Tuesday, February 24, 2015

ಹುದುಗಲಾರದ ದುಃಖ............ಬೇಂದ್ರೆ



ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?

ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
           ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
           ನಾನೆದೆಯ ಕಟುಕನೇನು?

ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
           ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
           ನಿಜದುಃಖ ಮರೆಸಬಹುದೆ?

ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
           ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
           ಅಂತಿಂತು ನಟಿಸುತಿರಲು?
……………………………………………………………………….
ವರಕವಿ ಬೇಂದ್ರೆಯವರ ಜೀವನದಲ್ಲಿ ಬಂದ ಪರಿತಾಪಗಳು ಅಷ್ಟಿಷ್ಟಲ್ಲ. ಅವರ ಐದು ಮಕ್ಕಳು ಶಿಶುಮರಣವನ್ನಪ್ಪಿದರು. ಈ ಆಘಾತಗಳನ್ನು ಸಹಿಸುವುದು ಹೇಗೆ?  ಇಂತಹ ಸಂದರ್ಭದಲ್ಲಿ ಗಂಡಹೆಂಡಿರು ತಮ್ಮ ದುಃಖವನ್ನು ಮರೆಮಾಚುತ್ತ ಪರಸ್ಪರರನ್ನು ಸಂತೈಸುವ ಪ್ರಯತ್ನ ಮಾಡುವುದು ಸಹಜ. ಬೇಂದ್ರೆಯವರ ಹೆಂಡತಿಯು ತನ್ನ ದುಃಖವನ್ನು ಮರೆಮಾಚಿ, ತನ್ನ ಗಂಡನನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಣ್ಣಿಗೆ ಮರೆಯಾದದ್ದು ಹೃದಯಕ್ಕೆ ಕಾಣದಿದ್ದೀತೆ? ಅಂತೆಯೇ ಬೇಂದ್ರೆ ತಮ್ಮ ಹೆಂಡತಿಗೆ ಕೇಳುತ್ತಾರೆ:
ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?
ಈ ದುಃಖ ಹುದುಗಲಾರದ್ದು; ಅಂದರೆ ಎಷ್ಟೇ ಪ್ರಯತ್ನಿಸಿದರೂ ಇದನ್ನು ಅದುಮಿ ಇಡಲು ಸಾಧ್ಯವಾಗದು. ಅಂತಹ ದುಃಖವನ್ನು ಬೇಂದ್ರೆಯವರ ಪತ್ನಿ ತನ್ನ ನಸುನಗುವಿನಲ್ಲಿ ಹುಗಿದು ಹಾಕಿ ತನ್ನ ಗಂಡನನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಪತ್ನಿಯ ಅಂತರಂಗವನ್ನು ಅರಿಯದಷ್ಟು ಆತ ಪರಕೀಯನೆ ಅಥವಾ ಶತದಡ್ಡನೆ? ಆದುದರಿಂದಲೇ ಅವರು ತಮ್ಮ ಹೆಂಡತಿಗೆ ಕೇಳುತ್ತಾರೆ: ‘ಈ ಜಾಣತನವನ್ನು ಎಲ್ಲಿಂದ ಕಲಿತೆ?’

ಬರಿಯ ಮಾತಿನಿಂದ ತನ್ನ ಗಂಡನನ್ನು ಸಮಾಧಾನಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಹೆಂಡತಿಯು, ಆತನ ಹತ್ತಿರ ಹೋಗಿ, ಆತನ ಮೈ-ಕೈ ಮುಟ್ಟಿ ಸಾಂತ್ವನಗೊಳಿಸುವುದು ಸಹಜವಷ್ಟೇ? ಕೆಲವು ಗಂಡಸರು ಸ್ತ್ರೀಸ್ಪರ್ಶದಿಂದ ಕರಗಿ ಹೋಗುತ್ತಾರೆ. ಆದರೆ ಸ್ತ್ರೀಸಾಮೀಪ್ಯವು ತನ್ನ ಸಂಕಟವನ್ನು ಕರಗಿಸಲು ಬೇಂದ್ರೆಯವರು ‘ಸೊಗಸುಗಾರ ಪುಟ್ಟಸ್ವಾಮಿ’ ಅಲ್ಲವಲ್ಲ! ಅವರು ತಮ್ಮ ಹೆಂಡತಿಯ ಅಳಲಿಗೆ ಮಿಡಿಯುವ ಅಂತಃಕರಣಮಯಿ ಗಂಡನಲ್ಲವೆ? ಅದನ್ನು ಅವರು ಹೇಳುವುದು ಹೀಗೆ:
ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
        ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
        ನಾನೆದೆಯ ಕಟುಕನೇನು?

ತಮಗೊಂದು ಕೂಸು ಇದ್ದದ್ದು ಕೇವಲ ಒಂದು ಕನಸು; ತನಗೆ  ಪುತ್ರಶೋಕವು ಆಗಿಯೇ ಇಲ್ಲ ಎನ್ನುವ ಭ್ರಮೆಯನ್ನು ಹುಟ್ಟಿಸುವಂತೆ, ಬೇಂದ್ರೆಯವರ ಹೆಂಡತಿ ಅಭಿನಯ ಮಾಡುತ್ತಾರೆ. ಮುಖದ ಮೇಲೆ ಮಂದಹಾಸ ತರುತ್ತಾರೆ, ತಮ್ಮ ಬಟ್ಟಲುಗಣ್ಣುಗಳನ್ನು ಓಲಾಡಿಸುತ್ತಾರೆ.

(ಬೇಂದ್ರೆಯವರ ಹೆಂಡತಿಗೆ ವಿಶಾಲವಾದ ಕಪ್ಪು ಕಣ್ಣುಗಳು ಇದ್ದವೇನೊ? ಅವರ ಮತ್ತೊಂದು ಕವನ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲೂ ಸಹ ಅವರು ತಮ್ಮ ಹೆಂಡತಿಯ ಕಣ್ಣುಗಳನ್ನು ಹೀಗೆ ವರ್ಣಿಸಿದ್ದಾರೆ:
‘ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?’)

ಆದರೆ ಈ ನಟನೆಯ ಹಿಂದಿನ ಸಂಕಟ ಬೇಂದ್ರೆಯವರಿಗೆ ಅರ್ಥವಾಗದಿದ್ದೀತೆ?  ಆ ಸಮಯದಲ್ಲಿ ಅವರ ಹೃದಯದಿಂದ ಬಂದ ನುಡಿಯೊಂದು ಕನ್ನಡ ಕಾವ್ಯದ ಶ್ರೇಷ್ಠ ಉಪಮೆಯಾಗಿ ಹೊರಹೊಮ್ಮಿದೆ:
ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
        ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
        ನಿಜದುಃಖ ಮರೆಸಬಹುದೆ?

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಕಾಲೀದಾಸನು ಒಂದು ವಸ್ತುವನ್ನು ಮತ್ತೊಂದು ವಸ್ತುವಿಗೆ ಹೋಲಿಸುವಾಗ ಸಮುಚಿತವಾದ ಉಪಮೆಗಳನ್ನು ಕೊಟ್ಟಿರಬಹುದು. ಆದರೆ ಬೇಂದ್ರೆಯವರ ಈ ಉಪಮೆಯಲ್ಲಿ ಕೇವಲ ಹೋಲಿಕೆ ಇಲ್ಲ; ಇಲ್ಲಿರುವುದು ಅಳಲಿನ ಆಕ್ರಂದ. ಉಪಮೆಯನ್ನು ಭಾವಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸುವ ಈ ಪ್ರತಿಭೆ ಬೇಂದ್ರೆಯವರಲ್ಲಿ ಮಾತ್ರ ಕಾಣಲು ಸಾಧ್ಯ.
[ಅವರ ಮತ್ತೊಂದು ಕವನ ಚಿಗರಿಗಂಗಳಚೆಲುವಿಯಲ್ಲಿಯೂ ಇಂತಹದೇ ಸಾಮರ್ಥ್ಯವನ್ನು ನೋಡಬಹುದು:
ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ
ಕೊನೆಯ ಸಾಲಿನಲ್ಲಿ ಇರುವ ಈ ಉಪಮೆಯನ್ನು ನೋಡಿರಿ. ಈ ಉಪಮೆಯೂ ಸಹ ಒಂದು ಕ್ರಿಯೆಯನ್ನು ಸೂಚಿಸುತ್ತ, ಕವನದ ಭಾವಕ್ಕೆ ಮಾಧ್ಯಮವಾಗಿದೆ.]

ಬೇಂದ್ರೆಯವರ ಹೆಂಡತಿಗೆ ಅವರ ಅಂತರಂಗದಲ್ಲಿ ಅತ್ಯುಚ್ಚ ಸ್ಥಾನವಿದೆ. ಅವಳು ಅವರಿಗೆ ಜೀವದ ಗೆಳತಿ; ಅವಳು ಅವರ ಗೃಹಲಕ್ಷ್ಮಿ; ಅವಳ ಸ್ಥಾನವು ದೇವರಿಗೆ ಹತ್ತಿರವಾದ ಸ್ಥಾನ. ಅಂದ ಮೇಲೆ ತಮ್ಮ ಹೃದಯದಲ್ಲಿ ನೆಲೆ ನಿಂತ ಅವಳ ಅಳಲು ಅವರಿಗೆ ತಿಳಿಯದಿದ್ದೀತೆ?
ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
        ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
        ಅಂತಿಂತು ನಟಿಸುತಿರಲು?
‘ನಿನ್ನ ನಗೆ ಕೇವಲ ವೇಷಧಾರಿ, ಅದು ಸುಖದಲ್ಲಿ ಅರಳಿದ ಹೂವಲ್ಲ’ ಎಂದು ಬೇಂದ್ರೆ ತಮ್ಮ ಹೆಂಡತಿಯು ತಮಗಾಗಿ  ಮಾಡುತ್ತಿರುವ ನಟನೆಗಾಗಿ ಮರಗುತ್ತಾರೆ. ಇಲ್ಲಿ ‘ಅಂತಿಂತು’ ಎನ್ನುವ ಪದವನ್ನು ಗಮನಿಸಬೇಕು. ‘ಅನೇಕ ವಿಧಗಳಲ್ಲಿ ಆದರೆ ನಿರರ್ಥಕವಾದ’ ಎನ್ನುವ ವಿಸ್ತಾರಿತ ಅರ್ಥವನ್ನು ಈ ಪದವು ಇಲ್ಲಿ ನೀಡುತ್ತದೆ. ಸಾಮಾನ್ಯ ಪದಗಳನ್ನು ಬಳಸುತ್ತಲೇ ಅಸಾಮಾನ್ಯ ಅರ್ಥವನ್ನು ಹೊಮ್ಮಿಸುವ ಬೇಂದ್ರೆ-ಪ್ರತಿಭೆ ಇದು. ಇಂತಹ ಪದಗಳನ್ನು ಬೇಂದ್ರೆಯವರ ಕವನಗಳಲ್ಲಿ ನಾವು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ.
ಈ ಕವನದ ನಾಲ್ಕೂ ನುಡಿಗಳು ಪ್ರಶ್ನೆಗಳಲ್ಲಿ ಕೊನೆಗೊಳ್ಳುವುದನ್ನು ಗಮನಿಸಬೇಕು.
‘ಹುದುಗಲಾರದ ದುಃಖ’ ಕವನವು  ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.
………………………………………………………………………….
ತಮ್ಮ ತಾಪ, ಸಂತಾಪಗಳನ್ನೆಲ್ಲ ಬೇಂದ್ರೆ ಕಾವ್ಯವಾಗಿ ಪರಿವರ್ತಿಸಿದರು. ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆ ಹೀಗೆ ಹಾಡಿದ್ದಾರೆ:
ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ

ತಮ್ಮ ಕಾವ್ಯವನ್ನು ಆಸ್ವಾದಿಸುವ ಸಹೃದಯರಿಂದ ಬೇಂದ್ರೆ ಕೇಳುವುದು ಇಷ್ಟೇ:
ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.

Tuesday, February 17, 2015

ಮುದುಕಿ, ನಿನ್ನಾಟ ಮುಂದ ಅದ!



ಅರವಿಂದ ಕೇಜರಿವಾಲಾರು ಮೊದಲ ಸಲ ದಿಲ್ಲಿಯ ಮುಖ್ಯ ಮಂತ್ರಿಯಾಗುವ ಸಮಯದಲ್ಲಿ ನನಗೆ ಅವರ ಬಗೆಗೆ ತುಂಬ ಗೌರವವಿತ್ತು. ಇವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರು ಹಾಗು ರಾಜಕೀಯದ ಶುದ್ಧೀಕರಣಕ್ಕಾಗಿ ತಮ್ಮದೇ ಆದ ‘ಆಮ ಆದ್ಮಿ ಪಕ್ಷ’ವನ್ನು ಕಟ್ಟಿ ಪರ್ಯಾಯ ರಾಜಕಾರಣವನ್ನು ಪ್ರಾರಂಭಿಸಿದವರು ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಕಳೆದ ವರ್ಷದಲ್ಲಿ ನಡೆದ ಚುನಾವಣೆಗೂ ಮೊದಲು ಅವರು ಉತ್ತರ ಪ್ರದೇಶದ ಮುಸ್ಲಿಮ ಧರ್ಮಗುರು ಒಬ್ಬರನ್ನು ಭೆಟ್ಟಿಯಾಗಿ ಮುಸ್ಲಿಮರ ಮತಗಳನ್ನು ಸೆಳೆಯಲು ಪ್ರಯತ್ನಿಸಿದಾಗ, ‘ಓಹ್! ಇವರೂ ಒಬ್ಬ ಪಕ್ಕಾ ರಾಜಕಾರಣಿಯೇ!’ ಎಂದು ಬೇಸರವಾಯಿತು.

ಈ ಸಲ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಂತೂ ಕೇಜರಿವಾಲಾ ತಮ್ಮ ಬಣ್ಣವನ್ನು ಸರಿಯಾಗಿ ತೋರಿಸಿದರು. ತಮ್ಮ ಎದುರಾಳಿ ಕಿರಣ ಬೇಡಿಯವರನ್ನು ‘ಮೋದಿಯ ಸೂತ್ರದ ಗೊಂಬೆ’ ಎಂದು ಹೀಯಾಳಿಸಿದ ಇವರು, ‘ಕೇಜರಿವಾಲಾ ಕಳ್ಳ’ ಎಂದು ನಿರ್ಮಲಾ ಸೀತಾರಾಮನ್ ಆಪಾದಿಸಿದಾಗ, ಇದು ‘ಅಸಭ್ಯ ಪ್ರಚಾರ’ ಎಂದು ಪ್ರತಿಭಟಿಸಿದರು.

ಕೇಜರಿವಾಲಾ ಮತದಾರರಿಗೆ ಒಡ್ಡಿದ ಆಮಿಶಗಳಿಗೆ ಹಾಗು ತೋರಿಸಿದ ಕಾಮನಬಿಲ್ಲಿಗೆ ನನ್ನ ಆಕ್ಷೇಪಣೆ ಇಲ್ಲ. ಎಲ್ಲ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ಆದರೆ ಕೇಜರಿವಾಲಾರು ತಮ್ಮನ್ನು ವೈಭವೀಕರಿಸುವ ಉದ್ದೇಶದಿಂದ, ಇತರರನ್ನು ಮುಖ್ಯವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಯನ್ನು ವಿನಾಕಾರಣ ಕೀಳು ಮಾಡುವುದು ಸರಿಯಲ್ಲ. ವಿದೇಶಿ ಬ್ಯಾಂಕುಗಳಲ್ಲಿ ಇರುವ ಭಾರತೀಯರ ಕಪ್ಪು ಹಣವನ್ನು ಬಯಲಿಗೆಳೆಯುತ್ತೇನೆ ಎನ್ನುವ ವಿದೇಶೀ ವ್ಯಕ್ತಿಯನ್ನು ಭಾರತ ಸರಕಾರವು ತನ್ನ ‘ಕಪ್ಪು ಹಣ ನಿರ್ವಹಣಾ ಮಂಡಲಿ’ಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಸಲಹೆಯನ್ನು ಪತ್ರಮುಖೇನ ಇವರು ಭಾರತ ಸರಕಾರಕ್ಕೆ ನೀಡುತ್ತಿದ್ದಾರೆ ಹಾಗು ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶವು ಯಾರಿಗಾದರೂ ಅರ್ಥವಾಗುವಂತಹದೇ. ಇಂತಹ ಕ್ರಿಯೆಯು ಅಸಾಧುವಾಗಿದ್ದರಿಂದ ಭಾರತ ಸರಕಾರವು ಹಾಗೆ ಮಾಡಲು ಸಾಧ್ಯವಿಲ್ಲ. ಆಗ ಕೇಜರಿವಾಲಾ ಅಮಾಯಕ ಜನರೆದುರಿಗೆ ಬೊಬ್ಬೆ ಹಾಕಬಹುದು: ‘ನೋಡಿ, ನಾನೊಬ್ಬನೇ ಸತ್ಯ ಹರಿಶ್ಚಂದ್ರ; ಉಳಿದವರು ಭ್ರಷ್ಟರು!’ ಭಾರತ ಸರಕಾರವು  ಕೆಲಸದಿಂದ ತೆಗೆದು ಹಾಕಿದ ಸಂಜೀವ ಚತುರ್ವೇದಿಯವರನ್ನು ಪುನಃ ನೇಮಿಸಿಕೊಳ್ಳುವ ಮೂಲಕ ಕೇಜರಿವಾಲಾ ಕೇಂದ್ರ ಸರಕಾರದ ವಿರುದ್ಧ ಸೆಡ್ಡು ಹೊಡೆಯುತ್ತಿದ್ದಾರೆ. ಇವೆಲ್ಲುವುಗಳ ಹಿಂದಿನ ಉದ್ದೇಶ ಇಷ್ಟೇ. ಕೇಂದ್ರ ಸರಕಾರದ ಮುಖಕ್ಕೆ ಕಪ್ಪು ಬಳಿದು, ಜನತೆಯನ್ನು ಅದರ ವಿರುದ್ಧ ತಿರುಗಿಸುವುದು. ಅಮಾಯಕ ಜನತೆಯನ್ನು ಮರಳು ಮಾಡುವ ಇಂತಹ ತಂತ್ರಗಳನ್ನು ತಥಾಕಥಿತ ಕ್ರಾಂತಿಕಾರಿಗಳು ಯಾವತ್ತಿನಿಂದಲೂ ಅನುಸರಿಸುತ್ತಲೇ ಬಂದಿದ್ದಾರೆ! ಫ್ರಾನ್ಸ ಹಾಗು ರಶಿಯಾದಲ್ಲಿ ನಡೆದ ಕ್ರಾಂತಿಗಳು ಎಂತಹ ನರಮೇಧಗಳಲ್ಲಿ ಕೊನೆಗೊಂಡವು ಹಾಗು ಕೊನೆಗೂ ಏನನ್ನೂ ಸಾಧಿಸದೇ ಹೋದವು ಎನ್ನುವುದು ಇತಿಹಾಸದ ಅಭ್ಯಾಸಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ.

ದಿಲ್ಲಿಗೇ ಆಗಲಿ, ಭಾರತಕ್ಕೇ ಆಗಲಿ, ಈಗ ಬೇಕಾಗಿರುವುದು ಸಂಪತ್ತನ್ನು ವೃದ್ಧಿಸುವ ಯೋಜನೆಗಳು. ಇಂತಹ ಯೋಜನೆಗಳಿಗಾಗಿ ಮೋದಿ ಎಲ್ಲೆಲ್ಲೂ ಅಲೆದು, ನಿಧಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೇಜರಿವಾಲಾ ಅವರು ಈ ನಿಧಿಯನ್ನು ಅಸಮರ್ಪಕ ಸಬ್ಸಿಡಿಗಳ ಮೂಲಕ ಹಾಳು ಮಾಡುತ್ತ, ತಮ್ಮ ಮುಂದಿನ ಚುನಾವಣೆಗಳ ಉದ್ದೇಶದಿಂದ ಅಪವ್ಯಯಗೊಳಿಸುತ್ತಿದ್ದಾರೆ. ವಾಹವ್ವಾ, ದೂರದೃಷ್ಟಿಯೇ!

ಅಣ್ಣಾ ಹಜಾರೆಯವರು ‘ರಾಜಕಾರಣವನ್ನು ಪ್ರವೇಶಿಸಬೇಡಿ’ ಎಂದು ತಮ್ಮ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದು ಏಕೆ ಎನ್ನುವುದು ಈಗ ಅರ್ಥವಾಗುತ್ತದೆ. ಎಂತಹ ನಿಸ್ವಾರ್ಥಿ ಕೇಜರಿವಾಲಾ ಎಷ್ಟು ಸರಳವಾಗಿ ತಮ್ಮ ಬಣ್ಣವನ್ನು ಬದಲಾಯಿಸಿದರಲ್ಲ ಎಂದು ವ್ಯಥೆಯೂ ಆಗುತ್ತದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ವೈಯಕ್ತಿಕ ಸ್ವಾರ್ಥವಿಲ್ಲದ ವ್ಯಕ್ತಿಯಲ್ಲಿ ರಾಜಕೀಯ ಸ್ವಾರ್ಥವು ಹುಟ್ಟಬಹುದಲ್ಲವೆ?  ಆದರೂ ಆ ಮಹಾಶಯನಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳಲೇ ಬೇಕು. ಲಕ್ಷ್ಮಣರೇಖೆಯನ್ನು ದಾಟಿದ ರಾವಣನು ಸೀತೆಯನ್ನು ಅಪಹರಿಸಲು ಸಾಧ್ಯವಾಯಿತು. ಆದರೆ ಆ ಮೂಲಕ ಇಡೀ ಲಂಕೆಯೇ ಸುಟ್ಟು ಹೋಯಿತು. ಕೇಜರಿವಾಲಾರೆ, ಇಡೀ ದಿಲ್ಲಿ ತನ್ನನ್ನು ಪ್ರೀತಿಸುತ್ತಿದೆ ಎಂದು ಬೊಬ್ಬೆ ಹೊಡೆಯಬೇಡಿ. ನಿಮಗೆ ಸಿಕ್ಕಿದ್ದು ಶೇಕಡಾ ೫೩ರಷ್ಟು ಮತಗಳು. ಇದರರ್ಥ ಶೇಕಡಾ ೪೭ರಷ್ಟು ಮತದಾರರು ನಿಮ್ಮನ್ನು ಪ್ರೀತಿಸುವದಿಲ್ಲ. ಈಗೇನೋ ನೀವು ದೊಂಬರಾಟವನ್ನು ಮಾಡುತ್ತಿದ್ದೀರಿ. ಆದರೆ ನಿಮಗೊಂದು ಮಾತನ್ನು ಗಟ್ಟಿಯಾಗಿ ಹೇಳಲೇ ಬೇಕು: ‘ಮುದುಕಿ, ನಿನ್ನಾಟ ಮುಂದ ಅದ!’

Friday, January 30, 2015

‘ಎಂಥಾ ಮೋಜಿನ ಕುದರಿ’...........ಶಿಶುನಾಳ ಶರೀಫರು



ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||

ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು    ||ಅ.ಪ.||

ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ  ||೧||

ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ                      ||೨||

ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು                    ||೩||

ಶರೀಫರು ಗೋವಿಂದಭಟ್ಟರ ಶಿಷ್ಯರು. ಗೋವಿಂದಭಟ್ಟರು ತಂತ್ರಮಾರ್ಗದ ಸಾಧಕರು. ಹೀಗಾಗಿ ಗೋವಿಂದಭಟ್ಟರು ಶರೀಫರಿಗೆ ಯೋಗಸಾಧನೆಯ ಹಾಗು ತಂತ್ರಮಾರ್ಗದ ಅನೇಕ ವಿಧಾನಗಳನ್ನು ಕಲಿಸಿರಲಿಕ್ಕೆ ಸಾಕು. ಆ ಕಾರಣದಿಂದಲೇ ಶರೀಫರ ಗೀತೆಯಲ್ಲಿ “ಆರು ಮೂರನು ಕಟ್ಟಿ, ಮೇಲಕೆ ಏರಿದವನು ಘಟ್ಟಿ” ಎಂಬಂತಹ ಸಾಲುಗಳು ಬರುತ್ತವೆ. ಪ್ರಸ್ತುತ ‘ಎಂಥಾ ಮೋಜಿನ ಕುದರಿ’ ಎನ್ನುವದೂ ಸಹ ಇಂತಹದೇ ಒಂದು ಗೀತೆಯಾಗಿದೆ.

ಯೋಗ ಅಥವಾ ತಂತ್ರ ಇದರ ಉದ್ದೇಶವು ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸುವುದು. ಇದು ಸತತ ಅಭ್ಯಾಸದಿಂದ ಸಾಧ್ಯವಿದೆ. ಓರ್ವ ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಇರುವ ದೈವೀ ಚೈತನ್ಯವನ್ನು ಧ್ಯಾನದಿಂದ ಉದ್ದೀಪನಗೊಳಿಸಬಹುದು. ಯೋಗಸಾಧಕರು ಈ ಸುಪ್ತಶಕ್ತಿಯನ್ನು ‘ಕುಂಡಲಿನಿ’ ಎಂದು ಕರೆದಿದ್ದಾರೆ. ಈ ದೈವೀ ಶಕ್ತಿ ಅಥವಾ ಕುಂಡಲಿನೀ ಶಕ್ತಿ ಅಥವಾ ಯೋಗಶಕ್ತಿಯು ಸೂಕ್ಷ್ಮಶರೀರದಲ್ಲಿರುವ ಆರು ವಿಭಿನ್ನ ಚಕ್ರಗಳಲ್ಲಿ ಉದ್ದೀಪನಗೊಂಡಾಗ, ಆ ಸಾಧಕನು ವಿವಿಧ ಸಿದ್ಧಿಗಳನ್ನು ಪಡೆಯುವನೆಂದು ಹೇಳಲಾಗುತ್ತದೆ. ಸಾಧಕನು ವಿವೇಕಿಯಾಗಿದ್ದರೆ, ಈ ಶಕ್ತಿಯ ಸದುಪಯೋಗವಾಗುತ್ತದೆ. ಇಲ್ಲವಾದರೆ ಈ ಶಕ್ತಿಸಂಚಯವು ಸಾಧಕನನ್ನು ಹಾದಿಗೆಡಿಸುವ ಸಂಭವ ಇದ್ದೇ ಇರುತ್ತದೆ. ಆದುದರಿಂದಲೇ ಪತಂಜಲಿಯು ತನ್ನ ‘ಅಷ್ಟಾಂಗ ಯೋಗ’ದಲ್ಲಿ ಕೇವಲ ಆಸನ, ಪ್ರಾಣಾಯಾಮ ಮೊದಲಾದ  ಕ್ರಿಯೆಗಳನ್ನಷ್ಟೇ ಹೇಳದೆ, ಸಾಧಕನು ಪ್ರಯತ್ನಪೂರ್ವಕವಾಗಿ ಸಾಧಿಸಬೇಕಾದ ಹತ್ತು ನಿಗ್ರಹಗಳನ್ನು (ಅಹಿಂಸೆ, ಸತ್ಯ, ಅಸ್ತೇಯ,ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ಸಂತೋಷ, ತಪ, ಸ್ವಾಧ್ಯಾಯ, ಈಶ್ವರ ಪ್ರಣಿಧಾನ) ನಿರೂಪಿಸಿದ್ದಾನೆ. ಶರೀಫರೂ ಸಹ ತಮ್ಮ ಈ ಗೀತೆಯಲ್ಲಿ ಯೋಗಸಾಧಕನಿಗೆ ಬೇಕಾದ ವಿವೇಕವನ್ನು ಹಾಗು ಯೋಗಸಾಧನೆಯ ಫಲಗಳನ್ನು ವರ್ಣಿಸಿದ್ದಾರೆ.

ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ||

ಮನಸ್ಸು ಒಂದು ಕುದುರೆ ಇದ್ದಂತೆ; ಯೋಗಶಕ್ತಿಯನ್ನು ಸಂಗ್ರಹಿಸಿದ ಮನಸ್ಸು ಒಂದು ಬಲಶಾಲಿ ಕುದುರೆ ಇದ್ದಂತೆ. ಇಂತಹ ಕುದುರೆಯ ಸವಾರನು ಮೋಜಿನಿಂದ, ಮಾಯಾಲೋಕದಲ್ಲೆಲ್ಲ ತಿರುಗಬಹುದು, ಅಂದರೆ ಅಷ್ಟಸಿದ್ಧಿಗಳನ್ನು ಪಡೆಯಬಹುದು ಹಾಗು ಮೂರು ಲೋಕಗಳ ಸಂಚಾರವನ್ನು ಮಾಡಬಹುದು. ಆದುದರಿಂದ ಶರೀಫರು ‘ತಿರುಗುವುದು ಹನ್ನೊಂದು ಫೇರಿ’ ಎಂದು ಹೇಳುತ್ತಾರೆ.

ಆದರೆ ಸಾಧಕನ ಮೂಲ ಉದ್ದೇಶವು ‘ಕೈವಲ್ಯ ಜ್ಞಾನ’ವಾಗಿರುತ್ತದೆ. ಈ ಜ್ಞಾನವನ್ನು ಪಡೆಯಲು ಸದ್ಗುರುವಿನ ಅನುಗ್ರಹವಾಗಬೇಕು. ಅಂತಹ ಗುರುವಿನ ಕರುಣೆಯಾಗಲು ಆತನ ಪಾದಗಳಿಗೆ ಸಾಧಕನು ಶರಣಾಗಬೇಕು. ಸಾಧಕನನ್ನು ಗುರುಪಾದಗಳ ಬಳಿಗೆ ಕರೆದೊಯ್ಯುವುದೇ ಈ ಕುದುರೆಯ ಅರ್ಥಾತ್ ಯೋಗಶಕ್ತಿಯನ್ನು ಪಡೆದ ಮನಸ್ಸಿನ ಕಾರ್ಯ. ಅದನ್ನೇ ಶರೀಫರು ಈ ಮಾತಿನಲ್ಲಿ ಹೇಳುತ್ತಾರೆ:
‘ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮುಟ್ಟಿಸಿತು’    ||ಅ.ಪ.||

ಕುದುರೆಯು ಹೇಳೀ ಕೇಳಿ ಮೊಂಡ ಪ್ರಾಣಿ. ಸಾಧಕನು ಅದನ್ನು ಸರಿಯಾಗಿ ನೋಡಿಕೊಂಡರೆ ಮಾತ್ರ, ಕುದುರೆಯು ಸವಾರನನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವುದು; ಇಲ್ಲವಾದರೆ ಸವಾರನ ಗತಿ ಅಧೋಗತಿ! ಕುದುರೆಯನ್ನು ಜೋಪಾನ ಮಾಡುವ ರೀತಿಯನ್ನು ಶರೀಫರು ಹೀಗೆ ಹೇಳುತ್ತಾರೆ:
ಹಚ್ಚನ್ನ ಕಡ್ಡವ ಹಾಕಲಿ ಬೇಕೋ
ನಿಚ್ಚಳ ನೀರು ಕುಡಿಸಲಿ ಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿ ಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿ ಬೇಕೋ     ||೧||

ಕಡ್ಡ ಅಂದರೆ ದನಗಳಿಗೆ ಹಾಕುವ ಮೇವು. ಈ ಮೇವು ಒಣಗಿರಬಾರದು, ಹಚ್ಚನೆ ಅಂದರೆ ತಾಜಾ ಮೇವು ಆಗಿರಬೇಕು. ಅರ್ಥಾತ್ ಪ್ರತಿ ದಿನವೂ ನಾವು ಮಾಡುವ ದೈವೀ ಸ್ಮರಣೆಯು ಯಾಂತ್ರಿಕವಾಗಿರದೆ, ಭಾವಪೂರ್ಣವಾಗಿರಬೇಕು. ನಿಚ್ಚಳ ನೀರು ಅಂದರೆ ತಿಳಿ ನೀರು. ಮನಸ್ಸು ಕಲ್ಮಶಪೂರಿತವಾಗಿರಬಾರದು, ಮನಸ್ಸಿನಲ್ಲಿ ರಾಗದ್ವೇಷಗಳಿರಬಾರದು ಎಂದು ಶರೀಫರು ತಿಳಿ ನೀರಿನ ಸಂಕೇತದ ಮೂಲಕ ಹೇಳುತ್ತಾರೆ. ಇಷ್ಟಾದರೂ ಸಹ ಮೊಂಡು ಕುದುರೆಯು ಅಡ್ಡ ಹಾದಿ ಹಿಡಿಯಬಹುದು. ಅದನ್ನು ತಪ್ಪಿಸಲು ಸವಾರನು ಆ ಕುದುರೆಯನ್ನು ಅಂದರೆ ತನ್ನ ಮನಸ್ಸನ್ನು ‘ಉತ್ತಮ ಸಂಸ್ಕಾರ ಎನ್ನುವ ಚಾವಟಿ’ಯಿಂದ ಹೊಡೆಯುತ್ತಲೇ ಇರಬೇಕು.

ಶರೀಫರು ಹೆಳುವ ಈ ಮಾತು ಎಲ್ಲ ದೇಶ-ಕಾಲಗಳಿಗೆ ಅನ್ವಯಿಸುವಂತಿದೆ. ಸದ್ಯದ ಭಾರತೀಯ ಸಮಾಜವನ್ನೇ ನೋಡಿರಿ. ನಮ್ಮ ಪ್ರಜೆಗಳ ಅವ್ಯವಹಾರಗಳಿಗೆ, ಹೆಣ್ಣು ಮಕ್ಕಳ ಮೇಲೆ ಆಗುವ ಅತ್ಯಾಚಾರಗಳಿಗೆ  ಮುಖ್ಯ ಕಾರಣವೆಂದರೆ ನಾವು ನಮ್ಮ ಮಕ್ಕಳನ್ನು ‘ಸಂಸ್ಕಾರಹೀನ’ರನ್ನಾಗಿ ಮಾಡಿರುವುದೇ ಆಗಿದೆ. ದೊಡ್ಡವರು ತಮ್ಮ ಒಳ್ಳೆಯ ನಡತೆಯಿಂದ ಕಿರಿಯರಿಗೆ ಅನುಕರಣೀಯ ಮಾದರಿಯಾಗಬೇಕು. ಕಿರಿಯರು ಹಾದಿಗೆಡದಂತೆ ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವುದು ಹಿರಿಯರ ಕರ್ತವ್ಯವಾಗಿದೆ. ನಾವು ಅಂದರೆ ದೊಡ್ಡವರು ತಪ್ಪಿದ್ದೇವೆ. ನಮ್ಮ ಸಮಾಜವು ನಮ್ಮ ತಪ್ಪಿನ ಫಲವನ್ನು ಉಣ್ಣುತ್ತಲಿದೆ.

ಅಚ್ಯುತ ಅಂದರೆ ದೇವರು ಹೌದು, ಆದರೆ ಎಂತಹ ದೇವರು? ಚ್ಯುತನಾಗದವನು ಅಂದರೆ ಸನ್ಮಾರ್ಗವನ್ನು ತಪ್ಪದಂಥವನು ಅಚ್ಯುತನು. ಆದುದರಿಂದ ಕೆಟ್ಟ ಗುಣಗಳನ್ನು ಚಾಟಿ ಏಟಿನಿಂದ ದೂರ ಮಾಡುವಂತೆಯೇ, ಒಳ್ಳೆಯ ಗುಣಗಳಿಂದ ನಮ್ಮ ಮನಸ್ಸೆಂಬ ಕುದುರೆಯನ್ನು ದಿನವೂ ಮಾಲೀಸು ಮಾಡಬೇಕು!

ಒಳ್ಳೆಯ ನಡತೆಯಿಂದ ನಡೆಯುವವನು ಮನಸ್ಸಿನ ತಳಾತಳದಲ್ಲಿ ಒಳ್ಳೆಯವನೇ ಇರುತ್ತಾನೆ ಎಂದು ಹೇಳಲು ಬಾರದು. ಅದಕ್ಕಾಗಿಯೇ ಬಸವಣ್ಣನವರು ‘ಬಹಿರಂಗ ಶುದ್ಧಿ ಹಾಗು ಅಂತರಂಗ ಶುದ್ಧಿ’ ಎಂದು ಹೇಳಿದರು. ಗೀತೆಯ ಎರಡನೆಯ ನುಡಿಯಲ್ಲಿ ಶರೀಫರು ಆಚಾರವನ್ನು ತಿದ್ದಿಕೊಂಡಂತೆ ವಿಚಾರವನ್ನೂ ಸಹ ಹೇಗೆ ತಿದ್ದಿಕೋಬೇಕು ಎನ್ನುವುದನ್ನು ಹೇಳುತ್ತಿದ್ದಾರೆ:
ತಪ್ಪುವುದಿಲ್ಲಪ್ಪಾ ಎರಡು ಹೊತ್ತಿನ ದಾಣಿ
ತಿಂದ ಮೇಲೆ ತಿರಗತೈತಿ ಮೇಲಿನ ಓಣಿ
ಖಾದರಲಿಂಗನು ಪಾಡಿದ ವಾಣಿ
ಸೋಸಿ ನೋಡಿಕೋ ಹಾಕಿದ ಗೋಣಿ             ||೨||

ಮನಸ್ಸೆಂಬ ಕುದುರೆಗೆ ದಿನವೂ ಎರಡು ಹೊತ್ತು ದಾಣಿಯನ್ನು (ಅಂದರೆ ಕುದುರೆಗೆ ತಿನ್ನಿಸುವ ಕಾಳನ್ನು) ಹಾಕಬೇಕಾಗುತ್ತದೆ. ಹಾಗಾದಾಗ ಮಾತ್ರ ಈ ಕುದುರೆಯು ‘ಮೇಲಿನ ಓಣಿ’ಯಲ್ಲಿ ತಿರುಗುತ್ತದೆ. ಇಲ್ಲಿ ದಾಣಿ ಎಂದರೆ ಧ್ಯಾನ, ಜಪ ಇತ್ಯಾದಿ. ಮುಂಜಾನೆ ಹಾಗು ಸಂಜೆ ಎರಡೂ ಹೊತ್ತಿನಲ್ಲಿ ದೇವರ ಧ್ಯಾನದಲ್ಲಿ, ಭಜನೆಯಲ್ಲಿ ನಿರತನಾದ ಸಾಧಕನ ಮನಸ್ಸು ಮಾತ್ರ ಅವನನ್ನು ‘ಮೇಲಿನ ಓಣಿ’ಯಲ್ಲಿ ನಡೆಯಿಸುವುದು. ಈ ಮೇಲಿನ ಓಣಿಗೆ ಅನೇಕ ಅರ್ಥಗಳನ್ನು ಹೇಳಬಹುದು.

ಆಧುನಿಕ ಮನೋವಿಜ್ಞಾನದ ಪಿತಾಮಹನಾದ ಫ್ರಾಯ್ಡ ಹೇಳುವಂತೆ ಮನಸ್ಸಿನ ಮೂಲವಸ್ತು (Id) ಪ್ರಾಣಿಸಹಜವಾದ ವರ್ತನೆಯನ್ನು ಪಡೆದಿರುತ್ತದೆ. ಮನಸ್ಸಿನ ಉನ್ನತಭಾಗವು (superconscious) ವಿವೇಚನೆಯನ್ನು ತೋರಿಸುತ್ತದೆ. ಮಹರ್ಷಿ ಅರವಿಂದರು ಪೂರ್ಣತೆಯನ್ನು ಪಡೆದ ಮನಸ್ಸಿಗೆ ‘ಸುಪ್ರಮಾನಸ’ (supramental) ಎಂದು ಕರೆದಿದ್ದಾರೆ. ಬೇಂದ್ರೆಯವರೂ ಸಹ ತಮ್ಮ ಒಂದು ಕವನದಲ್ಲಿ ‘ಎತ್ತರಕ್ಕೆ ನಡೆಯಣ್ಣ, ಅಲ್ಲೆ ನೀ ಪಡೆವುದನ್ನು ಪಡೆವೆ’ ಎಂದಿದ್ದಾರೆ. ಒಟ್ಟಿನಲ್ಲಿ, ದೈಹಿಕ, ಐಹಿಕ ಆಮಿಷಗಳಿಂದ ದೂರವಾಗಿ, ದೈವಿಕ ಭಾವನೆಗಳಿಗೆ ಹತ್ತಿರವಾದ ಮಾರ್ಗವನ್ನು ‘ಮೇಲಿನ ಓಣಿ’ ಎಂದು ಕರೆಯಬಹುದು.

ಕುದುರೆಯನ್ನು ಜೋಪಾನ ಮಾಡಿದರೆ ಸಾಲದು. ಅದರ ಸವಾರಿಯನ್ನು ಮಾಡಬೇಕಾದರೆ, ಅದರ ಮೇಲೆ ಜೀನನ್ನು ಹಾಕಿ ಹತ್ತಬೇಕಾಗುತ್ತದೆ. (ಒಳ್ಳೆಯ ಜೀನನ್ನು ಹಾಕುವುದು ಸಿರಿವಂತರಿಗೆ ಅಥವಾ ಸೈನಿಕರಿಗೆ ಮಾತ್ರ ಸಾಧ್ಯ. ಸಾಮಾನ್ಯರು ಗೋಣಿ ಬಟ್ಟೆಯನ್ನೇ ಅಂದರೆ ಸಣಬಿನ ಬಟ್ಟೆಯನ್ನೇ ಜೀನಿನಂತೆ ಉಪಯೋಗಿಸುತ್ತಿದ್ದರು.) ಶರೀಫರು ಬಳಸುವ ಜೀನು ಯಾವುದು? ಖಾದರಲಿಂಗ ಅಂದರೆ ಗುರು ಹೇಳಿದ ಉಪದೇಶವೇ ಶರೀಫರು ಬಳಸುವ ಜೀನು!

(ಶಿಶುನಾಳದ ಹತ್ತಿರ ಇರುವ ಹುಲಗೂರಿನಲ್ಲಿ  ಖಾದರ ಶಾವಲಿ ಎನ್ನುವ ಸಂತರೊಬ್ಬರ ಸಮಾಧಿ ಇದೆ. ಶರೀಫರ ತಂದೆ-ತಾಯಿ ಈ ಸಂತರ ಸಮಾಧಿಗೆ ನಡೆದುಕೊಂಡ ಬಳಿಕ ಶರೀಫರು ಹುಟ್ಟಿದರು. ಶರೀಫರು ತಮ್ಮ ಗೀತೆಗಳಲ್ಲಿ ಈ ಸಂತರನ್ನು ‘ಖಾದರಲಿಂಗ’ ಎಂದೇ ಸಂಬೋಧಿಸಿದ್ದಾರೆ. ಖಾದರಲಿಂಗ ಗುರುವಿನ ಬೋಧನೆಯನ್ನು ಸೋಸಿ ಅಂದರೆ ತಿಳಿದುಕೊಂಡು ಬಳಸುವುದೇ, ಶರೀಫರು ಉಪಯೋಗಿಸುವ ಜೀನು!)

ಸಾಧಕನು ಹಾಗು ಆತನ ಸಾಧನೆ ಒಂದು ಜನ್ಮದ್ದಲ್ಲ. ಇದನ್ನೇ ಶ್ರೀಕೃಷ್ಣನು ಅರ್ಜುನನಿಗೆ, “ಅರ್ಜುನಾ, ನಾನು ಹಾಗು ನೀನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ಅವೆಲ್ಲವೂ ನನಗೆ ಗೊತ್ತು; ನೀನು ಅವುಗಳನ್ನು ಅರಿಯೆ.” ಎಂದು ಹೇಳಿದ್ದಾನೆ. ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ. ಇದು ವಾಸ್ತವಿಕವಾಗಿರಬಹುದು ಅಥವಾ ಸಾಂಕೇತಿಕವಾಗಿರಬಹುದು. ಪಾಂಡವರು ಧರ್ಮಚಾರಿಗಳು. ಅವರ ಸಹವಾಸದಿಂದಾಗಿ ಈ ಕುದುರೆಯೂ ಸಹ ಪುಣ್ಯಕರ್ಮಿಯಾಗಿದೆ. ಆದರೂ ಸಹ ಈ ಕುದುರೆ ಅಲ್ಲಿ ಇರಲಾರದೆ, ತನಗೆ ಕಟ್ಟಿದ ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು. ಜನ್ಮಜನ್ಮಾಂತರಗಳಲ್ಲಿ ಸಂಚರಿಸುತ್ತ, ತನ್ನ ಪುಣ್ಯಬಲದಿಂದ ಶಿಶುನಾಳಿಗೆ ಬಂದಿತು:
( ದೀಪಕ್ ಚಂದ್ರಶೇಖರ್ ಅವರು ಈ ವಿಷಯದ ಬಗೆಗೆ ಹೀಗೆ ವ್ಯಾಖ್ಯಾನಿಸುತ್ತಾರೆ: ’’ಪಾಂಡವರ ಮನಿಯೊಳಗ ಪಾಗಾದಾಗಿತ್ತು ಪಾಗಾದ ಗೂಟವ ಕಿತ್ತು ಓಡ”...... ಶರೀಫರು ತಾವು ಪೂರ್ವಜನ್ಮದಲ್ಲಿ ಪಾಂಡವರ ಪಾಗಾದಲ್ಲಿ (= ಕುದುರೆ ಲಾಯದಲ್ಲಿ) ಕುದುರೆಯಾಗಿದ್ದೆ ಎಂದು ಹೇಳುತ್ತಿದ್ದಾರೆ.!! ಈ ಸಾಲುಗಳ ಮೇಲೆ ನನ್ನದೊಂದು ಸಣ್ಣ ಭಿನ್ನಬಿಪ್ರಾಯ! ಪಾಂಡವರು ಅಂದರೆ ಐದು ಜನ - ಪಂಚೇಂದ್ರಿಯಗಳು! ಪಂಚೇಂದ್ರಿಯಗಳ ಮನೆ - ಈ ದೇಹ! ಪಾಗು - ಮನಸ್ಸು! ನಮ್ಮ ಚೈತನ್ಯ/ಬುದ್ದಿ ಮನಸಿನ ಹತೋಟಿಗೆ ಸಿಗದೇ (ಅಂದರೆ ಇಂದ್ರೀಯ ಸುಖಕ್ಕೆ ಪಕ್ಕಾಗಿ) ಪಂಚೆದ್ರಿಯಗಳ ಮೇಲೆ ಹತೋಟಿ ಸಿಗದೇ (ಪಾಗಾದ ಗೂಟವ ಕಿತ್ತು ಓಡಿ) ಓಡಾಡುತಿದ್ದಾಗ, ಅಲ್ಲಿ ಗುರು ಗೋವಿಂದರ ಕೃಪಾದೃಷ್ಟಿ ಬಿತ್ತು. ಇದು ಪೂರ್ವ ಜನ್ಮದ ಅಥವಾ ಜನ್ಮಾಂತರದ ಬಗ್ಗೆ ಅಲ್ಲವೆಂದು (ಸಾಂಕೇತಿಕವಾಗಿಯೂ ಅಲ್ಲ), ನನ್ನ ಅಭಿಪ್ರಾಯ!)
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು              ||೩||

ಅಲ್ಲಿ ಗುರು ಗೋವಿಂದರ ಕೃಪಾದೃಷ್ಟಿ ಈ ಕುದುರೆಯ ಮೇಲೆ ಬೀಳುವದೇ ತಡ, ಈ ಕುದುರೆಯು ‘ತಾನೇ ತಾನಾತು’ ಅಂದರೆ
‘ಸ್ವ-ಜ್ಞಾನ’ವನ್ನು ಅರ್ಥಾತ್ ಆತ್ಮಜ್ಞಾನವನ್ನು ಪಡೆಯಿತು.

ಆತ್ಮಜ್ಞಾನವನ್ನು ಪಡೆಯುವವರೆಗೂ, ‘ಶಕ್ತಿಸಂಚಯವಾದ ಮನಸ್ಸೆನ್ನುವ ಕುದುರೆಯು’ ಮೋಜಿನ ಕುದುರೆಯಾಗಿ ಎಲ್ಲೆಲ್ಲಿಯೋ ತಿರುಗಬಹುದು. ಸಾಧಕನೆನ್ನುವ ಸವಾರನು ತನ್ನ ಆತ್ಮಜ್ಞಾನದ ಉದ್ದೇಶದಿಂದ ಈ ಕುದುರೆಯನ್ನು ‘ಮೇಲಿನ ಮಾರ್ಗ’ದಲ್ಲಿ ನಡೆಯಿಸಿಕೊಂಡು ಹೋದಾಗ ಸಾಧಕನಿಗೆ ಸದ್ಗತಿ ದೊರೆಯುವುದು.

Thursday, January 22, 2015

ವಿಶ್ವ ಪರಿಸರ ದಿನಾಚರಣೆ.........ತನ್ಮಯಿಯ ಕವನ

ಪ್ರತಿ ವರುಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತನ್ಮಯಿ ಶೂರ್ಪಾಲಿ ಎನ್ನುವ ೮ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಈ ವಿಷಯದ ಮೇಲೆ ಇಂಗ್ಲೀಶಿನಲ್ಲಿ  ಆಶುಕವನ ರಚಿಸಿ, ದ್ವಿತೀಯ ಬಹುಮಾನವನ್ನು ಪಡೆದ ಕವನವೊಂದು ಇತ್ತೀಚೆಗೆ ನನಗೆ ಲಭ್ಯವಾಯಿತು. ಕವನ ಸುಂದರವಾಗಿದೆ. ನಿಮ್ಮ  ವಾಚನಸುಖಕ್ಕಾಗಿ ಅದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸುತ್ತಿದ್ದೇನೆ:



SAVE ENVIRONMENT

We all have but one land
Which gave us birth,
Let’s join our hands
And save our mother earth.

Look at the beautiful trees
On which feed the busy bees,
Let’s not just cut and harm
But also wonder at their charm.

Green is our earth
And blue is the sky
Let’s not harm them
So we don’t have to cry.

We all have but one land
Which gave us birth,
Let’s join our hands
And save our mother earth.

-Tanamyi Shurpali
VIII class,

Saturday, January 17, 2015

ಸಾಹಿತ್ಯಸುಖ-೨



ಭಾಸ (ಕ್ರಿ.ಶ.೩೦೦), ಶೂದ್ರಕ (ಕ್ರಿ.ಶ.೪೦೦) ಹಾಗು ಕಾಲೀದಾಸ  (ಕ್ರಿ.ಶ.೪೦೦) ಇವರು ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಈ ಮೂವರ ನಾಟಕರಚನಾಶೈಲಿಗಳು ತುಂಬ ಭಿನ್ನವಾಗಿವೆ. ಆದರೆ ಇವರ ನಾಟಕಗಳು ಓದುಗನಿಗಾಗಲೀ, ಪ್ರೇಕ್ಷಕನಿಗಾಗಲೀ ನೀಡುವ ರಸಾನುಭವ ಮಾತ್ರ ಅವರ್ಣನೀಯವಾದದ್ದು.

ನಾಟಕೀಯತೆಯು ನಾಟಕದ ಚೆಲುವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದಾದರೆ, ಈ ವಿಷಯದಲ್ಲಿ ಭಾಸನನ್ನು ಮೀರಿಸಿದವರು ಯಾರೂ ಇಲ್ಲ. ‘ಪ್ರತಿಮಾ ನಾಟಕ’, ‘ಮಧ್ಯಮವ್ಯಾಯೋಗ’ ಹಾಗು ‘ಸ್ವಪ್ನವಾಸವದತ್ತಾ’ ಈ ಮೂರು ನಾಟಕಗಳು ನಾಟಕೀಯತೆಯ ಶಿಖರಗಳಾಗಿವೆ. ಅದರಲ್ಲೂ ‘ಮಧ್ಯಮವ್ಯಾಯೋಗ’ ಎನ್ನುವ ಪುಟ್ಟ ನಾಟಕದ ಕೊನೆಯಲ್ಲಿ ಬರುವ ‘ನಿಶ್ಶಬ್ದಸಂವಾದ’ವು ಜಗತ್ತಿನ ಯಾವ ನಾಟಕದಲ್ಲೂ ಇರಲಿಕ್ಕಿಲ್ಲ!

ಮಧ್ಯಮವ್ಯಾಯೋಗದ ಕತೆ ಹೀಗಿದೆ:
ವನವಾಸಸಂಚಾರದಲ್ಲಿರುವ ಪಾಂಡವರು, ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾರೆ. ಭೀಮಸೇನನೊಬ್ಬನನ್ನು ಕುಟೀರದ ಕಾವಲಿಗಾಗಿ ಬಿಟ್ಟು ಉಳಿದ ಪಾಂಡವರು ಯಜ್ಞವೊಂದನ್ನು ನೋಡುವುದಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಓರ್ವ ಬ್ರಾಹ್ಮಣನು ತನ್ನ ಹೆಂಡತಿ ಹಾಗು ಮೂವರು ಗಂಡುಮಕ್ಕಳೊಡನೆ ಅಡವಿಯ ಮಾರ್ಗದಲ್ಲಿ ನಡೆಯುತ್ತ ಬರುತ್ತಿದ್ದಾನೆ. ಆಯಾಸವನ್ನು ಪರಿಹರಿಸಿಕೊಳ್ಳಲು, ಇವರೆಲ್ಲರೂ ಕುಳಿತುಕೊಳ್ಳುತ್ತಾರೆ. ಗಂಡುಮಕ್ಕಳಲ್ಲಿ ನಡುವಿನ ಹುಡುಗನು ನೀರು ತರಲು ಕೆರೆಯನ್ನು ಹುಡುಕುತ್ತ ಹೋಗುತ್ತಾನೆ.

ಅಷ್ಟರಲ್ಲಿ ಒಂದು ಅನಿರೀಕ್ಷಿತ ಘಟನೆ ಸಂಭವಿಸುತ್ತದೆ. ತರುಣ ವಯಸ್ಸಿನ ರಾಕ್ಷಸನೊಬ್ಬನು ಅಲ್ಲಿಗೆ ಬಂದು, ಈ ಪ್ರದೇಶವು ತನ್ನ ತಾಯಿಯ ಒಡೆತನಕ್ಕೆ ಸೇರಿರುವದೆಂದೂ, ಅಲ್ಲಿ ಕುಳಿತಿರುವರಲ್ಲಿ ಒಬ್ಬರನ್ನು ತನ್ನ ತಾಯಿಯ ಭಕ್ಷಣೆಗಾಗಿ ಕೊಡಲೇಬೇಕೆಂದೂ ಗದರಿಸುತ್ತಾನೆ.

ಬ್ರಾಹ್ಮಣ ಹಾಗು ಅವನ ಹೆಂಡತಿ ಇಬ್ಬರೂ ವಯಸ್ಸಾದವರು; ಆದುದರಿಂದ ಭಕ್ಷಣೆಗೆ ನಿರುಪಯುಕ್ತರು. ಗಂಡು ಹುಡುಗರಲ್ಲಿ ಮೊದಲನೆಯವನು ತಂದೆಗೆ ಪ್ರೀತಿಪಾತ್ರನಾದವನು; ಅಲ್ಲದೆ ತಂದೆ-ತಾಯಿಯರ ಸಾವಿನ ನಂತರ ಅವರ ಅಪರ ಕರ್ಮಾದಿಗಳನ್ನು ಮಾಡುವ ಅಧಿಕಾರಿಯು. ಕೊನೆಯವನು ತಾಯಿಯ ಮುದ್ದಿನ ಮಗು. ಆದುದರಿಂದ ನಡುವಿನವನನ್ನೇ ಬಲಿಯಾಗಿ ಕೊಡಲು ಅವರು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಆದರೆ ಅವನನ್ನು ತಾವೇ ಕೂಗಿ ಕರೆಯಲು ಅಥವಾ ಅವನ ಹೆಸರನ್ನು ರಾಕ್ಷಸನಿಗೆ ತಿಳಿಸಲು ಅವರಿಂದ ಸಾಧ್ಯವಾದೀತೆ? ಕುಟುಂಬದ ಸದಸ್ಯರು ಮುಂದಾಗದಿರಲು, ರಾಕ್ಷಸನೇ ‘ಮಧ್ಯಮಾ! ಮಧ್ಯಮಾ!’ ಎಂದು ಕೂಗಿ ಕರೆಯುತ್ತಾನೆ.

ನಾಟಕೀಯತೆಯು ಪ್ರಾರಂಭವಾಗುವುದೇ ಈ ಕ್ಷಣದಿಂದ. ರಾಕ್ಷಸನ ಕೂಗು ದೂರದ ಕುಟೀರದಲ್ಲಿರುವ ಭೀಮನ ಕಿವಿಗೂ ಬೀಳುತ್ತದೆ.  ಪಾಂಡವರಲ್ಲಿ ಭೀಮನೇ ಮಧ್ಯಮನು ತಾನೇ! ತಕ್ಷಣವೇ ಭೀಮನು ಧ್ವನಿ ಬಂದ ದಿಕ್ಕಿಗೆ ತೆರಳುತ್ತಾನೆ. ಅಲ್ಲಿ ರಾಕ್ಷಸನ ಹಿಡಿತಕ್ಕೆ ಸಿಲುಕಿದ ಕುಟುಂಬದ ರಕ್ಷಣೆಯನ್ನು ತನ್ನ ಹೊಣೆಗಾರಿಕೆ ಎಂದು ಭಾವಿಸಿದ ಭೀಮನು ಆ ರಾಕ್ಷಸನನ್ನು ಹೋರಾಟಕ್ಕೆ ಆಹ್ವಾನಿಸುತ್ತಾನೆ.

ತರುಣ ರಾಕ್ಷಸ ಹಾಗು ಭೀಮಸೇನನ ನಡುವೆ ಹೋರಾಟ ನಡೆಯುತ್ತದೆ. ಆತನ ಮಾತುಗಳಿಂದ ಆತನು ತನ್ನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನೆನ್ನುವುದು ಭೀಮನಿಗೆ ತಿಳಿದು ಹೋಗುತ್ತದೆ! ತನ್ನ ಮಗನ ಬಲವನ್ನು, ಶೌರ್ಯವನ್ನು ಕಂಡು ಭೀಮಸೇನನು ಹಿಗ್ಗುತ್ತಾನೆ. ಆದರೆ ಘಟೋತ್ಕಚನಿಗೆ ಈ ಅಪರಿಚಿತನು ತನ್ನ ತಂದೆ ಭೀಮಸೇನನೆನ್ನುವುದು ತಿಳಿಯದು. ಈ ಅಪರಿಚಿತ ಮನುಷ್ಯನ ಬಲವನ್ನು ಕಂಡು ಘಟೋತ್ಕಚನಿಗೆ ಆಶ್ಚರ್ಯವೋ ಆಶ್ಚರ್ಯ! ಕೊನೆಗೊಮ್ಮೆ ಘಟೋತ್ಕಚನು ಭೀಮನನ್ನು ತನ್ನ ಮಾಯಾಪಾಶದಿಂದ ಬಂಧಿಸಿ, ತನ್ನ ತಾಯಿಯ ಬಳಿಗೆ ಕರೆದೊಯ್ಯುತ್ತಾನೆ. ಈ ಸಮಯದಲ್ಲಿ ಇವರೀರ್ವರ ನಡುವಿನ ಚಮತ್ಕಾರಿಕ ಸಂಭಾಷಣೆಯು ಭಾಸನ ಪ್ರತಿಭೆಗೆ ಸಾಕ್ಷಿಯಾಗಿದೆ.

ಹಿಡಂಬಿಯು ಘಟೋತ್ಕಚನಿಗೆ ಭೀಮಸೇನನು ಆತನ ತಂದೆಯೆಂದು ತಿಳಿಸುತ್ತಾಳೆ. ಘಟೋತ್ಕಚನು ಭೀಮನ ಕಾಲಿಗೆ ಎರಗುತ್ತಾನೆ. ಹಿಡಿಂಬೆಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಭೀಮಸೇನನು ಅವಳ ಉಸುರುವಿಕೆಗೆ ಸ್ಪಂದಿಸುತ್ತ, “ಹಿಡಿಂಬೆ, ನೀನು ರಾಕ್ಷಸಕುಲದವಳಾದರೂ, ಆರ್ಯಗುಣವುಳ್ಳವಳು” ಎಂದು ಹೇಳುತ್ತಾನೆ. ಇಲ್ಲಿಗೆ ನಾಟಕ ಕೊನೆಯಾಗುತ್ತದೆ, ಹಿಡಿಂಬೆಯ ಅಶ್ರಾವ್ಯ ಮಾತಿನೊಂದಿಗೆ!

ಭಾಸನು ಪ್ರತ್ಯಕ್ಷವಾಗಿ ಹೇಳದೆ,  ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು ಹೀಗಿದೆ:
ಪಾಂಡವರು ಅಡವಿಯ ಮಾರ್ಗವಾಗಿ ಸಂಚರಿಸುತ್ತ ಬರುತ್ತಿರುವುದು ಹಿಡಿಂಬೆಗೆ ಮೊದಲೇ ತಿಳಿದಿತ್ತು. ಆದರೆ ಅರಣ್ಯಪ್ರದೇಶದ ಒಡತಿಯಾದ ಅವಳಿಗೆ ತಾನೇ ಅವರಿದ್ದಲ್ಲಿಗೆ ಹೋಗಿ, ಅವರನ್ನು ಸ್ವಾಗತಿಸುವುದು ಶಿಷ್ಟಾಚಾರವಿರೋಧ ಎನ್ನಿಸುತ್ತಿತ್ತು. ಆದುದರಿಂದಲೇ ಅವಳು ಘಟೋತ್ಕಚನನ್ನು ನರಭಕ್ಷಣೆಯ ನೆವದಿಂದ ಭೀಮನಿದ್ದಲ್ಲಿಗೆ ಕಳುಹುತ್ತಾಳೆ. ಇನ್ನು ಅವಳು ಭೀಮನ ಕಿವಿಯಲ್ಲಿ ಗುಟ್ಟಾಗಿ ಉಸಿರಿದ್ದೇನು? ಇದು ಪ್ರೇಕ್ಷಕರ ತರ್ಕಕ್ಕೆ ಬಿಟ್ಟಿದ್ದು! ಆದರೆ ಭೀಮಸೇನನು ಹಿಡಿಂಬೆಯನ್ನು ‘ಸತ್ಕುಲಲಕ್ಷಣೆ’ ಎಂದು ಪ್ರಶಂಸಿರುವುದು ಪ್ರೇಕ್ಷಕರಿಗೆ ಒಂದು ಸುಳಿವನ್ನು ಕೊಡುತ್ತದೆ! ಈ ಸುಳಿವಿನ ಜಾಡನ್ನು ಹಿಡಿದು, ನೀವು ಹಿಡಿಂಬೆಯು ಭೀಮನ ಕಿವಿಯಲ್ಲಿ ಉಸಿರಿದ್ದನ್ನು ಊಹಿಸಬಹುದು!

ಮಿತ್ರರೆ, ಸಂಭಾಷಣೆಯೊಂದು ಪ್ರೇಕ್ಷಕರಿಗೆ ಕೇಳದಂತೆ, ಕಿವಿಯುಸಿರಿನಲ್ಲಿಯೇ ಕೊನೆಗೊಳ್ಳುವ ನಾಟಕವನ್ನು ನೀವೆಲ್ಲಿಯಾದರೂ ನೋಡಿದ್ದೀರಾ? ಕೇಳಿದ್ದೀರಾ? ಓದಿದ್ದೀರಾ? ಬಹುಶಃ ವಿಶ್ವನಾಟಕಗಳಲ್ಲಿ ಇದೊಂದೇ ಅಂತಹ ನಾಟಕವೆಂದು ಭಾಸವಾಗುತ್ತದೆ.

ಭಾಸನಂತಹ ನಾಟಕಚತುರರು ಮೊದಲು ಬಂದಿಲ್ಲ; ಇನ್ನು ಮುಂದೆ ಬಂದಾರೆಂದು ಹೇಳುವಂತಿಲ್ಲ! ಭಾರತೀಯರಿಗೆ ಶ್ರೇಷ್ಠ ನಾಟಕಗಳನ್ನು, ತನ್ಮೂಲಕ ಸಾಹಿತ್ಯಸುಖವನ್ನು, ರಸಾನುಭವವನ್ನು ನೀಡಿದ ಭಾಸನಿಗೆ ನಮ್ಮ ಅನಂತ ಕೃತಜ್ಞತೆಗಳನ್ನು ಸಲ್ಲಿಸೋಣ.