Tuesday, November 18, 2008

ತರವಲ್ಲ ತಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||೪||

ಕನ್ನಡ ಕವಿಗಳು ಸುಸಂಯೋಜಿತ, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.

ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:

“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”

ಆದುದರಿಂದ ಬುದ್ಧಿವಂತನಾದವನು, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.

ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.

ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.

“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”

ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.

ಈ ತಂಬೂರಿಯು ಅಸಮ(=unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

(ಶರೀಫರು ಅಸಮ ಸುಮೇಳ ಎನ್ನುವಾಗ, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=Disharmonius orchestra)

ಹುಟ್ಟುತ್ತಲೆ, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.

ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.

39 comments:

  1. ಸುನಾಥ್ ಸಾರ್,
    ಶರೀಫರ "ತರವಲ್ಲ ತೆಗಿ ನಿನ್ನ ತಂಬೂರಿ" ಪದ್ಯವನ್ನು ಅತ್ಯುತ್ತಮವಾಗಿ ವಿವರಿಸಿದ್ದೀರಿ. ಅದರ ಪ್ರತಿ ಪದಗಳ ಅರ್ಥ ಅದರ ಸಾರ್ಥಕತೆ, ಹೋಲಿಕೆ, ಮತ್ತು ವಿವರಣೆಗಳಿಂದ ಓದುಗರಿಗೆ ಒಂದು ಉತ್ತಮ ತಿಳುವಳಿಕೆ ಬರುವುದಂತೂ ಖಂಡಿತ. ಹೀಗೆ ಬರೆಯುತ್ತಿರಿ....
    ಆಹಾಂ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ. ಬನ್ನಿ ನೋಡಿ !

    ReplyDelete
  2. ಭಾಗವತರ ತಪಸ್ಸು ಫಲಿಸಿತು!

    ReplyDelete
  3. ಶರೀಫರ ಈ ಹಾಡು ಸುಮ್ಮನೇ ಹಾಡಿಕೊಳ್ಳುತ್ತಿದ್ದೆ. ಇಷ್ಟೆಲ್ಲಾ ಅರ್ಥವಿರುವುದು ಗೊತ್ತೇ ಇರಲಿಲ್ಲ! ಪದ ಪದವನ್ನೂ ಬಿಡಿಸಿ ವಿವರಿಸಿದಕ್ಕೆ ಧನ್ಯವಾದಗಳು ಕಾಕಾ.

    ಮುಂದೆ " ಎಲ್ಲರಂಥವನಲ್ಲ ನನಗಂಡಾ....." ಪದ್ಯ ಬೇಕು ...plzzzzzzz...

    ReplyDelete
  4. ಬರೆದರೆ ಶರೀಫರೇ ಬರೆಯಬೇಕು ಇಂತಹ ಹಾಡು.. ವಿಮರ್ಶಿಸಿದರೆ ಸುನಾಥರೇ.. ಮತ್ತೆ, ಹಾಡಿದರೆ ಅಶ್ವತ್ಥ್:

    ರೇರೇರೆರೇರೆರಾ... ರೇರೇರೆರಾ..

    ReplyDelete
  5. ಅರಮನೆ ಮೈದಾನದಲ್ಲಿ ನಡೆದ ಮೊದಲ ’ಕನ್ನಡವೇ ಸತ್ಯ’ ಕಾರ್ಯಕ್ರಮದಲ್ಲಿ ಅಶ್ವತ್ಥ್ ಈ ಹಾಡು ಹಾಡಿದಾಗ ಅಲ್ಲಿದ್ದ ಲಕ್ಷಗಟ್ಟಲೆ ಜನ ಉನ್ಮಾದ ಬಂದು ಕುಣಿದಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..

    ReplyDelete
  6. ಶಿವು,
    ಭಾಳ ಛಂದಾಗಿ ಟೊಪಗಿ ಹಾಕ್ತಿದ್ದೀರಿ.
    ನಾನು ತಪ್ಪಿಸಿಕೊಳ್ಳೋದಿಲ್ಲ.

    ReplyDelete
  7. ಹರೀಶ,
    ದೇವರು ಭಾಗವತರಿಗೆ ಒಳ್ಳೇದು ಮಾಡಲಿ.

    ReplyDelete
  8. ಗಿರಿಜಾ,
    ತಥಾಸ್ತು.
    -ಕಾಕಾ

    ReplyDelete
  9. ಸುಶ್ರುತ,
    ಸೃಜನಶೀಲ ಕವಿ, ಸಂತ ಇವರೇ ದೊಡ್ಡವರು. ವಿಮರ್ಶಕನ ಕಣ್ಣು ಎಷ್ಟು ದೊಡ್ಡದಾಗಲು ಸಾಧ್ಯ?

    ReplyDelete
  10. ಶರೀಫರ ಈ ತಂಬೂರಿ ಹಾಡು ಕೇಳಿ ಪುರಂದರದಾಸರ
    "ತಂಬೂರಿ ಶೄತಿ ಮಾಡಿ ತಂದಾರೋ..
    ಬಿಂಬವ ಕಾಣಲು ನಿಂದಾರೋ.." ಭಜನೆ ನೆನಪಾಯಿತು.
    ಬಹುಶಃ ಇದೂ ಅದೇ ರೀತಿಯ ಅರ್ಥ ಹೊರಡಿಸುತ್ತದೋ ಏನೋ!
    ಓಟ್ಟಿನಲ್ಲಿ ಮಧುರವಾದ ರಾಗದಲ್ಲಿರುವ ಹಿತವಾದ ಹಾಡುಗಳಿವು..
    -ರಾಘವೇಂದ್ರ ಜೋಶಿ.

    ReplyDelete
  11. ಷರಿಫರ ಹಾಡುಗಳ ಭಾವಾರ್ಥ ಗೊತ್ತಾಗುತ್ತಿರಲಿಲ್ಲ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ.. ಧನ್ಯವಾದಗಳು..

    ReplyDelete
  12. ವ್ಹಾವ್. ಎಷ್ಟು ಚೆನ್ನಾಗಿ ವಿವರಣೆ ನೀಡಿದ್ದೀರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.ನೀವು ವರ ನೀಡಿರುವ ಹಾಡಿಗೆ ನಾನು ಸಹ ಎದುರು ನೋಡುತ್ತಿರುವೆ. ಎಲ್ಲಾ ಬರಹಗಳನ್ನು ಓದಿಲ್ಲ, ಒಂದೇ ಸಲ ಮುಗಿಸುವ ಆಸೆ. ಮತ್ತೆ ಬರುತ್ತಿರುವೆ.

    ReplyDelete
  13. ಅಂಕಲ್,
    ಬೇಂದ್ರೆಯವರೆ ಕವನವಾಗಲಿ, ಶರೀಫರದ್ದೇ ಆಗಲಿ ತುಂಬಾ ಚೆನ್ನಾಗಿ ವಿವರಿಸುತ್ತಾಯಿದ್ದೀರ. ನಮಗೆ ಅನೇಕ ವಿಷಯಗಳನ್ನು ತಿಳಿಸುತ್ತಾಯಿದ್ದೀರ.

    ReplyDelete
  14. Hi friend,

    i too doing blogging in a blogspot.com in kannada, is it any option is there where i can write directly in kannada.. coz whenever i post a post typed in nudi, it will not work in some systems..
    is it any option is there

    http://santhvana.blogspot.com

    ReplyDelete
  15. wow..wow..kaaka teacher!!
    berenoo heLalu tochuttilla..

    preetiyinda,
    archu

    ReplyDelete
  16. rj,
    ದಾಸರು, ಸಂತರು ಹೇಳುವದೆಲ್ಲ ಒಂದೇ ಅಂತಾಯಿತಲ್ಲವೆ!

    ReplyDelete
  17. ಪ್ರಕಾಶ,ಭಾರ್ಗವಿ,ಜಯಶಂಕರ, ಪ್ರೀತಿಯ ಅರ್ಚು,
    The pleasure is mine.

    ReplyDelete
  18. ರಾಜ್,
    BRH Unicodeದಲ್ಲಿ ಟೈಪ್ ಮಾಡಿರಿ. ಅದರಲ್ಲಿ ಕನ್ನಡ ಹಾಗೂ ಇಂಗ್ಲಿಶ options ಇವೆ.

    ReplyDelete
  19. ನೀವು ಯಾಕೆ ಇಂಜಿನೀಯರ ಆಗಿ, ಕನ್ನಡ ಸಾಹಿತ್ಯಕ್ಕೆ 35 ವರ್ಷ ಅನ್ಯಾಯ ಮಾಡಿದಿರಿ ? ನಿಮ್ಮ ಇಂಜಿನೀಯರಿಂಗ ಸರಕಾರಕ್ಕೆ, ಲಾಭ ತಂದಿತೇನೋ ನಿಜ, ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಅಪಾರ ಹಾನಿ ಮಾಡಿದ್ದಂತೂ ನಿಜ. ನೀವು ಎಳೆ ವಯಸ್ಸಿನಲ್ಲೇಬರೆಯುವದನ್ನುಆರಂಭಿಸಿದ್ದರೆ.....ಹೋಗಲಿ,ರೆ ರಾಜ್ಯದಿಂದ, ಏನೂ ಫಲವಿಲ್ಲ. ನಿಮ್ಮ ಸಾಧನೆ ಅಪ್ರತಿಮ. ಶರೀಫರನ್ನು ಬಹಳ ಚೆನ್ನಾಗಿ ಅರ್ಥೈಸದ್ದೀರಿ. ಶರೀಫರಿಗೆ ಭೂತ,ವರ್ತಮಾನ,ಭವಿಷ್ಯವನ್ನು ಅರಿಯುವ ಸಿದ್ಧಿ ಪ್ರಾಪ್ತವಾಗಿತ್ತು. ಆದರೆ, ಅದನ್ನು ಅವರು ಬಳಸಿರುವದು ಒಂದೆರಡು ಸಂದರ್ಭಗಳಲ್ಲಿ ಮಾತ್ರ. ಅದೇ ಅವರ ಹಿರಿಮೆ ಕೂಡ. ಇನ್ನೊಂದು ವಿಷಯ, ಶರೀಫರು ಶಾಕ್ತ ಪಂಥದವರೆನ್ನುವದಕ್ಕೆ ಸಾಕಷ್ಟು ಆಧಾರಗಳಿಲ್ಲವಲ್ಲ !

    ReplyDelete
  20. namaskAra

    nimma blog tumbaa mAhitidAyaka vaagide.

    nAnu satyakAmara tantrayOni pustakavannu swalpa maTTige odiddIni. neevu satyakAmara bagge tiLisabahudA?

    ReplyDelete
  21. ಕಟ್ಟಿಯವರೆ,
    ಶರೀಫರ ಗುರುಗಳಾದ ಗೋವಿಂದ ಭಟ್ಟರು ಅವೈದಿಕ (ತಾಂತ್ರಿಕ)ಮಾರ್ಗವನ್ನು ಅನುಸರಿಸುತ್ತಿದ್ದರಿಂದ ಅವರು ವೈದಿಕ ಸಮಾಜದಲ್ಲಿ accepted ಇರಲಿಲ್ಲ.

    ಶರೀಫರು ಮದ್ಯಕ್ಕೆ ’ಶಂಕರಿ’ ಎಂದು ಕರೆಯುತ್ತಿದ್ದರು ಎನ್ನುವ ಉದಾಹರಣೆಗಳು ಅವರು ತಾಂತ್ರಿಕ (ಶಾಕ್ತ) ಮಾರ್ಗಾನುಯಾಯಿಗಳು ಎನ್ನುವದನ್ನು ತೋರಿಸುತ್ತದೆ.

    ReplyDelete
  22. ಕಾಲಹರಣಸುರತ್ರಾಣರೆ,
    ಸತ್ಯಕಾಮರ ಬಗೆಗೆ ನನಗಿರುವ ಮಾಹಿತಿ ಅತ್ಯಲ್ಪ.
    ಹೆಚ್ಚಿನ ಮಾಹಿತಿ ಲಭ್ಯವಾದರೆ, ಖಂಡಿತವಾಗಿಯೂ ಬರೆಯುವೆ.

    ReplyDelete
  23. hmmmm.. ee haadina oLa artha nange gottaage irlilla.. innu aneka geetegaLu ive enandre enu artha aagilde irO anthaddu... ellaa list kotbidtini.. ondondaage vivarsbidi pa... super... :-)

    ReplyDelete
  24. ಅರುಣ,
    ನಿಮ್ಮ ಯಾದಿಗಾಗಿ ಕಾಯುವೆ.

    ReplyDelete
  25. ಶರೀಫರ ಗುರು ಗೋವಿಂದಭಟ್ಟರು ಮದ್ಯಪಾನಿಗಳಾಗಿದ್ದರು ಎಂಬ ಕಥೆ ಇದೆ. ಶಾಕ್ತರು ಅಪೇಯ ಪಾನ, ಅಭಕ್ಷ ಭೋಜನ, ಸ್ಮಶಾನ ವಾಸ, ಯೋನಿ ಪೂಜೆ ಮುಂತಾದ ಮಾರ್ಗಗಳಿಂದ ಸಿದ್ಧಿಗಳನ್ನು ಪಡೆಯುತ್ತಾರೆಂದು ಕೇಳಿ, ಓದಿ ಬಲ್ಲೆ. ಶರೀಫರು ಸಾಮಾನ್ಯರಂತೆ ಸಂಸಾರಿಗಳೂ ಆಗಿದ್ದರು ಎಂದು ಅವರ ಜೀವನ ಚರಿತ್ರೆ ಹೇಳುತ್ತದೆ. ಶರೀಫರುತಮ್ಮ ಗುರು ಗೋವಿಂದ ಭಟ್ಟರಿಗಾಗಿ ಮದ್ಯ ಸಂಪಾದಿಸಿರಬಹುದು. ಅವರು ಮದ್ಯಪಾನಿಗಳೂ ಆಗಿರಲಿಲ್ಲ ! ಭೀಮಸೇನ ಜೋಷಿಯವರು ತಮ್ಮ ಮುಸ್ಲಿಮ್ ಗುರುಗಳಿಗಾಗಿ, ಮೂಗಿಗೆ ಬಟ್ಟೆ ಕಟ್ಟಿಕೊಂಡು ಮಾಂಸಾಹಾರ ತಯಾರಿತ್ತಿದ್ದರಂತೆ!!

    ReplyDelete
  26. ಸುನಾಥರೆ,

    ತಮ್ಮನ್ನು ಭೇಟಿಯಾಗುವುದಾದರೆ ಎಲ್ಲಿ? ಫೋನ್ ನಂಬರ್, ವಿಳಾಸ, ಈ-ಮೈಲ್ ಏನಾದರೂ ದೊರಕಬಹುದೆ? ತಾವು ಧಾರವಾಡದ ನಿವಾಸಿ ಎಂದು ನಂಬಿದ್ದೇನೆ. ಈ ವರ್ಷ ಐದಾರು ಬಾರಿ ಧಾರವಾಡಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ಸಲನೂ ತಮ್ಮನ್ನು ಭೇಟಿಯಾಗುವ ಇರಾದೆಯಿದ್ದರೂ ಸಂಪರ್ಕಿಸಲು ಆಗುತ್ತಿರಲಿಲ್ಲ. ಮುಂದಿನ ಬಾರಿ ಬಂದಾಗ ಭೇಟಿಯಾಗಲು ಅವಕಾಶ ನೀಡುವಿರಾ? ಏನೂ ಅಭ್ಯಂತರವಿಲ್ಲದಿದ್ದರೆ ತಮ್ಮ ದೂರವಾಣಿ ಸಂಖ್ಯೆ/ವಿಳಾಸ/ಈ ಮೈಲ್ ಯಾವುದಾದರನ್ನು ೯೩೪೨೯೮೫೭೦೪ ಇಲ್ಲಿಗೆ ಮೆಸೇಜ್ ಮಾಡುವಿರಾ? ಧನ್ಯವಾದ.

    ReplyDelete
  27. super sir. I really never thought this song is so much spiritual.
    thank you for making me understand. I can now admire Santha Shishunal Sharif more.

    ReplyDelete
  28. ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ಹಾಡಿನ ಅರ್ಥ ವಿವರಿಸಿದಲ್ಲಿ ಬಹಳ ಸಂತೋಷವಾಗುತ್ತದೆ.

    ReplyDelete
  29. Anonymusರೆ,
    ಈ ಕವನದ ಬಗೆಗೆ ಬರೆಯಲು ಪ್ರಯತ್ನಿಸುತ್ತೇನೆ.

    ReplyDelete
  30. ದಯಮಾಡಿ ಎಷ್ಟು ಕಾಡತಾವ ಕಬ್ಬಕ್ಕಿ ವಿಶ್ಲೇಷಿಸಿ

    ReplyDelete
  31. ಪ್ರಯತ್ನಿಸುತ್ತೇನೆ, ಸsರ್.

    ReplyDelete
  32. ಧನ್ಯವಾದಗಳು, Kannada Saurabha

    ReplyDelete
  33. ಸುನಾಥಣ್ಣ... ಪದಗಳ ಅರ್ಥ ವ್ಯಾಪ್ತಿಯನ್ನು ಅರಿತಂತೆಲ್ಲಾ ಹಿಗ್ಗಿಸಬಹುದು, ಅರಿವಿಲ್ಲದಿರೆ ಕುಗ್ಗಿ ಬರಿ ಪದವನಾಡಬಹುದು... ದಾರ್ಶನೀಕ ಮಹಾನುಭಾವರ ಅದರಲ್ಲೂ ಸಂತ/ದಾಸ/ಶರಣರ ಮಾತುಗಳು ಆಡುನುಡಿಯಲ್ಲಿದ್ದರೂ ಎಂತಹ ಸತ್ವಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ನಿಮ್ಮ ಈ ವಿವರಣೆ ಸಾರಿ ಹೇಳುತ್ತದೆ. ಈ ದಿನ ಪದಾರ್ಥ ಚಿಂತಾಮಣಿಯ ಚರ್ಚೆಯ ಪದವೊಂದರ ಕಾರಣದಿಂದ ನಿಮ್ಮ ಈ ಲೇಖನವನ್ನು ಮತ್ತೊಮ್ಮೆ ಓದಬೇಕೆನಿಸಿತು. ಧನ್ಯವಾದ ಅಣ್ಣ.

    ReplyDelete
  34. ಜಲನಯನ, ನೋಡಲು ಎಷ್ಟೋ ಸರಳವಾಗಿದ್ದರೂ, ಕೆಲವು ಪದಗಳು ಹಾಗಿ ಕೆಲವು ವಾಕ್ಯಗಳು ಅರ್ಥಪೂರ್ಣವಾಗಿರುತ್ತವೆ. ಒಂದು ಸಲ ಕೀರ್ತಿನಾಥ ಕುರ್ತಕೋಟಿಯವರು ಬೇಂದ್ರೆಯವರ ಕವನದ ಒಂದು ನುಡಿಯನ್ನು ಹೇಳುತ್ತ. ಆ ಸಂಪೂರ್ಣ ನುಡಿಯೇ ಹೇಗೆ ಶ್ಲೇಷಾರ್ಥವನ್ನು ಒಳಗೊಂಡಿದೆ ಎಂದು ವಿವರಿಸಿದ್ದರು. ಅಂತಹ ಕವಿ ಹಾಗು ಅಂತಹ ವ್ಯಾಖ್ಯಾನಕಾರರು ನಮಗೆ ದೊರೆತದ್ದು ನಮ್ಮ ಪುಣ್ಯ. ಆದುದರಿಂದಲೇ
    ಶ್ರೀ ಆಮೂರರು ಬೇಂದ್ರೆಯವರ ಬಗೆಗೆ ತಾವು ಸಂಕಲಿಸಿದ ಪುಸ್ತಕ ಒಂದಕ್ಕೆ ‘ಭುವನದ ಭಾಗ್ಯ’ ಎನ್ನುವ ಹೆಸರನ್ನು ಕೊಟ್ಟಿದ್ದರು.‘ಭುವನದ ಭಾಗ್ಯ’ ಎನ್ನುವ ಪದಪುಂಜವು ಮೂಲತ: ಕವಿ ರತ್ನಾಕರ ವರ್ಣಿಯದು. ನನಗೆ ನೆನಪಿರುವ ಮಟ್ಟಿಗೆ ಆತ ಬರೆದ ಸಾಲು ಹೀಗಿದೆ: "ಬೆಲೆಯಿಂದಕ್ಕುಮೆ ಕೃತಿ ಗಾ- ವಿಲ ಭುವನದ ಭಾಗ್ಯದಿಂದಕ್ಕುಂ"

    ReplyDelete
  35. ತುಂಬಾ ಅರ್ಥಪೂರಣ ವಿವರಣೆ , ಪೂರ್ಣ ಹಾಡಿನ ಅರ್ಥವಿವರಣೆ ಮಾಡಿದ್ದರಿ....ತುಂಬಾ ಸಂತೋಷ ಸರದ

    ReplyDelete
  36. ಧನ್ಯವಾದಗಳು, shiva!

    ReplyDelete
  37. ಅರ್ಥ ವಿವರಣೆ ಬಹಳ ಇಷ್ಟವಾಯ್ತು ಸರ್. ಧನ್ಯವಾದಗಳು.

    ReplyDelete
  38. ಧನ್ಯವಾದಗಳು, unknownರೆ!

    ReplyDelete