Monday, November 3, 2008

ಸಂಯುಕ್ತ ಕರ್ನಾಟಕ: ಅಪಶಬ್ದಕೋಶ

‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶ್ರೀಯುತರಿಗೆ ಅಭಿನಂದನೆಗಳು.
ಸಂಯುಕ್ತ ಕರ್ನಾಟಕ ಪತ್ರಿಕೆಗೆ ೭೫ ವರ್ಷಗಳ ಇತಿಹಾಸವಿದೆ.
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕಾಗಿ ಈ ಪತ್ರಿಕೆ ಸಾಕಷ್ಟು ದುಡಿದಿದೆ.
ಆದರೆ,ಇತ್ತೀಚಿನ ದಿನಗಳಲ್ಲಿ ಈ ಪತ್ರಿಕೆ ಕನ್ನಡ ಭಾಷೆಯನ್ನು ಕುಲಗೆಡಿಸುವದರಲ್ಲಿ ಅಪಾರ ಸಾಧನೆ ಮಾಡುತ್ತಿದೆ.

ಕಾಗುಣಿತದ ತಪ್ಪುಗಳ ಮೂಲಕ ‘ಕನ್ನಡ ಅಪಶಬ್ದ ಕೋಶ’ಕ್ಕೆ ಪ್ರತಿದಿನವೂ ಅಪಾರ ಕೊಡುಗೆಯನ್ನು ನೀಡುತ್ತಿರುವದಕ್ಕಾಗಿಯೇ ‘ಸಂಯುಕ್ತ ಕರ್ನಾಟಕ’ಕ್ಕೆ ಈ ಪ್ರಶಸ್ತಿ ಲಭಿಸಿರಬೇಕೆಂದು ನನ್ನ ಭಾವನೆ.
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಕಾಗುಣಿತದ ತಪ್ಪುಗಳನ್ನು ಸಂಶೋಧಿಸಲು ಹೊರಟವರಿಗೆ ‘ಸಂಯುಕ್ತ ಕರ್ನಾಟಕ’ ಅದ್ಭುತ ನಿಧಿಯಂತಾಗಿದೆ.

ಅಭಿನಂದನೆಗಳು, ಸಂಪಾದಕರೆ!
ಕನ್ನಡ ಸರಸ್ವತಿಯನ್ನು ಅಪಶಬ್ದಗಳ ಮೂಲಕ ದಿನವೂ ಚುಚ್ಚಿ ಕೊಲ್ಲುತ್ತಿರುವ ನಿಮ್ಮ ಪಾಂಡಿತ್ಯಕ್ಕೆ ಕನ್ನಡಿಗರು ಮೂಕವಿಸ್ಮಿತರಾಗಿದ್ದಾರೆ.
ಎಷ್ಟೇ ಪಾಂಡಿತ್ಯವಿದ್ದರೂ, ಅಪಶಬ್ದಗಳ ಬಗೆಗೆ ಕೆಲವೊಮ್ಮೆ ನಿಮಗೂ ಸಹ ಸಂಶಯ ಬರುವದುಂಟು.
ಅಂತಹ ಸಂದರ್ಭದಲ್ಲಿ ಅಪಶಬ್ದ ಹಾಗೂ ಸರಿಯಾದ ಶಬ್ದಗಳನ್ನು ಸಮಾನ ಪ್ರಮಾಣದಲ್ಲಿ ಬಳಸುವಂತಹ ಜಾಣತನವನ್ನು ನೀವು ತೋರಿಸುತ್ತಿದ್ದೀರಿ.
ಹೀಗೆ ಮಾಡುವದರಿಂದ, ಶೇಕಡಾ ೫೦ರಷ್ಟಾದರೂ ಅಪಶಬ್ದಗಳನ್ನು ಬಳಸಿದಂತಾಗುವದಿಲ್ಲವೆ?
ಉದಾಹರಣೆಗೆ ನವೆಂಬರ ೨ನೆಯ ದಿನಾಂಕದಂದು ಪ್ರಕಟಿಸಿದ ಸಂಯುಕ್ತ ಕರ್ನಾಟಕದ ೧೦ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ:
’ಶಿಷ್ಟಾಚಾರ ಪಾಲಿಸದ ಜಿಲ್ಲಾಧಿಕಾರಿ’ಎನ್ನುವ ಈ ವರದಿಯಲ್ಲಿ ‘ಶಿಷ್ಟಾಚಾರ’ವನ್ನು ೪ ಬಾರಿ ಹಾಗೂ ‘ಶಿಷ್ಠಾಚರ’ವನ್ನು ೪ ಬಾರಿ ಬಳಸಿದ್ದೀರಿ.
ಎಂತಹ ಜಾಣತನ!
ಸರಿಯಾದ ಪದವು ಗೊತ್ತಿರಲಿ, ಇಲ್ಲದಿರಲಿ, ಅದರ ಬಳಕೆಯನ್ನು ಶೇಕಡಾ ೫೦ಕ್ಕೆ ಮಾತ್ರ ಪರಿಮಿತಗೊಳಿಸಿದಂತಾಗಲಿಲ್ಲವೇ!
ಇನ್ನು ಇದೇ ಪತ್ರಿಕೆಯ ೧೧ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ.
‘ಗುರುವರ್’ ಪ್ರಶಸ್ತಿಗಾಗಿ ನಾಮಕರಣಗಳ ಪೂರ ಎಂದು ಪ್ರಕಟಿಸಿದ್ದೀರಿ.
ಸ್ವಾಮಿ ‘ವರ್’ ಎನ್ನುವ ಪದ ಕನ್ನಡದಲ್ಲಿ ಇಲ್ಲ.
‘ವರ’ ಎನ್ನುವ ಪದಕ್ಕೆ ಶ್ರೇಷ್ಠ ಎನ್ನುವ ಅರ್ಥವಿದೆ. ಇದು ‘ಗುರುವರ’ ಎಂದಾಗಬೇಕಿತ್ತು.
ಆದರೆ ಅಪಶಬ್ದಕೋಶವನ್ನು ಟಂಕಿಸಲು ಹೊರಟ ನೀವು ‘ಗುರುವರ್’ ಎನ್ನುವ ಪದವನ್ನು ಬಳಸಿದ್ದರಲ್ಲಿ ಅಚ್ಚರಿಯಿಲ್ಲ.

ಕಿಟ್ಟೆಲ್ ಕೋಶದಲ್ಲಿ ಬರೀ ತಪ್ಪುಗಳೇ ತುಂಬಿವೆ; ಆ ಶಬ್ದಕೋಶವನ್ನು ಸರಿಪಡಿಸುವ ಅಗತ್ಯವಿದೆ ಎಂದು ನೀವು ಭಾವಿಸಿದಂತಿದೆ.
ಅದಕ್ಕಾಗಿಯೇ, ಕಿಟ್ಟೆಲ್ ಕೋಶಕ್ಕೆ ಸಮಾಂತರವಾಗಿ ಒಂದು ಅಪಶಬ್ದಕೋಶವನ್ನು ನೀವು ನಿಮ್ಮ ಪತ್ರಿಕೆಯ ಮೂಲಕ ರೂಪಿಸುತ್ತಿರುವಿರಾ?
ನಿಮ್ಮ ಘನ ಪತ್ರಿಕೆಯಲ್ಲಿ ಪ್ರಸೂತವಾದ ಕೆಲವು ಅಪಶಬ್ದಗಳನ್ನು ಹೆಕ್ಕಿಕೊಂಡಿದ್ದೇನೆ.
ಇತರ ಕನ್ನಡಿಗರ ಕಣ್ಣಿಗೂ ಅವು ಬೀಳಲಿ ಎಂದು ಅವನ್ನು ಇಲ್ಲಿ ಕೊಡುತ್ತಿದ್ದೇನೆ.
(ಕನ್ನಡಿಗರೇ, ಎಚ್ಚರಿಕೆ; ಈ ಅಪಶಬ್ದಗಳನ್ನು ನೋಡಿ ಕಣ್ಣು ಕುರುಡಾದರೆ ನಾವು ಜವಾಬುದಾರರಲ್ಲ!)

ಕೆಳಗಿನ ಪಟ್ಟಿಯಲ್ಲಿ ಮೊದಲನೆಯದು ಅಪಶಬ್ದ, ಮುಂದಿನದು ಸರಿಯಾದ ಪದ.
ಉಚ್ಛ…………........ಉಚ್ಚ
ಸರ್ವೋಚ್ಛ………...... ಸರ್ವೋಚ್ಚ
ನಿಚ್ಛಳ…………....... ನಿಚ್ಚಳ
ಸಮುಚ್ಛಯ……....... ಸಮುಚ್ಚಯ
ದ್ರುವೀಕರಣ………...... ಧ್ರುವೀಕರಣ
ಅನುಗೃಹ………....... ಅನುಗ್ರಹ
ಭೋಗಸ್………....... ಬೋಗಸ್
ಥಳಕು ಹಾಕಿದ……...... ತಳಕು ಹಾಕಿದ
ಸೌಹಾರ್ದ್ರ………....... ಸೌಹಾರ್ದ
ಪ್ರಾಂಥ…………....... ಪ್ರಾಂತ
ಸೋಲ್ಲು………....... ಸೊಲ್ಲು
ಧೃವ……………........ ಧ್ರುವ
ಶೃತಿ……………........ ಶ್ರುತಿ
ಖೂಟ…………........ ಕೂಟ
ಛಾಳಿ……………........ ಚಾಳಿ
ನೈರುತ್ಯ…………....... ನೈಋತ್ಯ
ಜಾರ್ಕಂಡ………....... ಝಾರಖಂಡ
ಅಲ್ ಖೈದಾ……...... ಅಲ್ ಕೈದಾ
ಕೃತಗ್ನ…………........ ಕೃತಜ್ಞ
ಕೃತಗ್ನ…………........ ಕೃತಘ್ನ
ಡಾಬ……………....... ಧಾಬಾ
ಕಳ್ಳ ಬಟ್ಟಿ………....... ಕಳ್ಳ ಭಟ್ಟಿ
(ಬೆಳಗಾವಿಯ) ಕುಂದದಂತಹ….(ಬೆಳಗಾವಿಯ) ಕುಂದಾದಂತಹ
ಅಲ್ಲ……………....... ಅಲ್ಲಾ
ಶಿಲನ್ಯಾಸ………....... ಶಿಲಾನ್ಯಾಸ
ಢಾಕ……………........ ಡಾಕಾ

ಇಂತಹ ನೂರಾರು ಅಪಶಬ್ದಗಳನ್ನು ಅನಾಯಾಸವಾಗಿ ನೋಡಬೇಕೆಂದರೆ, ‘ಸಂಯುಕ್ತ ಕರ್ನಾಟಕ’ವನ್ನು ತಪ್ಪದೇ ಓದಿರಿ.
ಆದರೆ ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಈ ಪತ್ರಿಕೆಯನ್ನು ಜೋಪಾನವಾಗಿ ತೆಗೆದಿರಿಸಿರಿ.
ಎಚ್ಚರ! (statutory warning:)
ಈ ಅಪಶಬ್ದಗಳನ್ನೇ ಸರಿಯಾದ ಶಬ್ದಗಳೆಂದು ಮಕ್ಕಳು ಭಾವಿಸಬಹುದು.

27 comments:

  1. ಅಂಕಲ್,
    ಪ್ರಖ್ಯಾತ ಪತ್ರಿಕೆಗಳೇ ಈ ರೀತಿ ಪ್ರಕಟಿಸಿದರೆ ಶೋಚನೀಯ ವಿಷಯ :(

    ReplyDelete
  2. ಸರ್ವೋಚ್ಛ………...... ಸರ್ವೋಚ್ಛ

    ಎರಡೂ ಒಂದೇ ತರ ಕಾಣಿಸ್ತಿದೆಯಲ್ಲ, ಕಾಕಾ. ಸರ್ವೋಚ್ಚ ಅಲ್ವಾ?:-)

    ’ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಪದ್ಯದ ವಿವರಣೆ ಬರೀರಿ, ಪ್ಲೀಸ್.

    ReplyDelete
  3. ಪ್ರಿಯರೇ,
    ಬ್ಲಾಗ್ ನಂತಹ ಮಾಧ್ಯಮದಲ್ಲಿ ಒಮ್ಮೊಮ್ಮೆ ಈ ತೆರನಾದ ತಪ್ಪುಗಳು
    ನುಸುಳುವದು ಸಹಜವಾದರೂ ಕೂಡ ಅದಕ್ಕೆ "ಬರಹ"ದಂಥಹ ತಂತ್ರಾಂಶದಲ್ಲಿ
    ಕನ್ನಡ ಅಕ್ಷರಗಳನ್ನು ಟೈಪಿಸಲು ಬಾರದೇ ಇರುವ ಅಸಹಾಯಕತೆಯನ್ನು ಮುಂದಿಟ್ಟುಕೊಂಡು
    ಕ್ಷಮಿಸಿಬಿಡಬಹುದು..
    ಆದರೆ ಪತ್ರಿಕೆಯಂತಹ ಮಾಧ್ಯಮದಲ್ಲಿ ಪತ್ರಕರ್ತರಿಂದ ಇಂಥ ತಪ್ಪುಗಳನ್ನು ನಿರೀಕ್ಷಿಸಲಾಗದು..
    ಬಹುಶಃ proof ರೀಡರ್ ಗಳ ಅಪರಾಧವಿದು!
    ಮಿಕ್ಕಂತೆ,ಸರ್ವೋಚ್ಛ-ಸರ್ವೋಚ್ಚ doubt ನನಗೂ ಇದೆ.

    -ರಾಘವೇಂದ್ರ ಜೋಶಿ.

    ReplyDelete
  4. ಶ್ರೀ ಮೋಹರೆ ಹನುಮಂತರಾಯರ, ಶ್ರೀ ಪುರೋಹಿತರ ಸಮರ್ಥ ಸಂಪಾದಕತ್ವದಲ್ಲಿ , ನಿಸ್ವಾರ್ಥ ಸೇವೆಯಲ್ಲಿ,ಸಂಯುಕ್ತ ಕರ್ನಾಟಕವು ಉತ್ತರೋತ್ತರ ಅಭಿವೃದ್ಧಿ ಹೊಂದಿ ಉತ್ತರ ಕರ್ನಾಟಕದ ಮುಖವಾಣಿಯಾಗಿದ್ದು ಈಗ ಇತಿಹಾಸ. ನಂತರ, ದಿವಾಕರ ರಂಗರಾಯರು ಪತ್ರಿಕೆಯನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು, ತಮ್ಮ ಪುತ್ರ ಅನಂತನಿಗೆ "ಅನಂತ ದೀಪ" ಬರೆಯಿಸಲು ಆರಂಭಿಸಿ, ಪತ್ರಿಕೆಯ ಅವಸಾನಕ್ಕೆ ಅಡಿಗಲ್ಲು ಹಾಕಿದರು. ನಂತರದವರೂ, ತಮಗೆ ಸಾಧ್ಯವಾದ ರೀತಿಯಲ್ಲಿ ಪತ್ರಿಕೆ ಹಾಳಾಗಲು, ಪ್ರಯತ್ನಿಸಿದರು. ಆದರೂ, ಸಂಯುಕ್ತ ಕರ್ನಾಟಕ ಇನ್ನೂ ಜೀವಂತವಾಗಿರುವದು ಅದರ ಪ್ರಾಮಾಣಿಕ ಕೆಲಸಗಾರರಿಂದ ಮತ್ತು ಕೆಲವೇ ಪ್ರತಿಭಾವಂತ ಪತ್ರಕರ್ತರಿಂದ.

    ReplyDelete
  5. ಜಯಶಂಕರ,
    ಇದೆಲ್ಲ ಇತ್ತೀಚಿನ ಬೆಳವಣಿಗೆ,especially in ಸಂಯುಕ್ತ ಕರ್ನಾಟಕ.
    ನಾನು ಚಿಕ್ಕವನಿದ್ದಾಗ, ನನ್ನ ತಾಯಿ 'ಸಂಯುಕ್ತ ಕರ್ನಾಟಕ'ದಲ್ಲಿಯ ಅಕ್ಷರಗಳನ್ನು ತೋರಿಸುತ್ತ, ಅಕ್ಷರಮಾಲೆ ಕಲಿಸಿದಳು. ಈಗ ನಾನು ಚಿಕ್ಕ ಮಕ್ಕಳಿಂದ, 'ಸಂಯುಕ್ತ ಕರ್ನಾಟಕ'ವನ್ನು ಮುಚ್ಚಿ ಇಡುತ್ತೇನೆ for fear of wrong learning.

    ReplyDelete
  6. ಭಾಗವತರೆ,
    ನಿಮ್ಮ ಕಣ್ಣುಗಳನ್ನು test ಮಾಡಲು, ಒಂದು ಸಣ್ಣ ತಪ್ಪನ್ನು ಸೇರಿಸಿದ್ದೆ.ನೀವು testನಲ್ಲಿ ಪ್ರಥಮ rankನಲ್ಲಿ ಉತ್ತೀರ್ಣರಾಗಿದ್ದೀರಿ.ಅಭಿನಂದನೆಗಳು.
    ಆ ತಪ್ಪನ್ನು ಈಗ ಸರಿಪಡಿಸಿದ್ದೇನೆ. ನನ್ನ ಕಣ್ಣು ತಪ್ಪಿ ದೋಷಗಳು ಸೇರಿದ್ದರೆ,ದಯವಿಟ್ಟು ತಿಳಿಸಿ. ಧನ್ಯವಾದಗಳು.

    ReplyDelete
  7. rj,
    ಭಾಗವತರ ಕಣ್ಣು ಪರೀಕ್ಷೆ ಮಾಡಿದ ಬಳಿಕ, ಈಗ ಸರ್ವೋಚ್ಚ ಎಂದು ಸರಿಪಡಿಸಲಾಗಿದೆ.

    ReplyDelete
  8. ಕಟ್ಟಿಯವರೆ,
    ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಉಜ್ವಲ ಇತಿಹಾಸವಿದೆ. ಆದರೆ, ಅದರ ವರ್ತಮಾನ ಸ್ಥಿತಿ ಏನು? ಅಡಿಗರ ಕವನವೊಂದು ನೆನಪಾಗುತ್ತಿದೆ:
    "ವರ್ತಮಾನ ಪತ್ರಿಕೆಯ ತುಂಬ ಭೂತದ ಸುದ್ದಿ".

    ಹಳೆಯ ಮೋಹದಿಂದಾಗಿಯೇ ಈ ಪತ್ರಿಕೆಯನ್ನು ನಾನು ಇನ್ನೂ ಓದುತ್ತಿದ್ದೇನೆ. ನಿಜ ಹೇಳಬೇಕೆಂದರೆ, ಈಗ ಈ ಪತ್ರಿಕೆ ರದ್ದಿಗೆ ಹಾಕಲು ಮಾತ್ರ ಯೋಗ್ಯವಾಗಿದೆ.

    (ಟಿಪ್ಪಣಿ:
    ಸಂಯುಕ್ತ ಕರ್ನಾಟಕದ ಶನಿವಾರದ ಪುರವಣಿ "ಕಿಂದರ ಜೋಗಿ" ಮಾತ್ರ,ಅತ್ಯುತ್ಕೃಷ್ಟವಾದ ಪುರವಣಿ.)

    ReplyDelete
  9. ಪ್ರಸಿದ್ದವಾದ ಪತ್ರಿಕೆಗಳು ಬಹಳ ಎಚ್ಚರದಿಂದ ಮುದ್ರಿಸಬೇಕು. ಇತ್ತೀಚೆಗೆ ವಿಜಯಕರ್ನಾಟಕ ಕೂಡ ಅದೆ ದಾರಿ ಹಿಡಿಯುತ್ತಿದೆ. ನಿಮ್ಮ ಲೆಖನ ನಮಗೂ ಉಪಯುಕ್ತವಾಗಿದೆ. ಕೆಲವೊಂದು ಶಬ್ಧ ನನಗೂ ಸರಿಯಾಗಿ ಗೊತ್ತಿರಲಿಲ್ಲವಾಗಿತ್ತು. ಧನ್ಯವಾದಗಳು...

    ReplyDelete
  10. ಪ್ರಕಾಶ ಹೆಗಡೆಯವರೆ,
    ಇತ್ತೀಚೆಗೆ ಪತ್ರಿಕೆಗಳ ಭಾಷಾಶುದ್ಧಿ ತೀವ್ರವಾಗಿ ಇಳಿಮುಖವಾಗುತ್ತಿದೆಯಲ್ಲವ?
    ಇದು ಬಹಳ ಕಳವಳಕಾರಿಯಾದ ವಿಷಯ.

    ReplyDelete
  11. ತಂಬೂರಿ ಪದ್ಯ ಯಾವಗ ಬರತ್ತೆ?

    ReplyDelete
  12. ಕಾಕಾ,

    ಜವಾಬ್ದಾರಿಯುತ ಪತ್ರಿಕೆಯೊಂದು ಇಷ್ಟೊಂದು ರಾಜಾರೋಷವಾಗಿ ಕನ್ನಡ ಭಾಷೆಯನ್ನು ಕೊಲ್ಲುತ್ತಿರುವುದನ್ನು ಕೇಳಿ ತುಂಬಾ ಬೇಸರವಾಯಿತು. ನನ್ನ ಪುಣ್ಯ ನಾವು ಈ ಪತ್ರಿಕೆಯನ್ನು ಓದುತ್ತಿಲ್ಲ!

    ReplyDelete
  13. ಸುನಾಥ್ ಸಾರ್, ನೀವು ಮಾಹಾ ಸಿ.ಐ.ಡಿ. ಆಗಿದ್ದೀರಿ. ನಮ್ಮ ಕಣ್ಣಿಗೆ ಬೀಳದಿದ್ದದ್ದು ನಿಮಗೆ ಬಿದ್ದಿದೆ ಎಂದರೆ ನೀವು ಬಲು ಸೂಕ್ಷ್ಮ. ನೀವು ನನ್ನ ಬ್ಲಾಗಿಗೆ ರೆಗ್ಯುಲರ್, ಅದರಲ್ಲಿ ಇದೇ ರೀತಿ ತಪ್ಪುಗಳನ್ನು ಹುಡುಕಿದರೆ ನಾನಂತೂ ಡಮಾರ್!.
    ಏನೇ ಆಗಲಿ ನಿಮ್ಮಂಹವರು ಇರಬೇಕು. ನಮ್ಮ ಭಾಷೆಗೆ. ಇಲ್ಲದಿದ್ದಲ್ಲಿ ನಾವು ಬೇಜವಬ್ದಾರಿಯಿಂದ ತಪ್ಪು ಮಾಡುತ್ತಿರುತ್ತಿರುತ್ತೇವೆ.
    ಆಹಾಂ! ನನ್ನ ಮತ್ತೊಂದು "ಕ್ಯಾಮೆರಾ ಹಿಂದೆ" ಬ್ಲಾಗಿಗೆ ಹೊಸ ಲೇಖನವನ್ನು ಹಾಕಿದ್ದೇನೆ. ಬಿಡುವು ಮಾಡಿಕೊಂಡು ಬನ್ನಿ.

    ReplyDelete
  14. ಮಾಣಿ,
    ತಂಬೂರಿಯನ್ನು ಹುಡುಕುತ್ತಿದ್ದೇನೆ.
    ಅದು ಸಿಕ್ಕುವವರೆಗೆ ಬೇರೊಂದು ತಂಬೂರಿಯನ್ನು ಕೊಡುತ್ತೇನೆ.
    -ಕಾಕಾ

    ReplyDelete
  15. ಕನ್ನಡ ಪೇಪರುಗಳಲ್ಲೇ ತಪ್ಪು ತಪ್ಪು ಕನ್ನಡ ಬರೀತಾರಾ? ಅಥವಾ ಕಾಕಾರವರು, ಭಾಗವತರಿಗೆ ಟೆಸ್ಟು ಕೊಟ್ಟಂತೆ, ಸಂ.ಕ.ದವರು ದಿನಾ ಟೆಸ್ಟು ಕೊಡುತ್ತಿರಬೇಕು :).

    ReplyDelete
  16. ಸುನಾಥ ಅವರೇ,

    ಎರಡು ಶಬ್ದಗಳು ಸಂದೇಹ ಹುಟ್ಟಿಸಿವೆ.

    ೧. ಜಾರ್ಕಂಡ………....... ಝಾರಖಂಡ ಅಂದಿದ್ದೀರಿ. ಅದು ಜಾರ್ಖಂಡ ಅನಿಸುತ್ತದೆ.

    ೨. ಕಳ್ಳ ಬಟ್ಟಿ………....... ಕಳ್ಳ ಭಟ್ಟಿ. ಕಳ್ಳ ಬಟ್ಟಿಯೇ ಸರಿಯಾದ ಬಳಕೆ ಎಂಬುದು ನನ್ನ ಅನಿಸಿಕೆ.

    ಈ ಸಂದೇಹವನ್ನು ಪರಿಹರಿಸುತ್ತೀರಾ?

    - ಪಲ್ಲವಿ ಎಸ್‌.

    ReplyDelete
  17. ತೇಜಸ್ವಿನಿ,
    ಭಾಷೆಯ ಕಾಗುಣಿತದಲ್ಲಿಯೇ ತಪ್ಪು ಮಾಡುವ ಪತ್ರಿಕೆಗಳಿಂದ ನೀನು ದೂರವುಳಿದದ್ದು ನಿನ್ನ ಅದೃಷ್ಟ.
    ಇಂತಹ ಪತ್ರಿಕೆಗಳು ಸಾಂಸರ್ಗಿಕ ರೋಗದ ರೋಗಾಣುಗಳಿದ್ದಂತೆ.
    ಎಷ್ಟು ಅಮಾಯಕರು ಈ ರೋಗಾಣುವಿಗೆ ಬಲಿಯಾಗಿದ್ದಾರೊ!

    ReplyDelete
  18. ಶಿವು,
    ನಿಮ್ಮಿಂದ ಈ ತರಹದ ತಪ್ಪುಗಳು ಆಗಲು ಸಾಧ್ಯವೇ ಇಲ್ಲ.

    ನಿಮ್ಮ blogನ ವೈವಿಧ್ಯತೆ ನನ್ನನ್ನು ಆಕರ್ಷಿಸಿದ ಕಾರಣದಿಂದಲೇ, ನಾನು ನಿಮ್ಮ regular ಓದುಗ.

    ReplyDelete
  19. ಗಿರಿಜಾ,
    ಸಂ.ಕ.ದವರು ಕೊಡುವ "ನಿತ್ಯದ ಕಣ್ಣು ಪರೀಕ್ಷೆ"ಯಿಂದಾಗಿ, ನನ್ನ ಕಣ್ಣುಗಳು ಹಾಳಾಗದಿದ್ದರೆ ಸಾಕು!

    ReplyDelete
  20. ಪಲ್ಲವಿ,
    'ಝಾರಖಂಡ' ಎನ್ನುವದು ಸರಿಯಾದ ಪದ. ಈ ಪದದ ಕಾಗುಣಿತಕ್ಕೆ ಆಧಾರವಾಗಿ ವಿಕಿಪೀಡಿಯಾವನ್ನು(ಹಿಂದಿ) ನೋಡಬಹುದು. ಕೊಂಡಿ ಹೀಗಿದೆ:
    http://hi.wikipedia.org/wiki/%E0%A4%9D%E0%A4%BE%E0%A4%B0%E0%A4%96%E0%A4%82%E0%A4%A1

    ಎರಡನೆಯದಾಗಿ ಕಳ್ಳಭಟ್ಟಿ ಎನ್ನುವ ಪದದಲ್ಲಿಯ ಭಟ್ಟಿ ಎನ್ನುವದು ಹಿಂದೀ ಪದ. ಇದರ ಅರ್ಥ distillery.
    ಕನ್ನಡದ ’ಕಳ್ಳ’ ಪದ ಸೇರಿದಾಗ ಇದು ಕಳ್ಳಭಟ್ಟಿ ಆಗಿದೆ.
    ದಕ್ಷಿಣ ಕರ್ನಾಟಕದಲ್ಲಿ ತಮಿಳು ಪ್ರಭಾವದಿಂದಾಗಿ, ಮಹಾಪ್ರಾಣಗಳು ಅಲ್ಪಪ್ರಾಣಗಳಾಗುತ್ತವೆ. ಹೀಗಾಗಿ ಭಟ್ಟಿ ಎನ್ನುವ ಪದ ಅಲ್ಲಿ ಬಟ್ಟಿ ಆಗಿದೆ. ಆದರೆ, ಹಿಂದಿಯಲ್ಲಿ ಬಟ್ಟಿ ಎನ್ನುವ ಪದವಿದ್ದು ಅದಕ್ಕೆ ಕೇಕ್ ಎನ್ನುವ ಅರ್ಥವಿದೆ. ಆದುದರಿಂದ ಕಳ್ಳಬಟ್ಟಿ ಎನ್ನುವ ಬಳಕೆ ಸಮಂಜಸವಾದದ್ದಲ್ಲ. ಆದರೂ ಸಹ ಶಿವರುದ್ರಪ್ಪನವರು ತಮ್ಮ ನಿಘಂಟುವಿನಲ್ಲಿ ಬಟ್ಟಿ ಎನ್ನುವ ಪದವನ್ನು ತೋರಿಸಿದ್ದಾರೆ. ಅದು ತಪ್ಪು.
    ಒಂದು ಭಾಷೆಯ ಪದವನ್ನು ನಾವು ತಪ್ಪಾಗಿ ಉಚ್ಚರಿಸಿ, ಅದೇ ಸರಿಯಾದ ಪದ ಎನ್ನುವದು ಸರಿಯಲ್ಲ.
    ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಧಾಬಾ ಎನ್ನುವ ಪದ. ಧಾಬಾ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಈ ಪದವನ್ನು ದಕ್ಷಿಣ ಕರ್ನಾಟಕದಲ್ಲಿ ’ಡಾಬ’
    ಎಂದು ಉಚ್ಚರಿಸುತ್ತಾರೆ. ಇದು ತಪ್ಪು.

    ReplyDelete
  21. ಕಾಕಾ,
    ಎಲ್ಲರೂ ನನ್ನ ಕಣ್ಣು test ಮಾಡುವವರೇ. ಇಲ್ಲಿ ನೋಡಿ ಇನ್ನೊಬ್ರು - https://www.blogger.com/comment.g?blogID=5213352721691405359&postID=3072625260549156884

    ಅಂದಹಾಗೆ ಕಾಕಾ, ನಿಘಂಟು ಬರ್ದಿದ್ದು ಶಿವರುದ್ರಪ್ಪನವರಲ್ಲ, ವೆಂಕಟಸುಬ್ಬಯ್ಯನವರು - http://baraha.com/kannada/prof_gv.htm

    ReplyDelete
  22. ಮಾಣಿ,
    "ಬಿನ್ನಹಕೆ ಬಾಯಿಲ್ಲವಯ್ಯಾ
    ಎನ್ನಲ್ಲೆ ಇರಲಾಗಿ ಕಣ್ಣ ದೋಷಗಳೆಲ್ಲ!"

    ಆದರೆ, ಸೀಮಾ ಹೆಗಡೆ may be right about your
    ಕಣ್ಣಿನ ಪರೆ!

    ಶಿವರುದ್ರಪ್ಪನವರಿಗೆ ನಾನು ಅನ್ಯಾಯವಾಗಿ (dis)credit ಕೊಟ್ಟಿದ್ದೆ. ಅದನ್ನು ವೆಂಕಟಸುಬ್ಬಯ್ಯನವರಿಗೆ ಹಸ್ತಾಂತರಿಸಲು ನೀನು ನೀಡಿದ ಸೂಚನೆಗಾಗಿ ಧನ್ಯವಾದಗಳು, ಮಾಣಿ!

    ReplyDelete
  23. ತ"ಳು"ಕು ಆಗ್ಬೇಕಲ್ವಾ?

    ಬರಹ ನಿಘಂಟಿನಲ್ಲಿ ತಳುಕು, ತಳಕು ಎರಡೂ ಪದಗಳಿವೆ... ಯಾವುದು ಸರಿ?

    ReplyDelete
  24. ಕಾಕಾ,


    ಸದ್ಯ ಇಲ್ಲಿ ಕನ್ನಡ ದಿನ ಪತ್ರಿಕೆಗಳು ಅಷ್ಟಾಗಿ ಸಿಕ್ಕದ ಕಾರಣ ನಾವು ಈ ಬೇಸರದಿಂದ ಪಾರಾಗಿದ್ದೇವೆ. ಹಾಗೆ ನೋಡಿದರೆ, ಕೇವಲ ಪತ್ರಿಕೆಗಳಷ್ಟೇ ಏನು, ಕನ್ನಡ ದೂರದರ್ಶನ ವಾಹಿನಿಗಳೂ ಈ ನಿಟ್ಟಿನಲ್ಲಿ ತಾವೇನೂ ಕಮ್ಮಿಯಿಲ್ಲ ಎನ್ನುತ್ತವೆ.ತಪ್ಪು ತಪ್ಪು ಉಚ್ಚಾರಣೆಗಳು,ಅಡಿಬರೆಹಗಳಿಂದಾಗಿ ಅವುಗಳನ್ನು ’ ಕನ್ನಡ ದುರ್ದರ್ಶನ ವಾಹಿನಿಗಳು ’ ಎನ್ನಬಹುದೇನೋ ! ನನ್ನ ಮಗಳು ಇನ್ನೂ ಚಿಕ್ಕವಳಿದ್ದಾಗ ಅವಳೆದುರು ಕನ್ನಡ ಚಾನಲ್ ಗಳನ್ನು ನೋಡಲೇ ನಾವು ಹೆದರುತ್ತಿದ್ದೆವು !! ಅದೇ ಶುದ್ಧ ಕನ್ನಡವೆಂದು ಅವಳು ತಿಳಿಯಬಾರದೆಂದು! ಈಗೀಗಂತೂ ಅಣಬೆಗಳಂತೆ ಹುಟ್ಟಿಕೊಂಡಿರುವ ಚಾನಲ್ ಗಳಿಂದ ಪರಿಸ್ಥಿತಿ ಇನ್ನೂ ಹದಗೆಟ್ಟಂತೆನಿಸುತ್ತದೆ !

    ReplyDelete
  25. ಹರೀಶ,
    ಕಿಟ್ಟೆಲ್ ರಚಿತ ನಿಘಂಟುವಿನಲ್ಲಿ ತಳಕು ಇದಕ್ಕೆ ಜೋಡಿಯಾಗಿ ಬೆಸೆದುಕೊಳ್ಳುವದು ಎನ್ನುವ ಅರ್ಥ ಕೊಡಲಾಗಿದೆ.
    ತಳುಕು ಪದಕ್ಕೆ stroke ಎನ್ನುವ ಅರ್ಥ ಕೊಡಲಾಗಿದೆ.

    ಜಿವಿಎಸ್ ಅವರ ’ಬರಹ ಶಬ್ದಕೋಶದಲ್ಲಿ' ತಳುಕು ಇದು ಜೋಡಿಯಾಗಿ ಬೆಸೆದುಕೊಳ್ಳು ಎನ್ನುವ ಅರ್ಥ ಕೊಟ್ಟಿದ್ದರೆ ಅದು ಸರಿ ಅಲ್ಲ ಅನ್ನಿಸುತ್ತದೆ.

    ReplyDelete
  26. ಚಿತ್ರಾ,
    ಕನ್ನಡ ದೂರದರ್ಶನ ಚಾನೆಲ್‌ಗಳು ನಿಜವಾಗಿಯೂ ದುರ್ದರ್ಶನ ಚಾನೆಲ್‌ಗಳೇ ಸರಿ.
    ಆಕಾಶವಾಣಿ ಹಾಗೂ ಈ ದುರ್ದರ್ಶನಗಳು ಕಿವಿಯಲ್ಲಿ ಸೂಜಿ ಚುಚ್ಚಿದಂತೆ ಕನ್ನಡ ನುಡಿಯುತ್ತಿವೆ.

    ಹೊರದಾರಿ ಯಾವುದಯ್ಯಾ ಈ ಚಕ್ರವ್ಯೂಹದಿಂದ?

    ReplyDelete
  27. ೧)ನೈರುತ್ಯ…………....... ನೈಋತ್ಯ
    ನೈರುತ್ಯ ಮತ್ತು ನೈಋತ್ಯ ಎರಡೂ ಸರಿ. ನೈರುತ್ಯ ಕನ್ನಡದಲ್ಲಿ ಪದದ ನಡುವೆ ಸ್ವರ ಬರಬರುವುದಿಲ್ಲ ಎಂಬ ನಿಯಮದ ಅನುಸಾರ
    ಸಾಇ = ಸಾಯಿ
    लखनऊ = ಲಖನೌ

    ಹೀಗೆ

    ೨)(ಬೆಳಗಾವಿಯ) ಕುಂದದಂತಹ….(ಬೆಳಗಾವಿಯ) ಕುಂದಾದಂತಹ

    ದೀರ್‍ಗಾಕ್ಶರದಿಂದ ಕೊನೆಯಾಗುವ ಕನ್ನಡಪದಗಳಲ್ಲಿ ಇದು ಮಾಮಾಲಿ

    ಶಾಸ್ತ್ರೀ = ಶಾಸ್ತ್ರಿ ( ’ನರಸಿಂಹ ಶಾಸ್ತ್ರಿಯ’ ಮನೆ ಹೊರತು ’ನರಸಿಂಹ ಶಾಸ್ತ್ರೀಯ ಮನೆ ಅಲ್ಲ )
    ಕೀರ್‍ತೀ = ಕೀರ್‍ತಿ
    ಮುಂತಾದವು

    ೩)ಅಲ್ಲ……………....... ಅಲ್ಲಾ
    ಇದು ನನಗೆ ತಿಳೀಲಿಲ್ಲ. ಇಲ್ಲಿ ಯಾವ ಅಲ್ಲ?

    ಕನ್ನಡದ ನಿಶೇದಾರ್‍ತಕ ಅಲ್ಲ ಆದರೆ ಅದು ’ಅಲ್ಲ’ ’ಅಲ್ಲಾ’ ಅಲ್ಲ

    ಇನ್ನು ಮಿಕ್ಕ ದೋಶಗಳು ಅದು ಹೇಗೆ ಅಚ್ಚಾದವು
    ಅದರಲ್ಲೂ ’ಖೂಟ…………........ ಕೂಟ’ ತಪ್ಪು.

    ಆದರೆ ಕೂಳ ಮತ್ತು ಖೂಳ ಎರಡೂ ಪದಗಳು ಸರಿ. ಕಂಡಿತ ಮತ್ತು ಖಂಡಿತದ ಹಾಗೆ.

    ನನ್ನಿ

    ReplyDelete