Sunday, June 22, 2014

‘ನವಿಲು’....................ದ.ರಾ.ಬೇಂದ್ರೆ



ಕಲಘಟಗಿ ಇದು ಧಾರವಾಡದಿಂದ ೩೫ ಕಿಲೋಮೀಟರ ದೂರದಲ್ಲಿರುವ ತಾಲುಕಾ ಸ್ಥಳ. ಧಾರವಾಡವು ಮಲೆನಾಡಿನ ಸೆರಗಾದರೆ, ಕಲಘಟಗಿಯು ಪೂರ್ಣ ಮಲೆನಾಡಾಗಿದೆ. ಬೇಂದ್ರೆಯವರು ಒಮ್ಮೆ ಧಾರವಾಡದಿಂದ ಕಲಘಟಗಿಗೆ ಪ್ರಯಾಣಿಸುತ್ತಿದ್ದಾಗ ದಾರಿಯ ಬದಿಯ ಗದ್ದೆಯಲ್ಲಿ ನವಿಲೊಂದನ್ನು ನೋಡಿದ್ದಾರೆ. ಅದು ಬಹುಶಃ ಬೇಸಿಗೆಯ ಕಾಲವಿರಬೇಕು. ನವಿಲುಗಳು ಬೇಸಿಗೆಯ ಕಾಲದಲ್ಲಿ ಸಂತಾನೋತ್ಪಾದನೆಯನ್ನು ಮಾಡುತ್ತವೆ. ಬೇಸಿಗೆಯಲ್ಲಿ ಅಡ್ಡ ಮಳೆಗಳು ಹುಯ್ಯುವ ಸಮಯದಲ್ಲಿ ಗಂಡು ನವಿಲು ತನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿಯುತ್ತದೆ ಹಾಗು ಜೊತೆಗೂಡಲೆಂದು ಹೆಣ್ಣು ನವಿಲನ್ನು ಆಹ್ವಾನಿಸುತ್ತದೆ. ಮಳೆ ಬರುವ ಮುನ್ಸೂಚನೆ ಹಕ್ಕಿಗಳಿಗೆ ತಿಳಿಯುವುದು ಅಸಹಜವೇನಲ್ಲ. ಅನೇಕ ಜೀವಿಗಳಲ್ಲಿ ಈ ಪೂರ್ವಸಂವೇದನಾ ಶಕ್ತಿ ಇದ್ದೇ ಇರುತ್ತದೆ. ಆದುದರಿಂದ ನವಿಲು ಕುಣಿದರೆ ಮಳೆ ಬರುತ್ತದೆ ಎಂದು ನಮ್ಮ ಗ್ರಾಮೀಣ ಪೂರ್ವಜರು ಭಾವಿಸುತ್ತಿದ್ದರು. 

ಆದರೆ ಬೇಂದ್ರೆಯವರು ನೋಡಿದ ನವಿಲು ತನ್ನ ಪಂಖವನ್ನು ಮುಚ್ಚಿಕೊಂಡು ಸುಮ್ಮನೇ ನಿಂತಿದೆ. ಇದು ಬೇಂದ್ರೆಯವರಲ್ಲಿ ಒಂದು ಕಲ್ಪನೆಯನ್ನು ಹುಟ್ಟಿಸಿರಬಹುದು. ಮಳೆಯು ಆಗದೇ ಇರುವದರಿಂದ, ಭೂಮಿ ಒಣಗಿ ಹೋಗಿದೆ, ಜನ ತತ್ತರಿಸುತ್ತಿದ್ದಾರೆ. ಈ ನವಿಲು ಕುಣಿದರೆ ಮಳೆ ಬಂದೀತೆ ಎಂದು ಬೇಂದ್ರೆಯವರ ಮನಸ್ಸು ಹೊಯ್ದಾಡಿರಬಹುದು. ಆಗ ಬೇಂದ್ರೆಯವರಲ್ಲಿ ಮೂಡಿದ ಹಾಡು, ‘ಕುಣಿ ಕುಣಿ ನವಿಲೇ ಕುಣೀ ಕುಣೀ’! ಕವಿತೆಯ ಪೂರ್ಣಪಾಠ ಹೀಗಿದೆ:

ಕುಣಿ ಕುಣಿ, ನವಿಲೇ, ಕುಣೀ ಕುಣೀ || ಪಲ್ಲವಿ ||
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ
ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ
ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ
ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ
ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.
..........................................................................................
ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ,
ಕುದಿವುದು ಮೋಡವು, ತೊಟ್ಟಿಡದಿದೆ ಮಳೆ,
ಬತ್ತಿತು ಹಳ್ಳವು, ಅತ್ತಿತು ತೊರೆ ಹೊಳೆ,
ತಾಪವ ನೀ ಮರೆ, ಕುಣೀ ಕುಣೀ

ಕ್ರಮಬದ್ಧ ಬೆಳೆವಣಿಗೆಯು   ಬೇಂದ್ರೆಯವರ ಕವನಗಳ ಅಚೂಕ ವೈಶಿಷ್ಟ್ಯವಾಗಿದೆ. ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಭೂಮಿಯ ಬವಣೆಯನ್ನು ಬಣ್ಣಿಸುತ್ತಿದ್ದಾರೆ. ಬಾಯಾರಿಕೆಯಿಂದ ಭೂತಾಯಿ ಬಾಯ್ಬಿಡುತ್ತಿದ್ದಾಳೆ ಎಂದು ಹೇಳುವಾಗ, ಬೇಂದ್ರೆಯವರು ಎರೆಮಣ್ಣಿನ ಹೊಲಗಳಲ್ಲಿ ಎದ್ದಿರುವ ಬಿರುಕುಗಳನ್ನು ಚಿತ್ರಿಸುತ್ತಿದ್ದಾರೆ. ಈ ಪರೋಕ್ಷ ವರ್ಣನೆ ಬೇಂದ್ರೆಯವರ ಕವನಗಳ ಮತ್ತೊಂದು ಲಕ್ಷಣವಾಗಿದೆ. ಭೂತಾಯಿಯ ಬಾಯಾರಿಕೆಗೆ ಕಾರಣವೆಂದರೆ ಮಳೆ ಇಲ್ಲ. ಮಳೆ ಇಲ್ಲದ್ದರಿಂದ ತೊರೆ, ಹಳ್ಳಗಳೆಲ್ಲ ಬತ್ತಿ ಹೋಗಿವೆ. ಮಳೆಯನ್ನು ಸುರಿಸುವ ಮೋಡವು ಸುಡುಬೇಸಿಗೆಯಿಂದಾಗಿ ಕಾಯ್ದಿದೆ. ಕಾಯ್ದ ಮೋಡವು ಮೇಲೇರಿ ಹೋಗುವುದು ಹಾಗು ಮಳೆಯನ್ನು ಸುರಿಸದೆ ಇರುವುದು ವೈಜ್ಞಾನಿಕ ಸತ್ಯವಾಗಿದೆ. ಅರ್ಥಾತ್ ಬೇಂದ್ರೆಯವರ ಕವನಗಳಲ್ಲಿ ಕಲ್ಪನೆಯು ಯಾವಾಗಲೂ ಸತ್ಯವನ್ನು ಅನುಸರಿಸುತ್ತದೆ. ಮಳೆಯೇ ಇಲ್ಲವಾದಾಗ, ಹಳ್ಳ ಬತ್ತಿ ಹೋಗುವುದು ಸಹಜವಾಗಿದೆ; ಸ್ವಲ್ಪ ನೀರು ಇರಬಹುದಾದ ತೊರೆ ಹಾಗು ಹೊಳೆಗಳಲ್ಲಿ ಈ ನೀರು, ಹೊಳೆಯು ಅತ್ತಿದ್ದರ ಪರಿಣಾಮದಂತೆ ಕಾಣುವುದು ಕಲ್ಪನೆಯ ಪರಮಶಿಖರವಾಗಿದೆ! ಇಷ್ಟೆಲ್ಲ ಸಂಕಟವು ಸುತ್ತಲೂ ಸುತ್ತಿರುವಾಗಲೂ ಸಹ, ಬೇಂದ್ರೆಯವರು ನವಿಲಿಗೆ ಕುಣಿಯಲು ಕರೆಯುತ್ತಿದ್ದಾರೆ. ‘ತಾಪವನ್ನು ಮರೆ’ ಎಂದು ಹೇಳುವಾಗ, ‘ಬಿಸಿಲಿನ ಶಕೆ’ ಎಂದು ಸೂಚಿಸುವದರ ಜೊತೆಗೆ ‘ಮಾನಸಿಕ ಸಂತಾಪ’ ಎನ್ನುವ ಅರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಿದ್ದಾರೆ.

ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ,
ಸರಸತಿ ಅರಳಿಸಿದೀ ಶತಪತ್ರ,
ರೋಮಾಂಚನದೊಳು ಕುಣೀ ಕುಣೀ

ನವಿಲು ಕುಣಿದ ಮಾತ್ರಕ್ಕೆ ಮಳೆ ಆದೀತೆ ಎನ್ನುವ ಸಂಶಯ ಯಾರಿಗಾದರೂ ಬರುವುದು ಸಹಜವೇ ಆಗಿದೆ. ಬೇಂದ್ರೆಯವರಿಗೂ ಸಹ ಈ ಸಂಶಯ ಬಂದಿರಬಹುದು. ಆದುದರಿಂದ ಅವರು ನವಿಲಿನ ಅಲೌಕಿಕತೆಯನ್ನು ಆಲೋಚಿಸುತ್ತಾರೆ. ನವಿಲು ನಮ್ಮೆಲ್ಲರಂತೆ ಕೇವಲ ಭೂಜೀವಿ ಅಲ್ಲ. ದೇವಲೋಕದ ಸರಸ್ವತಿಯು ‘ಶತಪತ್ರ’ದ ಮೇಲೆ ಎಂದರೆ ಕಮಲದ ಹೂವಿನ ಮೇಲೆ ಆಸೀನಳಾಗಿರುತ್ತಾಳೆ. ನವಿಲಿನ ರೆಕ್ಕೆಗಳೂ ಸಹ ಶತಪತ್ರಗಳು ಅಂದರೆ ನೂರು ಕಣ್ಣಿನ ಗರಿಗಳಾಗಿವೆ. ಈ ರೆಕ್ಕೆಗಳಿಂದ ಮಾಡಿದ ಬೀಸಣಿಗೆಯು ಗಾಳಿಯನ್ನು ಬೀಸಿಕೊಳ್ಳುವುದಕ್ಕಾಗಿ ಭೂಲೋಕದಲ್ಲಿ ಬಳಕೆಯಾಗುತ್ತದೆ. ಸ್ವರ್ಗ ಹಾಗು ಪಾತಾಳ ಲೋಕದಲ್ಲಿ ಇದು ಅಲಂಕಾರವಾಗಿ ಉಪಯೋಗಿಸಲ್ಪಡುತ್ತದೆ. ಅಲ್ಲದೆ ನವಿಲು ಸರಸ್ವತಿಯ ವಾಹನವೂ ಅಹುದು. ಇದೆಲ್ಲವೂ ನವಿಲಿಗಿರುವ ದೇವಸಂಬಂಧವನ್ನು ತಿಳಿಸುತ್ತದೆ. ಇಂತಹ ಅಸಾಮಾನ್ಯ ಜೀವಿಯಾದ ನವಿಲು ಕುಣಿದರೆ ಮಳೆ ಆಗದಿದ್ದೀತೆ? ಜೊತೆಗಾತಿಯ ಜೊತೆಗೆ ನರ್ತಿಸುವುದು ನವಿಲಿಗೆ ರೋಮಾಂಚನವನ್ನು ಮಾಡಿದರೆ, ಮಳೆ ಆದೀತೆನ್ನುವ ಆಸೆ ಮಾನವರನ್ನು ರೋಮಾಂಚನಗೊಳಿಸುತ್ತದೆ!

ನೀ ಕುಣಿ, ಜೊತೆಗಾತಿಯನೂ ಕುಣಿಸು;
ನಿನ್ನ ನೋಡಿ ಜಗ ಮರೆವರ ತಣಿಸು.
ಹರುಷ ಬಾಷ್ಪಗಳನೆತ್ತಲು ಹಣಿಸು;
ಕೇಕೆಯ ಹಾಕುತ ಕುಣೀ ಕುಣೀ

ಮಳೆಯು ಆಗಲಿ ಎನ್ನುವ ಹಂಬಲದಿಂದ ಬೇಂದ್ರೆಯವರು ನವಿಲಿಗೆ ಕುಣಿಯಲು ಆಹ್ವಾನವನ್ನೇನೊ ಇತ್ತರು. ಆದರೆ ಬೇಂದ್ರೆಯವರಿಗೆ ನವಿಲಿನ ಕುಣಿತದ ಮೂಲೋದ್ದೇಶ ಚೆನ್ನಾಗಿ ಗೊತ್ತು. ಆದುದರಿಂದಲೇ ‘ ನಿನ್ನ ಜೊತೆಗಾತಿಯನ್ನೂ ಕುಣಿತಕ್ಕೆ ಕರೆ; ನಿಮ್ಮ ಲೋಕಸಂಗ್ರಹ ಕಾರ್ಯ ನೆರವೇರಲಿ’ ಎನ್ನುತ್ತಾರೆ. ಈ ಕುಣಿತವನ್ನು ನೋಡಿದ ಜನ ಹರ್ಷಿತರಾಗುತ್ತಾರೆ. ಏಕೆ ಎನ್ನುತ್ತೀರಾ? ಇದು ಕೇವಲ ನವಿಲಿನ ನರ್ತನವನ್ನು ನೋಡಿದ ಆನಂದವಲ್ಲ, ಅಥವಾ ಒಂದು ಗಳಿಗೆಯ ಮಟ್ಟಿಗಾದರೂ ಜನರು ಸುತ್ತಲಿನ ತಾಪವನ್ನು ಮರೆತಿದ್ದಾರೆ ಎನ್ನುವ ಆನಂದವಲ್ಲ. ನಿಸರ್ಗವು ಸಂತೋಷದಿಂದ ಇದ್ದರೆ, ಜಗತ್ತಿಗೆಲ್ಲ ಒಳ್ಳೆಯದಾಗುತ್ತದೆ ಎನ್ನುವ ತಿಳಿವಳಿಕೆಯು ಈ ಆನಂದಕ್ಕೆ ಕಾರಣ. ಕಾಲಕಾಲಕ್ಕೆ ಮಳೆ ಬರಬೇಕು, ನವಿಲು ಕುಣಿಯಬೇಕು, ಸಕಲ ಜೀವಿಗಳು ತೃಪ್ತರಾಗಿರಬೇಕು ಎನ್ನುವ ಜೀವನದರ್ಶನ.

ನಭಕ್ಕೆ ಏನಿದೆ ನೆಲದಲಿ ಆಸೆ?
ನೆಲಕಿದೆ ಆರದ ಶುಷ್ಕ ಪಿಪಾಸೆ!
ಮೊಳಗಲಿ ನಿನ್ನಾನಂದದ ಭಾಷೆ
ನೆಲೆ ಮುಗಿಲನು ಹೆಣೆದೀತು ಮಳೆ

ಇಲ್ಲಿ ಕವಿಯಲ್ಲಿ ಒಂದು ಸಂಶಯ ಹುಟ್ಟುತ್ತದೆ. ಆಕಾಶವು ಮಳೆಯನ್ನು ಏಕೆ ಸುರಿಸಬೇಕು. ಅಂತಹ ಹಂಗು ಏನಿದೆ ಅದಕ್ಕೆ?  ಆದರೆ ಭೂಮಿಗೆ ಮಾತ್ರ ಯಾವಾಗಲೂ ತೀರದಂತಹ ಬಾಯಾರಿಕೆ ಇದೆ. ಆ ಕಾರಣದಿಂದ ಆಕಾಶವು ಮಳೆಯನ್ನು ಅನುಗ್ರಹಿಸಬೇಕು. ಇದೇ ‘ದ್ಯಾವಾ ಪೃಥವಿ’ಗಳ ನಡುವಿನ ಸಂಬಂಧ, ಇದೇ ಲೌಕಿಕ ಹಾಗು ಅಲೌಕಿಕಗಳ ನಡುವಿನ ಪ್ರೇಮಸಂಬಂಧ. (ಇಲ್ಲಿ ಬಸವಣ್ಣನವರ ‘ಹಳೆಯ ನಾನು, ಕೆಳೆಯ ನೀನು’ ಎನ್ನುವ ವಚನ ನೆನಪಾಗುತ್ತದೆ.) ಆದುದರಿಂದ, ನವಿಲೇ, ನೀನು ಕೇಕೆ ಹಾಕುತ್ತ ಕುಣಿ. ಆ ಕರೆಗೆ ಸ್ಪಂದಿಸಿ ಮಳೆ ಭೂಲೋಕವನ್ನು ತಲುಪೀತು!

ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ.

ನವಿಲಿನ ಮೂಲಕ ಬೇಂದ್ರೆಯವರು ದೇವರನ್ನೂ ಸಹ ಪ್ರಾರ್ಥಿಸುತ್ತಿದ್ದಾರೆ. ಈ ಪ್ರಾರ್ಥನೆಯ ಫಲಶ್ರುತಿ ಏನು? ಮಳೆಯು ಕೆಳಗೆ ಧುಮ್ಮಿಕ್ಕುವದರಿಂದ ಬೆಳೆ ಮೇಲೆ ಉಕ್ಕುವುದು. ಭೂತಾಯಿಯು ಸಂತುಷ್ಟಳಾಗಿ ಆಕಾಶಕ್ಕೆ ಜಿಗಿದಂತೆ ಇದು ತೋರುವುದು. ಆದುದರಿಂದ ಸಾವಿರ ಚಿಕ್ಕೆಗಳು ಇರುಳಿನ ಆಗಸದಲ್ಲಿ ಹೊಳೆಯುವಂತೆ, ನಿನ್ನ ರೆಕ್ಕೆಗಳನ್ನು ಹರಡಿಕೊಂಡು ಕುಣಿ ಎಂದು ಬೇಂದ್ರೆಯವರು ನವಿಲಿಗೆ ಕೇಳಿಕೊಳ್ಳುತ್ತಾರೆ. ಇದು ಮತ್ತೊಮ್ಮೆ ಭೂಲೋಕ ಹಾಗು ದೇವಲೋಕದ ಸಂಬಂಧವನ್ನು ನೆನಪಿಸುತ್ತದೆ. ಇದು ಬೇಂದ್ರೆಯವರು ನವಿಲಿಗೆ ಮಾಡುವ ಪ್ರಾರ್ಥನೆಯೂ ಹೌದು ; ದೇವರಲ್ಲಿ ಅವರು ಮಾಡುವ ಪ್ರಾರ್ಥನೆಯೂ ಹೌದು.

Friday, May 30, 2014

ಪತ್ರಕರ್ತರ ಕರ್ತವ್ಯ, ಅಕರ್ತವ್ಯ.


ನವೋದಯ ಕಾಲದಲ್ಲಿ ಕನ್ನಡ ಸಾಹಿತಿಗಳು ಕನ್ನಡ ಭಾಷೆಯನ್ನು ಕಟ್ಟಿದಂತೆ, ಬೆಳಸಿದಂತೆ, ಪತ್ರಿಕಾಕರ್ತರೂ ಸಹ ಕನ್ನಡ ಭಾಷೆಯನ್ನು ಬೆಳಸುತ್ತಲೇ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಪ್ರಾರಂಭವಾಗಿ ಅರ್ಧ ಶತಕಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿವೆ. ಕನ್ನಡದ ಮೊದಲ ಸಮಾಚಾರಪತ್ರಿಕೆ ‘ತಾಯಿನಾಡು’ ೧೯೨೭ರಲ್ಲಿ ಪ್ರಾರಂಭವಾಯಿತು. ‘ಸಂಯುಕ್ತ ಕರ್ನಾಟಕ’ ಪತ್ರಿಕೆ ೧೯೩೩ರಲ್ಲಿ ಪ್ರಾರಂಭವಾಯಿತು. ‘ಪ್ರಜಾವಾಣಿ’ ಪತ್ರಿಕೆಯು ೧೯೪೮ರಲ್ಲಿ ಪ್ರಾರಂಭವಾಯಿತು.

ಈ ಎಲ್ಲ ಪತ್ರಿಕೆಗಳು ಹೆಮ್ಮೆಪಡುವಂತಹ ಪತ್ರಿಕಾಶೈಲಿಯನ್ನು ನಿರ್ಮಿಸಿದವು. ಅನೇಕ ಹೊಸ ಪತ್ರಿಕಾಪದಗಳನ್ನು ಸೃಷ್ಟಿಸಿದವು. ಉದಾಹರಣೆಗೆ lead articleಗೆ ‘ಅಗ್ರಲೇಖನ’ವೆಂದು ಹೆಸರಿಸಿದರು. Vested interestಅನ್ನು ‘ಪಟ್ಟಭದ್ರ ಹಿತಾಸಕ್ತಿ’ ಎಂದು ಕರೆದರು. ಆಂಗ್ಲ ಭಾಷೆಯಲ್ಲಿರುವ ಅನೇಕ ಪತ್ರಿಕಾಪದಗಳನ್ನು ನಮ್ಮ ಪತ್ರಕರ್ತರು ತುಂಬ ಸಮರ್ಥವಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಗಂಭೀರವಾದ ಕಾರ್ಯ. ಒಟ್ಟಿನಲ್ಲಿ ಒಂದು ಸಮಾಚಾರಪತ್ರಿಕೆಯು ಮಾಡಬೇಕಾದ ಮೂರು ಅವಶ್ಯಕ ಮುಖ್ಯ ಕಾರ್ಯಗಳನ್ನು ಇವು ಸಮರ್ಪಕವಾಗಿ ನಿರ್ವಹಿಸಿದವು:
(೧) ನಿಷ್ಪಕ್ಷಪಾತವಾಗಿ ಸಮಾಚಾರವನ್ನು ನೀಡುವುದು,
(೨) ಚಿಂತನಪರ ಲೇಖನಗಳನ್ನು ನೀಡುವುದು,
(೩) ಪತ್ರಿಕಾಕನ್ನಡವನ್ನು ಬೆಳೆಸುವುದು.

ಪತ್ರಿಕಾಕರ್ತರಷ್ಟೇ ಅಲ್ಲ ನಮ್ಮ ಸರಕಾರಿ ನೌಕರರು ಸಹ ‘ಸರಕಾರಿ’ ಹಾಗು ತಾಂತ್ರಿಕ ಪದಗಳನ್ನು ತುಂಬ ಅರ್ಥಪೂರ್ಣವಾಗಿ ಭಾಷಾಂತರಿಸಿದ್ದಾರೆ. ಉದಾಹರಣೆಗೆ ‘ಪಬ್ಲಿಕ್ ವರ್ಕ್ಸ್ ಡಿಪಾರ್ಟಮೆಂಟ್’ ಎನ್ನುವುದು ‘ಲೋಕೋಪಯೋಗಿ ಇಲಾಖೆ’ ಆಯಿತು , ‘ಬೆನಿಫಿಶರಿ’ಯು  ‘ಫಲಾನುಭವಿ’ ಆದನು. ‘ಸ್ಪೀಡ್ ಬ್ರೆಕರ್’ ಎನ್ನುವುದು ‘ರಸ್ತೆದಿಬ್ಬ’ ಆಯಿತು. ಪತ್ರಕರ್ತರು, ಸರಕಾರಿ ನೌಕರರು ಹಾಗು ಜನಸಾಮಾನ್ಯರು ಇಂತಹ ಅನೇಕ ಪದಗಳನ್ನು ಅನುವಾದಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ. ಅಂತಹ ಕೆಲವು ಪದಗಳು ಹೀಗಿವೆ:
Protocol......................ಶಿಷ್ಟಾಚಾರ
Ordinanace.................ಸುಗ್ರೀವಾಜ್ಞೆ
Green revolution........ ಹಸಿರು ಕ್ರಾಂತಿ
Transgenic..................ಕುಲಾಂತರಿ
anasthesia...................ಅರಿವಳಿಕೆ
Inferiority complex.......ಕೀಳರಿಮೆ
Unconscious................ಸುಪ್ತಪ್ರಜ್ಞೆ
Dedicated to people....ಲೋಕಾರ್ಪಣೆ
Preface........................ಮುನ್ನುಡಿ

ಇಂತಹ ಅನುವಾದ ಕಾರ್ಯವೇನೊ ಹೊಸದಾಗಿ ಪ್ರಾರಂಭವಾದದ್ದು. ನೂರಾರು ವರ್ಷಗಳಿಂದ ಕನ್ನಡದಲ್ಲಿಯೇ ಸುಂದರವಾದ ಅನೇಕ ಪದಪುಂಜಗಳು ಸೃಷ್ಟಿಯಾಗಿವೆ. ಉದಾಹರಣೆಗೆ:
ಉದರವೈರಾಗ್ಯ
ಸ್ಮಶಾನಶಾಂತಿ
ಲೋಕಮಾನ್ಯ

ಭಾರತದಲ್ಲಿ ರಾಜಪ್ರಭುತ್ವವಿದ್ದಂತಹ ಕಾಲದಲ್ಲಿ, ರಾಜರ ಅನುಯಾಯಿಗಳಾದ ಕೆಲವು ಗಣ್ಯರಿಗೆ ‘ರಾಜಮಾನ್ಯ’ ಎನ್ನುವ ಬಿರುದು ದೊರೆಯುತ್ತಿತ್ತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಶರ ವಿರುದ್ಧ ಸಮರ ಸಾರಿದ ಬಾಲಗಂಗಾಧರ ತಿಲಕರಿಗೆ ಜನಸಾಮಾನ್ಯರೇ ‘ಲೋಕಮಾನ್ಯ’ ಎನ್ನುವ ಬಿರುದನ್ನು ಇತ್ತರು. ಇಂತಹ ಸುಂದರವಾದ ಪದಗಳ ಸೃಷ್ಟಿಕರ್ತರು ಸಾಮಾನ್ಯ ಅನಾಮಧೇಯರು. ಇವರನ್ನು ಹುಡುಕಿ ಗೌರವಿಸುವುದು ನಮ್ಮಿಂದ ಸಾಧ್ಯವಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಇತ್ತೀಚಿನ ಕೆಲವು ಪತ್ರಿಕಾಸಂಪಾದಕರ ಗುಣಪರೀಕ್ಷೆಯನ್ನು ಮಾಡೋಣ!

ಶ್ರೀ ವಿಶ್ವೇಶ್ವರ ಭಟ್ಟರು ಮೊದಲು ‘ವಿಜಯಕರ್ನಾಟಕ’ ಪತ್ರಿಕೆಯ, ತನ್ನಂತರ ‘ಕನ್ನಡಪ್ರಭಾ’ ಪತ್ರಿಕೆಯ ಸಂಪಾದಕರಾದರು. ‘ಕುಂಬಾರನಿಗೆ ಒಂದು ವರ್ಷ, ಡೊಣ್ಣೆಗೆ ಒಂದು ನಿಮಿಷ’ ಎನ್ನುವಂತೆ. ನಮ್ಮ ಪತ್ರಿಕಾಪೂರ್ವಜರ ಮಹತ್ಸಾಧನೆಯನ್ನು ಭಟ್ಟರು ನುಚ್ಚುನೂರು ಮಾಡುತ್ತಿದ್ದಾರೆ. ಒಂದು ಸಮಾಚಾರಪತ್ರಿಕೆಯಲ್ಲಿ ರಂಜನೆಗೂ ಸ್ಥಾನವಿರಲೇ ಬೇಕು. ಆದರೆ ಅದೇ ಪ್ರಧಾನವಾಗಬಾರದು. ಹಾಗಾದಾಗ, ಪತ್ರಿಕಾಶೈಲಿಯು ಭರತನಾಟ್ಯವಾಗುವ ಬದಲು ‘ತಮಾಶಾ, ನೌಟಂಕಿ’ ಕುಣಿತವಾಗುತ್ತದೆ. ವಿಶ್ವೇಶ್ವರಭಟ್ಟರು ತಮ್ಮ ವಿಚಿತ್ರ ಪದಪ್ರಯೋಗಗಳ ಮೂಲಕಇದನ್ನು ಸಾಧಿಸುತ್ತಿದ್ದಾರೆ. ಉದಾಹರಣೆಗೆ ‘ಹತ್ಯಾಚಾರ’ ಎನ್ನುವ ಪದಪ್ರಯೋಗವನ್ನು ನೋಡಿರಿ. ಅತ್ಯಾಚಾರದ ಬಳಿಕ ಮಾಡಿದ ಹತ್ಯೆಯನ್ನು ಸೂಚಿಸಲು ಭಟ್ಟರು ‘ಹತ್ಯಾಚಾರ’ ಎಂದು ಬರೆಯುತ್ತಾರೆ. ಇದನ್ನೇ ‘ಅತ್ಯಾಚಾರ ಹಾಗು ಕೊಲೆ’ ಎಂದರೆ ಆಗದೆ? ತಾವು ಹೊಸ ಪದವೊಂದನ್ನು ಟಂಕಿಸಿರುವದಾಗಿ ಭಟ್ಟರು ತಮ್ಮನ್ನು ತಾವೇ ಹೊಗಳಿಕೊಳ್ಳಬಹುದು. ಆದರೆ ಇದನ್ನು ನಾನು ‘ಪಂಕ್ ಪ್ರಯೋಗ’ ಎಂದು ಕರೆಯುತ್ತೇನೆ. ತಲೆಯ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡು ತಿರುಗಾಡುವ, ‘ಪಂಕ್’ ಎಂದು ಕರೆಯಿಸಿಕೊಳ್ಳುವ ಯುವಕರನ್ನು ನೀವು ನೋಡಿರಬಹುದು. ಜನರ ಗಮನ ಸೆಳೆಯಲು ಈ ಹುಚ್ಚಾಟವನ್ನು ಅವರು ಮಾಡುತ್ತಾರೆ. ಇದೊಂದು ತರಹದ ಮನೋರೋಗ. ವಿಶ್ವೇಶ್ವರ ಭಟ್ಟರು ಕನ್ನಡ ಭಾಷೆಯನ್ನು ‘ಪಂಕ್’ ಮಾಡುತ್ತಿದ್ದಾರೆ. ಆದರೆ ಇದು ಪತ್ರಿಕೆಯಲ್ಲಿ ಬಳಸಲು ಯೋಗ್ಯವಾದ ಪ್ರಯೋಗವಲ್ಲ.

ಕನ್ನಡವನ್ನು ಕುಲಗೆಡಿಸಲು ಭಟ್ಟರು ಇನ್ನೂ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಒಂದು ಪದಕ್ಕೆ ಜೋಡಿಸಬೇಕಾದ ವ್ಯಾಕರಣಸಮ್ಮತ ವಿಭಕ್ತಿಪ್ರತ್ಯಯದ ಅಂಗಛ್ಛೇದವನ್ನು ಮಾಡುವುದು. ಉದಾಹರಣೆಗೆ ‘ವಾರಾಣಸಿಯಲ್ಲಿ’ ಎಂದು ಬರೆಯಬೇಕಾದ ಪದವನ್ನು ಭಟ್ಟರು ‘ವಾರಾಣಸೀಲಿ’ ಎಂದು ಬರೆಯುತ್ತಾರೆ. ಈ ತರಹದ ಪ್ರಯೋಗದಿಂದ ಭಟ್ಟರು ಏನನ್ನು ಸಾಧಿಸುತ್ತಾರೆ?

ಪತ್ರಿಕಾಕನ್ನಡವನ್ನು ಆಡುಭಾಷೆಯ ಕನ್ನಡವನ್ನಾಗಿ ಮಾಡುವ ದೊಡ್ಡಸ್ತಿಕೆಯೆ ಇದು? ಹಾಗಿದ್ದರೆ, ‘ಮಹಾರಾಜರು ಸಿಂಹಾಸನದ ಮೇಲೆ ಕುಳಿತರು’ ಅನ್ನುವ ವಾಕ್ಯವನ್ನು ‘ಮಾರಾಜರು ಸಿಂಆಸನದ ಮ್ಯಾಲೆ ಕುಂತರು’ ಎಂದು ಇವರು ಬರೆಯಬಹುದೇನೊ? ಇನ್ನೂ ಒಂದು ನೆವ ಭಟ್ಟರ ಬತ್ತಳಿಕೆಯಲ್ಲಿ ಇರಬಹುದು: ಲಭ್ಯವಿರುವ ಸ್ಥಳದಲ್ಲಿ ಸಮಾಚಾರವನ್ನು ಹೊಂದಿಸುವ ಸಲುವಾಗಿ, ಈ ರೀತಿಯಲ್ಲಿ ಬರೆಯಲಾಗಿದೆ, ಎಂದು ಅವರು ಹೇಳಬಹುದು. ಇದು ಒಪ್ಪಲು ಅಸಾಧ್ಯವಾದ ಕುಂಟುನೆವ. ಅಕ್ಷರಗಳ ಅಳತೆಯನ್ನು ಕಡಿಮೆ ಮಾಡಿದರೆ, ಸ್ಥಳಾವಕಾಶಕ್ಕೇನು ಕೊರತೆಯಾದೀತು? ನಿಜ ಹೇಳಬೇಕೆಂದರೆ ಓದುಗರನ್ನು ಆಕರ್ಷಿಸಲು ಭಟ್ಟರು ಮಾಡುತ್ತಿರುವ ಡೊಂಬರಾಟವಿದು!

ಭಟ್ಟರು ಇಷ್ಟಕ್ಕೇ ಸುಮ್ಮನಾಗಿಲ್ಲ. ಆಂಗ್ಲ ಪದಗಳಿಗೆ ತಪ್ಪು ಕನ್ನಡ ಪದಗಳನ್ನು ಸೂಚಿಸುವ ತೆವಲು ಅವರಲ್ಲಿದೆ. ಭಟ್ಟರು ಈ ಮೊದಲೊಮ್ಮೆ audacity ಪದವನ್ನು ‘ತಿಕಕೊಬ್ಬು’ ಎಂದು ವರ್ಣಿಸಿದಾಗ, ಅದನ್ನು ಖಂಡಿಸಿ ನಾನು ಇಲ್ಲಿ ಬರೆದಿದ್ದೆ. ಅಂತಹದೇ ತಪ್ಪನ್ನು ಭಟ್ಟರು ಮತ್ತೊಮ್ಮೆ ಮಾಡಿದ್ದಾರೆ. ಅದು ಹೀಗಿದೆ:
Faceless ಪದದ ಅರ್ಥ ‘ಗುರುತಿರದ’ ಎಂದಾಗುತ್ತದೆ, ಉದಾಹರಣೆಗೆ , Faceless mob, Faceless kidnapper, Faceless Terrorist ಇತ್ಯಾದಿ. ಭಟ್ಟರು faceless ಎಂದರೆ ‘ಮುಖೇಡಿ’ ಎಂದು ಸೂಚಿಸಿದ್ದಾರೆ. ‘ಮುಖೇಡಿ’ ಅಥವಾ ‘ಮುಖಹೇಡಿ’ ಅಥವಾ ‘ಮಖೀನ’ ಎಂದರೆ ಮತ್ತೊಬ್ಬರ ಜೊತೆ ಮುಖ ಎತ್ತಿ ಮಾತನಾಡಲೂ ಸಹ ಹೆದರಿಕೊಳ್ಳುವ, ಸಂಕೋಚಪಡುವ ವ್ಯಕ್ತಿ. ಭಟ್ಟರ ಪ್ರಕಾರ Faceless Terrorist ಎಂದರೆ ‘ಹೆದರುಪುಕ್ಕ, ಸಂಕೋಚಶೀಲ ಭಯೋತ್ಪಾದಕ’!
ಭಟ್ಟರೆ, ನೀವು ಇಂಗ್ಲಿಶ್ ಪದಗಳನ್ನೇ ಬಳಸಿರಿ ಅಥವಾ ಕನ್ನಡ ಪದಗಳನ್ನೇ ಬಳಸಿರಿ, ‘ಕನ್ನಡಪ್ರಭಾ’ದ ಓದುಗರಿಗೆ ಅರ್ಥವಾಗುತ್ತದೆ. ದಯವಿಟ್ಟು ಇಂಗ್ಲಿಶ್ ಪದವನ್ನು ಬಳಸಿ ಅದಕ್ಕೆ ತಪ್ಪು ಕನ್ನಡ ಪದವನ್ನು ಸೂಚಿಸಬೇಡಿ. ಅದು ಅಮಾಯಕ ಓದುಗರಿಗೆ, ವಿಶೇಷತಃ ವಿದ್ಯಾರ್ಥಿಗಳಿಗೆ ದಾರಿ ತಪ್ಪಿಸಬಹುದು.



ತನ್ನ ಅಜ್ಞಾನವನ್ನು ಇತರಲ್ಲಿ ಯಾವುದೇ ಸಂಕೋಚವಿಲ್ಲದೇ ಹರಡುವವನಿಗೆ ಏನೆನ್ನಬೇಕು? ಒಂದು ಜನಪ್ರಿಯ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟರು ತಮ್ಮ ಬರಹದ ಮೂಲಕ ತಪ್ಪು ಮಾಹಿತಿ ಪ್ರಸಾರವಾಗದಂತೆ ಎಚ್ಚರದಿಂದ ಇರಬೇಕು. ಆದರೆ ಇಲ್ಲಿ ನೋಡಿ: ‘ಬಾಲವಿಲ್ಲದ ಮುಧೋಳ ನಾಯಿ’ ಎಂದು ಬರೆಯುವ ಮೂಲಕ ಭಟ್ಟರು ಮುಧೋಳ ನಾಯಿಗೆ ಬಾಲ ಇರುವುದಿಲ್ಲ ಎನ್ನುವ ತಪ್ಪು ತಿಳಿವಳಿಕೆಯನ್ನು ಜನರಲ್ಲಿ ಹರಡುತ್ತಿದ್ದಾರೆ. ಮುಧೋಳ ನಾಯಿಗೆ ಏನಾದರೂ ಈ ವಿಷಯ ತಿಳಿದರೆ ಅದು ಭಟ್ಟರನ್ನು ಸುಮ್ಮನೆ ಬಿಟ್ಟೀತೆ? ಯಾಕೆಂದರೆ ಅದಕ್ಕೆ ಸಾಕಷ್ಟು ಉದ್ದವಾದ ಬಾಲವಿದೆ. ಭಟ್ಟರು, ‘ಇದು ಹಾಗಲ್ಲ, ಬಾಲವಿರದಂತಹ ಮುಧೋಳ ನಾಯಿ’ಯ ಬಗೆಗೆ ನಾನು ಬರೆಯುತ್ತಿದ್ದೆ ಎನ್ನುವ ಸಮಜಾಯಿಸಿ ಕೊಡಲು ಪ್ರಯತ್ನಿಸಬಹುದು. ದಯವಿಟ್ಟು ಈ ಮಾತನ್ನು ಮುಧೋಳ ನಾಯಿಯ ಎದುರಿಗೆ ಹೇಳಲು ಪ್ರಯತ್ನಿಸಿರಿ! 


ನೀವು ಎಷ್ಟೇ ತಿಳಿಹೇಳಿದರೂ ಭಟ್ಟರು ಎರಡೇ ವಾಕ್ಯಗಳಲ್ಲಿ ನಿಮ್ಮನ್ನು ಚಿತ್ ಮಾಡಿ ಬಿಡುತ್ತಾರೆ: `ಪ್ರತಿಯೊಂದು ಪತ್ರಿಕೆಗೂ ಒಂದು stylesheet ಇರುತ್ತದೆ ; ಇದು ಕನ್ನಡಪ್ರಭಾ ಪತ್ರಿಕೆಯ stylesheet !’  
 ‘ನೀಟಾದ ಸೂಟಿನ ಬಟ್ಟೆ ಹಾಕಿಕೊಂಡರೆ ಚೆನ್ನಾಗಿ ಕಾಣುತ್ತೀಯಪ್ಪಾ’ ಎಂದು ನೀವು ಒಬ್ಬ ಎಬಡನಿಗೆ ಹೇಳಿದರೆ, ಆತನು ‘ಲಂಗೋಟಿಯೇ ನನ್ನ style !’ ಎಂದು ಹೇಳಿದನಂತೆ. ಇದೂ ಹಾಗೆಯೇ!

ಭಟ್ಟರೆ, ಕನ್ನಡಪ್ರಭಾ ಪತ್ರಿಕೆಯ ಪ್ರಸಾರವು ನಿಮ್ಮ ಆಡಳಿತದಲ್ಲಿ ಸಾಕಷ್ಟು ವರ್ಧಿಸಿದೆ. ನೀವು ಕನ್ನಡದ ಒಬ್ಬ ಹೊಣೆಗಾರ ಸಂಪಾದಕರಂತೆ ವರ್ತಿಸಬೇಕೆ ವಿನಃ ಹತ್ಯಾಚಾರಿ ‘ಪಂಕ್’ ಸಂಪಾದಕನಂತೆ ಅಲ್ಲ. ಏಕೆಂದರೆ, ಪತ್ರಿಕೆಯನ್ನು ಓದುವ ಅಮಾಯಕ ತರುಣರು ಹಾಗು ವಿದ್ಯಾರ್ಥಿಗಳು ನೀವು ಬರೆದದ್ದೇ ಸರಿ ಎಂದು ತಪ್ಪಾಗಿ ಭಾವಿಸುತ್ತಾರೆ. ಅಷ್ಟೇ ಅಲ್ಲ, ಶ್ರೇಷ್ಠ ಇತಿಹಾಸವಿದ್ದಂತಹ ‘ಸಂಯುಕ್ತ ಕರ್ನಾಟಕ ಪತ್ರಿಕೆ’ಯೂ ಸಹ ನಿಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತ ಮುಕ್ಕರಿಸುತ್ತಿದೆ. ಆದುದರಿಂದ ದಯವಿಟ್ಟು ಈ ‘ಮಂಗಾಟ’ವನ್ನು ನಿಲ್ಲಿಸಿರಿ ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.     

Tuesday, May 20, 2014

‘ಸಾರಾಸಾರ ವಿಚಾರ ಮಾಡಿದರ............’ ---ಶ್ರೀಧರ ಖಾನೋಳಕರ



ದಿವಂಗತ ಶ್ರೀಧರ ಖಾನೋಳಕರ ಇವರು ಬೇಂದ್ರೆಯವರ ಸಹಪಾಠಿಗಳಾಗಿದ್ದರು. ಜಾನಪದ ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ ಇವರು ಉಪಯುಕ್ತ ಜಾನಪದ ಸಂಶೋಧನೆಗಳನ್ನು ಮಾಡಿದವರಾಗಿದ್ದರು. ‘ಸಾರಾಸಾರ ವಿಚಾರ ಮಾಡಿದರ............’ ಎನ್ನುವುದು ಇವರು ‘ಹರದೇಶಿ-ನಾಗೇಶಿ’ ಪದ್ಧತಿಯಲ್ಲಿ ರಚಿಸಿದ ಕನ್ನಡ ಕವಾಲಿಯಾಗಿದೆ. ಈ ಕವಾಲಿಯ ಒಂದು ನುಡಿಯನ್ನು ಹೆಂಗಸರ ಗುಂಪು ಹಾಗು ಮುಂದಿನ ನುಡಿಯನ್ನು ಗಂಡಸರ ಗುಂಪು ಹಾಡುತ್ತದೆ. ಇಂತಹ ಕವಾಲಿಗಳು ಒಂದು ಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಿಡೀ ಜರಗುತ್ತಿದ್ದವು. ಎರಡೂ ಗುಂಪುಗಳ ನಡುವೆ ತುರುಸಿನ ಸ್ಪರ್ಧೆ ಇರುತ್ತಿತ್ತು.

ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.  ಅವರು ರಚಿಸಿದ ಈ ಕವಾಲಿ ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು.
(ಟಿಪ್ಪಣಿ: ‘ಪಿಂಜಾರ’ ಎಂದರೆ ಅರಳಿಯನ್ನು ಹಿಂಜಿ ಗಾದಿಯನ್ನು ತಯಾರಿಸುವವರು. ಇವರು ಮನೆಯಿಂದ ಮನೆಗೆ ತಿರುಗುತ್ತ ತಮ್ಮ ಕುಲಕಸಬನ್ನು ಮಾಡುತ್ತಿದ್ದರು. ಇವರು ಮುಸಲ್ಮಾನ ಧರ್ಮದವರು. ಈ ಕವಾಲಿಯಲ್ಲಿ ಪಿಂಜಾರ ಎಂದರೆ ಸೇವಕ ಎಂದು ಅರ್ಥೈಸಿಕೊಳ್ಳಬೇಕು.
ಖಾನಾವಳಿ ಎಂದರೆ ಊಟದ ಹೊಟೆಲ್.)
ಕವಾಲಿಯ ಪೂರ್ತಿಪಾಠ ಹೀಗಿದೆ:
 
ಸಾರಾಸಾರ ವಿಚಾರ ಮಾಡಿದರ
ಹೆಣ್ಣು ಆಳತದ ಸಂಸಾರಾ
ಸಾವಿರ ಕುದರಿ ಸರದಾರಾ
ಮನೀ ಹೆಂಡತಿ ಪಿಂಜಾರಾ || ಪಲ್ಲ ||

ಹೆಣ್ಣು : ಹೆಣ್ಣು ಇದ್ದರ ಹಬ್ಬ ಹುಣ್ಣವಿ
           ಹೆಣ್ಣು ಇದ್ದರ ಎಲ್ಲಾ ಪರಿವಾರ
 ಹೆಣ್ಣು ಇದ್ದರ ಮದುವಿ, ಮುಂಜಿವಿ
 ಹೆಣ್ಣಿದ್ದರ ಜೀವನ ಪೂರಾ || ೧ ||

ಗಂಡು :  ಸಾರಾಸಾರ ವಿಚಾರ ಮಾಡಿದರ
            ಗಂಡು ಆಳತದ ಸಂಸಾರಾ
            ರತಿಯ ನಾಚಿಸುವ ರೂಪವಿದ್ದರೂ
            ಕುಂಕುಮ ಹೆಣ್ಣಿಗೆ ಸಿಂಗಾರಾ || ೨ ||

ಹೆಣ್ಣು : ಹೆಣ್ಣು ಇದ್ದರ ಬರ್ರೀ ರಾಯರ
            ಅಂತ ಕರಿಯತಾರ ಎಲ್ಲ ಜನ
            ಹೆಣ್ಣು ಇಲ್ಲದೆ ತಿರುಗುವ ಖೋಡಿಯ
            ಮಾರಿ ಸುರಿಯತದ ಭಣಭಣ || ೩ ||

ಗಂಡು :  ಮನೆತನವೆಂಬುವ ಅರಮನೆ ಇರುವಿಗೆ
            ಗಂಡುಗೋಡೆಗಳೆ ಆಧಾರ
            ಹೆಣ್ಣು ನೋಡಿದರ ಗೋಡೆಗಂಟಿಸಿದ
            ಬಗೆ ಬಗೆ ಬಣ್ಣದ ಚಿತ್ತಾರಾ || ೪ ||

ಹೆಣ್ಣು : ಹೆಣ್ಣು ಇದ್ದರ ಹೋಳಿಗೆ ತುಪ್ಪಾ
            ಕರಿದ ಕಡಬು ಶ್ಯಾವಿಗೆ ಖೀರು
            ಹೆಣ್ಣು ಇಲ್ಲದವನ ಬಾಯಿಗೆ ಹುಳಿ ಹುಳಿ
            ಖಾನಾವಳಿ ಮಜ್ಜಿಗೆ ನೀರಾ || ೫ ||

ಗಂಡು :  ಗಂಡೆಂಬುದೆ ದುಂಡು ಕುಂಕುಮಾ
            ಹೆಣ್ಣಿನ ಚಲುವಿನ ಚಂದ್ರಾಮಾ
            ಹೆಣ್ಣಿನ ಜನುಮದ ಮುಗಿಲು ಬೆಳಗುವುದು
            ಹುಣ್ಣಿಮೆ ಬೆಳದಿಂಗಳ ಬೆಳಕಾ || ೬ ||

ಹೆಣ್ಣು : ಹೆಣ್ಣು ಇದ್ದರ ಸೊಗಸು ಮನಿವಳಗ
            ಹೋಗಿ ಬರೋರಿಗೆ ತೆರಪಿಲ್ಲ
            ಹುಡುಗರು ಹುಪ್ಪಡಿ ತಿಂದು ಉಳಿಯತಾವ
            ನಕ್ಕು ನಲಿಯತಾವ ಹಗಲೆಲ್ಲ || ೭ ||

ಇಬ್ಬರೂ : ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಗಂಡೂ ಹೆಣ್ಣೂ ಕೂಡಿ ನಡೆದರ
ಬಾಳು ಆಗತದ ಬಂಗಾರಾ || ೮ ||
ಗಂಡು ಹೆಣ್ಣು ಕೂಡಿ ನಡೆದರ
            ಕೆನೆ ಹಾಲು ಸಕ್ಕರೆಯ ರುಚಿ
            ಕಬ್ಬಿನ ರಸದಾಗೆ ಜೇನು ಕೂಡಿದರ
            ಎನು ಹೇಳಬೇಕದರ ರುಚಿ || ೯ ||
           
ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ || ೧೦ ||
                                                ---ಶ್ರೀಧರ ಖಾನೋಳಕರ