Tuesday, October 7, 2008

ಕೋಡಗನ್ನ ಕೋಳಿ ನುಂಗಿತ

‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.

ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.

ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:

“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||

ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .

ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||
. . .. . . . . .. . . . . . . .. . . . . . . . .. . .

ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.

‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.

ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.

(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )

ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.

ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.

ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.

‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.

ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.

ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ

ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !

ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ

ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).

ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.

ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ

ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.

ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .

ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
………………………………………………………..
( ಈ ಲೇಖನ ಬರೆಯುವಾಗ ಸಹಾಯ ಮಾಡಿದ ನನ್ನ ಶ್ರೀಮತಿ ವನಮಾಲಾಳಿಗೆ ಋಣಿಯಾಗಿದ್ದೇನೆ.)

27 comments:

  1. ಕಾಕ,
    ‘ಕೋಡಗನ್ನ ಕೋಳಿ ನುಂಗಿತ’ ಪದ್ಯವನ್ನು ರಸವತ್ತಾಗಿ ವಿವರಿಸಿದ್ದಕ್ಕೆ ನಿಮಗೂ ನಿಮ್ಮ ಶ್ರೀಮತಿಯವರಿಗೂ ಧನ್ಯವಾದಗಳು.
    ಒಂದೇ ಒಂದು ಪ್ರಶ್ನೆ,
    ನೀವು ಹೇಳಿರುವಂತೆ "ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ."
    ಹಾಗಂದ್ರೆ ಶರೀಫಾ ಅದ್ವೈತವಾದಿ ಎಂದಂತಾಗಲಿಲ್ಲವೇ?
    - ಬಾಲಕೃಷ್ಣ.

    ReplyDelete
    Replies
    1. ಹೌದು, ಶರೀಫ಼ ಅದ್ವೈತಿಯೇ ಅನುಮಾನಬೇಡ. ಆದರೆ, ಯಾವುದೇ ಒಂದರ/ ಒಬ್ಬರ ಪಕ್ಷಪಾತಿಯವರಾಗಿರಲಿಲ್ಲ. ಕೆಲವೆಡೆ ದ್ವೈತಪರ 'ಪದ'ಗಳಿವೆ.

      Delete
  2. ಶರೀಫರ ಪದಗಳು ಅತ್ಯಂತ ಅರ್ಥಪೂರ್ಣ. ಇದೊಂದೇ ಅಲ್ಲ, ಎಲ್ಲವೂ. ಹೆಸರಿಸಬೇಕಾದರೆ, "ಬಿದ್ದಿಯಬ್ಭೆ ಮುದುಕಿ" "ಸೋರುತಿರುವದು ಮನೆಯ ಮಾಳಿಗೆ" ಮುಂ. ಅವರ ಜೀವನವೇ ಅಧ್ಯಾತ್ಮ. ದ್ವೈತ-ಅದ್ವೈತ ವಿಚಾರದಲ್ಲಿ ಕುಮಾರವ್ಯಾಸ, ಪಾಶುಪತಾಸ್ತ್ರ ಪ್ರಸಂಗದಲ್ಲಿ ಒಂದು ಪದ್ಯದಲ್ಲಿ " ನೋಡಲವನದ್ವೈತ, ಸಾರಾಸರವನರಿಯೆ ತಾ ದ್ವೈತ" ಎಂದು ಅರ್ಜುನನ ಬಾಯಲ್ಲಿ ಹೇಳಿಸಿದ್ದಾನೆ. ಇದರರ್ಥ ನನಗೆ ಇನ್ನೂ ಆಗಿಲ್ಲ ! ಬಹಿಷಃ ಅವಧೂತರಿಗೆ ಎಲ್ಲವೂ ಅದ್ವೈತ, ಎಲ್ಲವೂ ದ್ವೈತ ಎಂದು ಕಾಣುತ್ತದೆ. ಅವರಿಗರ ಇದು ಸಮಸ್ಯೆಯೇ ಆಗಿರಲಿಲ್ಲ !!

    ReplyDelete
  3. ತಿದ್ದುಪಡಿಗಳು:

    ಬಹಿಷಃ = ಬಹುಷಃ
    ಅವರಿಗರ=ಅವರಿಗೆ

    ತಪ್ಪುಗಳಿಗೆ ಕ್ಷಮೆ ಇರಲಿ.

    ReplyDelete
  4. ನಮ್ಮಲ್ಲಿ ಒಮ್ಮೊಮ್ಮೆ ಕೆಲ (ಶ್ರೇಷ್ಠ?)ಕವಿಗಳು,ಸಾಹಿತಿಗಳು
    ಕಮ್ಮಟ/ವಿಚಾರ ಸಂಕೀರ್ಣಗಳಲ್ಲಿ ಹೇಳಿದ್ದೇ ಅರ್ಥವಾಗುವದಿಲ್ಲ.
    ಕೆಲವೊಂದು ಕಡೆ ಶರೀಫ,ದಾಸರೂ ಕೂಡ ಇದಕ್ಕೆ ಹೊರತಾಗಿಲ್ಲ.
    logic ಇಲ್ಲದ,non practical ಆದ ರೂಪಕಗಳನ್ನು ಕಟ್ಟುವದರಲ್ಲಿ ಶರೀಫರದು
    ಎತ್ತಿದ ಕೈ..
    ಶಿರಡಿ ಸಾಯಿಬಾಬ ಅವರ ’ಯಾವದು ಹೌದು ಅದು ಅಲ್ಲ;ಯಾವುದು ಅಲ್ಲ
    ಅದು ಹೌದು’ ಎಂಬ confused quote ಕೂಡ ಇಂಥದ್ದೇ ಸಾಲಿಗೆ ಸೇರುತ್ತದೆ.
    ಇವರೆಲ್ಲರೂ ತಂತಮ್ಮ ಕಾಲಘಟ್ಟಗಳಲ್ಲಿ ತಮ್ಮ ವಿನೂತನ ಚರಿಶ್ಮಾದಿಂದ
    ಜನಸಾಮಾನ್ಯರ ಮನಸೂರೆಗೊಂಡವರು.
    ಆದರೂ ಒಮ್ಮೊಮ್ಮೆ ಹೀಗ್ಯಾಕೆ ಅಸಂಗತವಾದ,ತರ್ಕಹೀನವಾದ ಹೇಳಿಕೆ/ಪದ
    ಕಟ್ಟುವ ಪ್ರಯತ್ನಕ್ಕಿಳಿದರು?
    -ರಾಘವೇಂದ್ರ ಜೋಶಿ.
    ಮರೆತ ಮಾತು: ನೀವು ನಿಮ್ಮ ಶ್ರೀಮತಿಯವರನ್ನ ನೆನೆಸಿಕೊಂಡ ಬಗೆ ನೋಡಿ
    ಖುಶಿಯಾಯಿತು..

    ReplyDelete
  5. ಶರೀಫರು ಶಾಕ್ತ ಪಂಥದವರು. ಈ ಹಾಡಿನಲ್ಲಿ ಅವರು
    ಅದ್ವೈತವನ್ನು ಪ್ರತಿಪಾದಿಸಿದಂತೆ, ಬೇರೆ ಕೆಲವು ಹಾಡುಗಳಲ್ಲಿ ದ್ವೈತವನ್ನು ಪ್ರತಿಪಾದಿಸಿದ್ದಾರೆ.ಹೀಗಾಗಿ ಅವರನ್ನು ಯಾವುದೇ categoryಯಲ್ಲಿ ಕೂಡಿಸುವದು ಸಾಧ್ಯವಾಗಲಿಕ್ಕಿಲ್ಲ.

    ReplyDelete
  6. ಕಟ್ಟಿಯವರೆ,
    ನೀವು ಹೇಳಿದ್ದು ಅರ್ಥಪೂರ್ಣವಾಗಿದೆ.
    ರಾಮಕೃಷ್ಣ ಪರಮಹಂಸರಂತೂ ಹೀಗೆ ಹೇಳಿದ್ದಾರೆ:
    " ಪರಮಾತ್ಮನೆಂದರೆ ಸಮುದ್ರವಿದ್ದಂತ; ಸಂಸಾರವೆಂದರೆ ಸಮುದ್ರದ ಮೇಲಿನ ತೆರೆಯಂತೆ."

    ಎರಡನೆಯದಾಗಿ, ಬೆರಳಚ್ಚಿನ ದೋಷಗಳು common ಆಗಿರುತ್ತವೆ. ಕ್ಷಮಾಯಾಚನೆ ಯಾಕೆ?

    ReplyDelete
  7. RJ,
    ವರಕವಿಗಳೇ ಆಗಲಿ, ಸುರಕವಿಗಳೇ ಆಗಲಿ ತಪ್ಪುವದು ಸಹಜವೆಂದು ಇದರಿಂದ ಸಿದ್ಧವಾಗುತ್ತದೆ, ಅಲ್ಲವೆ?
    (ಇನ್ನು ನರಕವಿಗಳ ಹಾಡೇನು?)

    ReplyDelete
  8. ಕಾಕಾ,

    ಮತ್ತೊಮ್ಮೆ ಕೋರಿಕೆ ಮನ್ನಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಒಂದೊಂದು ಸಾಲಿನ ಅರ್ಥವೂ ಪಾರಮಾರ್ಥಿಕತೆಯನ್ನು ಸಾರುವಂತಿದೆ. ಹಾಡು ಕೇಳುವಾಗ ತುಂಬಾ ಸರಳವೆಂದೆನಿಸಿದರೂ ಇದರೊಳಗಿನ ಗೂಡಾರ್ಥ ತುಂಬಾ ಕ್ಲಿಷ್ಟತೆಯಿಂದ ಕೂಡಿದೆ. ನಿಮ್ಮ ಸರಳ ಹಾಗೂ ಅರ್ಥವತ್ತಾದ ವಿವರಣೆಯಿಂದ ಪ್ರತಿ ಪದದ ಒಳಾರ್ಥವನ್ನೂ ತಿಳಿಯುವಂತಾಯಿತು.

    ವಂದನೆಗಳು.

    (ನಿಮ್ಮಲ್ಲಿ ದಿನಕರ ದೇಸಾಯಿಯವರ "ಎನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ" ಎಂಬ ಕವನವಿದೆಯೇ?)

    ReplyDelete
  9. ತೇಜಸ್ವಿನಿ,
    ದಿನಕರ ದೇಸಾಯಿಯವರು ನಮ್ಮ original ಕವಿಗಳಲ್ಲಿ ಒಬ್ಬರು. ಅವರ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಅಂತೂ ಕನ್ನಡದ ಮಕ್ಕಳ ಕವನಗಳಲ್ಲಿ ಒಂದು ಶ್ರೇಷ್ಠವಾದ ಕವನ.
    ಆದರೆ, ಅವರ ಯಾವುದೇ ಕವನವೂ ಸದ್ಯಕ್ಕೆ ನನ್ನಲ್ಲಿ ಇಲ್ಲ.

    ReplyDelete
  10. ಕಾಕಾ,

    ಇಷ್ಟೋಳ್ಳೇ ಬರಹವನ್ನು ನಮಗೆ ಒದಗಿಸಲು ಸಹಾಯಮಾಡಿದ ನಿಮ್ಮ ಶ್ರೀಮತಿಯವರಿಗೂ ನನ್ನ ಧನ್ಯವಾದವನ್ನು ತಿಳಿಸಿಬಿಡಿ. ಕ್ಷಮಿಸಿ ಮೊದಲ ಕಾಮೆಂಟ್‌ನಲ್ಲಿ ಬರಯಲು ಮರೆತಿದ್ದೆ.

    ReplyDelete
  11. oops! ka ka...
    didnt visit your profile for long..looks like i missed many things :)

    ReplyDelete
  12. haaDikonDE nimma postannu odide. ee kavanadalli ishtondu oLa artha ide antha gotte iralilla..

    tumba dhanyavaadagaLu uncle... :)

    ReplyDelete
  13. ತೇಜಸ್ವಿನಿ,
    You are most welcome.
    -ವನಮಾಲಾ ಕಾಕೂ

    ReplyDelete
  14. ಕನಸುಗಾತಿ, ಅಂತರ್ವಾಣಿ,
    ನಿಮಗೆ ವಂದನೆಗಳು.

    ReplyDelete
  15. ಚೆನ್ನಾಗಿದೆ ಬರಹ.

    ಅಂದಹಾಗೆ ನೀವು ಹೆಸರಿಸಿದ "ಬಯಲು ಆಲಯದೊಳಗೊ, ಆಲಯವು ಬಯಲೊಳಗೊ" ಎನ್ನುವ ಕನಕದಾಸರ ಪದ "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ" ಎಂದು ಆರಂಭವಾಗುತ್ತೆ.

    ReplyDelete
  16. ಅಂಕಲ್, ಮತ್ತ ಹೊಟ್ಟೆಕಿಚ್ಚೂ ನಿಮ್ ಮ್ಯಾಲ. ನಿಮ್ ಹಿಂದ ವನಮಾಲಾ ಕಾಕೂ ಇರೂದು ಗೊತ್ತ ಇರಲಿಲ್ಲ ನೋಡ್ರಿ. ಅವರನ್ನೊಂದೀಟ ಮುಂದ ಕರ್‍ಕೊಂಡ್ ಬರ್‍ರಿಲಾ...

    ReplyDelete
  17. kakaa teacher ,
    chikkandinda ee haadu keLta idde. idakke ishtondu artha iruvudu kakaa mestrinda tiLeetu :)

    cheers,
    archana

    ReplyDelete
  18. ಹಂಸಾನಂದಿಯವರೆ,
    ಕನಕದಾಸರ ಹಾಡಿನ ಮೊದಲ ಸಾಲುಗಳನ್ನು ನಾನು ಉಲ್ಲೇಖಿಸಬೇಕಾಗಿತ್ತು.
    ನೀವು ಸರಿಪಡಿಸಿದಿರಿ; ಧನ್ಯವಾದಗಳು.

    ReplyDelete
  19. ಶ್ರೀದೇವಿ,
    ಕಾಕೂನ್ನ ಮುಂದ ಎಳದರ, ನನ್ನ ಬಿಟಗೊಟ್ಟು ಹಂಗs ಮುಂದs ಹೋದಾಳು. ಹಿಂದs ಇರಲೇಳ್ರಿ!
    -ಕಾಕಾ

    ReplyDelete
  20. ಅರ್ಚು,
    ನಿನ್ನ ಖುಶಿಯೇ ನನ್ನ ಖುಶಿ!
    -ಕಾಕಾ ಟೀಚರ

    ReplyDelete
  21. ಸ್ವಾರ್ಥಿಯಾಗಬ್ಯಾಡ್ರಿ ಅಂಕಲ್‌.........

    ReplyDelete
  22. ಸುನಾಥರೇ,
    ನಾನು ಚಿಕ್ಕವನಿದ್ದಾಗಲೇ ಗುನುಗುತ್ತಿದ್ದ ಹಾಡಿದು...ಅರ್ಥ ತಿಳಿಯದೇ ಸುಮ್ಮನೇ ಹಾಡುತ್ತಿದ್ದೆ. ದೊಡ್ಡವನಾದರೂ ಇದರ ಅರ್ಥದ ಹರವು ಇಷ್ಟಿದೆಯೆಂದು ತಿಳಿದಿರಲಿಲ್ಲ...ನಿಮಗೆ ನಿಮ್ಮ ಶ್ರೀಮತಿಯವರಿಗೆ ವಂದನೆಗಳು

    ReplyDelete
  23. ಧನ್ಯವಾದಗಳು, ವೇಣು.

    ReplyDelete
  24. ಕೋಡಗನ ಕೋಳಿ ನುಂಗಿತ್ತ " ಪದ್ಯವನ್ನು ಇಷ್ಟೊಂದು ಸೊಗಸಾಗಿ ನಿಮಗೆ ತುಂಬಾ ಧನ್ಯ್ವವಾದಗಳು ನನ್ನ ಫೋಟೋಗ್ರಫಿಗೆ ನನ್ನ ಹೆಂಡತಿಯ ಕೈವಾಡವಿದ್ದಂತೆ ಇಲ್ಲಿ ನಿಮ್ಮ ಶ್ರೀಮತಿಯವರ ಕೈವಾಡವಿದೆ. ಅವರಿಗೂ ಧನ್ಯವಾದಗಳು.
    ಶಿವು.ಕೆ

    ReplyDelete
  25. ಇತ್ತೀಚಿಗೆ ಶರೀಫರ ಮೂವಿ ನೋಡಿದಾಗಿಂದ ಇದರ ಅರ್ಥ ಹುಡುಕ್ತಾ ಇದ್ದೆ, ಮುಕುಂದೂರು ಸ್ವಾಮಿಗಳ ಚರಿತ್ರೆ 'ಯೇಗ್ದಾಗೆಲ್ಲ ಐಯ್ತೆ' ಅಲ್ಲಿ ಅದರ ವಿವರಣೆ ಇತ್ತು, ಈಗ ಸಂಪೂರ್ಣ ವಿವರಣೆ ಓದಿದ್ದು ತುಂಬಾ ಖುಷಿ ಆಯಿತು, ಚೆನ್ನಾಗಿ ಅರ್ಥ ಆಯಿತು ಧನ್ಯವಾದಗಳು

    ReplyDelete