Wednesday, October 14, 2009

ಪತ್ರಿಕಾಪ್ರದೂಷಣ

ಉತ್ತರ ಕರ್ನಾಟಕದಲ್ಲಿ  ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು. ಅನೇಕ ವರ್ಷಗಳವರೆಗೆ ಈ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು. ಈ ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ.ವೆಂ.ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು.

ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಆ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು. ಇದು ಪತ್ರಿಕಾಭಾಷೆಗೆ ‘ಸಂಯುಕ್ತ ಕರ್ನಾಟಕ’ವು ನೀಡಿದ ದೊಡ್ಡ ಕೊಡುಗೆಯಾಗಿದೆ.

ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು. ಇಂದು ಅದು ದೊಡ್ಡ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ಭಾಷೆಗೆ, ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ‘ಸಂಯುಕ್ತ ಕರ್ನಾಟಕ’ದ ಓದುಗರನ್ನು ಬಾಧಿಸುತ್ತದೆ. ‘ಸಂಯುಕ್ತ ಕರ್ನಾಟಕ’ದ ನಿಯಮಿತ ಓದುಗನಾದ ನನಗೆ, ಈ ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ. ಇವುಗಳನ್ನು ‘ಪತ್ರಿಕಾಪ್ರಪಂಚದ ಪಂಚ ಮಹಾಪಾತಕ’ಗಳು ಎಂದು ಕರೆದರೆ ತಪ್ಪಿಲ್ಲ. ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ, ದಯವಿಟ್ಟು ನನ್ನನ್ನು  ತಿದ್ದಲು ಕೋರಿಕೊಳ್ಳುತ್ತೇನೆ.

(೧) ಕಾಗುಣಿತದ ತಪ್ಪುಗಳು:
ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು. ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು. ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು. ಗಣಕಯಂತ್ರದ ಬಳಕೆ ಮಾಡುವ ಈ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ. ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು? ‘ಸಂಯುಕ್ತ ಕರ್ನಾಟಕ’ದ ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು. ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ. Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು, ಅಲ್ಲವೆ?

ದಿನಾಂಕ                                ತಪ್ಪು                     ಒಪ್ಪು
೨೩--೯-೦೯                           ಸ್ಕೈಐವಿಂಗ್                   ಸ್ಕೈಡೈವಿಂಗ್
೨೩--೯-೦೯                           ಶೀಖರ                           ಶಿಖರ
೨೬-೯-೦೯                            ವಿಶಿಷ್ಠ                          ವಿಶಿಷ್ಟ
೨೬-೯-೦೯                            ದಿಕ್ಷಿತಲು                        ದೀಕ್ಷಿತರು
೨೬-೯-೦೯                            ಪ್ರೀಟಿ                            ಪ್ರೀತಿ
೨೬-೯-೦೯                            ನಿಗಧಿತ                          ನಿಗದಿತ
೨೬-೯-೦೯                             ಸ್ಕಂಧ್                         ಸ್ಕಂದ
೨೬-೯-೦೯                            ಮಾಲಿದ್ದಾರೆ                  ಮಾಡಲಿದ್ದಾರೆ
೨೬-೯-೦೯                            ಎದು                             ಎಂದು
೨೬-೯-೦೯                            ಪ್ರೊಬೆಷನರಿ                     ಪ್ರೊಬೇಷನರಿ
೨೬-೯-೦೯                             ಪರಿಶಿಷ್ಠ                        ಪರಿಶಿಷ್ಟ
೨೭-೯-೦೯                            ದಿಗ್ಭಂದನ                       ದಿಗ್ಬಂಧನ
೨೭-೯-೦೯                            ಹಲ್ಯೆಯನ್ನು                   ಹಲ್ಲೆಯನ್ನು
೨೭-೯-೦೯                            ಪರೀಶಿಲಿಸಿ                       ಪರಿಶೀಲಿಸಿ
೨೭-೯-೦೯                            ಘಂಟೇಪ್ಪನವರ                ಘಂಟೆಪ್ಪನವರ
೨೭-೯-೦೯                            ಅದಿಕಾರಿಗಳಲ್ಲಿ                 ಅಧಿಕಾರಿಗಳಲ್ಲಿ
೨೭-೯-೦೯                            ವಿಶ್ವಬ್ಯಾಂಕನಂಥ              ವಿಶ್ವಬ್ಯಾಂಕನಂತಹ
೨೯-೯-೦೯                            ಬ್ರೀಜ್                           ಬ್ರಿಜ್
೨೯-೯-೦೯                             ಮಥ                             ಮೃತ
೨೯-೯-೦೯                            ಹರ್ಷೋದ್ಘಾರ                ಹರ್ಷೋದ್ಗಾರ
೨೯-೯-೦೯                            ಸ್ತಬ್ದ                             ಸ್ತಬ್ಧ
೨೯-೯-೦೯                            ಕೈಗೂಳ್ಳುವದಾಗಿ              ಕೈಗೊಳ್ಳುವದಾಗಿ
೨೯-೯-೦೯                            ಅನಿಷ್ಠಾನ                        ಅನುಷ್ಠಾನ
೨೯-೯-೦೯                            ಅಂಕೀತ                            ಅಂಕಿತ
೨೯-೯-೦೯                             ಹರಿಸಿದ್ದಾರೆ                     ಹರಸಿದ್ದಾರೆ.
೨೯-೯-೦೯                            ಶುಭಾಷಯ                       ಶುಭಾಶಯ
೨೯-೯-೦೯                           ವಿಜಯದಶಿಮಿ                    ವಿಜಯದಶಮಿ
೨೯-೯-೦೯                           ಅವ್ವಾಹತವಾಗಿ                  ಅವ್ಯಾಹತವಾಗಿ
೨೯-೯-೦೯                            ಪುನಶ್ಛೇತನ                      ಪುನಶ್ಚೇತನ
೨೯-೯-೦೯                           ವಿಶಿಷ್ಠ                              ವಿಶಿಷ್ಟ
೩೦-೯-೦೯                           ಅನುಷ್ಟಾನ                         ಅನುಷ್ಠಾನ
೩೦-೯-೦೯                            ಮಧ್ಯಾನ್ಹದಿಂದ                 ಮಧ್ಯಾಹ್ನದಿಂದ
೩೦-೯-೦೯                           ಕಾಲ್ಕಿತಿತ್ತು                         ಕಾಲ್ಕಿತ್ತಿತು

(೨) ವ್ಯಾಕರಣದೋಷಗಳು:
ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು. ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ:

೨೬-೯-೦೯
(೧)ತಪ್ಪು: ಮಳೆಗೆ ಕೋಟ್ಯಂತರ ಆಸ್ತಿ ನಷ್ಟ
ಒಪ್ಪು: ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ
(೨) ತಪ್ಪು: ಮಿಷಿನ್ ಗಳ
ಒಪ್ಪು: ಮಶೀನುಗಳ
೨೭-೯-೦೯
(೧) ತಪ್ಪು: ಸೂಕ್ತ ಆರೋಪಿಗಳನ್ನು
ಒಪ್ಪು: ನೈಜ ಅಪರಾಧಿಗಳನ್ನು
(ಟಿಪ್ಪಣಿ: ಸೂಕ್ತ ಎಂದರೆ ವಿಧಿ-ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ.
ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ.)
(೨) ತಪ್ಪು: ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು.
ಒಪ್ಪು: ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು.
(೩) ತಪ್ಪು: ಅಂತಾರಾಷ್ಟ್ರೀಯ (=inland)
ಒಪ್ಪು: ಅಂತರರಾಷ್ಟ್ರೀಯ (=international)
೨೯-೯-೦೯
(೧) ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು
ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು
(೨) ತಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿದರು
ಒಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿತು (ಅಥವಾ, ಜನರು .....ಆಚರಿಸಿದರು.)
(೩) ತಪ್ಪು: ಶುಭ್ರವರ್ಣದ ಹೊಸ ಬಟ್ಟೆಗಳನ್ನು
ಒಪ್ಪು: ಶುಭ್ರವಾದ ಹೊಸ ಬಟ್ಟೆಗಳನ್ನು
(ಟಿಪ್ಪಣಿ: ಶುಭ್ರ=ಸ್ವಚ್ಛ. ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ?)

(೩) ಭಾಷೆಯ ತಪ್ಪುಗಳು:
ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ. ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು. ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಆ ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ. ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ. ‘ಸಂಯುಕ್ತ ಕರ್ನಾಟಕ’ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ:
"ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ" ಎನ್ನುವ ಈ ವರದಿಯನ್ನು ನೋಡಿರಿ. ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ  ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ. ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ? ಉದಾಹರಣೆಯನ್ನು ನೋಡಿರಿ:
"ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು ಫಾರ್ ಎ ಚೇಂಜ್ ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು."
ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ, ಈ ಶೈಲಿಯನ್ನು ಒಪ್ಪಿಕೊಳ್ಳಬಹುದು. ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ.

ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ:
ಈ ವರದಿಯ ಮೊದಲನೆಯ ದೋಷವೆಂದರೆ ‘ಸವದತ್ತಿ’ಯನ್ನು ‘ಸೌಂದತ್ತಿ’ ಎಂದು ಗ್ರಾಮ್ಯವಾಗಿ ಬರೆದಿದ್ದು. ಈ ವರದಿಯ  ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ:
"ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ."
ಅರ್ಥವಾಯಿತೆ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು:
"ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ, ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ."

(೪) ವರದಿಯ ದೋಷಗಳು:
ವರದಿಯ ದೋಷಗಳಿಗಾಗಿ ಈ ವರದಿಗಳನ್ನು ನೋಡಬಹುದು:
ಮೊದಲನೆಯ ವರದಿ ‘ಸಂಯುಕ್ತ ಕರ್ನಾಟಕ’ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ. ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ.

"ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು." ಎಂದು ಈ ವರದಿ ಪ್ರಾರಂಭವಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಈ ಜಿಲ್ಲೆಯಲ್ಲಿವೆ. ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು. ’ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ’, ಎನ್ನುವ ಸಂದೇಹ ಓದುಗನಿಗೆ ಬಾರದಿರದು. ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು. ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ, ಕಾರಣವಾಗುತ್ತದೆ. ಈಗ ಈ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ: ‘ಮಧ್ಯಾಹ್ನ’ ಪದವನ್ನು ‘ಮಧ್ಯಾನ್ಹ’ ಎಂದು ಬರೆಯಲಾಗಿದೆ. ’ಬಿಟ್ಟೂಬಿಡದೆ’ ಎನ್ನುವದನ್ನು ‘ಬಿಟ್ಟುಬಿಡದೇ’ ಎಂದು ಬರೆಯಲಾಗಿದೆ.

ಈ ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ:
"ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು. ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ."
ಮೊದಲನೆಯದಾಗಿ, ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ. ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ. ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ. ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ.

ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ:
"ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು. ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ. ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್, ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ. ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ. ಹೊಲಗಳಲ್ಲಿ ನೀರು ಹರಿದಿವೆ. ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ."
ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ. ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ. ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು? ಅಲ್ಲದೆ, "ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು" ಎನ್ನುವದು ವ್ಯಾಕರಣದ ಕೊಲೆಯಲ್ಲವೆ?
"ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು" ಅಂದರೆ, ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ?
ಈ ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ, ಇನ್ನೊಂದೆಡೆ ಮಳೆ ಇರುವದಿಲ್ಲ. ಬಹುಶ: ಈ ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ?!

ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು, ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ,       ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ(--’ಒಂದು ಮಳೆಗಾಲದ ದಿನ’--)ದಂತೆ ಭಾಸವಾಗುತ್ತದೆ:
"ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು."
ವರದಿಯ ಕೊನೆಯ ಸಾಲಿನಲ್ಲಿ ‘ರವಿ ಕರಲಿಂಗಣ್ಣವರ’ ಎಂದು ಬಿಡಿಸಿ ಬರೆಯದೆ, ‘ರವಿಕರಲಿಂಗಣ್ಣವರ’ ಎಂದು ಕೂಡಿಸಿ ಬರೆಯಲಾಗಿದೆ.

ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ:
"ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ."
"ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ" ಎಂದು ಹೇಳಿದರೆ, ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ? ಎರಡನೆಯದಾಗಿ  ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ. ಆದುದರಿಂದ ‘ಮಳೆ ಸುರಿಯುತ್ತಿದೆ’ ಎಂದು ವರ್ತಮಾನಕಾಲದಲ್ಲಿ ಹೇಳಬಾರದು. ಮೂರನೆಯದಾಗಿ ಈ ಮಳೆ ಜನರಿಗೆ ಬೇಕಾಗಿರಲಿಲ್ಲ. ಆದುದರಿಂದ ‘ಉತ್ತಮವಾಗಿ’ ಎಂದು ವರ್ಣಿಸಬಾರದು ; ‘ಜೋರಾಗಿ’ ಎಂದು ಹೇಳಬಹುದಿತ್ತು.

ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ, ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು "ಅಮೆರಿಕ ಮೂಲದ ಭಾರತೀಯ ವಿಜ್ಞಾನಿ" ಎಂದು ಬರೆಯಲಾಗಿದೆ. ಈ ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ!

(೫) ಮಾಹಿತಿಯ ತಪ್ಪುಗಳು:
ಅಕ್ಟೋಬರ ೧೩ನೆಯ ದಿನಾಂಕದ ‘ಸಂಯುಕ್ತ ಕರ್ನಾಟಕ’ದ ‘ರಸಪ್ರಶ್ನೆ’ ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ:
ಪ್ರಶ್ನೆ: ‘ಸಂಸ್ಕಾರ’ ಚಲನಚಿತ್ರದ ನಿರ್ದೇಶಕರು ಯಾರು?
ಕೊಟ್ಟ ಉತ್ತರ: ಗಿರೀಶ್ ಕಾರ್ನಾಡ್.
ಇದು ತಪ್ಪು ಉತ್ತರ. ‘ಸಂಸ್ಕಾರ’ ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು. ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು. ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು.

ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ‘ಸಂಯುಕ್ತ ಕರ್ನಾಟಕ’ ಯಾಕೆ ಈ ರೀತಿ ಎಡವುತ್ತ ನಡೆಯುತ್ತಿದೆ?

55 comments:

  1. ಸುನಾಥ ಸರ್....

    ತುಂಬಾ ಬೇಸರವಾಯಿತು....
    ನೀವು ಬರೆದ ಈ ಲೇಖನದ ಒಂದು ಪ್ರತಿಯನ್ನು ಸಂಯುಕ್ತ ಕರ್ನಾಟಕಕ್ಕೂ ಕಳಿಸಿಕೊಡಿ..

    ಓದು ಮುಗಿದ ಮೇಲೆ ಭಾಷೆ ವ್ಯಾಕರಣಗಳು ಸ್ವಲ್ಪ ಮರೆತುಹೋಗುವದು ಸಹಜ...
    ನನಗಂತೂ ಹಾಗೇ ಆಗಿದೆ...
    ನಾನು ಬರೆದ ಲೇಖನ ಮತ್ತೆ ಮತ್ತೆ ಓದುತ್ತೇನೆ...
    ನನ್ನ ಗಮನಕ್ಕೆ ಬಾರದೆ ಕೆಲವು ದೋಷಗಳು ಉಳಿದು ಬಿಡುತ್ತದೆ...

    ಆದರೆ ಪತ್ರಿಕೆಗಳಲ್ಲಿ ಹಾಗೆ ಆಗಬಾರದಲ್ಲವೆ...?
    ಅವುಗಳು ಭಾಷಾ ತಜ್ಞರನ್ನೇ ನೇಮಿಸಿಕೊಳ್ಳತ್ತವೆ...
    ಸಾಹಿತ್ಯವನ್ನು, ಭಾಷೆಯ ಅಧ್ಯಯನ ಮಾಡಿದವರೇ ಅಲ್ಲಿರುತ್ತಾರೆ...

    ದಿನಾಲೂ ಓದುವ ಪತ್ರಿಕೆಗಳು ಇಂಥ ಭಾಷೆಯನ್ನು ಪ್ರಕಟಿಸುತ್ತಿದ್ದರೆ..
    ನನ್ನಂಥವರ ಭಾಷೆ ಇನ್ನೂ ಅಧೋಗತಿಯಾಗಿಬಿಡುತ್ತದೆ...

    ಸರ್ ಕಣ್ಣು ತೆರೆಸುವ ಲೇಖನ ಇದು...

    ಧನ್ಯವಾದಗಳು...

    ReplyDelete
  2. ಕಾಕಾ, ಈ ಲೇಖನ ಸಂಬಂಧಪಟ್ಟವರ ಕಣ್ಣಿಗೆ ಬಿದ್ದು, ಕಣ್ತೆರೆಸಲೆಂದು ಆಶಿಸುತ್ತೇನೆ.

    ReplyDelete
  3. ಕಾಕಾ ನಾ ಏನೋ ನೀವು "ಸಂಯುಕ್ತ ಕರ್ನಾಟಕ" ದ ಇತಿಹಾಸ ಹೇಳಲಿಕ್ಕಹತ್ತೀರಿ ಅಂತ ತಿಳದಿದ್ದೆ.ತಪ್ಪು ಅಕ್ಷಮ್ಯ ಅದ ಖರೆ
    ಏನು ಮಾಡೂದು ಈಗ ಆ ಪೇಪರಿನ್ಯಾಗ್ ಬೆಂಗಳೂರಿಗರ ಕಾರಭಾರ. ಅವರ ಕನ್ನಡದ ಲೆವಲ್ಲು ಎಲ್ಲಾರಿಗೂ ಗೊತ್ತು
    ಸಹಿಸಿಕೊಬೇಕಾಗೇದ.... ನಾ ಸಂಯುಕ್ತ ಓದೂದ ಬಿಟ್ಟು ಭಾಳ ದಿನಾ ಆದ್ವು

    ReplyDelete
  4. ಸುನಾಥ್ ಸರ್,
    ತಪ್ಪುಗಳು ಆಗೋದು ಸಹಜ, ಆದ್ರೆ ಪತ್ರಿಕೆಗಳಲ್ಲಿ ಆಗಬಾರದು ಕೂಡಾ,
    ನಿಮ್ಮ ಅಧ್ಯಯನ ಚೆನ್ನಾಗಿದೆ,
    ತುಂಬಾ ತಪ್ಪು ಹುಡುಕಿದ್ದಿರಿ
    ಇದನ್ನು ನೋಡಿಯಾದರೂ ಸುಧಾರಿಸಿಕೊಳ್ಳಲಿ

    ReplyDelete
  5. ತುಂಬಾ ಬೇಜಾರಾಗುತ್ತೆ. ಇಸ್ಟೊಂದು ವರ್ಷಗಳ ಇತಿಹಾಸವಿರುವ ಪತ್ರಿಕೆ ಈ ರೀತಿಯ ತಪ್ಪುಗಳನ್ನು ಮಾಡಬಾರದು.
    ನನ್ನಂತವರು ಅದನ್ನೇ ಸರಿ ಎಂದುಕೊಂಡು, ನಾವು ಅದೇ ತಪ್ಪನ್ನೇ ಮಾಡುತ್ತೇವೆ.
    ನನಗೂ ಕನ್ನಡ ಅಸ್ಟೊಂದು ಚನ್ನಾಗಿ ಬರೆಯೋಕೆ ಬರೋಲ್ಲ. ಒಂದು ಲೇಖನ ಬರೆದ ಮೇಲೆ ಮೂರು ನಾಲ್ಕು ಬಾರಿ ಓದುತ್ತೇನೆ.
    ನಂತರ ನನ್ನ ಸ್ನೇಹಿತನಿಗೂ ತೋರಿಸುತ್ತೇನೆ. ಅವನು ತಪ್ಪುಗಳನ್ನು ಹುಡಿಕಿ ಹೇಳಿದರೆ ಸರಿಪಡಿಸುತ್ತೇನೆ. ಕೆಲವು ಬಾರಿ ನಾವು ಗುರುತಿಸದಿದ್ದರೆ ಕೆಲವು ತಪ್ಪುಗಳು ಹಾಗೆ ಉಳಿದುಬಿಡುತ್ತವೆ.
    ನನ್ನ ಲೇಖನದಲ್ಲಿ ಏನಾದರು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಷಿ. ಹಾಗೇನಾದರೂ ದೊಡ್ಡ ತಪ್ಪುಗಳು ಕಾಣಿಸಿದರೆ ನನಗೆ ಒಂದು E-Mail ಕಳಿಸಿ.
    shivaprakash.hm@gmail.com

    ReplyDelete
  6. ಪ್ರಕಾಶ,
    ಪತ್ರಿಕೆಗಳು ಭಾಷಾಶಿಕ್ಷಕರಿದ್ದಂತೆ.
    ನಾನು ಬಾಲಕನಿದ್ದಾಗ ನನ್ನ ತಾಯಿ, ಸಂಯುಕ್ತ ಕರ್ನಾಟಕದಲ್ಲಿಯ ಅಕ್ಷರಗಳನ್ನು ತೋರಿಸುತ್ತ ಅಕ್ಷರಗಳನ್ನು ಕಲಿಸಿದಳು. ಅಂತಹ ಪತ್ರಿಕೆಗೆ ಈಗ ಕಾಗುಣಿತ ಕಲಿಸಬೇಕಾಗಿ ಬಂದದ್ದು ನನ್ನ ದುರ್ದೈವ.

    ReplyDelete
  7. ತ್ರಿವೇಣಿ,
    ನನ್ನ ಆಶೆಯೂ ಅದೇ ಆಗಿದೆ.

    ReplyDelete
  8. ಉಮೇಶ,
    ‘ಸಂಯುಕ್ತ ಕರ್ನಾಟಕ’ದಾಗ ಏಸರs ತಪ್ಪು ಆಗಲಿ, ಆ ಪೇಪರ ಓದದಿದ್ದರ, ಚಹಾಕ್ಕ ರುಚಿ ಬರೂದುಲ್ಲ,ತಮ್ಮಾ!
    ಅದಕ್ಕs ಅದನ್ನs ಹಿಡಕೊಂಡು ಹೊಂಟೀನಿ.

    ReplyDelete
  9. ಗುರುಮೂರ್ತಿ,
    ಊದೋ ಶಂಖಾ ಊದತೇನಿ. ಅವರ ಕಣ್ಣು,ಕಿವಿ ಸರಿಯಾಗಿದ್ದರ ಉಪಯೋಗ ಆದೀತು.

    ReplyDelete
  10. ಶಿವಪ್ರಕಾಶ,
    ನಿಮ್ಮ ಅಥವಾ ನನ್ನ ತಪ್ಪುಗಳು ಕ್ಷಮ್ಯ. ಪತ್ರಿಕೆಯವರ ತಪ್ಪುಗಳು ಅಕ್ಷಮ್ಯ.
    ನಿಮ್ಮ ಲೇಖನಗಳಲ್ಲಿಯ ತಪ್ಪುಗಳನ್ನು ತಿದ್ದಲು ಕೇಳಿಕೊಂಡಿದ್ದೀರಿ. ಇದು ನಿಮ್ಮ ದೊಡ್ಡ ಗುಣ. ಆದರೆ ಅಂತಹ
    ಪ್ರಸಂಗ ಬರಲಾರದೆಂದು ನನ್ನ ಭಾವನೆ!

    ReplyDelete
  11. This comment has been removed by the author.

    ReplyDelete
  12. ಸುನಾಥ ಅಂಕಲ್,

    ಹೌದ್ರೀ, ಪೇಪರ್ ದಾಗ ಕಾಗುಣಿತ, ವ್ಯಾಕರಣ ತಪ್ಪುಗಳು ಮತ್ತ ಭಾಷಾ ಶುದ್ಧಿಯ ಕೊರತೆ ನೋಡಿದಾಗ ಭಾಳ ಬೇಜಾರ್ ಆಗ್ತದ. ನಾನು ಬ್ಲಾಗ್ ದಾಗ ಏನೇ ಬರದ್ರೂ ಅದನ್ನ ನಾಲ್ಕೈದು ಸಲ ಓದಿ, ಪರಿಚಯದವರಿಗೆ ಓದೋಕೆ ಹೇಳಿ ಅವರೆಲ್ಲರೂ ಹೇಳೋ ತಿದ್ದುಪಡಿಗಳನ್ನ ಮಾಡಿ ಆಮ್ಯಾಲ ಪೋಸ್ಟ್ ಮಾಡಿರ್ತೀನಿ. ಆದ್ರೂ, ಕೆಲವೊಂದಿಷ್ಟು ತಪ್ಪುಗಳು ಉಳಿದಿರುತ್ತವೆ. ಮುಂದೆ ಎಂದಾದರೂ ಅವನ್ನ ಗಮನಿಸಿದ ತಕ್ಷಣ ತಿದ್ದುತೀನಿ. ಕೆಲವರು ಬ್ಲಾಗಲ್ಲಿ ಪೋಸ್ಟ್ ಮಾಡೋ ಅವಸರದಲ್ಲಿ ಕಾಗುಣಿತ ತಪ್ಪುಗಳನ್ನು ಸರಿಪಡಿಸದೇ ಪೋಸ್ಟ್ ಮಾಡಿದಾಗ ಅದನ್ನು ಓದಿದ ಮೇಲೆ ಪ್ರತಿಕ್ರಿಯಿಸಿ ತಪ್ಪು ಸರಿಪಡಿಸಿಕೊಳ್ಳೋಕೆ ವಿನಂತಿಸ್ತೀನಿ. ಕನ್ನಡಿಗರಿಂದಲೇ ಕನ್ನಡ ಭಾಷೆಯ ಕೊಲೆಯಾಗುವುದು ನೋಡಿ ಭಾಳ ಬೇಜಾರ್ ಆಗ್ತದ.

    ಸಾಮಾನ್ಯ ಬರಹಗಾರರು ಒತ್ತಟ್ಟಿಗಿರಲಿ. ಈ ಕವಿ ಆ ಕವಿ ಅಂತ ರಾಜ್ಯಮಟ್ಟದ ಮತ್ತು ಜಿಲ್ಲಾ, ತಾಲೂಕು ಮಟ್ಟದ ಕನ್ನಡ ಸಂಘಟನೆಗಳಿಂದ ಬರುವ ಪತ್ರಗಳಲ್ಲೂ ಕಾಗುಣಿತದ ತಪ್ಪುಗಳು ಹೇರಳವಾಗಿರ್ತವೆ. ನಿಮ್ಮ ಈ ಲೇಖನ ಈ-ಕವಿ ಹುಬ್ಬಳ್ಳಿ ಧಾರವಾಡ (http://ekavihublidharwad.ning.com/) ಎಂಬ ತಾಣದಲ್ಲೂ ಪ್ರಕಟವಾಗಿದೆ. ಆದರೆ, ಆ ತಾಣದ ಅಡಿಬರಹದಲ್ಲಿಯೇ ಕಾಗುಣಿತದ ಮತ್ತು ವ್ಯಾಕರಣ ತಪ್ಪುಗಳಿವೆ.ಉದಾಹರಣೆಗೆ ಇದನ್ನು ಗಮನಿಸಿ:

    ದಾರವಾಡ ಜಿಲ್ಲೆಯ ಕನ್ನಡಿಗರು ಇದನ್ನು ಸೇರಿ, ಅವರ ವೇದಿಕೆ ತರ ಉಪಯೋಗಿಸಬಹುದು

    ಕನ್ನಡ ಭಾಷೆಯ ಉಳಿವು, ಅಭಿವೃದ್ಧಿಗಾಗಿ ಹೋರಾಡಬೇಕಾದ ಇಂತಹ ಸಂಘಟನೆಗಳಿಂದಲೇ ಕನ್ನಡ ಭಾಷೆಯ ಕೊಲೆಯಾದರೆ ಹೇಗೆ?

    ತುಂಬಾ ಹಿಂದೆ ಒಂದ್ಸಲ ಇದನ್ನು ಅವರ ಗಮನಕ್ಕೆ ತರೋ ಪ್ರಯತ್ನಾನೂ ಮಾಡಿದ್ದೆ. ಆದರೆ ಅವರು ಅದನ್ನು ಇದುವರೆಗೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

    ತುಂಬಾ ಬೇಸರವಾಗುತ್ತೆ.

    - ಉಮೇಶ್

    ReplyDelete
  13. ಸರ್,
    ನಿಮ್ಮ ಮನೆಗೆಲಸ (home work!?) ತುಂಬ ಸಹನೆಯಿಂದ ಕೂಡಿದೆ.
    ದಿನಪತ್ರಿಕೆಗಳಲ್ಲಿನ deadline ಧಾವಂತದಲ್ಲಿ ಶಿರೋನಾಮೆ ಕೊಡುವಾಗ
    ಒಮ್ಮೊಮ್ಮೆ ವಾಕ್ಯಗಳು ಶಿರಚ್ಚೇದ ಮಾಡಿಕೊಳ್ಳುತ್ತವೆ.ಅದು ಸಹಜ ಕೂಡ.
    ಉದಾ:"ಸತತ ಮಳೆಯಿಂದ ಹೊಲ,ಗದ್ದೆ, ಬೆಳೆಗಳು ಹಾಳು" ಎಂಬುದನ್ನು
    "ಸತತ ಮಳೆ:ಕಂಗಾಲು ಇಳೆ" ಎಂಬುದಾಗಿ ಮಾರ್ಪಾಡಾಗುತ್ತದೆ..
    ಇದು ಆಯಾ ಕಾಲ ಅಥವಾ ಉಪಲಬ್ಧವಿರುವ column width ಮೇಲೆ ಅವಲಂಬಿಸಿರುತ್ತದೆ.
    ಅದನ್ನು ಬಹುಶಃ ಒಪ್ಪಿಕೊಳ್ಳಬಹುದು.
    ಆದರೆ ನೀವು ಪಟ್ಟಿ ಮಾಡಿರುವ ದೋಷಗಳು ಖಂಡಿತವಾಗಿಯೂ ದೋಷಗಳೇ..
    ಆದರೆ ನಿಮ್ಮ ಈ ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕಲ್ಲ?

    -ರಾಘವೇಂದ್ರ ಜೋಶಿ

    ReplyDelete
  14. sunath sir nanna barahadalli enadaroo e reetiya tappu kandare dayavittu tilisi sir.nimma e article oadida mele bareyoke dhairya bartilla:(

    ReplyDelete
  15. ಉಮೇಶ,
    ನಿಮ್ಮ ಸೂಚನೆಯನ್ನು ಅನುಸರಿಸಿ,ಈ-ಕವಿ(ಧಾರವಾಡ ಜಿಲ್ಲೆ)ಯ ತಾಣವನ್ನು ವೀಕ್ಷಿಸಿದೆ.ನೀವು ಎತ್ತಿ ತೋರಿಸಿದಂತೆ ಮುಖ್ಯ ಶಿರ್ಷಿಕೆಯ ಅಡಿಯಲ್ಲಿಯೇ ಪ್ರಮಾದವನ್ನು ಎಸಗಲಾಗಿದೆ! ವಾಕ್ಯರಚನೆ ಸಹ ಸರಿಯಾಗಿಲ್ಲ.
    ನಮ್ಮ ಬ್ಲಾಗ್ ಲೇಖನಗಳನ್ನು ಕಾಗುಣಿತದ ಹಾಗು ವ್ಯಾಕರಣದ ದೋಷಗಳಿಗಾಗಿ ಮತ್ತೆ ಮತ್ತೆ ಪರೀಕ್ಷಿಸಿ, ಪ್ರಕಟಿಸುವದು ಬಹಳ ಯೋಗ್ಯ ಕಾರ್ಯ. ನಾನೂ ಸಹ ಎರಡು ಮೂರು ಬಾರಿ ಓದಿಕೊಳ್ಳದೆ ಪ್ರಕಟಿಸುವದಿಲ್ಲ.
    ಈ ಪರಿಶ್ರಮವು ಸುಖವನ್ನೇ ಕೊಡುತ್ತದೆ.

    ReplyDelete
  16. RJ,
    ನಿಮ್ಮ ಮಾತು ನಿಜ. column widthಗೆ ಹೊಂದುವಂತೆ ಶೀರ್ಷಿಕೆ ಕೊಡುವದರಲ್ಲಿ ತಪ್ಪಿಲ್ಲ. ಅನೇಕ ಸಲ ಈ ಶೀರ್ಷಿಕೆಗಳೂ ಸಹ ರಂಜಕವಾಗಿರುತ್ತವೆ. ಈ ವಿಷಯದಲ್ಲಿ ವಿಜಯ ಕರ್ನಾಟಕದವರು ಇತರ ಪತ್ರಿಕೆಗಳಿಗೆ ಮಾದರಿಯಾಗಿದ್ದಾರೆ
    ಎನ್ನಬಹುದು. ಆದರೆ ಇಲ್ಲಿಯೂ ಸಹ ಕಾಗುಣಿತ, ವ್ಯಾಕರಣ ಹಾಗೂ ಭಾಷೆಗಳ ಮರ್ಯಾದೆಯನ್ನು ಪಾಲಿಸುವದು ಒಳ್ಳೆಯದಲ್ಲವೆ?

    ReplyDelete
  17. ಗೌತಮ,
    ‘ನಡೆಯುವವರು ಎಡವದೆ ಕುಳಿತವರು ಎಡುವುತ್ತಾರೆಯೆ?’ ಎಂದು ರಾಘವಾಂಕ ಕೇಳಿದ್ದಾನೆ. ನಾವೆಲ್ಲರೂ ತಪ್ಪು ಮಾಡುವವರೇ. ತಪ್ಪಿಗೆ ಹೆದರಿ ಕೂಡಲಾದೀತೆ?
    Carry on bravely!

    ReplyDelete
  18. ಇಂತಹ ತಪ್ಪುಗಳನ್ನ್ನು ನಾನು ಕೂಡ ಗಮನಿಸಿದ್ದೇನೆ. ಸಂಪಾದಕರು ತಾವು ಬರೆಯುವುದೆಲ್ಲವೂ ಸರಿ ಎಂದುಕೊಳ್ಳುತ್ತಾರೋ ಅಥವಾ ತಾವು ಬರೆದಿದ್ದನ್ನು ಯಾರೂ ಪ್ರಶ್ನಿಸಲಾರರು ಎಂಬ ಧೋರಣೆಯಿಂದ ಹೀಗೆ ಬರೆಯುತ್ತಾರೋ ತಿಳಿಯದು.

    ಕನ್ನಡವನ್ನು ಶಾಶ್ವತವಾಗಿ ಕಣ್ಮರೆ ಮಾಡಲು ಇದು ಪತ್ರಿಕೆಗಳ ಅಳಿಲು-ಸೇವೆಯಾಗಿರಬಹುದೆ?

    ReplyDelete
  19. ಹರೀಶ,
    ನಿಮ್ಮ ಅಂದಾಜು ಸರಿಯಾಗಿದೆ. ಇದು ಕನ್ನಡವನ್ನು ಶಾಶ್ವತವಾಗಿ ಕಣ್ಮರೆಗೊಳಿಸುವ ತಂತ್ರ ಹೌದು. ಆದರೆ ಅಳಿಲು ಸೇವೆಯೇನಲ್ಲ; ಭಗೀರಥ ಪ್ರಯತ್ನವೆನ್ನಬಹುದು!

    ReplyDelete
  20. ಕಾಕಾ,

    ನಾನೂ ಮೊನ್ನೆ ಊರಿಗೆ ಬಂದಾಗ ಸಂ.ಕ.ದ ಇಂತಹ ಕಾಗುಣಿತ ದೋಷಗಳನ್ನು ಗಮನಿಸಿದ್ಯಾ, ಒಂದು ಯಾವುದೋ ವರದಿ ಓದುತ್ತಾ ತಲೆ ಚಿಟ್ಟೆಂದಿತು, ನನ್ನ ತಂದೆಯವರಿಗೆ ಇದನ್ನು ಹೇಗೆ ಓದುತ್ತಿರಿ ಅಂತ ಕೇಳಿದಾಗ, ವಿ.ಕ. ಜಾಹೀರಾತು ಓದುಕ್ಕಿಂತ ಅಗಣಿತ ದೋಷಗಳ ಸುದ್ದಿ ಕೊಡುವ ಇದೆ ಸ್ವಲ್ಪ ಉತ್ತಮ ಎಂದರು.

    ನಿಮ್ಮೆಲ್ಲರ ಬಗ್ಗೆ ಸಹಾನುಭೂತಿ ಇದೆ, ನಾನು ಬಚಾವಾದೆನಲ್ಲ ಎಂಬ ಖುಷಿಯೂ.

    (ಇತ್ತಿಚಿಗೆ ಗೆಳೆಯನೊಬ್ಬ ಹೇಳಿದ ಕನ್ನಡ ಟೈಮ್ಸ್ ಆಫ್ ಇಂಡಿಯಾ ಬೇರೆ ಭಾಷೆಯವರು ಓದಿದ್ದೆಯಾದರೆ ಕನ್ನಡಕ್ಕೆ ಕೊಟ್ಟ ಶಾಸ್ತ್ರಿಯ ಭಾಷೆಯ ಸ್ಥಾನಮಾನವನ್ನೂ ಕಿತ್ತುಕೊಳ್ಳುವರೆಂದು)
    ಸಿರಿಗನ್ನಡಂ ಗೆಲ್ಗೆ...

    ಶೆಟ್ಟರು

    ReplyDelete
  21. ಕಾಕಾ, ಇಂತಹ ತಪ್ಪುಗಳು ಸಂಯುಕ್ತ ಕರ್ನಾಟಕ ಮಾತ್ರವಲ್ಲ ಇತರ ಪತ್ರಿಕೆಗಳಲ್ಲೂ (ವಿಜಯ ಕರ್ನಾಟಕ, ಉದಯವಾಣಿ- ಮುಖ್ಯ ವಾಗಿ) ಕಂಡಿದ್ದೇನೆ. ಸತತ ಕೆಲವು ದಿನ ಆ ರೀತಿ ನೋಡಿ ಬೇಜಾರಾಗಿ ಕೊನೆಗೆ ಪತ್ರಿಕೆಯನ್ನು "ಹಾರಿಸಿಕೊಂಡು ಓದುವ" ಹವ್ಯಾಸ ಬೆಳೆಸಿಕೊಂಡಿದ್ದೆ. ಈಗಂತೂ ಗಣಕೀಕರಣ ಆದಮೇಲೆ ತಪ್ಪುಗಳು ಹೆಚ್ಚಾಗಿವೆ. ಎಲ್ಲರಿಗೂ ಧಾವಂತವೇ. ಇನ್ನು ತಿದ್ದುವವರಾರು? ತಿದ್ದಿಕೊಳ್ಳುವವರಾರು?

    ಈ ಲೇಖನ ಸಂಯುಕ್ತ ಕರ್ನಾಟಕ ಮಾತ್ರವಲ್ಲ, ಇತರ ಪತ್ರಿಕೆಗಳ ಸಂಪಾದಕರ ಕಣ್ಣುಗಳಿಗೂ ಬೀಳಲಿ. ಅವರೂ ಅರಿತು ನಡೆಯಲಿ ಎಂದು ಆಶಿಸುತ್ತೇನೆ.

    ReplyDelete
  22. ಧನ್ಯವಾದಗಳು ಸರ್ ಇಂತಹ ಅದ್ಭುತ ಲೇಖನವನ್ನು ನಮಗೆ ನೀಡಿದ್ದೀರಿ...

    ನೀವು ಒಂದು ಮಾತು ಹೇಳಿದ್ದೀರಿ ಪತ್ರಿಕೆಗಳು ನಮಗೆ ಭಾಷಾಶಿಕ್ಷಕರಿದ್ದಂತೆ ಎಂದು ಈ ಮಾತು ನಿಜ, ನಮಗೆ ಎಷ್ಟೋ ಶಬ್ಧಗಳ ಪರಿಚಯ ಅಥವ ಕೆಲವು ಕ್ಲಿಷ್ಠ ಪದಗಳ ಗಂಧವೊ ಇರುವುದಿಲ್ಲ. ಪತ್ರಿಕೆ ಮೂಲಕವೇ ಎಷ್ಟೋ ತಿಳಿಯುತ್ತೇವೆ.

    ಈ ರೀತಿ ತಪ್ಪುಗಳಾಗುತ್ತಿರುವುದು ಬೇಸರದ ಸಂಗತಿಯೇ ಸರಿ..

    ಸರ್ ನೀವು ದಿನಾಂಕ, ತಪ್ಪು, ಒಪ್ಪು, ವ್ಯಾಕರಣ ಎಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ತಿಳಿಸಿದ್ದೀರಿ ಅದು ಅಲ್ಲದೆ ಪಟ್ಟಿ ಕೂಡ ನಿಜಕ್ಕೂ ನಿಮ್ಮ ಬ್ಲಾಗ್ ನೋಡಿ ನನಗೆ ಬಹಳ ಖುಷಿ ಜೊತೆಗೆ ತಿಳುವಳಿಕೆಯೊ ಮೂಡಿದೆ.

    ನಾವುಗಳೇನಾದರು ತಪ್ಪು ಮಾಡಿದರೊ ಸಹ ನೀವು ತಿದ್ದಿ ತಿಳಿಹೇಳಿ...ಮತ್ತೊಮ್ಮೆ ಧನ್ಯವಾದಗಳು.. ನಿಮ್ಮ ಲೇಖನವೇ ವಿವಿದೋದ್ದೇಶಗಳ ಯೋಜನೆಯಂತಿದೆ... ಆ ಉದ್ದೇಶ ಪತ್ರಿಕೆಗಳಲ್ಲೂ ರೂಢಿಯಾದರೆ ಒಳಿತು.

    ReplyDelete
  23. ಸುನಾಥ್ ಸರ್,

    ನೀವು ಸಾಹಿತ್ಯ, ಕತೆ, ಕವನ, ಕೊನೆಗೆ ಪತ್ರಿಕೆಗಳಲ್ಲಿ ಆಗುವ ಶಬ್ದ ತಪ್ಪನ್ನು ಎಷ್ಟು ಚೆನ್ನಾಗಿ ಅವಲೋಕಿಸಿದ್ದೀರಿ...ನಿಮ್ಮ ತಾಳ್ಮೆಗೆ ಒಂದು ಹ್ಯಾಟ್ಸಪ್..
    ಇದು ಅವರಿಗೆ ಮಾತ್ರವಲ್ಲ. ನಮಗೂ ಅನ್ವಯವಾಗುತ್ತದೆ. ಹಾಗೂ ಬ್ಲಾಗಿಗೋ ಅಥವ ಪತ್ರಿಕೆಗೆ ಕಳಿಸುವ ಮುನ್ನ ಮತ್ತೊಮ್ಮೆ ಅವಲೋಕಿಸಬೇಕೆನ್ನುವ ಪರೋಕ್ಷ ಎಚ್ಚರಿಕೆಯನ್ನು ಕೊಟ್ಟಿದ್ದೀರಿ..
    ಧನ್ಯವಾದಗಳು.

    ReplyDelete
  24. ಶೆಟ್ಟರ,
    ಸದ್ಯಕ್ಕೇನೋ ಬಚಾವಾಗಿದ್ದೀರಿ. ಈ ಅದೃಷ್ಟ ಚಿರಗಾಲವಿರಲಿ ಎಂದು ಹಾರೈಸಲೆ?

    ReplyDelete
  25. ಜ್ಯೋತಿ,
    ‘ಸಂಯುಕ್ತ ಕರ್ನಾಟಕ’ವೇ ಚಾಂಪಿಯನ್!
    ರನ್ನರ್ಸ್-ಅಪ್ ಯಾರೆಂದು ತಿಳಿಯದು.

    ReplyDelete
  26. ನಗಿಸು,
    ನೀವು ತಪ್ಪುಗಳನ್ನು ಮಾಡಿದರೆ ತಾನೆ, ನನಗೆ ತಿದ್ದುವ ಅವಕಾಶ ಸಿಗುವದು! ಅಂಥ ಅವಕಾಶವ ನನಗೆ ದೊರೆಯದು ಎಂದು ಭಾಸವಾಗುತ್ತದೆ.

    ReplyDelete
  27. ಶಿವು,
    ‘ಸಂಯುಕ್ತ ಕರ್ನಾಟಕ’ವನ್ನು ಓದಿ,ಓದಿ ತಾಳ್ಮೆ ಕಳೆದುಕೊಂಡ ಬಳಿಕವೇ ನಾನು ಈ ಲೇಖನ ಬರೆದಿದ್ದು!

    ReplyDelete
  28. ಸುನಾಥ,

    ತುಂಬ ತಾಳ್ಮೆಯಿಂದ ತಪ್ಪುಗಳನ್ನು ಬರೆದಿದ್ದೀರಿ. ಭಾಷೆಯನ್ನು ರೂಪಿಸುವ ಪತ್ರಿಕೆಗಳೇ ಹೀಗೆ ಮಾಡಿದರೆ, ಭಾಷೆಯ ಗತಿ ಏನು? ಇದು ಬರೀ ಸಂಯುಕ್ತ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲವೆಂದು ನನ್ನ ಅನಿಸಿಕೆ.

    ಇನ್ನೂ ಒಂದು ಖೇದದ ಸಂಗತಿ. "ವೀಣಾ" ಎಂಬ ಹೆಸರನ್ನು "ವೀಣ" ಎಂದು ಬರೆಯಲಾಗುತ್ತಿದೆ. "ದೀಪಕ" ಎನ್ನುವ ಹೆಸರನ್ನು "ದೀಪಕ್" ಎಂದು ಬರೆಯಲಾಗುತ್ತಿದೆ. ಇದನ್ನೇ ಓದಿ ಓದಿ, ಅದೇ ಸರಿ ಎಂದು ವಾದಿಸುವವರನ್ನೂ ನೋಡಿದ್ದೇನೆ.

    - ಕೇಶವ

    ReplyDelete
  29. ಈ ರೀತಿ ತಪ್ಪುಗಳು ಎಲ್ಲಾ ಪತ್ರಿಕೆಗಳಲ್ಲೂ ಆಗುತ್ತಿವೆ. ಪತ್ರಿಕೆ ಮಾತ್ರವಲ್ಲ, ನಮ್ಮ ಟೀವಿ ವಾಹಿನಿಗಳಲ್ಲಿ ಕೂಡ ಆಗುತ್ತಿವೆ. ಭಾಷೆ ಅರಿವಿನ ಕೊರತೆಯೋ, ಉದಾಸೀನವೋ ಅಥವಾ ತಾವು ಬರೆದದ್ದೇ ಭಾಷೆ ಎಂಬ ಭ್ರಮೆಯೋ ಗೊತ್ತಿಲ್ಲ. ಒಳ್ಳೆಯ ಕನ್ನಡ ಪದಗಳು ಇರುವ ಕಡೆ ಕೂಡ ಸುಮ್ಮನೇ ಇಂಗ್ಲೀಷ್ ಪದಗಳನ್ನು ಬಳಸುವುದು, ಕಾಗುಣಿತ, ವ್ಯಾಕರಣ ತಪ್ಪುಗಳನ್ನು ಹಾಗೆಯೇ ಅಚ್ಚುಹಾಕುವುದು ಅತೀ ಸಾಮಾನ್ಯವಾಗಿಬಿಟ್ಟಿದೆ ಇತ್ತೀಚೆಗೆ. ಕನ್ನಡ ಅಂಕೆಗಳ ಬಳಕೆಯನ್ನು ಲೋಕಶಿಕ್ಷಣದ ಪತ್ರಿಕೆಗಳನ್ನು ಹೊರತುಪಡಿಸಿ ಎಲ್ಲ ಪತ್ರಿಕೆಗಳೂ ಕೈಬಿಟ್ಟಿವೆ. ಕೇಳಿದರೆ ಜನಕ್ಕೆ ತಿಳಿಯೂದಿಲ್ಲ, ಓದಲು ಕಷ್ಟವಾಗುತ್ತವೆ ಅನ್ನುತ್ತಾರೆ. ಇವರು ಬಳಸದೆ ಜನ ಕಲಿಯೂದಾದರೂ ಹೇಗೆ?. ನಾನಂತೂ ಬಹಳಷ್ಟು ಕನ್ನಡ ಪದಗಳನ್ನು ತಿಳಿದುಕೊಂಡಿದ್ದೇ ಪತ್ರಿಕೆಗಳಿಂದ. ಅಂತಹ ಜವಾಬ್ದಾರಿಯ ಜಾಗದಲ್ಲಿರುವ ಪತ್ರಿಕೆಗಳೇ ಹೀಗೆ ಮಾಡುವುದನ್ನು ನೋಡಿದರೆ ಬೇಜಾರಾಗುತ್ತದೆ. ಪತ್ರಿಕೆಗಳಲ್ಲಿ ಕೆಲಸ ಮಾಡುವು ಎಲ್ಲಾ ಮಿತ್ರರೂ ಇದರ ಬಗ್ಗೆ ಸ್ವಲ್ಪ ಗಮನಕೊಟ್ಟು ತಪ್ಪಿದ್ದಾಗ ತಿದ್ದಿಕೊಂಡರೆ ಚೆನ್ನಾಗಿರುತ್ತದೆ. ಇನ್ಮೇಲೆ ಏನಾದರೂ ಬರೆಯುವಾಗ ನನಗೂ ಕೂಡ ನಿಮ್ಮ ಎಚ್ಚರಿಗೆ ಸದಾ ಬೆನ್ನಿಗಿರುತ್ತದೆ . thanx

    ReplyDelete
  30. ಕೇಶವ,
    ವೀಣಾ ‘ವೀಣ’ ಆದಂತೆಯೇ ಬಾಲಾ ‘ಬಾಲ’ ಆಗಿದ್ದಾಳೆ. ಇದು ಕತ್ತೇಬಾಲವೊ ಕುದುರೆಬಾಲವೋ ತಿಳಿಯದು. ಹೆಸರಾಂತ ಅಂಕಣಕಾರ ಎಚ್.ಎಸ್.ಕೆ. ತಮ್ಮ ಒಂದು ಅಂಕಣದಲ್ಲಿ ರಾಯಚೂರಕರ ಅವರನ್ನು ರಾಯ್ ಚೂರ್ ಕರ್ ಎಂದು ಚೂರುಚೂರು ಮಾಡಿದ್ದರು. ಅಂತ್ಯದಲ್ಲಿಯ ದೀರ್ಘಗಳ ಹೃಸ್ವೀಕರಣವಷ್ಟೇ ಅಲ್ಲ, ಮಧ್ಯದಲ್ಲಿಯ ದೀರ್ಘಗಳೂ ಸಹ ಈ ಶಸ್ತ್ರಕ್ರಿಯೆಗೆ ಒಳಗಾಗಿವೆ. ಉದಾಹರಣೆಗೆ ಶುಭಾಶಯವನ್ನು ಶುಭಶಯವಾಗಿ ಹಾಗೂ ಶಿಲಾನ್ಯಾಸವನ್ನು ಶಿಲನ್ಯಾಸವಾಗಿ ಬರೆಯುತ್ತಿರುವದನ್ನು ನಾನು ಓದಿ ಖೇದಪಟ್ಟಿದ್ದೇನೆ.
    ಇದು ಒಂದು ಪ್ರಕಾರವಾದರೆ ಮಹಾಪ್ರಾಣದ ಅಲ್ಪಪ್ರಾಣೀಕರಣ ಮತ್ತು vice versa ಮತ್ತೊಂದು ಬಗೆಯದು.ಧಾಬಾ ಇದು ಡಾಬ ಆಗಿದೆ. ವಿಕಿಪೀಡಿಯಾದಲ್ಲಿ ಖಾನ ಅಬ್ದುಲ ಗಫಾರಖಾನರು ಕಾನ್ ಅಬ್ದುಲ್ ಗಪಾರ್ ಕಾನ್ ಆಗಿದ್ದಾರೆ;ಝಾರಖಂಡವು ಜಾರ್ಕಂಡ್ ಆಗಿದೆ. ಇದರ ವಿರುದ್ಧ ಪ್ರತಿಭಟಿಸಿ, originalಗಳು ಸಿಗುವ sourceನಿಂದ ಅಂದರೆ ಹಿಂದಿ ಪತ್ರಿಕೆ ಇತ್ಯಾದಿಗಳಿಂದ ನೈಜರೂಪವನ್ನು ನೋಡಿ, ಬರೆಯಿರಿ ಎಂದು ಗುದ್ದಾಡಿದ್ದೆ.
    ನೈಜರೂಪ ಅರಿಯದ ಪಂಡಿತರು ಮಾಡುವ ಹಾವಳಿ ಹೇಳತೀರದು. ಇತ್ತೀಚಿನ ಸಂಯುಕ್ತ ಕರ್ನಾಟಕ ಒಂದರಲ್ಲಿ ತಾಲಿಪೆಟ್ಟು ಅನ್ನುವ ಶಬ್ದವು ಪೆಟ್ಟು ಕೊಡುವದರಿಂದ ಬಂದಿದೆ ಎನ್ನುವ ಮಹಾಸಂಶೋಧನೆಯನ್ನು Mr.ಪ್ರಸನ್ನ ಬರೆದಿದ್ದರು. ಥಾಲೀಪೀಠ ಎಂದರೆ ಥಾಲಿಯಲ್ಲಿರುವ ಹಿಟ್ಟು ಎನ್ನುವದು ಈ ಮಹಾಶಯರಿಗೆ ಗೊತ್ತಿದ್ದರೆ ತಾನೆ?
    ಅದೇಕೆ, ರಾಜಪುರೋಹಿತ ಎನ್ನುವ ಭಾಷಾತಜ್ಞರೇ ಕಸ್ತೂರಿ ಮಾಸಪತ್ರಿಕೆಯಲ್ಲಿ "ಗಡಿಯಾರ"ವನ್ನು ಉತ್ತರ ಕರ್ನಾಟಕದವರು "ಘಡಿಯಾರ" ಎಂದು ಉಚ್ಚರಿಸುತ್ತಾರೆ ಎಂದು ಅಣಗಿಸಿದ್ದರು. ಘಟಿಕಾ ಎನ್ನುವ ಸಂಸ್ಕೃತ ಶಬ್ದದಿಂದ ‘ಘಡೀ’ ಎನ್ನುವ ಹಿಂದೀ ಶಬ್ದ ಹಾಗೂ ಆ ಶಬ್ದದಿಂದ घ्डीयार ಅನ್ನುವ ಶಬ್ದ derive ಆಗಿವ. ಆದುದರಿಂದ ಘಡಿಯಾರವೇ ಸರಿ;ಗಡಿಯಾರ ಸರಿಯಲ್ಲ ಎಂದು ನಾನು ಬರೆದ ಪತ್ರವನ್ನು ಕಸ್ತೂರಿ ಪ್ರಕಟಿಸಲಿಲ್ಲ.
    ಇಂತಹ ಬರಹ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಕಂಡು ಹಿಡಿಯಲು ನಾನು ಧಾರವಾಡ ಜಿಲ್ಲೆಯ ಎಲ್ಲ ಸಾಹಿತಿಗಳನ್ನು ಭೇಟಿ ಮಾಡಿ, ಒಂದು ಸಂಕಿರಣವನ್ನು ಸಹ ಏರ್ಪಡಿಸಿದ್ದೆ. ಆದರೆ ಇಲ್ಲಿ ಇದ್ದವರೆಲ್ಲರೂ ಸ್ವಾರ್ಥಿಗಳು.
    They are only after the crumbs of bread pieces thrown by the Power.

    ReplyDelete
  31. ವಿ.ರಾ.ಹೆ.
    ಕನ್ನಡ ಅಂಕಿಗಳ ಈ ಪರಿಸ್ಥಿತಿಯು ನನ್ನನ್ನೂ ಸಹ ತಳಮಳಗೊಳಿಸಿದೆ. ಈ ವಿಷಯದಲ್ಲಿ ನಮ್ಮ ವಿನೋದಸಾಹಿತಿ ಅನಂತ ಕಲ್ಲೋಳರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ:
    ತಮಿಳಿನಲ್ಲಿ ಅಂಕಿಗಳನ್ನು ಅಕ್ಷರಸಂಕೇತದಲ್ಲಿ ಬರೆಯುವ ಪದ್ಧತಿ ಇದ್ದುದರಿಂದ, ತಮಿಳರು ಇಂಗ್ಲೀಶ ಅಂಕಿಗಳನ್ನೇ ಬಳಸತೊಡಗಿದರು. ಅದೇ ಪ್ರಭಾವದಿಂದ ದಕ್ಷಿಣ ಕರ್ನಾಟಕದಲ್ಲಿ ಸಹ ಇಂಗ್ಲೀಶ ಅಂಕಿಗಳೇ ರೂಢಿಯಲ್ಲಿ ಬಂದಿವೆ.
    ಇನ್ನು ಆಕಾಶವಾಣಿ ಹಾಗು ಟೀವಿಗಳಲ್ಲಿ ಬಳಸುವ ಕನ್ನಡವಂತೂ ಕಣ್ಣೀರನ್ನೇ ತರಿಸುತ್ತದೆ!

    ReplyDelete
  32. "...ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ.."

    ಸುನಾತರೆ,
    ಇಲ್ಲಿ ನೀವು ಹೇಳುರುವುದನ್ನು ನೋಡಿದರೆ ತಾವು "ಸರ್ವೋಚ್ಚ ನ್ಯಾಯಲಯ" ಪದಗಳನ್ನು ಕನ್ನಡದ್ದೇ ಅಂತ ತಿಳಿದಿರುವಂತಿದೆ ಮೇಣ್ ಬೇಕೂ ಅಂತಲೇ ಸಂಸ್ಕೃತ ಪದಗಳನ್ನು ಕನ್ನಡದ್ದು ಎಂದು ನೀವು ಹೇಳುತ್ತಿರಬಹುದು. ಇದು ಬೇಕೆ?

    ಕನ್ನಡದಲ್ಲೇ ಅಚ್ಚುಕಟ್ಟಾಗಿ ’ಹೆತ್ತೀರ್ಪು ಮನೆ’(ಪೆರ್+ತೀರ್ಪು) ಅಂತ ಪದವಿರುವುದು ತಮಗೆ ಗೊತ್ತಿಲ್ಲವೆ? (ಮಾದರಿ: ಹೆಬ್ಬುಲಿ,ಹೆಬ್ಬಾವು)

    ಇಶ್ಟಕ್ಕೂ ’ಸರ್ವೋಚ್ಚ ನ್ಯಾಯಲಯ’ ಬದಲು ’ಸುಪ್ರೀಂ ಕೋರ್ಟ್’ ಪದಬಳಕೆ ಅಶ್ಟೇನು ತಪ್ಪಾಗಿ ಕಾಣಲಿಲ್ಲ ಯಾಕಂದರೆ ಎರಡೂ ಕನ್ನಡಕ್ಕೆ ಹೊರನುಡಿಗಳಿಂದ ಬಂದಿರುವುದು.

    ಇನ್ನು ನೀವು ತೋರಿಸಿಕೊಟ್ಟಿರುವ ತಪ್ಪುಗಳಲ್ಲಿ ಹೆಚ್ಚು ಪದಗಳು ಸಂಸ್ಕೃತದ್ದು ಮೇಣ್ ಇಂಗಳೀಸಿನ್ನದ್ದು .

    ಅಲ್ಪ/ಮಹಾಪ್ರಾಣ ದ ಗೊಂದಲಗಳು ಹೆಚ್ಚು ಕನ್ನಡಿಗರಿಗೆ ಸಂಸ್ಕೃತದ ಸಹವಾಸದಿಂದ ಒದಗಿರುವ ತೊಂದರೆ. ಇದನ್ನು ಬಗೆಹರಿಸಲು ಇರುವ ಒಂದೇ ದಾರಿ - ’ಮಹಾಪ್ರಾಣ’ವನ್ನು ಕನ್ನಡದಿಂದ ಕೈಬಿಡುವುದು.

    ಅಂದಹಾಗೆ ’ಸಂಯುಕ್ತ ಕರ್ನಾಟಕ’ದ ಕಾಗದ ಮತ್ತು ಅಚ್ಚು ಚೆನ್ನಾಗಿರುವುದಿಲ್ಲ. ನನಗೆ ’ಪ್ರಜಾವಾಣಿ’ಯೇ ಕನ್ನಡದ ಎಲ್ಲಾ ಸುದ್ದಿಯೋಲೆಗಳಲ್ಲಿ ಅಚ್ಚುಕಟ್ಟು ಅಂತ ಅನಿಸುತ್ತದೆ.

    ReplyDelete
  33. ""ಘಡಿಯಾರ" ಎಂದು ಉಚ್ಚರಿಸುತ್ತಾರೆ ಎಂದು ಅಣಗಿಸಿದ್ದರು. ಘಟಿಕಾ ಎನ್ನುವ ಸಂಸ್ಕೃತ ಶಬ್ದದಿಂದ ‘ಘಡೀ’ ಎನ್ನುವ ಹಿಂದೀ ಶಬ್ದ ಹಾಗೂ ಆ ಶಬ್ದದಿಂದ घ्डीयार ಅನ್ನುವ ಶಬ್ದ derive ಆಗಿವ. ಆದುದರಿಂದ ಘಡಿಯಾರವೇ ಸರಿ;ಗಡಿಯಾರ ಸರಿಯಲ್ಲ ಎಂದು..."

    ಹಾಗಾದರೆ
    ಕತೆ ಸರಿನೊ, ಕಥೆ ಸರಿನೊ
    ಕೈದಿ ಸರಿನೊ, ಖೈದಿ ಸರಿನೊ (ಇಲ್ಲಿರುವುದು ಖ ಅಲ್ಲ Qai)
    ಶೇಕ್ಸ್ ಪಿಯರ್, ಷೇಕ್ಸ್ ಪಿಯರ್ ( ಇಂಗಳೀಸನಲ್ಲಿ ಎಲ್ಲಿ "ಷ" ಅಕ್ಕರವಿದೆ?

    ನಾವು ಹೊರಗಿನಿಂದ ಪದಗಳನ್ನು ಎರವಲು ಪಡೆದಾಗ ನಾವು ಹೇಗೆ ಉಚ್ಚರಿಸುತ್ತೇವೆಯೊ ಹಾಗೆ ಬರೆಯಬೇಕು. ಪಡೆದುಕೊಂಡ ಹೊರನುಡಿಯಲ್ಲಿ ಅದರ ಉಲಿಯುವಿಕೆ ಹೇಗಿದಿಯೋ ಅದಕ್ಕೆ ಅಶ್ಟು ತಲೆಮೆ ನೀಡಬೇಕಾಗಿಲ್ಲ. ಇಲ್ಲವಾದರೆ ಕನ್ನಡದಲ್ಲಿ ’Q', "F" ಮತ್ತು ಕೆಲವು ಅರೇಬಿಯನ್ ನುಡಿಗಳಲ್ಲಿರುವ ಮೂರು-ನಾಕು ತೆಱ ಇರುವ ’ಹ’ಗಳನ್ನು ಸೇರಿಸ್ಕೊಬೇಕಾಗುತ್ತದೆ. ಈಗಾಗಲೆ ಬೇಕಾಗಿರುವುದಕ್ಕಿಂತ ಹೆಚ್ಚು ಅಕ್ಕ್ರಗಳು ಕನ್ನಡದಲ್ಲಿದೆ.

    -ಬರತ್

    ReplyDelete
  34. ಭರತ,
    ಸಂಸ್ಕೃತವು ಕನ್ನಡಕ್ಕೆ ರಕ್ತಸಂಬಂಧಿ ಎಂದು ಜೇಳಿದರೆ ಕರ್ನಾಟಕದ ಅಶಿಕ್ಷಿತ ಮನುಷ್ಯನಿಗೂ ಸಹ ಅರ್ಥವಾಗುತ್ತದೆ. ಅದರೆ ಇಂಗ್ಲೀಶು ಕನ್ನಡದ blood relative ಎಂದು ನೀವು ಹೇಳಿದರೆ ಅದು ಯಾರಿಗೂ ಅರ್ಥವಾಗಲಾರದು. (Blood relative ಅನ್ನುವ ಪದವೆ ಕಂಟ್ರಿ ಇಂಗ್ಲಿಶ್ ಅನ್ನುವ ಮಾತು ಬೇರೆ!)
    ಕನ್ನಡದಲ್ಲಿ ದಿನನಿತ್ಯವೂ ಬಳಕೆಯಾಗುವ ಅನೇಕ ಪದಗಳು ಸಂಸ್ಕೃತ ಮೂಲದವೇ ಆಗಿದ್ದು, ಅವು ನಮಗೆ ಸಹಜ ಕನ್ನಡ ಪದಗಳೇ ಅಗಿವೆ.
    ಸಂಸ್ಕೃತದ ಬಗೆಗೆ ನಿಮಗೆ ಇಷ್ಟು ಅಸಹನೆ ಇದ್ದರೆ, ನಿಮ್ಮ ಹೆಸರು ಸಹ ಸಂಸ್ಕೃತ ಪದವೇ ಎನ್ನುವದನ್ನು ನೀವು ಗಮನಿಸಿಲ್ಲವೆ?

    ReplyDelete
  35. ಭರತ,
    ಉತ್ತರ ಕರ್ನಾಟಕ ಜನರು ‘ಘಡಿಯಾರ’ ಎಂದೇ ಉಚ್ಚರಿಸುತ್ತಾರೆ ; ಅದೇ ರೀತಿ ಬರೆಯುತ್ತಾರೆ. ನೀವೇಕೆ ಅಲ್ಪಪ್ರಾಣೀಕರಣ ಮಾಡುತ್ತೀರೊ ತಿಳಿಯದು!

    ReplyDelete
  36. ಕನ್ನಡದಲ್ಲಿ ಬರೀ ಕನ್ನಡದ ಪದಗಳಲ್ಲ, ಸಂಸ್ಕೃತದಿಂದ ತುಂಬ ಬೆಳೆದಿದೆ. ಫಾರ್ಸಿ ಮೂಲದ ಪದಗಳೂ ಇವೆ (ಕುರ್ಚಿ ಇತ್ಯಾದಿ). ಇಂಗ್ಲೀಷನ್ನಂತೂ ಎಗ್ಗಿಲ್ಲದೇ ಎಲ್ಲಿ ಬೇಕೆಂದರಲ್ಲಿ ಉಪಯೋಗಿಸುತ್ತಿದ್ದೇವೆ (ಬರೆಯುವಾಗ ಮಿತ ತೋರಿದರೂ ಮಾತಾಡುವಾಗ ಮಾತ್ರ..). ಕನ್ನಡ ಬೆಳೆಯಬೇಕಾದರೆ ಕನ್ನಡದ ಬೇರನ್ನು ಮರೆಯದೇ, ಕನ್ನಡಕ್ಕೆ ಸಂಸ್ಕೃತ ಕೊಟ್ಟ ಕಾಣಿಕೆ ಮರೆಯದೇ, ನಮ್ಮ ಹತ್ತಿರದ ಭಾಷೆಗಳನ್ನು ಕೂಡಿಸಿಕೊಂಡು, ಇಂಗ್ಲೀಷನ್ನು ಅರಗಿಸಿಕೊಂಡು ಬೆಳೆಸಬೇಕಿದೆ.

    ಅದನ್ನು ಬಿಟ್ಟು ಸಂಸ್ಕೃತವನ್ನು ಬಯ್ಯುತ್ತ, ಇಂಗ್ಲೀಷನ್ನು ಹೊಗಳುತ್ತ ಕುಳಿತುಕೊಳ್ಳುವುದರಿಂದ ಯಾವ ಉಪಯೋಗವೂ ಇಲ್ಲ ಎಂದು ನನ್ನ ಅನಿಸಿಕೆ.

    ಕನ್ನಡದಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸುವುದರಿಂದ ಕನ್ನಡಕ್ಕೆ ಇನ್ನೂ ಉಪಯೋಗವೇ ಆಗುವುದು ಎಂದು ನನ್ನ ಅನಿಸಿಕೆ. ಫಾರ್ಸಿ (ಫಾ ದ ಕೆಳಗೆ ಎರಡು ಚುಕ್ಕೆ), ಜ ಕೆಳಗೆ ಎರಡು ಚುಕ್ಕೆ, ಲಾಜ್ ಬರೆಯುವಾಗ ಲಾ ದ ಮೇಲೆ ಅರ್ಧ ಚಂದ್ರಾಕಾರ, ಇತ್ಯಾದಿ ಬರೆಯುವುದರಿಂದ ಕನ್ನಡಕ್ಕೆ ಹೆಚ್ಚಿನ ಉಪಯೋಗ ಎಂದ ನನ್ನ ಅಂಬೋಣ.

    - ಕೇಶವ

    ReplyDelete
  37. ಸುನಾತರೆ,

    ನನಗೆ ಸಂಸ್ಕ್ರುತ/ಇಂಗಳೀಸ್ ಎರಡು ಒಂದೇ.ಎರಡೂ ಹೊರಗಿನವು. ಯಾವುದು ಹೆಚ್ಚು, ಕಡಿಮೆ ಅಲ್ಲ.

    ನೀವು ತಿಳಿದುರುವ ಹಾಗೆ ಉತ್ತರ ಕರ್ನಾಟಕದ ಎಲ್ಲರೂ ’ಮಹಾಪ್ರಾಣ’ ಉಲಿಯಬಲ್ಲರು ಎನ್ನುವುದು ತಪ್ಪು ತಿಳುವಳಿಕೆ. ಮಹಾಪ್ರಾಣ ಉಲಿಯಬಲ್ಲವರು ಬರೀ ಮಹಾರಾಶ್ಟ್ರದ ಗಡಿಯಲ್ಲಿರುವ ಜಿಲ್ಲೆಗಳಲ್ಲಿರುವ ಮಂದಿ(ಇದು ಮುಂಬಯಿ ಸರ್ಕಾರವಿದ್ದಾಗ ಮರಾಟಿ ಹೇರಿಕೆಯಿಂದಾದ ತೊಂದರೆಗಳು). ಇದರ ಬಗ್ಗೆ ಶಂಕರಬಟ್ಟರು ಬರೆದಿರುವ ’ಕನ್ನಡ ನುಡಿ ನಡೆದು ಬಂದ ದಾರಿ’ಹೊತ್ತಿಗೆಯನ್ನು ಓದಬೇಕಾಗಿ ಕೋರಿಕೆ.

    ಬಡಗು ಕರ್ನಾಟಕದಲ್ಲಿರುವ ’ಅ’ ಕಾರ ’ಇ’ ಕಾರವಾಗುವಿಕೆ ಮಯ್ಸೂರಿನಲ್ಲೂ ಇದೆ.

    ಮಾದರಿ: ಮನೆ(ಮನಿ), ಹಣೆ(ಹಣಿ), ಕರೆ(ಕರಿ), ಬರೆ(ಬರಿ)

    ಆದರೆ ಮಯ್ಸೂರಿನಲ್ಲಿ ಬರೀ ಕೆಲಸದೊರೆಗಳು ಈ ’ಅ’ಕಾರಕ್ಕೆ ’ಇ’ಕಾರವಾಗುತ್ತದೆ ಆದರೆ ಬಡಗು ಕರ್ನಾಟಕದಲ್ಲಿ ಹೆಸರೊರೆ,ಕೆಲಸದೊರೆ ಎರಡರಲ್ಲೂ ಈ ’ಅ’ಕಾರ ’ಇ’ ಕಾರವಾಗುತ್ತದೆ.

    ಅಲ್ಲದೆ ತೆಂಕು ಕರ್ನಾಟಕದ ಹಳ್ಳಿಗಳಲ್ಲಿ ’ಅಯ್ತೆ’, ’ಬತ್ತಯ್ತೆ’
    ಇದ್ದ ಹಾಗೆ ಬಡಗು ನಾಡಿನಲ್ಲೂ ’ಅಯ್ತಿ’, ’ಬರಾಕ ಹತ್ತಯ್ತಿ’

    ಅಂದ ಹಾಗೆ, ನೀವು ತುಂಬಾ ಜಾಣರು, ’ಸರ್ವೋಚ್ಚ ನ್ಯಾಯಲಯ’ ಸಂಸ್ಕೃತದ್ದು ಎಂದು ನಾನು ಎತ್ತಿ ತೋರಿಸಿದ್ದನ್ನು ನೀವು ತಪ್ಪು ಎಂದು ಒಪ್ಪಿಕೊಳ್ಳುವ ’ಸೌಜನ್ಯ’ವನ್ನು ತೋರಲಿಲ್ಲ. ಕನ್ನಡದ ಬಗ್ಗೆ ಅಶ್ಟು ಒಲವಿದ್ದರೆ ’ಹೆತ್ತೀರ್ಪು ಮನೆ’ ಬಳಕೆಯ ಬಗ್ಗೆ ನಿಮ್ಮ ’ದಿವ್ಯ ಮೌನ’ ತಿಳಿಯುತ್ತಿಲ್ಲ?

    ಇನ್ನು ನನ್ನ ಹೆಸರಿನ ಬಗ್ಗೆ,

    ನನಗೆ ಹೆಸರಿಡುವಾಗ ನನ್ನನ್ನು ಯಾರು ಕೇಳಲಿಲ್ಲ. ಇಲ್ದೆ ಹೋಗಿದ್ರೆ ಕನ್ನಡದಲ್ಲೇ ಹೆಸರು ಇಟ್ಕೋತಾ ಇದ್ದೆ. :)


    ಇದಕ್ಕೆ ತಾವು ಇನ್ನು ಉತ್ತರಿಸಿಲ್ಲ.
    "
    ಕತೆ ಸರಿನೊ, ಕಥೆ ಸರಿನೊ
    ಕೈದಿ ಸರಿನೊ, ಖೈದಿ ಸರಿನೊ (ಇಲ್ಲಿರುವುದು ಖ ಅಲ್ಲ Qai)
    ಶೇಕ್ಸ್ ಪಿಯರ್, ಷೇಕ್ಸ್ ಪಿಯರ್ ( ಇಂಗಳೀಸನಲ್ಲಿ ಎಲ್ಲಿ "ಷ" ಅಕ್ಕರವಿದೆ? .."

    ಬಡಗು ಕರ್ನಾಟಕದ ಬರಹಗಾರರೆ ತಮ್ಮ ಬರಹಗಳಲ್ಲಿ ’ಕತೆ’ ಬಳಸಿರುವುದನ್ನು ನಾನು ಬೇಕಾದರೆ ತೋರಿಸಬಲ್ಲೆ. ಬೇಕಾದರೆ ಗೀತಾ ನಾಗಬೂಶಣ ಅವರ ಕತೆಗಳನ್ನು ಓದಿ.

    ಕೇಶವರೆ,
    ನಿಮ್ಮ ಕಮೆಂಟುಗಳನ್ನು ನೋಡಿದರೆ ನಿಮ್ಮ ನುಡಿಯರಿಮೆ ಕಡಿಮೆ ಎಂದು ತಿಳಿಯುತ್ತದೆ. ಮೊದಲು ತಾವು ಡಾ| ಡಿ.ಎನ್. ಶಂಕರಬಟ್ಟರ ಹೊತ್ತಿಗೆಗಳನ್ನು ಓದಿಕೊಳ್ಳಬೇಕೆಂದು ’ಸವಿನಯ ಪ್ರಾರ್ಥನೆ’

    ಕೊಸರು: ದಯವಿಟ್ಟು ನಮ್ಮ ಮೇಲೆ ಮಹಾಪ್ರಾಣ ಹೇರಬೇಡಿ, ನೀವು ಹೇರುವುದನ್ನು ನೋಡಿ ಆಮೇಲೆ ಬೇರೆಯವರು Q, F, X ಇವುನ್ನೆಲ್ಲ ಹೇರುತ್ತಾರೆ...ಅದು ನಮಗೆ ಬೇಕಾಗಿಲ್ಲ. ನಮ್ಮನ್ನು ಉಲಿದಂತೆ ಬರೆಯಲು ಬಿಡಿ.

    ReplyDelete
  38. ಎಸ್.ಕೆ. ಕರೀಂ ಕಾನ್ ಇಟ್ಟಿಕೊಂಡಿರುವುದು ಅರೇಬಿಯನ್ ಹೆಸರು ಆದರೆ ಕನ್ನಡದಲ್ಲೆ ಒಳ್ಳೊಳ್ಳೆ ಹಾಡುಗಳನ್ನು ಬರೆದಿಲ್ಲವೆ.

    ಇನ್ನು ಕಿಟ್ಟೆಲ್ (ಜರ್ಮನ್ ಹೆಸರು)- ಇವರಿಗಿಂತ ಕನ್ನಡಕ್ಕೆ ಹೆಚ್ಚು ದುಡಿದವರುಂಟೆ?

    ಹೆಸರಲ್ಲೇನಿದೆ. ಬಿಡ್ರಿ ?

    -ಬರತ್

    ReplyDelete
  39. ನಲುಮೆಯ ಭರತ,

    "ಕೇಶವರೆ,
    ನಿಮ್ಮ ಕಮೆಂಟುಗಳನ್ನು ನೋಡಿದರೆ ನಿಮ್ಮ ನುಡಿಯರಿಮೆ ಕಡಿಮೆ ಎಂದು ತಿಳಿಯುತ್ತದೆ. ಮೊದಲು ತಾವು ಡಾ| ಡಿ.ಎನ್. ಶಂಕರಬಟ್ಟರ ಹೊತ್ತಿಗೆಗಳನ್ನು ಓದಿಕೊಳ್ಳಬೇಕೆಂದು ’ಸವಿನಯ ಪ್ರಾರ್ಥನೆ’"

    ಕನ್ನಡ ನುಡಿಯ ಮೇಲೆ ನನ್ನ ಹಿಡಿತ ನಿಮ್ಮಷ್ಟು ಇಲ್ಲ ಎಂದು ಖಂಡಿತ ಒಪ್ಪಿಕೋತೇನೆ. ಶಂಕರಭಟ್ಟರನ್ನು ನಾನು ಇನ್ನೂ ಓದಿಲ್ಲ. ಇದುವರೆಗೆ ಅವರ ಪುಸ್ತಕಗಳ ಬಗ್ಗೆ ಜಾಲದಲ್ಲಾದ ಚರ್ಚೆಯನ್ನು ಸುಮಾರಾಗಿ ಓದಿದ್ದೇನೆ. ಈ ಸಲ ಕರುನಾಡಿಗೆ ಬಂದಾಗ ಆ ಹೊತ್ತಿಗೆಯನ್ನು ಖಂಡಿತ ಹೊತ್ತೊಯ್ಯುತ್ತೇನೆ. ನನಗೆ ಶಂಕರಭಟ್ಟರ ಮೇಲೆ ತುಂಬ ಗೌರವವಿದೆ.

    ಆದರೆ ಪ್ರಶ್ನೆ ಇರುವುದು ಇಲ್ಲಲ್ಲ. ಉತ್ತರ ಕರ್ನಾಟಕದವರ ಕನ್ನಡದ ಬಗ್ಗೆ ನಿಮಗೆ ಯಾವ ಅರಿವೂ ಇಲ್ಲ ಎಂದು ಒಪ್ಪುವ ವಿನಯ ಬಿಟ್ಟು, ಉಡಾಫೆಯಲ್ಲಿ ಮಾತಾಡಿದ್ದೀರಿ. ಮೈಸೂರು ಕಡೆ ಕನ್ನಡವೇ (ಮಯ್ಸೂರು) ಕನ್ನಡವಲ್ಲ. ಕರುನಾಡಿನಲ್ಲಿ ನೂರಾರು ತರಹದ ಕನ್ನಡಗಳಿವೆ, ಅವುಗಳಲ್ಲಿ ಶಂಕರಭಟ್ಟರು (ಅಥವಾ ನೀವು) ಪ್ರತಿಪಾದಿಸುವ ಕನ್ನಡವೂ ಒಂದು.

    ಕನ್ನಡಕ್ಕೆ ಕನ್ನಡ ಬಿಟ್ಟು ಎಲ್ಲವೂ ಹೊರಗಿನವೇ, ಆದರೆ ಹೊರಗಿನ ಹೊಡೆತಗಳನ್ನು (ಹಿಂದೆ ಸಂಸ್ಕೃತ, ಈಗ ಇಂಗ್ಲೀಷ್) ತನ್ನದನ್ನಾಗಿಸಿಕೊಂಡು ಬೆಳೆಸಲು ನಾವೆಲ್ಲ ಶ್ರಮಿಸಬೇಕಿದೆ. ಅಂಥಾ ಕೆಲಸವನ್ನು ನೀವೂ ಮಾಡುತ್ತಿದ್ದೀರಿ, ಸುನಾಥರೂ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಪ್ರೀತಿ ಇರುವ ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕಿದೆ. ದೂರಿವುದರಿಂದ, ವಯಕ್ತಿಕವಾಗಿ ನಿಂದಿಸುವುದರಿಂದ ಕನ್ನಡಕ್ಕೆ ಯಾವ ಪ್ರಯೋಜವೂ ಇಲ್ಲ. ಫ್ಯಾಸಿಸ್ಟ್ ಅಟ್ಟಿಟ್ಟ್ಯೂಡ್ ನಿಂದ ಯಾರಿಗೂ ಉಪಯೋಗವಾಗಿಲ್ಲ. ವಿದ್ಯೆ ವಿನಯದಿಂದ ಶೋಭಿಸುತ್ತದೆ. ನಿಮ್ಮಲ್ಲಿ ಕನ್ನಡದ ವಿದ್ವತ್ತು ಇದೆ, ಆದರೆ ಅದನ್ನು ಹೊರಹಾಕುವ ರೀತಿಯಿಂದ ಕನ್ನಡಕ್ಕೆ ಯಾವ ಉಪಯೋಗವೂ ಆಗುವುದಿಲ್ಲ. ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಹುರುದುಂಬಿಸಿ, ತಪ್ಪಿದ್ದರೆ ನಯವಾಗಿ ಹೇಳಿ, ಆರ್ಭಟಿಸಬೇಡಿ. ಇನ್ನೊಬ್ಬ ಕನ್ನಡಿಗ ನೊಂದುಕೊಳ್ಳುತ್ತಾನೆ ಎನ್ನುವುದನ್ನು ಮರೆಯಬೇಡಿ.

    ನಮಸ್ಕಾರ.

    - ಕೇಶವ

    ReplyDelete
  40. ಕೇಶವರೆ,
    ನಾನು ಯಾರನ್ನು ನೋಯಿಸುವಂತೆ ಬರೆದಿಲ್ಲ. ಬರೆದಿದ್ದರೆ ಮನ್ನಿಸಬೇಕಾಗಿ ಕೋರಿಕೆ.

    ಇನ್ನು, ನನಗೆ ಬಡಗು ಕರ್ನಾಟಕದ ಕನ್ನಡದ ಅರಿವಿನ ಬಗ್ಗೆ ಬರೆದಿದ್ದೀರಿ. ಇದರ ಬಗ್ಗೆ ಎರಡು ಮಾತು.

    ೧. ನನ್ನ ಗೆಳೆಯರೆಲ್ಲರೂ ಹುಬ್ಬಳ್ಳಿ,ದಾರವಾಡ, ಬೆಳಗಾವಿಯವರೆ. ಅವರ ಜೊತೆ ಒಂದೇ ಮನೆಯಲ್ಲಿ ೫ ವರುಶ ಕಳೆದಿದ್ದೇನೆ. ಆದ್ದರಿಂದ ನಾನು ಬಡಗು ಕರ್ನಾಟಕದ ದಾಟಿಯಲ್ಲಿ ಯಾವುದೇ ಅಳುಕಿಲ್ಲದೆ ಮಾತನಾಡಬಲ್ಲೆ.

    ೨. ನಾನು ಹುಬ್ಬಳ್ಳಿ, ದಾರವಾಡ, ಬೆಳಗಾವಿ, ಬಾಗಲಕೋಟೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು(ಕಿಸುವೊಳಲು),ರೋಣ,ಉತ್ತರ ಕನ್ನಡ - ಈ ಎಲ್ಲ ಜಿಲ್ಲೆ/ತಾಲೂಕಗಳನ್ನು ಸುತ್ತಿ ಬಂದಿದ್ದೇನೆ. ಅಲ್ಲದೆ ಅಲ್ಲಿನ ಮಂದಿಯ ಆಡುನುಡಿಯನ್ನು ಹತ್ತಿರದಿಂದ ಗಮನಿಸಿದ್ದೇನೆ.

    ೩. ದಾರವಾಡಕ್ಕೆ ಬಂದಿದ್ದಾಗ ಬೇಂದ್ರೆಯವರ ಮನೆಗೆ ಹೋಗಿ ಅಲ್ಲಿ ಕೊಂಚ ಹೊತ್ತು ಕಳೆದು ಬೇಂದ್ರೆಯವರನ್ನು ಹೆಮ್ಮೆಯಿಂದ ನೆನೆದು ಬಂದಿದ್ದೇನೆ.

    ೪. ಹುಬ್ಬಳ್ಳಿಯ ಕಾನಾವಳಿ ಊಟ, ಗಿರ್ಮಿಟ್ ಮತ್ತು ಬೆಳಗಾವಿಯ ಕುಂದ - ಇವೆಲ್ಲವುಗಳ ಸವಿಯನ್ನು ಸವಿದಿದ್ದೇನೆ.

    ನನಗೂ ಮೊದಲಿನಿಂದಲೂ ಕನ್ನಡದ ಬೇರೆ ಬೇರೆ ಬಗೆಗಳನ್ನು ಆಳವಾಗಿ ಅರಿಯುವ ಮನಿಸ್ಸಿದೆ ಮತ್ತು ಕನ್ನಡವಲ್ಲದ ಪದಗಳನ್ನು (ಸಕ್ಕದದ ಪದಗಳನ್ನು) ಕನ್ನಡವೆಂದು ಹೇಳಿದರೆ ನನಗೆ ತಡೆದುಕೊಳ್ಳಲಾಗುವುದಿಲ್ಲ. ಬೇರೆಯವರ ಪದಗಳನ್ನು ನಮ್ಮ ಪದಗಳೆಂದು ಹೇಳುವುದು ನನಗೆ ಸರಿಗಾಣುವುದಿಲ್ಲ. ಆದ್ದರಿಂದ ಕೂಡಲೆ ಅದನ್ನ ಇದಿರಿಸುತ್ತೆನೆ.

    ಅಲ್ಲದೆ ’ಕನ್ನಡ ನುಡಿ ನಡೆದು ಬಂದ ದಾರಿ’ ಹೊತ್ತಿಗೆ ಓದಿದರೆ ಕನ್ನಡ ನಾಡನ್ನೇ ಸುತ್ತಿ ಬಂದಂತೆ ಆಗುತ್ತದೆ.

    ಕೊಸರು: ನನಗೆ ಎಲ್ಲಾ ಬಗೆಯ ಕನ್ನಡಗಳಲ್ಲಿ ಹುರುಪು,ಒಲವು ಮತ್ತು ಗವ್ರವವಿದೆ.

    ReplyDelete
  41. ಭರತರೆ,
    ಕನ್ನಡಿಗರು ಅಲ್ಪಪ್ರಾಣಿಗಳು, ಅದೇ ಅವರ ಜಾಯಮಾನ ಎಂದು ನೀವು ನಂಬಿಕೊಂಡು ಕೂತು ಬಿಟ್ಟಿರುವಿರಿ. ಈ ಅಲ್ಪಪ್ರಾಣತನವು simply the effect of Tamilunadu.
    ಒಂದು ವೇಳೆ, ವಾದಕ್ಕಾಗಿ ನಿಮ್ಮ ಮಾತನ್ನು ಒಪ್ಪಿಕೊಳ್ಳೋಣ. ಅಂದರೆ ಶಿಲಾಯುಗದ ಕಾಲದಲ್ಲಿ ಕನ್ನಡಿಗರು ಅಲ್ಪಪ್ರಾಣಿಗಳಾಗಿರಬಹುದು. ಆ ಕಾಲದಲ್ಲಿ ಅವರು ಬಟ್ಟೆಯನ್ನೇ ತೊಟ್ಟುಕೊಳ್ಳುತ್ತಿದ್ದಿಲ್ಲ. ಹಾಗಂತ, ನಾವು ಈಗಲೂ ಸಹ ಮರ್ಯಾದೆ ಮುಚ್ಚಿಕೊಳ್ಳದೇ, ತಮಿಳರನ್ನೇ ಅನುಕರಿಸುತ್ತೀವಿ ಅಂತ ಹಟ ಹಿಡಿಯೋದು ಸರಿಯೇ?
    ಭರತರೇ,
    ಜಗತ್ತು ತುಂಬಾ ವಿಸ್ತಾರವಾಗಿದೆ;ಹಾಗೂ ಭರದಿಂದ ಓಡುತ್ತಿದೆ.
    ನಾವು ಸಂಕುಚಿತ ಬುದ್ಧಿಯಿಂದ ಕುಳಿತರೆ ಹಿಂದೆ ಬೀಳುತ್ತೇವೆ.
    Come on, let us catch up with the world! ಉತ್ತಮವಾದದ್ದನ್ನು ಎಲ್ಲೆಡೆಯಿಂದಲೂ ಪಡೆಯೋಣ:
    आ नॊ भद्रा: ऋतवॊ यंतु विश्वतः॥

    ReplyDelete
  42. ಸುನಾತರೆ,
    ತಾವು ನಾನು ಕೇಳಿದ ಕೇಳ್ಮೆಗಳಿಗೆ ಮಾರುಲಿಯದೆ ನುಣುಚಿಕೊಳ್ಳುತ್ತಿದ್ದೀರಿ. ಅಲ್ಲದೆ ತುಂಬಾ ’generalise' ಮಾಡಿ ಮತಾಡುತ್ತಿದ್ದೀರಿ.

    ನಾನು ಎಲ್ಲೂ ಬೇರೆ ಕಡೆಯಿಂದ ಪದ ತೆಗೆದುಕೊಳ್ಳಬೇಡಿ ಅಂತ ಹೇಳಿಲ್ಲ. ಇದು ನಿಮ್ಮ ಮರುಳು/ಬ್ರಮೆ.

    "ನೀವು ನಂಬಿಕೊಂಡು ಕೂತು ಬಿಟ್ಟಿರುವಿರಿ. ಈ ಅಲ್ಪಪ್ರಾಣತನವು simply the effect of Tamilunadu.
    "

    ಇದನ್ನು ಇದುವರೆವಿಗೂ ಯಾವ ನುಡಿಯರಿಗನೂ ಹೇಳಿಲ್ಲ. ಮತ್ತು ಇದಕ್ಕೆ ಯಾವ ಪುರಾವೆಯೂ ಇಲ್ಲ.

    ನೀವು ಹೇಳಿಕೆ ಕೊಡುವ ಬದಲು ನುಡಿಯರಿಗರ ಜೊತೆ ಮಾತಾಡಿ ಮೇಣ್ ಅವರು ಬರೆದಿರುವುದನ್ನ ಓದಿ(ಮಾದರಿ ಡಾ| ಡಿ.ಎನ್.ಶಂಕರ ಬಟ್, ಡಾ| ಕೆ.ವಿ.ನಾರಾಯಣ)

    ನೀವು ಹೇಳಿರುವುದಕ್ಕೆ ಇದಿರಾಗಿ ಕನ್ನಡದ ಕಯ್ವಾಡವೇ(influence) ತಮಿಳಿನ ಮೇಲೆ ಹೆಚ್ಚಾಗಿದೆ.
    ತಮಿಳುನಾಡಿನ ದರ್ಮಪುರಿ,ಕೊಯಮತ್ತೂರು ಜಿಲ್ಲೆಗಳಲ್ಲಿ ಇಂದಿಗೂ ಕನ್ನಡಿಗರಿದ್ದಾರೆ. ಅಲ್ಲಿ ಪರುವತನಹಳ್ಳಿ, ಹೊಗೇನಕಲ್, ಕುರುಬರಹಳ್ಳಿ, ತಾಳವಾಡಿ ಎಂಬ ಅಚ್ಚಕನ್ನಡದ ಎಂಬ ಊರುಗಳಿವೆ. ಅಲ್ಲಿನ ತಮಿಳರು ಕೂಡ ಕನ್ನಡ ಮಾತಾಡುತ್ತಾರೆ.

    ಅಶ್ಟೇ ಏಕೆ ಇಂದಿಗೂ ತಮಿಳರು ಹೆಮ್ಮೆ ಪಡುವ ಪೆರಿಯಾರ್ (ರಾಮಸ್ವಾಮಿ ನಾಯಕ)ಕೂಡ ಕನ್ನಡಿಗರೆ. ಅವರ ತಾಯಿನುಡಿ ಕನ್ನಡ.

    ReplyDelete
  43. ನೀವು ಇದನ್ನು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಕಳುಹಿಸಿ, ಅವರು ಸುಧಾರಿಸಿ ಕೊಳ್ಳಬಹುದು.

    ಕಾಗುಣಿತ ದೋಷಗಳು ಕಣ್ತಪ್ಪಿನಿಂದ ಆಗುತ್ತವೆ ಎನ್ನುವುದನ್ನು ಒಪ್ಪಿಕೊಂಡರು, ವ್ಯಾಕರಣ ದೋಷಗಳನ್ನು ಮನ್ನಿಸಲಾಗದು. ಇನ್ನು ಕನ್ನಡದ ಟಿವಿ ವಾಹಿನಿ ಗಳು, ಎಫ್ ಎಂ ರೇಡಿಯೋ ಗಳ ಕನ್ನಡವನ್ನು ಅ ಭಗವಂತನೇ ಮೆಚ್ಚಬೇಕು. ಅವರು ತಿಳಿಯದೆ ತಪ್ಪು ಮಾಡುತ್ತಾರೋ ಅಥವಾ ಕನ್ನಡದ ಬಗ್ಗೆ ಇರುವ ಅಸಡ್ಡೆ ಇಂದ ಮಾಡುತ್ತಾರೋ ಗೊತ್ತಿಲ್ಲ. ಹೇಗೆ ಬರೆದರು ಜನ ಓದುತ್ತಾರೆ ಅನ್ನುವ ನಂಬಿಕೆಯೂ ಇರಬಹುದು.

    ಒಟ್ಟಲ್ಲಿ ಇವರ ಭಾಷ ಜ್ಞಾನದಿಂದ ನಮ್ಮ ಕಣ್ಣಲ್ಲಿ ಕಿವಿಲಿ ರಕ್ತಾ ಬರೋದು ಒಂದು ಬಾಕಿ ...

    ReplyDelete
  44. ಭರತರೆ,
    ನಾನೂ ಸಹ ದಕ್ಷಿಣ ಕರ್ನಾಟಕದಲ್ಲಿ ಸಾಕಷ್ಟು ಕಾಲ ಕಳೆದಿದ್ದೇನೆ. ಮೈಸೂರು ಜನರೇ ನನಗೆ, "ನೀವು ಮೈಸೂರಿನವರಾ?", ಎಂದು ಕೇಳಿದ್ದುಂಟು.

    ನೀವು ಹುಬ್ಬಳ್ಳಿಯಲ್ಲಿ ಊಟ ಮಾಡಿದ್ದಾಗಿದ್ದರೆ, ‘ಖಾನಾವಳಿ’ಯಲ್ಲಿ ಮಾಡಿರುತ್ತೀರೇ ಹೊರತು ‘ಕಾನಾವಳಿ’ಯಲ್ಲಿ ಮಾಡಿರುವದಿಲ್ಲ. ‘ಗಿರಮಿಟ್ಟು’ ತಿಂದಿರಹುದೇ ಹೊರತು ‘ಗಿರ್ಮಿಟ್’ಅನ್ನು ಅಲ್ಲ. ಬೆಳಗಾವಿಯಲ್ಲಿ ‘ಕುಂದಾ’ ಸಿಗುತ್ತದೆಯೇ ವಿನಃ ‘ಕುಂದ’ ಅಲ್ಲ!

    ಶಂಕರ ಭಟ್ಟರ ಪುಸ್ತಕವನ್ನು ನಾನು ಓದಿದ್ದೇನೆ. ಓದಿ ತುಂಬಾ ನೊಂದುಕೊಂಡಿದ್ದೇನೆ. ‘ಕನ್ನಡಾಂಬೆಯೇ, ಎಂಥ ಸ್ಥಿತಿ ಬಂತಮ್ಮಾ ನಿನಗೆ! ನಿನ್ನ ಮಕ್ಕಳೇ (ಕೆಲವರು) ನಿನ್ನ
    ಅಂಗಾಂಗಳನ್ನು ಕತ್ತರಿಸಿ ನಲಿಯುತ್ತಿರುವರಲ್ಲ!" ಎಂದು ಕೊರಗಿದ್ದೇನೆ.
    ಭರತರೇ,
    ದಯವಿಟ್ಟು ಹಠ ಮಾಡಬೇಡಿ. "ನೋಡಿ ಸ್ವಾಮಿ, ನಾವಿರೋದು ಹೀಗೇ" ಎನ್ನಬೇಡಿ. ಕನ್ನಡಿಗರು ಒಂದು ಕಾಲದಲ್ಲಿ ಹಸಿ ಮಾಂಸ ತಿನ್ನುತ್ತಿದ್ದರೆಂಬ ಕಾರಣದಿಂದ, ಅದೇ ಅವರ ಜಾಯಮಾನವೆಂದು ಘೋಷಿಸುತ್ತ ಈಗ
    ‘ಶಾಲ್ಯನ್ನ ಸಹಘೃತ ಪಂಚಭಕ್ಷ್ಯ ಪರಮಾನ್ನ’ವನ್ನಾಗಲೀ, ಕೊಲ್ಲಾಪುರೀ ಚಿಕನ್-ಅನ್ನಾಗಲೀ, Maggie noodles
    ಅನ್ನಾಗಲೀ ತಿನ್ನಬಾರದೆನ್ನುವದು ಯಾವ ನ್ಯಾಯ?
    By the way, ಭರತರೆ, ‘ಜಾಯಮಾನ’ ಇದು ಯಾವ ಭಾಷೆಯ ಪದ?

    ReplyDelete
  45. ಸಂಬಂಧಪಟ್ಟ ಎಲ್ಲರಿಗೂ..
    ----------------

    ಸುನಾಥ ಸರ್/ಭರತರೇ,
    ಕರ್ನಾಟಕದಲ್ಲಿ ಹತ್ತಿಪ್ಪತ್ತು ತೆರನಾದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳಿವೆ.
    ಹುಬ್ಬಳ್ಳಿ,ಧಾರವಾಡ ಕಡೆ "ನಗ್ಬೇಕಪ್ಪ,ಫೋಟೋ ಹೊಡೀತಾರೆ.."ಅಂದ್ರೆ,ಮೈಸೂರ ಕಡೆ "ನಗು ಕಣೋ,ಫೋಟೋ ಹಿಡಿತಾರೆ.."ಅಂತಾರೆ.
    ಇನ್ನೆಲ್ಲೋ ಅದು "ಕಿಸಿಯಲೇ,ಫೋಟೋ ತೆಗೀತಾರೆ.."ಎಂದು ಉದ್ಘೋಷಿತವಾಗುತ್ತದೆ.

    ಇಲ್ಲಿ ಯಾವುದು ತಪ್ಪು?ಯಾವುದು ಸರಿ?

    ಯಾಕೆಂದರೆ,ಹಿಡಿಯೋದಕ್ಕೆ ಅದು ನಾಯಿಯೂ ಅಲ್ಲ;ಹೊಡಿಯೋದಕ್ಕೆ ಎಮ್ಮೆಯೂ ಅಲ್ಲ!

    ಆಯಾ ಪ್ರಾಂತ್ಯದ ಜನರ ಮೇಲಾದ external language influence ನಿಂದ ಹೀಗಾಗುವದು ಸಹಜ.
    ಹೀಗಾಗಿಯೇ ಬೆಂಗಳೂರಿನ ಮಗುವಿಗೆ ಫಿವರ್ ಬಂದರೆ,ಹುಬ್ಬಳ್ಳಿಯ ಮಗುವಿಗೆ ಜ್ವರ ಬರುತ್ತದೆ.
    ಗುಲ್ಬರ್ಗದ ಪಿಳ್ಳೆಗೆ ಮೈಬಿಸಿಯಾದರೆ,ಬೀದರ್ ನ ಪೋರನಿಗೆ ಉರಿ ಹೋಗ್ತದೆ!
    ಒಟ್ಟಿನಲ್ಲಿ ಇದೆಲ್ಲ ಕನ್ನಡ ಭಾಷೆಯೇ.ಅವರವರ ಭಾವಕ್ಕೆ. ಅವರವರ ಭಕುತಿಗೆ..
    ಇದೆಲ್ಲದರ ಮಧ್ಯೆ ಶಂಕರಭಟ್ಟರ ಕನ್ನಡ ಹೊತ್ತಿಗೆಯೇ ಕನ್ನಡದ ಬೈಬಲ್ ಅಂತ ನಾವ್ಯಾಕೆ ಭಾವಿಸಬೇಕು ಹೇಳಿ?

    -ರಾಘವೇಂದ್ರ ಜೋಶಿ.

    ReplyDelete
  46. RJ,
    ನಿಮ್ಮ ಮಾತು ತುಂಬ ವಿವೇಚನೆಯಿಂದ ಕೂಡಿದೆ. ನಿಮ್ಮ ಮಾತಿಗೆ ಗೌರವ ಕೊಡುತ್ತ ಹಾಗೂ ಭರತರ ಕಳಕಳಿಗೂ ಸಹ ಅಷ್ಟೇ ಗೌರವದಿಂದ ಸ್ಪಂದಿಸುತ್ತ, ನಾನು ಈ ವಿಷಯದ ವ್ಯಾಖ್ಯಾನ-ಪ್ರತಿಖ್ಯಾನದಿಂದ ನಿರ್ಗಮಿಸುತ್ತೇನೆ.

    ReplyDelete
  47. ೨೯-೯-೦೯
    (೧) ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು
    ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು
    ---
    ನಿಮ್ಮಷ್ಟು ತಿಳಿದಿಲ್ಲ ಆದರೆ ನೀವಿಲ್ಲಿ ನೀಡಿರುವ ಒಪ್ಪು ಕೂಡಾ ತಪ್ಪೆ. ಏಕೆಂದರೆ ಅದು 'ಪೊಲೀಸ್' ಆಗಬೇಕಿತ್ತು.

    ReplyDelete
  48. ತಡವಾಗಿ ನೋಡಿದೆ. ವೃತ್ತಿಪರವಾಗಿ ಚರ್ಚಿಸಬಹುದಾದ ಗಂಭಿರ "ಆರೋಪ"ಗಳನ್ನು ಲೇಖನ ಒಳಗೊಂಡಿದೆ. ಪತ್ರಿಕೆಗಳಲ್ಲಿ ಮಾಹಿತಿ ದೋಷ ಅಕ್ಷಮ್ಯ. ಯದ್ವಾ-ತದ್ವಾ ವಾಕ್ಯರಚನೆ ವರದಿಗಾರನ(ಳ) ಭಾಷಾ ಅಸಾಮರ್ಥ್ಯ. ಇವೆರಡೂ, ಪ್ರಜ್ಞಾಪೂರ್ವಕವಾಗಿ ತಿದ್ದಿಕೊಳ್ಳಲೇಬೇಕಾದಬೇಕಾದ ದೋಷಗಳು. ಉಳಿದಂತೆ ಅನಿವಾರ್ಯವಲ್ಲದ ಸಂದರ್ಭದಲ್ಲಿ ದ್ವಿತಿಯಾ ವಿಭಕ್ತಿ ಕೈಬಿಡುವ "ವೈಯಾಕರಣಿಕ" ಪ್ರವೃತ್ತಿಯನ್ನಾಗಲೀ, ಸರ್ವೋಚ್ಚ ನ್ಯಾಯಾಲಯಕ್ಕೆ "ಸುಪ್ರೀಂ" ಎಂಬಷ್ಟೇ ಸಂಬೋಧನೆಯ ಪ್ರಯೊಗಗಳನ್ನಾಗಲೀ ದೋಷವೆಂದು ಪರಿಗಣಿಸುವುದು ಬೇಕಾಗಿಲ್ಲ. ಇವು ನಿಜವಾಗಿ ಪ್ರಯೋಗಶೀಲತೆಯ ಪ್ರಗತಿಯೇ ಆದೀತು.ಇಂಥದು ಎಸ್‌ಎಂಎಸ್ ಸಂಕ್ಷೀಪ್ತೀಕರಣದ ಅಷಡ್ಡಾಳಕ್ಕಿಂತಾ ಎಷ್ಟೆಷ್ಟೋ ವಾಸಿ!

    ReplyDelete
  49. ಶ್ರೀ,
    ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  50. ದಿವಾಕರ,
    ಸಂಯುಕ್ತ ಕರ್ನಾಟಕದಲ್ಲಿ ಕಾಗುಣಿತ ದೋಷಗಳು ಪ್ರತಿ ದಿನವೂ ಕಾಣಿಸುತ್ತವೆ. ಇದರಿಂದ ಬೇಜಾರಾಗಿ ಈ ಲೇಖನ ಬರೆಯಬೇಕಾಯಿತು. ಅವರಿಗೆ ಒಂದು ಪ್ರತಿಯನ್ನು ಕಳಿಸುವೆ.
    ಸುಧಾರಣೆ ಆದೀತು!

    ReplyDelete
  51. ಸುನಾಥ್ ಸರ್...
    ಗುದ್ದಾಡಿದರೆ ಗ೦ಧದೊ೦ದಿಗೇ ಗುದ್ದಾಡಬೇಕೆ೦ಬುದು ನನಗೀಗ ಚೆನ್ನಾಗಿ ಅರ್ಥವಾಯಿತು. ನಿಮ್ಮ ಲೇಖನ ಹಾಗೂ ಅದಕ್ಕೆ ಬ೦ದ ಪ್ರತಿಕ್ರಿಯೆಗಳನ್ನು ಓದಿ ನನಗೆ ಕನ್ನಡದ ಬಗೆಗಿನ ಅನೇಕ ವಿಚಾರಗಳು ತಿಳಿದವು.ನಿಮಗೂ ನಿಮ್ಮೊ೦ದಿಗೆ ಅಕ್ಷರ ಯುದ್ಧ ಮಾಡಿದವರಿಗೂ ಧನ್ಯವಾದಗಳು.

    ReplyDelete
  52. ವಿಜಯಶ್ರೀ,
    ವಾದ,ಪ್ರತಿವಾದ ಮಾಡಿದಾಗಲೇ ಹೊಸ ಬೆಳಕು ಕಾಣುವದಲ್ಲವೆ?

    ReplyDelete
  53. ತಮ್ಮ ಭಾಷಾಧ್ಯಯನ ಪ್ರ್‍ಅವೃತಿ ಮೆಚ್ಚುವ೦ತಹುದು. ಪತ್ರಿಕೆಗಳನ್ನು ಓದಿ ಭಾಷೆ-ಬರಹ ತಿದ್ದಿಕೊ೦ಡು ಬೆಳೆದವರಲ್ಲಿ ನಾನೂ ಒಬ್ಬ. ಅದರಲ್ಲೂ ಸ೦ಯುಕ್ತ ಕರ್ನಾಟಕ ಆಗಿನ ನಮ್ಮ ಮೆಚ್ಚಿನ ಪತ್ರಿಕೆ. ಇತ್ತೀಚೆಗೆ ಓದಿಲ್ಲ . ಅದರೆ ತಮ್ಮ ಲೇಖನ ನೋಡಿದ ಮೇಲೆ ವರದಿಯಲ್ಲಿನ ಭಾಷೆಯಲ್ಲಿರುವ ಅದ್ವಾನಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
    ನೋಡೋಣ ತಮ್ಮ ಲೇಖನದಿ೦ದಾದರೂ ಪತ್ರಿಕೆಯವರು ತಿದ್ದಿ ಕೊಳ್ಳುವ ಪ್ರಯತ್ನ ಮಾಡುತ್ತಾರೋ ಎ೦ದು.

    ReplyDelete