Wednesday, June 9, 2010

ಕನ್ನಡ ಸಮಾಚಾರ ಪತ್ರಿಕೆಗಳು------ ಒಂದು ಅವಲೋಕನ

ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳು ಜನ್ಮ ತಳೆದದ್ದು ರಾಜಕೀಯ ಹಾಗು ಸಾಮಾಜಿಕ ಜಾಗೃತಿಯ ಉದ್ದೇಶದಿಂದ. ೧೯೩೩ನೆಯ ಇಸವಿಯಲ್ಲಿ ಬೆಳಗಾವಿಯಲ್ಲಿ ಪ್ರಾರಂಭವಾದ ಸಂಯುಕ್ತ ಕರ್ನಾಟಕ ಪತ್ರಿಕೆಯು, ಹೆಸರೇ ಸೂಚಿಸುವಂತೆ, ಕರ್ನಾಟಕ ಏಕೀಕರಣಕ್ಕಾಗಿ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಾಗಿ ಹಾಗೂ ಸಮಾಜ ಸುಧಾರಣೆಗಾಗಿ ದುಡಿದಿದೆ. ತಾಯಿನಾಡು ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಕಾರ್ಯವನ್ನು ಮೈಸೂರು ಪ್ರಾಂತದಲ್ಲಿ ಮಾಡಿದವು. ಈ ಪತ್ರಿಕೆಗಳು ನಾಡು ಕಟ್ಟಲು ದುಡಿದಂತೆ, ನುಡಿಯನ್ನು ಬೆಳೆಸಲೂ ದುಡಿದವು. ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಪತ್ರಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವೊಂದು ಬದಲಾವಣೆಗಳು ಹೆಮ್ಮೆ ಪಡುವಂತಹವು ; ಕೆಲವೊಂದು ದುಃಖ ಪಡುವಂತಹವು.

ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನು ಪಡೆದ ಐದು ಕನ್ನಡ ಸಮಾಚಾರ ಪತ್ರಿಕೆಗಳ ಪ್ರಸಾರ ಸಂಖ್ಯೆ  ಅಂದಾಜು ಹೀಗಿದೆ :
(೧) ವಿಜಯ ಕರ್ನಾಟಕ:……೫,೪೧,೪೬೬
(೨) ಪ್ರಜಾವಾಣಿ :……… .೪,೭೩,೮೧೮
(೩) ಉದಯವಾಣಿ :……. ೧,೮೫,೨೪೭
(೪) ಕನ್ನಡ ಪ್ರಭಾ :…….. ೧,೭೬,೬೦೧ 
(೫) ಸಂಯುಕ್ತ ಕರ್ನಾಟಕ :.. ೧,೩೬,೯೩೬

ಈ ಪತ್ರಿಕೆಗಳು ಕನ್ನಡ ನಾಡಿಗೆ, ಕನ್ನಡ ನುಡಿಗೆ ಹಾಗು ಕನ್ನಡ ಓದುಗರಿಗೆ ಸಮರ್ಪಕವಾದ ಹಾಗು ತಾವು ವಿಧಿಸುತ್ತಿರುವ ಶುಲ್ಕಕ್ಕೆ ಸಮುಚಿತವಾದ ಸೇವೆಯನ್ನು ಸಲ್ಲಿಸುತ್ತಿವೆಯೆ? ಈ ವಿಷಯವನ್ನು ಗ್ರಹಿಸಲು ಕೆಳಗಿನ ಅಂಶಗಳನ್ನು  ಪರಾಮರ್ಶಿಸುವದು ಅವಶ್ಯವಾಗಿದೆ :

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿವೆಯೆ?
(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
(೩) ಸಮಾಚಾರದ ಹೊರತಾಗಿ, ರಾಜಕೀಯ, ಸಾಂಸ್ಕೃತಿಕ ಹಾಗು ವೈಜ್ಞಾನಿಕ ಮಾಹಿತಿಯನ್ನು ಓದುಗರಿಗೆ ಪೂರೈಸುತ್ತಿವೆಯೆ?
(ಉದಯವಾಣಿ ಪತ್ರಿಕೆಯ ಹೊರತಾಗಿ, ಉಳಿದ ನಾಲ್ಕು ಪತ್ರಿಕೆಗಳ ಅವಲೋಕನ ಇಲ್ಲಿದೆ.)

(೧) ಕನ್ನಡ ಪತ್ರಿಕೆಗಳು ಕನ್ನಡ ನುಡಿಯನ್ನು ಕಟ್ಟುವ, ಬೆಳೆಸುವ ಕಾರ್ಯವನ್ನು ಮಾಡುತ್ತಿವೆಯೆ?
ಕನ್ನಡ ಪತ್ರಿಕೆಗಳ ಪ್ರಸಾರಸಂಖ್ಯೆಯಲ್ಲಿ ಮೊದಲ ಸ್ಥಾನ ಪಡೆದ ‘ವಿಜಯ ಕರ್ನಾಟಕ’ಕ್ಕೆ ಕನ್ನಡ ಪತ್ರಿಕೆ ಎಂದು ಕರೆಯಬಹುದೇ ಎನ್ನುವ ಸಂದೇಹ ನನಗಿದೆ. ‘ಕನ್ನಡಾಂಗ್ಲೋ’ ಪತ್ರಿಕೆ ಎನ್ನುವ ಅಭಿಧಾನವೇ ಇದಕ್ಕೆ ಹೆಚ್ಚು ಸರಿಯಾದೀತು. ಇನ್ನು ಕೆಲವು ದಿನಗಳಲ್ಲಿ ಇದು ‘ಕಂಗ್ಲಿಶ್’ ಪತ್ರಿಕೆಯಾಗಿ ಬದಲಾದರೂ ಆಶ್ಚರ್ಯವಿಲ್ಲ. ಮೆಕಾಲೆಯ ನಂತರ ಭಾರತದಲ್ಲಿ ಅಂದರೆ ಕರ್ನಾಟಕದಲ್ಲಿ ಇಂಗ್ಲೀಶಿನ ಪ್ರಸಾರಕ್ಕೆ ‘ವಿಜಯ ಕರ್ನಾಟಕ’ ನೀಡುತ್ತಿರುವ ಕೊಡುಗೆ ಅತಿ ಹೆಚ್ಚಿನದು. ‘ಇದರಲ್ಲಿ ಏನು ತಪ್ಪಿದೆ?’ ಎಂದು ಕೆಲವರು ಕೇಳಬಹುದು. ಜನರು ತಮ್ಮ ಆಡುಮಾತಿನಲ್ಲಿ ಬಳಸುವ ಭಾಷೆಯನ್ನೇ ಪತ್ರಿಕೆಗಳಲ್ಲಿ  ಬಳಸಿದರೆ, ಆ ಪತ್ರಿಕೆ ಹೆಚ್ಚೆಚ್ಚು ಜನಪ್ರಿಯವಾಗುವದಲ್ಲವೆ? ಇದೇ ಕುತರ್ಕವನ್ನು ನಮ್ಮ ಸಿನೆಮಾ ನಿರ್ಮಾಪಕರೂ ಮುಂದಿಡುತ್ತಿದ್ದಾರೆ . “ಜನರು ಬಯಸುವದು ಮಚ್ಚು, ಲಾಂಗು ಹಾಗು ಬತ್ತಲೆ ಕುಣಿತ, ಹಾಗಾಗಿ ನಾವು ಅಂತಹ ಸಿನೆಮಾಗಳನ್ನೇ ನಿರ್ಮಿಸುತ್ತೇವೆ”, ಎನ್ನುತ್ತಾರವರು. ಆದರೆ ಇದೊಂದು ವಿಷಚಕ್ರವೆನ್ನುವದು ಎಲ್ಲರಿಗೂ ತಿಳಿದ ಮಾತೇ. ಅರಿಯದ ಮಗುವಿಗೆ ದಿನವೂ ಸೆರೆ ಕುಡಿಸುತ್ತ ಹೋದರೆ, ಆ ಮಗು ಅದನ್ನೇ ಬಯಸತೊಡುಗುತ್ತದೆ.

ವಿಜಯ ಕರ್ನಾಟಕದ ದಿ: ೧-೬-೨೦೧೦ರ ಹುಬ್ಬಳ್ಳಿ ಆವೃತ್ತಿಯ ಸಂಚಿಕೆಯ ೧೦ನೆಯ ಪುಟದಲ್ಲಿಯ ವರದಿಯ ತಲೆಬರಹವನ್ನು ನೋಡಿರಿ. ಈ ಸುದ್ದಿಯ ಸಂಪಾದಕರು ಕನ್ನಡ ಪತ್ರಿಕೆಯ ಸಂಪಾದಕರೆಂದು ಅನಿಸುವದೆ?‘ಎನ್‌ಡಬ್ಲುಕೆ‍ಆರ್‌ಟಿಸಿ‘ ಎಂದು ಕಷ್ಟಪಟ್ಟು ದೀರ್ಘವಾಗಿ ಬರೆಯುವ ಬದಲು ‘ವಾಕರಸಾಸಂಸ್ಥೆ’ ಎಂದು ಮುದ್ದಾಗಿ ಬರೆಯಲು ಬರುತ್ತಿರಲಿಲ್ಲವೆ? ಓದುಗರಿಗೆ ಯಾವುದು ತಟ್ಟನೆ ಅರ್ಥವಾಗುತ್ತದೆ? ಆಂಗ್ಲವ್ಯಾಮೋಹಿ ವಿಜಯ ಕರ್ನಾಟಕವನ್ನು `ನವ ಮೆಕಾಲೆ’ ಎಂದು ಬಣ್ಣಿಸಿದರೆ ತಪ್ಪೇನಿದೆ? ಶಾಲೆಯ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ನಿಯತವಾಗಿ ಓದುತ್ತಿದ್ದರೆ, ಇಂಗ್ಲಿಶ್ ಪದಗಳನ್ನೇ ಕನ್ನಡ ಪದಗಳೆಂದು  ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆ.

ಓದುಗರನ್ನು ಚಿತ್ರವಿಚಿತ್ರ ಭಾಷೆಯ ಮೂಲಕ ಮರಳುಗೊಳಿಸಬಹುದು ಎನ್ನುವ ಭಾವನೆಯಿಂದ ವಿಜಯ ಕರ್ನಾಟಕವು ಈಗಾಗಲೇ ಬಳಕೆಯಲ್ಲಿರುವಂತಹ ಕನ್ನಡ ಪದಗಳ ಬದಲಾಗಿ, ಇಂಗ್ಲಿಶ್ ಪದಗಳನ್ನು ಬಳಸುತ್ತಿದೆ. ಉದಾಹರಣೆಗೆ, ಸರ್ವೋಚ್ಚ ನ್ಯಾಯಾಲಯದ ಆದೇಶ  ಎನ್ನುವ ಬದಲಾಗಿ ಸುಪ್ರೀಂ ಆದೇಶ ಎಂದು ಬರೆದು ಬಿಡುತ್ತದೆ. ಸ್ಥಳಮಿತಿಯೇ ಇದರ ಕಾರಣವೆನ್ನುವ  ನೆವ ಬೇರೆ. ಇದು ಪೊಳ್ಳು ನೆವ ಎನ್ನುವದು ಮುಂದಿನ ಪರಾಮರ್ಶೆಯಲ್ಲಿ ಬಯಲಾಗುತ್ತದೆ..

ಇಂದು ಕನಿಷ್ಠ ಪ್ರಸಾರ ಹೊಂದಿದ ‘ಸಂಯುಕ್ತ ಕರ್ನಾಟಕ’ ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಆದರ್ಶ ಪತ್ರಿಕೆಯಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ, ಜನಜಾಗೃತಿಯ ಉದ್ದೇಶದಿಂದ ಜನ್ಮ ತಳೆದ ಈ ಪತ್ರಿಕೆಯ ಸಂಪಾದಕರು ಆ ಉದ್ದೇಶಕ್ಕೆ ಬದ್ಧರಾಗಿದ್ದರು. ಅಲ್ಲದೆ ಅವರು ಕನ್ನಡ ಭಾಷೆಯನ್ನು ತಿಳಿದಂತಹ ಕನ್ನಡ ಪ್ರೇಮಿಗಳಾಗಿದ್ದರು. ಹೀಗಾಗಿ  ಕನ್ನಡದ ಪತ್ರಿಕಾ ಭಾಷೆಯನ್ನು ರೂಪಿಸುವಲ್ಲಿ ‘ಸಂಯುಕ್ತ ಕರ್ನಾಟಕ’ದ ಕೊಡುಗೆ ಅಪಾರವಾಗಿದೆ. ಅದೇ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಇಂದು ‘ವಿಜಯ ಕರ್ನಾಟಕ’ವನ್ನು ನಕಲು ಮಾಡುವ ಭರದಲ್ಲಿ ತನ್ನತನವನ್ನು ಕಳೆದುಕೊಳ್ಳುತ್ತಲಿದೆ. ‘ವಿಜಯ ಕರ್ನಾಟಕ’ವು ಇಂಗ್ಲಿಶ್ ಪದಗಳನ್ನು ಬಳಸಿದರೆ, ‘ಸಂಯುಕ್ತ ಕರ್ನಾಟಕ’ವು ಇಂಗ್ಲೀಶಿನ ಪದಪುಂಜಗಳನ್ನೇ ಬಳಸುತ್ತಿದೆ. ( ಉದಾ: “ವಿಧಾನಸೌಧದಲ್ಲಿ  ಫಾರ್ ಎ ಚೇಂಜ್ ಅಧಿಕಾರಿಗಳು ಇರಲಿಲ್ಲ.”)

ಕನ್ನಡ ಪ್ರಭಾ ಪತ್ರಿಕೆಯು ಸಹ ಇಂಗ್ಲಿಶ್ ಪದಗಳನ್ನು ನಿರ್ಯೋಚನೆಯಿಂದ ಬಳಸುತ್ತಿದೆ. ಪ್ರಜಾವಾಣಿಯೊಂದೇ  ಕನ್ನಡತನವನ್ನು ಕಾಯ್ದುಕೊಂಡ ಬಂದ ಪತ್ರಿಕೆಯಾಗಿದೆ ಎನ್ನಬಹುದು. ವಿಜಯ ಕರ್ನಾಟಕ ಹಾಗು ಸಂಯುಕ್ತ ಕರ್ನಾಟಕ ಇವೆರಡೂ ‘ಸಿ.ಎಂ.’ ಎನ್ನುವ ಆಂಗ್ಲ ಪದವನ್ನೇ ಬಳಸುತ್ತಿರುವಾಗ ‘ಮುಖ್ಯ ಮಂತ್ರಿ’ ಎನ್ನುವ ಕನ್ನಡ ಪದವನ್ನೂ ಸಹ ಬಳಸುತ್ತಿರುವ ಶ್ರೇಯಸ್ಸು ಪ್ರಜಾವಾಣಿ ಪತ್ರಿಕೆಗೆ ಇದೆ.
ವಿಜಯ ಕರ್ನಾಟಕವು ಕನ್ನಡಾಂಗ್ಲೊ ಭಾಷೆಯನ್ನು ಒಂದು fashion ತರಹ  ಬಳಸುತ್ತಿದೆ. ಆದರೆ ಒಳ್ಳೆಯ ಪತ್ರಿಕೆಗೆ ಬೇಕಾದದ್ದು fashion ಅಲ್ಲ; passion !

ಪತ್ರಿಕೆಯ ವ್ಯಕ್ತಿತ್ವ:
ಒಂದು ಪತ್ರಿಕೆಗೆ ‘ತನ್ನತನ’ ಎನ್ನುವದು ಬೇಕು. ಪಾ.ವೆಂ. ಆಚಾರ್ಯರು ‘ಸಂಯುಕ್ತ ಕರ್ನಾಟಕ’ದ ಸಂಪಾದಕ ಮಂಡಲಿಯಲ್ಲಿದ್ದ ಕಾಲವದು. ಆ ಸಮಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ರಂಗೇರಿತ್ತು. ಮರಾಠಿ ಪತ್ರಿಕೆಗಳು ಭಂಡಶೈಲಿಯಲ್ಲಿ ಸುದ್ದಿಯನ್ನು ಪ್ರಕಟಿಸುತ್ತಿದ್ದವು. ನಾನು ಪಾ.ವೆಂ. ಅವರನ್ನು ಪತ್ರಿಕೆಯ ಕಚೇರಿಯಲ್ಲಿ ಭೆಟ್ಟಿಯಾದಾಗ, ಈ ವಿಷಯವನ್ನು ಪ್ರಸ್ತಾಪಿಸಿ, “ಸಂಯುಕ್ತ ಕರ್ನಾಟಕವು ಸಭ್ಯವಾಗಿ ಬರೆಯುವದೇಕೆ?”ಎಂದು ಕೇಳಿದ್ದೆ. ಪಾ.ವೆಂ. ನಸುನಕ್ಕು ಹೇಳಿದರು: “ಸಂಯುಕ್ತ ಕರ್ನಾಟಕಕ್ಕೆ ದೀರ್ಘವಾದ ಒಂದು ಸತ್ಸಂಪ್ರದಾಯವಿದೆ !”

ಆ ಸತ್ಸಂಪ್ರದಾಯ ಇಂದು ಎತ್ತ ಹೋಗಿದೆಯೋ ಅಥವಾ ಸತ್ತೇ ಹೋಗಿದೆಯೋ ತಿಳಿಯದು ! ಸಂಯುಕ್ತ ಕರ್ನಾಟಕದ ಭಾಷೆ, ಕಾಗುಣಿತಗಳ ತಪ್ಪು ಹಾಗು ವರದಿಯ ಶೈಲಿಯನ್ನು ನೋಡಿದಾಗ, ಈ ಪತ್ರಿಕೆಗೆ ಇಂದು ಕೋಡಂಗಿಯ ವ್ಯಕ್ತಿತ್ವ ಬಂದಿದೆ ಎಂದು ಭಾಸವಾಗುವದು.

ಪ್ರಜಾವಾಣಿಗೆ ಒಂದು ಪತ್ರಿಕಾ ವ್ಯಕ್ತಿತ್ವವಿದೆ. ಅದು ವಿಶ್ವಾಸಾರ್ಹತೆಯ ವ್ಯಕ್ತಿತ್ವ. ಅಬ್ಬರವಿಲ್ಲದ, ನಿಷ್ಪಕ್ಷಪಾತ ವರದಿಯ, ಸಭ್ಯತೆಯ ವ್ಯಕ್ತಿತ್ವ. ಪ್ರಜಾವಾಣಿ ಪತ್ರಿಕೆಯ ಸಂಪಾದಕರ ವ್ಯಕ್ತಿತ್ವವು ಯಾವಾಗಲೂ ಪತ್ರಿಕೆಯ ವ್ಯಕ್ತಿತ್ವದ ಹಿಂದೆ ನಿಲ್ಲುತ್ತದೆ, ನಾಟಕದ ಸೂತ್ರಧಾರನ ಹಾಗೆ. ಪ್ರಜಾವಾಣಿಯ ಸಂಪಾದಕರು ರಂಗದ ಮೇಲೆ  ನಟರ ಹಾಗೆ ಬರುವದಿಲ್ಲ. ಆದರೆ, ವಿಜಯ ಕರ್ನಾಟಕದಲ್ಲಿ ಸಂಪಾದಕರದೇ ಅಬ್ಬರ. ಪತ್ರಿಕೆಯ ಮೂಲಕ ಅವರು ತಮ್ಮ ವ್ಯಕ್ತಿತ್ವವನ್ನು ವೈಭವೀಕರಿಸಿಕೊಳ್ಳುತ್ತಿದ್ದಾರೆ ಎನ್ನುವ ಭಾವನೆ ಓದುಗನಿಗೆ ಬರದೇ ಇರದು. ಈ ಸ್ವ-ವೈಭವೀಕರಣದ ಹುಚ್ಚು ಇತ್ತೀಚೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಗೂ ತಾಕಿದೆ. ಶ್ರೀ ಜಿ.ಎಮ್.ಪಾಟೀಲರು ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರಾಗಿದ್ದಾಗ, ಅವರ ಫೋಟೋ ಹಾಗು ಸುದ್ದಿ ಸಂಯುಕ್ತ ಕರ್ನಾಟಕದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದವು. ಶ್ರೀ ಅಶೋಕ ಹಾರನಹಳ್ಳಿಯವರು ಇದೀಗ ಲೋಕಶಿಕ್ಷಣ ವಿಶ್ವಸ್ಥ ಮಂಡಲಿಯ ಅಧ್ಯಕ್ಷರು. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಇವರದೇ ಫೋಟೋ ಹಾಗು ಸುದ್ದಿ!

(೨) ಕನ್ನಡ ಓದುಗರಿಗೆ ಸಕಾಲಿಕ ಸಮಾಚಾರವನ್ನು ಈ ಪತ್ರಿಕೆಗಳು ಪಕ್ಷಪಾತವಿಲ್ಲದೆ ಒದಗಿಸುತ್ತಿವೆಯೆ?
ಯಾವ ಭಾಷೆಯನ್ನೇ ಬಳಸಲಿ, ಈ ಪತ್ರಿಕೆಗಳು ಓದುಗನಿಗೆ  ವಿಧಿಸುತ್ತಿರುವ ಶುಲ್ಕಕ್ಕೆ  ತಕ್ಕ ಸೇವೆಯನ್ನು ಸಲ್ಲಿಸುತ್ತಿವೆಯೆ ಎನ್ನುವದು ಮುಖ್ಯವಾದದ್ದು. ಈ ಪತ್ರಿಕೆಗಳಲ್ಲಿ ಸುದ್ದಿಗೆ ಎಷ್ಟು ಭಾಗವನ್ನು ನೀಡಲಾಗಿದೆ ಹಾಗು ಇತರ ವಿಷಯಗಳಿಗೆ ಮೀಸಲಾದ ಭಾಗವೆಷ್ಟು ಎನ್ನುವದನ್ನು ಗಮನಿಸೋಣ. ಮೇಲಿನ ಐದು ಪತ್ರಿಕೆಗಳಲ್ಲಿ  ಉದಯವಾಣಿ ಪತ್ರಿಕೆಯನ್ನು ಹೊರತು ಪಡಿಸಿ ಉಳಿದ ನಾಲ್ಕು ಪತ್ರಿಕೆಗಳ ‘ಹುಬ್ಬಳ್ಳಿ ಆವೃತ್ತಿ’ಗಳನ್ನಷ್ಟು ಪರೀಕ್ಷೆಗೆ ಒಡ್ಡೋಣ: ಈ ಪತ್ರಿಕೆಗಳ ೧-೬-೨೦೧೦ರ ಸಂಚಿಕೆಗಳ ವಿವರ ಈ ರೀತಿಯಾಗಿದೆ:


ಈ ಲೆಕ್ಕಾಚಾರದ ಮೇರೆಗೆ ಓದುಗರಿಗೆ ಗರಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ: ಕನ್ನಡ ಪ್ರಭಾ ; ಕನಿಷ್ಠ ಸಮಾಚಾರಭಾಗವನ್ನು ನೀಡುವ ಪತ್ರಿಕೆ : ವಿಜಯ ಕರ್ನಾಟಕ.

ಸಮಾಚಾರ ಭಾಗದಲ್ಲಿ ಸುದ್ದಿಗಳಲ್ಲದೇ ಸುದ್ದಿ ವಿಶ್ಲೇಷಣೆ, ವಿವಿಧ ವಿಷಯಗಳ ಮೇಲಿನ ಲೇಖನಗಳು, ಹಿತೋಕ್ತಿ, ಅಗ್ರಲೇಖನ, ಪೇಟೆಯ ಧಾರಣಿ ಇವೆಲ್ಲ ಸೇರಿವೆ. ಇತರ ಭಾಗದಲ್ಲಿ ಜಾಹೀರಾತುಗಳು, ಪತ್ರಿಕೆಗಳ ಮುಖಪುಟದ ಶಿಖರಭಾಗ, ವ್ಯಂಗ್ಯಚಿತ್ರಗಳು, ಜ್ಯೋತಿಷ್ಯ ಹಾಗು ಪುಟ್ಟ ಜಾಗದಲ್ಲಿ ಪತ್ರಿಕೆಗಳು ಸೇರಿಸುವ fill-in ಸೇರಿವೆ. ಬಹುತೇಕ ಓದುಗರು ಈ ಜಾಹೀರಾತುಗಳನ್ನಾಗಲೀ, fill-inಗಳನ್ನಾಗಲೀ, ಹಿತೋಕ್ತಿಗಳನ್ನಾಗಲೀ ಓದುವದೇ ಇಲ್ಲ. ಅಷ್ಟೇ ಏಕೆ, ಅಗ್ರಲೇಖನಗಳನ್ನು ಓದುವವರೂ ಸಹ, ಆ ವಿಷಯಕ್ಕಿರುವ ಮಹತ್ವವನ್ನು ಗಮನಿಸುತ್ತಾರೆ ; ಲೇಖನದ ಶೈಲಿಯನ್ನು ಗಮನಿಸುತ್ತಾರೆ. ಇವೆರಡೂ ಸರಿ ಬರದಿದ್ದರೆ, ಆ ಪುಟವನ್ನು ತಿರುವಿ ಮುಂದೆ ಹೋಗುತ್ತಾರೆ.

ಒಳಗಿನ ಹೂರಣ:
ಇದೆಲ್ಲ ಈ ಪತ್ರಿಕೆಗಳ ಸುದ್ದಿ ವಿನ್ಯಾಸದ ವಿಶ್ಲೇಷಣೆಯಾಯಿತು. ಇನ್ನು ಈ ಪತ್ರಿಕೆಗಳ ಒಳಗಿನ ಹೂರಣವನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸೋಣ:
೧-೬-೨೦೧೦ರ ಸಂಚಿಕೆಗಳಲ್ಲಿ ಈ ಪತ್ರಿಕೆಗಳು ಎಷ್ಟೆಲ್ಲ ಸುದ್ದಿಗಳನ್ನು ಪ್ರಕಟಿಸಿವೆ, ಈ ಸುದ್ದಿಗಳಿಗೆ ಕೊಟ್ಟ ಸ್ಥಳಾವಕಾಶ ಎಷ್ಟು, ಸುದ್ದಿಗಳಲ್ಲಿ ಇರುವ ಹುರುಳೆಷ್ಟು ಎನ್ನುವದನ್ನು ನೋಡೋಣ.  ಸುದ್ದಿಗಳ ಸಂಖ್ಯೆಯನ್ನು  ಲೆಕ್ಕಿಸುವಾಗ ಚಿಲ್ಲರೆ ಸುದ್ದಿಗಳನ್ನು  ಪರಿಗಣಿಸಲಾಗಿಲ್ಲ. ನಾಲ್ಕೂ ಪತ್ರಿಕೆಗಳಲ್ಲಿ ಪ್ರಕಟವಾದ, ಸುಮಾರಾಗಿ ಮಹತ್ವವುಳ್ಳ ವಿಭಿನ್ನ ಸುದ್ದಿಗಳ ಒಟ್ಟು ಸಂಖ್ಯೆ : ೭೧. ಅವುಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ಪ್ರಕಟಿಸಿದ ಪತ್ರಿಕೆ ವಿಜಯ ಕರ್ನಾಟಕ. ನಂತರದ ಸ್ಥಾನ ಪ್ರಜಾವಾಣಿಯದು. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಮೂರನೆಯ ಹಾಗು ಕೊನೆಯ ಸ್ಥಾನವನ್ನು ಪಡೆದಿವೆ :
ಸುಮಾರಾಗಿ ಮಹತ್ವವಿರುವ ವಿಭಿನ್ನ ಸುದ್ದಿಗಳಲ್ಲಿ ಅತಿ ಹೆಚ್ಚು ಸುದ್ದಿಗಳನ್ನು ವಿಜಯ ಕರ್ನಾಟಕ ಪತ್ರಿಕೆ ನೀಡಿದೆ. ಪ್ರಜಾವಾಣಿ ಒಂದೇ ಒಂದು ಕಡಿಮೆ ಸುದ್ದಿಯೊಂದಿಗೆ ಪಕ್ಕದಲ್ಲಿಯೇ ನಿಂತಿದೆ. ಸಂಯುಕ್ತ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ಹಿಂದಿನ ಸಾಲಿನಲ್ಲಿ ಜೊತೆಯಾಗಿ ನಿಂತಿವೆ ! ಇವುಗಳಲ್ಲಿ ಯಾವ ಪತ್ರಿಕೆಯೂ ಸುಮಾರಾಗಿ ಮಹತ್ವವಿರುವ ೭೧ ಸುದ್ದಿಗಳ ಅರ್ಧದಷ್ಟನ್ನೂ ಸಹ ಓದುಗರಿಗೆ ವರದಿ ಮಾಡಿಲ್ಲ ಎನ್ನುವದನ್ನು ಗಮನಿಸಬೇಕು.

ಈ ಪತ್ರಿಕೆಗಳು ತಮ್ಮ ಜಾಹೀರಾತಿನ ಅಥವಾ ಸಮಾಚಾರೇತರ ಭಾಗದ ಇನ್ನು ಸ್ವಲ್ಪ ಭಾಗವನ್ನು ಸುದ್ದಿ ಭಾಗಕ್ಕೆ ನೀಡಿದರೆ, ಇನ್ನಷ್ಟು ಹೆಚ್ಚು ಸುದ್ದಿಗಳನ್ನು ಅಂದರೆ ಒಟ್ಟು ಸುದ್ದಿಗಳ ಶೇಕಡಾ ೬೦ರಷ್ಟನ್ನಾದರೂ ಓದುಗರಿಗೆ ಕೊಡಬಹುದಾಗಿದೆ.

ತಲೆಬರಹ :
ದಿ: ೧-೬-೨೦೧೦ರ ಅತಿ ಮುಖ್ಯ ಸುದ್ದಿ ಎಂದರೆ ಮೇಲ್ಮನೆ ಚುನಾವಣೆ. ವಿಜಯ ಕರ್ನಾಟಕವು ಈ ಸಮಾಚಾರಕ್ಕೆ  ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟಿಸಿದೆ. ಪತ್ರಿಕೆಯ ಅಡ್ಡಳತೆಯ ಮುಕ್ಕಾಲು ಭಾಗವನ್ನು ಇದು ವ್ಯಾಪಿಸಿದೆ . ತಲೆಬರಹ ಈ ರೀತಿಯಾಗಿದೆ :
ಈ ತಲೆಬರಹದ ಮೂಲಕ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದ ಎರಡು ನಿರ್ದಿಷ್ಟ ಅಂಶಗಳು ಓದುಗನಿಗೆ ತಿಳಿದು ಬರುವವು. (೧) ಮುಕ್ತಾಯ ದಿನಾಂಕ (೨) ಅಭ್ಯರ್ಥಿಗಳ ಸಂಖ್ಯೆ. ಆದುದರಿಂದ ಈ ತಲೆಬರಹಕ್ಕೆ ಅತ್ಯುತ್ತಮ ತಲೆಬರಹ ಎನ್ನಬಹುದು.

ಪ್ರಜಾವಾಣಿ ಪತ್ರಿಕೆಯ ತಲೆಬರಹಕ್ಕೆ ಎರಡನೆಯ ಸ್ಥಾನವನ್ನು ನೀಡಬಹುದು :

ಈ ತಲೆಬರಹದಲ್ಲಿ ನಾಮಪತ್ರಿಕೆಯ ಸಲ್ಲಿಸುವ ದಿನಾಂಕ ಮುಗಿದುದರ ಬಗೆಗೆ ಅರಿವಾಗುವದಿಲ್ಲ.
ಆದರೆ ದಳ ಹಾಗು ಕಾಂಗ್ರೆಸ್ ಪಕ್ಷಗಳ ಭಿನ್ನಾಭಿಪ್ರಾಯದ ಬಗೆಗೆ ನಿರ್ದಿಷ್ಟವಾದ ಮಾಹಿತಿ ಇದೆ. ಅಲ್ಲದೆ, ಮುಂದುವರಿದ  ಸಮಾಚಾರದಲ್ಲಿ  ಈ ಭಿನ್ನಾಭಿಪ್ರಾಯದ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ
ಮಾಹಿತಿಯನ್ನು ಇತರ ಪತ್ರಿಕೆಗಳು ನೀಡಿಲ್ಲ.

ಮೂರನೆಯ ಸ್ಥಾನವನ್ನು ಕನ್ನಡ ಪ್ರಭಾ ಪತ್ರಿಕೆಗೆ ನೀಡಬಹುದು.

ಪತ್ರಿಕೆಯ ಮೊದಲ ಪುಟದ ಅಗ್ರಭಾಗದಲ್ಲಿ ವೃದ್ಧರೊಬ್ಬರ ಸಾಧನೆಯ ವರ್ಣನೆಯನ್ನು ಮಾಡಲಾಗಿದೆ. ಈ ವರ್ಣನೆಯು  ಮಹತ್ವವುಳ್ಳ ದೈನಂದಿನ ಸಮಾಚಾರವಾಗಲಾರದು ಎನ್ನುವ ಅರಿವು ಪತ್ರಿಕೆಯ ಸಂಪಾದಕರಿಗೆ ಇದ್ದಂತಿಲ್ಲ. ಇದನ್ನು ಎರಡನೆಯ ಪುಟದ ಮೇಲ್ಭಾಗದಲ್ಲಿ ನೀಡಬಹುದಾಗಿತ್ತು. ಇದರ ಕೆಳಭಾಗದಲ್ಲಿ ಎಡಗಡೆಗೆ ಶ್ರೀ ಶ್ರೀರವಿಶಂಕರ ಗುರೂಜಿಯವರ ಹತ್ಯೆಯ ಸಮಾಚಾರದ ವಿಶ್ಲೇಷಣೆ ಇದೆ. ಇದಕ್ಕೆ ನೀಡಿದ ತಲೆಬರಹದ ಭಾಗ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿದೆ. ಈ ವಿಶ್ಲೇಷಣೆಯು ನಿನ್ನೆ ಜರುಗಿದ ಘಟನೆಯ ವಿಶ್ಲೇಷಣೆ. ನಿನ್ನೆಯೇ ಇದರ ಬಗೆಗೆ ಸಾಕಷ್ಟು ವಿವರಗಳನ್ನು ನೀಡಲಾಗಿದ್ದು, ಮುಖಪುಟದಲ್ಲಿ ಮತ್ತೊಮ್ಮೆ ಇಷ್ಟು ದೀರ್ಘ ವಿಶ್ಲೇಷಣೆಯ ಅವಶ್ಯಕತೆ ಇರಲಿಲ್ಲ. ಈ ಸುದ್ದಿಯ ಬಲಭಾಗದಲ್ಲಿ ಮೇಲ್ಮನೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಚಾರ ಕೊಡಲಾಗಿದೆ. ಇದರ ತಲೆಬರಹ ಸಂದಿಗ್ಧವಾಗಿದೆ. ಈ ತಲೆಬರಹದಿಂದ ತಿಳಿಯುವ ಅಂಶವೆಂದರೆ ದಳ ಹಾಗು ಕಾಂ^ಗ್ರೆಸ್ ಪಕ್ಷಗಳ ನಡುವೆ ತಾತ್ಕಾಲಿಕ ಭಿನ್ನಾಭಿಪ್ರಾಯವಿದ್ದು, ಅದು ಕೊನೆಗೊಳ್ಳಬಹುದು.  ಈ ಎಲ್ಲ ಅಂಶಗಳನ್ನು ಗಮನಿಸಿದರೆ ಕನ್ನಡ ಪ್ರಭಾ ಪತ್ರಿಕೆಯು ಮುಖಪುಟದ ಸಮಾಚಾರಗಳಿಗೆ ಹಾಗು ತಲೆಬರಹಕ್ಕೆ ಸಾಕಷ್ಟು ಗಮನ ನೀಡುತ್ತಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.

ತಲೆಬರಹಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕರ್ನಾಟಕ ಪತ್ರಿಕೆಯದು ಕೊನೆಯ ಸ್ಥಾನ. ಅಷ್ಟೇ ಅಲ್ಲ, ಒಂದು ಸಮಾಚಾರ ಪತ್ರಿಕೆಗೆ ಇರಬೇಕಾದ ಸಾಮಾನ್ಯ ಜ್ಞಾನವು ತನಗಿಲ್ಲ ಎನ್ನುವದನ್ನು ಈ ಪತ್ರಿಕೆಯು ಬಿನ್ ದಾಸ್ ಶೈಲಿಯಲ್ಲಿ ತೋರಿಸಿಕೊಳ್ಳುತ್ತದೆ.
ಮುಖಪುಟದ ಅಗ್ರಭಾಗದಲ್ಲಿ ಶ್ರೀ ಶ್ರೀರವಿಶಂಕರ ಗುರೂಜಿಯವರು ತಾವು ಅಪರಾಧಿಯನ್ನು ಕ್ಷಮಿಸಿರುವದಾಗಿ ತಿಳಿಸಿರುವ ಸಮಾಚಾರವಿದೆ.  ಸಾಮಾನ್ಯವಾಗಿ ಎಲ್ಲ ಸಂತರೂ ಹೇಳುವಂತಹ ಮಾತಿದು. ಇದನ್ನು  ಇಷ್ಟು ದೊಡ್ಡದಾಗಿ, ಅಗ್ರಭಾಗದಲ್ಲಿ ನೀಡುವ ಅವಶ್ಯಕತೆ ಇರಲಿಲ್ಲ.
ಇದರ ಕೆಳಗೆ ದೊಡ್ಡಕ್ಷರಗಳಲ್ಲಿ ನೀಡಲಾದ ಸುದ್ದಿ ಹೀಗಿದೆ:

ಈ ತಲೆಬರಹದ ಅರ್ಥವೇ ಆಗಲಾರದಂತಿದೆ. ಜ್ಞಾನೇಶ್ವರಿ ಯಾರು? ಯಾರ ಗುರಿ ತಪ್ಪಿತು? ಯಾಕೆ ತಪ್ಪಿತು? ಇವು ಓದುಗನಲ್ಲಿ ಮೊದಲು ಮೂಡುವ ಪ್ರಶ್ನೆಗಳು. ಸಮಾಚಾರವನ್ನು ಪೂರ್ತಿ ಓದಿದಾಗಲೇ, ನಕ್ಸಲರು ಗೂಡ್ಸ ಗಾಡಿಯನ್ನು ಹಳಿ ತಪ್ಪಿಸಲು ಬಯಸಿದ್ದರು ; ಆದರೆ ಅಜ್ಞಾನವಶಾತ್ ಜ್ಞಾನೇಶ್ವರಿ ಎನ್ನುವ ಪ್ರಯಾಣಿಕರ ರೇಲವೆ ಗಾಡಿಯ ಅಪಘಾತಕ್ಕೆ ಕಾರಣರಾದರು ಎನ್ನುವ ಅಂಶ ತಿಳಿದು ಬರುತ್ತದೆ. ಇದು ಮುಖ್ಯ ಸುದ್ದಿಯಾಗುವ ಅರ್ಹತೆಯನ್ನು ಪಡೆದಿಲ್ಲ. ಆದರೂ ಇದಕ್ಕಾಗಿ ಮುಖಪುಟದ ೧೩೨ ಚಸೆಂಮೀ ಜಾಗವನ್ನು ವ್ಯಯಿಸಲಾಗಿದೆ. ಮುಖ್ಯ ಸುದ್ದಿಯಾಗಬೇಕಾಗಿದ್ದ ಮೇಲ್ಮನೆ ಚುನಾವಣೆಯ ಬಗೆಗೆ ಮುಖಪುಟದ ಕೆಳ ಭಾಗದಲ್ಲಿ ಕೇವಲ ೧೧೨ ಚಸೆಂಮೀಯಷ್ಟು ಸ್ಥಳವನ್ನು ನೀಡಲಾಗಿದೆ. ಮೇಲ್ಮನೆಗೆ ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವಾಗ, ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಈ ಸುದ್ದಿಯಲ್ಲಿ ತಿಳಿಸುವ ಮೂಲಕ ಓದುಗರಿಗೆ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. ಜೊತೆಗೆ ತಮ್ಮ ಅಜ್ಞಾನದ ಹಾಗು ಬೇಜವಾಬುದಾರಿಯ ಪರಮಾವಧಿಯನ್ನು ತೋರಿಸಿದ್ದಾರೆ. ಬಲ ಭಾಗದಲ್ಲಿ ಪೋಲೀಸ ಅಧಿಕಾರಿಯ ಹೇಳಿಕೆಯಲ್ಲಿ ‘ಆರ್ಟ ಆಫ್ ಲೀವಿಂಗ್’ ಎನ್ನುವ ಪದವನ್ನು ಬಳಸಿದ್ದಾರೆ, ಅದೂ ಎರಡು ಸಲ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಮಂಡಲಿಗೆ ಇಂಗ್ಲಿಶ್ ಭಾಷೆಯ ಜ್ಞಾನ ಇಲ್ಲ ಎನ್ನುವ ಸಂದೇಹ ಓದುಗರಿಗೆ ಮೊದಲಿನಿಂದಲೂ ಇದೆ. ‘ಸಿಇಟಿ ಕೌನ್ಸೆಲಿಂಗ್’ ಅನ್ನುವ ಪದಪುಂಜವನ್ನು ಯಾವಾಗಲೂ ಸಿಇಟಿ ಕೌನ್ಸಿಲಿಂಗ್’ ಎಂದೇ ಬರೆಯುತ್ತ ಬಂದಿದೆ ಈ ಪತ್ರಿಕೆ. ‘ಕೌನ್ಸೆಲ್’ ಹಾಗು ‘ಕೌನ್ಸಿಲ್’ ಪದಗಳ ಅರ್ಥಭೇದವನ್ನೇ ತಿಳಿಯದ ಈ ಸಂಪಾದಕ ಮಂಡಲಿಯು ಓದುಗರನ್ನು, ವಿಶೇಷತಃ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುತ್ತಿರುವದು ವಿಷಾದದ ಸಂಗತಿ.

ತಲೆಬರಹಗಳ ಬಳಿಕ, ಈಗ ಮುಖ್ಯ ಸುದ್ದಿಗಳನ್ನಷ್ಟು  ಅವಲೋಕಿಸೋಣ. ಒಂದು ಪತ್ರಿಕೆಗೆ ರಾಶಿ ರಾಶಿ ಸುದ್ದಿ ಬಂದು ಬೀಳುತ್ತವೆ. ಅವುಗಳಲ್ಲಿ ಪ್ರಮುಖವಾದುವಗಳನ್ನು ಆರಿಸುವದು ಹೇಗೆ? ಓದುಗನಾಗಿ ನನ್ನ ಅಭಿಪ್ರಾಯ ಹೀಗಿದೆ:
ಮೊದಲನೆಯದಾಗಿ ಸುದ್ದಿ ತಾಜಾ ಇರಬೇಕು. ಆ ಬಳಿಕ ಅವುಗಳ ಸ್ಥಾನಮಾನ ಈ ರೀತಿಯಾಗಿ ಇರಬೇಕು:
(೧) ಭಾರತವು ಭಾಗವಹಿಸಿದ ಅಂತರರಾಷ್ಟೀಯ ಸುದ್ದಿಗಳು
(೨) ಭಾರತದ  ಮೇಲೆ ಮಹತ್ವದ ಪರಿಣಾಮ ಬೀರುವ ಅಂತರರಾಷ್ಟ್ರೀಯ ಸುದ್ದಿಗಳು
(೩) ಕರ್ನಾಟಕದ ಮಹತ್ವದ ಸುದ್ದಿಗಳು
(೪) ಸ್ಥಳೀಯ ಮಹತ್ವದ ಸುದ್ದಿಗಳು

(೧) ಮೇಲ್ಮನೆ ಚುನಾವಣೆಯು ಮಹತ್ವದ ವಿಷಯವಾಗಿದ್ದರಿಂದ ಈ ನಾಲ್ಕೂ  ಪತ್ರಿಕೆಗಳು, ಈ ಸುದ್ದಿಯನ್ನು ಮೊದಲ ಪುಟದಲ್ಲಿಯೇ ಪ್ರಕಟಿಸಿವೆ. ವಿಜಯ ಕರ್ನಾಟಕ (೪೮೪ ಚಸೆಂಮೀ) ಹಾಗು ಪ್ರಜಾವಾಣಿ (೩೨೦ ಚಸೆಂಮೀ) ಈ ಸುದ್ದಿಗೆ ಅಗ್ರ ಪ್ರಾಶಸ್ತ್ಯ ನೀಡಿವೆ. ಕನ್ನಡ ಪ್ರಭಾ ಪತ್ರಿಕೆಯು ವೃದ್ಧನೊಬ್ಬನ ಸಮಾಜ ಸೇವೆಯನ್ನು ಮೇಲ್ಭಾಗದಲ್ಲಿ ಪ್ರಕಟಿಸಿದೆ. ಶ್ರೀ ಶ್ರೀರವಿಶಂಕರರಿಗೆ ಎರಡನೆಯ ಪ್ರಾಶಸ್ತ್ಯ. ಕೊನೆಯ ಪ್ರಾಶಸ್ತ್ಯ ಮೇಲ್ಮನೆ ಚುನಾವಣೆಗೆ (೪೬೩ ಚ.ಸೆಂಮೀ). ಈ ಸಮಾಚಾರವನ್ನು ಸಂಯುಕ್ತ ಕರ್ನಾಟಕವು ಮುಖಪುಟದ ನಡುಭಾಗದಲ್ಲಿ ಪ್ರಕಟಿಸಿದೆ ಹಾಗು ಕನಿಷ್ಠ ಸ್ಥಳಾವಕಾಶ ನೀಡಿದೆ (೧೨೦ ಚಸೆಂಮೀ).

(೨) ಹೊರನಾಡ ಕನ್ನಡಿಗರ ಸಮ್ಮೇಳನವು ಧಾರವಾಡದಲ್ಲಿ ಜರುಗಿತು. ಈ ಸಮ್ಮೇಳನದಲ್ಲಿ ಭಾರತದ ಎಲ್ಲೆಡೆಯ ಕನ್ನಡ ಸಂಘಗಳು ಭಾಗವಹಿಸಿದ್ದವು. ಅನೇಕ ಮಹತ್ವದ ವಿಷಯಗಳ ಬಗೆಗೆ ಚರ್ಚೆ ನಡೆಯಿತು. ಇದು ರಾಜಕೀಯವಾಗಿ ಮಹತ್ವದ ವಿಷಯವಾಗಿರಲಿಕ್ಕಿಲ್ಲ. ಆದರೆ ಸಾಂಸ್ಕೃತಿಕವಾಗಿ ತುಂಬ ಮಹತ್ವದ ವಿಷಯವಾಗಿತ್ತು. ಈ ಸಮಾಚಾರಕ್ಕೆ ಮೂರನೆಯ ಪುಟದಲ್ಲಿ ಸ್ಥಾನ ಹಾಗು ಉತ್ತಮ ಸ್ಥಳಾವಕಾಶ ಸಿಗಬೇಕಾಗಿತ್ತು.  ಸಂಯುಕ್ತ ಕರ್ನಾಟಕ ಪತ್ರಿಕೆಯು ಈ ಸಮಾಚಾರವನ್ನು ೪ನೆಯ ಹಾಗು ೧೨ನೆಯ ಪುಟಗಳಲ್ಲಿ ಪ್ರಕಟಿಸಿದೆ. ಒಟ್ಟು ೧೦೫೨ ಚಸೆಂಮೀ ಸ್ಥಳವನ್ನು ನೀಡಿದೆ. ಕನ್ನಡ ಪ್ರಭಾ ಪತ್ರಿಕೆಯು ಅತಿ ಹೆಚ್ಚು ಸ್ಥಳವನ್ನು ಅಂದರೆ ೧೦೮೯ ಚಸೆಂಮೀ ಸ್ಥಳವನ್ನು ನೀಡಿದ್ದರೂ ಸಹ ೯ನೆಯ ಪುಟದಲ್ಲಿ ಪ್ರಕಟಿಸಿ, ಸಮಾಚಾರವನ್ನು ಅಪಮೌಲ್ಯಗೊಳಿಸಿದೆ. ಪ್ರಜಾವಾಣಿ ಪತ್ರಿಕೆಯು ಈ ಪತ್ರಿಕೆಗಳು ನೀಡಿದ ಸ್ಥಳದ ಸುಮಾರು ಅರ್ಧದಷ್ಟು ಸ್ಥಳವನ್ನು  ಅಂದರೆ ೫೪೯ ಚಸೆಂಮೀ ಸ್ಥಳವನ್ನು ನೀಡಿದೆ. ೪ನೆಯ ಹಾಗು ೮ನೆಯ ಪುಟಗಳಲ್ಲಿ  ಈ ಸಮಾಚಾರವನ್ನು ಪ್ರಕಟಿಸಿದೆ. ೪ನೆಯ ಪುಟದಲ್ಲಿಯೇ ಪ್ರಕಟಿಸಿದರೂ ಸಹ ಕನಿಷ್ಠ ಸ್ಥಳವನ್ನು ನೀಡಿದ ಕೀರ್ತಿ ವಿಜಯ ಕರ್ನಾಟಕಕ್ಕೆ ಸಲ್ಲಬೇಕು. ೫೨೯ ಚಸೆಂಮೀ ಸ್ಥಳ ಮಾತ್ರ ಈ ಮಹತ್ವದ ಸುದ್ದಿಗೆ ಸಾಕು ಎನ್ನುವದು ವಿಜಯ ಕರ್ನಾಟಕದ ಅಭಿಪ್ರಾಯವಾಗಿದೆ. ಕನ್ನಡ ನುಡಿಗೇ ಮಹತ್ವ ಕೊಡದ ವಿಜಯ ಕರ್ನಾಟಕವು, ಹೊರನಾಡ ಕನ್ನಡಿಗರ ಸಮ್ಮೇಳನಕ್ಕೆ ಏನು ಮಹತ್ವ ಕೊಟ್ಟೀತು?

ಉಳಿದ ಸುದ್ದಿಗಳಲ್ಲಿ ಅನೇಕ ಸ್ಥಳೀಯ ಮಹತ್ವದ ಸುದ್ದಿಗಳಿವೆ:
(೧) ನೂತನ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಮಾವೇಶವು ಧಾರವಾಡದಲ್ಲಿ ಜರುಗಿದ್ದು , ಪಂಚಾಯತ ರಾಜ ಇಲಾಖೆಯ ಮಂತ್ರಿ ಶ್ರೀ ಶೆಟ್ಟರರು ಅಲ್ಲಿ ಭಾಷಣ ಮಾಡಿದ್ದಾರೆ. ಮಂತ್ರಿಗಳ ಭಾಷಣದ ಸಾರವನ್ನು ವಿವಿಧ ಪತ್ರಿಕೆಗಳು ವರದಿ ಮಾಡಿದ ಪರಿ ಹೀಗಿದೆ :

ಸಂಯುಕ್ತ  ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ‘ಉದ್ಯೋಗ ಖಾತ್ರಿ ಯೋಜನೆಗಾಗಿ ೪೬೦೦ ಕೋಟಿ ರೂ. ಬಿಡುಗಡೆ’ ಎನ್ನುವ ತಲೆಬರಹವನ್ನು ನೀಡಿವೆ. ವಿಜಯ ಕರ್ನಾಟಕ ಪತ್ರಿಕೆಯು  ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹ ನೀಡಿದೆ.  ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ: ಶೆಟ್ಟರ್ ಸಲಹೆ’ ಎನ್ನುವ ಅತ್ಯಂತ ಮೂರ್ಖ ತಲೆಬರಹವನ್ನು ಪ್ರಜಾವಾಣಿ ಪತ್ರಿಕೆ ನೀಡಿದೆ.

ಮಂತ್ರಿಗಳ ಭಾಷಣದಲ್ಲಿ ಯಾವ ಅಂಶಕ್ಕೆ ವಾಸ್ತವಿಕತೆಯ ಬೆಂಬಲವಿರುತ್ತದೆಯೊ ಅದನ್ನು ತಲೆಬರಹಕ್ಕಾಗಿ ಬಳಸಿಕೊಳ್ಳಬೇಕು. ಕೇಂದ್ರದಿಂದ ೪೬೦೦ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಒಂದು ವಾಸ್ತವ ಘಟನೆ. ಆದುದರಿಂದ ಈ ತಲೆಬರಹಕ್ಕೆ ವಾಸ್ತವತೆಯ ಬೆಂಬಲವಿದೆ.  ನಿರುದ್ಯೋಗ ನಿವಾರಣೆ ಮಾಡುವದು ಅಧಿಕಾರಿಗಳ ಕೈಯಲ್ಲಿ ಇರುವದಿಲ್ಲ. ಆದರೂ ಸಹ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಅನುದಾನ ಬಿಡುಗಡೆಯಾಗುತ್ತಿರುವದರಿಂದ, ‘ನಿರುದ್ಯೋಗ ನಿವಾರಣೆಗೆ ಶ್ರಮಿಸಿ’ ಎನ್ನುವ ತಲೆಬರಹವನ್ನೂ ಒಪ್ಪಿಕೊಳ್ಳಬಹುದು.

ಇನ್ನು ಮಂತ್ರಿಗಳು ತಮ್ಮ ಭಾಷಣದಲ್ಲಿ ಅನೇಕ ವಿಷಯಗಳನ್ನು ಹೇಳುತ್ತಾರೆ. ಕೆಲವೊಮ್ಮೆ ಅದು ಕೇವಲ public imageಗಾಗಿ ಇರುತ್ತದೆ. ‘ಕ್ರಾಂತಿಕಾರಕ ಬದಲಾವಣೆ ಮಾಡಿರಿ’ ಎನ್ನುವದು ಇಂತಹ ಒಂದು ವೀರಾವೇಶದ ಹೇಳಿಕೆಯಾಗಿರಬಹುದು. ಅಥವಾ ಅವರ ಪಕ್ಷದ ಆಶಯವಾಗಿರಬಹುದು. ಒಟ್ಟಿನಲ್ಲಿ ಶೆಟ್ಟರು ಮಾಡಿದ ಭಾಷಣದಲ್ಲಿ ಇದು ಮಹತ್ವದ ಅಂಶವಂತೂ ಅಲ್ಲ. ಆದುದರಿಂದ ಈ ತಲೆಬರಹವನ್ನು ನೀಡುವದರ ಮೂಲಕ ಪ್ರಜಾವಾಣಿಯು ತನ್ನ ದಡ್ಡತನವನ್ನು ತೋರಿದೆ.

ಅಧಿಕಾರಿಗಳಿಗೆ ಲ್ಯಾಪ್ ಟಾ^ಪ್ ಹಾಗು ಮೋಬೈಲ್ ಸಿಮ್ ಕೊಡುವ ವಿಷಯವನ್ನು ಮತ್ತು ಮಂತ್ರಿ ಶೆಟ್ಟರರು ಪ್ರತಿಜ್ಞಾವಿಧಿಯನ್ನು ಬೋಧಿಸಿದ ವಿಷಯವನ್ನು  ವಿಜಯ ಕರ್ನಾಟಕ, ಪ್ರಜಾವಾಣಿ ಹಾಗು ಕನ್ನಡ ಪ್ರಭಾ ಪತ್ರಿಕೆಗಳು ವರದಿ ಮಾಡಿವೆ. ಸಂಯುಕ್ತ ಕರ್ನಾಟಕವು ಈ ವರದಿ ಮಾಡದಿರುವದು ಎದ್ದು ಕಾಣುವ ಲೋಪವಾಗಿದೆ.

ತಲೆಬರಹ ಹಾಗು ಸಮಾಚಾರ-ಲೋಪದ ಉದಾಹರಣೆಯನ್ನು ನೋಡಿದಂತಾಯಿತು. ಇನ್ನು ಕೆಲವೊಂದು ಪತ್ರಿಕೆಗಳಲ್ಲಿ ವರದಿಯಾಗದೇ ಇರುವ ಕೆಲವು ಮಹತ್ವದ ಸುದ್ದಿಗಳನ್ನು ನೋಡೋಣ;

(೧) ಭಾರತದಲ್ಲಿ ಮೊದಲ ಬಾರಿಗೆ ನಡೆದ ಪೋಲೋ ಕಪ್ ಇಂಡಿಯಾ ಚಾಂಪಿಯನ್ ಶಿಪ್ ಪಂದ್ಯದ ವರದಿ ಕೇವಲ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಮಾತ್ರ ಬಂದಿದೆ. ಸಂಯುಕ್ತ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಈ ಮಹತ್ವದ  ಸಮಾಚಾರವನ್ನು ವರದಿ ಮಾಡದೆ ಇದ್ದದ್ದು ದೊಡ್ಡ ಲೋಪವಾಗಿದೆ.

 (೨) ಮುಜಾಹಿದೀನ್ ಸಂಘಟನೆಯ ಮುಖಂಡನ ಹತ್ಯೆಯು ಪ್ರಮುಖ ಸುದ್ದಿಯಾದರೂ ಸಹ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ವರದಿಯಾಗಿದೆ.

(೩) ಜಾಗತಿಕ ಹೂಡಿಕೆದಾರರ ಸಮ್ಮೇಳನದ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೪) ದರೋಡೆಕೋರರ ಇರಿತಕ್ಕೆ ಪೋಲೀಸನ ಬಲಿ ಎನ್ನುವ ವರದಿಯು ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ವರದಿಯಾಗಿಲ್ಲ.

(೫) ಕೇರಳ ಹಾಗು ಬಂಗಾಲದಲ್ಲಿ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯದ ಶಾಖೆಗಳು ಪ್ರಾರಂಭವಾಗುವದು ಮಹತ್ವದ ಸಮಾಚಾರ. ಈ ಸುದ್ದಿ ಕೇವಲ ಕನ್ನಡ ಪ್ರಭಾ ಹಾಗು ವಿಜಯ ಕರ್ನಾಟಕಗಳಲ್ಲಿ ಪ್ರಕಟವಾಗಿದೆ.

(೬) ಧಾರವಾಡದಲ್ಲಿ ಅಖಿಲ ಭಾರತೀಯ ಹಾಶಮ್ ಪೀರ ಶಾಂತಿ ಪ್ರತಿಷ್ಠಾನದ ಉದ್ಘಾಟನೆಯಾದ ಸುದ್ದಿಯು ಕೇವಲ ಕನ್ನಡ ಪ್ರಭಾ ಪತ್ರಿಕೆಯಲ್ಲಿ ವರದಿಯಾಗಿದೆ.

(೭) ಧಾರವಾಡದಲ್ಲಿ ಆಯೋಜಿಸಲಾಗುತಿರುವ ಕ್ಷೇತ್ರವಾರು ಉದ್ಯೋಗ ಮೇಳದ ವರದಿಯನ್ನು ಪ್ರಜಾವಾಣಿ ಮಾತ್ರ ಮಾಡಿದೆ

 (೮) ಶಾಸಕ ಲಾಡ ಇವರ ಪ್ರಚಾರ ಭಾಷಣ ಹಾಗು ಮಂತ್ರಿ ಶೆಟ್ಟರರ ಭಾಷಣ ಕೇವಲ ವಿಜಯ ಕರ್ನಾಟಕದಲ್ಲಿ ವರದಿಯಾಗಿವೆ. 

 (೯) ಮಂಡ್ಯದಲ್ಲಿ ತಪ್ಪಿದ ರೇಲವೇ ದುರಂತದ ಸುದ್ದಿ ಕೇವಲ ಪ್ರಜಾವಾಣಿ ಹಾಗು ಸಂಯುಕ್ತ ಕರ್ನಾಟಕಗಳಲ್ಲಿ ಮಾತ್ರ ಬಂದಿದೆ.

(೧೦) ಮಣಿಪಾಲ ವಿಶ್ವವಿದ್ಯಾಲಯಕ್ಕೆ ಕುಲಪತಿಯ ನೇಮಕವಾದ ಸುದ್ದಿ ವಿಜಯ ಕರ್ನಾಟಕ ಹಾಗು ಕನ್ನಡ ಪ್ರಭಾಗಳಲ್ಲಿ ಮಾತ್ರ ವರದಿಯಾಗಿದೆ.

(೧೧) ಅಥಣಿಯಲ್ಲಿ ಸಾಂಸ್ಕೃತಿಕ ಸಂಘ ಆರಂಭವಾದ ಸುದ್ದಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮಾತ್ರ ಬಂದಿದೆ.

(೧೨) ಸಿಇಟಿ ಕೌನ್ಸೆಲಿಂಗಿನಲ್ಲಿ ಸಿಸಿಟಿವಿಯ ಬಳಕೆಯಾಗಲಿದೆ ಎನ್ನುವ ಉಪಯುಕ್ತ ಮಾಹಿತಿಯು ಕೇವಲ ಪ್ರಜಾವಾಣಿಯಲ್ಲಿ ವರದಿಯಾಗಿದೆ.

ಮೇಲಿನ ಲೋಪಗಳು ಕೇವಲ ಉದಾಹರಣೆಗೆ ಮಾತ್ರ. ಈ ತರಹದ ಇನ್ನೂ ಚಿಕ್ಕ ಪುಟ್ಟ ಆದರೆ ಮಹತ್ವದ ಅನೇಕ ಸುದ್ದಿಗಳನ್ನು ಈ ಪತ್ರಿಕೆಗಳು ವರದಿ ಮಾಡುವ ಮನಸ್ಸು ಮಾಡಿಲ್ಲ. ಆದರೆ, ಕೆಲಸಕ್ಕೆ ಬಾರದ ಸುದ್ದಿಗಾಗಿ ಹಾಗು ವಿಶ್ಲೇಷಣೆಗಾಗಿ ಅನವಶ್ಯಕ ಸ್ಥಳಾವಕಾಶ ಮಾಡುತ್ತವೆ.  ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮೋಬೈಲ್ ವೇಶ್ಯಾವಾಟಿಕೆ ಎನ್ನುವದು ಒಂದು ಮೂರನೆಯ ದರ್ಜೆಯ ವರದಿ. ಇದಕ್ಕೆ ೧೪೪ ಚಸೆಂಮೀ ಸ್ಥಳ ಕೊಡಲಾಗಿದೆ.
ವೀರಪ್ಪನ್ ಹೂತಿಟ್ಟ ದಂತಕ್ಕಾಗಿ ಉತ್ಖನನ ಎನ್ನುವ ಸುದ್ದಿಗಾಗಿ ಕನ್ನಡ ಪ್ರಭಾ ಪತ್ರಿಕೆಯು ೨೮೬ ಚಸೆಂಮೀ ಸ್ಥಳವನ್ನು ವ್ಯಯಿಸಿದೆ.

ದಿನಾಂಕರೇಖೆ:
ಪತ್ರಿಕೆಗಳು ಸುದ್ದಿಯ ವರದಿಯ ಪ್ರಾರಂಭದಲ್ಲಿ ದಿನಾಂಕವನ್ನು ದಾಖಲಿಸಬೇಕು. ಹಾಗಿದ್ದಾಗ ಮಾತ್ರ ಸುದ್ದಿಯ ತಾಜಾತನ ತಿಳಿಯುತ್ತದೆ. ಸಂಯುಕ್ತ ಕರ್ನಾಟಕ ಹಾಗು  ಕನ್ನಡ ಪ್ರಭಾ ಪತ್ರಿಕೆಗಳು ತಾವು ಪ್ರಕಟಿಸಿದ ಬಹುತೇಕ ಸುದ್ದಿಗಳಿಗೆ ದಿನಾಂಕವನ್ನು ನಮೂದಿಸಿವೆ. ಆದರೆ ವಿಜಯ ಕರ್ನಾಟಕ ಹಾಗು ಪ್ರಜಾವಾಣಿ ಪತ್ರಿಕೆಗಳು ಮಾತ್ರ ಯಾವ ಸುದ್ದಿಗೂ ದಿನಾಂಕವನ್ನು ಕೊಟ್ಟಿಲ್ಲ. ತಾವು ಹಳಸಲು ಸುದ್ದಿಯನ್ನು ಪ್ರಕಟಿಸಿದಾಗ, ಓದುಗರಿಗೆ ಅದರ ಅರಿವಾಗಬಾರದೆನ್ನುವ ಠಕ್ಕತನವೆ ಇದಕ್ಕೆ ಕಾರಣವೇ?

ಉದಾಹರಣೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಎರಡು ಸುದ್ದಿಗಳನ್ನು ನೋಡಿರಿ:

ಮೊದಲನೆಯ ಸುದ್ದಿಯಲ್ಲಿ ರವಿವಾರ  ಎಂದು ದಿನವನ್ನು ಹೇಳಿದ್ದಾರೆಯೆ ಹೊರತು ಮೇ ೩೦ ಎನ್ನುವ ದಿನಾಂಕವನ್ನು ಹೇಳಿಲ್ಲ. ಮೇ ೩೦ರಂದು ಭಾರತೀಯರು ತ್ರಿನಿದಾದ ದೇಶಕ್ಕೆ  ವಲಸೆ ಹೋದ ದಿನವೆಂದು ಆಚರಿಸುತ್ತಾರೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಇದು ಅಪೂರ್ಣ ವರದಿಯ ಉದಾಹರಣೆ.

ಎರಡನೆಯ ಸುದ್ದಿಯು ಇನ್ನಿಷ್ಟು ಕಳಪೆ ವರದಿಯ ನಿದರ್ಶನವಾಗಿದೆ. ಲಂಡನ್ನಿನಲ್ಲಿ ತೊಗಲು ಬೊಂಬೆಯಾಟ ಯಾವಾಗ ನಡೆಯಿತು ಎನ್ನುವದಕ್ಕೆ ಯಾವುದೇ ಸುಳಿವನ್ನು ಇಲ್ಲಿ ನೀಡಿಲ್ಲ. ಅಂತರಜಾಲ ಶೋಧನೆ ಮಾಡಿದರೂ ಸಹ ನನಗೆ ಯಾವುದೆ ಧನಾತ್ಮಕ ಪರಿಣಾಮ ಲಭಿಸಲಿಲ್ಲ. ಈ ಸುದ್ದಿಯನ್ನು ನಂಬುವದು ಹೇಗೆ? ಇದು ಮಿಥ್ಯಾ ಸುದ್ದಿ ಯಾಕಾಗಿರಬಾರದು? ಆದುದರಿಂದ ಪ್ರತಿಯೊಂದು ಸುದ್ದಿಯ ತುಣುಕಿಗೂ ಪತ್ರಿಕೆಯು ದಿನಾಂಕವನ್ನು ನಮೂದಿಸಲೇ ಬೇಕು.

ಭಾಷಾಶುದ್ಧಿ :
ಓರ್ವ ವ್ಯಕ್ತಿ ಭಾಷೆಯನ್ನು ಕಲಿಯುವದೇ ಪತ್ರಿಕೆಗಳ ಮೂಲಕ. ಪತ್ರಿಕೆಯಲ್ಲಿ ದಾಖಲಾದ ಕಾಗುಣಿತವೇ ತಪ್ಪಾದರೆ, ಈ ತಪ್ಪು ಲಕ್ಷಾನುಗಟ್ಟಲೆ ಓದುಗರ ಮೂಲಕ ಎಲ್ಲೆಡೆ ಹರಡಿ ಸಾರ್ವತ್ರಿಕವಾಗುತ್ತದೆ.

ದಿ: ೧-೬-೨೦೧೦ರಂದು ಪ್ರಕಟವಾದ ಈ ನಾಲ್ಕೂ ಪತ್ರಿಕೆಗಳ ಸಂಚಿಕೆಗಳಲ್ಲಿ ಝಾರಖಂಡ ಎನ್ನುವ ಪದವನ್ನು ಜಾರ್ಖಂಡ್  ಎಂದು ಬರೆಯಲಾಗಿದೆ. ಸ್ವಾಮಿ ಸಂಪಾದಕರೆ, ಇಂತಹ ಹೊಸ ಪದವೊಂದನ್ನು ನೀವು ನೋಡಿದಾಗ, ವರದಿ ಬರೆಯುವ ಮೊದಲೊಮ್ಮೆ, ಇಂಗ್ಲಿಶ್ ವಿಕಿಪೀಡಿಯಾದಲ್ಲಿ ಒಮ್ಮೆ ಶೋಧನೆ ಮಾಡಿರಿ. ಅಲ್ಲಿ ಈ ಪದದ ಉಚ್ಚಾರವನ್ನು ಬರೆದಿರುತ್ತಾರೆ. ಅಲ್ಲದೆ ಉಚ್ಚಾರವನ್ನು ಧ್ವನಿಸಿ ತೋರಿಸುವ ಸೌಲಭ್ಯವೂ ಅಲ್ಲಿದೆ. ಕರ್ನಾಟಕದ ಕೆಲವು ನವ-ವೈಯಾಕರಣಿಗಳು ‘ಕನ್ನಡದಲ್ಲಿ ಮಹಾಪ್ರಾಣದ ಉಚ್ಚಾರ ಇಲ್ಲ, ಆದುದರಿಂದ ನಾವು ಬರೆಯುವದು ಹೀಗೇ’ ಎನ್ನುವ ಹುಚ್ಚಾರವನ್ನು ಮಾಡುತ್ತಾರೆ. ಹಾಗಿದ್ದರೆ, ಜಾರ್ಕಂಡ್ ಎಂದು ಬರೆಯಬೇಕಿತ್ತಲ್ಲ! ‘ಭಾರತ’ ಪದವನ್ನು ‘ಬಾರತ’ ಎಂದು ನೀವು ಬರೆಯುತ್ತೀರಾ? ಝಾರಖಂಡ ಮಾತ್ರ ಜಾರ್ಕಂಡ್ ಏಕಾಗಬೇಕು? ಮರಾಠಿ ಬಾಷಿಕರು ‘ಕನ್ನಡ’ಕ್ಕೆ ‘ಕಾನಡಿ’ ಎಂದು ಕರೆದಾಗ ನಿಮ್ಮ ಮೈ ಉರಿಯುವದಿಲ್ಲವೆ? ಅಥವಾ ವಿಶ್ವೇಶ್ವರ ಭಟ್ಟರನ್ನು ಇಸ್ವೇಸ್ವರ ಬಟ್ಟ ಎಂದು ಬರೆದರೆ, ಭಟ್ಟರಿಗೆ ಬೇಜಾರಾಗುವದಿಲ್ಲವೆ? ಹಾಗಿದ್ದಾಗ ಝಾರಖಂಡಕ್ಕೆ  ಜಾರ್ಖಂಡ್ ಎಂದು ಬರೆದರೆ, ಝಾರಖಂಡ ನಿವಾಸಿಗಳ ಮನಸ್ಸು ನೋಯುವದಿಲ್ಲವೆ?

ಕಾಗುಣಿತದ ತಪ್ಪುಗಳನ್ನು ಮಾಡುವಲ್ಲಿ ಸಂಯುಕ್ತ ಕರ್ನಾಟಕವು ಎಲ್ಲಕ್ಕೂ ಮುಂದಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯ ಕಾಗುಣಿತದ ತಪ್ಪುಗಳನ್ನು ನಾನು ಈ ಮೊದಲೂ ಎತ್ತಿ ತೋರಿಸಿದ್ದೆ. ಅವುಗಳನ್ನು ಇಲ್ಲಿ ಹಾಗು ಇಲ್ಲಿ ನೋಡಬಹುದು. 

ದಿನಾಂಕ ೧-೬-೨೦೧೦ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ತಪ್ಪು ಹೀಗಿದೆ:

ವರದಿಯ ಕೊನೆಯವರೆಗೂ ‘ಬೇದಿ’ ಎನ್ನುವ ತಪ್ಪನ್ನು ಮತ್ತೆ ಮತ್ತೆ ಮಾಡಿದ್ದು ಪತ್ರಿಕೆಯ ಹೆಚ್ಚುಗಾರಿಕೆಯಾಗಿದೆ.


ಇಂಗ್ಲಿಶ್ ಪದಗಳು:

ಇಂಗ್ಲಿಶ್ ಪದಗಳನ್ನು ಬರೆಯುವಾಗ, ಸಂಯುಕ್ತ ಕರ್ನಾಟಕಕ್ಕೆ ಏನು ಸಮಸ್ಯೆ ಬರುವುದೋ ನನಗೆ ತಿಳಿಯದು. ಉಳಿದೆಲ್ಲ ಪತ್ರಿಕೆಗಳು ‘ಆರ್ಟ್ ಆಫ್ ಲಿವಿಂಗ್’ ಎಂದು ಬರೆದಾಗ, ಸಂಯುಕ್ತ ಕರ್ನಾಟಕದಲ್ಲಿ ಮಾತ್ರ ‘ಆರ್ಟ್ ಆಫ್ ಲೀವಿಂಗ್’ ಎಂದು ಬರೆದಿದ್ದಾರೆ, (ಮೂರು ಸಲ). ಲಿವಿಂಗ್( = ಜೀವಿಸುವದು) ಬೇಡವಾದಾಗ ಮನುಷ್ಯನು ಲೀವಿಂಗ್ (= ಹೊರಡುವದು) ಮಾಡುತ್ತಾನೆ, ಅಲ್ಲವೆ?

ಜನಪ್ರಿಯತೆಯ ಗುಟ್ಟೇನು?
ಇಷ್ಟೆಲ್ಲ ಲೋಪದೋಷಗಳಿದ್ದರೂ ಸಹ ವಿಜಯ ಕರ್ನಾಟಕ ಪತ್ರಿಕೆಯು ಇಂದು ಜನಪ್ರಿಯತೆಯ ಶಿಖರದಲ್ಲಿದೆ. ಸಂಯುಕ್ತ ಕರ್ನಾಟಕವು ಕನಿಷ್ಠ ಮಟ್ಟದಲ್ಲಿದೆ. ಇದಕ್ಕೆ ಕಾರಣಗಳೇನು?

ಇಸವಿ ೨೦೦೦ದಲ್ಲಿ ವಿಜಯ ಕರ್ನಾಟಕವು ಪ್ರಾರಂಭವಾದ ಬಳಿಕ ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ವಕ್ರ ಮಾರ್ಗವನ್ನು ಹಿಡಿಯಿತೆನ್ನಬಹುದು. ಪತ್ರಿಕೆಯ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಉಳಿದ ಪತ್ರಿಕೆಗಳ ತೊಡೆಯ ಮೇಲೆ ಗದಾಪ್ರಹಾರ ಮಾಡಿತು. ಸರಿ, ಉಳಿದ ಪತ್ರಿಕೆಗಳೂ ಸಹ ಬೆಲೆಯನ್ನು ಕಡಿತಗೊಳಿಸಿದವು. ಆಬಳಿಕ ವಿಜಯ ಕರ್ನಾಟಕವು ತನ್ನ ಹೊಚ್ಚ ಹೊಸ ಭಾಷಾಪ್ರಯೋಗಗಳ ಮೂಲಕ ಓದುಗರನ್ನು ಆಕರ್ಷಿಸಿತು. ತಲೆಬರಹವನ್ನು ಭಾಗಶಃ ತುಂಡರಿಸಿ, ವಿಶೇಷ ಅರ್ಥ ಬರುವಂತೆ ಮಾಡಿತು. ಈ ವಿಷಯದಲ್ಲಿ ವಿಜಯ ಕರ್ನಾಟಕದ ಸಂಪಾದಕರು ಪ್ರತಿಭಾಶಾಲಿಗಳು. ವಿಜಯ ಕರ್ನಾಟಕವನ್ನು ಅನುಕರಿಸ ಹೋದ ಸಂಯುಕ್ತ ಕರ್ನಾಟಕವು ನಗೆಗೀಡಾಗುವಂತಹ ತಲೆಬರಹಗಳನ್ನು ನಿರ್ಮಿಸಿದೆ. ಆದರೆ, ಪ್ರಜಾವಾಣಿ ಪತ್ರಿಕೆಯು ಮಾತ್ರ ತನ್ನ ಗಂಭೀರ, ಸಭ್ಯ ನಿಲುವನ್ನು ಉಳಿಸಿಕೊಂಡು ಬಂದಿದೆ.

ಎರಡನೆಯದಾಗಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವ ಅಂಕಣ ಲೇಖನಗಳೇ ಈ ಪತ್ರಿಕೆಯ ಜನಪ್ರಿಯತೆಯ ನಿಜವಾದ ಕಾರಣವೆಂದು ಭಾಸವಾಗುತ್ತದೆ.
(೧) ಶ್ರೀ ಶ್ರೀವತ್ಸ ಜೋಶಿಯವರ ಸರಸ ಲೇಖನಮಾಲೆ: ಪರಾಗಸ್ಪರ್ಶ
(೨) ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಯವರ ತಿಳಿವು ನೀಡುವ ತಿಳಿಯಾದ ಲೇಖನಮಾಲೆ: ಬಿಸಿಲು ಬೆಳದಿಂಗಳು
(೩) ಶ್ರೀ ಪ್ರತಾಪ ಸಿಂಹರ ಅಂಕಣ: ಬತ್ತಲೆ ಜಗತ್ತು
(೪) ಶ್ರೀ ತ್ಯಾಗರಾಜರು ಬರೆಯುವ ರಾಜಕೀಯ ಒಳನೋಟದ ’ಒಳಸುಳಿ’
(೫) ಶ್ರೀ ಪ್ರಭಾಕರರು ಬರೆಯುವ ವಿನೋದಮಯ ಲೇಖನಮಾಲೆ: ‘ಟಾಂಗ್’
(೬) ಕೆಲವೊಮ್ಮೆ ಸ್ವಾರಸ್ಯಕರ ಮಾಹಿತಿ ನೀಡುವ ವಿಶ್ವೇಶ್ವರ ಭಟ್ಟರ ಸುದ್ದಿಮನೆ.

ಮೂರನೆಯದಾಗಿ ಕೆಲವು ರಾಜಕಾರಣಿಗಳ ಕೊಳಕನ್ನು ಬಯಲು ಮಾಡುವಲ್ಲಿ ವಿಜಯ ಕರ್ನಾಟಕವು ತೋರುವ ಅವಿಶ್ರಾಂತ ಪ್ರಯತ್ನವೂ ಸಹ ವಿಜಯ ಕರ್ನಾಟಕಕ್ಕೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ.

ವಿಜಯ ಕರ್ನಾಟಕದ ದಾಳಿಗೆ ಸೊಪ್ಪು ಹಾಕದ ಪ್ರಜಾವಾಣಿಯು ತನ್ನ ಗಂಭೀರ ನಿಲುವನ್ನು ಉಳಿಸಿಕೊಂಡು ಬಂದಿದೆ. ಸುದ್ದಿಯ ಖಚಿತತೆ ಹಾಗು ಪರಿಪೂರ್ಣ ಮಾಹಿತಿ ನೀಡುವಲ್ಲಿ ಇದು ವಿಜಯ ಕರ್ನಾಟಕ ಪತ್ರಿಕೆಗಿಂತಲೂ ಮುಂದಿದೆ. ಈ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಲೇಖನಗಳೂ ಸಹ ಉತ್ತಮ ಪ್ರಮಾಣದ್ದಾಗಿವೆ. ಅಲ್ಲದೆ ಚಿತ್ರವಿಚಿತ್ರ ಭಾಷಾಪ್ರಯೋಗಗಳ ಮೂಲಕ ಕನ್ನಡದ ಕೊರಳು ಕೊಯ್ಯುವ ಕೆಲಸವನ್ನು ಇದು ಮಾಡಿಲ್ಲ. ಆದರೆ ಈ ಪತ್ರಿಕೆಯ ಪ್ರಾದೇಶಿಕ ಆವೃತ್ತಿಯು ಪ್ರಾದೇಶಿಕತೆಯ ವೈಶಿಷ್ಟ್ಯವನ್ನು ತೋರಿಸದೆ ಇರುವದರಿಂದ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಲು ವಿಫಲವಾಗಿದೆ.

ಈ ಪತ್ರಿಕೆಗಳ ದೋಷಗಳೇನು?
ವಿಜಯ ಕರ್ನಾಟಕ :
(೧) ಈ ಪತ್ರಿಕೆಯು ಕನ್ನಡ ಪದಗಳನ್ನು ಬಳಸಲು ಕಲಿಯಬೇಕು. ಸಂಪಾದಕರು ಒಂದು ಇಂಗ್ಲಿಶ್-ಕನ್ನಡ ಪದಕೋಶವನ್ನು ಮೇಜಿನ ಮೇಲೆ ಇಟ್ಟುಕೊಂಡಿರುವದು ಉಪಯುಕ್ತವಾಗಬಹುದು.

(೨) ‘ಒಂದು ಪದವನು ಇವರು ಅಂದಗೆಡಿಸಿಹರಯ್ಯ!’
One word is too often profaned  ಎಂದು ಶೆಲ್ಲಿ ತನ್ನ ಕವನದಲ್ಲಿ ಹೇಳಿದ್ದಾನೆ. ವಿಜಯ ಕರ್ನಾಟಕದಲ್ಲಿ Too many words are too often profaned. ಒಂದು ಉದಾಹರಣೆ ಹೀಗಿದೆ:
‘ಬ್ರಾ’ ಎನ್ನುವ ಪದವನ್ನು ಎತ್ತಿ ತೋರಿಸುವ ಉದ್ದೇಶದಿಂದ ವಿಜಯ ಕರ್ನಾಟಕದ ಒಂದು ಹಳೆಯ ಪುರವಣಿಯಲ್ಲಿ ‘ದಿಗ್ಭ್ರಾಂತ’ ಪದದ ಬದಲಾಗಿ ದಿಗ್‘ಬ್ರಾಂ’ತ ಎನ್ನುವ ಪದವನ್ನು ಬಳಸಲಾಗಿದೆ. ಈ ತರಹ ಪದಗಳನ್ನು ವಿರೂಪಿಸುವದು ಕನ್ನಡದ ಕತ್ತು ಕುಯ್ಯುವ ಕೆಲಸವಲ್ಲವೆ?

(೩) ವಿಜಯ ಕರ್ನಾಟಕವು ‘ಸಭ್ಯಸಾಚಿ’ ಎನ್ನುವ ಹಿತೋಕ್ತಿಯನ್ನು ಓದುಗರಿಗೆ ನಿಯಮಿತವಾಗಿ ನೀಡುತ್ತಲಿದೆ. ಆದರೆ ತಾನೂ ಹಾಗಿರಬೇಕಾದದ್ದು ತನ್ನ ಪರಮ ಹೊಣೆಗಾರಿಕೆ ಎನ್ನುವದನ್ನು ಮರೆತು ಬಿಟ್ಟಿದೆ. ವಿಜಯ ಕರ್ನಾಟಕದ ಸಿನೆಮಾ ಪುರವಣಿಗಳಲ್ಲಿ ಬರೆಯುವವರು ನಟಿಯರ ಬಗೆಗೆ ಬರೆಯುವಾಗ ಗೌರವದ ಎಲ್ಲೆಯನ್ನು ಮೀರುತ್ತಾರೆ. ಉದಾಹರಣೆಗೆ ೨೮-೧೦-೨೦೧೦ರ ಪುರವಣಿಯಲ್ಲಿ ಬಂದ ಒಂದು ಲೇಖನದ ತಲೆಬರಹ ಹೀಗಿದೆ:
ರೋಡಿಗಿಳೀ ರೂಪಿಕಾ..”
ರೂಪಿಕಾ ಎನ್ನುವ ನಟಿಯ ಬಗೆಗಿನ ತಲೆಬರಹವಿದು.
ಬರಹದ ಕೊನೆಕೊನೆಗೆ ಏಕವಚನ ಪ್ರಾರಂಭವಾಯಿತು. “ರೂಪಿ ಟೆಂಥ್ ಪಾಸಾಗಿಲ್ಲ…..ಈಗಲೇ ಇವಳಿಗೆ ಇಷ್ಟು ಬಿಲ್ಡ್ ಅಪ್ಪು……..ಇವಳು ಅಮೂಲ್ಯಾ ಆಗಲು ಸಾಧ್ಯವಿಲ್ಲ…..”

ಯಾವುದೇ ಹೆಣ್ಣನ್ನಾದರೂ ಗೌರವದಿಂದ ಕಾಣಬೇಕು. ಅದು ಸಾಭ್ಯಸ್ಥಿಕೆ. ಬಹುಶಃ ಈ ಲೇಖನ ಬರೆದ ವರದಿಗಾರ ರೂಪಿಕಾರಿಂದ ಯಾವಾಗಲೊ ಒಮ್ಮೆ ಉಗಿಸಿಕೊಂಡಿರಬಹುದೆ? ಅದಕ್ಕಾಗಿಯೇ ಹೀಗೆಲ್ಲ ಹೀಯಾಳಿಸಿ ಬರೆದು ಸೇಡು ತೀರಿಸಿಕೊಂಡಿರಬಹುದೆ? ಅದೇನೆ ಇರಲಿ, ಸಭ್ಯಸಾಚಿತ್ವವನ್ನು ಪರರಿಗೆ ಉಪದೇಶಿಸುವ ಮುಖ್ಯ ಸಂಪಾದಕರು ಈ ಲೇಖನವನ್ನು ಕಣ್ಣು ತೆರೆದುಕೊಂಡು ಅಂಗೀಕರಿಸಿದರೊ ಅಥವಾ ಕಣ್ಣು ಮುಚ್ಚಿಕೊಂಡಿದ್ದರೊ?

ಸಂಯುಕ್ತ ಕರ್ನಾಟಕ :
(೧) ವಿಜಯ ಕರ್ನಾಟಕದ ನಕಲು ಮಾಡುವದನ್ನು ಬಿಡಬೇಕು.
(೨) ಈ ಮೊದಲು ತಾನೇ ಟಂಕಿಸಿದಂತಹ ಕನ್ನಡ ಪದಗಳನ್ನು ಬಳಸಬೇಕು.
(೩) ಸಂಯುಕ್ತ ಕರ್ನಾಟಕದ ಅಂಕಣ ಲೇಖನಗಳಲ್ಲಿ ಯಾವುದೇ ಸ್ವಾರಸ್ಯವಿಲ್ಲ, ತಾಜಾತನವೂ ಇಲ್ಲ. ಶ್ರೀ ಕೆ.ಎಸ್. ನಾರಾಯಣಾಚಾರ್ಯ ಎನ್ನುವ ಹಿರಿಯರು ಈ ಪತ್ರಿಕೆಯಲ್ಲಿ ನಿಯತವಾಗಿ ಬರೆಯುತ್ತಾರೆ. ಇವರ ಲೇಖನಗಳಲ್ಲಿ ಇರುವದು ಕೇವಲ ಪುರಾಣ ಮಂಥನ, ಪುರಾಣ ಚಿಂತನ. ಹಳೆಯದೆಲ್ಲ ಹೊನ್ನು ಎನ್ನುವದು ಇವರ ಚಿಂತನ ಸಾರ. ಶ್ರೀ ನವರತ್ನ ರಾಜಾರಾಯರು ವೈಚಾರಿಕ ಲೇಖನಗಳನ್ನು ಬರೆದರೂ ಸಹ ಅವುಗಳಲ್ಲಿ ವರ್ತಮಾನದ ತುರ್ತು ಇರುವದಿಲ್ಲ.  ಶ್ರೀ ಮನೋಜ ಪಾಟೀಲರು ವರ್ತಮಾನದ ತುರ್ತಿನ ಅಂಕಣಗಳನ್ನು ಬರೆದರೂ ಸಹ, ಅವುಗಳಲ್ಲಿ ಇನ್ನಷ್ಟು ಗಾಢತೆ ಬರಬೇಕು. ಇನ್ನು ವೈದ್ಯರ ಸುಬೋಧ ರಾಮಾಯಣವನ್ನು ಶ್ರೀರಾಮಚಂದ್ರನೇ ಓದಬೇಕು. ಎಲ್ಲದಕ್ಕೂ ಕನಿಷ್ಠ ಅಂಕಣವೆಂದರೆ ‘ಗೋವಿಂದಾ, ಗೋವಿಂದಾ’. ಇದು ನಿಜವಾಗಲೂ ‘ಗೋssವಿಂದಾ!’ ಸಂಯುಕ್ತ ಕರ್ನಾಟಕವು ಅಂಕಣಗಳಿಗಾಗಿ ಸ್ಥಳ ಹಾಳು ಮಾಡುವದರ ಬದಲಾಗಿ, ಇನ್ನಿಷ್ಟು ಸುದ್ದಿಗಳನ್ನು ಸೇರಿಸಿದರೆ, ಓದುಗ ವೃಂದವು ಹೆಚ್ಚಬಹುದು.

ಪ್ರಜಾವಾಣಿ:
ಹುಬ್ಬಳ್ಳಿ ಆವೃತ್ತಿಯಲ್ಲಿಯ ಸ್ಥಳೀಯ ಸುದ್ದಿಗಳಿಗೆ ಹುಬ್ಬಳ್ಳಿ ಭಾಷೆಯನ್ನು ಬಳಸಬೇಕು ; ಬೆಂಗಳೂರು ಭಾಷೆಯನ್ನು ಬಳಸಬಾರದು. ಆದುದರಿಂದ ಪ್ರಾದೇಶಿಕ ಭಾಷೆಯ / ರಿವಾಜಿನ ಅರಿವುಳ್ಳ ಸಂಪಾದಕರನ್ನು / ಉಪಸಂಪಾದಕರನ್ನು ನಿಯಮಿಸಿಕೊಳ್ಳಬೇಕು. ಒಂದು ಉದಾಹರಣೆ ಕೊಡುತ್ತೇನೆ :

‘ಹುರಕಡ್ಲಿ ಅಜ್ಜ’ ಎಂದು ಖ್ಯಾತರಾದ ಆಧ್ಯಾತ್ಮಿಕ ಸಾಧಕರೊಬ್ಬರು ನಿಧನರಾದಾಗ, ಪ್ರಜಾವಾಣಿಯ ಹುಬ್ಬಳ್ಳಿ ಆವೃತ್ತಿಯು ಅವರ ಹೆಸರನ್ನು ‘ಹುರಕಡ್ಲಿ ಅಜ್ಜನವರ್’ ಎಂದು ಬರೆದಿತ್ತು. ಬಹುಶ: ಪತ್ರಿಕಾ ಸಂಪಾದಕರು ‘ಅಜ್ಜನವರ್’ ಎನ್ನುವದು ಅವರ ಅಡ್ಡಹೆಸರು ಎಂದು ತಿಳಿದಿರಬಹುದು ! ಉತ್ತರ ಕರ್ನಾಟಕದಲ್ಲಿ ಹಿರಿಯರನ್ನು ಗೌರವದಿಂದ ‘ಅಜ್ಜ’ ಎಂದು ಕರೆಯುತ್ತಾರೆ ; ಅದು ಅವರ ಅಡ್ಡ ಹೆಸರಲ್ಲ! ಪ್ರಾದೇಶಿಕ ತಿಳಿವಳಿಕೆಯ ಅಭಾವದಿಂದ ಹೀಗಾಗುತ್ತದೆ.
………………………………………………………
ಏನೇ ಇರಲಿ, ಕನ್ನಡ ಪತ್ರಿಕೆಗಳು ನಮ್ಮ ಪತ್ರಿಕೆಗಳು. ಈ ಪತ್ರಿಕೆಗಳನ್ನು ಓದುವಾಗ ಸಮಾಚಾರದ ಖುಶಿಯ ಜೊತೆಗೇ ಭಾಷೆಯ ಖುಶಿಯೂ ಆಗುತ್ತಲಿದೆ. ಒಬ್ಬ ಓದುಗನಾಗಿ ಕನ್ನಡ ಪತ್ರಿಕೆಗಳ ಗುಣಾವಗುಣಗಳನ್ನು ನನಗೆ ತಿಳಿದಂತೆ ಪರಾಮರ್ಶಿಸಿ ನಿಮ್ಮೆದುರಿಗೆ ಇರಿಸಿದ್ದೇನೆ. ಕಣ್ತಪ್ಪಿನಿಂದ ಅನೇಕ ಲೋಪ ದೋಷಗಳು ಇಲ್ಲಿ ನುಸುಳಿರಬಹುದು. ಅಂತಹ ಪ್ರಸಂಗಗಳಲ್ಲಿ, ನಿಮ್ಮ ಕ್ಷಮೆ ಕೋರುತ್ತೇನೆ.

ನಮ್ಮ ಪತ್ರಿಕೆಗಳು ‘ಸಿರಿಗನ್ನಡಂ ಗೆಲ್ಗೆ’ ಎಂದು ಹೇಳಿದರೆ ಸಾಲದು; ‘ಸರಿಗನ್ನಡಂ ಗೆಲ್ಗೆ’ ಎಂದೂ ಹೇಳಬೇಕು.

Sunday, May 16, 2010

"ಹರಿಚಿತ್ತ ಸತ್ಯ"--ವಸುಧೇಂದ್ರರ ಮೊದಲ ಕಾದಂಬರಿ

ವಸುಧೇಂದ್ರರು  ತಮ್ಮ ಸಣ್ಣ ಕತೆಗಳ ಮೂಲಕ ಈಗಾಗಲೇ ಕನ್ನಡ ಓದುಗರಿಗೆ ಸುಪ್ರಿಯರಾಗಿದ್ದಾರೆ. “ಹರಿಚಿತ್ತ ಸತ್ಯ” ಇದು ವಸುಧೇಂದ್ರರ ಮೊದಲ ಕಾದಂಬರಿ ; ‘ದೇಶ ಕಾಲ ವಿಶೇಷ ’ (೨೦೧೦) ಸಂಚಿಕೆಯಲ್ಲಿ ಇದು ಪ್ರಕಟವಾಗಿದೆ.

ಸಣ್ಣ ಕತೆಗಳ ರಚನಾ ವಿಧಾನಕ್ಕೂ, ಕಾದಂಬರಿಯ ರಚನಾವಿಧಾನಕ್ಕೂ ತುಂಬ ಅಂತರವಿದೆ. ಸಣ್ಣ ಕತೆಗಳಲ್ಲಿ ಕಥಾನಕದ ಬೆಳವಣಿಗೆ ಕ್ಷಿಪ್ರವಾದದ್ದು. ಕಾದಂಬರಿಯಲ್ಲಿ ಸಂಯಮದ ಹಾಗು ತಾಳ್ಮೆಯ ಬರವಣಿಗೆಯ ಅಗತ್ಯವಿದೆ.   ಸಣ್ಣ ಕತೆಗಳು ಸಂಕೀರ್ಣವಾಗಿರುವದು ವಿರಳ. ಹೀಗಾಗಿ ಸಣ್ಣ ಕತೆಗಳಲ್ಲಿ focus ನಿರ್ಮಿಸುವದು ಸುಲಭ. ಆದರೆ ಕಾದಂಬರಿಗಳ ವಿಸ್ತಾರ ಹಾಗು ಸಂಕೀರ್ಣತೆಯನ್ನು ಗಮನಿಸಿದಾಗ, ಕಾದಂಬರಿಗೊಂದು focus ನಿರ್ಮಿಸುವದು ಹಾಗು ಬೆಳವಣಿಗೆಯಲ್ಲಿ ಸಮತೋಲನ ಕಾಯ್ದುಕೊಂಡು ಹೋಗುವದು ಕಷ್ಟದ ಕೆಲಸ. ಸಣ್ಣ ಕತೆಗಳ ರಚನೆಯಲ್ಲಿ ಪರಿಣತರಾದ ವಸುಧೇಂದ್ರರು ತಮ್ಮ ಮೊದಲ ಕಾದಂಬರಿಯ ರಚನೆಯಲ್ಲಿ ಯಶಸ್ವಿಯಾಗಿದ್ದಾರೆಯೆ?

“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಎರಡು ಸಮಾಂತರ ಕತೆಗಳಿವೆ. ಪ್ರವಾಹದಲ್ಲಿ ಸಿಲುಕಿದ ಕಟ್ಟಿಗೆಯ ಎರಡು ತುಂಡುಗಳು ಒಂದನ್ನೊಂದು ತಾಕುವ ಹಾಗು ಬೇರೆಯಾಗುವ ತರಹದಲ್ಲಿ ಈ ಎರಡೂ ಕತೆಗಳಲ್ಲಿಯ ಪಾತ್ರಧಾರಿಗಳ ವಿಯೋಗ, ಸಂಯೋಗವಿದೆ. ಆದರೆ ವಸುಧೇಂದ್ರರಿಗೆ ಕಥಾನಕವೇ ಮುಖ್ಯವಲ್ಲ. ತಮ್ಮ ಕೃತಿಗಳ ಮೂಲಕ ವಸುಧೇಂದ್ರರು ಅನೇಕ ವಿಷಯಗಳನ್ನು ಓದುಗರ ಕಣ್ಣೆದುರಿಗೆ ತರುತ್ತಾರೆ.

ಒಂದು ಸಂಪ್ರದಾಯನಿಷ್ಠ ಸಮಾಜದ ವಿವರಗಳು, ಆ ಸಮಾಜದ ಕಠಿಣವಾದ ಚೌಕಟ್ಟಿನಲ್ಲಿ ಬದುಕಬೇಕಾದ ಜೀವಿಗಳ ತೊಳಲಾಟ, ಆ ಮೂಲಕ ಅವರು ರೂಪಿಸಿಕೊಂಡ ವ್ಯಕ್ತಿತ್ವ ಹಾಗು ಸಮಾಜದ ಸಡಿಲಾಗುತ್ತಿರುವ ನಿಯಮಗಳು ಇವೆಲ್ಲವನ್ನು ಓದುಗರಿಗೆ ತಲುಪಿಸುವದು ವಸುಧೇಂದ್ರರ ಮುಖ್ಯ ಆಸಕ್ತಿಯಾಗಿದೆ.

“ಹರಿಚಿತ್ತ ಸತ್ಯ”  ಕಾದಂಬರಿಯ ನಾಯಕ ಮತ್ತು ನಾಯಕಿ ಯಾರು? ಔಪಚಾರಿಕ ನಾಯಕ ಮತ್ತು ನಾಯಕಿ ಅಲ್ಲದೆ, ಈ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಇಲ್ಲಿ ಅಷ್ಟೇ ಮಹತ್ವದ್ದಾಗಿವೆ. ಇವರನ್ನು ಬಂಧಿಸಿರುವ ವ್ಯವಸ್ಥೆಯೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುವದರಿಂದ, ಈ ವ್ಯವಸ್ಥೆಯನ್ನೂ ನಾಯಕ ಎನ್ನಬಹುದು. ಆದರೆ ಈ ಕಾದಂಬರಿಯ ನಿಜವಾದ ನಾಯಕನೆಂದರೆ ‘ವಿಧಿ’! ಅಂತಲೇ “ಹರಿಚಿತ್ತ ಸತ್ಯ” ಎನ್ನುವ ಹೆಸರು ಈ ಕಾದಂಬರಿಗೆ ಯಥಾರ್ಥವಾಗಿದೆ.

ವಸುಧೇಂದ್ರರ “ಹರಿಚಿತ್ತ ಸತ್ಯ” ಕಾದಂಬರಿಯ ಅವಲೋಕನಕ್ಕೂ ಮೊದಲಿಗೆ, ಕನ್ನಡ ಕಾದಂಬರಿಕಾರರು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸುವ ಕೆಲವು ವಿಧಾನಗಳನ್ನು ಗಮನಿಸೋಣ. ಕನ್ನಡದ ಮೊದಲ ಕಾದಂಬರಿಗಳಲ್ಲಿ ಲೇಖಕನ ನೇರ ಕಥನವಿರುತ್ತಿತ್ತು. ಅನಕೃ, ತರಾಸು, ಕಾರಂತ, ಮಾಸ್ತಿ,ಕುವೆಂಪು ಮೊದಲಾದವರು ಈ ವಿಧಾನವನ್ನು ಬಳಸಿದ ಲೇಖಕರು. ಶ್ರೀರಂಗರು ತಮ್ಮ ಕಾದಂಬರಿಗಳ ರಚನೆಗೆ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ. ನಾಯಕಿಯ first person ಕಥನ ಹಾಗು ಪೋಷಕ ಪಾತ್ರದ first person ಕಥನವನ್ನು ತ್ರಿವೇಣಿಯವರು ತಮ್ಮ “ಮೊದಲ ಹೆಜ್ಜೆ” ಕಾದಂಬರಿಯಲ್ಲಿ ಬಳಸಿದ್ದಾರೆ. ಈ ವಿಧಾನ ಬಳಸಿದವರಲ್ಲಿ ಬಹುಶ: ತ್ರಿವೇಣಿಯವರೇ ಮೊದಲಿಗರಿರಬಹುದು. ಕಣ್ಣಿಗೆ ಕಾಣುವ ಸತ್ಯವನ್ನು ಕಣ್ಣಿಗೆ ಕಾಣುವಂತೆ ಹೇಳಲು ಮುಜುಗರ ಪಟ್ಟ ದೇವನೂರು ಮಹಾದೇವರು “ಕುಸುಮ ಬಾಲೆ”ಗೆ ಆಡುನುಡಿಯ ಮುಸುಕನ್ನು ಹಾಕಿದರು ಹಾಗು mystic realism ವಿಧಾನ ಬಳಸಿದರು. ಇದೇ ಉದ್ದೇಶದಿಂದ ಕುಂ.ವೀರಭದ್ರಪ್ಪನವರು ತಮ್ಮ “ಅರಮನೆ” ಕಾದಂಬರಿಗೆ ಪೌರಾಣಿಕ ಆಕೃತಿ ಬಳಸಲು ಹೋಗಿ ಸೋತುಬಿಟ್ಟರು.  ಇವಲ್ಲದೆ flash back, ಪ್ರಯತ್ನಪೂರ್ವಕ ಸರಳತೆ ಅಥವಾ ಸಂಕೀರ್ಣತೆ ಇವೆಲ್ಲ ಕಾದಂಬರಿಯ ರಚನಾವಿಧಾನಗಳು. ವಸುಧೇಂದ್ರರ ಕಾದಂಬರಿಯ ರಚನಾವಿಧಾನ ಎಂತಹದು?

ವಸುಧೇಂದ್ರರು ತಮ್ಮ ಕಾದಂಬರಿಯ ನೆಯ್ಗೆಯಲ್ಲಿ  ವಿನೋದ  ಹಾಗೂ ಮರುಕ ಇವುಗಳನ್ನು ಹಾಸು ಮತ್ತು ಹೊಕ್ಕುಗಳಂತೆ ಬಳಸಿಕೊಳ್ಳುತ್ತಾರೆ.  ಇಡೀ ಕಾದಂಬರಿಯಲ್ಲಿ ಹೆಜ್ಜೆ ಹೆಜ್ಜೆಗೂ ತೆಳು ವಿನೋದವು ಹೊಮ್ಮುತ್ತಿದೆ. ಕೆಲವೊಂದು ಸಂದರ್ಭಗಳಂತೂ ತುಂಬ delightful ಮತ್ತು hilarious ಆಗಿವೆ. ಅಲ್ಲದೆ ಈ ನೆಯ್ಗೆಯ ಮೇಲೆ caricatureದ ಕಸೂತಿ ಬೇರೆ. ಆದರೆ ಓದುಗನನ್ನು  ನಗಿಸುವದಷ್ಟೇ ಈ ವಿನೋದದ ಸೀಮಿತ ಉದ್ದೇಶವಲ್ಲ. ಇಲ್ಲಿರುವ caricature ಸಮಾಜವನ್ನು target ಮಾಡಿದ ವ್ಯಂಗ್ಯವೇ ಹೊರತು ಪಾತ್ರಗಳ ಅವಹೇಳನವಲ್ಲ.

ವಿನೋದ ಅಥವಾ ಹಾಸ್ಯವನ್ನು ಬಳಸಿ ಮರುಕವನ್ನು ಸೃಷ್ಟಿಸಿದ ಪೂರ್ವಸೂರಿಗಳು ಕನ್ನಡ ಸಾಹಿತ್ಯದಲ್ಲಿ ಈ ಮೊದಲೂ ಇದ್ದರು. ಬೀchiಯವರು ಈ ಮಾತಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. (ಬೀchiಯವರು ಸಹ ಬಳ್ಳಾರಿಯವರೇ ಆಗಿದ್ದದು ಕಾಕತಾಳೀಯವೆ?) ಆದರೆ ಬೀchiಯವರ ಹಾಸ್ಯ ಸ್ವಲ್ಪ ಕಟುತರವಾದದ್ದು. ವಸುಧೇಂದ್ರರ ವಿನೋದ ಎಳೆ ಮಗುವಿನ ನಗೆಯಂತಹದು. ಅವರ ವಿನೋದದ ಕೆಲವು sampleಗಳನ್ನು ಇಲ್ಲಿ ನೋಡಬಹುದು:

ವಿಧವೆ ರಂಗಮ್ಮ ತನ್ನ ಮಗಳು ಪದ್ಮಾವತಿಯನ್ನು ಕನ್ಯಾಪರೀಕ್ಷೆಗೆಂದು ಕರೆದುಕೊಂಡು ಹೊರಟಿದ್ದಾಳೆ.  ಕಾಡು ಜಾಗದ ನಡುವೆ ಬಸ್ಸು ಕೆಟ್ಟು ನಿಲ್ಲುತ್ತದೆ. ಪ್ರಯಾಣಿಕರೆಲ್ಲ ಕೆಳಗಿಳಿದ ಮೇಲೆ ಗಂಡಸರೆಲ್ಲ ಮೂತ್ರವಿಸರ್ಜನೆಗೆ ರಸ್ತೆ ಬದಿಗೆ ಸಾಗುತ್ತಾರೆ. ಆಗ ರಂಗಮ್ಮ ಮಾಡುವ ಟೀಕೆಯನ್ನು ಕೇಳಿ:
[“ಈ ದರಿದ್ರ ಬಿಸಿಲಿಗೆ ಸ್ನಾನ ಮಾಡೋ ಹಂಗೆ ಬೆವರು ಇಳೀತಾ ಅದೆ. ಈ ರಂಡೇಗಂಡರಿಗೆ ಅದೆಲ್ಲಿಂದ ಉಚ್ಚಿಗೆ ಅವಸರ ಆಗಿದ್ದೀತು ಹೇಳೆ ಪದ್ದಿ? ನೆಪ ಸಿಕ್ಕರೆ ಸಾಕು, ಬಿಚ್ಚಿ ನಿಂತುಗೊಳ್ಳೋ ಚಟ ನೋಡು ಇವಕ್ಕೆ.” ]

ಈ ವಿಧವೆಗೆ ಜೊತೆಗಾರರಾಗಿ ಹೊರಟ ದಂಪತಿಗಳು ಸುಭದ್ರಮ್ಮ ಹಾಗು ಶ್ರೀಪತಿ.  ಬಸ್ಸು ಕೆಟ್ಟು ನಿಂತದ್ದು ರಂಗಮ್ಮನಿಗೆ ಆತಂಕದ ವಿಷಯವಾದರೆ, ರಂಗಮ್ಮನ ಆತಂಕವು ಇತರರಿಗೆ ನಗೆಚಾಟಿಕೆಯ ವಿಷಯವಾಗುತ್ತದೆ. ರಂಗಮ್ಮನ ಜೊತೆಗಾರ ಶ್ರೀಪತಿಯಂತೂ ಈ ಕಾಡಿನಲ್ಲಿ ಹನುಮಂತನ ಗುಡಿಯನ್ನು ಹುಡುಕುತ್ತ ಹೊರಟು ಬಿಟ್ಟಿದ್ದಾನೆ. ’ಕಂಡ ಕಂಡ ದೇವರಿಗೆ ಕೈ ಮುಗಿಯುವ ಶ್ರೀಪತಿ’ ಎನ್ನುವ ಅವನ ಖ್ಯಾತಿ ವರನ ಊರಿಗೂ ಸಹ ತಲುಪಿ ಬಿಟ್ಟಿದೆ. ಕನ್ಯಾಪರೀಕ್ಷೆಯ ಘಟನೆಯಂತೂ ವಿನೋದೋಲ್ಲಾಸದ ಪರಮಶಿಖರವನ್ನು ಮುಟ್ಟಿದೆ. ಆದರೆ…! ಅಲ್ಲಿಯೂ ಸಹ ಈ ಸಮಾಜದ ರಿವಾಜುಗಳನ್ನು ವಿಮರ್ಶೆಯ ಕಣ್ಣಿನಿಂದ ನೋಡುವದೇ ಮುಖ್ಯ ಉದ್ದೇಶವಾಗಿದೆ. ಈ ಉದಾಹರಣೆ ನೋಡಿ:
[ಸಾಲಿನ ಕೊನೆಯಲ್ಲಿದ್ದ ಪೂಜೆ ಮಾಡುತ್ತಿರುವ ಮಹನೀಯರ ಫೋಟೋಕ್ಕೆ ಭಕ್ತಿಯಿಂದ ಕೈಮುಗಿದ ಶ್ರೀಪತಿ ‘ಇವರು ಯಾವ ಮಠದ ಸ್ವಾಮಿಗಳು?’ ಎಂದು ಕೇಳಿದ. ಅತ್ಯಂತ ಸಾವಧಾನದ ದನಿಯಲ್ಲಿ ರಾಮರಾಯರು ‘ಅವರು ನಮ್ಮಪ್ಪ. ಮೂರು ಸಲ ಮದುವಿ ಆಗಿದ್ದರು. ಎಲ್ಲಾ ಸೇರಿ ಹತ್ತು ಮಕ್ಕಳು. ನಾನು ಕಡಿಯಾಕಿ ಮಗ’ ಎಂದರು.]

ಕಥಾನಾಯಕ ರಾಘವೇಂದ್ರನ  ಹಸುಗೂಸು ಸರಿರಾತ್ರಿಯಲ್ಲಿ ಎಚ್ಚರಾಗಿ ಅಳುತ್ತಿದೆ. ಅದನ್ನು ಸಮಾಧಾನಪಡಿಸಲು ಆತ ಸಂಡೂರಿನ ಓಣಿ ಓಣಿಗಳಲ್ಲಿ ಠಿಕಾಣಿ ಹೂಡಿರುವ ಹಂದಿಗಳನ್ನು ಹಾಗು ನಾಯಿಗಳನ್ನು ತೋರಿಸಲು ಹೋಗುತ್ತಾನೆ! ಅವನ ಶೈಲಿಯನ್ನಷ್ಟು ನೋಡಿರಿ:
[“ಅಗೋ ಅಲ್ಲಿ ದೊಡ್ಡ ಹಂದಿ ಅದೆ ನೋಡು. ಎಷ್ಟು ಮಕ್ಕಳವಮ್ಮಾ  ಹಂದೀಗೆ? ಒಂದು,ಎರಡು, ಮೂರು…..
ಅಬ್ಬಬ್ಬಾ, ಏಳು ಪುಟ್ಟಮ್ಮ ಮಕ್ಕಳು ಅವೇ ನೋಡೆ ನಮ್ಮ ಹಂದೀಗೆ………..”]

ಹಿಂದು ಸಮಾಜವು ರೂಢಿಸಿಕೊಂಡ ವಾತಾವರಣವು ಈ ರೀತಿಯಾಗಿ ಕೊಳೆತು ನಾರುತ್ತಿದ್ದರೆ, ಕ್ರಿಶ್ಚಿಯನ್ ಸಮಾಜದ ಶಿಕ್ಷಿತ ವ್ಯಕ್ತಿಗಳ ಆರೋಗ್ಯಕರ ಪರಿಸರದ ವರ್ಣನೆಯನ್ನು ಗಮನಿಸಿ:
[“…..ರಂಗಮ್ಮ ಮತ್ತು ಪದ್ದಿ ಇಬ್ಬರಿಗೂ ಭಯವಾಗಿತ್ತು. ಆದರೆ ರೂಮಿನ ಒಳಗೆ ಹೋದಾಗ ನಗುಮುಖದ
ಡಾಕ್ಟರರನ್ನು ಕಂಡು  ಸ್ವಲ್ಪ ಗೆಲುವಾದರು. ಟೇಬಲಿನ ತುದಿಯಲ್ಲಿ ಕೋತಿಯೊಂದು ಮರದ ಟೊಂಗೆಗೆ ಜೋಕಾಲಿ ಆಡುವ ಫೋಟೋ ಇತ್ತು. ಆ ಚಿತ್ರದ ಕೆಳಗೆ ಮನಸ್ಸು ಮರ್ಕಟ ಎಂದು ಬರೆದ ಒಂದು ನಾಮಫಲಕವಿತ್ತು…………….
‘ತಾಯಿ ಹೇಳಿ, ಯಾರಿಗೆ ಕಾಯಿಲೆ ಆಗಿದೆ?’ ಎಂದು ವಿನಯಪೂರ್ವಕವಾಗಿ ಡಾಕ್ಟರ ಥಾಮಸ್ ಕೇಳಿದರು…..”]

ಆಧುನಿಕ ಶಿಕ್ಷಣವು ಡಾಕ್ಟರ್ ಥಾಮಸ್ ಅವರಿಗೆ ನೀಡಿದ ಆರೋಗ್ಯಕರ ಹಾಗು ವಿನಯಶೀಲ ವ್ಯಕ್ತಿತ್ವವನ್ನು ರೂಢಿನಿಷ್ಠ ಬ್ರಾಹ್ಮಣ ಸಮಾಜದ ಆಢ್ಯರ ವ್ಯಕ್ತಿತ್ವದೊಡನೆ ಹೋಲಿಸಿದಾಗ, ಈ ಸಮಾಜಗಳ contrast ಎದ್ದು ಕಾಣುವಂತಿದೆ.

ಹಳೆಯ ತಲೆಗಳ ಸಂಪ್ರದಾಯನಿಷ್ಠೆಗೆ ವಿರುದ್ಧವಾಗಿ ಹೊಸ ತಲೆಗಳು ಬದಲಾವಣೆಯ ಗಾಳಿಯನ್ನು ಹೆದರುತ್ತಲೆ ಸ್ವೀಕರಿಸುತ್ತಿವೆ.  ಕಥಾನಾಯಕಿ ಪದ್ಮಾವತಿ ತನ್ನ ಗೆಳತಿ ಪಂಕಜಾಳೊಡನೆ ಸಿನೆಮಾಕ್ಕೆ ಹೋಗುವ ಸಂಭ್ರಮವನ್ನು ನೋಡಬೇಕು. ಪಂಕಜಾಳ ಗಂಡ ದುಬಾಯಿಯಿಂದ ಕಳಿಸಿದ ಸಲ್ವಾರ-ಕಮೀಜನ್ನು ಹಾಕಿಕೊಳ್ಳುವ ಧೈರ್ಯ ಸ್ವತಃ ಅವಳಿಗೇ ಇಲ್ಲ. ಅವಿವಾಹಿತೆಯಾಗಿದ್ದ ಪದ್ಮಾವತಿ ತಾನೇ ಆ ವೇಷವನ್ನು ಧರಿಸುತ್ತಾಳೆ. ಹೆದರುತ್ತಲೇ, ಎಲ್ಲರ ಕಣ್ಣು ತಪ್ಪಿಸುತ್ತಲೇ ಗೆಳತಿಯರಿಬ್ಬರೂ ಸಿನೆಮಾಗೆ ಹೋಗುತ್ತಾರೆ. ಹರೆಯದ ಈ ಗೆಳತಿಯರ ಮಾತುಗಳನ್ನು ಸಂಪ್ರದಾಯನಿಷ್ಠ ಹೆಂಗಸರು ಕನಸಿನಲ್ಲೂ ಆಡಲಾರರು!
[“..ಆದರೆ ಇಬ್ಬರೂ ಒಂದು ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದರು. ‘ರಾಜ್ ಕುಮಾರ್ ಬರೀ ಮೈಲೆ ಕಾಣಿಸಿಕೊಂಡಾಗ  ಅವನನ್ನ ಅಪ್ಪಿಗೊಂಡು ಅದೇ ಚಾದರದಾಗೆ ನಾನೂ ಅವನ ಜೋಡಿ ಮಲ್ಕೋಬೇಕು ಅನ್ನಿಸ್ತೇ’ ಎಂದು ಪಂಕಜ ಹೇಳಿದರೆ, ಪದ್ದಿ ಸೀಮೋಲ್ಲಂಘನೆ ಮಾಡಿ ’ಒಂದು ಸೀನಿನಾಗೆ ಆತ ಬಗ್ಗಿ ಪೆನ್ನು ಎತ್ತಿಗೊಳ್ತಾನೆ ನೋಡು, ಆಗ ನಂಗಂತೂ ಆತನ ಕುಂಡಿ ಸವರಬೇಕು ಅಂತ ಅನ್ನಿಸಿಬಿಡ್ತು’ ಎಂದಳು………”]

ವಿನೋದದ ಮುಖವಾಡ ಹೊತ್ತ ಈ ಕತೆಯ ಬೆಳವಣಿಗೆಯಲ್ಲಿ ವಿಧಿಯ ಪಾತ್ರವೇ ಮಹತ್ವದ್ದಾಗಿದೆ.  ಈ ಕಾದಂಬರಿಯಲ್ಲಿ ವಿಧಿಯು ಆಡುವ ಕುವಾಡಗಳಿಗೆ ಲೆಕ್ಕವಿಲ್ಲ. ಈ ಕಾದಂಬರಿಯ ಉದ್ದೇಶವು ಕೇವಲ ಕತೆ ಹೇಳುವದಲ್ಲ ಎನ್ನುವ ಮಾತನ್ನು ಗಮನಿಸಿದಾಗ, ಓದುಗನು ಈ ವಿಧಿಯಾಟವನ್ನು ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಇಂತಹ ವಿಧಿಲೀಲೆಗಳನ್ನು ಪಟ್ಟಿ ಮಾಡಿದರೆ, ಕಾದಂಬರಿಯ ಸ್ವಾರಸ್ಯ ಬಯಲಾಗುತ್ತದೆ. ಆದುದರಿಂದ, ಆ ಪಟ್ಟಿಯನ್ನು ಬದಿಗಿಟ್ಟುಬಿಡೋಣ.

ಇನ್ನು ಈ ಕಾದಂಬರಿಯ ಕೆಲವು ಪಾತ್ರಗಳನ್ನು ನೋಡೋಣ:
ವಸುಧೇಂದ್ರರ ಕತೆಗಳಲ್ಲಿ ಹಾಗು ಈ ಕಾದಂಬರಿಯಲ್ಲಿ ಹೆಂಗಸರು ಸಹಸಾ ಗಟ್ಟಿಗಿತ್ತಿಯರಾಗಿ ಹೊರಹೊಮ್ಮುತ್ತಾರೆ. ಕಥಾನಾಯಕಿ ಪದ್ಮಾವತಿ ಇನ್ನೂ ಎಂಟು ವರುಷದ ಚಿಕ್ಕ ಹುಡುಗಿ ಇರುವಾಗಲೆ ಅವಳ ತಾಯಿ ರಂಗಮ್ಮ ವಿಧವೆಯಾಗುತ್ತಾಳೆ. ಅವಳ ಹಿತೈಷಿಗಳು ತಲೆ ಬೋಳಿಸಿಕೊಳ್ಳುವದು ಬೇಡವೆಂದು ಹೇಳಿದರೂ ಸಹ, ಅವಳು ಕೇಶಮುಂಡನಕ್ಕೆ ಹಟ ಮಾಡುತ್ತಾಳೆ. ಅದರ ಕಾರಣವನ್ನಷ್ಟು ನೋಡಿರಿ:
[“ ‘ಮಡಿ ಆದರೆ ನಾಲ್ಕು ಮನಿ ಅಡಿಗಿ ಕೆಲಸ ಆದರೂ ಸಿಗ್ತದೆ. ಮಗಳು ದೊಡ್ಡೋಳು ಆಗೋ ತಂಕಾ ಹೆಂಗೋ ಹೊಟ್ಟಿ ಹೊರಕೋಬೇಕಲ್ಲ. ಕೂದಲಿಗೆ ಆಸಿ ಪಡ್ತೀನಿ ಅಂದ್ರೆ ಹೊಟ್ಟಿ ಸುಮ್ಮನಿರ್ತದೇನು?’ ಎಂದು ತಿಳಿಹೇಳಿದ್ದಳು.”]

ಎಂತಹ ಸಮಸ್ಯೆಗಳು ಬಂದು ಮುತ್ತಿಕೊಂಡಾಗಲೂ, ರಂಗಮ್ಮ ಧೈರ್ಯದಿಂದ ಸಂಭಾಳಿಸಿಕೊಂಡು, ಸಂಸಾರದ ಬಂಡಿಯನ್ನು ಸಾಗಿಸುತ್ತಾಳೆ.  ಪದ್ಮಾವತಿ ಹಾಗು ಅವಳ ಗೆಳತಿ ಪಂಕಜರೂ ಸಹ ವಿಧಿಲೀಲೆಗೆ ಬಲಿಯಾದವರೇ. ಅವರೂ ಸಹ ಬಂದದ್ದನ್ನೆಲ್ಲ ಎದುರಿಸಿಯೇ ಮುಂದುವರಿದವರು.

ವಸುಧೇಂದ್ರರ ಕತೆಗಳಲ್ಲಿ ಗಂಡಸರು ಸಾಮಾನ್ಯವಾಗಿ ಅಸಹಾಯಕ ವ್ಯಕ್ತಿತ್ವವುಳ್ಳವರು. ಈ ಕಾದಂಬರಿಯ ನಾಯಕ ರಾಘವೇಂದ್ರನದೂ ಅಂತಹ ವ್ಯಕ್ತಿತ್ವವೇ. ಹಬ್ಬದಡುಗೆಗಾಗಿ ಹೂರಣವನ್ನು ರುಬ್ಬುತ್ತಲೇ, ತನಗೊಬ್ಬ ಕನ್ಯೆ ಸಿಗುತ್ತಿಲ್ಲವೆಂದು ಈತ ತನ್ನ ತಾಯಿಯೆದುರಿಗೆ ತಕರಾರು ಹೇಳುತ್ತಾನೆ. ಈತನಿಗೆ ಕೊನೆಗೊಮ್ಮೆ ಸಿಕ್ಕ ಕನ್ಯೆ ಸುಧಾ ಮಾತ್ರ ಧೈರ್ಯಸ್ಥ ಹೆಣ್ಣು. ಪ್ರಸಂಗ ಬಂದರೆ, ಓಡುತ್ತಿರುವ ರೈಲಿನಿಂದ ಕಾಲುವೆಗೆ ಜಿಗಿಯಬಲ್ಲ ಗಟ್ಟಿಗಿತ್ತಿ. ಹಸಿ ಬಾಣಂತಿಯಿದ್ದಾಗಲೇ, ಮತ್ತೆ ಬೀಜಾರೋಪಣ ಮಾಡಿದ ಗಂಡನಿಗೆ ಇವಳು ಸಮಾಧಾನ ಹೇಳುವ ಪರಿಯನ್ನು ನೋಡಿ:
[“ಅತ್ತ ವನಮಾಲಾಬಾಯಿ ಮಠಕ್ಕೆ ಹೋಗಿದ್ದೇ ಇತ್ತ ರಾಘವೇಂದ್ರ ಸುಧಾಳ ಬಳಿ ಹಗೂರಕ್ಕೆ ಬಂದ. ಅತ್ಯಂತ ಕಳವಳದಿಂದ ’ನಿಂಗೆ ಏನಾದ್ರೂ ಆಗ್ತದೆ ಅಂತಾಳಲ್ಲೇ ಅಮ್ಮ’ ಎಂದ. ಅದಕ್ಕೆ ಮುಸಿಮುಸಿ ನಕ್ಕ ಸುಧಾ ‘ಏನೂ ಆಗಲ್ಲ ಸುಮ್ಮನಿರಿ. ನಾನು ಗಟ್ಟಿಮುಟ್ಟ ಹೆಣ್ಣು. ಪ್ರತಿಭಾಳ ಹುಟ್ಟಿದ ಹಬ್ಬ,  ಕೂಸಿನ ಹುಟ್ಟಿದ ಹಬ್ಬ ಒಂದೇ ದಿನ ಮಾಡೋಣಂತೆ’ ಎಂದು ಧೈರ್ಯ ತುಂಬಿದಳು. ರಾಘವೇಂದ್ರನಿಗೆ ಈಗ ಸಮಾಧಾನವಾಯ್ತು.”]

ಕಾದಂಬರಿಯಲ್ಲಿ ಬರುವ ಇತರ ಪಾತ್ರಗಳೂ ಸಹ ಮನಸ್ಸಿನಲ್ಲಿ ನಾಟುವಂತಿವೆ.  ಈ ಪಾತ್ರಗಳು ಕ್ಷಣಿಕ ಪಾತ್ರಗಳಾಗಿರಬಹುದು; ಈ ಪಾತ್ರಗಳಿಗೆ ಮಹತ್ವವಿರಲಿಕ್ಕಿಲ್ಲ. ಆದರೂ ಸಹ ಪ್ರಮುಖ ಪಾತ್ರಗಳಷ್ಟೇ ಗಟ್ಟಿಯಾಗಿ ಈ ಪಾತ್ರಗಳೂ ಸಹ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುತ್ತವೆ. ಕನ್ಯಾಪರೀಕ್ಷೆಗಾಗಿ ಬರುತ್ತಿರುವ ಟೋಳಿಗೆ ಮಾರ್ಗದರ್ಶನ ಮಾಡಲು ಬಂದ ಹುಡುಗ ಸುಧೀಂದ್ರನೇ ಆಗಲಿ, ಜಾಗಂಟೆ ಬಾರಿಸುವ ಹುಡುಗ ವಾಜಿಯೇ ಆಗಲಿ ಓದುಗನ ಚಿತ್ತಾಪಹರಣ ಮಾಡದೆ ಬಿಡುವದಿಲ್ಲ. ಇದಕ್ಕೆ ಕಾರಣವೇನು? ನನಗೆ ಅನಿಸುವದು ಹೀಗೆ: ವಸುಧೇಂದ್ರರ basic ಅಸಕ್ತಿ ಇರುವದು ಮನುಷ್ಯಜೀವಿಗಳಲ್ಲಿ ; ಪ್ರತಿಯೊಂದು ವ್ಯಕ್ತಿಯ ಭಾವನೆಗಳ ಬಗೆಗೂ ಅವರಿಗೆ ಅಪಾರ ಕಳಕಳಿ. ಹೀಗಾಗಿ ಅವರ ಕತೆಗಳಲ್ಲಿ ಪಾತ್ರಗಳು ಬಹಳ ಮುಖ್ಯವಾಗಿ ಬಿಡುತ್ತವೆ. ಅವರ ಕತೆಗಳಿಗೆ Human panorama ಎಂದು ಕರೆಯಬಹುದೇನೊ! ಈ ಕಾದಂಬರಿಯಲ್ಲಂತೂ ಮಾನವಾಸಕ್ತಿಗೆ ವಿಪುಲ ಅವಕಾಶವಿದೆ. ಈ ಮಾನವಾಸಕ್ತಿಯೇ ಈ ಕಾದಂಬರಿಯ ಪ್ರಮುಖ ಗುಣವಾಗಿದೆ.

“ಹರಿಚಿತ್ತ ಸತ್ಯ” ಕಾದಂಬರಿಯಲ್ಲಿ ಓದುಗನ ಮನಸ್ಸನ್ನು ವಿನೋದದ ಜೊತೆಗೇ ಉಲ್ಲಾಸದಿಂದ ತುಂಬುವ ಘಟನೆಗಳೂ ಇವೆ. ಕಥಾನಾಯಕ ರಾಘವೇಂದ್ರನು ತನ್ನ ಹೆಂಡತಿಯ ಮನೆ ಬಿಜಾಪುರಕ್ಕೆ ಹೋಗಿದ್ದು ಒಂದು ಅಂತಹ ಘಟನೆ. ಅವನಿಗೆ ಅಲ್ಲಿ ತನ್ನ ಹೆಂಡತಿಯ ಭೆಟ್ಟಿಯಾದ ಸಂದರ್ಭ ಮಾತ್ರ ಅವಿಸ್ಮರಣೀಯವಾಗಿದೆ!

ಕಾದಂಬರಿಯಲ್ಲಿ ಕೇವಲ ವಿನೋದ ತುಂಬಿದೆ ಎಂದಲ್ಲ. ಪಂಕಜಾ ಹಾಗು ಪದ್ಮಾವತಿಯ ಬಾಳಿಗೆ ತಿರುವು ಕೊಡುವ ಘಟನೆಗಳು ಕಳವಳವನ್ನು ಹಾಗು ಕನಿಕರವನ್ನು ಹುಟ್ಟಿಸುವಂತಿವೆ. ತಾಳ್ಮೆಯಿಂದ, ತಿಳಿವಳಿಕೆಯಿಂದ ಹಾಗು ಸೂಕ್ಷತೆಯಿಂದ ವಸುಧೇಂದ್ರರು ವರ್ಣಿಸಿದ ಈ ವಿವರಗಳನ್ನು ಓದುತ್ತಿದ್ದಂತೆ, ಈ ಲೇಖಕರ ಬಗೆಗೆ ಓದುಗನಲ್ಲಿ ಗೌರವ ಹಾಗು ಅಭಿಮಾನ ಹುಟ್ಟುತ್ತವೆ.

ಕಾದಂಬರಿಯ ಕಥಾನಕದ ಎಲ್ಲ ಹಂತಗಳನ್ನು ಅಥವಾ ವಿವರಗಳನ್ನು ಇಲ್ಲಿ ಕೊಡುವದು ಸರಿಯಲ್ಲ. ರಸಗುಲ್ಲಾದಲ್ಲಿ ಏನೇನನ್ನು ಬಳಸಿದ್ದಾರೆ ಎಂದು  ಚರ್ಚಿಸುವದಕ್ಕಿಂತ  ಸ್ವತಃ ಸವಿಯುವದೇ ಉತ್ತಮವಾದದ್ದು.
“ಹರಿಚಿತ್ತ ಸತ್ಯ” ಕಾದಂಬರಿಯನ್ನು ಈಗಾಗಲೇ ಓದಿದವರು ನನ್ನೊಡನೆ  ಸಹಮತ ತಾಳುತ್ತಾರೆನ್ನುವ ನಂಬಿಕೆ ನನಗಿದೆ. ಇನ್ನೂ ಓದಬೇಕಾದವರಿಗೆ ಹೇಳುವದಿಷ್ಟೆ: Read and enjoy!
ವಸುಧೇಂದ್ರರು ಕನ್ನಡ ಓದುಗರಿಗೆ ಇನ್ನಷ್ಟು ಇಂತಹ ಕೃತಿಗಳನ್ನು ನೀಡಲಿ ಎಂದು ಹಾರೈಸೋಣ.

Thursday, April 29, 2010

ಬೇಂದ್ರೆಯವರ "ಗಣಪತಿ"

ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು

ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.

ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.

ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.
……………………………………………………………………………………………
ಬೇಂದ್ರೆಯವರ ಕಾವ್ಯಜೀವನವನ್ನು ಸ್ಥೂಲವಾಗಿ ಮೂರು ಘಟ್ಟಗಳಲ್ಲಿ ವಿಭಾಗಿಸಬಹುದು. ೧೯೨೨ನೆಯ ಇಸವಿಯಲ್ಲಿ ಅಂದರೆ ಬೇಂದ್ರೆಯವರು ೨೬ ವರ್ಷದವರಿದ್ದಾಗ ಅವರ ಮೊದಲ ಕೃತಿ “ಕೃಷ್ಣಾಕುಮಾರಿ” ಪ್ರಕಟವಾಯಿತು. ಅಲ್ಲಿಂದ ೧೯೫೧ರಲ್ಲಿ ‘ಗಂಗಾವತರಣ’ ಕವನಸಂಕಲನವು ಪ್ರಕಟವಾಗುವವರೆಗಿನ ಅವಧಿಯು ಬೇಂದ್ರೆಯವರ ಕಾವ್ಯಜೀವನದ ಮೊದಲ ಘಟ್ಟ. ಈ ಘಟ್ಟವು ಬೇಂದ್ರೆ-ಕಾವ್ಯವು ಸಿದ್ಧಿಯ ಹಾಗು ಪ್ರಸಿದ್ಧಿಯ ಪರಮೋಚ್ಚ  ಶಿಖರವನ್ನು ತಲುಪಿದ ಘಟ್ಟ. ಈ ಅವಧಿಯಲ್ಲಿ ಪ್ರಕಟವಾದ ಬೇಂದ್ರೆ ಕಾವ್ಯರಚನೆಗಳು ಇಂತಿವೆ:
(೧) ಕೃಷ್ಣಾಕುಮಾರಿ, (೨) ಗರಿ, (೩) ಸಖೀಗೀತ, (೪) ಮೂರ್ತಿ, (೫) ಕಾಮಕಸ್ತೂರಿ, (೬) ಉಯ್ಯಾಲೆ, (೭) ನಾದಲೀಲೆ, (೮) ಮೇಘದೂತ (ಅನುವಾದ), (೯) ಹಾಡು-ಪಾಡು ಹಾಗು (೧೦) ಗಂಗಾವತರಣ.

೧೯೫೬ರಲ್ಲಿ ಬೇಂದ್ರೆಯವರಿಗೆ ೬೦ ವರ್ಷಗಳು ತುಂಬಿದವು. ೧೯೫೭ರಲ್ಲಿ ‘ಅರಳು ಮರಳು’ ಕವನಸಂಕಲನ ಪ್ರಕಟವಾಯಿತು. ಈ ಬೃಹತ್ ಸಂಕಲನದಲ್ಲಿ ೫ ಉಪಸಂಕಲನಗಳಿವೆ:
(೧) ಹೃದಯ ಸಮುದ್ರ, (೨) ಸೂರ್ಯಪಾನ, (೩) ಮುಕ್ತಕಂಠ, (೪) ಚೈತ್ಯಾಲಯ ಹಾಗು (೫) ಜೀವಲಹರಿ.
ಬೇಂದ್ರೆಯವರ ಕಾವ್ಯಪಥವು ಬದಲಾದದ್ದನ್ನು ಈ ಸಂಕಲನಗಳಲ್ಲಿ ಕಾಣಬಹುದು. ನಿಸರ್ಗಪ್ರೀತಿ, ಆದರ್ಶ ಹಾಗು ಬದುಕಿನ ಒಲವನ್ನು ಬಿಂಬಿಸುತ್ತಿದ್ದ ಜೀವನ್ಮುಖಿ ಕಾವ್ಯವು ಇದೀಗ ಸೂರ್ಯಪಾನದಂತೆ ಪರಮಾರ್ಥಮುಖಿಯಾಗಿ ಬದಲಾಯಿತು. ಯಾವುದೇ ವ್ಯಕ್ತಿಯ ಜೀವನದಲ್ಲಿ ಇದು ಸಹಜವಾದದ್ದೇ. ೧೯೪೩ರಲ್ಲಿ ಬೇಂದ್ರೆಯವರು ಶ್ರೀ ಅರವಿಂದ ಹಾಗು ಶ್ರೀಮಾತಾ ಇವರ ದರ್ಶನ ಪಡೆದರು. ಬೇಂದ್ರೆಯವರ ಗೆಳೆಯರ ದೊಡ್ಡ ಗುಂಪೇ ಅರವಿಂದರಿಂದ ಪ್ರಭಾವಿತವಾಗಿತ್ತು. ಇವರಲ್ಲಿ ‘ಮಧುರಚೆನ್ನ ’ ಕಾವ್ಯನಾಮದಿಂದ ಖ್ಯಾತರಾದ ಹಲಸಂಗಿ ಚೆನ್ನಮಲ್ಲಪ್ಪನವರು, ಶ್ರೀ ಸಿಂಪಿ ಲಿಂಗಣ್ಣನವರು ಹಾಗು ಶ್ರೀ ವಿನಾಯಕ ಗೋಕಾಕರು ಪ್ರಮುಖರು. ೧೯೪೮ರಲ್ಲಿ ಬೇಂದ್ರೆಯವರಿಗೆ ತತ್ವಜ್ಞಾನಿ ಶ್ರೀ ಜಿಡ್ಡು ಕೃಷ್ಣಮೂರ್ತಿಯವರ ಭೆಟ್ಟಿ ಹಾಗು ಶ್ರೀ ಗುಳವಣಿ ಮಹಾರಾಜರ ದರ್ಶನವಾಯಿತು. ೧೯೫೨ರಲ್ಲಿ ಪ್ರಭಾಕರ ಮಹಾರಾಜರ ದರ್ಶನ ಪಡೆದರು. ೧೯೫೪ರಲ್ಲಿ ಶ್ರೀ ರಾಮದಾಸರ ದರ್ಶನಲಾಭವಾಯಿತು. ಬೇಂದ್ರೆಕುಟುಂಬವು ಪಾರಂಪರಿಕವಾಗಿ  ಗೋಂದಾವಲಿಯ ಶ್ರೀ ಬ್ರಹ್ಮಚೈತನ್ಯರ ಶಿಷ್ಯವರ್ಗಕ್ಕೆ ಸೇರಿದ್ದು.  ಇದೆಲ್ಲದರ ಪರಿಣಾಮವು ಅವರ ಸಾಹಿತ್ಯದಲ್ಲಿ ಬಿಂಬಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಈ ಅವಧಿಯ ಕಾವ್ಯದಲ್ಲಿ ಕಾವ್ಯ ಹಾಗು ಪಾರಮಾರ್ಥಿಕತೆಯ ಸಂಯೋಗವನ್ನು ಕಾಣುತ್ತೇವೆ.

೧೯೫೭ರ ನಂತರದ ಬೇಂದ್ರೆ-ಕಾವ್ಯವು ಮೂರನೆಯ ಘಟ್ಟದ ಕಾವ್ಯ. ಈ ಅವಧಿಯಲ್ಲಿ ಪ್ರಕಟಗೊಂಡ ಸಂಕಲನಗಳು ಇಂತಿವೆ:
(೧) ನಮನ, (೨) ಸಂಚಯ, (೩) ಉತ್ತರಾಯಣ, (೪) ಮುಗಿಲ ಮಲ್ಲಿಗೆ, (೫) ಯಕ್ಷ ಯಕ್ಷಿ, (೬) ನಾಕು ತಂತಿ, (೭) ಮರ್ಯಾದೆ, (೮) ಶ್ರೀಮಾತಾ, (೯) ಇದು ನಭೋವಾಣಿ, (೧೦) ಮತ್ತೆ ಶ್ರಾವಣಾ ಬಂತು ಹಾಗು (೧೧) ಚತುರೋಕ್ತಿ ಮತ್ತು ಇತರ ಕವನಗಳು.
ಅವರ ಮರಣೋತ್ತರ (೧೯೮೧ರ ನಂತರದಲ್ಲಿ) ಪ್ರಕಟವಾದ ಕವನಸಂಕಲನಗಳು ಇಂತಿವೆ:
(೧) ಪರಾಕಿ, (೨) ಕಾವ್ಯವೈಖರಿ, (೩) ತಾ ಲೆಕ್ಕಣಕಿ ತಾ ದೌತಿ, (೪) ಬಾಲಬೋಧೆ, (೫) ಪ್ರತಿಬಿಂಬಗಳು ಹಾಗು (೬) ಶತಮಾನ.

ಈ ಮೂರನೆಯ ಘಟ್ಟದ ಕಾವ್ಯವು ಐಹಿಕ ಸಿದ್ಧಿ ಹಾಗು ಪ್ರಸಿದ್ಧಿಯ ಆಚೆಗಿನ ಕಾವ್ಯ. ಕವಿಯು ಧ್ಯಾನಸ್ಥನಾದ ಸಮಯದ ಕಾವ್ಯವಿದು. ಈ ಕಾವ್ಯದಲ್ಲಿ ಬೆಡಗು, ಬಿನ್ನಾಣಗಳಿಲ್ಲ. ಬದಲಿಗೆ ನಿಗೂಢತೆ ಇದೆ. ಹೀಗಾಗಿ ಇದೆಂತಹ ಕಾವ್ಯ ಎಂದು ಕೆಲವರಿಗೆ ಅನ್ನಿಸಬಹುದು. ‘ಅರಳು ಮರಳು’ ನಂತರದ ಬೇಂದ್ರೆ ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವು ವಿಮರ್ಶಕರು ಹೇಳಿದ್ದುಂಟು. ಅವರ ದೃಷ್ಟಿದೋಷವೇ ಈ ಹೇಳಿಕೆಗೆ ಕಾರಣ. ಬೇಲೂರು ಶಿಲಾಬಾಲಿಕೆಯಂತಹ ಕುಸುರಿ ಕೆಲಸದ ಶಿಲ್ಪಸೌಂದರ್ಯವನ್ನು ನೋಡಿದ ಬಳಿಕ, ಗೊಮ್ಮಟೇಶ್ವರನನ್ನು ನೋಡಿ, ಈ ಕೆತ್ತನೆಯಲ್ಲಿ ಏನಿದೆ ಎಂದು ಹೀಯಾಳಿಸುವ ಕುರುಡುತನ ಈ ವಿಮರ್ಶಕರದು.

ಬೇಂದ್ರೆಯವರು ರಚಿಸಿದ ‘ಗಣಪತಿ’ ಕವನವು ಅವರ ಧ್ಯಾನಸ್ಥ ಘಟ್ಟದ ಕವನ. ಗಣಪತಿಯನ್ನು ಧ್ಯಾನಿಸುತ್ತಿರುವಾಗ, ಆ ದೇವತೆಯು ಅವರ ಅಂತರಂಗದಲ್ಲಿ ಮೂಡುತ್ತಿದ್ದಾನೆ. ಆ ದೇವತೆಯೇ ಸಾಧಕನಿಗೆ ತನ್ನ ಸ್ವರೂಪವನ್ನು ತೆರೆಯುತ್ತಿರುವ ರೀತಿಯಲ್ಲಿ ಈ ಕವನವಿದೆ.
ಕವನದ ಮೊದಲ ನುಡಿಯನ್ನು ನೋಡಿ:

“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ
ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ
ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”

“ನಾನು ಹೊಲಸಿನ ಹೊಲಿಗೆ ಬಿಚ್ಚಿ ಬಂದ ಸುಗಂಧ”:
ತಾಯ ಗರ್ಭದಲ್ಲಿ ಇರುವ ಕೂಸು ಗರ್ಭಚೀಲದಲ್ಲಿ (placenta) ಇರುತ್ತದೆ. ಇದಕ್ಕೆ ‘ಮಾಸ’ ಎಂದೂ ಹೇಳುತ್ತಾರೆ. ಇದು ಹೊಲಸಿನ ಚೀಲ. ಶಿಶುವು ಪ್ರಸವ ಸಮಯದಲ್ಲಿ ಈ ಹೊಲಸಿನ ಚೀಲವನ್ನು ಹರಿದುಕೊಂಡು ಹೊರಬರುತ್ತದೆ. ಸಾಧಕನ ಅಂತರಂಗವೂ ಸಹ ಅರಿಷಡ್ವರ್ಗಗಳಿಂದ ಮಲಿನವಾದದ್ದೇ. ಇಂತಹ ಅಶುದ್ಧ ಅಂತರಂಗದಲ್ಲಿಯೂ ಸಹ ಭಕ್ತನ ಸಾಧನೆಯಿಂದಾಗಿ ಗಣಪತಿಯು ಮೂಡುತ್ತಾನೆ. ಸಾಧನೆಯ ಅಂತಿಮ ಹಂತದಲ್ಲಿ ಶಿಶುರೂಪದಲ್ಲಿ ಇರುವ ಗಣಪತಿಯು, ಭಕ್ತನಿಗೆ ವ್ಯಕ್ತವಾಗುವಾಗ, ಈ ಹೊಲಸಿನ ಚೀಲವನ್ನು ಬಿಚ್ಚಿ ಹೊರಬರುತ್ತಾನೆ. ದೇವಶಿಶುವಿನ ಆಗಮನದಿಂದ  ಮಲಿನ ಅಂತರಂಗವು ಪಾವನವಾಗಿ, ಅಲ್ಲಿ ಸುಗಂಧ ಹರಡುತ್ತದೆ.
ಈ ಸುಗಂಧವು  ಅತೀಂದ್ರಿಯ ಅನುಭವಕ್ಕೆ ಮಾತ್ರ ಸಿಲುಕುವಂತಹದು. ಸುಗಂಧವು ನಮ್ಮನ್ನು ಆಹ್ಲಾದಗೊಳಿಸುವಂತೆ, ದೇವನ ಆಗಮನವೂ ಸಹ ನಮ್ಮ ಅಂತರಂಗವನ್ನು ಆಹ್ಲಾದಗೊಳಿಸುತ್ತದೆ.

“ನಾನು ಬಣ್ಣಕೆ ಸಿಗದೆ ಹರಿವ ರುಚಿ ಮಕರಂದ”:
ಗಣಪತಿಯ ಅಂದರೆ ಇಷ್ಟದೇವತೆಯ ಸಾಕ್ಷಾತ್ಕಾರದಿಂದ ಅಂತರಂಗದಲ್ಲಿ ಬ್ರಹ್ಮಾನಂದದ ಝರಿ ಹರಿಯುತ್ತದೆ. ಸದ್ಗುಣಗಳು ಪುಷ್ಟಿಗೊಳ್ಳುತ್ತವೆ. ಇದುವೇ ಭಕ್ತನಿಗೆ ಗಣಪತಿಯು ಉಣ್ಣಿಸುವ ಮಕರಂದ. ಆದರೆ ಈ ಮಕರಂದವೂ ಸಹ ಇಂದ್ರಿಯಗಳ ಅನುಭವಕ್ಕೆ ಸಿಗದ ಅಲೌಕಿಕ ಪದಾರ್ಥ, ಇದು transcendental joy!

“ನಾನು ಅಪರೂಪ ಗೆರೆ ಗುರುತು ತೋರದ ಕಟ್ಟು
ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು”:
ಅಪರೂಪದ ಗೆರೆ ಎಂದರೆ ಮಿಂಚಿ ಮಾಯವಾಗುವ ಗೆರೆ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಭಗವದ್ದರ್ಶನ ಪಡೆದಾಗ ಅದನ್ನು “ತಟಿಲ್ಲತಾ ಸಮರುಚಿಃ” ಎಂದರೆ ಕೋಲ್ಮಿಂಚು ಎಂದು ವರ್ಣಿಸುತ್ತಾರೆ. ಗಣಪತಿಯು ವ್ಯಕ್ತವಾಗುವದೂ ಸಹ ಕೋಲ್ಮಿಂಚಿನಂತೆ. ಸಾಧಕನ ಅಂತರಂಗದ ಬಾನಿನಲ್ಲಿ ಗಣಪತಿಯು ಮಿಂಚಿನಂತಹ ಅಪರೂಪದ ಗೆರೆಯಾಗಿ ಕಾಣುತ್ತಾನೆ. ಇಂತಹ ಸತತ ಕೋಲ್ಮಿಂಚುಗಳ ಕಟ್ಟೇ ಅವನಾಗಿದ್ದಾನೆ. ಆದರೆ ಸಾಧಕನಿಗೆ ಆ ಕಟ್ಟಿನ ಗುರುತು ಸರಳಸಾಧ್ಯವಲ್ಲ! ಆ ಕೋಲ್ಮಿಂಚು ಸಾಧಕನಿಗೆ ಕಾಣಬೇಕಾದರೆ, ಆ ದೇವತಾದರ್ಶನವು ಅವನಿಗೆ ಆಗಬೇಕಾದರೆ ಅವನ ಶರೀರಗಳು (ಸ್ಥೂಲ ಹಾಗು ಸೂಕ್ಷ್ಮ ಶರೀರಗಳು), ಸಾಧನೆಯಿಂದ ಹುರಿಗೊಳ್ಳಬೇಕು.

‘ಹುರಿಗೊಳ್ಳುವದು’ ಎಂದರೇನು? ನೂಲಿನ ಬೇರೆ ಬೇರೆ ಎಳೆಗಳು ಒಂದಾಗಿ ಗಟ್ಟಿಯಾಗುವದಕ್ಕೆ ಹುರಿಗೊಳ್ಳುವದು ಎನ್ನುತ್ತಾರೆ. ಹಾಗಾದಾಗ ಮಾತ್ರ ಆತ ತನ್ನ ಅಂತರಂಗದಲ್ಲಿಯ ದೇವತೆಯನ್ನು ಮುಟ್ಟಬಲ್ಲ, ಅನುಭವಿಸಬಲ್ಲ. ‘ನಾನು ಮೈತುಂಬ ಹುರಿ ತುಂಬಿ ಮುಟ್ಟುವ ಗುಟ್ಟು’ ಎನ್ನುವದರ ಅರ್ಥವಿದು.
ಈಗ ಎರಡನೆಯ ನುಡಿಯನ್ನು ನೋಡಿರಿ:

“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು
ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”

“ನಾನು ಬರಿಸದ್ದು, ತಾನಿದ್ದದ್ದು ಇಲ್ಲದ್ದು
ನಾನು ಎಣಿಕೆಗೆ ಹೊರಗೆ, ಒಳಗೆ ಇರುವೆನು ಕದ್ದು”
‘ನಾನು ಬರಿಸದ್ದು’ ಎನ್ನುವದರ ಒಂದು ಅರ್ಥ ‘ನಾನು ಬರಿಸದೇ ಇದ್ದದ್ದು’, ಎಂದರೆ ಸೃಷ್ಟಿಸದೇ ಇದ್ದದ್ದು ಎಂದು ಆಗಬಹುದು. ‘ತಾನು (=ಭಗವಂತ) ಇದ್ದದ್ದು’ ಎಂದರೆ ‘ಸತ್’ ಎನ್ನುವ ಅರ್ಥ; ‘ಇಲ್ಲದ್ದು’ ಎಂದರೆ ‘ಅಸತ್’ ಎನ್ನುವ ಅರ್ಥ. ಸತ್ ಹಾಗು ಅಸತ್ ಈ ಎರಡೂ ಪ್ರಪಂಚಗಳು  ಅವನು ಬರಿಸದೇ ಇದ್ದದ್ದು, ಅವನು ಮಾಡದೇ ಇದ್ದದ್ದು. ಗಣಪತಿಯು ಈ ಸತ್ ಹಾಗು ಅಸತ್ ಪ್ರಪಂಚಗಳನ್ನು ಸೃಷ್ಟಿಸದೇ ಇದ್ದರೆ, ಈ ಪ್ರಪಂಚಗಳು ವ್ಯಕ್ತವಾಗುವದೇಕೆ ಎನ್ನುವ ಸಂದೇಹ ಬರುತ್ತದೆ. ಈ ಸಂದೇಹಕ್ಕೆ ಉತ್ತರ ಶಂಕರಾಚಾರ್ಯರ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿದೆ.
“ಯಸ್ಯೈವ ಸ್ಫುರಣಂ ಸದಾತ್ಮಕಮಸತ್ ಕಲ್ಪಾರ್ಥಕಂ ಭಾಸತೇ”.  ಅಂದರೆ, ಭಗವಂತನ ಸ್ಫುರಣಕ್ರಿಯೆಯಿಂದಾಗಿ ಸತ್ ಮತ್ತು ಅಸತ್ ಎನ್ನುವ ಪ್ರಪಂಚಗಳು ನಿರಂತರವಾಗಿ ಭಾಸವಾಗುತ್ತವೆ. ಅರ್ಥಾತ್ ಅವು ವಾಸ್ತವಿಕವಾಗಿ ಇಲ್ಲ. ಈ ಅವಾಸ್ತವ ಪ್ರಪಂಚಗಳ ಹೊರಗೆ ಇರುವದರಿಂದಲೇ ಗಣಪತಿಯು ‘ನಾನು ಎಣಿಕೆಗೆ ಹೊರಗೆ’ ಎನ್ನುತ್ತಾನೆ. ಇದೇ ಮಾತನ್ನು ‘ಅತ್ಯತಿಷ್ಠತ್ ದಶಾಂಗುಲಮ್’ ಎಂದೂ ಹೇಳಲಾಗಿದೆ. ಅಂದರೆ, ಈ ಪ್ರಪಂಚಗಳನ್ನೆಲ್ಲ ವ್ಯಾಪಿಸಿಯೂ, ಭಗವಂತನು ಇದರ ಹೊರಗೆ ಸಹ ಇರುತ್ತಾನೆ. ಆ ಕಾರಣದಿಂದಾಗಿ ಅವನು ಪ್ರಾಪಂಚಿಕರ ಎಣಿಕೆಗೆ ಸಿಗಲಾರ. ಪ್ರಪಂಚಗಳಲ್ಲಿ ಇರುವ ಭಗವಂತನು ಪ್ರಾಪಂಚಿಕರ ಅನುಭವಕ್ಕೆ ಬರದಂತೆ ಇರುತ್ತಾನೆ. ಆದುದರಿಂದಲೇ ಗಣಪತಿಯು ಹೇಳುವದು: “ನಾನು ಇರುವೆನು ಕದ್ದು.”

‘ನಾನು ಬರಿಸದ್ದು’ ಎನ್ನುವ ಪದಪುಂಜವನ್ನು ‘ನಾನು ಬರಿ ಸದ್ದು’ ಎಂದು ಬಿಡಿಸಿಯೂ ಓದಬಹುದು. ಸದ್ದು ಎಂದರೆ ನಾದ. ಭಗವಂತನು ‘ಓಂ’ ನಾದದ ಮೂಲಕ ಪ್ರಕಟವಾಗುತ್ತಾನೆ ಎಂದು ಹೇಳುತ್ತಾರೆ. ಗಣಪತಿಯೂ ಸಹ ಸಾಧಕನಿಗೆ ಓಂಕಾರದ ಮೂಲಕ ಪ್ರಕಟವಾಗಬಹುದು. ‘ತಾನಿದ್ದದ್ದು’ ಎಂದರೆ ಈ ಓಂಕಾರ ನಾದಕ್ಕೆ ಸಂಗೀತದ ‘ತಾನ್’ ಇರಲೂ ಬಹುದು, ಇರದಿರಲೂ ಬಹುದು. ಸಾಧಕನ ಸಾಧನೆಯ ಮಟ್ಟದ ಮೇಲೆ ಇದು ಹೋಗುತ್ತದೆ.

“ನಾನು ಕಾಣಿಕೆಗಳನು ಕುಣಿಗೆ ಎಸೆಯುವೆ ಹೊತ್ತು
ನಾನು ಬೇರೆ ಅಲ್ಲ; ತುಟಿಯ ಮೇಲಿನ ಮುತ್ತು.”
ಈ ಭಗವಂತನು ಭಕ್ತರ ಕಾಣಿಕೆಗಳಿಗೆ ಮರುಳಾಗುತ್ತಾನೆಯೆ? ಇಲ್ಲ. ಏಕೆಂದರೆ ಕಾಣಿಕೆಗಳಲ್ಲಿ ‘ತಾನು ಕೊಟ್ಟಿದ್ದು’ ಎನ್ನುವ ಅಹಂಕಾರವಿರುತ್ತದೆ ಮತ್ತು ಕಾಣಿಕೆಗಳು ಅಲ್ಪಾಯುಗಳು. ಪ್ರೀತಿ ಮಾತ್ರ ನಿರಂತರವಾದದ್ದು. ಆದುದರಿಂದ ಗಣಪತಿಯು ಅಹಂಕಾರದ ಈ ಅಲ್ಪಾಯು ಕಾಣಿಕೆಗಳನ್ನು ಕುಣಿಗೆ (ಅಂದರೆ burial pitಗೆ) ಎಸೆಯುತ್ತಾನೆ. ಆತನಿಗೆ ಬೇಕಾದದ್ದು ಭಕ್ತರ ನಿರ್ವ್ಯಾಜ ಪ್ರೇಮ. ಹಾಗೆಂತಲೇ ಆತ ತನ್ನನ್ನು ‘ತುಟಿಯ ಮೇಲಿನ ಮುತ್ತು’ ಎಂದು ಕರೆದುಕೊಳ್ಳುತ್ತಾನೆ.  ತುಟಿಯ ಮೇಲಿನ ಮುತ್ತು ಅನ್ಯೋನ್ಯ ಪ್ರೀತಿಯ ದ್ಯೋತಕ. ಮುತ್ತು ಕೊಟ್ಟ ಮೇಲೂ ಸಹ, ಆ ಭಾಸ ನಿರಂತರವಾಗಿ ಉಳಿಯುತ್ತದೆ. ಗಣಪತಿಯು ದೇವತೆಯೂ ಹೌದು; ಭಕ್ತ ಹಾಗು ದೇವತೆಯ ನಡುವಿನ ಪ್ರೀತಿಯೂ ಹೌದು.

ಬೇಂದ್ರೆಯವರು ಅಪಾರ ಶ್ರದ್ಧೆ ಹಾಗು ನಿಷ್ಠೆಯನ್ನು ಇಟ್ಟಿದ್ದ  ಬ್ರಹ್ಮಚೈತನ್ಯ ಮಹಾರಾಜರಿಗೆ ಅವರ ಶಿಷ್ಯರೊಬ್ಬರು ಒಮ್ಮೆ ತಕರಾರು ಹೇಳಿದರು: “ಮಹಾರಾಜ, ನಾನು ನನ್ನ ಸರ್ವಸ್ವವನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ. ಆದರೂ ದೇವರು ನನಗೇಕೆ ದರ್ಶನ ಕೊಟ್ಟಿಲ್ಲ?”
ಅದಕ್ಕೆ ಮಹಾರಾಜರ ಉತ್ತರ ಹೀಗಿತ್ತು: “ನೀವು ನಿಮ್ಮ ಸರ್ವವನ್ನೂ ಕೊಟ್ಟಿದ್ದೀರಿ. ಆದರೆ ‘ಸ್ವ’ವನ್ನು ಮಾತ್ರ ಇನ್ನೂ ಕೊಟ್ಟಿಲ್ಲ!”
ಇದರಂತೆಯೇ, ಸಾಧಕನು ಕೊಟ್ಟ ಸರ್ವ ಕಾಣಿಕೆಗಳನ್ನು ಗಣಪತಿಯು ಕುಣಿಗೆ ಎಸೆಯುತ್ತಾನೆ. ಅವನಿಗೆ ಬೇಕಾದದ್ದು ‘ಸ್ವ’ ಮಾತ್ರ!

ಈಗ ಮೂರನೆಯ ನುಡಿಯನ್ನು ನೋಡಿರಿ:

ನಾನು ನೀನಿನ ನೂಲು ಈ ದಿಗಂಬರ ಪಟವು
ಉಸಿರಿಗೇಕೊ ಬೆಸಿಗೆ? ಆರೆಂಟರೀ ಹಠವು?
ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.

“ನಾನು ನೀನಿನ ನೂಲು ಈ ದಿಗಂಬರ ಪಟವು”:
ಬಸವಣ್ಣನವರು ತಮ್ಮ ವಚನವೊಂದರಲ್ಲಿ ದೇವರಿಗೆ ಹೇಳುತ್ತಾರೆ: “ಹಳೆಯ ನಾನು, ಕೆಳೆಯ ನೀನು.”
ಈ ಪ್ರಪಂಚ ಕೂಡ ದೇವರಷ್ಟೇ ಸನಾತನವಾದದ್ದು. ದೇವರು ಈ ಪ್ರಪಂಚದ ಪ್ರಿಯಕರ. ಬೇಂದ್ರೆಯವರು ಸಹ ‘ನಾನು’ ಹಾಗು ‘ನೀನು’ ಎನ್ನುವ ನೂಲುಗಳು ಹಾಸು ಮತ್ತು ಹೊಕ್ಕು ಇದ್ದಂತೆ ; ಇವೆರಡೂ ಇದ್ದರೇ, ಸೃಷ್ಟಿ ಎನ್ನುವ ‘ಪಟ’ (=ಬಟ್ಟೆ, ನಕಾಶೆ) ತಯಾರಾಗುವದು ಎಂದು ಹೇಳುತ್ತಾರೆ. ಆದರೆ ಈ ಪಟವು ‘ದಿಗಂಬರ ಪಟ’ ವಾಗಿದೆ.  ದಿಕ್ಕುಗಳೇ ಅಂಬರವಾಗಿರುವದು ಅಂದರೆ ಬಟ್ಟೆಯಾಗಿರುವದು ದಿಗಂಬರ. ಭಕ್ತ ಹಾಗು ಭಗವಂತರ ಈ ಪಟವು ಎಷ್ಟು ವಿಶಾಲವಾಗಿದೆ ಎಂದರೆ, ಅದು ದಿಕ್ಕುಗಳನ್ನೆಲ್ಲ ವ್ಯಾಪಿಸಿದೆ. ಈ ಎಲ್ಲ ಪ್ರಪಂಚಗಳು ಭಗವಂತನ ಹಾಗು ಭಕ್ತರ ದಿಗಂಬರ ಪಟವೇ ಆಗಿವೆ.

ದಿಗಂಬರ ಎನ್ನುವದು ದತ್ತಾತ್ರೇಯನ ವರ್ಣನೆಯೂ ಅಹುದು. ಆತನಿಗೆ ದಿಕ್ಕುಗಳೇ ಅಂಬರ ಎಂದರೆ ಆತ ಬತ್ತಲೆ ಯತಿ. ಭಕ್ತ ಹಾಗು ಭಗವಂತರ ಜೋಡಣೆಯಿಂದಾದ ಈ ಪಟಕ್ಕೆ ದಿಗಂಬರನೇ ಅಂದರೆ ಭಗವಂತನೇ ಒಡೆಯ. ಆದುದರಿಂದ ಈ ಪಟವು (=ನಕಾಶೆಯು) ದಿಗಂಬರ ಬರೆದ, ಆತನ ಒಡೆತನದ ಪಟ(=ನಕಾಶೆ).

“ಉಸಿರಿಗೇಕೊ ಬೆಸಿಗೆ?”
 ತಾಯ ಗರ್ಭದಲ್ಲಿದ್ದ ಶಿಶುವಿನ ಉಸಿರು ಹಾಗು ಶಿಶುವನ್ನು ಹೊತ್ತ ತಾಯಿಯ ಉಸಿರು ಬೇರೆಯಾಗಿಲ್ಲ.  ಅದೇ ರೀತಿಯಲ್ಲಿ ಭಕ್ತ ಹಾಗು ಭಗವಂತನ ನಡುವಿನ ಉಸಿರು ಒಂದೇ ಆಗಿದೆ. ಬೇರೆಯಾಗಿದ್ದರೆ ಮಾತ್ರ ಬೆಸುಗೆ ಬೇಕು. ಭಕ್ತನು ಭಗವಂತನ ಶಿಶು; ಭಗವಂತನೂ ಸಹ ಭಕ್ತನ ಅಂತರಂಗದಲ್ಲಿಯ ಶಿಶು. ಇವರಿಬ್ಬರಿಗೂ ಇರುವದು ಪರಸ್ಪರ ತಾಯಿ-ಮಗುವಿನ ಸಂಬಂಧ. ಹೀಗಿರುವಾಗ ಈ ಉಸಿರಿಗೆ ಬೆಸುಗೆ ಏತಕೆ ಬೇಕು?
ಉಸಿರಿನ ಬೆಸುಗೆ ಎಂದರೆ ಪ್ರಾಣಾಯಾಮ ಎಂದೂ ಅರ್ಥವಾಗುವದು. ಭಗವತ್-ದರ್ಶನಕ್ಕೆ ಪ್ರಾಣಾಯಾಮ ಮೊದಲಾದ ಹಠಸಾಧನೆಗಳ ಅವಶ್ಯಕತೆ ಏನಿದೆ ಎಂದು ಗಣಪತಿಯು ಕೇಳುತ್ತಾನೆ.

” ಆರೆಂಟರೀ ಹಠವು?”:
ಆರೆಂಟು ಅರ್ಥಾತ್ ಆರು ಹಾಗು ಎಂಟುಗಳನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
ಮೊದಲನೆಯ ಅರ್ಥವನ್ನು ನೋಡೋಣ:
‘ಆರು’ ಎಂದರೆ ಷಟ್-ದರ್ಶನಗಳು:
ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ ಹಾಗು ಉತ್ತರಮೀಮಾಂಸಾ ಇವು ಆರು ಆಸ್ತಿಕ ದರ್ಶನಗಳು ; ಚಾರ್ವಾಕ, ಆರ್ಹತ, ವೈಭಾಷಿಕ, ಸಾತ್ರಾಂತಿಕ, ಯೋಗಾಚಾರ, ಮಾಧ್ಯಮಿಕ ಇವು ಆರು ನಾಸ್ತಿಕ ದರ್ಶನಗಳು.
‘ಎಂಟು’ ಅಂದರೆ ಅಷ್ಟಾಂಗ ಯೋಗ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗು ಸಮಾಧಿ ಇವು ಯೋಗದ ಎಂಟು ಅಂಗಗಳು.
ಭಕ್ತ ಹಾಗು ಭಗವಂತರು ಹಾಸು-ಹೊಕ್ಕಾಗಿ ಪಟವನ್ನು ನೇಯ್ದಾಗ  ಆರು ದರ್ಶನಗಳ ಹಾಗು ಎಂಟು ಯೋಗಗಳ ಅವಶ್ಯಕತೆ ಉಳಿಯುವದಿಲ್ಲ ಎನ್ನುವದು ಮೊದಲನೆಯ ಅರ್ಥ.

ಈಗ ಎರಡನೆಯ ಅರ್ಥವನ್ನು ನೋಡೋಣ:
ಅಂತರಂಗದಲ್ಲಿ ಅಮೂರ್ತವಾಗಿ ಇರುವ ಗಣಪತಿ ಎನ್ನುವ ಭಾವನೆಯು ಮೂರ್ತರೂಪ ತಾಳಬೇಕಾದರೆ ಅವನಿಗೆ ಘನರೂಪ ಬೇಕು. ಘನಕ್ಕೆ ಇರುವದು ಆರು ಪಾತಳಿಗಳು ಹಾಗು ಎಂಟು ಕೋನಬಿಂದುಗಳು. ಈ ಆರು ಹಾಗು ಎಂಟರ ಅಂದರೆ ಘನರೂಪವನ್ನು ತಾಳುವ ಅರ್ಥಾತ್ ಮೂರ್ತರೂಪ ತಾಳುವ ಅವಶ್ಯಕತೆ ಇಲ್ಲವೆಂದು ಗಣಪತಿಯು ಭಕ್ತನಿಗೆ ಹೇಳುತ್ತಾನೆ. ಇದಕ್ಕೆ ಎರಡು ಕಾರಣಗಳಿವೆ. ಮೂರ್ತರೂಪವನ್ನು ತಾಳಿದಾಗ, ಆತನು ಅಂತರಂಗದ ಹೊರಗೆ ಬಂದು ಬಹಿರಂಗನಾಗಬೇಕಾಗುತ್ತದೆ. ಎರಡನೆಯದಾಗಿ ಮೂರ್ತರೂಪಕ್ಕೆ ಅಂತ್ಯವೆನ್ನುವದಿದೆ. ‘ಗಣಪತಿ ಅಥರ್ವ ಶೀರ್ಷ’ದಲ್ಲಿ ಗಣಪತಿಯನ್ನು ‘ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತ:’ ಎಂದು ಬಣ್ಣಿಸಿದ್ದಾರೆ. ಗಣಪತಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ಮೂರು ಗುಣಗಳಿಲ್ಲದವನು. ಈ ಮೂರು ಗುಣಗಳ ವಿವಿಧ ಪ್ರಮಾಣದ ಬೆರಕೆಯಿಂದಲೆ, ಸೃಷ್ಟಿಯ ವಿವಿಧ ಜೀವಿಗಳಿಗೆ ವಿವಿಧ ರೂಪದ ದೇಹಗಳು ಬರುವವು. ದೇಹವು ವಿನಾಶಕ್ಕೆ ಒಳಪಟ್ಟಿದೆ. ಗಣಪತಿಯು ನಿರ್ಗುಣನು, ಆದುದರಿಂದ ನಿರ್ದೇಹಿಯು, ಆದುದರಿಂದ ಅವಿನಾಶನು, ಕಾಲಾತೀತನು. ಅಂತಹ ದೇವತೆಯನ್ನು ಮೂರ್ತರೂಪದಲ್ಲಿ, ಬಹಿರಂಗದಲ್ಲಿ ಕಾಣಬೇಕೆನ್ನುವ ಭಕ್ತನ ಹಠವು ಸರಿಯಲ್ಲ ಎಂದು ಗಣಪತಿಯು ಹೇಳುತ್ತಿದ್ದಾನೆ.

ಈಗ ಮೂರನೆಯ ಅರ್ಥವನ್ನು ನೋಡೋಣ:
ಸಾಧಕನು ದೇವತೆಯನ್ನು ಪೂಜಿಸುವಾಗ, ತನ್ನ ದೇಹದ ಆರು ಅಂಗಗಳಲ್ಲಿ ದೇವತೆಯನ್ನು ನ್ಯಾಸ ಮಾಡಿಕೊಳ್ಳುತ್ತಾನೆ. ಆ ಅಂಗಗಳು ಇಂತಿವೆ: ಹೃದಯ, ತಲೆ, ಶಿಖೆ, ಭುಜಗಳು, ಕಣ್ಣುಗಳು ಹಾಗು  ಕರತಲ. ಇದು ಪಿಂಡಾಂಡ. ಇದೇ ದೇವತೆಯು ಬ್ರಹ್ಮಾಂಡದಲ್ಲಿ ಎಂಟು ರೂಪಗಳಲ್ಲಿ ಸ್ಥಿತನಾಗಿರುತ್ತಾನೆ. ಅವು ಇಂತಿವೆ: ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ,ವಾಯು, ಸೂರ್ಯ ಮತ್ತು ಚಂದ್ರ (ಗಣಪತಿ-ಅಥರ್ವಶೀರ್ಷದ ಮೇರೆಗೆ.)
ಪಿಂಡಾಂಡದಲ್ಲಿಯೇ ಆಗಲಿ ಅಥವಾ ಬ್ರಹ್ಮಾಂಡದಲ್ಲಿಯೇ ಆಗಲಿ, ದೇವತೆಯ ಮೂರ್ತರೂಪವನ್ನು ಕಾಣುವ ಹಠ ಭಕ್ತನಿಗೆ ಬೇಡವೆನ್ನುವದು ಗಣಪತಿಯ ಅಭಿಮತವಾಗಿರಬಹುದು.
ಯಾಕೆ? ಇದಕ್ಕೆ ಉತ್ತರ ಮುಂದಿನ ಸಾಲುಗಳಲ್ಲಿದೆ.

“ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ!
ರಸವಿಲ್ಲವರಸರಿಗೆ ಊಟಕೂಟವೆ ವ್ಯರ್ಥ.”
ಭಕ್ತ ಹಾಗು ಭಗವಂತನ ನಡುವೆ ಇರುವ ಸಂಬಂಧವು ಪೂರಕ ಸಂಬಂಧ.
(ಬಸವಣ್ಣನವರ ವಚನವೂ ಸಹ ಈ ಪೂರಕ ಸಂಬಂಧವನ್ನೇ ಬಣ್ಣಿಸುತ್ತದೆ:
“ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ, ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ, ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನು ಆಕಾರವಾಗಿರ್ದಲ್ಲಿ,ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ;
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು ಜಂಗಮ-ಲಾಂಛನವಾಗಿ ಬಂದೆಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ, ಕೂಡಲ ಸಂಗಮ ದೇವಾ.”)

ಈ ಪೂರಕ ಸಂಬಂಧವು ಎಂತಹದು?
ಭಕ್ತನು ಮಾಡಬೇಕಾದ ಅಡುಗೆಗೆ, ಸಾಹಿತ್ಯವನ್ನು ಪೂರೈಸುವವನೇ ಭಗವಂತನು.
ಭಕ್ತನು ಮಾಡುವ ಅಡುಗೆ ಯಾವುದು? ಭಕ್ತಿಯೇ ಅವನು ಅಟ್ಟು ಬಡಿಸುವ ನೈವೇದ್ಯ. ಆ ಭಕ್ತಿಗೆ ಬೇಕಾದ ಸಾಹಿತ್ಯವನ್ನು ಅಂದರೆ ಭಾವನೆಯನ್ನು ಕೊಡುವವನೇ ಗಣಪತಿ.

ಪಾಕಪದಾರ್ಥಕ್ಕೆ ಇನ್ನೂ ಹಲವು ಅರ್ಥಗಳಿವೆ. ಪಾಕವಾದದ್ದು ಎಂದರೆ ಹದವಾದದ್ದು, maturityಯನ್ನು ಪಡೆದದ್ದು ಎಂದು ಅರ್ಥ. ಭಕ್ತನು ಪಾಕಗೊಳ್ಳಲು ಅಂದರೆ maturityಯನ್ನು ಪಡೆಯಲು ಬೇಕಾಗುವ ಸಾಹಿತ್ಯವನ್ನು ಕೊಡುವವನು ಭಗವಂತನೇ!

ಮೂರನೆಯ ಅರ್ಥವೊಂದನ್ನು ಗಮನಿಸಿರಿ.
ಬೇಂದ್ರೆಯವರು ಸಾಹಿತ್ಯರಸಿಕರಿಗೆ ಉಣ್ಣಿಸಿದ ಪಾಕ(=ಅಡುಗೆ) ಯಾವುದು? ಅದು ಪದಾರ್ಥ(=ಪದ+ಅರ್ಥ)ದ ಅಡುಗೆ, ಅಂದರೆ ಸಾಹಿತ್ಯದ ಅಡುಗೆ. ಅವರು ಪಾಕಗೊಳ್ಳದೆ (=ಹಣ್ಣಾಗದೆ,) ಅಂತಹ ಸಾಹಿತ್ಯವನ್ನು ಉಣ್ಣಿಸಲು ಸಾಧ್ಯವೆ? ಸ್ವತಃ ಬೇಂದ್ರೆಯವರೆ ಹೇಳಿಲ್ಲವೆ?
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ……..”
ಬೇಂದ್ರೆಯವರು ಪಾಡು ಆಗದೆ(=ಹಣ್ಣು ಆಗದೆ), ಇಂತಹ ಸಾಹಿತ್ಯ ಕೊಡಲು ಸಾಧ್ಯವೆ? ಆದರೆ ಅವರು ಪಾಡಾಗಲು, ಪಾಕವಾಗಲು ಸಾಹಿತ್ಯವನ್ನು(=ಪರಿಸ್ಥಿತಿಯನ್ನು) ಕೊಟ್ಟವನು ಗಣಪತಿಯೇ!

ಈ ಸಂದರ್ಭದಲ್ಲಿ ಕವಿಗುರು ಕಾಳಿದಾಸನ ನಾಂದೀಪದ್ಯವೊಂದು ನೆನಪಿಗೆ ಬರುತ್ತದೆ:
“ವಾಗರ್ಥಾವಿವ ಸಂಪೃಕ್ತೌ, ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
“ವಾಕ್ ಮತ್ತು ಅರ್ಥ ಇವುಗಳ ಸುಸಂಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಒಂದಾಗಿರುವ ಪಾರ್ವತೀ-ಪರಮೇಶ್ವರರಿಗೆ ವಂದಿಸುತ್ತೇನೆ”, ಎಂದು ಕಾಳಿದಾಸನು ಪ್ರಾರ್ಥಿಸುತ್ತಾನೆ. ಬೇಂದ್ರೆಯವರೂ ಸಹ ಪದ(=ವಾಕ್) ಮತ್ತು ಅದರ ಅರ್ಥಗಳ ಸುಸಂಯೋಗಕ್ಕಾಗಿ ಗಣಪತಿಯಿಂದಲೇ ಪದಾರ್ಥ-ಸಾಹಿತ್ಯವನ್ನು ಪಡೆಯುತ್ತಾರೆ.

(ಆಂಗ್ಲ ವಿಮರ್ಶಕನೊಬ್ಬನ ಹೇಳಿಕೆಯೊಂದನ್ನು ಇಲ್ಲಿ ಸೇರಿಸಿದರೆ ಅಪ್ರಸ್ತುತವಾಗಲಿಕ್ಕಿಲ್ಲ:
“ಒಂದು ಪದವನ್ನು ಕೇಳಿದಾಗ, ಆ ಪದದ ಎಲ್ಲ ಪುರಾತನ, ನೂತನ ಅರ್ಥಗಳು ಯಾರಿಗೆ ಹೊಳೆಯುತ್ತವೆಯೋ ಅವನೇ ಕವಿ.”)

ಗಣಪತಿಯ ಈ ಪ್ರಸಾದವನ್ನು ರಸಿಕರು ಮಾತ್ರ ಮೆಚ್ಚಿಕೊಂಡು ಭುಂಜಿಸಬಲ್ಲರು. ಅರ್ಥ ತಿಳಿಯದ ಅರಸಿಕರಿಗೆ ಈ ಊಟವೂ ವ್ಯರ್ಥ ; ಈ ಕೂಟವೂ ವ್ಯರ್ಥ!

ಇನ್ನು ನಾಲ್ಕನೆಯ ನುಡಿಯನ್ನು ನೋಡೋಣ:

“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ
ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು
ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”

ಭಕ್ತನ ಅಂತರಂಗದಲ್ಲಿ ಅರಳುವ ಗಣಪತಿಯ ಸ್ವರೂಪವನ್ನು ಅನುಭವಿಸಿದ್ದಾಯ್ತು. ಈ ಗಣಪತಿಯ ಹಾಗು ಭಕ್ತರ ನಡುವಿನ ಸಂಬಂಧವನ್ನು ತಿಳಿದದ್ದಾಯ್ತು. ಇನ್ನು ಗಣಪತಿಯು ಭಕ್ತರಿಗೆ ನೀಡುವ ಫಲವೇನು ಎಂದು ಫಲಶ್ರುತಿಯನ್ನು ಹೇಳುವ ಕೊನೆಯ ಭಾಗವು ಇದಾಗಿದೆ.

“ನಾನು ಧರ್ಮಾರ್ಥ ಕಾಮಗಳ ನೀಡುವ ಸಾಕ್ಷಿ”:
ಭಕ್ತರಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ನೀಡುವ ಸಾಕ್ಷಿಪುರುಷನು ತಾನಾಗಿದ್ದೇನೆ ಎಂದು ಗಣಪತಿಯು ಹೇಳುತ್ತಾನೆ. ಭಗವಂತನು ಯಾವಾಗಲೂ ಎಲ್ಲ ಜೀವಿಗಳ ಅಂತರಂಗದಲ್ಲಿ ಸಾಕ್ಷಿಯಾಗಿ ನಿಂತುಕೊಂಡಿರುತ್ತಾನೆ. ಈ ಜೀವಿಗಳು ಮಾಡುವ ಕರ್ಮಕ್ಕೆ ಅನುಸಾರವಾಗಿ ಆತ ಫಲ ನೀಡುತ್ತಾನೆ ಎಂದು ಹೇಳಲಾಗುತ್ತಿದೆ. ಗಣಪತಿ-ಸಹಸ್ರನಾಮಾವಳಿಯಲ್ಲಿ ‘ಸಾಕ್ಷಿ’ ಎಂದು ಗಣಪತಿಯನ್ನು ಕರೆಯಲಾಗಿದೆ.

“ನೀ ಮುಕ್ತನೋ ರಸಿಕ, ಧನ್ಯ ಸಾರಸ ಪಕ್ಷಿ
ನಾ ಪಡುವ ಹದುಳ ನೀ ಪಡೆವ ನೋಂಪಿಯ ಗಂಟು”:
ಭಗವಂತನಿಗೆ ‘ರಸ’ ಎಂದು ಕರೆಯಲಾಗಿದೆ. (‘ರಸೋ ವೈ ಸಃ.’) ರಸಿಕ ಎಂದರೆ ಭಗವಂತನನ್ನು ಅರಿತುಕೊಂಡವನು. ಆ ರಸಿಕನಿಗೆ ಧರ್ಮ, ಅರ್ಥ ಹಾಗು ಕಾಮಗಳನ್ನು ಮೀರಿದ ನಾಲ್ಕನೆಯ ಪುರುಷಾರ್ಥವಾದ ಮುಕ್ತಿ ದೊರೆತಿದೆ. ಆದುದರಿಂದ ಆತ ಮುಕ್ತನು. ಆತ ಸಾರಸ ಪಕ್ಷಿಯಂತೆ ಧನ್ಯನು. ಸಾರಸ ಪಕ್ಷಿಯು (ಅಂದರೆ ಬಕಪಕ್ಷಿಯು) ನೀರಿನ ಅಂಚಿನಲ್ಲಿ ಧ್ಯಾನಸ್ಥವಾಗಿ ನಿಂತುಕೊಂಡಿರುತ್ತದೆ. ಅದೇ ರೀತಿಯಲ್ಲಿ ಸಾಧಕನೂ ಸಹ ಪ್ರಪಂಚದ ಅಂಚಿನಲ್ಲಿ ಧ್ಯಾನಸ್ಥನಾಗಿ ನಿಂತಿರುತ್ತಾನೆ. ‘ಸಾರಸ’ ಪದಕ್ಕೆ ‘ಸಹ ರಸ’ ಎಂದು ಅರ್ಥೈಸಬಹುದು. ಅಂದರೆ ಈ ಪಕ್ಷಿಯು ಭಗವಂತನ ಧ್ಯಾನದಲ್ಲಿಯೇ ಇರುತ್ತದೆ. ಅದು ಭಕ್ತನ ನೋಂಪಿ(=ತಪಸ್ಸು). ಭಕ್ತನ ಈ ತಪಸ್ಸಿನ ಗಂಟೇ(=ಐಶ್ವರ್ಯವೇ), ಭಗವಂತನು ಪಡುವ ಸುಖ (=ಹದುಳ). ಭಕ್ತ ಮತ್ತು ಭಗವಂತನಿಗಿರುವ ಪರಸ್ಪರ ಸಂಬಂಧವಿದು. “ಪರಸ್ಪರಂ ಭಾವಯಂತಃ” ಎನ್ನುವ ಗೀತಾವಾಕ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”:
ಇಲ್ಲಿಯವರೆಗೂ ಗಣಪತಿಯ ಸ್ವಸ್ವರೂಪ ವರ್ಣನೆಯನ್ನು ಅನುಭವಿಸಿದ ಕವಿ-ಋಷಿ ಈಗ ಹಿಗ್ಗಿನಿಂದ ಹೇಳುತ್ತಾನೆ:
“ಶಿವಶಕ್ತಿ ಒಳಕೀಲ ನಮ್ಮ ಗಣಪತಿಗುಂಟು, ಎಲ್ಲ ಗಣಪತಿಗುಂಟು.”
ದೇವತೆಯಿಂದ ಸ್ಫುರಣವಾದದ್ದು ಮಂತ್ರ. ಪ್ರತಿಯೊಂದು ಮಂತ್ರಕ್ಕೆ ‘ಕೀಲಕ’ ಎನ್ನುವದಿರುತ್ತದೆ. ಗಣಪತಿ ಮಂತ್ರಕ್ಕೆ ಶಿವ-ಶಕ್ತಿಯೇ ಕೀಲಕ.
ಗಣಪತಿ-ಮಂತ್ರವನ್ನು ಬೇಂದ್ರೆಯವರು ಧ್ಯಾನಸ್ಥ ಸ್ಥಿತಿಯಲ್ಲಿ ನೋಡಿದರು. (ಅವರು ‘ಮಂತ್ರ-ದೃಷ್ಟಾರರು’.)
ಸೂತ್ರರೂಪದಲ್ಲಿ ನಮ್ಮೆದುರಿಗೆ ಇಟ್ಟರು. ತಿಳಿದುಕೊಳ್ಳುವದು ನಮ್ಮ ಹೊಣೆ.
“ಕಂಡವರಿಗಲ್ಲ, ಕಂಡವರಿಗಷ್ಟೆ ಹೊಳೆಯುವದು ಇದರ ಕಳೆಯು!”(---ಹೃದಯ ಸಮುದ್ರ)

ಬೇಂದ್ರೆಯವರು ಕಾವ್ಯಾಕಾಶದಲ್ಲಿ ಹಕ್ಕಿಯಂತೆ ಹಾರಾಡಿದ್ದನ್ನು ನೋಡಿದವರು, ಮೆಚ್ಚಿಕೊಂಡವರು ಅನೇಕರಿದ್ದಾರೆ. ಈ ರಾಜಹಂಸವು ಆಗಸದಲ್ಲಿ ಹಾರಾಟ ನಿಲ್ಲಿಸಿ, ಧ್ಯಾನಸ್ಥವಾಗಿ ನಿಂತುಕೊಂಡಾಗ, ಆ ಚೆಲುವನ್ನು ಕಾಣದವರೂ ಇದ್ದಾರೆ. ಇಂತಹ ವಿಮರ್ಶಕರ ನಿಲುವಿನಿಂದ ಆ ರಾಜಹಂಸದ ಚೆಲುವಿಗೆ ಕುಂದಿಲ್ಲ!

(ಈ ಕವನವನ್ನು ನನಗೆ ಒದಗಿಸಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.)

Saturday, April 3, 2010

‘ಬಂಡಾಯ’---ವ್ಯಾಸರಾಯ ಬಲ್ಲಾಳ

ವ್ಯಾಸರಾಯ ಬಲ್ಲಾಳರು ಬರೆದ ಕಾದಂಬರಿ ‘ಬಂಡಾಯ’ವು ೧೯೮೬ರಲ್ಲಿ ಪ್ರಕಟವಾಯಿತು. ಮಹಾನಗರಿ ಮುಂಬಯಿಯಲ್ಲಿಯ ಶ್ರಮಜೀವಿಗಳ ಬದುಕು, ಬವಣೆ ಹಾಗು ಮುಷ್ಕರಗಳೇ ಈ ಕಾದಂಬರಿಯ ವಸ್ತುಗಳಾಗಿವೆ. ಮುಷ್ಕರಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬಹುದೇ ಅಥವಾ ಅದಕ್ಕೂ ಸಹ ನಕ್ಸಲ ಮಾದರಿಯ ಹಿಂಸಾತ್ಮಕ ಹೋರಾಟವೇ ಅನಿವಾರ್ಯವೆ ಎನ್ನುವದು ಈ ಕಾದಂಬರಿಯ ಕೊನೆಯಲ್ಲಿ ಕೇಳಲಾದ ಪ್ರಶ್ನೆ. ಇಂತಹ ಒಂದು ತಾತ್ವಿಕ ವಸ್ತುವನ್ನು ಆಸಕ್ತಿಪೂರ್ಣ ಕಾದಂಬರಿಯನ್ನಾಗಿ ಮಾರ್ಪಡಿಸುವಲ್ಲಿ ಬಲ್ಲಾಳರು ತಮ್ಮ  ಕಥನಕೌಶಲವನ್ನು ತೋರಿಸಿದ್ದಾರೆ.

ಪ್ರತಿಯೊಂದು ದೊಡ್ಡ ಉದ್ದಿಮೆಯಲ್ಲಿ ನಾಲ್ಕು ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಲ್ಕು ಮಾನವಕೂಟಗಳನ್ನು ನಾವು ಗುರುತಿಸಬಹುದು. ಮೊದಲನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಉದ್ದಿಮೆಪತಿಯದು. ಏನಕೇನ ಪ್ರಕಾರೇಣ ತನ್ನ ಉದ್ದಿಮೆಯ ನಿತಾಂತ ಪ್ರಗತಿಯಾಗಬೇಕು; ತಾನು ಹಾಗು ತನ್ನ ಕುಟುಂಬವು ಆಧುನಿಕ ಸುಖಸೌಲಭ್ಯಗಳಲ್ಲಿ ಮುಳುಗಿರಬೇಕು ಎನ್ನುವದು ಉದ್ದಿಮೆಪತಿಯ ತವಕ.

ಎರಡನೆಯ ಹಿತಾಸಕ್ತಿ ಅಥವಾ ಮಾನವಕೂಟ ಕಾರ್ಮಿಕರದು. ಕೊಳೆಗೇರಿಗಳಲ್ಲಿ ಪಶುತುಲ್ಯ ಜೀವನ ನಡೆಯಿಸುತ್ತಿರುವ ಇವರು ಉದ್ದಿಮೆಪತಿ ಹಾಗು ವಿಭಿನ್ನ ಕಾರ್ಮಿಕ ಮುಖಂಡರ ಕೈಯಲ್ಲಿ ಸಿಲುಕಿದ ದಾಳಗಳಾಗಿದ್ದಾರೆ.

ಮೂರನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಕಾರ್ಮಿಕ ಸಂಘಗಳ ಮುಖಂಡರದು. ಈ ಮುಖಂಡರಲ್ಲಿ ಎರಡು ಬಗೆಯವರಿದ್ದಾರೆ. ಕಾರ್ಮಿಕರನ್ನು ಚದುರಂಗದ ದಾಳಗಳಂತೆ ಉಪಯೋಗಿಸಿಕೊಳ್ಳುತ್ತ, ತಮ್ಮ ಸ್ವಂತದ ಪ್ರತಿಷ್ಠೆ ಹಾಗು ಸಂಪತ್ತನ್ನು ಅಧಿಕಗೊಳಿಸಲು ಪ್ರಯತ್ನಿಸುವ ಮುಖಂಡರು ಒಂದು ವರ್ಗದವರು. ಉದ್ದಿಮೆಗಳು ಹಾಳಾಗಲಿ ಅಥವಾ ಕಾರ್ಮಿಕರು ಸತ್ತು ಹೋಗಲಿ, ಆದರೆ ತಮ್ಮ ಸ್ವಾರ್ಥಸಾಧನೆಯಾಗಬೇಕು ಎನ್ನುವದು ಇಂತಹ ಮುಖಂಡರ ಅಂತರಂಗದ ಬಯಕೆ. ಎರಡನೆಯ ವರ್ಗದವರೆಂದರೆ, ಕಾರ್ಮಿಕರಿಗಾಗಿ ನಿಜವಾಗಿ  ಹೋರಾಡುವವರು. ತಮ್ಮ ವೈಯಕ್ತಿಕ ಬದುಕನ್ನು ಬಲಿಕೊಟ್ಟು ಕಾರ್ಮಿಕರ ಹಿತಕ್ಕಾಗಿ ಶ್ರಮಿಸುವವರು.

ನಾಲ್ಕನೆಯ ಮಾನವಕೂಟವು ಉದ್ದಿಮೆಗಳಿಗೆ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳದು ಉದಾಹರಣೆಗೆ ಕಾರ್ಮಿಕ ಇಲಾಖೆಯ ಹಾಗು ಪೋಲೀಸ ಇಲಾಖೆಯ ಅಧಿಕಾರಿಗಳದು. ತಮ್ಮ ಸ್ವಂತ ಹಿತಾಸಕ್ತಿಗಳ ರಕ್ಷಣೆ ಮಾತ್ರ ಇವರ ಅನುಗಾಲದ ಚಿಂತೆ.

ಕಾದಂಬರಿಯಲ್ಲಿ ಮೊದಲಿಗೆ ಬರುವದು ರಾಜೀವನ ಪಾತ್ರ.  ರಾಜೀವನು ಕಾರ್ಮಿಕರ ಹಿತವನ್ನು ಬಯಸುವ ಕಾರ್ಮಿಕ ಮುಖಂಡ. ತನ್ನೆಲ್ಲ ಸಮಯವನ್ನು ಕಾರ್ಮಿಕ ಸಂಘಟನೆಗಾಗಿ ಹಾಗು ಹೋರಾಟಕ್ಕಾಗಿ ಈತ ಮೀಸಲಿಟ್ಟಿದ್ದಾನೆ. ತನ್ನ ಸುತ್ತಲೂ ಹರಡಿದ ಮಾನವ ಕಾರ್ಪಣ್ಯದ ಬಗೆಗೆ ಈತನ ಮನಸ್ಸಿನಲ್ಲಿ ಏಳುತ್ತಿದ್ದ ಆಕ್ರೋಶದ ಭಾವನೆಗಳನ್ನು ವ್ಯಕ್ತಪಡಿಸುವದರ ಮೂಲಕ ಕಾದಂಬರಿಯ ಮೊದಲ ಪುಟ ಪ್ರಾರಂಭವಾಗುತ್ತದೆ. ಜೊತೆಜೊತೆಗೇ ಇವನಿಗೆ ಯಾಮಿನಿ ನೆನಪಾಗುತ್ತಾಳೆ. ಅವಳ ಬಗೆಗಿನ ನೆನಪಿನ ತುಣುಕುಗಳು ಪುಟಿದಂತೆಲ್ಲ, ಆ ಮೂಲಕ ಅವಳ ಸುಸಂಸ್ಕೃತ ವ್ಯಕ್ತಿತ್ವವನ್ನು ಬಲ್ಲಾಳರು ಓದುಗರಿಗೆ ಪರಿಚಯಿಸುತ್ತಾರೆ. ಯಾಮಿನಿ ಹಾಗು ರಾಜೀವರ ಸಾಂಗತ್ಯವನ್ನು good lightನಲ್ಲಿ ತೋರಿಸುವದು ಬಲ್ಲಾಳರ ಉದ್ದೇಶ. ಯಾಕೆಂದರೆ ಭಾರತೀಯ ಕಾದಂಬರಿಗಳಲ್ಲಿ (ಸಿನಿಮಾಗಳಲ್ಲಿ ಕೂಡ) ನಾಯಕ ಹಾಗು ನಾಯಕಿಯರು ಸುಶೀಲರೆಂದು ತೋರಿಸುವದು ಒಂದು ಅನಿವಾರ್ಯತೆಯಾಗಿದೆ.  ಯಾಮಿನಿಯನ್ನು ಸುಸಂಸ್ಕೃತಳು ಹಾಗು ವಿದ್ಯಾವಂತಳು ಎಂದು ತೋರಿಸುವ ಉದ್ದೇಶದಿಂದ ಲೇಖಕರು ಅವಳ ಸಂಸ್ಕೃತ ಭಾಷೆಯ ತಿಳಿವನ್ನು ಹಾಗು ಅವಳು ನಾಟಕಗಳಲ್ಲಿ ಭಾಗವಹಿಸುತ್ತಿದ್ದಳೆಂದು ಬರೆದಿದ್ದಾರೆ. ಇದನ್ನೂ ಕೂಡ ರಾಜೀವನ ಚುಟುಕು ನೆನಪುಗಳ ಮುಖಾಂತರವೇ ತೋರಿಸಿದ್ದರಿಂದ, ನೇರ ನಿರೂಪಣೆಯನ್ನು ತಪ್ಪಿಸಿದಂತಾಗಿದೆ ಹಾಗು ಕಾದಂಬರಿಯನ್ನು compact ಮಾಡಿದಂತಾಗಿದೆ.

ಕಾದಂಬರಿ ಬೆಳೆದಂತೆ, ಅವಳ ಪೂರ್ವೇತಿಹಾಸವು ಅನೇಕ ಝಲಕುಗಳ ಮೂಲಕ ತೆರೆದುಕೊಳ್ಳುತ್ತ ಹೋಗುತ್ತದೆ. ಇದು ಒಂದು ಕುಶಲ ಕಥನ ತಂತ್ರ.  ಯಾಮಿನಿಯ ಅಸಹಾಯಕ ಕೌಟಂಬಿಕ ಪರಿಸ್ಥಿತಿಯನ್ನು ತೋರಿಸುವಲ್ಲಿ ಮತ್ತು ಅವಳ ಹಾಗು ರಾಜೀವನ ನಡುವೆ ಬೆಳೆದ ಆಕರ್ಷಣೆಗೆ ತರ್ಕಬದ್ಧ ಗತಿಯನ್ನು ಕೊಡುವಲ್ಲಿ ಈ ತಂತ್ರವು ಉತ್ತಮ ಸಾಧನವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಎರಡನೆಯ ಪ್ರಕರಣದಲ್ಲಿ ಉದ್ದಿಮೆಪತಿ ಸತೀಶನ ಹಾಗು ಅವನ ಕುಟುಂಬದ ಪರಿಚಯವನ್ನು ಲೇಖಕರು ಒಂದೇ ಧಾರೆಯಲ್ಲಿ ಮಾಡಿಬಿಡುತ್ತಾರೆ. ಯಾಕೆಂದರೆ, ಕಾದಂಬರಿಯ ಬೆಳವಣಿಗೆಯಲ್ಲಿ ಸತೀಶನ ಕುಟುಂಬದ ಪಾತ್ರವು ನಗಣ್ಯವಾಗಿದೆ. ಶ್ರೀಮಂತ ಉದ್ಯೋಗಪತಿಯ ಕುಟುಂಬದ ಜೀವನಶೈಲಿಯನ್ನು ತೋರಿಸುವ ಉದ್ದೇಶಕ್ಕೆ ಮಾತ್ರ ಈ ಕುಟುಂಬದ ವರ್ಣನೆ ಅವಶ್ಯವಾಗಿದೆ. ಸತೀಶನ ತಂದೆ ನಾಗೇಶರು ಒಂದು ಔಷಧ ಅಂಗಡಿಯಲ್ಲಿ ಮಾರಾಟದ ಹುಡುಗ ಆಗಿದ್ದವರು.  ಭಾರತವು ಇಬ್ಭಾಗವಾದ ಸಮಯದಲ್ಲಿ ಅಂಗಡಿಯ ಮುಸ್ಲಿಮ್ ಮಾಲಕನು ಈ ಹುಡುಗನಿಗೇ ತನ್ನ ಅಂಗಡಿಯನ್ನು ಕೊಟ್ಟು ಹೋಗಿ ಬಿಡುತ್ತಾನೆ. ನಾಗೇಶರು ತುಂಬ ಶ್ರದ್ಧೆಯಿಂದ ಅಂಗಡಿಯನ್ನು ಬೆಳೆಯಿಸಿ ಶ್ರೀಮಂತರಾಗುತ್ತಾರೆ. ವಯಸ್ಸಾದ ನಂತರ, ದೇವರ ಸ್ಮರಣೆಯಲ್ಲಿ ಮಗ್ನರಾಗಿ ಜೀವನ ಸಾಗಿಸುತ್ತಾರೆ. ಆದರೂ ಸಹ ಕಾಲಕಾಲಕ್ಕೆ ಮಗನಿಗೆ ಸಲಹೆ ಸೂಚನೆ ಕೊಡುವದರಲ್ಲಿ ಹಿಂದೆ ಬೀಳುವದಿಲ್ಲ. ಅವರ ಮಗ ಸತೀಶನಾದರೋ MBA ಪದವೀಧರ. ಈತ ತನ್ನ ತಂದೆಯಂತಲ್ಲ. ಈತನಿಗೆ ವ್ಯಾವಹಾರಿಕ ಜಾಣ್ಮೆಯೇ ಮುಖ್ಯವಾದದ್ದು. ಆಧುನಿಕ ಮಾರ್ಗದಲ್ಲಿ ಮುನ್ನಡೆದ ಈತ ತನ್ನ ಉದ್ದಿಮೆಯನ್ನು ಬೆಳೆಸುತ್ತ, ಅಂತರರಾಷ್ಟ್ರೀಯ ವ್ಯವಹಾರದ ಉದ್ಯೋಗಪತಿಯಾಗಿದ್ದಾನೆ.  ಈತನ ರೂಪವತಿ ಹೆಂಡತಿ ಲಕ್ಷ್ಮಿ ಆಧುನಿಕ ನಾರಿಯಾದರೂ ಸಹ ವಾತ್ಸಲ್ಯಮಯಿ ಗೃಹಿಣಿ. ತನ್ನ ಗಂಡ, ಮಾವ ಹಾಗು ನಾದಿನಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವವಳು. ಇಂತಹ ಹೆಂಡತಿಯಿದ್ದರೂ ಸಹ ಸತೀಶನು, ವಿದೇಶಕ್ಕೆ ಹೋದಂತಹ ಸಮಯದಲ್ಲಿ  ಓರ್ವ ಬಿಳಿ ಹೆಣ್ಣಿನೊಡನೆ ಒಂದು ರಾತ್ರಿಯ ತಾತ್ಕಾಲಿಕ ಸಂಬಂಧವನ್ನು ಬೆಳೆಸುತ್ತಾನೆ. ಕೇವಲ ಒಂದು ಪುಟ್ಟ ಪರಿಚ್ಛೇದಕ್ಕೆ ಸೀಮಿತವಾದ ಈ ತಾತ್ಕಾಲಿಕ ಸಂಬಂಧವನ್ನು ಹೇಳುವ ಮೂಲಕ ಲೇಖಕರು, ಆರ್ಥಿಕವಾಗಿ ಉಚ್ಚ ತರಗತಿಯಲ್ಲಿರುವ ನಮ್ಮ ಆಧುನಿಕ ಉದ್ಯೋಗಪತಿಗಳು ಹಾಗು high society ವ್ಯಕ್ತಿಗಳು ಸದಸದ್ವಿವೇಚನಾ ಪ್ರಜ್ಞೆಯನ್ನು (conscience) ಕಳೆದುಕೊಂಡಿರುವ ಸ್ಥಿತಿಯನ್ನು ಸೂಕ್ಷ್ಮವಾಗಿ ವರ್ಣಿಸಿದ್ದಾರೆ. ಈ ಕುಟುಂಬದ ಕೊನೆಯ ಹಾಗು ಕಿರಿಯ ಸದಸ್ಯೆ ಎಂದರೆ ಸತೀಶನ ತಂಗಿ. ಇವಳು ಕಾ^ಲೇಜಿನಲ್ಲಿ ತತ್ವಜ್ಞಾನವನ್ನು ಓದುತ್ತಿರುವಳು. ತನ್ನ ಕುಟುಂಬದ ಸಂಪತ್ತಿನ ಬಗೆಗೆ ತಿರಸ್ಕಾರ ಉಳ್ಳವಳು. ಇದೆಲ್ಲವನ್ನು ಬಿಟ್ಟು, ಆಶ್ರಮವಾಸಿಯಾಗಲು ಬಯಸುವವಳು. ಆದರೆ ಆಧುನಿಕ ಹುಡುಗಿಯಾದ ಇವಳು ತನ್ನ ಕುಟುಂಬದ ಇತರ ಸದಸ್ಯರ ಎದುರಿಗೇ ಧೂಮಪಾನ ಮಾಡುವಂತಹ ‘ಬಿನ್ ದಾಸ್’ ಧೋರಣೆಯುಳ್ಳವಳು.              
      
ಮುಂಬಯಿಯಲ್ಲಿ ಅನೇಕ ಉದ್ದಿಮೆಗಳಿವೆ. ಈ ಉದ್ದಿಮೆಗಳ ಕಾರ್ಮಿಕ ಸಂಘಗಳೂ ಪ್ರತ್ಯೇಕವಾಗಿವೆ. ಆದರೆ ಇವು ಕೆಲವೊಂದು ಮಹಾಮಂಡಲಗಳಿಗೆ affiliate ಆಗಿರುತ್ತವೆ. ಒಂದು ಉದ್ದಿಮೆಯಲ್ಲಿ ಯಾವ ಯಾವ ಕಾರಣಕ್ಕೆ ಮುಷ್ಕರಗಳು ಪ್ರಾರಂಭವಾಗುತ್ತವೆ, ಈ ಮುಷ್ಕರಗಳನ್ನು ಯಶಸ್ವಿಗೊಳಿಸಲು ಅದರ ಮುಖಂಡರು ಹೇಗೆ ಪ್ರಯತ್ನಿಸುತ್ತಾರೆ, ಅವುಗಳ ಅಪಯಶಸ್ಸಿಗೆ ಉದ್ದಿಮದಾರರು ಹೇಗೆ ಪ್ರಯತ್ನಿಸುತ್ತಾರೆ, ಬೇರೆ ಬೇರೆ ಮಹಾಮಂಡಲಗಳ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳನ್ನು ಮತ್ತು ಅವರ ಮುಷ್ಕರಗಳನ್ನು ಹೇಗೆ ಮುರಿಯುತ್ತಾರೆ; ಲಂಚ, ಹಾದರ, ಕೊಲೆ ಇವುಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವದೆಲ್ಲವನ್ನೂ ಬಲ್ಲಾಳರು ತಮ್ಮ ಪಾತ್ರಗಳ ಕತೆಗಳ ಹಿನ್ನೆಲೆಯಲ್ಲಿಯೇ ನಿರೂಪಿಸಿದ್ದಾರೆ. ಈ ರೀತಿಯಾಗಿ ಕಾರ್ಮಿಕ ಸಂಘಟನೆಗಳ ಒಳಹೊರಗನ್ನೆಲ್ಲ ಬಣ್ಣಿಸುವಾಗ ಸಹ ನೇರ ನಿರೂಪಣೆಯನ್ನು ಬಲ್ಲಾಳರು ಬಳಸುವದಿಲ್ಲ. ಕೆಲವೊಂದು ಕಾರ್ಮಿಕರ ಸಂಸಾರ ಚಿತ್ರಗಳನ್ನು brief ಆಗಿ ಕೊಡುತ್ತಲೇ  ಬಲ್ಲಾಳರು ಮುಷ್ಕರದ ಪ್ರಗತಿ ಹಾಗು ದುರ್ಗತಿಗಳನ್ನು ಚಿತ್ರಿಸುತ್ತಾರೆ. ಈ ರೀತಿಯಾಗಿ ಸಮಾಜದ ವಿವಿಧ ಸ್ತರಗಳಲ್ಲಿರುವ ಕುಟುಂಬಗಳ ಚಿತ್ರಗಳನ್ನು ಕೊಡುವ ಬಲ್ಲಾಳರ ಕೌಶಲ್ಯವು ಮೆಚ್ಚುವಂತಹದು.

ಮುಂಬಯಿ ಮಹಾನಗರಿಯಲ್ಲಿ ನಡೆಯುವ ಮುಷ್ಕರಗಳ ಜಾತಕವನ್ನು ತದ್ರೂಪವಾಗಿ ಬಣ್ಣಿಸುತ್ತ ಹೋದರೆ, ‘ಬಂಡಾಯ’ವೆನ್ನುವ ಈ ಕಾದಂಬರಿಯು ಶುಷ್ಕ ಪ್ರಬಂಧವಾಗಿ ಬಿಡುತ್ತಿತ್ತು. ಅದನ್ನು ತಪ್ಪಿಸಲೆಂದೇ, ಬಲ್ಲಾಳರು ಈ ಕಾದಂಬರಿಯಲ್ಲಿ ರಾಜೀವ ಹಾಗು ಯಾಮಿನಿಯರ ಆಕರ್ಷಣೆ ಹಾಗು ಪ್ರೇಮ ಸಂಬಂಧವನ್ನು ಯೋಜಿಸಿದ್ದಾರೆ. ಅದರಂತೆ ಕಾದಂಬರಿಯಲ್ಲಿಯ ಇನ್ನಿತರ ಪಾತ್ರಗಳ ಕೌಟಂಬಿಕ ಸಮಸ್ಯೆಯ ಸುತ್ತಲೂ ಕತೆ ಹೆಣೆಯುತ್ತ ಸಾಗಿದ್ದಾರೆ. ಈ ವಿಧಾನವು ಕನ್ನಡದಲ್ಲಿ ಹೊಸದೇನೂ ಅಲ್ಲ. ಉದಾಹರಣೆಗೆ ಕನ್ನಡದ ಮತ್ತೊಬ್ಬ ಶ್ರೇಷ್ಠ ಕಾದಂಬರಿಕಾರ ನಿರಂಜನರೂ ಸಹ ಇದೇ  ವಿಧಾನವನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೆ.

ಆದರೆ ಎಲ್ಲ ಭಾರತೀಯ ಲೇಖಕರಂತೆ, ಬಲ್ಲಾಳರೂ ಸಹ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯನ್ನು ಚಿತ್ರಿಸುವಾಗ conservative ಆಗಿ ಬಿಡುತ್ತಾರೆ. ಅದಾಗ್ಯೂ ಅದ್ಭುತವಾದ ಕಥನ ಕೌಶಲವನ್ನು ಹೊಂದಿದ ಬಲ್ಲಾಳರು ತಮ್ಮ ಉದ್ದೇಶವನ್ನು ಅತ್ಯಂತ ಸಹಜವೆನ್ನುವಂತೆ ಕಥಿಸಿದ್ದಾರೆ. ಅದು ಹೀಗಿದೆ:

ಯಾಮಿನಿ ಹಾಗು ಶ್ರೀಕಾಂತರದು ಮಧ್ಯಮವರ್ಗದ ಸುಖೀ ಕುಟುಂಬ. ಶ್ರೀಕಾಂತನೊಡನೆ ಸುಖಸಂಸಾರವನ್ನು ನಡೆಸುತ್ತಿರುವ ಯಾಮಿನಿಯನ್ನು ರಾಜೀವನ ಸಂಗಾತಿಯನ್ನಾಗಿ ಮಾಡುವ ಬಗೆ ಹೇಗೆ? ಲೇಖಕರ ಈ ಉದ್ದೇಶಪೂರ್ತಿಗಾಗಿಯೇ, ಯಾಮಿನಿಯ ಗಂಡ ಶ್ರೀಕಾಂತನು ಪೋಲಿಯೊ ರೋಗದಿಂದಾಗಿ ನೌಕರಿಯನ್ನು ಕಳೆದುಕೊಂಡು, ಮನೆ ಹಿಡಿದು ಕೂಡಬೇಕಾಗುತ್ತದೆ. ಈಗ ಯಾಮಿನಿಗೆ ನೌಕರಿ ಮಾಡುವದು ಅನಿವಾರ್ಯ. ರೋಗಿಯಾದ ಶ್ರೀಕಾಂತನಿಗೆ ಯಾಮಿನಿಯ ಮೇಲೆ ಸಂಶಯ, ಸೆಡವು ಹಾಗು ಅಸಹಿಷ್ಣುತೆ ಹುಟ್ಟುವದು ಸಹಜ. ಈ ಸಂದರ್ಭವನ್ನು ಸುಶೀಲಳಾದ ಆದರೆ ಸ್ವಾಭಿಮಾನಿಯಾದ ಯಾಮಿನಿಯು ನಿರ್ವಹಿಸುವ ರೀತಿಯನ್ನು ಲೇಖಕರು ಕಾದಂಬರಿಯ ಬೆಳವಣಿಗೆಗಾಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ.

ಯಾಮಿನಿಯು ಕೆಲಸ ಮಾಡುತ್ತಿರುವ ಫ್ಯಾಕ್ಟರಿಯಲ್ಲಿ ಮುಷ್ಕರ ನಡೆದಾಗ, ಅವಳೂ ಸಹ ಮುಷ್ಕರದಲ್ಲಿ ಭಾಗವಹಿಸಿರುತ್ತಾಳೆ. ರಾಜೀವನು ಅಲ್ಲಿಯ ನೌಕರರ ಕೋರಿಕೆಯ ಮೇರೆಗೆ ಆ ಮುಷ್ಕರದ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ರಾಜೀವ ಹಾಗು ಯಾಮಿನಿಯರಿಗೆ ಆ ಕಾರಣದಿಂದ ಪರಿಚಯವಾಗುತ್ತದೆ. ಮುಷ್ಕರದ ಕಾರಣದಿಂದಾಗಿ ಇವರ ಒಡನಾಟ ಹೆಚ್ಚುತ್ತದೆ. ಯಾಮಿನಿ ರಾಜೀವನ ಇತರ ಕಾರ್ಯಕ್ರಮಗಳಲ್ಲೂ ಸಹಭಾಗಿಯಾಗುತ್ತಾಳೆ. ಈ ರೀತಿಯಾಗಿ ಯಾಮಿನಿಯು ರಾಜೀವನ ಮುಂದಾಳುತನದಲ್ಲಿದ್ದ ಕಾರ್ಮಿಕ ಸಂಘಟನೆಯಲ್ಲಿ ಪ್ರಮುಖ ಪಾತ್ರವಾಗುತ್ತಾಳೆ. ಇದರಿಂದಾಗಿ ಅವಳಿಗೆ ತನ್ನ ಗಂಡ, ಪೋಲಿಯೊ ಪೀಡಿತನಾಗಿ ಮನೆ ಹಿಡಿದು ಕೂತಿದ್ದ ಶ್ರೀಕಾಂತನೊಡನೆ ಸಾಕಷ್ಟು ಇರಸು ಮುರಸಾಗುತ್ತದೆ. ಅದೆಲ್ಲವನ್ನೂ ಅವಳು ತಾಳ್ಮೆ ಹಾಗು ಧೈರ್ಯದಿಂದ ಎದುರಿಸುತ್ತಾಳೆ.

ಜಡಿಮಳೆಯ ಒಂದು ರಾತ್ರಿಯಂದು, ಯಾಮಿನಿಗೆ ರಾಜೀವನ ಮನೆಯಲ್ಲಿ ಇರುವದು ಅನಿವಾರ್ಯವಾಗುತ್ತದೆ. ಅವರ ಮಾನಸಿಕ ಮಿಲನವು ಆವೊತ್ತು ಅವರ ದೈಹಿಕ ಮಿಲನದಲ್ಲಿ ಪರಿಣಮಿಸುತ್ತದೆ. ಇಂತಹ compelling circumstances ಇರದೇ ದೈಹಿಕ ಮಿಲನವಾದರೆ, ನಾಯಕ ಹಾಗು ನಾಯಕಿಯರು  ಪಶುತುಲ್ಯ ಕಾಮಜೀವಿಗಳೆಂದು ಓದುಗರು ಭಾವಿಸಿಯಾರು ಎನ್ನುವ ಹೆದರಿಕೆ ಲೇಖಕರಲ್ಲಿದೆ. ಆದರೆ, ಅವರ ದೈಹಿಕ ಮಿಲನವು ಆಗಲೇಬೇಕೆನ್ನುವ ಹಟ ಯಾಕೆ ಲೇಖಕರಿಗೆ? ನಾಯಕ, ನಾಯಕಿಯರಲ್ಲಿ platonic love ಇದ್ದರೆ ಸಾಲದೆ? ಊಂಹೂಂ. ಓದುಗರು ನಾಯಕ ಹಾಗು ನಾಯಕಿಯ ಮಿಲನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ, under acceptable, decent conditions! ಅದಕ್ಕಾಗಿ ಇಷ್ಟೆಲ್ಲಾ ಕಸರತ್ತು. ಬಲ್ಲಾಳರು ಅತ್ಯಂತ ಚಾಣಾಕ್ಷತೆಯಿಂದ ಇದನ್ನು ಸಂಬಾಳಿಸುತ್ತಾರೆ ಎನ್ನುವದು ಅವರಿಗೆ ಸಲ್ಲಬೇಕಾದ credit ಅಗಿದೆ.

ಇತ್ತ ಸತೀಶನ ಉದ್ದಿಮೆಗಳಲ್ಲಿಯೇ ಮುಷ್ಕರ ಪ್ರಾರಂಭವಾಗುತ್ತದೆ. ಈ ಮುಷ್ಕರವನ್ನು ಎಬ್ಬಿಸಿದವನು ದೇಶಪಾಂಡೆ ಎನ್ನುವ ಕಾರ್ಮಿಕ ಮುಂದಾಳು. ಮುಂಬಯಿಯಲ್ಲಿಯ ಎಲ್ಲ ಕಾರ್ಮಿಕ ಸಂಘಟನೆಗಳಿಗೂ ತಾನೇ ನೇತಾರನಾಗಬೇಕು, ಎಲ್ಲೆಲ್ಲಿಯೂ ತನ್ನದೇ ಪ್ರತಿಷ್ಠೆ ಮೆರೆಯಬೇಕು ಎನ್ನುವ ದುರ್ಬುದ್ಧಿ ಈತನದು. ಕಾದಂಬರಿಯಲ್ಲಿ ದೇಶಪಾಂಡೆಯ ಹೆಸರು ಮಾತ್ರ ಬರುತ್ತಲೇ ಇರುತ್ತದೆಯೇ ಹೊರತು, ಆತ ಪ್ರತ್ಯಕ್ಷವಾಗಿ ಎಲ್ಲಿಯೂ ಕಾಣಿಸಿಕೊಳ್ಳುವದಿಲ್ಲ.

ಈ ಪಾತ್ರಗಳಲ್ಲದೆ, ಅನೇಕ ಕಾರ್ಮಿಕ ಪಾತ್ರಗಳು ಈ ಕಾದಂಬರಿಯಲ್ಲಿ ಬಂದು ಹೋಗುತ್ತವೆ. ಮುಂಬಯಿಯ ಕೊಳೆಗೇರಿಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಈ ಕಾರ್ಮಿಕರು ಪಶುಗಳಂತೆ ಬದುಕುವ ಪರಿಯನ್ನು ಬಲ್ಲಾಳರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಕೇವಲ ಒಂದೇ ಪುಟದ ಪಾತ್ರಗಳಾದರೂ ಸಹ ಬಲ್ಲಾಳರು ಆ ಪಾತ್ರಗಳಲ್ಲಿ ಓದುಗನಿಗೆ ಮಾನವೀಯ ಆಸಕ್ತಿ ಹುಟ್ಟುವಂತಹ ಚಿತ್ರಣ ನೀಡಿದ್ದಾರೆ. ಉದಾಹರಣೆಗೆ ರಘು ಪಾಟಸ್ಕರನ ಪಾತ್ರವನ್ನು ತೆಗೆದುಕೊಳ್ಳಬಹುದು. ಈತ ಸತೀಶನ ತಂದೆ ನಾಗೇಶರ ಬಲಗೈ ಬಂಟ. ಸತೀಶನ ಉದ್ದಿಮೆಗಳಲ್ಲಿಯ ಕಾರ್ಮಿಕರ ಮೇಲೆ ನಿಗಾ ಇಡುವದು ಇವನ ಕೆಲಸ. ಇಂತಹ ಸಣ್ಣ ಪಾತ್ರದ ಕುಟುಂಬಕ್ಕೂ  ಬಲ್ಲಾಳರು ಇಲ್ಲಿ ಔಚಿತ್ಯಪೂರ್ಣ ಸ್ಥಳಾವಕಾಶ ನೀಡಿದ್ದಾರೆ. ಯಾವಾಗಲೂ ಕುಟುಂಬದವರ ದೇಖರೇಖಿಯಲ್ಲಿ ಮಗ್ನಳಾದ ಆತನ ಹೆಂಡತಿ, ಸಂಗೀತ ಕಲಿಯುತ್ತಿರುವ ಆತನ ಮಗಳು, ತುಂಟಾಟದ ಆತನ ಮಗ, ಪಾಟಸ್ಕರನೊಟ್ಟಿಗೆ ಇರುವ ಆತನ ಮುದಿ ತಂದೆ, ತಾಯಿ ಇವರೆಲ್ಲರ ಚಿತ್ರವನ್ನು ಬಲ್ಲಾಳರು ಸಾಂದರ್ಭಿಕವಾಗಿ ಕೇವಲ ಎರಡೇ ಪುಟಗಳಲ್ಲಿ ನೀಡುತ್ತಾರೆ. ಆದರೆ, ಇಷ್ಟೇ ಸಾಕು ಕಾದಂಬರಿಯಲ್ಲಿ ಮಾನವೀಯ ಆಸಕ್ತಿಯನ್ನು ಹುಟ್ಟಿಸಲು. ಇದರಂತೆಯೇ ಕೊಲೆಯಾದ ಕಾರ್ಮಿಕ ತಿವಾರಿಯ ಹೆಂಡತಿಯು ಉದ್ದಿಮೆಯ ಕಚೇರಿಗೆ ಬಂದಾಗ, ಅವಳ ಬತ್ತಲೆ ಬೆನ್ನಿನ ಕಡೆಗೆ ಹರಿಯುವ ಸತೀಶನ ಲಕ್ಷವನ್ನು ವರ್ಣಿಸುವ ಮೂಲಕ, ಮಾನವಸಂವೇದನೆ ಇಲ್ಲದ ವ್ಯಕ್ತಿಗಳ ಮನಸ್ಸನ್ನು ಬಲ್ಲಾಳರು ಅನಾವರಣಗೊಳಿಸುತ್ತಾರೆ. 

            ಮುಂಬಯಿ ನಗರದ ಪೋಲೀಸ ಮುಖ್ಯಸ್ಥನ ಜೊತೆಗೆ ಸತೀಶನದು ಏಕವಚನದ ಗೆಳೆತನ. ಆಗಾಗ ಗುಂಡು ಪಾರ್ಟಿಗಳ ಮೂಲಕ ಇವರ ಸಖ್ಯವೃದ್ಧಿ. ಇವರೀರ್ವರಿಗೆ ಪರಸ್ಪರ ಹೆಂಡಿರನ್ನೂ ಸಹ ಏಕವಚನದಲ್ಲಿಯೇ ಕರೆಯುವ ಸಲುಗೆ. High Societyಯ ಬೆಡಗು, ಬಿನ್ನಾಣಗಳನ್ನೆಲ್ಲ ಇಲ್ಲಿ ಕಾಣಬಹುದು. ಇಷ್ಟಿದ್ದರೂ ಸಹ ಸತೀಶನ ಉದ್ದಿಮೆಯ ಕಾರ್ಮಿಕನೊಬ್ಬನ ಕೊಲೆಯ ಶೋಧನೆಗಾಗಲೀ, ಮುಷ್ಕರ ನಡೆದಾಗ ಕೆಲಸ ಮಾಡಬಯಸುವ ನಿಷ್ಠ ಕಾರ್ಮಿಕರಿಗೆ ರಕ್ಷಣೆ ಕೊಡುವದಕ್ಕಾಗಲೀ ಈ ಪೋಲೀಸ ಅಧಿಕಾರಿ ತನ್ನ ಮಿತಿ ಬಿಟ್ಟು ಹೊರ ಬರಲಾರ. ಇದು ಅಲ್ಲಿಯ ಕಠೋರ ಸತ್ಯ!

ಈ ಎಲ್ಲ ಕುಟುಂಬಗಳ ಸುಖ ದುಃಖಗಳನ್ನು ವರ್ಣಿಸುತ್ತಲೇ, ಬಲ್ಲಾಳರು ಮುಂಬಯಿಯಲ್ಲಿ ಮುಷ್ಕರ ಹುಟ್ಟುವ ಅಥವಾ ಮುಷ್ಕರವನ್ನು ಹುಟ್ಟಿಸುವ ಬಗೆ,  ಕಾರ್ಮಿಕರ ಗೋಳು, ಕಾರ್ಮಿಕ ಸಂಘಗಳ ಮುಂದಾಳುಗಳ ಅಟ್ಟಹಾಸ, ಉದ್ಯಮಪತಿಗಳ ಸಂವೇದನಾರಾಹಿತ್ಯ ಇವೆಲ್ಲವನ್ನೂ  ತೆರೆಯುತ್ತಲೇ ಹೋಗುತ್ತಾರೆ. ಸತೀಶನ ಕುಟುಂಬದ ಕತೆಯಂತೆ ಕಾಣುವ ಈ ಕಾದಂಬರಿ, ರಾಜೀವ, ಯಾಮಿನಿಯರ ಆಕರ್ಷಣೆಯ ಕತೆಯಂತೆ ಕಾಣುವ ಈ ಕಾದಂಬರಿ ನಿಜಕ್ಕೂ  ಮುಷ್ಕರಗಳ ಒಳಹೊರಗನ್ನು ಚಿತ್ರಿಸುವ ಕಾದಂಬರಿಯಾಗಿದೆ.

ಕಾದಂಬರಿಯ ಕೊನೆಯಲ್ಲಿ, ರಾಜೀವನಿಗೆ ಈ ರೀತಿಯ ಮುಷ್ಕರಗಳಿಂದ ಕಾರ್ಮಿಕರ ಹಿತ ಸಾಧಿಸಲು ಶಕ್ಯವಿಲ್ಲ ಎನ್ನುವ ಅರಿವು ಹುಟ್ಟುತ್ತದೆ. ಈ ಮಾರ್ಗವನ್ನು ಬಿಟ್ಟು, ತನ್ನ ಮೊದಲಿನ ಮಾರ್ಗಕ್ಕೆ ಮರಳಲು ಆತ ಒಮ್ಮೆಲೆ ಕಣ್ಮರೆಯಾಗುತ್ತಾನೆ. ರಾಜೀವನ ಮೊದಲಿನ ಮಾರ್ಗವು ಯಾವುದು ಎನ್ನುವದಕ್ಕೆ ಕಾದಂಬರಿಯಲ್ಲಿ ಸಾಕಷ್ತು ಸುಳಿವುಗಳಿವೆ.  ರಾಜೀವನ ಬದಲಾಗಿ ಯಾಮಿನಿಯು ಕಾರ್ಮಿಕ ಸಂಘದ ಮುಂದಾಳಾಗಿ ಮುಂದುವರೆಯುತ್ತಾಳೆ.

ಭಾರತದಲ್ಲಿಯ ಶೋಷಕ ಹಾಗು ಶೋಷಿತರ ಸಮಸ್ಯೆಯು ಉದ್ಯೋಗಪತಿಗಳಿಗೆ ಹಾಗು ನಗರಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಾಡಿನಲ್ಲಿ ಇದು ಜಮೀನುದಾರರ ಹಾಗು ರೈತಶ್ರಮಿಕರ ಸಮಸ್ಯೆಯಾಗಿದೆ. In fact ಭಾರತೀಯ ಬದುಕಿನ ವ್ಯವಸ್ಥೆಯೇ ಒಂದು ಶ್ರೇಣೀಕೃತ ಶೋಷಣಾವ್ಯವಸ್ಥೆಯಾಗಿದೆ. ಇದಕ್ಕೆ ಪರಿಹಾರವೆಲ್ಲಿದೆ? ನಕ್ಸಲರು ನಂಬುವಂತೆ, ಬಂದೂಕಿನ ನಳಿಕೆಯ ಮುಖಾಂತರವೇ ಬದಲಾವಣೆ ಸಾಧ್ಯವೆ? ಕಾದಂಬರಿಯ ಕೊನೆಯಲ್ಲಿ ರಾಜೀವನಲ್ಲಿಯ ಮರುಚಿಂತನೆ ಈ ವಿಚಾರವನ್ನು ಓದುಗರ ಎದುರಿಗೆ ಇಡುತ್ತದೆ. ಇದರರ್ಥ ಬಲ್ಲಾಳರು ಈ ಅಭಿಪ್ರಾಯವನ್ನು endorse ಮಾಡುತ್ತಾರಂತಲ್ಲ.  ಆದರೆ ನಮ್ಮಲ್ಲಿಯ ನಕ್ಸಲೀಯ ಚಿಂತನೆಯ ಉಗಮವನ್ನು ತೋರಿಸುತ್ತಾರೆ, ಅಷ್ಟೆ.

ಬಲ್ಲಾಳರು ಮುಂಬಯಿಯ ಕನ್ನಡ ಭಾಷೆಯನ್ನು ಹಾಗು ಅಲ್ಲಲ್ಲಿ ಮರಾಠಿಯನ್ನು ಬಳಸುವ ಮೂಲಕ ಕಾದಂಬರಿಗೆ ಒಂದು ಪ್ರಾದೇಶಿಕತೆಯನ್ನು ಕೊಡಲು ಸಮರ್ಥರಾಗಿದ್ದಾರೆ. ಕತೆಯ ಬೆಳವಣಿಗೆಯನ್ನು ಅತ್ಯಂತ ಕ್ಷಿಪ್ರವಾಗಿ ಮಾಡುತ್ತ, ಓದುಗನಲ್ಲಿ ಕುತೂಹಲವನ್ನು ಮೂಡಿಸವಲ್ಲಿ ಬಲ್ಲಾಳರು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ, ಕಾದಂಬರಿಯು ಔದ್ಯೋಗಿಕ ಜಗತ್ತಿನ ಶೋಷಣೆಯ ಅನಾವರಣವೆನಿಸದೆ, ಕಾದಂಬರಿಯಲ್ಲಿ ಬರುವ ಪಾತ್ರಗಳ ವೈಯಕ್ತಿಕ ಕತೆ ಎನಿಸುವಂತೆ ಬಲ್ಲಾಳರು ಬರೆದಿದ್ದಾರೆ. ಹೀಗಾಗಿ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕಾದಂಬರಿಯು ಆಸಕ್ತಿಪೂರ್ಣವಾಗಿದೆ. ಇಷ್ಟೆಲ್ಲ ಧನಾತ್ಮಕ ಅಂಶಗಳಿದ್ದ ಈ ಕಾದಂಬರಿಯಲ್ಲಿ ಒಂದು ಚಿಕ್ಕ ದೋಷವೂ ಇದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳು ನೈಜವೆನ್ನಿಸಬೇಕೇ ಹೊರತು, ಕಾದಂಬರಿಕಾರನ ಉದ್ದೇಶಪೂರ್ತಿಗಾಗಿ
ನಿರ್ಮಿತವಾದ robotಗಳಾಗಬಾರದು. ‘ಬಂಡಾಯ’ ಕಾದಂಬರಿಯಲ್ಲಿ ಎಲ್ಲ ಪಾತ್ರಗಳೂ ಲೇಖಕರ ಉದ್ದೇಶದ ಮಿತಿಗೆ ಕಟ್ಟುಬಿದ್ದಂತೆ ಓದುಗನಿಗೆ ಭಾಸವಾಗುವದು ಈ ಕಾದಂಬರಿಯ ಒಂದು ಚಿಕ್ಕ ದೋಷವೆನ್ನಬಹುದು. ಆದರೆ ಚಂದ್ರನ ಚೆಲುವಿನಲ್ಲಿ, ಅವನ ಕಪ್ಪು ಕಲೆಯು ಮುಚ್ಚಿ ಹೋಗುವಂತೆ, ಕಾದಂಬರಿಯ ಧನಾತ್ಮಕ ಅಂಶಗಳ ಎದುರಿಗೆ, ಈ ದೋಷವು ಮುಚ್ಚಿ ಹೋಗುತ್ತದೆ.