Sunday, February 12, 2012

ಬೇಂದ್ರೆಯವರ ‘ಫಜಾರಗಟ್ಟಿ ಮುಟ್ಟೋಣು ಬಾ’


ಫಜಾರಗಟ್ಟೀ ಮುಟ್ಟೋಣು ಬಾ
            ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                       ||ಪಲ್ಲ||

ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
            ಅದs ನಿಜದ ನೆಲ ಮುಟ್ಟೋಣು ಬಾ          ||೧||

ಅಂಗಲಿಂಗದ ಜೋಡಿ ಕೂಡಿ ಹೊಸ
            ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
            ಜನಾ ಕಂಡು ಅದ ಕೂಡೋಣು ಬಾ            ||೨||

ಪುಂಡರೀಕ ನಾ, ಮಹಾಶ್ವೇತೆ ನೀ
            ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
            ಹಚ್ಚೀದ ಬಳ್ಳಿಗೆ ಹಣಿಸೋಣ ಬಾ            ||೩||

ಗುರುವಿನಂಗಳದ ಗಿಡಾ ಬಳ್ಳಿಯಾಗಿ
            ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
            ಬೆಂದವರ ಜೀವ ಬೆರಸೋಣ ಬಾ              ||೪||

..................................................................................
ಫಜಾರಗಟ್ಟೀ ಮುಟ್ಟೋಣು ಬಾ
          ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                  
ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಹಾಗು ಸನ್ಯಾಸ ಇವು ಸನಾತನ ಭಾರತೀಯ ಸಂಸ್ಕೃತಿಯು ವಿಧಿಸುವ ನಾಲ್ಕು ಆಶ್ರಮಗಳು. ಧರ್ಮ, ಅರ್ಥ, ಕಾಮ ಹಾಗು ಮೋಕ್ಷ ಇವು ಜೀವನದ ನಾಲ್ಕು ಪುರುಷಾರ್ಥಗಳು. ಇವುಗಳಲ್ಲಿ ಮೊದಲ ಮೂರು ಪುರುಷಾರ್ಥಗಳನ್ನು ಅಂದರೆ ಧರ್ಮ, ಅರ್ಥ ಹಾಗು ಕಾಮ ಇವುಗಳನ್ನು ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕು. ಈ ಪುರುಷಾರ್ಥಗಳು ವೈಯಕ್ತಿಕ ಸಿದ್ಧಿಗಷ್ಟೇ ಅಲ್ಲ, ಸಮಾಜದ ರಕ್ಷಣೆಗಾಗಿಯೂ ಅವಶ್ಯವಾಗಿವೆ. ಆದುದರಿಂದ  ಇವು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆಯೂ ಆಗಿವೆ. ಸನಾತನ ಧರ್ಮದ ಮೇರೆಗೆ ವಿವಾಹವು ಗಂಡು ಹಾಗು ಹೆಣ್ಣಿನ ನಡುವಿನ ಒಪ್ಪಂದವಾಗಿರದೆ, ಒಂದು ಧಾರ್ಮಿಕ ವಿಧಿಯಾಗಿದೆ. ನಾಲ್ಕನೆಯ ಪುರುಷಾರ್ಥವಾದ ಮೋಕ್ಷವನ್ನು ಸಾಧಿಸಲು ಸನ್ಯಾಸವನ್ನು ಸ್ವೀಕರಿಸುವದು ಪ್ರಶಸ್ತವಾದ ಕ್ರಮವಾಗಿದೆ.

ಬೇಂದ್ರೆಯವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಬಳಿಕ, ಬದುಕಿನಲ್ಲಿ ಸುಖವನ್ನು, ದುಃಖವನ್ನು ಹಾಗು ಅನೇಕ ಸಂಕಟಗಳನ್ನು ಅನುಭಸಿದರು. ಅಂತಹದರಲ್ಲಿಯೇ ಈ ದಂಪತಿಗಳು ಧರ್ಮಸಾಧನೆಯನ್ನು  ಮಾಡಿದರು. ದೈವ ಕೊಟ್ಟಷ್ಟು ಅರ್ಥಸಾಧನೆಯನ್ನು ಮಾಡಿದರು. ಕಾಮ ಅಂದರೆ ಸಂತಾನಕಾಮ. ಜೀವನದ ಮುಂದುವರಿಕೆಗಾಗಿ ಸೃಷ್ಟಿನಿಯಮದಂತೆ ಸಂತಾನವನ್ನೂ ಪಡೆದರು. ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕಾದ ಮೂರೂ ಪುರುಷಾರ್ಥಗಳನ್ನು ಈ ರೀತಿಯಾಗಿ ಸಾಧಿಸಿದರು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಗಂಡನಾಗಲೀ, ಹೆಂಡತಿಯಾಗಲೀ ವೈಯಕ್ತಿಕವಾಗಿ ಸಾಧಿಸಬೇಕಾಗುತ್ತದೆ. ಆದರೂ ಸಹ ಈ ಸಾಧನಾಮಾರ್ಗದಲ್ಲಿ ಅವರು ಪರಸ್ಪರ ನೆರವು ನೀಡುತ್ತ ಜತೆಯಾಗಿ ನಡೆಯಬಹುದು.

ಕಣ್ಣು ಮುಚ್ಚಾಟದಲ್ಲಿ ಫಜಾರಗಟ್ಟಿಯನ್ನು ಮುಟ್ಟಿದವರು ಪಾರಾದಂತೆ. ಅದರಂತೆ ಜೀವನದಲ್ಲಿ ಧರ್ಮ,ಅರ್ಥ ಹಾಗು ಕಾಮವೆನ್ನುವ ಪುರುಷಾರ್ಥಗಳನ್ನು ಸಾಧಿಸಿದವರು ಜೀವನದ ಫಜಾರಗಟ್ಟಿಯನ್ನು ಮುಟ್ಟಿದಂತೆ. ಬೇಂದ್ರೆಯವರು ತಮ್ಮ ಹೆಂಡತಿಗೆ ಫಜಾರಗಟ್ಟಿಯನ್ನು ಮುಟ್ಟಲು ಕರೆಯುತ್ತಿದ್ದಾರೆ. ಅಂದರೆ ಗೃಹಸ್ಥಾಶ್ರಮದ ಮೂರು ಪುರುಷಾರ್ಥಗಳನ್ನು ತಾವಿಬ್ಬರೂ ಜೊತೆಯಾಗಿ ಸಾಧಿಸಿದ್ದೇವೆ, ಇನ್ನು ಇದಕ್ಕೆ ಕೊನೆ ಹೇಳಿ ಮುಂದಿನ ಆಟವನ್ನು ಆಡೋಣ ಬಾ ಎಂದು ಸೂಚಿಸುತ್ತಿದ್ದಾರೆ. ‘ಮುಂದಿನ ಆಟ’ವೆಂದರೆ ಏನು? ಕಣ್ಣುಮುಚ್ಚಾಟದಲ್ಲಿ ತಾಯಿಯು ಮಕ್ಕಳ ಕಣ್ಣು ಕಟ್ಟಿ ಆಟಕ್ಕೆ ಬಿಡುವಂತೆ, ಮಾಯೆಯು ಜೀವಿಗಳ ಕಣ್ಣು ಕಟ್ಟಿ ಸಂಸಾರಕ್ಕೆ ಕಳಿಸುತ್ತಾಳೆ. ಒಂದು ಆಟವನ್ನು ಮುಗಿಸಿದ ಬಳಿಕ, ಮುಂದಿನ ಆಟವನ್ನು ಆಡಬೇಕು. ಇದು ಮುಂದಿನ ಜನ್ಮದ ಆಟವಾಗಬಹುದು ಅಥವಾ ಇದೇ ಜನ್ಮದಲ್ಲಿ, ನಾಲ್ಕನೆಯ ಪುರುಷಾರ್ಥವಾದ ಮೋಕ್ಷಕ್ಕೆ ಕರೆದೊಯ್ಯುವ ದೈವಸಾಧನೆಯ ಆಟವಾಗಬಹುದು.

ದೈವಸಾಧನೆಗಾಗಿ ತಾವು ತುಳಿಯುತ್ತಿರುವ ಪಥವು ಸರಿಯಾದದ್ದು ಎನ್ನುವದನ್ನು ತಿಳಿಯುವದು ಹೇಗೆ? ಹೃದಯಕ್ಕೆ ಇದರ ಅರಿವು ತಾನಾಗಿಯೇ ಆಗುವದು. ಅದಕ್ಕೆಂದೇ ಬೇಂದ್ರೆಯವರು ಹೇಳುತ್ತಾರೆ:
ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
          ಅದs ನಿಜದ ನೆಲ ಮುಟ್ಟೋಣು ಬಾ      ||
ಇದೇ ತಮ್ಮ ಸರಿಯಾದ ಪಥ, ಇದೇ ತಾವು ತಲುಪಬೇಕಾದ ತಾಣ ಎಂದು ಹೃದಯವು ಹೇಳುತ್ತಿದೆ. ಆದುದರಿಂದ ನಾವು ಈ ಸ್ಥಾನದಲ್ಲಿ ನಮ್ಮ ಮನೆಯನ್ನು ಕಟ್ಟೋಣ; ಇದೇ ತಮ್ಮ ನೆಲೆಯಾಗಿದೆ, ಹೊಸ ಬಾಳನ್ನು ಇಲ್ಲಿ ಪ್ರಾರಂಭಿಸೋಣ ಎಂದು ಬೇಂದ್ರೆಯವರು ತಮ್ಮ ಸಖಿಗೆ ಹೇಳುತ್ತಿದ್ದಾರೆ.

ನೆಲದ ಮೇಲಿನ ನೆಲೆ ಅಂದರೆ ಐಹಿಕ ಲೋಕದ ನೆಲೆ. ಇಲ್ಲಿ ಐಹಿಕ ಆಸೆಗಳು ಹಾಗು ವಿಕಾರಗಳು ಇರುತ್ತವೆ. ಹೊಸ ಸ್ಥಾನವು ವಿಕಾರಮುಕ್ತವಾದ ನೆಲೆಯಾಗಿದೆ. ಈ ಸೂಚನೆಯನ್ನು ‘ಸಂಗಿ’ ಎಂದು ಕರೆಯುವದರ ಮೂಲಕ ಬೇಂದ್ರೆಯವರು ಸೂಚಿಸುತ್ತಾರೆ. ಸಂಗಿ ಎಂದರೆ ಗೆಳತಿ. ಹೆಂಡತಿಯು ಗೆಳತಿಯೇ ಹೌದು. ಆದರೆ ಅವಳು ‘ನಿಸ್ಸಂಗ’ದ ಅಂದರೆ ವಿಕಾರಮುಕ್ತವಾದ ಸತ್ಸಂಗದ ಗೆಳತಿಯಾಗಿದ್ದಾಳೆ. ಇಂತಹ ಗೆಳತಿಗೆ ಬೇಂದ್ರೆಯವರು ‘ಅದು ಅದs’ ಎಂದು ತೋರಿಸುತ್ತಿದ್ದಾರೆ. ‘ಅದು ಅದs’ ಎಂದರೆ ‘ಭಗವಚ್ಚೈತನ್ಯವು ಇದೆ’ ಎನ್ನುವ ಶ್ರದ್ಧೆ. ಅದೇ ನಿಜದ ನೆಲ, ನೆಲೆ. ಇಲ್ಲಿಯವರೆಗಿನ ಆಟವೆಲ್ಲ ಮಿಥ್ಯೆಯ ನೆಲದ ಮೆಲಿನ ಆಟ. ಸತ್ ಎಂದರೆ ನಿಜ, ಅಸತ್ ಎಂದರೆ ಮಿಥ್ಯೆ. ಮಿಥ್ಯೆಯ ಲೋಕದ ಆಟವನ್ನು ಮುಗಿಸಿ, ಈಗ ಸತ್‍ಲೋಕವನ್ನು ಮುಟ್ಟೋಣ ಎಂದು ಬೇಂದ್ರೆಯವರು ತಮ್ಮ ಸಖಿಯನ್ನು ಕರೆಯುತ್ತಿದ್ದಾರೆ.

ಅಂಗಲಿಂಗದ ಜೋಡಿ ಕೂಡಿ ಹೊಸ
          ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
          ಜನಾ ಕಂಡು ಅದ ಕೂಡೋಣು ಬಾ  ||   
ಬೇಂದ್ರೆಯವರು ವಿವಿಧ ಭಾರತೀಯ ದರ್ಶನಗಳನ್ನು ಅರಗಿಸಿಕೊಂಡಿದ್ದು, ಅದು ಅವರ ಕವನಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ‘ಅಂಗಲಿಂಗದ ಜೋಡಿ ಕೂಡಿ.....’ ಎಂದು ಹೇಳುವಾಗ ವೀರಶೈವ ದರ್ಶನದ ‘ಲಿಂಗಾಂಗ ಸಾಮರಸ್ಯ’ವನ್ನು ಅವರು ಸೂಚಿಸುತ್ತಿದ್ದಾರೆ.
     
ಇಲ್ಲಿಯವರೆಗಿನ ಬದುಕಿನಲ್ಲಿ ಈ ದಂಪತಿಗಳು ಧರ್ಮ, ಅರ್ಥ ಹಾಗು ಸಂತಾನಕಾಮದ ಸಾಧನೆಯನ್ನು ಗೈದರು. ಇದೀಗ ಮೋಕ್ಷಾರ್ಥಕ್ಕಾಗಿ ದೈವಸಾಧನೆಯನ್ನು ಮಾಡಬೇಕಾಗಿದೆ. ಇದರ ಸಿದ್ಧಿ ವೈಯಕ್ತಿಕವೇ ಆದರೂ ಸಹ, ಸಾಧನೆಯು ವೈಯಕ್ತಿಕವಾಗಿರಬೇಕಿಲ್ಲ. ವೀರಶೈವ ಕ್ರಮವಂತೂ ‘ಸತಿಪತಿಗಳಲಿ ಒಂದಾದ ಭಕ್ತಿ ಶಿವನಿಗೆ ಪ್ರಿಯ’ ಎಂದೇ ಹೇಳುತ್ತದೆ. ಆದುದರಿಂದ ಲಿಂಗಾಂಗ ಸಾಮರಸ್ಯದ ಭಕ್ತಿಪಥವನ್ನು ‘ಜೋಡಿ ಕೂಡಿ’ ಅಂದರೆ ಜೊತೆಯಾಗಿ ಕ್ರಮಿಸೋಣ ಎಂದು ಬೇಂದ್ರೆ ಹೇಳುತ್ತಿದ್ದಾರೆ.

ಬೇಂದ್ರೆಯವರ ಕಾವ್ಯದಲ್ಲಿ ‘ಗಿಣಿ’ ಎನ್ನುವ ಪ್ರತಿಮೆಯು ಸಖ್ಯದ ಹಾಗು ಆಪ್ತತೆಯ ಪ್ರತೀಕವಾಗಿದೆ. ಇಲ್ಲಿಯವರೆಗಿನ ತಮ್ಮ ದಾಂಪತ್ಯದಲ್ಲಿ ರೂಢಿಸಿಕೊಂಡಿದ್ದ ಪರಸ್ಪರ ಸಮೀಕರಣವನ್ನು  ತ್ಯಜಿಸಿ, ಹೊಸ ಸಮೀಕರಣವನ್ನು ರೂಪಿಸಿಕೊಳ್ಳೋಣ; ಇದು ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎನ್ನುವ ವಿಷಮ ಸಮೀಕರಣವಲ್ಲ; ಇದು ಸಮಾನತೆಯ ಸಮೀಕರಣ;  ಇದು  ಇಹಲೋಕದ  ಕೆಳೆತನವನ್ನು ಮೀರಿದ ಹೊಸ ಕೆಳೆತನ ಎಂದು ಹೇಳಲು ಬೇಂದ್ರೆಯವರು ‘ಹೊಸ ಗಿಣೀ-ಗೆಣೆತನ’ ಎನ್ನುವ ಪ್ರತೀಕವನ್ನು ಬಳಸಿದ್ದಾರೆ. ಈ ಹೊಸ ಸಾಂಗತ್ಯದ ವಿಹಾರಕ್ಕಾಗಿ ಲಭಿಸುವ ಉಪವನ ಯಾವುದು? ಮನವೆಂಬದೇ ಆ ಹೊಸ ಬನಾ! ಮನಸ್ಸಿನ ಸಾಧ್ಯತೆಗಳು ಅಗಾಧವಾಗಿವೆ. ಮನವನ್ನು ಸರಿಯಾಗಿ ರೂಢಿಸಬೇಕು. ಕಳೆ, ಕಲ್ಮಶಗಳನ್ನು ಕಿತ್ತು ಹಾಕಿ, ಸುಗಂಧ ಬೀರುವ ಹೂಬಳ್ಳಿಗಳನ್ನು ಬೆಳೆಸಬೇಕು. ಆವಾಗ ಅದು ಆಹ್ಲಾದಕರವಾದ ಉಪವನದಂತೆ ಶೋಭಿಸುವದು.

ಇದೆಲ್ಲವೂ ಒಂದೇ ಜನ್ಮದಲ್ಲಿ ಸಾಧ್ಯವಾಗಬಹುದಾದ ಸಿದ್ಧಿಯೆ? ಬೇಂದ್ರೆಯವರು ವಿವಾಹಜೀವನವನ್ನು ದಾಂಪತ್ಯಯೋಗ ಎಂದು ಕರೆಯುತ್ತಾರೆ. ಅನೇಕ ಜನ್ಮಗಳಿಂದಲೂ ದಂಪತಿಗಳು ಜೊತೆಯಾಗಿ ಸಾಧನಾಪಥವನ್ನು ಕ್ರಮಿಸುತ್ತಿರುತ್ತಾರೆ ಎನ್ನುವದು ಬೇಂದ್ರೆಯವರ ನಂಬುಗೆ.
ಪುಂಡರೀಕ ನಾ, ಮಹಾಶ್ವೇತೆ ನೀ
          ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
          ಹಚ್ಚೀದ ಬಳ್ಳಿಗೆ ಹಣಿಸೋಣ ಬಾ  ||         
ಭಾರತೀಯ ಸಾಹಿತ್ಯದಲ್ಲಿ ಪುಂಡರೀಕ ಹಾಗು ಮಹಾಶ್ವೇತಾ ಇವರು ಚಿರಪ್ರಣಯಿಗಳು. ತಪಸ್ಸಿನಿಂದ ಒಬ್ಬರನ್ನೊಬ್ಬರು ಪಡೆದುಕೊಂಡವರು. ಜನ್ಮಜನ್ಮಾಂತರದ ಸಂಬಂಧ ಇವರದು. (ಕವಿ ಬಾಣನು ಏಳನೆಯ ಶತಮಾನದ ಸಂಸ್ಕೃತ ಕವಿ. ಇವನು ಬರೆದ ‘ಕಾದಂಬರಿ’ಯಲ್ಲಿ ಪುಂಡರೀಕ ಹಾಗು ಮಹಾಶ್ವೇತೆ ಇವರಿಗೆ ಸಮಾಂತರವಾಗಿ ಚಂದ್ರಾಪೀಡ ಹಾಗು ಕಾದಂಬರಿ ಇವರ ಜನ್ಮಾಂತರದ ಪ್ರಣಯಕಥೆಯೂ ಇದೆ.) ತಾವು ಆ ಕಲ್ಪನಾವಿಲಾಸದ, ಆ ಕಾಲಾಂತರದ ಪ್ರಣಯಿಗಳೇ ಇರಬಹುದೆ? ಈ ಮಾತು ಜಗದ ಎಲ್ಲ ದಂಪತಿಗಳಿಗೂ ಅನ್ವಯಿಸುತ್ತದೆ. ಯಾವ ದಾಂಪತ್ಯವೂ ಆಕಸ್ಮಿಕವಲ್ಲ. ಎಲ್ಲ ದಂಪತಿಗಳದೂ ಜನ್ಮಜನ್ಮಾಂತರದ ಸಖ್ಯ ಎಂದು ಬೇಂದ್ರೆ ನಂಬುತ್ತಾರೆ. ದಂಪತಿಗಳು ಈ ಚಿರಕಾಲದ ಸಖ್ಯವನ್ನು ನೆನಸಬೇಕು. ಆ ನೆನಕೆಯಿಂದ ಅರಿವು ಮೂಡುವುದು. ಆ ಅರಿವಿನಿಂದ ದೈವಯೋಗದ ಪಥದಲ್ಲಿ ನಡೆಯಲು ಸಾಧ್ಯವಾಗುವುದು. ಇಷ್ಟೆಲ್ಲ ಅರ್ಥವನ್ನು ಬೇಂದ್ರೆಯವರು ‘ಪುಂಡರೀಕ ನಾ, ಮಹಾಶ್ವೇತೆ ನೀ ಆಧ್ಹಾಂಗಿತ್ತು ಅದ ನೆನಸೋಣ ಬಾ’ ಎನ್ನುವ ಎರಡು ಸರಳ ಸಾಲುಗಳ ಮೂಲಕ ಸೂಚಿಸುತ್ತಾರೆ!

ತುಂಬುರನು ದೇವಲೋಕದ ಗಾಯಕ; ರಂಭೆ ಸ್ವರ್ಗದ ನರ್ತಕಿ. ತುಂಬುರನು ರಂಭೆಯ ಗುರು ಹಾಗು ಪ್ರಣಯಿ. ಈ ದೇವಪ್ರಣಯಿಗಳು ಹಚ್ಚಿದ ಬಳ್ಳಿ ಯಾವುದು? ಪ್ರೇಮ ಹಾಗು ಭಕ್ತಿಯೇ ಆ ಬಳ್ಳಿಯಾಗಿದೆ. ಅಮರಲೋಕದಲ್ಲಿ ಹಚ್ಚಿದ ಆ ಬಳ್ಳಿಯನ್ನು, ತಾವು ಇಹಲೋಕದಲ್ಲಿ, ಜನ್ಮಾಂತರಗಳಲ್ಲಿ ಪೋಷಿಸುತ್ತ ಬಂದಿರುವದಾಗಿ ಬೇಂದ್ರೆ ಹೇಳುತ್ತಾರೆ.

ಇಂತಹ ದಾಂಪತ್ಯಯೋಗದ ಕೊನೆಯ ಮೆಟ್ಟಿಲು ಯಾವುದು? ಯಾವ ಭಾವವನ್ನು ತಾವು ಪೋಷಿಸುತ್ತ ಬಂದಿರುವೆಯೋ, ತಾವೇ ಆ ಭಾವವಾಗಿ ಮಾರ್ಪಾಡಾಗುವ ಸ್ಥಿತಿ. ಪ್ರೇಮ ಹಾಗು ಭಕ್ತಿಯ ಬಳ್ಳಿಯನ್ನು ಪೋಷಿಸುತ್ತ ಬಂದಿರುವ ತಾವೇ ಆ ಬಳ್ಳಿಯಾಗಬೇಕು. ಇದು ಸ್ಥಿತ್ಯಂತರದ ಕೊನೆಯ ಹಂತ. ಈ ಹಂತದ ಸಿದ್ಧಿಗಾಗಿ ಬೇಂದ್ರೆ ತಮ್ಮ ಸಖಿಗೆ ಕರೆಯನ್ನು ನೀಡುತ್ತಿದ್ದಾರೆ:
ಗುರುವಿನಂಗಳದ ಗಿಡಾ ಬಳ್ಳಿಯಾಗಿ
          ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
          ಬೆಂದವರ ಜೀವ ಬೆರಸೋಣ ಬಾ ||    
ಈ ಭಕ್ತಿಲತೆಯು ಗುರುವಿನಂಗಳದಲ್ಲಿ ಮಾತ್ರ ಬೆಳೆಯುವ ಬಳ್ಳಿ. ಈವರೆಗಿನ ಜನ್ಮಾಂತರಗಳಲ್ಲಿ ಇವರ ದಾಂಪತ್ಯದ ಬಳ್ಳಿಯು ಸುರಿಸಿದ ಹೂವುಗಳು ಸಂಸಾರದ ಹೂವುಗಳು. ಇನ್ನು ಮುಂದೆ ಈ ಬಳ್ಳಿಯು ಹೊಸ ಹೂವುಗಳನ್ನು ಅಂದರೆ ಭಕ್ತಿ ಮತ್ತು ಪ್ರೇಮದ ಹೂವುಗಳನ್ನು ಸುರಿಸಬೇಕು ಎನ್ನುವದು ಬೇಂದ್ರೆಯವರ ಅಭೀಪ್ಸೆ. ಈ ದಾಂಪತ್ಯಸಖ್ಯದಲ್ಲಿ ಇವರಿಗೆ ಉಳಿದಿರುವ ಕಾರ್ಯ ಏನು? ಭಕ್ತಿಯ ಹೂವನ್ನು ದೇವಮಾತೆಯ ಪಾದಕ್ಕೆ ಅರ್ಪಿಸಿ, ಆ ಚರಣಭಕ್ತಿಯಿಂದ ಸಿಗುವ ಆನಂದವನ್ನು, ಪರಿಮಳವನ್ನು ಪಡೆಯುವುದು ಹಾಗು ನೊಂದ ಜೀವಿಗಳ ಜೊತೆ ಒಂದಾಗಿ ಅವರಿಗೆ ಸಾಂತ್ವನ ನೀಡುವದು ಇನ್ನು ಉಳಿದಿರುವ ಕಾರ್ಯ. ಪುರುಷಾರ್ಥಗಳನ್ನೆಲ್ಲ ಸಾಧಿಸಿದ ಬಳಿಕ, ಬದುಕಿರುವವರೆಗೆ ‘ಪರೋಪಕಾರಾರ್ಥಮಿದಂ ಜೀವನಮ್’ ಎನ್ನುವದೊಂದೇ ಉಳಿದಿರುವ ಧ್ಯೇಯ.

ಸಂಸಾರಕಾಮವು ಪ್ರೇಮವಾಗಿ ಹಾಗು ಭಕ್ತಿಯಾಗಿ ಅರಳಬೇಕು ಎನ್ನುವದು ಬೇಂದ್ರೆಯವರ ಕಾಣ್ಕೆಯಾಗಿದೆ. ಇದು ಪರಮ ಪುರುಷಾರ್ಥವನ್ನು ತಲುಪಿಸುವ ಜನ್ಮಜನ್ಮಾಂತರದ ದಾಂಪತ್ಯಯೋಗವಾಗಿದೆ. ಗಾಢವಾದ ತತ್ವವನ್ನು ಸರಳಗನ್ನಡದ ಆಡುನುಡಿಯಲ್ಲಿ ಹೇಳುವ ಬೇಂದ್ರೆಯವರ ಪ್ರತಿಭೆಗೆ ಈ ಕವನವು ಉತ್ತಮ ನಿದರ್ಶನವಾಗಿದೆ. 

‘ಗಂಗಾವತರಣ’ ಕವನಸಂಕಲನದಲ್ಲಿ ಈ ಕವನವು ಅಡಕವಾಗಿದೆ. 

51 comments:

  1. ಆಳವಾದ ಅಧ್ಯಯನ ಮತ್ತು ಪರಧರ್ಮ ಸತ್ವ ಅಳವಡಿಕೆ ಸಾಧಿಸಿದ ಪ್ರಬುದ್ಧ ಕವಿ ಮಾತ್ರ ಇಂತಹ ರುಚಿಗಟ್ಟಾದ ತತ್ವ ಕಾವ್ಯ ನಿರೂಪಿಸಬಲ್ಲ.

    ತಂಬೂರ ರಂಭೆ
    ಜೋಡಿ ಕೂಡ
    ಪುಂಢರೀಕ ಮಹಾಶ್ವೇತ
    ಹೀಗೆ...
    ಪೊಳ್ಳು ಕವಿಗೆ ದಕ್ಕುವ ವಿಚಾರಗಳಲ್ಲ.

    ಬೇಂದ್ರೆ ಅಜ್ಜನ ಧೋತರಕ್ಕೆ ಅಂಟಿದಷ್ಟೂ ಸರಸ್ವತಿಯನ್ನು ಒಲೆಸಿಕೊಳ್ಳಲಾರದ ನಮ್ಮಂತವರ ಅಹಮ್ಮಿಗೆ ಧಿಕ್ಕಾರವಿರಲಿ.

    ಮರಿ ಹಕ್ಕಿಗಳಿಗೆ ಗುಕ್ಕುಣಿಸುವ ನಿಮ್ಮ ಶೈಲಿಗೆ ಜೈಹೋ!

    ReplyDelete
  2. ಫಜಾರಗಟ್ಟೀ ಅಂದ್ರೆ ಏನು ಸರ್?
    ಕ್ಷಮಿಸಿ, ಆ ಪದ ಕೇಳಿಲ್ಲ.ಅರ್ಥ ತಿಳಿಲಿಲ್ಲ.
    ವಿವರಣೆ ತುಂಬಾ ಚೆನ್ನಾಗಿದೆ.
    ಸ್ವರ್ಣಾ

    ReplyDelete
  3. ಸುನಾಥ್ ಜೀ,
    ಬೇಂದ್ರೆಯವರ ಸುಂದರ ಕವನದ ಸಂಪೂರ್ಣ ಪರಿಚಯವನ್ನು ಎಳೆ ಎಳೆಯಾಗಿ ಉಣಬಡಿಸಿದ್ದೀರಾ,
    ಧನ್ಯೋಸ್ಮಿ..........

    ReplyDelete
  4. ಬೇಂದ್ರೆಯವರು ಮುಟ್ಟದಿರುವ destination ಯಾವುದು ? !. ಈ ಕವನ ಮತ್ತು ಅದರ ವಿವರಣೆಯೇ 'ಚೂಡಾಮಣಿ'ಯಂತಿದೆ. ಸಂಗೀತ ನಿರ್ದೇಶಕರಾದ ಇಳಯರಾಜ ಇವರೂ ಸಹ ಸಣ್ಣ ಸಣ್ಣ ಸ್ವರಗಳಲ್ಲೇ ಮೋಡಿ ಮಾಡಬಲ್ಲಂತಹ ಸಂಗೀತವನ್ನು ಕೋಟ್ಟವರು. ಬೇಂದ್ರೆಯವರೂ ಕಿರಿದರಲ್ಲಿ ಪಿರಿದರ್ಥವನ್ನು ತುಂಬಿ ನಮಗೆ ಕಲಿಸಿ ಕೊಟ್ಟಿದ್ದಾರೆ ಎನ್ನಬಹುದು. ಈ ವಿವರಣೆಗಾಗಿ ನಿಮಗೆ ಧನ್ಯವಾದಗಳು.

    ReplyDelete
  5. ಬದರಿನಾಥರೆ,
    ಪೊಳ್ಳು ಕವಿಗೆ ದಕ್ಕುವ ವಿಚಾರಗಳಲ್ಲ ಎನ್ನುವದು ಅತ್ಯಂತ ಸಮಂಜಸವಾದ ಮಾತು. ಆದರೆ ನಿಮಗೆ ನೀವು ಧಿಕ್ಕಾರ ಹಾಕಿಕೊಳ್ಳುವದು ಸರಿಯಾದದ್ದಲ್ಲ.

    ReplyDelete
  6. ಸ್ವರ್ಣಾ ಮೇಡಮ್,
    ಕಣ್ಣುಮುಚ್ಚಾಲೆಯಾಟದಲ್ಲಿ ಕಣ್ಣು ಕಟ್ಟಿಸಿಕೊಂಡವನು ಇತರರನ್ನು ಮುಟ್ಟಲು ಬರುತ್ತಾನೆ. ಉಳಿದವರು ಅವನಿಂದ ತಪ್ಪಿಸಿಕೊಂಡು ಓಡಿ ಹೋಗಿ ಒಂದು ಕಟ್ಟೆಯನ್ನು ಮುಟ್ಟುತ್ತಾರೆ. ಆ ಕಟ್ಟೆಯನ್ನು ಮುಟ್ಟಿದಾಗ ಅವರು ಪಾರಾದಂತೆ. ಕಟ್ಟೆಯನ್ನು ಮುಟ್ಟುವ ಮೊದಲೇ ಹಿಡಿಸಿಕೊಂಡು ಬಿಟ್ಟರೆ, ಅಂಥವನೇ ಕಳ್ಳನಾಗುತ್ತಾನೆ. ಈ ಕಟ್ಟೆಗೆ ಫಜಾರಗಟ್ಟೆ ಎನ್ನುತ್ತಾರೆ.

    ReplyDelete
  7. ಪ್ರವೀಣರೆ,
    ದಾಂಪತ್ಯದಲ್ಲಿ ಸಾಧಿಸಬೇಕಾದದ್ದನ್ನು ಬೇಂದ್ರೆಯವರು ಈ ಕವನದಲ್ಲಿ ತುಂಬ ಚೆನ್ನಾಗಿ ಹೇಳಿದ್ದಾರೆ. ಇಂತಹದೇ ಮತ್ತೊಂದು ಕವನವನ್ನು (Robert Browning ಬರೆದದ್ದು)ಹೀಗಿದೆ:
    Let us grow old together
    The best is yet to be.

    ReplyDelete
  8. ಸುನಾಥ್ ಸರ್ ...

    ಬೇಂದ್ರೆ ಯವರು ಜೀವನದಲ್ಲಿ 'ನಂಜುಂಡ ಶಿವ' ನಂತೆ ಕಹಿಯನ್ನುಂಡರೂ ಲೋಕಕ್ಕೆ ಶಿವರೂಪಿ ಎನಿಸಿ ಸಿಹಿಯನ್ನು ನೀಡಿದ್ದಾರೆ....
    'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆ'...ಎನ್ನುವ ನುಡಿ ಅವರ ಜೀವನದ ಕಾವ್ಯವನ್ನೂ, ಕಾವ್ಯ ಜೀವವನವನ್ನೂ ಸಂಕೇತಿಸುತ್ತದೆ....

    ಅವರ ಕಾವ್ಯಗಳನ್ನು ಸುಲಭವಾಗಿ ಅರ್ಥವಾಗುವಂತೆ ನಮಗೆಲ್ಲರಿಗೂ ಉಣಬಡಿಸುತ್ತಿರುವ ನಿಮಗೆ ಹಾರ್ದಿಕ ಧನ್ಯವಾದಗಳು....

    ReplyDelete
  9. ಬೇಂದ್ರೆಯವರ ಈ ಕವಿತೆ ಕೇಳಿರಲೇ ಇಲ್ಲ.ಸರಳಪದ್ಯದ ಒಳಾರ್ಥ ನಿಮ್ಮ ವಿವರಣೆಯಲ್ಲಿ ಚೆಂದಾಗಿ ಮೂಡಿದೆ..
    ಫಜಾರ ಗಟ್ಟಿ-ಈ ಶಬ್ದವನ್ನು ಕೇಳದೇ ಅದೆಷ್ಟು ವರ್ಷವಾಗಿತ್ತೋ ಗೊತ್ತಿಲ್ಲ.
    ಬಾಲ್ಯದಲ್ಲಿ ಆಟ ಆಡುವಾಗ ending line (target line) ಗೆ ನಾವು "ಪಾಜಾ ಗಟ್ಟಿ"
    ಅಂತ ಕರೆಯುತ್ತಿದ್ದುದು ನೆನಪಿಗೆ ಬರುತ್ತಿದೆ.ಬಹುಶಃ ನೀವು ಹೇಳುವ ಫಜಾರಗಟ್ಟಿಯನ್ನು
    ನಾವೆಲ್ಲ ರೂಢಿಯಲ್ಲಿ ಪಾಜಾಗಟ್ಟಿ ಅಂತ ಕರೆಯುತ್ತಿದ್ದೆವೇನೋ...ಇದೊಂಥರಾ ಆಟದ
    ಮಧ್ಯದಲ್ಲಿ 'ಟ್ಯಾಂಪ್ಲೀಜ್' (time please-ದಣಿವಾರಿಸಿಕೊಳ್ಳಲು ಕೇಳುವ ಸಮಯ) ಅಂದ ಹಾಗೆ!:-)

    ReplyDelete
  10. ಸುಬ್ರಹ್ಮಣ್ಯರೆ,
    ಸಮುದ್ರದ ಪ್ರತಿ ಹನಿಯೂ ಸಮುದ್ರವೇ ಅಲ್ಲವೆ? ಹಾಗಿದೆ ಬೇಂದ್ರೆ-ಕಾವ್ಯ!

    ReplyDelete
  11. ಅಶೋಕ,
    ಸರಿಯಾಗಿ ಹೇಳಿದಿರಿ. ತಾನು ನಂಜುಂಡು ನಮಗೆ ಕಾವ್ಯಾಮೃತವನ್ನು ಬಡಿಸಿದ, ಬಡಿಸುತ್ತಿರುವ ಮಹಾನುಭಾವರು ಬೇಂದ್ರೆ!

    ReplyDelete
  12. ಇದ ಇದ ಅಂತ ಎದಿ ಅನ್ನತದ
    ಅಲ್ಲೇ ಮನಿ ಕಟ್ಟೋಣ.
    ಸುನಾಥ ಕಾಕಾ ಇದು ಎಷ್ಟು ವಿಚಾರ ಪೂರ್ಣ ಮಾತು.ಇದನ್ನು ಬರೆದ ಬೇಂದ್ರೆ ಯವರಿಗೂ, ಅದನ್ನು ನಮಗೆ ನೀಡಿದ ನಿಮಗೂಧನ್ಯವಾದಗಳು.

    ReplyDelete
  13. ಬೇಂದ್ರೆಯವರ ಕವನಗಳನ್ನು ಪದರು ಪದರಾಗಿ ಬಿಡಿಸಿ ಉಣಿಸಿ ನಮ್ಮ ಹಸಿವನ್ನು ತುಂಬಾ ಹೆಚ್ಚಿಸಿದ್ದೀರಿ. ಇನ್ನೂ ತುಂಬಾ ಕವನಗಳ ವಿವರಣೆಗಾಗಿ ಕಾಯುತ್ತಿದ್ದೇವೆ. ತಡ ಮಾಡಬೇಡಿ.

    ‘ಇದs ಇದs ಅಂತ ಎದೀ ಅನ್ನತದ
    ಅದs ಅಲ್ಲಿ ಮನಿ ಕಟ್ಟೋಣು ಬಾ |‘


    ’ಅದು ಅಲ್ಲೇ ಅದ, ಅದಕ್ಕs ಅಲ್ಲಿ ಮನಿ ಕಟ್ಟೂನು’ ಅಂತಾನೂ ಅರ್ಥ ಮಾಡಬಹುದಾ?

    ReplyDelete
  14. ಸುನಾಥ್ ಸರ್,
    ಮತ್ತೊಂದು ಸೊಗಸಾದ ವಿಶ್ಲೇಷಣೆ...ನಿಮ್ಮೆಲ್ಲ ವಿಶ್ಲೇಷಣೆಗಳ ಸಂಗ್ರಹ ಪುಸ್ತಕವಾಗುವ ನಿರೀಕ್ಷೆಯಲ್ಲಿದ್ದೇನೆ. ಬೇಗ ಸಾಧ್ಯವಾಗಲಿ ಸರ್...

    ReplyDelete
  15. ಚಿಕ್ಕವನಿದಾಗ ಓದಿದ್ದ ಈ ಕವನ ಪ್ರಣಯಕ್ಕೆ ಸಂಭದಿಸಿದ್ದು ಅಂದುಕೊಂಡಿದ್ದೆ. ಇತ್ತೀಚಿಗೆ ನೋಡಲು ಆಗಿರಲಿಲ್ಲ.
    ಈ ಕವನದ ಹಿಂದಿರುವ ಆಧ್ಯಾತ್ಮಡ ಪತಿ-ಪತ್ನಿಯರ ಒದಗುಡಿದ ತುಡಿತ ತಮ್ಮಿಂದಲೇ ಗೊತ್ತಾಗಿದ್ದು. ಇಂತಹ ತುಡಿತದ ಆಯಾಮದ ಬೇಂದ್ರೆ ಕಲ್ಪನೆಯೇ ಒಂದು ವಿನೂತನ.
    ಇಂತಹ ಕವನಗಳನ್ನು ಹೆಕ್ಕಿ ಅರ್ಥ ಸಹಿತ ವಿವರಿಸುತ್ತಿರುವ ತಮಗೆ ಒಂದನೆಗಳು.

    ReplyDelete
  16. RJ,
    ಫಜಾರಗಟ್ಟಿ ಇದು ಮರಾಠಿ ಮೂಲದ ಅಥವಾ ಪ್ರಾಕೃತ ಮೂಲದ ಪದವಿರಬಹುದು. ಪಾಜಾಗಟ್ಟಿ ಇದು ನೀವಂದಂತೆ ಅಪಭೃಂಶ ಇರಬಹುದು!

    ReplyDelete
  17. ಉಮಾ ಮೇಡಮ್,
    ಇಲ್ಲಿರುವ ಪ್ರತಿ ‘ಇದS’ಕ್ಕೂ ಒಂದು ಬೇರೆ ಅರ್ಥ ಅದ, ಅಲ್ಲವೆ?!

    ReplyDelete
  18. ಕೇಶವರೆ,
    ಖಂಡಿತವಾಗಿಯೂ ಹಾಗೆ ಅರ್ಥೈಸಬಹುದು. ‘ಅದು’ ಅಲ್ಲಿ ಇರುವದರಿಂದ, ಅಲ್ಲಿಯೇ ಮನಿ ಕಟ್ಟೋಣ ಎಂದು ಬೇಂದ್ರೆಯವರು ಸೂಚಿಸುತ್ತಿರಬಹುದು.

    ReplyDelete
  19. ತುಂಬಾ ಆಳವಾಗಿ ವಿಶ್ಮೇಷಿಸಿ ಬರೆದಿದ್ದೀರಿ ಕಾಕ, ಬದುಕು,ಸಂಸಾರ, ನಡೆನುಡಿ ಹೇಗಿರಬೇಕೆಂದು ಬೇಂದ್ರೆಯವರು ತುಂಬ ಮನೋಜ್ಞವಾಗಿ ತಿಳಿಸಿದ್ದಾರೆ. ಈ ಲೇಖನ ನಮ್ಮಗಳಿಗೂ ಒಂದು ಕಿವಿಮಾತಿದ್ದಂತೆ... ತಿಳಿದುಕೊಳ್ಳುವುದು ಬಹಳವಿದೆ..
    ನಿಮ್ಮ ಈ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು ಕಾಕ ಎಷ್ಟು ಚೆನ್ನಾಗಿ ಅರ್ಥವಾಗುತ್ತದೆ...ಧನ್ಯವಾದಗಳು

    ReplyDelete
  20. ಶಿವು,
    ನಿಮ್ಮ ನಿರೀಕ್ಷೆಗೆ ಧನ್ಯವಾದಗಳು. ಆದರೆ ಇದು ಸರಿಯಾದದ್ದು ಎನ್ನುವ ನಂಬಿಕೆ ನನಗಿಲ್ಲ!

    ReplyDelete
  21. ಸೀತಾರಾಮರೆ,
    ಬೇಂದ್ರೆಯವರಿಗೆ ಪ್ರಣಯವು ದಾಂಪತ್ಯಯೋಗವೇ ಹೊರತು ಕಾಮಸಾಧನವಲ್ಲ. ಕಾಮವು ಪ್ರೇಮವಾಗಿ ಅರಳಿ, ಭಕ್ತಿಯಲ್ಲಿ ಪರಿಪೂರ್ಣವಾಗಬೇಕು ಎನ್ನುವದು ಬೇಂದ್ರೆಯವರ ದರ್ಶನ.

    ReplyDelete
  22. ಮನಸು,
    ಬೇಂದ್ರೆಯವರ ಕವನಗಳು ನಮಗೆಲ್ಲ ದಾರಿದೀಪಗಳಿದ್ದಂತೆ. ಅವರ ಕಾವ್ಯವು ನಮಗೆ ಜೀವನ-ಮಾರ್ಗದರ್ಶಿಯಾಗಿದೆ.

    ReplyDelete
  23. ಒಂಥರಾಉನ್ಮಾದ ಬಂತು ಕವಿತಾ ಓದಿ..
    ಆ ಪದಗಳಿಗಿರೂ ಒಳಅರ್ಥವಿಸ್ತಾರ, ನಿಮ್ಮ ವಿಶ್ಲೇಷಣೆ ಎರಡೂ ದಂಗ ಹೊಡೆಸಿದ್ವು..
    ಧನ್ಯ ಭಾಗ ಸೇವಾಕಾ....

    ReplyDelete
  24. ದೇಸಾಯರ,
    ಓದುಗನಿಗೆ ಭಾವೋನ್ಮಾದ ಆದರ, ಕವನ ಸಾರ್ಥಕ ಆದ್ಹಂಗ. ಬೇಂದ್ರೆಯವರಿಗೆ ಖುಶಿ ಮುಟ್ಟತದ.

    ReplyDelete
  25. ನೀವು ಉಣಬಡಿಸುತ್ತಿರುವ ವಿಚಾರಧಾರೆ ಹಸಿವು ಹೆಚ್ಚಿಸುತ್ತಿದೆ ಖಂಡಿತ.
    ಆದರೆ ನನ್ನಂತ ಚಿಕ್ಕವನಿಗೆ ಸಿಹಿ ಹೆಚ್ಚಾಗಿದೆ

    ReplyDelete
  26. ಸರ್ ಈ ಕವನವನ್ನು ಮುಂಚೆ ಓದಿದ್ದೆ ..ಆದರೆ ಇಷ್ಟೊಂದು ಅರ್ಥವನ್ನು ಅನುಭವಿಸಿ ಓದಿರಲಿಲ್ಲ... ವಿವರಣೆ ಅದ್ಭುತವಾಗಿದೆ...

    ReplyDelete
  27. ವಿಚಲಿತರೆ,
    ಹಸಿವು ಹೆಚ್ಚಾದಾಗಲೇ ಉನ್ನತಿ ಸಾಧ್ಯ. ಬೇಂದ್ರೆಯವರ ಕವನಗಳು ನಿಮಗೆ ವೈಚಾರಿಕ ಪೋಷಣೆಯನ್ನು ಕೊಡಲಿ.

    ReplyDelete
  28. ಗಿರೀಶರೆ,
    ಓದುತ್ತ ಹೋದಂತೆಲ್ಲ, ಬೇಂದ್ರೆ-ಕಾವ್ಯದ ಒಳ ಅರ್ಥಗಳು ಹೊಳೆಯುತ್ತ ಹೋಗುತ್ತವೆ. ಆದುದರಿಂದಲೇ ಬೇಂದ್ರೆಯವರಿಗೆ ಓದುಗನನ್ನು ಬೆಳೆಸುವ ಕವಿ ಎನ್ನುತ್ತಾರೆ.

    ReplyDelete
  29. ಹದಾ ಇಲ್ಲದಿದ್ರ ಬರಂಗಿಲ್ಲಂತ ಪದಾ
    ಬಿಡಿಸದಿದ್ರ ಕಾಕಾ ಮುಟ್ಟುತ್ತಿದಿಲ್ಲ ಫಾಜಾ
    ಏನೂ ತಿಳಿತಿದ್ದಿಲ್ಲಾ ಮಾಡದಿದ್ರ ಸುನಾಥ ಶೋಧಾ
    ಇದರ ಮರ್ಮ ಬರಿ ಕಾಮ ಅಂತಿದ್ರ ಸಿಗ್ತಿರಲಿಲ್ಲ ದೀಕ್ಷಾ
    -ಅನಿಲ ತಾಳಿಕೋಟಿ

    ReplyDelete
  30. ಸಾಹಿತ್ಯಾಸಕ್ತರಿಗೆ ಬೇ೦ದ್ರೆಯವರ ರಚನೆಗಳು ಒ೦ದು ಸವಾಲು. ಆಳಕ್ಕೆ ಇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತದೆ. ಫಜಾರಗಟ್ಟೀ ಕವನದ ಪರಿಚಯ ಮಾಡಿಸಿ ಗ೦ಗಾವತರಣದ ಸಿ೦ಚನವನ್ನು ನಮ್ಮೆಡೆಗೆ ಸಿಡಿಸಿದ ಸುನಾತ್ ಸರ್ ಗೆ ವ೦ದನೆಗಳು.

    ಅನ೦ತ್

    ReplyDelete
  31. ತುಂಬಾ ಅಧ್ಯಯನ ಮಾಡಿದ್ದೀರಿ. ವಿಚಾರಪೂರ್ಣ ಲೇಖನ

    ReplyDelete
  32. ಅನಿಲರೆ,
    ಬೇಂದ್ರೆಯವರ ಭಾಷೆಯಲ್ಲಿಯೇ ಸ್ಪಂದಿಸಿದ್ದೀರಿ. ಅವರ ಕಾವ್ಯದ ಫಜಾರಗಟ್ಟಿಯನ್ನು ನೀವು ಮುಟ್ಟಿದ್ದೀರಿ ಎನ್ನುವದರ ಸೂಚನೆ ಇದಾಗಿದೆ!

    ReplyDelete
  33. ಅನಂತರಾಜರೆ,
    ನಿಮ್ಮ ವಿಶ್ಲೇಷಣೆ ಅತ್ಯಂತ ಸಮರ್ಪಕವಾಗಿದೆ. ಹೀಗಾಗಿ ಬೇಂದ್ರೆ-ಕಾವ್ಯದ ಆಳ ಹಾಗು ವಿಸ್ತಾರವನ್ನು ಅರಿಯುವದು ಕಠಿಣವೇ ಸೈ.

    ReplyDelete
  34. ದೀಪಸ್ಮಿತರೆ,
    ಬೇಂದ್ರೆ-ಅಧ್ಯಯನ ಎಷ್ಟು ಮಾಡಿದರೂ ಕಡಿಮೆಯೇ!

    ReplyDelete
  35. ಬೇಂದ್ರೆಯವರ ಒಂದು ಕವನದಲ್ಲಿ ಇಷ್ಟೊಂದು ಒಳಾರ್ಥವಿದೆಯೇ?ನಿಜಕ್ಕೂ ನಿಮ್ಮ ವಿಶ್ಲೇಷಣೆಯಿಂದ ನಾನು ಬಹಳ ತಿಳಿದಂತಾಯ್ತು.

    ReplyDelete
  36. ಮಂಜುಳಾದೇವಿಯವರೆ,
    ಬೇಂದ್ರೆಯವರ ಕವನದ ಅರ್ಥ ನನಗೆ ತಿಳಿದದ್ದು ಇಷ್ಟು ಮಾತ್ರ. ಇದು ಸಾಗರವನ್ನು ಅಳೆದಂತೆ!

    ReplyDelete
  37. ಸಾಮಾನ್ಯರಿಗೆ ನಿಲುಕುವ ಕಾವ್ಯ ಇದಲ್ಲ !!! .ಅದನ್ನು ಉಣ ಬಡಿಸುದಕ್ಕೆ ಧನ್ಯವಾದಗಳು sir

    ReplyDelete
  38. ದಯಾನಂದರೆ,
    ಧನ್ಯವಾದಗಳು. ಬೇಂದ್ರೆಯವರ ಪಾಕವೇ ಅಸಾಮಾನ್ಯ. ಸಾಧ್ಯವಾದಷ್ಟು ಸವಿಯೋಣ.

    ReplyDelete
  39. ಕಾಲದ ಗತಿಯಲ್ಲಿ ಫಜಾರಗಟ್ಟಿಯೆಲ್ಲ ಈಗ ಅಪರೂಪವೇ ! ಆಗೀಗ ಟಿವಿ ಮುಂದೆ ಕೂಡ್ರುವ ಹಳ್ಳಿಯ ಮಕ್ಕಳೂ ಆಟಗಳನ್ನೇ ಮರೆತಂತಿದೆ. ಮೊದಲೆಲ್ಲಾ ಅಲ್ಲಿಲ್ಲಿ ಗೋಮಾಳಗಳ ಕಡೆಗಾದರೂ ಚಿಕ್ಕ ಜಾಗಗಳಿರುತ್ತಿದ್ದವು, ಈಗ ಹಳ್ಳಿಗಳಲ್ಲೂ ಹೊಲ/ತೋಟ ಖಾಲೀ ಬಿದ್ದಾಗ ಮಾತ್ರ ಜಾತ ಎಂಬಂತಾಗಿದೆ. ಗ್ರಾಮೀಣಕ್ರೀಡೆಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಬೇಂದ್ರೆಯವರ ಇಂಥಾ ಕವನಗಳು ಅಂಥಾ ಕ್ರೀಡೆಗಳನ್ನು ನೆನೆಯಲು ಸಹಕಾರಿಯಾಗುತ್ತವೆ, ಧನ್ಯವಾದಗಳು.

    ReplyDelete
  40. ಭಟ್ಟರೆ,
    ಬಹುತೇಕ ಭಾರತೀಯ ಕ್ರೀಡೆಗಳು ಮೂಲೆಗುಂಪಾಗಿವೆ! ಕ್ರಿಕೆಟ್ಟಿನಂತಹ ಅನರ್ಥಕಾರಿ ಕೀಡೆಯು (---ಕ್ರೀಡೆಯಲ್ಲ)ಭಾರತವನ್ನು ಹಾಳು ಮಾಡುತ್ತಿದೆ.
    ಕಾಲಾಯ ತಸ್ಮೈ ನಮಃ!

    ReplyDelete
  41. ಕಲರವ,
    ನಿಮಗೆ ಧನ್ಯವಾದಗಳು.

    ReplyDelete
  42. ಸುನಾಥಣ್ಣ ಮತ್ತೊಂದು ಮನೋಜ್ಞ ಕವಿತೆಗಳ ವಿವರಣೆ... ನಿಮ್ಮ ಹಲಭಾವ ಅನಾವರಣದ ಪರಿಯಂತೂ ಅಧ್ವಿತೀಯ... ಬೇಂದ್ರೆಯವರ ಕವನ -ಕವಿತೆ ನಮಗೆಲ್ಲಾ ವಿವಿಧ ರುಚಿ ನೀಡುವುದು ನಿಮ್ಮ ವಿವವರಣೆ ಮೂಲಕ.
    ಧನ್ಯವಾದ///

    ReplyDelete
  43. ಜಲನಯನ,
    ಬೇಂದ್ರೆಯವರ ಕವನ ಮನೋಜ್ಞವಾಗಿರುವದರಲ್ಲಿ ಅಚ್ಚರಿ ಏನಿದೆ?

    ReplyDelete
  44. ಜನ್ಮ ಜನ್ಮಾ೦ತರದ ಸಖ್ಯ, ಜೀವನದ ಮಜಲುಗಳನ್ನು ಆಳವಾಗಿ ಅರ್ಥೈಸುವ ಉತ್ತಮ ಕವನ..
    ಕವನವನ್ನು ಸರಳವಾಗಿ ಅರ್ಥೈಸುವ ಸು೦ದರ ವಿವರಣೆ..

    ವ೦ದನೆಗಳು ಕಾಕಾ.

    ReplyDelete
  45. ಮನಮುಕ್ತಾ,
    ಧನ್ಯವಾದಗಳು.

    ReplyDelete
  46. ಪ್ರೀತಿಯ ಸುನಾಥ ಕಾಕ,
    ಒಮ್ಮೆ ಓದಿದೆ. ಮತ್ತೆ ಓದಿ ಬರೆಯೋಣವೆಂದುಕೊಂಡೆ ಕೂಡಲೇ ಬರೆಯಲಾಗಲಿಲ್ಲ.
    ತುಂಬಾ ಅಪರೂಪದ ಕವಿತೆ. ಇದು ಅನ್ನಿಸಿದ ಕವಿವರ್ಯ ಬೇಂದ್ರೆ, ಮತ್ತವರ ಕಡೆಯಿಂದ ಹೀಗೆ ಹೇಳಿಸಿಕೊಂಡ ಅವರ ಪತ್ನಿ ಇಬ್ಬರು.. ನಭೂತೋ ನ ಭವಿಷ್ಯತಿ!
    ಓದಿದ ಪುರಾಣ ಮಿಥಕಗಳಿಂದ, ಕಲಿತ ಅರಿತ ವಿಷಯಗಳಿಂದ, ದಾರ್ಶನಿಕ ಕವಿಗೆ ಹೀಗನ್ನಿಸುವುದು ಅಸಹಜವೇನಲ್ಲ.. ಆದರೆ
    ಪುಂಡರೀಕ ನಾ, ಮಹಾಶ್ವೇತೆ ನೀ ಆದ್ಹಾಂಗಿತ್ತು ಅದ ನೆನಸೋಣ ಬಾ ಅನ್ನೋವಲ್ಲಿ ಕವಿತೆಯ ಮಜಲೇ ಬೇರೆಯಾಗುತ್ತದೆ. ಎಚ್ಚರದ ಕನಸಿನಲ್ಲಿ ತೇಲುವ ಕವಿಸಮಯದ ದೋಣಿ. ಆ ಸಾಲಿನಿಂದ ಹೊರಗೆ ಬರೋಕೆ ಆಗುತ್ತಿಲ್ಲ ನನಗೆ.
    ಗಲ್ಲ ಗಲ್ಲ ಹಚ್ಚಿ ಕೂತು ಮಲ್ಲಿಗಿ ಮಂಟಪದಾಗ...ಸಾಲಿನ ಮಧುರ ನೆನಪು ಸುಯ್ಯುತ್ತದೆ.
    ತಾಯಿ ಪಾದದಾನಂದ ಗಂಧ ಉಂಡು ಬೆಂದವರ ಜೀವ ಬೆರಸೋಣ ಬಾ - ಎಂದು ಕೊನೆಯಾಗುವಲ್ಲಿ ಕವಿತೆ ಎಲ್ಲರ ಬದುಕಿನ ಪಾಕಕ್ಕೆ ಸುರಿದ ಏಲಕ್ಕಿಯ ಘಮ.

    ಚಂದದ ಕವಿತೆಗೆ ತಕ್ಕ ಚಂದ ವಿಶ್ಲೇಷಣೆ. ಕಾಕಾ ಬೇಂದ್ರೆಯವರನ್ನ ನನ್ನ ಅಂತರಂಗಧ ಅವಿಭಾಜ್ಯ ಅಂಗವಾಗಿಸುತ್ತಿರುವ ನಿಮಗೆ ಶರಣು ಶರಣು. ಬೇಯಿಸುವ ಬದುಕಿನಲ್ಲಿ ಸೂಸುವ ತಂಗಾಳಿ ಎಂದರೆ ಇದೆ ಇರಬಹುದು.

    ಪ್ರೀತಿಯಿಂದ.
    ಸಿಂಧು

    ReplyDelete
  47. ಸಿಂಧು,
    ಬೇಂದ್ರೆಯವರು ‘ಪುಂಡರೀಕ ನಾ, ಮಹಾಶ್ವೇತೆ ನೀ ಆಧಾಂಗಿತ್ತು’ ಎನ್ನುತ್ತಾರೆ. ‘ಆಗಿದ್ದೆವು’ ಎನ್ನುವದಿಲ್ಲ. ಯಾಕೆಂದರೆ ಇವರು ಬಾಣನ ಕಲ್ಪನಾಪಾತ್ರಗಳು! ಆದರೆ ತುಂಬುರ ಹಾಗು ರಂಭೆಯ ಪ್ರಣಯ ಪೌರಾಣಿಕ ಸತ್ಯ. ಆದುದರಿಂದ ‘ನಾವು ಅವರಾಗಿದ್ದೆವು’ ಎನ್ನುವದರಲ್ಲಿ ಬೇಂದ್ರೆಯವರಿಗೆ ಸಂದೇಹವಿಲ್ಲ!

    ReplyDelete
  48. ವಸಂತ,
    ಧನ್ಯವಾದಗಳು.
    ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿ ಹಾಗೂ ಯಶಸ್ಸನ್ನು ತರಲಿ.

    ReplyDelete
  49. ಬೇ೦ದ್ರೆಯವರು ಸರಳ ಆಡು ಮಾತಿನಲ್ಲೇ ಅದ್ಭುತವಾದ ಅರ್ಥ ಗರ್ಭಿತವಾದ ಕವನವನ್ನು ನೀಡಿದ್ದಾರೆ. ಅದನ್ನು ನಮ್ಮೆಲ್ಲರಿಗೂ ಮನಸ್ಸಿಗೆ ತಟ್ಟುವ೦ತೆ ವಿವರಿಸಿದ್ದೀರಿ ಸರ್. ಧನ್ಯವಾದಗಳು. ನಿಮ್ಮಿ೦ದ ಇ೦ಥಾ ಕಾರ್ಯ ನಿರ೦ತರವಾಗಿ ನಡೆಯುತ್ತಿರಲಿ ಎ೦ದು ಆಶಿಸುತ್ತೇನೆ.

    ReplyDelete
  50. ಪ್ರಭಾಮಣಿ ಮೇಡಮ್,
    ಧನ್ಯವಾದಗಳು.

    ReplyDelete