Sunday, July 17, 2011

ರಾಮರಕ್ಷಾ ಸ್ತೋತ್ರದ ಕಾವ್ಯಸೌಂದರ್ಯ

ಸಾಂಪ್ರದಾಯಕ ರಕ್ಷಾಸ್ತೋತ್ರಗಳಲ್ಲಿ ‘ರಾಮರಕ್ಷಾ ಸ್ತೋತ್ರ’ವು ಅನೇಕ ಭಕ್ತರು ಪಠಿಸುತ್ತಿರುವ ಮಹತ್ವದ ಸ್ತೋತ್ರವಾಗಿದೆ. ಬುಧಕೌಶಿಕ ಋಷಿಗಳು ಈ ಸ್ತೋತ್ರದ ದೃಷ್ಟಾರರು. (ತನ್ನ ಕನಸಿನಲ್ಲಿ ಭಗವಾನ್ ಶಂಕರನು ತನಗೆ ಈ ಸ್ತೋತ್ರವನ್ನು ನೀಡಿದನು ಎಂದು ಬುಧಕೌಶಿಕ ಋಷಿಗಳು ಹೇಳಿದ್ದಾರೆ.) ಅವರ ಈ ರಚನೆಯಲ್ಲಿಯ ಮುಖ್ಯ ಭಾಗವನ್ನು, ಸಾಹಿತ್ಯದ ದೃಷ್ಟಿಯಿಂದ ಗಮನಿಸೋಣ. ಆ ಭಾಗ ಹೀಗಿದೆ:

ಶಿರೋಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ
ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯ: ಶ್ರುತಿ:
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಜಿಹ್ವಾ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕ:
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕ:
ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪು:
           
ಈ ಸ್ತೋತ್ರದಲ್ಲಿ ತನ್ನ ಶರೀರದ ವಿವಿಧ ಬಾಗಗಳನ್ನು ಶ್ರೀ ರಾಮಚಂದ್ರನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ. ಮೊದಲಿಗೆ ಪ್ರಾರಂಭವಾಗುವದು ಶಿರಸ್ಸು, ತನ್ನಂತರ ಹಣೆ, ಕಣ್ಣುಗಳು, ಕಿವಿಗಳು. ಇದೇ ರೀತಿಯಾಗಿ ಪಾದಗಳವರೆಗೆ ಈ ಪ್ರಾರ್ಥನೆ ಸಾಗಿದೆ. ಅನೇಕ ಸಂಸ್ಕೃತ ಶ್ಲೋಕಗಳಲ್ಲಿ ಈ ತರಹದ ‘ಮುಡಿಯಿಂದ ಅಡಿಯವರೆಗೆ’ ಅಥವಾ ‘ಅಡಿಯಿಂದ ಮುಡಿಯವರೆಗಿನ’ ಕ್ರಮಬದ್ಧ ವರ್ಣನೆ ಇದ್ದೇ ಇರುತ್ತದೆ. ಬುಧಕೌಶಿಕ ಋಷಿಗಳೂ ಸಹ ಅದನ್ನೇ ಮಾಡಿದ್ದಾರೆ.                                                                     
ಈ ಪ್ರಾರ್ಥನಾಶ್ಲೋಕದ ಹೆಚ್ಚುಗಾರಿಕೆಯಿರುವದು ರಾಮಚಂದ್ರನನ್ನು ಬಣ್ಣಿಸುವ ವಿಶೇಷಣಗಳಲ್ಲಿ.  ಮೇಲಿನ ಶ್ಲೋಕದ ಸಾಲುಗಳನ್ನು ಒಂದೊಂದಾಗಿ ಪರಿಶೀಲಿಸೋಣ:

ಶಿರೋಮೇ ರಾಘವಃ ಪಾತು
(=ರಾಘವನು ನನ್ನ ಶಿರಸ್ಸನ್ನು ರಕ್ಷಿಸಲಿ.)
ರಘು ಎನ್ನುವ ರಾಜನು ರಾಮಚಂದ್ರನ ವಂಶದ ಮೂಲಪುರುಷರಲ್ಲಿ ಹೆಸರಾದವನು. ರಘುವಿನ ನಂತರದವರೆಲ್ಲರೂ ರಾಘವರು. ಆದುದರಿಂದ ರಾಮಚಂದ್ರನನ್ನು ‘ರಾಘವ’ ಎನ್ನಲಾಗಿದೆ.
ಈ ರೀತಿಯಾಗಿ ರಘುವಂಶದ ಮೂಲಪುರುಷನನ್ನು ಇಲ್ಲಿ ಮೊದಲು ಸ್ಮರಿಸಲಾಗಿದೆ. ಆ ಮೂಲಕ ರಾಮಚಂದ್ರನ identityಯನ್ನು ಗುರುತಿಸಲಾಗಿದೆ.

ಭಾಲಂ ದಶರಥಾತ್ಮಜಃ
(=ದಶರಥನ ಪುತ್ರನು ನನ್ನ ಹಣೆಯನ್ನು ರಕ್ಷಿಸಲಿ.)
ನಂತರದ ಸ್ಮರಣೆ ರಾಮಚಂದ್ರನ ಜನಕನಾದ ದಶರಥನದು. ವಂಶವನ್ನು ಹೇಳಿದ ನಂತರ ರಾಮಚಂದ್ರನ ತಂದೆಯ ಹೆಸರನ್ನು ಹೇಳಲಾಗಿದೆ ಆದುದರಿಂದ ಶ್ರೀರಾಮಚಂದ್ರನನ್ನು ಇಲ್ಲಿ ಮೊದಲು ರಾಘವ ಹಾಗು ನಂತರ ದಶರಥಾತ್ಮಜ ಎಂದು ವರ್ಣಿಸಲಾಗಿದೆ.

ಕೌಸಲ್ಯೇಯೋ ದೃಶೌ ಪಾತು
(=ಕೌಸಲ್ಯೆಯ ಕುಮಾರನು ನನ್ನ ಕಣ್ಣುಗಳನ್ನು ರಕ್ಷಿಸಲಿ)
 ತಂದೆಯ ನಂತರ ಬರುವವಳು ತಾಯಿ.
ಉಪನಿಷತ್ತುಗಳಲ್ಲಿ ‘ಮಾತೃದೇವೋ ಭವ’ ಎಂದು ಹೇಳಿದ ಬಳಿಕವೇ ‘ಪಿತೃದೇವೋ ಭವ’ ಹಾಗು ‘ಆಚಾರ್ಯದೇವೋ ಭವ ’ ಎಂದು ಹೇಳಲಾಗಿದೆ. ಆದರೆ ಓರ್ವ ವ್ಯಕ್ತಿಯನ್ನು ಆತನ ವಂಶ ಹಾಗು ತಂದೆಯ ಮೂಲಕವೇ ಗುರುತಿಸಲಾಗುವದರಿಂದ ಇಲ್ಲಿ ರಘು ಹಾಗು ದಶರಥರನ್ನು ಮೊದಲು ಸ್ಮರಿಸಲಾಗಿದೆ. ಆಬಳಿಕ ತಾಯಿಯನ್ನು ಸ್ಮರಿಸಲಾಗಿದೆ.

ವಿಶ್ವಾಮಿತ್ರಪ್ರಿಯ: ಶ್ರುತಿ:
(=ವಿಶ್ವಾಮಿತ್ರನ ಪ್ರಿಯ ಶಿಷ್ಯನು ನನ್ನ ಕಿವಿಗಳನ್ನು ರಕ್ಷಿಸಲಿ.)
‘ಮಾತೃದೇವೋ ಭವ ಹಾಗು ಪಿತೃದೇವೋಭವ’ದ ಬಳಿಕ ‘ಆಚಾರ್ಯದೇವೋಭವ’. ಆದುದರಿಂದ ಈಗ ರಾಮಚಂದ್ರನ ಗುರುವಾದ ವಿಶ್ವಾಮಿತ್ರರನ್ನು ನೆನಸಲಾಗಿದೆ. ಅಲ್ಲದೆ, ಓರ್ವ ವ್ಯಕ್ತಿಯನ್ನು ಆತನ ಗುರುಕುಲದ ಮೂಲಕವೂ ಗುರುತಿಸಲಾಗುತ್ತಿತ್ತು. ಈ ಕಾರಣಗಳಿಗಾಗಿ ಇಲ್ಲಿ ರಾಮಚಂದ್ರನ ಗುರುವಾದ ವಿಶ್ವಾಮಿತ್ರರ ಉಲ್ಲೇಖ ಬಂದಿದೆ.

ಪುರಾಣಕಾಲದಲ್ಲಿ ವಿದ್ಯಾಭ್ಯಾಸವು ಶ್ರುತಿಯ ಮೂಲಕ ಅಂದರೆ ಕೇಳುವದರ ಮೂಲಕವೇ ಆಗುತ್ತಿತ್ತು. ಆದುದರಿಂದಲೇ ವೇದಗಳಿಗೆ ‘ಶ್ರುತಿಗಳು’ ಎನ್ನುತ್ತಾರೆ. ‘ವಿಶ್ವಾಮಿತ್ರರಿಂದ ಶ್ರುತಿಜ್ಞಾನ ಪಡೆದ ಶಿಷ್ಯನು ನನ್ನ ‘ಶ್ರುತಿ’ಗಳನ್ನು ಅಂದರೆ ಕಿವಿಗಳನ್ನು ರಕ್ಷಿಸಲಿ’ ಎಂದು ಪ್ರಾರ್ಥಿಸಲಾಗಿದೆ.

ಘ್ರಾಣಂ ಪಾತು ಮಖತ್ರಾತಾ
(=ಯಜ್ಞರಕ್ಷಕನು ನನ್ನ ನಾಸಿಕವನ್ನು ರಕ್ಷಿಸಲಿ)
ಮಖತ್ರಾತಾ ಅಂದರೆ ಯಜ್ಞರಕ್ಷಕ. ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯನನ್ನು ಯಾವ ಕಾರ್ಯಕ್ಕಾಗಿ ಆಯೋಜಿಸಿದ್ದನು ಎನ್ನುವದನ್ನು ಈಗ ತಿಳಿಯಬೇಕಲ್ಲವೆ? ರಾಕ್ಷಸರ ಉಪಟಳದಿಂದ ಯಜ್ಞಗಳನ್ನುರಕ್ಷಿಸುವದೇ ವಿಶ್ವಾಮಿತ್ರನು ರಾಮಚಂದ್ರನಿಗೆ ವಹಿಸಿದ  ಮಹತ್ಕಾರ್ಯವಾಗಿತ್ತು.

ಮುಖಂ ಸೌಮಿತ್ರಿವತ್ಸಲಃ
(=ಮುಖವನ್ನು ಸುಮಿತ್ರೆಯ ಮಗನಾದ ಲಕ್ಷ್ಮಣನು ರಕ್ಷಿಸಲಿ.)
ಈ ಕಾರ್ಯದಲ್ಲಿ ಶ್ರೀರಾಮಚಂದ್ರನಿಗೆ ನೆರವಾಗಿ ನಿಂತವನು ಸುಮಿತ್ರೆಯ ಮಗನಾದ ಲಕ್ಷ್ಮಣ. ಲಕ್ಷ್ಮಣನು ರಾಮಚಂದ್ರನ ಮೊದಲನೆಯ ತಮ್ಮ ಹಾಗು ಸತತ ಸಹಚರ.
ಲಕ್ಷ್ಮಣನನ್ನು ‘ಸೌಮಿತ್ರಿವತ್ಸಲಃ’ ಎಂದು ಕರೆಯುವ ಮೂಲಕ ರಾಮಚಂದ್ರನಿಗೆ ಎರಡನೆಯ ತಾಯಿಯಾದ ಸುಮಿತ್ರೆಯನ್ನೂ ಸಹ ಇಲ್ಲಿ ನೆನಸಲಾಗಿದೆ.

ಜಿಹ್ವಾ ವಿದ್ಯಾನಿಧಿಃ ಪಾತು
(=ನಾಲಿಗೆಯನ್ನು ವಿದ್ಯೆಗಳ ನಿಧಿಯಾದವನು ರಕ್ಷಿಸಲಿ)
ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯ ರಾಮಚಂದ್ರನಿಗೆ ಶಸ್ತ್ರವಿದ್ಯೆಯನ್ನಲ್ಲದೇ ಶಾಸ್ತ್ರವಿದ್ಯೆಯನ್ನೂ ಧಾರೆ ಎರೆದಿದ್ದನು. ಶಸ್ತ್ರಗಳು ಹಸ್ತದಲ್ಲಿದ್ದರೆ, ಶಾಸ್ತ್ರವಿದ್ಯೆಯು ನಾಲಿಗೆಯ ಮೇಲೆ ಇರುತ್ತದೆ. ಏಕೆಂದರೆ ನಾಲಿಗೆಯು ವಿದ್ಯಾಧಿದೇವತೆಯಾದ ಸರಸ್ವತಿಯ ಆವಾಸಸ್ಥಾನವಾಗಿದೆ. ಆದುದರಿಂದ ನಾಲಿಗೆಯನ್ನು ರಕ್ಷಿಸಬೇಕಾದವನು ವಿದ್ಯಾನಿಧಿಯಾದ ಶ್ರೀರಾಮಚಂದ್ರನು.

ಕಂಠಂ ಭರತವಂದಿತಃ
(=ಭರತನಿಂದ ವಂದಿತನಾದವನು ಕಂಠವನ್ನು ರಕ್ಷಿಸಲಿ.)
ಸೋದರವತ್ಸಲನಾದ ರಾಮಚಂದ್ರನಿಗೆ ಭರತನೂ ಸಹ ಪ್ರಿಯನಾದ ತಮ್ಮನೇ. ಈ ಭರತನು ರಾಮಚಂದ್ರನಿಗೆ ಸಿಂಹಾಸನವನ್ನು ಮರಳಿ ಒಪ್ಪಿಸಲು ಬಂದು ಅವನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತವನು. ಆದುದರಿಂದ ರಾಮಚಂದ್ರನು ಭರತವಂದಿತನು. ಇಲ್ಲಿ ಇರುವ ಇನ್ನೊಂದು ವಿಶೇಷವೆಂದರೆ ಕೌಸಲ್ಯೆ ಹಾಗು ಸುಮಿತ್ರೆಯರನ್ನು ನೆನಸಿದ ಮೇಲೆ, ಕೈಕೇಯಿಯನ್ನೂ ಸಹ ನೆನಸುವದು ಕ್ರಮಪ್ರಾಪ್ತವಾಗಿದೆ. ಅಲ್ಲದೆ ಶ್ರೀರಾಮಚಂದ್ರನಿಗೆ ತನ್ನ ಮೂವರೂ ತಾಯಂದಿರ ಮೇಲೆ ಸಮಾನವಾದ ಗೌರವವು ಇದ್ದಿತೆನ್ನುವದನ್ನು ಇದು ಸೂಚಿಸುತ್ತದೆ.

ಮನುಷ್ಯಶರೀರದಲ್ಲಿ ಮೂರು ಭಾಗಗಳನ್ನು ಮಾಡಬಹುದು. ಮೊದಲನೆಯ ಭಾಗ ಮುಖ. ಎರಡನೆಯ ಭಾಗವು ಮುಖದಿಂದ ಟೊಂಕದವರೆಗಿನ ಭಾಗ. ಮೂರನೆಯದು ಟೊಂಕದಿಂದ ಪಾದಗಳವರೆಗಿನ ಭಾಗ. ಮುಖಭಾಗದ ರಕ್ಷಣಾಸ್ತೋತ್ರದ ನಂತರ, ಇನ್ನು ಎರಡನೆಯ ಶರೀರಭಾಗ ಪ್ರಾರಂಭವಾಗುತ್ತದೆ.

ಸ್ಕಂಧೌ ದಿವ್ಯಾಯುಧಃ ಪಾತು
(=ದಿವ್ಯಾಯುಧಗಳನ್ನು ಧರಿಸಿದವನು ಹೆಗಲುಗಳನ್ನು ರಕ್ಷಿಸಲಿ)
ಗುರುಗಳಾದ ವಿಶ್ವಾಮಿತ್ರರಿಂದ ಪ್ರಾಪ್ತವಾದ ದಿವ್ಯ ಆಯುಧಗಳನ್ನು ರಾಮಚಂದ್ರನು ಹೆಗಲ ಮೇಲೆ ಧರಿಸಿರುವದರಿಂದ
ಹೆಗಲುಗಳನ್ನು ರಕ್ಷಿಸುವದು ಅಂಥವನ ಹೊಣೆಯೇ ಆಗಿದೆ.

ಭುಜೌ ಭಗ್ನೇಶಕಾರ್ಮುಕ:
(=ಶಿವಧನುಸ್ಸನ್ನು ಮುರಿದವನು ತೋಳುಗಳನ್ನು ರಕ್ಷಿಸಲಿ.)
ಶಿವಧನುಸ್ಸನ್ನು ಮುರಿದವನು ಭುಜಗಳನ್ನು ರಕ್ಷಿಸಲಿ ಎಂದು ಕೋರುವ ಮೂಲಕ ಅನೇಕ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದು ಶ್ರೀರಾಮಚಂದ್ರನ ಬಾಹುಬಲ ಹಾಗು ರಕ್ಷಣಾಸಾಮರ್ಥ್ಯ. ಎರಡನೆಯದಾಗಿ ಶಿವಧನುಸ್ಸನ್ನು ಎತ್ತುವದೇ ಶ್ರೀರಾಮಚಂದ್ರನ ವಿವಾಹಕ್ಕೆ ಕಾರಣವಾಯಿತು. ಈ ರೀತಿಯಾಗಿ ಸೀತಾದೇವಿಯನ್ನು ನೆನಸಲು ಇಲ್ಲಿ ಪೂರ್ವಪೀಠಿಕೆಯನ್ನು ಹಾಕಲಾಗಿದೆ. ಮುಂದಿನ ಸಾಲಿನಲ್ಲಿ ಸೀತಾದೇವಿಯನ್ನು ನೆನಸಲಾಗಿದೆ.

ಕರೌ ಸೀತಾಪತಿಃ ಪಾತು
(=ಸೀತಾಪತಿಯು ಕರಗಳನ್ನು ರಕ್ಷಿಸಲಿ)
ಸೀತಾದೇವಿಯ ಪಾಣಿಗ್ರಹಣ ಮಾಡಿದವನೇ ನಮ್ಮ ಪಾಣಿಗಳನ್ನು ರಕ್ಷಿಸಬೇಕಲ್ಲವೆ?
ಇಲ್ಲಿಯವರೆಗಿನ ವರ್ಣನೆಯಲ್ಲಿ ರಾಮಚಂದ್ರನ ಆಪ್ತರನ್ನು ನೆನಸಲಾಯಿತು.
ಇನ್ನು ಮುಂದೆ ರಾಮಚಂದ್ರನ ವಿಜಯಯಾತ್ರೆ ಪ್ರಾರಂಭವಾಗುತ್ತದೆ.

ಹೃದಯಂ ಜಾಮದಗ್ನ್ಯಜಿತ್
(=ಪರಶುರಾಮನನ್ನು ಸೋಲಿಸಿದವನು ಹೃದಯಭಾಗವನ್ನು ರಕ್ಷಿಸಲಿ.)
ರಾಮಚಂದ್ರನು ಸೀತೆಯನ್ನು ಮದುವೆಯಾಗಿ ಅಯೋಧ್ಯೆಗೆ ಮರಳುವಾಗ, ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನ ಜೊತೆಗೆ ಕಾದಾಡಿ, ಅವನನ್ನು ಸೋಲಿಸುತ್ತಾನೆ. ಆದುದರಿಂದ  ಆ ಘಟನೆಯನ್ನು ‘ಹೃದಯಂ ಜಾಮದಗ್ನ್ಯಜಿತ್’ ಎಂದು ಸ್ಮರಿಸಲಾಗಿದೆ.

ಮಧ್ಯಂ ಪಾತು ಖರಧ್ವಂಸೀ
(=ಖರ ರಾಕ್ಷಸನನ್ನು ಕೊಂದವನು ಮಧ್ಯಭಾಗವನ್ನು ರಕ್ಷಿಸಲಿ)
ವನವಾಸದಲ್ಲಿದ್ದಾಗ ಶ್ರೀರಾಮಚಂದ್ರನು ಶೂರ್ಪನಖಾ ಪ್ರಸಂಗದಿಂದಾಗಿ ಖರ ಎನ್ನುವ ರಾಕ್ಷಸನನ್ನು ಸಂಹರಿಸಿದನು. ಇದು ಸೀತಾಪಹರಣಕ್ಕೆ ಹಾಗು ರಾವಣಸಂಹಾರಕ್ಕೆ ಕಾರಣವಾಯಿತು.

ನಾಭಿಂ ಜಾಂಬವದಾಶ್ರಯಃ
(=ಜಾಂಬುವಂತನಿಗೆ ಆಶ್ರಯನಿತ್ತವನು ಹೊಕ್ಕಳುಭಾಗವನ್ನು ರಕ್ಷಿಸಲಿ.)
ರಾಕ್ಷಸಸಂಹಾರದ ಜೊತೆಗೇ, ರಾಮಚಂದ್ರನು ಶರಣಾಗತರಿಗೆ ರಕ್ಷಣೆಯನ್ನೂ ಇತ್ತನು. ಆದುದರಿಂದ ಇಲ್ಲಿ ಜಾಂಬುವಂತನನ್ನು ನೆನಸಲಾಗಿದೆ.

ಸುಗ್ರೀವೇಶಃ ಕಟೀ ಪಾತು
(=ಸುಗ್ರೀವನಿಗೆ ಒಡೆಯನಾದವನು ಟೊಂಕವನ್ನು ರಕ್ಷಿಸಲಿ)
ರಾಮಚಂದ್ರನು ವಾಲಿಯನ್ನು ಸಂಹರಿಸಿದ ಬಳಿಕ ಸುಗ್ರೀವನು ಪಟ್ಟಾಭಿಷಿಕ್ತನಾಗುತ್ತಾನೆ. ರಾಮಚಂದ್ರನು ಸುಗ್ರೀವನನ್ನು ಮಿತ್ರ ಎಂದೇ ಕರೆಯುತ್ತಿದ್ದರೂ ಸಹ, ರಾಮಚಂದ್ರನ ಅನುಗ್ರಹದ ಕಾರಣದಿಂದಾಗಿ ಸುಗ್ರೀವನು ಆತನನ್ನು ತನ್ನ ಒಡೆಯ ಎಂದೇ ಭಾವಿಸಿರುತ್ತಾನೆ.

ಸಕ್ಥಿನೀ ಹನುಮತ್ಪ್ರಭುಃ
(=ಹನುಮಂತನ ಪ್ರಭುವು ಬಸ್ತಿಯನ್ನು ರಕ್ಷಿಸಲಿ.)
ಸುಗ್ರೀವನ ನಂತರ ಅವನ ಅನುಚರನಾದ ಹನುಮಂತನನ್ನು ಇಲ್ಲಿ ಸ್ಮರಿಸಲಾಗಿದೆ.

ಶರೀರದ ಮೂರನೆಯ ಭಾಗದ ರಕ್ಷಣಾಸ್ತೋತ್ರವು ಇನ್ನು ಪ್ರಾರಂಭವಾಗುತ್ತದೆ:
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
(=ರಾಕ್ಷಸಕುಲಸಂಹಾರಕನಾದವನು ಹಾಗು ರಘುವಂಶದಲ್ಲಿ ಶ್ರೇಷ್ಠನಾದವನು ತೊಡೆಗಳನ್ನು ರಕ್ಷಿಸಲಿ.)
ತೊಡೆಗಳು ಧೃತಿಯ ಸಂಕೇತ. ಪುಕ್ಕಲು ಮನುಷ್ಯನನ್ನು ವರ್ಣಿಸಬೇಕಾದರೆ ‘ಅವನ ತೊಡೆಗಳು ನಡುಗಿದವು ಅಥವಾ ಬೆವರಿದವು’ ಎನ್ನುವ ವರ್ಣನೆಯನ್ನು ಮಾಡಲಾಗುತ್ತದೆ ರಾಕ್ಷಸಕುಲವನ್ನೇ ಸಂಹಾರ ಮಾಡುವ ಧೈರ್ಯ ಹಾಗು ಸಾಮರ್ಥ್ಯ ಇರುವದು ರಘುವಂಶದಲ್ಲಿಯೇ ಶ್ರೇಷ್ಠನಾದವನಿಗೆ ಮಾತ್ರ ಸಾಧ್ಯ. ಆದುದರಿಂದ ಅಂತಹ ರಘುಕುಲತಿಲಕನು ನನ್ನ ತೊಡೆಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.

ಜಾನುನೀ ಸೇತುಕೃತ್ಪಾತು
(=ಸಮುದ್ರಕ್ಕೆ ಸೇತುಬಂಧನ ಮಾಡಿದವನು ನನ್ನ ಮೊಣಕಾಲುಗಳನ್ನು ರಕ್ಷಿಸಲಿ)
ಇನ್ನು ಪ್ರಾರಂಭವಾಗುವದು ರಾಮಚಂದ್ರನ ಮಹತ್ವದ ಕಾರ್ಯವಾದ ರಾವಣವಿಜಯ. ಆ ಕಾರ್ಯಕ್ಕಾಗಿ ಆತ ಸಮುದ್ರದ ಮೇಲೆ ಸೇತುಬಂಧನವನ್ನು ಮಾಡಬೇಕು ಹಾಗು ಲಂಕೆಯವರೆಗೆ ಧಾವಿಸಬೇಕು. ಅಂಥವನೇ ಮೊಣಕಾಲುಗಳನ್ನು ರಕ್ಷಿಸಲು ಯೋಗ್ಯನಾದವನು.

ಜಂಘೇ ದಶಮುಖಾಂತಕ:
(=ದಶಮುಖ ರಾವಣನ ಸಂಹಾರ ಮಾಡಿದವನು ನನ್ನ ಮೀನಗಂಡಗಳನ್ನು ರಕ್ಷಿಸಲಿ.)
ರಾವಣಸಂಹಾರವೇನು ಸಾಮಾನ್ಯ ಕಾರ್ಯವೆ? ಇದಕ್ಕೆ ಅಸಾಮಾನ್ಯ ಜಂಘಾಬಲ ಬೇಕು. ಆದುದರಿಂದ ಜಂಘಾಬಲ ಇರುವ ರಾಮಚಂದ್ರನೇ ನಮ್ಮ ಜಂಘೆಗಳನ್ನು ರಕ್ಷಿಸಬೇಕು.

ಪಾದೌ ವಿಭೀಷಣಶ್ರೀದಃ ಪಾತು
 (=ವಿಭೀಶಣನಿಗೆ ವೈಭವವನ್ನು ಕೊಟ್ಟವನು ನನ್ನ ಪಾದಗಳನ್ನು ರಕ್ಷಿಸಲಿ.)
ಶ್ರೀರಾಮಚಂದ್ರನು ಕೇವಲ ದುಷ್ಟಸಂಹಾರವನ್ನಷ್ಟೇ ಮಾಡುವವನಲ್ಲ. ಆತನು ತನ್ನ ಚರಣಭಕ್ತರಿಗೆ ಅನುಗ್ರಹವನ್ನೂ ಮಾಡುವವನು. ಆದುದರಿಂದಲೇ ಶರಣಾಗತ ವಿಭೀಷಣನಿಗೆ ರಾಜ್ಯೈಶ್ವರ್ಯವನ್ನು ಅನುಗ್ರಹಿಸಿದ ರಾಮಚಂದ್ರನು ನಮ್ಮ ಪಾದಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.


ರಾಮೋsಖಿಲಂ ವಪು:
(=ಶ್ರೀರಾಮಚಂದ್ರನು ನನ್ನ ಸಂಪೂರ್ಣ ದೇಹವನ್ನು ರಕ್ಷಿಸಲಿ.)
‘ಮುಡಿಯಿಂದ ಅಡಿಯವರೆಗಿನ ಅಂಗಾಂಗಳನ್ನು ಶ್ರೀರಾಮಚಂದ್ರನು ರಕ್ಷಿಸಲಿ’ ಎನ್ನುವ ಪ್ರಾರ್ಥನೆಯನ್ನು ಈ ರೀತಿ ಕ್ರಮಬದ್ಧವಾಗಿ ಮಾಡಲಾಗಿದೆ. ಜೊತೆಗೇ ರಾಮಚಂದ್ರನ ವಂಶಾವಳಿಯ ಮೂಲದಿಂದ ಪ್ರಾರಂಭಿಸಿ, ತಂದೆ, ತಾಯಿ, ಗುರು ಹಾಗು ಸೋದರರ ಬಗೆಗೆ ಹೇಳಲಾಗಿದೆ. ರಾಮಚಂದ್ರನ ವಿವಾಹವನ್ನು ಉಲ್ಲೇಖಿಸಲಾಗಿದೆ. ತನ್ನಂತರ ರಾಮಚಂದ್ರನ ದುಷ್ಟಸಂಹಾರ ಹಾಗು ಶಿಷ್ಟರಕ್ಷಣೆಯ ವರ್ಣನೆಯನ್ನು ಮಾಡಲಾಗಿದೆ. ಈ ರೀತಿಯಲ್ಲಿ ಈ ಸ್ತೋತ್ರವು ಸಂಕ್ಷಿಪ್ತ ರಾಮಾಯಣವೇ ಆಗಿದೆ. ಆದುದರಿಂದ ಕೊನೆಯಲ್ಲಿ ಶ್ರೀರಾಮಚಂದ್ರನು ‘ನನ್ನ ಸಂಪೂರ್ಣ ಶರೀರವನ್ನು ರಕ್ಷಿಸಲಿ’ ಎನ್ನುವ ಮಂಗಳಪ್ರಾರ್ಥನೆಯನ್ನು ಮಾಡಲಾಗಿದೆ.
...................................................................................................
ರಾಮರಕ್ಷಾ ಸ್ತೋತ್ರದಲ್ಲಿಯ ಮತ್ತೊಂದು ಶ್ಲೋಕ ಹೀಗಿದೆ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಈ ಶ್ಲೋಕದ ಅರ್ಥ ಹೀಗಿದೆ:
ರಾಮ, ರಾಮಭದ್ರ, ರಾಮಚಂದ್ರ, ರಘುನಾಥ, ನಾಥ, ಸೀತಾಪತಿ ಎನ್ನುವ ಹೆಸರುಗಳಿಂದ ಕರೆಯಲ್ಪಡುತ್ತಿರುವವನಿಗೆ ನಮಸ್ಕಾರವಿರಲಿ.
ಈ ಶ್ಲೋಕಕ್ಕೆ ಸ್ವಾರಸ್ಯಪೂರ್ಣವಾದ ವ್ಯಾಖ್ಯಾನವನ್ನು ಪಂಡಿತರೊಬ್ಬರು ಮಾಡಿದ್ದು, ಅದು ಹೀಗಿದೆ:

ತಂದೆ ದಶರಥನು ಶ್ರೀರಾಮಚಂದ್ರನನ್ನು ‘ರಾಮ!’ ಎಂದು ಸಲಿಗೆಯಿಂದ ಕರೆಯುತ್ತಾನೆ.
ತಾಯಿ ಕೌಸಲ್ಯೆಯು ಪ್ರೀತಿಯಿಂದ ‘ರಾಮಭದ್ರ’ ಎಂದು ಕರೆಯುತ್ತಾಳೆ.
ತಮ್ಮಂದಿರು ಅವನನ್ನು ‘ರಾಮಚಂದ್ರ’ ಎಂದು ಆತ್ಮೀಯತೆಯಿಂದ ಕರೆಯುತ್ತಾರೆ.
ಪುರಜನರು ತಮ್ಮ ರಾಜನನ್ನು ‘ರಘುನಾಥ’ ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.
ಸೀತಾದೇವಿ ತನ್ನ ಪತಿಯನ್ನು ಹೆಸರುಗೊಂಡು ಕರೆಯದೆ, ಕೇವಲ ‘ನಾಥ!’ ಎಂದು ಕರೆಯುತ್ತಾಳೆ.
ಸೀತಾದೇವಿಯ ತವರೂರಿನವರಾದ ಮಿಥಿಲಾಪುರನಿವಾಸಿಗಳಿಗೆ ಈತನು ಕೇವಲ ‘ಸೀತೆಯ ಗಂಡ!’
.............................................................................................................
ಕುತರ್ಕವಾದಿಯೊಬ್ಬರು ‘ಸೀತಾದೇವಿ’ ವನವಾಸದಲ್ಲಿ ಬಸಿರಾಗಲಿಲ್ಲ. ಅವಳು ರಾವಣನ ಸೆರೆಯಲ್ಲಿದ್ದಾಗ ಬಸಿರಾದಳು. ಇದರರ್ಥವೇನೆಂದರೆ ‘ರಾಮನು ನಪುಂಸಕನು’ ಎಂದು ವಾದಿಸಿದ್ದಾರೆ. ಇವರಿಗೆ ವನವಾಸದ ಅರ್ಥವೇ ಗೊತ್ತಿಲ್ಲ. ಭೋಗಜೀವನವನ್ನು ತ್ಯಜಿಸಿ, ಯೋಗಿಯಂತೆ ಬಾಳುವದೇ ನಮ್ಮ ಪುರಾತನರ ಆದರ್ಶವಾಗಿತ್ತು. ರಾಮಾಯಣವೇ ಆಗಲಿ, ಮಹಾಭಾರತವೇ ಆಗಲಿ ವನವಾಸವನ್ನು ಆದರ್ಶವೆಂದೇ ಬಿಂಬಿಸಿದ್ದನ್ನು ಗಮನಿಸಬೇಕು. ರಾಮರಕ್ಷಾ ಸ್ತೋತ್ರದ ಈ ಶ್ಲೋಕವನ್ನು ಗಮನಿಸಿರಿ:
ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ

ರಾಮಲಕ್ಷಣರು ವನವಾಸದಲ್ಲಿ ಹೇಗೆ ಇರುತ್ತಿದ್ದರು ಎನ್ನುವದರ ವರ್ಣನೆ ಇದು:
ಫಲಮೂಲಾಶಿನೌ = ಅವರು ಹಣ್ಣು ಮತ್ತು ಗಡ್ಡೆಗೆಣಸುಗಳನ್ನು ಮಾತ್ರ ಭುಂಜಿಸುತ್ತಿದ್ದರು.
ದಾಂತೌ = ಇಂದ್ರಿಯನಿಗ್ರಹ ಮಾಡಿದವರು.
ತಾಪಸೌ = ತಪಸ್ವಿಗಳು
ಬ್ರಹ್ಮಚಾರಿಣೌ = ಬ್ರಹ್ಮಚಾರಿಗಳು

ಈ ಶ್ಲೋಕವನ್ನು ಮೂಲರಾಮಾಯಣದಲ್ಲಿ ಶೂರ್ಪನಖಿಯು ರಾವಣನ ಎದುರಿಗೆ ಹೇಳಿದಳು ಎಂದು ಕೇಳಿದ್ದೇನೆ. ಬುಧಕೌಶಿಕ ಋಷಿಗಳು ಅಲ್ಲಿಂದ ಎತ್ತಿಕೊಂಡಿರಬಹುದು.
................................................................................................
ಕೊನೆಯದಾಗಿ ರಾಮರಕ್ಷಾ ಸ್ತೋತ್ರದ ಕೊನೆಯ ಶ್ಲೋಕವನ್ನು ನೋಡೋಣ:
ರಾಮೋ ರಾಜಮಣಿಃ ಸದಾ ವಿಜಯತೇ
ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ
ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಮ್
ರಾಮಸ್ಯ ದಾಸೋಸ್ಮ್ಯಹಮ್
ರಾಮೇ ಚಿತ್ತಲಯಃ ಸದಾ ಭವತು
ಮೇ ಭೋ ರಾಮ ಮಾಮುದ್ಧರ.

ಈ ಶ್ಲೋಕದ ಪ್ರತಿಯೊಂದು ಸಾಲು, ಸಂಸ್ಕೃತ ವ್ಯಾಕರಣದ ವಿಭಕ್ತಿಯನ್ನು ಕ್ರಮಬದ್ಧವಾಗಿ ಸೂಚಿಸುತ್ತದೆ.
ರಾಜರಲ್ಲಿ ಶ್ರೇಷ್ಠನಾದ ರಾಮನು ವಿಜಯಿಯಾಗಲಿ.............(ಪ್ರಥಮಾ ವಿಭಕ್ತಿ)
ರಮಾದೇವಿಯ ಪತಿಯಾದ ರಾಮನನ್ನು ಭಜಿಸುತ್ತೇನೆ...........(ದ್ವಿತೀಯಾ ವಿಭಕ್ತಿ)
ಯಾವ ರಾಮನಿಂದ ರಾಕ್ಷಸಸಂಹಾರವಾಯಿತೊ...................(ತೃತೀಯಾ ವಿಭಕ್ತಿ)
ಅಂತಹ ರಾಮನಿಗೆ ನಮಸ್ಕಾರಗಳು.................................(ಚತುರ್ಥೀ ವಿಭಕ್ತಿ)
ರಾಮನಿಗಿಂತ ಹೆಚ್ಚಿನ ಪಾರಾಯಣವಿಲ್ಲ...........................(ಪಂಚಮೀ ವಿಭಕ್ತಿ)
ರಾಮನ ದಾಸನು ನಾನು.............................................(ಷಷ್ಠೀ ವಿಭಕ್ತಿ)
ರಾಮನಲ್ಲಿ ನನ್ನ ಚಿತ್ತವು ಲಯವಾಗಲಿ...........................(ಸಪ್ತಮೀ ವಿಭಕ್ತಿ)
ಹೇ ರಾಮನೆ, ನನ್ನನ್ನು ಉದ್ಧರಿಸು................................(ಸಂಬೋಧನ ವಿಭಕ್ತಿ)
………………………………………………………………………….

ನಾನೃಷಿ: ಕುರುತೇ ಕಾವ್ಯಮ್ ಎನ್ನುವ ಮಾತಿದೆ, ಋಷಿಯಾದವನು ಮಾತ್ರ ಕಾವ್ಯವನ್ನು ರಚಿಸಬಲ್ಲ ಎಂದು.
ಪ್ರಾಚೇತಸ ಎನ್ನುವ ಬೇಡನು ನಾರದ ಮಹರ್ಷಿಗಳ ಉಪದೇಶದಿಂದ ವಾಲ್ಮೀಕಿ ಮಹರ್ಷಿಗಳಾದರು. ಆದರೆ ಅವರ ಅಂತರಂಗದಲ್ಲಿ ತಮ್ಮ ಹಳೆಯ  ಹಿಂಸಾಜೀವನದ ಬಗೆಗಿನ ದುಃಖ ಕುದಿಯುತ್ತಲೇ ಇತ್ತು. ಮತ್ತೊಬ್ಬ ಬೇಡನು ಕ್ರೌಂಚಮಿಥುನಕ್ಕೆ ಬಾಣ ಎಸೆದು ಅವುಗಳಲ್ಲಿ ಒಂದನ್ನು ಕೊಂದಾಗ, ಈ ಶೋಕವು ಶ್ಲೋಕರೂಪದಲ್ಲಿ ಹೊರಬಂದಿತು:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ:
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್.

ತಮ್ಮ ಮನದಲ್ಲಿ ಎಡೆಬಿಡದೆ ಕಾಡುತ್ತಿರುವ ಶೋಕವನ್ನು ಉತ್ಸರ್ಜಿಸುವ ಸಲುವಾಗಿಯೇ ಅವರು ರಾಮಾಯಣವನ್ನು ಬರೆಯಬೇಕಾಯಿತು. ಇದನ್ನೇ ಗೋಪಾಲಕೃಷ್ಣ ಅಡಿಗರು, ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು ಎಂದು ತಮ್ಮ ‘ಭೂಮಿಗೀತೆ’ಯಲ್ಲಿ ವರ್ಣಿಸಿದ್ದಾರೆ. ರಾಮಾಯಣದ ರಚನೆಯ ನಂತರ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಯಿತು. ಆದುದರಿಂದಲೇ ಬುಧಕೌಶಿಕ ಋಷಿಗಳು ‘ರಾಮರಕ್ಷಾಸ್ತೋತ್ರ’ದಲ್ಲಿ ಹೀಗೆ ಹೇಳಿದ್ದಾರೆ:
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್.
ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತುಕೊಂಡು ‘ರಾಮ,ರಾಮ’ ಎನ್ನುವ ಮಧುರ ಪದವನ್ನು ಕೂಜಿಸುತ್ತಿದೆ. ಆ ವಾಲ್ಮೀಕಿಕೋಕಿಲಕ್ಕೆ ವಂದನೆಗಳು.

ಆಧ್ಯಾತ್ಮಿಕ ಅಮೃತದ ಜೊತೆಗೆ ಕಾವ್ಯಾಮೃತವನ್ನೂ ಹಂಚುತ್ತಿರುವ ವಾಲ್ಮೀಕಿ ಮಹರ್ಷಿಗಳಿಗೆ ಹಾಗು ಬುಧಕೌಶಿಕ ಋಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.

Friday, July 15, 2011

ನಮ್ಮದೇ ಹಣ- -ನಮ್ಮದೇ ಹೆಣ!

ಭಾರತೀಯ ನಾಗರಿಕರು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣವು ೧೬೦೦ ಬಿಲಿಯನ್ ಡಾಲರ್ ಎಂದು ಒಂದು ಅಂದಾಜು ಇದೆ. ಇದು ಕಪ್ಪುಹಣವಾಗಿರುವದರಿಂದ ಅಕ್ರಮ ಮಾರ್ಗದಿಂದಲೇ ಅಂದರೆ ಹವಾಲಾ ಮುಖಾಂತರವೇ ವಿದೇಶವನ್ನು ಸೇರಿರಬೇಕು. ಈ ಹವಾಲಾ ಧಂಧೆಯನ್ನು ನಿಯಂತ್ರಿಸುವವರು ದಾವೂದ ಇಬ್ರಾಹಿಮನಂಥವರು. ಇವರು ಭಯೋತ್ಪಾದಕರ ಸೃಷ್ಟಿಕರ್ತರು ಹಾಗು ಪೋಷಕರು. ಅಂದ ಮೇಲೆ ಭಾರತೀಯರೇ ಈ ಭಯೋತ್ಪಾದಕರನ್ನು ಬೆಳೆಯಿಸುತ್ತಿದ್ದಾರೆ ಎಂದಾಯಿತು. ಯಾರು ಈ ಕಪ್ಪು ಹಣದ ಒಡೆಯರು? ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡು ಕಮಿಶನ್, ಕಿಕ್‍ಬ್ಯಾಕ್ ಮುಂತಾದವುಗಳನ್ನು ತಿನ್ನುತ್ತಿರುವವರೇ ಈ ಕಪ್ಪು ಹಣವನ್ನು ಸಂಗ್ರಹಿಸುತ್ತಿರುವ ರಾಜಕಾರಣಿಗಳು.

ರಾಜಕಾರಣಿಗಳ ಭ್ರಷ್ಟಾಚಾರ ಭಾರತದಲ್ಲಿ ನಡೆಯುತ್ತಲೇ ಇದ್ದರೂ, ಅಂತರರಾಷ್ಟ್ರೀಯ ಮಟ್ಟದ ಭ್ರಷ್ಟಾಚಾರದ ಮೊದಲ ಸಂಶಯ ಬಂದದ್ದು ‘ಬೋಫೋರ್ಸ್’ ತೋಪುಗಳನ್ನು ಖರೀದಿಸಿದ ಸಂದರ್ಭದಲ್ಲಿ. ಕಾಮನ್‍ವೆಲ್ಥ ಹಗರಣ, ೨-ಜಿ ಹಗರಣ ಇವೆಲ್ಲ
ಇತ್ತೀಚಿನವು. ಸರಿ, ಈ ಹಗರಣಗಳ ಮೂಲಕ ರಾಜಕಾರಣಿಗಳು ಸಂಪಾದಿಸುವ ಅಪಾರ ಸಂಪತ್ತು ಎಲ್ಲಿಂದ ಸಂಗ್ರಹವಾಗುತ್ತದೆ? ಇದಕ್ಕೆ ನೇರ ಹಾಗು ಸರಳ ಉತ್ತರ: ಪ್ರಜೆಗಳು ಕೊಡುವ ತೆರಿಗೆಗಳ ಮುಖಾಂತರ! ಉದಾಹರಣೆಗೆ ಭಾರತದಲ್ಲಿ ಒಂದು ಲಿಟರ ಪೆಟ್ರೋಲಿಗೆ ಸುಮಾರು ೭೦ ರೂಪಾಯಿಗಳನ್ನು ನಾವು ಕೊಡುತ್ತೇವೆ. ಅದೇ ಏಶಿಯಾ ಖಂಡದ ಬಡದೇಶಗಳಾದ ಬಾಂಗ್ಲಾದೇಶ ಹಾಗು ಮಲೆಯೇಶಿಯಾದಲ್ಲಿ ಈ ಬೆಲೆ ೪೫ ರೂಪಾಯಿಗಳ ಆಸುಪಾಸಿನಲ್ಲಿದೆ. ನಮ್ಮ ಹಣಕಾಸು ಮಂತ್ರಿಗಳು ಅಂತರರಾಷ್ಟ್ರೀಯ ದರ ಏರಿದೆ ಎಂದು ನಮ್ಮ ಕಿವಿಯ ಮೇಲೆ ಹೂವನ್ನು ಇಡುತ್ತಿದ್ದಾರೆ. ಇದರಂತೆ ರಾಷ್ಟ್ರಮಟ್ಟದಲ್ಲಿ ರಸಗೊಬ್ಬರ ಸಬ್ಸಿಡಿ, ಕೃಷಿ ಉಪಕರಣಗಳ ಸಬ್ಸಿಡಿ ಮೊದಲಾದವುಗಳ ಮೂಲಕವೂ ರಾಜಕಾರಣಿಗಳು ಕಪ್ಪು ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಬೆಲೆಗಳು ಏರುತ್ತಲೇ ಹೋಗುತ್ತವೆ. ಬೆಲೆ ಏರಿಕೆ ಆದಷ್ಟೂ ರಾಜಕಾರಣಿಗಳಿಗೆ ಕಪ್ಪು ಹಣದ ಸುಗ್ಗಿ. ದುರ್ದೈವದ ಸಂಗತಿ ಎಂದರೆ ಈ ಕಪ್ಪು ಹಣವು ಹವಾಲಾ ಮೂಲಕ ಭಯೋತ್ಪಾದಕರನ್ನೇ ತಲಪುತ್ತಿರುವದು. ಅರ್ಥಾತ್, ನಮ್ಮನ್ನು ಕೊಲ್ಲಿಸಿಕೊಳ್ಳುವ ಸಲುವಾಗಿ ನಾವೇ ಭಯೋತ್ಪಾದಕರಿಗೆ ಹಣ ಪೂರೈಸುತ್ತಿದ್ದೇವೆ. ನಮ್ಮದೇ ಹಣ, ನಮ್ಮದೇ ಹೆಣ!

ನಮ್ಮ ರಾಜಕಾರಣಿಗಳಿಗೆ ಹಾಗು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಇದೆಲ್ಲವೂ ಗೊತ್ತಿದೆ. ಆದರೂ ಸಹ ಕಪ್ಪು ಹಣವನ್ನು ವಿದೇಶದಿಂದ ಹಿಂಪಡೆಯಲು ಅವರು ತಯ್ಯಾರ ಇಲ್ಲ. ಅಣ್ಣಾ ಹಜಾರೆಯವರ ‘ಜನ ಲೋಕಪಾಲ’ ಶಾಸನದ ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು. ಅದೇ ಅವರಿಗೆ ಬೇಡವಾಗಿದೆ. ನೋಡುತ್ತಿರಿ, ಲೋಕಪಾಲ ಮಸೂದೆ ಒಂದು ವೇಳೆ ಲೋಕಸಭೆಯಲ್ಲಿ ಮಂಡಿತವಾದರೆ, ಬಹುತೇಕ ಶಾಸಕರುಯಾವುದೇ ಪಕ್ಷದವರಾಗಿರಲಿ---ಅಣ್ಣಾ ಹಜಾರೆಯವರ ಸೂತ್ರಕ್ಕೆ ಬೆಂಬಲ ನೀಡುವದಿಲ್ಲ. ಇಂಥವರನ್ನು ಶಾಸನಸಭೆಗಳಿಗೆ ಚುನಾಯಿಸುತ್ತಿದ್ದೇವಲ್ಲ; ನಾವೇ ಮುಠ್ಠಾಳರು!

ಕಪ್ಪು ಹಣವೆಲ್ಲ ವಿದೇಶಿ ಬ್ಯಾಂಕುಗಳಿಂದ ಭಾರತಕ್ಕೆ ಮರಳಿ ಬಂದರೆ, ಅದನ್ನು ಬಡ ಭಾರತೀಯರಲ್ಲಿ ಹಂಚಬಹುದೆಂದು ಕೆಲ ರಾಜಕಾರಣಿಗಳು ಬುರುಡೆ ಹೊಡೆಯುತ್ತಿದ್ದಾರೆ. ಹಾಗೆ ಹಂಚಿದರೆ ಈಗಿರುವ ಬೆಲೆಗಳು ನೂರು ಪಟ್ಟು ಏರುವದರಲ್ಲಿ ಸಂದೇಹವಿಲ್ಲ! ಆಗ ಗೋಣಿಚೀಲದಲ್ಲಿ ನೋಟುಗಳನ್ನು ಒಯ್ದು ಜೋಬಿನಲ್ಲಿ ಕಾಯಿಪಲ್ಲೆ ತರಬೇಕಾದೀತು. ಅಲ್ಲದೆ, ಅಲ್ಲಿಯೂ ಭ್ರಷ್ಟಾಚಾರ ಮತ್ತೆ ತಲೆ ಎತ್ತುವದೇ! ಆದುದರಿಂದ ಈ ಹಣವನ್ನು ಮುಖ್ಯವಾಗಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕು. ಸೂರಿಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳು ಎಷ್ಟಿಲ್ಲ? ಇಂಜನಿಯರಿಂಗ ಅಥವಾ ವೈದ್ಯಕೀಯ ಶಿಕ್ಷಣವನ್ನು ಹಣದ ಅಭಾವದಿಂದಾಗಿ ಪಡೆಯಲಾರದ ಎಷ್ಟು ವಿದ್ಯಾರ್ಥಿಗಳಿಲ್ಲ? ಇವರೆಲ್ಲರ ಕಲ್ಯಾಣವನ್ನು ಈ ಕಪ್ಪು ಹಣದಿಂದ ಸಾಧಿಸಬಹುದು. ಇದು ನಾವೇ ತೆರಿಗೆಯೆಂದು ನೀಡಿದ ಹಣ ಎನ್ನುವದನ್ನು ನೆನಪಿಟ್ಟುಕೊಳ್ಳೋಣ.

ಭಯೋತ್ಪಾದಕರ ದಾಳಿ ನಡೆದಾಗೊಮ್ಮೆ, ಮಂತ್ರಿವರ್ಯರು ಎಲ್ಲೆಡೆಯೂ ‘ಕಟ್ಟೆಚ್ಚರ’ವನ್ನು ವಹಿಸುವಂತೆ ಪೋಲೀಸರಿಗೆ ಆದೇಶವೀಯುತ್ತಾರೆ. ಇರುವ ಹತ್ತು ಪೋಲೀಸರು ಎಲ್ಲೆಲ್ಲಿ ‘ಕಟ್ಟೆಚ್ಚೆರ’ವನ್ನು ವಹಿಸಬೇಕು? ಅಲ್ಲದೆ, ಸಂಶಯಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದರೆ, ತಕ್ಷಣವೇ ಸ್ವಾರ್ಥಿ ರಾಜಕಾರಣಿಗಳು ಗಲಾಟೆ ಪ್ರಾರಂಭಿಸುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರು ಆಂದೋಲನ ಪ್ರಾರಂಭಿಸುತ್ತಾರೆ. ಈಗಂತೂ ಭಯೋತ್ಪಾದನೆಯ ವಿರುದ್ಧದ ಶಾಸನಗಳನ್ನು ವೋಟು-ರಾಜಕೀಯಕ್ಕಾಗಿ ತೆಗೆದೊಗೆಯಲಾಗಿದೆ. ಇದರರ್ಥ ಏನೆಂದರೆ ‘ನಿಮ್ಮ ಹೆಣಗಳ ಮೇಲೆ ನಾವು ಚುನಾಯಿತರಾಗುತ್ತೇವೆ ಹಾಗು ನಿಮ್ಮ ಹಣವನ್ನು ಲೂಟಿ ಮಾಡುತ್ತೇವೆ.’

ಇದು ತಪ್ಪಬೇಕಾದರೆ, ಮತದಾರರು ಭ್ರಷ್ಟ ರಾಜಕಾರಣಿಗಳನ್ನು ಚುನಾಯಿಸಬಾರದು---(ಅವರು ಯಾವುದೇ ಪಕ್ಷದವರಿರಲಿ.) ಚುನಾವಣೆಯಲ್ಲಿ ನನಗೆ ವೋಟು ಕೇಳಲು ಬರುವ ರಾಜಕಾರಣಿಗೆ ನಾನು ಕೇಳುವ ಪ್ರಶ್ನೆಗಳಿವು:
(೧) ನೀವು ಜನಲೋಕಪಾಲ ಶಾಸನದ ಪರವಾಗಿ ಇರುವಿರೊ ಅಥವಾ ವಿರುದ್ಧವಾಗಿರುವಿರೊ?
(೨) ಒಂದು ವೇಳೆ ನೀವು ಆರಿಸಿ ಬಂದರೆ, ಪೂರ್ಣ ಅವಧಿಯವರೆಗೆ ಪಕ್ಷಕ್ಕೆ ನಿಷ್ಠರಾಗಿ ಉಳಿಯುವಿರೊ, ಇಲ್ಲವೊ?

ಈ ಪ್ರಶ್ನೆಗಳಿಗೆ ‘ಎಸ್’ ಎಂದು ಉತ್ತರಿಸುವ ರಾಜಕಾರಣಿ ಬಹುಶಃ ಸಿಗಲಿಕ್ಕಿಲ್ಲ. ಹಾಗಾದರೆ, ಭಯೋತ್ಪಾದಕರ ಮತ್ತೊಂದು ದಾಳಿಗಾಗಿ ನಾವು ಸಿದ್ಧರಾಗಿರೋಣ!

Saturday, July 9, 2011

ಜನುಮದ ಜಾತ್ರಿ .............ದ.ರಾ.ಬೇಂದ್ರೆ

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು.  ||೧||

                                                ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
                                                ‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ.  ||೨||

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು.  ||೩||

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ.  ||೫||

‘ಒಲುಮೆಯ ಕಿಚ್ಚು’  ಕವನವು ವಿರಹದಗ್ಧ ಮುಗ್ಧೆಯ ಹಾಡಾದರೆ, ‘ಜನುಮದ ಜಾತ್ರಿ’ ಕವನವು ಪ್ರಣಯಸಂತೃಪ್ತಳಾದ ಹೊಸ ಮದುವಣಗಿತ್ತಿಯ ಹಾಡಾಗಿದೆ.

ಬೇಂದ್ರೆಯವರ ‘ಜನುಮದ ಜಾತ್ರಿ’ ಕವನದಲ್ಲಿ ತನ್ನ ನಲ್ಲನಿಗೆ ಮನಸೋತಿರುವ ಹೊಸ ಮದುವಣಗಿತ್ತಿಯ ಮನ:ಸ್ಥಿತಿಯನ್ನು ವರ್ಣಿಸಲಾಗಿದೆ. ಈ  ಹೊಸ ಮದುವಣಗಿತ್ತಿಯು ತನ್ನ ಆಪ್ತಸಖಿಯ ಜೊತೆಗೆ ತನ್ನ ಹೊಸ ಸಂಸಾರದ ಸುಖವನ್ನು ಹಂಚಿಕೊಳ್ಳುತ್ತಿದ್ದಾಳೆ. ತನ್ನ ನಲ್ಲನ ಒಲವಿಗೆ ಮನಸೋತು ಅವನ ಕೈಯಲ್ಲಿಯ ಸೂತ್ರದ ಗೊಂಬೆಯಂತೆ ಆಗಿರುವದಾಗಿ ಅವಳು ಹೇಳುತ್ತಿದ್ದಾಳೆ. ಆ ನಲ್ಲನಾದರೋ ತನ್ನ ನೇತ್ರಪಲ್ಲವಿಯಿಂದಲೇ ಅಂದರೆ ಕಣ್ಸನ್ನೆಯಿಂದಲೇ ಇವಳನ್ನು ಕುಣಿಸುತ್ತಾನೆ. ಇವನು ನಿರ್ದೇಶಿಸಿದಂತೆ ಕುಣಿಯುವ ಪಾತ್ರವಾಗಿದ್ದಾಳೆ ಅವಳು. ಅವರಿಬ್ಬರನ್ನು ಜೋಡಿಸುತ್ತಿರುವ ಆ ‘ಸೂತ್ರ’ ಯಾವುದು?

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. 

ಅವಳಲ್ಲಿ ಇವನಿಗೆ ಇರುವ ಒಲುಮೆ ಹಾಗು ಇವನಲ್ಲಿ ಅವಳಿಗಿರುವ ಒಲುಮೆ ಇವೇ ಅವರ ಬದುಕಿನಾಟದ ಸೂತ್ರ. ಇಂತಹ ಒಲುಮೆಯನ್ನು  ದಿನದಿನವೂ ಈ ಪ್ರಣಯಜೋಡಿಯು ಸೂರೆ ಮಾಡುತ್ತಿರುವಾಗ, ಹೊಸ ಬಾಳು ಹೇಗಿರುತ್ತದೆ?
‘ದಿನದಿನ ಜಾತ್ರಿಯೆನಿಸಿತ್ತ ಜನುಮವು!’

ಆಧುನಿಕ ತಲೆಮಾರಿನ ನಮ್ಮ ಯುವಕ, ಯುವತಿಯರು ಹಳ್ಳಿಯ ಜಾತ್ರೆಗಳನ್ನು ಬಹುಶಃ ನೋಡಿರಲಿಕ್ಕಿಲ್ಲ. ಅದೊಂದು ಸಡಗರದ ಸಮಾವೇಶ. ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಆಟಿಗೆಗಳನ್ನು ಕೊಡಿಸಿಕೊಳ್ಳಲು ಬಂದಿದ್ದರೆ, ಹುಡುಗ-ಹುಡುಗಿಯರಿಗೆ ತಿರುಗು-ಗಾಲಿಗಳಲ್ಲಿ ಕೂಡುವ ಉಮೇದಿ. ಬಹುಪಾಲು ಯುವಕ-ಯುವತಿಯರು ‘ರಾಜಾ-ರಾಣಿ ದೇಖೋ’ ಅನ್ನುತ್ತ ‘ಕಣ್ಣಾಟ’ಕ್ಕಾಗಿ ಬಂದಿರುತ್ತಾರೆ. ಒಟ್ಟಿನಲ್ಲಿ ಆಬಾಲವೃದ್ಧರಿಗೆ ಇದೊಂದು  ಉತ್ಸಾಹದ, ಸಂಭ್ರಮದ ಸನ್ನಿವೇಶ.

ತನ್ನ ನಲ್ಲನ ಒಲವಿನಲ್ಲಿ ನಮ್ಮ ಹೊಸ ಮದುವಣಗಿತ್ತಿಗೆ ಅವಳ ಬಾಳೆಂಬುದು ಪ್ರತಿದಿನವೂ ಇಂತಹ ಜಾತ್ರೆಯ ಸಂಭ್ರಮವಾಗಿದೆ. ನಿಸಾರ ಅಹಮದರ ಭಾಷೆಯಲ್ಲಿ ಹೇಳುವದಾದರೆ, ಜೀವನವೊಂದು ‘ನಿತ್ಯೋತ್ಸವ!’  

ತನ್ನ ನಲ್ಲೆಯನ್ನು ಕಣ್ಸನ್ನೆಯಿಂದಲೇ ಆಟ ಆಡಿಸುವದು, ರಸಿಕತನದ ಪ್ರಥಮ ಸಂಕೇತವಾದರೆ, ಅವಳನ್ನು  ‘ಹುಬ್ಬು ಹಾರಿಸಿ’ ಕರೆಯುವದು ರಸಿಕ ನಲ್ಲನು ಕೊಡುತ್ತಿರುವ ಎರಡನೆಯ ಸಂಕೇತ. ಇದು ಶೃಂಗಾರದಾಟಕ್ಕೆ ಆತ ನೀಡುತ್ತಿರುವ ನೇರ ಆಹ್ವಾನವೇ ಆಗಿದೆ. ಇದು ಯೌವನದ ಹಬ್ಬ, ಇದು ರಸಿಕರ ಹಬ್ಬ, ಇದು ಶೃಂಗಾರದ ಹಬ್ಬ!

ನಮ್ಮ ಹೊಸ ಮದುವಣಗಿತ್ತಿಯ ಗೆಳತಿಗೆ ಈ ಸಂಕೇತಗಳಲ್ಲಿ, ಈ ಆಟದಲ್ಲಿ ಯಾವ ವಿಶೇಷತೆಯೂ ಕಾಣಿಸಲಿಲ್ಲವೇನೋ. ಅದನ್ನು ಗ್ರಹಿಸಿದ ಈ ಹುಡುಗಿ ತನ್ನ ನಲ್ಲನು ಸಾಮಾನ್ಯನಲ್ಲವೆಂದು ಆಗ್ರಹದಿಂದ ಹೇಳುತ್ತಾಳೆ:

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ ಸಾವಿರಕ
           ಒಬ್ಬ ನೋಡವ್ವ ನನ ನಲ್ಲ. 

‘ತನ್ನ ನಲ್ಲನು ಸಾವಿರದಲ್ಲಿ ಒಬ್ಬನು; ನನ್ನ ಈ ಮಾತಿಗೆ ನೀನು ‘ಅಬ್ಬಾ!’ ಎಂದು ಹಾಸ್ಯ ಮಾಡದಿರು’ ಎಂದು ತನ್ನ ಗೆಳತಿಯ ಎದುರು ಸಮರ್ಥನೆ ಮಾಡುತ್ತಾಳೆ ಈ ಹುಡುಗಿ. ಅಂತಹ ಅಸಾಮಾನ್ಯತೆ ಏನಿದೆ ಇವಳ ನಲ್ಲನಲ್ಲಿ?
ಬಹುಶ: ಹೊಸದಾಗಿ ಮದುವೆಯಾದ ಎಲ್ಲ ಹುಡುಗಿಯರೂ ತಮ್ಮ ನಲ್ಲನೆಂದರೆ ಅಸಾಮಾನ್ಯ ಎನ್ನುವ ಭಾವನೆಯನ್ನೇ ಇಟ್ಟುಕೊಂಡಿರುತ್ತಾರೊ ಏನೊ? ಈ ಹುಡುಗಿಯ ನಲ್ಲನಲ್ಲಿ ಇರುವ ವಿಶೇಷತೆ ಏನು?

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. 

ಕಣ್ಣುಗಳು ಭಾವನೆಯನ್ನು ಪ್ರದರ್ಶಿಸುವ ಅಂಗಗಳಾಗಿವೆ.  ತನ್ನ ನಲ್ಲೆಯ ಬಗೆಗೆ ಆ ನಲ್ಲನಿಗೆ ಎಷ್ಟು ಪ್ರೀತಿ ಇದೆ ಎಂದರೆ ಆತ ತನ್ನ ಕಣ್ಣುರೆಪ್ಪೆಗಳನ್ನು ಎತ್ತಿ ಇವಳೆಡೆಗೆ ನೋಡಿದರೆ ಸಾಕು, ಅಲ್ಲಿ ಪೂರ್ಣಿಮೆಯ ಬೆಳದಿಂಗಳು ಹರಡುತ್ತದೆ. ಆ ಬೆಳದಿಂಗಳಿನಲ್ಲಿ ಒಂದು ಗಂಧರ್ವಲೋಕದ ಸೃಷ್ಟಿಯಾಗುತ್ತದೆ. ‘ಆ ಲೋಕದಲ್ಲಿ ತನ್ನ ಹುಡುಗಿಯನ್ನು ನಲಿಸಬೇಕು’ ಎನ್ನುವ ಅವನ ಚಿತ್ತದೊಳಗಿನ ಬಯಕೆ ಪಾರದರ್ಶಕವಾಗಿ ಅವನ ಕಣ್ಣಿನಲ್ಲಿ ಇವಳಿಗೆ ಕಾಣುತ್ತದೆ. ನಿಜ ಹೇಳಬೇಕೆಂದರೆ, ತನ್ನ ಬಯಕೆಯನ್ನೇ ಇವಳು ಅವನ ಕಣ್ಣುಗಳಲ್ಲಿ ಕಾಣುತ್ತಿದ್ದಾಳೆ. ಇದನ್ನು ಬೇಂದ್ರೆಯವರು ‘ಚಿತ್ತಕ್ಕೆ ಕಣ್ಣು ಬರೆಧ್ಹಾಂಗ ಕಂಡಿತ್ತು’ ಎಂದು ವರ್ಣಿಸುತ್ತಾರೆ.

ಜೀವನವೆಲ್ಲ ಮಾಯಾಲೋಕವಾಗಲು ಸಾಧ್ಯವೆ? ಇಲ್ಲಿ ದೈನಂದಿನ ಸಮಸ್ಯೆಗಳು ಇದ್ದೇ ಇರುತ್ತವೆ. ‘ಸಾಕಪ್ಪಾ ಈ ಬದುಕು!’ ಎಂದೆನಿಸುವದು ಸಹಜ. ಅಂತಹ ಸಮಯದಲ್ಲಿ ಇವಳ ನಲ್ಲನೇ ಇವಳಿಗೆ ಸಮಾಧಾನ ಹೇಳಿ ಬದುಕಿನಲ್ಲಿ ಆಸೆ ಹುಟ್ಟಿಸಬೇಕಲ್ಲವೆ?

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ.

ಸಮಸ್ಯೆಗಳಿಗೆ ಹೆದರಿದ ತನ್ನ ನಲ್ಲೆಗೆ ಈ ನಲ್ಲ ಧೈರ್ಯವನ್ನು ಕೊಡುವ ಬಗೆ ಎಂತಹದು?  ತನ್ನ ಮೀಸೆಯ ಮೇಲೆ ಕಿರಿಬೆರಳನ್ನು ಎಳೆದು, ಈ ಗಂಡಸು ಅವಳಿಗೆ ಅಭಯ ಕೊಡುತ್ತಾನೆ:ನಾನಿದ್ದೇನೆ, ಹೆದರದಿರು! ಬಾ ನನ್ನ ಜೊತೆಗೆ ಬದುಕನ್ನು ಎದುರಿಸಲು!’ ಎನ್ನುವ ಧಾಟಿಯಲ್ಲಿ ತನ್ನ ಕೆಂಚನೆಯ ಕೈಯನ್ನು ಬೀಸಿ ಇವಳನ್ನು ಕರೆಯುತ್ತಾನೆ. ಬೇಂದ್ರೆಯವರು ನಲ್ಲನ ‘ಗಂಡಸುತನ’ವನ್ನು ಎತ್ತಿ ತೋರಿಸುವ ಉದ್ದೇಶದಿಂದ, ‘ಮೀಸಿ ಮೇಲೆಳೆದ ಬೆರಳು, ‘ಕೆಂಗಯ್ಯ ಬೀಸಿ ಕರೆದಾನ’ ಎನ್ನುವ ಎನ್ನುವ ವಿಶೇಷಣಗಳನ್ನು ಬಳಸಿದ್ದಾರೆ.

ರಸಿಕ ನಲ್ಲನ ಆಸರೆಯು ಇರುವಾಗ ಇವಳ ಬದುಕಿನ ಬೇಗುದಿ ಮಾಯವಾಗುತ್ತದೆ, ಆಸೆ ಮತ್ತೆ ಚಿಗುರುತ್ತದೆ, ಪ್ರಣಯ ಮತ್ತೆ ಕೊನರುತ್ತದೆ.  ತಾಂಬೂಲದಿಂದ ಕೆಂಪಾದ ತುಟಿಯ ಈ ರಸಿಕನ ನಗೆಯು ಇವಳಿಗೆ ಬೆಚ್ಚನೆಯ, ಆಹ್ಲಾದಕರವಾದ ಹೊಂಬಿಸಲಂತೆ ಭಾಸವಾಗುತ್ತದೆ. ಅವಳ ಅಂತರಂಗದಲ್ಲಿ ಈ ಭಾವನೆಯು ‘ಬಿಂಬಿಸುತ್ತದೆ’ ಎಂದರೆ ಅವನ ಅಂತರಂಗದಿಂದ ಇವಳ ಅಂತರಂಗಕ್ಕೆ transfer ಆಗುತ್ತದೆ.

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. 

ನಿರಂತರ ಪ್ರಣಯವೊಂದೇ ಅಲ್ಲ, ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. ಇವೆರಡನ್ನೂ ಈತ ತನ್ನ ನಲ್ಲೆಗೆ ಕೊಡುತ್ತಿದ್ದಾನೆ. ಆ ಮಾತನ್ನು ‘ನಂಬೀಸಿ, ರಂಬಿಸಿತವ್ವಾ ಜೀವವ’ ಎನ್ನುವ ಮೂಲಕ ಅಭಿವ್ಯಕ್ತಿಸಲಾಗಿದೆ.

ದೇಸಿ ಪದಗಳನ್ನು ಬೇಂದ್ರೆಯವರು ಎಷ್ಟು ಸಮರ್ಥವಾಗಿ ಬಳಸಬಲ್ಲರು, ತಮಗೆ ಬೇಕಾದ ಅರ್ಥವನ್ನು ಈ ಪದಗಳ ಮೂಲಕ ಹೇಗೆ ಹಿಗ್ಗಿಸಿ ಹೊರತರಬಲ್ಲರು ಎನ್ನುವದಕ್ಕೆ ಈ ಗೀತೆಯು ಶ್ರೇಷ್ಠ ಉದಾಹರಣೆಯಾಗಿದೆ. ಪದಗಳ ಅರ್ಥವನ್ನು ಅರಿಯಬಲ್ಲವನು ಪಂಡಿತ; ಪದಗಳಲ್ಲಿ ಅರ್ಥ ತುಂಬಬಲ್ಲವನು ವರಕವಿ!
‘ಜನುಮದ ಜಾತ್ರಿ’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.

Thursday, June 30, 2011

`ಒಲುಮೆಯ ಕಿಚ್ಚು'...................................ದ.ರಾ.ಬೇಂದ್ರೆ

                                                ನೀರನ ನೋಟಕ್ಕ ನೀರು ಕಡೆದಿತು ಜೀವ
                                                ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ  ||೧||

ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು  ||೨||

ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ  ||೩||

ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ  ||೪||

ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ  ||೫||

ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು  ||೬||
………………………………………………………………………………...............

ಬೇಂದ್ರೆಯವರು ಬಳಸದೆ ಇದ್ದ ಕಾವ್ಯಪ್ರಕಾರ ಉಂಟೆ? ಕನ್ನಡ ಕಾವ್ಯದಲ್ಲಿರುವ ಎಲ್ಲ ಛಂದೋಪ್ರಕಾರಗಳನ್ನು ಬೇಂದ್ರೆಯವರು ಬಳಸಿರುವ ಸಂಭಾವ್ಯತೆ ಇದೆ. ಮಾರ್ಗಕಾವ್ಯ, ದೇಸಿ ರಚನೆ, ಶರಣರ ವಚನಗಳು, ದಾಸರ ಕೀರ್ತನೆಗಳು, ಜಾನಪದ ಹಾಡುಗಳು, ನವೋದಯದ ಭಾವಗೀತೆ, ಅಷ್ಟಷಟ್ಪದಿ, ಮುಕ್ತ ಛಂದಸ್ಸು ಇವೆಲ್ಲವನ್ನೂ ಬೇಂದ್ರೆಯವರು ಮುಕ್ತವಾಗಿ ಹಾಗು ಸಮರ್ಥವಾಗಿ ತಮ್ಮ ಕಾವ್ಯರಚನೆಯಲ್ಲಿ ಬಳಸಿಕೊಂಡಿದ್ದಾರೆ.

ಜಾನಪದ ತ್ರಿಪದಿಯ ಮಾದರಿಯಲ್ಲಿರುವ ‘ಒಲುಮೆಯ ಕಿಚ್ಚು’ ಕವನವನ್ನು ಓದಿದಾಗ (ಅಥವಾ ಹಾಡಿಕೊಂಡಾಗ) ಈ ಕವನವು ಹಳ್ಳಿಯ ಹೆಣ್ಣುಮಕ್ಕಳು ಹಾಡುವ, ‘ಕುಟ್ಟುವ-ಬೀಸುವ ಹಾಡು’ ಎಂದೇ ಅನಿಸುವದು. ಆದರೆ ಕವನದ ಸುಸಂಬದ್ಧ ರಚನೆ ಹಾಗು ಭಾಷಾವೈಖರಿ ಇವು  ಬೇಂದ್ರೆಯವರ ಲೇಖನಿಯ ಕುರುಹನ್ನು ಸ್ಪಷ್ಟವಾಗಿ ತೋರಿಸುವವು!

‘ಒಲುಮೆಯ ಕಿಚ್ಚು’ ಕವನವು  ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳ ಪ್ರಥಮ ಪ್ರೇಮ ಹಾಗು ವಿರಹಗಳ ಗೀತೆ. ಈ ಹುಡುಗಿಯು ೨೧ನೆಯ ಶತಮಾನದ ನಾಗರಿಕ ಹುಡುಗಿಯಲ್ಲ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆಗಿನ ಹುಡುಗಿಯರು ಪ್ರಣಯ,ಪ್ರೇಮಗಳಿಗೆ ಹಿಂಜರಿಯುತ್ತಿದ್ದರು ಎಂದೇನಲ್ಲ, ಆದರೆ ಸ್ವಲ್ಪ ನಾಚಿಕೊಳ್ಳುತ್ತಿದ್ದರು ಎಂದು ಹೇಳಬಹುದು! ಈ ಕವನದ ಮುಗುದೆ ಮೊದಲ ನೋಟದಲ್ಲಿ ಪ್ರೇಮಕ್ಕೆ ಬಲಿಯಾಗಿ, ಬಳಿಕ ವಿರಹದಲ್ಲಿ ಬಳಲುತ್ತಿದ್ದಾಳೆ. ತಾನು ಪ್ರೇಮದ ಬಲೆಗೆ ಸಿಲುಕಿದ ಪ್ರಸಂಗವನ್ನು  ಮತ್ತೆ ನೆನೆಸಿಕೊಳ್ಳುತ್ತಿದ್ದಾಳೆ (ಅಥವಾ ತನ್ನ ಜೀವದ ಗೆಳತಿಯ ಎದುರಿಗೆ ಬಿಚ್ಚಿಡುತ್ತಿದ್ದಾಳೆ.) ಆ ಸಂಗತಿಯ ಆತ್ಮನಿವೇದನೆ ಹೀಗಿದೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .

ಗಂಡಸರ ದೃಷ್ಟಿಗೆ ಅಂಜಿಕೊಳ್ಳುವಳಂಥವಳೇನಲ್ಲ ನಮ್ಮ ಹುಡುಗಿ. ಆದರೆ ಈ ನೀರನ(=ಗಂಡಿನ) ನೋಟಕ್ಕೆ ನಮ್ಮ ನೀರೆ ತಲ್ಲಣಿಸಿ ಹೋದಳು. ತನ್ನ ನೀರು (ಅಂದರೆ ಅಂತಃಸತ್ವವು) ಕಡೆಗೋಲಿನಿಂದ ಕಡೆದಂತೆ ಅವಳ ಜೀವವು ತಳಮಳಿಸಿತು. ನೀರು ಕಡೆದಿತು ಎಂದರೆ ಈ ಬಾಲೆಯು ಆತನ ನೋಟಕ್ಕೆ ಬೆವತು ಹೋದಳು ಎಂದೂ ಅರ್ಥವಾಗುತ್ತದೆ. ಈ ಹುಡುಗಿಯನ್ನು ನೆಟ್ಟ ನೋಟದಿಂದ ಸೋಲಿಸಿದ ಆ ಧೀರ ಗಂಡಸು ಅವಳ ಧೈರ್ಯವನ್ನೇ ಉಡುಗಿಸಿ ಬಿಟ್ಟ! ಇಷ್ಟೇ ಅಲ್ಲ, ಅವಳನ್ನು ಪೂರಾ ಮರುಳಿಯನ್ನಾಗಿ ಮಾಡಿದ, ಅಂದರೆ ಅವಳಿಗೆ ಇವನ ಹುಚ್ಚು ಹಿಡಿಯಿತು ಎನ್ನಬಹುದು.

ಈಗ ತಾನೇ ಬಾಲ್ಯಾವಸ್ಥೆಯನ್ನು ದಾಟುತ್ತಿರುವ ಇವಳಿಗೆ  ಇದು ಹೊಚ್ಚ ಹೊಸ ಅನುಭವ. ಇದೀಗ ಅವಳು ಹದಿಹರೆಯಕ್ಕೆ ಕಾಲಿಟ್ಟಿದ್ದಾಳೆ. ಅವಳ ಮಾತುಗಳಲ್ಲಿಯೇ ಈ ಬದಲಾವಣೆಯ ಅನುಭವವನ್ನು ಕೇಳಬಹುದು:
          ಸುಗ್ಗಿ ನಗಿ ನಕ್ಕಾಗ ಮೊಗ್ಗಿ ಬಿಚ್ಚಿತು ಒಳಗ
          ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
          ಬಗ್ಗದ ಎದೆಯ ಬಾಗಿಸಿತು.

‘ಸುಗ್ಗಿ ನಗಿ ನಕ್ಕಾಗ’ ಎನ್ನುವದನ್ನು ಎರಡು ರೀತಿಯಲ್ಲಿ ಅರ್ಥೈಸಬಹುದು.
(೧)ಅವಳ ಜೀವನದಲ್ಲಿ ಸುಗ್ಗಿಯ ಕಾಲವು ಈಗ ಪ್ರವೇಶಿಸಿದೆ ಅಂದರೆ ಹೊಸ ಹರೆಯವು ಉಲ್ಲಾಸದ ನಗೆಯನ್ನು ಚಿಮ್ಮುತ್ತ ಬರುತ್ತಿದೆ.
(೨) ಅವಳ ಪ್ರಣಯಿಯು ‘ಸುಗ್ಗಿಯ ಸೊಬಗಿನ ನಗೆಯನ್ನು ನಕ್ಕಾಗ’ ಎಂದು ಭಾವಿಸಿದರೆ, ಆತನ ನಗೆಯಿಂದಲೇ ಅವಳ ಅಂತರಂಗದಲ್ಲಿ ವಸಂತಕಾಲ ಪ್ರವೇಶಿಸಿತು ಎಂದೂ ಅರ್ಥೈಸಬಹುದು.

ಈ ಹರೆಯದ ಸುಗ್ಗಿಯ ಕಾಲದಲ್ಲಿ ಮೊಗ್ಗುಗಳೆಲ್ಲ ಅರಳಿ ಹೂವಾಗಬೇಕಲ್ಲವೆ? ಇವಳ ‘ಒಳಗಿನ ಮೊಗ್ಗೂ’ ಸಹ ಈಗ ಬಿಚ್ಚಿಕೊಂಡು ಹಿಗ್ಗಿತು; ಅಂದರೆ ಅವಳ ಅಂತರಂಗವು ಅರಳಿತು. ‘ಹಿಗ್ಗುವದು’ ಎಂದರೆ ಉಲ್ಲಾಸವನ್ನು ಅನುಭವಿಸುವದು ಎಂದೂ ಅರ್ಥವಾಗುತ್ತದೆ. ಹದಿಹರೆಯವು ಹೊಸ ಉಲ್ಲಾಸವನ್ನು ತರುವದು ಸಹಜವೇ ಆಗಿದೆ.

‘ಮೊಗ್ಗು ಬಿಚ್ಚಿತು’ ಎನ್ನುವ ಪದಗುಚ್ಛವು ಮೊದಲನೆಯದಾಗಿ ಅವಳ ದೈಹಿಕ ಬದಲಾವಣೆಗಳನ್ನೂ ಸೂಚಿಸುತ್ತದೆ ಹಾಗು ಎರಡನೆಯದಾಗಿ ಸುಪ್ತಾವಸ್ಥೆಯಲ್ಲಿದ್ದ ಸಹಜ ಕಾಮನೆಗಳು ಈಗ ವ್ಯಕ್ತಾವಸ್ಥೆಗೆ ಬಂದವು ಎನ್ನುವದನ್ನೂ ಸೂಚಿಸುತ್ತದೆ. ಈ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಮುಂದಿನ ಘಟ್ಟವೆಂದರೆ ‘ಪಾಡು’ ಆಗುವದು ಅರ್ಥಾತ್ ಪಕ್ವವಾಗುವದು. ಈ ಪದವೂ ಸಹ ದೈಹಿಕ ಹಾಗು ಮಾನಸಿಕ ಪಕ್ವತೆಯನ್ನು ಸೂಚಿಸುವವು. ಪಕ್ವತೆಯ ಮುಂದಿನ ಹಂತವು ‘ಮಾಗುವದು’ ಎಂದರೆ ಭೋಗಯೋಗ್ಯವಾಗುವದು. ಹರೆಯದ ವಸಂತ ಕಾಲದಲ್ಲಿ ಇದೆಲ್ಲ ಸಹಜವೇ! ಇನ್ನು ‘ಬಗ್ಗದ ಎದೆಯನ್ನು ಬಾಗಿಸಿತು’ ಎಂದರೆ, ಧಾಷ್ಟೀಕದ ಹುಡುಗತನವು ಹೋಗಿ, ನಮ್ರತೆಯ, ನಾಚಿಕೆಯ ಭಾವ ಅವಳಲ್ಲಿ ತುಂಬಿತು ಎಂದು ಅರ್ಥೈಸಬಹುದು.

ಇಂತಹ ಪ್ರಣಯಯೋಗ್ಯಳಾದ ಕನ್ಯೆಯನ್ನು ಒಬ್ಬ ಧೀರನು ದೃಷ್ಟಿಯುದ್ಧದಿಂದ ಸೋಲಿಸಿದ್ದಾನೆ. ಇದೀಗ ಆ ಧೀರನಿಗಾಗಿ, ಆ ನೀರನಿಗಾಗಿ ಈ ಮುಗ್ಧೆ ಹಂಬಲಿಸುತ್ತಿದ್ದಾಳೆ. ಅವಳು ತನ್ನ ವಿರಹವನ್ನು ತೋಡಿಕೊಳ್ಳುತ್ತಿರುವ ಪರಿ ಹೀಗಿದೆ:
ಮಾಗಿ ಮೂಡಲಗಾಳಿ ತಾಗಿದ ಬನಧಾಂಗ
ಸಾಗ್ಯದ ನನ್ನ ಹರೆಯವು ಕೋಗಿಲಾ
ಕೂಗಿ ಕರೆತಾರs ಸುಗ್ಗಿಯಾ.

ಮಾಘ ಮಾಸದಲ್ಲಿ ಅಂದರೆ ಚಳಿಗಾಲದಲ್ಲಿ ಮೂಡಲಗಾಳಿಯು ಬಿರ್ರನೆ ಬೀಸುತ್ತಿರುತ್ತದೆ. ಗಿಡ, ಮರಗಳೆಲ್ಲ ತಮ್ಮ ಎಲೆಗಳನ್ನು ಉದುರಿಸಿ ಬರಲಾಗಿ ನಿಲ್ಲುವವು. ಸೃಷ್ಟಿಕ್ರಿಯೆ ಪ್ರಾರಂಭವಾಗಲು ಅಂದರೆ ಮತ್ತೆ ಹೂಬಿಡಲು ಅವು ವಸಂತಕಾಲಕ್ಕಾಗಿ ಕಾಯಬೇಕು. ನಮ್ಮ ಹುಡುಗಿಯ ಪ್ರೇಮಿಯು ಅವಳನ್ನು ದೃಷ್ಟಿಯುದ್ಧದಲ್ಲಿ ಸೋಲಿಸಿದ್ದಾನೆ. ಆದರೆ ಅವಳನ್ನು ಸೆರೆಹಿಡಿದೊಯ್ಯುವ ಬದಲು ತಾನೇ ಮಾಯವಾಗಿದ್ದಾನೆ. ಹೀಗಾಗಿ ಅವಳ ಹರೆಯವೆಂಬ ಬನಕ್ಕೆ ವಿರಹವೆಂಬ ಮಾಘಮಾಸ ಕಾಲಿಟ್ಟಿದೆ. ಅವಳ ವಯೋವೈಭವವೆಲ್ಲ ಮುರುಟಿ, ವ್ಯರ್ಥವಾಗುತ್ತಿದೆ. ಈಗ ಅವಳ ನೆರವಿಗೆ ಬರುವರಾರು? ವಸಂತಕಾಲ ಕಾಲಿಟ್ಟೊಡನೆಯೇ ಗಂಡುಕೋಗಿಲೆಯು ಹೆಣ್ಣುಕೋಗಿಲೆಗೆ ತನ್ನ ಪಂಚಮಸ್ವರದಲ್ಲಿ ಪ್ರಣಯದ ಆಹ್ವಾನವನ್ನು ನೀಡುವದು ಪ್ರಕೃತಿಯ ನಿಯಮ. ಅದಕ್ಕೇ ನಮ್ಮ ಕಾವ್ಯನಾಯಕಿಯು ಆರ್ತಳಾಗಿ ಕೋಗಿಲೆಗೆ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದಾಳೆ. ‘ಕೋಗಿಲೆಯೇ, ನೀನು ಕೂಗಿದರೆ ವಸಂತಕಾಲ ಬರುವದು. ದಯವಿಟ್ಟು ವಸಂತನನ್ನು ನನ್ನಲ್ಲಿಗೆ ಕರೆದುಕೊಂಡು ಬಾ!’ ಇಲ್ಲಿಯ ವೈಚಿತ್ರ್ಯವನ್ನು ಗಮನಿಸಿರಿ. ಕೋಗಿಲೆಯು ಕೂಗುವದು ವಸಂತಕಾಲದಲ್ಲಿ. ಆದರೆ ಅದು ಕೂಗುವದರಿಂದ ವಸಂತಕಾಲವು ಬರುವದಿಲ್ಲ. ವಿರಹದಲ್ಲಿ ಹುಚ್ಚಿಯಾದ ನಮ್ಮ ಕಾವ್ಯನಾಯಕಿಗೆ ಕೋಗಿಲೆಯ ಕೂಜನವೇ ವಸಂತನನ್ನು ಕರೆದುತರುವದು ಎಂದು ಭಾಸವಾಗುತ್ತಿದೆ!

ಆದರೇನು? ಅವಳ ಆರ್ತತೆ ಅವಳ ಪ್ರಣಯಿಗೆ ಅರ್ಥವಾಗುತ್ತಿಲ್ಲ. ಅವಳ ಹೃದಯದ ಕರೆ ಅವನಿಗೆ ಕೇಳಿಸುತ್ತಿಲ್ಲ.
ಆಡಿ ಜೀವದ ಗಾಣಾ ನೋಡ ಹಿಂಡಿತು ಪ್ರಾಣಾ
ಕಾಡತಾನ್ಯಾಕs ಆ ಜಾಣ ಕೇಳಿಲ್ಲ
ಹಾಡು ತಲ್ಲಣದ ತಿಲ್ಲಾಣ.
ನಮ್ಮ ಹುಡುಗಿಯ ಬದುಕು ಒಂದು ದಿನನಿತ್ಯದ ಗಾಣವಾಗಿದೆ. ಪ್ರತಿದಿನವನ್ನು ಅವಳು ಗಾಣದೆತ್ತಿನಂತೆ ಕಳೆಯುತ್ತಿದ್ದಾಳೆ. ಆದರೆ ಈ ಗಾಣವು ಹಿಂಡುತ್ತಿರುವದೇನನ್ನು? ಅವಳ ಪ್ರಾಣವನ್ನೇ ಈ ಗಾಣ ಹಿಂಡುತ್ತಿದೆ. ಅದನ್ನೇ ಅವಳು ಸ್ವಗತದಲ್ಲಿ (ಅಥವಾ ತನ್ನ ಆಪ್ತಸಖಿಯಲ್ಲಿ ಹೇಳಿಕೊಳ್ಳುತ್ತಿದ್ದಾಳೆ.) ಇಷ್ಟೆಲ್ಲ ನೋವನ್ನು ಇವಳು ಅನುಭವಿಸುತ್ತಿರುವಾಗ, ಆ ಜಾಣನಿಗೆ ಇದು ಅರ್ಥವಾಗುತ್ತಿಲ್ಲವೆ? ಇವಳನ್ನು ವಿರಹದಲ್ಲಿ ನೂಕಿ ಅವನು ಏಕೆ ಕಾಡುತ್ತಿದ್ದಾನೆ? ಜಾಣ ಎನ್ನುವ ಪದವನ್ನು ನಮ್ಮ ಹುಡುಗಿಯು ದ್ವಂದ್ವಾರ್ಥಾದಲ್ಲಿ ಉಪಯೋಗಿಸುತ್ತಿರುವದನ್ನು ಗಮನಿಸಬೇಕು.

ತನ್ನ ಪ್ರೇಮಿ ಬಾರದೇ ಹೋಗಬಹುದು ಎನ್ನುವ ತಲ್ಲಣ ಅವಳಿಗಿದೆ. ಈ ವಿರಹರಾಗದ ತಿಲ್ಲಾಣವನ್ನು (ಅಂದರೆ ಪ್ರಾರಂಭಿಕ ಆಲಾಪವನ್ನು) ಆ ಪ್ರಣಯಜಾಣ ಕೇಳಿರಲಿಕ್ಕಿಲ್ಲ. ಯಾಕೆಂದರೆ ಇವಳ ಮೌನಸ್ವರವು ಆತನಿಗೆ ಕೇಳಿಸುವದಾದರೂ ಹೇಗೆ? ಕೇಳಿದ್ದರೆ ಆತ  ಸುಮ್ಮನೇ ಇರುತ್ತಿರಲಿಲ್ಲವೇನೊ? (ತಿಲ್ಲಾಣವೆಂದರೆ ಹಾಡಿನ ಪ್ರಾರಂಭದಲ್ಲಿ ಗಾಯಕರು ಆಲಾಪಿಸುವ ವರ್ಣಗಳು.) ಇದೀಗ ತಿಲ್ಲಾಣ ಪ್ರಾರಂಭವಾಗಿದೆ. ಈ ವಿರಹರಾಗವು ದೀರ್ಘಕಾಲೀನವಾಗಬಹುದೇನೊ ಎನ್ನುವ ಅಂಜಿಕೆಯು ನಮ್ಮ ಕವನನಾಯಕಿಯನ್ನು ಬಾಧಿಸುತ್ತಿದೆ.

ಇವಳ ದೀರ್ಘವಿರಹವನ್ನು ಪರಿಹರಿಸಲು ಆ ಮೊದಲ ಪ್ರೇಮಿಯೇ ಆಗಬೇಕೆ? ಬೇರೊಬ್ಬನನ್ನು ವರಿಸಿ, ಸುಖವಾಗಿ ಇರಬಹುದಲ್ಲವೆ? ಇಂತಹ ತಿಳಿಗೇಡಿ ಪ್ರಶ್ನೆಗೆ ಅವಳ ಉತ್ತರ ಹೀಗಿದೆ:
ಬಾತುಗೋಳಿ ಹಾಂಗ ಚಾತಕದ ಜಾತ್ಯಲ್ಲ
ನಾತನೀರಾಗ ಅದರಾಟ, ಇದರೂಟ
ಮೀಸಲಳಿಯದ ಮಳಿಯಾಗ.
ಅಕ್ಕಾ, ಬಾತುಗೋಳಿ ಹಾಗು ಚಾತಕ ಪಕ್ಷಿ ಇವುಗಳ ವ್ಯತ್ಯಾಸ ನಿನಗೆ ಗೊತ್ತೆ? ಬಾತುಗೋಳಿಯ ಆಟವೆಲ್ಲ ಕೊಳೆಯಾಗಿ ನಾರುತ್ತಿರುವ ನೀರಿನಲ್ಲಿ. ಚಾತಕ ಪಕ್ಷಿಯಾದರೋ ಮೊದಲ ಮಳೆಯ ಹನಿಯನ್ನು ಮಾತ್ರ ಆಸ್ವಾದಿಸುತ್ತದೆ. ನಾನು ಚಾತಕ ಪಕ್ಷಿಯೇ ಹೊರತು ಬಾತುಗೋಳಿಯಲ್ಲ. ಜೀವನದಲ್ಲಿ ಮೊದಲ ಪ್ರಣಯವು ಮೊದಲ ಮಳೆಯ ಹನಿ ಇದ್ದಂತೆ, ಅಂದರೆ ಮೀಸಲು ಅಳಿಯದ ಮಳೆಹನಿಯಿದ್ದಂತೆ. ಅದರಂತೆ ತಮ್ಮಿಬ್ಬರ ಪ್ರೀತಿಯೂ ಸಹ ಮೀಸಲು ಪ್ರೀತಿ ಎನ್ನುವದು ನಮ್ಮ ಹುಡುಗಿಯ ಸಂಕಲ್ಪ.

ಹಾಗಾದರೆ ಎಷ್ಟು ಕಾಲ ಈ ವಿರಹವನ್ನು ಸಹಿಸಿಕೊಳ್ಳುತ್ತ ಇರಲು ಸಾಧ್ಯ?
ಒಲುಮೆಯ ನಚ್ಚೊಂದು ಕುಲುಮೆಯ ಕಿಚ್ಚವ್ವ
ಹುಲುಜೀವ ಕಾದು ಕಮರೀತು ಒಳುಜೀವ
ಒಲುಮೀಗೆ ಹ್ಯಾಂಗೊ ಬಾಳೀತು.
ಒಂದು ಜೀವವನ್ನು ಪ್ರೀತಿಸಿ, ಆ ಜೀವವನ್ನೇ ನಚ್ಚಿಕೊಂಡು, ಆ ಜೀವದ ವಿರಹದಲ್ಲಿ ಬಾಳುವದು ಅಂದರೆ ‘ಕುಲುಮೆಯ ಕಿಚ್ಚು’ ಇದ್ದಂತೆ. ಕಮ್ಮಾರನು ಕಬ್ಬಿಣವನ್ನು ಕಾಯಿಸಲು ಬಳಸುವ ಒಲೆಗೆ ಕುಲುಮೆ ಎನ್ನುತ್ತಾರೆ. ಕಬ್ಬಿಣವನ್ನು ಮೆತ್ತಗೆ ಮಾಡುವ ಆ ಶಾಖದಷ್ಟೇ ಪ್ರಖರವಾಗಿರುವದು ವಿರಹದ ಶಾಖ. ಈ ಶಾಖಕ್ಕೆ ಹುಲುಜೀವಗಳು ಅಂದರೆ ಅಸ್ಥಿರ ಜೀವಗಳು ಕಾದು ಕಮರುತ್ತವೆ ಅಂದರೆ ಬಾಳುವ ಆಸೆಯನ್ನೇ ಕಳೆದುಕೊಳ್ಳುತ್ತವೆ. ಆದರೆ ಆ ತಾಪವನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿರುವ ‘ಒಳುಜೀವ’ವು (=ಸಾತ್ವಿಕ ಸಾಮರ್ಥ್ಯದ ಜೀವವು) ಆ ಪ್ರೀತಿಯನ್ನೇ ನೆನೆಸಿಕೊಳ್ಳುತ್ತ ಹೇಗೋ ಬದಕುತ್ತದೆ!
(ಟಿಪ್ಪಣಿ: ನಮ್ಮ ಪುರಾಣ ಕತೆಗಳ ನಾಯಕಿರಾದ ಸೀತೆ ಹಾಗು ಶಕುಂತಲಾ ಇಂತಹ ಸಾಮರ್ಥ್ಯವನ್ನು ತೋರಿಸಿದ್ದಾರೆ.)
..........................................................................................

ನೋಡಲೇನೋ ಇದು ಜಾನಪದ ಮಾದರಿಯ ಗೀತೆ. ಆದರೆ ಅರ್ಥ ಹೊಳೆದಂತೆಲ್ಲ, ಇದು ಜಾನಪದವನ್ನು ಮೀರಿದ ಗೀತೆ ಎನ್ನುವ ಅರಿವಾಗುವದು. ಜಾನಪದ ಗೀತೆಗಳಲ್ಲಿಯೂ ಪ್ರತಿಭೆಯನ್ನು ಹಾಗು ಪಾಂಡಿತ್ಯವನ್ನು ನಾವು ಕಾಣುತ್ತೇವೆ. ಆದರೆ ಬೇಂದ್ರೆಯವರಿಗೇ ವಿಶಿಷ್ಟವಾದ ಕೆಲವು ಅಂಶಗಳು ಈ ಕವನದಲ್ಲಿವೆ. ಮೊದಲನೆಯದಾಗಿ ಬೇಂದ್ರೆ-ಕಾವ್ಯದಲ್ಲಿ ಕಾಣುವ ಸುಸಂಬದ್ಧ ಬೆಳವಣಿಗೆ. 

ಈ ಕವನದ ನಾಯಕಿಯು ತನ್ನ ಪ್ರಥಮ ಪ್ರೇಮಜಾಲದಲ್ಲಿ ಬೀಳುವ ನಿವೇದನೆಯಿಂದ ಕವನವನ್ನು ಪ್ರಾರಂಭಿಸಿದ ಬೇಂದ್ರೆಯವರು, ಈ ಘಟನೆಗೆ ಕಾರಣವನ್ನು ಅಂದರೆ ಹದಿಹರೆಯಕ್ಕೆ ಅವಳು ಕಾಲಿಡುತ್ತಿರುವದನ್ನು ಎರಡನೆಯ ನುಡಿಯಲ್ಲಿ ವರ್ಣಿಸಿದ್ದಾರೆ. ಮೂರೇ ಸಾಲುಗಳ ಈ ನುಡಿಯಲ್ಲಿ ಅವಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಯ ಪೂರ್ಣ ವಿವರಣೆಯನ್ನು ಬೇಂದ್ರೆಯವರು ಸಾಂಕೇತಿಕವಾಗಿ ಸೂಚಿಸಿದ್ದಾರೆ!  ಮುಂದಿನ ನುಡಿಗಳಲ್ಲಿ ಬರುವದು ಅವಳ ವಿರಹದ ಹಾಗು ಅವಳ ಸಂಕಲ್ಪದ ವರ್ಣನೆ. ಈ ರೀತಿಯಲ್ಲಿ ಕ್ರಮಬದ್ಧ ರಚನೆಯನ್ನು ನಾವು ಕಾಣುವದು ಬೇಂದ್ರೆಯವರ ಕಾವ್ಯದಲ್ಲಿಯೇ.

ಬೇಂದ್ರೆಯವರ ಭಾಷಾಪ್ರತಿಭೆಯಂತೂ ಅಪ್ರತಿಮವಾದದ್ದು. ಅಂತರಂಗದ ತಳಮಳವನ್ನು ‘ನೀರು ಕಡೆದಿತು ಜೀವ’ ಎಂದು ಬಣ್ಣಿಸುವಾಗ, ಹರೆಯಕ್ಕೆ ಕಾಲಿಡುವ ಸಮಯದ ಎಲ್ಲ ಬೆಳವಣಿಗೆಗೆಳನ್ನು ‘ಮೊಗ್ಗಿ ಬಿಚ್ಚಿತು ಒಳಗ’ ಎಂದು ಸೂಚನೆ ಕೊಡುವಾಗ, ನಾಯಕಿಯ ಪ್ರೀತಿಯನ್ನು ‘ಮೀಸಲಳಿಯದ ಮಳೆಹನಿಯಂತೆ’ ಎಂದು ವರ್ಣಿಸುವಾಗ ಬೇಂದ್ರೆಯವರು ಬಳಸುವ ದೇಸಿ ರೂಪಕಗಳು, ಅವರ ರೂಪಕಪ್ರತಿಭೆಗೆ ಸಾಕ್ಷಿಯಾಗಿವೆ.

ಬೇಂದ್ರೆಯವರು ಭಾಷಾಚಮತ್ಕಾರಗಳನ್ನು ಕೇವಲ ರಂಜನೆಗಾಗಿಯೇ ಬಳಸುವದಿಲ್ಲ. ಕಾವ್ಯದ ಸರಾಗತೆಯೇ ಅವರ ಉದ್ದೇಶವಾಗಿರುತ್ತದೆ. ಮೊದಲ ನುಡಿಯಲ್ಲಿ ಬರುವ ‘ರ’ಕಾರಪ್ರಾಸವನ್ನು (ಉದಾ: ನೀರ, ಧೀರ ಇ.), ಎರಡನೆಯ ನುಡಿಯಲ್ಲಿ ಬರುವ ‘ಗ’ಕಾರಪ್ರಾಸವನ್ನು (ಉದಾ: ಸುಗ್ಗಿ, ಹಿಗ್ಗು, ಮೊಗ್ಗಿ ಇ.), ಅದೇ ರೀತಿಯಲ್ಲಿ ಇತರ ನುಡಿಗಳಲ್ಲಿಯ ಅಕ್ಷರಪ್ರಾಸಗಳನ್ನೂ ಸಹ ನಾವು ಇಲ್ಲಿ ಗಮನಿಸಬಹುದು.

ನೋಡಲು ಇಷ್ಟು ಸರಳವಾಗಿ ಕಾಣುವ ಈ ಕವನದ ರಚನೆಯಲ್ಲಿಯ ಕ್ಲಿಷ್ಟತೆಯನ್ನು ಗಮನಿಸಿರಿ:
ಪ್ರತಿ ನುಡಿಯ ಎರಡನೆಯ ಸಾಲಿನ ಕೊನೆಯ ಪದವು, ಮುಂದಿನ ಸಾಲಿಗೆ ಸಂಬಂಧಪಟ್ಟ ಪದವಾಗಿದೆ.
ಉದಾಹರಣೆ:
ನೀರನ ನೋಟಕ್ಕ ನೀರು ಕಡೆದಿತು ಜೀವ
ಧೀರ ಧೈರ್ಯಾವ ಕಳೆದಾನ ನನ್ನೊಂದ
ತೀರ ಮರುಳಿಯ ಮಾಡ್ಯಾನ .
‘ಧೀರ ಧೈರ್ಯಾವ ಕಳೆದಾನ’ ಎನ್ನುವಲ್ಲಿಗೆ ವಾಕ್ಯ ಪೂರ್ಣವಾಗುತ್ತದೆ. ‘ನನ್ನೊಂದ’  ಇದು ಈ ಸಾಲಿನ ಕೊನೆಯ ಪದವಾದರೂ ಸಹ, ಮುಂದಿನ ಸಾಲಿನೊಂದಿಗೆ ಅದರ ಸಂಬಂಧವಿದೆ. ‘ನನ್ನೊಂದ ತೀರ ಮರುಳಿಯ ಮಾಡ್ಯಾನ’ ಎನ್ನುವದು ಪೂರ್ಣ ವಾಕ್ಯವಾಗುತ್ತದೆ. ಈ ರೀತಿಯಲ್ಲಿ ಪದಗಳನ್ನು ಒಡೆಯುವದನ್ನು ಸಂಸ್ಕೃತ ಶ್ಲೋಕಗಳಲ್ಲಿ ಕಾಣಬಹುದು.

ಕೊನೆಯದಾಗಿ, ಬೇಂದ್ರೆಯವರ ಹೆಚ್ಚಾನುಹೆಚ್ಚು ಪ್ರಣಯಗೀತೆಗಳೆಲ್ಲವೂ ದೇಸಿ ಪ್ರಕಾರದಲ್ಲಿಯೇ ಇರುವದನ್ನು ಗಮನಿಸಬೇಕು. 
` ಒಲುಮೆಯ ಕಿಚ್ಚು’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.

Thursday, June 16, 2011

ಬೇಂದ್ರೆಯವರ ‘ಚಳಿಯಾಕೆ’


ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.

ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.

ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.

ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.
………………………………………………………...........................................


 ‘ಚಳಿಯಾಕೆ’ ಕವನದಲ್ಲಿ ಓದುಗರು ಒಂದು  Etheric feeling ಅನ್ನು ಅನುಭವಿಸುತ್ತಾರೆ. ಇದು ಬೇಂದ್ರೆಯವರ ‘ಕಾವ್ಯಪ್ರತಿಭೆಯ’ ನಿದರ್ಶನ. ಕವನದ ಪ್ರತಿ ನುಡಿಯಲ್ಲಿ ಅವರು ಸೃಷ್ಟಿಸುವ ಉಪಮಾಲಂಕಾರಗಳು ಅವರ ಕಾವ್ಯರಚನಾ ಪ್ರತಿಭೆಯ ನಿದರ್ಶನಗಳಾಗಿವೆ.

ಈ ಕವನದ ಹಿನ್ನೆಲೆ ಹೀಗಿದೆ:
ಭಾದ್ರಪದ ಮಾಸದ ಕೊನೆಗೆ ವರ್ಷಾ ಋತು ಮುಗಿದು, ಶರತ್ ಋತುವಿನ ಮೊದಲ ಮಾಸವಾದ ಆಶ್ವೀನ ಮಾಸ ಪ್ರಾರಂಭವಾಗುತ್ತದೆ. ಮಳೆಗಾಲದ ಕಾರ್ಮೋಡಗಳು ಕರಗಿ ಹೋಗಿರುತ್ತವೆ. ಅಲ್ಲೊಂದು ಇಲ್ಲೊಂದು ಬಿಳಿಯ ಮೋಡಗಳ ತುಣುಕುಗಳು ಕಾಣುತ್ತಿರುತ್ತವೆ. ಹಗಲು ಕಡಿಮೆಯಾಗುತ್ತ, ರಾತ್ರಿಯು ದೀರ್ಘವಾಗುತ್ತಿರುತ್ತದೆ. ಮುಂಗಾರು ಪೈರಿನಲ್ಲಿ ತೆನೆಗಳು ಮೂಡಿರುತ್ತವೆ. ಕೆರೆ, ಬಾವಿಗಳು ತುಂಬಿಕೊಂಡಿರುತ್ತವೆ.

ಇದು ಎಲ್ಲರಿಗೂ ಉಲ್ಲಾಸದ ಕಾಲ. ಆದುದರಿಂದ ಈ ಮಾಸದ ಮೊದಲ ದಿನದಿಂದಲೇ ಹಬ್ಬಗಳು ಪ್ರಾರಂಭವಾಗುತ್ತವೆ.  ಅಷ್ಟಮಿ ತಿಥಿಯಂದು ದುರ್ಗಾಪೂಜೆ, ಮಹಾನವಮಿಯಂದು ಬನ್ನೀಪೂಜೆ, ವಿಜಯದಶಮಿಯಂದು ಬನ್ನಿ-ಬಂಗಾರದ ವಿನಿಮಯ!

ಸೀಗೆ ಹುಣ್ಣಿವೆಯ ದಿವಸ ‘ಚರಗ’ ಚೆಲ್ಲುತ್ತಾರೆ; ಅಂದು ರಾತ್ರಿ ‘ಕೋಜಾಗರಿ’, ಅಂದರೆ ಬೆಳದಿಂಗಳ ಊಟ! ಬೇಂದ್ರೆಯವರ ಕಾಲದ ಹಳ್ಳಿಗಳಲ್ಲಿ ಹಾಗು ಅನೇಕ ಊರುಗಳಲ್ಲಿ ವಿದ್ಯುತ್ ದೀಪ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರೆಲ್ಲ ರಾತ್ರಿಯ ಊಟವನ್ನು ಮುಗಿಸಿದ ನಂತರ, ಪ್ರಶಾಂತ ವಾತಾವರಣದಲ್ಲಿ ಮನೆಯ ಅಂಗಳದಲ್ಲಿ ಹರಟೆ ಹೊಡೆಯುತ್ತ ಕೂತುಕೊಂಡಿರುತ್ತಿದ್ದರು. ಹುಣ್ಣಿವೆಯ ಬೆಳದಿಂಗಳ ಸೊಬಗನ್ನು ಸವಿಯುತ್ತ , ಚಳಿಯಲ್ಲಿ ನಡುಗುತ್ತ, ಪ್ರಕೃತಿಯಲ್ಲಿ ಸಮರಸರಾಗಿ ಹೋಗುವ ಪರಿ ಇದು. ಇಂತಹ ಸೊಬಗನ್ನು ಬೇಂದ್ರೆಯವರು ಬಣ್ಣಿಸುವದು ಹೀಗೆ:

ಸೀಗೆ ಹುಣ್ಣಿವೆ ಮುಂದೆ
ಸೋಗಿನ ಚಂದ್ರಮ
ಸಾಗಿ ಬರುವೊಲು ಬರುವ ಚಳಿಯಾಕೆ.
ಹೊನ್ನ ಸೇವಂತಿಗೆಯ
ಹೆರಳು ಬಂಗಾರದ
ಬೆಳ್ಳಿ ಸೇವಂತಿಗೆಯ ಬಳಿಯಾಕೆ.

ಬೇಂದ್ರೆಯವರ ಕವನ ‘ಸೋಗಿನ ಚಂದ್ರಮ’ನಿಂದ ಪ್ರಾರಂಭವಾಗುತ್ತದೆ. ಏಕೆಂದರೆ ಇಡೀ ವಾತಾವರಣವೇ ಸೋಗಿನಿಂದ ತುಂಬಿದೆ. ಹರಟೆ ಹೊಡೆಯುವ ದೊಡ್ಡವರ ಸೋಗು ಒಂದು ರೀತಿಯದಾದರೆ, ಕಳ್ಳಾಟದ ಹುಡುಗರ ಸೋಗು ಒಂದು ರೀತಿಯದು. ಇದಕ್ಕೆಲ್ಲ ಪ್ರೇರಣೆ ನೀಡುವ ಚಂದ್ರನಂತೂ ಸೋಗಿನ ಪ್ರಮುಖ ಆಟಗಾರನಾಗಿದ್ದಾನೆ.

ಆಶ್ವೀನ ಮಾಸದಲ್ಲಿ ಬಿಳಿಯ ಮೋಡಗಳ ತುಣುಕುಗಳು ಅಲ್ಲಲ್ಲಿ ಸಾಗುತ್ತಿರುತ್ತವೆ. ಇವುಗಳ ನಡುವಿನ ಅಂತರದಲ್ಲಿ, ಸೀಗೆ ಹುಣ್ಣಿವೆಯ ಪೂರ್ಣಚಂದ್ರನು ಒಮ್ಮೆ ಪ್ರಕಾಶಿಸುವದು, ಒಮ್ಮೆ ಕಣ್ಮರೆಯಾಗುವದು ನಡೆದಿರುತ್ತದೆ. ಇದೇ ಚಂದ್ರನ ಕಣ್ಣುಮುಚ್ಚಾಲೆಯಾಟ ಅಂದರೆ ಸೋಗಿನಾಟ! ಬೇಂದ್ರೆಯವರ ಚಳಿಯಾಕೆಯೂ ಸಹ ಚಂದ್ರಮನ ಸೋಗಿನಾಟಕ್ಕೆ ತಕ್ಕ ಕಳ್ಳಹೆಜ್ಜೆ ಇಡುತ್ತ ಮೆಲ್ಲಮೆಲ್ಲನೆ ಎಲ್ಲವನ್ನೂ ಆವರಿಸುತ್ತಿದ್ದಾಳೆ. ಚಂದ್ರನನ್ನು ಹಾಗು ಚಳಿಯನ್ನು ಒಟ್ಟಾರೆಯಾಗಿ ನಿರೂಪಿಸುವ ವರಕವಿಯ ಕುಶಲತೆಯನ್ನು ಇಲ್ಲಿ ಕಾಣಬಹುದು. ಚಂದ್ರ, ಚಳಿಯಾಕೆ, ಪ್ರಕೃತಿ ಹಾಗು ಮಾನವರು ಇಲ್ಲಿ ಒಂದಾಗಿ ಬೆರತಿದ್ದಾರೆ.

ಪ್ರಕೃತಿಯ ಚೆಲುವನ್ನು ಆಸ್ವಾದಿಸುತ್ತ ಕುಳಿತ ಬೇಂದ್ರೆಯವರು, ಆ ಚೆಲುವನ್ನೆಲ್ಲ ತಮ್ಮ ಚಳಿಯಾಕೆಗೆ ತೊಡಿಸದೆ ಇರಲು ಸಾಧ್ಯವೆ? ವರಕವಿಯ ಕಣ್ಣಿಗೆ ಚಂದ್ರ ಹಾಗು ತಾರೆಗಳು ತಮ್ಮ ಚಳಿಯಾಕೆಯ ಆಭೂಷಣಗಳಾಗಿ ಕಾಣುತ್ತವೆ. ಅಂತಲೇ ಇವಳು ‘ಹೊನ್ನ ಸೇವಂತಿಗೆ’ ಹಾಗು  ‘ಹೆರಳು ಬಂಗಾರ’ ಎನ್ನುವ ಒಡವೆಗಳನ್ನು ಧರಿಸಿದ್ದಾಳೆ. ಹೆಣ್ಣುಮಕ್ಕಳು ಹೊನ್ನ ಸೇವಂತಿಗೆಯನ್ನು ತುರುಬಿನಲ್ಲಿ ಧರಿಸುತ್ತಾರೆ ಹಾಗು ಹೆರಳು ಬಂಗಾರವನ್ನು ಜಡೆಯಲ್ಲಿ ಸಿಕ್ಕಿಸಿಕೊಳ್ಳುತ್ತಾರೆ. ಈ ಚಳಿಯಾಕೆಗೆ ನಸುಹಳದಿ ಬಣ್ಣದ ದುಂಡು ಚಂದ್ರನೇ ಹೊನ್ನಸೇವಂತಿಗೆ ಹಾಗು ಅಲ್ಲಲ್ಲಿ ಮಿನುಗುತ್ತಿರುವ ಚಿಕ್ಕೆಗಳೇ ಹೆರಳುಬಂಗಾರ.  ಕೆಲವೊಮ್ಮೆ ಚಂದ್ರನ ಸುತ್ತಲೂ ಕಟ್ಟಬಹುದಾದ ‘ಕೆರೆ’ಯೇ ಇವಳ ಬೆಳ್ಳಿಸೇವಂತಿಗೆಯ ಕೈಬಳೆ!

ಇಷ್ಟಾದರೆ ಸಾಕೆ?
ಬೇಂದ್ರೆಯವರು ಚಳಿಯಾಕೆಯ ಕರ್ಣಾಭರಣಗಳ ಹಾಗು ಉಡುಗೆಯ ವರ್ಣನೆಯನ್ನು ಎರಡನೆಯ ನುಡಿಯಲ್ಲಿಯೂ ಮುಂದುವರೆಸುತ್ತಾರೆ. ಈ ರೀತಿಯಾಗಿ ಚಳಿಯ ಮಾನುಷೀಕರಣ ಮಾಡುತ್ತ, ಚಂದ್ರತಾರೆಗಳನ್ನು ಆಭರಣಗಳನ್ನಾಗಿ ಮಾಡುವದರಿಂದ, ಇವೆರಡನ್ನೂ ಒಟ್ಟಾಗಿ ವರ್ಣಿಸುವದು ಸುಲಭವಾಗುತ್ತದೆ. ಇದೊಂದು ಸಾಹಿತ್ಯಕೌಶಲ್ಯ.

ಮುಗಿಲಲ್ಲಾಡುವ
ಬಾವಿಲಿ ಮಲ್ಲಿಗೆ
ಕಿವಿಗೊಪ್ಪು ಓಲೆಕೊಪ್ಪು ಚಳತುಂಬ
ಹೊಳೆಹೊಂಡದುಸಿರನ್ನೆ
ನಯವಾಗಿ ನೆಯ್ದಂಥ
ಮಂಜಿನ ಮೇಲ್ಸೆರಗು ಮೈತುಂಬ.

ಬಿಳಿಯ ತುಂಡುಮೋಡಗಳು ಕೆಳಗೆ ಚಲಿಸುತ್ತಿದ್ದರೆ, ಚಂದ್ರ ಹಾಗು ಚಿಕ್ಕೆಗಳು ಆ ಮೋಡಗಳ ಮೇಲ್ಭಾಗದಲ್ಲಿ ಕಾಣಿಸುತ್ತವೆ. ಇದರಿಂದಾಗಿ ಆಕಾಶವು ತಲೆಕೆಳಗಾದ ‘ಬಾವಿ’ಯಂತೆ ಕಾಣುವದು! ಮೋಡಗಳ ಚಲನೆಯಿಂದಾಗಿ, ಈ ಬಾವಿ ಅಲ್ಲಾಡಿದಂತೆ ತೋರುವದು. ಈ ಅಲ್ಲಾಡುತ್ತಿರುವ ಬಾವಿಯಲ್ಲಿಯ ಮಲ್ಲಿಗೆ ಹೂವುಗಳನ್ನು ಅಂದರೆ ಚಿಕ್ಕಿಗಳನ್ನು ಧರಿಸಿದ್ದಾಳೆ ನಮ್ಮ ಚಳಿಯಾಕೆ! ಈ ಆಕಾಶಮಲ್ಲಿಗೆಗಳೆಲ್ಲ ಅವಳಿಗೆ ಓಲೆಕೊಪ್ಪು ಹಾಗು ಚಳತುಂಬ ಎನ್ನುವ ಕರ್ಣಭೂಷಣಗಳಾಗಿವೆ. ಇನ್ನು ಅವಳು ಮೈತುಂಬ ಹೊದ್ದುಕೊಂಡಂತಹ ಮೇಲ್ಸೆರಗು ಎಂತಹದು?

ತುಂಬಿತುಳುಕುತ್ತಿರುವ ಹೊಳೆ ಹಾಗು ಹೊಂಡಗಳ ನೀರು ಬಾಷ್ಪೀಭವನವಾಗುವದನ್ನು ಬೇಂದ್ರೆಯವರು ಹೊಳೆ,ಹೊಂಡಗಳ ‘ಉಸಿರು’ ಎಂದು ಬಣ್ಣಿಸುತ್ತಾರೆ. ಈ ‘ಉಸಿರ’ನ್ನೇ ನಯವಾಗಿ ನೇಯ್ದಾಗ ಅದು ಮಂಜಾಗುತ್ತದೆ. ಅದೇ ಚಳಿಯಾಕೆಯು ಹೊದ್ದುಕೊಂಡ ತೆಳ್ಳನೆಯ ಮೇಲ್ಸೆರಗು. ವಾಸ್ತವತೆಯನ್ನೇ ಚಮತ್ಕಾರದ ಕಲ್ಪನೆಯನ್ನಾಗಿ ಮಾರ್ಪಡಿಸುವ ಬೇಂದ್ರೆಪ್ರತಿಭೆಯ ಉದಾಹರಣೆ ಇದು!

ಇಲ್ಲಿ ಮತ್ತೊಂದು ಚಮತ್ಕಾರವನ್ನು ಗಮನಿಸಬೇಕು. ಚಳಿಯಾಕೆ ತೊಟ್ಟ ಆಭರಣಗಳು ಆಕಾಶದಲ್ಲಿದ್ದರೆ, ಅವಳು ಉಟ್ಟ ಉಡುಪು ಭೂಮಿಯ ಕೊಡುಗೆ. ಈ ರೀತಿಯಾಗಿ ಅವಳು ಭೂಮಿ ಹಾಗು ಆಕಾಶಗಳನ್ನು ವ್ಯಾಪಿಸಿದ್ದಾಳೆ.

ಮೂರನೆಯ ನುಡಿ ಹೀಗಿದೆ:

ಹೊಂಗಡಲು ಹೊಯ್ದಾಡಿ-
ದೊಲು ನೆಲ್ಲು ತಲೆದೂಗೆ,
ಅದರಲ್ಲಿ ಬಾ ಸುಮ್ಮನೀಸಾಡಿ.
ತೆನೆಹಾಲು ದಕ್ಕಲಿ
ಕಕ್ಕಿಸಬೇಡದನು
ನಿನ್ನ ನಂಜಿನ ಸೆರಗ ಬೀಸಾಡಿ.

ಇಂತಹ ಮಂಜಿನ ಉಡುಗೆಯನ್ನು ಉಟ್ಟ ಚಳಿಯಾಕೆ ಬಿರುಸಾಗಿ ಬಂದರೆ, ಭೂಮಿಯ ಮೇಲಿನ ಬದುಕು ಏನಾಗಬೇಡ?
ಭತ್ತದ ಪೈರು ಬೆಳೆದು ನಿಂತಿರುವ ಕಾಲವಿದು.  ಸಾಲುಸಾಲಾಗಿ ಹಬ್ಬಿರುವ ಇದರ ತೆನೆಗಳು, ಬೆಳದಿಂಗಳಿನಲ್ಲಿ ಬಂಗಾರದ ಕಡಲಿನ ತೆರೆಗಳಂತೆ ಶೋಭಿಸುತ್ತವೆ. ಕಡಲ ತೆರೆಗಳು ಹೊಯ್ದಾಡಿದಂತೆ ಇವು ಗಾಳಿಗೆ ತಲೆದೂಗುತ್ತಲಿವೆ! ಭತ್ತದ ಈ ಕಡಲಿನಲ್ಲಿ ಚಳಿಯಾಕೆ ತನ್ನ ನಂಜಿನ ಸೆರಗಾದ ಮಂಜನ್ನು ಬೀಸಾಡಿದರೆ, ತೆನೆಹಾಲೆಲ್ಲ ಕಕ್ಕಿ ಹೋದೀತು. ಆದುದರಿಂದ, ‘ಈ ಹೊಂಗಡಲಿನಲ್ಲಿ ಸಾವಕಾಶವಾಗಿ ಈಜಿದಂತೆ ಬಾ’, ಎಂದು ಬೇಂದ್ರೆಯವರು ಚಳಿಯಾಕೆಯನ್ನು ಪ್ರಾರ್ಥಿಸುತ್ತಾರೆ.
(ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.)
(ಈ ತೆನೆಹಾಲು ಭತ್ತದ ಬೆಳೆಯ ಶೈಶವಾವಸ್ಥೆಯ ಹಾಲು. ಹಾಲು ಕುಡಿಯುತ್ತಿರುವ ಕಂದಮ್ಮನ ಬಾಯಿಯಿಂದ ಕೆಲವೊಮ್ಮೆ ಹಾಲು ಹೊರಚೆಲ್ಲುವುದುಂಟು. ಆವಾಗ, ‘ಕೂಸು ಹಾಲನ್ನು ಕಕ್ಕಿತು’ ಎನ್ನುತ್ತಾರೆ. ಆದುದರಿಂದಲೇ ಬೇಂದ್ರೆಯವರು ‘ತೆನೆಹಾಲು ದಕ್ಕಲಿ, ಕಕ್ಕಿಸಬೇಡದನು’ ಎಂದು ಚಳಿಯಾಕೆಗೆ ಪ್ರಾರ್ಥಿಸುತ್ತಾರೆ.)

ನಾಲ್ಕನೆಯ ನುಡಿ:

ಕಣ್ಣಿಗೆ ಕಾಣದೆ
ಮೈಮುಟ್ಟಿ ತುಟಿಮುಟ್ಟಿ
ಮಿಸುಕದೆ ಮುಸುಕಿಗೆ ಹೋಗುವಾಕೆ.
ಅಡಿಗೊಮ್ಮೆ ನಡುನಡುಗಿ
ಇರುಳ ಬೆಳದಿಂಗಳಕೆ
ಬಿಳಿಮೋಡ ನಗುವಂತೆ ನಗುವಾಕೆ.

ಈ ಚಳಿಯಾಕೆ ಬಲು ಚಾಲಾಕಿ ಹೆಣ್ಣು! ನಿಮ್ಮ ಕಣ್ಣಿಗೆ ಬೀಳದೆಯೆ, ನಿಮ್ಮ ಮೈ ಮುಟ್ಟುತ್ತಾಳೆ. ಆಗ ನಿಮ್ಮ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮ ತುಟಿಗೆ ಅವಳು ಸೋಂಕಿದರೆ, ನಿಮ್ಮ ಬಾಯಿ ‘ಅಹಹ’ ಎಂದು ನಡುಗುವದು! ತಾನು ಸ್ವಲ್ಪವೂ ಮಿಸುಕದೆ, ನಿಮಗೆ ತಿಳಿಯಲಾರದಂತೆ ನೀವು ಹೊತ್ತುಕೊಂಡ ಹೊದ್ದಿಕೆಯಲ್ಲಿ ಈ ಅದೃಶ್ಯವನಿತೆ ಸೇರಿಕೊಳ್ಳುತ್ತಾಳೆ! ನೀವು ಚಳಿಯಾಯಿತೆಂದು ನಡುಗುತ್ತ, ಕಾಲು ಮಡಚಿಕೊಂಡು ಮುದ್ದೆಯಾಗುತ್ತೀರಿ. ಆಗ ಈ ಚಳಿಯಾಕೆ ನಗುತ್ತಾಳೆ. ಅವಳ ನಗುವು ಎಷ್ಟು ಚೆಲುವಾಗಿದೆ ಎನ್ನುತ್ತೀರಾ?  ಹುಣ್ಣಿವೆಯ ರಾತ್ರಿಯ ಬೆಳದಿಂಗಳನ್ನು ಹೀರಿಕೊಂಡು, ಅದನ್ನೇ ಎಲ್ಲೆಡೆ ಪ್ರತಿಫಲಿಸುವ ಬಿಳಿಮೋಡದ ನಗುವಿನಂತೆ ಈ ಚಳಿಯಾಕೆ ನಿಶ್ಶಬ್ದವಾಗಿ ನಗುತ್ತಾಳೆ. ಬೇಂದ್ರೆಯವರು ಎಂತಹ ರಮ್ಯ ಪ್ರಣಯಿನಿಯನ್ನು ಸೃಷ್ಟಿಸಿದ್ದಾರಲ್ಲವೆ!

ಐದನೆಯ ನುಡಿ:
ಉಸುರುಸಿರಿಗೆ ಮರುಕ
ಹೆಜ್ಜೆಹೆಜ್ಜೆಗೆ ಬೆಡಗು
ಮೆಲ್ಲಗೆ ಮುಂಗಯ್ಯ ಹಿಡಿವಾಕೆ.
ಯಾವ ಜಾತಿಯ ಹೆಣ್ಣೊ
ಹಾವ ಭಾವವೆ ಬೇರೆ
ಅಪ್ಪಿದ ಅಪ್ಪಿಗೆ ಬಿಡದಾಕೆ.

ಚಳಿಯಿಂದ ನಡುಗುತ್ತಿರುವ ನೀವು ಕ್ಷಿಪ್ರವಾಗಿ ಉಸಿರಾಡಿಸುವಾಗ, ಚಳಿಯಾಕೆ ನಿಮ್ಮ ಮೇಲೆ ಮರುಕ ತೋರಿ ಒಂದು ಕ್ಷಣ ಹಿಂದೆಗೆಯುತ್ತಾಳೆ. ಮರು ಉಸಿರಿನಲ್ಲಿ ಮತ್ತೆ ನಿಮ್ಮ ಬಳಿ ಸಾರಿರುತ್ತಾಳೆ. ಈ ರೀತಿಯಾಗಿ ಹಿಂದೆ ಮುಂದೆ ಹೆಜ್ಜೆ ಇಡುತ್ತ ತನ್ನ ಬೆಡಗನ್ನು ತೋರಿಸುತ್ತಲೇ, ನಿಮಗೆ ಅರಿವಾಗದಂತಲೇ, ನಿಮ್ಮ ಮುಂಗೈಯನ್ನು ಹಿಡಿದುಕೊಳ್ಳುತ್ತಾಳೆ. ಇನ್ನು ಇವಳಿಂದ ಬಿಡುಗಡೆಯನ್ನು ಪಡೆಯುವದು ಸಾಧ್ಯವಿಲ್ಲ! ಬೇಂದ್ರೆಯವರು ಈ ಸತ್ಯವನ್ನು ಈಗ ಒಪ್ಪಿಕೊಂಡು ಬಿಟ್ಟರು. ಆದುದರಿಂದ ಇವಳು ತೋರಿಸಿದ ಹಾವಭಾವಗಳಿಂದ ಚಕಿತರಾದ ಅವರು ಇವಳು ಯಾವ ಜಾತಿಯ ಹೆಣ್ಣೊ ಎಂದು ಉದ್ಗಾರ ತೆಗೆಯುತ್ತಾರೆ. ಪ್ರಣಯಕಾಮಿನಿಯರಲ್ಲಿ ‘ಪದ್ಮಿನಿ,ಚಿತ್ತಿನಿ,ಹಸ್ತಿನಿ’ ಮೊದಲಾದ ಜಾತಿಗಳಿವೆ ಎಂದು ನಮ್ಮ ಶಾಸ್ತ್ರಕಾರರು ಹೇಳಿದ್ದಾರೆ. ತನ್ನನ್ನು ಬಿಡದಂತೆ ಬಿಗಿದಪ್ಪಿಕೊಂಡ ಈ ಚಳಿಯಾಕೆ ಯಾವ ಪ್ರಕಾರಕ್ಕೆ ಸೇರಿದವಳು ಎನ್ನುವದು ಬೇಂದ್ರೆಯವರನ್ನು ಅಚ್ಚರಿಗೀಡು ಮಾಡಿದೆ!
...................................................................................

‘ಚಳಿಯಾಕೆ’ ಕವನದಲ್ಲಿ ಬೇಂದ್ರೆಯವರು ಅನೇಕ ಉಪಮೆಗಳನ್ನು ಬಳಸಿಕೊಂಡಿದ್ದಾರೆ. ಕವನದ ಪ್ರತಿಯೊಂದು ನುಡಿಯಲ್ಲಿಯೂ ಮೈ ಜುಮ್ಮೆನ್ನುವ ಉಪಮೆಗಳಿವೆ.  ಉಪಮಾನಗಳಿಗೂ ವಿಶೇಷಣಗಳನ್ನು ಜೋಡಿಸಿದ್ದು ಇಲ್ಲಿಯ ವೈಶಿಷ್ಟ್ಯ. ಹೀಗಾಗಿ ಇಲ್ಲಿಯ ಚಂದ್ರ ‘ಸೋಗಿನ ಚಂದ್ರಮ’. ಇಲ್ಲಿಯ ಮುಗಿಲು ‘ಅಲ್ಲಾಡುವ’ ಬಾವಿ. ಭತ್ತದ ತೆನೆಗಳ ಹೊಯ್ದಾಟವು ಇಲ್ಲಿ ಹೊನ್ನ ಕಡಲಿನ ತೆರೆಗಳಂತೆ ತೋರುತ್ತವೆ. ಚಳಿಯಾಕೆಯ ನಗುವೂ ಸಹ ಬೆಳದಿಂಗಳನ್ನು ಹೀರಿಕೊಂಡ ಬಿಳಿಮೋಡದ ನಗುವಿನಂತೆ ಕಾಣುತ್ತದೆ. ಪ್ರಕೃತಿಯಲ್ಲಿಯ ವಾಸ್ತವ ವಸ್ತುಗಳನ್ನು (ಚಂದ್ರ, ಚಿಕ್ಕೆಗಳು, ಹೊಳೆ ಹೊಂಡ ಇ.) ಅನುಭವಕ್ಕೆ ಮಾತ್ರ ಸಿಗುವ ವಸ್ತುವಾದ ಚಳಿಯ ಜೊತೆಗೆ ಜೋಡಿಸುತ್ತ ಬೇಂದ್ರೆಯವರು ಒಂದು ಮಾಯಾಸೃಷ್ಟಿಯ ನಿರ್ಮಾಣವನ್ನೇ ಮಾಡಿದ್ದಾರೆ. ಪ್ರಕೃತಿಯಲ್ಲಿ ಸಮರಸವಾಗುವ ಸುಖವನ್ನು ಈ ಕವನದ ಮೂಲಕ ತೋರಿಸಿದ್ದಾರೆ.

ಆಂಗ್ಲ ಕವಿ ಶೆಲ್ಲಿಯ ಕವನವೊಂದರಲ್ಲಿ ಬೆಳದಿಂಗಳಿನಲ್ಲಿ ಹಾಡು ಕೇಳುತ್ತಿರುವ ಸುಖವೊಂದು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಆ ಕವನದ ಕೊನೆಯ ನುಡಿ ಹೀಗಿದೆ:
Sing again, with your dear voice 
Revealing a tone
Of some world far from ours
Where music and moonlight and feeling are one.

ಇದು ಒಂದು Etheric feeling ಅನ್ನು ಹೇಳುತ್ತದೆ.
ಚಳಿಯಾಕೆ ಕವನವು ‘ಗರಿ’ ಸಂಕಲನದಲ್ಲಿ ಅಡಕವಾಗಿದೆ.