Sunday, September 22, 2013

ಕವನದಿಂದ ಕವನ ಹುಟ್ಟುವ ಪರಿ

“ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ | ”

ವಾಲ್ಮೀಕಿಋಷಿಗಳು ಪ್ರಾತಃಕಾಲದಲ್ಲಿ ಸ್ನಾನ, ಆಹ್ನಿಕಾದಿಗಳನ್ನು ಮುಗಿಸಿಕೊಂಡು ನದೀತಟದಿಂದ ಮರಳುವಾಗ, ಬೇಡನೋರ್ವನು ಕ್ರೌಂಚಪಕ್ಷಿಗಳ ಜೋಡಿಗೆ ತನ್ನ ಬಾಣದಿಂದ ಹೊಡೆಯುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಒಂದು ಪಕ್ಷಿಯು ಜೀವ ಕಳೆದುಕೊಂಡು ಕೆಳಗೆ ಬೀಳುತ್ತದೆ. ಇನ್ನೊಂದು ಪಕ್ಷಿಯು ತನ್ನ ಜೊತೆಯ ಪಕ್ಷಿಯ ಸುತ್ತಲೂ ವಿಲಪಿಸುತ್ತ ಸುತ್ತುತ್ತದೆ.

ವಾಲ್ಮೀಕಿ ಋಷಿಗಳು ಈ ಘಟನೆಯಿಂದ ಉದ್ವಿಗ್ನರಾದಾಗ ಅವರ ಮುಖದಿಂದ ಒಂದು ಉದ್ಗಾರ ಹೊರಡುತ್ತದೆ:
“ಬೇಡನೆ, ಕಾಮಮೋಹಿತವಾದ ಈ ಜೋಡಿಯಲ್ಲಿ ಒಂದನ್ನು ಹತ್ಯೆ ಮಾಡಿದ ನಿನಗೆ ಎಂದಿಗೂ ಶಾಂತಿ ಸಿಗಲಾರದು.” ಭಾರತದ ಆದಿಕವಿ ವಾಲ್ಮೀಕಿಯವರಿಂದ ಹೊರಹೊಮ್ಮಿದ ಪ್ರಥಮ ಶ್ಲೋಕವಿದು. ‘ಶೋಕವೇ ಶ್ಲೋಕರೂಪವನ್ನು ಪಡೆಯಿತು’ ಎಂದು ಈ ನುಡಿಯನ್ನು ವರ್ಣಿಸಲಾಗಿದೆ. ಗೋಪಾಲಕೃಷ್ಣ ಅಡಿಗರೂ ಸಹ “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು” ಎಂದು ಭಾರತದ ಮೊದಲ ಮಹಾಕಾವ್ಯ ರಾಮಾಯಣವನ್ನು ಬಣ್ಣಿಸಿದ್ದಾರೆ.

ಅನಂತರ ಅನೇಕ ಕವಿಗಳು ರಾಮಾಯಣವನ್ನು ತಮ್ಮದೇ ಆದ ನೋಟದಲ್ಲಿ  ಹಾಗು ತಮ್ಮದೇ ಅದ ಧಾಟಿಯಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ತೊರವೆ ರಾಮಾಯಣದಿಂದ, ಮೊಯಿಲಿರಾಮಾಯಣದವರೆಗೆ ಈ ಸರಣಿ ಸಾಗಿದೆ. ‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ ಎಂದು ಸಾರಿದ ಕುಮಾರವ್ಯಾಸನು ತನ್ನ ಪೂರ್ವಕವಿಗಳ ಮಾರ್ಗದಲ್ಲಿಯೇ ‘ಮಹಾಭಾರತ’ವನ್ನು ರಚಿಸಿದ್ದಾನೆ.

ಹಾಗಿದ್ದರೆ, ಈ ಕವಿಗಳು ರಚಿಸಿದ ರಾಮಾಯಣ ಅಥವಾ ಮಹಾಭಾರತ ಕಾವ್ಯಗಳು ಅನುಕರಣೆಗಳೆ? ಖಂಡಿತವಾಗಿಯೂ ಅಲ್ಲ! ಬಂಗಾರದ ತುಂಡಿನಿಂದ ಒಬ್ಬ ಅಕ್ಕಸಾಲಿಗನು ಜೋಡೆಳೆಯ ಸರವನ್ನು ಮಾಡಿದರೆ, ಮತ್ತೊಬ್ಬ ಅಕ್ಕಸಾಲಿಗನು ಅದೇ ಬಂಗಾರದ ತುಂಡಿನಿಂದ ಕಮಲಹಾರವನ್ನು ರಚಿಸಬಹುದು. ಮೊದಲನೆಯ ಅಕ್ಕಸಾಲಿಗನು ಎರಡನೆಯವನಿಗೆ ಪ್ರೇರಣೆಯನ್ನು ನೀಡುತ್ತಾನೆ, ಅಷ್ಟೇ. ಇದುವೇ ಕವನದಿಂದ ಕವನ ಹುಟ್ಟುವ ಪರಿ.

ಇಂತಹ ಪ್ರೇರಣೆಯನ್ನು ಪಡೆದ ಕನ್ನಡ ಕವಿಗಳಲ್ಲಿ ವರಕವಿ ಬೇಂದ್ರೆಯವರು ಅಗ್ರಗಣ್ಯರು. ಬೇಂದ್ರೆಯವರದು ಬಹಳ ವಿಸ್ತಾರವಾದ ಹಾಗು ಆಳವಾದ ಅಧ್ಯಯನ. ಈ ಅಧ್ಯಯನದ ಪ್ರಭಾವವನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ತೋರಿಸಿದ್ದಾರೆ. ಈ ರೀತಿಯಿಂದ ತಮ್ಮ ಮೇಲೆ ಪ್ರಭಾವ ಬೀರಿದ ಪೂರ್ವಕವಿಗಳನ್ನು ಅಪ್ರತ್ಯಕ್ಷವಾಗಿ ಸ್ಮರಿಸುತ್ತಾರೆ.

ಅವರ ಕವನವೊಂದು ಸರ್ವಜ್ಞನ ಈ ವಚನದಿಂದ ಪ್ರೇರಿತವಾಗಿರುವದನ್ನು ಗಮನಿಸಬಹುದು:
“ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು?  ಸರ್ವಜ್ಞ ||”

ಸರ್ವಜ್ಞನು ಕುಲಭೇದವನ್ನು ಖಂಡಿಸಿ ರಚಿಸಿದ ವಚನವಿದು. ಈಗ ಬೇಂದ್ರೆಯವರ ಕವನವೊಂದನ್ನು (ಬೈರಾಗಿಯ ಹಾಡು) ಗಮನಿಸಿರಿ:
“ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..”

ಸರ್ವಜ್ಞನ ವಚನವು ತ್ರಿಪದಿಯ ಧಾಟಿಯಲ್ಲಿದೆ, ಬೇಂದ್ರೆಯವರ ಕವನದಲ್ಲಿ ಎಂಟು ಸಾಲುಗಳಿವೆ. ಈ ಕಾರಣದಿಂದಾಗಿ ಬೇಂದ್ರೆಯವರ ಕವನದಲ್ಲಿ ಮೂಲ ತಿರುಳಿನ ವಿಸ್ತಾರವಿದೆ. ಆದರೆ ಎರಡೂ ರಚನೆಗಳಲ್ಲಿ, ಭೂಮಿತಾಯಿ ಹಾಗು ಜೀವಜಲ ಇವು ಎಲ್ಲರಿಗೂ ಸಮಾನ ಎನ್ನುವ ಆಶಯವಿದೆ. ಸರ್ವಜ್ಞನು ಕುಲಭೇದವನ್ನು ಪ್ರತ್ಯಕ್ಷವಾಗಿ ಖಂಡಿಸಿದ್ದಾನೆ. ಬೇಂದ್ರೆಯವರು ಮಾನವರೆಲ್ಲರೂ ಒಂದೇ ಎಂದಿದ್ದಾರೆ. ಸರ್ವಜ್ಞನ ಕಾಣ್ಕೆಯನ್ನು ಹಾಗು ಅವನದೇ ಕೆಲವು ಪದಗಳನ್ನು ಬಳಸಿಕೊಂಡು ಬೇಂದ್ರೆಯವರು ಮಾಡಿದ ಬಂಗಾರದ ಒಡವೆಯಿದು! ಇದು ತಮ್ಮ ಪೂರ್ವಕವಿಗಳನ್ನು ಬೇಂದ್ರೆಯವರು ಸ್ಮರಿಸುವ ರೀತಿಯೂ ಹೌದು.

ಭಾರತೀಯ ಕವಿಗಳಷ್ಟೇ ಬೇಂದ್ರೆಯವರಿಗೆ ಈ ರೀತಿಯ ಪ್ರೇರಣೆ ಕೊಟ್ಟಿದ್ದಾರೆ ಎಂದಲ್ಲ. ಆಂಗ್ಲ ನಾಟಕಕಾರ ಶೇಕ್ಸಪಿಯರನ ‘ಕಿಂಗ ಲಿಯರ’ ಎನ್ನುವ ನಾಟಕದಲ್ಲಿ ಪುಟ್ಟದೊಂದು ಹಾಡು ಬರುತ್ತದೆ:
Under the greenwood tree
Who wants to lie with me
Come hither, come hither, come hither.
Here shall he see
No enemy
But winter and rough weather.

ಈಗ ಬೇಂದ್ರೆಯವರ ಕವನವೊಂದನ್ನು ಗಮನಿಸಿರಿ:
“ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,
ಮುಮ್ಮುಖದ ಋತುಮಾನ ಹೇಗು ಇರಲಿ;  
ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಶೇಕ್ಸಪಿಯರನ ಕವನದ ಮನೋಧರ್ಮಕ್ಕೂ, ಬೇಂದ್ರೆಯವರ ಕವನದ ಮನೋಧರ್ಮಕ್ಕೂ ಏನಾದರೂ ಭಿನ್ನತೆ ಇದೆಯೆ?
ಶೇಕ್ಸಪಿಯರನು ತನ್ನ ಕವನದಲ್ಲಿ ಸಾಮರಸ್ಯವನ್ನು ಸೂಚಿಸಲು ನಿಸರ್ಗದ ಪ್ರತೀಕವನ್ನು ಬಳಸಿಕೊಂಡಂತೆ, ಬೇಂದ್ರೆಯವರೂ ತಮ್ಮ ಕವನದಲ್ಲಿ ಋತುಮಾನದ ಪ್ರತೀಕವನ್ನು ಬಳಸಿಕೊಂಡಿದ್ದಾರಲ್ಲವೆ?

ಬೇಂದ್ರೆಯವರು ತಮ್ಮ ಕವನಗಳಲ್ಲಿ ಯಾರದೇ ಅನುಕರಣೆಯನ್ನು ಮಾಡಿಲ್ಲ. ಆದರೆ ಅವರ ಪ್ರತಿಭೆಯು ತಾನು ಕಂಡದ್ದನ್ನು, ಹಾಗು ತಾನು ಉಂಡದ್ದನ್ನು ಅರಗಿಸಿಕೊಂಡು, ಮತ್ತೊಂದು ಪ್ರಸಂಗದಲ್ಲಿ, ತನ್ನದೇ ರೀತಿಯಲ್ಲಿ ಮರುಸೃಷ್ಟಿಸಿ ಕನ್ನಡಿಗರಿಗೆ ನೀಡಿದೆ. ಇದನ್ನೇ ಕವನದಿಂದ ಕವನ ಹುಟ್ಟುವ ಪರಿ ಎಂದು ಹೇಳಬಹುದು.

ಯೇಟ್ಸ ಕವಿಯ “Crazy Jane talks with the Bishop” ಎನ್ನುವ ಕವನಕ್ಕೂ ಬೇಂದ್ರೆಯವರ ಕವನವೊಂದಕ್ಕೂ ಇರುವ ಸಾಮ್ಯ, ವೈಷಮ್ಯಗಳನ್ನು ಗಮನಿಸಿರಿ. ಯೇಟ್ಸನ ಕವನವನ್ನು ಇಲ್ಲಿ ನೋಡಬಹುದು. ಇನ್ನು ಬೇಂದ್ರೆಯವರ ಕವನದ ಮೊದಲ ಸಾಲುಗಳು ಹೀಗಿವೆ:
“ಗುಡಿಯ ಮಡಿಯ ಪೂಜಾರರಣ್ಣ ನರ್ತಕಿಗೆ ನುಡಿದ ನೊಂದು
‘ಎಲೆ ದುಷ್ಟೆ, ನಷ್ಟೆ, ನೀ ಪ್ರಾಯದವರನು ಬೇಟೆಯಾಡುವೆಯೆ’ ಎಂದು.
‘ಹೌದು ದೊರೆಯೆ, ನಾ ಬಿಚ್ಚುಮೊಗ್ಗೆ, ನನಗಿಲ್ಲ ಸೆರಗು ಮುಚ್ಚು,
ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’”

ಯೇಟ್ಸನ ಕವನದಲ್ಲಿ ವೇಶ್ಯೆಯೋರ್ವಳಿಗೆ ಬಿಶಪ್ ಹೇಳುವ ಮಾತುಗಳು ಹಾಗು ಬೇಂದ್ರೆಯವರ ಕವನದ ಪೂಜಾರಿಯು ನರ್ತಕಿಗೆ ಹೇಳುವ ಮಾತುಗಳು ಒಂದೇ ಆಗಿವೆ. ಯೇಟ್ಸನ ವೇಶ್ಯೆ ಹಾಗು ಬೇಂದ್ರೆಯವರ ನರ್ತಕಿ ಇವರು ಕೊಡುವ ಉತ್ತರಗಳ ತಿರುಳು ಒಂದೇ. ಆದರೆ ಯೇಟ್ಸನ ವೇಶ್ಯೆಯ ಉತ್ತರದಲ್ಲಿ ಆಕ್ರೋಶವಿದೆ. ಬೇಂದ್ರೆಯವರ ನರ್ತಕಿಯ ಉತ್ತರದಲ್ಲಿ resignation ಇದೆ. ಯೇಟ್ಸನ ವೇಶ್ಯೆಯು “.... love has pitched his mansion in the place of excrement” ಎಂದು ಕೊನೆಯಲ್ಲಿ ಹೇಳುವಾಗ ಸ್ಫೋಟಿಸುತ್ತಾಳೆ. ಬೇಂದ್ರೆಯವರ ನರ್ತಕಿಯು “ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’” ಎಂದು ಉಸುರುವಾಗ, “ನನ್ನದು ಬಹಿರಂಗವಾದ ಕಾಮವ್ಯಾಪಾರವಾದರೆ, ನಿಮ್ಮದು ಅಂತರಂಗದಲ್ಲಿರುವ ಕಾಮವ್ಯಾಪಾರ” ಎಂದು ಮುಸುಕಿನ ಗುದ್ದು ಕೊಡುತ್ತಾಳೆ!

ಯೇಟ್ಸ ಕವಿಯ ಇದೇ ಕವನದಿಂದ ಪ್ರೇರಣೆ ಪಡೆದು ರಚಿಸಿದ ಒಂದು ಕವನವು ಇಲ್ಲಿದೆ. ಇದನ್ನು ರಚಿಸಿದವರು ಸ್ವರ್ಣಾ. ಅವರ ಕವನ ಇಲ್ಲಿದೆ: http://subbajji.blogspot.in/2013/08/blog-post_29.html

28 comments:

  1. ಅಕ್ಕಸಾಲಿಗರ ಉದಾಹರಣೆ ಸಮಂಜಸವಾಗಿದೆ ಗುರುವರ್ಯ.
    ಕಾವ್ಯದಿಂದ ಕಾವ್ಯವೇ ಜನಿಸುವುದು ಸಕಲ ಕಾಲದಲ್ಲೂ.
    ಸಂಸ್ಕೃತವೋ, ಕನ್ನಡವೋ, ಆಂಗ್ಲವೋ ಇರಲಿ ಮತ್ತೊಂದು ಅದನ್ನು ಕನ್ನಡ ಕವಿ ನೋಡುವ ಪರಿಯೇ ಪ್ರೇರಕ ನೋಟ.

    ಇಲ್ಲಿ ನಮ್ಮ ಸಾಹಿತಿಗಳ ದೊಡ್ಡತನ ಗಮನಿಸಿದರೆ, ನಾವು ಬಹು ಭಾಷಾ ಆಸ್ವಾದಕರು. ಬಹು ಭಾಷಾ ಪೋಷಕರು. ನಾವು ಭಾಷಾ ಸಹಿಷ್ಣುತೆಯಲ್ಲಿ ಶ್ರೇಷ್ಟರು. ಇತರ ಭಾಷಿಗರು ಕನ್ನಡ ಓದದಿದ್ದರೂ ಸೈ ನಾವು ಸವಿಯುವೆವು ಅವರ ಕಳಿತ ಹಣ್ಣುಗಳ ರುಚಿಗಳನ್ನ.

    ತುಂಬಾ ಒಳ್ಳೆಯ ಲೇಖನ ಸಾರ್.

    ಈ ಲೇಖನವನ್ನು ಫೇಸ್ ಬುಕ್ಕಿನ 3ಕೆ ಸಮುದಾಯದಲ್ಲಿ ಹಂಕಿಕೊಂಡಿದ್ದೇನೆ ಹೀಗೆ:
    https://www.facebook.com/photo.php?fbid=635743306470122&set=gm.512784095472812&type=1&theater

    ReplyDelete
  2. ಕವನದಿ೦ದ ಕವನ ಹುಟ್ಟುವ ಪರಿ.... ಸಮ೦ಜಸವಾಗಿದೆ ಸುನಾತ್. ಈ ಪ್ರೇರಣೆ ಹಿ೦ದಿನಿ೦ದಲೂ / ಮಹಾನ್ ಕವಿಗಳು ಸಹ ಪಾಲಿಸಿಕೊ೦ಡು ಬ೦ದದ್ದಾರೆ ಎ೦ದು ಹೇಳಿರುವ ನಿಮ್ಮ ಲೇಖನದ ಪರಿ ತಿಳಿವಳಿಕೆ ಮೂಡಿಸುವ೦ತದ್ದು.
    ಒಬ್ಬರ ಕವನ ಮತ್ತೊಬ್ಬರ ಕವನಕ್ಕೆ ಪ್ರೇರಣೆ, ಒಬ್ಬರ ಲಿಖಿತ ಮತ್ತೊ೦ದು ಗ್ರ೦ಥಕ್ಕೆ ಪ್ರೇರಣೆ, ಒಬ್ಬರ ಭಾವನೆಗಳು ಮತ್ತೊ೦ದು ಭಾವಲಹರಿಗೆ ಪ್ರೇರಣೆ.....
    ಇಷ್ಟವಾಯ್ತು....

    ReplyDelete
  3. ನಿಮ್ಮ ಲೇಖನದಲ್ಲಿ ನೀವು ಹೇಳಿದ ಕವನದಿಂದ ಕವನ ಹುಟ್ಟುವ ಬಗೆ ನಿಜ. ನೀವು ಕೊಟ್ಟ ಅಕ್ಕಸಾಲಿಗನ ಉಪಮೆ ಚೆನ್ನಾಗಿದೆ.

    ReplyDelete
  4. ಬೀಜದಿಂದ ಮತ್ತಷ್ಟು ಬೀಜ ಹುಟ್ಟುವಂತೆ ಕವನ
    ಮತ್ತೊಂದು ಕವಿತೆಗೆ ಪ್ರೇರಣೆಯಾದ ಪರಿ ಸೊಗಸು.
    ನಿಮ್ಮ ಓದಿನ ವೈಶಾಲ್ಯ ಬೆರಗು ಹುಟ್ಟಿಸುತ್ತದೆ.
    ನಾ ಬರೆದ ಸಾಲುಗಳನ್ನೂ ಇಲ್ಲಿ ಸೇರಿಸದ್ದಕ್ಕೆ ಮತ್ತು ಈ ಲೇಖನಕ್ಕಾಗಿ ವಂದನೆಗಳು ಮತ್ತು ಧನ್ಯವಾದಗಳು ಕಾಕಾ

    ReplyDelete
  5. ಕವನದಿಂದ ಕವನ ಹುಟ್ಟುವ ಪರಿ..

    ಚೆನ್ನಾಗಿದೆ ... ಎಲ್ಲಿಯದೋ ಸ್ಫೂರ್ತಿ .. ಕನ್ನಡದಿ ಘಮಘಮಿಸಿದ್ದು ಅದ್ಭುತ ...

    ReplyDelete
  6. ಒಂದು ಸಾಲು ಹುಟ್ಟಬೇಕಾದರೆ ಎಲ್ಲಿಂದಲೋ ಸ್ಪೂರ್ತಿ ಹುಟ್ಟುತ್ತದೆ. ನೀವು ಅಕ್ಕಸಾಲಿಗನ ಉದಾಹರಣೆ ಕೊಟ್ಟಿದ್ದು ತುಂಬಾ ಚೆನ್ನಾಗಿದೆ ಕಾಕ. ಧನ್ಯವಾದಗಳು ನಿಮ್ಮ ಲೇಖನಗಳು ಸದಾ ವಿಭಿನ್ನ ಮತ್ತು ವಿಶಿಷ್ಟತೆ ಹೊಂದಿರುತ್ತದೆ

    ReplyDelete
  7. ಬದರಿನಾಥರೆ,
    ಈ ಲೇಖನವನ್ನು ಫೇಸ್‍ಬುಕ್ಕಿನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  8. ಬಿಳಿಮುಗಿಲು,
    ಸಾಹಿತ್ಯ ಹಬ್ಬುವ, ಹಬ್ಬಬೇಕಾದ ರೀತಿಯೇ ಹೀಗೆ. ನಮ್ಮ ಭಾಷೆ, ನಮ್ಮ ಸಾಹಿತ್ಯ, ನಮ್ಮ ವ್ಯಕ್ತಿತ್ವ ಇದೇ ವಿಧವಾಗಿ ವಿಸ್ತರಿಸಬೇಕಲ್ಲವೆ?

    ReplyDelete
  9. ಚಂದ್ರಶೇಖರರೆ,
    ಧನ್ಯವಾದಗಳು.

    ReplyDelete
  10. ಸ್ವರ್ಣಾ, ಬೀಜದಿಂದ ಬೀಜ ಹುಟ್ಟಿದರೂ ಸಹ ಅದು ಹುಟ್ಟಿಸುವ ಮರಗಳಲ್ಲಿ ಎಷ್ಟೊಂದು ವೈವಿಧ್ಯವಿದೆಯಲ್ಲವೆ? ಸಾಹಿತ್ಯದ ಸೊಗಸೂ ಸಹ ಹೀಗೆಯೇ!

    ReplyDelete
  11. ಸಂಧ್ಯಾ,
    ಇಂಗ್ಲಿಶ್ ಗೀತೆಗಳ ಸ್ಫೂರ್ತಿಯಿಂದ ಶ್ರೀಕಂಠಯ್ಯನವರು ಕನ್ನಡಕ್ಕೆ ಹೊಸ ಮಾರ್ಗವನ್ನು ತೋರಿಸಿದ್ದು ಹೀಗೇ ತಾನೆ?

    ReplyDelete
  12. ಮನಸು,
    ಮೃದುಮನಸಿನ ಸುಗುಣಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಕಾಕಾ ಭಾಳದಿನಾ ಆದ್ವು ನಿಮ್ಮ ಬ್ಲಾಗಿಗೆ ಬಂದು..
    ಕವಿರತ್ನ ಕಾಳಿದಾಸ ಸಿನೇಮಾದ "ಕಮಲೋ ಕಮಲೋತ್ಪತ್ತಿಃ...." ಸನ್ನಿವೇಶ ನೆನಪಾಯಿತು
    ಎಂದಿನ ನಿಮ್ಮ ಟೆರಿಫಿಕ್ ವಿಶ್ಲೇಷಣದ ಖಮಂಗ ಒಗ್ಗರಣಿ...!!

    ReplyDelete
  14. ದೇಸಾಯರ,
    ‘ಖ-ಮಂಗ’ ಒಗ್ಗರಣಿ ಅಲ್ಲ ಹೌದಲ್ಲೊ? ಯಾಕಂದ್ರ, ನಾ ಇಂಗು ತಿಂದ ಮಂಗ ಆಗಬಾರದಲ್ಲ!

    ReplyDelete
  15. ಕಾಕಾ,
    ಬಹಳ ಚೊಲೊ ಅನ್ನಿಸಿತು ಓದಿ.
    ನಿಮ್ಮ ಬ್ಲಾಗಿಗೆ ಬಂದರೆ ರಸದೌತಣಕ್ಕೆ ಯಾವತ್ತೂ ಭಂಗವೇ ಇಲ್ಲ.
    ಕವಿತೆಯಿಂದ ಹುಟ್ಟುವ ಕವಿತೆಯಷ್ಟೇ ಅಥವಾ ಅದಕ್ಕೂ ರಸವತ್ತಾದ ವಿಶೇಷ ವಿಶ್ಲೇಷಣೆ ನಿಮ್ಮ ನೋಡಿ ಕಲಿಯಬೇಕು.
    ಇದು ಹಿರಿಯರ ಹಾಡು. ನಮ್ಮ ಮನವನ್ನು ಅರಳಿಸುವ ಸಫಲ ಪ್ರಯತ್ನ.

    ಪ್ರೀತಿಯಿಂದ,
    ಸಿಂಧು

    ReplyDelete
  16. ಸಿಂಧು,
    ನಿಮ್ಮ ಅಕ್ಕರೆಗೆ ನಾನು ಋಣಿ.

    ReplyDelete
  17. "ದೀಪದಿಂದ ದೀಪವ ಹಚ್ಚಬೇಕು ಮಾನವ " ಎನ್ನುವ ಹಾಗೆ ಕವಿತೆಯೊಂದು ಕವಿತೆಗೆ ಪ್ರೇರಣೆ

    ReplyDelete
  18. ಗಿರೀಶರೆ,
    ನೀವು ಹೇಳುವ ದೀಪದ ಸಂಕೇತವು ತುಂಬ ಸಮಂಜಸವಾಗಿದೆ. ಬೆಳಕನ್ನು ಹಂಚಿಕೊಳ್ಳುವ ಪ್ರತಿ ದೀಪವು ಬೇರೆಯೆ ಆಗಿರುತ್ತದೆ.

    ReplyDelete
  19. ಹಿರಿಯರು ಬರೆದ ಸಾಹಿತ್ಯ ಅದು ಕಥೆ ಇರಲಿ, ಕಾದಂಬರಿ, ಕವನ ಇರಲಿ, ಒಂದೊಂದನ್ನೂ ಓದುತ್ತಾ ಹೋದಂತೆಯೇ ಒಂದೊಂದೂ ಆಗಿನ ವರ್ತಮಾನ ತೆರೆದಿರಿಸುತ್ತದೆ, ನಮ್ಮ ಇಂದಿನ ಬಗ್ಗೆ ಹೊಸ ಹೊಳಹು ಸೃಷ್ಟಿಸುತ್ತದೆ, ಹೊಸ ಸೃಷ್ಟಿಗೆ ಸ್ಪೂರ್ತಿಯಾಗುತ್ತದೆ, ಇದು ಯಾವತ್ತೂ ಆಗುತ್ತಿರಲಿ, ಸಿರಿಗನ್ನಡಂ ಗೆಲ್ಗೆ

    ReplyDelete
  20. ‘ಸಿರಿಗನ್ನಡಂ ಗೆಲ್ಗೆ’ ಎನ್ನುವ ನಿಮ್ಮ ಅಭಿಮಾನ ಸ್ಫೂರ್ತಿದಾಯಕವಾದದ್ದು. ನಿಮ್ಮೊಡನೆ ನಾನೂ ಹೇಳುತ್ತೇನೆ: ‘ಸಿರಿಗನ್ನಡಂ ಗೆಲ್ಗೆ!’

    ReplyDelete
  21. ಸುನಾಥ್ ಸರ್.. Plagiarism ಮತ್ತು "ಪ್ರಭಾವಿತ" ಅಥವಾ "ಪ್ರೇರೇಪಿತ" ಸಾಹಿತ್ಯ ಸೃಷ್ಟಿಯ ನಡುವಿನ ಕೂದಲೆಳೆಯ ಅಂತರವನ್ನು ಉತ್ತಮ ಉದಾಹರಣೆಗಳ ಮೂಲಕ ಅದ್ಭುತವಾಗಿ ಕಟ್ಟುಕೊಟ್ಟಿದ್ದೀರಾ.. ಧನ್ಯವಾದಗಳು...

    ReplyDelete
  22. ದಿಲೀಪರೆ,
    ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  23. ಸುನಾಥ್ ಕಾಕಾ,

    ಬಹಳ ದಿನವಾಗಿತ್ತು ನಿಮ್ಮ ಬ್ಲಾಗಿಗೆ ಬಂದು...
    ಎಂದಿನಂತೆ ಅಮೋಘ ವಿಶ್ಲೇಷಣೆ.
    ನಿಮ್ಮ ಅಧ್ಯಯನದ ಆಳ-ವಿಸ್ತಿರಣಕ್ಕೆ ಒಂದು ಶರಣು !

    ReplyDelete
  24. ಅಪ್ಪ-ಅಮ್ಮ,
    ಸುಮಾರು ಎರಡು ವರ್ಷಗಳಿಂದಲೇ ನೀವು ಬ್ಲಾ*ಗ್ ಲೋಕದಿಂದ ಅದೃಶ್ಯರಾಗಿದ್ದೀರಿ. ಪಾತರಗಿತ್ತಿ ಎಲ್ಲಿ ಹಾರಿ ಹೋಯಿತು ಎಂದು ನಾವೆಲ್ಲರೂ ಚಿಂತಿಸುತ್ತಿದ್ದೇವೆ! ಇದೀಗ ನಿಮ್ಮ ಭೆಟ್ಟಿಯಾದದ್ದು ಖುಶಿಯ ವಿಷಯ. ಧನ್ಯವಾದಗಳು Keep blogging.

    ReplyDelete
  25. ಬೇಂದ್ರೆ ಅವರಂತೆ ಮನಸ್ಸಿನಲ್ಲಿ ಮೂಡಿದ್ದನ್ನು ಅಕ್ಷರಕ್ಕೆ ಇಳಿಸಿದವರು ಇನ್ನೊಬ್ಬರಿಲ್ಲ -ಇದು ಉತ್ಪ್ರೇಕ್ಷೆಯ ಮಾತಲ್ಲ. ಕವಿಯ ಈ ದಾರ್ಶನಿಕ ದೃಷ್ಟಿಗೆ ಅವರ ಮೇಲೆ ಅರವಿಂದೊ ಅವರ ಪ್ರಭಾವ ಇಲ್ಲದಿದ್ದರೆ
    "ಇಕೋ ನೆಲ-ಅಕೋ ಜಲ ಅದರ ಮೇಲೆ ಮರದ ಫಲ" ಎಂಬ ಸೌಂದರ್ಯ ಹೊರಬರಲು ಸಾಧ್ಯವೆ ಇರಲಿಲ್ಲವೆನಿಸುತ್ತದೆ.
    -ಅನಿಲ

    ReplyDelete
  26. ಅನಿಲರೆ,
    ಬೇಂದ್ರೆಯವರ ಬಗೆಗೆ ನೀವು ಹೇಳುತ್ತಿರುವುದು ಶತಶಃ ಸತ್ಯವಾಗಿದೆ!

    ReplyDelete
  27. sir nimma vbhinnavaada kaavya vmarsheya rasadoutana unabadisuttiddira.dhanyavaadagalu.

    ReplyDelete
  28. ಧನ್ಯವಾದಗಳು, ಕಲರವ.

    ReplyDelete