Saturday, July 12, 2008

ಬೇಂದ್ರೆ ಕಾವ್ಯ : “ನನ್ನವಳು ”

ಬೇಂದ್ರೆಯವರು ರಚಿಸಿದ ಪ್ರೇಮ ಕವನಗಳಲ್ಲಿ ಅಥವಾ ದಾಂಪತ್ಯಕವನಗಳಲ್ಲಿ (--ಬೇಂದ್ರೆಯವರ ಎಲ್ಲ ಪ್ರೇಮಕವನಗಳು ದಾಂಪತ್ಯಕವನಗಳೇ ಆಗಿವೆ.--) ನನಗೆ ಅತಿ ಮೆಚ್ಚುಗೆಯಾದ ಕವನವೆಂದರೆ : ನನ್ನವಳು ”.

ಬೇಂದ್ರೆಯವರ ಈ ಕವನದ ನಾಯಕಿ ನಿಸರ್ಗವೂ ಹೌದು, ಕವಿಯ ನಲ್ಲೆಯೂ ಹೌದು.
ಬೇಂದ್ರೆಯವರ ಈ ಕವನದಲ್ಲಿ ನಲ್ಲೆಯ ವರ್ಣನೆ ಹಾಗು ದಿನಮಾನದ ವರ್ಣನೆ ಒಂದರೊಳಗೊಂದು ಚಮತ್ಕಾರಪೂರ್ಣವಾಗಿ ಬೆಸೆದುಕೊಂಡಿವೆ.
ಕವನ ಹೀಗಿದೆ:

ನನ್ನವಳು
(ನಸುಕಿನ ಝುಳುಕು)


ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ಈ ಕವನದ ಮೊದಲನೆಯ ನುಡಿಯು ಪ್ರಾರಂಭವಾಗುವದು ಪ್ರೇಮಿಯು ಮಾಡುವ ನಲ್ಲೆಯ ವರ್ಣನೆಯಿಂದ :

ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಕವಿಯ ನಲ್ಲೆ ತಾಂಬೂಲ ಚರ್ವಣದಿಂದ ತುಟಿಗಳನ್ನು ಕೆಂಪಾಗಿಸಿಕೊಂಡು, ಮಲ್ಲಿಗೆ ಹೂವುಗಳನ್ನು ಮುಡಿದುಕೊಂಡು, ಮೆಲ್ಲಮೆಲ್ಲಗೆ ಆತನನ್ನು ಸಂಧಿಸಲು ಬರುತ್ತಿದ್ದಾಳೆ ಎನ್ನುವದು ಮೊದಲ ಮೂರು ಸಾಲುಗಳಲ್ಲಿ ತೋರುವ ಅಭಿಪ್ರಾಯ. ಆದರೆ, ಕೊನೆಯ ಸಾಲಿನಲ್ಲಿ ಬರುವ ಸಂಜಿ ಏನs? ” ಎನ್ನುವ ಪ್ರಶ್ನೆಯಿಂದಾಗಿ, ಈ ಕವನದ ನಾಯಕಿ ದಿನಮಾನದ ಸಂಧ್ಯಾಸಮಯವೆನ್ನುವ ಹೊಸ ಹೊಳಹು ವ್ಯಕ್ತವಾಗುತ್ತದೆ.

ತಾಂಬೂಲಚರ್ವಣದ ಕೆಂಪುವರ್ಣವು ಸಂಜೆಗೆಂಪಿನ ಬಣ್ಣ ; ಮಲ್ಲಿಗೆಯ ಹೂವುಗಳು ಒಂದೊಂದಾಗಿ ಕಾಣುತ್ತಿರುವ ತಾರೆಗಳು ; ಬೆಳಗು ಜಾರಿ ಕತ್ತಲೆ ಸಾವಕಾಶವಾಗಿ ಬರುತ್ತಿದೆ ಎನ್ನುವ ಹೊಸ ಅರ್ಥ ಇಲ್ಲಿ ಮೂಡುತ್ತದೆ.

ಎರಡನೆಯ ನುಡಿಯನ್ನು ನೋಡಿರಿ:

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಎರಡನೆಯ ನುಡಿಯ ಮೊದಲ ಮೂರು ಸಾಲುಗಳೂ ಸಹ ನಲ್ಲೆಯ ವರ್ಣನೆಯಂತೆಯೇ ಭಾಸವಾಗುವವು.
ನಲ್ಲನನ್ನು ಸಂಧಿಸಿದ ನಲ್ಲೆ ತನ್ನ ಸೆರಗನ್ನು ಮೆಲ್ಲಗೆ ಸರಿಸಿ, ಓರೆನೋಟವನ್ನು ತುಸುವೇ ಮೇಲಕ್ಕೆತ್ತಿ, ತೋರಿಕೆಗೆ ಮಳ್ಳಿಯಂತೆ ನಟಿಸುತ್ತ, ಬಿನ್ನಾಣ ಮಾಡುತ್ತ, ನಲ್ಲನನ್ನು ರಂಬಿಸುವ ಪರಿಯನ್ನು ವರ್ಣಿಸಿದಂತೆ ಭಾಸವಾಗುವದು.
ಆದರೆ ಕೊನೆಯಲ್ಲಿರುವ ಇರುಳು ಏನs? ” ಎನ್ನುವ ಸಾಲಿನಿಂದ ಕವನಕ್ಕೆ ಮತ್ತೊಂದು ದ್ವಂದ್ವಾರ್ಥ ಪ್ರಾಪ್ತವಾಗುವದು.

ಮೇಲಸೆರಗು ಅಂದರೆ ಮೋಡಗಳ ಸೆರಗು. ವಾರಿನೋಟವೆಂದರೆ ಮೋಡಗಳ ಮರೆಯಿಂದ ಆಗಾಗ ಹೊರಗಾಣುವ ಚಂದ್ರಾಮ. ಇಂತಹ ಬೆಳದಿಂಗಳ ರಾತ್ರಿಯ ಚೆಲುವನ್ನು ಅನುಭವಿಸುತ್ತ ಕೂತಿರುವ ರಸಿಕನಿಗೆ, ಇದು ಒಯ್ಯಾರ ಮಾಡುತ್ತಿರುವ ನಾರಿಯಂತೆ ಭಾಸವಾಗುವದು ಸಹಜವಾಗಿದೆ.

ಮೂರನೆಯ ನುಡಿಯನ್ನು ಗಮನಿಸಿರಿ :

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಈ ಮೂರನೆಯ ನುಡಿಯ ಸಾಲುಗಳನ್ನೂ ಸಹ ನಲ್ಲೆಯ ಪ್ರೇಮದಾಟಗಳಿಗೆ ಹೋಲಿಸುವಂತೆಯೇ, ಇರುಳಿನಿಂದ ನಸುಕಿನವರೆಗಿನ ನಿಸರ್ಗದ ಕ್ರಿಯೆಗಳಿಗೂ ಹೋಲಿಸಬಹುದು.

ನಾಲ್ಕನೆಯ ನುಡಿಯು ಅದ್ಭುತವಾದ ರೀತಿಯಲ್ಲಿ, ಕವಿಗೆ ತನ್ನ ನಲ್ಲೆಯ ಬಗೆಗಿರುವ ಪ್ರೀತಿಯನ್ನು, ಹಾಗು ದಾಂಪತ್ಯರಹಸ್ಯವನ್ನು ಹೇಳುತ್ತದೆ:

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ನಿಸರ್ಗದ ದೈನಂದಿನ ವ್ಯಾಪಾರದಲ್ಲಿ, ನಿಸರ್ಗ ಹೇಗೆ ಹಲವು ಬಣ್ಣಗಳನ್ನು ತಳೆಯುತ್ತದೆ, ಇವೆಲ್ಲ ಪ್ರಕಾರಗಳು ಹೇಗೆ ನಿಸರ್ಗದ ಚೆಲುವೇ ಆಗಿವೆ, ಈ ಎಲ್ಲ ಬಗೆಗಳು ಮನುಷ್ಯನಿಗೆ ಹೇಗೆ ಸುಖವನ್ನೇ ಕೊಡುತ್ತವೆ ಎಂದು ಹೇಳುತ್ತಲೆ, ಸಮರಸ ದಾಂಪತ್ಯವೂ ಸಹ ಇದೇ ತೆರನಾಗಿರುತ್ತದೆ ಎನ್ನುವ ತನ್ನ ಭಾವನೆಯನ್ನು ಕವಿ ಹೊರಗೆಡುವುತ್ತಿದ್ದಾನೆ. ದೈನಂದಿನ ವ್ಯವಹಾರದಲ್ಲಿ ಬಳಲಿದ ಮನುಷ್ಯ ಸಂಜೆಯಾಗುತ್ತಿದ್ದಂತೆ ವಿಶ್ರಾಂತಿಯನ್ನು ಬಯಸುತ್ತಾನೆ. ಇರುಳು ಆತನ ದಣಿವನ್ನು ತೊಡೆಯುತ್ತದೆ. ಬೆಳಗಾಗುತ್ತಿದ್ದಂತೆ ಆತ ಮರುದಿನದ ವ್ಯವಹಾರಕ್ಕೆ ಹುರುಪಿನಿಂದ ಅಣಿಯಾಗುತ್ತಾನೆ. ಅವನ ನಲ್ಲೆಯೂ ಸಹ ಈ ಸಂಧ್ಯಾಕಾಲದಂತೆ, ನಿಶಾಕಾಲದಂತೆ ಹಾಗೂ ಉಷಾಕಾಲದಂತೆ ಅವನ ದಣಿವನ್ನು ಪರಿಹರಿಸುತ್ತಾಳೆ, ತಣಿಸುತ್ತಾಳೆ, ಹೊಸ ಹುರುಪನ್ನು ತುಂಬುತ್ತಾಳೆ.

ಅವಳನ್ನು ಕವಿ ಚನ್ನಿ ಎಂದು ಕರೆಯುತ್ತಾರೆ. ಚನ್ನಿ ಯಾದವಳೇ ಚೆಲುವಿ ಯಾಗಿರಬಲ್ಲಳು, ಬರಿ ನೋಟಕ್ಕೆ ಚೆಲುವಿಯಾದವಳು ಚನ್ನಿಯಾಗಿರದಿದ್ದರೆ ಅವಳು ಚೆಲುವೆಯಾಗಲಾರಳು. ನಲ್ಲನಿಗೆ ಅವಳು ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೆಯಾಗಬೇಕು . ಈ ಒಬ್ಬಳೇ ನಲ್ಲೆ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ತೋರಿಬರುತ್ತಾಳೆ ಎನ್ನುವ ಅಭಿಪ್ರಾಯವನ್ನು ಬೇಂದ್ರೆ ವ್ಯಕ್ತ ಪಡಿಸುತ್ತಾರೆ.

ಬೇಂದ್ರೆಯವರ ಈ ಕವನ ಅವರ ಕಾಮಕಸ್ತೂರಿ ಕವನಸಂಗ್ರಹದಲ್ಲಿದೆ.
ಕಾಮಕಸ್ತೂರಿ ಸುಗಂಧವನ್ನು ಬೀರುವ ಒಂದು ಸಸ್ಯ. ಇದರ ಎಲೆಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ಆದರೆ ಕಸ್ತೂರಿ ಮೃಗದಿಂದ ಪಡೆಯಲಾದ ಗಂಧವನ್ನು ಕಾಮೋದ್ದೀಪನಕ್ಕಾಗಿ ಬಳಸಲಾಗುತ್ತದೆ. ಗಂಡು ಹೆಣ್ಣಿನ ನಡುವಿರುವ ಕಾಮವೂ ಸಹ ಕಸ್ತೂರಿಯ ಗಂಧವಾಗದೆ, ಕಾಮಕಸ್ತೂರಿಯ ಸುಗಂಧವಾಗಬೇಕು ಎನ್ನುವದು ಬೇಂದ್ರೆಯವರ ಮನೀಷೆ.  
ಇದು ಸುಪ್ರಸಿದ್ಧ ವಿಮರ್ಶಕ ಸಾಕ್ಷಿ’ (ದಿವಂಗತ ಶ್ರೀ ಆರ್. ಜಿ. ಕುಲಕರ್ಣಿ) ಇವರ ಅಭಿಪ್ರಾಯವಾಗಿದೆ.

ಕೇವಲ ನಾಲ್ಕು ನುಡಿಗಳ ಈ ಕವನ, ಅತ್ಯಂತ ಸರಳ ಕನ್ನಡದಲ್ಲಿ ಬರೆದ ಈ ಕವನ, ಅತ್ಯಂತ ಚಮತ್ಕಾರಪೂರ್ಣವಾದ ಈ ಕವನ, ಅತಿ ಸುಂದರವಾದ ನಿಸರ್ಗ ಕವನವೂ ಹೌದು, ದಾಂಪತ್ಯಕವನವೂ ಹೌದು.

Saturday, July 5, 2008

ಭಾಷೆ ಎನ್ನುವ ಉಪಕರಣ

ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ ಹಾಗೂ ಉಪಯೋಗಿಸಬಲ್ಲ.

ಮಾನವನ ಬಳಿಯಿರುವ ಶ್ರೇಷ್ಠ ಉಪಕರಣ ಯಾವುದು?
ನಿಸ್ಸಂದೇಹವಾಗಿಯೂ ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ. ಕಾಡುಮಾನವನನ್ನು ನಾಡಮಾನವನನ್ನಾಗಿ ಸುಸಂಸ್ಕೃತಗೊಳಿಸಲು ಬೇಕಾಗುವ ಸಂವಹನ ಮಾಧ್ಯಮವೇ ಭಾಷೆ.
ಉಪಕರಣದ ಸಾಮರ್ಥ್ಯ ಹೆಚ್ಚಿದಷ್ಟೂ ಉಪಭೋಕ್ತಾನ ಸಾಮರ್ಥ್ಯ ಹೆಚ್ಚುತ್ತದೆ. ಶಿಲಾಯುಗದಲ್ಲಿ ಕಲ್ಲುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದ ಮಾನವ, ಆ ಬಳಿಕ ಕಬ್ಬಿಣ, ತಾಮ್ರಗಳ ಆಯುಧಗಳನ್ನು ಬಳಸತೊಡಗಿದ. ಇದೇ ರೀತಿಯಾಗಿ ಅವನ ಸಂವಹನ ಸಾಮರ್ಥ್ಯವೂ ಬೆಳೆಯಲಾರಂಭಿಸಿತು. ಭಿನ್ನ ಭಿನ್ನ ಸಮುದಾಯಗಳಲ್ಲಿ ಸಂಪರ್ಕ ಬಂದಂತೆಲ್ಲ, ಈ ಸಮುದಾಯಗಳಲ್ಲಿ ಪದಾರ್ಥ ವಿನಿಮಯ, ಆಯುಧ ವಿನಿಮಯ ಹಾಗು ಅತಿ ಮುಖ್ಯವಾಗಿ ಭಾಷಾ ವಿನಿಮಯ ಪ್ರಾರಂಭವಾಯಿತು. ಇದು ನಾಗರಿಕತೆ ಬೆಳೆಯುವ ರೀತಿ. ಭಾಷೆ ಬೆಳೆಯುವ ರೀತಿ.

ಸಂಸ್ಕೃತ ಭಾಷಿಕ ಸಮುದಾಯಗಳಿಗೆ ಹಾಗು ಕನ್ನಡ ಭಾಷಿಕ ಸಮುದಾಯಗಳಿಗೆ ಬಂದ ಸಂಪರ್ಕದಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ. ಹೆಚ್ಚೇನು, ಈ ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ. ಆ ಕಾರಣದಿಂದಲೇ, ಮರಾಠಿ ಭಾಷೆಯು ಕನ್ನಡದಿಂದ ಹುಟ್ಟಿದೆ ಎಂದು ಹೇಳುವದು; ಗುಜರಾತ ಭಾಷೆಗೆ ದ್ರಾವಿಡ (=ಕನ್ನಡ) ತಳಪಾಯವಿದೆ ಎಂದು ಹೇಳುವದು. ಸಂಸ್ಕೃತದಲ್ಲಿ ಕನ್ನಡದ ಹಾಗು ಕನ್ನಡದಲ್ಲಿ ಸಂಸ್ಕೃತದ ಅನೇಕ ಪದಗಳ ವಿನಿಮಯವಾಗಿರುವದು.

ದುರ್ದೈವದಿಂದ, ಸಂಸ್ಕೃತ ಭಾಷಿಕರ ಜೊತೆಗೆ ಅತಿ ಕಡಿಮೆ ಸಂಪರ್ಕ ಹೊಂದಿದ ತಮಿಳರು (-ಇದಕ್ಕೆ ಕಾರಣ ದುರಭಿಮಾನವೆ? ಅಥವಾ physical distanceಏ?-) ವಿನಿಮಯದ ಲಾಭವನ್ನು ಕಳೆದುಕೊಂಡರು. ಇದನ್ನೆಲ್ಲ ತಿಳಿಯದೆ, ಕನ್ನಡದ ಮೂಲಪದಗಳಲ್ಲಿ ಮಹಾಪ್ರಾಣವಿಲ್ಲವೆಂದು ಬೊಬ್ಬೆ ಹಾಕುವ ಅಲ್ಪಪ್ರಾಣಿಗಳಿಗೆ ಕನ್ನಡದ ಮೂಲಪದಗಳು ಎಷ್ಟಿವೆ ಎನ್ನುವದು ಗೊತ್ತೆ? ಆಧುನಿಕ ಜಗತ್ತಿನಲ್ಲಿ ಅಷ್ಟೇ ಪದಗಳು ಸಾಕೆ? ಯಾವುದೇ ಭಾಷೆಯಿರಲಿ, ಬೇರೆ ಭಾಷೆಗಳಿಂದ ಪದಗಳನ್ನು, ಧ್ವನಿಸಂಕೇತಗಳನ್ನು ಎರವಲಾಗಿ ತೆಗೆದುಕೊಳ್ಳದಿದ್ದರೆ, ಅದು ದರಿದ್ರ ಭಾಷೆಯಾಗಿಯೇ ಉಳಿಯುವದು.

ಕನ್ನಡಕ್ಕೆ ವಿದೇಶಿ ಪದಗಳು ಬೇಡ ಎನ್ನುವ ಪಂಡಿತರಿಗೆ, ಕನ್ನಡದಲ್ಲಿರುವ ವಿದೇಶಿ ಪದಗಳ ಸಂಖ್ಯೆ ಗೊತ್ತೆ? ಈಗ ಕುದುರೆ ಎನ್ನುವ ಪದವನ್ನೆ ತೆಗೆದುಕೊಳ್ಳಿ. ‘ಕುದುರೆ ಅನ್ನಲು ನಾವು ಅಶ್ವ ಅಥವಾ ಘೋಡಾ ಅನ್ನಕೂಡದು, ಇವು ಕನ್ನಡೇತರ ಪದಗಳು’ ಎಂದು ಕೆಲವರು ಹೇಳಬಹುದು. ಮಹನೀಯರೆ, ‘ಕುದುರೆ’ ಎನ್ನುವದೇ ಕನ್ನಡ ಪದವಲ್ಲ. ಕರುನಾಡಿನಲ್ಲಿ ಮೊದಲು ಕತ್ತೆಗಳೇ ತುಂಬಿದ್ದವು. (ಈಗಲೂ ಸಹ ಸಾಕಷ್ಟಿವೆ.) ತುಂಬಾ ಹಿಂದಿನ ಕಾಲದಲ್ಲಿ ಕನ್ನಡ ಕರಾವಳಿಗೆ ಈಜಿಪ್ತ ಜೊತೆಗೆ ವ್ಯಾಪಾರ ಸಂಪರ್ಕವಿತ್ತು. ಈಜಿಪ್ತಿನಿಂದ ಕುದುರೆಗಳು ಕರಾವಳಿಗೆ ಹಡಗಿನಲ್ಲಿ ಬರುತ್ತಿದ್ದವು. ಕುದುರೆಗೆ ಈಜಿಪ್ತ ಭಾಷೆಯಲ್ಲಿ ‘hytr’ ಎನ್ನುತ್ತಾರೆ. ಅದೇ ಕನ್ನಡಿಗರ ಕುದುರೆ! ಕೇವಲ ಕನ್ನಡ ಪದಗಳನ್ನು ಮಾತ್ರ ಉಪಯೋಗಿಸುತ್ತೇನೆ ಎನ್ನುವವರು ಕುದುರೆಯನ್ನು ಬಿಟ್ಟು ಕತ್ತೆಯನ್ನಷ್ಟೇ ಓಡಿಸಬೇಕಾದೀತು! ಇಂತಹದೇ ಬಡಾಯಿ ಕೊಚ್ಚಿದ ಆಂಡಯ್ಯ ಬರೆದದ್ದು “ಕಬ್ಬಿಗರ ಕಾವ”! ಹಾಗಂದರೇನು? ಸಂಸ್ಕೃತವನ್ನು ವಿರೂಪಗೊಳಿಸು……ಅದು ಕನ್ನಡವಾಗುತ್ತದೆ, ಎಂದೆ?



The Language Barrier
ಚೀನಾ ಗೋಡೆಯನ್ನು ಹೇಗೊ ದಾಟಿ ಒಳಗೆ ನುಸಳಿದ ವಿದೇಶಿ ಪ್ರವಾಸಿಯೊಬ್ಬನು ಚೀನೀಯನೊಬ್ಬನಿಗೆ ಕೇಳಿದನಂತೆ: “ವಿದೇಶಿ ಆಕ್ರಮಣಕಾರರ ಹಾವಳಿ ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದಿರಾ?”
ಈ ಪ್ರಶ್ನೆಗೆ ಆ ಚೀನೀಯನು ಕೊಟ್ಟ ಉತ್ತರ:
“ಹಾಗಲ್ಲ. ವಿದೇಶೀಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಈ ಗೋಡೆ ಕಟ್ಟಿದ್ದೇವೆ.”

ನಮ್ಮಲ್ಲಿ ತಮಿಳರನ್ನು ನಾವು ಈ ಚೀನೀಯರಿಗೆ ಹೋಲಿಸಬಹುದು. ಆದರೆ ಇವರು ಕಟ್ಟಿಕೊಂಡ ಗೋಡೆ ಕಲ್ಲು ಮಣ್ಣಿನದಲ್ಲ; ಇದು language barrier.

“ಬೇರೆ ಭಾಷೆಗಳ ಪದಗಳು ನಮಗೆ ಬೇಡ, ಅವರ ಉಚ್ಚಾರ ನಮಗೆ ಬೇಡ; ಅವರ ಸಂಸ್ಕೃತಿ ನಮಗೆ ಬೇಡ. ನಾವು ಶಿಲಾಯುಗದ ನಾಗರಿಕರಾಗಿಯೇ ಉಳಿಯುತ್ತೇವೆ.”—ಇದು ತಮಿಳು ಧೋರಣೆ. ಹಾಗಂತ ಬೇರೆಯವರ ನಾಡುಗಳನ್ನು ಅತಿಕ್ರಮಿಸಿ, ಅಲ್ಲಿಯೂ ಸಹ “ ಕನ್ನಡ ತಿರಿಯಾದು” ಎಂದು ಹೇಳಲು ಇವರು ಹೇಸುವದಿಲ್ಲ. ನಾವು ಪರದೇಶಿ ಪದಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳುವ ತಮಿಳರು, ಸಂಸ್ಕೃತದ ಪದಗಳನ್ನೇ ವಿಕಾರಗೊಳಿಸಿ, ತಮಿಳೀಕರಿಸಿರುವದನ್ನು ನೋಡಬೇಕಾದರೆ, ಶಂಕರ ಭಟ್ಟರು ಬರೆದಿರುವ “ಕನ್ನಡ ಬರಹ ಸರಿಪಡಿಸೋಣ” ಪುಸ್ತಕದ (ಮೊದಲ ಮುದ್ರಣ) ೭೧ನೆಯ ಹಾಗು ೭೨ನೆಯ ಪುಟಗಳಲ್ಲಿ ಲೇಖಕರು ಕೊಟ್ಟ ಪಟ್ಟಿಗಳನ್ನು ನೋಡಬೇಕು.

ಇಂತಹ ತಮಿಳು ಸಂಸ್ಕೃತಿ ನಮ್ಮ ಶಂಕರ ಭಟ್ಟರಿಗೆ ಆದರ್ಶವಾಗಿದೆ. ತಮಿಳಿನಲ್ಲಿ ಕೇವಲ ೧೦ ವರ್ಗಾಕ್ಷರಗಳು ಮಾತ್ರ ಇವೆ. ಒಂದೂ ಮಹಾಪ್ರಾಣಾಕ್ಷರ ಇಲ್ಲ. (ಪುಟ ೬೯). ಅಂದ ಮೇಲೆ ಕನ್ನಡ ಲಿಪಿಯಲ್ಲೇಕೆ ೨೯ ವರ್ಗಾಕ್ಷರಗಳು ಬೇಕು?
ಕನ್ನಡದಲ್ಲಿ ೨೯ ವರ್ಗಾಕ್ಷರಗಳಿರುವದರಿಂದ ಹಾಗು ತಮಿಳಿನಲ್ಲಿ ಕೇವಲ ೧೦ ಇರುವದರಿಂದ ಕನ್ನಡದಲ್ಲಿ ತಾತ್ವಿಕವಾಗಿ ಸಾಧಿಸಬಹುದಾದ ಹೆಚ್ಚಿನ ಪದಗಳು (೨೯ factorial-೧೦ factorial=೧೯ factorial) ಎನ್ನುವ ಗಣಿತ ಮೇಲ್ನೋಟಕ್ಕೆ ಗೊತ್ತಾಗುವಂತಹದು.

ಈಗಂತೂ globalization ಯುಗ. ಕನ್ನಡದ ಧ್ವನಿಸಂಪತ್ತು ಹಾಗು ಧ್ವನಿಸಂಕೇತಗಳು ಹೆಚ್ಚಬೇಕೆ ಹೊರತು ಕಡಿಮೆಯಾಗಬಾರದು. ತಮಿಳರನ್ನು ಅನುಕರಿಸಿ ನಾವೂ ಸಹ ಮಹಾಪ್ರಾಣಗಳನ್ನು ಬಿಟ್ಟು ಬಿಟ್ಟೆವು ಅಂತ ಇಟ್ಕೊಳ್ಳಿ. ಆಗ ನಮ್ಮ ಹುಡುಗರು ಅಂತರ್ರಾಷ್ಟ್ರೀಯ ಭಾಷೆಗಳನ್ನು ಮಾತನಾಡುವಾಗಲೂ ಸಹ, ತಮಗೆ ರೂಢಿಯಾಗಿ ಬಿಟ್ಟಿರುವ ಅಲ್ಪಪ್ರಾಣೀಯ ಉಚ್ಚಾರವನ್ನೇ ಮಾಡುತ್ತಾರೆ. ನಮ್ಮಲ್ಲಿರುವ call centresಗಳನ್ನೆಲ್ಲ ಆಗ ಮುಚ್ಚಬೇಕಾದೀತು.

ಹಾಗಿದ್ದರೆ, ಶಂಕರ ಭಟ್ಟರು ಕನ್ನಡದ ವರ್ಣಮಾಲೆಗೆ ಕತ್ತರಿ ಹಾಕಲು ಏಕಿಷ್ಟು ಹಪಾಪಿಸುತ್ತಿದ್ದಾರೆ?
ತಮ್ಮ ಪುಸ್ತಕದ opening paraದಲ್ಲಿ ಅವರು ಈ ರೀತಿ ಹೇಳಿಕೊಂಡಿದ್ದಾರೆ:

“ ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಬಳಕೆಯ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರೂ ಸಮಾನವಾಗಿ ಪಡೆಯುವ ಹಾಗಾಗಬೇಕು ಎಂಬ ಕಳಕಳಿಯಿಂದ ಈ ಪುಸ್ತಕವನ್ನು ಬರೆಯಲು ಹೊರಟಿದ್ದೇನೆ.”

ಯಾರನ್ನೇ ಆಗಲಿ, ‘ಕೆಳವರ್ಗ’ದವರು ಎಂದು ಕರೆಯಲು ನನ್ನ ಮನಸ್ಸು ಒಪ್ಪುವದಿಲ್ಲ. ಇರಲಿ, ಶಂಕರ ಭಟ್ಟರು ಸೂಚಿಸುವ ಈ ಕೆಳವರ್ಗದವರಿಗೆ ಭಾಷೆಯನ್ನು (ಅವರು ಹೇಳುವಂತೆ) ಸರಳೀಕರಿಸಿ ಕಲಿಸಿದರೆ, ಭಾಷೆ ಆಗ ಎಲ್ಲರ ಸೊತ್ತಾಗುವದು. ಇದೇ ತರ್ಕವನ್ನು ಅನುಸರಿಸಿ ಗಣಿತವನ್ನು ಕಲಿಸಿದರೆ, ಇನ್ನೂ ಹೆಚ್ಚು ಜನರಿಗೆ ಸರಳ ಗಣಿತದ ಪ್ರಯೋಜನವಾಗಬಹುದಲ್ಲವೆ? ಅಂದರೆ, ೦ದಿಂದ ೯ರವರೆಗಿನ ೧೦ ಅಂಕಿಗಳ ಬದಲಾಗಿ, ೦ದಿಂದ ೫ರವರೆಗಿನ ೫ ಅಂಕಿಗಳನ್ನು ಮಾತ್ರ ಕಲಿಸೋಣ! ಗಣಿತ ಈಗ ಬರೀ ಪಂಡಿತರ ಸೊತ್ತಲ್ಲ!!


ಕೇವಲ ತಮಿಳು ಭಾಷೆಯನ್ನೇ ಉದಾಹರಣೆಯಾಗಿ ನೀಡುವ ಶಂಕರ ಭಟ್ಟರು ತೆಲಗು ಭಾಷೆಯ ಉದಾಹರಣೆ ಏಕೆ ಕೊಡುವದಿಲ್ಲ? ಏಕೆಂದರೆ, ತೆಲಗು ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ! ಹಾಗಾದರೆ, ತೆಲಗು ಭಾಷೆಯೂ ಸಹ ಅಲ್ಲಿಯ ‘ಮೇಲ್ವರ್ಗ’ದವರ ಸೊತ್ತಾಗಿದೆಯೆ? ಯಾವ ತೆಲಗು ಭಾಷಿಕನೂ ಹಾಗೇ ಹೇಳಿಲ್ಲವಲ್ಲ! ತೆಲಗು ಭಾಷಿಕರೂ ಸಹ ಮಹಾಪ್ರಾಣ ಪದಗಳನ್ನು ಅನಾಯಾಸವಾಗಿ ಉಚ್ಚರಿಸುತ್ತಾರಲ್ಲ! ಇದಕ್ಕೆ ಕಾರಣವೆಂದರೆ, ಅವರೂ ಸಹ ಕನ್ನಡಿಗರಂತೆ ಸಂಸ್ಕೃತ ಭಾಷಿಕರ ಜೊತೆಗೆ ಸಂಪರ್ಕ ಪಡೆದದ್ದು.

ಕನ್ನಡ ವರ್ಣಮಾಲೆಗೆ ಕತ್ತರಿ ಹಾಕಲು ಶಂಕರ ಭಟ್ಟರು ತಾಂತ್ರಿಕ ಕಾರಣ ನೀಡುತ್ತಿಲ್ಲ. ವರ್ಗಭೇದ ನೀತಿಯನ್ನು ಅನುಸರಿಸುತ್ತಾರೆ. ಹೋಲಿಕೆಗಾಗಿ ಕೇವಲ ತಮಿಳು ಭಾಷೆಯನ್ನು ತೋರಿಸುತ್ತಿದ್ದಾರೆಯೆ ಹೊರತು, ತೆಲಗು ಭಾಷೆಯನ್ನು ತೋರಿಸುತ್ತಿಲ್ಲ. ಇದು hypocrisy ಅಲ್ಲವೆ?

ವಂಚನೆಯ ಜಾಲ:
ಶಂಕರ ಭಟ್ಟರು ಮುಂದುವರೆದು ಹೀಗೆ ಬರೆದಿದ್ದಾರೆ:
“ ಸಂಸ್ಕೃತ ಭಾಷೆಯ ಗ್ರಂಥಗಳನ್ನು ಬರೆಯುವದಕ್ಕಾಗಿ ತಮಿಳು ನಾಡಿನ ಸಂಸ್ಕೃತ ವಿದ್ವಾಂಸರು ಬೇರೆಯೇ ಒಂದು ಲಿಪಿಯನ್ನು ಬಳಕೆಗೆ ತಂದಿದ್ದರು. ಈ ಲಿಪಿಗೆ ‘ಗ್ರಂಥ ಲಿಪಿ’ (ಎಂದರೆ ಸಂಸ್ಕೃತ ‘ಗ್ರಂಥ’ಗಳನ್ನು ಬರೆಯಲು ಬಳಸುವ ಲಿಪಿ) ಎಂಬ ಹೆಸರಿದೆ. (ಪುಟ ೭೩).

ಇದರರ್ಥವೇನು? ತಮಿಳು ವಿದ್ವಾಂಸರು ಜನಸಾಮಾನ್ಯರನ್ನು ಸಂಸ್ಕೃತ ಜ್ಞಾನದಿಂದ ಶಾಶ್ವತವಾಗಿ ದೂರವಿಡುವದಕ್ಕಾಗಿಯೇ ಒಂದು ‘ಗ್ರಂಥಲಿಪಿ’ಯನ್ನು ರೂಪಿಸಿದ್ದರು ಎಂದಲ್ಲವೆ? ಆದರೆ, ಕನ್ನಡದಲ್ಲಿ ಇಂತಹ ವಂಚನೆ ಜರುಗಲಿಲ್ಲ. ಒಂದೇ ಸಾಮಾನ್ಯ ಲಿಪಿ ಇಲ್ಲಿ ಬಳಕೆಯಲ್ಲಿತ್ತು- -ಇದೆ. ಈ ಸಾಮಾನ್ಯ ಕನ್ನಡ ಲಿಪಿಯ ಸಾಮರ್ಥ್ಯ ಅದ್ಭುತವಾದದ್ದು. ಭಾರತದ ಎಲ್ಲ ಧ್ವನಿಗಳನ್ನೂ ಅದು ಲಿಪಿಸುವ ಸಾಮರ್ಥ್ಯ ಪಡೆದಿದೆ. ಅದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕು.

ಅಂತಹ ಕನ್ನಡ ಲಿಪಿಯನ್ನು incapacitate ಮಾಡುವ ಹುಮ್ಮಸ್ಸು ಏತಕ್ಕೆ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ‘ಕೆಳವರ್ಗ’ದವರೆಂದು ಯಾರನ್ನು ಶಂಕರಭಟ್ಟರು ಕರೆಯುತ್ತಿದ್ದಾರೊ ಅವರನ್ನು ಶಾಶ್ವತವಾಗಿ ಲಿಪಿಹೀನರನ್ನಾಗಿ ಮಾಡುವ ಹುನ್ನಾರವೆ ಇದು?

Saturday, June 28, 2008

ಹೆಸರಿನ ಕುಸುರು ಪಸರಿಸಿದಾಗ

ಹಿನ್ನೆಲೆಯ ಟಿಪ್ಪಣಿ:
ಶ್ರೀ ಅನಂತ ಕಲ್ಲೋಳರು ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕರು. ೧೯೯೫ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿತವಾದ ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ಸ್ಥಾಪಕ ಸದಸ್ಯರು. ಕನ್ನಡದ ಅಭಿಮಾನದಿಂದಾಗಿ, ತಮ್ಮ ನೌಕರಿಯಲ್ಲಿ ಹಿಂದೇಟು ಅನುಭವಿಸಿದವರು.
ಕನ್ನಡದ ಕಟ್ಟಾಳುಗಳಾದ ಶ್ರೀ ಅನಂತ ಕಲ್ಲೋಳರು ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ದಶಮಾನೋತ್ಸವದ ಸ್ಮರಣ ಸಂಚಿಕೆ (೨೦೦೮)ಯಲ್ಲಿ ಬರೆದ ಲೇಖನವನ್ನು ಇಲ್ಲಿ ಉದ್ಧರಿಸಲಾಗಿದೆ.
ಶ್ರೀ ಅನಂತ ಕಲ್ಲೋಳರಿಗೆ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ.
-ಸುನಾಥ


”ಹೆಸರಿನ ಕುಸುರು ಪಸರಿಸಿದಾಗ”
------ಅನಂತ ಕಲ್ಲೋಳ

ನನ್ನ ಹಿರಿಯ ಸಾಹಿತಿ ಮಿತ್ರರಾದ ‘ರಂ.ಶಾ’ರವರು ‘ಗಾಂಧಿ ಆಣಿ ಆಂಬೇಡಕರ’ ಎಂಬ ಶೀರ್ಷಿಕೆಯ ತರವಲ್ಲ ಎಂದೆನಿಸಿದರೂ ಹೆಸರಿನ ಬಗ್ಗೆ ಕೊಸರಾಡುವದನ್ನು ತಪ್ಪಿಸಲಾಗಲಿಲ್ಲ. ನಾವು ಕನ್ನಡದಲ್ಲಿ ಬಾಬಾಸಾಹೇಬರ ಅಡ್ಡಹೆಸರನ್ನು ‘ಅಂಬೇಡ್ಕರ್’ ಎಂದೇ ರೂಢಿಸಿದ್ದೇವೆ. ಆದರೆ ಮರಾಠಿಯಲ್ಲಿ ಅದು ‘ಆಂಬೇಡಕರ’ ಎಂದು ಝಳಕಾಯಿಸುತ್ತದೆ. ‘ವ್ಯಕ್ತಿಯು ತನ್ನ ಹೆಸರನ್ನು ಹೇಗೆ ಬರೆಯುತ್ತಾನೋ ಹಾಗೆಯೇ ಉಳಿದರೂ ಬರೆಯುವದು, ಉಚ್ಚರಿಸುವದು ಶಿಷ್ಟಾಚಾರವೆನಿಸುತ್ತದೆ. ಆದ್ದರಿಂದ ನೀವು ಆಂಬೇಡಕರ ಎಂದೇ ಕನ್ನಡದಲ್ಲಿ ಬರೆಯಿರಿ’ ಎಂದು ರಂ.ಶಾ. ಬಜಾಯಿಸಿದ್ದರು.

‘ಹೌದ್ರೀ ಖರೆ; ಅವರು ನಮ್ಮ ‘ಕಾರಂತ’ರನ್ನು ‘ಕಾರಂಥ’ ಎಂದು ಗಿರೀಶ ‘ಕಾರ್ನಾಡ’ರನ್ನು ಗಿರೀಷ ಕರ್ನಾಡರೆಂದು, ‘ಮೈಸೂರ’ನ್ನು ‘ಮ್ಹೈಸೂರೆಂದು, ಅಷ್ಟೇ ಏಕೆ ‘ಕನ್ನಡ’ವನ್ನು ‘ಕಾನ್ಹಡೀ’ ಎಂದು ರೂಢಿಸಿಕೊಂಡು ದೃಢಪಡಿಸಿಬಿಟ್ಟಿದ್ದಾರಲ್ಲ ಮರಾಠಿಯಲ್ಲಿ. ಕನ್ನಡದಲ್ಲಿ ರಾಹುಲ್ ‘ದ್ರಾವಿಡ’ ಅದರೆ ಮರಾಠೀ ಬಂಧುಗಳು ಆತನನ್ನು ‘ದ್ರವಿಡ’ ಎಂದೆನ್ನುತ್ತಾರೆ, ಹಾಗೇ ಬರೆಯುತ್ತಾರೆ. ಸದ್ಯ ಭಾರತದ ಪುಣ್ಯಕ್ಕ ರಾಷ್ಟ್ರಗೀತೆಯಲ್ಲಿಯ ‘ದ್ರಾವಿಡ’ವನ್ನು ಅವರು ದ್ರವಿಡಗೊಳಿಸಿಲ್ಲ! ಶಾಸ್ತ್ರಾತ್ ರೂಢಿರ್ಬಲೀಯಸೀ……..’ ಅಂತ ನಾನು ಕೊಸರಾಟದ ಸುರು ತೆಗೆದಾಗ, ರಂ.ಶಾ.ಮೊಳಕೆಯಲ್ಲಿಯೇ ಚಿವುಟಿ ಹಾಕಿದರು. ‘ಅವರು ತಮ್ಮ ಮಾತೃಭಾಷೆಯಲ್ಲಿ ಹೇಗೆ ತಮ್ಮ ಹೆಸರು ಬರೆಯುತ್ತಿದ್ದರೋ ಹಾಗೇ ಕನ್ನಡದಲ್ಲಿ ಇರಲಿ’ ಎಂದು ಅವರು ಅಪ್ಪಣೆ ಕೊಡಿಸಿದ್ದು ಒಪ್ಪುವಂತೆಯೇ ಇತ್ತು. ನಾನು ಹಾಗೇ ಅದನ್ನು ಅನುಷ್ಠಾನಗೊಳಿಸಿದೆ; ಆದರೆ ಹೆಸರಿನ ಕುರಿತು ಒಡಮೂಡಿದ ಕುಸುರು ಮನಸ್ಸಿನಲ್ಲಿ ಪಸರಿಸುತ್ತಲೇ ಇದೆ.

ಕನ್ನಡ ಭಾಷಾ ಅಕ್ಷರಸಂಪತ್ತು, ಕನ್ನಡ ಭಾಷಾ ಬಳ್ಳಿ ಪುಷ್ಕಳವಾಗಿದೆ. ಕನ್ನಡದವರು ಯಾವುದೇ ಭಾಷೆಯವರ ಹೆಸರುಗಳನ್ನು , ಪದಗಳನ್ನು ಅವರವರ ಉಚ್ಚಾರಣೆಗೆ ತದ್ರೂಪವಾಗಿ ಬರೆಯಬಲ್ಲರು. ಆ ದೃಷ್ಟಿಯಿಂದ ದೇವನಾಗರಿ ಲಿಪಿ ಸಹ ಕನ್ನಡದ ಲಿಪಿಯಷ್ಟು ಸಮೃದ್ಧವಾಗುವದಿಲ್ಲ. ಉದಾಹರಣೆಗೆ ಏಕನಾಥನನ್ನು ಕನ್ನಡದಲ್ಲಿ ಬರೆಯುತ್ತೇವೆ; ಅಂತೆಯೇ ಎಡೆಯೂರೇಶ್ವರನನ್ನು ಉಚ್ಚಾರಾನುಗುಣವಾಗಿ ಬರೆಯುವಾಗ ಹೃಸ್ವ ‘ಎ’ಕಾರದೊಂದಿಗೆ ಆರಂಭಿಸುತ್ತೇವೆ. ಇಂಥ ನಿಷ್ಕೃಷ್ಟತೆ ದೇವನಾಗರಿಗೂ ಸಾಧ್ಯವಿಲ್ಲವಲ್ಲ. ನಮ್ಮಲ್ಲಿ ಎ,ಏ; ಒ, ಓ ಎಂಬ ಭೇದನಿರೂಪಣೆಯ ಉಚ್ಚಾರ ಸಂಕೇತಗಳು ದೇವರ ಭಾಷೆಯಲ್ಲಿಯೂ ಇಲ್ಲ ನೋಡ್ರಿ. ನಮ್ಮ ಬೆಳಗಾವಿಯನ್ನು ಮರಾಠಿಯಲ್ಲಿ ಬರೆದಾಗ ಬೇಳಗಾಂವ ಎಂದು ದೀರ್ಘ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಬಹುಶಃ ಇಷ್ಟೊಂದು ದೀರ್ಘಕಾಲದ ಹೋರಾಟ ನಡೆಯಿಸಿದರೂ ಅವರಿಗೆ ಕನ್ನಡದ ಬೆಳಗಾವಿ ಕನ್ನಡಿಯ ಗಂಟಾಗಿಯೇ ಉಳಿದಿದೆ. ‘ಬೆಳಗಾವಿ’ಯ ನಿಖರ ಉಚ್ಚಾರ ಮರಾಠಿಯಲ್ಲಿ ಬರೆಯಲಾಗುವದಿಲ್ಲವಲ್ಲ! TASTEನ್ನು ಮತ್ತು TESTನ್ನು ಅವರು ಒಂದೇ ರೀತಿಯಲ್ಲಿ ತಮ್ಮ ಲಿಪಿಯಲ್ಲಿ ಬರೆಯಬೇಕಾಗುತ್ತದೆ. ಅವರಿಗೆ ದೀರ್ಘದ ದಂಡ ನಾಸ್ತಿ. ಬಹುಶಃ ಅದರಿಂದಾಗಿ ಅವರು ಉಳಿದ ಭಾಷೆಗಳಿಗೆ ದೂರದಿಂದಲೇ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ನುಡಿಯ ಬಗ್ಗೆ ವಿಶೇಷ ಪುರಸ್ಕಾರ ನೀಡುತ್ತಾರೇನೋ?

ದೇವನಾಗರಿ ಲಿಪಿಯನ್ನು ಬದಿಗಿಟ್ಟು ತಮಿಳು ಭಾಷೆಯ ಕಡೆಗೆ ಹೊರಳೋಣ. ನಮಗಿಂತ ಮೊದಲೇ ತಮಿಳು ಭಾಷೆ ಶಾಸ್ತ್ರೀಯ ಭಾಷೆಯಾಗಿ ಅಧಿಕೃತ ಪಟ್ಟಗೊಡಿಸಿದೆಯಷ್ಟೇ. ‘ಗಾಂಧಿ’ ಎಂಬ ಸುಲಭದ ಹೆಸರನ್ನು ತಮಿಳು ಭಾಷೆಯಲ್ಲಿ ಬರೆದಾಗ ಅದನ್ನು ಕಾಂತಿ ಎಂದೋ, ಖಾಂತಿ ಎಂದೋ, ಕಾಂಥಿ ಎಂದೋ, ಗಾಂತಿ ಎಂದೋ, ಗಾಂಧಿ ಎಂದೋ, ಖಾಂದಿ ಎಂದೋ, ಘಾಂತಿ ಎಂದೋ, ಖಾಂಧಿ ಎಂದೋ ಹಲವು ಹನ್ನೊಂದು ಬಗೆಯಾಗಿ ಉಚ್ಚರಿಸಬಹುದಾಗಿದೆ. ‘ಪ್ರಭಾಕರ’ನನ್ನು ‘ಪಿರ್ಪಾಗರ್’ ಎಂದು, ಪ್ರತಿಭಾ ಪಾಟೀಲ ಎಂಬ ಹೆಸರನ್ನು ಪಿರಿತಿಪಾ ಬಾಡಿಲ ಎಂದೂ ಓದುವಂತಹ ಅಧ್ವಾನ ಉಂಟಾಗುತ್ತದೆ. ಅವರಲ್ಲಿ ಕ ಆದ ಕೂಡಲೆ ಙ, ಖ ಆದ ಕೂಡಲೇ ಞ್ ಹೀಗೆ ಮಿತಸಂಖ್ಯೆಯಲ್ಲಿ ಲಿಪಿಸಂಕೇತಗಳಿವೆ. ಬರವಣಿಗೆಯಲ್ಲಿ ಮಿತಾಕ್ಷರಿಗಳಿದ್ದರು ಬಾಯಬಡಕತನದಲ್ಲಿ ಅವರ ಬಢಾಯಿ, ಲಢಾಯಿ ಬಲು ಜೋರು. ಒಂದೊಂದೇ ಅಕ್ಷರವು ಹಲವು ಹನ್ನೊಂದು ಉಚ್ಚಾರಣೆಗಳಿಗೆ ಆಸ್ಪದವೀಯುತ್ತದೆ. ಕನ್ನಡದಲ್ಲಿ ಅಕ್ಷರಗಳ ಸಿರಿವಂತಿಕೆ ಇದ್ದರೂ, ನಾವು ದೈವವಿದ್ದೂ ದತ್ತಗೇಡಿಯಂತೆ ಹೆರವರ ಅನುವರ್ತನೆ ಮಾಡುತ್ತೇವೆ. ವಿಶೇಷತಃ ಕರ್ನಾಟಕದ ದಕ್ಷಿಣ ಭಾಗದಲ್ಲಿ ‘P.T.ಉಷಾ’, ‘K.D.ಸತೀಶ್’ ಎಂಬಂಥ ಹಂಡಬಂಡ ಬರವಣಿಗೆ ಕಂಡುಬರುತ್ತದಲ್ಲವೆ! ಅದು ತಮಿಳರಿಂದ ನಾವು ಪಡೆದ ಬಳುವಳಿ. ಪಾಪ; ತಮಿಳಿನಲ್ಲಿ ಈ ಆದ್ಯಾಕ್ಷರಗಳನ್ನು (initials) ಬರೆದಲ್ಲಿ
P.T.ಉಷಾ, B.D. ಉಷಾ, B.T. ಉಷಾ, P.D.ಉಷಾ ಹೀಗೆ ನಾನಾ ತರಹದವಳಾಗಬೇಕಾಗುತ್ತದೆ. ಕನ್ನಡದಲ್ಲಿ ಅಂಥ ಗೊಂದಲವಿಲ್ಲ; ನಮ್ಮ ಅಕ್ಷರಸಂಪತ್ತು ಎಂಥ ಹೆಸರನ್ನೂ, ಇನಿಷಿಯಲ್ಸನ್ನೂ ಅಪ್ಪಟವಾಗಿ ಬರೆಯುವಷ್ಟು ಶ್ರೀಮಂತವಾಗಿದೆ. ಆದರೆ ಹಿರಿಯಣ್ಣ ತಮಿಳು ತನ್ನ ಅಕ್ಷರದಾರಿದ್ರ್ಯದಿಂದ ಅವಲಂಬಿಸಿರುವ ಈ ಹಂಡಬಂಡತನವನ್ನು ಕನ್ನಡದವರು ಕುರುಡರಾಗಿ ಅನುಸರಿಸುತ್ತಾರೆ. ತಲೆ ಬೋಳಾದವನು ಪಾಪ; ವಿಗ್ ಹಾಕಿಕೊಳ್ಳುತ್ತಾನೆಂದು ನೋಡಿದ ಎಬಡ (ಕನ್ನಡಿಗ) ತನ್ನಕೇಶಸಂಪತ್ತನ್ನು ಬೋಳಿಸಿಕೊಂಡು ಟೋಪಣ ಹಾಕಿಕೊಂಡಂತೆ! ಮೈಸೂರು ಕಡೆಗೆ ಕನ್ನಡ ಅಂಕಿಗಳ ಬಳಕೆ ಕಡಿಮೆ. ಇದಕ್ಕೂ ಅದೇ ಕಾರಣ. ತಮಿಳು ಅಂಕೆಗಳು ಅಕ್ಷರ ರೂಪದಲ್ಲಿ ಇವೆ. (ಅ,ಗ……) ಅದರಿಂದ ಬರವಣಿಗೆಯಲ್ಲಿ ಅಧ್ವಾನವಾಗುತ್ತದೆ ಎಂದು ಅವರು ಅರೆಬಿಕ್ ಅಂಕೆ (1,2,3,…) ಅವಲಂಬಿಸಿದರು. ಕನ್ನಡದ ಅಂಕೆಗಳಿಂದ ಅಂಥ ಫಜೀತಿ ಇಲ್ಲ. ಆದರೂ ತ್ಮಿಳರು ಅರೆಬಿಕ್ ಅಂಕೆಗಳಿಗೆ ಆತುಕೊಂಡರು ಎಂದು ಕನ್ನಡಿಗರು ಕನ್ನಡ ಅಂಕೆಗಳನ್ನು ಕೈಬಿಟ್ಟರು. ತಮಿಳರ ಕುರುಡು ಅನುಕರಣ ಮಾಡಿದರು.

ಈಗ ನೋಡ್ರಿ. ನಮ್ಮ ಕನ್ನಡದಲ್ಲಿ ‘ಸಾರಿಗೆ’ ಎಂದು ಸೂಕ್ತವಾದ ಪದವಿದೆ, Transport ಎಂಬುದಕ್ಕೆ. ನಾವು ಅದನ್ನು ಬಳಸುವದಿಲ್ಲ. ತಮಿಳು ಭಾಷಿಕರು ‘Transport’ ಎಂಬುದಕ್ಕೆ ತಮ್ಮಲ್ಲಿ ಸೂಕ್ತವಾದ ಪದವಿಲ್ಲ ಎಂಬುದನ್ನು ಕಂಡುಕೊಂಡಾಗ ‘ಪೋಕ್ಕುವರುವದು’ ಎಂಬ ಕೃತ್ರಿಮ ಪದವನ್ನು ಸೃಷ್ಟಿಸಿದರು. ಅದರರ್ಥ ‘ಹೋಗಿಬರುವದು’ ಎಂದು. ಈಗ ತಮಿಳಿನಲ್ಲಿ ಅದೇ ಪದ ಪ್ರಚಲಿತಗೊಂಡು ಪ್ರತಿಷ್ಠಾಪಿತವಾಗಿದೆ. ತಮಿಳು ಸರ್ಕಾರ, ತಮಿಳು ಅರಸಾಂಗ ಎನಿಸುತ್ತದೆ. ಗವರ್ನರು ರಾಜ್ಯಪಾಲರಲ್ಲ ತಮಿಳಿನಲ್ಲಿ; ಆಳುವವರ್! ನಾವು ಕನ್ನಡ ಪದಗಳು ಇದ್ದಾಗಲೂ ಬಳಸದೇ ಹೆರವರ ನುಡಿಗಳಲ್ಲಿ ಪದಗಳಿಗೆ ಜೋತು ಬೀಳ್ತೀವಿ. ಎಂಥ ನ್ಯೂನಗಂಡತೆ ಇದು!!

ಮರಾಠಿಗರು ಸಹ ಹೆಚ್ಚೂ ಕಡಿಮೆ ತಮಿಳರಂತೇ ಸ್ವತ್ವದ ಸತ್ವ ಕಾಯ್ದುಕೊಂಡವರು. Airhostessಗೆ ಹವಾಯಿ ಸುಂದರಿ ಎಂಬಂಥ ಅನರ್ಥಕಾರಿ ಪದವನ್ನು ಸೃಷ್ಟಿಸಿ ಬಳಸುತ್ತಾರೆ ಅವರು. ಅವರದೇ ‘ಅಮೃತ’ ಎಂಬ ಡೈಜೆಸ್ಟ್ ದಲ್ಲಿ ಕೆಲವರ್ಷಗಳ ಹಿಂದೆ ಈ ಬಗ್ಗೆ ಒಂದು ಲೇಖನ ಬಂದಿತ್ತು. ‘ಕನ್ನಡಿಗರು ಗಗನಸಖಿ ಎಂಬಂಥ ಅರ್ಥಪೂರ್ಣ ಪದ ಟಂಕಿಸಿದ್ದಾರೆ. ನಮ್ಮ ‘ಹವಾಯೀ ಸೌಂದರಿ’ಯಲ್ಲಿ ಮರಾಠಿತನವೂ ಇಲ್ಲ, ಸೂಕ್ತತೆಯೂ ಇಲ್ಲ’ ಎಂದು ಹಳಹಳಿಕೆ ಇತ್ತು. ಜೀವಾವಧಿ ಶಿಕ್ಷೆ ಕನ್ನಡದಲ್ಲಿದೆ, Life termಗೆ ಸುಸಂವಾದಿಯಾದ ಪದ. ಮೊನ್ನೆ ನಮ್ಮ ಇಲ್ಲಿಯ ಕನ್ನಡದ ಸಾಹಿತಿಗಳೊಬ್ಬರು, ‘ಪ್ರವೀಣ ಮಹಾಜನ್ನಿಗೆ ಜನ್ಮಠೇಪ ಆತಲ್ರಿ’ ಅಂತ ಒರಲಿದ್ರು. ಜೀವಾವಧಿ ಶಿಕ್ಷೆ ಕನ್ನಡದ ನಾಲಗೆಗೆ ಬರದೆ ‘ಜನ್ಮಠೇಪ ಯಾಕೆ ಲೇಪಗೊಳ್ಳಬೇಕು?’ ಭಾಷೆಗೆ ತಪ್ಪುವ ರಾಯರ ಗಂಡ ಹುಟ್ಟಬೇಕಾಗಿದೆ.

ಕನ್ನಡಿಗರ ಲಿಪಿಯಲ್ಲಿ, ಶಬ್ದಕೋಶದಲ್ಲಿ ಎಂಥ ಭಾವನೆಗಳನ್ನೂ ವಿಚಾರಗಳನ್ನೂ ಸಂವಹಿಸುವ ಕ್ಷಮತೆ ಇದೆ. ಸಂಸ್ಕೃತದ ಜೀವಧಾರೆಯು ಪುಷ್ಟಿದಾಯಕವಾಗಿ ಹೊಂದಿಕೊಳ್ಳುವಂತಿದೆ. ಆದರೆ ಕನ್ನಡಿಗರಿಗೆ ಅದನ್ನು ಬಳಸುವಂಥ ಮನಸ್ಸು ಯಾಕೆ ಬಾರದು? ಹೆರವರನ್ನು ಅನುಕರಿಸುವ ರಣಹೇಡಿತನ, ಗತಿಗೇಡಿತನ ಇನ್ನೂ ಎಷ್ಟೊಂದು ಕಾಲ ಇರೋದು?

‘ಕಂಠೀ ಝಳಕೆ ಮಾಳ ಮುಕ್ತಾಫಳಾಚಿ’ ಎಂದರೆ ಏನು? ‘ನುರುವಿ ಪುರುವಿ’ ಎಂದರೇನು? ಮುತ್ತಿನ ಸರ ಇರುತ್ತವೆ ಸರಿ; ಮುಕ್ತಾಫಳ ಎಂಬುದಕ್ಕೆ ಇರುವ ಅರ್ಥ ಏನು? ‘ಮುಕ್ತಾಫಳ’ಕ್ಕೆ ಮರಾಠಿಯಲ್ಲಿಯೇ ವ್ಯಂಗ್ಯಾರ್ಥ ಒಂದಿದೆ. ಅದೇನೆ ಇರಲಿ. ಆರತಿ/ಮಂತ್ರ ಮುಂತಾದವುಗಳು ಭಕ್ತಿ ಭಾವನೆಯಿಂದ ಹಾಡುವದು/ಅನ್ನುವದು ನಮ್ಮ ರೀತಿಯಾಗಿದೆ. ಅದರಲ್ಲೇನೂ ದೋಷವಿಲ್ಲ. ಪ್ರಾರ್ಥನೆಯ, ಸ್ತೋತ್ರದ ರೂಪದಲ್ಲಿಯ ಆರತಿಯು ನಮ್ಮದೇ ಭಾಷೆಯಲ್ಲಿದ್ದರೆ ಅರ್ಥದ ಅರಿವಿನಂದಾಗ ಅದಕ್ಕೆ ಹೆಚ್ಚಿನ ಸಾರ್ಥಕತೆ ಬರುವದಲ್ಲವೇ? ಹಾಗೆ ಮಾಡಿ ನಂತರ ಬೇಕಾದರೆ ಬೇರೆ ಭಾಷೆಯ ಜನಪ್ರಿಯ ಆರತಿ ಅಂದಲ್ಲಿ ಸರಿಯಾದೀತಲ್ಲವೇ? ‘ನುರುವಿ’ಯನ್ನು ಎಲ್ಲಿ ನುರಿಸೋದು ಎಂಬುದನ್ನು ಕೂಡ ಯೋಚಿಸದೇ ಚಪ್ಪಾಳೆ ತಟ್ಟುತ್ತೇವೆ. ಅರ್ಥಪೂರ್ಣವಾದ ಕನ್ನಡದ ಆರತಿಗಳನ್ನು ಅನ್ನಲಿಕ್ಕೆ, ನಮ್ಮ ಬಾಯಿ ಸೆಟಗೊಳ್ಳುತ್ತದೆ. ದ.ರಾ.ಬೇಂದ್ರೆಯವರು ೧೯೩೧ರಷ್ಟು ಹಿಂದೆಯೇ ಬೇರೆ ಭಾಷೆಯ ಗಣಪತಿ ಆರತಿಯನ್ನು ಹಾಡುವ ಕಾಲಕ್ಕೆ ಕನ್ನಡಿಗರನ್ನು ತರಾಟೆಗೆ ತಗೊಂಡಿದ್ದರಲ್ಲದೇ ತಾವೇ ಅನೇಕ ಆರತಿ ಪದಗಳನ್ನು ಬರೆದುಕೊಟ್ಟಿದ್ದರು. (ಅವರ ಮಾತೃಭಾಷೆ ಮರಾಠಿ ಎಂದು ಕನ್ನಡಿಗರು ಮತ್ತೆ ಮತ್ತೆ ಹೇಳುತ್ತಾರೆ.) ಅವರು ನಮ್ಮವರ ಈ ಆರೆತನದ ಮೋಹದ ವಿರುದ್ಧ ಸಿಡಿದು ಹಾಡಿದ್ದು ಏನೆಂದರೆ “ಕನ್ನಡ ದೀಕ್ಷೆಯು ಹೊಂದಿದ ಪ್ರತಿಯೊಬ್ಬನು ಆರ್ಯ, ಕನ್ನಡ ತೇಜವು ಸಾರಲಿ, ಕನ್ನಡಿಗರ ಕಾರ್ಯ,
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ.”

ಮತ್ತೊಬ್ಬ ಆರ್ಯ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ.ಗೋಕಾಕರು ತಮ್ಮ ಮರಾಠಿ ಮಡದಿಯ ಮೋಹವನ್ನು ನಿಷ್ಪ್ರಭಗೊಳಿಸಲು ಹಾಕಿದ್ದ ಒಗಟ ಹೀಗಿತ್ತು.

“ಕ್ವಾಟ್ಯಾಗ ಕ್ವಾಟಿ ಕರ್ನಾಟಕದ ಬಾಗಿಲುಕ್ವಾಟಿ
ಮರಾಠಿ ಒಗಟ ಹಾಕಿದ್ರ ತಿವಿತೇನು ಶಾರದಾನ ಸ್ವಾಟಿ.” (ಶಾರದಾಬಾಯಿ ಅವರ ಮಡದಿ). ಹೆಸರುವಾಸಿ ಪಂಡಿತ, ವಿದ್ವಾಂಸರು, ಎಷ್ಟೊಂದು ಕಳಕಳಿಯಿಂದ ಕನ್ನಡದ ಉಸಿರು ಜ್ವಾಪಾಸನೆ ಮಾಡ್ಯಾರ. ಪಾಪ, ಅವರಂಥ ಸಭ್ಯಸ್ತರು, ಶಿಷ್ಟಾಚಾರ ಸಂಪನ್ನರು ಸಹ ಹೊಟ್ಟಿ ಉರಿಸ್ಕೊಂಡು ಹೀಂಗ ಉದ್ಗರಿಸುವಂಥ ಪಾಳಿಯನ್ನು ಮುಖೇಡಿ ಕನ್ನಡಿಗರು ತಂದಾರ. ಹೌದ್ರೀ; ತಮ್ಮತನವನ್ನು ತಾನs ಕಡೆಗಣಿಸಿದರ ಮೂಲೋಕದಲ್ಲಿ ಎಲ್ಲಿಯೂ ತಮಗ ಠಾವು ಉಳ್ಯಾಣಿಲ್ಲ; ಅಂತರ್ ಪಿಶಾಚಿಯಾಗಿ ಉಳಿಯೋದs ಗತಿ ಆದೀತು. ಚೊಕ್ಕ ಮತವನ್ನು ಸಾರಿದ ನಾಡಿನಲ್ಲಿ ಚೊಕ್ಕ ಕನ್ನಡ ಉಳಿಸಿಕೊಳ್ಳೋದು ಹ್ಯಾಂಗ ಅಂಬೋದನ್ನು ಚಿಂತಿಸಬೇಕಾಗೇದ. ಅರುವತ್ತು ವರ್ಷ ಆದ್ವು ನಮ್ಮ ರಾಜ್ಯ ಆಗಿ; ಆದ್ರೂ ಅರಿವು ಬರಲಿಲ್ಲವೋ ಅಥವಾ ಅಳವು ಉಳಿದೇ ಇಲ್ಲವೋ?

ಕನ್ನಡದಲ್ಲಿ ಮಾತನಾಡುವದಕ್ಕೆ, ಕನ್ನಡದಲ್ಲಿ ಕರೆಯೋಲೆ ಮುದ್ರಿಸಲಿಕ್ಕೆ, ಕನ್ನಡದಲ್ಲಿ ರುಜು ಹಾಕುವದಕ್ಕೆ, ಪತ್ರವ್ಯವಹಾರ ಮಾಡುವದಕ್ಕೆ, ಕನ್ನಡದ ಹಾಡು ಹಾಡುವದಕ್ಕೆ ಕನ್ನಡಿಗರೇ ಹಿಂಜರಿದರೆ, ಹಿಂದೇಟು ಹಾಕಿದರೆ ಕನ್ನಡವನ್ನು ಅರಬರೋ, ಆಂಗ್ಲರೋ, ಅಮೆರಿಕನ್ನರೋ ಬಳಸಿ ಉಳಿಸುವರೇ! ಕನ್ನಡ ತಾಯಿಯ ಮೊಲೆ ಉಂಡ ಮಕ್ಕಳೇ ತಾಯ್ನುಡಿಯನ್ನು ಹೀನಾಯವಾಗಿ ಕಂಡು ಪರಭಾಷೆಗೆ ಪರವಶರಾಗಿ ಹರಕಾಮುರಕಾ ಆದ್ರೂ ಸೈ ‘ನಾವು ಆರೇ ಮಾತಾಡಾವ್ರು, ನಾವು ಇಂಗ್ಲೀಷಿನ್ಯಾಗ ವ್ಯವಹರಿಸಾವ್ರು; ಅರ್ಥ ಆಗಲಿ ಬಿಡಲಿ ಪರಭಾಷೆಯ ಆರತೀ ಪದ ಗಿಳಿಪಾಠ ಮಾಡಿ ದೇವರ ಮೂರ್ತಿಯ ಮುಂದೆ ಧನಿ ತೆಗೆದು ಒದರಾವ್ರು’ ಎಂಬಂಥ ಪರಪ್ರತ್ಯನೇಯ ಬುದ್ಧಿ ಮತ್ತು ತನ್ನತನಕ್ಕೆ ತಿಲಾಂಜಲಿ ತರ್ಪಣಗೈಯುವ ಮನೆಮುರುಕತನ ಮತ್ತು ಕಾರ್ಪಣ್ಯ ಇನ್ನೂ ಎಷ್ಟು ಕಾಲ ಮುಂದುವರಿಸಾವ್ರು? ತಮಿಳು ಮಾತೃಭಾಷಿಕರಾದ ರಾಜರತ್ನಂ, ಮಾಸ್ತಿ; ತೆಲುಗು ತಾಯ್ನುಡಿಯಾಗಿದ್ದ ಡಿ.ಇ.ಜಿ., ಮರಾಠಿ ಮೂಲದವರಾದ ಬೇಂದ್ರೆ, ಶಂ.ಬಾ., ಮಲಯಾಳ ಮಾತೃಭಾಷಿಕರಾದ ಕಸ್ತೂರಿ, ಕೊಂಕಣಿ ಭಾಷಿಕರಾದ ಗೋವಿಂದ ಪೈ ಮುಂತಾದವರು ಕನ್ನಡತನವನ್ನು ದೇವತ್ವವನ್ನು ಆರಾಧಿಸುವಂತೆ ಆರಾಧಿಸಿದ್ದರು. ಕಾನಡಾ ಹೋ ವಿಟ್ಠಲು, ಕರ್ನಾಟಕು ಎಮ್ದು ಜ್ಞಾನೇಶ್ವರರು ಪಾಡಿದ್ದರು. ನಮೋ ಕಾನಡೀ ಭಾಷಾ ಎಂದು ಏಕನಾಥ್ರು ಮಣಿದು ವಂದಿಸಿದ್ದರು; ಪುಲ, ಖಾಂಡೇಕರ್, ಶಿರವಾಡ್ಕರಾದಿಗಳು ಗೌರವದಿಂದ ಕನ್ನಡವನ್ನು ಮನ್ನಿಸಿದವರು. ಅಂಥವರ ಅರಿವಿಗೆ ಬಂದದ್ದು ಸ್ವಂತ ಕನ್ನಡ ಕುವರರ (ಕುವರಿಯರೂ ಸೇರಿದ್ದಾರೆ ಇದರಲ್ಲಿ) ತಲೆಗೆ ಹೊಳೆಯುವದಿಲ್ಲವೇಕೆ? ಕನ್ನಡದ ಕಡೆಗೆ ಬೆನ್ನು ತಿರುಗಿಸಿ ತಮಗರಿವಿಲ್ಲದ ಹೆರವರ ನುಡಿಗಳಲ್ಲಿ ಬಡಬಡಿಸುವ ದರಿದ್ರತನ ಯಾಕೆ?

ಕವಿಗೋಷ್ಠಿ ಅಂತ ಇಟ್ಟುಕೊಂಡರೆ, ನೂರಾರು ‘ಕವಿ’ಗಳು ತಮ್ಮ ತಥಾಕಥಿತ ಕಾವ್ಯ ವಾಚಿಸಿ ಕೊರೆಯಲು ಸಜ್ಜಾಗುತ್ತಾರೆ. ಆದರೆ ಕನ್ನಡದಲ್ಲಿ ನವನವೀನ ರೀತಿಯಲ್ಲಿ ಆರತಿ ಪದಗಳನ್ನು ಬರೆಯುವವರು, ಹಬ್ಬ ಹರಿದಿನಗಳಲ್ಲಿ ಸೂಕ್ತ ಶುಭಾಶಯಗಳನ್ನು ಕನ್ನಡದಲ್ಲಿ ಹೊಸೆದು ಶುಭಾಶಯ ಪತ್ರಗಳನ್ನು ಹೊರತರುವವರು, ಮದುವೆ ಮುಂಜಿವೆಗಳಲ್ಲಿ ಹೊಸ ಬಗೆಯ ಕನ್ನಡ ಒಗಟ ಸಾದರಪಡಿಸುವವರು ಎಷ್ಟು ಜನರಿದ್ದಾರೆ? ಕಲ್ಪನಾಶಕ್ತಿಯ ಕೊರತೆಯೇ, ಅಂಜುಬುರುಕತನದ ಪರಮಾವಧಿಯೋ ಹೆರವರ ಚಾಲ್ತಿಯಲ್ಲಿದ್ದ ಪದಗಳನ್ನು ಪುಟಪುಟಿಸುವ , ಅರ್ಥ ತಿಳಿಯದೇ ಇದ್ದರೂ ಸೈ, ಅಂದು ತೋರಿಸಿ ಬಿಡುಗಡೆಯ ನಿಟ್ಟುಸಿರು ಬಿಡುವ ಗತಿಗೇಡಿತನ, ಮತಿಗೇಡಿತನ ಇನ್ನೂ ಎಷ್ಟು ಕಾಲ ಮುಂದುವರಿಯುವದು?

ದ.ರಾ. ಬೇಂದ್ರೆಯವರು ಅಳ್ನಾವರದ ಕರ್ನಾಟಕ ಸಂಘದಲ್ಲಿ ಗಣೇಶೋತ್ಸವದಲ್ಲಿ (೧೯೩೧)ರಲ್ಲಿ ‘ಸುಖಕರ್ತಾ ದುಃಖಕರ್ತಾ’ ಹಾಡಿದ್ದು ಕೇಳಿ ಕನಲಿ ಕೆಂಡವಾಗಿ ಕನ್ನಡದಲ್ಲಿ ಗಣಪನ ಆರತಿಗಳನ್ನು ಬರೆದರು. ಕವಿಗಳೆಂದು ಹೇಳಿಕೊಳ್ಳುವವರು, ಸಾಹಿತಿಗಳೆಂದು ಮೆರೆಯುವವರು ಈ ಮಾದರಿಯನ್ನ ಮುಂದುವರಿಸಬೇಡವೇ? ಗಣಪತಿಯ ಮುಂದೆ ‘ಗಣಪತಿ ಬಪ್ಪಾ ಮೋರಯಾ ಪುಢಚ್ಯಾ ವರ್ಷೀ ಲೌಕರ್ ಯಾ’ ಅಂತ ಮರಾಠಿ ತಿಳಿಯದ ಕನ್ನಡ ಹುಡುಗರೂ ಕೂಗ್ತಾವೆ. ಈ ಘೋಷಣೆಗೆ ಏನರ್ಥ? ಭಾದ್ರಪದ ಶುದ್ಧ ಚತುರ್ಥಿಯಂದೇ ಮತ್ತೆ ಗಣಪತಿ ಪ್ರತಿಷ್ಠಾಪನೆ ಆಗಬೇಕೆಂದು ನಿಗದಿಯಾಗಿರುವಾಗ ಬೇಗನೇ ಹೇಗೆ ಬರಬಹುದು? ನಡುವೆ ಅಧಿಕಮಾಸ ಬಂದರಂತೂ ಆತ ಬರುವದಕ್ಕೆ ತಡವೇ ಆದೀತು. ಕೇವಲ ಪ್ರಾಸಕ್ಕಾಗಿ ಇಂಥ ಘೋಷಣೆಗಳನ್ನು ಅವರು ಹೊಸೆಯುತ್ತಾರೆ. ‘ಮಾಡಿವರಚೀ ಅಕ್ಕಾ ಮಾರಾ ಪುಲೀಚಾ ಶಿಕ್ಕಾ’, ‘ಚಾಂದೀಚ್ಯಾ ತಾಟಾತ್ ರೂಪಯೆ ಠೇವಿಲೆ ಸತ್ತರ್, ಸಖಾರಾಮರಾವಾನಾ ಲಾವತೇ ಅತ್ತರ್’ ಎಂಬಂಥ ಅರ್ಥವಿರಹಿತ ಘೋಷಣೆ, ಒಗಟ ಅವರಲ್ಲಿ ನಡೆಯಬಹುದು. ಅಂಥವನ್ನು ಆಲಿಂಗಿಸಿ ಅನುಸರಿಸಬೇಕೆ? ಹಾಗೆ ಮಾಡುವದು ‘ಸುಧಾರಕತನವೇ?’

ನಾನಂತೂ ಕಳೆದ ಮೂರು ದಶಕಗಳಿಂದ ಈ ಕೆಳಗಿನ ಆರತಿ ಪದವನ್ನು ನಮ್ಮ ಗಣಪತಿಯ ಮುಂದೆ ಹಾಡುತ್ತೇನೆ.


ಗಜಾನನ ನಿಜ ಆರತಿ
ಸಿದ್ಧಿ ವಿನಾಯಕ ಬುದ್ಧಿ ಪ್ರದಾಯಕ
ಜಯ ಜಯ ಮಂಗಳ ಮೂರುತಿ
ಸಂಕಟಹಾರಕ ಪಾಪವಿನಾಶಕ
ಬೆಳಗುವೆ ನಿನಗೆ ಆರತಿ ನಾ ಬೆಳಗುವೆ ನಿನಗೆ ಆರತಿ ||ಪ||
ಆನೆಯ ಮೊಗದ ಮೊರಗಳ ಕಿವಿಯ
ಒಂದೇ ದಾಢೆಯ ಠೀವಿಯು, ಒಂದೇ ದಾಢೆಯ ಠೀವಿಯು!
ಸಾನುರಾಗದಿ ಭಕ್ತರ ಸಲಹುವ ನಿತ್ಯ ನಿರಂತರ ನೀವಿಯು
ಶಿಷ್ಟರಕ್ಷಕ ಕಷ್ಟನಿವಾರಕ
ಜಯ ಜಯ ಮಂಗಳ ಮೂರುತಿ ಬೆಳಗುವೆ……..||೧||
ಲಂಬೋದರನೆ ಹೇರಂಬದೇವನೆ
ನೀಡೆಮಗೆ ಅವಲಂಬನ, ನೀಡೆಮಗೆ ಅವಲಂಬನ
ಅಂಬೆಯ ತನುಜನೆ ಇಂಬಾಗು ಎನೆ
ತುಡಿಯುತ್ತಿದೆ ಈ ಹೃನ್ಮನ||
ಅನಾಯಕರಿಗೆ ನೀನೇ ನಾಯಕ ಜಯ ಜಯ ಮಂಗಳ ಮೂರುತಿ ಬೆಳಗುವೆ ನಿನಗೆ……..||೨||

ಆರತಿಯ ನಂತರ ಭಜನೆ
ಮಂಗಳ ಮೂರುತಿ ಮೋರಯ್ಯಾ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ | ಹರುಷವ ನಮಗೆ ತಾರಯ್ಯ||
ಕಂಗಳು ಕಾಣಲಿ ನಿನ್ನಯ ಮೂರುತಿ | ಕಿವಿಗಳು ಕೇಳಲಿ ನಿನ್ನಯ ಕೀರುತಿ ||
ಭಕ್ತರ ಮನದಲಿ ನಿನ್ನಾವಾಸ | ನಿತ್ಯ ನಿರಂತರ ನಿನ್ನದೇ ಧ್ಯಾಸ ||
ನಿತ್ಯವು ಪೂಜನೆ ನಿತ್ಯವು ಭಜನೆ | ತನುಮನ ಅರ್ಪಿತ ನಿತ್ಯಾರಾಧನೆ ||
ಇದುವೇ ನಮ್ಮಯ ನಿತ್ಯ ಕಾಯಕ | ಶರಣು ಸಿದ್ಧಿ ಶ್ರೀ ವಿನಾಯಕ ||
ಮಂಗಳ ಮೂರುತಿ ಮೋರಯ್ಯ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ || ಹರುಷವ ನಮಗೆ ತಾರಯ್ಯ||
*********************************************************
ಇದೇ ತೆರನಾಗಿ ನವರಾತ್ರಿಯಲ್ಲಿ ಶ್ರೀ ವೆಂಕಟೇಶನಿಗೆ, ಶನಿವಾರದಂದು ಮಾರುತಿಯ ಭಜನೆಯ ಕಾಲಕ್ಕೆ ಹಣಮಪ್ಪನಿಗ್ ಕನ್ನಡದಲ್ಲಿಯೇ ಆರತಿ ರಚಿಸಿ ಹಾಡುತ್ತೇನೆ. ಈ ಯಾವ ದೇವರೂ ತಕ್ರಾರು ಮಾಡಿಲ್ಲರಿ ; ಭಾಳ ಖುಷಿಯಿಂದ ಕೇಳಿ ಪ್ರಸನ್ನರಾಗಿ ನನ್ನನ್ನು ಕಾಪಾಡುತ್ತ ಬಂದಿದ್ದಾರೆ. ನಾನು ಹಾಡುವ ಈ ಆರತಿ ಪದಗಳನ್ನು ಕೇಳಿದ ನನ್ನ ಇಷ್ಟಮಿತ್ರರು, ನಂಟರು ಕೂಡ ಕನ್ನಡದ ಆರತಿಗಳನ್ನು ಅನ್ನುವಷ್ಟು ಧೈರ್ಯವನ್ನು , ಪ್ರೇರಣೆಯನ್ನು ಆಯಾ ದೇವರ ದಯದಿಂದ ಹೊಂದಿದ್ದಾರೆ ಎಂದು ಹೇಳಲು ನನಗೆ ಸಂತಸವೆನಿಸುತ್ತದೆ. ಯಾವ ದೇವರ ಬಗ್ಗೆಯೂ ನಾನು ಕನ್ನಡದಲ್ಲಿ ಆರತಿ ಬರೆದು ಕೊಡಬಲ್ಲೆ. ಹಾಡುವ ಧೈರ್ಯವನ್ನು ಮಾಡುವ ಕನ್ನಡ ಭಕ್ತರು ಬೇಕು.

ನೋಡಿ, ಕರ್ನಾಟಕ ರಾಜ್ಯ ನಿರ್ಮಿತಿಯ ಚಿನ್ನದ ಹಬ್ಬದ ಸಂದರ್ಭದಲ್ಲಿಯೂ ‘ಕ್ನ್ನಡಿಗರಲ್ಲಿ ಸ್ವಭಾಷಾ ಅಭಿಮಾನ ತೀರ ಕಡಿಮೆ’ ಎಂಬ ಅದೇ ಹಳೆಯ ಅವಹೇಳನಕಾರಿ ಪದ ಕೇಳುವ ದೌರ್ಭಾಗ್ಯ ಉಳಿದುಕೊಂಡು ಬಂದಿದೆ. ವೈಯ್ಯಕ್ತಿಕ ಮಟ್ಟದಲ್ಲಿಯಾದರೂ ತಿಳಿದವರು, ಸೂಜ್ಞರು, ಸುಶಿಕ್ಷಿತರು ವಿಧಾಯಕ ರೀತಿಯಿಂದ ತಾಯ್ನಾಡಿನ ಹೆಮ್ಮೆಯನ್ನು ದರ್ಶಿಸುವ, ಪ್ರದರ್ಶಿಸುವ ಎಚ್ಚರ ಹೊಂದಿರಬೇಕಲ್ಲವೇ? ‘ದೈವವಿದ್ದೂ ದತ್ತಗೇಡಿ’ ಎನ್ನುವ ನುಡಿಗೆ ಪಕ್ಕಾಗದಿರೋಣ; ಸ್ವಾಭಿಮಾನಿ ಹೆರವರ ಪಕ್ಕದಲ್ಲಿದ್ದೂ ಅವರಿಂದ ಪಕ್ಕಾತನ ಕಲಿಯದಿದ್ದರೂ ಹೇಗೆ? ಕನ್ನಡಿಗರಿಗೆ ಅಭಿಮಾನಿಗಳಾಗಿ ಎಂದು ಹೇಳುವದೇ ಒಂದೇ ಗೊಮ್ಮಟನಿಗೆ ಚಡ್ಡಿ ಏರಿಸೋದು ಒಂದೇ ಎಂದು ಲೇವಡಿ ಮಾತು ಇದೆ. ಅದಕ್ಕೆ ಎಡೆ ನೀಡದಂತೆ ಎದೆಗಾರಿಕೆ ತೋರಿಸಬೇಕಿದೆ. ಪುನಶ್ಚ ‘ಹರಿ ಓಂ’ ಎಂದು ಸಜ್ಜಾಗಬೇಕಿದೆ ಸರೀನಾ?
---ಅನಂತ ಕಲ್ಲೋಳ

Wednesday, June 25, 2008

ಶಂಕರ ಭಟ್ಟರ ಪದಕ್ರಾಂತಿ

ಶಂಕರ ಭಟ್ಟರು ಕನ್ನಡ ನುಡಿಯಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳೇ ಬಳಕೆಯಲ್ಲಿ ಬರಬೇಕೆಂದು ಹೇಳುತ್ತಾರೆ. ಈ ಹೇಳಿಕೆಗೆ ಸ್ವಾಗತವಿದೆ. ಕನ್ನಡದಲ್ಲಿ ಇಲ್ಲದ ಹೊಸ ಪದಗಳನ್ನು ರೂಪಿಸುವಾಗ ಕ್ಲಿಷ್ಟ ಸಂಸ್ಕೃತ ಪದಗಳಿಗೆ ಜೋತು ಬೀಳದೆ, ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಲು ಸೂಚಿಸುತ್ತಾರೆ:
ಉದಾಹರಣೆ:
ಪೋಲೀಸ.……ಆರಕ್ಷಕ
ಇಂಜನಿಯರ…..ಅಭಿಯಂತ

ಇದರಂತೆ, ವೈಜ್ಞಾನಿಕ ಬರಹಗಳಲ್ಲಿ ಸಹ ಹೆಚ್ಚೆಚ್ಚು ಕನ್ನಡ ಪದಗಳನ್ನು ಬಳಸಲು ಅವರು ಕರೆ ಕೊಡುತ್ತಿದ್ದಾರೆ. ಇವೆಲ್ಲ ಸ್ವಾಗತಾರ್ಹ ಸಲಹೆಗಳು. ಈಗಾಗಲೇ ನಮ್ಮ ಅನೇಕ ಸತ್ವಶಾಲಿ ವಿಜ್ಞಾನ-ಬರಹಗಾರರು ಇಂತಹ ಪದಗಳನ್ನು ಬಳಕೆಯಲ್ಲಿ ತಂದಿದ್ದಾರೆ. ಉದಾ: ಅರಿವಳಿಕೆ, ಕೀಳರಿಮೆ, ಕುಲಾಂತರಿ ಇತ್ಯಾದಿ.

ಶಂಕರ ಭಟ್ಟರು ದಿನಪತ್ರಿಕೆಗಳಲ್ಲಿ ಅನೇಕ ಸಂಸ್ಕೃತ ಪದಗಳನ್ನು ಕೇವಲ ಘನತೆಗಾಗಿ ಉಪಯೋಗಿಸುತ್ತಾರೆ ಎನ್ನುವ ಆರೋಪ ಮಾಡುತ್ತಾರೆ. ಸಂಸ್ಕೃತ ಪದಗಳನ್ನು ಘನತೆಗಾಗಿ ಉಪಯೋಗಿಸುವದು ನಿಜವೇ ಆದರೂ, ಇದು ಅನಿವಾರ್ಯವಾಗಿದೆ.
ಉದಾಹರಣೆಗೆ: ‘ಮಾಜಿ ಪ್ರಧಾನ ಮಂತ್ರಿಗಳು ನಿಧನರಾದರು’ ಎನ್ನುವ head line ಬದಲಿಗೆ ‘ಮಾಜಿ ಪ್ರಧಾನ ಮಂತ್ರಿಗಳು ಸತ್ತರು’ ಎನ್ನುವ head line ಕೊಡುವದು ಚಂದ ಕಂಡೀತೆ?

ಭಾರತೀಯ ಭಾಷೆಗಳಿಗೆ ಒಂದು advantage ಇದೆ. ‘ಘನತೆ’ ಬೇಕಾದಾಗ ಅಥವಾ ಮುಜುಗರ ತಪ್ಪಿಸುವಂತಹ ಪದಗಳನ್ನು ಬಳಸಬೇಕಾದಾಗ ಸಂಸ್ಕೃತ ಭಾಷೆಯನ್ನು ನಾವು ಅವಲಂಬಿಸಬಹುದು. ಈ advantage ಇಂಗ್ಲಿಶ ಭಾಷೆಗಿಲ್ಲ. ವೈಜ್ಞಾನಿಕ ಪುಸ್ತಕಗಳಲ್ಲಿ ಲೈಂಗಿಕ ಪದಗಳನ್ನು ಬಳಸುವಾಗ, ನಾವು ಸರಳವಾಗಿ ಸಂಸ್ಕೃತ ಪದಗಳನ್ನು ಬಳಸಬಹುದು. ಇಂಗ್ಲಿಶ್ ಭಾಷೆಯಲ್ಲಿ ಇದು ಸಾಧ್ಯವಿಲ್ಲ. ಅಷ್ಟೇ ಏಕೆ, ಹೊಲಸು ಬೈಗಳನ್ನು ಹೇಳಬೇಕಾದಾಗ ಸಹ, ನಾವು ಇಂಗ್ಲಿಶ್ ಭಾಷೆಯ ಪದವನ್ನೇ ಬಳಸಿ ಮುಜುಗರ ತಪ್ಪಿಸಿಕೊಳ್ಳುತ್ತೇವೆ. ಉದಾಹರಣೆ: shit. ಈ ಸೌಲಭ್ಯ ಇಂಗ್ಲಿಶ್ ಅಥವಾ ಅಮೆರಿಕನ್ನರಿಗೆ ಇಲ್ಲವಲ್ಲ!

ವೀರಶೈವ ಚಳುವಳಿಯು ಕರ್ನಾಟಕದಲ್ಲಿ ಕೇವಲ ಸಾಮಾಜಿಕ ಕ್ರಾಂತಿಯನ್ನಷ್ಟೇ ಮಾಡಲಿಲ್ಲ. ವಚನಸಾಹಿತ್ಯವೆನ್ನುವ ಸೊಬಗಿನ ಸೃಷ್ಟಿಯನ್ನೇ ಮಾಡಿತು. ಈ ವಚನ ಸಾಹಿತ್ಯವನ್ನು ರಚಿಸಿದವರಲ್ಲಿ ಹೆಚ್ಚಿನವರು the so called ‘ಕೆಳವರ್ಗದವರು’. ಆದರೆ ಇವರ ವಚನಗಳಲ್ಲಿ ಸಂಸ್ಕೃತ ಪದಗಳಿಲ್ಲವೆ?

ಸಂಸ್ಕೃತ ಪದಗಳ ಅವಶ್ಯಕತೆಯನ್ನು ಅರಿತುಕೊಳ್ಳಲು ಬಸವಣ್ಣನವರ ಈ ವಚನವನ್ನು ನೋಡಿರಿ:

‘ಕರಿ ಘನ ಅಂಕುಶ ಕಿರಿದೆನ್ನ ಬಹುದೆ?
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

ಶಂಕರ ಭಟ್ಟರು ಈ ವಚನವನ್ನು ಹೀಗೆ ಬರೆಯುತ್ತಿದ್ದರೇನೊ?

‘ಆನೆ ದೊಡ್ಡದು, ಆದರೆ ಚುಚ್ಚುಗ ಸಣ್ಣದೆ?
ಕತ್ತಲೆ ದಟ್ಟವಾಗಿದೆ, ಆದರೆ ಸೊಡರು ಸಣ್ಣದೆ?’

ಆದುದರಿಂದ ಸಂಸ್ಕೃತ ಹಾಗೂ ಇಂಗ್ಲಿಶ್ ಅಥವಾ ಮತ್ತಾವದೇ ಭಾಷೆಯ ಪದಗಳನ್ನು ಕನ್ನಡದಲ್ಲಿ ಸಂಕೋಚವಿಲ್ಲದೇ ಬಳಸೋಣ.ಬಳಸಲು ನಮ್ಮ ಸಂಕೋಚವನ್ನು ತೊರೆಯೋಣ.

ಇಷ್ಟು ದಿನ ಶಂಕರ ಭಟ್ಟರ ಜೊತೆಗೆ ಮಲ್ಲಯುದ್ಧಕ್ಕಿಳಿದು ಸಾಕಾಗಿದೆ. ಇದೀಗ ಸಾಕು ಮಾಡುತ್ತಿದ್ದೇನೆ.
ಕನ್ನಡದ ಖ್ಯಾತ ಹಾಸ್ಯ ಲೇಖಕ ಶ್ರೀ ಅನಂತ ಕಲ್ಲೋಳ ಅವರು ಕನ್ನಡ ಬರಹದ ಬಗೆಗೆ ಬರೆದ ಲೇಖನವೊಂದನ್ನು ಮಂಗಳಶ್ಲೋಕದ ರೂಪದಲ್ಲಿ ಮುಂದಿನ postನಲ್ಲಿ ಕೊಟ್ಟು ಮಂಗಳ ಹಾಡುತ್ತೇನೆ. ತಾಳ್ಮೆಯಿಂದ ಸಹಭಾಗಿಗಳಾದ ತಮಗೆಲ್ಲರಿಗೂ ನನ್ನ ವಂದನೆಗಳು.

Monday, June 23, 2008

ಶಂಕರ ಭಟ್ಟರ ವಾದದಲ್ಲಿಯ ದೋಷಗಳು

ಶಂಕರ ಭಟ್ಟರ ಪ್ರತಿಪಾದನೆಯಲ್ಲಿ ಕೆಳಗಿನ ಲೋಪದೋಷಗಳಿವೆ:

‘ಮೇಲ್ವರ್ಗ’ದವರು ‘ಕೆಳವರ್ಗ’ದವರನ್ನು ಶೋಷಿಸುವ ಉದ್ದೇಶದಿಂದಲೇ ಕನ್ನಡ ಲಿಪಿಯಲ್ಲಿ ೫೦ ಅಕ್ಷರಗಳನ್ನು ಇಟ್ಟುಕೊಂಡಿದ್ದಾರೆ ಎಂದು ಭಟ್ಟರು ಪ್ರತಿಪಾದಿಸುತ್ತಾರೆ.(ಪುಟ ೧: ಸಾಲು ೨, ಸಾಲು ೧೭; ಪುಟ ೨೬: ಸಾಲು ೮; ಪುಟ:೫೯,ಸಾಲು ೨; ಪುಟ ೯೩: ಸಾಲು ೨,ಸಾಲು ೨೫ ಇತ್ಯಾದಿ).

ಹೀಗೆ ಹೇಳುವದು absolutely presumptive statement ಹಾಗು ಲಿಪಿ ಕಡಿತಕ್ಕೆ ತಾಂತ್ರಿಕ ಕಾರಣವಾಗುವದಿಲ್ಲ. ಕನ್ನಡದಲ್ಲಿ ಇತರ ಭಾರತೀಯ ಭಾಷೆಗಳ ಹಾಗೂ ಅನೇಕ ಅಭಾರತೀಯ ಭಾಷೆಗಳ ಪದಗಳು ಸಮ್ಮಿಳಿತವಾಗಿವೆ. ಇವುಗಳ ಸರಿಯಾದ ಉಚ್ಚಾರ ಮಾಡಲು ಈಗ ಕನ್ನಡದಲ್ಲಿರುವ ಧ್ವನಿಸಂಕೇತಗಳನ್ನು ನಾವು ಉಳಿಸಿಕೊಂಡರೆ ಸಾಕು. (ಉದಾ:ಖುದಾ, ಖಾನದಾನೀ, ಖೋಮೆನಿ, ಘೋಟಾಳೆ ಇ.)

ಎರಡನೆಯದಾಗಿ ಅವಶ್ಯವಾದರೆ, ಇನ್ನೂ ಹೆಚ್ಚಿನ ಧ್ವನಿಸಂಕೇತಗಳನ್ನೂ ನಾವು ರೂಢಿಸಿಕೊಳ್ಳಬೇಕು. ಉದಾಹರಣೆಗಾಗಿ, ಇಂಗ್ಲೀಶಿನಲ್ಲಿರುವ doctor, profit ಮೊದಲಾದ ಪದಗಳನ್ನು ಬರೆಯುವಾಗ ನಾಗರಿ ಲಿಪಿಯಲ್ಲಿ ‘ಡಾ’ ಅಥವಾ ‘ಪ್ರಾ’ ಅಕ್ಷರಗಳ ಮೇಲ್ಗಡೆಯಲ್ಲಿ ಅರ್ಧಚಂದ್ರದ ಸಂಕೇತವನ್ನು ಬಳಸುತ್ತಾರೆ. ಕನ್ನಡದಲ್ಲೂ ಸಹ ಇದನ್ನು ಬಳಸಲಾಗುತ್ತಿತ್ತು. ಇದೀಗ ಅರ್ಧಚಂದ್ರ ಸಂಕೇತಕ್ಕೆ ಕನ್ನಡದಲ್ಲಿ ಅರ್ಧಚಂದ್ರಪ್ರಯೋಗವಾಗಿದ್ದರಿಂದ, ಈ ಧ್ವನಿಯನ್ನು ಸಮರ್ಥವಾಗಿ ಬರೆಯಲು ಆಗುತ್ತಿಲ್ಲ.
ಒಂದು ಉದಾಹರಣೆ: ಕನ್ನಡಿಗರಲ್ಲಿ John ಹೆಸರಿನ ವ್ಯಕ್ತಿಗಳು ಇದ್ದಾರಷ್ಟೆ. ಇವರು ತಮ್ಮ ಹೆಸರನ್ನು ಜಾನ್ ಎಂದು ಬರೆದುಕೊಂಡರೆ ಅದನ್ನು ಅನೇಕರು ಇಂಗ್ಲೀಶಿನ ‘ಒ’ಕಾರವಿಲ್ಲದೇ ಉಚ್ಚರಿಸುತ್ತಾರೆ. ಇದನ್ನು ತಪ್ಪಿಸಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ John ಪದವನ್ನು ‘ಜೋನ್’ ಎಂದು ಬರೆಯುತ್ತಾರೆ. ಆದರೆ Joan ಎನ್ನುವ ಹೆಸರೂ ಇದೆ ಎನ್ನುವದನ್ನು ಗಮನಿಸಿ. ಇಂತಹ ಆಭಾಸವನ್ನು ತಪ್ಪಿಸಲು ‘ಜಾ’ ಅಕ್ಷರದ ಮೇಲೆ ಅರ್ಧಚಂದ್ರ ಕೊಡುವದೇ ಸರಿಯಾದ ಉಪಾಯ.
ಮತ್ತೊಂದು ಉದಾಹರಣೆ: ಕನ್ನಡಿಗರು Collage ಹಾಗು College ಅನ್ನುವ ಎರಡು ವಿಭಿನ್ನ ಪದಗಳನ್ನು ಮಾತಿನಲ್ಲಿ ಬಳಸುತ್ತಾರೆ ಹಾಗು ಬರಹದಲ್ಲೂ ಉಪಯೋಗಿಸುತ್ತಾರೆ. ಒಂದಕ್ಕೆ ಕೊಲೇಜ ಎಂದು ಬರೆಯುವದು ಸರಿ. ಮತ್ತೊಂದಕ್ಕೂ ಹಾಗೆ ಬರೆಯುವದು ತಪ್ಪಲ್ಲವೆ? ಅದಕ್ಕೆ ಬೇಕು ಮೇಲೊಂದು ಅರ್ಧಚಂದ್ರವುಳ್ಳ ‘ಕಾ’. ಅರ್ಥಾತ್, ನಮಗೆ ಹೆಚ್ಚೆಚ್ಚು ಧ್ವನಿಸಂಕೇತಗಳು ಬೇಕಾದಂತೆ, ಅವುಗಳನ್ನು ಸೃಷ್ಟಿಸಿಕೊಂಡರೆ ತಪ್ಪೇನು? ಲಿಪಿ ಹೆಚ್ಚೆಚ್ಚು ವಿಕಾಸವಾದರೆ ಅದರಲ್ಲಿ ತಪ್ಪೇನಿದೆ?

ಶಂಕರ ಭಟ್ಟರು ತಮಿಳು ಲಿಪಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. (ಮೊದಲ ಮುದ್ರಣ, ಪುಟ ೬೮ರಿಂದ ಪುಟ ೭೩ರವರೆಗೆ).
ಮೂಲ ಬ್ರಾಹ್ಮಿ ಲಿಪಿಯಿಂದ ಭಾರತೀಯ ಲಿಪಿಗಳು ವಿಕಾಸಗೊಳ್ಳುವ ಸಂದರ್ಭದಲ್ಲಿ, ಒಂದು ಕಾಲದಲ್ಲಿ ತಮಿಳು ಹಾಗು ಕನ್ನಡದಲ್ಲಿ ಕೆಲವೇ ಅಕ್ಷರಗಳು ಇದ್ದಿರಬಹುದು. ಆದರೆ ಕನ್ನಡ ಲಿಪಿಯು ವಿಕಾಸಗೊಂಡಿತು. ತಮಿಳು ಲಿಪಿ ಹಳೆಯ ಸ್ಥಿತಿಯಲ್ಲಿಯೇ ಉಳಿದುಕೊಂಡಿತು. ಇದನ್ನು ಮಂಗನಿಂದ ಮಾನವನಾದ(=ಕನ್ನಡ) ಹಾಗು ಮಂಗನಾಗಿಯೇ ಉಳಿದ (=ತಮಿಳು) ಡಾರ್ವಿನ್ ವಿಕಾಸವಾದಕ್ಕೆ ಹೋಲಿಸಬಹುದು. ನನ್ನ ಈ ಲೇವಡಿ ಮಾತಿಗೆ ಚಕೋರರಂತಹ sensitive persons ವಿರೋಧ ವ್ಯಕ್ತಪಡಿಸಬಹುದು. ಆದರೆ ನನ್ನ ಮಾತನ್ನು ಸ್ಪಷ್ಟ ಪಡಿಸಲು ನನಗೆ ಬೇರೊಂದು ಹೋಲಿಕೆ ಹೊಳೆಯುತ್ತಿಲ್ಲ. I apologise.

ಹೀಗಾಗಿ ಕನ್ನಡದಲ್ಲಿ ಕೆಳೆಯ/ಗೆಳೆಯ, ತಬ್ಬು/ದಬ್ಬು ಮೊದಲಾದ ಭಿನ್ನ ಅರ್ಥವುಳ್ಳ ಪದಗಳು ಸಾಧ್ಯವಾದರೆ ಇದು ತಮಿಳಿನಲ್ಲಿ ಸಾಧ್ಯವಿಲ್ಲ. ( ‘ಕೆಳೆಯನು ಕೆಳದಿಯನ್ನು ತಬ್ಬಿದನು’ ಎನ್ನುವ ವಾಕ್ಯವನ್ನು ‘ಗೆಳೆಯನು ಗೆಳತಿಯನ್ನು ದಬ್ಬಿದನು’ ಎಂದೂ ಸಹ ತಮಿಳಿನಲ್ಲಿ ಓದಬಹುದು ಅಂತ ಕಾಣುತ್ತೆ).

ಶಂಕರ ಭಟ್ಟರೆ ಸ್ವತಃ ತಮ್ಮ ವಾದವನ್ನು ಮಂಡಿಸುತ್ತ, ತಮಿಳಿನಲ್ಲಿ ಯಾವ ರೀತಿಯಿಂದ ಸಂಸ್ಕೃತ ಪದಗಳನ್ನು ತಮಿಳಿನಲ್ಲಿ ಬರೆಯುತ್ತಾರೆ ಹಾಗೂ ಓದುತ್ತಾರೆ ಎನ್ನುವ ಉದಾಹರಣೆಗಳನ್ನು ಕೊಟ್ಟಿದ್ದಾರೆ.
ಭಟ್ಟರು ಕೊಟ್ಟ ಉದಾಹರಣೆಗಳು:

ಪುಟ ೭೧:
ಸಂಸ್ಕೃತ ಪದ--- ತಮಿಳು ಪದ
ಬುದ್ಧಿ------ ಪುತ್ತಿ
ಭಕ್ತಿ------ ಪಕ್ತಿ
ಧಾನ್ಯ----- ತಾನಿಯ
ಅಧಿಕ----- ಅತಿಕ
ಶೀಘ್ರ------ ಚೀಕ್ಕಿರ
ಗೋಷ್ಠಿ----- ಕೋಷ್ಟಿ
ಮುಖ್ಯ----- ಮುಕ್ಕಿಯ
ಮಾಂಗಲ್ಯ----------- ಮಾಙ್ಕಲ್ಯ
ಸಂದೇಹ----- ಚನ್ತೇಕ
ಪೂಜಾರಿ----- ಪೂಚಾರಿ
ತಾಂಬೂಲ----------- ತಾಮ್ಪೂಲ
ತಾಂಡವ------ ತಾಣ್ಟವ
ಋಷಿ------- ರಿಷಿ
ಕೃಷ್ಣ------ ಕಿರುಷ್ಣ
ತೃಪ್ತಿ------ ತಿರುಪ್ತಿ
ದುರದೃಷ್ಟ---------- ತುರತಿರುಷ್ಟ
ಪ್ರಯಾಣ------------ ಪಿರಯಾಣ
ಪ್ರಯೋಗ------------ ಪಿರಯೋಕ
ದ್ವಾಪರ----- ತುವಾಪರ
ಗ್ರಾಮ------- ಕಿರಾಮ
ಧ್ಯಾನ------ ತಿಯಾನ
ಬ್ರಹ್ಮ------ ಪಿರಮ್ಮ
ಉಪದೇಶ------------ ಉಪತೇಚ
ದರ್ಶನ------ ತರಿಚನ
ಅತಿಶಯ------ ಅತಿಚಯ
ದಿಶಾ------- ತಿಚೈ
ಗೌರವ------ ಕೌರವ
ಗುಣ------- ಕುಣ
ದುಃಖ------ ತುಕ್ಕ
ದೀಪ------- ತೀಪ

ಭಟ್ಟರ ಪ್ರಕಾರ, ಕನ್ನಡಿಗರಿಗೂ ಸಹ ಇದೇ ಸರಿಯಾದ ಮಾರ್ಗ. (ತಮಿಳು ಜನಾಃ ಯೇನ ಗತಾ: ಸಃ ಪಂಥಾಃ?)
ಭಟ್ಟರೆ,ನೀವು ಪ್ರಗತಿಚಕ್ರವನ್ನು reverse ಮಾಡುತ್ತೇನೆಂದರೆ, ಅದು ತಪ್ಪು ಕಣ್ರೀ.
ಜಗತ್ತು ಎಷ್ಟು fast ಆಗಿ ಓಡ್ತಾ ಇದೆ ಅನ್ನುವದು ನಿಮಗೆ ಕಾಣೋದಿಲ್ವೆ? ಕನ್ನಡಿಗರು ಈಗ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಕನ್ನಡಕ್ಕೆ ಬೇರೆ ಬೇರೆ ಭಾಷೆಗಳ ಪದಗಳನ್ನು ತರಬೇಕಾಗಿದೆ. ಆ ಸಂದರ್ಭದಲ್ಲಿ ಬೇರೆ ಭಾಷೆಯ ಪದಗಳ ಮೂಲಧ್ವನಿಗೆ ನಾವು ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು.

ಒಂದು ಉದಾಹರಣೆ: ‘ಯೇಶು’ ಇದು ಪ್ರೀತಿ ಹಾಗು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ ಪುಣ್ಯಾತ್ಮನ ಸರಿಯಾದ ಹೆಸರು. ಇದನ್ನು ಫ್ರೆಂಚ್ ಭಾಷೆಯಲ್ಲಿ ಬಹುಶ: JESUS ಎಂದು ಬರೆದು ‘ಯೇಶು’ ಎಂದು ಉಚ್ಚಾರ ಮಾಡುತ್ತಾರೆ. ಇಂಗ್ಲೀಶರು ಫ್ರೆಂಚ್ spelling ತೆಗೆದುಕೊಂಡರು; ಇಂಗ್ಲಿಶ್ ಉಚ್ಚಾರ ಮಾಡಿದರು.
ಹೀಗಾಗಿ ಇಂದು ಇಂಗ್ಲಿಶ್ ಅನ್ನು ಒಂದು ಮುಖ್ಯ ಭಾಷೆಯಾಗಿ ಕಲಿತವರು, ಯೇಶುವನ್ನು ಜೀಸಸ್ ಎಂದು ವಿರೂಪಗೊಳಿಸಿದ್ದಾರೆ. (ಸಾಧ್ಯವಾದಷ್ಟೂ ಅನ್ಯಾಯ ಮಾಡಬಾರದು ಎಂದು ಬರದದ್ದೇಕೆನ್ನುವದಕ್ಕೆ ಇಲ್ಲೊಂದು ಉದಾಹರಣೆ: ಫ್ರೆಂಚ್ ಭಾಷೆಯಲ್ಲಿ ‘ಪ್ರೋಗ್ರಾಮ್’ ಪದದಲ್ಲಿಯ ‘ಪ್ರೊ’ ಅನ್ನು ಅವರು ಪ್ರೋ ಹಾಗು ಬ್ರೋ ಧ್ವನಿಗಳ ಮಿಶ್ರಣದಂತೆ ಉಚ್ಚರಿಸುತ್ತಾರೆ. ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ.)

ಬೆಂಗಳೂರಿಗೆ ಬ್ಯಾಂಗ್ಲೋರ್ ಎಂದು ಕರೆಯುವದನ್ನು ನಾವು ವಿರೋಧಿಸಲಿಲ್ಲವೆ? ಅಂದ ಮೇಲೆ ಯೇಶುವನ್ನು ಜೀಸಸ್ ಎಂದು ಕರೆಯುವದು ತಪ್ಪಲ್ಲವೆ?
ಈಗ ನೋಡಿ: ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಬರೆದ ಶ್ರೀ ರಂ. ಶ್ರೀ. ಮುಗಳಿ ತಮಿಳಿನಲ್ಲಿ ಏನಾಗುತ್ತಾರೆ ಎಂದು ವಿಚಾರ ಮಾಡಿದರೆ ಮೈ ಉರಿದು ಹೋಗುತ್ತದೆ. ಆದರೆ ಇದು ‘ತಿರು ಸಂಕರ ಪತ್ತ’ರಿಗೆ ಅತ್ಯಂತ ಯೋಗ್ಯವಾದ ಮಾರ್ಗವಾಗಿ ಕಾಣುತ್ತದೆ.

ಮತ್ತೆ ಅವರ ಸಮರ್ಥನೆ ಏನು? ‘ಕೆಳವರ್ಗ’ದವರ ಉದ್ಧಾರ.
‘ಕೆಳವರ್ಗ’ ಎಂದು ಯಾರಿಗೆ ಭಟ್ಟರು ಕರೆಯುತ್ತಾರೊ ಅವರಲ್ಲಿಯ ಅನೇಕರು, ತಮ್ಮ ಪ್ರತಿಭೆಯ ಮೂಲಕ ಇಂದು ಉಚ್ಚ ಸ್ಥಾನಗಳನ್ನು ಪಡೆದಿಲ್ಲವೆ? ಕನ್ನಡದ ಅನೇಕ ಶ್ರೇಷ್ಠ ಸಾಹಿತಿಗಳು the so called ಕೆಳವರ್ಗದವರಲ್ಲವೆ? ಅನೇಕರು high postsಗಳಿಲ್ಲವೆ? ಇವರಿಗೆ ಕನ್ನಡ ಲಿಪಿ ಅಡ್ಡ ಬಂದಿತೆ? ಅನೇಕ ‘ಮುಂದುವರಿದ’ ವರ್ಗದವರು ಕೆಳಸ್ತರಗಳಲ್ಲಿ ಇಲ್ಲವೆ? ಇವರಿಗೆ ಕನ್ನಡ ಲಿಪಿ ಸಹಾಯ ಮಾಡಿತೆ?

ಆದುದರಿಂದ ಭಟ್ಟರ (೧) ಉದ್ದೇಶದಲ್ಲಿ ಅರ್ಥವಿಲ್ಲ ಹಾಗು (೨) ಲಿಪಿಕ್ರಾಂತಿಯಲ್ಲಿ ಅನರ್ಥವಿದೆ. ಆದರೆ ಅವರ ಪದಕ್ರಾಂತಿಯ ಮೇಲೆ ಈ ಆರೋಪಗಳನ್ನು ಹೊರಿಸಲಾಗುವದಿಲ್ಲ. ಅವುಗಳನ್ನು ಮುಂದಿನ postನಲ್ಲಿ ನೋಡೋಣ.

ಹೊಸ ಟಿಪ್ಪಣಿ: ಶ್ರೀ ಹಂಸಾನಂದಿಯವರು ಈ ರೀತಿ commentiಸಿದ್ದಾರೆ:
" ತಮಿಳಿನಲ್ಲೂ ಸಹ ಳ ಮತ್ತು ಝ ಧ್ವನಿಗಳ ಮಿಶ್ರ ಧ್ವನಿ ಇದ್ದಂತೆ"

ಈ ಅಕ್ಷರಕ್ಕೆ ಇಂಗ್ಲಿಷ್ ನಲ್ಲಿ ಸೂಚಿಸುವಾಗ ’zh' ಎಂದು ಬರೆಯುವುದು ರೂಢಿಯಾದರೂ, ಅದು ಳ ಮತ್ತು ಝ ಧ್ವನಿಗಳ ಮಿಳಿತವೇನೂ ಅಲ್ಲ.ೞ ಎಂಬ ಹಳೆಗನ್ನಡದ ಅಕ್ಷರವೇ ಅದು. ಹೆಚ್ಚಿನಂಶ ಳ ವನ್ನು ಹೋತರೂ, retroflextion ಇನ್ನೂ ಹೆಚ್ಚಿರುವ ಉಚ್ಚಾರ ಅದರದ್ದು

Friday, June 20, 2008

I accuse

ಕನ್ನಡ ಬರಹದಲ್ಲಿ ನುಸುಳಿರುವ ಭಾಷಾದೋಷಗಳನ್ನು ಪರಿಶೀಲಿಸುತ್ತಿರುವಾಗಲೆ, ಶ್ರೀ ಶಂಕರ ಭಟ್ಟರ “ಕನ್ನಡ ಬರಹವನ್ನು ಸರಿಪಡಿಸೋಣ” ಕೃತಿಯ ಪ್ರಸ್ತಾವನೆ ಬಂದುದರಿಂದ, ನಮ್ಮೆಲ್ಲರ ಚರ್ಚೆ ಆ ದಿಕ್ಕಿಗೆ ಹೊರಳಿದೆ.

ಈ ಕೃತಿಯಲ್ಲಿ ಶ್ರೀ ಶಂಕರ ಭಟ್ಟರು ಎರಡು ಕ್ರಾಂತಿಗಳ ಬಗೆಗೆ ಪ್ರಸ್ತಾಪಿಸಿದ್ದಾರೆ:
೧) ಅಕ್ಷರಕ್ರಾಂತಿ
೨) ಪದಕ್ರಾಂತಿ

ಶ್ರೀ ಶಂಕರ ಭಟ್ಟರ ಕ್ರಾಂತಿಗೆ ಪ್ರೇರಣೆ, ಅವರೇ ಹೇಳುವ ಪ್ರಕಾರ: “ಕೆಳವರ್ಗದ ಮೇಲಿನ ಕಳಕಳಿ”. ಈ ಘೋಷಣೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವದು ಇದೀಗ ನಮ್ಮ ಮುಂದಿರುವ ಕಾರ್ಯ.

ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನು ಕನ್ನಡಿಗರ ಬಗೆಗೆ ಒಕ್ಕಣಿಸಿದ ಮೆಚ್ಚುಗೆಯ ಮಾತುಗಳು ಮಾಧ್ಯಮಿಕ ಶಿಕ್ಷಣ ಪಡೆದ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುವವೇ:
ಕನ್ನಡಿಗರು “ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಈ “ಕುರಿತೋದುದೆಯಮ್” ಪದದ ಅರ್ಥವೇನು?
ನೃಪತುಂಗ ಚಕ್ರವರ್ತಿಯ ಕಾಲದಲ್ಲಿ ‘universal formal education’ ಎನ್ನುವದು ಇರಲಿಲ್ಲವಷ್ಟೆ?
ಕುಲವೃತ್ತಿಯ ಮೇರೆಗೆ, ಹುಡುಗರು ತಮ್ಮ ಅಜ್ಜ, ಅಪ್ಪಂದಿರ ಕೈಯಲ್ಲೆ apprentices ಆಗಿ, heredity knowledgeಅನ್ನು ಪಡೆಯುತ್ತಿದ್ದರಷ್ಟೆ? ಹೆಣ್ಣು ಮಕ್ಕಳಿಗಂತೂ ಶಿಕ್ಷಣವೆಂದರೆ ಮನೆಗೆಲಸದ ಶಿಕ್ಷಣವಷ್ಟೆ ಆಗಿತ್ತು.

ಇಷ್ಟಾದರೂ ಸಹ ಜಾನಪದ ಸಾಹಿತ್ಯ ಎಂತಹ ಉಚ್ಚಮಟ್ಟದಲ್ಲಿ ಇತ್ತು ಎನ್ನುವದು ನಮಗೆಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿದೆ. ಹೆಣ್ಣುಮಕ್ಕಳ ಕುಟ್ಟುವ ಹಾಡುಗಳು, ಬೀಸುವ ಹಾಡುಗಳು ಇವುಗಳ ಬಗೆಗಂತೂ ಹೇಳುವದೇ ಬೇಡ. ಇಂತಹ ಒಂದು ತ್ರಿಪದಿಯ ಒಂದು ಸಾಲನ್ನು ಇಲ್ಲಿ ಉದ್ಧರಿಸುತ್ತೇನೆ:
“…ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ…”.

ಹೆಣ್ಣು ಮಗಳು ತನ್ನ ಕೂಸನ್ನು ಹೆರುವ ಸಮಯದಲ್ಲಿ ಅವಳು ಅನುಭವಿಸುವ ನೋವು ಹಾಗು ಕೂಸು ಹುಟ್ಟಿದ ತಕ್ಷಣ ಅವಳಿಗಾಗುವ ಆನಂದ –the Agony and Ecstacy—ಈ ಎರಡೂ ಭಾವಗಳು “ಮುಗಿಲಿಗೇರ್ಯಾವ ಜೀವ” ಎನ್ನುವ ಒಂದೇ ಸಾಲಿನಲ್ಲಿ ಅಡಕವಾಗಿವೆ.
ಇಂತಹ ಸಾಲು ಯಾವ classical literatureನಲ್ಲಿ ಸಿಕ್ಕೀತು?
ಇಂತಹ ಸಾಮಾನ್ಯ ಕನ್ನಡಿಗರನ್ನು ಕುರಿತೇ ಚಕ್ರವರ್ತಿ-ಕವಿ ಹೇಳಿದ ಮಾತುಗಳಿವು:
ಕುರಿತೋದುದೆಯುಮ್ ಕಾವ್ಯಪ್ರಯೋಗಪರಿಣತ ಮತಿಗಳ್….”

ಸರ್ವಜ್ಞ ಕವಿ ತನ್ನನ್ನೇ ಕುರಿತು ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾನೆ:
“ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೆ ಆದ ಸರ್ವಜ್ಞ”.

ಸರ್ವಜ್ಞನಿಗೂ formal schooling ಇರಲಿಲ್ಲ. ಆದರೆ ಅವನು ವಿದ್ಯೆಯ ಪರ್ವತವೆ ಆಗಿದ್ದ.

ಇಂಥವರ ಬಗೆಗೆ ನಮ್ಮ ಶಂಕರ ಭಟ್ಟರ ಅಭಿಪ್ರಾಯವೇನು? ಅವರ ಪುಸ್ತಕದ ‘ಮುನ್ನೋಟ’ದ ಸಾರಾಂಶ ಹೀಗಿದೆ:-

“ಜನಸಾಮಾನ್ಯರು ಕೆಳವರ್ಗದವರು.
ಮೇಲ್ವರ್ಗದವರು ಇವರನ್ನು ಶೋಷಿಸುತ್ತಿದ್ದಾರೆ. ಯಾಕೆಂದರೆ, ಮೇಲ್ವರ್ಗದವರು ಕನ್ನಡದಲ್ಲಿರುವ ೫೦ ಅಕ್ಷರಗಳನ್ನು ಸುಲಭವಾಗಿ ಕಲಿಯಬಲ್ಲರು; ಆದರೆ ಕೆಳವರ್ಗದವರಿಗೆ ೫೦ ಅಕ್ಷರಗಳನ್ನು mastery ಮಾಡುವದು ಕಠಿಣವಾಗುವದರಿಂದ, ಅದರಲ್ಲಿಯ ೧೭ ಅಕ್ಷರಗಳಿಗೆ ಕತ್ತರಿ ಹಾಕೋಣ. ಕನ್ನಡ ಸುಲಭವಾಗುತ್ತದೆ. ಕೆಳವರ್ಗದವರ ಶೋಷಣೆ ತಪ್ಪುತ್ತದೆ!”

ವಾಹ್, ಭಟ್ಟರೆ! ಕನ್ನಡದ ಲಿಪಿಯನ್ನು ಕತ್ತರಿಸಲಿಕ್ಕೆ ನೀವು ಬೇರಾವದೊ ತಾಂತ್ರಿಕ ಕಾರಣಗಳನ್ನು ತೋರಿಸಿದ್ದರೆ,ಒಪ್ಪಿಕೊಳ್ಳಬಹುದಾಗಿತ್ತು. ಆದರೆ, ನೀವು ಬ್ರಿಟಿಶರ ಹಳೆಯ ‘Devide and Rule policy’ಯನ್ನು ಉಪಯೋಗಿಸಲು ಪ್ರಯತ್ನಿಸುತ್ತಿದ್ದೀರಿ, ಅಲ್ಲವೆ? ಕೆಳವರ್ಗ, ಮೇಲ್ವರ್ಗ ಹಾಗು ಶೋಷಣೆ ಎನ್ನುವ ಪದಗಳನ್ನು ಉಪಯೋಗಿಸಿ blackmailಗೆ ಪ್ರಯತ್ನಿಸುತ್ತಿದ್ದೀರಾ?
ಈ ಕತ್ತರಿಪ್ರಯೋಗಕ್ಕೆ ನಿಮಗಿರುವ role-model ಯಾವುದು?
ತಮಿಳು, of course!

ಶ್ರೀ ಶಂಕರ ಭಟ್ಟರು ಕೊಡುವ ಈ ಕಾರಣವು ಸರಿ ಎನ್ನಿಸುವದೆ? ನನಗಂತೂ ಇದು ಹಸಿ ಮೋಸ ಎನಿಸುತ್ತಿದೆ.
Shankar Bhat, I accuse you of hypocrisy!

ಇದಷ್ಟೇ ಅಲ್ಲ, ಇದರಲ್ಲಿ ದುರುದ್ದೇಶವೇನಾದರೂ ಅಡಗಿರಬಹುದೆ?
ಈಗ ನೋಡಿ, ಕನ್ನಡದ ಪದಗಳಿಂದ ಮಹಾಪ್ರಾಣವನ್ನು ತೆಗೆದುಹಾಕಬೇಕೆನ್ನುವ ಭಟ್ಟರ policyಯನ್ನು ಕರ್ನಾಟಕ ಸರಕಾರದವರು ಪಾಲಿಸಿದರು ಅಂತ ಇಟ್ಟುಕೊಳ್ಳಿ.
ಆಗ ಏನಾಗುತ್ತೆ?

ಕನ್ನಡಿಗರ ಉಚ್ಚಾರದಲ್ಲಿ ಮಹಾಪ್ರಾಣ ಮರೆಯಾಗಿ ಬಿಡುತ್ತದೆ. ಅಲ್ಪಪ್ರಾಣ ಇವರಿಗೆ ಸ್ವಾಭಾವಿಕವಾಗಿ ಬಿಡುತ್ತದೆ. ಈ tendencyಯು ಕನ್ನಡಿಗರ ಇಂಗ್ಲಿಶ್ ಉಚ್ಚಾರದಲ್ಲೂ ಸೇರಿಕೊಳ್ಳುತ್ತದೆ. (ಈಗ ತಮಿಳರು, ಮರಾಠಿಗರು etc. ತಮ್ಮದೇ strange English pronunciation ಮಾಡುವದಿಲ್ಲವೇ?—ಹಾಗೆ).

ಕರ್ನಾಟಕದಿಂದ ಪರದೇಶಗಳಿಗೆ ಹೋದ ಅನೇಕ ಕನ್ನಡಿಗರಿದ್ದಾರೆ. Call centreಗಳಲ್ಲಿ ಕೆಲಸ ಮಾಡುವ ಅನೇಕ ಕನ್ನಡಿಗರಿದ್ದಾರೆ. ಇವರ ಇಂಗ್ಲಿಶ್ ಉಚ್ಚಾರದಿಂದ ಮಹಾಪ್ರಾಣ ಮರೆಯಾಯಿತೆನ್ನಿ.
ಆಗ ಕನ್ನಡಿಗರಾದ ಒಬ್ಬ ಕ್ರಿಕೆಟ್ ಅಂಪೈರ್ ಇಂಗ್ಲಿಶ್‌ನಲ್ಲಿ ಹೇಗೆ ಕಮೆಂಟರಿ ಹೇಳಬಹುದು?

“ದೋನಿ ಪೇಸ್ಡ್ ದ ಬಾಲ್ ವುಯಿತ್ ಕರೇಜ್.
(==ಧೋನಿ ಫೇಸ್ಡ್ ದ ಬಾಲ್ ವುಯಿಥ್ ಕರೇಜ್).

ಶಂಕರ ಭಟ್ಟರೆ, ನಿಮಗೆ ಇದು ಸರಿ ಕಾಣಿಸುವದೆ?
‘ಸರಿ ಕಾಣುತ್ತಿದೆ’ ಎಂದು ನೀವು ಹೇಳಿದರೆ, ನಿಮ್ಮ ಅಜ್ಞಾನವನ್ನು ಕ್ಷಮಿಸಿ ಬಿಡಬಹುದು. ತಿಳಿದೂ ತಿಳಿದೂ ನೀವು ಈ ಪ್ರಸ್ತಾವನೆಯನ್ನು ಮಾಡುತ್ತಿದ್ದರೆ, ಇದು ನೀವು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವೆಂದಾಗುತ್ತದೆ.

Shankar Bhat, I accuse you of hypocrisy!
(ಭಟ್ಟರ ಅಕ್ಷರಕ್ರಾಂತಿ ಹಾಗು ಪದಕ್ರಾಂತಿಗಳ ಬಗೆಗೆ ಮುಂದಿನ ಲೇಖನದಲ್ಲಿ ಗಮನಿಸೋಣ.)

Tuesday, June 17, 2008

ಕನ್ನಡಕ್ಕೆ ಬಂದ ಕುತ್ತು

ಈ ಲೇಖನದ ಹಿಂದಿನ ಲೇಖನದ ಬಗೆಗೆ ಶ್ರೀ ಹರೀಶರು ತಮ್ಮ commentನಲ್ಲಿ ನೀಡಿದ ಅಭಿಪ್ರಾಯದ ಜೊತೆಗೆ ಒಂದು ಕೊಂಡಿಯನ್ನು ಕೊಟ್ಟಿದ್ದಾರೆ. ಈ ಕೊಂಡಿಗೆ ಹೋದಾಗ, ಶ್ರೀ ಕಿ.ರಂ.ನಾಗರಾಜರು ಕನ್ನಡವನ್ನು ಮಾರ್ಪಡಿಸಲು ನೀಡಿದ ಅಮೂಲ್ಯ ಸಲಹೆಗಳನ್ನು ಓದಿ ನನ್ನ ಕಣ್ಣಾಲಿಗಳು ತುಂಬಿ ಬಂದವು. ಆ ಲೇಖನದಲ್ಲಿ ದೊರೆತ ಕೊಂಡಿಯ ಮೂಲಕ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ ಶ್ರೀ ಡಿ.ಎನ್.ಶಂಕರ ಭಟ್ಟರ ಪುಸ್ತಕದ ಭಾಗವನ್ನು ಓದಿದೆ. ಈ ಪುಸ್ತಕವನ್ನು ಈಗಾಗಲೇ ನಾನು ಓದಿದ್ದೆ. ಓದಿ ಹೈರಾಣಾಗಿದ್ದೆ. ಶ್ರೀ ಡಿ.ಎನ್. ಶಂಕರಭಟ್ಟರು ಬಯಸಿದಂತೆ ನಡೆದರೆ, ಕನ್ನಡ ನುಡಿಯು ಕುಲಗೆಟ್ಟು ಹೋಗುವದರಲ್ಲಿ ಸಂಶಯವಿಲ್ಲ.

ಭಾಷೆ ನಿಂತ ನೀರಲ್ಲ; ಬದಲಾಗುತ್ತಲೇ ಇರಬೇಕು. ಬದಲಾವಣೆ ಎಂದರೆ ವಿಕಾಸಗೊಳ್ಳಬೇಕೆ ಹೊರತು, ಕುಂಠಿತವಾಗುತ್ತ ಹೋಗುವದಲ್ಲ. ಯಾವ ಭಾಷೆಯೂ ತನ್ನಷ್ಟಕ್ಕೇ ವಿಕಾಸಗೊಳ್ಳುವದಿಲ್ಲ. ಪರಭಾಷೆ ಹಾಗು ಪರಕೀಯ ಸಂಸ್ಕೃತಿಗಳ ಸಂಪರ್ಕದಿಂದಲೇ ಭಾಷೆಯ ವಿಕಾಸ ಸಾಧ್ಯವಾಗುವದು.

ಸಂಸ್ಕೃತ ಭಾಷೆಯ ಸಂಪರ್ಕದಿಂದ ಕನ್ನಡಕ್ಕೆ ಲಾಭವಾದಂತೆ, ಸಂಸ್ಕೃತಕ್ಕೂ ಆಗಿದೆ. ಭಾರತೀಯ ಭಾಷೆಗಳ ಸಂಪರ್ಕದಿಂದ, ಹಾಗೂ ತನ್ನ ಕೊಲೊನಿಯ ಭಾಷೆಗಳ ಸಂಪರ್ಕದಿಂದ ಇಂಗ್ಲೀಶಿಗೂ ಲಾಭವಾಗಿದೆ. ಆದುದರಿಂದ ಸಂಕುಚಿತ ಮನಸ್ಸನ್ನು, ಸಂಕುಚಿತ ಬುದ್ಧಿಯನ್ನು ತೊರೆದು, ಸಂಸ್ಕೃತ, ಇಂಗ್ಲಿಶ್ ಹಾಗು ಇತರ ಭಾಷೆಗಳ ಸಂಪರ್ಕದಿಂದ ಕನ್ನಡ ವಿಶಾಲವಾಗುವಂತೆ, ಕನ್ನಡಕ್ಕೆ ಲಾಭವಾಗುವಂತೆ ಪ್ರಯತ್ನಿಸುವದರಲ್ಲಿಯೇ ಜಾಣತನವಿದೆ.

ಕನ್ನಡದಲ್ಲಿ ಶಂಕರಭಟ್ಟರು ತರಬಯಸುವ ಕ್ರಾಂತಿಯಲ್ಲಿ ಎರಡು ಹೆಜ್ಜೆಗಳಿವೆ:
೧) ಲಿಪಿಕ್ರಾಂತಿ
೨) ಪದಕ್ರಾಂತಿ

ಶಂಕರಭಟ್ಟರು ವಿವರಿಸುವ ಪ್ರಕಾರ ಕನ್ನಡದಲ್ಲಿ ೫೨ ಅಕ್ಷರಗಳು ಇದ್ದದ್ದು ಹೆಚ್ಚಾಯಿತು; ೩೨ ಅಕ್ಷರಗಳೇ ಸಾಕು; ಬಾಕಿ ೨೦ ಅಕ್ಷರಗಳು ಅನವಶ್ಯಕ ಎಂದು ಅವರ ಅಭಿಪ್ರಾಯ. ಈ ವಿಷಯದಲ್ಲಿ ಅವರಿಗೆ role model ಅಂತ ಇರುವದು ತಮಿಳು ಲಿಪಿ. ತಮಿಳು ಲಿಪಿಯು inadequate ಇದ್ದದ್ದು ಅವರಿಗೆ ಶ್ರೇಷ್ಠತೆಯಾಗಿ ಕಾಣುತ್ತಿರುವದು, ಕನ್ನಡದ ದುರ್ದೈವ. ಕಡಿಮೆ ಧ್ವನಿಸಂಕೇತಗಳು ಇರುವದರಿಂದ ತಮಿಳು ಭಾಷೆಗೆ ಆದ ಹಾನಿಯ ಬಗೆಗೆ ಅವರ ಗಮನವಿಲ್ಲ.

ಈಗ ನೋಡಿ, ಕನ್ನಡದಲ್ಲಿ ಗೆಳತಿ ಹಾಗು ಕೆಳದಿ ಎನ್ನುವ ಎರಡು ಪದಗಳಿವೆ. ಗೆಳತಿ ಎಂದರೆ friend, ಕೆಳದಿ ಎಂದರೆ ಮಡದಿ. ತಮಿಳಿನಲ್ಲಿ ಗೆಳತಿ ಹಾಗು ಕೆಳದಿ ಪದಗಳನ್ನು ಒಂದೇ ರೀತಿಯಾಗಿ ಬರೆಯುತ್ತಾರೆ. (---I believe). ಶಂಕರಭಟ್ಟರ ಸಮರ್ಥನೆ ಏನೆಂದರೆ, ಸಂದರ್ಭದ ಪ್ರಕಾರ ಅರ್ಥ ಮಾಡಿಕೊಳ್ಳಲು ತಮಿಳು ಬುದ್ಧಿಗೆ ಸಾಧ್ಯವಿದೆ ಎನ್ನುವದು. OK,ಕೆಳಗಿನ ಪ್ಯಾರಾ ಓದಿರಿ:

“ರಮಾ ರಾಜನ ಕೆ(ಗೆ)ಳದಿ(ತಿ). ಇಬ್ಬರೂ ಜೊತೆಯಾಗಿ ಹೊಟೆಲ್ಲಿನಲ್ಲಿ ಮಸಾಲೆ ದೋಸೆ ತಿಂದು, ಪಾರ್ಕಿನಲ್ಲಿ ಸರಸವಾಡಿದರು…….”.
ಇದೇ ರೀತಿಯಾಗಿ ಒಂದು ಇಡೀ ಅಧ್ಯಾಯವನ್ನೇ ಬರೆಯಬಹುದು. ಓದುಗರಿಗೆ ರಮಾ ಹಾಗು ರಾಜನ ಸಂಬಂಧ ಏನೆಂಬುದು ಗೊತ್ತಾಗುವದೇ ಇಲ್ಲ,….ಸಂದರ್ಭ ಬರುವವರೆಗೂ. ಆದುದರಿಂದ ತಮಿಳು ಭಾಷೆ suspense novels ಬರೆಯಲು ಯೋಗ್ಯವಾದೀತೆ ಹೊರತು, ಸರಾಗ ಓದಿಗಲ್ಲ.

ಆದರೆ ನನ್ನ point ಇದಲ್ಲ. ಧ್ವನಿಸಂಕೇತಗಳು ಕಡಿಮೆಯಾಗಿದ್ದರಿಂದ ಪದಗಳ ಸಂಖ್ಯೆ ಕಡಿಮೆಯಾಗುವದು ಎನ್ನುವದು ಗಣಿತದಲ್ಲಿಯ permutations and combinations ಬಲ್ಲ ಯಾರಿಗಾದರೂ ಗೊತ್ತಾಗುವದು.
ಇಂಗ್ಲಿಶ್ ಲಿಪಿ non-phonetic ಇರುವದರಿಂದ ಅದೇ ಆ ಭಾಷೆಗೆ ಒಂದು advantage ಆಗಿಬಿಟ್ಟಿದೆ. ಬೇಕಾಬಿಟ್ಟಿಯಾಗಿ ಅಕ್ಷರ ಜೋಡಣೆ ಮಾಡುವದರಿಂದ ಅವರು ಯಾವ ಧ್ವನಿಯನ್ನಾದರೂ ಪದವನ್ನಾಗಿ ಬರೆಯಬಲ್ಲರು. ಆದರೆ phonetic script ಹೊಂದಿರುವ ತಮಿಳಿನಲ್ಲಿ, ಕಡಿಮೆ ಅಕ್ಷರಗಳಿರುವದರಿಂದ ಅದರ ಪದಸಂಪತ್ತೂ ಸಹ ಕಡಿಮೆಯಾಗುತ್ತದೆ ಎನ್ನುವದು just a mathematical understanding.

ಇಂತಹ ಅನಾಗರಿಕ ಲಿಪಿಯನ್ನು ಅನುಸರಿಸಲು, ಶಂಕರಭಟ್ಟರು ಕನ್ನಡಿಗರಿಗೆ ಯಾಕೆ ಸಲಹೆ ನೀಡುತ್ತಿದ್ದಾರೆ? ಕನ್ನಡದ ಮೇಲಿನ ದ್ವೇಷದಿಂದಲೆ? ಸಂಸ್ಕೃತದ ಮೇಲಿನ ದ್ವೇಷದಿಂದಲೆ? ಅಥವಾ ಲಿಪಿ ಅನಾಗರಿಕವಾದಾಗ, ಆ ಭಾಷೆಗೆ Classical Status ಸಿಗುವದು ಎನ್ನುವ ಕಲ್ಪನೆಯಿಂದಲೆ?

ಊಂ.. ಹೂಂ…. ಅಲ್ಲ. ತಮಗೆ ‘ಕೆಳವರ್ಗ’ದ ಬಗೆಗೆ ಇರುವ ಕಳಕಳಿಯಿಂದ ಎಂದು ಶಂಕರ ಭಟ್ಟರು ತಮ್ಮ ಪುಸ್ತಕದಲ್ಲಿ ಘೋಷಿಸಿದ್ದಾರೆ. ಅದರ ಸತ್ಯಾಸತ್ಯತೆಯನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.