Sunday, February 12, 2012

ಬೇಂದ್ರೆಯವರ ‘ಫಜಾರಗಟ್ಟಿ ಮುಟ್ಟೋಣು ಬಾ’


ಫಜಾರಗಟ್ಟೀ ಮುಟ್ಟೋಣು ಬಾ
            ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                       ||ಪಲ್ಲ||

ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
            ಅದs ನಿಜದ ನೆಲ ಮುಟ್ಟೋಣು ಬಾ          ||೧||

ಅಂಗಲಿಂಗದ ಜೋಡಿ ಕೂಡಿ ಹೊಸ
            ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
            ಜನಾ ಕಂಡು ಅದ ಕೂಡೋಣು ಬಾ            ||೨||

ಪುಂಡರೀಕ ನಾ, ಮಹಾಶ್ವೇತೆ ನೀ
            ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
            ಹಚ್ಚೀದ ಬಳ್ಳಿಗೆ ಹಣಿಸೋಣ ಬಾ            ||೩||

ಗುರುವಿನಂಗಳದ ಗಿಡಾ ಬಳ್ಳಿಯಾಗಿ
            ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
            ಬೆಂದವರ ಜೀವ ಬೆರಸೋಣ ಬಾ              ||೪||

..................................................................................
ಫಜಾರಗಟ್ಟೀ ಮುಟ್ಟೋಣು ಬಾ
          ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                  
ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಹಾಗು ಸನ್ಯಾಸ ಇವು ಸನಾತನ ಭಾರತೀಯ ಸಂಸ್ಕೃತಿಯು ವಿಧಿಸುವ ನಾಲ್ಕು ಆಶ್ರಮಗಳು. ಧರ್ಮ, ಅರ್ಥ, ಕಾಮ ಹಾಗು ಮೋಕ್ಷ ಇವು ಜೀವನದ ನಾಲ್ಕು ಪುರುಷಾರ್ಥಗಳು. ಇವುಗಳಲ್ಲಿ ಮೊದಲ ಮೂರು ಪುರುಷಾರ್ಥಗಳನ್ನು ಅಂದರೆ ಧರ್ಮ, ಅರ್ಥ ಹಾಗು ಕಾಮ ಇವುಗಳನ್ನು ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕು. ಈ ಪುರುಷಾರ್ಥಗಳು ವೈಯಕ್ತಿಕ ಸಿದ್ಧಿಗಷ್ಟೇ ಅಲ್ಲ, ಸಮಾಜದ ರಕ್ಷಣೆಗಾಗಿಯೂ ಅವಶ್ಯವಾಗಿವೆ. ಆದುದರಿಂದ  ಇವು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆಯೂ ಆಗಿವೆ. ಸನಾತನ ಧರ್ಮದ ಮೇರೆಗೆ ವಿವಾಹವು ಗಂಡು ಹಾಗು ಹೆಣ್ಣಿನ ನಡುವಿನ ಒಪ್ಪಂದವಾಗಿರದೆ, ಒಂದು ಧಾರ್ಮಿಕ ವಿಧಿಯಾಗಿದೆ. ನಾಲ್ಕನೆಯ ಪುರುಷಾರ್ಥವಾದ ಮೋಕ್ಷವನ್ನು ಸಾಧಿಸಲು ಸನ್ಯಾಸವನ್ನು ಸ್ವೀಕರಿಸುವದು ಪ್ರಶಸ್ತವಾದ ಕ್ರಮವಾಗಿದೆ.

ಬೇಂದ್ರೆಯವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಬಳಿಕ, ಬದುಕಿನಲ್ಲಿ ಸುಖವನ್ನು, ದುಃಖವನ್ನು ಹಾಗು ಅನೇಕ ಸಂಕಟಗಳನ್ನು ಅನುಭಸಿದರು. ಅಂತಹದರಲ್ಲಿಯೇ ಈ ದಂಪತಿಗಳು ಧರ್ಮಸಾಧನೆಯನ್ನು  ಮಾಡಿದರು. ದೈವ ಕೊಟ್ಟಷ್ಟು ಅರ್ಥಸಾಧನೆಯನ್ನು ಮಾಡಿದರು. ಕಾಮ ಅಂದರೆ ಸಂತಾನಕಾಮ. ಜೀವನದ ಮುಂದುವರಿಕೆಗಾಗಿ ಸೃಷ್ಟಿನಿಯಮದಂತೆ ಸಂತಾನವನ್ನೂ ಪಡೆದರು. ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕಾದ ಮೂರೂ ಪುರುಷಾರ್ಥಗಳನ್ನು ಈ ರೀತಿಯಾಗಿ ಸಾಧಿಸಿದರು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಗಂಡನಾಗಲೀ, ಹೆಂಡತಿಯಾಗಲೀ ವೈಯಕ್ತಿಕವಾಗಿ ಸಾಧಿಸಬೇಕಾಗುತ್ತದೆ. ಆದರೂ ಸಹ ಈ ಸಾಧನಾಮಾರ್ಗದಲ್ಲಿ ಅವರು ಪರಸ್ಪರ ನೆರವು ನೀಡುತ್ತ ಜತೆಯಾಗಿ ನಡೆಯಬಹುದು.

ಕಣ್ಣು ಮುಚ್ಚಾಟದಲ್ಲಿ ಫಜಾರಗಟ್ಟಿಯನ್ನು ಮುಟ್ಟಿದವರು ಪಾರಾದಂತೆ. ಅದರಂತೆ ಜೀವನದಲ್ಲಿ ಧರ್ಮ,ಅರ್ಥ ಹಾಗು ಕಾಮವೆನ್ನುವ ಪುರುಷಾರ್ಥಗಳನ್ನು ಸಾಧಿಸಿದವರು ಜೀವನದ ಫಜಾರಗಟ್ಟಿಯನ್ನು ಮುಟ್ಟಿದಂತೆ. ಬೇಂದ್ರೆಯವರು ತಮ್ಮ ಹೆಂಡತಿಗೆ ಫಜಾರಗಟ್ಟಿಯನ್ನು ಮುಟ್ಟಲು ಕರೆಯುತ್ತಿದ್ದಾರೆ. ಅಂದರೆ ಗೃಹಸ್ಥಾಶ್ರಮದ ಮೂರು ಪುರುಷಾರ್ಥಗಳನ್ನು ತಾವಿಬ್ಬರೂ ಜೊತೆಯಾಗಿ ಸಾಧಿಸಿದ್ದೇವೆ, ಇನ್ನು ಇದಕ್ಕೆ ಕೊನೆ ಹೇಳಿ ಮುಂದಿನ ಆಟವನ್ನು ಆಡೋಣ ಬಾ ಎಂದು ಸೂಚಿಸುತ್ತಿದ್ದಾರೆ. ‘ಮುಂದಿನ ಆಟ’ವೆಂದರೆ ಏನು? ಕಣ್ಣುಮುಚ್ಚಾಟದಲ್ಲಿ ತಾಯಿಯು ಮಕ್ಕಳ ಕಣ್ಣು ಕಟ್ಟಿ ಆಟಕ್ಕೆ ಬಿಡುವಂತೆ, ಮಾಯೆಯು ಜೀವಿಗಳ ಕಣ್ಣು ಕಟ್ಟಿ ಸಂಸಾರಕ್ಕೆ ಕಳಿಸುತ್ತಾಳೆ. ಒಂದು ಆಟವನ್ನು ಮುಗಿಸಿದ ಬಳಿಕ, ಮುಂದಿನ ಆಟವನ್ನು ಆಡಬೇಕು. ಇದು ಮುಂದಿನ ಜನ್ಮದ ಆಟವಾಗಬಹುದು ಅಥವಾ ಇದೇ ಜನ್ಮದಲ್ಲಿ, ನಾಲ್ಕನೆಯ ಪುರುಷಾರ್ಥವಾದ ಮೋಕ್ಷಕ್ಕೆ ಕರೆದೊಯ್ಯುವ ದೈವಸಾಧನೆಯ ಆಟವಾಗಬಹುದು.

ದೈವಸಾಧನೆಗಾಗಿ ತಾವು ತುಳಿಯುತ್ತಿರುವ ಪಥವು ಸರಿಯಾದದ್ದು ಎನ್ನುವದನ್ನು ತಿಳಿಯುವದು ಹೇಗೆ? ಹೃದಯಕ್ಕೆ ಇದರ ಅರಿವು ತಾನಾಗಿಯೇ ಆಗುವದು. ಅದಕ್ಕೆಂದೇ ಬೇಂದ್ರೆಯವರು ಹೇಳುತ್ತಾರೆ:
ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
          ಅದs ನಿಜದ ನೆಲ ಮುಟ್ಟೋಣು ಬಾ      ||
ಇದೇ ತಮ್ಮ ಸರಿಯಾದ ಪಥ, ಇದೇ ತಾವು ತಲುಪಬೇಕಾದ ತಾಣ ಎಂದು ಹೃದಯವು ಹೇಳುತ್ತಿದೆ. ಆದುದರಿಂದ ನಾವು ಈ ಸ್ಥಾನದಲ್ಲಿ ನಮ್ಮ ಮನೆಯನ್ನು ಕಟ್ಟೋಣ; ಇದೇ ತಮ್ಮ ನೆಲೆಯಾಗಿದೆ, ಹೊಸ ಬಾಳನ್ನು ಇಲ್ಲಿ ಪ್ರಾರಂಭಿಸೋಣ ಎಂದು ಬೇಂದ್ರೆಯವರು ತಮ್ಮ ಸಖಿಗೆ ಹೇಳುತ್ತಿದ್ದಾರೆ.

ನೆಲದ ಮೇಲಿನ ನೆಲೆ ಅಂದರೆ ಐಹಿಕ ಲೋಕದ ನೆಲೆ. ಇಲ್ಲಿ ಐಹಿಕ ಆಸೆಗಳು ಹಾಗು ವಿಕಾರಗಳು ಇರುತ್ತವೆ. ಹೊಸ ಸ್ಥಾನವು ವಿಕಾರಮುಕ್ತವಾದ ನೆಲೆಯಾಗಿದೆ. ಈ ಸೂಚನೆಯನ್ನು ‘ಸಂಗಿ’ ಎಂದು ಕರೆಯುವದರ ಮೂಲಕ ಬೇಂದ್ರೆಯವರು ಸೂಚಿಸುತ್ತಾರೆ. ಸಂಗಿ ಎಂದರೆ ಗೆಳತಿ. ಹೆಂಡತಿಯು ಗೆಳತಿಯೇ ಹೌದು. ಆದರೆ ಅವಳು ‘ನಿಸ್ಸಂಗ’ದ ಅಂದರೆ ವಿಕಾರಮುಕ್ತವಾದ ಸತ್ಸಂಗದ ಗೆಳತಿಯಾಗಿದ್ದಾಳೆ. ಇಂತಹ ಗೆಳತಿಗೆ ಬೇಂದ್ರೆಯವರು ‘ಅದು ಅದs’ ಎಂದು ತೋರಿಸುತ್ತಿದ್ದಾರೆ. ‘ಅದು ಅದs’ ಎಂದರೆ ‘ಭಗವಚ್ಚೈತನ್ಯವು ಇದೆ’ ಎನ್ನುವ ಶ್ರದ್ಧೆ. ಅದೇ ನಿಜದ ನೆಲ, ನೆಲೆ. ಇಲ್ಲಿಯವರೆಗಿನ ಆಟವೆಲ್ಲ ಮಿಥ್ಯೆಯ ನೆಲದ ಮೆಲಿನ ಆಟ. ಸತ್ ಎಂದರೆ ನಿಜ, ಅಸತ್ ಎಂದರೆ ಮಿಥ್ಯೆ. ಮಿಥ್ಯೆಯ ಲೋಕದ ಆಟವನ್ನು ಮುಗಿಸಿ, ಈಗ ಸತ್‍ಲೋಕವನ್ನು ಮುಟ್ಟೋಣ ಎಂದು ಬೇಂದ್ರೆಯವರು ತಮ್ಮ ಸಖಿಯನ್ನು ಕರೆಯುತ್ತಿದ್ದಾರೆ.

ಅಂಗಲಿಂಗದ ಜೋಡಿ ಕೂಡಿ ಹೊಸ
          ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
          ಜನಾ ಕಂಡು ಅದ ಕೂಡೋಣು ಬಾ  ||   
ಬೇಂದ್ರೆಯವರು ವಿವಿಧ ಭಾರತೀಯ ದರ್ಶನಗಳನ್ನು ಅರಗಿಸಿಕೊಂಡಿದ್ದು, ಅದು ಅವರ ಕವನಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ‘ಅಂಗಲಿಂಗದ ಜೋಡಿ ಕೂಡಿ.....’ ಎಂದು ಹೇಳುವಾಗ ವೀರಶೈವ ದರ್ಶನದ ‘ಲಿಂಗಾಂಗ ಸಾಮರಸ್ಯ’ವನ್ನು ಅವರು ಸೂಚಿಸುತ್ತಿದ್ದಾರೆ.
     
ಇಲ್ಲಿಯವರೆಗಿನ ಬದುಕಿನಲ್ಲಿ ಈ ದಂಪತಿಗಳು ಧರ್ಮ, ಅರ್ಥ ಹಾಗು ಸಂತಾನಕಾಮದ ಸಾಧನೆಯನ್ನು ಗೈದರು. ಇದೀಗ ಮೋಕ್ಷಾರ್ಥಕ್ಕಾಗಿ ದೈವಸಾಧನೆಯನ್ನು ಮಾಡಬೇಕಾಗಿದೆ. ಇದರ ಸಿದ್ಧಿ ವೈಯಕ್ತಿಕವೇ ಆದರೂ ಸಹ, ಸಾಧನೆಯು ವೈಯಕ್ತಿಕವಾಗಿರಬೇಕಿಲ್ಲ. ವೀರಶೈವ ಕ್ರಮವಂತೂ ‘ಸತಿಪತಿಗಳಲಿ ಒಂದಾದ ಭಕ್ತಿ ಶಿವನಿಗೆ ಪ್ರಿಯ’ ಎಂದೇ ಹೇಳುತ್ತದೆ. ಆದುದರಿಂದ ಲಿಂಗಾಂಗ ಸಾಮರಸ್ಯದ ಭಕ್ತಿಪಥವನ್ನು ‘ಜೋಡಿ ಕೂಡಿ’ ಅಂದರೆ ಜೊತೆಯಾಗಿ ಕ್ರಮಿಸೋಣ ಎಂದು ಬೇಂದ್ರೆ ಹೇಳುತ್ತಿದ್ದಾರೆ.

ಬೇಂದ್ರೆಯವರ ಕಾವ್ಯದಲ್ಲಿ ‘ಗಿಣಿ’ ಎನ್ನುವ ಪ್ರತಿಮೆಯು ಸಖ್ಯದ ಹಾಗು ಆಪ್ತತೆಯ ಪ್ರತೀಕವಾಗಿದೆ. ಇಲ್ಲಿಯವರೆಗಿನ ತಮ್ಮ ದಾಂಪತ್ಯದಲ್ಲಿ ರೂಢಿಸಿಕೊಂಡಿದ್ದ ಪರಸ್ಪರ ಸಮೀಕರಣವನ್ನು  ತ್ಯಜಿಸಿ, ಹೊಸ ಸಮೀಕರಣವನ್ನು ರೂಪಿಸಿಕೊಳ್ಳೋಣ; ಇದು ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎನ್ನುವ ವಿಷಮ ಸಮೀಕರಣವಲ್ಲ; ಇದು ಸಮಾನತೆಯ ಸಮೀಕರಣ;  ಇದು  ಇಹಲೋಕದ  ಕೆಳೆತನವನ್ನು ಮೀರಿದ ಹೊಸ ಕೆಳೆತನ ಎಂದು ಹೇಳಲು ಬೇಂದ್ರೆಯವರು ‘ಹೊಸ ಗಿಣೀ-ಗೆಣೆತನ’ ಎನ್ನುವ ಪ್ರತೀಕವನ್ನು ಬಳಸಿದ್ದಾರೆ. ಈ ಹೊಸ ಸಾಂಗತ್ಯದ ವಿಹಾರಕ್ಕಾಗಿ ಲಭಿಸುವ ಉಪವನ ಯಾವುದು? ಮನವೆಂಬದೇ ಆ ಹೊಸ ಬನಾ! ಮನಸ್ಸಿನ ಸಾಧ್ಯತೆಗಳು ಅಗಾಧವಾಗಿವೆ. ಮನವನ್ನು ಸರಿಯಾಗಿ ರೂಢಿಸಬೇಕು. ಕಳೆ, ಕಲ್ಮಶಗಳನ್ನು ಕಿತ್ತು ಹಾಕಿ, ಸುಗಂಧ ಬೀರುವ ಹೂಬಳ್ಳಿಗಳನ್ನು ಬೆಳೆಸಬೇಕು. ಆವಾಗ ಅದು ಆಹ್ಲಾದಕರವಾದ ಉಪವನದಂತೆ ಶೋಭಿಸುವದು.

ಇದೆಲ್ಲವೂ ಒಂದೇ ಜನ್ಮದಲ್ಲಿ ಸಾಧ್ಯವಾಗಬಹುದಾದ ಸಿದ್ಧಿಯೆ? ಬೇಂದ್ರೆಯವರು ವಿವಾಹಜೀವನವನ್ನು ದಾಂಪತ್ಯಯೋಗ ಎಂದು ಕರೆಯುತ್ತಾರೆ. ಅನೇಕ ಜನ್ಮಗಳಿಂದಲೂ ದಂಪತಿಗಳು ಜೊತೆಯಾಗಿ ಸಾಧನಾಪಥವನ್ನು ಕ್ರಮಿಸುತ್ತಿರುತ್ತಾರೆ ಎನ್ನುವದು ಬೇಂದ್ರೆಯವರ ನಂಬುಗೆ.
ಪುಂಡರೀಕ ನಾ, ಮಹಾಶ್ವೇತೆ ನೀ
          ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
          ಹಚ್ಚೀದ ಬಳ್ಳಿಗೆ ಹಣಿಸೋಣ ಬಾ  ||         
ಭಾರತೀಯ ಸಾಹಿತ್ಯದಲ್ಲಿ ಪುಂಡರೀಕ ಹಾಗು ಮಹಾಶ್ವೇತಾ ಇವರು ಚಿರಪ್ರಣಯಿಗಳು. ತಪಸ್ಸಿನಿಂದ ಒಬ್ಬರನ್ನೊಬ್ಬರು ಪಡೆದುಕೊಂಡವರು. ಜನ್ಮಜನ್ಮಾಂತರದ ಸಂಬಂಧ ಇವರದು. (ಕವಿ ಬಾಣನು ಏಳನೆಯ ಶತಮಾನದ ಸಂಸ್ಕೃತ ಕವಿ. ಇವನು ಬರೆದ ‘ಕಾದಂಬರಿ’ಯಲ್ಲಿ ಪುಂಡರೀಕ ಹಾಗು ಮಹಾಶ್ವೇತೆ ಇವರಿಗೆ ಸಮಾಂತರವಾಗಿ ಚಂದ್ರಾಪೀಡ ಹಾಗು ಕಾದಂಬರಿ ಇವರ ಜನ್ಮಾಂತರದ ಪ್ರಣಯಕಥೆಯೂ ಇದೆ.) ತಾವು ಆ ಕಲ್ಪನಾವಿಲಾಸದ, ಆ ಕಾಲಾಂತರದ ಪ್ರಣಯಿಗಳೇ ಇರಬಹುದೆ? ಈ ಮಾತು ಜಗದ ಎಲ್ಲ ದಂಪತಿಗಳಿಗೂ ಅನ್ವಯಿಸುತ್ತದೆ. ಯಾವ ದಾಂಪತ್ಯವೂ ಆಕಸ್ಮಿಕವಲ್ಲ. ಎಲ್ಲ ದಂಪತಿಗಳದೂ ಜನ್ಮಜನ್ಮಾಂತರದ ಸಖ್ಯ ಎಂದು ಬೇಂದ್ರೆ ನಂಬುತ್ತಾರೆ. ದಂಪತಿಗಳು ಈ ಚಿರಕಾಲದ ಸಖ್ಯವನ್ನು ನೆನಸಬೇಕು. ಆ ನೆನಕೆಯಿಂದ ಅರಿವು ಮೂಡುವುದು. ಆ ಅರಿವಿನಿಂದ ದೈವಯೋಗದ ಪಥದಲ್ಲಿ ನಡೆಯಲು ಸಾಧ್ಯವಾಗುವುದು. ಇಷ್ಟೆಲ್ಲ ಅರ್ಥವನ್ನು ಬೇಂದ್ರೆಯವರು ‘ಪುಂಡರೀಕ ನಾ, ಮಹಾಶ್ವೇತೆ ನೀ ಆಧ್ಹಾಂಗಿತ್ತು ಅದ ನೆನಸೋಣ ಬಾ’ ಎನ್ನುವ ಎರಡು ಸರಳ ಸಾಲುಗಳ ಮೂಲಕ ಸೂಚಿಸುತ್ತಾರೆ!

ತುಂಬುರನು ದೇವಲೋಕದ ಗಾಯಕ; ರಂಭೆ ಸ್ವರ್ಗದ ನರ್ತಕಿ. ತುಂಬುರನು ರಂಭೆಯ ಗುರು ಹಾಗು ಪ್ರಣಯಿ. ಈ ದೇವಪ್ರಣಯಿಗಳು ಹಚ್ಚಿದ ಬಳ್ಳಿ ಯಾವುದು? ಪ್ರೇಮ ಹಾಗು ಭಕ್ತಿಯೇ ಆ ಬಳ್ಳಿಯಾಗಿದೆ. ಅಮರಲೋಕದಲ್ಲಿ ಹಚ್ಚಿದ ಆ ಬಳ್ಳಿಯನ್ನು, ತಾವು ಇಹಲೋಕದಲ್ಲಿ, ಜನ್ಮಾಂತರಗಳಲ್ಲಿ ಪೋಷಿಸುತ್ತ ಬಂದಿರುವದಾಗಿ ಬೇಂದ್ರೆ ಹೇಳುತ್ತಾರೆ.

ಇಂತಹ ದಾಂಪತ್ಯಯೋಗದ ಕೊನೆಯ ಮೆಟ್ಟಿಲು ಯಾವುದು? ಯಾವ ಭಾವವನ್ನು ತಾವು ಪೋಷಿಸುತ್ತ ಬಂದಿರುವೆಯೋ, ತಾವೇ ಆ ಭಾವವಾಗಿ ಮಾರ್ಪಾಡಾಗುವ ಸ್ಥಿತಿ. ಪ್ರೇಮ ಹಾಗು ಭಕ್ತಿಯ ಬಳ್ಳಿಯನ್ನು ಪೋಷಿಸುತ್ತ ಬಂದಿರುವ ತಾವೇ ಆ ಬಳ್ಳಿಯಾಗಬೇಕು. ಇದು ಸ್ಥಿತ್ಯಂತರದ ಕೊನೆಯ ಹಂತ. ಈ ಹಂತದ ಸಿದ್ಧಿಗಾಗಿ ಬೇಂದ್ರೆ ತಮ್ಮ ಸಖಿಗೆ ಕರೆಯನ್ನು ನೀಡುತ್ತಿದ್ದಾರೆ:
ಗುರುವಿನಂಗಳದ ಗಿಡಾ ಬಳ್ಳಿಯಾಗಿ
          ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
          ಬೆಂದವರ ಜೀವ ಬೆರಸೋಣ ಬಾ ||    
ಈ ಭಕ್ತಿಲತೆಯು ಗುರುವಿನಂಗಳದಲ್ಲಿ ಮಾತ್ರ ಬೆಳೆಯುವ ಬಳ್ಳಿ. ಈವರೆಗಿನ ಜನ್ಮಾಂತರಗಳಲ್ಲಿ ಇವರ ದಾಂಪತ್ಯದ ಬಳ್ಳಿಯು ಸುರಿಸಿದ ಹೂವುಗಳು ಸಂಸಾರದ ಹೂವುಗಳು. ಇನ್ನು ಮುಂದೆ ಈ ಬಳ್ಳಿಯು ಹೊಸ ಹೂವುಗಳನ್ನು ಅಂದರೆ ಭಕ್ತಿ ಮತ್ತು ಪ್ರೇಮದ ಹೂವುಗಳನ್ನು ಸುರಿಸಬೇಕು ಎನ್ನುವದು ಬೇಂದ್ರೆಯವರ ಅಭೀಪ್ಸೆ. ಈ ದಾಂಪತ್ಯಸಖ್ಯದಲ್ಲಿ ಇವರಿಗೆ ಉಳಿದಿರುವ ಕಾರ್ಯ ಏನು? ಭಕ್ತಿಯ ಹೂವನ್ನು ದೇವಮಾತೆಯ ಪಾದಕ್ಕೆ ಅರ್ಪಿಸಿ, ಆ ಚರಣಭಕ್ತಿಯಿಂದ ಸಿಗುವ ಆನಂದವನ್ನು, ಪರಿಮಳವನ್ನು ಪಡೆಯುವುದು ಹಾಗು ನೊಂದ ಜೀವಿಗಳ ಜೊತೆ ಒಂದಾಗಿ ಅವರಿಗೆ ಸಾಂತ್ವನ ನೀಡುವದು ಇನ್ನು ಉಳಿದಿರುವ ಕಾರ್ಯ. ಪುರುಷಾರ್ಥಗಳನ್ನೆಲ್ಲ ಸಾಧಿಸಿದ ಬಳಿಕ, ಬದುಕಿರುವವರೆಗೆ ‘ಪರೋಪಕಾರಾರ್ಥಮಿದಂ ಜೀವನಮ್’ ಎನ್ನುವದೊಂದೇ ಉಳಿದಿರುವ ಧ್ಯೇಯ.

ಸಂಸಾರಕಾಮವು ಪ್ರೇಮವಾಗಿ ಹಾಗು ಭಕ್ತಿಯಾಗಿ ಅರಳಬೇಕು ಎನ್ನುವದು ಬೇಂದ್ರೆಯವರ ಕಾಣ್ಕೆಯಾಗಿದೆ. ಇದು ಪರಮ ಪುರುಷಾರ್ಥವನ್ನು ತಲುಪಿಸುವ ಜನ್ಮಜನ್ಮಾಂತರದ ದಾಂಪತ್ಯಯೋಗವಾಗಿದೆ. ಗಾಢವಾದ ತತ್ವವನ್ನು ಸರಳಗನ್ನಡದ ಆಡುನುಡಿಯಲ್ಲಿ ಹೇಳುವ ಬೇಂದ್ರೆಯವರ ಪ್ರತಿಭೆಗೆ ಈ ಕವನವು ಉತ್ತಮ ನಿದರ್ಶನವಾಗಿದೆ. 

‘ಗಂಗಾವತರಣ’ ಕವನಸಂಕಲನದಲ್ಲಿ ಈ ಕವನವು ಅಡಕವಾಗಿದೆ. 

Tuesday, February 7, 2012

ಕನ್ನಡಮ್ಮನ ಖಟ್ಲೆ

ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಹಾಗು ಇತರ ಕೆಲವು ರಾಜಕಾರಣಿಗಳಿಗೆ ನಾನು ಋಣಿಯಾಗಿರಬೇಕು. ಇವರಿಂದಾಗಿ ನಾನು ಕರ್ನಾಟಕದ ಉಚ್ಚ ನ್ಯಾಯಾಲಯ  ಹಾಗು  ನ್ಯಾಯಾಲಯ ಸಮುಚ್ಚಯವನ್ನು (ಟೀವಿಯಲ್ಲಿ) ವೀಕ್ಷಿಸುವ ಅವಕಾಶವನ್ನು ಪಡೆದೆ. ಟೀವಿ ಚಾನೆಲ್ಲುಗಳು ವೀಕ್ಷಕರ ಅನುಕೂಲಕ್ಕಾಗಿ ಈ ನ್ಯಾಯಾಲಯಗಳ ಫಲಕಗಳ ಮೇಲಿನ ಬರಹವನ್ನು ಪ್ರದರ್ಶಿಸುತ್ತಿವೆ. ಈ ಬರಹಗಳನ್ನು ನೋಡಿದ ಬಳಿಕ, ಇವುಗಳನ್ನು ಬರೆಯಿಸಿದ ಜಾಣರು ಕನ್ನಡಮ್ಮನ ಆಗರ್ಭ ಶತ್ರುಗಳಾಗಿರಬಹುದೇನೊ ಎನ್ನುವ ಭಯಂಕರ ಸಂಶಯ ನನ್ನನ್ನು ಕಾಡತೊಡಗಿತು!

ಉಚ್ಚ ನ್ಯಾಯಾಲಯ’ವನ್ನು ‘ಉಚ್ಛ ನ್ಯಾಯಾಲಯ’ವೆಂದು ಹಾಗು ‘ನ್ಯಾಯಾಲಯ ಸಮುಚ್ಚಯ’ವನ್ನು ‘ನ್ಯಾಯಾಲಯ ಸಮುಚ್ಛಯ’ ವೆಂದು ಬರೆದದ್ದನ್ನು ಓದುವಾಗ, ನನ್ನ ಹೃದಯಕ್ಕೆ ಶೂಲದಿಂದ ಇರಿದಂತಾಗುತ್ತಿತ್ತು. ಕೊನೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಉಚ್ಚ ನ್ಯಾಯಾಲಯದ ಆಗಿನ ಪ್ರಧಾನ ನ್ಯಾಯಾಧೀಶರಾದ ಶ್ರೀ ಖೇಹರ ಅವರಿಗೆ ಒಂದು ಪತ್ರ ಬರೆದೆ. ನನ್ನ ದುರ್ದೈವಕ್ಕೆ, ಅಲ್ಪ ಕಾಲದಲ್ಲಿಯೇ ಶ್ರೀ ಖೇಹರರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡತಿಯೊಡನೆ ವರ್ಗಾವಣೆಯಾದ ಸಮಾಚಾರವನ್ನು ಪತ್ರಿಕೆಗಳಲ್ಲಿ ಓದಿದೆ. ನನ್ನ ಸಾಹಸವು ಈ ರೀತಿಯಲ್ಲಿ ದುಃಖಾಂತಗೊಂಡಿತಲ್ಲ ಎಂದು ವ್ಯಥೆಪಟ್ಟು ಸುಮ್ಮನಾಗಿದ್ದೆ. ಕೆಲ ತಿಂಗಳುಗಳ ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ ಇವರಿಗೆ ಉಚ್ಚ ನ್ಯಾಯಾಲಯದ ರಜಿಸ್ಟ್ರಾರರು ಬರೆದ ಪತ್ರದ ಪ್ರತಿಯನ್ನು ನನಗೆ ಕಳುಹಿಸಿದ್ದು ತಲುಪಿತು. ಈ ಎಲ್ಲ ಪತ್ರಪ್ರಕರಣವನ್ನು ತಮ್ಮ ಎದುರಿಗೆ ಇಡುತ್ತಿದ್ದೇನೆ. ಪತ್ರಗಳ ದಿನಾಂಕಗಳನ್ನು ಗಮನಿಸಿದಾಗ, ಎಲ್ಲಿಯೋ ತಪ್ಪು ಇದ್ದಂತೆ ಭಾಸವಾಗುತ್ತದೆ. ದಯವಿಟ್ಟು ಅಲಕ್ಷಿಸಿ.

ಪತ್ರ (೧):
ಶ್ರೀ ಖೇಹರ, ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ನಾನು ಬರೆದ ಪತ್ರ:
Chief Justice / Sir,

I submit herewith a grievance which is not legal but which has to do with the High Court, Bengaluru. We see the words " Karnataka High Court" written in English on the top of the Court building. Above that we also see the words written in Kannada. There is a grave error in the Kannada writing. When I saw that in the TV recently (thanks to the politicians' cases), I felt a stab in my Heart.

Now the error is this:
"High” is “uchch=उच्च=ಉಚ್ಚ”.
The High Court in Delhi also is written as उच्च न्यायालय only.

Unfortunately it is written on Bengaluru High Court as ಉಚ್ಛ ನ್ಯಾಯಾಲಯ which is like उच्छ न्यायालय written in Hindi. Similarly “Court Complex” is written as “ನ್ಯಾಯಾಲಯ ಸಮುಚ್ಛಯ (=न्यायालय समुच्छय). It should have been “ನ್ಯಾಯಾಲಯ ಸಮುಚ್ಚಯ”(=न्यायालय समुच्चय)

Every time I see this in TV, I feel pained at the linguistic murder.
Apart from my personal grievance at the murder of language committed here, it is inappropriate to see such error on a prestigious legal institute.

Chief Justice / Sir,

When you bring this error to the notice of the concerned people, they may suggest that what they have written is correct and try to justify the error. Please ask them to refer to the Kannada Dictionaries. One standard dictionary is Kittel’s Dictionary. Rev. Kittel who came to Karnataka from Germany as a Christian missionary in the last century did a monumental work to produce the first modern Kannada Dictionary.
The Kannada Sahitya Academy Dictionary may be referred too.

Chief Justice / Sir,
I am an aging man who wants to see the errors corrected in my life time.
I request you to give justice to Kannada language.

Thanking you,

                                                                                                                                  Yours truly
                                                                                                                                   (S.L.Deshpande)

ಪತ್ರ (೨):

ಪತ್ರ (೩):

ಪತ್ರ (೪):

To
The Registrar General
High Court of Karnataka
Bengaluru-1

Sir,

Sub: To carry out correction in the Kannada Name board
of the High Court of Karnataka—reg

Ref: Your letter No: HCA-II/139/87 (1) Dt: 6-1-2012

I am thankful to you for your instructions given to the appropriate authorities for correcting the Kannada Name board of the High Court, Bengaluru. I had pointed out two mistakes to the Hon’ble Chief Justice Shri J.S.Khehar through my letter, dt: 9-9-2011. One of the two is being corrected now. The other mistake is in the Kannada Name board of the `Court Complex.’ It is written there as `ನ್ಯಾಯಾಲಯ ಸಮುಚ್ಛಯ’. This should be: `ನ್ಯಾಯಾಲಯ ಸಮುಚ್ಚಯ.’

I shall be grateful to you if this error is also corrected suitably.

Thanking you,

                                                                                                                                              Yours truly,
                                                                                                                                      (S.L.Deshpande)
                                                                                                                                     
ಪ್ರತಿ, ಗೌರವಪೂರ್ವಕವಾಗಿ ಡಾ. ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ ೩೩೮, ಮೂರನೆಯ ಮಹಡಿ, ವಿಧಾನಸೌಧ, ಬೆಂಗಳೂರು-೫೬೦ ೦೦೧ ಇವರಿಗೆ. ತಮ್ಮ ಸತ್ಪ್ರಭಾವವನ್ನು ಬಳಸಿ, ದಯವಿಟ್ಟು ಈ ತಿದ್ದುಪಡಿಯನ್ನು ಮಾಡಿಸಲು ಕೋರಲಾಗುತ್ತಿದೆ.

ಡೆಪ್ಯುಟಿ ರಜಿಸ್ಟ್ರಾರ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ತಾವು ಬರೆದ ಪತ್ರ ಕ್ರಮಾಂಕ: ಕ‍ಅಪ್ರಾ:ಕ:೯೩:೨೦೧೧-೨೦೧೨, ದಿ:೧೫-೬-೨೦೧೧ ಕ್ಕೆ ಇದು ಸಂಬಂಧಿಸಿದೆ.

ಪತ್ರ (೫):
TO
Honourable Chief Justice
Shri J.S.Khehar,
Supreme Court of India,
New Delhi

Sir,
I am grateful to you for kindly considering my letter dt: 9-9-2011 and for the action taken for correcting the Kannada Name board of the High Court, Bengaluru.

Let me take this opportunity to congratulate you on your elevation as Chief Justice, Supreme Court of India.

I pray the Lord to bestow happiness and long life to you.

Thanking you,

                                                                                                                                             Yours truly
                                                                                                                                  (S.L.Deshpande)
........................................................................

ನ್ಯಾಯಾಲಯ ಕಟ್ಟಡಗಳ ಮೇಲಿನ ಬರಹವನ್ನು ಯಾರೇ ಬರೆಯಿಸಿರಲಿ, ಅವರನ್ನು ನಾವು ದೂಷಿಸುವಂತಿಲ್ಲ. ಯಾವುದೋ ಕನ್ನಡ ಬಾರದ ಮೇಸ್ತ್ರಿಯ ಕೆಲಸವಿದು ಎಂದು ಸಂಶಯದ ಲಾಭವನ್ನು ಕೊಡಬಹುದು. ಆದರೆ ಕನ್ನಡ ಸಾಹಿತಿಗಳು ಹಾಗು ಸಾಹಿತ್ಯದಲ್ಲಿ ಆಸಕ್ತಿ ಇದ್ದವರು ಮಾಡುತ್ತಿರುವ ತಪ್ಪುಗಳನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಅಂತಹ ಕೆಲವು ಸಾಮಾನ್ಯ ದೋಷಗಳು ಹೀಗಿವೆ:

ಸರಿಯಾದ ಪದ..........ತಪ್ಪು ಪದ
ಕನಿಷ್ಠ...........................ಕನಿಷ್ಟ
ಅನಿಷ್ಟ..........................ಅನಿಷ್ಠ
ಮುಷ್ಟಿ.........................ಮುಷ್ಠಿ
ಪುಷ್ಟಿ............................ಪುಷ್ಠಿ
ಉಚ್ಛ್ವಾಸ....................ಉಚ್ವಾಸ
ಉಚ್ಚಾರ......................ಉಚ್ಛಾರ
ಶಾಪಗ್ರಸ್ತ.......................ಶಾಪಗ್ರಸ್ಥ
ಶ್ರುತಿ.............................ಶೃತಿ
ಶಾಕಾಹಾರ......................ಶಾಖಾಹಾರ
ನಾಗರಿಕ..........................ನಾಗರೀಕ
ಧಾಬಾ............................ಡಾಬಾ
ದಾಳಿ..............................ಧಾಳಿ

ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಉಚ್ಚರಿಸುವದು ಅಥವಾ ತಪ್ಪಾಗಿ ಬರೆಯುವದು ಇನ್ನೂ ಕ್ರೂರವಾದ ಕರ್ಮ. ಗಡಿನಾಡ ಗಾಂಧಿ ಎಂದು ಹೆಸರಾದ ಖಾನ ಅಬ್ದುಲ್ ಗಫಾರ ಖಾನರ ಹೆಸರನ್ನು ಕಾನ್ ಅಬ್ದುಲ್ ಗಪಾರ ಕಾನ್ ಎಂದು ಬರೆದಿದ್ದನ್ನು ಓದಿ ವ್ಯಥೆಪಟ್ಟಿದ್ದೇನೆ. ಇದು ಹೋಗಲಿ ಬಿಡಿ, ನಮ್ಮ ಜ್ಞಾನಪೀಠಸ್ಥ ಅನಂತಮೂರ್ತಿಯವರು ‘ರಬೀಂದ್ರನಾಥ ಠಾಕೂರ’ ಹೆಸರನ್ನು ‘ರವೀಂದ್ರನಾಥ ಟ್ಯಾಗೋರ್’ ಎಂದು ಬರೆಯುತ್ತಾರೆ. ಅವರಿಗೆ ಇದು ಫ್ಯಾಶನೇಬಲ್ ಅನಿಸೀತು. ಆದರೆ ಇದು ಸರಿಯೆ? ಅವರ ಹೆಸರನ್ನು ಯಾರಾದರೂ ಅನಂತಮೂತ್ರಿ ಎಂದು ಬರೆದರೆ ಅವರಿಗೆ ಹೇಗೆನಿಸಬಹುದು? ಅದರಂತೆ ‘ಮೇಡಮ್ ಕಾಮಾ’ ಇವರ ಹೆಸರನ್ನು ‘ಮೇಡಮ್ ಕಾಮ’ ಎಂದು ಬರೆದಿದ್ದನ್ನು ಒದಿದ್ದೇನೆ. ಮೇಮ್‍ಸಾಹೇಬರು ಯಾವಾಗ ಲಿಂಗಪರಿವರ್ತನೆಗೊಂಡು ಕಾಮದೇವರಾದರೊ, ಬರೆದವರೇ ಬಲ್ಲರು.

Friday, January 27, 2012

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರಿಗೆ ಕೃತಜ್ಞತೆಗಳು

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ಎನ್ನುವ ಧೀರ, ಪ್ರಜ್ಞಾಶೀಲ ಮಹಿಳೆಗೆ ನನ್ನ ಕೃತಜ್ಞತೆಗಳು. ೨೦೧೨ರ ಲಂಡನ್ ಓಲಿಂಪಿಕ್ಸ್ ಸಸ್ಟೇನಿಬಿಲಿಟಿ ಕಮಿಟಿಗೆ ಇವರು ಇದೇ ಜನೇವರಿ ೨೬ರಂದು ರಾಜೀನಾಮೆ ಕೊಟ್ಟಿದ್ದಾರೆ.

ಡಿಶಂಬರ ೧೯೮೪ರಲ್ಲಿ ಭೋಪಾಲದಲ್ಲಿ ಜರುಗಿದ ಘೋರ ದುರಂತಕ್ಕೆ ಕಾರಣವಾದ, ಅಮೇರಿಕಾದ ಯೂನಿಯನ್ ಕಾರ್ಬೈಡ ಕಂಪನಿಯ ಕೀಟನಾಶಕ ಕಾರಖಾನೆಯು ೨೦೦೧ರಲ್ಲಿ ಡೋವ್ ಕೆಮಿಕಲ್ ಕಂಪನಿಗೆ ಹಸ್ತಾಂತರಿತವಾಯಿತು. ಭೋಪಾಲದ ನಿವಾಸಿಗಳಿಗೆ ಸಮುಚಿತವಾದ ಪರಿಹಾರ ಇನ್ನೂ ದೊರೆತಿಲ್ಲ, ಯೂನಿಯನ್ ಕಾರ್ಬೈಡ ಕಂಪನಿಯ ಉಚ್ಚಾಧಿಕಾರಿಗೆ ಶಿಕ್ಷೆಯಾಗಿಲ್ಲ.

೨೦೧೨ರ ಲಂಡನ್ ಓಲಿಂಪಿಕ್ಸಿನ ಪ್ರಾಯೋಜಕರಲ್ಲಿ ಡೋವ್ ಕೆಮಿಕಲ್ ಕಂಪನಿಯೂ ಒಂದು. ಇದನ್ನು ಪ್ರತಿಭಟಿಸಿ ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರು ಕೊಟ್ಟ ಹೇಳಿಕೆ ಹೀಗಿದೆ:
"I don't want to be party to a defence of Dow Chemicals, the company responsible for one of the worst corporate human rights violations in my generation. It is appalling that 27 years on, the site has still not been cleaned up and thousands upon thousands of people are still suffering. I believe people should be free to enjoy London 2012 without this toxic legacy on their conscience."

ನಮ್ಮ ರಾಜಕಾರಣಿಗಳಲ್ಲಿ ಕಾಣದಿರುವ ನೈತಿಕ ಪ್ರಜ್ಞೆಯನ್ನು ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ತೋರಿಸಿದ್ದಾರೆ.
May her tribe increase!

Friday, January 20, 2012

ಬೇಂದ್ರೆ-ಕಾವ್ಯ ಶೈಲಿ

ಭಾಷೆ, ಛಂದಸ್ಸು ಹಾಗು ಅಲಂಕಾರ ಇವು ಕಾವ್ಯಶೈಲಿಯ ಮೂರು ಅಂಗಗಳಾಗಿವೆ. ಬೇಂದ್ರೆಯವರ ಕಾವ್ಯಶೈಲಿಯನ್ನು ಅರಿತುಕೊಳ್ಳುವದು ಎಂದರೆ ಸಮುದ್ರವನ್ನು ಅಳೆದಂತೆ. ಅವರ ಕವನಗಳ ಭಾಷಾವೈವಿಧ್ಯವು ಬೆರಗುಗೊಳಿಸುವಂತಹದು. ಅಚ್ಚಗನ್ನಡ, ಸಂಸ್ಕೃತಭೂಯಿಷ್ಠ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ ಇವೆಲ್ಲವೂ ಅವರ ಕವನಗಳಲ್ಲಿ ಬಳಕೆಯಾಗಿವೆ. ಅವರು ಬಳಸಿದ ಭಾಷೆಯು ಯಾವುದೇ ಆಗಿರಲಿ, ಅದು ಕವನದ ಆಶಯಕ್ಕೆ ಸಮರ್ಪಕವಾದ ವಾಹನವಾಗಿರುವದು ಅವರ ಪ್ರತಿಭೆಯ ನಿದರ್ಶನವಾಗಿದೆ. ಅವರ ಕವನಗಳ ಭಾಷಾವೈವಿಧ್ಯದ ಅಂದಾಜು ಮಾಡಲು ಅವರ ಕೆಲವೊಂದು ಕವನಗಳನ್ನು ಇಲ್ಲಿ ಪರಿಶೀಲಿಸೋಣ:

ಮೊದಲನೆಯದಾಗಿ ಆಡುನುಡಿಯನ್ನು ಬಳಸಿರುವ, ಜಾನಪದ ಧಾಟಿಯ ಅವರ ಕವನವೊಂದನ್ನು ನೋಡೋಣ. ‘ಒಲುಮೆಯ ಕಿಚ್ಚು’ ಎನ್ನುವ ಕವನದ ಎರಡನೆಯ ನುಡಿ ಹೀಗಿದೆ:
“ಸುಗ್ಗಿ ನಗಿ ನಕ್ಕಾಗ ಮೊಗ್ಗು ಬಿಚ್ಚಿತ ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು ”

ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಜೀವದ ಗೆಳತಿಯೊಡನೆ ಹಂಚಿಕೊಳ್ಳುತ್ತಿರುವ ಆಪ್ತವಾದ ಮಾತಿದು. ಸುಗ್ಗಿಯ ಕಾಲವೆಂದರೆ ಹೊಲದಲ್ಲಿಯ ಪೈರು ಮಾಗುವ ಕಾಲ. ಈ ಹುಡುಗಿಯೂ ಈಗ ದೈಹಿಕವಾಗಿ ಹಾಗು ಮಾನಸಿಕವಾಗಿ ಮಾಗುತ್ತಿದ್ದಾಳೆ. ಇದನ್ನು ಸೂಚಿಸಲು ಅವಳು ಬಳಸುವ ರೂಪಕಗಳು ಜಾನಪದ ರೂಪಕಗಳಾಗಿವೆ; ಬಳಸುವ ಭಾಷೆ ಜಾನಪದ ಭಾಷೆಯಾಗಿದೆ. ಜಾನಪದ ಭಾಷೆ ಹಾಗು ಗ್ರಾಮೀಣ ಭಾಷೆ ಎರಡೂ ಒಂದೇ ಅಲ್ಲ. ಜಾನಪದ ಭಾಷೆ ಎಂದರೆ ಗ್ರಾಮೀಣ ಸಂಸ್ಕೃತಿಯು ತನ್ನದೇ ಆದ ಸಾಹಿತ್ಯಕ್ಕಾಗಿ ಸೃಷ್ಟಿಸಿಕೊಂಡ ಭಾಷೆ. ಗ್ರಾಮೀಣ ಭಾಷೆ ಎಂದರೆ ಹಳ್ಳಿಗರ ಸದ್ಯದ ಆಡುನುಡಿ. ಗ್ರಾಮೀಣ ಆಡುನುಡಿಯ ಉದಾಹರಣೆ ಎಂದು ಅವರ ‘ಕಗ್ಗ’ ಕವನವನ್ನು ನೋಡಬಹುದು. ಈ ಕವನದ ಎರಡನೆಯ ನುಡಿ ಹೀಗಿದೆ:
“ಹಸು ಕೂಡs ಕಟ್ಟಿದ್ದುಂಟು
ಬಸವಣ್ಣsನೂ ಹುಟ್ಟಿದ್ದುಟು
ಮುಟ್ಟಿದ್ದೆಲ್ಲಾ ‘ಬೂದಿ’ ಮಾಡಿದಾ ಭಸ್ಮಾಸುರಾss
ಅವನ ನೀಗಿಸಿ ಬಿಟ್ಟಿತಣ್ಣಾ ಮೋಹಿನಿ ಅವತಾರಾ.”

ಹಸುವು ಗರ್ಭ ಧರಿಸುವದಕ್ಕೆ ಹಳ್ಳಿಗರು ‘ಕಟ್ಟುವದು’ ಎನ್ನುತ್ತಾರೆ. ಹಸುವು ಕಟ್ಟಿದ ಮೇಲಷ್ಟೆ ಆದಕ್ಕೆ ಬಸವಣ್ಣ ಅಂದರೆ ಹೋರಿಗರು ಹುಟ್ಟಲು ಸಾಧ್ಯ. ಆದರೆ ಬಸವಣ್ಣನು ‘ಭವಿ’ ಅಲ್ಲ ಅರ್ಥಾತ್ ಅವನು ಭೂಲೋಕದಲ್ಲಿ ಹುಟ್ಟಿದರೂ ಸಹ ಅವನದು ಅವತರಣ ಮಾತ್ರ. ಈ ಕವನದ ಭಾಷೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಹಳ್ಳಿಗರು ಬಳಸುತ್ತಿದ್ದ ಆಡುನುಡಿಯಾಗಿದೆ. ನೋಡಲು ಸರಳವೆನಿಸುವ ಈ ನುಡಿಯನ್ನು ತಿಳಿದುಕೊಳ್ಳಲು ಗ್ರಾಮೀಣ ಹಾಗು ಪೌರಾಣಿಕ ಹಿನ್ನೆಲೆಗಳನ್ನು ಅರಿತಾಗ ಮಾತ್ರ ಸಾಧ್ಯ!

ಬೇಂದ್ರೆಯವರ ಸಂಸ್ಕೃತಭೂಯಿಷ್ಠ ಭಾಷೆಯ ಉದಾಹರಣೆಗಾಗಿ ‘ಏಲಾಗೀತೆ’ ಎನ್ನುವ ಕವನವನ್ನು ಗಮನಿಸಬಹುದು. ಈ ಕವನದ ಮೊದಲ ನುಡಿ ಹೀಗಿದೆ:
“ಏಲಾವನ ಲವಲೀವನ ಲವಂಗವನಗಳಲಿ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ”
ಈ ಕವನದಲ್ಲಿ ಲಲಿತ ಹಾಗು ಸಂಸ್ಕೃತಭೂಯಿಷ್ಠ ಭಾಷೆಯ ಬಳಕೆಯಾಗಿದೆ. ಇದು ಸಂಸ್ಕೃತವ್ಯಾಮೋಹದ ಪರಿಣಾಮವಲ್ಲ! ಅನುರಣಿಸುವ ಮೃದುಪದಗಳಿಂದ ಈ ಕವನದಲ್ಲಿ ಅಪೂರ್ವವಾದ ನಾದಬಂಧುರತೆಯನ್ನು ಸಾಧಿಸಲಾಗಿದೆ.

ಬೀದರ ಶಹರದಲ್ಲಿ ವಾರ್ತಾ ಇಲಾಖೆಯವರು ಹಮ್ಮಿಕೊಂಡ ಕವಿಗೋಷ್ಠಿಗಾಗಿ ಬೇಂದ್ರೆಯವರು ರಚಿಸಿದ ಕವನವು ಮಿಶ್ರಭಾಷೆಯ ಬಳಕೆಯ ಉತ್ಕೃಷ್ಟ ಉದಾಹರಣೆಯಾಗಿದೆ. ‘ಕವಿಗಳ ಕಾಣಿಕಿ’ ಎನ್ನುವ ಆ ಕವನದ ಒಂದು ನುಡಿ ಹೀಗಿದೆ:
“ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ
ಜಗ ಜಾಹೀರ ವಜ್ರದ ಖಾಣೀಗೆ
ಕಾಳಾಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು:
ಅದು ಕವಿ ಕಾಣಿಕೀ
ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ”

ಬೇಂದ್ರೆಯವರು ತಮ್ಮ ಕವನಗಳಲ್ಲಿ ಕನ್ನಡ ಹಾಗು ಸಂಸ್ಕೃತದ ವಿವಿಧ ಛಂದಸ್ಸುಗಳನ್ನು ಬಳಸಿದ್ದಾರೆ. ಕವನದ ಭಾವವನ್ನು ಆತ್ಮವೆಂದು ಕರೆದರೆ, ಛಂದಸ್ಸನ್ನು ದೇಹವೆಂದು ಕರೆಯಬಹುದು. ಬೇಂದ್ರೆಯವರ ಪ್ರತಿ ಕವನದ ಛಂದಸ್ಸು ಆಯಾ ಕವನದ ಭಾವಕ್ಕೆ ಪೂರಕವಾದಂತಹದು. ಉದಾಹರಣೆಗೆಂದು ಅವರ ‘ಪಾತರಗಿತ್ತಿ ಪಕ್ಕಾ’ ಕವನವನ್ನು ನೋಡಬಹುದು. ಪಾತರಗಿತ್ತಿಯ ಅಂದರೆ ಚಿಟ್ಟೆಯ ಹಾರಾಟವು ಎಷ್ಟು ಲಘುಗತಿಯದಾಗಿರುವದೋ, ಈ ಕವನದ ಛಂದಸ್ಸು ಸಹ ಅಷ್ಟೇ ಕ್ಷಿಪ್ರಗತಿಯದಾಗಿದೆ.
‘ಪಾತರಗಿತ್ತಿ ಪಕ್ಕಾ
ನೋಡಿದೇನ ಅಕ್ಕಾ’ ಎಂದು ಹಾಡಿದಾಗ ಚಿಟ್ಟೆಯೇ ನಮ್ಮ ಕಣ್ಣೆದುರು ಚಲಿಸುತ್ತಿರುವಂತೆ ಭಾಸವಾಗುವದು. ಇನ್ನು ಕೆಲವು ಕವನಗಳನ್ನು ಬೇಂದ್ರೆಯವರು ದೀರ್ಘ ಛಂದಸ್ಸಿನಲ್ಲಿ ರಚಿಸಿದ್ದಾರೆ. ಉದಾಹರಣೆಗೆ ಅವರ ‘ಅಷ್ಟು ಪ್ರೀತಿ, ಇಷ್ಟು ಪ್ರೀತಿ’ ಎನ್ನುವ ಕವನವನ್ನು ನೋಡಿರಿ.
‘ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಿಸಿ ಕಷ್ಟಬಡೆದಿರು, ಒಲೆದು ಒಲಿಸಿ ಸುಖದಿರು;
ಎಷ್ಟೆ ಇರಲಿ ಅಷ್ಟೆ ಮಿಗಿಲು, ತಮ್ಮ ಕಿರಣ ತಮಗೆ ಹಗಲು, ಉಳಿದ ಬೆಳಕು ಕತ್ತಲು;
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು, ಉಳಿದ ಲೋಕ ಹಿತ್ತಲು;’
ದೀರ್ಘವಾದ ಕಲ್ಪನೆಗೆ ತಕ್ಕಂತೆ ದೀರ್ಘವಾದ ಛಂದಸ್ಸಿನಲ್ಲಿಯೇ ಈ ಕವನವನ್ನು ಹೆಣೆಯಲಾಗಿದೆ!

ಬೇಂದ್ರೆಯವರ ಅನುವಾದ ಕವನಗಳ ಛಂದಸ್ಸುಗಳ ಬಗೆಗೂ ಒಂದು ಮಾತನ್ನು ಇಲ್ಲಿ ಹೇಳುವದು ಅವಶ್ಯವಿದೆ. ಸಂಸ್ಕೃತ ಮಂದಾಕ್ರಾಂತ ವೃತ್ತದಲ್ಲಿದ್ದ ಕಾಳಿದಾಸನ ‘ಮೇಘದೂತ’ ಕಾವ್ಯದ ಅನುವಾದಕ್ಕಾಗಿ ಅವರು ಕನ್ನಡ ಮಂದಾಕ್ರಾಂತ ಛಂದಸ್ಸನ್ನು ಸೃಷ್ಟಿಸಿದರು.

ಫಿಲಿಪೀನ ದೇಶದ ಸ್ವಾತಂತ್ರ್ಯಯೋಧರಾದ ಜೋಸ ರಿಝಾಲರು ರಚಿಸಿದ My Last Farewell ಕವನವನ್ನು ಬೇಂದ್ರೆಯವರು ‘ನಮ್ಮ ಕೊನೆಯ ಶರಣು’ ಎನ್ನುವ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಇದರ ಛಂದಸ್ಸು ಲಾವಣಿಯ ಗತ್ತಿನಲ್ಲಿದ್ದು, ಈ ಕವನವು ಭಾರತೀಯ ಸ್ವಾತಂತ್ರ್ಯಯೋಧರ ಬಗೆಗಿನ ಗೀತೆ ಎನ್ನುವ ಭಾಸವನ್ನು ಹುಟ್ಟಿಸುತ್ತದೆ.

ಬೇಂದ್ರೆಯವರ ಕಲ್ಪನೆಗೆ ಎಲ್ಲೆ ಎನ್ನುವದಿಲ್ಲ. ‘ ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ’ ಎನ್ನುವಂತೆ ಅವರ ಕಲ್ಪನೆಯು ದಿಗಂತವ್ಯಾಪಿಯಾಗಿದೆ. ಆದರೆ ಬೇಂದ್ರೆಯವರ ಕಾವ್ಯದಲ್ಲಿ ಎಲ್ಲಿಯೂ ಕಲ್ಪನೆಯು ವಾಸ್ತವತೆಗೆ ವ್ಯತಿರಿಕ್ತವಾಗಿ ಬಳಕೆಯಾಗಿಲ್ಲ. ಕಾವ್ಯ ಎನ್ನುವ ಬಟ್ಟೆಯ ಹಾಸು ಮತ್ತು ಹೊಕ್ಕಿನಂತಿರುವ ಅವು ಸಮಪ್ರಮಾಣದಲ್ಲಿಯೇ ನೇಯ್ಗೆಯಾಗಿವೆ. ಉದಾಹರಣೆಗೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎನ್ನುವ ಬೇಂದ್ರೆಯವರ ಕವನವನ್ನು ಪರಿಶೀಲಿಸಬಹುದು. ಕಾಲಪಕ್ಷಿಯ ಅಮಿತ ವೇಗವನ್ನು ಸೂಚಿಸಲು ಬೇಂದ್ರೆಯವರು ‘ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎಂದು ಹೇಳಿದ್ದಾರೆ. ಭಾರತೀಯ ಕಾಲಗಣನೆಯ ಮೇರೆಗೆ ‘ಎವೆ ತೆರೆದಿಕ್ಕುವ ಹೊತ್ತು’ ಒಂದು ನಿಮಿಷದ ಅವಧಿಯಾಗಿದೆ. ಈ ರೀತಿಯಲ್ಲಿ ಬೇಂದ್ರೆಯವರು ಕಲ್ಪನೆಯನ್ನು ಭೌತಿಕ ವಾಸ್ತವತೆಯೊಡನೆ ತಳಕು ಹಾಕುತ್ತಿದ್ದಾರೆ.

ಬೇಂದ್ರೆಯವರ ಕವನಗಳಲ್ಲಿ ತರ್ಕಪೂರ್ಣ ಕ್ರಮಬದ್ಧತೆಗೆ ಎಂದೂ ಲೋಪವಾಗುವದಿಲ್ಲ. ಇದನ್ನು ಮನಗಾಣಲು ಕೆಳಗಿನ ಸಾಲುಗಳನ್ನು ನೋಡಬಹುದು:
“ಎಲೆಗಳ ಮೇಲೇ, ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-- ಅಮೃತsದ ಬಿಂದು ”

‘ಬೆಳಗು’ ಕವನದಲ್ಲಿ ಈ ವರ್ಣನೆ ಬರುತ್ತಿದೆ. ಎಲೆಗಳ ಮೇಲಿರುವ ಇಬ್ಬನಿಯ ಹನಿಗಳು ನೋಡುಗನ ಕಣ್ಣಿಗೆ ಮೊದಲು ಕಾಣುತ್ತವೆ. ಹೂಗಳ ಪಕಳೆಗಳಲ್ಲಿರುವ ಹನಿಗಳು ಹತ್ತಿರ ಹೋದ ಬಳಿಕ ಕಾಣುತ್ತವೆ. ಇದೇ ಕ್ರಮವನ್ನು ಕವನದಲ್ಲಿಯೂ ಅನುಸರಿಸಲಾಗಿದೆ.

ಇದೇ ಸಾಲಿನಲ್ಲಿರುವ ‘ಅಮೃತsದಾ ಬಿಂದು’ ಎನ್ನುವ ವಿಶೇಷವನ್ನು ಗಮನಿಸಿರಿ. ‘ಅಮೃತ’ವೆಂದರೆ ನಾಶವಿಲ್ಲದ್ದು. ಇಬ್ಬನಿಯು ಕ್ಷಣಮಾತ್ರದಲ್ಲಿ ಮಾಯವಾಗುವಂತಹದು. ಅಪೂರ್ವವಾದ ವೈರುಧ್ಯತೆಯೊಂದನ್ನು ಒಂದೇ ಪದಪುಂಜದಲ್ಲಿ ಅಡಕಗೊಳಿಸುವ ಬೇಂದ್ರೆಯವರ ಕೌಶಲ್ಯವನ್ನು ಇಲ್ಲಿ ಕಾಣಬಹುದು.

ಇಂತಹದೇ ವಿರುದ್ಧಶ್ಲೇಷೆಯ ಸಾಲು ‘ಸಂಸಾರ’ ಎನ್ನುವ ಕವನದಲ್ಲಿದೆ:
‘ಅಮೃತಂತ ಬಾಯಿ ಚಪ್ಪರಿಸತಾವ
ಕೇಳಿ ಕಣ್ಣು ಮಿಟಕತದ ರಾತ್ರಿ.’

ನಲ್ಲ, ನಲ್ಲೆಯರ ನಡುವೆ ಮುತ್ತುಗಳ ವಿನಿಮಯವಾಗುತ್ತಿರುವಾಗ, ‘ಅಹಾ! ಇದೇ ಅಮೃತ’ ಎಂದು ಅವರು ಖುಶಿ ಪಡುತ್ತಾರೆ.ಇದನ್ನು ಆಲಿಸಿದ ರಾತ್ರಿ ಚೇಷ್ಟೆಯಿಂದ ಕಣ್ಣು ಮಿಟುಕಿಸುತ್ತದೆ. ಇದು ತೋರಿಕೆಯ ಅರ್ಥ. ಕಣ್ಣು ಮಿಟುಕಿಸುವದು ಎಂದರೆ ಒಂದು ನಿಮಿಷದ ಕಾಲ. ಇದು ಅಮೃತದಂತೆ ಚಿರಕಾಲದ ಸುಖವಲ್ಲ, ಆದರೆ ಕ್ಷಣಿಕ ಎನ್ನುವದು ಒಳಗಿನ ಅರ್ಥ! ಒಂದೇ ಸಾಲಿನಲ್ಲಿ ವಿರುದ್ಧಾರ್ಥವನ್ನು ಸೂಚಿಸುವ ಬೇಂದ್ರೆ ಪ್ರತಿಭೆ ಇದು!

ಇಂತಹ ವೈರುಧ್ಯಭಾವವನ್ನು ಸೂಚಿಸುವ ಮತ್ತೊಂದು ಸಾಲು ‘ಬಾರೊ ಸಾಧನಕೇರಿಗೆ’ ಕವನದಲ್ಲಿದೆ;
‘ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂಬೆರಳಿದೆ
ನೆಲಕೆ ಹರೆಯವು ಮರಳಿದೆ’

ಬೇಂದ್ರೆಯವರು ಈ ಕವನವನ್ನು ಬರೆಯುವ ಕಾಲಾವಧಿಯಲ್ಲಿ ಧಾರವಾಡದಲ್ಲಿದ್ದ ಮನೆಗಳಿಗೆ ಈಗಿನಂತೆ ಕಲ್ಲಿನ ಅಥವಾ ಸಿಮೆಂಟಿನ ಪ್ರಾಕಾರ ಇರುತ್ತಿರಲಿಲ್ಲ. ಸಾದಾ ಹೂವುಗಳ ಬೇಲಿ ಇರುತ್ತಿತ್ತು. ಈ ಬೇಲಿಯ ಹೂವುಗಳು ಸಹಸಾ ಕೊಳವೆಯಾಕಾರದಲ್ಲಿ ಇರುತ್ತಿದ್ದವು. ಬೇಂದ್ರೆಯವರು ಈ ಹೂವುಗಳನ್ನು ಬೇಲಿಯ ಬೆರಳುಗಳಿಗೆ ಹೋಲಿಸುತ್ತಿದ್ದಾರೆ. ಬೇಲಿಯ ಕೆಲಸವೆಂದರೆ ಅಪರಿಚಿತರನ್ನು ಹೊರಗಿಡುವದು. ಆದರೆ ಈ ಬೇಲಿಯು ತನ್ನ ಹೂಬೆರಳುಗಳಿಂದ ಎಲ್ಲರಿಗೂ ಸ್ವಾಗತ ನೀಡುವ ಸ್ವಾಗತಕಾರಿಣಿಯಾಗಿದೆ! ಈ ರೀತಿಯಾಗಿ ಬೇಂದ್ರೆಯವರು ವಿರುದ್ಧಾರ್ಥವನ್ನು ಸೂಚಿಸುತ್ತಲೇ, ಆ ಕಾಲದ ವಾಸ್ತವತೆಯ ದಾಖಲಾತಿಯನ್ನು ಸಹ ಮಾಡುತ್ತಿದ್ದಾರೆ.

ಕವನದಲ್ಲಿರುವ ಕ್ರಮಬದ್ಧತೆಯನ್ನು ಪರೀಕ್ಷಿಸುವಾಗ ‘ರಾಧೆಯ ಪಾಡು’ ಎನ್ನುವ ಕವನವನ್ನು ನಿರ್ಲಕ್ಷಿಸುವದು ಸಾಧ್ಯವಿಲ್ಲ. ಭಕ್ತಿಯ ಮೊದಲ ಹಂತವೆಂದರೆ ಆರ್ತ ಪ್ರಾರ್ಥನೆ. ಈ ಕವನದಲ್ಲಿ ರಾಧೆಯು ಕೃಷ್ಣನನ್ನು ‘ಒರೆದನಂಗಲಾಚಿ, ಕರೆದೆ ಜೀವವ ಚಾಚಿ’ ಎಂದು ತನ್ನ ಸಖಿಯೆದುರಿಗೆ ಹೇಳುತ್ತಿದ್ದಾಳೆ. ಆದರೆ ಕೃಷ್ಣ ಅವಳಿಗೆ ಒಲಿಯುತ್ತಿಲ್ಲ. ಮುಂದಿನ ಹಂತದಲ್ಲಿ ಅವಳ ದನಿಯೇ ಬಿದ್ದು ಹೋಗುತ್ತದೆ. ಅವಳ ಅಹಮಿಕೆ ಕರಗತೊಡಗುತ್ತದೆ. ಆ ಹಂತವನ್ನು ‘ಬರದು ಕೂತಿತು ದನಿ, ಕಣ್ಣೆಲ್ಲಾ ಕಂಬನಿ ತಂದೇನೆ, ಕರಗಿ ತಂದೇನೆ’ ಎಂದು ಬಣ್ಣಿಸಲಾಗಿದೆ. ಇದೂ ಸಹ ನಿಷ್ಫಲ. ತನ್ನ ಶೃಂಗಾರದಿಂದ ತಾನು ಕೃಷ್ಣನನ್ನು ಗೆಲ್ಲಲಾರೆ ಎಂದು ತಿಳಿದಾಗ, ‘ಒಗೆದು ಹೂದಂಡಿಗೆ ಯಮುನೆಯ ದಂಡಿಗೆ’ ಎಂದು ತನ್ನ ಅಲಂಕಾರವನ್ನೆಲ್ಲ ಕಿತ್ತೆಸೆಯುತ್ತಾಳೆ. ಅಹಮ್‍ದ ಈ ಎಲ್ಲ ಹಂತಗಳನ್ನು ದಾಟಿ ಕೊನೆಯಲ್ಲಿ ಬರುವ ಹಂತವೆಂದರೆ, ‘ನಾನು’ ಎನ್ನುವದರ ಸಂಪೂರ್ಣ ನಿರಾಕರಣೆ. ‘ಹೊಳೆಯೊಳು ಹೊತ್ತಾರೆ ಧುಮುಕಿ ನಾ ಸತ್ತಾರೆ ಹೊಂದೇನೆ ಅವನ ಹೊಂದೇನೆ’ ಎನ್ನುವ ಮೂಲಕ ಈ ಭಾವನೆಯನ್ನು ವ್ಯಕ್ತಪಡಿಸಲಾಗಿದೆ. ಈ ರೀತಿಯಾಗಿ ಸಾಧನಾಮಾರ್ಗದ ವಿವಿಧ ಹಂತಗಳನ್ನು ಇಲ್ಲಿ ಕ್ರಮಬದ್ಧವಾಗಿ ವರ್ಣಿಸಲಾಗಿದೆ.

ಶ್ಲೇಷಾಲಂಕಾರವಂತೂ ಬೇಂದ್ರೆಯವರ ಕವನಗಳ ವಿಶೇಷ ಲಕ್ಷಣವಾಗಿದೆ. `ಸಾವಿರದ ಮನೆಗಳಲ್ಲಿ ಒಂದು ಮನೆಯ ಮಾಡಿದೆ’ ಎನ್ನುವಾಗ, ‘ಒಂದು ಸಾವಿರ’ ಎನ್ನುವ ಅರ್ಥವಲ್ಲದೆ, ‘ಸಾವು ಇರದ’ ಎನ್ನುವ ಅರ್ಥವೂ ಧ್ವನಿಸುತ್ತದೆ. ‘ಮುತ್ತು, ರತುನ, ಹೊನ್ನು ಎಲ್ಲ ಕಲ್ಲುಮಣ್ಣ ವೈಭವಾ’ ಎನ್ನುವಾಗ, ಈ ಅಮೂಲ್ಯ ವಸ್ತುಗಳಿಗೆ ಬೆಲೆ ಇಲ್ಲ ಎನ್ನುವ ಅರ್ಥದೊಡನೆ, ಇವು ಖನಿಜ ಪದಾರ್ಥಗಳೆನ್ನುವ ಅರ್ಥವೂ ಇದೆ. ಬೇಂದ್ರೆಯವರ ಪ್ರಸಿದ್ಧ ಕವನ ‘ನಾನು ಬಡವಿ..’ಯಲ್ಲಿಯ ‘ತೋಳ ಬಳಸಿ ತೋಳಬಂದಿ, ಕೆನ್ನೆ ಮೇಲೆ ಮುತ್ತು’ ಎನ್ನುವ ಸಾಲಿನಲ್ಲಿ ತೋಳಬಂದಿ ಹಾಗು ಮುತ್ತು ಇವು ಒಡವೆಗಳಾಗಿರುವಂತೆಯೇ, ಪ್ರಣಯದ ಸಂಕೇತಗಳೂ ಆಗಿವೆ. ಈ ಕವನದ ಕೊನೆಯಲ್ಲಿ ಬರುವ ವ್ಯಂಗ್ಯಧ್ವನಿಯಂತೂ ಅಪೂರ್ವವಾದದ್ದು. ‘ಹೊಟ್ಟೆಗಿತ್ತ ಜೀವಫಲವ’ ಎಂದು ನಲ್ಲೆಯು ಹೇಳುವಾಗ, ತಾನು ಗರ್ಭಿಣಿಯಾಗಿರುವದನ್ನು ಸೂಚಿಸುತ್ತಲೇ, ತನ್ನ ನಲ್ಲ ತನಗೆ ಕೊಟ್ಟದ್ದು ಇದಷ್ಟೇ ಎನ್ನುವ ಛೇಡನೆಯೂ ಇದೆ!

‘ಹೃದಯಸಮುದ್ರ’ ಕವನದ ಈ ಸಾಲನ್ನು ಗಮನಿಸಿರಿ:
‘ಅದರೊಳಗೆ ನಾವು, ನಮ್ಮೊಳಗೆ ತಾವು
ಅದು ಇಲ್ಲವಣ್ಣ ದೂರಾ’

ಹೃದಯಸಮುದ್ರದಲ್ಲಿ ನಾವು ಇದ್ದೇವೆ ಹಾಗು ನಮ್ಮೊಳಗೆ ತಾವು ಅಂದರೆ ದೇವರು ಇದ್ದೀರಿ ಎನ್ನುವದು ಮೇಲಿನ ಅರ್ಥ. ‘ನಾವು’ ಎಂದರೆ ದೋಣಿ, ‘ತಾವು’ ಅಂದರೆ ಬಂದರು. ನಮ್ಮ ಹೃದಯಸಮುದ್ರದಲ್ಲಿಯೇ ದೋಣಿ ಇದೆ ಹಾಗು ಅಲ್ಲಿಯೇ ನಾವು ತಲುಪಬೇಕಾದ ಬಂದರು ಇದೆ ಎನ್ನುವದು ಎರಡನೆಯ ಅರ್ಥ.

ಒಂದು ಕವನದ ಒಂದು ಸಂಪೂರ್ಣ ನುಡಿಯೇ ಶ್ಲೇಷೆಯಾಗುವದು ಬೇಂದ್ರೆಯವರ ಕಾವ್ಯದಲ್ಲಿ ಮಾತ್ರ ಸಾಧ್ಯ!
“ಏನೈತಿ ಸುಗ್ಗಿಯಾ ಹುರುಡ—
ಯಾಕ ಉಳಿದೆಲ್ಲ ತಿಂಗಳಾ ಬರಡ
ಬೇಕ್ಯಾಕ ಮಾವಿನಾ ಕಾಡು
ಕೋಗಿಲದ ಹಾಡು
ಅಗಲಿಕೀ ಕೇಕು......
.............ನಿನ ತೆಕ್ಕಿಯೊಳಗ ಸಿಕ್ಕೈತಿ ಸುಗ್ಗಿ
ಸ್ವರ್ಗಕ್ಕ ಸಾಕು ತೋಳೆರಡs……”

ನಲ್ಲೆಯ ಸರಸ ಸಮಾಗಮಕ್ಕೆ ವಸಂತ ಋತು, ಮಾವು ಹಾಗು ಕೋಗಿಲೆಯ ನೆರವು ಬೇಕಾಗಿಲ್ಲ ಎಂದು ನಲ್ಲನೊಬ್ಬನು ಹೇಳುತ್ತಿರುವ ಮಾತಿದು. ವಸಂತ ಋತು, ಮಾವು ಹಾಗು ಕೋಗಿಲೆ ಈ ಮೂರು ವಿಶೇಷಗಳು ಮಾರ್ಗ ಕಾವ್ಯದ ಅವಶ್ಯಕ ಅಂಶಗಳು ಎನ್ನುವದನ್ನು ಗಮನಿಸಬೇಕು. ದೇಸಿ ಪದ್ಧತಿಯಲ್ಲಿ ರಚಿಸಲಾದ ಈ ಕಾವ್ಯವು ‘ ಹೊಸ ಕಾಲದಲ್ಲಿ ಮಾರ್ಗ ಕಾವ್ಯ ಬೇಕಾಗಿಲ್ಲ’ ಎನ್ನುವ ಶ್ಲೇಷೆಯನ್ನು ಹೊಂದಿದೆ!

ಬೇಂದ್ರೆಯವರ ಕವನಗಳಲ್ಲಿ ಉಪಮೆಗಳು ಹಾಗು ರೂಪಕಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ‘ಗಮ ಗಮಾ ಗಮಾಡಸ್ತಾವ ಮಲ್ಲಿಗಿ’ ಕವನದಲ್ಲಿ ನಲ್ಲೆಯೊಬ್ಬಳು ತನ್ನ ನಲ್ಲನಿಗೆ ಹೇಳುತ್ತಿರುವ ಸಾಲುಗಳು ಹೀಗಿವೆ:
‘ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮಾ ಕನ್ನಡಿ ಹರಳ’

ಚಿಕ್ಕೆಗಳ ಮಿನುಗುವಿಕೆ ಈ ಹುಡುಗಿಗೆ ಬೆರಳುಗಳಂತೆ ಕಾಣಿಸುತ್ತಿದೆ. ಚಿಕ್ಕೆಗಳು ಚಂದ್ರನನ್ನು ತೋರಿಸುತ್ತವೆ ಎಂದು ಹೇಳುವ ಮೂಲಕ ಈ ಹುಡುಗಿಯು ತನ್ನ ನಲ್ಲನಿಗೆ ಪ್ರಣಯದ ಕರೆಯನ್ನು ನೀಡುತ್ತಿದ್ದಾಳೆ. ಚಂದ್ರನು ಕನ್ನಡಿಯ ಹರಳು ಎನ್ನುವದು ಸುಂದರವಾದ ಉಪಮೆ. ಈ ಉಪಮೆಯು ಹಳ್ಳಿಗರಿಗೆ ವಿಶಿಷ್ಟವಾದ ಉಪಮೆ ಎನ್ನುವದನ್ನು ಗಮನಿಸಬೇಕು.

‘ನೀ ಹೀಂಗ ನೋಡಬ್ಯಾಡ ನನ್ನ’ ಕವನದ ‘ಹುಣ್ಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ’ ಎನ್ನುವದು ಒಂದು ಸಂಕೀರ್ಣ ಉಪಮೆಯಾಗಿದೆ. ನಾಯಕನ ಹೆಂಡತಿಯ ರೂಪವು ಹುಣ್ಣಿವೆಯ ಚಂದ್ರನಂತೆ ಶಾಂತ ಹಾಗು ಸುಂದರವಾಗಿರುವದನ್ನು ಹೇಳುತ್ತಲೇ, ಇದೀಗ ಆ ಮುಖದ ಮೇಲೆ ಪ್ರೇತಕಳೆ ಆವರಿಸಿರುವದನ್ನೂ ಸಹ ಇಲ್ಲಿ ಹೇಳಲಾಗಿದೆ.

ಉಪಮೆಗಳಂತೆ ಬೇಂದ್ರೆಯವರ ರೂಪಕಗಳೂ ಸಹ ವಿಶಿಷ್ಟವಾಗಿವೆ. ‘ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ’ ಎನ್ನುವ ರೂಪಕವನ್ನು ನೋಡಿರಿ. ಹರಿಯುತ್ತಿರುವ ಹಳ್ಳವು ಜೀವನವನ್ನು ಸೂಚಿಸುವ ರೂಪಕವಾದರೆ, ‘ಮೊದಲಿಗೆ’ ಎನ್ನುವದು ತಾರುಣ್ಯದ ಕಾಲದ ಸೂಚನೆಯಾಗಿದೆ.

ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧರಾದ ಮೂವರು ಕವಿಗಳ (ಕಾಲಿದಾಸ, ಭಾರವಿ ಹಾಗು ದಂಡಿನ) ವೈಶಿಷ್ಟ್ಯಗಳನ್ನು ವರ್ಣಿಸುತ್ತ, ಮಾಘ ಎನ್ನುವ ಕವಿಯಲ್ಲಿ ಈ ಮೂರೂ ಲಕ್ಷಣಗಳು ಸಮ್ಮಿಲಿತವಾಗಿವೆ ಎಂದು ಹೇಳುವ ಶ್ಲೋಕವೊಂದು ಹೀಗಿದೆ:
ಉಪಮಾ ಕಾಲಿದಾಸಸ್ಯ
ಭಾರವೇರರ್ಥಗೌರವಮ್
ದಂಡಿನ: ಪದಲಾಲಿತ್ಯಮ್
ಮಾಘೇ ಸಂತಿ ತ್ರಯೋ ಗುಣಾ:
ಕಾಲಿದಾಸನ ಉಪಮಾಸಾಮರ್ಥ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ ಇವು ಬೇಂದ್ರೆಯವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿವೆ. ಇವರೆಲ್ಲರ ಸರಿಜೋಡಿಯಾದ ಪ್ರತಿಭೆಯೂ ಬೇಂದ್ರೆಕಾವ್ಯದಲ್ಲಿದೆ. ಬೇಂದ್ರೆ ಕಾವ್ಯದಲ್ಲಿಯ ಭಾಷೆ, ಛಂದಸ್ಸು ಹಾಗು ಅಲಂಕಾರಗಳು ಅವರ ಅನನ್ಯ ಪ್ರತಿಭೆಗೆ ಸಾಕ್ಷಿಯಾಗಿವೆ.

Tuesday, January 3, 2012

ಬೇಂದ್ರೆಯವರ ‘ಅರಳು ಮರಳು’

ಮರುಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರುಳಸಿದ್ಧ
ನಿಮ್ಮರುಳಿನಿಂದ ಮರ ಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ—
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು-ಬೆರಳು, ಆ ಕರುಳು-ಅರಳು
ಮರುಳೂನು ತಂಪ್ರಸಾದ

ಬೇಂದ್ರೆಯವರ ಮೊದಲ ಕಾವ್ಯರಚನೆಯಾದ ‘ಕೃಷ್ಣಾಕುಮಾರಿ’ಯು ೧೯೨೨ರಲ್ಲಿ ಪ್ರಕಟವಾಯಿತು. ಅವರ ‘ಗಂಗಾವತರಣ’ ಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ನಡುವಿನ ೨೯ ವರ್ಷಗಳಲ್ಲಿ ಗರಿ,ಮೂರ್ತಿ, ಕಾಮಕಸ್ತೂರಿ, ಸಖೀಗೀತ, ನಾದಲೀಲೆ, ಉಯ್ಯಾಲೆ, ಮೇಘದೂತ (ಅನುವಾದ), ಹಾಗು ಹಾಡು-ಪಾಡು ಎನ್ನುವ ಕವನಸಂಕಲನಗಳು ಮತ್ತು ‘ನಿರಾಭರಣ ಸುಂದರಿ’ (ಕಥಾಸಂಕಲನ) ಹಾಗು ‘ಸಾಹಿತ್ಯ ಮತ್ತು ಸಂಶೋಧನೆ’ ಎನ್ನುವ ಕೃತಿಗಳು ಪ್ರಕಟವಾದವು. ಆನಂತರದ ಐದು ವರ್ಷಗಳಲ್ಲಿ ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ ಹಾಗು ಜೀವಲಹರಿ ಎನ್ನುವ ಐದು ಕವನಸಂಕಲನಗಳು ಹೊರಬಂದವು. ೧೯೫೬ರಲ್ಲಿ ಬೇಂದ್ರೆಯವರು ೬೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ, ಕೊನೆಯ ಐದು ಸಂಕಲನಗಳನ್ನು ಸಂಗ್ರಹಿಸಿ ‘ಅರಳು ಮರಳು’ ಸಂಕಲನವನ್ನು ಪ್ರಕಟಿಸಲಾಯಿತು. ಈ ಸಂಗ್ರಹಕ್ಕಾಗಿ ಬೇಂದ್ರೆಯವರು ಬರೆದ ಆತ್ಮನಿವೇದನೆಯ ಕೊನೆಯಲ್ಲಿ ಮೇಲಿನ ಕವನವಿದೆ.

‘ಅರವತ್ತು ವರ್ಷಕ್ಕೆ ಅರಳು ಮರಳು’ ಎನ್ನುವ ಮಾತು ಕನ್ನಡದಲ್ಲಿದೆ. ಬೇಂದ್ರೆಯವರ ಪ್ರತಿಭೆಗೆ ಅರಳುಮರಳು ಎಂದೂ ಮುಸುಕಲಿಲ್ಲ. ಈ ಪ್ರತಿಭೆ ಇದೀಗ ಹೆಚ್ಚು ಅಂತರ್ಮುಖವಾಯಿತಷ್ಟೆ. ಇದೇ ಮಾತನ್ನು ಬೇಂದ್ರೆಯವರು ‘ಮರುಳಲ್ಲ ನಾನು, ಮರುಳಾದೆನಯ್ಯ’ ಎನ್ನುವದರ ಮೂಲಕ ಹೇಳುತ್ತಾರೆ. ‘ನಾನು ಹುಚ್ಚನಲ್ಲ, ಆದರೆ ನನಗೆ ನೀನು ಹುಚ್ಚು ಹಿಡಿಸಿರುವೆ’ ಎನ್ನುವ ಅವರ ಮಾತನ್ನು ಮೀರಾದೇವಿಯ ‘ಹರಿ ಕೀ ಮೈ ತೊ ಪ್ರೇಮದಿವಾನಿ’ ಎನ್ನುವ ಗೀತೆಗೆ ಹೋಲಿಸಬಹುದು. ಕನ್ನಡದ ಅಕ್ಕಮಹಾದೇವಿಯೂ ಸಹ ಚೆನ್ನಮಲ್ಲಿಕಾರ್ಜುನಗೆ ಮರುಳಾದವಳೇ!

ಬೇಂದ್ರೆಯವರು ತಮ್ಮ ಹೃದಯದಲ್ಲಿರುವ ಗುರುವನ್ನು ‘ಮರುಳಸಿದ್ಧ’ ಎಂದು ಕರೆಯುತ್ತಾರೆ. ಸಾಧನೆಯ ಕೊನೆಯ ಹಂತವನ್ನು ಮುಟ್ಟಿದ ಯೋಗಿಗಳು ಲೋಕದ ಕಣ್ಣಿಗೆ ‘ಮರುಳ’ರಂತೆಯೇ ಕಾಣುತ್ತಿರುತ್ತಾರೆ. (ಉದಾಹರಣೆಗೆ ರಾಮಕೃಷ್ಣ ಪರಮಹಂಸರು.) ಕೆಲವು ಯೋಗಿಗಳು ಉದ್ದೇಶಪೂರ್ವಕವಾಗಿ ಮರುಳರಂತೆ ನಟಿಸುತ್ತಿರುತ್ತಾರೆ. ಉದಾಹರಣೆಗೆ ಬ್ರಹ್ಮಚೈತನ್ಯ ಮಹಾರಾಜರ ಗುರುಗಳಾದ ತುಕಾಮಾಯಿಯವರು. ಏನೆ ಇರಲಿ, ಇವರೆಲ್ಲ ದೇವರಿಗೆ ಮರುಳಾದಂತಹ ಸಿದ್ಧಪುರುಷರು ಎನ್ನುವದಂತೂ ನಿಜ. ಈ ಗುರುಗಳು ತಮ್ಮ ಶಿಷ್ಯರಿಗೂ ಅಲೌಕಿಕದ ಮರುಳು ಹಿಡಿಸಿದಂಥವರು.

ಮರುಳಸಿದ್ಧನು ಅರಳಿದವನು ಅಂದರೆ ಪೂರ್ಣತೆಯನ್ನು ಮುಟ್ಟಿದವನು. ಅರುವು ಅಂದರೆ ಜ್ಞಾನ. (‘ಓ ಗುರುವೆ, ಅರುವೆ, ಶರಣಾಗಿ ಬರುವೆ..’ ಎನ್ನುವ ಬೇಂದ್ರೆಯವರ ಕವನವನ್ನು ಗಮನಿಸಿರಿ.) ಮರುಳಸಿದ್ಧನ ಅರಳುವಿಕೆ ಆತನ ಸಾಧಕರನ್ನೂ ಸಹ ಅರಳಿಸುತ್ತದೆ ಅಂದರೆ ಉತ್ಕ್ರಾಂತಿಯ ಪರಮ ನೆಲೆಗೆ ತಲುಪಿಸುತ್ತದೆ. (--ಇದು ಅರವಿಂದರು ಹೇಳುವ Superhuman Evolution ಆಗಿದೆ.—)ಆದರೆ ಈ ಹಾದಿ ಬಲು ದುರ್ಗಮವಾದ ಪಥವಾಗಿದೆ. ‘ಮರ ಮರಳಿ’ ಎನ್ನುವ ಪದಗಳ ಮೂಲಕ ಬೇಂದ್ರೆಯವರು ಸಾಧಕನು ತನ್ನ ಹಾದಿಯಲ್ಲಿ ಮತ್ತೆ ಮತ್ತೆ ಹಿಂದೆ ಮರಳುತ್ತಿರುತ್ತಾನೆ ಹಾಗು ಮತ್ತೆ ಮುನ್ನಡೆಯುತ್ತಾನೆ ಎನ್ನುವದನ್ನು ಸೂಚಿಸುತ್ತಾರೆ.

‘ಮರಳು’ವದು ಎಂದರೆ ಕುದಿಯುವದು ಎನ್ನುವ ಅರ್ಥವೂ ಇದೆ. ಪರಿಶುದ್ಧ ಮೂಲವಸ್ತುವನ್ನು ಬೇರ್ಪಡಿಸುವ ಉದ್ದೇಶದಿಂದ ರಸಾಯನತಜ್ಞರು ಮಿಶ್ರವಸ್ತುವನ್ನು ಕುದಿಸುತ್ತಾರೆ ಎನ್ನುವದು ತಿಳಿದಿರುವ ಸಂಗತಿ. ಇದರಂತೆಯೇ ಮನೋವಿಕಾರಗಳಿಂದ ಕೂಡಿದ ಚೈತನ್ಯವನ್ನು ಮತ್ತೆ ಮತ್ತೆ ಕುದಿಸಿ, ಕಶ್ಮಲಗಳನ್ನು ಬೇರ್ಪಡಿಸಿ, ಮರುಳಸಿದ್ಧನು ಸಾಧಕನನ್ನು ಪರಿಶುದ್ಧಾತ್ಮನನ್ನಾಗಿ ಮಾರ್ಪಡಿಸುತ್ತಾನೆ. (‘ಬೆಂದರೆ ಅದು ಬೇಂದ್ರೆ’ ಎಂದು ಬೇಂದ್ರೆಯವರೇ ಹೇಳಿದ್ದಾರೆ.) ಇದೀಗ ಸಾಧಕನ ಭಾವವು ಶುದ್ಧವಾಗುತ್ತದೆ ಹಾಗು ಸ್ಫುಟವಾಗುತ್ತದೆ ಅಂದರೆ ಸ್ಫಟಿಕದಂತೆ ನಿಚ್ಚಳವಾಗುತ್ತದೆ.

ಶ್ರುತಿಶುದ್ಧವಾದ ‘ಕಿನ್ನರಿ’ ವಾದ್ಯದಿಂದ ಸತತವಾಗಿ ಒಂದೇ ಸುನಾದ ಹೊರಹೊಮ್ಮುತ್ತದೆ. ಅದರಂತೆ ಕವಿ ಬೇಂದ್ರೆಯವರ ಅಂತಃಕರಣದಿಂದ ಈಗ ಗುರುಗೀತೆ ಮಾತ್ರ ಹೊರಹೊಮ್ಮುತ್ತಿದೆ. ಅವರ ‘ಮಾತು’ ಅಂದರೆ ಈ ಗೀತೆ ಈಗ ಗುರು ಮರುಳಸಿದ್ಧರ ಕೀರ್ತನೆಗೆ ಮಾತ್ರ ಮೀಸಲಾಗಿದೆ. ಈ ಮುಡಿಪಾದ ಭಕ್ತಿಪುಷ್ಪವನ್ನು ಸಾಧಕನು ಮೊದಲು ಅರ್ಪಿಸುವದು ಗುರುವಿನ ಅಡಿಗಳಿಗೆ, ತನ್ನಂತರ ಆತನ ಮುಡಿಗೆ. ಸಾಧಕನ ಈ ನಿವೇದನೆಗೆ ಅಂದರೆ ನೈವೇದ್ಯಕ್ಕೆ ಗುರುವು ಪ್ರಸನ್ನನಾಗಿ ಪ್ರಸಾದವನ್ನು ಅನುಗ್ರಹಿಸುತ್ತಾನೆ. ಬೇಂದ್ರೆಯವರಿಗೆ ದೊರೆತ ಪ್ರಸಾದ ಏನು? ...... ‘ಕೊರಳು ಮತ್ತು ಬೆರಳು’, ಅಂದರೆ ಹಾಡು ಮತ್ತು ಕಾವ್ಯ. ತನ್ನಂತರ ಬೇಂದ್ರೆಯವರು ಹಾಡುವದು ‘ಮರುಳಸಿದ್ಧನ’ ಗೀತೆಯನ್ನು ಹಾಗು ರಚಿಸುವದು ‘ಅವನ’ ಕಾವ್ಯವನ್ನು ಮಾತ್ರ.

`ಕರುಳು’ ಅಂದರೆ ಪ್ರೀತಿ. ಭಗವಂತನನ್ನು ಮಾತ್ರವಲ್ಲದೆ, ಆತನ ಸಕಲ ಸೃಷ್ಟಿಯನ್ನೂ ಸಹ ಬೇಂದ್ರೆಯವರು ಪ್ರೀತಿಸುತ್ತಾರೆ. ಇದು ಅವರ ‘ಕರುಳು’. ‘ಅರಳು’ ಎಂದರೆ ಜ್ಞಾನ. ಪ್ರೀತಿ ಹಾಗು ಜ್ಞಾನ ಇವೆರಡೂ ದೊರೆತಾಗಲೆ, ಸಾಧಕನಿಗೆ ಸಿದ್ಧಿಯಾಗುವದು. ಇವೆರಡೂ ದೊರೆಯುವದು ಭಗವಂತನ ಪ್ರಸಾದದಿಂದಲೇ. ಇಷ್ಟೇ ಏಕೆ? ದೇವರಿಗೆ ಮರುಳಾಗಿರುವ ಸಾಧಕನ ‘ಮರುಳೂ’ ಸಹ ಭಗವಂತನ ಪ್ರಸಾದವೇ ಅಲ್ಲವೆ! ‘ಮರುಳೂನು ತಂ ಪ್ರಸಾದ’ ಎಂದು ಬೇಂದ್ರೆಯವರು ಏಕೋಭಾವದಿಂದ ಆ ಹುಚ್ಚನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.

ಕರುಳು ಎಂದರೆ ದೇಹವೆಂದೂ ಅರ್ಥವಾಗುತ್ತದೆ. ಅರಳು ಎಂದರೆ ತಾನು ಈ ದೇಹ ಅಲ್ಲ ಎನ್ನುವ ಜ್ಞಾನ. ದೇಹವನ್ನು ಕೊಟ್ಟವನೇ, ‘ಈ ದೇಹ ತಾನಲ್ಲ’ ಎನ್ನುವ ಜ್ಞಾನವನ್ನೂ ಕೊಡುತ್ತಾನೆ. ಆ ಜ್ಞಾನ ಲಭಿಸುವವರೆಗೆ ಜೀವಿಯು ಮರುಳಿನಲ್ಲಿ ಅಂದರೆ ಮಾಯೆಯಲ್ಲಿರುತ್ತಾನೆ. ಆದುದರಿಂದ ದೇಹ, ದೇಹದ ಅಜ್ಞಾನ ಹಾಗು ಸುಜ್ಞಾನ ಇವೆಲ್ಲವೂ ಆ ಜಗದ್ಗುರು ನೀಡುವ ಪ್ರಸಾದವೇ ಆಗಿವೆ!

ಮರುಳಸಿದ್ಧ ಹಾಗು ಕಿನ್ನರಿಗೆ ಒಂದು ಹಿನ್ನೆಲೆಯಿದೆ. ಬೇಂದ್ರೆಯವರ ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ ಆ ಹಿನ್ನೆಲೆ ಲಭ್ಯವಾಗುತ್ತದೆ. ಮರುಳಸಿದ್ಧ ಎನ್ನುವ ಮಹಾತ್ಮರೊಬ್ಬರು ಉತ್ತರಭಾರತದಲ್ಲಿ ತಮ್ಮ ದಿಗ್ವಿಜಯವನ್ನು ಪೂರೈಸಿ, ಕರ್ನಾಟಕದಲ್ಲಿರುವ ಕೊಲ್ಲಾಪುರಕ್ಕೆ (--ಇದೀಗ ಮಹಾರಾಷ್ಟ್ರದಲ್ಲಿದೆ--) ಬರುತ್ತಾರೆ. ಅಲ್ಲಿರುವ ‘ಮಾಯೆ’ ಎನ್ನುವ ಯೋಗಿನಿಯು ಸಾವಿರ ಯೋಗಿಗಳನ್ನು ಸೋಲಿಸಿ, ತನ್ನ ಮಂತ್ರಬಲದಿಂದ ತನ್ನ ಊಳಿಗಕ್ಕೆ ತೊಡಗಿಸಿರುತ್ತಾಳೆ. ಮರುಳಸಿದ್ಧರೊಡನೆ ಅನೇಕ ದಿನಗಳವರೆಗೆ ವಾಗ್ವಾದ ನಡೆದು ಮಾಯೆ ಸೋಲುತ್ತಾಳೆ. ಮಂತ್ರಬಲದಿಂದ ಮರುಳಸಿದ್ಧರನ್ನು ಸೋಲಿಸಲು ಮಾಯೆ ಹವಣಿಸುತ್ತಾಳೆ. ಆದರೆ ಮರುಳಸಿದ್ಧರು ಮಾಯೆಯನ್ನೇ ಒಂದು ಕಿನ್ನರಿಯಾಗಿ ಪರಿವರ್ತಿಸಿ, ತಮ್ಮೊಡನೆ ಒಯ್ಯುತ್ತಾರೆ. ಈ ಕಿನ್ನರಿಯು ಮೊದಮೊದಲು ಹಟ ಮಾಡಿದರೂ, ಕೊನೆಗೆ ಮರುಳಸಿದ್ಧರಿಗೆ ಮರುಳಾಗಿ, ಅವರಿಗೆ ಒಲಿದು ದಿವ್ಯ ಸಂಗೀತವನ್ನು ಹೊರಡಿಸುತ್ತದೆ.

ಈ ಗೀತೆಯಲ್ಲಿ ಬೇಂದ್ರೆಯವರು ಗುರುರೂಪಿ ಭಗವಂತನನ್ನು ಮರುಳಸಿದ್ಧನಿಗೆ ಹಾಗು ಮಾಯೆಯಲ್ಲಿ ಸಿಲುಕಿದ ತಮ್ಮನ್ನು ಕಿನ್ನರಿಗೆ ಹೋಲಿಸುತ್ತಿದ್ದಾರೆ. ಯಾವ ಸಾಧಕರೂ ಸಾಧನಾಪಥದೆಡೆಗೆ ಸರಳವಾಗಿ ಆಕರ್ಷಿತರಾಗುವದಿಲ್ಲ. ಅನೇಕ ಜನ್ಮಗಳ ಆಕರ್ಷಣೆ ಹಾಗು ವಿಕರ್ಷಣೆಗಳ ಬಳಿಕ ಸಾಧಕನಿಗೆ ‘ಮರುಳಸಿದ್ಧ’ ಎಂದರೆ ಆತನ ಗುರು ದೊರೆಯುತ್ತಾನೆ. ಗುರುವಿನ ಜೊತೆಗೆ ಶಿಷ್ಯನ ವಾಗ್ವಾದ ನಡೆದೇ ಇರುತ್ತದೆ. ಒಮ್ಮೆ ಅರಿವು ಮೂಡಿದ ಬಳಿಕ ಶಿಷ್ಯನು ‘ಗುರುವಿನ ಗುಲಾಮ’ನಾಗುತ್ತಾನೆ. (ವಿವೇಕಾನಂದ ಹಾಗು ರಾಮಕೃಷ್ಣ ಪರಮಹಂಸರು ಈ ಮಾತಿಗೆ ಉಜ್ವಲ ನಿದರ್ಶನರಾಗಿದ್ದಾರೆ.)

ಬೇಂದ್ರೆಯವರು ಮೊದಲಿನಿಂದಲೂ ಭಕ್ತಕವಿಗಳು. ಈ ಭಕ್ತಿ ಅವರ ಕವನಗಳಲ್ಲಿ ವಿವಿಧ ಬಗೆಗಳಲ್ಲಿ ವ್ಯಕ್ತವಾಗಿದೆ. ತಾಯಿ, ತಾಯಿನಾಡು, ತಾಯಿನುಡಿ, ಪ್ರಕೃತಿ ಇವೆಲ್ಲವುಗಳ ಮೇಲಿನ ಅವರ ಪ್ರೀತಿ ಭಕ್ತಿಗೆ ಹತ್ತರವಾದದ್ದು. ಅವರ ಅಜ್ಜಿ ಹಾಗು ತಾಯಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿದ್ದ ಸಂತಶ್ರೇಷ್ಠ ಬ್ರಹ್ಮಚೈತನ್ಯ ಮಹಾರಾಜರಿಂದ ಉಪದೇಶ ಪಡೆದವರು.ಸ್ವತಃ ಬೇಂದ್ರೆಯವರಿಗೆ ಚಿಕ್ಕಂದಿನಲ್ಲಿ ಅವರ ದರ್ಶನಲಾಭವಾಗಿತ್ತು. ಗುಳವಣಿ ಮಹಾರಾಜ ಹಾಗು ಟೇಂಬೆ ಮಹಾರಾಜರಂತಹ ಸಂತರನ್ನೂ ಬೇಂದ್ರೆಯವರು ಕಂಡಿದ್ದರು. ಅರವಿಂದರು ಬೇಂದ್ರೆಯವರ ಮಾನಸ ಗುರುಗಳು. ಶರಣ ಸಾಹಿತ್ಯದಿಂದ ಪ್ರಭಾವಿತರಾದ ಬೇಂದ್ರೆಯವರಿಗೆ ಅಲ್ಲಮಪ್ರಭುಗಳಲ್ಲಿ ವಿಶೇಷ ಒಲವು. ಇವೆಲ್ಲ ಬೇಂದ್ರೆಯವರನ್ನು ಸಾಧನಾಪಥಕ್ಕೆ ಎಳೆದ ಅಂಶಗಳು.

ಲೌಕಿಕ ದೃಷ್ಟಿಯಲ್ಲಿ ಈ ಸಾಧನಾಪಥವು ಹುಚ್ಚಿನ ಹಾದಿ. ಈ ಸಾಧನೆಯಲ್ಲಿ ಸಿದ್ಧಿ ಪಡೆದವರನ್ನು ಗುರುತಿಸಲಾಗದ ಲೋಕವು, ಅವರನ್ನು ‘ಮರುಳಸಿದ್ಧ’ ಎಂದು ಕರೆದರೆ ಆಶ್ಚರ್ಯವಿಲ್ಲ. ಆದರೆ ಇಂತಹ ಯೋಗಿಗಳ ಮಹತ್ತನ್ನು ಅರಿತವರು, ಇವರನ್ನು ಸದಾಕಾಲವೂ ತಮ್ಮ ಹೃದಯಕಮಲದಲ್ಲಿ ಇಟ್ಟುಕೊಳ್ಳುತ್ತಾರೆ. (‘ನಂಬಿರುವೀ ಎದೆ ಹೂವನೆ ಆಸನ ಮಾಡಿರುವಿರಿ’ ಎಂದು ಬೇಂದ್ರೆಯವರು ಮತ್ತೊಂದು ಕವನದಲ್ಲಿ ಹಾಡಿದ್ದಾರೆ.) ಆದುದರಿಂದಲೇ ಬೇಂದ್ರೆಯವರು ತಮ್ಮ ಗುರುವನ್ನು ‘ನನ್ನೆದೆಯ ಮರುಳಸಿದ್ಧ’ ಎಂದು ಕರೆದಿದ್ದಾರೆ. ಈ ಮರುಳಸಿದ್ಧರು ತೋರಿಸುವ ಹಾದಿಯು ಅಗ್ನಿಪಥವಾಗಿದೆ. ಇದರಲ್ಲಿ ಹಾಯ್ದು ಹೊರಬರಬಂದಾಗ, ಸಾಧಕನ ಅಂತಃಕರಣವು ಸ್ಫಟಿಕದಂತೆ ಶುದ್ಧವಾಗಿರುತ್ತದೆ. ಆನಂತರದ ಆತನ ಕ್ರಿಯೆ ಎಲ್ಲವೂ ಗುರುಸಮರ್ಪಿತವಾದ ನೈವೇದ್ಯ! ಇದು ಬೇಂದ್ರೆಯವರ ಕಾವ್ಯಧರ್ಮ ಹಾಗು ಜೀವನಧರ್ಮ.

Tuesday, December 13, 2011

ಠಕ್ಕರ ಬಾಳಪ್ಪ

ಬಾಳ ಠಾಕರೆಯವರಿಗೆ ಇತಿಹಾಸ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಓಡಿಸುವ ಮಾತುಗಳನ್ನು ಆಡುತ್ತಿರುವ ಅವರು ಭಾರತದ ಪ್ರಾಚೀನ ಇತಿಹಾಸವನ್ನು ಅರಿತುಕೊಳ್ಳುವದು ಒಳ್ಳೆಯದು. ಪ್ರಾಚೀನ ಕಾಲದಲ್ಲಿ ಅನೇಕ ಬುಡಕಟ್ಟುಗಳು ಭಾರತದಲ್ಲೆಲ್ಲ ಹರಡಿಕೊಂಡಿದ್ದವು. ಕನ್ನಡ ಬುಡಕಟ್ಟುಗಳು ಹಿಮಾಲಯದ ತಪ್ಪಲಿನಲ್ಲಿಯೂ ವಾಸಿಸುತ್ತಿದ್ದವು. ಇಂದಿನ ಗುಜರಾತ, ಮಹಾರಾಷ್ಟ್ರಗಳಲ್ಲಿಯೂ ಸಹ ಈ ಬುಡಕಟ್ಟುಗಳು ವಾಸಿಸುತ್ತಿದ್ದವು. ಬಹುಶಃ ಸಿಂಧು ಸಂಸ್ಕೃತಿಯ ನಾಗರಿಕರು ಕನ್ನಡಿಗರೇ ಆಗಿರಬಹುದು. ಈ ಎಲ್ಲ ಊಹೆಗಳಿಗೆ ಕನಿಷ್ಠ ಮೇಲ್ನೋಟದ ಸಾಕ್ಷಿಗಳಾದರೂ ಬೇಕಲ್ಲವೆ? ಅದೃಷ್ಟವಶಾತ್ ಕೀರ್ತಿಶೇಷ ಶಂ.ಬಾ. ಜೋಶಿಯವರ ಸಂಶೋಧನೆ ಈ ವಿಷಯದಲ್ಲಿ ದಿಕ್ಸೂಚಿಯಾಗಿದೆ. ಭಾಷೆ ಹಾಗು ಸ್ಥಳನಾಮಗಳು ಇತಿಹಾಸವನ್ನು ಶೋಧಿಸುವದರಲ್ಲಿ ಹೇಗೆ ಸಹಾಯಕವಾಗಬಲ್ಲವು ಎನ್ನುವದನ್ನು ಅವರು ತೋರಿಸಿಕೊಟ್ಟಿದ್ದಾರೆ. ಆ ಆಧಾರದ ಮೇಲೆ ಕನ್ನಡಿಗರ ಕುರುಹುಗಳು ಭಾರತದ ಉತ್ತರದಲ್ಲಿಯೂ ಲಭಿಸುವದನ್ನು ಪರಿಶೀಲಿಸಿ ಪ್ರಮಾಣಿಸಬಹುದು.

ಮೊದಲಿಗೆ ಮಹಾರಾಷ್ಟ್ರದ ಮೂಲವನ್ನು ಪರೀಕ್ಷಿಸೋಣ. ಮಹಾರಾಷ್ಟ್ರ ಎನ್ನುವ ಪದವು ಮರಹಟ್ಟ ಎನ್ನುವ ಕನ್ನಡ ಪದದ ಸಂಸ್ಕೃತೀಕರಣವಾಗಿದೆ.  ಪ್ರಾಚೀನ ಕಾಲದಲ್ಲಿ ಮಹಾರಾಷ್ಟ್ರವೆಲ್ಲ ಅರಣ್ಯಪ್ರದೇಶವಾಗಿತ್ತು. ಹಾಗೆ ನೋಡಿದರೆ ಭಾರತದ ಬಹುಭಾಗವೆಲ್ಲ ಅರಣ್ಯಪ್ರದೇಶವೇ ಆಗಿತ್ತು. ವಾಲ್ಮೀಕಿ ರಾಮಾಯಣದಲ್ಲಿ ಈ ಅರಣ್ಯಭಾಗದ ಸುಂದರ ವರ್ಣನೆಗಳು ಬರುತ್ತವೆ. ಅಟವಿ ಅಥವಾ ಅಡವಿಯಲ್ಲಿ ಇರುವವರು ಆಟವಿಕರು. ನಗರಿಗಳಲ್ಲಿ ಇರುವವರು ನಾಗರಿಕರು. ಅಡವಿ ಅಥವಾ ಮರಗಳ ಮಧ್ಯೆ ವಾಸಿಸುವವರು ಮರಹಾಡಿಗಳು ಅಥವಾ ಮರಹಟ್ಟರು. (ಕನ್ನಡಿಗರು ತಮ್ಮ ಬೀಡುಗಳನ್ನು ‘ಹಾಡಿ’, ‘ಹಟ್ಟಿ’ ಎಂದು ಕರೆಯುತ್ತಾರೆ.) ಆರ್ಯ ಅಥವಾ ಆರಿಯ ಜನಾಂಗಗಳು ಭಾರತವನ್ನು ಆಕ್ರಮಿಸತೊಡಗಿದಾಗ ಹಾಗು ಪ್ರಭಾವಶಾಲಿಗಳಾದಾಗ ಇಲ್ಲಿಯ ಪ್ರದೇಶನಾಮಗಳನ್ನು ತಮ್ಮ ನಾಲಗೆಗೆ ತಕ್ಕಂತೆ ಬದಲಾಯಿಸಿಕೊಂಡರು. ಮರಹಟ್ಟವು ಮರಹಾಟವಾಗಿ ಬಳಿಕ ಮಹಾರಾಷ್ಟ್ರವಾಯಿತು. ಇಲ್ಲಿಯ ನಿವಾಸಿಗಳು ಮರಾಠಾ ಆದರು. ‘ಮ’ಕಾರಕ್ಕೆ ವಕಾರ ಬಂದಲ್ಲಿ ಅದು ವರ್ಹಾಡ ಎನ್ನುವ ಸ್ಥಳವೂ ಆಯಿತು. ಅದರಂತೆ ಕರಹಾಡಿ ಗ್ರಾಮವು ಕರ್ಹಾಡ ಎಂದಾಯಿತು. ಇಂದು ಮಹಾರಾಷ್ಟ್ರದಲ್ಲಿರುವ ಅಥವಾ ಕರ್ನಾಟಕದಲ್ಲಿ ಮರಾಠಿ ಪ್ರಭಾವವಿರುವಂತಹ ಬಹಳಷ್ಟು ಊರುಗಳು ಕನ್ನಡ ಹೆಸರಿನ ಆರಯೀಕರಣವೇ ಆಗಿವೆ.
ಕೆಲವು ಉದಾಹರಣೆಗಳು ಇಂತಿವೆ:
ಕರ್ನಾಟಕದಲ್ಲಿ:
ಕಾಳೀನದಿಯ ದಂಡೆಯ ಮೇಲಿರುವ ‘ದಂಡೀಹಳ್ಳಿ’ಯು ‘ದಾಂಡೇಲಿ’ ಆಗಿದೆ.
ಚಾಪಿಹಳ್ಳಿಯು ಚಾಪೋಲಿ ಆಗಿದೆ.
ಮಹಾರಾಷ್ಟ್ರದಲ್ಲಿ:
ಸಂಗೊಳ್ಳಿಯು ಸಾಂಗ್ಲಿ ಆಗಿದೆ.
ಮಿರಜಿ ಇದು ಮಿರಜ ಆಗಿದೆ.
ಕಂದವಳ್ಳಿಯು ಕಾಂದೀವ್ಲಿ ಆಗಿದೆ.
ಕಂದಹಾಳವು ಖಂಡಾಲಾ ಆಗಿದೆ.
ಮುಂಬರಗಿಯು ಮುಂಬಯಿ ಆಗಿದೆ.
ಗುಜರಾತದಲ್ಲಿ:
ಕಂದಹಾಳವು ಕಾಂಡ್ಲಾ ಆಗಿದೆ.
ಬರ್ದಳ್ಳಿಯು ಬಾರ್ಡೋಲಿಯಾಗಿದೆ.
ಉತ್ತರ ಭಾರತದಲ್ಲಿ:
ದೇಹಳ್ಳಿಯು ದೆಹಲಿ ಆಗಿದೆ.

ಅಫಘಾನಿಸ್ತಾನದಲ್ಲಿರುವ ಕಂದಹಾರವು ಬದಲಾಗದೇ ಉಳಿದುಕೊಂಡಿದೆ. ಇದು ಕನ್ನಡದ ಊರು.
(ನೋಡಿರಿ:ಕಂದರು)
ಹಾಗಿದ್ದರೆ, ಆರಿಯ ಜನಾಂಗಗಳು ಮರಹಾಡಿಯನ್ನು ಆಕ್ರಮಿಸಿಕೊಂಡು ‘ಮಹಾರಾಷ್ಟ್ರ’ವನ್ನಾಗಿ ಮಾಡಿದವೆ? ಈ ಮಾತು ಪೂರ್ಣ ಸತ್ಯವಲ್ಲ. ಇಲ್ಲಿರುವ ಕನ್ನಡ ಬುಡಕಟ್ಟುಗಳೇ ಆಕ್ರಮಿಕ ಆರಿಯ ಜನಾಂಗದಲ್ಲಿ ಒಂದಾಗಿ ಹೋಗಿ,ಮರಹಟ್ಟರಿದ್ದವರು ಮರಾಠಾ ಆದರು. ತಮ್ಮ ಕನ್ನಡ ಭಾಷೆಯನ್ನು ಆರಯೀಕರಣಗೊಳಿಸಿದರು. ಇಂದು ಮಹಾರಾಷ್ಟ್ರದಲ್ಲಿರುವ ಮರಾಠಾ ಜನರಲ್ಲಿ ಶೇಕಡಾ ೯೦ರಷ್ಟು ಜನ ಮೂಲತಃ ಕನ್ನಡಿಗರೇ. ಇದು ಹೇಗೆನ್ನುತ್ತೀರಾ? ಇದರ ರುಜುವಾತು ಇಲ್ಲಿದೆ:

ಒಂದು ಜನಾಂಗವು ಯಾವುದೋ ಕಾರಣಕ್ಕಾಗಿ ತನ್ನ ಭಾಷೆಯನ್ನು ಬದಲಾಯಿಸಿಕೊಂಡಿರಬಹುದು. ಉದಾಹರಣೆಗೆ ಅಮೆರಿಕಾಕ್ಕೆ ವಲಸೆ ಹೋದ ಕನ್ನಡಿಗರ ಸಂತತಿ ಕಾಲಕ್ರಮೇಣ ತಮ್ಮ ಕುಟುಂಬದಲ್ಲಿ ಇಂಗ್ಲಿಶ್ ಭಾಷೆಯನ್ನೇ ಬಳಸಬಹುದು. ಆದರೆ ಇಂತಹ ಕುಟುಂಬದ ಮೊದಲ ತಲೆಮಾರಿನ ಸದಸ್ಯರು ತಮ್ಮ ಸಂಬಂಧಸೂಚಕ ಪದಗಳನ್ನು ಹಳೆಯ ಭಾಷೆಯಲ್ಲಿಯೇ ಹೇಳುತ್ತಿರುತ್ತಾರೆ. ಮರಾಠಿ ಭಾಷೆಯನ್ನು ಆಡುವ ಕುಟುಂಬಗಳು ಇವತ್ತಿಗೂ ‘ಅಪ್ಪಾ, ಅಣ್ಣಾ, ಆಯಿ’ ಎನ್ನುವ ಕನ್ನಡ ಭಾಷೆಯ ಸಂಬಂಧಸೂಚಕ ಪದಗಳನ್ನು ಬಳಸುತ್ತಾರೆಯೇ ಹೊರತು, ‘ಪಿತಾಜಿ, ಭಾಯಿ, ಮಾ’ ಎನ್ನುವ ಸಂಸ್ಕೃತಮೂಲ ಪದಗಳನ್ನು ಬಳಸುವದಿಲ್ಲ. ‘ಅಣ್ಣಾ ಹಜಾರೆ’ ಎಂದು ಪ್ರಸಿದ್ಧರಾದ ಕಿಸನ ಹಜಾರೆಯವರನ್ನು ‘ಅಣ್ಣಾ’ ಎಂದು ಕರೆದವರು ಅವರ ಹಳ್ಳಿಯ ಜನ. ಅವರನ್ನು ‘ಭಾಯೀ’ ಎಂದೇಕೆ ಅವರು ಕರೆಯುತ್ತಿಲ್ಲ?

ಮರಾಠಿ ಭಾಷೆಗೆ ಸಂಬಂಧಿಸಿದಂತೆ, ಪುಣೆಯ ನಾಗರಿಕರು ಕೊಲ್ಲಾಪುರದ ನಾಗರಿಕರನ್ನು ಮೂದಲಿಸುತ್ತಾರೆ. ಕೊಲ್ಲಾಪುರದ ಮರಾಠಿಯು ಪುಣೆಯ ಮರಾಠಿಗಿಂತ ಕೆಳಗಿನ ಮಟ್ಟದ್ದು ಎಂದು ಅವರ ಭಾವನೆ. ಉದಾಹರಣೆಗೆ ‘ಈ ಬದಿಯಲ್ಲಿ’ ಎಂದು ಹೇಳಲು ಕೊಲ್ಲಾಪುರದವರು `ಇಕಡೆ’ ಎನ್ನುತ್ತಾರಂತೆ. ಆದರೆ ಪುಣೆಯ ನಾಗರಿಕರು ಮಾತ್ರ ‘ಇಥs’ ಎಂದು ಉಲಿಯುತ್ತಾರಂತೆ.

ಪಾಪ! ಈ ಮರಾಠಿಗರಿಗೆ ‘ಇಕಡೆ’ ಪದವು ಕನ್ನಡದ ‘ಈ ಕಡೆಗೆ’ ಎನ್ನುವ ಪದದ ಹಾಗು ‘ಇಥs’ ಪದವು ಕನ್ನಡದ ‘ಇತ್ತ’ ಎನ್ನುವ ಪದದ ಮಾರ್ಪಾಡು, ಅರ್ಥಾತ್ ಎರಡೂ ಪದಗಳು ಕನ್ನಡ ಪದಗಳು ಎನ್ನುವದೇ ಗೊತ್ತಿಲ್ಲ! ಅನೇಕ ಪದಾರ್ಥವಾಚಕ ಮರಾಠೀ ಪದಗಳೂ ಸಹ ಕನ್ನಡಮೂಲದವೇ ಆಗಿವೆ. ಉದಾಹರಣೆಗೆ ಕನ್ನಡದ ‘ತುಪ್ಪ’ವು ಮರಾಠಿಯಲ್ಲಿ ‘ತೂsಪ’ ಆಗಿದೆ. ಅಷ್ಟೇ ಏಕೆ, ‘ಚಾಂಗು (=ಒಳ್ಳೆಯ)’ ಎನ್ನುವ ಕನ್ನಡ ವಿಶೇಷಣವನ್ನೇ ಮರಾಠಿಗರು ‘ಚಾಂಗಲಾ’ ಎಂದು ಬಳಸುತ್ತಾರೆ. ಒಟ್ಟಿನಲ್ಲಿ ಕನ್ನಡ ಪದಗಳನ್ನು ಎಳೆದು ಹಿಗ್ಗಿಸಿದಾಗ ಮರಾಠಿ ಪದಗಳು ಆಗುತ್ತವೆ ಎನ್ನಬಹುದೇನೊ!

ಹೀಗಿರಲು, ಬಾಳ ಠಾಕರೆಯವರಿಗೆ ತಮ್ಮ ಪೂರ್ವಜರು ಕನ್ನಡಿಗರು ಎನ್ನುವದೇ ಗೊತ್ತಿಲ್ಲ! ಅವರ ಹೆಸರನ್ನೇ ತೆಗೆದುಕೊಳ್ಳಿರಿ. ಆರಿಯ ಜನಾಂಗಗಳು ‘ಳ’ಕಾರವನ್ನು ಬಳಸುವದಿಲ್ಲ; ಕನ್ನಡಿಗರು ಬಳಸುತ್ತಾರೆ. ಆರಿಯರ ‘ಕಾಲೀ’ ದೇವಿ ನಮಗೆ ‘ಕಾಳಿ’ದೇವಿ. ಅವರ ‘ಬಾಲ(=ಬಾಲಕ=ಮಗು)’ ನಮಗೆ ‘ಬಾಳ’. ಠಾಕರೆಯವರು ‘ಬಾಳ’ರು, ‘ಬಾಲ’ರಲ್ಲ. ಆದರೆ ಅವರ ಬಾಲ ಮಾತ್ರ ಉದ್ದವಾಗಿದೆ!

ಅವರ ಅಡ್ಡಹೆಸರಾದ ‘ಠಾಕರೆ’ಯೂ ಸಹ ಮಾರ್ಪಾಡಾದ ಪದವೇ. ಭಾರತದ ವಾಯವ್ಯ ಭಾಗದಲ್ಲಿರುವ ಠಕ್ಕರ ಜನಾಂಗವು ಮುಸ್ಲಿಮ್ ಆಕ್ರಮಣಕ್ಕೊಳಗಾಗಿ ಗುಜರಾತಿಗೆ ಓಡಿ ಬಂದಿತು. ಅಲ್ಲಿಂದ ಮಹಾರಾಷ್ಟ್ರಕ್ಕೆ ಬಂದವರೇ ‘ಠಾಕರೇ’ ಆಗಿರಬಹುದು. ಇನ್ನೊಂದು ಸಾಧ್ಯತೆ ಎಂದರೆ ಕನ್ನಡದ ‘ಠಕ್ಕ’ರೇ ಮರಾಠಿಯಲ್ಲಿ ‘ಠಾಕರೇ’ ಆಗಿರಬಹುದು. ಈ ಸಾಧ್ಯತೆಯನ್ನು ನಗೆಚಾಟಿಕೆ ಎಂದು ತಳ್ಳಿ ಹಾಕುವಂತಿಲ್ಲ. ಇದರ ಕಾರಣ ಹೀಗಿದೆ:

ಬ್ರಿಟಿಶರು ತಮ್ಮ ಆಳ್ವಿಕೆಯಲ್ಲಿ ನಿಶ್ಶಸ್ತ್ರೀಕರಣಗೊಳಿಸಿದ ಅನೇಕ ಯೋಧ ಜನಾಂಗಗಳು ಉಪಜೀವನಕ್ಕಾಗಿ ಕುಟಿಲವೃತ್ತಿಗಳನ್ನು ಹಾಗು ದರೋಡೆಗಾರಿಕೆಯನ್ನು ಅವಲಂಬಿಸಿದವು. ‘ಠಕ್ಕ’ರೂ ಸಹ ಅಂತಹ ಒಂದು ಬುಡಕಟ್ಟು ಜನಾಂಗದವರು. ಇವರೇ ಮಹಾರಾಷ್ಟ್ರದ ‘ಠಾಕರೇ’ ಆಗಿದ್ದಾರು.

ಮಹಾರಾಷ್ಟ್ರದ ಅನೇಕ ಅಡ್ಡಹೆಸರುಗಳು ‘ಏ’ಕಾರಾಂತವಾಗುತ್ತವೆ:
ಕರ್ನಾಟಕದಲ್ಲಿಯ ‘ಸಕ್ಕರಿ’ ಎನ್ನುವ ಅಡ್ಡಹೆಸರು ಮರಾಠಿಯಲ್ಲಿ ‘ಸಾಖರೇ’ ಆಗುತ್ತದೆ.
(‘ಶಾಂತಕವಿ’ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದ ಸಕ್ಕರಿ ಬಾಳಾಚಾರ್ಯರನ್ನು ನೆನಪಿಸಿಕೊಳ್ಳಿರಿ.)
ಕನ್ನಡ ಮಾತನಾಡುವ ಕುಟುಂಬಗಳಿಗೆ ಮರಾಠಿಗರು ‘ಕಾನಡೆ’ ಎನ್ನುವ ಅಡ್ಡಹೆಸರನ್ನು ಕೊಟ್ಟಿದ್ದಾರೆ. ಅದರಂತೆ ‘ಮರಾಠೆ’ ಎನ್ನುವ ಅಡ್ಡಹೆಸರಿನ ಶ್ರೇಷ್ಠ ಕನ್ನಡ ಸಂಶೋಧಕರೊಬ್ಬರು ಬೆಳಗಾವಿಯಲ್ಲಿದ್ದಾರೆ. ಅದರಂತೆ ದಾಬಡೇ, ಹಜಾರೇ, ಜಾಯದೇ ಮೊದಲಾದ ಅಡ್ಡಹೆಸರುಗಳು. ಆದರೆ ಕನ್ನಡಿಗರ ದೃಷ್ಟಿಯಿಂದ ಅತ್ಯಂತ ಮೋಜಿನ ಹೆಸರೆಂದರೆ: ‘ಲೇಲೇ’. ಕನ್ನಡಿಗರು ಆ ವ್ಯಕ್ತಿಯನ್ನು ‘ಲೇ, ಲೇ, ಲೇಲೇ’ ಎಂದು ಕರೆಯಬಹುದೇನೊ! ಈ ರೀತಿಯಲ್ಲಿ ‘ಠಕ್ಕರ ಬಾಳಪ್ಪ’ನೇ ಮರಾಠಿಯಲ್ಲಿ ‘ಬಾಳ ಠಾಕರೇ’ ಆಗಿದ್ದಾರೆ ಹಾಗು ತಮ್ಮ ಮೂಲಿಗರ ಸಂತತಿಯ ವಿರುದ್ಧವೇ ಗರ್ಜಿಸುತ್ತಿದ್ದಾರೆ! ಇದು ಇತಿಹಾಸದ ವೈಪರೀತ್ಯ!

ಬಾಳ ಠಾಕರೆಯವರು ಮರಾಠೇತರರನ್ನು ಮುಂಬಯಿ ಬಿಟ್ಟು ತೊಲಗಿ ಎಂದು ಗರ್ಜಿಸಿದರು. ಮರಾಠಿಗರಿಗೆ
ಮಹಾರಾಷ್ಟ್ರದಲ್ಲಿ  ಕಟ್ಟಿಗೆ ಕಡಿಯುವ ಹಾಗು ನೀರು ಹೊರುವ ಕೆಲಸಗಳು ಮಾತ್ರ ಸಿಗುತ್ತವೆ ಎಂದು ಸಾರ್ವಜನಿಕವಾಗಿ ವ್ಯಥೆ ಪಟ್ಟರು. ಈ ವ್ಯಥೆಯು ಅವರ ನೈಜ ವ್ಯಥೆಯೇ ಅಥವಾ ರಾಜಕೀಯ ಲಾಭಕ್ಕಾಗಿ ಮಾಡಿದ ವ್ಯಥೆಯೆ?
ಇದು ರಾಜಕೀಯ ವ್ಯಥೆಯಾಗಿದ್ದರೆ ಹಾಗು ಇದರಿಂದಾಗಿ ಅವರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಲಾಭವಾಗಿದ್ದರೆ, ಆ ವಿಷಯದಲ್ಲಿ ನಾನು ಏನೂ ಹೇಳಬಯಸುವದಿಲ್ಲ. ಯಾಕೆಂದರೆ ಕರ್ನಾಟಕದ ಕೆಲವು ರಾಜಕಾರಣಿಗಳೂ ಸಹ ಇಂತಹದೇ ಮಾತುಗಳನ್ನಾಡುತ್ತಾರೆ. ಭಾವನೆಗಳನ್ನು ಕೆರಳಿಸುವ ಇಂತಹ ಘೋಷಣೆಗಳಿಂದ ಎಲ್ಲಾ ಬಣ್ಣದ ರಾಜಕಾರಣಿಗಳು ಲಾಭವನ್ನೇ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಇದು ನೈಜ ವ್ಯಥೆಯಾಗಿದ್ದರೆ? ಹಾಗಿದ್ದರೆ, ಇದರಂತಹ ಮೂರ್ಖತನ ಬೇರೊಂದಿಲ್ಲ. ಭಾರತದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವಿಭಿನ್ನ ಭಾಷಿಕರು ವಲಸೆ ಹೋಗುವದು ಸಾಮಾನ್ಯವಾಗಿದೆ. ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೋಗಲೇ ಬೇಕಲ್ಲ. ಆದರೆ ಒಂದು ರಾಜ್ಯಕ್ಕೆ ಹೋದವರು ಅಲ್ಲಿಯ ನಾಡಭಾಷೆಯನ್ನು ಬಳಸಲು ಕಲಿಯಬೇಕು. ಈ ವಿಷಯದಲ್ಲಿ ಮಾತ್ರ ಕನ್ನಡಿಗರನ್ನು ಅಭಿಮಾನ್ಯಶೂನ್ಯರೆಂದು ಹೇಳಲೇ ಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು ಎನ್ನುವ ಪರಿಸ್ಥಿತಿ ಇಲ್ಲವೇ ಇಲ್ಲ. ತಮಿಳುನಾಡಿನಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಇದು ಸಾಧ್ಯವೆ? ಈ ಸಂದರ್ಭದಲ್ಲಿ ನನಗೆ ದಿವಂಗತ ರಾ.ಶಿ.ಯವರ ನಗೆಹನಿಯೊಂದು ನೆನಪಾಗುತ್ತದೆ. ಬೆಂಗಳೂರಿನಲ್ಲಿದ್ದ ಅವರ ದವಾಖಾನೆಗೆ ಬರುತ್ತಿದ್ದ ರೋಗಿಗಳು ತಮಿಳು, ತೆಲಗು, ಉರ್ದು ಮೊದಲಾದ ತಮ್ಮ ಭಾಷೆಗಳಲ್ಲಿಯೇ ಇವರ ಜೊತೆಗೆ ಮಾತನಾಡುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಮಾತನಾಡುವ ಅವಶ್ಯಕತೆ ಇವರಿಗೆ ಬರುತ್ತಿರಲಿಲ್ಲ. ಮನೆಗೆ ಹೋದ ಬಳಿಕ ಹೆಂಡತಿಯೊಡನೆ ಮಾತಂತೂ ಬೇಕಾಗಿಲ್ಲವಲ್ಲ. ಅಲ್ಲಿ ಏನಿದ್ದರೂ TARZAN! ರಾ.ಶಿ.ಯವರಿಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಅಗತ್ಯವೇ ಬರುತ್ತಿರಲಿಲ್ಲವಂತೆ!

ಬಾಳ ಠಾಕರೆಯವರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ, ಕಲಿಯಬಾರದ್ದೂ ಸಾಕಷ್ಟಿದೆ!

[ಟಿಪ್ಪಣಿ: ಕನ್ನಡದ ಪ್ರಸಿದ್ಧ ವ್ಯಕ್ತಿಯೊಬ್ಬರು ಮುಂಬಯಿಗೆ ಸರಬರಾಜು ಆಗುವ ಹುಡುಗಿಯರು ವಿಜಾಪುರ ಭಾಗದ ಕನ್ನಡ ಹುಡುಗಿಯರು ಎಂದು ದುಃಖಿಸಿದ್ದರು. ಇದು ಮತ್ತೊಂದು ಮೂರ್ಖತನ. ಒಬ್ಬಳು ಹೆಣ್ಣುಕೂಸು ಸೂಳೆಯಾಗುವ ಪರಿಸ್ಥಿತಿ ಬಂದರೆ, ಆ ಹೆಣ್ಣುಮಗುವಿಗಾಗಿ ನಾವು ದುಃಖಿಸಬೇಕೆ ಹೊರತು, ಅವಳು ಕನ್ನಡಿಗಳು ಎನ್ನುವ ಕಾರಣಕ್ಕಾಗಿ ಅಲ್ಲ. ದೌರ್ಭಾಗ್ಯದಲ್ಲಿಯೂ ಸಹ ನಾವು ಭಾಷಾವಾದಿಗಳು ಆಗಬೇಕೆ? ಮಾನವೀಯತೆ ಎನ್ನುವದು ಇಲ್ಲವೆ?]

Thursday, November 24, 2011

ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ


ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||

ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||
……………………………………………………………………………………..
ಬೇಂದ್ರೆಯವರಿಗೆ ಶ್ರಾವಣ ಮಾಸ ಸಂಭ್ರಮದ ಮಾಸ.  
ರಭಸದಿಂದ ಹುಯ್ಯುವ ಶ್ರಾವಣದ ಮಳೆಯನ್ನು ಅವರು ರಾವಣನ ಕುಣಿತಕ್ಕೆ ಹೋಲಿಸುತ್ತಾರೆ:

‘ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||’

ಕಣ್ಣೆದುರಿಗೆ ಕುಣಿಯುವಂತಹ ಚಿತ್ರಗಳಿವು. ಇಷ್ಟೇ ಅಲ್ಲ, ಮಳೆಯ ಹುಯ್ಯಲಿನ ನಾದವನ್ನು ಈ ಕವನದಲ್ಲಿ ಆಲಿಸಬಹುದು. ಇದು ಬೇಂದ್ರೆಯವರ ಶ್ರಾವಣಪ್ರತಿಭೆ, ವರಕವಿಗೆ ಮಾತ್ರ ಸಾಧ್ಯವಾದ ವರಸಿದ್ಧಿ!

ಮಳೆಗಾಲ ಮುಂದುವರೆದಂತೆ, ಇಳೆಯಲ್ಲ ಹಸಿರಿನಿಂದ ತುಂಬುತ್ತದೆ.
ಆಗ ಭೂಮಿತಾಯಿಯು ಅವರಿಗೆ ಕಾಣಿಸುವದು ಹೀಗೆ:

‘ಹೂವ ಹಡಲಿಗೆಯನು ಹೊತ್ತ
ಭೂಮಿತಾಯಿ ಜೋಗಿತಿ,
ಮೈsತುಂಬಿ ಕುಣಿಯುತಿಹಳ-
ನಂತ ಕಾಲವೀ ಗತಿ.’

ಸಾಂಗತ್ಯಜೀವಿಯಾದ ಬೇಂದ್ರೆಯವರು ಇಂತಹ ನೋಟವನ್ನು ಸವಿಯಲು ತಮ್ಮ ನಲ್ಲೆಯನ್ನು ಆಹ್ವಾನಿಸುತ್ತಾರೆ.
‘ಏನು ಹಸಿರು, ಏನು ಹಳದಿ
ಸುತ್ತು ಮುತ್ತು ನೋಡು ಕೆಳದಿ!’

‘ಚಿತ್ತಿಯ ಮಳೆಯ ಸಂಜೆ’ ಕವನವು ಈ ಎಲ್ಲ ಕವನಗಳಿಗಿಂತ ತುಂಬ ಭಿನ್ನವಾದದ್ದು. ಇಲ್ಲಿರುವ ಕವಿ ಧ್ಯಾನಸ್ಥ ಕವಿ. ಆತ ಪ್ರಕೃತಿಯಲ್ಲಿ ಲೀನನಾಗಿ, ಪ್ರಶಾಂತ ಸ್ಥಿತಿಯಲ್ಲಿ ತನ್ನ ಸುತ್ತಲಿನ ಚರಾಚರ ಬದುಕನ್ನು ಅವಲೋಕಿಸುತ್ತಿದ್ದಾನೆ. ಈ ಸೃಷ್ಟಿಯು ಭಗವಂತನ ಲೀಲೆ ಎನ್ನುವ ಕಾಣ್ಕೆ ಅವನಿಗಾಗುತ್ತದೆ. ಈ ಕಾಣ್ಕೆಯ ನಿರೂಪಣೆಯನ್ನು ಈ ಕವನದಲ್ಲಿ ಕ್ರಮಶಃ ಮಾಡಲಾಗಿದೆ. ಅಂದರೆ ಕವನದ ಮೊದಲ ನುಡಿಯಿಂದ ಕೊನೆಯ ನುಡಿಯವರೆಗೆ ಈ ಕಾಣ್ಕೆಯ ಸಾವಯವ ಬೆಳವಣಿಗೆ ಇದೆ.


ಕವನದ ಮೊದಲರ್ಧವು (೧ನೆಯ ನುಡಿಯಿಂದ ೭ನೆಯ ನುಡಿಯವರೆಗೆ) ಮಳೆಯ ನಂತರದ ಪ್ರಕೃತಿಯ ಅವಲೋಕನೆಗೆ ಮೀಸಲಾಗಿದೆ. ಪ್ರಕೃತಿಯ ಅಂಶಗಳಾದ ಪಂಚಮಹಾಭೂತಗಳನ್ನು (ಅಂದರೆ ಗಾಳಿ,ನೀರು,ಸೂರ್ಯ,ಭೂಮಿ ಹಾಗು ಆಕಾಶಗಳನ್ನು) ಇಲ್ಲಿ ಮಾನುಷೀಕರಣಗೊಳಿಸಲಾಗಿದೆ. ಕವನದ ಉತ್ತರಾರ್ಧದಲ್ಲಿ (೮ನೆಯ ನುಡಿಯಿಂದ ೧೫ನೆಯ ನುಡಿಯವರೆಗೆ) ಪ್ರಕೃತಿಯೊಡನೆ ಸಮರಸವಾದ ಜೀವಸಂಕುಲದ ಬದುಕಿನ ವರ್ಣನೆ ಇದೆ. ಕೊನೆಯ ಅಂದರೆ ೧೬ನೆಯ ನುಡಿಯಲ್ಲಿ ಪ್ರಕೃತಿಯ ದೈವೀಕರಣವಿದೆ. ಆ ಮೂಲಕ ಸೃಷ್ಟಿ ಹಾಗು ಸೃಷ್ಟಿಮಾತೆಯ ಅಭಿನ್ನತೆಯ ದರ್ಶನವಿದೆ.   
............................................................................................................
ಮೊದಲನೆಯ ನುಡಿ:
ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವದು ಚಿತ್ತಿ ಮಳೆ. ಭೂಮಿಯನ್ನು ಹಸಿಯಾಗಿಡಲು ಈ ಮಳೆ ಬೇಕು. ಆದರೆ ಅದು ಆದೀತು ಎನ್ನುವ ಭರವಸೆ ಇಲ್ಲ. ಆದುದರಿಂದಲೇ ಒಕ್ಕಲಿಗರು ಈ ಮಳೆಗೆ ‘ಕುರುಡು ಚಿತ್ತಿ’ ಎಂದೇ ಕರೆಯುತ್ತಾರೆ. ಬೇಂದ್ರೆಯವರು ಈ ಮಳೆಯ ಧಾಟಿಯನ್ನು ಕುರುಡು ಪ್ರೀತಿಗೆ ಹೋಲಿಸುತ್ತಾರೆ. ಕುರುಡು ಪ್ರೀತಿಗೆ ಸಮಚಿತ್ತ  ಎನ್ನುವದು ಇರುವದಿಲ್ಲ. ಕುರುಡು ಚಿತ್ತಿಯ ಮಳೆಯೂ ಸಹ ಎಲ್ಲೆಲ್ಲೋ ಸುರಿಯುತ್ತದೆ, ಅಷ್ಟೋ ಇಷ್ಟೋ ಸುರಿಯುತ್ತದೆ! ಈ ಚಿತ್ತಿಯ ಮಳೆರಾಯನ ಬಿಂಕವನ್ನು ನೋಡಿರಿ. ಭೂಮಿತಾಯಿಯ ಮಕ್ಕಳಿಗೆ ತಾನು ಅಗತ್ಯ ಎನ್ನುವದನ್ನು ಈ ಮಳೆರಾಯ ಅರಿತಿದ್ದಾನೆ. ಅಂತೆಯೇ ತಾನು ಬರುವಾಗ ಬಿಂಕದ ಮುಗುಳುನಗೆಯನ್ನು  ಸುತ್ತಲೂ ಉರುಳಿಸುತ್ತ ಬರುತ್ತಾನೆ! ಒಕ್ಕಲಿಗರಿಗೆ ಆಸೆಯನ್ನು ಹುಟ್ಟಿಸುತ್ತಾನೆ. ಅವರ ಮುಖದಲ್ಲೂ ಮುಗುಳುನಗೆಯನ್ನು ಅರಳಿಸುತ್ತಾನೆ. ಆದರೆ ಕೊನೆಗೆ ಎಲ್ಲೊ ಕೃಪೆ ತೋರಿಸಿ ಮಾಯವಾಗುತ್ತಾನೆ!
ಚಿತ್ತಿಯ ಮಳೆಯ ಚಿತ್ತವು ಕುರುಡಾಗಿರಬಹುದು, ಅದು ಸುರಿಯದೇ ಇರಬಹುದು. ಆದರೂ ಬೇಂದ್ರೆಯವರು ಈ ಮಳೆಯನ್ನು ಪ್ರೀತಿಯಿಂದ ‘ಕುರುಡು ಪ್ರೀತಿಯ ಹಾಗೆ’ ಎಂದು ಕರೆಯುತ್ತಾರೆ.

ಎರಡನೆಯ ನುಡಿ:
ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ಮಳೆರಾಯನ ಅನಿಶ್ಚಿತ ನಡತೆಯನ್ನು ವರ್ಣಿಸಿದ್ದಾರೆ.
ಈ ನುಡಿಯನ್ನು ಎರಡು ರೀತಿಗಳಲ್ಲಿ ಅರ್ಥೈಸಬಹುದು
ಮೊದಲನೆಯ ಅರ್ಥ ಹೀಗಿದೆ:
‘ಎತ್ತೇನೋ’ ಅಂದರೆ ಎದ್ದಿತೇನೊ ಎನ್ನುವ ಅರ್ಥ ಹಾಗು ‘ಬಿತ್ತೇನೊ’ ಎಂದರೆ ಬಿದ್ದಿತೇನೊ ಎನ್ನುವ ಅರ್ಥ ಆಗುತ್ತದೆ. ಮಳೆಯು ಎದ್ದಿತೋ ಅಂದರೆ ಮೋಡ ಕಟ್ಟುತ್ತಿದೆ ಎನ್ನುವ ಅರ್ಥ. ಹಾಗು ಬಿದ್ದಿತೋ ಅಂದರೆ ಮಳೆ ನೆಲಕ್ಕೆ ಇಳಿದಿತೊ ಎನ್ನುವ ಅರ್ಥ.
ಅದಲ್ಲದೆ ಒಂದು ಜೀವಿಯು ದಿಕ್ಕೆಟ್ಟು ಓಡುವಾಗ, ‘ಎದ್ದಿತೋ, ಬಿದ್ದಿತೋ ಎನ್ನುವಂತೆ ಓಡುತ್ತಿದೆ’, ಎಂದು ಹೇಳುತ್ತಾರೆ. ಅದರಂತೆ ಚಿತ್ತಿಯ ಮಳೆಯ ಮೋಡಗಳು ನೋಡುನೋಡುತ್ತಿರುವಂತೆ ಕಟ್ಟಿಕೊಂಡು, ದಿಕ್ಕು ತಿಳಿಯದಂತೆ ಧಾವಿಸುತ್ತವೆ. ಈಗ ಇಲ್ಲಿ ಆಗುತ್ತಿದೆ ಎನ್ನುವಾಗಲೇ, ಮತ್ತೊಂದೆಡೆ ಮಳೆಯ ಹನಿಗಳು ಮಿಂಚಿನಿಂದ ಉದುರಿದ ಮುತ್ತುಗಳಂತೆ ಉದುರಿ ಹೋಗಿರುತ್ತವೆ. ಕಣ್ಮುಚ್ಚಿ ತೆರೆಯುವದರಲ್ಲಿಯೇ, ಕಣ್ಣಿಗೆ ಕಾಣಿಸದಷ್ಟು ದೂರ ಹೋಗಿರುತ್ತವೆ. ಬೇಂದ್ರೆಯವರು ಇದನ್ನು ಹರದಾರಿಗೆ (=ಸುಮಾರು ೫ ಕಿಲೋಮೀಟರುಗಳು) ಹರದು ಹೋದವು ಎಂದು ಹೇಳುತ್ತಾರೆ.

ಎರಡನೆಯ ಅರ್ಥ ಹೀಗಿದೆ:
ಬೀಜ ಬಿತ್ತಲು ಎತ್ತು ಬೇಕು. ಮಳೆಯ ಮೋಡಗಳು ಎತ್ತಿನಂತೆ ಮುಸುಗುಟ್ಟುತ್ತಿವೆ. ಅವು ಮಳೆಯ ಹನಿಗಳ ಬೀಜವನ್ನು ಬಿತ್ತಲು ಅಂದರೆ ಮಳೆಯೊಡೆಯಲು ಸಿದ್ಧವಾಗಿವೆ. ಮಿಂಚಿನ ಮೂಲಕ ಮುತ್ತಿನಂತಹ ಬೀಜಗಳನ್ನು ಅವು ಚೆಲ್ಲುತ್ತಿವೆ. ಈ ಎತ್ತುಗಳು ಎಷ್ಟು ಶೀಘ್ರವಾಗಿವೆ ಎಂದರೆ, ಕಣ್ಮುಚ್ಚಿ ತೆರೆಯುವದರಲ್ಲಿ ಹರದಾರಿಯಷ್ಟು ಧರೆಯನ್ನು ಹರದವು (=ಹರಗಿದವು=ಬೀಜ ಬಿತ್ತಿದವು). ಚಿತ್ತಿಯ ಮಳೆಯ ಸಮಯದಲ್ಲಿ ಕೆಲವು ರೈತರು ಗಳೆ ಹೊಡೆದು, ಹಿಂಗಾರು ಬಿತ್ತಿಗೆಯ ಮೊದಲ ಕ್ರಮಗಳನ್ನು ಆರಂಭಿಸುತ್ತಾರೆ ಎನ್ನುವದನ್ನು ಗಮನಿಸಬೇಕು.

ಈ ಮಳೆಯು ಬಿದ್ದರೆ, ತೆನೆಗಳಲ್ಲಿ ಮುತ್ತಿನಂತಹ ಕಾಳುಗಳು ತುಂಬಿಕೊಳ್ಳುವವು. ಆದುದರಿಂದ ಈ ಮಳೆಯ ಹನಿಗಳನ್ನು ಬೇಂದ್ರೆಯವರು ‘ಮುತ್ತು’ ಎಂದು ವರ್ಣಿಸುತ್ತಾರೆ.

ಮೂರನೆಯ ನುಡಿ:
ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ಇದು ಮುಂಗಾರು ಮಳೆಗಾಲದ ಕೊನೆಯ ಹಂತ. ಈ ಕಾಲದಲ್ಲಿ ಮುಗಿಲಿನಲ್ಲಿ ದಟ್ಟವಾದ ಮೋಡಗಳು ಇರುವದಿಲ್ಲ. ಆದುದರಿಂದ ಪಶ್ಚಿಮದ ಸೂರ್ಯನ ಎದುರಿಗಿರುವ ಗುಡ್ಡದ ನೆತ್ತಿಯ ಮೇಲೆ ಅಳಿದುಳಿದ ಮೋಡಗಳು ಮುಸುಕು ಹಾಕಿದಂತೆ ಕಾಣುತ್ತದೆ.  ಈ ಗುಡ್ಡದ ಪಕ್ಕದಲ್ಲಿಯೇ ಇರುವ ಮತ್ತೊಂದು ಗುಡ್ಡದ ಮೇಲೆ ಮಾತ್ರ ಸೂರ್ಯಕಿರಣಗಳ ನಿಚ್ಚಳ ಬೆಳಕು ಬಿದ್ದಿರುತ್ತದೆ.
ಒಂದು ಗುಡ್ಡವು ತಲೆಯ ಮೇಲೆ ಮುಸುಕೆಳೆದುಕೊಂಡು ಅಪರಾಹ್ನದ ನಿದ್ರೆಗೆ ಇಳಿದರೆ, ಪಕ್ಕದ ಗುಡ್ಡದ ಮೇಲಿ ಬಿದ್ದ ಬಿಸಿಲೂ ಸಹ ಮೈಚಾಚಿಕೊಂಡು ನಿದ್ರೆಗೆ ಎಳಸುತ್ತಿದೆ!

‘ಬಿಸಿಲು ಮೈಚಾಚ್ಯಾವ’ ಎಂದು ಹೇಳುವದರ ಮೂಲಕ ಬೇಂದ್ರೆಯವರು ಇದು ಅಪರಾಹ್ನದ ಹೊತ್ತು ಎಂದು ಸೂಚಿಸುತ್ತಾರೆ. ಈ ಹೊತ್ತಿನಲ್ಲಿ ಸೂರ್ಯಕಿರಣಗಳು ದೀರ್ಘವಾಗಿ ಬೀಳುವದರಿಂದ ಬಿಸಿಲು ಮೈಚಾಚಿರುತ್ತದೆ. ಅಲ್ಲದೆ, ಮಧ್ಯಾಹ್ನದಲ್ಲಿ ಊಟ ಹೊಡೆದು ಮಲಗಿರುವವರೂ ಸಹ, ಅಪರಾಹ್ನದವರೆಗೆ ‘ಮೈಚಾಚಿರುತ್ತಾರೆ’ ಅಂದರೆ ವಾಮಕುಕ್ಷಿಯಾಗಿರುತ್ತಾರೆ. ‘ಬಿಸಿಲು’ ಕೂಡ ಭೋಜನ ಮುಗಿಸಿ ಮೈಚಾಚಿದೆ!  ಸೂರ್ಯನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವದರಿಂದ ಅವನಿಗೆ ಈ ಸಮಯದಲ್ಲಿ ಪ್ರಖರತೆ ಇರುವದಿಲ್ಲ. ಆ ಕಾರಣಕ್ಕಾಗಿ ಸಹ ‘ಬಿಸಿಲು ಮೈಚಾಚ್ಯಾವ’ ಎಂದು ಹೇಳಬಹುದು. ಬೇಂದ್ರೆಯವರು ಇಲ್ಲಿ ಬಿಸಿಲಿನ ಮಾನುಷೀಕರಣವನ್ನು ಮಾಡುತ್ತಿದ್ದಾರೆ. ಜೊತೆಗೇ ಪ್ರಕೃತಿಯೊಡನೆ ಆಪ್ತತ್ವವನ್ನು ಸಾಧಿಸುತ್ತಿದ್ದಾರೆ.

ನಾಲ್ಕನೆಯ ನುಡಿ:
ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಈ ಕಾಲದಲ್ಲಿ ಮೋಡಗಳು ಕಡಿಮೆ, ಆದರೆ ಗಾಳಿಯ ಅರ್ಭಟಕ್ಕೇನೂ ಕೊರತೆ ಇಲ್ಲ. ಈ ಗಾಳಿಯು ಮಾವಿನ ತೋಪುಗಳಲ್ಲಿ ಹಾಗು ಪೇರಲ ಹಣ್ಣಿನ ತೋಟಗಳಲ್ಲಿ ನುಗ್ಗುತ್ತದೆ. (ಆ ಕಾಲದಲ್ಲಿ ಬೇಂದ್ರೆಯವರು ವಾಸಿಸುತ್ತಿದ್ದ ಸಾಧನಕೇರಿಯಲ್ಲಿ ಮಾವಿನ ತೋಪುಗಳು ಹಾಗು ಪೇರಲ ತೋಟಗಳು ವಿಪುಲವಾಗಿದ್ದವು.) ಅಲ್ಲಿ ಧಾವಿಸಿ ಬಂದು, ಸಿಕ್ಕಿಹಾಕಿಕೊಂಡ ಗಾಳಿಯು ನುಸುಳಿ ಹೊರಬಂದಾಗ ಅದರ ವೇಗ ಕಡಿಮೆಯಾಗಿರುತ್ತದೆ. ಅಲ್ಲದೆ ಗುಡ್ಡಕ್ಕೆ ಢಿಕ್ಕಿ ಹೊಡೆದ ಗಾಳಿಯ ವೇಗವು ಕಡಿಮೆಯಾಗುತ್ತದೆ. ಹೀಗಾಗಿ ಗುಡ್ಡದ ಮೇಲೆ ಹಾಸಿರುವ ಹುಲ್ಲುಗಾವಲನ್ನು ಗಾಳಿಯು ಸವರಿ ಹೋಗುವಾಗ, ಹುಲ್ಲು ಇಬ್ಭಾಗವಾಗಿ, ತಲೆಗೂದಲಿನ ಬೈತಲೆಯನ್ನು ಬಾಚಿದಂತೆ ಕಾಣುತ್ತದೆ.
ಬೀಸುಗಾಳಿಯ ವೇಗವು ಕ್ರಮವಾಗಿ ಕಡಿಮೆಯಾಗುವದನ್ನು ಬೇಂದ್ರೆಯವರು ನುಗ್ಗಿ, ನುಸುಳಿ ಹಾಗು ಸವರಿ ಎನ್ನುವ ಕ್ರಿಯಾಪದಗಳ ಮೂಲಕ ಸೂಚಿಸಿದ್ದಾರೆ.

ಐದನೆಯ ನುಡಿ:
ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಇನ್ನು ತೋಟದಲ್ಲಿರುವ ಎಲೆಗಳು ಹೇಗೆ ಕಾಣಿಸುತ್ತಿವೆ?
ಮಳೆಯ ಒಂದು ಝಳಕು ಬಂದು ಹೋದ ಬಳಿಕ, ವಾತಾವರಣದಲ್ಲಿರುವ ಧೂಳೆಲ್ಲ ಕರಗಿ, ಹರಿದು ಹೋಗುತ್ತದೆ. ಆದುದರಿಂದ ಸೂರ್ಯನ ಕಿರಣಗಳ ಹರಡುವಿಕೆ (=diffraction) ಆಗುವದಿಲ್ಲ. ಹೀಗಾಗಿ ತೋಟದಲ್ಲಿರುವ ತೆಂಗು, ಅಡಕೆ, ಮಾವು ಈ ಮರಗಳ ಎಲೆಗಳ ಮೇಲೆ ಸೂರ್ಯನ ನೇರವಾದ ಕಿರಣಸ್ಪರ್ಶವಾಗುತ್ತದೆ. ಆಗ ಈ ಎಲೆಗಳ ಮೇಲಿರುವ ಮಳೆಯ ಹನಿಗಳು ಸೂರ್ಯಕಿರಣಗಳನ್ನು ಪ್ರತಿಫಲಿಸುತ್ತ ಹೊಳೆಯುತ್ತವೆ. ತೆಂಗಿನ ಗರಿಗಳ ಅಂಚಿನಲ್ಲಿ ಪೋಣಿಸಿದ ಹನಿಗಳ ಮೇಲೆ ಬಿದ್ದ ಕಿರಣಗಳು ಬೆಳ್ಳಿಗೋಲವನ್ನು ಬರೆದಂತೆ ಕಾಣಿಸುತ್ತವೆ. ನೋಡಿದವರ ಕಣ್ಣು ಕೋರೈಸುವಂತೆ ಇವು ಮಿತಿಮೀರಿ ಮಿಂಚುತ್ತವೆ.

ಆರನೆಯ ನುಡಿ:
ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಇಲ್ಲಿಯವರೆಗೆ ಬೇಂದ್ರೆಯವರು ನೋಟವು ಮೇಲಿನಿಂದ ಕೆಳಗಿಳಿಯುತ್ತ,  ಆಕಾಶದಲ್ಲಿ ಕಟ್ಟಿಕೊಂಡ ಮೋಡಗಳನ್ನು,, ಗುಡ್ಡ ಹಾಗು ತೋಪುಗಳನ್ನು ಬಳಿಕ ಮಳೆಯಿಂದ ತೊಯ್ದ ಗಿಡಮರಗಳನ್ನು ತನ್ನ ಹರವಿನಲ್ಲಿ ತೆಗೆದುಕೊಂಡಿತು. ಈಗ ಅವರ ದೃಷ್ಟಿ ಇನ್ನೂ ಕೆಳಗೆ ಇಳಿದು ಕ್ಷಿತಿಜವನ್ನು ನೋಡಿದೆ.

 ತನ್ನ ಕರ್ತವ್ಯವನ್ನು ಪೂರೈಸಿದ ಬಳಿಕ ಪಶ್ಚಿಮ ದಿಕ್ಕಿನಲ್ಲಿ ಇಳಿದ ಸೂರ್ಯನು ಕಿರಣಗಳೆಂಬ ತನ್ನ ಕರಗಳ ಮೂಲಕ ವಿಶ್ವಚೈತನ್ಯಕ್ಕೆ ನಮಸ್ಕರಿಸುತ್ತಿದ್ದಾನೆ. ಇದನ್ನು ಬೇಂದ್ರೆಯವರು ‘ಪಡುವಲಕ ಮುಗಿದ ಕಿರಣ’ ಎಂದು ಹೇಳಿದರು. ‘ಮುಗಿದ ಕಿರಣ’ ಎನ್ನುವದು ಸೂರ್ಯನು ‘ಕೈಮುಗಿದನು’ ಎಂದು ಸೂಚಿಸುವದರ ಜೊತೆಗೇ, ಸೂರ್ಯನ ಕರ್ತವ್ಯವು ಮುಗಿಯಿತು ಎಂದೂ ಸೂಚಿಸುತ್ತದೆ.

ಈ ಕಿರಣಗಳ ಬೆಳಕು ಪೂರ್ವದಿಕ್ಕಿಗೂ ಸಹ ಚಿಮ್ಮುತ್ತದೆ. ಬಾನೆಲ್ಲ ಆಗ ಹಳದಿ ಹಾಗು ಕೆಂಪು ಬಣ್ಣಗಳಿಂದ ತುಂಬುತ್ತದೆ. ಈ ಬಣ್ಣಗಳು ಗಿಡಮರಗಳ ಮೇಲೂ ಪ್ರತಿಫಲಿಸುತ್ತವೆ. ಬೇಂದ್ರೆಯವರು ಈ ಬೆಡಗನ್ನು ‘ಅರಿಶಿಣ ಕುಂಕುಮ ತಂದು ಮರದ್ಹಣಿಗೆ ಹಂಚ್ಯಾವ’ ಎಂದು ಹೇಳುತ್ತಾರೆ. ನಿಸರ್ಗದೇವಿಗೆ ಅರಿಶಿಣ ಕುಂಕುಮ ಹಚ್ಚುವದರ ಮೂಲಕ ಸೂರ್ಯಕಿರಣಗಳು ಅವಳಿಗೆ ಮಂಗಳವನ್ನು  ಕೋರುತ್ತಿವೆ.

ಇಲ್ಲಿ ಪ್ರಕೃತಿಯ ಮಾನುಷೀಕರಣವಷ್ಟೇ ಅಲ್ಲ, ದೈವೀಕರಣವೂ ಆಗಿದೆ. ಬೇಂದ್ರೆಯವರಿಗೆ ಚೈತನ್ಯದ ಎಲ್ಲ ರೂಪಗಳು ದೈವದ ರೂಪಗಳೇ ಆಗಿವೆ.

ಏಳನೆಯ ನುಡಿ:
ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಕಾಲ ಸರಿದಂತೆ, ಮೈಚಾಚಿದ ಬಿಸಿಲು ಇನ್ನೂ ಕೆಳಗೆ ಇಳಿದು ಸೂರ್ಯನು ಅಸ್ತಮಾನನಾಗುತ್ತಿದ್ದಾನೆ.
ಸೂರ್ಯನ ಸುತ್ತಲೂ ಅಲ್ಲಲ್ಲಿ ಹರಡಿರುವ ಮೋಡಗಳು ಬಣ್ಣಗಳಿಂದ ತುಂಬಿವೆ. ಇವು ಬೇಂದ್ರೆಯವರಿಗೆ ಸೂರ್ಯನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಶಾಲಿನಂತೆ ಕಾಣುತ್ತದೆ. ಮೋಡಗಳ ಅಂಚು ಹೊಳೆಯುವದರಿಂದ, ಅದು ಶಾಲಿನ ಅಂಚಿನ ಜರದಂತೆ ಕಾಣುತ್ತದೆ. ಈ ಜರದ ಅಂಚನ್ನು ಬೇಂದ್ರೆಯವರು ಸೋಗಿಗೆ (=eyeliner) ಹೋಲಿಸುತ್ತಾರೆ.

ಆಕಾಶದ ಉಳಿದ ಭಾಗವೆಲ್ಲ ಕಡುನೀಲಿಯಾಗಿಯೇ ಉಳಿದಿರುವದರಿಂದ, ಬೇಂದ್ರೆಯವರು ಅದನ್ನು ‘ನವಿಲಗೊರಳಿನ ಮುಗಿಲ ಸೆರಗು’ ಎಂದು ಬಣ್ಣಿಸುತ್ತಾರೆ. ಮುಳುಗುತ್ತಿರುವ ಸೂರ್ಯನ ಜರದಂಚಿನ ಶಾಲು ಕ್ಷಣಕ್ಷಣಕ್ಕೂ ಬದಲಾಗುತ್ತಿರುವದರಿಂದ, ನೀಲ ಮುಗಿಲಿನ ಸೆರಗಿಗೆ ಬೀಸುತ್ತಿರುವಂತೆ ಭಾಸವಾಗುತ್ತಿದೆ.
ಈ ನುಡಿಯಲ್ಲಿರುವ ರೂಪಕಗಳು ಅಪೂರ್ವ ಎಂದು ಹೇಳಬೇಕು.

ಎಂಟನೆಯ ನುಡಿ:
ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ಇಲ್ಲಿಯವರೆಗೆ ಬೇಂದ್ರೆಯವರು ಸುತ್ತಲಿನ ಪ್ರಕೃತಿಯ ರಮ್ಯತೆಯನ್ನು ವರ್ಣಿಸಿದರು. ಇದೀಗ ಹೊತ್ತು ಮುಳುಗುತ್ತಿದೆ. ಹೊಲಗಳಲ್ಲಿ ದುಡಿಯುತ್ತಿರುವ ಒಕ್ಕಲು ಮಕ್ಕಳು ಇನ್ನು ಮನೆಗೆ ಮರಳಬೇಕು. ಭೂಮಿತಾಯಿ ಹಾಗು ಈ ಒಕ್ಕಲುಮಕ್ಕಳ ನಡುವೆ ಅನ್ಯೋನ್ಯ ಸಂಬಂಧವಿದೆ. ಚಿತ್ತಿಯ ಮಳೆ ಇವರಿಬ್ಬರನ್ನೂ ಪುಲಕಿತಗೊಳಿಸಿದೆ.

ಚಿತ್ತಿಯ ಮಳೆಯ ಕಾಲದಲ್ಲಿ ಮುಂಗಾರು ಫಸಲು ತೆನೆ ಹಿಡಿಯುವ ಹಂತಕ್ಕೆ ಬಂದಿರುತ್ತದೆ. ಕೆಲವಾರು ರೈತರು ಹಿಂಗಾರು ಬಿತ್ತಿಗೆಯನ್ನು ಪ್ರಾರಂಭಿಸಿರುತ್ತಾರೆ. ದುಡಿತ ಮುಗಿಸಿ ಬರುತ್ತಿರುವ ಈ ಕಾಯಕನಿಷ್ಠಜೀವಿಗಳಿಗೆ ಭೂಮಿತಾಯಿಯು ತನ್ನ ಮಮತೆ ಹಾಗು ಮನ್ನಣೆಯನ್ನು ತೋರಿಸುವ ಬಗೆಯನ್ನು ಬೇಂದ್ರೆಯವರು ವರ್ಣಿಸುವ ಪರಿ ಅಪೂರ್ವವಾಗಿದೆ:

ಹೊಲದ ಅಂಚಿನಲ್ಲಿರುವ ಹಸಿರು ಬಯಲಿನಲ್ಲಿ ಚಿತ್ತಿ ಮಳೆ ಉದುರಿಸಿದ ಮಳೆಯ ಹನಿಗಳು ಮುತ್ತಿನಂತೆ ಬಿದ್ದಿವೆ. ಭೂಮಿತಾಯಿಯು ಈ ನೀರಮುತ್ತುಗಳನ್ನೇ ಅಕ್ಷತೆಯನ್ನಾಗಿ (=ಸೇಸೆ) ಮಾಡಿಕೊಂಡು ದುಡಿದು ಬರುತ್ತಿರುವ ತನ್ನ ಮಕ್ಕಳ ಪಾದಗಳ ಕೆಳಗೆ ಅಕ್ಷತೆಯ ವಸ್ತ್ರವನ್ನೇ ಹಾಸುತ್ತಿದ್ದಾಳೆ!
(ಹಡದಿ ಎಂದರೆ ಅಗಸನು ಒಗೆದು ಕೊಟ್ಟ ಬಟ್ಟೆ.)
ಒಕ್ಕಲುಮಕ್ಕಳಿಗೆ ಇದಕ್ಕಿಂತ ಹೆಚ್ಚಿನ ಗೌರವವು ಯಾವ ಕವನದಲ್ಲೂ ವ್ಯಕ್ತವಾಗಿರಲಿಕ್ಕಿಲ್ಲ!

ಒಂಬತ್ತನೆಯ ನುಡಿ:
ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಇನ್ನೀಗ ಬೇಂದ್ರೆಯವರು ಈ ಒಕ್ಕಲುಮಕ್ಕಳು ಯಾವ ರೀತಿಯಲ್ಲಿ ತಮ್ಮ ಕಾಯಕದಲ್ಲಿ ಹಾಗು ತಮ್ಮ ಸುತ್ತಲಿನ ಪ್ರಕೃತಿಯಲ್ಲಿ ಸಮರಸರಾಗಿದ್ದಾರೆ ಎನ್ನುವದರ ಅವಲೋಕನವನ್ನು ಮಾಡುತ್ತಾರೆ.

ಈಗ ಮನೆಗೆ ಮರಳುತ್ತಿರುವ ಶ್ರಮಜೀವಿಗಳೆಲ್ಲ ದಿನಗೂಲಿಗಾಗಿ ಜಮೀನುಗಳಲ್ಲಿ ದುಡಿದವರು. ಇಡೀ ದಿನವೆಲ್ಲ ಇವರು ದುಡಿದು ದಣಿದಿದ್ದಾರೆ. ಇಷ್ಟೇ ಅಲ್ಲ, ತಮ್ಮ ಕಾಯಕದಲ್ಲಿ ಶ್ರದ್ಧೆ ಇರುವ ಈ  ಶ್ರಮಿಕರು ‘ತಣಿದಿದ್ದಾರೆ’ , ಅಂದರೆ ಸಂತೃಪ್ತರಾಗಿದ್ದಾರೆ. ಯಾಕೆಂದರೆ ಇವರದು ನಿಷ್ಠಾವಂತ ದುಡಿಮೆ, ವಂಚನೆಯಿಲ್ಲದ ದುಡಿಮೆ.  ಆದುದರಿಂದ ಭೂಮಿತಾಯಿಯು ಅನುಗ್ರಹಿಸಿದ, ಎದೆಯೆತ್ತರ ಬೆಳೆದ ಫಸಲಿನ ಮೇಲೆ ಕಾಣುವ ಇವರ ಮುಖಗಳು ಆ ಫಸಲಿಗೆ ಕಳಸವಿಟ್ಟಂತೆ ಮೆರೆಯುತ್ತಿವೆ.

ಹತ್ತನೆಯ ನುಡಿ:
ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಈ ಕಾಲದಲ್ಲಿ ಜಮೀನಿನಲ್ಲಿರುವ ಪೀಕು ಬೆಳವಣಿಗೆಯ ಒಂದು critical  ಹಂತದಲ್ಲಿದೆ. ಇದನ್ನು  ‘ಹದ’ ಎನ್ನುತ್ತಾರೆ. ಈ ಪೈರು ಉತ್ತಮವಾಗಿ ಫಲಿಸಲು ಹವಣಾದ ಮಳೆ (= optimum rainfall) ಬೇಕು. ಅಂತಹ ಮಳೆ ಇದೀಗ ಬಿದ್ದಿದೆ. ಅದರಿಂದ ಉಲ್ಲಸಿತರಾದ ಆಳುಮಕ್ಕಳು ಆ ಮಳೆಯಲ್ಲಿ ನೆನೆದು ಹೋಗಿದ್ದಾರೆ. ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಮನೋಪಟಲದಲ್ಲಿ ಇಂತಹ ಒಳ್ಳೆಯ ಮಳೆಯಿಂದ ಬರಬಹುದಾದ ಉತ್ತಮ ಸುಗ್ಗಿಯ ಚಿತ್ರ ಮೂಡುತ್ತಿದೆ. ಪ್ರಕೃತಿ ಫಲಿಸಬೇಕು, ನಿಸರ್ಗ ಸುಭಿಕ್ಷವಾಗಬೇಕು; ಪಶು, ಪಕ್ಷಿ ಹಾಗು ಎಲ್ಲ ಜೀವಿಗಳೂ ಸಮರಸರಾಗಿ ಸುಖದಿಂದ ಬದುಕಬೇಕು ಎನ್ನುವ ಭಾವನೆ ಇದ್ದವರಿಗೆ ಮಾತ್ರ ಇಂತಹ ಆಲೋಚನೆ ಬರಲು ಸಾಧ್ಯ.
ಇದನ್ನು emphasize ಮಾಡುವ ಉದ್ದೇಶದಿಂದ, ಬೇಂದ್ರೆಯವರು ‘ಚಿತ್ತ’ ಪದವನ್ನು ಬಳಸಿದ್ದಾರೆ. (ಚಿತ್ತ ಅಂದರೆ ಅರಿವಿನ ಮೂಲರೂಪ ಎಂದು ಹೇಳಬಹುದು.)

 ಹನ್ನೊಂದನೆಯ ನುಡಿ:
ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಈ ಆಳುಮಕ್ಕಳಲ್ಲಿ ಗಂಡಾಳು ಹಾಗು ಹೆಣ್ಣಾಳು ಇಬ್ಬರೂ ಇರುತ್ತಾರೆ. ಗಂಡಾಳು ಹಾಗು ಹೆಣ್ಣಾಳು ಜೋಡಿಯಾಗಿಯೇ ಕೆಲಸಕ್ಕೆ ಹೋಗುವದು ಸಾಮಾನ್ಯವಾಗಿದೆ. ದುಡಿದು ದಣಿದ ಇಂತಹ ಹೆಣ್ಣಾಳುಗಳು ಹೇಗೆ ಕಾಣುತ್ತಿದ್ದಾರೆ?

ಈಗೆಲ್ಲ tattooing ಒಂದು ಫ್ಯಾಶನ್ ಆಗಿದೆ. ಬೇಂದ್ರೆಯವರ ಕಾಲದಲ್ಲಿ ಇದಕ್ಕೆ ಹಚ್ಚಿ (=ಹಂಚಿ) ಚುಚ್ಚಿಕೊಳ್ಳುವದು ಎನ್ನುತ್ತಿದ್ದರು. ಗದ್ದ, ಗಲ್ಲ ಹಾಗು ಹಣೆಯ ಮೇಲೆ ಹಸಿರು ಹಚ್ಚಿಯನ್ನು ಚುಚ್ಚಿಸಿಕೊಂಡು, ಹೆಂಗಳೆಯರು ತಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಕಣ್ಜೋಗಿ ಎಂದರೆ ಕಣ್ಣಿನ ಸೋಗಿ (=eyeliner). ಇದೂ ಕೂಡ ಹಸಿರು ಹಚ್ಚಿಯೇ. ದುಡಿದು ಬೆವರಿದ ಇವರ ಮುಖದಲ್ಲಿ ಈ ಹಚ್ಚಿಗಳೆಲ್ಲ ಬೆವರಿನಿಂದಲೇ ತೊಳೆದು ಇನ್ನಿಷ್ಟು ನಿಚ್ಚಳವಾಗಿ ಕಾಣುತ್ತಿವೆ. ಈ ಹೆಣ್ಣುಮಕ್ಕಳ ಚೆಲುವು ದುಡಿತದ ಚೆಲುವು.

ಹನ್ನೆರಡನೆಯ ನುಡಿ:
ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಈ ಹೆಣ್ಣುಮಕ್ಕಳು ಶ್ರಮಜೀವನದಿಂದ ಬದುಕುವಂಥವರು. ಇವರಿಗೆ ಶೃಂಗಾರ ಮಾಡಿಕೊಳ್ಳಲು ವೇಳೆ ಹಾಗು ಹಣ ಸಿಕ್ಕೀತೆ? ಮುಖದ ಮೇಲೆ ಮೂರು ಹಸಿರು ಹಚ್ಚಿಗಳಾದರೆ ಸಾಕು. ಅವರಿಗೆ ಅದೇ ದೊಡ್ಡ ಶೃಂಗಾರ.
ಸಿಂಗಾರವಿಲ್ಲದಿದ್ದರೇನಾಯಿತು; ಸೊಬಗು ಇರಲಾರದೆ? ಅಂತಹ ಸೊಬಗನ್ನು ಮೆಚ್ಚುವವರು ‘ಸೊಗಸಿ-ಜೀವ’ಗಳು, ನಿರಾಭರಣ ಚೆಲುವನ್ನು ಮೆಚ್ಚಿ, ಮುದ್ದು ಮಾಡುವ ಅವರ ಜೊತೆಗಾರರು! ದಾರಿಯನ್ನು ನಡೆನಡೆದು ಈ ದಾರಿಗರು ಸೋತಿದ್ದರೂ ಸಹ, ತಮ್ಮ ಜೊತೆಗಾತಿಯರ ಈ ನಿರಾಭರಣ, ಶ್ರಮಿಕ ಚೆಲುವಿಗೆ ಮನಸೋತಿದ್ದಾರೆ. ‘ದಾರಿಗರು’ ಎನ್ನುವ ಪದವನ್ನು ಗಮನಿಸಿರಿ. ಇವರು ಕ್ರಮಿಸುತ್ತಿರುವದು ಬದುಕಿನ ದಾರಿ. ಈ ದಾರಿಯನ್ನು ಹಗುರಾಗಿ ಕ್ರಮಿಸಲು ಬೇಕಾಗುವದು ಪರಸ್ಪರ ಪ್ರೀತಿಯೇ ಹೊರತು ಶೃಂಗಾರ ಸಾಧನವಲ್ಲ!

ಹದಿಮೂರನೆಯ ನುಡಿ:
ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಈ ಶ್ರಮಿಕರಲ್ಲಿ ಶೃಂಗಾರಪ್ರಸಾದನವಿರಲಿಕ್ಕಿಲ್ಲ. ಆದರೆ ಪ್ರಕೃತಿಯೇ ಇವರಿಗೆ ಶೃಂಗಾರವನ್ನು ತೊಡಿಸುತ್ತದೆ. ಅದು ಹೇಗೆ? ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಜೀವವಿದೆ. ಅದು ಪ್ರೇಮ ಹಾಗು ಕರುಣೆಗೆ ಸ್ಪಂದಿಸುತ್ತದೆ. ಆದುದರಿಂದ ಅಲ್ಲಿ ಬೆಳೆದು ನಿಂತ ಜೋಳದ ಪೀಕು ಸಹ ಈ ಆಳುಮಕ್ಕಳೊಡನೆ ಒಂದಾಗಿ ಆಡಬಯಸುತ್ತದೆ. ಅವರೊಡನೆ ಅದು ಸ್ಪಂದಿಸುವ ರೀತಿಯನ್ನು ನೋಡಿರಿ:

ಈ ಆಳುಮಕ್ಕಳು ಹೊಲದಲ್ಲಿ ಹಾದು ಹೋಗುವಾಗ, ತೆನೆ ಹೊತ್ತ ಚವರಿ-ಜೋಳವು ಎರಡು ಭಾಗವಾಗಿ, ಅವರಿಗೆ ದಾರಿ ಮಾಡುತ್ತದೆ. (ಚವರಿ ಎಂದರೆ ಜೋಳದ ಒಂದು ಪ್ರಕಾರ. ಚವರಿ ಪದಕ್ಕೆ ಹೆಣ್ಣುಮಕ್ಕಳು ಹೆರಳಿನ ಕೊನೆಗೆ ಜೋಡಿಸಿಕೊಳ್ಳುವ ಗೊಂಡೆ ಎನ್ನುವ ಅರ್ಥವೂ ಇದೆ.) ಈ ತೆನೆಗಳು ಆಗ ದೇವರಿಗೆ ಬೀಸುವ ಚಾಮರದಂತೆ ಕಾಣುತ್ತವೆ. ಈ ಆಳುಮಕ್ಕಳು ಮೌನಿಯಾಗಿ ನಡೆದಿಲ್ಲ. ಮಾತನಾಡುತ್ತ ಹಾಗು ನಗುತ್ತ ಹೊರಟಿದ್ದಾರೆ. (ಮುಖರೇದ ಅಂದರೆ ಮಾತುಗುಳಿ ಎನ್ನುವ ಅರ್ಥ.) ಉಲ್ಲಾಸದಿಂದ ಸಂಭಾಷಿಸುತ್ತಿರುವ ಅವರ ಮಾತುಗಾರ ಮುಖಕ್ಕೆ ಈ ತೆನೆಗಳು ಚಾಮರ ಹಿಡಿದಂತೆ ಕಾಣುತ್ತಿವೆ.


ಹದಿನಾಲ್ಕನೆಯ ನುಡಿ:
ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||


ಮಾನವಜೀವಿಗಳ ಚಟುವಟಿಕೆಯನ್ನು ಬಣ್ಣಿಸಿದ್ದಾಯ್ತು. ಇನ್ನು ಇತರ ಜೀವಿಗಳೂ ಸಹ ಈ ಪರಿಸರದ ವಾಸಿಗಳೇ ಅಲ್ಲವೆ? ಬೇಂದ್ರೆಯವರು ಆಗಸದಲ್ಲಿ ಹಾರುತ್ತ, ತಮ್ಮ ಗೂಡಿನತ್ತ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಾರೆ.

ಬೆಳ್ಳಕ್ಕಿಗಳ ಹಿಂಡು ಹಗಲು ಹೊತ್ತಿನಲ್ಲಿ ಮಲೆನಾಡಿಗೆ ತೆರಳಿ, ಅಲ್ಲಿ ತನ್ನ ಭೋಜನವನ್ನು ಮುಗಿಸಿಕೊಂಡು, ಈಗ ಇರುಳಿನಲ್ಲಿ ತಮ್ಮ ವಸತಿಗೆ ಅಂದರೆ ಗೂಡಿಗೆಂದು ಬೆಳವಲಕ್ಕೆ ತೆರಳುತ್ತಿವೆ. ಒಂದು ಶಿಸ್ತಿನಲ್ಲಿ ಹಾರುವ ಬೆಳ್ಳಕ್ಕಿಯ ಸಾಲು ತೋರಣದಂತೆ ಕಾಣುವದು ಸಹಜವೆ!

ಧಾರವಾಡವು ಮಲೆನಾಡು ಹಾಗು ಬೆಳವಲದ ಸಂಧಿಸ್ಥಾನದಲ್ಲಿದೆ. ಈ ಹಕ್ಕಿಗಳು ಹಗಲಿನಲ್ಲಿ ಧಾರವಾಡದ ಪಶ್ಚಿಮಕ್ಕೆ ಚಲಿಸಿ ಹೇರಳವಾಗಿ ಸಿಗುವ ಕಾಳುಕಡಿ ಹಾಗು ಕೀಟಗಳನ್ನು ಭಕ್ಷಿಸುವವು. ಸಂಜೆಯಾದೊಡನೆ ಧಾರವಾಡದ ಪೂರ್ವಕ್ಕೆ, ಹೆಚ್ಚು ಸುರಕ್ಷಿತವಾದ ವಾಸಸ್ಥಾನಕ್ಕೆ ತೆರಳುವವು.

ಹದಿನೈದನೆಯ ನುಡಿ:
ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಬೇಂದ್ರೆಯವರು ಈಗ ಪ್ರಕೃತಿಯ ಜೀವಿಗಳಲ್ಲಿಯ ಸಾಮ್ಯತೆಯನ್ನು ಗಮನಿಸುತ್ತಾರೆ.
ಹೊಲದಲ್ಲಿ ದುಡಿದು ವಿಶ್ರಾಂತಿಗೆಂದು ಗುಡಿಸಲಿಗೆ ಮರಳುತ್ತಿರುವ ಮಾನವ ಜೀವಿಗಳಿಗೆ ಹಾಗು ಆಹಾರಕ್ಕಾಗಿ ಹಾರಾಡಿ, ಈಗ ಗೂಡಿಗೆ ಮರಳುತ್ತಿರುವ ಹಕ್ಕಿಗಳಿಗೆ ಇರುವ ಸಾಮ್ಯತೆ ಏನು?

ಒಕ್ಕಲುಮಕ್ಕಳು ಬಯಲಲ್ಲಿ ಗುಡಿಸಲು ಹಾಕಿಕೊಂಡು ಬದುಕುವ ಬಡಜೀವಿಗಳು; ಹಕ್ಕಿಗಳು ಕಾಡಿನಲ್ಲಿ ಗೂಡು ಕಟ್ಟಿಕೊಂಡು ಇರುವ ಜೀವಿಗಳು. ಈ ಎರಡೂ ಜೀವಿಗಳು ಅವತ್ತಿನ ಅನ್ನವನ್ನು ಅವತ್ತಿನ ದುಡಿತದಿಂದ ಪಡೆಯುವ, ಲೋಭವಿಲ್ಲದ ಸರಳ ಜೀವಿಗಳು ಹಾಗು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಜೀವಿಗಳು.

ಇರುಳು ಸರಿದು ಬಂದಂತೆ, ಈ ಮುಗ್ಧಜೀವಿಗಳು ತಮ್ಮ ತಮ್ಮ ಜೊತೆಗಾರ/ಜೊತೆಗಾತಿಯನ್ನು ಜೋಡಿ ಮಾಡಿಕೊಂಡು ಸೋಬಾನೆ ಹಾಡುತ್ತ ಆನಂದಿಸುತ್ತಾರೆ. ಸೋಬಾನೆ ಹಾಡುವದು ಎನ್ನುವ ಪದಪುಂಜ ತುಂಬ ಅರ್ಥಪೂರ್ಣ ಬಳಕೆಯಾಗಿದೆ. ಇದು ಈ ಮುಗ್ಧ ಜೀವಿಗಳ  ಸಾಮುದಾಯಿಕ ಬದುಕನ್ನು ತೋರಿಸುವದಲ್ಲದೆ, ಸೋಬಾನೆ(=ಶೋಭನ) ಅಂದರೆ ಪ್ರೇಮಮಗ್ನವಾಗುವ ನೈಸರ್ಗಿಕ ಕ್ರಿಯೆಯನ್ನು ಸೂಚಿಸುತ್ತದೆ.

ಹದಿನಾರನೆಯ ನುಡಿ:
ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||

ಸಂಜೆ ಮುಗಿದು ಇರುಳು ಮುಸುಕುತ್ತಿದೆ. ಈ ಹಕ್ಕಿಗಳು ಹಾಗು ಈ ಕಾಯಕಜೀವಿಗಳು ಹಾಡುವ ‘ಸೋಬಾನೆ’ ಹಾಡು ಪರಿಸರವನ್ನು ತುಂಬಿಕೊಳ್ಳುತ್ತಿದೆ. ಇದು ಸೀಗಿಹುಣ್ಣಿವೆ ಬರುವ ಚೆಲುವಿನ ಕಾಲ. ಸೀಗಿಹುಣ್ಣಿವೆಯಂದು ಒಕ್ಕಲಿಗರು ಹೊಲದಲ್ಲಿ ಚರಗ ಚೆಲ್ಲಿ ಪ್ರಕೃತಿದೇವಿಗೆ ನಮಿಸುತ್ತಾರೆ. ಆದುದರಿಂದ ಈ ಸೋಬಾನೆ ಹಾಡು ಸೀಗಿಗೌರಿಯ ದನಿಯಂತೆಯೇ ಭಾಸವಾಗುತ್ತಿದೆ. ಗಾಳಿಯಲ್ಲಿ ತೇಲಿ ಬರುವ ಈ ಹಾಡನ್ನು ಇಡೀ ನಾಡೇ ಕಿವಿಯಾಗಿ ಕೇಳುತ್ತಿದೆ. ನಾಡು ಎನ್ನುವ ಪದವು ಚರಾಚರ ಜಗತ್ತನ್ನೆಲ್ಲ ಸೂಚಿಸುತ್ತದೆ. ಭಗವಂತನ ಸೃಷ್ಟಿಯೆಲ್ಲ ಈ ನಾದದಲ್ಲಿ ಲೀನವಾಗಿದೆ.

ಈ ಕವನದ ಪ್ರತಿ ನುಡಿಯ ಕೊನೆಯಲ್ಲಿ ಬರುವ ಕ್ರಿಯಾಪದವು ಬಹುವಚನದಲ್ಲಿ ಇದ್ದುದನ್ನು ಗಮನಿಸಬೇಕು. ಉದಾಹರಣೆಗೆ ‘ ಬಿಸಿಲು ಮೈಚಾಚ್ಯಾವ, ಬೈತಲಾ ಬಾಚ್ಯಾವ’ ಇತ್ಯಾದಿ. ಆಡುನುಡಿಯಲ್ಲಿ ಸಹ ಇಂತಹದೇ ಪ್ರಯೋಗವು ಸಾಮಾನ್ಯವಾಗಿದೆ.

 ಈ ರೀತಿಯ ಪ್ರಯೋಗದಿಂದ ಬೇಂದ್ರೆಯವರು ಬಹು ವಸ್ತುಗಳು ಏಕರೂಪವಾಗಿ ಕ್ರಿಯೆಯಲ್ಲಿ ತೊಡಗುವದನ್ನು ಅರ್ಥಾತ್ ಸಮರಸದ ಕ್ರಿಯೆಯನ್ನು ತೋರಿಸುತ್ತಿದ್ದಾರೆ. ಇಂತಹ ಪ್ರಯೋಗದ ಮತ್ತೊಂದು ಪ್ರಯೋಜನವೆಂದರೆ, ಬಿಸಿಲು, ಗಾಳಿ ಈ ಮೊದಲಾದ ವಸ್ತುಗಳ ಕ್ರಿಯಾಪ್ರದೇಶಗಳು ವೈಶಾಲ್ಯವನ್ನು ಪಡೆಯುತ್ತವೆ.

 ಕೊನೆಯ ನುಡಿಯಲ್ಲಿ ‘ನಾಡು ಕೇಳ್ಯಾವ’ ಎನ್ನುವಾಗ ‘ನಾಡು’ ಏಕವಚನದಲ್ಲಿದ್ದರೂ ಸಹ ಕ್ರಿಯಾಪದವು ಬಹುವಚನದಲ್ಲಿದೆ. ಏಕೆಂದರೆ ನಾಡಿನಲ್ಲಿಯ ಎಲ್ಲ ಚರಾಚರ ವಸ್ತುಗಳು ಈ ಹಾಡನ್ನು ಕೇಳುತ್ತಿವೆ.
ಉದ್ದೇಶಕ್ಕೆ ತಕ್ಕಂತೆ ‘ವ್ಯಾಕರಣವನ್ನು ಬಗ್ಗಿಸಿಕೊಳ್ಳುವ’ ಈ ಕಲೆ ಚಮತ್ಕಾರಿಕವಾದದ್ದು!

ಪ್ರಕೃತಿಯು ಪಂಚಭೂತಾತ್ಮಕವಾಗಿದೆ. ಪೃಥ್ವಿ, ಅಪ್, ತೇಜ, ಆಕಾಶ, ವಾಯು ಇವು ಈ ಪಂಚಮಹಾಭೂತಗಳು. ‘ಚಿತ್ತಿ ಮಳೆಯ ಸಂಜೆ’ ಕವನದಲ್ಲಿ ಪ್ರಕೃತಿಯ ಪೂಜೆಯಿದೆ. ಮೊದಲೆರಡ ನುಡಿಗಳಲ್ಲಿ ಅಪ್ ಅಂದರೆ ಮಳೆಯ ವರ್ಣನೆಯಿದ್ದರೆ, ಮೂರನೆಯ, ಐದನೆಯ ಹಾಗು ಆರನೆಯ ನುಡಿಗಳಲ್ಲಿ ತೇಜ ಅಂದರೆ ಸೂರ್ಯನ ವರ್ಣನೆ ಇದೆ. ನಾಲ್ಕನೆಯ ನುಡಿಯಲ್ಲಿ ವಾಯುವಿನ ವರ್ಣನೆ ಇದ್ದರೆ ಕೊನೆಯಲ್ಲಿ ಪೃಥ್ವಿ ಅಂದರೆ ಭೂತಾಯಿಯ ವರ್ಣನೆ ಇದೆ. ಜೀವಸಂಕುಲವೂ ಸಹ ಪಂಚಭೂತಗಳಿಂದಲೇ ಸೃಷ್ಟಿಯಾದದ್ದು. ಮಾನವ ಹಾಗು ಪಕ್ಷಿಗಳನ್ನು ಒಳಗೊಂಡ ಈ ಜೀವಸಂಕುಲವು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಸ್ಥಿತಿಯನ್ನು ೮ರಿಂದ ೧೫ನೆಯ ವರೆಗಿನ ನುಡಿಗಳು ವರ್ಣಿಸುತ್ತವೆ. ೧೬ನೆಯ ನುಡಿಯು ಈ ಪ್ರಕೃತಿಯು ದೈವೀ ಚೈತನ್ಯ ಎಂದು ಸಾರುತ್ತದೆ.

ಬೇಂದ್ರೆಯವರ ಕವನಗಳು ತೋರಿಕೆಗೆ ತುಂಬ ಸರಳವಾದ ಕವನಗಳು. ದೇಸಿ ನುಡಿಯಲ್ಲಿರುವದರಿಂದ  ಸಂಸ್ಕೃತ ಪದಗಳ ಸಮಾಸಜೋಡಣೆಯ ಲಾಭ ಇಲ್ಲಿ ಸಿಗುವದಿಲ್ಲ. ಬೇಂದ್ರೆಯವರಿಗೆ ಅದು ಬೇಕಾಗಿಯೇ ಇಲ್ಲ. ದೇಸಿ ಪದಗಳನ್ನೇ ಬಳಸಿ ಅವರು ಅಪೂರ್ವ ಅರ್ಥಸಾಧನೆಯನ್ನು ಮಾಡಬಲ್ಲರು. ‘ಸಿಂಗಾರಿಲ್ಲದೀ ಸೊಬಗು’ ಹಾಗು ‘ಸೊಗಸಿ-ಜೀವ’ ಎನ್ನುವ ಪದಗಳ ಅರ್ಥಗರ್ಭಿತೆಯನ್ನು ಉದಾಹರಣೆಗೆಂದು ನೋಡಬಹುದು. 

ಬೇಂದ್ರೆಯವರು ನಿಸರ್ಗದ ಸಾಧಾರಣ ಎನ್ನಿಸಬಹುದಾದ ನೋಟಗಳನ್ನು ಸರಳವಾಗಿ ವಿವರಿಸುತ್ತಲೇ, ಸಂಕೀರ್ಣವಾದ ಕವನವನ್ನು ರಚಿಸಬಲ್ಲರು. ಚಿತ್ತಿಯ ಮಳೆಯ ಸಂಜೆಯು ತರುವ ಆಹ್ಲಾದದಿಂದ ಪ್ರಾರಂಭವಾಗುವ ಕವನವು, ಸುತ್ತಲಿನ ಪ್ರಕೃತಿಯ ಲಾಸ್ಯವನ್ನು ಕ್ರಮಬದ್ಧವಾಗಿ ವರ್ಣಿಸುತ್ತಲೇ, state of blissಗೆ ಹೋಗಿ ತಲುಪತ್ತದೆ.

‘ಚಿತ್ತಿಯ ಮಳೆಯ ಸಂಜೆ’ ಕವನವು ಕೇವಲ ಪ್ರಕೃತಿವರ್ಣನೆಯ ಕವನವಲ್ಲ. ಇದು ಋಷಿಹೃದಯದ ಕವಿಯೊಬ್ಬನ ದಾರ್ಶನಿಕ ಕವನ.

‘ನಾನೃಷಿಃ ಕುರುತೇ ಕಾವ್ಯಮ್!’

[ಟಿಪ್ಪಣಿ: ಬೇಂದ್ರೆಯವರು ಈ ಕವನದಲ್ಲಿ ತಲುಪಿದ ರಸಸಿದ್ಧಿಯ ಸಮರ್ಪಕ ವ್ಯಾಖ್ಯಾನವು ನನಗೆ ಸಾಧ್ಯವಾಗಿಲ್ಲ ಎನ್ನುವ ಅರಿವು ನನಗಿದೆ.]