Monday, March 30, 2009

ಪ್ರಕೃತಿಯ ಯುಗಾದಿ......ದ.ರಾ.ಬೇಂದ್ರೆ

ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭದ ದಿನವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.
ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ ಪ್ರಜ್ಞಾಪೂರ್ವಕ ಮೇಧಾಶಕ್ತಿ ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ ಅಪ್ರಜ್ಞಾಪೂರ್ವಕ ಮೇಧಾಶಕ್ತಿ ಎಂದು ಕರೆಯಬಹುದು. ನಿಸರ್ಗದ ಅಪ್ರಜ್ಞಾಪೂರ್ವಕ ಮೇಧಾಶಕ್ತಿ ಎದುರಿಗೆ ಮನುಜನ ಪ್ರಜ್ಞಾಪೂರ್ವಕ ಮೇಧಾಶಕ್ತಿ ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.
ಅಂಬಿಕಾತನಯದತ್ತರು ತಮ್ಮ ಯುಗಾದಿಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.
ಯುಗಾದಿಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪ ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಕೋಟಿ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿರಿ:
ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.
ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!
ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪ ಸೂಸಿ
ಜೀವಕಳೆಯ ತರುತಿದೆ

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಪ್ರತಿ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡು, ಕಹಿ ಬದುಕನ್ನೇ ಕಳೆದ ಬೇವಿನ ಮರವು ಯುಗಾದಿಯಂದು ನಸುಕಂಪು ಬೀರುವ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!
ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನಲ್ಲಿರುವ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:  
ಕವಿಗೇನ ಬೇಕs? ಹೂತ ಹುಣಸಿಮರ ಸಾಕs!”

ವಸಂತ ಋತುವಿಗೂ ಕಾಮದೇವನಿಗೂ ಅನನ್ಯ ಸ್ನೇಹಸಂಬಂಧವಿದೆ. ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ

ಈ ಮೇಲಿನ ಮೂರು ಸಾಲುಗಳು ಕವಿಯ ಅಸಾಮಾನ್ಯ ಕಲ್ಪನೆಯಿಂದಾಗಿ ಹೊರಹೊಮ್ಮಿವೆ. ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ ಅಂದರೆ ಸಿಹಿಯಾದ ಬಾಣಕ್ಕೆ ಸೋಲದ ಜೀವಿ ಉಂಟೆ? ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ. ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು. On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!
ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳು ಜೊತೆಜೊತೆಯಾಗಿಯೇ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ. 

ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ. ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ. ನಿಸರ್ಗದ ಈ ಚೆಲುವನ್ನು, ಅದರ ಯೌವನದ ಪುನರಾವರ್ತನೆಯನ್ನು ಕಂಡ ಕವಿ ಸಂತಸಪಡುತ್ತಾನೆ. ಆದರೆ, ಮನುಜನ ಸ್ಥಿತಿ ಹೀಗಿಲ್ಲವಲ್ಲ ಎನ್ನುವುದು ಅವನಿಗೆ ಹೊಳೆದಾಗ, ಕವಿಯು ಅಚ್ಚರಿ ಹಾಗು ವಿಷಾದಭಾವನೆಗಳಿಗೆ ಒಳಗಾಗುತ್ತಾನೆ. 

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯಿಂದ ಎದ್ದ ಬಳಿಕ, ನಮ್ಮ ಹಳತನ್ನು ಕಳೆದೊಗೆದು, ಹೊಸ ಜೀವನವನ್ನು ಪಡೆಯುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?

ನಿಸರ್ಗದ ಈ ಮರುಹುಟ್ಟಿಗೆ ಕಾರಣನಾದ ಸನತ್ಕುಮಾರನನ್ನೇ ಅಂದರೆ ಕಾಮದೇವನನ್ನೇ ಕವಿಯು ಪ್ರಶ್ನಿಸುತ್ತಾನೆ. 

ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಪೃಕೃತಿಯ ಬದುಕು ಪ್ರತಿ ಯುಗಾದಿಗೊಮ್ಮೆ ಹೊಸತಾಗುತ್ತದೆ. ಮನುಜನ ಬದುಕು ಹಾಗಿಲ್ಲವಲ್ಲ ಎನ್ನುವ ಕವಿಯ ಉದ್ಗಾರದೊಡನೆ ಕವನ ಮುಕ್ತಾಯಗೊಳ್ಳುತ್ತದೆ!

32 comments:

  1. ಸರ್,
    ಬೇ೦ದ್ರೆಯವರ "ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ" ಹಾಡಿನಲ್ಲಿನ ಅರ್ಥ ವಿಸ್ತಾರವನ್ನು, ಕವಿಯ ಅಸಾಮಾನ್ಯ ಕಲ್ಪನೆಯನ್ನು, ನಿಸರ್ಗದ ವೈಚಿತ್ರ್ಯವನ್ನು ಚೆನ್ನಾಗಿ ಬಿಡಿಸಿಟ್ಟಿದ್ದಿರಿ. ಯುಗಾದಿಹಬ್ಬದ ಸ೦ದರ್ಭದಲ್ಲಿ ಸಮಯೋಚಿತವಾಗಿದೆ . ಆದರೆ ವರುಷಗಳು ಕಳೆದ೦ತೆ ಹಬ್ಬಗಳ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಎಲ್ಲ ಆಚರಣೆಗಳೂ ಯಾ೦ತ್ರಿಕವಾಗುತ್ತಿವೆ. ನಿಮ್ಮ ಲೇಖನ ಚೆನ್ನಾಗಿದೆ.

    ReplyDelete
  2. ಪರಾಂಜಪೆಯವರೆ,
    ನೀವು ಹೇಳಿದಂತೆ ಹಬ್ಬಗಳ ಬಗೆಗೆ ಜನರ ಆಸಕ್ತಿ ಕಡಿಮೆಯಾಗತೊಡಗಿದೆ. ಆದರೆ ಸೃಷ್ಟಿಯು ತನ್ನ ಉತ್ಸವಗಳಲ್ಲಿ ಕಡಿಮೆ ಮಾಡಿಕೊಂಡಿಲ್ಲ!

    ReplyDelete
  3. ಸುನಾಥಂಕಲ್,
    ಬಹಳ ಚೆನ್ನಾಗಿ ವಿವರಣೆ ನೀಡಿದ್ದೀರ.

    ReplyDelete
  4. ಸರ್,
    ಬೇಂದ್ರೆಯವರ ಕವನ,ಪ್ರಕೃತಿಯ ಹಾಡು, ಹಬ್ಬದ ಔಚಿತ್ಯದ ಬಗ್ಗೆ ನಿಮ್ಮ ಲೇಖನದಿಂದ ತುಂಬಾ ವಿಷಯ ತಿಳಿಯಿತು. ಧನ್ಯವಾದಗಳು.

    ReplyDelete
  5. ಸುನಾಥ್ ಸರ್,

    ಮನುಷ್ಯನ conscious intelligence ಮತ್ತು ಪ್ರಕೃತಿಯ unconscious intelligence ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ ಇದು ನನಗೆ ಹೊಸ ವಿಚಾರ. ಮತ್ತು ಬೇಂದ್ರೆಯವರ ಕವನವನ್ನು ಇಷ್ಟು ಸುಲಭವಾಗಿ ಸಹಜವಾಗಿ ವಿವರಿಸುವುದು ಮತ್ತು ಪರೋಕ್ಷವಾಗಿ ತಿಳುವಳಿಕೆ ಮೂಡಿಸುವುದು ನಿಮಗೆ ಮಾತ್ರವೇ ಸಾಧ್ಯವೇನೋ. ನಾನು ಸ್ಕೂಲು ಕಾಲೇಜಿನಲ್ಲೂ ಇಷ್ಟು ಚೆನ್ನಾಗಿ ಅರ್ಥವಾಗಿರಲಿಲ್ಲ ಈ ಕವನ ಹೀಗೆ ಮುಂದುವರಿಯಲಿ ನಿಮ್ಮ ಈ ಸೇವೆ....

    ಧನ್ಯವಾದಗಳು...

    ReplyDelete
  6. ಅದೆಷ್ಟು ಯುಗಾದಿಗಳು ಕಳೆದರೂ ಬೇಂದ್ರೆಯವರ ಕವನ ಮಾತ್ರ evergreen!

    ReplyDelete
  7. ಸುನಾಥ್ ಸರ್,
    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದೀರಿ.. ಹಬ್ಬ ಹರಿದಿನಗಳು ಹಿಂದಿನಂತಿಲ್ಲ ಎಲ್ಲ ಆಡಂಬರವಾಗಿದೆ ಅನ್ನಿಸುವದಿಲ್ಲವೇ?

    ಬೇಂದ್ರೆಯವರ ಕವನದ ಸಾಲುಗಳು ಮಾತ್ರ ಎಂದೆಂದಿಗೂ ಮರೆಯಲಾಗದ ಕವನ... ಇನ್ನೆಸ್ಟೆ ಕವನದ ಸಾಲುಗಳು ಮೂಡಿಬಂದರೂ ಈ ಕವನ ಮಾತ್ರ ತನ್ನ ಹಚ್ಚ ಹಸಿರನ್ನ ಬೀರುತ್ತಲೇ ಇರುತ್ತೆ..
    ವಂದನೆಗಳು.

    ReplyDelete
  8. ಸರ್,
    ಮನುಷ್ಯನ conscious intelligence ಮತ್ತು ಪ್ರಕೃತಿಯ unconscious intelligence ವಿಚಾರ ಹಿಡಿಸಿತು.
    ಬೇಂದ್ರೆಯವರ ಈ ಕವನ ಹಬ್ಬದ ವೇಳೆಯಲ್ಲಿ ಸೂಕ್ತವಾಗಿ ಮೂಡಿ ಬಂದಿದೆ.
    "ನಿದ್ದೆಗೊಮ್ಮೆ ನಿತ್ಯ ಮರಣ
    ಎದ್ದ ಸಲ ನವೀನ ಜನನ
    ನಮಗೆ ಏಕೆ ಬಾರದೊ?" ಸಾಲುಗಳು ಎಷ್ಟೊಂದು ಸರಳ, ಸಹಜ ಮತ್ತು ನೇರ ಇದಾವಲ್ಲ !!!
    ಯುಗಾದಿಯ ಶುಭಾಷಯಗಳು
    --ಎಮ್.ಡಿ

    ReplyDelete
  9. ಸುನಾಥ ಸರ್...

    ಹಾಡು ಗುನುಗುತ್ತಿದ್ದರೂ..
    ಪೂರ್ತಿಯಾಗಿ ಅರ್ಥವಾಗಿಲ್ಲವಾಗಿತ್ತು...

    ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು..

    ನಾನು ನನ್ನ ಲೇಖನದಲ್ಲಿ
    "ಉಗಾದಿಯ ಶುಭಾಶಯಗಳು" ಎಂದು ಬರೆದಿದ್ದೆ..
    ನಾನು ಬಹಳ ಕಡೆ ಹಾಗೇ ಓದಿದ ನೆನಪು...

    ಇದು ಸರಿಯಾದ ಶಬ್ಧವಲ್ಲವೇ..?

    "ಉಗಾದಿ" ಅನ್ನುವ ಶಬ್ಧವನ್ನು " ಯುಗಾದಿ"ಗೆ ಪರ್ಯಾಯವಾಗಿ ಬಳಸಬಹುದೇ..?

    ದಯವಿಟ್ಟು ತಿಳಿಸುವಿರಾ..?

    ReplyDelete
  10. thank you sunaath for letting us to know some unnoticed meaning of lines in beautiful song "ಯುಗ ಯುಗಾದಿ ಕಳೆದರು".

    thank you...

    ReplyDelete
  11. md,
    ನಿಮಗೂ ಸಹ ಹೊಸ ಸಂವತ್ಸರದ ಶುಭಾಶಯಗಳು.
    ನಿಸರ್ಗದ unconscious intelligence ದಿಗಿಲುಗೊಳಿಸುವಂತಹದು. ಅದರ ಬಗೆಗೇ ಒಮ್ದು ಪುಸ್ತಕ ಬರೆಯಬಹುದೇನೊ?

    ReplyDelete
  12. ಜಯಪ್ರಕಾಶ, ಶಿವು, ಮಲ್ಲಿಕಾರ್ಜುನ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಸಂದೀಪ,
    ವರಕವಿಯ ಸಾಲುಗಳಿಗೆ ಸಾವಿಲ್ಲ ಅಲ್ಲವೆ?

    ReplyDelete
  14. ನಗಿಸು,
    ಮನುಜ ಹಬ್ಬ ಹರಿದಿನಗಳನ್ನು ಕಡಿಮೆ ಮಾಡಿದ್ದಾನೆ. ಆದರೆ ಪ್ರಕೃತಿಯ ಉಲ್ಲಾಸ ಕಡಿಮೆಯಾಗಿಲ್ಲ.

    ReplyDelete
  15. ಪ್ರಕಾಶ,
    ಯುಗಾದಿಗೆ ಪರ್ಯಾಯವಾಗಿ ಉಗಾದಿ ಎನ್ನುವ ಆಡುಮಾತಿನ ಪದವು ಬಳಕೆಯಲ್ಲಿದೆ. ಆದುದರಿಂದ ಉಗಾದಿಯನ್ನು ಧಾರಾಳವಾಗಿ ಬಳಸಬಹುದು.

    ReplyDelete
  16. ಶಿವಪ್ರಕಾಶ,
    ಬೇಂದ್ರೆಯವರ ಕವನದ ಸಾಲುಗಳ ಅರ್ಥ ಹೊಳೆಯುತ್ತಲೇ ಇರುವತಹದು!

    ReplyDelete
  17. ಸುನಾಥ್ ಸರ್,
    ಬೇಂದ್ರೆಯವರ "ಯುಗಾದಿ" ಕವನವನ್ನು ತೊಳೆ ತೊಳೆಯಾಗಿ ನಮ್ಮ ಮುಂದೆ ಬಿಡಿಸಿಟ್ಟಿದ್ದಕ್ಕೆ ಧನ್ಯವಾದಗಳು. ಯುಗಾದಿ ಹಬ್ಬದ ಬಗ್ಗೆ ಬೇಂದ್ರೆಯವರು ಬೆಲ್ಲದಷ್ಟೇ ಸಿಹಿಯಾಗಿ ಮಾತನಾಡುತ್ತಾ ಕವನದ ಕೊನೆಯಲ್ಲಿ

    ಯುಗಯುಗಾದಿ ಕಳೆದರೂ
    ಯುಗಾದಿ ಮರಳಿ ಬರುತಿದೆ.
    ಹೊಸ ವರುಷಕೆ ಹೊಸ ಹರುಷವ
    ಹೊಸತು ಹೊಸತು ತರುತಿದೆ.
    ನಮ್ಮನಷ್ಟೆ ಮರೆತಿದೆ!

    ಎನ್ನುವ ಬೇವಿನಷ್ಟೆ ಕಹಿಯಾದ ಸತ್ಯವೊಂದನ್ನು ಹೇಳುತ್ತಾರೆ. ಆ ಮೂಲಕ ಜೀವನ ಬೇವು ಬೆಲ್ಲ ಎಂದು ಸೂಚ್ಯವಾಗಿ ಹೇಳುತ್ತಾರೆ.

    ReplyDelete
  18. ಸರ್,
    "Followers" ಕಾಲಂನ್ನು ನಮ್ಮ ಬ್ಲಾಗ್‍ಲ್ಲಿ ಹೇಗೆ add ಮಾಡೋದು ಮತ್ತು display ಮಾಡೋದು ಅಂತ ಹೇಳುತ್ತೀರಾ?

    ReplyDelete
  19. ಉದಯ,
    ನೀವು www.blogger.com ಕ್ಕೆ ಹೋದ ಮೇಲೆ, ಅಲ್ಲಿ ನಿಮ್ಮ IDಯನ್ನು ಕೊಟ್ಟು ನಿಮ್ಮ siteಅನ್ನು open ಮಾಡುತ್ತೀರಿ. ನಿಮಗೆ Dashboard ಸಿಗುತ್ತದೆ. ಅದರ ಬಲಬದಿಯ ಮೇಲ್ಭಾಗದಲ್ಲಿ Followers ಎನ್ನುವ ಸೂಚನೆಯಿದೆ. ಅಲ್ಲಿ ನೀವು click ಮಾಡಿದರೆ, ನಿಮಗೆ ಆ ಪುಟವು ತೆರೆಯುವದು. ಅಲ್ಲಿರುವ ಸೂಚನೆಗಳ ಮೇರೆಗೆ ನೀವು
    Display ಮಾಡಬಹುದು.

    ReplyDelete
  20. ಅಂಕಲ್‌, ಸ್ಕೂಲ್‌ನ್ಯಾಗ ಇದ್ದಾಗ ನಮ್ಮ ಟೀಚರ್‌ ಏನಾದ್ರೂ ಇಷ್ಟ ಛಂದ ಬಿಡಿಸಿ ಹೇಳಿದ್ರ ನಾ ಇಷ್ಟೊತ್ತಿಗೆ....

    ReplyDelete
  21. ಕಾಕಾ ,
    ಮತ್ತೆ ಬೇಂದ್ರೆಯವರ ಜತೆ ಪ್ರತ್ಯಕ್ಷ ಆಗಿದ್ದೀರಿ..ಖುಷಿ ಆಯ್ತು :)
    ಹೊಸ ವರುಷಕೆ ಹೊಸ ಹರುಷವ
    ಹೊಸತು ಹೊಸತು ತರುತಿದೆ
    ನಿಮ್ಮ ಲೇಖನ ಜತೆಗಿದೆ :)
    ಪ್ರೀತಿಯಿಂದ ,
    ಅರ್ಚನಾ

    ReplyDelete
  22. ಸರ್..
    ತಡವಾಗಿ ಬಂದು ಹೊಸ ವರುಷದ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಕ್ಷಮೆಯಿರಲಿ
    ಹಬ್ಬದ ೌಚಿತ್ಯದ ಕುರಿತು ಚೆನ್ನಾಗಿ ಹೇಳಿದ್ದೀರಿ.
    -ಧರಿತ್ರಿ

    ReplyDelete
  23. ಆಲಾಪಿನಿ,
    ಹಾಗಿದ್ದರೆ ನಾನೀಗ ನಿಮ್ಮ ಸ್ಕೂಲ್ ಟೀಚರ!

    ReplyDelete
  24. ಅರ್ಚು,
    ಹೊಸ ಸಂವತ್ಸರಕ್ಕೆ ಬೇಂದ್ರೆಯವರ ಕವನವೆ ತೋರಣ!

    ReplyDelete
  25. ಧರಿತ್ರಿ,
    ಶುಭಾಶಯಗಳಿಗೆ ತಡ ಅನ್ನುವದು ಇಲ್ಲವೇ ಇಲ್ಲ! ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ನಿಮಗೆ ನನ್ನ ಪ್ರೀತಿಯ ಶುಭಾಶಯಗಳು.

    ReplyDelete
  26. ಸುನಾಥ್ ಸರ್

    ನಮಸ್ಕಾರಗಳು. ಬಹಳ ತಡವಾಗಿ ನಿಮಗೆ ಹೊಸ ವರ್ಷದ ಶುಭಾಶಯ ಕೋರುತ್ತಿದ್ದೇನೆ.
    ಬೇಂದ್ರೆಯವರ ಕವನವನ್ನು ಚೆನ್ನಾಗಿ ವಿಶ್ಲೇಷಿಸಿರುವಿರಿ.
    ಪ್ರತಿವರ್ಷ ಹಿಸ ಚಿಗುರು, ಹೂವು...ಗಳನ್ನು ಮರ ಪಡೆಯುವುದು ವರುಷಕ್ಕೊಮ್ಮೆ ಅದು ಹೊಸ ಹುಟ್ಟು ಪಡೆಯುವುದನ್ನು ಸೂಚಿಸುತ್ತದಲ್ಲವೇ ? ಅಂದರೆ ಅದರ ಪ್ರತಿ ಭಾಗಕ್ಕೂ ಒಂದೇ ವರ್ಷ ಆಯಸ್ಸಲ್ಲವೇ ? ಈ ದೃಷ್ಟಿಯಲ್ಲಿ ಮನುಷ್ಯನೇ ಅದೃಷ್ಟವಂತನಲ್ಲವೇ ? ದೇವರು ಅವನಿಗೆ ಎಷ್ಟೊಂದು ದೀರ್ಘ ಆಯಸ್ಸನ್ನು ಕೊಟ್ಟಿರುವನಲ್ಲವೇ ? ಅದಕ್ಕೆ ನಾವು ದೇವರಿಗೆ ಕೃತಜ್ಞರಾಗಿರಬೇಕಾದು ನಮ್ಮ ಕರ್ತವ್ಯ ಎಂದು ಕೊಂಡಿರುವೆ.

    ReplyDelete
  27. ಚಂದ್ರಕಾಂತಾ,
    ಬೇಂದ್ರೆಯವರಿಗಿಂತ ಭಿನ್ನವಾದ ದೃಷ್ಟಿಕೋನ ನಿಮ್ಮದು. ನಿಮ್ಮ
    ಸ್ಪಂದನಕ್ಕೆ ಅಭಿನಂದನೆಗಳು.

    ReplyDelete
  28. ಚಂದ್ರಕಾಂತಾ,
    ಬೇಂದ್ರೆಯವರಿಗಿಂತ ಭಿನ್ನವಾದ ದೃಷ್ಟಿಕೋನ ನಿಮ್ಮದು. ನಿಮ್ಮ
    ಸ್ಪಂದನಕ್ಕೆ ಅಭಿನಂದನೆಗಳು.

    ReplyDelete
  29. Sunaath Sir
    ನೀವು ನನ್ನ http://www.nandondmatu.blogspot.com
    ನ "ತೇಜಸ್ವಿ ನೆನಪು : ಮರೆತಿದ್ದರೆ ತಾನೆ!" ಪೋಸ್ಟಿಗೆ ಕಳುಹಿಸಿದ್ದ ರಿಪ್ಲೇ ತಾಂತ್ರಿಕ ಕಾರಣಗಳಿಂದ ಡಿಸ್ ಪ್ಲೇ ಆಗಿಲ್ಲ. ನಾನು ಇಡೀ ಪೋಸ್ಟನ್ನು ಹೊಸದಾಗಿ ಮಾಡಬೇಕಾಯಿತು. ಆಗ ಹಳೆಯದನ್ನು ಡಿಲೀಟ್ ಮಾಡಿದ್ದರಿಂದ ತೊಂದರೆಯಾಯಿತು. ಆದರೆ ನಿಮ್ಮ ಈಮೇಲನ್ನು ನಾನು ನನ್ನ ಆರ್ಕೈವ್ಸ್ ನಲ್ಲಿ ಉಳಿಸಿಕೊಂಡಿದ್ದೇನೆ. ಕ್ಷಮೆಯಿರಲಿ.

    ReplyDelete
  30. ಸತ್ಯನಾರಾಯಣ ಸರ್,
    ಇದರಲ್ಲಿ ಕ್ಷಮೆ ಯಾಚಿಸುವಂತಹದೇನೂ ಆಗಿಲ್ಲ. ಇದು ನಿಮ್ಮ ವಿನಯವನ್ನು ತೋರಿಸುತ್ತದೆ ಅಷ್ಟೆ!

    ReplyDelete
  31. ಶ್ರೀನಿವಾಸ ಮ. ಕಟ್ಟಿApril 4, 2009 at 6:30 PM

    ಯುಗಾದಿಯ ಶುಭಾಷಯಗಳು. ವಿರೋಧಿ ವರ್ಷ `ಸಲ್ಲಾಪ'ದ ನಮಗೆಲ್ಲರಿಗೆ ಅವಿರೋಧಿಯಾಗಿ ಸಂತಸ ತರಲಿ. ಈ ಸಾಡೆತೀನದ ಶುಭ ಮುಹೂರ್ತದಂದು ವರಕವಿಯ ನಿತ್ಯನೂತನ ಕವಿತೆಯಿಂದ ಹೊಸತಾಗಿ ಬೇಂದ್ರೆಯವರನ್ನು ಅಭ್ಯಸಿಸೋಣ.

    ReplyDelete
  32. ಕಟ್ಟಿಯವರೆ,
    ನಿಮಗೂ ಸಹ ವಿರೋಧಿನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

    ReplyDelete