Wednesday, June 9, 2010

ಕನ್ನಡ ಸಮಾಚಾರ ಪತ್ರಿಕೆಗಳು------ ಒಂದು ಅವಲೋಕನ

ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಜನ್ಮ ತಳೆದದ್ದು ರಾಜಕೀಯ ಹಾಗು ಸಾಮಾಜಿಕ ಜಾಗೃತಿಯ ಉದ್ದೇಶದಿಂದ. ೧೯೩೩ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಪ್ರಾರಂಭವಾದ ಸಂಯುಕ್ತ ಕರ್ನಾಟಕ ಪತ್ರಿಕೆಯು, ಹೆಸರೇ ಸೂಚಿಸುವಂತೆ, ಕರ್ನಾಟಕ ಏಕೀಕರಣಕ್ಕಾಗಿ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಾಗಿ ಹಾಗೂ ಸಮಾಜ ಸುಧಾರಣೆಗಾಗಿ ದುಡಿದಿದೆ. ತಾಯಿನಾಡು ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಕಾರ್ಯವನ್ನು ಮೈಸೂರು ಪ್ರಾಂತದಲ್ಲಿ ಮಾಡಿದವು. ಈ ಪತ್ರಿಕೆಗಳು ನಾಡು ಕಟ್ಟಲು ದುಡಿದಂತೆ, ನುಡಿಯನ್ನು ಬೆಳೆಸಲೂ ದುಡಿದವು. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಪತ್ರಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವೊಂದು ಬದಲಾವಣೆಗಳು ಹೆಮ್ಮೆ ಪಡುವಂತಹವು ; ಕೆಲವೊಂದು ದುಃಖ ಪಡುವಂತಹವು.

ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನು ಪಡೆದ ಐದು ಕನ್ನಡ ಸಮಾಚಾರ ಪತ್ರಿಕೆಗಳ ಪ್ರಸಾರ ಸಂಖ್ಯೆ  ಅಂದಾಜು ಹೀಗಿದೆ :
(೧) ವಿಜಯ ಕರ್ನಾಟಕ:……೫,೪೧,೪೬೬
(೨) ಪ್ರಜಾವಾಣಿ :……… .೪,೭೩,೮೧೮
(೩) ಉದಯವಾಣಿ :……. ೧,೮೫,೨೪೭
(೪) ಕನ್ನಡ ಪ್ರಭಾ :…….. ೧,೭೬,೬೦೧ 
(೫) ಸಂಯುಕ್ತ ಕರ್ನಾಟಕ :.. ೧,೩೬,೯೩೬

ಈ ಪತ್ರಿಕೆಗಳು ಕನ್ನಡ ನಾಡಿಗೆ, ಕನ್ನಡ ನುಡಿಗೆ ಹಾಗು ಕನ್ನಡ ಓದುಗರಿಗೆ ಸಮರ್ಪಕವಾದ ಹಾಗು ತಾವು ವಿಧಿಸುತ್ತಿರುವ ಶುಲ್ಕಕ್ಕೆ ಸಮುಚಿತವಾದ ಸೇವೆಯನ್ನು ಸಲ್ಲಿಸುತ್ತಿವೆಯೆ? ಈ ವಿಷಯವನ್ನು ಗ್ರಹಿಸಲು ಕೆಳಗಿನ ಅಂಶಗಳನ್ನು  ಪರಾಮರ್ಶಿಸುವದು ಅವಶ್ಯವಾಗಿದೆ :

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿವೆಯೆ?
(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
(೩) ಸಮಾಚಾರದ ಹೊರತಾಗಿ, ರಾಜಕೀಯ, ಸಾಂಸ್ಕೃತಿಕ ಹಾಗು ವೈಜ್ಞಾನಿಕ ಮಾಹಿತಿಯನ್ನು ಓದುಗರಿಗೆ ಪೂರೈಸುತ್ತಿವೆಯೆ?
(ಉದಯವಾಣಿ ಪತ್ರಿಕೆಯ ಹೊರತಾಗಿ, ಉಳಿದ ನಾಲ್ಕು ಪತ್ರಿಕೆಗಳ ಅವಲೋಕನ ಇಲ್ಲಿದೆ.)

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ, ಬೆಳೆಸುವ ಕಾರ್ಯವನ್ನು ಮಾಡುತ್ತಿವೆಯೆ?
ಕನ್ನಡ ಪತ್ರಿಕೆಗಳ ಪ್ರಸಾರಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದ ‘ವಿಜಯ ಕರ್ನಾಟಕ’ಕ್ಕೆ ಕನ್ನಡ ಪತ್ರಿಕೆ ಎಂದು ಕರೆಯಬಹುದೇ ಎನ್ನುವ ಸಂದೇಹ ನನಗಿದೆ. ‘ಕನ್ನಡಾಂಗ್ಲೋ’ ಪತ್ರಿಕೆ ಎನ್ನುವ ಅಭಿಧಾನವೇ ಇದಕ್ಕೆ ಹೆಚ್ಚು ಸರಿಯಾದೀತು. ಇನ್ನು ಕೆಲವು ದಿನಗಳಲ್ಲಿ ಇದು ‘ಕಂಗ್ಲಿಶ್’ ಪತ್ರಿಕೆಯಾಗಿ ಬದಲಾದರೂ ಆಶ್ಚರ್ಯವಿಲ್ಲ. ಮೆಕಾಲೆಯ ನಂತರ ಭಾರತದಲ್ಲಿ ಅಂದರೆ ಕರ್ನಾಟಕದಲ್ಲಿ ಇಂಗ್ಲೀಶಿನ ಪ್ರಸಾರಕ್ಕೆ ‘ವಿಜಯ ಕರ್ನಾಟಕ’ ನೀಡುತ್ತಿರುವ ಕೊಡುಗೆ ಅತಿ ಹೆಚ್ಚಿನದು. ‘ಇದರಲ್ಲಿ ಏನು ತಪ್ಪಿದೆ?’ ಎಂದು ಕೆಲವರು ಕೇಳಬಹುದು. ಜನರು ತಮ್ಮ ಆಡುಮಾತಿನಲ್ಲಿ ಬಳಸುವ ಭಾಷೆಯನ್ನೇ ಪತ್ರಿಕೆಗಳಲ್ಲಿ  ಬಳಸಿದರೆ, ಆ ಪತ್ರಿಕೆ ಹೆಚ್ಚೆಚ್ಚು ಜನಪ್ರಿಯವಾಗುವದಲ್ಲವೆ? ಇದೇ ಕುತರ್ಕವನ್ನು ನಮ್ಮ ಸಿನೆಮಾ ನಿರ್ಮಾಪಕರೂ ಮುಂದಿಡುತ್ತಿದ್ದಾರೆ . “ಜನರು ಬಯಸುವದು ಮಚ್ಚು, ಲಾಂಗು ಹಾಗು ಬತ್ತಲೆ ಕುಣಿತ, ಹಾಗಾಗಿ ನಾವು ಅಂತಹ ಸಿನೆಮಾಗಳನ್ನೇ ನಿರ್ಮಿಸುತ್ತೇವೆ”, ಎನ್ನುತ್ತಾರವರು. ಆದರೆ ಇದೊಂದು ವಿಷಚಕ್ರವೆನ್ನುವದು ಎಲ್ಲರಿಗೂ ತಿಳಿದ ಮಾತೇ. ಅರಿಯದ ಮಗುವಿಗೆ ದಿನವೂ ಸೆರೆ ಕುಡಿಸುತ್ತ ಹೋದರೆ, ಆ ಮಗು ಅದನ್ನೇ ಬಯಸತೊಡುಗುತ್ತದೆ.

ವಿಜಯ ಕರ್ನಾಟಕದ ದಿ: ೧-೬-೨೦೧೦ರ ಹುಬ್ಬಳ್ಳಿ ಆವೃತ್ತಿಯ ಸಂಚಿಕೆಯ ೧೦ನೆಯ ಪುಟದಲ್ಲಿಯ ವರದಿಯ ತಲೆಬರಹವನ್ನು ನೋಡಿರಿ. ಈ ಸುದ್ದಿಯ ಸಂಪಾದಕರು ಕನ್ನಡ ಪತ್ರಿಕೆಯ ಸಂಪಾದಕರೆಂದು ಅನಿಸುವದೆ?‘ಎನ್‌ಡಬ್ಲುಕೆ‍ಆರ್‌ಟಿಸಿ‘ ಎಂದು ಕಷ್ಟಪಟ್ಟು ದೀರ್ಘವಾಗಿ ಬರೆಯುವ ಬದಲು ‘ವಾಕರಸಾಸಂಸ್ಥೆ’ ಎಂದು ಮುದ್ದಾಗಿ ಬರೆಯಲು ಬರುತ್ತಿರಲಿಲ್ಲವೆ? ಓದುಗರಿಗೆ ಯಾವುದು ತಟ್ಟನೆ ಅರ್ಥವಾಗುತ್ತದೆ? ಆಂಗ್ಲವ್ಯಾಮೋಹಿ ವಿಜಯ ಕರ್ನಾಟಕವನ್ನು `ನವ ಮೆಕಾಲೆ’ ಎಂದು ಬಣ್ಣಿಸಿದರೆ ತಪ್ಪೇನಿದೆ? ಶಾಲೆಯ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ನಿಯತವಾಗಿ ಓದುತ್ತಿದ್ದರೆ, ಇಂಗ್ಲಿಶ್ ಪದಗಳನ್ನೇ ಕನ್ನಡ ಪದಗಳೆಂದು  ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆ.

ಓದುಗರನ್ನು ಚಿತ್ರವಿಚಿತ್ರ ಭಾಷೆಯ ಮೂಲಕ ಮರಳುಗೊಳಿಸಬಹುದು ಎನ್ನುವ ಭಾವನೆಯಿಂದ ವಿಜಯ ಕರ್ನಾಟಕವು ಈಗಾಗಲೇ ಬಳಕೆಯಲ್ಲಿರುವಂತಹ ಕನ್ನಡ ಪದಗಳ ಬದಲಾಗಿ, ಇಂಗ್ಲಿಶ್ ಪದಗಳನ್ನು ಬಳಸುತ್ತಿದೆ. ಉದಾಹರಣೆಗೆ, ಸರ್ವೋಚ್ಚ ನ್ಯಾಯಾಲಯದ ಆದೇಶ  ಎನ್ನುವ ಬದಲಾಗಿ ಸುಪ್ರೀಂ ಆದೇಶ ಎಂದು ಬರೆದು ಬಿಡುತ್ತದೆ. ಸ್ಥಳಮಿತಿಯೇ ಇದರ ಕಾರಣವೆನ್ನುವ  ನೆವ ಬೇರೆ. ಇದು ಪೊಳ್ಳು ನೆವ ಎನ್ನುವದು ಮುಂದಿನ ಪರಾಮರ್ಶೆಯಲ್ಲಿ ಬಯಲಾಗುತ್ತದೆ..

ಇಂದು ಕನಿಷ್ಠ ಪ್ರಸಾರ ಹೊಂದಿದ ‘ಸಂಯುಕ್ತ ಕರ್ನಾಟಕ’ ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಆದರ್ಶ ಪತ್ರಿಕೆಯಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ, ಜನಜಾಗೃತಿಯ ಉದ್ದೇಶದಿಂದ ಜನ್ಮ ತಳೆದ ಈ ಪತ್ರಿಕೆಯ ಸಂಪಾದಕರು ಆ ಉದ್ದೇಶಕ್ಕೆ ಬದ್ಧರಾಗಿದ್ದರು. ಅಲ್ಲದೆ ಅವರು ಕನ್ನಡ ಭಾಷೆಯನ್ನು ತಿಳಿದಂತಹ ಕನ್ನಡ ಪ್ರೇಮಿಗಳಾಗಿದ್ದರು. ಹೀಗಾಗಿ  ಕನ್ನಡದ ಪತ್ರಿಕಾ ಭಾಷೆಯನ್ನು ರೂಪಿಸುವಲ್ಲಿ ‘ಸಂಯುಕ್ತ ಕರ್ನಾಟಕ’ದ ಕೊಡುಗೆ ಅಪಾರವಾಗಿದೆ. ಅದೇ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಇಂದು ‘ವಿಜಯ ಕರ್ನಾಟಕ’ವನ್ನು ನಕಲು ಮಾಡುವ ಭರದಲ್ಲಿ ತನ್ನತನವನ್ನು ಕಳೆದುಕೊಳ್ಳುತ್ತಲಿದೆ. ‘ವಿಜಯ ಕರ್ನಾಟಕ’ವು ಇಂಗ್ಲಿಶ್ ಪದಗಳನ್ನು ಬಳಸಿದರೆ, ‘ಸಂಯುಕ್ತ ಕರ್ನಾಟಕ’ವು ಇಂಗ್ಲೀಶಿನ ಪದಪುಂಜಗಳನ್ನೇ ಬಳಸುತ್ತಿದೆ. ( ಉದಾ: “ವಿಧಾನಸೌಧದಲ್ಲಿ  ಫಾರ್ ಎ ಚೇಂಜ್ ಅಧಿಕಾರಿಗಳು ಇರಲಿಲ್ಲ.”)

ಕನ್ನಡ ಪ್ರಭಾ ಪತ್ರಿಕೆಯು ಸಹ ಇಂಗ್ಲಿಶ್ ಪದಗಳನ್ನು ನಿರ್ಯೋಚನೆಯಿಂದ ಬಳಸುತ್ತಿದೆ. ಪ್ರಜಾವಾಣಿಯೊಂದೇ  ಕನ್ನಡತನವನ್ನು ಕಾಯ್ದುಕೊಂಡ ಬಂದ ಪತ್ರಿಕೆಯಾಗಿದೆ ಎನ್ನಬಹುದು. ವಿಜಯ ಕರ್ನಾಟಕ ಹಾಗು ಸಂಯುಕ್ತ ಕರ್ನಾಟಕ ಇವೆರಡೂ ‘ಸಿ.ಎಂ.’ ಎನ್ನುವ ಆಂಗ್ಲ ಪದವನ್ನೇ ಬಳಸುತ್ತಿರುವಾಗ ‘ಮುಖ್ಯ ಮಂತ್ರಿ’ ಎನ್ನುವ ಕನ್ನಡ ಪದವನ್ನೂ ಸಹ ಬಳಸುತ್ತಿರುವ ಶ್ರೇಯಸ್ಸು ಪ್ರಜಾವಾಣಿ ಪತ್ರಿಕೆಗೆ ಇದೆ.
ವಿಜಯ ಕರ್ನಾಟಕವು ಕನ್ನಡಾಂಗ್ಲೊ ಭಾಷೆಯನ್ನು ಒಂದು fashion ತರಹ  ಬಳಸುತ್ತಿದೆ. ಆದರೆ ಒಳ್ಳೆಯ ಪತ್ರಿಕೆಗೆ ಬೇಕಾದದ್ದು fashion ಅಲ್ಲ; passion !

ಪತ್ರಿಕೆಯ ವ್ಯಕ್ತಿತ್ವ:
ಒಂದು ಪತ್ರಿಕೆಗೆ ‘ತನ್ನತನ’ ಎನ್ನುವದು ಬೇಕು. ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದ ಸಂಪಾದಕ ಮಂಡಲಿಯಲ್ಲಿದ್ದ ಕಾಲವದು. ಆ ಸಮಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಂಗೇರಿತ್ತು. ಮರಾಠಿ ಪತ್ರಿಕೆಗಳು ಭಂಡಶೈಲಿಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ನಾನು ಪಾ.ವೆಂ. ಅವರನ್ನು ಪತ್ರಿಕೆಯ ಕಚೇರಿಯಲ್ಲಿ ಭೆಟ್ಟಿಯಾದಾಗ, ಈ ವಿಷಯವನ್ನು ಪ್ರಸ್ತಾಪಿಸಿ, “ಸಂಯುಕ್ತ ಕರ್ನಾಟಕವು ಸಭ್ಯವಾಗಿ ಬರೆಯುವದೇಕೆ?”ಎಂದು ಕೇಳಿದ್ದೆ. ಪಾ.ವೆಂ. ನಸುನಕ್ಕು ಹೇಳಿದರು: “ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಒಂದು ಸತ್ಸಂಪ್ರದಾಯವಿದೆ !”

ಆ ಸತ್ಸಂಪ್ರದಾಯ ಇಂದು ಎತ್ತ ಹೋಗಿದೆಯೋ ಅಥವಾ ಸತ್ತೇ ಹೋಗಿದೆಯೋ ತಿಳಿಯದು ! ಸಂಯುಕ್ತ ಕರ್ನಾಟಕದ ಭಾಷೆ, ಕಾಗುಣಿತಗಳ ತಪ್ಪು ಹಾಗು ವರದಿಯ ಶೈಲಿಯನ್ನು ನೋಡಿದಾಗ, ಈ ಪತ್ರಿಕೆಗೆ ಇಂದು ಕೋಡಂಗಿಯ ವ್ಯಕ್ತಿತ್ವ ಬಂದಿದೆ ಎಂದು ಭಾಸವಾಗುವದು.

ಪ್ರಜಾವಾಣಿಗೆ ಒಂದು ಪತ್ರಿಕಾ ವ್ಯಕ್ತಿತ್ವವಿದೆ. ಅದು ವಿಶ್ವಾಸಾರ್ಹತೆಯ ವ್ಯಕ್ತಿತ್ವ. ಅಬ್ಬರವಿಲ್ಲದ, ನಿಷ್ಪಕ್ಷಪಾತ ವರದಿಯ, ಸಭ್ಯತೆಯ ವ್ಯಕ್ತಿತ್ವ. ಪ್ರಜಾವಾಣಿ ಪತ್ರಿಕೆಯ ಸಂಪಾದಕರ ವ್ಯಕ್ತಿತ್ವವು ಯಾವಾಗಲೂ ಪತ್ರಿಕೆಯ ವ್ಯಕ್ತಿತ್ವದ ಹಿಂದೆ ನಿಲ್ಲುತ್ತದೆ, ನಾಟಕದ ಸೂತ್ರಧಾರನ ಹಾಗೆ. ಪ್ರಜಾವಾಣಿಯ ಸಂಪಾದಕರು ರಂಗದ ಮೇಲೆ  ನಟರ ಹಾಗೆ ಬರುವದಿಲ್ಲ. ಆದರೆ, ವಿಜಯ ಕರ್ನಾಟಕದಲ್ಲಿ ಸಂಪಾದಕರದೇ ಅಬ್ಬರ. ಪತ್ರಿಕೆಯ ಮೂಲಕ ಅವರು ತಮ್ಮ ವ್ಯಕ್ತಿತ್ವವನ್ನು ವೈಭವೀಕರಿಸಿಕೊಳ್ಳುತ್ತಿದ್ದಾರೆ ಎನ್ನುವ ಭಾವನೆ ಓದುಗನಿಗೆ ಬರದೇ ಇರದು. ಈ ಸ್ವ-ವೈಭವೀಕರಣದ ಹುಚ್ಚು ಇತ್ತೀಚೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಗೂ ತಾಕಿದೆ. ಶ್ರೀ ಜಿ.ಎಮ್.ಪಾಟೀಲರು ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರಾಗಿದ್ದಾಗ, ಅವರ ಫೋಟೋ ಹಾಗು ಸುದ್ದಿ ಸಂಯುಕ್ತ ಕರ್ನಾಟಕದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಶ್ರೀ ಅಶೋಕ ಹಾರನಹಳ್ಳಿಯವರು ಇದೀಗ ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರು. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರದೇ ಫೋಟೋ ಹಾಗು ಸುದ್ದಿ!

(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಈ ಪತ್ರಿಕೆಗಳು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
ಯಾವ ಭಾಷೆಯನ್ನೇ ಬಳಸಲಿ, ಈ ಪತ್ರಿಕೆಗಳು ಓದುಗನಿಗೆ  ವಿಧಿಸುತ್ತಿರುವ ಶುಲ್ಕಕ್ಕೆ  ತಕ್ಕ ಸೇವೆಯನ್ನು ಸಲ್ಲಿಸುತ್ತಿವೆಯೆ ಎನ್ನುವದು ಮುಖ್ಯವಾದದ್ದು. ಈ ಪತ್ರಿಕೆಗಳಲ್ಲಿ ಸುದ್ದಿಗೆ ಎಷ್ಟು ಭಾಗವನ್ನು ನೀಡಲಾಗಿದೆ ಹಾಗು ಇತರ ವಿಷಯಗಳಿಗೆ ಮೀಸಲಾದ ಭಾಗವೆಷ್ಟು ಎನ್ನುವದನ್ನು ಗಮನಿಸೋಣ. ಮೇಲಿನ ಐದು ಪತ್ರಿಕೆಗಳಲ್ಲಿ  ಉದಯವಾಣಿ ಪತ್ರಿಕೆಯನ್ನು ಹೊರತು ಪಡಿಸಿ ಉಳಿದ ನಾಲ್ಕು ಪತ್ರಿಕೆಗಳ ‘ಹುಬ್ಬಳ್ಳಿ ಆವೃತ್ತಿ’ಗಳನ್ನಷ್ಟು ಪರೀಕ್ಷೆಗೆ ಒಡ್ಡೋಣ: ಈ ಪತ್ರಿಕೆಗಳ ೧-೬-೨೦೧೦ರ ಸಂಚಿಕೆಗಳ ವಿವರ ಈ ರೀತಿಯಾಗಿದೆ:


ಈ ಲೆಕ್ಕಾಚಾರದ ಮೇರೆಗೆ ಓದುಗರಿಗೆ ಗರಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ: ಕನ್ನಡ ಪ್ರಭಾ ; ಕನಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ : ವಿಜಯ ಕರ್ನಾಟಕ.

ಸಮಾಚಾರ ಭಾಗದಲ್ಲಿ ಸುದ್ದಿಗಳಲ್ಲದೇ ಸುದ್ದಿ ವಿಶ್ಲೇಷಣೆ, ವಿವಿಧ ವಿಷಯಗಳ ಮೇಲಿನ ಲೇಖನಗಳು, ಹಿತೋಕ್ತಿ, ಅಗ್ರಲೇಖನ, ಪೇಟೆಯ ಧಾರಣಿ ಇವೆಲ್ಲ ಸೇರಿವೆ. ಇತರ ಭಾಗದಲ್ಲಿ ಜಾಹೀರಾತುಗಳು, ಪತ್ರಿಕೆಗಳ ಮುಖಪುಟದ ಶಿಖರಭಾಗ, ವ್ಯಂಗ್ಯಚಿತ್ರಗಳು, ಜ್ಯೋತಿಷ್ಯ ಹಾಗು ಪುಟ್ಟ ಜಾಗದಲ್ಲಿ ಪತ್ರಿಕೆಗಳು ಸೇರಿಸುವ fill-in ಸೇರಿವೆ. ಬಹುತೇಕ ಓದುಗರು ಈ ಜಾಹೀರಾತುಗಳನ್ನಾಗಲೀ, fill-inಗಳನ್ನಾಗಲೀ, ಹಿತೋಕ್ತಿಗಳನ್ನಾಗಲೀ ಓದುವದೇ ಇಲ್ಲ. ಅಷ್ಟೇ ಏಕೆ, ಅಗ್ರಲೇಖನಗಳನ್ನು ಓದುವವರೂ ಸಹ, ಆ ವಿಷಯಕ್ಕಿರುವ ಮಹತ್ವವನ್ನು ಗಮನಿಸುತ್ತಾರೆ ; ಲೇಖನದ ಶೈಲಿಯನ್ನು ಗಮನಿಸುತ್ತಾರೆ. ಇವೆರಡೂ ಸರಿ ಬರದಿದ್ದರೆ, ಆ ಪುಟವನ್ನು ತಿರುವಿ ಮುಂದೆ ಹೋಗುತ್ತಾರೆ.

ಒಳಗಿನ ಹೂರಣ:
ಇದೆಲ್ಲ ಈ ಪತ್ರಿಕೆಗಳ ಸುದ್ದಿ ವಿನ್ಯಾಸದ ವಿಶ್ಲೇಷಣೆಯಾಯಿತು. ಇನ್ನು ಈ ಪತ್ರಿಕೆಗಳ ಒಳಗಿನ ಹೂರಣವನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸೋಣ:
೧-೬-೨೦೧೦ರ ಸಂಚಿಕೆಗಳಲ್ಲಿ ಈ ಪತ್ರಿಕೆಗಳು ಎಷ್ಟೆಲ್ಲ ಸುದ್ದಿಗಳನ್ನು ಪ್ರಕಟಿಸಿವೆ, ಈ ಸುದ್ದಿಗಳಿಗೆ ಕೊಟ್ಟ ಸ್ಥಳಾವಕಾಶ ಎಷ್ಟು, ಸುದ್ದಿಗಳಲ್ಲಿ ಇರುವ ಹುರುಳೆಷ್ಟು ಎನ್ನುವದನ್ನು ನೋಡೋಣ.  ಸುದ್ದಿಗಳ ಸಂಖ್ಯೆಯನ್ನು  ಲೆಕ್ಕಿಸುವಾಗ ಚಿಲ್ಲರೆ ಸುದ್ದಿಗಳನ್ನು  ಪರಿಗಣಿಸಲಾಗಿಲ್ಲ. ನಾಲ್ಕೂ ಪತ್ರಿಕೆಗಳಲ್ಲಿ ಪ್ರಕಟವಾದ, ಸುಮಾರಾಗಿ ಮಹತ್ವವುಳ್ಳ ವಿಭಿನ್ನ ಸುದ್ದಿಗಳ ಒಟ್ಟು ಸಂಖ್ಯೆ : ೭೧. ಅವುಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ಪ್ರಕಟಿಸಿದ ಪತ್ರಿಕೆ ವಿಜಯ ಕರ್ನಾಟಕ. ನಂತರದ ಸ್ಥಾನ ಪ್ರಜಾವಾಣಿಯದು. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಮೂರನೆಯ ಹಾಗು ಕೊನೆಯ ಸ್ಥಾನವನ್ನು ಪಡೆದಿವೆ :
ಸುಮಾರಾಗಿ ಮಹತ್ವವಿರುವ ವಿಭಿನ್ನ ಸುದ್ದಿಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ವಿಜಯ ಕರ್ನಾಟಕ ಪತ್ರಿಕೆ ನೀಡಿದೆ. ಪ್ರಜಾವಾಣಿ ಒಂದೇ ಒಂದು ಕಡಿಮೆ ಸುದ್ದಿಯೊಂದಿಗೆ ಪಕ್ಕದಲ್ಲಿಯೇ ನಿಂತಿದೆ. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಹಿಂದಿನ ಸಾಲಿನಲ್ಲಿ ಜೊತೆಯಾಗಿ ನಿಂತಿವೆ ! ಇವುಗಳಲ್ಲಿ ಯಾವ ಪತ್ರಿಕೆಯೂ ಸುಮಾರಾಗಿ ಮಹತ್ವವಿರುವ ೭೧ ಸುದ್ದಿಗಳ ಅರ್ಧದಷ್ಟನ್ನೂ ಸಹ ಓದುಗರಿಗೆ ವರದಿ ಮಾಡಿಲ್ಲ ಎನ್ನುವದನ್ನು ಗಮನಿಸಬೇಕು.

ಈ ಪತ್ರಿಕೆಗಳು ತಮ್ಮ ಜಾಹೀರಾತಿನ ಅಥವಾ ಸಮಾಚಾರೇತರ ಭಾಗದ ಇನ್ನು ಸ್ವಲ್ಪ ಭಾಗವನ್ನು ಸುದ್ದಿ ಭಾಗಕ್ಕೆ ನೀಡಿದರೆ, ಇನ್ನಷ್ಟು ಹೆಚ್ಚು ಸುದ್ದಿಗಳನ್ನು ಅಂದರೆ ಒಟ್ಟು ಸುದ್ದಿಗಳ ಶೇಕಡಾ ೬೦ರಷ್ಟನ್ನಾದರೂ ಓದುಗರಿಗೆ ಕೊಡಬಹುದಾಗಿದೆ.

ತಲೆಬರಹ :
ದಿ: ೧-೬-೨೦೧೦ರ ಅತಿ ಮುಖ್ಯ ಸುದ್ದಿ ಎಂದರೆ ಮೇಲ್ಮನೆ ಚುನಾವಣೆ. ವಿಜಯ ಕರ್ನಾಟಕವು ಈ ಸಮಾಚಾರಕ್ಕೆ  ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟಿಸಿದೆ. ಪತ್ರಿಕೆಯ ಅಡ್ಡಳತೆಯ ಮುಕ್ಕಾಲು ಭಾಗವನ್ನು ಇದು ವ್ಯಾಪಿಸಿದೆ . ತಲೆಬರಹ ಈ ರೀತಿಯಾಗಿದೆ :
ಈ ತಲೆಬರಹದ ಮೂಲಕ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದ ಎರಡು ನಿರ್ದಿಷ್ಟ ಅಂಶಗಳು ಓದುಗನಿಗೆ ತಿಳಿದು ಬರುವವು. (೧) ಮುಕ್ತಾಯ ದಿನಾಂಕ (೨) ಅಭ್ಯರ್ಥಿಗಳ ಸಂಖ್ಯೆ. ಆದುದರಿಂದ ಈ ತಲೆಬರಹಕ್ಕೆ ಅತ್ಯುತ್ತಮ ತಲೆಬರಹ ಎನ್ನಬಹುದು.

ಪ್ರಜಾವಾಣಿ ಪತ್ರಿಕೆಯ ತಲೆಬರಹಕ್ಕೆ ಎರಡನೆಯ ಸ್ಥಾನವನ್ನು ನೀಡಬಹುದು :

ಈ ತಲೆಬರಹದಲ್ಲಿ ನಾಮಪತ್ರಿಕೆಯ ಸಲ್ಲಿಸುವ ದಿನಾಂಕ ಮುಗಿದುದರ ಬಗೆಗೆ ಅರಿವಾಗುವದಿಲ್ಲ.
ಆದರೆ ದಳ ಹಾಗು ಕಾಂಗ್ರೆಸ್ ಪಕ್ಷಗಳ ಭಿನ್ನಾಭಿಪ್ರಾಯದ ಬಗೆಗೆ ನಿರ್ದಿಷ್ಟವಾದ ಮಾಹಿತಿ ಇದೆ. ಅಲ್ಲದೆ, ಮುಂದುವರಿದ  ಸಮಾಚಾರದಲ್ಲಿ  ಈ ಭಿನ್ನಾಭಿಪ್ರಾಯದ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ
ಮಾಹಿತಿಯನ್ನು ಇತರ ಪತ್ರಿಕೆಗಳು ನೀಡಿಲ್ಲ.

ಮೂರನೆಯ ಸ್ಥಾನವನ್ನು ಕನ್ನಡ ಪ್ರಭಾ ಪತ್ರಿಕೆಗೆ ನೀಡಬಹುದು.

ಪತ್ರಿಕೆಯ ಮೊದಲ ಪುಟದ ಅಗ್ರಭಾಗದಲ್ಲಿ ವೃದ್ಧರೊಬ್ಬರ ಸಾಧನೆಯ ವರ್ಣನೆಯನ್ನು ಮಾಡಲಾಗಿದೆ. ಈ ವರ್ಣನೆಯು  ಮಹತ್ವವುಳ್ಳ ದೈನಂದಿನ ಸಮಾಚಾರವಾಗಲಾರದು ಎನ್ನುವ ಅರಿವು ಪತ್ರಿಕೆಯ ಸಂಪಾದಕರಿಗೆ ಇದ್ದಂತಿಲ್ಲ. ಇದನ್ನು ಎರಡನೆಯ ಪುಟದ ಮೇಲ್ಭಾಗದಲ್ಲಿ ನೀಡಬಹುದಾಗಿತ್ತು. ಇದರ ಕೆಳಭಾಗದಲ್ಲಿ ಎಡಗಡೆಗೆ ಶ್ರೀ ಶ್ರೀರವಿಶಂಕರ ಗುರೂಜಿಯವರ ಹತ್ಯೆಯ ಸಮಾಚಾರದ ವಿಶ್ಲೇಷಣೆ ಇದೆ. ಇದಕ್ಕೆ ನೀಡಿದ ತಲೆಬರಹದ ಭಾಗ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿದೆ. ಈ ವಿಶ್ಲೇಷಣೆಯು ನಿನ್ನೆ ಜರುಗಿದ ಘಟನೆಯ ವಿಶ್ಲೇಷಣೆ. ನಿನ್ನೆಯೇ ಇದರ ಬಗೆಗೆ ಸಾಕಷ್ಟು ವಿವರಗಳನ್ನು ನೀಡಲಾಗಿದ್ದು, ಮುಖಪುಟದಲ್ಲಿ ಮತ್ತೊಮ್ಮೆ ಇಷ್ಟು ದೀರ್ಘ ವಿಶ್ಲೇಷಣೆಯ ಅವಶ್ಯಕತೆ ಇರಲಿಲ್ಲ. ಈ ಸುದ್ದಿಯ ಬಲಭಾಗದಲ್ಲಿ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಚಾರ ಕೊಡಲಾಗಿದೆ. ಇದರ ತಲೆಬರಹ ಸಂದಿಗ್ಧವಾಗಿದೆ. ಈ ತಲೆಬರಹದಿಂದ ತಿಳಿಯುವ ಅಂಶವೆಂದರೆ ದಳ ಹಾಗು ಕಾಂ^ಗ್ರೆಸ್ ಪಕ್ಷಗಳ ನಡುವೆ ತಾತ್ಕಾಲಿಕ ಭಿನ್ನಾಭಿಪ್ರಾಯವಿದ್ದು, ಅದು ಕೊನೆಗೊಳ್ಳಬಹುದು.  ಈ ಎಲ್ಲ ಅಂಶಗಳನ್ನು ಗಮನಿಸಿದರೆ ಕನ್ನಡ ಪ್ರಭಾ ಪತ್ರಿಕೆಯು ಮುಖಪುಟದ ಸಮಾಚಾರಗಳಿಗೆ ಹಾಗು ತಲೆಬರಹಕ್ಕೆ ಸಾಕಷ್ಟು ಗಮನ ನೀಡುತ್ತಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ತಲೆಬರಹಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕರ್ನಾಟಕ ಪತ್ರಿಕೆಯದು ಕೊನೆಯ ಸ್ಥಾನ. ಅಷ್ಟೇ ಅಲ್ಲ, ಒಂದು ಸಮಾಚಾರ ಪತ್ರಿಕೆಗೆ ಇರಬೇಕಾದ ಸಾಮಾನ್ಯ ಜ್ಞಾನವು ತನಗಿಲ್ಲ ಎನ್ನುವದನ್ನು ಈ ಪತ್ರಿಕೆಯು ಬಿನ್ ದಾಸ್ ಶೈಲಿಯಲ್ಲಿ ತೋರಿಸಿಕೊಳ್ಳುತ್ತದೆ.
ಮುಖಪುಟದ ಅಗ್ರಭಾಗದಲ್ಲಿ ಶ್ರೀ ಶ್ರೀರವಿಶಂಕರ ಗುರೂಜಿಯವರು ತಾವು ಅಪರಾಧಿಯನ್ನು ಕ್ಷಮಿಸಿರುವದಾಗಿ ತಿಳಿಸಿರುವ ಸಮಾಚಾರವಿದೆ.  ಸಾಮಾನ್ಯವಾಗಿ ಎಲ್ಲ ಸಂತರೂ ಹೇಳುವಂತಹ ಮಾತಿದು. ಇದನ್ನು  ಇಷ್ಟು ದೊಡ್ಡದಾಗಿ, ಅಗ್ರಭಾಗದಲ್ಲಿ ನೀಡುವ ಅವಶ್ಯಕತೆ ಇರಲಿಲ್ಲ.
ಇದರ ಕೆಳಗೆ ದೊಡ್ಡಕ್ಷರಗಳಲ್ಲಿ ನೀಡಲಾದ ಸುದ್ದಿ ಹೀಗಿದೆ:

ಈ ತಲೆಬರಹದ ಅರ್ಥವೇ ಆಗಲಾರದಂತಿದೆ. ಜ್ಞಾನೇಶ್ವರಿ ಯಾರು? ಯಾರ ಗುರಿ ತಪ್ಪಿತು? ಯಾಕೆ ತಪ್ಪಿತು? ಇವು ಓದುಗನಲ್ಲಿ ಮೊದಲು ಮೂಡುವ ಪ್ರಶ್ನೆಗಳು. ಸಮಾಚಾರವನ್ನು ಪೂರ್ತಿ ಓದಿದಾಗಲೇ, ನಕ್ಸಲರು ಗೂಡ್ಸ ಗಾಡಿಯನ್ನು ಹಳಿ ತಪ್ಪಿಸಲು ಬಯಸಿದ್ದರು ; ಆದರೆ ಅಜ್ಞಾನವಶಾತ್ ಜ್ಞಾನೇಶ್ವರಿ ಎನ್ನುವ ಪ್ರಯಾಣಿಕರ ರೇಲವೆ ಗಾಡಿಯ ಅಪಘಾತಕ್ಕೆ ಕಾರಣರಾದರು ಎನ್ನುವ ಅಂಶ ತಿಳಿದು ಬರುತ್ತದೆ. ಇದು ಮುಖ್ಯ ಸುದ್ದಿಯಾಗುವ ಅರ್ಹತೆಯನ್ನು ಪಡೆದಿಲ್ಲ. ಆದರೂ ಇದಕ್ಕಾಗಿ ಮುಖಪುಟದ ೧೩೨ ಚಸೆಂಮೀ ಜಾಗವನ್ನು ವ್ಯಯಿಸಲಾಗಿದೆ. ಮುಖ್ಯ ಸುದ್ದಿಯಾಗಬೇಕಾಗಿದ್ದ ಮೇಲ್ಮನೆ ಚುನಾವಣೆಯ ಬಗೆಗೆ ಮುಖಪುಟದ ಕೆಳ ಭಾಗದಲ್ಲಿ ಕೇವಲ ೧೧೨ ಚಸೆಂಮೀಯಷ್ಟು ಸ್ಥಳವನ್ನು ನೀಡಲಾಗಿದೆ. ಮೇಲ್ಮನೆಗೆ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವಾಗ, ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಈ ಸುದ್ದಿಯಲ್ಲಿ ತಿಳಿಸುವ ಮೂಲಕ ಓದುಗರಿಗೆ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. ಜೊತೆಗೆ ತಮ್ಮ ಅಜ್ಞಾನದ ಹಾಗು ಬೇಜವಾಬುದಾರಿಯ ಪರಮಾವಧಿಯನ್ನು ತೋರಿಸಿದ್ದಾರೆ. ಬಲ ಭಾಗದಲ್ಲಿ ಪೋಲೀಸ ಅಧಿಕಾರಿಯ ಹೇಳಿಕೆಯಲ್ಲಿ ‘ಆರ್ಟ ಆಫ್ ಲೀವಿಂಗ್’ ಎನ್ನುವ ಪದವನ್ನು ಬಳಸಿದ್ದಾರೆ, ಅದೂ ಎರಡು ಸಲ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಮಂಡಲಿಗೆ ಇಂಗ್ಲಿಶ್ ಭಾಷೆಯ ಜ್ಞಾನ ಇಲ್ಲ ಎನ್ನುವ ಸಂದೇಹ ಓದುಗರಿಗೆ ಮೊದಲಿನಿಂದಲೂ ಇದೆ. ‘ಸಿಇಟಿ ಕೌನ್ಸೆಲಿಂಗ್’ ಅನ್ನುವ ಪದಪುಂಜವನ್ನು ಯಾವಾಗಲೂ ಸಿಇಟಿ ಕೌನ್ಸಿಲಿಂಗ್’ ಎಂದೇ ಬರೆಯುತ್ತ ಬಂದಿದೆ ಈ ಪತ್ರಿಕೆ. ‘ಕೌನ್ಸೆಲ್’ ಹಾಗು ‘ಕೌನ್ಸಿಲ್’ ಪದಗಳ ಅರ್ಥಭೇದವನ್ನೇ ತಿಳಿಯದ ಈ ಸಂಪಾದಕ ಮಂಡಲಿಯು ಓದುಗರನ್ನು, ವಿಶೇಷತಃ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿರುವದು ವಿಷಾದದ ಸಂಗತಿ.

ತಲೆಬರಹಗಳ ಬಳಿಕ, ಈಗ ಮುಖ್ಯ ಸುದ್ದಿಗಳನ್ನಷ್ಟು  ಅವಲೋಕಿಸೋಣ. ಒಂದು ಪತ್ರಿಕೆಗೆ ರಾಶಿ ರಾಶಿ ಸುದ್ದಿ ಬಂದು ಬೀಳುತ್ತವೆ. ಅವುಗಳಲ್ಲಿ ಪ್ರಮುಖವಾದುವಗಳನ್ನು ಆರಿಸುವದು ಹೇಗೆ? ಓದುಗನಾಗಿ ನನ್ನ ಅಭಿಪ್ರಾಯ ಹೀಗಿದೆ:
ಮೊದಲನೆಯದಾಗಿ ಸುದ್ದಿ ತಾಜಾ ಇರಬೇಕು. ಆ ಬಳಿಕ ಅವುಗಳ ಸ್ಥಾನಮಾನ ಈ ರೀತಿಯಾಗಿ ಇರಬೇಕು:
(೧) ಭಾರತವು ಭಾಗವಹಿಸಿದ ಅಂತರರಾಷ್ಟೀಯ ಸುದ್ದಿಗಳು
(೨) ಭಾರತದ  ಮೇಲೆ ಮಹತ್ವದ ಪರಿಣಾಮ ಬೀರುವ ಅಂತರರಾಷ್ಟ್ರೀಯ ಸುದ್ದಿಗಳು
(೩) ಕರ್ನಾಟಕದ ಮಹತ್ವದ ಸುದ್ದಿಗಳು
(೪) ಸ್ಥಳೀಯ ಮಹತ್ವದ ಸುದ್ದಿಗಳು

(೧) ಮೇಲ್ಮನೆ ಚುನಾವಣೆಯು ಮಹತ್ವದ ವಿಷಯವಾಗಿದ್ದರಿಂದ ಈ ನಾಲ್ಕೂ  ಪತ್ರಿಕೆಗಳು, ಈ ಸುದ್ದಿಯನ್ನು ಮೊದಲ ಪುಟದಲ್ಲಿಯೇ ಪ್ರಕಟಿಸಿವೆ. ವಿಜಯ ಕರ್ನಾಟಕ (೪೮೪ ಚಸೆಂಮೀ) ಹಾಗು ಪ್ರಜಾವಾಣಿ (೩೨೦ ಚಸೆಂಮೀ) ಈ ಸುದ್ದಿಗೆ ಅಗ್ರ ಪ್ರಾಶಸ್ತ್ಯ ನೀಡಿವೆ. ಕನ್ನಡ ಪ್ರಭಾ ಪತ್ರಿಕೆಯು ವೃದ್ಧನೊಬ್ಬನ ಸಮಾಜ ಸೇವೆಯನ್ನು ಮೇಲ್ಭಾಗದಲ್ಲಿ ಪ್ರಕಟಿಸಿದೆ. ಶ್ರೀ ಶ್ರೀರವಿಶಂಕರರಿಗೆ ಎರಡನೆಯ ಪ್ರಾಶಸ್ತ್ಯ. ಕೊನೆಯ ಪ್ರಾಶಸ್ತ್ಯ ಮೇಲ್ಮನೆ ಚುನಾವಣೆಗೆ (೪೬೩ ಚ.ಸೆಂಮೀ). ಈ ಸಮಾಚಾರವನ್ನು ಸಂಯುಕ್ತ ಕರ್ನಾಟಕವು ಮುಖಪುಟದ ನಡುಭಾಗದಲ್ಲಿ ಪ್ರಕಟಿಸಿದೆ ಹಾಗು ಕನಿಷ್ಠ ಸ್ಥಳಾವಕಾಶ ನೀಡಿದೆ (೧೨೦ ಚಸೆಂಮೀ).

(೨) ಹೊರನಾಡ ಕನ್ನಡಿಗರ ಸಮ್ಮೇಳನವು ಧಾರವಾಡದಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ ಭಾರತದ ಎಲ್ಲೆಡೆಯ ಕನ್ನಡ ಸಂಘಗಳು ಭಾಗವಹಿಸಿದ್ದವು. ಅನೇಕ ಮಹತ್ವದ ವಿಷಯಗಳ ಬಗೆಗೆ ಚರ್ಚೆ ನಡೆಯಿತು. ಇದು ರಾಜಕೀಯವಾಗಿ ಮಹತ್ವದ ವಿಷಯವಾಗಿರಲಿಕ್ಕಿಲ್ಲ. ಆದರೆ ಸಾಂಸ್ಕೃತಿಕವಾಗಿ ತುಂಬ ಮಹತ್ವದ ವಿಷಯವಾಗಿತ್ತು. ಈ ಸಮಾಚಾರಕ್ಕೆ ಮೂರನೆಯ ಪುಟದಲ್ಲಿ ಸ್ಥಾನ ಹಾಗು ಉತ್ತಮ ಸ್ಥಳಾವಕಾಶ ಸಿಗಬೇಕಾಗಿತ್ತು.  ಸಂಯುಕ್ತ ಕರ್ನಾಟಕ ಪತ್ರಿಕೆಯು ಈ ಸಮಾಚಾರವನ್ನು ೪ನೆಯ ಹಾಗು ೧೨ನೆಯ ಪುಟಗಳಲ್ಲಿ ಪ್ರಕಟಿಸಿದೆ. ಒಟ್ಟು ೧೦೫೨ ಚಸೆಂಮೀ ಸ್ಥಳವನ್ನು ನೀಡಿದೆ. ಕನ್ನಡ ಪ್ರಭಾ ಪತ್ರಿಕೆಯು ಅತಿ ಹೆಚ್ಚು ಸ್ಥಳವನ್ನು ಅಂದರೆ ೧೦೮೯ ಚಸೆಂಮೀ ಸ್ಥಳವನ್ನು ನೀಡಿದ್ದರೂ ಸಹ ೯ನೆಯ ಪುಟದಲ್ಲಿ ಪ್ರಕಟಿಸಿ, ಸಮಾಚಾರವನ್ನು ಅಪಮೌಲ್ಯಗೊಳಿಸಿದೆ. ಪ್ರಜಾವಾಣಿ ಪತ್ರಿಕೆಯು ಈ ಪತ್ರಿಕೆಗಳು ನೀಡಿದ ಸ್ಥಳದ ಸುಮಾರು ಅರ್ಧದಷ್ಟು ಸ್ಥಳವನ್ನು  ಅಂದರೆ ೫೪೯ ಚಸೆಂಮೀ ಸ್ಥಳವನ್ನು ನೀಡಿದೆ. ೪ನೆಯ ಹಾಗು ೮ನೆಯ ಪುಟಗಳಲ್ಲಿ  ಈ ಸಮಾಚಾರವನ್ನು ಪ್ರಕಟಿಸಿದೆ. ೪ನೆಯ ಪುಟದಲ್ಲಿಯೇ ಪ್ರಕಟಿಸಿದರೂ ಸಹ ಕನಿಷ್ಠ ಸ್ಥಳವನ್ನು ನೀಡಿದ ಕೀರ್ತಿ ವಿಜಯ ಕರ್ನಾಟಕಕ್ಕೆ ಸಲ್ಲಬೇಕು. ೫೨೯ ಚಸೆಂಮೀ ಸ್ಥಳ ಮಾತ್ರ ಈ ಮಹತ್ವದ ಸುದ್ದಿಗೆ ಸಾಕು ಎನ್ನುವದು ವಿಜಯ ಕರ್ನಾಟಕದ ಅಭಿಪ್ರಾಯವಾಗಿದೆ. ಕನ್ನಡ ನುಡಿಗೇ ಮಹತ್ವ ಕೊಡದ ವಿಜಯ ಕರ್ನಾಟಕವು, ಹೊರನಾಡ ಕನ್ನಡಿಗರ ಸಮ್ಮೇಳನಕ್ಕೆ ಏನು ಮಹತ್ವ ಕೊಟ್ಟೀತು?

ಉಳಿದ ಸುದ್ದಿಗಳಲ್ಲಿ ಅನೇಕ ಸ್ಥಳೀಯ ಮಹತ್ವದ ಸುದ್ದಿಗಳಿವೆ:
(೧) ನೂತನ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಮಾವೇಶವು ಧಾರವಾಡದಲ್ಲಿ ಜರುಗಿದ್ದು , ಪಂಚಾಯತ ರಾಜ ಇಲಾಖೆಯ ಮಂತ್ರಿ ಶ್ರೀ ಶೆಟ್ಟರರು ಅಲ್ಲಿ ಭಾಷಣ ಮಾಡಿದ್ದಾರೆ. ಮಂತ್ರಿಗಳ ಭಾಷಣದ ಸಾರವನ್ನು ವಿವಿಧ ಪತ್ರಿಕೆಗಳು ವರದಿ ಮಾಡಿದ ಪರಿ ಹೀಗಿದೆ :

ಸಂಯುಕ್ತ  ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ‘ಉದ್ಯೋಗ ಖಾತ್ರಿ ಯೋಜನೆಗಾಗಿ ೪೬೦೦ ಕೋಟಿ ರೂ. ಬಿಡುಗಡೆ’ ಎನ್ನುವ ತಲೆಬರಹವನ್ನು ನೀಡಿವೆ. ವಿಜಯ ಕರ್ನಾಟಕ ಪತ್ರಿಕೆಯು  ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹ ನೀಡಿದೆ.  ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ: ಶೆಟ್ಟರ್ ಸಲಹೆ’ ಎನ್ನುವ ಅತ್ಯಂತ ಮೂರ್ಖ ತಲೆಬರಹವನ್ನು ಪ್ರಜಾವಾಣಿ ಪತ್ರಿಕೆ ನೀಡಿದೆ.

ಮಂತ್ರಿಗಳ ಭಾಷಣದಲ್ಲಿ ಯಾವ ಅಂಶಕ್ಕೆ ವಾಸ್ತವಿಕತೆಯ ಬೆಂಬಲವಿರುತ್ತದೆಯೊ ಅದನ್ನು ತಲೆಬರಹಕ್ಕಾಗಿ ಬಳಸಿಕೊಳ್ಳಬೇಕು. ಕೇಂದ್ರದಿಂದ ೪೬೦೦ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಒಂದು ವಾಸ್ತವ ಘಟನೆ. ಆದುದರಿಂದ ಈ ತಲೆಬರಹಕ್ಕೆ ವಾಸ್ತವತೆಯ ಬೆಂಬಲವಿದೆ.  ನಿರುದ್ಯೋಗ ನಿವಾರಣೆ ಮಾಡುವದು ಅಧಿಕಾರಿಗಳ ಕೈಯಲ್ಲಿ ಇರುವದಿಲ್ಲ. ಆದರೂ ಸಹ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಅನುದಾನ ಬಿಡುಗಡೆಯಾಗುತ್ತಿರುವದರಿಂದ, ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹವನ್ನೂ ಒಪ್ಪಿಕೊಳ್ಳಬಹುದು.

ಇನ್ನು ಮಂತ್ರಿಗಳು ತಮ್ಮ ಭಾಷಣದಲ್ಲಿ ಅನೇಕ ವಿಷಯಗಳನ್ನು ಹೇಳುತ್ತಾರೆ. ಕೆಲವೊಮ್ಮೆ ಅದು ಕೇವಲ public imageಗಾಗಿ ಇರುತ್ತದೆ. ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ’ ಎನ್ನುವದು ಇಂತಹ ಒಂದು ವೀರಾವೇಶದ ಹೇಳಿಕೆಯಾಗಿರಬಹುದು. ಅಥವಾ ಅವರ ಪಕ್ಷದ ಆಶಯವಾಗಿರಬಹುದು. ಒಟ್ಟಿನಲ್ಲಿ ಶೆಟ್ಟರು ಮಾಡಿದ ಭಾಷಣದಲ್ಲಿ ಇದು ಮಹತ್ವದ ಅಂಶವಂತೂ ಅಲ್ಲ. ಆದುದರಿಂದ ಈ ತಲೆಬರಹವನ್ನು ನೀಡುವದರ ಮೂಲಕ ಪ್ರಜಾವಾಣಿಯು ತನ್ನ ದಡ್ಡತನವನ್ನು ತೋರಿದೆ.

ಅಧಿಕಾರಿಗಳಿಗೆ ಲ್ಯಾಪ್ ಟಾ^ಪ್ ಹಾಗು ಮೋಬೈಲ್ ಸಿಮ್ ಕೊಡುವ ವಿಷಯವನ್ನು ಮತ್ತು ಮಂತ್ರಿ ಶೆಟ್ಟರರು ಪ್ರತಿಜ್ಞಾವಿಧಿಯನ್ನು ಬೋಧಿಸಿದ ವಿಷಯವನ್ನು  ವಿಜಯ ಕರ್ನಾಟಕ, ಪ್ರಜಾವಾಣಿ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ವರದಿ ಮಾಡಿವೆ. ಸಂಯುಕ್ತ ಕರ್ನಾಟಕವು ಈ ವರದಿ ಮಾಡದಿರುವದು ಎದ್ದು ಕಾಣುವ ಲೋಪವಾಗಿದೆ.

ತಲೆಬರಹ ಹಾಗು ಸಮಾಚಾರ-ಲೋಪದ ಉದಾಹರಣೆಯನ್ನು ನೋಡಿದಂತಾಯಿತು. ಇನ್ನು ಕೆಲವೊಂದು ಪತ್ರಿಕೆಗಳಲ್ಲಿ ವರದಿಯಾಗದೇ ಇರುವ ಕೆಲವು ಮಹತ್ವದ ಸುದ್ದಿಗಳನ್ನು ನೋಡೋಣ;

(೧) ಭಾರತದಲ್ಲಿ ಮೊದಲ ಬಾರಿಗೆ ನಡೆದ ಪೋಲೋ ಕಪ್ ಇಂಡಿಯಾ ಚಾಂಪಿಯನ್ ಶಿಪ್ ಪಂದ್ಯದ ವರದಿ ಕೇವಲ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಮಾತ್ರ ಬಂದಿದೆ. ಸಂಯುಕ್ತ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಮಹತ್ವದ  ಸಮಾಚಾರವನ್ನು ವರದಿ ಮಾಡದೆ ಇದ್ದದ್ದು ದೊಡ್ಡ ಲೋಪವಾಗಿದೆ.

 (೨) ಮುಜಾಹಿದೀನ್ ಸಂಘಟನೆಯ ಮುಖಂಡನ ಹತ್ಯೆಯು ಪ್ರಮುಖ ಸುದ್ದಿಯಾದರೂ ಸಹ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ವರದಿಯಾಗಿದೆ.

(೩) ಜಾಗತಿಕ ಹೂಡಿಕೆದಾರರ ಸಮ್ಮೇಳನದ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೪) ದರೋಡೆಕೋರರ ಇರಿತಕ್ಕೆ ಪೋಲೀಸನ ಬಲಿ ಎನ್ನುವ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೫) ಕೇರಳ ಹಾಗು ಬಂಗಾಲದಲ್ಲಿ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಶಾಖೆಗಳು ಪ್ರಾರಂಭವಾಗುವದು ಮಹತ್ವದ ಸಮಾಚಾರ. ಈ ಸುದ್ದಿ ಕೇವಲ ಕನ್ನಡ ಪ್ರಭಾ ಹಾಗು ವಿಜಯ ಕರ್ನಾಟಕಗಳಲ್ಲಿ ಪ್ರಕಟವಾಗಿದೆ.

(೬) ಧಾರವಾಡದಲ್ಲಿ ಅಖಿಲ ಭಾರತೀಯ ಹಾಶಮ್ ಪೀರ ಶಾಂತಿ ಪ್ರತಿಷ್ಠಾನದ ಉದ್ಘಾಟನೆಯಾದ ಸುದ್ದಿಯು ಕೇವಲ ಕನ್ನಡ ಪ್ರಭಾ ಪತ್ರಿಕೆಯಲ್ಲಿ ವರದಿಯಾಗಿದೆ.

(೭) ಧಾರವಾಡದಲ್ಲಿ ಆಯೋಜಿಸಲಾಗುತಿರುವ ಕ್ಷೇತ್ರವಾರು ಉದ್ಯೋಗ ಮೇಳದ ವರದಿಯನ್ನು ಪ್ರಜಾವಾಣಿ ಮಾತ್ರ ಮಾಡಿದೆ

 (೮) ಶಾಸಕ ಲಾಡ ಇವರ ಪ್ರಚಾರ ಭಾಷಣ ಹಾಗು ಮಂತ್ರಿ ಶೆಟ್ಟರರ ಭಾಷಣ ಕೇವಲ ವಿಜಯ ಕರ್ನಾಟಕದಲ್ಲಿ ವರದಿಯಾಗಿವೆ. 

 (೯) ಮಂಡ್ಯದಲ್ಲಿ ತಪ್ಪಿದ ರೇಲವೇ ದುರಂತದ ಸುದ್ದಿ ಕೇವಲ ಪ್ರಜಾವಾಣಿ ಹಾಗು ಸಂಯುಕ್ತ ಕರ್ನಾಟಕಗಳಲ್ಲಿ ಮಾತ್ರ ಬಂದಿದೆ.

(೧೦) ಮಣಿಪಾಲ ವಿಶ್ವವಿದ್ಯಾಲಯಕ್ಕೆ ಕುಲಪತಿಯ ನೇಮಕವಾದ ಸುದ್ದಿ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾಗಳಲ್ಲಿ ಮಾತ್ರ ವರದಿಯಾಗಿದೆ.

(೧೧) ಅಥಣಿಯಲ್ಲಿ ಸಾಂಸ್ಕೃತಿಕ ಸಂಘ ಆರಂಭವಾದ ಸುದ್ದಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮಾತ್ರ ಬಂದಿದೆ.

(೧೨) ಸಿಇಟಿ ಕೌನ್ಸೆಲಿಂಗಿನಲ್ಲಿ ಸಿಸಿಟಿವಿಯ ಬಳಕೆಯಾಗಲಿದೆ ಎನ್ನುವ ಉಪಯುಕ್ತ ಮಾಹಿತಿಯು ಕೇವಲ ಪ್ರಜಾವಾಣಿಯಲ್ಲಿ ವರದಿಯಾಗಿದೆ.

ಮೇಲಿನ ಲೋಪಗಳು ಕೇವಲ ಉದಾಹರಣೆಗೆ ಮಾತ್ರ. ಈ ತರಹದ ಇನ್ನೂ ಚಿಕ್ಕ ಪುಟ್ಟ ಆದರೆ ಮಹತ್ವದ ಅನೇಕ ಸುದ್ದಿಗಳನ್ನು ಈ ಪತ್ರಿಕೆಗಳು ವರದಿ ಮಾಡುವ ಮನಸ್ಸು ಮಾಡಿಲ್ಲ. ಆದರೆ, ಕೆಲಸಕ್ಕೆ ಬಾರದ ಸುದ್ದಿಗಾಗಿ ಹಾಗು ವಿಶ್ಲೇಷಣೆಗಾಗಿ ಅನವಶ್ಯಕ ಸ್ಥಳಾವಕಾಶ ಮಾಡುತ್ತವೆ.  ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮೋಬೈಲ್ ವೇಶ್ಯಾವಾಟಿಕೆ ಎನ್ನುವದು ಒಂದು ಮೂರನೆಯ ದರ್ಜೆಯ ವರದಿ. ಇದಕ್ಕೆ ೧೪೪ ಚಸೆಂಮೀ ಸ್ಥಳ ಕೊಡಲಾಗಿದೆ.
ವೀರಪ್ಪನ್ ಹೂತಿಟ್ಟ ದಂತಕ್ಕಾಗಿ ಉತ್ಖನನ ಎನ್ನುವ ಸುದ್ದಿಗಾಗಿ ಕನ್ನಡ ಪ್ರಭಾ ಪತ್ರಿಕೆಯು ೨೮೬ ಚಸೆಂಮೀ ಸ್ಥಳವನ್ನು ವ್ಯಯಿಸಿದೆ.

ದಿನಾಂಕರೇಖೆ:
ಪತ್ರಿಕೆಗಳು ಸುದ್ದಿಯ ವರದಿಯ ಪ್ರಾರಂಭದಲ್ಲಿ ದಿನಾಂಕವನ್ನು ದಾಖಲಿಸಬೇಕು. ಹಾಗಿದ್ದಾಗ ಮಾತ್ರ ಸುದ್ದಿಯ ತಾಜಾತನ ತಿಳಿಯುತ್ತದೆ. ಸಂಯುಕ್ತ ಕರ್ನಾಟಕ ಹಾಗು  ಕನ್ನಡ ಪ್ರಭಾ ಪತ್ರಿಕೆಗಳು ತಾವು ಪ್ರಕಟಿಸಿದ ಬಹುತೇಕ ಸುದ್ದಿಗಳಿಗೆ ದಿನಾಂಕವನ್ನು ನಮೂದಿಸಿವೆ. ಆದರೆ ವಿಜಯ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಮಾತ್ರ ಯಾವ ಸುದ್ದಿಗೂ ದಿನಾಂಕವನ್ನು ಕೊಟ್ಟಿಲ್ಲ. ತಾವು ಹಳಸಲು ಸುದ್ದಿಯನ್ನು ಪ್ರಕಟಿಸಿದಾಗ, ಓದುಗರಿಗೆ ಅದರ ಅರಿವಾಗಬಾರದೆನ್ನುವ ಠಕ್ಕತನವೆ ಇದಕ್ಕೆ ಕಾರಣವೇ?

ಉದಾಹರಣೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಎರಡು ಸುದ್ದಿಗಳನ್ನು ನೋಡಿರಿ:

ಮೊದಲನೆಯ ಸುದ್ದಿಯಲ್ಲಿ ರವಿವಾರ  ಎಂದು ದಿನವನ್ನು ಹೇಳಿದ್ದಾರೆಯೆ ಹೊರತು ಮೇ ೩೦ ಎನ್ನುವ ದಿನಾಂಕವನ್ನು ಹೇಳಿಲ್ಲ. ಮೇ ೩೦ರಂದು ಭಾರತೀಯರು ತ್ರಿನಿದಾದ ದೇಶಕ್ಕೆ  ವಲಸೆ ಹೋದ ದಿನವೆಂದು ಆಚರಿಸುತ್ತಾರೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಇದು ಅಪೂರ್ಣ ವರದಿಯ ಉದಾಹರಣೆ.

ಎರಡನೆಯ ಸುದ್ದಿಯು ಇನ್ನಿಷ್ಟು ಕಳಪೆ ವರದಿಯ ನಿದರ್ಶನವಾಗಿದೆ. ಲಂಡನ್ನಿನಲ್ಲಿ ತೊಗಲು ಬೊಂಬೆಯಾಟ ಯಾವಾಗ ನಡೆಯಿತು ಎನ್ನುವದಕ್ಕೆ ಯಾವುದೇ ಸುಳಿವನ್ನು ಇಲ್ಲಿ ನೀಡಿಲ್ಲ. ಅಂತರಜಾಲ ಶೋಧನೆ ಮಾಡಿದರೂ ಸಹ ನನಗೆ ಯಾವುದೆ ಧನಾತ್ಮಕ ಪರಿಣಾಮ ಲಭಿಸಲಿಲ್ಲ. ಈ ಸುದ್ದಿಯನ್ನು ನಂಬುವದು ಹೇಗೆ? ಇದು ಮಿಥ್ಯಾ ಸುದ್ದಿ ಯಾಕಾಗಿರಬಾರದು? ಆದುದರಿಂದ ಪ್ರತಿಯೊಂದು ಸುದ್ದಿಯ ತುಣುಕಿಗೂ ಪತ್ರಿಕೆಯು ದಿನಾಂಕವನ್ನು ನಮೂದಿಸಲೇ ಬೇಕು.

ಭಾಷಾಶುದ್ಧಿ :
ಓರ್ವ ವ್ಯಕ್ತಿ ಭಾಷೆಯನ್ನು ಕಲಿಯುವದೇ ಪತ್ರಿಕೆಗಳ ಮೂಲಕ. ಪತ್ರಿಕೆಯಲ್ಲಿ ದಾಖಲಾದ ಕಾಗುಣಿತವೇ ತಪ್ಪಾದರೆ, ಈ ತಪ್ಪು ಲಕ್ಷಾನುಗಟ್ಟಲೆ ಓದುಗರ ಮೂಲಕ ಎಲ್ಲೆಡೆ ಹರಡಿ ಸಾರ್ವತ್ರಿಕವಾಗುತ್ತದೆ.

ದಿ: ೧-೬-೨೦೧೦ರಂದು ಪ್ರಕಟವಾದ ಈ ನಾಲ್ಕೂ ಪತ್ರಿಕೆಗಳ ಸಂಚಿಕೆಗಳಲ್ಲಿ ಝಾರಖಂಡ ಎನ್ನುವ ಪದವನ್ನು ಜಾರ್ಖಂಡ್  ಎಂದು ಬರೆಯಲಾಗಿದೆ. ಸ್ವಾಮಿ ಸಂಪಾದಕರೆ, ಇಂತಹ ಹೊಸ ಪದವೊಂದನ್ನು ನೀವು ನೋಡಿದಾಗ, ವರದಿ ಬರೆಯುವ ಮೊದಲೊಮ್ಮೆ, ಇಂಗ್ಲಿಶ್ ವಿಕಿಪೀಡಿಯಾದಲ್ಲಿ ಒಮ್ಮೆ ಶೋಧನೆ ಮಾಡಿರಿ. ಅಲ್ಲಿ ಈ ಪದದ ಉಚ್ಚಾರವನ್ನು ಬರೆದಿರುತ್ತಾರೆ. ಅಲ್ಲದೆ ಉಚ್ಚಾರವನ್ನು ಧ್ವನಿಸಿ ತೋರಿಸುವ ಸೌಲಭ್ಯವೂ ಅಲ್ಲಿದೆ. ಕರ್ನಾಟಕದ ಕೆಲವು ನವ-ವೈಯಾಕರಣಿಗಳು ‘ಕನ್ನಡದಲ್ಲಿ ಮಹಾಪ್ರಾಣದ ಉಚ್ಚಾರ ಇಲ್ಲ, ಆದುದರಿಂದ ನಾವು ಬರೆಯುವದು ಹೀಗೇ’ ಎನ್ನುವ ಹುಚ್ಚಾರವನ್ನು ಮಾಡುತ್ತಾರೆ. ಹಾಗಿದ್ದರೆ, ಜಾರ್ಕಂಡ್ ಎಂದು ಬರೆಯಬೇಕಿತ್ತಲ್ಲ! ‘ಭಾರತ’ ಪದವನ್ನು ‘ಬಾರತ’ ಎಂದು ನೀವು ಬರೆಯುತ್ತೀರಾ? ಝಾರಖಂಡ ಮಾತ್ರ ಜಾರ್ಕಂಡ್ ಏಕಾಗಬೇಕು? ಮರಾಠಿ ಬಾಷಿಕರು ‘ಕನ್ನಡ’ಕ್ಕೆ ‘ಕಾನಡಿ’ ಎಂದು ಕರೆದಾಗ ನಿಮ್ಮ ಮೈ ಉರಿಯುವದಿಲ್ಲವೆ? ಅಥವಾ ವಿಶ್ವೇಶ್ವರ ಭಟ್ಟರನ್ನು ಇಸ್ವೇಸ್ವರ ಬಟ್ಟ ಎಂದು ಬರೆದರೆ, ಭಟ್ಟರಿಗೆ ಬೇಜಾರಾಗುವದಿಲ್ಲವೆ? ಹಾಗಿದ್ದಾಗ ಝಾರಖಂಡಕ್ಕೆ  ಜಾರ್ಖಂಡ್ ಎಂದು ಬರೆದರೆ, ಝಾರಖಂಡ ನಿವಾಸಿಗಳ ಮನಸ್ಸು ನೋಯುವದಿಲ್ಲವೆ?

ಕಾಗುಣಿತದ ತಪ್ಪುಗಳನ್ನು ಮಾಡುವಲ್ಲಿ ಸಂಯುಕ್ತ ಕರ್ನಾಟಕವು ಎಲ್ಲಕ್ಕೂ ಮುಂದಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯ ಕಾಗುಣಿತದ ತಪ್ಪುಗಳನ್ನು ನಾನು ಈ ಮೊದಲೂ ಎತ್ತಿ ತೋರಿಸಿದ್ದೆ. ಅವುಗಳನ್ನು ಇಲ್ಲಿ ಹಾಗು ಇಲ್ಲಿ ನೋಡಬಹುದು. 

ದಿನಾಂಕ ೧-೬-೨೦೧೦ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ತಪ್ಪು ಹೀಗಿದೆ:

ವರದಿಯ ಕೊನೆಯವರೆಗೂ ‘ಬೇದಿ’ ಎನ್ನುವ ತಪ್ಪನ್ನು ಮತ್ತೆ ಮತ್ತೆ ಮಾಡಿದ್ದು ಪತ್ರಿಕೆಯ ಹೆಚ್ಚುಗಾರಿಕೆಯಾಗಿದೆ.


ಇಂಗ್ಲಿಶ್ ಪದಗಳು:

ಇಂಗ್ಲಿಶ್ ಪದಗಳನ್ನು ಬರೆಯುವಾಗ, ಸಂಯುಕ್ತ ಕರ್ನಾಟಕಕ್ಕೆ ಏನು ಸಮಸ್ಯೆ ಬರುವುದೋ ನನಗೆ ತಿಳಿಯದು. ಉಳಿದೆಲ್ಲ ಪತ್ರಿಕೆಗಳು ‘ಆರ್ಟ್ ಆಫ್ ಲಿವಿಂಗ್’ ಎಂದು ಬರೆದಾಗ, ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ‘ಆರ್ಟ್ ಆಫ್ ಲೀವಿಂಗ್’ ಎಂದು ಬರೆದಿದ್ದಾರೆ, (ಮೂರು ಸಲ). ಲಿವಿಂಗ್( = ಜೀವಿಸುವದು) ಬೇಡವಾದಾಗ ಮನುಷ್ಯನು ಲೀವಿಂಗ್ (= ಹೊರಡುವದು) ಮಾಡುತ್ತಾನೆ, ಅಲ್ಲವೆ?

ಜನಪ್ರಿಯತೆಯ ಗುಟ್ಟೇನು?
ಇಷ್ಟೆಲ್ಲ ಲೋಪದೋಷಗಳಿದ್ದರೂ ಸಹ ವಿಜಯ ಕರ್ನಾಟಕ ಪತ್ರಿಕೆಯು ಇಂದು ಜನಪ್ರಿಯತೆಯ ಶಿಖರದಲ್ಲಿದೆ. ಸಂಯುಕ್ತ ಕರ್ನಾಟಕವು ಕನಿಷ್ಠ ಮಟ್ಟದಲ್ಲಿದೆ. ಇದಕ್ಕೆ ಕಾರಣಗಳೇನು?

ಇಸವಿ ೨೦೦೦ದಲ್ಲಿ ವಿಜಯ ಕರ್ನಾಟಕವು ಪ್ರಾರಂಭವಾದ ಬಳಿಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ವಕ್ರ ಮಾರ್ಗವನ್ನು ಹಿಡಿಯಿತೆನ್ನಬಹುದು. ಪತ್ರಿಕೆಯ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉಳಿದ ಪತ್ರಿಕೆಗಳ ತೊಡೆಯ ಮೇಲೆ ಗದಾಪ್ರಹಾರ ಮಾಡಿತು. ಸರಿ, ಉಳಿದ ಪತ್ರಿಕೆಗಳೂ ಸಹ ಬೆಲೆಯನ್ನು ಕಡಿತಗೊಳಿಸಿದವು. ಆಬಳಿಕ ವಿಜಯ ಕರ್ನಾಟಕವು ತನ್ನ ಹೊಚ್ಚ ಹೊಸ ಭಾಷಾಪ್ರಯೋಗಗಳ ಮೂಲಕ ಓದುಗರನ್ನು ಆಕರ್ಷಿಸಿತು. ತಲೆಬರಹವನ್ನು ಭಾಗಶಃ ತುಂಡರಿಸಿ, ವಿಶೇಷ ಅರ್ಥ ಬರುವಂತೆ ಮಾಡಿತು. ಈ ವಿಷಯದಲ್ಲಿ ವಿಜಯ ಕರ್ನಾಟಕದ ಸಂಪಾದಕರು ಪ್ರತಿಭಾಶಾಲಿಗಳು. ವಿಜಯ ಕರ್ನಾಟಕವನ್ನು ಅನುಕರಿಸ ಹೋದ ಸಂಯುಕ್ತ ಕರ್ನಾಟಕವು ನಗೆಗೀಡಾಗುವಂತಹ ತಲೆಬರಹಗಳನ್ನು ನಿರ್ಮಿಸಿದೆ. ಆದರೆ, ಪ್ರಜಾವಾಣಿ ಪತ್ರಿಕೆಯು ಮಾತ್ರ ತನ್ನ ಗಂಭೀರ, ಸಭ್ಯ ನಿಲುವನ್ನು ಉಳಿಸಿಕೊಂಡು ಬಂದಿದೆ.

ಎರಡನೆಯದಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವ ಅಂಕಣ ಲೇಖನಗಳೇ ಈ ಪತ್ರಿಕೆಯ ಜನಪ್ರಿಯತೆಯ ನಿಜವಾದ ಕಾರಣವೆಂದು ಭಾಸವಾಗುತ್ತದೆ.
(೧) ಶ್ರೀ ಶ್ರೀವತ್ಸ ಜೋಶಿಯವರ ಸರಸ ಲೇಖನಮಾಲೆ: ಪರಾಗಸ್ಪರ್ಶ
(೨) ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರ ತಿಳಿವು ನೀಡುವ ತಿಳಿಯಾದ ಲೇಖನಮಾಲೆ: ಬಿಸಿಲು ಬೆಳದಿಂಗಳು
(೩) ಶ್ರೀ ಪ್ರತಾಪ ಸಿಂಹರ ಅಂಕಣ: ಬತ್ತಲೆ ಜಗತ್ತು
(೪) ಶ್ರೀ ತ್ಯಾಗರಾಜರು ಬರೆಯುವ ರಾಜಕೀಯ ಒಳನೋಟದ ’ಒಳಸುಳಿ’
(೫) ಶ್ರೀ ಪ್ರಭಾಕರರು ಬರೆಯುವ ವಿನೋದಮಯ ಲೇಖನಮಾಲೆ: ‘ಟಾಂಗ್’
(೬) ಕೆಲವೊಮ್ಮೆ ಸ್ವಾರಸ್ಯಕರ ಮಾಹಿತಿ ನೀಡುವ ವಿಶ್ವೇಶ್ವರ ಭಟ್ಟರ ಸುದ್ದಿಮನೆ.

ಮೂರನೆಯದಾಗಿ ಕೆಲವು ರಾಜಕಾರಣಿಗಳ ಕೊಳಕನ್ನು ಬಯಲು ಮಾಡುವಲ್ಲಿ ವಿಜಯ ಕರ್ನಾಟಕವು ತೋರುವ ಅವಿಶ್ರಾಂತ ಪ್ರಯತ್ನವೂ ಸಹ ವಿಜಯ ಕರ್ನಾಟಕಕ್ಕೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ.

ವಿಜಯ ಕರ್ನಾಟಕದ ದಾಳಿಗೆ ಸೊಪ್ಪು ಹಾಕದ ಪ್ರಜಾವಾಣಿಯು ತನ್ನ ಗಂಭೀರ ನಿಲುವನ್ನು ಉಳಿಸಿಕೊಂಡು ಬಂದಿದೆ. ಸುದ್ದಿಯ ಖಚಿತತೆ ಹಾಗು ಪರಿಪೂರ್ಣ ಮಾಹಿತಿ ನೀಡುವಲ್ಲಿ ಇದು ವಿಜಯ ಕರ್ನಾಟಕ ಪತ್ರಿಕೆಗಿಂತಲೂ ಮುಂದಿದೆ. ಈ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಲೇಖನಗಳೂ ಸಹ ಉತ್ತಮ ಪ್ರಮಾಣದ್ದಾಗಿವೆ. ಅಲ್ಲದೆ ಚಿತ್ರವಿಚಿತ್ರ ಭಾಷಾಪ್ರಯೋಗಗಳ ಮೂಲಕ ಕನ್ನಡದ ಕೊರಳು ಕೊಯ್ಯುವ ಕೆಲಸವನ್ನು ಇದು ಮಾಡಿಲ್ಲ. ಆದರೆ ಈ ಪತ್ರಿಕೆಯ ಪ್ರಾದೇಶಿಕ ಆವೃತ್ತಿಯು ಪ್ರಾದೇಶಿಕತೆಯ ವೈಶಿಷ್ಟ್ಯವನ್ನು ತೋರಿಸದೆ ಇರುವದರಿಂದ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಲು ವಿಫಲವಾಗಿದೆ.

ಈ ಪತ್ರಿಕೆಗಳ ದೋಷಗಳೇನು?
ವಿಜಯ ಕರ್ನಾಟಕ :
(೧) ಈ ಪತ್ರಿಕೆಯು ಕನ್ನಡ ಪದಗಳನ್ನು ಬಳಸಲು ಕಲಿಯಬೇಕು. ಸಂಪಾದಕರು ಒಂದು ಇಂಗ್ಲಿಶ್-ಕನ್ನಡ ಪದಕೋಶವನ್ನು ಮೇಜಿನ ಮೇಲೆ ಇಟ್ಟುಕೊಂಡಿರುವದು ಉಪಯುಕ್ತವಾಗಬಹುದು.

(೨) ‘ಒಂದು ಪದವನು ಇವರು ಅಂದಗೆಡಿಸಿಹರಯ್ಯ!’
One word is too often profaned  ಎಂದು ಶೆಲ್ಲಿ ತನ್ನ ಕವನದಲ್ಲಿ ಹೇಳಿದ್ದಾನೆ. ವಿಜಯ ಕರ್ನಾಟಕದಲ್ಲಿ Too many words are too often profaned. ಒಂದು ಉದಾಹರಣೆ ಹೀಗಿದೆ:
‘ಬ್ರಾ’ ಎನ್ನುವ ಪದವನ್ನು ಎತ್ತಿ ತೋರಿಸುವ ಉದ್ದೇಶದಿಂದ ವಿಜಯ ಕರ್ನಾಟಕದ ಒಂದು ಹಳೆಯ ಪುರವಣಿಯಲ್ಲಿ ‘ದಿಗ್ಭ್ರಾಂತ’ ಪದದ ಬದಲಾಗಿ ದಿಗ್‘ಬ್ರಾಂ’ತ ಎನ್ನುವ ಪದವನ್ನು ಬಳಸಲಾಗಿದೆ. ಈ ತರಹ ಪದಗಳನ್ನು ವಿರೂಪಿಸುವದು ಕನ್ನಡದ ಕತ್ತು ಕುಯ್ಯುವ ಕೆಲಸವಲ್ಲವೆ?

(೩) ವಿಜಯ ಕರ್ನಾಟಕವು ‘ಸಭ್ಯಸಾಚಿ’ ಎನ್ನುವ ಹಿತೋಕ್ತಿಯನ್ನು ಓದುಗರಿಗೆ ನಿಯಮಿತವಾಗಿ ನೀಡುತ್ತಲಿದೆ. ಆದರೆ ತಾನೂ ಹಾಗಿರಬೇಕಾದದ್ದು ತನ್ನ ಪರಮ ಹೊಣೆಗಾರಿಕೆ ಎನ್ನುವದನ್ನು ಮರೆತು ಬಿಟ್ಟಿದೆ. ವಿಜಯ ಕರ್ನಾಟಕದ ಸಿನೆಮಾ ಪುರವಣಿಗಳಲ್ಲಿ ಬರೆಯುವವರು ನಟಿಯರ ಬಗೆಗೆ ಬರೆಯುವಾಗ ಗೌರವದ ಎಲ್ಲೆಯನ್ನು ಮೀರುತ್ತಾರೆ. ಉದಾಹರಣೆಗೆ ೨೮-೧೦-೨೦೧೦ರ ಪುರವಣಿಯಲ್ಲಿ ಬಂದ ಒಂದು ಲೇಖನದ ತಲೆಬರಹ ಹೀಗಿದೆ:
ರೋಡಿಗಿಳೀ ರೂಪಿಕಾ..”
ರೂಪಿಕಾ ಎನ್ನುವ ನಟಿಯ ಬಗೆಗಿನ ತಲೆಬರಹವಿದು.
ಬರಹದ ಕೊನೆಕೊನೆಗೆ ಏಕವಚನ ಪ್ರಾರಂಭವಾಯಿತು. “ರೂಪಿ ಟೆಂಥ್ ಪಾಸಾಗಿಲ್ಲ…..ಈಗಲೇ ಇವಳಿಗೆ ಇಷ್ಟು ಬಿಲ್ಡ್ ಅಪ್ಪು……..ಇವಳು ಅಮೂಲ್ಯಾ ಆಗಲು ಸಾಧ್ಯವಿಲ್ಲ…..”

ಯಾವುದೇ ಹೆಣ್ಣನ್ನಾದರೂ ಗೌರವದಿಂದ ಕಾಣಬೇಕು. ಅದು ಸಾಭ್ಯಸ್ಥಿಕೆ. ಬಹುಶಃ ಈ ಲೇಖನ ಬರೆದ ವರದಿಗಾರ ರೂಪಿಕಾರಿಂದ ಯಾವಾಗಲೊ ಒಮ್ಮೆ ಉಗಿಸಿಕೊಂಡಿರಬಹುದೆ? ಅದಕ್ಕಾಗಿಯೇ ಹೀಗೆಲ್ಲ ಹೀಯಾಳಿಸಿ ಬರೆದು ಸೇಡು ತೀರಿಸಿಕೊಂಡಿರಬಹುದೆ? ಅದೇನೆ ಇರಲಿ, ಸಭ್ಯಸಾಚಿತ್ವವನ್ನು ಪರರಿಗೆ ಉಪದೇಶಿಸುವ ಮುಖ್ಯ ಸಂಪಾದಕರು ಈ ಲೇಖನವನ್ನು ಕಣ್ಣು ತೆರೆದುಕೊಂಡು ಅಂಗೀಕರಿಸಿದರೊ ಅಥವಾ ಕಣ್ಣು ಮುಚ್ಚಿಕೊಂಡಿದ್ದರೊ?

ಸಂಯುಕ್ತ ಕರ್ನಾಟಕ :
(೧) ವಿಜಯ ಕರ್ನಾಟಕದ ನಕಲು ಮಾಡುವದನ್ನು ಬಿಡಬೇಕು.
(೨) ಈ ಮೊದಲು ತಾನೇ ಟಂಕಿಸಿದಂತಹ ಕನ್ನಡ ಪದಗಳನ್ನು ಬಳಸಬೇಕು.
(೩) ಸಂಯುಕ್ತ ಕರ್ನಾಟಕದ ಅಂಕಣ ಲೇಖನಗಳಲ್ಲಿ ಯಾವುದೇ ಸ್ವಾರಸ್ಯವಿಲ್ಲ, ತಾಜಾತನವೂ ಇಲ್ಲ. ಶ್ರೀ ಕೆ.ಎಸ್. ನಾರಾಯಣಾಚಾರ್ಯ ಎನ್ನುವ ಹಿರಿಯರು ಈ ಪತ್ರಿಕೆಯಲ್ಲಿ ನಿಯತವಾಗಿ ಬರೆಯುತ್ತಾರೆ. ಇವರ ಲೇಖನಗಳಲ್ಲಿ ಇರುವದು ಕೇವಲ ಪುರಾಣ ಮಂಥನ, ಪುರಾಣ ಚಿಂತನ. ಹಳೆಯದೆಲ್ಲ ಹೊನ್ನು ಎನ್ನುವದು ಇವರ ಚಿಂತನ ಸಾರ. ಶ್ರೀ ನವರತ್ನ ರಾಜಾರಾಯರು ವೈಚಾರಿಕ ಲೇಖನಗಳನ್ನು ಬರೆದರೂ ಸಹ ಅವುಗಳಲ್ಲಿ ವರ್ತಮಾನದ ತುರ್ತು ಇರುವದಿಲ್ಲ.  ಶ್ರೀ ಮನೋಜ ಪಾಟೀಲರು ವರ್ತಮಾನದ ತುರ್ತಿನ ಅಂಕಣಗಳನ್ನು ಬರೆದರೂ ಸಹ, ಅವುಗಳಲ್ಲಿ ಇನ್ನಷ್ಟು ಗಾಢತೆ ಬರಬೇಕು. ಇನ್ನು ವೈದ್ಯರ ಸುಬೋಧ ರಾಮಾಯಣವನ್ನು ಶ್ರೀರಾಮಚಂದ್ರನೇ ಓದಬೇಕು. ಎಲ್ಲದಕ್ಕೂ ಕನಿಷ್ಠ ಅಂಕಣವೆಂದರೆ ‘ಗೋವಿಂದಾ, ಗೋವಿಂದಾ’. ಇದು ನಿಜವಾಗಲೂ ‘ಗೋssವಿಂದಾ!’ ಸಂಯುಕ್ತ ಕರ್ನಾಟಕವು ಅಂಕಣಗಳಿಗಾಗಿ ಸ್ಥಳ ಹಾಳು ಮಾಡುವದರ ಬದಲಾಗಿ, ಇನ್ನಿಷ್ಟು ಸುದ್ದಿಗಳನ್ನು ಸೇರಿಸಿದರೆ, ಓದುಗ ವೃಂದವು ಹೆಚ್ಚಬಹುದು.

ಪ್ರಜಾವಾಣಿ:
ಹುಬ್ಬಳ್ಳಿ ಆವೃತ್ತಿಯಲ್ಲಿಯ ಸ್ಥಳೀಯ ಸುದ್ದಿಗಳಿಗೆ ಹುಬ್ಬಳ್ಳಿ ಭಾಷೆಯನ್ನು ಬಳಸಬೇಕು ; ಬೆಂಗಳೂರು ಭಾಷೆಯನ್ನು ಬಳಸಬಾರದು. ಆದುದರಿಂದ ಪ್ರಾದೇಶಿಕ ಭಾಷೆಯ / ರಿವಾಜಿನ ಅರಿವುಳ್ಳ ಸಂಪಾದಕರನ್ನು / ಉಪಸಂಪಾದಕರನ್ನು ನಿಯಮಿಸಿಕೊಳ್ಳಬೇಕು. ಒಂದು ಉದಾಹರಣೆ ಕೊಡುತ್ತೇನೆ :

‘ಹುರಕಡ್ಲಿ ಅಜ್ಜ’ ಎಂದು ಖ್ಯಾತರಾದ ಆಧ್ಯಾತ್ಮಿಕ ಸಾಧಕರೊಬ್ಬರು ನಿಧನರಾದಾಗ, ಪ್ರಜಾವಾಣಿಯ ಹುಬ್ಬಳ್ಳಿ ಆವೃತ್ತಿಯು ಅವರ ಹೆಸರನ್ನು ‘ಹುರಕಡ್ಲಿ ಅಜ್ಜನವರ್’ ಎಂದು ಬರೆದಿತ್ತು. ಬಹುಶ: ಪತ್ರಿಕಾ ಸಂಪಾದಕರು ‘ಅಜ್ಜನವರ್’ ಎನ್ನುವದು ಅವರ ಅಡ್ಡಹೆಸರು ಎಂದು ತಿಳಿದಿರಬಹುದು ! ಉತ್ತರ ಕರ್ನಾಟಕದಲ್ಲಿ ಹಿರಿಯರನ್ನು ಗೌರವದಿಂದ ‘ಅಜ್ಜ’ ಎಂದು ಕರೆಯುತ್ತಾರೆ ; ಅದು ಅವರ ಅಡ್ಡ ಹೆಸರಲ್ಲ! ಪ್ರಾದೇಶಿಕ ತಿಳಿವಳಿಕೆಯ ಅಭಾವದಿಂದ ಹೀಗಾಗುತ್ತದೆ.
………………………………………………………
ಏನೇ ಇರಲಿ, ಕನ್ನಡ ಪತ್ರಿಕೆಗಳು ನಮ್ಮ ಪತ್ರಿಕೆಗಳು. ಈ ಪತ್ರಿಕೆಗಳನ್ನು ಓದುವಾಗ ಸಮಾಚಾರದ ಖುಶಿಯ ಜೊತೆಗೇ ಭಾಷೆಯ ಖುಶಿಯೂ ಆಗುತ್ತಲಿದೆ. ಒಬ್ಬ ಓದುಗನಾಗಿ ಕನ್ನಡ ಪತ್ರಿಕೆಗಳ ಗುಣಾವಗುಣಗಳನ್ನು ನನಗೆ ತಿಳಿದಂತೆ ಪರಾಮರ್ಶಿಸಿ ನಿಮ್ಮೆದುರಿಗೆ ಇರಿಸಿದ್ದೇನೆ. ಕಣ್ತಪ್ಪಿನಿಂದ ಅನೇಕ ಲೋಪ ದೋಷಗಳು ಇಲ್ಲಿ ನುಸುಳಿರಬಹುದು. ಅಂತಹ ಪ್ರಸಂಗಗಳಲ್ಲಿ, ನಿಮ್ಮ ಕ್ಷಮೆ ಕೋರುತ್ತೇನೆ.

ನಮ್ಮ ಪತ್ರಿಕೆಗಳು ‘ಸಿರಿಗನ್ನಡಂ ಗೆಲ್ಗೆ’ ಎಂದು ಹೇಳಿದರೆ ಸಾಲದು; ‘ಸರಿಗನ್ನಡಂ ಗೆಲ್ಗೆ’ ಎಂದೂ ಹೇಳಬೇಕು.

85 comments:

  1. ಬಹಳ ಚೆನ್ನಾಗಿ ಕನ್ನಡ ಪ್ರಮುಖ ದಿನಪತ್ರಿಕೆ ಗಳನ್ನು ವಿವಿಧ ಕೋನ ಗಳಿ೦ದ ವಿಶ್ಲೇಷಣೆ ಮಾಡಿದ್ದೀರಿ. ಇದನ್ನು ಆಯಾ ಪತ್ರಿಕೆಯ ಸ೦ಪಾದಕ ಮಂಡಳಿಗೆ ಕಳುಹಿಸಿದಲ್ಲಿ ಅವರಿಗೆ ತಮ್ಮ ಲೋಪ ತಿದ್ದಿಕೊಳ್ಳಲು ಮನಸ್ಸು ಬರಬಹುದೇನೋ ಎ೦ಬ ಆಶಯ ನನ್ನದು. ಕನ್ನಡ ಪತ್ರಿಕೆ ಗಳ ಆ೦ಗ್ಲ ವ್ಯಾಮೋಹ, ಶಬ್ದಗಳನ್ನು ತಿರುಚಿ ವಿಪರೀತಾರ್ಥ ಹೊಮ್ಮಿಸುವ ಸರ್ಕಸ್ ಇವನ್ನು ಮೊದಲಿಗೆ ವಿಜಯಕರ್ನಾಟಕ ಶುರು ಮಾಡಿದ್ದು ಅ೦ತ ನನ್ನ ಅನಿಸಿಕೆ. ಆ ಮೂಲಕ ಜಡ್ದುಗಟ್ಟಿದ್ದ ಕನ್ನಡ ಪತ್ರಿಕಾ ಭಾಷೆಗೆ ಹೊಸ ಭಾಷ್ಯ ಬರೆದಿದ್ದೇವೆ ಎ೦ಬ ಹುಸಿ ಪೊಗರೂ ಅವರಿಗಿದೆ. ಆದರೆ ವಾಸ್ತವವಾಗಿ ಅವರು ಮಾಡಿದ್ದು ಭಾಷೆಯ ಅ೦ದ ಮತ್ತು ಸೊಗಡನ್ನು ಕೆಡಿಸುವ ಕೆಲಸ.

    ನಾವು ತಮಾಷೆಗೆ "ಮರಣವಾಣಿ" ಎ೦ದು ಕರೆಯುವ
    ಉದಯವಾಣಿ (ಯಾಕೆ೦ದರೆ ಅದರಲ್ಲಿ ಶ್ರದ್ಧಾ೦ಜಲಿ ಸುದ್ದಿಗಳೇ ಜಾಸ್ತಿ) ಬಗ್ಗೆಯೂ ಒಮ್ಮೆ ವಿಶ್ಲೇಷಣೆ ಮಾಡಿ.

    ReplyDelete
  2. ಯಾವಾಗಲೂ ಇತರರನ್ನು ವಿಮರ್ಶಿಸುವ ಪತ್ರಿಕೆಗಳನ್ನು ಚೆನ್ನಾಗಿ ವಿಮರ್ಶಿಸಿದ್ದೀರಿ ಸುನಾಥಕಾಕ.ನೀವು ಹೇಳಿರುವ ಪರಿಹಾರಗಳು ಸಮಂಜಸವಾಗಿವೆ . ಅವುಗಳನ್ನು ಅಳವಡಿಸಿಕೊಂಡರೆ ಪತ್ರಿಕೆಗಳಿಗೂ ಒಳ್ಳೆಯದು , ಓದುಗರಿಗೂ ನೆಮ್ಮದಿ,

    ReplyDelete
  3. Bakwaas. Stupid analysis. Manassige banda haage bareyodu vishleshane alla.

    ReplyDelete
  4. ಸುಸ್ತು ಮಾಡುವ ನಿಮ್ಮ home work ಅದ್ಭುತ
    ತಾಳ್ಮೆಯಿಂದ ಕೂಡಿದೆ.ನಿಮ್ಮ ಅಂಕಿ-ಅಂಶಗಳು
    ಅದಕ್ಕೊಂದು ಹಿರಿಮೆ ತಂದು ಕೊಟ್ಟಿವೆ.
    art of living ಮತ್ತು art of leaving
    ತುಂಬ ಮಜವಾಗಿದೆ!
    ನಮ್ಮ ಪುಣ್ಯ,ಇನ್ನೂ art of loving ಅಂತ ಬಂದಿಲ್ಲ.
    ಅಲ್ಲೇನು ಪ್ರೂಫ್ ನೋಡೋರು ಇಲ್ವಾ ಅಂತ..
    ಬಹುಶಃ ಇದೆಲ್ಲ ಪಟ್ಟಿ ಮಾಡಲು ನೀವೂ ಸಾಕಷ್ಟು
    ಶ್ರಮ ಪಟ್ಟಿರಬೇಕು.
    sincerely, ನನ್ನದೊಂದು "ಥಮ್ಸ್ ಅಪ್" ನಿಮ್ಗೆ!
    -RJ

    ReplyDelete
  5. ಒಳ್ಳೆಯ ವಿಶ್ಲೇಷಣೆ. ಕನ್ನಡ ನುಡಿಯನ್ನು ಹಾಳುಗೆಡುತ್ತಿರುವುದರಲ್ಲಿ ವಿಜಯ ಕರ್ನಾಟಕ ಮುಂದಿದೆ. ಇತ್ತೀಚೆಗೆ ವಿ.ಕ. ವಿಜಯ next ಎನ್ನುವ ಅಸಹ್ಯಕರ ಪ್ರಯೋಗಕ್ಕೆ ಕೈಹಾಕಿದೆ. ಪ್ರಜಾವಾಣಿ ನಿಷ್ಪಕ್ಷಪಾತ ವರದಿಗಳನ್ನು ಕೊಡುತ್ತದೆ ಎಂಬುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಿಕ್ಕಿಲ್ಲ. ಆದರೆ ಪತ್ರಿಕೋದ್ಯಮದ
    ಒಂದು ಗಾಂಭೀರ್ಯತೆಯನ್ನು ಉಳಿಸಿಕೊಂಡು ಬಂದಿದೆ. ಸಂಯುಕ್ತ ಕರ್ನಾಟಕ ದಾರಿದ್ರ್ಯ ನೋಡಿದರೆ ಕರುಣೆ ಬರುತ್ತದೆ. ಭಾರತದಲ್ಲಿ ಪತ್ರಿಕೋದ್ಯಮವನ್ನು ಹಾಳುಗೆಡವಿ, ಸೆಲೆಬ್ರಿಟಿಗಳ ಸುತ್ತ ಸುತ್ತುವ ಉದ್ಯಮವನ್ನಾಗಿ ಮಾಡಿದ್ದರಲ್ಲಿ ಟೈಮ್ಸಾಫಿಂಡಿಯಾದ ಕೊಡುಗೆ ಬಹಳವಿದೆ. ಬದಲಾವಣೆಗಳ ಹೆಸರಿನಲ್ಲಿ ಕನ್ನಡ ಪತ್ರಿಕೆಗಳು ಇಂಗ್ಲೀಷ್ ಪತ್ರಿಕೆಗಳನ್ನು ಅನುಕರಣೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ನಿಮ್ಮ ಕಾಳಜಿಯುತ ವಸ್ತುನಿಷ್ಠ ವಿಶ್ಲೇಷಣೆಗೆ ಧನ್ಯವಾದಗಳು. ಪತ್ರಿಕೆಗಳು ಸರಿಯಾಗಲಿ ಎಂದು ಆಶಿಸೋಣ.

    ReplyDelete
  6. ಕಾಕಾ,
    ಕನ್ನಡ ಪತ್ರಿಕೆಗಳನ್ನು ಓದುವಾಗ ಆಗುವ ಅಲವರಿಕೆಯನ್ನ ತುಂಬಾ ಚೆನ್ನಾಗಿ ಅಂಕಿ ಅಂಶಗಳೊಂದಿಗೆ ತಿಳಿಸಿದ್ದೀರಿ. ತಪ್ಪುಗಳನ್ನು ಎಷ್ಟು ಸೂಕ್ಷ್ಮವಾಗಿ ಪತ್ತೆ ಹಿಡಿದು ತಿಳಿಸಿದ್ದೀರೋ ಅಷ್ಟೇ ಚೆನ್ನಾಗಿ ಪತ್ರಿಕೆಗಳಿಗೆ ಸಲಹೆಗಳನ್ನೂ ನೀಡಿದ್ದೀರಿ. ಕಾಕಾ,, ತಮ್ಮ ಲೇಖನ ಎಷ್ಟೇ ದೀರ್ಘವಿದ್ದರೂ ಓದುವಾಗ ಚೂರೂ ದೀರ್ಘವೆನಿಸದು ಮತ್ತು ಲೇಖನ ಬಹಳಷ್ಟು ಮಾಹಿತಿಪೂರ್ಣಗಿರುತ್ತದೆ. ತಮ್ಮ ಲೆಖನಗಳೆಲ್ಲ ಸಂಗ್ರಹ ಯೋಗ್ಯ. ಚೆಂದದ ಲೇಖನಕ್ಕೆ ಧನ್ಯವಾದಗಳು.

    ReplyDelete
  7. ಸರ್
    ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ. ಮುದ್ದಾದ ಕನ್ನಡ ಪದಗಳಿರುವಾಗ ಅವನ್ನು ಮರೆಮಾಚಿ ಇಂಗ್ಲಿಷ್ ಬಳಸುವುದು ಕನ್ನಡವನ್ನು ಅಂದಗೆಡಿಸಿದಂತೆ ಸರಿ. ಇತ್ತೀಚಿಗೆ ವಿ. ಕ ದಲ್ಲಿ ಇಂತಹ ದೋಷಗಳು ಕಾಣುತ್ತಿವೆ.
    ಸಂಪಾದಕರು ಇತ್ತ ಗಮನಿಸಲಿ
    -ವೀರೇಶ

    ReplyDelete
  8. ಆಂಗ್ಲ ಭಾಷೆಯ ವ್ಯಾಮೋಹ ದಿನಾ ದಿನಾ ಹೆಚ್ಚಾಗುತ್ತಿದೆ. ಅದರ ಜೊತೆಗೇ ಕನ್ನಡದ ಪ್ರಮುಖ ದಿನಪತ್ರಿಕೆಗಳ ಆಂಗ್ಲ ಮೋಹ ಚಿಂತೆಗೀಡು ಮಾಡುತ್ತಿದೆ.
    ನಿಮ್ಮ ಲೇಖನ ಒಮ್ಮೆ ಕನ್ನಡಿಗರು ಯೋಚಿಸುವಂತಿದೆ

    ReplyDelete
  9. ಕಾಕಾ,

    ನಿಮ್ಮೀ ಬರಹ ಯಾವುದೇ ಉನ್ನತ ಮಟ್ಟದ ಗೋಷ್ಠಿಯಲ್ಲಿ ಸಹ ಮಂಡಿಸಲು ಯೋಗ್ಯವಾಗಿದೆ. ಇದನ್ನು ನಮ್ಮ ಪತ್ರಿಕೆಗಳ ಸಂಪಾದಕರು ಓದಿದರೆ -ಬದಲಾವಣೆ ಆಗುತ್ತೆ ಅಂತೇನೂ ನಂಬಿಕೆ ಇಲ್ಲ- ಕನಿಷ್ಟ ಪಾಪಪ್ರಜ್ಞೆಯಾದರೂ ಕಾಡುತ್ತೇನೋ ಅಂತ ಆಸೆ..

    ReplyDelete
  10. ಪರಾಂಜಪೆಯವರೆ,
    ವಿಜಯ ಕರ್ನಾಟಕದ ಬಗೆಗಿನ ನಿಮ್ಮ ವ್ಯಾಖ್ಯಾನ ಯಥಾರ್ಥವಾಗಿದೆ.
    ಉದಯವಾಣಿಯ ಹುಬ್ಬಳ್ಳಿ ಆವೃತ್ತಿ ಇಲ್ಲವೆನ್ನುವ ಗ್ರಹಿಕೆಯಿಂದ, ನಾನು ಆ ಪತ್ರಿಕೆಯನ್ನು ಅವಲೋಕಿಸಲು ಸಾಧ್ಯವಾಗಿಲ್ಲ.

    ReplyDelete
  11. ಸುಮಾ,
    ಧನ್ಯವಾದಗಳು. ನಮ್ಮ ಪತ್ರಿಕೆಗಳು ಓದುಗ-ಸ್ನೇಹಿಯಾದರೆ, ಅವುಗಳ ಸುಧಾರಣೆ ಸಾಧ್ಯವಾದೀತು!

    ReplyDelete
  12. ಅನಾನಿಮಸ್ಸರೆ,
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. RJ,
    ಈ ಎಲ್ಲ ಪತ್ರಿಕೆಗಳ ಕಾ^ಲಮ್ಮುಗಳನ್ನು ಇಂಚುಪಟ್ಟಿ ಹಿಡಿದು, ಅಳೆದು, ಇಲ್ಲಿ ಕಾಣಿಸಿದ ಅಂಕಿ ಅಂಶಗಳನ್ನು ಲೆಕ್ಕಿಸಬೇಕಾಯಿತು.
    ಅದು ನಿಜವಾಗಿಯೂ ತಲೆಬಿಸಿಯ ಕೆಲಸವೇ. ಆದರೆ ಫಲಿತಾಂಶ ನೋಡಿದ ಬಳಿಕ ನನಗೂ ಖುಶಿಯಾಯಿತು!

    ReplyDelete
  14. ವಿ.ರಾ.ಹೆ,
    ನಿಮ್ಮ ಮಾತು ಸರಿಯಾಗಿದೆ. ಪ್ರಜಾವಾಣಿ ಯಾವಾಗಲೂ ನಿಷ್ಪಕ್ಷಪಾತ ವರದಿ ಕೊಡುತ್ತದೆ ಎಂದೇನಲ್ಲ; ಆದರೆ ಈ ವರದಿಗಳು ಅಚ್ಚುಕಟ್ಟಾಗಿ, ಗಂಭೀರವಾಗಿ ಇರುತ್ತವೆ.
    Times of Indiaದವರು ಪತ್ರಿಕೋದ್ಯಮವನ್ನು ಹಾಳುಗೆಡುವತ್ತಿರುವದರಲ್ಲಿ ಸಂದೇಹವಿಲ್ಲ.

    ReplyDelete
  15. ಸಾಗರಿ,
    ದೀರ್ಘ ಲೇಖನವನ್ನು ತಾಳ್ಮೆಯಿಂದ ಓದಿದ್ದಕ್ಕೆ ನಿಮಗೇ ನಾನು ಧನ್ಯವಾದಗಳನ್ನು ಹೇಳಬೇಕು!

    ReplyDelete
  16. ಕಾಕಾಶ್ರೀ,

    ನಮ್ಮ ಮನೆಯಲ್ಲಿ "ಪ್ರಜಾಮತ" ತರಿಸುತ್ತಿದ್ದರು. ನನಗೆ ಓದುವ ಜ್ಞಾನ ಬಂದಾಗಿನಿಂದ ಅದನ್ನು ಹೆಚ್ಚು ಓದುತ್ತಿದ್ದೆ. ಆ ಓದುವಿಕೆಯಿಂದ ಭವಿಷ್ಯದಲ್ಲಿ ನನ್ನ ಕನ್ನಡ ಪದಬಳಕೆ , ಸಂಯೋಜನೆ ತುಂಬ ಸುಧಾರಿಸಿತು. ಪ್ರೋ. ಶೇಷಗಿರಿರಾಯರು, ಸಿ.ಕೆ. ನಾಗರಾಜರಾವ್ ಮುಂತಾದ ಉತ್ತಮೋತ್ತಮರು ಅದರಲ್ಲಿ ಬರೆಯುತ್ತಿದ್ದರು. ಒಂದು ವಾರಪತ್ರಿಕೆ ನನ್ನ ಕನ್ನಡ ಭಾಷೆಯ ಸುಧಾರಣೆಯಲ್ಲಿ ಸಹಾಯ ಮಾಡಿತು ಎನ್ನುವುದನ್ನು ಇಂದಿಗೂ ನಾನು ಮರೆಯಲಾರೆ.
    ಆದರೆ, ಇಂದಿನ ಪತ್ರಿಕೆಗಳು ವ್ಯಾಪಾರ ಹಾಗೂ ಸ್ಪರ್ಧೆಯ ನಾಗಾಲೋಟಕ್ಕೆ ಸಿಲುಕಿ ವಸ್ತುನಿಷ್ಠ, ಉತ್ತಮ ಕನ್ನಡನುಡಿ ಹಾಗು ಉತ್ತಮ ವೈಚಾರಿಕತೆಯ ವರದಿ, ಅಂಕಣಗಳನ್ನು ಕೊಡದೆ ಭವಿಷ್ಯದ ಪೀಳಿಗೆಗೆ (ನಮಗೆ !) ನಿಜವಾದ ಕನ್ನಡ ಹಾಗೂ ಪತ್ರಿಕಾಧರ್ಮ ಯಾವುದು ಎಂದು ಅರ್ಥವಾಗದಂತೆ ಮಾಡಿದೆ ಮತ್ತು ಮಾಡುತ್ತಿದೆ.

    ೧) ಪ್ರಜಾವಾಣಿ ಪತ್ರಿಕೆ ಶೀರ್ಷಿಕೆ ಮತ್ತು ವರದಿಗಳನ್ನು highlight ಮಾಡುವುದಿಲ್ಲ. ಆದರೆ, ಒಳಗಿನ ಸಾರ ವಸ್ತುನಿಷ್ಠವಾಗಿರುತ್ತದೆ, ಇದು ಸತ್ಯ. ಪತ್ರಿಕೆಯು ತನ್ನ ವರದಿಗಾರರು, stingers ಗಳನ್ನು ಆದರಿಸುವ ರೀತಿಯು ಉತ್ತಮವಾಗಿರುವುದರಿಂದ ಘನತೆಯನ್ನು ಕಾಪಾಡಿಕೊಂಡು ಬಂದಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಅಂಕಣಗಳು ಕಡಿಮೆ ಮತ್ತು ಲೇಟ್ ಸಮಾಚಾರ, ಪ್ರಜಾವಾಣಿಯ ದೌರ್ಬಲ್ಯ.

    ೨) ಕನ್ನಡಪ್ರಭಾ ಪತ್ರಿಕೆಯ ಶೀರ್ಶಿಕೆಗಳು ಪ್ರಚೋದನಕಾರಿಯಾಗಿರುತ್ತವೆ. Title ನಲ್ಲಿ ಕಂಡುಬರುವ ಆಕರ್ಷಣೆ ವರದಿಯಲ್ಲಿ ಸಪ್ಪೆಯಾಗಿರುತ್ತದೆ. ಪ್ರಚೋದನಕಾರಿ Title ಗಳನ್ನು ಬಳಸುವುದನ್ನು ಈ ಪತ್ರಿಕೆ ನಿಲ್ಲಿಸುವುದು ಒಳಿತೆನಿಸುತ್ತದೆ. ಉಳಿದಂತೆ ಪತ್ರಿಕೆಯ News gathering ನಲ್ಲಿ ಯಾವ ಲೋಪಗಳಿಲ್ಲವೆನಿಸುತ್ತದೆ, ಕಂಗ್ಲಿಷ್ ಹೊರತುಪಡಿಸಿ !. ಈ ಪತ್ರಿಕೆಯ ಧನಾತ್ಮಕ ಅಂಶವೆಂದರೆ Indian Express ನ ಸಹಯೋಗವಿರುವುದು ಮತ್ತು ಇತ್ತೀಚೆಗೆ ಸುವರ್ಣ ವಾಹಿನಿಯೊಂದಿಗೆ ಹೊಂದಾಣಿಕೆಯಾಗಿರುವುದು. ನಿಮ್ಮ ಲೇಖನ ಓದಿಯಾದರೂ ಈ ಪತ್ರಿಕೆ ತಪ್ಪುಗಳನ್ನು ತಿದ್ದಿಕೊಳ್ಳಲಿ ,ಎಲ್ಲರಿಗೂ ಸರಿಯಾದ ಕನ್ನಡವನ್ನು ಕಲಿಸಲೆಂದು ಆಶಿಸುತ್ತೇನೆ.

    ೩) ವಿಜಯಕರ್ನಾಟಕ ಒಂದು ರೂಪಾಯಿ ಧಮಾಕಾದಿಂದಲೇ ಮೇಲೇರಿದ್ದು ಎಂದು ಹೇಳುವಾಗ ಬೇಸರವಾಗುತ್ತದೆ. ವಿಚಿತ್ರ ಕನ್ನಡಪದಗಳನ್ನು ಹೊರಡಿಸಿ ಹೊಸ ನಿಘಂಟು ತಯಾರಿಸುವ ಅವಸರದಲ್ಲಿದ್ದಾರೆ ಎನಿಸುತ್ತದೆ. ಕನ್ನಡದಲ್ಲಿ ಈಗಾಗಲೆ "ಕಲಿಕಾ ನ್ಯೂನತೆ" ಎಂಬ ಪದ ಬಳಕೆಯಲ್ಲಿರುವಾಗ ಅದನ್ನು ಇವರು "ಪಠಣ ಅಕ್ಷಮತೆ" ಎಂಬ ಹೊಸ ಪ್ರಯೋಗದಿಂದ ಬಳಸುತ್ತಾರೆ. ಈ ಪತ್ರಿಕೆಯು ಕನ್ನಡದ ದಾರಿಯನ್ನೇ ತಪ್ಪಿಸುತ್ತಿದೆ. ಅಂಕಣಗಳು ಮತ್ತು ನವ್ಯ (ನವ) ಸಾಹಿತಿಗಳಿಗೆ ಮಣೆ ಹಾಕುವ ಅಭ್ಯಾಸದಿಂದ ಪತ್ರಿಕೆಯ ಪ್ರಸಾರ ಹೆಚ್ಚಾಗಿದೆ ಎನ್ನುವುದು ನಿಜ,ಮತ್ತು ಅಂತಹ ಸಾಹಿತ್ಯವನ್ನು ಪರಾಮರ್ಶಿಸುವ ಗೋಜಿಗೆ ಹೋಗದಿರುವುದು ಮತ್ತೊಂದು ತಪ್ಪು. ತೀರಾ " ಉದ್ದಿನವಡೆ", "ನಾನು ಅನಾನಸ್ ತಿಂದುದು", " ಹೇರ್ ಸಲೂನ್ ನಲ್ಲಿ ಒಂದು ದಿನ " ಇಂತಹ ಲೇಖನಗಳೇ ಹೆಚ್ಚು ಈ ಪತ್ರಿಕೆಯಲ್ಲಿ. ಇದೆಲ್ಲಾ ಬೇಕೆ ? ಕನ್ನಡ ಸಾಹಿತ್ಯ ಹಾಗೂ ಕನ್ನಡದ ಪೂರಕ ಬೆಳವಣಿಗೆಗೆ ಹಿಂದೆ ಬಂದಿರುವ ಪತ್ರಿಕೆಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಒಳ್ಳೆಯದೆನಿಸುತ್ತದೆ. ವಿಶ್ವೇಶ್ವರ ಭಟ್ಟರ ಹೆಸರಿನಿಂದಲೆ ಉತ್ತರ ಕನ್ನಡ ಹಾಗೂ ಶಿವಮೊಗ್ಗಿಯಲ್ಲಿ ಪತ್ರಿಕೆ ಒಡುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು !.

    ೪) ಉದಯವಾಣಿ ವಿಷಯ ನನಗೂ ಗೊತ್ತಿಲ್ಲ.

    ನೀವು, ನಾವು ಕನ್ನಡ ಪದಬಳಕೆಯಲ್ಲಿ ತಪ್ಪು ಮಾಡುವುದು ಸಹಜ ಮತ್ತು ಅದು ಕ್ಷಮ್ಯವೂ ಹೌದು. ಸಮಾಜದ ಪ್ರತಿನಿಧಿಯಂತಿರುವ ಪತ್ರಿಕೆಗಳು ತಪ್ಪೆಸಗಬಾರದು. ನಿಮ್ಮ ಲೇಖನವನ್ನೊಮ್ಮೆ "ಸಂಪಾದಕ"ರುಗಳು ಓದುವುದು ಒಳ್ಳೆಯದು.

    ReplyDelete
  17. ಸರ್
    ತುಂಬಾ ಚೆನ್ನಾಗಿ ಪತ್ರಿಕೆಯನ್ನು ಜಾಲಾಡಿದ್ದಿರಿ
    ಒಳ್ಳೆಯ ಸಂಗ್ರಹಯೋಗ್ಯ ಬರಹ

    ReplyDelete
  18. ಸುನಾಥ್ ಸರ್,

    ಅದ್ಭುತ ವಿಶ್ಲೇಷಣೆ. ಅತ್ಯುತ್ತಮ ಬರಹ. ಬಹಳಷ್ಟು ತಾಳ್ಮೆ ಅಮ್ತ್ತು ಸಂಯಮದಿಂದ ಈ ಲೇಖನವನ್ನು ಬರೆದಿದ್ದೀರಿ. ಒಂದೊಂದು ಅಂಶವನ್ನು ಎಳೆ ಎಳೆಯಾಗಿ ಬಿಡಿಸಿ ಉದಾಹರಣೆಗಳ ಸಹಿತ ಅರ್ಥವಾಗುವಂತೆ ವಿವರಿಸಿದ ಪರಿ ಬಹಳ ಇಷ್ಟವಾಯಿತು.

    ಸಂಯುಕ್ತ ಕರ್ನಾಟಕದ ಪತನ ನನಗೆ ಮೊದಲಿನಿಂದಲೂ ಸೋಜಿಗವನ್ನುಂಟುಮಾಡುತ್ತಿತ್ತು. ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕದೆ ಇದ್ದ ಪರಿಣಾಮವನ್ನು ಈಗ ಪತ್ರಿಕೆ ಅನುಭವಿಸುತ್ತಿದೆ. ಉದಯವಾಣಿ ಅಂತೂ ಕೊನೆಗೆ ಈಗ ಹುಬ್ಬಳ್ಳಿ ಆವೃತ್ತಿಯನ್ನು ಹೊರತರುವ ಪ್ರಯತ್ನ ಮಾಡುತ್ತಿದೆ. ಪ್ರಜಾವಾಣಿ ನಾನು ಮೆಚ್ಚುವ ಪತ್ರಿಕೆ. ವಿಜಯ ಕರ್ನಾಟಕ ಕನ್ನಡದ ’ಟೈಮ್ಸ್ ಆಫ್ ಇಂಡಿಯಾ’. ಕನ್ನಡ ಪ್ರಭವನ್ನು ಕೂಡಾ ಮೊದಲು ಬಹಳ ಆಸಕ್ತಿಯಿಂದ ಓದುತ್ತಿದ್ದೆ. ಆದರೆ ಈಗೀಗ ಅದೂ ವೈಭವೀಕರಣದ ಹಾದಿಯನ್ನು ತುಳಿಯುತ್ತಿದೆ.

    ತುಂಬಾ ಉತ್ತಮ ವಿಶ್ಲೇಷಣೆಗಾಗಿ ಧನ್ಯವಾದಗಳು.

    ReplyDelete
  19. ಕೆಲವು ಪತ್ರಿಕೆಗಳಲ್ಲಿ (ಉದಾ: ವಿಜಯ ಕರ್ನಾಟಕ) ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರುಗಳಲ್ಲಿ ಪತ್ರ ಬರೆಯುತ್ತಾರಲ್ಲ. ಈ ವಿಷಯದ ಬಗ್ಗೆಯೂ ಬೆಳಕು ಚೆಲ್ಲಿ.

    -:raghu

    ReplyDelete
  20. ವೀರೇಶ,
    ಈ ಆಂಗ್ಲವ್ಯಾಮೋಹವು ನಮ್ಮ ಪತ್ರಿಕೆಗಳಲ್ಲಿ ಮಾತ್ರವಲ್ಲ, ರೇಡಿಯೋ ಹಾಗೂ ಟೀವಿಗಳಲ್ಲಿ ಸಹ ಹೊಕ್ಕಿದೆ. ಕನ್ನಡಕ್ಕೆ ಇದು ದೊಡ್ಡ ಕುತ್ತು.

    ReplyDelete
  21. ಪ್ರವೀಣ,
    ಕರ್ನಾಟಕದಲ್ಲಿ ಆಂಗ್ಲಭಾಷೆಯು ಕನ್ನಡವನ್ನು ಹೊರಹಾಕುವ ದಿನ ದೂರವಿಲ್ಲ ಎಂದು ಅನಿಸುತ್ತದೆ!

    ReplyDelete
  22. ಸುಶ್ರುತ,
    ಬದಲಾವಣೆಯಾದೀತೆನ್ನುವ ಭರವಸೆ ನನಗೂ ಇಲ್ಲ. ಇನ್ನು ಪಾಪಪ್ರಜ್ಞೆಯಾದರೂ ಅವರನ್ನು ಕಾಡಿದರೆ ಸಾಕು!

    ReplyDelete
  23. ಪುತ್ತರ್,
    ಪ್ರಜಾಮತ, ಕರ್ಮವೀರ ಈ ವಾರಪತ್ರಿಕೆಗಳೆಲ್ಲ ಕನ್ನಡದ ಬೆಳವಣಿಗೆಗೆ ಒಳ್ಳೆಯ ಅಡಿಪಾಯ ಹಾಕಿದವು. ಆಮೇಲೆ ಬಂದ ಸುಧಾ ಹಾಗು ತರಂಗ ಸಹ ಒಳ್ಳೆಯ ಕೆಲಸ ಮಾಡಿವೆ. ಬಹುಶಃ ವಿಜಯ ಕರ್ನಾಟಕ ಪ್ರಾರಂಭವಾದ ಮೇಲೆ, ಈ ಭಾಷಾ ಅವನತಿ ಪ್ರಾರಂಭವಾಗಿರಬಹುದು.
    ನೀವೂ ಸಹ ಕೆಲವು ಉತ್ತಮ ಅಂಶಗಳನ್ನು ನಮೂದಿಸಿದ್ದೀರಿ. ಅವು ಲೇಖನಕ್ಕೆ ಪೂರಕವಾದ ಅಂಶಗಳಾಗಿವೆ. ಧನ್ಯವಾದಗಳು.

    ReplyDelete
  24. ಗುರುಮೂರ್ತಿಯವರೆ,
    ನಾವು ಎಷ್ಟೇ ಜಾಲಾಡಿದರೂ, ಈ ಪತ್ರಿಕೆಗಳು ಜಾಲದಿಂದ ನುಸುಳಿಕೊಂಡೇ ಹೋಗುತ್ತವೆ!

    ReplyDelete
  25. ರಾಜೇಶ,
    ಈ ಎಲ್ಲ ಪತ್ರಿಕೆಗಳಲ್ಲಿ ಒಳ್ಳೆಯ ಅಂಶಗಳೂ ಇವೆ;ಕೆಟ್ಟ ಅಂಶಗಳೂ ಇವೆ. ಕೆಟ್ಟ ಅಂಶಗಳ ಕೈಬಿಟ್ಟು,ಒಳ್ಳೆಯ ಅಂಶಗಳನ್ನು ವೃದ್ಧಿಸಿದರೆ, ನಮ್ಮ ಕನ್ನಡ ಪತ್ರಿಕೆಗಳು ಅತ್ಯುತ್ತಮ
    ಪತ್ರಿಕೆಗಳಾಗುವವು.

    ReplyDelete
  26. raghu,
    ವಿಜಯ ಕರ್ನಾಟಕದಲ್ಲಿ ಒಬ್ಬರೇ ಬೇರೆ ಬೇರೆ ಹೆಸರಿನಿಂದ ಪತ್ರ ಬರೆಯುವ ಬಗೆಗೆ ನನಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  27. ಅದ್ಭುತ ವಸ್ತುನಿಷ್ಠ ವಿಶ್ಲೇಷಣೆ ಮಾಡಿದ್ದಿರಾ -ನಮ್ಮ ಪತ್ರಿಕಾರ೦ಗವನ್ನು. ಉದಯವಾಣಿಯ ವಿಶ್ಲೇಷಣೆಯಿದ್ದಿದ್ದರೇ ಸಮಗ್ರ ಕನ್ನಡ ದಿನಪತ್ರಿಕೆ ಲೋಕವನ್ನ ಜಾಲಾಡಿಸಿದ ಹಾಗೇ ಆಗುತ್ತಿತ್ತು. ಉದಯವಾಣಿ ಪತ್ರಿಕೆಯಲ್ಲಿ ೨ ಪುಟಗಳಲ್ಲಿ ಶ್ರದ್ಧಾ೦ಜಲಿ ಮತ್ತು ಥಾ೦ಕ್ಸ್-ಗಿವಿ೦ಗ್, ವಿದೇಶ ಪ್ರಯಾಣದ ಶುಭಾಶಯಗಳು ತು೦ಬಿರುತ್ತೆ. ೮ನೇ ಪುಟದಲ್ಲಿ ಪೂರಾ ಕೊಲೆ, ಸುಲಿಗೆ, ಅಪಘಾತ, ದರೋಡೆ, ಮಾನಹಾನಿ ಮತ್ತು ಇತ್ಯಾದಿ ಉಡುಪಿ ಮತ್ತು ಮ೦ಗಳೂರು ಜಿಲ್ಲೆಗಳಲ್ಲಿನ ಅಪರಾಧಿ ಪ್ರಕರಣಗಳನ್ನು ಸ೦ಗ್ರಹ ಮಾಡಿರುತ್ತಾರೆ. ಇನ್ನು ಎರಡು ಪುಟಗಳಲ್ಲಿ ಹೆಚ್ಚಿನ ಮಟ್ಟಿಗೆ ಇಡೀ ಎರಡು ಜಿಲ್ಲೆಯಲ್ಲಿನ ನಡೆದ ಮತ್ತು ನಡೆಯುವ ಸಾಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿವರವಿರುತ್ತೆ ( ಬ್ರಹ್ಮಕಲಶೋತ್ಸವ, ಯಕ್ಷಗಾನ, ನಾಟಕ, ಗೊಷ್ಟಿ, ನಾಗಮ೦ಡಲ, ಗುಡಿ-ಮಠಗಳ ವಿಶೇಷ ಜಾತ್ರೆ ಮತ್ತು ಪೂಜೆ). ಒ೦ದು ಪುಟದಲ್ಲಿ ಕ್ರೀಡಾವಾರ್ತೆ ಇರುತ್ತದೆ ಅದರಲ್ಲಿ ಹೆಚ್ಚಿನ ಮಟ್ಟಿಗೆ ಕುದುರೆ ರ್‍ಏಸಿನ ಬಗ್ಗೆ ಮಾಹಿತಿ ಲಭ್ಯವಿದೆ. ಉಳಿದ ೩ ಪುಟಗಳಲ್ಲಿ ( ಮುಖಪುಟ) ಸೇರಿ ಸ್ವಲ್ಪ ಸುದ್ಧಿಗಳಿರುತ್ತವೆ ಜಾಹೀರಾತುಗಳೊ೦ದಿಗೆ. ಜಾಹೀರಾತುಗಳು ಹೆಚ್ಚಾದರೆ ಪುಟಗಳ ಸ೦ಖ್ಯೆ ಇನ್ನೂ ಹೆಚ್ಚಾಗುತ್ತೆ. ಈ ಪತ್ರಿಕೆ ನಡೆಯುತ್ತಿರುವದೇ ದಕ್ಷಿಣ ಕನ್ನಡಿಗರ ಅಪಾರ ಪ್ರೀತಿಯಿ೦ದ. ಎಲ್ಲ ದಕ್ಷಿಣ ಕನ್ನಡಿಗರು ಎಲ್ಲೇ ಇದ್ದರೂ ಅವರಿಗೆ ಓದಲು ಅವರಿಗೆ ಉದಯವಾಣಿ ಬೇಕು-ಅದು ತಲುಪುವದು ರಾತ್ರಿಯಾದರೂ ಅಥವಾ ಮರುದಿನವಾದರೂ ಸರೀ!. ನಮ್ಮ ತ೦ದೆ ಉದಯವಾಣಿಯನ್ನು ಬಾಗಲಕೋಟೆಯಲ್ಲಿ ತರಿಸಿ ಓದುತ್ತಿದ್ದದ್ದು ರಾತ್ರಿ ಇಲ್ಲಾ ಮರುದಿನ!. ಭಾಷಾಪ್ರಯೋಗ ಚೆನ್ನಾಗಿರುತ್ತದೆ ಆದರೆ ಅದೊ೦ದು ವ್ಯವಸ್ಥಿತ ಪ್ರಾದೇಶಿಕ ಪತ್ರಿಕೆ ಎನಿಸುವದೇ ಹೊರತು ಸಮಗ್ರ ರಾಷ್ಠ್ರ್‍ಈಯ ಪತ್ರಿಕೆಯೆ೦ದು ನನಗನ್ನಿಸಿಲ್ಲ.
    ಭಾಷಾ-ವಿಶೇಷ, ಕೆಲವು ಅ೦ಕಣಗಳು ಸೋಗಸಾಗಿರುತ್ತದೆ. ಅದೇ ಪತ್ರಿಕೆ ವೈಶಿಷ್ಠ್ಯ. ತುಳು ಭಾಷೆಯು ಸೇರಿರುತ್ತೆ. ಆದರೇ ದಕ್ಷಿಣ ಕನ್ನಡಿಗರ ಅವರ ಈ ಪತ್ರಿಕಾ ಅಭಿಮಾನ ಇತರೇ ಭಾಗಗಳಲ್ಲಿನ ಜನರಲ್ಲಿ ಕ೦ಡಿಲ್ಲ ಮತ್ತು ಇದೇ ಆ ಪತ್ರಿಕೆಯ ಉಳಿವಿಗೂ ಕಾರಣ ಇಲ್ಲವಾದಲ್ಲಿ ಅದರದೂ ಸ೦ಯುಕ್ಯ ಕರ್ನಾಟಕದ್ದು ಕಥೆ ವಿಭಿನ್ನವಾಗಿರುತ್ತಿರಲಿಲ್ಲ. ಸ೦ಯುಕ್ತ ಕರ್ನಾಟಕ ಸದೃಡ ಸ೦ಪಾದಕರು ಮತ್ತು ವರದಿಗಾರರಿಲ್ಲದೇ ಇನ್ನಷ್ಟು ನರಳಬೇಕಾಯಿತು. ಕಾಯಕಲ್ಪ ನೀಡುವಲ್ಲಿ ಆಡಲಿತ ಮ೦ಡಳಿ ಕೆಲಸ ಮಾಡಬೇಕಾಗಿದೆ. ಇನ್ನೂ ಉದಯ ಕರ್ನಾಟಕ ದಕ್ಷಿಣ-ಕನ್ನಡಿಗರ ಸಿಮೀತ ಓದು-ವಲಯದಲ್ಲಿ ತೃಪ್ತಿಪಟ್ಟುಕೊ೦ಡಿರುವದಕ್ಕಿ೦ತಾ ಅವರನ್ನು ಉಳಿಸಿಕೊ೦ಡು ಸದೃಡ ಜಾಗತಿಕ ಪತ್ರಿಕೆಯಾಗಿ ಬೆಳೆಯುವದನ್ನು ನೋಡಿಕೊಳ್ಳಬೇಕಾಗಿದೆ.
    ವಿಕ, ಪ್ರಜಾವಾಣಿ, ಕನ್ನಡಪ್ರಭಾ ಮತ್ತು ಸ೦ಕ-ಗಳನ್ನು ತಾವು ಸಮಗ್ರವಾಗಿ ಅಧ್ಯಯನ ಮಾಡಿ ಬರೆದಿದ್ದಿರ.. ಸ೦ಶೋಧನa ಬರಹಕ್ಕೆ ಧನ್ಯವಾದಗಳು.

    ReplyDelete
  28. ಕಾಕಾ,

    ಎಂದಿಗಿಂತಲೂ ಹೆಚ್ಚಿನ ತಾಳ್ಮೆಭರಿತ ಅಂಕಿ-ಸಂಖ್ಯೆ ಮತ್ತು ಉದಾಹರಣೆ ಸಹಿತದ ವಿಶ್ಲೇಷಣೆ.

    ನಿಮ್ಮಿಂದ ಕಲಿಯುವುದು ತುಂಬಾ ಇದೆ, ಹೀಗೆ ಕಲಿಸುತ್ತಾ ಇರಿ.

    ಪ್ರೀತಿಯಿಂದ

    ಶೆಟ್ಟರು

    ReplyDelete
  29. ಸಂಯುಕ್ತ ಕರ್ನಾಟಕವನ್ನು ಓದುವಾಗ ಹಾಗು ಟೀವಿಯಲ್ಲಿ
    ಸಮಾಚಾರವನ್ನು ಕೇಳುವಾಗ ಮನಸ್ಸು ಮುದುಡುತ್ತದೆ.
    ಕನ್ನಡ ನುಡಿಯ ಅವನತಿಗಾಗಿ ವ್ಯಥೆಯಾಗುತ್ತದೆ.

    ReplyDelete
  30. ಸೀತಾರಾಮರೆ,
    ಉದಯವಾಣಿಯ ಹುಬ್ಬಳ್ಳಿ ಆವೃತ್ತಿ ಇಲ್ಲದೆ ಇದ್ದುದರಿಂದ, ಈ ಪತ್ರಿಕೆಯ ಪರಾಮರ್ಶೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ಆದರೆ, ನೀವೇ ಈ ಪತ್ರಿಕೆಯ ವಿಶ್ಲೇಷಣೆಯನ್ನು ಸೊಗಸಾಗಿ ಮಾಡಿದ್ದೀರಿ. ಜೊತೆಗೇ ಈ ಪತ್ರಿಕೆಯ ಬಗೆಗೆ ಮಂಗಳೂರು ಕನ್ನಡಿಗರಿಗೆ ಇರುವ ಅಭಿಮಾನವನ್ನೂ ತೋರಿಸಿದ್ದೀರಿ. ಇದು ನಿಜವಾಗಿಯೂ ಮೆಚ್ಚತಕ್ಕ ಮಾತಾಗಿದೆ.

    ReplyDelete
  31. ಶೆಟ್ಟರ,
    ನಮ್ಮ ಪತ್ರಿಕೆಗಳನ್ನು ಓದುವಾಗ,ಏನ ಮಾಡಿದರ ಇವು ಸರಿ ಆಗ್ತಾವಪಾ ಅಂತ ಅನಸ್ತದ. ಅದಕ್ಕಂತs ಇಷ್ಟೆಲ್ಲಾ ಗುದ್ದಾಟ ನೋಡರಿ!

    ReplyDelete
  32. ವನಮಾಲಾ,
    ಅದಕ್ಕಂತs ನಮ್ಮ ಮನ್ಯಾಗಿನ ಟೀವಿ ಪೆಟಗೀನ ಮೂಲ್ಯಾಗ ಒಗದಬಿಟ್ಟೇನಿ. ಆದರ ಪತ್ರಿಕಾ ಓದೋದು ಅನಿವಾರ್ಯ ಆಗೇದ!

    ReplyDelete
  33. ಅಪರೂಪದ ವಿಶ್ಲೇಷಣೆ...ವಿಶ್ಲೇಷಣೆಯನ್ನು ಹೇಗೆ ಮಾಡಬೇಕೆನ್ನುವದಕ್ಕೆ ಉತ್ತಮ ಮಾರ್ಗದರ್ಶನ ಕೂಡ ನಿಮ್ಮ ಲೇಖನದಲ್ಲಿ ಸಿಗುತ್ತದೆ.

    ReplyDelete
  34. ನಾರಾಯಣ ಭಟ್ಟರೆ,
    ಇನ್ನೂ ಸಾಕಷ್ಟು ಅಂಶಗಳು ಅವ. ಆದರ,blog ಲೇಖನಕ್ಕ ಒಂದು ಮಿತಿ ಹಾಕಬೇಕಾಗ್ತದ ನೋಡರಿ.

    ReplyDelete
  35. ಅಬ್ಬಾ ಎಂಥಾ ವಿಶ್ಲೇಶಣೆ ಸರ್. ನಾನೂ ಹೆಚ್ಚಿನ ಈ ಪತ್ರಿಕೆಗಳನ್ನು ಓದುತ್ತೇನೆ. ನೀವು ಹೇಳಿದ ಅನೇಕ ವಿಚಾರಗಳು ನನಗೂ ಸರಿಯೆನಿಸಿದೆ. ಅತಿಯಾದ ಆಂಗ್ಲ ಬಳಕೆ, ಆಂಗ್ಲ ಪತ್ರಿಕೆಗಳನ್ನು ಅನುಕರಿಸುವುದು ಕೆಲ ಪತ್ರಿಕೆಗಳು ಮಾಡುತ್ತಿವೆ. ಸಂಶೋಧನಾತ್ಮಕ ಲೇಖನ

    ReplyDelete
  36. ಒಳ್ಳೆಯ ವಿಶ್ಲೇಷಣೆ ಅಂಕಲ್

    ReplyDelete
  37. ಕಾಕಾ ಅತ್ಯಂತ ವಿಸ್ತಾರವಾಗಿ ಆಳವಾಗಿ ವಿಶ್ಲೇಷಿಸಿದ್ದೀರಿ ಸಣ್ಣವರಿದ್ದಾಗಿನ ನಮ್ಮ ಸಂಯುಕ್ತಕರ್ನಾಟಕದ ಓದೋಣಕಿಗೂ
    ಈಗಿನ ವಿಕದ ಓದುವಿಕೆಗೂ ಫರಕಿದೆ...ಹಿಂದೆ ಕಸ್ತೂರಿಯಲ್ಲಿ ಒಂದು ವಿವಾದಾತ್ಮಕ ವ್ಯಂಗ್ಯಚಿತ್ರ ಬಂದಿತ್ತು ಕೋಲಾಹಲ ಎಬ್ಬಿಸಿತ್ತು
    ಆದರೆ ಹೋದವಾರ ವಿಕದಲ್ಲಿ ವೀನಸ್ ಳ ಪೃಷ್ಠ ತೋರಿಸಿದಾಗ ಯಾವ ಖಲಿಬಿಲಿಯೂ ಇಲ್ಲ ಈಗ ಇದು ಕಾಮನ್ ಆತೇ ಅಥವಾ
    ಕನ್ನಡ ಪತ್ರಿಕೆಗಳು ಬೆಳೆದಿವೆಯೆ....

    ReplyDelete
  38. ಧನ್ಯವಾದಗಳು, ವಸಂತ. ನೀವು ಮೆಚ್ಚಿಕೊಂಡರೆ ನನಗೆ ಖುಶಿ.

    ReplyDelete
  39. ದೀಪಸ್ಮಿತರೆ,
    ಧನ್ಯವಾದಗಳು.

    ReplyDelete
  40. ಚಿತ್ರಾ,
    Thank you so much.

    ReplyDelete
  41. ದೇಸಾಯರ,
    ಜಮಾನಾ ಬದಲ ಗಯಾ ಹೈ!
    ಮೊದಲೆಲ್ಲಾ ಫಿಲ್ಮ್ ಹೀರೋಗೋಳು ಬುರ್ಖಾಧಾರಿ ನಟಿಗೂ ’ಸೂರತ ತೇರಿ ಸುಹಾನ ಅಲ್ಲಾ!’ ಅಂತ ಹಾಡತಿದ್ದರು. ಈಗ ಏನು ನೋಡಿದರೂ, "ಕುಛ್ ಭೀ ನಹೀ!’ ಅಂತ ಹಾಡ್ತಾರ್ರೆಪಾ!

    ReplyDelete
  42. ಸುನಾಥಣ್ಣ ನಮ್ಮ ಬ್ಲಾಗಿಗರ ಕನ್ನಡ ಪ್ರಯೋಗಗಳು ಎಂಬ ಪ್ರಹಸನ ನಿಮ್ಮ ಲೇಖನಿಯಿಂದ ಹರಿದು ಬರಬಹುದು ಎಂದುಕೊಂಡಿದ್ದೆ.....ಆದರೆ ಬಹಳ ಗಂಭೀರ..ಅಂಕಿ ಅಂಶ, ನಿದರ್ಶನ ಆಧಾರಿತ ಬಹು ಮಾಹಿತಿ ಪೂರ್ಣ ಲೇಖನ ಇದು..ನಾನು ಇದನ್ನು ಕಾಪಿ ಮಾಡಿ ಇಟ್ಕೊಂಡಿದ್ದೇನೆ ಅಭ್ಯಂತರ ಇಲ್ಲ ಅಂದ್ಕೋತೇನೆ.....
    ಹೌದು ಪ್ರಜಾವಾಣಿಯ ಗಾಂಭೀರ್ಯವನ್ನು ನಾನೂ ಮೆಚ್ಚುತ್ತೇನೆ...ಕನ್ನಡ ಪ್ರಭ ಹೆಚ್ಚಾಗಿ ಈಗ ಕಾಣುತ್ತಿಲ್ಲವೇ...? ಉದಯವಾಣಿಯಲ್ಲಿ ದ.ಕ. ದ ಕನ್ನಡ ಹೆಚ್ಚಾಗಿ ಕಂದುಬರುತ್ತದೆ...
    ನವಿಲು ಎಂತ ಭಯಂಕರವಾಗಿ ನರ್ತಿಸುವುದು.....ಇಲ್ಲಿಂದಲೇ ನಮಗೆ ಗೊತ್ತಾಗಿದ್ದು..ಮನಮೋಹಕ ನವಿಲಿನ ನಾಟ್ಯ ಭಯಂಕರವೂ ಆಗಬಹುದು ಅಂತ....

    ReplyDelete
  43. ಜಲನಯನ,
    ಬ್ಲಾ^ಗಿಗರಲ್ಲಿ ನಾನೂ ಬಂದೆ. ನನ್ನ ಕನ್ನಡವೂ ಕೆಲವು ಸಲ ಹಾಸ್ಯವಸ್ತುವೇ ಆಗುತ್ತದೆ. ಹೀಗಾಗಿ ನಮಗೆಲ್ಲ ಈ ವಿಷಯದಲ್ಲಿ ‘ಸೋಡ್ತಿ’ ಇದೆ!

    ನನ್ನ ಎಲ್ಲ ಲೇಖನಗಳು ನಿಮ್ಮವೂ ಹೌದು. ಯಾವ ಲೇಖನವನ್ನು ಆದರೂ ನೀವು ಬಳಸಿಕೊಳ್ಳಬಹುದು. ನಾನೂ ಸಹ ನಿಮ್ಮ ಲೇಖನಗಳ ಬಗೆಗೆ ಇದೇ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತಿದ್ದೇನೆ!

    ಪತ್ರಿಕೆಗಳೆಂದರೆ ಹೆಂಡತಿ ಇದ್ದಂತೆ. ನಮ್ಮ ಪತ್ರಿಕೆಗಳನ್ನು ನಾವು ಎಷ್ಟೇ ತೆಗಳಿದರೂ, ಅವಿಲ್ಲದೆ ಇರಲಾರೆವು!

    ReplyDelete
  44. ಸುನಾಥ್ ರವರೆ,
    ಸ೦ಗ್ರಹ ಯೋಗ್ಯವಾದ ಲೇಖನವನ್ನು ಬರೆದಿದ್ದೀರಿ. ಕನ್ನಡದ ಪ್ರಮುಖ ದೈನ೦ದಿನ ಪತ್ರಿಕೆಗಳನ್ನು ಆರೋಗ್ಯ ಪೂರ್ಣವಾಗಿ ಹೋಲಿಸಿ ವಸ್ತುಸ್ಥಿತಿಯನ್ನು ಎಲ್ಲರ ಮು೦ದಿರಿಸಿದ್ದೀರಿ. ಪತ್ರಿಕೆಗಳ ಈ ಪರಿಸ್ಥಿತಿಯಿ೦ದ ಯಾವ ಪತ್ರಿಕೆ ತರಿಸುವುದು ಎ೦ದು ತಿಳಿಯದ೦ತಹ ಸ್ಥಿತಿ ನಿರ್ಮಾಣವಾಗಿದೆ.

    ReplyDelete
  45. ಉತ್ತಮ ವಿಶ್ಲೇಷಣೆ..

    ReplyDelete
  46. ಪ್ರಭಾಮಣಿಯವರೆ,
    ‘ಕುರುಡರಲ್ಲಿ ಮೆಳ್ಳ ಶ್ರೇಷ್ಠ’ ಎನ್ನುವ ಗಾದೆ ಮಾತಿನಂತೆ, ಒಟ್ಟಿನಲ್ಲಿ ಯಾವುದೋ ಒಂದು ಪತ್ರಿಕೆಯನ್ನು ಓದಬೇಕಷ್ಟೆ!

    ReplyDelete
  47. ರವಿಕಾಂತ,
    ಧನ್ಯವಾದಗಳು.

    ReplyDelete
  48. ಕಾಕಾ,

    ಇತ್ತೀಚಿಗೆ ಕನ್ನಡ ಪತ್ರಿಕೆಗಳ ಬಗ್ಗೆ ಓದಿದ ಸಂತುಲಿತ ಬರಹ. ನಿಮ್ಮ ಅಧ್ಯಯನ ಮೆಚ್ಚುವಂತಹುದು.

    ವಿಜಯ ಕರ್ನಾಟಕ ಪತ್ರಿಕೆ ತನ್ನತನವನ್ನು ಕಳೆದುಕೊಂಡು ತಿಂಗಳುಗಳೇ ಆದವು. ಈಗಾಗಲೇ ಆ ಪತ್ರಿಕೆಯ ಪ್ರಸಾರ ಸಂಖ್ಯೆ ಕುಸಿದಿದ್ದು, ಹೀಗೇ ಆದರೆ ಇನ್ನೊಂದು ವರ್ಷದಲ್ಲಿ ಕನ್ನಡ ಪ್ರಭವೋ, ಪ್ರಜಾವಾಣಿಯೋ ಮತ್ತೆ ನಂ. ೧ ಆಗುವುದರಲ್ಲಿ ಸಂದೇಹವಿಲ್ಲ.

    ಆದ್ರೆ, ಇತ್ತೀಚಿಗೆ ಗಮನಿಸಿದ ಹಾಗೆ ಯಾವ ಪತ್ರಿಕೆಗಳೂ "ವಾರೇ ವಾಹ್" ಅನ್ನಿಸುವಂತಹ ಗುಣಮಟ್ಟ ಹೊಂದಿಲ್ಲ.

    ReplyDelete
  49. ಶ್ರೀನಿಧಿ,
    ನೀವು ಹೇಳುತ್ತಿರುವದು ಸರಿಯಾಗಿದೆ. ವಿಜಯ ಕರ್ನಾಟಕದ ಜನಪ್ರಿಯತೆ ಕಡಿಮೆಯಾಗತೊಡಗಿದೆ. ಆದರೆ ಇತರ ಪತ್ರಿಕೆಗಳು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುವಂತಹ ಯಾವುದೇ ಕಾರ್ಯ ಮಾಡುತ್ತಿಲ್ಲ!

    ReplyDelete
  50. ತುಂಬಾ ಮಾಹಿತಿಯುತ ಬರಹ...ಪರಿವರ್ತನೆ ಜಗದ ನಿಯಮವಂತೆ! ಹಾಗಾಗಿ ಮುದೊಂದು ದಿನ ಕನ್ನಡ ದಿನಪತ್ರಿಕೆಗಳ ಸ್ಥಿತಿ ಬದಲಾಗಬಹುದು...
    ಕೋಡ್ಸರ

    ReplyDelete
  51. ಅಬ್ಬಾ! ಇಷ್ಟೊಂದು ಮಾಹಿತಿ ಕಲೆ ಹಾಕಿ, ಕೂಲಂಕುಷವಾಗಿ ಎಲ್ಲವನ್ನೂ ವಿವರಿಸಿದ್ದೀರಲ್ಲ, ನಿಮ್ಮ ತಾಳ್ಮೆ ನನಗೂ ಇದ್ದಿದ್ದರೆ... :-)

    ಪತ್ರಿಕೆಗಳು ಒಂದು ಮಟ್ಟಿಗೆ ಬೇಕು. ದೂರದರ್ಶನದಲ್ಲಿ ಬರುವ ಅಬದ್ಧಗಳನ್ನು ಪಟ್ಟಿ ಮಾಡಲು ಹೋದರೆ ಹೊಸ ಬ್ಲಾಗನ್ನೇ ತೆರೆಯಬೇಕಾಗಬಹುದು!

    ReplyDelete
  52. ಕನ್ನಡ ಪತ್ರಿಕೆಗಳ ಬಗ್ಗೆ ಒಳ್ಳೆಯ ವಿಶ್ಲೇಷಣೆ ಮಾಡಿದ್ದೀರಿ.

    ಇಂದು ಪ್ರಸಾರವಾಗುತ್ತಿರುವ ಬಹುಪಾಲು ಕನ್ನಡ ಪತ್ರಿಕೆಗಳು ಕನ್ನಡ ಅಂಕಿಗಳ ಅಸ್ತಿತ್ವವನ್ನೇ ಮರೆತುಹೋಗಿವೆ...

    ReplyDelete
  53. ಕೋಡ್ಸರರೆ,
    ಕನ್ನಡ ಪತ್ರಿಕೆಗಳಿಗೆ ಒಳ್ಳೆಯ ದಿನಗಳು ಬರಲಿ ಎಂದು ಹಾರೈಸೋಣ!

    ReplyDelete
  54. ಹರೀಶ,
    ದೂರದರ್ಶನದ ಒಂದೊಂದು ಚಾನೆಲ್ಲಿಗೂ ಒಂದು ಬ್ಲಾ^ಗ್ ಬೇಕಾದೀತೇನೊ!?

    ReplyDelete
  55. ತೇಜಸ್,
    ಕನ್ನಡ ಅಂಕಿಗಳು ಕನ್ನಡ ಬರಹದಿಂದ ಮರೆಯಾಗಿ ಹೋಗಿದ್ದು ದೊಡ್ಡ ದುರಂತ. ಪತ್ರಿಕೆಗಳಲ್ಲಿ ಹೋಗಲಿ, ಪಠ್ಯ ಪುಸ್ತಕಗಳಲ್ಲಿ ಸಹ ಕನ್ನಡ ಅಂಕಿಗಳಿಲ್ಲ. ‘ಕನ್ನಡ ಅಂಕಿಗಳು ಇದ್ದವಾ?’ ಎಂದು ಮುಂದಿನ ಪೀಳಿಗೆ ಕೇಳಿದರೆ ಆಶ್ಚರ್ಯವಿಲ್ಲ.

    ReplyDelete
  56. ಸೊಗಸಾದ ವಿಶ್ಲೇಷಣೆಯುತ ಸುಂದರ ಬರಹ :)

    ReplyDelete
  57. ಪತ್ರಿಕೆಗಳನ್ನು ವಿವಿಧ ಕೋನಗಳಲ್ಲಿನ ಉತ್ತಮ ವಿಶ್ಲೇಷಣೆ ತುಂಬಾ ಚನ್ನಾಗಿದೆ.

    ಹೊನ್ನ ಹನಿ

    ReplyDelete
  58. ಸುನಾಥ್ ಸರ್,
    ನಮ್ಮ ಕನ್ನಡ ಪತ್ರಿಕೆಗಳ ಬಗ್ಗೆ ಇಷ್ಟು ದೀರ್ಘವಾಗಿ, ಗಂಭೀರವಾಗಿ ವಿಶ್ಲೇಷಣೆಯನ್ನು ಮಾಡಿರುವುದು ನೋಡಿ ಖುಷಿಯಾಯ್ತು.

    ವಿಜಯ ಕರ್ನಾಟಕದ ಗಿಮಿಕ್ ನೋಡಿದರೆ ನಾನು ಒಬ್ಬ ವೆಂಡರ್ ಆಗಿ ಅದರ ಬಗ್ಗ್ಗೆ ಬೇಸರವೆನಿಸುತ್ತೆ. ವ್ಯಾಪಾರಿ ದೃಷ್ಟಿಯಿಂದ ಇದೆಲ್ಲಾ ಮಾಡಿದರೂ ಅವರ ಇಂಗ್ಲೀಷ್ ಬಳಕೆ ಬೇಸರ ತರಿಸುತ್ತೆ. ಅವರ ಶುಕ್ರವಾರದಂದು ಹೊಸದಾಗಿ ಪತ್ರಿಕೆಯ ಜೊತೆಗೆ ಕೊಡುವ "ವಿಜಯNEXT" ಅನ್ನುವ ಅಂಕಣ ಪತ್ರಿಕೆ ಕೊಡುತ್ತಿದ್ದಾರೆ. ಅದರ ಬೆಲೆ ಆರು ರೂಪಾಯಿಗಳು. ಇದೊಂದು ಉದಾಹರಣೆ ಅಷ್ಟೇ.

    ನೀವು ಉಳಿದ ಪತ್ರಿಕೆಗಳ ಬಗ್ಗೆ ಬರೆದ ಈ ಲೇಖನವನ್ನು ಆ ಪತ್ರಿಕೆಯವರು ಗಮನಿಸಿದರೆ ಒಳ್ಳೆಯದೆಂದು ನನ್ನ ಭಾವನೆ.

    ಧನ್ಯವಾದಗಳು.

    ReplyDelete
  59. ಶ್ರೀನಿವಾಸರೆ,
    ಧನ್ಯವಾದಗಳು ನಿಮಗೆ.

    ReplyDelete
  60. ಹೊನ್ನ ಹನಿ ಹರೀಶರೆ,
    ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು.

    ReplyDelete
  61. ಶಿವು,
    ಮಿತಿ ಇಲ್ಲದ ಇಂಗ್ಲಿಶ್ ಬಳಕೆಯೇ ವಿಜಯ ಕರ್ನಾಟಕ ಪತ್ರಿಕೆಯ ಪ್ರಮುಖ ದೋಷವಾಗಿದೆ.ಆ ದೋಷವನ್ನೇ ಅವರು ಹೆಚ್ಚುಗಾರಿಕೆ ಎಂದುಕೊಳ್ಳುತ್ತಿದ್ದಾರೆ!

    ReplyDelete
  62. ಸುನಾಥ್ ಸರ್,
    ಎಷ್ಟು ಚನಾಗಿ ಬರೆದಿದ್ದೀರಿ.. ಸಕತ್ observation .........:)
    ಓದಿ ನಾನಂತೂ ಫುಲ್ ಕುಶ್... :-)
    ವಿಜಯ ಕರ್ನಾಟಕ ಪತ್ರಿಕೆ ಮೊದ ಮೊದಲು ನನ್ನನ್ನು ಆಕರ್ಷಿಸಿತ್ತು.. ಆದ್ರೆ ಆಮೇಲೆ ನನಗನ್ನಿಸಿದ್ದು ಈ ಪತ್ರಿಕೆಗೆ "passion ಕಿಂತ fashione ಹೆಚ್ಚಾಗಿದೆ " ಅಂತ...
    ಪತ್ರಿಕೆಗಳು ಯಾವಾಗ ಇದನೆಲ್ಲ ಅರ್ಥ ಮಾಡಿಕೊಳ್ಳುತ್ತವೋ??... ದೇವರಿಗೆ ಗೊತ್ತು!!

    ReplyDelete
  63. ಕಾಕಾ,
    ಪತ್ರಿಕೋದ್ಯಮದ ಬಗ್ಗೆಯೂ ಇಷ್ಟು ಆಳವಾಗಿ ಬರೆದಿದ್ದೀರಿ . ಅದ್ಭುತವಾದ ವಿಶ್ಲೇಷಣೆ ಕಾಕಾ ! ಇವೆಲ್ಲ ವಿಷಯಗಳು ಎಂದೂ ತಲೆಯಲ್ಲಿ ಬಂದಿರಲೇ ಇಲ್ಲ!
    ಕೆಲವೊಮ್ಮೆ , ಸುದ್ದಿಗಳನ್ನು ಓದುವಾಗ ಇದ್ಯಾಕೆ ಮುಖಪುಟದಲ್ಲಿ , ಇದ್ಯಾಕೆ ಇಷ್ಟು ಸಣ್ಣ ವರದಿ ಎಂದೆಲ್ಲ ಯೋಚಿಸುತ್ತಿದ್ದೆ .
    ಇಷ್ಟು ಚೆನ್ನಾಗಿ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.

    ಇನ್ನು ಕನ್ನಡ ಶಬ್ದಗಳನ್ನು ತಿರುಚುವುದು , ಅಪಭ್ರಂಶ , ಕಂಗ್ಲಿಷ್ ನ ವ್ಯಾಪಕ ಬಳಕೆ ಇತ್ಯಾದಿಗಳು ಪತ್ರಿಕೆಗಳಿಗಷ್ಟೇ ಸೀಮಿತವಾಗಿಲ್ಲ , ಟಿವಿಯವರಂತೂ ಅದರಲ್ಲಿ ಪಿ ಹೆಚ್ ಡಿ ಮಾಡುವಷ್ಟು ಮುಂದುವರೆದಿದ್ದಾರೆ. ಶುದ್ಧ ಕನ್ನಡದಲ್ಲಿ ಏನನ್ನಾದರೂ ವಿವರಿಸಿದರೆ ,
    " ಅದೇನು ಹೇಳ್ದೆ ಅಂತ ಸರಿಯಾಗಿ ಕನ್ನಡದಲ್ಲಿ ಹೇಳು " ಎಂದು ಜನ ಹೇಳುವಂತಾಗಿದೆ .

    ReplyDelete
  64. ದಿವ್ಯಾ,
    ವಿಜಯ ಕರ್ನಾಟಕ ಪತ್ರಿಕೆಯು ಈಗಲೂ ಆಕರ್ಷಕವಾಗಿಯೇ ಇದೆ. ಆದರೆ ಮಿತಿಮೀರಿದ ಆಂಗ್ಲಮೋಹವು ಈ ಪತ್ರಿಕೆಯನ್ನು ಕೆಡಿಸುತ್ತಲಿದೆ.ನಮ್ಮ ಪತ್ರಿಕೆಗಳ ಧೋರಣೆಯನ್ನು ಗಮನಿಸಿದರೆ, ಇದು ಸದ್ಯದಲ್ಲಿ ನಿಲ್ಲುವಂತೆ ಕಾಣುವದಿಲ್ಲ!

    ReplyDelete
  65. ಚಿತ್ರಾ,
    ಟೀವಿ ಕನ್ನಡವಂತೂ ಕನ್ನಡವಾಗಿ ಉಳಿದೇ ಇಲ್ಲ. ನಾನೊಂದು ಸಲ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಚಿಕ್ಕ ಮಗುವೊಂದು ತನ್ನ ತಾಯಿಗೆ ಕೇಳುತ್ತಿದ್ದ ಪ್ರಶ್ನೆಯೊಂದು ಕಿವಿಗೆ ಬಿತ್ತು. ಅದು ಹೀಗಿದೆ:
    "ಅಮ್ಮಾ,‘ವಾಟರ್’ಗೆ ಇಂಗ್ಲೀಶಿನಲ್ಲಿ ಏನೆನ್ನುತ್ತಾರೆ?"
    ಇದೀಗ ಕನ್ನಡದ ಪರಿಸ್ಥಿತಿಯಾಗಿದೆ!

    ReplyDelete
  66. ಸುನಾಥ್,
    ವಸ್ತುನಿಷ್ಠ content analysis. ಬಹುಷಃ ಪತ್ರಿಕೆಗಳನ್ನು ಎಚ್ಚರಿಸುವ ಕೆಲಸ ಆಗಾಗ ಆಗುತ್ತಿರಬೇಕು ಮತ್ತು ಅಂತರ್ಜಾಲ ಎಲ್ಲೆಡೆ ಪಸರಿಸುತ್ತಿರುವಾಗ ಇದು ಖಂಡಿತ ಸಾಧ್ಯ.‌ಓದುಗರು ತಮ್ಮೊಳಗೆ ಈ ಚರ್ಚೆ ಮಾಡಿಕೊಳ್ಳುವುದು, ಪತ್ರಿಕೆಗಳ ಗಮನಕ್ಕೆ ಬಂದರೆ ಸ್ವಲ್ಪವಾದರೂ ಬದಲಾಗಬಹುದೇನೋ ಅನ್ನೋದು ಓರ್ವ ಪತ್ರಕರ್ತನಾಗಿ ನನ್ನ ಅನಿಸಿಕೆ ಕೂಡಾ..ವಂದನೆಗಳು

    ReplyDelete
  67. ವೇಣುವಿನೋದ,
    ಪತ್ರಕರ್ತರಾಗಿ,ನೀವು ಇಂತಹ ಒಂದು ಪ್ರಯತ್ನವನ್ನು ಒಪ್ಪಿದ್ದು ನನಗೆ ಸಮಾಧಾನ ತಂದಿದೆ. ಸ್ವಾತಂತ್ರ್ಯಪೂರ್ವದ ಆದರ್ಶ ಪತ್ರಿಕೆಗಳಿಗೆ
    ಉಳಿದಿಲ್ಲ ಹಾಗು ಪತ್ರಿಕೋದ್ಯಮವು ಪತ್ರಿಕಾ-ಮಾಲೀಕರಿಗೆ ಹಣ ತಂದು ಕೊಡುವ ಬಿಜಿನೆಸ್ ಆಗಿರುವದು ಈ ಅವನತಿಗೆ ಕಾರಣವಾಗಿರಬಹುದು. ಎಲ್ಲ ಪತ್ರಕರ್ತರು ಈ ನಿಟ್ಟಿನಲ್ಲಿ ಆಲೋಚಿಸುವದು ಒಳ್ಳೆಯದು.

    ReplyDelete
  68. ನಮಸ್ಕಾರ. ನಾನು ಬ್ಲಾಗ್ ಲೋಕಕ್ಕೆ ಹೊಸಬ (೬ ತಿಂಗಳಷ್ಟೇ). ಮೊದಲ ಬಾರಿಗೆ ನಿಮ್ಮ ಈ ಬ್ಲಾಗ್ ಓದಿದೆ. ಪ್ರಜಾವಾಣಿ, ವಿ.ಕ. ಬಗ್ಗೆ ನೀವು ಬರೆದಿದ್ದು ನನ್ನ ಮನದ ಅಭಿಪ್ರಾಯವೇ ಆಗಿದೆ!! ಪ್ರಜಾವಾಣಿಯ ಈ ಇಬ್ಬರು ಅಂಕಣಕಾರರ ಬಗ್ಗೆ ಏನನ್ನಿಸುತ್ತದೆ? ಒಬ್ಬರು ದಿನೇಶ್ ಅಮೀನಮಟ್ಟು. ಭಾಷೆಯಮೇಲೆ ಚೆನ್ನಾಗಿ ಹಿಡಿತವಿರುವ ಇವರು ಕೆಲವೊಮ್ಮೆ ಜಾಣ ಮರೆವು ತೋರಿಸುತ್ತಾರೆ!!
    ಇನ್ನೊಬ್ಬರು ಪದ್ಮರಾಜ ದಂಡಪಾಣಿ. ಕಾಂಗ್ರೆಸ್ ಹಿಂಬಾಲಕರು. ಚುನಾವಣಾ ಮಾರನೆ, ದಿನ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಹುದಾದ ಕಾಂಗ್ರೆಸ್ಗೆ ಮತ ಹಾಕದೆ ಬಿ.ಜೆ.ಪಿ. ಗೆ ಮತ ಹಾಕಿ ಕರ್ನಾಟಕದ ಜನ ಸೋತಂತಾಗಿದೆ-ಎಂಬ ವಿಶ್ಲೇಷಣೆ ಬರೆದಿದ್ದರು.

    ReplyDelete
  69. ನಿಮ್ಮ ವಿಶ್ಲೇಷಣೆಗೆ ಅಡ್ಡಬಿದ್ದು ಕೈಮುಗಿದೆ, ನಮಗೆಲ್ಲಾ ಇಷ್ಟು ಬರೆಯಲು ಸಾಧ್ಯವೋ ತಿಳಿಯೆ, ಬಹಳ ನಾಜೂಕಾಗಿ, ಪ್ರತೀ ಪ್ರಮುಖ ಪತ್ರಿಕೆಗೂ ದುರ್ಬೀನು ಹಿಡಿದಿದ್ದೀರಿ, ನಿಮ್ಮ ನಿಸಿಕೆಗಳು ನಮ್ಮವೇ ಆಗಿವೆ ಎಂದು ಬೇರೆ ಹೇಳಬೇಕಿಲ್ಲವಲ್ಲ-ಇದರಲ್ಲಿ ರಾಜಕೀಯವೆನಿಲ್ಲ! ಪ್ರಾಂಜಲ ಮನಸ್ಸಿನ ಬ್ಲಾಗ್ ಲೋಕದ ದೊರೆ ನಿಮಗೆ ಸದಾ ಶರಣು,ಶರಣು ಶರಣೆಂಬೆನು

    ReplyDelete
  70. ಸುಬ್ರಹ್ಮಣ್ಯರೆ,
    ಪ್ರಜಾವಾಣಿ ಪತ್ರಿಕೆಯ ಹಾಗು ಪತ್ರಿಕಾ-ಅಂಕಣಕಾರರ ರಾಜಕೀಯ ಒಲವು ಸ್ಪಷ್ಟವಿದೆ! ನಮ್ಮ ಪತ್ರಿಕೆಗಳಲ್ಲಿ ಕೆಲವು ಎಡಚ, ಕೆಲವು ಬಲಚ. ಇವೆರಡರಲ್ಲಿ ಸೇರದೇ ಇದ್ದವು ಅಂಗಹೀನ! ನಾನು ಪ್ರಜಾವಾಣಿ ಪತ್ರಿಕೆಯನ್ನು ನಿಯತವಾಗಿ ಓದುವದಿಲ್ಲ. ಆದುದರಿಂದ ಅಮೀನಮಟ್ಟು ಹಾಗು ದಂಡಪಾಣಿ ಇವರ ಬಗೆಗೆ ನಿರ್ದಿಷ್ಟ ಅಭಿಪ್ರಾಯವನ್ನು ರೂಪಿಸಿಕೊಂಡಿಲ್ಲ. ನೀವು ನೀಡಿದ ತಿಳಿವಳಿಕೆಯಿಂದ
    ಪ್ರೇರಿತನಾಗಿ, ಇವರೀರ್ವರ ಅಂಕಣಗಳನ್ನು ಇನ್ನು ಮೇಲೆ ಓದಬೇಕಷ್ಟೆ.

    ReplyDelete
  71. ಭಟ್ಟರೆ,
    ಈ ವಿಶ್ಲೇಷಣೆ ಆಳವಾದದ್ದು ಅಥವಾ ವಿಸ್ತಾರವಾದದ್ದು ಎಂದೇನಲ್ಲ. ಈ ಎಲ್ಲ ಪತ್ರಿಕೆಗಳಲ್ಲಿಯೂ ಇನ್ನೂ ಅನೇಕ ಲೋಪದೋಷಗಳು ಇವೆ. ಅದರಂತೆ ಕೆಲವೊಂದು ಒಳ್ಳೆಯ ಗುಣಗಳೂ ಇವೆ. ಅವುಗಳ ಅಧ್ಯಯನ ಮಾಡುವದಾದರೆ ಕೆಲವು ತಿಂಗಳುಗಳೇ ಬೇಕಾಗಬಹುದು! ಮುಖ್ಯವಾಗಿ, ಇದರಲ್ಲಿ ರಾಜಕೀಯವಿಲ್ಲ ಎನ್ನುವ ನಿಮ್ಮ ಮಾತಿಗಾಗಿ ನಾನು ಕೃತಜ್ಞ.

    ReplyDelete
  72. ಕಾಕಾ, ನಿಮ್ಮ ಬ್ಲಾಗಿನ ಅಭಿಮಾನಿ ನಾನು. ಕನ್ನಡ ಪತ್ರಿಕೆಗಳ ತಪ್ಪು-ಒಪ್ಪುಗಳನ್ನು ವಿಶ್ಲೇಷಣೆ ಮಾಡಿ ಬರೆದಿರುವ ಈ ಲೇಖನ ಇಷ್ಟವಾಯಿತು. ಆದರೆ "(೧) ಶ್ರೀ ಶ್ರೀವತ್ಸ ಜೋಶಿಯವರ ಸರಸ ಲೇಖನಮಾಲೆ: ಪರಾಗಸ್ಪರ್ಶ" - ಆದರೆ ಈ ಮಾತು ಒಪ್ಪಿಗೆಯಾಗಲಿಲ್ಲ. ತನ್ನನ್ನು ಊಟಕ್ಕೆ ಕರೆದವರ ಮನೆಯವರ ಹೆಸರಲ್ಲೇ ಒಂದು ಅಂಕಣ ಬರೆದು ಬಿಸಾಕುವ ಈತನನ್ನು ಒಳ್ಳೆಯ ಲೇಖಕ ಎಂದಿರುವುದು, ನಿಮ್ಮಿಂದ ನಿಷ್ಪಕ್ಷಪಾತದ ಲೇಖನವನ್ನಷ್ಟೇ ಇದುವರೆಗೂ ಓದಿದ್ದ ನನಗೆ ಆಶ್ಚರ್ಯವಾಯಿತು. ಪರಾಗಸ್ವರ್ಶದಲ್ಲಿ ಬರುವ ಲೇಖನಗಳಲ್ಲಿ ಬಹುಪಾಲು ಈಗಾಗಲೇ ‘ವಿಚಿತ್ರಾನ್ನ’ ಎಂಬ ಅಂಕಣದಲ್ಲಿ ಬಂದಿರುವ ಹಳಸಲು ಸರಕು. ವಡೆ ಹನುಮ, ಡ್ಯಾಶ್ ಬೋರ್ಡ್ ಗಣಪ...... ಇತ್ಯಾದಿ. ವಿಕ ಪತ್ರಿಕೆಗೆ ಹೊಸ ಲೇಖನ ಬರೆದುಕೊಡುವ ಲೇಖಕರು ಸಿಗುವುದಿಲ್ಲವೇ ಅನ್ನಿಸಿತು.

    ಇರಲಿ, ನನ್ನ ಅಭಿಪ್ರಾಯ ಮಾತ್ರ. ನಿಮ್ಮ ಬ್ಲಾಗಿನಿಂದ ಬಹಳ ಕಲಿತಿದ್ದೇನೆ. ಮುಂದೆಯೂ ಕಲಿಯಲಿದ್ದೇನೆ. ಧನ್ಯವಾದಗಳು.

    ReplyDelete
  73. ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ. ಇಷ್ಟ ಆಯಿತು.
    ನಿಮ್ಮವ,
    ರಾಘು.

    ReplyDelete
  74. ಅದ್ಭುತ ವಿಮರ್ಶಾ ಲೇಖನ..
    ತುಂಬಾ ಇಷ್ಟವಾದ ಲೇಖನ..

    ReplyDelete
  75. ಆಕಾಶ,
    ಶ್ರೀವತ್ಸ ಜೋಶಿಯವರ ಲೇಖನಗಳು ಸರಸವಾಗಿರುತ್ತವೆ ಎಂದು ನನ್ನ ಭಾವನೆ. ಅವುಗಳಲ್ಲಿಯ ದೋಷಗಳನ್ನು ನೀವು ತೋರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಲೇಖನಗಳು ಪುನರಾವರ್ತಿಸಿರುವ ಹಳೆಯ ಸರಕು ಎನ್ನುವದೂ ಸಹ ನನಗೆ ಗೊತ್ತಿರಲಿಲ್ಲ.

    ReplyDelete
  76. ರಾಘು,
    ಮೆಚ್ಚುಗೆಗೆ ಧನ್ಯವಾದಗಳು.

    ReplyDelete
  77. ಪ್ರಿಯ ಜ್ಞಾನಾರ್ಪಣಮಸ್ತು,
    ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  78. ಕಾಕಾ..
    ಅದೆಷ್ಟೊಂದು ಅಂಕಿ ಅಂಶಗಳ ಸಮೇತ, ವಿವರವಾದ ಲೇಖನ ಬರೆದಿದ್ದೀರಿ. ಅದ್ಭುತವಾದ ವಿಶ್ಲೇಷಣೆ... ಎಲ್ಲರೂ ಓದಲೇ ಬೇಕಾದ ಬರಹ...... ಧನ್ಯವಾದಗಳು ಕಾಕಾ...

    ಶ್ಯಾಮಲ

    ReplyDelete
  79. ಶ್ಯಾಮಲಾ,
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ReplyDelete
  80. ಸುನಾಥ್ ಕಾಕಾ,

    ಎಷ್ಟೊಂದು ವಿಶ್ಲೇಷಣೆ !
    ಅದ್ಭುತವಾಗಿದೆ ನಿಮ್ಮ ಲೇಖನ.

    ReplyDelete
  81. ಶಿವ,
    ಮೆಚ್ಚಿಕೊಂಡಿದ್ದೀರಿ. ಧನ್ಯವಾದಗಳು.

    ReplyDelete
  82. ಕಾಕಾ ,
    ಮೊದಲು ನಿಮ್ಮ ತಾಳ್ಮೆಗೆ ಒಂದು ಪುಟ್ಟ ನಮನ.
    ಇಷ್ಟೊಂದು ಅಂಕಿ , ಅಂಶ ,... ಉದಾಹರಣೆಗಳೊಂದಿಗೆ ನೀಡಿದ ವಿಶ್ಲೇಷಣೆಗೆ ಮತ್ತೊಂದು
    ದೊಡ್ಡ ನಮನ.
    ಬಹಳ ಇಷ್ಟವಾಯ್ತು .. ಹಾಗು ಹಲವು ಮಾಹಿತಿಗಳು ಸಹ ದೊರೆತವು.

    ReplyDelete
  83. ಶ್ರೀಧರ,
    ತಾಳ್ಮೆಯಿಂದ ಓದಿದ್ದಕ್ಕಾಗಿ, ನಿಮಗೆ ಧನ್ಯವಾದಗಳನ್ನು ಹೇಳಬೇಕು ನಾನು! ಹೇಳಬಹುದಾದ ಅಂಶಗಳು ಇನ್ನೂ ಬಹಳಷ್ಟಿದ್ದರೂ ಸಹ, ಬ್ಲಾ^ಗಿನ ಮಿತಿಗೆ ಒಳಪಟ್ಟು ಬರೆಯಬೇಕಾಯಿತು!

    ReplyDelete
  84. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  85. ಧನ್ಯವಾದಗಳು, @ಚಾ ಶಿ ಜಯಕುಮಾರ್!

    ReplyDelete