Sunday, April 26, 2009

ಸಂಜೀಯ ಜಾವಿಗೆ.....ದ.ರಾ.ಬೇಂದ್ರೆ

ಛಂದಸ್ಸು ಬೇಂದ್ರೆಯವರ ಕಾವ್ಯದ ಸಹಜವಾದ ಸಿದ್ಧಿಗಳಲ್ಲಿ ಒಂದು. ಬೇಂದ್ರೆಯವರು ಕವನವನ್ನು ಬರೆಯುತ್ತಿದ್ದಿಲ್ಲ ; ಕವನವು ಅವರ ಮನದಲ್ಲಿ ಮೂಡುತ್ತಿತ್ತು. ಒಂದು ಘಟನೆಯು ಅವರ ಮನದಲ್ಲಿ ಒಂದು ಭಾವವನ್ನು ಉದ್ದೀಪಿಸಿದ ಬಳಿಕ, ಆ ಭಾವಕ್ಕೆ ತಕ್ಕದಾದ ನಾದ ಹಾಗೂ ಛಂದಗಳೊಂದಿಗೆ ಪ್ರಾಸಬದ್ಧ ಪದಗಳು ಅವರ ಮನದಿಂದ ಕವನರೂಪದಲ್ಲಿ ಹೊರಹೊಮ್ಮುತ್ತಿದ್ದವು.
ಇದರ ಒಂದು ಶ್ರೇಷ್ಠ ಉದಾಹರಣೆ ಎಂದರೆ ‘ಪಾತರಗಿತ್ತಿ ಪಕ್ಕ’ ಎನ್ನುವ ಕವನ. ಪಾತರಗಿತ್ತಿಯು ಎಷ್ಟು ಕ್ಷಿಪ್ರವಾಗಿ ರೆಕ್ಕೆಗಳನ್ನು ಬಡೆಯುವದೊ, ಅಷ್ಟೇ ಕ್ಷಿಪ್ರವಾದ ಛಂದಸ್ಸು ಈ ಕವನಕ್ಕಿದೆ. ಪಾತರಗಿತ್ತಿಯು ಕ್ಷಣಾರ್ಧದಲ್ಲಿ ಎಲ್ಲೆಲ್ಲಿ ಸುತ್ತಾಡುವದೊ, ಈ ಕವನ ಸಹ ಅದೇ ವೇಗದಲ್ಲಿ ಎಲ್ಲೆಲ್ಲೊ ಸುತ್ತಾಡುತ್ತದೆ. (ಕಲ್ಪನೆಯ ರೆಕ್ಕೆಗಳ ಮೂಲಕ ಹಾರಾಡಿದರೂ ಸಹ ಬೇಂದ್ರೆಯವರ ಕವನ ವಾಸ್ತವದ ನೆಲೆಗಳನ್ನು ಬಿಡುವದಿಲ್ಲ.) ಇಂತಹದೇ ಸಹಜ ಛಂದಸ್ಸಿನ ಮತ್ತೊಂದು ಕವನ : “ಸಂಜೀಯ ಜಾವಿಗೆ ”.

ಮೂರೂಸಂಜೆಯ ಹೊತ್ತಿನಲ್ಲಿ ಬೇಂದ್ರೆಯವರು ತಮ್ಮ ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾರೆ. ಅವರ ಪುಟ್ಟ ಮಗಳು ಮಂಗಲಾ ನೀರು ತರುವವರ ಜೊತೆಗೆ ತಾನೂ ಸಹ ಬಾವಿಗೆ ಹೊರಟಿದ್ದಾಳೆ. ಆ ಕಾಲದಲ್ಲಿ ನೀರನ್ನು ಕೆರೆ ಅಥವಾ ಬಾವಿಯಿಂದಲೇ ತರಬೇಕಾಗಿತ್ತು. ಹೊತ್ತು ಮೂಡುವ ಮುನ್ನ ಹಾಗೂ ಹೊತ್ತು ಮುಳುಗುವ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು.

ಈ ಪುಟ್ಟ ಬಾಲೆ, ಪುಟ್ಟ ಬಿಂದಿಗೆ ಹೊತ್ತುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ನೀರು ತರಲು ಹೊರಟಾಗ, ಬೇಂದ್ರೆಯವರಿಗೆ ವಿನೋದವೆನಿಸಿದೆ. ಅವರು ಅವಳ ಚಲನವಲನವನ್ನು ಕೌತುಕದಿಂದ ಗಮನಿಸುತ್ತಿದ್ದಾರೆ. ಅವಳ ಪುಟ್ಟ ಹೆಜ್ಜೆಗಳ ತಾಳಕ್ಕೆ ತಕ್ಕಂತೆ ಅವರ ಮನದಲ್ಲಿ ಕವನ ಮೂಡುತ್ತಿದೆ.
ಕವನದ ಪೂರ್ತಿಪಾಠ ಇಂತಿದೆ:

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||

ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||

ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ ||

ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||

ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ ||

ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||

ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||

ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||
vvvvvvvvvvvvvvvvvvvvvvvvvvvvvvvvvvvvvvvvvvvvvvv

ಪುಟ್ಟ ಮಂಗಲೆಯನ್ನು ಎತ್ತಿಕೊಂಡು ಆಡುವದರಿಂದ ತಂದೆಗೆ ಸಂತೋಷ ಉಕ್ಕುತ್ತದೆ. ಅವಳನ್ನು ಆತ ಎತ್ತಿ ಎತ್ತಿ ಕುಣಿಸುತ್ತಾನೆ. ಇಬ್ಬರ ಮನಸ್ಸೂ ಆನಂದದ ಆಸೆಯಲ್ಲಿ ಅರಳುತ್ತದೆ. ಕುಣಿಸುವಾಗ ಈತ ಮಾಡುವ ‘ಊ ಊ’ ರಾಗದ ದನಿಗೆ ತಕ್ಕಂತೆ ಅವಳು ತೂಗುತ್ತಾಳೆ. ಒಬ್ಬರಿಗೊಬ್ಬರು ಮಮತೆಯಿಂದ ಸ್ಪಂದಿಸುತ್ತಾರೆ. ಈ ಸ್ಪಂದನದಿಂದ ಉದ್ದೀಪ್ತನಾದ ಕವಿಯಲ್ಲಿ ಹಾಡು ಮೂಡುತ್ತದೆ.

“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನೊ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಇಂತಹ ಕಾವ್ಯೋದ್ದೀಪನಕ್ಕೆ ಕಾರಣಳಾಗುವ ಈ ಮಗಳು , ಮಂಗಳೆ ಇದೀಗ ಮೂರೂಸಂಜೆಯ ಹೊತ್ತಿನಲ್ಲಿ ನೀರು ತರಲು ಬಾವಿಗೆ ಹೊರಟಿದ್ದಾಳೆ. ಈ ಪುಟ್ಟ ಬಾಲೆ ನಡೆಯುತ್ತಿರುವ ಪರಿಯಾದರೂ ಎಂತಹದು? ಅವಸರದಲ್ಲಿ ಧಾವಿಸುತ್ತಿರುವದರಿಂದ ತಾನು ಉಟ್ಟುಕೊಂಡ ಕಿರಿಗೆ (=ಸಣ್ಣ ಸೀರೆ)ಯ ನಿರಿಗೆಗಳನ್ನು ಅವಳು ಚಿಮ್ಮುತ್ತಿದ್ದಾಳೆ. ಈ ಕಿರಿಗೆ ಸಹ ಅವಳಿಗೆ ದೊಡ್ಡದೇ ಆಗಿದೆ. ಅದು ಅವಳ ಅಂಗಾಲುಗಳನ್ನು ದಾಟಿ, ನೆಲವನ್ನು ಸ್ಪರ್ಷಿಸುತ್ತದೆ. ಆದುದರಿಂದ ಕವಿ ಇದನ್ನು ‘ಒದೆಯೂತ ದಾರಿಗೆ’ ಎಂದು ಬಣ್ಣಿಸುತ್ತಾನೆ.

“ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ ||
ಕಿರಗೀಯ ನೀರಿಗೆ | ಒದೆಯೂತ ದಾರಿಗೆ ||
ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ ||
ಏನಾರ ನಡಿಗೆ | ಯಾವೂರ ಹುಡಿಗೆ ||
ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||”

ಅದರಂತೆ ಅವಳ ಗೆಜ್ಜೆಗಳು ಅವಳ ಹೆಜ್ಜೆಗೆ ತಾಕುತ್ತಿವೆ. ಈ ಪುಟ್ಟ ಚೆಲುವಿಯನ್ನು ಕಂಡ ಕವಿಗೆ ತನ್ನ ಮಗಳಲ್ಲಿಯೇ ಹೊಸದೊಂದು ಸೌಂದರ್ಯ ಕಾಣುತ್ತದೆ. ‘ಎಲಾ! ಇವಳು ತನ್ನ ಮಗಳೇ?’ ಎಂದು  ಅಗಾಧಪಟ್ಟುಕೊಂಡ ಕವಿ, “ಏನಾರ ನಡಿಗೆ, ಯಾವೂರ ಹುಡಿಗೆ!ಎಂದು ಉದ್ಗಾರವೆತ್ತುತ್ತಾನೆ.

ಇವಳು ಹೋಗುತ್ತಿರುವ ಕಿರುದಾರಿಯ ಎರಡೂ ಬದಿಗೆ ಬೇಲಿ ಹಬ್ಬಿದೆ. ಆ ಬೇಲಿಯಲ್ಲಿ , ಬಾವಿಯ ಸನಿಹದಲ್ಲಿ ಗುಲಬಾಕ್ಷಿ ಹಾಗು ಕಾಡುಮಲ್ಲಿಗೆ ಬೆಳೆದಿವೆ. ಅವೂ ಸಹ ಈ ಬಾಲೆಯನ್ನು ನೋಡುತ್ತವೆ. ತಂದೆಯಲ್ಲಿ ಕೌತುಕವನ್ನು ಹುಟ್ಟಿಸಿದ ಈ ದೃಶ್ಯವು ಹೂವುಗಳಲ್ಲಿ ಅನುಕಂಪವನ್ನು ಹುಟ್ಟಿಸಿದೆ. ಮಂಗಲೆಯ ಸಾಹಸವು ಅವುಗಳಲ್ಲಿ ಮರುಕವನ್ನೇ ಮೂಡಿಸುತ್ತದೆ.

“ಎರಡೂನು ಸಾಲಿಗೆ | ಹಾದ್ಯುದ್ದ ಬೇಲಿಗೆ ||
ಗುಲಬಾಕ್ಷಿ ಮಲ್ಲಿಗೆ | ಕೇಳತಾವ ಕಲ್ಲಿಗೆ ||
“ ಕಳಸೋದೆ ನೀರಿಗೆ | ಇಂಥ ಸುಕುಮಾರಿಗೆ ||
ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಸಂಜೀಯ ಜಾವಿಗೆ | ಬಂದ್ಯಲ್ಲ ಬಾವಿಗೆ || ”

ಹೂವು ಮೃದುತ್ವದ ಪ್ರತೀಕ. ಕಲ್ಲು ಕಾಠಿಣ್ಯದ ಪ್ರತೀಕ. ಕಲ್ಲುಮನಸ್ಸಿನ ಕಲ್ಲನ್ನೇ ಈ ಹೂವುಗಳು ಕೇಳುತ್ತವೆ:
“ ಕಳಸೋದೆ ನೀರಿಗೆ , ಇಂಥ ಸುಕುಮಾರಿಗೆ ? ಅದೂ ಸಹ ಇಂತಹ ಮುಚ್ಚಂಜೆಯ ವೇಳೆಯಲ್ಲಿ? ”
ಈ ಪ್ರಶ್ನೆಗೆ ಆ ಕಲ್ಲು ಸಹ ಕರಗಿರಬಹುದೆ?

ಕಾಲವನ್ನು ಗುರುತಿಸಲು ಮನುಷ್ಯರಿಗೆ ಕಾಲಯಂತ್ರವೆನ್ನುವ ಸಾಧನವಿದೆ. ಮರ, ಗಿಡ, ಹೂವು ಮೊದಲಾದ ನೈಸರ್ಗಿಕ ವಸ್ತುಗಳು ಕಾಲವನ್ನು ಹೇಗೆ ಗುರುತಿಸುತ್ತಿವೆ?
“ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ” ||
ಮೂರೂಸಂಜೆಯ ನಾಲಿಗೆ (=ಮುಳುಗುತ್ತಿರುವ ಸೂರ್ಯಕಿರಣಗಳು) ಇವಳ ಅಂಗಾಲನ್ನು ಸ್ಪರ್ಶಿಸುತ್ತಿವೆ. ಇದು ಹೊತ್ತು ಮುಳುಗುವ ಸಮಯ. ಇಂತಹ ಸಮಯದಲ್ಲಿ ಯಾರಾದರೂ ಇಂತಹ ಪುಟ್ಟ ಹುಡುಗೆಯನ್ನು ನೀರು ತರಲು ಕಳಿಸಬಹುದೆ?
ತಮ್ಮ ಪ್ರಶ್ನೆಗೆ ಉತ್ತರಿಸುವರಾರೂ ಇಲ್ಲವೆಂದು ಆ ಹೂವುಗಳು ಆ ಹುಡುಗೆಯನ್ನೇ ಕೇಳುತ್ತವೆ:
“ಯಾಕವ್ವಾ, ಸಂಜೀಯ ಜಾವಿಗೆ ಬಂದ್ಯಲ್ಲ ಬಾವಿಗೆ ? ”

ಯಾರಿಂದಲೂ ಉತ್ತರ ಸಿಗದಿದ್ದಾಗ, ಆ ಹೂವುಗಳು ತಮ್ಮ ಮಾತಿಗಾಗಿ ತಾವೇ ನಾಚಿಕೊಳ್ಳುತ್ತವೆ. (ಹೂವುಗಳು ನಾಚಿಕೊಳ್ಳುವದೆಂದರೇನು? ಕೆಲವು ಹೂವುಗಳು ಸಂಜೆಯಾದಾಗ ಮುಚ್ಚಿಕೊಳ್ಳುತ್ತವೆ.) ಮೃದು ಸ್ವಭಾವದ ಆ ಹೂವುಗಳ ನಾಚಿಗೆಯ ಭಾವನೆಯು ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹದು. (ಅದಕ್ಕಾಗಿಯೇ ಅವು ಮುಚ್ಚಿಕೊಳ್ಳುವದು.)

“ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||
ಗಿಲುಕೆಂಬೊ ಬಳಿಗೆ | ಕೆಲಸೊಂದೊ ಗಳಿಗೆ ||
ಗೆಳತೇರ ಒಂದಿದೆ | ಸೇದಿದೆ ಬಿಂದಿಗೆ ||
ಸಂಜೀಯ ಜಾವಿಗೆ | ಬಂದೀಯೆ ಬಾವಿಗೆ ||”

ಈ ಬಾಲೆಯಾದರೊ ತನ್ನ ಕೆಲಸದಲ್ಲಿ ಖುಶಿ ಪಡುತ್ತ, ಬಳೆಗಳನ್ನು ಗಿಲುಕೆನ್ನಿಸುತ್ತ, ಒಂದೇ ಗಳಿಗೆಯಲ್ಲಿ ತನ್ನ ಜೊತೆಗಾತಿಯರೊಡನೆ ನೀರು ಸೇದಿಕೊಂಡು, ತನ್ನ ಬಿಂದಿಗೆಯನ್ನು ತುಂಬಿಕೊಂಡು ಈಗ ಮರಳಿ ಹೋಗುತ್ತಿದ್ದಾಳೆ !

“ಮೂಗಿನ ನೇರಿಗೆ | ಹೊರಳೀದೆ ಊರಿಗೆ ||
ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ ||
ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ ||
ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ ||
ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ”

ಮರಳುತ್ತಿರುವ ಈ ಬಾಲೆಯ ತಲೆಯ ಮೇಲೆ ಇರುವದು ಬಿಂದಿಗೆ ಹಾಗೂ ಕಾಲಲ್ಲಿ ಇರುವದು ಅಂದಿಗೆ ; ಈ ವರ್ಣನೆಯನ್ನು ಆಪಾದಮಸ್ತಕ ವರ್ಣನೆ ಎನ್ನಬಹುದಲ್ಲವೆ? ತಲೆಯ ಮೇಲಿನ ಬಿಂದಿಗೆಯು ತುಂ ತುಂ ಎಂದು ಧ್ವನಿಸುತ್ತಿದ್ದರೆ, ಕಾಲೊಳಗಿನ ಅಂದಿಗೆಗಳು ಝಣ್ ಝಣ್ ಎನ್ನುತ್ತಿವೆ. ಬಿಂದಿಗೆಯ ಹಾಗೂ ಅಂದಿಗೆಯ ಧ್ವನಿಗಳು ಸಮತಾಳದಲ್ಲಿ ಸಂವಾದಿಯಾಗಿ ಹೊಂದಿಕೊಂಡಿವೆ !

ಕುಡಿಯಲು ಸಿಹಿನೀರು ತರಲು ಹೋದ ಬಾಲೆ ಒಂದು ಸಾರಿಗೆ ನೀರು ತಂದಳು. ಅಷ್ಟೇ ಸಾಕು, ಅವಳ ಮುಖದ ಮೇಲೆಲ್ಲ ಬೆವರಿನ ಹನಿಗಳು ಮೂಡಿವೆ. ತಂದೆಯ ಕಣ್ಣಿಗೆ ಇದು ಮುಂಜಾವಿನಲ್ಲಿ ಹೂವಿಗೆ ಮುಸುಕಿದ ಇಬ್ಬನಿಯಂತೆ ಕಾಣುವದು. ಈ ಬೆವರಿನ ಹನಿಗಳು ಮುತ್ತಿನ ಹನಿಗಳಂತೆ ಅವನಿಗೆ ಕಾಣುವವು.

“ಒಂದೇನೆ ಬಾರಿಗೆ | ಹೋದೆ ಸೀ-ನೀರಿಗೆ ||
ಬೆವರೀನ ಸಾರಿಗೆ | ತಂದೀದಿ ಯಾರಿಗೆ ||
ಇಬ್ಬನಿ ಹೂವಿಗೆ | ನಸುಕಿನ ಜಾವಿಗೆ ||
ಮುತ್ತ್ಹನಿ ಮಾರಿಗೆ | ಮುತ್ತ್ಯಾವೊ ನಾರಿಗೆ ||
ಸಂಜೀಯ ಜಾವಿಗೆ | ಹೋಗಿಯು ಬಾವಿಗೆ ||”

ಸಂಜೆಯ ಸಮಯದಲ್ಲಿ ನೀರು ತಂದರೂ ಸಹ, ಮುಂಜಾನೆಯ ಇಬ್ಬನಿಗಳು ಮುಖದಲ್ಲಿ ಕಾಣುತ್ತಿವೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತಿದೆ. ತನ್ನ ಮಗಳ ಮೊಗವು ಮುಂಜಾನೆಯ ಹೂವಿನಂತೆ ಯಾವಾಗಲೂ ತಾಜಾ ಆಗಿಯೇ ಇರುವದು ಎಂದು ಅವನ ಭಾವನೆಯೆ?

ಆಟವಾಡುವ ವಯಸ್ಸಿನ ಬಾಲೆ ಇವಳು. ಇವಳಿಗೆ ಕೆಲಸವೆಲ್ಲವೂ ಆಟವೇ! ಈ ಪುಟ್ಟ ಗರತಿಯ ಇಂತಹ ಅಚ್ಚುಕಟ್ಟಾದ ವಿಧಾನವನ್ನು ತಂದೆ ಮೆಚ್ಚಿಕೊಳ್ಳುತ್ತಾನೆ. ಅವನ ಮನಸ್ಸು ಕುಣಿಯುತ್ತದೆ. ಅವಳ ಈ ನೀರು ತರುವ ಆಟವನ್ನು ನೋಡಿದ ಜನರೂ ಅನೇಕರು. ಅವರ ‘ಕಣ್ಣು’ ಇವಳಿಗೆ ತಾಕಬಾರದಲ್ಲ ! ಅದಕ್ಕಾಗಿ ತಂದೆ ಇವಳಿಗೆ ನೀವಾಳಿಸುತ್ತಾನೆ.

“ಕೆಲಸಾನ ಆಟಿಗೆ | ಮಾಡುವ ಸೂಟಿಗೆ |
ಹಸನಾದ ಧರತಿಗೆ | ಮೆಚ್ಚಿದೆ ಗರತಿಗೆ ||
ಕುಣಿಸಿದೆ ಇಂದಿಗೆ | ಕಣ್ಬಿಟ್ಟ ಮಂದಿಗೆ ||
ನೀವಾಳಿ ದಿಟ್ಟಿಗೆ | ಕಣ್ಣೆಲ್ಲ ಒಟ್ಟಿಗೆ ||
ಸಂಜೀಯ ಜಾವಿಗೆ | ಹೋಗಿದ್ದ್ಯೆ ಬಾವಿಗೆ ||”

ಕವಿ ತನ್ನ ಸವಿ ಅನುಭವವನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ.
“ಮಂಗಲೆಯೊಂದಿಗೆ | ಹಿಗ್ಗಾಯ್ತು ತಂದೆಗೆ ||
ಕುಣಿಸ್ಯಾಡಿ ಕೂಸಿಗೆ | ಅರಳಿಸಿ ಆಸೆಗೆ ||
ರಾಗದ ಸಾಟಿಗೆ | ತೂಗ್ಯಾಡೊ ಧಾಟಿಗೆ ||
ಒಲಿದಾಡೊ ರೀತಿಗೆ | ಹಾಡ್ಯಾನ ಗೀತಿಗೆ ||
ಸಂಜೀಯ ಜಾವಿಗೆ | ಹೊರಟೀದಿ ಬಾವಿಗೆ ||”

ಮೊದಲನೆಯ ನುಡಿಯು ಕೊನೆಯ ನುಡಿಯಂತೆಯೇ ಕಾಣುತ್ತಿದೆ. ಆದರೆ ಮೊದಲನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನೊ ಗೀತಿಗೆ ” ಎನ್ನುವ ಉಲ್ಲಾಸಮಯ ಪ್ರಾರಂಭವಿದ್ದರೆ, ಕೊನೆಯ ನುಡಿಯ ನಾಲ್ಕನೆಯ ಸಾಲಿನಲ್ಲಿ “ ಹಾಡ್ಯಾನ ಗೀತಿಗೆ ” ಎನ್ನುವ ಮಂಗಲಮುಕ್ತಾಯವಿದೆ.

ಬೇಂದ್ರೆಯವರ ಈ ಕವನದ ಎರಡು ವೈಶಿಷ್ಟ್ಯಗಳನ್ನು ಇಲ್ಲಿ ಗಮನಿಸಬಹುದು.
ಮೊದಲನೆಯದು ಸಹಜ ಛಂದಸ್ಸು , ಅಂದರೆ ಕಾವ್ಯದ ವಸ್ತುವಿಗೆ ಹೊಂದಿಕೊಳ್ಳುವ ಛಂದಸ್ಸು.
ಎರಡನೆಯದು, ನಿಸರ್ಗದ ವಸ್ತುಗಳಾದ ಹೂವು , ಕಲ್ಲು ಇತ್ಯಾದಿ ವಸ್ತುಗಳ ಮಾನುಷೀಕರಣ ಹಾಗು ಅವುಗಳ ಜೊತೆಗೆ ಕವನವು ಸಾಧಿಸಿದ ತಾದಾತ್ಮ್ಯ.
ಈ ಕವನವು ಕೇವಲ ಪುಟ್ಟ ಬಾಲೆಯ ಬಗೆಗಿನ ಕವನವಲ್ಲ. ಇದು ನಿಸರ್ಗವಸ್ತುಗಳ ಬಗೆಗಿನ ಕವನವೂ ಹೌದು.
ಅಂತೆಯೇ ಕವನ ಮುಗಿದ ಬಳಿಕವೂ ಸಹ ಕೆಳಗಿನ ಸಾಲುಗಳು ನಮ್ಮ ಮನಸ್ಸಿನಲ್ಲಿ ರಿಂಗಣಿಸುತ್ತಲೇ ಉಳಿದು ಬಿಡುತ್ತವೆ:
“ಗುಲಬಾಕ್ಷಿ, ಮಲ್ಲಿಗೆ ಕೇಳತಾವ ಕಲ್ಲಿಗೆ
ಕಳಸೋದೆ ನೀರಿಗೆ, ಇಂಥ ಸುಕುಮಾರಿಗೆ ?”

29 comments:

  1. ಸುನಾಥವರೇ,
    ಮದುವೆಯ ಸಂಭ್ರಮದ ನಂತರ, ಮತ್ತೆ ಬೇಂದ್ರೆಯ ಊಟ ಮಾಡಿಸಿದ್ದೀರಿ.
    "ಚಾಚ್ಯಾವಂಗಾಲಿಗೆ | ಮುಚ್ಚಂಜಿ ನಾಲಿಗೆ ||" ತುಂಬ ಇಷ್ಟವಾಯಿತು. ತುಂಬ ಹಿಂದೆ ಓದಿದ್ದ ಈ ಕವಿತೆಯನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.
    ಮತ್ತೆ, ನನ್ನ ನೀಲುವಿಗೊಂದು ಸಾಲು ಬರೆದಿದ್ದಕ್ಕೆ ಥ್ಯಾಂಕ್ಸ್!
    - ಕೇಶವ

    ReplyDelete
  2. ಬೇಂದ್ರೆ ಅವರು ಕವಿಯಲ್ಲ.. ಅವರೇ ಒಂದು ಕವಿತೆ.. Poetic Soul ಅವರು ..

    ನೀವು ಹಿಂದೆ ಬೇಂದ್ರೆ ಅವರ ಅನೇಕ ಕವಿತೆಗಳ ಬಗ್ಗೆ ಬರೆದದ್ದನ್ನು ಓದಿದ್ದೇನೆ.. ತುಂಬ ಇಷ್ಟವಾಗಿತ್ತು...

    ಈಗ ಮತ್ತೆ ಬೇಂದ್ರೆ ಅವರ ಮತ್ತೊಂದು ಅತ್ಯಂತ ಸುಂದರ ಕವಿತೆಯೊಂದನ್ನುಓದಲು ನೀಡಿದ್ದಿರಿ.. ಧನ್ಯವಾದಗಳು...

    ReplyDelete
  3. ಸುನಾಥ್ ಸರ್,
    ಮಗಳ ಮದುವೆಯ ಗೌಜು ಮುಗಿಸಿ ಬ್ಲಾಗಿನತ್ತ ಮತ್ತೆ ಹೊರಳಿದ್ದೀರಿ, ಜೊತೆಗೆ ಬೇ೦ದ್ರೆಯಜ್ಜನ ಕಾವ್ಯದ ರಸದೂಟ ಉಣಬಡಿಸಿದ್ದೀರಿ. ನೀವು ಬೇ೦ದ್ರೆಕಾವ್ಯವನ್ನು ಅನುಭವಿಸಿ ಅದರ ಒಳ ಹೂರಣವನ್ನು ಮೊಗೆಮೊಗೆದು ಹೊಸ ಅರ್ಥ ಗಳನ್ನು ತಿಳಿಹೇಳಿ, ಕಾವ್ಯದ ಹೊಳಪನ್ನು ಇನ್ನಷ್ಟು ಹೆಚ್ಚಿಸಿದ್ದಿರಿ. ಬೇ೦ದ್ರೆಯವರ ಕಾವ್ಯ ಹೇಗೆ ಅನುಪಮವೋ, ಹಾಗೆಯೆ ಅವರ ಕವನಗಳ ಬಗ್ಗೆ ನಿಮ್ಮ ಈ ವಿವರಣಾತ್ಮಕ ಬರಹ ಕೂಡ ವಿಶಿಷ್ಟ. ನಿಮ್ಮ ಬ್ಲಾಗ್ ಬರಹಗಳು ಪುಸ್ತಕರೂಪದಲ್ಲಿ ಬರಬೇಕು. ಏಕೆ೦ದರೆ ಇದು ಓದಿ ಮರೆಯುವ೦ಥಾದ್ದಲ್ಲ, ಸ೦ಗ್ರಹಯೋಗ್ಯ. ಚೆನ್ನಾಗಿದೆ. ತು೦ಬಾ ದಿನಗಿ೦ದ ನೀವಿಲ್ಲದೇ ಬಿಕೋ ಎನ್ನುತ್ತಿತ್ತು. ಮತ್ತೆ ಬ೦ದು ಆ vaccume ತು೦ಬಿದ್ದೀರಿ. ವ೦ದನೆಗಳು.

    ReplyDelete
  4. ಸುನಾಥ್ ಸರ್,

    ಬೇಂದ್ರೆಯವರ ಕವನಗಳ ಸಾಲು ಅವರಷ್ಟೆ ಚೆಂದ... ಈಗ ತಾನೆ ನೀವು ಮಗಳ ಮದುವೆ ಮಾಡಿ ಅತ್ತೆ ಮನೆಗೆ ಕಳಿಸಿಕೊಟ್ಟಿದ್ದೀರಿ. ನಿಮಗೊ ನಿಮ್ಮ ಮಗಳ ಆಟ ಮಾತು ಎಲ್ಲವೊ ನೆನಪಾಗಿರಬೇಕು.. ಹೆಣ್ಣು ಮಕ್ಕಳು ತಂದೆಯೊಂದಿಗೆ ಆತ್ಮೀಯತೆ ಹೆಚ್ಚು ಹಾಗೆ ಪ್ರೀತಿ ಪಾತ್ರರರೊ ಕೂಡ..
    ನೀವು ಬೇಂದ್ರೆಯವರ ಕವನವೆಲ್ಲವನು ಅರ್ಥಪೂರ್ಣವಾಗಿ ತೆರೆತಿಟ್ಟಿದ್ದೀರಿ ತುಂಬಾ ಖುಷಿ ಹಾಗು ನನ್ನ ಹಾಗು ನನ್ನ ತಂದೆಯವರ ನಡುವಿನ ಮಾತು ಹರಟೆ.. ಅವರ ಪ್ರೀತಿ ಎಲ್ಲವನ್ನು ನೆನಪು ಮಾಡಿಸಿತು..ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
    ಹೀಗೆ ಹಲವು ಕವನಗಳ ಅರಿವು ನಮಗಾಗಲಿ
    ಧನ್ಯವಾದಗಳು

    ReplyDelete
  5. ಸುನಾಥ್ ಅವರೇ,
    superb explanation...
    ಮೊದಲು ಕವನ ಓದಿದಾಗ ನನಗೆ ಅರ್ಥವಾಗಲಿಲ್ಲ,
    ನೀವು ಅದನ್ನು ವಿವರಿಸಿ ಹೇಳಿದಾಗ ಅರ್ಥವಾಯಿತು..
    ಎಂತ ಒಳ್ಳೆಯ ಕವನ... ತುಂಬಾ ಚನ್ನಾಗಿದೆ...
    ತುಂಬಾ ಚನ್ನಾಗಿ ವಿವರಿಸಿದ್ದೀರಿ...
    ನನಗರ್ಥವಾಗದ ಕವನ, ಅರ್ಥಮಾಡಿಸಿದ್ದಿರಿ..
    ತುಂಬಾ ಧನ್ಯವಾದಗಳು...

    ReplyDelete
  6. ಅಂಕಲ್...
    ತುಂಬ ಆಪ್ತವೆನಿಸುತ್ತದೆ, ಮತ್ತೆ ಮತ್ತೆ ಓದಬೇಕೆನಿಸುತ್ತದೆ.
    ಕವನವನ್ನು ಮಾತ್ರ ಓದಿದರೆ ಆಪ್ತವೆನಿಸುತ್ತಿತ್ತು. ಈಗ ಇನ್ನಷ್ಟು ಆಪ್ತವೆನಿಸುತ್ತಿದೆ.
    ಧನ್ಯವಾದ.

    ReplyDelete
  7. ವರಕವಿಗೆ ಕನ್ನಡಿ ಹಿಡಿದಿದ್ದೀರಿ! ವಿರಾಮವಾಗಿ ಕುಳಿತು ಓದಿದೆ. ಇದುವರೆಗೆ ಬೇಂದ್ರೆಯವರ ಸಾಹಿತ್ಯದ ಬಗ್ಗೆ ನೂರಾರು ಲೇಖನಗಳನ್ನು ಓದಿದ್ದರೂ, ಇಷ್ಟೊಂದು ಆಪ್ತವಾಗಿ ಓದಿಸಿಕೊಂಡ ಬೇರೆ ಲೇಖನ ಮತ್ತೊಂದಿಲ್ಲ. ಸಹೃದಯ ವಿಮರ್ಶೆಗೆ ಇದು ಮಾದರಿ. ಇಲ್ಲಿ ವಿಮರ್ಶಕನ ಬುದ್ಧಿಪ್ರದರ್ಶನಕ್ಕಿಂತ ಕವಿಯನ್ನು ಬಿಂಬಿಸುವುದೇ ಮುಖ್ಯ. ಻ದು ಈ ಲೇಖನದಲ್ಲಿ ಸಾಧಿತವಾಗಿದೆ.

    ReplyDelete
  8. ಕೇಶವ,
    ಮದುವೆಯ ಊಟದಂತೆಯೇ ಬೇಂದ್ರೆಯವರ ಕವನದೂಟವು ಸಿಹಿಯಾಗಿ ಇರುತ್ತದೆ, ಅಲ್ಲವೆ? ಆದರೆ, ಮದುವೆಯ ಊಟ ಕೆಲವೊಮ್ಮೆ ಮಾತ್ರ. ಬೇಂದ್ರೆಯವರ ಕವನದೂಟವನ್ನು ಬೇಕಾದಾಗ ಸವಿಯಬಹುದು!

    ReplyDelete
  9. ಗೋದಾವರಿ,
    ನೀವು ಹೇಳುವದು ನಿಜ. ಕವನವೇ ಬೇಂದ್ರೆ ರೂಪ ತಾಳಿತೇನೊ ಎಂದು ಅನಿಸುತ್ತದೆ.

    ReplyDelete
  10. ಪರಾಂಜಪೆಯವರೆ,
    ಮದುವೆ ಮುಗಿದ ಬಳಿಕ, ಈಗ relaxation.
    Relaxation ಅಂದರೆ ಬೇಂದ್ರೆ!

    ReplyDelete
  11. ನಗಿಸು,
    ನಿಮ್ಮ ಹಾಗೂ ನಿಮ್ಮ ತಂದೆ ಸಾಹಿತ್ಯವಿನೋದದ ಹರಟೆಯಲ್ಲಿ ತೊಡಗಿರುತ್ತಿದ್ದನ್ನು ತಿಳಿದು ಖುಶಿಯಾಯಿತು.
    ನೀವು ಹೇಳಿದಂತೆ, ಹೆಣ್ಣುಮಕ್ಕಳು ತಂದೆ-ತಾಯಿಯರಿಗೆ ವಿಶೇಷವಾಗಿ ಸ್ಪಂದಿಸುತ್ತಾರೆ.
    ಇದೇ ಒಂದು ಭಾಗ್ಯ!

    ReplyDelete
  12. ಶಿವಪ್ರಕಾಶ,
    ಬೇಂದ್ರೆಯವರ ಕವನಗಳು ಮೇಲೆಮೇಲೆ ಸರಳವಾಗಿರುತ್ತವೆ. ಒಳಗೆಲ್ಲ ವಿಶೇಷಾರ್ಥದಿಂದ ತುಂಬಿರುತ್ತವೆ. ಅವರ ಕವನಗಳನ್ನು ನಾವೆಲ್ಲ ಜೊತೆಯಾಗಿ ಸವಿಯೋಣ!

    ReplyDelete
  13. ಶಾಂತಲಾ,
    ಬೇಂದ್ರೆಯವರ ಕೌಟುಂಬಿಕ ಕವನಗಳು ತುಂಬ ಆಪ್ತವಾಗಿರುತ್ತವೆ.
    ಇದರಂತೆಯೇ ಆಪ್ತವಾದ ಕವನಗಳೆಂದರೆ ನರಸಿಂಹಸ್ವಾಮಿಯವರ
    ಮೈಸೂರು ಮಲ್ಲಿಗೆಯ ಕವನಗಳು. ಹೌದಲ್ಲವೆ?

    ReplyDelete
  14. ಸತ್ಯನಾರಾಯಣರೆ,
    ಧನ್ಯವಾದಗಳು.
    ನನ್ನ ಚಿಕ್ಕ ಪ್ರಯತ್ನಕ್ಕೆ ನೀವು ಕೊಡುವ ಪ್ರೋತ್ಸಾಹ ಹೆಚ್ಚಿನದು.

    ReplyDelete
  15. ನಿಮ್ಮ ವಿವರಣೆ ಕೇಳಿ ಪುಟ್ಟ ಬಾಲೆಯೊಬ್ಬಳು ಕಣ್ಮುಂದೆ ಬಂದಳು.
    ನಮ್ಮೂರ ಕಡೆ ಮದುವೆ ಮನೆಯಲ್ಲಿ ಪುಟ್ಟ ಹುಡುಗಿಗೆ ಸೀರೆ,ಒಡವೆ ಹಾಕಿ ತಲೆ ಮೇಲೊಂದು ಬೈತಲೆ ಮಣೆ ಇಳಿಬಿಟ್ಟು ಕಳಸಗಿತ್ತಿ ಅಂತ ಕೂಡ್ರಿಸುತ್ತಾರೆ.
    ಥೇಟ್ ಅದೇ ಹುಡುಗಿ ನೆನಪಿಗೆ ಬಂದಳು!
    ಬೇಂದ್ರೆ ಅಂದರೆ ಬಹುಶಃ ಇದೇನೆ...

    -ರಾಘವೇಂದ್ರ ಜೋಶಿ

    ReplyDelete
  16. ಸುನಾತ್,

    ಮಾತೀಗು ಆಚೆಗೆ | ಮೀರಿದ್ದ ನಾಚಿಗೆ ||
    ಮುಸುಕ್ಯಾವ ಹೂವಿಗೆ | ಬಂದೀಯೆ ಬಾವಿಗೆ ||

    ಬೆಂದ್ರೆಯವರ ಸಂಪನ್ನತೆಗೆ ನಿಮ್ಮ ಭಾಷ್ಯದ ಹಿಮ್ಮೇಳ ಇಂಪಾಗಿ, ಮನದುಂಬಿ ಬಂತು.
    ಎಷ್ಟೊಂದು ಸೊಬಗಿದೆ ಪ್ರತಿ ಸಾಲುಗಳಲ್ಲಿ.

    ಹುಡುಕಿ ತಂದು ಕೊಟ್ಟ ನಿಮಗೆ ಅನಂತ ಧನ್ಯವಾದಗಳು...
    -ಗಿರಿ

    ReplyDelete
  17. ಚೆಕ್ಕಮಕ್ಕಳೊಂದಿಗೆ ಆಟಕ್ಕೆ ಕುಳಿತರೆ ಜಗವೇ ಮರೆತು ಬಿಡಬಹುದು.. ಕವನ ಅದರ ವಿವರಣೆ ಸೊಗಸಾಗಿದೆ

    ReplyDelete
  18. rj,
    ನಿಮ್ಮ ವಿವರಣೆ ಓದಿದ ಬಳಿಕ, ಬಹುಶಃ ಬೇಂದ್ರೆಯವರ ಕಣ್ಣಿಗೂ
    ತಮ್ಮ ಪುಟ್ಟ ಮಗಳು ಕಳಸಗಿತ್ತಿಯಂತೆ ಕಂಡಿದ್ದಳೇನೊ ಎಂದು ಅನಿಸಿತು.

    ReplyDelete
  19. ಗಿರಿ,
    ಬೇಂದ್ರೆ-ಕವನದ ರಸವುಂಡು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  20. ಪ್ರಭುರಾಜ,
    ಮಕ್ಕಳ ಜೊತೆಗೆ ಆಡುವಾಗ ದೊಡ್ಡವರೂ ಸಹ ಮಕ್ಕಳಾಗಿ ಬಿಡುತ್ತಾರೆ. ನಿಮ್ಮ blogನಲ್ಲಿ ನೀವಿನ್ನೂ ಹೊಸದಾಗಿ ಮದುವೆಯಾದಂತಹ ಹಂತದಲ್ಲಿದ್ದೀರಿ. ನಿಮ್ಮ ಹೊಸ ರೋಮಾನ್ಸ್ ಸೊಗಸಾಗಿದೆ. ಚಿಕ್ಕಮಕ್ಕಳನ್ನು ಆಡಿಸುವ ಹಂತವನ್ನು ಎದುರು ನೋಡುತ್ತೇನೆ!

    ReplyDelete
  21. ನಮಸ್ತೆ ಸರ್..
    ನನಗೆ ತುಂಬಾ ಇಷ್ಟದ ಕವಿ ಬೇಂದ್ರೆ. ಅವರ ಕುರಿತಾಗಿ ಬರೆದು ಇನ್ನಷ್ಟು ತಿಳಿಸಿಕೊಟ್ಟಿದ್ದೀರಿ ಸರ್.
    "ತನ್ನ ಕಿರಣ ತನಗೆ ಹಗಲು ಉಳಿದ ಬೆಳಕು ಕತ್ತಲು" ಎಂಬುವುದು ಬೇಂದ್ರೆ ಅವರ ನುಡಿ ಎಂದು ಓದಿದ ನೆನಪು. ಇದರ ವಿಶಾಲ ಅರ್ಥ ವ್ಯಾಪ್ತಿಯನ್ನು ತಿಳಿಸಿಕೊಡುವಿರಾ ಸರ್.
    -ಧರಿತ್ರಿ

    ReplyDelete
  22. ಸುನಾಥ್ ಸರ್,

    ಬೇಂದ್ರೆ ಅಜ್ಜನ ಕುರಿತ ಬರಹ ಓದಿ ಬಲು ಖುಷಿ ಆಯ್ತು. ಜೋಗಿ ಒಂದು ಬರಹದಲ್ಲಿ ಬೇಂದ್ರೆ ಜಗತ್ತಿನಲ್ಲೇ ಶ್ರೇಷ್ಟ ಕವಿ ಅಂದರು.(ಜಾನಕಿ ಕಾಲಮ್, ಭಾಗ-೨). ಕವಿಯ ಬಗ್ಗೆ ಬರೆಯುತ್ತ ಬರೆಯುತ್ತಾ ಹಾಗನ್ನುವುದು ಮಾಮೂಲು. ಆದರೆ ಬೇಂದ್ರೆಯವರ ಕುರಿತು ಅಂದಿದ್ದು ಒಂಚೂರು ಉತ್ಪ್ರೇಕ್ಷೆ ಅನ್ನಿಸಲಿಲ್ಲ.

    ಒಳ್ಳೆಯ ಬರಹಕ್ಕೆ ಥ್ಯಾಂಕ್ಸ್.

    ReplyDelete
  23. ಧರಿತ್ರಿ,
    ಬೇಂದ್ರೆಯವರ ಹೆಂಡತಿ, "ನೀವು ನನ್ನ ಮ್ಯಾಲ ಪ್ರೀತಿ ಮಾಡೋದಿಲ್ಲ, ನನಗೆ ಮುತ್ತಿನ ಹಾರ ಕೊಡಸಿಲ್ಲ" ಅಂತ ಆಪಾದನೆ ಮಾಡಿದಾಗ, ಬೇಂದ್ರೆಯವರು ಹಾಡಿದ ಕವನದಲ್ಲಿ ನೀವು ಹೇಳಿದ ಸಾಲುಗಳು ಬರುತ್ತವೆ.
    ಇದರ ಬಗೆಗೆ ಮುಂದಿನ ಲೇಖನದಲ್ಲಿ ಹೆಚ್ಚಿನ ಮಾಹಿತಿ ಕೊಡುತ್ತೇನೆ.

    ReplyDelete
  24. ರಣಜಿತ,
    ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಬೇಂದ್ರೆ ಒಬ್ಬರು ಎನ್ನುವದು ಸರಿಯಾದ ಮಾತಾದೀತು.ವಿಮರ್ಶಕ ಆಮೂರರಂತೂ ಬೇಂದ್ರೆಯವರನ್ನು "ಭುವನದ ಭಾಗ್ಯ" ಎಂದಿದ್ದಾರೆ.
    ನಮ್ಮ ಕನ್ನಡದ ನವೋದಯ ಕಾಲದಲ್ಲಿ ಅಡಿಗ, ರಾಜರತ್ನಮ್, ಕೆ.ಎಸ್.ಎನ್. ಇವರೂ ಸಹ ಶ್ರೇಷ್ಠ ಕವಿಗಳೇ. ನವ್ಯರಲ್ಲಿ ಅಡಿಗರನ್ನು ಮೀರಿಸುವ ಕವಿ ಕನ್ನಡದಲ್ಲಿ ಇನ್ನೊಬ್ಬರು ಬಂದಿಲ್ಲ.

    ReplyDelete
  25. ಅಂಕಲ್,

    ಅವರ ಬೇರೆ ಕವನಕ್ಕಿಂತ ಇಲ್ಲಿ ಛಂದಸ್ಸು ಕಡೆ ಹೆಚ್ಚು ಗಮನ ಕೊಟ್ಟು ಬರೆದಿದ್ದರು ಅನಿಸುತ್ತದೆ. ಓದುವುದರ ಜೊತೆಗೆ ನಮ್ಮಗನಿಸಿದ Tune ಹಾಕಿ ಹಾಡಬಹುದೂ ಕೂಡ.

    ReplyDelete
  26. ಓಕೆ ಅಂಕಲ್..ಕಾಯ್ತಾ ಇರ್ತೀನಿ.
    -ಧರಿತ್ರಿ

    ReplyDelete
  27. ಸುನಾಥ ಸರ್ ನನಗ ಅನಸ್ತದ ಬೇಂದ್ರೆ ,ಕುವೆಂಪು,ಪುತಿನ ಇವರಿಗೆ ಸುತ್ತಲಿನ ಪರಿಸರ ಬಹಳ ಸ್ನೇಹಮಯಿಯಾಗಿತ್ತು ಮತ್ತ ಅದು ಇಷ್ಟು ಕೆಟ್ಟಿರಲಿಲ್ಲ ಭಾವಿ ಕೊಡ ನೀರು ತರುವುದು ಮುಂತಾದ ಚಟುವಟಿಕೆಗಳೆ ಈಗ ಇಲ್ಲ..
    ಬೇಂದ್ರೆ ಅವರಂತೂ ಶಬ್ದದ ಮೋಡಿಗಾರ ಎರಡು ಮಾತಿಲ್ಲ
    "ಕಿರಗಿ ಒದಿಯುತ..." ಎಂಥಾ ಸುಂದರ ಕಲ್ಪನಾ ಅಲ್ಲ?

    ReplyDelete
  28. ಜಯಶಂಕರ,
    ಬೇಂದ್ರೆಯವರ ಹೆಚ್ಚಿನ ಕವನಗಳು ಹಾಡುಗವನಗಳೇ. ಬೇಂದ್ರೆಯವರು ತಮ್ಮ ಕವನಗಳ ಸರಿಯಾದ tuning ಬಗೆಗೆ ಬಹಳ particular ಆಗಿರುತ್ತಿದ್ದರು.
    ಮಾಧವ ಗುಡಿಯವರ ಗಂಡಾ ಸಮಾರಂಭದಲ್ಲಿ, ಗುಡಿಯವರು ಬೇಂದ್ರೆಯವರ "ಗಮ ಗಮಾ ಗಮಾಡಸ್ತಾವ ಮಲ್ಲಿಗಿ" ಕವನವನ್ನು ಹಾಡಿದರು. ಬೇಂದ್ರೆಯವರಿಗೆ ಗುಡಿಯವರ ಹಾಡುಗಾರಿಕೆ ಸರಿ ಕಾಣಲಿಲ್ಲ. ಆಗ ಅವರು ಕವನದ ಕೊನೆಯ ಸಾಲನ್ನು ಬದಲಿಸಿ ಗುಡಿಯವರ ಮೇಲೆ ಟೀಕೆ ಮಾಡಿದರು:
    "ತಿಳಿಲಿಲ್ಲೊ ರಾಯಾ ನಿನಗ ನನ್ನ ಮನಸು".

    ReplyDelete
  29. ಉಮೇಶ,
    ನವೋದಯದ ಆದರ್ಶಮಯ ವಾತಾವರಣವೇ ಬೇರೆ. ಈಗಿನ polluted ವಾತಾವರಣವೇ ಬೇರೆ. ಅಡಿಗರನ್ನು ಹೊರತುಪಡಿಸಿ ಉಳಿದ ನವ್ಯ ಕವಿಗಳಲ್ಲಿ ಯಾರನ್ನೂ ಆದರ್ಶ ಸಾಹಿತಿಗಳೆಂದು ಹೇಳುವದು ಸಾಧ್ಯವಾಗಲಾರದು.

    ReplyDelete