Saturday, August 13, 2011

ಕರಡಿ ಕುಣಿತ............ದ.ರಾ.ಬೇಂದ್ರೆ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.

                                    ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
                                    ಜಾಂಬುವಂತನ ಹಿಡಿದು ತಂದಾನ
                                    ‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
                                    ಧಣಿ ದಾನ ಕೊಡುವನು’ ಅಂದಾನ

  ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
  ಕಲಿಯುಗದ ಕಲ್ಕೀನ ಕಂಡಾನ
  ಜಾಂಬುನದಿ ತೀರದ ಜಂಬುನೀರಲ ಹಣ್ಣು
  ಕೃತಯುಗದ ಕೊನೆಗೀವಾ ಉಂಡಾನ

ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ

  ‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
  ತನ್ನsನ ತಾsನನ ತಂದಾs
  ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
  ಕುಣಿದಾನ ಕುಣಿತವ ಛಂದಾನ

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ

  ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
  ಪ್ರಾಣದ ಈ ಪ್ರಾಣಿ ಹಿಂದಾs
  ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
  ಪರಮಾರ್ಥ ಎಂಬಂತೆ ಬಂದಾನ

ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.            
……………………………………………………………………………
೧೯ನೆಯ ಶತಮಾನದಲ್ಲಿ ಬಾಳಿದ ಸಂತ ಶರೀಫರಿಗೂ, ೨೦ನೆಯ ಶತಮಾನದಲ್ಲಿ ಬಾಳಿದ ಬೇಂದ್ರೆಯವರಿಗೂ ಒಂದು ಸಾಮ್ಯವಿದೆ. ಇವರೀರ್ವರೂ ಜನರಿಗಾಗಿ, ಜನರ ನಡುವೆ ಹಾಡಿದ ಕವಿಗಳು. ಈರ್ವರೂ ಒಂದು ಸಾಮಾನ್ಯ ಘಟನೆಯನ್ನು ವರ್ಣಿಸುತ್ತ ಅದರಲ್ಲಿಯ ಅಸಾಮಾನ್ಯ ತಿರುಳನ್ನು ಬೋಧಿಸುತ್ತಿದ್ದರು. ಇವರೀರ್ವರ ನಡುವಿನ ಭೇದವೆಂದರೆ ಶರೀಫರು ಸಂತಕವಿಗಳು, ಬೇಂದ್ರೆಯವರು ಲೋಕಕವಿಗಳು.

 ‘ಸರಳತೆ’ಯು ಲೋಕಕವಿಯಾದ ಬೇಂದ್ರೆಯವರ ಅನೇಕ ಕವನಗಳ ಲಕ್ಷಣವಾಗಿದೆ. ಆಡಂಬರದ ಸಂಸ್ಕೃತಾಲಂಕಾರ ಅವರ ಕವನಗಳಲ್ಲಿ ಕಾಣಸಿಗದು. ಒಂದು ರೀತಿಯಲ್ಲಿ ಇದು  ಅವರ ಶೈಲಿಯ ದೌರ್ಬಲ್ಯ ಎನ್ನಬಹುದೇನೊ? ಏಕೆಂದರೆ ಬಗೆಬಗೆಯ ಸಂಸ್ಕೃತ ಪದಗಳಿಂದ ಅಲಂಕಾರಗೊಂಡ ಕಾವ್ಯವು `ಸುಲಭ ಓದುಗನನ್ನು ಮರಳು ಮಾಡುವಂತೆ, ಸರಳ ದೇಸಿ ಪದಗಳ ಕವನಗಳು ಮಾಡಲಾರವು.  ಬೇಂದ್ರೆಯವರ ಕವನಗಳನ್ನು ಸಹಜಸೌಂದರ್ಯದ ನಿರಾಭರಣ ಸುಂದರಿಗೆ ಹೋಲಿಸಬಹುದು. ನಿಜವಾದ ರಸಿಕಹಂಸರೇ ಈ ಕವನಗಳ ಚೆಲುವನ್ನು ಸವಿಯಬಲ್ಲರು.

‘ಕರಡಿ ಕುಣಿತ’ವು ಬೇಂದ್ರೆಯವರ ‘ಸರಳ ಕವನ’ಗಳಲ್ಲೊಂದು. ಕವನವನ್ನು ಓದುತ್ತ ಹೋದಂತೆ, ಈ ಸರಳ ಕವನದ ಒಡಲಲ್ಲಿರುವ ಶೋಷಣೆಯ ಸಂಕೀರ್ಣತೆಯು ಓದುಗರ ಗಮನಕ್ಕೆ ಬಾರದಿರಲಾರದು.

 ‘ಕರಡಿ ಕುಣಿತ’ ಕವನದ ಮೊದಲ ನುಡಿಯನ್ನು ಗಮನಿಸೋಣ.
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಕರಡಿಯನ್ನು ಆಡಿಸುವವನ ಚಿತ್ರಣದಿಂದ ಈ ಕವನ ಪ್ರಾರಂಭವಾಗುತ್ತದೆ. ನೋಡುಗನ ಕಣ್ಣಿಗೆ ಮೊದಲು ಕಾಣುವದು ಇವನ ಉಡುಗೆ-ತೊಡುಗೆ. ಈ ವೇಷಭೂಷಣಗಳು ಇವನ ವ್ಯಕ್ತಿತ್ವದ ಪ್ರತೀಕಗಳೂ ಆಗಿವೆ. ಈತನು ಹೆಗಲ ಮೇಲೆ ಕರಿಯ ಕಂಬಳಿಯನ್ನು ಹೊದ್ದುಕೊಂಡಿದ್ದಾನೆ ಹಾಗು ಮಣಿಕಟ್ಟಿನಲ್ಲಿ ಕಬ್ಬಿಣದ ಕಡಗವನ್ನು  ತೊಟ್ಟುಕೊಂಡಿದ್ದಾನೆ. ಅಲ್ಲದೆ ಕೈಯಲ್ಲಿ ಕುಣಿಗೋಲನ್ನೊಂದನ್ನು ಹಿಡಿದುಕೊಂಡಿದ್ದಾನೆ. ಇದು ಕರಡಿಯನ್ನು ತಿವಿಯಲು ಅವನು ಬಳಸುವ ಉಪಕರಣ. ಜೊತೆಗೆ ಕರಡಿಯದೇ ಕೂದಲುಗಳ ಗುಚ್ಛವೊಂದು ಅವನ ಮತ್ತೊಂದು ಕೈಯಲ್ಲಿ. ಇವೆಲ್ಲವು ಈ ಮನುಷ್ಯನ ನಿಷ್ಕರುಣತೆಯನ್ನು ಗಾಢವಾಗಿ ಬಿಂಬಿಸುತ್ತವೆ. ನೋಡುಗರನ್ನು ಆಕರ್ಷಿಸಲು ಈತ ಕಡಗವನ್ನು ಕುಟ್ಟುತ್ತ, ಏನೇನೋ ಗುಣುಗುಟ್ಟುತ್ತ ಕರಡಿಯನ್ನು ಆಡಿಸಲು ಬರುತ್ತಿದ್ದಾನೆ. ಈತನ ಕರ್ಕಶ ವ್ಯಕ್ತಿತ್ವವನ್ನು ನೋಡಿದಾಗ ಕವಿಯ ಮನಸ್ಸು ಕರಡಿಯ ಅಸಹಾಯಕ ಸ್ಥಿತಿಯನ್ನು ಚಿಂತಿಸುತ್ತದೆ. (ಈ ನುಡಿಯ ಸಾಲುಗಳಲ್ಲಿ ಪ್ರಧಾನವಾಗಿರುವ ‘ಕ’ಕಾರವು ಕರ್ಕಶತೆಯನ್ನು ಧ್ವನಿಸುವದನ್ನು ಗಮನಿಸಬೇಕು.)

ಎರಡನೆಯ ನುಡಿ:
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ಅಡವಿಯಲ್ಲಿ ಸ್ವತಂತ್ರವಾಗಿ ಬದಕುತ್ತಿದ್ದ ಪ್ರಾಣಿ ಈ ಕರಡಿ. ಹೇರಳವಾಗಿ ಸಿಗುವ ಜೇನುತುಪ್ಪವನ್ನು ಮೆಲ್ಲುತ್ತ ನೆಮ್ಮದಿಯಿಂದ ಜೀವಿಸುತ್ತಿದ್ದ ಜೀವಿಯಿದು. ಅಲ್ಲದೆ, ಕರಡಿಯೆಂದರೇನು ಸಾಮಾನ್ಯ ಪ್ರಾಣಿಯೆ? ಇದು ಜಾಂಬುವಂತ. ಪರಮಾತ್ಮನು ರಾಮಾವತಾರ ಎತ್ತಿದಾಗ ಅವನಿಗೆ ನೆರವು ನೀಡಿದ ಪ್ರಾಣಿ. ಕೃಷ್ಣಾವತಾರದಲ್ಲಿ ಭಗವಂತನೊಡನೆಯೇ ಸೆಣಸಾಡಿಸಿದಂತಹ ಬಲಿಷ್ಠ ಪ್ರಾಣಿ. ಇದೀಗ ಮಾನವನ ಕುಟಿಲ ಜಾಲದಲ್ಲಿ ಸೆರೆಯಾಗಿ ಅವನ ಕೈಗೊಂಬೆಯಾಗಿದೆ. ಇಂತಹ ಪ್ರಾಣಿಗೆ ಈ ಮಾನವನ ತುಚ್ಛ ಆದೇಶವೇನು?---‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ’ ಎನ್ನುವ ಗುಲಾಮಗಿರಿಯ ಆದೇಶ! ಇದಕ್ಕೆ ಪ್ರತಿಫಲವೆಂದರೆ ಧಣಿ ಬಿಸಾಕುವ ‘ದಾನ’. ಈ ದಾನ ದೊರೆಯುವದೂ ಸಹ ಕುಣಿಸುವವನಿಗೇ! ಎಂತಹ ಹೃದಯವಿದ್ರಾವಕ ಚಿತ್ರವಿದು!


ಮೂರನೆಯ ನುಡಿ:
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಕೃತಯುಗ ಅಥವಾ ಸತ್ಯಯುಗದಲ್ಲಿ ಎಲ್ಲ ಜೀವಿಗಳು ನಿಸರ್ಗಸಹಜ ಜೀವನ ನಡೆಯಿಸುತ್ತಿದ್ದರು. ಈ ಯುಗದ ಅಂತ್ಯದವರೆಗೆ ಜಾಂಬುವಂತನು ಅಂದರೆ ಕರಡಿಯು ಜಾಂಬುನದಿಯ ದಂಡೆಯ ಮೇಲೆ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿಂದು ಜೀವಿಸುತ್ತಿತ್ತು. ಆನಂತರದ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ಭಗವಂತನು ರಾಮಾವತಾರ, ಕೃಷ್ಣಾವತಾರ ಹಾಗು ಕಲ್ಕಿಯ ಅವತಾರಗಳನ್ನು ಎತ್ತಿ ದುಷ್ಟಸಂಹಾರ ಮಾಡಿದನು. ಇವು ನಾಗರಿಕ ಯುಗಗಳಾಗಿದ್ದುದರಿಂದ ಜಾಂಬುವಂತನು ನಿಸರ್ಗಸಹಜ ಜೀವನಕ್ಕೆ ಕೊನೆ ಹಾಡಿದನು. ಈ ಎಲ್ಲ ಯುಗಗಳನ್ನು ಕಂಡವನಾದುದರಿಂದ ಜಾಂಬುವಂತನು ಪುರಾಣಪುರುಷನು.

[ಟಿಪ್ಪಣಿ: ಹಿಮಾಲಯಪರ್ವತಶ್ರೇಣಿಯ ಭಾಗವಾದ ಕೈಲಾಸ ಶಿಖರದ ಸಮೀಪದಲ್ಲಿರುವ ಮಾನಸ ಸರೋವರದ ಸುತ್ತಲೂ ಏಳು ದ್ವೀಪಗಳಿವೆ ಎಂದು ಪುರಾಣಗಳು ಹೇಳುತ್ತವೆ. ಇವು ಬಹುಶಃ ಏಳು ಖಂಡಗಳು. ದಕ್ಷಿಣ ದಿಕ್ಕಿನಲ್ಲಿರುವ ಖಂಡಕ್ಕೆ ಜಂಬೂದ್ವೀಪ (=ಭಾರತ) ಎಂದು ಕರೆಯುತ್ತಾರೆ. ಈ ಜಂಬೂದ್ವೀಪದಲ್ಲಿ ಹರಿಯುತ್ತಿರುವ ನದಿಯೇ ಜಾಂಬುನದಿ. ಅಲ್ಲಿಯ ನಿವಾಸಿಗಳು ಜಾಂಬುವಂತರು. ಇವರೇ ಭಾರತದ ಮೂಲನಿವಾಸಿಗಳು. ಈ ನದೀತೀರದಲ್ಲಿ ಬೆಳೆಯುವ ವೃಕ್ಷಗಳು ಜಂಬು ನೀರಲ ವೃಕ್ಷಗಳು. ಜಾಂಬುವಂತರು ಈ ಮರದ ನೀರಲ ಹಣ್ಣುಗಳನ್ನು ತಿಂದು ಬದಕುತ್ತಿದ್ದರು. ಮಾನಸ ಸರೋವರದ ನಡುವಿನಲ್ಲಿಯೂ ಸಹ ಒಂದು ಬೃಹತ್ ಜಂಬೂವೃಕ್ಷ ಅಂದರೆ ನೀರಲ ಮರವಿದೆ. ಇದರಿಂದ ಬೀಳುವ ಜಂಬೂಫಲಗಳನ್ನು ಅಲ್ಲಿಯ ವಾಸಿಗಳಾದ ‘ನಾಗ’ರು ತಿಂದು ಜೀವಿಸುತ್ತಿದ್ದರು. ಸ್ವತಂತ್ರವಾಗಿ ಬಾಳುತ್ತಿದ್ದ ಈ ಆದಿವಾಸಿಗಳು ಆಯುಧಕುಶಲವಾದ ಜನಾಂಗಕ್ಕೆ ಸೋತು ಆಳಾಗಿ ಬಾಳಬೇಕಾಯಿತು.

ಜಂಬುದ್ವೀಪದಲ್ಲಿರುವ ಜಾಂಬುನದಿಯ ದಂಡೆಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿನ್ನುತ್ತ ಈ ಜಾಂಬುವಂತರು ಸ್ವತಂತ್ರವಾಗಿ, ಸುಖವಾಗಿ ಇರುತ್ತಿದ್ದರು. ಇದು ಕೃಷಿ ಸಂಸ್ಕೃತಿಗಿಂತಲೂ ಮೊದಲಿನ ಜೀವನಪದ್ಧತಿಯನ್ನು ಸೂಚಿಸುತ್ತದೆ. ಈ ಯುಗದ ಅಂದರೆ ಕೃತಯುಗದ ಲಕ್ಷಣವೇನು? ಈ ಯುಗದಲ್ಲಿ ಕಬ್ಬಿಣದ ಆವಿಷ್ಕಾರವಾಗಿರಲಿಲ್ಲ. ಆದುದರಿಂದ ಕೃಷಿಸಂಸ್ಕೃತಿಯೂ ಪ್ರಾರಂಭವಾಗಿರಲಿಲ್ಲ. ಸಸ್ಯಾಹಾರಿಗಳು ಗಡ್ಡೆ ಗೆಣಸುಗಳನ್ನು ಹಾಗು ಹಣ್ಣು ಹಂಪಲಗಳನ್ನು ತಿಂದು ಬದಕುತ್ತಿದ್ದರು. ಈ ಯುಗದಲ್ಲಿ ‘ಗುಂಪು ಜೀವನ’ವಿತ್ತು. ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆ ಪ್ರಾರಂಭವಾಗಿರಲಿಲ್ಲ; ಹಾಗು ಈ ಯುಗದ ಮನುಷ್ಯರು ‘ಆಟವಿಕರು’, ಅಂದರೆ ಅಡವಿಯ ನಿವಾಸಿಗಳು.

ಈ ನಿಸರ್ಗಸಹಜ ಜೀವನ ಕೊನೆಗೊಂಡಿದ್ದು ಕೃತಯುಗದ ಅಂದರೆ ಸತ್ಯಯುಗದ ಕೊನೆಯಲ್ಲಿ. ಸತ್ಯಯುಗದ ಬಳಿಕ ಬಂದದ್ದು ತ್ರೇತಾಯುಗ, ಆನಂತರ ಬಂದದ್ದು ದ್ವಾಪರ ಯುಗ. ತ್ರೇತಾಯುಗದಲ್ಲಿ ಕಬ್ಬಿಣದ ಶೋಧವಾಗಿತ್ತು. ಈ ಯುಗದಲ್ಲಿಯೇ ಸೂರ್ಯವಂಶದವರ ವಂಶಪಾರಂಪರಿಕ ಪ್ರಭುತ್ವ ಬೆಳೆದು ಬಂದಿತು. ಇವರು ನಗರಿಗಳಲ್ಲಿ ಜೀವಿಸುವವರು ಅಂದರೆ ‘ನಾಗರಿಕರು.’ ಶ್ರೀರಾಮಚಂದ್ರನು ಕಬ್ಬಿಣದ ಬಿಲ್ಲು ಬಾಣಗಳನ್ನು ಉಪಯೋಗಿಸಿ, ಶಿಲಾಯುಧ ಹಾಗು ಕಟ್ಟಿಗೆಯ ಗದೆಗಳನ್ನು  ಬಳಸುತ್ತಿದ್ದ ಮೂಲನಿವಾಸಿಗಳನ್ನು ಅಂದರೆ ‘ಆಟವಿಕ’ರನ್ನು ಸೋಲಿಸಿದನು. ಆಯುಧಕುಶಲ ಜನಾಂಗವು ನಿಸರ್ಗಸಹಜ ಜೀವಿಗಳನ್ನು ಮಣಿಸಿತು. ಅವರನ್ನು ತನ್ನ ಅಧೀನರನ್ನಾಗಿ ಮಾಡಿತು. ಸಮಾಜದಲ್ಲಿ ವಿವಿಧ ವರ್ಣಗಳು ಪ್ರಾರಂಭವಾದವು. ಪ್ರಭುತ್ವದಿಂದ ಗುಲಾಮಗಿರಿಯವರೆಗಿನ ಪಿರ್ಯಾಮಿಡ್ ರೂಪುಗೊಂಡಿತು. ಇದು ಯಜಮಾನ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತದೆ.

ವಿಭಿನ್ನ ಜನಾಂಗಗಳ ಅಥವಾ ಗುಂಪುಗಳ ನಡುವೆ ಹೋರಾಟ ನಡೆದಾಗ ಗೆದ್ದವನೇ ಯಜಮಾನ, ಸೋತವನೇ ಗುಲಾಮ!
ಸತ್ಯಯುಗದ ಕೊನೆಯಲ್ಲಿ ಸೋತು ಹೋದ ‘ಜಾಂಬುವಂತರು’ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ವಿಭಿನ್ನ ಅಧಿಪತಿಗಳನ್ನು ಕಂಡರು. ತಾವು ಮಾತ್ರ ಗುಲಾಮರಾಗಿಯೇ ಉಳಿದರು.]

ನಾಲ್ಕನೆಯ ನುಡಿ:
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
ಮೊದಲನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಚಿತ್ರಣವನ್ನು ಹಾಗು ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಕರಡಿಯ ಚರಿತ್ರೆಯನ್ನು ಬಣ್ಣಿಸಿದ ಬೇಂದ್ರೆಯವರು ನಾಲ್ಕನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಮಾಯದ ಮಾತುಗಳನ್ನು ವರ್ಣಿಸುತ್ತಾರೆ.

ಕುಣಿತವನ್ನು ನೋಡಲು ಬರುವವರನ್ನು ಮರಳು ಮಾಡಿ ತನ್ನ ಹೊಟ್ಟೆ ತುಂಬಿಕೊಳ್ಳುವದೇ ಕುಣಿಸುವವನ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧಿಸಲು ಆತನು ಅಲ್ಲಿ ನೆರೆದ ತಾಯಂದಿರ ಭಾವನೆಗಳ ಮೇಲೆ ಆಟ ಆಡುತ್ತಾನೆ. ಚಿಕ್ಕ ಮಕ್ಕಳು ಯಾವಾಗಲೋ ಅಳುತ್ತಿರುತ್ತಾರೆ. ಮಗು ಅಂಜಿರಬಹುದು ಅಥವಾ ಅದಕ್ಕೆ ಕೆಟ್ಟ ದೃಷ್ಟಿ ತಾಗಿರಬಹುದು ಎಂದು ಹೆದರಿದ ತಾಯಂದಿರು ‘ದೃಷ್ಟಿಯನ್ನು ನಿವಾಳಿಸಿ’ ಚೆಲ್ಲುತ್ತಾರೆ. ‘ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ’ ಎಂದು ದೈವದ ರಕ್ಷಣೆ ಕೋರುತ್ತಾರೆ. ಅಂತಹ ಅಮಾಯಕ ತಾಯಂದಿರ ಎದುರಿಗೆ ಕರಡಿ ಕುಣಿಸುವವನು ‘ಈ ಕರಡಿಯ ಕೂದಲುಗಳಲ್ಲಿ ಭೀಮರಕ್ಷಿಯ ಬಲವಿದೆ’ ಎಂದು ಹೇಳುವಾಗ ಕರಡಿಯ ದೈಹಿಕ ಸಾಮರ್ಥ್ಯದ ಜೊತೆಗೇ ಅದಕ್ಕೊಂದು ದೈವಿಕ ಸಾಮರ್ಥ್ಯವನ್ನು ಆರೋಪಿಸುತ್ತಾನೆ. ಅದು ನಿಜವಿದ್ದರೆ, ಕರಡಿ ಮನುಷ್ಯನ ಆಳಾಗಿ ಬಾಳುತ್ತಿತ್ತೆ!?

ಐದನೆಯ ನುಡಿ:
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾs
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ನೆರೆದವರ ಮನರಂಜನೆಗಾಗಿ ಕರಡಿಯನ್ನು ಕುಣಿಸಬೇಕಲ್ಲವೆ? ಕರಡಿಯಾದರೇನು ಮನುಷ್ಯನಾದರೇನು, ಜೀವಜಗತ್ತಿನಲ್ಲಿ ಎಲ್ಲರೂ ಸಮಾನರೇ. ಆದರೆ ಮನುಷ್ಯನು ತಾನೇ ಜೀವಜಗತ್ತಿನ ಅಂತಿಮ ಸೃಷ್ಟಿ ಎಂದು ಭಾವಿಸಿಬಿಟ್ಟಿದ್ದಾನೆ. ಹಾಗೆಂದುಕೊಂಡು ಕರಡಿಯನ್ನು ತನಗಿಂತ ಕೆಳದರ್ಜೆಯ ಪ್ರಾಣಿಯನ್ನಾಗಿ ಮಾಡಿದ ಮನುಷ್ಯನು ಆ ಜೀವಿಗೆ ‘ಕುಣಿಯಲೆ ಮಗನ ನೀ’ ಎಂದು ಆದೇಶ ನೀಡುತ್ತಾನೆ. ಪಾಪದ ಕರಡಿಗಂತೂ ಮೊದಲೇ ತರಬೇತಿ ಸಿಕ್ಕಿರುತ್ತದೆ. ಕುಣಿಸುವವನಿಂದ ಹೊರಡುವ ಧ್ವನಿ ಹಾಗು ಕುಣಿಗೋಲಿನ ಸನ್ನೆಗೆ ಅದು ಆಳಾಗಿ ಬಿಟ್ಟಿದೆ. ಇಂತಹ ವರ್ತನೆಯನ್ನು ೧೯ನೆಯ ಶತಮಾನದಲ್ಲಿದ್ದ ರಶಿಯಾದ ಖ್ಯಾತ ವರ್ತನಾ-ವಿಜ್ಞಾನಿ ಪಾವ್ಲೋವರು ‘ರೂಢಿಸಿದ ಪ್ರತಿಕ್ರಿಯೆ’ (=Conditioned Reaction) ಎಂದು ಕರೆದಿದ್ದಾರೆ. ಆದುದರಿಂದ  ಅದರ ಕುಣಿತವು ಸುಖದ ಕುಣಿತವಲ್ಲ. ಕುಣಿಗೋಲಿಗೆ ಹೆದರಿಕೊಳ್ಳುವ ಮುಗ್ಧ ಕರಡಿಯ ಕುಣಿತವನ್ನು ಬೇಂದ್ರೆಯವರು ‘ಮುದ್ದು ಕೂಸಿನ ಮುಸುಮುಸು’ ವರ್ತನೆಗೆ ಹೋಲಿಸುತ್ತಿದ್ದಾರೆ. ಕೂಸು ಎಂದರೆ ಅಸಹಾಯಕ ಜೀವಿ. ಅದಕ್ಕೆ ಅಸಮಾಧಾನವಾದಾಗ ಅದು ಮುಸುಮುಸು ಮಾಡುತ್ತದೆ. ಅದರಂತೆ ಕರಡಿಯ ಕುಣಿತವೂ ಸಹ ಅಸಹಾಯಕ ಜೀವಿಯ ಮುಸುಮುಸು ಕುಣಿತ. ಆದರೆ ನೋಡುಗರಿಗೆ ಅದು ‘ಛಂದಾನ ಕುಣಿತ’!

ಆರನೆಯ ನುಡಿ:
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಕರಡಿಯ ಕುಣಿತವು ತನ್ನ ಹೊಟ್ಟೆಪಾಡಿಗಲ್ಲ. ಅದನ್ನು ಹಿಡಿದುಕೊಂಡು ಬಂದವನ ಹೊಟ್ಟೆಪಾಡಿಗಾಗಿ. ‘ನಡೆದಾನ’ ಎಂದರೆ ಅನಾದಿಕಾಲದಿಂದಲೂ ಇದು ನಡೆದು ಬಂದಿದೆ. ‘ಪಡೆದಾನ ಬಂಧಾsನ’ ಎಂದರೆ ಈ ಬಂಧನವು ಆ ಕರಡಿಯ ಹಣೆಬರಹವಾಗಿದೆ. ಆದುದರಿಂದಲೇ ಆತ ಜನರೆದುರಿಗೆ ಬಂದು ಕುಣಿಯುತ್ತಿದ್ದಾನೆ. ಕರಡಿಯನ್ನು ಆಡಿಸುವವನ ಹೊಟ್ಟೆ ಭಗಭಗ ಎನ್ನುತ್ತಿರುವಷ್ಟು ಸಮಯವೆಲ್ಲ, ಕರಡಿ ಕುಣಿಯುತ್ತಲೇ ಇರಬೇಕು. ಅವನ ಹೊಟ್ಟೆ ತಣ್ಣಗಾದಾಗಲೇ ಕರಡಿ ಪಡುವ ಕಷ್ಟವೂ ಕಡಿಮೆಯಾದೀತು. ಅದಕ್ಕೆಂದೇ ಇದು ಮುಗಿಲಿಗೆ ಕೈ ಮಾಡಿ ದೇವರನ್ನು ಪ್ರಾರ್ಥಿಸುತ್ತದೆ: ನನ್ನನ್ನು ಕುಣಿಸುತ್ತಿರುವವನ ಹೊಟ್ಟೆ ತಣ್ಣಗಿರಲಿ, ದೇವರೆ!
ಅನಾಥೋ ದೇವರಕ್ಷಕಃ!

ಏಳನೆಯ ನುಡಿ:
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾs
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಇರುವ ಭೇದವೇನು? ಪ್ರಾಣಿಗಳಲ್ಲಿ ಇರುವದು ಪ್ರಾಣಶಕ್ತಿ (vitality). ಮನುಷ್ಯನಲ್ಲಿರುವದು ಬುದ್ಧಿಶಕ್ತಿ. ಬುದ್ಧಿಶಕ್ತಿ ಎನ್ನುವದು ಧೂರ್ತತನವೂ ಆಗಬಲ್ಲದು. ಮನಬಲ್ಲ ಮಾನವ ಎನ್ನುವಾಗ ಬೇಂದ್ರೆಯವರು ಮನುಷ್ಯನ ಈ ಧೂರ್ತ ಬುದ್ಧಿಯನ್ನು ಸೂಚಿಸುತ್ತಿದ್ದಾರೆ ಹಾಗು ಪ್ರಾಣದ ಪ್ರಾಣಿ ಎನ್ನುತ್ತ ಕರಡಿ ಹಾಗು ಇತರ ಪ್ರಾಣಿಗಳ ಪ್ರಾಣಶಕ್ತಿಯನ್ನು ಸೂಚಿಸುತ್ತಿದ್ದಾರೆ. ಈ ಧೂರ್ತಬುದ್ಧಿಯಿಂದಲೇ ಮಾನವನು ಪ್ರಾಣಶಕ್ತಿಯ ಪ್ರಾಣಿಗಳನ್ನು ಸೋಲಿಸಿದ್ದಾನೆ. ಈ ಧೂರ್ತಬುದ್ಧಿಯಿಂದಲೇ ಇತರ ಅಮಾಯಕ ಮಾನವರನ್ನು ಮರಳು ಮಾಡಿದ್ದಾನೆ. ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಷವನ್ನು ತೊಡಿಸಿದ್ದಾನೆ.

ಎಂಟನೆಯ ನುಡಿ
ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.              

ಬೇಂದ್ರೆಯವರು ಕೊನೆಯಲ್ಲಿ ಕವನದ ತತ್ವಸಾರವನ್ನು ಹೇಳಿದ್ದಾರೆ. ಸಾಧಾರಣವೆಂದು ಕಾಣಿಸುವ ಈ ತತ್ವಸಾರವನ್ನು ಯಾವ ಉದ್ದೇಶಕ್ಕಾಗಿ ಬೇಂದ್ರೆಯವರು ಇಲ್ಲಿ ಹೇಳಿದ್ದಾರೆ? ಕವನಕ್ಕಿಂತ ಹೆಚ್ಚಾಗಿ ಕವಿಯ ಅಸ್ಮಿತೆಯನ್ನು ಗುರುತಿಸುವದು ಈ ಕೊನೆಯ ನುಡಿಯ ಉದ್ದೇಶವಾಗಿದೆ. ಬೇಂದ್ರೆಯವರು ತಮ್ಮನ್ನು ಯಾವಾಗಲೂ ಸಾಧಾರಣ ಜನರ ನಡುವಿನ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಹಳ್ಳಿಯಲ್ಲಿಯ ಕಟ್ಟೆಯೊಂದರ ಮೇಲೆ ಹತ್ತು ಜನರ ನಡುವೆ ಕುಳಿತುಕೊಂಡು ಕೈಯೆತ್ತಿ ಹಾಡುವ ಕವಿಯೊಬ್ಬನನ್ನು ಕಲ್ಪಿಸಿಕೊಳ್ಳಿರಿ. ಬಹುಶಃ ಬೇಂದ್ರೆಯವರ ಸ್ವ-ಕಲ್ಪನೆಯೂ ಅದೇ ಇದ್ದಿತೇನೋ? ಅಂತಹ ಕವಿಯೊಬ್ಬ ತನ್ನ ಕೇಳುಗರಿಗೆ ಕೊನೆಯಲ್ಲಿ ಕವನದ ತಿರುಳನ್ನು ಹೇಳುತ್ತಾನೆ, ಒಂದು ನೀತಿಬೋಧೆಯನ್ನು ಮಾಡುತ್ತಾನೆ. ಆದುದರಿಂದಲೇ ಬೇಂದ್ರೆಯವರು ಕವಿಯಾಗಿ ತನಗೆ ಕಂಡ ದರ್ಶನವನ್ನು ಇಲ್ಲಿ ಇತರರಿಗೂ ತಿಳಿಸುತ್ತಿದ್ದಾರೆ. ತಾವು ‘ಲೋಕಕವಿ’ ಎನ್ನುವ ಅಸ್ಮಿತೆಯನ್ನು ಸಮರ್ಥಿಸಿಕೊಂಡಿದ್ದಾರೆ.

51 comments:

  1. ದ.ರಾ.ಬೇಂದ್ರೆ ಯವರ "ಕರಡಿ ಕುಣಿತ............" ದ ಅ೦ತರಾರ್ಥವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್, ಕವನವನ್ನು ಪೂರ್ಣ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳಲು ಬಹಳ ಸಹಕಾರಿಯಾಗಿದೆ.
    ಧನ್ಯವಾದಗಳು. ನಿಮ್ಮಿ೦ದ ಇ೦ಥಾ ಲೇಖನಗಳ ನಿರೀಕ್ಷೆಯಲ್ಲಿರುವೆ.

    ReplyDelete
  2. ಸ೦ತಕವಿ ಶರೀಪ್ಹ ಮತ್ತು ಲೋಕಕವಿ ಬೇ೦ದ್ರೆ ಇವರಿಬ್ಬರ ನಡುವಿನ ಸಾಮ್ಯವನ್ನು ವಿವರಿಸುತ್ತ, ಬೇ೦ದ್ರೆಯವರ ಕವಿತೆಯ ಸಾರ ಸರ್ವಸ್ವವನ್ನು ನಮಗೆ ಉಣಬಡಿಸುವಲ್ಲಿ ನೀವು ಯಶಸ್ವಿ ಯಾಗಿದ್ದೀರಿ. ಬಹಳ ಚೆನ್ನಾಗಿದೆ ವಿವರಣೆ.

    ReplyDelete
  3. ಪ್ರಭಾಮಣಿಯವರೆ,
    ಕರಡಿ ಕುಣಿತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ತಿಳಿದದ್ದನ್ನು ನಿಮ್ಮ ಎದುರಿಗೆ ಇಟ್ಟಿದ್ದೇನೆ. ಸ್ಪಂದನೆಗಾಗಿ ಧನ್ಯವಾದಗಳು.

    ReplyDelete
  4. ಪರಾಂಜಪೆಯವರೆ,
    ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

    ReplyDelete
  5. ಸುನಾಥ ರವರೆ
    ಕರಡಿ ಕುಣಿತದ ದಲ್ಲಿ ಕರಡಿಯ ದ್ವನಿ ಗುಲಾಮತನ ಅನುಭವಿಸುವರ ದ್ವನಿಯಾಗಿ ಹೊರಹೊಮ್ಮಿರುವುದು ವಿಶೇಷ
    ... ಅದನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದ

    ReplyDelete
  6. ಸೋಮಶೇಖರ,
    ಆಯುಧಕುಶಲರು ಹಾಗು ‘ನಾಗರಿಕ’ರು ಅನಾದಿಕಾಲದಿಂದ ಮುಗ್ಧ ಜನಾಂಗದವರನ್ನು ಗುಲಾಮಗಿರಿಗೆ ಒಳಪಡಿಸಿದ್ದಾರೆ. ಈ ಕಾಲದಲ್ಲೂ ಸಹ ಅದು ಬೇರೊಂದು ರೀತಿಯಲ್ಲಿ ನಡೆದಿದೆ! ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  7. ಸರ್, ಕವಿತೆಯ ಬಗ್ಗೆ ವಿವರಣೆ ತುಂಬಾ ಚೆನ್ನಾಗಿದೆ. ಟಿಪ್ಪಣಿಯಲ್ಲಿ ನೀವು ಹೇಳಿದ ವಿಷಯ ನಂಗೆ ಹೊಸದು, ಥ್ಯಾಂಕ್ಸ್.
    'ಕರಡಿ ಕುಣಿತ' ಬರೀ ಕರಡಿ ಮತ್ತು ಮನುಷ್ಯನ ನಡುವಿನದಲ್ಲ. ಮನುಷ್ಯ ಮನುಷ್ಯನ ನಡುವೆ ನಡೆದ, ಈಗಲೂ ತನ್ನ ಆದಿಪತ್ಯವನ್ನ ಮೆರೆಯುತ್ತಿರುವ ನಾಗರೀಕಸಮಾಜದ ಅಂಶ / ಒಂದು ಭಾಗ.
    ಬೇಂದ್ರೆ ಮಾಸ್ತಾರರ ಕವಿತೆಗಳನ್ನ ಇಷ್ಟು ಚೆನ್ನಾಗಿ ವಿವರ್ಸ್ತೀರಲ್ಲ wonderful sir. ಕವಿತೆಗಳನ್ನ ಓದುವುದು, ಅಲ್ಲಿನ ಏರಿಳಿತಗಳ ಅನುಭವ, ಅದನ್ನ ಅರ್ಥೈಸಿಕೊಳ್ಳೋದು, ಯಾವ ಶಬ್ದ ಏನನ್ನ ದ್ವನಿಸ್ತಾಯಿದೆ . . . . All these expect considerable effort, right ? ಕವಿತೆಗಳನ್ನ ಓದುತ್ತಾ ಹೋದಂತೆಲ್ಲ ಅನಿಸಿದ್ದೆನೆಂದ್ರೆ, ಎಲ್ಲದಕ್ಕಿಂತ ಮಿಗಿಲಾಗಿ ಕವಿತೆಯಂದ್ರೆ : 'Through the influence of open mind, rigorously selected words from vocabulary and put in relevant place'
    Thank you for nice post :-)

    ReplyDelete
  8. sunaath sir,bendreyavara adbhutavaada kavanagalalli "karadi kunitavuu",ondu, idiyaagi anubhavisi haaduvantaha arthapoornavaada padyada.adara antaraalavannu bahala sogasaagi arthaisiddira.shaaleyalli kannadetara makkalu saha bahala akkareyinda nammondige haadi sambhramisuttiddu nenapaagisitu.dhanyavaadagalu.

    ReplyDelete
  9. ನಾಗರಾಜ,
    ಕವಿತೆಯ ಬಗೆಗಿನ ನಿಮ್ಮ ವ್ಯಾಖ್ಯಾನ ಸ್ವಾರಸ್ಯಪೂರ್ಣವಾಗಿದೆ. ಕವನಗಳನ್ನು ಓದುವ,ಅರ್ಥೈಸಿಕೊಳ್ಳುವ ವಿಧಾನವನ್ನು ನನ್ನ ಶಾಲಾಗುರುಗಳು ಕಲಿಸಿದರು. ಕಾವ್ಯಾರ್ಥ ಹೊಳೆದಂತೆಲ್ಲ ಖುಶಿ ಸಿಗುತ್ತದೆ!

    ReplyDelete
  10. ಕಲರವ,
    ಈ ಕವನವನ್ನು ಚಿಕ್ಕಮಕ್ಕಳು ಹಾಡಿ ಖುಶಿಯಾದಂತೆ, ದೊಡ್ಡವರು ಅರ್ಥೈಸಿಕೊಂಡು ಖುಶಿ ಪಡುವರು, ಅಲ್ಲವೆ?

    ReplyDelete
  11. ಸುನಾಥ್ ಸರ್,

    ಈ ಕವಿತೆಯನ್ನು ೫ ನೆಯ ಅಥವಾ ೬ ನೆಯ ತರಗತಿಯಲ್ಲಿ ಓದಿದ್ದೆ. ನಮ್ಮ ಕನ್ನಡ ಅಧ್ಯಾಪಕರು ಅದರ ಭಾವಾರ್ಥವನ್ನು ಯಾವ ರೀತಿಯಲ್ಲಿ ತಿಳಿಸಿದ್ದರು ಅನ್ನೋದು ನೆನಪಿಲ್ಲ. ಆದರೆ ನಿಮ್ಮ ವಿವರವಾದ ಭಾವಾರ್ಥ ಈ ಕವಿತೆನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡಿದೆ...ಧನ್ಯವಾದಗಳು ...

    ReplyDelete
  12. ಕಾಕಾ..
    ಕರಡಿಯ ಕುಣಿತ ಪದ್ಯವನ್ನು ನನ್ನ ಮಗಳಿಗೆ ಹೇಳಿಕೊಡುತ್ತಿದ್ದೆ.ಇದರ ಅರ್ಥ ಇಷ್ಟೋ೦ದು ವಿಸ್ತೀರ್ಣವಾಗಿದೆ ಎ೦ಬುದನ್ನು ಗಮನಿಸಿರಲಿಲ್ಲ. ತಿಳಿಸಿದ ತಮಗೆ ವ೦ದನೆಗಳು.

    ReplyDelete
  13. ಅಶೋಕ,
    ಪ್ರಾಥಮಿಕ ಶಾಲೆಗಳಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಅರ್ಥವನ್ನಷ್ಟೇ ತಿಳಿಸುವರು. ಯಾವಾಗಲೋ ಮತ್ತೊಮ್ಮೆ ನಾವು ದೊಡ್ಡವರಾದ ಮೇಲೆ, ಈ ಕವನಗಳನ್ನು ಓದಿದಾಗ, ಹೊಳೆಯುವ ಅರ್ಥವೇ ಬೇರೆ!

    ReplyDelete
  14. ವಿಜಯಶ್ರೀ,
    ಮಕ್ಕಳಿಗೆ ನಾವು ತಿಳಿಸಬೇಕಾದ ಅರ್ಥವೇ ಬೇರೆ,ನಾವು ತಿಳಿದುಕೊಳ್ಳಬೇಕಾದ ಅರ್ಥವೇ ಬೇರೆ, ಅಲ್ಲವೆ!

    ReplyDelete
  15. ಈ ಪದ್ಯದ ಕೆಲವು ನುಡಿಗಳು ನಮಗೆ ಪ್ರಾಥಮಿಕ ಶಾಲೆಯಲ್ಲಿ ಇತ್ತು. ಆಗ ಅದೇನು ಅರ್ಥವಾಗಿತ್ತೋ, ಮರೆತುಹೋಗಿದೆ. ನಂಗೆ ನೆನಪಿದ್ದುದು ಇದೊಂದೆ ಸಾಲು "ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
    ಕೊರಳಾಗ ಕೊಟ್ಟಿರಿ ಒಂದಾನ"

    ಈಗ ಇಲ್ಲಿ ಚೆನ್ನಾಗಿ ತಿಳಿದಂತಾಯಿತು.

    ReplyDelete
  16. ಕಾಕಾ..
    ನಿಮ್ಮ ವಿವರಣೆ ಮನಸ್ಸಿನಾಳಕ್ಕೆ ಇಳಿಯಿತು. ಬಾಲ್ಯದಲ್ಲಿ ಹಾಡುತ್ತಾ.. ಆಡುತ್ತಿದ್ದ ನೆನಪು ಹಸಿರಾಯಿತು. ಆದರೆ ಆಗ ಅರ್ಥ ತಿಳಿದಿರಲಿಲ್ಲ. ಧನ್ಯವಾದಗಳು ಕಾಕಾ...

    ಶ್ಯಾಮಲ

    ReplyDelete
  17. ಸುಬ್ರಹ್ಮಣ್ಯರೆ,
    ಧನ್ಯವಾದಗಳು.

    ReplyDelete
  18. ಶ್ಯಾಮಲಾ,
    ನೀವು ಚಿಕ್ಕವರಿದ್ದಾಗ ಈ ಕವನವನ್ನು ಹಾಡುತ್ತ, ಆಡುತ್ತಿದ್ದಿರಿ ಎಂದು ತಿಳಿದು ಸಂತೋಷವಾಯಿತು. ಈಗ ನೀವು ಇದನ್ನು ಅರ್ಥೈಸಿಕೊಳ್ಳುವ ಪರಿಯೇ ಬೇರೆ ಆಗಿದೆ!

    ReplyDelete
  19. ಕರಡಿ ಕುಣಿತ ತುಂಬಾ ಚೆನ್ನಾಗಿದೆ.

    ReplyDelete
  20. ಮನಮುಕ್ತಾ,
    ಸ್ಪಂದನೆಗೆ ಧನ್ಯವಾದಗಳು.

    ReplyDelete
  21. ಮಹಾಂತೇಶ,
    ವರಕವಿಗಳು ಕುಣಿಸಿದ ಕರಡಿ-ಕುಣಿತ ಚೆನ್ನಾಗಿರಲೇ ಬೇಕು!

    ReplyDelete
  22. ವರಕವಿಯ ಒ೦ದೊ೦ದು ಕವನವೂ ಹೇರಳವಾಗಿ ತು೦ಬಿಸಿದ ವಿಚಾರ-ಸ೦ಗ್ರಹವೇ ಆಗಿದೆ. ಒ೦ದೊ೦ದನ್ನೇ ಒಪ್ಪ ಓರಣವಾಗಿ ಬಿಡಿಸಿ/ಬಡಿಸಿ ಉಣಿಸುತ್ತಿರುವ ತಮ್ಮ ಮೇರು ಕಾಯಕಕ್ಕೆ ಶರಣು ಸಾರ್.

    ಅನ೦ತ್

    ReplyDelete
  23. ಅನಂತರಾಜರೆ,
    ಮೇರುಕವಿಯ ಕಾವ್ಯದ ಬಗೆಗಿನ ತಮ್ಮ ದೃಷ್ಟಿಕೋನ ಸರಿಯಾದದ್ದೇ ಆಗಿದೆ. ಆದರೆ ಇವರ ಕವನಗಳ ತಿರುಳನ್ನು ನಾನು ತಿಳಿದುಕೊಂಡದ್ದು ಅತ್ಯಲ್ಪ!

    ReplyDelete
  24. ಪ್ರಿಯ ಸುನಾಥ,

    ಎಂದಿನಂತೆ, ಮತ್ತೊಂದು ಅತ್ಯುತ್ತಮ ಕವಿತೆಯ ರಸದೂಟ.
    ಬೇಂದ್ರೆ ಮಾಸ್ತರರೇ ಆಹಾಹಾ ಅಂತ ಕೂರ್ತಾ ಇದ್ರೋ ಏನೋ ನಿಮ್ ವಿಶ್ಲೇಷಣೆ ಕೇಳೋಕೆ ಅನ್ನಿಸ್ತಾ ಇದೆ.
    ಈ ಕರಡಿ ಕುಣಿತ ನಮಗೆ ೬ನೇ ತರಗತಿಯಲ್ಲಿ ಇತ್ತು. ನಮಗೆಲ್ಲ ತುಂಬ ಇಷ್ಟವೂ ಆದ ಪದ್ಯ.ಹಾಡಿಕೊಳ್ತಾ ಇದ್ವಿ. ಪದಗಳನ್ನು ಮೀರಿದ ಭಾವಾರ್ಥವನ್ನ ನೀವು ಎಷ್ಟು ಸೊಗಸಾಗಿ ವರ್ಣಿಸಿದ್ದೀರಲ್ಲ. ತುಂಬ ಧನ್ಯವಾದಗಳು.
    ಉಳಿದ ಎಲ್ಲ ಪ್ಯಾರಾಗಳು ಸುಲಭವಾಗಿ ಇದ್ದರೂ ಕೃತಯುಗದ ಕೊನೆಗಿನ ಜಂಬುನೇರಲ ಮಾತ್ರ ಆಳಕ್ಕೆ ಇಳಿದರೇ ಸಿಕ್ಕುವ ಸೊಗಸು. ಅದು ಅದ್ಭುತವಾಗಿ ಬಂದಿದೆ ನಿಮ್ಮ ವಿವರಣೆಯಲ್ಲಿ.

    ತುಂಬ ಅಕ್ಕರೆಯೊಂದಿಗೆ,
    ನಮಸ್ಕಾರಗಳು,
    ಸಿಂಧು

    ReplyDelete
  25. ತುಂಬಾ ಚೆನ್ನಾಗಿದೆ ಸರ್
    ಸ್ವರ್ಣ

    ReplyDelete
  26. ಪ್ರಿಯ ಸಿಂಧು,
    ಧನ್ಯವಾದಗಳು.
    ನಿಸರ್ಗಸಹಜ ‘ಆಟವಿಕ’ ಜೀವನದ ಅಂತ್ಯವನ್ನು ಹಾಗು ಗುಲಾಮಗಿರಿಯ ಶ್ರೇಣೀಕರಣದ ‘ನಾಗರಿಕ’ ಜೀವನದ ಪ್ರಾರಂಭವನ್ನು ಸೂಚಿಸುವ ‘ಕೃತಯುಗದ ಕೊನೆ’ಯು ಈ ಕವನದ poignant point ಎಂದು ನನ್ನ ಭಾವನೆ.

    ReplyDelete
  27. ಸ್ವರ್ಣಾ,
    ನಿಮ್ಮ ಸ್ಪಂದನೆಗಾಗಿ ಅನೇಕ ಧನ್ಯವಾದಗಳು.

    ReplyDelete
  28. ಸ್ವಾಮೀ, ನಾನು ಆರನೆಯ ಕ್ಲಾಸಿನಲ್ಲಿದ್ದಾಗೇನಾದರೂ ನೀವು ನಮ್ಮ ಮೇಷ್ಟರಾಗಿದ್ದಿದ್ದರೆ, ಈ ಪದ್ಯವನ್ನು ನಮಗೆ ಪಾಠ ಮಾಡಿದ್ದರೆ ನನ್ನ ಸಾಹಿತ್ಯದ ಒಳನೋಟ ಇವತ್ತು ಇನ್ನಷ್ಟು ಆಳವಾಗಿರುತ್ತಿತ್ತೇನೋ ಅನ್ನಿಸಿದ್ದು ಸುಳ್ಳಲ್ಲ. ಶಾಲೆಯ ದಿನಗಳಲ್ಲಿ ತಿಳಿಯದ ಕಾರಣಕ್ಕಾಗಿ ನಮ್ಮ ಅಚ್ಚುಮೆಚ್ಚಾದ ಕವನವನ್ನು ಇವತ್ತು ಮತ್ತೆ ನೆನಪಿಸಿ ಖುಶಿ ಕೊಟ್ಟಿರಿ, ಜೊತೆಗೆ ಆಗಿನ ನನ್ನ ಗ್ರಹಿಕೆಯನ್ನು ಮತ್ತೆ ನೆನಪಿಸಿಕೊಂಡು ನಿಮ್ಮ ವಿವರಣೆಯ ಜೊತೆ ತಾಳೆಹಾಕುವ ಸೊಗಸಾದ ಅವಕಾಶವನ್ನೂ ಕೊಟ್ಟಿರಿ, ಥ್ಯಾಂಕ್ಸ್.

    "ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದುಮುಗಿಲಿಗೆ ಕೈಮುಗಿದು ನಿಂದಾನ" ಅನ್ನುವುದರ ಸೂಕ್ಷ್ಮ ಮನಮುಟ್ಟಿತು. ಆಗಲೂ ಈ ಸಾಲುಗಳು ಇಡೀ ಕವನದೊಂದಿಗೆ ಯಾಕೋ ಹೊಂದುವುದಿಲ್ಲವಲ್ಲ ಎಂದು ಅಸ್ಪಷ್ಟವಾಗಿ ಅನ್ನಿಸಿದ್ದು ನೆನಪಿದೆ, ಆದರೆ ಹುಡುಗುಬುದ್ಧಿ ಅದಕ್ಕಿಂತಾ ಆಳಕ್ಕಿಳಿದಿರಲಿಲ್ಲ.

    ಆದರೆ "ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲುನಡೆದಾನ ಪಡೆದಾನ ಬಂದಾsನ" - ಎಂಬಲ್ಲಿನ ವಿವರಣೆ ಮಾತ್ರ ತುಸು ಬಳಸಿನದೆನಿಸಿತು. ನನಗನ್ನಿಸಿದ್ದು ಇದು: ಬಂದಾsನ ಅನ್ನೋದು "ಬಂಧನ"ಬಳಕೆಯ ರೂಪದಂತೆ ಕಾಣುತ್ತದೆ. ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು ಈ ಧೀರ ನಡೆದಿದ್ದಾನೆ, ತನ್ನ ಸ್ವಚ್ಛಂದವನ್ನು ಬಿಟ್ಟು ಬಂಧನವನ್ನು ಪಡೆದಿದ್ದಾನೆ, ಆ ಹಿರಿ ಉದ್ದೇಶದಿಂದಲೇ ಕುಣಿಯುತ್ತಾ, ಕುಣಿಸುವವನ ಹೊಟ್ಟೆ ತಣ್ಣಗಾಗಲಿ ಎಂದು ದೇವರಲ್ಲಿ ಬೇಡುತ್ತಾನೆ.

    "ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡತನ್ನsನ ತಾsನನ ತಂದಾsನಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತಕುಣಿದಾನ ಕುಣಿತವ ಛಂದಾನ" - ಅನ್ನುವುದರಲ್ಲಿ ಆಗ ಆ ಕರಡಿಯ ಬಗ್ಗೆ ಕವಿಯ ಬೆರಗು ಮಾತ್ರ ಕಂಡಿತ್ತೇ ಹೊರತು ನೀವು ತೋರಿಸಿದ ಸೂಕ್ಷ್ಮ ಕಂಡಿರಲಿಲ್ಲ, ಸೊಗಸಾದ ವಿವರಣೆ.

    ReplyDelete
  29. ಮಂಜುನಾಥರೆ,
    ನಿಮ್ಮ ಅಧ್ಯಯನಪೂರ್ಣ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  30. ಸ್ವಾಮೀ, ಜಗಕ್ಕೆ ತನ್ನ ಕಾವ್ಯಗಳಿಂದ ಜ್ಞಾನವನ್ನು ತುಂಬುವವನೇ ಕವಿ ಎಂಬುದು ಋಜುಮಾರ್ಗದವರ ಅಂಬೋಣ ಅಲ್ಲವೇ? ಅಂತಹ ಕವಿಯೊಳಗೇ ಒಬ್ಬ ಸಂತನೂ ಕುಳಿತುಬಿಟ್ಟರೆ ಹೇಗಾಗಬಹುದು ಎಂಬುದಕ್ಕೆ ಸಹಜ ಉದಾಹರಣೆ ಬೇಂದ್ರೆ. ಬೇಂದ್ರೆಯವರ ಹಲವು ಕಾವ್ಯಗಳು ವೇದಾಂತವನ್ನು ಸಾರುತ್ತವೆ. ಪ್ರಸ್ತುತಪಡಿಸಿದ ’ಕರಡಿಯ ಕುಣಿತ’ವನ್ನೂ ಮಾನವ ಜೀವನದ ಮಜಲಿಗೆ ಹೋಲಿಸಿ ಬರೆದಿದ್ದಾರೆ. ಇಲ್ಲಿ ಕರಡಿಯನ್ನು ಮನುಷ್ಯನನ್ನಾಗಿಯೂ ಕುಣಿಸುವಾತನನ್ನು ವಿಧಿಯಾಗಿಯೂ ಕಾಣಬಹುದಾಗಿದೆ.

    ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
    ಜಾಂಬುವಂತನ ಹಿಡಿದು ತಂದಾನ
    ‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
    ಧಣಿ ದಾನ ಕೊಡುವನು’ ಅಂದಾನ

    --- ಜನ್ಮಾಂತರಗಳ ಸಾಂಗತ್ಯವನ್ನು ಪರೋಕ್ಷವಾಗಿ ಹೇಳಿದರೇ ?

    ವಿವರಣೆ ಬಹಳ ಸೊಗಸಾಗಿದೆ. ನಮಗೆಲ್ಲಾ ಅಂದಿಗೆ ಪಠ್ಯದಲ್ಲಿ ಅಡಕವಾಗಿದ್ದ ಈ ಹಾಡಿಗೆ ಅರ್ಥತಿಳಿಯದ ಮಾಸ್ತರು ಬೋಧಿಸುತ್ತಿದ್ದರು-ಅದು ಅವರ ತಪ್ಪಲ್ಲ; ಬೇಂದ್ರೆಯವರ ಭಾವಾರ್ಥದ ಆಳದ ಕೊಳದಲ್ಲಿ ಎಲ್ಲರೂ ಈಜಲು ಸಾಧ್ಯವೇ? ಚೆನ್ನಾಗಿದೆ, ಧನ್ಯವಾದಗಳು.

    ReplyDelete
  31. ಭಟ್ಟರೆ,
    ಬೇಂದ್ರೆಯವರ ಕವನ ಗೂಢಾರ್ಥ ಹಾಗು ಗಾಢಾರ್ಥಗಳಿಂದ ಕೂಡಿದ್ದು. ಇವರ ಕಾವ್ಯಸಾಗರದಲ್ಲಿ ಮೇಲೆ ಮೇಲೆ ಈಜಿದರೆ ಒಂದು ಸುಖ; ತೆಳಗೆ ಇಳಿದರೆ ಸಿಗುವವು ಮುತ್ತು, ರತ್ನ!

    ReplyDelete
  32. ಸುನಾಥ್ ಕಾಕಾ,
    ಶಾಲೆಯಲ್ಲಿ ಕಲಿತ ಪದ್ಯ ಮತ್ತೆ ನಿಮ್ಮ ಲೇಖನಿಯಲ್ಲಿ ನೋಡಿ ಸಂತಸವಾಯ್ತು.
    ಆಗ ಅದು ಕೇವಲ ಕರಡಿ ಮತ್ತು ಕರಡಿ ಕುಣಿಸುವವನ ವರ್ಣನೆಗೆ ಸೀಮಿತವಾಗಿತ್ತು
    ಈಗ ನಿಮ್ಮ ಆಳವಾದ ವಿಶ್ಲೇಷಣೆಯಿಂದ ಅದರ ಭಾವಾರ್ಥ ಅರಿವಾಗುತ್ತಿದೆ.

    ಶರಣು

    ReplyDelete
  33. ಅಪ್ಪ-ಅಮ್ಮ,
    ಈ ಕವನವು ಚಿಕ್ಕವರಿಗಾಗಲೀ, ದೊಡ್ಡವರಿಗಾಗಲೀ ಖುಶಿಯನ್ನು ಕೊಡುವ ಕವನವೇ ಆಗಿದೆ!

    ReplyDelete
  34. ಸುನಾಥ್ ಅವರೆ ನಿಮ್ಮ ಈ-ಮೇಲ್ ವಿಳಾಸ ಸಿಗಬಹುದಾ? ತಮ್ಮೊಂದಿಗೆ ಒಂದೆರಡು ವಿಷಯಗಳನ್ನು ಚರ್ಚಿಸಬೇಕಿತ್ತು (ಕನ್ನಡದ ಕುರಿತು)

    ReplyDelete
  35. ಮಂಜುಳಾ ಅವರೆ,
    ನನ್ನ ಈ-ಮೇಲ್ ಹೀಗಿದೆ:
    sunaath@gmail.com

    ReplyDelete
  36. kaka, how are u? here in this country after a long gap i am accessing net. read ur blog as ususal its execellent.

    ReplyDelete
  37. ಎಲ್ಲಾ ಓದಲು ಈಗ ಶುರು ಮಾಡಿದ್ದೇನೆ.. ಎಲ್ಲರೆನ್ನುವ ಹಾಗೆ ಕಾಕಾ ಎನ್ನುತ್ತೇನೆ.
    ಬೇಂದ್ರೆ ಮತ್ತು ಅಡಿಗರ ಕವನ ಅರ್ಥವಾಗದಿದ್ದರೂ ಓದುತ್ತಿದ್ದೆ, ಓದುತ್ತಿದ್ದೇನೆ. ನಿಮ್ಮಿಂದ ತುಂಬಾ ಉಪಕಾರವಾಯಿತು. ಧನ್ಯವಾಗದಳು.
    ಮತ್ತೆ ಅಡಿಗರ ಕೂಪಮಂಡೂಕ ಕವನದ ಬಗ್ಗೆ ಕೇಳಬೇಕೆನ್ನಿಸಿದೆ.

    ReplyDelete
  38. ದೇಸಾಯರ,
    ಕೊನೆಗೂ ನಿಮಗೆ ‘ಜಾಲ’ ಸಿಕ್ಕಿತು. ನಿಮ್ಮ ಜಾಲದಲ್ಲಿ ಬೀಳಲು ನಾವು ಕಾತರರಾಗಿದ್ದೇವೆ. ದಯವಿಟ್ಟು ಬಲೆ ಬೀಸಿ. ಪರದೇಶದಲ್ಲಿ ನೀವು comfortable ಆಗಿರುವಿರಿ ಎಂದು ಆಶಿಸುತ್ತೇನೆ.

    ReplyDelete
  39. ಈಶ್ವರ ಭಟ್ಟರೆ,
    ನಿಮ್ಮ ಪರಿಚಯವಾಗುತ್ತಿರುವದು ಸಂತಸದ ವಿಷಯ. ಕೂಪಮಂಡೂಕದ ಬಗೆಗೆ ಪ್ರಯತ್ನಿಸುತ್ತೇನೆ. ನೀವು ಬ್ಲಾಗ್ ಬರೆಯುತ್ತೀರಾ? ತಿಳಿಸಿ.

    ReplyDelete
  40. ನಮಸ್ತೆ ಕಾಕಾ,
    ಪ್ರತಿಕ್ರಿಯೆಗೆ ಧನ್ಯವಾದ.
    ಹೌದು ನಾನೂ ಬರೆಯುತ್ತೇನೆ ಅನ್ನುವುದಕ್ಕಿಂತ ಗೀಚುತ್ತೇನೆ ಅಷ್ಟೆ.
    http://bhavakirana.blogspot.com/2011/07/blog-post_09.html

    ನೀವು ನೋಡಿ ಅಭಿಪ್ರಾಯ ತಿಳಿಸಿದರೆ ಧನ್ಯ. ಮತ್ತೆ ಕೂಪಮಂಡೂಕಕ್ಕೆ ಕಾಯುತ್ತಾ ಇರುತ್ತೇನೆ.
    ಶುಭದಿನ.

    ReplyDelete
  41. ನನ್ನ ಪುಣ್ಯಕ್ಕೆ ನಮ್ಮ ಪ್ರಾಥಮಿಕ ಶಾಲೆ ಗುರುಗಳು ಇದನ್ನು ನಮಗೆ ಸರಿಯಾಗಿ ವಿಶ್ಲೇಷಿಸಿ ಪಾಠ ಮಾಡಿದ್ದರು-ಇದೊಂದು ಶೋಷಣೆ ಬಗ್ಗೆ ಬರೆದ ಕವನವೆಂದು. ತಾವು ಅದನ್ನು ಎಳೆ ಎಳೆಯಾಗಿ ವಿಸ್ತರಿಸಿದ್ದು ತುಂಬಾ ಚೆನ್ನಾಗಿದೆ.
    ಬೇಂದ್ರೆಯವರ ಕವನದ ಆಂತರ್ಯದ ನಿಜತಿರುಳು ಉಣಬಡಿಸುತ್ತಿರುವ ತಮಗೆ ಶ್ರಧ್ಧಾ ವಂದನೆಗಳು.

    ReplyDelete
  42. ವಿಶ್ಲೇಷನೆ ತುಂಬಾ ಚೆನ್ನಾಗಿದೆ.

    ಇದರ MP3 ಏನಾದ್ರು ಸಿಗುತ್ತಾ?

    ReplyDelete
  43. ವಿವರಣೆ ತುಂಬಾ ಚನ್ನಾಗಿದೆ mp3 ಇದ್ದರೆ ಕಳುಹಿಸಿ

    ReplyDelete
  44. ಪ್ರಿಯ ಮಂಜುನಾಥರೆ, ‘ಕರಡಿ ಕುಣಿತ’ವಿರುವ ಧ್ವನಿ ಮುದ್ರಿಕೆ ನನಗೆ ಸಿಕ್ಕಿಲ್ಲ. ಪ್ರಯತ್ನಿಸುತ್ತೇನೆ ಹಾಗು ನಿಮಗೆ ಮತ್ತೆ ತಿಳಿಸುತ್ತೇನೆ.

    ReplyDelete
  45. ಧನ್ಯವಾದಗಳು ಗುರುಗಳೇ ಅದ್ಭುತವಾದ ವಿವರಣೆ ಮಾಡಿದ್ದೀರಿ

    ReplyDelete
  46. ಧನ್ಯವಾದಗಳು, Anonymus

    ReplyDelete
  47. Thank you so much ಈ ವಿವರಣೆ ನನಗೆ ತುಂಬಾ ಸಯಾಯ ಆಗ್ತಿದೆ. ಈ ಪದ್ಯದ ಸಾಲುಗಳಙ್ನು ಅದ್ಭುತವಾಗಿ ವಿವರಿಸಿದ್ದೀರಿ . ಧನ್ಯವಾದಗಳು ನಿಮಗೆ

    ReplyDelete
  48. Unknown, ನಿಮಗೂ ಧನ್ಯವಾದಗಳು.

    ReplyDelete
  49. ಕರಡಿ ಕುಣಿತ ಹಾಡು ಬೇಂದ್ರೆಯವರು ಹಾಡಿದ್ದು ಧಾರವಾಡ ಆಕಾಶವಾಣಿಯಲ್ಲಿ ಇರಬಹುದು.

    ReplyDelete