Thursday, March 20, 2008

ಬೇಂದ್ರೆ, ಕುವೆಂಪು---ಕಾವ್ಯದೃಷ್ಟಿ

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”
………………………………………ಅಂಬಿಕಾತನಯದತ್ತ

ಭಾರತೀಯ ಸಾಹಿತ್ಯದ ಸಾಂಪ್ರದಾಯಿಕ ದೃಷ್ಟಿಯಲ್ಲಿ ಓದುಗನೆಂದರೆ ಸಹೃದಯ ರಸಿಕ. ಇದು ಬೇಂದ್ರೆಯವರ ದೃಷ್ಟಿಯೂ ಹೌದು. ಲೇಖಕ ಮತ್ತು ಓದುಗರ ನಡುವೆ ಇರುವ ಈ ಸಹೃದಯ ಸಂಬಂಧ ಬೇಂದ್ರೆಯವರು ಬರೆದ ಮೇಲಿನ ಸಾಲುಗಳಲ್ಲಿ ವ್ಯಕ್ತವಾಗಿದೆ. ಬೇಂದ್ರೆಯವರು ತಮ್ಮ ಓದುಗರಿಗೆ ಕಾವ್ಯಸುಧೆಯನ್ನು ನೀಡಿದರು. ಅವರ ಓದುಗರೂ ಸಹ ಅವರಿಗೆ ತಮ್ಮ ಅಭಿಮಾನ, ಪ್ರೇಮವನ್ನು ನೀಡಿದ್ದಾರೆ.

ಕುವೆಂಪು ದೃಷ್ಟಿಯು ಬೇಂದ್ರೆಯವರ ದೃಷ್ಟಿಗಿಂತ ಭಿನ್ನವಾಗಿದೆ. ಅವರು ತಮ್ಮ ಓದುಗರಿಗೆ ಆಹ್ವಾನ ನೀಡುತ್ತಾರೆ: “ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು ಕುವೆಂಪು ಕೇಳುತ್ತಾರೆ. ಆದರೆ ಕುವೆಂಪು ಅಭಿಮಾನಿಗಳೂ ಸಹ ಕುವೆಂಪುರವರಿಗೆ ಗೌರವಾದರಗಳನ್ನು ನೀಡಿದ್ದಾರೆ. In fact ಕನ್ನಡಿಗರು ತಮ್ಮ ನೆಚ್ಚಿನ ಎಲ್ಲ ಸಾಹಿತಿಗಳ ಮೇಲೂ ತಮ್ಮ ಅಭಿಮಾನವನ್ನು ಸೂರೆ ಮಾಡಿದ್ದಾರೆ.

ಕುವೆಂಪುರವರ ಅನೇಕ ಕವನಗಳಲ್ಲಿ, ಆದೇಶವಾಕ್ಯಗಳು ಹೇರಳವಾಗಿ ಸಿಗುತ್ತವೆ.
ಉದಾಹರಣೆಗಳು:
೧) ಬಾಗಿಲಲಿ ಕೈಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು.

೨) ಕೈಮುಗಿ ಈ ತಂತಿಯ ಕಂಬಕ್ಕೆ
ವಂದಿಸಿ ನಡೆ ಮುಂದಕ್ಕೆ

೩) ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ
ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ

೪) ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀಕುಡಿಯುವ ನೀರ್ ಕಾವೇರಿ

೫) ನೂಕಾಚೆ ದೇವರನ್, ನೂರಾರು ದೇವರನ್

ಈ ಎಲ್ಲ ಉದಾಹರಣೆಗಳು ಕುವೆಂಪುರವರ ಕವಿತೆಗಳಲ್ಲಿ ಸಹಜವಾಗಿ ವ್ಯಕ್ತವಾಗುವ ಅಧಿಕಾರ-ಧೋರಣೆಯನ್ನು ವ್ಯಕ್ತಪಡಿಸುತ್ತವೆ. ಹಾಗೆಂದ ಮಾತ್ರಕ್ಕೆ ಇದು ಕವನದ ವಿಮರ್ಶೆಯಲ್ಲ. ಕವಿಯ ಧೋರಣೆಯನ್ನು ತೋರಿಸುವದಷ್ಟೆ ಈ ಉದಾಹರಣೆಗಳ ಕೆಲಸ. ಈ ’ಯಜಮಾನ ಧೋರಣೆ’ಯ ಕೆಲವು ಕವನಗಳು ಯಶಸ್ವಿ ಕವನಗಳಾಗಿವೆ. ಉದಾಹರಣೆ:

“ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ
ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ
……………………………………
………………………………………..
ನಾನಳಿವೆ, ನೀನಳಿವೆ, ನಮ್ಮೆಲವುಗಳ ಮೇಲೆ
ಮೂಡುವದು, ಮೂಡುವದು ಭಾರತದ ಲೀಲೆ
ನವಭಾರತದ ಲೀಲೆ!”


ಕನ್ನಡದ ಈ ಇಬ್ಬರು ಶ್ರೇಷ್ಠ ಕವಿಗಳಾದ ಬೇಂದ್ರೆ ಮತ್ತು ಕುವೆಂಪು ಇವರು ತಮ್ಮ ಸಾಹಿತ್ಯದಲ್ಲಿ ಹೆಣ್ಣನ್ನು ಯಾವ ದೃಷ್ಟಿಯಿಂದ ನೋಡಿದ್ದಾರೆ ಎಂದು ಪರೀಕ್ಷಿಸುವದು ಕುತೂಹಲಕಾರಿಯಾದ ವಿಷಯವಾಗಿದೆ.
ಕುವೆಂಪುರವರ ಜನಪ್ರಿಯ ರಚನೆಯಾದ “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ” ಈ ಕವನದ ಕೆಳಗಿನ ಸಾಲುಗಳನ್ನು ಗಮನಿಸಿರಿ:

“ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.”

ಪ್ರಾಚೀನ ಕಾಲದಿಂದಲೂ ’ಉಷೆ’ಯನ್ನು ಭಾರತೀಯ ಕವಿಗಳು ’ದೇವತೆ’ ಎಂದು ವರ್ಣಿಸುತ್ತ ಬಂದಿದ್ದಾರೆ. ಅಂದರೆ ಸಮಸ್ತ ಪ್ರಪಂಚಕ್ಕೆ ಇವಳು ಬೆಳಕಿನ ತಾಯಿ. ಓರ್ವ ಮನುಷ್ಯನು ತಾಯಿಯ ದೈಹಿಕ ಸೌಂದರ್ಯದ ಕಡೆಗೆ ಆತ ಲಕ್ಷ್ಯ ಕೊಡುವದಿಲ್ಲ; ಅವಳ ಮಮತೆಗೆ ಆತ ಮರಳಾಗುತ್ತಾನೆ. ಮೇಲಿನ ಸಾಲುಗಳಲ್ಲಿ “ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ” ಎನ್ನುವ ಹೇಳಿಕೆ sensitive ಓದುಗನಿಗೆ ಆಘಾತಕಾರಿಯಾಗುತ್ತದೆ. ಮತ್ತೂ ಅವಳ ಅಂಗಸೌಂದರ್ಯದ ಕಾರಣಕ್ಕಾಗಿ ’ಆಕೆಗೆ ಸುಪ್ರಭಾತವ ಬಯಸಿರಿ’ ಎನ್ನುವದು repugnant ಭಾವನೆಯನ್ನು ಹೊಮ್ಮಿಸುತ್ತದೆ. ಕುವೆಂಪುರವರ ಅನೇಕ ಕವನಗಳಲ್ಲಿ ಇಂತಹ ಬಾಹ್ಯಸೌಂದರ್ಯದ ಆರಾಧನೆ ನೋಡಸಿಗುತ್ತದೆ. ಉದಾಹರಣೆಗೆ ಅವರ ಮತ್ತೊಂದು ಜನಪ್ರಿಯ ಕವಿತೆಯನ್ನು ನೋಡಿರಿ:

“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ”

ಈ ಕವನ ಮುಂದುವರಿದಂತೆ, ಗೋಪಿ ತನ್ನ ಸಖಿಗೆ ಹೀಗೆ ಹೇಳುತ್ತಾಳೆ:
“ತೊಂಡೆಯ ಹಣ್ಣನು ತುಟಿಗಳು ನಗಲಿ, ವದನವು ಮೀರಲಿ ತಾವರೆಯ”.

ಕವಿ ಮತ್ತೊಮ್ಮೆ ದೈಹಿಕ ಚೆಲುವಿಗೆ ಮನ್ನಣೆ ಹಾಕುವದನ್ನು ಕಾಣಬಹುದು. ಸರೋಜಿನಿ ನಾಯಡು ಅವರು ಇಂಗ್ಲಿಶ್‌ನಲ್ಲಿ ಬರೆದ ಒಂದು ಕವಿತೆ ಈ ಕವನದ ಮಾತೃಕಾವ್ಯ ಎನ್ನಬಹುದು. ಆದರೆ ಆ ಕವನದಲ್ಲಿ ಸಹ ಗೋಪಿಯ ಅಂತರಾಳದ ಹಂಬಲವನ್ನು ವರ್ಣಿಸಲಾಗಿದೆಯೇ ಹೊರತು, ಗೋಪಿಯ ಬಾಹ್ಯ ಸೌಂದರ್ಯವನ್ನಲ್ಲ.
ಶ್ರೀ ಅರವಿಂದರು ಸೌಂದರ್ಯದ ನಾಲ್ಕು ಬಗೆಗಳನ್ನು ಹೇಳಿದ್ದಾರೆ. ಬಾಹ್ಯಸೌಂದರ್ಯಕ್ಕೆ ಅವರು Sensuous beauty ಎಂದು ಕರೆಯುತ್ತಾರೆ. ಕುವೆಂಪುರವರ ಕಾವ್ಯದಲ್ಲಿಇಂತಹ sensuous beautyಯ ಬಗೆಗೆ ಒಂದು ತರಹದ compulsive obsession ಇರುವದನ್ನು ಗಮನಿಸಬಹುದು.

ಬೇಂದ್ರೆಯವರ ದೃಷ್ಟಿ ಇದಕ್ಕೆ ಸಂಪೂರ್ಣ ವಿರುದ್ಧವಾದ ದೃಷ್ಟಿಯಾಗಿದೆ. ಉದಾಹರಣೆಗಾಗಿ ಅವರು ಬರೆದ “ರಾಧೆಯ ಪಾಡು” ಎನ್ನುವ ಕವನ ರಾಧೆ ಯಾವ ರೀತಿಯಲ್ಲಿ , stage by stage, ಕೃಷ್ಣನಿಗಾಗಿ ಕಾತರಿಸುತ್ತಾಳೆ ಎನ್ನುವದನ್ನು ವಿವರಿಸುತ್ತದೆ:

ಸಖಿ: ’ಮುಂದೇನೆ? / ಸಖಿ/ ಮುಂದೇನೆ?’
ರಾಧೆ: ’ರೂಪ ಗುsಣಕೆ ಮೆಚ್ಚಿ
ಬಂದೆನೆಂದೆನು ಹುಚ್ಚಿ
ಅಂದೆನೇ / ಮನದಿ / ಅಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಕಾಣುವಂತಹನಲ್ಲ
ಕಾಣದಾದನು ಗೊಲ್ಲ
ಚೆಂದೇನೆ? /ಇದು ಚೆಂದೇನೇ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ಇವನ ಪಂಥವ ತೊಟ್ಟು
ಬಳಗವೆಲ್ಲವ ಬಿಟ್ಟು
ಬಂದೆನೇ / ಅಲ್ಲಿ ಬಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಒರೆದನಂಗಲಾsಚಿ
ಕರೆದೆ ಜೀವವ ಚಾಚಿ
ನೊಂದೆನೇ / ಬಹಳ ನೊಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಬರನು, ಕೂತಿತು ಧನಿ
ಕಣ್ಣೆಲ್ಲ ಕಂಬನಿ
ತಂದೆನೇ! ಕರಗಿ ತಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಕರಣ ಕಳವಳಿಸೀವೆ
ಹರಣ ತಳಮಳಿಸೀವೆ
ಒಂದೇನೇ / ಸ್ಥಿತಿ ಒಂದೇನೆ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಒಗೆದು ಹೂ ದಂಡಿಗೆ
ಯಮುನೆಯ ದಂಡಿಗೆ
ನಿಂದೆನೇ / ದುಃಖಿ ನಿಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ಹೊಳೆಯೊಳು ಹೊತ್ತಾರೆ
ಧುಮುಕಿ ನಾ ಸತ್ತಾರೆ
ಹೊಂದೇನೇ? ಅವನ ಹೊಂದೇನೆ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ನಲ್ಲ ತೋರಿಸಿಕೊಡು
ಬೇಕಾದ ವರ ಬೇಡು
ಅಂದೇನೇ? ಸಖಿ ಅಂದೇನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ಕೃಷ್ಣ: ನಾನೆಲ್ಲಿ ಹೋಗಿದ್ದೆ
ನಿನ್ನ ಎದೆಯೊಳಗಿದ್ದೆ
ನಿಂದೆನೇ, ಹೊರಗೆ ಬಂದೇನೇ
ಸಖಿ, ಮುಂದೇನೇ/ ನಿನ್ನ ಮುಂದೇನೇ!

ಬೇಂದ್ರೆಯವರ ಈ ಕವನದಲ್ಲಿ ರಾಧೆ ತನ್ನ ಚೆಲುವಿಕೆಯ ಹಮ್ಮನ್ನು ಹಾಗು ತನ್ನ ಅಲಂಕಾರವನ್ನು ತ್ಯಜಿಸಿ ಹಂಬಲಿಸುವದನ್ನು stage by stage ತೋರಿಸಲಾಗಿದೆ. ಕೊನೆಗೊಮ್ಮೆ, ಅವಳು “ಧುಮುಕಿ ’ನಾ’ ಸತ್ತಾರೆ”, ಅಂದರೆ, ಅವಳು ಅಹಂಕಾರಶೂನ್ಯೆಯಾದಾಗ, ಅವಳ ಅಂತರಾಳದಲ್ಲಿದ್ದ ಕೃಷ್ಣ ಅವಳಿಗೆ ಕಾಣಿಸುತ್ತಾನೆ ಎನ್ನುವ ಸತ್ಯದರ್ಶನವಿದೆ.

ಬೇಂದ್ರೆಯವರ ಈ ಕವನವನ್ನು ಕುವೆಂಪುರವರ ಕವನದೊಡನೆ ಹೋಲಿಸಿದಾಗೆ ಕುವೆಂಪುರವರ ಕವಿತೆ ಬಾಲಿಶವಾಗಿ ಕಾಣುತ್ತದೆ.

19 comments:

  1. ಕನ್ನಡದ ಇಬ್ಬರು ಧೀಮಂತ ಕವಿಗಳ ಕಾವ್ಯದೃಷ್ಟಿಯನ್ನು ಬಹು ಸುಂದರವಾಗಿ ಚಿತ್ರಿಸಿರುವಿರಿ. ಕುವೆಂಪು ಕುಪ್ಪೇನಹಳ್ಳಿಯ ಜಮೀನುದಾರರು. ಸಿರಿವಂತ ಮನೆತನದವರು. ಬಡತನದ ಜಂಜಾಟದಲ್ಲಿ ಎಂದೂ ಸಿಕ್ಕದವರು. ಹೊಟ್ಟೆಯ ಹಸಿವು ಅವರನ್ನೆಂದೂ ಕಾಡಿರಲಾರದು. ಹೀಗಾಗಿ, ಅವರದು ಅಧಿಕಾರ ಮನೋಭಾವ. ಬೇಂದ್ರೆ ತದ್ವಿರುದ್ಧ. ಬೇಂದ್ರೆ ಜೀವನದ ಕಷ್ಟ ಕಂಡವರು. ಅವರೇ ಹೇಳಿದ ಹಾಗೆ ಬೆಂದವರು. ಅದಕ್ಕೆ ಅವರದು ಉದಾರ ಮನೋಭಾವ.ಕುವೆಂಪುರವರ ಕಾವ್ಯ ಹೊಟ್ಟೆ ತುಂಬಿದ ಮೇಲೆ ಬರೆದದ್ದು. ಬೇಂದ್ರೆ ಬರೆದದ್ದು ಹಸಿವಿನ ಚೀಲ ಕೂಗುತ್ತಿದ್ದಾಗ. ಅದಕ್ಕೆ, ಬೇಂದ್ರೆ ಬರೆದದ್ದು ಹೃದಯದಿಂದ. ಕುವೆಂಪು ಬರೆದದ್ದು ಅಭ್ಯಾಸದಿಂದ.ಬೇಂದ್ರೆಯವರಿಗೆ ಕಾವ್ಯ ಹೃದಯವನ್ನು ಬಿಚ್ಚಿ, ಭಾವನೆಗಳನ್ನು ಹಂಚಿಕೊಳ್ಳುವ ಮಾಧ್ಯಮ. ಕುವೆಂಪುರವರಿಗೆ ಕಾವ್ಯ ತಮ್ಮ ಅಪಾರ ವಿದ್ವತ್ತು, ಪ್ರಗಾಢ ಪಾಂಡಿತ್ಯವನ್ನು ಅದಿಲ್ಲದವರಿಗೆ ತೋರಿಸುವ ಮಾಧ್ಯಮ. ಇದು ನನ್ನ ಅನಿಸಿಕೆ.

    ReplyDelete
  2. ಪ್ರಿಯ ಕಟ್ಟಿಯವರೆ,
    ನೀವು ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಅಧಿಕಾರ ಹಾಗು ಶ್ರೀಮಂತಿಕೆ ಇದ್ದ ಕುವೆಂಪು ಬರೆದ ಕಾವ್ಯದಲ್ಲಿ ಅದರ ಪ್ರತಿಫಲನ ಆಗುವದು ಸ್ವಾಭಾವಿಕ. ಆದರೆ ನನ್ನನ್ನು ಅಚ್ಚರಿಗೊಳಿಸುವ ಸಂಗತಿ ಎಂದರೆ, ಕುವೆಂಪುರವರು ಹೆಣ್ಣನ್ನು ನೋಡುವ ದೃಷ್ಟಿ. ರಾಮಕೃಷ್ಣಾಶ್ರಮದಲ್ಲಿ ಕಾಲ ಕಳೆದ ಕುವೆಂಪು
    ಹೆಣ್ಣಿನ sensous beauty-ಐಂದ್ರಿಯ ಗಮ್ಯ ಸೌಂದರ್ಯಕ್ಕೆ ಮರುಳಾದ ರೀತಿ ಆಶ್ಚರ್ಯವನ್ನುಂಟು ಮಾಡುತ್ತದೆ. ಇದು compemsatory complex ಇರಬಹುದೆ?

    ReplyDelete
  3. ಸುನಾಥರೇ, ನೀವು ಕುವೆಂಪುರವರ ದೋಣಿ ಸಾಗಲಿ ಗೀತೆಯ ಬಗ್ಗೆ ಬರೆದಂತೆ ಅವರ ಇನ್ನೊಂದು ಕವಿತೆ ಕೂಡ ನನ್ನಲ್ಲಿ ಅದೇ ಭಾವನೆಯನ್ನು ಉಂಟು ಮಾಡಿತ್ತು. ಅದು "ಸೊಬಗಿನ ಸೆರೆಮನೆಯಾಗಿಹೆ ನೀನು..ಚೆಲುವೆ ಸರಸತಿಯೆ" ಎಂಬ ಗೀತೆ. ಇದನ್ನು ನಾನು ಕವನವಾಗಿ ಓದಿಲ್ಲ. ಚಿತ್ರಗೀತೆಯಾಗಿ ಮಾತ್ರ ಬಲ್ಲೆ. ಈ ಕವನ ತಾಯಿ ಶಾರದೆಯ ಬಗ್ಗೆ ಇದೆಯೆಂದು ಕೇಳಿದ್ದೇನೆ.(ಖಚಿತವಾಗಿ ಗೊತ್ತಿಲ್ಲ) ಆದರೆ ಕವನದಲ್ಲಿ ಆ ಭಕ್ತಿಭಾವ ಹೊಮ್ಮುವುದಿಲ್ಲ.ನಾನಂತೂ ಇದೊಂದು ಸುಂದರ ಪ್ರೇಮಗೀತೆಯೆಂದೇ ತಿಳಿದಿದ್ದೆ (ಈಗಲೂ )"ನಿನ್ನೊಳು ನಾನು ನನ್ನಲಿ ನೀನು ಪ್ರೇಮದಿ ಲಯವಾಗುವುದಾಸೆ...ಚೆಲುವೆ ಒಲವೆ ಮುದ್ದಿನ ಹೆಣ್ಣೆ ನಿನ್ನವ ನಾನಾಗುವ ಆಸೆ" ಈ ಸಾಲುಗಳಲ್ಲಿ ದೇವಿ-ಭಕ್ತ ಭಾವನೆ ಎಲ್ಲಿದೆ?

    ಇನ್ನೊಂದು ಹಾಡು - ಕೆಂಪು ಗುಲಾಬಿಯ ಕೆನ್ನೆಯ ಚೆಲುವೆ..ಎಂತು ನಿನ್ನನು ಹೇಳು ಗೆಲುವೆ? - ಈ ಕವನದಲ್ಲೂ ಶಾರದೆ ಇದ್ದಾಳೆ. ಈಕೆ ಯಾರು? ನಲ್ಲೆಯೇ? ದೇವಿಯೇ? ಈ ಕವನಗಳ ಬಗ್ಗೆಯೂ ‘ಸಲ್ಲಾಪ ’ ನಡೆಯಲಿ...

    ReplyDelete
  4. ಕ್ಷಮೆ ... ಕೆಂಪು ಗುಲಾಬಿಯ - ಕೆನ್ನೆ ಅಲ್ಲ - ಚೆಂದುಟಿ ಚೆಲುವೆ ಆಗಬೇಕಿತ್ತು :)

    ReplyDelete
  5. ಹೆಣ್ಣಿನ ಐಂದ್ರಿಯಗಮ್ಯ ಚೆಲುವನ್ನು ವರ್ಣಿಸುವದು ಕವಿಗಳ ಭಾವುಕತೆಯೋ ಅಥವಾ ಅದೇ ಒಂದು ದುರ್ಬಲತೆಯೋ ?!. ಕನಕದಾಸರಂತಹ ಶ್ರೇಷ್ಟ ಭಕ್ತ ಕವಿ, ಶ್ರೀ ವಾದಿರಾಜರಂತಹ ಅಪರೋಕ್ಷ ಜ್ಞಾನಿಗಳು, ಅಷ್ಟೆ ಏಕೆ, ಋಗ್ವೇದದ ಶರೀ ಸೂಕ್ತದಲ್ಲಿಯೂ ಹೆಣ್ಣಿನ ಐಂದ್ರಿಯಗಮ್ಯ ಸೌಂದರ್ಯವನ್ನು ತುಂಬ ವರ್ಣಿಸಿದ್ದಾರೆ. ಇನ್ನೊಂದು ಮಾತು, ಸೌಂದರ್ಯ ಸೌಂದರ್ಯವೇ. ಅದು, ಭಾವಗಮ್ಯವೋ ಅಥವಾ ಇಂದ್ರಿಯಗಮ್ಯವೋ ಎಂಬುದು ಓದುಗನ ಮನೋಸ್ಥಿತಿಯನ್ನು ಅವಲಂಬಿಸಿರುವ ಸಾಧ್ಯತೆಯೂ ಇದೆಯಲ್ಲವೆ ?

    ReplyDelete
  6. It is :SHREE SOOKTA" not "SHARI SOOKTA". I apologize for the spelling mistake.

    ReplyDelete
  7. ತ್ರಿವೇಣಿಯವರೆ,
    ಈ ಕವನಗಳು ಯಾರನ್ನು ಉದ್ದೇಶಿಸಿವೆ ಎಂದು ಅರ್ಥ ಮಾಡಿಕೊಳ್ಳುವ ನನ್ನ ಪ್ರಯತ್ನಗಳು ವಿಫಲವಾದವು. ಸೊಬಗಿನ ಸೆರೆಮನೆ ಕವನದ ಕೊನೆಯ ಸಾಲುಗಳಲ್ಲಿ, "ಕಾಮನ ಕನ್ನೆಯೆ" ಎನ್ನುವ ಸಂಬೋಧನ ಬರುತ್ತಿದೆ. ಒಂದು ವೇಳೆ ಈ ಕವನಗಳು ದೇವಿ ಸರಸ್ವತಿಯನ್ನು ಉದ್ದೇಶಿಸಿ ಬರೆದದ್ದೇ ಆಗಿದ್ದರೆ, ಕುವೆಂಪುರವರಿಗೂ ಮತ್ತು ಖ್ಯಾತ ಚಿತ್ರಕಾರ ಎಮ್. ಎಫ್. ಹುಸೇನರಿಗೂ ಇರುವ ಅಂತರವೇನು ಎಂದು ಕೇಳಬೇಕಾಗುತ್ತದೆ.

    ReplyDelete
  8. ಕಟ್ಟಿಯವರೆ,
    ಸನಾತನ ಧರ್ಮಗ್ರಂಥಗಳಲ್ಲಿ ದೇವತೆಗಳ ಆಂಗಿಕ ವರ್ಣನೆ ಬಂದಿರಬಹುದು. ಆದರೆ ಅದರ ಹಿಂದಿರುವ ಭಾವನೆ ಸ್ತನಪಾನ
    ಮಾಡುತ್ತಿರುವ ಕೂಸು ತಾಯಿಯ ಸ್ತನಗಳನ್ನು caress ಮಾಡುವಂತಹ ಭಾವನೆ. ಆದರೆ ಕುವೆಂಪು ಬರೆದ ಕವನಗಳಲ್ಲಿ
    ಐಂದ್ರಿಯ ರಂಜನೆಗೆ ಆಹ್ವಾನವಿದೆ. ಇದು ವಿಟಪುರುಷನು ಬೆಲೆವೆಣ್ಣನ್ನು ನೋಡುವ ರೀತಿಯದು.

    ReplyDelete
  9. ಸುನಾಥರೇ, ನಾನು ಕೇಳಿದ್ದು, ಓದಿದ್ದು ತಪ್ಪಿರಬಹುದು ಅಂದುಕೊಳ್ಳುತ್ತಿದ್ದೇನೆ. (ಕೇಳಿದ್ದು ಸುಳ್ಳಾಗಬಹುದು :-) ) ಈ ಕವನ ಸರಸ್ವತಿಯ ಬಗ್ಗೆ ಇರಲಾರದು. ನಾನು ಕವನ ಓದಿಲ್ಲ.ನಿಮಗೆ ಓದಲು ಸಿಕ್ಕಲ್ಲಿ ನಮಗೂ ತಿಳಿಸಿ.

    ReplyDelete
  10. ಸುನಾಥರೇ, ಪೂರ್ಣ ಕವನ ಕನ್ನಡ ಲಿರಿಕ್ಸ್.ಕಾಂನಲ್ಲಿ ಸಿಕ್ಕಿತು. ಇಲ್ಲಿದೆ ನೋಡಿ.
    -----------------------

    ಸೊಬಗಿನ ಸೆರೆಮನೆ ಆಗಿಹೆ ನೀನು ಚೆಲುವೆ ಸರಸತಿಯೇ
    ಅದರಲಿ ಸಿಲುಕಿದ ಸೆರೆಯಾಳ್ ನಾನು ನನ್ನೆದೆಯಾ ರತಿಯೇ ||ಪ||

    ನಿನ್ನೆಳೆ ಮೊಗದಲಿ ನಸುನಗೆ ಆಗಿರೆ ನನಗಿಹುದೊಂದಾಸೆ
    ನಿನ್ನಾ ಮುಡಿಯಲಿ ಹೂವಾಗಿರುವುದು ನನಗಿಹುದೊಂದಾಸೆ ||ಸೊಬಗಿನ||

    ತಾವರೆ ಬಣ್ಣದ ನಿನ್ನಾ ಹಣೆಯಲಿ ಕುಂಕುಮವಾಗಿರಲೆನಗಾಸೆ
    ಬಳ್ಳಿಯನೇಳಿಪ ನಿನ್ನಾ ಕೈಯಲಿ ಹೊಂಬಳೆಯಾಗಿರಲೆನಗಾಸೆ ||ಸೊಬಗಿನ||

    ನಿನ್ನಾ ಕೈಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ
    ನಿನ್ನೊಳು ನಾನು ನನ್ನೊಳು ನೀನು ಪ್ರೇಮದಿ ಲಯವಾಗುವುದಾಸೆ ||ಸೊಬಗಿನ||

    ಚೆಲುವೆ ತರಳೆ ಮುತ್ತಿನ ಹೆಣ್ಣೇ ನಿನ್ನವ ನಾನಾಗುವುದಾಸೆ
    ಇನ್ನೇನುಸುರಲಿ ಕಾಮನ ಕಣ್ಣೇ ನನಗಿಹುದೇನೇನೋ ಆಸೆ ||ಸೊಬಗಿನ||

    ReplyDelete
  11. ತ್ರಿವೇಣಿಯವರೆ,
    ಕಾವ್ಯದ ಪೂರ್ಣ ಪಾಠ ನೀಡಿದ್ದಕ್ಕೆ ಧನ್ಯವಾದಗಳು. ಕುವೆಂಪು ಬಹುಶಃ ತಮ್ಮ ನಲ್ಲೆಯನ್ನು ಉದ್ದೇಶಿಸಿರಬಹುದು ಅಂತ ಅನಿಸುತ್ತದೆ.

    ReplyDelete
  12. ಸುನಾಥರೇ, ಇರಬಹುದೇನೊ. ಆದರೆ "ನಿನ್ನಾ ಕೈಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ" - ಈ ಸಾಲೇಕೋ ನನ್ನಲ್ಲಿ ಮತ್ತೆ ವೀಣಾಪಾಣಿಯ ನೆನಪನ್ನೇ ತರುತ್ತಿದೆ!

    ReplyDelete
  13. ತ್ರಿವೇಣಿಯವರೆ,
    "ನಿನ್ನಾ ಕೈಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ" ಎನ್ನುವ ಸಾಲು, ಸರಸ್ವತಿಯನ್ನು ನೆನಪಿಸುವದು ನಿಜ; ಆದರೆ ಉಳಿದ ಸಾಲುಗಳು ಪ್ರೇಯಸಿಯನ್ನು ಉದ್ದೇಶಿಸಿದ ತರಹ ಇರುವದರಿಂದ,ಓದುಗನಿಗೆ
    ಅರ್ಥೈಸಿಕೊಳ್ಳುವದು risky job ಆಗಿದೆ, ಅಲ್ಲವೆ!?

    ReplyDelete
  14. "ಚೆಲುವಿನ ಸೆರೆಮನೆ..." ಮತ್ತು "ಕೆಂಪು ಗುಲಾಬಿಯ ಚೆಂದುಟಿ ಚೆಲುವೆ..." ಇವೆರಡೂ ಪ್ರೇಮ ಗೀತೆಗಳೇ.
    ಮೊದಲ ಗೀತೆಯಲ್ಲಿ ನಲ್ಲೆಯೇ ವೀಣೆ ನುಡಿಸುವವಳು ಯಾಕಾಗಿರಬಾರದು? (ವೀಣೆ ನುಡಿಸಲು ಕಲಿತ ಹೆಣ್ಣುಮಕ್ಕಳು ಇಲ್ಲವೆ?) ಎರಡನೆ ಗೀತೆಯಲ್ಲಿ ಚಿತ್ರದಲ್ಲಿ ಪಾತ್ರದ ಹೆಸರೂ ಶಾರದಾ...

    ReplyDelete
  15. ವಿವರಣೆಗಾಗಿ ಧನ್ಯವಾದಗಳು,ಜ್ಯೋತಿ.
    -ಸುನಾಥ ಕಾಕಾ

    ReplyDelete
  16. ಸನಾಥ್,

    ನೀವೆಲ್ಲರೂ ಕುವೆಂಪುರವರ ಕಾವ್ಯ ಶೈಲಿ Authoritative ಮತ್ತು sensuous ಆಗಿದೆ ಮತ್ತು ಅದಕ್ಕೆ ಕಾರಣ ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದಾರೆ ಎಂದು ನಂಬುತ್ತೀರಿ. ಅದು ಒಂದು ದೃಷ್ಟಿಕೋನ. ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ಅನಿಸುವುದು ಬೇರೆ. ಮಲೆನಾಡು ಪ್ರತಿಯೊಂದು ರುತುಮಾನದಲ್ಲೂ ಅಲ್ಲಿರುವ ಪ್ರಾಣಿ ಪಕ್ಷಿ ಮತ್ತು ನಮ್ಮೆಲ್ಲರಲ್ಲೂ ಒಂದು ಚಿತನ್ಯ, ಕುಶಲತೆ ಮೂಡಿಸುತ್ತದೆ. ಅಲ್ಲಿ ಬಡವ ಶ್ರೀಮಂತ ಎಬುದಕ್ಕಿತ ಪರಿಸರ ದೊಡ್ಡ ಪಾಲು ಹೊಂದಿದೆ. ರಸಿಕತೆ ಕುಶಲತೆಯಾಗಿ ಕಾವ್ಯ ಬರಹಗಳಲ್ಲಿ ಕಂಡು ಬರುತ್ತದೆ. ನಿಮಗೆ ಉದಾಹರಣೆ ಕೊಡಲು ನನ್ನ ಭಾಷಾ ಜ್ಞಾನ ಕಡಿಮೆ. ಆದರೆ ಇದು ನಾನ ಅಭಿಪ್ರಾಯ. ಅದರಂತೆಯೇ ಬೇಂದ್ರೆಯವರ ಶೈಲಿಗೆ ಕೇವಲ ಬಡತನವಲ್ಲ ಅವರು ಬೆಳೆದು ಬಂದ ರೀತಿ ಅಂದರೆ, ಉತ್ತರ ಕರ್ನಾಟಕದ ನಡವಳಿಕೆ, ಹಿರಿಯರು ಕಿರಿಯರು ಗಂಡು ಹೆಣ್ಣು ಹೀಗೆ ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಹಿನ ಶಿಸ್ತು ಮತ್ತು ಭಿನ್ನತೆಯನ್ನು ಹೊಂದಿದೆ. ಹೀಗಾಗಿ sensuous ಎಂಬುದು taboo ಆಗಿಬಿಡುವುದು. ಆದ್ದರಿಂದ ಬೇಂದ್ರೆಯವರು sensuous ವಿಷಯವನ್ನೂ ಕೂಡ, ಸರಳವಾಗಿ ಮತ್ತು 'mind beauty against body' ರೀತಿಯಲ್ಲಿ ವ್ಯಕ್ತ ಪಡಿಸುತ್ತಾರೆ ಎಂಬುದು ನನ್ನ ಅಭಿಪ್ರಾಯ.

    ReplyDelete
  17. ಕವಿತಾ,
    ಮತ್ತೊಂದು ದೃಷ್ಟಿಕೋನವನ್ನು ತೋರಿಸಿ ಕೊಟ್ಟದ್ದಕ್ಕಾಗಿ ಅನೇಕ ಧನ್ಯವಾದಗಳು. ಓರ್ವ ಕವಿಯನ್ನು ರೂಪಿಸುವಲ್ಲಿ ಅವರ ನೈಸರ್ಗಿಕ ಹಾಗು ಸಾಂಸ್ಕೃತಿಕ ಪರಿಸರ ನೀಡುವ ಕಾಣಿಕೆಯನ್ನು ನಾವು ಗಮನಿಸಬೇಕು. ಕುವೆಂಪು ಅವರು ಮಲೆನಾಡ ಪರಿಸರದಲ್ಲಿ ಬೆಳೆದದ್ದು ಹಾಗು ಮೈಸೂರಿನಲ್ಲಿ ಆದರ್ಶ ವಾತಾವರಣದಲ್ಲಿ ಬೆಳೆದದ್ದು ಅವರ ಕಾವ್ಯದ ಮೇಲೆ ಪರಿಣಾಮ ಬೀರಿರುತ್ತದೆ ಎನ್ನುವದನ್ನು ನಾನೀಗ ಅರಿತು, ಒಪ್ಪಿಕೊಳ್ಳುತ್ತೇನೆ. ನಿಮಗೆ ಮತ್ತೊಮ್ಮೆ ಧನ್ಯವಾದಗಳು.

    ReplyDelete
  18. ತ್ರಿವೇಣಿ...

    I am not sure if we are falling short of vocabulary in kannada for the word 'Romantic'. Thats a straight forward romantic poem. Be it for Godess Saraswathi or for his own wife.


    ನೀವು ಕುವೆಂಪು ಮತ್ತು ಎಂ ಎಫ್ ಹುಸೈನ್ ಒಂದೇ ಎಂಬ ಭಾವನೆಯಲ್ಲಿದ್ದೀರಿ .ಅದು ತಪ್ಪೋ ಸರಿಯೋ ನನಗೆ ಗೊತ್ತಿಲ್ಲ. irrespective of that, ದೇವಿ ಸರಸ್ವತಿ ಹೇಗೆ ದ ರಾ ಬೇಂದ್ರೆಯವರ ಕಾವ್ಯದಲ್ಲಿ ಹೊಮ್ಮುವಳು ಅಷ್ಟೇ ಕುವೆಂಪು ಅವರ ಹೃದಯದಲ್ಲಿ ನೆಲೆಸಿದ್ದಾಳೆ ಎಂಬುದು ನನ್ನ ಅಭಿಪ್ರಾಯ.

    ಕುವೆಂಪು ದಕ್ಷಿಣ ಕರ್ನಾಟಕದವರು. ಒಕ್ಕಲಿಗ (more relaxed community). ಮತ್ತು ಸಂಸ್ಕೃತದಿಂದ ಪ್ರಭಾವಿತರಾದವರು. Sanskrit is very liberal in describing woman w.r.t her external beauty. So does Kuvempu. Its as simple as it.


    There are much closer words in kannada if we have to write to the level of Hussain's paintings. And I disagree that this poem expresses that level of nudity in it. But by your comments, its very interesting to see how conservative a reader can be.

    Sorry, Sunaath, I am taking this space to express my views on what your commenter wrote.

    thank you,
    Kavitha.

    ReplyDelete
  19. Kavita,
    You are most welcome to express your views. It is really fascinating to see and understand other ways of looking at the matter. I appreciate your concern in literary matters.

    One point: I may not always come to know that you have commented on a previous posting. Kindly send a mail to me at sunaath@gmail.com whenever you comment on previous posts. I am afraid Smt. Triveni has not seen your new comment.
    Regards,
    -Sunaath

    ReplyDelete