Saturday, July 25, 2009

ಗ್ರಹಣರಹಸ್ಯ

“ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಇವರು ಆಕಾಶದಲ್ಲಿ ಸಂಚರಿಸುವ ದೇವತೆಗಳು ; ರಾಹು ಹಾಗೂ ಕೇತು ಇವರು ರಾಕ್ಷಸರು. ಇವರಲ್ಲಿ ಒಬ್ಬನಿಗೆ ರುಂಡ ಮಾತ್ರ ಇದೆ. ಮತ್ತೊಬ್ಬನಿಗೆ ಮುಂಡ ಮಾತ್ರ ಇದೆ. ಗ್ರಹಣಕಾಲದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ಈ ರಾಕ್ಷಸರಲ್ಲಿ ಒಬ್ಬನು ಹಿಡಿದುಕೊಳ್ಳುತ್ತಾನೆ ಎನ್ನುವ ಪಾರಂಪರಿಕ ನಂಬಿಕೆ ಭಾರತೀಯರಲ್ಲಿ ಇದೆ.”
ಆದುದರಿಂದ ಭಾರತೀಯರು ಮೂಢರು ಎನ್ನುವ ಒಂದು ಗ್ರಹಿಕೆ ಪಾಶ್ಚಾತ್ಯರಲ್ಲಿ ಹಾಗೂ ಅನೇಕ ಭಾರತೀಯರಲ್ಲಿ ಇದೆ. ಆದರೆ ಈ ಗ್ರಹಿಕೆ ಪೂರ್ವಾಗ್ರಹಪೀಡಿತವಾದಂತಹ ಗ್ರಹಿಕೆ.

ಭಾರತೀಯರ ಈ ನಂಬಿಕೆಯನ್ನು ಸ್ವಲ್ಪ ಲಕ್ಷ್ಯಗೊಟ್ಟು ಪರೀಕ್ಷಿಸಿರಿ. ಗ್ರಹಣಸಮಯದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು ಅಥವಾ ಕೇತು ಎನ್ನುವ ರಾಕ್ಷಸನು ಹಿಡಿಯುತ್ತಾನೆ ಎನ್ನುವದು ಇಲ್ಲಿರುವ ನಂಬಿಕೆ. ಭಾರತೀಯರಲ್ಲಿ ಮೂಢನಂಬಿಕೆಯೆ ಇದ್ದರೆ, ಒಬ್ಬನೇ ರಾಕ್ಷಸನು ಇವರನ್ನು ಬೆನ್ನಟ್ಟಬಹುದಿತ್ತಲ್ಲ? ಇಬ್ಬರು ಯಾಕೆ ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅಲ್ಲದೆ, ಯಾವ ಗ್ರಹಣದಲ್ಲಿ ಯಾವ ರಾಕ್ಷಸನು ಈ ಬೆನ್ನಟ್ಟುವ ಕಾರ್ಯ ಮಾಡುತ್ತಾನೆ, ಅವನು ರಾಹುವೊ ಅಥವಾ ಕೇತುವೊ ಎನ್ನುವದನ್ನು ಭಾರತೀಯ ಪಂಚಾಂಗಗಳಲ್ಲಿ ನಿಖರವಾದ ಕಾಲಮಾನದೊಡನೆ ಹೇಳಲಾಗುತ್ತದೆ. ಅರ್ಥಾತ್ ಭಾರತೀಯರಿಗೆ ಈ ರಾಕ್ಷಸರು ಯಾರು ಅನ್ನುವ ಕಲ್ಪನೆ ಸ್ಪಷ್ಟವಾಗಿತ್ತು.

ಖಗೋಲಶಾಸ್ತ್ರವು ಸಾವಿರಾರು ವರ್ಷಗಳಷ್ಟು ಹಳೆಯದು. ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ ಎನ್ನುವ ಮಾತನ್ನು ಮೊದಲು ದಾಖಲಿಸಿದವನು ಮೊದಲನೆಯ ಆರ್ಯಭಟನು (ಕ್ರಿ.ಶ. ೪೭೬-೫೫೦). ಭೂಮಿಯ ಸುತ್ತಳತೆ ಹಾಗೂ ಸೂರ್ಯನಿಂದ ಭೂಮಿಯ ದೂರವನ್ನು ಆರ್ಯಭಟನು ಅತ್ಯಂತ ನಿಖರವಾಗಿ ತಿಳಿಸಿದ್ದಾನೆ.
ಆರ್ಯಭಟನ ನಂತರ ಒಂದು ಸಾವಿರ ವರ್ಷಗಳ ಬಳಿಕ ಕೋಪರ್ನಿಕಸ್(ಕ್ರಿ.ಶ. ೧೪೭೩- ಕ್ರಿ.ಶ. ೧೫೪೩) ಎನ್ನುವ ಪೋಲ್ಯಾಂಡಿನ ಶಾಸ್ತ್ರಜ್ಞನು ಭೂಮಿಯ ಪರಿಭ್ರಮಣವನ್ನು ಯುರೋಪಿನಲ್ಲಿ ಸಾರಿದನು.

ಖಗೋಲಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತಿರುವಂತೆ, ಚಂದ್ರನು ಭೂಮಿಯ ಸುತ್ತಲೂ ತಿರುಗುವ ಕಕ್ಷೆಯು, ಭೂಮಿಯು ಸೂರ್ಯನ ಸುತ್ತಲೂ ತಿರುಗುವ ಕಕ್ಷೆಯನ್ನು, ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೆರಡೂ ಕಾಲ್ಪನಿಕ ಬಿಂದುಗಳು. ಪರಿಭ್ರಮಣೆ ಮುಂದುವರೆದಂತೆಲ್ಲ, ಈ ಬಿಂದುಗಳೂ ಸಹ ಸರಿಯುತ್ತಲೆ ಹೋಗುತ್ತವೆ. ಭೂಮಿಯು ಸೂರ್ಯನ ಸುತ್ತಲೂ ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ ಈ ಬಿಂದುಗಳು ಸರಿಯುತ್ತವೆ.

ಈಗ ಈ ಬಿಂದುಗಳಲ್ಲಿ ಮೊದಲನೆಯ ಬಿಂದುವಿಗೆ ನಮ್ಮ ಶಾಸ್ತ್ರಜ್ಞರು ಕೊಟ್ಟ ಹೆಸರು ರಾಹು ; ಎರಡನೆಯ ಬಿಂದುವಿನ ಹೆಸರು ಕೇತು. ‘ಈ ಬಿಂದುಗಳು ರಾಕ್ಷಸರು ಏಕೆ?’ ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಉತ್ತರವನ್ನು ಹುಡುಕುವ ಮೊದಲು ನಾವು ಇನ್ನಿಷ್ಟು ಮಾಹಿತಿಗಳನ್ನು ಗಮನಿಸೋಣ.

ಮೊದಲನೆಯದಾಗಿ ಈ ಬಿಂದುಗಳ ಹೆಸರುಗಳನ್ನು ಪರೀಕ್ಷಿಸೋಣ. ಮೊದಲನೆಯ ಬಿಂದುವಿಗೆ ರಾಹು ಎಂದು ಕರೆದಿದ್ದಾರೆ. ರಾಹು ಈ ಪದದ ಅರ್ಥ Lock. ಗ್ರಹಣಸಮಯದಲ್ಲಿ ಈ ಬಿಂದುವಿನಲ್ಲಿ ಸೂರ್ಯ ಅಥವಾ ಚಂದ್ರರ ಚೈತನ್ಯಕ್ಕೆ ತಡೆ ಬೀಳುವದರಿಂದ ಈ ಬಿಂದುವಿನ ಹೆಸರು Lock ಅಥವಾ ರಾಹು.
ಎರಡನೆಯ ಬಿಂದುವಿನ ಹೆಸರು ಕೇತು. ಕೇತು ಅಂದರೆ Flag. ಮೊದಲನೆಯ ಬಿಂದುವಿಗೆ Flag ಎಂದು ಕರೆಯದೆ ಎರಡನೆಯ ಬಿಂದುವಿಗೆ Flag ಎಂದು ಕರೆಯುವ ಕಾರಣವೇನು? ಯಾಕೆಂದರೆ, ಈ ಬಿಂದುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವದರಿಂದ, ಮೊದಲನೆಯ ಬಿಂದು ಹಿಂದಿನಿಂದ ಚಲಿಸುತ್ತದೆ ಹಾಗೂ ಎರಡನೆಯ ಬಿಂದು ಮುಂದಿನಿಂದ ಚಲಿಸುತ್ತದೆ. ಎರಡನೆಯ ಬಿಂದುವೇ ಇಲ್ಲಿ Flag bearer. ಆದುದರಿಂದ ಇದರ ಹೆಸರು ಕೇತು ಅರ್ಥಾತ್ Flag!
ಮತ್ತೊಂದು ವಿಷಯವೆಂದರೆ ರಾಹುವಿಗೆ ರುಂಡವಿಲ್ಲ ಹಾಗೂ ಕೇತುವಿಗೆ ಮುಂಡವಿಲ್ಲ. ಈ ಎರಡೂ ಬಿಂದುಗಳು ಒಂದರ್ಥದಲ್ಲಿ Supplementary ಬಿಂದುಗಳು. ಆದುದರಿಂದಲೇ ಇವು ಅರ್ಧದೇಹಿಗಳು.

ಪಾಶ್ಚಾತ್ಯರಿಗಿಂತ ಸಾವಿರ ವರ್ಷಕ್ಕೂ ಮೊದಲೇ ಭಾರತೀಯ ಖಗೋಲವಿಜ್ಞಾನಿಗಳು ತಿಳಿದ ವಿಷಯ ಇದು. ಆದರೆ, ಯುರೋಪ ಖಂಡವು ಏಶಿಯಾ ಖಂಡವನ್ನು ತನ್ನ ಆಳ್ವಿಕೆಗೆ ಒಳಪಡಿಸಿದ್ದರಿಂದ, ಭಾರತೀಯ ಖಗೋಲಶಾಸ್ತ್ರಜ್ಞರ ಜ್ಞಾನಕ್ಕೆ ಮನ್ನಣೆ ಸಿಗದೆ, ಈ ದೇಶವನ್ನು ಗೆದ್ದವರೇ ಪಂಡಿತರಾಗಿ ಮನ್ನಣೆ ಪಡೆದದ್ದು ಅನಿವಾರ್ಯವಾಯಿತು.

ಈ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನವನ್ನು ನೀಡಿದ ವಿಷಯ ಯಾವದು ಎಂದು ಕೇಳಿದರೆ ಪಾಶ್ಚಾತ್ಯರು ಒಕ್ಕೊರಲಿನಿಂದ ಐನ್‌ಸ್ಟೈನನ ಸಾಪೇಕ್ಷವಾದವೆಂದು ಘೋಷಿಸುತ್ತಾರೆ. ಆದರೆ ಅಂಕಗಣಿತದಲ್ಲಿಯ Place value position ಹಾಗೂ ಶೂನ್ಯಸಂಕೇತ ಇವೇ ಅತ್ಯಂತ ಮಹತ್ವದ ಜ್ಞಾನಗಳು. ಇದರ ಸಂಶೋಧಕರು ಭಾರತೀಯರು. ಆದರೆ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನ ನೀಡಿದ ಸಂಶೋಧನೆ ಎಂದು ಇವಕ್ಕೆ ಯಾರೂ ಕರೆಯುವದಿಲ್ಲ. ಒಂದು ವೇಳೆ ಭಾರತೀಯ ಗಣಿತಜ್ಞರು ಶೂನ್ಯಸಂಶೋಧನೆಯನ್ನು ಮಾಡಿರದಿದ್ದರೆ, ವಿಜ್ಞಾನದ ಪ್ರಗತಿಯು ಸಾಧ್ಯವಿರಲಿಲ್ಲ.

ಇವತ್ತು ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ, “ನೂರು-ಐವತ್ತು” ಎಂದು ಕೇಳಿದರೆ (೧೦೦-೫೦) ಎಂದು ಬರೆದುಕೊಂಡು ೫೦ ಎನ್ನುವ ಉತ್ತರವನ್ನು ಥಟ್ಟನೆ ನೀಡುತ್ತಾನೆ. ಆದರೆ ಭಾರತೀಯ ಗಣಿತವು ಯುರೋಪಿಗೆ ತಲುಪುವ ಮೊದಲು “ನೂರು-ಐವತ್ತು” ಇದನ್ನು ಅಲ್ಲಿಯ ಗಣಿತ ಪಂಡಿತರು “C-L” ಎಂದು ಬರೆದುಕೊಳ್ಳುತ್ತಿದ್ದರು. ಆ ಬಳಿಕ ಒಂದುನೂರು ಗುಂಡುಗಳನ್ನು ಎಣಿಸಿ ತೆಗೆದುಕೊಂಡು, ಅದರಲ್ಲಿ ಐವತ್ತು ಗುಂಡುಗಳನ್ನು ಎಣಿಸಿ ಪಕ್ಕಕ್ಕಿಡುತ್ತಿದ್ದರು. ಬಳಿಕ ಉಳಿದ ಗುಂಡುಗಳನ್ನು ಎಣಿಸಿ, ಐವತ್ತು ಎನ್ನುವ ಉತ್ತರವನ್ನು ಕೊಡುತ್ತಿದ್ದರು.

ವಿಜ್ಞಾನದಲ್ಲಿ ಇಷ್ಟೆಲ್ಲ ಮುಂದುವರಿದಿದ್ದ ಭಾರತೀಯರು ರಾಹು ಹಾಗೂ ಕೇತು ಎನ್ನುವ ಬಿಂದುಗಳನ್ನು ರಾಕ್ಷಸರು ಎಂದು ಕರೆದಿದ್ದೇಕೆ? ಇದಕ್ಕೆ ಉತ್ತರ ಬಹುಶಃ ಹೀಗಿರಬಹುದು. ನಮ್ಮ ವಿಜ್ಞಾನಿಗಳು ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸಿದ್ದರು. ಈ ದೇವತೆಗಳನ್ನು ಮರೆಮಾಡುವಂತಹ ವಸ್ತು ಯಾವುದೇ ಇದ್ದರೂ ಅದು ರಾಕ್ಷಸಸಮಾನ. ಆದುದರಿಂದ ಈ ಬಿಂದುಗಳು ರಾಕ್ಷಸರು.

ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸುವದು ತಪ್ಪೆನ್ನುತ್ತೀರಾ? ಭೌತಿಕ ಅರ್ಥದಲ್ಲಿ ಅದು ತಪ್ಪಾಗಿರಬಹುದು. ಆದರೆ ಪುರಾತನ ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವದವರಾಗಿದ್ದರು. ಈ ಸೃಷ್ಟಿಯಲ್ಲಿಯ ಪ್ರತಿಯೊಂದು ವಸ್ತುವೂ ಭಗವಂತನ ರೂಪವೇ (form) ಆಗಿದೆ. ಇತರರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅದೊಂದು ದೇವತೆ ; ದೇವತೆಗೆ ವಿರೋಧವಾಗಿರುವದು ರಾಕ್ಷಸ. ಇದು ನಮ್ಮ ಪುರಾತನರ ಭಾವನೆ.

ಆದುದರಿಂದಲೇ ಅವರು ಸೂರ್ಯ ಹಾಗು ಚಂದ್ರರನ್ನು ದೇವತೆಗಳೆಂದು ಭಾವಿಸಿದರು ; ರಾಹು ಹಾಗು ಕೇತು ಎನ್ನುವ ಕಾಲ್ಪನಿಕ ಖಗೋಲ ಬಿಂದುಗಳನ್ನು ರಾಕ್ಷಸರೆಂದು ಕರೆದರು. ತಮ್ಮ ಖಗೋಲ ಜ್ಞಾನದ ಮೂಲಕ ಗ್ರಹಣದ ಸಮಯ ಹಾಗೂ ಅವಧಿಯನ್ನು ಕಂಡು ಹಿಡಿಯುತ್ತದ್ದಿಂತೆಯೇ, ಆ ಅವಧಿಯಲ್ಲಿ ನದಿಯಲ್ಲಿ ಮುಳುಗು ಹಾಕಿ ದೇವರ ಧ್ಯಾನವನ್ನು ಮಾಡುತ್ತಿದ್ದರು! ಇದು ಅವರ ಪ್ರಾಮಾಣಿಕ ಮನೋಧರ್ಮ. ಇದರಲ್ಲಿ ಯಾವುದೇ ವಿರೋಧಾಭಾಸ ಇಲ್ಲ!

Sunday, July 12, 2009

ಬೆಕ್ಕು ಹಾರುತಿದೆ ನೋಡಿದಿರಾ?

ಬೇಂದ್ರೆಯವರ ಪ್ರತಿಭೆ ಕೇವಲ ಗಂಭೀರ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರಲಿಲ್ಲ. ವಿನೋದಸಾಹಿತ್ಯದಲ್ಲೂ ಅವರು ಕುಶಲರೇ. ಅವರ ಅಣಕುವಾಡುಗಳು ಹಾಗೂ ಅವರ ‘ಸಾಯೋ ಆಟ’ ನಾಟಕವು ಅವರ ಈ ಪ್ರತಿಭೆಗೆ ಉದಾಹರಣೆಗಳಾಗಿವೆ.

‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನವನ್ನು ಬರೆದು, ಹಾಡಿ, ಕನ್ನಡಿಗರನ್ನು ಮೋಡಿ ಮಾಡಿದ ಬೇಂದ್ರೆಯವರು ಇದೇ ಹಾಡನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ಕವನವನ್ನು ಬರೆದರು. ಇಂತಹ ಕವನಗಳಿಗೆ ‘ಅಣಕುವಾಡು’ ಎಂದು ಕರೆದರು. ‘ಒರದಾ ತಗಣಿ ಒರದಾ’ ಎನ್ನುವದು ಅವರ ಇನ್ನೊಂದು ಅಣಕುವಾಡು. ಇದು ‘ವರದಾ ಕಂಚಿ ವರದಾ’ ಎನ್ನುವ ದಾಸರ ಹಾಡಿನ ಮೇಲೆ ರೂಪಿತವಾಗಿದೆ.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಓದಿದಾಗ, ಬೇಂದ್ರೆಯವರ ವೈನೋದಿಕ ಕಲ್ಪನಾಸಾಮರ್ಥ್ಯದ ಅರಿವಾಗುವದು. ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದಲ್ಲಿ ಆಟವಾಡಿದ ಕಲ್ಪನೆಯೇ ಈ ಕವನದಲ್ಲಿಯೂ ಆಟವಾಡಿದೆ. ಭಾಷೆ, ಛಂದಸ್ಸು ಎಲ್ಲವೂ ಮೂಲಕವನದ ಅನುಕರಣೆಗಳು. ಅಲ್ಲದೆ, ಪ್ರತಿಯೊಂದು ಸಾಲಿನಲ್ಲಿಯೂ ಮೂಲಕವನದ ಅಣಕನ್ನು ಕಾಣಬಹುದು.

‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
…………………………………………………………….
‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
………………………………………………………………………………….................
‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||

ಈಗ ‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಮೊದಲ ನುಡಿಯನ್ನು ನೋಡಿರಿ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಮೂಲಕವನದ ಮೊದಲ ಸಾಲಿನಲ್ಲಿ ‘ಇರುಳಿರುಳಳಿದು ದಿನ ದಿನ ಬೆಳಗೆ’ ಎನ್ನುವ ವಾಕ್ಯವಿದ್ದರೆ, ಅಣಕುಕವನದಲ್ಲಿ ‘ಈರುಳ್ಳ್ಯುರುಳಲು ಮಾಡವು ಬೆಳಗೆ’ ಎನ್ನುವ ಸಾಲಿದೆ.
ಇವೆರಡೂ ಸಾಲುಗಳು ಶ್ರವಣಕ್ಕೆ ಒಂದೇ ತೆರನಾಗಿವೆ. ಆದರೆ ಮೂಲಕವನದ ಸಾಲು ಹಕ್ಕಿಯ ಬೆಳಗಿನ ಹಾರಾಟದೊಂದಿಗೆ ಕಾರ್ಯಾರಂಭ ಮಾಡಿದರೆ, ಅಣಕುವಾಡಿನ ಸಾಲು ಕತ್ತಲೆಯಲ್ಲಿ ಬೆಕ್ಕು ಮಾಡುವ ಹಾರಾಟವನ್ನು ಚಿತ್ರಿಸುತ್ತದೆ.
ಈ ಬೆಕ್ಕು ಮಾಡಕ್ಕೆ ಜಿಗಿದು ಅಲ್ಲಿ ಇಟ್ಟ ಈರುಳ್ಳಿಗಳನ್ನೆಲ್ಲ ಉರುಳಿಸುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.
ಮೂಲಕವನದ ಮುಂದಿನ ಸಾಲುಗಳಲ್ಲಿ
‘ಗಾವುದ ಗಾವುದ ಗಾವುದ ಮುಂದೆ,
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ’
ಎನ್ನುವ ವರ್ಣನೆ ಇದ್ದರೆ, ಅಣಕವಾಡಿನಲ್ಲಿ
‘ಯಾವುದ ! ಯಾವುದ ! ಯಾವುದ ಎಂದು,
ಕೇಳುವ ಹೇಳುವ ಹೊತ್ತಿನ ಒಳಗೆ’
ಎನ್ನುವ ವರ್ಣನೆ ಇದೆ.

ಈ ರೀತಿಯಾಗಿ, ಬೇಂದ್ರೆ ಮೂಲಕವನದ ಸಾಲುಗಳ ಅನುರಣನವನ್ನು ಅಣಕುವಾಡಿನಲ್ಲಿ ಅನುಸರಿಸಿದ್ದಾರೆ.

ಮೂಲಕವನವದ ಎರಡನೆಯ ನುಡಿಯಲ್ಲಿ ಹಕ್ಕಿಯ ಗರಿಗಳನ್ನು ವರ್ಣಿಸಲಾಗಿದೆ:
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||

ಅಣಕುವಾಡಿನಲ್ಲಿ ಬೆಕ್ಕಿನ ಮುಖವರ್ಣನೆ ಇದೆ.
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಮೂಲಕವನದ ಮೂರನೆಯ ನುಡಿ ಹೀಗಿದೆ:
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||

ಅಣಕುವಾಡಿನ ಮೂರನೆಯ ನುಡಿಯೂ ಸಹ ಬೆಕ್ಕಿನ ಬಣ್ಣದ ಬಣ್ಣನೆಯನ್ನು ಮಾಡುತ್ತದೆ.
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ಮೂಲಕವನದಲ್ಲಿ ಹಕ್ಕಿಗೆ ಮಾಡಲಾದ ವರ್ಣನೆಯ ಸಮಾಂತರ ವರ್ಣನೆ ಅಣಕುವಾಡಿನಲ್ಲಿಯೂ ಇದೆ. ಅಲ್ಲದೆ ‘ಕತ್ತಲಕೇ ಕಾಲೊಡೆದವೊ ಅಣ್ಣಾ’
ಎನ್ನುವ ಸಾಲು ನಗುವನ್ನು ಉಕ್ಕಿಸುತ್ತದೆ.

ಮೂಲಕವನದ ನಾಲ್ಕನೆಯ ನುಡಿ ಕಾಲಪಕ್ಷಿಯ ಗಂಭೀರ-ಭಯಂಕರ ಕಾರ್ಯವನ್ನು ವರ್ಣಿಸುತ್ತದೆ:
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||

ಅಣಕುವಾಡಿನಲ್ಲಿ ಬೆಕ್ಕು ಮಾಡುವ ಭಯಂಕರ ಕಾರ್ಯ(!)ಗಳ ವರ್ಣನೆ ಇದೆ:
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಕಾಲಪಕ್ಷಿ ಹಾಗೂ ಬೆಕ್ಕು ಇವುಗಳ ಘನತೆ ಬೇರೆಯಾಗಿರಬಹುದು. ಇವುಗಳ ಕಾರ್ಯರಂಗಗಳು ಬೇರೆಯಾಗಿರಬಹುದು. ಬೆಕ್ಕು ಮಾಡುವ ಕಾರ್ಯ ಹಾಸ್ಯವಾಗಿ ಕಾಣಲೂಬಹುದು. ಆದರೆ ಈ ಎರಡೂ ಕಾರ್ಯಗಳಲ್ಲಿಯ ಅಂತರಂಗ ಒಂದೇ ಆಗಿದೆ.

ಸಮಾಂತರವಾಗಿ ಚಲಿಸುತ್ತಿದ್ದ ಈ ಎರಡೂ ಕವನಗಳು ಇನ್ನು ಮುಂದಿನ ನುಡಿಗಳಲ್ಲಿ ಸ್ವಲ್ಪ ಬೇರೆಯಾಗಿ ಸಾಗುತ್ತವೆ.
ಮೂಲಕವನದ ಐದನೆಯ ನುಡಿ ಹೀಗಿದೆ:
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಮೂಲಕವನವು ಇಲ್ಲಿ ಶುಭ ಕೋರುವ ಕಾಲಪಕ್ಷಿಯಾಗಿದೆ. ಆದರೆ ಬೆಕ್ಕು ಮಾತ್ರ ತನ್ನ ಚಾಳಿಯನ್ನು ಬಿಡದು:
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಹಾಲಿನ ಗಡಿಗೆಯನ್ನು ಸ್ವಚ್ಛ ಮಾಡುವ ಈ ಬೆಕ್ಕು ಮೊಸರನ್ನೂ ಸಹ ನೆಕ್ಕುತ್ತದೆ. ಅಲ್ಲಿರುವ ಪಾತ್ರೆಗಳನ್ನೆಲ್ಲ ಉರುಳಿಸುತ್ತದೆ. ಇಷ್ಟಕ್ಕೆ ಇದರ ಕಿಡಿಗೇಡಿತನ ನಿಲ್ಲುವದಿಲ್ಲ. ಮನೆಯವರು ತೆಗೆದಿಟ್ಟ ಬಿಸಿ ಹಾಲಿನಲ್ಲಿ ತುಸು ಮಜ್ಜಿಗೆ ಬೆರಸಿಬಿಡುತ್ತದೆ. ಬೇಂದ್ರೆಯವರ ವಿನೋದಸೃಷ್ಟಿಗೆ ಈ ಸಾಲು ಅತ್ಯುತ್ತಮ ಉದಾಹರಣೆಯಾಗಿದೆ.

ಆರನೆಯ ನುಡಿಗಳಲ್ಲಿ ರಚನಾ ಸಾದೃಶ್ಯವಿದೆ.
ಮೂಲಕವನ ಹೀಗಿದೆ:
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||

ಅಣಕುವಾಡು ಹೀಗಿದೆ:
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಕಾಲಪಕ್ಷಿ ಮುಗಿಲಿನಲ್ಲಿ ಹಾರಾಡಿದರೆ, ಈ ಬೆಕ್ಕು ತಾನೂ ಸಹ ಮುಗಿಲಿನಲ್ಲಿರುವ ಚಂದ್ರನನ್ನು ಹಿಡಿಯಲು ಜಿಗಿಯುತ್ತದೆ, ಬೆಣ್ಣೆಯೆಂದು ತಿಳಿದು!

ಮೂಲಕವನದ ಏಳನೆಯ ನುಡಿಯಲ್ಲಿ ಕಾಲಪಕ್ಷಿಯ ಭವಿಷ್ಯತ್ ಯೋಜನೆಗಳ ಹೊಳಹು ಇದೆ:
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||

ಅಣಕುವಾಡಿನಲ್ಲಿಯೂ ಸಹ ಬೆಕ್ಕು ತನ್ನ ಭವಿಷ್ಯದ ಕಾರ್ಯಗಳಿಗಾಗಿ ಹೊಂಚಿ ನಿಂತಿರುವ ವರ್ಣನೆ ಇದೆ:
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||

ಈ ರೀತಿಯಾಗಿ ಮೂಲಕವನದ ತದ್ವತ್ ಅನುಕರಣೆಯನ್ನು ಈ ಅಣಕುವಾಡು ಮಾಡುತ್ತದೆ.
ಮೂಲಕವನವು ಬೇಂದ್ರೆಯವರ ದಾರ್ಶನಿಕ ಪ್ರತಿಭೆಯನ್ನು ತೋರಿಸಿದರೆ, ಅಣಕುವಾಡು ಅವರ ವಿನೋದಸೃಷ್ಟಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ, ಈ ಎರಡೂ ರಚನೆಗಳಲ್ಲಿ ಕಂಡುಬರುವ ಕಾವ್ಯರಚನಾ ಕೌಶಲ್ಯವು ಅಪ್ರತಿಮವಾಗಿದೆ.
‘ಬೆಕ್ಕು ಹಾರುತಿದೆ ನೋಡಿದಿರಾ?’ ಕವನವನ್ನು ಸ್ವತಂತ್ರ ಕವನವೆಂದು ಓದಿದರೂ ಸಹ , ಇದು ಅಷ್ಟೇ ಸ್ವಾರಸ್ಯಪೂರ್ಣವಾದ ಕವನವಾಗಿದೆ.

Friday, July 3, 2009

ಚೋಳ ಕಡಿತು, ನನಗೊಂದು ಚೋಳ ಕಡಿತು

‘ಚೋಳ ಕಡಿತು, ನನಗೊಂದು ಚೋಳ ಕಡಿತು’ – ಇದು ಶರೀಫರು ರಚಿಸಿದ ಗೀತೆ.
ಸಾಮಾನ್ಯವಾಗಿ ಕುಂಡಲಿನಿ ಶಕ್ತಿಯನ್ನು ಅಂದರೆ ಮನುಷ್ಯನಲ್ಲಿ ನಿಹಿತವಾದ ದೈವಿ ಶಕ್ತಿಯನ್ನು ಸರ್ಪರೂಪವಾಗಿ ಕಲ್ಪಿಸುತ್ತಾರೆ. ಈ ಕವನದಲ್ಲಿ ಶರೀಫರು ತಮ್ಮ ಬದುಕನ್ನು ಬದಲಾಯಿಸಿದ ಘಟನೆಯನ್ನು, ಅದಕ್ಕೆ ಕಾರಣವಾದ ಶಕ್ತಿಯನ್ನು ಚೋಳಿನ ರೂಪದಲ್ಲಿ ಬಣ್ಣಿಸಿದ್ದಾರೆ. ಶರೀಫರ ಗೀತೆಯ ಪೂರ್ಣಪಾಠ ಹೀಗಿದೆ:

ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು ||ಪಲ್ಲ||

ಎಷ್ಟು ದಿನದ ಸಿಟ್ಟು ಇಟ್ಟಿತ್ತು, ತೀರಿಸಿ ಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ||೧||

ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು ||೨||

ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ||೩||

ಆಧ್ಯಾತ್ಮಪಥದಲ್ಲಿ ಸಾಗಿದವರ ಜೀವನದಲ್ಲಿ ನಡೆಯುವ ಒಂದೆರಡು ಘಟನೆಗಳಿಂದಾಗಿ ಅವರ ಜೀವನವೇ ಬದಲಾಗಿ ಬಿಡುತ್ತದೆ. ಇಂತಹ ಸಂದರ್ಭವನ್ನು ಅನೇಕ ಸಾಧಕರು ಕಾವ್ಯದ ಮೂಲಕ ವರ್ಣಿಸಿದ್ದೂ ಉಂಟು.
ತಮ್ಮ ಬದುಕಿನಲ್ಲಿಯ ಇಂತಹ ಘಟನೆಯೊಂದನ್ನು ಶರೀಫರು “ಚೋಳ ಕಡಿತು ನನಗೊಂದು ಚೋಳ ಕಡಿತು”.
ಎನ್ನುವ ಚಿಕ್ಕ ಗೀತೆಯಲ್ಲಿ ಬಣ್ಣಿಸಿದ್ದಾರೆ.

ಯಾವ ಜೀವಿಗೂ ತನ್ನ ಮುಂದಿನ ಕ್ಷಣದ ಭವಿಷ್ಯದ ಅರಿವಿರುವದಿಲ್ಲ. ಭವಿಷ್ಯವೆಂದರೆ ಕಪ್ಪುಕತ್ತಲೆಯೇ ಸೈ. ಇಂತಹ ಕಪ್ಪು ಕತ್ತಲೆಯಲ್ಲಿ ತನ್ನ ಬಲಿಯನ್ನು ಜಪ್ಪಿಸಿಕೊಂಡು ಈ ಚೋಳು ಕೂತಿರುತ್ತದೆ. ಬಲಿಗೆ ಚೋಳು ಕಾಣಲಿಕ್ಕಿಲ್ಲ. ಆದರೆ ಚೋಳಿಗೆ ಬಲಿಯು ಸುಸ್ಪಷ್ಟ.
ಆದುದರಿಂದ ಇದನ್ನು “ಕಾಳಕತ್ತಲದೊಳಗೆ ಕೂತಿತ್ತು, ನನಕಂಡ ಬಂತು” ಎಂದು ಶರೀಫರು ಬಣ್ಣಿಸುತ್ತಾರೆ.

ಈ ಚೋಳು ಅಕಸ್ಮಾತ್ತಾಗಿ ಶರೀಫರನ್ನು ಕಂಡದ್ದಲ್ಲ. ಅದು ಎಷ್ಟೋ ದಿನದಿಂದ ಇವರ ಮೇಲೆ ಸಿಟ್ಟು ಇಟ್ಟುಕೊಂಡು ಕಾಯುತ್ತ ಕೂತಿದೆ. ಆದುದರಿಂದಲೇ ಚೋಳು ಕಚ್ಚಿಸಿಕೊಂಡ ಬಳಿಕ ಶರೀಫರು ವಿಸ್ಮಯಗೊಳ್ಳುತ್ತಾರೆ. “ಎಷ್ಟು ದಿನದ ಸಿಟ್ಟು ಇಟ್ಟಿತ್ತು, ಈಗ ತೀರಿಸಿ ಬಿಟ್ಟಿತು”, ಎನ್ನುತ್ತಾರೆ.
ಈ ಚೋಳಿಗೆ ಶರೀಫರ ಮೇಲೆ ದೀರ್ಘಕಾಲದ ಸಿಟ್ಟು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ.
ಶರೀಫರ ಜನ್ಮಾಂತರಗಳ ಕರ್ಮಫಲವೇ ಈ ಚೋಳು. ಆದುದರಿಂದ ಅದರ ಸಿಟ್ಟು ಎಷ್ಟೋ ಜನ್ಮಗಳ ಸಿಟ್ಟು. ಈ ಚೋಳು ಕಡಿದ ಸಂಗತಿಯನ್ನು ಅಥವಾ ಅದರ ನೋವನ್ನು ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ, ಕರ್ಮಫಲವನ್ನು ಬದಲಿಸಲು ಯಾರೂ ತಮಗೆ ಸಹಾಯ ಮಾಡಲಾರರು ಎನ್ನುವದು ಶರೀಫರ ಮನಸ್ಸಿಗೆ ಅನುಭವವಾಗುತ್ತದೆ. ಅದಕ್ಕೇ ಸ್ವಗತದಲ್ಲಿ ಎಂಬಂತೆ ಶರೀಫರು ನುಡಿಯುತ್ತಾರೆ:
“ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು”.

ಚೋಳಿನ ಕಡಿತದಷ್ಟು ಶರೀಫರ ಮನಸ್ಸಿಗೆ ಆಘಾತ ಕೊಡುವ ಯಾವ ಘಟನೆ ನಡೆದಿರಬಹುದೆನ್ನುವ ಸೂಚನೆ ಮುಂದಿನ ಸಾಲಿನಲ್ಲಿ ಸಿಗುತ್ತದೆ:
“ಹುಟ್ಟಿದ ಮಗಳ ಕಂಡಿದ್ದಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು ”

ಶರೀಫರ ಮೊದಲ ಹಾಗೂ ಒಂದೇ ಸಂತತಿಯಾದ ಹೆಣ್ಣು ಕೂಸು, ಅವರ ಹೆಂಡತಿಯ ತವರು ಮನೆಯಲ್ಲಿ ಜನಿಸಿ, ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತದೆ. ಇದೊಂದು ತೀವ್ರ ದುಃಖದ ಅನುಭವ. ಅದಕ್ಕೇ ‘ಇದರ ಕಷ್ಟ ಶಿವನೇ ಬಲ್ಲ’ ಎಂದು ಶರೀಫರು ದುಃಖದಿಂದ ಹೇಳುತ್ತಾರೆ. ಇದು ಎದೆಯಲ್ಲಿ ಮುಳ್ಳು ಚುಚ್ಚಿದಂತಹ ಅನುಭವವಾಗಿರಬೇಕು. ಆ ಸಮಯದಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚೆಚ್ಚಾಗಿ ತಿರುಗಿದ ಶರೀಫರು ‘ಮಾಯವಾಗಿ ಹೋತು’ ಎಂದು ಹೇಳುತ್ತಾರೆ.

ಈ ‘ಮಾಯವಾಗಿ ಹೋತು’ ಎನ್ನುವ ವಾಕ್ಯ ಅನೇಕ ಅರ್ಥಗಳಿಂದ ಕೂಡಿದೆ. ಇದೀಗ ಹುಟ್ಟಿದ ಕೂಸು ಕೆಲವೇ ದಿನಗಳಲ್ಲಿ ಮಾಯವಾಗಿ ಹೋಯಿತು ಎನ್ನುವದು ಒಂದು ಅರ್ಥ. ಚುಚ್ಚಿದ ಮುಳ್ಳು ಮಾಯವಾಗಿ ಹೋಯಿತು ಎಂದು ತಿಳಿದರೆ ಸಂಸಾರದಲ್ಲಿ ಯಾವದೂ ಶಾಶ್ವತವಲ್ಲ; ಸುಖ ಹಾಗೂ ದುಃಖಗಳು ಬರುತ್ತವೆ ಹಾಗೂ ಹೋಗುತ್ತವೆ ಎನ್ನುವದು ಮತ್ತೊಂದುಅರ್ಥ. ಸಂಸಾರದಲ್ಲಿ ಮುಳುಗಿದ ಶರೀಫರಿಗೆ ಕವಿದ ಮೋಹದ ಮಾಯೆ ಮಾಯವಾಗಿ ಹೋಯಿತು ಎನ್ನುವದು ಮೂರನೆಯ ಅರ್ಥ.

ಇಂತಹ ದುಃಖದ ಅನುಭವದ ನಂತರ ಶರೀಫರು ಇದೀಗ ಕಣ್ಣು ತೆರೆದ ವ್ಯಕ್ತಿ. ಹೀಗಾಗಿ ಆ ಚೋಳನ್ನು ಕೇವಲ ಆಘಾತ ನೀಡುವ ಕರ್ಮಫಲವೆಂದು ತಿಳಿಯದೆ, ಜ್ಞಾನದ ಬೆಳಕು ನೀಡುವ ಶಕ್ತಿಯೆಂದು ಅವರು ಭಾವಿಸುತ್ತಾರೆ. ಈ ಚೋಳು ಕೇವಲ ಕಷ್ಟ ಕೊಡುವ ಚೋಳಲ್ಲ, ಕಷ್ಟದ ಮೂಲಕ ಪರಮಜ್ಞಾನದ ಕಡೆಗೆ ಮನಸ್ಸನ್ನು ತಿರುಗಿಸುವ ಚೋಳು ಎನ್ನುವದು ಅವರಿಗೆ ಅರಿವಾಗುತ್ತದೆ. ಅದರ ನಿಜಸ್ವರೂಪ ಅವರಿಗೆ ಈಗ ನಿಚ್ಚಳವಾಗತೊಡಗಿದೆ. ಈ ಗೂಢಾರ್ಥ ಅವರ ಮುಂದಿನ ನುಡಿಗಳಲ್ಲಿ ಸ್ಪಷ್ಟವಾಗಿದೆ.

“ಮೂರು ದೇಹದೊಳಗ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳೆದಿತ್ತ
ಸಾರಿಬಂದು ಎನ್ನ ನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿಂತಿತು”

ಈ ಚೋಳು ಇರುವ ಮೂರು ದೇಹಗಳು ಅಂದರೆ ಸ್ಥೂಲ ಶರೀರ, ಸೂಕ್ಷ್ಮ ಶರೀರ ಹಾಗೂ ಕಾರಣಶರೀರಗಳು. ಸ್ಥೂಲಶರೀರವೆಂದರೆ ಯಾವುದೇ ಒಂದು ಜನ್ಮದಲ್ಲಿ ನಮಗಿರುವ ದೇಹ. ಸೂಕ್ಷ್ಮಶರೀರವೆಂದರೆ ವಾಸನಾಶರೀರ. ಇದು ಸ್ಥೂಲಶರೀರವು ನಾಶವಾದ ನಂತರವೂ ಉಳಿದಿರುವ ವಾಸನೆಗಳ ಹಾಗೂ ಕರ್ಮಫಲಗಳ ಶರೀರ. ಕಾರಣಶರೀರವೆಂದರೆ ಆತ್ಮವು ದೇಹವನ್ನು ಧರಿಸಲು ಬೇಕಾಗುವ ಮೂಲ ಪ್ರೇರಣಾ ಶರೀರ. ಈ ಮೂರೂ ದೇಹಗಳಲ್ಲಿ ಈ ಚೋಳು ಇರುತ್ತದೆ ಎಂದು ಶರೀಫರು ಹೇಳುತ್ತಾರೆ. ಅಂದರೆ, ಈ ಚೋಳು ನಮಗೆ ಹೊರಗಿನದಲ್ಲ, ನಮ್ಮಲ್ಲೇ ಸದಾಕಾಲ ಇರುವಂಥಾದ್ದು. ನಮ್ಮನ್ನು ತಪ್ಪು ಮಾರ್ಗದಿಂದ ಬಿಡಿಸಿ ಸನ್ಮಾರ್ಗಕ್ಕೆ ಹಚ್ಚುವಂಥಾದ್ದು. ಈ ಚೋಳಿಗೆ ಇರುವ ಸ್ವಭಾವ ಯಾವುದು ಎಂದರೆ ‘ಪರಮಾತ್ಮನಾದದೊಳು ತಾನು ಬೆಳೆದಿತ್ತ’.
ಯಾವಾಗಲೂ ಪರಮಾತ್ಮನನ್ನು ಚಿಂತಿಸುತ್ತ ಅದೇ ನಾದದಲ್ಲಿ, ಅದೇ ಧ್ಯಾನದಲ್ಲಿ ಇರುವ ಜೀವಿ ಇದು. ಹಾಗಿದ್ದರೆ ಇದಕ್ಕೆ ನೋವು ಕೊಡುವ ಕೊಂಡಿ ಏಕೆ ಇದೆ ಎಂದು ಕೇಳಬಹುದು. ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ. ಸರಿಯಾದ ಸಮಯದಲ್ಲಿ ಇದು ಸಾರಿ ಬಂದು ಅಂದರೆ ಧಾವಿಸಿ ಬಂದು, ಶರೀಫರನ್ನು ನೋಡಿತು. ಆ ಚೋಳು ನೋಡಿದ್ದೇ ಒಂದು ಅನುಗ್ರಹ! ಆ ಚೋಳಿನಲ್ಲಿರುವ ಬೆಳಕು ಎಂತಹದಂದರೆ, ಮೂರು ಲೋಕಗಳನ್ನೂ ಬೆಳಗುವ ಬೆಳಕು ಅದು. ಮೂರು ಲೋಕಗಳೆಂದರೆ ಸ್ವರ್ಗ, ಮರ್ತ್ಯ ಹಾಗೂ ಪಾತಾಳ. ಆತ್ಮವು ತನ್ನ ವಿವಿಧ ಅವಸ್ಥೆಗಳಲ್ಲಿ ಈ ಲೋಕಗಳಲ್ಲಿ ವಾಸಿಸುತ್ತದೆ. ಯಾವುದೇ ಲೋಕದಲ್ಲಿರಲಿ, ಅಲ್ಲಿ ಈ ಎಚ್ಚರಿಕೆ ನೀಡುವ ಚೋಳು ಆತ್ಮವನ್ನು ದಿಟ್ಟಿಸುತ್ತಲೇ ಇರುತ್ತದೆ. ಹಾಗು ಈ ಮೂರೂ ಲೋಕಗಳ ಮೇಲಿರುವ ಉನ್ಮನಿ ಅವಸ್ಥೆಯಲ್ಲಿ ಈ ಚೋಳು ಹಾರಿ ಐಕ್ಯವಾಗುತ್ತದೆ. (ಉನ್ಮನಿ ಅವಸ್ಥೆ ಎಂದರೆ ಸಾಧನೆಯ ಒಂದು ಅವಸ್ಥೆ. ಈ ಅವಸ್ಥೆಯಲ್ಲಿ ಸಾಧಕನ ಪ್ರಜ್ಞೆಯು ಲೋಕಸಾಮಾನ್ಯ ಸ್ಥಿತಿಯಲ್ಲಿ ಇರುವದಿಲ್ಲ. ಹೀಗಾಗಿ ಆ ವ್ಯಕ್ತಿಯು ಜನರ ಕಣ್ಣಿಗೆ ಹುಚ್ಚನಂತೆ ಕಾಣಬಹುದು. ರಾಮಕೃಷ್ಣ ಪರಮಹಂಸರು ಈ ಅವಸ್ಥೆಯಲ್ಲಿ ಇದ್ದಾಗ ಹುಚ್ಚರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗುತ್ತದೆ.)

ಈಗಿನ ಆಧುನಿಕ ಮನೆಗಳಲ್ಲಿ ಚೋಳು ಕಾಣಸಿಗುವದಿಲ್ಲ. ಆದರೆ ಮೊದಲು ಹಳ್ಳಿಗಳಲ್ಲಿ ಕಟ್ಟಿರುತ್ತಿದ್ದ ಮಣ್ಣಿನ ಮನೆಗಳಲ್ಲಿ ಇವು ಸಾಮಾನ್ಯವಾಗಿರುತ್ತಿದ್ದವು. ಮನೆಯ ಕೋಣೆಗಳ ಮೂಲೆಗಳಲ್ಲಿ ಇವು ಸಿಗುತ್ತಿದ್ದವು. ಶರೀಫರು ತಮ್ಮ ಈ ಚೋಳು ದೇವರ ಕೋಣೆಯ ಮೂಲೆಯೊಳಗಿತ್ತು ಎಂದು ಹೇಳುತ್ತಾರೆ. ಅಂದರೆ ಈ ಚೋಳನ್ನು ನೀವು ಕಾಣಬೇಕಾದರೆ ಅಥವಾ ಈ ಚೋಳಿನಿಂದ ಕಡಿಸಿಕೊಳ್ಳಬೇಕಾದರೆ, ದೇವರ ಕೋಣೆಯೊಳಗೆ ನೀವು ಪ್ರವೇಶಿಸಬೇಕು ಅರ್ಥಾತ್ ನಿಮ್ಮ ಮನಸ್ಸು ಪರಮಾತ್ಮದ ಕಡೆಗೆ ತಿರುಗಬೇಕು! ದೇವರ ಮನೆ ಎಂದರೆ ಮನುಷ್ಯನ ಮನಸ್ಸು ಎಂದೂ ಅರ್ಥವಾಗಬಹುದು. ಅಲ್ಲಿ ಈ ಚೋಳು ಆಧಾರ ಹಿಡಿದು ಕೊಂಡಿಯನ್ನು ಮೇಲ್ಮುಖವಾಗಿ ಮಾಡಿಕೊಂಡಿತ್ತು.
“ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊರ್ಧ್ವಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗೆ ಮಲಗಿತ್ತು
ಕಲಿಕರ್ಮ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು, ಹುಚ್ಚು ಹಿಡಿದಂಗಾತು ”

ಶರೀಫರು ಈ ಸಾಲಿನಲ್ಲಿ ಯೋಗಸಾಧನೆಯ ಪರಿಭಾಷೆಯನ್ನು ಬಳಸುತ್ತಾರೆ. ಆಧಾರ ಎಂದರೆ ಮೂಲಾಧಾರ ಚಕ್ರ. ಅಲ್ಲಿ ಈ ಚೋಳು ಊರ್ಧ್ವಮುಖಿಯಾಗಿತ್ತು ಅಂದರೆ ಇದರ ಗಮನ ಮೂಲಾಧಾರದ ಮೇಲಿರುವ ಚಕ್ರಗಳತ್ತ ಇದೆ. (ಮೂಲಾಧಾರದ ಮೇಲಿನ ಚಕ್ರಗಳು ಹೀಗಿವೆ: ಸ್ವಾಧಿಸ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಹಾಗೂ ಆಜ್ಞಾಚಕ್ರ.) ಸಾಧಕನನ್ನು ಮೇಲ್ಮುಖವಾಗಿ ಕರೆದೊಯ್ಯುವ ಶಕ್ತಿ ಇದು. ತನ್ನ ಸಮಯ ಬರುವವರೆಗೆ ಇದು ಸ್ಥೂಲದೇಹದಲ್ಲಿ ಅಂದರೆ ಜ್ಞಾನವಿಹೀನ ದೇಹದಲ್ಲಿ ನಿದ್ರಿಸುತ್ತಿರುತ್ತದೆ. (ಕುಂಡಲಿನಿ ಶಕ್ತಿಯು ಮೂಲಾಧಾರದಲ್ಲಿ ಸರ್ಪರೂಪದಲ್ಲಿ ಮಲಗಿರುತ್ತದೆ ಎನ್ನುವದು ಯೋಗಶಾಸ್ತ್ರದ ಪರಿಭಾಷೆ.) ಹಾಗೂ ಕಲಿಕರ್ಮವನ್ನು ಅಂದರೆ ದುಷ್ಕರ್ಮಗಳನ್ನು ನುಂಗುತ್ತ ತಕ್ಕ ಸಮಯಕ್ಕಾಗಿ ಕಾಯುತ್ತಿತ್ತು. ಸಮಯ ಬರುವ ವರೆಗೂ ಈ ಚೋಳು ಪರಮಾತ್ಮನ ಧ್ಯಾನದಲ್ಲಿಯೇ ಮಗ್ನವಾಗಿತ್ತು. ಅರ್ಥಾತ್ ಪರಮಾತ್ಮನ ಹೊರತಾಗಿ ಈ ಶಕ್ತಿಗೆ ಮತ್ತೇನೂ ಬೇಕಾಗಿಲ್ಲ. ಅಂತಹ ಚೈತನ್ಯ ವು ಕುಟುಕಿದಾಗ, ಶರೀಫರು ತಮಗೆ ಎಚ್ಚರಾಯಿತು, ಅಷ್ಟೇ ಅಲ್ಲ ಹುಚ್ಚು ಹಿಡಿದ ಹಾಗಾಯಿತು ಎಂದು ಹೇಳುತ್ತಾರೆ.
ಪರಮಾರ್ಥದ ಜ್ಞಾನ ದೊರೆತ ಬಳಿಕ ಜೀವಿಯು ಪರಮಾತ್ಮನ ಹುಚ್ಚಿನಲ್ಲಿ ಮುಳುಗುವದು ಸಹಜವೇ ಆಗಿದೆ!

[ಟಿಪ್ಪಣಿ:
ಪರಮಾರ್ಥದ ಜ್ಞಾನಕ್ಕಾಗಿ ನೋವಿನ ಅನುಭವ ಅನಿವಾರ್ಯವೇನೊ? ಕರ್ನಾಟಕದ ಇನ್ನಿಬ್ಬರು ಸಂತರ ಬಾಳಿನಲ್ಲಿಯೂ ಇಂತಹ ವಿಷಾದಕರ ಘಟನೆಗಳು ನಡೆದಿವೆ. ಮೊದಲನೆಯವರು ಬಸವಣ್ಣ. ತಮ್ಮ ಮಗ ಸಂಗಬಸವಣ್ಣ ನಿಧನ ಹೊಂದಿದಾಗ ಅವರು ಉದ್ಗರಿಸಿದ ವಚನ ಹೀಗಿದೆ:
“ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು”.
ಪರಮಾತ್ಮನು ವಯಸ್ಸಾದ ತನಗೆ ಸಾವು ಕೊಡುವ ಬದಲು ಚಿಕ್ಕ ಬಾಲಕನಿಗೆ ಸಾವು ಕೊಟ್ಟನಲ್ಲ ಎನ್ನುವ ಈ ವಚನದಲ್ಲಿ ವ್ಯಕ್ತವಾಗುವ anguish ಹಾಗೂ resignation to God’s will ಇವು ಬೇರೆ ಯಾವ ಭಾಷೆಯ ಸಾಹಿತ್ಯದಲ್ಲೂ ಸಿಗಲಿಕ್ಕಿಲ್ಲ.
ಎರಡನೆಯವರು ಪುರಂದರದಾಸರು. ತಮ್ಮ ಮಗನ ಮರಣದ ಸಂದರ್ಭದಲ್ಲಿ ಇವರು ಹಾಡಿದ ಗೀತೆಯೂ ಸಹ ಶೋಕರಸದ ಅನನ್ಯ ಗೀತೆಯಾಗಿದೆ:
“ಗಿಳಿಯು ಪಂಜರದೊಳಿಲ್ಲ
ಬರಿದೆ ಪಂಜರವಾಯಿತಲ್ಲ!”]

Wednesday, June 24, 2009

‘ಹಕ್ಕಿ ಹಾರುತಿದೆ ನೋಡಿದಿರಾ?’.........ದ.ರಾ.ಬೇಂದ್ರೆ

‘ಹಕ್ಕಿ ಹಾರುತಿದೆ ನೋಡಿದಿರಾ?’ ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೨೯ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಈ ಕವನವನ್ನು ಹಾಡಿದರು. ಬೇಂದ್ರೆಯವರ ಉತ್ತರ ಕರ್ನಾಟಕದ ವೇಷ-ಭೂಷ, ಅವರ ಹಾವಭಾವ ಹಾಗೂ ಹಾಡುಗಾರಿಕೆಯ ಗತ್ತು ಇವುಗಳಿಂದ ನೆರೆದ ಸಭಿಕರೆಲ್ಲ ಮಂತ್ರಮುಗ್ಧರಾದರಂತೆ. ಆನಂತರ ೧೯೩೨ರಲ್ಲಿ ಪ್ರಕಟವಾದ ಅವರ ಪ್ರಥಮ ಕವನ ಸಂಕಲನ ’ಗರಿ’ಯಲ್ಲಿ ಈ ಕವನ ಸೇರ್ಪಡೆಯಾಯಿತು.

ಕವನದ ಪೂರ್ತಿಪಾಠ ಹೀಗಿದೆ:

ಇರುಳಿರಳಳಿದು ದಿನದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದಕೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

ಬೇಂದ್ರೆಯವರು ಈ ಕವನದಲ್ಲಿ ಕಾಲವನ್ನು ಹಾರುತ್ತಿರುವ ಹಕ್ಕಿಗೆ ಹೋಲಿಸಿದ್ದಾರೆ. ಈ ಕವನದ ಮೊದಲ ನುಡಿಯಲ್ಲಿ ಕಾಲಪಕ್ಷಿಯನ್ನು ಪರಿಚಯಿಸುವ ವಿಧಾನ ತುಂಬಾ ಸ್ವಾರಸ್ಯಕರವಾಗಿದೆ.
`ಇರುಳು ಅಳಿದು ದಿನವಾಗುವದು'-- ಇದು ಒಂದು ದಿನದ ಕಾಲಮಾನವನ್ನು ಸೂಚಿಸುತ್ತದೆ.
‘ಇರುಳು ಇರುಳು ಅಳಿದು ದಿನದಿನ ಬೆಳಗೆ’ ಅನ್ನುವದು ಈ ಕಾಲಮಾನದ ಪುನರಾವರ್ತನೆ.
ಈ ಸಾಲಿನ ಮೂಲಕ ಬೇಂದ್ರೆಯವರು ಒಂದು ಚಲನಶೀಲ ಕಾಲವನ್ನು ನಮ್ಮ ಕಣ್ಣೆದುರಿಗೆ ಮೂಡಿಸುತ್ತಿದ್ದಾರೆ.

ಈಗ ಕವನದ ಮುಂದಿನ ಸಾಲನ್ನು ನೋಡಿರಿ:
‘ಸುತ್ತಮುತ್ತಲೂ ಮೇಲಕೆ ಕೆಳಗೆ’ ಎನ್ನುವ ಸಾಲು ‘ಅವಕಾಶ’ದ (space) ಮೂರು ಆಯಾಮಗಳನ್ನು (3 co-ordinates) ಬಣ್ಣಿಸುತ್ತದೆ.
ಅಂದರೆ ಈ ಕಾಲವು ‘ವಿಶ್ವವ್ಯಾಪಿ ಕಾಲ’ವಾಯಿತು !
ಕಾಲಪಕ್ಷಿಯ ಬೃಹತ್ ರೂಪವನ್ನು ಈ ರೀತಿಯಾಗಿ ಬೇಂದ್ರೆ ನಿರೂಪಿಸಿದ್ದಾರೆ.

ಈ ಕಾಲಪಕ್ಷಿಯ ಗತಿ ಎಂತಹದು?
‘ಗಾವುದ ಗಾವುದ ಗಾವುದ ಮುಂದಕೆ’!
‘ಮುಂದಕೆ’ ಎಂದು ಹೇಳುವ ಮೂಲಕ ಈ ಕಾಲಪಕ್ಷಿಯು ಕೇವಲ ಗತಿಶೀಲವಲ್ಲ, ಪ್ರ-ಗತಿಶೀಲವೂ ಹೌದು ಎಂದು ಬೇಂದ್ರೆ ಸೂಚಿಸುತ್ತಾರೆ.
ಈ ಗಾವುದ ದೂರವನ್ನು ಚಲಿಸಲು ಈ ಪಕ್ಷಿಗೆ ಬೇಕಾಗುವ ಸಮಯ ಮಾತ್ರ ‘ಎವೆ ತೆರೆದಿಕ್ಕುವ ಹೊತ್ತು’.
ಕೇವಲ ಕಣ್ಣು ಮಿಟುಕಿಸುವ ಸಮಯದಲ್ಲಿ ಈ ಕಾಲಪಕ್ಷಿ ಸುದೂರ ಗಮಿಸಬಲ್ಲದು.

ಸಮಯದ ಅತ್ಯಂತ ಚಿಕ್ಕ ಅಳತೆ ಯಾವುದು ಎಂದರೆ ‘ನಿಮಿಷ’. ಭಾರತೀಯರು ಪೂರ್ವಕಾಲದಿಂದಲೂ ಬಳಸುತ್ತಿದ್ದ ಕಾಲಮಾನ ಇದು. ‘ನಿಮಿಷ’ವನ್ನು ಅಳೆಯುವ ಬಗೆ ಹೇಗೆ? ಕಣ್ಣರೆಪ್ಪೆಯನ್ನು ಬಡಿಯುವ ಕಾಲಮಾನಕ್ಕೆ ‘ನಿಮಿಷ’ ಎನ್ನುತ್ತಾರೆ. ಆದುದರಿಂದ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಈ ಪದಪುಂಜದ ಅರ್ಥ=ನಿಮಿಷ. ಇದೇ ಕಾಲದ ಕನಿಷ್ಠ ಮಾನದಂಡ. ಆದುದರಿಂದ ಅತಿ ಚಿಕ್ಕ ಕಾಲಮಾನದಲ್ಲಿ ಈ ಹಕ್ಕಿ ಗಾವುದ ದೂರಕ್ಕೆ ಚಲಿಸಬಲ್ಲದು.
ಕಲ್ಪನೆಯಂತೆ ಕಾಣುವ ಪದದಲ್ಲಿ ವಾಸ್ತವತೆಯನ್ನು ಹಿಡಿದಿಡುವ ಬೇಂದ್ರೆ-ಪ್ರತಿಭೆಯನ್ನು ಈ ಸಾಲಿನಲ್ಲಿ ನಾವು ಕಾಣುತ್ತೇವೆ.
(ದೇವತೆಗಳು ಕಣ್ಣು ಮುಚ್ಚುವದಿಲ್ಲ ಅಂದರೆ ಕಣ್ಣರೆಪ್ಪೆ ಬಡೆಯುವದಿಲ್ಲ ; ಆದುದರಿಂದ ಅವರು ‘ಅನಿಮೇಷ’ರು.)

ಈಗ ಈ ನುಡಿಯ ಮತ್ತೊಂದು ಆಯಾಮವನ್ನು ನೋಡೋಣ.
ವಿಶ್ವವನ್ನು ವ್ಯಾಪಿಸಿರುವ ಈ ಕಾಲಪಕ್ಷಿ ತನ್ನ ಚಲನೆಯ ಮೂಲಕ ವಿಶ್ವವನ್ನು ಅಂದರೆ ದೇಶವನ್ನು ಬದಲಾವಣೆಗೆ ಒಳಪಡಿಸುತ್ತದೆ. ಇದೇ ಮಾತನ್ನು ವಿಜ್ಞಾನಿ ಐನ್‍ಸ್ಟೈನ್‍ ‘ಕಾಲ ಮತ್ತು ದೇಶ ಇವೆರಡು ಸಾಪೇಕ್ಷವಾಗಿವೆ’ ಎನ್ನುವ ಮೂಲಕ ತಿಳಿಸಿದರು. (Relativity of space and time.)
ಶಂಕರಾಚಾರ್ಯರೂ ಇದೇ ಮಾತನ್ನು ‘ಮಾಯಾಕಲ್ಪಿತ ದೇಶ,ಕಾಲ ಕಲನಾ’ (=ದೇಶ ಮತ್ತು ಕಾಲ ಇವು ಕೇವಲ ಭ್ರಮೆ.)
ಎಂದು philosophically ಹೇಳಿದ್ದಾರೆ
ಆದುದರಿಂದ ಬೇಂದ್ರೆಯವರ ಈ ಕಾಲಪಕ್ಷಿ ಕೇವಲ ಸಮಯದ ಪಕ್ಷಿ ಅಲ್ಲ. ವಿಶ್ವವನ್ನೇ ತನ್ನ ಚಲನೆಯಲ್ಲಿ ಬದಲಾಯಿಸುತ್ತಿರುವ ಬೃಹತ್ ಚೈತನ್ಯಪಕ್ಷಿ!

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಈ ಚೈತನ್ಯರೂಪಿ ಕಾಲಪಕ್ಷಿಯ ಭೌತಿಕ ವಿವರಗಳನ್ನು ಕೊಡುತ್ತಾರೆ:

ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ಈ ನುಡಿಯನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು:
ಪುಚ್ಚ ಅಂದರೆ ಬಾಲ. ಇದು ಹಕ್ಕಿಯ ಹಿಂದಿರುತ್ತದೆ. ಇದು ಭೂತಕಾಲ. ಆದುದರಿಂದ ಇದರ ಬಣ್ಣ ಕರಿ.
ಈಗ ಕಣ್ಣಿಗೆ ಕಾಣುತ್ತಿರುವ , ಹೊಳೆಯುತ್ತಿರುವ ಗರಿಯ ಬಣ್ಣ ಬಿಳಿ. ಆದುದರಿಂದ ಇದು ವರ್ತಮಾನ ಕಾಲ. ನಮಗೆ ಮುಂದೆ ಕಾಣುವದು ಭವಿಷ್ಯತ್ ಕಾಲ. ಇದು ಉದಯಿಸುತ್ತಿರುವ ಸೂರ್ಯನ ಹಾಗೆ ಕೆಂಪಾಗಿ ಹಾಗೂ ಬಂಗಾರ ಬಣ್ಣದ್ದಾಗಿರುತ್ತದೆ. ಈ ಮೂರೂ ಕಾಲಗಳು ಕಾಲಪಕ್ಷಿಯ ಚಲನೆಯ ಅಂಶಗಳು.

ಎರಡನೆಯದಾಗಿ, ನಮ್ಮ ಪೃಥ್ವಿಯ ಮೇಲಿನ ಜನಾಂಗಗಳನ್ನು ಗಮನಿಸಿರಿ: ಕರಿಯ ಬಣ್ಣದ ಆಫ್ರಿಕನ್ ಜನಾಂಗ, ಬಿಳಿಯ ಬಣ್ಣದ ಕಾ^ಕೇಸಿಯನ್ ಜನಾಂಗ, ಇವೆರಡರ ನಡುವಿನ ಕೆನ್ನನ ಅಂದರೆ brownie ಜನಾಂಗ ಹಾಗೂ ಕೊನೆಯದಾಗಿ ಹಳದಿ ಬಣ್ಣದ ಅಂದರೆ ಹೊನ್ನ ಬಣ್ಣದ ಮಂಗೋಲಿಯನ್ ಜನಾಂಗ.
ಈ ಎಲ್ಲ ಜನಾಂಗಗಳನ್ನು ಈ ಕಾಲಪಕ್ಷಿ ಹೊತ್ತುಕೊಂಡು ಮುನ್ನಡೆದಿದೆ ಎಂದೂ ಅರ್ಥೈಸಬಹುದು.

ಇಂತಹ ಒಂದು ಬೃಹತ್ ಪಕ್ಷಿ ನೋಡಲು ಹೇಗೆ ಕಾಣುತ್ತಿರಬಹುದು?
ಇದರ ಹರಹು ಪೃಥ್ವಿಯನ್ನಷ್ಟೇ ಅಲ್ಲ, ನಮ್ಮ ಆಕಾಶಗಂಗೆಯನ್ನೂ ದಾಟಿದೆ. ಬೇಂದ್ರೆ ಇದರ ಅನಂತ ವೈಶಾಲ್ಯವನ್ನು ಹೀಗೆ ಬಣ್ಣಿಸುತ್ತಾರೆ :

ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ಆಕಾಶ ಅನಂತವಾದದ್ದು. ಅದರ ಬಣ್ಣ ಈ ಕಾಲಪಕ್ಷಿಯದು, ಅಂದರೆ ಕಾಲವೂ ಸಹ ಅನಂತವೇ. ಆ ಅನಂತವಾದ ಆಕಾಶಕ್ಕೆ ರೆಕ್ಕೆ ಒಡೆದರೆ ಹೇಗಿರಬೇಡ!? ಅಂತಹ ಈ ಕಾಲಪಕ್ಷಿಯು ಚಿಕ್ಕೆಗಳ ಮಾಲೆಯನ್ನು ಅಂದರೆ ಆಕಾಶಗಂಗೆಯೇ ಮೊದಲಾದ ವಿಶ್ವಗಳನ್ನು ಸೆಕ್ಕಿಸಿಕೊಂಡಿದೆ.
ಬೇಂದ್ರೆಯವರು ‘ಸಿಕ್ಕಿಸಿಕೊಂಡಿದೆ’ ಎಂದು ಹೇಳಿಲ್ಲ . ಸೆಕ್ಕಿಸಿಕೊಂಡಿದೆ ಎಂದು ಹೇಳಿದ್ದಾರೆ. ಸೆಕ್ಕಿಸಿಕೊಳ್ಳುವದು ಅಂದರೆ ದಿಮಾಕಿನಿಂದ ಸಿಕ್ಕಿಸಿಕೊಳ್ಳುವದು.
ಈ ಕಾಲಪಕ್ಷಿಯ ಕಣ್ಣುಗಳು ಸೂರ್ಯ ಹಾಗೂ ಚಂದ್ರ ಎನ್ನುವ ಎರಡು ಪ್ರಭಾಬಿಂಬಗಳು. ಸೂರ್ಯ ಹಾಗೂ ಚಂದ್ರರನ್ನು ನಾವು ಕಾಲಗಣನೆಗೆ ಬಳಸುತ್ತೇವೆ. ಆದುದರಿಂದ ಈ ಪ್ರಭಾಬಿಂಬಗಳು ಕಾಲಪಕ್ಷಿಯ ಕಣ್ಣುಗಳು ಎಂದು ಹೇಳುವದು ಯಥಾರ್ಥವಾಗಿದೆ.
ಇಂತಹ ಅದ್ಭುತ ನೋಟದ ಈ ಕಾಲಪಕ್ಷಿಯು ಮಾಡುತ್ತಿರುವದೇನು?
ಅದನ್ನು ನಾಲ್ಕನೆಯ ನುಡಿಯಲ್ಲಿ ಬೇಂದ್ರೆಯವರು ಈ ರೀತಿಯಾಗಿ ಬಣ್ಣಿಸುತ್ತಾರೆ:

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಸಣ್ಣ ಪುಟ್ಟ ರಾಜ್ಯಗಳನ್ನು, ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹುಟ್ಟಿಸಿ ಬೆಳೆಯಿಸುವದೇ ಈ ಕಾಲಪಕ್ಷಿ. ಅವುಗಳ ತೆನೆ ಒಕ್ಕುವದು ಅಂದರೆ ಅವುಗಳ ಫಲಿತವನ್ನು ಕೊಯ್ಲು ಮಾಡುವದು ಈ ಕಾಲಪಕ್ಷಿಯ ಕೆಲಸ. ಈ ತರಹ ಬೆಳೆದು ನಿಂತ ತೆನೆಗಳನ್ನು ಮುಕ್ಕುವದೂ ಸಹ ಈ ಕಾಲಪಕ್ಷಿಯೇ! (ಸುಗ್ಗಿಯ ಸಮಯದಲ್ಲಿ ಹಕ್ಕಿಗಳು ಹೊಲದಲ್ಲಿಯ ಕಾಳುಗಳನ್ನು ಮುಕ್ಕುವದನ್ನು ನೆನಪಿಸಿಕೊಳ್ಳಿರಿ.) ಭೂಮಂಡಲವೆಲ್ಲ ಈ ಹಕ್ಕಿಯ ಆಹಾರವೇ. ಧರಣಿಮಂಡಲದಲ್ಲಿರುವ ಏಳೂ ಖಂಡಗಳನ್ನು ಈ ಹಕ್ಕಿ ತೇಲಿಸುತ್ತದೆ ಹಾಗೂ ಮುಳುಗಿಸುತ್ತದೆ. ಒಂದು ಕಾಲದಲ್ಲಿ ಏಶಿಯಾ ಖಂಡ ಎಲ್ಲಕ್ಕೂ ಮೇಲೆ ತೇಲುತ್ತಿತ್ತು,ಇದೀಗ ಯುರೋಪ ಹಾಗೂ ಅಮೇರಿಕಾ ಖಂಡಗಳು ಮೇಲೆದ್ದಿವೆ!
(ಭೌತಿಕವಾಗಿಯೂ ಸಹ ಇಡೀ ಭೂಪ್ರದೇಶವು ಮೊದಲು ಗೊಂಡವನ ಖಂಡವೆನ್ನುವ ಒಂದೇ ಭೂಮಿಯಾಗಿದ್ದು, ಅನಂತರ ತುಂಡಾಗಿ ಏಳು ಖಂಡಗಳಾದವು.)
ಈ ಖಂಡಗಳಿಗೆ ತಾವು ಸಾರ್ವಭೌಮರೆಂದುಕೊಂಡು ಬೀಗುತ್ತಿರುವವರ ನೆತ್ತಿಯನ್ನು ಕುಕ್ಕಿ ಅವರ ಅಹಂಕಾರವನ್ನು ಈ ಕಾಲಪಕ್ಷಿ ಮೆಟ್ಟಿ ನಿಂತಿದೆ.
(ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶ್ ಸಾಮ್ರಾಟರನ್ನು ಅಣಕಿಸುವ ಈ ಸಾಲುಗಳನ್ನು ಬರೆಯಲು ಯಾವುದೇ ಕವಿಗೂ ಅಪಾರ ಧೈರ್ಯ ಬೇಕು. ಸಾಹಿತ್ಯಸಮ್ಮೇಳನದಲ್ಲಿ ಈ ಕವನವನ್ನು ಕೇಳುತ್ತಿದ್ದ ಬಿ.ಎಮ್.ಶ್ರೀಕಂಠಯ್ಯನವರು ಗಾಬರಿಗೊಂಡರೆಂದು ದಾಖಲೆಗಳಿವೆ.)

ಈ ವಿಶ್ವ, ಈ ಭೂಮಿ, ಭೂಮಿಯ ಮೇಲಿನ ಜೀವಜಂತುಗಳು ಇವೆಲ್ಲವುಗಳ ಉಗಮವಾಗಿ ಯಾವ ಕಾಲವಾಯಿತೊ? ಹೊಸ ಯುಗಕ್ಕೊಮ್ಮೆ ಆ ಯುಗದ ಹಣೆಬರಹವನ್ನು ಬರೆಯುವದು, ಹಳೆಯ ಯುಗದ ಹಣೆಬರಹವನ್ನು ಒರೆಸುವದು ಈ ಕಾಲಪಕ್ಷಿಯ ಕೆಲಸ. ಭೂಮಿಯ ಮೇಲಿನ ಶಿಲಾಯುಗ, ಧಾತುಯುಗ, ಪರಮಾಣುಯುಗ ಇವೆಲ್ಲವೂ ಕಾಲದ ಅಧೀನವೇ.
ಆದುದರಿಂದ ಈ ಕಾಲಪಕ್ಷಿಯ ಮಹಿಮೆ ಅಪಾರ. ಅದು ಯುಗ-ಯುಗಗಳನ್ನು, ಮನ್ವಂತರಗಳನ್ನು ತನ್ನ ಆಧೀನದಲ್ಲಿಟ್ಟುಕೊಂಡಿದೆ:

ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲಪಕ್ಷಿಯ ಕೆಲಸ ಕೇವಲ ವಿನಾಶಕಾರಿಯಲ್ಲ. ಹೊಸ ಮನ್ವಂತರದ ಶುಭೋದಯವಾಗುವದು ಈ ಕಾಲಪಕ್ಷಿಯಿಂದಲೇ. ಯಾಕೆಂದರೆ ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಪ್ರಾಣವಾಯುವನ್ನು ಕೊಟ್ಟು ಈ ನಿರ್ಜೀವ ಮನ್ವಂತರಗಳಿಗೆ ಚೈತನ್ಯ ನೀಡುವುದು ಅಂದರೆ ಸಜೀವಗೊಳಿಸುವದು ಈ ಕಾಲಪಕ್ಷಿಯ ಕೆಲಸ. ನಮ್ಮ ಭೂಮಂಡಲದಲ್ಲಿ ಜರುಗಿದ ಸಾಂಸ್ಕೃತಿಕ ಬದಲಾವಣೆಗಳು, ಪುನಶ್ಚೇತನಗಳು (Renaissances) ಎಲ್ಲವೂ ಈ ಕಾಲಪಕ್ಷಿಯ ಮಹಿಮೆಯೇ! ಹೊಸ ಕಾಲದ ಎಳೆಯ ಮಕ್ಕಳಿಗೆ ಹಾರೈಸಿ ಬೆಳೆಸುವದು ಈ ಕಾಲಪಕ್ಷಿಯೇ. ಇದನ್ನೆಲ್ಲ ಪರಿವೀಕ್ಷಿಸುವ ಕಣ್ಣು ನಮಗೆ ಬೇಕು. ಅಂತಲೇ ಬೇಂದ್ರೆ ನಮ್ಮನ್ನು ಕೇಳುತ್ತಿದ್ದಾರೆ:
“ಹಕ್ಕಿ ಹಾರುತಿದೆ ನೋಡಿದಿರಾ?”

ಮಾನವ ದೃಷ್ಟಿ ತತ್ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಕವಿಯ ನೋಟ ಕಾಲಾತೀತ, ದೇಶಾತೀತ.
ಮುಂದಿನ ನುಡಿಯಲ್ಲಿ ಬೇಂದ್ರೆಯವರು ಕಾಲಪಕ್ಷಿಯ ಲಾಘವದ ಭವಿಷ್ಯ ನುಡಿಯುತ್ತಿದ್ದಾರೆ:

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಕಾಲದ ಓಟದಲ್ಲಿ ಬೆಳ್ಳಿ ಅಂದರೆ ಶುಕ್ರಗ್ರಹವು ಮನುಷ್ಯನಿಗೆ ಕೇವಲ ಹಳ್ಳಿಯಾಗಬಹುದು, ಚಂದ್ರಲೋಕವು ಬರಿ ಊರಾಗಬಹುದು ಹಾಗೂ ಮಂಗಳಲೋಕವು ಭೂಮಿಗೆ ಅಂಗಳವಾಗಬಹುದು. ಮಾನವನಿಗೆ ಈ ಆಕಾಶಕಾಯಗಳು ಆಡಲು, ಹಾಡಲು ಹಾಗೂ ಹಾರಾಡಲು platforms ಆಗಬಹುದು!
ಮಾನವನು ಭೂಮಿಯಿಂದ ಇತರ ಗ್ರಹ, ಉಪಗ್ರಹಗಳಿಗೆ ಸಂಚರಿಸಬಹುದಾದ ದಾರ್ಶನಿಕ ಮುನ್ನೋಟ ಈ ನುಡಿಯಲ್ಲಿ ವ್ಯಕ್ತವಾಗಿದೆ.

ಕೊನೆಯ ನುಡಿಯಲ್ಲಿ ಬೇಂದ್ರೆಯವರು ಈ ಕಾಲಪಕ್ಷಿಯ ಹಾರಾಟ ಮಾನವನ ಕಲ್ಪನೆಗೆ ಮೀರಿದ್ದು ಎನ್ನುವದನ್ನು ವ್ಯಕ್ತಪಡಿಸುತ್ತಾರೆ:

ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ?

ವಿಶ್ವಗಳು ಅನೇಕವಿರಬಹುದು. ಈ ವಿಶ್ವಗಳ ದಿಕ್ಕುಗಳು ಅನಂತವಾಗಿರಬಹುದು. ಆದರೆ ಈ ಕಾಲಪಕ್ಷಿಯು ಈ ಎಲ್ಲ ಮಂಡಲಗಳ ಅಂಚನ್ನು ಮುಟ್ಟಿದೆ. ಇಷ್ಟೇ ಅಲ್ಲ, ಈ ಅನಂತತೆಯ ಆಚೆಗೂ ಸಹ ಇದು ತನ್ನ ಚುಂಚನ್ನು ಚಾಚಿದೆ. ಅಬ್ಬಾ, ಎಂತಹ ಕಲ್ಪನೆ !
ಈ ಕಾಲಪಕ್ಷಿಯ ಮನೋಗತ ನಮಗೆ ಅರ್ಥವಾಗಬಹುದೆ? ಇದು ಅಸಾಧ್ಯ ಎನ್ನುವ ಹೊಳಹನ್ನು ‘ಬಲ್ಲರು ಯಾರಾ’ ಎನ್ನುವ ಪ್ರಶ್ನೆಯ ಮೂಲಕ ಬೇಂದ್ರೆ ವ್ಯಕ್ತಪಡಿಸುತ್ತಾರೆ.
ಬ್ರಹ್ಮಾಂಡ ಅಂದರೆ ಬ್ರಹ್ಮದೇವನು ಸೃಷ್ಟಿಸಿದ ಬೃಹತ್ ಅಂಡ. ಆ ಬ್ರಹ್ಮಸೃಷ್ಟಿಗಳನ್ನೇ ಈ ಕಾಲಪಕ್ಷಿ ಒಡೆಯಲೆಂದು ಹೊಂಚು ಹಾಕಿ ಹಾರುತ್ತಿದೆಯೆ? ಇರಬಹುದು, ಅಥವಾ ಅಂಡವು ಒಡೆದಾಗಲೇ ಹೊಸ ಸೃಷ್ಟಿ ಹೊರಗೆ ಬರುವದು ಎನ್ನುವ ಅರ್ಥವೂ ಇಲ್ಲಿ ಇರಬಹುದು.
ಇದಕ್ಕೆ ಉತ್ತರ : “ಬಲ್ಲರು ಯಾರಾ?”

ಇಂತಹ ಹಕ್ಕಿ ಹಾರುತ್ತಿರುವದನ್ನು ನೀವು ನೋಡಿದಿರಾ?
ಬಹುಶ: ಈ ಕಾಣ್ಕೆ, ಈ ನೋಟ ವರಕವಿಗೆ ಮಾತ್ರ ಸಾಧ್ಯ!

ಈ ಕವನದ ಕೆಲವು ವೈಶಿಷ್ಟ್ಯಗಳು:
ಈ ಕವನವನ್ನು ಓದಿದಾಗ ಮೂಡುವ ಭಾವನೆ ಎಂದರೆ ಬೆರಗು.
ವಿಸ್ಮಯರಸವೇ ಈ ಕವನದ ಪ್ರಧಾನ ರಸ. ಈ ರಸವನ್ನು ಬೇಂದ್ರೆಯವರು ಹೇಗೆ ಸಾಧಿಸಿದ್ದಾರೆ?
ಕವನದ ಪ್ರತಿಯೊಂದು ನುಡಿಯ ಕೊನೆಯ ಸಾಲು “ಹಕ್ಕಿ ಹಾರುತಿದೆ ನೋಡಿದಿರಾ?” ಎಂದಾಗಿರುವದನ್ನು ನೀವು ಗಮನಿಸಿರಬಹುದು. ಕವನದ ಏಳೂ ನುಡಿಗಳಲ್ಲಿ ಇದು ಆವರ್ತಿಸಿದೆ. ಆಗಸದಲ್ಲಿ ಹಾರುವ ಹಕ್ಕಿಯೊಂದನ್ನು ನೋಡಿದ ಹುಡುಗನೊಬ್ಬ ಬೆರಗುಪಟ್ಟು ತನ್ನ ಗೆಳೆಯನೊಬ್ಬನಿಗೆ ಆ ಹಕ್ಕಿಯನ್ನು ತೋರಿಸುತ್ತ, ಬಣ್ಣಿಸುತ್ತ, ಪದೇ ಪದೇ ಉದ್ಗರಿಸುವ ಪ್ರಶ್ನೆಯಂತಿದೆ ಈ ಸಾಲು. ಆ ಹುಡುಗನ ಬೆರಗು ಅವನ ಗೆಳೆಯನಿಗೂ ಸಹ ಹಬ್ಬುತ್ತದೆ.
ಇದು ಬೇಂದ್ರೆಯವರು ವಿಸ್ಮಯರಸವನ್ನು ಈ ಕವನದಲ್ಲಿ ಸಾಧಿಸಿದ ವಿಧಾನ.

ಕವನಕ್ಕೆ ಅವಶ್ಯವಾದ ಛಂದಸ್ಸನ್ನು ಆಯ್ಕೆ ಮಾಡುವದು, ಕವನದಲ್ಲಿ ಲಯವನ್ನು ಸಾಧಿಸುವದು ಇವು ಬೇಂದ್ರೆಯವರ ಸಹಜಸಿದ್ಧಿಗಳು. ಈ ಕವನದ ನುಡಿಗಳಲ್ಲಿ ಐದು ಸಾಲುಗಳಿವೆ. ಕವನದಲ್ಲಿ ನಾಲ್ಕು ಸಾಲುಗಳಿರುವದು ಸಹಜ. ದಾಸರ ಹಾಡುಗಳಿಂದ ಹಿಡಿದು, ನವೋದಯದ ಭಾವಗೀತೆಗಳವರೆಗೆ, ಕನ್ನಡದ ಕವನಗಳು ಬಹುತೇಕವಾಗಿ ಚೌಪದಿಗಳೇ ಆಗಿವೆ. ನಡುಗನ್ನಡದ ಕವಿಗಳು ಷಟ್ಪದಿಗಳನ್ನು ರಚಿಸಿದ್ದಾರೆ ನಿಜ, ಆದರೆ ಅವೂ ಸಹ ಚೌಪದಿಗಳೇ. ಉದಾಹರಣೆಗೆ ಚಾಮರಸನ ಪ್ರಭುಲಿಂಗಲೀಲೆಯ ಈ ಪದ್ಯವನ್ನು ಗಮನಿಸಿರಿ:

ಹಿಡಿಹಿಡಿದುಕೊಂಡರ್ತಿಯಲಿ ಬೆಂ-
ಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು, ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ||

ಭಾಮಿನೀಷಟ್ಪದಿಯ ಈ ನುಡಿಯನ್ನು ಹೀಗೂ ಬರೆಯಬಹುದು:
“ ಹಿಡಿಹಿಡಿದುಕೊಂಡರ್ತಿಯಲಿ, ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ, ಮುದ್ದುತನ ಮಿಗೆ ಮಾಯೆ ತನ್ನಂತೆ|
ನಡೆಯಕಲಿಸಿದಳಂಚೆವಿಂಡಿಗೆ, ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ ”||
ಇದೀಗ ಚೌಪದಿಯಾಯಿತು!

ಹೀಗಿರುವಾಗ, ಬೇಂದ್ರೆಯವರು ಕವನವನ್ನು ಚೌಪದಿಯನ್ನಾಗಿ ಬರೆಯದೆ, ಪ್ರತಿಯೊಂದು ನುಡಿಗೂ ಐದನೆಯ ಸಾಲೊಂದನ್ನು ಜೋಡಿಸಿದ್ದಾರೆ. ಐದನೆಯ ಸಾಲಿನಲ್ಲಿ ವಿಸ್ಮಯವನ್ನು ಸೂಚಿಸುವ ಆವರ್ತಕ ಸಾಲೊಂದನ್ನು ಇಟ್ಟಿದ್ದಾರೆ.
ಹೀಗೆ ಮಾಡುವಾಗ ಕಾವ್ಯದ ಲಯವು ಕೈತಪ್ಪಿ ಹೋಗಬೇಕು. ಆದರೆ ಏಳು ನುಡಿಗಳ ಈ ಕವನದಲ್ಲಿ ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೂ ಕಾವ್ಯದಲಯವು ಸಮಪ್ರವಾಹದಲ್ಲಿ ಹರಿದಿದೆ.

“ಪಾತರಗಿತ್ತಿ ಪಕ್ಕ”ದಲ್ಲಿ ಪುಟ್ಟ ಸಾಲುಗಳ ಮೂಲಕ, ಎರಡೇ ಸಾಲುಗಳ ನುಡಿಯ ಮೂಲಕ, ದೀರ್ಘವಾಗಿರುವ ಇಡೀ ಕವನವನ್ನೇ ಚಿಕ್ಕ ಚಿಟ್ಟೆಯನ್ನಾಗಿ ಪರಿವರ್ತಿಸಿದ ಕವಿ, ಇಲ್ಲಿ ಚೌಪದಿಯ ಬಂಧವನ್ನು ಕಿತ್ತೊಗೆದು, ಕಾವ್ಯದಲಯವನ್ನು ಹಿಡಿತದಲ್ಲಿ ಇಟ್ಟುಕೊಂಡೇ ಕಾಲಪಕ್ಷಿಯ ವಿಶಾಲತೆಯನ್ನು ಓದುಗನ ಅನುಭವಕ್ಕೆ ತರುತ್ತಾರೆ.

ಇನ್ನು ಬೇಂದ್ರೆಯವರ ಕವನಗಳ ಇತರ ಲಕ್ಷಣಗಳು ಈ ಕವನದಲ್ಲೂ ಕಾಣುತ್ತವೆ.
ವಾಸ್ತವತೆಯನ್ನು ಚಮತ್ಕಾರಿಕವಾಗಿ ಬಳಸುವ ಅವರ ಪ್ರತಿಭೆಯನ್ನು ಇಲ್ಲೂ ಕಾಣಬಹುದು. ಉದಾಹರಣೆಗೆ ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎನ್ನುವಾಗಿನ ಕಾಲಮಾನದ ವಾಸ್ತವತೆಯನ್ನು ಗಮನಿಸಬಹುದು.

ಬೇಂದ್ರೆಯವರ ಕವನಗಳಲ್ಲಿ ಬರುವ ಪ್ರತೀಕಗಳು ಸಂಕೀರ್ಣವಾಗಿರುತ್ತವೆ. ಕಾಲಪಕ್ಷಿಯ ಪುಚ್ಚ ಹಾಗೂ ಗರಿಗಳ ಪ್ರತೀಕವನ್ನು ಉದಾಹರಣೆಯಾಗಿ ಗಮನಿಸಬಹುದು.

ಬೇಂದ್ರೆಯವರ ಕಲ್ಪನೆ ಅಗಾಧವಾದದ್ದು. ಕಾಲಪಕ್ಷಿಯ ವರ್ಣನೆ, ಅದರ ಆಹಾರ,ಅದರ ಕಾರ್ಯಸೂಚಿಯನ್ನು ಬೇಂದ್ರೆಯವರು ಹೆಣೆದ ಪರಿಯನ್ನು ಗಮನಿಸಿದರೆ, ಅವರ ಕಲ್ಪನಾಸಾಮರ್ಥ್ಯದ ಅರಿವಾಗುವದು. ಇಂತಹ ಅಪಾರ ಕಲ್ಪನೆಯನ್ನು ವ್ಯವಸ್ಥಿತವಾಗಿ ಹೆಣೆಯುತ್ತ, ಕವನದ focus ಅನ್ನು ಕಾಯ್ದುಕೊಂಡು ಹೋಗುವದು ಪ್ರತಿಭಾವಂತ ಕವಿಗೇ ಸಾಧ್ಯ.

ಇಷ್ಟೆಲ್ಲ ಗುಣಗಳಿದ್ದ ಈ ಕವನದಲ್ಲಿ ದೋಷಗಳೂ ಇವೆ.
ಓದುಗನಲ್ಲಿ ಕಾಲಪಕ್ಷಿಯ ಬಗೆಗೆ ಬೆರಗು ಹುಟ್ಟುತ್ತದೆಯೇ ಹೊರತು, ಕಾಲಪಕ್ಷಿಯ ಪ್ರಧಾನಗುಣವಾದ powerಅನ್ನು ಆತ ಅನುಭವಿಸುವದಿಲ್ಲ. ಕಾಲಪಕ್ಷಿಯ powerಅನ್ನು ತಿಳಿಸಲು, ಬೇಂದ್ರೆ ಮೂರು-ನಾಲ್ಕು ನುಡಿಗಳನ್ನು ಬರೆದಿದ್ದಾರೆ. ಆದರೆ ಈ ಸಾಲುಗಳು ಕೇವಲ ವಾಚ್ಯವಾಗಿವೆ. ಕಾಲಪಕ್ಷಿಯ ಶಕ್ತಿ ಓದುಗನ ಅನುಭವಕ್ಕೆ ಬರುವದಿಲ್ಲ.

ಶಂಕರಾಚಾರ್ಯರು ತಮ್ಮ ಸ್ತೋತ್ರವೊಂದರಲ್ಲಿ ಕಾಲದ ಮಹಿಮೆಯನ್ನು ಹೀಗೆ ಬಣ್ಣಿಸಿದ್ದಾರೆ:
“ಕಾಲೋ ಜಗದ್ ಭಕ್ಷಕ:” (=ಕಾಲವು ವಿಶ್ವಗಳನ್ನು ಕಬಳಿಸುತ್ತದೆ.)
ಈ ಒಂದು ಸಾಲಿನಲ್ಲಿ ಅನುಭವಕ್ಕೆ ಬರುವ ಕಾಲದ ಶಕ್ತಿಯು, ಬೇಂದ್ರೆಯವರ ೩೫ ಸಾಲುಗಳಲ್ಲಿ ಬರುವದಿಲ್ಲವೆನ್ನುವದು ಕವನದ ಶಕ್ತಿಹೀನತೆಯ ನಿದರ್ಶನವಾಗಿದೆ.

ಹೀಗಾಗಿ ಬೇಂದ್ರೆಯವರ ಈ ಕವನವು ಉತ್ತಮ ಲಕ್ಷಣಗಳಿದ್ದರೂ ಸಹ ರಸಸೃಷ್ಟಿಯಲ್ಲಿ ಸೋತಿದೆ ಎಂದು ಹೇಳಬೇಕಾಗುತ್ತದೆ.

Saturday, June 13, 2009

ಸೋರುತಿಹದು ಮನಿಯ ಮಾಳಿಗಿ

ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:

“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”

ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.

ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ ||ಪಲ್ಲ||

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||೧||

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||೨||

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||೩||

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||೪||

ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.

ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.

ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||

ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?

ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||

ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||

ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.

ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||

ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.

ಈ ರೀತಿಯಾಗಿ ಶರೀಫರ ಈ ಹಾಡು ಸತ್-ವಿಶ್ವಾಸದೊಂದಿಗೆ ಮುಕ್ತಾಯವಾಗಿದೆ.

Thursday, May 28, 2009

ಇವ ನಮ್ಮವ

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿಯೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಘಟನೆಯಾಗಿದೆ. ಈ ಘಟನೆಯ ಕೇಂದ್ರವ್ಯಕ್ತಿಗಳಲ್ಲಿ ಬಸವಣ್ಣನವರು ಅಗ್ರಗಣ್ಯರು. ಬಸವಣ್ಣನವರ ವ್ಯಕ್ತಿತ್ವದಿಂದ ಬೆರಗುಗೊಂಡು, ಪ್ರಭಾವಿತರಾಗಿ ಅವರ ಬಗೆಗೆ ಸಾಹಿತ್ಯ ರಚಿಸಿದವರು ಅನೇಕರು. ಅವರ ಜೀವನಚರಿತ್ರೆಯನ್ನು ಕನ್ನಡದಲ್ಲಿ ರಚಿಸಿದವರಲ್ಲಿ ಹರಿಹರನು ಮೊದಲಿಗನು. ಆಧುನಿಕರಲ್ಲಿ, ದ. ರಾ. ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದರೂ ಸಹ ಅದು ಪ್ರಕಾಶನಗೊಳ್ಳಲಿಲ್ಲ. ಆಬಳಿಕ ಅ.ನ.ಕೃಷ್ಣರಾಯರು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ರಚಿಸಿದರೆ, ಪುಟ್ಟಸ್ವಾಮಿಗಳು ‘ಕಲ್ಯಾಣ ಕ್ರಾಂತಿ’ ಕಾದಂಬರಿಯನ್ನು ಬರೆದರು. ಶರಣ ಚಳುವಳಿಯನ್ನು ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು ಪ್ರಯತ್ನಿಸಿ ಲಂಕೇಶ ಹಾಗೂ ಶಿವಪ್ರಕಾಶ ಅವರು ‘ಸಂಕ್ರಾಂತಿ’ ಹಾಗು ’ಮಹಾಚೈತ್ರ’ ನಾಟಕಗಳನ್ನು ಬರೆದರು. ಗಿರೀಶ ಕಾರ್ನಾಡರು ತಾವು ರಚಿಸಿದ ನಾಟಕಕ್ಕೆ, ಬೇಂದ್ರೆಯವರ ಅನುಮತಿಯೊಂದಿಗೆ ’ತಲೆದಂಡ’ ಎನ್ನುವ ಹೆಸರನ್ನೇ ಬಳಸಿಕೊಂಡರು.

ಶ್ರೀ ವ್ಯಾಸ ದೇಶಪಾಂಡೆಯವರ “ಇವ ನಮ್ಮವ ” ನಾಟಕವು ಈ ಸರಣಿಯಲ್ಲಿಯೆ ಇತ್ತೀಚಿನ ಆದರೆ ಅತ್ಯಂತ ಭಿನ್ನವಾದ ನಾಟಕ. ೨೦೦೬ನೆಯ ಇಸವಿಯಲ್ಲಿ ರಚಿತವಾದ ಈ ನಾಟಕವು ಈವರೆಗೆ ಅನೇಕ ರಂಗಪ್ರಯೋಗಗಳನ್ನೂ ಕಂಡಿದೆ.

“ಇವ ನಮ್ಮವ ” ನಾಟಕವು ಕನ್ನಮಾರಿ ಎನ್ನುವ ಕಳ್ಳನೊಬ್ಬನು ಬಸವಣ್ಣನ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿ, ಸಿಕ್ಕಿಬಿದ್ದು, ಆ ಬಳಿಕ ಪರಿವರ್ತನೆಗೊಂಡು ಶರಣನಾದವನ ಕತೆಯನ್ನು ಆಧರಿಸಿದೆ. ಆದರೆ ಇದಿಷ್ಟೇ ಕತೆಯ ಮೂಲಕ ಲೇಖಕರು ಆ ಕಾಲದ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆಯನ್ನು ಸಮಗ್ರವಾಗಿ ಮಾಡಿದ್ದಾರೆ. ಇದಲ್ಲದೆ ಆ ಕಾಲದ ಜನಸಾಮಾನ್ಯರ, ಶರಣಸಂಕುಲದ, ದುಡ್ಡುಳ್ಳವರ ಹಾಗೂ ಆಡಳಿತವರ್ಗದ ಅರ್ಥಪೂರ್ಣ ವಿಶ್ಲೇಷಣೆಯೂ ಇಲ್ಲಿದೆ. (ಆ ವಿಶ್ಲೇಷಣೆಯು ಇಂದಿಗೂ ಹಾಗೂ ಎಂದೆಂದಿಗೂ ನಮ್ಮೆಲ್ಲ ಸಮಾಜಗಳಿಗೆ ಅನ್ವಯಿಸುವಂತಿದೆ!)

ನಾಟಕದ ಪಾತ್ರಗಳು:
ಕನ್ನಮಾರಿ:
ನಾಟಕವನ್ನು ಮೊದಲಿನಿಂದ ಕೊನೆಯವರೆಗೂ ವ್ಯಾಪಿಸಿಕೊಂಡ ಕನ್ನಮಾರಿಯು ಈ ನಾಟಕದ ಮಹತ್ವದ ಪಾತ್ರ. ಆದರೂ ಆತ ನಾಟಕದ ನಾಯಕನಲ್ಲ. ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾಟಕದ ಪ್ರತಿಯೊಂದು ಚಿಕ್ಕ ಪಾತ್ರವೂ ಇಲ್ಲಿ ಮಹತ್ವದ ಪಾತ್ರವೇ. ಆದರೆ ನಾಟಕದ ನಾಯಕಪಟ್ಟ ಲಭ್ಯವಾಗುವದು ಬಸವಣ್ಣನಿಗೇ.

ಈವರೆಗೆ, ಕನ್ನಮಾರಿಯು ರಚಿಸಿದ ಮೂರು ವಚನಗಳು ಲಭ್ಯವಾಗಿವೆ. ಆತನ ಎರಡು ವಚನಗಳನ್ನು ಲೇಖಕರು ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಆರಂಭದಲ್ಲಿಯೇ ಕನ್ನಮಾರಿಯು ತನ್ನ ಬಂಟರೊಡನೆ ರಂಗಪ್ರವೇಶ ಮಾಡುತ್ತ, ತನ್ನ ಕನ್ನಗಾರಿಕೆಯನ್ನು ಸಮರ್ಥಿಸುವ ತರ್ಕವನ್ನು ಪ್ರೇಕ್ಷಕಕರ ಎದುರಿಗೆ ಸಾರುತ್ತಾನೆ. ಬಸವಣ್ಣನವರು ಒಂದು ಧ್ರುವವಾದರೆ, ಕನ್ನಮಾರಿಯು ವಿರುದ್ಧ ಧ್ರುವ. ಕನ್ನಮಾರಿಯ ವಿಚಾರ ಹಾಗೂ ತರ್ಕಗಳನ್ನು ಎದುರಿಸುವದು ಸರಳವಲ್ಲ. ಕಲ್ಯಾಣರಾಜ್ಯವನ್ನೇ ಕಳ್ಳರ ರಾಜ್ಯವೆಂದು ಕರೆಯುತ್ತಾನೀತ.
ರಾಜ, ಆತನ ಅಧಿಕಾರಿಗಳು, ಸಮಾಜದ ಶ್ರೇಷ್ಠಿಗಳು ಇವರೆಲ್ಲ ಹಗಲುಗಳ್ಳರು, ಬಲುಗಳ್ಳರು ಎನ್ನುವದು ಇವನ ಅಭಿಪ್ರಾಯ. ಇವರೆಲ್ಲರೂ ದುಡಿಯುವ ಬಡವರನ್ನು ಶೋಷಿಸುತ್ತಾರೆ. ತಾನು ಉಳ್ಳವರ ಸಂಪತ್ತನ್ನು ಇಲ್ಲದವರಲ್ಲಿ ಹಂಚುತ್ತೇನೆ ಎನ್ನುವದು ಇವನ ಸಮರ್ಥನೆ!
ಸಮಾಜದ ವಿವಿಧ ಸ್ತರಗಳ ಜನತೆಯೊಡನೆ ಈತ ಮಾಡುವ ಸಂಭಾಷಣೆ ಹಾಗೂ ಮಂಡಿಸುವ ತರ್ಕಗಳ ಮೂಲಕ ಈತನ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅನುಭವ ಮಂಟಪದಲ್ಲಿಯ ಶರಣರಿಗೇ ಎದುರಾಡಬಲ್ಲ ಧಾರ್ಷ್ಟ್ಯ ಈತನದು.
ಕನ್ನಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಸವಣ್ಣನವರ ವ್ಯಕ್ತಿತ್ವವು ಬೆಳಗಿದೆ. ಕನ್ನಮಾರಿಗೆ ಗೊತ್ತಿರುವ ತರ್ಕ ಹಾಗೂ ವಿಚಾರವೆಲ್ಲ ಬಸವಣ್ಣನವರಿಗೂ ಗೊತ್ತಿದೆ. ಅವರೂ ಸಹ ಕಲ್ಯಾಣಪ್ರಭುತ್ವವನ್ನು ಕಳ್ಳರ ಪ್ರಭುತ್ವವೆಂದೇ ಕರೆಯುತ್ತಾರೆ. ಆದರೆ ಕೇವಲ ತರ್ಕದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲವೆನ್ನುವದು ಅವರಿಗೆ ಗೊತ್ತಿದೆ.

ನಾಟಕದ ಆರಂಭದಲ್ಲಿ, ಮೊದಲಿಗೆ ಕನ್ನಮಾರಿಯ ಕೈಯಲ್ಲಿ ಸಿಗುವವರು ಭೋಳೇ ಜಂಗಮರು. ಅವರ ಭೋಳೇತನವನ್ನು ಹಂಗಿಸಿ ಈತ ಮಾತನಾಡುತ್ತಾನೆ. ಅವರೋ ಬಸವಣ್ಣನನ್ನು ಪವಾಡಪುರುಷನೆಂದು ಭಾವಿಸಿದವರು. ವಚನಗಳನ್ನು ಸಾರುವದರ ಮೂಲಕ ಕೆಡುಕರನ್ನು ಸುಧಾರಿಸಬಹುದೆನ್ನುವ ನಂಬಿಕೆ ಇಟ್ಟುಕೊಂಡವರು. ಜಂಗಮವೃತ್ತಿಯನ್ನೇ ಹೊಟ್ಟೆಪಾಡಿನ ಕಾಯಕ ಮಾಡಿಕೊಂಡವರು! ಹಾಗೂ ಪ್ರಸಂಗ ಬಂದಾಗ ಪ್ರಭುತ್ವಕ್ಕೆ ದಂಡನಮಸ್ಕಾರವನ್ನೂ ಹಾಕಬಲ್ಲವರು.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು, ಕನ್ನಮಾರಿಯು ಈ ಜಂಗಮರನ್ನೇ ಠಕ್ಕತನದಿಂದ ಕಟ್ಟಿಹಾಕಿ ಅವರೆಲ್ಲರ ವಸ್ತ್ರಭೂಷಣಗಳನ್ನು ಅಪಹರಿಸುವನು. ತಮ್ಮ ಸುರಕ್ಷತೆಯ ಉದ್ದೇಶದಿಂದ ಕನ್ನಮಾರಿ ಹಾಗೂ ಅವನ ಬಂಟರು ಶರಣರ ವೇಷದಲ್ಲಿ ಬಸವಣ್ಣನ ಮಹಾಮನೆಗೆ ತೆರಳುತ್ತಿರುವಾಗ ಅವರಿಗೆ ಭೆಟ್ಟಿಯಾಗುವಳು ಒಬ್ಬ ಹುಲ್ಲು ಹೊರುವ ಹೆಣ್ಣುಮಗಳು. ಸಮಾಜದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತನ್ನ ಕೆಳಸ್ತರವನ್ನು ಒಪ್ಪಿಕೊಂಡು ಬಾಳುತ್ತಿರುವ ಈಕೆ ಬಸವಣ್ಣ ತನ್ನನ್ನು ಮೇಲೆತ್ತಿದ ರೀತಿಯನ್ನು ಕನ್ನಮಾರಿಗೆ ಹೇಳಿದಾಗ, ಆತ ಇವರೆಲ್ಲ ಮರಳು ಜನ ಎಂದು ಅಪಹಾಸ್ಯ ಮಾಡುತ್ತಾನೆ.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕನ್ನಮಾರಿ ಬಸವಣ್ಣನ ಮಹಾಮನೆಗೇ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಶರಣರು ದೈನಂದಿನ ಚರ್ಚೆಯನ್ನು ನಡೆಸಿರುತ್ತಾರೆ. ಕನ್ನಮಾರಿ ತನ್ನ ತಾರ್ಕಿಕ ಅಹಂಭಾವದಲ್ಲಿ, ಅವರಿಗೆ ಉದ್ಧಟ ಪ್ರಶ್ನೆಗಳನ್ನು ಕೇಳುತ್ತಾನೆ.
ಇದಿಷ್ಟು ಕನ್ನಮಾರಿಯ ಮೊದಲ ವ್ಯಕ್ತಿತ್ವ.
ಇಂತಹ ಕನ್ನಮಾರಿ ಶರಣನಾಗಿ ಪರಿವರ್ತಿತನಾಗುವದು ರೋಚಕವಾದ ಘಟನೆ.
ಕನ್ನಮಾರಿಯ ಮಾತುಗಳಲ್ಲಿಯೇ ಹೇಳುವದಾದರೆ :-
“ ಕಳ್ಳರು ಯಾರು, ಕಳ್ಳರ ಕಳ್ಳರು ಯಾರು, ಬಲುಗಳ್ಳರು ಯಾರಂತ ನಾನು ನಿಮ್ಮ ಮುಂದೆ ಒಗಟು ಇಟ್ಟೆ. ಬಸವೇಶ್ವರ, ಇದು ಕಳ್ಳರ ನಗರ. ಕಳ್ಳರ ನಗರದಲ್ಲಿ ನಾನು ಕಳ್ಳರ ಕಳ್ಳನಾಗಿದ್ದೆ. ಕದೀಲಿಕ್ಕೆ ಬಂದ ನನ್ನನ್ನು ನೀವು ನೆಟ್ಟನೇ ನುಂಗಿ ನಿಮ್ಮ ಹೊಟ್ಟೆಯೊಳಗೆ ಅರಗಿಸಿಕೊಂಡು ಬಿಟ್ರಿ. ನೀವೇ ಬಲುಗಳ್ಳರು!..”

ಬಿಜ್ಜಳ:
ಬಿಜ್ಜಳನು ಕಲ್ಯಾಣರಾಜ್ಯದ ಪ್ರಭು. ಬಸವಣ್ಣನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಾಗಿ ರಾಜ್ಯಾಡಳಿತ ಸುಸೂತ್ರವಾಗಿ ನಡೆಯುತ್ತಿರುವದರಿಂದ ಈತನಿಗೆ ಬಸವಣ್ಣ ಬೇಕು. ಬಸವಣ್ಣ ರಾಜ್ಯದ ಮಂತ್ರಿಯಾಗಿ ಉಳಿಯಲೇ ಬೇಕು. ಅಲ್ಲದೆ ಬಸವಣ್ಣನನ್ನು ಆಡಳಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಈತನಿಗೆ ಮತ್ತೊಂದು ಕಾರಣವಿದೆ. ಬಸವಣ್ಣನಿಗೇ ಬೇಕಾಗಿರದಿದ್ದರೂ ಸಹ ಆತ ಪ್ರಭುತ್ವಕ್ಕೆ ಹೊರತಾದ ಮತ್ತೊಂದು ಶಕ್ತಿಕೇಂದ್ರವಾಗಿರುವದನ್ನು ಬಿಜ್ಜಳ ಬಲ್ಲ. ಈ ಶಕ್ತಿಕೇಂದ್ರವನ್ನು ಜಾಣತನದಿಂದ ಸಂಭಾಳಿಸುವದು ಪ್ರಭುತ್ವದ ಹಿತದ ದೃಷ್ಟಿಯಿಂದ ಅವಶ್ಯವೆಂದು ಈತ ಅರಿತಿದ್ದಾನೆ.
ಬಸವಣ್ಣನ ಬಗೆಗೆ ಬಿಜ್ಜಳ ಹೇಳುವ ಮಾತುಗಳು ಹೀಗಿವೆ:
“…ಮಾರಾಯಾ ನಿನಗ ಯಾವ ಪದವಿನೂ ಬೇಕಾಗಿಲ್ಲ. ಇದು ನನಗ ಗೊತ್ತೈತಿ. ನಿನಗ ಪದವಿ ಯಾಕ ಬೇಕು? ನೀ ಎಲ್ಲಿ ಹೋಗಿ ನಿಲ್ಲತೀ ಅಲ್ಲಿ ದೀಪ ಬೆಳಗತಾರು; ಎಲ್ಲಿ ಹೋಗಿ ಕುಂದರತೀ ಅಲ್ಲಿ ಕಾಯಿ ಒಡೀತಾರು; ನೀ ಕಾಡು ಹೊಕ್ಕೊಂಡು ಮರದ ಕೆಳಗ ಕುಂತರೂ ಶರಣರ ಸಂತಿ ಅಲ್ಲೇ ನಡೀತೈತಿ….”

ಬಸವಣ್ಣನನ್ನು ಮನಸಾ ಗೌರವಿಸುತ್ತಿದ್ದರೂ ಸಹ ಬಿಜ್ಜಳನು ಪ್ರಭುತ್ವಕ್ಕೆ ಅವಶ್ಯವಾದ ಕೋರೆಹಲ್ಲು ಹಾಗೂ ಹುಲಿಯುಗುರುಗಳನ್ನು ಬೆಳೆಸಿಕೊಂಡವನೇ. ವ್ಯವಸ್ಥೆಯ ರಕ್ಷಣೆಯ ಉದ್ದೇಶ ಹಾಗೂ ಅದಕ್ಕೆ ಬೇಕಾದ ಕ್ರೌರ್ಯ ಇವು ಬಿಜ್ಜಳನ ವ್ಯಕ್ತಿತ್ವದ ಭಾಗಗಳಾಗಿವೆ.
ತನ್ನ ದಂಡನಾಯಕ ಮಂಚಣ್ಣನಾಯಕನಿಗೆ ಬಿಜ್ಜಳನ್ನು ಕೊಡುತ್ತಿರುವ ಆದೇಶವನ್ನು ನೋಡಿರಿ:
“…ಮಧ್ಯರಾತ್ರಿಗೆ ಸರಿಯಾಗಿ ನಾಕೂ ಕಡೆಯಿಂದ ಮಹಾಮನಿಗೆ ಮಿಂಚು ಹೊಡಧಾಂಗ ಮುತ್ತಿಗೆ ಹಾಕಬೇಕು……ಹೊರಗಿನ ಸುತ್ತಿನ್ಯಾಗ ಬ್ಯಾಟಿ ನಾಯಿಗಳನ್ನು ಬಿಡಿರಿ, ಬಿಲ್ಲಿನವರನ್ನು ಮರದ ಮ್ಯಾಲ ಏರಸರಿ. ಎರಡು ಕಾಲು ಓಡ್ತಿರೋದು ಕಂಡ್ರ ಸಾಕು, ಬಾಣ ಹೊಡೆದು ಭೂಮಿಗೆ ಬೀಳಿಸತಕ್ಕದ್ದೆಂದು ಕಟ್ಟಪ್ಪಣೆ ಮಾಡ್ರಿ….”

ಶರಣರು:
ಶರಣರಲ್ಲಿ ಭೋಳೇ ಜನರು ಇದ್ದಂತಯೇ, ಬೌದ್ಧಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಎತ್ತರದ ಮಟ್ಟವನ್ನು ಏರಿದವರೂ ಇದ್ದರು. ಅನುಭವ ಮಂಟಪದ ನಿರ್ವಾಹಕರೆಂದು ಇವರನ್ನು ಕರೆಯಬಹುದು. ಬಸವಣ್ಣನ ಹೊರತಾಗಿಯೂ, ಶರಣಚಳುವಳಿಯನ್ನು ಸಾರ್ಥಕಗೊಳಿಸಬಲ್ಲ ಸಾಮರ್ಥ್ಯ ಉಳ್ಳವರು. ಶರಣನ ವೇಷದಲ್ಲಿಯ ಕನ್ನಮಾರಿಯ ಉದ್ದಟತನದಿಂದ ಇವರಲ್ಲಿ ಕೆಲವರು ವಿಚಲಿತರಾದರೆ, ಮುಂದಾಳುಗಳು ಮಾತ್ರ ಎಲ್ಲರನ್ನೂ ಶಾಂತ ಮಾಡಬಲ್ಲವರು.

ಬಸವಣ್ಣ:
ಈಗಾಗಲೇ ರಚಿತವಾದ ಸಾಹಿತ್ಯದಲ್ಲಿ ಬಸವಣ್ಣನು ರಾಜ್ಯದ ಉನ್ನತ ಅಧಿಕಾರಿಯಂತೆ ಕಾಣುವ ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ನಾಟಕಗಳಲ್ಲಿಯೂ ಸಹ ಆತ ಮಂತ್ರಿಯ ಪೋಷಾಕನ್ನು ಧರಿಸಿ ರಂಗದ ಮೇಲೆ ಬರುವದೇ ಜನಪ್ರಿಯವಾಗಿದೆ. ಆದರೆ ಈ ನಾಟಕದಲ್ಲಿ ಬಸವಣ್ಣನು ಸಾಮಾನ್ಯರೊಡನೆ ಸಮಾನನಾಗಿ ಇರಬಯಸುವ ವ್ಯಕ್ತಿ.

ನಾಟಕದ ಮೊದಲಲ್ಲಿಯೆ ಆತ ಕೆಳ ಸ್ತರದ ಹೆಣ್ಣುಮಗಳೊಬ್ಬಳಿಗೆ ಹುಲ್ಲು ಹೊರಿಸುವದನ್ನು, ಅವಳೊಡನೆ ಆತ್ಮೀಯವಾಗಿ ಸಂಭಾಷಿಸುವದನ್ನು ಹಾಗೂ ಅವಳಿಗೆ ಲಿಂಗಧಾರಣೆ ಮಾಡುವದನ್ನು flashbackನಲ್ಲಿ ತೋರಿಸಲಾಗಿದೆ.

ಆನಂತರ ಬಸವಣ್ಣನ ಉಲ್ಲೇಖವಾಗುವದು ಬಿಜ್ಜಳನ ಮಾತುಗಳಲ್ಲಿ:
“ಆತ ಮೊದಲೇ ಮಹಾ ತಲೆತಿರುಕ. …………..ಅಲ್ಲಾ ಮಂತ್ರಿಪದವಿ ಬ್ಯಾಡಾ ಅನ್ನೋ ತಲೆತಿರುಕ ಮತ್ತೊಬ್ಬನದಾನೇನು ಈ ದೇಶದೊಳಗ?”

ಹುಲ್ಲು ಹೊರುವ ಹೆಣ್ಣುಮಗಳೊಡನೆ ಆತ್ಮೀಯವಾಗಿ ಮಾತನಾಡುವಾಗ, ಕನ್ನಮಾರಿಯ ಪರವಾಗಿ ಶರಣರೊಡನೆ ಮಾತನಾಡುವಾಗ, ಬಿಜ್ಜಳನ ದಂಡನಾಯಕನು ತಂದ ಆದೇಶವನ್ನು ಧಿಕ್ಕರಿಸುವಾಗ, ತನ್ನ ಹೆಂಡತಿಯ ಉಪಾಯಕ್ಕೆ ಅಸಮಾಧಾನ ವ್ಯಕ್ತಪಡಿಸುವಾಗ ಬಸವಣ್ಣನ ವ್ಯಕ್ತಿತ್ವ ಪ್ರೇಕ್ಷಕರೆದುರಿಗೆ ಹೊಳೆಯುತ್ತದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಅಪೂರ್ಣ ವಚನವೊಂದರ ಕೊನೆಯ ಸಾಲನ್ನು ಆತ ತನ್ನ ಹೆಂಡತಿ ಗಂಗಾಂಬಿಕೆಗೆ ಪ್ರೀತಿಯಿಂದ ಪೂರ್ಣಗೊಳಿಸಿ ಹೇಳುವ ಸನ್ನಿವೇಶವು ಬಸವಣ್ಣನ ಆದರ್ಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತೋರಿಸುತ್ತದೆ ಎನ್ನಬಹುದು.

ನಾಟಕದ ಕಥಾನಕ:
ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ. ಬಸವಣ್ಣನ ರಂಗಪ್ರವೇಶವಾಗುವದು ಸಂಜೆಯಲ್ಲಿ (flash back ಹೊರತುಪಡಿಸಿ), ಅಂದರೆ ನಾಟಕದ ಕೊನೆಯ ಭಾಗದಲ್ಲಿ.
ಅಲ್ಲಿಯವರೆಗೂ ಕನ್ನಮಾರಿ ಹಾಗೂ ಅವನನ್ನು ಹಿಡಿಯಲೆತ್ನಿಸುತ್ತಿರುವ ಬಿಜ್ಜಳನ ಸೈನಿಕರೇ ರಂಗವನ್ನು ವ್ಯಾಪಿಸಿದ್ದಾರೆ.
ರಂಗದ ಮೇಲೆ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಬಹುಜನರು ಪ್ರಭುತ್ವಕ್ಕೆ ಹೆದರುವ, ಪ್ರಭುತ್ವ ಎಸೆಯುವ ರೊಟ್ಟಿಯ ತುಣುಕುಗಳಿಗೆ ಆಸೆ ಪಡುವ ಜನತೆ. ಇವರು ಅನಾದಿ ಕಾಲದಿಂದಲೂ ಹೀಗೇ ಇದ್ದವರು. ಬಸವಣ್ಣನ ಕಾಲದಲ್ಲೂ ಹಾಗೇ ಇದ್ದರು. ಈಗಲೂ ಹಾಗೇ ಇದ್ದಾರೆ. ಅದರಂತೆಯೇ ರಂಗದ ಮೇಲೆ ಕಾಣಿಸಿಕೊಳ್ಳುವ ಶ್ರೇಷ್ಠಿಗಳು ವ್ಯವಸ್ಥೆಯ ಮುಂದುವರಿಕೆಯಲ್ಲಿಯೇ ಆಸಕ್ತಿ ಉಳ್ಳವರು.

ಕನ್ನಮಾರಿಯು ಅನುಭವ ಮಂಟಪದಲ್ಲಿ ಶರಣರ ಜೊತೆಗೆ ಸೇರಿಕೊಂಡಿರುವದು ಬಿಜ್ಜಳನ ಗುಪ್ತಚಾರರಿಗೆ ಗೊತ್ತಾಗಲು ತಡವಾಗುವದಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಬಸವಣ್ಣನವರ ಮಹಾಮನೆಗೆ ಸೈನಿಕರು ಮುತ್ತಿಗೆ ಹಾಕುತ್ತಾರೆ. ಕನ್ನಮಾರಿ ತಮ್ಮೊಳಗೇ ಇದ್ದದ್ದು ಬಸವಣ್ಣನ ಹೆಂಡತಿ ಗಂಗಾಂಬಿಕೆಯ ಅರಿವಿಗೂ ಬಂದಿರುತ್ತದೆ. ಅವನನ್ನು ಹಿಡಿದು ಹಾಕಲು ಗಂಗಾಂಬಿಕೆ ಉಪಾಯವೊಂದನ್ನು ರೂಪಿಸುತ್ತಾಳೆ. ಬಂಗಾರದ ತನ್ನ ಒಡವೆಗಳನ್ನು ಗುಪ್ತವಾಗಿ ನೆಲವಿನಲ್ಲಿ ಇಟ್ಟಿರುವದಾಗಿ ಕನ್ನಮಾರಿಗೆ ನಂಬಿಕೆ ಬರುವಂತೆ ನಟಿಸುತ್ತಾಳೆ. ಕನ್ನಮಾರಿ ಹಾಗೂ ಅವನ ಬಂಟರು ಕಳ್ಳತನ ಮಾಡುತ್ತಿರುವಾಗ ಶರಣರ ಕೈಯಲ್ಲಿ ಸಿಕ್ಕು ಬೀಳುತ್ತಾರೆ.

ಇಲ್ಲಿಯವರೆಗೆ ಬಸವಣ್ಣ ಎಲ್ಲಿದ್ದ? ಗಂಗಾಂಬಿಕೆಯು ತನ್ನ ಉಪಾಯದ ಅಂಗವಾಗಿ ಬಂಗಾರದ ಒಡವೆಗಳನ್ನು ಧರಿಸಿರುತ್ತಾಳೆ. ತನ್ನ ಹೆಂಡತಿ ಬಂಗಾರ ಧರಿಸಿರುವದು ಬಸವಣ್ಣನಿಗೆ ಸಹ್ಯವಾಗುವದಿಲ್ಲ. ಆತ ವ್ಯಥಿತನಾಗಿ, ದಾಸೋಹದಲ್ಲಿರುವದನ್ನು ಬಿಟ್ಟು ತನ್ನ ಅರುಹಿನ ಮನೆಗೆ ಹೋಗಿ ಬಿಟ್ಟಿರುತ್ತಾನೆ. ಇದು ಗಂಗಾಂಬಿಕೆಗೆ ಅರ್ಥವಾಗುವದಿಲ್ಲ. ಬೆಳಿಗ್ಗೆ ಒಂದು ವಚನವನ್ನು ಅರ್ಧ ರಚನೆ ಮಾಡಿದವರು ಎಲ್ಲಿ ಹೋದರು? ‘ನೀರಿಗೆ ನೈದಿಲೆಯೆ ಶೃಂಗಾರ…..’ ಎಂದು ಅರ್ಧ ವಚನ ಹೇಳಿದವರು ಆ ವಚನ ಪೂರ್ತಿಗೊಳಿಸಲು ಹೋದರೆ? ಎಂದುಕೊಳ್ಳುತ್ತಾಳೆ. ಆದರೆ ಬಸವಣ್ಣನನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಗವ್ವೆ ಮಾತ್ರ ‘ಶಟಗೊಂಡವರ ಹಂಗ ದುಡುದುಡು ಹೋದಾ…’ ಎನ್ನುತ್ತಾಳೆ.

ಬಸವಣ್ಣನನ್ನು ಅರುಹಿನ ಮನೆಯಿಂದ ಕರೆದುಕೊಂಡು ಬಂದಾಗ ಕನ್ನಮಾರಿಯನ್ನು ಹಿಡಿದದ್ದಕ್ಕಾಗಿ ಶರಣರೆಲ್ಲ ಸಂತೋಷದಲ್ಲಿ ಮುಳುಗಿದ್ದರು. ಮಹಾಕಳ್ಳ ಕನ್ನಮಾರಿಯನ್ನು ರಾಜನಿಗೆ ಒಪ್ಪಿಸಬೇಕು ಎನ್ನುವದೇ ಎಲ್ಲ ಶರಣರ ಅಭಿಪ್ರಾಯ. ಬಸವಣ್ಣ ಅದಕ್ಕೆ ಒಪ್ಪುವದಿಲ್ಲ.

ಕನ್ನಮಾರಿಯ ತರ್ಕವನ್ನಾಗಲಿ, ಶರಣರ ತರ್ಕವನ್ನಾಗಲಿ , ಪ್ರಭುತ್ವದ ತರ್ಕವನ್ನಾಗಲಿ ಬಸವಣ್ಣನು ಒಪ್ಪುವವನಲ್ಲ. ಅಷ್ಟೇ ಏಕೆ, ಗಂಗಾಂಬಿಕೆಯ ಸ್ತ್ರೀಧನದ ತರ್ಕವನ್ನೂ ಆತ ಕಡೆಗಣಿಸುತ್ತಾನೆ. ಕನ್ನಮಾರಿಗೆ ಆಶ್ರಯ ಕೊಟ್ಟರೆ ಬಸವಣ್ಣನೂ ಅಪರಾಧಿಯೇ ಆಗುತ್ತಾನೆ ಎನ್ನುವ ಮಾತಿಗೂ ಆತ ಬೆಲೆ ಕೊಡುವದಿಲ್ಲ.ಬಿಜ್ಜಳನ ಸೇನಾಪತಿಗೆ ಬಸವಣ್ಣನು ಹೇಳುವ ಮಾತುಗಳಿವು:
"ದೇಶಕ್ಕೊಂದು ಶಾಸನ ಐತಿ ನಿಜ.ಆದರ ಶಾಸನಕ್ಕಂಜಿ ನನ್ನ ಅಂತರಾತ್ಮ ಒಪ್ಪದಿರುವಂಥಾ ಯಾವ ಕೆಲಸವನ್ನೂ ನಾನು ಮಾಡಲಾರೆ."

ಕನ್ನಮಾರಿಯ ಜೀವ ಉಳಿಸಲು ಆತನನ್ನು ತನ್ನ ಅಂದರೆ ಮಂತ್ರಿಯ ಮುತ್ತಿನ ಪಲ್ಲಕ್ಕಿಯಲ್ಲಿ, ಮಂತ್ರಿಯ ಕಿರೀಟ ತೊಡಸಿ, ಗಂಗಾಂಬಿಕೆಯ ಎಲ್ಲ ಒಡವೆಗಳನ್ನೂ ಆತನಿಗೇ ಕೊಟ್ಟು ಆತನನ್ನು ಪಾರು ಮಾಡುತ್ತಾನೆ.
ಆ ಸಮಯದಲ್ಲಿ ಬಸವಣ್ಣನು ಅರ್ಧ ರಚಿಸಿದ ತನ್ನ ವಚನವನ್ನು ಪೂರ್ತಿಗೊಳಿಸಿ ಗಂಗಾಂಬಿಕೆಗೆ ಹೇಳುವ ಭಾಗವು ನಾಟಕದ ಉತ್ತುಂಗಭಾಗವೆನ್ನಬಹುದು.

ಬಸವಣ್ಣನ ತರ್ಕವು ಬುದ್ಧಿಯಿಂದ ಬಂದದ್ದಲ್ಲ, ಅದು ಆತನ ಹೃದಯದಿಂದ ಹೊಮ್ಮಿದ್ದು ಎನ್ನುವದು ಇತರರಿಗೆಲ್ಲ ಆಗ ಅರ್ಥವಾಗುತ್ತದೆ. ಬಸವಣ್ಣ ಬಯಸುವ ಸಮಾಜದ ಆದರ್ಶವೂ ಆ ವಚನದಿಂದಲೇ ಅರಿವಾಗುತ್ತದೆ.

ನಾಟಕದ ಕೊನೆಯ ದೃಶ್ಯದಲ್ಲಿ ಬಿಜ್ಜಳನ ದಂಡನಾಯಕನು ಬಸವಣ್ಣನ ಸೆರೆ ಹಿಡಿಯಲು ಸನ್ನದ್ಧನಾಗಿ ಬರುತ್ತಾನೆ. ಅದೇ ಸಮಯದಲ್ಲಿ ಬಿಜ್ಜಳನು ಕನ್ನಮಾರಿಯೊಂದಿಗೆ ಅಲ್ಲಿಗೆ ಬರುತ್ತಾನೆ. ಯಾಕೆಂದರೆ ಕನ್ನಮಾರಿಯು ತನ್ನ ಜೀವ ಉಳಿಸಿದ ಬಸವಣ್ಣನ ಜೀವವು ಅಪಾಯದಲ್ಲಿರುವದನ್ನು ಅರಿತುಕೊಂಡು, ತಾನೇ ಸ್ವತಃ ಬಿಜ್ಜಳನ ಅರಮನೆಗೆ ತೆರಳಿ, ಅಲ್ಲಿ ತನ್ನನ್ನೇ ಒಪ್ಪಿಸಿಕೊಂಡಿರುತ್ತಾನೆ.

ಕನ್ನಮಾರಿಯ ಬಿಡುಗಡೆಯಾಗುತ್ತದೆ ಹಾಗು ಆತನೂ ಸಹ ಶರಣಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ.
ಇದಿಷ್ಟು ನಾಟಕದ ಕಥಾನಕ.

ನಾಟಕದ ವೈಶಿಷ್ಟ್ಯಗಳು:
ಕೇವಲ ಕಳ್ಳನೊಬ್ಬನು ಶರಣನಾದ ಕತೆಯನ್ನು ಹೇಳುವ ನಾಟಕವಲ್ಲವಿದು. ಕಳ್ಳನನ್ನು ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನವು ಇಲ್ಲಿದೆ. ಬಸವಣ್ಣನ ವ್ಯಕ್ತಿತ್ವ ಎಂತಹದು?
ಅಂಗುಲಿಮಾಲಾನನ್ನು ಪರಿವರ್ತಿಸಿದ ಬುದ್ಧನ ವ್ಯಕ್ತಿತ್ವವೆ? ಅಥವಾ ಸಮಾಜಸುಧಾರಕನ ವ್ಯಕ್ತಿತ್ವವೆ?
ಬಸವಣ್ಣನ ಬಗೆಗೆ ಬರೆದ ಲೇಖಕರೆಲ್ಲ ಆತನನ್ನು ಅರಿತುಕೊಳ್ಳಲು ಪ್ರಯತ್ನಿಸಿ ಬರೆದವರೇ.

ವ್ಯಾಸ ದೇಶಪಾಂಡೆಯವರು ಇಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಇತರ ಪಾತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.

ಜೊತೆಜೊತೆಗೇ ಆ ಸಮಯದ ಸಮಾಜದ ವ್ಯವಸ್ಥೆ, ದುಡಿವ ವರ್ಗದ ಶೋಷಣೆ, ಪ್ರಭುತ್ವದ ರಾಜಕೀಯ ಇವೆಲ್ಲ ನಾಟಕದಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇಂತಹ ವ್ಯವಸ್ಥೆಗೆ ಒಂದು ಪ್ರತಿವ್ಯವಸ್ಥೆ ಇದೆಯೆ?
ಆಧುನಿಕ ಭಾರತದಲ್ಲಿ,ಗಾಂಧೀಜಿ, ವಿನೋಬಾ, ಜಯಪ್ರಕಾಶ ನಾರಾಯಣ ಇವರೆಲ್ಲ ಇದಕ್ಕಾಗಿ ಪ್ರಯತ್ನಿಸಿದವರೆಂದು ನಾವು ಬಲ್ಲೆವು.

ಇಲ್ಲಿ ಬರುವ ಕನ್ನಮಾರಿ ಹಳೆಯ ಕಾಲದ Robin Hood ಹಾಗೂ ಈ ಕಾಲದ ನಕ್ಸಲೀಯರನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಾನೆ ಎನ್ನಬಹುದಾದರೂ ಲೇಖಕರು ಇಂತಹ ಸುಳಿವುಗಳು ನುಸಳದಂತೆ ಪ್ರಯತ್ನಪೂರ್ವಕವಾಗಿ ನಾಟಕವನ್ನು ರಚಿಸಿದ್ದಾರೆ. ಅದರಂತೆಯೆ ಮಾರ್ಕ್ಸಿಸ್ಟ್ ಗುರುತುಗಳನ್ನೂ ಸಹ ಇಲ್ಲಿ ಸುಳಿಯಗೊಟ್ಟಿಲ್ಲ.
(ಕಮ್ಯುನಿಸ್ಟ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ಮಾರ್ಕ್ಸನನ್ನು ಬಸವಣ್ಣನಿಗೆ ಹೋಲಿಸುವದು ದೊಡ್ಡ ತಪ್ಪು. ಏಕೆಂದರೆ ಮಾರ್ಕ್ಸನು State Ownershipಅನ್ನು ಹೇಳುತ್ತಿದ್ದ ಹಾಗೂ ಆಧ್ಯಾತ್ಮವನ್ನು ತಿರಸ್ಕರಿಸಿದ್ದ.)
ಬಸವಣ್ಣನವರು ಮಾನವ ಘನತೆಯನ್ನು ಸಾಮಾಜಿಕ ಸಮಾನತೆಯನ್ನು, ಕಾಯಕದ ಮಹತ್ವವನ್ನು ಹಾಗೂ ಆಧ್ಯಾತ್ಮಿಕ ಅವಶ್ಯಕತೆಯನ್ನು ಜೀವಿಸಿ ತೋರಿಸಿದವರು. ಈ ಎಲ್ಲ ಅಂಶಗಳು ೫೩ ಪುಟಗಳ ಈ ಚಿಕ್ಕ ನಾಟಕದಲ್ಲಿ ಸಮರ್ಥವಾಗಿ ಬಂದಿವೆ.

ಎರಡನೆಯದಾಗಿ ಬಸವಣ್ಣನವರ ಈ ಆದರ್ಶಸಮಾಜದ ಅಂಗವ್ಯಕ್ತಿಗಳು ಯಾರು ಅನ್ನುವದನ್ನೂ ಸಹ ನಾಟಕವು ಸ್ಪಷ್ಟಪಡಿಸುತ್ತದೆ. ಶರಣಚಳವಳಿಯು ಕೇವಲ ಕೆಳಸ್ತರದವರ ಚಳವಳಿಯಲ್ಲ ಅಥವಾ ಕೇವಲ ಚಿಂತಕರ ಚಳವಳಿಯೂ ಅಲ್ಲ. ಇದೊಂದು ಸರ್ವಸಮನ್ವಯ ಚಳವಳಿ. ಈ ಆದರ್ಶ ಸಮಾಜಕ್ಕೆ ಯಾರೂ ಹೊರತಲ್ಲ. ಇದರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಅದಕ್ಕೆಂದೇ ಈ ನಾಟಕದ ಶೀರ್ಷಿಕೆ: “ಇವ ನಮ್ಮವ”.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಐತಿಹಾಸಿಕ ನಾಟಕವೂ ಹೌದು ಹಾಗೂ ಸಾಮಾಜಿಕ ನಾಟಕವೂ ಹೌದು ಎನ್ನುವದು ಸ್ಪಷ್ಟವಾಗುತ್ತದೆ. ಆದುದರಿಂದ ಇದನ್ನು ಐತಿಹಾಸಿಕ-ಸಾಮಾಜಿಕ ನಾಟಕವೆಂದು ಕರೆಯಬಹುದೇನೊ?

ಈ ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ , ಮುಕ್ತಾಯವಾಗುವದು ಮರುದಿನದ ಬೆಳಗಿನಲ್ಲಿ. ಹುಲ್ಲು ಹೊರುವ ಹೆಣ್ಣುಮಗಳು ಬಸವಣ್ಣನ ಜೊತೆಗೆ ಮಾತನಾಡುವ flashback ಹೊರತುಪಡಿಸಿ ನಾಟಕದ ಕಾಲ ಒಂದೇ ದಿನಮಾನದ್ದು.
ಸರಳ ಆಡುನುಡಿಯ ಸಂಭಾಷಣೆ ನಾಟಕದ ಸೊಬಗನ್ನು ಹೆಚ್ಚಿಸಿದೆ.
ನಾಟಕದ ಅಂತರಾಳ ಎಷ್ಟೇ ಗಂಭೀರವಾಗಿದ್ದರೂ ಸಹ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸಹಜ ವಿನೋದವನ್ನು ಹೊಮ್ಮಿಸುತ್ತವೆ. ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎನ್ನುವ ಆಶಾಭಾವವನ್ನು ಹೊಮ್ಮಿಸುವ ಈ ನಾಟಕವು ಬಸವಣ್ಣನವರ ಬಗೆಗೆ ರಚಿಸಲಾದ ಉಳಿದೆಲ್ಲ ದುರಂತ ನಾಟಕಗಳಿಗಿಂತ ಮನಸ್ಸನ್ನು ತಟ್ಟುತ್ತದೆ.

ಈ ನಾಟಕಕ್ಕೆ ಒಂದು ಮಿತಿಯೂ ಇದೆ. ಕಿರಿದರೊಳ್ ಪಿರಿದರ್ಥವಂ ಹೇಳುವಾಗ ಹುಟ್ಟುವ ಮಿತಿ ಅದು. ನಾಟಕದ ವಸ್ತು ಎಷ್ಟೇ ಜಟಿಲವಾಗಿದ್ದರೂ ಸಹ, ರಚನೆ ಸರಳವಾಗಿದೆ. ಇದು ಈ ನಾಟಕದ ಅನಿವಾರ್ಯತೆ ಹಾಗೂ ಮಿತಿ.
ಒಟ್ಟಿನಲ್ಲಿ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದು ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.
……………………………………………………………………………….
ಟಿಪ್ಪಣಿ: ವ್ಯಾಸ ದೇಶಪಾಂಡೆಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು
http://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%B8_%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86 ದಲ್ಲಿ ಪಡೆಯಬಹುದು.

Wednesday, May 20, 2009

ತುಂಬಿ ಬಂದಿತ್ತು..........ದ.ರಾ.ಬೇಂದ್ರೆ


ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಈ ನಾಟಕವು ಪ್ರಕಟಿತವಾಗಲಿಲ್ಲ. ಈ ಹಾಡನ್ನು ಸ್ವತಃ ಬೇಂದ್ರೆಯವರೇ ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು ‘ಎಚ್.ಎಮ್.ವ್ಹಿ’ ಕಂಪನಿಯಿಂದ ಮುದ್ರಿತವಾಗಿತ್ತು. ಅನೇಕ ವರ್ಷಗಳ ನಂತರ ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕವನ್ನು ರಚಿಸಿದರು ಹಾಗು ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎನ್ನುವ ಹೆಸರನ್ನೇ ಕೊಟ್ಟರು. ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:
 

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು ||ಪಲ್ಲವಿ||

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್....

ಬೇಂದ್ರೆಯವರ ನಾಟಕದಲ್ಲಿ, ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು. ಏಕತಾರಿಯ ನಾದದಲ್ಲಿ ಲೀನವಾಗುವಂತೆ, ಗೀಗೀ ಪದದ ಗತ್ತಿನಲ್ಲಿ ಈ ಹಾಡನ್ನು ಹೆಣೆಯಲಾಗಿದೆ.

ಚೈತನ್ಯಪುರುಷರು ದೇವಲೋಕದಿಂದ ಇಹಲೋಕಕ್ಕೆ ‘ಅವತರಣ’ ಮಾಡುತ್ತಾರೆ ಎನ್ನುವದು ಭಕ್ತರ ನಂಬುಗೆಯಾಗಿದೆ. ಬಸವಣ್ಣನವರು ಶಿವನ ಗಣಗಳಲ್ಲಿ ಒಬ್ಬರಾಗಿದ್ದು ಜನರ ಉದ್ಧಾರಕ್ಕಾಗಿ ಇಹಲೋಕಕ್ಕೆ ಅವತರಣ ಮಾಡಿದರು ಎನ್ನುವುದು ಒಂದು ನಂಬಿಕೆ. ಈ ಹಾಡನ್ನು ಆ ಹಿನ್ನೆಲೆಯಲ್ಲಿಯೂ ಅರ್ಥೈಸಬಹುದು. ಅಲ್ಲದೆ, ಬೇಂದ್ರೆಯವರ ಕವನಗಳಿಗೆ ಅನೇಕ ಆಯಾಮಗಳು ಇರುವುದರಿಂದ ಇನ್ನೂ ಬೇರೆ ರೀತಿಯಿಂದಲೂ ಅರ್ಥೈಸಬಹುದು. ಆ ಎಲ್ಲ ಆಯಾಮಗಳನ್ನು ಸಮಗ್ರಗೊಳಿಸಿದ ಒಂದು ವ್ಯಾಖ್ಯಾನವನ್ನು ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. 

ಈ ಗೀತೆಯ ಮೊದಲ ನುಡಿಯನ್ನು ಗಮನಿಸಿರಿ: ‘ ಬೆಳಕಿಂತ ಬೆಳ್ಳಗೆ ಇತ್ತ, ಗಾಳಿಗಿಂತ ತೆಳ್ಳಗೆ ಇತ್ತ’ ಎನ್ನುವ ವಸ್ತು ಯಾವುದಿರಬಹುದು? ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ವರ್ಣಿಸಿದ ಆತ್ಮವನ್ನು ಇದು ಹೋಲುತ್ತದೆ:
"ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ
ನಚೈನಂ ಶೋಧಯಂತ್ಯಾಪೋ, ನ ಶೋಷಯತಿ ಮಾರುತ:" 

ಇಂತಹ ಆತ್ಮದ ಅವತರಣದ ಸ್ವರೂಪವನ್ನು ಈ ಹಾಡಿನ ಮೊದಲ ನುಡಿಯಲ್ಲಿ ವರ್ಣಿಸಲಾಗಿದೆ:

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಭಗವಚ್ಚೈತನ್ಯದ ಒಂದು ಅಂಶವು ಪೃಥಕ್ಕರಣಗೊಳ್ಳುವಾಗ, ಮೊದಲಿಗೆ ಪಂಚಮಹಾಭೂತಗಳಲ್ಲಿ, ಅಂದರೆ ಪೃಥ್ವಿ, ನೀರು, ತೇಜ, ಆಕಾಶ ಹಾಗು ವಾಯು ರೂಪಗಳಲ್ಲಿ ವಿಘಟನೆ ಹೊಂದುತ್ತದೆ. ಈ ಚೈತನ್ಯವು ನಮ್ಮ ಐಹಿಕ ಪಂಚೇಂದ್ರಿಯಗಳ ಗ್ರಹಣಶಕ್ತಿಯನ್ನು ಮೀರಿದ ಬೆರಗು. ಆದುದರಿಂದಲೇ ಇದು ಬೆಳಕಿಗಿಂತಲೂ ಬೆಳ್ಳಗಿದೆ ಹಾಗು ಗಾಳಿಗಿಂತಲೂ ತೆಳ್ಳಗಿದೆ. ಶಿವನು ತನ್ನ ಜಡೆಯಲ್ಲಿ ಧರಿಸಿದ ಗಂಗಾದೇವಿಯು ಪತಿತೋದ್ಧಾರಕ್ಕಾಗಿ ಭೂಮಿಗೆ ಜಿಗಿದಂತೆ, ಈ ಚೈತನ್ಯವೂ ಭೂಮಿಗೆ ಧಾವಿಸಿದೆ. ಅಲ್ಲಿಂದ ಈ ನಾಡಿನ ಮೂಲೆಮೂಲೆಗೂ ಇದು ತಲುಪಿ ಅಲ್ಲಿಯ ಕಲ್ಮಶವನ್ನು ತೊಳೆದಿದೆ. ಅಡಿಯಿಂದ ಮುಡಿಯವರೆಗೂ ಅಂದರೆ ಸಮಾಜದ ಕೆಳಸ್ತರದಲ್ಲಿ ಇರುವವರಿಂದ ಹಿಡಿದು, ಮೇಲ್ತರಗತಿಯಲ್ಲಿ ಇರುವವರವರೆಗೂ ಈ ಗಂಗಾಪ್ರವಾಹದ ಪರಿಣಾಮವಾಗಿದೆ. ಭಕ್ತರ ಅಡಿ ಅಂದರೆ ನಡೆಯನ್ನು, ಮುಡಿ ಅಂದರೆ ವಿಚಾರವನ್ನು ಹಾಗು ನಡು ಅಂದರೆ ಆಚಾರವನ್ನು ಈ ಚೈತನ್ಯಗಂಗೆಯು ತುಂಬಿ, ತುಳುಕಿ ಅವರನ್ನು ಶುದ್ಧಗೊಳಿಸಿದೆ. ಬೆಳಕು ಅಜ್ಞಾನವನ್ನು, ಗಾಳಿಯು ದುರ್ಗಂಧವನ್ನು ಹಾಗು ನೀರು ಮಾಲಿನ್ಯವನ್ನು ತೆಗೆದು ಹಾಕುವ ಸಾಧನಗಳಾಗಿವೆ. ಕೈಲಾಸದಲ್ಲಿರುವ ಶಿವನ ತುಂಬಿಯು ಈ ಉದ್ದೇಶದಿಂದ ಧರಣಿಗೆ ಅವತರಿಸಿದೆ. ಬಸವಣ್ಣನವರ ಪ್ರಭಾವವು ನಾಡನ್ನೆಲ್ಲ ವ್ಯಾಪಿಸಿ, ಜನರ ಮನಸ್ಸನ್ನು ಶುದ್ಧಗೊಳಿಸಿದ ರೀತಿಯನ್ನು ಈ ಗೀತೆ ಹೀಗೆ ವರ್ಣಿಸಿದೆ ಎನ್ನಬಹುದು.

ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸಲೂ ಸಹ ಈ ನುಡಿಯನ್ನು ಬಳಸಬಹುದು. ಬೆಳಕು, ಗಾಳಿ ಹಾಗು ಗಂಗೆ ಅರ್ಥಾತ್ ನೀರು ಇವು ಮಾನವನನ್ನು ಶುದ್ಧಗೊಳಿಸುವ ಸಾಧನಗಳು. ಅಲ್ಲದೆ ಈ ಮೂರು ಮಹಾಭೂತಗಳು (ತೇಜಸ್ಸು, ಪೃಥ್ವಿ ಹಾಗು ವಾಯು) ದೇಶಕಾಲವನ್ನು ಮೀರಿದ ಶಕ್ತಿಗಳು. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ ಇಲ್ಲಿ ಹಾಡುತ್ತಿರುವ ಜಂಗಮನು ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ಎಲ್ಲ ಜೀವಿಗಳ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ ಸಹ ವರ್ಣಿಸುತ್ತದೆ. ಬಸವಣ್ಣನವರೂ ಸಹ ಬೆಳಕು, ಗಾಳಿ ಹಾಗು ಗಂಗೆಯಂತೆ ಸಮಾಜದ ಶುದ್ಧೀಕರಣದಲ್ಲಿ ತೊಡಗಿದ್ದರು. ನಾಡಿನ ಮೂಲೆಮೂಲೆಗಳಿಂದ ಆಕರ್ಷಿತರಾದವರು ಕಲ್ಯಾಣಕ್ಕೆ ಬಂದು ಬಸವಣ್ಣನವರಿಗೆ ಶರಣಾದರು, ಬಸವಣ್ಣನವರ ಶರಣರಾದರು. ಈ ಆಕರ್ಷಣೆಗೆ, ಇಂತಹ ಅದ್ಭುತ ಪರಿಣಾಮಕ್ಕೆ ಕಾರಣವೇನು? ಎರಡನೆಯ ನುಡಿಯಲ್ಲಿ ಇದರ ಕಾರಣವನ್ನು ಈ ರೀತಿಯಾಗಿ ಹೇಳಲಾಗಿದೆ: 

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಬಸವಣ್ಣನವರ ವ್ಯಕ್ತಿತ್ವವು ಸರ್ವರನ್ನು ಆಕರ್ಷಿಸುವ ವ್ಯಕ್ತಿತ್ವ. ಆದುದರಿಂದಲೇ ಬಡವರು, ಶ್ರೀಮಂತರು, ದಲಿತರು, ಸವರ್ಣೀಯರು, ಸೇವಕರು ಹಾಗು ಮಹಾರಾಜರು ಇವರೆಲ್ಲ ಬಸವಣ್ಣನವರನ್ನು ಮುತ್ತಿಕೊಂಡರು. ಆದರೆ ಈ ಆಕರ್ಷಕ ವ್ಯಕ್ತಿತ್ವವು ಪ್ರಯತ್ನಪಟ್ಟು ಬೆಳೆಯಿಸಿಕೊಂಡ ವ್ಯಕ್ತಿತ್ವವಲ್ಲ. ಹೂವಿನಲ್ಲಿರುವ ಕಂಪು ಅದರ ಸಹಜ ಗುಣವಾಗಿದೆ, ಅದು ಕೃತಕ ಸುಗಂಧವಲ್ಲ. ಅದರಂತೆ ನೈಜ ಹಾಡುಗಾರನಲ್ಲಿರುವದು ದೇವದತ್ತವಾದ ಇಂಪಾದ ಧ್ವನಿ. ಬಸವಣ್ಣನವರದು ಈ ಬಗೆಯ ದೇವದತ್ತವಾದ, ನೈಜ ವ್ಯಕ್ತಿತ್ವವಾಗಿತ್ತು. ಅವರು ಜನರಿಗೆ ಹೇಳುವ ಮಾತುಗಳು ಆಡಂಬರದ ಉಪದೇಶವಾಗಿರದೆ, ಅವರ ಜೀವಾಳದಿಂದ ಬಂದ ಮಾತಾಗಿರುತ್ತಿತ್ತು. ಆ ಕಾರಣದಿಂದಲೇ ಕೇಳುಗರ ಎದೆಯಲ್ಲಿ ಅದು ನಾಟುತ್ತಿತ್ತು. ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಈ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು. ಅವರ ವಚನಗಳಲ್ಲಿ ನಾಮಾಮೃತವು ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.

ಬಸವಣ್ಣನವರ ನಡೆ ಹಾಗು ನುಡಿಗಳ ಸರಳತೆ, ಸೌಜನ್ಯ ಹಾಗು ಅವರಲ್ಲಿರುವ ಸತ್ಯ ಇವು ಜನರ ಮನಸ್ಸಿಗೆ ನಾಟುತ್ತಿದ್ದವು. ಇಷ್ಟೇ ಅಲ್ಲ, ಆ ಮಾತಿನಲ್ಲಿಯ ವರ್ಮ ಅಂದರೆ ಧೀರತನ ಅನೇಕ ಸಲ ಸಮಾಜದ ರೂಢಿಗಳಿಗೆ ವಿರುದ್ಧವಾಗಿರುತ್ತಿದ್ದವು. ಆದರೂ ಸಹ ಆಲೋಚಿಸಿದಾಗ ಅದು ಸತ್ಯ ಎನ್ನುವುದರ ಅರಿವು ತಟ್ಟನೆ ಆಗುತ್ತಿತ್ತು. ಕೇಳುಗರ ಮನಸ್ಸನ್ನು ಬೇಧಿಸುತ್ತಿತ್ತು ಅದನ್ನೇ  ‘ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಸಾಂದರ್ಭಿಕವಾಗಿ ಇಲ್ಲಿ ನಾವು ಮತ್ತೊಂದು ಮಾತನ್ನು ಅಂದರೆ ಬೇಂದ್ರೆಯವರ ಪದಪ್ರತಿಭೆಯನ್ನೂ ಗಮನಿಸಬೇಕು. ಉತ್ತರ ಕರ್ನಾಟಕದ ರೂಢ ಮಾತಿನಲ್ಲಿ ವರ್ಮ ಅಂದರೆ ವೈರ ಹಾಗು ಮರ್ಮ ಅಂದರೆ  ಅಂತರಂಗದ ಸೂಕ್ಷ್ಮತೆ. ಈ ಪದಗಳನ್ನು ವಿಶೇಷ ಅರ್ಥವನ್ನು ಸೂಚಿಸುವಂತೆ ಬೇಂದ್ರೆ ಇಲ್ಲಿ ಬಳಸಿಕೊಂಡಿರುವುದು ಅವರ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ.

ಒಳ್ಳೆಯವರನ್ನು ಹಾಗು ಕೇಡುಗರನ್ನು ಒಳಗೊಂಡ ಸಂಪೂರ್ಣ ಸಮಾಜವೇ ಬಸವಣ್ಣನವರ ಹೃದಯದ ಮಾತುಗಳತ್ತ ಆಕರ್ಷಿತವಾಗಿದೆ. ಇದನ್ನು ಒಂದು ಸುಂದರವಾದ ಉಪಮೆಯ ಮೂಲಕ ವಿವರಿಸಲಾಗಿದೆ. ಕತ್ತಲಲ್ಲಿರುವ ಕಮಲವು ಮುಚ್ಚಿಕೊಂಡಿರುತ್ತದೆ. ಸೂರ್ಯೋದಯವಾದಾಗ, ಅದು ಬೆಳಕಿಗೆ ಮರಳುವದರಿಂದ ಅದು ಅರಳುತ್ತದೆ. ಅದರಲ್ಲಿರುವ ಜೇನನ್ನು ತುಂಬಿಗಳು ಹೀರಿಕೊಳ್ಳುತ್ತವೆ. ಇದರಂತೆಯೇ ಕತ್ತಲಲ್ಲಿದ್ದ ಸಮಾಜವು ವಿಚಾರದ ಬೆಳಕಿಗೆ ಎದುರಾದಾಗ,  ತನ್ನಲ್ಲಿರುವ ಮೂಢ ಆಚಾರವಿಚಾರಗಳನ್ನು ತ್ಯಜಿಸುತ್ತದೆ. ಸಮಾಜವೆನ್ನುವ ಕಮಲಕ್ಕೆ ಬಸವಣ್ಣನವರು ಬೆಳಕು ನೀಡಿದ ರವಿಯಾಗಿದ್ದಾರೆ. ಈ ರವಿಗೂ ಒಂದು ಅಸ್ತಮಾನ ಇರಬೇಕಲ್ಲವೆ? ಬಸವಣ್ಣನವರ ಅವತರಣ ಹಾಗು ಸಾಮಾಜಿಕ ಕಾರ್ಯವನ್ನು ಬಣ್ಣಿಸಿದ ಬಳಿಕ, ಅವರ ಅನೂಹ್ಯ ಹಾಗು ಕ್ಷಿಪ್ರ ಕೊನೆಯನ್ನು ಮೂರನೆಯ ನುಡಿಯಲ್ಲಿ ಬಣ್ಣಿಸಲಾಗಿದೆ. ಮೊದಲನೆಯ ನುಡಿಯಲ್ಲಿ ಬೆಳಕಿಗಿಂತ ಬೆಳ್ಳಗಿತ್ತ ಎನ್ನುವ ವರ್ಣನೆ, ಮೂರನೆಯ ನುಡಿಯಲ್ಲಿ ‘ಕಾಲಧಾಂಗ ಕಪ್ಪಗಿತ್ತ’ ಎಂದಾಗಿದೆ. ಕಾಲ ಎಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಈತ ಜೀವನದ ಎಲ್ಲ ಬಣ್ಣಗಳನ್ನೂ ನುಂಗಿ ಹಾಕುವ ಕಾಳವರ್ಣದವನು.

ಕಾಲದ ಮೂರು ಮುಖಗಳು: ಭೂತ ಹಾಗು ಭವಿಷ್ಯತ್ ಹಾಗು ವರ್ತಮಾನ. ಭೂತ ಹಾಗು ಭವಿಷ್ಯತ್ ಇವು ಯಾವಾಗಲೂ ನಿಗೂಢವೇ ಸರಿ. ಆದುದರಿಂದಲೇ ಇವು ಕಪ್ಪು ಕುಳಿಗಳು! ಜೀವಿಗಳ ಆಪೋಶನವನ್ನು ಸಾವು ಮೌನವಾಗಿ ತೆಗೆದುಕೊಳ್ಳುತ್ತದೆ ಹಾಗು ಜೀವಿಯನ್ನು ನಿಶ್ಚಲಗೊಳಿಸುತ್ತದೆ. ಆದುದರಿಂದ ಕಾಲವು ಕಪ್ಪಾದರೆ, ಸಾವು ತೆಪ್ಪಗೆ ಮಾಡುವ ಕ್ರಿಯೆಯಾಗಿದೆ. ಬಸವಣ್ಣನವರ ಅವತಾರವು ಈ ಕಾಲದಲ್ಲಿ ಈಗ ವಿಲೀನವಾಗುವ ಕಾಲ ಬಂದಿದೆ. ಜಂಗಮನು ಅದನ್ನು ಹಾಡುವ ಬಗೆ ಹೀಗಿದೆ: 

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು.

ಸಮಾಜಸುಧಾರಣೆಯು ಕಲ್ಯಾಣದಲ್ಲಿ ಈ ರೀತಿ ನಡೆದಿರುವಾಗಲೇ ಒಂದು ಆಘಾತಕಾರಿ ಘಟನೆ ಸಂಭವಿಸುತ್ತದೆ. ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಹೋಗುತ್ತಾರೆ. ಅಲ್ಲಿ ಅವರ ಜಲಸಮಾಧಿಯಾಗುತ್ತದೆ. ಇತ್ತ ಕಲ್ಯಾಣದಲ್ಲಿ ಅನೇಕ ಶರಣರ ನರಮೇಧವೂ ನಡೆಯುತ್ತದೆ. ಈ ದುರಂತವನ್ನು ‘ಕಾಲದ್ಹಾಂಗ ಕಪ್ಪಗಿತ್ತ’ ಎಂದು ಬೇಂದ್ರೆ ಬಣ್ಣಿಸುತ್ತಾರೆ. ಕಪ್ಪು ಅಥವಾ ಕತ್ತಲೆಯು ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ಕಾಲಗರ್ಭದಲ್ಲಿ ಏನಿದೆ ಎನ್ನುವದನ್ನು ನಾವು ತಿಳಿಯಲಾರೆವು. ಕಲ್ಯಾಣದಲ್ಲಿ ನಡೆದ ವಿನಾಶದ ನಂತರ ಅಲ್ಲಿ ನೆಲೆಸಿದ್ದು ಸ್ಮಶಾನಶಾಂತಿ. ಅದನ್ನು ಬೇಂದ್ರೆಯವರು ಸಾವಿನ್ಹಾಂಗ ತೆಪ್ಪಗಿತ್ತ ಎಂದು ಹೇಳುತ್ತಾರೆ. ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿಯೇ ಜರುಗಿದ ಈ ವಿಪ್ಲವವನ್ನು ‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎಂದು ಬೇಂದ್ರೆ ವರ್ಣಿಸುತ್ತಾರೆ.

‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎನ್ನುವ ಉಪಮೆಯು ಅನೇಕ ಅರ್ಥಗಳನ್ನು ಧ್ವನಿಸುತ್ತದೆ. ಮೊದಲನೆಯದಾಗಿ ಇದರಲ್ಲಿ ಕ್ರೌರ್ಯ ಅಡಗಿದೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ಭಯಂಕರವಾಗಿತ್ತು. ಅನೇಕ ಶರಣರ ಕೊಲೆ ಹಾಗು ನಿರ್ಗಮನದಿಂದಾಗಿ ಕಲ್ಯಾಣವು ಹಾಳು ಬಿದ್ದು ಹೋಯಿತು. ಈ ಉಪಮೆಯು ಆ ಸಮಯದ ಘಟನೆಗಳನ್ನು ನೆನಪಿಗೆ ತರುತ್ತದೆ. ಹದ್ದು ಎರಗುವುದು ಅತ್ಯಂತ ವೇಗವಾಗಿ. ಬಸವಣ್ಣನವರ ದೇಹತ್ಯಾಗವೂ ಅಷ್ಟೇ ಆಕಸ್ಮಿಕವಾಗಿ ಹಾಗು ತ್ವರಿತವಾಗಿ ನಡೆದು ಹೋಯಿತು. ನಾಡನ್ನು ಬೆಳಗಿದ ಬೆಳಕು ಈಗ ಎಲ್ಲೆಡೆಗೂ ಹಬ್ಬಿದ ಮಬ್ಬುಗತ್ತಲೆಯಲ್ಲಿ ಕರಗಿ ಹೋಯಿತು. ಈ ಸಾಲನ್ನು ಓದುವಾಗ ಗಾಂಧೀಜಿಯವರ ಸಾವಿನ ನೆನಪೂ ಆಗದಿರದು. ಬಸವಣ್ಣ ಹಾಗು ಗಾಂಧೀಜಿಯವರ ಸಾವಿನಲ್ಲಿ ಭಿನ್ನತೆ ಇದೆ. ಆದರೆ ಸಮಾಜವನ್ನು ಸತ್ಯ ಹಾಗು ಪ್ರೇಮಗಳಿಂದ ಬೆಳಗಿದ ಈ ಎರಡು ಜ್ಯೋತಿಗಳು ಕತ್ತಲೆಯಲ್ಲಿ ಕರಗಿ ಹೋದದ್ದರಲ್ಲಿ ಸಾಮ್ಯತೆ ಇದೆ. ‘ಮಬ್ಬು’ ಎನ್ನುವ ಪದವನ್ನು ಗಮನಿಸಿರಿ. ಮಬ್ಬು ಎನ್ನುವುದು ಕತ್ತಲೆಯನ್ನು ಹಾಗು ಬುದ್ಧಿಗೇಡಿತನವನ್ನಷ್ಟೇ ಅಲ್ಲ, ಯಾವುದೋ ವಿಚಾರಧಾರೆಯ ಹಿಡಿತವನ್ನೂ ಸೂಚಿಸುತ್ತದೆ. ಸಮಾಜದಲ್ಲಿ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)
 

ಇದೆಲ್ಲ ಸರಿ, ಬಸವಣ್ಣನವರ ನಂತರ ಈ ಸಮಾಜದ ಗತಿ ಏನು? ಹಗಲಿನ ಬೆಳಕು ರಾತ್ರಿಯ ಮಬ್ಬಿನಲ್ಲಿ ಕರಗಿ ಹೋದಂತೆ, ಬಸವಣ್ಣನವರ ಸತ್ಕಾರ್ಯಗಳು ಕರಗಿ ಹೋದವು. ಮಬ್ಬು ಎಂದರೆ ಕತ್ತಲೆ ಎನ್ನುವ ಅರ್ಥವಲ್ಲದೆ ಬುದ್ಧಿಹೀನತೆ, ವಿಚಾರದಾಸ್ಯ ಎನ್ನುವ ಅರ್ಥವೂ ಇರುವದನ್ನು ಗಮನಿಸಬೇಕು. 

ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಅದು ‘ತಂಗಿದಾಗ’ ಅಂದರೆ ಕಲ್ಯಾಣವನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಅಲ್ಲಿ ತಳವೂರಿದಾಗ ಎನ್ನುವ ಅರ್ಥವು ಇಲ್ಲಿ ನಿಹಿತವಾಗಿದೆ. ಬಸವಣ್ಣನವರದೂ ಸಹ ಅದರಂತೆಯೆ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.

ಕಲ್ಯಾಣದ ವಿಪ್ಲವಕ್ಕೂ ಮೊದಲು ಬಸವಣ್ಣನವರ ಅನುಚರರು ಅವರ ಸುತ್ತಲೂ ‘ಗುಂಗು ಹಿಡಿದವರಂತೆ’ ಕೂಡಿರುತ್ತಿದ್ದರು. ‘ತಂಗುವದು’ ಎಂದರೆ ಅಲ್ಲಿಯೇ ನೆಲೆ ನಿಲ್ಲುವದು. ಕಲ್ಯಾಣದಲ್ಲಿದ್ದ ಶರಣರೆಲ್ಲ, ಈ ವಿಪ್ಲವದ ನಂತರ ತುಳುಕಿ ಹೋದರು. ಈ ಸಾಲುಗಳು ಬಸವಣ್ಣನವರಿಗೂ ಅನ್ವಯಿಸುತ್ತವೆ. ಕಲ್ಯಾಣದಲ್ಲಿ ತಂಗಿದ್ದಾಗ ಅವರು ‘ಗುಂಗು ಹಿಡಿದ’ ತುಂಬಿಯಂತೆ ಇದ್ದರು. ತುಂಬಿಯು ‘ಗುಂ ಗುಂ’ ಎನ್ನುವ ಒಂದೇ ನಾದವನ್ನು ಹೊರಡಿಸುತ್ತದೆ. ಬಸವಣ್ಣನವರಿಗೆ ಹಿಡಿದ ಗುಂಗು ಶಿವಾಚಾರದ ಗುಂಗು, ಸಮಾಜದ ಉದ್ಧಾರದ ಗುಂಗು. ಅವರು ಹೊರಡಿಸುತ್ತಿದ್ದ ಧ್ವನಿಯೂ ಅದೊಂದೇ ಧ್ವನಿ. ತಮ್ಮ ವ್ಯಕ್ತಿತ್ವವನ್ನೆಲ್ಲ , ತಮ್ಮ ತನು, ಮನ, ಧನವನ್ನೆಲ್ಲ ಅದರಲ್ಲಿಯೇ ತೊಡಗಿಸಿ, ಅದರಲ್ಲಿಯೇ ಅವರು ತುಂಬಿಕೊಂಡಿದ್ದರು. ಆದರೆ ಅವರ ಕಾಲವು ತುಂಬಿ ಬಂದಿತ್ತು ಹಾಗು ಬಸವಣ್ಣನವರ ಚೈತನ್ಯವು ಈಗ ತುಳುಕಿ ಹೋಯಿತು ಅಂದರೆ ಇಲ್ಲದಂತಾಯಿತು.

ಇನ್ನು ಈ ಗೀತೆಯ ಪಲ್ಲವಿಯನ್ನು ಗಮನಿಸೋಣ:

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು||
 ತುಮ್ ತುಮ್..... ಎನ್ನುವ ಪದವು ಏಕತಾರಿಯ ನಾದಕ್ಕೆ ಸಂವಾದಿಯಾದ ಪದವಾಗಿದೆ. ಬೇಂದ್ರೆಯವರ ‘ತಲೆದಂಡ’ ನಾಟಕದಲ್ಲಿಯ ಜಂಗಮನು ಏಕತಾರಿಯನ್ನು ಬಾರಿಸುತ್ತಲೇ ಈ ಗೀತೆಯನ್ನು ಹಾಡುತ್ತಿರುತ್ತಾನೆ. ಮೊದಲನೆಯ ನುಡಿಯ ಕೊನೆಯಲ್ಲಿ ಆತನು ‘ತುಂಬಿ ಬಂದಿತ್ತ’ ಎಂದು ಹೇಳುವಾಗ, ಬಸವಣ್ಣನವರನ್ನು ಭ್ರಮರಕ್ಕೆ ಹೋಲಿಸಿ ಅವರ ಅವತರಣಕ್ಕೆ ಸಂಕೇತವಾಗಿ ‘ತುಂಬಿ’ ಪದವನ್ನು ಬಳಸಲಾಗಿದೆ. ಬಸವಣ್ಣವರ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಬಣ್ಣಿಸಲು ಹಾಗು ಕೈಲಾಸದಿಂದ ಭೂಮಿಗೆ ಈ ದೇವ-ತುಂಬಿಯ ಅವತರಣವನ್ನು ಸೂಚಿಸಲು ‘ತುಂಬಿ ಬಂದಿತ್ತ’ ಎಂದು ಹೇಳಲಾಗಿದೆ. ಕೈಲಾಸದಲ್ಲಿರುವ ದುಂಬಿಯು ಈಗ ಭೂಲೋಕಕ್ಕೆ ಬಂದಿದೆ ಎನ್ನುವುದರ ಸೂಚನೆ ಇದು.

ಎರಡನೆಯ ನುಡಿಯಲ್ಲಿ ಸಾಮಾಜಿಕ ಹಾಗು ಆಧ್ಯಾತ್ಮಿಕ ಕಾರ್ಯದಲ್ಲಿ ಬಸವಣ್ಣನವರು ತುಂಬಿಕೊಂಡಿದ್ದನ್ನು ಸೂಚಿಸಲಾಗಿದೆ. ಬಸವಣ್ಣನವರ ಆಚಾರ, ವಿಚಾರಗಳು ಸಮಾಜವನ್ನು ಪೂರ್ಣವಾಗಿ ತುಂಬಿದವು ಅಂದರೆ ಆವರಿಸಿದವು ಹಾಗು ಪ್ರಭಾವಿಸಿದವು ಎನ್ನುವ ಸೂಚನೆಯು ‘ತುಂಬಿ ಬಂದಿತ್ತ’ ಪದದಲ್ಲಿ ಅಡಕವಾಗಿದೆ.
ಮೂರನೆಯ ನುಡಿಯಲ್ಲಿ ಬಸವಣ್ಣನವರ ಕಾಲವು ತುಂಬಿ ಬಂದಿದ್ದನ್ನು ಸೂಚಿಸಲಾಗಿದೆ.ಕನ್ನಡ ನಾಡಿನಲ್ಲಿ ಒಂದು ಯುಗಸಮಾಪ್ತಿಯಾಯಿತು.
ಬಸವಣ್ಣನವರ ಜೀವನದ ಮಂಗಲಗೀತೆಯಂತೆ ಇರುವ ಈ ಕವನದಲ್ಲಿ ‘ತುಂಬಿ’ ಪದವನ್ನು ಬಳಸಲು ಬೇಂದ್ರೆಯವರಿಗೆ ಬಹುಶಃ ಬಸವಣ್ಣನವರ ಒಂದು ವಚನದಿಂದಲೇ ಪ್ರೇರಣೆ ದೊರೆತಿರಬಹುದು. ಭಕ್ತಿಭಂಡಾರಿ ಬಸವಣ್ಣನವರು ಕೂಡಲಸಂಗಮದೇವರಲ್ಲಿ ಇರಿಸಿದ ಭಕ್ತಿ ಆ ವಚನದಲ್ಲಿ ವ್ಯಕ್ತವಾಗಿದೆ. ಆ ವಚನ ಹೀಗಿದೆ:

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಾನು ತುಂಬಿ

ಇದರಂತೆಯೇ ಅಲ್ಲಮಪ್ರಭುಗಳೂ ಸಹ ಒಂದು ವಚನವನ್ನು ರಚಿಸಿದ್ದಾರೆ. ಅದು ಹೀಗಿದೆ:

ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!
ಆತುಮ ತುಂಬಿ ತುಂಬಿ ನೋಡಾ!
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!

ಅಲ್ಲಮಪ್ರಭುವಿನ ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ. ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಬಣ್ಣಿಸಿದ್ದಾರೆ.
ಈ ಎರಡು ವಚನಗಳಲ್ಲಿಯ ‘ತುಂಬಿ’ ಬೇಂದ್ರೆಯವರ ಕವನಕ್ಕೆ ಪ್ರೇರಣೆಯಾಗಿರಬಹುದು! 
ಈ ಕವನವು ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ.