Sunday, July 25, 2010

ವಸಂತಮುಖ..........(ದ.ರಾ.ಬೇಂದ್ರೆ)

ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು.

ಕವನ ಇಲ್ಲಿದೆ:
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ


ಬೇಂದ್ರೆಯವರಿಗೆ ಪ್ರಕೃತಿಯು ಕೇವಲ ದೃಶ್ಯವೈಭವವಲ್ಲ. ಅವರ ಪಾಲಿಗೆ ಅದು ಸಜೀವವಾದ ಚೈತನ್ಯದ ಚಿಲುಮೆ. ಪ್ರಕೃತಿಯ ಚಟುವಟಿಕೆಗಳಿಗೆ ಪ್ರೇರಣೆ ಕೊಡುವ ‘ಬೆಳಗು’ ಆಗಲೀ, ದಣಿದ ಜೀವಿಗಳನ್ನು ಮಡಿಲಲ್ಲಿ ಮಲಗಿಸಿ, ಮುದ್ದಿಸುವ ಬೆಳದಿಂಗಳೇ ಆಗಲಿ ಅಥವಾ ರಾವಣನಂತೆ ಕುಣಿಯುವ ಶ್ರಾವಣವೇ ಆಗಲಿ, ಇವೆಲ್ಲ ಬೇಂದ್ರೆಯವರ ಪಾಲಿಗೆ ನಿಸರ್ಗದ ಸಜೀವ ಚೇತನಗಳು. ಅಷ್ಟೇ ಏಕೆ, ಒಂದು ಹೂತ ಹುಣಿಸೆಯ ಮರವೂ ಸಹ ಬೇಂದ್ರೆಯವರಿಗೆ ಬದುಕಿನ ಸಜೀವ ಭಾಗವೇ ಆಗಿದೆ. ಈ ಮನೋಧರ್ಮದ ಪರಾಕಾಷ್ಠೆಯನ್ನು ನಾವು ‘ವಸಂತಮುಖ’ ಕವನದಲ್ಲಿ ನೋಡಬಹುದು.

ವಸಂತ ಋತುವಿನ ಒಂದು ಉಷಃಕಾಲದಲ್ಲಿ ಕವಿ ಅನುಭವಿಸಿದ ಆನಂದವನ್ನು ‘ವಸಂತಮುಖ’ ಕವನವು ವರ್ಣಿಸುತ್ತದೆ. ಕನ್ನಡ ಕವಿಗಳು ಸೂರ್ಯೋದಯದ ಸಮಯದಲ್ಲಿ ತಾವು ಅನುಭವಿಸಿದ ಆನಂದದ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಈ ಕವನಗಳಲ್ಲಿ ಸೂರ್ಯೋದಯ ಸಮಯದ ನಿಸರ್ಗಸೌಂದರ್ಯದ ವರ್ಣನೆಯೇ ಪ್ರಧಾನವಾಗಿದೆ. ಬೇಂದ್ರೆಯವರೇ ಬರೆದ ಕವನ ‘ಬೆಳಗು’ ಅಂತೂ ಅತಿ ಪ್ರಸಿದ್ಧವಾದ ಕವನವೇ ಹೌದು. ಈ ಕವನದಲ್ಲಿಯೂ ಸಹ ಸೂರ್ಯೋದಯ ಸಮಯದ ಪ್ರಕೃತಿಯ ವೈಭವವನ್ನು ವರ್ಣಿಸಿ, ಕವಿಯು ಅದರಿಂದಾಗಿ ಹೇಗೆ ಆನಂದಪರವಶನಾದನು ಎನ್ನುವ ವರ್ಣನೆ ಇದೆ. ಆದರೆ, ‘ವಸಂತಮುಖ’ ಕವನವು ಹಾಗಿಲ್ಲ. ಈ ಕವನದಲ್ಲಿ ಕವಿಯು ಅಖಿಲ ವಿಶ್ವವೇ ಉಷಃಕಾಲದಲ್ಲಿ ಚೇತನಗೊಂಡು, ಆನಂದಪರವಶವಾದುದರ ದರ್ಶನವಿದೆ.  ಕನ್ನಡದಲ್ಲಿ ನಾವು ಕೇಳುವ ಇಂತಹ ಇನ್ನೊಂದೇ ಗೀತೆಯೆಂದರೆ ಪುರಂದರದಾಸರು ಹಾಡಿದ ಕೀರ್ತನೆ.
ಅದರ ಪಲ್ಲ ಹೀಗಿದೆ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು”

ರಂಗನ ಕೊಳಲಿನ ಸ್ವರದಿಂದ ಅಖಿಲ ಪ್ರಕೃತಿಯೇ ಹೇಗೆ ಸಚೇತನವಾಯ್ತು, ಹೇಗೆ ಆನಂದಪರವಶವಾಯ್ತು ಎಂದು ಪುರಂದರದಾಸರು ಹಾಡಿ, ಕುಣಿದು ಹೇಳುವ ಕೀರ್ತನೆ ಇದು.

ಈಗ ಬೇಂದ್ರೆಯವರ ‘ವಸಂತಮುಖ’ವನ್ನು ನೋಡೋಣ:
(ಮೊದಲ ನುಡಿ:)
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

‘ಉದಿತ ದಿನ’ ಅಂದರೆ, ಇದೀಗ ಬೆಳಕು ಒಡೆದಿದೆ. ಇದು ಉಷ:ಕಾಲ.  ಉಷಃಕಾಲದ ಆನಂದವು ಕೇವಲ ಮನುಷ್ಯನಷ್ಟೇ ಅನುಭವಿಸಬಹುದಾದ ಸುಖವಲ್ಲ.  ಸುತ್ತಲಿರುವ  ವನವೆಲ್ಲ ಸಚೇತನವಾಗಿದೆ, ಉಷಃಕಾಲದಿಂದ ಮುದಗೊಂಡಿದೆ. ವನರಾಜಿಯ ಈ ಆನಂದವು ‘ವನವಾಸಿ’ಗಳಾದ ಹಕ್ಕಿಗಳ ಚಿಲಿಪಿಲಿಯಲ್ಲಿ ಕೇಳಬರುತ್ತಿದೆ. ಇದು ಕಣ್ಣಿಗೆ ಬೀಳುವ ದೃಶ್ಯ ಸೌಂದರ್ಯವಷ್ಟೇ ಅಲ್ಲ, ಕಿವಿಗೆ ಬೀಳುವ ಶ್ರಾವ್ಯ ಸೌಭಾಗ್ಯವೂ ಹೌದು.

ಕೇವಲ ಒಂದು ಹಕ್ಕಿಯ ಸ್ವರ ಇಲ್ಲಿ ಕೇಳಬರುತ್ತಿಲ್ಲ. ಅನೇಕ ವಿಧದ ಹಕ್ಕಿಗಳು ಇಲ್ಲೀಗ ಹಾಡುತ್ತಿವೆ. ಇಲ್ಲಿ ಕೇಳಿಬರುತ್ತಿರುವದು ಈ ಸಾಮುದಾಯಿಕ ಸ್ವರಮೇಳ. ನಿಸರ್ಗದಲ್ಲಿರುವ ಈ ಸಾಮರಸ್ಯವನ್ನು ಕಂಡ ಕವಿ ‘ಇದುವೆ ಜೀವ, ಇದು ಜೀವನ’ ಎಂದು ಉದ್ಗರಿಸುತ್ತಾನೆ. ಅಲ್ಲದೆ ಇಂತಹ ಸಾಮರಸ್ಯದ ಜೀವನವೇ ಪಾವನಗೊಂಡ ಜೀವನ. ಪವನ ಅಂದರೆ ಗಾಳಿ. ಗಾಳಿಯು ಎಲ್ಲೆಡೆಗೆ ಬೀಸುತ್ತ ಸುಗಂಧವನ್ನು ಹರಡುತ್ತದೆ. ಅದರಂತೆ ದುರ್ಗಂಧವನ್ನು ದೂರೀಕರಿಸುತ್ತದೆ. ಉಷಃಕಾಲವೂ ಸಹ ವಾತಾವರಣವನ್ನು ಅದೇ ರೀತಿಯಲ್ಲಿ ಪಾವನಗೊಳಿಸುವದರಿಂದ, ಕವಿಯು, ‘ಪವನದಂತೆ ಪಾವನ’ ಎಂದು ಹೇಳುತ್ತಾನೆ.

(ಎರಡನೆಯ ನುಡಿ:)
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ಈ ಚೈತನ್ಯಪೂರ್ಣ, ಉಲ್ಲಾಸಮಯ ವಾತಾವರಣವು ಕವಿಯಲ್ಲಿ ಯಾವ ಭಾವನೆಯನ್ನು ಮೂಡಿಸುತ್ತಿದೆ? ಅದು ಅನಿರ್ವಚನೀಯವಾದ, ಆಧ್ಯಾತ್ಮಿಕತೆಗೆ ಹತ್ತಿರವಾದ ಭಾವನೆಯಾಗಿದೆ. ಬ್ರಹ್ಮಭಾವನೆ, ವಿಶ್ವ-ಏಕಾತ್ಮ ಭಾವನೆ ಎಂದು ಹೇಳಬಹುದೇನೊ? ಅದು ಕವಿಯ ಅನುಭವಕ್ಕೆ ಬರುತ್ತಿದೆಯೇ ಹೊರತು, ಏನೆಂದು ಹೇಳಲು ಬರದಂತಿದೆ. (ಶಂಕರಾಚಾರ್ಯರು ಬ್ರಹ್ಮವನ್ನು ‘ನೇತಿ, ನೇತಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿಕೊಳ್ಳಬಹುದು.)  ಆದುದರಿಂದ ಕವಿ ಅದನ್ನು ‘ಏನೊ ವಿಧ!’ ಎಂದು ಬಣ್ಣಿಸುತ್ತಾನೆ. (ಆಮೂಲಕ ಅದು ‘ಬ್ರಹ್ಮಾನಂದ’ ಎಂದು ಸೂಚಿಸುತ್ತಾನೆ.) ಆ ಭಾವನೆ ಏನೆಂದು ಹೇಳಲು ಬರದಿದ್ದರೂ,ಅದು ಕವಿಯಲ್ಲಿ ಒಂದು ಭಾವಪಕ್ವತೆಯನ್ನು ಹುಟ್ಟಿಸಿದೆ. ಅದು ಕವಿಯ ಅನುಭವಕ್ಕೆ ಬರುತ್ತಿರುವ ‘ಹದ’! ಇಂತಹ ಹದ ಅಥವಾ ಪಕ್ವತೆ ಬರಲು ಕಾರಣವೆಂದರೆ, ಕವಿಯ ಅಹಂಭಾವವು ಇಲ್ಲಿ ಗಾಳಿಗೊಡೆದ ಬುದ್ಬುದ ಅಂದರೆ ನೀರಗುಳ್ಳೆಯಾಗಿದೆ. ಪ್ರಕೃತಿಚೈತನ್ಯದ ಎದುರಿಗೆ ಮನುಷ್ಯ ತಾನೆಷ್ಟು ಅಲ್ಪ ಎನ್ನುವದನ್ನು ಅರಿಯುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ಯಾವುದು ಮಹತ್?’ ಎನ್ನುವ ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ, ‘ಬೆಳಕೆ ಬದುಕು!’ ನಿಸರ್ಗದಲ್ಲಿರುವ ಗಿಡ,ಮರಗಳಿಗೆ ಬೆಳಕು ಬೇಕು; ಅಲ್ಲಿರುವ ಪಕ್ಷಿಗಳಿಗೆ ಬೆಳಕು ಬೇಕು. ಬೆಳಕು ಅವುಗಳಿಗೆ ಜೀವನವನ್ನು ಕೊಡುತ್ತದೆ. ಮನುಷ್ಯನಿಗೂ ಸಹ ಬೆಳಕು ಬೇಕು. ಆದರೆ ಇದು ಬರಿ ಹೊರಗಿನ ಬೆಳಕಲ್ಲ. ಮನುಷ್ಯನಿಗೆ ಬೇಕಾಗಿರುವದು ಅಂತರಂಗದ ಬೆಳಕು. ಈ ಸತ್ಯದರ್ಶನವೇ ಕವಿಗೆ ಮುದವನ್ನು ಅಂದರೆ ಸಂತೋಷವನ್ನು ಕೊಡುತ್ತದೆ. ಈ ಸಂತೋಷವು ಸ್ವಯಂಸ್ಫೂರ್ತ ಸಂತೋಷವು. ತನ್ನಿಂದ ತಾನೇ ಹೊರಹೊಮ್ಮಿದ್ದು. ಆದುದರಿಂದ ಕವಿ  ಈ ಸಂತೋಷವನ್ನು ‘ಜೀವ ಹೊಮ್ಮಿ ಚಿಮ್ಮಿದ ಮುದ’ ಎಂದು ಕರೆಯುತ್ತಾನೆ.

 (ಮೂರನೆಯ ನುಡಿ:)
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ

ನಾವು ಸಂಸ್ಕೃತಿ ಎಂದು ಕರೆಯುವ ಮಾನವ-ನಾಗರಿಕತೆಗಳಲ್ಲಿ ಎಲ್ಲ ಮಾನವರನ್ನು ಒಂದೇ ಶಿಸ್ತಿನ ಏಕತಾನತೆಗೆ ಒಳಪಡಿಸುವ ವಿಕೃತಿ ಇದೆ. ಆದರೆ ಪ್ರಕೃತಿಯಲ್ಲಿ ಇರುವದು ಸ್ವಚ್ಛಂದತೆ; ಏಕತಾನತೆ ಅಲ್ಲ. ಈ ವನರಾಜಿಯಲ್ಲಿ ನೂರಾರು ತರದ ಮರಗಳಿವೆ. ಅಲ್ಲಿರುವ ಹಕ್ಕಿಗಳು ನೂರಾರು ತರದ ಸ್ವರ ಹೊರಡಿಸುತ್ತಿವೆ. ಇಂತಹದೇ ಸ್ವರ ಹೊರಡಿಸಬೇಕೆನ್ನುವ  ಕಟ್ಟುನಿಟ್ಟು ಅವುಗಳಿಗೂ ಇಲ್ಲ. ಇಂತಹ ಬಂಧನವು ಇರದ ಕಾರಣದಿಂದಲೆ ಇವುಗಳ ಹಾಡು ಬಂಧುರ ಅಂದರೆ ಉಲ್ಲಾಸದಾಯಕವಾಗಿದೆ. ಇವುಗಳ ಹಾಡು ಹಾಗು ಹಾರಾಟ ಸ್ವಚ್ಛಂದ ವಾಗಿರುವದರಿಂದಲೇ ಇವುಗಳ ಬದುಕು ಸುಂದರವಾಗಿದೆ. ಬದುಕಿನಲ್ಲಿ ವಿವಿಧ ಸ್ವರಗಳು ಬೇಕು. ಆದರೆ ಮಧುರವಾದ ಸ್ವರಮೇಳಕ್ಕಾಗಿ ಸಾಮರಸ್ಯವೂ ಬೇಕು. ಇದು ಕವಿಯು ಇಲ್ಲಿ ಅನುಭವಿಸಿದ ದರ್ಶನವಾಗಿದೆ. ಪ್ರಕೃತಿಯಲ್ಲಿ ಒಂದಾಗಿ, ಪ್ರಕೃತಿಯ ಉಲ್ಲಾಸವೇ ತನ್ನ ಉಲ್ಲಾಸವಾಗಿದ್ದನ್ನು ಕವಿ ಅನುಭವಿಸಿದ ಕಾವ್ಯವು ಇದಾಗಿದೆ.
...........................................................................
ಈ ಕವನದ ವೈಶಿಷ್ಟ್ಯ:
ಸೂರ್ಯೋದಯದಿಂದಾಗಿ ಮೂಡುವ ನಿಸರ್ಗವೈಭವವು ಕವಿಗಳಲ್ಲಿ ಉಲ್ಲಾಸವನ್ನು ಮೂಡಿಸುವದು ಸಹಜ ಹಾಗು ಸಾಮಾನ್ಯ. ಇಂತಹ ಕವನಗಳು, ಸ್ವತಃ ಬೇಂದ್ರೆಯವರೇ ಬರೆದಂತಹವು, ಅನೇಕವಿವೆ. ಸಾಮಾನ್ಯವಾಗಿ, ಪ್ರಕೃತಿ ಅನುಭವಿಸುವ ಸಂವೇದನೆಗಳು ಮಾನವನ ಅನುಭವಕ್ಕೆ ಹೊರತಾಗಿವೆ. ಆದರೆ, ಈ ಕವನದಲ್ಲಿ, ಉಷಃಕಾಲವು ನಿಸರ್ಗದಲ್ಲಿ ಮೂಡಿಸಿದ ಉಲ್ಲಾಸದ ಅನುಭವವಿದೆ. ಈ ಅನುಭವವು ಕವಿಯನ್ನು ಮೂಕನನ್ನಾಗಿಸುತ್ತದೆ. (“ಏನೊ ವಿಧ! ಏನೊ ಹದ.”) ಪ್ರಕೃತಿಯ ಅಗಾಧತೆಯ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸ್ವಾತಂತ್ರ್ಯ ಬೇಕು, ಅದರೊಡನೆಯೆ ಸಾಮರಸ್ಯವೂ ಬೇಕು ಎನ್ನುವ ದರ್ಶನವನ್ನು ಕವಿಯಲ್ಲಿ ಹುಟ್ಟಿಸುತ್ತದೆ. ಇಂತಹ ಬೃಹದ್ದರ್ಶನವನ್ನು ಮಾಡಿಸುವ ಈ ಕವನದಲ್ಲಿ ಇರುವದು ಕೇವಲ ಮೂರು ನುಡಿಗಳು ಅಥವಾ ಮೂವತ್ತಾರು ಪದಗಳು! ‘ಕಿರಿದರೊಳ್ ಪಿರಿದರ್ಥವನು’ ಪೇಳುವದು ಎಂದರೆ ಇದೇ ಇರಬೇಕು!

ಬೇಂದ್ರೆಯವರದು ಅಸೀಮ ಕಲ್ಪನಾವಿಲಾಸ ಹಾಗು ಅಪಾರವಾದ ಪದಸಾಮರ್ಥ್ಯ. ಅವರ ‘ಪಾತರಗಿತ್ತಿ ಪಕ್ಕಾ’, ‘ಬೆಳದಿಂಗಳ ನೋಡಾ’  ಮೊದಲಾದ ಕವನಗಳನ್ನು ಓದಿದವರಿಗೆ ಇದರ ಅನುಭವವಿದೆ. ಆದರೆ ‘ವಸಂತಮುಖ’ ಕವನದಲ್ಲಿ, ಬೇಂದ್ರೆಯವರು ನಿಸರ್ಗದ ಆನಂದದಲ್ಲಿ ಎಷ್ಟು ಪರವಶರಾಗಿದ್ದಾರೆಂದರೆ, ಅತಿ ಚಿಕ್ಕದಾದ ಕವನದಲ್ಲಿ ಅತಿ ಮಹತ್ವದ ದರ್ಶನ ಇಲ್ಲಿ ಹೊಮ್ಮಿದೆ. ಇದೇ ಈ ಕವನದ ವೈಶಿಷ್ಟ್ಯವಾಗಿದೆ.
……………………………………………

ಟಿಪ್ಪಣಿ:
(೧) ಪಾಂಡವರು ವನವಾಸದಲ್ಲಿದ್ದಾಗ, ಓರ್ವ ಮುನಿಯನ್ನು ಅವಮಾನಿಸಿದ್ದಕ್ಕಾಗಿ ಅರ್ಜುನನು ಶಪಿತನಾದನು. ಶಾಪಮುಕ್ತಿಗಾಗಿ ಆತನು ತೀರ್ಥಯಾತ್ರೆಯನ್ನು ಮಾಡಬೇಕಾಯಿತು.‘ಬುದ್ಬುದಾ’ ಎನ್ನುವ ಅಪ್ಸರೆಯು ಈ ಪ್ರಸಂಗಕ್ಕೆ ಸಂಬಂಧಿಸಿದ್ದಾಳೆ.  ಬೇಂದ್ರೆಯವರು ಎರಡನೆಯ ಸಾಲಿನಲ್ಲಿ ಬಳಸಿದ ‘ಬುದ್ಬುದ’ ಪದವು ಈ ಕಾರಣದಿಂದಾಗಿ ಬಂಧ ಹಾಗು ಮೋಕ್ಷವನ್ನು ಸೂಚಿಸುತ್ತದೆ.
(೨) ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ದೇಸಿ ಶೈಲಿಯಲ್ಲಿವೆ ಎನ್ನುವದು ಕೆಲವು ವಿಮರ್ಶಕರ ಅಭಿಪ್ರಾಯ. ಈ ಕವನವು ಮಾರ್ಗ ಭಾಷೆಯಲ್ಲಿದ್ದೂ ಸಹ ಬೇಂದ್ರೆಯವರ ಕವನಗಳಲ್ಲಿಯೇ ಶಿಖರಸ್ಥಾಯಿಯಾಗಿರುವದನ್ನು ಗಮನಿಸಬೇಕು.

ಹೆಚ್ಚಿನ ಟಿಪ್ಪಣಿ:
(೧) ಒಂದೇ ಸಾಲಿನಲ್ಲಿ ಜೀವನದರ್ಶನವನ್ನು ಮಾಡಿಸುವ ಕವನಗಳು ಕನ್ನಡದಲ್ಲಿ ಇದ್ದೇ ಇವೆ. ಅನೇಕ ವರ್ಷಗಳ ಹಿಂದೆ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ‘ಕನ್ನಡ ಕವಿಗಳ ಪ್ರತಿಭೆಯ ಮಿಂಚು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕೆಲವು ಕವನಗಳ ಒಂದೊಂದು ಸಾಲನ್ನು ಕೊಡಲಾಗಿತ್ತು. ಸೂರ್ಯೋದಯಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಸಾಲು ಇಲ್ಲಿದೆ:
ಶಿವ ಬರೆದ ಕತೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು.”

ಕವಿಯ ದೈವಶ್ರದ್ಧೆಯನ್ನು, ಈ ಶ್ರದ್ಧೆ ಅವನಲ್ಲಿ ಮೂಡಿಸುವ ಸ್ಥೈರ್ಯವನ್ನು, ಶಿವವಾದುದನ್ನು ಅಂದರೆ ಮಂಗಲವನ್ನೇ ಬಯಸುವ ಅವನ ಮನೀಷೆಯನ್ನು ಈ ಸಾಲು ಅದ್ಭುತವಾಗಿ ಬಿಂಬಿಸುತ್ತದೆ. ಈ ಸಾಲಿನ ಕೆಳಗೆ ‘ಮಸಳಿ’ ಎನ್ನುವ ಅಂಕಿತವಿದ್ದುದ್ದಾಗಿ ನನ್ನ ಮಸುಕಾದ ನೆನಪು ಹೇಳುತ್ತಿದೆ. ಆದರೆ ಇದು ಹೀಗೇ ಎಂದು ಹೇಳಲು ಈಗ ಸಾಧ್ಯವಾಗದು.

(೨) ಇಂಗ್ಲಿಶ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ Reader’s Digest ತರಹದ ಮಾಸಿಕವನ್ನು ಕನ್ನಡದಲ್ಲಿ ತರಲು ಉದ್ದೇಶಿಸಿದ ಲೋಕಶಿಕ್ಷಣ ಸಂಸ್ಥೆಯು ‘ಕಸ್ತೂರಿ’ ಮಾಸಿಕವನ್ನು ಹೊರತಂದಿತು. Reader’s Digestನಲ್ಲಿ ಪ್ರಕಟವಾಗುತ್ತಿದ್ದ ಸ್ಥಿರಶೀರ್ಷಿಕೆ ‘Life’s like that’ ಗೆ ಸಂವಾದಿಯಾಗಿ ಕಸ್ತೂರಿ ಮಾಸಿಕದಲ್ಲಿ ’ಇದುವೇ ಜೀವ ಇದು ಜೀವನ’ ಶೀರ್ಷಿಕೆಯನ್ನು ತರಲಾಯಿತು. ಕನ್ನಡದ ಶೀರ್ಷಿಕೆಯು ‘ವಸಂತಮುಖ’ ಕವನದ ಮೊದಲನೆಯ ನುಡಿಯ ಮೂರನೆಯ ಸಾಲೇ ಆಗಿರುವದನ್ನು ಗಮನಿಸಬಹುದು.

63 comments:

  1. ಸುನಾಥ್ ಕಾಕ..
    ಬೇ೦ದ್ರೆ ಅಜ್ಜನವರ ”ವಸ೦ತಮುಖ ” ದ ಪರಿಚಯವನ್ನು ತು೦ಬಾ ಚನ್ನಾಗಿ ವಿವರಿಸಿದ್ದೀರಿ.. ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ.
    ಅವರ ಸ೦ಜೆಯ ವರ್ಣನೆ ಮರೆಯುವ೦ತದ್ದಲ್ಲ..
    ”ಮುಗಿಲ ಮಾರಿಗೆ ರಾಗರತಿಯ ನ೦ಜ ಏರಿತ್ತಾ ಆಗ ಸ೦ಜೆಯಾಗಿತ್ತ..” ನನ್ನ ಇಷ್ಟದ ಹಾಡು..

    ಥ್ಯಾ೦ಕ್ಸ್ ಕಾಕ.

    ReplyDelete
  2. ಬೇಂದ್ರೆಯವರ 'ವಸಂತ ಮುಖ'ಕವನದ ಅರ್ಥದ ವಿಶ್ಲೇಷಣೆ ತುಂಬಾ ಇಷ್ಟವಾಯಿತು.ಅವರ ಇನ್ನೂ ಕೆಲವು ಕವನಗಳ ಅರ್ಥ ವಿಶ್ಲೇಷಣೆ ಮಾಡಿಕೊಡ ಬೇಕಾಗಿ ವಿನಂತಿ.ಧನ್ಯವಾದಗಳು.

    ReplyDelete
  3. ಸುನಾಥ್ ಸಾರ್ ನೆಚ್ಚಿನ ಕವಿ ಬೇಂದ್ರೆ ಕವಿತೆ ಮುದನೀಡಿತು.ಧಾರವಾಡ ಪೇಡಾ ತಿಂದಂಗ್ ಆಯ್ತು.

    ReplyDelete
  4. ಬೇ೦ದ್ರೆಯವರ ವಸ೦ತಮುಖ ಕವನದ ಬಗ್ಗೆ, ಸು೦ದರ ಶಬ್ದಗಳಲ್ಲಿ ವಿವರಣೆ ನೀಡಿದ್ದೀರಿ.ಧನ್ಯವಾದಗಳು ಕಾಕ. ಬೇ೦ದ್ರೆಯವರ ಇನ್ನೂ ಬೇರೆ ಬೇರೆ ಕವನಗಳ ಕುರಿತು ಮತ್ತಷ್ಟು ಮಾಹಿತಿಗಳನ್ನು ನೀಡುವಿರೆ೦ದು ಆಶಿಸಿದ್ದೇನೆ.

    ReplyDelete
  5. ಕಾಕಾ,

    ತುಂಬಾ ತುಂಬಾ ಸುಂದರ ಕವನ. ಈ ಕವನವನ್ನು ನಾನು ಓದಿರಲಿಲ್ಲ... ಕಾಣಿಸಿದ್ದಕ್ಕೆ ಹಾಗೂ ಸುಂದರ ವಿವರಣೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ಬೇಂದ್ರೆಯವರ ಪ್ರತಿ ಇರುವ ನನ್ನ ಅಭಿಮಾನ, ಆದರಗಳು ಮತ್ತಷ್ಟು ಹೆಚ್ಚಾದವು.

    ReplyDelete
  6. ಸುನಾಥ್ ಕಾಕಾ...

    ಬೇಂದ್ರೆ ಅವರ ಕವನ ಮತ್ತು ಅದರ ವಿವರಣೆ ತುಂಬಾ ಚೆನ್ನಾಗಿದೆ. ನಾನು ಈ ಕವನ ಓದಿರಲಿಲ್ಲ.. ಧನ್ಯವಾದಗಳು.

    ಶ್ಯಾಮಲ

    ReplyDelete
  7. ಸುನಾಥ ಸರ್...

    ಬೆಂದ್ರೆ ಕಾವ್ಯದ ಪರಿಚಯ ನಿಮ್ಮಿಂದ ಆದರೇ.. ಸೊಗಸು..
    ನಿಮ್ಮ ವಿವರಣೆ ಓದಿದ ಮೇಲೆ ಹಾಡು ಬೇರೆಯೇ ಅರ್ಥ ಕೊಡುತ್ತದೆ..

    ಇನ್ನಷ್ಟು ಕವಿತೆಗಳ ಪರಿಚಯ ಮಾಡಿಕೊಡಿ...

    ReplyDelete
  8. ಕವನದಷ್ಟೇ ಸೊಗಸಾಗಿದೆ ನಿಮ್ಮ ಭಾವ ವಿಶ್ಲೇಷಣೆ. ಮೂರು ಸಾಲುಗಳಲ್ಲಿ ಅದೆಂತಹ ಅರ್ಥವನ್ನಿಟ್ಟಿದ್ದಾರೆ ಬೇಂದ್ರೆಯವರು !.
    ಧನ್ಯವಾದಗಳು.

    ReplyDelete
  9. ಬೇಂದ್ರೆಯವರ ಪ್ರತೀ ಕವನದ ಹಿಂದೆ ಒಂದೊಂದು ದೊಡ್ಡ ಕಥೆ ಅಡಗಿದೆಯೆಂದು ಕೇಳಿದ್ದೇನೆ, ಕೆಲವನ್ನು ಶ್ರೀ ಪಾವಗಡ ಪ್ರಕಾಶ ರಾವ್ ವಿವರಿಸುವಾಗ ರಸವತ್ತಾಗಿ ಹೀರಿದ್ದೇನೆ, ಬೇಂದ್ರೆ ವರಕವಿ ಎಂಬುದರ ಜೊತೆಗೆ ವೇದಾಂತಿ ಎಂದರೂ ತಪ್ಪಲ್ಲ, ಅವರ ಬಹುತೇಕ ಕವನಗಳ ಸಾರ ವೇದಗಳ ಬಾಷ್ಯಗಳಂತೆ! ವೇದವನ್ನು ಓದಲು ಆಗದವರು ಕೊನೇಪಕ್ಷ ಬೇಂದ್ರೆಯವರ ಕವನಗಳನ್ನು ಓದಿದರೂ ಸಾಕು ಅನಿಸುತ್ತದೆ. ನಮ್ಮಂತಹ ಸಾಮಾನ್ಯರಿಂದ ನಾಲ್ಕೂ ವೇದವಿರಲಿ ಒಂದನ್ನೇ ಪರಿಪೂರ್ಣವಾಗಿ ಓದಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದು ಕಷ್ಟ, ಹೀಗಿರುವಾಗ ಬೇಂದ್ರೆ ಕವನಕ್ಕೆ ಭಾಷ್ಯ ಬರೆದರೆ ಅದು ನೀವು ಜನಸಾಮಾನ್ಯರಿಗೆ ಮಾಡುವ ಉಪಕಾರ, ಇದರ ಜೊತೆಜೊತೆಗೇ ಕವನದ ಹಿಂದಿನ ಕವನಹುತ್ತಿದ ಕಥೆ ಸಿಕ್ಕರೆ ಅದನ್ನೂ ನಮಗೆ ಕರುಣಿಸಿದರೆ ಇನ್ನೂ ಜಾಸ್ತಿ ಉಪಕಾರ,

    ಅದು ಕಾವ್ಯ ಇದು ಭಾಷ್ಯ
    ಈವುದಿದು ಸರಿ ತೋಷ್ಯ
    ಇದು ಓದುವಗೆ ಭವಿಷ್ಯ
    ಬೇಂದ್ರೆ ಕಾಣದ ನಾ ಶಿಷ್ಯ

    ಇಂತಹದನ್ನೆಲ್ಲ ಕಲೆಹಾಕಿ ನಿಜವಾಗಿ ಮಾಡಬಹುದಾದ ಒಂದು ಕೃತಿ ' ಸುನಾಥ ದರ್ಶನ' - ಇದು ತಮಾಷೆಗಾಗಿ ಹೇಳಿದ್ದಲ್ಲ, ಬಹಳ ಸರಿಯಾದ ತಲೆಬರಹವೇನೋ ಅನಿಸುತ್ತಿದೆ, ದೇಶಪಾಂಡೆ ಸರ ತಮ್ಮ ವ್ಯಾಖ್ಯಾನ ಓದಾಕ ಹತ್ತದ್ರ ಆತ ಹತ್ಕೊಂಡೇ ಇರ್ತಾನ್ ಬುಡ್ರಿ, ತಮಗ ಸಾವಿರ ಸಲಾಮು ಕಣ್ರೀಪಾ, ಕಮ್ಮಿ ಆದ್ರ ಹೇಳ್ರಲ್ಲ ಮತ್ತ !

    ReplyDelete
  10. ವಿಜಯಶ್ರೀ,
    ಈ ಕವನವು ಬೇಂದ್ರೆಯವರ ‘ಸಖೀಗೀತ’ ಸಂಕಲನದಲ್ಲಿದೆ.
    ‘ಮುಗಿಲ ಮಾರಿಗೆ ರಾಗರತಿಯಾ....’ ಇದು ನನಗೂ ಇಷ್ಟವಾದ ಕವನ.

    ReplyDelete
  11. ಮೂರ್ತಿಯವರೆ,
    ಬೇಂದ್ರೆಯವರ ಕವನಗಳ ಹೂತೋಟದಲ್ಲಿ ಜೊತೆಯಾಗಿ ವಿಹರಿಸೋಣ!

    ReplyDelete
  12. ಬಾಲು,
    ಬೇಂದ್ರೆಯವರೆ ಧಾರವಾಡ ನಿಜವಾದ ಫೇಡೆ!ಆ ಸವಿ ಬೇರೆ ಫೇಡೆಗೆ ಇಲ್ಲ.

    ReplyDelete
  13. ಮನಮುಕ್ತಾ,
    ಬೇಂದ್ರೆಯವರ ಕಾವ್ಯಾಸ್ವಾದನ ನನಗೂ ಪ್ರಿಯವಾದ ವಿಷಯವೇ. ಆದರೆ, ಸರಿಯಾದ ವ್ಯಾಖ್ಯಾನ ಕೊಡಬಲ್ಲೆನೆ ಎನ್ನುವ ಅಧೈರ್ಯವೂ ಇದೆ.

    ReplyDelete
  14. ತೇಜಸ್ವಿನಿ,
    ಈ ಕವನವು ‘ಸಖೀಗೀತ’ ಸಂಕಲನದಲ್ಲಿದೆ. ಇದು ಬೇಂದ್ರೆಯವರ ಒಂದು ಶ್ರೇಷ್ಠ ಗೀತೆ ಎಂದು ನನ್ನ ಭಾವನೆ.

    ReplyDelete
  15. ಶ್ಯಾಮಲಾ,
    ಬೇಂದ್ರೆಯವರ ಕವನ ಮೆಚ್ಚುಗೆಯಾಗುವದು ಸಹಜವೇ. ನನ್ನ
    ವ್ಯಾಖ್ಯಾನ ಸ್ವಲ್ಪವಾದರೂ ಮೆಚ್ಚುಗೆಯಾಗಿದ್ದರೆ, ನಾನು ಧನ್ಯ.

    ReplyDelete
  16. ಪ್ರಕಾಶ,
    ಬೇಂದ್ರೆಯವರ ಕವನಗಳನ್ನು ಅರಿತುಕೊಳ್ಳಲು, ನಾನು ಅರಿತದ್ದನ್ನು ನಿಮ್ಮ ಎದುರಿಗೆ ಇಡಲು ಖಂಡಿತವಾಗಿಯೂ ಪ್ರಯತ್ನಿಸುವೆ.

    ReplyDelete
  17. ಪುತ್ತರ್,
    ಚಿಕ್ಕದಾದರೂ ಚೊಕ್ಕ ಚಿನ್ನವಾಗಿರುವದೇ ಈ ಕವನದ ಹೆಚ್ಚುಗಾರಿಕೆ!

    ReplyDelete
  18. ಭಟ್ಟರೆ,
    ಬೇಂದ್ರೆಯವರದು ಅಪಾರವಾದ ಓದು.
    ವೇದ, ಉಪನಿಷತ್ತು, ವಿಜ್ಞಾನ, ಸಂಶೋಧನೆ ಎಲ್ಲದರಲ್ಲಿಯೂ ಅವರಿಗೆ ಪಾಂಡಿತ್ಯವಿತ್ತು.ಅದನ್ನೆಲ್ಲ ಕವನೀಕರಿಸುವ ಪ್ರತಿಭೆ ಇತ್ತು.
    ನಿಮ್ಮ ಸಾವಿರ ಸಲಾಮು ಸಲ್ಲಬೇಕಾದದ್ದು ಅವರಿಗೇ ಹೊರತು ನನಗಲ್ಲ!

    ReplyDelete
  19. ಸರ್
    ಬೇಂದ್ರೆ ಅಜ್ಜನವರ
    ಕವನಗಳನ್ನು ಓದುವುದೇ ಒಂದು ಸಂಭ್ರಮ
    ಅವರ ಕವನದ ಪರಿಚಯ ಮಾಡಿಸಿದ್ದಿರಿ
    ತುಂಬಾ ಥ್ಯಾಂಕ್ಸ್

    ReplyDelete
  20. ಕಾಕಾ.. ತುಂಬಾ ಸೊಗಸಾಗಿ ವಿವರಿಸಿದ್ದೀರಿ. "ಬೆಳಗು" ನನಗೆ ತುಂಬಾ ಸೊಗಸಿದ್ದರೂ "ವಸಂತಮುಖ" ಅದೇಕೋ ಅಷ್ಟು ಆಕರ್ಷಣೀಯವೆನಿಸಿರಲಿಲ್ಲ, ಕಾರಣ ಗೊತ್ತಿಲ್ಲ. ಆದರೆ ನಿಮ್ಮ ವಿವರಣೆ ಓದುತ್ತಾ ಅದನ್ನು ಮತ್ತೆ ಓದುತ್ತಾ ಹೋದಂತೆ ರುಚಿ ಹತ್ತಿತು.

    ಧನ್ಯವಾದ

    ReplyDelete
  21. ಪ್ರಕೃತಿ ವೈಭವವನ್ನು ವರ್ಣಿಸುವ ಬೇಂದ್ರೆಯವರ ,"ವಸಂತ ಮುಖ " ಕವನದ ವಿಶ್ಲೇಷಣೆ ಚೆನ್ನಾಗಿದೆ.

    ಮೂರನೆಯ ನುಡಿ ಹಾಗು ಅದರ ಅರ್ಥ ಬಹಳ ಇಷ್ಟ ಆಯ್ತು... :-)

    ReplyDelete
  22. ವಾಹ್ ಎಂತಹ ಸಾಲುಗಳು, ಬಹಳ ಧನ್ಯವಾದಗಳು ಕಾಕ, ಬೇಂದ್ರೆಯವರ ಈ ಕವನ ಓದಿದ್ದೆ ಆದರೆ ಇಷ್ಟು ಅರ್ಥಗರ್ಭಿತವಾಗಿ ತಿಳಿದುಕೊಂಡಿರಲಿಲ್ಲ.... ವಂದನೆಗಳು

    ReplyDelete
  23. ಬೇಂದ್ರೆಯವರ ವಸಂತಮುಖ ಕವನ ಸುಂದರವಾಗಿದೆ. ಅದನ್ನು ಮೊದಲು ಓದಿದ್ದರೂ ಅದರ ಅರ್ಥವ್ಯಾಪ್ತಿ ಇಷ್ಟ್ತೊಂದು ಗಹನವಾಗಿದೆ ಎಂದು ತಿಳಿದಿರಲಿಲ್ಲ! ತಮ್ಮ ವಿವರಣೆಗೆ ಧನ್ಯವಾದಗಳು. "ಬೇಂದ್ರೆ-ಸುನಾಥ ದರ್ಶನ" ನಿಜಕ್ಕೂ ತಾವು ಪ್ರಯತ್ನ ಪಡಲೇಬೇಕು!!! ಕನ್ನಡ ಸಾಹಿತ್ಯಕ್ಕೆ ಇದರ ಅವಶ್ಯಕತೆ ಇದೆ.

    ReplyDelete
  24. ಗುರುಮೂರ್ತಿಯವರೆ,
    ಬೇಂದ್ರೆಯವರ ಕವನಗಳು ನಿಜಕ್ಕೂ ರಸಮಯ ಕವನಗಳು. ಕೆಲವು ಹರ್ಷದ ಕವನಗಳು, ಕೆಲವು ದುಃಖದ ಕವನಗಳು. ಬೇಂದ್ರೆಯವರೇ ಹಾಡಿದಂತೆ:
    "ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
    ನೀಡುವೆನು ರಸಿಕ ನಿನಗೆ;
    ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
    ಆ ಸವಿಯ ಹಣಿಸು ನನಗೆ!"

    ReplyDelete
  25. ಮಂಜುನಾಥರೆ,
    ‘ಬೆಳಗು’ ಕವನದಲ್ಲಿ explicit ಸೊಬಗಿದೆ. ‘ವಸಂತಮುಖ‘ದ ಸೊಬಗು implicit.

    ReplyDelete
  26. ದಿವ್ಯಾ,
    ಮೂರನೆಯ ನುಡಿಯು ಬೇಂದ್ರೆ-ದರ್ಶನದ punching ನುಡಿಯಂತಿದೆ. ಈ ನುಡಿಯ ಮೊದಲ ಸಾಲಾದ, "ನೂರು ಮರ ನೂರು ಸ್ವರ’ವನ್ನು ಕೀರ್ತಿನಾಥ ಕುರ್ತಕೋಟಿಯವರು ತಮ್ಮ ಒಂದು ಗ್ರಂಥದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ.

    ReplyDelete
  27. ಮನಸು,
    "ನಿನ್ನ ಮಾತಿನಲಿಹುದು ಒಡಪಿನಂದ" ಎಂದು ಬೇಂದ್ರೆಯವರ
    ಒಂದು ಕವನದ ಸಾಲು ಹೇಳುತ್ತದೆ. ಬೇಂದ್ರೆಯವರ ಕವನಗಳಿಗೆಲ್ಲ ಇದೇ ಮಾತನ್ನು ಹೇಅಬಹುದೇನೊ?

    ReplyDelete
  28. ಸೀತಾರಾಮರೆ,
    ಬೇಂದ್ರೆಯವರು ವರಕವಿಗಳು. ಅವರ ಕವನಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ಒಬ್ಬ ಸಾಮಾನ್ಯ ವ್ಯಕ್ತಿ ನಾನು. ಹೂವಿನ ಜೊತೆಗೆ ನಾರೂ ಸ್ವರ್ಗಕ್ಕೆ ಹೋಗುತ್ತಿರುವದೇ
    ನನ್ನ ಭಾಗ್ಯ!

    ReplyDelete
  29. ಕಾಕಾ
    ತಮಗೆ ಬೇಂದ್ರೆಯವರು ಎಂದರೆ ಬಹಳ ಪ್ರೀತಿಯೇ?? ಅದೆಷ್ಟು ಸುಂದರವಾಗಿ ವಿವರಿಸುತ್ತೀರಿ, ತಮ್ಮ ಲೇಖನದಲ್ಲಿ ಬೇಂದ್ರೆಯವರ ಮೆಲಿನ ತಮ್ಮ ಆದರಾಭಿಮಾನಗಳು ಎದ್ದು ಕಾಣುತ್ತದೆ. ಮತ್ತು ಅದು ನಮ್ಮಲ್ಲೂ ಇನ್ನಷ್ಟು ಪ್ರೀತಿಯನ್ನು ಮೂಡಿಸುತ್ತದೆ.

    ReplyDelete
  30. ಕಾಕಾ,

    ಬೇಂದ್ರೆ ಅಜ್ಜನ ಕವನದ ಫರ್ಮಾಯಿಶಿ ಎಷ್ಟು ಜಲ್ದಿ ಇಡೆರೇದ.
    ಬೇಂದ್ರೆ ಅಜ್ಜನ ಈ ಕವನ ನಿಜಕ್ಕೂ "ಇದುವೆ ಜೀವ, ಇದು ಜೀವನ
    "

    ನನಗಂತೂ ಈ ಕೆಳಗಿನ ಸಾಲುಗಳು ತುಂಬಾ ಹಿಡಿಸಿದವು.

    "ನೂರು ಮರ! ನೂರು ಸ್ವರ
    ಒಂದೊಂದು ಅತಿ ಮಧುರ
    ಬಂಧವಿರದೆ ಬಂಧುರ
    ಸ್ವಚ್ಛಂದ ಸುಂದರ
    "

    -ಶೆಟ್ಟರು

    ReplyDelete
  31. sunaath ,

    ಹೊಸ ಪದಗಳ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ, ಹಲವು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..

    ReplyDelete
  32. ಸುಂದರ ಕವನದ ಸಚಿತ್ರ ವರ್ಣನೆ, ತು೦ಬಾ ಚೆನ್ನಾಗಿದೆ .ನಿಮ್ಮಿ೦ದ ಬೇ೦ದ್ರೆಯವರ ರಚನೆ ಗಳ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ.

    ReplyDelete
  33. ಬೇಂದ್ರೆಯವರ ಕವನದ ಅರ್ಥ ವಿವರಿಸಿದ್ದಕ್ಕೆ ಧನ್ಯವಾದಗಳು ಸುನಾಥ್ ಸರ್.. ಬುದ್ಬುದ, ಬಂಧುರ ಮುಂತಾದ ಸುಂದರ ಶಬ್ದಗಳಿಗೆ ಅರ್ಥ ಕೇಳಿದರೆ ಈಗಿನ ಕನ್ನಡ ಪಂಡಿತರಲ್ಲೂ ಉತ್ತರವಿಲ್ಲವೇನೋ..

    ReplyDelete
  34. ಸುನಾಥ್ ಸರ್,
    ಆ ವರಕವಿಯ ಕವನ,ಲೇಖನಗಳ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು, ಅಂಥಹ ಧೀಮಂತ ಕವಿಯೋರ್ವರ ಕವನದ ಬಗ್ಗೆ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ, ಈ ಕವನವನ್ನು ಕೇಳಿರಲಿಲ್ಲ, ನಿಮ್ಮಿಂದ ತಿಳಿಯಿತು. ಧನ್ಯವಾದಗಳು.

    ReplyDelete
  35. ಸಾಗರಿ,
    ರತ್ನಾಕರ ವರ್ಣಿಯು ಭರತೇಶ ಚಕ್ರವರ್ತಿಯನ್ನು ‘ಭುವನದ ಭಾಗ್ಯ’ ಎಂದು ವರ್ಣಿಸಿದ್ದಾನೆ.(Am I correct?)ಹಿರಿಯ ವಿಮರ್ಶಕ ಆಮೂರರು ಈ ಪದಪುಂಜವನ್ನು ಎತ್ತಿಕೊಂಡು
    ಬೇಂದ್ರೆಯವರನ್ನು ‘ಭುವನದ ಭಾಗ್ಯ’ ಎಂದು ಕರೆದಿದ್ದಾರೆ.
    ಈ ವರಕವಿ ಕನ್ನಡ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯವಿಶೇಷದಿಂದಲೇ ಇರಬೇಕು.

    ReplyDelete
  36. ಶೆಟ್ಟರ,
    ನೀವು ಫರಮಾಯಿಶಿ ಮಾಡೋದು ಹೆಚ್ಚೊ, ನಾ ‘ಯೆಸ್ !’ಅನ್ನೋದು ಹೆಚ್ಚೊ?
    ‘ಕನಸಿನೊಳಗೊಂದು ಕಣಸು’ ಒಂಚೂರು ಉದ್ದ ಕವನ ಆಗಿರೋದರಿಂದ, ಅದರ ಬದಲಿಗೆ ಈ short but sweet ಕವನವನ್ನು ಆರಿಸಿಕೋಬೇಕಾತು.

    ReplyDelete
  37. ಕತ್ತಲೆ ಮನೆ/ಮನಸಿನ ಮನೆ/ಜ್ಞಾನಾರ್ಪಣಮಸ್ತು,
    ಬೇಂದ್ರೆಯವರ ಕವನಗಳನ್ನು ಓದಿದರೆ, ಕನ್ನಡದ ಅನೇಕ ಪದಗಳ ಪರಿಚಯವಾಗುವದು ಖಂಡಿತ!

    ReplyDelete
  38. ಪರಾಂಜಪೆಯವರೆ,
    ಬೇಂದ್ರೆ ಕಾವ್ಯವೇ ಸಚಿತ್ರವಾದ ಕಾವ್ಯ!

    ReplyDelete
  39. ದಿಲೀಪ,
    ಬೇಂದ್ರೆ ಕಾವ್ಯವೆಂದರೆ ಕನ್ನಡ ಪದಗಳ ಕೋಶವೇ ಆಗಿದೆ. ಅದಲ್ಲದೆ ಕನ್ನಡ,ಸಂಸ್ಕೃತ,ಪ್ರಾಕೃತ ಆಂಗ್ಲ ಪದಗಳೂ ಸಹ ಬೇಂದ್ರೆ ಕವನಗಳಲ್ಲಿ ಸಿಗುತ್ತವೆ.

    ReplyDelete
  40. ಪ್ರವೀಣ,
    ಬೇಂದ್ರೆ ಕವನವೊಂದನ್ನು ನಿಮಗೆ ತಲುಪಿಸಿದ್ದೇ ನನಗೆ ಸಂತೋಷ ತರುವ ವಿಷಯವಾಗಿದೆ. ನೀವು ಮೆಚ್ಚಿಕೊಂಡರೆ ನಾನು ಧನ್ಯ.

    ReplyDelete
  41. ಕಾಕಾ ,
    ನಿಮ್ಮ ವಿಮರ್ಶೆ ಓದುವುದು ಎಂದರೇನೆ .. ಒಂದು ರೀತಿಯ ಕುಶಿಯಾಗುತ್ತದೆ.
    ಬೇಂದ್ರೆಯವರ ವಸಂತಮುಖ ಕವನದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
    ಎಷ್ಟೊಂದು ಪದಗಳ ಅರ್ಥವೇ ಗೊತ್ತಿರಲಿಲ್ಲ ..

    ReplyDelete
  42. ಶ್ರೀಧರ,
    ಅಮೃತಪಾಕವನ್ನು ಮಾಡಿದವರು ಬೇಂದ್ರೆ. ಅದನ್ನು ನಿಮಗೆ ಬಡಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ.

    ReplyDelete
  43. ಸುನಾತ್ ಸರ್ ..ದರಾ ಬೇ೦ದ್ರೆ ಅ೦ದರೆ ಅವರೊ೦ದು "ಕಾವ್ಯ ವಿಶ್ವವಿದ್ಯಾಲಯ"..ಅವರ ಕವನದ ಜೊತೆಯಲ್ಲಿ ತಮ್ಮ ವ್ಯಾಖ್ಯಾನ ಓದುಗರಿಗೆ ಮತ್ತು ರಚಿಸಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ಮಾರ್ಗದರ್ಶನ.

    ಧನ್ಯವಾದಗಳು
    ಅನ೦ತ್

    ReplyDelete
  44. ಅನಂತರಾಜರೆ,
    ನೀವು ಹೇಳುವಂತೆ, ಬೇಂದ್ರೆಯವರು, ಕಾವವಿದ್ಯಾಲಯವೇ ಹೌದು. ಬೇಂದ್ರೆಯವರಿಗೆ ಹಾಗು ಗೋಪಾಲಕೃಷ್ಣ ಅಡಿಗರಿಗೆ ‘ಜನಕ ಕವಿ’ ಎಂದೇ ಕರೆಯುತ್ತಾರೆ.

    ReplyDelete
  45. ಸುನಾಥ ಅವರೆ,
    ಈ ಕವನ ನನಗೆ ತಂಬಾ ಹಿಡಿಸಿತು. ನಿಮ್ಮ ವಿವರಣೆ ಕೂಡ
    ಬಹಳ ಚೆನ್ನಾಗಿದೆ. ಕವನ ಹಾಗು ವಿವರಣೆ ಖುಶಿ ಕೊಟ್ಟವು.
    ಧನ್ಯವಾದಗಳು.

    ReplyDelete
  46. ಸುನಾಥ್ ಸರ್,

    ಬೇಂದ್ರೆಯವರ ವಸಂತಮುಖ ಪುಸ್ತಕದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಕವನ ಓದಿದಾಗ ನನಗೆ ಅರ್ಥವಾಗಲಿಲ್ಲ. ನೀವು ಕೆಳಗೆ ಕೊಟ್ಟ ವಿವರವನ್ನು ಓದಿದಾಗ ನಿಜಕ್ಕೂ ಖುಷಿಯಾಯ್ತು. ನಿಸರ್ಗದ ವಿಚಾರದಲ್ಲಿ ಬೇಂದ್ರೆಯವರಿಗಿದ್ದ ರುಚಿ ಮತ್ತು ಅಭಿರುಚಿಯನ್ನು ಚೆನ್ನಾಗಿ ವಿವರಿಸಿದ್ದೀರಿ..

    ಧನ್ಯವಾದಗಳು.

    ReplyDelete
  47. ವನಮಾಲಾ
    ಕವನವನ್ನು ಹಾಗು ವ್ಯಾಖ್ಯಾನವನ್ನು ಮೆಚ್ಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  48. ಶಿವು,
    ಬೇಂದ್ರೆಯವರು ನಿಸರ್ಗಪ್ರೇಮಿಗಳು. ಅವರ ಅನೇಕ ಕವನಗಳು ಸೂರ್ಯೋದಯದ ಮೇಲೆ ರಚಿಸಲ್ಪಟ್ಟಿವೆ!

    ReplyDelete
  49. ಕವಿತೆಯ ಒಳಾರ್ಥವನ್ನು ಅರ್ಥೈಸಿಕೊಳ್ಳುವದು
    ಒಂದು ಸವಾಲೇ ಸರಿ.ನಿಮ್ಮಂಥ ಪ್ರಾಜ್ಞರು ವಿವರಿಸಿದಾಗಲೇ
    ಕವಿತೆಯ ಬಗ್ಗೆ ಇನ್ನಷ್ಟು ಖುಷಿ ಮೂಡುತ್ತದೆ.
    ನಮಗೆಲ್ಲ ಸಹಜ ಮತ್ತು ಸಿಲ್ಲಿ ಅನಿಸುವ ಚಿತ್ರಗಳಲ್ಲಿ ಬೇಂದ್ರೆ ಅವರಿಗೆ ವಿಶೇಷ ಅನಿಸುವದು ಅವರಲ್ಲಿರುವ ಪಕ್ವತೆ ಮತ್ತು ಅನುಭವ ಅಥವಾ ಇನ್ನೂ ಏನೇನೋ ಕಾರಣಗಳಿರಬಹುದು.
    ಆ ಹಂತ ತಲುಪಬೇಕೆಂದರೆ ಉಫ್..!
    -RJ

    ReplyDelete
  50. RJ,
    ಬೇಂದ್ರೆಯವರಲ್ಲಿ ಪಕ್ವತೆ ಬಂದಿತ್ತು, ಅದು ಅವರ ಕವಿತೆಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ದಯವಿಟ್ಟು ನನ್ನನ್ನು ಮಾತ್ರ ಪ್ರಾಜ್ಞ ಎಂದು ಕರೆಯಬೇಡಿ!

    ReplyDelete
  51. ಸುನಾಥಣ್ಣ ಎಂದಿನಂತೆ ಬಹಳ ಮಾಹಿತಿ ಪೂರ್ಣ ಮತ್ತು ವಿವವರಣೆಯುಳ್ಳ ಲೇಖನ...ಹೌದು..ಬೇಂದ್ರೆಯವರ ಪ್ರಕೃತಿಯನ್ನು ನೋಡುವ ಪರಿ ಮತ್ತು ವಿವವರಿಸುವ ಆಳ ನಮಗೆಲ್ಲಾ ನಿಲುಕಕ್ಕೆ ಬರದು, ಚನ್ನಾಗಿದೆ ವಿವರಣೆ

    ReplyDelete
  52. ಜಲನಯನ,
    ಬೇಂದ್ರೆಯವರ ದೃಷ್ಟಿ ಮತ್ತು ಸೃಷ್ಟಿಯನ್ನು ಕಂಡಾಗ ನಾವು ಮೂಕರಾಗುತ್ತೇವೆ, ಅಲ್ಲವೆ?

    ReplyDelete
  53. ಬೇಂದ್ರೆಯವರ "ವಸಂತಮುಖ" ಕವನದ ಪರಿಚಯ ಭಾವಾರ್ಥದೊಂದಿಗೆ ಚೆನ್ನಾಗಿ ಬರೆದಿದ್ದೀರಿ.. ಧನ್ಯವಾದ

    ReplyDelete
  54. ಪಾಲ,
    ಮೆಚ್ಚಿಕೊಂಡಿರುವಿರಿ. ನಿಮಗೂ ಢನ್ಯವಾದಗಳು.

    ReplyDelete
  55. ಬೇ೦ದ್ರೆಯವರಿಗೆ ಬೇ೦ದ್ರೆಯವರೇ ಸಾಟಿ. ಉತ್ತಮ ಮಾಹಿತಿ ಸರ್. ಧನ್ಯವಾದಗಳು.

    ಅನ೦ತ್

    ReplyDelete
  56. ಸಂಗೀತ ತರಗತಿಯಲ್ಲಿ ಹೇಳಿಕೊಟ್ಟಾಗ ಅಥ೯ ತಿಳಿಯದೆ ಭಾವ ತುಂಬಿ ಹಾಡಲು ಸಾಧ್ಯವಾಗದೆ ಇದ್ದಾಗ ತುಂಬಾ ಅಥ೯ ಪೂಣ೯ ವಿವರಣೆ

    ReplyDelete
  57. ನವೋದಯವನ್ನು ಸಾರುವ ಮಹತ್ವದ ಕವಿತೆ ಇದಾಗಿದೆ.

    ReplyDelete
  58. ಅನಂತರಾಜರೆ, ಅನಂತ ಧನ್ಯವಾದಗಳು.

    ReplyDelete
  59. ಪ್ರಿಯ Unknown, ಭಾವ ಹಾಗು ಅರ್ಥಗಳ ಸಂಯೋಜನೆ ಈಗ ಸೊಗಸಾಗಿದೆ ಅಲ್ಲವೆ?

    ReplyDelete
  60. ಕೃಷ್ಣಾ ಕಟ್ಟಿಯವರೆ, ನಿಮ್ಮ ಪ್ರತಿಕ್ರಿಯೆ ನನಗೆ ಅಮೂಲ್ಯವಾದದ್ದು.

    ReplyDelete
  61. This comment has been removed by a blog administrator.

    ReplyDelete
  62. ಮಲ್ಲಪ್ಪ ಪದ ತೆಗೆದು ಮಾಡಬೇಕಾಗಿ ವಿನಂತಿ

    ReplyDelete
  63. Unknownರೆ, ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಪ್ರತಿಕ್ರಿಯೆಯೇ ಅಳಿಸಿ ಹೋಗುವುದು.

    ReplyDelete