Sunday, July 17, 2011

ರಾಮರಕ್ಷಾ ಸ್ತೋತ್ರದ ಕಾವ್ಯಸೌಂದರ್ಯ

ಸಾಂಪ್ರದಾಯಕ ರಕ್ಷಾಸ್ತೋತ್ರಗಳಲ್ಲಿ ‘ರಾಮರಕ್ಷಾ ಸ್ತೋತ್ರ’ವು ಅನೇಕ ಭಕ್ತರು ಪಠಿಸುತ್ತಿರುವ ಮಹತ್ವದ ಸ್ತೋತ್ರವಾಗಿದೆ. ಬುಧಕೌಶಿಕ ಋಷಿಗಳು ಈ ಸ್ತೋತ್ರದ ದೃಷ್ಟಾರರು. (ತನ್ನ ಕನಸಿನಲ್ಲಿ ಭಗವಾನ್ ಶಂಕರನು ತನಗೆ ಈ ಸ್ತೋತ್ರವನ್ನು ನೀಡಿದನು ಎಂದು ಬುಧಕೌಶಿಕ ಋಷಿಗಳು ಹೇಳಿದ್ದಾರೆ.) ಅವರ ಈ ರಚನೆಯಲ್ಲಿಯ ಮುಖ್ಯ ಭಾಗವನ್ನು, ಸಾಹಿತ್ಯದ ದೃಷ್ಟಿಯಿಂದ ಗಮನಿಸೋಣ. ಆ ಭಾಗ ಹೀಗಿದೆ:

ಶಿರೋಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ
ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯ: ಶ್ರುತಿ:
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಜಿಹ್ವಾ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕ:
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕ:
ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪು:
           
ಈ ಸ್ತೋತ್ರದಲ್ಲಿ ತನ್ನ ಶರೀರದ ವಿವಿಧ ಬಾಗಗಳನ್ನು ಶ್ರೀ ರಾಮಚಂದ್ರನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ. ಮೊದಲಿಗೆ ಪ್ರಾರಂಭವಾಗುವದು ಶಿರಸ್ಸು, ತನ್ನಂತರ ಹಣೆ, ಕಣ್ಣುಗಳು, ಕಿವಿಗಳು. ಇದೇ ರೀತಿಯಾಗಿ ಪಾದಗಳವರೆಗೆ ಈ ಪ್ರಾರ್ಥನೆ ಸಾಗಿದೆ. ಅನೇಕ ಸಂಸ್ಕೃತ ಶ್ಲೋಕಗಳಲ್ಲಿ ಈ ತರಹದ ‘ಮುಡಿಯಿಂದ ಅಡಿಯವರೆಗೆ’ ಅಥವಾ ‘ಅಡಿಯಿಂದ ಮುಡಿಯವರೆಗಿನ’ ಕ್ರಮಬದ್ಧ ವರ್ಣನೆ ಇದ್ದೇ ಇರುತ್ತದೆ. ಬುಧಕೌಶಿಕ ಋಷಿಗಳೂ ಸಹ ಅದನ್ನೇ ಮಾಡಿದ್ದಾರೆ.                                                                     
ಈ ಪ್ರಾರ್ಥನಾಶ್ಲೋಕದ ಹೆಚ್ಚುಗಾರಿಕೆಯಿರುವದು ರಾಮಚಂದ್ರನನ್ನು ಬಣ್ಣಿಸುವ ವಿಶೇಷಣಗಳಲ್ಲಿ.  ಮೇಲಿನ ಶ್ಲೋಕದ ಸಾಲುಗಳನ್ನು ಒಂದೊಂದಾಗಿ ಪರಿಶೀಲಿಸೋಣ:

ಶಿರೋಮೇ ರಾಘವಃ ಪಾತು
(=ರಾಘವನು ನನ್ನ ಶಿರಸ್ಸನ್ನು ರಕ್ಷಿಸಲಿ.)
ರಘು ಎನ್ನುವ ರಾಜನು ರಾಮಚಂದ್ರನ ವಂಶದ ಮೂಲಪುರುಷರಲ್ಲಿ ಹೆಸರಾದವನು. ರಘುವಿನ ನಂತರದವರೆಲ್ಲರೂ ರಾಘವರು. ಆದುದರಿಂದ ರಾಮಚಂದ್ರನನ್ನು ‘ರಾಘವ’ ಎನ್ನಲಾಗಿದೆ.
ಈ ರೀತಿಯಾಗಿ ರಘುವಂಶದ ಮೂಲಪುರುಷನನ್ನು ಇಲ್ಲಿ ಮೊದಲು ಸ್ಮರಿಸಲಾಗಿದೆ. ಆ ಮೂಲಕ ರಾಮಚಂದ್ರನ identityಯನ್ನು ಗುರುತಿಸಲಾಗಿದೆ.

ಭಾಲಂ ದಶರಥಾತ್ಮಜಃ
(=ದಶರಥನ ಪುತ್ರನು ನನ್ನ ಹಣೆಯನ್ನು ರಕ್ಷಿಸಲಿ.)
ನಂತರದ ಸ್ಮರಣೆ ರಾಮಚಂದ್ರನ ಜನಕನಾದ ದಶರಥನದು. ವಂಶವನ್ನು ಹೇಳಿದ ನಂತರ ರಾಮಚಂದ್ರನ ತಂದೆಯ ಹೆಸರನ್ನು ಹೇಳಲಾಗಿದೆ ಆದುದರಿಂದ ಶ್ರೀರಾಮಚಂದ್ರನನ್ನು ಇಲ್ಲಿ ಮೊದಲು ರಾಘವ ಹಾಗು ನಂತರ ದಶರಥಾತ್ಮಜ ಎಂದು ವರ್ಣಿಸಲಾಗಿದೆ.

ಕೌಸಲ್ಯೇಯೋ ದೃಶೌ ಪಾತು
(=ಕೌಸಲ್ಯೆಯ ಕುಮಾರನು ನನ್ನ ಕಣ್ಣುಗಳನ್ನು ರಕ್ಷಿಸಲಿ)
 ತಂದೆಯ ನಂತರ ಬರುವವಳು ತಾಯಿ.
ಉಪನಿಷತ್ತುಗಳಲ್ಲಿ ‘ಮಾತೃದೇವೋ ಭವ’ ಎಂದು ಹೇಳಿದ ಬಳಿಕವೇ ‘ಪಿತೃದೇವೋ ಭವ’ ಹಾಗು ‘ಆಚಾರ್ಯದೇವೋ ಭವ ’ ಎಂದು ಹೇಳಲಾಗಿದೆ. ಆದರೆ ಓರ್ವ ವ್ಯಕ್ತಿಯನ್ನು ಆತನ ವಂಶ ಹಾಗು ತಂದೆಯ ಮೂಲಕವೇ ಗುರುತಿಸಲಾಗುವದರಿಂದ ಇಲ್ಲಿ ರಘು ಹಾಗು ದಶರಥರನ್ನು ಮೊದಲು ಸ್ಮರಿಸಲಾಗಿದೆ. ಆಬಳಿಕ ತಾಯಿಯನ್ನು ಸ್ಮರಿಸಲಾಗಿದೆ.

ವಿಶ್ವಾಮಿತ್ರಪ್ರಿಯ: ಶ್ರುತಿ:
(=ವಿಶ್ವಾಮಿತ್ರನ ಪ್ರಿಯ ಶಿಷ್ಯನು ನನ್ನ ಕಿವಿಗಳನ್ನು ರಕ್ಷಿಸಲಿ.)
‘ಮಾತೃದೇವೋ ಭವ ಹಾಗು ಪಿತೃದೇವೋಭವ’ದ ಬಳಿಕ ‘ಆಚಾರ್ಯದೇವೋಭವ’. ಆದುದರಿಂದ ಈಗ ರಾಮಚಂದ್ರನ ಗುರುವಾದ ವಿಶ್ವಾಮಿತ್ರರನ್ನು ನೆನಸಲಾಗಿದೆ. ಅಲ್ಲದೆ, ಓರ್ವ ವ್ಯಕ್ತಿಯನ್ನು ಆತನ ಗುರುಕುಲದ ಮೂಲಕವೂ ಗುರುತಿಸಲಾಗುತ್ತಿತ್ತು. ಈ ಕಾರಣಗಳಿಗಾಗಿ ಇಲ್ಲಿ ರಾಮಚಂದ್ರನ ಗುರುವಾದ ವಿಶ್ವಾಮಿತ್ರರ ಉಲ್ಲೇಖ ಬಂದಿದೆ.

ಪುರಾಣಕಾಲದಲ್ಲಿ ವಿದ್ಯಾಭ್ಯಾಸವು ಶ್ರುತಿಯ ಮೂಲಕ ಅಂದರೆ ಕೇಳುವದರ ಮೂಲಕವೇ ಆಗುತ್ತಿತ್ತು. ಆದುದರಿಂದಲೇ ವೇದಗಳಿಗೆ ‘ಶ್ರುತಿಗಳು’ ಎನ್ನುತ್ತಾರೆ. ‘ವಿಶ್ವಾಮಿತ್ರರಿಂದ ಶ್ರುತಿಜ್ಞಾನ ಪಡೆದ ಶಿಷ್ಯನು ನನ್ನ ‘ಶ್ರುತಿ’ಗಳನ್ನು ಅಂದರೆ ಕಿವಿಗಳನ್ನು ರಕ್ಷಿಸಲಿ’ ಎಂದು ಪ್ರಾರ್ಥಿಸಲಾಗಿದೆ.

ಘ್ರಾಣಂ ಪಾತು ಮಖತ್ರಾತಾ
(=ಯಜ್ಞರಕ್ಷಕನು ನನ್ನ ನಾಸಿಕವನ್ನು ರಕ್ಷಿಸಲಿ)
ಮಖತ್ರಾತಾ ಅಂದರೆ ಯಜ್ಞರಕ್ಷಕ. ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯನನ್ನು ಯಾವ ಕಾರ್ಯಕ್ಕಾಗಿ ಆಯೋಜಿಸಿದ್ದನು ಎನ್ನುವದನ್ನು ಈಗ ತಿಳಿಯಬೇಕಲ್ಲವೆ? ರಾಕ್ಷಸರ ಉಪಟಳದಿಂದ ಯಜ್ಞಗಳನ್ನುರಕ್ಷಿಸುವದೇ ವಿಶ್ವಾಮಿತ್ರನು ರಾಮಚಂದ್ರನಿಗೆ ವಹಿಸಿದ  ಮಹತ್ಕಾರ್ಯವಾಗಿತ್ತು.

ಮುಖಂ ಸೌಮಿತ್ರಿವತ್ಸಲಃ
(=ಮುಖವನ್ನು ಸುಮಿತ್ರೆಯ ಮಗನಾದ ಲಕ್ಷ್ಮಣನು ರಕ್ಷಿಸಲಿ.)
ಈ ಕಾರ್ಯದಲ್ಲಿ ಶ್ರೀರಾಮಚಂದ್ರನಿಗೆ ನೆರವಾಗಿ ನಿಂತವನು ಸುಮಿತ್ರೆಯ ಮಗನಾದ ಲಕ್ಷ್ಮಣ. ಲಕ್ಷ್ಮಣನು ರಾಮಚಂದ್ರನ ಮೊದಲನೆಯ ತಮ್ಮ ಹಾಗು ಸತತ ಸಹಚರ.
ಲಕ್ಷ್ಮಣನನ್ನು ‘ಸೌಮಿತ್ರಿವತ್ಸಲಃ’ ಎಂದು ಕರೆಯುವ ಮೂಲಕ ರಾಮಚಂದ್ರನಿಗೆ ಎರಡನೆಯ ತಾಯಿಯಾದ ಸುಮಿತ್ರೆಯನ್ನೂ ಸಹ ಇಲ್ಲಿ ನೆನಸಲಾಗಿದೆ.

ಜಿಹ್ವಾ ವಿದ್ಯಾನಿಧಿಃ ಪಾತು
(=ನಾಲಿಗೆಯನ್ನು ವಿದ್ಯೆಗಳ ನಿಧಿಯಾದವನು ರಕ್ಷಿಸಲಿ)
ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯ ರಾಮಚಂದ್ರನಿಗೆ ಶಸ್ತ್ರವಿದ್ಯೆಯನ್ನಲ್ಲದೇ ಶಾಸ್ತ್ರವಿದ್ಯೆಯನ್ನೂ ಧಾರೆ ಎರೆದಿದ್ದನು. ಶಸ್ತ್ರಗಳು ಹಸ್ತದಲ್ಲಿದ್ದರೆ, ಶಾಸ್ತ್ರವಿದ್ಯೆಯು ನಾಲಿಗೆಯ ಮೇಲೆ ಇರುತ್ತದೆ. ಏಕೆಂದರೆ ನಾಲಿಗೆಯು ವಿದ್ಯಾಧಿದೇವತೆಯಾದ ಸರಸ್ವತಿಯ ಆವಾಸಸ್ಥಾನವಾಗಿದೆ. ಆದುದರಿಂದ ನಾಲಿಗೆಯನ್ನು ರಕ್ಷಿಸಬೇಕಾದವನು ವಿದ್ಯಾನಿಧಿಯಾದ ಶ್ರೀರಾಮಚಂದ್ರನು.

ಕಂಠಂ ಭರತವಂದಿತಃ
(=ಭರತನಿಂದ ವಂದಿತನಾದವನು ಕಂಠವನ್ನು ರಕ್ಷಿಸಲಿ.)
ಸೋದರವತ್ಸಲನಾದ ರಾಮಚಂದ್ರನಿಗೆ ಭರತನೂ ಸಹ ಪ್ರಿಯನಾದ ತಮ್ಮನೇ. ಈ ಭರತನು ರಾಮಚಂದ್ರನಿಗೆ ಸಿಂಹಾಸನವನ್ನು ಮರಳಿ ಒಪ್ಪಿಸಲು ಬಂದು ಅವನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತವನು. ಆದುದರಿಂದ ರಾಮಚಂದ್ರನು ಭರತವಂದಿತನು. ಇಲ್ಲಿ ಇರುವ ಇನ್ನೊಂದು ವಿಶೇಷವೆಂದರೆ ಕೌಸಲ್ಯೆ ಹಾಗು ಸುಮಿತ್ರೆಯರನ್ನು ನೆನಸಿದ ಮೇಲೆ, ಕೈಕೇಯಿಯನ್ನೂ ಸಹ ನೆನಸುವದು ಕ್ರಮಪ್ರಾಪ್ತವಾಗಿದೆ. ಅಲ್ಲದೆ ಶ್ರೀರಾಮಚಂದ್ರನಿಗೆ ತನ್ನ ಮೂವರೂ ತಾಯಂದಿರ ಮೇಲೆ ಸಮಾನವಾದ ಗೌರವವು ಇದ್ದಿತೆನ್ನುವದನ್ನು ಇದು ಸೂಚಿಸುತ್ತದೆ.

ಮನುಷ್ಯಶರೀರದಲ್ಲಿ ಮೂರು ಭಾಗಗಳನ್ನು ಮಾಡಬಹುದು. ಮೊದಲನೆಯ ಭಾಗ ಮುಖ. ಎರಡನೆಯ ಭಾಗವು ಮುಖದಿಂದ ಟೊಂಕದವರೆಗಿನ ಭಾಗ. ಮೂರನೆಯದು ಟೊಂಕದಿಂದ ಪಾದಗಳವರೆಗಿನ ಭಾಗ. ಮುಖಭಾಗದ ರಕ್ಷಣಾಸ್ತೋತ್ರದ ನಂತರ, ಇನ್ನು ಎರಡನೆಯ ಶರೀರಭಾಗ ಪ್ರಾರಂಭವಾಗುತ್ತದೆ.

ಸ್ಕಂಧೌ ದಿವ್ಯಾಯುಧಃ ಪಾತು
(=ದಿವ್ಯಾಯುಧಗಳನ್ನು ಧರಿಸಿದವನು ಹೆಗಲುಗಳನ್ನು ರಕ್ಷಿಸಲಿ)
ಗುರುಗಳಾದ ವಿಶ್ವಾಮಿತ್ರರಿಂದ ಪ್ರಾಪ್ತವಾದ ದಿವ್ಯ ಆಯುಧಗಳನ್ನು ರಾಮಚಂದ್ರನು ಹೆಗಲ ಮೇಲೆ ಧರಿಸಿರುವದರಿಂದ
ಹೆಗಲುಗಳನ್ನು ರಕ್ಷಿಸುವದು ಅಂಥವನ ಹೊಣೆಯೇ ಆಗಿದೆ.

ಭುಜೌ ಭಗ್ನೇಶಕಾರ್ಮುಕ:
(=ಶಿವಧನುಸ್ಸನ್ನು ಮುರಿದವನು ತೋಳುಗಳನ್ನು ರಕ್ಷಿಸಲಿ.)
ಶಿವಧನುಸ್ಸನ್ನು ಮುರಿದವನು ಭುಜಗಳನ್ನು ರಕ್ಷಿಸಲಿ ಎಂದು ಕೋರುವ ಮೂಲಕ ಅನೇಕ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದು ಶ್ರೀರಾಮಚಂದ್ರನ ಬಾಹುಬಲ ಹಾಗು ರಕ್ಷಣಾಸಾಮರ್ಥ್ಯ. ಎರಡನೆಯದಾಗಿ ಶಿವಧನುಸ್ಸನ್ನು ಎತ್ತುವದೇ ಶ್ರೀರಾಮಚಂದ್ರನ ವಿವಾಹಕ್ಕೆ ಕಾರಣವಾಯಿತು. ಈ ರೀತಿಯಾಗಿ ಸೀತಾದೇವಿಯನ್ನು ನೆನಸಲು ಇಲ್ಲಿ ಪೂರ್ವಪೀಠಿಕೆಯನ್ನು ಹಾಕಲಾಗಿದೆ. ಮುಂದಿನ ಸಾಲಿನಲ್ಲಿ ಸೀತಾದೇವಿಯನ್ನು ನೆನಸಲಾಗಿದೆ.

ಕರೌ ಸೀತಾಪತಿಃ ಪಾತು
(=ಸೀತಾಪತಿಯು ಕರಗಳನ್ನು ರಕ್ಷಿಸಲಿ)
ಸೀತಾದೇವಿಯ ಪಾಣಿಗ್ರಹಣ ಮಾಡಿದವನೇ ನಮ್ಮ ಪಾಣಿಗಳನ್ನು ರಕ್ಷಿಸಬೇಕಲ್ಲವೆ?
ಇಲ್ಲಿಯವರೆಗಿನ ವರ್ಣನೆಯಲ್ಲಿ ರಾಮಚಂದ್ರನ ಆಪ್ತರನ್ನು ನೆನಸಲಾಯಿತು.
ಇನ್ನು ಮುಂದೆ ರಾಮಚಂದ್ರನ ವಿಜಯಯಾತ್ರೆ ಪ್ರಾರಂಭವಾಗುತ್ತದೆ.

ಹೃದಯಂ ಜಾಮದಗ್ನ್ಯಜಿತ್
(=ಪರಶುರಾಮನನ್ನು ಸೋಲಿಸಿದವನು ಹೃದಯಭಾಗವನ್ನು ರಕ್ಷಿಸಲಿ.)
ರಾಮಚಂದ್ರನು ಸೀತೆಯನ್ನು ಮದುವೆಯಾಗಿ ಅಯೋಧ್ಯೆಗೆ ಮರಳುವಾಗ, ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನ ಜೊತೆಗೆ ಕಾದಾಡಿ, ಅವನನ್ನು ಸೋಲಿಸುತ್ತಾನೆ. ಆದುದರಿಂದ  ಆ ಘಟನೆಯನ್ನು ‘ಹೃದಯಂ ಜಾಮದಗ್ನ್ಯಜಿತ್’ ಎಂದು ಸ್ಮರಿಸಲಾಗಿದೆ.

ಮಧ್ಯಂ ಪಾತು ಖರಧ್ವಂಸೀ
(=ಖರ ರಾಕ್ಷಸನನ್ನು ಕೊಂದವನು ಮಧ್ಯಭಾಗವನ್ನು ರಕ್ಷಿಸಲಿ)
ವನವಾಸದಲ್ಲಿದ್ದಾಗ ಶ್ರೀರಾಮಚಂದ್ರನು ಶೂರ್ಪನಖಾ ಪ್ರಸಂಗದಿಂದಾಗಿ ಖರ ಎನ್ನುವ ರಾಕ್ಷಸನನ್ನು ಸಂಹರಿಸಿದನು. ಇದು ಸೀತಾಪಹರಣಕ್ಕೆ ಹಾಗು ರಾವಣಸಂಹಾರಕ್ಕೆ ಕಾರಣವಾಯಿತು.

ನಾಭಿಂ ಜಾಂಬವದಾಶ್ರಯಃ
(=ಜಾಂಬುವಂತನಿಗೆ ಆಶ್ರಯನಿತ್ತವನು ಹೊಕ್ಕಳುಭಾಗವನ್ನು ರಕ್ಷಿಸಲಿ.)
ರಾಕ್ಷಸಸಂಹಾರದ ಜೊತೆಗೇ, ರಾಮಚಂದ್ರನು ಶರಣಾಗತರಿಗೆ ರಕ್ಷಣೆಯನ್ನೂ ಇತ್ತನು. ಆದುದರಿಂದ ಇಲ್ಲಿ ಜಾಂಬುವಂತನನ್ನು ನೆನಸಲಾಗಿದೆ.

ಸುಗ್ರೀವೇಶಃ ಕಟೀ ಪಾತು
(=ಸುಗ್ರೀವನಿಗೆ ಒಡೆಯನಾದವನು ಟೊಂಕವನ್ನು ರಕ್ಷಿಸಲಿ)
ರಾಮಚಂದ್ರನು ವಾಲಿಯನ್ನು ಸಂಹರಿಸಿದ ಬಳಿಕ ಸುಗ್ರೀವನು ಪಟ್ಟಾಭಿಷಿಕ್ತನಾಗುತ್ತಾನೆ. ರಾಮಚಂದ್ರನು ಸುಗ್ರೀವನನ್ನು ಮಿತ್ರ ಎಂದೇ ಕರೆಯುತ್ತಿದ್ದರೂ ಸಹ, ರಾಮಚಂದ್ರನ ಅನುಗ್ರಹದ ಕಾರಣದಿಂದಾಗಿ ಸುಗ್ರೀವನು ಆತನನ್ನು ತನ್ನ ಒಡೆಯ ಎಂದೇ ಭಾವಿಸಿರುತ್ತಾನೆ.

ಸಕ್ಥಿನೀ ಹನುಮತ್ಪ್ರಭುಃ
(=ಹನುಮಂತನ ಪ್ರಭುವು ಬಸ್ತಿಯನ್ನು ರಕ್ಷಿಸಲಿ.)
ಸುಗ್ರೀವನ ನಂತರ ಅವನ ಅನುಚರನಾದ ಹನುಮಂತನನ್ನು ಇಲ್ಲಿ ಸ್ಮರಿಸಲಾಗಿದೆ.

ಶರೀರದ ಮೂರನೆಯ ಭಾಗದ ರಕ್ಷಣಾಸ್ತೋತ್ರವು ಇನ್ನು ಪ್ರಾರಂಭವಾಗುತ್ತದೆ:
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
(=ರಾಕ್ಷಸಕುಲಸಂಹಾರಕನಾದವನು ಹಾಗು ರಘುವಂಶದಲ್ಲಿ ಶ್ರೇಷ್ಠನಾದವನು ತೊಡೆಗಳನ್ನು ರಕ್ಷಿಸಲಿ.)
ತೊಡೆಗಳು ಧೃತಿಯ ಸಂಕೇತ. ಪುಕ್ಕಲು ಮನುಷ್ಯನನ್ನು ವರ್ಣಿಸಬೇಕಾದರೆ ‘ಅವನ ತೊಡೆಗಳು ನಡುಗಿದವು ಅಥವಾ ಬೆವರಿದವು’ ಎನ್ನುವ ವರ್ಣನೆಯನ್ನು ಮಾಡಲಾಗುತ್ತದೆ ರಾಕ್ಷಸಕುಲವನ್ನೇ ಸಂಹಾರ ಮಾಡುವ ಧೈರ್ಯ ಹಾಗು ಸಾಮರ್ಥ್ಯ ಇರುವದು ರಘುವಂಶದಲ್ಲಿಯೇ ಶ್ರೇಷ್ಠನಾದವನಿಗೆ ಮಾತ್ರ ಸಾಧ್ಯ. ಆದುದರಿಂದ ಅಂತಹ ರಘುಕುಲತಿಲಕನು ನನ್ನ ತೊಡೆಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.

ಜಾನುನೀ ಸೇತುಕೃತ್ಪಾತು
(=ಸಮುದ್ರಕ್ಕೆ ಸೇತುಬಂಧನ ಮಾಡಿದವನು ನನ್ನ ಮೊಣಕಾಲುಗಳನ್ನು ರಕ್ಷಿಸಲಿ)
ಇನ್ನು ಪ್ರಾರಂಭವಾಗುವದು ರಾಮಚಂದ್ರನ ಮಹತ್ವದ ಕಾರ್ಯವಾದ ರಾವಣವಿಜಯ. ಆ ಕಾರ್ಯಕ್ಕಾಗಿ ಆತ ಸಮುದ್ರದ ಮೇಲೆ ಸೇತುಬಂಧನವನ್ನು ಮಾಡಬೇಕು ಹಾಗು ಲಂಕೆಯವರೆಗೆ ಧಾವಿಸಬೇಕು. ಅಂಥವನೇ ಮೊಣಕಾಲುಗಳನ್ನು ರಕ್ಷಿಸಲು ಯೋಗ್ಯನಾದವನು.

ಜಂಘೇ ದಶಮುಖಾಂತಕ:
(=ದಶಮುಖ ರಾವಣನ ಸಂಹಾರ ಮಾಡಿದವನು ನನ್ನ ಮೀನಗಂಡಗಳನ್ನು ರಕ್ಷಿಸಲಿ.)
ರಾವಣಸಂಹಾರವೇನು ಸಾಮಾನ್ಯ ಕಾರ್ಯವೆ? ಇದಕ್ಕೆ ಅಸಾಮಾನ್ಯ ಜಂಘಾಬಲ ಬೇಕು. ಆದುದರಿಂದ ಜಂಘಾಬಲ ಇರುವ ರಾಮಚಂದ್ರನೇ ನಮ್ಮ ಜಂಘೆಗಳನ್ನು ರಕ್ಷಿಸಬೇಕು.

ಪಾದೌ ವಿಭೀಷಣಶ್ರೀದಃ ಪಾತು
 (=ವಿಭೀಶಣನಿಗೆ ವೈಭವವನ್ನು ಕೊಟ್ಟವನು ನನ್ನ ಪಾದಗಳನ್ನು ರಕ್ಷಿಸಲಿ.)
ಶ್ರೀರಾಮಚಂದ್ರನು ಕೇವಲ ದುಷ್ಟಸಂಹಾರವನ್ನಷ್ಟೇ ಮಾಡುವವನಲ್ಲ. ಆತನು ತನ್ನ ಚರಣಭಕ್ತರಿಗೆ ಅನುಗ್ರಹವನ್ನೂ ಮಾಡುವವನು. ಆದುದರಿಂದಲೇ ಶರಣಾಗತ ವಿಭೀಷಣನಿಗೆ ರಾಜ್ಯೈಶ್ವರ್ಯವನ್ನು ಅನುಗ್ರಹಿಸಿದ ರಾಮಚಂದ್ರನು ನಮ್ಮ ಪಾದಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.


ರಾಮೋsಖಿಲಂ ವಪು:
(=ಶ್ರೀರಾಮಚಂದ್ರನು ನನ್ನ ಸಂಪೂರ್ಣ ದೇಹವನ್ನು ರಕ್ಷಿಸಲಿ.)
‘ಮುಡಿಯಿಂದ ಅಡಿಯವರೆಗಿನ ಅಂಗಾಂಗಳನ್ನು ಶ್ರೀರಾಮಚಂದ್ರನು ರಕ್ಷಿಸಲಿ’ ಎನ್ನುವ ಪ್ರಾರ್ಥನೆಯನ್ನು ಈ ರೀತಿ ಕ್ರಮಬದ್ಧವಾಗಿ ಮಾಡಲಾಗಿದೆ. ಜೊತೆಗೇ ರಾಮಚಂದ್ರನ ವಂಶಾವಳಿಯ ಮೂಲದಿಂದ ಪ್ರಾರಂಭಿಸಿ, ತಂದೆ, ತಾಯಿ, ಗುರು ಹಾಗು ಸೋದರರ ಬಗೆಗೆ ಹೇಳಲಾಗಿದೆ. ರಾಮಚಂದ್ರನ ವಿವಾಹವನ್ನು ಉಲ್ಲೇಖಿಸಲಾಗಿದೆ. ತನ್ನಂತರ ರಾಮಚಂದ್ರನ ದುಷ್ಟಸಂಹಾರ ಹಾಗು ಶಿಷ್ಟರಕ್ಷಣೆಯ ವರ್ಣನೆಯನ್ನು ಮಾಡಲಾಗಿದೆ. ಈ ರೀತಿಯಲ್ಲಿ ಈ ಸ್ತೋತ್ರವು ಸಂಕ್ಷಿಪ್ತ ರಾಮಾಯಣವೇ ಆಗಿದೆ. ಆದುದರಿಂದ ಕೊನೆಯಲ್ಲಿ ಶ್ರೀರಾಮಚಂದ್ರನು ‘ನನ್ನ ಸಂಪೂರ್ಣ ಶರೀರವನ್ನು ರಕ್ಷಿಸಲಿ’ ಎನ್ನುವ ಮಂಗಳಪ್ರಾರ್ಥನೆಯನ್ನು ಮಾಡಲಾಗಿದೆ.
...................................................................................................
ರಾಮರಕ್ಷಾ ಸ್ತೋತ್ರದಲ್ಲಿಯ ಮತ್ತೊಂದು ಶ್ಲೋಕ ಹೀಗಿದೆ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಈ ಶ್ಲೋಕದ ಅರ್ಥ ಹೀಗಿದೆ:
ರಾಮ, ರಾಮಭದ್ರ, ರಾಮಚಂದ್ರ, ರಘುನಾಥ, ನಾಥ, ಸೀತಾಪತಿ ಎನ್ನುವ ಹೆಸರುಗಳಿಂದ ಕರೆಯಲ್ಪಡುತ್ತಿರುವವನಿಗೆ ನಮಸ್ಕಾರವಿರಲಿ.
ಈ ಶ್ಲೋಕಕ್ಕೆ ಸ್ವಾರಸ್ಯಪೂರ್ಣವಾದ ವ್ಯಾಖ್ಯಾನವನ್ನು ಪಂಡಿತರೊಬ್ಬರು ಮಾಡಿದ್ದು, ಅದು ಹೀಗಿದೆ:

ತಂದೆ ದಶರಥನು ಶ್ರೀರಾಮಚಂದ್ರನನ್ನು ‘ರಾಮ!’ ಎಂದು ಸಲಿಗೆಯಿಂದ ಕರೆಯುತ್ತಾನೆ.
ತಾಯಿ ಕೌಸಲ್ಯೆಯು ಪ್ರೀತಿಯಿಂದ ‘ರಾಮಭದ್ರ’ ಎಂದು ಕರೆಯುತ್ತಾಳೆ.
ತಮ್ಮಂದಿರು ಅವನನ್ನು ‘ರಾಮಚಂದ್ರ’ ಎಂದು ಆತ್ಮೀಯತೆಯಿಂದ ಕರೆಯುತ್ತಾರೆ.
ಪುರಜನರು ತಮ್ಮ ರಾಜನನ್ನು ‘ರಘುನಾಥ’ ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.
ಸೀತಾದೇವಿ ತನ್ನ ಪತಿಯನ್ನು ಹೆಸರುಗೊಂಡು ಕರೆಯದೆ, ಕೇವಲ ‘ನಾಥ!’ ಎಂದು ಕರೆಯುತ್ತಾಳೆ.
ಸೀತಾದೇವಿಯ ತವರೂರಿನವರಾದ ಮಿಥಿಲಾಪುರನಿವಾಸಿಗಳಿಗೆ ಈತನು ಕೇವಲ ‘ಸೀತೆಯ ಗಂಡ!’
.............................................................................................................
ಕುತರ್ಕವಾದಿಯೊಬ್ಬರು ‘ಸೀತಾದೇವಿ’ ವನವಾಸದಲ್ಲಿ ಬಸಿರಾಗಲಿಲ್ಲ. ಅವಳು ರಾವಣನ ಸೆರೆಯಲ್ಲಿದ್ದಾಗ ಬಸಿರಾದಳು. ಇದರರ್ಥವೇನೆಂದರೆ ‘ರಾಮನು ನಪುಂಸಕನು’ ಎಂದು ವಾದಿಸಿದ್ದಾರೆ. ಇವರಿಗೆ ವನವಾಸದ ಅರ್ಥವೇ ಗೊತ್ತಿಲ್ಲ. ಭೋಗಜೀವನವನ್ನು ತ್ಯಜಿಸಿ, ಯೋಗಿಯಂತೆ ಬಾಳುವದೇ ನಮ್ಮ ಪುರಾತನರ ಆದರ್ಶವಾಗಿತ್ತು. ರಾಮಾಯಣವೇ ಆಗಲಿ, ಮಹಾಭಾರತವೇ ಆಗಲಿ ವನವಾಸವನ್ನು ಆದರ್ಶವೆಂದೇ ಬಿಂಬಿಸಿದ್ದನ್ನು ಗಮನಿಸಬೇಕು. ರಾಮರಕ್ಷಾ ಸ್ತೋತ್ರದ ಈ ಶ್ಲೋಕವನ್ನು ಗಮನಿಸಿರಿ:
ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ

ರಾಮಲಕ್ಷಣರು ವನವಾಸದಲ್ಲಿ ಹೇಗೆ ಇರುತ್ತಿದ್ದರು ಎನ್ನುವದರ ವರ್ಣನೆ ಇದು:
ಫಲಮೂಲಾಶಿನೌ = ಅವರು ಹಣ್ಣು ಮತ್ತು ಗಡ್ಡೆಗೆಣಸುಗಳನ್ನು ಮಾತ್ರ ಭುಂಜಿಸುತ್ತಿದ್ದರು.
ದಾಂತೌ = ಇಂದ್ರಿಯನಿಗ್ರಹ ಮಾಡಿದವರು.
ತಾಪಸೌ = ತಪಸ್ವಿಗಳು
ಬ್ರಹ್ಮಚಾರಿಣೌ = ಬ್ರಹ್ಮಚಾರಿಗಳು

ಈ ಶ್ಲೋಕವನ್ನು ಮೂಲರಾಮಾಯಣದಲ್ಲಿ ಶೂರ್ಪನಖಿಯು ರಾವಣನ ಎದುರಿಗೆ ಹೇಳಿದಳು ಎಂದು ಕೇಳಿದ್ದೇನೆ. ಬುಧಕೌಶಿಕ ಋಷಿಗಳು ಅಲ್ಲಿಂದ ಎತ್ತಿಕೊಂಡಿರಬಹುದು.
................................................................................................
ಕೊನೆಯದಾಗಿ ರಾಮರಕ್ಷಾ ಸ್ತೋತ್ರದ ಕೊನೆಯ ಶ್ಲೋಕವನ್ನು ನೋಡೋಣ:
ರಾಮೋ ರಾಜಮಣಿಃ ಸದಾ ವಿಜಯತೇ
ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ
ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಮ್
ರಾಮಸ್ಯ ದಾಸೋಸ್ಮ್ಯಹಮ್
ರಾಮೇ ಚಿತ್ತಲಯಃ ಸದಾ ಭವತು
ಮೇ ಭೋ ರಾಮ ಮಾಮುದ್ಧರ.

ಈ ಶ್ಲೋಕದ ಪ್ರತಿಯೊಂದು ಸಾಲು, ಸಂಸ್ಕೃತ ವ್ಯಾಕರಣದ ವಿಭಕ್ತಿಯನ್ನು ಕ್ರಮಬದ್ಧವಾಗಿ ಸೂಚಿಸುತ್ತದೆ.
ರಾಜರಲ್ಲಿ ಶ್ರೇಷ್ಠನಾದ ರಾಮನು ವಿಜಯಿಯಾಗಲಿ.............(ಪ್ರಥಮಾ ವಿಭಕ್ತಿ)
ರಮಾದೇವಿಯ ಪತಿಯಾದ ರಾಮನನ್ನು ಭಜಿಸುತ್ತೇನೆ...........(ದ್ವಿತೀಯಾ ವಿಭಕ್ತಿ)
ಯಾವ ರಾಮನಿಂದ ರಾಕ್ಷಸಸಂಹಾರವಾಯಿತೊ...................(ತೃತೀಯಾ ವಿಭಕ್ತಿ)
ಅಂತಹ ರಾಮನಿಗೆ ನಮಸ್ಕಾರಗಳು.................................(ಚತುರ್ಥೀ ವಿಭಕ್ತಿ)
ರಾಮನಿಗಿಂತ ಹೆಚ್ಚಿನ ಪಾರಾಯಣವಿಲ್ಲ...........................(ಪಂಚಮೀ ವಿಭಕ್ತಿ)
ರಾಮನ ದಾಸನು ನಾನು.............................................(ಷಷ್ಠೀ ವಿಭಕ್ತಿ)
ರಾಮನಲ್ಲಿ ನನ್ನ ಚಿತ್ತವು ಲಯವಾಗಲಿ...........................(ಸಪ್ತಮೀ ವಿಭಕ್ತಿ)
ಹೇ ರಾಮನೆ, ನನ್ನನ್ನು ಉದ್ಧರಿಸು................................(ಸಂಬೋಧನ ವಿಭಕ್ತಿ)
………………………………………………………………………….

ನಾನೃಷಿ: ಕುರುತೇ ಕಾವ್ಯಮ್ ಎನ್ನುವ ಮಾತಿದೆ, ಋಷಿಯಾದವನು ಮಾತ್ರ ಕಾವ್ಯವನ್ನು ರಚಿಸಬಲ್ಲ ಎಂದು.
ಪ್ರಾಚೇತಸ ಎನ್ನುವ ಬೇಡನು ನಾರದ ಮಹರ್ಷಿಗಳ ಉಪದೇಶದಿಂದ ವಾಲ್ಮೀಕಿ ಮಹರ್ಷಿಗಳಾದರು. ಆದರೆ ಅವರ ಅಂತರಂಗದಲ್ಲಿ ತಮ್ಮ ಹಳೆಯ  ಹಿಂಸಾಜೀವನದ ಬಗೆಗಿನ ದುಃಖ ಕುದಿಯುತ್ತಲೇ ಇತ್ತು. ಮತ್ತೊಬ್ಬ ಬೇಡನು ಕ್ರೌಂಚಮಿಥುನಕ್ಕೆ ಬಾಣ ಎಸೆದು ಅವುಗಳಲ್ಲಿ ಒಂದನ್ನು ಕೊಂದಾಗ, ಈ ಶೋಕವು ಶ್ಲೋಕರೂಪದಲ್ಲಿ ಹೊರಬಂದಿತು:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ:
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್.

ತಮ್ಮ ಮನದಲ್ಲಿ ಎಡೆಬಿಡದೆ ಕಾಡುತ್ತಿರುವ ಶೋಕವನ್ನು ಉತ್ಸರ್ಜಿಸುವ ಸಲುವಾಗಿಯೇ ಅವರು ರಾಮಾಯಣವನ್ನು ಬರೆಯಬೇಕಾಯಿತು. ಇದನ್ನೇ ಗೋಪಾಲಕೃಷ್ಣ ಅಡಿಗರು, ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು ಎಂದು ತಮ್ಮ ‘ಭೂಮಿಗೀತೆ’ಯಲ್ಲಿ ವರ್ಣಿಸಿದ್ದಾರೆ. ರಾಮಾಯಣದ ರಚನೆಯ ನಂತರ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಯಿತು. ಆದುದರಿಂದಲೇ ಬುಧಕೌಶಿಕ ಋಷಿಗಳು ‘ರಾಮರಕ್ಷಾಸ್ತೋತ್ರ’ದಲ್ಲಿ ಹೀಗೆ ಹೇಳಿದ್ದಾರೆ:
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್.
ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತುಕೊಂಡು ‘ರಾಮ,ರಾಮ’ ಎನ್ನುವ ಮಧುರ ಪದವನ್ನು ಕೂಜಿಸುತ್ತಿದೆ. ಆ ವಾಲ್ಮೀಕಿಕೋಕಿಲಕ್ಕೆ ವಂದನೆಗಳು.

ಆಧ್ಯಾತ್ಮಿಕ ಅಮೃತದ ಜೊತೆಗೆ ಕಾವ್ಯಾಮೃತವನ್ನೂ ಹಂಚುತ್ತಿರುವ ವಾಲ್ಮೀಕಿ ಮಹರ್ಷಿಗಳಿಗೆ ಹಾಗು ಬುಧಕೌಶಿಕ ಋಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.

47 comments:

  1. ಕೇವಲ ಪಾರಾಯಣಕ್ಕಷ್ಟೇ ಬಳಸುವ ಸ್ತೋತ್ರವನ್ನು ನೀವು ಕಾವ್ಯ ದೃಷ್ಟಿಯಿಂದ ನೋಡಿದ್ದು ವಿಭಿನ್ನ ಮತ್ತು ವಿಶಿಷ್ಟವಾಗಿತ್ತು. ಇದು surprise ಅನ್ನಿಸಿತು ನನಗೆ !.
    'ರಾಮಯ ರಾಮಭದ್ರಾಯ' ಶ್ಲೋಕದ ವಿವರಣೆ ಚೆನ್ನಾಗಿತ್ತು.
    ಕೊನೆಯಲ್ಲಿ ವ್ಯಾಕರಣದ ನಿಲುವಿನಿಂದ ವಿವರಿಸಿದ್ದು , ರಾಮರಕ್ಷಾಸ್ತೋತ್ರದಲ್ಲಿ ಏನೆಲ್ಲಾ ಇದೆ ಎಂಬುದಕ್ಕೆ ಒಳ್ಳೆಯ ನಿದರ್ಶನ. ನನ್ನ ಅಮ್ಮ ಇದನ್ನು ಪಠಿಸುತ್ತಾರೆ, ಅವರಿಗೆ ನಿಮ್ಮ ವಿವರಣೆಗಳನ್ನು ತೋರಿಸಿದೆ. ಸಂತೋಷಪಟ್ಟರು.

    ReplyDelete
  2. ಪುತ್ತರ್,
    ನಮ್ಮ ಅನೇಕ ಪಾರಾಯಣ ರಚನೆಗಳಲ್ಲಿ ಕಾವ್ಯಸೌಂದರ್ಯವೂ ಅಡಗಿದೆ. ವಾಲ್ಮೀಕಿರಾಮಾಯಣದಲ್ಲಿ ಪಂಪಾಸರೋವರದ ವರ್ಣನೆಯನ್ನು ಮಾಡುವಾಗ,‘ಪಂಪಾಸರೋವರವು ಸಜ್ಜನರ ಮನಸ್ಸಿನಂತೆ ನಿರ್ಮಲವಾಗಿದೆ’ ಎಂದು ಹೇಳಲಾಗಿದೆ. ಎಷ್ಟು ಸುಂದರವಾದ ಉಪಮೆ ಅಲ್ಲವೆ? ಹೋಲಿಕೆಯನ್ನು ತಿರುವು ಮುರುವಾಗಿ ಬಳಸಿ ವಾಲ್ಮೀಕಿ ಮಹರ್ಷಿಗಳು ಕಾವ್ಯಕ್ಕೆ ಚೆಲುವನ್ನು ತಂದಿದ್ದಾರೆ.
    ರಾಮರಕ್ಷಾ ಸ್ತೋತ್ರವನ್ನು ಪಠಿಸುವ ನಿಮ್ಮ ತಾಯಿಯವರಿಗೆ ನನ್ನ ವಂದನೆಗಳು.

    ReplyDelete
  3. ಸಂಸ್ಕೃತ ರಚನೆಗಳನ್ನು ಸರಳವಾಗಿ ನಿರೂಪಿಸುವುದೇ ಕಷ್ಟಸಾಧ್ಯ. ಮಗುವಿಗೆ ಹಾಲುಣಿಸುವ ಅಕ್ಕರೆಯ ತಂತ್ರಗಾರಿಕೆ ನಿಮ್ಮದು. ಮೆಚ್ಚಿದೆ ಸರ್.
    ಬೇಡದ್ದೆಲ್ಲ ಬ್ಲಾಗಿಗೆ ತುಂಬುವ ಪ್ರಚಾರಕೋರರ ಮದ್ಯೆ ನಿಮ್ಮ ಪ್ರಯತ್ನ ಅನನ್ಯವಾಗಿದೆ.

    ReplyDelete
  4. ಬದರಿನಾಥರೆ,
    ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

    ReplyDelete
  5. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
    ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ - ಈ ಶ್ಲೋಕದ ಅರ್ಥ ತುಂಬಾ ಚೆನ್ನಾಗಿದೆ... ಹಾಗೆ ಕುತರ್ಕವಾದಿಯವರ ವಾದದ ಬಗ್ಗೆ ಕೇಳೇ ಇರಲಿಲ್ಲ, ವಿಭಕ್ತಿ ಸೂಚಗಳ ಬಗ್ಗೆ ತಿಳಿಸಿದ್ದೀರಿ ನಿಜಕ್ಕೂ ಇವೆಲ್ಲಾ ನಮ್ಮಗಳಿಗೆ ತಿಳಿದೇ ಇಲ್ಲ. ಧನ್ಯವಾದಗಳು ಕಾಕ.

    ReplyDelete
  6. ಮನಸು,
    ಪೋಲಂಕಿಯವರು ಬರೆದ ‘ಸೀತಾಯಣ’ದಲ್ಲಿ ಸಾಕಷ್ಟು ಕುತರ್ಕಗಳು ಹಾಗು ವಿತಂಡವಾದವು ದೊರೆಯುತ್ತವೆ. ಸೀತೆಯನ್ನು ಜರಿದು ಮಾತನಾಡಿದ ಅಗಸನೇ, ಪೋಲಂಕಿಯಾಗಿ ಹುಟ್ಟಿರಬಹುದೆ?!

    ReplyDelete
  7. ನನಗೆ ರಾಮರಕ್ಷಾಸ್ತೋತ್ರದ ಕೆಲವು ಭಾಗಗಳಷ್ಟೇ ಬರುತ್ತದೆ, ಬಹು ಸುಂದರ ರಚನೆ. ಅದರ ಕಾವ್ಯಗುಣದ ವಿಶ್ಲೇಷಣೆ ಸಂತಸ ತಂದಿತು. ಇದರ ಕೊನೆಯ ಶ್ಲೋಕ (ವಿಭಕ್ತಿಗಳಿಂದ ಕೂಡಿದ್ದು) ನನಗೆ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ವಂದನೆಗಳು.

    "ಹೃದಯಂ ಜಾಮದಗ್ನ್ಯಜಿತ್" ಎನ್ನುವುದರ ಮತ್ತೊಂದು ಔಚಿತ್ಯ - ರಾಮ ಪರಶುರಾಮನನ್ನು ಕೇವಲ ಗೆಲ್ಲಲಿಲ್ಲ, ಅವನ ಹೃದಯವನ್ನು ಗೆದ್ದನು. ಆದ್ದರಿಂದ ಹೃದಯವನ್ನು ಗೆಲ್ಲುವ ರಾಮ ಹೃದಯವನ್ನು ಕಾಯುವುದು ಉಚಿತವೇ ಆಗಿದೆ.

    ಸಂಗ್ರಹಯೋಗ್ಯ ಲೇಖನ. ಕುತರ್ಕವಾದಿಗಳು ಬಿಡಿ, ಎಲ್ಲೆಲ್ಲೂ ಇರುತ್ತಾರೆ. ಅವರ ವಿಷಯವನ್ನೊಂದು ಇಲ್ಲಿ ತರದಿದ್ದಿದ್ದರೆ ಲೇಖನ ಪರಿಪೂರ್ಣವಾಗಿ, ಪರಿಶುದ್ಧವಾಗಿರುತ್ತಿತ್ತು :)

    ReplyDelete
  8. ಮಂಜುನಾಥರೆ,
    ರಾಮಚಂದ್ರನು ಪರಶುರಾಮನ ಹೃದಯವನ್ನು ಗೆದ್ದನು ಎನ್ನುವ ನಿಮ್ಮ ವಿಶ್ಲೇಷಣೆ ಸಮಂಜಸವಾಗಿದೆ. ಇನ್ನು ಓದುಗರ ಗಮನವನ್ನು ಕುತರ್ಕದ ಕಡೆಗೆ ಎಳೆಯಲು ಮುಖ್ಯ ಕಾರಣವೆಂದರೆ, ರಾಮಾಯಣದಲ್ಲಿಯೇ ಅಥವಾ ರಾಮರಕ್ಷಾ ಸ್ತೋತ್ರದಲ್ಲಿಯೇ ಅದರ ವಿರುದ್ಧ ಸಾಕ್ಷಿಯು ಲಭ್ಯವಿದೆ ಎನ್ನುವದಕ್ಕಾಗಿ. Anyway I am grateful for your value-additions.

    ReplyDelete
  9. ಅಜ್ಜಿ ಅಮ್ಮ ಕಳಿಸಿದ ರಾಮಾಯ ರಾಮ ಭದ್ರಾಯ
    ದಲ್ಲಿ ಇಷ್ಟೊಂದು ಅರ್ಥ ಇದೆ ಅಂತ ಗೊತ್ತಿರ್ಲಿಲ್ಲ ಸರ್,
    ತುಂಬಾ ಧನ್ಯವಾದಗಳು
    ಸ್ವರ್ಣ

    ReplyDelete
  10. ರಾಮರಕ್ಷಾ ಸ್ತೋತ್ರದ ವಿವರಣೆ ಚೆನ್ನಾಗಿದೆ, ಸಾಮಾನ್ಯವಾಗಿ ಈ ತರಹ ಅಂಗಾಂಗಗಳನ್ನು ದೇವತಾಸ್ವರೂಪಗಳು ಕಾಪಾಡಲಿ ಎಂದು ಕೇಳಿಕೊಳ್ಳುವ ಸ್ತೋತ್ರಗಳನ್ನು ಕವಚ ಎನ್ನುತ್ತಾರೆ (ಶಿವಕವಚ ಇತ್ಯಾದಿ) ಆದರೆ ಇದಕ್ಕೆ ರಕ್ಷಾಸ್ತೋತ್ರ ಎಂಬ ಹೆಸರು ಏಕಿರಬಹುದು? ಈ ತರಹ ರಕ್ಷಾಸ್ತೋತ್ರಗಳು ಬೇರೆ ಇವೆಯೇ?

    ಅನಂತೇಶ ನೆಂಪು

    ReplyDelete
  11. ಸುನಾಥ್ ಕಾಕಾ,

    ಶರಣು !
    ಚಿಕ್ಕವನಿದ್ದಾಗ ವಿಭಕ್ತಿ ನೆನಪಿಟ್ಟುಕೊಳ್ಳಲ್ಲಿಕ್ಕೆ ನಮ್ಮ ಸಂಸ್ಕೃತ ಗುರುಗಳು ಹೇಳಿದ ’ರಾಮೋ ರಾಜಮಣಿ..’ ಮತ್ತೆ ಇಲ್ಲಿ ಓದಿ ಖುಷಿಯಾಯ್ತು.

    ರಾಮರಕ್ಷಾ ಸ್ತೋತ್ರದ ಕಾವ್ಯಾತ್ಮಕ ವಿಶ್ಲೇಷಣೆ ಸೊಗಸಾಗಿತ್ತು.

    ReplyDelete
  12. ಕಾಕಾ,

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ... ನಾನೂ ಇದನ್ನು ನಿತ್ಯಪಠಣ ಮಾಡುತ್ತಿರುವೆ. ಧನ್ಯವಾದಗಳು.

    ReplyDelete
  13. sunath sir, raamaraksha,sthotrada kaavyasowndaryada,
    vyakaranabaddha
    vivaranegaagi
    dhanyavaadagalu.

    ReplyDelete
  14. ಸ್ವರ್ಣಾ,
    ಈ ಅರ್ಥವನ್ನು ಕೇಳಿದಾಗ ನನಗೂ ಸಹ ಆನಂದ ಹಾಗು ಆಶ್ಚರ್ಯ ಅದವು!

    ReplyDelete
  15. ಅನಂತೇಶರೆ,
    ಕೆಲವೊಂದು ರಕ್ಷಾಸ್ತೋತ್ರಗಳನ್ನು ನಾನು ಓದಿದ್ದೇನೆ. ಕೆಲವೊಂದು ಕವಚಗಳನ್ನೂ ನಾನು ಓದಿದ್ದೇನೆ. ನನಗೆ ಅನಿಸುವದೇನೆಂದರೆ, ರಕ್ಷಾಸ್ತೋತ್ರಗಳನ್ನು ನಾವು ಸಾಮಾನ್ಯವಾಗಿ ಪಠಿಸಬಹುದು ಆದರೆ ಕವಚಗಳನ್ನು ವಿಧಿವತ್ತಾಗಿ ಪಠಿಸಬೇಕು.
    ಈ ವಿಷಯದಲ್ಲಿ ನನಗೂ ಹೆಚ್ಚಿನ ಮಾಹಿತಿ ಇಲ್ಲ.

    ReplyDelete
  16. ಅಪ್ಪ-ಅಮ್ಮ,
    ನಾನೂ ಸಹ ವಿಭಕ್ತಿಗಳನ್ನು ನೆನಪಿಟ್ಟುಕೊಳ್ಳಲು ರಾಮರಕ್ಷೆಯನ್ನು ಅವಲಂಬಿಸಿದ್ದೆ!

    ReplyDelete
  17. ತೇಜಸ್ವಿನಿ,
    ಧನ್ಯವಾದಗಳು.

    ReplyDelete
  18. ಕಲರವ,
    ನಿಮಗೂ ಧನ್ಯವಾದಗಳು.

    ReplyDelete
  19. " ರಕ್ಷಾಸ್ತೋತ್ರಗಳನ್ನು ನಾವು ಸಾಮಾನ್ಯವಾಗಿ ಪಠಿಸಬಹುದು ಆದರೆ ಕವಚಗಳನ್ನು ವಿಧಿವತ್ತಾಗಿ ಪಠಿಸಬೇಕು.
    ಈ ವಿಷಯದಲ್ಲಿ ನನಗೂ ಹೆಚ್ಚಿನ ಮಾಹಿತಿ ಇಲ್ಲ. "

    ನನಗೆ ತಿಳಿದಿರುವಂತೆ ಕವಚಗಳನ್ನು ಪಠಿಸುವ ಮೊದಲು ನ್ಯಾಸಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂಗನ್ಯಾಸ, ಕರನ್ಯಾಸ ಇತ್ಯಾದಿ. ಧ್ಯಾನ ಶ್ಲೋಕವೂ ಇರುತ್ತದೆ. ಉಪಾಸ್ಯ ದೇವತೆಯನ್ನು ನಿರ್ಧಿಷ್ಟ್ ಕ್ರಮದಲ್ಲಿ ಆವಾಹಿಸಿಕೊಳ್ಳಬೇಕಾಗುತ್ತದೆ. ನಂತರವಷ್ಟೇ ಮುಂದಿನ ಭಾಗದ ಪಾರಾಯಣ. ಉದಾ : ದುರ್ಗಾ ಸಪ್ತಶತಿಯ ಪ್ರಾರಂಭದಲ್ಲಿ ಚಂಡೀ ಕವಚವನ್ನು ಪಠಿಸಿ ನಂತರ ಸಪ್ತಶತಿಯ ಪಾರಾಯಣ ನಡೆಸಲಾಗುತ್ತದೆ.

    ReplyDelete
  20. ಪಂಚಮಿ ವಿಭಕ್ತಿ "ರಾಮನಿಗಿಂತ" ಆಗಬೇಕಲ್ಲವೇ?

    ReplyDelete
  21. ಸುಬ್ರಹ್ಮಣ್ಯರೆ,
    ಉತ್ತಮ ಮಾಹಿತಿ ನೀಡಿದಿರಿ. ಧನ್ಯವಾದಗಳು.

    ReplyDelete
  22. ಸಂತೋಷ,
    ತಪ್ಪನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಸೂಚನೆಯಂತೆ, ತಿದ್ದುಪಡಿ ಮಾಡಿದ್ದೇನೆ.

    ReplyDelete
  23. ನಮ್ಮ ಪೂಜೆ ಪುನಸ್ಕಾರಗಳಲ್ಲಿ ಇರುವ ಷೋಡಶೋಪಚಾರ ಪೂಜೆಗಳ ಶ್ಲೋಕಗಲು ಮತ್ತು ಪಾರ್ಥನಾ ಶ್ಲೋಕಗಳು ಎಷ್ಟು ಪ್ರಾಸಬದ್ಧವಾಗಿವೆಯೆಂದರೆ ನಿಜಕ್ಕೂ ಸಂತೋಷವಾಗುತ್ತದೆ. ಕೇವಲ ಏನೋ ಕಟ್ಟುಪಾಡು-ವಿಧಿಯಿಲ್ಲ ಮಾಡಬೇಕು ಎಂಬ ಅನಿಸಿಕೆ ತೋಡೆದು ಅವುಗಳಲ್ಲಿರುವ ರಾಗಗಳು, ಸ್ವರಗಳು, ಲಯಬದ್ಧತೆ ಮತ್ತು ತಾತ್ಪರ್ಯಗಳನ್ನು ಅರಿತುಕೊಂಡರೆ ಜೀವನಕ್ಕೆ ಅವುಗಳು ಇದ್ದರೇ ಸೊಗಸು ಎನಿಸುತ್ತದೆ. ಮಾಮೂಲಾಗಿ ಯಾವುದೇ ಹೋಮ ಹವನಗಳನ್ನು ಮಾಡಿಸುವಾಗ ಏನೋ ಹಣ ಕೊಡ್ತೀವಿ-ಪುರೋಹಿತರು ಮಾಡ್ತಾರೆ ಎಂಬ ಭಾವನೆಯಿಂದಿರದೇ ಪುರೋಹಿತರು ಮಂತ್ರಗಳಲ್ಲಿ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಆಗ ಮಾಡಿದ ಪೂಜೆಗಳ ಮಹತ್ವದ ಅರಿವಾಗುತ್ತದೆ, ಮಾನಸಿಕ ನೆಮ್ಮದಿ ತಕ್ಷಣಕ್ಕೇ ಸಿಗುತ್ತದೆ. ರಾಮರಕ್ಷಾ ಸ್ತೋತ್ರದಲ್ಲಿ ಅಂಥದ್ದೇನಿದೆ ಎಂಬುದನ್ನು ನೀವು ಎಳೆಯೆಳೆಯಾಗಿ ಹೊರಗೆಡಹಿದ್ದೀರಿ ಅದೇರೀತಿ ಹನುಮಾನ್ ಚಾಲೀಸಾದ ಬಗ್ಗೆಯೂ ನಿಮ್ಮಿಂದ ಭಾಷ್ಯ ಬರಲಿ ಎಂದು ಬಯಸುತ್ತಾ ಶ್ರೀರಾಮನ ರಕ್ಷೆ ಎಲ್ಲರಿಗಿರಲಿ ಎಂದು ಪ್ರಾರ್ಥಿಸಿ ಹಾರೈಸುತ್ತೇನೆ, ಧನ್ಯವಾದಗಳು.

    ReplyDelete
  24. ಭಟ್ಟರೆ,
    ನಮ್ಮ ಹಳೆಯ ಸ್ತೋತ್ರಾದಿಗಳಲ್ಲಿ ಕಾವ್ಯಾಂಶ ಇದ್ದೇ ಇದೆ. ಪಾರಾಯಣದ ಜೊತೆಗೆ ಇದನ್ನೂ ಗಮನಿಸಿದರೆ, ಖುಶಿಯಾಗುವದರಲ್ಲಿ ಸಂದೇಹವಿಲ್ಲ.

    ReplyDelete
  25. ತು೦ಬಾ ಒಳ್ಳೆಯ ವಿವರಣೆ.. ಓದಿ ಖುಶಿಯಾಯ್ತು ಕಾಕ.
    ವ೦ದನೆಗಳು.

    ReplyDelete
  26. ಮನಮುಕ್ತಾ,
    ಧನ್ಯವಾದಗಳು. ನನಗೆ ಹೊಳೆದಿದ್ದು ಇಷ್ಟು. ಇನ್ನೂ ಎಷ್ಟಿದೆಯೊ?!

    ReplyDelete
  27. ‘ರಾಮರಕ್ಷಾ ಸ್ತೋತ್ರ’ ದಲ್ಲಿ ಅಡಕವಾಗಿರುವ ಸಂಕ್ಷಿಪ್ತ ರಾಮಾಯಣ ಹಾಗೂ ಅದರಲ್ಲಿರುವ ಕಾವ್ಯ ಸೌ೦ದರ್ಯವನ್ನು ಬಹಳ ಅ೦ದವಾಗಿ, ಅರ್ಥವತ್ತಾಗಿ ಬಣ್ಣಿಸಿದ್ದೀರಿ ಸರ್, ಧನ್ಯವಾದಗಳು.

    ReplyDelete
  28. ಸುನಾಥ ಕಾಕಾ,
    ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ.. ಅಂದ ಹಾಗೆ ಸೌಮಿತ್ರಿ ಅಂದ್ರೆ ಶತ್ರುಘ್ನನೂ ಆಗಬಹುದಲ್ಲವೆ?

    ReplyDelete
  29. ಇನ್ನೊಂದು ವಿಷಯ.. ಪಂಚಮೀ ವಿಭಕ್ತಿಯ ಮೂಲ ರೂಪ "ರಾಮನಿಗಿಂತ" (ರಾಮನಿಗೆ + ಕಿಂತ) ಅಲ್ಲ. ರಾಮನಿಂದ/ರಾಮನ ದೆಸೆಯಿಂದ ಎಂಬುದೇ ಸರಿ. ಸಂಸ್ಕೃತದ ಪಂಚಮೀ ವಿಭಕ್ತಿಯು ಇನ್ನೊಂದರ ಜೊತೆ ಹೋಲಿಕೆ, ವಿಯೋಗ ಮಾಡುವಾಗ ಸೂಚಿಸಲ್ಪಡುತ್ತದೆ.
    ಇದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಇದೇ ರೀತಿಯ ಕೃಷ್ಣನ ಮೇಲಿನ ಶ್ಲೋಕ ಇಲ್ಲಿದೆ:
    http://www.kandala.org/pdf/vibhakti.htm

    ReplyDelete
  30. ಹರೀಶ,
    ರಾಮ,ಲಕ್ಷ್ಮಣ,ಭರತ,ಶತ್ರುಘ್ನ ಇದು ಈ ಸೋದರರ birth order ಎಂದು ಕೇಳಿದ್ದೇನೆ. ಆದುದರಿಂದ ಭರತವಂದಿತನಿಗಿಂತ ಮೊದಲು ಬರುವ ಸೌಮಿತ್ರಿವತ್ಸಲನು ಲಕ್ಷ್ಮಣನೇ ಆಗಿರುವದು ಸಮಂಜಸವಾಗಿದೆ.

    ಪಂಚಮೀ ವಿಭಕ್ತಿಯ ಬಗೆಗೆ ನೀವು ಸೂಚಿಸಿದ್ದು ಸರಿಯಾಗಿದೆ. ಆದರೆ ಕನ್ನಡ ಭಾಷೆಯಲ್ಲಿ ‘ರಾಮನಿಂದ ಹೆಚ್ಚಿನ’ ಎನ್ನುವ ಬದಲಾಗಿ ‘ರಾಮನಿಗಿಂತ ಹೆಚ್ಚಿನ’ ಎನ್ನುವದು ಬಳಕೆಯಲ್ಲಿದೆ.
    ಸೂಕ್ಷ್ಮ ವಿಮರ್ಶೆಗಾಗಿ ಧನ್ಯವಾದಗಳು.

    ReplyDelete
  31. ಕಾಕಾ,
    ರಾಮರಕ್ಷಾ ಸ್ತೋತ್ರದ ಕಾವ್ಯ ಸೌಂದರ್ಯವನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ!ನಾನು ಆಗಾಗ್ಗೆ ಇದನ್ನು ಪಠಿಸುತ್ತಾ ಇರುತ್ತೇನೆ.

    ಪ್ರೌಢಶಾಲೆಯಲ್ಲಿ ಸಂಸ್ಕೃತ ಕಲಿಯುವಾಗ ನಮ್ಮ ಗುರುಗಳು ಹೇಳುತ್ತಿದ್ದದ್ದು ನೆನಪಿಗೆ ಬಂತು " ರಾಮ ಶಬ್ದ ಆದ್ರೂ ಸರಿಯಾಗಿ ಕಲೀರಿ..ಪುಣ್ಯ ಬರ್ತದೆ !!"

    ಪ್ರೀತಿಯಿಂದ,
    ಅರ್ಚನಾ

    ReplyDelete
  32. ಅರ್ಚನಾ,
    ನಮ್ಮ ಅನೇಕ ಹಳೆಯ ಸ್ತೋತ್ರಗಳಲ್ಲಿ, ಕಾವ್ಯಸೌಂದರ್ಯ ಇದೆ. ಪಾರಾಯಣದ ಆಧ್ಯಾತ್ಮಿಕ ಅನುಭವದ ಜೊತೆಗೇ, ಕಾವ್ಯಮಾಧುರ್ಯವೂ ಅನುಭವಕ್ಕೆ ಬರುತ್ತದೆ.

    ReplyDelete
  33. ಇದು ನಾನು ದಿನವೂ ಪಠಿಸುವ ಸ್ತೋತ್ರ...ಕಾಲೇಜು ದಿನಗಳಲ್ಲೇ ಇದನ್ನು ಪಠಿಸಲು ಉಜಿರೆ ಕಾಲೇಜು ದಿನಗಳು ಪ್ರೇರಣೆಯಾದವು, ಚಿಕ್ಕ ಮಗ್ಗಿಪುಸ್ತಕದಷ್ಟೇ ಗಾತ್ರದ ಪುಸ್ತಕದಲ್ಲಿ ಶ್ಲೋಕ, ಅರ್ಥ ಎರಡೂ ಇದ್ದವು...
    ಮತ್ತೊಮ್ಮೆ ಶ್ಲೋಕದ ಬಗ್ಗೆ ವಿವರಣೆ ನೀಡಿದ ನಿಮಗೆ ವಂದನೆಗಳು..

    ReplyDelete
  34. ಸುನಾಥ್ ಸರ್,

    ಬೇಂದ್ರೆಯವರ ಕವನಗಳಿಂದ ಈಗ ಸ್ತೋತ್ರಗಳಿಗೆ ಜಂಪ್ ಆಗಿದ್ದೀರ..ಅವುಗಳ ಸಂಫೂರ್ಣ ವಿವರವನ್ನು ಓದಿದೆ ಮೇಲೆ ಈ ಸ್ತೋತ್ರಗಳಲ್ಲಿ ಎಷ್ಟೋಂದು ವಿಚಾರ ಅಡಗಿದೆಯಲ್ಲಾ ಅನ್ನಿಸಿತು. ಧನ್ಯವಾದಗಳು.

    ReplyDelete
  35. ನು-ನನ್ನು-ನಿಂದ-ನಿಗೆ-ಇಂತ-ನ-ನಲ್ಲಿ ಇದಿಷ್ಟು ನಮಗೆ ಹೇಳಿಕೊಟ್ಟ ಎಸ್.ಆರ್.ಸಿದ್ದರಾಮಯ್ಯ ನವರು ನೆನಪಾದರು. ನೆ ಸಂಬೋಧನಾ ಪ್ರತ್ಯಯ ನಿಮ್ಮಿಂದ ಕಲಿತೆ...ಅಂತೂ ನಮ್ಮೆಲ್ಲರಿಗೆ ಕನ್ನಡದ ಸಿರಿವಂತಿಕೆಯ ಮನನ ಮತ್ತು ಕಲಿಕೆಗೆ ದಾರಿ ಮಾಡಿಕೊಡ್ತಿದ್ದೀರಿ ನಿಮ್ಮ ಬ್ಲಾಗ್ ಮೂಲಕ... ನಿಜಕ್ಕೂ ಒಂದು ಅಮೂಲ್ಯ ತಾಣ-ಸಲ್ಲಾಪ. ಇನ್ನು ರಾಜನ ಕರ್ತವ್ಯಗಳನ್ನು ಪುರುಷೋತ್ತಮನ ಉದಾಹರಣೆ ಮೂಲಕ ಬಿಂಬಿಸಿರುವುದು (ಶ್ಲೋಕ ಅರ್ಥೈಸಿ ಹೇಳುವರೇ ವಿರಳವಿರುವಾಗ) ಹೊಸ ವಿಷಯವನ್ನೇ ಅರುಹಿದೆ. ನನಗೆ ಇದರಲ್ಲಿ ಬಹಳ ವೈಶಾಲ್ಯದ ಲಕ್ಷಣಗಳು ಕಾಣುತ್ತವೆ...ಶಿರಸ್ಸು: ಅಧಿಕಾರ ಮೂಲ ಅಂದರೆ ನಮ್ಮ ಸಂವಿಧಾನ ಮತ್ತು ಅದರ ನ್ಯಾಯಯುತ ಪಾಲನೆ, ಭುಜ: ನಮ್ಮ ರಕ್ಷಣಾ ವ್ಯವಸ್ಥೆ, ಹೊರ ಮತ್ತು ಒಳ ಶತೃಗಳಿಂದ ರಕ್ಷಣೆ, ಕಿವಿ: ನಮ್ಮ ವರ್ತಾ ಮತ್ತು ಪ್ರಚಾರ ವ್ಯವಸ್ಥೆ ಹೀಗೆ....ನನಗನ್ನಿಸಿದ್ದು...ತಪ್ಪಿದ್ದರೆ ಮನ್ನಿಸಿ...ಹಿಂದಿನವರ ಶ್ಲೋಕಗಳು ಅನುಭವ ರಸಸಾರ ಅವನ್ನು ಅರಗಿಸಬಲ್ಲ ಜನ ಅಂದಿನವರು ಎಂದರೆ ನಮಗಿಂತ ಎಷ್ಟು ಹೆಚ್ಚು ತಿಳಿದವರಾಗಿದ್ದರಲ್ಲವೇ...???
    ಧನ್ಯವಾದ ನಿಮ್ಮೀ ಲೇಖನಕ್ಕೆ

    ReplyDelete
  36. ವೇಣು,
    ರಾಮರಕ್ಷಾಸ್ತೋತ್ರವು ಜನಪ್ರಿಯ ಸ್ತೋತ್ರವಾಗಿದೆ. ನಮ್ಮ ಮನೆಯಲ್ಲಿಯೂ ಸಹ ನಮ್ಮ ತಾಯಿ ಈ ಸ್ತೋತ್ರಪಾಠ ಮಾಡುತ್ತಿದ್ದು, ಅವರಿಂದಲೇ ನಾವೂ ಕಲಿತೆವು!

    ReplyDelete
  37. ಶಿವು,
    ನಮ್ಮ ಅನೇಕ ಸ್ತೋತ್ರಗಳಲ್ಲಿ ಇರುವ ತರ್ಕ ಮತ್ತು ಸೌಂದರ್ಯಗಳನ್ನು amazing ಎಂದು ಹೇಳಬೇಕಾಗುತ್ತದೆ. ನನ್ನ ಕಣ್ಣಿಗೆ ಬಿದ್ದಾಗಲೆಲ್ಲ ನಿಮ್ಮೊಡನೆ ಹಂಚಿಕೊಳ್ಳುವೆ.

    ReplyDelete
  38. ಜಲನಯನ,
    ನೀವು ಮತ್ತಿಷ್ಟು ಹೆಚ್ಚಿನ ಅರಿವನ್ನು ನೀಡಿದಿರಿ. ರಾಮಚಂದ್ರನಿಗೆ ಅಧಿಕಾರಪ್ರಾಪ್ತಿಯಾದದ್ದು ವಂಶಪಾರಂಪರ್ಯವಾಗಿ ಹಾಗು ಆತನು ರಾಜ್ಯವನ್ನಾಳಿದ್ದು ತನ್ನ ಭುಜಬಲದಿಂದಾಗಿ ಎನ್ನುವದನ್ನು ಗಮನಿಸಿದಾಗ, ನಿಮ್ಮ ತರ್ಕವು ಅತ್ಯಂತ ಸಮಂಜಸವಾಗಿರುವದು ಅರಿವಾಗುತ್ತದೆ.
    ಪಾರಂಪರಿಕ ಸ್ತೋತ್ರಗಳಲ್ಲಿ ಮತ್ತೊಂದು ವಿಶೇಷವಿದೆ. ಅಲ್ಲಿ ಶಿರಸ್ಸನ್ನು ಇಚ್ಛಾಶಕ್ತಿಗೆ, ಮಧ್ಯಭಾಗವನ್ನು ಜ್ಞಾನಶಕ್ತಿಗೆ ಹಾಗು ಅಧೋಭಾಗವನ್ನು ಕ್ರಿಯಾಶಕ್ತಿಗೆ ಪ್ರತೀಕಗಳಾಗಿ ಗ್ರಹಿಸುತ್ತಾರೆ.

    ReplyDelete
  39. ಶ್ರೀನಿವಾಸ ಮ. ಕಟ್ಟಿAugust 5, 2011 at 11:20 PM

    ರಸಮಯ ಕಾವ್ಯ ಲೋಕ, ಅಪವಿತ್ರ ರಾಜಕೀಯ ಲೋಕ ಬಿಟ್ಟು ಒಮ್ಮೆಲೆ ಭಕ್ತಿ ಲೋಕಕ್ಕೆ ಬಂದಿದ್ದೀರಲ್ಲ ! ಆಶ್ಚರ್ಯವೂ ಆಯಿತು ಸಂತೋಷವೂ ಆಯಿತು. ಇದೇ ಸರಣಿಯಲ್ಲಿ ಶ್ರೀ ಶಂಕರ ಭಗವತ್ಪಾದರ "ಭಜಗೋವಿಂದಮ್" ಮತ್ತು ಇತರ ಸ್ತೋತ್ರಗಳು ಮತ್ತು ಶ್ರಿಮದಾನಂದತೀರ್ಥರ "ದ್ವಾದಶ ಸ್ತೊತ್ರ" ಶ್ರೀ ವಾದಿರಾಜರ "ದಶಾವತಾರ ಸ್ತೋತ್ರ" ಗಳ ಬಗ್ಗೆಯೂ ಬರೆದರೆ ಚೆನ್ನಾಗಿರುತ್ತದೆ. ಪ್ರಯತ್ನಿಸುವಿರಾ ? ಈ ಎಲ್ಲವೂ ಕಾವ್ಯ ದೃಷ್ಟಿಯಿಂದ ಅತ್ಯುತ್ತಮವೂ, ಅರ್ಥಪೂರ್ಣವೂ ಆಗಿವೆ.

    ReplyDelete
  40. ನಿಮ್ಮ ಸೂಚನೆ ಸಮುಚಿತವಾಗಿದೆ. ಪ್ರಯತ್ನಿಸುವೆ.

    ReplyDelete
  41. ಪ್ರಿಯ ಸುನಾಥ,

    ನಿಮ್ಮ ಹಾರೈಕೆ ಫಲಿಸಿ(ಬಯಕೆ ಬರುವುದರ ಕಣ್ಸನ್ನೆ ಕಾಣೋ), ನನ್ನ ಇಷ್ಟದ ಜಾಗ - ಹೂಕಣಿವೆ ಗೆ ಹೋಗಿ ಬಂದೆ.
    ನಿಮ್ಮ ಮೈಲ್ ಐಡಿ ಬೇಕು. ಪತ್ರ ಮತ್ತು ಫೋಟೋಲಿಂಕಿಗಾಗಿ.

    ಪ್ರೀತಿಯಿಂದ,
    ಸಿಂಧು

    ReplyDelete
  42. ಪ್ರಿಯ ಸಿಂಧು,
    mail: sunaath@gmail.com
    ನಿಮ್ಮ ಪತ್ರ ಹಾಗು ಫೋಟೋಗಳನ್ನು ಪ್ರತೀಕ್ಷಿಸುವೆ.
    -ಸುನಾಥ

    ReplyDelete
  43. ಬದರಿನಾಥರೆ,
    ಫೇಸ್‍ಬುಕ್‍ಅನ್ನು ನಿರ್ವಹಿಸುವದು ನನ್ನಿಂದ ಸಾಧ್ಯವಾಗದು. ಆದುದರಿಂದ ನಾನು ಅಲ್ಲಿಲ್ಲ. ಆದರೆ, ಒಂದು ತಾತ್ಪೂರ್ತಿಕ ಮಿಶನ್‍ಗಾಗಿ ಫೇಸ್‍ಬುಕ್ ಓಪನ್ ಮಾಡಿ ಮತ್ತೆ ಅದನ್ನು ಮುಚ್ಚಿಬಿಟ್ಟೆ. ನೀವು ಫೇಸ್‍ಬುಕ್‍ ನಿರ್ವಹಿಸುತ್ತಿರುವಿರಿ, ಅಲ್ಲವೆ?

    ReplyDelete
  44. ಭಕ್ತಿ-ಸ್ತೋತ್ರಗಳಲ್ಲಿ ಕಾವ್ಯಸೌ೦ದರ್ಯವನ್ನು ಸೆರೆ ಹಿಡಿದು ಪ್ರಸ್ತುತ ಪಡಿಸುತ್ತಿರುವ ಸುನಾತ್ ಸರ್ ಗೆ ಅಭಿನ೦ದನೆಗಳು. ಈ ನಿಟ್ಟಿನಲ್ಲಿ ಜಗನ್ನಾಥ ದಾಸರ ಹರಿಕಥಾಮೃತಸಾರದ ಬಗ್ಗೆ ಒ೦ದು ತಾಣವನ್ನು ಪ್ರಾರ೦ಭಿಸಿದ್ದೇವೆ. ತಮ್ಮ ಪ್ರೋತ್ಸಾಹ, ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ ಸರ್.

    ಅನ೦ತ್

    ReplyDelete
  45. ಪ್ರತಿದಿನ ರಾಮರಕ್ಷಾ ಪಠಣ ಮಾಡುವ ನಾನೂ ಇಷ್ಟೆಲ್ಲ ಯೋಚನೆ ಮಾಡಿರಲಿಲ್ಲ (ಸಂಸ್ಕೃತ ಮಾಸ್ತರನಾಗಿಯೂ) ಕಾವ್ಯ ಸೌಂದರ್ಯವನ್ನು ಅವಶ್ಯ ಅವಲೋಕಿಸಿದ್ದೆ. ಆದರೆ ಸ್ತೋತ್ರಗಳಲ್ಲಿ "ಫಲಶ್ರುತಿಯನ್ನು" ಹೇಳಬಾರದು ಎಂಬುದು ನನ್ನ ಅನಿಸಿಕೆ. ನಿಷ್ಕಾಮ ಕರ್ಮ ಆಗಬೇಕಾದರೆ. ಯಾವ ಸ್ತೋತ್ರವನ್ನೇ ಆಗಲಿ ಪಠಿಸಿದರೆ ಒಳ್ಳೇದಾಗ್ತದೆ ಎಂದಷ್ಟೆ ಅರಿತಿರಬೇಕು.

    ReplyDelete
  46. ಪುಸ್ತಕವನ್ನೂ ಹಿಡಿದು ಉದ್ದೌದ್ದವಾಗಿ ಓಡಿ ಮುಗಿಸುತ್ತಿದ್ದ ರಾಮರಕ್ಷಾಸ್ತೋತ್ರದ ತಿರುಳನ್ನು ಅದರಲ್ಲಿನ ಕಾವ್ಯಳಹರಿಯನ್ನು ಮತ್ತು ವಿಶೇಷ ಆಂತರಿಕ ಸೊಗಡನ್ನು, ವ್ಯಾಕರಣ ಉದ್ದೇಶವನ್ನು..ಸವಿವರವಾಗಿ ನೀಡಿ ನಮ್ಮ ಜ್ಞಾನ ಹೆಚ್ಚಿಸಿ ಅದನ್ನು ಮನಸ್ಪೋರ್ವಕವಾಗಿ ಮತ್ತು ಆದರವಾಗಿ ಪಠಿಸಲು ಅಣಿಗೊಳಿಸಿದ ತಮಗೆ ವಂದನೆಗಳು.

    ReplyDelete