Thursday, April 29, 2010

ಬೇಂದ್ರೆಯವರ "ಗಣಪತಿ"

ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು

ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.

ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.

ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.
……………………………………………………………………………………………
ಬೇಂದ್ರೆಯವರ ಕಾವ್ಯಜೀವನವನ್ನು ಸ್ಥೂಲವಾಗಿ ಮೂರು ಘಟ್ಟಗಳಲ್ಲಿ ವಿಭಾಗಿಸಬಹುದು. ೧೯೨೨ನೆಯ ಇಸವಿಯಲ್ಲಿ ಅಂದರೆ ಬೇಂದ್ರೆಯವರು ೨೬ ವರ್ಷದವರಿದ್ದಾಗ ಅವರ ಮೊದಲ ಕೃತಿ “ಕೃಷ್ಣಾಕುಮಾರಿ” ಪ್ರಕಟವಾಯಿತು. ಅಲ್ಲಿಂದ ೧೯೫೧ರಲ್ಲಿ ‘ಗಂಗಾವತರಣ’ ಕವನಸಂಕಲನವು ಪ್ರಕಟವಾಗುವವರೆಗಿನ ಅವಧಿಯು ಬೇಂದ್ರೆಯವರ ಕಾವ್ಯಜೀವನದ ಮೊದಲ ಘಟ್ಟ. ಈ ಘಟ್ಟವು ಬೇಂದ್ರೆ-ಕಾವ್ಯವು ಸಿದ್ಧಿಯ ಹಾಗು ಪ್ರಸಿದ್ಧಿಯ ಪರಮೋಚ್ಚ  ಶಿಖರವನ್ನು ತಲುಪಿದ ಘಟ್ಟ. ಈ ಅವಧಿಯಲ್ಲಿ ಪ್ರಕಟವಾದ ಬೇಂದ್ರೆ ಕಾವ್ಯರಚನೆಗಳು ಇಂತಿವೆ:
(೧) ಕೃಷ್ಣಾಕುಮಾರಿ, (೨) ಗರಿ, (೩) ಸಖೀಗೀತ, (೪) ಮೂರ್ತಿ, (೫) ಕಾಮಕಸ್ತೂರಿ, (೬) ಉಯ್ಯಾಲೆ, (೭) ನಾದಲೀಲೆ, (೮) ಮೇಘದೂತ (ಅನುವಾದ), (೯) ಹಾಡು-ಪಾಡು ಹಾಗು (೧೦) ಗಂಗಾವತರಣ.

೧೯೫೬ರಲ್ಲಿ ಬೇಂದ್ರೆಯವರಿಗೆ ೬೦ ವರ್ಷಗಳು ತುಂಬಿದವು. ೧೯೫೭ರಲ್ಲಿ ‘ಅರಳು ಮರಳು’ ಕವನಸಂಕಲನ ಪ್ರಕಟವಾಯಿತು. ಈ ಬೃಹತ್ ಸಂಕಲನದಲ್ಲಿ ೫ ಉಪಸಂಕಲನಗಳಿವೆ:
(೧) ಹೃದಯ ಸಮುದ್ರ, (೨) ಸೂರ್ಯಪಾನ, (೩) ಮುಕ್ತಕಂಠ, (೪) ಚೈತ್ಯಾಲಯ ಹಾಗು (೫) ಜೀವಲಹರಿ.
ಬೇಂದ್ರೆಯವರ ಕಾವ್ಯಪಥವು ಬದಲಾದದ್ದನ್ನು ಈ ಸಂಕಲನಗಳಲ್ಲಿ ಕಾಣಬಹುದು. ನಿಸರ್ಗಪ್ರೀತಿ, ಆದರ್ಶ ಹಾಗು ಬದುಕಿನ ಒಲವನ್ನು ಬಿಂಬಿಸುತ್ತಿದ್ದ ಜೀವನ್ಮುಖಿ ಕಾವ್ಯವು ಇದೀಗ ಸೂರ್ಯಪಾನದಂತೆ ಪರಮಾರ್ಥಮುಖಿಯಾಗಿ ಬದಲಾಯಿತು. ಯಾವುದೇ ವ್ಯಕ್ತಿಯ ಜೀವನದಲ್ಲಿ ಇದು ಸಹಜವಾದದ್ದೇ. ೧೯೪೩ರಲ್ಲಿ ಬೇಂದ್ರೆಯವರು ಶ್ರೀ ಅರವಿಂದ ಹಾಗು ಶ್ರೀಮಾತಾ ಇವರ ದರ್ಶನ ಪಡೆದರು. ಬೇಂದ್ರೆಯವರ ಗೆಳೆಯರ ದೊಡ್ಡ ಗುಂಪೇ ಅರವಿಂದರಿಂದ ಪ್ರಭಾವಿತವಾಗಿತ್ತು. ಇವರಲ್ಲಿ ‘ಮಧುರಚೆನ್ನ ’ ಕಾವ್ಯನಾಮದಿಂದ ಖ್ಯಾತರಾದ ಹಲಸಂಗಿ ಚೆನ್ನಮಲ್ಲಪ್ಪನವರು, ಶ್ರೀ ಸಿಂಪಿ ಲಿಂಗಣ್ಣನವರು ಹಾಗು ಶ್ರೀ ವಿನಾಯಕ ಗೋಕಾಕರು ಪ್ರಮುಖರು. ೧೯೪೮ರಲ್ಲಿ ಬೇಂದ್ರೆಯವರಿಗೆ ತತ್ವಜ್ಞಾನಿ ಶ್ರೀ ಜಿಡ್ಡು ಕೃಷ್ಣಮೂರ್ತಿಯವರ ಭೆಟ್ಟಿ ಹಾಗು ಶ್ರೀ ಗುಳವಣಿ ಮಹಾರಾಜರ ದರ್ಶನವಾಯಿತು. ೧೯೫೨ರಲ್ಲಿ ಪ್ರಭಾಕರ ಮಹಾರಾಜರ ದರ್ಶನ ಪಡೆದರು. ೧೯೫೪ರಲ್ಲಿ ಶ್ರೀ ರಾಮದಾಸರ ದರ್ಶನಲಾಭವಾಯಿತು. ಬೇಂದ್ರೆಕುಟುಂಬವು ಪಾರಂಪರಿಕವಾಗಿ  ಗೋಂದಾವಲಿಯ ಶ್ರೀ ಬ್ರಹ್ಮಚೈತನ್ಯರ ಶಿಷ್ಯವರ್ಗಕ್ಕೆ ಸೇರಿದ್ದು.  ಇದೆಲ್ಲದರ ಪರಿಣಾಮವು ಅವರ ಸಾಹಿತ್ಯದಲ್ಲಿ ಬಿಂಬಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಅವಧಿಯ ಕಾವ್ಯದಲ್ಲಿ ಕಾವ್ಯ ಹಾಗು ಪಾರಮಾರ್ಥಿಕತೆಯ ಸಂಯೋಗವನ್ನು ಕಾಣುತ್ತೇವೆ.

೧೯೫೭ರ ನಂತರದ ಬೇಂದ್ರೆ-ಕಾವ್ಯವು ಮೂರನೆಯ ಘಟ್ಟದ ಕಾವ್ಯ. ಈ ಅವಧಿಯಲ್ಲಿ ಪ್ರಕಟಗೊಂಡ ಸಂಕಲನಗಳು ಇಂತಿವೆ:
(೧) ನಮನ, (೨) ಸಂಚಯ, (೩) ಉತ್ತರಾಯಣ, (೪) ಮುಗಿಲ ಮಲ್ಲಿಗೆ, (೫) ಯಕ್ಷ ಯಕ್ಷಿ, (೬) ನಾಕು ತಂತಿ, (೭) ಮರ್ಯಾದೆ, (೮) ಶ್ರೀಮಾತಾ, (೯) ಇದು ನಭೋವಾಣಿ, (೧೦) ಮತ್ತೆ ಶ್ರಾವಣಾ ಬಂತು ಹಾಗು (೧೧) ಚತುರೋಕ್ತಿ ಮತ್ತು ಇತರ ಕವನಗಳು.
ಅವರ ಮರಣೋತ್ತರ (೧೯೮೧ರ ನಂತರದಲ್ಲಿ) ಪ್ರಕಟವಾದ ಕವನಸಂಕಲನಗಳು ಇಂತಿವೆ:
(೧) ಪರಾಕಿ, (೨) ಕಾವ್ಯವೈಖರಿ, (೩) ತಾ ಲೆಕ್ಕಣಕಿ ತಾ ದೌತಿ, (೪) ಬಾಲಬೋಧೆ, (೫) ಪ್ರತಿಬಿಂಬಗಳು ಹಾಗು (೬) ಶತಮಾನ.

ಈ ಮೂರನೆಯ ಘಟ್ಟದ ಕಾವ್ಯವು ಐಹಿಕ ಸಿದ್ಧಿ ಹಾಗು ಪ್ರಸಿದ್ಧಿಯ ಆಚೆಗಿನ ಕಾವ್ಯ. ಕವಿಯು ಧ್ಯಾನಸ್ಥನಾದ ಸಮಯದ ಕಾವ್ಯವಿದು. ಈ ಕಾವ್ಯದಲ್ಲಿ ಬೆಡಗು, ಬಿನ್ನಾಣಗಳಿಲ್ಲ. ಬದಲಿಗೆ ನಿಗೂಢತೆ ಇದೆ. ಹೀಗಾಗಿ ಇದೆಂತಹ ಕಾವ್ಯ ಎಂದು ಕೆಲವರಿಗೆ ಅನ್ನಿಸಬಹುದು. ‘ಅರಳು ಮರಳು’ ನಂತರದ ಬೇಂದ್ರೆ ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವು ವಿಮರ್ಶಕರು ಹೇಳಿದ್ದುಂಟು. ಅವರ ದೃಷ್ಟಿದೋಷವೇ ಈ ಹೇಳಿಕೆಗೆ ಕಾರಣ. ಬೇಲೂರು ಶಿಲಾಬಾಲಿಕೆಯಂತಹ ಕುಸುರಿ ಕೆಲಸದ ಶಿಲ್ಪಸೌಂದರ್ಯವನ್ನು ನೋಡಿದ ಬಳಿಕ, ಗೊಮ್ಮಟೇಶ್ವರನನ್ನು ನೋಡಿ, ಈ ಕೆತ್ತನೆಯಲ್ಲಿ ಏನಿದೆ ಎಂದು ಹೀಯಾಳಿಸುವ ಕುರುಡುತನ ಈ ವಿಮರ್ಶಕರದು.

ಬೇಂದ್ರೆಯವರು ರಚಿಸಿದ ‘ಗಣಪತಿ’ ಕವನವು ಅವರ ಧ್ಯಾನಸ್ಥ ಘಟ್ಟದ ಕವನ. ಗಣಪತಿಯನ್ನು ಧ್ಯಾನಿಸುತ್ತಿರುವಾಗ, ಆ ದೇವತೆಯು ಅವರ ಅಂತರಂಗದಲ್ಲಿ ಮೂಡುತ್ತಿದ್ದಾನೆ. ಆ ದೇವತೆಯೇ ಸಾಧಕನಿಗೆ ತನ್ನ ಸ್ವರೂಪವನ್ನು ತೆರೆಯುತ್ತಿರುವ ರೀತಿಯಲ್ಲಿ ಈ ಕವನವಿದೆ.
ಕವನದ ಮೊದಲ ನುಡಿಯನ್ನು ನೋಡಿ:

“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”

“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ”:
ತಾಯ ಗರ್ಭದಲ್ಲಿ ಇರುವ ಕೂಸು ಗರ್ಭಚೀಲದಲ್ಲಿ (placenta) ಇರುತ್ತದೆ. ಇದಕ್ಕೆ ‘ಮಾಸ’ ಎಂದೂ ಹೇಳುತ್ತಾರೆ. ಇದು ಹೊಲಸಿನ ಚೀಲ. ಶಿಶುವು ಪ್ರಸವ ಸಮಯದಲ್ಲಿ ಈ ಹೊಲಸಿನ ಚೀಲವನ್ನು ಹರಿದುಕೊಂಡು ಹೊರಬರುತ್ತದೆ. ಸಾಧಕನ ಅಂತರಂಗವೂ ಸಹ ಅರಿಷಡ್ವರ್ಗಗಳಿಂದ ಮಲಿನವಾದದ್ದೇ. ಇಂತಹ ಅಶುದ್ಧ ಅಂತರಂಗದಲ್ಲಿಯೂ ಸಹ ಭಕ್ತನ ಸಾಧನೆಯಿಂದಾಗಿ ಗಣಪತಿಯು ಮೂಡುತ್ತಾನೆ. ಸಾಧನೆಯ ಅಂತಿಮ ಹಂತದಲ್ಲಿ ಶಿಶುರೂಪದಲ್ಲಿ ಇರುವ ಗಣಪತಿಯು, ಭಕ್ತನಿಗೆ ವ್ಯಕ್ತವಾಗುವಾಗ, ಈ ಹೊಲಸಿನ ಚೀಲವನ್ನು ಬಿಚ್ಚಿ ಹೊರಬರುತ್ತಾನೆ. ದೇವಶಿಶುವಿನ ಆಗಮನದಿಂದ  ಮಲಿನ ಅಂತರಂಗವು ಪಾವನವಾಗಿ, ಅಲ್ಲಿ ಸುಗಂಧ ಹರಡುತ್ತದೆ.
ಈ ಸುಗಂಧವು  ಅತೀಂದ್ರಿಯ ಅನುಭವಕ್ಕೆ ಮಾತ್ರ ಸಿಲುಕುವಂತಹದು. ಸುಗಂಧವು ನಮ್ಮನ್ನು ಆಹ್ಲಾದಗೊಳಿಸುವಂತೆ, ದೇವನ ಆಗಮನವೂ ಸಹ ನಮ್ಮ ಅಂತರಂಗವನ್ನು ಆಹ್ಲಾದಗೊಳಿಸುತ್ತದೆ.

“ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ”:
ಗಣಪತಿಯ ಅಂದರೆ ಇಷ್ಟದೇವತೆಯ ಸಾಕ್ಷಾತ್ಕಾರದಿಂದ ಅಂತರಂಗದಲ್ಲಿ ಬ್ರಹ್ಮಾನಂದದ ಝರಿ ಹರಿಯುತ್ತದೆ. ಸದ್ಗುಣಗಳು ಪುಷ್ಟಿಗೊಳ್ಳುತ್ತವೆ. ಇದುವೇ ಭಕ್ತನಿಗೆ ಗಣಪತಿಯು ಉಣ್ಣಿಸುವ ಮಕರಂದ. ಆದರೆ ಈ ಮಕರಂದವೂ ಸಹ ಇಂದ್ರಿಯಗಳ ಅನುಭವಕ್ಕೆ ಸಿಗದ ಅಲೌಕಿಕ ಪದಾರ್ಥ, ಇದು transcendental joy!

“ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”:
ಅಪರೂಪದ ಗೆರೆ ಎಂದರೆ ಮಿಂಚಿ ಮಾಯವಾಗುವ ಗೆರೆ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಭಗವದ್ದರ್ಶನ ಪಡೆದಾಗ ಅದನ್ನು “ತಟಿಲ್ಲತಾ ಸಮರುಚಿಃ” ಎಂದರೆ ಕೋಲ್ಮಿಂಚು ಎಂದು ವರ್ಣಿಸುತ್ತಾರೆ. ಗಣಪತಿಯು ವ್ಯಕ್ತವಾಗುವದೂ ಸಹ ಕೋಲ್ಮಿಂಚಿನಂತೆ. ಸಾಧಕನ ಅಂತರಂಗದ ಬಾನಿನಲ್ಲಿ ಗಣಪತಿಯು ಮಿಂಚಿನಂತಹ ಅಪರೂಪದ ಗೆರೆಯಾಗಿ ಕಾಣುತ್ತಾನೆ. ಇಂತಹ ಸತತ ಕೋಲ್ಮಿಂಚುಗಳ ಕಟ್ಟೇ ಅವನಾಗಿದ್ದಾನೆ. ಆದರೆ ಸಾಧಕನಿಗೆ ಆ ಕಟ್ಟಿನ ಗುರುತು ಸರಳಸಾಧ್ಯವಲ್ಲ! ಆ ಕೋಲ್ಮಿಂಚು ಸಾಧಕನಿಗೆ ಕಾಣಬೇಕಾದರೆ, ಆ ದೇವತಾದರ್ಶನವು ಅವನಿಗೆ ಆಗಬೇಕಾದರೆ ಅವನ ಶರೀರಗಳು (ಸ್ಥೂಲ ಹಾಗು ಸೂಕ್ಷ್ಮ ಶರೀರಗಳು), ಸಾಧನೆಯಿಂದ ಹುರಿಗೊಳ್ಳಬೇಕು.

‘ಹುರಿಗೊಳ್ಳುವದು’ ಎಂದರೇನು? ನೂಲಿನ ಬೇರೆ ಬೇರೆ ಎಳೆಗಳು ಒಂದಾಗಿ ಗಟ್ಟಿಯಾಗುವದಕ್ಕೆ ಹುರಿಗೊಳ್ಳುವದು ಎನ್ನುತ್ತಾರೆ. ಹಾಗಾದಾಗ ಮಾತ್ರ ಆತ ತನ್ನ ಅಂತರಂಗದಲ್ಲಿಯ ದೇವತೆಯನ್ನು ಮುಟ್ಟಬಲ್ಲ, ಅನುಭವಿಸಬಲ್ಲ. ‘ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು’ ಎನ್ನುವದರ ಅರ್ಥವಿದು.
ಈಗ ಎರಡನೆಯ ನುಡಿಯನ್ನು ನೋಡಿರಿ:

“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”

“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು”
‘ನಾನು ಬರಿಸದ್ದು’ ಎನ್ನುವದರ ಒಂದು ಅರ್ಥ ‘ನಾನು ಬರಿಸದೇ ಇದ್ದದ್ದು’, ಎಂದರೆ ಸೃಷ್ಟಿಸದೇ ಇದ್ದದ್ದು ಎಂದು ಆಗಬಹುದು. ‘ತಾನು (=ಭಗವಂತ) ಇದ್ದದ್ದು’ ಎಂದರೆ ‘ಸತ್’ ಎನ್ನುವ ಅರ್ಥ; ‘ಇಲ್ಲದ್ದು’ ಎಂದರೆ ‘ಅಸತ್’ ಎನ್ನುವ ಅರ್ಥ. ಸತ್ ಹಾಗು ಅಸತ್ ಈ ಎರಡೂ ಪ್ರಪಂಚಗಳು  ಅವನು ಬರಿಸದೇ ಇದ್ದದ್ದು, ಅವನು ಮಾಡದೇ ಇದ್ದದ್ದು. ಗಣಪತಿಯು ಈ ಸತ್ ಹಾಗು ಅಸತ್ ಪ್ರಪಂಚಗಳನ್ನು ಸೃಷ್ಟಿಸದೇ ಇದ್ದರೆ, ಈ ಪ್ರಪಂಚಗಳು ವ್ಯಕ್ತವಾಗುವದೇಕೆ ಎನ್ನುವ ಸಂದೇಹ ಬರುತ್ತದೆ. ಈ ಸಂದೇಹಕ್ಕೆ ಉತ್ತರ ಶಂಕರಾಚಾರ್ಯರ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿದೆ.
“ಯಸ್ಯೈವ ಸ್ಫುರಣಂ ಸದಾತ್ಮಕಮಸತ್ ಕಲ್ಪಾರ್ಥಕಂ ಭಾಸತೇ”.  ಅಂದರೆ, ಭಗವಂತನ ಸ್ಫುರಣಕ್ರಿಯೆಯಿಂದಾಗಿ ಸತ್ ಮತ್ತು ಅಸತ್ ಎನ್ನುವ ಪ್ರಪಂಚಗಳು ನಿರಂತರವಾಗಿ ಭಾಸವಾಗುತ್ತವೆ. ಅರ್ಥಾತ್ ಅವು ವಾಸ್ತವಿಕವಾಗಿ ಇಲ್ಲ. ಈ ಅವಾಸ್ತವ ಪ್ರಪಂಚಗಳ ಹೊರಗೆ ಇರುವದರಿಂದಲೇ ಗಣಪತಿಯು ‘ನಾನು ಎಣಿಕೆಗೆ ಹೊರಗೆ’ ಎನ್ನುತ್ತಾನೆ. ಇದೇ ಮಾತನ್ನು ‘ಅತ್ಯತಿಷ್ಠತ್ ದಶಾಂಗುಲಮ್’ ಎಂದೂ ಹೇಳಲಾಗಿದೆ. ಅಂದರೆ, ಈ ಪ್ರಪಂಚಗಳನ್ನೆಲ್ಲ ವ್ಯಾಪಿಸಿಯೂ, ಭಗವಂತನು ಇದರ ಹೊರಗೆ ಸಹ ಇರುತ್ತಾನೆ. ಆ ಕಾರಣದಿಂದಾಗಿ ಅವನು ಪ್ರಾಪಂಚಿಕರ ಎಣಿಕೆಗೆ ಸಿಗಲಾರ. ಪ್ರಪಂಚಗಳಲ್ಲಿ ಇರುವ ಭಗವಂತನು ಪ್ರಾಪಂಚಿಕರ ಅನುಭವಕ್ಕೆ ಬರದಂತೆ ಇರುತ್ತಾನೆ. ಆದುದರಿಂದಲೇ ಗಣಪತಿಯು ಹೇಳುವದು: “ನಾನು ಇರುವೆನು ಕದ್ದು.”

‘ನಾನು ಬರಿಸದ್ದು’ ಎನ್ನುವ ಪದಪುಂಜವನ್ನು ‘ನಾನು ಬರಿ ಸದ್ದು’ ಎಂದು ಬಿಡಿಸಿಯೂ ಓದಬಹುದು. ಸದ್ದು ಎಂದರೆ ನಾದ. ಭಗವಂತನು ‘ಓಂ’ ನಾದದ ಮೂಲಕ ಪ್ರಕಟವಾಗುತ್ತಾನೆ ಎಂದು ಹೇಳುತ್ತಾರೆ. ಗಣಪತಿಯೂ ಸಹ ಸಾಧಕನಿಗೆ ಓಂಕಾರದ ಮೂಲಕ ಪ್ರಕಟವಾಗಬಹುದು. ‘ತಾನಿದ್ದದ್ದು’ ಎಂದರೆ ಈ ಓಂಕಾರ ನಾದಕ್ಕೆ ಸಂಗೀತದ ‘ತಾನ್’ ಇರಲೂ ಬಹುದು, ಇರದಿರಲೂ ಬಹುದು. ಸಾಧಕನ ಸಾಧನೆಯ ಮಟ್ಟದ ಮೇಲೆ ಇದು ಹೋಗುತ್ತದೆ.

“ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
ಈ ಭಗವಂತನು ಭಕ್ತರ ಕಾಣಿಕೆಗಳಿಗೆ ಮರುಳಾಗುತ್ತಾನೆಯೆ? ಇಲ್ಲ. ಏಕೆಂದರೆ ಕಾಣಿಕೆಗಳಲ್ಲಿ ‘ತಾನು ಕೊಟ್ಟಿದ್ದು’ ಎನ್ನುವ ಅಹಂಕಾರವಿರುತ್ತದೆ ಮತ್ತು ಕಾಣಿಕೆಗಳು ಅಲ್ಪಾಯುಗಳು. ಪ್ರೀತಿ ಮಾತ್ರ ನಿರಂತರವಾದದ್ದು. ಆದುದರಿಂದ ಗಣಪತಿಯು ಅಹಂಕಾರದ ಈ ಅಲ್ಪಾಯು ಕಾಣಿಕೆಗಳನ್ನು ಕುಣಿಗೆ (ಅಂದರೆ burial pitಗೆ) ಎಸೆಯುತ್ತಾನೆ. ಆತನಿಗೆ ಬೇಕಾದದ್ದು ಭಕ್ತರ ನಿರ್ವ್ಯಾಜ ಪ್ರೇಮ. ಹಾಗೆಂತಲೇ ಆತ ತನ್ನನ್ನು ‘ತುಟಿಯ ಮೇಲಿನ ಮುತ್ತು’ ಎಂದು ಕರೆದುಕೊಳ್ಳುತ್ತಾನೆ.  ತುಟಿಯ ಮೇಲಿನ ಮುತ್ತು ಅನ್ಯೋನ್ಯ ಪ್ರೀತಿಯ ದ್ಯೋತಕ. ಮುತ್ತು ಕೊಟ್ಟ ಮೇಲೂ ಸಹ, ಆ ಭಾಸ ನಿರಂತರವಾಗಿ ಉಳಿಯುತ್ತದೆ. ಗಣಪತಿಯು ದೇವತೆಯೂ ಹೌದು; ಭಕ್ತ ಹಾಗು ದೇವತೆಯ ನಡುವಿನ ಪ್ರೀತಿಯೂ ಹೌದು.

ಬೇಂದ್ರೆಯವರು ಅಪಾರ ಶ್ರದ್ಧೆ ಹಾಗು ನಿಷ್ಠೆಯನ್ನು ಇಟ್ಟಿದ್ದ  ಬ್ರಹ್ಮಚೈತನ್ಯ ಮಹಾರಾಜರಿಗೆ ಅವರ ಶಿಷ್ಯರೊಬ್ಬರು ಒಮ್ಮೆ ತಕರಾರು ಹೇಳಿದರು: “ಮಹಾರಾಜ, ನಾನು ನನ್ನ ಸರ್ವಸ್ವವನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ. ಆದರೂ ದೇವರು ನನಗೇಕೆ ದರ್ಶನ ಕೊಟ್ಟಿಲ್ಲ?”
ಅದಕ್ಕೆ ಮಹಾರಾಜರ ಉತ್ತರ ಹೀಗಿತ್ತು: “ನೀವು ನಿಮ್ಮ ಸರ್ವವನ್ನೂ ಕೊಟ್ಟಿದ್ದೀರಿ. ಆದರೆ ‘ಸ್ವ’ವನ್ನು ಮಾತ್ರ ಇನ್ನೂ ಕೊಟ್ಟಿಲ್ಲ!”
ಇದರಂತೆಯೇ, ಸಾಧಕನು ಕೊಟ್ಟ ಸರ್ವ ಕಾಣಿಕೆಗಳನ್ನು ಗಣಪತಿಯು ಕುಣಿಗೆ ಎಸೆಯುತ್ತಾನೆ. ಅವನಿಗೆ ಬೇಕಾದದ್ದು ‘ಸ್ವ’ ಮಾತ್ರ!

ಈಗ ಮೂರನೆಯ ನುಡಿಯನ್ನು ನೋಡಿರಿ:

ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.

“ನಾನು ನೀನಿನ ನೂಲು ಈ ದಿಗಂಬರ ಪಟವು”:
ಬಸವಣ್ಣನವರು ತಮ್ಮ ವಚನವೊಂದರಲ್ಲಿ ದೇವರಿಗೆ ಹೇಳುತ್ತಾರೆ: “ಹಳೆಯ ನಾನು, ಕೆಳೆಯ ನೀನು.”
ಈ ಪ್ರಪಂಚ ಕೂಡ ದೇವರಷ್ಟೇ ಸನಾತನವಾದದ್ದು. ದೇವರು ಈ ಪ್ರಪಂಚದ ಪ್ರಿಯಕರ. ಬೇಂದ್ರೆಯವರು ಸಹ ‘ನಾನು’ ಹಾಗು ‘ನೀನು’ ಎನ್ನುವ ನೂಲುಗಳು ಹಾಸು ಮತ್ತು ಹೊಕ್ಕು ಇದ್ದಂತೆ ; ಇವೆರಡೂ ಇದ್ದರೇ, ಸೃಷ್ಟಿ ಎನ್ನುವ ‘ಪಟ’ (=ಬಟ್ಟೆ, ನಕಾಶೆ) ತಯಾರಾಗುವದು ಎಂದು ಹೇಳುತ್ತಾರೆ. ಆದರೆ ಈ ಪಟವು ‘ದಿಗಂಬರ ಪಟ’ ವಾಗಿದೆ.  ದಿಕ್ಕುಗಳೇ ಅಂಬರವಾಗಿರುವದು ಅಂದರೆ ಬಟ್ಟೆಯಾಗಿರುವದು ದಿಗಂಬರ. ಭಕ್ತ ಹಾಗು ಭಗವಂತರ ಈ ಪಟವು ಎಷ್ಟು ವಿಶಾಲವಾಗಿದೆ ಎಂದರೆ, ಅದು ದಿಕ್ಕುಗಳನ್ನೆಲ್ಲ ವ್ಯಾಪಿಸಿದೆ. ಈ ಎಲ್ಲ ಪ್ರಪಂಚಗಳು ಭಗವಂತನ ಹಾಗು ಭಕ್ತರ ದಿಗಂಬರ ಪಟವೇ ಆಗಿವೆ.

ದಿಗಂಬರ ಎನ್ನುವದು ದತ್ತಾತ್ರೇಯನ ವರ್ಣನೆಯೂ ಅಹುದು. ಆತನಿಗೆ ದಿಕ್ಕುಗಳೇ ಅಂಬರ ಎಂದರೆ ಆತ ಬತ್ತಲೆ ಯತಿ. ಭಕ್ತ ಹಾಗು ಭಗವಂತರ ಜೋಡಣೆಯಿಂದಾದ ಈ ಪಟಕ್ಕೆ ದಿಗಂಬರನೇ ಅಂದರೆ ಭಗವಂತನೇ ಒಡೆಯ. ಆದುದರಿಂದ ಈ ಪಟವು (=ನಕಾಶೆಯು) ದಿಗಂಬರ ಬರೆದ, ಆತನ ಒಡೆತನದ ಪಟ(=ನಕಾಶೆ).

“ಉಸಿರಿಗೇಕೊ ಬೆಸಿಗೆ?”
 ತಾಯ ಗರ್ಭದಲ್ಲಿದ್ದ ಶಿಶುವಿನ ಉಸಿರು ಹಾಗು ಶಿಶುವನ್ನು ಹೊತ್ತ ತಾಯಿಯ ಉಸಿರು ಬೇರೆಯಾಗಿಲ್ಲ.  ಅದೇ ರೀತಿಯಲ್ಲಿ ಭಕ್ತ ಹಾಗು ಭಗವಂತನ ನಡುವಿನ ಉಸಿರು ಒಂದೇ ಆಗಿದೆ. ಬೇರೆಯಾಗಿದ್ದರೆ ಮಾತ್ರ ಬೆಸುಗೆ ಬೇಕು. ಭಕ್ತನು ಭಗವಂತನ ಶಿಶು; ಭಗವಂತನೂ ಸಹ ಭಕ್ತನ ಅಂತರಂಗದಲ್ಲಿಯ ಶಿಶು. ಇವರಿಬ್ಬರಿಗೂ ಇರುವದು ಪರಸ್ಪರ ತಾಯಿ-ಮಗುವಿನ ಸಂಬಂಧ. ಹೀಗಿರುವಾಗ ಈ ಉಸಿರಿಗೆ ಬೆಸುಗೆ ಏತಕೆ ಬೇಕು?
ಉಸಿರಿನ ಬೆಸುಗೆ ಎಂದರೆ ಪ್ರಾಣಾಯಾಮ ಎಂದೂ ಅರ್ಥವಾಗುವದು. ಭಗವತ್-ದರ್ಶನಕ್ಕೆ ಪ್ರಾಣಾಯಾಮ ಮೊದಲಾದ ಹಠಸಾಧನೆಗಳ ಅವಶ್ಯಕತೆ ಏನಿದೆ ಎಂದು ಗಣಪತಿಯು ಕೇಳುತ್ತಾನೆ.

” ಆರೆಂಟರೀ ಹಠವು?”:
ಆರೆಂಟು ಅರ್ಥಾತ್ ಆರು ಹಾಗು ಎಂಟುಗಳನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
ಮೊದಲನೆಯ ಅರ್ಥವನ್ನು ನೋಡೋಣ:
‘ಆರು’ ಎಂದರೆ ಷಟ್-ದರ್ಶನಗಳು:
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ ಹಾಗು ಉತ್ತರಮೀಮಾಂಸಾ ಇವು ಆರು ಆಸ್ತಿಕ ದರ್ಶನಗಳು ; ಚಾರ್ವಾಕ, ಆರ್ಹತ, ವೈಭಾಷಿಕ, ಸಾತ್ರಾಂತಿಕ, ಯೋಗಾಚಾರ, ಮಾಧ್ಯಮಿಕ ಇವು ಆರು ನಾಸ್ತಿಕ ದರ್ಶನಗಳು.
‘ಎಂಟು’ ಅಂದರೆ ಅಷ್ಟಾಂಗ ಯೋಗ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗು ಸಮಾಧಿ ಇವು ಯೋಗದ ಎಂಟು ಅಂಗಗಳು.
ಭಕ್ತ ಹಾಗು ಭಗವಂತರು ಹಾಸು-ಹೊಕ್ಕಾಗಿ ಪಟವನ್ನು ನೇಯ್ದಾಗ  ಆರು ದರ್ಶನಗಳ ಹಾಗು ಎಂಟು ಯೋಗಗಳ ಅವಶ್ಯಕತೆ ಉಳಿಯುವದಿಲ್ಲ ಎನ್ನುವದು ಮೊದಲನೆಯ ಅರ್ಥ.

ಈಗ ಎರಡನೆಯ ಅರ್ಥವನ್ನು ನೋಡೋಣ:
ಅಂತರಂಗದಲ್ಲಿ ಅಮೂರ್ತವಾಗಿ ಇರುವ ಗಣಪತಿ ಎನ್ನುವ ಭಾವನೆಯು ಮೂರ್ತರೂಪ ತಾಳಬೇಕಾದರೆ ಅವನಿಗೆ ಘನರೂಪ ಬೇಕು. ಘನಕ್ಕೆ ಇರುವದು ಆರು ಪಾತಳಿಗಳು ಹಾಗು ಎಂಟು ಕೋನಬಿಂದುಗಳು. ಈ ಆರು ಹಾಗು ಎಂಟರ ಅಂದರೆ ಘನರೂಪವನ್ನು ತಾಳುವ ಅರ್ಥಾತ್ ಮೂರ್ತರೂಪ ತಾಳುವ ಅವಶ್ಯಕತೆ ಇಲ್ಲವೆಂದು ಗಣಪತಿಯು ಭಕ್ತನಿಗೆ ಹೇಳುತ್ತಾನೆ. ಇದಕ್ಕೆ ಎರಡು ಕಾರಣಗಳಿವೆ. ಮೂರ್ತರೂಪವನ್ನು ತಾಳಿದಾಗ, ಆತನು ಅಂತರಂಗದ ಹೊರಗೆ ಬಂದು ಬಹಿರಂಗನಾಗಬೇಕಾಗುತ್ತದೆ. ಎರಡನೆಯದಾಗಿ ಮೂರ್ತರೂಪಕ್ಕೆ ಅಂತ್ಯವೆನ್ನುವದಿದೆ. ‘ಗಣಪತಿ ಅಥರ್ವ ಶೀರ್ಷ’ದಲ್ಲಿ ಗಣಪತಿಯನ್ನು ‘ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತ:’ ಎಂದು ಬಣ್ಣಿಸಿದ್ದಾರೆ. ಗಣಪತಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಲ್ಲದವನು. ಈ ಮೂರು ಗುಣಗಳ ವಿವಿಧ ಪ್ರಮಾಣದ ಬೆರಕೆಯಿಂದಲೆ, ಸೃಷ್ಟಿಯ ವಿವಿಧ ಜೀವಿಗಳಿಗೆ ವಿವಿಧ ರೂಪದ ದೇಹಗಳು ಬರುವವು. ದೇಹವು ವಿನಾಶಕ್ಕೆ ಒಳಪಟ್ಟಿದೆ. ಗಣಪತಿಯು ನಿರ್ಗುಣನು, ಆದುದರಿಂದ ನಿರ್ದೇಹಿಯು, ಆದುದರಿಂದ ಅವಿನಾಶನು, ಕಾಲಾತೀತನು. ಅಂತಹ ದೇವತೆಯನ್ನು ಮೂರ್ತರೂಪದಲ್ಲಿ, ಬಹಿರಂಗದಲ್ಲಿ ಕಾಣಬೇಕೆನ್ನುವ ಭಕ್ತನ ಹಠವು ಸರಿಯಲ್ಲ ಎಂದು ಗಣಪತಿಯು ಹೇಳುತ್ತಿದ್ದಾನೆ.

ಈಗ ಮೂರನೆಯ ಅರ್ಥವನ್ನು ನೋಡೋಣ:
ಸಾಧಕನು ದೇವತೆಯನ್ನು ಪೂಜಿಸುವಾಗ, ತನ್ನ ದೇಹದ ಆರು ಅಂಗಗಳಲ್ಲಿ ದೇವತೆಯನ್ನು ನ್ಯಾಸ ಮಾಡಿಕೊಳ್ಳುತ್ತಾನೆ. ಆ ಅಂಗಗಳು ಇಂತಿವೆ: ಹೃದಯ, ತಲೆ, ಶಿಖೆ, ಭುಜಗಳು, ಕಣ್ಣುಗಳು ಹಾಗು  ಕರತಲ. ಇದು ಪಿಂಡಾಂಡ. ಇದೇ ದೇವತೆಯು ಬ್ರಹ್ಮಾಂಡದಲ್ಲಿ ಎಂಟು ರೂಪಗಳಲ್ಲಿ ಸ್ಥಿತನಾಗಿರುತ್ತಾನೆ. ಅವು ಇಂತಿವೆ: ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ,ವಾಯು, ಸೂರ್ಯ ಮತ್ತು ಚಂದ್ರ (ಗಣಪತಿ-ಅಥರ್ವಶೀರ್ಷದ ಮೇರೆಗೆ.)
ಪಿಂಡಾಂಡದಲ್ಲಿಯೇ ಆಗಲಿ ಅಥವಾ ಬ್ರಹ್ಮಾಂಡದಲ್ಲಿಯೇ ಆಗಲಿ, ದೇವತೆಯ ಮೂರ್ತರೂಪವನ್ನು ಕಾಣುವ ಹಠ ಭಕ್ತನಿಗೆ ಬೇಡವೆನ್ನುವದು ಗಣಪತಿಯ ಅಭಿಮತವಾಗಿರಬಹುದು.
ಯಾಕೆ? ಇದಕ್ಕೆ ಉತ್ತರ ಮುಂದಿನ ಸಾಲುಗಳಲ್ಲಿದೆ.

“ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.”
ಭಕ್ತ ಹಾಗು ಭಗವಂತನ ನಡುವೆ ಇರುವ ಸಂಬಂಧವು ಪೂರಕ ಸಂಬಂಧ.
(ಬಸವಣ್ಣನವರ ವಚನವೂ ಸಹ ಈ ಪೂರಕ ಸಂಬಂಧವನ್ನೇ ಬಣ್ಣಿಸುತ್ತದೆ:
“ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ, ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ, ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ಆಕಾರವಾಗಿರ್ದಲ್ಲಿ,ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು ಜಂಗಮ-ಲಾಂಛನವಾಗಿ ಬಂದೆಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ, ಕೂಡಲ ಸಂಗಮ ದೇವಾ.”)

ಈ ಪೂರಕ ಸಂಬಂಧವು ಎಂತಹದು?
ಭಕ್ತನು ಮಾಡಬೇಕಾದ ಅಡುಗೆಗೆ, ಸಾಹಿತ್ಯವನ್ನು ಪೂರೈಸುವವನೇ ಭಗವಂತನು.
ಭಕ್ತನು ಮಾಡುವ ಅಡುಗೆ ಯಾವುದು? ಭಕ್ತಿಯೇ ಅವನು ಅಟ್ಟು ಬಡಿಸುವ ನೈವೇದ್ಯ. ಆ ಭಕ್ತಿಗೆ ಬೇಕಾದ ಸಾಹಿತ್ಯವನ್ನು ಅಂದರೆ ಭಾವನೆಯನ್ನು ಕೊಡುವವನೇ ಗಣಪತಿ.

ಪಾಕಪದಾರ್ಥಕ್ಕೆ ಇನ್ನೂ ಹಲವು ಅರ್ಥಗಳಿವೆ. ಪಾಕವಾದದ್ದು ಎಂದರೆ ಹದವಾದದ್ದು, maturityಯನ್ನು ಪಡೆದದ್ದು ಎಂದು ಅರ್ಥ. ಭಕ್ತನು ಪಾಕಗೊಳ್ಳಲು ಅಂದರೆ maturityಯನ್ನು ಪಡೆಯಲು ಬೇಕಾಗುವ ಸಾಹಿತ್ಯವನ್ನು ಕೊಡುವವನು ಭಗವಂತನೇ!

ಮೂರನೆಯ ಅರ್ಥವೊಂದನ್ನು ಗಮನಿಸಿರಿ.
ಬೇಂದ್ರೆಯವರು ಸಾಹಿತ್ಯರಸಿಕರಿಗೆ ಉಣ್ಣಿಸಿದ ಪಾಕ(=ಅಡುಗೆ) ಯಾವುದು? ಅದು ಪದಾರ್ಥ(=ಪದ+ಅರ್ಥ)ದ ಅಡುಗೆ, ಅಂದರೆ ಸಾಹಿತ್ಯದ ಅಡುಗೆ. ಅವರು ಪಾಕಗೊಳ್ಳದೆ (=ಹಣ್ಣಾಗದೆ,) ಅಂತಹ ಸಾಹಿತ್ಯವನ್ನು ಉಣ್ಣಿಸಲು ಸಾಧ್ಯವೆ? ಸ್ವತಃ ಬೇಂದ್ರೆಯವರೆ ಹೇಳಿಲ್ಲವೆ?
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ……..”
ಬೇಂದ್ರೆಯವರು ಪಾಡು ಆಗದೆ(=ಹಣ್ಣು ಆಗದೆ), ಇಂತಹ ಸಾಹಿತ್ಯ ಕೊಡಲು ಸಾಧ್ಯವೆ? ಆದರೆ ಅವರು ಪಾಡಾಗಲು, ಪಾಕವಾಗಲು ಸಾಹಿತ್ಯವನ್ನು(=ಪರಿಸ್ಥಿತಿಯನ್ನು) ಕೊಟ್ಟವನು ಗಣಪತಿಯೇ!

ಈ ಸಂದರ್ಭದಲ್ಲಿ ಕವಿಗುರು ಕಾಳಿದಾಸನ ನಾಂದೀಪದ್ಯವೊಂದು ನೆನಪಿಗೆ ಬರುತ್ತದೆ:
“ವಾಗರ್ಥಾವಿವ ಸಂಪೃಕ್ತೌ, ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
“ವಾಕ್ ಮತ್ತು ಅರ್ಥ ಇವುಗಳ ಸುಸಂಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಒಂದಾಗಿರುವ ಪಾರ್ವತೀ-ಪರಮೇಶ್ವರರಿಗೆ ವಂದಿಸುತ್ತೇನೆ”, ಎಂದು ಕಾಳಿದಾಸನು ಪ್ರಾರ್ಥಿಸುತ್ತಾನೆ. ಬೇಂದ್ರೆಯವರೂ ಸಹ ಪದ(=ವಾಕ್) ಮತ್ತು ಅದರ ಅರ್ಥಗಳ ಸುಸಂಯೋಗಕ್ಕಾಗಿ ಗಣಪತಿಯಿಂದಲೇ ಪದಾರ್ಥ-ಸಾಹಿತ್ಯವನ್ನು ಪಡೆಯುತ್ತಾರೆ.

(ಆಂಗ್ಲ ವಿಮರ್ಶಕನೊಬ್ಬನ ಹೇಳಿಕೆಯೊಂದನ್ನು ಇಲ್ಲಿ ಸೇರಿಸಿದರೆ ಅಪ್ರಸ್ತುತವಾಗಲಿಕ್ಕಿಲ್ಲ:
“ಒಂದು ಪದವನ್ನು ಕೇಳಿದಾಗ, ಆ ಪದದ ಎಲ್ಲ ಪುರಾತನ, ನೂತನ ಅರ್ಥಗಳು ಯಾರಿಗೆ ಹೊಳೆಯುತ್ತವೆಯೋ ಅವನೇ ಕವಿ.”)

ಗಣಪತಿಯ ಈ ಪ್ರಸಾದವನ್ನು ರಸಿಕರು ಮಾತ್ರ ಮೆಚ್ಚಿಕೊಂಡು ಭುಂಜಿಸಬಲ್ಲರು. ಅರ್ಥ ತಿಳಿಯದ ಅರಸಿಕರಿಗೆ ಈ ಊಟವೂ ವ್ಯರ್ಥ ; ಈ ಕೂಟವೂ ವ್ಯರ್ಥ!

ಇನ್ನು ನಾಲ್ಕನೆಯ ನುಡಿಯನ್ನು ನೋಡೋಣ:

“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”

ಭಕ್ತನ ಅಂತರಂಗದಲ್ಲಿ ಅರಳುವ ಗಣಪತಿಯ ಸ್ವರೂಪವನ್ನು ಅನುಭವಿಸಿದ್ದಾಯ್ತು. ಈ ಗಣಪತಿಯ ಹಾಗು ಭಕ್ತರ ನಡುವಿನ ಸಂಬಂಧವನ್ನು ತಿಳಿದದ್ದಾಯ್ತು. ಇನ್ನು ಗಣಪತಿಯು ಭಕ್ತರಿಗೆ ನೀಡುವ ಫಲವೇನು ಎಂದು ಫಲಶ್ರುತಿಯನ್ನು ಹೇಳುವ ಕೊನೆಯ ಭಾಗವು ಇದಾಗಿದೆ.

“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ”:
ಭಕ್ತರಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ನೀಡುವ ಸಾಕ್ಷಿಪುರುಷನು ತಾನಾಗಿದ್ದೇನೆ ಎಂದು ಗಣಪತಿಯು ಹೇಳುತ್ತಾನೆ. ಭಗವಂತನು ಯಾವಾಗಲೂ ಎಲ್ಲ ಜೀವಿಗಳ ಅಂತರಂಗದಲ್ಲಿ ಸಾಕ್ಷಿಯಾಗಿ ನಿಂತುಕೊಂಡಿರುತ್ತಾನೆ. ಈ ಜೀವಿಗಳು ಮಾಡುವ ಕರ್ಮಕ್ಕೆ ಅನುಸಾರವಾಗಿ ಆತ ಫಲ ನೀಡುತ್ತಾನೆ ಎಂದು ಹೇಳಲಾಗುತ್ತಿದೆ. ಗಣಪತಿ-ಸಹಸ್ರನಾಮಾವಳಿಯಲ್ಲಿ ‘ಸಾಕ್ಷಿ’ ಎಂದು ಗಣಪತಿಯನ್ನು ಕರೆಯಲಾಗಿದೆ.

“ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು”:
ಭಗವಂತನಿಗೆ ‘ರಸ’ ಎಂದು ಕರೆಯಲಾಗಿದೆ. (‘ರಸೋ ವೈ ಸಃ.’) ರಸಿಕ ಎಂದರೆ ಭಗವಂತನನ್ನು ಅರಿತುಕೊಂಡವನು. ಆ ರಸಿಕನಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ಮೀರಿದ ನಾಲ್ಕನೆಯ ಪುರುಷಾರ್ಥವಾದ ಮುಕ್ತಿ ದೊರೆತಿದೆ. ಆದುದರಿಂದ ಆತ ಮುಕ್ತನು. ಆತ ಸಾರಸ ಪಕ್ಷಿಯಂತೆ ಧನ್ಯನು. ಸಾರಸ ಪಕ್ಷಿಯು (ಅಂದರೆ ಬಕಪಕ್ಷಿಯು) ನೀರಿನ ಅಂಚಿನಲ್ಲಿ ಧ್ಯಾನಸ್ಥವಾಗಿ ನಿಂತುಕೊಂಡಿರುತ್ತದೆ. ಅದೇ ರೀತಿಯಲ್ಲಿ ಸಾಧಕನೂ ಸಹ ಪ್ರಪಂಚದ ಅಂಚಿನಲ್ಲಿ ಧ್ಯಾನಸ್ಥನಾಗಿ ನಿಂತಿರುತ್ತಾನೆ. ‘ಸಾರಸ’ ಪದಕ್ಕೆ ‘ಸಹ ರಸ’ ಎಂದು ಅರ್ಥೈಸಬಹುದು. ಅಂದರೆ ಈ ಪಕ್ಷಿಯು ಭಗವಂತನ ಧ್ಯಾನದಲ್ಲಿಯೇ ಇರುತ್ತದೆ. ಅದು ಭಕ್ತನ ನೋಂಪಿ(=ತಪಸ್ಸು). ಭಕ್ತನ ಈ ತಪಸ್ಸಿನ ಗಂಟೇ(=ಐಶ್ವರ್ಯವೇ), ಭಗವಂತನು ಪಡುವ ಸುಖ (=ಹದುಳ). ಭಕ್ತ ಮತ್ತು ಭಗವಂತನಿಗಿರುವ ಪರಸ್ಪರ ಸಂಬಂಧವಿದು. “ಪರಸ್ಪರಂ ಭಾವಯಂತಃ” ಎನ್ನುವ ಗೀತಾವಾಕ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”:
ಇಲ್ಲಿಯವರೆಗೂ ಗಣಪತಿಯ ಸ್ವಸ್ವರೂಪ ವರ್ಣನೆಯನ್ನು ಅನುಭವಿಸಿದ ಕವಿ-ಋಷಿ ಈಗ ಹಿಗ್ಗಿನಿಂದ ಹೇಳುತ್ತಾನೆ:
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ದೇವತೆಯಿಂದ ಸ್ಫುರಣವಾದದ್ದು ಮಂತ್ರ. ಪ್ರತಿಯೊಂದು ಮಂತ್ರಕ್ಕೆ ‘ಕೀಲಕ’ ಎನ್ನುವದಿರುತ್ತದೆ. ಗಣಪತಿ ಮಂತ್ರಕ್ಕೆ ಶಿವ-ಶಕ್ತಿಯೇ ಕೀಲಕ.
ಗಣಪತಿ-ಮಂತ್ರವನ್ನು ಬೇಂದ್ರೆಯವರು ಧ್ಯಾನಸ್ಥ ಸ್ಥಿತಿಯಲ್ಲಿ ನೋಡಿದರು. (ಅವರು ‘ಮಂತ್ರ-ದೃಷ್ಟಾರರು’.)
ಸೂತ್ರರೂಪದಲ್ಲಿ ನಮ್ಮೆದುರಿಗೆ ಇಟ್ಟರು. ತಿಳಿದುಕೊಳ್ಳುವದು ನಮ್ಮ ಹೊಣೆ.
“ಕಂಡವರಿಗಲ್ಲ, ಕಂಡವರಿಗಷ್ಟೆ ಹೊಳೆಯುವದು ಇದರ ಕಳೆಯು!”(---ಹೃದಯ ಸಮುದ್ರ)

ಬೇಂದ್ರೆಯವರು ಕಾವ್ಯಾಕಾಶದಲ್ಲಿ ಹಕ್ಕಿಯಂತೆ ಹಾರಾಡಿದ್ದನ್ನು ನೋಡಿದವರು, ಮೆಚ್ಚಿಕೊಂಡವರು ಅನೇಕರಿದ್ದಾರೆ. ಈ ರಾಜಹಂಸವು ಆಗಸದಲ್ಲಿ ಹಾರಾಟ ನಿಲ್ಲಿಸಿ, ಧ್ಯಾನಸ್ಥವಾಗಿ ನಿಂತುಕೊಂಡಾಗ, ಆ ಚೆಲುವನ್ನು ಕಾಣದವರೂ ಇದ್ದಾರೆ. ಇಂತಹ ವಿಮರ್ಶಕರ ನಿಲುವಿನಿಂದ ಆ ರಾಜಹಂಸದ ಚೆಲುವಿಗೆ ಕುಂದಿಲ್ಲ!

(ಈ ಕವನವನ್ನು ನನಗೆ ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)

Saturday, April 3, 2010

‘ಬಂಡಾಯ’---ವ್ಯಾಸರಾಯ ಬಲ್ಲಾಳ

ವ್ಯಾಸರಾಯ ಬಲ್ಲಾಳರು ಬರೆದ ಕಾದಂಬರಿ ‘ಬಂಡಾಯ’ವು ೧೯೮೬ರಲ್ಲಿ ಪ್ರಕಟವಾಯಿತು. ಮಹಾನಗರಿ ಮುಂಬಯಿಯಲ್ಲಿಯ ಶ್ರಮಜೀವಿಗಳ ಬದುಕು, ಬವಣೆ ಹಾಗು ಮುಷ್ಕರಗಳೇ ಈ ಕಾದಂಬರಿಯ ವಸ್ತುಗಳಾಗಿವೆ. ಮುಷ್ಕರಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬಹುದೇ ಅಥವಾ ಅದಕ್ಕೂ ಸಹ ನಕ್ಸಲ ಮಾದರಿಯ ಹಿಂಸಾತ್ಮಕ ಹೋರಾಟವೇ ಅನಿವಾರ್ಯವೆ ಎನ್ನುವದು ಈ ಕಾದಂಬರಿಯ ಕೊನೆಯಲ್ಲಿ ಕೇಳಲಾದ ಪ್ರಶ್ನೆ. ಇಂತಹ ಒಂದು ತಾತ್ವಿಕ ವಸ್ತುವನ್ನು ಆಸಕ್ತಿಪೂರ್ಣ ಕಾದಂಬರಿಯನ್ನಾಗಿ ಮಾರ್ಪಡಿಸುವಲ್ಲಿ ಬಲ್ಲಾಳರು ತಮ್ಮ  ಕಥನಕೌಶಲವನ್ನು ತೋರಿಸಿದ್ದಾರೆ.

ಪ್ರತಿಯೊಂದು ದೊಡ್ಡ ಉದ್ದಿಮೆಯಲ್ಲಿ ನಾಲ್ಕು ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಲ್ಕು ಮಾನವಕೂಟಗಳನ್ನು ನಾವು ಗುರುತಿಸಬಹುದು. ಮೊದಲನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಉದ್ದಿಮೆಪತಿಯದು. ಏನಕೇನ ಪ್ರಕಾರೇಣ ತನ್ನ ಉದ್ದಿಮೆಯ ನಿತಾಂತ ಪ್ರಗತಿಯಾಗಬೇಕು; ತಾನು ಹಾಗು ತನ್ನ ಕುಟುಂಬವು ಆಧುನಿಕ ಸುಖಸೌಲಭ್ಯಗಳಲ್ಲಿ ಮುಳುಗಿರಬೇಕು ಎನ್ನುವದು ಉದ್ದಿಮೆಪತಿಯ ತವಕ.

ಎರಡನೆಯ ಹಿತಾಸಕ್ತಿ ಅಥವಾ ಮಾನವಕೂಟ ಕಾರ್ಮಿಕರದು. ಕೊಳೆಗೇರಿಗಳಲ್ಲಿ ಪಶುತುಲ್ಯ ಜೀವನ ನಡೆಯಿಸುತ್ತಿರುವ ಇವರು ಉದ್ದಿಮೆಪತಿ ಹಾಗು ವಿಭಿನ್ನ ಕಾರ್ಮಿಕ ಮುಖಂಡರ ಕೈಯಲ್ಲಿ ಸಿಲುಕಿದ ದಾಳಗಳಾಗಿದ್ದಾರೆ.

ಮೂರನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಕಾರ್ಮಿಕ ಸಂಘಗಳ ಮುಖಂಡರದು. ಈ ಮುಖಂಡರಲ್ಲಿ ಎರಡು ಬಗೆಯವರಿದ್ದಾರೆ. ಕಾರ್ಮಿಕರನ್ನು ಚದುರಂಗದ ದಾಳಗಳಂತೆ ಉಪಯೋಗಿಸಿಕೊಳ್ಳುತ್ತ, ತಮ್ಮ ಸ್ವಂತದ ಪ್ರತಿಷ್ಠೆ ಹಾಗು ಸಂಪತ್ತನ್ನು ಅಧಿಕಗೊಳಿಸಲು ಪ್ರಯತ್ನಿಸುವ ಮುಖಂಡರು ಒಂದು ವರ್ಗದವರು. ಉದ್ದಿಮೆಗಳು ಹಾಳಾಗಲಿ ಅಥವಾ ಕಾರ್ಮಿಕರು ಸತ್ತು ಹೋಗಲಿ, ಆದರೆ ತಮ್ಮ ಸ್ವಾರ್ಥಸಾಧನೆಯಾಗಬೇಕು ಎನ್ನುವದು ಇಂತಹ ಮುಖಂಡರ ಅಂತರಂಗದ ಬಯಕೆ. ಎರಡನೆಯ ವರ್ಗದವರೆಂದರೆ, ಕಾರ್ಮಿಕರಿಗಾಗಿ ನಿಜವಾಗಿ  ಹೋರಾಡುವವರು. ತಮ್ಮ ವೈಯಕ್ತಿಕ ಬದುಕನ್ನು ಬಲಿಕೊಟ್ಟು ಕಾರ್ಮಿಕರ ಹಿತಕ್ಕಾಗಿ ಶ್ರಮಿಸುವವರು.

ನಾಲ್ಕನೆಯ ಮಾನವಕೂಟವು ಉದ್ದಿಮೆಗಳಿಗೆ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳದು ಉದಾಹರಣೆಗೆ ಕಾರ್ಮಿಕ ಇಲಾಖೆಯ ಹಾಗು ಪೋಲೀಸ ಇಲಾಖೆಯ ಅಧಿಕಾರಿಗಳದು. ತಮ್ಮ ಸ್ವಂತ ಹಿತಾಸಕ್ತಿಗಳ ರಕ್ಷಣೆ ಮಾತ್ರ ಇವರ ಅನುಗಾಲದ ಚಿಂತೆ.

ಕಾದಂಬರಿಯಲ್ಲಿ ಮೊದಲಿಗೆ ಬರುವದು ರಾಜೀವನ ಪಾತ್ರ.  ರಾಜೀವನು ಕಾರ್ಮಿಕರ ಹಿತವನ್ನು ಬಯಸುವ ಕಾರ್ಮಿಕ ಮುಖಂಡ. ತನ್ನೆಲ್ಲ ಸಮಯವನ್ನು ಕಾರ್ಮಿಕ ಸಂಘಟನೆಗಾಗಿ ಹಾಗು ಹೋರಾಟಕ್ಕಾಗಿ ಈತ ಮೀಸಲಿಟ್ಟಿದ್ದಾನೆ. ತನ್ನ ಸುತ್ತಲೂ ಹರಡಿದ ಮಾನವ ಕಾರ್ಪಣ್ಯದ ಬಗೆಗೆ ಈತನ ಮನಸ್ಸಿನಲ್ಲಿ ಏಳುತ್ತಿದ್ದ ಆಕ್ರೋಶದ ಭಾವನೆಗಳನ್ನು ವ್ಯಕ್ತಪಡಿಸುವದರ ಮೂಲಕ ಕಾದಂಬರಿಯ ಮೊದಲ ಪುಟ ಪ್ರಾರಂಭವಾಗುತ್ತದೆ. ಜೊತೆಜೊತೆಗೇ ಇವನಿಗೆ ಯಾಮಿನಿ ನೆನಪಾಗುತ್ತಾಳೆ. ಅವಳ ಬಗೆಗಿನ ನೆನಪಿನ ತುಣುಕುಗಳು ಪುಟಿದಂತೆಲ್ಲ, ಆ ಮೂಲಕ ಅವಳ ಸುಸಂಸ್ಕೃತ ವ್ಯಕ್ತಿತ್ವವನ್ನು ಬಲ್ಲಾಳರು ಓದುಗರಿಗೆ ಪರಿಚಯಿಸುತ್ತಾರೆ. ಯಾಮಿನಿ ಹಾಗು ರಾಜೀವರ ಸಾಂಗತ್ಯವನ್ನು good lightನಲ್ಲಿ ತೋರಿಸುವದು ಬಲ್ಲಾಳರ ಉದ್ದೇಶ. ಯಾಕೆಂದರೆ ಭಾರತೀಯ ಕಾದಂಬರಿಗಳಲ್ಲಿ (ಸಿನಿಮಾಗಳಲ್ಲಿ ಕೂಡ) ನಾಯಕ ಹಾಗು ನಾಯಕಿಯರು ಸುಶೀಲರೆಂದು ತೋರಿಸುವದು ಒಂದು ಅನಿವಾರ್ಯತೆಯಾಗಿದೆ.  ಯಾಮಿನಿಯನ್ನು ಸುಸಂಸ್ಕೃತಳು ಹಾಗು ವಿದ್ಯಾವಂತಳು ಎಂದು ತೋರಿಸುವ ಉದ್ದೇಶದಿಂದ ಲೇಖಕರು ಅವಳ ಸಂಸ್ಕೃತ ಭಾಷೆಯ ತಿಳಿವನ್ನು ಹಾಗು ಅವಳು ನಾಟಕಗಳಲ್ಲಿ ಭಾಗವಹಿಸುತ್ತಿದ್ದಳೆಂದು ಬರೆದಿದ್ದಾರೆ. ಇದನ್ನೂ ಕೂಡ ರಾಜೀವನ ಚುಟುಕು ನೆನಪುಗಳ ಮುಖಾಂತರವೇ ತೋರಿಸಿದ್ದರಿಂದ, ನೇರ ನಿರೂಪಣೆಯನ್ನು ತಪ್ಪಿಸಿದಂತಾಗಿದೆ ಹಾಗು ಕಾದಂಬರಿಯನ್ನು compact ಮಾಡಿದಂತಾಗಿದೆ.

ಕಾದಂಬರಿ ಬೆಳೆದಂತೆ, ಅವಳ ಪೂರ್ವೇತಿಹಾಸವು ಅನೇಕ ಝಲಕುಗಳ ಮೂಲಕ ತೆರೆದುಕೊಳ್ಳುತ್ತ ಹೋಗುತ್ತದೆ. ಇದು ಒಂದು ಕುಶಲ ಕಥನ ತಂತ್ರ.  ಯಾಮಿನಿಯ ಅಸಹಾಯಕ ಕೌಟಂಬಿಕ ಪರಿಸ್ಥಿತಿಯನ್ನು ತೋರಿಸುವಲ್ಲಿ ಮತ್ತು ಅವಳ ಹಾಗು ರಾಜೀವನ ನಡುವೆ ಬೆಳೆದ ಆಕರ್ಷಣೆಗೆ ತರ್ಕಬದ್ಧ ಗತಿಯನ್ನು ಕೊಡುವಲ್ಲಿ ಈ ತಂತ್ರವು ಉತ್ತಮ ಸಾಧನವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಎರಡನೆಯ ಪ್ರಕರಣದಲ್ಲಿ ಉದ್ದಿಮೆಪತಿ ಸತೀಶನ ಹಾಗು ಅವನ ಕುಟುಂಬದ ಪರಿಚಯವನ್ನು ಲೇಖಕರು ಒಂದೇ ಧಾರೆಯಲ್ಲಿ ಮಾಡಿಬಿಡುತ್ತಾರೆ. ಯಾಕೆಂದರೆ, ಕಾದಂಬರಿಯ ಬೆಳವಣಿಗೆಯಲ್ಲಿ ಸತೀಶನ ಕುಟುಂಬದ ಪಾತ್ರವು ನಗಣ್ಯವಾಗಿದೆ. ಶ್ರೀಮಂತ ಉದ್ಯೋಗಪತಿಯ ಕುಟುಂಬದ ಜೀವನಶೈಲಿಯನ್ನು ತೋರಿಸುವ ಉದ್ದೇಶಕ್ಕೆ ಮಾತ್ರ ಈ ಕುಟುಂಬದ ವರ್ಣನೆ ಅವಶ್ಯವಾಗಿದೆ. ಸತೀಶನ ತಂದೆ ನಾಗೇಶರು ಒಂದು ಔಷಧ ಅಂಗಡಿಯಲ್ಲಿ ಮಾರಾಟದ ಹುಡುಗ ಆಗಿದ್ದವರು.  ಭಾರತವು ಇಬ್ಭಾಗವಾದ ಸಮಯದಲ್ಲಿ ಅಂಗಡಿಯ ಮುಸ್ಲಿಮ್ ಮಾಲಕನು ಈ ಹುಡುಗನಿಗೇ ತನ್ನ ಅಂಗಡಿಯನ್ನು ಕೊಟ್ಟು ಹೋಗಿ ಬಿಡುತ್ತಾನೆ. ನಾಗೇಶರು ತುಂಬ ಶ್ರದ್ಧೆಯಿಂದ ಅಂಗಡಿಯನ್ನು ಬೆಳೆಯಿಸಿ ಶ್ರೀಮಂತರಾಗುತ್ತಾರೆ. ವಯಸ್ಸಾದ ನಂತರ, ದೇವರ ಸ್ಮರಣೆಯಲ್ಲಿ ಮಗ್ನರಾಗಿ ಜೀವನ ಸಾಗಿಸುತ್ತಾರೆ. ಆದರೂ ಸಹ ಕಾಲಕಾಲಕ್ಕೆ ಮಗನಿಗೆ ಸಲಹೆ ಸೂಚನೆ ಕೊಡುವದರಲ್ಲಿ ಹಿಂದೆ ಬೀಳುವದಿಲ್ಲ. ಅವರ ಮಗ ಸತೀಶನಾದರೋ MBA ಪದವೀಧರ. ಈತ ತನ್ನ ತಂದೆಯಂತಲ್ಲ. ಈತನಿಗೆ ವ್ಯಾವಹಾರಿಕ ಜಾಣ್ಮೆಯೇ ಮುಖ್ಯವಾದದ್ದು. ಆಧುನಿಕ ಮಾರ್ಗದಲ್ಲಿ ಮುನ್ನಡೆದ ಈತ ತನ್ನ ಉದ್ದಿಮೆಯನ್ನು ಬೆಳೆಸುತ್ತ, ಅಂತರರಾಷ್ಟ್ರೀಯ ವ್ಯವಹಾರದ ಉದ್ಯೋಗಪತಿಯಾಗಿದ್ದಾನೆ.  ಈತನ ರೂಪವತಿ ಹೆಂಡತಿ ಲಕ್ಷ್ಮಿ ಆಧುನಿಕ ನಾರಿಯಾದರೂ ಸಹ ವಾತ್ಸಲ್ಯಮಯಿ ಗೃಹಿಣಿ. ತನ್ನ ಗಂಡ, ಮಾವ ಹಾಗು ನಾದಿನಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವವಳು. ಇಂತಹ ಹೆಂಡತಿಯಿದ್ದರೂ ಸಹ ಸತೀಶನು, ವಿದೇಶಕ್ಕೆ ಹೋದಂತಹ ಸಮಯದಲ್ಲಿ  ಓರ್ವ ಬಿಳಿ ಹೆಣ್ಣಿನೊಡನೆ ಒಂದು ರಾತ್ರಿಯ ತಾತ್ಕಾಲಿಕ ಸಂಬಂಧವನ್ನು ಬೆಳೆಸುತ್ತಾನೆ. ಕೇವಲ ಒಂದು ಪುಟ್ಟ ಪರಿಚ್ಛೇದಕ್ಕೆ ಸೀಮಿತವಾದ ಈ ತಾತ್ಕಾಲಿಕ ಸಂಬಂಧವನ್ನು ಹೇಳುವ ಮೂಲಕ ಲೇಖಕರು, ಆರ್ಥಿಕವಾಗಿ ಉಚ್ಚ ತರಗತಿಯಲ್ಲಿರುವ ನಮ್ಮ ಆಧುನಿಕ ಉದ್ಯೋಗಪತಿಗಳು ಹಾಗು high society ವ್ಯಕ್ತಿಗಳು ಸದಸದ್ವಿವೇಚನಾ ಪ್ರಜ್ಞೆಯನ್ನು (conscience) ಕಳೆದುಕೊಂಡಿರುವ ಸ್ಥಿತಿಯನ್ನು ಸೂಕ್ಷ್ಮವಾಗಿ ವರ್ಣಿಸಿದ್ದಾರೆ. ಈ ಕುಟುಂಬದ ಕೊನೆಯ ಹಾಗು ಕಿರಿಯ ಸದಸ್ಯೆ ಎಂದರೆ ಸತೀಶನ ತಂಗಿ. ಇವಳು ಕಾ^ಲೇಜಿನಲ್ಲಿ ತತ್ವಜ್ಞಾನವನ್ನು ಓದುತ್ತಿರುವಳು. ತನ್ನ ಕುಟುಂಬದ ಸಂಪತ್ತಿನ ಬಗೆಗೆ ತಿರಸ್ಕಾರ ಉಳ್ಳವಳು. ಇದೆಲ್ಲವನ್ನು ಬಿಟ್ಟು, ಆಶ್ರಮವಾಸಿಯಾಗಲು ಬಯಸುವವಳು. ಆದರೆ ಆಧುನಿಕ ಹುಡುಗಿಯಾದ ಇವಳು ತನ್ನ ಕುಟುಂಬದ ಇತರ ಸದಸ್ಯರ ಎದುರಿಗೇ ಧೂಮಪಾನ ಮಾಡುವಂತಹ ‘ಬಿನ್ ದಾಸ್’ ಧೋರಣೆಯುಳ್ಳವಳು.              
      
ಮುಂಬಯಿಯಲ್ಲಿ ಅನೇಕ ಉದ್ದಿಮೆಗಳಿವೆ. ಈ ಉದ್ದಿಮೆಗಳ ಕಾರ್ಮಿಕ ಸಂಘಗಳೂ ಪ್ರತ್ಯೇಕವಾಗಿವೆ. ಆದರೆ ಇವು ಕೆಲವೊಂದು ಮಹಾಮಂಡಲಗಳಿಗೆ affiliate ಆಗಿರುತ್ತವೆ. ಒಂದು ಉದ್ದಿಮೆಯಲ್ಲಿ ಯಾವ ಯಾವ ಕಾರಣಕ್ಕೆ ಮುಷ್ಕರಗಳು ಪ್ರಾರಂಭವಾಗುತ್ತವೆ, ಈ ಮುಷ್ಕರಗಳನ್ನು ಯಶಸ್ವಿಗೊಳಿಸಲು ಅದರ ಮುಖಂಡರು ಹೇಗೆ ಪ್ರಯತ್ನಿಸುತ್ತಾರೆ, ಅವುಗಳ ಅಪಯಶಸ್ಸಿಗೆ ಉದ್ದಿಮದಾರರು ಹೇಗೆ ಪ್ರಯತ್ನಿಸುತ್ತಾರೆ, ಬೇರೆ ಬೇರೆ ಮಹಾಮಂಡಲಗಳ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳನ್ನು ಮತ್ತು ಅವರ ಮುಷ್ಕರಗಳನ್ನು ಹೇಗೆ ಮುರಿಯುತ್ತಾರೆ; ಲಂಚ, ಹಾದರ, ಕೊಲೆ ಇವುಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವದೆಲ್ಲವನ್ನೂ ಬಲ್ಲಾಳರು ತಮ್ಮ ಪಾತ್ರಗಳ ಕತೆಗಳ ಹಿನ್ನೆಲೆಯಲ್ಲಿಯೇ ನಿರೂಪಿಸಿದ್ದಾರೆ. ಈ ರೀತಿಯಾಗಿ ಕಾರ್ಮಿಕ ಸಂಘಟನೆಗಳ ಒಳಹೊರಗನ್ನೆಲ್ಲ ಬಣ್ಣಿಸುವಾಗ ಸಹ ನೇರ ನಿರೂಪಣೆಯನ್ನು ಬಲ್ಲಾಳರು ಬಳಸುವದಿಲ್ಲ. ಕೆಲವೊಂದು ಕಾರ್ಮಿಕರ ಸಂಸಾರ ಚಿತ್ರಗಳನ್ನು brief ಆಗಿ ಕೊಡುತ್ತಲೇ  ಬಲ್ಲಾಳರು ಮುಷ್ಕರದ ಪ್ರಗತಿ ಹಾಗು ದುರ್ಗತಿಗಳನ್ನು ಚಿತ್ರಿಸುತ್ತಾರೆ. ಈ ರೀತಿಯಾಗಿ ಸಮಾಜದ ವಿವಿಧ ಸ್ತರಗಳಲ್ಲಿರುವ ಕುಟುಂಬಗಳ ಚಿತ್ರಗಳನ್ನು ಕೊಡುವ ಬಲ್ಲಾಳರ ಕೌಶಲ್ಯವು ಮೆಚ್ಚುವಂತಹದು.

ಮುಂಬಯಿ ಮಹಾನಗರಿಯಲ್ಲಿ ನಡೆಯುವ ಮುಷ್ಕರಗಳ ಜಾತಕವನ್ನು ತದ್ರೂಪವಾಗಿ ಬಣ್ಣಿಸುತ್ತ ಹೋದರೆ, ‘ಬಂಡಾಯ’ವೆನ್ನುವ ಈ ಕಾದಂಬರಿಯು ಶುಷ್ಕ ಪ್ರಬಂಧವಾಗಿ ಬಿಡುತ್ತಿತ್ತು. ಅದನ್ನು ತಪ್ಪಿಸಲೆಂದೇ, ಬಲ್ಲಾಳರು ಈ ಕಾದಂಬರಿಯಲ್ಲಿ ರಾಜೀವ ಹಾಗು ಯಾಮಿನಿಯರ ಆಕರ್ಷಣೆ ಹಾಗು ಪ್ರೇಮ ಸಂಬಂಧವನ್ನು ಯೋಜಿಸಿದ್ದಾರೆ. ಅದರಂತೆ ಕಾದಂಬರಿಯಲ್ಲಿಯ ಇನ್ನಿತರ ಪಾತ್ರಗಳ ಕೌಟಂಬಿಕ ಸಮಸ್ಯೆಯ ಸುತ್ತಲೂ ಕತೆ ಹೆಣೆಯುತ್ತ ಸಾಗಿದ್ದಾರೆ. ಈ ವಿಧಾನವು ಕನ್ನಡದಲ್ಲಿ ಹೊಸದೇನೂ ಅಲ್ಲ. ಉದಾಹರಣೆಗೆ ಕನ್ನಡದ ಮತ್ತೊಬ್ಬ ಶ್ರೇಷ್ಠ ಕಾದಂಬರಿಕಾರ ನಿರಂಜನರೂ ಸಹ ಇದೇ  ವಿಧಾನವನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೆ.

ಆದರೆ ಎಲ್ಲ ಭಾರತೀಯ ಲೇಖಕರಂತೆ, ಬಲ್ಲಾಳರೂ ಸಹ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯನ್ನು ಚಿತ್ರಿಸುವಾಗ conservative ಆಗಿ ಬಿಡುತ್ತಾರೆ. ಅದಾಗ್ಯೂ ಅದ್ಭುತವಾದ ಕಥನ ಕೌಶಲವನ್ನು ಹೊಂದಿದ ಬಲ್ಲಾಳರು ತಮ್ಮ ಉದ್ದೇಶವನ್ನು ಅತ್ಯಂತ ಸಹಜವೆನ್ನುವಂತೆ ಕಥಿಸಿದ್ದಾರೆ. ಅದು ಹೀಗಿದೆ:

ಯಾಮಿನಿ ಹಾಗು ಶ್ರೀಕಾಂತರದು ಮಧ್ಯಮವರ್ಗದ ಸುಖೀ ಕುಟುಂಬ. ಶ್ರೀಕಾಂತನೊಡನೆ ಸುಖಸಂಸಾರವನ್ನು ನಡೆಸುತ್ತಿರುವ ಯಾಮಿನಿಯನ್ನು ರಾಜೀವನ ಸಂಗಾತಿಯನ್ನಾಗಿ ಮಾಡುವ ಬಗೆ ಹೇಗೆ? ಲೇಖಕರ ಈ ಉದ್ದೇಶಪೂರ್ತಿಗಾಗಿಯೇ, ಯಾಮಿನಿಯ ಗಂಡ ಶ್ರೀಕಾಂತನು ಪೋಲಿಯೊ ರೋಗದಿಂದಾಗಿ ನೌಕರಿಯನ್ನು ಕಳೆದುಕೊಂಡು, ಮನೆ ಹಿಡಿದು ಕೂಡಬೇಕಾಗುತ್ತದೆ. ಈಗ ಯಾಮಿನಿಗೆ ನೌಕರಿ ಮಾಡುವದು ಅನಿವಾರ್ಯ. ರೋಗಿಯಾದ ಶ್ರೀಕಾಂತನಿಗೆ ಯಾಮಿನಿಯ ಮೇಲೆ ಸಂಶಯ, ಸೆಡವು ಹಾಗು ಅಸಹಿಷ್ಣುತೆ ಹುಟ್ಟುವದು ಸಹಜ. ಈ ಸಂದರ್ಭವನ್ನು ಸುಶೀಲಳಾದ ಆದರೆ ಸ್ವಾಭಿಮಾನಿಯಾದ ಯಾಮಿನಿಯು ನಿರ್ವಹಿಸುವ ರೀತಿಯನ್ನು ಲೇಖಕರು ಕಾದಂಬರಿಯ ಬೆಳವಣಿಗೆಗಾಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ.

ಯಾಮಿನಿಯು ಕೆಲಸ ಮಾಡುತ್ತಿರುವ ಫ್ಯಾಕ್ಟರಿಯಲ್ಲಿ ಮುಷ್ಕರ ನಡೆದಾಗ, ಅವಳೂ ಸಹ ಮುಷ್ಕರದಲ್ಲಿ ಭಾಗವಹಿಸಿರುತ್ತಾಳೆ. ರಾಜೀವನು ಅಲ್ಲಿಯ ನೌಕರರ ಕೋರಿಕೆಯ ಮೇರೆಗೆ ಆ ಮುಷ್ಕರದ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ರಾಜೀವ ಹಾಗು ಯಾಮಿನಿಯರಿಗೆ ಆ ಕಾರಣದಿಂದ ಪರಿಚಯವಾಗುತ್ತದೆ. ಮುಷ್ಕರದ ಕಾರಣದಿಂದಾಗಿ ಇವರ ಒಡನಾಟ ಹೆಚ್ಚುತ್ತದೆ. ಯಾಮಿನಿ ರಾಜೀವನ ಇತರ ಕಾರ್ಯಕ್ರಮಗಳಲ್ಲೂ ಸಹಭಾಗಿಯಾಗುತ್ತಾಳೆ. ಈ ರೀತಿಯಾಗಿ ಯಾಮಿನಿಯು ರಾಜೀವನ ಮುಂದಾಳುತನದಲ್ಲಿದ್ದ ಕಾರ್ಮಿಕ ಸಂಘಟನೆಯಲ್ಲಿ ಪ್ರಮುಖ ಪಾತ್ರವಾಗುತ್ತಾಳೆ. ಇದರಿಂದಾಗಿ ಅವಳಿಗೆ ತನ್ನ ಗಂಡ, ಪೋಲಿಯೊ ಪೀಡಿತನಾಗಿ ಮನೆ ಹಿಡಿದು ಕೂತಿದ್ದ ಶ್ರೀಕಾಂತನೊಡನೆ ಸಾಕಷ್ಟು ಇರಸು ಮುರಸಾಗುತ್ತದೆ. ಅದೆಲ್ಲವನ್ನೂ ಅವಳು ತಾಳ್ಮೆ ಹಾಗು ಧೈರ್ಯದಿಂದ ಎದುರಿಸುತ್ತಾಳೆ.

ಜಡಿಮಳೆಯ ಒಂದು ರಾತ್ರಿಯಂದು, ಯಾಮಿನಿಗೆ ರಾಜೀವನ ಮನೆಯಲ್ಲಿ ಇರುವದು ಅನಿವಾರ್ಯವಾಗುತ್ತದೆ. ಅವರ ಮಾನಸಿಕ ಮಿಲನವು ಆವೊತ್ತು ಅವರ ದೈಹಿಕ ಮಿಲನದಲ್ಲಿ ಪರಿಣಮಿಸುತ್ತದೆ. ಇಂತಹ compelling circumstances ಇರದೇ ದೈಹಿಕ ಮಿಲನವಾದರೆ, ನಾಯಕ ಹಾಗು ನಾಯಕಿಯರು  ಪಶುತುಲ್ಯ ಕಾಮಜೀವಿಗಳೆಂದು ಓದುಗರು ಭಾವಿಸಿಯಾರು ಎನ್ನುವ ಹೆದರಿಕೆ ಲೇಖಕರಲ್ಲಿದೆ. ಆದರೆ, ಅವರ ದೈಹಿಕ ಮಿಲನವು ಆಗಲೇಬೇಕೆನ್ನುವ ಹಟ ಯಾಕೆ ಲೇಖಕರಿಗೆ? ನಾಯಕ, ನಾಯಕಿಯರಲ್ಲಿ platonic love ಇದ್ದರೆ ಸಾಲದೆ? ಊಂಹೂಂ. ಓದುಗರು ನಾಯಕ ಹಾಗು ನಾಯಕಿಯ ಮಿಲನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ, under acceptable, decent conditions! ಅದಕ್ಕಾಗಿ ಇಷ್ಟೆಲ್ಲಾ ಕಸರತ್ತು. ಬಲ್ಲಾಳರು ಅತ್ಯಂತ ಚಾಣಾಕ್ಷತೆಯಿಂದ ಇದನ್ನು ಸಂಬಾಳಿಸುತ್ತಾರೆ ಎನ್ನುವದು ಅವರಿಗೆ ಸಲ್ಲಬೇಕಾದ credit ಅಗಿದೆ.

ಇತ್ತ ಸತೀಶನ ಉದ್ದಿಮೆಗಳಲ್ಲಿಯೇ ಮುಷ್ಕರ ಪ್ರಾರಂಭವಾಗುತ್ತದೆ. ಈ ಮುಷ್ಕರವನ್ನು ಎಬ್ಬಿಸಿದವನು ದೇಶಪಾಂಡೆ ಎನ್ನುವ ಕಾರ್ಮಿಕ ಮುಂದಾಳು. ಮುಂಬಯಿಯಲ್ಲಿಯ ಎಲ್ಲ ಕಾರ್ಮಿಕ ಸಂಘಟನೆಗಳಿಗೂ ತಾನೇ ನೇತಾರನಾಗಬೇಕು, ಎಲ್ಲೆಲ್ಲಿಯೂ ತನ್ನದೇ ಪ್ರತಿಷ್ಠೆ ಮೆರೆಯಬೇಕು ಎನ್ನುವ ದುರ್ಬುದ್ಧಿ ಈತನದು. ಕಾದಂಬರಿಯಲ್ಲಿ ದೇಶಪಾಂಡೆಯ ಹೆಸರು ಮಾತ್ರ ಬರುತ್ತಲೇ ಇರುತ್ತದೆಯೇ ಹೊರತು, ಆತ ಪ್ರತ್ಯಕ್ಷವಾಗಿ ಎಲ್ಲಿಯೂ ಕಾಣಿಸಿಕೊಳ್ಳುವದಿಲ್ಲ.

ಈ ಪಾತ್ರಗಳಲ್ಲದೆ, ಅನೇಕ ಕಾರ್ಮಿಕ ಪಾತ್ರಗಳು ಈ ಕಾದಂಬರಿಯಲ್ಲಿ ಬಂದು ಹೋಗುತ್ತವೆ. ಮುಂಬಯಿಯ ಕೊಳೆಗೇರಿಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಈ ಕಾರ್ಮಿಕರು ಪಶುಗಳಂತೆ ಬದುಕುವ ಪರಿಯನ್ನು ಬಲ್ಲಾಳರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಕೇವಲ ಒಂದೇ ಪುಟದ ಪಾತ್ರಗಳಾದರೂ ಸಹ ಬಲ್ಲಾಳರು ಆ ಪಾತ್ರಗಳಲ್ಲಿ ಓದುಗನಿಗೆ ಮಾನವೀಯ ಆಸಕ್ತಿ ಹುಟ್ಟುವಂತಹ ಚಿತ್ರಣ ನೀಡಿದ್ದಾರೆ. ಉದಾಹರಣೆಗೆ ರಘು ಪಾಟಸ್ಕರನ ಪಾತ್ರವನ್ನು ತೆಗೆದುಕೊಳ್ಳಬಹುದು. ಈತ ಸತೀಶನ ತಂದೆ ನಾಗೇಶರ ಬಲಗೈ ಬಂಟ. ಸತೀಶನ ಉದ್ದಿಮೆಗಳಲ್ಲಿಯ ಕಾರ್ಮಿಕರ ಮೇಲೆ ನಿಗಾ ಇಡುವದು ಇವನ ಕೆಲಸ. ಇಂತಹ ಸಣ್ಣ ಪಾತ್ರದ ಕುಟುಂಬಕ್ಕೂ  ಬಲ್ಲಾಳರು ಇಲ್ಲಿ ಔಚಿತ್ಯಪೂರ್ಣ ಸ್ಥಳಾವಕಾಶ ನೀಡಿದ್ದಾರೆ. ಯಾವಾಗಲೂ ಕುಟುಂಬದವರ ದೇಖರೇಖಿಯಲ್ಲಿ ಮಗ್ನಳಾದ ಆತನ ಹೆಂಡತಿ, ಸಂಗೀತ ಕಲಿಯುತ್ತಿರುವ ಆತನ ಮಗಳು, ತುಂಟಾಟದ ಆತನ ಮಗ, ಪಾಟಸ್ಕರನೊಟ್ಟಿಗೆ ಇರುವ ಆತನ ಮುದಿ ತಂದೆ, ತಾಯಿ ಇವರೆಲ್ಲರ ಚಿತ್ರವನ್ನು ಬಲ್ಲಾಳರು ಸಾಂದರ್ಭಿಕವಾಗಿ ಕೇವಲ ಎರಡೇ ಪುಟಗಳಲ್ಲಿ ನೀಡುತ್ತಾರೆ. ಆದರೆ, ಇಷ್ಟೇ ಸಾಕು ಕಾದಂಬರಿಯಲ್ಲಿ ಮಾನವೀಯ ಆಸಕ್ತಿಯನ್ನು ಹುಟ್ಟಿಸಲು. ಇದರಂತೆಯೇ ಕೊಲೆಯಾದ ಕಾರ್ಮಿಕ ತಿವಾರಿಯ ಹೆಂಡತಿಯು ಉದ್ದಿಮೆಯ ಕಚೇರಿಗೆ ಬಂದಾಗ, ಅವಳ ಬತ್ತಲೆ ಬೆನ್ನಿನ ಕಡೆಗೆ ಹರಿಯುವ ಸತೀಶನ ಲಕ್ಷವನ್ನು ವರ್ಣಿಸುವ ಮೂಲಕ, ಮಾನವಸಂವೇದನೆ ಇಲ್ಲದ ವ್ಯಕ್ತಿಗಳ ಮನಸ್ಸನ್ನು ಬಲ್ಲಾಳರು ಅನಾವರಣಗೊಳಿಸುತ್ತಾರೆ. 

            ಮುಂಬಯಿ ನಗರದ ಪೋಲೀಸ ಮುಖ್ಯಸ್ಥನ ಜೊತೆಗೆ ಸತೀಶನದು ಏಕವಚನದ ಗೆಳೆತನ. ಆಗಾಗ ಗುಂಡು ಪಾರ್ಟಿಗಳ ಮೂಲಕ ಇವರ ಸಖ್ಯವೃದ್ಧಿ. ಇವರೀರ್ವರಿಗೆ ಪರಸ್ಪರ ಹೆಂಡಿರನ್ನೂ ಸಹ ಏಕವಚನದಲ್ಲಿಯೇ ಕರೆಯುವ ಸಲುಗೆ. High Societyಯ ಬೆಡಗು, ಬಿನ್ನಾಣಗಳನ್ನೆಲ್ಲ ಇಲ್ಲಿ ಕಾಣಬಹುದು. ಇಷ್ಟಿದ್ದರೂ ಸಹ ಸತೀಶನ ಉದ್ದಿಮೆಯ ಕಾರ್ಮಿಕನೊಬ್ಬನ ಕೊಲೆಯ ಶೋಧನೆಗಾಗಲೀ, ಮುಷ್ಕರ ನಡೆದಾಗ ಕೆಲಸ ಮಾಡಬಯಸುವ ನಿಷ್ಠ ಕಾರ್ಮಿಕರಿಗೆ ರಕ್ಷಣೆ ಕೊಡುವದಕ್ಕಾಗಲೀ ಈ ಪೋಲೀಸ ಅಧಿಕಾರಿ ತನ್ನ ಮಿತಿ ಬಿಟ್ಟು ಹೊರ ಬರಲಾರ. ಇದು ಅಲ್ಲಿಯ ಕಠೋರ ಸತ್ಯ!

ಈ ಎಲ್ಲ ಕುಟುಂಬಗಳ ಸುಖ ದುಃಖಗಳನ್ನು ವರ್ಣಿಸುತ್ತಲೇ, ಬಲ್ಲಾಳರು ಮುಂಬಯಿಯಲ್ಲಿ ಮುಷ್ಕರ ಹುಟ್ಟುವ ಅಥವಾ ಮುಷ್ಕರವನ್ನು ಹುಟ್ಟಿಸುವ ಬಗೆ,  ಕಾರ್ಮಿಕರ ಗೋಳು, ಕಾರ್ಮಿಕ ಸಂಘಗಳ ಮುಂದಾಳುಗಳ ಅಟ್ಟಹಾಸ, ಉದ್ಯಮಪತಿಗಳ ಸಂವೇದನಾರಾಹಿತ್ಯ ಇವೆಲ್ಲವನ್ನೂ  ತೆರೆಯುತ್ತಲೇ ಹೋಗುತ್ತಾರೆ. ಸತೀಶನ ಕುಟುಂಬದ ಕತೆಯಂತೆ ಕಾಣುವ ಈ ಕಾದಂಬರಿ, ರಾಜೀವ, ಯಾಮಿನಿಯರ ಆಕರ್ಷಣೆಯ ಕತೆಯಂತೆ ಕಾಣುವ ಈ ಕಾದಂಬರಿ ನಿಜಕ್ಕೂ  ಮುಷ್ಕರಗಳ ಒಳಹೊರಗನ್ನು ಚಿತ್ರಿಸುವ ಕಾದಂಬರಿಯಾಗಿದೆ.

ಕಾದಂಬರಿಯ ಕೊನೆಯಲ್ಲಿ, ರಾಜೀವನಿಗೆ ಈ ರೀತಿಯ ಮುಷ್ಕರಗಳಿಂದ ಕಾರ್ಮಿಕರ ಹಿತ ಸಾಧಿಸಲು ಶಕ್ಯವಿಲ್ಲ ಎನ್ನುವ ಅರಿವು ಹುಟ್ಟುತ್ತದೆ. ಈ ಮಾರ್ಗವನ್ನು ಬಿಟ್ಟು, ತನ್ನ ಮೊದಲಿನ ಮಾರ್ಗಕ್ಕೆ ಮರಳಲು ಆತ ಒಮ್ಮೆಲೆ ಕಣ್ಮರೆಯಾಗುತ್ತಾನೆ. ರಾಜೀವನ ಮೊದಲಿನ ಮಾರ್ಗವು ಯಾವುದು ಎನ್ನುವದಕ್ಕೆ ಕಾದಂಬರಿಯಲ್ಲಿ ಸಾಕಷ್ತು ಸುಳಿವುಗಳಿವೆ.  ರಾಜೀವನ ಬದಲಾಗಿ ಯಾಮಿನಿಯು ಕಾರ್ಮಿಕ ಸಂಘದ ಮುಂದಾಳಾಗಿ ಮುಂದುವರೆಯುತ್ತಾಳೆ.

ಭಾರತದಲ್ಲಿಯ ಶೋಷಕ ಹಾಗು ಶೋಷಿತರ ಸಮಸ್ಯೆಯು ಉದ್ಯೋಗಪತಿಗಳಿಗೆ ಹಾಗು ನಗರಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಾಡಿನಲ್ಲಿ ಇದು ಜಮೀನುದಾರರ ಹಾಗು ರೈತಶ್ರಮಿಕರ ಸಮಸ್ಯೆಯಾಗಿದೆ. In fact ಭಾರತೀಯ ಬದುಕಿನ ವ್ಯವಸ್ಥೆಯೇ ಒಂದು ಶ್ರೇಣೀಕೃತ ಶೋಷಣಾವ್ಯವಸ್ಥೆಯಾಗಿದೆ. ಇದಕ್ಕೆ ಪರಿಹಾರವೆಲ್ಲಿದೆ? ನಕ್ಸಲರು ನಂಬುವಂತೆ, ಬಂದೂಕಿನ ನಳಿಕೆಯ ಮುಖಾಂತರವೇ ಬದಲಾವಣೆ ಸಾಧ್ಯವೆ? ಕಾದಂಬರಿಯ ಕೊನೆಯಲ್ಲಿ ರಾಜೀವನಲ್ಲಿಯ ಮರುಚಿಂತನೆ ಈ ವಿಚಾರವನ್ನು ಓದುಗರ ಎದುರಿಗೆ ಇಡುತ್ತದೆ. ಇದರರ್ಥ ಬಲ್ಲಾಳರು ಈ ಅಭಿಪ್ರಾಯವನ್ನು endorse ಮಾಡುತ್ತಾರಂತಲ್ಲ.  ಆದರೆ ನಮ್ಮಲ್ಲಿಯ ನಕ್ಸಲೀಯ ಚಿಂತನೆಯ ಉಗಮವನ್ನು ತೋರಿಸುತ್ತಾರೆ, ಅಷ್ಟೆ.

ಬಲ್ಲಾಳರು ಮುಂಬಯಿಯ ಕನ್ನಡ ಭಾಷೆಯನ್ನು ಹಾಗು ಅಲ್ಲಲ್ಲಿ ಮರಾಠಿಯನ್ನು ಬಳಸುವ ಮೂಲಕ ಕಾದಂಬರಿಗೆ ಒಂದು ಪ್ರಾದೇಶಿಕತೆಯನ್ನು ಕೊಡಲು ಸಮರ್ಥರಾಗಿದ್ದಾರೆ. ಕತೆಯ ಬೆಳವಣಿಗೆಯನ್ನು ಅತ್ಯಂತ ಕ್ಷಿಪ್ರವಾಗಿ ಮಾಡುತ್ತ, ಓದುಗನಲ್ಲಿ ಕುತೂಹಲವನ್ನು ಮೂಡಿಸವಲ್ಲಿ ಬಲ್ಲಾಳರು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ, ಕಾದಂಬರಿಯು ಔದ್ಯೋಗಿಕ ಜಗತ್ತಿನ ಶೋಷಣೆಯ ಅನಾವರಣವೆನಿಸದೆ, ಕಾದಂಬರಿಯಲ್ಲಿ ಬರುವ ಪಾತ್ರಗಳ ವೈಯಕ್ತಿಕ ಕತೆ ಎನಿಸುವಂತೆ ಬಲ್ಲಾಳರು ಬರೆದಿದ್ದಾರೆ. ಹೀಗಾಗಿ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕಾದಂಬರಿಯು ಆಸಕ್ತಿಪೂರ್ಣವಾಗಿದೆ. ಇಷ್ಟೆಲ್ಲ ಧನಾತ್ಮಕ ಅಂಶಗಳಿದ್ದ ಈ ಕಾದಂಬರಿಯಲ್ಲಿ ಒಂದು ಚಿಕ್ಕ ದೋಷವೂ ಇದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳು ನೈಜವೆನ್ನಿಸಬೇಕೇ ಹೊರತು, ಕಾದಂಬರಿಕಾರನ ಉದ್ದೇಶಪೂರ್ತಿಗಾಗಿ
ನಿರ್ಮಿತವಾದ robotಗಳಾಗಬಾರದು. ‘ಬಂಡಾಯ’ ಕಾದಂಬರಿಯಲ್ಲಿ ಎಲ್ಲ ಪಾತ್ರಗಳೂ ಲೇಖಕರ ಉದ್ದೇಶದ ಮಿತಿಗೆ ಕಟ್ಟುಬಿದ್ದಂತೆ ಓದುಗನಿಗೆ ಭಾಸವಾಗುವದು ಈ ಕಾದಂಬರಿಯ ಒಂದು ಚಿಕ್ಕ ದೋಷವೆನ್ನಬಹುದು. ಆದರೆ ಚಂದ್ರನ ಚೆಲುವಿನಲ್ಲಿ, ಅವನ ಕಪ್ಪು ಕಲೆಯು ಮುಚ್ಚಿ ಹೋಗುವಂತೆ, ಕಾದಂಬರಿಯ ಧನಾತ್ಮಕ ಅಂಶಗಳ ಎದುರಿಗೆ, ಈ ದೋಷವು ಮುಚ್ಚಿ ಹೋಗುತ್ತದೆ.

Saturday, March 13, 2010

ಧೀಮಂತ ನಾಡು

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.

ಗುರುದೇವ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕವನ ಸಂಕಲನದಲ್ಲಿ ಬರುವ ಗೀತೆಯಿದು. ಈ ಕವನಕ್ಕೆ ಶೀರ್ಷಿಕೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಈ (ಮೂಲ ಬಂಗಾಲಿ) ಕವನದಲ್ಲಿ ಠಾಕೂರರು ದೇವರಲ್ಲಿ ಪ್ರಾರ್ಥಿಸುತ್ತಿರುವುದು, ಕೇವಲ ತಮ್ಮ ದೇಶದ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ತಮ್ಮ ನಾಡಿನ ಜನ ಧೀಮಂತರಾಗಬೇಕು ಎನ್ನುವದು ಅವರ ಅಭೀಪ್ಸೆ. ಆದುದರಿಂದ ನಾವು ಈ ಗೀತೆಗೆ ‘ಧೀಮಂತ ನಾಡು’ ಎನ್ನುವ ಶೀರ್ಷಿಕೆಯನ್ನು ಕೊಡಬಹುದೇನೊ? ಈ ಕವನದ ಭಾವಾನುವಾದ ಇಂತಿದೆ:

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು,
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಅನವರತ ಅರಳುತಿಹ ತಿಳಿವನ್ನು, ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.


‘ಗೀತಾಂಜಲಿ’ ಕ್ರಿ.ಶ. ೧೯೧೩ರ ಸುಮಾರಿಗೆ ಇಂಗ್ಲೀಶಿನಲ್ಲಿ ಪ್ರಕಟವಾಯಿತು. ಅದಕ್ಕೂ ಮೊದಲೇ ಬಂಗಾಲಿಯಲ್ಲಿ ಈ ಗೀತೆಗಳು ತುಂಬ ಜನಪ್ರಿಯವಾಗಿದ್ದವು. ಇಂಗ್ಲಿಶ್ ಆವೃತ್ತಿಗೆ ಇದೀಗ ೯೭ ವರ್ಷಗಳು ತುಂಬಿದವು. ಬಹುಶ: ರವೀಂದ್ರನಾಥ ಠಾಕೂರರು ಈ ಮೇಲಿನ ಗೀತೆಯನ್ನು ರಚಿಸಿ ಈಗ ನೂರು ವರ್ಷಗಳು ಆಗಿರಬಹುದು. ಆದರೆ ‘ಧೀಮಂತ ನಾಡಿ’ನ ಅವರ ಕನಸು ಕನಸಾಗಿಯೇ ಉಳಿದಿದೆ. ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ ಇನ್ನೂ ಫಲಪ್ರದವಾಗಬೇಕಾಗಿದೆ.

ಈ ಗೀತೆಯ ಮೊದಲ ನುಡಿಯನ್ನು ನೋಡಿರಿ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ, ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
 ‘ನಿರ್ಭೀತ ಮನ’ ಎಂದರೇನು? ತನಗೆ ಕಂಡ ಸತ್ಯವನ್ನು ಭಯವಿಲ್ಲದೇ ಹೇಳುವ ಮನಸ್ಸು. ಈ ಭಯ ಯಾತಕ್ಕೆ ಬರಬೇಕು? ಸಮಾಜದಲ್ಲಿ oppression ಇದ್ದಾಗ ಭಯವಿರುತ್ತದೆ. ಇದು ಸರಕಾರದ ಭಯವಿರಬಹುದು ಅಥವಾ ಸಮಾಜದ ಭಯವಿರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ಒಂದು ಮಣ್ಣು ಹುಳವೂ ಸಹ ಸರಕಾರಕ್ಕೆ ಅಂಜುತ್ತಿಲ್ಲ. ಅಂದ ಮೇಲೆ ಉಳಿದದ್ದು ಸಮಾಜದ ಭಯ.

ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅನೇಕ ಸಮಾಜಗಳಿವೆ. ಇವುಗಳಲ್ಲಿ ಕೆಲವು ಸಮಾಜಗಳು ಮುಕ್ತ ಸಮಾಜಗಳು. ಅಂದರೆ ಇಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿದೆ. ಕೆಲವು ಸಮಾಜಗಳು ಮುಚ್ಚಿದ ಸಮಾಜಗಳು. ಇಲ್ಲಿ ಟೀಕೆಗಳಿಗೆ, ಸ್ವತಂತ್ರ ಆಲೋಚನೆಗಳಿಗೆ ಅವಕಾಶವಿಲ್ಲ. ಇಂತಹ ಸಮಾಜಗಳು ಸುಧಾರಿಸುವದು ಹೇಗೆ? ನಮ್ಮ ದೇಹದ ಒಂದು ಭಾಗದಲ್ಲಿ ಹುಣ್ಣಾದರೆ, ಅದನ್ನು ತಕ್ಷಣವೇ ಗುಣಪಡಿಸದಿದ್ದರೆ, ಇಡೀ ದೇಹಕ್ಕೇ ಅಪಾಯ. ಅದೇ ರೀತಿಯಲ್ಲಿ, ಒಂದು ಸಮಾಜವು ರೋಗಗ್ರಸ್ತವಾದರೆ, ಇಡೀ ದೇಶವೇ ರೋಗಿಯಾಗುತ್ತದೆ. ಇದನ್ನು ಅರಿತುಕೊಂಡು, ಆ ಸಮಾಜವು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಅದಾಗದಿದ್ದರೆ, ಸರಕಾರವೇ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು. ಅದು ಸದ್ಯದ ‘ಮತಪ್ರಜಾಪ್ರಭುತ್ವ’ದಲ್ಲಿ ಸಾಧ್ಯವೆ?  ಹಾಗಿದ್ದಾಗ, ರವೀಂದ್ರನಾಥ ಠಾಕೂರರ ಈ ಕನಸು ಕನಸಾಗಿಯೇ ಉಳಿಯುವದು.

ಯಾವುದೇ ಸಮಾಜದಲ್ಲಿಯ ದೋಷವನ್ನು ತೋರಿಸುವ ಮುಕ್ತ ಮನಸ್ಸು ಭಾರತೀಯನಿಗೆ ಇರಬೇಕು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ. ಹೀಗಿದ್ದಾಗ, ಗುರುದೇವ ಠಾಕೂರರು ಬಯಸುವ ‘ತಲೆ ಎತ್ತಿ ನಿಲುವ ನಿಲುವು’ ಹೇಗೆ ಸಾಧ್ಯವಾದೀತು? ಅದರ ಬದಲಾಗಿ ತಲೆ ತಪ್ಪಿಸಿ ಬದುಕುವ ಪರಿಸ್ಥಿತಿ ಬಂದಿದೆ, ಸತ್ಯವಂತರಿಗೆ.  ಇಂಥವರ ಅಜ್ಞಾತವಾಸವು ನಿಜಕ್ಕೂ ಮರುಕವನ್ನು ಹುಟ್ಟಿಸುವಂತಹದು.

ಎಲ್ಲಿ ಜ್ಞಾನಸಾಧನೆಗೆ ಇರುತಿಹುದು ಸಂಕೋಲೆಯಿರದ ಒಲವು”:
ಹಿಂದೂ ಸಮಾಜದಲ್ಲಿರುವ ವ್ಯಕ್ತಿಗಳಿಗೆ ಒಂದೇ faith ಎನ್ನುವದಿಲ್ಲ. ಆತ ವೈದಿಕನಿರಬಹುದು, ಅವೈದಿಕನಿರಬಹುದು, pagan ಇರಬಹುದು ಅಥವಾ ನಾಸ್ತಿಕನೂ ಆಗಿರಬಹುದು. ಆತನು Hindu by culture. ಆದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮಾಜಗಳಲ್ಲಿ ಆ ವ್ಯಕ್ತಿಯು ತನ್ನ ಸಮಾಜದ ಮೂಲತತ್ವಗಳಲ್ಲಿ ಶ್ರದ್ಧೆ ಇಡಬೇಕಾಗುತ್ತದೆ. ಅಂದರೆ ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಆಗಿರುವದು by faith.

ಈ ರೀತಿಯ ವ್ಯವಸ್ಥೆಯಿಂದಾಗಿ ಹಿಂದೂ ಸಮಾಜಕ್ಕೆ ಒಳ್ಳೆಯದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯದೆಂದರೆ ಆತನಿಗೆ ಸಂಕೋಲೆಯಿಲ್ಲದ ಜ್ಞಾನಸಾಧನೆಗೆ ಅನುಕೂಲವಾಯಿತು. ಈ ಉದಾಹರಣೆ ನೋಡಿರಿ:
ಸೂರ್ಯನ ಸುತ್ತಲೂ ಪೃಥ್ವಿಯು ತಿರುಗುತ್ತಿದೆ ಎಂದು ಗೆಲಿಲಿಯೋ ಹೇಳಿದಾಗ, ಧರ್ಮನಿಂದನೆಯ ಅಪವಾದಕ್ಕೆ ಗುರಿಯಾಗಬೇಕಾಯಿತು. ಯಾಕೆಂದರೆ ಇದು ಕ್ರಿಶ್ಚಿಯನ್ ಶ್ರದ್ದೆಯ ವಿರುದ್ಧವಾದ ಹೇಳಿಕೆ ಎಂದು. ಆದರೆ, ಗೆಲಿಲಿಯೋನಿಗಿಂತ ಸಾವಿರ ವರ್ಷಗಳ ಮೊದಲೇ ಆರ್ಯಭಟನು ಪೃಥ್ವಿ ಹಾಗು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ಹೇಳಲು ಹೆದರಿಕೆ ಅಥವಾ ಸಂಕೋಚ ಪಡಬೇಕಾಗಿರಲಿಲ್ಲ. ವೇದಗಳಲ್ಲಿ ಏನೇ ಹೇಳಿರಲಿ, ಶಾಸ್ತ್ರಗಳ ಶ್ರದ್ಧೆ ಏನೇ ಇರಲಿ, ಜ್ಞಾನಸಾಧನೆಗೆ ಅದು ಸಂಕೋಲೆಯಾಗಬಾರದು ಎನ್ನುವ ವಿವೇಕ ಇಲ್ಲಿದೆ.

ಇನ್ನು  ಈ ವ್ಯವಸ್ಥೆಯಿಂದ ಆದಂತಹ ಕೆಡಕೆಂದರೆ ಹಿಂದೂ ಸಮಾಜವು ವಿಭಿನ್ನ ತತ್ವಗಳನ್ನು ಪ್ರತಿಪಾದಿಸುವ ಉಪಸಮಾಜಗಳಲ್ಲಿ ಒಡೆದು ಹೋಯಿತು. ಶ್ರದ್ಧೆಯನ್ನು ಪ್ರಶ್ನಿಸುವ ವ್ಯಕ್ತಿಗಳೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಹಿಂದೂ ಸಮಾಜದಲ್ಲಿ ಒಕ್ಕಟ್ಟು ಎನ್ನುವದು ಇರದೇ ಹೋಯಿತು. ಇರಲಿ, ಗುರುದೇವ ಠಾಕೂರರು ಇಂತಹ ಜ್ಞಾನಾನ್ವೇಷಣೆಯ ಒಲವನ್ನು ಎಲ್ಲ ಭಾರತೀಯರಲ್ಲೂ ಮೂಡಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಈಗ ಈ ಗೀತೆಯ ಎರಡನೆಯ ನುಡಿ:
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

‘ವಸುಧೈವ ಕುಟುಂಬಕಮ್’, ಇಡೀ ಜಗತ್ತೇ ಒಂದು ಕುಟುಂಬ.
ಈ ಜಗತ್ತು ದೇಶದೇಶಗಳಲ್ಲಿ, ಧರ್ಮಗಳಲ್ಲಿ ಒಡೆದು  ಹೋಗುವದು ಬೇಡವೆನ್ನುವದು ಗುರುದೇವರ ಆಶಯವಾಗಿದೆ. ಆದರೆ ಅವರ ಈ ಆಶಯವೂ ಸಹ ಫಲಿಸಲಿಲ್ಲ. ವಾಸ್ತವದಲ್ಲಿ, ನಮ್ಮ ದೇಶದಲ್ಲಿಯೇ ನೂರಾರು ಹೊಸ ಗೋಡೆಗಳು ಎದ್ದಿವೆ. ಈ ಗೋಡೆಗಳನ್ನು ಸಮರ್ಥಿಸುವವರಿಗೇ ಮನ್ನಣೆ ಸಿಗುತ್ತಿದೆ.
ನಿಜವನ್ನು ಅರಿತವರು, ಕೆಲವೊಮ್ಮೆ ಕಣ್ಣು ಮುಚ್ಚಿಕೊಂಡಿರುತ್ತಾರೆ, ಕೆಲವೊಮ್ಮೆ ಭಯದಿಂದ ಬಾಯಿ ಮುಚ್ಚಿಕೊಂಡಿರುತ್ತಾರೆ.
ನಿಷ್ಠುರವಾದ ಒಡಲಾಳದ ನಿಜವು ಅನಾಥವಾಗಿದೆ.

ಗುರುದೇವರ ಗೀತೆಯ ಮೂರನೆಯ ನುಡಿಯು ಹೀಗಿದೆ:
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಪೂರ್ಣತೆಯನ್ನು ಸಾಧಿಸಲು ಅನವರತ ಶ್ರಮ ಬೇಕು. ರವೀಂದ್ರನಾಥ ಠಾಕೂರರೇ, ಮತ್ತೊಂದೆಡೆಯಲ್ಲಿ ಹೀಗೆ ಹೇಳಿದ್ದಾರೆ: ‘ಒಂದು ಗುಲಾಬಿ ಹೂವನ್ನು ರೂಪಿಸಲು ದೇವರು ಲಕ್ಷ ವರ್ಷಗಳನ್ನು ತೆಗೆದುಕೊಂಡಿದ್ದಾನೆ.’
ಆದುದರಿಂದ ಈಗಿನ ನಮ್ಮ ಲಘುಸಾಧನೆಯೇ ಪರಮೋಚ್ಚವೆನ್ನುವ ಭ್ರಮೆ ಹೋಗಬೇಕು.
ಆದರೆ ಈ ಸಾಧನೆಗೆ ಜ್ಞಾನವೂ ಬೇಕಲ್ಲವೆ? ನಮ್ಮ ಕುರುಡು ಸಂಪ್ರದಾಯಗಳೆನ್ನುವ ಮರಳುಗಾಡಿನಲ್ಲಿ ತಿಳಿವಿನ ತೊರೆಯು ಬತ್ತಿ ಹೋಗಿ ಬಿಡಬಹುದು. ಆದುದರಿಂದ, ನಮ್ಮ ತಿಳಿವು, ನಮ್ಮ ತರ್ಕ ಇವು ಸಂಪ್ರದಾಯವನ್ನು ಯಾವಾಗಲೂ ಪರೀಕ್ಷಿಸುತ್ತಲೇ ಇರಬೇಕು ಹಾಗೂ ತಪ್ಪು ಸಂಪ್ರದಾಯಗಳನ್ನು ದಾಕ್ಷಿಣ್ಯವಿಲ್ಲದೇ ತ್ಯಜಿಸಬೇಕು.

ನಾಲ್ಕನೆಯ ನುಡಿ:
ಅನವರತ ಅರಳುತಿಹ ತಿಳಿವನ್ನು,ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.

ತಮ್ಮ ತಿಳಿವು ಕೊನೆಯ ಘಟ್ಟವನ್ನು ಮುಟ್ಟಿಬಿಟ್ಟಿದೆ ಎಂದು ಗುರುದೇವರು ಭಾವಿಸುವದಿಲ್ಲ. ಇದು ಯಾವಾಗಲೂ ಅರಳುತ್ತಿರಲೇ ಇರಬೇಕಾದ ತಿಳಿವು. ಆದುದರಿಂದ ಇದು ದೈವಶ್ರದ್ಧೆಯಿಂದ ಲಭಿಸುವ ತಿಳಿವು. ಈ ತಿಳಿವಿಗೆ ತಕ್ಕಂತೆ ನಮ್ಮ ಕ್ರಿಯೆಯೂ ಸಹ ಉನ್ನತ ಸ್ತರಕ್ಕೆ ಏರುತ್ತಿರಬೇಕು. ಆ ತಿಳಿವಳಿಕೆ ಮೂಡಿದ ನಾಡೇ ನಿಜವಾದ ಸ್ವತಂತ್ರ ನಾಡು. ದೇವರೆ, ನಿನ್ನ ಅನುಗ್ರಹದಿಂದ ನನ್ನ ನಾಡಿಗೆ ಅಂತಹ ಸ್ವಾತಂತ್ರ್ಯ ಲಭಿಸಲಿ ಎಂದು ಗುರುದೇವರು ಪ್ರಾರ್ಥಿಸುತ್ತಾರೆ.

ಗುರುದೇವರ ಬಯಕೆ ಸಫಲವಾಗಲಿ.
Amen!

Friday, March 5, 2010

ಸಾರ್ವಜನಿಕ ಪ್ರಮಾಣ, ಸಾಂಸ್ಕೃತಿಕ ಆದರ್ಶ ಹಾಗು ತಸ್ಲೀಮಾ ನಸರೀನ್

ಶಿವಮೊಗ್ಗಿ ಹಾಗು ಹಾಸನಗಳಲ್ಲಿ ತಸ್ಲೀಮಾ ನಸರೀನ್ ಇವರ ವಿರುದ್ಧ ಜರುಗಿದ ಹಿಂಸಾತ್ಮಕ ಪ್ರತಿಭಟನೆಗಳು ಕರ್ನಾಟಕದ ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಘೋರ ಕಳಂಕವನ್ನು ತಂದಿವೆ. ಈ ಹಿಂಸಾತ್ಮಕ ಪ್ರತಿಭಟನೆಗಿಂತ ಘೋರವಾದದ್ದು, ಈ ಘಟನೆಗಳಿಗೆ ವಿಚಾರವಂತರ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯೆಯ ಅಭಾವ. ತಸ್ಲೀಮಾ ಅವರ ಮೂಲಲೇಖನದ ಅನುವಾದವೆಂದು ಹೇಳಲಾದ ಲೇಖನವೊಂದು ‘ಕನ್ನಡ ಪ್ರಭಾ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಾನು ಅಂತಹ ಯಾವುದೇ ಅನುವಾದಕ್ಕೆ ಒಪ್ಪಿಗೆಯನ್ನೇ ನೀಡಿಲ್ಲ ಎನ್ನುವ ಅವರ ಹೇಳಿಕೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆ !
ಇಲ್ಲಿ ಮೂಡುವ ಪ್ರಶ್ನೆಗಳು ಇಂತಿವೆ:
(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ ಅಥವಾ ಸ್ವಯಂಸ್ಫೂರ್ತ ಘಟನೆಯೆ?
(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?

(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ?:
 ಮಾಧ್ಯಮ ವಿದ್ಯಾರ್ಥಿಯಾದ ರಾಕೇಶ ಮಥಾಯಸರು ಈ ಹಿಂಸಾತ್ಮಕ ಪ್ರತಿಭಟನೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾರೆ. ನಮ್ಮ ಮಹಾನ್ ಭಾರತ ದೇಶದ ಪೂರ್ವ ಪ್ರಧಾನಿಯೊಬ್ಬರು ಈ ಸಂಚಿನ ಪ್ರೇರಕರು ಎನ್ನುವದು ಅವರ ಅಭಿಪ್ರಾಯ. ಅವರ ಕನ್ನಡ ಬ್ಲಾ^ಗು  ‘ಕ್ಷಕಿರಣ’ದಲ್ಲಿ ಅವರ ಅಭಿಪ್ರಾಯವನ್ನು ನೋಡಬಹುದು. 

ಇದು ನಿಜವೇ ಆಗಿದ್ದರೆ, ಇದಕ್ಕಿಂತ ಹೀನ ರಾಜಕೀಯ ಮತ್ತೊಂದಿಲ್ಲ. ಕೋಟಿಗಟ್ಟಲೆ ಬೆಲೆ ಬಾಳುವ  ಸಾರ್ವಜನಿಕ ಹಾಗು ಖಾಸಗಿ ಆಸ್ತಿಯ ನಾಶವಂತೂ ಆಯಿತು. ಅದಕ್ಕಿಂತ ಹೆಚ್ಚಾಗಿ ಈ ಲೇಖನದ ಬಗೆಗೆ ಏನೂ ಗೊತ್ತಿರದ ಅಮಾಯಕರ ಜೀವಹಾನಿಯೂ ಆಯಿತು. ಆ ರಾಜಕಾರಣಿಗೆ ಇದರಿಂದ ಏನು ಲಾಭವಾಯಿತೊ ತಿಳಿಯದು!
ಇನ್ನು ಇದು ಸ್ವಯಂಸ್ಫೂರ್ತ ಪ್ರತಿಭಟನೆಯಾಗಿದ್ದರೆ, ಪ್ರತಿಭಟನಾಕಾರರಿಗೆ ಪ್ರಜಾಪ್ರಭುತ್ವದ ವಿಧಾನಗಳಲ್ಲಿ ವಿಶ್ವಾಸವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅವರಿಗೆ ತಮ್ಮ ತೋಳ್ಬಲದ ಪ್ರದರ್ಶನ ಮಾಡುವದಷ್ಟೇ ಬೇಕಾಗಿದೆ ! ಅವರು ಕೊಡುವ ಸಂದೇಶವು ಹೀಗಿದೆ: ‘ನೋಡು, ನನ್ನ ಅಭಿಪ್ರಾಯಕ್ಕೆ ವಿರುದ್ಧವಾದದ್ದನ್ನು ನೀನು ಹೇಳಿದರೆ, ನಾನು ನಿನ್ನ ಗಂಟಲನ್ನು ಹಿಸುಕುತ್ತೇನೆ!’

‘ಕನ್ನಡ ಪ್ರಭಾ’ದಲ್ಲಿ ಪ್ರಕಟವಾದ ಲೇಖನದಲ್ಲಿ ಧರ್ಮನಿಂದೆಯ (blasphemy) ಅಥವಾ ಅವಹೇಳನದ (slander) ಅಂಶಗಳಿದ್ದರೆ, ನ್ಯಾಯಲಯಕ್ಕೆ  ಹೋಗಲು ಅವಕಾಶವಿದೆ. ಭಾರತೀಯ ನ್ಯಾಯಾಲಯಗಳು ಸತ್ಯ ಹಾಗು ನ್ಯಾಯವನ್ನು ಎತ್ತಿ ಹಿಡಿಯುವ ಪರಂಪರೆಯನ್ನೇ ಹೊಂದಿವೆ. ಅಲ್ಲಿ ಖಂಡಿತವಾಗಿಯೂ ಪ್ರತಿಭಟನಾಕಾರರಿಗೆ ಜಯವು ದೊರೆಯುತ್ತಿತ್ತು. ಆದರೆ, ಗಲಭೆಕೋರರಿಗೆ ತರ್ಕಜಿಜ್ಞಾಸೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ಒಂದು ಸಮಾಜದಲ್ಲಿಯ status quoಅನ್ನು ಮುಂದುವರಿಸುವದು ಮಾತ್ರ ಬೇಕಾಗಿದೆ. ಆದುದರಿಂದಲೇ ಅವರು ಹಿಂಸಾತ್ಮಕ ದೊಂಬಿಗೆ ಮುಂದಾಗಿದ್ದಾರೆ. ಎರಡು ಪೂರ್ವನಿದರ್ಶನಗಳನ್ನು ಇಲ್ಲಿ ಗಮನಿಸಬಹುದು. ಒಂದು ಪೂರ್ವನಿದರ್ಶನವು ಸ್ವತಃ ಶ್ರೀಮತಿ ತಸ್ಲೀಮಾ ನಸರೀನ್ ಅವರಿಗೇ ಸಂಬಂಧಿಸಿದ್ದು. ಎರಡನೆಯದು ಕಲಾವಿದ ಶ್ರೀ ಎಮ್.ಎಫ್.ಹುಸೇನರಿಗೆ ಸಂಬಂಧಿಸಿದ್ದು.

ಕನ್ನಡ ನಾಡಿನಲ್ಲಿ ಸ್ತ್ರೀಸಂವೇದಿಯಾದ ಹಾಗು ಉದಾರ ಮನೋಭಾವದ ಅನೇಕ ಲೇಖಕಿಯರಿದ್ದಾರೆ. (ಉದಾಹರಣೆಗೆ ಶ್ರೀಮತಿ ಸಾರಾ ಅಬೂಬಕ್ಕರ.) ಶ್ರೀಮತಿ ತಸ್ಲೀಮಾ ನಸರೀನ್ ಸಹ ಇವರಂತಹ ಬಂಗ್ಲಾ ದೇಶೀಯ ಲೇಖಕಿ. ಇವರು ರಚಿಸಿದ ಕೆಲವೊಂದು ದಿಟ್ಟ ಬಂಗಾಲಿ ಕವನಗಳನ್ನು ಕನ್ನಡದಲ್ಲಿ ಅನುವಾದಿಸಿ, ಶ್ರೀ ಉದಯ ಇಟಗಿ ಅವರು ತಮ್ಮ ಬ್ಲಾ^ಗ್ ‘ಬಿಸಿಲ ಹನಿ’ಯಲ್ಲಿ ನೀಡಿದ್ದಾರೆ. 


ಬಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಧರ್ಮೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಶ್ರೀಮತಿ ತಸ್ಲೀಮಾ ನಸರೀನ್ ಅವರು ತಮ್ಮ ಕಿರು ಕಾದಂಬರಿ ‘ಲಜ್ಜಾ’ದಲ್ಲಿ ಚಿತ್ರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಮೂಲಭೂತವಾದಿ ಮುಲ್ಲಾಗಳು ಇವರ ಮೇಲೆ ಫತ್ವಾ ಹೊರಡಿಸಿದರು. ಶ್ರೀಮತಿ ತಸ್ಲೀಮಾ ನಸರೀನ್ ಭಾರತಕ್ಕೆ ಓಡಿ ಬಂದರು. ಆದರೆ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಕೇಂದ್ರ ಸರಕಾರವು  ಶ್ರೀಮತಿ ತಸ್ಲೀಮಾ ನಸರೀನ್ ಇವರಿಗೆ ಆಶ್ರಯ ಕೊಡಲು ನಿರಾಕರಿಸಿತು. ಭಾರತದಲ್ಲಿಯೂ ಸಹ ಇವರಿಗೆ ಮೂಲಭೂತವಾದಿಗಳ ಕಾಟ ತಪ್ಪಲಿಲ್ಲ. ಈ ದಿಟ್ಟ ಲೇಖಕಿ ಈಗ ಅಜ್ಞಾತವಾಸದಲ್ಲಿ ಇರಬೇಕಾಗಿದೆ (ಸಲ್ಮಾನ್ ರಶ್ದಿಯ ತರಹ).  ಬಂಗ್ಲಾ ದೇಶದಲ್ಲಿಯ ಅಸಹಾಯಕ ಹಿಂದೂಗಳ ಪರವಾಗಿ ದನಿ ಎತ್ತಿದ ಈ ದಿಟ್ಟ ಮಹಿಳೆಗೆ ಭಾರತದಲ್ಲಿಯ ಮುಸ್ಲಿಮರಿಂದ  ವಿರೋಧ ಬರಲು ಕಾರಣವೇನು? ಇದು ಭಾರತೀಯ ಮುಸ್ಲಿಮರ ಯಾವ ಮನೋಧರ್ಮವನ್ನು ತೋರಿಸುತ್ತದೆ?

ಇನ್ನು ಎರಡನೆಯ ಉದಾಹರಣೆಯನ್ನು ನೋಡಿರಿ. ಶ್ರೀ ಎಮ್.ಎಫ್.ಹುಸೇನರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರಿಂದ ಮನನೊಂದ ಅನೇಕ ಹಿಂದೂ ಸಂಘಟನೆಗಳು ನ್ಯಾಯಾಲಕ್ಕೆ ಹೋಗಿವೆ. ಅಲ್ಲಿ ಇವರ ವಿರುದ್ಧ ಧರ್ಮನಿಂದೆ ಹಾಗು ಅವಹೇಳನದ ಆರೋಪಗಳು ಸಾಬೀತು ಆಗುವ ಸಾಧ್ಯತೆಗಳಿವೆ. ಅರ್ಥಾತ್ ಶ್ರೀ ಹುಸೇನರು ದಂಡ ಮತ್ತು ಸೆರೆಮನೆಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಶ್ರೀ ಹುಸೇನರು ಮುಸ್ಲಿಮ್ ದೇಶವೊಂದಕ್ಕೆ ಪಲಾಯನಗೈದರು. ಸಾರ್ವಜನಿಕವಾಗಿ, ಜೀವಭಯದ ನೆಪವನ್ನು ತೋರಿಸಿದರು.  ಈ ದೇಶದೊಡನೆ ಭಾರತಕ್ಕೆ extradition ಒಪ್ಪಂದವಿಲ್ಲ. ಆದುದರಿಂದಲೇ ಭಾರತದಿಂದ ಓಡಿ ಹೋದ ಅಪರಾಧಿಗಳೆಲ್ಲ ಗಲ್ಫ್ ದೇಶಗಳಲ್ಲಿ ಆಶ್ರಯ ಪಡೆಯುವದು ! ಇದೀಗ ಶ್ರೀ ಹುಸೇನರಿಗೆ ಕತಾರದ ಪೌರತ್ವ ಸಹ ದೊರೆತಿದೆ !
ಈ ಎರಡೂ ಘಟನೆಗಳಲ್ಲಿ ಕಂಡು ಬರುವದೇನು?
ಮುಸ್ಲಿಮೇತರ ಸಮಾಜಗಳು ನ್ಯಾಯಾಲಯದಿಂದ ನ್ಯಾಯ ಪಡೆಯಲು ಪ್ರಯತ್ನಿಸುತ್ತವೆ. ಆದರೆ ಮುಸ್ಲಿಮ್ ಸಮಾಜವು ತನ್ನಲ್ಲಿಯ ಉದಾರವಾದಿಗಳನ್ನು ನಿರ್ದಯವಾಗಿ ಬೇಟೆಯಾಡುತ್ತದೆ !

(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?
ನಮ್ಮ ನಾಡಿನಲ್ಲಿಯ ಢೋಂಗಿ ವಿಚಾರವಂತರು ಸಾಮಾಜಿಕ ಹಾಗು ಸಾಂಸ್ಕೃತಿಕ ಸ್ವಾಸ್ಥ್ಯಕ್ಕಿಂತ ತಮ್ಮ ಮುಖವಾಡಗಳಿಗೆ, ಹಾಗು ಆ ಮೂಲಕ ಲಭಿಸುವ ಪ್ರಶಸ್ತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಭಿಪ್ರಾಯ ಸ್ವಾತಂತ್ರ್ಯದ ಬಗೆಗೆ ವೇದಿಕೆಗಳ ಮೇಲೆ ತಾಸುಗಟ್ಟಲೆ ಮಾತನಾಡುವ ನಮ್ಮ ಜ್ಞಾನಪೀಠಸ್ಥರು ಕೆಲವೊಂದು ಸಂದರ್ಭಗಳಲ್ಲಿ ತತ್ಕಾಲಕ್ಕೆ ತುಟಿ ಹೊಲಿದುಕೊಂಡು ಕೂತಿರುವ ಕಾರಣವನ್ನು ತಿಳಿಯಬಹುದೆ? ನನಗೆ ನೆನಪಿರುವ ಇಂತಹ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತೇನೆ:

 (೧) ಖ್ಯಾತ ಸಂಶೋಧಕರಾದ ಡಾ^. ಎಮ್. ಎಮ್.  ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ ‘ಮಾರ್ಗ’ದಲ್ಲಿ ವೀರಶೈವ ಶರಣ ಚೆನ್ನಬಸವಣ್ಣನ ಹುಟ್ಟಿನ ಬಗೆಗೆ ಕೆಲವು ಮಾತು ಹೇಳಿದ್ದರು. ಇದಕ್ಕೆ ತೀವ್ರವಾದ ಪ್ರತಿಭಟನೆ ನಡೆದು, ಕೊನೆಗೆ ಅವರು ಮಠಾಧೀಶರಲ್ಲಿ ಕ್ಷಮೆ ಕೇಳಿಕೊಳ್ಳಬೇಕಾಯಿತು.

(೨) ಬಂಜಗೆರೆ ಜಯಪ್ರಕಾಶರು ಬಸವಣ್ಣನ ಕುಲದ ಬಗೆಗೆ ಬರೆದ “ಆನು ದೇವಾ ಹೊರಗಿವನು” ಸಂಶೋಧನಾತ್ಮಕ ಕೃತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಸರಕಾರವು ಈ ಕೃತಿಯ ಮೇಲೆ ಪ್ರತಿಷೇಧ ಹೇರಿತು.

(೩) ಡ್ಯಾನ್ ಬ್ರೌನ್ ಅವರ The Da Vinci Code ಕಾದಂಬರಿಯನ್ನು ವಿರೋಧಿಸಿ ಬೆಂಗಳೂರಿನ ಕ್ರಿಶ್ಚಿಯನ್ ಸಮುದಾಯದವರು ಮೆರವಣಿಗೆ ಮಾಡಿದರು. (ಯುರೋಪ್ ಅಥವಾ ಅಮೇರಿಕಾದಲ್ಲಿ ಆಗದ ಪ್ರತಿಭಟನೆ ಭಾರತದಲ್ಲಾಯಿತು!)

(೪) ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರವೊಂದು ಡ್ಯಾನಿಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕಾಗಿ ಭಾರತದಲ್ಲಿ ಗಲಭೆಗಳಾದವು.

(೫) ಕೆಲವು ವರ್ಷಗಳ ಹಿಂದೆ ಮಲೆಯಾಳಿ ಕತೆಯ ಅನುವಾದವೊಂದು ಡೆಕ್ಕನ್ ಹೆರಾಲ್ಡ ಪತ್ರಿಕೆಯಲ್ಲಿ ಪ್ರಕಟವಾದಾಗ, ಅದರ ವಿರುದ್ಧ ಗಲಭೆ ನಡೆದಿತ್ತು. ( ಆ ಕತೆಯ ಪಾತ್ರವೊಂದರ ಹೆಸರು ಮಹಮ್ಮದ ಎಂದಿತ್ತು.)

(೬) ತಸ್ಲೀಮಾ ನಸರೀನ್ ಅವರು ಇತ್ತೀಚೆಗೆ ಕೊಲ್ಕತ್ತಾದಲ್ಲಿ ಹಾಗು ಹೈದರಾಬಾದಿನಲ್ಲಿ ಭಾಗವಹಿಸಿದ್ದ ವೇದಿಕೆಯಲ್ಲಿ ಗಲಾಟೆಯನ್ನು ನಡೆಸಲಾಯಿತು.

ಈ ಎಲ್ಲ ಪ್ರಸಂಗಗಳು ನಡೆದ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಅಭಿಪ್ರಾಯಸ್ವಾತಂತ್ರ್ಯದ ಪರವಾಗಿ ಒಂದು ಮಾತನ್ನೂ ಆಡಲಿಲ್ಲ. ಆ ಬಳಿಕ ವೇದಿಕೆಗಳ ಮೇಲೆ ಅಥವಾ ಪತ್ರಿಕೆಗಳ ಎದುರಿನಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಚಾಂಪಿಯನ್ನರ ತರಹ ಸೋಗು ಹಾಕಿದರು.

ವಿಚಾರವಾದಿಗಳ ಬಾಯಿ ಮುಚ್ಚಿಸುವ ಇಂತಹ ಘಟನೆಗಳು ಭಾರತದಲ್ಲಿ ಏಕೆ ನಡೆಯುತ್ತವೆ, ಯುರೋಪ್ ಅಥವಾ ಅಮೇರಿಕಾದಲ್ಲಿ ಏಕೆ ನಡೆಯುವದಿಲ್ಲ?
ಕಾರಣಗಳು ಹೀಗಿರಬಹುದು:
(೧) ಯುರೋಪ್ ಮತ್ತು ಅಮೇರಿಕಾದಲ್ಲಿ ಇರುವಂತಹ ಸಂಶೋಧಕ ಹಾಗು ವೈಚಾರಿಕ ಪ್ರವೃತ್ತಿ ಭಾರತದಲ್ಲಿ ಮಾಯವಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮುಖವಾಡದ ಬುದ್ಧಿಜೀವಿಗಳು.
(೨) ನಮ್ಮ ಸರಕಾರಕ್ಕೆ ಇಂತಹ ಹಿಂಸಾತ್ಮಕ ಗಲಭೆಗಳನ್ನು ದಮನಗೊಳಿಸುವ ಧೈರ್ಯವಿಲ್ಲ. (ಮತಬ್ಯಾಂಕಿನ ಕಾರಣದಿಂದಾಗಿ).

(೧) ಮೊದಲನೆಯ ಕಾರಣವನ್ನು ನೋಡಿರಿ. ಅನೇಕ ವರ್ಷಗಳ ಹಿಂದೆ ಭಾರತದಲ್ಲಿ The Illustrated Weekly of India ಎನ್ನುವ ಜನಪ್ರಿಯ ಆಂಗ್ಲ ವಾರಪತ್ರಿಕೆಯು ಹೊರಡುತ್ತಿತ್ತು. ಈ ವಾರಪತ್ರಿಕೆಯಲ್ಲಿ ಯೇಸುವಿನ ಬಗೆಗೆ ಯುರೋಪಿನಲ್ಲಿ ನಡೆದ ಸಂಶೋಧನೆಯನ್ನು ಉಲ್ಲೇಖಿಸಿ ಒಂದು ಲೇಖನ ಪ್ರಕಟವಾಗಿತ್ತು. ಯೇಸುವಿನ ತಂದೆ ಒಬ್ಬ ರೋಮನ್ ನಾವಿಕ ಹಾಗು ತಾಯಿ ಒಬ್ಬ ಯಹೂದಿ ವೇಶ್ಯೆ ಎಂದು ಈ ಲೇಖನದಲ್ಲಿ ಬರೆಯಲಾಗಿತ್ತು. ಆದರೆ ಈ ಸಂಶೋಧನಾತ್ಮಕ ಲೇಖನದ ಬಗೆಗೆ ಆ ಸಮಯದಲ್ಲಿ ಎಲ್ಲಿಯೂ ಯಾವುದೇ ತರಹದ ಗಲಭೆ ನಡೆಯಲಿಲ್ಲ.  ಧಾರ್ಮಿಕ ಭಾವನೆಗಳಿಗಿಂತ ಸತ್ಯವೇ ಹೆಚ್ಚಿನದು ಎನ್ನುವ ಗ್ರಹಿಕೆ ಆ ಕಾಲದ ನೈಜ ವಿಚಾರವಾದಿಗಳಿಗೆ ಇದ್ದುದೇ ಇದಕ್ಕೆ ಕಾರಣವಾಗಿರಬಹುದು. ಈಗಿನ ಸೋಗಿನ ವಿಚಾರವಾದಿಗಳಾದರೋ ತಮ್ಮ ತರ್ಕದ ದೊಂಬರಾಟವನ್ನು ತಮಗೆ ಅನುಕೂಲವಾಗುವಂತೆ ಕುಣಿಸುತ್ತಾರೆ. ನಮ್ಮ ಈರ್ವರು ಜ್ಞಾನಪೀಠಸ್ಥರಾದ ಅನಂತಮೂರ್ತಿ ಹಾಗು ಕಾರ್ನಾಡರ ಉದಾಹರಣೆಗಳನ್ನೇ ನೋಡಬಹುದು.

‘ಟೀಪು ಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಕಾರ್ನಾಡರು ಬರೆದಾಗ ಕೆಲವರು ಟೀಪು ಸುಲ್ತಾನನು ಮತಾಂಧನಿರಲಿಲ್ಲವೆ? ಎನ್ನುವ ಪ್ರಶ್ನೆಯನ್ನು ಕಾರ್ನಾಡರ ಎದುರಿಗೆ ಇಟ್ಟರು. ಟೀಪು ಸುಲ್ತಾನನ ಕಾಲದಲ್ಲಿ ಧರ್ಮನಿರಪೇಕ್ಷತೆಯ ಕಲ್ಪನೆಯೆ ಇರಲಿಲ್ಲವೆನ್ನುವ ಜಾಣತನದ ಉತ್ತರ ಕೊಟ್ಟು ಕಾರ್ನಾಡರು ಜಾರಿಕೊಂಡರು. ಟೀಪು ಸುಲ್ತಾನನಿಗೆ ದಕ್ಷಿಣ ಭಾರತವನ್ನೆಲ್ಲ ಇಸ್ಲಾಮೀಕರಿಸಬೇಕೆನ್ನುವ ಹೆಬ್ಬಯಕೆ ಇತ್ತು ಎನ್ನುವದು ಕಾರ್ನಾಡರಿಗೆ ಮತಾಂಧತೆಯಂತೆ ಕಂಡಿರಲಿಕ್ಕಿಲ್ಲ. ಟೀಪು ಸುಲ್ತಾನನಿಗಿಂತಲೂ ನೂರಾರು ವರ್ಷಗಳಷ್ಟು ಮೊದಲೇ ರಾಜ್ಯವಾಳಿದ ಹಿಂದೂ ರಾಜರಲ್ಲಿ ಯಾರೂ ಮುಸ್ಲಿಮ್ ಪ್ರಜೆಗಳನ್ನು ಭೇದಭಾವದಿಂದ ಕಂಡ ಉದಾಹರಣೆಗಳು ಇಲ್ಲ. ವಿಜಯನಗರದ ರಾಜನಾದ ಕೃಷ್ಣದೇವರಾಯನಂತೂ ತನ್ನ ಧರ್ಮನಿರಪೇಕ್ಷ ಆಡಳಿತೆಗೆ ಹೆಸರಾದವನು. ಕಾರ್ನಾಡರಂತಹ ಬುದ್ಧಿವಂತರಿಗೆ ಈ ಇತಿಹಾಸವೇ ಗೊತ್ತಿಲ್ಲ ಎಂದುಕೊಳ್ಳೋಣವೆ?
ಇನ್ನು ಅನಂತಮೂರ್ತಿಯವರ ಬಗೆಗೆ ಏನು ಹೇಳಲಾದೀತು? ಇವರು ಎಷ್ಟು ಎತ್ತರದಲ್ಲಿದ್ದಾರೆಂದರೆ ತಸ್ಲೀಮಾ ನಸರೀನಳು ಇವರ ಕಣ್ಣಿಗೇ ಬೀಳುವದಿಲ್ಲ!
ಒಂದು ವೇಳೆ ತಸ್ಲೀಮಾ ನಸರೀನ್ ರನ್ನು ಹಿಂದೂ ಸಂಘಟನೆಗಳು ವಿರೋಧಿಸಿದ್ದರೆ, ಅನಂತಮೂರ್ತಿ ಹಾಗು ಕಾರ್ನಾಡರಿಗೆ ಅಭಿಪ್ರಾಯ ಸ್ವಾತಂತ್ರ್ಯದ ನೆನಪು ತಕ್ಷಣವೇ ಆಗುತ್ತಿತ್ತೇನೊ?
ಈ ಸೋಗಿನ ಜ್ಞಾನಮೂರ್ತಿಗಳನ್ನು ಬಿಡೋಣ. ನಮ್ಮವರೇ ಆದ, ನಾವು ತುಂಬ ಪ್ರೀತಿಸುವ ಹಾಗು ಬೆಲೆ ಕೊಡುವ ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರು ಈ ವಿಷಯಕ್ಕೆ ಏನೆನ್ನುತ್ತಾರೆ?

ನಮ್ಮ ಜನಪ್ರಿಯ online ಪತ್ರಿಕೆ ‘ಕೆಂಡಸಂಪಿಗೆ’ಯಲ್ಲಿ ಅದರ ಸಂಪಾದಕ ಅಬ್ದುಲ್ ರಶೀದರು ತಸ್ಲೀಮಾ ಇಂತಹ ಲೇಖನ ಬರೆದದ್ದರಿಂದಲೇ ಅಮಾಯಕರ ಜೀವಹಾನಿಯಾಯಿತು ಎನ್ನುವ ತರ್ಕವನ್ನು ಮುಂದಿಟ್ಟಿದ್ದಾರೆ. (ಇಲ್ಲಿ ನೋಡಿ.) 
ತಸ್ಲೀಮಾ ಅವರು ಧರ್ಮನಿಂದೆಯನ್ನು ಅಥವಾ ಅವಹೇಳನವನ್ನು ಮಾಡಿದ್ದರೆ, ಆ ಅಂಶಗಳನ್ನು ಸ್ಪಷ್ಟೀಕರಿಸಬೇಕು. ಆದರೆ ಅವರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವದು ಸರಿಯಲ್ಲ. ಎರಡನೆಯದಾಗಿ, ಅವಳಿಂದಲೇ ಜೀವಹಾನಿಯಾಯಿತು ಎನ್ನುವದು, ಗಲಭೆಕೋರರ The Right to Riotಅನ್ನು ಎತ್ತಿ ಹಿಡಿದಂತಾಗುವದಿಲ್ಲವೆ? ಇದು ಸರಿಯೆ? ದೊಂಬಿಕೋರರು ಕಾಯದೆಯನ್ನು ಕೈಗೆತ್ತಿಕೊಂಡರೆ, ವಿಚಾರವಾದಿಗಳು ಅದನ್ನೇ ಸರಿ ಎನ್ನಬೇಕೆ?
ಕೆಂಡಸಂಪಿಗೆಯಲ್ಲಿಯೇ ಮತ್ತೊಂದು ಲೇಖನ ಬಂದಿದೆ. ಅದನ್ನು ಬರೆದ ಕನ್ನಡದ ಖ್ಯಾತ ಲೇಖಕ ಕಟ್ಪಾಡಿಯವರಂತೂ ತಸ್ಲೀಮಾ ಬರೆದ ಲೇಖನ ಕೆಟ್ಟ ಲೇಖನ ಎಂದಿದ್ದಾರೆಯೇ ಹೊರತು ಅದರಲ್ಲಿರುವ ಕೆಟ್ಟತನವು ಏನು ಎನ್ನುವದನ್ನು ತಿಳಿಸಿಲ್ಲ. 

ಅನಂತಮೂರ್ತಿ, ಗಿರೀಶ ಕಾರ್ನಾಡ, ಅಬ್ದುಲ್ ರಶೀದ ಮತ್ತು ಫಕೀರ ಮಹಮ್ಮದ ಕಟಪಾಡಿ ಇವರೆಲ್ಲರೂ  ನಮ್ಮ ಸಾರ್ವಜನಿಕ ಪ್ರಮಾಣವನ್ನು ರೂಪಿಸಬಲ್ಲ ಸಾಮರ್ಥ್ಯವಿರುವವರು.  ಸಾಂಸ್ಕೃತಿಕ ಆದರ್ಶಗಳ ರೂವಾರಿಗಳಾಗಬಲ್ಲವರು. ಇಂತಹ ವಿಚಾರವಾದಿಗಳೇ ಅಭಿಪ್ರಾಯ ಸ್ವಾತಂತ್ರ್ಯವನ್ನು ಹಾಗು ಸ್ತ್ರೀಸ್ವಾತಂತ್ರ್ಯವನ್ನು ಧಿಕ್ಕರಿಸುವದು ಸರಿಯೆ? ಇದರಿಂದ ನಮ್ಮ ಸಮಾಜದಲ್ಲಿ ಸುಧಾರಣೆಯಾಗಲು ಶಕ್ಯವಿದೆಯೆ? (ನಮ್ಮ ಸಮಾಜವೆಂದು ಹೇಳುವಾಗ, ನಾನು ಹಿಂದೂ ಹಾಗು ಮುಸ್ಲಿಮ್ ಸಮಾಜಗಳಲ್ಲಿ ಭೇದವೆಣಿಸುವದಿಲ್ಲ.)

ನಮ್ಮ ಎಲ್ಲಾ ರಾಜಕಾರಣಿಗಳೂ ಸ್ವಾರ್ಥಿಗಳೇ ಆಗಿದ್ದಾರೆ, ಸಮಯಸಾಧಕರೇ ಆಗಿದ್ದಾರೆ ಎಂದುಕೊಳ್ಳೋಣ. ಆದುದರಿಂದಲೇ ನಮ್ಮ ಸಾರ್ವಜನಿಕ ಹಾಗು ಸಾಂಸ್ಕೃತಿಕ ಆದರ್ಶವನ್ನು ಕಾಯ್ದುಕೊಳ್ಳುವದು ಈಗ ನಮ್ಮ ವೈಚಾರಿಕರ ಹೊಣೆಗಾರಿಕೆಯಾಗಿದೆ.

Saturday, February 27, 2010

“ಎಡಿ ಒಯ್ಯನು ಬಾರೆ ದೇವರಿಗೆ”----ಶರೀಫ ಸಾಹೇಬರು

ಇಂದು ಈದ ಮಿಲಾದ ಹಬ್ಬ. ಇಸ್ಲಾಮ ಧರ್ಮದ ಪ್ರವರ್ತಕರಾದ ಮೊಹಮ್ಮದ ಪೈಗಂಬರರ ಹುಟ್ಟುದಿನ.
ಮುಸ್ಲಿಮ್ ಶಿವಯೋಗಿ ಎಂದು ಕರೆಯಬಹುದಾದ ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯವನ್ನು ಅರಿಯಬೇಕಾದರೆ ಅವರು ರಚಿಸಿದ ಈ ಹಾಡನ್ನು ನೋಡಬಹುದು:

ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ  ||೨||

ಶರೀಫರು ಅಲ್ಲಮ ಎಂದು ಹೇಳುವಾಗ ಶಿವಯೋಗಿ ಅಲ್ಲಮನನ್ನು ಸೂಚಿಸುವಂತೆಯೇ, ‘ಅಲ್ಲಾ’ ನನ್ನೂ ಸೂಚಿಸುತ್ತಾರೆ. ಆದಿ ಅಲ್ಲಮ ಗುರು ಎಂದರೆ ಇಡೀ ವಿಶ್ವಕ್ಕೆ ಗುರುವಾದ ದೇವರು. ಅಲ್ಲಮ ಪದವನ್ನು ಶೂನ್ಯಾರ್ಥದಲ್ಲಿ ಗ್ರಹಿಸಿದಾಗ ಈ ಪದವು ನಿರ್ಗುಣ ಬ್ರಹ್ಮನನ್ನೂ ಸೂಚಿಸುತ್ತದೆ.

Friday, February 12, 2010

ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ

‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಜನೆವರಿ ೨೧ರ ಸಂಚಿಕೆಯಲ್ಲಿ, ‘ನೂರೊಂದು ಮಾತು’ ಎನ್ನುವ ತಮ್ಮ ಅಂಕಣಬರಹದಲ್ಲಿ ಒಂದು ಲೇಖನ ಬರೆದಿದ್ದಾರೆ. ‘ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ’ ಎನ್ನುವ ಈ ಲೇಖನವನ್ನು ಇಲ್ಲಿ ಪ್ರಸ್ತಾಪಿಸಲಿಕ್ಕೆ ನನಗೆ ಎರಡು ಕಾರಣಗಳಿವೆ:

(೧) ಶ್ರೀ ಭಟ್ಟರಂತಹ ಮೇಧಾವಿ, ತರ್ಕಚತುರ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿಯೊಬ್ಬರು ‘ಪ್ರಭಾವಿ’ ವ್ಯಕ್ತಿಗಳ ಸಮ್ಮುಖದಲ್ಲಿರುವಾಗ ಎಷ್ಟು ವೇಗವಾಗಿ ತಮ್ಮ ಮೇಧಾವಿತನ, ತರ್ಕಚತುರತೆ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿತ್ವವನ್ನು ಕಳೆದುಕೊಂಡು ಬಿಡುತ್ತಾರಲ್ಲ! Glamour ಎದುರಿಗೆ, ಸಮ್ಮೋಹಿನಿಗೆ ಒಳಗಾದವರಂತೆ ಮರುಳಾಗಿ ಬಿಡುತ್ತಾರಲ್ಲ! ಇದು ವಿಸ್ಮಯದ ಮಾತು.

(೨) ಶ್ರೀ ಭಟ್ಟರು ಆ ‘ಪ್ರಭಾವಿ’ ವ್ಯಕ್ತಿಯ ತರ್ಕದಲ್ಲಿದ್ದ ಮಿಥ್ಯೆ(fallacy)ಯನ್ನು ಗುರುತಿಸದೆ ಹೋದರಲ್ಲ ಎನ್ನುವ ವ್ಯಥೆ. ಈ ಮಿಥ್ಯಾತರ್ಕವನ್ನು ತಮ್ಮ ಪತ್ರಿಕೆಯ ಮೂಲಕ ಇನ್ನಷ್ಟು ಪ್ರಚುರಪಡಿಸುತಿದ್ದಾರಲ್ಲ ಎನ್ನುವ ದುಃಖ.

ಎಲ್ಲಕ್ಕೂ ಮೊದಲಿಗೆ ಅವರ ಲೇಖನದಲ್ಲಿ ನಮಗೆ ಸಂಬಂಧಪಡುವಂತಹ ಭಾಗವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ದಯವಿಟ್ಟು ಗಮನಿಸಿ:

ಈ ಲೇಖನಾಂಶವನ್ನು ಓದಿದ ಬಳಿಕ ನಮಗೆ ಅನಿಸುವದೇನು?
ವಿಶ್ವೇಶ್ವರ ಭಟ್ಟರು ಒಬ್ಬ ಅತಿ ಗಣ್ಯ ವ್ಯಕ್ತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಭಟ್ಟರು ವರ್ಣಿಸುವ ಮೇರೆಗೆ ಆ ವ್ಯಕ್ತಿ ಕೋಟ್ಯಾಧಿಪತಿಗಳಿಗೆ ಪಾಠ ಹೇಳುವ ಅಧ್ಯಾಪಕ. ಅಂತಹ ವ್ಯಕ್ತಿ ಇನ್ನೋರ್ವ ಗಣ್ಯ ವ್ಯಕ್ತಿಯೊಡನೆ ಅಂದರೆ ಆ^ಸ್ಟ್ರೇಲಿಯನ್ ಹಡಗಿನ ದಳಪತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆ ದಳಪತಿಯ ಅಭಿಪ್ರಾಯದ ಪ್ರಕಾರ ಒಂದು ದೇಶದ ಸಂಪತ್ತೆಂದರೆ ಅಲ್ಲಿಯ ಜನಸಂಖ್ಯೆಯೇ ಹೊರತು ಅಲ್ಲಿಯ ಧನಸಂಪತ್ತಲ್ಲ. ಜನಸಂಖ್ಯೆಯು ನಮ್ಮ ದೇಶದ ಜಟಿಲ ಸಮಸ್ಯೆಯೆಂದು ಭಾವಿಸಿದ ಆ ಅಧ್ಯಾಪಕರು ಹಡಗಿನ ದಳಪತಿಯ ಲೋಕಾಭಿರಾಮ ಹರಟೆಯಿಂದ ಪ್ರಭಾವಿತರಾದರು. ‘ಹೌದಲ್ಲ! ನಾವು ಜನಸಂಖ್ಯಾಸ್ಫೋಟವನ್ನು ಸಮಸ್ಯೆಯೆಂದು ಏಕೆ ಭಾವಿಸಬೇಕು? ಇದೇ ನಮ್ಮ ಬಲವೂ ಆಗಬಹುದು’ ಎಂದು ಈ ಅಧ್ಯಾಪಕರಿಗೆ ಅನಿಸಿತು. ತಮಗೆ ಅನಿಸಿದ್ದನ್ನು ಈ ದೊಡ್ಡ ಅಧ್ಯಾಪಕರು ಭಟ್ಟರಿಗೆ ಹೇಳಿದರು. ಸರಿ, ಭಟ್ಟರಿಗೂ ಹಾಗೆಯೇ ಅನ್ನಿಸತೊಡಗಿತು.

ಭಟ್ಟರೆ, ನಿಮ್ಮ ಮೇಧಾವಿತನ, ತೀಕ್ಷ್ಣ ತರ್ಕಚಾತುರ್ಯ ಹಾಗು ವಿಸ್ತಾರ ಅಧ್ಯಯನದ ಫಲವಾದ ಪಾಂಡಿತ್ಯ ಇವೆಲ್ಲ ಎಲ್ಲಿ ಮಾಯವಾದವು? ನಿಮ್ಮೆದುರಿಗಿನ ವ್ಯಕ್ತಿ ಎಷ್ಟೇ ‘ಪ್ರಭಾವಶಾಲಿ’ಯಾಗಿರಲಿ, ನೀವು ಇಷ್ಟು ವೇಗವಾಗಿ ಅವರ ಸಮ್ಮೋಹಿನಿಗೆ ಒಳಗಾಗಬಹುದೆ? ಅವರ ಮಾತಿಗೆ ಮರುಳಾಗಬಹುದೆ?

Of course, ಒಪ್ಪಿಕೊಳ್ಳುತ್ತೇನೆ—Consistancy is the virtue of an ass.
ಒಬ್ಬ ವ್ಯಕ್ತಿಯ ಅಭಿಪ್ರಾಯವು ಯಾವಾಗಲೂ ಏಕಪ್ರಕಾರವಾಗಿರಬೇಕಿಲ್ಲ. ಆದರೆ, ಅಭಿಪ್ರಾಯದ ಬದಲಾವಣೆಯು ತರ್ಕಬದ್ಧವಾಗಿರಬೇಕಲ್ಲವೆ? ಆ ಪ್ರಭಾವಿ ಅಧ್ಯಾಪಕರು ‘ಜನಸಂಖ್ಯೆಯೇ ಒಂದು ದೇಶದ ಸಂಪತ್ತು’ ಎಂದು ಹೇಳಿದಾಗ, ಅವರ ಕಣ್ಣಿಗೆ ಬಿದ್ದಿರಲಾರದ ಒಂದು ಸತ್ಯ ನಿಮ್ಮ ಕಣ್ಣಿಗೂ ಬೀಳಲಿಲ್ಲವೆ? ಅದೇನೆಂದರೆ, ನಮ್ಮ ದೇಶದ ಜನಸಂಖ್ಯೆಯ ಬಹುಭಾಗ ಎಂತಹುದು? ಅರ್ಧಕ್ಕೂ ಹೆಚ್ಚು ಭಾರತೀಯರು ನಿರಕ್ಷರಿಗಳು. ಸಾಕ್ಷರ ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚಿನವರ ಶಿಕ್ಷಣ ನಿರುಪಯುಕ್ತ ಶಿಕ್ಷಣ. ಮುಕ್ಕಾಲು ಭಾಗ ಭಾರತೀಯರು ಅರೆಕಾಲೀನ ಉದ್ಯೋಗಿಗಳು. ಇಲ್ಲಿ ಉದ್ಯೋಗ ಸಿಗಲಾರದ ಕಾರಣಕ್ಕಾಗಿ, ಕೆಳದರ್ಜೆಯ ಉದ್ಯೋಗ ಮಾಡುವ ಭಾರತೀಯರೂ ಸಹ ದುಬಾಯಿ ಮೊದಲಾದ ಅರಬ ರಾಷ್ಟ್ರಗಳಿಗೆ ಉದ್ಯೋಗವನ್ನರಸಿ ಹೋಗುತ್ತಿದ್ದಾರೆ. ಭಾರತೀಯ ಹೆಂಗಸರೂ ಸಹ ಆ ದೇಶಗಳಲ್ಲಿ ಮನೆಗೆಲಸಕ್ಕೆ ಹೋಗಿ, ಅಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಮೂರು ವರ್ಷದ ಹೆಣ್ಣು ಶಿಶುಗಳೂ ಸಹ ಭಾರತದಲ್ಲಿ ವೇಶ್ಯಾವಾಟಿಕೆಗೆ ಬಿಕರಿಯಾಗುತ್ತಿವೆ. ಶಿಕ್ಷಣ ಪಡೆಯಲು ಇಲ್ಲಿಂದ ಹೊರದೇಶಗಳಿಗೆ ತೆರಳಿದ ನಮ್ಮ ವಿದ್ಯಾರ್ಥಿಗಳು, ಅಲ್ಲಿ ಏಟು ತಿನ್ನುತ್ತಿದ್ದಾರೆ.

ಭಟ್ಟರೆ, ಇದು ನಮ್ಮ ದೇಶದ ಜನಸಂಪತ್ತು ; ಬೇಕಾದರೆ ಇದನ್ನು ದನಸಂಪತ್ತು ಎಂದು ಕರೆಯಿರಿ. ಅದೂ ತಪ್ಪೇ!
ಭಟ್ಟರೆ, ನಮ್ಮವರಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ ಹಾಗು ಒಳ್ಳೆಯ ಬದುಕನ್ನು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಜನಸಂಖ್ಯೆಯು ಈ ಮಿತಿಯನ್ನು ಮೀರಿ ಬೆಳೆದಿದೆ.

ದೊಡ್ಡ ಹಡಗವೊಂದು ಸಮುದ್ರ ಮಧ್ಯದಲ್ಲಿ ತೇಲುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಒಂದು ಸಾವಿರ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವಿರುವ ಹಡಗು ಇದು ಎಂದು ಇಟ್ಟುಕೊಳ್ಳಿ. ಈ ಹಡಗಿನಲ್ಲಿ ಎರಡು ಸಾವಿರ ಪ್ರಯಾಣಿಕರನ್ನು ತುಂಬಿದರೆ ಏನಾಗುತ್ತದೆ? ಹಡಗು ಮುಳುಗಿ ಹೋಗುತ್ತದೆ. ಇದು ಸಾಮಾನ್ಯ ಜ್ಞಾನದ ಮಾತು.

ಎರಡನೆಯದಾಗಿ, ಭಟ್ಟರು ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಅದು ಸಮಸ್ಯೆಯೇ ಅಲ್ಲ ಎನ್ನುವ ಮಿಥ್ಯಾತರ್ಕಕ್ಕೆ ಬಲಿಯಾಗಿದ್ದಾರೆ. ಇಂತಹ ಮಿಥ್ಯಾತರ್ಕದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.

(೧) ಪೋಲೀಸ ಸ್ಟೇಶನ್ನಿಗೆ ಹೋದ ಓರ್ವ ವ್ಯಕ್ತಿ, ಪೋಲೀಸ ಅಧಿಕಾರಿಗೆ: “ಸಾಹೇಬರ, ನನ್ನ ಹೇಣತಿ ಮನಿ ಬಿಟ್ಟು ಓಡಿ ಹೋಗ್ಯಾಳರೀ!”
ಪೋಲೀಸ ಅಧಿಕಾರಿ: “ಛಲೋ ಆತಲ್ಲಪಾ! ಆಕೀ ಹೊಟ್ಟಿಗೆ ಹಾಕೋ ತ್ರಾಸು ತಪ್ಪಿತು ನಿನಗ.
ಅರಾಮ ಇರು, ಹೋಗು!”

(೨) ಅಪ್ಪ ಮಗನಿಗೆ: “ಮಗನs, ಈ ಸಲಾನೂ SSLC ಒಳಗ ಢುಮ್ಕಿ ಹೊಡದೇನು?”
ಮಗ: “ ಅಪ್ಪಾ, ನಿಮಗ ಈ ಸಲಾ tution fees ಉಳಿತಾಯ ಮಾಡೇನಿ ಅಂತ ಯಾಕ ತಿಳ್ಕೋಬಾರ್ದು ನೀವು?”

ಇಂತಹ ಮಿಥ್ಯಾತರ್ಕದಲ್ಲಿ ನಮ್ಮ ರಾಜಕಾರಣಿಗಳು ಬಹು ಚತುರರು. ತಮ್ಮ ತಂದೆ ಇನ್ನೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ, ಶ್ರೀಮತಿ ಇಂದಿರಾ ಗಾಂಧಿಯವರು ಒಮ್ಮೆ ಓಡಿಸಾ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರು. ಓಡಿಸಾದಲ್ಲಿ ಆಗ ಭೀಕರ ಬರಗಾಲವಿತ್ತು. ಅಕ್ಕಿಯಂತೂ ಕಾಳಸಂತೆಯಲ್ಲಿ ಮಾತ್ರ ಲಭ್ಯವಿತ್ತು. ಆಗ ಶ್ರೀಮತಿ ಇಂದಿರಾ ಗಾಂಧಿಯವರು ಜನತೆಗೆ ಕೊಟ್ಟ ಸಲಹೆ: “ ಅಕ್ಕಿ ಸಿಗದೇ ಹೋದರೆ, ಬಟಾಟೆ ತಿನ್ನಿರಿ!”
ಇತ್ತೀಚೆಗೆ, ಕೇಂದ್ರಸಚಿವರಾದ ನಮ್ಮ ಕನ್ನಡಿಗರೊಬ್ಬರು , ‘ವಾರದಲ್ಲಿ ಒಂದು ದಿನ ಉಪವಾಸ ಮಾಡಿರಿ’ ಎಂದು ಹೇಳಲಿಲ್ಲವೆ? ವಾಸ್ತವ ಸ್ಥಿತಿ ಏನಿದೆಯೆಂದರೆ, ಕರ್ನಾಟಕದಲ್ಲಿ ಅನೇಕ ನೆರೆ ಸಂತ್ರಸ್ತರು ವಾರದಲ್ಲಿ ಒಂದೇ ದಿನ ಊಟ ಮಾಡುತ್ತಿದ್ದಾರೆ!

ಇದು ನಮ್ಮ ದೇಶದ ಜನಸಂಪತ್ತು. ಇದು ಇಮ್ಮಡಿ, ಮುಮ್ಮಡಿಯಾಗಲಿ ಎಂದು ವಿಶ್ವೇಶ್ವರ ಭಟ್ಟರು ಬಯಸುತ್ತಿದ್ದಾರೆಯೆ? ಭಟ್ಟರೆ, ಹಾಗಿದ್ದರೆ ಒಂದು ಕಿವಿಮಾತನ್ನು ನಿಮಗೆ ಹೇಳಬಯಸುತ್ತೇನೆ:
‘ದೇಶದ ಪ್ರಗತಿಯನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕು!

Wednesday, January 20, 2010

ಪದಶೋಧ

ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು  ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.

ಆಂಗ್ಲ ಪದಗಳನ್ನು  ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?)  ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?  ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.

ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ  ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:

‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!

ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ.  ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’.   ‘ಪುದು’ ಇದರ ಅರ್ಥ ಹೊಸದಾದದ್ದು. 
‘ಪುದು’=new ;`ಗಿ’=habitat. 
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ. 
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.

ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು.  ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.

ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ  ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.

ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು.  ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ. 

ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್  (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ  ಇದೇ ಪದವು ಬಾಗಿಲು  ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.

ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!