Friday, May 30, 2014

ಪತ್ರಕರ್ತರ ಕರ್ತವ್ಯ, ಅಕರ್ತವ್ಯ.


ನವೋದಯ ಕಾಲದಲ್ಲಿ ಕನ್ನಡ ಸಾಹಿತಿಗಳು ಕನ್ನಡ ಭಾಷೆಯನ್ನು ಕಟ್ಟಿದಂತೆ, ಬೆಳಸಿದಂತೆ, ಪತ್ರಿಕಾಕರ್ತರೂ ಸಹ ಕನ್ನಡ ಭಾಷೆಯನ್ನು ಬೆಳಸುತ್ತಲೇ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಪ್ರಾರಂಭವಾಗಿ ಅರ್ಧ ಶತಕಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಕನ್ನಡದ ಮೊದಲ ಸಮಾಚಾರಪತ್ರಿಕೆ ‘ತಾಯಿನಾಡು’ ೧೯೨೭ರಲ್ಲಿ ಪ್ರಾರಂಭವಾಯಿತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ೧೯೩೩ರಲ್ಲಿ ಪ್ರಾರಂಭವಾಯಿತು. ‘ಪ್ರಜಾವಾಣಿ’ ಪತ್ರಿಕೆಯು ೧೯೪೮ರಲ್ಲಿ ಪ್ರಾರಂಭವಾಯಿತು.

ಈ ಎಲ್ಲ ಪತ್ರಿಕೆಗಳು ಹೆಮ್ಮೆಪಡುವಂತಹ ಪತ್ರಿಕಾಶೈಲಿಯನ್ನು ನಿರ್ಮಿಸಿದವು. ಅನೇಕ ಹೊಸ ಪತ್ರಿಕಾಪದಗಳನ್ನು ಸೃಷ್ಟಿಸಿದವು. ಉದಾಹರಣೆಗೆ lead articleಗೆ ‘ಅಗ್ರಲೇಖನ’ವೆಂದು ಹೆಸರಿಸಿದರು. Vested interestಅನ್ನು ‘ಪಟ್ಟಭದ್ರ ಹಿತಾಸಕ್ತಿ’ ಎಂದು ಕರೆದರು. ಆಂಗ್ಲ ಭಾಷೆಯಲ್ಲಿರುವ ಅನೇಕ ಪತ್ರಿಕಾಪದಗಳನ್ನು ನಮ್ಮ ಪತ್ರಕರ್ತರು ತುಂಬ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಗಂಭೀರವಾದ ಕಾರ್ಯ. ಒಟ್ಟಿನಲ್ಲಿ ಒಂದು ಸಮಾಚಾರಪತ್ರಿಕೆಯು ಮಾಡಬೇಕಾದ ಮೂರು ಅವಶ್ಯಕ ಮುಖ್ಯ ಕಾರ್ಯಗಳನ್ನು ಇವು ಸಮರ್ಪಕವಾಗಿ ನಿರ್ವಹಿಸಿದವು:
(೧) ನಿಷ್ಪಕ್ಷಪಾತವಾಗಿ ಸಮಾಚಾರವನ್ನು ನೀಡುವುದು,
(೨) ಚಿಂತನಪರ ಲೇಖನಗಳನ್ನು ನೀಡುವುದು,
(೩) ಪತ್ರಿಕಾಕನ್ನಡವನ್ನು ಬೆಳೆಸುವುದು.

ಪತ್ರಿಕಾಕರ್ತರಷ್ಟೇ ಅಲ್ಲ ನಮ್ಮ ಸರಕಾರಿ ನೌಕರರು ಸಹ ‘ಸರಕಾರಿ’ ಹಾಗು ತಾಂತ್ರಿಕ ಪದಗಳನ್ನು ತುಂಬ ಅರ್ಥಪೂರ್ಣವಾಗಿ ಭಾಷಾಂತರಿಸಿದ್ದಾರೆ. ಉದಾಹರಣೆಗೆ ‘ಪಬ್ಲಿಕ್ ವರ್ಕ್ಸ್ ಡಿಪಾರ್ಟಮೆಂಟ್’ ಎನ್ನುವುದು ‘ಲೋಕೋಪಯೋಗಿ ಇಲಾಖೆ’ ಆಯಿತು , ‘ಬೆನಿಫಿಶರಿ’ಯು  ‘ಫಲಾನುಭವಿ’ ಆದನು. ‘ಸ್ಪೀಡ್ ಬ್ರೆಕರ್’ ಎನ್ನುವುದು ‘ರಸ್ತೆದಿಬ್ಬ’ ಆಯಿತು. ಪತ್ರಕರ್ತರು, ಸರಕಾರಿ ನೌಕರರು ಹಾಗು ಜನಸಾಮಾನ್ಯರು ಇಂತಹ ಅನೇಕ ಪದಗಳನ್ನು ಅನುವಾದಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ. ಅಂತಹ ಕೆಲವು ಪದಗಳು ಹೀಗಿವೆ:
Protocol......................ಶಿಷ್ಟಾಚಾರ
Ordinanace.................ಸುಗ್ರೀವಾಜ್ಞೆ
Green revolution........ ಹಸಿರು ಕ್ರಾಂತಿ
Transgenic..................ಕುಲಾಂತರಿ
anasthesia...................ಅರಿವಳಿಕೆ
Inferiority complex.......ಕೀಳರಿಮೆ
Unconscious................ಸುಪ್ತಪ್ರಜ್ಞೆ
Dedicated to people....ಲೋಕಾರ್ಪಣೆ
Preface........................ಮುನ್ನುಡಿ

ಇಂತಹ ಅನುವಾದ ಕಾರ್ಯವೇನೊ ಹೊಸದಾಗಿ ಪ್ರಾರಂಭವಾದದ್ದು. ನೂರಾರು ವರ್ಷಗಳಿಂದ ಕನ್ನಡದಲ್ಲಿಯೇ ಸುಂದರವಾದ ಅನೇಕ ಪದಪುಂಜಗಳು ಸೃಷ್ಟಿಯಾಗಿವೆ. ಉದಾಹರಣೆಗೆ:
ಉದರವೈರಾಗ್ಯ
ಸ್ಮಶಾನಶಾಂತಿ
ಲೋಕಮಾನ್ಯ

ಭಾರತದಲ್ಲಿ ರಾಜಪ್ರಭುತ್ವವಿದ್ದಂತಹ ಕಾಲದಲ್ಲಿ, ರಾಜರ ಅನುಯಾಯಿಗಳಾದ ಕೆಲವು ಗಣ್ಯರಿಗೆ ‘ರಾಜಮಾನ್ಯ’ ಎನ್ನುವ ಬಿರುದು ದೊರೆಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಶರ ವಿರುದ್ಧ ಸಮರ ಸಾರಿದ ಬಾಲಗಂಗಾಧರ ತಿಲಕರಿಗೆ ಜನಸಾಮಾನ್ಯರೇ ‘ಲೋಕಮಾನ್ಯ’ ಎನ್ನುವ ಬಿರುದನ್ನು ಇತ್ತರು. ಇಂತಹ ಸುಂದರವಾದ ಪದಗಳ ಸೃಷ್ಟಿಕರ್ತರು ಸಾಮಾನ್ಯ ಅನಾಮಧೇಯರು. ಇವರನ್ನು ಹುಡುಕಿ ಗೌರವಿಸುವುದು ನಮ್ಮಿಂದ ಸಾಧ್ಯವಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಇತ್ತೀಚಿನ ಕೆಲವು ಪತ್ರಿಕಾಸಂಪಾದಕರ ಗುಣಪರೀಕ್ಷೆಯನ್ನು ಮಾಡೋಣ!

ಶ್ರೀ ವಿಶ್ವೇಶ್ವರ ಭಟ್ಟರು ಮೊದಲು ‘ವಿಜಯಕರ್ನಾಟಕ’ ಪತ್ರಿಕೆಯ, ತನ್ನಂತರ ‘ಕನ್ನಡಪ್ರಭಾ’ ಪತ್ರಿಕೆಯ ಸಂಪಾದಕರಾದರು. ‘ಕುಂಬಾರನಿಗೆ ಒಂದು ವರ್ಷ, ಡೊಣ್ಣೆಗೆ ಒಂದು ನಿಮಿಷ’ ಎನ್ನುವಂತೆ. ನಮ್ಮ ಪತ್ರಿಕಾಪೂರ್ವಜರ ಮಹತ್ಸಾಧನೆಯನ್ನು ಭಟ್ಟರು ನುಚ್ಚುನೂರು ಮಾಡುತ್ತಿದ್ದಾರೆ. ಒಂದು ಸಮಾಚಾರಪತ್ರಿಕೆಯಲ್ಲಿ ರಂಜನೆಗೂ ಸ್ಥಾನವಿರಲೇ ಬೇಕು. ಆದರೆ ಅದೇ ಪ್ರಧಾನವಾಗಬಾರದು. ಹಾಗಾದಾಗ, ಪತ್ರಿಕಾಶೈಲಿಯು ಭರತನಾಟ್ಯವಾಗುವ ಬದಲು ‘ತಮಾಶಾ, ನೌಟಂಕಿ’ ಕುಣಿತವಾಗುತ್ತದೆ. ವಿಶ್ವೇಶ್ವರಭಟ್ಟರು ತಮ್ಮ ವಿಚಿತ್ರ ಪದಪ್ರಯೋಗಗಳ ಮೂಲಕಇದನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ‘ಹತ್ಯಾಚಾರ’ ಎನ್ನುವ ಪದಪ್ರಯೋಗವನ್ನು ನೋಡಿರಿ. ಅತ್ಯಾಚಾರದ ಬಳಿಕ ಮಾಡಿದ ಹತ್ಯೆಯನ್ನು ಸೂಚಿಸಲು ಭಟ್ಟರು ‘ಹತ್ಯಾಚಾರ’ ಎಂದು ಬರೆಯುತ್ತಾರೆ. ಇದನ್ನೇ ‘ಅತ್ಯಾಚಾರ ಹಾಗು ಕೊಲೆ’ ಎಂದರೆ ಆಗದೆ? ತಾವು ಹೊಸ ಪದವೊಂದನ್ನು ಟಂಕಿಸಿರುವದಾಗಿ ಭಟ್ಟರು ತಮ್ಮನ್ನು ತಾವೇ ಹೊಗಳಿಕೊಳ್ಳಬಹುದು. ಆದರೆ ಇದನ್ನು ನಾನು ‘ಪಂಕ್ ಪ್ರಯೋಗ’ ಎಂದು ಕರೆಯುತ್ತೇನೆ. ತಲೆಯ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ತಿರುಗಾಡುವ, ‘ಪಂಕ್’ ಎಂದು ಕರೆಯಿಸಿಕೊಳ್ಳುವ ಯುವಕರನ್ನು ನೀವು ನೋಡಿರಬಹುದು. ಜನರ ಗಮನ ಸೆಳೆಯಲು ಈ ಹುಚ್ಚಾಟವನ್ನು ಅವರು ಮಾಡುತ್ತಾರೆ. ಇದೊಂದು ತರಹದ ಮನೋರೋಗ. ವಿಶ್ವೇಶ್ವರ ಭಟ್ಟರು ಕನ್ನಡ ಭಾಷೆಯನ್ನು ‘ಪಂಕ್’ ಮಾಡುತ್ತಿದ್ದಾರೆ. ಆದರೆ ಇದು ಪತ್ರಿಕೆಯಲ್ಲಿ ಬಳಸಲು ಯೋಗ್ಯವಾದ ಪ್ರಯೋಗವಲ್ಲ.

ಕನ್ನಡವನ್ನು ಕುಲಗೆಡಿಸಲು ಭಟ್ಟರು ಇನ್ನೂ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಒಂದು ಪದಕ್ಕೆ ಜೋಡಿಸಬೇಕಾದ ವ್ಯಾಕರಣಸಮ್ಮತ ವಿಭಕ್ತಿಪ್ರತ್ಯಯದ ಅಂಗಛ್ಛೇದವನ್ನು ಮಾಡುವುದು. ಉದಾಹರಣೆಗೆ ‘ವಾರಾಣಸಿಯಲ್ಲಿ’ ಎಂದು ಬರೆಯಬೇಕಾದ ಪದವನ್ನು ಭಟ್ಟರು ‘ವಾರಾಣಸೀಲಿ’ ಎಂದು ಬರೆಯುತ್ತಾರೆ. ಈ ತರಹದ ಪ್ರಯೋಗದಿಂದ ಭಟ್ಟರು ಏನನ್ನು ಸಾಧಿಸುತ್ತಾರೆ?

ಪತ್ರಿಕಾಕನ್ನಡವನ್ನು ಆಡುಭಾಷೆಯ ಕನ್ನಡವನ್ನಾಗಿ ಮಾಡುವ ದೊಡ್ಡಸ್ತಿಕೆಯೆ ಇದು? ಹಾಗಿದ್ದರೆ, ‘ಮಹಾರಾಜರು ಸಿಂಹಾಸನದ ಮೇಲೆ ಕುಳಿತರು’ ಅನ್ನುವ ವಾಕ್ಯವನ್ನು ‘ಮಾರಾಜರು ಸಿಂಆಸನದ ಮ್ಯಾಲೆ ಕುಂತರು’ ಎಂದು ಇವರು ಬರೆಯಬಹುದೇನೊ? ಇನ್ನೂ ಒಂದು ನೆವ ಭಟ್ಟರ ಬತ್ತಳಿಕೆಯಲ್ಲಿ ಇರಬಹುದು: ಲಭ್ಯವಿರುವ ಸ್ಥಳದಲ್ಲಿ ಸಮಾಚಾರವನ್ನು ಹೊಂದಿಸುವ ಸಲುವಾಗಿ, ಈ ರೀತಿಯಲ್ಲಿ ಬರೆಯಲಾಗಿದೆ, ಎಂದು ಅವರು ಹೇಳಬಹುದು. ಇದು ಒಪ್ಪಲು ಅಸಾಧ್ಯವಾದ ಕುಂಟುನೆವ. ಅಕ್ಷರಗಳ ಅಳತೆಯನ್ನು ಕಡಿಮೆ ಮಾಡಿದರೆ, ಸ್ಥಳಾವಕಾಶಕ್ಕೇನು ಕೊರತೆಯಾದೀತು? ನಿಜ ಹೇಳಬೇಕೆಂದರೆ ಓದುಗರನ್ನು ಆಕರ್ಷಿಸಲು ಭಟ್ಟರು ಮಾಡುತ್ತಿರುವ ಡೊಂಬರಾಟವಿದು!

ಭಟ್ಟರು ಇಷ್ಟಕ್ಕೇ ಸುಮ್ಮನಾಗಿಲ್ಲ. ಆಂಗ್ಲ ಪದಗಳಿಗೆ ತಪ್ಪು ಕನ್ನಡ ಪದಗಳನ್ನು ಸೂಚಿಸುವ ತೆವಲು ಅವರಲ್ಲಿದೆ. ಭಟ್ಟರು ಈ ಮೊದಲೊಮ್ಮೆ audacity ಪದವನ್ನು ‘ತಿಕಕೊಬ್ಬು’ ಎಂದು ವರ್ಣಿಸಿದಾಗ, ಅದನ್ನು ಖಂಡಿಸಿ ನಾನು ಇಲ್ಲಿ ಬರೆದಿದ್ದೆ. ಅಂತಹದೇ ತಪ್ಪನ್ನು ಭಟ್ಟರು ಮತ್ತೊಮ್ಮೆ ಮಾಡಿದ್ದಾರೆ. ಅದು ಹೀಗಿದೆ:
Faceless ಪದದ ಅರ್ಥ ‘ಗುರುತಿರದ’ ಎಂದಾಗುತ್ತದೆ, ಉದಾಹರಣೆಗೆ , Faceless mob, Faceless kidnapper, Faceless Terrorist ಇತ್ಯಾದಿ. ಭಟ್ಟರು faceless ಎಂದರೆ ‘ಮುಖೇಡಿ’ ಎಂದು ಸೂಚಿಸಿದ್ದಾರೆ. ‘ಮುಖೇಡಿ’ ಅಥವಾ ‘ಮುಖಹೇಡಿ’ ಅಥವಾ ‘ಮಖೀನ’ ಎಂದರೆ ಮತ್ತೊಬ್ಬರ ಜೊತೆ ಮುಖ ಎತ್ತಿ ಮಾತನಾಡಲೂ ಸಹ ಹೆದರಿಕೊಳ್ಳುವ, ಸಂಕೋಚಪಡುವ ವ್ಯಕ್ತಿ. ಭಟ್ಟರ ಪ್ರಕಾರ Faceless Terrorist ಎಂದರೆ ‘ಹೆದರುಪುಕ್ಕ, ಸಂಕೋಚಶೀಲ ಭಯೋತ್ಪಾದಕ’!
ಭಟ್ಟರೆ, ನೀವು ಇಂಗ್ಲಿಶ್ ಪದಗಳನ್ನೇ ಬಳಸಿರಿ ಅಥವಾ ಕನ್ನಡ ಪದಗಳನ್ನೇ ಬಳಸಿರಿ, ‘ಕನ್ನಡಪ್ರಭಾ’ದ ಓದುಗರಿಗೆ ಅರ್ಥವಾಗುತ್ತದೆ. ದಯವಿಟ್ಟು ಇಂಗ್ಲಿಶ್ ಪದವನ್ನು ಬಳಸಿ ಅದಕ್ಕೆ ತಪ್ಪು ಕನ್ನಡ ಪದವನ್ನು ಸೂಚಿಸಬೇಡಿ. ಅದು ಅಮಾಯಕ ಓದುಗರಿಗೆ, ವಿಶೇಷತಃ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸಬಹುದು.



ತನ್ನ ಅಜ್ಞಾನವನ್ನು ಇತರಲ್ಲಿ ಯಾವುದೇ ಸಂಕೋಚವಿಲ್ಲದೇ ಹರಡುವವನಿಗೆ ಏನೆನ್ನಬೇಕು? ಒಂದು ಜನಪ್ರಿಯ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ತಮ್ಮ ಬರಹದ ಮೂಲಕ ತಪ್ಪು ಮಾಹಿತಿ ಪ್ರಸಾರವಾಗದಂತೆ ಎಚ್ಚರದಿಂದ ಇರಬೇಕು. ಆದರೆ ಇಲ್ಲಿ ನೋಡಿ: ‘ಬಾಲವಿಲ್ಲದ ಮುಧೋಳ ನಾಯಿ’ ಎಂದು ಬರೆಯುವ ಮೂಲಕ ಭಟ್ಟರು ಮುಧೋಳ ನಾಯಿಗೆ ಬಾಲ ಇರುವುದಿಲ್ಲ ಎನ್ನುವ ತಪ್ಪು ತಿಳಿವಳಿಕೆಯನ್ನು ಜನರಲ್ಲಿ ಹರಡುತ್ತಿದ್ದಾರೆ. ಮುಧೋಳ ನಾಯಿಗೆ ಏನಾದರೂ ಈ ವಿಷಯ ತಿಳಿದರೆ ಅದು ಭಟ್ಟರನ್ನು ಸುಮ್ಮನೆ ಬಿಟ್ಟೀತೆ? ಯಾಕೆಂದರೆ ಅದಕ್ಕೆ ಸಾಕಷ್ಟು ಉದ್ದವಾದ ಬಾಲವಿದೆ. ಭಟ್ಟರು, ‘ಇದು ಹಾಗಲ್ಲ, ಬಾಲವಿರದಂತಹ ಮುಧೋಳ ನಾಯಿ’ಯ ಬಗೆಗೆ ನಾನು ಬರೆಯುತ್ತಿದ್ದೆ ಎನ್ನುವ ಸಮಜಾಯಿಸಿ ಕೊಡಲು ಪ್ರಯತ್ನಿಸಬಹುದು. ದಯವಿಟ್ಟು ಈ ಮಾತನ್ನು ಮುಧೋಳ ನಾಯಿಯ ಎದುರಿಗೆ ಹೇಳಲು ಪ್ರಯತ್ನಿಸಿರಿ! 


ನೀವು ಎಷ್ಟೇ ತಿಳಿಹೇಳಿದರೂ ಭಟ್ಟರು ಎರಡೇ ವಾಕ್ಯಗಳಲ್ಲಿ ನಿಮ್ಮನ್ನು ಚಿತ್ ಮಾಡಿ ಬಿಡುತ್ತಾರೆ: `ಪ್ರತಿಯೊಂದು ಪತ್ರಿಕೆಗೂ ಒಂದು stylesheet ಇರುತ್ತದೆ ; ಇದು ಕನ್ನಡಪ್ರಭಾ ಪತ್ರಿಕೆಯ stylesheet !’  
 ‘ನೀಟಾದ ಸೂಟಿನ ಬಟ್ಟೆ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೀಯಪ್ಪಾ’ ಎಂದು ನೀವು ಒಬ್ಬ ಎಬಡನಿಗೆ ಹೇಳಿದರೆ, ಆತನು ‘ಲಂಗೋಟಿಯೇ ನನ್ನ style !’ ಎಂದು ಹೇಳಿದನಂತೆ. ಇದೂ ಹಾಗೆಯೇ!

ಭಟ್ಟರೆ, ಕನ್ನಡಪ್ರಭಾ ಪತ್ರಿಕೆಯ ಪ್ರಸಾರವು ನಿಮ್ಮ ಆಡಳಿತದಲ್ಲಿ ಸಾಕಷ್ಟು ವರ್ಧಿಸಿದೆ. ನೀವು ಕನ್ನಡದ ಒಬ್ಬ ಹೊಣೆಗಾರ ಸಂಪಾದಕರಂತೆ ವರ್ತಿಸಬೇಕೆ ವಿನಃ ಹತ್ಯಾಚಾರಿ ‘ಪಂಕ್’ ಸಂಪಾದಕನಂತೆ ಅಲ್ಲ. ಏಕೆಂದರೆ, ಪತ್ರಿಕೆಯನ್ನು ಓದುವ ಅಮಾಯಕ ತರುಣರು ಹಾಗು ವಿದ್ಯಾರ್ಥಿಗಳು ನೀವು ಬರೆದದ್ದೇ ಸರಿ ಎಂದು ತಪ್ಪಾಗಿ ಭಾವಿಸುತ್ತಾರೆ. ಅಷ್ಟೇ ಅಲ್ಲ, ಶ್ರೇಷ್ಠ ಇತಿಹಾಸವಿದ್ದಂತಹ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯೂ ಸಹ ನಿಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತ ಮುಕ್ಕರಿಸುತ್ತಿದೆ. ಆದುದರಿಂದ ದಯವಿಟ್ಟು ಈ ‘ಮಂಗಾಟ’ವನ್ನು ನಿಲ್ಲಿಸಿರಿ ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.     

Tuesday, May 20, 2014

‘ಸಾರಾಸಾರ ವಿಚಾರ ಮಾಡಿದರ............’ ---ಶ್ರೀಧರ ಖಾನೋಳಕರ



ದಿವಂಗತ ಶ್ರೀಧರ ಖಾನೋಳಕರ ಇವರು ಬೇಂದ್ರೆಯವರ ಸಹಪಾಠಿಗಳಾಗಿದ್ದರು. ಜಾನಪದ ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ ಇವರು ಉಪಯುಕ್ತ ಜಾನಪದ ಸಂಶೋಧನೆಗಳನ್ನು ಮಾಡಿದವರಾಗಿದ್ದರು. ‘ಸಾರಾಸಾರ ವಿಚಾರ ಮಾಡಿದರ............’ ಎನ್ನುವುದು ಇವರು ‘ಹರದೇಶಿ-ನಾಗೇಶಿ’ ಪದ್ಧತಿಯಲ್ಲಿ ರಚಿಸಿದ ಕನ್ನಡ ಕವಾಲಿಯಾಗಿದೆ. ಈ ಕವಾಲಿಯ ಒಂದು ನುಡಿಯನ್ನು ಹೆಂಗಸರ ಗುಂಪು ಹಾಗು ಮುಂದಿನ ನುಡಿಯನ್ನು ಗಂಡಸರ ಗುಂಪು ಹಾಡುತ್ತದೆ. ಇಂತಹ ಕವಾಲಿಗಳು ಒಂದು ಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಿಡೀ ಜರಗುತ್ತಿದ್ದವು. ಎರಡೂ ಗುಂಪುಗಳ ನಡುವೆ ತುರುಸಿನ ಸ್ಪರ್ಧೆ ಇರುತ್ತಿತ್ತು.

ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.  ಅವರು ರಚಿಸಿದ ಈ ಕವಾಲಿ ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು.
(ಟಿಪ್ಪಣಿ: ‘ಪಿಂಜಾರ’ ಎಂದರೆ ಅರಳಿಯನ್ನು ಹಿಂಜಿ ಗಾದಿಯನ್ನು ತಯಾರಿಸುವವರು. ಇವರು ಮನೆಯಿಂದ ಮನೆಗೆ ತಿರುಗುತ್ತ ತಮ್ಮ ಕುಲಕಸಬನ್ನು ಮಾಡುತ್ತಿದ್ದರು. ಇವರು ಮುಸಲ್ಮಾನ ಧರ್ಮದವರು. ಈ ಕವಾಲಿಯಲ್ಲಿ ಪಿಂಜಾರ ಎಂದರೆ ಸೇವಕ ಎಂದು ಅರ್ಥೈಸಿಕೊಳ್ಳಬೇಕು.
ಖಾನಾವಳಿ ಎಂದರೆ ಊಟದ ಹೊಟೆಲ್.)
ಕವಾಲಿಯ ಪೂರ್ತಿಪಾಠ ಹೀಗಿದೆ:
 
ಸಾರಾಸಾರ ವಿಚಾರ ಮಾಡಿದರ
ಹೆಣ್ಣು ಆಳತದ ಸಂಸಾರಾ
ಸಾವಿರ ಕುದರಿ ಸರದಾರಾ
ಮನೀ ಹೆಂಡತಿ ಪಿಂಜಾರಾ || ಪಲ್ಲ ||

ಹೆಣ್ಣು : ಹೆಣ್ಣು ಇದ್ದರ ಹಬ್ಬ ಹುಣ್ಣವಿ
           ಹೆಣ್ಣು ಇದ್ದರ ಎಲ್ಲಾ ಪರಿವಾರ
 ಹೆಣ್ಣು ಇದ್ದರ ಮದುವಿ, ಮುಂಜಿವಿ
 ಹೆಣ್ಣಿದ್ದರ ಜೀವನ ಪೂರಾ || ೧ ||

ಗಂಡು :  ಸಾರಾಸಾರ ವಿಚಾರ ಮಾಡಿದರ
            ಗಂಡು ಆಳತದ ಸಂಸಾರಾ
            ರತಿಯ ನಾಚಿಸುವ ರೂಪವಿದ್ದರೂ
            ಕುಂಕುಮ ಹೆಣ್ಣಿಗೆ ಸಿಂಗಾರಾ || ೨ ||

ಹೆಣ್ಣು : ಹೆಣ್ಣು ಇದ್ದರ ಬರ್ರೀ ರಾಯರ
            ಅಂತ ಕರಿಯತಾರ ಎಲ್ಲ ಜನ
            ಹೆಣ್ಣು ಇಲ್ಲದೆ ತಿರುಗುವ ಖೋಡಿಯ
            ಮಾರಿ ಸುರಿಯತದ ಭಣಭಣ || ೩ ||

ಗಂಡು :  ಮನೆತನವೆಂಬುವ ಅರಮನೆ ಇರುವಿಗೆ
            ಗಂಡುಗೋಡೆಗಳೆ ಆಧಾರ
            ಹೆಣ್ಣು ನೋಡಿದರ ಗೋಡೆಗಂಟಿಸಿದ
            ಬಗೆ ಬಗೆ ಬಣ್ಣದ ಚಿತ್ತಾರಾ || ೪ ||

ಹೆಣ್ಣು : ಹೆಣ್ಣು ಇದ್ದರ ಹೋಳಿಗೆ ತುಪ್ಪಾ
            ಕರಿದ ಕಡಬು ಶ್ಯಾವಿಗೆ ಖೀರು
            ಹೆಣ್ಣು ಇಲ್ಲದವನ ಬಾಯಿಗೆ ಹುಳಿ ಹುಳಿ
            ಖಾನಾವಳಿ ಮಜ್ಜಿಗೆ ನೀರಾ || ೫ ||

ಗಂಡು :  ಗಂಡೆಂಬುದೆ ದುಂಡು ಕುಂಕುಮಾ
            ಹೆಣ್ಣಿನ ಚಲುವಿನ ಚಂದ್ರಾಮಾ
            ಹೆಣ್ಣಿನ ಜನುಮದ ಮುಗಿಲು ಬೆಳಗುವುದು
            ಹುಣ್ಣಿಮೆ ಬೆಳದಿಂಗಳ ಬೆಳಕಾ || ೬ ||

ಹೆಣ್ಣು : ಹೆಣ್ಣು ಇದ್ದರ ಸೊಗಸು ಮನಿವಳಗ
            ಹೋಗಿ ಬರೋರಿಗೆ ತೆರಪಿಲ್ಲ
            ಹುಡುಗರು ಹುಪ್ಪಡಿ ತಿಂದು ಉಳಿಯತಾವ
            ನಕ್ಕು ನಲಿಯತಾವ ಹಗಲೆಲ್ಲ || ೭ ||

ಇಬ್ಬರೂ : ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಗಂಡೂ ಹೆಣ್ಣೂ ಕೂಡಿ ನಡೆದರ
ಬಾಳು ಆಗತದ ಬಂಗಾರಾ || ೮ ||
ಗಂಡು ಹೆಣ್ಣು ಕೂಡಿ ನಡೆದರ
            ಕೆನೆ ಹಾಲು ಸಕ್ಕರೆಯ ರುಚಿ
            ಕಬ್ಬಿನ ರಸದಾಗೆ ಜೇನು ಕೂಡಿದರ
            ಎನು ಹೇಳಬೇಕದರ ರುಚಿ || ೯ ||
           
ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ || ೧೦ ||
                                                ---ಶ್ರೀಧರ ಖಾನೋಳಕರ

Monday, April 28, 2014

ಬಿಸಿಲುಗುದುರೆ.................................ದ. ರಾ. ಬೇಂದ್ರೆ

ಹಳ್ಳsದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತs       || ಪಲ್ಲ ||
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
            ಹೋಗೇತಿ ಎತ್ತೆತ್ತs    || ಅನುಪಲ್ಲ ||

                        ೧
ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ
            ತುಟಿಯಾಗಿನ ಝುಳುಕೇನ
ಉಡುಗಿಯ ಮಾಟೇನs ನಡಿಗಿಯ ಥಾಟೇನ
            ಹುಡುಗಿ ಹುಡುಗಾಟೇನ !

                        ೨
ಕಂಡ್ಹಾಂಕಾಣsಲಿಲ್ಲ ಅಂದ್ಹಾಂಗನ್ನsಲಿಲ್ಲ
            ಬಂದ್ಹಾಂಗ ಬರಲಿಲ್ಲಾ
ಚಂದಾನ ಒಂದೊಂದ ಅಂದೇನಿ ಬೇರೊಂದ
ಅರಿವನs ಇರಲಿಲ್ಲ !

ಬಡತನದ ಬಲಿಯಾಗ ಕರುಳಿನ ಕೊಲಿಯಾಗ
            ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
            ಬಂತಂತ ಮುಪ್ಪು ಬ್ಯಾಗ !

ಕಣಕಣ್ಣ ನೆನಸೇನ ಮನಸಿಲೆ ಬಣಿಸೇನ
            ಕಂಡೀತೆಂತೆಣಿಸೇನ
ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ
            ಹೊರಟಿತ್ತು ಕನಸೇನ ?

                        ೫
ಮುಂಗಾರಿ ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ ಮಿಂಚಿತ್ತ
ನಿನ ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ ನಾನಿತ್ತ !

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತ !!

ಎಳೆಹರಯದ ಸೊಗಸೇ ಸೊಗಸು. ನೂರು ಕನಸುಗಳು ಕಣ್ಣಲ್ಲಿ ತುಂಬಿರುತ್ತವೆ, ಅವುಗಳನ್ನು ಸಾಧಿಸುವ ಛಲ ಮನದಲ್ಲಿ ಪುಟಿಯುತ್ತಿರುತ್ತದೆ. ಪರಸ್ಪರ ಒಲಿದ ಗಂಡು ಹೆಣ್ಣುಗಳಂತೂ ಸಂಸಾರಸುಖದ ಕಾಮನಬಿಲ್ಲನ್ನು ಹೆಣೆಯುತ್ತಿರುತ್ತಾರೆ. ಆದರೆ ಕನಸೇ ಬೇರೆ, ವಾಸ್ತವವೇ ಬೇರೆ. ಸುಮಾರು ಎಂಬತ್ತು ವರ್ಷಗಳ ಹಿಂದೆ, ಬೇಂದ್ರೆಯವರು ಕಂಡುಕೊಂಡ ಸತ್ಯವಿದು. ಈಗಲೂ ಸಹ ಇದು ಸತ್ಯವಾಗಿಯೇ ಇದೆ.

ಬೇಂದ್ರೆಯವರ ಪ್ರಣಯಕವನಗಳು ಗ್ರಾಮೀಣ ಶೈಲಿಯ ಕವನಗಳಾಗಿರುವುದನ್ನು ಗಮನಿಸಬೇಕು. ಈ ಕವನಕ್ಕೆ ಪ್ರಥಮಪ್ರಣಯದ ಹಿನ್ನೆಲೆ ಇದ್ದರೂ ಇದು ಪ್ರಣಯಕವನವೇನಲ್ಲ ; ಸಂಸಾರದ ಸಂಕಷ್ಟಗಳಲ್ಲಿ ಸೋತು ಹೋದ ದಂಪತಿಗಳ ನಿಟ್ಟುಸಿರೇ ಇಲ್ಲಿ ಕವನರೂಪ ತಾಳಿದೆ. ಈ ಕವನವೂ ಸಹ ಗ್ರಾಮೀಣಶೈಲಿಯಲ್ಲಿ ಅಭಿವ್ಯಕ್ತವಾಗಿರುವುದು ಇದರ ವೈಶಿಷ್ಟ್ಯವಾಗಿದೆ. ಕವನದ ಮೊದಲಲ್ಲಿ ಕವಿಯು ತನ್ನ ಹಾಗು ತನ್ನ ನಲ್ಲೆಯ ಮೊದಲ ಮುಖಾಮುಖಿಯನ್ನು ನೆನಪಿಸಿಕೊಳ್ಳುತ್ತಾನೆ. ಹೊಸ ಹರೆಯದ ಆ ದಿನಗಳಲ್ಲಿ ಮುಖದಲ್ಲಿ ತುಂಟತನ ತುಳುಕುತ್ತಿರುತ್ತದೆ. ತುಟಿಗಳಲ್ಲಿ ನಗೀನವಿಲು ಕುಣಿಯುತ್ತಿರುತ್ತದೆ. ಇದು ಕವನದ ಮೊದಲ ನಾಲ್ಕು ಸಾಲುಗಳು ಹೇಳುವ ಸುಖದ ಪಲ್ಲ. ಆದರೆ ಈ ಸುಖವನ್ನು ಅನುಸರಿಸಿ, ಸಂಸಾರದ ಸಂಕಷ್ಟಗಳು ಪ್ರಾರಂಭವಾಗುತ್ತವೆ. ಆದುದರಿಂದ ಪಲ್ಲದ ನಂತರದ ಎರಡು ಸಾಲುಗಳು ಈ ಕಷ್ಟಕೋಟಲೆಯ ಅನುಪಲ್ಲವಾಗಿವೆ!

ಹಳ್ಳsದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತs       || ಪಲ್ಲ ||
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
            ಹೋಗೇತಿ ಎತ್ತೆತ್ತs    || ಅನುಪಲ್ಲ ||

ಹಳ್ಳಿಯ ಹುಡುಗಿಯರು ನೀರು ತರಲು ಪಕ್ಕದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಹೋಗುವುದು ಒಂದು ಕಾಲದ ಅನಿವಾರ್ಯತೆಯಾಗಿತ್ತು. ಆ ಹುಡುಗಿಯರನ್ನು ನೋಡಲು ಹರೆಯದ ಹುಡುಗರೂ ಸಹ ಈಜುವ ನೆಪದಲ್ಲಿ ಹಳ್ಳಕ್ಕೆ ಹೋಗುತ್ತಿದ್ದರು. ಹೀಗಾಗಿ ತರುಣ ತರುಣಿಯರ ಕಣ್ಣಾಟ, ಕಳ್ಳಾಟಗಳು ಹಳ್ಳದ ದಂಡೆಯ ಮೇಲೆ ಆಗುತ್ತಿದ್ದವು! ಪರಸ್ಪರನ್ನು ಆಕರ್ಷಿಸಲು ಹಾಗು ಪ್ರೇಮಸಮ್ಮತಿ ನೀಡಲು ನಗುವೇ ಪ್ರಮುಖ ಸಾಧನವಾಗಿರುತ್ತಿತ್ತು. ಆ ನಗೆಯ ಪರಿಯನ್ನು ಬೇಂದ್ರೆ ವಿವರವಾಗಿ ಚಿತ್ರಿಸಿದ್ದಾರೆ. ‘ಏನೊಂದು ನಗಿ’ ಎಂದರೆ  ವರ್ಣಿಸಲು ಸಾಧ್ಯವಾಗದ ರಹಸ್ಯಮಯವಾದ ನಗಿ; ‘ಏಸೊಂದು ನಗಿ’ ಎಂದರೆ ವಿವಿಧ ಭಾವಗಳನ್ನು ಸೂಚಿಸುವ, ಕೊನೆಯಿಲ್ಲದ ನಗೆಗಳು ; ಏರಿಕಿ ನಗಿ ಎಂದರೆ ಉಕ್ಕುವ ಪ್ರಾಯದ ನಗಿ. ಈ ಎಲ್ಲ ನಗೆಗಳು ಬಾಳು ಎಂದರೆ ಚೆಲುವು’ ಎನ್ನುವ ಭಾವವನ್ನು ಸೂಸುವ ನಗೆಗಳು. ಇವೆಲ್ಲವೂ ನಲ್ಲ, ನಲ್ಲೆಯರು ಸಂಸಾರದಲ್ಲಿ ಕಾಲಿರಿಸುವ ಮೊದಲಿನ ಸಂಗತಿ. ಕವಿಯು ಅದನ್ನು ಹಿನ್ನೋಟದಲ್ಲಿ ನೆನಪಿಸಿಕೊಂಡು ತನ್ನ ಕೆಳದಿಗೂ ಸಹ ನೆನಪಿಸುತ್ತಿದ್ದಾನೆ.

ಈ ಕೆಳೆಯರು ಮದುವೆಯ ಬಂಧನಕ್ಕೆ ಒಳಗಾಗಿ ಸಂಸಾರದ ಒಜ್ಜೆಯನ್ನು ಹೊತ್ತುಕೊಂಡ ಬಳಿಕ ಈ ಸೊಗಸಿನ ಭಾವವು ನೀರ್ಗುಳ್ಳೆಯಂತೆ ಒಡೆಯಲು ಎಷ್ಟು ಹೊತ್ತು ಬೇಕು? ‘ಆ ನಗೆ ಈಗ ಎಲ್ಲಿ ಮಾಯವಾಗಿ ಹೋಗಿದೆ?’ ಎಂದು ಕವಿ ತನ್ನ ಜೊತೆಗಾತಿಯನ್ನು ಕೇಳುತ್ತಿದ್ದಾನೆ. ಅವಳನ್ನು ‘ಚೆನ್ನಿ’ ಎಂದು ಸಂಬೋಧಿಸುವ ಮೂಲಕ, ‘ಸುಖದ ಕಾಲದಲ್ಲಿ ನೀನು ನನಗೆ ಚೆನ್ನಿ (=ಪ್ರಿಯಸಖಿ)ಯಾಗಿದ್ದೆ ; ಕಷ್ಟದ ಕಾಲದಲ್ಲಿಯೂ  ನೀನು ನನಗೆ ಚೆನ್ನಿಯೇ ಆಗಿರುವೆ’ ಎನ್ನುವುದನ್ನು affirm ಮಾಡುತ್ತಾನೆ. ‘ನಕ್ಕೊಮ್ಮೆ ಹೇಳು’ ಎನ್ನುವ ಮಾತಿನಲ್ಲಿ ದ್ವಂದ್ವಾರ್ಥವಿದೆ. ‘ನಿನ್ನ ಅಳಲನ್ನು ಮರೆತು ಒಮ್ಮೆ ನಗು ; ಆಮೂಲಕ ನನಗೂ ಸಾಂತ್ವನವನ್ನು ನೀಡು’ ಎನ್ನುವುದು ಒಂದು ಅರ್ಥವಾದರೆ, ‘ಮೊದಲಿನ ನಗುವಿನ ದಿನಗಳೆಲ್ಲ ಒಂದು ಭ್ರಮೆಯಾಗಿದ್ದವು’ ಎನ್ನುವ ಪರಿಹಾಸದ ಮತ್ತೊಂದು ಅರ್ಥವೂ ಇಲ್ಲಿದೆ.  ‘ಹಳ್ಳದ ದಂಡ್ಯಾಗ’ ಎನ್ನುವಾಗ ಈ ಜೀವನವೇ ಒಂದು ಪ್ರವಾಹ, ನಾವೆಲ್ಲರೂ ಈ ಪ್ರವಾಹದ ದಂಡೆಯಲ್ಲಿ ನಿಂತಿರುವ ಪಯಣಿಗರು ಎನ್ನುವ ಸಂಕೇತಾರ್ಥವೂ ಇಲ್ಲಿ ಸೂಚಿತವಾಗಿದೆ.

                        ೧
ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ
            ತುಟಿಯಾಗಿನ ಝುಳುಕೇನ
ಉಡುಗಿಯ ಮಾಟೇನs ನಡಿಗಿಯ ಥಾಟೇನ
            ಹುಡುಗಿ ಹುಡುಗಾಟೇನ !

ಹಳ್ಳದ ದಂಡೆಯ ಮೇಲೆ ಕಲೆತ ಈ ಹುಡುಗಿಯರ ಹುಡುಗಾಟವು ಅಲ್ಲಿ ನೆರೆದ ಹುಡುಗರನ್ನು ಆಕರ್ಷಿಸುತ್ತದೆ. ತನ್ನ ನಲ್ಲನನ್ನು ಕಂಡ ನಲ್ಲೆಯ ಕಣ್ಣುಗಳಲ್ಲಿ ಪ್ರೀತಿಯ ಬೆಳಕು ತುಂಬುತ್ತದೆ. ಅದು ತುಳುಕಿ ಮುಖದಲ್ಲಿ ಹರಡಿ, ತುಟಿಗಳಲ್ಲಿ ಕಾಂತಿಯಾಗುತ್ತದೆ. ಪ್ರತಿಯೊಬ್ಬ ಹುಡುಗನೂ ತನ್ನ ಹುಡುಗಿಯನ್ನು ಕಂಡು ‘ಅಬ್ಬಾ! ಈ ಹುಡುಗಿ!’ ಎನ್ನುತ್ತಾನೆ.

ತಂದೆ ತಾಯಿಯ ಪೋಷಣೆಯಲ್ಲಿರುವವರೆಗೆ ಈ ಹುಡುಗ ಹುಡುಗಿಯರಿಗೆ ಸಂಸಾರದ ಬಿಸಿ ಇನ್ನೂ ಹತ್ತಿರುವದಿಲ್ಲ. ಬಾಳಿನ ಸುಖವನ್ನು ಹೀರಬೇಕು ಎನ್ನುವ ಉತ್ಸಾಹ ಮನದಲ್ಲಿ ಪುಟಿಯುತ್ತಿರುತ್ತದೆ. ಈ ಉತ್ಸಾಹವು ಇಲ್ಲದ ವ್ಯಕ್ತಿಗಳ ಕಣ್ಣುಗಳನ್ನು ನೋಡಿರಿ. ಅವು ಎಷ್ಟು ಕಳಾಹೀನವಾಗಿರುತ್ತವೆ. ಅದರಂತೆ ಉತ್ಸಾಹ ತುಂಬಿದವರ ಕಣ್ಣುಗಳಲ್ಲಿ ಎಂಥಾ ತೇಜವಿರುತ್ತದೆ ಎನ್ನುವುದನ್ನು ಗಮನಿಸಿರಿ. ಆ ತೇಜವು ಅವರ ಕಣ್ಣುಗಳಿಂದ ಹೊರಸೂಸಿ  ಮುಖದಲ್ಲಿಯೂ ಸಹ ತುಳುಕುತ್ತಿರುತ್ತದೆ. ತನ್ನ ಮನದಲ್ಲಿ ಅಡಗಿರುವ ಅಭಿಲಾಷೆಯನ್ನು ಮಾತಿನಲ್ಲಿ ವ್ಯಕ್ತಪಡಿಸಬಹುದೋ, ಬೇಡವೋ ಎನ್ನುವ ದ್ವಂದ್ವದಿಂದ, ಅವರ ತುಟಿಯಲ್ಲಿ ಮಿಂಚು ಹೊಯ್ದಾಡುತ್ತಿರುತ್ತದೆ. ಆದರೆ ಮಾತಿನಲ್ಲಿ ಹೇಳಲಾಗದ್ದನ್ನು ಹುಡುಗಿಯರು ತಮ್ಮ ಒನಪು, ವೈಯಾರದಿಂದ ಹೇಳಬಹುದಲ್ಲವೆ? ಉಡುವುದನ್ನೇ ಆಕರ್ಷಕವಾಗುವಂತೆ ಮಾಡಬಹುದಲ್ಲವೆ? ತಮ್ಮ ತಮ್ಮಲ್ಲಿಯೇ ತುಂಟತನ, ಹುಡುಗಾಟ ಮಾಡುವ ಮೂಲಕ ಹುಡುಗರಿಗೆ ಸಂದೇಶವನ್ನೂ ನೀಡಬಹುದಲ್ಲವೆ? ಇವೆಲ್ಲವೂ ಪ್ರಾಯಕ್ಕೆ ಕಾಲಿಡುತ್ತಿರುವ ಎಳೆಯರ ಗುಣಲಕ್ಷಣಗಳೇ ಆಗಿವೆ !

ಬೇಂದ್ರೆಯವರು ‘ನಡಿಗಿಯ ಥಾಟೇನ’ ಎನ್ನುವ ಪದಪುಂಜವನ್ನು ಬಳಸಿದ್ದನ್ನು ಗಮನಿಸಿರಿ. ಈ ‘ಥಾಟ’ ಎನ್ನುವ ಪದವು ಕುದುರೆಯ ನಡಿಗೆಗಾಗಿ ಬಳಸಲಾಗುವ ಪದವಾಗಿದೆ. ಕಾಠೇವಾಡಿ ಥಾಟು, ಅರಬ್ಬಿ ಥಾಟು ಎನ್ನುವ ಪದಗಳು ಇದರಿಂದಲೇ ಹುಟ್ಟಿಕೊಂಡಿವೆ. ಥಾಟು ಎನ್ನುವ ಪದದಿಂದಲೇ ಧಾಟಿ ಎನ್ನುವ ಪದವೂ ಹುಟ್ಟಿದೆ.

ಬೇಂದ್ರೆಯವರು ಈ ನುಡಿಯ ಮೊದಲ ಎರಡು ಸಾಲುಗಳಲ್ಲಿ ಏರುಜವ್ವನದ ಅಂಗಲಕ್ಷಣಗಳನ್ನು ಬಣ್ಣಿಸಿ, ಮುಂದಿನ ಎರಡು ಸಾಲುಗಳಲ್ಲಿ ಉಡುಗೆ ಹಾಗು ನಡಿಗೆಗಳನ್ನು ಬಣ್ಣಿಸುತ್ತಾರೆ. ಇದು ಅವರ ಕವನಗಳಲ್ಲಿಯ ಕ್ರಮಬದ್ಧತೆಯನ್ನು ಸೂಚಿಸುತ್ತದೆ.

                        ೨
ಕಂಡ್ಹಾಂಕಾಣsಲಿಲ್ಲ ಅಂದ್ಹಾಂಗನ್ನsಲಿಲ್ಲ
            ಬಂದ್ಹಾಂಗ ಬರಲಿಲ್ಲಾ
ಚಂದಾನ ಒಂದೊಂದ ಅಂದೇನಿ ಬೇರೊಂದ
ಅರಿವನs ಇರಲಿಲ್ಲ !

ಈ ಸಂಪೂರ್ಣ ನುಡಿಯೇ ಎರಡರ್ಥಗಳ ಒಂದು ಶ್ಲೇಷೆಯಾಗಿದೆ.  ಕವನದ ಮೊದಲ ನುಡಿಯನ್ನು ಅನುಸರಿಸಿ ಮುಂದುವರೆದಾಗ ಮೊದಲ ಅರ್ಥ ಈ ರೀತಿಯಾಗುತ್ತದೆ:
ಹಳ್ಳದ ದಂಡೆಯ ಮೇಲಿನ ಬೇಟವು ಇದೀಗ ವಿವಾಹಬಂಧನದಲ್ಲಿ ಕೊನೆಗೊಂಡಿದೆ.
ಸಂಸಾರದ ಪ್ರಾರಂಭದ ದಿನಗಳಲ್ಲಿ ನಲ್ಲ ನಲ್ಲೆಯರ ಶೃಂಗಾರ ಹಾಗು ಪರಸ್ಪರ ಅನ್ವೇಷಣೆ ನಡೆದೇ ಇರುತ್ತದೆ. ಆದುದರಿಂದ ಅವರು ಒಮ್ಮೆ ಕಂಡಂತೆ ಮತ್ತೊಮ್ಮೆ ಕಾಣುವುದಿಲ್ಲ. ಅವರ ನುಡಿ ಹಾಗು ನಡೆ ಯಾವಾಗಲೂ ಹೊಸ ಹೊಸ ರೀತಿಯಲ್ಲಿ ತೋರುತ್ತಿರುತ್ತದೆ. ತನ್ನ ಕೆಳದಿಯ ಚಂದನ್ನ ಹೊಸ ನೋಟಗಳನ್ನು ಕೆಳೆಯನು ಬೆರಗುಬಟ್ಟು ವರ್ಣಿಸುತ್ತಲೇ ಹೋಗುತ್ತಾನೆ. ಅವನಿಗೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ.

ಆದರೆ ಮೂರನೆಯ ನುಡಿಯಲ್ಲಿಯ ಖೇದವನ್ನು ಗಮನಿಸಿದರೆ, ಎರಡನೆಯ ನುಡಿಯನ್ನು ಅದರ ಮುನ್-ನುಡಿಯಂದು ಭಾವಿಸಬಹುದು. ಆವಾಗ ಅದನ್ನು ಹೀಗೆ ಅರ್ಥೈಸಬಹುದು :
ಹಳ್ಳದ ದಂಡೆಯಲ್ಲಿ ಮೊದಲ ಮಿಲನದಲ್ಲಿ ಕಂಡ ನೋಟ ಈಗ ಬದಲಾಗಿದೆ. ಮೊದಲಿನ ನಡೆ, ನುಡಿ ಈಗ ಉಳಿದಿಲ್ಲ. ಆದರೆ ನಲ್ಲನಿಗೆ ಇದರ ಅರಿವೇ ಆಗಿಲ್ಲ. ಆತ ಹಳೆಯ ಸೊಗಸಿನ ಭ್ರಮೆಯಲ್ಲಿಯೇ ಇನ್ನೂ ಉಳಿದುಕೊಂಡಿದ್ದಾನೆ. ಆದರೆ ಆ ಭ್ರಮೆ ಹರಿದು, ಸಂಸಾರದಲ್ಲಿ ಬೆಂದು, ಬಸವಳಿದ ದಂಪತಿಗಳ ಚಿತ್ರವನ್ನು ಮೂರನೆಯ ನುಡಿಯು ತೀಕ್ಷ್ಣವಾಗಿ ಹಾಗು ನೇರವಾಗಿ ಕೊಡುತ್ತದೆ:

ಬಡತನದ ಬಲಿಯಾಗ ಕರುಳಿನ ಕೊಲಿಯಾಗ
            ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
            ಬಂತಂತ ಮುಪ್ಪು ಬ್ಯಾಗ !

ಬೇಂದ್ರೆಯವರ ನಿರುದ್ಯೋಗ ಪರ್ವ ದೊಡ್ಡದು. ಸರಕಾರದ ಅವಕೃಪೆಗೆ ಒಳಗಾಗಿ ಇವರು ಕೆಲಕಾಲ ನಜರಬಂದಿಯಲ್ಲಿದ್ದರು. ಏಳು ವರ್ಷಗಳವರೆಗೆ ಯಾವ ಸಂಸ್ಥೆಯೂ ಇವರಿಗೆ ಉದ್ಯೋಗ ನೀಡಬಾರದೆಂದು ಸರಕಾರದ ಆದೇಶವಿತ್ತು. ಹೆಂಡತಿ-ಮಕ್ಕಳು ಹಾಗು ಬೇಂದ್ರೆಯವರು ಪರಸ್ಪರ ದೂರವಾಗಿ ಪರಾಶ್ರಯದಲ್ಲಿ ಬದುಕಬೇಕಾಯಿತು.

ಬಡತನದ ಬಲೆಯಲ್ಲಿ ಸಿಲುಕಿದ ಇವರಿಗೆ, ಆ ಬಲೆಯಿಂದ ಹೊರಬರುವ ಉಪಾಯವೇ ತೋಚದಂತಾಯಿತು. ತಮ್ಮ ನೋವನ್ನು ಪರಸ್ಪರ ಹಂಚಿಕೊಳ್ಳುವ ಅವಕಾಶವೂ ಇವರಿಗಿಲ್ಲ. ಅದನ್ನು ‘ಕರುಳಿನ ಕೊಲೆ’ ಎಂದು ಬೇಂದ್ರೆ ಬಣ್ಣಿಸುತ್ತಾರೆ. ಬಾಳೆಂಬುದು ದಿನದಿನವೂ ಭಗಭಗಿಸುವ ಉರಿಯ ಒಲೆಯಾಗಿದೆ. ಇಂತಹ ಬದುಕಿನಲ್ಲಿ ತಮ್ಮ ಹೆಂಡತಿಯು ಸುಟ್ಟ ಹಪ್ಪಳದಂತೆ ಆಗಿದ್ದಾಳೆ, ಬಾಡಿ ಹೋದ ಸೊಪ್ಪಿನಂತೆ ಸೊರಗಿ ಹೋಗಿದ್ದಾಳೆ ಎಂದು ಬೇಂದ್ರೆಯವರು ವ್ಯಥೆ ಪಡುತ್ತಾರೆ. ಈ ಎರಡೂ ಉಪಮೆಗಳು ಊಟದ ಪದಾರ್ಥಗಳು ಆಗಿರುವದನ್ನು ಗಮನಿಸಬೇಕು. (ಬೇಂದ್ರೆಯವರ ಮತ್ತೊಂದು ಕವನದಲ್ಲಿ ‘ಉಪ್ಪಿಗೂ ಹೊರತಾದೆವು ’ ಎನ್ನುವ ಮಾತು ಬರುತ್ತದೆ.) ಇಂತಹ ಪರಿಸ್ಥಿತಿಯಲ್ಲಿ ಮೊದಲಿನ ಹುಡುಗಾಟದ ಹುಡುಗಿಯು, ತಮ್ಮ ಚೆನ್ನಿಯು ಎಷ್ಟು ಬೇಗನೇ ಮುದುಕಿಯಾಗಿಬಿಟ್ಟಳಲ್ಲ , ಪ್ರಾಯದಲ್ಲಿಯೇ ಅಕಾಲವಾರ್ಧಕ್ಯವನ್ನು ಹೊಂದಿದಳಲ್ಲ ಎಂದು ಬೇಂದ್ರೆಯವರು ಹಲಬುತ್ತಾರೆ.

ಕಣಕಣ್ಣ ನೆನಸೇನ ಮನಸಿಲೆ ಬಣಿಸೇನ
            ಕಂಡೀತೆಂತೆಣಿಸೇನ
ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ
            ಹೊರಟಿತ್ತು ಕನಸೇನ ?

ಕಣ್ಣುಗಳನ್ನು ಅರೆಮುಚ್ಚಿಕೊಂಡು ಬೇಂದ್ರೆಯವರು ತಮ್ಮ ಹಳೆಯ ನೆನಪುಗಳಿಗೆ ಜಾರುತ್ತಾರೆ. ಸೋತು ಹೋದ ತಮ್ಮ ಜೋಡಿಯನ್ನು ಮನಸ್ಸಿನಲ್ಲಿಯೇ ಮತ್ತೊಮ್ಮೆ ಮೊದಲಿನಿಂದ ನೋಡುತ್ತಾರೆ. ಹಳೆಯ ಕನಸು ಮತ್ತೊಮ್ಮೆ ಕಂಡೀತೆ ಎಂದು ಲೆಕ್ಕಿಸುತ್ತಾರೆ. ತನ್ನ ಕೆಳದಿ ನೆನಸಿದ ಸುಖವು ಬರೀ ಕನಸೆ ಎಂದು ವಿಭ್ರಮಿಸುತ್ತಾರೆ.

‘ಬಿಸಿಲುಗುದುರೆ’ ಎಂದರೆ mirage ಅಥವಾ ಮಾಯಾಮೃಗ. ಬೇಸಿಗೆಯ ಕಾಲದಲ್ಲಿ ಅನತಿ ದೂರದಲ್ಲಿ ನೀರು ಹರಿಯುತ್ತಿರುವಂತೆ ಭಾಸವಾಗುತ್ತದೆ. ಎಷ್ಟೇ ನಡೆದರೂ, ಆ ಮಾಯಾದೃಶ್ಯ ಮತ್ತೆ ಸ್ವಲ್ಪ ಮುಂದಕ್ಕೆ ಕಾಣುತ್ತ ಹೋಗುತ್ತದೆ. ಈ ದೃಶ್ಯಕ್ಕೆ ಬಿಸಿಲುಗುದುರೆ ಎನ್ನುತ್ತಾರೆ. ಸುಖ ಸಿಕ್ಕೀತು ಎನ್ನುವುದು ಸಹ ಇಂತಹ ಬಿಸಿಲುಗುದುರೆಯೇ ಆಗಿದೆ. ತನ್ನ ಕೆಳದಿಯ ಮೊದಲಿನ ಹುಡುಗಾಟದ ನಗೆ ಎಲ್ಲವೂ ಇಂತಹ ಬಿಸಿಲುಗುದುರೆಯನ್ನು ಏರಿದ ಸವಾರಿಯೇ ಅಲ್ಲವೆ? ಅಂತಹ ಭ್ರಮಾತ್ಮಕ ಸುಖಕ್ಕೂ ಸಹ ನಾವು ಎರವಾಗಿ ಬಿಟ್ಟೆವೆ? ಅದೂ ಸಹ ಇದೀಗ ಕನಸಾಗಿ ಬಿಟ್ಟಿದೆಯೆ ಎಂದು ಬೇಂದ್ರೆಯವರು ತಮ್ಮ ಕೆಳದಿಯನ್ನು ಕೇಳುತ್ತಿದ್ದಾರೆ.

[‘ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ, ಹೊರಟಿತ್ತು ಕನಸೇನ ?’ ಎನ್ನುವ ರೂಪಕವು ಆ ಕಾಲದ ಅನೇಕ ತರುಣರ ಬಾಳಿಗೆ ಅನ್ವಯಿಸುವ ವಸ್ತುಸ್ಥಿತಿಯಾಗಿತ್ತು. ಕನ್ನಡದ ಖ್ಯಾತ ನಾಟಕಕಾರರಾದ ಶ್ರೀರಂಗರೂ ಸಹ ಇಂತಹ ಅಗ್ನಿಪರೀಕ್ಷೆಯಲ್ಲಿ ಬದುಕಿದವರೇ. ತಮ್ಮ ಹೆಂಡತಿಗೆ ಔಷಧಿ ತರಲು ದುಡ್ಡು ಇಲ್ಲದ ಶ್ರೀರಂಗರು ಮತ್ತೊಬ್ಬ ಸಾಹಿತಿ ದ.ಬಾ.ಕುಲಕರ್ಣಿಯವರ ಹತ್ತಿರ ಒಂದು ರೂಪಾಯಿ ಸಾಲ ಕೇಳಿದ್ದರು. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನ ಬಳಿ ಬೇಡಿದಂತೆ! ದ.ಬಾ. ರ ಜೇಬೂ ಬರಿದೇ. ಆಗ ದ.ಬಾ.ರವರು ತಮ್ಮ ಗುರುತಿನ ಔಷಧಿಯ ಅಂಗಡಿಯಿಂದ ಶ್ರೀರಂಗರಿಗೆ ಔಷಧಿಯನ್ನು ಉದ್ದರಿ ಕೊಡಿಸಿದರು.]

                     ೫
ಮುಂಗಾರಿ ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ ಮಿಂಚಿತ್ತ
ನಿನ ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ ನಾನಿತ್ತ !

ಮುಂಗಾರಿ ಮಳೆ ಪ್ರಾರಂಭವಾಗುವ ಪೂರ್ವದಲ್ಲಿ ಮೋಡಗಳು ಮಿಂಚಿನ ಮೂಲಕ ಕಣ್ಣುಸನ್ನಿಯನ್ನು ಅಂದರೆ ಮಳೆ ಪ್ರಾರಂಭವಾಗುವ ಪೂರ್ವಸೂಚನೆಯನ್ನು ನೀಡುತ್ತವೆ. ಆ ಬಳಿಕ ಮಳೆ ಧೋಧೋ ಎಂದು ಪ್ರಾರಂಭವಾಗುತ್ತದೆ. ಸಂಸಾರ ಪ್ರಾರಂಭವಾದ ತರುಣದಲ್ಲಿ ಬೇಂದ್ರೆಯವರ ಕೆಳದಿಯ ಮುಖದಲ್ಲಿ ಒಮ್ಮೆ ನಗು ಮಿಂಚಿತ್ತು. ಆ ನಗುವನ್ನು ಮುಂಗಾರಿನ ಮಿಂಚಿಗೆ ಬೇಂದ್ರೆಯವರು ಹೋಲಿಸುತ್ತಿದ್ದಾರೆ. ಕಷ್ಟಗಳ ಕಾರ್ಮೋಡಗಳು ಕವಿಯುವುದು ನಿಶ್ಚಿತ. ತಮ್ಮ ಕೆಳದಿಯ ಕಣ್ಣುಗಳಿಂದ ಧಾರೆ ಸುರಿಯುವುದು ನಿಶ್ಚಿತ ಎಂದು ಈ ನಗೆಮಿಂಚು ಸೂಚಿಸುತ್ತಿದೆ. ಈ ಮಿಂಚಿಗೆ ಮರುಳಾಗಬಹುದೆ? ಇದು ತನ್ನ ನೋವನ್ನು ಮುಚ್ಚಿಡಲು ಕೆಳದಿ ಉಕ್ಕಿಸುತ್ತಿರುವ ಸುಳ್ಳು ನಗೆಯೆ ಅಥವಾ ನೈಜ ನಗೆಯೆ ಎನ್ನುವುದನ್ನು ಅರಿಯಲು ಬೇಂದ್ರೆಯವರು ತನ್ನ ಕೆಳದಿಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅವಳು ಹೇಳದೆ ಇರುವ ಸತ್ಯ ಏನು ಎಂದು ಅರಿಯಲು ಪ್ರಯತ್ನಿಸುತ್ತಾರೆ.

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತ !!

ಬೇಂದ್ರೆಯವರಿಗೂ ಗೊತ್ತು, ಅವರ ಕೆಳದಿಗೂ ಗೊತ್ತು: ಆ ಏರಿಕೆಯ ನಗಿ ಈಗ ಎಲ್ಲಿ ಹೋಗಿದೆ ಎನ್ನುವುದು! ಆದರೆ ಒಂದು ಕ್ಷಣವಾದರೂ ಸಹ ಸಂಸಾರದ ಸಂಕಟಗಳನ್ನೆಲ್ಲ ಮರೆತು ಆ ಹಳ್ಳದ ದಂಡೆಯ ಮೊದಲ ಮುಖಾಮುಖಿಯನ್ನು, ಆ ಹುಡುಗಾಟದ ಸುಖದ ನೆನಪನ್ನು ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ ಬೇಂದ್ರೆಯವರು. 
ಹಳೆಯ ಸುಖದ ನೆನಪು ಸದ್ಯದ ಸಂಕಟವನ್ನು ಮರೆಸಬಹುದು !


‘ಬಿಸಿಲುಗುದುರೆ’ ಕವನವು ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.