ಅನೇಕ ದಿನಗಳಿಂದ ನಮ್ಮ ಪ್ರಿಯ ಮಿತ್ರರಾದ ಅಸತ್ಯಾನ್ವೇಷಿಗಳ ಮುಖವನ್ನೇ ನಾವು ಕಂಡಿಲ್ಲ ;
ಅವರ ‘ಬೊಗಳೆ ರಗಳೆ’ಯನ್ನು ಓದಿಲ್ಲ. ಅಸತ್ಯಾನ್ವೇಷಿಗಳ ಕಟ್ಟಾ ಅಭಿಮಾನಿ ಹಾಗು ‘ಬೊಗಳೆ ರಗಳೆ’ ಪತ್ರಿಕೆಯ ನಿಯತ ಓದುಗನಾದ ನಮ್ಮ ಕರ್ಣಪಿಶಾಚಿಗೆ ಭಯಂಕರ ಚಡಪಡಿಕೆಯಾಗತೊಡಗಿತು. ‘ಎಲ್ಲಿ ಹೋದರು ನಮ್ಮ ಭೋ-ಜನಪ್ರಿಯ ಸೊಂಪಾದಕರು?’ ಎಂದು ಚಡಪಡಿಸುತ್ತ ಕರ್ಣಪಿಶಾಚಿ ಎಲ್ಲಾ ಕಡೆಗೂ ಹುಡುಕಾಡಲಾರಂಭಿಸಿತು. ಕೊನೆಗೊಮ್ಮೆ ಅವರು ಸಿಕ್ಕೇ ಬಿಟ್ಟರು..........ಹರಿಶ್ಚಂದ್ರ ಘಾಟಿನಲ್ಲಿ ಗುದ್ದಲಿ ಹಿಡಿದುಕೊಂಡು ಗೋರಿಗಳನ್ನು ಅಗೆಯುತ್ತಿದ್ದರು. ಅವರ ನಡುವೆ ನಡೆದ ಸಂಭಾಷಣೆ ಹೀಗಿದೆ:
ಕ.ಪಿ: ಅಲೋ ಸೊಂಪಾದಕರೆ, ಏನು ಹುಡುಕುತ್ತಿದ್ದೀರಿ?
ಅಸತ್ಯಾನ್ವೇಷಿ: ನನಗೆ ತುಂಬ ಪ್ರಿಯವಾದ ಅಸತ್ಯವನ್ನು. ಅದನ್ನ ಇಲ್ಲೆಲ್ಲೊ ಹೂತು ಹಾಕಿದ್ದಾರೆ.
ಕ.ಪಿ: ಅದು ಹೇಗೆ?
ಅನ್ವೇಷಿ: ಈಗ ಎಲ್ಲೆಲ್ಲೂ ಸತ್ಯದ ತಾಂಡವ ನೃತ್ಯ ನಡೆದಿದೆ. ಹಸ್ತಿನಾಪುರವನ್ನು ಮಮೋ ಸಿಂಗ ಎಂಬ ಧರ್ಮರಾಜರು ಆಳುತ್ತಿದ್ದಾರೆ. ಭಾರತದೇಶದಿಂದ ಲಂಚವನ್ನು ನಿರ್ಮೂಲ ಮಾಡಿ, ಸ್ವಿಸ್ ಬ್ಯಾಂಕುಗಳಿಗೆ ಕಳಿಸಲು ಪಣ ತೊಟ್ಟಿದ್ದಾರೆ!
ಕ.ಪಿ: ಹೋಗಲಿ ಬಿಡಿ? ಕರ್ನಾಟಕದಲ್ಲಾದರೂ ನಿಮಗೆ ಅಸತ್ಯ ಸಿಗಬಹುದಲ್ಲ?
ಅ..ಷಿ: ಹೋಗೋ ದಡ್ಡ ನನ ಮಗನೆ! ಇದು ಕೊಡುಗೈ ದೊರೆ ಚಡ್ಯೂರಪ್ಪನವರ ರಾಜ್ಯ. ಕರ್ನಾಟಕದಲ್ಲಿರುವ ಹತ್ತುಸಾವಿರ ಮಠಗಳಿಗೆ, ಪ್ರತಿ ಮಠಕ್ಕೆ ನೂರು ಕೋಟಿ ರೂಪಾಯಿಗಳಂತೆ ದಾನ ಕೊಟ್ಟಿದ್ದಾರೆ! ಇಂಥಾ ದೊರೆ ಇರೋ ನಾಡಿನಲ್ಲಿ ಅಸತ್ಯ ಎಲ್ಲಿ ಸಿಕ್ಕೀತು? ಭಾರತವರ್ಷದಲ್ಲಿ ಇದೀಗ ಸತ್ಯಯುಗ ಪ್ರಾರಂಭವಾಗಿದೆ.
ಭಯಂಕರ ನಿರಾಶೆಯಲ್ಲಿ ಮುಳುಗಿದ ಕರ್ಣಪಿಶಾಚಿಯು ಅಸತ್ಯಾನ್ವೇಷಿಗಳ ಕಾಯಕಕ್ಕೆ ಶುಭ ಕೋರಿ, ಬೆಂಗಳೂರಿನತ್ತ ಹಾರತೊಡಗಿತು. ಆಗ ಅದು ಕಂಡದ್ದೇನು? ನೈಸ್ ರಸ್ತೆಯ ನಟ್ಟನಡುವೆ ಧಡೂತಿ ಆಸಾಮಿಯೊಂದು ಹಸಿರು ಶಲ್ಲೆ ಹೊತ್ತುಕೊಂಡು ಮಲಗಿದೆ. ಹತ್ತಿರ ಹೋಗಿ ನೋಡಿದಾಗ,....... ಅಹೋ ಇವರು ನಮ್ಮ ವೇದೇಗೌಡರು!
ಕ.ಪಿ: ನಮಸ್ಕಾರ ಗೌಡರೆ! ಖೇಣಿ ವಿರುದ್ಧ ಧರಣಿ ಮಾಡುತ್ತಿದ್ದೀರಾ?
ಗೌಡರು: ಇಲ್ಲಪ್ಪಾ, ಸುಮ್ನೆ ನಿದ್ದೆ ಮಾಡ್ತಾ ಇದ್ದೆ! ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ನಿದ್ದೆ ಮಾಡಿ ಅಭ್ಯಾಸ ಆಗಿಬಿಟ್ಟಿದೆ, ಕಣಪ್ಪಾ!
ಗೌಡರು ನಿಜವನ್ನೇ ನುಡಿಯುತ್ತಿದ್ದಾರೆ! ಕರ್ಣಪಿಶಾಚಿಗೆ ಸಿಡಿಲು ಬಡಿದ ಅನುಭವವಾಯ್ತು. ಆದರೂ ಚೇತರಿಸಿಕೊಂಡ ಕರ್ಣಪಿಶಾಚಿ ಮತ್ತೊಂದು ಪ್ರಶ್ನೆ ಎಸೆಯಿತು.
ಕ.ಪಿ: ಗೌಡರೆ, ನೀವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದು ಯಾಕೆ? ಇದು ಮತ ರಾಜಕಾರಣದ ಸುಳ್ಳು ಘೋಷಣೆಯೆ?
ಗೌಡರು: ಖಂಡಿತವಾಗಿಯೂ ಅಲ್ಲ. ‘ಇಬ್ಬರು ಹೆಂಡಿರ ಮುದ್ದಿನ ಗೌಡನಾಗಿ’ ಮೆರೆಯೋ ಆಸೆ ನನಗೆ. ಆದರೆ ನಮ್ಮ ಗೊಡ್ಡು ಹಿಂದೂ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಮುಂದಿನ ಜನ್ಮದಲ್ಲಾದರೂ ಆ ಆಸೇನ ಪೂರೈಸಿಕೊಳ್ಳೋಣ ಅಂತ!
ಗೌಡರ ಬಾಯಿಂದ ಮತ್ತೊಂದು ಸತ್ಯವಾಕ್ಯ! ಕರ್ಣಪಿಶಾಚಿಯ ಜಂಘಾಬಲವೇ ಉಡುಗಿ ಹೋಯಿತು. ಆದರೂ ಹಠ ಬಿಡದ ಬೇತಾಳನಂತೆ ಮತ್ತೊಂದು ಪ್ರಶ್ನೆ ಎಸೆಯಿತು.
ಕ.ಪಿ: ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟೋದಿಲ್ಲ ಅಂತ ನೀವು ಹೇಳಿದ್ದೀರಂತೆ?
ಗೌಡರು: ಇಲ್ಲೇನು ಉಳಿದಿದೆ ಮಣ್ಣು? ಡಿನೋಟಿಫಿಕೇಶನ್ನು ಮಾಡಿ ಎಲ್ಲಾ ಮಣ್ಣನ್ನೂ ತಾನೇ ತಿಂದಿದ್ದಾನಲ್ಲ ಚಡ್ಯೂರಿ! ಅದಕ್ಕೆ ಗುಜರಾತ ರಾಜ್ಯದಲ್ಲಿ ಹುಟ್ಟಿ ಅಲ್ಲಿಯ ಮಣ್ಣನ್ನು ಮುಕ್ಕುವ ಆಸೆ ಇದೆ ನನಗೆ! ಇನ್ನು ನೀನು ಹೋಗಪ್ಪ. ನಾನೀಗ ನಿದ್ದೆ ಮಾಡಬೇಕು. ಸತ್ಯಮೇವ ಜಯತೇ! ಜೈಹಿಂದ!
ಕರ್ಣಪಿಶಾಚಿಗೆ ಆಘಾತದ ಮೇಲೆ ಆಘಾತ! ಭಾರತದ ರಾಜಕಾರಣಿಗಳು ಸತ್ಯ ಹರಿಶ್ಚಂದ್ರರಾಗಿ ಬಿಟ್ಟಿದ್ದಾರಲ್ಲ. ಇನ್ನು ಸುಳ್ಳಿಗೆಲ್ಲಿಯ ನೆಲೆ? ಕರ್ಣಪಿಶಾಚಿಯ ಮನದಲ್ಲಿ ಮಿಂಚು ಹೊಡೆದಂತಾಯಿತು. ನಮ್ಮ ಸಾಹಿತಿಗಳು! ಸುಳ್ಳಿಗೂ ಸಾಹಿತಿಗಳಿಗೂ ಬಿಡದ ನಂಟು. ಅವರನ್ನೇ ಹಿಡಿಯೋಣ ಎಂದುಕೊಂಡ ಕರ್ಣಪಿಶಾಚಿ ಸೀದಾ ವಿಶ್ವಕನ್ನಡ ಸಮ್ಮೇಳನದತ್ತ ಹಾರಿತು. ಮೊದಲು ಕಾಣಿಸಿದ್ದು ಧಾರವಾಡ.
ಧಾರವಾಡದಲ್ಲಿ ಕರ್ಣಪಿಶಾಚಿಗೆ ಮೊದಲು ಸಿಕ್ಕವರೇ ಗುರಡ್ಡಿ ಗೋವಿಂದರಾಜರು.
ಕ.ಪಿ: ನಮಸ್ಕಾರ ಗುರಡ್ಡಿಯವರೆ! ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆಯೆ, ಹೇಳಿ.
ಗುರಡ್ಡಿ: ಕನ್ನಡಕ್ಕೆ ಇಂಗ್ಲೀಶಿನಿಂದ ಏನೇನೂ ಅಪಾಯವಿಲ್ಲ. ಆದರೆ ಇಂಗ್ಲೀಶಿಗೆ ಮಾತ್ರ ಕನ್ನಡದಿಂದ, ಕನ್ನಡಿಗರಿಂದ ಸಾಕಷ್ಟು ಅಪಾಯವಿದೆ.
ಕ.ಪಿ: ಅದು ಹೇಗೆ?
ಗುರಡ್ಡಿ: ಕನ್ನಡ ಬಾಲಕರೆಲ್ಲ ನರ್ಸರಿಯಿಂದಲೇ ಇಂಗ್ಲೀಶಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅರ್ಥಾತ್ ಇಂಗ್ಲೀಶೇ ಇದೀಗ ಕನ್ನಡಿಗರ ಮಾತೃಭಾಷೆಯಾಗಿದೆ. ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಬಜ್ಜಿ ಮಾಡುವದರಲ್ಲಿ ನಿಪುಣರು. ಅಂದ ಮೇಲೆ ಇಂಗ್ಲೀಶಿನ ಗತಿ ಏನಾಗಬೇಡ?
ಕ.ಪಿ: ಉದಾಹರಣೆ ಕೊಡುತ್ತೀರಾ?
ಗುರಡ್ಡಿ: ಇಂಗ್ಲೀಶ ಮಂದಿ ‘ಬಿಜಿ’ ಅನ್ನೋದನ್ನ ಕನ್ನಡಿಗರು ‘ಬ್ಯುಜಿ’ ಎನ್ನುತ್ತಾರೆ. ಅವರು ‘ಸsರ್’ ಅನ್ನೋದನ್ನ ಇವರು ‘ಸಾsರ್’ ಅಂತಾರೆ. ಉದಾಹರಣೆ ಸಾಕೊ, ಇನ್ನೂ ಬೇಕೊ?
ಕರ್ಣಪಿಶಾಚಿಗೆ ಅಚ್ಚರಿಯೋ ಅಚ್ಚರಿ! ಗುರಡ್ಡಿಯವರು ಖ್ಯಾತ ವಿಮರ್ಶಕರಾದರೂ ಸಹ ಸತ್ಯವನ್ನೇ ಮಾತನಾಡುತ್ತಿದ್ದಾರಲ್ಲ! ತಟ್ಟನೆ ಕರ್ಣಪಿಶಾಚಿಗೆ ಗುರಡ್ಡಿಯವರ ‘ಹಿಡಿಯದ ಹಾದಿ’ ಪ್ರಬಂಧಸಂಕಲನದ ನೆನಪಾಯಿತು.
ಕ.ಪಿ: ಗುರಡ್ಡಿಯವರೆ, ‘ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಬೀಸಿದರೂ, ಅದು ಒಬ್ಬ ಕವಿಯ ಮನೆಯ ಮೇಲೆ ಬೀಳುತ್ತದೆ’ ಎಂದು ನಿಮ್ಮ ಸಂಕಲನದಲ್ಲಿ ಬರೆದಿದ್ದೀರಿ. ಇದು ಸುಳ್ಳಲ್ಲವೆ?
ಗುರಡ್ಡಿ; ಇದು ಅಪ್ಪಟ ಸತ್ಯ! ಧಾರವಾಡದ ಮಂದಿಗೆ ಕಲ್ಲು ಒಗೆಯೋ ಚಟವಿದೆ. ಕಾಶ್ಮೀರದ ಉಗ್ರವಾದಿಗಳಿಗೆ ಕಲ್ಲು ಒಗೆಯಲು ಕಲಿಸಿದವರೇ ಧಾರವಾಡದವರು. ಧಾರವಾಡಿಗಳ ಈ ಹುಚ್ಚನ್ನು ನೋಡಿಯೇ ಇಲ್ಲಿ ಹುಚ್ಚಾಸ್ಪತ್ರೆ ಕಟ್ಟಿಸಿದ್ದಾರೆ.
ಕ.ಪಿ: ಈ ಕಲ್ಲೆಸೆಯುವ ಕಾಯಕದ ಗುರು ಯಾರೆಂದು ಹೇಳುತ್ತೀರಾ?
ಗುರಡ್ಡಿ: ಮತ್ಯಾರು? ಹುಚ್ಚಾಸ್ಪತ್ರೆಯ ಪಕ್ಕದಲ್ಲೇ ಮನೆ ಮಾಡಿಕೊಂಡು ಇದ್ದರಲ್ಲ ಚಂಪಾ! ಕನ್ನಡಕ್ಕೆ ಅವರಿಂದಲೇ ಅಪಾಯವಿದೆ. ಅವರನ್ನು ಕರ್ನಾಟಕದಿಂದ ಗಡೀಪಾರು ಮಾಡಿದರೆ ಮಾತ್ರ ಪಾಟೀಲ ಪುಟ್ಟಪ್ಪ, ಪಟ್ಟಣಶೆಟ್ಟಿ ಹಾಗು ನಾನು ಇಲ್ಲಿ ನೆಮ್ಮದಿಯಿಂದ ಬದುಕಬಹುದು!
ಕರ್ಣಪಿಶಾಚಿಗೆ ಭಯಂಕರ ನಿರಾಸೆಯಾಯಿತು. ವಿಮರ್ಶಕರೂ ಸಹ ಸತ್ಯವನ್ನೇ ಹೇಳುತ್ತಿದ್ದಾರಲ್ಲ! ಇನ್ನು ಸುಳ್ಳಿಗೆ ಎಲ್ಲಿಯ ನೆಲೆ, ಎಲ್ಲಿಯ ಬೆಲೆ ಎನ್ನುತ್ತಿರುವಾಗ ಅದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಗೋಪುರ ಕಣ್ಣಿಗೆ ಬಿದ್ದಿತು. ವಿಶ್ವವಿದ್ಯಾಲಯಗಳು ಸುಳ್ಳಿನ ಭಂಡಾರಗಳು ಎಂದು ಗೆಲುವಾದ ಕರ್ಣಪಿಶಾಚಿಯು ಆ ದಿಕ್ಕಿನತ್ತ ಮುನ್ನಡೆಯಿತು. ಅಲ್ಲಿ ಮೊದಲು ಕಂಡವರೇ ಖ್ಯಾತ ಪ್ರಾಚ್ಯಸಂಶೋಧಕ ಕಲಬುರ್ಗಿಯವರು.
ಕರ್ಣಪಿಶಾಚಿ: ನಮಸ್ಕಾರ, ಕಲಬುರ್ಗಿಯವರೆ! ನೀವು ಇತಿಹಾಸ ಸಂಶೋಧಕರು. ಅಂದ ಮೇಲೆ ನೀವು ಸಾಕಷ್ಟು ಸುಳ್ಳನ್ನು ಹುಡುಕಿ ತೆಗೆದಿರಬಹುದು, ಅಲ್ಲವೆ?
ಕಲಬುರ್ಗಿ: ಛೇ! ಛೇ! ನಾನು ಯಾವಾಗಲೂ ಸತ್ಯವನ್ನು ಮಾತ್ರ ಹುಡುಕುತ್ತೇನೆ. ಉದಾಹರಣೆಗೆ ಇತ್ತೀಚೆಗೆ ಅಣ್ಣೀಗೇರಿಯಲ್ಲಿ ಹಡ್ಡಿ ತೆಗೆದ ತಲೆಬುರುಡೆಗಳನ್ನೇ ತೆಗೆದುಕೊಳ್ಳಿರಿ. ಅವೆಲ್ಲ ತಲೆಬುರುಡೆಗಳು ಸಾಹಿತಿಗಳ ಬುರುಡೆಗಳು ಎನ್ನುವದನ್ನು ನಾನು ಸಂಶೋಧನೆ ಮಾಡಿ ಹೇಳಿದ್ದೇನೆ. ಆದರೆ, ಆ ಚಿದಾನಂದ ಮೂರ್ತಿ ಇದ್ದಾರಲ್ಲ, ಅವರು ಬರಿ ಸುಳ್ಳು ಸಂಶೋಧನೆ ಮಾಡುತ್ತಾರೆ.
ಕ.ಪಿ: ಹೌದಾ? ಅವರೇನು ಹೇಳುತ್ತಿದ್ದಾರೆ?
ಕಲಬುರ್ಗಿ: ಅವು ರಾಜ್ಯಪಾಲರ ಹಾಗು ಅವರ ಸಿಬ್ಬಂದಿಯವರ ಬುರುಡೆಗಳಂತೆ!
ಕ.ಪಿ: ಏನು? ಹಂಸರಾಜ ಭಾರದ್ವಾಜರ ಬುರುಡೆಯೇ?
ಕಲಬುರ್ಗಿ: ಅಲ್ಲಯ್ಯ, ಮೂರ್ಖ ಶಿಖಾಮಣಿ! ಪಂಪನ ಕಾಲದಲ್ಲಿ ಅಣ್ಣೀಗೇರಿಯಲ್ಲಿ ರಾಜ್ಯಪಾಲರಾಗಿದ್ದ ಕಂಸರಾಜರ ಬುರುಡೆ!
ಬುರುಡೆಗಳ DNA ಪರೀಕ್ಷೆ ಆಗದ ಹೊರತು ಕಲಬುರ್ಗಿ ಸುಳ್ಳರೊ, ಚಿ.ಮೂ. ಸುಳ್ಳರೊ ಅಥವಾ ಇಬ್ಬರೂ ಸುಳ್ಳರೊ ಎಂದು ಗೊತ್ತಾಗುವದಿಲ್ಲ. ಇರಲಿ, ಇಲ್ಲಿ ಸ್ವಲ್ಪ ಭರವಸೆಯ ಬೆಳಕಿದೆ ಎಂದುಕೊಂಡ ಕರ್ಣಪಿಶಾಚಿಯು ಬೆಳಗಾವಿಯತ್ತ ಮುಖ ಮಾಡಿ ಹಾರಿತು.
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ. ಅಲ್ಲಿ ನಾರಾಯಣ ಮೂರ್ತಿಗಳು ಉದ್ಘಾಟನೆ ಮಾಡುತ್ತಿದ್ದಾರೆ. ಮೂರ್ತಿಗಳು ಉದ್ದಿಮೆದಾರರು. ಸುಳ್ಳು ಹೇಳುವದು ಅವರಿಗೆ ಅವಶ್ಯವಾದ ಒಂದು ಬಿಜಿನೆಸ್ ಕಲೆ. ಇವರನ್ನೇ ಹಿಡಿಯುವೆ ಎಂದುಕೊಂಡ ಕರ್ಣಪಿಶಾಚಿಯು ಮೂರ್ತಿಯವರ ಸಂದರ್ಶನ ಪ್ರಾರಂಭಿಸಿತು.
ಕ.ಪಿ: ಹಲೋ ಮೂರ್ತಿಯವರೆ, ನೀವು ಕನ್ನಡಕ್ಕಿಂತ ಇಂಗ್ಲೀಶಿಗೆ ಹೆಚ್ಚು ಮಹತ್ವ ಕೊಡುತ್ತೀರಿ ಎನ್ನುವ ಆಪಾದನೆ ಇದೆಯಲ್ಲ. ಇದಕ್ಕೆ ಏನು ಹೇಳುತ್ತೀರಿ?
ಮೂರ್ತಿ: ಅದು ಹಾಗಲ್ಲ. ಬೆಂಗಳೂರಿನ ಕನ್ನಡಿಗರು ಕನ್ನಡವನ್ನು ಮಾತನಾಡುವದೇ ಇಂಗ್ಲೀಶಿನಲ್ಲಿ. ಕೆಲವರ ಸ್ಪೀಚಿನಲ್ಲಿ ಕನ್ನಡ ten percent ಇರಬಹುದು, ಕೆಲವರ ಸ್ಪೀಚಿನಲ್ಲಿ five percent ಇರಬಹುದು. ನಮ್ಮ infosysದ ಕನ್ನಡದಲ್ಲಿ ಕನ್ನಡವು zero percent ಇರ್ತದೆ.
ಕ.ಪಿ: ಎಂತಹ ಕನ್ನಡ ಕಟ್ಟಾಳು ಇದ್ದೀರಿ, ಮೂರ್ತಿಯವರೆ! ನಿಮಗೆ ನನ್ನ Hats off!
ಕರ್ಣಪಿಶಾಚಿಗೆ ಭಯಂಕರ ನಿರಾಶೆ ಆಯಿತು. ಜೋಲು ಮುಖ ಹಾಕಿಕೊಂಡು ಹೊರಬೀಳುತ್ತಿರುವ ಕರ್ಣಪಿಶಾಚಿಯ ಕಣ್ಣಿಗೆ ಬಿದ್ದದ್ದು ಬಿಳಿ ಬಣ್ಣದ ಹೋತದ ಗಡ್ಡವನ್ನು ಹಚ್ಚಿಕೊಂಡ ಮುಖ. ಓ! ಇವರು ನಮ್ಮ ಅಜ್ಞಾನಮೂರ್ತಿಗಳು! ಕರ್ಣಪಿಶಾಚಿಗೆ ಖುಶಿಯೋ ಖುಶಿ!
‘ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನಿ ದೇವರು’ ಎಂದು ಹಾಡಿದ ದಾಸರ ಪರಂಪರೆಯವರಲ್ಲವೇ ಇವರು ಎಂದು ಉಬ್ಬಿ ಉಬ್ಬಿ ಬಲೂನಿನಂತಾಯ್ತು ನಮ್ಮ ಕ.ಪಿ.
ಕ.ಪಿ: ನಮಸ್ಕಾರ ಅಜ್ಞಾನಮೂರ್ತಿಗಳೆ! ನೀವು ಗಡ್ಡಬಿಟ್ಟದ್ದು ಯಾಕೆ ಹೇಳ್ತೀರಾ?
ಅ.ಮೂ: ದುಡ್ಡು ಉಳಿಸಲಿಕ್ಕೆ.
ಕ.ಪಿ: ಆದರೆ ಹೋತದ ಗಡ್ಡವು ಬುದ್ಧಿಜೀವಿಗಳ brand mark ಎಂದು ಹೇಳುತ್ತಾರಲ್ಲ.
ಅ.ಮೂ: ಹಾಗೆ ಹೇಳುವವರು ಬುದ್ಧಿ ಇಲ್ಲದ ಜನ. ‘ಜನ ಮರುಳೊ, ಜಾತ್ರೆ ಮರುಳೊ, ಗಡ್ಡಕೆ ಮರುಳೊ ಶಂಕರಲಿಂಗಾ!’ ಎನ್ನುವ ಗಾದೆ ಮಾತು ನೀವು ಕೇಳಿಲ್ಲವೆ?
ಕ.ಪಿ: ಕನ್ನಡಕ್ಕೆ ಯಾವುದರಿಂದ ಅಪಾಯ ಇದೆ ಎನ್ನುವದನ್ನು ಸ್ವಲ್ಪ ವಿವರಿಸ್ತೀರಾ?
ಅ.ಮೂ: ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆ. ಕನ್ನಡದ ಎಲ್ಲಾ ಪದಗಳನ್ನು ಇಂಗ್ಲೀಶಿನವರು ತಮ್ಮ ಡಿಕ್ಶನರಿಯಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈಗ ನೋಡಿ, ‘ಬೆಂಗಳೂರು’ ನಮ್ಮ ಕನ್ನಡದ ಪದ ತಾನೆ? ಅದನ್ನು ಈಗ bangalored ಎನ್ನುವ ಇಂಗ್ಲಿಶ್ ಪದವನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಹೀಗಾದರೆ, ಕನ್ನಡದ ಪದಗಳೆಲ್ಲಾ ಇಂಗ್ಲೀಶಿನಲ್ಲಿ ಸೇರಿ ಹೋಗುವವು.
ಕ.ಪಿ: ಸಂಸ್ಕೃತದಿಂದ ಕನ್ನಡಕ್ಕೆ ಅಪಾಯವಿಲ್ಲವೆ?
ಅ.ಮೂ: ತುಂಬಾ ಅಪಾಯವಿದೆ. ಕನ್ನಡ ಉಳಿದದ್ದೇ ನಮ್ಮ ಹಳ್ಳಿಗಳಲ್ಲಿ. ಆದುದರಿಂದಲೇ ನನ್ನ ಕತೆಗಳನ್ನು ನಾನು ಹಳ್ಳಿಗರಿಗೆ ತಿಳಿಯದಂತಹ ಸಂಕೀರ್ಣ ಸಂಸ್ಕೃತದಲ್ಲಿ ಬರೆಯುತ್ತೇನೆ.
ಕ.ಪಿ: ಅದರಿಂದ ಏನು ಪ್ರಯೋಜನ?
ಅ.ಮೂ: ಬಹಳಷ್ಟು ಪ್ರಯೋಜನವಿದೆ. ಹಳ್ಳಿಗರು ಉಳಿಯುತ್ತಾರೆ, ಹಳ್ಳಿಗಳಲ್ಲಿ ಕನ್ನಡ ಉಳಿಯುತ್ತದೆ. ಹಾಗು ನನ್ನ ಅಜ್ಞಾನಪೀಠ ಪ್ರಶಸ್ತಿ ಉಳಿಯುತ್ತದೆ.
ಕ.ಪಿ: ಅಜ್ಞಾನಮೂರ್ತಿಗಳೇ, ನೀವು ಸತ್ಯವನ್ನೇ ನುಡಿದಿದ್ದರಿಂದ ನನಗೆ ತುಂಬಾ ಬೇಜಾರಾಗಿದೆ. ಸುಳ್ಳು ಹೇಳುವಂಥವರು ನಿಮ್ಮ ಲಿಸ್ಟಿನಲ್ಲಿ ಯಾರಾದರೂ ಇರುವರೆ?
ಅ.ಮೂ: ಸುಳ್ಳು ಹೇಳುವವರು ಈಗ ಸಿಗುವದೇ ಕಷ್ಟ. ಗಿರೀಶ ಕಾರ್ನಾಡ ಹೇಳಿದರೆ ಹೇಳಬಹುದು. ಪ್ರಯತ್ನಿಸಿ ನೋಡಿ. ಸಂಧ್ಯಾಕಾಲದ ಈ ವೇಳೆಯಲ್ಲಿ ಅವರು ನಿಮಗೆ ಸಾರ್ವಜನಿಕ ಮದ್ಯಶಾಲೆಯಲ್ಲಿ ದರ್ಶನ ಕೊಡುವ ಸಾಧ್ಯತೆಗಳಿವೆ. ‘ನಿಶೇದವರ ಮಾತು ಕಿಶೇದಾಗ’ ಎನ್ನುವ ಗಾದೆ ಇದೆ, ನೋಡಿ! ಕುಡಿದಾಗ ಅವರು ಸುಳ್ಳನ್ನೇ ಹೇಳುವ ಚಾನ್ಸ್ ಇದೆ!
ಕರ್ಣಪಿಶಾಚಿಗೆ ಹೋದ ಉಸಿರು ಬಂದಂತಾಯಿತು.
ಕರ್ಣಪಿಶಾಚಿಯು ಕುಣಿಯುತ್ತ ಮದ್ಯಶಾಲೆಯ ಕಡೆಗೆ ಹಾರಿತು. ಅಲ್ಲಿ ಗಲಾಟೆಯೋ ಗಲಾಟೆ.
“ಕುಡಿಯುವದು ನಮ್ಮ ಹಕ್ಕು.”
“ಕುಡಿಯೋಣ ಬಾರಾ, ಕುಡಿಯೋಣ ಬಾ!”
ಇತ್ಯಾದಿ ಫಲಕಗಳನ್ನು ಹೊತ್ತಂತಹ, ಜೀನುಧಾರಿ ಗಂಡು,ಹೆಣ್ಣುಗಳ ಮುಂಭಾಗದಲ್ಲಿ ರಾರಾಜಿಸುತ್ತಿದ್ದಾರೆ ಗಿರೀಶ ಕಾರ್ನಾಡರು.
ಕ.ಪಿ: ನಮಸ್ಕಾರ ಕಾರ್ನಾಡರೆ!
ಕಾರ್ನಾಡ: ನಮಸ್ಕಾರ..(ಹಿಕ್!)...ಪಿಶಾಚೀ!
ಕ.ಪಿ: ಕಾರ್ನಾಡರೇ, ಕನ್ನಡ ಯಾರಿಂದ ಉಳಿಯುತ್ತದೆ ಎಂದು ಹೇಳಬಲ್ಲಿರಾ?
ಕಾರ್ನಾಡ: ಬಜರಂಗ ದಳದವರಿಂದ!
ಕ.ಪಿ: ವಿಚಿತ್ರ ಆದರೂ ಸತ್ಯ?
ಕಾರ್ನಾಡ: ಬಜರಂಗ ದಳದವರು ಗಲಾಟೆ ಮಾಡೋದರಿಂದಲೇ..(ಹಿಕ್).. ನನಗೆ ಸ್ಫೂರ್ತಿ ಸಿಗುತ್ತದೆ. ನನ್ನ ನಾಟಕಗಳನ್ನು..(ಹಿಕ್..) ಹಿಂದೀ ಹಾಗು ಇಂಗ್ಲೀಶಿನಲ್ಲಿ ಎಲ್ಲೆಲ್ಲೂ ಆಡಬಹುದು. ಇದರಿಂದಾಗಿ ಕನ್ನಡವು (..ಹಿಕ್..) ಉಳಿಯುತ್ತದೆ!
ಎಂತಹ ಅದ್ಭುತ ತರ್ಕ! ಎಂತಹ ಕಟು ಸತ್ಯ!!
ಕರ್ಣಪಿಶಾಚಿಗೆ ಘೋರ ನಿರಾಶೆಯಾಯಿತು. ತಾನು ಬದುಕಿ ಫಲವಿಲ್ಲ ಎಂದುಕೊಂಡ ಕರ್ಣಪಿಶಾಚಿಯು ಆತ್ಮಹತ್ಯೆಯನ್ನೇ ಮಾಡಿಕೊಳ್ಳೋಣ ಎಂದುಕೊಂಡಿತು. ಊರ ಹೊರಗಿದ್ದ ಆಲದ ಮರವೊಂದನ್ನು ಹುಡುಕಿ ಅಲ್ಲಿಗೆ ಹೋದಾಗ, ಅದಕ್ಕೆ ಕಂಡಿದ್ದೇನು?
(ಮುಂದಿನ ಸಂಚಿಕೆಯಲ್ಲಿ ನೋಡಿರಿ.)