Monday, January 10, 2011

ಎರಡು ಲೇಖನಗಳು : ಒಂದು ಪ್ರಶ್ನೆ

ನಮ್ಮ ಸಮಾಚಾರ ಪತ್ರಿಕೆಗಳಲ್ಲಿ ಎರಡು ಲೇಖನಗಳು ಅಲ್ಪಕಾಲಾಂತರದಲ್ಲಿ ಪ್ರಕಟವಾಗಿರುವದು, ಈ ವಿಷಯಕ್ಕೆ ನಮ್ಮ ‘ವಿಚಾರವಾದಿ’ಗಳು ಕೊಡುತ್ತಿರುವ ಮಹತ್ವವನ್ನು ತೋರಿಸುತ್ತದೆ.  ಮೊದಲನೆಯದು ಜನೆವರಿ ಐದನೆಯ ದಿನಾಂಕದ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಎರಡನೆಯದು ಜನೆವರಿ ಒಂಬತ್ತನೆಯ ದಿನಾಂಕದ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದೆ. ಪ್ರಜಾವಾಣಿಯ  ಅಂಕಣದ ಲೇಖಕರು ಶ್ರೀ ಅನಂತಮೂರ್ತಿ. ಸಂಯುಕ್ತ ಕರ್ನಾಟಕದಲ್ಲಿ ಬರೆದವರು ಶ್ರೀ ಕೆ.ಎಸ್. ಶರ್ಮಾ. ಎರಡೂ ಲೇಖನಗಳ ಹೂರಣ ಒಂದೇ: ಇತ್ತೀಚೆಗೆ ಸೆರೆಮನೆಯ ಶಿಕ್ಷೆಗೆ ಒಳಗಾದ ವಿನಾಯಕ ಸೇನರ ಪರವಾದ ವಕಾಲತ್ತು.

ಮೊದಲಿಗೆ ಶ್ರೀ ಶರ್ಮಾ ಅವರ ಲೇಖನವನ್ನು ಓದಿ:





ಶ್ರೀಮಾನ್ ಕೆ.ಎಸ್.ಶರ್ಮಾ ಅವರ ಬಗೆಗೆ ನನಗೆ ತುಂಬ ಗೌರವವಿದೆ. ಅವರು ಕಾನೂನು ಪರಿಣತರು ಹಾಗು ಕರ್ನಾಟಕದ ದಿನಗೂಲಿ ಆಂದೋಲನದ ಪ್ರಮುಖ ನಾಯಕರು. ಆದರೆ ಮೂಲತಃ ಮಾರ್ಕ್ಸವಾದಿಯಾದ ಶರ್ಮಾ ದೇಶದ ಎಲ್ಲ ಸಮಸ್ಯೆಗಳನ್ನು ಹಾಗು ಪರಿಹಾರಗಳನ್ನು ತಮ್ಮ ಮಾರ್ಕ್ಸವಾದದ ದೃಷ್ಟಿಕೋನದಿಂದಲೇ ನೋಡಬಯಸುತ್ತಾರೆ. ಈ ಸಂದರ್ಭದಲ್ಲಿ ನಾವು ರಶಿಯದ ಹಾಗು ಚೀನಾದ ಮಾರ್ಕ್ಸವಾದಿಗಳಿಗೂ ಭಾರತೀಯ ಮಾರ್ಕ್ಸವಾದಿಗಳಿಗೂ ಇರುವ ಅಂತರವನ್ನು ಗಮನಿಸುವದು ಅವಶ್ಯಕ. ರಶಿಯದ ಹಾಗು ಚೀನಾದ ಮಾರ್ಕ್ಸವಾದಿಗಳು ತಮ್ಮ ದೇಶದ ಹಿತಾಸಕ್ತಿಯನ್ನು ತಿಳಿದುಕೊಂಡವರು ಹಾಗು ಕಟ್ಟಾ ದೇಶಾಭಿಮಾನಿಗಳು. ಭಾರತೀಯ ಮಾರ್ಕ್ಸವಾದಿಗಳಿಗೆ ದೇಶದ ಹಿತಕ್ಕಿಂತಲೂ ಮಾರ್ಕ್ಸವಾದದ ಹಿತವೇ ಮುಖ್ಯವಾಗಿದೆ.

ನನ್ನ ಅಭಿಪ್ರಾಯಕ್ಕೆ ಪುಷ್ಟಿ ಕೊಡಲು ನಾನು ಬಂಗಾಲ ಹಾಗು ಕೇರಳ ರಾಜ್ಯಗಳ ಉದಾಹರಣೆಯನ್ನು ಕೊಡಬಯಸುತ್ತೇನೆ. ಬಂಗಾಲದಲ್ಲಿ ಅನೇಕ ವರ್ಷಗಳಿಂದ ಆಳುವ ಕಮ್ಯುನಿಸ್ಟ ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾಚಾರ ಹಾಗು ಆ ರಾಜ್ಯದ ಪೋಲೀಸರು ಮುಗ್ಧ ರೈತರ ಮೇಲೆ ಮತ್ತು ಸಾಮಾನ್ಯ ಜನತೆಯ ಮೇಲೆ ಮಾಡುತ್ತಿರುವ ಅತ್ಯಾಚಾರಗಳು ಶರ್ಮಾರವರಿಗೆ ಗೊತ್ತಿಲ್ಲವೆ? ಕೇರಳದಲ್ಲಿ  ಆಳುವ ಪಕ್ಷದ ಕೆಲವು ಧುರೀಣರು ರತಿಹಿಂಸೆಯಲ್ಲಿ ತೊಡಗಿಕೊಂಡಿದ್ದು ಹಾಗು ಅಲ್ಲಿ ಶ್ರೀ ಜೋಸೆಫ್ ಎನ್ನುವ ಉಪನ್ಯಾಸಕರ ಕೈಗಳನ್ನು ಉಗ್ರವಾದಿಗಳು ಕತ್ತರಿಸಿದ್ದದ್ದು ಇವರಿಗೆ ಗೊತ್ತಿಲ್ಲವೆ?  ಈ ಘಟನೆಗಳು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೆ? ಈ ಎಲ್ಲ ಸಂದರ್ಭಗಳಲ್ಲಿ ತುಟಿಗಳನ್ನೂ ಸಹ ಅಲುಗಾಡಿಸದ ಶರ್ಮಾ ಅವರು ವಿನಾಯಕ ಸೇನರಿಗೆ ಭಾರತೀಯ ನ್ಯಾಯಾಲಯವು ಶಿಕ್ಷೆ ನೀಡಿದ್ದಕ್ಕಾಗಿ ಗುಡುಗುತ್ತಿದ್ದಾರೆ.

ವಿನಾಯಕ ಸೇನರು ಉತ್ತಮ ವೈದ್ಯರಿರಬಹುದು, ಆದಿವಾಸಿಗಳ ಸೇವೆಯನ್ನು ನಿ:ಸ್ಪೃಹರಾಗಿ ಮಾಡಿರಬಹುದು. ಆದರೆ ಈ ದೇಶದ ಕಾನೂನನ್ನು ಅವರು ಭಂಗಿಸಿದ್ದರೆ, ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಸೇನರೇ ಆಗಲಿ, ಶರ್ಮಾರೇ ಆಗಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಲ್ಲದೆ ನ್ಯಾಯಾಲಯವು ಕಾನೂನಿನ ಎಲ್ಲ ಮುಖಗಳ ದೀರ್ಘ ಅಧ್ಯಯನದ ನಂತರವೇ ತೀರ್ಪು ನೀಡುತ್ತದೆ. ಈ ತೀರ್ಪನ್ನು ನಾವು ಗೌರವಿಸಬೇಡವೆ? ನಮಗೆ ಬೇಡವಾದ ತೀರ್ಪಿಗಾಗಿ ನ್ಯಾಯಾಲಯವನ್ನು ಟೀಕಿಸುವದು ಸರಿಯೆ? ಈ ತೊಡಕನ್ನು ಬದಿಗೆ ಸರಿಸಲೆಂದೇ ಶರ್ಮಾ ಬೇರೊಂದು ಉಪಾಯ ಹುಡುಕುತ್ತಾರೆ. ಅದೇನೆಂದರೆ : ಭಾರತದ ಕಾನೂನುಗಳೇ ಸರಿಯಾಗಿಲ್ಲ! ನಮ್ಮ ಕಾನೂನುಗಳು ಮಾನವತಾವಿರೋಧಿಯಾಗಿವೆ! ಯಾಕೆ ಸ್ವಾಮಿ? ಈಗಿರುವ ಕಾನೂನುಗಳ ಮೂಲಕ ಎಷ್ಟು ದೇಶದ್ರೋಹಿಗಳನ್ನು ನೀವು ಶಿಕ್ಷೆಗೆ ಒಳಪಡಿಸಿದ್ದೀರಿ? ಅಫಝಲ್ ಗುರು, ಕಸಬರಂತಹ ಭಯೋತ್ಪಾದಕರು  ಸೆರೆಮನೆ ಎನ್ನುವ ಅರಮನೆಗಳಲ್ಲಿ ಆರಾಮಾಗಿ ಕಾಲಕ್ಷೇಪ ಮಾಡುತ್ತಿಲ್ಲವೆ? ಇದಕ್ಕಿಂತ ಮಾನವತಾವಾದಿ ಕಾನೂನು ಯಾವ ದೇಶದಲ್ಲಿ ನಿಮಗೆ ಸಿಕ್ಕೀತು?

ಎರಡನೆಯದಾಗಿ ಸೇನರ ಬೆಂಬಲಕ್ಕೆ ನಿಂತಂತಹ ಮಾನವ ಹಕ್ಕುಗಳ ಸಂಘಟನೆಗಳ ದೊಡ್ಡ ಪಟ್ಟಿಯನ್ನೇ ಶರ್ಮಾ ಕೊಟ್ಟಿದ್ದಾರೆ. ಶರ್ಮಾರಿಗೆ ಹಾಗು ಈ ಸಂಘಟನೆಗಳಿಗೆ ಭಾರತದಲ್ಲಿ ಸಂಚಾರ ನಿಯಂತ್ರಿಸುವ ಪೋಲೀಸನೂ ಸಹ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಸರ್ವಾಧಿಕಾರಿಯಂತೆ ಕಾಣುತ್ತಾನೆ. ಇವರಿಗೆ ರಶಿಯಾ ಹಾಗು ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕಾಣುವದಿಲ್ಲ. ಅಮೇರಿಕಾ ಎಷ್ಟೆಲ್ಲ ದೇಶಗಳ ಅಮಾಯಕ ನಾಗರಿಕರ ಮೇಲೆ ವರ್ಷ ವರ್ಷವೂ ಬಾಂಬು ಸುರಿಸುವದು ಕಾಣುವದಿಲ್ಲ. ಆಸ್ಟ್ರೇಲಿಯಾದಲ್ಲಿ ವರ್ಣೀಯ ಹಿಂಸೆ ನಡೆಯುತ್ತಿರುವದು ಕಾಣುವದಿಲ್ಲ. ನಮ್ಮ ದೇಶದ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ಒಬ್ಬ ಅಪರಾಧಿಯನ್ನು ಸೆರೆಮನೆಗೆ ಕಳುಹಿಸಿದರೆ ಮಾತ್ರ ಅದು ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗುತ್ತದೆ! ಇದಲ್ಲದೆ, ಅನೇಕ  ಮಾನವ ಹಕ್ಕುಗಳ ಸಂಘಟನೆಗಳು ವಿವಿಧ ದೇಶಗಳ ಗುಪ್ತಚಾರ ಸಂಸ್ಥೆಗಳ ಮುಖವಾಡಗಳು ಎನ್ನುವದು ಶರ್ಮಾರಿಗೆ ಗೊತ್ತಿಲ್ಲವೆ? ಭಾರತೀಯ ಸಮಾಜವನ್ನು ಒಡೆಯುವದು ಹಾಗು ಭಾರತದ ಆಡಳಿತವನ್ನು ಬುಡಮೇಲು ಮಾಡುವದೇ ಈ ಸಂಸ್ಥೆಗಳ ಉದ್ದೇಶ ಎನ್ನುವದು  ಶರ್ಮಾರಿಗೆ ಗೊತ್ತಿಲ್ಲವೆ?

ಕೆಳಗಿನ ನ್ಯಾಯಾಲಯವು ಶಿಕ್ಷೆ ವಿಧಿಸಿದಾಗ, ಮೇಲಿನ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿರುತ್ತದೆ. ವಿನಾಯಕ ಸೇನರು ಸಾಧ್ಯವಿದ್ದರೆ ಆ ಅವಕಾಶವನ್ನು ಬಳಸಿಕೊಳ್ಳಬಹುದು. ಅಂತಹ ನೇರಮಾರ್ಗವನ್ನು ಬಿಟ್ಟು ನಮ್ಮ ನ್ಯಾಯವ್ಯವಸ್ಥೆಯನ್ನು ಹಾಗು ನ್ಯಾಯಾಲಯಗಳನ್ನು ದೂಷಿಸುವದು ಶರ್ಮಾರಂತಹ ಕಾನೂನುಪಂಡಿತರಿಗೆ ಭೂಷಣವಲ್ಲ.  ಇಂತಹ ವಿಧಾನವನ್ನು ಅನುಸರಿಸುವದರಿಂದಲೇ ಅರುಂಧತಿ ರಾಯರಂತಹ ವ್ಯಕ್ತಿಗಳಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚುವದು ಸಾಧ್ಯವಾಗಿದೆ. ಆದರೆ ಈ ಸ್ವಾರ್ಥಿಗಳ ಮಹತ್ವಾಕಾಂಕ್ಷೆಗಾಗಿ ನಮ್ಮ ದೇಶ ಎಂತಹ ಬೆಲೆ ತೆರಬೇಕಾಗುತ್ತದೆ ಎನ್ನುವದು ಶರ್ಮಾರಿಗೆ ಗೊತ್ತಿಲ್ಲವೆ? ಶರ್ಮಾ ಕೀರ್ತಿಕಾಂಕ್ಷಿ ಅಲ್ಲ ಎನ್ನುವದು ನನಗೆ ಗೊತ್ತಿದೆ. ಬದುಕಿನುದ್ದಕ್ಕೂ ಅಪ್ಪಿಕೊಂಡು ಬಂದ ಮಾರ್ಕ್ಸವಾದವನ್ನು ಸಮರ್ಥಿಸುವ ಸಲುವಾಗಿ, ದೇಶದ ಕಾನೂನುಗಳನ್ನು ಹೀಯಾಳಿಸುವ ಕಸರತ್ತನ್ನು ಶರ್ಮಾ ಮಾಡುತ್ತಿದ್ದಾರೆಯೆ?

ಶರ್ಮಾ ಅವರ ದೃಷ್ಟಿಕೋನ ಹೇಗೇ ಇರಲಿ, ಅವರ ಬರಹದಲ್ಲಿ ಸರಳತೆ ಇದೆ, ಸಾಕಷ್ಟು ಮಾಹಿತಿ ಇದೆ ಹಾಗು ತಾವು ನಂಬಿರುವದು ಏನು ಎನ್ನುವದರ ಸ್ಪಷ್ಟತೆ ಇದೆ. ನನ್ನ ನಂಬಿಕೆ ಬೇರೆಯಾಗಿರುವದರಿಂದ ಅವರ ಅಭಿಪ್ರಾಯವನ್ನು ನಾನು ಒಪ್ಪುವದಿಲ್ಲ, ಅಷ್ಟೇ. 
ಈಗ ಶ್ರೀ ಅನಂತಮೂರ್ತಿಯವರ ಲೇಖನವನ್ನು (ಪ್ರಜಾವಾಣಿ, ೫ನೆಯ ಜನೆವರಿ) ನೋಡಿರಿ.


ಅನಂತಮೂರ್ತಿಯವರು ಕ್ಲಿಷ್ಟ ಶೈಲಿಯಲ್ಲಿ ಲೇಖನವನ್ನು ಬರೆಯಲು ಇಷ್ಟ ಪಡುತ್ತಾರೆ. ಹಾಗೆ ಮಾಡುವದರಿಂದ ತಮ್ಮ ಲೇಖನವು ಕೃತಕ ಸಂಕೀರ್ಣತೆಯನ್ನು ಪಡೆದು, ಪಾಂಡಿತ್ಯಪೂರ್ಣವಾಗಿ ಕಂಗೊಳಿಸುವದು ಎನ್ನುವದು ಅವರ ಭ್ರಮೆಯಾಗಿದೆ. ಮಾಹಿತಿಶೂನ್ಯವಾಗಿರುವ ತಮ್ಮ ಲೇಖನದಲ್ಲಿ ಪಾಂಡಿತ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಅನಂತಮೂರ್ತಿಯವರು ಭೀಷ್ಮ ಹಾಗು ವಿಭೀಷಣರ ರೂಪಕಗಳನ್ನು ಬಳಸಿಕೊಂಡಿದ್ದಾರೆ ಎನ್ನಬಹುದು. ಈ ರೂಪಕಗಳನ್ನು ಒಟ್ಟಾಗಿ ನೋಡಬೇಕೆಂದು ಅವರು ನಮಗೆ ಸೂಚನೆ ಇತ್ತಿದ್ದಾರೆ. ಕೊನೆಗೊಮ್ಮೆ ಸುತ್ತು ಬಳಸಿ ನಕ್ಸಲರು ಕೆಟ್ಟವರೇನಲ್ಲ , ನಮ್ಮ ರಾವಣ ವ್ಯವಸ್ಥೆಯನ್ನು ಬದಲಾಯಿಸಲು (ಶ್ರೀರಾಮಚಂದ್ರನಂತೆ?) ಹೋರಾಡುತ್ತಿರುವವರು ಎಂದು ಶರಾ ಹಾಕುತ್ತಾರೆ. ಈ ನಕ್ಸಲವಾದಿಗಳು ಕರ್ನಾಟಕದಲ್ಲಿ ಮಾಡುತ್ತಿರುವ ಮಹಾಕ್ರಾಂತಿಯಲ್ಲಿ ಈವರೆಗೂ ಪ್ರಾಣ ತೆತ್ತಿರುವವರು ಯಾರು? ಅಮಾಯಕ ಹಳ್ಳಿಗರೊ ಅಥವಾ (ನೀಚ!) ಬಂಡವಾಳಶಾಹಿಗಳೊ? ಸ್ವತಃ ಅನಂತಮೂರ್ತಿಯವರು ಯಾವ ವರ್ಗದಲ್ಲಿ ಸೇರಿದ್ದಾರೆ? ರಾಜಧಾನಿಯ ಡಾಲರ್ ಕಾಲನಿಯಲ್ಲಿ ಮನೆ ಕಟ್ಟಿಕೊಂಡವರನ್ನು, ದುಬಾರಿ ಮದ್ಯಪಾನ ಮಾಡುವ ಶಕ್ತಿಯುಳ್ಳವರನ್ನು  ಯಾವ ವರ್ಗದಲ್ಲಿ ಸೇರಿಸಬಹುದು? ರಾವಣನ ರಾಜ್ಯಭಾರದಲ್ಲಿ ಅವನ ಭಟ್ಟಂಗಿಯಾಗಿ, ಸಕಲ ಸವಲತ್ತುಗಳನ್ನು ಪಡೆದುಕೊಂಡು ವಿಭೀಷಣನ ಹೆಸರು ಹೇಳುವವರನ್ನು ಯಾವ ಗುಂಪಿಗೆ ಸೇರಿಸಬೇಕು? ಹಾಗಿದ್ದರೆ ಅನಂತಮೂರ್ತಿಯವರು ಯಾತಕ್ಕಾಗಿ ವಿನಾಯಕ ಸೇನರ ಪರವಾಗಿ ವಕಾಲತ್ತು ಮಾಡಲು ಬಯಸುತ್ತಾರೆ? ನನಗೆ ತೋರಿದ್ದನ್ನು ಮೊದಲೇ ಹೇಳಿದ್ದೇನೆ. ದೇಶದ್ರೋಹಿಗಳ ಪರವಾಗಿ ನೀವು ಮಾನವತಾವಾದದ ಬುರುಡೆಯನ್ನು ಉರುಳಿಸಿದರೆ, ನೀವು ಅಂತರರಾಷ್ಟ್ರೀಯ ರಂಗದಲ್ಲಿ ಮಿಂಚಬಹುದು. ಈ ಮಾರ್ಗವನ್ನು ಅರುಂಧತಿ ರಾಯ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅನಂತಮೂರ್ತಿಯವರಿಗೂ ಈ ಮಾರ್ಗ ಹೊಸದೇನಲ್ಲ.

28 comments:

  1. ತಮ್ಮ ಪ್ರಶ್ನೆ ಸಮಂಜಸವಾಗಿದೆ. ಅನಂತಮೂತಿ ಕೆಲವೊಮ್ಮೆ ವಿಚಿತ್ರವಾಗಿ ಮೂತಿತಿರುವುವುದಿದೆ. ಗೋರಕ್ಷಣಾ ಕಾಯ್ದೆಯ ವಿರುದ್ಧವಾಗಿ ಹಾಗೂ ಕಸಾಯಿಖಾನೆಯ ವ್ಯಹಾರಗಳಿಗೆ ಪೂರಕವಾಗಿ ಅವರು ಮಾತನಾಡಿದ್ದರು. ಮೇಲಾಗಿ ಟಿಕೆಟ್ ಸಿಕ್ಕರೆ ಅವರೊ ಒಬ್ಬ ರಾಜಕಾರಣಿ, ಅಪ್ಪ-ಮಕ್ಕಳ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿಲ್ಲ ಹೀಗಾಗಿ ಹಾಗೇ ಅಲ್ಲಲ್ಲಿ ಮೂತಿ ಓಡಾಡಿಸಿಕೊಂಡಿದ್ದಾರೆ. ಇನ್ನು ಶರ್ಮಾ ಪಕ್ಕಾ ಮಾರ್ಕ್ಸ್ ವಾದಿಯಾಗಿದ್ದು ಅವರ ಅಭಿಮತವನ್ನೇ ಸಮಾಜಕ್ಕೆ ಬೋಧಿಸಿದ್ದಾರೆ! ಸಕಾಲಿಕ ಬರಹಕ್ಕೆ ತಮಗೆ ವಂದನೆಗಳು.

    ReplyDelete
  2. ಹೌದು ಸರ್, ನಾನು ಅನಂತಮೂರ್ತಿಯವರ ಲೇಖನ ಓದಿದ್ದೆ. ಎಲ್ಲರನ್ನೂ ಇವರು ಮಾನವನಂತೆಯೇ ಕಾಣುವುದಿಲ್ಲ ಯಾಕೋ?
    ಮನುಷ್ಯ ಪ್ರೀತಿಯೊಂದರಿಂದಲೇ ಎಲ್ಲರನ್ನೂ, ಎಲ್ಲವನ್ನೂ ನೋಡಿದರೆ ಸಮಸ್ಯೆಯಿರುವುದಿಲ್ಲ. ಇಂಥಾ ಬುದ್ದಿವಂತರೆಲ್ಲಾ ಅದ್ಯಾಕೆ ಈ ತಾರತಮ್ಯ ಮಾಡುತ್ತಾರೋ...? ನಿಮ್ಮ ಚರ್ಚೆ ಸಮಂಜಸವಾಗಿದೆ.

    ReplyDelete
  3. ಸುನಾಥ್ ಸರ್,

    ನಿಮ್ಮ ನಾನು ಅವೆರಡು ಲೇಖನಗಳನ್ನು ಓದಲಿಲ್ಲ. ಮತ್ತೆ ನಿಮ್ಮ ಲೇಖನದಿಂದಾಗಿ ಓದಿದೆ. ನ್ಯಾಯಾಂಗ ಪ್ರಶ್ನಿಸುವುದರ ಬದಲು ಅದನ್ನು ಗೌರವಿಸಬೇಕೆನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಈ ಬುದ್ದಿವಂತರೆನಿಸಿಕೊಂಡವರು ಯಾಕೆ ಹೀಗಾಡುತ್ತಾರೆ ನನಗಂತೂ ಅರ್ಥವಾಗುವುದಿಲ್ಲ. ನಿಮ್ಮ ನೇರ ಮತ್ತು ನಿಷ್ಟತೆಯ ಬರಹ ಇಷ್ಟವಾಯಿತು.

    ReplyDelete
  4. ಅವರದು ವಿಚಾರವಾದವೋ ವಿಕಾರವಾದವೋ...????

    ReplyDelete
  5. ಭಟ್ಟರೆ,
    ಅನಂತಮೂರ್ತಿಯವರ ಸಮಾಜವಾದಿ ನುಡಿಗೆ ಹಾಗೂ ಆರಾಮೀ ನಡೆಗೆ ತುಂಬ ವ್ಯತ್ಯಾಸವಿದೆ. ಅವರ ಆಷಾಢಭೂತಿತನ ಇದರಿಂದ ಸುಸ್ಪಷ್ಟವಾಗುತ್ತಿದೆ. ಇನ್ನು ಶರ್ಮಾ ಅವರೋ ಪ್ರಾಮಾಣಿಕ ಮಾರ್ಕ್ಸವಾದಿಗಳು.
    ಭಾರತಕ್ಕೆ ಯಾರಿಂದ ಹೆಚ್ಚಿಗೆ ಅಪಾಯವಿದೆ?---ಆಷಾಢಭೂತಿ ಸಮಾಜವಾದಿಯಿಂದಲೊ ಅಥವಾ ಪ್ರಾಮಾಣಿಕ ಮಾರ್ಕ್ಸವಾದಿಯಿಂದಲೊ?!

    ReplyDelete
  6. ಸತೀಶ,
    ಇದು ಬುದ್ಧಿಜೀವಿಯ ಚಹರೆ ಕಣ್ರೀ!

    ReplyDelete
  7. ಶಿವು,
    ಭಾರತದಲ್ಲಿ ಕೆಲವೊಂದು ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಇನ್ನೂ ಉಳಿಸಿಕೊಂಡಿವೆ. ನ್ಯಾಯಾಂಗವ್ಯವಸ್ಥೆ ಅಂತಹದು. ಇದನ್ನು ಶರ್ಮಾ ಪ್ರಶ್ನಿಸುತ್ತಾರೆ. ಮತ್ತೊಂದು ಪ್ರಾಮಾಣಿಕ ವ್ಯವಸ್ಥೆಯೆಂದರೆ ಮಹಾಲೇಖಪಾಲಕರದು.ಆ ವ್ಯವಸ್ಥೆಯನ್ನು ಕಪಿಲ ಸಿಬಾಲರಂತಹ ಕೇಂದ್ರಮಂತ್ರಿಗಳು ಗೇಲಿ ಮಾಡುತ್ತಿದ್ದಾರೆ.
    ತಮಗೆ ಅನಿಷ್ಟವಾದ ಸಂಸ್ಥೆಗಳನ್ನು ಟೀಕಿಸುವದು ರಾಜಕಾರಣಿಗಳ ಗುಣವಿಶೇಷವಾಗಿದೆ.

    ReplyDelete
  8. ವಿಜಯಶ್ರೀ,
    ನೀವು ಹೇಳುವದೇ ಸರಿ. ಇವರೆಲ್ಲ ವಿಕಾರವಾದಿಗಳು.

    ReplyDelete
  9. ನಿಮ್ಮ ಲೇಖನ ಬಹಳ ಅರ್ಥಪೂರ್ಣವಾಗಿದೆ. ಅನ೦ತಮೂರ್ತಿ ಯವರು ಉತ್ತಮ ಬರಹಗಾರರೋ, ಮೇಧಾವಿಗಳೋ , ಮತ್ತೊ೦ದೋ ಇರಬಹುದು.ಅದು ನನಗೆ ಗೊತ್ತಿಲ್ಲ. ಅವರು ಕನ್ನಡದ ಸಾಕ್ಷಿಪ್ರಜ್ಞೆ ಅಂತ ನಮ್ಮ ಸಾಹಿತ್ಯ ವಲಯದ ಕೆಲ ಮಂದಿ ಕೊ೦ಡಾಡುತ್ತಾರೆ. ಆದರೆ ನನಗೆ ಹಾಗೆ ಅನಿಸಿಲ್ಲ. ಅವರ ಅನೇಕ ಭಾಷಣಗಳನ್ನು ನಾನು ಕೇಳಿದ ಮೇಲೆ ನನಗೆ ಅವರ ಬಗ್ಗೆ ಒ೦ದು ಸ್ಪಷ್ಟ ಅಭಿಪ್ರಾಯ ಮೂಡಿದೆ. ಅವರು ಯಾವುದೇ ಭಾಷಣ ಮಾಡಿದರೂ, ಸ೦ದರ್ಭಕ್ಕೆ ಹೊ೦ದದ ವಿಚಾರ ಪ್ರಸ್ತಾಪ ಮಾಡಿ, ಕೇಳುಗರನ್ನು ಗೊ೦ದಲಕ್ಕೆ ಈಡು ಮಾಡುತ್ತಾರೆ, ಸುಲಭವಾಗಿ ಹೇಳಬಹುದಾದ್ದನ್ನು ಕ್ಲಿಷ್ಟವಾಗಿ ಹೇಳಿ ತಾವು ಮೇಧಾವಿ ಎ೦ಬ ಹುಸಿನಗೆ ಬೀರುತ್ತಾರೆ. ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡೋದು ಬಿಟ್ಟು, ನರೆ೦ದ್ರ ಮೋದಿಯನ್ನು ತೆಗಳುತ್ತಾರೆ, ಅರ್ಥಾರ್ಥ ಸ೦ಬ೦ಧವಿಲ್ಲದ ವಿಚಾರ ಮಾತಾಡಿ ಬಿಡುತ್ತಾರೆ. ನಿಮ್ಮ ಬರಹ ಓದಿದ ಮೇಲೆ ಇದನ್ನು ಪ್ರಸ್ತಾಪಿಸಲೇಬೇಕೆನಿಸಿತು.

    ReplyDelete
  10. ಕ್ಲಿಷ್ಟ, ಅಸಂಬದ್ಧ ವ್ಯಾಖ್ಯಾನವೇ ಜ್ಞಾನಪೀಠಸ್ಥರ ಕುರುಹು ಎಂದು ತೋರುತ್ತದೆ!

    ReplyDelete
  11. ಬಿನಾಯಕ ಸೇನರು ಶ್ರೀ ನಾರಾಯಣ ಗುರು ಅವರ ಸಾದನೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ವ್ಯವಸ್ಥೆ ಸುದಾರಿಸಲು (ರಕ್ತಪಿಪಾಸು) ನಕ್ಸಲಿಸಂ ಅಗತ್ಯವೆಂದು ಅವರಿಗೆ ಸಹಾಯಮಾಡುತ್ತಿರಲಿಲ್ಲವೇನೋ.

    ReplyDelete
  12. ಧನ್ಯವಾದಗಳು, ಸುಬ್ರಹ್ಮಣ್ಯರೆ.
    ಸೇನರ ಪೂರ್ವಾಪರ ನನಗೆ ತಿಳಿಯದು. ಆದರೆ ಪ್ರಬಲ
    ಸಾಕ್ಷ್ಯಾಧಾರವಿಲ್ಲದೆ, ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸದು ಎಂದು ನಂಬಿದ್ದೇನೆ. ಅವರ ಬಗೆಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ.

    ReplyDelete
  13. vikaara manisavaranne buddi jivigalu ennodu sir... namma duradrusta....

    :)

    ReplyDelete
  14. ಧನ್ಯವಾದ, ಹಳ್ಳಿಯ ತರುಣ ಹುಡುಗರೆ!
    ನಮ್ಮ ಬುದ್ಧಿಜೀವಿಗಳು ‘ಬುದ್ಧಿಜೀವಿ’ ಎನ್ನುವ ಪದವನ್ನು ಅಪಹಾಸ್ಯದ ಮಟ್ಟಕ್ಕೆ ಇಳಿಸಿರುವದರಲ್ಲಿ ಏನೂ ಸಂಶಯವಿಲ್ಲ!

    ReplyDelete
  15. ವಿಚಾರಗಳು ವಿಕಾರವಾಗಿ ಹೋಗುತ್ತವೆ... ಅರ್ಥಪೂರ್ಣ ಲೇಖನ... ಸದಾ ನೀವು ಹೊಸ ವಿಚಾರಗಳನ್ನು ತಿಳಿಸುತ್ತೀರಿ. ಧನ್ಯವಾದಗಳು ಕಾಕ.

    ReplyDelete
  16. ಮನಸು,
    ಪೂರ್ವಾಗ್ರಹಕ್ಕೆ ಜೋತು ಬಿದ್ದ ಹಾಗು/ಅಥವಾ ಕೀರ್ತಿಕಾಂಕ್ಷಿಗಳಾದ ವಿಚಾರವಾದಿಗಳ ಬುದ್ಧಿ ವಿಕಾರಗೊಂಡಿದ್ದರ ಫಲವಿದು. ರಾಷ್ಟ್ರವು ಸುರಕ್ಷಿತವಾಗಿದ್ದರೆ ಮಾತ್ರ ತಾವೂ ಉಳಿಯುತ್ತೇವೆ ಎನ್ನುವ ಮೂಲ ತಿಳಿವಳಿಕೆಯೇ ಇವರಿಗಿಲ್ಲ!

    ReplyDelete
  17. ಅರುಂಧತಿ ರಾಯ್ ತನ್ನ "ಗಾಡ್ ಆಫ಼್ ಸ್ಮಾಲ್ ತಿಂಗ್ಸ್" ನಲ್ಲಿ ಕೇರಳದ ಮಳೆಯ ವರ್ಣನೆಗೆ ಬಳಸಿದ್ದ ರೂಪಕವೊಂದನ್ನು ಓದಿ ,ಎಂತಹ ಉತ್ತಮ ಬರಹಗಾರರೆಂಬ ಅಭಿಮಾನ ಹುಟ್ಟಿತ್ತು. ಕಾಶ್ಮೀರದ ವಿಚಾರದಲ್ಲಿ ಆಕೆ ತಳೆದ ನಿಲುವು ನೋಡಿ ಹೀಗೆಕೆ ಎನ್ನುವಂತಾಯ್ತು. ಅನಂತಮೂರ್ತಿಯವರೂ ಇದಕ್ಕೆ ಹೊರತಲ್ಲವೆನೆಸುತ್ತದೆ. ಬುದ್ದಿಜೀವಿಗಳು, ವಿಚಾರವಾದಿಗಳು ಎನಿಸಿಕೊಳ್ಳಲು ಇವರಂತೆ ವಕ್ರವಾಗಿಯೇ ಯೋಚಿಸಬೇಕೆ ?!

    ಅವಕಾಶವಾದಿಗಳು ಅಷ್ಟೆ.

    ReplyDelete
  18. ಸುನಾಥ್ ಸರ್,
    ನಿಮ್ಮ ಲೇಖನದ ಧಾಟಿ ಮತ್ತು ಅನಂತಮೂರ್ತಿಯವರ ಬಗ್ಗೆ ನಿಮ್ಮ ನಿಲುವು ಎರಡೂ ಇಷ್ಟವಾದವು. ಅನಂತಮೂರ್ತಿಯವರು ಈ ರೀತಿ ವರ್ತಿಸುವದು ಹೊಸದೇನಲ್ಲ ಬಿಡಿ. ನಿಮ್ಮ ಲೇಖನಕ್ಕೆ ಧನ್ಯವಾದಗಳು.

    ReplyDelete
  19. ಮಯೂರದಲ್ಲಿ ಅನಂತ ಮೂರ್ತಿಯವರ ಇತ್ತೀಚಿನ ಭಾಷಣ ಓದಿ ಅವರ ಬಗ್ಗೆ ಸ್ವಲ್ಪ ಅಭಿಪ್ರಾಯ ಚೂರು ಬದಲಾಯಿಸಿಕೊಂಡಿದ್ದೇನೆ.

    ReplyDelete
  20. ಸುನಾಥ್ ಕಾಕಾ,

    ಸಮಯೋಚಿತ ಲೇಖನ.

    ಬಹುಷಃ ಈ ರೀತಿ ಯಾರಿಗೂ ಅರ್ಥವಾಗದಂತೆ ಮಾತಾಡುವುದೇ ಬುದ್ಧಿಜೀವಿ(?)ಗಳ ಲಕ್ಷಣ.

    ReplyDelete
  21. ಕಾಕಾ,
    ಒಳ್ಳೆಯ ಲೇಖನ..

    ReplyDelete
  22. ಸತ್ಯವೆ೦ದು ಕ೦ಡಿದ್ದನ್ನು ಪ್ರಾಮಾಣಿಕವಾಗಿ ಮ೦ಡಿಸುವ ನಿಮ್ಮ ನೇರ ಸ್ವಭಾವಕ್ಕೆ ನಮನಗಳು. ಎಲ್ಲರು ತಾವು ಹೇಳಿದ್ದೆ ಸರಿ ಎ೦ದು ವಾದಿಸುವ ಕುತರ್ಕ ಬೇಸರ ತರಿಸುತ್ತದೆ. ಈ ಮಕರ ಸಂಕ್ರಮಣವು ಹೊಸತನವನ್ನು ತರಲಿ, `ಸತ್ಯ'ಕ್ಕೆ ಜಯ ಲಭಿಸಲಿ ಎ೦ದು ಆಶಿಸುತ್ತಾ ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.'

    ReplyDelete
  23. ನಮ್ಮ ಇತರೆ ಹೈಲೆವೆಲ್ ಪ್ರಕಾಂಡ ಪಂಡಿತರಾದ ಗಿರೀಶ ಕಾರ್ನಾಡರು ಹಾಗೂ ಜಿಕೆಗೋ-ರವರು ಏಕೋ ಇನ್ನೂ ಈ ಬಗ್ಗೆ ತಮ್ಮ "ಸಮಯೋಚಿತ" ಹೇಳಿಕೆ ಕೊಟ್ಟಿಲ್ಲ. ಅವರೂ ಹೇಳಿಕೆ ಕೊಟ್ಟುಬಿಟ್ಟರೆ ಅಲ್ಲಿಗೆ ಒಂದು ಅಧ್ಯಾಯ ಸಂಪೂರ್ಣವಾದಂತೆ.

    ಈ ಬಾರಿ ಚೀನಾ ಪ್ರಧಾನಿ ವೆನ್ ಭಾರತಕ್ಕೆ ಬಂದಿದ್ದಾಗ ಯೆಚೂರಿಯೂ ಸೇರಿ ಒಂಬತ್ತು ಮಂದಿ "ಎಡಚ"ರಿಗೆ ಪ್ರಶಸ್ತಿ ಕೊಟ್ಟು ತಮ್ಮ ತಮ್ಮ ಕೆಲಸಗಳನ್ನು ಇನ್ನೂ ಚೆನ್ನಾಗಿ ಮಾಡಲು ಬುದ್ಧಿ ಹೇಳಿಹೋಗಿದ್ದಾರೆ. ಮುಂದಿನ ಬಾರಿ ಯುಆರ್/ಜಿಕೆಗೋ/ಕಾರ್ನಾಡ್-ಗೆ ಇದು ಬಂದಲ್ಲಿ ಆಶ್ಚರ್ಯವಿಲ್ಲ.

    ಬುದ್ದೀಜೀವಿಗಳ ಸೋಗಿನಲ್ಲಿ ದೇಶದ ವಿರುದ್ಧ ಮಾತನಾಡಿ ನಮ್ಮನ್ನು ನಾವೇ ಕೀಳರಿಮೆಯಿಂದ ನೋಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುವ ಇಂಥಾ ಸಕಲವಿದ್ಯಾ ಪಾರಂಗತರು ಇರುವವರೆಗೂ ನಮ್ಮ ದಾಸ್ಯಕ್ಕೆ ಬಿಡುಗಡೆ ಇಲ್ಲ. ತಮ್ಮ ಎಲ್ಲಾ ಸಾಹಿತ್ಯಿಕ ಕ್ರಿಯಾಶೀಲತೆಯನ್ನು ಕಳೆದುಕೊಂಡಿರುವ ಈ ಮಹಾನ್ ಚಿಂತಕರು [ಸುಸಾನ್ನ ಆರುಂಧತಿ ರಾಯ್ ರೀತಿಯಲ್ಲಿ] ಇಂಥಾ ವಕ್ರಮಾರ್ಗದ ಸುಲಭೋಪಾಯಗಳನ್ನು ಹುಡುಕಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

    ಪ್ರಸನ್ನ ಎಸ್

    ReplyDelete
  24. @Subrahmanyam,
    @Bisila Hani,
    @Kumar,
    @Pataragitti..Shiv,
    @Manamukta,
    @Prabhamani Nagaraja,
    @Bloggie,
    @Vichalita,

    Thanks for the comments.
    My computer has crashed due to Virus Attack. I have not been able to visit your blogs since a week.
    Forgive me.

    ReplyDelete
  25. "ಭಾರತೀಯ ಮಾರ್ಕ್ಸವಾದಿಗಳಿಗೆ ದೇಶದ ಹಿತಕ್ಕಿಂತಲೂ ಮಾರ್ಕ್ಸವಾದದ ಹಿತವೇ ಮುಖ್ಯವಾಗಿದೆ." - 100% correct kaka...

    Uttama lEKhana... dhanyavadagaLu.

    ReplyDelete
  26. "ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ.....ಒಂದೇ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯಿ...;( ...."
    ಕವಿ ನಿಸಾರ್ ಅಹ್ಮದ್ ರವರು ಬರೆದದ್ದು ಈ ಅರ್ಥದಲ್ಲಿ ಅಲ್ಲವಾದರೂ ನಂಗೆ ಇದಕ್ಕಿಂತ ಬೇರೆ ಏನು ಹೇಳಬೇಕೋ ತಿಳಿಯುತ್ತಿಲ್ಲ....;(
    ಅನಂತ ಮೂರ್ತಿಗಳಿಗೆ ಅನಂತ ನಮಸ್ಕಾರಗಳು.

    ReplyDelete
  27. @Tejaswini,
    @Aniketan Sunil,
    Thank you for the response.

    ReplyDelete