Wednesday, June 26, 2013

ಭಾರತದ ನಾರೀಪಾಡು---ನಾಯೀಪಾಡು

ನಮ್ಮ ಭಾರತ ದೇಶವನ್ನು ನಾವು ‘ಪುಣ್ಯಭೂಮಿ’ ಎಂದು ಕರೆಯುತ್ತೇವೆ. ಇದರಂತಹ ಮಿಥ್ಯೆ ಇನ್ನೊಂದಿಲ್ಲ. ಇದು ಪಾಪಭೂಮಿ,ಇದು ಪಾಪಿಷ್ಠರ ಭೂಮಿ. ಯಾಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯವು ತಡೆಯಿಲ್ಲದೆ ನಡೆದಿದೆ. ಸರಕಾರ ಹಾಗು ಸಮಾಜ ಇವೆರಡೂ ಈ ಅಪರಾಧದಲ್ಲಿ ಸಮಪಾಲು ಹೊಂದಿವೆ. ೨೦೧೩ರಲ್ಲಿ ಕೇಂದ್ರ ಸರಕಾರವು ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶದಿಂದ ೨೦೦೫ರ ಅಪರಾಧೀ ಶಾಸನಕ್ಕೆ ಬದಲಾವಣೆಗಳನ್ನು ತಂದಿತು. ಆದರೆ ಅದರಿಂದ ಏನೇನೂ ಪ್ರಯೋಜನವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಿದೆ. ಇದೊಂದು ನಿರರ್ಥಕ ಶಾಸನವಾಗಿದೆ ಹಾಗು ಸ್ತ್ರೀದೌರ್ಜನ್ಯವನ್ನು ತಡೆಗಟ್ಟಲು ಅಸಮರ್ಥವಾದ ಶಾಸನವಾಗಿದೆ. ಈ ಶಾಸನವನ್ನು ಮಾಡಿದ ನಮ್ಮ ಜನಪ್ರತಿನಿಧಿಗಳು ಸಂಕುಚಿತ ಮನಸ್ಕರಾಗಿದ್ದಾರೆ. ಅವರಿನ್ನೂ ಸಾಂಪ್ರದಾಯಕ ಮನೋಧರ್ಮದಿಂದ ಹೊರಬಂದಿಲ್ಲ. ಇವರಲ್ಲಿ ಯಾರೊಬ್ಬರೂ ಸ್ತ್ರೀಪರವಾದ ಆಧುನಿಕ ಹಾಗು ವಿಶಾಲ ಮನೋಭಾವನೆಯನ್ನು ಹೊಂದಿಲ್ಲ!

ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಇದು ಬಹುಸ್ಪಷ್ಟವಾಗಿ ವ್ಯಕ್ತವಾಯಿತು. ಹೆಣ್ಣುಮಕ್ಕಳನ್ನು ಹಿಂಬಾಲಿಸದ ಗಂಡಸರು ಇದ್ದಾರೆಯೇ ಎಂದು ಕೇಳಿದ ಶಾಸಕರೊಬ್ಬರು ತಮ್ಮ ನೈತಿಕ ಮಟ್ಟವನ್ನು ಮೆರೆದರು ಹಾಗು ಚರ್ಚೆಯ ಗಂಭೀರತೆಯನ್ನೇ ಹಾಳು ಮಾಡಿದರು. ಹೆಣ್ಣುಮಕ್ಕಳು ಉದ್ರೇಕಕಾರಿ ಉಡುಪನ್ನು ಧರಿಸಬಾರದೆಂದು ಕೆಲವು ಜನಪ್ರತಿನಿಧಿಗಳು ಸಾರಿದರು. ಮೂರು ವರ್ಷದ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುವಾಗ, ಶಿಶುವೇಶ್ಯೆಯರ ಹಿಂಡೇ ಈ ದೇಶದಲ್ಲಿ ಇರುವಾಗ ಈ ಹೇಳಿಕೆಗೆ ಅರ್ಥವಿದೆಯೆ? ಇನ್ನು ಖಾಪ ಪಂಚಾಯತಗಳ ಬಗೆಗೆ ಹಾಗು ಕೆಲವೊಂದು ಧಾರ್ಮಿಕ ಸಮುದಾಯಗಳ ಪಂಚಾಯತಿಗಳ ಬಗೆಗೆ ಹೇಳುವುದೇ ಬೇಡ. ಇವಿನ್ನೂ ಹದಿನೇಳನೆಯ ಶತಮಾನದಲ್ಲಿಯೇ ಬದುಕುತ್ತಿವೆ!

ಇಷ್ಟೆಲ್ಲ ಚರ್ಚೆಯ ಬಳಿಕ ಅಂಗೀಕೃತಗೊಂಡ ವಿಧೇಯಕವಾದರೂ ಎಂತಹದು? ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದಂತಾಯಿತೇ ಹೊರತು, ಹೆಣ್ಣುಮಕ್ಕಳಿಗೆ ರಕ್ಷಣೆ ಮಾತ್ರ ದೊರೆಯಲಿಲ್ಲ.

‘ನಮ್ಮಲ್ಲಿ ಸಾಕಷ್ಟು ಶಾಸನಗಳಿವೆ, ಆದರೆ ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎನ್ನುವುದು ಕೆಲವರ ಅನುರಣಿಸುವ ಅಭಿಪ್ರಾಯವಾಗಿದೆ. ಆದರೆ ಈ ಎಲ್ಲ ಶಾಸನಗಳು ‘ಸರಿಯಾದ ಶಾಸನಗಳೇ?’ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ. ಇತ್ತೀಚಿನ ಶಾಸನವೂ ಅದೇ ರೀತಿಯದಾಗಿದೆ. ಹೆಣ್ಣು ಮಕ್ಕಳಿಗೆ ದೌರ್ಜನ್ಯದ ವಿರುದ್ಧ ಸರಿಯಾದ ರಕ್ಷಣೆಯನ್ನು ನೀಡುವುದು ನಮ್ಮ ಶಾಸಕರ ಹಾಗು ನಮ್ಮ ಸಮಾಜದ ಗಂಭೀರ ಉದ್ದೇಶವಾಗಿದ್ದರೆ, ಈ ಕೆಳಗಿನ ಅಂಶಗಳನ್ನು ಶಾಸನದಲ್ಲಿ ಅಳವಡಿಸಬೇಕಾಗಿತ್ತು  ಎನ್ನುವುದು ನನ್ನ ಅನಿಸಿಕೆ.

(೧) ‘ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳು ಪೋಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಲು ಹಿಂಜರಿಯುತ್ತಾಳೆ. ಅಥವಾ ಅವಳು ನೀಡಿದ ದೂರನ್ನು ಪೋಲೀಸರು ದಾಖಲಿಸಿಕೊಳ್ಳುವುದಿಲ್ಲ’ ಎನ್ನುವುದು ಒಂದು ಸಾಮಾನ್ಯವಾದ ತಕರಾರು ಆಗಿದೆ. ಆದುದರಿಂದ ದೂರು ದಾಖಲಿಸಲು ಪ್ರತಿಯೊಂದು ತಾಲೂಕಾ ಕೇಂದ್ರದಲ್ಲಿ ಒಂದು ಮಹಿಳಾ ಕೇಂದ್ರವಿರಬೇಕು. ಈ ಕೇಂದ್ರದ ಮುಖ್ಯಸ್ಥಳಿಗೆ ಅರೆ-ನ್ಯಾಯಾಧೀಶರ ಸವಲತ್ತುಗಳು ಇರಬೇಕು. ದೂರನ್ನು ದಾಖಲಿಸಿಕೊಂಡ ತಕ್ಷಣ, ಈ ಮುಖ್ಯಸ್ಥಳು ಸಂಬಂಧಿಸಿದ ಪೋಲೀಸ್ ಠಾಣೆಗೆ ದೂರನ್ನು ವರ್ಗಾಯಿಸಬೇಕು ಹಾಗು ಸಂಬಂಧಿಸಿದ ಆರೋಗ್ಯಾಧಿಕಾರಿಗೆ ದೂರು ನೀಡಿದವಳ ತಕ್ಷಣದ ವೈದ್ಯಕೀಯ ಪರೀಕ್ಷೆಗಾಗಿ ಆದೇಶ ನೀಡಬೇಕು.

(೨) ಸಂಬಂಧಿಸಿದ ಪೋಲೀಸ್ ಠಾಣೆಯು ೧೫ ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಹಾಗು ಮಹಿಳಾಕೇಂದ್ರಕ್ಕೆ ಪ್ರತಿ ವಾರವೂ ಪ್ರಗತಿಯ ವರದಿಯನ್ನು ನೀಡಬೇಕು. ಇದಕ್ಕೆ ತಪ್ಪಿದ ಪೋಲೀಸ್ ಸಿಬ್ಬಂದಿಯನ್ನು ಕೆಲಸದಿಂದ ವಿಲಂಬಿತಗೊಳಿಸಬೇಕು.

(೩)  ದೂರುದಾರಳು ಓರ್ವ ವ್ಯಕ್ತಿಯನ್ನು ಅತ್ಯಾಚಾರದ ಅಪರಾಧಿ ಎಂದು ಬೊಟ್ಟು ಮಾಡಿದ ಬಳಿಕ,  ತಾನು ಅಪರಾಧಿ ಅಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ಆರೋಪಿತನ ಮೇಲೆ ಹೊರಿಸಬೇಕು. ಅಪರಾಧ ಸಾಬೀತುಗೊಳಿಸಲು ಯಾವುದೇ ಸಾಕ್ಷಿಯ ಅವಶ್ಯಕತೆ ಇರಕೂಡದು. DNA ಪರೀಕ್ಷೆಯಲ್ಲಿ ಆತ ನಿರಪರಾಧಿ ಎಂದು ಸಾಬೀತಾದರೆ ಮಾತ್ರ, ಆತನನ್ನು ಮುಕ್ತಗೊಳಿಸಬಹುದು. ದೌರ್ಜನ್ಯದ ಕ್ರಿಯೆಯಲ್ಲಿ ಸಹಾಯ ನೀಡಿದವನನ್ನೂ ಸಹ ಅದೇ ಪ್ರಮಾಣದ ಅಪರಾಧಿ ಎಂದು ಪರಿಗಣಿಸಬೇಕು.

(೪) ಪೋಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಒಂದು ತಿಂಗಳಿನೊಳಗಾಗಿ ನ್ಯಾಯದಾನದ ಪ್ರಕ್ರಿಯೆ ಮುಗಿಯಬೇಕು. ಇಲ್ಲವಾದರೆ, ಆರೋಪಿಯ ಬೆಂಬಲಿಗರು ನ್ಯಾಯವನ್ನು ತಿರುಚುವ ಪ್ರಯತ್ನ ಮಾಡಬಹುದು. ಇದಕ್ಕಾಗಿ ಕ್ಷಿಪ್ರ-ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

(೫) ಅತ್ಯಾಚಾರಿಗೆ bobbit ಶಿಕ್ಷೆಯನ್ನು ವಿಧಿಸಬೇಕು.

(೬) ದೌರ್ಜನ್ಯಕ್ಕೊಳಗಾದವಳ ಹೆಸರು, ದೆಸೆಗಳನ್ನು ಗುಪ್ತವಾಗಿ ಇರಿಸಬೇಕು. ಇದಕ್ಕೆ ಭಂಗ ತಂದಂತಹ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಬೇಕು.

ಅತ್ಯಾಚಾರದ ಪ್ರಕರಣಗಳಲ್ಲದೆ, ಸ್ತ್ರೀಯರನ್ನು ಅವಮಾನಿಸುವ, ಹಿಂಸಿಸುವ ಪ್ರಕರಣಗಳೂ ಅನೇಕವಿವೆ. ಕೆಲವೊಂದು ಸಲ ಪೋಲೀಸರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವದನ್ನು ದೂರದರ್ಶನದಲ್ಲಿ ನಾವೆಲ್ಲರೂ ನೋಡಿದ್ದೇವೆ. ಇಂತಹ ಪ್ರಕರಣಗಳ ಬಗೆಗೆ ಮಹಿಳಾಕೇಂದ್ರಗಳಲ್ಲಿ ದೂರು ನೀಡುವ ಅವಕಾಶವಿರಬೇಕು. ಈ ಮಹಿಳಾಕೇಂದ್ರಗಳ ಮುಖ್ಯಸ್ಥರಿಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವ ಅಧಿಕಾರವೂ ಇರಬೇಕು.

ಇದೆಲ್ಲ ಶಾಸನದ ಮಾತಾಯಿತು. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಸಾಮಾಜಿಕ ಕಾರಣಗಳೂ ಇವೆ. ಅವುಗಳನ್ನು ಈ ರೀತಿಯಲ್ಲಿ ಪಟ್ಟಿ ಮಾಡಬಹುದು:

(೧) ಭಾರತೀಯ ಸಮಾಜವು ಸ್ತ್ರೀವಿರೋಧಿ ಸಮಾಜವಾಗಿದೆ. ಹೆಣ್ಣುಮಗಳು ಗಂಡನ property, ಅವಳು  ಮನೆಯಲ್ಲಿ ದುಡಿಯುವ ಕೆಲಸಗಿತ್ತಿ ಹಾಗು ನಿರಾಕರಣೆಯ ಅಧಿಕಾರವಿಲ್ಲದ, ಪುಕ್ಕಟೆ ದೊರೆಯುವ ಭೋಗವಸ್ತು ಎಂದೇ ಈವರೆಗೂ ಪರಿಗಣಿತಳಾಗಿದ್ದಾಳೆ. ಹೊರಗೆ ದುಡಿದು ಹಣ ಸಂಪಾದಿಸುವ ಸ್ತ್ರೀಯರೂ ಸಹ ಈ ಮಾತಿಗೆ ಹೊರತಾಗಿಲ್ಲ! ಇದು ದೀರ್ಘಕಾಲದಿಂದಲೂ ನಡೆದು ಬರುತ್ತಿರುವ ಭಾರತೀಯ ಪರಂಪರೆ. ಇದಕ್ಕೆ ನಮ್ಮ ಪುರಾಣ, ‘ಪುಣ್ಯಕಥೆ’ಗಳಲ್ಲಿಯೇ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಗಮನಿಸೋಣ:

ಸತ್ಯವಂತನೆಂದು ಖ್ಯಾತನಾದ ಹರಿಶ್ಚಂದ್ರ ಮಹಾರಾಜನು ‘ತನ್ನ ಸತ್ಯ’ವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿ ತಾರಾಮತಿಯನ್ನು ಬಿಕರಿ ಮಾಡಿದ! ‘ಧರ್ಮರಾಯ’ನೆಂದು ಖ್ಯಾತಿವೆತ್ತ ಮಹಾರಾಜನು ಜೂಜಾಟದಲ್ಲಿ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು ಸೋತ! ಇದಕ್ಕಿಂತಲೂ ದಾರುಣವಾದ ಕತೆಯು ‘ಮಾಧವಿ’ ಎನ್ನುವ ಕನ್ಯೆಯದು. ಈ ಕತೆ ಹೀಗಿದೆ:

ಗಾಲವ ಎನ್ನುವ ಋಷಿಕುಮಾರನು ವಿಶ್ವಾಮಿತ್ರನ ಆಶ್ರಮದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ತಾನು ಸಲ್ಲಿಸಬೇಕಾದ ಗುರುದಕ್ಷಿಣೆ ಏನೆಂದು ಕೇಳಿದ. ಇದು ಸಂಪೂರ್ಣವಾಗಿ ಪುಕ್ಕಟೆಯಾದ ಶಿಕ್ಷಣವೆಂದು ಗುರು ವಿಶ್ವಾಮಿತ್ರನು ಸಾರಿದರೂ ಸಹ ಗಾಲವನು ಗುರುದಕ್ಷಿಣೆಯನ್ನು ಕೊಡುವ ತನ್ನ ಹಟವನ್ನು ಬಿಡಲಿಲ್ಲ. ಬೇಸತ್ತ ವಿಶ್ವಾಮಿತ್ರನು ತನಗೆ ಎಂಟುನೂರು ಕುದುರೆಗಳನ್ನು ಕೊಡಬೇಕೆಂದು ಹೇಳಿದ. ಆದರೆ ಒಂದು ಶರ್ಯತ್ತು. ಈ ಕುದುರೆಗಳ ಮೈಯೆಲ್ಲ ಬಿಳಿದಾಗಿದ್ದು, ಒಂದು ಕಿವಿ ಮಾತ್ರ ಕಪ್ಪಾಗಿರಬೇಕು! ಸರಿ, ಗಾಲವ ಮೊದಲಿಗೆ ಯಯಾತಿ ಎನ್ನುವ ಮಹಾರಾಜನಲ್ಲಿ ತೆರಳಿ ಇಂತಹ ಕುದುರೆಗಳಿಗಾಗಿ ಪ್ರಾರ್ಥನೆ ಮಾಡಿದ. ಯಯಾತಿಯ ಹತ್ತಿರ ಇಂತಹ ಒಂದೂ ಕುದುರೆ ಇರಲಿಲ್ಲ. ಛೇ! ಈ ಬ್ರಹ್ಮಚಾರಿಯನ್ನು ಬರಿಗೈಯಿಂದ ಮರಳಿ ಕಳಿಸುವುದೇ? ಧರ್ಮಿಷ್ಠ ಯಯಾತಿಯ ‘ಧರ್ಮನಿಷ್ಠೆ’ ಅದನ್ನೊಪ್ಪಲಿಲ್ಲ. ಆದುದರಿಂದ ಯಯಾತಿ ಮಹಾರಾಜನು ಕುದುರೆಗಳ ಬದಲಾಗಿ ತನ್ನ ಮಗಳು ಮಾಧವಿಯನ್ನು ಗಾಲವನಿಗೆ ಧಾರೆ ಎರೆದು ಕೊಟ್ಟುಬಿಟ್ಟ. ‘ಬೇರೆ ಯಾರಾದರೂ ರಾಜನ ಬಳಿಗೆ ಹೋಗು. ಅವನಲ್ಲಿ ಇಂತಹ ಕುದುರೆಗಳಿದ್ದರೆ, ನಿನ್ನ ಹೆಂಡತಿಗೆ ಬದಲಾಗಿ ಆ ಕುದುರೆಗಳನ್ನು ಪಡೆದುಕೊ’ ಎನ್ನುವ ಅದ್ಭುತ ಉಪಾಯ cum ಉಪದೇಶವನ್ನು ನೀಡಿದ. ಸರಿ, ಗಾಲವನು ಮಾಧವಿಗೆ ಮೂಗುದಾಣ ಹಾಕಿಕೊಂಡು ಮತ್ತೊಬ್ಬ ರಾಜನ ಬಳಿಗೆ ಎಳೆದುಕೊಂಡು ಹೋದ. ಅವನಲ್ಲಿ ಇಂತಹ ಕುದುರೆಗಳು ಎರಡುನೂರು ಮಾತ್ರ ಇದ್ದವು. ಅವನಿಗೆ ಮಾಧವಿಯನ್ನು ಒಂದು ವರ್ಷದ ಮಟ್ಟಿಗೆ ಭೋಗ್ಯಕ್ಕೆ ಹಾಕಿದ ಗಾಲವನು, ಎರಡುನೂರು ಕುದುರೆಗಳನ್ನು ಸಂಪಾದಿಸಿಕೊಂಡೊಯ್ದು, ವಿಶ್ವಾಮಿತ್ರನಿಗೆ ಅರ್ಪಿಸಿದ. ಒಂದು ವರ್ಷದ ಅವಧಿಯಲ್ಲಿ ಮಾಧವಿಯು ಒಂದು ಮಗುವನ್ನು ಹೆತ್ತಿದ್ದಳು. ಮರಳಿ ಬಂದ ಗಾಲವನು ಆ ಮಗುವನ್ನು ಅದೇ ರಾಜನಿಗೆ ಕೊಟ್ಟು, ತನ್ನ ಹೆಂಡತಿ ಮಾಧವಿಯನ್ನು ಕರೆದೊಯ್ದ. ಈ ಕಥೆ ಮತ್ತೆ ಇಬ್ಬರು ರಾಜರಲ್ಲಿ ಪುನರಾವರ್ತಿಸಿತು. ಮಾಧವಿ ಒಟ್ಟು ಮೂವರು ರಾಜರಿಂದ ಬಳಕೆಯಾಗಿ, ಮೂರು ಕಂದಮ್ಮಗಳನ್ನು ಅವರಿಗೆ ನೀಡಿದಳು. ಆದರೆ ಇನ್ನೂ ಎರಡುನೂರು ಕುದುರೆಗಳು ಬಾಕಿ ಉಳಿದವಲ್ಲ! ಯಾವ ರಾಜನಲ್ಲೂ ಇಂತಹ ಒಂದು ಕುದುರೆಯೂ ಸಿಗಲೇ ಇಲ್ಲ. ಆದುದರಿಂದ ಗಾಲವನು ಮಾಧವಿಯನ್ನೇ ಒಂದು ವರ್ಷದವರೆಗೆ ವಿಶ್ವಾಮಿತ್ರನಿಗೆ ಕೊಟ್ಟು, ತನ್ನ ಗುರುದಕ್ಷಿಣೆಯನ್ನು ಚುಕ್ತಾ ಮಾಡಿದ. ವಾಹ್‍ವಾ, ಗಾಲವ! ಇದು ಪುರಾಣಕಾಲದಲ್ಲಿ ಭಾರತೀಯ ಹೆಣ್ಣಿಗಿದ್ದ ಸ್ಥಾನಮಾನವನ್ನು ಹಾಗು ಹೆಣ್ಣಿನ ‘ಬೆಲೆ’ಯನ್ನು ಸೂಚಿಸುವ ಕತೆಯಾಗಿದೆ!

ಭಾರತದ ಮೇಲೆ ತುರುಕರ ಹಾಗು ಮಂಗೋಲರ ದಾಳಿ ಪ್ರಾರಂಭವಾದ ಮೇಲಂತೂ ಹೆಣ್ಣಿನ ಪರಿಸ್ಥಿತಿ ಇನ್ನಿಷ್ಟು ಶೋಚನೀಯವಾಯಿತು. ದಾಳಿಗೆ ತುತ್ತಾದ ಹೆಣ್ಣುಗಳು ದಾಳಿಕೋರರ ಉಪಭೋಗದ ತೊತ್ತುಗಳಾದವು. ಅವಳ ಸಾಮಾಜಿಕ ಸ್ಥಾನಮಾನಗಳು ಶೂನ್ಯಮಟ್ಟಕ್ಕಿಳಿದವು.

ಬ್ರಿಟಿಶ್ ಆಡಳಿತವೇ ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಕಾರಣೀಭೂತವಾಯಿತು ಎನ್ನಬಹುದು. ‘ಸತಿ ಪದ್ಧತಿ’ಯನ್ನು ನಿಷೇಧಿಸಿದ ಬ್ರಿಟಿಶ್ ಗವರ್ನರ ವಿಲಿಯಮ್ ಬೆಂಟಿಂಕನೇ ಬಾಲ್ಯವಿವಾಹ ನಿರೋಧ ಕಾಯದೆಯನ್ನೂ ೧೮೭೨ರಲ್ಲಿ ಜಾರಿಗೆ ತಂದನು. ಈ ಕಾಯದೆಯ ಪ್ರಕಾರ ೧೪ ವರ್ಷದ ಒಳಗಿನ ಹುಡುಗ ಹುಡುಗಿಯರ ವಿವಾಹವು ಕಾನೂನುಬಾಹಿರವಾಯಿತು.

(೨) ಜನಸಂಖ್ಯಾಸ್ಫೋಟದ ಪರಿಣಾಮವಾಗಿ, ಹಳ್ಳಿಗಳಲ್ಲಿರುವ  ರೈತಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅವರೆಲ್ಲ ಕೆಲಸ ಹುಡುಕುತ್ತ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯ ಜನರು ತಮ್ಮ ಹೆಂಡತಿ ಹಾಗು ಮಕ್ಕಳನ್ನು ಹಳ್ಳಿಗಳಲ್ಲಿಯೇ ಬಿಟ್ಟು ಹೋಗುವಂತಹವರು. ಪಟ್ಟಣದಲ್ಲಿರುವ ಸ್ಥಿತಿವಂತರ ಲಂಗುಲಗಾಮಿಲ್ಲದ ಜೀವನವನ್ನು ನೋಡುವ ಇವರಲ್ಲಿಯೂ ಸಹ ನೈತಿಕ ಮೌಲ್ಯಗಳು ಮಾಯವಾಗುತ್ತಿವೆ. ಕಾಮತೃಷೆಯನ್ನು ಹಿಂಗಿಸಲು ಅನೇಕರು ಸೂಳೆಯರನ್ನು ಹುಡುಕಿಕೊಂಡು ಹೋಗುತ್ತಾರೆ. ಅಸಹಾಯಕ ಹೆಣ್ಣೊಂದು ಸಿಕ್ಕರೆ, ಅವಳ ಮೇಲೆ ಅತ್ಯಾಚಾರ ಎಸಗಲು ಥಟ್ಟನೆ ಮುನ್ನುಗ್ಗುತ್ತಾರೆ ಹಾಗು ಸಾಕ್ಷಿಯನ್ನು ಅಳಿಸಲು ಅವಳ ಕೊಲೆ ಮಾಡುತ್ತಾರೆ.

ಇಂತಹ population migration ಅನ್ನು ನಾನು ಧಾರವಾಡದಂತಹ ಸಣ್ಣ ಊರಿನಲ್ಲಿಯೇ ನೋಡುತ್ತಿದ್ದೇನೆ. ಇಲ್ಲಿಯ ರೈತಕಾರ್ಮಿಕರೆಲ್ಲ ಕಟ್ಟಡ ಮೊದಲಾದ ಕೆಲಸಗಳಲ್ಲಿ ದುಡಿಯಲು ಗೋವಾಕ್ಕೆ ಹೋಗುತ್ತಿದ್ದಾರೆ. ಅದರಂತೆ ಉತ್ತರಪ್ರದೇಶದ ಮತ್ತುಬಿಹಾರದ ಚಿಕ್ಕಪುಟ್ಟ ಕೆಲಸಗಾರರು ಹಾಗು ಅರೆತಾಂತ್ರಿಕರು ಧಾರವಾಡಕ್ಕೆ ಬರುತ್ತಿದ್ದಾರೆ. ಇವರೆಲ್ಲರೂ ರಜಾಸಮಯದಲ್ಲಿ ತಮ್ಮ ಮನೆಮಂದಿಯ ಭೆಟ್ಟಿಗಾಗಿ ತಮ್ಮ ಊರುಗಳಿಗೆ ಮರಳುವಂತಹವರು. ಅಲ್ಲಿಯವರೆಗೂ ಇವರಿಗೆ ಸ್ಥಳೀಯ ಸೂಳೆಯರೇ ಗತಿ. ಇವರಿಂದಾಗಿಯೇ ಸೂಳೆಗಾರಿಕೆ ಎಲ್ಲೆಲ್ಲೂ ದೊಡ್ಡ ಉದ್ದಿಮೆಯಾಗಿ ಬೆಳೆಯಲಾರಂಭಿಸಿದೆ!

ಇದು ಪೋಲೀಸರಿಗೂ ಇಷ್ಟವಾದ ಸಂಗತಿಯೇ ಆಗಿರಬಹುದು. ಹೆಚ್ಚೆಚ್ಚು ಅಪರಾಧ ನಡೆಯುವ ಠಾಣೆಗಳು ಹೆಚ್ಚಿನ ಕಿಮ್ಮತ್ತಿಗೆ ಹರಾಜು ಆಗುತ್ತವೆ ಅನ್ನುವ ವದಂತಿಯೊಂದಿದೆ. ಆ ಲೆಕ್ಕದಲ್ಲಿ ನೋಡಿದರೆ, ಮುಂಬಯಿ, ಕೋಲಕತ್ತಾ ಹಾಗು ದಿಲ್ಲಿಯಂತಹ ನಗರಗಳ ಮುಖ್ಯ ಪೋಲೀಸ ಸ್ಥಾನಗಳ ಹರಾಜು ಕೋಟಿಯಲ್ಲಿಯೇ ಇರಬಹುದೇನೋ! ಇಂತಹ ಪೋಲೀಸರಿಗೆ ಹೆಣ್ಣುಮಕ್ಕಳು ಕಾಲುಕಸದ ಸಮಾನ. ಅವರ ಜೊತೆಗೆ ಉದ್ಧಟತನದಿಂದ ವರ್ತಿಸುವುದು ಪೋಲೀಸರಿಗೆ ಸಹಜಸ್ವಭಾವವೇ ಆಗಿಬಿಡುತ್ತದೆ.

(೩) ನಮ್ಮ ತರುಣರಲ್ಲಿ ಮಾಯವಾಗುತ್ತಿರುವ ನೈತಿಕ ಮೌಲ್ಯಗಳಿಗೆ ಕಾರಣವೇನು? ಟೀವಿ, ಸಿನೆಮಾ ಮೊದಲಾದ ಮನೋರಂಜನೆಯ ಸಾಧನಗಳು ಆಧುನಿಕತೆಯ ನೆವದಲ್ಲಿ, ಕೀಳು ಕಾಮನೆಗಳನ್ನು ಉತ್ತೇಜಿಸುತ್ತಿರುವದು ಒಂದು ಕಾರಣವಾದರೆ, ಯುವ ಪೀಳಿಗೆಗೆ ಸರಿಯಾದ role modelಗಳು ಇಲ್ಲದೇ ಇರುವುದು ಮತ್ತೊಂದು ಕಾರಣವಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಾ ಗಾಂಧೀ, ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳು ನಮ್ಮ ಆದರ್ಶ ಪುರುಷರಾಗಿದ್ದರು. ಈಗಿನ ಆದರ್ಶ ಪುರುಷರು ಎಂಥವರು? ಕಾಮುಕ, ಲಂಚಬಡಕ, ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳು ಇಂದಿನ role model ಆಗಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಮೋಬೈಲುಗಳಲ್ಲಿ ನೀಲಿ ಚಿತ್ರಗಳನ್ನು ನೋಡುವ ಶಾಸಕರು ಹಾಗು ವೃದ್ಧಾಪ್ಯದಲ್ಲಿಯೂ ಸಹ ಅನೈತಿಕ ಕಾಮಕೇಳಿಗಳಲ್ಲಿ ತೊಡುಗುವ ರಾಜ್ಯಪಾಲರು, ಕುಡಿದು ಧಾಂಧಲೆ ಹಾಕುವ ಸಿರಿವಂತರ ಹಾಗು ಅಧಿಕಾರಸ್ಥರ ಮಕ್ಕಳು ನಮ್ಮ ಯುವಕರ ಕಣ್ಣೆದುರಿಗೆ ಇರುವ ಆದರ್ಶಪುರುಷರಾಗಿದ್ದಾರೆ. ಹೀಗಿದ್ದಾಗ ನಮ್ಮ ಯುವಕರು ಇವರನ್ನೇ ಅನುಕರಿಸುವುದು ಸಹಜವೇ ಆಗಿದೆ.

(೪) ಇಲಿಗಳನ್ನು ಹಾಗು ಕೋತಿಗಳನ್ನು ಬಳಸಿಕೊಂಡು ಪ್ರಾಣಿವರ್ತನಾ ವಿಜ್ಞಾನಿಗಳು ಮಾಡಿದ ಕೆಲವು ಪ್ರಯೋಗಗಳು ಅರ್ಥಪೂರ್ಣವಾಗಿವೆ: ದಟ್ಟ ಅರಣ್ಯ, ಸಾಧಾರಣ ಅರಣ್ಯ ಹಾಗು ವಿರಳ ಅರಣ್ಯಗಳಲ್ಲಿ ವಾಸಿಸುತ್ತಿರುವ ಮಂಗಗಳ ಮೇಲೆ ಈ ಪ್ರಯೋಗಗಳನ್ನು ಮಾಡಲಾಯಿತು. (ಧಾರವಾಡವೂ ಸಹ ಈ ಪ್ರಯೋಗದ ಒಂದು ಪ್ರದೇಶವಾಗಿತ್ತು ಎಂದು ಇಲ್ಲಿಯ ಮಂಗಗಳು ಅಭಿಮಾನ ಪಡಬಹುದು!) ಅದರಂತೆ ಅಷ್ಟೇ ಇಲಿಗಳನ್ನು ಸಣ್ಣ ಜಾಗದಲ್ಲಿ, ಮಧ್ಯಮ ವಿಸ್ತಾರದ ಜಾಗದಲ್ಲಿ ಹಾಗು ದೊಡ್ಡ ಜಾಗದಲ್ಲಿ ಬಂಧಿಸಿ ಪ್ರಯೋಗಗಳಿಗೆ ಒಳಪಡಿಸಲಾಯಿತು. ಪ್ರಯೋಗಗಳ ಫಲಿತಾಂಶಗಳನ್ನು ಈ ರೀತಿಯಾಗಿ ಅರ್ಥೈಸಲಾಗುತ್ತಿದೆ:
(೧) ಜನಸಂಖ್ಯೆ ವಿರಳವಾಗಿರುವ ಹಾಗು ಬಲಿಷ್ಠ ನಾಯಕನಿರುವ ಪ್ರದೇಶದಲ್ಲಿ ಶಿಸ್ತು ಕಂಡು ಬರುತ್ತದೆ.
(೨) ಜನಸಂಖ್ಯೆ ಹೆಚ್ಚಿದ್ದಲ್ಲಿ ಹಾಗು ನಿರ್ಬಲ ನಾಯಕನಿರುವ ಪ್ರದೇಶದಲ್ಲಿ ಆಂತರಿಕ ದೌರ್ಜನ್ಯ ಕಂಡು ಬರುತ್ತದೆ.

ನಮ್ಮ ಈಗಿನ ಜನಸಂಖ್ಯೆ ಹಾಗು ನಮ್ಮ ಈಗಿನ ರಾಜಕೀಯ ನಾಯಕತ್ವ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹತ್ತು ಜನ ಕೂಡಬಹುದಾದ ದೋಣಿಯಲ್ಲಿ ನೂರು ಜನ ಕೂತರೆ ಏನಾಗಬಹುದು? ಇದು ಸದ್ಯದ ನಮ್ಮ ಭಾರತದ ಪರಿಸ್ಥಿತಿ. ಇನ್ನು ಈ ದೋಣಿಯನ್ನು ನಡೆಯಿಸುವ ನಾವಿಕನು ಎಂತಹ ದುರ್ಬಲ ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ಎಲ್ಲರೂ ಬಲ್ಲರು.  ಇಷ್ಟಾದರೂ ಸಹ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವ ಮಾತನ್ನೇ ಯಾರೂ ಆಡುವುದಿಲ್ಲ ಹಾಗು ತಮ್ಮ ಸ್ವಾರ್ಥಕ್ಕಾಗಿ ದುರ್ಬಲ ನಾಯಕನನ್ನೇ ಸಿಂಹಾಸನದ ಮೇಲೆ ಸ್ಥಾಪಿಸುತ್ತಿದ್ದಾರೆ.!

ಪರಿಹಾರ:
ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಬಹುದು:  
ಗಂಡಸರಿಗೆ ಸರಿಸಮಾನವಾದ ಹಕ್ಕುಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟರೆ ಸಾಲದು. ಅವರಿಗೆ ವಿಶೇಷವಾದ ಸವಲತ್ತುಗಳನ್ನು ಕೊಡುವುದು ಅವಶ್ಯವಾಗಿದೆ. ಇದಕ್ಕೆ ಕಾರಣ ಹೀಗಿದೆ:
ಸಂತಾನದ ವಿಪುಲತೆಯು ನಿಸರ್ಗದ ಆಶಯವಾಗಿದೆ. ಆದುದರಿಂದಲೇ ಮಕ್ಕಳನ್ನು ಹೊರಬೇಕಾದ ಹಾಗು ಹೆರಬೇಕಾದ ಹೆಣ್ಣುಮಗಳು ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗಿ ಬಿಡುತ್ತಾಳೆ; ಆದರೆ ಗಂಡುಮಗುವು ‘ವೀರ್ಯವಂತ’ನಾಗುವುದಕ್ಕೆ ಹೆಚ್ಚಿಗೆ ಕಾಲ ಬೇಕಾಗುತ್ತದೆ. ಹೆಣ್ಣುಮಗುವು ತನ್ನ ದೈಹಿಕ ಚೈತನ್ಯದ ಬಹುಭಾಗವನ್ನು ಗರ್ಭಾಶಯದ ಬೆಳವಣಿಗೆಯಲ್ಲಿ ವ್ಯಯಿಸಬೇಕಾಗುವದರಿಂದ, ಅವಳ ಇತರ ದೈಹಿಕ ಬೆಳವಣಿಗೆಯು ಗಂಡಸಿನ ಬೆಳವಣಿಗೆಯಷ್ಟು ಆಗಲಾರದು. ಗರ್ಭವತಿ ಹೆಣ್ಣನ್ನು ಗಂಡು ರಕ್ಷಿಸುವುದು ಅನಿವಾರ್ಯವಾಗುವುದರಿಂದ, ಗಂಡಿನ ದೈಹಿಕ ಬೆಳವಣಿಗೆಯು ಅಧಿಕವಾಗಿರುವುದು ಸಹಜವೇ ಆಗಿದೆ. ಈ ರೀತಿಯಾಗಿ ದೈಹಿಕವಾಗಿ ಹೆಚ್ಚಿಗೆ ಸಶಕ್ತನಾದ ಗಂಡಸು ಹೆಣ್ಣಿನ ರಕ್ಷಣೆ ಮಾಡುವುದರ ಬದಲಾಗಿ ಅವಳ ಶೋಷಣೆ ಮಾಡತೊಡಗಿರುವುದು ನಿಸರ್ಗವಿರೋಧಿಯಾಗಿದೆ, ಪರಮ ನೀಚತನವಾಗಿದೆ. ಹೆಣ್ಣಿಗೆ ಗರ್ಭಧಾರಣೆಯ ಅವಧಿಯಲ್ಲಿ ಹಾಗು ಶಿಶುಪಾಲನೆಯ ಅವಧಿಯಲ್ಲಿ ವಿಶೇಷ ಸವಲತ್ತುಗಳನ್ನು ಕೊಡುವುದು ನಿಸರ್ಗಸಹಜವಾದ ಅವಶ್ಯಕತೆಯಾಗಿದೆ.

ಬಹುಶಃ ಈ ಕಾರಣದಿಂದಲೇ ಮನು ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೇಳಿದನು. ಅವನ ಆಶಯವೆಂದರೆ, ಹೆಣ್ಣನ್ನು ಬಾಲ್ಯಾವಸ್ಥೆಯಲ್ಲಿ ತಂದೆ, ಯೌವನದಲ್ಲಿ ಗಂಡ ಹಾಗು ವೃದ್ಧಾಪ್ಯದಲ್ಲಿ ಮಕ್ಕಳು ನೋಡಿಕೊಳ್ಳಬೇಕು. ಅವಳು ಒಂಟಿಯಾಗಿ ಜೀವಿಸುವಂತೆ ಆಗಬಾರದು. ಇದು ಸ್ತ್ರೀಯ ವಿಶೇಷ ಹಕ್ಕಾಗಿದೆ.

ಸ್ತ್ರೀದೌರ್ಜನ್ಯವನ್ನು ತಡೆಯಲು ಕೆಳಗಿನ ಶಾಸನಾತ್ಮಕ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು:
(೧) ಸ್ತ್ರೀದೌರ್ಜನ್ಯದ ದೂರುಗಳನ್ನು ಸ್ವೀಕರಿಸಲು quasi judicial ಅಧಿಕಾರವಿರುವ ಮಹಿಳಾಕೇಂದ್ರಗಳನ್ನು ಸ್ಥಾಪಿಸಬೇಕು. ಸದ್ಯಕ್ಕೆ domestic violence ತಡೆಗಟ್ಟಲು ಮಾತ್ರ ಇಂತಹ ಕೇಂದ್ರಗಳಿದ್ದು, ಇವುಗಳ ಅಧಿಕಾರ ವಿಸ್ತರಣೆಯಾಗಬೇಕು. ಪೋಲೀಸ್ ಠಾಣೆಗಳಿಗೆ ಈ ಕೇಂದ್ರಗಳಿಂದ ದೂರು ಹೋಗುವಂತಿರಬೇಕು. ಈ ಕೇಂದ್ರಗಳಿಗೆ ಪೋಲೀಸರಿಂದ ಪ್ರಗತಿವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕು. ವಿಳಂಬವಾದಲ್ಲಿ ಪೋಲೀಸರನ್ನು ವಿಲಂಬಿತಗೊಳಿಸಬೇಕು. ತಾನು ಅಪರಾಧಿಯಲ್ಲ ಎಂದು ಸಾಬೀತು ಪಡಿಸುವ ಹೊಣೆಯನ್ನು ಆರೋಪಿಯ ಮೇಲೆ ಹೇರಬೇಕು. ಅತ್ಯಾಚಾರದ ಪ್ರಕರಣಗಳಲ್ಲಿ DNA ವರದಿಯನ್ನು ಅವಲಂಬಿಸಿ ಆರೋಪಿಯನ್ನು ಮುಕ್ತಗೊಳಿಸಬಹುದು.
(೨) ತಕ್ಷಣವೇ ಎಲ್ಲೆಡೆಗಳಲ್ಲಿ ಇರುವ ವೇಶ್ಯಾಗೃಹಗಳನ್ನು ಮುಚ್ಚಿ ಹಾಕಬೇಕು. ಇಲ್ಲಿ ಬಂಧಿಗಳಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು.
(೩) ಟೀವಿ, ಸಿನೆಮಾ ಮೊದಲಾದ ಮನೋರಂಜನೆಗಳಲ್ಲಿ ಹೆಣ್ಣುಮಕ್ಕಳ ದೇಹಪ್ರದರ್ಶನವನ್ನು ಪ್ರತಿಬಂಧಿಸಬೇಕು. ಕುಡಿಯುವ ತಾಣಗಳಲ್ಲಿ ನೃತ್ಯವನ್ನು ನಿಷೇಧಿಸಬೇಕು.
(೪) ಸಾರ್ವಜನಿಕ ವಾಹನಗಳಲ್ಲಿ ಹಾಗು ಸಾರ್ವಜನಿಕ ಸ್ಥಾನಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಕೊಡಬೇಕು.


ಇಂತಹ ಶಾಸನವನ್ನು ತರಲು ಪ್ರಜ್ಞಾವಂತರು ನಮ್ಮ ಶಾಸಕರನ್ನು ಒತ್ತಾಯಿಸಬೇಕು.

Tuesday, April 30, 2013

`ಬದುಕು ಮಾಯೆಯ ಮಾಟ'.................ಬೇಂದ್ರೆ



ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವಮಾನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು.

ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ಬೇಂದ್ರೆಯವರ ಕಾಲವು ಆದರ್ಶದ ಕಾಲ. ಆ ಕಾಲದ ತರುಣರಿಗೆ ತಿಲಕ, ಗಾಂಧೀಜಿ, ಸುಭಾಸಚಂದ್ರ ಬೋಸ ಮೊದಲಾದವರಿಂದ ರಾಜಕೀಯ ಹೋರಾಟದ ಕೆಚ್ಚು ಬಂದರೆ, ರವೀಂದ್ರನಾಥ ಠಾಕೂರ ಮೊದಲಾದವರಿಂದ ಭಾರತೀಯ ಸಾಹಿತ್ಯ ಹಾಗು ಕಲೆಗಳ ಬಗೆಗೆ ಆದರಾಭಿಮಾನಗಳು ಮೂಡಿದ್ದವು. ವಿವೇಕಾನಂದ, ಅರವಿಂದ ಹಾಗು ಅನೇಕ ಸಾಧು-ಸಂತರಿಂದ ಈ ಯುವಕರಿಗೆ ಆಧ್ಯಾತ್ಮದತ್ತ ಒಲವು ಮೂಡಿತ್ತು. ಇವೆಲ್ಲ ಪ್ರೇರಣೆಗಳು ಆ ಕಾಲದ ಅನೇಕ ಯುವಕರ ಮನೋಧರ್ಮವನ್ನು ರೂಪಿಸಿದ್ದವು. ಬೇಂದ್ರೆಯವರಂತೂ ಬಹುಶ್ರುತರು. ಅವರ ಆದರ್ಶವು ಸಾಂಸ್ಕೃತಿಕ ಹಿರಿಮೆಯಾಗಿತ್ತು ಹಾಗು ದೈವಶ್ರದ್ಧೆಯು ಅವರ ಆದರ್ಶದ ತಳಹದಿಯಾಗಿತ್ತು. ಬೇಂದ್ರೆಯವರ ‘ಗೆಳೆಯರ ಗುಂಪು’ ಈ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡ ಕೂಟವಾಗಿತ್ತು. ಈ ವೈಶಿಷ್ಟ್ಯಗಳನ್ನು ‘ಬದುಕು ಮಾಯೆಯ ಮಾಟ’ ಎನ್ನುವ ಅವರ ಕವನದಲ್ಲಿ ನೋಡಬಹುದು.

ಬೇಂದ್ರೆಯವರು ಸ್ನೇಹಜೀವಿಗಳು. ಅದರಲ್ಲೂ ‘ಮಧುರಚೆನ್ನ’ (ಹಲಸಂಗಿ ಚೆನ್ನಮಲ್ಲಪ್ಪ)ರಂತಹ ಆಧ್ಯಾತ್ಮಸಾಧಕ, ಸಾಹಿತಿ ಗೆಳೆಯರಂತೂ ಅವರಿಗೆ ಪ್ರಾಣಪ್ರಿಯರು. ಈ ಕವನವನ್ನು ಓದಿದಾಗ, ಬೇಂದ್ರೆಯವರು ಮಧುರಚೆನ್ನರೊಡನೆ ಸಂಭಾಷಿಸುತ್ತಿದ್ದಾರೇನೊ ಎನ್ನುವ ಭಾಸವು ಆಗುವುದು.

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಈ ಪ್ರಪಂಚವು ದೇವರ ಲೀಲೆ ಹಾಗು ನಮ್ಮ ಬದುಕು ದೇವಸೃಷ್ಟಿ ಎಂದು ಹೇಳುತ್ತಾರೆ. ಎರಡನೆಯ ನುಡಿಯಲ್ಲಿ ಬದುಕಿಗಿರಬೇಕಾದ ಧ್ಯೇಯಾದರ್ಶಗಳನ್ನು ಗುರುತಿಸುತ್ತಾರೆ. ಮೂರನೆಯ ನುಡಿಯಲ್ಲಿ ಸಾರ್ಥಕ ಬದುಕಿಗೆ ಬೇಕಾದ ದೈವೀಕೃಪೆಯನ್ನು ಆಶಿಸುತ್ತಾರೆ.

ಕವನದ ಮೊದಲ ಸಾಲು ಬದುಕನ್ನು ಮಾಯೆಯ ಮಾಟಕ್ಕೆ ಹೋಲಿಸುತ್ತದೆ. ‘ಮಾಯೆ’ ಎನ್ನುವುದು ಅನೇಕ ಅರ್ಥಗಳನ್ನು ಹೊಂದಿದ್ದು, ಬೇಂದ್ರೆಯವರು ಯಾವ ಅರ್ಥದಲ್ಲಿ ಈ ಪದವನ್ನು ಬಳಸಿದ್ದಾರೆ ಎನ್ನುವುದನ್ನು ಪರಿಶೀಲಿಸೋಣ.

ಆದಿ ಶಂಕರಾಚಾರ್ಯರು ಈ ಪ್ರಪಂಚವನ್ನು ‘ಮಾಯಾಕಲ್ಪಿತ ದೇಶಕಾಲಕಲನಾ’ ಎಂದು ಕರೆದಿದ್ದಾರೆ. ದೇಶ ಹಾಗು ಕಾಲ ಇವು ಸತ್ಯವಲ್ಲ; ಇದು ಮಿಥ್ಯಾಪ್ರಪಂಚ ಎಂದು ಶಂಕರಾಚಾರ್ಯರು ಹೇಳುತ್ತಾರೆ. (ಖ್ಯಾತ ವಿಜ್ಞಾನಿ ಅಲ್ಬರ್ಟ ಐನಸ್ಟೈನ್ ಸಹ space ಅರ್ಥಾತ್ ದೇಶ ಹಾಗು time ಅರ್ಥಾತ್ ಕಾಲ ಇವು ಸಾಪೇಕ್ಷ ಎಂದೇ ಹೇಳುತ್ತಾನೆ.  ಆದರೆ ಶಂಕರಾಚಾರ್ಯರದು ತಾತ್ವಿಕ ಸಿದ್ಧಾಂತ; ಐನಸ್ಟೈನನದು ಭೌತಿಕ ಸಿದ್ಧಾಂತ!)

‘ಮಾಟ’ ಪದವು ‘ಮಾಡು’ ಪದದಿಂದ ಬಂದಿದೆ. (ಉದಾಹರಣೆಗೆ ‘ಆಡು’....‘ಆಟ’; ‘ಕೂಡು’...‘ಕೂಟ’ ಇತ್ಯಾದಿ). ಈ ಸಮಸ್ತ ಪ್ರಪಂಚವನ್ನು ‘ಮಾಡಿ’ದವಳು ಮಾಯೆ. ಈ ಮಿಥ್ಯಾಪ್ರಪಂಚವನ್ನು ಸೃಷ್ಟಿಸುವ ‘ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ’ ಇರುವುದು ಈ ಮಾಟಗಾತಿಯಲ್ಲಿ ಮಾತ್ರ!  ಆದುದರಿಂದ ಬದುಕು ಎನ್ನುವುದು ‘ಮಾಯೆಯ ಮಾಟ’ವಾಗಿದೆ.

ಮಾಟ ಎನ್ನುವ ಪದಕ್ಕೆ witchcraft ಎನ್ನುವ ಅರ್ಥವೂ ಇದೆ. ‘ಮಾಟಗಾತಿ’ ಎಂದರೆ  witch ಎನ್ನುವ ಅರ್ಥವೇ ಇದೆ. ಆದುದರಿಂದ ಮಾಟಗಾತಿಯು ತನ್ನ ಮನಸೋಇಚ್ಛೆ ಈ ಪ್ರಪಂಚವನ್ನು ಸೃಷ್ಟಿಸಬಲ್ಲಳು ಹಾಗು ವಿನಾಶ ಮಾಡಬಲ್ಲಳು. ಆದುದರಿಂದಲೂ ಈ ಬದುಕು ಆ ಮಾಯೆಯ ‘ಮಾಟ’ವಾಗಿದೆ. ಆಡುಮಾತಿನಲ್ಲಿ ಮಾಯೆ ಎಂದರೆ ಜಾದೂ ಎನ್ನುವ ಅರ್ಥವಿದೆ ಹಾಗು ಅದೃಶ್ಯವಾಗುವುದು ಎನ್ನುವ ಅರ್ಥವೂ ಇದೆ. ಇವೆಲ್ಲದರ ಒಟ್ಟರ್ಥವೆಂದರೆ ಮಾಯೆ ಎಂದರೆ magic.

‘ಮಾಟ’ ಎನ್ನುವ ಪದಕ್ಕೆ ಸುಂದರವಾದದ್ದು ಎನ್ನುವ ಅರ್ಥವೂ ಇದೆ. (ಉದಾಹರಣೆಗೆ: ‘ಮಾಟವಾದ ಗೊಂಬೆ’.) ಬೇಂದ್ರೆಯವರ ಈ ಕವನದಲ್ಲಿ ಬದುಕಿನ ಆದರ್ಶ ಹಾಗು ಉತ್ಸಾಹಗಳು ತುಂಬಿರುವುದರಿಂದ, ಮಾಟ ಎಂದರೆ ಸುಂದರ ಎನ್ನುವ ಅರ್ಥವೂ ಅನ್ವಯವಾಗುತ್ತದೆ.

ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ‘ಈ ಸೃಷ್ಟಿಯೆಲ್ಲ ದೇವಿಯ ಅಭಿವ್ಯಕ್ತಿಯಾಗಿದೆ (ತ್ವಯಿ ಪರಿಣತಾಯಾಂ ನ ಹಿ ಪರಮ್)’ ಎನ್ನುತ್ತಾರೆ. ಅರವಿಂದರು ‘To be or to become something is the whole endeavor of the Nature' ಎಂದಿದ್ದಾರೆ. Nature ಎಂದರೆ ಪ್ರಕೃತಿಯೂ ಹೌದು, ಸ್ವಭಾವವೂ ಹೌದು. ಆದರೆ ಭಾರತೀಯ ದರ್ಶನಗಳು ದೇವರಿಗೆ ‘ಸ್ವಭಾವ’ ಇದೆ ಎಂದು ಗ್ರಹಿಸುವದಿಲ್ಲ. ದೇವರು ನಿರ್ವಿಕಲ್ಪನು; ಆತನನ್ನು ವಿಕಲ್ಪಕ್ಕೆ ಒಳಪಡಿಸುವುದೇ ಮಾಯೆ!

ಬಸವಣ್ಣನವರು ‘ಅಯ್ಯಾ,ನೀನು ನಿರಾಕಾರನಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ; ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ....’ ಎನ್ನುತ್ತಾರೆ. ಬಸವಣ್ಣನವರು ಹೇಳುವ ‘ವಾಹನ’ವು ದೇವನ ‘ಮಹಿಮೆ’ಯಾಗಿದ್ದು ಪ್ರಾಚೀನರು ಹೇಳುವ ಮಾಯೆಯೇ ಆಗಿದೆ.

ಸ್ವತಃ ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ ‘ಓ ತಾಯಿ, ಮಾಯಿ, ಶಿವಜಾಯಿ ಕಾಯಿ’ ಎನ್ನುವಾಗ ‘ಮಾಯಿ’ ಎನ್ನುವದನ್ನು ಅಂತಃಕರಣಪೂರಿತ ತಾಯಿ ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ‘ಬದುಕು ಮಾಯೆಯ ಮಾಟ’ ಎನ್ನುವಾಗ ಬೇಂದ್ರೆಯವರ ‘ಮಾಯೆ’ ಈ ಎಲ್ಲ ಅರ್ಥಗಳನ್ನು ಒಳಗೊಂಡಿದೆ.

ಬದುಕು ಮಾಯೆಯ ಸೃಷ್ಟಿ ಎಂದು ಹೇಳಿದ ನಂತರ, ಬೇಂದ್ರೆಯವರು ಈ ಸೃಷ್ಟಿಯ ಲಕ್ಷಣಗಳನ್ನು ಪರೀಕ್ಷಿಸುತ್ತಿದ್ದಾರೆ.   ಬದುಕು static ಅಲ್ಲ. ಇದಕ್ಕೆ ಅಂತರ್ಗತವಾದ ಚಲನೆ ಇದೆ, ವಿವಿಧರೂಪ ತಾಳಿದ ಜೀವಿಗಳಲ್ಲಿ ಅಬಾಧಿತ ಸಂಪರ್ಕವಿದೆ. ಅದನ್ನೇ ಬೇಂದ್ರೆಯವರು ‘ಮಾತು ನೆರೆ-ತೊರೆಯಾಟ’ ಎನ್ನುತ್ತಾರೆ. ಈ ಅಂತರ್-ಸಂಪರ್ಕ ಹಾಗು ಚಲನೆ ಇವೆಲ್ಲ ಸಮುದ್ರದ ನೊರೆ ಹಾಗು ತೆರೆ ಇದ್ದಂತೆ. ಸಮುದ್ರವು ಸಮುದ್ರವೆನಿಸುವುದೇ ತನ್ನ ತೆರೆಗಳಿಂದಾಗಿ. ಆದರೆ ಓರ್ವ ಜೀವಿಯ ಅಂತರಂಗದ ಬದುಕು ಈ ಮೇಲ್‍ಮೇಲಿನ ತೆರೆಗಳಿಗಿಂತ ತುಂಬ ಗಾಢವಾಗಿ, ಗಂಭೀರವಾಗಿ ಇರುತ್ತದೆ. ಮುನ್ನೀರು ಎಂದರೆ ಸಮುದ್ರ; ಗುಂಭ ಎಂದರೆ ಗಾಢವಾದದ್ದು. ಬದುಕು ಸಮುದ್ರದಂತೆ ಆಳವಾಗಿ ಇರುವದಾದರೂ, ಸಮುದ್ರದ ಮೇಲ್ಮೈಯಲ್ಲಿರುವ ತೆರೆಗಳಂತೆ, ಬದುಕಿನ ಮೇಲ್ಮೈಯಲ್ಲಿ ಸೃಷ್ಟಿಯ ಘಟನೆಗಳು ಜರಗುತ್ತಿರುತ್ತವೆ.

ಬೇಂದ್ರೆಯವರು ಸಮುದ್ರಕ್ಕೆ ‘ಮುನ್ನೀರು’ ಎನ್ನುವ ಪದವನ್ನು ಬಳಸಿದ್ದನ್ನು ಗಮನಿಸಬೇಕು. ಮಳೆನೀರು, ಒರತೆಯ ನೀರು ಹಾಗು ಹೊಳೆನೀರು ಸಂಗಮಿಸಿ ಸಮುದ್ರವಾಗಿರುತ್ತದೆ. ಆದುದರಿಂದ ಇದು ‘ಮೂರ್+ನೀರು’ = ಮುನ್ನೀರು. ಪ್ರತಿ ಜೀವಿಯ ವೈಯಕ್ತಿಕ ಬದುಕೂ ಸಹ ದೈವಕೃಪೆ, ಕರ್ಮಬಂಧನ ಹಾಗು ಸ್ವಪ್ರಯತ್ನಗಳಿಂದ ರೂಪಗೊಳ್ಳುತ್ತದೆ.

ಬದುಕು ಸಾರ್ಥಕವಾಗಲು ಎರಡು ಸಂಗತಿಗಳ ಅವಶ್ಯಕತೆ ಇದೆ. ಒಂದು ಕರುಣೋದಯ; ಎರಡನೆಯದು ಅರುಣೋದಯ. ಸಮಸ್ತ ಜೀವಿಗಳಲ್ಲಿ ಸ್ನೇಹಭಾವ ಬೆಳೆಯುವುದೇ ಕರುಣೋದಯ. ತನ್ನ ಬದುಕಿನಲ್ಲಿ ಭಗವಂತನ ಬೆಳಕು ಕಾಣುವುದೇ ಅರುಣೋದಯ! ಈ ಎರಡು ಸಾಧನೆಗಳಾದಾಗ ಮಾತ್ರ ‘ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು’. ಓರ್ವ ಜೀವಿಯು ಮೇಲಿನ ಸಾಧನೆಗಳಿಂದ ಪಕ್ವವಾದಾಗ ಮಾತ್ರ, ಆ ಜೀವಿಯ ಹಳೆಯ ಕೊಳೆಯಲ್ಲ ತೊಳೆದು ಹೋಗಿ, ಅವನ ಎದೆಯು ಅಂದರೆ ಅಂತರಂಗವು ಹೊಚ್ಚ ಹೊಸದಾದಂತಹ, ಆದುದರಿಂದ ಸ್ಫೂರ್ತಿದಾಯಕವಾದ ಹೊನ್ನೀರಿನಿಂದ ತುಂಬುವುದು. ಈ ಹೊಸ ಹೊನ್ನೀರು ಆ ಜೀವಿಗೆ ಹೊಸ ಬೆಳಕನ್ನು ತೋರುವುದರ ಮೂಲಕ ಸತ್‍ಪಥದಲ್ಲಿ ನಡೆಯಿಸುವುದು. (‘ಕರುಣಾಳು ಬಾ ಬೆಳಕೆ....ನೆನಪಾಗುವದಲ್ಲವೆ?)

ಆದಿ ಶಂಕರಾಚಾರ್ಯರ ‘ಸೌಂದರ್ಯಲಹರಿ’ಯಲ್ಲಿಯ ಸಾಲೊಂದನ್ನು ನೋಡಿರಿ:
‘ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ’
ಶಂಕರಾಚಾರ್ಯರು ದೇವಿಯನ್ನು ‘ಶಿವನ ಕರುಣೆ’ಗೆ ಹೋಲಿಸುತ್ತಾರೆ. ಈ ಕರುಣೆಯು ಅವ್ಯಾಜವಾಗಿರುವದರಿಂದ ಶ್ವೇತವರ್ಣದ್ದಾಗಿದೆ. ಶ್ವೇತವರ್ಣವು ನಿರ್ವಿಕಲ್ಪ ಸ್ಥಿತಿಯನ್ನೂ ಸೂಚಿಸುತ್ತದೆ. ಆದರೆ ಪ್ರಪಂಚವನ್ನು ಸೃಷ್ಟಿಸಲು ‘ರಾಗ’ಗಳ ಅವಶ್ಯಕತೆ ಇದೆ. ಆದುದರಿಂದ ದೇವಿಯು ಈ ಕರುಣಭಾವದಲ್ಲಿ ಕಿಂಚಿತ್ ಕೆಂಪು ಕೂಡಿದ ಅರುಣವರ್ಣದವಳಾಗಿದ್ದಾಳೆ! ಇದನ್ನೇ ಬೇಂದ್ರೆಯವರು ‘ಕರುಣೋದಯದ ಕೂಡ, ಅರುಣೋದಯವು ಇರಲು’ ಎಂದು ವರ್ಣಿಸುತ್ತಾರೆ. ಬೇಂದ್ರೆಯವರು ಓದಿದ್ದು, ಕೇಳಿದ್ದು ಎಲ್ಲವೂ, ಅವರ ಕಾವ್ಯಮೂಸೆಯಲ್ಲಿ ಮಾರ್ಪಾಡಾಗಿ ಒಂದಿಲ್ಲೊಂದು ರೂಪದಲ್ಲಿ ಕಾಣಿಸಿಕೊಳ್ಳುವದರ ಉದಾಹರಣೆ ಇದು.

ಬೇಂದ್ರೆಯವರ ಕವನಗಳಲ್ಲಿ ಕೆಲವೊಂದು ಪದಗಳು ಬೇರೆ ಬೇರೆ ರೂಪಗಳಲ್ಲಿ ಪುನರಾವರ್ತಿಸುತ್ತಿರುತ್ತವೆ. ಇಲ್ಲಿಯ ‘ಹೊನ್ನೀರು’ ಅವರ ‘ಹೃದಯ ಸಮುದ್ರ’ ಕವನದಲ್ಲಿ ‘ಬಂಗಾರ ನೀರ ಕಡಲಾಚೆಗೀಚೆಗಿದೆ’ ಆಗಿದೆ.

ಇಷ್ಟೆಲ್ಲದರ ಜೊತೆಗೆ, ಮತ್ತೂ ಒಂದು ಅರ್ಥವು ‘ಬದುಕು ಮಾಯೆಯ ಮಾಟ’ ಎನ್ನುವ ಹೇಳಿಕೆಯಲ್ಲಿ ಇದೆ.
ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ ಜಾಗೃತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ’ ಎಂದು ಹೇಳುತ್ತಾರೆ, ಅಂದರೆ ನಮ್ಮ ಬದುಕು ಮಾಯೆ ಸೃಷ್ಟಿಸಿದ ಭ್ರಮೆ ಮಾತ್ರ!

ಮೊದಲ ನುಡಿಯಲ್ಲಿ ಬೇಂದ್ರೆಯವರು ಸೃಷ್ಟಿರಹಸ್ಯವನ್ನು ಹೇಳಿದರು. ಈ ದೈವೀಶಕ್ತಿಯ ಸಂತಾನವಾದ ನಾವು ಎಂತಹ ಬದುಕನ್ನು ಬದುಕಬೇಕು ಎನ್ನುವುದನ್ನು ಎರಡನೆಯ ನುಡಿಯಲ್ಲಿ ಹೇಳುತ್ತಿದ್ದಾರೆ:
ನಿಜದಲ್ಲೆ ಒಲವಿರಲಿ
ಚೆಲುವಿನಲಿ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ

ಬದುಕಿನಲ್ಲಿ ವಂಚನೆ ಇರಬಾರದು. ನಮ್ಮದು ಸತ್ಯವಂತ ಜೀವನವಾಗಿರಬೇಕು. ಜೊತೆ ಜೊತೆಗೇ (ಎಲ್ಲರಲ್ಲೂ) ಪ್ರೀತಿ ಇರಬೇಕು. ನಾವು ಬದುಕುವ ರೀತಿಯಿಂದ ಬದುಕಿಗೆ ಒಂದು ಚೆಲುವು ಹಾಗು ಸಂತಸ ಬರಬೇಕು. ನಮ್ಮ ಒಳಿತು ದುರ್ಬಲರ ಒಳ್ಳೆಯತನ ಆಗಬಾರದು. (ಈ ಮಾತುಗಳು ಮಹಾತ್ಮಾ ಗಾಂಧೀಜಿಯವರ ಮಾತುಗಳೇ ಆಗಿವೆ.)

ನಿಜತೆ, ಒಲವು ಹಾಗು ಚೆಲುವು ಇವು ‘ಸತ್ಯಂ ಶಿವಂ ಸುಂದರಂ’ ಎನ್ನುವ ಆದರ್ಶವನ್ನೇ ಹೇಳುತ್ತವೆ. ಇದೇ ಅರ್ಥದ ಮತ್ತೊಂದು ಬೇಂದ್ರೆ-ಕವನ ಹೀಗಿದೆ:
‘ಸಿಂಹಮುಖಕ್ಕಿದೆ ನವಿಲಿನ ಸೋಗೆ
ಶಕ್ತಿ, ಶಾರದೆಯ ಮೇಳದ ಹಾಗೆ.’
ಬದುಕಿಗೆ ಶಾರದೆಯ ಸಂಸ್ಕೃತಿಯೂ ಬೇಕು; ಜೊತೆಗೇ ಕಾಳಿಯ ಶಕ್ತಿಯೂ ಬೇಕು!

ಬೇಂದ್ರೆಯವರು ಈ ಮಾತನ್ನೆಲ್ಲ ‘ಜೀವಕೆಳೆಯಾ’ ಅಂದರೆ ಪ್ರಾಣಸ್ನೇಹಿತನಿಗೆ ಸಂಬೋಧಿಸಿ ಹೇಳುತ್ತಿರುವುದನ್ನು ಗಮನಿಸಬೇಕು. ನಾವು ನಮ್ಮ ಆದರ್ಶಗಳನ್ನು, ನಮ್ಮ ಕನಸುಗಳನ್ನು ಹಂಚಿಕೊಳ್ಳುವುದು ಪ್ರಾಣಸ್ನೇಹಿತರ ಜೊತೆಗೇ ತಾನೆ? ಆದುದರಿಂದ ಇಲ್ಲಿ ಆ ತರಹದ ಸಂಬೋಧನೆ ಇದೆ. ಅಷ್ಟೇ ಅಲ್ಲ, ಬೇಂದ್ರೆಯವರ ಆದರ್ಶವು ಇಡೀ ಪ್ರಪಂಚವನ್ನೇ ಒಳಗೊಳ್ಳುವುದರಿಂದ (-‘ವಸುಧೈವ ಕುಟುಂಬಕಮ್’-) ಈ ಪ್ರಪಂಚದ ಸಮಸ್ತ ಜೀವಿಗಳು ಅವರಿಗೆ ‘ಜೀವಕೆಳೆಯರೇ’ ಆಗಿದ್ದಾರೆ!

‘ಸತ್ಯಂ ಶಿವಂ ಸುಂದರಮ್’ ಎನ್ನುವುದು ಬದುಕು ಹೇಗಿರಬೇಕು ಎನ್ನುವ ಸಾಂಸ್ಕೃತಿಕ ಆದರ್ಶವಾಯಿತು. ಆದರೆ ಇದಷ್ಟೇ ಬದುಕಿನ ಅಂತಿಮ ಗುರಿಯಾಗಲಾರದು. ಸಾಂಸ್ಕೃತಿಕ ಆದರ್ಶವು ಆಧ್ಯಾತ್ಮದತ್ತ ಕೈದೋರಬೇಕು. ಇದು ಬೇಂದ್ರೆಯವರ ಮುಂದಿನ ಕಾಣ್ಕೆಯಾಗಿದೆ:
ದೇವ ಜೀವನಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ.

ನಮ್ಮ ಬದುಕು ಲೌಕಿಕ-ಕೇಂದ್ರಿತವಾಗಬಾರದು; ಆ ದೇವನೇ ಈ ಬದುಕಿನ ಕೇಂದ್ರ. ಪ್ರತಿ ಜೀವಿಯೂ ತನ್ನ ಬದುಕನ್ನು ತಾನೇ ಆಧ್ಯಾತ್ಮಿಕವಾಗಿ ರೂಪಿಸಿಕೊಳ್ಳುವ masterಆಗಬೇಕು; ಹಾಗು ಸಾಧನೆಯ ಉಚ್ಚ ಮಟ್ಟವನ್ನು ತಲುಪಿದರೂ ಸಹ ತನ್ನ ‘ಎಲ್ಲೆ’ಯನ್ನು ಅಂದರೆ ಸೀಮೆಯನ್ನು ತಿಳಿದುಕೊಳ್ಳಬೇಕು. ವಿಧಿವಿಲಾಸದ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ನಾವು ಅರಿಯಬೇಕು. ಈ ಸಂದರ್ಭದಲ್ಲಿ ಡಿ.ವಿ.ಜಿ.ಯವರ ‘ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ...’ ಎನ್ನುವ ಸಾಲು ನೆನಪಾಗದೇ ಇರದು. ಒಬ್ಬೊಬ್ಬನೂ ಇಂದ್ರ ಎಂದಾಗ, ಪ್ರತಿ ಜೀವಿಯೂ ಇಂದ್ರಿಯ ಸುಖಗಳನ್ನು ಬಯಸುವವನೇ ಆಗಿರುತ್ತಾನೆ; ಆದರೆ ದೇವನೇ ಈ ಜೀವನದ ಕೇಂದ್ರವನ್ನಾಗಿ ಆತನು ಮಾಡಿಕೊಳ್ಳಬೇಕು ಎನ್ನುವ ಅರ್ಥವೂ ಇಲ್ಲಿದೆ.

ಮೊದಲ ನುಡಿಯಲ್ಲಿ ಬೇಂದ್ರೆಯವರು ‘ಮಾಯೆ ನಮಗೆ ಬದುಕನ್ನು ಕೊಟ್ಟವಳು’ ಎಂದು ಹೇಳಿದರು. ಎರಡನೆಯ ನುಡಿಯಲ್ಲಿ, ಬದುಕಿನಲ್ಲಿ ಪ್ರತಿ ಜೀವಿಯು ಸಾಧಿಸಬೇಕಾದ ಆದರ್ಶಗಳನ್ನು ಉಸುರಿದರು. ಕೊನೆಯ ನುಡಿಯಲ್ಲಿ ಈ ಸಾಧನೆಗೆ ಬೇಕಾದ ನೋಟ ಹಾಗು ಭಗವತ್‍ಕೃಪೆಯ ಅವಶ್ಯಕತೆಯ ಬಗೆಗೆ ಹೇಳುತ್ತಿದ್ದಾರೆ.
ಆತನಾಕೆಯ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ

ಈ ಸೃಷ್ಟಿ ಸಾಧ್ಯವಾಗಬೇಕಾದರೆ ‘ಶಿವ’ ಹಾಗು ‘ಶಕ್ತಿ’ ಈರ್ವರೂ ಬೇಕು. ಈ ಮಾತನ್ನು emphasize ಮಾಡಲೆಂದೇ, ಬೇಂದ್ರೆಯವರು ‘ಆತನಾಕೆ’ ಎನ್ನುತ್ತಾರೆ. ಆತನ (ಶಿವನ) ಆಕೆಯು (ಶಕ್ತಿಯು) ನಮ್ಮ ಜೀವನನೌಕೆಯನ್ನು ನಡೆಯಿಸಲಿ ಎನ್ನುವುದು ಕವಿಯ ಅಪೇಕ್ಷೆ. ಹಳೆಯ ಕಾಲದ ನಾವಿಕರು ನೌಕಾಯಾನದಲ್ಲಿ ಗುರಿ ತಪ್ಪದಿರಲು, ಧ್ರುವ ನಕ್ಷತ್ರವನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಿದ್ದರು. ಧ್ರುವನಕ್ಷತ್ರವು ಶಾಶ್ವತವಾದದ್ದು. ಅದರಂತ ತಮ್ಮ ಜೀವನನೌಕೆಯು ಅಂದರೆ ಪ್ರತಿಯೊಬ್ಬರ ಜೀವನನೌಕೆಯು ಶಾಶ್ವತವಾದದ್ದರ ಕಡೆಗೆ ಸಾಗಲಿ; ಆ ಗುರಿಯು ತಪ್ಪದಂತೆ ದೇವಿಯು ನಮ್ಮ ನೌಕೆಯನ್ನು ನಡೆಯಿಸಲಿ ಎಂದು ಕವಿಯು ಪ್ರಾರ್ಥಿಸುತ್ತಾರೆ. ‘ಶಿವ’ ಎಂದರೆ ಒಳಿತಾದದ್ದು. ಶಿವನೊಡನೆ ಶಕ್ತಿ ಕೂಡಿದಾಗ ಮಾತ್ರ ಬದುಕನ್ನು ಸರಿಯಾದ ಧ್ಯೇಯದೆಡೆಗೆ ಕೊಂಡೊಯ್ಯಬಹುದು.

ಬೇಂದ್ರೆಯವರ ನೌಕೆಯು ವಿಶ್ವನೌಕೆ. ಈ ನೌಕೆಯಲ್ಲಿ ಸಮಸ್ತ ಜೀವಿಗಳು ಪಯಣಿಸುತ್ತಿವೆ. ಆದುದರಿಂದ ಬೇಂದ್ರೆ ತಮ್ಮ ಸಹಪ್ರಯಾಣಿಕರಿಗೆ ಹೇಳುವುದು ಹೀಗೆ:
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ.

ನೌಕೆಯ ಸಹಪ್ರಯಾಣಿಕರಲ್ಲಿ ಅಂದರೆ ಬದುಕಿನಲ್ಲಿ ನಮ್ಮ ಜೊತೆಯಲ್ಲಿದ್ದವರಲ್ಲಿ ಸಾಮರಸ್ಯ ಇರಬೇಕು. ಹಾಗಾದಾಗ, ‘ನಾನು’, ‘ನೀನು’ ಅಳಿಸಿ ಹೋಗಿ ನಾವು ‘ತಾನು’ ಆಗುತ್ತೇವೆ. ಭಗವಂತನ ತಾನಿನ (=ಸಂಗೀತದ) ತಾನು (=ಸಂಗೀತ) ಆಗುತ್ತೇವೆ. ಮತ್ತೊಂದು ಅರ್ಥವೆಂದರೆ ತಾನು ಎಂದರೆ self ಅರ್ಥಾತ್ ಭಗವಂತನೇ ಆಗುತ್ತೇವೆ. ಹಿತಮಯವಾದ ಬದುಕಿಗೆ ಬೇಕಾದ ತಾಳ, ಲಯ ಹಾಗು ರಾಗಗಳು ‘ಸಹಜ’ವಾಗಿ ಬರಲಿ ಎಂದರೆ ಅವುಗಳಲ್ಲಿ ಸೃಷ್ಟಿಗೆ ಅಸಹಜವಾದದ್ದು (unnatural ಆದದ್ದು), ಆ ಕಾರಣದಿಂದ ವಿಕಾರವಾದದ್ದು ಬರದಿರಲಿರಲಿ ಎಂದು ಕವಿ ಆಶಿಸುತ್ತಾರೆ.

‘ಬದುಕು ಮಾಯೆಯ ಮಾಟ’ ಕವನವು ಕವಿಯ ತಾತ್ವಿಕ ತಿಳಿವು ಹಾಗು ಅವನ ಕನಸುಗಳ ಅಭಿವ್ಯಕ್ತಿಯಾಗಿ ಒಡಮೂಡಿದೆ. ಕೇವಲ ಮೂರು ನುಡಿಗಳ ಸರಳ ಕವನದಲ್ಲಿ ಬೇಂದ್ರೆಯವರು ವಿಶ್ವವ್ಯಾಪಿಯಾದ ಜೀವನದರ್ಶನವನ್ನು ಕಾಣಿಸಿದ್ದಾರೆ.
ಬೇಂದ್ರೆಯವರು ಈ ಕವನದಲ್ಲಿ ಬಳಸಿದ ‘ನಾನು’, ‘ನೀನು’ ಹಾಗು ‘ತಾನು’ ಇವು ಅವರ ‘ನಾಕು ತಂತಿ’ ಕವನದಲ್ಲಿ ಪುನರಾವರ್ತಿಸಿವೆ. ಇದು ಅವರ ಜೀವನದೃಷ್ಟಿಯೇ ಆಗಿದೆ.

‘ಬದುಕು ಮಾಯೆಯ ಮಾಟ’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

Sunday, April 21, 2013

ನ್ಯಾಯವಿವೇಚನೆ-೩



ನಮ್ಮ ದೇಶದಲ್ಲಿ ಶಾಸನವು ‘ಬಹುತೇಕವಾಗಿ’ ಧರ್ಮನಿರಪೇಕ್ಷವಾಗಿದೆ ಹಾಗು ನ್ಯಾಯದಾನವು ನೂರಕ್ಕೆ ನೂರರಷ್ಟು
ಧರ್ಮನಿರಪೇಕ್ಷವಾಗಿದೆ. (‘ಬಹುತೇಕ’ ಎನ್ನುವುದರ ಉದಾಹರಣೆಯನ್ನು ಮುಂದೆ ಕೊಡಲಾಗಿದೆ.) ನಮ್ಮ ಉಚ್ಚ ನ್ಯಾಯಾಲಯಗಳ ಹಾಗು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು (ಕೆಲವೊಂದು ಅಪವಾದಗಳ ಹೊರತಾಗಿ) ಉನ್ನತ ಸ್ತರದ ನ್ಯಾಯಮೂರ್ತಿಗಳಾಗಿದ್ದಾರೆ. ಆದುದರಿಂದ ಭಾರತದೇಶದಲ್ಲಿ ಸರ್ವರಿಗೂ ಸರ್ವಕಾಲಕ್ಕೂ ಉಚಿತ ನ್ಯಾಯವು ದೊರೆಯುತ್ತದೆ ಎಂದು ನಾವು ಭಾವಿಸಿದರೆ ತಪ್ಪಿಲ್ಲ. ಆದರೆ ವಸ್ತುಸ್ಥಿತಿ ಹೀಗಿಲ್ಲ. ಈ ಅನ್ಯಾಯದ ಕಾರಣವನ್ನು ಶೋಧಿಸಿದರೆ ಮೊದಲು ಕಾಣುವವರು ನ್ಯಾಯವಾದಿಗಳು; ಎರಡನೆಯದಾಗಿ ನಮ್ಮ ಶಾಸಕರು. ಎಲ್ಲ ನ್ಯಾಯವಾದಿಗಳು ಹಾಗು ಎಲ್ಲ ಶಾಸಕರು ಅನ್ಯಾಯಕ್ಕೆ ಕಾರಣರಾಗಿದ್ದಾರೆ ಎಂದು ಇದರರ್ಥವಲ್ಲ. ಇದು ಸಾರ್ವತ್ರಿಕ ವಾಸ್ತವವಲ್ಲ ಎಂದು ನಾನು ಮೊದಲೇ ಸ್ಪಷ್ಟೀಕರಿಸುತ್ತೇನೆ.

ತನ್ನ ಕಕ್ಷಿದಾರನ ಹಿತವನ್ನು ಕಾಪಾಡುವುದು ನ್ಯಾಯವಾದಿಯ ಕರ್ತವ್ಯವಾಗಿದೆ. ಆದರೆ ಎದುರುಪಕ್ಷದವನಿಗೆ ಅನ್ಯಾಯ ಮಾಡಿ ಇದನ್ನು ಸಾಧಿಸುವುದು ತಪ್ಪಲ್ಲವೆ? ಈ ಉದಾಹರಣೆಯನ್ನು ನೋಡಿರಿ:
ಧಾರವಾಡದ ವತನದಾರ ಗೃಹಸ್ಥನೊಬ್ಬನು ಕುತ್ತಿಗೆಯವರೆಗೆ ಸಾಲ ಮಾಡಿದ್ದ. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೆ? ‘ನಿನ್ನ ಜಮೀನು ಮಾರಿ ಸಾಲ ತೀರಿಸು’ ಎಂದು ಗಂಟು ಬಿದ್ದರು. ಈ ಭೂಪ ಅವರ ಸಾಲ ಮುಳುಗಿಸಲು ವಕೀಲರೊಬ್ಬರ ಸಲಹೆ ಕೇಳಿದ. ಆ ವಕೀಲರು ಇಂತಹ ಪ್ರಕರಣಗಳಲ್ಲಿ ಎತ್ತಿದ ಕೈ. ಆ ಗೃಹಸ್ಥನ ಹೆಂಡತಿ ಹಾಗು ಮಕ್ಕಳಿಂದ ಅವನ ಮೇಲೆ ದಾವೆ ಹೂಡಿಸಿ, ಎಲ್ಲ ಆಸ್ತಿಯನ್ನು ಹೆಂಡತಿ-ಮಕ್ಕಳ ಹೆಸರಿಗೆ ವರ್ಗಾಯಿಸಿ, ಇವನಿಗೆ pauper ಚೀಟಿ ಕೊಡಿಸಿದರು. ಇವನ ಆಸ್ತಿ ಇವನಿಗೆ ಉಳಿಯಿತು; ಸಾಲ ಕೊಟ್ಟವರು ಮುಳುಗಿದರು!

ಕಕ್ಷಿದಾರನ ಹಿತವೇ ವಕೀಲನ ಪರಮೋಚ್ಚ ಉದ್ದೇಶವೆನ್ನುವ ವಿತಂಡವಾದದ ಮೂಲಕ ನ್ಯಾಯವಾದಿಗಳು ಈ ಅನ್ಯಾಯವನ್ನು ಸಮರ್ಥಿಸಿಯಾರು. ಆದರೆ ತನ್ನದೇ ಕಕ್ಷಿದಾರರ ಕುತ್ತಿಗೆಯನ್ನು ಕೊಯ್ಯುವ ವಕೀಲರಿಗೆ ಏನೆನ್ನಬೇಕು?

ಇಂಗ್ಲೆಂಡಿನಲ್ಲಿ ಡಾ^ಕ್ಟರ್ ಎಂದು ಕೆಲಸ ಮಾಡುತ್ತಿದ್ದ ಓರ್ವ ಮಹನೀಯನು ಧಾರವಾಡದ ಓರ್ವ ಮುಗ್ಧ ಕನ್ಯೆಯನ್ನು ಮದುವೆಯಾಗಿ, ಇಂಗ್ಲೆಂಡಿಗೆ ಕರೆದುಕೊಂಡು ಹೋದ. ಆ ಮಹಿಳೆಗೆ ಒಂದು ಮಗುವೂ ಆಯಿತು. ಆಬಳಿಕ ಅವಳನ್ನು ಧಾರವಾಡಕ್ಕೆ ಮರಳಿ ಕರೆ ತಂದು ಅವಳ ತಂದೆಯ ಮನೆಯಲ್ಲಿಯೇ ಬಿಟ್ಟು ಈತ ಇಂಗ್ಲಂಡಿಗೆ ಓಡಿ ಹೋದ. (ಹೋಗುವಾಗ, ಅವಳ ತವರುಮನೆಯವರು ಮದುವೆಯಲ್ಲಿ ಕೊಟ್ಟಿದ್ದ ಚಿನ್ನವನ್ನೂ ಸಹ ತೆಗೆದುಕೊಂಡೇ ಹೋದ!) ಅಲ್ಲಿಂದಲೇ ಆಕೆಗೆ ವಿವಾಹ ವಿಚ್ಛೇದನ ಕೊಡಲು ಆತ ಇಂಗ್ಲೆಂಡ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ. ಆದರೆ ಇಂಗ್ಲೆಂಡಿನ ನ್ಯಾಯಾಲಯದಲ್ಲಿ ಅವನ ಅರ್ಜಿ ತಿರಸ್ಕೃತವಾದದ್ದರಿಂದ ಧಾರವಾಡದಲ್ಲಿಯ ನ್ಯಾಯಾಲಯದಲ್ಲಿಯೇ ವಿಚ್ಛೇದನಕ್ಕಾಗಿ ದಾವೆ ಮಾಡಬೇಕಾಯಿತು. ಇಲ್ಲಿಯೂ ಸಹ ಅವನ ದಾವೆ ತಿರಸ್ಕೃತವಾಯಿತು. ಅಷ್ಟೇ ಅಲ್ಲದೆ, ಅವನ ಹೆಂಡತಿಗೆ ಅವನು ತಾತ್ಪೂರ್ತಿಕವಾಗಿ ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡಬೇಕೆಂದೂ ಸಹ ನ್ಯಾಯಾಲಯವು ಆದೇಶ ನೀಡಿತು. ಹಟಕ್ಕೆ ಬಿದ್ದ ಆತ, ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡಿದ. ಈ ಮಧ್ಯೆ ಆತನು ಮಾಸಿಕ ನಿರ್ವಹಣಾ ಮೊತ್ತವನ್ನು ಕೊಡದೇ ಇದ್ದುದರಿಂದ, ಅನೇಕ ವರ್ಷಗಳವರೆಗೆ ಕೂಡಿ ಬಿದ್ದ ಮೊತ್ತವೇ ಸುಮಾರು ಮೂರೂವರೆ ಲಕ್ಷ ರೂಪಾಯಿಗಳಷ್ಟು ಆಗಿತ್ತು. ಈ ಮಹಿಳೆಯ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದ ನ್ಯಾಯವಾದಿಯು, ‘ತಾನು ವಿಚ್ಛೇದನ ದಾವೆಯ ಬಗೆಗಷ್ಟೇ ವಾದ ಮಾಡುತ್ತೇನೆ; ಆದುದರಿಂದ ಬಾಕಿ ವಸೂಲಿಗಾಗಿ ಬೇರೊಬ್ಬ ವಕೀಲನನ್ನು ನಿಯಮಿಸಿಕೊಳ್ಳಿ’ ಎಂದು ಹೇಳಿ, ಬೇರೊಬ್ಬ ವಕೀಲನನ್ನು ತಾನೇ ಗೊತ್ತು ಮಾಡಿ ಕೊಟ್ಟ. ಈ ಬೇರೊಬ್ಬ ವಕೀಲನು ತನ್ನ ಕಕ್ಷಿದಾರಳಿಂದ ತನ್ನ ವಕೀಲಿ ಫೀ ಅನ್ನು ಮುಂಗಡವಾಗಿ ವಸೂಲಿ ಮಾಡಿಕೊಂಡದ್ದಲ್ಲದೇ, ಎದುರಾಳಿಗಳೊಡನೆ ಮಿಲಾಪಿಯಾಗಿ ಬಿಟ್ಟ ಹಾಗು ಈ ಹೆಣ್ಣುಮಗಳಿಗೆ ಬರಬೇಕಾದ ಬಾಕಿಯನ್ನು ಕೊಡಿಸಲೇ ಇಲ್ಲ! ಆ ಅಸಹಾಯಕ ಹೆಣ್ಣುಮಗಳು ‘ತನ್ನ ಹಣೆಬರಹ’ ಎಂದುಕೊಂಡು ಸುಮ್ಮನಾದಳು.

ನ್ಯಾಯವಾದಿಗಳು ತಮ್ಮ ಕಕ್ಷಿದಾರರ ಸಲುವಾಗಿ, ಸತ್ಯವನ್ನು ಸುಳ್ಳು ಮಾಡಬಹುದು ಹಾಗು ಸುಳ್ಳನ್ನೇ ಸತ್ಯವನ್ನಾಗಿ ತಿರುಚಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ, ನಮ್ಮ ಶಾಸಕರೇ ನಿಸ್ಸಹಾಯಕ ಮಹಿಳೆಯ ಮೇಲೆ ಗದಾಪ್ರಹಾರ ಮಾಡಿದರೆ, ಏನೆನ್ನಬೇಕು? ಮಧ್ಯಪ್ರದೇಶದ ಇಂದೂರಿನಲ್ಲಿದ್ದ ಶಾಹ ಬಾನೊ ಎನ್ನುವ ೬೨ ವರ್ಷದ ವೃದ್ಧೆಯೊಬ್ಬಳ ಪ್ರಖ್ಯಾತ ಪ್ರಕರಣವನ್ನು ನೋಡಿ: ಅವಳ ಗಂಡನು ಅವಳಿಗೆ ತಲಾಕ್ ಕೊಟ್ಟ. ಅವಳು ತನ್ನ ಹಾಗು ತನ್ನ ಮಕ್ಕಳ ಜೀವನನಿರ್ವಹಣೆಗಾಗಿ ನ್ಯಾಯಾಲಯಕ್ಕೆ ಮೊರೆ ಹೋಗಬೇಕಾಯಿತು.  ೭ ವರ್ಷಗಳ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯವು ‘ಕ್ರಿಮಿನಲ್ ಸಂಹಿತೆಯ ೧೨೫ನೆಯ ಸೆಕ್ಶನ್ನಿ’ನ ಆಧಾರದ ಮೇಲೆ ಅವಳಿಗೆ ಜೀವನನಿರ್ವಹಣೆಯನ್ನು ಕೊಡಿಸುವ ಆದೇಶ ನೀಡಿತು (೨೩-೪-೧೯೮೫). ರಾಜಕೀಯ ಕಾರಣಗಳಿಗಾಗಿ ೧೯೮೬ರಲ್ಲಿ ರಾಜೀವ ಗಾಂಧಿಯವರ ನೇತೃತ್ವದ ಲೋಕಸಭೆಯು ಒಂದು ಹೊಸ ಶಾಸನವನ್ನು ರೂಪಿಸುವ ಮೂಲಕ ಈ ನ್ಯಾಯದಾನವನ್ನು ಹೊಸಕಿ ಹಾಕಿತು. ಇಂತಹ ಶಾಸಕರಿಗೆ ನಾವು ದುಶ್ಶಾಸನರು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಕೌರವಸಭೆಯು ದ್ರೌಪದಿಯ ಬಟ್ಟೆಗಳನ್ನು ಕಸಿದುಕೊಂಡರೆ, ಲೋಕಸಭೆಯು ಶಾಹ ಬಾನೋಳ  ಜೀವನನಿರ್ವಹಣೆಯನ್ನೇ ಕಸಿದುಕೊಂಡಿತು!

ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ‘ಹಿಂದ ಸ್ವರಾಜ” ಪತ್ರಿಕೆಯಲ್ಲಿ ಬ್ರಿಟಿಶ್ ಪಾರ್ಲಿಮೆಂಟಿನ ಬಗೆಗೆ ಮಾಡಿದ ಟೀಕೆಯೊಂದು ನೆನಪಾಗುತ್ತದೆ: "British Parliament is a prostitute and a sterile woman "! ಇಂತಹ ಅವಹೇಳನಕಾರಿ ಹೇಳಿಕೆಯ ಕಾರಣವನ್ನೂ ಅವರು ಸ್ಪಷ್ಟಪಡಿಸಿದರು. ‘ವೇಶ್ಯೆಗೆ ತನ್ನ ಗಿರಾಕಿಗಳ ಮೇಲೆ ಏನೂ ಪ್ರೀತಿ ಇರುವುದಿಲ್ಲ; ಅವಳಿಗೆ ತನ್ನ ಸಂಪಾದನೆಯೇ ಮುಖ್ಯ. ಅದರಂತೆ ಈ ಪಾರ್ಲಿಮೆಂಟಿನ ಸದಸ್ಯರಿಗೆ, ತಮ್ಮ ಪ್ರಜೆಗಳ ಬಗೆಗೆ ಏನೂ ಕಳಕಳಿ ಇಲ್ಲ; ತಮ್ಮ ದಂಭಾಚಾರವೆ ಇವರಿಗೆ ಮುಖ್ಯವಾಗಿದೆ. ಬಂಜೆ ಹೆಣ್ಣುಮಗಳು ಫಲವತಿಯಾಗಲಾರಳು. ಬ್ರಿಟಿಶ್ ಪಾರ್ಲಿಮೆಂಟ್ ಸಹ ಬಂಜೆ ಹೆಂಗಸಿನಂತೆ ಒಳ್ಳೆಯ ಫಲಗಳನ್ನು ಕೊಡಲಾರದಾಗಿದೆ. ಗಾಂಧೀಜಿಯವರ ಮಾತು ನಮ್ಮ ಲೋಕಸಭೆಗೂ ಅನ್ವಯವಾಗುವುದೆ?
  
ಲೋಕಸಭೆಯಲ್ಲಿ ಇತ್ತೀಚೆಗೆ ಒಂದು ಅತ್ಯಾಚಾರ-ವಿರೋಧಿ ವಿಧೇಯಕದ ಬಗೆಗೆ ನಡೆದ ಚರ್ಚೆಯನ್ನು ಟೀವಿ ಚಾನೆಲ್ಲುಗಳು ಪ್ರಸಾರ ಮಾಡಿದವು. ಆ ಚರ್ಚೆಯನ್ನು ನೋಡಿದವರಿಗೆ, ನಮ್ಮ ಪುರುಷ ಶಾಸಕರು ಅತ್ಯಾಚಾರದಂತಹ ವಿಷಯವನ್ನು ಎಷ್ಟು ಹಗುರವಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಘಾತಕಾರಿ ಅರಿವು ಆಗುತ್ತದೆ. ಒಂದು ವಿರೋಧಿ ಪಕ್ಷದ ಒಬ್ಬ ಗಣ್ಯ ಧುರೀಣರಂತೂ ‘ಹೆಂಗಸನ್ನು ಹಿಂಬಾಲಿಸದ ಗಂಡಸು ಯಾರಿದ್ದಾರೆ?’ ಎಂದು ಅಪಹಾಸ್ಯ ಮಾಡುವ ಮೂಲಕ ತಾವು male chauvinistic pig ಇರುವುದನ್ನು ಸಾಬೀತುಪಡಿಸಿದರು! ವಿಧೇಯಕವನ್ನು ರೂಪಿಸುವಾಗಲೂ ಸಹ ಅನೇಕ ಶಾಸಕರು ವಿಷಯದ ಬಗೆಗಿರುವ ತಮ್ಮ ಅಜ್ಞಾನವನ್ನು ಧಾರಾಳವಾಗಿ ಪ್ರಕಟಪಡಿಸಿದರು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗೆ ಹೆಚ್ಚಿನ ಶಿಕ್ಷೆ ವಿಧಿಸಿದರೆ ಮಾತ್ರ ಸಾಲದು. ಪ್ರಕರಣವನ್ನು ದಾಖಲು ಮಾಡಿಕೊಳ್ಳುವುದನ್ನು ನಿರಾಕರಿಸುವ ಅಥವಾ ವಿಲಂಬ ಮಾಡುವ ಪೋಲೀಸ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡುವುದು ಅತ್ಯಂತ ಅವಶ್ಯವಾಗಿದೆ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಎಂದರೆ, ಅತ್ಯಾಚಾರದ ಪ್ರಕರಣದಲ್ಲಿ ತಕರಾರನ್ನು ದಾಖಲಿಸಿಕೊಳ್ಳಲು ಒಂದು ಪ್ರತ್ಯೇಕ ಸೆಲ್ ಮಾಡಬೇಕು. ಈ ಸೆಲ್‍ ನ್ಯಾಯಾಲಯದ ಆವರಣದಲ್ಲಿ ಇರಬೇಕು. ಈ ಸೆಲ್‍ನ ಮುಖ್ಯಸ್ಥರು ಒಬ್ಬ ನೋಟರಿ ಆಗಿರಬೇಕು. ಈ ಸೆಲ್‍ಗೆ ಸದಸ್ಯರನ್ನಾಗಿ ಮಹಿಳೆಯರನ್ನು ಹಾಗು NGO ಸದಸ್ಯರನ್ನು ನಿಯಮಿಸಬೇಕು. ಈ ಸೆಲ್‍ನಲ್ಲಿ ತಕರಾರು ಅರ್ಜಿಯನ್ನು ಸ್ವೀಕರಿಸಿದ ತಕ್ಷಣ, ಸಂಬಂಧಿಸಿದ ಪೋಲೀಸ್ ಠಾಣೆಗೆ ಕಳುಹಿಸಿ, ಅದರ ಪ್ರಗತಿಯನ್ನು ವಿಮರ್ಶಿಸುವ ವ್ಯವಸ್ಥೆಯಾಗಬೇಕು. ಹಾಗಾದಾಗ ಮಾತ್ರ ಪೋಲೀಸರಿಂದಲೇ ನ್ಯಾಯದಾನದ ಗರ್ಭಪಾತವಾಗುವ ಸಂದರ್ಭಗಳು ತಪ್ಪಬಹುದು! ಆದರೆ ಇಂತಹ ಮುಖ್ಯ ಸಂಗತಿಯೇ ನಮ್ಮ ಶಾಸಕರಿಗೆ ಹೊಳೆಯಲಿಲ್ಲ. ಅಥವಾ ಇದು ಉದ್ದೇಶಪೂರ್ವಕ ವಿಸ್ಮರಣೆಯಾಗಿರಬಹುದೆ?

ನ್ಯಾಯವಾದಿಗಳು, ಪೋಲೀಸರು ಹಾಗು (ಶಾಸಕರು ರೂಪಿಸುತ್ತಿರುವ) ಅನರ್ಥಕ ಶಾಸನಗಳು ಎನ್ನುವ ಮೂರು ತಡೆಗಳನ್ನು ಹಾರಿ ನ್ಯಾಯಾಲಯದಿಂದ ನ್ಯಾಯ ಪಡೆಯಬಲ್ಲ ಸಮರ್ಥರು ನಮ್ಮಲ್ಲಿ ಯಾರಾದರೂ ಇದ್ದಾರೆಯೆ?