದು ತಿಳಿದು ಆಶ್ಚರ್ಯವಾಯಿತು. ಕೋರಿಕೆಯನ್ನು ಮನ್ನಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಆದರೂ ಈ ಮನಸ್ಸೆಬುಂದು ಆಶೆಗಳ ಮೂಟೆ ತಾನೆ.. ಅವರ ಇನ್ನೊಂದು ಪ್ರತಿಮೆಗಳ ಹಾಡಾದ "ಕೋಡಗನ ಕೋಳಿ ನುಂಗಿತ್ತಾ.." ಎಂಬ ಹಾಡಿನ ವಿವರಣೆಯನ್ನೂ ಸಲ್ಲಾಪದಲ್ಲಿ ಕಾಣ ಬಯಸುತ್ತೇನೆ :)


    ವಂದನೆಗಳು.

    ReplyDelete
  9. kaka,
    wow..wow..

    neevyake nange kannada mestragi baralilla ?

    adroo parvagilla..eegalaadroo sikkiddeeralla :)

    thank you very much kaka..
    preetiyinda,
    archana

    ReplyDelete
  10. ತೇಜಸ್ವಿನಿ,
    ಹಾಗೇ ಆಗಲಿ.
    -ಕಾಕಾ

    ReplyDelete
  11. ಅರ್ಚನಾ,
    ನನ್ನನ್ನು ಈಗ ನಿಮ್ಮ teacher ಅಂತಲೇ ತಿಳ್ಕೋಳಮ್ಮ!
    -ಕಾಕಾ ಟೀಚರ್.

    ReplyDelete
  12. ಕಾಕಾ, ನಿಮ್ಮ ಉತ್ಸಾಹಕ್ಕೆ, ವಿವರಣೆಗಳಿಗೆ ಶರಣು ಶರಣು.

    ನೀವು ಹೀಗೇ ಒಳನೋಟಗಳುಳ್ಳ ಒಳಾರ್ಥಗಳುಳ್ಳ ಒಳ್ಳೊಳ್ಳೆ ಲೇಖನಗಳ ಔತಣ ಬಡಿಸಿದರೆ ಉಂಡು ಸವಿದು "ಬೆಳೆಯಲು" ನಾನಂತೂ ತಯಾರಿದ್ದೇನೆ. ಧನ್ಯವಾದಗಳು ಕಾಕಾ.

    ReplyDelete
  13. ಜ್ಯೋತಿ,
    "ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವಹೈ" ಅಂದರೆ ಜೊತೆಜೊತೆಯಾಗಿ ಬೆಳೆಯೋಣ, ಜೊತೆಜೊತೆಯಾಗಿ ತೇಜಸ್ವಿಗಳಾಗೋಣ!
    -ಕಾಕಾ

    ReplyDelete
  14. ಲೌಕಿಕ
    ಅಲೌಕಿಕ
    ಪಾರಮಾರ್ಥಿಕ..
    ಸುಮ್ಮನೆ ಸಹಜವಾಗಿ ದಿನನಿತ್ಯದ ದೄಶ್ಯಗಳ
    ಬಗ್ಗೆ ಹೇಳುತ್ತಲೇ ಲೌಕಿಕದಿಂದ ಅಲೌಕಿಕ ಜಗತ್ತಿಗೆ
    ಕರೆದೊಯ್ಯುವದು ಶರೀಫರ ಮತ್ತು ದಾಸ ಸಾಹಿತ್ಯದ
    ಹಿರಿಮೆ..
    "ಸಡಗರದಿ ನಾರಿಯರು
    ಹಡೆಯುವಾಗ ಸೂಲಗಿತ್ತಿ;
    ಅಡವಿಯೊಳಗೆ ಹಡೆವ ಮೄಗವ
    ಹಿಡಿದು ರಕ್ಷಿಸುವರಾರು..."
    ಎನ್ನುವ ಪುರಂದರದಾಸರು ನಮ್ಮ ಒಳಮನಸ್ಸಿಗೆ ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.
    ಇಂತಿಪ್ಪ ಶರೀಫ-ದಾಸ ಸಾಹಿತ್ಯಗಳು ಇವತ್ತಿನ ಸಿನೆಮಾ ಹಾಡುಗಳಲ್ಲಿ
    ಕಳೆದೇ ಹೋಗಿಬಿಟ್ಟರೆ ಎಂಥ ದೌರ್ಭಾಗ್ಯವಲ್ಲವೇ?
    -ರಾಘವೇಂದ್ರ ಜೋಶಿ.

    ReplyDelete
  15. RJ,
    ನೀವು ಹೇಳುವದು ಸರಿಯಾಗಿದೆ.
    ಕಾಲಾಯ ತಸ್ಮೈ ನಮಃ !

    ReplyDelete
  16. ಗುರೂಜಿ,

    ರೇಷ್ಮೆದಡಿ ಸೀರೆ ನಲ್ಲಿ ದಡಿ ಅಂದ್ರೆ 'ಅಂಚು' ಅನ್ನೋದು ತಪ್ಪು ಅನ್ನಿಸತ್ತೆ.

    ದಡಿ ಅಂದ್ರೆ 'ಬಡಿಗೆ ' ಅನ್ನೋ ಅರ್ಥ ಇದೆ.

    ಅದು ರೇಷ್ಮೆದ + ಅಡಿ + ಸೀರೆ ಅಂತ ಆಗಬೇಕು ಅಲ್ವಾ? ಆಗ ಅರ್ಥ ಸುಲಲಿತ ಅನ್ನಿಸತ್ತೆ. 'ಅಡಿ' ಅಂದ್ರೆ ಕೆಳಗಿನ ಭಾಗ, ಅಂಚು ಅನ್ನೋ ಅರ್ಥ ಬರತ್ತೆ. ಅಂದರೆ 'ರೇಷ್ಮೆ ಅಂಚನ್ನು ಹೊಂದಿರುವ ಸೀರೆ ' ಎಂದಾಗುತ್ತೆ.

    ಬಹಳ ದಿನಗಳಿಂದ ಹುಡುಕುತ್ತ ಇದ್ದೆ ಶರೀಫರ ಹಾಡುಗಳಿಗೆ ಅರ್ಥವನ್ನು. ನಿಮ್ಮ ಲೇಖನ ನೋಡಿ ತುಂಬಾನೆ ಖುಷಿ ಆಯಿತು. ನೀವು ಗ್ರೇಟ್, ಇಂಟರ್ನೆಟ್ ಗ್ರೇಟ್ ಅಂಡ್ ಗೂಗಲ್ ಕೂಡ! :-)

    ವಂದನೆಗಳು

    ಚಂದ್ರ ಮೋಹನ್

    ReplyDelete
  17. ನಿಮ್ಮ ಬ್ಲಾಗ್ ನಲ್ಲಿ ಇರುವ ಶರೀಫರ ಹಾಡುಗಳಿಗೂ ಮತ್ತು ನಾವು ಕೇಳುವ ಅಶ್ವತ್ ರ ದನಿಯ ಹಾಡುಗಳ ನಡುವೆ ಬಹಳಷ್ಟು ವ್ಯತ್ಯಾಸ ಇದೆ. ಯಾವುದು ಸರಿ? ಇ ರೀತಿ ಅಪಬ್ರಂಶ ಗಳೇಕೆ? ತಿಳಿದವರು ತಿಳಿಸುವಿರಾ?

    ReplyDelete
  18. 'ಸ್ನೇಹ ಮಾಡಬೇಕಿಂಥವಳ' ಹಾಡಿನ ಬಗ್ಗೆ ಬರೆಯಿರಿ ಪ್ಲೀಸ್. ಇದು ಷರೀಫ್ ಅವರ ರಚನೆ ಎಂದರೆ ಅಚ್ಚರಿ ಅನಿಸುತ್ತದೆ.

    ReplyDelete
  19. Thank you lote..........:)
    Mahesh Athani

    ReplyDelete
  20. ತುಂಬ ಚೆಂದದ ವಿಶ್ಲೇಷಣೆ. ಹಂಗನೂಲು ಪದದ ಅರ್ಥಕ್ಕಾಗಿ ಹುಡುಕಾಟದಲ್ಲಿದ್ದಾಗ ತೆರೆದುಕೊಂಡಿದ್ದು ನಿಮ್ಮ ಪುಟ. ಖುಷಿಯಾಯ್ತು ನಿಮ್ಮ ಈ ಭೇಟಿಯಿಂದ..ಅಭಿನಂದನೆ.

    ವಿಶೇಷವಾಗಿ ಶರೀಫರ ಪದಗಳಲ್ಲಿ ಆಸಕ್ತಿಯಿರುವ ನಾನೂ ಸಹ ಅವುಗಳ ವಿಶ್ಲೇಷಣೆಗೆ ತೊಡಗಿದ್ದೇನೆ. ಸಮಾನ ಆಸಕ್ತರು ಓದಬೇಕೆಂಬ ಇಚ್ಛೆ...ಒದಗಿ ಬರಲಿ ಅವಕಾಶ.

    ReplyDelete
  21. ತುಂಬಾ ಚೆನ್ನಾಗಿದೆ ಈ ನಿಮ್ಮ ವಿಶ್ಲೇಷಣೆ , ಅನೇಕ ಹೊಳಹುಗಳ ಸಾಧ್ಯತೆಗೆ ಅವಕಾಶ ಮಾಡಿಕೊಟ್ಟಿದ್ದೀರಿ.

    ReplyDelete
  22. ಧನ್ಯವಾದಗಳು, Anonymus!

    ReplyDelete