Saturday, August 22, 2009

ಬೇಂದ್ರೆಯವರ ‘ಬೆಳಗು’--ಇದು ಬರಿ ಹಾಡಲ್ಲೋ ಅಣ್ಣಾ!

ಬೇಂದ್ರೆಯವರ ಕವನಗಳನ್ನು ಪ್ರತಿ ಸಲ ಓದಿದಾಗಲೂ ಹೊಸ ಅರ್ಥ ‘ಹೊಳೆ’ಯುತ್ತಿರುತ್ತದೆ ಅವರ ಕವನಗಳನ್ನು ಈ ಹೊತ್ತು ನಾವು ಪೂರ್ಣವಾಗಿ ಅರಿತುಕೊಂಡಿದ್ದೇವೆ ಎಂದು ಹೇಳುವದು ಸಾಧ್ಯವಲ್ಲದ ಮಾತು. ಅವರ ಕವನಗಳಲ್ಲಿ ಅರ್ಥವಲ್ಲದೇ ಪರಮಾರ್ಥವೂ ಇರುತ್ತದೆ. ಉದಾಹರಣೆಗೆ ಅವರ ‘ಬೆಳಗು’ ಕವನವನ್ನೇ ತೆಗೆದುಕೊಳ್ಳಿರಿ. ಈ ಕವನದ ಕೊನೆಯ ನುಡಿಯ ಬಗೆಗೆ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ಹೆಚ್ಚಿನ ವಿವರಣೆಯನ್ನು ಈ ರೀತಿಯಾಗಿ ಕೊಟ್ಟಿದ್ದಾರೆ.

ಕವನದ ಕೊನೆಯ ನುಡಿ ಹೀಗಿದೆ:
“ ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಕಣ್ಣಿಗೆ—ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತೀಯಿಂದಾ
ಮೈದೋರಿತಣ್ಣಾ
ಇದು ಬರಿ—ಬೆಳಗಲ್ಲೋ ಅಣ್ಣಾ”

ಕವನದ ಮೊದಲಿನ ಐದು ನುಡಿಗಳಲ್ಲಿ ಬೇಂದ್ರೆಯವರು ತಮ್ಮ ಪಂಚೇಂದ್ರಿಯಗಳಿಗಾದ ವಿಸ್ಮಯಭರಿತ ಅನುಭವವನ್ನು ವರ್ಣಿಸಿದ್ದಾರೆ. ಪಂಚೇಂದ್ರಿಯಗಳ ಆ ಅನುಭವವು ಮನಸ್ಸನ್ನು ಹೇಗೆ ‘ವಿಶ್ವಾತ್ಮ’ನಲ್ಲಿ ತನ್ಮಯಗೊಳಿಸಿತು ಎನ್ನುವದನ್ನೂ ಹೇಳಿದ್ದಾರೆ. (‘ದೇವರದೀ—ಮನಸಿನ ಗೇಹಾ’).

ಈ ಕೊನೆಯ ನುಡಿಯಲ್ಲಿ ಅವರು “ಅರಿಯದು ಅಳವು ತಿಳಿಯದು ಮನವು” ಎಂದು ಹೇಳುತ್ತಾರೆ. “ಅಳವು” ಅಂದರೆ ಸಾಮರ್ಥ್ಯ. ಬೇಂದ್ರೆಯವರು ‘ಬೆಳಗಿ’ ನ ಪೂರ್ಣ ಅನುಭವವು ತಮ್ಮ ಪಂಚೇಂದ್ರಿಯಗಳ ಅಳವಿಗೆ ಹೊರತಾದದ್ದು ಎಂದು ಹೇಳುತ್ತಿದ್ದಾರೆ. ಇದು ಮನುಷ್ಯನ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಮೀರಿದ್ದು. ಆದುದರಿಂದಲೇ ‘ತಿಳಿಯದು ಮನವು’. ತನ್ನ ಪಂಚೇಂದ್ರಿಯಗಳ ಸಂವೇದನೆಯಿಂದಲೇ ಲೋಕವನ್ನು ತಿಳಿಯುವ ಮನಸ್ಸಿಗೆ ‘ಬೆಳಗಿ’ನ ಪೂರ್ಣ ಅನುಭವವನ್ನು ತಿಳಿಯಲು ಸಾಧ್ಯವಾಗುವದಿಲ್ಲ. ಈ ಅನುಭವದ ಬಣ್ಣ ಹೊರಗಣ್ಣಿಗಾಗಲೀ ಒಳಗಣ್ಣಿಗಾಗಲೀ ಕಾಣದು. ಉದಾಹರಣೆಗೆ ಹೊರಗಣ್ಣಿಗೆ ಕಾಣುವದು ಕೇವಲ ಏಳೇ ಬಣ್ಣಗಳು. ಈ ಬಣ್ಣಗಳ ತರಂಗಾಂತರದ ಹೊರಗಿನ ಬಣ್ಣಗಳನ್ನು ನಮ್ಮ ಹೊರಗಣ್ಣು ಗ್ರಹಿಸಲಾರದು. ಆ ಕಾರಣದಿಂದ ನಮ್ಮ ಮನಸ್ಸೂ ಸಹ ಅದನ್ನು ಗ್ರಹಿಸಲಾರದು. ಅದರಂತೆ ಈ ಅನುಭವವೂ ಸಹ ಪಂಚೇಂದ್ರಿಯಗಳ ಹೊರಗಿನ ‘ಅಲೌಕಿಕ’ ಅನುಭವ.

ಉಪನಿಷತ್ತಿನಲ್ಲಿ ಭಗವಂತನನ್ನು ‘ಅತ್ಯತ್ತಿಷ್ಠದ್ದಶಾಂಗುಲಮ್’ ಎಂದು ವರ್ಣಿಸಲಾಗಿದೆ. ಭಗವಂತನು ತನ್ನ ಸೃಷ್ಟಿಯ ಒಳಗಲ್ಲದೆ, ಹೊರಗೂ ಸಹ ಹತ್ತು ಅಂಗುಲದವರೆಗೆ ವ್ಯಾಪಿಸಿದ್ದಾನೆ. ಅದರಂತೆ ಈ ಅನುಭವವೂ ಸಹ ಮನುಷ್ಯನ ಸಂವೇದನೆಯ ಅಳವಿನ ಹೊರಗೂ ವ್ಯಾಪಿಸಿದೆ. ಈ ಅಲೌಕಿಕ ವಿಸ್ಮಯವನ್ನು ಬಣ್ಣಿಸಲೇ ಬೇಕಾದರೆ, “ಶಾಂತೀರಸವೇ ಪ್ರೀತೀಯಿಂದಾ ಮೈದೋರಿತಣ್ಣಾ” ಎಂದಷ್ಟೇ ಹೇಳಬಹುದು.

ಭಗವಂತನು ಶಾಂತಿರಸದ ಅನಂತಸಮುದ್ರವಿದ್ದಂತೆ. ಅವನಲ್ಲಿ ಇರುವ ಪ್ರೀತಿಯೇ ಸೃಷ್ಟಿಯ ರೂಪವಾಗಿ ಮೈದೋರುತ್ತದೆ. ಈ ಮಾಂತ್ರಿಕನ ಪ್ರೀತಿಯ ಜಾದೂದಿಂದಲೇ ಸೃಷ್ಟಿಯ ರೂಪಗಳು ವ್ಯಕ್ತವಾಗುತ್ತವೆ. ಆದುದರಿಂದ ಈ ಬೆಳಗೆನ್ನುವದು ಭಗವಚ್ಚೈತನ್ಯದ ರೂಪ. ಹೀಗಾಗಿ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎಂದು ಬೇಂದ್ರೆಯವರು ಹಾಡುತ್ತಾರೆ.
ಅದೇ ರೀತಿಯಾಗಿ ಬೇಂದ್ರೆಯವರ ಕವನದ ಬಗೆಗೆ ನಾವೂ ಹೇಳಬಹುದಲ್ಲವೆ :
“ಇದು ಬರಿ ಹಾಡಲ್ಲೋ ಅಣ್ಣಾ!”

(ಶ್ರೀ ವ್ಯಾಸ ದೇಶಪಾಂಡೆಯವರಿಗೆ ಕೃತಜ್ಞತೆಗಳು.)

38 comments:

  1. ಕಾಕಾ ಗಣಪತಿ ಹಬ್ಬದ ಶುಭಾಶಯಗಳು.
    ಖರೆ ಅದ ಬೇಂದ್ರೆ ಅವರದು ಬರಿ ಹಾಡು ಅಲ್ಲ ಅದು
    ಒಳಗನ್ನು ಬೆಳಗುವ ದೀಪ ಅದು ನಿಮಗ ಒಲದದ.

    ReplyDelete
  2. ಉಮೇಶ,
    ನಿಮಗ, ನಿಮ್ಮ ಶ್ರೀಮತಿಯವರಿಗೆ ಹಾಗೂ ಸುನಿಧಿಗೆ ಗಣಪತಿ ಹಬ್ಬದ ಶುಭಾಶಯಗಳು.

    ReplyDelete
  3. neevu heLuva maatu nija..bendreyavara haadugaLe haagive.

    dhanyavadagaLu
    Gowri-Ganesha habbada shubhashayagaLu

    ReplyDelete
  4. ನಗಿಸು,
    ನಿಮಗೂ ಸಹ ಗಣೇಶಚವತಿಯ ಶುಭಾಶಯಗಳು.

    ReplyDelete
  5. ಈ ಕವನಗಳೆ ಹೀಗೇ ಸರ್, ಕವಿ ಅದ್ಯಾವ ಭಾವದಲ್ಲಿ ಬರೆದನೊ ಅವನಿಗೇ ಗೊತ್ತು, ಬರೆದ ಆ ಹೊತ್ತಿನಲ್ಲಿ ಯಾವ ಮೂಡು ಇತ್ತು, ಅದು ಹೇಗೆ ಮೂಡಿಬಂತು ಅನ್ನೋದು ಬಿಡಿಸಿ ತಿಳಿದುಕೊಳ್ಳಲು ಬಲು ಕಷ್ಟ... ಇನ್ನು ಬೇಂದ್ರೆಯವರ ಬಗ್ಗೆ ಏನು ಹೇಳೊದು, "ನೀ ಹಿಂಗ್ ನೋಡಬ್ಯಾಡ" ದಂಥ್ ಕವನ ವಿಚಿತ್ರ ಭಾವನೆಯಲ್ಲಿ, ಸನ್ನಿವೇಷದಲ್ಲಿ ಬರೆದಿರುವಾಗ...

    ReplyDelete
  6. ಸುನಾಥ್ ಸರ್,

    ಖಂಡಿತ ಇದು ಬರಿಯ ಹಾಡಲ್ಲೋ ಅಣ್ಣ ಅನ್ನುವುದು ಸರಿ....

    ಅವರ ಕವನಗಳಲ್ಲಿ ಅರ್ಥವಲ್ಲದೇ ಪರಮಾರ್ಥವೂ ಇರುತ್ತದೆ. ಅನ್ನುವುದಂತೂ ಎಷ್ಟು ಸತ್ಯದ ಮಾತು. ಮತ್ತೆ ಬಣ್ಣಗಳ ವಿಚಾರದಲ್ಲಿ ನಮ್ಮ ಹೊರಗಣ್ಣಿಗೆ ಕಾಣುವುದು ಏಳೇ ಬಣ್ಣಗಳು.
    ಈ ಬಣ್ಣಗಳ ತರಂಗಾಂತರದ ಹೊರಗಿನ ಬಣ್ಣಗಳನ್ನು ನಮ್ಮ ಹೊರಗಣ್ಣು ಗ್ರಹಿಸಲಾರದು.

    ಇದಂತೂ ಎಂಥ ಆನುಭವದ ಮಾತು...ಶ್ರೀ ವ್ಯಾಸ ದೇಶಪಾಂಡೆಯವರಿಗೆ ಮತ್ತು ಅದನ್ನು ಇಲ್ಲಿ ನಮಗಾಗಿ ಕೊಟ್ಟ ನಿಮಗೂ ಧನ್ಯವಾದಗಳು ಸರ್.

    ReplyDelete
  7. ಪ್ರಭುರಾಜ,
    ನೀವು ಹೇಳೋದು ಹದಿನಾರಾಣೆ ಸೋಳಾ ಪೈ ಖರೇ ಅದ.

    ReplyDelete
  8. ಶಿವು,
    ಬೇಂದ್ರೆಯವರ ಕವನಗಳು ನೋಡಲಿಕ್ಕೆ ಎಷ್ಟು ಸರಳ ಕಾಣಸ್ತಾವೋ, ತಿಳಕೋತ ಹೋದಹಂಗ ನಮಗ ಬೆರಗು ಹುಟ್ಟಸ್ತಾವ, ನೋಡರಿ.

    ReplyDelete
  9. ಸುನಾಥ ಅವರೆ,
    ವ್ಯಾಸ ದೇಶಪಾಂಡೆ ಅವರು ‘ಬೆಳಗು’ ಕವನದ ಬಗೆಗೆ ಮಾಡಿದ ವಿಶ್ಲೇಷಣೆ ನನಗೆ ತುಂಬಾ ಹಿಡಿಸಿತು.”ಇದು ಬರಿ ಬೆಳಗಲ್ಲೊ ಅಣ್ಣಾ" ಎನ್ನುವ ಸಾಲನ್ನು ಓದಿದಾಗ ಬೆಳಗಿನ ವಿಸ್ಮಯವನ್ನು ನಾವೂ ಸಹ ಅನುಭವಿಸುತ್ತೇವೆ. ಬೆಳಗಿನ ಜಾವವು ಎಷ್ಟೊಂದು ಆಹ್ಲಾದಕರ ಹಾಗೂ ಚೈತನ್ಯಮಯವಾಗಿರುತ್ತದೆ, ಅಲ್ಲವೆ? ಈ ಕವನವನ್ನು ಹಾಗೂ ನಿಮ್ಮ ವಿಶ್ಲೇಷಣೆಯನ್ನು ಓದಿದ ಬಳಿಕ ನಾನು ಪ್ರತಿದಿನವೂ ನೋಡುವ ಬೆಳಗು ಮತ್ತಿಷ್ಟು ಅರ್ಥಪೂರ್ಣವೆನಿಸುತ್ತದೆ.

    ReplyDelete
  10. ವನಮಾಲಾ,
    ಬೇಂದ್ರೆಯವರ ಕವನದ ಅರ್ಥದ ಹಿಂದೆ ಪರಮಾರ್ಥವಿರುತ್ತದೆ. ಹೀಗಾಗಿ ಅವರ ‘ಬೆಳಗು’ ನಮ್ಮ ಬೆಳಗಿಗೆ ಮತ್ತಷ್ಟು ಅರ್ಥ ಕೊಡುತ್ತದೆ!

    ReplyDelete
  11. ಕಾಕಾ,

    ವರ್ಣಿಸಲು ಪದಗಳಿಲ್ಲ. ಹಾಗಾಗಿ ಹೆಚ್ಚೇನೂ ಹೇಳಲಾರೆ. ಹಾಡೆಷ್ಟು ಸುಂದರವೋ ಅದನ್ನು ಅರ್ಥೈಸಿಕೊಂಡು, ವರ್ಣಿಸಿ ವಿವರಿಸಿದ ವಿವರಣೆಯೂ ಅಷ್ಟೇ ಅರ್ಥಪೂರ್ಣ! ಇಂತಹ ಬೆಳಗಿನ ಬೆರಗನ್ನು ನಮ್ಮವರಿಗೂ ಕಾಣಿಸಿದ ಆ ವರಕವಿಗೆ ಸಾವಿರ ನಮನ!

    ReplyDelete
  12. ತೇಜಸ್ವಿನಿ,
    ಧನ್ಯೋಸ್ಮಿ!

    ReplyDelete
  13. ಪದ್ಯವನ್ನು ಅತ್ಯ೦ತ ಸು೦ದರವಾಗಿ ವರ್ಣಿಸಿದ್ದಿರಿ.
    ಇದು ಬರಿ ಪದ್ಯವಲ್ಲೊ... ಅಣ್ಣಾ....

    ReplyDelete
  14. ಸುನಾಥ್ ಸರ್,

    ಬೆಳಗಿನ ಹಿಂದೆ ಕರೆದುಕೊಂಡು ಹೋದದಕ್ಕೆ ನಿಮಗೆ ಧನ್ಯವಾದಗಳು. ಹಾಂಗ ಶ್ರೀ ವ್ಯಾಸ ದೇಶಪಾಂಡೆಯವರಿಗೂ ನಮನಗಳು.

    ಗಣಪತಿ ಹಬ್ಬ ಹೇಗಾಂತು ಕಾಕಾ?

    ReplyDelete
  15. Bendre kavanagaLna hidkondu nimm hatra bandbidteeni saar, paaTa maadbidi.. :-)

    ReplyDelete
  16. ಬಾಲು,
    ಇದು ಬರಿ ಪದ್ಯವಲ್ಲ; ಇದು ಬೆರಗು!

    ReplyDelete
  17. ಶಿವಶಂಕರ,
    ಬೆಳಗಿನ ಬೆರಗನ್ನ ಅಮೇರಿಕಾದಲ್ಲಿಯೇ ಅನುಭವಿಸಿದಿರಿ ಅಂಧಂಗಾತು.
    ಗಣಪತಿ ಅಂತೂ ಹಬ್ಬದ ಊಟಾ ಹೊಡಕೋತ ಕೂತಾನ. Diabetes ಇರೋದರಿಂದ ನಾನು ನೋಡಿಕೋತ ಕೂತೇನಿ!

    ReplyDelete
  18. ಅರುಣ,
    ನಿಮಗ ಸುಸ್ವಾಗತ. ಬೇಂದ್ರೆಯವರ ಭೃಂಗದ ಬೆನ್ನೇರಿ ಬಂದು ಬಿಡರಿ!

    ReplyDelete
  19. ಸುನಾಥ ಅವರೆ,

    ವನಮಾಲಾ ಅವರು ಹೇಳಿದಂತೆ ಈ ಕವನವನ್ನು ಹಾಗೂ ನಿಮ್ಮ ವಿಶ್ಲೇಷಣೆಯನ್ನು ಓದಿದ ಮೇಲೆ ನೋಡುವ ಬೆಳಗು ಮತ್ತಿಷ್ಟು ಅರ್ಥಪೂರ್ಣವೆನಿಸುತ್ತದೆ.
    ಬೇಂದ್ರೆಯವರ ಕವನ - ಬರಿ ಹಾಡು ಅಲ್ಲ
    ಸುನಾಥ ಅವರ blog - ಬರಿ ಸಧಾರಣ ಬ್ಲೊಗ್ ಅಲ್ಲ
    ನಿಮ್ಮ blog ನಿಂದ ಅಗತ್ಯವಿದ್ದಾಗ ತುಂಬ ಉಪಯೋಗವಾಗಿದೆ. ಧನ್ಯವಾದಗಳು
    - ಆನಂದ್

    ReplyDelete
  20. ಆನಂದ,
    ನಿಮ್ಮ ವಿಶ್ವಾಸಕ್ಕೆ ಹಾಗು ಪ್ರೀತಿಗೆ ಧನ್ಯವಾದಗಳು.

    ReplyDelete
  21. ಶ್ರೀನಿವಾಸ ಮ. ಕಟ್ಟಿAugust 27, 2009 at 12:09 AM

    ಬೇಂದ್ರೆಯವರು ದಾರ್ಶನಿಕ ಕವಿ. ಅವರ ಎಲ್ಲ ಕವಿತೆಗಳಲ್ಲಿಯೂ ಜೀವನ ದರ್ಶನದ ಅನುಭವ ಸಹೃದಯ ಓದುಗರಿಗೆ ಆಗುತ್ತದೆ. ಬಹುಶಃ ಅವರು ಕಂಡರಿಯದ ಮಾನವ ಸ್ವಭಾವವೇ ಇಲ್ಲವೇನೋ ! ಅವರದು सुख दुःखे समे क्रत्वा ಎಂದೇ ಜೀವನವನ್ನು ನೋಡಿದ ದೃಷ್ಟಿ. ಆ ಕಾರಣ ಅವರು ಕವಿ ಮಾತ್ರವಲ್ಲ, ದೃಷ್ಟಾರರು ಎಂದು ನನ್ನ ಅನಿಸಿಕೆ.

    ReplyDelete
  22. ಸುನಾಥ್ ಸರ
    ಹ್ಯಾಂಗಾಯ್ತ್ರೀ ಗಣೇಶ್ನ ಹಬ್ಬ ಭಾಳ್ ಬ್ಯುಸೀ ಬಿಡ್ರೀ ನೀವು ಈ ಮಧ್ಯ..
    ನಮ್ಮ್ ಗೂಡ್ಕಡೀಗ್ ಬನ್ರಲಾ ಒಮ್ಮಿ...
    ನಿಮ್ಮ ಲೇಖನದಷ್ಟೇ ಅಚ್ಚುಮೆಚ್ಚು ನನಗೆ ಧಾರವಾಡದ ಆಡು ಭಾಷೆ, ನನ್ನ ಮೆಚ್ಚಿನ ಕವಿಗಳಲ್ಲಿ ದರಾಬೇಂದ್ರೆ ಪ್ರಮುಖರಾದರೆ, ಕಂಬಾರರ ನಾಟಕ ನನಗೆ ಮೆಚ್ಚು. ನಾವು ಸ್ನಾತಕದಲ್ಲಿದ್ದಾಗ ನಾಟಕ ಸ್ಪರ್ಧೆಗೆ ಕಂಬಾರರ ಮತಾಂತರ ಆಯ್ಕೆ ಮಾಡಿಕೊಂಡೆ ನನ್ನ ಸ್ನೇಹಿತರು ಬ್ಯಾಡಲೇ ಅದು..ಬಹಳ ಕಷ್ಟ ಮಾತುಗಳು ಉರು ಹೊಡಿಯಕಾಗಲ್ಲ ...ಅಂದಿದ್ದರು (ಬಹುಪಾಲು ಸ್ನೇಹಿತರು ಬೆಂಗಳೂರು, ತುಮಕೂರು, ಶಿವಮೊಗ್ಗೆ, ಹಾಸನ ಕಡೆಯವರು), ಆದರೆ ಸವಾಲಾಗಿ ತೆಗೆದುಕೊಂಡು ಚನ್ನಾಗಿ ಪ್ರಾಕ್ಟೀಸ್ ಮಾಡಿ ಪ್ರಥಮ ಪುರಸ್ಕಾರ ತಗೋಂಡ್ವಿ. ನನ್ನದು ಮತಾಂತರದ ಕೇಂದ್ರ ಪಾತ್ರ-ಅಜ್ಜಿಯದು (ಇದೂ ಚಾಲೇಂಜಾಗೆ ಆಯ್ಕೆ ಮಾಡಿಕೊಂಡದ್ದು).
    ಬಹಳ ವಿಶ್ಲೇಷಣೆ ಕೂಡಿದ ಪೋಸ್ಟುಗಳು ನಿಮ್ಮವು ಅದರ್ಲ್ಲೂ ವರಕವಿಗಳ ಅವರ ಕೃತಿಗಳ ಬಗ್ಗೆ ನಿಮ್ಮ ಬರಹದ ಆಳ ನಮ್ಮಂತಹವರಿಗೆ ಎಟುಕದ್ದು. ಈ ಪೋಸ್ಟ್ ಬಗ್ಗೆ ಹೇಳುವಷ್ಟು ಅರ್ಹತೆ ನನಗೆ ಇಲ್ಲವಾದ್ದರಿಂದ ಈ ನನ್ನ ಮಾತು.

    ReplyDelete
  23. ಸುನಾತರೆ,

    ಗುಂಪೊಡೆಯನ ನೋಂಪಿನ ನಲ್ವಾರಯ್ಕೆಗಳು.

    ಅಳವಿಗೆ ಈ(ಸೋಕು,ತಗುಲು) ಅರಿವೂ ಇದೆ. ಇದು ಕೂಡ ಈ ಕಬ್ಬಕ್ಕೆ ಸರಿಹೊಂದಬಹುದೇನೊ ನೋಡಿ.

    Ka. aḷa, aḷavu, aḷavi joining, contact, contiguity, nearness

    ಹದುಳವಿರಲಿ,
    ಬರತ್

    ReplyDelete
  24. ಅಂಕಲ್‌ ಭಾಳ ದಿನಾ ಆಗಿದ್ವು ನಿಮ್ಮ ಮನೀ ಕಡೆ ಬರದ... ಖರೇನ ಇವನ್ನೆಲ್ಲ ಸೇರಿಸಿ ಪುಸ್ತಕ ಮಾಡಿದ್ರ ಭಾಳ ಛುಲೋ..

    ReplyDelete
  25. ಜಲನಯನ,
    ನಿಮ್ಮ ತಾಣದ ಓದುಗಳನ್ನು ನಾನು ತಪ್ಪಿಸಿಕೊಳ್ಳುವದೇ ಇಲ್ಲ. ಆದರೆ ಪ್ರತಿಕ್ರಿಯೆಯನ್ನು ದಾಖಲಿಸಿರಲಿಕ್ಕಿಲ್ಲ ಅಷ್ಟೇ. ಕಂಬಾರರ ನಾಟಕಗಳಲ್ಲಿರುವ ಆಡುಮಾತುಗಳ ವೈಖರಿಯೇ ವಿಶಿಷ್ಟವಾದದ್ದು. ನೀವು ಅವರ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಿದ್ದರೆ, ಅದಕ್ಕೆ ಅಭಿನಂದನೆಗಳನ್ನು ಹೇಳಲೇ ಬೇಕು!

    ReplyDelete
  26. ಕಟ್ಟಿಯವರೆ,
    ಬೇಂದ್ರೆಯವರ ಕವನದಲ್ಲಿ ಅಡಗಿರುವ ದರ್ಶನದ ಬಗೆಗೆ ಚೆನ್ನಾಗಿ ಹೇಳಿದಿರಿ. ಅವರೇ ಹೇಳಿದ್ದಾರಲ್ಲ:
    "ಸರಸ ಜನನ
    ವಿರಸ ಮರಣ
    ಸಮರಸವೇ ಜೀವನ"

    ReplyDelete
  27. ಭರತ,
    ನಿಮ್ಮ ಓಲೆಯಲ್ಲಿರುವ ಅಚ್ಚಕನ್ನಡ ಪದಗಳನ್ನು ಓದಿದಾಗ ಸುಖವಾಗುತ್ತದೆ. ‘ಅಳವು’ ಪದಕ್ಕೆ ನೀವು ತಿಳಿಸಿದ ಮತ್ತೆರಡು ಅರ್ಥಗಳನ್ನು ತಿಳಿದು ಸಂತೋಷವಾಯಿತು.
    ನಲ್ಮೆಯ ಹಾರೈಕೆಗಳು.

    ReplyDelete
  28. ಶ್ರೀದೇವಿ,
    "ತೆರೆದಿದೆ ಬಾಗಿಲು ಓ ಅತಿಥಿ!" ಆದರೆ ನೀವು ಅತಿಥಿಗಳಲ್ಲ. ಯಾಕೆಂದರೆ ಇದು ನಿಮ್ಮದೇ ಮನೆ. ನಿಮಗೆ ಯಾವಾಗಲೂ ಸ್ವಾಗತ!

    ReplyDelete
  29. ಎ೦ದಿನ೦ತೆ ಅತ್ಯುತ್ತಮ ಬರಹ. ಚೆನ್ನಾಗಿದೆ.

    ReplyDelete
  30. ಪರಾಂಜಪೆಯವರೆ,
    ಧನ್ಯವಾದಗಳು.

    ReplyDelete
  31. wow, I love Bendre poems, today I got this link from a friend, thanks for all the post, I will read one by one
    thanks again
    shashi

    ReplyDelete
  32. Good article on a nice poem. ಇದೇ ಕವನದ ಬಗ್ಗೆ ನಾನೂ ಬರೆದಿದ್ದೇನೆ, ಇಲ್ಲಿ ಅದನ್ನು ನೋಡಬಹುದು:

    http://nannabaraha.blogspot.com/2009/08/blog-post.html

    ReplyDelete
  33. ಶಶಿ,
    ಬೇಂದ್ರೆ ಕವನಗಳನ್ನು ಅಮೃತಪಾನಕ್ಕೆ ಹೋಲಿಸಬಹುದೇನೊ?
    ನಿಮಗೆ ಸ್ವಾಗತ. ನಿಮ್ಮ link ಮೂಲಕ ನಿಮ್ಮ blogಅನ್ನು
    ನೋಡಿದೆ. ಮೂರು ತಿಂಗಳುಗಳಿಂದ ನಿಶ್ಚರ ಆಗಿಬಿಟ್ಟಿದ್ದೀರಲ್ಲ!

    ReplyDelete
  34. ಮಂಜುನಾಥ,
    ನಿಮ್ಮ blogನಲ್ಲಿಯ ‘ಬೆಳಗು’ ಓದಿದೆ. ಬೇಂದ್ರೆ ಅತ್ತಿಕೊಳ್ಳದಲ್ಲಿ ಅನುಭವಿಸಿದ ಶಾಂತಿರಸವನ್ನೇ ನೀವು ನಿಮ್ಮ ಟೆರೇಸ್ ಮೇಲೆ, ನಿಮ್ಮ ಮಗನ ಜೊತ ಅನುಭವಿಸಿದಿರಿ. ತುಂಬ ಸರಸವಾಗಿ ಬರೆದ ಲೇಖನ. ಅಭಿನಂದನೆಗಳು.

    ReplyDelete
  35. ಸುನಾಥ ಸರ್...

    ಬೇಂದ್ರೆಯವರ ಕವಿತೆಗಳು ಸರಳವಾಗಿ
    ಮೇಲುನೋಟದ ಅರ್ಥ ಮಾತ್ರ ಗೊತ್ತಿತ್ತು...
    ನಿಮ್ಮಿಂದ ಒಳಗಿನ ಗೂಢಾರ್ಥವೂ ಗೊತ್ತಾಗುತ್ತಿದೆ...

    ಮೊನ್ನೆ ಟಿವಿಯಲ್ಲಿ
    "ಘಮ ಘಮಡಸ್ತಾವ ಮಲ್ಲಿಗೀ...
    ನೀ ಹೊರಟಿದ್ದೀಗ ಎಲ್ಲಿಗಿ..?"

    ಹಾಡು ಬಂದಿತ್ತು...
    ತನ್ಮಯನಾಗಿ ಕೇಳಿದೆ..
    ನಿಮ್ಮ ನೆನಪಾಯಿತು... ಆ ಹಾಡಿನಲ್ಲೂ ಅನೇಕ ಭಾವಾರ್ಥಗಳು ಇರಬಹುದಲ್ಲಾ ಎಂದು..

    ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ... ಅಂತ ಅನಿಸ್ತದೆ...

    ReplyDelete
  36. ಪ್ರತಿ ಸುಂದರ ಮುಂಜಾನೆಯು ತಪ್ಪದೆ ನೆನಪಾಗುವ ಕವನ. ಕಾಕಾ ನಿಮ್ಮ ವಿವರಣೆ ಬೆಳಗಿಗೆ ಮತ್ತಷ್ಟು ಬೆಳಕು ತಂದಿತು ಎಂದರೆ ತಪ್ಪಾಗದು.

    ಮುಂದಿನ ಕವಿತೆ ಯಾವುದಿರಬಹುದೆಂದು ಕಾಯುತ್ತಿದ್ದೇನೆ. ಕಾವ್ಯಯಾತ್ರೆಯ ಸುಖ ನಿರಂತರವಾಗಿರಲೆಂಬ ಹಾರೈಕೆ.

    ReplyDelete
  37. ಪ್ರಕಾಶ,
    "ಗಮಗಮಾ ಗಮಾಡಸ್ತಾವ ಮಲ್ಲಿಗೆ" ತುಂಬ ಸುಂದರವಾದ ಕವನ.ಸಂಗೀತಾ ಕಟ್ಟಿಯವರು ಅಷ್ಟೇ ಭಾವಪೂರ್ಣವಾಗಿ ಆ ಕವಿತೆಯನ್ನು ಹಾಡಿದ್ದಾರೆ. ನೆನಪು ಮಾಡಿಕೊಟ್ಟಿರಿ; ಧನ್ಯವಾದಗಳು.

    ReplyDelete
  38. ತ್ರಿವೇಣಿ,
    ಕಾವ್ಯಯಾತ್ರೆಯ ಪಥಿಕರು ನಾವೆಲ್ಲ, ಅಲ್ಲವೆ?

    ReplyDelete